ಈಚೆಗೆ ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರು, ಲೇಖಕರು, ಲೇಖಕಿಯರ ಜೊತೆ ಮಾತಾಡುವಾಗ `ಕ್ರಿಟಿಕಲ್’ ಮತ್ತು ’ಕ್ರಿಟಿಸಿಸಂ’ ಈ ಎರಡು ಪದಗಳ ಬಳಕೆಯ ಬಗ್ಗೆ ಗೊಂದಲವಿರುವುದನ್ನು ಗಮನಿಸಿರುವೆ. ಮೂವತ್ತು ವರ್ಷ ಸಾಹಿತ್ಯ ಪಾಠ ಮಾಡಿರುವ ಮೇಷ್ಟರೊಬ್ಬರು ಒಂದು ಭಾಷಣದಲ್ಲಿ ಹತ್ತು ಸಲ `ಕ್ರಿಟಿಕಲ್ ಆಗಿ ನೋಡಬೇಕು’ ಎಂಬುದನ್ನು `ಟೀಕಿಸಬೇಕು’ ಎಂಬ ಅರ್ಥದಲ್ಲೇ ಬಳಸುತ್ತಿದ್ದರು. ಅವರು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಈ ಮೇಷ್ಟ್ರು ಬಳಸುತ್ತಿದ್ದ `ಕ್ರಿಟಿಕಲ್’ ಎಂಬ ಪದ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಹುಟ್ಟುವ `ಟೀಕೆ’ ಅಥವಾ ಕ್ರಿಟಿಸೈಸ್ ಮಾಡುವುದು ಎಂಬ ಸರಳ ಅರ್ಥವನ್ನೇ ಮತ್ತೆ ಮತ್ತೆ ಸೂಚಿಸುತ್ತಿತ್ತು.
ಇಂಥ ಮಾತುಗಳಿಂದ ಕೂಡ ಸಾಹಿತ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಒಂದು ಕೃತಿಯ ವಿಮರ್ಶೆಯೆಂದರೆ ಅದರಲ್ಲಿರುವ ದೋಷ, ದೌರ್ಬಲ್ಯಗಳನ್ನು ಹೆಕ್ಕಿ ತೋರಿಸುವುದು ಅಥವಾ ಟೀಕಿಸುವುದು ಎಂಬುದೇ ಪ್ರಧಾನ ಅರ್ಥವಾಗಿ ಉಳಿದುಬಿಟ್ಟಿರುತ್ತದೆ. ಯಾವುದೇ ಪಠ್ಯವನ್ನು `ಕ್ರಿಟಿಕಲ್’ ಆಗಿ ನೋಡುವುದು ಎಂಬುದರ ಅರ್ಥ ಹೀಗೆ ಸೀಮಿತವಾದರೆ, `ಕ್ರಿಟಿಸಿಸಂ’ ಅಥವಾ `ವಿಮರ್ಶೆ’ಯ ವಿಸ್ತಾರವಾದ ಕೆಲಸ ಮರೆತು ಹೋಗುತ್ತದೆ.
ಸಾಹಿತ್ಯಕ ಸಂಸ್ಕೃತಿಯಲ್ಲಿ ಹಾಗೂ ಸಾಹಿತ್ಯದ ಟೀಚಿಂಗಿನಲ್ಲಿ ಇಂಥ ಗೊಂದಲಗಳು ಸೃಷ್ಟಿಯಾದಾಗ ಸಾಹಿತ್ಯ ವಿಮರ್ಶೆಯ ಪ್ರಾಥಮಿಕ ಪಾಠಗಳನ್ನು ಮತ್ತೆ ತಿರುವಿ ಹಾಕಿ ಸ್ಪಷ್ಟತೆ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, `ಕ್ರಿಟಿಸಿಸಂ’ ಅಥವಾ `ವಿಮರ್ಶೆ’ ಎಂಬ ಪದಕ್ಕೆ ವಿಮರ್ಶೆ ಕುರಿತು ನೀವು ಹಿಂದೆ ಕೇಳಿರುವ ವಿವರಣೆಗಳನ್ನು ಒಮ್ಮೆ ನೆನಸಿಕೊಳ್ಳಿ. ಅಥವಾ ಓ. ಎಲ್. ನಾಗಭೂಷಣಸ್ವಾಮಿಯವರ ’ವಿಮರ್ಶೆಯ ಪರಿಭಾಷೆ’ಯನ್ನು ನೋಡಿ. ವಿಮರ್ಶೆಗೆ ಪರಿಶೀಲನೆ, ಪರೀಕ್ಷೆ, ವ್ಯಾಖ್ಯಾನ, ವಿವರಣೆ, ಮೌಲ್ಯಮಾಪನ, ಕೃತಿಪ್ರಕಾಶ, ಕೃತಿ ವಿಸ್ತಾರ, ಸಮಕಾಲೀನ ಅರ್ಥನಿರ್ಮಾಣ… ಹೀಗೆ ಹಲವು ಕೆಲಸಗಳಿರುತ್ತವೆ. ಡೇವಿಡ್ ಡೈಚಸ್‌ನ `ಕ್ರಿಟಿಕಲ್ ಅಪ್ರೋಚಸ್ ಟು ಲಿಟರೇಚರ್’ ಎಂಬ ಹಳೆಯ ಪುಸ್ತಕ ವಿಮರ್ಶೆಯ ವಿಶಾಲ ಪ್ರಕ್ರಿಯೆಯಲ್ಲಿ ಬಗೆಬಗೆಯ ಓದುಗಳು, ಅಂತರ್ ಶಿಸ್ತೀಯ ಸಂಬಂಧಗಳು ಸೇರಿರುವುದನ್ನು ವಿವರವಾಗಿ ಮಂಡಿಸುತ್ತದೆ.
ವಿಮರ್ಶೆಯ ಚರಿತ್ರೆಯ ಈ ಹಿನ್ನೆಲೆಯಲ್ಲಿ, `ಕ್ರಿಟಿಕಲ್’ ಎಂಬ ಪದಕ್ಕೆ ಕನ್ನಡದಲ್ಲಿ ಕೆಲವೊಮ್ಮೆ ಸೀಮಿತ ಅರ್ಥ ಬಂದಿದ್ದೇಕೆ ಎಂಬುದನ್ನು ಗಮನಿಸೋಣ. ಕುವೆಂಪು ಕೃತಿಗಳ ಬಗ್ಗೆ ಹಲ ಬಗೆಯ ವಿಮರ್ಶೆಗಳು ಬಂದಿದ್ದರೂ, `ಬಿ. ಕೃಷ್ಣಪ್ಪನವರು ಕುವೆಂಪು ಬರೆದ ಎರಡು ಕಾದಂಬರಿಗಳಲ್ಲಿ ದಲಿತಲೋಕದ ಚಿತ್ರಣವನ್ನು `ಕ್ರಿಟಿಕಲ್’ ಆಗಿ ನೋಡಿದ್ದಾರೆ’ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ದಲಿತ ತಾತ್ವಿಕತೆಯ ಮೂಲಕ ಕುವೆಂಪು ಕಾದಂಬರಿಗಳನ್ನು ಪರಿಶೀಲಿಸಿದ ಕೃಷ್ಣಪ್ಪ(1938-1997), ಕುವೆಂಪುವಿನಂಥ ದೊಡ್ಡ ಲೇಖಕರಿಗೂ ದಲಿತ ಲೋಕವನ್ನು ಹತ್ತಿರದಿಂದ ನೋಡಿ ಬರೆಯಲು ಸಾಧ್ಯವಾಗಲಿಲ್ಲ; ಅವರ ದಲಿತ ಜೀವನಚಿತ್ರಣದಲ್ಲಿ ಪೂರ್ವಗ್ರಹಗಳಿವೆ. ಆದ್ದರಿಂದ ದಲಿತರ ಅಥೆಂಟಿಕ್ ಲೋಕವನ್ನು ದಲಿತ ಸಾಹಿತಿಗಳೇ ಚಿತ್ರಿಸಲು ಸಾಧ್ಯ ಎಂದು ವಾದಿಸಿದರು. ಇದು ಒಂದು ಬಗೆಯ `ಕ್ರಿಟಿಕಲ್’ ನೋಟವೂ ಹೌದು.
ಆದರೆ `ಕ್ರಿಟಿಸಿಸಂ’ನ ವಿಶಾಲ ಪ್ರಕ್ರಿಯೆ ಹೀಗೆ `ಕ್ರಿಟಿಸೈಸ್’ ಅಥವಾ ’ಟೀಕೆ’ ಮಾಡುವುದರ ಜೊತೆಗೇ ಕುವೆಂಪು ಕೃತಿಗಳಲ್ಲಿ ಇರುವ ಇನ್ನಿತರ ಅಂಶಗಳನ್ನೂ ಓದುಗರ ಎದುರು ತೆರೆದಿಡುತ್ತದೆ: ಉದಾಹರಣೆಗೆ, ಈ ಕಾದಂಬರಿಯ ಭಾಷೆ ಓದುಗ, ಓದುಗಿಯರನ್ನು ತನ್ನೊಳಗೆ ಮಗ್ನವಾಗಿಸಿಕೊಂಡು ಅವರ ವ್ಯಕ್ತಿತ್ವ ಬೇರೆ ಥರ ಬೆಳೆಯುವಂತೆ ಮಾಡುತ್ತದೆ; ಕಾದಂಬರಿಯ ನಾಯಕ ಹೂವಯ್ಯ ಜಡ ಸಮಾಜವನ್ನು ಕದಲಿಸಲೆತ್ನಿಸುತ್ತಿದ್ದಾನೆ, ಬದಲಿಸಲೆತ್ನಿಸುತ್ತಿದ್ದಾನೆ; ಸುತ್ತಲಿನ ಜನರನ್ನು ಸೂಕ್ಷ್ಮವಾಗಿಸುತ್ತಿದ್ದಾನೆ; ಒಂದು ಸಮಾಜ ಬದಲಾಗಲು ಎಲ್ಲ ಜಾತಿಗಳ ಆಧುನಿಕ ಮನಸ್ಸಿನವರೂ ತಂತಮ್ಮ ಸಮುದಾಯಗಳ ಸ್ವವಿಮರ್ಶೆಯನ್ನು, ಸುಧಾರಣೆಯನ್ನು ಆರಂಭಿಸಬೇಕು ಎಂಬ ಸ್ವಾತಂತ್ರ‍್ಯ ಚಳುವಳಿಯ ಕಾಲದ ತುಡಿತವನ್ನು, ಗಾಂಧೀ ನೋಟವನ್ನು ಈ ಕಾದಂಬರಿ ಹೇಳುತ್ತಿದೆ; ಕಾದಂಬರಿಯ ಕೇಂದ್ರ ಪಾತ್ರದ ಕ್ರಿಯೆ ಒಟ್ಟಾರೆಯಾಗಿ ಸಮಾಜದ ಶೂದ್ರರ, ದಲಿತರ, ಮಹಿಳೆಯರ ಬಿಡುಗಡೆಯ ಹಾದಿಯನ್ನೂ ನಿಧಾನಕ್ಕೆ ತೆರೆಯಬಹುದು…ಇವೆಲ್ಲವನ್ನೂ ಕಾದಂಬರಿಯ ಸಮಗ್ರ ವಿಮರ್ಶೆ ತೋರಿಸಿಕೊಡಬಲ್ಲದು.
ಆದ್ದರಿಂದಲೇ, `ಕ್ರಿಟಿಸಿಸಂ’ನ ಚಟುವಟಿಕೆಗೆ ಹಲವು ಕೆಲಸಗಳಿವೆ ಎಂಬುದನ್ನು ಸಾಹಿತ್ಯದ ಟೀಚರುಗಳಾದರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಕೃತಿಯ ವಿಮರ್ಶೆ ಕೃತಿಯಲ್ಲಿನ ಅನೇಕ ಅಂಶಗಳನ್ನು ಅನುಭವಿಸಿ, ಆ ಅನುಭವವನ್ನು ಓದುಗ, ಓದುಗಿಯರಿಗೆ ದಾಟಿಸಬೇಕಾಗುತ್ತದೆ. ಟೀಚಿಂಗಿನಲ್ಲಿ ಕ್ರಿಟಿಸಿಸಂನ ಈ ಕೆಲಸ ಪ್ರಧಾನವಾಗಿ ನಡೆಯುತ್ತಿರುತ್ತದೆ. ಕೃತಿಯ ಭಾಷೆ, ಶೈಲಿ, ಪಾತ್ರ, ವಸ್ತು, ವಸ್ತುವಿನ್ಯಾಸ ಎಲ್ಲವನ್ನೂ ವಿವರವಾಗಿ ನೋಡಬೇಕಾಗುತ್ತದೆ. ತನ್ನ ಸ್ವಂತದ ಸಿದ್ಧಾಂತ ಅಥವಾ ಫಿಲಾಸಫಿ ಯಾವುದೇ ಇದ್ದರೂ ಅದರಾಚೆಗೂ ಹೋಗಿ ಕೃತಿಯ ಸತ್ವವನ್ನು ನೋಡಬೇಕಾಗುತ್ತದೆ.
ಹೀಗೆ ಮಾಡದಿದ್ದರೆ, `ಈ ಬಟ್ಟೆಯ ಬಣ್ಣ ಚೆನ್ನಾಗಿದೆ’; `ಆ ಬಟ್ಟೆಯ ಬಣ್ಣ ಚೆನ್ನಾಗಿಲ್ಲ’ ಎನ್ನುವ ಬಟ್ಟೆಯಂಗಡಿ ಗ್ರಾಹಕ ಗ್ರಾಹಕಿಯರಂತೆ ಓದುಗ ಓದುಗಿಯರೂ ಸೀಮಿತ ಪ್ರತಿಕ್ರಿಯೆಗಳಲ್ಲಿ ಮುಳುಗುತ್ತಾರೆ. `ಫೇಸ್ ಬುಕ್’, `ವಾಟ್ಸ್ ಆಪ್’ ವೇದಿಕೆಗಳಲ್ಲಿ ಸಡನ್ನಾಗಿ ಹೆಬ್ಬೆಟ್ಟೆತ್ತುವ, ಹೆಬ್ಬೆಟ್ಟಿಳಿಸುವ ಪ್ರತಿಕ್ರಿಯೆಕಾರರ ಆಯ್ಕೆ-ತಿರಸ್ಕಾರಗಳ ಕ್ಷಿಪ್ರ ಮಾರ್ಗವನ್ನು ಸಾಹಿತ್ಯ ವಿಮರ್ಶೆ ಅಳವಡಿಸಿಕೊಳ್ಳಲಾಗದು. ಹಾಗೆ ಮಾಡಿದರೆ ಸಾಹಿತ್ಯ ಕೃತಿಗಳ-ಒಟ್ಟಾರೆಯಾಗಿ ಎಲ್ಲ ಬಗೆಯ ಬರವಣಿಗೆಗಳ- ಓದು, ವಿಮರ್ಶೆ, ಅಧ್ಯಯನ, ಟೀಚಿಂಗ್, ಮೌಲ್ಯಮಾಪನ ಎಲ್ಲವೂ ಕ್ಷಿಪ್ರ ಪ್ರತಿಕ್ರಿಯೆಗಳ ಅವಸರದಲ್ಲಿ ಚಿಂದಿಯಾಗಿ ಹೋಗುತ್ತವೆ. ಹಲವು ವರ್ಷಗಳ ಆಳವಾದ ಅಧ್ಯಯನಗಳ ಹಿನ್ನೆಲೆಯಲ್ಲಿ ಹುಟ್ಟುವ ಕ್ಷಿಪ್ರ ಪ್ರತಿಕ್ರಿಯೆಗಳು ಕೂಡ ಗಂಭೀರವಾಗಿ `ಕ್ರಿಟಿಕಲ್’ ಆಗಿರಬಲ್ಲವು, ನಿಜ. ಅವುಗಳಲ್ಲಿ `ಕ್ರಿಟಿಸಿಸಂ’ನ ವಿಸ್ತೃತ ಕೆಲಸ ಸೇರಿಕೊಂಡಾಗ ಮಾತ್ರ ಅವು ಕೃತಿಗಳನ್ನು ಬೆಳೆಸಬಲ್ಲವು.
‘ಈಗಿನ ಪರಿಸ್ಥಿತಿಯಲ್ಲಿ ನಮ್ಮ ಕ್ಲಾಸ್ ರೂಮುಗಳಲ್ಲಿ ಒಂದು ಪಠ್ಯ ಟೀಚ್ ಮಾಡುವಾಗ ಯಾವುದಾದರೂ ಧರ್ಮವನ್ನು `ಕ್ರಿಟಿಕಲ್’ ಆಗಿ ನೋಡುವುದು ಕಷ್ಟವಾಗಿದೆಯಲ್ಲ?’ ಎಂದು ಸಾಹಿತ್ಯದ ಅಧ್ಯಾಪಕರೊಬ್ಬರು ಈಚೆಗೆ ಕೇಳಿದರು. ಅವರ ಕಷ್ಟ ಎಲ್ಲರಿಗೂ ಅರ್ಥವಾಗುತ್ತದೆ. ಅವರ ಮಾತಿನ ಬಗ್ಗೆ ಯೋಚಿಸುತ್ತಿದ್ದಾಗ ನನಗೆ ಹೀಗೆನ್ನಿಸಿತು:
`ನಮ್ಮ ಸಮಾಜದಲ್ಲಿ `ಜಾತ್ಯತೀತತೆ’, `ಉದಾರವಾದ’, `ಸಮಾನತೆ’, `ವೈಚಾರಿಕತೆ’ ಇತ್ಯಾದಿ ಪದಗಳು ಮಕ್ಕಳ ಕಿವಿಗೆ ಬೀಳದೆ, ತಿರುಪತಿ ಲಡ್ಡು, ಜಾತೀಯತೆ, ಸಂಕುಚಿತ ಅರ್ಥದ ಧರ್ಮ…ಇತ್ಯಾದಿ ಪದಗಳು ಕಿವಿಗೆ ಬೀಳುತ್ತಿವೆ; ಇಂಥ ಕಾಲದಲ್ಲಿ ಮಕ್ಕಳ ಮನಸ್ಸಿನ ವಿಕಾರಗಳಿಗೆ `ಮನೆಯೆ ಮೊದಲ ಪಾಠಶಾಲೆ’ಯಾಗಿದೆ; ಹಾದಿ ಬೀದಿಗಳು, ಸಮಾಜ, ಹಾಗೂ ಒಂದು ವರ್ಗದ ಮಾಧ್ಯಮಗಳು ಈ ವಿಕಾರಗಳ `ಹೈಯರ್ ಎಜುಕೇಶನ್’ ಸೆಂಟರುಗಳಾಗಿವೆ. ಈ ಭಾಷೆ ನ್ಯಾಯಾಧೀಶರುಗಳ ನಾಲಗೆಯಿಂದಲೂ ಉದುರತೊಡಗಿದೆ. ಇಂಥ ಸಂದರ್ಭದಲ್ಲಿ ಯಾವುದಾದರೂ ಧರ್ಮವನ್ನು ‘ಟೀಕಿಸುವುದು’, ಅಂದರೆ ಸರಳ ಅರ್ಥದಲ್ಲಿ ‘ಕ್ರಿಟಿಕಲ್ ಆಗಿರುವುದು’ ಕಷ್ಟ. ಆದರೆ ‘ಕ್ರಿಟಿಸಿಸಂ’ನ ಇತರ ಸಲಕರಣೆಗಳನ್ನು ಬಳಸಿ ಪಠ್ಯಗಳಲ್ಲಿರುವ ಧರ್ಮದ ನಿಜವಾದ ಅರ್ಥವನ್ನು ತೋರಿಸಬಹುದು. ಜೈನ ಧರ್ಮದ ಬಗ್ಗೆ ಪಂಪ, ಜನ್ನರ ಕೃತಿಗಳು ಏನು ಹೇಳುತ್ತಿವೆ ಎಂಬುದನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕನ್ನಡಿಯಂತೆ ತೋರಿಸುತ್ತಾ, ಈಗ ಏನಾಗುತ್ತಿದೆ ಎಂಬುದನ್ನು ನೋಡಲು ಸೂಚಿಸಬಹುದು.
ಇದೆಲ್ಲದರ ಕುರಿತು ಟಿಪ್ಪಣಿ ಮಾಡುತ್ತಿರುವಾಗ ಮುಡಾ ಪ್ರಕರಣದ ಬಗೆಗಿನ ಹೈಕೋರ್ಟ್ ತೀರ್ಪಿನ ೧೯೭ ಪುಟಗಳ ಕಾಪಿಯನ್ನು ತರುಣ ಲಾಯರೊಬ್ಬರು ಕಳಿಸಿದರು. ಪಠ್ಯದ ನಿಕಟ ಓದು ಕೂಡ ವಿಮರ್ಶೆಯ ಭಾಗವೇ ತಾನೆ? ಇದೀಗ ಈ ತೀರ್ಪನ್ನು ವಿವರವಾಗಿ ಗ್ರಹಿಸುವ, ಕ್ರಿಟಿಕಲ್ ಆಗಿ ಪರೀಕ್ಷಿಸುವ ಹಾಗೂ ತೀರ್ಪಿನ ಪರಾಮರ್ಶೆ ಮಾಡುವ ‘ಕ್ರಿಟಿಸಿಸಂ’ ಇವೆಲ್ಲವೂ ಈ ಸನ್ನಿವೇಶದಲ್ಲಿ ಅತ್ಯಗತ್ಯ ಎನ್ನಿಸತೊಡಗಿತು.
ವಿಮರ್ಶೆಯ ಈ ಮುಖ್ಯ ಕೆಲಸಗಳು ತರಗತಿಗಳಲ್ಲೂ ಆರಂಭವಾದರೆ ಮಕ್ಕಳ ಸಂವೇದನೆ ಹರಿತವಾಗತೊಡಗುತ್ತದೆ. ಕ್ರಿಟಿಸಿಸಂನ ಕೆಲಸಗಳಲ್ಲಿ ’ಅಭಿರುಚಿಯನ್ನು ತಿದ್ದುವುದು’ (’ಕರೆಕ್ಷನ್ ಆಫ್ ಟೇಸ್ಟ್’) ಕೂಡ ಮುಖ್ಯವಾದುದು ಎನ್ನುತ್ತಾನೆ ಎಲಿಯಟ್. ಈ ಕೆಲಸ ಮೊದಲು ಶುರುವಾದರೆ, ನಂತರ ’ಕ್ರಿಟಿಕಲ್’ ಆಗಿ ನೋಡುವ ಬಗೆಯನ್ನು ಕಲಿಸಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊದಲು ಕುವೆಂಪು ಸಾಹಿತ್ಯದ ಸತ್ವವನ್ನು ಕಲಿಸಿ ಓದುಗಲೋಕವನ್ನು ಅರಳಿಸೋಣ. ಕುವೆಂಪುವಿನ ಭಾವಗೀತೆಯ ಸಾಧ್ಯತೆಯನ್ನು ತೋರಿಸಿ ಮಕ್ಕಳ ಮನಸ್ಸನ್ನು ಉದಾರವಾಗಿಸೋಣ. ನಂತರ ಕುವೆಂಪು ಕಾದಂಬರಿಯ ಬಗ್ಗೆ ಕೃಷ್ಣಪ್ಪನವರು ಎತ್ತಿದ ಪ್ರಶ್ನೆಯನ್ನೋ, ’ಮನೆ ಮನೆಯ ತಪಸ್ವಿನಿಗೆ’ ಪದ್ಯದ ಬಗ್ಗೆ ಸ್ತ್ರೀವಾದಿ ಚಿಂತಕಿ ಎಲ್. ಸಿ. ಸುಮಿತ್ರ ಅವರು ಎತ್ತಿರುವ ’ಕ್ರಿಟಿಕಲ್’ ಪ್ರಶ್ನೆಗಳನ್ನೋ ಮುನ್ನಲೆಗೆ ತರೋಣ. ಆಗ ’ಕ್ರಿಟಿಸಿಸಂ’ ಹಾಗೂ ’ಕ್ರಿಟಿಕಲ್ ನೋಟ’ ಎರಡೂ ತಂತಮ್ಮ ಕೆಲಸ ಮಾಡುತ್ತಿರುತ್ತವೆ. ಹಲವು ಓದುಗಳು ಬೆಳೆಯುತ್ತಿರುತ್ತವೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ವಾರಗೆಯ ಲೇಖಕ, ಲೇಖಕಿಯರು ತಂತಮ್ಮ ಬರಹಗಳಿಗೆ ಹೇಗೆ ಟೈಟಲ್ ಕೊಡುತ್ತಾರೆ ನೋಡೋಣವೆಂದು ಅವರವರ ಟೈಟಲ್ ಥಿಯರಿಯ ಬಗ್ಗೆ ಕೇಳಿದೆ. ದೊಡ್ಡ ದೊಡ್ಡ ಲೇಖಕರು ತಮ್ಮ ಕೃತಿಗಳಿಗೆ ಹೇಗೆ ಟೈಟಲ್ ಕೊಡಬಹುದು ಎಂಬ ಕುತೂಹಲದಿಂದ ನನ್ನ ಪ್ರಿಯ ಲೇಖಕ ಮಾರ್ಕ್ವೆಜ್ ಸಂದರ್ಶನಗಳನ್ನು ನೋಡಲು ಹೋದೆ… ಇದೆಲ್ಲ ಕಳೆದ ವಾರದ `ಕಲಾಕೃತಿಯ ಹೆಸರು’ (READ HERE) ಎಂಬ ಅಂಕಣಬರಹದ ಮಳೆ ನಿಂತ ಮೇಲಿನ ಮರದ ಹನಿ ಎಂಬುದು ನಿಮಗೆ ಹೊಳೆದಿರಬಹುದು!
ಗೂಗಲ್ ಹಾದಿಯಲ್ಲಿ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆಯಲ್ಲ! ಮಾರ್ಕ್ವೆಝ್ ಸಂದರ್ಶನ ಹುಡುಕುತ್ತಿರುವಂತೆ ಒಂದು ವೆಬ್‌ಸೈಟ್ ಪ್ರತ್ಯಕ್ಷವಾಯಿತು. ಹೆಸರು: Poem Title Generator. ಅದರ ಕೆಳಗೆ `ನಮ್ಮ ಪೊಯೆಮ್ ಟೈಟಲ್ ಜನರೇಟರ್ ಆಟೊಮ್ಯಾಟಿಕ್ ಆಗಿ ಕವಿತೆಯ ಶೀರ್ಷಿಕೆಗಳನ್ನು ಉತ್ಪಾದಿಸಲು `ಆರ್ಟಿಫಿಶಿಯಲ್ ಇಂಟಲಿಜೆನ್ಸ್’ನ ಶಕ್ತಿ ಬಳಸುತ್ತದೆ’ ಎಂಬ ಒಕ್ಕಣೆಯಿತ್ತು!
ಏಳೆಂಟು ತಿಂಗಳ ಕೆಳಗೆ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಇಂಗ್ಲಿಷಿನಲ್ಲಿ ಪ್ರಬಂಧ ಬರೆಯುವುದನ್ನು ಸಮಾಜವಿಜ್ಞಾನಿ ಸಿ.ಜಿ. ಲಕ್ಷ್ಮೀಪತಿ ತೋರಿಸಿದ್ದರು. ಆಗ ಆ ವೇದಿಕೆಗೆ ಕೈ ಕೊಡಲು ಅಂಬೇಡ್ಕರ್ ಬಗ್ಗೆ ಯಾರೂ ಕೊಡದ ವಿಶೇಷ ವಸ್ತುವನ್ನು ಕೊಟ್ಟು `ಟ್ರೈ ಮಾಡಿ’ ಎಂದೆ. ಅದು ಅಸಂಬದ್ಧವಾದ ಬರಹವೊಂದನ್ನು ಸೃಷ್ಟಿಸಿತು.
ಆದರೆ ಈ ಸಲ ಸಿಕ್ಕ ಪೊಯೆಮ್ ಟೈಟಲ್ ಜನರೇಟರ್’ ಸೃಜನಶೀಲವಾಗಿತ್ತು. ಮೊದಲಿಗೆ `ನಿನ್ನ ಕವಿತೆಯ ವಸ್ತುವೇನು?’ ಎಂದು ಟೈಟಲ್ ಜನರೇಟರ್ ಕೇಳಿತು. ರೈಟಿಂಗ್ ಈಸ್ ಥಿಂಕಿಂಗ್ ಎಂದು ನಂಬುವ ನಾನು ಕೀಬೋರ್ಡ್ ಮೇಲೆ ಬೆರಳಿಟ್ಟ ತಕ್ಷಣ ಸುಮ್ಮಸುಮ್ಮನೆ ಕವಿತೆಯ ವಸ್ತುವೊಂದು ಟೈಪಾಗತೊಡಗಿತು: My poem deals with a lonely girl who has lost her way in the woods and it is dark and she is helpless…
'ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಎದುರು ನನ್ನ 'ಸಹಜ ಇಂಟಲಿಜೆನ್ಸ್’ ಇಷ್ಟನ್ನು ಟೈಪ್ ಮಾಡಿ ಸುಮ್ಮನಾಯಿತು. ಈ ಸಾಲು ಏಕೆ, ಹೇಗೆ ಮೂಡಿತೋ ತಿಳಿಯದು! ಈ ವಿವರಣೆಗೊಂದು ಟೈಟಲ್ ಬಂತು: ’Whispers of the Lost Woods.’ ಅಂದರೆ, `ಕಳೆದು ಹೋದ ಕಾಡಿನ ಪಿಸುಮಾತುಗಳು’! ಲವ್ಲಿ! `ಇನ್ನಷ್ಟು ಟೈಟಲ್ಸ್ ಬೇಕೆ?’ ಎಂದು ಅದು ಕೇಳಿತು. `ಹೂಂ’ ಎಂದೆ. ಟೈಟಲ್ ಬಂತು: Tales from the Mystic Vale ಅಂದರೆ, ನಿಗೂಢ ಕಣಿವೆಯ ಕತೆಗಳು.
ನೋಡನೋಡುತ್ತಾ ಹಲವು ಟೈಟಲ್‌ಗಳು ಮೂಡತೊಡಗಿದವು.`Fables Beneath Canopy's Veil’; `Laments of the Shrouded Thorns’ ಇತ್ಯಾದಿ…
ಇನ್ನು ಮುಂದೆ ಶಬ್ದವಿಲ್ಲ!
ನಿನ್ನೆ ತಾನೆ ಕವಿ ಚಂದ್ರಶೇಖರ ತಾಳ್ಯ ತಮ್ಮ ಕವಿತೆಗೆ ಹೆಸರಿಡುವುದರ ಬಗ್ಗೆ ಮಾತಾಡಿದ್ದು ನೆನಪಾಯಿತು. ಆ ಕವಿತೆಯ ಹೆಸರು `ಕಾಲದ ಹಾಡು’ ಎಂದ ತಕ್ಷಣ, `ಅದು ಕವಿತೆಯ ವಸ್ತು, ಆಶಯ, ಕೇಂದ್ರ ಧ್ವನಿ…ಎಲ್ಲವನ್ನೂ ಹೇಳಿಬಿಟ್ಟಿದೆಯಲ್ಲ? ಇನ್ನು ಕವಿತೆಯನ್ನೇಕೆ ಓದಬೇಕು?’ ಎಂದೆ. ಕವಿತೆಯ ಎಲ್ಲ ಗೂಢಗಳನ್ನು ಟೈಟಲ್ ಬಿಟ್ಟುಕೊಡಬಾರದೆಂಬ ಕಾರಣಕ್ಕೋ ಏನೋ, ಅನೇಕರು ಅನೇಕ ಅರ್ಥಗಳನ್ನು ಹೊರಡಿಸುವ ರೂಪಕವೊಂದನ್ನು ಟೈಟಲ್ ಮಾಡಲು ಹುಡುಕಾಡುತ್ತಿರುತ್ತಾರೆ. ಮೇಲೆ ಹೇಳಿದ ‘ಟೈಟಲ್ ಜೆನರೇಟರ್’ ಕೂಡ ರೂಪಕಗಳನ್ನೇ ಹುಡುಕಿ ಕೊಟ್ಟಿತ್ತು! ಆದರೆ ಬರೆವವರೆಲ್ಲರೂ ಕೊನೆಗೆ ತಮ್ಮ `ಒಳಪಿಸುಮಾತು’ ಅಥವಾ `ಇಂಟ್ಯೂಶನ್’ ಆಧಾರದ ಮೇಲೆ ಟೈಟಲ್ ಕೊಡುತ್ತಾರೆಂದು ಕಾಣುತ್ತದೆ. ಈ ಕುರಿತು ಇಬ್ಬರ ಪ್ರತಿಸ್ಪಂದನವನ್ನು ಇಲ್ಲಿ ಕೊಡುವೆ:
ಚಂದ್ರಶೇಖರ ತಾಳ್ಯ: `ಕವಿತೆಗೆ ಹೆಸರು ಅನಿವಾರ್ಯವೇ ಎನ್ನುವುದು ಜಿಜ್ಞಾಸೆಯ ವಿಷಯವೇ. ಆದರೆ ಅದೊಂದು ರೀತಿಯಲ್ಲಿ ನದಿ ದಾಟುವಾಗಿನ ಪುಟ್ಟ ದೋಣಿ ಇದ್ದಂತೆ. ನಾವು ದೋಣಿಯಲ್ಲಿ ಕುಳಿತು ನದಿಯ ವಿಸ್ತಾರ, ಅದರ ಹರಿವಿನ ವಯ್ಯಾರ, ಅಲೆಗಳ ಮೋಹಕತೆ, ಆಚೆ ದಡದ ಸೆಳೆತ, ದಂಡೆಯಲ್ಲಿ ಬೆಳೆದ ಹಸಿರು ಮರಗಳ ನೋಟಗಳನ್ನು ಗಮನಿಸುತ್ತಾ ಕುಂತ ದೋಣಿಯನ್ನು ಮರೆತೇಬಿಟ್ಟಿರುತ್ತೇವೆ. ದಂಡೆ ಮುಟ್ಟಿದ ಮೇಲೂ ದೋಣಿ ನೆನಪಷ್ಟೇ ಆಗಿ ಉಳಿಯುತ್ತದೆ. ಹೀಗೇ ಕವಿತೆಯ ಹೆಸರು.
ನಾನು ಕವಿತೆ ಬರೆದಾದ ಮೇಲೆ ಕವಿತೆ ಇಡಿಯಾಗಿ ಏನು ಹೇಳುತ್ತದೆ ಎನ್ನುವುದರ ಮೇಲೆ ಹೆಸರು ನೀಡುತ್ತೇನೆ. ಅದು ಕವಿತೆಯ ಕೇಂದ್ರ ಧ್ವನಿಯೂ ಆಗಿರಬಹುದು; ಅದರ ಭಾವಸೂಚಕವೂ ಆಗಿರಬಹುದು. ಏನೇ ಇದ್ದರೂ ಇದೊಂದು ಇಬ್ಬದಿಯ ಅಲಗಿನ ಪ್ರಶ್ನೆಯೇ. ಕೊನೆಗೂ ಉಳಿಯುವುದು ಓದುಗರ ಪ್ರತಿಭೆ. ಗಿಣಿ, ನೈಟಿಂಗೇಲ್ ನೆಪದಲ್ಲಿ ಕವಿ ಮತ್ತೇನೋ ವಿಭಿನ್ನ ದರ್ಶನವೊಂದನ್ನು ಕಟ್ಟಿ ಕೊಡಲು ಯತ್ನಿಸುವಂತೆ ಕಾಣಿಸುತ್ತಾನೆ. ಅದನ್ನು ಬಗೆವ ಬಗೆ ಕವಿತೆಯ ಹೆಸರನ್ನು ಮೀರಿ ಹೋಗಿರುತ್ತದೆ.
ಅಂತಿಮವಾಗಿ, ಕವಿತೆಗೆ ಟೈಟಲ್ ಅನಿವಾರ್ಯವೋ ಅಲ್ಲವೋ ಎಂಬುದು 'ಜಿಜ್ಞಾಸೆಯ' ವಿಷಯವೇ!
ಎಂ. ಎಸ್. ಆಶಾದೇವಿ: `ಶೀರ್ಷಿಕೆಗಳನ್ನು ಕೊಡುವುದು ಕೆಲವು ಸಲ ಹೆತ್ತ ಮಕ್ಕಳಿಗೆ ಹೆಸರಿಡುವಷ್ಟೇ ಉತ್ಕಟವಾದ ಹುಡುಕಾಟ; ಇದು ಕೆಲವೊಮ್ಮೆ ಸರಿಯಾದ, ಸರಳವಾದ ಶೀರ್ಷಿಕೆ ಕೊಟ್ಟರೆ ಸಾಕಪ್ಪಾ ಎನ್ನಿಸುವ ಒತ್ತಡದ ಸಂಗತಿಯೂ ಆಗಿಬಿಡುತ್ತದೆ. ಆದರೆ ಅದು ನಾನು ಹೇಳಹೊರಟಿರುವುದನ್ನು ಧ್ವನಿಸುವ ಶೀರ್ಷಿಕೆಯಾಗಿರಬೇಕು ಎನ್ನುವ ಆಸೆ! ಕೆಲವು ಸಲ ಲೇಖನ ಬರೆದು ಎಷ್ಟು ಹೊತ್ತಾದರೂ ಶೀರ್ಷಿಕೆ ಹೊಳೆಯದೆ ಕಂಗಾಲಾಗುವುದೂ ಇದೆ. ಶೀರ್ಷಿಕೆಯೇ ಮೊದಲು ಹೊಳೆದು ಅದೇ ಲೇಖನದ ಭಿತ್ತಿಯನ್ನು ರೂಪಿಸಿದ್ದೂ ಇದೆ… ಕೆಲವೊಮ್ಮ ಶೀರ್ಷಿಕೆ ಕಾವ್ಯಮಯವಾಗಿರಲಿ ಎಂಬ ಭಾವ ಮಿಂಚಿ ಮರೆಯಾಗುತ್ತಿರುತ್ತದೆ.
ಕಳೆದ ವಾರ ಟೈಟಲ್ ಎಂಬ ಪರಿಕಲ್ಪನೆಯನ್ನು ’ಪ್ರಾಬ್ಲಮೆಟೈಸ್’ ಮಾಡಿದ್ದು ಎಲ್ಲೆಲ್ಲಿಗೆ ಕರೆದೊಯ್ಯತ್ತಿದೆ ನೋಡಿ! ಈ ಟೈಟಲ್ ಸವಾಲು ಇಟಲಿಯ ಸುಪ್ರಸಿದ್ಧ ಲೇಖಕ ಅಂಬರ್ತೊ ಇಕೋಗೂ ಎದುರಾಯಿತು. ಹಲವು ಬಗೆಯ ‘ನ್ಯಾರೇಟೀವ್’ ಅಥವಾ ‘ಕಥನ’ಗಳನ್ನು ಬರೆಯುತ್ತಿದ್ದ ಇಕೋ ತನ್ನ ಬರೆವ ಬದುಕಿನಲ್ಲಿ ಕೊಂಚ ತಡವಾಗಿ, ೧೯೮೦ರಲ್ಲಿ, ತನ್ನ ಮೊದಲ ಕಾದಂಬರಿ ಬರೆದ. ‘ಈ ಕಾದಂಬರಿಗೆ ಯಾವ ಹೆಸರಿಡಲಿ?’ ಎಂದು ಹತ್ತು ಹೆಸರುಗಳನ್ನು ಬರೆದು ಗೆಳೆಯ, ಗೆಳತಿಯರಿಗೆ ಕಳಿಸಿದ. ಅವರು ಆ ಹೆಸರುಗಳಲ್ಲಿ ‘ದ ನೇಮ್ ಆಫ್ ದಿ ರೋಸ್' ಎಂಬ ಟೈಟಲ್ ಆರಿಸಿದರು. ಆದರೆ ಇಕೋ ಕಾದಂಬರಿಯ ಆಶಯವನ್ನು, ವಸ್ತುವನ್ನು ಒಡೆದು ಹೇಳದಿರುವಂಥ ‘Adso of Melk’ ಎಂಬ `ನ್ಯೂಟ್ರಲ್’ ಟೈಟಲ್ ಹುಡುಕಿ ಅದನ್ನೇ ಫೈನಲೈಸ್ ಮಾಡಿದ. ಪ್ರಕಾಶಕರು ಅದನ್ನು ಒಪ್ಪಲಿಲ್ಲ.
ಕೊನೆಗೆ, `ದ ನೇಮ್ ಆಫ್ ದಿ ರೋಸ್’ ಟೈಟಲ್ ಕೊಡುತ್ತಾ ಇಕೋ ಹೇಳಿದ: `ಈ ಹೆಸರಿಟ್ಟಿದ್ದು ನಿಜಕ್ಕೂ ಆಕಸ್ಮಿಕ. `ಗುಲಾಬಿ’ ಎನ್ನುವುದು ಎಷ್ಟೊಂದು ಸಮೃದ್ಧ ಅರ್ಥಗಳನ್ನು ಕೊಡುವ ಸಾಂಕೇತಿಕ ಚಿತ್ರವಾಗಿದೆಯೆಂದರೆ, ಈಗಂತೂ ಅದರಲ್ಲಿ ಇನ್ಯಾವ ಅರ್ಥವೂ ಉಳಿದಂತಿಲ್ಲ.’
`ದ ನೇಮ್ ಆಫ್ ದಿ ರೋಸ್’ ಕಾದಂಬರಿಯ ಐವತ್ತು ಮಿಲಿಯನ್ ಪ್ರತಿಗಳು ಮಾರಾಟವಾದವು. ಕೊಲೆಯ ರಹಸ್ಯವೂ ಕೇಂದ್ರದಲ್ಲಿರುವ ಈ ಕಾದಂಬರಿ ಮುಂದೆ ಅದೇ ಹೆಸರಿನ ಜನಪ್ರಿಯ ಸಿನಿಮಾ ಕೂಡ ಆಯಿತು. ಈ ಕಾದಂಬರಿಯ ಜನಪ್ರಿಯತೆಯಲ್ಲಿ ಗುಲಾಬಿ ಎಂಬ ಹೆಸರಿನ ಆಕರ್ಷಣೆ ಕೂಡ ಸೇರಿರಬಹುದೇನೋ.
ಇಂಗ್ಲಿಷ್ ಕವಯಿತ್ರಿ ಗರ್ಟ್ರೂಡ್ ಸ್ಟೆಯ್ನ್ ಬರೆದ `ಸೇಕ್ರೆಡ್ ಎಮಿಲಿ’ ಪದ್ಯದಲ್ಲಿ ಬರುವ ‘ರೋಸ್ ಈಸ್ ಎ ರೋಸ್ ಈಸ್ ಎ ರೋಸ್ ಈಸ್ ಎ ರೋಸ್’ ಎಂಬ ಪ್ರಖ್ಯಾತ ಸಾಲು ನಿಮ್ಮ ಕಿವಿಗೆ ಬಿದ್ದಿರಬಹುದು. ಈ ಸಾಲಿನಲ್ಲಿ ಗುಲಾಬಿ ಎಂಬ ಒಂದೇ ಸಂಕೇತದ ಪುನರಾವರ್ತನೆ ಹಾಗೂ `ಈಸ್’ ಎಂಬ ಕ್ರಿಯಾಪದದ ಪುನರಾವರ್ತನೆಯ ಹಟಮಾರಿ ಚೀತ್ಕಾರ…ಈ ಎರಡರಿಂದ ಅರ್ಥಸಮೃದ್ಧತೆ ಹುಟ್ಟುವುದನ್ನು ನೀವು ಗಮನಿಸಿರಬಹುದು. `ಗುಲಾಬಿಯನ್ನು ಯಾವ ಹೆಸರಿನಿಂದಾದರೂ ಕರೆಯಿರಿ, ಅದು ಗುಲಾಬಿಯಾಗಿಯೇ ಇರುತ್ತದೆ; ಹಾಗೆಯೇ ಎಮಿಲಿಯ ವ್ಯಕ್ತಿತ್ವದ ಶುಭ್ರತೆ ಕೂಡ’ ಎಂದು ಕೂಡ ಗರ್ಟ್ರೂಡ್ ಸ್ಟೆಯ್ನ್ ಅಲ್ಲಿ ಸೂಚಿಸಿದ್ದರು.
ಅಂಬರ್ತೋ ಇಕೋ ತನ್ನ ಕಾದಂಬರಿಗೆ `ದ ನೇಮ್ ಆಫ್ ದ ರೋಸ್’ ಟೈಟಲ್ ಕೊಟ್ಟಾಗ ಗರ್ಟ್ರೂಡ್ ಸ್ಟೆಯ್ನ್ ಕವಿತೆಯ ಸಾಲನ್ನು ಗಮನಿಸಿರಬಹುದು ಅಥವಾ ಇಲ್ಲದಿರಬಹುದು. ಅನೇಕ ಸಲ ನಾವು ಓದಿದ, ಕೇಳಿದ, ನಮ್ಮೊಳಗಿಳಿದ ಸಂಕೇತ, ರೂಪಕಗಳು ಕೂಡ ಆಧುನಿಕ, ಅತ್ಯಾಧುನಿಕ ಕೃತಿಗಳಲ್ಲಿ ನೇರವಾಗಿ ಅಥವಾ ಮಾರ್ಪಟ್ಟು ಟೈಟಲ್‌ಗಳಾಗುತ್ತವೆ. ನಾನು ಹಿಂದೊಮ್ಮೆ ಬರೆದ ರಮ್ಯ ಪ್ರೇಮಕತೆಯೊಂದಕ್ಕೆ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯೊಂದರಲ್ಲಿರುವ ’ದಾರಿಯೆರಡರ ನಡುವೆ ದಟ್ಟ ಮಂಜು’ (ಮತ್ತೊಬ್ಬ ಸರ್ವಾಧಿಕಾರಿ, ಪಲ್ಲವ ಪ್ರಕಾಶನ) ಎಂಬ ಸಂಕೇತ ಟೈಟಲ್ ಆಗಿದ್ದು ನೆನಪಾಗುತ್ತದೆ!
ನಿಮಗೂ ಹಾಗಾಗಬಹುದು. ಮೇ ಟೈಟಲ್ ಫೈಂಡ್ ಯು!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
`ಕವಿತೆಗೂ ಅದರ ಟೈಟಲ್‌ಗೂ ಏನು ಸಂಬಂಧ?’
ಈ ಪ್ರಶ್ನೆ ಸಾಹಿತ್ಯಪ್ರಕಾರಗಳ ಅನುಸಂಧಾನದ ಚರ್ಚೆಯ ನಡುವೆ ನುಸುಳಿ ಬಂತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮೊನ್ನೆ ನಡೆದ ಕನ್ನಡ ಅಧ್ಯಾಪಕ, ಅಧ್ಯಾಪಕಿಯರ ರಿಫ್ರೆಶರ್ ಕೋರ್ಸ್‌ನಲ್ಲಿ ಈ ಪ್ರಶ್ನೆಗೆ ಕೆಲವು ಉತ್ತರಗಳು ತೇಲಿ ಬಂದವು.
`ಕವಿತೆಯ ಕೇಂದ್ರ ಅರ್ಥ ಟೈಟಲ್‌ನಲ್ಲಿರುತ್ತದೆ’ ಎಂದರು ಮೇಡಂ.
`ಕವಿತೆಯ ತಾತ್ವಿಕತೆ ಕವಿತೆಯ ಟೈಟಲ್‌ನಲ್ಲಿರುತ್ತದೆ’ ಎಂದರು ಮೇಷ್ಟರು.
`ಕವಿತೆಗೊಂದು ಹೆಸರು ಬೇಕೆ?’ ಎಂದರು ಮತ್ತೊಬ್ಬ ಮೇಷ್ಟರು.
`ಕವಯಿತ್ರಿ ಅಥವಾ ಕವಿ ಹೇಗೆ ಮತ್ತು ಯಾಕೆ ಟೈಟಲ್ ಕೊಡುತ್ತಾರೆ ಎಂಬುದು ಯಾರಿಗೆ ಗೊತ್ತು? ಈ ಹೆಸರು ಕವಿತೆಯ ಒಟ್ಟು ಅರ್ಥವನ್ನೋ, ಕೇಂದ್ರ ಅರ್ಥವನ್ನೋ ಹೇಳುತ್ತದೆ ಎಂಬುದಕ್ಕೆ ಖಾತ್ರಿಯೇನು? ಒಂದು ಕವಿತೆಯ ಟೈಟಲ್ ಎಷ್ಟೋ ಸಲ ಆ ಕವಿತೆಯನ್ನು ಒಂದು ನಿರ್ದಿಷ್ಟ ಅರ್ಥಕ್ಕೆ, ನಿರ್ದಿಷ್ಟ ಭಾವಕ್ಕೆ ಕಟ್ಟಿ ಹಾಕಬಹುದಲ್ಲವೆ? ಉದಾಹರಣೆಗೆ, ಹಿಂದೆ ಈ ಅಂಕಣದಲ್ಲಿ ಚರ್ಚಿಸಿರುವ ಬೇಂದ್ರೆಯವರ `ಬೆಳಗು’ ಪದ್ಯದ ಟೈಟಲ್ ಬೆಳಗಿನ ರೂಪಕದ ಸುತ್ತ ಒಂದು ದಿಕ್ಕಿನ ಅರ್ಥವನ್ನು ನಿರ್ದಿಷ್ಟಗೊಳಿಸುತ್ತದೆಯೇ? ಎಷ್ಟೋ ಸಲ ಈ ಟೈಟಲ್‌ಗಳು ಕವಿತೆಯ ನಾನಾರ್ಥಗಳಿಗೆ ಅವಕಾಶ ಕೊಡದೆ, ಇದೇ ಕವಿತೆಯ ಮುಖ್ಯ ಅರ್ಥ ಎಂದು ನಿರ್ದೇಶನ ಮಾಡುತ್ತವೆಯೇ? ಕವಿತೆಯ ಹೆಸರುಗಳು ಅರ್ಥವಿಸ್ತಾರಕ್ಕೆ ಅವಕಾಶ ಮಾಡಿಕೊಡುತ್ತವೆಯೋ, ಇಲ್ಲವೋ?’
…ಹೀಗೆಲ್ಲ ಅನ್ನಿಸಿದ್ದನ್ನು ಅಲ್ಲಿದ್ದ ಅಧ್ಯಾಪಕಿಯರು, ಅಧ್ಯಾಪಕರೊಡನೆ ಹೇಳಿಕೊಳ್ಳುತ್ತಾ, `ಟೈಟಲ್’ ಎಂಬ ಪರಿಕಲ್ಪನೆಯನ್ನು `ಪ್ರಾಬ್ಲಮೆಟೈಸ್’ ಮಾಡಲೆತ್ನಿಸಿದೆ.
“…`ಪ್ರಾಬ್ಲಮೆಟೈಸ್’ ಮಾಡುವುದು ಅಂದರೆ, ನಾವು ಪರೀಕ್ಷಿಸಬೇಕಾದ ಅಥವಾ ಉತ್ತರ ಕಂಡುಕೊಳ್ಳಬೇಕಾದ ಯಾವುದೇ ಐಡಿಯಾ, ಪದ, ನಂಬಿಕೆ ಇತ್ಯಾದಿಗಳನ್ನು ಒಂದು ಪ್ರಶ್ನೆ ಅಥವಾ ಸಮಸ್ಯೆ ಎಂದು ಪರಿಗಣಿಸುವುದು; ಆ ಪದ ಅಥವಾ ಐಡಿಯಾ ಜನರು ಈಗ ತಿಳಿದಿರುವಷ್ಟು ಸರಳವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು.”
ಇದು ಕೇಂಬ್ರಿಡ್ಜ್ ನಿಘಂಟು `ಪ್ರಾಬ್ಲಮೆಟೈಸ್’ ಪರಿಕಲ್ಪನೆಯ ಬಗ್ಗೆ ಕೊಡುವ ಸರಳ ವಿವರಣೆ. ’ಪ್ರಾಬ್ಲಮೆಟೈಸೇಶನ್’ ಎಂಬ ಪದವನ್ನು ಮಕ್ಕಿಕಾಮಕ್ಕಿಯಾಗಿ ‘ಸಮಸ್ಯೀಕರಣ’ ಎಂದು ಕನ್ನಡದಲ್ಲಿ ಅನುವಾದಿಸಿಕೊಂಡಿದ್ದು ಕೊಂಚ ಸಮಸ್ಯಾತ್ಮಕವಾದಂತಿದೆ! ಯಾವುದೇ ಪ್ರಶ್ನೆಯನ್ನಾಗಲಿ ’ಪ್ರಾಬ್ಲಮೆಟೈಸ್’ ಮಾಡುವುದೆಂದರೆ, ಒಂದು ಪ್ರಶ್ನೆಯ ಸರಳ, ಸಿದ್ಧ, ಪರಿಚಿತ ಅರ್ಥದ ಆಚೆಗೆ ಹೋಗಿ ಆ ಪ್ರಶ್ನೆಯನ್ನು ವಿಸ್ತರಿಸಿ, ಪರಿಶೀಲಿಸುವುದು; ಅದರ ಹೊಸ ಮುಖಗಳನ್ನು ಹುಡುಕುವುದು. ಇದನ್ನು ‘ಪ್ರಶ್ನವಿಸ್ತಾರ’ ಅಥವಾ ‘ಸಿದ್ಧ ಅರ್ಥ ಪರಿಶೀಲನೆ’ ಎಂದು ಕೂಡ ಕರೆಯಬಹುದು. ‘ಪ್ರಾಬ್ಲಮೆಟೈಸೇಶನ್’ ಎಂಬ ಪದಕ್ಕೆ ಮತ್ತೊಂದು ಸಂವಾದಿ ಪದ ಹುಡುಕಬಹುದೇ? ಮುಂದೆ ನೋಡೋಣ.
ಅದೇನೇ ಇರಲಿ. ಕವಿತೆಯನ್ನೋ, ಲೇಖನವನ್ನೋ ಪ್ರತಿನಿಧಿಸಲು ಕೊಟ್ಟ ಟೈಟಲ್‌ನ ಕೇಂದ್ರದಿಂದಲೇ ಪದ್ಯವೊಂದನ್ನು ಓದುವುದು ಪದ್ಯದ ಇನ್ನಿತರ, ಅನೇಕ ಓದುಗಳನ್ನು ಕಡೆಗಣಿಸಬಲ್ಲದು. ಒಂದು ಕೇಂದ್ರ ಪ್ರತಿಮೆಯ ಸುತ್ತಲೇ ಕವಿತೆಯನ್ನು ಓದುವುದು ಈ ಕೃತಿಯನ್ನು ಬೇರೆ ಥರವೂ ಓದಲು ಸಾಧ್ಯ ಎಂಬುದನ್ನು ಕಡೆಗಣಿಸುತ್ತಿರುತ್ತದೆ. ಕೆಲವು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯ ‘ಗಾಳಿ ಬೆಳಕು’ ಅಂಕಣದಲ್ಲಿ ಬರೆದ ಲೇಖನವೊಂದರ ವಿವರಗಳನ್ನು ಕೊಂಚ ತಿದ್ದಿ ಇಲ್ಲಿ ಕೊಡುತ್ತಿರುವೆ:
ಕವಿ ಎಲಿಯಟ್ ತನ್ನ ಪ್ರಖ್ಯಾತ ‘ಟ್ರೆಡಿಷನ್ ಅಂಡ್ ದಿ ಇಂಡಿವಿಜುಯಲ್ ಟ್ಯಾಲೆಂಟ್’ ಲೇಖನದಲ್ಲಿ ಜಾನ್ ಕೀಟ್ಸ್‌ನ ‘ಓಡ್ ಟು ಎ ನೈಟಿಂಗೇಲ್’ ಕವಿತೆಯನ್ನು ಪ್ರಸ್ತಾಪಿಸುತ್ತಾನೆ.
ಕವಿತೆಯ ತಲೆಬರಹವನ್ನು ನೋಡುವವರಿಗೆ ಇದು ನೈಟಿಂಗೇಲ್ ಹಕ್ಕಿಯನ್ನು ಕೇಂದ್ರದಲ್ಲಿಟ್ಟುಕೊಂಡು ಅಥವಾ ನೈಟಿಂಗೇಲ್ ಹಕ್ಕಿಯನ್ನು ಉದ್ದೇಶಿಸಿ ಬರೆದ ಓಡ್ ಅಥವಾ ಪ್ರಗಾಥ ಎನ್ನಿಸುತ್ತದೆ. ಇಪ್ಪತ್ತೈದನೆಯ ವಯಸ್ಸಿನಲ್ಲೇ ತೀರಿಕೊಂಡ ಕೀಟ್ಸ್ (೧೩.೧೦.೧೭೯೫-೨೩.೨.೧೮೨೧) ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ, ೧೮೧೯ರಲ್ಲಿ, ಈ ಕವಿತೆ ಬರೆದಿದ್ದ. ಕವಿ ಎಲಿಯಟ್ ಈ ಕವಿತೆಯನ್ನು ನೂರು ವರ್ಷಗಳ ನಂತರ, ೧೯೧೯ರ ಪ್ರಬಂಧದಲ್ಲಿ ಚರ್ಚಿಸಿದ. ಕವಿತೆ ಓದುವಾಗ ಎಲಿಯಟ್‌ಗೆ ಹೀಗೆನ್ನಿಸಿತು: ‘...ಕೀಟ್ಸ್‌ನ ಪದ್ಯದಲ್ಲಿ ತುಂಬಿರುವ ಅನೇಕ ರೀತಿಯ ಭಾವಗಳಿಗೂ ನೈಟಿಂಗೇಲ್ ಹಕ್ಕಿಗೂ ನಿರ್ದಿಷ್ಟ ಸಂಬಂಧವೇನೂ ಇಲ್ಲ. ಆದರೆ ನೈಟಿಂಗೇಲ್ ಎಂಬ ಆಕರ್ಷಕ ಹೆಸರು ಅಥವಾ ಹಕ್ಕಿಗಿರುವ ಕೀರ್ತಿ ಈ ಎಲ್ಲ ಭಾವಗಳನ್ನು ಒಟ್ಟಾಗಿ ತರಲು ಸಹಾಯಕವಾಗಿದೆ.’
ಒಂದು ಕವಿತೆಯ ಬಗ್ಗೆ ಒಬ್ಬ ವಿಮರ್ಶಕ ಬರೆದ ಮಾತು ಇನ್ನೊಂದು ಕವಿತೆಯನ್ನು ಓದುವ ಹಾದಿ ತೋರಿಸಬಲ್ಲದು. ಈ ಅನುಭವ ನನಗೂ ಆಯಿತು. ಕೀಟ್ಸ್ ಕವಿತೆಯ ಬಗ್ಗೆ ಎಲಿಯಟ್ ಬರೆದಿದ್ದನ್ನು ಓದಿದ ಮೇಲೆ ಬೇಂದ್ರೆಯ ‘ಮಲ್ಲಾಡದ ಗಿಣಿ’ ಕವಿತೆಯನ್ನು ಓದುವ ಹೊಸ ಹಾದಿ ತೆರೆಯಿತು. ಈ ಕವಿತೆ ಕೂಡ ಹೀಗೆ ಹಲವು ಭಾವಗಳನ್ನು ತಂದು ಸೇರಿಸುತ್ತದೆ. ಎಲ್ಲ ಉತ್ತಮ ಕವಿತೆಗಳೂ, ಕತೆಗಳೂ ಒಂದು ಕೇಂದ್ರ ಪ್ರತಿಮೆಗೆ ಬಗೆಬಗೆಯ ಸರಕನ್ನು ತಂದು ಜೋಡಿಸುವುದನ್ನು ನೀವು ಗಮನಿಸಿರಬಹುದು.
ಅಂದರೆ, ನಿಮಿತ್ತಮಾತ್ರವಾಗಿ ಒಂದು ಗಿಣಿ ಅಥವಾ ನೈಟಿಂಗೇಲ್ ಕವಿತೆಯ ಆಯಕಟ್ಟಿನ ಸ್ಥಳವೊಂದರಲ್ಲಿ ಕೂತು ಕವಿಯಿಂದ ಏನೇನನ್ನೋ ಹೇಳಿಸಲೆತ್ನಿಸುತ್ತಿರುತ್ತದೆ. ಭಾವಗಳನ್ನು ಒಂದರಿಂದ ಇನ್ನೊಂದಕ್ಕೆ ಹಾರಿಸಲೆತ್ನಿಸುತ್ತಿರುತ್ತದೆ. ಆದರೆ ಅವುಗಳ ಜೊತೆಗೆ ಹಾರಲೊಲ್ಲದ, ಹಾರಲಾಗದ ಓದುಗರು ಅಥವಾ ಕವಿತೆಯ ಸಂದರ್ಭಸೂಚಕರು ‘ಕವಿ ನೈಟಿಂಗೇಲ್ ಬಗ್ಗೆ ಹೀಗೆ ಹೇಳಿದ್ದಾನೆ ಅಥವಾ ‘ಗಿಣಿಯನ್ನು ಈ ರೀತಿ ವರ್ಣಿಸಿದ್ದಾನೆ’ ಎಂದು ಎಲ್ಲವನ್ನೂ ಕವಿತೆಯ ಕೇಂದ್ರಕ್ಕೇ ಆರೋಪಿಸಿ ಮಾತಾಡುತ್ತಿರುತ್ತಾರೆ. ಇದು ಕೇವಲ ಈ ಬಗೆಯ ಓದುಗ, ಓದುಗಿಯರ ಸಮಸ್ಯೆ ಮಾತ್ರ ಅಲ್ಲ. ‘ಕವಿತೆಯೊಂದರಲ್ಲಿ ಬರುವ ಎಲ್ಲವೂ ಕೇಂದ್ರ ಅರ್ಥಕ್ಕೇ ದುಡಿಯಬೇಕು’ ಎಂದು ನಂಬುವ ನವ್ಯ ವಿಮರ್ಶಕರು ಕೂಡ ಈ ತಪ್ಪು ಮಾಡುತ್ತಿರುತ್ತಾರೆ.
ಹಿಂದೆ ಬೇರೊಂದು ಸಂದರ್ಭದಲ್ಲಿ ಬರೆದ ಮಾತುಗಳು ಈಗ ಕವಿತೆಯ ಟೈಟಲ್ ಕುರಿತ ಚರ್ಚೆಗೂ ಒಗ್ಗುವಂತಿರುವರಿಂದ ಇಲ್ಲಿ ಕೊಟ್ಟಿರುವೆ. ಹೀಗೆ ಟೈಟಲ್ ಪರಿಕಲ್ಪನೆಯನ್ನು ‘ಪ್ರಾಬ್ಲಮೆಟೈಸ್’ ಮಾಡುತ್ತಿದ್ದಾಗ, ಲಂಕೇಶರು ತಮ್ಮ ಆತ್ಮಚರಿತ್ರೆ ಬರೆಯುವಾಗ ಕಾಲಕಾಲಕ್ಕೆ ಯೋಚಿಸಿದ ಹೆಸರುಗಳು ನೆನಪಾದವು. ಮೊದಲು ಅವರು ತಮ್ಮ ಆತ್ಮಚರಿತ್ರೆಗೆ ‘ಅರಿವು’ ಎಂದು ಹೆಸರಿಡಬೇಕೆಂದುಕೊಂಡರು. ನಂತರ, ಅದನ್ನು ಶಿಶುನಾಳ ಶರೀಫರ ಸಾಲು ಬಳಸಿ ‘ನನ್ನೊಳಗ ನಾ ತಿಳಕೊಂಡೆ’ ಎಂದು ಕರೆಯಬೇಕೆಂದುಕೊಂಡರು. ಈ ಟೈಟಲ್ ತೀರಾ ಪಾಂಪಸ್ ಅನ್ನಿಸಿತೇನೋ; ನನ್ನೊಳಗನ್ನು ತಿಳಿಯುವುದು ಆತ್ಮಚರಿತ್ರೆಯ ಗುರಿಯಾದರೂ, ‘ತಿಳಕೊಂಡೆ’ ಎನ್ನುವುದು ತೀರಾ ಉಛಾಯಿಸಿ, ಅಹಂಕಾರದಿಂದ ಹೇಳಿದಂತೆ ಆದೀತೇನೋ ಎಂದು ಲಂಕೇಶರಿಗೆ ಅನ್ನಿಸಿರಬಹುದು.
ನಂತರ, ಎಲ್ಲೋ ತಮ್ಮ ಬಾಲ್ಯದಲ್ಲಿ ಕಂಡ ಆಲೆಮನೆಯ ಕಂಪು, ಸಿಹಿ ನೆನಪಾಗಿ ‘ಆಲೆಮನೆ’ಯೇ ಒಳ್ಳೆಯ ರೂಪಕಾತ್ಮಕ ಹೆಸರು ಎಂದು ಲಂಕೇಶರಿಗೆ ಅನ್ನಿಸಿತು. ಕೊನೆಗೆ ಅವರ ಕೈಬರಹ ಟೈಪಾಗಿ, ಅದರ ಮೊದಲ ಪ್ರತಿ ಒಂದು ಸೋನೆ ಮಳೆಯ ಸಂಜೆ ನನ್ನ ಕೈ ಸೇರಿದಾಗ ಅದರ ಹೆಸರು ‘ಹುಳಿಮಾವಿನ ಮರ’ ಆಗಿತ್ತು; ‘ಆಲೆಮನೆ’ಗೆ ವಿರುದ್ಧವಾದ ಹೆಸರು ನಿಕ್ಕಿಯಾಗಿತ್ತು!
ಲಂಕೇಶ್ ತಾರುಣ್ಯದಲ್ಲಿ ‘ಹುಳಿಮಾವಿನ ಮರ’ ಎಂಬ ಪದ್ಯ ಬರೆದಿದ್ದರು. ಕೊನೆಗೆ ‘ಹುಳಿಮಾವಿನ ಮರ’ವೇ ತಮ್ಮ ಆತ್ಮಚರಿತ್ರೆಗೆ ಹೆಚ್ಚು ರೂಪಕಾತ್ಮಕ ಟೈಟಲ್ ಎಂದು ಅವರಿಗೆ ಅನ್ನಿಸಿರಬಹುದು. ಅದೇನೇ ಇರಲಿ, ಕನ್ನಡದ ಅತ್ಯುತ್ತಮ ಆತ್ಮಚರಿತ್ರೆ ಎನ್ನಬಹುದಾದ ಈ ಪುಸ್ತಕದ ತೀವ್ರ ಬರವಣಿಗೆ ಹೇಗಿದೆಯೆಂದರೆ, ಅದು ಬೇರೆ ಯಾವ ಹೆಸರು ಹೊತ್ತು ಬಂದಿದ್ದರೂ ಅದಕ್ಕೆ ಈಗ ಇರುವ ಶ್ರೇಷ್ಠತೆ, ಎತ್ತರ ಇದ್ದೇ ಇರುತ್ತಿತ್ತು.
ಇದೆಲ್ಲದರ ಹಿನ್ನೆಲೆಯಲ್ಲಿ, ಕವಿತೆಗೆ ಹೆಸರಿಡುವ ಕೆಲಸ ಹಾಗೂ ಕವಿತೆಯ ಹೆಸರಿಗೂ ಕವಿತೆಗೂ ಇರುವ ಸಂಬಂಧ ತೀರಾ ಸಂಕೀರ್ಣ ಎಂದಷ್ಟೇ ಸೂಚಿಸಬಯಸುವೆ! ಹೇಳಬೇಕೆಂದರೆ, ಈ ಬರಹದ ಹೆಸರನ್ನೇ ಮೂರು ನಾಲ್ಕು ಸಲ ಬದಲಿಸಬೇಕಾಗಿ ಬಂತು!
ಸಹ ಸ್ಪಂದನ
ಕೆಲವು ವಾರಗಳ ಕೆಳಗೆ ಈ ಅಂಕಣದಲ್ಲಿ ಪ್ರಕಟವಾದ ‘ಕವಿ ಮೂಲ; ಕಾವ್ಯ ಮೂಲ’ ಬರಹದ ಆಲೋಚನೆಗಳನ್ನು ವಿಸ್ತರಿಸುತ್ತಾ, ಕತೆಗಾರ-ಕಾದಂಬರಿಕಾರ ಮಲ್ಲಿಕಾರ್ಜುನ ಹಿರೇಮಠರು ಬರೆದ ಕುತೂಹಲಕರ ಟಿಪ್ಪಣಿ:
“…‘ಕವಿಮೂಲ; ಕಾವ್ಯ ಮೂಲ’ ಓದಿದೆ. ಈ ಮೂಲಗಳು ನಮ್ಮ ಕಲ್ಪನೆಗೆ, ನಮ್ಮ ಹಲವಾರು ಅರ್ಥಸಾಧ್ಯತೆಗಳಿಗೆ ವ್ಯತ್ಯಯ ತರುತ್ತದೆ ಎಂದು ಅನಿಸುತ್ತದೆ. ಬೇಂದ್ರೆಯವರ ‘ಕುಣಿಯೋಣು ಬಾರಾ’ ಕವಿತೆ ಎರಡು ಕಾಗೆಗಳು ಕುಣಿಯೋದನ್ನು ನೋಡಿ ಬರೆದ ಕವಿತೆಯಂತೆ. ಇದನ್ನು ತಿಳಿದ ಮೇಲೆ ನನಗೆ ರಸಭಂಗ ಆದಂತಾಯಿತು. ಆದರೆ ‘ನೀ ಹೀಂಗ ನೋಡಬ್ಯಾಡ’ದಂಥ ಕವಿತೆಗಳಿಗೆ clue, ಸಂದರ್ಭ ಇದ್ದರೆ ಒಳ್ಳೆಯದೇನೋ!”
ಆದರೆ ‘ನೀ ಹೀಂಗ ನೋಡಬ್ಯಾಡ’ ಕವಿತೆಯ ಬಗ್ಗೆ ಲೇಖಕಿಯೊಬ್ಬರಿಗೆ ಹೀಗೆನ್ನಿಸಿತು:
“ಈ ಕವಿತೆಯನ್ನು ಡಿಗ್ರಿ ತರಗತಿಗಳಲ್ಲಿ ಓದುವಾಗ ಹೊಸ ಓದು ಹುಟ್ಟಿತ್ತು. ಆದರೆ ಮುಂದೆ ಬೇಂದ್ರೆ ತಮ್ಮ ಮಗುವಿನ ಸಾವಿನ ಹಿನ್ನೆಲೆಯಲ್ಲಿ ನೊಂದ ಮಡದಿಯನ್ನು ಸಮಾಧಾನ ಮಾಡುವ ಹಿನ್ನೆಲೆಯಿಂದ ಹುಟ್ಟಿದ ಪದ್ಯ ಇದು. ಕವನದ ನಿರೂಪಕನ ಬಡತನ ಮಗುವಿನ ಸಾವಿಗೆ ಕಾರಣವಾಯಿತು… ಇತ್ಯಾದಿ ಅಂಶಗಳು ತಿಳಿಯದಿದ್ದರೆ, ಕವಿತೆಯ ಓದು ಬೇರೆಯೇ ಆಗಿ ಉಳಿಯುತ್ತಿತ್ತು…’
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಕಳೆದ ವಾರ ಅಸ್ಪಷ್ಟವಾಗಿ ಸುತ್ತುತ್ತಿದ್ದ ಒಂದು ವಸ್ತು ಈ ವಾರ ಮತ್ತೆ ಕೆಣಕತೊಡಗಿತು. ಅದಕ್ಕೆ ಕಾರಣವೂ ಇತ್ತು.
ಗಣೇಶಮೂರ್ತಿಯ ವಿಸರ್ಜನೆಯನ್ನೇ ನೆಪವಾಗಿಟ್ಟುಕೊಂಡು ಗಲಭೆ ಸೃಷ್ಟಿಸಲು ಸಮಾಜ ವಿಭಜಕ ಶಕ್ತಿಗಳು ಕೆಲವೆಡೆ ಬೀದಿಗೆ ಬಂದವು. ಸಮಾಜದ ನೆಮ್ಮದಿ ಕೆಡಿಸಲು ಇಂಥ ದುರುಳತನವನ್ನು ಹುಟ್ಟು ಹಾಕುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ವಿಘ್ನನಿವಾರಕ ಎಂದು ಹೊಗಳುವ ದೇವತೆಯನ್ನೇ ವಿಘ್ನಗಳ ಕೇಂದ್ರವಾಗಿಸುವ ವ್ಯವಸ್ಥಿತ ಹುನ್ನಾರಗಳನ್ನು ದೇವರು, ಧರ್ಮಗಳನ್ನು ರಾಜಕೀಯ ಲಾಭದ ಆಚೆಗೆ ನೋಡುವ ಧಾರ್ಮಿಕ ಮನಸ್ಸಿನ ಜನರಾದರೂ ಅರ್ಥ ಮಾಡಿಕೊಳ್ಳಬಹುದೇ? ‘ಭಕ್ತಿಯೆಂಬುದು ತೋರುಂಬ ಲಾಭ’ ಎಂದು ಅಲ್ಲಮಪ್ರಭು ಹೇಳಿದ ಮಾತಿನ ಸತ್ಯವನ್ನು ಅಸಲಿ ಆಧ್ಯಾತ್ಮಿಕ ಜೀವಿಗಳಾದರೂ ಅರಿಯಬಲ್ಲರೆ?
ಕೆಲ ವರ್ಷಗಳ ಕೆಳಗೆ ಗಣೇಶಾಕೃತಿಯ ಸಾಂಕೇತಿಕತೆಗೆ ಮನಸೋತಿದ್ದ ವಿದೇಶಿ ಮಹಿಳೆಯೊಬ್ಬರನ್ನು ಕಂಡಾಗ ಅಚ್ಚರಿಯಾಗಿತ್ತು. ಸ್ವೀಡನ್ನಿನಿಂದ ಬೆಂಗಳೂರಿಗೆ ಬಂದಿದ್ದ ಲೇಖಕ, ಲೇಖಕಿಯರ ತಂಡಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ನಾಟಕ, ಯಕ್ಷಗಾನ, ರಂಗಭೂಮಿಗಳನ್ನು ಪರಿಚಯಿಸುವ ಪ್ರವಾಸವೊಂದನ್ನು ಏರ್ಪಡಿಸಿತ್ತು. ಆಗ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ನನ್ನನ್ನು ಆ ತಂಡದ ಜೊತೆಗೆ ಕಳಿಸಿದ್ದರು. ಆ ಕತೆ ಇಲ್ಲಿ ಅಗತ್ಯವಿಲ್ಲ. ನಾನು ಹೇಳಹೊರಟಿದ್ದು ಆ ತಂಡದಲ್ಲಿದ್ದ ಒಬ್ಬ ಮಹಿಳೆ ಮತ್ತೆ ಮತ್ತೆ ಗಣೇಶನ ಚಿತ್ರಗಳು, ಗಣೇಶನ ಬೊಂಬೆ, ಪುಟ್ಟ ವಿಗ್ರಹಗಳನ್ನು ಹುಡುಕುತ್ತಿದ್ದರ ಬಗ್ಗೆ; ಈ ಅಪರೂಪದ ಕಲಾಕಲ್ಪನೆ ಆಕೆಯನ್ನು ಸೆಳೆದಿದ್ದರ ಬಗ್ಗೆ.
ಪರೀಕ್ಷೆಗೆ ಕೂತ ವಿದ್ಯಾರ್ಥಿನಿಯಂತೆ, ಶಾಪದಿಂದಾಗಿ ಯುದ್ಧ ಕಾಲದಲ್ಲಿ ತಕ್ಕ ಶಸ್ತ್ರವಿದ್ಯೆ ಮರೆತು ಹೋದ ಕರ್ಣನಂತೆ, ನನಗೂ ವಿಸ್ಮೃತಿ ಆವರಿಸುತ್ತಿರುತ್ತದೆ! ಲೋಹಿಯಾ ಮಾಡಿದ್ದ ಗಣೇಶನ ಕತೆಯ ಅನನ್ಯ ವಿಶ್ಲೇಷಣೆಯನ್ನು ಆಕೆಗೆ ಹೇಳಬೇಕೆಂದು ಅವತ್ತು ಹೊಳೆಯಲಿಲ್ಲ. ಇವತ್ತು ವಿದೇಶೀಯರಿರಲಿ, ಮೊದಲು ದೇಶೀಯರಿಗೆ ಈ ಲೋಹಿಯಾ ವಿಶ್ಲೇಷಣೆಯನ್ನು ತಲುಪಿಸಬೇಕಾದ ಅಗತ್ಯ ಈ ಆಧ್ಯಾತ್ಮಿಕ ಅಂಧಕಾರದ ಕಾಲದಲ್ಲಿ ಹೆಚ್ಚು ಇರುವಂತಿದೆ. ಲೋಹಿಯಾರ ‘ರಾಜಕೀಯದ ಮಧ್ಯೆ ಬಿಡುವು’ ಪುಸ್ತಕದಲ್ಲಿರುವ ‘ರಾಮ ಕೃಷ್ಣ ಶಿವ’ ಲೇಖನದಲ್ಲಿ ಬರುವ ಈ ವಿಶ್ಲೇಷಣೆಯನ್ನು (ಕನ್ನಡಕ್ಕೆ: ಕೆ.ವಿ. ಸುಬ್ಬಣ್ಣ) ಇಲ್ಲಿ ಕೊಡುತ್ತಿರುವೆ:
‘ಆನೆಮುಖದ ಗಣೇಶನ ವ್ಯಕ್ತಿತ್ವವೂ ತೀರ ವಿಶಿಷ್ಟವಾದದ್ದೇ. ಒಂದು ರೀತಿಯಿಂದ ಅವನು ತನ್ನ ತಂದೆಯ ಕೈಚಳಕವೇ ಆಗಿದ್ದಾನೆ. ಇನ್ನೊಂದು ರೀತಿಯಿಂದ ತನ್ನ ಸಾವಧಾನ ಪ್ರವೃತ್ತಿಯ, ಆದರೆ ಆಳವಾದ ಬುದ್ಧಿಮತ್ತೆಯ ಸಾಕಾರನಾಗಿದ್ದಾನೆ. ಸಣ್ಣ ಹುಡುಗನಿದ್ದಾಗ ಒಮ್ಮೆ ಅವನ ತಾಯಿ ಸ್ನಾನಕ್ಕೆ ಹೋಗುವಾಗ ಹೊರಗೆ ಈತನನ್ನು ನಿಲ್ಲಿಸಿ, ಯಾರನ್ನೂ ಒಳಗೆ ಬಿಡದಿರುವಂತೆ ಹೇಳಿದಳು. ಅದೇ ಹೊತ್ತಿನಲ್ಲಿ ಶಿವ ಅಲ್ಲಿಗೆ ಬಂದ. ಅವನೋ ಮೊದಲೇ ಶೀಘ್ರಕೋಪಿ; ಗಣೇಶನೋ ಅಚಲನಾದ ಬಂಟ. ಗಣೇಶ ಶಿವನನ್ನು ತಡೆದ; ಶಿವ ಮಗನ ಕುತ್ತಿಗೆ ತರಿದು ಹಾಕಿದ. ಮುಂದೆ ಪಾರ್ವತಿಯ ಶೋಕಕ್ಕೆ ಮೇರೆಯಿಲ್ಲವಾಯಿತು. ಅಷ್ಟರಲ್ಲಿ ಅಲ್ಲೇ ಒಂದು ಆನೆ ಹೋಗುತ್ತಿದ್ದುದು ಕಂಡಿತು. ಶಿವ ಆ ಆನೆಯ ಕುತ್ತಿಗೆಯನ್ನೆ ಕತ್ತರಿಸಿ ಗಣೇಶನಿಗಿಟ್ಟ. ಆಗ ಮನುಷ್ಯ ಬುದ್ಧಿಯೂ ಆನೆಯ ವಿಧೇಯತೆಯೂ ಏಕತ್ರ ಹೊಂದಿಕೊಂಡು, ಜ್ಞಾನಸಾಗರನಾಗಿರುವ ಈ ಗಜದೇವತೆ ಹುಟ್ಟಿದ.’
ಈ ವ್ಯಾಖ್ಯಾನ ಮಾಡುತ್ತಿರುವಾಗಲೇ ಒಂದು ನೈತಿಕ ಪ್ರಶ್ನೆಯೂ ಲೋಹಿಯಾಗೆ ಎದುರಾಗುತ್ತದೆ: ‘ಈ ಸಂದರ್ಭದಲ್ಲಿ ಶಿವ ತನ್ನ ಸಹಜ ಚಾರಿತ್ಯ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲವೆ ಎಂದು ಎಷ್ಟೋ ಸಲ ನನಗೆ ಆಶ್ಚರ್ಯವಾಗಿದೆ. ಶಿವನ ಈ ಕೃತ್ಯ ಸಮರ್ಥನೀಯವೆ? ಗಣೇಶನಿಗೆ ಜೀವ ಮರಳಿ, ಪಾರ್ವತಿಯ ದುಃಖ ತಣಿಯಿತು, ನಿಜ. ಆದರೆ ಜೀವ ಕಳೆದುಕೊಂಡ ಆನೆಮರಿಯ ತಾಯಿಯ ದುಃಖಕ್ಕೆ ಶಿವನ ಕೃತ್ಯ ಕಾರಣವಾಯಿತಲ್ಲವೆ? ಬಹುಶಃ ಈ ಪ್ರಶ್ನೆಯಲ್ಲೇ ಉತ್ತರವೂ ಹೊಳೆಯುವಂತಿದೆ. ಗಜಮುಖನ ಈ ನೂತನ ನಿರ್ಮಿತಿಯಲ್ಲಿ ಹಿಂದಿನ ಗಣೇಶನೂ ಈ ಆನೆಯೂ ಎರಡೂ ಜೀವ ಪಡೆದುಕೊಂಡಂತಾಯಿತು. ಎರಡೂ ಜೀವಗಳು ಇಲ್ಲಿ ಮತ್ತೆ ತಮ್ಮ ಬದುಕನ್ನು ಮುಂದುವರಿಸಿದವು; ಯಾರೂ ಸಾಯಲಿಲ್ಲ. ಜೊತೆಗೆ, ಮನುಷ್ಯ ಮತ್ತು ಆನೆಯ ಈ ಮೋಜಿನ ಮಿಶ್ರಣ ಎಂಥ ನಿತ್ಯಹರ್ಷದ, ನಿತ್ಯಜ್ಞಾನದ ನೂತನ ಸೃಷ್ಟಿಯಾಗಿತ್ತು!’
ಇದು ಲೋಹಿಯಾ ವ್ಯಾಖ್ಯಾನ. ನೀವು ಕೇಳಿರುವ ಗಣೇಶನ ಕತೆ ಇದಕ್ಕಿಂತ ಕೊಂಚ ಭಿನ್ನವಾಗಿರಬಹುದು. ಆದರೆ ಸಾವಿರಾರು ವರ್ಷಗಳ ಕೆಳಗೆ ಈ ಪುರಾಣವನ್ನು ಸೃಷ್ಟಿಸಿದ ಜನರ ಕಲ್ಪನೆಯಲ್ಲಿ ಅರಳಿರುವ ಮಾನವ ಹಾಗೂ ಪ್ರಾಣಿಯ ಸಂಗಮಕ್ಕೆ ಅನೇಕ ಅರ್ಥಗಳಿರಬಹುದು. ಮನುಷ್ಯ ಮೂಲತಃ ಪ್ರಾಣಿಯೇ; ಎಲ್ಲೋ ಆಗಾಗ್ಗೆ ಮಾತ್ರ ಈ ಪ್ರಾಣಿತನ ಮೀರಲು ಮಾನವ ಪ್ರಯತ್ನ ನಡೆಯುತ್ತಿರುತ್ತದೆ. ಮಾನವ ಮನಸ್ಸು ಪ್ರಾಣಿತನವನ್ನು ಮೀರಿದ ಸೃಜನಶೀಲ ಗಳಿಗೆಗಳಲ್ಲಿ ಮಾನವ ಹಾಗೂ ಪ್ರಾಣಿ ಎರಡೂ ಬೆರೆತ ಇಂಥ ವಿಶಿಷ್ಟ ಕಲ್ಪನೆಗಳು ಮೂಡಿರಬಹುದು.
ಲೋಹಿಯಾ ಪ್ರಕಾರ, ‘ಯಾವುದೇ ಜನರ ಪುರಾಣಕಥೆಗಳು ಅವರ ಕನಸು ಮತ್ತು ಕೋಟಲೆಗಳ ದಾಖಲೆಯಾಗಿರುತ್ತವೆ; ಜನರು ಅತ್ಯಂತ ಆಳದಲ್ಲಿ ಸವಿದ, ಅತ್ಯಮೂಲ್ಯವೆಂದು ತಿಳಿದ ಆಸೆಗಳು, ಹಂಬಲಗಳ ಜೊತೆಗೇ, ಬದುಕಿನ ಸರಕಾಗಿರುವ, ಮತ್ತು ಬದುಕಿನ ಸ್ಥಳಿಕ ಹಾಗೂ ಲೌಕಿಕ ಇತಿಹಾಸದ ಸರಕಾಗಿರುವ, ವಿಮೋಚನೆಯೇ ಇಲ್ಲದ ವಿಷಾದ’ಗಳ ದಾಖಲೆಯಾಗಿರುತ್ತವೆ.
ಇದೇ ಲೇಖನದಲ್ಲಿ ಲೋಹಿಯಾ ಬರೆಯುತ್ತಾರೆ: ‘ಪುರಾಣವೆಂಬುದು ತುದಿಯೇ ಇಲ್ಲವೇನೋ ಎನ್ನುವಂಥ ಕಾದಂಬರಿ; ಚಕಚಕಿಸುವ ಅಸಂಖ್ಯ ಕತೆಗಳನ್ನು ಖಚಿತಗೊಳಿಸಿ ಕಟ್ಟಿದ್ದು. ಅದು ಉಪದೇಶಿಸಿದರೆ ಅಥವಾ ರಂಜಿಸಿದರೆ ಕತೆಯ ಭಾಗವಾಗಿ, ಅಷ್ಟೆ. ಹೆಚ್ಚಾಗಿ ಅದು ಸೂರ‍್ಯನ ಹಾಗೆ, ಬೆಟ್ಟಗಳ ಹಾಗೆ, ಫಲವೃಕ್ಷಗಳ ಹಾಗೆ ನಮ್ಮ ಬದುಕಿನ ದೊಡ್ಡ ಭಾಗವೇ ಆಗಿರುತ್ತದೆ. ಮಾವು, ಹಲಸುಗಳು ನಮ್ಮ ದೇಹಧಾತುವೇ ಆಗುತ್ತವೆ; ನಮ್ಮ ರಕ್ತಮಾಂಸಗಳಲ್ಲೆ ಬೆರೆತುಕೊಳ್ಳುತ್ತವೆ; ಹಾಗೆಯೇ ಪುರಾಣ ಕೂಡ ಯಾವುದೇ ಜನಾಂಗದ ದೇಹಧಾತುವಿನ ಭಾಗ; ಅದು ರಕ್ತಗತವಾಗುವಂಥದು ಹಾಗೂ ಮಾಂಸಗತವಾಗುವಂಥದು...’
ಆದರೆ, ‘ಪುರಾಣಕಲ್ಪನೆಗಳನ್ನು ಉದಾತ್ತೀಕರಣದ ಮಾದರಿಗಳಾದ ಮಹಾವ್ಯಕ್ತಿಗಳ ಜೀವನ ಎಂಬಂತೆ ಅಳೆಯ ಹೊರಡುವುದು ಹಾಸ್ಯಾಸ್ಪದವಾದ ಬೆಪ್ಪುತನವಾದೀತು’ ಎಂದು ಕೂಡ ಲೋಹಿಯಾ ಎಚ್ಚರಿಸುತ್ತಾರೆ.
ಜಗತ್ತಿನಾದ್ಯಂತ ಸಮುದಾಯದ ಪುರಾಣಗಳು ಹೇಗೆ ಹುಟ್ಟುತ್ತವೆ ಎಂಬುದರ ಬಗ್ಗೆ ಮನೋವಿಜ್ಞಾನಿ ಕಾರ್ಲ್ ಯೂಂಗ್ ಕೊಡುವ ವ್ಯಾಖ್ಯಾನವನ್ನು ಹಿಂದೊಮ್ಮೆ ಉಲ್ಲೇಖಿಸಿದ್ದೆ: ‘ಪುರಾಣಗಳು ಸಮಷ್ಟಿ ಅಥವಾ ಸಮುದಾಯದ ಅಪ್ರಜ್ಞೆಯಲ್ಲಿರುವ ಕನಸುಗಳು.’ ಅಂದರೆ, ಈ ಪುರಾಣಗಳು ಏಕವ್ಯಕ್ತಿ ಸೃಷ್ಟಿಗಳಲ್ಲ; ಸಾಮೂಹಿಕ ಸೃಷ್ಟಿಗಳು. ಅವುಗಳನ್ನು ಸಮುದಾಯ ಸಮ್ಮತಿಯಿಂದ ಒಪ್ಪಿಕೊಂಡಿರಬಹುದು; ಕೆಲವೊಮ್ಮೆ ಯೋಚಿಸದೆ, ಹುಂಬತನದಿಂದಲೂ ಅನುಸರಿಸಿರಬಹುದು. ಅಂಬೇಡ್ಕರ್ ’ಹಿಂದೂ ಧರ್ಮದ ಒಗಟುಗಳು’ ಪುಸ್ತಕದಲ್ಲಿ ತೋರಿಸುವಂತೆ ಅವುಗಳಲ್ಲಿ ದಮನಕಾರಿ ಪುರಾಣಗಳು, ಯಜಮಾನಿಕೆ ಹಾಗೂ ಭೇದಭಾವಗಳನ್ನು ಸೃಷ್ಟಿಸುವ ಪುರಾಣಗಳೂ ಇರುತ್ತವೆ.
ಆದ್ದರಿಂದಲೇ ಈ ಕಾಲದ ಸಾಹಿತ್ಯ ಕೃತಿಗಳನ್ನು ನಾವು ನೋಡುವ ರೀತಿಯಲ್ಲೇ ಪುರಾಣ ಕತೆಗಳಲ್ಲಿರುವ ಸರ್ವಕಾಲದ ಸತ್ಯಗಳನ್ನೂ, ಅಸತ್ಯಗಳನ್ನೂ ಮುಕ್ತವಾಗಿ ನೋಡುವ ಅಗತ್ಯವಿದೆ. ಕೊನೆಯ ಪಕ್ಷ ಸಾಹಿತ್ಯವನ್ನು ಗಂಭೀರವಾಗಿ ಓದುವವರು ಹಾಗೂ ಕಲಿಸುವವರು ಪ್ರಾಚೀನ ಪುರಾಣಗಳ ಸರ್ವಕಾಲದ ಉತ್ತಮ ಅರ್ಥಗಳನ್ನು ಮುನ್ನೆಲೆಗೆ ತರುವ ಅಗತ್ಯವಿದೆ. ಅವುಗಳಲ್ಲಿ ದಮನಕಾರಿ ಅಂಶಗಳಿದ್ದರೆ ಅವನ್ನೂ ಚರ್ಚಿಸಿ, ತಿರಸ್ಕರಿಸಲೂ ಬೇಕಾಗುತ್ತದೆ.
ಭಸ್ಮಾಸುರನ ಮೃತ್ಯುಹಸ್ತದಂತೆ ಕೋಮುವಾದಿ ರಾಜಕಾರಣ ಎಲ್ಲರ ತಲೆಯ ಮೇಲೆ ಚಾಚಿಕೊಳ್ಳುತ್ತಿದೆ. ಈ ಕರಾಳಹಸ್ತ ಭಾರತದ ಸಾಮೂಹಿಕ ಸೃಜನಶೀಲತೆ ಸೃಷ್ಟಿಸಿದ ಅನನ್ಯ ಪುರಾಣಗಳ ಅರ್ಥಪೂರ್ಣತೆಯನ್ನು ನಾಶಮಾಡದಂತೆ ಕಾಪಾಡುವುದು ಅಸಲಿ ಆಧ್ಯಾತ್ಮಿಕ ಮನಸ್ಸಿನ ಜನರ ಕರ್ತವ್ಯವಾಗಿದೆ; ಹಾಗೆಯೇ ಇದು ಸಾಹಿತ್ಯವನ್ನು ಗಂಭೀರವಾಗಿ ನೋಡುವವರ ಕೆಲಸವೂ ಆಗಿದೆ. ಪುರಾಣಗಳು ಜನರ ಮನಸ್ಸಿನಲ್ಲಿ ಸೃಷ್ಟಿಸುವ ಮಂಪರನ್ನು ಕೂಡ ಲೋಹಿಯಾ ಮತ್ತೊಂದೆಡೆ ಚರ್ಚಿಸುತ್ತಾರೆ. ಆ ಬಗ್ಗೆ ಮುಂದೊಮ್ಮೆ ಮಾತಾಡಬಹುದು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಪ್ರಸಂಗ- ಒಂದು:
ಕುವೆಂಪು ಅವರ ಕುಪ್ಪಳ್ಳಿಯಲ್ಲಿ ಹತ್ತಾರು ವರ್ಷ ಇದ್ದ ಗೆಳೆಯ-ಪ್ರಾಧ್ಯಾಪಕ ಶಿವಾರೆಡ್ಡಿ ಕುವೆಂಪು ಕೃತಿಗಳಲ್ಲಿ ಬರುವ ಜಾಗಗಳನ್ನೆಲ್ಲ ಖುದ್ದು ಮೆಟ್ಟಿ ನೋಡಿದ್ದರು. ಕುಪ್ಪಳ್ಳಿಗೆ ಬರುವ ಲೇಖಕ, ಲೇಖಕಿಯರಿಗೆ; ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆ ಜಾಗಗಳನ್ನು ತೋರಿಸುತ್ತಾ ಕುವೆಂಪು ಮೈಮೇಲೆ ಬಂದವರಂತೆ ವರ್ಣಿಸುತ್ತಿದ್ದರು. ಹಾಗೇ ನನಗೂ ಹಲವು ಜಾಗಗಳನ್ನು ತೋರಿಸಿದರು. ಆ ಅಡ್ಡಾಟ ಕುತೂಹಲಕರವಾಗೇನೋ ಇತ್ತು. ಆದರೆ, `ಕುವೆಂಪು ’ಶಿಲಾತಪಸ್ವಿ’ ಕವಿತೆ ಬರೆಯಲು ಪ್ರೇರಣೆಯಾದ ಶಿಲೆ ಇದೇ ಸಾರ್!’ ಎಂದು ಅವರು ಕಣ್ಣರಳಿಸಿ ಆ ಶಿಲೆಯನ್ನು ತೋರಿಸಿದ ಸಂಜೆ ಮಾತ್ರ ಇದ್ದಕ್ಕಿದ್ದಂತೆ 'ಛೆ! ಈ ಶಿಲೆಯನ್ನು ನೋಡಬಾರದಾಗಿತ್ತು’ ಎನ್ನಿಸಿತು!
ಪ್ರಸಂಗ- ಎರಡು:
ತಮ್ಮ ಪುಸ್ತಕಗಳ ಕಾಡಿನಿಂದ ಅಡಿಗರ ಸಮಗ್ರ ಕಾವ್ಯವನ್ನು ಹುಡುಕಿ ಕೊಡುತ್ತಾ ಗೆಳೆಯ-ವಿಮರ್ಶಕ ದಂಡಪ್ಪ ಆ ಸಂಕಲನದಲ್ಲಿದ್ದ `ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯನ್ನು ಅಡಿಗರು ಬರೆದ `ಸಂದರ್ಭ’ವನ್ನು ನೆನಸಿಕೊಂಡರು: `೧೯೮೦ರ ದಶಕದಲ್ಲಿ ಅಡಿಗರು ಕೋಲಾರ ಜಿಲ್ಲೆಯ ಚಿಂತಾಮಣಿಗೆ ಬಂದಿದ್ದರು. ಅಲ್ಲಿ ಲಕ್ಷ್ಮಣರಾವ್ ಮೊದಲಾದವರು ಏರ್ಪಡಿಸಿದ್ದ ಸಾಹಿತ್ಯಕ ಸಭೆಯಲ್ಲಿ ಭಾಷಣ ಮಾಡಿದರು. ಮುಂದಿನ ವಾರಗಳಲ್ಲಿ `ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯನ್ನು ಪ್ರಜಾವಾಣಿಯಲ್ಲಿ ಪ್ರಕಟಿಸಿದರು.’
ಹಿಂದೊಮ್ಮೆ `ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯಲ್ಲಿ ನನಗೆ ಪ್ರಿಯವಾದ ಸಾಲುಗಳನ್ನು ಇದೇ ಅಂಕಣದಲ್ಲಿ ಉಲ್ಲೇಖಿಸಿದ್ದು ನಿಮಗೆ ನೆನಪಿರಬಹುದು:
ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ
ಮನಸ್ಸು, ಮನಸ್ಸಿನ ಶೇಕಡಾ ತೊಂಬತ್ತು ಪಾಲು; ಕಣ್ಣು
ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ,
ಬಡಿತಕ್ಕೆ ತಕ್ಕ ಪ್ರತಿ ಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ.
ಈ ಕವಿತೆಯನ್ನು ನಾನು ಕ್ಲಾಸಿನಲ್ಲಿ ಚರ್ಚಿಸುವಾಗ ದಂಡಪ್ಪನವರು ಹೇಳಿದ್ದ ಕವಿತೆ ಹುಟ್ಟಿದ ಸಂದರ್ಭವನ್ನೂ ಹುಡುಗ, ಹುಡುಗಿಯರಿಗೆ ಹೇಳಿದೆ. ಆದರೆ ಕ್ಲಾಸಿನ ನಂತರ `ಛೇ! ಈ ಸಂದರ್ಭ ನನಗೆ ಗೊತ್ತಾಗದಿದ್ದರೆ ಚೆನ್ನಾಗಿರುತ್ತಿತ್ತು’ ಎನ್ನಿಸತೊಡಗಿತು. ನಿಜಕ್ಕೂ ಬೇಜಾರಾಯಿತು! ಆ ಬೇಜಾರಿಗೂ ಕಾವ್ಯದ ಓದನ್ನು ಕುರಿತ ನನ್ನ ನಂಬಿಕೆಗೂ ಸಂಬಂಧವಿತ್ತು. `ಕವಿತೆ ಹುಟ್ಟಿದ ಸಂದರ್ಭ ಇದು’ ಎಂದು ಕವಿತೆ ಬರೆದವರು ಹೇಳುವುದನ್ನು ಬಿಟ್ಟು ಕವಿತೆ ಓದಿದರೆ ಮಾತ್ರ ಹೊಸ ಓದು ಹುಟ್ಟುತ್ತದೆ ಎಂದು ನಂಬುವ ಸ್ಕೂಲ್‌ಗೆ ಸೇರಿದವನು ನಾನು.
ಅದಕ್ಕೇ `ಶಿಲಾತಪಸ್ವಿ’ ಕವಿತೆಗೆ ಸ್ಫೂರ್ತಿಯಾದ ಶಿಲೆಯ ವಿವರ, ಅಥವಾ `ಚಿಂತಾಮಣಿಯಲ್ಲಿ ಕಂಡ ಮುಖ’ ಹುಟ್ಟಿದ ಸಂದರ್ಭದ ವಿವರ ನನಗೆ ಗೊತ್ತಾಗದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸಿದ್ದು! ಕಾರಣ, ಕವಿತೆ ಹುಟ್ಟಿದ ಸಂದರ್ಭ ಕೆಲವೊಮ್ಮೆ ನಮ್ಮನ್ನು ಸುಗ್ಗಿ ಕಣದ ಮೇಟಿಗೆ ಕಟ್ಟಿದ ಎತ್ತಿನಂತೆ ಅಲ್ಲೇ ಸುತ್ತರಗಾಣ ಹೊಡೆಸುತ್ತದೆ. ಕವಿತೆ ಹುಟ್ಟಿದ ಹಿನ್ನೆಲೆ, ಸಂದರ್ಭಗಳ ಆಚೆಗೆ ಹೊರಡಲು ಒಲ್ಲದವರನ್ನಂತೂ ಮೇಟಿಗೇ ಕಟ್ಟಿಹಾಕಿಬಿಡುತ್ತದೆ.
ಅದೇನೇ ಇರಲಿ, ಕವಿತೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಹುಟ್ಟಿತೋ, ಅಥವಾ ಕವಿಚಿತ್ತದಲ್ಲಿ ಎಷ್ಟೋ ದಿನಗಳಿಂದ, ಎಷ್ಟೋ ವರ್ಷಗಳಿಂದ ಹಾದು ಹೋಗುತ್ತಿದ್ದ ಭಾವಗಳು, ಐಡಿಯಾಗಳು ಆ ಗಳಿಗೆಯಲ್ಲಿ ತಕ್ಕ `ವಸ್ತು ಪ್ರತಿರೂಪ’ವನ್ನು ಕಂಡುಕೊಂಡವೋ…ಹೇಳುವುದು ಕಷ್ಟ!
ತಮ್ಮ ಕವನ ಸಂಕಲನಗಳ ಕೊನೆಯಲ್ಲಿ ಕವಿತೆಯ ಸಂದರ್ಭಸೂಚಿಗಳನ್ನು ಪ್ರಕಟಿಸುತ್ತಿದ್ದ ಬೇಂದ್ರೆ ಈ ಕುರಿತ ಪ್ರಶ್ನೆಯೊಂದಕ್ಕೆ ಕೊಟ್ಟ ಉತ್ತರ ಕುತೂಹಲಕರವಾಗಿದೆ: ಬೇಂದ್ರೆಯವರ ಕವಿತೆಯೊಂದು ಕಾಲೇಜು ಪಠ್ಯವಾಗಿತ್ತು. ಕನ್ನಡ ಅಧ್ಯಾಪಕರಾಗಿದ್ದ ಬೇಂದ್ರೆಯವರ ಮಗ ವಾಮನ ಬೇಂದ್ರೆ ಕ್ಲಾಸಿನಲ್ಲಿ ಈ ಕವಿತೆಯನ್ನು ಪಾಠ ಮಾಡುವಾಗ ಅರ್ಥದ ತೊಡಕು ಎದುರಾಯಿತು. ಮನೆಗೆ ಬಂದು ತಂದೆಯನ್ನು ಈ ಭಾಗದ ಅರ್ಥವೇನೆಂದು ಕೇಳಿದರು. `ನಂಗೊತ್ತಿಲ್ಲ’ ಎಂದ ಬೇಂದ್ರೆ, ತಬ್ಬಿಬ್ಬಾದ ಪ್ರೊಫೆಸರ್ ಮಗನನ್ನು ಕುಟುಕಿದರು: ‘ನಾನೇನೋ ಮನೆಯಲ್ಲಿ ನಿನಗೆ ಸಿಕ್ಕಿದೆ; ಆ ಕವಿತೆಯ ಅರ್ಥ ಕೇಳಿದೆ. ಪಂಪನ ಕಾವ್ಯದಲ್ಲಿ ಈ ಸಮಸ್ಯೆ ಬಂದರೆ ಅದನ್ನು ಕೇಳಲು ಪಂಪನ ಬಳಿ ಹೋಗುತ್ತೀಯೇನು?’
ಇದು ನಡೆದ ಘಟನೆಯೋ, ಕವಿ ಸುತ್ತಣ ಉಪಕತೆಯೋ ತಿಳಿಯದು. ಆದರೆ ಕವಿತೆಯ ಅರ್ಥ ಕವಿಯಲ್ಲಿದೆಯೋ, ಕವಿತೆಯಲ್ಲಿದೆಯೋ, ಓದುವವರಲ್ಲಿದೆಯೋ ಎಂಬ ಪ್ರಶ್ನೆಯನ್ನು ಈ ಅಂಕಣದಲ್ಲಿ ಪದೇ ಪದೇ ಎದುರಾಗುವ ನನಗೆ ಬೇಂದ್ರೆಯವರ ಉತ್ತರ ಅರ್ಥಪೂರ್ಣ ಎನ್ನಿಸಿತು. ಇಂಗ್ಲಿಷ್ ಕವಿ ವಿಲಿಯಂ ಬ್ಲೇಕ್, `ದಿಸ್ ಪೊಯೆಮ್ ಈಸ್ ಮೈನ್, ಬಟ್ ನಾಟ್ ಮೈನ್’ (`ಈ ಕವಿತೆ ನನ್ನದು; ಆದರೆ ನನ್ನದಲ್ಲ’) ಎಂದಿದ್ದು ನೆನಪಾಗುತ್ತದೆ.
ಕವಿ ಕೂಡ ತಾನು ಬರೆದ ಕವಿತೆಯ ಸಂದರ್ಭ, ಹಿನ್ನೆಲೆಗಳ ಆಚೆಗಿನ ಹೊಸ ಅರ್ಥ ಕೊಡುವವರನ್ನು ಕಂಡು ಪುಳಕಗೊಳ್ಳುವುದು ಸಹಜ. ಹೊಸ ತಲೆಮಾರಿನ ಕವಿ ದಾದಾಪೀರ್ ಜೈಮನ್ ’ಲೋಕಚರಿತ’ದ ಸಭೆಯಲ್ಲಿ ತಮ್ಮ ಕವಿತೆ ಓದಿದಾಗ, `ನಿಮ್ಮ ಕವಿತೆಯಲ್ಲಿ ಬರುವ ’ಕಾದರು’ ಎಂಬ ಪದಕ್ಕೆ `ಕಾಯುವಿಕೆ’, `ಕಾವು’, `ಬಿಸಿ’ ಎಂಬ ಎರಡುಮೂರು ಅರ್ಥಗಳಿವೆ!’ ಎಂದೆ. ಜೈಮನ್ ಚಕಿತರಾದರು; ಖುಷಿಯಾದರು!
ಒಂದು ದಿನ `ಕಾವ್ಯಾರ್ಥ ಚಿಂತಾಮಣಿ’ (ಇದು ಇದೀಗ ಹೊಳೆದ ಬಣ್ಣನೆ!) ಕಿ.ರಂ. ನಾಗರಾಜರ ಬೆಂಗಳೂರಿನ ಡಿ.ವಿ.ಜಿ. ರಸ್ತೆಯ ಮನೆಗೆ ಬೇಂದ್ರೆ ಇದ್ದಕ್ಕಿದ್ದಂತೆ ಬಂದಿದ್ದನ್ನು ಕೀರಂ ಹೇಳಿದ ಗಳಿಗೆಯ ಸಂಭ್ರಮದ ಮುಖ ಚೆನ್ನಾಗಿ ನೆನಪಿದೆ. ಬೇಂದ್ರೆಯವರು ಕೀರಂ ತಮ್ಮ ಕವಿತೆಗಳಿಗೆ ಕೊಡುವ ಹೊಸ ಹೊಸ ಅರ್ಥ ಕೇಳಿಸಿಕೊಳ್ಳಲು ಬಂದಿರಲೂಬಹುದು; ಈ ಇಬ್ಬರ `ಮಾತು ಮಾತು ಮಾತು ಮಥಿಸಿ’ ಕಾವ್ಯದ `ನವನೀತ’ ಹುಟ್ಟಿರಬಹುದು… ಇವೆಲ್ಲ ನನ್ನ ಸುಂದರ ಊಹೆಗಳು! ಅವರಿಬ್ಬರ ನಡುವೆ ಏನೇನು ಮಾತುಕತೆ ನಡೆಯಿತೋ…ಅದನ್ನೆಲ್ಲ ಕಿರಂ ಅವತ್ತು ಹೇಳುವುದನ್ನು ಮರೆತರು; ನಾನು ಕೇಳುವುದನ್ನು ಮರೆತೆ. ಮನುಷ್ಯ ಅಮರ ಎಂಬ ಭ್ರಮೆಯಲ್ಲಿ ನಾವು ಕೇಳಬೇಕಾದುದನ್ನು ಕೇಳದೆ ಮುಂದೂಡುತ್ತೇವೆ; ಹಲವರ ವಿಚಾರದಲ್ಲಿ ನನಗೆ ಹೀಗೇ ಆಗಿದೆ ಎನ್ನಿಸಿ ಇವತ್ತು ಪಿಚ್ಚೆನ್ನಿಸಿತು; ಇನ್ನುಮುಂದೆ ಹೀಗೆ ಮಾಡಬಾರದು ಎಂದುಕೊಂಡೆ.
ಕವಿತೆ ಹುಟ್ಟಿದ ಸಂದರ್ಭ ಕುರಿತ ಪ್ರಶ್ನೆಗಳನ್ನು ಕುರಿತು ಈ ಅಂಕಣದಲ್ಲಿ ಆಗಾಗ್ಗೆ ಬರೆದಿರುವೆ. ಕನ್ನಡ ರಿಫ್ರೆಶರ್ ಕೋರ್ಸುಗಳಲ್ಲಿ, ’ಬೇಂದ್ರೆ ತಮ್ಮ ಕವನ ಸಂಕಲನಗಳ ಕೊನೆಯಲ್ಲಿ ಕೊಡುವ ಸಂದರ್ಭಸೂಚಿಗಳು ಬೇಕೋ ಬೇಡವೋ?’ ಎಂದು ಕೇಳುತ್ತಿರುತ್ತೇನೆ. ಬೇಂದ್ರೆ ವಾಮನ ಬೇಂದ್ರೆಗೆ ಕೊಟ್ಟ ಉತ್ತರ ನೋಡಿದರೆ, ಸ್ವತಃ ಬೇಂದ್ರೆ ಕೂಡ ಆ ಸಂದರ್ಭಸೂಚಿಗಳ ಬಗ್ಗೆ ಹೆಚ್ಚು ನಂಬಿಕೆ ಇರಿಸಿಕೊಂಡಿರಲಿಕ್ಕಿಲ್ಲ ಎನ್ನಿಸುತ್ತದೆ!
ಆದರೂ `ಕವಿತೆ ಓದಲು ಈ ಬಗೆಯ ಸಂದರ್ಭಸೂಚಿಗಳ ಊರುಗೋಲು ಬೇಕು’ ಎಂದು ಹೇಳುವ ಮೇಡಂ, ಮೇಷ್ಟ್ರುಗಳ ಸಂಖ್ಯೆ ದೊಡ್ಡದಿದೆ ಎಂಬುದನ್ನು ಗಮನಿಸಿರುವೆ. `ಪರೀಕ್ಷೆಯಲ್ಲಿ ಉತ್ತರ ಬರೆಯಲು ಇವು ಬೇಕಾಗುತ್ತವೆ’ ಎನ್ನುವವರೂ ಇದ್ದಾರೆ. ಇಂಥವರ ನಡುವೆ ಕವಿತೆಯನ್ನು ಹಿಡಿದು, ಮುಟ್ಟಿ, ನುಡಿಸುವ ಆನಂದಮಯ ಸವಾಲನ್ನೇ ಕೈಗೆತ್ತಿಕೊಳ್ಳದೆ, ಕವಿತೆಯೊಳಗಣ ಪಯಣವನ್ನೇ ಅನುಭವಿಸದೆ, ಬಾಯಿಗೆ ಬಂದದ್ದನ್ನು ಒದರುವ `ಪ್ರೊಫೆಸರ್’ಗಳೂ ಸಾಕಷ್ಟಿದ್ದಾರೆ. ಎಷ್ಟೋ ಕಾಲೇಜು ಕನ್ನಡ ಪಠ್ಯಗಳಲ್ಲಿ ಸಂಪಾದಕರು ಕವಿತೆಗಳಿಗೆ ಬರೆದಿರುವ ವಿವರಣೆ ನೆನಸಿಕೊಂಡರೆ ಗಡಗಡ ನಡುಕ ಹುಟ್ಟುತ್ತದೆ!
ಓದುಗಿ-ಓದುಗ ಸ್ಪಂದನ
ಹಿಂದೆ ಇದೇ ಅಂಕಣದಲ್ಲಿ `ಅತ್ತಲಿತ್ತ ಹರಿದಾಡುವ ಜಾಣ ಕಣ್ಣು’ (READ HERE) ಎಂಬ ಲೇಖನದಲ್ಲಿ `ಚಿಂತಾಮಣಿಯಲ್ಲಿ ಕಂಡ ಮುಖ’ ಕುರಿತು ಬರೆದಾಗ ಕನ್ನಡ ಪ್ರಾಧ್ಯಾಪಕಿಯೊಬ್ಬರು ಅದಕ್ಕೆ ಮತ್ತೊಂದು ವ್ಯಾಖ್ಯಾನ ಬರೆದಿದ್ದರು:
`ಭಾಷಣಕಾರರ ಹಾಗೆಯೇ ಕೇಳುಗರಿಗೂ ಭಾಷಣಕಾರ ಇಷ್ಟವಾದರೆ, ಅವರು ನಮ್ಮ ಕಡೆ ನೋಡಿಕೊಂಡು ಮಾತಾಡಲಿ ಅನ್ನಿಸುತ್ತೆ! ಹಾಗಾದಾಗ, ಆತನಕ ಇದ್ದ ನಮ್ಮ ಭಂಗಿಯನ್ನು ಸರಿ ಮಾಡಿಕೊಳ್ಳುವುದೋ; ಆತನಕ ಇರದಿದ್ದ ಗಾಂಭೀರ್ಯ ಇದ್ದಕ್ಕಿದ್ದ ಹಾಗೆ ಬಂದಂತೆಯೋ; ಒಂಥರಾ ಅಸ್ವಸ್ಥತೆ ಉಂಟಾದಂತೆಯೋ…ಹೀಗೆಲ್ಲ ಆಗಿದೆ. ಅದರಲ್ಲೂ ನನ್ನ ಇಷ್ಟದ, ನಾನು ಗೌರವಿಸುವ, ಅಭಿಮಾನ ಪಡುವ ಗುರುಗಳು ಮಾತಾಡುವಾಗ ಹಾಗನ್ನಿಸಿರೋದುಂಟು. ಇದು ಕೇಳುಗರ angle.’
ನಾನು ಈ ದಿಕ್ಕಿನಲ್ಲಿ ಯೋಚಿಸಿರಲೇ ಇಲ್ಲ! ಪುಳಕ ಹುಟ್ಟಿತು. ಪ್ರತಿಭೆ ಕುರಿತ ಭಾರತೀಯ ಕಾವ್ಯಮೀಮಾಂಸೆಯಲ್ಲಿ ನವ ನವ ಅರ್ಥಗಳನ್ನು ಹೊಳೆಯಿಸುವುದು; ಹೇಳುವ ನವ ನವ ರೀತಿಗಳನ್ನು ಹೊಳೆಯಿಸುವುದು ಎರಡೂ ಪ್ರತಿಭೆಯ ಕೆಲಸವೇ ಎನ್ನುತ್ತಾರೆ. ಈ ಮಾತು ಓದುಗಿಯರ, ಓದುಗರ ಪ್ರತಿಭೆಗೂ ಅನ್ವಯಿಸುತ್ತದೆ. ಪ್ರತಿಭೆ ಕುರಿತ ಈ ವ್ಯಾಖ್ಯಾನಗಳು ಸಂಸ್ಕೃತದಲ್ಲಿವೆ ಎಂದೋ, ಕೋಲರಿಜ್‌ನ ಪ್ರತಿಭೆಯ ವ್ಯಾಖ್ಯಾನ ಇಂಗ್ಲಿಷಿನಲ್ಲಿದೆ ಎಂದೋ ಕಣ್ಣು ಕಿವಿ ಮುಚ್ಚಿಕೊಂಡರೆ, ನಷ್ಟ ನಮಗೇ ಹೊರತು, ಎಂದೋ ತೀರಿಹೋದ ಆ ಕಾವ್ಯತತ್ವಜ್ಞಾನಿಗಳಿಗಲ್ಲ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಸೌತ್‌ಈಸ್ಟ್ ಏಷ್ಯನ್ ಸಂಸ್ಥೆಯ ಮೇಡಂಗಳು, ಮೇಷ್ಟ್ರುಗಳ ಜೊತೆ ಮಾತಾಡುತ್ತಾ ‘ನಿಮ್ಮ ಪ್ರಕಾರ ಟೀಚಿಂಗ್ ಎಂದರೇನು?’ ಎಂದೆ. ಅವತ್ತು ಗೆಳೆಯ-ಪ್ರಿನ್ಸಿಪಾಲ್ ಮುತ್ತೇಗೌಡರು ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮಿನಲ್ಲಿ ಮಾತಾಡಲು ಕರೆದಿದ್ದರು. ‘ಟೀಚಿಂಗ್ ಎಂದರೆ ನಿರಂತರ ಕಲಿಕೆ’ ಎಂದರು ಒಬ್ಬ ಮೇಡಂ.
ಅಲ್ಲೇ ತೆರೆಯ ಮೇಲೆ ನನ್ನ ಪವರ್ ಪಾಯಿಂಟ್ ಮಂಡನೆಯಲ್ಲಿದ್ದ ಝೆನ್ ಸಾಲು ಇದನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುತ್ತಿತ್ತು: ‘ದೇರ್ ಆರ್ ನೋ ಟೀಚರ್ಸ್; ವಿ ಆರ್ ಆಲ್ ಲರ್ನರ್‍ಸ್’. (‘ಟೀಚರ್ಸ್ ಅಂತ ಯಾರೂ ಇರುವುದಿಲ್ಲ; ನಾವೆಲ್ಲ ಕಲಿಯುವವರೇ’). ಈ ಝೆನ್ ಮಾತು ಹುಸಿ ವಿನಯದ ಮಾತೇನಲ್ಲ; ನನಗಂತೂ ಇದು ನಿತ್ಯ ಅನುಭವಕ್ಕೆ ಬರುತ್ತಿರುತ್ತದೆ.
ಅವತ್ತಿನ ಮಾತಿನಲ್ಲಿ ಹಿಂದೆ ಇದೇ ಅಂಕಣದಲ್ಲಿ ಬರೆದಿದ್ದ ನಟ ಇರ್ಫಾನ್‌ಖಾನ್ ಮಾತನ್ನು ನೆನಪಿಸಿದೆ: ‘ನಾಟಕದಲ್ಲಿ ಆ್ಯಕ್ಟ್ ಮಾಡೋಕೆ ನನಗೆ ನಿಜಕ್ಕೂ ಇಷ್ಟ. ಆದರೆ ಇವತ್ತು ನಟನೆ ಮಾಡಿದಂತೆ ನಾಳೆ ಮಾಡಬಾರದು; ಇದು ನನ್ನಾಸೆ. ನಟನೆ, ಡೈಲಾಗ್ ಡೆಲಿವರಿ… ಎಲ್ಲದರಲ್ಲೂ ನಾಳಿನ ಪ್ರಯೋಗ ಬೇರೆಯದೇ ಆಗಿರಬೇಕು.’ ಇರ್ಫಾನ್ ಮಾತು ಟೀಚಿಂಗ್, ಬರವಣಿಗೆ, ನೃತ್ಯ, ಸಂಗೀತ ಎಲ್ಲದಕ್ಕೂ ಅನ್ವಯಿಸುತ್ತದೆ ಎಂಬುದು ನಂತರ ಹೊಳೆಯಿತು.
ಅವತ್ತು ‘ಟೀಚಿಂಗ್ ಎಂದರೇನು?’ ಎಂದು ಕೇಳುತ್ತಾ, ‘ಟೀಚಿಂಗ್ ಬಗ್ಗೆ ನಿಮ್ಮ ಅನುಭವದಿಂದ ಹುಟ್ಟಿರುವ ಡೆಫನಿಶನ್ ಮಾತ್ರ ಹೇಳಿ; ಟೀಚರ್ಸ್ ಡೇ quotes, ಗುರು ವಿಷ್ಣು, ಗುರು ಬ್ರಹ್ಮ…ಇವನ್ನೆಲ್ಲ ಹೇಳಬೇಡಿ’ ಎಂದಿದ್ದೆ. ಆದರೂ ಇಂಡಿಯಾದಲ್ಲಿ ‘ಗುರು’ ಎಂಬ ಕಲ್ಪನೆ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಇಲ್ಲಿ ತಮ್ಮ ರಾಜಕೀಯ ಮುಂದಾಳುಗಳನ್ನು ಕೂಡ ಜನರು ಗುರುಗಳಂತೆ, ತಮ್ಮ ಮಾರ್ಗದರ್ಶಕರಂತೆ ಕಾಣುತ್ತಾರೆ ಎಂಬುದನ್ನು ರಿಚರ್ಡ್ ಲ್ಯಾನಾಯ್ ‘ದ ಸ್ಪೀಕಿಂಗ್ ಟ್ರೀ’ ಪುಸ್ತಕದಲ್ಲಿ ಗುರುತಿಸುತ್ತಾನೆ.
‘ಗುರು’ ಎಂಬುದಕ್ಕೆ ಈ ಅರ್ಥ ಸ್ವಾತಂತ್ರ‍್ಯ ಚಳುವಳಿಯ ಕಾಲದ ನಿಸ್ವಾರ್ಥಿ ನಾಯಕರನ್ನು ನೋಡಿ ಕೂಡ ಹುಟ್ಟಿರಬಹುದು ಎಂದು ನನಗನ್ನಿಸುತ್ತದೆ. ಜನರು ನೆಹರೂರನ್ನು ‘ಪಂಡಿತ್‌ಜೀ’ ಎಂದಿದ್ದನ್ನು ಹಾಗೂ ಗಾಂಧೀಜಿ ರವೀಂದ್ರನಾಥ ಟ್ಯಾಗೋರರನ್ನು ‘ಗುರುದೇವ್’ ಎಂದಿದ್ದನ್ನು ಲ್ಯಾನಾಯ್ ಉದಾಹರಿಸುತ್ತಾನೆ. ಮುಂದೊಮ್ಮೆ ಜನ ಅಂಬೇಡ್ಕರ್ ಅವರನ್ನು ‘ಬಾಬಾಸಾಹೇಬ್’ ಎಂದಿದ್ದನ್ನು, ಲೋಹಿಯಾರನ್ನು ‘ಡಾಕ್ಟರ್ ಸಾಹೇಬ್’ ಎಂದಿದ್ದನ್ನು ನೋಡಿದಾಗ, ಇವರೆಲ್ಲ ತಮಗೆ ಸರಿ ದಾರಿ ತೋರಿಸುವ ಗುರುಗಳು ಎಂಬ ಭಾವ ಜನರಲ್ಲಿರುವುದು ಹೊಳೆಯುತ್ತದೆ.
ಲ್ಯಾನಾಯ್ ಪ್ರಕಾರ ಇಂಡಿಯಾದಲ್ಲಿ ‘ಗುರು ಎನ್ನುವುದು ಒಂದು ಮಾನಸಿಕ ಅಗತ್ಯ’ ಕೂಡ. ಆದರೂ ಅವರ ಪುಸ್ತಕದ ‘ಗುರು’ ಎಂಬ ಪದ ಗಂಡನ್ನೇ ಸೂಚಿಸುತ್ತಿದೆಯಲ್ಲ ಎಂದು ಎಂದಿನಂತೆ ಮುಜಗರ ಹುಟ್ಟಿ, ಟೀಚರ್ ಎಂಬ ಪದ ಬಳಸಿರುವೆ.
ನೀವು ಎಷ್ಟೇ ಬೆಳೆದು, ಏನೇ ಆಗಿರಿ; ನೀವು ಸೂಕ್ಷ್ಮ ಮನಸ್ಸಿನವರಾಗಿದ್ದರೆ, ಟೀಚರ್ ಎಂಬ ಪದಕ್ಕಿರುವ ತೂಕ ನಿಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿರುತ್ತದೆ. ನಮ್ಮ ಹೈಸ್ಕೂಲ್ ಮೇಷ್ಟ್ರು ಎಚ್.ಕೆ. ರಾಮಯ್ಯನವರು ಸುಮಾರು ಮೂವತ್ತೇಳು ವರ್ಷಗಳ ನಂತರ ನನ್ನ ರೂಮಿಗೆ ಅಡಿಯಿಡುತ್ತಲೇ ‘ಗುರುತು ಸಿಕ್ತೇನಪ್ಪಾ?’ ಎಂದು ಒಳಬಂದರು; ಅವರ ದನಿ ಕೇಳಿದ ತಕ್ಷಣ, ನನಗರಿವಿಲ್ಲದೆಯೇ ಥಟ್ಟನೆ ಎದ್ದು ನಿಂತೆ. ಅವರು ತೀರಾ ಗೌರವದಿಂದ ನನ್ನನ್ನು ಮಾತಾಡಿಸತೊಡಗಿದಾಗ ಸಂಕೋಚದಿಂದ ಕುಗ್ಗಿದೆ.
ರಾಮಯ್ಯ ಮೇಷ್ಟರ ಬಗೆಗಿನ ಗೌರವಕ್ಕೆ ಅವರ ಕನ್ನಡ ಟೀಚಿಂಗಿನ ಜೊತೆಗೇ ಮತ್ತೊಂದು ಕಾರಣವೂ ಇತ್ತು: ಎಂ.ಎ. ಓದಲು ಹೊರಟಿದ್ದ ನಾನು ಹಾಸ್ಟೆಲ್ ಫೀಸ್ ಇತ್ಯಾದಿಗಳಿಗಾಗಿ ಬ್ಯಾಂಕ್ ಲೋನ್‌ಗೆ ಅರ್ಜಿ ಹಾಕಿದ್ದೆ; ಬ್ಯಾಂಕ್ ಅಧಿಕಾರಿಯೊಬ್ಬರು ‘ಅರ್ಜಿಗೆ ಶೂರಿಟಿ ಹಾಕಿಸಿಕೊಂಡು ಬಾ’ ಎಂದರು. ಸುಮ್ಮನೆ ಅಲ್ಲೇ ನಿಂತಿದ್ದೆ. ಬ್ಯಾಂಕಿಗೆ ಬಂದಿದ್ದ ರಾಮಯ್ಯ ಮೇಷ್ಟ್ರಿಗೆ ಅಧಿಕಾರಿಯ ಮಾತು ಕೇಳಿಸಿತ್ತು. ಮೇಷ್ಟ್ರು ನನ್ನತ್ತ ತಿರುಗಿ ನೋಡಿದವರೇ, ನನ್ನತ್ತ ಬಂದರು; ಅರ್ಜಿ ತೆಗೆದುಕೊಂಡವರೇ ಶೂರಿಟಿ ಹಾಕಿ ಹೊರಟರು. ಅವತ್ತು ಅವರಿಗೆ ಥ್ಯಾಂಕ್ಸ್ ಹೇಳಿದ್ದು ಕೂಡ ನನಗೆ ನೆನಪಿಲ್ಲ! ಆದರೆ ಆ ಗಳಿಗೆ ಹುಟ್ಟಿದ ಜೀವಮಾನದ ಕೃತಜ್ಞತೆ ಹಾಗೇ ಉಳಿದಿದೆ.
‘ಯಾರು ಟೀಚರ್’ ಎಂಬ ಪ್ರಶ್ನೆ ಆಗಾಗ್ಗೆ ನನ್ನನ್ನು ಕುತೂಹಲಕರ ಹುಡುಕಾಟಗಳತ್ತ ಕರೆದೊಯ್ಯುತ್ತದೆ: ನನಗೆ ಅಆಇಈ, ಎಬಿಸಿ, ಮಗ್ಗಿ ಮೂರನ್ನೂ ಕಲಿಸಿದ ತಾಯಿಯೇ ನನ್ನ ನಿಜವಾದ ಟೀಚರ್ ಎಂದು ಅನೇಕ ಸಲ ಅನ್ನಿಸಿದೆ. ಮೊನ್ನೆ ಲೋಹಿಯಾ ಜೀವನಚರಿತ್ರೆ ಬರೆಯುವಾಗ ಲೋಹಿಯಾ ಕುರಿತ ಹಿಂದಿ ಜೀವನಚರಿತ್ರೆಗಳನ್ನು, ಅವರ ಹಿಂದಿ ಭಾಷಣಗಳನ್ನು ಸಲೀಸಾಗಿ ಓದುತ್ತಿದ್ದ ರಾತ್ರಿ ‘ಥ್ಯಾಂಕ್ಯೂ ಮದರ್’ ಎಂದುಕೊಂಡೆ. ಕಾರಣ, ನಾನು ಮಿಡ್ಲ್‌ಸ್ಕೂಲ್, ಹೈಸ್ಕೂಲಿನಲ್ಲಿದ್ದಾಗ ಅವರು ನನಗೆ ಹಿಂದಿ ಪ್ರಥಮ, ಮಧ್ಯಮ, ರಾಷ್ಟ್ರಭಾಷಾ ಪರೀಕ್ಷೆಗಳನ್ನು ಕಲಿಯಲು ಹಿಂದಿ ಟೀಚರ್ ಬಳಿ ಕಳಿಸಿದ್ದರು; ಹಿಂದಿ ಕಲಿಸಿದ ಆ ಹಿಂದಿ ಮೇಡಂಗಳು ನೆನಪಾಗುತ್ತಾರೆ.
ಅವತ್ತು ಹಿಂದಿ ಕಲಿತಿದ್ದು ಎಷ್ಟು ಮಹತ್ವದ್ದೆಂಬುದು ಲೋಹಿಯಾ ಭಾಷಣಗಳನ್ನು ಒರಿಜಿನಲ್ ಹಿಂದಿಯಲ್ಲಿ ಓದುತ್ತಿರುವಾಗಲೆಲ್ಲ ನನಗೆ ಅರಿವಾಗುತ್ತಿರುತ್ತದೆ. ನಮ್ಮ ಮನೆಗೆ ಬರುತ್ತಿದ್ದ ಶಫಿ, ಬಾಷಾ ಮಾತಾಡುತ್ತಿದ್ದ ಉರ್ದುವೂ ಸೇರಿ ನನ್ನ ಹಿಂದಿ ಕಲಿಕೆ ವಿಸ್ತಾರವಾಗಿತ್ತು. ಇದೆಲ್ಲದರ ಜೊತೆಗೆ, ತಾಯಿ ಬಾಲ್ಯದಲ್ಲಿ ಕಲಿಸಿದ ಹೊಲಿಗೆ, ಅಡಿಗೆ, ಸುಧಾ, ಪ್ರಜಾಮತಗಳ ಧಾರಾವಾಹಿಗಳ ಓದಿನ ಅಭ್ಯಾಸ ಈ ಗಳಿಗೆಯಲ್ಲೂ ನೆರವಾಗುತ್ತಲೇ ಇದೆ. ಅಂಥವರು ಟೀಚರ್ ಅಲ್ಲದೆ, ಮತ್ಯಾರು?
ಇದನ್ನೆಲ್ಲ ಆತ್ಮಚರಿತ್ರಾತ್ಮಕ ಟಿಪ್ಪಣಿಯೆಂದು ನೋಡದೆ, ‘ಟೀಚಿಂಗ್’, ‘ಟೀಚರ್’ ಎಂಬ ವಸ್ತುಗಳ ಸುತ್ತ ಬೆಳೆದ ಪ್ರಬಂಧವೆಂದು ತಾವು ನೋಡಬೇಕೆಂದು ಬಿನ್ನಹ. ಒಬ್ಬ ವ್ಯಕ್ತಿಗೆ ಹತ್ತಾರು ಥರದ ಟೀಚರುಗಳಿರುತ್ತಾರೆ ಎಂದು ಸೂಚಿಸಲು ಇದನ್ನೆಲ್ಲ ಹೇಳುತ್ತಿರುವೆ.
ನನ್ನ ಕಲ್ಪನೆಯ ‘ಟೀಚರ್’ ಎಂಬುದರ ಅರ್ಥ ನಿತ್ಯ ವಿಸ್ತಾರವಾಗುತ್ತಿರುತ್ತದೆ: ಸಾಮಿಲ್‌ನ ಕಂಬಿಗಳ ಮೇಲೆ ಮರದ ತುಂಡಿಟ್ಟು, ಅತ್ತಣಿಂದ ಕತ್ತರಿಸುವ ಯಾಂತ್ರಿಕ ಗರಗಸ ಬರುವ ಹೊತ್ತಿಗೆ ಛಕ್ಕನೆ ಮತ್ತೊಂದು ಮರದ ತುಂಡಿಡುತ್ತಿದ್ದ ಗಡ್ಡದ ಸಾಬರು ‘ಕಾನ್ಸೆಂಟ್ರೇಶನ್ ಎಂದರೇನು’ ಎಂಬುದನ್ನು ನನಗೆ ಕಲಿಸಿದ ಟೀಚರ್! ನಮ್ಮ ಮನೆಯ ನಲ್ಲಿ ರಿಪೇರಿ ಮಾಡುತ್ತಲೇ ನನಗೂ ರಿಪೇರಿ ಕಲೆ ಕಲಿಸಿದ ಪ್ಲಂಬರ್ ಗೋಪಾಲ್ ನನ್ನ ಟೀಚರ್. ನೀವು ಗಮನಿಸಿರಬಹುದು: ಯಾವ ಕಸುಬಿನವರೇ ಆಗಲಿ, ಏನನ್ನಾದರೂ ಹೇಳಿಕೊಡಲು ಶುರು ಮಾಡಿದ ತಕ್ಷಣ ಟೀಚರ್ ಆಗುತ್ತಾರೆ; ಕಲಿಸುವ ಥ್ರಿಲ್, ಆತ್ಮವಿಶ್ವಾಸ; ಸರಿಯಾದದ್ದನ್ನು ಕಲಿಸಬೇಕೆಂಬ ಜವಾಬ್ದಾರಿ ಎಲ್ಲವೂ ಅವರ ಕಣ್ಣು, ಮಾತುಗಳಲ್ಲಿ ಮಿಂಚತೊಡಗುತ್ತದೆ. ಟೀಚಿಂಗಿನ ಈ ಮೂಲ ಮಾದರಿ ಎಂದೂ ಮಾಯವಾಗುವುದಿಲ್ಲ!
ನನ್ನ ಟೀಚರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ: ಬಾಲ್ಯದಲ್ಲಿ ಕರ್ನಾಟಿಕ್ ಸಂಗೀತ ಕಲಿಸಿದ ಕೃಷ್ಣಪ್ಪ ಮೇಷ್ಟ್ರು; ನಂತರ ಹಿಂದೂಸ್ತಾನಿಯ ಹತ್ತಾರು ರಾಗಗಳನ್ನು ಕಲಿಸಿದ ಎಸ್.ಆರ್. ರಾಮಕೃಷ್ಣ, ಸಿತಾರ್ ಕಲಿಸಿದ ಜಯಂತ್‌ಕುಮಾರ್‌ದಾಸ್ ನನ್ನ ಸಂಗೀತ ಟೀಚರುಗಳು; ಈ ಸಂಗೀತ ಕಲಿಕೆಯಲ್ಲಿ ತಾಯಿಯ ಹಾಡುಗಳೂ, ಆಕಾಶವಾಣಿಯ ಬೆಳಗಿನ ಸಂಗೀತ ಪಾಠಗಳೂ, ಸಿನಿಮಾ ಹಾಡುಗಳೂ ಸೇರಿವೆ. ನಾನು ಇಂಗ್ಲಿಷ್ ಮೇಷ್ಟರಾದ ಮೇಲೆ ಹೊಸ ಕಾಲದ ಇಂಗ್ಲಿಷ್ ಕಲಿಸಿದ ಎನ್‌ಎಂಕೆಆರ್‌ವಿ ಕಾಲೇಜಿನ ಗಿಳಿಗಳಂಥ ಹುಡುಗಿಯರೂ ನನ್ನ ಟೀಚರುಗಳೇ.
ಮೂರೂವರೆ ದಶಕಗಳಿಂದಲೂ ನಾನು ತೊಡಗಿರುವ ಟೀಚಿಂಗ್ ನನಗೆ ಕಲಿಸಿರುವ ಒಂದು ಮುಖ್ಯ ಪಾಠವೆಂದರೆ, ನಾನು ಪೂರ್ಣವಾಗಿ ತೊಡಗುವ ಟೀಚಿಂಗಿನ ಇಡೀ ಪ್ರಕ್ರಿಯೆಯೇ ನನ್ನ ಟೀಚರ್ ಎನ್ನುವುದು. ವಿಮರ್ಶೆ, ಓದುವ ಹಾದಿಗಳು, ಲಿಟರರಿ ಫಾರ್‍ಮ್ಸ್, ಅನುವಾದ, ಅಂಬೇಡ್ಕರ್ ಸ್ಟಡೀಸ್, ಗಾಂಧಿಯನ್ ಸ್ಟಡೀಸ್, ಮಹಿಳಾ ಅಧ್ಯಯನ, ಬಹುಶಿಸ್ತೀಯ ಅಧ್ಯಯನ... ಹೀಗೆ ಹಲವು ವಿಶ್ವವಿದ್ಯಾಲಯಗಳಲ್ಲಿ ನಾನು ಹಲಬಗೆಯ ಕೋರ್ಸ್‌ಗಳನ್ನು ಕೊಡುವಾಗ ಅದು ನನ್ನ ನಿಜವಾದ ಕಲಿಕೆಯಾಗಿ ಮಾರ್ಪಟ್ಟಿದೆ. ಟೀಚಿಂಗ್ ಮತ್ತು ಕಲಿಕೆಗಳ ಸುಂದರ ಸಂಬಂಧದ ಬಗ್ಗೆ; ಕಲಿಸುತ್ತಾ ಕಲಿಯುವ ಬಗ್ಗೆ ಹಿಂದೆ ಈ ಅಂಕಣದಲ್ಲೇ ಬರೆದಿರುವೆ.
ಆದ್ದರಿಂದಲೇ, ಶಿಕ್ಷಕರ ಚುನಾವಣಾ ಕ್ಷೇತ್ರಗಳ ಮತದಾನಗಳಲ್ಲಿ ಟೀಚರುಗಳ ಭ್ರಷ್ಟತೆಯಿಂದ ‘ಟೀಚರ್’ ಪರಿಕಲ್ಪನೆಗಿರುವ ದಿವ್ಯತೆ ನಾಶವಾದಾಗ ಬೇಜಾರಾಗುತ್ತದೆ. ಗುರು-ಶಿಷ್ಯ ಕಲ್ಪನೆಯಲ್ಲಿರುವ ಜಮೀನ್ದಾರಿ ದರ್ಪ ಚಲಾಯಿಸುವ ಮೇಷ್ಟರೊಬ್ಬ ತನ್ನ ವಿದ್ಯಾರ್ಥಿಯನ್ನು ’ನನ್ನ ಶಿಷ್ಯ’ ಎನ್ನುವ ಠೇಂಕಾರ ಕಂಡಾಗ ಅಸಹ್ಯವಾಗುತ್ತದೆ.
ಆದರೂ ಇವತ್ತಿಗೂ ನಾನು ಬಲ್ಲ ನೂರಾರು ಮೇಡಂಗಳು, ಮೇಷ್ಟ್ರುಗಳು ನಿಜಕ್ಕೂ ‘ಟೀಚಿಂಗ್’ ಎಂದರೆ ‘ಕಲಿಕೆ’ ಎಂದು ಆಳದಲ್ಲಿ ನಂಬಿರುವುದನ್ನು ಕಂಡು ನೆಮ್ಮದಿಯಾಗುತ್ತದೆ. ಇಂಥ ಲಕ್ಷಾಂತರ ವೃತ್ತಿವಂತ ಟೀಚರುಗಳನ್ನು, ನಿತ್ಯ ಹಲವು ಪಾಠಗಳನ್ನು ಕಲಿಸುವ ಇನ್ನಿತರ ಎಲ್ಲ ಟೀಚರುಗಳನ್ನು ನೆನೆಯುತ್ತಲೇ ಅಡ್ವಾನ್ಸ್ ಆಗಿ ‘ಹ್ಯಾಪಿ ಟೀಚರ್ಸ್ ಡೇ’ ಹೇಳುವೆ.
ಈ ಮಾತು ಬರೆಯುತ್ತಿರುವಾಗ ಕುವೆಂಪುವಿನ ‘ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ’ ಎಂಬ ನಿವೇದನೆ- ಹಾಡಿದವರ ಮೊಗಸಮೇತ- ನೆನಪಾಗುತ್ತಿದೆ; ಎಲ್ಲ ಬಗೆಯ ಟೀಚರುಗಳ ಒಳಗೂ ನೆಲೆಸಿರುವ ‘ಅಂತರಾತ್ಮ’ ಎಂಬ ಟೀಚರ್ ಸದಾ ಎಚ್ಚರವಾಗಿರಲಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಗಳಿಕೆಯಾಗಿದೆ!
ಒಂದು ವರ್ಷ ಉರುಳಿಹೋಗಿದೆ ಎಂದು ಬರೆಯಲು ಕೈ ಬರಲಿಲ್ಲ. ಇದು ಈಚಿನ ವರ್ಷಗಳಲ್ಲಿ ನನಗೆ ರೂಢಿಯಾಗಿರುವ ಒಂದು ಬಗೆಯ ‘ಪಾಸಿಟೀವ್ ಥಿಂಕಿಂಗ್’ನ ಪರಿಣಾಮವೂ ಇರಬಹುದು! ಇದೆಲ್ಲ ಬರೆಯಲು ಕಾರಣ-ಅಚಾನಕ್ಕಾಗಿ ೨೦ ಆಗಸ್ಟ್ ೨೦೨೩ ಎಂಬ ದಿನಾಂಕ ನನ್ನ ಕಣ್ಣಿಗೆ ಬಿದ್ದದ್ದು! ಅದು `ಗಾಳಿ ಬೆಳಕು- ೩.೦’ ಮೋಡದ ಬೆನ್ನೇರಿದ ದಿನ! ನೀವು ಓದುತ್ತಿರುವ ಈ ಅಂಕಣ ಶುರುವಾಗಿ ಒಂದು ವರ್ಷವಾಯಿತು. ಇದು ನನ್ನ `ಗಳಿಕೆ’ ಎಂದು ನನಗರಿವಿಲ್ಲದೆಯೇ ಬೆರಳು ಬರೆಯಿತು.
`ಬೆರಳು ಬರೆಯಿತು’ ಎನ್ನಲು ಈ ಅಂಕಣ ಬರವಣಿಗೆ ನನಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಟ್ಟಿರುವ `ರೈಟಿಂಗ್ ಈಸ್ ಥಿಂಕಿಂಗ್’ ಎಂಬ ಅರಿವು ಕಾರಣ. `ಥಿಂಕ್ ಬಿಫೋರ್ ಯು ಇಂಕ್’ ಎಂಬ ಇಂಗ್ಲಿಷ್ ನಾಣ್ಣುಡಿ ನಿಮಗೆಲ್ಲ ಗೊತ್ತಿರುತ್ತದೆ. ಅದು ಇಂಕ್ ಪೆನ್ನಿನಲ್ಲಿ ಬರೆಯುವ ಕಾಲದ ಕಿವಿಮಾತು; ಎಚ್ಚರಿಕೆ. ನಾಣ್ಣುಡಿಗಳೆಲ್ಲ ನಾನಾರ್ಥ ಕೊಡುವ ರೂಪಕಗಳೇ ತಾನೆ? ಆದ್ದರಿಂದ ಈ ನಾಣ್ಣುಡಿಯನ್ನು ಈಗ ಬೆರಳಿನಲ್ಲಿ ಅಕ್ಷರ ಒತ್ತುವ ಕಾಲದಲ್ಲಿ `ಥಿಂಕ್ ಬಿಪೋರ್ ಯು ಟಚ್’ ಅಥವಾ `ಥಿಂಕ್ ಬಿಫೋರ್ ಯು ಪ್ರೆಸ್’ ಎಂಬ ಎಚ್ಚರ ಉಳಿಸಿಕೊಂಡೇ `ರೈಟಿಂಗ್ ಈಸ್ ಥಿಂಕಿಂಗ್’ ಕೂಡ ನಡೆಯುತ್ತಿರಬೇಕು!
ರೈಟಿಂಗ್ ಈಸ್ ಥಿಂಕಿಂಗ್ ಎಂಬ ಮಾತನ್ನು ಒಪ್ಪಿದ ಜಿಯಾಲಜಿ ಫ್ರೊಫೆಸರ್ ಪ್ರಭಾಕರ್ ತಮ್ಮ ಪಿಎಚ್.ಡಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಗಾಗ್ಗೆ ಹೇಳುತ್ತಿದ್ದ ಮಾತೊಂದನ್ನು ನೆನಸಿಕೊಂಡರು: `ನೀವು ಡಾಟಾ ಸಂಗ್ರಹಿಸಿದ ಮಾತ್ರಕ್ಕೇ ಎಲ್ಲವೂ ಆಗುವುದಿಲ್ಲ. ಬರೆಯಲು ಶುರು ಮಾಡಿದಾಗ, ನೀವು ವ್ಯಾಖ್ಯಾನ ಮಾಡತೊಡಗಿದಾಗ ಮಾತ್ರ ಹೊಸ ಒಳನೋಟಗಳು ಬರುತ್ತವೆ; ಒಂದರ್ಥದಲ್ಲಿ ಬರೆಯುವುದೇ ಆಲೋಚನಾ ಪ್ರಕ್ರಿಯೆ.’
ಜಗತ್ ಸಾಹಿತ್ಯದ ವಿದ್ಯಾರ್ಥಿಯೂ, ಅಧ್ಯಾಪಕನೂ ಆದ ನನಗೆ ಪಶ್ಚಿಮದ ಬರವಣಿಗೆಯ ಎರಡು ಪರಿಕಲ್ಪನೆಗಳು ಪರಿಚಿತ: ೧. ಆಟೊಮ್ಯಾಟಿಕ್ ರೈಟಿಂಗ್- ಅಂದರೆ, ನಮಗರಿವಿಲ್ಲದೆಯೇ ‘ಸ್ಪಿರಿಚುಯಲ್’ ಎಂಬಂತೆ ಮೂಡುವ ಬರವಣಿಗೆ. ೨. ಸ್ಟ್ರೀಮ್ ಆಫ್ ಕಾನ್ಷಿಯಸ್‌ನೆಸ್- ಅಂದರೆ, ನಮ್ಮ ಒಳಗಿರುವುದೆಲ್ಲ ಅಡೆತಡೆಯಿಲ್ಲದೆ ಹರಿವ ಪ್ರಜ್ಞಾಪ್ರವಾಹ.
ಕನ್ನಡ ವಿಮರ್ಶೆ ಬಳಸಿರುವ ‘ಪ್ರಜ್ಞಾಪ್ರವಾಹ’ ಎಂಬ ಐಡಿಯಾ ಇಂಗ್ಲಿಷಿನ ‘ಸ್ಟ್ರೀಮ್ ಆಫ್ ಕಾನ್ಸಿಯಸ್‌ನೆಸ್’ಗಿಂತ ವಿಸ್ತೃತ ಹಾಗೂ ಅರ್ಥಗರ್ಭಿತ. ಇಂಗ್ಲಿಷಿನಲ್ಲಿ ಅದು ಪ್ರಜ್ಞೆಯ ಹೊಳೆ; ಸ್ಟ್ರೀಮ್. ಆದರೆ ಕನ್ನಡದಲ್ಲಿ ಅದು ಪ್ರಜ್ಞಾಪ್ರವಾಹ! ಈ ಎರಡೂ ಪದಗಳನ್ನು ಕನ್ನಡಕ್ಕೆ ಕೊಟ್ಟಿರುವ ಸಂಸ್ಕೃತ ಭಾಷೆಯ ಆಧುನಿಕ ಸಾಹಿತ್ಯ ವಿಮರ್ಶೆ (ಸಂಸ್ಕೃತದಲ್ಲಿ ಅದು ಬೆಳೆದಿದ್ದರೆ!) ’ಪ್ರಜ್ಞಾಪ್ರವಾಹ’ ಪರಿಕಲ್ಪನೆಯನ್ನು ಹೀಗೆ ಬಳಸಿದೆಯೋ, ಇಲ್ಲವೋ ತಿಳಿಯದು. ವ್ಯಾಸನಿಗೆ ಪ್ರಜ್ಞಾಪ್ರವಾಹ ಎಂಬ ಪರಿಭಾಷೆ ಗೊತ್ತಿಲ್ಲದಿರಬಹುದು. ಆದರೆ ದ್ರೌಪದಿಯ ಒಂದು ಅಪೂರ್ವ ನಿವೇದನೆಯಲ್ಲಿ ಪ್ರಜ್ಞಾಪ್ರವಾಹದ ಹರಿವಂತೂ ಇದ್ದೇ ಇದೆ.
ಸ್ವಗತ, ಪ್ರಜ್ಞಾಪ್ರವಾಹ… ಇವೆಲ್ಲ ಈ ಅಂಕಣ ಬರವಣಿಗೆಯಲ್ಲೂ ಸೇರಿಕೊಂಡು ರೈಟಿಂಗ್ ಈಸ್ ಥಿಂಕಿಂಗ್‌ನ ಅನುಭವ ಈ ಅಂಕಣಕಾರನಿಗೆ ಆಗಾಗ ಆಗುತ್ತಿರುತ್ತದೆ. ಇದು ಎಷ್ಟೋ ಸಲ ಮಿಂಚಿ, ಮೂಡಿ ಮರೆಯಾಗುವ ನಿಗೂಢ ಸೆಲೆಗಳಿಂದ, ಕಾತರದ ಮುಖಗಳಿಂದಲೂ ಪ್ರೇರಣೆ, ಸ್ಫೂರ್ತಿ ಪಡೆಯುತ್ತಿರುತ್ತದೆ!
ಈ ಬರಹದ ಶುರುವಿನಲ್ಲಿ ಇದು ‘ಗಳಿಕೆ’ ಎಂದೆ. ಇದೇನೂ ಉತ್ಪ್ರೇಕ್ಷೆಯಲ್ಲ…ಓದುಗ ಓದುಗಿಯರು ಇಲ್ಲೇ ಕಣ್ಣೆದುರಿಗಿರುವಂತೆ ಬರೆಯುತ್ತಲೇ ಜಗತ್ತಿನ ದೊಡ್ಡ ಲೇಖಕ ಲೇಖಕಿಯರು, ಅವರ ಬರಹಗಳು, ಪುಸ್ತಕಗಳು; ಅವರ ಜ್ಞಾನದ ಬೆಳಕು, ಅವರ ಅರಿವು…ಈ ಬರವಣಿಗೆಗೆ ಒಡ್ಡೊಡೆದುಕೊಂಡು ನುಗ್ಗಿ ಬಂದಿವೆ. ಬರೆವ ಗಳಿಗೆಯಲ್ಲೇ ಇವೆಲ್ಲ ಮರಳಿ ಮನಸ್ಸಿಗೆ ಬಂದ ರೀತಿ ಅಥವಾ ಮನಸ್ಸಿಗೆ ಕರಕೊಂಡ ಗಳಿಗೆ ನಿಜಕ್ಕೂ ಬೆಲೆ ಕಟ್ಟಲಾಗದ ಗಳಿಕೆ! ಇದು ಎಷ್ಟೋ ಸಲ ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆ ನನ್ನ ಲ್ಯಾಪ್ ಟಾಪಿನ ಮೇಲೆ ಬೆರಳು ಓಡತೊಡಗಿದ ತಕ್ಷಣವೂ ಆಗಿದೆ.
ಈ ಬರಹಗಳನ್ನು ಓದುತ್ತಾ ತುಮಕೂರಿನ ಪ್ರಾಧ್ಯಾಪಕ-ಗೆಳೆಯ ಶಿವಲಿಂಗಮೂರ್ತಿ ಓದುವ ‘ಬೆದೆ’ ಹುಟ್ಟಿದೆ ಎಂದು ಬರೆದಾಗ ಆ ಬಣ್ಣನೆಯ ತಾಜಾತನಕ್ಕೆ ಬೆರಗಾದೆ. ಇಂಗ್ಲಿಷ್ ಮೇಷ್ಟ್ರು ಸುನಿಲ್‌ಗೆ ಈ ಅಂಕಣ ಓದಿ ಬರೆಯುವ ಆಸೆ ಮೂಡಿದಾಗ ಸಾರ್ಥಕ ಭಾವ ಹುಟ್ಟಿತು. ಹಿರಿಯ ಲೇಖಕಿ ಇಳಾ ವಿಜಯಮ್ಮನವರು ‘ನೀವು ಬರೆಯುತ್ತಿಲ್ಲ ನಿಮ್ಮೊಳಗೇ ನೀವು ಪಿಸುಗುಟ್ಟಿಕೊಳ್ಳುತ್ತೀರಿ’ ಎಂದಾಗ; ಹಿಸ್ಟರಿ ಪ್ರೊಫೆಸರ್ ಜಮುನ ‘ಇದು ಇಂಟಿಮೇಟ್ ಕಾನ್ವರ್ಸೇಶನ್’ ಎಂದಾಗ ಚಕಿತನಾದೆ; ‘ಇದು ಸ್ಪರ್ಶ ಬರವಣಿಗೆ’ ಎಂದು ಸ್ತ್ರೀವಾದಿ ಚಿಂತಕಿ ಆಶಾದೇವಿ ಬರೆದಾಗ ಈ ವ್ಯಾಖ್ಯಾನದ ಹೊಸತನಕ್ಕೆ ಮೂಕನಾದೆ…
ಇಂಥ ಹತ್ತಾರು ಪ್ರಸಂಗಗಳು ನೆನಪಾಗುತ್ತವೆ. ವಂದನಾರ್ಪಣೆಯ ಪಟ್ಟಿ ಕೊಟ್ಟು ಎಲ್ಲರಿಗೂ ಮುಜಗರ ಹುಟ್ಟಿಸಲು ಇದೇನೂ ಕೊನೆಯ ಅಂಕಣವಲ್ಲ!
ಪ್ರಕಟವಾಗುವ ಮುನ್ನ ಹತ್ತಲ್ಲ ಇಪ್ಪತ್ತು ಸಲ ಬರೆದು ತಿದ್ದುವ ನನಗೆ ಮುದ್ರಣಗೊಂಡ ಪುಸ್ತಕವನ್ನು ಓದಲು ಹಿಂಜರಿಕೆ…ಅದು ಬರವಣಿಗೆಯ ಪರೀಕ್ಷೆಯ ಕಟ್ಟ ಕಡೆಯ ಕಟಕಟೆಯಲ್ಲಿ ನಿಂತ ಹಾಗೆ! ಆದ್ದರಿಂದಲೋ ಏನೋ, ಈ ಬರಹಗಳನ್ನು ಈಗ ಮತ್ತೆ ಓದಲಿಲ್ಲ; ಈ ಅಂಕಣಗಳ ಐವತ್ತಕ್ಕೂ ಹೆಚ್ಚಿನ ಟೈಟಲ್‌ಗಳನ್ನು ನೋಡುತ್ತಾ ಹೋದೆ…ಇದ್ದಕ್ಕಿದ್ದಂತೆ ೨೦೦೭-೮ರ ನಡುವೆ ‘ಕನ್ನಡ ಟೈಮ್ಸ್’ ಪತ್ರಿಕೆಗಾಗಿ ‘ಗಾಳಿ ಬೆಳಕು’ ಬರೆದ ಗಳಿಗೆ ನೆನಪಾಯಿತು. ನಾನು ಬರೆದು ಕೊಡುತ್ತಿದ್ದ ಅಂಕಣಗಳಿಗೆ ಅಪರೂಪದ ಕನ್ನಡ ಕತೆಗಾರ ಮಂಜುನಾಥ ಲತಾ ಕೊಡುತ್ತಿದ್ದ ಟೈಟಲ್‌ಗಳು ನೆನಪಾದವು. ನನ್ನ ಬರಹವೊಂದಕ್ಕೆ ಅವನು ಕೊಟ್ಟ ‘ಧರ್ಮ ಎಂಬ ಮೋಹಕ ಭಯೋತ್ಪಾದನೆ’ ಟೈಟಲ್ ಹುಟ್ಟಿಸಿದ ಪುಳಕ ಇವತ್ತಿಗೂ ನನ್ನಲ್ಲಿದೆ. ಎಂದಾದರೊಂದು ದಿನ ಅವನಿಗೆ ಸೈಡ್ ಹೊಡೆಯುವ ಟೈಟಲ್ ಕೊಡಬೇಕೆಂಬ ಆಸೆ ಬತ್ತಿಲ್ಲ!
ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿರಬಹುದು: ಇದು ’ಗಾಳಿ ಬೆಳಕು’ ಅಂಕಣದ ಮೂರನೆಯ ಹುಟ್ಟು. ಅದಕ್ಕೇ ಇದು ಗಾಳಿ ಬೆಳಕು: ೩.೦! ಒಂದು ರಾತ್ರಿ ಇದ್ದಕ್ಕಿದ್ದಂತೆ ಲಂಕೇಶರು ’ಲಂಕೇಶ್ ಪತ್ರಿಕೆ’ಗೆ ಕಾಲಂ ಬರೆಯಲು ಹೇಳಿದಾಗ ನಾನು ಹುಡುಕಿಕೊಂಡ ಟೈಟಲ್ ಇದು. ಮುಂದೆ ಚಂದ್ರಶೇಖರ ಐಜೂರ್ ಸಂಪಾದಕತ್ವದ ‘ಕನ್ನಡ ಟೈಮ್ಸ್’ ವಾರಪತ್ರಿಕೆಗೆ ಮತ್ತೆ ಇದೇ ಟೈಟಲ್ ಬಳಸಿದೆ. ಇವೆರಡೂ ಪತ್ರಿಕೆಗಳ ಅಂಕಣಗಳು ‘ಗಾಳಿ ಬೆಳಕು’ (ಪಲ್ಲವ ಪ್ರಕಾಶನ, ರೂ ೨೦೦) ಪುಸ್ತಕದಲ್ಲಿ ಹಲವು ಮುದ್ರಣಗಳನ್ನು ಕಂಡಿವೆ.
ಈಗ ‘ಗಾಳಿ ಬೆಳಕು’ ಕಳೆದೊಂದು ವರ್ಷದಿಂದ ಈ ವೆಬ್‌ಸೈಟಿನಲ್ಲಿ, ಹಾಗೂ ಈ ಬರಹಗಳನ್ನು ಸಾವಿರಾರು ಓದುಗ, ಓದುಗಿಯರಿಗೆ ತಲುಪಿಸುವ ವಾರ್ತಾಭಾರತಿ ಹಾಗೂ ಇತರ ಕೆಲವು ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದೆ. ಈ ಅಂಕಣ ಪ್ರಕಟವಾದ ತಕ್ಷಣ ಶೇರ್ ಮಾಡಿ ಎಲ್ಲೆಡೆ ಹಬ್ಬಿಸುವ ನಿರ್ಮಲ ಮನಸ್ಸಿನ ಗೆಳೆಯ ಗೆಳತಿಯರಿಗೆ; ಓದುಗಿಯರಿಗೆ, ಓದುಗರಿಗೆ; ಮುಖ್ಯವಾಗಿ, ಈ ಅಂಕಣದ ಉಸ್ತುವಾರಿ ನೋಡುವ ಸಮಂತ, ವಿನ್ಯಾಸ ಬಡಿಗೇರ ಎಂಬ ಪ್ರತಿಭಾವಂತ ಹುಡುಗರು ಹಾಗೂ ’ಓಪನ್ ಮೈಂಡ್ಸ್’ ಸಾಹಸಜೀವಿ ಕಿರಣ್‌ಕುಮಾರ್… ಎಲ್ಲರಿಗೂ ನನ್ನ ಪ್ರೀತಿ ಮತ್ತು ಕೃತಜ್ಞತೆ.
ಚಿಯರ್ಸ್!
ಇಸವಿ ೧೯೪೭. ಆಗಸ್ಟ್ ೧೫ ಇನ್ನೇನು ಅಡಿಯಿಡಲಿದ್ದ ನಡು ರಾತ್ರಿಯ ಗಳಿಗೆ.
ಇತ್ತ ಕವಿ ಕುವೆಂಪು ದೆಹಲಿಯಲ್ಲಿ ನಡೆಯುತ್ತಿದ್ದ ಸ್ವತಂತ್ರ ಭಾರತದ ಉದಯದ ವಿವರ, ಸಡಗರಗಳ ಕಾಮೆಂಟರಿಯನ್ನು ಆಕಾಶವಾಣಿಯಲ್ಲಿ ಕೇಳಿಸಿಕೊಳ್ಳುತ್ತಿದ್ದರು. ಭಾರತಕ್ಕೆ ಸ್ವಾತಂತ್ರ‍್ಯ ಬರಲಿದ್ದ ಆ ಗಳಿಗೆಯಲ್ಲಿ ಕವಿಯ ಮನದಲ್ಲಿ ‘ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥ’ ಮೂಡತೊಡಗಿತ್ತು.
ಸಂಭ್ರಮ, ಪ್ರಾರ್ಥನೆ, ಜಯಕಾರಗಳ ಮೂಡ್‌ನಲ್ಲಿ ಮುನ್ನಡೆಯುತ್ತಿದ್ದ ಮಹಾಪ್ರಗಾಥ ಯಾಕೋ ಥಟ್ಟನೆ ಉತ್ಸಾಹದ, ಹುಮ್ಮಸ್ಸಿನ ನಡೆ ತಪ್ಪಿ ತಡವರಿಸತೊಡಗಿತು. ಅದಕ್ಕೆ ಕಾರಣವಿತ್ತು: ಆ ರಾತ್ರಿ ಗಾಂಧೀಜಿ ದಿಲ್ಲಿಯ ಆ ಸಂಭ್ರಮದ ನಡುವೆ ಇರಲಿಲ್ಲ; ಅವರೆಲ್ಲಿದ್ದಾರೆ ಎಂದು ಕವಿತೆ ಹುಡುಕತೊಡಗಿತು:
ಮರೆವುದೆಂತಾ ನಮ್ಮ ಸ್ವಾತಂತ್ರ ಶಿಲ್ಪಿಯಂ
ದಿವ್ಯ ದಿನದೀ ಶುಭ ಮುಹೂರ್ತದಲ್ಲಿ?
ಮರೆವುದೆಂತಯ್ ಭುವನ ಗೌರವ ಮಹಾತ್ಮನಂ
ಸ್ವಾತಂತ್ರ‍್ಯದೀ ಸುಪ್ರಭಾತದಲ್ಲಿ?
ಹಜ್ಜೆ ಹೆಜ್ಜೆಯನಿಡಿಸಿ ಕೈಹಿಡಿದು
ಬಿಡುಗಡೆಗೆ ತಂದ ಆ ತಂದೆಯೆಲ್ಲಿ?
ಎಲ್ಲಿ? ಓ ಅವನೆಲ್ಲಿ ನಿಚ್ಚವೂ ನಮ್ಮೆದೆಯ
ನಂಜೀಂಟುವಾ ನೀಲಕಂಠನೆಲ್ಲಿ?
‘ಸ್ವಾತಂತ್ರ‍್ಯ ಶಿಲ್ಪಿ’ ಎಲ್ಲಿರುವನೆಂದು ಹುಡುಕುತ್ತಾ ಕುವೆಂಪು ಪ್ರಗಾಥದ ಕಣ್ಣು ಗಾಂಧೀಜಿಯಿದ್ದ ಕಲ್ಕತ್ತಾದ ರಕ್ತಸಿಕ್ತ ಹಾದಿಬೀದಿಗಳನ್ನು ತಲುಪುತ್ತದೆ:
ಇಲ್ಲಿ ಉತ್ಸವದೊಳವನಿಲ್ಲ, ಆ ದೂರದಲಿ
ಕ್ರೋಧ ಕಾರ್ಪಣ್ಯ ರೋದನಗಳೊಡನೆ
ಕೆನ್ನೀರು ಕಣ್ಣೀರುಗಳ ಹೊನಲ ಗೋಳ್ ನಡುವೆ
ದಾರಿದ್ಯ್ರ ದೈನ್ಯ ಧನಮದಗಳೊಡನೆ
ವಾದಿಸುತೆ ಬೋಧಿಸುತೆ ಕರುಣೆಯಂ ಸಾಧಿಸುತೆ
ಭಕ್ತಿಯಿಂ ದೇವನಂ ಪ್ರಾರ್ಥಿಸುತ್ತೆ
ನಿರಶನವ್ರತನಿಷ್ಠನಾಗಿಹನು ನೋಡಲ್ಲಿ
ಧರ್ಮಶಕ್ತಿಯ ಕೃಪೆಯನರ್ಥಿಸುತ್ತೆ!
ಕುವೆಂಪು ಇದನ್ನು ‘ಮಹಾಪ್ರಗಾಥ’ ಎನ್ನುತ್ತಾರೆ. ಗ್ರೀಕ್ ಸಾಹಿತ್ಯಲೋಕದ ‘ಓಡ್’ ಕಾವ್ಯರಚನೆ ಕನ್ನಡದಲ್ಲಿ ’ಪ್ರಗಾಥ’ ಆಗಿದೆ. ವ್ಯಕ್ತಿ, ವಿದ್ಯಮಾನ ಅಥವಾ ಒಂದೇ ವಸ್ತುವನ್ನು ಭವ್ಯ ಶೈಲಿಯಲ್ಲಿ ಬರೆಯಲು ಗ್ರೀಕ್ ಕವಿಗಳು ಕಾವ್ಯದ ಈ ಉಪಪ್ರಕಾರವನ್ನು ಬಳಸುತ್ತಿದ್ದರು. ಇದು ಸ್ವಾತಂತ್ರ್ಯೋದಯ ಕುರಿತ ಪ್ರಗಾಥವಾದದ್ದರಿಂದ ಕುವೆಂಪು ಇದನ್ನು ಮಹಾಪ್ರಗಾಥ ಎಂದಿರಬಹುದೆ?
ಕುವೆಂಪು ತಮ್ಮ ಕವಿತೆಗಳ ಕೊನೆಯಲ್ಲಿ ಕೊಡುವ ತಾರೀಕುಗಳ ಬಗ್ಗೆ ನನಗೆ ಯಾವಾಗಲೂ ಕುತೂಹಲ ಮತ್ತು ವಿಸ್ಮಯ. ಯಾಕೆಂದರೆ, ಅವರು ಎಷ್ಟೋ ಕವಿತೆಗಳನ್ನು ಒಂದೇ ದಿನ ಒಂದೇ ಸಿಟ್ಟಿಂಗಿನಲ್ಲಿ ಬರೆದು ಮುಗಿಸಿದಂತೆ ಕಾಣುತ್ತದೆ! ಒಮ್ಮೊಮ್ಮೆ ಒಂದು ಕತೆಯನ್ನೋ, ಪದ್ಯವನ್ನೋ ಐದು-ಹತ್ತು ವರ್ಷ ಬರೆದಿರುವ ನನಗೆ ಕುವೆಂಪು ಪ್ರಗಾಥದಂಥ ಸುದೀರ್ಘ ರಚನೆಯನ್ನೂ ಒಂದೇ ಸಿಟ್ಟಿಂಗಿನಲ್ಲಿ ಮುಗಿಸಿರುವುದು ವಿಸ್ಮಯ ಹುಟ್ಟಿಸುವುದು ಸಹಜ!
ಕುವೆಂಪು ಥರವೇ ಲಂಕೇಶ್, ಡಿ. ಆರ್. ಇಬ್ಬರೂ ಒಂದೇ ಸಿಟ್ಟಿಂಗಿನಲ್ಲಿ ಲೇಖನ ಬರೆದ ಸ್ಪೀಡ್ ನೋಡಿದ್ದೇನೆ. ಅಂಥ ಬರಹಗಳು ಹಲವರ ಕ್ಷಿಪ್ರ ಬರವಣಿಗೆಗಳಂತೆ, ಇಬ್ಬನಿಯಂತೆ, ಕರಗದೆ ಶ್ರೇಷ್ಠ ಬರಹಗಳೂ ಆಗಿ ಇವತ್ತಿಗೂ ಉಳಿದಿರುವುದನ್ನೂ ನೋಡಿದ್ದೇನೆ. ಅವು ಅವರ ಮನಸ್ಸಿನಲ್ಲಿ ಎಷ್ಟು ವರ್ಷ ಮಾಗಿದ್ದವೋ, ಏನೋ…
ಕುವೆಂಪು ಪ್ರಗಾಥದ ಕೊನೆಗೆ ಕೊಟ್ಟಿರುವ ತಾರೀಕು ನೋಡಿದೆ: ೧೫.೮. ೧೯೪೭! ಅವತ್ತು ರಾತ್ರಿ ಇಡೀ ಪ್ರಗಾಥ ಒಂದು ಓಘದಲ್ಲಿ ಬಂದಂತಿದೆ. ಕುವೆಂಪುವಿನ ಪ್ರಿಯ ಕವಿ ವರ್‍ಡ್ಸ್‌ವರ್ತ್ ಹೇಳಿದಂತೆ ‘ಕಾವ್ಯ ಶಕ್ತ ಭಾವನೆಗಳ ಸಹಜ ಉಕ್ಕುವಿಕೆ’ ಎನ್ನುವುದು ಈ ಪ್ರಗಾಥದಲ್ಲೂ ನಡೆದಂತಿದೆ.
ಮೊನ್ನೆ ಆಗಸ್ಟ್ ಹದಿನೈದರಂದು ಶಾಲೆ, ಕಾಲೇಜುಗಳಲ್ಲಿ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಭಾಗಿಯಾದ ಮಕ್ಕಳು, ಮೇಡಂ, ಮೇಷ್ಟರುಗಳಿಗೆ; ಸಾರ್ವಜನಿಕರಿಗೆ, ರಾಜಕಾರಣಿಗಳಿಗೆ ಆಗಸ್ಟ್ ೧೯೪೭ರ ಆ ರಾತ್ರಿ ಗಾಂಧೀಜಿ ದಿಲ್ಲಿಯಲ್ಲಿರಲಿಲ್ಲ ಹಾಗೂ ಯಾಕೆ ದಿಲ್ಲಿಯಲ್ಲಿರಲಿಲ್ಲ ಎಂಬುದು ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಆದ್ದರಿಂದಲೇ ಕುವೆಂಪು ಆ ರಾತ್ರಿ ಗಾಂಧಿಯನ್ನು ಹುಡುಕಿದ ಈ ಪದ್ಯದ ಮಹತ್ವ ಹಾಗೂ ಆ ರಾತ್ರಿಯ ಚರಿತ್ರೆ ಎಲ್ಲರ ಗಮನದಲ್ಲಿರಲಿ.
ಆಗಸ್ಟ್ ಹದಿನೈದರ ಬೆಳಗ್ಗೆ ಕಲ್ಕತ್ತಾದ ಬಡವರ ಕೇರಿಯ ಮುಸ್ಲಿಮರೊಬ್ಬರ ಮನೆಯಲ್ಲಿ ಗಾಂಧೀಜಿ ಕಣ್ತೆರೆದರು. ಕೋಮುಗಲಭೆಗೆ ತುತ್ತಾಗಿದ್ದ ಕಲ್ಕತ್ತಾದಲ್ಲಿ ಇವತ್ತಾದರೂ ಹಾದಿಬೀದಿಗಳಲ್ಲಿ ಜನರ ಸಂಭ್ರಮ ಉಕ್ಕಿದ್ದು ಕೇಳಿ ಅವರು ಕೊಂಚ ನೆಮ್ಮದಿಯಲ್ಲಿದ್ದರೆಂದು ಕಾಣುತ್ತದೆ; ಭಾರತ ವಿಭಜನೆಯ ಕಹಿ ಅಷ್ಟಿಷ್ಟು ಹಿನ್ನೆಲೆಗೆ ಸರಿಯತೊಡಗಿತ್ತು. ಗಾಂಧೀ ಸಲಹೆಯಂತೆ ಆ ಕಾಲದಲ್ಲಿ ಕಲ್ಕತ್ತಾದಲ್ಲಿದ್ದ ಲೋಹಿಯಾ ಬರೆಯುತ್ತಾರೆ:
‘ಆಗಸ್ಟ್ ಹದಿನೈದರಂದು ಎಣೆಯಿಲ್ಲದ ಉತ್ಸಾಹ, ಸಂಭ್ರಮವಿತ್ತು. ಹಿಂದೂಗಳು, ಮುಸಲ್ಮಾನರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಲಾರಂಭಿಸಿದರು. ಒಂದು ವರ್ಷಕ್ಕಿಂತ ಹಿಂದಿನಿಂದ ಬೆಳೆದುಬಂದ ಶತ್ರುತ್ವ, ಧರ್ಮೋನ್ಮಾದಗಳು ಕೊನೆಗೊಂಡು ಪ್ರತಿಯೊಂದು ಮೊಹಲ್ಲವೂ ಪ್ರತಿಯೊಬ್ಬರ ಪಾಲಿಗೂ ತೆರೆಯಿತು. ಅದೇ ಕ್ಷಣದಲ್ಲಿ ನಮಗೊಂದು ವಿಚಾರ ಹೊಳೆಯಿತು: ಇಡೀ ರಾತ್ರಿ ಒಂದು ಮೆರವಣಿಗೆಯ ಏರ್ಪಾಟು ಮಾಡಿದೆವು. ಆ ಮೆರವಣಿಗೆ ಎಲ್ಲ ತಡೆಗೋಡೆಗಳನ್ನೂ ಒಡೆದು ಹಾಕಿತು.’
ಆದರೆ ಸಾಮಾನ್ಯ ಜನರಲ್ಲಿ ಅವತ್ತು ಹೊರಚೆಲ್ಲಿದ್ದ ಈ ಒಳಿತಿನ ಭಾವ ಉಳಿಯದಂತೆ ಎರಡೂ ಧರ್ಮಗಳ ವಿಭಜಕ ಶಕ್ತಿಗಳು ಹುನ್ನಾರ ನಡೆಸುತ್ತಲೇ ಇದ್ದವು. ಮತ್ತೆ ಕೋಮು ಗಲಭೆ ಶುರುವಾಯಿತು.
ಗಾಂಧೀಜಿ ಮಾತ್ರ ಎಂಥ ಕಲ್ಲು ಹೃದಯಗಳನ್ನು ಕೂಡ ಕರಗಿಸಬಹುದೆಂಬ ನಂಬಿಕೆಯಿಂದ ಕಲ್ಕತ್ತಾದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಪರಸ್ಪರರನ್ನು ಹಿಂಸಿಸುತ್ತಾ, ಗಲಭೆ ಹಬ್ಬಿಸುತ್ತಿದ್ದವರ ಮನಸ್ಸನ್ನು ಪರಿವರ್ತಿಸಲು ಉಪವಾಸ ಮಾಡುತ್ತಲೇ ಆತ್ಮಪರೀಕ್ಷೆ ಮಾಡಿಕೊಳ್ಳುತ್ತಿದ್ದರು.
ಆ ಕಾಲದ ಕಲ್ಕತ್ತಾದಲ್ಲಿ ತಾವು ಕಂಡ ಜನರ ಪ್ರತಿಕ್ರಿಯೆಗಳನ್ನು ಬಂಗಾಳದ ಪ್ರೊಫೆಸರೊಬ್ಬರು ದಾಖಲಿಸಿದ್ದಾರೆ:
ಆಗ ಕೆಲವು ವಿದ್ಯಾರ್ಥಿಗಳು ತಮಗೆ ಅಪಾಯವಿದ್ದರೂ ಲೆಕ್ಕಿಸದೆ, ಮನೆಗಳಿಂದ, ಹಾದಿಬೀದಿಗಳಿಂದ ಆಯುಧಗಳನ್ನು ತಂದು ಗಾಂಧೀಜಿಯವರ ಎದುರು ಇಟ್ಟರು; ತಾವು ಹಿಂಸೆಯ ಮಾರ್ಗದಿಂದ ದೂರ ಸರಿದಿದ್ದೇವೆ ಎಂಬುದನ್ನು ನಿವೇದಿಸಿದರು. ಇದು ವಿದ್ಯಾರ್ಥಿಗಳ ಮೇಲೆ ಗಾಂಧೀಜಿಯ ಉಪವಾಸ ಉಂಟು ಮಾಡಿದ ಸಾತ್ವಿಕ ಪ್ರಭಾವವನ್ನು ಸೂಚಿಸುವ ಒಂದು ಘಟನೆ.
ಇದಕ್ಕಿಂತ ಮನ ಕರಗಿಸುವ ಪ್ರತಿಕ್ರಿಯೆ ಕಲ್ಕತ್ತಾದ ಮನೆಗಳಲ್ಲಿ ಕಂಡು ಬಂತು. ಕಲ್ಕತ್ತಾದ ಗಂಡಸರು ತಂತಮ್ಮ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವ ಹೊತ್ತಿಗೆ ಎಂದಿನಂತೆ ಅವರ ಊಟ ರೆಡಿಯಾಗಿರುತ್ತಿತ್ತು. ಆದರೆ ಮನೆಯಲ್ಲಿದ್ದ ಮಡದಿಯರು ಇಡೀ ದಿನ ಊಟ ಮಾಡಿದಂತಿರಲಿಲ್ಲ. ‘ಯಾಕೆ ಊಟ ಮಾಡಿಲ್ಲ?’ ಎಂದು ಆ ಗಂಡಸರು ಮಡದಿಯರನ್ನು ಕೇಳಿದರು.
ಆಗ ಆ ಮಹಿಳೆಯರ ಉತ್ತರ: ’ಗಾಂಧೀಜಿ ನಾವು ಮಾಡಿದ ಪಾಪಗಳಿಗಾಗಿ ಸಾಯುತ್ತಿರುವಾಗ ನಾವು ಹೇಗೆ ಊಟ ಮಾಡುವುದು.’
ಆ ಮಹಿಳೆಯರ ಈ ಪ್ರತಿಕ್ರಿಯೆ ಏನನ್ನು ಹೇಳುತ್ತದೆ?
ನಾಯಕನೊಬ್ಬ ನಿಜಕ್ಕೂ ಉದಾತ್ತನಾಗಿದ್ದರೆ, ಸ್ವಾರ್ಥವಿಲ್ಲದೆ ಜನರಿಗಾಗಿ ಮಿಡಿಯುತ್ತಿದ್ದಾನೆ ಎಂಬುದು ಅರಿವಾದರೆ ಕೆಲವರಾದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಇನ್ನೂ ಮುಗ್ಧತೆ ಉಳಿಸಿಕೊಂಡ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಗಾಂಧಿಗೆ ಮಿಡಿದ ರೀತಿ ಮನುಷ್ಯರ ಬಗೆಗಿನ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತದೆ. ‘ಅರ್ಧನಾರೀಶ್ವರ’ ಕಲ್ಪನೆಯನ್ನು ಎಲ್ಲರೂ ಅನುಸರಿಸಬಲ್ಲ ಆದರ್ಶ ಸಂಕೇತವಾಗಿ ಕಂಡಿದ್ದ ಗಾಂಧಿ ಮಾನವನೊಳಗಿನ ಮುಗ್ಧತೆ, ಒಳಿತು, ಸ್ತ್ರೀತನವನ್ನು ಸದಾ ಎಚ್ಚರಗೊಳಿಸಲು ಯತ್ನಿಸುತ್ತಿದ್ದರು.
ತಮ್ಮ ಮಾತಿನ ಪರಿಣಾಮವೇನು ಎಂಬ ಪ್ರಜ್ಞೆಯೇ ಇಲ್ಲದೆ ಬಾಯಿಗೆ ಬಂದದ್ದನ್ನು ಬೊಗಳುವ ಚಾಳಿಯವರು; ಮನಸ್ಸಿನಲ್ಲಿ ಕೇಡು ತುಂಬಿಕೊಂಡು ಜನರ ಕೇಡಿತನವನ್ನು ಉದ್ದೀಪಿಸುವವರು- ಈ ಎರಡೂ ವರ್ಗದ ವಾಚಾಳಿಗಳಿಗೆ ಗಾಂಧಿಯಾಗಲಿ, ಕುವೆಂಪು ಆಗಲಿ ಜನರೊಳಗಿನ ಒಳಿತನ್ನು ಹೊರ ತರಲು ಪ್ರಯತ್ನಿಸಿರುವ ರೀತಿ ಒಂದು ಪಾಠವಾಗಬೇಕು.
ಜನರ ಪೂರ್ವಗ್ರಹಗಳನ್ನು ಹೆಚ್ಚಿಸಿ ಅಗ್ಗದ ಜನಪ್ರಿಯತೆ ಗಳಿಸಿಕೊಳ್ಳುವುದು ಸುಲಭ; ಆದರೆ ಪೂರ್ವಗ್ರಹಗಳನ್ನು ತಿದ್ದುವ ಕೆಲಸ ಕಷ್ಟ. ಬಸವಣ್ಣ, ಅಕ್ಕಮಹಾದೇವಿ, ಗಾಂಧಿ, ಅಂಬೇಡ್ಕರ್ ಥರದವರು ಜನರ ಪೂರ್ವಗ್ರಹಗಳನ್ನು ತಿದ್ದುವ, ಎದುರಿಸುವ ಕಷ್ಟದ ಹಾದಿ ಹಿಡಿದಿದ್ದರು. ಅಂಥವರು ಮಾತ್ರ ಜನರ ಮನಸ್ಸಿನ ಆರೋಗ್ಯ ಕಾಪಾಡಬಲ್ಲರು.
ಆಗಸ್ಟ್ ೧೫ರ ರಾತ್ರಿ ಏಕಾಂಗಿಯಾಗಿದ್ದ ಗಾಂಧೀಜಿ; ಗಾಂಧೀಜಿಯ ಏಕಾಕಿತನವನ್ನು ಕಾವ್ಯರಚನೆಯ ಏಕಾಂತದಲ್ಲಿ ನೆನೆಯುತ್ತಿದ್ದ ಕುವೆಂಪು...ಇವೆರಡೂ ವ್ಯಕ್ತಿತ್ವಗಳು ಸಂಧಿಸಿ ನನ್ನಂಥವನೊಳಗೆ ಹಬ್ಬಿಸಿದ ದಿವ್ಯ ಕೋಮಲ ಭಾವ ಎಲ್ಲರಲ್ಲೂ ಹುಟ್ಟಬಲ್ಲದು ಎಂಬ ನಂಬಿಕೆ ನನ್ನದು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಬಸ್ಸಿನಲ್ಲಿ ಕೂತಿದ್ದ ನಾವಿಬ್ಬರೂ -ಅಂದರೆ ಈ ಅಂಕಣಕಾರ ಮತ್ತು ಒಬ್ಬ ಕನ್ನಡ ಲೇಖಕ- ಮಾತಿನ ನಡುವೆ ‘ಡಿ. ಆರ್.’ ‘ಡಿ. ಆರ್.’ ಎನ್ನುತ್ತಿದ್ದುದನ್ನು ಆ ಹಿರಿಯ ಲೇಖಕರು ಗಮನಿಸುತ್ತಿದ್ದರು; ಅವರ ಕುತೂಹಲ ಕೆರಳಿದಂತಿತ್ತು.
ಕನ್ನಡ ಬಾರದ ಅವರು ಬಸ್ಸಿಳಿದ ನಂತರ ನನ್ನನ್ನು ಅಕ್ಕರೆಯಿಂದ ನೋಡುತ್ತಾ ಇಂಗ್ಲಿಷಿನಲ್ಲಿ ಕೇಳಿದರು: ನೀವು ಮಾತಾಡುತ್ತಿದ್ದುದು ಡಿ. ಆರ್. ನಾಗರಾಜ್ ಅವರ ಬಗೆಗೇನು?’
ಅಚ್ಚರಿಯಿಂದ, ‘ಹೂಂ’ ಎಂದೆ.
‘ಹೌ ಡು ಯೂ ನೋ ಹಿಮ್?’ ಎಂದರು.
‘ಅವರು ನನ್ನ ಪಿಎಚ್. ಡಿ. ಗೈಡ್ ಅಂಡ್ ಗುರು’ ಎಂದೆ.
‘ನಾನು ಅವರನ್ನು ಶೆಲ್ಡನ್ ಪೊಲಾಕರ ಇನ್‌ಸ್ಟಿಟ್ಯೂಟಿನಲ್ಲಿದ್ದಾಗ ಕಂಡಿದ್ದೆ. ಹತ್ತಾರು ಗಂಟೆ ಕಳೆದಿದ್ದೆ. ಗ್ರೇಟ್ ಸ್ಕಾಲರ್. ನನ್ನ ಹೆಸರು ಸೀತಾಂಶು ಯಶಸ್ಚಂದ್ರ.’
ಆಗ ನಾನು ಅವರ ಹೆಸರು ಕೇಳಿರಲಿಲ್ಲ. ಅವರೊಬ್ಬ ದೊಡ್ಡ ಗುಜರಾತಿ ಕವಿ, ನಾಟಕಕಾರ, ಸ್ಕಾಲರ್ ಎಂಬುದು ಕೂಡ ಗೊತ್ತಿರಲಿಲ್ಲ. ಅವತ್ತು ಮಧ್ಯಾಹ್ನ ಹಾಗೂ ಸುದೀರ್ಘ ಸಂಜೆ ಅವರೊಡನೆ ಕಳೆದಾಗಲೂ ಅದು ಗೊತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿದ್ದ ಡಿ. ಆರ್. ಬಗ್ಗೆ ಅವರೂ, ಅವರ ಮನಸ್ಸಿನಲ್ಲಿದ್ದ ಡಿ.ಆರ್. ಬಗ್ಗೆ ನಾನೂ ಕುತೂಹಲಗೊಂಡಿದ್ದೆವು.
ಮಾತಿನ ನಡುವೆ ಹೇಳಿದೆ: ‘ನನ್ನ ಇಬ್ಬರು ಗುರುಗಳಾದ ಡಿ. ಆರ್. ನಾಗರಾಜ್ ಹಾಗೂ ಲಂಕೇಶರ ಬಗ್ಗೆ ಒಂದು ಸಾಂಸ್ಕೃತಿಕ ಕಥಾನಕ ಬರೆದಿದ್ದೇನೆ. ಅದರ ಹೆಸರು ‘ಇಂತಿ ನಮಸ್ಕಾರಗಳು.’
ಕನ್ನಡ ಬಾರದ ಅವರ ಮನಸ್ಸಿಗೆ ‘ಇಂತಿ ನಮಸ್ಕಾರ’ ಎಂಬ ನುಡಿಗಟ್ಟು ಠಕ್ಕನೆ ಇಳಿಯಿತು; ‘ವಾಹ್! ಇಂತಿ ನಮಷ್ಕಾರ್’ ಎನ್ನುತ್ತಲೇ ಡಿ. ಆರ್. ನೆನೆದು ಅವರ ಕಣ್ಣು ತುಂಬಿ ಬಂತು. ಡಿ. ಆರ್. ಜೊತೆ ನಾನು ಕೆಲಸ ಮಾಡಿದ್ದೆನೆಂಬ ಒಂದೇ ಕಾರಣಕ್ಕೆ ಅವರು ನನಗೆ ಕೊಟ್ಟ ದೇಶಿ ಪಠ್ಯಗಳ ಪ್ರಾಜೆಕ್ಟಿನ ಆಹ್ವಾನ ಅಚ್ಚರಿ ಹುಟ್ಟಿಸುವಂತಿತ್ತು. ‘ಡಿ. ಆರ್.ಗೆ ಪ್ರಾಚೀನ ಕನ್ನಡ ಸಾಹಿತ್ಯ ಪಠ್ಯಗಳ ಜೊತೆಗಿದ್ದ ಆಳವಾದ ಸಂಬಂಧ, ಈ ಪ್ರಾಜೆಕ್ಟಿಗೆ ಬೇಕಾದ ಅರ್ಹತೆ ಎರಡೂ ನನಗಿಲ್ಲ’ ಎಂದೆ. ಅದೆಲ್ಲ ಇಲ್ಲಿ ಮುಖ್ಯವಲ್ಲ.
ನಿಜಕ್ಕೂ ಮುಖ್ಯವಾದ ವಿಷಯವೆಂದರೆ, ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಾನು ಕರ್ನಾಟಕದ ಹೊರಗಿನ ರಾಜ್ಯಗಳಲ್ಲಿ, ಸೆಮಿನಾರುಗಳಲ್ಲಿ ಡಿ.ಆರ್. ಹೆಸರು ತೆಗೆದಾಗಲೆಲ್ಲ ಹಲವರಲ್ಲಿ ಉಕ್ಕುವ ಅಸಲಿ ಗೌರವ. ನಾನು ಡಿ.ಆರ್. ಹೆಸರೆತ್ತಿದ ತಕ್ಷಣ ಹೆಮ್ಮೆಯಿಂದ ಮಾತಾಡಿರುವವರಲ್ಲಿ ನಿರ್ವಸಾಹತೀಕರಣ ಚಿಂತಕರಾದ ಅಶೀಶ್ ನಂದಿ, ಮರಾಠಿ ವಿಮರ್ಶಕ ಬಾಲಚಂದ್ರ ನೆಮಾಢೆ, ಪೊಲಿಟಿಕಲ್ ಥಿಯರಿಸ್ಟ್ ಯೋಗೆಂದ್ರ ಯಾದವ್, ಕವಿ ಉದಯನ್ ವಾಜಪೇಯಿ ಹೀಗೆ ಹೆಸರುಗಳನ್ನು ಹೇಳುತ್ತಾ ಹೋಗಬಹುದು. ಅವತ್ತು ಸೀತಾಂಶು ಈ ಪಟ್ಟಿಗೆ ಸೇರಿಕೊಂಡರು.
ಇದೆಲ್ಲ ನೆನಪಾದದ್ದು ಆಗಸ್ಟ್ ತಿಂಗಳಲ್ಲಿ ಡಿ. ಆರ್. ನಿರ್ಗಮನದ ೧೨ನೇ ತಾರೀಕು ಕಂಡಾಗ. ೧೯೯೮ ಆಗಸ್ಟ್ ೧೨ರ ಬೆಳಗಿನ ಜಾವ ಡಿ. ಆರ್. ನಾಗರಾಜ್ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಒಳಗೆ ಹೋಗಿ, ಚಿಕಿತ್ಸೆ ಪಡೆಯುವ ಮೊದಲೇ ಕೊನೆಯುಸಿರೆಳೆದಿದ್ದರು. ಗಂಟೆ ಸುಮಾರು ೨.೩೦. ಆ ಬಗ್ಗೆ ಈಗಾಗಲೇ ‘ಇಂತಿ ನಮಸ್ಕಾರಗಳು’ ಪುಸ್ತಕದಲ್ಲಿ ಬರೆದಿರುವುದರಿಂದ ಇಲ್ಲಿ ಬರೆಯುವ ಅಗತ್ಯವಿಲ್ಲ. ಮೂರ್‍ನಾಲ್ಕು ವರ್ಷಗಳ ಕೆಳಗೆ ಡಿ.ಆರ್. ಕುರಿತು ಮತ್ತೊಂದು ಪುಸ್ತಕ ಬರೆಯುವ ಅವಕಾಶವನ್ನು ಅಂದಿನ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ್ ಇದ್ದಕ್ಕಿದ್ದಂತೆ ಸೃಷ್ಟಿಸಿದರು. ಮತ್ತೆ ಡಿ. ಆರ್. ಪುಸ್ತಕಗಳನ್ನು ಓದುವ ಖುಷಿ, ರೋಮಾಂಚನ, ಬರೆವ ಸವಾಲು…
ಓದಿನ ಬಗ್ಗೆ ಪ್ರೀತಿಯಿರುವವರಿಗೆ ಉಪಯುಕ್ತವಾಗಬಹುದೆಂದು ಇಲ್ಲೇ ನನ್ನದೊಂದು ಮೆಥೆಡ್ ಹೇಳಬಹುದು:
ಒಬ್ಬ ಲೇಖಕ, ಲೇಖಕಿ ನನಗೆ ಇಷ್ಟವಾದರೆ, ಅವರು ನಿಜಕ್ಕೂ ದೊಡ್ಡವರೆಂದು ಮನದಟ್ಟಾದರೆ, ಅವರ ಎಲ್ಲ ಕೃತಿಗಳನ್ನೂ ಓದುವ ಆನಂದ, ಅವರ ಕೃತಿ ವಿಹಾರ… ಇದು ನನ್ನ ಪ್ರಿಯವಾದ ಕೆಲಸ. ಲಂಕೇಶ್, ತೇಜಸ್ವಿ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮ, ಲೋಹಿಯಾ, ಮಿಲನ್ ಕುಂದೇರ, ಕಾಫ್ಕಾ, ಮಾರ್ಕ್ವೆಜ್, ಟಾಲ್‌ಸ್ಟಾಯ್, ಶೇಕ್‌ಸ್ಪಿಯರ್, ಈಚೆಗೆ ಓರಾನ್ ಪಾಮುಕ್… ಹೀಗೆ ಒಬ್ಬ ಲೇಖಕ, ಲೇಖಕಿಯ ಎಲ್ಲವನ್ನೂ ಓದುವುದೆಂದರೆ ಒಂದು ಸಂವೇದನಾ ಲೋಕವನ್ನು ಹೀರಿಕೊಳ್ಳುವುದು ಎನ್ನುವುದು ನನ್ನ ನಿರಂತರ ಅನುಭವ.
ಆ ಕಾರಣದಿಂದಲೇ, ನನಗೆ ಪ್ರಿಯವಾದ ದೊಡ್ಡ ಲೇಖಕ ತೀರಿಕೊಂಡಾಗ ’ಅಯ್ಯೋ, ಈ ಲೇಖಕನ ಮುಂದಿನ ಪುಸ್ತಕ ಸಿಕ್ಕುವುದೇ ಇಲ್ಲವಲ್ಲ…’ ಎಂಬ ದುಗುಡ ಆವರಿಸುತ್ತದೆ. ನನ್ನ ಮೆಚ್ಚಿನ ಲೇಖಕರಲ್ಲೊಬ್ಬನಾದ ಮಾರ್ಕ್ವೆಜ್‌ನ ಕೊನೇ ಪುಸ್ತಕ ’ಮೆಮೊರೀಸ್ ಆಫ್ ಮೈ ಮೆಲಾಂಕಲಿ ಹೋರ್‍ಸ್’ (ನನ್ನ ಖಿನ್ನ ಸೂಳೆಯರ ನೆನಪುಗಳು) ಓದಿದ ಮೇಲೆ, ಇನ್ನು ಮಾರ್ಕ್ವೆಜ್‌ನ ಅಚ್ಚರಿಯ ಹೊಸ ಲೋಕ ಸಿಕ್ಕುವುದಿಲ್ಲವಲ್ಲ ಎಂಬ ವಿಷಣ್ಣಭಾವ ಆವರಿಸಿತ್ತು. ೨೦೨೦ರಲ್ಲಿ ಮಾರ್ಕ್ವೆಜ್‌ನ ಕೊನೆಯ ದಿನಗಳನ್ನು ಕುರಿತು ಅವನ ಮಗ ರೊಡ್ರಿಗೊ ಗಾರ್ಸಿಯಾ ‘ಎ ಫೇರ್ ವೆಲ್ ಟು ಗ್ಯಾಬೊ ಅಂಡ್ ಮರ್ಸಿಡಿಸ್: ’ದ ಪಬ್ಲಿಕ್, ದ ಪ್ರೈವೇಟ್, ದ ಸೀಕ್ರೆಟ್’ ಎಂಬ ಪುಸ್ತಕ ಪ್ರಕಟಿಸಿದ. ಈ ಬಗ್ಗೆ ಇದೇ ಅಂಕಣದಲ್ಲಿ ’ಮಾಂತ್ರಿಕ ಮಾರ್ಕ್ವೆಜ್‌ಗೆ ಮರೆವು ಬಂದಾಗ’ ಲೇಖನದಲ್ಲಿ ಬರೆದಿರುವೆ.
READ HERE
ಮಾರ್ಕ್ವೆಜ್ ಮರೆವು ಆವರಿಸುವ ಮುನ್ನ ಬರೆದು, ‘ಪ್ರಕಟಿಸುವುದು ಬೇಡ’ ಎಂದು ಬಿಸಾಕಿದ್ದ ಪುಟ್ಟ ಕಾದಂಬರಿಯೊಂದನ್ನು ಈಚೆಗೆ ಅವನ ಮಕ್ಕಳು, ಅನುವಾದಕರು, ಎಡಿಟರ್ ಸೇರಿ ಪ್ರಕಟಿಸಿಯೇ ಬಿಟ್ಟರು. ‘ಅಂಟಿಲ್ ಆಗಸ್ಟ್’ (ಆಗಸ್ಟ್ ತನಕ)ಎಂಬ ಈ ಕಾದಂಬರಿಯನ್ನು ಮೊನ್ನೆ ಚಿಟಿಕೆ ಹೊಡೆಯುವುದರಲ್ಲಿ ಕಿಂಡಲ್‌ನಲ್ಲಿ ಕೊಂಡು ಓದಲು ಶುರು ಮಾಡಿದೆ…ಆ ರಾತ್ರಿಯೇ ಓದಿ ಮುಗಿಸಬಹುದಾಗಿದ್ದ ಕಾದಂಬರಿಯನ್ನು ಜಿಪುಣತನದಿಂದ ಕಂತಿನಲ್ಲಿ ಓದತೊಡಗಿದೆ! ಮುಗಿದೇ ಬಿಡುತ್ತದಲ್ಲ ಎಂಬ ಭಯದಿಂದ ಇನ್ನೂ ಮುಗಿಸಿಲ್ಲ! ಕುಂದೇರನ ಕೊನೇ ಕಾದಂಬರಿ ‘ದ ಫೆಸ್ಟಿವಲ್ ಆಫ್ ಇನ್ಸಿಗ್ನಿಫಿಕೆನ್ಸ್’ ಓದುವಾಗಲೂ ಎಷ್ಟೋ ರಾತ್ರಿ ಹೀಗೇ ಆಗಿತ್ತು!
ಈ ಆಗಸ್ಟ್ ತಿಂಗಳಲ್ಲಿ ‘ಅಂಟಿಲ್ ಆಗಸ್ಟ್’ ಕಾದಂಬರಿ ಓದುತ್ತಿರುವಾಗ ಡಿ.ಆರ್. ಅವರ ಆಗಸ್ಟ್ ನಿರ್ಗಮನವೂ ನೆನಪಾಗಿದ್ದು ಆಕಸ್ಮಿಕವಿರಬಹುದು. ಡಿ. ಆರ್. ಬರವಣಿಗೆಯ ಶಕ್ತಿಯ ಬಗ್ಗೆ ಮೊನ್ನೆ ಗೆಳೆಯ- ವಿಮರ್ಶಕ ದಂಡಪ್ಪ ಮತ್ತೆ ಹೇಳಿದರು: ‘ಡಿ. ಆರ್. ಪುಸ್ತಕಗಳಿಗೆ ನಾವು ಯಾವಾಗ ಬೇಕಾದರೂ ಮರಳುತ್ತಿರಬಹುದು…ಡಿ. ಆರ್. ರೂಪಕಗಳ ಬೆನ್ನು ಹತ್ತಿದ್ದರಿಂದ ಅವರ ಬರವಣಿಗೆ ಇವತ್ತಿಗೂ ಫ್ರೆಶ್ಶಾಗಿರುತ್ತದೆ.’
ಡಿ.ಆರ್. ಅವರ ರೂಪಕಾನುಸಂಧಾನದ ಜೊತೆಗೆ ಥಿಯರಿಟಿಕಲ್ ರೀಡಿಂಗಿನ ಆಳವೂ ಸೇರಿರುವುದರಿಂದ ಆ ಬರಹಗಳ ಅರ್ಥಪೂರ್ಣತೆ, ಜೀವಂತಿಕೆ ಈತನಕ ಮುಕ್ಕಾಗಿಲ್ಲ. ‘ಡಿ ಆರ್. ಕನ್ನಡದ ಮೊದಲ ಆಧುನಿಕೋತ್ತರ ಲಿಟರರಿ ಥಿಯರಿಸ್ಟ್’ ಎಂದು ಡಿ. ಆರ್. ಕುರಿತ ಅಕಾಡೆಮಿ ಪುಸ್ತಕದಲ್ಲಿ ನಾನೇ ಬರೆದ ನೆನಪು.
ಡಿ.ಆರ್. ಬರೆದ ಕೊನೆಯ ಅಪೂರ್ಣ ಪುಸ್ತಕ ’ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯ ಬಗ್ಗೆ ಈಚೆಗೆ ಗೆಳೆಯ-ಲೇಖಕ ಗುಂಡೂರ್ ನನ್ನನ್ನು ಕೆಣಕುತ್ತಿರುತ್ತಾರೆ; ಈ ಕೆಣಕಿನ ಫಲವಾಗಿ ಈ ಅಲ್ಲಮಯಾನವನ್ನು ತಿರುವಿ ಹಾಕುವಾಗಲೆಲ್ಲ ಡಿ, ಆರ್. ರೂಪಕಾನ್ವೇಷಣೆಯ ಒಂದು ಜೀವಮಾನದ ಪಯಣ ರೋಮಾಂಚನ ಹುಟ್ಟಿಸುತ್ತಿರುತ್ತದೆ. ಅಲ್ಲಮನ ಹೊಸ ಹೊಸ ಅರ್ಥಗಳ ಬೆಳಕು ಮಿಂಚುತ್ತಿರುತ್ತದೆ. ಈ ಪುಸ್ತಕದ ಅನುವಾದದ ಮಹತ್ವಾಕಾಂಕ್ಷೆಯ ಸೆಣಸಾಟದಲ್ಲಿರುವ ಗುಂಡೂರ್‌ಗೆ ಹೇಳಿದೆ: ‘ಈ ಕೆಲಸ ಮಾಡಿ ಮುಗಿಸುವ ಹೊತ್ತಿಗೆ ನಿಮ್ಮ ಓದು, ಬರವಣಿಗೆ, ಶ್ರದ್ಧೆ, ಕಾನ್ಸೆಂಟ್ರೇಶನ್, ಕ್ರಿಟಿಕಲ್ ಎಬಿಲಿಟಿ, ಸಂವೇದನೆ ಎಲ್ಲದರಲ್ಲೂ ಮಹತ್ತರವಾದ ಶಿಫ್ಟ್ ಆಗುತ್ತದೆ’.
ಗುಂಡೂರ್ ಒಳಗೆ ಆ ಪಲ್ಲಟ ಆದಂತಿದೆ. ಗುಂಡೂರ್‌ಗೆ ಆದದ್ದು ಶ್ರೀಧರ ಏಕಲವ್ಯ, ಚಾಂದ್ ಪಾಶಾ, ಶಿವವೆಂಕಟಯ್ಯ, ಮೋಹನ್ ಮಿರ್ಲೆ, ಸಂಗನಗೌಡ ಹಿರೇಗೌಡ ಥರದ ಹೊಸ ಸಂಶೋಧಕರಲ್ಲಿ ಯಾಕಾಗಲಾರದು? ಗಂಭೀರವಾಗಿ ಕಾವ್ಯ ಪ್ರವೇಶ ಮಾಡಲು ಹೊರಡುವವರಿಗೆ, ಹಾಗೂ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗಳ ವಸ್ತುಗಳನ್ನು ಕುರಿತು ಸಂಶೋಧನೆ ಮಾಡುವವರಿಗೆ ನಾನು ಮೊದಲು ನಿಕಟವಾಗಿ ಓದಲು ಹೇಳುವ ಪುಸ್ತಕವೇ ಡಿ. ಆರ್. ಅವರ ‘ಶಕ್ತಿ ಶಾರದೆಯ ಮೇಳ.’
ಡಿ.ಆರ್. ಬರವಣಿಗೆ ‘ಕಷ್ಟ’ ಎಂದು ಓದದೆ ಗೊಣಗುವ, ಓದದೆ ಬಡವಾಗುವ ಮುಗ್ಧರಿದ್ದಾರೆ. ಬರವಣಿಗೆಯಿರಲಿ, ಪ್ರೀತಿಯಿರಲಿ… ಕಷ್ಟಪಡದೆ ಈ ಬದುಕಿನಲ್ಲಿ ಏನಾದರೂ ’ನನ್ನದು’ ಎಂಬುದು ದಕ್ಕುವುದುಂಟೆ!
ಕೊನೆ ಟಿಪ್ಪಣಿ
ಹತ್ತು ವರ್ಷಗಳ ಕೆಳಗೆ ಒಂಥರಾ ವಿದ್ವಾಂಸರೊಬ್ಬರು ಗಹಗಹಿಸಿ ನಗುತ್ತಾ ಲೇಖಕಿಯೊಬ್ಬರಿಗೆ ಹೇಳಿದರು: ’ಡಿ. ಆರ್.ಗೆ ಅಲ್ಲಮ ಅರ್ಥವೇ ಆಗಿಲ್ಲ.’
ಈ ಅಟ್ಬಹಾಸದ ಬಗ್ಗೆ ಯೋಚಿಸುತ್ತಿರುವಾಗ ಕೆಲವು ಕುತೂಹಲಕರ ಪ್ರಶ್ನೆಗಳು ಎದುರಾದವು:
೧. ಸರಿ! ಸದರಿ ವಿದ್ವಾಂಸರಿಗೆ ಅಲ್ಲಮ ‘ಅರ್ಥ’ವಾಗಿರಬಹುದೇ?
೨. ಈ ಅಲ್ಲಮ ನಿಜಕ್ಕೂ ಯಾರಿಗಾದರೂ ಪೂರಾ ‘ಅರ್ಥ’ ಆಗಿರಬಹುದೆ?
೩. ಅದೆಲ್ಲ ಇರಲಿ! ಸ್ವತಃ ಅಲ್ಲಮನಿಗೇ ಅಲ್ಲಮ ಅರ್ಥವಾಗಿರಬಹುದೆ?
ಹೀಗೆಂದುಕೊಳ್ಳುತ್ತಾ ಅಲ್ಲಮನ ವಚನಗಳಲ್ಲಿ ‘ಅರ್ಥ’ ಎಂಬ ಪದ ಎಲ್ಲಿ, ಹೇಗೆ ಬರುತ್ತದೆ ಎಂದುಕೊಂಡು, ನನ್ನ ಪ್ರಿಯ ಜಾಲತಾಣಗಳಲ್ಲೊಂದಾದ ವಚನಸಂಚಯ.ಕಾಂ ನೋಡಿದೆ: ‘ಅರ್ಥ’ ಎಂಬ ಪದವಿರುವ ಅಲ್ಲಮನ ಎಂಟು ವಚನಗಳು ಸಿಕ್ಕವು.
ಅವುಗಳಲ್ಲಿ, ‘ಸಾವನ್ನಕ್ಕರ ಶ್ರವವ ಮಾಡಿದಡೆ, ಇನ್ನು ಕಾದುವ ದಿನವಾವುದು? ಎಂದು ಶುರುವಾಗುವ ಅಲ್ಲಮನ ವಚನದ ಒಂದು ಸುಂದರ ಫಿಲಾಸಫಿಕಲ್ ಝಲಕ್:
‘ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದಡೆ ನಿಜವನೆಯ್ದುವ ದಿನವಾವುದು?’
ಡಿ. ಆರ್. ನಾಗರಾಜ್ ಅಥವಾ ಮಾರ್ಕ್ವೆಜ್ ಅರ್ಥ ಹುಡುಕುತ್ತಿದ್ದರೋ? ನಿಜ ಹುಡುಕುತ್ತಿದ್ದರೋ? ಅದೆಲ್ಲ ಬರೆವವರ ಆದಿಮ ಹುಡುಕಾಟ ಎಂದಷ್ಟೇ ಹೇಳಬಲ್ಲೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಸಾಕ್ರೆಟಿಸ್ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೨೪೦೦ ವರ್ಷಗಳ ಕೆಳಗೆ ಬದುಕಿದ್ದ ದಿಟ್ಟ, ಸ್ವತಂತ್ರ ಗ್ರೀಕ್ ಫಿಲಾಸಫರ್. ಸಾಕ್ರೆಟಿಸ್ ತರುಣ ಜನಾಂಗವನ್ನು ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಿದ್ದ. ‘ನಮ್ಮನ್ನು ನಾವು ಪರೀಕ್ಷೆಗೆ ಒಡ್ಡಿಕೊಳ್ಳದ ಜೀವನ ಬದುಕಲು ಲಾಯಕ್ಕಲ್ಲ’ ಎಂದು ಹೇಳುತ್ತಿದ್ದ. ಸಾಕ್ರೆಟಿಸ್ ಹೊಸ ತಲೆಮಾರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾನೆಂದು ಹಳೆಯ ತಲೆಮಾರಿನವರು ಸಿಟ್ಟಾಗಿದ್ದರು.
ಸಾಕ್ರೆಟಿಸ್ ಬಗ್ಗೆ ಹಳಬರ ಪೂರ್ವಗ್ರಹಗಳು ಗ್ರೀಕ್ ವಿನೋದ ನಾಟಕಕಾರ ಅರಿಸ್ಟೋಫನಿಸ್‌ನ ನಾಟಕಗಳಲ್ಲೂ ಸೇರಿಕೊಂಡವು. ಅರಿಸ್ಟೋಫನಿಸ್ (೪೪೬ ಬಿ.ಸಿ.- ೩೮೬ ಬಿ.ಸಿ.) ಮಹಾ ಪ್ರತಿಭಾವಂತ ನಾಟಕಕಾರ. ಕಾಮಿಡಿ ನಾಟಕ ಪ್ರಕಾರದ ಪಿತಾಮಹ. ತನ್ನ ಕಾಲದ ರಾಜನನ್ನೇ ಗೇಲಿ ಮಾಡುತ್ತಿದ್ದ; ರಾಜನ ಬಗ್ಗೆ ಪ್ರಜೆಗಳ ಮನಸ್ಸಿನಲ್ಲಿದ್ದ ಅಸಮಾಧಾನ, ಸಿಟ್ಟು, ಭಿನ್ನಮತಗಳಿಗೆ ದನಿಯಾಗಿದ್ದ. ಡಯೋನಿಸಿಸ್ ಎಂಬ ಕಾಳಶಕ್ತಿಗಳ ದೇವತೆಯನ್ನು ಕೂಡ ಗೇಲಿ ಮಾಡುತ್ತಿದ್ದ.
ಹೀಗೆ ಅರಿಸ್ಟೋಫನಿಸ್ ಜನರನ್ನು ಆಳುವ ರಾಜ, ದೇವತೆ ಎಂಬ ಎರಡೂ ಬಗೆಯ ಸರ್ವಾಧಿಕಾರಗಳನ್ನು ನೋಡಿ ಜನ ನಗುವಂತೆ ಮಾಡುತ್ತಿದ್ದ; ಆ ಮೂಲಕ ನಾಟಕದ ನೋಡುಗರು ನಿರ್ಭಯ ಮನಸ್ಸಿನ ವ್ಯಕ್ತಿಗಳಾಗುವಂತೆ ಮಾಡುತ್ತಿದ್ದ. ಆ ಮೂಲಕ ತನ್ನ ಕಾಲದ ಜನಾಭಿಪ್ರಾಯವನ್ನು ರೂಪಿಸುತ್ತಿದ್ದ.
ಆದರೆ ಅದೇ ಕಾಲದಲ್ಲಿ ಅಥೆನ್ಸಿಗೆ ಹೊಸ ಚಿಂತನೆಗಳನ್ನು ತಂದ ಹೊರಗಿನವರ ಬಗೆಗೆ, ಇತರ ದೇಶಗಳ ಚಿಂತಕರ ಬಗೆಗೆ, `ವಿದೇಶೀಯರ’ ಬಗ್ಗೆ ಅರಿಸ್ಟೋಫನಿಸ್ ಪೂರ್ವಗ್ರಹ ಬೆಳೆಸಿಕೊಂಡ. ಆ ಕಾಲದಲ್ಲಿ ಗ್ರೀಸ್ ದೇಶದ ಅಥೆನ್ಸ್ ಹೊಸ ಚಿಂತನೆಗಳ ಚರ್ಚೆಯ ನೆಲೆವೀಡಾಗಿತ್ತು. ಅಥೆನ್ಸಿಗೆ ಹೊಸ ಡಯಲೆಕ್ಟಿಕಲ್ ಚಿಂತನೆಯ ಸೋಫಿಸ್ಟರೂ ಬಂದರು. ಅವರು ಕೂಡ ಹಾಲಿಯಿದ್ದ ರೂಢಿ ಮಾರ್ಗಗಳನ್ನು ಪ್ರಶ್ನಿಸುವವರೇ ಆಗಿದ್ದರು.
ಅಥೆನ್ಸಿನ ಹಳಬರಿಗೆ ಅದು ಹೇಗೋ ಏನೋ ತಮ್ಮ ಅಥೆನ್ಸಿನಲ್ಲಿರುವ ತತ್ವಜ್ಞಾನಿ ಸಾಕ್ರೆಟಿಸ್ ಈ ಸೋಫಿಸ್ಟ್ ಮಾರ್ಗದ ಚಿಂತಕರ ಪರವಾಗಿದ್ದಾನೆ ಎಂಬ ಪೂರ್ವಗ್ರಹ ಬೆಳೆಯಿತು. ಅಥವಾ ಅದು ಅರಿಸ್ಟೋಫನಿಸ್ ಎಂಬ ನಾಟಕಕಾರನ ಮನಸ್ಸಿನಲ್ಲಿ ಹೆಚ್ಚು ಬೆಳೆಯಿತೋ ಏನೋ! ಹೇಳುವುದು ಕಷ್ಟ.
ತನ್ನ ಕಾಲದ ಕ್ರಾಂತಿಕಾರಿ ತತ್ವಜ್ಞಾನಿ ಸಾಕ್ರೆಟಿಸ್ ಬಗ್ಗೆ ತನ್ನ ಪೂರ್ವಗ್ರಹ ಹಾಗೂ ಆ ಕಾಲದ ಪೂರ್ವಗ್ರಹ ಎರಡೂ ಅರಿಸ್ಟೋಫನಿಸನಲ್ಲಿ ಸೇರಿಕೊಂಡಂತಿವೆ. ಅರಿಸ್ಟೋಫನಿಸ್ ತನ್ನ ’ದ ಕ್ಲೌಡ್ಸ್’ ನಾಟಕದಲ್ಲಿ ಸಾಕ್ರಟಿಸ್‌ನನ್ನು ಪಾತ್ರವಾಗಿ ಮಾಡಿ ಕ್ರೂರವಾಗಿ ಅಣಕಿಸಿದ. ಆ ಕಾಲದ ಅಥೆನ್ಸ್‌ನಲ್ಲಿ ಪ್ರತಿ ವರ್ಷ ನಾಟಕ ಸ್ಪರ್ಧೆಗಳು ನಡೆಯುತ್ತಿದ್ದವು. ಅಲ್ಲಿ ಗೆಲ್ಲಲು ನಾಟಕಕಾರರು ಸಣ್ಣ ಪುಟ್ಟ ಟ್ರಿಕ್‌ಗಳನ್ನು ಕೂಡ ಮಾಡುತ್ತಿದ್ದಂತೆ ಕಾಣುತ್ತದೆ!
ಆದರೆ ಅರಿಸ್ಟೋಫನಿಸ್ ನಾಟಕದ ಬರ್ಬರ ಅಣಕ ಹಳಬರ ಮನಸ್ಸಿನಲ್ಲಿ ಸಾಕ್ರೆಟಿಸ್‌ನ ಸ್ವತಂತ್ರ ಮನೋಭಾವದ ಬಗ್ಗೆ, ವೈಚಾರಿಕತೆಯ ಬಗ್ಗೆ ಇದ್ದ ವಿಷವನ್ನು ಮತ್ತಷ್ಟು ಹೆಚ್ಚಿಸಿತು. ಕೊನೆಗೆ ಅಥೆನ್ಸಿನ ನ್ಯಾಯಮಂಡಲಿ ಸಾಕ್ರೆಟಿಸ್‌ಗೆ ವಿಷ ಕುಡಿಸುವ ಶಿಕ್ಷೆ ಕೊಟ್ಟಿದ್ದರಲ್ಲಿ ಅರಿಸ್ಟೋಫನಿಸ್ ನಾಟಕದ ಕ್ರೂರ ಪ್ರಭಾವವೂ ಇತ್ತು ಎಂದು ಪ್ಲೇಟೋ ಟೀಕಿಸುತ್ತಾನೆ.
ಹೆಮ್ಲಾಕ್ ಎಂಬ ವಿಷ ಕುಡಿಸುವ ಆಜ್ಞೆ ಮಾಡುವ ಮುನ್ನ ನ್ಯಾಯಮಂಡಲಿ ಸಾಕ್ರಟಿಸ್‌ನನ್ನು `ನೀನು ಹೇಳಿರುವುದು ತಪ್ಪು ಎಂದು ಒಪ್ಪಿಕೊಂಡರೆ ನಿನ್ನ ಶಿಕ್ಷೆ ರದ್ದು ಮಾಡುತ್ತೇವೆ’ ಎಂದು ಹೇಳಿತು. ಆಗ ಸಾಕ್ರೆಟಿಸ್ ಹೇಳಿದ: `ನೀವು ನನ್ನನ್ನು ಬಿಡುಗಡೆ ಮಾಡಿದರೂ, ಬಿಡುಗಡೆ ಮಾಡದಿದ್ದರೂ ನಾನು ಹೇಳಿದ್ದು ಸರಿ ಎಂದೇ ಹೇಳುತ್ತೇನೆ.’
ಇಂಥ ದಿಟ್ಟ ತತ್ವಜ್ಞಾನಿ ಸಾಕ್ರೆಟಿಸ್ ಬಗ್ಗೆ ಅರಿಸ್ಟೋಫನಿಸ್ ಥರದವರಿಗೆ ಇದ್ದ ಪೂರ್ವಗ್ರಹ ಈ ಕಾಲದ ಕಾಮಿಡಿಗಳಲ್ಲೂ ಇರಬಲ್ಲದು. ಆದ್ದರಿಂದಲೇ ಕಾಮಿಡಿ ನೋಡಿ ನಗುವ ಮುನ್ನ ಅಥವಾ ನಕ್ಕ ನಂತರ, ನಗಿಸುವವರ ಉದ್ದೇಶ ಏನೆಂಬುದನ್ನು ಕಾಣುವ ವೈಚಾರಿಕ ನೋಟ ನಮಗಿರಬೇಕಾಗುತ್ತದೆ. ಒಂದು ಕಾಲಕ್ಕೆ `ಜನಪ್ರಿಯ’ ಎನ್ನಿಸಿಕೊಂಡಿದ್ದ ಮಾಸ್ಟರ್ ಹಿರಣ್ಣಯ್ಯ ಥರದವರ ಅಗ್ಗದ ಕಾಮಿಡಿಗಳು ನೇರವಾಗಿಯೇ ಶೂದ್ರವಿರೋಧಿಗಳಾಗಿದ್ದವೆಂಬುದು ನಿಮಗೆ ನೆನಪಿರಬಹುದು. ಆದ್ದರಿಂದಲೇ ಜನರನ್ನು ನಗಿಸುವ ಮುಸುಕಿನ ಮರೆಯಲ್ಲಿ ಕಾಮಿಡಿಗಳು ಮಾಡುವ ಕ್ರೂರ, ಚಿಲ್ಲರೆ ರಾಜಕಾರಣವನ್ನು ಜಾಣ ಜಾಣೆಯರು ವಿಮರ್ಶಾತ್ಮಕವಾಗಿ ಗಮನಿಸುತ್ತಿರಬೇಕಾಗುತ್ತದೆ.
ತನ್ನ ಬಗೆಗಿನ ಅಣಕವಿದ್ದ ನಾಟಕದ ಪ್ರದರ್ಶನ ನಡೆಯುತ್ತಿದ್ದಾಗ ಸಾಕ್ರೆಟಿಸ್ ಹೇಗೆ ಪ್ರತಿಕ್ರಿಯಿಸಿದ? ಎ.ಎನ್. ಮೂರ್ತಿರಾವ್ ಅನುವಾದಿಸಿರುವ ‘ಸಾಕ್ರೆಟಿಸನ ಕೊನೆಯ ದಿನಗಳು’ ಪುಸ್ತಕದಲ್ಲಿ ಒಂದು ಭಾಗವಿದೆ: ಒಮ್ಮೆ ಅಥೆನ್ಸಿನ ಬಯಲು ರಂಗಭೂಮಿಯಲ್ಲಿ ‘ದ ಕ್ಲೌಡ್ಸ್’ ನಾಟಕ ನಡೆಯುತ್ತಿತ್ತು. ಸಾಕ್ರೆಟಿಸ್ ಪಾತ್ರ ರಂಗದ ಮೇಲೆ ಬಂತು. ಈ ನಾಟಕ ತನ್ನನ್ನು ಗೇಲಿ ಮಾಡಿ, ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿ ಮಾಡಿದ್ದನ್ನು ಸಾಕ್ರೆಟಿಸ್ ಖುದ್ದು ನೋಡಿದ. ಸಾಕ್ರೆಟಿಸ್‌ಗೆ ಎಷ್ಟು ಆತ್ಮವಿಶ್ವಾಸ ಇತ್ತೆಂದರೆ, ಅವನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ‘ಈ ನಾಟಕದಲ್ಲಿ ಗೇಲಿಗೊಳಗಾಗುತ್ತಿರುವವನು ನಾನೇ’ ಎಂಬುದು ಎಲ್ಲರಿಗೂ ಕಾಣುವಂತೆ ಎದ್ದು ನಿಂತುಕೊಂಡ!
ಸಾಕ್ರೆಟಿಸ್‌ಗೆ ಸಾವಿರಾರು ವರ್ಷಗಳ ಕೆಳಗೆ ಇದ್ದ ಆತ್ಮವಿಶ್ವಾಸ, ಹಾಸ್ಯಪ್ರಜ್ಞೆ ಹುಂಬ ಜನರ ಹುಸಿ ಭಜನೆಯ ಪರಾಕು ಪಂಪುಗಳಿಂದ ಉಬ್ಬುವ ಬಲೂನುಗಳಾದ ಈ ಕಾಲದ ನಾಯಕರಿಗೆ ಎಲ್ಲಿಂದ ಬಂದೀತು! ಅರವತ್ತು ವರ್ಷಗಳ ಕೆಳಗೆ, ತಮ್ಮನ್ನು ಗೇಲಿ ಮಾಡಿ ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಬರೆದ ಕಾರ್ಟೂನನ್ನು ನೆಹರು ತಮ್ಮ ಕಛೇರಿಯ ಗೋಡೆಯ ಮೇಲೆ ತೂಗು ಹಾಕಿಕೊಂಡಿದ್ದರು. ಆದರೆ ಅವರ ಪುತ್ರಿ ಇಂದಿರಾಗಾಂಧಿಯವರನ್ನು ಗೇಲಿ ಮಾಡಿದ್ದ ನಾಟಕವೊಂದು ನಡೆಯಲು ಇಂದಿರಾ ಭಕ್ತರು ಬಿಡಲಿಲ್ಲ!
ಈ ಕಾಲದ ಸರ್ಕಾರಗಳಂತೂ ಸ್ಟ್ಯಾಂಡಪ್ ಕಾಮಿಡಿ ಮಾಡುವ ಹುಡುಗ, ಹುಡುಗಿಯರಿಗೆ ನಿತ್ಯ ಕಿರಿಕಿರಿ ಮಾಡುತ್ತಲೇ ಇರುತ್ತವೆ; ನಿತ್ಯವೂ ಈ ‘ಕಿರುಕುಳಜೀವಿ’(‘ಕಿಕುಜೀ’) ಗುಂಪುಗಳ ಉಪಟಳ ನಡೆಯುತ್ತಲೇ ಇರುತ್ತದೆ. ಮೊನ್ನೆ ಶ್ಯಾಮ್ ರಂಗೀಲ ಎಂಬ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಹಾಲಿ ಪ್ರೈಂ ಮಿನಿಸ್ಟರ್ ಎದುರು ವಾರಣಾಸಿಯಲ್ಲಿ ಚುನಾವಣೆಗೆ ನಿಲ್ಲಲು ಹೋದರೆ ಅವರ ನಾಮಪತ್ರವೇ ತಿರಸ್ಕೃತವಾದ ಪವಾಡ ನಡೆಯಿತು!
ಇದು ನಮ್ಮ ದೇಶದ ಕತೆ! ಸಹಜ ನಗೆ ಕಳೆದುಕೊಂಡ ನಾಡು ಅಸಹನೆಯ ಬೀಡಾಗತೊಡಗುತ್ತದೆ. ಸಂಗೀತ, ಕಲೆ ಸಾಹಿತ್ಯಗಳ ಖದರ್ ಕಳೆದುಕೊಂಡ ಸಮಾಜಗಳು ಸ್ಮಶಾನಗಳಾಗುತ್ತವೆ; ಮನುಷ್ಯರು ರಕ್ಕಸರಾಗತೊಡಗುತ್ತಾರೆ. ಸರ್ವಾಧಿಕಾರ ಸೃಷ್ಟಿಯಾಗುತ್ತದೆ.
ಆದರೆ ಅರಿಸ್ಟೋಫನಿಸ್ `ದ ಕ್ಲೌಡ್ಸ್’ ಥರದ ಕಾಮಿಡಿಯನ್ನು ನೋಡಿದಾಗ ಬರೆವ ಕಲೆಯ ಮತ್ತೊಂದು ಪ್ರಶ್ನೆ ಎದುರಾಗುತ್ತದೆ: ವೈನೋದಿಕ ನಾಟಕಕಾರನಾಗಲೀ, ಯಾವುದೇ ಥರದ ಲೇಖಕಿಯಾಗಲಿ, ಲೇಖಕನಾಗಲಿ, ಅವರ ಜೀವನ ದರ್ಶನ ಸಂಕುಚಿತವಾದರೆ, ವಸ್ತುನಿಷ್ಠ ನೋಟ ಮಂಕಾದರೆ ಅವರ ಬರವಣಿಗೆಗೆ, ಕಲೆಗೆ ಮಾರಕ ಹೊಡೆತ ಬೀಳುತ್ತದೆ. ಅದರ ಕೆಟ್ಟ ಪರಿಣಾಮ ಬರೆವವರ ಮೇಲೂ ಆಗುತ್ತದೆ. ಓದುವವರ ಮೇಲೂ ಆಗುತ್ತದೆ.
ಅರಿಸ್ಟೋಫನಿಸ್‌ನ ಅದ್ಭುತ ಕಾಮಿಡಿ ಲೋಕದ ಬಗ್ಗೆ ಮುಂದೊಮ್ಮೆ ಬರೆಯುವೆ. ಸದ್ಯಕ್ಕೆ ಅಂಥ ಪ್ರತಿಭಾವಂತ ನಾಟಕಕಾರನ ಪೂರ್ವಗ್ರಹಗಳು ವಿಚಾರವಾದಿ ಸಾಕ್ರೆಟಿಸ್ ವ್ಯಕ್ತಿತ್ವಕ್ಕೆ ತಂದ ಕುತ್ತು ಎಂಥದೆಂಬುದನ್ನು ಮಾತ್ರ ದುಗುಡದಿಂದ ದಾಖಲಿಸುತ್ತಿರುವೆ.
ಈ ಮಾತು ಬರೆವ ಗಳಿಗೆಯಲ್ಲಿ ನಮ್ಮ ಪ್ರತಿಭಾವಂತ ಲೇಖಕ ಲಂಕೇಶ್ ಒಮ್ಮೆ ರೈತ ಚಳುವಳಿಯನ್ನು ಬೆಂಬಲಿಸಿದ್ದರೂ, ಮುಂದೆ ನಾಡಿನ ದೊಡ್ಡ ರೈತನಾಯಕರಾದ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರ ಮೇಲೆ ಗೇಲಿಯ ಅಸ್ತ್ರ ಬಳಸಿ ಹಣಿಯಲೆತ್ನಿಸಿದ್ದು ನೆನಪಾಗುತ್ತದೆ. ಅರಿಸ್ಟೋಫನಿಸ್‌ನ ಬರ್ಬರತೆ ನನ್ನ ಕಣ್ಣ ಮುಂದೆಯೇ ನಡೆದಿರುವುದನ್ನು ಕಂಡು ದಟ್ಟ ವಿಷಾದ ಆವರಿಸತೊಡಗುತ್ತದೆ. ಈ ಬಗ್ಗೆ ಲಂಕೇಶರ ಜೊತೆ ವಾದಿಸಿದ್ದೂ ನೆನಪಾಗುತ್ತದೆ. ಮುಂದೆ ಎಂ.ಡಿ.ಎನ್. ಕುರಿತು ಬಂದ ಹೊಸ ಹೊಸ ಪುಸ್ತಕಗಳು ಈ ಗೇಲಿಯನ್ನು ಹಿಮ್ಮೆಟ್ಟಿಸಿರಬಹುದು ಎಂಬ ನೆಮ್ಮದಿಯೂ ಮೂಡುತ್ತದೆ!
ಮೊನ್ನೆ ಗೆಳೆಯ ದೇವು ಪತ್ತಾರ್, `ನೀವು ಹಿಂದೊಮ್ಮೆ ಕಾರ್ಟೂನ್ ಬರೆಯುತ್ತಿದ್ದ ಕಾಲದ ಬಗ್ಗೆ ಪ್ರಜಾವಾಣಿಯ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ನೆನಪಿಸಿದ್ದಾರೆ. ಆ ಬಗ್ಗೆ ಬರೆಯಿರಿ’ ಎಂದರು.
ಅದನ್ನು ಬರೆಯಬೇಕಾಗಿದ್ದವನು ಇದನ್ನು ಬರೆದೆ!
ಓದುಗಿ- ಓದುಗ ಸ್ಪಂದನ
ಓದುಗಿ : ಕಳೆದ ವಾರದ ‘ಗಾಳಿ ಬೆಳಕು’ ಅಂಕಣದಲ್ಲಿರುವ ’ರೀಡರ್ ಅಥವಾ ಓದುಗಿಯ ಹುಟ್ಟು’ ಲೇಖನದಲ್ಲಿ ಹೇಳಿದಂತೆ ಓದುಗ- ಓದುಗಿ/ ಓದುಗಿತ್ತಿ; ಪ್ರೇಕ್ಷಕ - ಪ್ರೇಕ್ಷಕಿ; ಮತದಾರ - ಮತದಾರ್ತಿ; ವಿದ್ಯಾರ್ಥಿ - ವಿದ್ಯಾರ್ಥಿನಿ; ಶಿಕ್ಷಕ-ಶಿಕ್ಷಕಿ….ಇವೆಲ್ಲ ಸರಿ. ಆದರೆ ಪುರುಷಸೂಚಿ ’ರಾಷ್ಟ್ರಪತಿ’ಯನ್ನು ಏನು ಮಾಡುವುದು?
ಅಂಕಣಕಾರ: ‘ಪ್ರೆಸಿಡೆಂಟ್’ ಪದಕ್ಕೆ ‘ರಾಷ್ಟ್ರಪತಿ’ ಎಂಬ ಅನುವಾದ ಸೂಚಿಸಿದವರು ಕನ್ನಡದ ತೀನಂಶ್ರೀ ಎಂದು ಎಲ್ಲೋ ಓದಿದ ನೆನಪು.
ಆದರೆ, ಅವತ್ತು ಮಹಿಳೆಯೊಬ್ಬರು ಪ್ರೆಸಿಡೆಂಟ್ ಆಗುವುದನ್ನು ಅವರು ನಿರೀಕ್ಷಿಸಿರಲಿಲ್ಲವೇನೋ! ಅವರು ರಾಷ್ಟ್ರಾಧ್ಯಕ್ಷ ಎಂದು ಅನುವಾದಿಸಿದ್ದರೆ, ರಾಷ್ಟ್ರಾಧ್ಯಕ್ಷೆ, ರಾಷ್ಟ್ರಾಧ್ಯಕ್ಷಿಣಿ ಎನ್ನಬಹುದಾಗಿತ್ತು!
ಅದಕ್ಕೇ ಮೇಡಂ, ಎಲ್ಲದಕ್ಕೂ ಫೆಮಿನಿಸ್ಟ್ ತಲೆಯಿರಬೇಕು ಅನ್ನುವುದು!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಈ ಸಲದ ಅಂಕಣದ ತಲೆಬರಹದಲ್ಲಿ `ರೀಡರ್’ ಎಂಬ ಪದ ನೋಡಿ, ಇಲ್ಲಿ ಇಂಗ್ಲಿಷ್ ಪದ ಯಾಕೆ? ಓದುಗ ಎಂಬ ಪದ ಇಲ್ಲವೆ? ಎಂದು ಅಚ್ಚರಿಗೊಳ್ಳುವವರು, ಗೊಣಗುವವರು ಇರಬಹುದು; ಇರುತ್ತಾರೆ!
ಕಳೆದ ವಾರದ ಅಂಕಣದ ಎರಡನೆಯ ಭಾಗದಲ್ಲಿರುವ ಸಹ-ಅಂಕಣಕ್ಕೆ ಕೊಟ್ಟಿದ್ದ `ಓದುಗಿ-ಓದುಗ ಸ್ಪಂದನ’ ಎಂಬ ಖಾಯಂ ತಲೆಬರಹವನ್ನು ನೀವು ಗಮನಿಸಿರಬಹುದು.
ಆ ಭಾಗಕ್ಕೆ ಓದುಗಿ-ಓದುಗ ಎರಡನ್ನೂ ಸೇರಿಸಿ ಟೈಟಲ್ ಕೊಟ್ಟಿದ್ದಕ್ಕೆ ಕಾರಣ `ರೀಡರ್’ ಎಂಬ ಪದಕ್ಕೆ ನಾವು ಬಳಸುವ `ಓದುಗ’ ಎಂಬ ಪದಕ್ಕೆ ಇರುವ ಮಿತಿ.
ಇಂಗ್ಲಿಷಿನ `ರೀಡರ್’ ಎಂಬ ಪದ ಓದುಗಿಯನ್ನೂ, ಓದುಗನನ್ನೂ, ಲಿಂಗಾತೀತರನ್ನೂ ಒಳಗೊಳ್ಳುತ್ತದೆ. ಅಷ್ಟೇ ಅಲ್ಲ, ಓದಬಲ್ಲ ಯಂತ್ರಜೀವಿಯನ್ನೂ `ರೀಡರ್’ ಎಂಬ ಪದ ಒಳಗೊಳ್ಳುತ್ತದೆ.
ಕನ್ನಡದ ‘ಓದುಗ’ ಎಂಬ ಪದಕ್ಕೂ ಈ ಎಲ್ಲ ಅರ್ಥಸಾಧ್ಯತೆಗಳು ಇಲ್ಲ ಎಂದು ಹೇಳುತ್ತಿಲ್ಲ; ಆದರೂ, `ಓದುಗ’ ಎಂದಾಕ್ಷಣ ಗಂಡಸೇ ನನ್ನ ಕಣ್ಣೆದುರು ಬರುತ್ತಾನೆ; ಹೆಂಗಸು, ‘ಓದುಗಿ’, ತಕ್ಷಣ ಕಣ್ಣೆದುರು ಬರುವುದಿಲ್ಲ. ಲೋಕಸಭಾ ಚುನಾವಣೆಯ ಕಾಲದ ನನ್ನ ಪ್ರಜಾವಾಣಿ ಅಂಕಣವೊಂದರಲ್ಲಿ ‘ಮತದಾರ್ತಿ’ ಎಂಬ ಪದವನ್ನು ಪ್ರತ್ಯೇಕವಾಗಿ ಬಳಸಿದ್ದೇನೆ; `ವೋಟರ್’ ಎನ್ನುವುದರ ಬದಲು ’ಮತದಾರ’ ಎಂಬ ಪದ ಬಳಸಿದ ತಕ್ಷಣ ಗಂಡಸು ಎಂಬುದೇ ನಮ್ಮ ಕಣ್ಣೆದುರು ಯಾಕೆ ಬರುತ್ತದೆ? ಈ ಪದರಾಜಕಾರಣದ ಬಗೆಗೂ ಚರ್ಚಿಸಿದ್ದೇನೆ.
ಈ ಸಮಸ್ಯೆ ಕೇವಲ ಭಾಷೆಯಲ್ಲಲ್ಲ, ಒಟ್ಟು ಜನಮಾನಸದ ಧೋರಣೆಯಲ್ಲೇ ಹುದುಗಿಬಿಟ್ಟಿದೆ ಎಂಬುದನ್ನು ಬ್ಲ್ಯಾಕ್ ಫೆಮಿನಿಸ್ಟ್ ಬೆಲ್ ಹುಕ್ಸ್ ಹೇಳುತ್ತಾರೆ: `ಸಾಮಾನ್ಯವಾಗಿ `ಬ್ಲ್ಯಾಕ್ ಪೀಪಲ್’ ಎಂದು ಮಾತಾಡುವಾಗ ಒತ್ತು ಕಪ್ಪು ಗಂಡಸರ ಬಗೆಗೆ ಇರುತ್ತದೆ; ಹಾಗೆಯೇ ‘ಹೆಂಗಸರು’ ಎಂದು ಸಾಮಾನ್ಯವಾಗಿ ಮಾತಾಡುವಾಗ ಒತ್ತು ಬಿಳಿಯ ಮಹಿಳೆಯರ ಕಡೆಗೆ ವಾಲುತ್ತದೆ.’
ಇಷ್ಟಾಗಿಯೂ, ಕನ್ನಡ ಭಾಷೆ ಕೆಲವೆಡೆ ಸ್ತ್ರೀಯರನ್ನು `ರಕ್ಷಿಸಿದೆ’ ಎನ್ನಿಸುತ್ತದೆ! ಈ ವಿಶೇಷ ಅಂಶವನ್ನು ಕನ್ನಡ ಸ್ತ್ರೀವಾದಿಗಳಾದ ಸುಮಿತ್ರಾಬಾಯಿ, ಆಶಾದೇವಿ, ಸುಮಾ, ಮೀರಾ, ಕಾವ್ಯಶ್ರೀ, ತಾರಿಣಿ ಇವರ ಗಮನಕ್ಕೆ ವಿನಮ್ರವಾಗಿ ತರಲೆತ್ನಿಸುತ್ತೇನೆ:
ಇದು ನನಗೆ ಒಂದು ದಿನ ಇದ್ದಕ್ಕಿದ್ದಂತೆ ಹೊಳೆದಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಕಾರಿಡಾರಿನಲ್ಲಿ; ಯಾರೋ ರೂಮಿನ ಬೀಗ ಮುರಿದಿದ್ದು ಪತ್ತೆಯಾದ ದಿನ. ಅವತ್ತು ನಾನು ಕ್ಲಾಸಿಗೆ ಹೋಗುವ ಹಾದಿಯಲ್ಲಿ ವಿದ್ಯಾರ್ಥಿಯೊಬ್ಬ ಕಡು ಉತ್ಸಾಹದಿಂದ ಒಂದು ರೋಚಕ ಬ್ರೇಕಿಂಗ್ ನಾಯ್ಸ್ ಬಿತ್ತರಿಸಿದ: ‘ಸಾರ್! ಯಾವನೋ ಕಳ್ಳ ಬೀಗ ಮುರ್‍ದಿದಾನೆ!’
‘ಕಳ್ಳಿ ಯಾಕಾಗಿರಬಾರದು?’ ಎಂಬ ಪ್ರಶ್ನೆ ತಕ್ಷಣ ನನಗೆ ಎದುರಾಯಿತು! ಅವನನ್ನು ಈ ಪ್ರಶ್ನೆ ಕೇಳಿ ಪ್ರಯೋಜನವಿರಲಿಲ್ಲ. ನಂತರ, ಕ್ಲಾಸಿನಲ್ಲಿ ಸ್ತ್ರೀವಾದ ಪಾಠ ಮಾಡುತ್ತಾ, ‘ಭಾಷೆಯಲ್ಲಿ ಪುರುಷ ಪೂರ್ವಗ್ರಹ ಹುದುಗಿರುವ ಬಗೆಯನ್ನು ಡೇಲ್ ಸ್ಪೆಂಡರ್ ‘ಮ್ಯಾನ್ ಮೇಡ್ ಲ್ಯಾಂಗ್ವೇಜ್’ ಪುಸ್ತಕದಲ್ಲಿ ತೋರಿಸಿದ್ದಾರೆ; ಆದರೆ…’ ಎಂದು ಚಣ ನಿಲ್ಲಿಸಿದೆ;
ತಮಾಷೆಯೆಂಬಂತೆ ಈ ಹೊಸ ‘ಸಂಶೋಧನೆ’ಯನ್ನು ಹೇಳಿದೆ:
ಸಾಮಾನ್ಯವಾಗಿ ಕಳ್ಳತನ, ಕೊಲೆ, ಭ್ರಷ್ಟಾಚಾರಗಳ ವಿಚಾರ ಬಂದಾಗ ಜನರ ಬಾಯಲ್ಲಿ ಬರುವ ವಾಡಿಕೆಯ ಮಾತುಗಳನ್ನು ಗಮನಿಸಿ:
‘ಯಾವನೋ ಕಳ್ಳ ನುಗ್ಗಿದಾನೆ!’
‘ಯಾವನೋ ಕದ್ಕೊಂಡೋಗಿದಾನೆ!’
‘ಯಾವನೋ ಕೊಲೆ ಮಾಡಿದಾನೆ!’
‘ಯಾವನೋ ಹೊಡೆದಾಕಿದಾನೆ!’
ಅಂದರೆ, ಪಾತಕಗಳ ವಿಚಾರದಲ್ಲಂತೂ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳು ಇನ್ನೂ ಪುರುಷಪಕ್ಷಪಾತಿಯಾಗಿರುವುದು ನಿಜ!
ಈ ಮಾತು ಕೇಳಿ ಹುಡುಗಿಯರ ಮುಖ ಅರಳಿತು; ಮುಕ್ತ ಮನಸ್ಸಿನ ಹುಡುಗರ ಮುಖವೂ ಅರಳಿತು; ಕೆಲವು ಪುರುಷವಾದಿ ಮುಖಗಳು ಸಣ್ಣಗೆ ಬಿಗಿದುಕೊಂಡಂತೆ ಕಂಡಿತು! ಅವತ್ತು ಗಂಡು ಹೆಣ್ಣುಗಳ ಪಾತಕಗಳ ಪ್ರಮಾಣದ ಬಗ್ಗೆ ಭಾಷೆಯಿಂದ ಪಡೆದ ಸೂಚನೆಯನ್ನು ಈಚೆಗೆ ಮತ್ತೆ ಚೆಕ್ ಮಾಡಿದೆ: ವಾಸ್ತವದಲ್ಲೂ ಅದು ನಿಜವಾಗಿತ್ತು! ೨೦೨೨ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿಇದ್ದ ಮಹಿಳಾ ಕೈದಿಗಳ ಸಂಖ್ಯೆ ೨೦೬. ಪುರುಷ ಕೈದಿಗಳ ಸಂಖ್ಯೆಯನ್ನು ಎಷ್ಟೋ ಪಟ್ಟು ಹೆಚ್ಚಿಸಿ, ನೀವೇ ಲೆಕ್ಕ ಹಾಕಿಕೊಳ್ಳಬಹುದು!
ಅದೆಲ್ಲ ಇರಲಿ. ಈ ಲೇಖನದ ಶುರುವಿನಲ್ಲಿ ಹೇಳಿದ ‘ಓದುಗಿ’ ಎಂಬ ಪದವನ್ನು ನಾನು ಅಧಿಕೃತವಾಗಿ ಬಳಸಿದ್ದು ಕನ್ನಡ ಅಧ್ಯಯನ ಕೇಂದ್ರದ ಮೌಖಿಕ ಪರೀಕ್ಷೆಯೊಂದರಲ್ಲಿ; ಅವತ್ತು ವಿಷಯತಜ್ಞರಾಗಿದ್ದ ಸ್ತ್ರೀವಾದಿ ಚಿಂತಕಿ ಎಚ್. ಎಸ್. ಶ್ರೀಮತಿಯವರು ಈ ಪದಪ್ರಯೋಗವನ್ನು ಮನಸಾರೆ ಒಪ್ಪಿದ್ದು ನೆನಪಾಗುತ್ತಿದೆ; ಅಲ್ಲೇ ಇದ್ದ ಭಾಷಾವಿಜ್ಞಾನಿ ಕೆ.ವಿ. ನಾರಾಯಣರು ಈ ವರ್ಗೀಕರಣವನ್ನು ಯಾಕೋ ಒಪ್ಪಲಿಲ್ಲ; ಕೊನೆಗೆ ಅಳೆದೂ ಸುರಿದೂ, ‘ಓದುಗಿತ್ತಿ… ಬೆಟರ್’ ಎಂದರು.
ಭಾಷಾತಜ್ಞನಲ್ಲದ ನನಗೆ, ಲೇಖಕ-ಲೇಖಕಿ, ಪ್ರೇಕ್ಷಕ- ಪ್ರೇಕ್ಷಕಿ ಇವೆಲ್ಲ ಇರುವಂತೆ ಓದುಗ- ಓದುಗಿಯೇ ಸರಿ ಅನ್ನಿಸಿ, ಅದನ್ನೇ ಬಳಸುತ್ತಾ ಬಂದಿರುವೆ. ಈ ಅಂಕಣ ಓದಿರುವ ಕೆಲವರು ಓದುಗಿ ಎಂದು ಬಳಸುವುದನ್ನು ಕಂಡು ಪುಳಕಗೊಂಡಿರುವೆ!
ಈ ಅಂಕಣ ಬರೆಯುತ್ತಾ, ಬೆಲ್ ಹುಕ್ಸ್ ಮಾತನ್ನು ಗಮನಿಸಿದಾಗ ಮತ್ತೊಂದು ವಿಚಾರ ಹೊಳೆಯಿತು: ಎಂದೂ ಇಲ್ಲದ ಓದುಗಿಯ ಪ್ರಶ್ನೆ ಈ ಕಾಲದಲ್ಲಿ ಹೇಗೆ ಬಂತು? ಅಂದರೆ, ಓದುಗಿ ಹುಟ್ಟುವುದು ಫೆಮಿನಿಸ್ಟ್ ರೀಡಿಂಗ್ ಬಂದ ನಂತರ!
ಹೀಗೇ ರೀಡಿಂಗ್ ಬಗ್ಗೆ ಬರೆಯುತ್ತಾ, ಮೊನ್ನೆ ಪದ್ಯದ ಹೊಸ ರೀಡಿಂಗ್ ಬಗ್ಗೆ ಮೋಹನ್ ಮಿರ್ಲೆಯವರ ಜೊತೆ ಮಾತಾಡಿದ್ದು ನೆನಪಾಯಿತು; ಫ್ರೆಂಚ್ ವಿಮರ್ಶಕ ರೊಲಾ ಬಾರ್ತ್ ರೂಪಿಸಿದ ’ರೀಡರ್‍ಸ್ ರೆಸ್ಪಾನ್ಸ್ ಥಿಯರಿ’ಯ ಬಗ್ಗೆ ನಾನೊಮ್ಮೆ ರಿಫ್ರೆಶರ್ ಕೋರ್ಸಿನಲ್ಲಿ ಮಾತಾಡಿದ್ದನ್ನು ಮಿರ್ಲೆ ನೆನಪಿಸಿದರು.
ರೀಡರ್‍ಸ್ ರೆಸ್ಪಾನ್ಸ್ ಥಿಯರಿಯ ಸರಳ ರೂಪ ಇದು: ಕೃತಿ ರಚನೆಯ ನಂತರ ’ಆಥರ್’ ಸಾವು; ರೀಡರ್ ಹುಟ್ಟು. ಅಂದರೆ, ಕೃತಿ ರಚನೆಯ ನಂತರ ಕೃತಿರಚಿಸಿದವರು ಸಾಯುತ್ತಾರೆ; ಓದುವವರು ಹುಟ್ಟುತ್ತಾರೆ. ಇದು ರೋಲಾ ಬಾರ್ಥ್‌ನ ’ಡೆತ್ ಆಫ್ ದ ಆಥರ್’ ಎಂಬ ಮಹತ್ವದ ಪ್ರಬಂಧದ ಒಂದು ಗ್ರಹಿಕೆ. ಡೆತ್ ಆಫ್ ದಿ ಆಥರ್ ಎಂಬುದಕ್ಕೆ ರೂಪಕಾರ್ಥವಿದೆ ಎಂದು ಬಿಡಿಸಿ ಹೇಳಬೇಕಿಲ್ಲ! ಆಥರ್-ಗಾಡ್ (ಲೇಖಕಿದೇವಿ ಅಥವಾ ಲೇಖಕ ದೇವರು) ಕೃತಿಯಲ್ಲಿನ ಎಲ್ಲ ಅರ್ಥವನ್ನೂ ಕೊಟ್ಟಿರಬಹುದು ಎಂದು ರೀಡರ್ ತಿಳಿಬೇಕಾಗಿಲ್ಲ; ಅದನ್ನು ನಿರೀಕ್ಷಿಸಲೂ ಬೇಕಾಗಿಲ್ಲ. ಕೊನೆಗೂ ಕೃತಿಗೆ ಅರ್ಥ ತುಂಬುವುದು ’ರೀಡರ್’ ಮಾತ್ರ. ಇದು ರೋಲಾಬಾರ್ಥ್ ವಾದದ ಸರಳ ಸಂಗ್ರಹರೂಪ.
ಮುಂದೆ ಯಾವುದಾದರೂ ಅಂಕಣದಲ್ಲಿ ರೋಲಾ ಬಾರ್ಥ್ ‘ರೀಡರ್’ ಗ್ರಹಿಕೆಯ ಬಗ್ಗೆ ಇನ್ನಷ್ಟು ಮಾತಾಡಬಹುದು.
ಓದುಗಿ-ಓದುಗ ಸ್ಪಂದನ
ಈ ಅಂಕಣದಲ್ಲೂ ಓದುಗಿ, ಓದುಗರ ಸ್ಪಂದನದ ಮೂಲಕ ಕೃತಿಗಳು, ಐಡಿಯಾಗಳು ಬೆಳೆಸುವ ಸಣ್ಣ ಪ್ರಯತ್ನ ಆಗೀಗ ನಡೆಯುತ್ತಿರುತ್ತದೆ. ಕಳೆದ ವಾರ ಬರೆದ ’ದಲಿತ’ ಪದ ಕುರಿತ ಚರ್ಚೆ ಓದಿದ ಪ್ರೊಫೆಸರ್ ವತ್ಸಲ, ಈ ಪದದ ಮೂಲ ಹೀಬ್ರೂ, ಸಂಸ್ಕೃತ ಭಾಷೆಗಳಲ್ಲೂ ಇರುವುದರ ಬಗ್ಗೆ ಬರೆದರು.
ಆದರೆ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆಯವರಲ್ಲಿ ಈ ಪದ ಮೊದಲು ಕಾಣಿಸಿಕೊಂಡಿದೆ ಎಂದಾದರೆ, ಮರಾಠಿಯಲ್ಲಿ ಕಿಟ್ಟೆಲ್ ಕೋಶದಂಥ ನಿಘಂಟು ಇದ್ದರೆ ಈ ಪದದ ಮೂಲ ಸಿಕ್ಕಬಹುದು. ಸಿಗದಿದ್ದರೇನಂತೆ? ೧೯೭೨ರಿಂದೀಚೆಗೆ ದಲಿತ್ ಪ್ಯಾಂಥರ್‍ಸ್ ಓದುಗ ಕೊಟ್ಟ ಹೊಸ ಅರ್ಥದ ಜೊತೆಗೇ ಹೊರಡಬಹುದು.
‘ನೀನು ಬೆಳೆದರೆ ನಾನು ಬೆಳೆವೆ’. ರೈಟ್?
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಬರಬರುತ್ತಾ ಒಂದು ವ್ಯಕ್ತಿತ್ವದಲ್ಲಿ ಒಂದು ಗುಣವೇ ಎದ್ದು ಕಾಣತೊಡಗಿದರೆ ಏನಾಗುತ್ತದೆ?
ಈ ಪ್ರಶ್ನೆ ಹುಟ್ಟಿದ್ದು ಹಿರಿಯ ಗೆಳೆಯರಂತಿದ್ದ ಕವಿ ಸಿದ್ಧಲಿಂಗಯ್ಯನವರ ವ್ಯಕ್ತಿತ್ವ ಯಾಕೋ ನೆನಪಾದಾಗ. ಮೊದಲು ಸಿಟ್ಟಿನ ಕವಿ ಎನ್ನಿಸಿಕೊಂಡಿದ್ದ ಸಿದ್ದಲಿಂಗಯ್ಯ ಸಂಜೆಯ ಗೋಷ್ಠಿಗಳಲ್ಲಿ ತಮಾಷೆಯ ಪ್ರಸಂಗಗಳನ್ನು ಹೇಳುವ ವ್ಯಕ್ತಿಯಾದರು. ಸಭೆಗಳಲ್ಲೂ ಪಂಚಿಂಗ್ ಜೋಕುಗಳನ್ನು ಪ್ರಯೋಗಿಸತೊಡಗಿದರು. ಅವರ ಈ ವ್ಯಕ್ತಿತ್ವವೇ ಮುಂಚೂಣಿಗೆ ಬಂದು ಅವರ ಕವಿ ವ್ಯಕ್ತಿತ್ವ, ಸ್ಕಾಲರ್ ವ್ಯಕ್ತಿತ್ವ, ವಿಧಾನ ಪರಿಷತ್ತಿನಲ್ಲಿ ಮುಖ್ಯ ಪ್ರಶ್ನೆಗಳನ್ನೆತ್ತುತ್ತಿದ್ದ ದಿಟ್ಟ ವ್ಯಕ್ತಿತ್ವ ಇವೆಲ್ಲ ಹಿನ್ನೆಲೆಗೆ ಸರಿಯತೊಡಗಿದವು; ಎಲ್ಲರೂ 'ಕವಿಗಳು’ ಎಂದು ಕರೆಯುತ್ತಿದ್ದ ಕವಿ ವ್ಯಕ್ತಿತ್ವವೂ ಮಬ್ಬಾಗತೊಡಗಿತು.
ಸಿದ್ಧಲಿಂಗಯ್ಯನವರು ಹಲ ಬಗೆಯ ಪುಸ್ತಕಗಳನ್ನು ಬೆನ್ನು ಹತ್ತುತ್ತಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಒಂದು ಸಂಜೆ ಭಾಷಣ ಮುಗಿಸಿ ನನ್ನ ಜೊತೆ ಹೊರಟ ಅವರು ವೇದಾಂತ ಬುಕ್ ಹೌಸ್ ಹೊಕ್ಕರು. ಅಲ್ಲಿ ಕೆಲವು ಪುಸ್ತಕಗಳನ್ನು ಕೊಂಡರು. ಉಳಿದ ಹಣದಲ್ಲಿ ಸಂಜೆ ಪುಟ್ಟ ಪಾರ್ಟಿ. ಕವಿಗಳ ವೇದಾಂತ ಪುಸ್ತಕ ಮಳಿಗೆಯ ಭೇಟಿ ನನ್ನ ಮನಸ್ಸಿನಲ್ಲಿ ಸುತ್ತರಗಾಣ ಹೊಡೆಯುತ್ತಿತ್ತು! ಮಾತಿನ ನಡುವೆ ಅವರೇ ಹೇಳಿದರು: 'ಇವರೆಲ್ಲ ಏನು ಬರೀತಾರೆ… ಇವೆಲ್ಲ ಗೊತ್ತಿರಬೇಕು. ಅದಕ್ಕೇ ಅಲ್ಲಿಗೆ ಹೋಗ್ತಿರ್‍ತೀನಿ.’
ಇಂಥ ಪುಸ್ತಕಗಳು ಯಜಮಾನಿಕೆಯ ಸಂಕಥನ ಸೃಷ್ಟಿಸುತ್ತಿದ್ದುದನ್ನು ಅರಿತಿದ್ದ ಅಂಬೇಡ್ಕರ್ ಇವನ್ನು ಮೂಲ ಸಂಸ್ಕೃತದಲ್ಲೇ ಓದಿದ್ದರು. ಈ ಮಾದರಿ ಯಾವುದೇ ಅಕಡೆಮಿಕ್ ಸಂಶೋಧನೆ ಮಾಡುವವರಿಗೆ ಮುಖ್ಯ ಪಾಠವಾಗಬಲ್ಲದು: ಮೂಲ ಪಠ್ಯಗಳನ್ನು ನಿಕಟವಾಗಿ ಓದಿದರೆ ಮಾತ್ರ ಹೊಸತೇನಾದರೂ ಕಾಣುತ್ತದೆ.
ಸಿದ್ಧಲಿಂಗಯ್ಯ ಹಲಬಗೆಯ ಪುಸ್ತಕಗಳನ್ನು ಓದುತ್ತಿದ್ದರು: ಬುದ್ಧಿಸಂ, ಅಂಬೇಡ್ಕರ್ ಕುರಿತ ಹತ್ತಾರು ಪುಸ್ತಕಗಳನ್ನು ಓದಿದ್ದರು. ಅಲ್ಲಮ ಮತ್ತು ಬೌದ್ಧರ ನಡುವಣ ಜಗಳದ ಬಗ್ಗೆ ಸುದೀರ್ಘವಾಗಿ ಮಾತಾಡಿದ್ದರು. ಲಂಕೇಶರ ಮಾತಿನಂತೆ ಗಾಂಧೀಜಿಯವರ 'ಹರಿಜನ್’ ಪತ್ರಿಕೆಯ ಬರಹಗಳನ್ನೆಲ್ಲ ಓದಿದ್ದರು. ಅವರು ಇವೆಲ್ಲ ವಿಚಾರಗಳನ್ನೂ ಯಾಕೆ ಸಂಭಾಷಣೆಯಲ್ಲಿ, ಭಾಷಣದಲ್ಲಿ ತರುವುದಿಲ್ಲ ಎಂದು ವಿಸ್ಮಯವಾಗುತ್ತಿತ್ತು.
ಎಲಿನಾರ್ ಝೆಲಿಯಟ್ ಬರೆದ 'ಫ್ರಂ ಅನ್ ಟಚಬಲ್ ಟು ದಲಿತ್’ ಪುಸ್ತಕದ ಬಗ್ಗೆ ಮೊದಲು ನನಗೆ ಹೇಳಿದವರು ಅವರೇ. ಎಲ್ಲೋ ಆ ಪುಸ್ತಕದ ವಿವರಗಳನ್ನು ಓದಿದ್ದ ಅವರು ಹೇಳಿದ್ದು ಕುತೂಹಲಕರವಾಗಿತ್ತು:
ಒಬ್ಬ 'ಅಸ್ಪೃಶ್ಯ’ನು 'ದಲಿತ’ನಾಗುವ ಪ್ರಕ್ರಿಯೆ ಎಂದರೆ, ಪ್ರಜ್ಞಾಪೂರ್ವಕವಾಗಿ ಸಿಟ್ಟಿನ, ಹೊಸ ಸ್ವಾಭಿಮಾನದ ವ್ಯಕ್ತಿತ್ವವನ್ನು ಪ್ರಧಾನವಾಗಿ ಗಳಿಸಿಕೊಳ್ಳುವುದು ಎಂಬ ಆ ಪುಸ್ತಕದ ಒಂದು ಗ್ರಹಿಕೆಯನ್ನು ಸಿದ್ಧಲಿಂಗಯ್ಯ ವಿವರಿಸಿದರು. ಎಲಿನಾರ್ ಝೆಲಿಯಟ್ ಪುಸ್ತಕ ಈ ಅಂಶವನ್ನು ದಲಿತ ಸಾಹಿತ್ಯ, ಚಳುವಳಿ ಎಲ್ಲದರಲ್ಲೂ ಕಂಡುಕೊಳ್ಳುತ್ತದೆ.
ಅವತ್ತು 'ಅನ್‌ಟಚಬಲ್ಸ್' ಎಂಬ ಇಂಗ್ಲಿಷ್ ಸಿನಿಮಾವನ್ನೂ ಕವಿಗಳು ನೆನಸಿಕೊಂಡರು. ಅದಕ್ಕೂ ನಾವು ಚರ್ಚಿಸುವ 'ಅನ್‌ಟಚಬಲಿಟಿ’ಗೂ ಯಾವ ಸಂಬಂಧವೂ ಇರಲಿಲ್ಲ. ಇಂಗ್ಲಿಷ್ ಸಿನಿಮಾದ ಟೈಟಲ್ಲನ್ನು 'ಅಸ್ಪೃಶ್ಯ’ ಪದಕ್ಕೆ ಕನೆಕ್ಟ್ ಮಾಡುತ್ತಾ ಸಿದ್ಧಲಿಂಗಯ್ಯ ಹೇಳಿದರು: 'ಇದು ಮುಟ್ಟಬಾರದ ವ್ಯಕ್ತಿಯೊಬ್ಬ ಯಾರೂ ಸುಲಭವಾಗಿ ಮುಟ್ಟಲಾಗದ ವ್ಯಕ್ತಿಯಾಗುವ ರೀತಿ! ಅಂದರೆ, ಒಂದು ಕಾಲಕ್ಕೆ ದೈನ್ಯದ ವ್ಯಕ್ತಿತ್ವ ಪಡೆದಿದ್ದ ವ್ಯಕ್ತಿಯೊಬ್ಬ ಹೊಸ ವಿದ್ಯಾಭ್ಯಾಸ ಪಡೆದು, ವಿಮೋಚನೆಗೊಂಡು, ಸಂಘಟಿತನಾಗಿ, ಹೋರಾಡುತ್ತಾ, 'ಎಲ್ಲಿ! ಟಚ್ ಮಾಡ್ ನೋಡಿ' ಎಂದು ಸವಾಲೆಸೆಯುವ ವ್ಯಕ್ತಿತ್ವವನ್ನು ಪಡೆಯುತ್ತಾನೆ.’
೧೯೭೨ರಲ್ಲಾಗಲೇ 'ದಲಿತ’ ಎಂಬ ಪದಕ್ಕೆ ಆತ್ಮಗೌರವ, ಸ್ವಾಭಿಮಾನ, ಪ್ರತಿಭಟನೆ ಮುಂತಾದ ಕ್ರಾಂತಿಕಾರಕ ಅರ್ಥಗಳನ್ನು ಮಹಾರಾಷ್ಟ್ರದ 'ದಲಿತ್ ಪ್ಯಾಂಥರ್‍ಸ್’ ಪ್ರತಿಪಾದಿಸಿದ್ದರು. ಅಮೆರಿಕದ ಆಫ್ರೋ-ಅಮೆರಿಕನ್ ಹೋರಾಟಗಾರರು ತಮ್ಮನ್ನು ತಾವು 'ಬ್ಲ್ಯಾಕ್ ಪ್ಯಾಂಥರ್‍ಸ್’ (ಕಪ್ಪು ಚಿರತೆಗಳು) ಎಂದು ಬಣ್ಣಿಸಿಕೊಂಡಿದ್ದರು. ಯಾವುದನ್ನು ಬಿಳಿಯರು 'ಕಪ್ಪು’ ಎಂದು ಹೀಗಳೆದಿದ್ದರೋ, ಅದನ್ನೇ ಪಾಸಿಟಿವ್ ಆಗಿ 'ಬ್ಲ್ಯಾಕ್’ ಪ್ಯಾಂಥರ್‍ಸ್ ಚಳುವಳಿ ಶುರು ಮಾಡಿದ್ದರು. 'ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಘೋಷಣೆಯನ್ನೂ ಕೊಟ್ಟರು. ದಲಿತ್ ಪ್ಯಾಂಥರ್‍ಸ್ ಈ ಹಾದಿಯಲ್ಲಿ ಮುಂದುವರಿದು, 'ದಲಿತ’ ಪದವನ್ನು ಸ್ವಾಭಿಮಾನದ ಪದವನ್ನಾಗಿ ಮಾಡಿತು. ದಲಿತ ಕಾವ್ಯದ, ದಲಿತ ಸಾಹಿತ್ಯದ ಆರಂಭ ಘಟ್ಟವನ್ನೂ ಉದ್ಘಾಟಿಸಿತು.
ಈಚೆಗೆ ವಿಧಾನಸಭೆಯಲ್ಲಿ 'ದಲಿತ’ ಪದದ ಬಗೆಗಿನ ಚರ್ಚೆ ಕೇಳಿಸಿಕೊಂಡಾಗ 'ದಲಿತ’ ಪದದ ಸುದೀರ್ಘ ನಡಿಗೆ ನೆನಪಾಯಿತು.
ದಲಿತ ಪದವನ್ನು ಮೊದಲು ಬಳಸಿದವರು ಜ್ಯೋತಿಬಾ ಫುಲೆ ಎನ್ನುತ್ತಾರೆ. ಅಂಬೇಡ್ಕರ್ ಕುರಿತು ಅಶೋಕ್ ಗೋಪಾಲ್ ಬರೆದ ಜೀವನ ಚರಿತ್ರೆ 'ಎ ಪಾರ್ಟ್ ಅಪಾರ್ಟ್’ನಲ್ಲಿ 'ದಲಿತ’ ಎಂಬ ಪದ ಸಾವಿತ್ರಿಬಾಯಿ ಫುಲೆ ೧೮೫೪ರಲ್ಲಿ ಬರೆದ 'ಕಾವ್ಯಫುಲೆ’ (ಹೂ ಕವಿತೆಗಳು) ಕವನ ಸಂಕಲನದಲ್ಲಿ ಮೊದಲು ಸಾಹಿತ್ಯಕವಾಗಿ ಕಾಣಿಸಿಕೊಂಡಿತು’ ಎಂಬ ದಾಖಲೆಯಿದೆ.
'ದಲಿತ’ ಪದ ಕುರಿತು ಎಲಿನಾರ್ ಝೆಲಿಯಟ್, ಆನಂದ್ ತೇಳ್‌ತುಂಬ್ಡೆ, ಅಶೋಕ್ ಗೋಪಾಲ್ ಪುಸ್ತಕಗಳಿಂದ ಕೆಲವು ಗ್ರಹಿಕೆಗಳು:
ಆರಂಭದಲ್ಲಿ 'ಅನ್‌ಟಚಬಲ್ಸ್’ ಪದವನ್ನು ಬಳಸುತ್ತಿದ್ದ ಬಾಬಾಸಾಹೇಬರಿಗೆ ಮುಂದೆ ಬ್ರಿಟಿಷರು ಬಳಸುತ್ತಿದ್ದ 'ಡಿಪ್ರೆಸ್ಡ್ ಕ್ಲಾಸಸ್’ ಎಂಬ ಪದ ಸರಿಯಾಗಿ ಕಂಡಿತು. ನಂತರ ೧೯೨೪ರಲ್ಲಿ'ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪಿಸಿದ ಕಾಲಕ್ಕೆ 'ಬಹಿಷ್ಕೃತ’ ಪದವನ್ನು ಬಳಸಿದರು. 'ಬಹಿಷ್ಕೃತ್ ಭಾರತ್’ ಪತ್ರಿಕೆಯ ಒಂದು ಲೇಖನದಲ್ಲಿ'ದಲಿತ’ ಪದವನ್ನು ಅಲ್ಲಲ್ಲಿ ಬಳಸಿದರು. ಸಾಮಾಜಿಕ ಶ್ರೇಣಿಯಲ್ಲಿ ನಡೆಯುತ್ತಿದ್ದ ದಮನ, ತುಳಿತವನ್ನು ಚರ್ಚಿಸುವಾಗ 'ಅನ್‌ಟಚಬಲ್ಸ್’ ಪದ ಬಳಸಿದರು. ಸರ್ಕಾರಿ ಕಾರ್ಯಕ್ರಮಗಳು, ಮೀಸಲಾತಿಗಳ ಸಂದರ್ಭದಲ್ಲಿ 'ಪರಿಶಿಷ್ಟ ಜಾತಿ’ಯನ್ನು ಬಳಸಿದರು.
ಮೊದಲು 'ಸಪ್ರೆಸ್ಡ್ ಕ್ಲಾಸಸ್’ ಪದಗುಚ್ಛ ಬಳಸಿದ್ದ ಗಾಂಧೀಜಿ ಮುಂದೆ 'ಹರಿಜನ್’ ಎಂಬ ಪದ ಬಳಸಿದರು. 'ಹರಿಜನ್’ ಪದವನ್ನು ಮೊದಲು ಬಳಸಿದವರು ಗಾಂಧೀಜಿಯಲ್ಲ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಗಾಂಧೀಜಿ ಸಂಪಾದಿಸುತ್ತಿದ್ದ 'ನವಜೀವನ್’ ಪತ್ರಿಕೆಯ ಓದುಗರೊಬ್ಬರು ೧೯೩೧ರಲ್ಲಿ ಗಾಂಧೀಜಿಗೆ ಪತ್ರ ಬರೆದರು: 'ಅಂತ್ಯಜ’, 'ಅಸ್ಪೃಶ್ಯ’ ಮುಂತಾದ ಪದಗಳಿಂದ ನಮಗೆ ನೋವಾಗುತ್ತದೆ. ಹದಿನೈದನೇ ಶತಮಾನದ ಗುಜರಾತಿ ಕವಿ ನರಸಿಂಹ ಮೆಹ್ತಾ ತಮ್ಮ ಕವಿತೆಯೊಂದರಲ್ಲಿ ನೊಂದ ಸಮುದಾಯಗಳ ಜನರನ್ನು 'ಹರಿಜನ’ ಎಂದಿದ್ದಾರೆ. ನೀವೂ ಆ ಹೆಸರನ್ನು ಬಳಸಬಹುದು.’
೧೯೩೨ರಿಂದೀಚೆಗೆ ಗಾಂಧೀಜಿ 'ಹರಿಜನ’ ಪದ ಬಳಸಿದರು; ಇದರಿಂದ ಸವರ್ಣೀಯರ ಧಾರ್ಮಿಕ ಭಾವನೆ ಉದ್ದೀಪನಗೊಂಡು, ಅಸ್ಪೃಶ್ಯತೆಯ ಆಚರಣೆಯನ್ನು ಕೈಬಿಡುತ್ತಾರೆ ಎಂದು ನಂಬಿದ್ದರು. ಆದರೆ ಜಡ ಮನಸ್ಸು ಬದಲಾಗಲಿಲ್ಲ. ಈ ಪದವನ್ನು ಅಂಬೇಡ್ಕರ್ ಹಾಗೂ ಎಚ್ಚೆತ್ತ ದಲಿತರು ಒಪ್ಪಲಿಲ್ಲ.
೧೯೭೨ರಲ್ಲಿ ದಲಿತ್ ಪ್ಯಾಂಥರ್‍ಸ್ ಹುಟ್ಟಿದ ನಂತರ ದೇಶಾದ್ಯಂತ ಅಂಬೇಡ್ಕರ್ ವಾದಿಗಳು 'ಎಚ್ಚೆತ್ತ’ 'ಸ್ವಾಭಿಮಾನ’ದ, 'ವಿಮೋಚನೆ’ಗೊಂಡ’, 'ಹಕ್ಕುಗಳಿಗಾಗಿ ಹೋರಾಡುವ’ ಎಂಬ ಪಾಸಿಟಿವ್ ಅರ್ಥದಲ್ಲಿ 'ದಲಿತ’ ಪದವನ್ನು ಬಳಸಿದರು. ಅದು ದಲಿತ ಚಿಂತನೆ, ದಲಿತ ಸ್ತ್ರೀವಾದ, ದಲಿತಾಧ್ಯಯನ, ದಲಿತ ರಾಜಕಾರಣ…ಹೀಗೆ ಕಳೆದ ಐವತ್ತು ವರ್ಷಗಳಲ್ಲಿ ಬೆಳೆದು ಮಹತ್ವದ ಚಾರಿತ್ರಿಕ ಸ್ಥಾನ ಪಡೆದಿದೆ.
ದಾದಾಸಾಹೇಬ್ ಕಾನ್ಷೀರಾಂ ಬಹುಜನ ಸಮಾಜ ಪಕ್ಷದ ಮೂಲಕ ದಲಿತ ರಾಜಕಾರಣವನ್ನು ರಾಜಕೀಯ ಅಧಿಕಾರದತ್ತ ಒಯ್ದರು. ತಮಿಳುನಾಡಿನಲ್ಲಿ 'ದಲಿತ್ ಪ್ಯಾಂಥರ್‍ಸ್’ನ ತಮಿಳು ರೂಪವಾದ 'ವಿಡುದಲೈ ಚಿರುದೈಗಳ್ ಕಚ್ಚಿ’ (ವಿಸಿಕೆ) ರಾಜಕೀಯ ಪಕ್ಷದಲ್ಲಿ ಈಗ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರೂ ಇದ್ದಾರೆ.
'ದಲಿತ’ ಎಂಬ ಪರಿಕಲ್ಪನೆ ಇಡೀ ದೇಶದಲ್ಲಿ ಸೃಷ್ಟಿಸಿರುವ ಐಕ್ಯತೆ, ಕ್ರಾಂತಿಕಾರಕತೆ ಹಾಗೂ ಸ್ವಾಭಿಮಾನದ ಚಳುವಳಿ ರಾಜಕಾರಣವನ್ನು ಕಂಡು ದಿಗಿಲುಗೊಂಡು, 'ದಲಿತ’ ಎಂಬ ಪದಕ್ಕೇ ಕುತ್ತು ತರುವ ಹುನ್ನಾರವೂ ನಡೆದಿತ್ತು. ಆದ್ದರಿಂದ ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಗಳು, ದಲಿತ ಸಾಹಿತ್ಯ, ದಲಿತ ಚಳುವಳಿ, ದಲಿತ ಚಿಂತನೆ, ದಲಿತ ರಾಜಕಾರಣ ಹಾಗೂ ಒಟ್ಟಾರೆ ಪ್ರಗತಿಪರ ಚಿಂತನೆ ಆಳವಾಗಿ ಚರ್ಚಿಸಿ ಮುನ್ನಡೆಯಬೇಕಾದ ಅಗತ್ಯವಿದೆ ಎನ್ನಿಸುತ್ತದೆ.
ಓದುಗಿ-ಓದುಗ ಸ್ಪಂದನ
ಕಳೆದ ವಾರ ಬರೆದ 'ರೂಪಕ ತೋರುವ ಹಾದಿ’ಯಲ್ಲಿ ಚರ್ಚಿಸಿದ ಹ್ಯಾಮ್ಲೆಟ್‌ನ 'ಟು ಬಿ ಆರ್ ನಾಟ್ ಟು ಬಿ ದಟ್ ಈಸ್ ದಿ ಕ್ವೆಶ್ಚನ್’ ಸ್ವಗತದಲ್ಲಿ ಪ್ರಶ್ನೆ, ಆತ್ಮಪರೀಕ್ಷೆ, ಆತ್ಮಮರುಕ, ಕೋಪ, ಪ್ರತಿಪಾದನೆ... ಇನ್ನೂ ಏನೇನೋ ಇವೆ ಅನ್ನಿಸುತ್ತಲೇ ಇತ್ತು…ಅಷ್ಟೊತ್ತಿಗೆ ಈ ಅಂಕಣ ಓದಿದ ಕನ್ನಡ ಪ್ರಾಧ್ಯಾಪಕಿಯೊಬ್ಬರು ಅಡಿಗರ 'ಮೋಹನ ಮುರಲಿ’ ಪದ್ಯದ ಕೊನೆಯ ಸಾಲನ್ನು ಕಳಿಸುತ್ತಾ ಬರೆದರು:
“…'ರೂಪಕ ತೋರುವ ಹಾದಿ’ ಲೇಖನದಲ್ಲಿ ಹ್ಯಾಮ್ಲೆಟ್‌ನ 'to be or not be' ಸಾಲನ್ನು ವಿವಿಧ ಅನುವಾದಗಳ ಹಿನ್ನೆಲೆಯಲ್ಲಿ ಚರ್ಚಿಸಿರುವುದನ್ನು ಓದಿದಾಗ, ಅಂಥದೇ ಸಾಲುಗಳು ನೆನಪಾದವು. ಉದಾಹರಣೆಗೆ, ಅಡಿಗರ 'ಮೋಹನ ಮುರಲಿ’ ಪದ್ಯದ ಕೊನೆಯ ಸಾಲು: 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ!’
'ಒಂದು ಚರ್ಚೆಯಲ್ಲಿ ಈ ಸಾಲು ಪ್ರಶ್ನೆಯೋ, ತೀರ್ಮಾನವೋ, ಹೇಳಿಕೆಯೋ, ಉದ್ಗಾರವೋ?’ ಈ ಪ್ರಶ್ನೆ ಬಂತು. 'ಕೊನೆಯಲ್ಲಿ ಆಶ್ಚರ್ಯ ಸೂಚಕ ಚಿಹ್ನೆ -!- ಇರುವುದರಿಂದ ಇದು ಉದ್ಗಾರ’ ಎಂದು ಒಬ್ಬರು ಹೇಳಿದರು. ಮತ್ತೊಬ್ಬರು, ‘ಅಲ್ಲಿ ಫುಲ್‌ಸ್ಟಾಪ್ ಇದೆ; ಇದು ತೀರ್ಮಾನ’ ಎಂದರು. ಆದರೆ, ಯಾರೋ ಹಾಡಿದ್ದನ್ನು ಕೇಳಿಸಿಕೊಂಡಾಗ, ನನಗೆ ಅವರು ದೈನ್ಯವಾಗಿ ಪ್ರಶ್ನಿಸುತ್ತಿದ್ದಾರೆ ಅನ್ನಿಸಿತು.’
ಪ್ರಾಧ್ಯಾಪಕಿಯ ಸ್ಪಂದನ ಓದುತ್ತಾ, ಹಿಂದೊಮ್ಮೆ ನಾನೂ ಹೀಗೇ ಓದುತ್ತಿದ್ದುದು ನೆನಪಾಯಿತು. ಆದರೆ ಒಂದು ಬೆಳಗ್ಗೆ ಸುಮತೀಂದ್ರ ನಾಡಿಗರು ಒಂದು ರೇಡಿಯೋ ಟಾಕ್‌ನಲ್ಲಿ 'ಈ ಸಾಲಿನ ಕೊನೆಗೆ ಪ್ರಶ್ನೆಯಿರುವುದನ್ನು ಓದುಗರು ಗಮನಿಸಿಲ್ಲ’ ಎಂದಿದ್ದು ಕೇಳಿಸಿತು!
ನಾಡಿಗರ ಮಾತು ಕೇಳಿ ಅಡಿಗರ 'ಸಮಗ್ರ ಕಾವ್ಯ’ ತೆಗೆದು ನೋಡಿದೆ; ಅಡಿಗರ ಒರಿಜಿನಲ್ ಸಾಲು ಹೀಗಿತ್ತು: 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’
ಈ ಸಾಲಿನ ಬಗ್ಗೆ ೧೯೯೮ರಲ್ಲಿ 'ಲಂಕೇಶ್ ಪತ್ರಿಕೆ’ಯಲ್ಲಿ ನನ್ನ 'ಗಾಳಿ ಬೆಳಕು' ಅಂಕಣದ 'ಸುಗಮ ಸಂಗೀತ ಹಾಗೂ ಸುಗಮ ಸಾಹಿತ್ಯ' ಲೇಖನದಲ್ಲಿ (ಪಲ್ಲವ ಪ್ರಕಾಶನ) ಚರ್ಚಿಸಿದ್ದು ನೆನಪಾಗುತ್ತದೆ.
ಅಡಿಗರ ಕವಿತೆಯ ಕೊನೆಯ ಸಾಲಿಗೆ ತಾತ್ವಿಕ ಹೇಳಿಕೆಯ ಅರ್ಥ ಬಂದಿರುವುದು ರತ್ನಮಾಲಾರ ಒಳತೋಟಿಯ ಗಾಯನದಿಂದ ಕೂಡ ಎಂದು ಕಂಡುಕೊಂಡಿರುವೆ. ಈ ಸಾಲನ್ನು ವಿದ್ಯಾರ್ಥಿನಿ-ವಿದ್ಯಾರ್ಥಿಗಳ ಸಂಗದಲ್ಲಿ ಹಲ ಬಗೆಯಲ್ಲಿ ವಿಸ್ತರಿಸಿಕೊಳ್ಳುತ್ತಾ ಡೆರಿಡಾ ಹೇಳಿದಂತೆ ಅರ್ಥದ ನಿರಂತರ ಮುಂದೂಡಿಕೆಯಲ್ಲಿ ನಿರತನಾದೆ:
೧. ಜೀವನವು ಇರುವುದೆಲ್ಲವನ್ನೂ ಬಿಟ್ಟು ತುಡಿಯುವುದೇ?
೨. ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವೇ?
೩. ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವ ಶಕ್ತಿ ಜೀವನಕ್ಕೆ ಇದೆಯೇ?
೪. ’ಇರವು’ ಎಂದರೆ ಅಸ್ತಿತ್ವ, ಜೀವನ, ಹಾಜರಿ… ಈ ಅರ್ಥಗಳೂ ಇವೆ. ಇರವನ್ನು ಬಿಟ್ಟು, ಗೊತ್ತಿಲ್ಲದ, ಇರದ ಏನೋ ಒಂದರತ್ತ, ಅಥವಾ ಇರದ ಮತ್ತೊಂದು ಜನ್ಮದತ್ತ ನಡೆಯುವುದೇ?
ಹೀಗೆಲ್ಲ ಬರೆಯುತ್ತಿರುವಾಗ… 'ಇರುವ ಅರ್ಥವನ್ನೆಲ್ಲ ಬಿಟ್ಟು ಇರದುದರೆಡೆಗೆ ತುಡಿವುದೇ ಓದಿನ ಜೀವನ ಅಲ್ಲವೆ?’ ಎಂಬ ಅರ್ಥವನ್ನೂ ಈ ಸಾಲು ಉಸುರತೊಡಗಿತು! ಥ್ಯಾಂಕ್ಯೂ ಡೆರಿಡಾ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
'ಈ ಅಂಕಣದಲ್ಲಿ ನೀವೇಕೆ ರಾಜಕೀಯದ ಬಗ್ಗೆ ಬರೆಯುತ್ತಿಲ್ಲ? ರಾಜಕೀಯದ ಬಗ್ಗೆ ಬರೆಯಿರಿ’ ಎಂದು ಕೇಳುವ, ಹೇಳುವ ಕೆಲವು ಗೆಳೆಯರಿದ್ದಾರೆ. ಗೆಳತಿಯರು ಈ ಪ್ರಶ್ನೆ ಕೇಳಿದಂತಿಲ್ಲ!
ಅದಕ್ಕೊಂದು ಸರಳ ಉತ್ತರ: 'ನೀವು ಕೇಳುವ ರೀತಿಯ ಸಮಕಾಲೀನ ರಾಜಕಾರಣದ ಬಗ್ಗೆ ’ಪ್ರಜಾವಾಣಿ’ಯಲ್ಲಿ ಬರೆಯುತ್ತಿರುತ್ತೇನೆ. ಈ ಅಂಕಣದ ಕೆಲಸ, ಉದ್ದೇಶ ಬೇರೆ.’
ಹಾಗೆ ನೋಡಿದರೆ, ನಾವು ಮಾಡುವ ಅನೇಕ ಬಗೆಯ 'ಸಾಂಸ್ಕೃತಿಕ’ ಎನ್ನಬಹುದಾದ ಕೆಲಸಗಳು ರಾಜಕಾರಣದ ವಿಶಾಲ ವ್ಯಾಪ್ತಿಗೇ ಸೇರುತ್ತವೆ. ಮೊನ್ನೆ ಚುನಾವಣೆಯ ಕಾಲದಲ್ಲಿ ಅಧ್ಯಾಪಕಿಯೊಬ್ಬರು ಮಾಡಿದ ಸಾಹಿತ್ಯದ ಪಾಠದಲ್ಲೇ ಖಚಿತ ರಾಜಕೀಯ ಸಂದೇಶವಿತ್ತು. ಬಹುತೇಕ ಮಹಿಳಾ ಕಾವ್ಯದಲ್ಲಿ ಒಂದಲ್ಲ ಒಂದು ಬಗೆಯ ರಾಜಕೀಯ ಪ್ರಶ್ನೆ ಇದ್ದೇ ಇರುತ್ತದೆ. ನಟರಾಜ್ ಹೊನ್ನವಳ್ಳಿ, ಬಸವಲಿಂಗಯ್ಯ, ಕೆ.ಪಿ. ಲಕ್ಷ್ಮಣ್ ಥರದ ರಂಗ ನಿರ್ದೇಶಕರು ಮಾಡುವ ಯಾವುದೇ ಕಲಾತ್ಮಕ ನಾಟಕದಲ್ಲೂ ರಾಜಕೀಯ ಎಳೆಗಳು ಇದ್ದೇ ಇರುತ್ತವೆ.
ಹೀಗೆಲ್ಲ ಅನ್ನಿಸತೊಡಗಿದ್ದಕ್ಕೆ ಒಂದು ಮೊಬೈಲ್ ಮೆಸೇಜ್ ಕಾರಣವಾಗಿತ್ತು. ಅದು ತಮ್ಮದೇ ಆದ ಸ್ಟೈಲ್‌ನಲ್ಲಿ ರಾಜಕೀಯ ರಂಗದಲ್ಲಿರುವ ಗೆಳೆಯರೊಬ್ಬರ ಹುಟ್ಟುಹಬ್ಬದ ಎಸ್. ಎಂ. ಎಸ್. ಅಥವಾ ನನ್ನ ಭಾಷೆಯಲ್ಲೇ ಹೇಳುವುದಾದರೆ, ಸಂಕ್ಷಿಪ್ತ ಮೇಘ ಸಂದೇಶ; ಸಂಮೇಸಂ!
'ಜುಲೈ ೧೪ರಂದು ರವಿಕೃಷ್ಣಾರೆಡ್ಡಿ ಅವರ ೫೦ನೇ ಹುಟ್ಟುಹಬ್ಬ. ಅಂದು ನಾವು ಕೆಲವು ಸ್ನೇಹಿತರು ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತಾವು ದಯವಿಟ್ಟು ಬರಬೇಕು. ಕಾರ್ಯಕ್ರಮ ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಇರುತ್ತದೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.’
ಅದ್ಯಾಕೋ ಏನೋ, ಈ ಸಂಮೇಸಂ ನೋಡುತ್ತಿದ್ದಂತೆ ನನಗೆ ಶೇಕ್‌ಸ್ಪಿಯರ್‌ನ ಹ್ಯಾಮ್ಲೆಟ್‌ನ ಪಿಸುಮಾತು (ಹ್ಯಾಮ್ಲೆಟ್ ಎಲ್ಲೂ ’ಕಿರುಚು ಮಾತು’ ಆಡಿದಂತಿಲ್ಲ!) ನೆನಪಾಯಿತು:
‘The time is out of joint- Oh, cursed spite,
That ever I was born to set it right!
ನನ್ನ 'ಶೇಕ್‌ಸ್ಪಿಯರ್ ಮನೆಗೆ ಬಂದ' ನಾಟಕದಲ್ಲಿ ಸ್ಟ್ರಾಟ್‌ಫರ್ಡ್ ಲೋಕಲ್ ನಟರು ಹ್ಯಾಮ್ಲೆಟ್ ನಾಟಕದ ರಿಹರ್ಸಲ್ ಮಾಡುವ ತಮಾಷೆಯ ದೃಶ್ಯದಲ್ಲಿ ಚೀರುವುದಕ್ಕಾಗಿ ಈ ಮಾತಿನ ಭಾಗವನ್ನು ಕೊಂಚ ಸಂಕ್ಷಿಪ್ತವಾಗಿ ಅನುವಾದಿಸಿಕೊಂಡಿದ್ದೆ: 'ಕಾಲದ ಕೊಂಡಿ ಕಳಚಿ ಬಿದ್ದಿದೆ. ನಾನಿದನ್ನು ಸರಿಪಡಿಸಲು ಹುಟ್ಟಿರುವೆನೆ?' ಆ ಭಾಗವನ್ನು ನನ್ನ ಯೂಟ್ಯೂಬ್ ಚಾನಲ್‌ನಲ್ಲಿರುವ ನಾಟಕದಲ್ಲಿ ನೋಡಬಹುದು.
ಅದಿರಲಿ, ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆ.ಆರ್.ಎಸ್) ಗೆಳೆಯರ ಸಂಮೇಸಂ ನೋಡಿದ ತಕ್ಷಣ ರವಿಕೃಷ್ಣಾರೆಡ್ಡಿಯ ಬಗೆಗೆ ಏನೋ ಬರೆಯಬೇಕೆನ್ನಿಸಿ ಲ್ಯಾಪ್‌ಟಾಪ್ ಮೇಲೆ ಬೆರಳಿಟ್ಟರೆ ಹ್ಯಾಮ್ಲೆಟ್ ಮಾತು ಬಾಯಿಗೆ ಬಂತು!
ರೈಟಿಂಗ್ ಈಸ್ ಥಿಂಕಿಂಗ್ ಎಂಬುದು ನನ್ನ ಈಚಿನ ಆಳದ ನಂಬಿಕೆ; ಇದನ್ನು ನಿತ್ಯದ ಅನುಭವದ ಮೂಲಕ ಮತ್ತೆ ಮತ್ತೆ ಕಂಡುಕೊಂಡಿರುವೆ. ಸರಿ! ಶೇಕ್‌ಸ್ಪಿಯರ್ ಸಾಲು ಕರೆದೊಯ್ದ ಕಡೆ ಹೊರಡಲು ಸಿದ್ಧನಾದೆ. ಕಾರಣ, ಸಾಹಿತ್ಯದ ರೂಪಕಗಳ ವಿಸ್ಡಂ ಅಥವಾ ಪರಮಜ್ಞಾನ ವಿನಾಕಾರಣ ನೆನಪಾಗುವುದಿಲ್ಲ ಎಂಬುದು ನನ್ನ ಅನುಭವ. ನಮಗೆ ಬೀಳುವ ಕನಸುಗಳ ಹಾಗೆ ಈ ರೂಪಕಗಳು ನೆನಪಾಗುವುದಕ್ಕೂ ಅದರದೇ ಆದ ತರ್ಕವಿರಬಹುದು. ಗೆಳೆಯರ ಆಹ್ವಾನದ ಸಂದೇಶ ನೋಡಿದ ಗಳಿಗೆಯಲ್ಲಿ ಹ್ಯಾಮ್ಲೆಟ್ ಮಾತು ಯಾಕೆ ಹೊಳೆಯಿತು ಎಂಬುದು ನಂತರ ಹೊಳೆಯಿತು! ಅದನ್ನು ಹೊಳೆಯಿಸಿದ್ದು ಕೂಡ ಶೇಕ್‌ಸ್ಪಿಯರ್‌ನ ಮತ್ತೊಂದು ದರ್ಶನ-ಸ್ವಗತವೇ:
'ಟು ಬಿ ಆರ್ ನಾಟ್ ಟು ಬಿ- ದಟ್ ಈಸ್ ದ ಕ್ವೆಶ್ಚನ್’
ಈ ಸ್ವಗತ ಹೊಳೆದಿದ್ದು ರವಿಕೃಷ್ಣಾರೆಡ್ಡಿಯ ರಾಜಕೀಯ ರೀತಿ ಒಂಥರದಲ್ಲಿ ಭಿನ್ನ ಎಂದುಕೊಂಡಾಗ. ರವಿ ಹ್ಯಾಮ್ಲೆಟ್ ಥರ ’ಟು ಬಿ ಆರ್ ನಾಟ್ ಟು ಬಿ’ ಎಂದು ನಾನಾರ್ಥ ತೂಗಿ, ಮುಂದಡಿಯಿಡುವ ವ್ಯಕ್ತಿಯಲ್ಲ! ’ಹೌದು! ಕಾಲದ ಕೊಂಡಿ ಕಳಚಿ ಬಿದ್ದಿದೆ. ನಾನಿದನ್ನು ಸರಿಪಡಿಸಲು ಹುಟ್ಟಿದ್ದೇನೆ’ ಎಂದು ನಂಬಿ ಏಕ್‌ದಂ ಕ್ರಿಯೆಗಿಳಿಯುವ ಮನುಷ್ಯ. ರವಿ ಹ್ಯಾಮ್ಲೆಟ್ ಥರ ’ನಾನಿದನ್ನು ಸರಿಪಡಿಸಲು ಹುಟ್ಟಿರುವೆನೆ?’ ಎಂದು ಅಳೆದು ತೂಗುತ್ತಾ ನಿರ್ಧಾರ ಮುಂದೂಡುವ ಅತಿ ಸೂಕ್ಷ್ಮ ಮನುಷ್ಯನಲ್ಲ!
ಹ್ಯಾಮ್ಲೆಟ್ ಮಾತುಗಳ, ಸ್ವಗತಗಳ ಅನುವಾದದ ಕಷ್ಟಗಳು ಒಂದಲ್ಲ, ಎರಡಲ್ಲ. ಖ್ಯಾತ ಶೇಕ್‌ಸ್ಪಿಯರ್ ವಿದ್ವಾಂಸ-ಭಾಷಾಂತರಕಾರ ಭಗವಾನ್ 'ಟೈಮ್ ಈಸ್ ಔಟ್ ಆಫ್ ಜಾಯಿಂಟ್’ ಎಂಬ ಸಾಲನ್ನು 'ಕಾಲ ಕೀಲು ತಪ್ಪಿದೆ’ ಎಂದು ಅನುವಾದಿಸಿದ ನೆನಪು; ಅದೇ ಸರಿಯೆನ್ನಿಸುತ್ತದೆ. ಶೇಕ್‌ಸ್ಪಿಯರ್ ಪಾತ್ರಗಳ ಮಾತುಗಳನ್ನು ಒಂದು ರೀತಿಯಲ್ಲಿ ಅನುವಾದ ಮಾಡಿದರೆ, ಮತ್ತೊಂದು ಅರ್ಥ ಕೈ ಕೊಡುತ್ತದೆ. 'ಟು ಬಿ ಆರ್ ನಾಟ್ ಟು ಬಿ’ಯ ಕನ್ನಡ ಅನುವಾದವೊಂದು ನೆನಪಾಗುತ್ತದೆ:
'ಇರಲೆ ಅಥವ ಇಲ್ಲದೆ ಇರಲೆ-ಇದು ಪ್ರಶ್ನೆ’
ಇದು ರಾಮಚಂದ್ರ ದೇವರ ಅನುವಾದ. ಭಗವಾನ್ ಅವರಿಗೆ ಫೋನ್ ಮಾಡಿ, ‘ಇದನ್ನು ನೀವು ಹೇಗೆ ಅನುವಾದಿಸಿದ್ದೀರಿ?’ ಎಂದೆ.
“…‘ಇರುವುದೇ ಅಥವಾ ಇಲ್ಲವಾಗುವುದೇ?’ ಎಂದು ಅನುವಾದಿಸಿದ್ದೇನೆ ಅನ್ನಿಸುತ್ತದೆ” ಎಂದರು.
'ಆಗ 'be’ ಎಂಬ ಕ್ರಿಯಾಪದಕ್ಕಿರುವ ನಾನಾರ್ಥಗಳು ಮರೆಯಾಗುತ್ತವಲ್ಲ?’ ಎಂದೆ.
'ನಿಜ. ಅದಕ್ಕೇ ಎಪ್ಪತ್ತೈದು ಭಾಷೆಗಳಲ್ಲಿ ಈ ವಾಕ್ಯವನ್ನು ಅನುವಾದಿಸದೆ ಹಾಗೇ ಇಟ್ಟುಕೊಂಡಿದ್ದಾರೆ’ ಎಂದರು ಭಗವಾನ್. ಸಾರ್ತರ್‌ನ ‘being’ and ’becoming’ ಪರಿಕಲ್ಪನೆಗಳನ್ನು ಕೂಡ ಭಗವಾನ್ ನೆನಪಿಸಿದರು. ಅವರ ಅಧ್ಯಯನ, ತಕ್ಷಣಕ್ಕೆ ಅವರಿಗೆ ಒದಗುವ ನೆನಪು ಕಂಡು ವಿಸ್ಮಯವಾಯಿತು.
'be’ ಎಂಬ ಕ್ರಿಯಾಪದಕ್ಕೆ ಅಸ್ತಿತ್ವ, ಹಾಜರಿ, ಇರುವುದು, ಬಿದ್ದಿರುವುದು, ಬದುಕಿರುವುದು….ಹೀಗೆ ಹಲವು ಅರ್ಥಗಳಿವೆ. ವಾಕ್ಯದಲ್ಲಿ ಬಳಕೆಯಾದಾಗ ಅದಕ್ಕೆ ಇನ್ನಷ್ಟು ಚಹರೆಗಳು ಬರುತ್ತವೆ.
ಹೀಗಾಗಿ, ಹ್ಯಾಮ್ಲೆಟ್‌ಗೆ ಎದುರಾಗುವ ‘ಟು ಬಿ ಆರ್ ನಾಟ್ ಟು ಬಿ’ ಹೊಯ್ದಾಟ, ತುಯ್ದಾಟಗಳು ’ಹ್ಯಾಮ್ಲೆಟ್’ ಅನುವಾದಕರಿಗೂ ಎದುರಾಗುವುದು ಗ್ಯಾರಂಟಿ. ಆದರೆ… ಪ್ರಖರ ವಿಚಾರವಾದಿ ಭಗವಾನ್ ನಿತ್ಯ ವಿವಾದದ ಹೇಳಿಕೆ ಕೊಡುವ ಮುನ್ನ ಅವರೊಳಗಿರುವ ಶೇಕ್‌ಸ್ಪಿಯರಿಯನ್ ಸ್ಕಾಲರ್ ಭಗವಾನ್ ’ಟು ಬಿ ಆರ್ ನಾಟ್ ಟು ಬಿ…’ ಎಂದು ಬ್ರೇಕ್ ಹಾಕುವುದಿಲ್ಲವೆ?
ಈ ಪ್ರಶ್ನೆ ಇದ್ದಕ್ಕಿದ್ದಂತೆ ಹುಟ್ಟಿದ್ದು ಈ ಮಾತು ಬರೆಯುತ್ತಿರುವ ಭಾನುವಾರದ ಶುಭ್ರ ಬೆಳಗಿನಲ್ಲಿ! ಇದನ್ನೇ ರೈಟಿಂಗ್ ಈಸ್ ಥಿಂಕಿಂಗ್ ಎಂದು ನಾನು ನೆಚ್ಚಿಕೊಂಡಿರುವುದು. ನಿಜಕ್ಕೂ ನಮ್ಮ ಹೆಮ್ಮೆಯ ಶೇಕ್‌ಸ್ಪಿಯರ್ ವಿದ್ವಾಂಸರಾದ ಭಗವಾನ್ ಅವರ ಇಮೇಜನ್ನು ಕ್ಷುಲ್ಲಕ ವಿವಾದಗಳ ಭಗವಾನ್ ಇಮೇಜ್ ನುಂಗಿ ಹಾಕದಿರಲಿ. ಸಾವಿರಾರು ಕನ್ನಡಿಗರಿಗೆ ಅತ್ಯಂತ ದಕ್ಷವಾಗಿ ಶೇಕ್‌ಸ್ಪಿಯರ್ ಸಂವೇದನೆಯನ್ನು ಹಬ್ಬಿಸಿರುವ ಅವರ ಅನನ್ಯ ಕೊಡುಗೆಯನ್ನು ವಾಚಾಳಿ ಹೇಳಿಕೆಗಳು ಮರೆಯಾಗಿಸದಿರಲಿ.
ಮತ್ತೆ ರವಿಕೃಷ್ಣಾರೆಡ್ಡಿಯ ಕತೆಗೆ: ಇಪ್ಪತ್ತು ವರ್ಷಗಳ ಕೆಳಗೆ ರವಿಕೃಷ್ಣಾರೆಡ್ಡಿ ಏನೋ ಒಂದನ್ನು ಮಾಡಬೇಕೆಂದು ಹೊರಟಾಗ ಅವರೆದುರು ಹ್ಯಾಮ್ಲೆಟ್‌ನ ‘ಟು ಬಿ ಆರ್ ನಾಟ್ ಟು ಬಿ’ ತೂಗುಯ್ಯಾಲೆಯಿರಲಿಲ್ಲ! ಅದರಿಂದ ಅವರು ನೇರ ಕ್ರಿಯೆಗಿಳಿದರು. ಅವರ ರೀತಿ ಬೇರೆ:
ಆಗ ರವಿ ಅಮೆರಿಕದಲ್ಲಿ ಟೆಕ್ಕಿಯಾಗಿ ದುಡಿಯುತ್ತಿದ್ದರು. ಅಷ್ಟಿಷ್ಟು ಹಣ ಸಂಪಾದಿಸಿದ ಮೇಲೆ ಇಂಡಿಯಾದಲ್ಲಿ ಏನಾದರೂ ಮಾಡಬೇಕೆಂದುಕೊಂಡು ‘ವಿಕ್ರಾಂತ ಕರ್ನಾಟಕ’ ಪತ್ರಿಕೆ ಮಾಡಿದರು. ಆದರೆ ಅವರು ಮಾಡಬಯಸಿದ್ದ ರಾಜಕಾರಣಕ್ಕೆ ನೆರವಾಗಲು ನಿಜಕ್ಕೂ ಬೇಕಾದದ್ದು ೧೨-೧೬ ಪುಟಗಳ ಟ್ಯಾಬ್ಲಾಯ್ಡ್ ಎಂದು ನನಗನ್ನಿಸಿತ್ತು. 'ಸುಧಾ’ ಸೈಜಿನ ಈ ವಾರಪತ್ರಿಕೆ ಕೆಲ ವರ್ಷ ನಡೆಯಿತು. ಚಂದ್ರಶೇಖರ್ ಐಜೂರ್ ಸಂಪಾದಕತ್ವದಲ್ಲಿ ನಾವೆಲ್ಲ ಗೆಳೆಯರು ಮಾಡುತ್ತಿದ್ದ ‘ಕನ್ನಡ ಟೈಮ್ಸ್’ ವಾರಪತ್ರಿಕೆ ಮಾಡಿದ ಚುನಾವಣಾ ಸಂಚಿಕೆಯಲ್ಲಿ ರವಿಕೃಷ್ಣಾರೆಡ್ಡಿ ವಿಶಿಷ್ಟ ನಾಯಕರ ಪಟ್ಟಿಯಲ್ಲೂ ಇದ್ದರು.
ರವಿ ಚುನಾವಣಾ ರಾಜಕೀಯಕ್ಕಿಳಿದರು; ಅದೂ ಜಯನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ. ಅವರ ಚುನಾವಣಾ ಜಿಗಿತವನ್ನು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮೊದಲ ಪತ್ರಿಕಾಗೋಷ್ಠಿಯ ಮೂಲಕ ಲಾಂಚ್ ಮಾಡಿದ ದಾಖಲೆ ನನ್ನ ಹೆಸರಲ್ಲೇ ಇದೆ! ನಂತರ ರವಿ ಚುನಾವಣೆಯ ಮೇಲೆ ಚುನಾವಣೆಗೆ ನಿಂತರು. ಆಮ್ ಆದ್ಮಿ ಪಾರ್ಟಿಯ ಆರಂಭದ ಸ್ಪಿರಿಟ್‌ಗೆ ರವಿ ಹೇಳಿ ಮಾಡಿಸಿದಂತಿದ್ದರು. ಕರ್ನಾಟಕದ ಆಮ್ ಆದ್ಮಿ ಪಾರ್ಟಿಯ ಆರಂಭದ ನಾಯಕರಲ್ಲಿ ರವಿ ಕೂಡ ಮುಖ್ಯರಾಗಿದ್ದರು. ಅಲ್ಲಿ ಕೂಡ ಅವರು ಇರಲಾಗಲಿಲ್ಲ. ರವಿಯ ಹೋರಾಟ, ಪಯಣ ಮುಂದುವರಿಯಿತು.
ಕೆಲವು ತಿಂಗಳ ಕೆಳಗೆ ಸೇಂಟ್ ಜೋಸೆಫ್ ಕಾಲೇಜಿನ ಹುಡುಗ ಚರಣ್ ’ನಾನು ರವಿಕೃಷ್ಣಾರೆಡ್ಡಿಯವರ ಕೆ.ಆರ್.ಎಸ್ ಜೊತೆ ಇದ್ದೇನೆ’ ಅಂದ. ಜರ್ನಲಿಸಂ ಓದುತ್ತಿದ್ದ ಚರಣ್‌ಗೆ ರವಿ ಮಾಡುತ್ತಿರುವ ರಾಜಕಾರಣದಲ್ಲಿ ಅರ್ಥ ಕಂಡಿತ್ತು. ಚರಣ್ ಮಾತು ಕೇಳಿದಾಗ ರವಿಯ ರಾಜಕೀಯ ಮುಂದುವರಿದೇ ಇದೆ; ಅದಕ್ಕೆ ಹೊಸ ಅನುಯಾಯಿಗಳೂ ಹುಟ್ಟುತ್ತಿದ್ದಾರೆ ಎಂದುಕೊಂಡೆ.
ನನ್ನಂಥವರು ಅವರ ಜೊತೆ ಬರುತ್ತಿಲ್ಲ ಎಂದು ರವಿ ಕಾಲೆಳೆಯುವುದುಂಟು. ಅವರ ಕೆಲಸ ಅರ್ಥಪೂರ್ಣವೋ; ನನ್ನಂಥವರ, ನಿಮ್ಮಂಥವರ ಕೆಲಸ; ಭಗವಾನ್ ಅನುವಾದ, ಭಾಷಣ; ರಂಗಭೂಮಿಯವರ ಕೆಲಸ…ಇವು ಅರ್ಥಪೂರ್ಣವೋ… ಇವೆಲ್ಲ ಒಣ ಚರ್ಚೆಗಳಷ್ಟೆ. ಹೀಗೆಂದುಕೊಳ್ಳುವಾಗ ಫಳಾರನೆ ಮಿಂಚಿದ ಒಂದು ಎಲಿಯಟ್ ದರ್ಶನ-ರೂಪಕ:
‘Mole digs, eagle flies. Both want to live.’
’ಹೆಗ್ಗಣ ಅಗೆಯುವುದು, ಹದ್ದು ಹಾರುವುದು. ಎರಡೂ ಬದುಕಲು ಬಯಸುವುವು.’
ನಾನು ಹಿಂದೆ ಕಂಡಂತೆ, ತಾನು ದುಡಿದ ದುಡ್ಡಿನಲ್ಲಿ ತನಗೆ ಬೇಕಾದ ರೀತಿಯ ರಾಜಕೀಯ ಮಾಡುತ್ತಿದ್ದ ರವಿಕೃಷ್ಣಾರೆಡ್ಡಿ, ಹೋರಾಟದ ಕಷ್ಟ ನಷ್ಟ, ಸವಾಲು, ಅರ್ಥಪೂರ್ಣತೆ ಎಲ್ಲವನ್ನೂ ಅನುಭವಿಸಿರುವವರು. ಸೋಲು, ಗೆಲುವುಗಳ ಹಂಗಿಲ್ಲದೆ ಮಾಡುವ ರಾಜಕೀಯ ಅವರ ಪಾಲಿಗೆ ಅರ್ಥಪೂರ್ಣ ಅನ್ನಿಸಿರಬಹುದು. ಅದನ್ನು ಈಗಿನ ಪರಿಚಿತ ರಾಜಕಾರಣದ ಹಿನ್ನೆಲೆಯಲ್ಲಿ ಅಳೆದು ತೂಗುವ ತಕ್ಕಡಿಯ ಅಗತ್ಯ ಇರಲಾರದು.
ಎಲ್ಲರೂ ಹ್ಯಾಮ್ಲೆಟ್ ಥರ ’ಸೂಕ್ಷ್ಮ’ವಾಗಿಯೇ ಯಾಕಿರಬೇಕು, ಅಲ್ಲವೆ? ಕ್ಷಿಪ್ರ ಕ್ರಿಯೆಗಳ ಸುಖ ದುಃಖಗಳನ್ನೂ ಶೇಕ್‌ಸ್ಪಿಯರ್ ಪಾತ್ರಗಳೇ ತೋರಿಸಿವೆಯಲ್ಲ!
ಕೊನೆಯದಾಗಿ, ‘ರಾಜಕೀಯ ಬರಹ’, ‘ರಾಜಕೀಯ ಕ್ರಿಯೆಗಳು’ ಎಂದರೆ ಒಂದೇ ಎರಕದಲ್ಲಿ ಇರುವುದಿಲ್ಲ ಎಂಬುದನ್ನು ವಿನಮ್ರವಾಗಿ ಸೂಚಿಸಬಯಸುವೆ.
Read Moreಸೂಕ್ಷ್ಮ ಸಂವೇದನೆಯ ನಟ ಇರ್ಫಾನ್ ಖಾನ್ ಬಗ್ಗೆ ನನ್ನ ಅಂಕಣವೊಂದರಲ್ಲಿ ಬರೆದ ಟಿಪ್ಪಣಿ ಓದಿ ಗೆಳೆಯ ಸಂದೀಪ್ ನಾಯಕ್ ಬರೆದರು:
‘ಇರ್ಫಾನ್ ತನ್ನ ಕಣ್ಣು, ದೇಹ ಎರಡನ್ನೂ ನಟನೆಯಲ್ಲಿ ಬಳಸುತ್ತಿದ್ದ. ಎರಡರ ನಡುವೆ ಸಮತೋಲನವಿತ್ತು. ಹಾಗಾಗಿಯೇ ಇರ್ಫಾನ್ ನಟನೆಯಲ್ಲಿ ಜೀವಂತಿಕೆ ಕಾಣಿಸುತ್ತದೆ. ಆತ ಸಂವೇದನಾಶೀಲ ಮಾತ್ರವಲ್ಲ, ತನ್ನ ಸುತ್ತಣ ಜಗತ್ತಿಗೆ ಸ್ಪಂದಿಸುವ ಸೂಕ್ಷ್ಮಜ್ಞನೂ ಆಗಿದ್ದರಿಂದಲೇ ಉತ್ತಮ ನಟನೂ ಆಗಿದ್ದ. ದಂತಗೋಪುರದಲ್ಲಿ ಇರುವ ಜಡಗೊಂಡ ನಟರು ಹೇಗಿರುತ್ತಾರೆ ಎಂಬುದು ನಿಮ್ಮ ಗಮನಕ್ಕೂ ಬಂದಿರುತ್ತದೆ; ಅಥವಾ ದಂತಗೋಪುರದಲ್ಲಿ ಇರುವುದರಿಂದಲೇ ಅವರು ಜಡಗೊಂಡಿರುತ್ತಾರೇನೋ! ಈ ಮಾತನ್ನು ನಮ್ಮ ಕೆಲವು ಲೇಖಕರಿಗೂ ಅನ್ವಯಿಸಬಹುದು. ದುರದೃಷ್ಟವೆಂದರೆ, ಇರ್ಫಾನ್ ತರಹದ ನಟರು ಕಡಿಮೆ.
ಇರ್ಫಾನ್ ಬಗ್ಗೆ ಹಿಂದೆ ’ಸುಧಾ’ ವಾರಪತ್ರಿಕೆಯಲ್ಲಿ ನಾನು ಬರೆದಿದ್ದ ಟಿಪ್ಪಣಿ ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಈಚೆಗೆ ‘ಸುಧಾ’ದಲ್ಲಿ ಬರುತ್ತಿರುವ ರಾಮಮನೋಹರ ಲೋಹಿಯಾ ಕುರಿತ ನನ್ನ ಧಾರಾವಾಹಿಯನ್ನು ಸಿನಿಮಾ ಮಾಡುವ ಮಾತು ಬಂದಾಗ ಮತ್ತೆ ಇರ್ಫಾನ್ ನೆನಪು ಬಂತು.
`ಲೋಹಿಯಾ ಪಾತ್ರಕ್ಕೆ ಪಕ್ಕಾ ಸೂಟಾಗಬಲ್ಲ ನಟ ನವಾಜುದ್ದೀನ್ ಸಿದ್ದಿಕಿ’ ಎಂದು ಸಿನಿಮಾ ನಿರ್ದೇಶಕ ಕಬಡ್ಡಿ ನರೇಂದ್ರಬಾಬು ಹೇಳಿದ್ದರು. ಅದೇಕೋ ಇರ್ಫಾನ್ ಖಾನ್ ಮುಖ ನನ್ನೆದುರು ತೇಲಿ ಬಂತು. ಇರ್ಫಾನ್ ಲೋಹಿಯಾ ಪಾತ್ರಕ್ಕೆ ನಿಜಕ್ಕೂ ಲಾಯಕ್ಕಾಗಿದ್ದರು. ಆದರೆ ನಾಲ್ಕು ವರ್ಷಗಳ ಕೆಳಗೆ ಇರ್ಫಾನ್ ತೀರಿಕೊಂಡಿದ್ದರು. ಪೆಚ್ಚೆನ್ನಿಸಿತು.
ಇರ್ಫಾನ್ ಬಗ್ಗೆ ಹಿಂದೊಮ್ಮೆ ಬರೆದ ಟಿಪ್ಪಣಿಗಳು ನೆನಪಾದವು. ಐದಾರು ವರ್ಷಗಳ ಕೆಳಗೆ ಮೈಸೂರಿನಲ್ಲಿ ಒಂದೇ ದಿನದ ಮೂರು ಭೇಟಿಗಳಲ್ಲಿ ಇರ್ಫಾನ್ ನನಗೆ ಪ್ರಿಯರಾಗಿದ್ದರು. ತಾನೊಬ್ಬ ಸೆಲೆಬ್ರಿಟಿ ನಟ ಎಂಬ ನೆನಪೇ ಇಲ್ಲದವರಂತೆ ಇರ್ಫಾನ್ ಬಹುಕಾಲದ ಗೆಳೆಯನಂತೆ ಆರಾಮಾಗಿ ನಮ್ಮೊಡನೆ ಬೆರೆತಿದ್ದರು. ಇರ್ಫಾನ್ ರಂಗಾಯಣದ ‘ಬಹುರೂಪಿ’ ಸಮಾರೋಪಕ್ಕೆ ಬಂದಿದ್ದರು. ರಂಗಾಯಣದ ನಿರ್ದೇಶಕರಾಗಿದ್ದ ಜನ್ನಿ ದೆಹಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಇರ್ಫಾನ್‌ಗೆ ಸೀನಿಯರ್. ಜನ್ನಿಯವರ ಪತ್ನಿ ರಂಗನಿರ್ದೇಶಕಿ ಸುಮತಿ ಎನ್‌ಎಸ್‌ಡಿಯಲ್ಲಿ ಇರ್ಫಾನ್, ಅವರ ಪತ್ನಿ ಸುತಾಪ ಇಬ್ಬರಿಗೂ ಕ್ಲಾಸ್‌ಮೇಟ್.
ಸಿನಿಮಾ ನೋಡುವುದನ್ನು ಕೂಡ ಒಪ್ಪದ ಕುಟುಂಬದಿಂದ ಬಂದ ಇರ್ಫಾನ್ ನಾಟಕಶಾಲೆ ಸೇರುವುದನ್ನು ಅಮ್ಮ ಒಪ್ಪಿರಲಿಲ್ಲ; ‘ಎನ್‌ಎಸ್‌ಡಿಯಲ್ಲಿ ಕಲಿತು ಬಂದು ಲೆಕ್ಚರರ್ ಆಗುತ್ತೇನೆ’ ಎಂದು ಅಮ್ಮನನ್ನು ನಂಬಿಸಿ ಇರ್ಫಾನ್ ಅಲ್ಲಿ ಸೇರಿದರಂತೆ! ಎನ್‌ಎಸ್‌ಡಿಯಲ್ಲಿ ತಮ್ಮ ಗುರುವಾಗಿದ್ದ ಪ್ರಸನ್ನ ಬದನವಾಳಿನಲ್ಲಿ ಮಾಡುತ್ತಿದ್ದ ಸತ್ಯಾಗ್ರಹವನ್ನು ಬೆಂಬಲಿಸಲು ಇರ್ಫಾನ್ ಹಿಂದೊಮ್ಮೆ ಬಂದಿದ್ದರು. ‘ಪ್ರಸನ್ನ ನಿರ್ದೇಶನ ಮಾಡಿದರೆ ರಂಗಭೂಮಿಗೆ ಬಂದು ನಟಿಸುತ್ತೇನೆ’ ಎಂದಿದ್ದರು.
ನಮ್ಮ ಭೇಟಿಯಲ್ಲಿ ರಂಗಭೂಮಿಯ ಬಗ್ಗೆ ಇರ್ಫಾನ್ ಹೇಳಿದ ಮಾತು ರಂಗ ನಟ, ನಟಿಯರಿಗೆ ದಿಕ್ಸೂಚಿಯಂತಿತ್ತು: ‘ನಾಟಕದಲ್ಲಿ ಆ್ಯಕ್ಟ್ ಮಾಡೋಕೆ ನನಗೆ ನಿಜಕ್ಕೂ ಇಷ್ಟ. ಆದರೆ ಇವತ್ತು ನಟನೆ ಮಾಡಿದಂತೆ ನಾಳೆ ಮಾಡಬಾರದು; ಇದು ನನ್ನಾಸೆ. ನಟನೆ, ಡೈಲಾಗ್ ಡೆಲಿವರಿ…ಎಲ್ಲದರಲ್ಲೂ ನಾಳಿನ ಪ್ರಯೋಗ ಬೇರೆಯದೇ ಆಗಿರಬೇಕು’ ಎಂದರು ಇರ್ಫಾನ್.
ಇರ್ಫಾನ್ ಮಾತು ಬರವಣಿಗೆ, ನೃತ್ಯ, ಟೀಚಿಂಗ್ ಎಲ್ಲದಕ್ಕೂ ಅನ್ವಯಿಸಬಲ್ಲದು ಎಂಬುದು ನನಗೆ ನಂತರ ಹೊಳೆಯಿತು.
‘Maturity is indivisible’ ಎನ್ನುತ್ತಾನೆ ಝೆಕ್ ಕಾದಂಬರಿಕಾರ ಮಿಲನ್ ಕುಂದೇರ. ಅಂದರೆ, ವ್ಯಕ್ತಿಯೊಬ್ಬ ನಿಜಕ್ಕೂ ಪ್ರಬುದ್ಧನಾಗಿದ್ದರೆ ಅವನ ಮಾತು, ಕ್ರಿಯೆ, ಪ್ರತಿಕ್ರಿಯೆ ಎಲ್ಲದರಲ್ಲೂ ಒಂದೇ ಬಗೆಯ ಪ್ರಬುದ್ಧತೆ ಇರುತ್ತದೆ. ವಿಶಿಷ್ಟ ಸಂವೇದನೆಯ ನಟನಾಗಿದ್ದ ಇರ್ಫಾನ್‌ಗೆ ಅಂಥ ಮೆಚುರಿಟಿ ಇತ್ತು. ಅಮೀರ್ ಖಾನ್, ಶಾರೂಕ್ ಖಾನ್ ಇಂಥ ಮೆಚುರಿಟಿ ಉಳ್ಳವರು ಎಂದು ನನಗನ್ನಿಸುತ್ತಿರುತ್ತದೆ.
ಅದಿರಲಿ, ಅವತ್ತು ಸಂಜೆ ರಂಗಾಯಣದಲ್ಲಿ ಇರ್ಫಾನ್ ಮಾತಾಡಬೇಕಾಗಿತ್ತು. ‘ಇರ್ಫಾನ್ ಓಪನ್ನಾಗಿ ಮಾತಾಡುತ್ತಾ ಹೋದರೆ ನೇರವಾಗಿ ಸತ್ಯ ಹೇಳುತ್ತಾರೆ; ಅದು ಮತ್ತೆಲ್ಲಿಗೋ ಹೋಗಿ ವಿವಾದವಾಗುತ್ತದೆ’ ಎಂದು ಸುತಾಪ ಆತಂಕದಲ್ಲಿದ್ದರು. ಅಷ್ಟೊತ್ತಿಗಾಗಲೇ ಇರ್ಫಾನ್, ಶಾರೂಖ್ ಥರದ ದೊಡ್ಡ ನಟರ ಸಾಮಾಜಿಕ ಪ್ರತಿಕ್ರಿಯೆಗಳಿಗೆ ಮತೀಯ ಬಣ್ಣ ಬಳಿಯುವ ಕೋಮುವಾದಿ ಸೈತಾನ ಕಾರ್ಖಾನೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು.
ಸಂಜೆ ಇರ್ಫಾನ್ ಸಭಿಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ, ಈ ದೇಶದಲ್ಲಿ ‘ನಾನು ಏನು ಹೇಳಿದರೂ ಅದನ್ನು ಒಬ್ಬ ಮುಸ್ಲಿಂ ಹೇಳುತ್ತಿದ್ದಾನೆ ಎಂದು ತಿರುಚಿದರೆ ನನಗೆಷ್ಟು ನೋವಾಗುತ್ತದೆ, ಯೋಚಿಸಿ’ ಎಂದರು. ಕೋಮು ವಿಕಾರಗಳ ಬಗ್ಗೆ ಸಿಟ್ಟಾದರು. ರಂಗಾಯಣದ ಪ್ರೇಕ್ಷಕರಿಗೆ ಇರ್ಫಾನ್ ನೋವು, ಕಾಳಜಿ, ಆತಂಕ ಅರ್ಥವಾಗತೊಡಗಿತು. ನಿಜಕ್ಕೂ ತಮ್ಮ ಆಳದಲ್ಲಿ ಅನ್ನಿಸಿದ್ದನ್ನು ಇರ್ಫಾನ್ ಹೇಳುತ್ತಿದ್ದರು. ದೇಶದಲ್ಲಿ ಒಂದೇ ಮಾರ್ಗ,ಧ್ವನಿ ಪ್ರಬಲವಾದರೆ ಆಗುವ ಅಪಾಯದ ಬಗ್ಗೆ, ನಟರು ಸಾಮಾಜಿಕ ಪ್ರಶ್ನೆಗಳ ಬಗ್ಗೆ ಮಾತಾಡಲೇಬೇಕಾದ ಬಗ್ಗೆ ಮಾತಾಡುತ್ತಾ ಹೋದರು.
ರಾತ್ರಿ ಪಾರ್ಟಿಯಲ್ಲಿ ಇರ್ಫಾನ್ ಇನ್ನಷ್ಟು ಮುಕ್ತವಾಗಿದ್ದರು. ಇರ್ಫಾನ್ ಆರಾಮಾಗಿ ಹರಟುತ್ತಿದ್ದನ್ನು ನೋಡುತ್ತಿದ್ದ ನನಗೆ, ಅವರು ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಕಾಣುವ ತೆಳ್ಳಗಿನ ಮುಸ್ಲಿಂ ತರುಣರ ಹಾಗೆ ಕಂಡರು! ಅದಕ್ಕೆ ಸರಿಯಾಗಿ ಕೊರಳಿಗೆ ಮಫ್ಲರ್ ಬೇರೆ! ಎನ್‌ಎಸ್‌ಡಿಯಲ್ಲಿ ವಿದ್ಯಾರ್ಥಿಯಾಗಿದ್ದ ಇರ್ಫಾನ್ ದಪ್ಪಗಾಗಲಿ ಎಂದು ಅವರ ಅಮ್ಮಿ ಕ್ಯಾರಿಯರ್ ತುಂಬ ತುಪ್ಪ ತಂದು ಕೊಡುತ್ತಿದ್ದುದನ್ನೂ, ಅದನ್ನು ಇರ್ಫಾನ್ ಯಾರಿಗೂ ಕೊಡದೆ ತಿನ್ನುತ್ತಿದ್ದುದನ್ನೂ ಸುಮತಿ ನೆನಪಿಸಿದರು. ‘ನಾನು ಕಡ್ಡೀ ಪೈಲ್ವಾನ್ ಥರಾ ಇದ್ನಲ್ಲಾ, ದಪ್ಪ ಆಗಬೇಕೂಂತ ತುಪ್ಪಾನ ಯಾರಿಗೂ ಕೊಡದೆ ಒಬ್ಬನೇ ತಿನ್ನುತ್ತಿದ್ದೆ. ದಪ್ಪ ಆಗಬೇಕು ಅಂತ ರೋಡ್‌ಸೈಡ್ ತಿಂಡೀನೂ ತಿನ್ನುತ್ತಿದ್ದೆ.…ಏನೂ ಪ್ರಯೋಜನವಾಗಲಿಲ್ಲ!’ ಎಂದು ಇರ್ಫಾನ್ ನಕ್ಕರು.
ಆ ಕಾಲಕ್ಕೆ ನನಗೆ ಇರ್ಫಾನ್ ಒಬ್ಬ ವಿಶಿಷ್ಟ ನಟನೆಂಬ ಅಂದಾಜಿತ್ತೇ ಹೊರತು, ಅವರ ಮುಖ್ಯ ಸಿನಿಮಾಗಳನ್ನು ನೋಡಿರಲಿಲ್ಲ. ‘ಸ್ಲಂ ಡಾಗ್ ಮಿಲಿಯನೇರ್’, ‘ಲಂಚ್ ಬಾಕ್ಸ್’ ಥರದ ಸಿನಿಮಾಗಳನ್ನು, ಅವರ ನಟನೆಯ ತುಣುಕುಗಳನ್ನು ಗಮನಿಸಿದ್ದೆ. ಆದರೆ ಒಬ್ಬ ವ್ಯಕ್ತಿ ನಿಜವಾದ ನಟನೋ, ನಟಿಯೋ ಅಲ್ಲವೋ ಎಂಬುದನ್ನು ತಿಳಿಯಲು ಒಂದೇ ಸಿನಿಮಾ, ಒಂದೇ ಪಾತ್ರ ಸಾಕು! ನಾನು ಗಮನಿಸಿದ್ದ ಕೆಲವೇ ಪಾತ್ರಗಳಲ್ಲೇ ಇರ್ಫಾನ್ ಪಾತ್ರಕ್ಕೆ ತಕ್ಕಂತೆ ‘ನಟಿಸದೆ’ ಪಾತ್ರವನ್ನು ಮರು ಸೃಷ್ಟಿಸುವ ಸೃಜನಶೀಲ ಕಲಾವಿದ ಎಂಬುದು ಮನದಟ್ಟಾಗಿತ್ತು.
ಇದೆಲ್ಲ ಆ ರಾತ್ರಿ ನೆನಪಾಗಿ, ‘ಒಂದಲ್ಲ ಒಂದು ದಿನ ನಿಮಗೆ ಆಸ್ಕರ್ ಪ್ರಶಸ್ತಿ ಬಂದೇ ಬರುತ್ತದೆ’ ಎಂದೆ. ಇರ್ಫಾನ್ ಕಣ್ಣರಳಿಸಿದರು. ನಾನು ವಿವರಿಸಿದೆ: ‘ಒಂದು ಕಾಲಕ್ಕೆ ನಾಸಿರುದ್ದೀನ್ ಶಾ ನಟನೆಗೆ ಆಸ್ಕರ್ ಬರಬಹುದೆಂದುಕೊಂಡಿದ್ದೆ; ಅವರ ನಟನೆ ಇಳಿಮುಖವಾಯಿತು; ನಾನಾ ಪಾಟೇಕರ್ ಸತ್ವ ಕಳಕೊಂಡು ‘ಟೈಪ್ಡ್’ ನಟನಾದರು. ನೀವು ಈಗಿನ ಹಾದಿಯಲ್ಲೇ ಮುಂದುವರಿದರೆ ಮುಂದೊಮ್ಮೆ ಆಸ್ಕರ್ ಬರುವುದು ಗ್ಯಾರಂಟಿ; ಇದು ನನ್ನ ನಂಬಿಕೆ.’
ಇರ್ಫಾನ್ ಅಚ್ಚರಿಗೊಳ್ಳಲಿಲ್ಲ. ಇರ್ಫಾನ್‌ಗೆ ದೊಡ್ಡ ದೊಡ್ಡ ರಾಷ್ಟ್ರೀಯ, ಅಂತರ‍್ರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು. ನಟನಾಲೋಕದ ನಿತ್ಯವಿದ್ಯಾರ್ಥಿಯಂತಿದ್ದ ಇರ್ಫಾನ್‌ಗೆ ಆಸ್ಕರ್ ಆತ್ಮವಿಶ್ವಾಸವೂ ಇದ್ದಂತಿತ್ತು!
‘ಹೌ ಡೂ ಯೂ ಸೇ ದಟ್?’ ಎಂದರು ಇರ್ಫಾನ್.
‘ಬಿಕಾಸ್… ಐ ನೋ ಎ ಬಿಟ್ ಆಫ್ ಅಸ್ಟ್ರಾಲಜಿ!’ ಎಂದೆ.
‘ರಿಯಲಿ?’ ಎನ್ನುತ್ತಾ, ‘ನನ್ನ ಕೈ ನೋಡಿ!’ ಎಂದು ಇರ್ಫಾನ್ ಹಸ್ತ ಚಾಚಿದರು.
‘ತಮಾಷೆಗೆ ಅಸ್ಟ್ರಾಲಜಿ ಅಂದೆ, ಅಷ್ಟೆ! ಆಸ್ಕರ್ ಬಗ್ಗೆ ಹೇಳಿದ್ದು ಮಾತ್ರ ನನ್ನ ಆಳದ ನಂಬಿಕೆಯಿಂದ’ ಎಂದೆ.
ಇರ್ಫಾನರ ‘ಮಖಬೂಲ್’ ‘ಪಾನ್ ಸಿಂಗ್ ತೋಮರ್’ ಸೇರಿದಂತೆ ಅವರ ಇನ್ನಿತರ ಮುಖ್ಯ ಸಿನಿಮಾಗಳನ್ನು ನೋಡಿರುವವರು ಈ ಮಾತನ್ನು ಒಪ್ಪಿಯಾರು.
ರಾತ್ರಿ ಹನ್ನೊಂದಾಗುತ್ತಿತ್ತು. ಇರ್ಫಾನ್, ಸುತಾಪ ಬೆಂಗಳೂರಿನಲ್ಲಿ ಮಧ್ಯರಾತ್ರಿಯ ವಿಮಾನ ಹಿಡಿಯಬೇಕಾಗಿತ್ತು. ವಾಚ್ ನೋಡುತ್ತಾ ಮೇಲೆದ್ದ ಇರ್ಫಾನ್, ತಮ್ಮ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ಕೊಂಚ ಮೇಲೆತ್ತಿ, ‘ಶಲ್ ಐ ಟೇಕ್ ದಿಸ್?’ ಎಂದರು. ಆ ರಾತ್ರಿ ನಸುನಗುತ್ತಾ ಭವಿಷ್ಯ ಕೇಳಲು ಇರ್ಫಾನ್ ನನ್ನೆದುರು ಚಾಚಿದ ಕೈ, ಗ್ಲಾಸ್ ಹಿಡಿದ ಕೈ ಎರಡೂ ನನ್ನ ಕಣ್ಣ ಮುಂದಿವೆ. ಈ ಆತ್ಮೀಯ ಭೇಟಿಯ ನಂತರ ಇರ್ಫಾನ್ ಸಿನಿಮಾಗಳನ್ನು ಹೆಚ್ಚು ಗಮನಿಸಿದೆ.
ಕರಕುಶಲಿಗಳ ಪರವಾಗಿ ಪ್ರಸನ್ನ ರೂಪಿಸಿದ ಹೋರಾಟಕ್ಕೂ ಇರ್ಫಾನ್ ಬಂದರು; ‘ಕೈ, ಕಾಲು, ಆತ್ಮ, ಭಾವನೆ, ಮಾತುಗಳನ್ನು ಬಳಸಿ ನಟನೆ ಮಾಡುವ ನನಗೆ, ಕೈಗಳನ್ನು ಬಳಸಿ ಕೆಲಸ ಮಾಡುವ ಕುಶಲಕರ್ಮಿಗಳು ನನ್ನ ಅಣ್ಣ ತಂಗಿಯರಂತೆ ಕಾಣುತ್ತಾರೆ. ನನಗೆ ದುಡ್ಡು ಬರುತ್ತೆ; ಆದರೆ ಈ ಕುಶಲಕರ್ಮಿಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ’ ಎಂದು ಇರ್ಫಾನ್ ಕಾಳಜಿಯಿಂದ ಹೇಳಿದ್ದರು.
ಇರ್ಫಾನ್‌ಗೆ ಬ್ರೈನ್ ಟ್ಯೂಮರ್ ಆದಾಗ ದುಗುಡಗೊಂಡವರಲ್ಲಿ ನಾನೂ ಒಬ್ಬ. ನಂತರ ಇರ್ಫಾನ್ ಸಾವನ್ನು ಗೆದ್ದು ಬಂದವರಂತೆ ‘ಆಂಗ್ರೇಝಿ ಮೀಡಿಯಂ’ ಸಿನಿಮಾದಲ್ಲೂ ನಟಿಸಿದರು. ಕೊನೆಯ ಸಿನಿಮಾದಲ್ಲೂ ಅವರ ಸತ್ವ ಮುಕ್ಕಾಗಿರಲಿಲ್ಲ. ಇರ್ಫಾನ್‌ಗೆ ಕಲೆಯೇ ಮರುಜೀವ ತುಂಬಿದಂತಿತ್ತು. ಸಾವಿನೊಂದಿಗೆ ಸೆಣಸಿದ್ದ ಇರ್ಫಾನ್ ತಮ್ಮ ಬದುಕಿನಲ್ಲಿ ಇಂಗ್ಲಿಷಿನೊಂದಿಗೂ ಸೆಣಸಿದ್ದರು! ಅದು ಕೂಡ ಈ ಸಿನಿಮಾದಲ್ಲಿತ್ತು.
ಒಳ್ಳೆಯ ಇಂಗ್ಲಿಷ್ ಬರದೆ ಮುಂಬೈನಲ್ಲಿ ಸೆಲೆಬ್ರಿಟಿ ನಟನಾಗುವುದು ಸಾಧ್ಯವಿಲ್ಲ ಎಂಬ ಮೂಢನಂಬಿಕೆಯ ನಡುವೆ ತಮಗೆ ಗೊತ್ತಿದ್ದಷ್ಟೇ ಇಂಗ್ಲಿಷಿನಲ್ಲಿ ಹಾಲಿವುಡ್ ಸಿನಿಮಾಗಳಲ್ಲೂ ಇರ್ಫಾನ್ ನಟಿಸಿ ಗೆದ್ದಿದ್ದರು; ಅಸಲಿ ನಟನಾ ಪ್ರತಿಭೆ ಏನನ್ನಾದರೂ ಅನುಕರಿಸಬಲ್ಲದು, ಮರು ಸೃಷ್ಟಿಸಬಲ್ಲದು ಎಂಬುದನ್ನು ಇಪ್ಪತ್ತು ವರ್ಷಗಳಲ್ಲಿ ಸಾಧಿಸಿ ತೋರಿಸಿದರು. ‘ಈ ಪಾತ್ರವನ್ನು ಇರ್ಫಾನ್ ಅಲ್ಲದೆ ಬೇರೆ ಯಾರೂ ನಿಭಾಯಿಸಲಾರರು’ ಎನ್ನುವಷ್ಟರ ಮಟ್ಟಿಗೆ ಬೆಳೆಯುತ್ತಾ ಹೋದರು.
ಒಮ್ಮೆ ಕ್ಲಿಕ್ಕಾದ ರೀತಿಯ ಪಾತ್ರವನ್ನು ಮತ್ತೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಇರ್ಫಾನ್ ನಂಬಿದ್ದರು. ‘ಹೀರೋ’ಗೆ ಇಂಥದೇ ಮುಖವಾಗಲೀ, ಇಂಥದೇ ಮೈಕಟ್ಟಾಗಲೀ ಮುಖ್ಯವಲ್ಲ; ಅಸಲಿಗೆ, ನಟನೊಬ್ಬ ‘ಹೀರೋ’ ಆಗಲೇಬೇಕಾಗಿಲ್ಲ; ನಟನೊಳಗಿನ ಸತ್ವ ಮಾತ್ರ ಅವನನ್ನು ಕಲಾವಿದನನ್ನಾಗಿ ಮಾಡುತ್ತದೆ ಎಂದು ಇರ್ಫಾನ್ ತೋರಿಸಿದರು. ಪ್ರತಿ ಪಾತ್ರದ ಒಳಸತ್ವವನ್ನು ಗುರುತಿಸಿ, ವ್ಯಾಖ್ಯಾನಿಸಿ, ವಿಸ್ತರಿಸಿ, ಆಯಾ ವ್ಯಕ್ತಿತ್ವಗಳ ಅಗೋಚರ ಸತ್ಯಗಳನ್ನು ಕಾಣಿಸಿದರು.
ಇರ್ಫಾನ್ ಎಷ್ಟು ಗಂಭೀರ ನಟನೆಂದರೆ, ರಾತ್ರಿ ಎಷ್ಟೋ ಹೊತ್ತಿನ ತನಕ ನಾಳೆಯ ಶೂಟಿಂಗ್ ಸ್ಕ್ರಿಪ್ಟ್ ಓದುತ್ತಿದ್ದರು. ಬಜಾರಿನಲ್ಲಿ, ರಸ್ತೆಯಲ್ಲಿ, ಲಿಫ್ಟಿನಲ್ಲಿ ಇರ್ಫಾನ್ ಡೈಲಾಗುಗಳನ್ನು ಗಟ್ಟು ಮಾಡಿಕೊಳ್ಳುತ್ತಿದ್ದುದನ್ನು ಸುತಾಪ ತಮಾಷೆ ಮಾಡುತ್ತಿದ್ದರು. ಇವೆಲ್ಲ ಪ್ರತಿ ಪಾತ್ರದ ಮನೋಲೋಕ ಅರಿತು, ಆ ಪಾತ್ರದ ಸಾಧ್ಯತೆಗಳನ್ನು ವಿಸ್ತರಿಸಬೇಕು ಎಂದು ನಂಬಿದ್ದ ಇರ್ಫಾನರ ನಿತ್ಯ ತಯಾರಿಗಳಾಗಿದ್ದವು. ಪ್ರತಿ ಜೀವಿಗೂ ತನ್ನದೇ ಆದ ವಿಶಿಷ್ಟ ಅಸ್ತಿತ್ವ, ಮಹತ್ವ ಇರುತ್ತದೆ ಎಂಬ ಸತ್ಯವನ್ನು ಅವರ ನಟನೆ ಹುಡುಕುತ್ತಿತ್ತು. ವಿಶಾಲ್ ಭಾರದ್ವಾಜ್ ಹೆಂಡತಿಗೆ ಹೊಡೆಯುವ ಪಾತ್ರವೊಂದನ್ನು ಇರ್ಫಾನರಿಗೆ ಕೊಟ್ಟರು; ಆ ಪಾತ್ರ ಮಾಡಲು ಮೊದಮೊದಲು ಒಲ್ಲೆನೆಂದಿದ್ದ ಇರ್ಫಾನ್, ‘ಆ ಪಾತ್ರದಲ್ಲಿ ನಾನು ಶೋಧಿಸುವುದಾಗಲೀ, ಕಲಿಯುವುದಾಗಲೀ ಏನೂ ಇಲ್ಲ’ ಎಂದಿದ್ದರು.
ಮನುಷ್ಯನ ಒಳಲೋಕದ ವಿಚಿತ್ರಗಳನ್ನು, ಮಾನವರ ಸೂಕ್ಷ್ಮಗಳನ್ನು ಎಲ್ಲ ಬಗೆಯ ಪ್ರೇಕ್ಷಕರಿಗೂ ಕಾಣಿಸಬಲ್ಲ ಇರ್ಫಾನ್ ಥರದ ಪ್ರತಿಭೆಗಳು ತೀರ ಕಡಿಮೆ. ಇಂಥ ಅಪರೂಪದ ನಟರು ಹಠಾತ್ತನೆ ನಿರ್ಗಮಿಸಿದಾಗ ಒಟ್ಟಾರೆ ಪ್ರಬುದ್ಧ ನಟನೆಯ ಲೋಕಕ್ಕೇ ನಿಜಕ್ಕೂ ದೊಡ್ಡ ನಷ್ಟ. ಈಚೆಗೆ ಲೋಹಿಯಾ ಪಾತ್ರದ ಚರ್ಚೆ ಬಂದಾಗ ಇರ್ಫಾನ್ ಮತ್ತೆ ನೆನಪಾದರು; ಈ ನೆಪದಲ್ಲಿ ಮರುಟಿಪ್ಪಣಿ. ಜೊತೆಗೆ ನಟ ಕಿರಣ್ ನಾಯಕ್ ಕಳಿಸಿದ, ಖ್ಯಾತ ಸಿನಿಮಾ ನಿರ್ದೇಶಕ ಮನ್ಸೋರೆ ಮಾಡಿದ ಇರ್ಫಾನ್ ಸ್ಕೆಚ್!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಶೇಕ್‌ಸ್ಪಿಯರ್‌ನ ‘ಕಿಂಗ್ ಲಿಯರ್’ ನಾಟಕದಲ್ಲಿ ಮಹಾರಾಜ ಲಿಯರ್ ಎಂಬತ್ತನೆಯ ವಯಸ್ಸಿನಲ್ಲಿ ತನ್ನ ಮೂವರು ಹೆಣ್ಣು ಮಕ್ಕಳಿಗೆ ರಾಜ್ಯ ಹಂಚಲು ನಿರ್ಧರಿಸುತ್ತಾನೆ. ಹಂಚುವ ಮೊದಲು ಮೂವರನ್ನೂ ಆಸ್ಥಾನಕ್ಕೆ ಕರೆದು, ‘ನಿಮಗೆ ನನ್ನನ್ನು ಕಂಡರೆ ಎಷ್ಟು ಪ್ರೀತಿ, ಹೇಳಿ ನೋಡೋಣ’ ಎಂದು ಒಬ್ಬೊಬ್ಬರನ್ನೇ ಕೇಳುತ್ತಾನೆ.
ಮೊದಲ ಇಬ್ಬರು ಹೆಣ್ಣುಮಕ್ಕಳು ಅವನನ್ನು ಬಾಯಿಗೆ ಬಂದಂತೆ ಹೊಗಳುತ್ತಾರೆ. ಉಬ್ಬಿದ ಲಿಯರ್ ಅವರಿಬ್ಬರಿಗೂ ರಾಜ್ಯದ ಸಮೃದ್ಧ ಪಾಲು ಕೊಡುತ್ತಾನೆ. ಕಿರಿ ಮಗಳು ಕಾರ್ಡೀಲಿಯಾ, ‘ಒಬ್ಬ ಮಗಳು ತನ್ನ ತಂದೆಯನ್ನು ಎಷ್ಟು ಪ್ರೀತಿಸಬಹುದೋ ಅಷ್ಟು ಮಾತ್ರ ನಿನ್ನನ್ನು ಪ್ರೀತಿಸುವೆ’ ಎಂಬ ಉತ್ತರ ಕೊಡುತ್ತಾಳೆ. ಅವಳ ಪ್ರಾಮಾಣಿಕ ಭಾಷೆ ಹಿಡಿಸದ ಲಿಯರ್ ಅವಳಿಗೆ ರಾಜ್ಯದಲ್ಲಿ ಪಾಲು ಕೊಡದೆ ಓಡಿಸುತ್ತಾನೆ.
ಬಾಯ್ತುಂಬ ಹೊಗಳಿದ ಹಿರಿಯ ಹೆಣ್ಣುಮಕ್ಕಳು ಕೊನೆಗೆ ತನ್ನನ್ನು ಮನೆ ಬಿಟ್ಟು ಓಡುವಂತೆ ಮಾಡಿದ ಮೇಲೆ ಲಿಯರ್ ಮಹಾರಾಜನಿಗೆ ಕಾರ್ಡೀಲಿಯಾಳ ಪ್ರಾಮಾಣಿಕತೆಯ ಅರಿವಾಗತೊಡಗುತ್ತದೆ! ಅಷ್ಟೊತ್ತಿಗೆ ಲಿಯರ್ ಸಾವಿನ ಹಂತ ತಲುಪಿದ್ದಾನೆ.
‘ತಡವಾಗಿ ಬಂದ ಬೆಳಕೇ!’ ಎಂಬ ರಾಮಚಂದ್ರ ಶರ್ಮರ ಪದ್ಯದ ಶೀರ್ಷಿಕೆ ನಿಮಗೆ ನೆನಪಿರಬಹುದು. ಸಾವಿನ ಅಂಚಿನಲ್ಲಾದರೂ ಲಿಯರ್‌ಗೆ ಬೆಳಕು ಸುಳಿಯಿತು; ಆದರೆ ಬೆಳಕು ಕೊನೆಗೂ ಸುಳಿಯದೆ ಸಾಯುವ ಲಿಯರ್‌ಗಳೇ ಹೆಚ್ಚು ಎಂದು ನನ್ನ ನಂಬಿಕೆ.
ನನ್ನ ಅಂಕಣವೊಂದರಲ್ಲಿ ಬರೆದಿದ್ದ ವಿಶ್ವವಿದ್ಯಾಲಯವೊಂದರ ಮುಖ್ಯಸ್ಥನ ಕತೆ ನೆನಪಾಗುತ್ತದೆ:
ಈ ಮುಖ್ಯಸ್ಥನದು ಹಿತ್ತಾಳೆ ಕಿವಿಯೆಂದು ಎಲ್ಲರಿಗೂ ಗೊತ್ತಾಯಿತು; ಹೀಗಾಗಿ ಅವನ ಸುತ್ತ ತಮಗೆ ಬೇಕಾದ್ದನ್ನು ಹೇಳುವವರು ಹೆಚ್ಚಾದರು. ಮುಖ್ಯಸ್ಥ ಮೊದಮೊದಲು ತಾನು ಎಲ್ಲರಿಂದಲೂ ಮಾಹಿತಿ ಪಡೆದು ಹಳೆಯ ಕಾಲದ ರಾಜರಂತೆ ನೆಮ್ಮದಿಯಿಂದ ರಾಜ್ಯ ಆಳಬಹುದೆಂದು ಭ್ರಮಿಸಿದ್ದ.
ಅದೆಲ್ಲ ಅಷ್ಟು ಸುಲಭವಿರಲಿಲ್ಲ. ಅವನಿಗೆ ಮಾಹಿತಿ ಕೊಡುವವರು ತಮ್ಮ ಅನುಕೂಲಕ್ಕೆ ತಕ್ಕ ಮಾಹಿತಿ ಕೊಡತೊಡಗಿದರು. ಅವನ ತಲೆ ಕೆಟ್ಟುಹೋಯಿತು! ತಾನು ಕಡುಜಾಣನೆಂದು ತಿಳಿದಿದ್ದ ಅವನು ಇತರರ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ. ಕೇಳಿಸಿಕೊಂಡರೂ ತನಗೆ ಇಷ್ಟವಿರುವ ಮಾತನ್ನು ಮಾತ್ರ ಕೇಳಿಸಿಕೊಳ್ಳುತ್ತಿದ್ದ. ಹೀಗಾಗಿ ಎಲ್ಲರೂ ತಂತಮ್ಮ ಲಾಭಗಳಿಗಾಗಿ ಅವನಿಗೆ ಪ್ರಿಯವಾದ ಮಾತುಗಳನ್ನಷ್ಟೆ ಹೇಳುತ್ತಿದ್ದರು…
ಅಧಿಕಾರ ಮುಗಿದ ನಂತರದ ವರ್ಷಗಳಲ್ಲಿ ತನ್ನ ಹಿತ್ತಾಳೆ ಕಿವಿಗೆ ನಿತ್ಯದ ಸರಕಿಲ್ಲದೆ ಈತ ಹುಚ್ಚಿನ ಸ್ಥಿತಿ ತಲುಪಿರಬಹುದೆಂದು ನನ್ನ ಊಹೆ!
ಇಂಥ ಮೂರ್ಖರಿಗೆ ಶೇಕ್‌ಸ್ಪಿಯರ್ ಬರೆದ ‘ಒಥೆಲೊ’ ನಾಟಕದ ಇಯಾಗೊ ಎಂಬ ಹುಟ್ಟು ಚಾಡಿಕೋರ ಸೃಷ್ಟಿಸಿದ ಸರಣಿ ದುರಂತ ಗೊತ್ತಿರಲಿಕ್ಕಿಲ್ಲ!
ಲೋಕದ ಸಾಹಿತ್ಯದಲ್ಲಿ ಚಾಡಿಗೆ ಮತ್ತೊಂದು ಹೆಸರು ಇಯಾಗೊ! ವೆನಿಸ್ಸಿನಲ್ಲಿ ’ಕರಿಯ’ ಒಥೆಲೊ ಸೇನಾಧಿಪತಿಯಾದ ಮೇಲೆ, ಬಿಳಿಯ ಇಯಾಗೋಗೆ ಕೊನೇಪಕ್ಷ ರಾಜ್ಯದ ಉಪಸೇನಾನಿಯಾದರೂ ಆಗುವ ಆಸೆ; ಆದರೆ ಈ ಹುದ್ದೆ ಕ್ಯಾಸಿಯೋಗೆ ಸಿಕ್ಕಿದ್ದಕ್ಕೆ ಇಯಾಗೊ ಕಹಿಯಾಗುತ್ತಾನೆ. ಜೊತೆಗೆ, ಬಿಳಿಯನಾದ ತಾನು ‘ನೀಗ್ರೋ’ ಒಥೆಲೋನ ಸಹಾಯಕನಾಗಿ ಕೆಲಸ ಮಾಡಬೇಕಲ್ಲ ಎಂದು ಇಯಾಗೋನ ‘ವರ್ಣಾಹಂಕಾರ’ ಕೆರಳಿದೆ. ಇದು ಸಾಲದೆಂಬಂತೆ, ಬಿಳಿ ಹುಡುಗಿ ಸುಂದರಿ ಡೆಸ್ಡಿಮೋನ ಒಥೆಲೋನನ್ನು ಒಲಿದಿದ್ದಾಳೆ. ಇದು ಇಯಾಗೋನಲ್ಲಿ ಉರಿಯೆಬ್ಬಿಸುತ್ತದೆ. ತನ್ನ ಹೆಂಡತಿ ಎಮಿಲಿಯಾ ಜೊತೆ ಒಥೆಲೊ ಮಲಗಿರಬಹುದೆಂಬ ಅನುಮಾನ ಕೂಡ ಅದ್ಯಾಕೋ ಇಯಾಗೋನಲ್ಲಿ ಹುಟ್ಟುತ್ತದೆ!
ಥರಂಥರದ ನೀಚಭಾವಗಳು ಬೆರೆತು ಹುಟ್ಟಿದ ದುಷ್ಟ ಮನಸ್ಥಿತಿಯಲ್ಲಿ ಇಯಾಗೋನ ಎಲುಬಿಲ್ಲದ ನಾಲಗೆ ಎತ್ತೆಂದರತ್ತ ತಿರುಗತೊಡಗುತ್ತದೆ. ಸ್ವಾರ್ಥಕ್ಕಾಗಿ ಏನು ಬೇಕಾದರೂ ಹೇಳುವ ಹರಕು ನಾಲಿಗೆಯ ಇಯಾಗೋ ಪ್ರಕಾರ ಜನರ ಕಿವಿಯಿರುವುದೇ ಚಾಡಿ ಹೇಳುವುದಕ್ಕೆ! ಅವನ ಮೊದಲ ಬಲಿಪಶು ರಾಡರಿಗೋ. ಸುಂದರಿಯೊಬ್ಬಳನ್ನು ಲೋಕದ ಜನರೆಲ್ಲ ಪ್ರೀತಿಸುವಂತೆ ರೋಡರಿಗೋ ಕೂಡ ಡೆಸ್ಡಿಮೋನಳನ್ನು ಒಳಗೊಳಗೇ ಪ್ರೀತಿಸಿದ್ದ! ‘ನೀನು ಒಲಿದ ಹುಡುಗಿಯನ್ನು ‘ಕರಿಯ’ ಒಥೆಲೊ ಮದುವೆಯಾಗಿದ್ದಾನಲ್ಲಯ್ಯ!’ ಎಂದು ಇಯಾಗೊ ರೊಡರಿಗೋನನ್ನು ಒಥೆಲೊ ವಿರುದ್ಧ ಎತ್ತಿ ಕಟ್ಟುತ್ತಾನೆ.
ಅತ್ತ ಡೆಸ್ಡಿಮೋನಳ ಅಪ್ಪನ ಬಳಿ ಹೋಗಿ ’ಕರಿಯ’ ಒಥೆಲೊ ನಿನ್ನ ಮಗಳನ್ನು ಹಾರಿಸಿಕೊಂಡು ಹೋಗಿದ್ದಾನೆ ಎಂದು ಕೆರಳಿಸುತ್ತಾನೆ. ಡೆಸ್ಡಿಮೋನ ತಾನು ಒಥೆಲೋನನ್ನು ಒಲಿದಿದ್ದೇನೆಂದು ಅಪ್ಪನೆದುರೇ ಸಾರಿದ ಮೇಲಂತೂ ಇಯಾಗೋನ ಕಿಚ್ಚು ಹೆಚ್ಚಾಗುತ್ತದೆ; ಈ ಮದುವೆಯನ್ನೇ ಮುರಿಯಲೆತ್ನಿಸುತ್ತಾನೆ.
ಅಸೂಯೆಯನ್ನೇ ತಿಂದು ಬದುಕುವ ಇಯಾಗೋಗೆ ಯಾವುದೂ ಪವಿತ್ರವಲ್ಲ. ಎಲ್ಲರ ಬಗೆಗೂ ಅವನಿಗೆ ದ್ವೇಷ. ಪ್ರತಿ ಕ್ಷಣ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟದಿದ್ದರೆ ಅವನಿಗೆ ತೃಪ್ತಿಯಿಲ್ಲ. ಅವನ ಚಾಡಿಕೋರ ಬುದ್ಧಿ, ಅವನ ನಾಲಗೆ, ಅವನ ಗೋಸುಂಬೆ ನಟನೆ ಎಂಥ ಸನ್ನಿವೇಶವನ್ನಾದರೂ ದುರ್ಬಳಕೆ ಮಾಡಿಕೊಳ್ಳಬಲ್ಲದು. ‘ಇಯಾಗೊ ಮನುಷ್ಯರನ್ನು ಮೊದಲು ದ್ವೇಷಿಸಲು ಶುರು ಮಾಡುತ್ತಾನೆ; ನಂತರ ಅದಕ್ಕೆ ಕಾರಣ ಹುಟ್ಟಿಸಿಕೊಳ್ಳುತ್ತಾನೆ!’ ಎಂದು ವಿಮರ್ಶಕನೊಬ್ಬ ಬರೆಯುತ್ತಾನೆ.
ಕಿರುಕುಳಜೀವಿಯೂ, ನಿತ್ಯಸಂಚುಜೀವಿಯೂ ಆದ ಇಯಾಗೊ ‘ನನ್ನ ಸಣ್ಣ ಬಲೆಯಲ್ಲಿ ಈ ದೊಡ್ಡ ನೊಣ ಸಿಕ್ಕಿಕೊಳ್ಳುವಂತೆ ಮಾಡುವೆ’ ಎಂದು ಒಥೆಲೊ ಬಳಿ ಬರುತ್ತಾನೆ; ಒಥೆಲೊ ಕ್ಯಾಸಿಯೋನನ್ನು ಕೆಲಸದಿಂದ ತೆಗೆದು ಹಾಕುವಂತೆ ಮಾಡುತ್ತಾನೆ. ಕೆಲಸ ಕಳೆದುಕೊಂಡ ಕ್ಯಾಸಿಯೋ ಬಳಿ ಹೋಗಿ, ‘ಬಾ ಮತ್ತೆ ಅದೇ ಕೆಲಸ ಕೊಡಿಸುತ್ತೇನೆ’ ಎಂದು ಮತ್ತೊಂದು ಬಲೆ ಹೆಣೆಯುತ್ತಾನೆ. ‘ಡೆಸ್ಡಿಮೋನಳನ್ನು ಬೇಡಿಕೋ; ಅವಳು ಒಥೆಲೋಗೆ ಹೇಳಿ ಮತ್ತೆ ನಿನ್ನ ಕೆಲಸ ಕೊಡಿಸುತ್ತಾಳೆ’ ಎಂದು ಕ್ಯಾಸಿಯೋನನ್ನು ಡೆಸ್ಡಿಮೋನಳ ಬಳಿ ಕಳಿಸುತ್ತಾನೆ.
ಅತ್ತ ಕ್ಯಾಸಿಯೋ ಡೆಸ್ಡಿಮೋನಳ ಬಳಿ ಈ ಬೇಡಿಕೆ ಇಡಲು ಹೊರಡುತ್ತಾನೆ; ಇತ್ತ ಇಯಾಗೊ, ‘ಕ್ಯಾಸಿಯೋ ನಿನ್ನ ಹೆಂಡತಿಯ ಬಳಿ ಹೋಗಿದ್ದಾನೆ; ಅವನ ಮೇಲೆ ಡೆಸ್ಡಿಮೋನಾಗೆ ಮೋಹ’ ಎಂದು ಒಥೆಲೋನ ಕಿವಿ ಕಚ್ಚುತ್ತಾನೆ.
ಹುಸಿಯನಾಡುವ ನಾಲಗೆ, ಸದಾ ಒಸರುವ ವಿಷ, ನಟನೆ, ಕುತಂತ್ರ ಎಲ್ಲವೂ ಸೇರಿಕೊಂಡು ಇಯಾಗೊ ನಿರ್ದಯನಾಗುತ್ತಾ ಹೋಗುತ್ತಾನೆ. ಇಯಾಗೊ ಹೇಳಿದ್ದನ್ನೆಲ್ಲ ಮುಗ್ಧ ಒಥೆಲೊ ನಂಬತೊಡಗುತ್ತಾನೆ. ಮುಗ್ಧತೆ ಮೂರ್ಖತನವಾಗುವ ಉದಾಹರಣೆ ಇದು! ಇಯಾಗೋನ ಕ್ರೂರ ಅಸೂಯೆ ಒಥೆಲೋನ ನೆಮ್ಮದಿಗೆಡಿಸುವ ಹಸಿ ಅಸೂಯೆಯಾಗುತ್ತದೆ; ಅವನನ್ನು ದಹಿಸತೊಡಗುತ್ತದೆ. ಡೆಸ್ಡಿಮೋನಳ ಬಗೆಗಿನ ಅವನ ಮುಗ್ಧ ಪ್ರೀತಿ ಕುರುಡು ದ್ವೇಷವಾಗುತ್ತದೆ. ತೀವ್ರ ಪ್ರೀತಿ ಆಯ ತಪ್ಪಿದರೆ ತೀವ್ರ ದ್ವೇಷವಾಗುವ ರೀತಿಯನ್ನು ಶೇಕ್‌ಸ್ಪಿಯರ್‌ಗಿಂತ ಚೆನ್ನಾಗಿ ಇನ್ನಾರು ಹೇಳಬಲ್ಲರು!
ಇಯಾಗೋನ ಸಂಚಿನ ಸರಣಿ ಬೆಳೆಯುತ್ತಾ ಹೋಗುತ್ತದೆ. ಒಥೆಲೊ ಡೆಸ್ಡಿಮೋನಾಗೆ ಪ್ರೀತಿಯಿಂದ ಕೊಟ್ಟ ಕರವಸ್ತ್ರವನ್ನು ಇಯಾಗೊ ಕದಿಯುತ್ತಾನೆ. ಈ ಕರವಸ್ತ್ರ ಕ್ಯಾಸಿಯೊ ಬಳಿ ಸಿಕ್ಕಿತೆಂದು ಒಥೆಲೋಗೆ ಹೇಳುತ್ತಾನೆ. ಕುಟಿಲ ಮಾತು, ಕಪಟ ಪುರಾವೆ, ಕೃತಕ ಸನ್ನಿವೇಶಗಳನ್ನು ಸೃಷ್ಟಿಸುವ ಇಯಾಗೋನನ್ನು ನಂಬಿ ಒಥೆಲೊ ಕುದಿಯತೊಡಗುತ್ತಾನೆ. ಇಯಾಗೋನ ಶಬ್ದಜಾಲ ಆ ಕುದಿಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಒಥೆಲೊ ಡೆಸ್ಡಿಮೋನಳ ಕತ್ತು ಹಿಸುಕುತ್ತಾನೆ.
ಆ ಘಟ್ಟದಲ್ಲಿ ಎಮಿಲಿಯಾ ಇಯಾಗೋನ ಸಂಚನ್ನು ಬಯಲುಗೊಳಿಸುತ್ತಾಳೆ; ಒಥೆಲೋಗೆ ತನ್ನ ಬಗೆಗೇ ತೀವ್ರ ಅಸಹ್ಯವಾಗುತ್ತದೆ. ಒಥೆಲೊ ತನ್ನನ್ನೇ ತಾನು ಇರಿದುಕೊಳ್ಳುತ್ತಾನೆ. ಇಯಾಗೊ ಕೂಡ ಇರಿಸಿಕೊಳ್ಳುತ್ತಾನೆ. ಕುಟಿಲ ಚಾಡಿಕೋರನ ವಿಷನಾಲಗೆ, ದುರಂತನಾಯಕನ ಚಾಡಿಪ್ರಿಯ ಕಿವಿ... ಎರಡೂ ಸೇರಿ ಕೊನೆಗೆ ಎಲ್ಲರೂ ನಾಶವಾಗುತ್ತಾರೆ…
ತಮ್ಮ ಲಾಭಕ್ಕಾಗಿ ಯಾರಿಗೆ ಏನು ಬೇಕಾದರೂ ಹೇಳಬಹುದು ಎನ್ನುವ ಈ ಕಾಲದಲ್ಲಿ ಇಯಾಗೊ ಪಾತ್ರವನ್ನು ಅರಿಯುವುದು ನಮ್ಮ ಉಳಿವಿನ ದೃಷ್ಟಿಯಿಂದಲೂ ಅಗತ್ಯ. ನಿತ್ಯ ಚಾಡಿ ಹೇಳುವವರು ತಂತಮ್ಮ ಲಾಭಕ್ಕಾಗಿ ಆ ಕೆಲಸ ಮಾಡುತ್ತಿರುತ್ತಾರೆ; ಆದರೆ ಇಯಾಗೊ ಥರದ ೨೪x೭ ಪ್ರೊಫೆಶನಲ್ ಚಾಡಿಕೋರರು ಇನ್ನಷ್ಟು ಅಪಾಯಕಾರಿ!
ಅಂದರೆ, ಮನುಷ್ಯ ಯಾವ ಕಾರಣವೂ ಇಲ್ಲದೇ ನೀಚನಾಗಬಲ್ಲ ಎಂಬುದನ್ನು ನಮ್ಮ ಸುತ್ತಮುತ್ತ ಇರುವ ಇಯಾಗೋಗಳನ್ನು ಒಮ್ಮೆ ನೋಡಿದರೆ ಗೊತ್ತಾಗುತ್ತದೆ! ಇಂಥವರ ನಡುವೆ, ಯಾರು ಪ್ರಾಮಾಣಿಕ, ಯಾರು ಕುಟಿಲ ಎಂಬುದನ್ನು ಅರಿಯುವ ಸೂಕ್ಷ್ಮತೆ ನಮಗಿಲ್ಲದಿದ್ದರೆ ದುರಂತ ಗ್ಯಾರಂಟಿ. ಇಯಾಗೋನಂಥವರ ಕುಟಿಲ ಮಾತುಗಳು ರೂಢಿಯಾದ ನಾಯಕರ ಕಿವಿಗಳಿಗೆ ಪ್ರಾಮಾಣಿಕರ ನೇರ ಮಾತುಗಳು ರುಚಿಸುವುದು ಕಷ್ಟ.
ಈ ಸತ್ಯ ಲಂಕೇಶರ ‘ಗುಣಮುಖ’ ನಾಟಕದ ಚಕ್ರವರ್ತಿ ನಾದಿರ್‌ಶಾಗೆ ಒಮ್ಮೆ ಹೊಳೆಯುತ್ತದೆ. ನಾದಿರ್‌ಗೆ ಕಾಯಿಲೆಯಾಗಿದೆ; ಸಾಮಂತ ರಾಜರು, ಸರ್ಕಾರಿ ವೈದ್ಯರು ಅವನನ್ನು ಹೊಗಳಿ ಹೊಗಳಿ ಅವನ ಕಾಯಿಲೆಯನ್ನು ಹೆಚ್ಚು ಮಾಡುತ್ತಾರೆ. ಆಗ ನಾದಿರ್ ಕರೆಸಿಕೊಂಡ ಹಕೀಮ ಅಲಾವಿಖಾನ್ ರೇಗಿ ಹೇಳುತ್ತಾನೆ: ‘ಕಿವುಡ! ನಿನ್ನ ಕಾಯಿಲೆಯೆಲ್ಲ ನಿನ್ನ ಕಿವಿಯಿಂದಲೇ ಶುರುವಾಗಿದೆ!’.
ನಾದಿರ್‌ಶಾನ ಅನಾರೋಗ್ಯದ ಬಗ್ಗೆ ಪ್ರಾಮಾಣಿಕ ಹಕೀಮ ಕಟುಸತ್ಯಗಳನ್ನು ಹೇಳತೊಡಗುತ್ತಾನೆ. ಈ ಕಟುಸತ್ಯಗಳನ್ನು ಕೇಳಿಸಿಕೊಳ್ಳುತ್ತಾ ನಾದಿರ್ ನಿಧಾನವಾಗಿ ಗುಣಮುಖನಾಗತೊಡಗುತ್ತಾನೆ. ಆದರೂ ಸರ್ವಾಧಿಕಾರಿ ನಾದಿರ್ ’ಗುಣಮುಖ’ನಾಗಬಹುದು ಎಂದು ಸಂದೇಹಿ ಲಂಕೇಶ್ ಸೂಚಿಸುತ್ತಾರೆಯೇ ಹೊರತು, ’ಗುಣಮುಖ’ನಾಗಿದ್ದಾನೆ ಎಂದಲ್ಲ. ಸರ್ವಾಧಿಕಾರಿಗಳ ಬಗ್ಗೆ ಈ ಎಚ್ಚರ ಸದಾ ನಮಗಿರಲಿ!
ಮನುಷ್ಯನೇಕೆ ನೀಚನಾಗುತ್ತಾನೆ? ಅದಕ್ಕೆ ಕಾರಣಗಳಿವೆಯೆ? ಅದು ನಿಷ್ಕಾರಣವೆ? ನೀಚನಾಗುವುದರಲ್ಲಿ ಅವನಿಗೆ ಆನಂದವಿದೆಯೆ? ಇಯಾಗೋಗೆ ತನ್ನ ಕುಟಿಲ ಭಾಷೆಯ ಬಳಕೆಯಿಂದ ಆನಂದವೂ ಆಗುತ್ತಿತ್ತೇನೋ! ಕಾರಣ, ಮನುಷ್ಯರು ಬರಬರುತ್ತಾ ತಮ್ಮ ನೀಚತನವನ್ನೂ ಆನಂದಿಸತೊಡಗುತ್ತಾರೆ. ಹೀಗೆ ಪೂರ್ಣಾವಧಿ ನೀಚನಾಗಿರುವ ವ್ಯಕ್ತಿ ಯಾರನ್ನಾದರೂ ಬಲಿ ತೆಗೆದುಕೊಳ್ಳಬಲ್ಲ. ಇದೆಲ್ಲ ಹುಂಬ ಒಥೆಲೋಗೆ ಅರ್ಥವಾಗುವುದಿಲ್ಲ.
ಒಥೆಲೊ ಸೋತ ಕಡೆ ನಾದಿರ್ ಗೆಲ್ಲುತ್ತಾನೆ. ನಾದಿರ್ ಗೆಲ್ಲುವುದು ಚಾಡಿಕೋರರನ್ನು ಕೊಲ್ಲುವುದರಿಂದ. ನಾಯಕನಾದವನಿಗೆ ತಾನು ಕೇಳಿಸಿಕೊಳ್ಳುವ ಮಾತುಗಳಲ್ಲಿ ಯಾವುದು ಪ್ರಾಮಾಣಿಕ, ಯಾವುದು ಅಪ್ರಾಮಾಣಿಕ ಎಂಬ ಅರಿವಿರಬೇಕು; ಅದಿಲ್ಲದಿದ್ದರೆ ಅದು ಕೇಳಿಸಿಕೊಳ್ಳುವವನನ್ನೇ ನಾಶ ಮಾಡುತ್ತದೆ. ಈ ಅರಿವು ನಾದಿರ್ ಶಾಗಿತ್ತು.
ಸತ್ಯ ಯಾವುದು, ಸುಳ್ಳು ಚಾಡಿ ಯಾವುದು ಎಂಬುದು ‘ಧೀರ’ ಒಥೆಲೋಗೆ ಕೊನೆಯವರೆಗೂ ತಿಳಿಯಲಿಲ್ಲ; ಸತ್ಯ ತಿಳಿಯುವ ಹೊತ್ತಿಗೆ ತೀರಾ ತಡವಾಗಿತ್ತು; ತನ್ನ ಬಗೆಗೇ ಅಸಹ್ಯವಾಗಿ ತನ್ನನ್ನೇ ಇರಿದುಕೊಂಡು ಸತ್ತ. ಲಿಯರ್‌ಗೂ ಹಾಗಾಯಿತು. ಆದರೆ ನಾದಿರ್ ಶಾ ಇತರರ ಮಾತುಗಳನ್ನು ಪರೀಕ್ಷಿಸಿ ಸತ್ಯವನ್ನು ಗುರುತಿಸುವ ಪ್ರಜ್ಞೆ ಗಳಿಸಿಕೊಂಡ; ‘ಗುಣಮುಖ’ನಾಗತೊಡಗಿದ. ಲಿಯರ್ ಹಾಗೂ ಒಥೆಲೋರ ದುರಂತ ಸಾವು ಮತ್ತು ಜಾಣ ನಾದಿರ್ ಶಾನ ಉಳಿವು... ಇವೆಲ್ಲವೂ ಸಾರ್ವಜನಿಕ ಜೀವನದಲ್ಲಿರುವವರಿಗೆ ಬೆಳಕಿನ ಹಾದಿ ತೋರಬಲ್ಲವು.
ಕೊನೆ ಟಿಪ್ಪಣಿ: ಯೋಗ ಬರಹದ ಯೋಗ!
ಕಳೆದ ವಾರ ಈ ಅಂಕಣದಲ್ಲಿ ಬಂದ ’ಯೋಗದ ಹೊಲಬ ನೀವೆತ್ತ ಬಲ್ಲಿರೋ’ ಲೇಖನ (READ HERE) ಓದಿ ಕವಿ ಚಂದ್ರಶೇಖರ ತಾಳ್ಯ ಅಲ್ಲಮನು ದಾರಿ ಮತ್ತು ಹೊಲಬು ಎರಡನ್ನೂ ಒಟ್ಟಿಗೆ ಬಳಸಿದ ’ಸೂರ್ಯರನೇಕರು ಮೂಡಿ ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ’ ಸಾಲನ್ನು ಉಲ್ಲೇಖಿಸಿದರು. ತಾಳ್ಯ ವಚನ ಪರಂಪರೆಯಿಂದ ಪಡೆದು ಕವಿಯಾಗಿ ಬೆಳೆದವರು.
ವಚನ ಸಂವೇದನೆಯನ್ನು ಕ್ಲಾಸಿನಲ್ಲಿ ಹಂಚಿಕೊಳ್ಳುವ ಪ್ರಾಧ್ಯಾಪಕಿ ವತ್ಸಲಾ ನೆನಸಿಕೊಂಡ ಉರಿಲಿಂಗಪೆದ್ದಿಗಳ ಕೆಲವು ಸಾಲುಗಳು:
ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ
ಯೋಗವು ಅಭ್ಯಾಸವೆ? ಅಭ್ಯಾಸವು ಯೋಗವೆ ಅಯ್ಯಾ?
ಯೋಗವ ನುಡಿವರೇ ಅಯ್ಯಾ?
ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ…
ಅಂಕಣ ಓದಿದ ಪ್ರಖ್ಯಾತ ವಿಮರ್ಶಕಿಯೊಬ್ಬರು ’ಯೋಗವನರಸಿ ಹೋದಿರೇ’ ಎಂದು ಬೆರಗಾದರು. ಖ್ಯಾತ ನಿರ್ದೆಶಕ ಬಿ ಸುರೇಶ್, ಯೋಗಿ ಆದಿತ್ಯನಾಥ್ ಎಂಬುವವರ ಭಂಗಿ ನೋಡಿ ನಕ್ಕು ಕಾಮೆಂಟ್ ಸೆಕ್ಷನ್ನಿನಲ್ಲಿ ಬರೆದರು.
ಈ ಅಂಕಣವೇ ನೆಪವಾಗಿ ಪ್ರತಿವಾರ ಕನ್ನಡದ ’ಕಲೆಕ್ಟಿವ್ ವಿಸ್ಡಂ’ ರೂಪುಗೊಳ್ಳುವ ಪರಿ ಕಂಡು ಅಂಕಣಕಾರನಲ್ಲಿ ನಿತ್ಯ ಕಲಿಕೆಯ ವಿನಯ ಮತ್ತು ನಿಜ ವಿಸ್ಮಯ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ವಾರ್ಷಿಕ ಯೋಗದ ಆಟಾಟೋಪ ನೋಡುತ್ತಿರುವಾಗ ಅಲ್ಲಮಪ್ರಭುಗಳ ‘ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ, ಯೋಗದ ಹೊಲಬ ನೀನೆತ್ತ ಬಲ್ಲೆ?’… ವಚನ ನೆನಪಾಯಿತು. ನನ್ನ ಪ್ರಿಯ ಹಿಂದೂಸ್ತಾನಿ ಗಾಯಕರಲ್ಲೊಬ್ಬರಾದ ವೆಂಕಟೇಶ್‌ಕುಮಾರ್ ಕಂಠದಲ್ಲಿ ಈ ವಚನ ಕಿವಿಯಲ್ಲಿ ಗುಂಯ್‌ಗುಡತೊಡಗಿತು.
ವೆಂಕಟೇಶ್‌ಕುಮಾರ್ ಹಾಡಿದ್ದ ವಚನದಲ್ಲಿ ‘ಯೋಗದ ಹೊಲಬ ನೀವೆತ್ತ ಬಲ್ಲಿರೋ’ ಎಂಬ ಪಾಠಾಂತರವಿತ್ತು. ಹಿಂದೂಸ್ತಾನಿ ಗಾಯನದ ಹರಿವಿನಲ್ಲಿ ಸದಾ ಹೊಸ ಹೊಸ ಅರ್ಥಗಳು ಹೊಳೆಯುತ್ತಾ ಹೋಗುತ್ತವೆ. ವೆಂಕಟೇಶ್‌ಕುಮಾರ್ ಹಾಡತೊಡಗಿದಾಗ ‘ಯೋಗದ ಹೊಲಬ ನೀವೆತ್ತ ಬಲ್ಲಿರೋ’ ಎಂಬ ಸಾಲು ಒಮ್ಮೆ ಪ್ರಶ್ನೆಯಾಯಿತು; ಮತ್ತೊಮ್ಮೆ ಆಶ್ಚರ್ಯಸೂಚಕವಾಯಿತು; ಮರುಗಳಿಗೆಗೆ ವಿಷಾದವಾಯಿತು; ಮಗದೊಮ್ಮೆ ’ಅಯ್ಯೋ’ ಎಂಬ ಕನಿಕರವಾಯಿತು; ಆತ್ಮಪರೀಕ್ಷೆಯಾಯಿತು, ಸವಾಲ್ ಆಯಿತು, ಕಾಲೆಳೆತವಾಯಿತು…ಯುಟ್ಯೂಬ್‌ನಲ್ಲಿರುವ ಈ ಹಾಡು ಕೇಳಿಸಿಕೊಂಡರೆ ಇನ್ನಷ್ಟು ಧ್ವನಿಗಳು ನಿಮ್ಮಲ್ಲೂ ಹೊರಡಬಹುದು.
ನಿಘಂಟಿನಲ್ಲಿ ‘ಹೊಲಬು’ ಎಂದರೆ ದಾರಿ, ರೀತಿ, ಮಾರ್ಗ ಎಂಬ ಅರ್ಥಗಳಿದ್ದವು. ’ಹೊಲಬುಗೆಡಿಸು’ ಎಂಬ ಪ್ರಯೋಗವೂ ನಿಘಂಟಿನಲ್ಲಿತ್ತು.
ಅಲ್ಲಮಪ್ರಭು ‘ಯೋಗದ ಹೊಲಬ ನೀನೆತ್ತ ಬಲ್ಲೆ’ ಎನ್ನುತ್ತಲೇ, ಕೊನೆಗೆ ‘ಕದಳಿಯ ಬನವ ನಿನ್ನಲ್ಲಿ ನೀನೆ ತಿಳಿದು ನೋಡು’ ಎಂದು ಹೇಳುತ್ತಾರೆ.
ಇವತ್ತು ಯೋಗವನ್ನು ರಾಜಕೀಯ ಪ್ರದರ್ಶನವಾಗಿ ಮಾಡುತ್ತಿರುವವರು ’ಯೋಗದ ಹೊಲಬ ಬಲ್ಲರೋ?’ ಅಥವಾ ’ಯೋಗದ ಹೊಲಬುಗೆಡಿಸುತ್ತಿರುವರೋ?’ ಇದೆಲ್ಲವನ್ನೂ ಸೂಕ್ಷ್ಮಜೀವಿಗಳು ಬಲ್ಲರು. ಯೋಗದ ಹೊಲಬು ತಿಳಿಯದ ಮಂದಿಗೆ ಕುವೆಂಪು ‘ಉಳುವ ಯೋಗಿಯ ನೋಡಲ್ಲಿ!’ ಎಂದು ‘ಯೋಗಿ’ಯ ಪರಿಕಲ್ಪನೆಗೇ ಹೊಸ ಅರ್ಥ ಕೊಟ್ಟಿರುವುದು ಕೇಳಿಸಿರಲಿಕ್ಕಿಲ್ಲ. ಮೂಗು ಹಿಡಿದ ಯೋಗಿಗಳಿಗೆ ಕವಿ ಉಳುವ ಯೋಗಿಯನ್ನು ತೋರಿಸುತ್ತಿರುವ ಚಿತ್ರ ಕಂಡಿರಲಿಕ್ಕಿಲ್ಲ!
ರಾಮಮನೋಹರ ಲೋಹಿಯಾ ಅವರ ‘ಆ್ಯನ್ ಎಪಿಸೋಡ್ ಇನ್ ಯೋಗ’ ಎಂಬ ಮಹತ್ವದ ಲೇಖನವೊಂದಿದೆ. ಅದನ್ನು ಕೆ.ವಿ. ಸುಬ್ಬಣ್ಣ ‘ಯೋಗದಲ್ಲಿ ಒಂದು ಅಧ್ಯಾಯ’ ಎಂದು ಅನನ್ಯವಾಗಿ ಕನ್ನಡಿಸಿದ್ದಾರೆ.
ಲೋಹಿಯಾ ಲೇಖನಕ್ಕೊಂದು ಹಿನ್ನೆಲೆಯಿದೆ: ಇಸವಿ ೧೯೪೪. ಸ್ವಾತಂತ್ರ‍್ಯ ಹೋರಾಟಗಾರ ಲೋಹಿಯಾರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತ್ತು. ಈ ಮೊದಲೇ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಶುರುವಾದ ತಕ್ಷಣ ಗಾಂಧಿ, ನೆಹರು, ಪಟೇಲ್, ಮೌಲಾನ ಮುಂತಾದ ಮುಂಚೂಣಿ ನಾಯಕರ ಬಂಧನವಾಗಿತ್ತು. ಲೋಹಿಯಾ, ಜೆ.ಪಿ., ಅರುಣಾ ಅಸಫ್ ಆಲಿ, ಅಚ್ಯುತ್ ಪಟವರ್ಧನ್ ಥರದ ಸಮಾಜವಾದಿಗಳ ಜೊತೆಗೆ ಲಕ್ಷಾಂತರ ಜನರು ಪೊಲೀಸರ ಕಣ್ತಪ್ಪಿಸಿ ಭೂಗತ ಹೋರಾಟ ನಡೆಸುತ್ತಿದ್ದರು; ಸ್ವಾತಂತ್ರ‍್ಯ ಚಳುವಳಿಯ ಸ್ಪಿರಿಟ್ಟನ್ನು ಕಾಯ್ದುಕೊಂಡಿದ್ದರು. ಉಷಾ ಮೆಹ್ತಾ, ಲೋಹಿಯಾ ಮೊದಲಾದವರು ಭೂಗತ ‘ಕಾಂಗ್ರೆಸ್ ರೇಡಿಯೋ’ ನಡೆಸಿ ಚಳುವಳಿಗಾರರನ್ನು ಮುನ್ನಡೆಸುತ್ತಿದ್ದರು.
ಕೊನೆಗೂ ಸಿಕ್ಕುಬಿದ್ದ ಲೋಹಿಯಾರ ಬಾಯಿ ಬಿಡಿಸಲು ವಸಾಹತು ಪೊಲೀಸರು ಚಿತ್ರವಿಚಿತ್ರವಾದ ದೈಹಿಕ, ಮಾನಸಿಕ ಹಿಂಸೆಗಳನ್ನು ಕೊಡಲಾರಂಭಿಸಿದರು. ‘ನಾನು ಮಾಡಿದ್ದರ ಬಗ್ಗೆ ಏನು ಬೇಕಾದರೂ ಕೇಳಿ, ಹೇಳುತ್ತೇನೆ; ವಿಚಾರಣೆ, ಶಿಕ್ಷೆ ಎಲ್ಲವನ್ನೂ ಎದುರಿಸಲು ಸಿದ್ಧ. ಆದರೆ ಬೇರೆಯವರ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದು ಲೋಹಿಯಾ ಖಡಕ್ಕಾಗಿ ಹೇಳಿದರು.
ಪೊಲೀಸರ ಹಿಂಸೆ ಮುಂದುವರಿಯಿತು. ಅಂಥದೊಂದು ಹಿಂಸೆಯ ದಿನ ಲೋಹಿಯಾಗೆ ಅಪ್ಪ ಹೀರಾಲಾಲ್ ಹೇಳುತ್ತಿದ್ದ ಪತಂಜಲಿಯ ಸೂತ್ರ ಇದ್ದಕ್ಕಿದ್ದಂತೆ ನೆನಪಾಯಿತು: ಯೋಗದ ಹಾದಿ ಎಂದರೆ ‘ಚಿತ್ತದ ಪ್ರವೃತ್ತಿಯ ನಿರೋಧ.’ ಆಗ ಚಿತ್ತದ ಪ್ರವೃತ್ತಿಯ ಮೇಲೆ ಹತೋಟಿ ಸಾಧಿಸಲೆತ್ನಿಸಿದ ಲೋಹಿಯಾಗೆ ತಾನು ಹಠಯೋಗದಲ್ಲಿ ಮುಳುಗಿದ್ದೇನೆ ಅನ್ನಿಸತೊಡಗಿತು.
ಬರ್ಬರ ಹಿಂಸೆಯನ್ನು ಮೀರಲು ನೆರವಾದ ಯೋಗದ ಹೊಳಹನ್ನು ಅನುಭವಿಸಿ ಕಂಡಿದ್ದ ಲೋಹಿಯಾ ಮುಂದೆ ಈ ಅನುಭವವನ್ನು ನೆನೆಯುತ್ತಾ ೧೯೫೭ರಲ್ಲಿ ’ಯೋಗದಲ್ಲಿ ಒಂದು ಅಧ್ಯಾಯ’ ಬರೆದರು. ಅರವತ್ತರ ದಶಕದ ಭಾರತದಲ್ಲಿ ಯೋಗವು ಪ್ರದರ್ಶನದ ಸರಕಾಗಿದ್ದನ್ನೂ ಕಂಡರು; ಯೋಗ, ಆಧ್ಯಾತ್ಮಗಳ ಬಗ್ಗೆ ಮಾತಾಡುವುದು ಹುಸಿ ಫ್ಯಾಶನ್ ಆದಾಗ ಲೋಹಿಯಾ ಬರೆದ ಮಾತುಗಳನ್ನು ಮೊನ್ನೆ ಶ್ರೀಧರ್ ಏಕಲವ್ಯ ನನ್ನ ’ಆರ್ಟ್ ಆಫ್ ಲಿವಿಂಗ್ ಎಂದರೇನು?’ (’ಗಾಳಿ ಬೆಳಕು’, ಪಲ್ಲವ ಪ್ರಕಾಶನ) ಬರಹದಿಂದ ಹೆಕ್ಕಿ ಕಳಿಸಿದರು:
‘ಈ ಯೋಗದ ಪ್ರಯತ್ನಗಳನ್ನು ಕುರಿತಂತೆ ಎರಡು ಮುಖ್ಯ ಅಂಶಗಳನ್ನು ಅಗತ್ಯವಾಗಿ ಗಮನಿಸಬೇಕು: ಈ ಪಂಥದ ಅನುಯಾಯಿಗಳಲ್ಲಿ ಬಹಳಷ್ಟು ಜನ ಸ್ಥಿತಿವಂತರೇ ಇದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಅವರ ಬದುಕುಗಳು ಅರ್ಥವನ್ನೇ ಕಳೆದುಕೊಂಡಿರುತ್ತವೆ; ಅವರ ಬದುಕು ಸಾಮಾನ್ಯವಾಗಿ ಹಣ ಗಳಿಸುವುದು, ಬೇರೆಯವರ ನೋವಿಗೆ ಅಥವಾ ಬಡತನಕ್ಕೆ ಕಾರಣವಾಗುವುದು... ಇವೇ ಮುಂತಾದ ವಿಷಮಯ ಅಂಶಗಳಿಂದಲೇ ತುಂಬಿರುವುದು ಗ್ಯಾರಂಟಿ.
‘ಯೋಗಿಗಳು ಹಾಗೂ ಅವರ ಪ್ರಚಾರಕರಿಬ್ಬರೂ ಈ ದೇಶದ ‘ಬುದ್ಧಿಜೀವಿಗಳು’ ಎಂದು ಕರೆಯಲಾಗುವ ವರ್ಗದಿಂದಲೇ ತಮ್ಮ ಅನುಯಾಯಿಗಳನ್ನು ಪಡೆದಿದ್ದಾರೆ. ಅವರಲ್ಲಿ ಬಹುತೇಕರು ನಿವೃತ್ತರಾದ ನ್ಯಾಯಾಧೀಶರುಗಳು, ಆಡಳಿತ ವರ್ಗದಲ್ಲಿದ್ದವರು, ಪೊಲೀಸ್ ಇನ್‌ಸ್ಪೆಕ್ಟರುಗಳು, ಲಾಯರುಗಳು, ವಿಶ್ವವಿದ್ಯಾಲಯಗಳ ಅಧ್ಯಾಪಕರುಗಳು ಹಾಗೂ ವ್ಯಾಪಾರಿಗಳು. ಇವರೆಲ್ಲ ತಮ್ಮ ವೃತ್ತಿಜೀವನದಲ್ಲಿ ಖಾಲಿ ಬದುಕನ್ನು ಸವೆಸಿದವರು; ಅಥವಾ ತಂತಮ್ಮ ಅಂತಸ್ಸಾಕ್ಷಿಗೆ ಹಾನಿ ಮಾಡಿಕೊಂಡವರು. ಭಾರತದ ವಿವಿಧ ವೃತ್ತಿಗಳಲ್ಲಿರುವ ಈ ಜನ ಇತರ ದೇಶಗಳ ವೃತ್ತಿಪರ ಜನರಂತೆ ಮಾನವನ ನಿಜವಾದ ಏಳಿಗೆಗೆ ಶ್ರಮಿಸುವುದಿಲ್ಲ; ಬದಲಿಗೆ, ಜನರಿಂದ ದೂರ ಇರುವುದಕ್ಕೇ ತಮ್ಮೆಲ್ಲ ಬುದ್ಧಿಯನ್ನು ಖರ್ಚು ಮಾಡಿರುವ ಜನರಿವರು.’
ಯೋಗಪೀಡಿತ ಮನಸ್ಸುಗಳನ್ನು ಕುರಿತ ಲೋಹಿಯಾ ಮಾತು ಇವತ್ತು ಅವತ್ತಿಗಿಂತ ಹೆಚ್ಚು ಸಕಾಲಿಕವಾಗಿದೆ.
ಕಳೆದೆರಡು ದಶಕಗಳಲ್ಲಿ ಯೋಗ ಋಷಿ ಪತಂಜಲಿಯನ್ನು ಲಾಭದ ಸಾಧನವಾಗಿ ಬಳಸಿರುವ ರಾಮದೇವ್ ಥರದವರು; ಈಚಿನ ವರ್ಷಗಳಲ್ಲಿ ಯೋಗ ಪ್ರದರ್ಶಿಸಿ ಉಬ್ಬಸ ಪಡುತ್ತಿರುವ ರಾಜಕಾರಣಿಗಳು; ಇದನ್ನೇ ಭಾರತದ ಸಾಧನೆಯೆಂದು ಕೂಗುತ್ತಿರುವವರು- ಇವರೆಲ್ಲ ಲೋಹಿಯಾ ಲೇಖನವನ್ನಿರಲಿ, ಪತಂಜಲಿಯನ್ನೂ ಓದಿರಲಾರರು. ಯೋಗದ ಈ ಅಣಕು ಪ್ರದರ್ಶನಗಳನ್ನು ಕಂಡು ಹೊಲ, ಗದ್ದೆಗಳಲ್ಲಿ ಸಹಜವಾಗಿ ನೂರಾರು ಸಲ ಬಗ್ಗಿ, ಮೇಲೇಳುವ ರೈತ, ಕಾರ್ಮಿಕ ಯೋಗಿಗಳು ಕನಿಕರದಿಂದ ನಗುತ್ತಿರಬಹುದು!
ಕಳೆದ ಎರಡು ದಶಕಗಳಲ್ಲಿ ಭಾರತದ ಸುಖವಾದಿ ವರ್ಗಗಳಲ್ಲಿ ದೇಹದ ಬಗ್ಗೆ ಹಬ್ಬಿರುವ ಹೊಸ-ಹುಸಿ ಆತಂಕದಿಂದ ರಾಮದೇವ್ ಅಂಡ್ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಗಳಿಸುವ ‘ಯೋಗ’ ದೊರೆತದ್ದು ಎಲ್ಲರಿಗೂ ಗೊತ್ತಿದೆ; ಈಗ ಸೈಡ್‌ವಿಂಗ್‌ಗೆ ಸರಿದಿರುವ ರಾಮದೇವ್, ಕೊರೋನಾ ಔಷಧಿ ಕುರಿತು ಕೊಟ್ಟ ಜಾಹಿರಾತುಗಳಿಗೆ ಸುಪ್ರೀಂ ಕೋರ್ಟ್ ಹಾಕಿದ ಛೀಮಾರಿಯನ್ನೂ ಮೊನ್ನೆ ನೋಡಿದ್ದೇವೆ!
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಆರ್ಥಿಕ ಭ್ರಷ್ಟಾಚಾರದ ವಿರುದ್ಧ ಭಾರಿ ಮಾತಾಡುತ್ತಿದ್ದ ರಾಮದೇವ್ ‘ಯೋಗ ದೃಷ್ಟಿ’ಗೆ ನಂತರದ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವೂ ಕಾಣಲಿಲ್ಲ! ಇಂಥವರ ಯೋಗ, ಆಧ್ಯಾತ್ಮದ ಮುಸುಕಿನ ಶಿಬಿರಗಳು ನಿಯಂತ್ರಿಸುತ್ತಿರುವ ಭಾರತದ ಮಧ್ಯಮ ವರ್ಗ ಹಾಗೂ ಕಾರ್ಪೊರೇಟ್ ವರ್ಗ, ಹಾಗೂ ಅಲ್ಲಿ ನಾಜೂಕಾಗಿ ಬಳಸುತ್ತಿರುವ ಕಂದಾಚಾರಿ ಭಾಷೆ ಇವೆಲ್ಲ ಯಾವ ಶಕ್ತಿಗಳಿಗೆ ಸಹಾಯ ಮಾಡುತ್ತಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಇಂಥ ಕಡೆ ನಿಜವಾದ ವ್ಯಕ್ತಿಗತ ಶುದ್ಧಿ, ಅಸಲಿ ಆತ್ಮಪರೀಕ್ಷೆಯ ಮಾತಾಡಿದರೆ ಶಿಬಿರಾರ್ಥಿಗಳೇ ಜಾಗ ಖಾಲಿ ಮಾಡುತ್ತಾರೇನೋ! ಆಧ್ಯಾತ್ಮಿಕ ಶಿಬಿರಗಳ ಅಮೂರ್ತ ‘ಆತ್ಮಶುದ್ದಿ’ಯ ಪ್ರವಚನಗಳು ಶಿಬಿರದ ಸಂಘಟಕರ ಹಾಗೂ ಶಿಬಿರಾರ್ಥಿಗಳ ನೀಚತನ, ಜಾತೀಯತೆಗಳನ್ನು, ಜನವಿರೋಧಿ ಧೋರಣೆಗಳನ್ನು ತಿದ್ದಿದ ಉದಾಹರಣೆಗಳಿಲ್ಲ. ಯಾವುದನ್ನಾದರೂ ಭ್ರಷ್ಟಗೊಳಿಸುವ ದೇಶದಲ್ಲಿ ಯೋಗದಂಥ ದೈಹಿಕ ವ್ಯಾಯಾಮ, ಚಿತ್ತದ ಪ್ರವೃತ್ತಿಯ ನಿರೋಧ ಎಲ್ಲವೂ ದಿಕ್ಕೆಟ್ಟಿದ್ದರೆ ಅಚ್ಚರಿಯಲ್ಲ.
ಮೊನ್ನೆ ಲೋಹಿಯಾ ಮಾತುಗಳನ್ನು ಕಳಿಸಿದ್ದ ಶ್ರೀಧರ್, ಗೆಳೆಯ ನಟರಾಜ್ ಬೂದಾಳು ಅನುವಾದಿಸಿದ ಸರಹಪಾದರ ಪದ್ಯವನ್ನೂ ಕಳಿಸಿದ್ದರು:
ದಣಿದ ಕುದುರೆಯ ಹಾಗೆ ಉಸಿರ ಎಳೆದು ಬಿಡುವೆಯಲ್ಲ!
ಸಹಜದಲ್ಲಿ ಸುಮ್ಮನಿರು ನಿಶ್ಚಲನಾಗಿ;
ಪವನವ ನಿರ್ಬಂಧಿಸಿ ನಿನ್ನ ಬಗ್ಗೆಯೇ ಧ್ಯಾನಿಸುವುದ ಬಿಡು
ಕಟ್ಟಾಜೋಗಿ, ಮೂಗಿನ ತುದಿಯ ನೋಡುತ್ತ ಕೂರಬೇಡ.
ಈ ಕಾಲದ ಧಿಡೀರ್ ಯೋಗಿಗಳಿಗೆ ಇದೊಂದು ಪದ್ಯದ ಕಿವಿಮಾತು ಸಾಕೆನ್ನಿಸುತ್ತದೆ; ‘ಇನ್ನು ಮುಂದೆ ಶಬ್ದವಿಲ್ಲ’ ಎಂದು ಅಲ್ಲಮಪ್ರಭುಗಳ ಅಪ್ಪಣೆಯಿದೆ!
ಕೊನೆಟಿಪ್ಪಣಿ: ಲೇಖಕರೊಬ್ಬರ ಯೋಗಾಯೋಗ!
ಚಿತ್ರ ನಟರೊಬ್ಬರು ಅತಿಯಾಗಿ ಯೋಗ ಮಾಡಿ ಫಳಫಳ ಹೊಳೆಯುವುದನ್ನು ಕಂಡ ಲೇಖಕರೊಬ್ಬರು ಕೇಳಿದರು:
‘ಸಾರ್! ದಿನಕ್ಕೆ ಎಷ್ಟು ಹೊತ್ತು ಯೋಗ ಮಾಡುತ್ತೀರಿ?’
‘ಒಂದು ಗಂಟೆ!’ ನಟರ ಉತ್ತರ.
‘ಹಾಗಾದರೆ ನಾನು ಎರಡು ಗಂಟೆ ಯೋಗ ಮಾಡಿದರೆ ಈ ನಟನಿಗಿಂತ ಚಿರಂಜೀವಿ ಆಗಬಹುದಲ್ಲ!’ ಎಂದು ಈ ಲೇಖಕರಿಗೆ ಅನ್ನಿಸಿತೋ ಏನೋ! ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ಅವರು ‘ಅತಿ ಯೋಗಿ’ಯಾದರು.
ಕೆಲವೇ ದಿನಗಳಲ್ಲಿ ನರಗಳ ಸೆಳೆತ ಶುರುವಾಗಿ ಡಾಕ್ಟರ್ ಬಳಿ ಹೋದರು. ಎಲ್ಲ ಪರೀಕ್ಷಿಸಿದ ಡಾಕ್ಟರು ‘ಇದು ಯೋಗದ ಅತಿ ಬಳಕೆಯ ಫಲ’ ಎಂದು ಬುದ್ಧಿ ಹೇಳಿ ಕಳಿಸಿದರು.
ಸದರಿ ಲೇಖಕರು ಯೋಗದ ಹೊಲಬಿನಲ್ಲಿ ಮುಂದುವರಿದಿರುವರೋ ಇಲ್ಲವೋ ಎಂಬ ಬಗ್ಗೆ ಯಾವುದೇ ವರದಿಯಿಲ್ಲ; ಕ್ಷಮೆಯಿರಲಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಯಾರಾದರೂ ಬಂಧನವಾದಾಗ, ಜೈಲು ಸೇರಿದಾಗ ಆರಾಮಾಗಿ ಹೇಳಿಕೆ ಕೊಡುವವರನ್ನು ಕಂಡರೆ ಇರಸುಮುರಸಾಗುತ್ತದೆ. ಅದರಲ್ಲೂ ಪಕ್ಕಾ ತನಿಖೆಗೆ ಒಳಪಡಿಸಿದರೆ ಸ್ವತಃ ತಾವೇ ಈ ಸ್ಥಿತಿ ತಲುಪಬಹುದಾದ ರಾಜಕಾರಣಿಗಳು ಯಾರಿಗಾದರೂ ‘ಉಗ್ರ ಶಿಕ್ಷೆ ವಿಧಿಸಿ’ ಎಂದರೆ ನಗು ಬರುತ್ತದೆ.
ಮೊನ್ನೆ ಇಬ್ಬರು ರಾಜಕೀಯ ನಾಯಕರು ನಟನೊಬ್ಬನ ಬಂಧನದ ಬಗ್ಗೆ ಹೇಳಿಕೆ ಕೊಟ್ಟರು. ಅವರ ಹೇಳಿಕೆಯ ವರದಿಯ ಪಕ್ಕದಲ್ಲೇ ಅವರ ಪಕ್ಷದ ನಾಯಕರಿಗೆ ಜಾಮೀನುರಹಿತ ಅರೆಸ್ಟ್ ವಾರಂಟ್ ಜಾರಿಯಾದ ಸುದ್ದಿಯಿತ್ತು; ಮಾರನೆಯ ದಿನ ಅವರ ಪಕ್ಷದ ಮತ್ತೊಬ್ಬ ನಾಯಕನ ಮಗ ಬಂಧನವಾಗಲಿರುವ ಸುದ್ದಿಯಿತ್ತು.
ಇಂಥ ನಿತ್ಯ ವಿರೋಧಾಭಾಸಗಳ ಈ ಕಾಲದಲ್ಲಿ ತೆರೆಯ ಮೇಲಿನ ಸೂಪರ್ ಹೀರೋ ಇಮೇಜುಗಳನ್ನು ತೆರೆಯಾಚೆಗೂ ಪ್ರಯೋಗಿಸುವವರ ಮನಸ್ಥಿತಿಯ ಬಗ್ಗೆ ಕೊಂಚ ವಸ್ತುನಿಷ್ಠವಾಗಿ ಯೋಚಿಸಬೇಕೆನ್ನಿಸುತ್ತದೆ. ‘ಅಪರಾಧ’ ಎನ್ನುವುದು ಯಾರು ಬೇಕಾದರೂ ಮಾಡುವ ಕ್ರಿಯೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡೇ ಇಂಥ ಘಟನೆಗಳನ್ನು ನೋಡುವುದು ಒಳ್ಳೆಯದು.
ಹೇಳಿ ಕೇಳಿ ಜನಪ್ರಿಯ ಸಿನಿಮಾ ಲೋಕ ಒಣ ಮೆಚ್ಚುಗೆಯನ್ನೇ ಹೆಚ್ಚು ಆಶ್ರಯಿಸಿದ ಲೋಕ. ಇಲ್ಲಿ ಸಂಗೀತ ನಿರ್ದೇಶಕನ ರಾಗ ಸಂಯೋಜನೆಗೆ ಆ ಕ್ಷಣದಲ್ಲೇ ಹಾಡು ಬರೆದ ಗೀತ ರಚನಕಾರ ಸುತ್ತಲಿನವರ ಮೆಚ್ಚುಗೆಗಾಗಿ ಕಾತರಿಸುವುದು ಸಹಜ. ಖ್ಯಾತ ನಟನೊಬ್ಬ ಒಂದು ಟೇಕ್ ಮುಗಿಸಿದ ಕೂಡಲೇ ‘ಸೂಪರ್ ಅಣ್ಣ!’ ಎನ್ನುವ ಜನ ಅವನ ಸುತ್ತಮುತ್ತ ಇರಬಲ್ಲರು. ಈ ವರಸೆ ಎಲ್ಲ ಕಡೆ ಕಾಣಬಲ್ಲದು.
ಒಣಮೆಚ್ಚುಗೆಯನ್ನು ಹೆಚ್ಚು ಆಶ್ರಯಿಸಿದ ಜನಪ್ರಿಯ ಸಿನಿಮಾ, ಸಂಗೀತ, ನೃತ್ಯದಂಥ ಕ್ಷೇತ್ರಗಳಲ್ಲಂತೂ ಅನೇಕ ಕಲಾವಿದರು ಬೆಳೆಯದೆ ಮರಗಟ್ಟುವುದು ಸಹಜ. ಅದರಲ್ಲೂ ಯಾವ ವಿಮರ್ಶೆಯೂ ಒಗ್ಗದ, ಯಾವ ವಿಮರ್ಶೆಗೂ ಬಗ್ಗದ, ನಟರ ಮನಸ್ಸು ಇನ್ನಷ್ಟು ಜಟಿಲವಾಗಿರಬಲ್ಲದು. ಈಚಿನ ವರ್ಷಗಳಲ್ಲಂತೂ ನಾಯಕನಟರನ್ನು ’ಹೈಪರ್ ಮ್ಯಾಸ್ಕುಲೈನ್’ ಹೀರೋಗಳನ್ನಾಗಿಸುವ ಸಿನಿಮಾಗಳನ್ನು ನೀವು ನೋಡಿರಬಹುದು. ಈ ನಾನ್ಸೆನ್ಸ್‌ಗಳನ್ನೆಲ್ಲ ಆಟದಂತೆ ಕಂಡು ನಟಿಸುವ ನಟನೊಬ್ಬ ಅತಿಮಾನವ ಭ್ರಮೆಯಿಂದ ಬಚಾವಾಗುತ್ತಾನೆ; ’ಈ ಅತಿಮಾನವ ನಾನೇ’ ಎಂದು ಭ್ರಮಿಸುವ ನಟ ಮುಗ್ಗರಿಸುತ್ತಾನೆ.
ಅಮೆರಿಕದ ಶ್ರೇಷ್ಠ ಕಾದಂಬರಿಕಾರ ಹೆನ್ರಿ ಜೇಮ್ಸ್ ಕಾದಂಬರಿ ಬರವಣಿಗೆ ಕುರಿತು ಮಾತಾಡುತ್ತಾ ‘ಥಿಯರಿ ಆಫ್ ಇಲ್ಯುಮಿನೇಶನ್’ ಎಂಬ ಐಡಿಯಾವನ್ನು ಚರ್ಚಿಸುತ್ತಾನೆ. ನಾನು ಇದನ್ನು ‘ಪಾತ್ರ ಪ್ರಕಾಶ ತತ್ವ’ ಎಂದು ಅನುವಾದಿಸಿಕೊಂಡಿದ್ದೇನೆ. ಈ ತತ್ವದ ಸಾರಾಂಶ:
ಒಂದು ವೃತ್ತದ ಕೇಂದ್ರದಲ್ಲಿ ಮುಖ್ಯ ಪಾತ್ರ ನಿಂತಿದೆ. ಉಳಿದ ಪಾತ್ರಗಳು ಮುಖ್ಯ ಪಾತ್ರವನ್ನು ಸುತ್ತುವರಿದು ನಿಂತಿವೆ. ಮುಖ್ಯ ಪಾತ್ರ ತನ್ನ ಸುತ್ತ ನಿಂತಿರುವ ಪಾತ್ರಗಳೊಂದಿಗೆ ಹಲ ಬಗೆಯಲ್ಲಿ ವ್ಯವಹರಿಸುತ್ತದೆ. ಹಲವು ದೀಪಗಳು ಒಂದು ಕತ್ತಲ ಕೋಣೆಯ ವಿವಿಧ ಭಾಗಗಳನ್ನು ಬೆಳಗುವಂತೆ ಈ ಪಾತ್ರಗಳ ಜೊತೆಗಿನ ಪ್ರತಿಯೊಂದು ಒಡನಾಟವೂ ಮುಖ್ಯಪಾತ್ರದ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತದೆ.
ಇತರ ಪಾತ್ರಗಳ ಮೂಲಕ ಕೇಂದ್ರ ಪಾತ್ರದಲ್ಲಿ ನಾವು ಕಾಣದ ಮುಖಗಳು ಬೆಳಕಿಗೆ ಬರುತ್ತವೆ ಎಂದು ಹೆನ್ರಿ ಜೇಮ್ಸ್ ಸೂಚಿಸುತ್ತಿದ್ದಾನೆ. ಈ ಐಡಿಯಾವನ್ನು ಟೀಚಿಂಗ್, ವಿಮರ್ಶೆ, ರಿಸರ್ಚ್ ಎಲ್ಲ ಕಡೆ ಬಳಸಿಕೊಳ್ಳಬಹುದು.
ಕಾದಂಬರಿಯ ಪ್ರೇರಣೆಯಿಂದಲೇ ವಿಕಾಸಗೊಂಡ ಹಾಲಿವುಡ್ ಸಿನಿಮಾ ಹೆನ್ರಿ ಜೇಮ್ಸ್ ಐಡಿಯಾವನ್ನು ಸೃಜನಶೀಲವಾಗಿ ಬಳಸಬಹುದಾದ ರೀತಿಯನ್ನು ಹಾಲಿವುಡ್ ಜನಪ್ರಿಯ ಸ್ಕ್ರೀನ್‌ಪ್ಲೇ ಗುರು ಸಿಡ್ ಫೀಲ್ಡ್ ಚರ್ಚಿಸುತ್ತಾನೆ. ಆದರೆ ಹಾಲಿವುಡ್‌ನಿಂದ ಹಿಡಿದು ಇಂಡಿಯನ್ ಸಿನಿಮಾದವರೆಗೂ ಜೇಮ್ಸ್ ಐಡಿಯಾವನ್ನು ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಚಿತ್ರಕಥಾಕಾರರು ಅಗ್ಗವಾಗಿ ಬಳಸಿಕೊಂಡಂತಿದೆ.
ಇದೇ ಥರ ಜೋಸೆಫ್ ಕ್ಯಾಂಪ್‌ಬೆಲ್‌ನ ‘ದ ಹೀರೋ ವಿತ್ ಎ ಥೌಸಂಡ್ ಫೇಸಸ್’ ಎಂಬ ಗಂಭೀರ ಸಂಶೋಧನಾ ಪುಸ್ತಕದ ಐಡಿಯಾಗಳನ್ನೂ ಹಾಲಿವುಡ್ ಸಿನಿಮಾ ಬಳಸಿಕೊಂಡಿದೆ. ಮನೋವಿಜ್ಞಾನಿ ಕಾರ್ಲ್ ಯೂಂಗ್‌ನ ನೋಟಗಳನ್ನು ಆಧರಿಸಿದ ಈ ಪುಸ್ತಕ ಪುರಾಣ, ಮಹಾಕಾವ್ಯಗಳ ಹೀರೋಗಳ ಮಹಾಪಯಣವನ್ನು ಶೋಧಿಸುತ್ತದೆ; ’ಸ್ಟಾರ್ ವಾರ್‍ಸ್’ನಂಥ ಜನಪ್ರಿಯ ಸಿನಿಮಾಗಳನ್ನೂ ಈ ಪುಸ್ತಕ ಪ್ರಭಾವಿಸಿದೆ.
ಸಿ.ಎಂ. ಬೌರಾ ಬರೆದ ’ಹೀರೋಯಿಕ್ ಪೊಯೆಟ್ರಿ’ ಪಶ್ಚಿಮದ ಮಹಾಕಾವ್ಯಗಳ ಹೀರೋಗಳ ವೈವಿಧ್ಯಮಯ ಲಕ್ಷಣಗಳನ್ನು ಶೋಧಿಸುತ್ತದೆ. ಈ ಥರದ ಗಂಭೀರ ಪುಸ್ತಕಗಳಲ್ಲಿರುವ ಹೀರೋಗಳ ಮೂಲಮಾದರಿಗಳ ಐಡಿಯಾಗಳನ್ನು ಹಾಲಿವುಡ್ ಮಂದಿ ತಮ್ಮ ತಲೆಮಟ್ಟಕ್ಕೆ ತಕ್ಕಂತೆ ತೆಳುಗೊಳಿಸಿದ್ದಾರೆ; ಹುಲುಮಾನವ ಹೀರೋಗಳನ್ನು ಅತಿಮಾನವರನ್ನಾಗಿ ಮಾಡಿದ್ದಾರೆ.
ಈ ಹೀರೋಗಳು ಬೈಕಿನಲ್ಲೇ ಆಫ್ಘಾನಿಸ್ಥಾನಕ್ಕೆ ಹಾರಿ, ಅಲ್ಲಿ ಸೆರೆಯಾಗಿದ್ದ ಭಾರತೀಯ ಗೂಢಚಾರನನ್ನು ‘ಎತ್ತಾಕಿಕೊಂಡು’ ಬರುತ್ತಾರೆ! ಲೋಕಲ್ ಹೀರೋಗಳು ಕೇಡಿಗಳು ಬೆನ್ನಟ್ಟಿ ಬಂದರೆ ಅವರನ್ನು ಎತ್ತಿ ಟೊಮ್ಯಾಟೋ ಗಾಡಿ, ತರಕಾರಿ ಗಾಡಿಗಳ ಮೇಲೆ ಎತ್ತಿ ಎಸೆಯುತ್ತಾರೆ. ಕೆಳಗೆ ಚೆಲ್ಲಾಡಿದ ಬಣ್ಣಬಣ್ಣದ ತರಕಾರಿಗಳು ಕ್ಯಾಮರಾಮನ್‌ಗೆ ಕಲರ್‌ಫುಲ್ ಆಗಿ ಕಾಣುತ್ತವೆ. ಹಾದಿಯಲ್ಲಿ ಚೆಲ್ಲಾಡುತ್ತಿರುವ ತರಕಾರಿಯನ್ನು ಅಸಹಾಯಕತೆಯಿಂದ ನೋಡುತ್ತಿರುವ ಹಸಿದ ಬಡವರಿಗೆ ಏನೆನ್ನಿಸಬಹುದು ಎಂಬ ಪ್ರಜ್ಞೆ ಕೂಡ ಈ ಜಡರಿಗೆ ಇರುವಂತಿಲ್ಲ.
ಹೀರೋ ಕೇಡಿಗಳನ್ನು ಎಸೆದ ರಭಸಕ್ಕೆ ಕೋಳಿಗಳು ಕಿಟಾರನೆ ಒರಲುತ್ತಾ ಹಾರಲೆತ್ನಿಸುತ್ತವೆ. ಬೈಕು ಆಗಸಕ್ಕೆ ಹಾರಿ ನೆಲಕ್ಕೆ ಅಪ್ಪಳಿಸುತ್ತದೆ. ಇಂಥ ಶೂಟಿಂಗ್‌ಗಳಲ್ಲಿ ಸ್ಟಂಟ್ ಕಲಾವಿದರು ಗಾಯಗೊಂಡ, ತೀರಿಕೊಂಡ ಉದಾಹರಣೆಗಳಿವೆ; ಹೀರೋಗಳು ಕೂಡ ಪ್ರಾಣಾಪಾಯದಿಂದ ಪಾರಾಗಿ ಸಿನಿಮಾದ ಹೀರೋ ಥರವೇ ಬದುಕುಳಿದ ಪ್ರಸಂಗಗಳಿವೆ.
ಇಂಥ ವಾತಾವರಣದಲ್ಲಿ ಕೆಲಸ ಮಾಡುವ ಹೀರೋ ತೆರೆಯ ಮೇಲಿನ ತನ್ನ ‘ಲಾರ್ಜರ್ ದ್ಯಾನ್ ಲೈಫ್’ ಇಮೇಜಿಗೆ ತಾನೇ ಮನಸೋತರೆ ದುರಂತ ಖಾತ್ರಿ! ತೆರೆಯ ಇಮೇಜಿಗೆ ಕಟ್ಟುಬಿದ್ದ ಹೀರೋಗೆ ತನ್ನ ಸಿನಿಮಾವನ್ನೋ, ತನ್ನ ನಟನೆಯನ್ನೋ ಹೊಗಳದವರಿಗೆ ಯಾಕೆ ನಾಲ್ಕು ಬಾರಿಸಬಾರದು ಎನ್ನಿಸತೊಡಗುತ್ತದೆ! ಹೀರೋ ಒಳಗಿನ ‘ನಾನು’ ಅಥವಾ ‘ಇಗೋ’ ಭಯಾನಕವಾಗಿ ಬೆಳೆಯತೊಡಗುತ್ತದೆ. ನನಗೆ ಬೇಕಾದ ರಾಜಕಾರಣಿಯ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಬಲ್ಲೆ ಎಂಬ ಅಹಂಕಾರ ಮೊಳೆಯುತ್ತದೆ. ಹೀರೋ ಒಂಚೂರು ಆಯ ತಪ್ಪಿದರೆ ಖೆಡ್ಡಾಗೆ ಕೆಡವಲು ಎದುರಾಳಿ ರಾಜಕಾರಣಿಗಳು ಕಾಯತೊಡಗುತ್ತಾರೆ.
ಇಂಥ ವಲಯಗಳಲ್ಲಿ ಗೆಲುವಿನ ಸಂಭ್ರಮವೂ ಅತಿ ಕುಡಿತದಲ್ಲಿ ಪರ್ಯವಸಾನವಾಗುತ್ತದೆ; ಸೋಲೂ ಅತಿ ಹತಾಶೆಯ ಕುಡಿತದಲ್ಲಿ ಕೊನೆಗೊಳ್ಳುತ್ತದೆ! ಮದ್ಯಪಾನ ಎಂದರೇನು, ತಾವು ಯಾಕೆ ಕುಡಿಯುತ್ತಿದ್ದೇವೆ... ಈ ಎಲ್ಲದರ ನೆದರೇ ಇರದ ಭ್ರಮೆಯ, ಆತ್ಮನಾಶದ ಭೀಕರ ವಾತಾವರಣ ಸೃಷ್ಟಿಯಾಗುತ್ತದೆ.
ಇನ್ನೊಂದು ವಿಚಿತ್ರ ನೋಡಿ: ನಮ್ಮ ಅನೇಕ ನಾಯಕ ನಟರು ತೆರೆಯ ಮೇಲೆ ಸಂವಿಧಾನ, ಕಾಯ್ದೆ, ಕಾನೂನುಗಳನ್ನು ಉಲ್ಲಂಘಿಸುವ ದುಷ್ಟರನ್ನು ಸದೆ ಬಡಿಯುತ್ತಲೇ ಇರುತ್ತಾರೆ. ಆದರೆ ಈ ಮಹನೀಯರಿಗೆ ನಮ್ಮ ಸಂವಿಧಾನ ಪ್ರತಿ ಪ್ರಜೆಯ ವರ್ತನೆ, ಹಕ್ಕು, ಕರ್ತವ್ಯಗಳ ಬಗ್ಗೆ ಏನು ಹೇಳುತ್ತದೆ ಎಂಬುದರ ಕನಿಷ್ಠ ಅರಿವು ಕೂಡ ಇದ್ದಂತಿಲ್ಲ; ತನ್ನನ್ನು ಯಾರಾದರೂ ಟೀಕಿಸಿದರೆ ಅದಕ್ಕೆ ತಕ್ಕ ಪ್ರತಿಟೀಕೆ, ವಾಗ್ವಾದ, ಕಾನೂನಿನ ಕ್ರಮ… ಇವೆಲ್ಲ ಇರುತ್ತವೆ ಎಂಬ ಸರಳ ಜ್ಞಾನ ಕೂಡ ಇದ್ದಂತಿಲ್ಲ!
ಇಂಥ ಅಜ್ಞಾನದಿಂದಾಗಿ ಅರಣ್ಯನ್ಯಾಯಕ್ಕಿಳಿಯುವ ನಟ, ನಟಿಯರ ಅಷ್ಟಿಷ್ಟೂ ಕಲೆಯೂ ನಾಶವಾಗುತ್ತದೆ; ವೈಯಕ್ತಿಕ ದ್ವೇಷ, ಸೇಡು ವಿಜೃಂಭಿಸತೊಡಗುತ್ತದೆ.
ಇದೆಲ್ಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಆಗುತ್ತದೆ ಎಂದುಕೊಂಡು ಇತರ ಸಾಂಸ್ಕೃತಿಕ ಕ್ಷೇತ್ರಗಳ ಜನ ತಾವು ಶ್ರೇಷ್ಠರೆಂದು ಬೀಗಬೇಕಾಗಿಲ್ಲ! ತನ್ನ ನಾಟಕವನ್ನು ಗೆಲ್ಲಿಸಲು ಮತ್ತೊಂದು ರಂಗತಂಡಕ್ಕೆ ಥಿಯೇಟರ್ ಸಿಗದಂತೆ ಪಿತೂರಿ ಮಾಡುವ ನಾಟಕಕಾರನೂ, ನಿರ್ದೇಶಕನೂ ಇಂಥದೇ ಕೊಲೆಗಡುಕ ಕೆಲಸದಲ್ಲಿ ಭಾಗಿಯಾಗಿರುತ್ತಾನೆ! ತನ್ನ ಕಳಪೆ ಕೃತಿಯನ್ನು ಮೆಚ್ಚಲಿಲ್ಲ ಎಂಬ ಕಾರಣಕ್ಕಾಗಿ ಮತ್ತೊಬ್ಬ ಒಳ್ಳೆಯ ಲೇಖಕನೊಬ್ಬನ ಮೇಲೆ ದ್ವೇಷ ಸಾಧಿಸಿ, ಯಾವುದೋ ಪ್ರಶಸ್ತಿ ತಪ್ಪಿಸುವ ಕವಿ; ಅಪಪ್ರಚಾರ ನಿರತರಾದ ಪತ್ರಕರ್ತ, ಪ್ರಾಧ್ಯಾಪಕಿ...ಹೀಗೆ ಅರಣ್ಯನ್ಯಾಯದ ಮೃಗಗಳು ಎಲ್ಲ ವಲಯದಲ್ಲೂ ಬೆಳೆಯುತ್ತಿರುತ್ತವೆ!
ಒಟ್ಟು ಸಮಾಜವೇ ಹೀಗಿರುವಾಗ, ನಟನೊಬ್ಬನ ಅಪರಾಧ ಕುರಿತು ಅತಿ ನೈತಿಕತೆಯಿಂದ ಕೂಗುವವರಿಗೆ ನೆನಪಿರಲಿ: ಭಿನ್ನಮತ ವ್ಯಕ್ತಪಡಿಸುವವರನ್ನು ಕೊಚ್ಚಿ ಹಾಕುವ ರೋಗ ಎಲ್ಲೆಡೆ ಹಬ್ಬಿದೆ. ರಾಜಕೀಯ, ಸಾಹಿತ್ಯ, ಸಂಸ್ಕೃತಿಗಳ ರಂಗದಲ್ಲಿ ಈ ರೋಗ ಸಿನಿಮಾಕ್ಕಿಂತೆ ಹೆಚ್ಚಿದೆಯೆಂಬುದು ಗೊತ್ತಿರಲಿ!
ಕೊನೆ ಟಿಪ್ಪಣಿ: ಪಾತ್ರ ಬದಲಾವಣೆಯ ಕಾತರ!
ಮೇಲಿನ ಟಿಪ್ಪಣಿ ಬರೆಯುವಾಗ, ಸಿನಿಮಾಗಳ ಕೆಲವು ಖಳನಾಯಕರು ಬರಬರುತ್ತಾ ನಾಯಕಪಾತ್ರಗಳಲ್ಲಿ ಅಥವಾ ಹಾಸ್ಯ ಪಾತ್ರಗಳಲ್ಲಿ ನಟಿಸಲು ಕಾತರಿಸುವುದು ನೆನಪಾಯಿತು! ಹಿಂದೊಮ್ಮೆ ಖಳನಾಯಕನ ಪಾತ್ರ ಮಾಡಿ ಸ್ಟೀರಿಯೋ ಟೈಪ್ಡ್ ನಟನಾಗಿದ್ದ ಕನ್ನಡ ನಟ ದಿನೇಶ್ ಮುಂದೆ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಾ ತಮ್ಮ ಕಲೆಯ ಹೊಸ ಶಕ್ತಿಯನ್ನು ಕಂಡುಕೊಂಡರು. ಖಳನಾಯಕ ಟೈಗರ್ ಪ್ರಭಾಕರ್ ತಮ್ಮದೇ ಶೈಲಿಯಲ್ಲಿ ಹೀರೋ ಆಗಿ ಕ್ಲಿಕ್ಕಾದರು.
ಎಲ್ಲೋ ಓದಿದ್ದು: ‘ಶೋಲೆ’ಯ ಗಬ್ಬರ್‌ಸಿಂಗ್ ಪಾತ್ರದಿಂದ ಖ್ಯಾತರಾಗಿದ್ದ ಅಮ್ಜದ್‌ಖಾನ್ ಒಮ್ಮೆ ಅಮಿತಾಭ್ ಬಚ್ಚನ್ ಮನೆಗೆ ಹೋದರು. ಆಗ ಅಮಿತಾಭ್ ಮಗ ಅಭಿಷೇಕ್ ಬಚ್ಚನ್ ಇನ್ನೂ ಬಚ್ಚಾ! ಅಮ್ಜದ್‌ಖಾನ್ ಬಂದ ತಕ್ಷಣ ಅಭಿಷೇಕ್, ‘ಗಬ್ಬರ್ ಸಿಂಗ್ ಆ ಗಯಾ!’ ಎಂದು ಹೆದರಿ ಅಪ್ಪನ ಹಿಂದೆ ಅವಿತುಕೊಂಡ. ಆಗ ಅಮಿತಾಭ್, ‘ಗಬ್ಬರ್ ಸಿಂಗ್ ಒಂದು ಪಾತ್ರ ಅಷ್ಟೆ’ ಎಂದು ಮಗನನ್ನು ಸಮಾಧಾನ ಮಾಡಿದರು.
ಅಕಸ್ಮಾತ್ ಆ ಗಳಿಗೆಯಲ್ಲಿ ಅಮ್ಜಾದ್‌ಖಾನ್‌ಗೆ ‘ಒಳ್ಳೆಯ’ ಪಾತ್ರ ಮಾಡಿ ಮಕ್ಕಳಿಗೆ ಪ್ರಿಯವಾಗುವ ಆಸೆ ಹುಟ್ಟಿದ್ದರೆ ಅಚ್ಚರಿಯಲ್ಲ! ಅಮ್ಜದ್‌ಖಾನ್ ಮುಂದೆ ಮೈಲ್ಡ್ ಪಾತ್ರಗಳನ್ನು ಮಾಡಿ ಖುಷಿಯಾದಂತಿದೆ.
ಇದಕ್ಕೆ ಪೂರಕವಾಗಿ ‘ಕಟ್ಟೇಪುರಾಣ’ದ ಬಿ. ಚಂದ್ರೇಗೌಡರು ಎರಡು ಸಿನಿಮಾ ಪಾತ್ರಗಳ ಘಟನೆಗಳನ್ನು ನೆನಪಿಸಿದರು:
ಘಟನೆ ೧: ‘ಸಿಪಾಯಿ ರಾಮು’ ಸಿನಿಮಾದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿ ನಡೆಯುತ್ತಿತ್ತು. ಕಾಲೇಜು ಹುಡುಗಿಯರು ರಾಜ್‌ಕುಮಾರ್ ಅವರನ್ನು ಮುತ್ತಿಕೊಂಡು ಮಾತಾಡಿಸುತ್ತಿದ್ದರು. ಆದರೆ ‘ಪ್ರಚಂಡ ರಾವಣ’ ನಾಟಕದ ಮೂಲಕ ಅದ್ಭುತ ರಂಗಭೂಮಿ ನಟರೆಂದು ಪ್ರಖ್ಯಾತರಾಗಿ, ಸಿನಿಮಾರಂಗಕ್ಕೆ ಬಂದಿದ್ದ ವಜ್ರಮುನಿಯವರನ್ನು ಒಬ್ಬ ಹುಡುಗಿಯೂ ಮಾತಾಡಿಸಲಿಲ್ಲ. ವಜ್ರಮುನಿ ಖಿನ್ನರಾದರು.
ಘಟನೆ ೨: ಖಿನ್ನತೆಯ ಮತ್ತೊಂದು ಬಗೆಯ ಕತೆ: ಹಿಂದಿ ಸಿನಿಮಾ ನಟ ದಿಲೀಪ್ ಕುಮಾರ್ ಭಗ್ನಪ್ರೇಮಿ ‘ದೇವದಾಸ್’ ಮುಂತಾದ ದುಃಖಿ ಪಾತ್ರಗಳನ್ನೇ ಮಾಡಿ ಖಿನ್ನತೆಗೊಳಗಾದರು. ಕೊನೆಗೆ ಮನೋವೈದ್ಯರನ್ನೂ ಭೇಟಿಯಾದರು. ‘ಈಗ ನೀವು ಮಾಡುತ್ತಿರುವ ಖಿನ್ನತೆಯ ಪಾತ್ರಗಳನ್ನು ಬಿಟ್ಟು ಲವಲವಿಕೆಯ ಪಾತ್ರಗಳನ್ನು ಮಾಡಿ ನೋಡಿ’ ಎಂದರು ವೈದ್ಯರು.
ದಿಲೀಪ್‌ಕುಮಾರ್ ಖಿನ್ನತೆಯ ಪಾತ್ರಗಳನ್ನು ಬಿಟ್ಟು, ವಿಭಿನ್ನ ಪಾತ್ರಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಮರಳಿ ಪಡೆದುಕೊಂಡರು!
ಸದಾ ಹೀರೋ ಪಾತ್ರ ಮಾಡಿ ಖ್ಯಾತರಾದವರು ತಮ್ಮ ಹೀರೋ ಇಮೇಜ್ ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ! ಅದು ಅವರ ವೃತ್ತಿ ಬದುಕಿನ ಪ್ರಶ್ನೆ ಕೂಡ. ಸೋಲುವುದು ಮನುಷ್ಯನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆಯೇ ಅದು ಒಮ್ಮೊಮ್ಮೆ ಒಳಿತನ್ನೂ ಮಾಡಬಹುದು; ಆಗಾಗ್ಗೆಯಾದರೂ ’ನಾಯಕ’ ಪಾತ್ರ ಬಿಟ್ಟು ‘ಮನುಷ್ಯ’ ಪಾತ್ರಗಳನ್ನು ಮಾಡುವುದು ನಟರ ಒಳಬದುಕಿಗೂ ಒಳ್ಳೆಯದೇನೋ!
ಖಳನಾಯಕನ ಪಾತ್ರ ಮಾಡಿ ಬೋರಾಗಿ ಕ್ಯಾರಕ್ಟರ್ ಪಾತ್ರಗಳನ್ನು, ಹಾಸ್ಯ ಪಾತ್ರಗಳನ್ನು ಮಾಡಿ ಗೆದ್ದ ದಿನೇಶ್ ಥರದವರ ಕತೆಯನ್ನು ಮೇಲೆ ಹೇಳಿರುವೆ. ಇದೇ ಮಾದರಿಯನ್ನು ಅನುಸರಿಸಿ, ಅತಿಮಾನವ ಪಾತ್ರಗಳನ್ನು ಮಾಡಿ ಬೋರಾದ ನಾಯಕನಟರು ಖಳಪಾತ್ರಗಳನ್ನೋ, ಹಾಸ್ಯಪಾತ್ರಗಳನ್ನೋ ಮಾಡುವುದು ಆರೋಗ್ಯಕರವಾಗಿರಬಲ್ಲದು. ಕೆಲವೊಮ್ಮೆ ಹಾಸ್ಯಾಸ್ಪದವಾಗುವುದು, ಸೋಲುವುದು ಕೂಡ ಮನುಷ್ಯರ ‘ಇಗೋ’ದ ಸಮಸ್ಯೆಗಳಿಗೆ ಮದ್ದರೆಯಬಲ್ಲದು.
ನಟನೆ ಹಾಗೂ ಕಲೆ ನಟ, ನಟಿಯರಿಗೆ ಥೆರಪಿ ಅಥವಾ ಚಿಕಿತ್ಸೆಯಾಗಬಲ್ಲದು ಎಂಬ ಸ್ಪಷ್ಟ ನಂಬಿಕೆ ಕಲಾವಿದರಿಗೆ ಇದ್ದರೆ ಮಾತ್ರ ಇದೆಲ್ಲ ಸಾಧ್ಯವಾಗಬಹುದು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ನಾವು ನಿತ್ಯ ನೋಡುವ ಕ್ಷಿಪ್ರ ಪ್ರತಿಕ್ರಿಯೆಗಳಲ್ಲಿ ವ್ಯಾಪಕ ರಾಜಕೀಯ ಸಂದೇಶಗಳೂ ಅಡಗಿರಬಲ್ಲವು! ಪೋಸ್ಟ್ ಮಾಡರ್ನ್ ಚಿಂತನೆಯ ಒಂದು ವಲಯ ಅಂತಿಮವಾಗಿ ಎಲ್ಲವೂ ’ಪೊಲಿಟಿಕಲ್’ ಎನ್ನುತ್ತದೆ; ಈ ಹಿನ್ನೆಲೆಯಲ್ಲಿ, ಕೆಳಗೆ ಕೊಟ್ಟಿರುವ ಎರಡು ತಕ್ಷಣದ ಪ್ರತಿಕ್ರಿಯೆಗಳು ದೊಡ್ಡ ಪೊಲಿಟಿಕಲ್ ಪ್ರತಿಕ್ರಿಯೆಗಳಾದ ರೀತಿ ಗಮನಿಸಿ:
ಮೊದಲನೆಯದು, ಲೋಕಸಭಾ ಚುನಾವಣೆಯ ನಂತರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಕಾಲದ ಪ್ರತಿಕ್ರಿಯೆ: ನೈರುತ್ಯ ವಿಧಾನ ಪರಿಷತ್ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ಉಡುಪಿಯ ಮಾಜಿ ಶಾಸಕ ರಘುಪತಿಭಟ್ ಬಿಜೆಪಿಯಿಂದ ಉಚ್ಚಾಟಿತರಾಗಿದ್ದರು. ಆಗ ಉಡುಪಿಯ ಆಲಿಯಾ ಅಸಾದಿ ಎಂಬ ಹುಡುಗಿ ಭಟ್ಟರಿಗೆ ಕೊಟ್ಟ ಮೈಲ್ಡ್ ಶಾಟ್:
‘ನಾನು ಹಿಜಾಬ್ ಧರಿಸಿದ ಒಂದೇ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದೂಡಲಾಯಿತು. ಆಗ ಅದು ನಿಮ್ಮ ಪಕ್ಷದ ಸಾಧನೆಯೆಂದು ನೀವು ತೋರಿಸಿದಿರಿ. ಆಗ ನಾನು ಉಚ್ಚಾಟಿತ ವಿದ್ಯಾರ್ಥಿನಿಯಾಗಿದ್ದೆ; ಅವತ್ತು ನಿಮಗೆ ಪಕ್ಷದಲ್ಲಿ ಸ್ಥಾನವಿತ್ತು. ಇವತ್ತು ನಾನು ಲಾ ವಿದ್ಯಾರ್ಥಿನಿ; ನಿಮ್ಮನ್ನು ಪಕ್ಷದಿಂದ ಹೊರ ಹಾಕಲಾಗಿದೆ.’
ಇದು ಆಲಿಯಾ ‘ಎಕ್ಸ್’ ವೇದಿಕೆಯಲ್ಲಿ ಬರೆದ ಇಂಗ್ಲಿಷ್ ಪೋಸ್ಟ್ ಸಾರಾಂಶ.
ಎರಡನೆಯದು, ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ನೀವು ಗಮನಿಸಿರಬಹುದಾದ ಘಟನೆ:
ಮೊನ್ನೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಗೆದ್ದ ಕಂಗನಾ ರಣಾವತ್ ಎಂಬ ತಲೆ ತಿರುಕ ನಟಿ ಚಂಡೀಗಢದ ಏರ್‌ಪೋರ್ಟಿಗೆ ಬಂದಿಳಿದಾಗ ಆಕೆಯ ಹ್ಯಾಂಡ್‌ಬ್ಯಾಗ್ ಚೆಕಪ್ ನಡೆದಿತ್ತು. ’ನಾನು ಸಂಸದೆ; ನನ್ನ ಫೋನ್ ಚೆಕ್ ಮಾಡುವಂತಿಲ್ಲ’ ಎಂದು ಜೋರು ಮಾಡಿದ ನಟಿಯ ಕೆನ್ನೆಗೆ ಒಂದೇಟು ಬಿತ್ತು. ಈ ಕೆನ್ನೆಯೇಟು ಕೊಟ್ಟವರು ಕುಲ್ವಿಂದರ್ ಕೌರ್ ಎಂಬ ಮಹಿಳಾ ಕಾನ್‌ಸ್ಟೇಬಲ್.
ಇಂಡಸ್ಟ್ರಿಯಲ್ ಸೆಂಟ್ರಲ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಕೆಲಸ ಮಾಡುವ ಈ ಮಹಿಳಾ ಕಾನ್‌ಸ್ಟೇಬಲ್ ತನ್ನ ಸಿಟ್ಟಿನ ಪ್ರತಿಕ್ರಿಯೆಯ ಒಳಕಾರಣವನ್ನೂ ಹೇಳಿದರು:
‘೨೦೨೦ರಲ್ಲಿ ಟಿಕ್ರಿ ಗಡಿಯಲ್ಲಿ ನಡೆದ ರೈತ ಹೋರಾಟದಲ್ಲಿ ಮಹಿಳೆಯರೂ ಭಾಗಿಯಾಗಿದ್ದರು. ಈ ಹೆಂಗಸರು ನೂರು ನೂರು ರೂಪಾಯಿ ಇಸ್ಕೊಂಡು ಅಲ್ಲಿ ಹೋರಾಟ ಮಾಡ್ತಿದಾರೆ ಎಂದಿದ್ದಳು ಈ ಕಂಗನಾ. ನಮ್ಮ ತಾಯಿಯೂ ಆ ಪ್ರತಿಭಟನೆಯಲ್ಲಿ ಕೂತಿದ್ದರು. ಕಂಗನಾ ಮಾತಿನಿಂದ ನನಗೆ ಸಿಟ್ಟು ಬಂದಿತ್ತು. ಈ ಕಂಗನಾ ಅಲ್ಲಿ ಹೋಗಿ ಕೂರ‍್ತಾಳೇನು?’
ಇಸವಿ ೨೦೨೦. ನಿಮಗೆ ನೆನಪಿರಬಹುದು: ಕೇಂದ್ರ ಸರ್ಕಾರದ ರೈತವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿ ದೇಶದ ರೈತರು, ಅದರಲ್ಲೂ ಮುಖ್ಯವಾಗಿ ಪಂಜಾಬ್, ಉತ್ತರ ಪ್ರದೇಶ, ಹರ್ಯಾಣಗಳ ರೈತರು ಹೋರಾಟ ನಡೆಸಿದ್ದರು. ದೆಹಲಿ-ಹರ್ಯಾಣಗಳ ನಡುವಣ ಟಿಕ್ರಿ ಗಡಿಯಲ್ಲಿ ಒಂದು ವರ್ಷ ಕಾಲ ಬೀಡುಬಿಟ್ಟರು. ಅಲ್ಲೇ ಊಟ, ಮಾತುಕತೆ, ಚರ್ಚೆ, ಚಿಂತನೆ ಎಲ್ಲವೂ ನಡೆದಿತ್ತು.
ಕರ್ನಾಟಕದಿಂದ ತಿಪಟೂರು ಕಡೆಯ ದೇವರಾಜ್, ಶ್ರೀಕಾಂತ್ ಕೆಳಹಟ್ಟಿ; ಲೇಖಕ ದಿಲಾವರ್ ರಾಮದುರ್ಗ; ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ದೇಶದ ನಾನಾ ಕಡೆಗಳಿಂದ ರೈತ ಪರ ತರುಣ, ತರುಣಿಯರು ಅಲ್ಲಿಗೆ ಬಂದು ಹೋಗುತ್ತಲೇ ಇದ್ದರು. ಈಗ ಅಮಾನತ್ತಿಗೊಳಗಾಗಿರುವ ಕೌರ್ ಅವರ ಅಣ್ಣ ರೈತ ಚಳುವಳಿಯಲ್ಲಿದ್ದಾರೆ.
‘ಕಂಗನಾ ರೈತರನ್ನು ಅವಮಾನಿಸಿದ್ದರಿಂದ ನಾನು ಹೀಗೆ ಮಾಡಿದೆ’ ಎಂದಿದ್ದಾರೆ ಕೌರ್. ‘ತಾಯಿಯ ಪರವಾಗಿ ಇಂಥ ನೂರು ಬಂಧನಗಳನ್ನು ಎದುರಿಸಲು ನಾನು ಸಿದ್ಧ’ ಎಂದು ಕೂಡ ಹೇಳಿದ್ದಾರೆ. ದೇಶದ ರೈತ ಚಳುವಳಿ ಅವರನ್ನು ಬೆಂಬಲಿಸಿದೆ. ರೈತ ನಾಯಕ ರಾಕೇಶ್ ಟಿಕಾಯತ್, ’ಅಲ್ಲಿ ತಳ್ಳಾಟವಾಗಿದೆಯೇ ಹೊರತು, ಕೌರ್ ಉದ್ದೇಶಪೂರ್ವಕವಾಗಿ ’ಕೆನ್ನೆಗೆ’ ಹೊಡೆದಿಲ್ಲ’ ಎಂದಿದ್ದಾರೆ; ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.
ಕೌರ್ ಜೀವನ ನಿರ್ವಹಣೆಗೆ ಕಷ್ಟವಾದರೆ ಕ್ರೌಡ್ ಫಂಡಿಂಗ್ ಮಾಡಲು ಕೂಡ ಕೆಲವರು ಮುಂದಾಗಿದ್ದಾರೆ! ‘ಆಕೆ ಕೆಲಸ ಕಳೆದುಕೊಂಡರೆ ನನಗೆ ಹೇಳಿ; ನಾನು ಕೆಲಸ ಕೊಡುತ್ತೇನೆ’ ಎಂದು ಖ್ಯಾತ ಹಾಡುಗಾರ ವಿಶಾಲ್ ದದ್ಲಾನಿ ಹೇಳಿದ್ದಾರೆ. ಸರ್ವಾಧಿಕಾರ ಹಿಮ್ಮೆಟ್ಟಿದ ಮೂರೇ ದಿನಗಳಲ್ಲಿ ಭಾರತ ಮುಕ್ತವಾಗಿ, ಬೇರೆ ಥರ ಮಾತಾಡುತ್ತಿದೆ!
ರೈತ ಕುಟುಂಬಕ್ಕೆ ಸೇರಿದ ಕೌರ್ ೨೦೦೯ರಿಂದ ಕಾನ್‌ಸ್ಟೇಬಲ್ ಕೆಲಸದಲ್ಲಿದ್ದಾರೆ. ಈ ಹಿಂದೆ ಅವರ ವಿರುದ್ಧ ಯಾವುದೇ ದೂರು, ವಿಚಾರಣೆ ದಾಖಲಾಗಿಲ್ಲ. ಅವರ ಗಂಡ ಕೂಡ ಇದೇ ಏರ್‌ಪೋರ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಮಾಜ, ರಾಜಕಾರಣ, ಸಂಸ್ಕೃತಿಗಳ ಪ್ರಾಥಮಿಕ ಪಾಠವೂ ಗೊತ್ತಿರದೆ ಸದಾ ಬಾಯಿಗೆ ಬಂದದ್ದನ್ನು ಕಾರುವ ಕಂಗನಾ, ‘ಈ ಟೆರರಿಸಂ ಮತ್ತು ಉಗ್ರವಾದ ಎಂದು ಕೊನೆಗೊಳ್ಳುವುದೋ...’ ಎಂದೆಲ್ಲ ಹುಂಬ ಪ್ರತಿಕ್ರಿಯೆ ಬರೆದುಕೊಂಡಿದ್ದಾರೆ; ಕೌರ್ ಕೊಟ್ಟ ಕೆನ್ನೆಯೇಟು ನಟಿಯೊಬ್ಬಳು ಭವ್ಯ ಬಂಗಲೆಯಲ್ಲಿ ಭಾರಿ ಪೊಲೀಸ್ ರಕ್ಷಣೆಯಲ್ಲಿ ಕೂತು ನಡೆಸುವ ‘ಡಿಜಿಟಲ್ ಟೆರರಿಸಂ’ಗೆ ಅನೇಕರ ಪ್ರತಿಕ್ರಿಯೆಗಳ ಮೂರ್ತ ರೂಪವಾಗಿರಬಹುದೆ?
ಈ ಸತ್ಯ ಈ ಇನ್‌ಸ್ಟೆಂಟ್ ರಾಜಕಾರಣಿ-ನಟೀಮಣಿಗೆ ಗೊತ್ತಿರಲಿಕ್ಕಿಲ್ಲ. ಅದೇ ಸಂದರ್ಭದಲ್ಲಿ ಕಂಗನಾ ತಂಡದಲ್ಲಿದ್ದ ಗಂಡಸೊಬ್ಬ ಬೇರೊಬ್ಬ ಮಹಿಳೆಯ ಕೆನ್ನೆಗೆ ಹೊಡೆದ ವಿಡಿಯೋವನ್ನೂ ನೆಟ್ಟಿಗರು ಹೊರ ಬಿಟ್ಟು, ಕಂಗನಾಗೆ ಪ್ರಶ್ನೆ ಎಸೆಯುತ್ತಿದ್ದಾರೆ. ಈ ಬಗ್ಗೆ ನಟೀಮಣಿ ತುಟಿ ಬಿಚ್ಚಿಲ್ಲ.
ಪೋಷಕ ನಟಿ ಸ್ಮೃತಿ ಇರಾನಿ ಈ ಸಲ ಅಮೇಥಿಯಲ್ಲಿ ಸೋತಿದ್ದರಿಂದ ನವ ಪಾರ್ಲಿಮೆಂಟಿನಲ್ಲಿ ನಟಿಯರ ಜಾಗ ಖಾಲಿಯಾಗಿತ್ತು. ಇಂಥ ಸಮಯದಲ್ಲಿ ಹೊಸ ಹೀರೋಯಿನ್ ಆಗಿ ಮಿಂಚಬಹುದೆಂದು ಹೊರಟಿದ್ದ ಕಂಗನಾ ಎದುರು ಲೇಡಿ ಕಾನ್‌ಸ್ಟೇಬಲ್ ಕೌರ್ ಇದ್ದಕ್ಕಿದ್ದಂತೆ ದೇಶದ ಹೊಸ ಹೀರೋಯಿನ್ ಆಗಿ ಎಮರ್ಜ್ ಆಗಿದ್ದಾರೆ!
ಇತ್ತ ಉಡುಪಿಯಲ್ಲಿ ರಾಜಕಾರಣಿ ರಘುಪತಿ ಭಟ್, ಆಲಿಯಾ ಕುಟುಕನ್ನು ಡಿಪ್ಲೊಮ್ಯಾಟಿಕ್ ಆಗಿ ನಿಭಾಯಿಸಲು ಯತ್ನಿಸಿದರು. ತಾನು ಒಳ್ಳೆಯವನು ಎಂದು ಸಮಜಾಯಿಷಿ ಕೊಡಲು ಹೋಗಿ ತಮಾಷೆಯ ವಸ್ತುವಾದರು. ಪಕ್ಷದಿಂದ ಹೊರ ಹಾಕಿಸಿಕೊಂಡರೂ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋತರು.
ಸೋತ ಕ್ಷಣದಲ್ಲಾದರೂ, ಕಳೆದ ವರ್ಷ ಒಬ್ಬ ಶಾಸಕನಾಗಿ ಹಿಜಾಬ್ ಪ್ರಕರಣದಲ್ಲಿ ಕೊನೇ ಪಕ್ಷ ನ್ಯೂಟ್ರಲ್ ಆಗಿಯಾದರೂ ಇರಬೇಕಿತ್ತು ಎಂದು ಅವರಿಗೆ ಅನ್ನಿಸಿರಬಹುದೇ? ಅಕಸ್ಮಾತ್ ಅವತ್ತು ಅವರು ಹಿಜಾಬ್ ವಿರುದ್ಧದ ತರಲೆಯಲ್ಲಿ ದೂರ ಕಾಯ್ದುಕೊಂಡು ಬಡಪಾಯಿ ಮುಸ್ಲಿಂ ಹುಡುಗಿಯರು ಕೊನೇ ಪಕ್ಷ ಪರೀಕ್ಷೆ ಬರೆಯಲಾದರೂ ನೆರವಾಗಿದ್ದರೆ… ಆಲಿಯಾ ಥರದ ನೂರು ಹುಡುಗಿಯರು ನಿನ್ನೆ ಅವರಿಗೆ ವೋಟು ಕೊಟ್ಟಿರುತ್ತಿದ್ದರು.
ನಾನು ಬಿ.ಎ. ಓದುತ್ತಿದ್ದಾಗ, ‘ನಾವು ಕೊಡುವುದಕ್ಕಿಂತ ಹೆಚ್ಚಿನ ಪ್ರೀತಿ ಕೊಡುವವರು ದಲಿತರು ಮತ್ತು ಮುಸ್ಲಿಮರು’ ಎಂದು ಲಂಕೇಶರು ಬರೆದ ಮಾತು ನಾನು ನೋಡುವ ರೀತಿಯನ್ನೇ ಬದಲಿಸಿತು; ಇದನ್ನು ಹಿಂದೆಯೂ ಬರೆದಿರುವೆ. ಇದೆಲ್ಲ ರಘುಪತಿ ಭಟ್ಟರಂಥವರಿಗೆ ಗೊತ್ತಿರಲಿಕ್ಕಿಲ್ಲ. ಲಂಕೇಶರ ಮಾತು ಕೋಮುವಾದಿ, ಜಾತಿವಾದಿ ಮಾತುಗಳಿಗೆ ಬಲಿಯಾಗಿ ದಲಿತರನ್ನು, ಮುಸ್ಲಿಮರನ್ನು ಅಸ್ಪೃಶ್ಯರಂತೆ ಕಾಣುವವರ ಕಣ್ತೆರೆಯುತ್ತಲೇ ಇರಲಿ!
ಅತ್ತ ಕಂಗನಾ ೨೦೨೦ರಲ್ಲಿ ರೈತರ ಬಗ್ಗೆ ದುರಹಂಕಾರದ ಮಾತಾಡದೆ, ಟಿಕ್ರಿ ಗಡಿಯಲ್ಲಿ ಬಿಸಿಲು, ಮಳೆಯೆನ್ನದೆ ರೊಟ್ಟಿ ಬೇಯಿಸಿ ರೈತರಿಗೆ ಕೊಡುತ್ತಿದ್ದ ಧೀರ ರೈತ ಮಹಿಳೆಯರ ಬಗ್ಗೆ ಒಂದೇ ಒಂದು ಗೌರವದ ಮಾತಾಡಿದ್ದರೂ ಸಾಕಾಗಿತ್ತು; ಇವತ್ತು ಕೆನ್ನೆಗೆ ಹೊಡೆದ ಕಾನ್‌ಸ್ಟೇಬಲ್ ಕೌರ್ ಆಕೆಯ ಆಟೋಗ್ರಾಫ್ ಕೇಳಿರುತ್ತಿದ್ದರು!
ರೈತರು, ಸಮಾಜ ಯಾವುದರ ಬಗೆಗೂ ಏನೂ ಗೊತ್ತಿರದೆ ಒಂದು ಜುಜುಬಿ ಲೋಕಸಭಾ ಸ್ಥಾನಕ್ಕಾಗಿ ಬಿಜೆಪಿಯನ್ನು ಮೆಚ್ಚಿಸಲು ಏನೇನೋ ಗೀಚುತ್ತಿದ್ದ ಕಂಗನಾ ಸ್ಥಿತಿ ನಗೆಪಾಟಲಾಗಿದೆ; ಹಾಗೇ ಬಿಜೆಪಿಯನ್ನು ಮೆಚ್ಚಿಸಲು ಏನೆಲ್ಲಾ ಕೋಮು ಸರ್ಕಸ್ ಮಾಡಿದರೂ ಈಚೆಗೆ ಎರಡೆರಡು ಸಲ ಟಿಕೆಟ್ ನಿರಾಕರಿಸಲಾದ ರಘುಪತಿ ಭಟ್ ಸ್ಥಿತಿ ಕೂಡ.
ಈ ನಡುವೆ, ತನ್ನ ಹಾಗೂ ತನ್ನ ಗೆಳತಿಯರಿಗೆ ಆದ ಅನ್ಯಾಯ ಕಂಡು ರೇಗಿ, ಪುಟಿದೆದ್ದು ಲಾ ಓದುತ್ತಿರುವ ಆಲಿಯಾಗೊಂದು ಕಿವಿ ಮಾತು: ತನ್ನ ‘ಎಕ್ಸ್’ ‘ಫೇಸ್‌ಬುಕ್’ ಪೋಸ್ಟುಗಳಿಗೆ ಬಂದ ಫಾಲೋಯಿಂಗ್‌ಗಳ ಹುಸಿಮಂಪರಿನಲ್ಲಿ ಆಲಿಯಾ ಮುಳುಗದಿರಲಿ. ಅಲ್ಲಿ ತನ್ನ ಪರವಾಗಿ ಹೆಬ್ಬೆಟ್ಟೆತ್ತಿ ರೈಲು ಹತ್ತಿಸುವ ಅನಾಮಿಕರ ಹುಂಬ ಪ್ರೋತ್ಸಾಹಕ್ಕೆ ಮರುಳಾಗದಿರಲಿ! ಚೆನ್ನಾಗಿ ಲಾ ಓದಿ, ಕಾನೂನಿನ ಪ್ರಬಲ ಅಸ್ತ್ರದ ಮೂಲಕ ತನ್ನ ಸಮುದಾಯದ ಅಸಹಾಯಕ ಮಹಿಳೆಯರಿಗೆ ಆಲಿಯಾ ನೆರವಾಗುವಂತಾಗಲಿ.
ಅತ್ತ ಚಂಡೀಗಢದ ಕಾನ್‌ಸ್ಟೇಬಲ್ ಕೌರ್ ಕೂಡ ರೈತ ಮಹಿಳೆಯರ ಪರವಾಗಿ ಅಹಿಂಸಾತ್ಮಕವಾಗಿ, ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಿ ನೆರವಾಗುವಂತಾಗಲಿ. ಯಾಕೆಂದರೆ ಆಲಿಯಾ, ಕೌರ್ ಥರದ ಸ್ತ್ರೀಯರ ಧೈರ್ಯ ಎಲ್ಲ ಕಾಲಕ್ಕೂ ದೊಡ್ಡ ಆಸ್ತಿಯಂತಿರಬಲ್ಲದು.
ಕೊನೆ ಟಿಪ್ಪಣಿ:
ಈ ಸಲದ ಚುನಾವಣೆಗಳ ಕಾಲದ ಮತ್ತೊಂದು ದೃಶ್ಯ:
ಚುನಾವಣೆಯಲ್ಲಿ ಸೋತಿದ್ದ ಡಿ.ಕೆ. ಸುರೇಶರನ್ನು ಮಂತ್ರಿ ಜಮೀರ್ ಅಹ್ಮದ್‌ಖಾನ್ ಅಪ್ಪಿಕೊಂಡ ವಿಡಿಯೋ ಕಂಡಾಗ ನನ್ನ ಹದಿಹರೆಯದಲ್ಲಿ ನಮ್ಮೂರ ಪಂಚಾಯಿತಿ ಚುನಾವಣೆಯ ಫಲಿತಾಂಶದ ಕಾಲ ನೆನಪಾಯಿತು. ಅವತ್ತಿನ ಒಂದು ದೃಶ್ಯ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
ಹೈಸ್ಕೂಲ್ ಮುಗಿಸಿದ್ದ ನಾನು ಅವತ್ತು ನಮ್ಮೂರ ಮಿಡ್ಲ್ ಸ್ಕೂಲ್ ಮೈದಾನದಲ್ಲಿ ನಿಂತಿದ್ದೆ. ಆ ಮಧ್ಯಾಹ್ನ ಅಲ್ಲಿ ಪಂಚಾಯಿತಿ ಚುನಾವಣೆಗಳ ಫಲಿತಾಂಶ ಘೋಷಣೆಯಾಗುತ್ತಿತ್ತು. ಹುಳಿಯಾರಿನ ಪಂಚಾಯತ್ ವಾರ್ಡೊಂದರಿಂದ ರಹಮತ್ ಉಲ್ಲಾ ಸಾಬ್ ಗೆದ್ದಿದ್ದರು. ಅವರ ಅಭಿಮಾನಿಗಳು ಹಾರಗಳನ್ನು ಹಿಡಿದು ಅವರನ್ನು ಮುತ್ತಿಕೊಂಡಿದ್ದರು.
ಅಲ್ಲೇ ಕೊಂಚ ದೂರದಲ್ಲಿ ಖಾಕಿ ನಿಕ್ಕರ್ ಹಾಗೂ ಖಾಕಿಷರಟು ಹಾಕಿದ್ದ ನಮ್ಮೂರ ಸ್ವೀಪರ್ ಈ ಸಂಭ್ರಮ ನೋಡುತ್ತಾ ಸಂಕೋಚದಿಂದ ನಿಂತಿದ್ದರು. ರಹಮತ್ ತಕ್ಷಣ ಅವರತ್ತ ತೋಳು ಚಾಚುತ್ತಾ, ‘ನೀವು ಕಣ್ರೋ ನೀವು!’ ಎಂದು ಕೃತಜ್ಞತೆಯಿಂದ ಅವರನ್ನು ಬಾಚಿ ತಬ್ಬಿಕೊಂಡರು.
ನನ್ನ ಬಾಲ್ಯದ ಸಾಂಪ್ರದಾಯಿಕ ಸಮಾಜದಲ್ಲಿ ನಾನು ಎಂದೂ ಕಾಣದಿದ್ದ ಒಂದು ‘ಮುಟ್ಟಿಸಿಕೊಂಡ’ ಘಟನೆ ನಡೆದಿತ್ತು. ನಮ್ಮಂಥ ಹುಡುಗರ ಮನಸ್ಸಿನಲ್ಲಿ ಸಮಾಜ, ಶಾಲೆ, ಮನೆ, ನೆರೆಹೊರೆಗಳಿಂದಾಗಿ ಬೆಳೆದು ನಿಂತಿದ್ದ ಅಸ್ಪೃಶ್ಯತೆಯ ಗೋಡೆ ಧಡ್ಡಂತ ಮುರಿದು ಬಿದ್ದಿತ್ತು; ಅದು ಮುರಿದು ಬಿದ್ದಿದ್ದು ರಹಮತ್ ಸಾಹೇಬರು ನಮ್ಮೂರ ಸ್ವೀಪರ್ ಒಬ್ಬರನ್ನು ಸಹಜವಾಗಿ ಅಪ್ಪಿಕೊಂಡ ರೀತಿಯಿಂದ.
ಇಂಥ ಆರೋಗ್ಯಕರ ಆತ್ಮೀಯತೆಯ ಪ್ರದರ್ಶನದ ಪರಿಣಾಮದ ಬಗ್ಗೆ ಇವತ್ತಿಗೂ ನನಗೆ ನಂಬಿಕೆಯಿದೆ. ಮೊನ್ನೆ ಜಮೀರ್ ಅಹ್ಮದ್ ಡಿ.ಕೆ. ಸುರೇಶರನ್ನು ಅಪ್ಪಿಕೊಂಡಿದ್ದು ನನಗೇನೂ ಕೃತಕ ಅನ್ನಿಸಲಿಲ್ಲ. ಆ ಅಪ್ಪುಗೆ ಕೋಮುವಾದಿಗಳು ನಿತ್ಯ ಮುಸ್ಲಿಮರ ವಿರುದ್ಧ ಸೃಷ್ಟಿಸುತ್ತಿರುವ ಅಸ್ಪೃಶ್ಯತೆಗೆ ಧಿಕ್ಕಾರ ಹೇಳುವ ಸಹಜ ಸಂದೇಶದಂತಿತ್ತು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
‘ಏನ್ ರಾಜು! ನಿಮ್ಮೂರ ಕಡೆ ಹೊಸ ಸಾಹಿತ್ಯ ಚಳುವಳಿ ನಡೀತಾ ಇರುವಂತಿದೆ?’ ಅಂದೆ.
‘ಯಾವ ಚಳುವಳಿ ಸಾರ್?’ ಲೇಖಕ ರಾಜು ಕಣ್ಣರಳಿಸಿದರು.
‘ಅದೇ…ಅಭಿನಂದನಾ ಚಳುವಳಿ!’
ರಾಜು ಕಣ್‌ಕಣ್ ಬಿಟ್ಟರು.
‘ನಿಮ್ಮೂರಿಗೆ ಕಾಲಿಟ್ಟ ಎಂಟು ಗಂಟೆಗಳಲ್ಲಿ ನನಗೆ ಎರಡು ಭಾರೀ ಗಾತ್ರದ ಪುಸ್ತಕ ಕೊಟ್ಟಿದ್ದಾರೆ. ಎರಡೂ ಅಭಿನಂದನಾ ಗ್ರಂಥಗಳೇ! ಹೋದ ಸಲ ಬಂದಾಗಲೂ ಇಂಥದೇ ಪುಸ್ತಕಗಳು ಸಿಕ್ಕಿದ್ದವು! ಇದನ್ನೇ ಅಭಿನಂದನಾ ಚಳುವಳಿ ಅನ್ನೋದು!’
‘ಇದೊಂದು ಹೊಸ ಪದ ಸಿಕ್ತಲ್ಲ ನನಗೆ!’ ಎಂದು ರಾಜು ನಗತೊಡಗಿದರು.
ಕಾರ್ ಡ್ರೈವ್ ಮಾಡುತ್ತಿದ್ದ ರಾಜುವಿನ ನಗು ನಿಲ್ಲುವ ಮೊದಲೇ ದಾರಿಯಲ್ಲಿ ಈ ಅಂಕಣಕಾರನಿಗೊಂದು ಫೋನ್ ಬಂತು.
‘ಹಲೋ!’
‘ಸಾರ್! ನಮ್ಮ ಫ್ರೆಂಡ್ ರಮೇಶ್... ಅವರು ನಿಮಗೂ ಗೊತ್ತಲ್ಲ... ಅವರು ಮೂವತ್ತನೇ ತಾರೀಕು ರಿಟೈರ್ಡ್ ಆಗ್ತಾ ಇದಾರೆ...’
‘ಛೇ! ಹಾಗಾಗಬಾರದಿತ್ತು!’
‘ಅದೇ ಸಾರ್! ಅವರನ್ನು ಬೀಳ್ಕೊಡಲು ಒಂದು ಪುಸ್ತಕ ತರ‍್ತಾ ಇದೀವಿ...’
‘ಗುಡ್!’
‘ಆ ಪುಸ್ತಕಕ್ಕೆ...’
‘ಬರೆಯೋದು ಕಷ್ಟ!’
‘ಪರವಾಗಿಲ್ಲ. ನೀವು ಹಿಂದೆ ನಿಮ್ಮ ವೆಬ್‌ಸೈಟಲ್ಲಿ ಸಂಸ್ಕೃತಿ ಬಗ್ಗೆ ಬರೆದಿದೀರಲ್ಲ ಆ ಲೇಖನ ಬಳಸಿಕೊಂಡಿದೀವಿ...’
‘ಫೈನ್!’
ನಿಜಕ್ಕೂ ಆನಂದವಾಗಿತ್ತು. ಕಾರಣ, ಗೆಳೆಯರನ್ನು ‘ಅಭಿನಂದಿಸಿ’ ಲೇಖನ ಬರೆಯಲು ಕೇಳಲಿಲ್ಲ!
ಯಾಕೆಂದರೆ, ಇವತ್ತಿಗೂ ನನಗೆ ದುಃಸ್ವಪ್ನದಂತೆ ಕಾಡುವ ಬರವಣಿಗೆಯ ಕೋರಿಕೆಗಳೆಂದರೆ ಅಭಿನಂದನಾ ಗ್ರಂಥಗಳ ಬರವಣಿಗೆಗಳು; ನನ್ನನ್ನು ಗಡ ಗಡ ನಡುಗಿಸುವ ಸಭೆಗಳೆಂದರೆ ಅಭಿನಂದನಾ ಸಮಾರಂಭಗಳು!
ಇದೇನೂ ಕಠೋರ ವ್ರತವಲ್ಲ. ಸಹಜವಾದ ಪ್ರೀತಿ, ಅಭಿಮಾನ ಉಕ್ಕಿದರೆ ಗಂಟೆಗಟ್ಟಲೆ ಯಾರ ಬಗ್ಗೆಯಾದರೂ ಮಾತಾಡಬಹುದು; ಪುಟಗಟ್ಟಲೆ ಬರೆಯಬಹುದು. ಅವು ಅಭಿನಂದನೆಗಳೇ ಆಗಿರಬೇಕೆಂದಿಲ್ಲ; ಅವೆಲ್ಲ ಮುಕ್ತವಾಗಿ ಗೆಳೆಯ, ಗೆಳತಿಯರ ಬಳಗದಲ್ಲಿ ಮಾತಾಡುವ ರೀತಿಯಲ್ಲಿರಬೇಕು. ಅಲ್ಲಿ ಏನು ಹೇಳಿದರೂ ಮಾಫಿ ಎನ್ನುವಂತಿರಬೇಕು. ಕಳೆದ ವರ್ಷ ಗೆಳೆಯ ಪ್ರಕಾಶ ಮಂಟೇದ ಬರೆದ ಕವನಗಳ ಸಂಕಲನ ‘ಕಾಮ ಕಸ್ತೂರಿ ಬನ’ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಮಾತಾಡುತ್ತಿದ್ದಾಗ ನನಗೆ ಹಾಗೆನ್ನಿಸಿತು:
ವೇದಿಕೆಯ ಮೇಲೆ ನೆಲ್ಲುಕುಂಟೆ ವೆಂಕಟೇಶ್, ಬಂಜಗೆರೆ ಜಯಪ್ರಕಾಶ್, ಚಾಂದಿನಿ, ರವಿ ಈಚಲಮರ ಥರದ ಆಪ್ತರು; ಎದುರಿಗೆ ಕೂತಿದ್ದವರೆಲ್ಲ ಗೆಳೆಯ ಗೆಳತಿಯರು; ಪ್ರೀತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು...ಬ್ರೇಕಿಲ್ಲದ ಮುಕ್ತ ಮಾತು- ಅದೂ ಕಾಮ ಕಸ್ತೂರಿ ಕುರಿತು; ಮುಕ್ತ ಮಾತಿಗೆ ತಕ್ಕ ವಸ್ತು!
ಅದಿರಲಿ! ಮೊನ್ನೆ ಜಿಲ್ಲೆಯೊಂದರಲ್ಲಿ ಸುತ್ತಾಡುತ್ತಿದ್ದಾಗ ಎಂದಿನಂತೆ ಗೆಳೆಯರು, ಹಿರಿಯರು ತಂತಮ್ಮ ಪುಸ್ತಕಗಳನ್ನು ಕೊಟ್ಟರು. ಅವುಗಳಲ್ಲಿ ಎರಡು ಅಭಿನಂದನಾ ಗ್ರಂಥಗಳಿದ್ದವು. ಅವನ್ನು ನೋಡನೋಡುತ್ತಾ ನನ್ನ ಬಾಯಿಂದ ‘ಅಭಿನಂದನಾ ಚಳುವಳಿ’ ಎಂಬ ಬಣ್ಣನೆ ಹೊರಬಿದ್ದಿತ್ತು! ‘ಅಭಿನಂದನಾ ಚಳುವಳಿ’ ಎಂಬ ಬಣ್ಣನೆ ನನಗೆ ಹೊಳೆದು ಹತ್ತಿರ ಹತ್ತಿರ ಇಪ್ಪತ್ತು ವರ್ಷವಾಗಿತ್ತು!
ಅದಾಗಿದ್ದು ಹಿಂದೊಮ್ಮೆ ಸಾಹಿತ್ಯ ಪರಿಷತ್ತು ಅನಂತಮೂರ್ತಿಯವರ ಹುಟ್ಟುಹಬ್ಬವನ್ನು ಆಚರಿಸಿದಾಗ. ಅನಂತಮೂರ್ತಿಯವರೇನೂ ನನ್ನಿಂದ ಅಭಿನಂದನೆ ನಿರೀಕ್ಷಿಸಿರಲಿಲ್ಲ.
ಅದೇ ಆಗ ಅನಂತಮೂರ್ತಿಯವರಿಗೆ ಓಪನ್ ಹಾರ್ಟ್ ಸರ್ಜರಿ ಆಗಿತ್ತು. ಆದರೂ ಅವರು ಆ ಸಭೆಗೆ ಬಂದರು. ಇದ್ದಕ್ಕಿದ್ದಂತೆ ನನ್ನ ಭಾಷಣದ ನಡುವೆ, ‘ಕನ್ನಡ ಸಾಹಿತ್ಯದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ… ಯಾವ ಚಳುವಳಿಗಳೂ ನಡೆಯುತ್ತಿಲ್ಲ; ಈಗ ಕನ್ನಡದಲ್ಲಿ ನಡೆಯುತ್ತಿರುವ ಚಳುವಳಿ ಒಂದೇ… ಅಭಿನಂದನಾ ಚಳುವಳಿ!’ ಎಂದೆ.
ಅನಂತಮೂರ್ತಿ ಮನಸಾರೆ ನಕ್ಕರು. ಅವರು ನಿರಾಳವಾಗಿ ನಕ್ಕಿದ್ದರಿಂದ, ಅನಂತರ ಅವರ ಬಗ್ಗೆ ಅನ್ನಿಸಿದ ಸರಿ, ತಪ್ಪುಗಳನ್ನೆಲ್ಲ ಮಾತಾಡಿದೆನೆಂದು ಕಾಣುತ್ತದೆ!
ನಂತರ ಅನಂತಮೂರ್ತಿ ಮಾತು ಶುರು ಮಾಡಿದಾಗ ನನ್ನತ್ತ ತಿರುಗಿ ಮತ್ತೆ ಕೇಳಿದರು:
‘ಅದೇನು ಚಳುವಳಿ ನೀನು ಹೇಳಿದ್ದು?’
‘ಅಭಿನಂದನಾ ಚಳುವಳಿ ಸಾರ್!’ ಎಂದೆ.
ಅನಂತಮೂರ್ತಿ ಮತ್ತೆ ನಕ್ಕರು. ಅವರ ಆರಾಮ್ ನಗೆ ನೋಡಿ ಅವರ ಮೇಲೆ ಏನೇನೋ ಮಾತಾಡಿದ್ದ ನನಗೂ ಆರಾಮೆನ್ನಿಸಿತು!
ಇದಾದ ಕೆಲ ವರ್ಷಗಳ ನಂತರ ಪ್ರಜಾವಾಣಿಯವರು ನನಗೆ ಅಂಕಣ ಬರೆಯಲು ಹೇಳಿದಾಗ ಬರೆದ ಮೊದಲ ಲೇಖನದ ಶೀರ್ಷಿಕೆಯೇ ‘ಕ್ಷಮಿಸಿ! ಇದು ಅಭಿನಂದನಾ ಚಳುವಳಿಗಳ ಕಾಲ!’
ಆ ಅಂಕಣ ಬರೆದು ಹತ್ತು ವರ್ಷವಾಯಿತು. ಮತ್ತೆ ಓದಿ ನೋಡೋಣವೆಂದರೆ, ‘ಅಳಿಸಲಾಗದ ಲಿಪಿಯನು ಬರೆಯಬಾರದು’ ಎಂಬ ಅಲ್ಲಮ ಪ್ರಭುಗಳ ವಿಷಾದ, ತಾಕೀತು ನೆನಪಾಯಿತು; ದಶಕದ ಕೆಳಗೆ ಬರೆದ ಆ ಅಂಕಣ ಲಿಪಿಯನ್ನು ಬೆದರುತ್ತಲೇ ನೋಡಿದೆ: ಅದು ಅಂದಿನ ಸತ್ಯವಾಗಿತ್ತು. ಆದರೇನಂತೆ! ಇವತ್ತು ಅಭಿನಂದನಾ ಚಳುವಳಿ ಕುರಿತು ಬರೆಯುವಾಗಲೂ ಸ್ಥಿತಿಯೇನೂ ಬದಲಾದಂತಿರಲಿಲ್ಲ. ಅಭಿನಂದನಾ ಚಳುವಳಿ ಮುಂದುವರಿಯುತ್ತಲೇ ಇದೆ!
ಹೀಗೆನ್ನಲು ಕಾರಣವಿದೆ: ಮೊನ್ನೆ ತಾನೇ ಲೇಖಕರೊಬ್ಬರ ಅಭಿನಂದನಾ ಗ್ರಂಥದ ಆಹ್ವಾನ ಪತ್ರಿಕೆ ನೋಡಿದೆ: ಸಂಘಟನೆಯ ಹೆಸರು ‘ಪ್ರೊಫೆಸರ್ ಚಂದ್ರಪ್ಪರವರ ಅಭಿಮಾನಿ ಬಳಗ.’
ಪರವಾಯಿಲ್ಲ! ಈ ಕಾಲದಲ್ಲಿ ಡಾಕ್ಟರ್ ರಾಜ್‌ಕುಮಾರ್ ಅವರಂತೆ ಲೇಖಕರಿಗೂ ಅಭಿಮಾನಿ ಬಳಗಗಳಿವೆ; ಅಂದರೆ, ಕನ್ನಡ ಸಾಹಿತ್ಯ ಪ್ರಗತಿಯ ಹಾದಿಯಲ್ಲಿದೆ! ’ಲಾಂಗ್ ಲಿವ್ ಅಭಿನಂದನಾ ಮೂವ್‌ಮೆಂಟ್’ ಎಂಬ ಉದ್ಗಾರ ಸಣ್ಣಗೆ ಹೊರಟಿತು!
ಕೊನೆಯದಾಗಿ, ಈ ಅಭಿನಂದನಾ ಗ್ರಂಥಗಳ ಶೈಲಿಯ ಬಗ್ಗೆ ಹಿಂದೊಮ್ಮೆ ಬರೆದ ಟಿಪ್ಪಣಿಗಳ ಸಾರ:
ಅದು ಹೇಗೋ ಏನೋ, ‘ಅಭಿನಂದನೆ’ ಎಂಬ ಶಬ್ದದಿಂದ ಹಿಡಿದು ಅಂಥ ಪುಸ್ತಕಗಳಲ್ಲಿನ ಬರವಣಿಗೆಯವರೆಗೂ ಸಂಸ್ಕೃತವೇ ಎದ್ದು ಕಾಣುತ್ತಿರುತ್ತದೆ! ದೇವ, ದೇವಿಯರ ಸ್ತೋತ್ರಗಳು ಸಂಸ್ಕೃತದಲ್ಲಿ ಹೆಚ್ಚು ಸೃಷ್ಟಿಯಾಗಿರುವುದರಿಂದ ಹೊಗಳಿಕೆಗೆ ಸಂಸ್ಕೃತವೇ ಸರಿ ಎಂಬ ನಂಬಿಕೆ ಈಗಲೂ ಮುಂದುವರಿದಿರಬಹುದು! ಕುಚೋನ್ನತೆ, ಕುಂಕುಮರಾಗ ಶೋಭಿತೆ ಥರದ ಚಿತ್ರಕ ಬಣ್ಣನೆಗಳು ನೆನಪಾಗುತ್ತವೆ!
ಅಂದರೆ, ದೈವಸ್ತುತಿಯಲ್ಲಿ ಎತ್ತಿದ ಕೈ ಹಾಗೂ ತೆರೆದ ಬಾಯಾಗಿರುವ ಸಂಸ್ಕೃತ ಭಾಷಾ ಬಳಕೆದಾರರಿಗೂ, ಉತ್ಪ್ರೇಕ್ಷಿತ ವರ್ಣನೆಗಳಿಗೂ ರಕ್ತಸಂಬಂಧ ಇರಬಹುದು! ಹೊಗಳುಭಟರ ‘ತ್ರಿಭುವನ ಮಲ್ಲ’ ‘ಮಾರ್ತಾಂಡ ತೇಜ’ದಂಥ ಹೊನ್ನಶೂಲಗಳನ್ನು ಬರೆದು ನೆಟ್ಟವರು ರಾಜಪುರೋಹಿತರು, ಆಸ್ಥಾನ ಪಂಡಿತರು ತಾನೆ!
ಅದೇನೇ ಇರಲಿ, ಅಭಿನಂದನಾ ಸಾಹಿತ್ಯ `ಪ್ರಕಾರ' ಎನ್ನುವುದು ಒಂದಿದ್ದರೆ, ಅದು ತನ್ನದೇ ಆದ ಕ್ಲೀಷೆಗಳನ್ನು ತಯಾರಿಸಿ ಹಂಚುತ್ತಿರುತ್ತದೆ: ಇಂಥ ಬರಹಗಳನ್ನು ಬರೆಯುವಾಗ ಮನಸ್ಸು ಆ ಸಿದ್ಧ ಪದಗಳ ಸುತ್ತ ಅನಿವಾರ್ಯವಾಗಿ ಸುತ್ತತೊಡಗುತ್ತದೆ.
ಉದಾಹರಣೆಗೆ, ಅಭಿನಂದಿತ ಮಹನೀಯರನ್ನು (ಹೌದು! ಇದು ಅಕ್ಷರಶಃ ಪುರುಷ ಪ್ರಧಾನ ಪ್ರಕಾರ! ಮಹಿಳೆಯರನ್ನು ಕುರಿತ ಅಭಿನಂದನಾ ಗ್ರಂಥಗಳು ತೀರಾ ತೀರಾ ಕಡಿಮೆ!) ಕುರಿತ ಬರಹಗಳಲ್ಲಿ ಬಳಕೆಯಾಗುವ ಶಬ್ದಗಳನ್ನು ನೋಡಿ: ‘ವಿಶಾಲ ಹೃದಯ’ ‘ನಿಸ್ಪೃಹ ಸೇವೆ’ ‘ಸಮರ್ಪಣಾ ಮನೋಭಾವ’ ‘ಅಜಾತ ಶತ್ರು’…ಈ ಥರದ ಗಾಳಿ ತುಂಬಿದ ಶಬ್ದಗಳ ಗಾಲಿಗಳಿಲ್ಲದೆ ಈ ಪುಸ್ತಕಗಳು ಮುಂದಕ್ಕೆ ಉರುಳುವುದೇ ಇಲ್ಲ! ಇತ್ತಿತ್ತಲಾಗಿ ‘ತಾಯಿ ಕರುಳು’, ’ಆತುಕೊಳ್ಳುವುದು’ ಮುಂತಾದ ಪದಗಳೂ ಈ ಪದಜಾಲದೊಳಗೆ ಸೇರಿಕೊಂಡಂತಿವೆ!
ಕೆಲವು ವರ್ಷಗಳ ಕೆಳಗೆ, ಕೊಂಚ ಉತ್ತಮ ಎನ್ನಬಹುದಾದ ರಾಜಕಾರಣಿಯೊಬ್ಬರ ಬಗ್ಗೆ ಮಿತ್ರರು ಹೊರತಂದ ಅಭಿನಂದನಾ ಗ್ರಂಥಕ್ಕೆ ಕೊಟ್ಟಿದ್ದ ಹೆಸರು: `ಪುಣ್ಯಕೋಟಿ.’ ಪುಸ್ತಕದ ಒಳಗೇನಿದೆಯೆಂದು ನೋಡುವ ಮೊದಲೇ ಪಿಚ್ಚೆನ್ನಿಸಿತು; ಕನ್ನಡನಾಡಿನಲ್ಲಿ ನೂರಾರು ವರ್ಷಗಳಿಂದ ಹಬ್ಬಿರುವ `ಪುಣ್ಯಕೋಟಿ' ಎಂಬ ಕನ್ನಡ ಜಾನಪದದ ಅರ್ಥಪೂರ್ಣ ರೂಪಕ ಏಕ್‌ದಂ ಕುಬ್ಜವಾದಂತೆ ಕಂಡಿತು; ಮನಸ್ಸು ಖಿನ್ನವಾಯಿತು.
‘ಪುಣ್ಯಕೋಟಿ’ ರೂಪಕದ ಬಿಡುಬೀಸು ಬಳಕೆ ಕುರಿತು ಬರೆದ ಕೆಲ ವರ್ಷಗಳ ನಂತರ ಬೆಂಗಳೂರಿನ ಜೆ.ಪಿ. ನಗರದ ಸ್ಕೂಲೊಂದರ ಎದುರಿಗೆ ಕಂಡ ಬೋರ್ಡು: ‘ಪುಣ್ಯಕೋಟಿ ಚಿಟ್ ಫಂಡ್ಸ್!’
ಈ ಬೋರ್ಡು ನೋಡಿದ ಮೇಲೆ ಗೆಳೆಯರು ಹಿಂದೆ ಅಭಿನಂದನಾ ಗ್ರಂಥಕ್ಕೆ ಕೊಟ್ಟ ‘ಪುಣ್ಯಕೋಟಿ’ ಎಂಬ ಹೆಸರು ಎಷ್ಟೋ ಪರವಾಯಿಲ್ಲ ಎನ್ನಿಸಿತು; ಯಾಕೆಂದರೆ, ಅಲ್ಲಿ ಪುಣ್ಯಕೋಟಿ ರೂಪಕ ಈ ಚಿಟ್‌ಫಂಡ್ಸ್ ನಡೆಸುವವನ ಬೋರ್ಡಿನಷ್ಟು ದುರ್ಬಳಕೆಯಾಗಿರಲಿಲ್ಲ.
ಕೊನೆಗೆ, ’ಇದೇನು? ಈ ಸಲದ ಅಂಕಣ ಬರಹಕ್ಕೆ ‘ಅಭಿನಂದನಾ ಚಳುವಳಿ: 2.0’ ಎಂಬ ಪೋಸ್ಟ್ ಮಾಡರ್ನ್ ಹೆಸರು!’ ಎಂದು ಬೆರಗಾಗದಿರಿ! ಹಿಂದೊಮ್ಮೆ ಇದೇ ವಸ್ತುವಿನ ಮೇಲೆ ಬರೆದಿದ್ದರಿಂದ ಈ ಅಂಕಣಕ್ಕೆ ನಮ್ಮ ಡಿಜಿಟಲ್ ಹುಡುಗಿಯರ ಶೈಲಿಯಲ್ಲಿ 2.0 ಎಂದು ಹೆಸರಿಟ್ಟೆ. 2.0 ಎಂದು ಹೆಸರಿಟ್ಟರೆ ಇದು ಇಲ್ಲಿಗೆ ಕೊನೆಯಾಗಬಹುದು ಎಂಬ ಆಸೆ!
ಅಭಿನಂದನಾ ಚಳುವಳಿಗೆ ಎಲ್ಲಿಯ ಕೊನೆ! ಇನ್ನೇನು ಹೊರಹೊಮ್ಮಲಿದೆಯಲ್ಲ ಪೇ-ಟಿವಿಗಳ ನಿರ್ಲಜ್ಜ ಅಭಿನಂದನಾ ಚಳುವಳಿ…3.0!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
`ಏನ್ ಮಾಡ್ತಿದೀರ?’ ಎಂದರು ಡಿ. ಆರ್. ನಾಗರಾಜ್. ನಾನಾಗ ಡಿ. ಆರ್. ಅವರ ರಿಸರ್ಚ್ ಸ್ಟೂಡೆಂಟ್.
‘ಜಿ. ಎಚ್. ನಾಯಕರ ಪುಸ್ತಕ್ ಪ್ರೂಫ್ ನೋಡ್ತಿದೀನಿ’ ಎಂದೆ. ಅದು ಶೂದ್ರ ಶ್ರೀನಿವಾಸ್ ಪ್ರೆಸ್ಸಿನ ಒಂದು ಅಸೈನ್‌ಮೆಂಟ್.
`ಏನ್ರೀ ಪುಸ್ತಕದ ಹೆಸರು?
`ವಿನಯ ವಿಮರ್ಶೆ.’
`ಥತ್! ವಿಮರ್ಶೆಗೂ ವಿನಯಕ್ಕೂ ಏನ್ರೀ ಸಂಬಂಧ?’ ಎಂದು ಡಿ. ಆರ್. ಪಟಾಕಿ ಹಚ್ಚಿ ಖುಷಿ ಪಡುವವರಂತೆ ನಕ್ಕರು.
ಮೊನ್ನೆ ಹೊಸ ತಲೆಮಾರಿನ ಸಂಶೋಧಕ-ವಿಮರ್ಶಕ ವಿನಯ್ ನಂದಿಹಾಳ್ ವಿಮರ್ಶೆಗೇ ಮೀಸಲಾದ ಒಂದು `ಯೂ ಟ್ಯೂಬ್’ ಚಾನಲ್ ಮಾಡಿ `ವಿನಯ ವಿಮರ್ಶೆ’ ಎಂದು ಹೆಸರಿಟ್ಟರು. ವಿನಯ್‌ಗೆ ಡಿ. ಆರ್. ಪ್ರತಿಕ್ರಿಯೆ ಹೇಳಿದರೆ, `ನನ್ನ ಹೆಸರನ್ನೂ ವಿಮರ್ಶೆಯನ್ನೂ ಕೂಡಿಸಿ ಹೀಗೆ ಹೆಸರಿಟ್ಟೆ ಸಾರ್!’ ಎಂದರು. `ವಿನಯ ವಿಮರ್ಶೆ’ ಕುರಿತು ಡಿ.ಆರ್. ಹೇಳಿದ ಮಾತೂ ನೆನಪಿರಲಿ’ ಎಂದೆ.
ಆದರೂ ಜಿ.ಎಚ್. ನಾಯಕರು `ವಿನಯ’ವನ್ನು ವಿಮರ್ಶೆಯ ಜೊತೆ ಸೇರಿಸಿದ್ದು ಮಹಾಕೃತಿಗಳ ಎದುರು ನಮ್ಮ ತಲೆ ತಂತಾನೇ ಬಾಗುವ ರೀತಿಯ ಬಗೆಗೇ ಹೊರತು ಅದೇನೂ ಭೋಳೆ ವಿನಯವಲ್ಲ; `ಕಲಿಸು ಬಾಗುವುದನ್ನು, ಬಾಗದೆ ಸೆಟೆಯುವುದನ್ನು’ ಎಂದ ಅಡಿಗರ `ಪ್ರಾರ್ಥನೆ’ಯ ಸಂಕೀರ್ಣ ತಹತಹ ನಾಯಕರ ವಿಮರ್ಶಕ ವ್ಯಕ್ತಿತ್ವದಲ್ಲೇ ಇತ್ತು.
ಜಿ. ಎಚ್. ನಾಯಕರನ್ನು ಕುರಿತ ನನ್ನ ಅಂಕಣ ಬರಹವೊಂದು `ಕನ್ನಡಿ’ (ಪಲ್ಲವ ಪ್ರಕಾಶನ) ಪುಸ್ತಕದಲ್ಲಿರುವುದರಿಂದ ಆ ಬರಹದಾಚೆಗೆ ನಿಂತು ನೋಡಲೆತ್ನಿಸಿದೆ: ನಾಯಕರ ನೈತಿಕ ವ್ಯಕ್ತಿತ್ವ ಅವರ ಒಟ್ಟು ವಿಮರ್ಶೆಯಲ್ಲೂ ಪ್ರಕಟಗೊಂಡಿರುವುದು ಕಾಣತೊಡಗಿತು. ಲೀವಿಸ್ `ವಿಮರ್ಶೆ ಬದುಕಿನ ನೈತಿಕ ವಿಚಾರಣೆ’ ಎಂದಿದ್ದು ನೆನಪಾಯಿತು. ನಾಯಕರಂತೆ ಕೃತಿ ಹೊರಡಿಸಿದ ಅರ್ಥವನ್ನು ಪ್ರಾಮಾಣಿಕವಾಗಿ ಹೇಳುವವರು ಕಡಿಮೆಯಾಗುತ್ತಿದ್ದಾರೆ ಎನ್ನಿಸಿತು.
ಇದನ್ನು ಹೀಗೆ ವಿವರಿಸಬಹುದು: ಒಬ್ಬ ವಿಮರ್ಶಕಿ, ಲೇಖಕ ಹೇಳಿದ್ದು ತಪ್ಪಾಗಿದೆ ಎಂದು ನಮಗೆ ಅನ್ನಿಸಬಹುದು. ಆದರೆ ಅದು ಸುಳ್ಳು ಎನ್ನಿಸಿದರೆ ಅದು ಓದಲು ಅರ್ಹವಲ್ಲ. ನಾಯಕ್ ಥರದವರು ಬರೆದಾಗ ಅದು ಕೆಲವೆಡೆ `ಮಂದ’ ಎನ್ನಿಸಿದರೂ ಸುಳ್ಳೆನ್ನಿಸುವುದಿಲ್ಲ. ಕಾಲಕಾಲದ ‘ಟ್ರೆಂಡಿ’ ವಿಮರ್ಶೆಗಳೆಲ್ಲ ಕಣ್ಮರೆಯಾಗಿ, ನಾಯಕರ ಓದಿನ ಪ್ರಾಮಾಣಿಕತೆ ಕನ್ನಡ ವಿಮರ್ಶಾ ಪರಂಪರೆಯಲ್ಲಿ ಬಹು ಕಾಲ ಉಳಿಯಬಲ್ಲದು. ಅವರ ಪುಸ್ತಕವೊಂದರ ಹೆಸರು: ‘ನಿಜ ದನಿ’. ಅವರ ಸಮಗ್ರ ವಿಮರ್ಶಾ ಸಂಪುಟಗಳ ಹೆಸರು: ‘ಮೌಲ್ಯಮಾರ್ಗ’. ಇವೆರಡೂ ಹೆಸರುಗಳು ಸಾಹಿತ್ಯ ಕೃತಿಗಳ ದನಿ ಹಾಗೂ ಮೌಲ್ಯಗಳನ್ನು ಕುರಿತಂತೆ ನಾಯಕರ ನಿರಂತರ ಹುಡುಕಾಟಗಳನ್ನು ಹೇಳುತ್ತವೆ.
ಕಳೆದ ವರ್ಷ ಮೇ ೨೬ರಂದು ತೀರಿಕೊಂಡ ಜಿ.ಎಚ್. ನಾಯಕರನ್ನು ಕುರಿತು ಹಿಂದೆ ಮತ್ತು ಈಚೆಗೆ ಪತ್ರಿಕೆಗಳಲ್ಲಿ ಬರೆದ ಟಿಪ್ಪಣಿಗಳು:
ನಾಯಕರ ಪ್ರಾಮಾಣಿಕ, ನಿಜ ದನಿ ನನ್ನನ್ನು ಥಟ್ಟನೆ ತಟ್ಟಿದ್ದು ಹದಿಹರೆಯದಲ್ಲಿ ಲೈಬ್ರರಿಯಲ್ಲಿ ಸಿಕ್ಕ ಅವರ ‘ಸಮಕಾಲೀನ’ ಎಂಬ ವಿಮರ್ಶೆಯ ಪುಸ್ತಕದಲ್ಲಿ. ಅದು ಎಷ್ಟು ಅರ್ಥವಾಯಿತೋ ಏನೋ! ಅಲ್ಲಿನ ವಿಶ್ಲೇಷಣೆಯ ಗಾಂಭೀರ್ಯ ಮಾತ್ರ ನನ್ನೊಳಗಿಳಿಯಿತು. ಒಂದು ಪಠ್ಯವನ್ನು ಓದುವ ಧ್ಯಾನಸ್ಥ ರೀತಿಯನ್ನು, ವಸ್ತುನಿಷ್ಠ ಓದು ತಲುಪುವ ಬೌದ್ಧಿಕ ಎತ್ತರವನ್ನು ನಾಯಕರ ಬರವಣಿಗೆಯಲ್ಲಿ ಮುಂದೆ ಗಮನಿಸುತ್ತಾ ಬಂದೆ. ಸಾಹಿತ್ಯವನ್ನು ಪ್ರೀತಿಯಿಂದ ಗ್ರಹಿಸುವವರಿಗೆ, ಅರ್ಥಪೂರ್ಣವಾಗಿ ಪಾಠ ಮಾಡುವವರಿಗೆ ನಾಯಕರ ರೀತಿಯ ಪಠ್ಯದ ನಿಕಟ ಓದು ಆದರ್ಶವಾದುದು. ಹೀಗೆ ಪ್ರಾಮಾಣಿಕವಾಗಿ ಪಠ್ಯವನ್ನು ಹತ್ತಿರದಿಂದ ಓದುವುದನ್ನು ಕಲಿತ ಮೇಲಷ್ಟೇ ಉಳಿದ ಅನೇಕ ಓದುಗಳು ನಮ್ಮಲ್ಲಿ ಬೆಳೆಯಬಲ್ಲವು.
ಒಮ್ಮೆ ನಾಯಕರು ರಿಫ್ರೆಶರ್ ಕೋರ್ಸಿನಲ್ಲಿ ಪಂಪನನ್ನು ಚರ್ಚಿಸುತ್ತಾ, ಅವನ ‘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ’ ಎಂಬ ಜನಪ್ರಿಯ ಘೋಷಣೆಯನ್ನು ಪ್ರಸ್ತಾಪಿಸಿದರು. ತಕ್ಷಣ ಅಲ್ಲಿದ್ದ ಟೀಚರುಗಳು, ‘ಇಲ್ಲಿ ಎಂದರೆ ವಿಕ್ರಮಾರ್ಜುನ ವಿಜಯ; ಅಲ್ಲಿ ಎಂದರೆ ಆದಿಪುರಾಣ’ ಎಂಬ ಹಳೆಯ ಪ್ಲೇಟನ್ನೇ ಹಾಕಿದರು!
“...‘ಅಲ್ಲಿ’ ಎಂದರೆ ಆದಿಪುರಾಣ ಎಂದು ಖಾತ್ರಿಯಾಗಿ ಹೇಗೆ ಹೇಳುತ್ತೀರಿ? ‘ಅಲ್ಲಿ’ ಎನ್ನುವುದು ಅಕಸ್ಮಾತ್ ಸಿಕ್ಕಿರದ ಪಂಪನ ಇನ್ನಾವುದೋ ಕೃತಿಯನ್ನೂ ಸೂಚಿಸುತ್ತಿರಬಹುದಲ್ಲವೆ!” ಎಂದು ನಾಯಕರು ನಕ್ಕರು. ಅವರ ಓಪನ್ ರೀಡಿಂಗ್‌ನ ಒರಿಜಿನಾಲಿಟಿ ಅವತ್ತು ನನ್ನಲ್ಲಿ ಹುಟ್ಟಿಸಿದ ವಿಸ್ಮಯ ಇವತ್ತಿಗೂ ಇದೆ.
ನಾಯಕರು ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಗೆ ಬರೆದ ಹಿನ್ನುಡಿಯಲ್ಲಿ ತೇಜಸ್ವಿಯವರ ಒಟ್ಟು ಸಾಹಿತ್ಯವನ್ನು ‘ಚಿರ ವಾಸ್ತವ’ಹಾಗೂ ‘ಚರ ವಾಸ್ತವ’ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ನೋಡಿದ ರೀತಿಯನ್ನು ನೀವು ಗಮನಿಸಿರಬಹುದು. ಎರಡು ಪರಿಕಲ್ಪನೆಗಳ ಮೂಲಕ ಲೇಖಕನೊಬ್ಬನ ಎಲ್ಲ ಕೃತಿಗಳನ್ನೂ ವಿವರಿಸಿದ ನಾಯಕರ ಅಧ್ಯಯನ ವಿಧಾನ ಸಾಹಿತ್ಯ ಸಂಶೋಧನೆಯಲ್ಲಿ ತೊಡಗುವವರಿಗೆ ಅತ್ಯಂತ ಉಪಯುಕ್ತ.
ಸಿರಿವರ ಪ್ರಕಾಶನ ಪ್ರಕಟಿಸಿರುವ ನಾಯಕರ ಸಮಗ್ರ ಕೃತಿಗಳನ್ನೊಳಗೊಂಡ ‘ಮೌಲ್ಯಮಾರ್ಗ’ದ ಸಂಪುಟಗಳನ್ನು ನೋಡನೋಡುತ್ತಾ, ನಾಯಕರ ವಿಮರ್ಶೆಯನ್ನು ಸರಿಯಾಗಿ ಓದದೆ ನಮ್ಮ ಬೋಧನಾವಲಯ ಗಂಭೀರ ಓದಿನ ಮಾರ್ಗಗಳನ್ನು ಕಳೆದುಕೊಂಡಿದೆ ಅನ್ನಿಸಿತು. ಅಬ್ಬರದ, ಅಸೂಕ್ಷವಾದ, ಸರಳ ಸಾಮಾಜಿಕ ಓದಿನ ಹಳ್ಳಕ್ಕೆ ಬಿದ್ದು ಒಂದು ಧಾರೆಯ ಕನ್ನಡ ವಿಮರ್ಶೆ ಕಳೆದುಕೊಂಡಿರುವ ಸೂಕ್ಷ್ಮತೆಯನ್ನು ನಾಯಕರಂಥವರ ಪಠ್ಯವಿಸ್ತರಣೆಯ ಓದಿನಿಂದಲೂ ಪಡೆಯುತ್ತಿರಬೇಕಾಗುತ್ತದೆ.
ಉತ್ತರಕನ್ನಡದ ಅಂಕೋಲದ ಸೂರ್ವೆ ಊರಿನಿಂದ ಬಂದ ಗೋವಿಂದರಾಯ ಹಮ್ಮಣ್ಣ ನಾಯಕ (ಹುಟ್ಟು: ೧೮ ಸೆಪ್ಟೆಂಬರ್ ೧೯೩೩) ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರೊಫೆಸರ್ ಆಗಿ, ಲೇಖಕರಾಗಿ, ತಮಗೆ ನಿಜಕ್ಕೂ ಒಪ್ಪಿಗೆಯಾದ ನವ್ಯ ವಿಮರ್ಶಾ ಮಾನದಂಡಗಳನ್ನು ನಿಷ್ಠುರವಾಗಿ ಬಳಸಿದರು. ಮೈಸೂರಿನ `ಸಾಹಿತ್ಯ ಪರಪುಟ್ಟ’ಗಳ ಅಸಾಹಿತ್ಯಕ ಪ್ರತಿಕ್ರಿಯೆಗಳು ಹಾಗೂ ಪೀಡನಗಳ ನಡುವೆಯೂ ಸಾಹಿತ್ಯದ ಚಿಂತನೆ, ಬೋಧನೆಗಳಲ್ಲಿ ಆಳವಾಗಿ ಮುಳುಗಿ ಸುತ್ತಲಿನ ಸಣ್ಣತನವನ್ನು ಮೀರಲೆತ್ನಿಸಿದರು.
ನಾಯಕರು ಕುವೆಂಪು ಅವರ ಸಾಹಿತ್ಯವನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದಾರೆಂದು ಕುವೆಂಪು ಅಂಧಾಭಿಮಾನಿಗಳು ಕಿಡಿ ಕಾರಿದ ಕಾಲವೂ ಇತ್ತು. ಇದರಿಂದ ಅಸಹ್ಯಗೊಂಡ ಪೂರ್ಣಚಂದ್ರ ತೇಜಸ್ವಿ, ಮೇಷ್ಟರ ಕೆಲಸ ಬಿಟ್ಟು ತನ್ನಂತೆಯೇ ತೋಟ ಮಾಡಲು ನಾಯಕರನ್ನು ಕರೆಯುತ್ತಾ ಹೇಳುತ್ತಾರೆ: ‘ಯಾವಯಾವುದೋ ಹಾಳುಮೂಳು ರದ್ದಿ ಟೆಕ್ಸ್ಟ್ ಬುಕ್ಕುಗಳನ್ನು ಹತ್ತೂವರೆಯಿಂದ ಐದು ಗಂಟೆಯವರೆಗೂ ಪಾಠ ಮಾಡುವುದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದು… ಇದರಲ್ಲೇ ನಿಮ್ಮ ಟೈಂ ಕಳೆದು ಹೋಗುತ್ತೆ. ಅದು ಅಕಡೆಮಿಕ್ ವರ್ಕ್ ಏನ್ರೀ?’
ನಾಯಕರು ಕೆಲಸ ಬಿಡಲಿಲ್ಲ. ತೋಟ ಮಾಡಲಿಲ್ಲ. ತಾವು ಬೋಧಿಸುತ್ತಿದ್ದ ಉತ್ತಮ ಕೃತಿಗಳ ನಿಜದನಿಯನ್ನು ವಿಸ್ತರಿಸುತ್ತಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಬೆಳೆಸುತ್ತಾ ಹೋದರು. ನಾಯಕರಂತೆ ಐವತ್ತು ವರ್ಷಗಳ ಕಾಲ ಹಲ್ಲು ಕಚ್ಚಿ ಸಾಹಿತ್ಯ ವಿಮರ್ಶೆಯ ಮೌಲ್ಯಮಾರ್ಗದಲ್ಲಿರುವುದು ಸುಲಭವಲ್ಲ. ಈ ಮಾರ್ಗದಲ್ಲಿರಲು ಸಾಹಿತ್ಯ ವಿಮರ್ಶೆಯ ಮಾನದಂಡಗಳ ಆಳವಾದ ಗ್ರಹಿಕೆಯ ಜೊತೆಜೊತೆಗೇ ತಾನು ಬಳಸುತ್ತಿರುವ ವಿಮರ್ಶಾ ಮಾರ್ಗಗಳ ಬಗ್ಗೆ ಸ್ಪಷ್ಟತೆಗಳಿರಬೇಕು; ಆ ಮಾರ್ಗಗಳ ಬಗ್ಗೆ ಆಳದ ನಂಬಿಕೆಯಿರಬೇಕು; ಸಾಹಿತ್ಯ ವಿಮರ್ಶೆ ಬಾಯುಪಚಾರದ ಮಾತುಗಳನ್ನು ಮೀರಿ ವಸ್ತುನಿಷ್ಠವಾದ ಸತ್ಯಶೋಧನೆಯಾಗಬೇಕು.… ಇವೆಲ್ಲ ನಾಯಕರ ವಿಮರ್ಶೆಯ ಮೂಲಕವೂ ನಮಗೆ ಮನವರಿಕೆಯಾಗುತ್ತಾ ಹೋಗುತ್ತವೆ.
ನಾಯಕರ ವಿಮರ್ಶೆಯಲ್ಲಿದ್ದ ವಸ್ತುನಿಷ್ಠ ನೋಟವನ್ನು ಸಮಾಜದ ಎಲ್ಲ ವಲಯಗಳೂ ಎದುರು ನೋಡುತ್ತಿರುತ್ತವೆ ಎಂಬುದಕ್ಕೆ ಒಂದು ಉದಾಹರಣೆ: ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿ ಮೈಸೂರಿನಲ್ಲಿ ದಲಿತ ಬಣಗಳನ್ನು ಒಂದುಗೂಡಿಸಲು ಮುಕ್ತ ಚರ್ಚೆಯೊಂದು ನಡೆಯಿತು. ದಿನವಿಡೀ ನಡೆದ ಈ ಚರ್ಚೆಯನ್ನು ನಿರ್ವಹಿಸಲು ದಲಿತ ಚಳುವಳಿಗಾರರು ಜಿ.ಎಚ್. ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದರ ಕಾರಣ ಮುಂದೊಮ್ಮೆ ಹೊಳೆಯಿತು: ವ್ಯಕ್ತಿಯೊಬ್ಬ ಸಾಹಿತ್ಯವಿಮರ್ಶೆಯಲ್ಲಿ ಬಳಸುವ ವಸ್ತುನಿಷ್ಠತೆ ಸಮಾಜದ ಇನ್ನಿತರ ವಲಯಗಳನ್ನು ಗ್ರಹಿಸಲೂ ಅತ್ಯಗತ್ಯ. ವಿಮರ್ಶೆಯ ಚಟುವಟಿಕೆ ಅಖಂಡ. ಅದು ಎಲ್ಲ ವಲಯಗಳಿಗೂ ಒಂದೇ ತೀವ್ರತೆಯಿಂದ ಚಾಚಿಕೊಳ್ಳಬಲ್ಲದು!
ಆ ಕಾಲದಲ್ಲಿ ನಾಯಕರು ಸಾಹಿತ್ಯ ವಿಮರ್ಶೆಯಾಚೆಗೆ ಹೊರಳಿ, ‘ದಲಿತ ಹೋರಾಟ: ಗಂಭೀರ ಸವಾಲುಗಳು’ ಎಂಬ ಪುಟ್ಟ ಪುಸ್ತಕ ಬರೆದರು. ದಲಿತ ಚಳುವಳಿ ಶಿಸ್ತುಬದ್ಧ ಅಕಡೆಮಿಕ್ ಗ್ರಹಿಕೆಗಳಿಂದಲೂ ಕಲಿಯಬೇಕಾದ ಅಗತ್ಯವನ್ನು ಸೂಚಿಸುವ ಪುಸ್ತಕವಿದು. ಸಾಹಿತ್ಯ ವಿಮರ್ಶೆಯ ಜೊತೆಗೇ ಖಚಿತ ವೈಚಾರಿಕ ಮುಖವೂ ನಾಯಕರಲ್ಲಿತ್ತು. ಆದ್ದರಿಂದಲೇ ಅಂಬೇಡ್ಕರ್ ಕುರಿತ ಅವರ ಲೇಖನವೂ ಮುಖ್ಯವಾದುದು. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದನ್ನು ಅವರು ಪ್ರಶ್ನಿಸಿದ ರೀತಿ; ಮಠಗಳು, ಕೋಮುವಾದ ಹಾಗೂ ಜಾತಿ ಸಂಘಟನೆಗಳ ಬಗ್ಗೆ ತಳೆದ ನಿಲುವುಗಳು ಅವರ ಸ್ಪಷ್ಟ ವೈಚಾರಿಕ ಚೌಕಟ್ಟನ್ನು ಬಿಂಬಿಸುತ್ತವೆ.
ಜಿ.ಎಚ್. ನಾಯಕರ ‘ಸಮಕಾಲೀನ’, ‘ಅನಿವಾರ್ಯ’, ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ಪುಸ್ತಕಗಳ ನಂತರ ಬಂದ ‘ಉತ್ತರಾರ್ಧ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಅವರ ವಿಮರ್ಶೆಯ ಪೂರ್ವಾರ್ಧದ ಪುಸ್ತಕಗಳ ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಈ ಪ್ರಶಸ್ತಿ ಪಡೆದ ಪುಸ್ತಕದಲ್ಲಿರಲಿಲ್ಲ. ಈ ಮಾತನ್ನು ಅವರಿದ್ದಾಗಲೇ ಬರೆದಿದ್ದೆ.
ಆದರೂ ಅವರ ಬರವಣಿಗೆ ತೀರಾ ಕುಂದಿರಲಿಲ್ಲ. ಗಂಭೀರ ಓದಿನ ಶ್ರಮ ಹಾಗೂ ಪ್ರಾಮಾಣಿಕತೆಗಳ ಬುನಾದಿಯುಳ್ಳ ಬರವಣಿಗೆ ಏರುಪೇರನ್ನು, ಇಳಿಮುಖವನ್ನು ಕಾಣಬಹುದು; ಆದರೆ ಅದು ತೀರಾ ಅಳ್ಳಕವಾಗುವುದಿಲ್ಲ.
ನಾಯಕರ ಕೊನೆಯ ಘಟ್ಟದ ಬರವಣಿಗೆ ಓದುವಾಗ ಹೀಗೆನ್ನಿಸಿತು: ಸಾಧಾರಣ ಕೃತಿಗಳ ಬಗ್ಗೆ ಬರೆಯುವಾಗ ನಮ್ಮ ಬರವಣಿಗೆಯೂ ಸಾಧಾರಣವಾಗುತ್ತದೇನೋ! ಕಾರಂತರ ‘ಒಂಟಿದನಿ’, ‘ಮೊಗ ಪಡೆದ ಮನ’ ಕಾದಂಬರಿಗಳ ಬಗೆಗೆ ನಾಯಕರ ವಿವರಣಾತ್ಮಕ ವಿಮರ್ಶೆಯನ್ನು ಓದುವಾಗ ಹೀಗನ್ನಿಸಿತು. ಅಲ್ಲಿ ಕೂಡ ಸರಿಯಾದ ಪ್ರಶ್ನೆಗಳನ್ನು ನಾಯಕರು ಎತ್ತಲು ಮರೆತಿಲ್ಲ ಎನ್ನುವುದೂ ನಿಜ.
ಸಾಹಿತ್ಯಸಂಸ್ಕೃತಿಯನ್ನು ಪೊರೆಯುವ ಕೆಲಸ ಆಳವಾದ ಅಧ್ಯಯನ, ಸೂಕ್ಷ್ಮ ಚರ್ಚೆ, ಸಮಾಜದ ಆರೋಗ್ಯ ಕುರಿತ ಕಾಳಜಿ, ಜವಾಬ್ದಾರಿಯುತ ಬೋಧನೆ, ಅರ್ಥಪೂರ್ಣ ವಿಮರ್ಶೆ, ಪಠ್ಯಪುಸ್ತಕಗಳ ಬಗೆಗೆ ಚಿಂತನೆ… ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಹೊಣೆಯನ್ನು ಹಲವು ದಶಕಗಳ ಕಾಲ ನಿರ್ವಹಿಸಿದ ಜಿ.ಎಚ್. ನಾಯಕರ ನಿಜ ಮಾದರಿ ಎಲ್ಲ ಕನ್ನಡ ತಲೆಮಾರುಗಳಿಗೂ ಬೇಕಾಗುತ್ತದೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ವಿದ್ಯಾರ್ಥಿನಿಯೊಬ್ಬರು ತಮ್ಮೂರಿನಲ್ಲಿದ್ದ ಜಮೀನಿನಲ್ಲಿ ಕೃಷಿ ಮಾಡುವ ಸಾಹಸಕ್ಕಿಳಿದಿದ್ದರು. ಸಾಹಿತ್ಯ, ಸಂಗೀತಗಳ ಲೋಕದ ಸೂಕ್ಷ್ಮಜೀವಿಯಾದ ಆಕೆಗೆ ಪಕ್ಕದ ಜಮೀನಿನವರು ಅನಗತ್ಯ ಕಿರುಕುಳ ಕೊಡತೊಡಗಿದರು. ಈಚೆಗೆ ಅವರು ತಮ್ಮ ಕೃಷಿ ಸಾಹಸ ಹೇಳುತ್ತಲೇ ತಮ್ಮ ಜಮೀನಿನ ಪಕ್ಕದ 'ಕಿರುಕುಳಜೀವಿ’ಯ ಉಪಟಳ ಹೇಳಿಕೊಂಡರು. ಈ 'ಕಿರುಕುಳಜೀವಿ’ ಎಂಬ ಪದ ನನಗೊಮ್ಮೆ ಹೀಗೇ ಹೊಳೆಯಿತು! ಅದರ ಸಂಕ್ಷಿಪ್ತರೂಪ 'ಕಿಕುಜೀ!’
ಅದಿರಲಿ! ಆಕೆಯ ಊರಿಗೆ ಸ್ವಲ್ಪ ಹತ್ತಿರದಲ್ಲಿ ಗೆಳೆಯರೊಬ್ಬರು ಪೊಲೀಸ್ ಅಧಿಕಾರಿಯಾಗಿರುವುದು ನೆನಪಾಯಿತು. 'ಅವರನ್ನು ಭೇಟಿ ಮಾಡಿ ನೋಡಿ’ ಎಂದೆ.
ಸಮಸ್ಯೆ ಹೊತ್ತು ಪೊಲೀಸ್ ಅಧಿಕಾರಿಯನ್ನು ಭೇಟಿಯಾದ ಆಕೆ ಮಾತಿನ ನಡುವೆ ಅವರ ಸಾಹಿತ್ಯ ವಿಹಾರದ ಪರಿ ಕಂಡು ವಿಸ್ಮಯಗೊಂಡರು; ಆಕೆಯ ಸಮಸ್ಯೆಗೂ ಅಧಿಕಾರಿ ಒಂದು ಪರಿಹಾರ ತೋರಿಸಿದ್ದರು. ಆ ಪರಿಹಾರಕ್ಕಿಂತ ಹೆಚ್ಚಾಗಿ, ಕಾಖಿ ತೊಟ್ಟ ಅಧಿಕಾರಿಯೊಳಗೆ ಉಕ್ಕುತ್ತಲೇ ಇದ್ದ ಸಾಹಿತ್ಯದ ಒರತೆ ಕಂಡು ಆಕೆ ದಂಗಾಗಿದ್ದರು.
ಆಕೆ ತಮ್ಮ ವಿಸ್ಮಯವನ್ನು ಹೇಳುತ್ತಿರುವಾಗ ಹತ್ತು ವರ್ಷಗಳ ಕೆಳಗೆ ಈ ಅಧಿಕಾರಿ ನನಗೂ ಇಂಥದೇ ವಿಸ್ಮಯ ಹುಟ್ಟಿಸಿದ್ದು ನೆನಪಾಯಿತು. ಆಗಿನ್ನೂ ಅವರು ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದರು. ಅವರ ಪರಿಚಯವೂ ನನಗಿರಲಿಲ್ಲ. ನಾನು ಯಾವುದೋ ಸಮಸ್ಯೆ ಹೇಳಿದ ತಕ್ಷಣ, ಅವರು ನನ್ನ ಸಹಾಯಕ್ಕೆ ಧಾವಿಸಿದ್ದರು. ಅಷ್ಟೊತ್ತಿಗಾಗಲೇ ನನ್ನ ಬರಹಗಳನ್ನು ಗಮನಿಸಿದ್ದ ಅವರು ಮಾತುಮಾತಾಡುತ್ತಲೇ ತಮ್ಮ ಯಾವುದೋ ಮಾತಿಗೆ ಉದಾಹರಣೆಯಾಗಿ ಡಿ.ವಿ.ಜಿಯವರ ‘ಮಂಕುತಿಮ್ಮನ ಕಗ್ಗ’ದ ಪದ್ಯವೊಂದನ್ನು ಉಲ್ಲೇಖಿಸಿದರು.
ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸುವುದು ಸಾಮಾನ್ಯವಾಗಿ ಸಾಹಿತ್ಯಾಸಕ್ತರ ಅಭ್ಯಾಸ ಎಂದುಕೊಂಡು ಸುಮ್ಮನಿದ್ದೆ. ಆದರೆ ಮರುಗಳಿಗೆಗೇ ಆ ಇನ್‌ಸ್ಪೆಕ್ಟರ್ ಸ್ನೇಹಮಯ ಸವಾಲೊಂದನ್ನು ಎಸೆದರು:
‘ನೀವು ಯಾವುದಾದರೂ ಥೀಮ್ ಹೇಳಿ, ನಾನು ಅದಕ್ಕೆ ತಕ್ಕ ಕಗ್ಗವೊಂದನ್ನು ಹೇಳುತ್ತೇನೆ!’
‘ಸರಿ! ’ಸೈಲೆನ್ಸ್’ ಬಗ್ಗೆ ಮಂಕುತಿಮ್ಮನ ಕಗ್ಗದಲ್ಲಿ ಏನಾದರೂ ಬರುತ್ತಾ, ನೋಡಿ’ ಎಂದೆ. ಒಂದು ಕಾಲಕ್ಕೆ ನನಗೆ ಪ್ರಿಯವಾಗಿದ್ದ ಆ ಪದ್ಯ ಇನ್‌ಸ್ಪೆಕ್ಟರ್ ನಾಲಗೆಯ ತುದಿಯಲ್ಲೇ ಇತ್ತು!
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ‍್ಯ ಚಂದ್ರರದೊಂದೂ ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ.
ಸಣ್ಣಪುಟ್ಟದ್ದನ್ನೇ ‘ಸಾಧನೆ’ ಎಂದುಕೊಂಡು ಆ ಬಗ್ಗೆ ಶಂಖ ಬಾರಿಸಿ ಕೂಗಿಕೊಳ್ಳುವ ಆತ್ಮಕೇಂದ್ರಿತ ಭಾರತೀಯರಿಗೆ ಎಚ್ಚರ ಹೇಳುವ ಈ ಪದ್ಯವನ್ನು ಹದಿಹರೆಯದಲ್ಲೇ ಒಪ್ಪಿ ಮೆಚ್ಚಿದ್ದು, ಹಾಗೂ ಆ ಪದ್ಯದ ಸಂದೇಶದಂತೆ ಅಷ್ಟಿಷ್ಟು ತುಟಿ ಹೊಲಿದುಕೊಂಡಿದ್ದು ನೆನಪಾಯಿತು! ಇದೀಗ ಮತ್ತೆ ಆ ಪದ್ಯ ಕೇಳಿ ಪುಳಕ ಹುಟ್ಟಿತು.
ಈ ಅಧಿಕಾರಿಯ ವಿಶಿಷ್ಟ ಪ್ರತಿಭೆಯ ಬಗ್ಗೆ ನನ್ನಲ್ಲಿ ಹುಟ್ಟಿದ ಗೌರವ, ಆನಂದಗಳನ್ನು ಅವರಿಗೆ ತುಟಿ ಹೊಲಿದುಕೊಂಡೇ, ಅಂದರೆ ಸೂಚ್ಯವಾಗಿ, ಹೇಳಿದೆ. ಆಗ ಅವರು ‘ಅಲ್ಲಮಪ್ರಭುಗಳ ವಚನಗಳು, ಗೋಪಾಲಕೃಷ್ಣ ಅಡಿಗರ ಕವನಗಳನ್ನು ಎಲ್ಲಿ ಬೇಕಾದರೂ ಕೇಳಿ, ಹೇಳುತ್ತೇನೆ’ ಎಂದು ಇನ್ನಷ್ಟು ಬೆರಗು ಹುಟ್ಟಿಸಿದರು!
ಮಂಕುತಿಮ್ಮನ ಕಗ್ಗದ ಬಗೆಗಿನ ಅವರ ಒಲವನ್ನೇನೋ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಿತ್ತು; ಆದರೆ ಕನ್ನಡದ ಶ್ರೇಷ್ಠ ಕವಿಗಳ ಸಾಲಿನಲ್ಲಿರುವ ಅಲ್ಲಮಪ್ರಭು, ಅಡಿಗರಂಥ ಸಂಕೀರ್ಣ ಕವಿಗಳಿಗೂ ಚಾಚಿಕೊಂಡಿರುವ ಅವರ ಬಗ್ಗೆ ವಿಶೇಷ ಅಭಿಮಾನ ಮೂಡತೊಡಗಿತು. ಆ ಗಳಿಗೆಯಲ್ಲೇ ನಾನು ಅವರ ಗೆಳೆಯನಾದೆ; ಸಂವೇದನೆಗಳು ಮ್ಯಾಚ್ ಆಗದೆ, ತಕ್ಷಣ ಇಂಥ ಸ್ನೇಹ ಹುಟ್ಟುವುದು ಕಷ್ಟ. ನೀವು ಇಂಥ ಸ್ನೇಹಿತ, ಸ್ನೇಹಿತೆಯರನ್ನು ಹೆಚ್ಚು ಭೇಟಿ ಮಾಡಿ, ಬಿಡಿ; ಆ ಸ್ನೇಹ ಹಾಗೇ ಇರುತ್ತದೆ. ಅವತ್ತಿನಿಂದಲೂ ಅವರು ನನ್ನ ಅಥವಾ ಇತರರ ಕಷ್ಟಗಳಲ್ಲಿ ಕೈ ಹಿಡಿದಿದ್ದಾರೆ. ಅದನ್ನೆಲ್ಲ ಹೇಳಲು ಇದು ವೇದಿಕೆಯಲ್ಲ.
ಇದನ್ನೆಲ್ಲ ಬರೆಯುತ್ತಾ, ’ಸ್ನೇಹ’ ಎಂಬ ಪದ ಸುಳಿದ ತಕ್ಷಣ, ಕಿ.ರಂ. 'ಸ್ನೇಹ' ಎಂಬ ಪದಕ್ಕೆ ಕೊಟ್ಟ ವಿವರಣೆಯನ್ನು ನನ್ನ ’ಕಾಮನಹುಣ್ಣಿಮೆ’ ಕಾದಂಬರಿಯ (ಪಲ್ಲವ ಪ್ರಕಾಶನ) ಚಂದ್ರ ನೆನಪಿಸಿಕೊಳ್ಳುವ ಭಾಗ ನೆನಪಾಯಿತು:
’[ಕಿ.ರಂ. ನಾಗರಾಜರು] ಇದ್ದಕ್ಕಿದ್ದಂತೆ ’ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೇ ಸುತ್ತಿ ಸುತ್ತಿ…’ ಎಂಬ ಅಕ್ಕನ ವಚನಕ್ಕೆ ಬಂದು ನಿಂತರು. ಅದೇ ಸಾಲನ್ನು ಇನ್ನೊಂದು ಸಲ ಹೇಳಿ, ’ಸ್ನೇಹ ಅಂದರೆ ಏನು ಗೊತ್ತೇನ್ರೀ?’ ಎಂದು ಚಣ ಮಾತು ನಿಲ್ಲಿಸಿ, ಸೈಲೆಂಟಾಗಿ ಸುತ್ತಮುತ್ತ ನೋಡಿದರು; ಕನ್ನಡ ಮೇಷ್ಟರಾದಿಯಾಗಿ ಯಾರೂ ಇದಕ್ಕೆ ಉತ್ತರ ಹೇಳಲು ಬಾಯಿ ಬಿಡಲಿಲ್ಲ. ಆಮೇಲೆ ಅವರೇ, ’ಸ್ನೇಹ ಅಂದರೇ … ಅಂಟು ಅಂತ! ಗೊತ್ತೇನ್ರೀ!’ ಎಂದು ನಗುತ್ತಾ ಕಣ್ಣು ಮಿಟುಕಿಸಿದರು!’
ಕಿ.ರಂ. ಮಾತನ್ನು ಉಲ್ಲೇಖಿಸುತ್ತಿರುವಂತೆಯೇ ಅವರೂ, ಕವಿ ಕೆ.ಬಿ. ಸಿದ್ಧಯ್ಯನವರೂ ಒಂದು ರಾತ್ರಿ ’ವಚನದಾಟ’ ಶುರು ಮಾಡಿದ್ದು ಕಣ್ಣಿಗೆ ಬಂತು! ಒಂದು ವಚನ ಒಗೆದು, ಅದಕ್ಕೆ ಸರಣಿಯಂತೆ ಸೇರಿಕೊಳ್ಳುವ ಇನ್ನೊಂದು ವಚನ, ಮತ್ತೊಂದು ವಚನ… ಹೀಗೆ ಅವರ ಸುಂದರ ಸಂಧ್ಯಾ ವಚನ ಖವ್ವಾಲಿ ನಡೆಯುತ್ತಿತ್ತು. ಅಂಥ ಪ್ರತಿಭೆಯನ್ನು ನಾನು ಮತ್ತೆ ಕಂಡಿದ್ದು ಈ ಹೊಸ ಗೆಳೆಯನಲ್ಲಿ.
ಇದಕ್ಕಿಂತ ಭಿನ್ನವಾದ, ಜನಪದ ಲೋಕದ ಅನನ್ಯ ಪ್ರತಿಭೆಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಒಗಟಿಗೊಂದು ಒಗಟು ಹೇಳುವ ಪ್ರತಿಭೆಗಳು, ಸವಾಲ್ ಜವಾಬ್‌ಗಳ, ಖವ್ವಾಲಿಗಳ ಅದ್ಭುತ ಹಾಡುಗಾರ, ಹಾಡುಗಾರ್ತಿಯರು ಕೂಡ ನಿಮಗೆ ಪರಿಚಯವಿರಬಹುದು. ವಚನ ಸಾಹಿತ್ಯ ರಚನೆಯಲ್ಲಿ ಭಾಗಿಯಾದ ಹಲವರು ಪ್ರತಿಮೆಗೊಂದು ಪ್ರತಿಮೆ ತಗುಲಿ ಬೆಳೆದ ವಚನಗಳನ್ನು ನುಡಿದಿದ್ದಾರೆ ಎಂದು ಊಹಿಸುವೆ. ಆಫ್ರಿಕದ ಜಾನಪದದಲ್ಲಿ ಕತೆಗೊಂದು ಕತೆ, ಸರಗತೆಗಳ ಲೋಕವೂ ಇದೆ.
ಆದರೆ ಈ ಕಾಲದ ಮೌಖಿಕ ಪ್ರತಿಭೆ ಈ ಗೆಳೆಯನಲ್ಲಿ ಕಾಲಕ್ಕೆ ತಕ್ಕ ರಿಫೈನ್‌ಮೆಂಟ್ ಪಡೆದಿತ್ತು. ನಾವು ಓದಿ ಹೀರಿಕೊಂಡಿದ್ದರ ನೆನಪು ಹೀಗೆ ಸೃಜನಶೀಲವಾಗಿ ಒದಗುವಂತೆ, ನುಡಿಯುವಂತೆ ನೆರವಾಗುವ ಈ ಪ್ರತಿಭೆ ಸಾಮಾನ್ಯದ್ದಲ್ಲ!
ಆ ಗೆಳೆಯ ಮೊದಲ ಸಲ ಭೇಟಿಯಾಗಿ ಹೊರಡುವಾಗ ನನ್ನ ’ಇಂತಿ ನಮಸ್ಕಾರಗಳು: ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ’ ಪುಸ್ತಕ ಕೊಟ್ಟೆ. ಅವರು ಜೀಪು ಹತ್ತಿದರು.
ಮುಂದಿನ ಎರಡೇ ನಿಮಿಷದಲ್ಲಿ ಆ ಪುಸ್ತಕದ ಪರಿವಿಡಿಯ ಮೇಲೆ ಕಣ್ಣಾಡಿಸಿದ್ದ ಅವರು ಫೋನ್ ಮಾಡಿದರು:
‘ಸಾರ್! ಇಲ್ಲೊಂದು ಚಾಪ್ಟರ್ ಟೈಟಲ್ ಬರುತ್ತಲ್ಲಾ- ‘ಇದ ಕಂಡು ಬೆರಗಾದೆ ಗುಹೇಶ್ವರಾ!’ ಇದು ಅಲ್ಲಮ ಪ್ರಭುಗಳ ’ಆ….’ ವಚನದ ಸಾಲಲ್ಲವೆ?’
’ಹೂಂ’ ಎಂದೆ.
ಆ ವಚನ ಅವರ ಬಾಯಲ್ಲೇ ಇತ್ತು:
ಬೆಳಕೂ ಅದೇ! ಕತ್ತಲೆಯೂ ಅದೇ!
ಇದೇನು ಚೋದ್ಯವೊ? ಒಂದಕ್ಕೊಂದಂಜದು
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ ಗುಹೇಶ್ವರಾ!
ಅವರು ಫೋನಿಟ್ಟ ತಕ್ಷಣ, ನಮ್ಮ ಅನೇಕ ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಲ್ಲಿ ಹುಡುಕಿದರೂ ಕಾಣದ ಅವರ ತೀವ್ರ ಕಾವ್ಯಮೋಹ ನನ್ನೊಳಗೆ ಹಬ್ಬತೊಡಗಿತು. ಅವರು ಸಮಸ್ಯೆಯೊಂದನ್ನು ಬಗೆಹರಿಸಲು ಬಂದಿದ್ದರು ಎಂಬುದನ್ನೇ ಮರೆತು ಅವರ ನವಮೌಖಿಕ ಪ್ರತಿಭಾಲೋಕ ತೆರೆದ ವಿಸ್ಮಯದಲ್ಲಿ ಮುಳುಗಿದೆ. ಅವತ್ತು ಅವರ ಹಾಜರಿಯ ವೈಖರಿಯಿಂದಲೇ ಕಳ್ಳ ಸಿಕ್ಕು ಬಿದ್ದ; ಹೇಳದೆ ಕೇಳದೆ ಬೇರೆ ಕಡೆ ವರ್ಗ ಮಾಡಿಸಿಕೊಂಡು ಹೋದ! ಆ ಕತೆ ಬೇರೆ!
ಒಂದು ಪ್ರತಿಮೆ ಇನ್ನೊಂದು ಪ್ರತಿಮೆಗೆ ತಗುಲಿ ಕವಿತೆ ಬೆಳೆಯುವ ರೀತಿ ಕವಯಿತ್ರಿಯರಿಗೆ ಗೊತ್ತಿರುತ್ತದೆ; ಎಷ್ಟೋ ಸಲ ಹಟಾತ್ತನೆ ಹೊಳೆದ ಪದವೇ ತಮ್ಮ ಕವಿತೆಯನ್ನು ಎಲ್ಲೋ ಕರೆದೊಯ್ಯುವ ಬೆರಗನ್ನು, ಬೆಡಗನ್ನು ಸೃಜನಶೀಲರು ಅನುಭವಿಸುತ್ತಲೇ ಇರುತ್ತಾರೆ. ಆದರೆ ಓದುಗ, ಓದುಗಿಯರ ಒಳಗಿಳಿದ ನೂರಾರು ಪಠ್ಯಗಳು ಹೀಗೆ ಕರೆದಾಗ ಒದಗಿ ಬರುವ ಪ್ರತಿಭೆ ಮಾತ್ರ ಅಪರೂಪ ಮತ್ತು ವಿಶಿಷ್ಟ!
ನಾವು ಓದಿದ ಕವಿತೆಗಳು ನಮ್ಮ ಆಳಕ್ಕಿಳಿಯದೆ, ನಮ್ಮ ಒಳಗಿನ ಭಾಗವಾಗದೆ, ಕಾವ್ಯದ ಬಗ್ಗೆ ಸಹಜ ಪ್ರೀತಿಯಿಲ್ಲದೆ, ಕವಿತೆಯ ಸಾಲುಗಳು ಹೀಗೆ ಎದೆಯಿಂದ ಪುಟಿದೆದ್ದು ಹೊರ ಚಿಮ್ಮಲಾರವು. ಕಿ.ರಂ. ಬಾಯಲ್ಲಿ ಹೀಗೆ ನುಗ್ಗಿ ನುಗ್ಗಿ ಬರುತ್ತಿದ್ದ ಕಾವ್ಯಪ್ರತಿಮೆಗಳನ್ನು ಕೇಳಿದ್ದ ನಾನು ಅವರ ನಂತರ ಹೀಗೆ ಸಾಲುಸಾಲುಗಳನ್ನು ನುಡಿಯಬಲ್ಲ, ನುಡಿಸಬಲ್ಲ ಮತ್ತೊಬ್ಬರನ್ನು ಮೊದಲ ಬಾರಿಗೆ ಕಂಡಿದ್ದೆ. ’ಕುಸುಮಬಾಲೆ’ಯನ್ನು ಎಲ್ಲಿ ಕೇಳಿದರಲ್ಲಿ ಹೇಳುವ ಮೈಸೂರು ಸೀಮೆಯ ಕನ್ನಡ ಪ್ರೊಫೆಸರ್ ಶಿವಸ್ವಾಮಿ ಕೂಡ ನೆನಪಾದರು.
ಮತ್ತೆ ಪೊಲೀಸ್ ಗೆಳೆಯರ ಮಾತಿಗೇ ಬರುವುದಾದರೆ, ಕಾವ್ಯ ಸಂಗಾತ ಅವರ ಮಾತು, ಗ್ರಹಿಕೆಗಳನ್ನು ಚೆನ್ನಾಗಿಯೇ ರೂಪಿಸಿದಂತಿತ್ತು. ಅದು ಮುಂದೆಯೂ ನನ್ನ ಅನುಭವಕ್ಕೆ ಬಂತು. ಅನೇಕ ಸಾಹಿತ್ಯದ ಮೇಷ್ಟರುಗಳು ತಪ್ಪಿಯೂ ಸಾಹಿತ್ಯ ಮಾತಾಡುವುದಿಲ್ಲ; ಆದರೆ ಈ ಗೆಳೆಯ ಸಾಹಿತ್ಯದ ನಾವೆಯಲ್ಲೇ ಸದಾ ತೇಲುವವರಂತೆ ಕಂಡರು!
ಇಂಥ ಮೌಖಿಕ ಪ್ರತಿಭೆಯ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮೂಲದ ರವೀಶ್ ಸಿ. ಆರ್. ಈಚೆಗೆ ಹುಬ್ಬಳ್ಳಿ ಧಾರವಾಡದಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆದ ಮೇಲೆ ಹೆಚ್ಚು ಬಿಜಿಯಾಗಿರುವುದು ಸಹಜ. ಆದರೆ ಅವರ ಮನಸ್ಸು ಹಳಗನ್ನಡ, ಹೊಸಗನ್ನಡವೆನ್ನದೆ ಕನ್ನಡ ಕಾವ್ಯಲೋಕದಲ್ಲೇ ತಂಗಲು ಕಾತರಿಸುತ್ತಿರುತ್ತದೆ.
ತಮ್ಮ ಬೆಂಗಳೂರಿನ ಮನೆಯಲ್ಲಿ ಸಾವಿರಾರು ಪುಸ್ತಕಗಳ ಖಾಸಗಿ ಗ್ರಂಥಾಲಯವನ್ನೂ ಜೋಡಿಸಿಕೊಂಡಿರುವ ರವೀಶ್ ನಮ್ಮೆಲ್ಲ ಮೇಡಂ, ಮೇಷ್ಟರುಗಳಿಗೂ ಒಳ್ಳೆಯ ಮಾದರಿಯಾಗಬಲ್ಲರು. ಮೊನ್ನೆಮೊನ್ನೆಯವರೆಗೂ ಪೊಲೀಸ್ ಅಧಿಕಾರಿಯಾಗಿದ್ದು, ಈಗ ಬೇರೊಂದು ಇಲಾಖೆಯಲ್ಲಿರುವ ಸ್ತ್ರೀವಾದಿ ಚಿಂತಕಿ ಧರಣೀದೇವಿ ಈಚೆಗೆ ಬರೆದ ಸೂಕ್ಷ್ಮ ಪದ್ಯಗಳು, ರವಿ ಬೆಸಗರಹಳ್ಳಿ ಆಗಾಗ್ಗೆ ಬರೆಯುವ ಚುರುಕಾದ ಪದ್ಯಗಳು ಕೂಡ ನೆನಪಾಗುತ್ತಿವೆ. ವೃತ್ತಿಯ ಒತ್ತಡಗಳಲ್ಲಿ ಸೃಜನಪ್ರತಿಭೆ ಛಲದಿಂದ ಹೊರ ಚಿಮ್ಮುವ ಈ ಪರಿ ಕಂಡಾದರೂ ’ಅಯ್ಯೋ! ಟೈಮೇ ಇಲ್ಲ!’ ಎಂದು ಹಲುಬುವ ವೃತ್ತಿಜೀವಿಗಳು ಸ್ಫೂರ್ತಿ ಪಡೆಯಲಿ!
ಹತ್ತಾರು ವರ್ಷ ಒಂದು ವೃತ್ತಿಯಲ್ಲಿರುವವರ ಭಾಷೆ, ಧೋರಣೆ, ವರ್ತನೆಗಳನ್ನು ಆ ವೃತ್ತಿಯೇ ರೂಪಿಸುತ್ತಿರುತ್ತದೆ, ನಿಜ. ಆದರೆ ನಮ್ಮ, ನಿಮ್ಮೆಲ್ಲರಂತೆ ಪೊಲೀಸರು ಕೂಡ ತಮ್ಮ ವೃತ್ತಿಯ ನಿರ್ದೇಶನ ಮೀರಿ ಕಲೆ, ಸಾಹಿತ್ಯಗಳ ಒರತೆಗಳನ್ನು ಹುಡುಕಿಕೊಳ್ಳುತ್ತಿರುತ್ತಾರೆ ಎಂಬುದನ್ನು ಬಾಲ್ಯದಿಂದಲೂ ನೋಡಿ ಬಲ್ಲೆ.
ನಮ್ಮ ಗ್ರಾಮೀಣ ರಂಗಭೂಮಿಯಲ್ಲಿ, ಹಳೆಯ ಬೆಂಗಳೂರಿನ ಭಾಗಗಳಲ್ಲಿ ಪೌರಾಣಿಕ ಪಾತ್ರಗಳನ್ನು ಮಾಡುತ್ತಿದ್ದ, ಈಗಲೂ ಪಾತ್ರ ಮಾಡುತ್ತಿರಬಹುದಾದ, ಪೊಲೀಸರು ನಿಮಗೆ ನೆನಪಾಗುತ್ತಿದ್ದಾರೆಯೆ?
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ನಮ್ಮ ಮನಸ್ಸಿಗೆ ಪ್ರಿಯವಾದ ವಸ್ತುವಿನ ಬಗ್ಗೆ ಸಾರ್ವಜನಿಕ ಭಾಷಣ ಮಾಡುವಾಗಲೆಲ್ಲ ಆ ಮಾತುಗಳನ್ನು ಕೇಳಲು ತಕ್ಕ ಮುಖಗಳನ್ನು ಚಿತ್ತ ಹುಡುಕುತ್ತಿರುತ್ತದೆ; ನಮ್ಮ ಕಣ್ಣು ಸಭಾಂಗಣದ ಉದ್ದಗಲಕ್ಕೂ ಹರಿದಾಡುತ್ತಿರುತ್ತದೆ; ನಮ್ಮ ‘ಭಾಷಣಮಗ್ನ ಮನಸ್ಸು’ ತಂಗಲು ತಕ್ಕ ತಾಣವನ್ನು ಅರಸುತ್ತಿರುತ್ತದೆ.
ಭಾಷಣಮಗ್ನ ಮನಸ್ಸಿನ ಇಂಥ ಹರಿದಾಟಗಳನ್ನು ಗೋಪಾಲಕೃಷ್ಣ ಅಡಿಗರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಗಿಂತ ಚೆನ್ನಾಗಿ ಹೇಳಿದ ಕನ್ನಡ ಕವಿತೆಯನ್ನು ನಾನಂತೂ ಕಂಡಿಲ್ಲ. ನಿಜವಾದ ಕವಿಯ ಶಕ್ತಿ ಅದು. ಶಕ್ತ ಕವಿಯಲ್ಲಿ ಎಂಥ ಸಂದರ್ಭ ಬೇಕಾದರೂ ಕಾವ್ಯಸಂದರ್ಭವಾಗುತ್ತದೆ. ಕುಂಬಾರನ ಕೈಲಿ ಮಣ್ಣು ಏನೇನೋ ಆಕಾರ ಪಡೆಯುವ ಹಾಗೆ ಅಸಲಿ ಕವಿಯ ಭಾಷೆ ನಾದದಲ್ಲಿ, ಹೊರಳುವಿಕೆಯಲ್ಲಿ, ಶಬ್ದ ನಿಶ್ಶಬ್ದಗಳಲ್ಲಿ ಹಲ ಬಗೆಯ ಆಕಾರ ಪಡೆಯುತ್ತಿರುತ್ತದೆ. ಆಗ ಏನು ಬೇಕಾದರೂ ಕಾವ್ಯವಾಗುತ್ತದೆ!
ಜಗತ್ತಿನ ದೊಡ್ಡ ಕವಿಗಳಲ್ಲೊಬ್ಬನಾದ ವಿಲಿಯಂ ಬಟ್ಲರ್ ಯೇಟ್ಸ್ ಕೂಡ ಒಂದು ಭಾಷಣದ ಸಂದರ್ಭವನ್ನು ಕವಿತೆ ಮಾಡುತ್ತಾ, ‘ಈ ಭಾಷಣ ಗೀಷಣ ಬಿಟ್ಟು ಅಲ್ಲಿ ಕೂತಿರುವ ಆ ಹುಡುಗಿಯನ್ನು ಅಪ್ಪಿಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬರ್ಥದ ಮಾತುಗಳನ್ನು ಬರೆಯುತ್ತಾನೆ. ಆ ಗಳಿಗೆಯಲ್ಲಿ ‘ಅತ್ತಲಿತ್ತ ಹರಿದಾಡುವ ಮನಸಿಗೆ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ’ ಎಂಬ ಶಿಶುನಾಳ ಶರೀಫನ ಬುದ್ಧಿಮಾತನ್ನು, ಕವಿಯ ಕಿವಿಯಲ್ಲಿ ಯಾರೂ ಉಸುರಿದಂತಿಲ್ಲ! ಶರೀಫ ತೀರಿಕೊಂಡಾಗ ಯೇಟ್ಸ್ ಮೂವತ್ನಾಲ್ಕು ವರ್ಷದ ಪ್ರಖರ ಕವಿಯಾಗಿದ್ದ.
ಅದಿರಲಿ, ಮೇಲೆ ಹೇಳಿದ ಯೇಟ್ಸ್ ಕವಿತೆಯಲ್ಲಿ ಭಾಷಣಕಾರನಿಗೆ ಭಾಷಣದ ನಡುವೆ ಕಾಣಿಸಿಕೊಳ್ಳುವ ಈ ರೊಮ್ಯಾಂಟಿಕ್ ಬಯಕೆ ಸರಿಯಲ್ಲ ಎಂದು ಯಾವ ಮಹನೀಯರೂ ಭಿನ್ನಮತ ವ್ಯಕ್ತಪಡಿಸಿದಂತಿಲ್ಲ!
ಶರೀಫರ ಮಾತನ್ನು ಯೇಟ್ಸ್ ಕೇಳಿಸಿಕೊಳ್ಳುತ್ತಿದ್ದನೋ ಇಲ್ಲವೋ, ಆದರೆ ಸ್ವತಃ ಶರೀಫನೇ ತನ್ನ ಮಾತನ್ನು ತಾನೇ ಕೇಳಿಸಿಕೊಳ್ಳುತ್ತಿದ್ದನೇ ಎನ್ನುವುದೇ ಅನುಮಾನ! ಗುರು ಗೋವಿಂದಭಟ್ಟರೇ ಶರೀಫನ ಮನಸ್ಸು ಅತ್ತಲಿತ್ತ ಹರಿದಾಡದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದ್ದರೂ ಕಿಲಾಡಿ ಕವಿ ಶರೀಫ ಅದನ್ನೆಲ್ಲ ಕೇಳಿಸಿಕೊಳ್ಳುವ ಆಸಾಮಿಯಾಗಿರಲಿಲ್ಲ! ಯಾಕೆಂದರೆ, ಅವನೊಳಗಿನ ಕವಿಯು ಹಾವು ತುಳಿದ ಮಾನಿನಿ, ಹುಬ್ಬಳ್ಳಿ ಕೊಡದ ಮಾಟದಂಥ ಹುಡುಗಿ...ಎಲ್ಲರನ್ನೂ ನೋಡಿ ನೋಡಿ ತನ್ನ ‘ಪದ ಬರಕೋ’ಬೇಕಾಗಿತ್ತಲ್ಲ!
ಶರೀಫರು ಕನ್ನಡ ಭಾಷೆಯನ್ನು ಆಧುನಿಕವಾಗಿ ಬಳಸಿ ಬರೆದ ಸುಮಾರು ನೂರು ವರ್ಷಗಳ ನಂತರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಬರೆದ ಅಡಿಗರ ಕವಿತೆಯಲ್ಲಿ ನಿರೂಪಕನ ಭಾಷಣಮಗ್ನ ಮನಸ್ಸು ಶರೀಫರ ಮಾತು ಕೇಳದೆ ಅತ್ತಲಿತ್ತ ಹರಿದಾಡುತ್ತಲೇ ಇತ್ತು:
ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ
ಮನಸ್ಸು, ಮನಸ್ಸಿನ ಶೇಕಡಾ ತೊಂಬತ್ತು ಪಾಲು; ಕಣ್ಣು
ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ,
ಬಡಿತಕ್ಕೆ ತಕ್ಕ ಪ್ರತಿ ಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ.
ದಶಕಗಳ ಕೆಳಗೆ ಈ ಕವಿತೆಯನ್ನು ಮೊದಲ ಬಾರಿಗೆ ಓದಿದಾಗಿನಿಂದಲೂ ಮತ್ತೆ ಮತ್ತೆ ಸುಳಿಯುತ್ತಲೇ ಇರುವ ‘ಭಾಷಣಮಗ್ನ ಮನಸ್ಸು’, ’ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ’, ತಂಗಲು ’ರೇವುಳ್ಳ ನಡುಗಡ್ಡೆಯೊಂದ’ ಮುಂತಾದ ನುಡಿಚಿತ್ರಗಳು; ಭಾಷಣಕಾರನ ಏಕಾಂಗಿ ಕಣ್ಣು ಸಭಾಂಗಣದಲ್ಲಿ ಹರಿದಾಡುವ ರೀತಿ...ಎಲ್ಲವೂ ನನ್ನೊಳಗೆ ಉಳಿದುಬಿಟ್ಟಿವೆ.
ಎಂಟು ವರ್ಷಗಳ ಕೆಳಗೆ ಒಂದು ತಂಪಾದ ಮಧ್ಯಾಹ್ನ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯ ಅನುಭವವನ್ನು ಬೆಂಗಳೂರಿನ ಜ್ಞಾನಭಾರತಿಯ ಕನ್ನಡ ಹುಡುಗಿಯರು, ಹುಡುಗರಿಗೆ ದಾಟಿಸಲೆತ್ನಿಸುತ್ತಿದ್ದೆ; ಆಗ ಇದ್ದಕ್ಕಿದ್ದಂತೆ ಅಂಥದೊಂದು ಪರಮಾಪ್ತ ಮುಖದ ಹುಡುಕಾಟವನ್ನು ನನ್ನ ಕಣ್ಣು ಕೂಡ ಆರಂಭಿಸಿದ್ದು ನೆನಪಾಗುತ್ತದೆ.
ಹಲವು ಸಲ ವೇದಿಕೆಯ ಮೇಲೆ ನಿಂತಾಗ ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗುವ ‘ಚಿಂತಾಮಣಿಯಲ್ಲಿ ಕಂಡ ಮುಖ’ದ ಈ ಪ್ರತಿಮೆಗಳು ಈಚೆಗೆ ಮತ್ತೆ ನನ್ನೆದುರು ಮೂಡತೊಡಗಿದವು. ಗುಲಬರ್ಗಾದ ಸೆಂಟ್ರಲ್ ಯೂನಿವರ್ಸಿಟಿಯ ಹುಡುಗ, ಹುಡುಗಿಯರಿಗೆ ಅಂಬೇಡ್ಕರ್ ಕುರಿತು ಮಾತಾಡುವ ಮುನ್ನ ನನ್ನ ‘ಭಾಷಣಮಗ್ನ ಮನಸ್ಸು’ ಅಡಿಗರ ಕವಿತೆಯ ನಿರೂಪಕನ ಥರವೇ ‘ಹುಡುಕುತ್ತಿತ್ತು ತಂಗಲು ರೇವುಳ್ಳ ನಡುಗಡ್ಡೆಯೊಂದ.’
ಆದರೆ ಅವತ್ತು ಒಂದು ವ್ಯತ್ಯಾಸವಿತ್ತು. ಇಪ್ಪತ್ತೊಂದನೆಯ ಶತಮಾನದಲ್ಲಿ ಅಂಬೇಡ್ಕರ್ ಬಗ್ಗೆ ಮಾತಾಡಲು ನಿಂತಿದ್ದ ಅಧ್ಯಾಪಕನೊಬ್ಬ ಅಡಿಗರ ಕವಿತೆಯ ಭಾಷಣಕಾರನಂತೆ ‘ಒಂದು’ ಮುಖವನ್ನು ಹುಡುಕಬೇಕಾಗಿರಲಿಲ್ಲ. ಅಲ್ಲಿ ಅಂಬೇಡ್ಕರ್ ಸ್ಫೂರ್ತಿಯಿಂದ ಛಾರ್ಜ್ ಆದ ಒಂದಲ್ಲ, ನೂರು, ನೂರಾರು ಮುಖಗಳಿದ್ದವು! ಸೆಂಟ್ರಲ್ ಯೂನಿವಿರ್ಸಿಟಿಯ ಲೈಬ್ರರಿಯ ಉದ್ಯೋಗಿ ಹರಿಶ್ಚಂದ್ರ ಡೋನಿ ಲತಾ ಮಂಗೇಶ್ಕರ್ ಅವರ ‘ಪಂಖ್ ಹೋತಿ ತೊ ಉಡ್ ಆತಿ ರೇ’ ಧಾಟಿ ಅನುಸರಿಸಿ ಅಂಬೇಡ್ಕರ್ ಮೇಲೆ ಹಾಡು ಕಟ್ಟಿ ಹಾಡಿದ್ದ…
ಆಗ ಇದ್ದಕ್ಕಿದ್ದಂತೆ ಇದೇ ಅಂಕಣದಲ್ಲಿ (READ HERE) ಅಂಬೇಡ್ಕರ್ ಜಯಂತಿಯಂದು ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯ ಪಂಕ್ತಿಯ ಪದವೊಂದನ್ನು ಹೊಸ ಗಾಯಕರು ಬದಲಿಸಿ ಹಾಡಿದ್ದನ್ನು ಕುರಿತು ಬರೆದದ್ದು ನೆನಪಾಯಿತು. ಆ ಅಂಕಣದಲ್ಲಿ ಪ್ರಸ್ತಾಪಿಸಿದ್ದ ಸಿದ್ಧಲಿಂಗಯ್ಯನವರ ಕವಿತೆ ಕೊನೆಗೆ ಬಾಬಾಸಾಹೇಬರನ್ನು ಕೇಳುತ್ತದೆ:
ಮಲಗಿದ್ದವರ ಕೂರಿಸಿದೆ
ನಿಲಿಸುವವರು ಯಾರೋ?
ಛಲದ ಜೊತೆಗೆ ಬಲದ ಪಾಠ
ಕಲಿಸುವವರು ಯಾರೋ?
ಇಪ್ಪತ್ತನೆಯ ಶತಮಾನದ ತೊಂಬತ್ತರ ದಶಕದ ಕೊನೆಯಲ್ಲಿ ಬಹುಜನ ಸಮಾಜ ಪಕ್ಷದ ರಾಜಕಾರಣ ಗಟ್ಟಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕೆಲವು ಹಾಡುಗಾರರು ಇದನ್ನು ಬದಲಿಸಿ ಹಾಡತೊಡಗಿದ ರೀತಿಯನ್ನೂ ಅದೇ ಅಂಕಣದಲ್ಲಿ ಉಲ್ಲೇಖಿಸಿದ್ದೆ:
ಮಲಗಿದ್ದವರ ಕೂರಿಸಿದೆ
ನಿಲಿಸುವವರು ನಾವು
ಛಲದ ಜೊತೆಗೆ ಬಲದ ಪಾಠ
ಕಲಿಸುವವರು ನಾವು.
ಈ ಬದಲಾವಣೆ ಹೇಗಾಯಿತು ಎಂಬುದನ್ನು ಅವತ್ತು ಅಂಬೇಡ್ಕರ್ ಜನ್ಮದಿನದ ಅಂಕಣದಲ್ಲಿ ಊಹಿಸಲೆತ್ನಿಸಿದ್ದ ನನಗೆ ಗುಲಬರ್ಗಾದ ಸಭೆಯಲ್ಲಿ ಮತ್ತೊಂದು ಕಾರಣ ಹೊಳೆಯಿತು. ಗೆಳೆಯ ಅಪ್ಪಗೆರೆ ಸೋಮಶೇಖರ್ ಹೇಳಿದಂತೆ `ಅಂಬೇಡ್ಕರ್ ಜಯಂತಿಯನ್ನು ಹೊಸ ಬಟ್ಟೆ ತೊಟ್ಟು ಹಬ್ಬದಂತೆ ಆಚರಿಸುವ ಗುಲಬರ್ಗಾದಲ್ಲಿ’, ನಾನೇ ಕಂಡಂತೆ ಆಟೋಗಳ ಮೇಲೆ ‘ಜೈ ಭೀಮ್’ ಎದ್ದು ಕಾಣುವ ಗುಲಬರ್ಗಾದಲ್ಲಿ, ಈ ಕಾರಣ ಹೊಳೆದದ್ದು ಮತ್ತೂ ವಿಶೇಷವಾದುದು!
ಸಿದ್ಧಲಿಂಗಯ್ಯನವರ ಪದ್ಯ ಐವತ್ತು ವರ್ಷಗಳ ಹಿಂದೆ ಕೇಳಿದ್ದ ‘ಯಾರು?’ ಎಂಬ ಪ್ರಶ್ನೆಗೆ, ಹೊಸ ದಲಿತ ಹಾಡುಗಾರರು ‘ನಿಲಿಸುವವರು ನಾವು, ಕಲಿಸುವವರು ನಾವು’ ಎಂದು ಆತ್ಮವಿಶ್ವಾಸದಿಂದ ಹಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಗುಲಬರ್ಗಾದಲ್ಲಿ ಹೊಸ ಉತ್ತರ ಸಿಕ್ಕಿತು!
ಆ ಉತ್ತರ ಹೊಳೆದ ಗಳಿಗೆ ಇದು: ಅದೇ ಆಗ ಸೆಂಟ್ರಲ್ ಯೂನಿವರ್ಸಿಟಿಯ ‘ಅಂಬೇಡ್ಕರ್’ ಸಮಾರಂಭದ ಆರಂಭದಲ್ಲಿ ಅನನ್ಯ ಎಂಬ ಜಾಣ ಹುಡುಗಿ ಸಂವಿಧಾನದ ಪೀಠಿಕೆಯನ್ನು ಸಭಿಕರಿಗೆ ಬೋಧಿಸಿದ್ದಳು: ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಈ ಪ್ರತಿಜ್ಞೆಯನ್ನು ವೇದಿಕೆಯ ಮೇಲಿದ್ದ ಅತಿಥಿಗಳು, ಸಭೆಯಲ್ಲಿದ್ದ ಹುಡುಗಿಯರು, ಹುಡುಗರು, ಮೇಡಂಗಳು, ಮೇಷ್ಟ್ರುಗಳು, ವಿಶ್ವವಿದ್ಯಾಲಯದ ಸಿಬ್ಬಂದಿ ಎಲ್ಲರೂ ಸ್ವೀಕರಿಸಿದ್ದರು.
‘ವಿ ದ ಪೀಪಲ್ ಆಫ್ ಇಂಡಿಯಾ’ ಪ್ರತಿಜ್ಞೆಯನ್ನು ಸ್ವೀಕರಿಸುತ್ತಿದ್ದ ಈ ಹೊಸ ಮುಖಗಳನ್ನು ನೋಡನೋಡುತ್ತಾ ಮಾತು ಶುರು ಮಾಡಿದ ಈ ಅಂಕಣಕಾರನ ಭಾಷಣಮಗ್ನ ಮನಸ್ಸಿನಲ್ಲಿ ‘ಅಂಬೇಡ್ಕರ್’ ಪದ್ಯದ ಹೊಸ ಓದು ಮೊಳೆಯಿತು: ಯೆಸ್! ಸಿದ್ಧಲಿಂಗಯ್ಯನವರ ಪದ್ಯದಲ್ಲಿರುವ ‘ಯಾರು?’ ಎಂಬ ಪ್ರಶ್ನೆಗೆ ಹೊಸ ಹಾಡುಗಾರರು ‘ನಾವು’ ಎಂದು ಉತ್ತರಿಸಲು ‘ವಿ ದ ಪೀಪಲ್ ಆಫ್ ಇಂಡಿಯಾ’ ಘೋಷಣೆಯೂ ಕಾರಣವಿರಬಹುದು! ಅಂದರೆ, ಹೊಸ ದಲಿತ ಹಾಡುಗಾರರಿಗೆ ‘ಛಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು’ ಎಂಬ ಆತ್ಮವಿಶ್ವಾಸ ನಮ್ಮ ಸಂವಿಧಾನದಿಂದಲೇ ಹುಟ್ಟಿದೆ!
ಈ ಸಲ ಸಮಾಜಕಲ್ಯಾಣ ಇಲಾಖೆಯನ್ನು ವಹಿಸಿಕೊಂಡ ತಕ್ಷಣ ಶಾಲಾಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಜಾರಿಗೊಳಿಸಿದ ಹಿರಿಯ ಸಚಿವರಾದ ಎಚ್.ಸಿ. ಮಹಾದೇವಪ್ಪನವರ ಮುನ್ನೋಟ, ಬದ್ಧತೆಗಳ ಮಹತ್ವ ಮತ್ತೆ ಮನವರಿಕೆಯಾಗತೊಡಗಿತು.
ನಾನು, ನಾನು, ನನ್ನ ಜಾತಿ, ನನ್ನ ಕುಟುಂಬ..ಅಥವಾ ಸ್ವಾರ್ಥಕ್ಕೋ, ದ್ವೇಷಕ್ಕೋ ನನ್ನ ಧರ್ಮ… ಇದರಿಂದಾಚೆಗೆ ಹೋಗದ ಜಾತಿಕೋರ, ಧರ್ಮಕೋರ ಭಾರತೀಯ ಮನಸ್ಸಿಗೆ ಅಂಬೇಡ್ಕರ್ ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಪೀಠಿಕಾ ಪ್ರಮಾಣವಚನ ಕೊಡುವ ಮೂಲಕ ಹೊಸ ಭಾಷೆಯನ್ನೇ ಸೃಷ್ಟಿಸಿದ್ದರು; ಭಾರತೀಯ ಸಂಕುಚಿತ ಮನಸ್ಸಿನ ‘ನಾನು’ ಎನ್ನುವುದನ್ನು ಅಂಬೇಡ್ಕರ್ ಭಾಷೆಯ ಮಟ್ಟದಲ್ಲಿ ಮುರಿದು, ‘ನಾವು’ ಎಂಬುದನ್ನು ಹೇಳಿಕೊಟ್ಟಿದ್ದರು.
ಭಾಷೆಯ ಮಟ್ಟದಲ್ಲಿ ಮೊದಲು ಮುರಿದರೆ ಅದು ನಂತರ ಪ್ರಜ್ಞೆಯ ಮಟ್ಟದಲ್ಲಿ, ಅನಂತರ ಸಮಾಜದ ಮಟ್ಟದಲ್ಲಿ, ಮುರಿಯುವ ಹಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಸ್ತ್ರೀವಾದಿಗಳು ನಮಗೆ ಹೇಳಿಕೊಟ್ಟಿದ್ದಾರಲ್ಲವೆ?
ಒಂದು ಭಾಷಣಮಗ್ನ ಮನಸ್ಸು ಅತ್ತಲಿತ್ತ ಹರಿದಾಡುತ್ತಿದ್ದರೆ; ಯಾರನ್ನೋ ಮೆಚ್ಚಿಸುವ, ಅಥವಾ ಯಾರಿಂದಲಾದರೂ ಮೆಚ್ಚಿಸಿಕೊಳ್ಳುವ ಕಾತರವಿಲ್ಲದೆ ಐಡಿಯಾಗಳು ಒಳಗೂ ಹೊರಗೂ ನಿಸ್ವಾರ್ಥದಿಂದ ಅಡ್ಡಾಡುತ್ತಿದ್ದರೆ... ನಮ್ಮಂಥವರಿಗೂ ಸಣ್ಣ ಪುಟ್ಟ ಜ್ಞಾನೋದಯ ಯಾಕಾಗಲಾರದು?
‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದು ನಿರಚನಾವಾದಿ ಗುರು ಜಾಕ್ವೆಸ್ ಡೆರಿಡಾ ಹೇಳಿದ್ದು…ಬರಿ ಬೆಡಗಲ್ಲೋ ಅಣ್ಣ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಕಾರ್ಲ್ ಮಾರ್ಕ್ಸ್ ಬರೆಯದಿದ್ದರೆ ಚರಿತ್ರೆಯ ಚಕ್ರ ಎತ್ತ ತಿರುಗುತ್ತಿತ್ತೋ ಊಹಿಸುವುದು ಕಷ್ಟ!
ಗ್ರೀಕ್ ದೇವತೆ ಪ್ರೊಮಿಥ್ಯೂಸ್‌ಗೆ ಮಾನವವಿರೋಧಿಗಳಾದ ಹಿರಿಯ ದೇವತೆಗಳು ‘ಮಾನವರಿಗೆ ಸಹಾಯ ಮಾಡಕೂಡದು’ ಎಂದು ಆಜ್ಞೆ ಮಾಡುತ್ತಾರೆ. ಆದರೆ ಮಾನವರಿಗೆ ಸಹಾಯ ಮಾಡಲೇಬೇಕೆಂಬ ಕಾಳಜಿ, ಹಟದ ಪ್ರೊಮಿಥ್ಯೂಸ್ ಬಳ್ಳಿಯ ಕಾಂಡದಲ್ಲಿ ಬೆಂಕಿ ಬಚ್ಟಿಟ್ಟುಕೊಂಡು ಬಂದು ಮಾನವರಿಗೆ ಕೊಡುತ್ತಾನೆ. ಬೆಂಕಿ ಮಾನವರ ಪ್ರಗತಿಯ ಹಾದಿ ತೆರೆಯುತ್ತದೆ. ಮಾನವರಿಗೆ ಸಹಾಯ ಮಾಡಿದ್ದಕ್ಕಾಗಿ ಪ್ರೊಮಿಥ್ಯೂಸ್‌ಗೆ ಸ್ಯೂಸ್ ದೇವ ಕ್ರೂರ ಶಿಕ್ಷೆ ಕೊಡುತ್ತಾನೆ. ಪ್ರೊಮಿಥ್ಯೂಸ್ ದಿಟ್ಟತನ ಕುರಿತು ಗ್ರೀಕ್ ನಾಟಕಕಾರ ಈಸ್ಕಿಲಸ್ ಎರಡೂವರೆ ಸಾವಿರ ವರ್ಷಗಳ ಕೆಳಗೆ ’ಪ್ರೊಮಿಥ್ಯೂಸ್ ಬೌಂಡ್’ ಎಂಬ ಅದ್ಭುತ ನಾಟಕ ಬರೆದ.
ಕಾರ್ಲ್ ಮಾರ್ಕ್ಸ್ (5.5.1818-14.3.1883) ಹುಟ್ಟು ಹಬ್ಬದ ದಿನ ಪ್ರೊಮಿಥ್ಯೂಸ್ ಅವನ ಪ್ರಿಯವಾದ ಪಾತ್ರವೆಂಬುದನ್ನು ನಿಮಗೆ ನೆನಪಿಸುತ್ತಿರುವೆ. ಬಡತನದಲ್ಲಿ ನರಳಿದ್ದ ಮಾರ್ಕ್ಸ್‌ಗೆ ಎಂಥ ಕಷ್ಟ ಎದುರಾದರೂ ಮಾನವಕೋಟಿಗೆ ನೆರವಾಗಲೇಬೇಕು ಎಂಬ ಪ್ರೇರಣೆ ಈ ಕತೆಯಿಂದಲೂ ಹುಟ್ಟಿರಬಹುದು. ಅಂಥ ಪ್ರೇರಣೆಯ ಸಣ್ಣ ಹೊಳೆ ನಮ್ಮೊಳಗೂ ಸದಾ ಹರಿಯುತ್ತಿರಲಿ!
ಜರ್ಮನಿಯ ಮಾರ್ಕ್ಸ್ ಸಾಮಾಜಿಕ ರಚನೆಯನ್ನೇ ಕದಲಿಸಿ, ದುಡಿಯುವವರ ಸ್ಥಿತಿಯನ್ನು ಬದಲಿಸುವ ಫಿಲಾಸಫಿ ರೂಪಿಸಿದವನು; ಚರಿತ್ರೆಯ ಚಕ್ರದ ನಡೆ ಬದಲಿಸಿದವನು. ಚರಿತ್ರೆ, ತತ್ವಜ್ಞಾನ, ಲೋಕದ ರಾಜಕೀಯ ವ್ಯವಸ್ಥೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಮಾರ್ಕ್ಸ್ ಸಾಹಿತ್ಯದ ಸೂಕ್ಷ್ಮ ವಿದ್ಯಾರ್ಥಿಯಾಗಿದ್ದ. ಶೇಕ್‌ಸ್ಪಿಯರ್ ನಾಟಕಗಳ ಮೂಲಕವೂ ಚರಿತ್ರೆಯ ಸಂಘರ್ಷಗಳನ್ನು ಅರಿಯಲೆತ್ನಿಸಿದ್ದ. ಮಾರ್ಕ್ಸ್ ಹಾಗೂ ಎಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಜಗತ್ತಿನ ವಿಮೋಚನೆಯ ಪ್ರಣಾಳಿಕೆಯಾಗಿರುವಂತೆ ಅದ್ಭುತ ಕಾವ್ಯ ಕೂಡ ಎನ್ನುವವರಿದ್ದಾರೆ.
ತನ್ನ ಥಿಯರಿಗಳನ್ನು ರೂಪಿಸುತ್ತಿದ್ದಾಗ ಮಾರ್ಕ್ಸ್‌ಗೆ ಹೀಗೆನ್ನಿಸಿತು: ‘ತತ್ವಜ್ಞಾನಿಗಳು ಜಗತ್ತನ್ನು ಬರೀ ವ್ಯಾಖ್ಯಾನಿಸುತ್ತಾ ಬಂದಿದ್ದಾರೆ. ಈಗ ಇರುವ ವಿಚಾರವೆಂದರೆ ಜಗತ್ತನ್ನು ಬದಲಾಯಿಸುವುದು.’ ಈ ಮಾತನ್ನು ತತ್ವಜ್ಞಾನಿಗಳ ಕೆಲಸ ವ್ಯರ್ಥ ಎಂಬ ಅರ್ಥಬರುವಂತೆ ಕೆಲವರು ವ್ಯಾಖ್ಯಾನಿಸುತ್ತಾರೆ; ಆದರೆ ಯಾವುದೇ ತತ್ವಜ್ಞಾನ ಜನರನ್ನು ಕ್ರಿಯೆಗೆ ಅಣಿಗೊಳಿಸುವಂತೆ ರೂಪುಗೊಳ್ಳಬೇಕು ಎಂಬುದು ಮಾರ್ಕ್ಸ್ ಆಶಯವಾಗಿತ್ತು.
ಮಾರ್ಕ್ಸ್‌ವಾದ ಇಪ್ಪತ್ತನೆಯ ಶತಮಾನದಲ್ಲಿ ಜಗತ್ತಿನಾದ್ಯಂತ ಚಿಂತನೆ, ಕ್ರಿಯೆ, ವ್ಯಾಖ್ಯಾನ, ಕಲೆ, ರಾಜಕಾರಣ ಹಾಗೂ ಬರವಣಿಗೆಗಳ ದಿಕ್ಕನ್ನು ಬದಲಿಸಿತು. ಮಾರ್ಕ್ಸ್ ಚಿಂತನೆಯನ್ನು ಮೇಲ್ಪದರದಲ್ಲಿ ಗ್ರಹಿಸಿದವರು ಕೂಡ ಯಥಾಸ್ಥಿತಿವಾದಿ ಆಗಿರುವುದು ಸಾಧ್ಯವಿಲ್ಲ. ಜಗತ್ತಿನ ಎಲ್ಲ ದೇಶಗಳೂ ಒಂದಲ್ಲ ಒಂದು ಹಂತದಲ್ಲಿ ಮಾರ್ಕ್ಸ್- ಎಂಗೆಲ್ಸರ ಚಿಂತನೆಗಳಿಂದ ಪ್ರಭಾವಿತವಾಗಿವೆ.
ಮಾರ್ಕ್ಸ್ ಚಿಂತನೆ 1920ರ ಸುಮಾರಿಗೆ ಕಾರ್ಮಿಕ ಚಳುವಳಿಗಳ ಮೂಲಕ ಕನ್ನಡನಾಡನ್ನು ಪ್ರವೇಶಿಸಿತು; ಇಲ್ಲಿನ ಚಳುವಳಿ, ಸಂಸ್ಕೃತಿ, ರಾಜಕಾರಣಗಳ ದಿಕ್ಕನ್ನು ನಿರ್ಣಾಯಕವಾಗಿ ಬದಲಿಸಿತು. ನವೋದಯ ಸಾಹಿತ್ಯದಲ್ಲಿ ಕುವೆಂಪು, ಬೇಂದ್ರೆಯವರ ಸಮಾನತೆಯ ಆಶಯದಲ್ಲಿ ಮಾರ್ಕ್ಸ್ ಹಣಿಕಿದಂತಿದೆ. ಪ್ರಗತಿಶೀಲ, ಬಂಡಾಯ, ದಲಿತ ಹಾಗೂ ಸ್ತ್ರೀವಾದಿ ಘಟ್ಟಗಳು ಮಾರ್ಕ್ಸ್‌ವಾದದಿಂದ ಒಂದಲ್ಲ ಒಂದು ರೀತಿಯ ಪ್ರಭಾವ ಪಡೆದಿವೆ. ಸು.ರಂ. ಎಕ್ಕುಂಡಿ, ಬಂಜಗೆರೆ ಜಯಪ್ರಕಾಶ್ ಮಾರ್ಕ್ಸ್‌ವಾದಿ ನೋಟಕ್ರಮಗಳ ಮೂಲಕ ವಿಶಿಷ್ಟ ರಾಜಕೀಯ ಕಾವ್ಯ ಬರೆದರು. ದಲಿತ ಸಾಹಿತ್ಯದ ಆರಂಭದಲ್ಲೂ, ಇವತ್ತಿನ ಹಂತದಲ್ಲೂ ಮಾರ್ಕ್ಸ್‌ವಾದದ ಛಾಯೆಯಿದ್ದೇ ಇದೆ. ಕರ್ನಾಟಕದಲ್ಲಿ ಒಂದು ಕಾಲಕ್ಕೆ ಮಾರ್ಕ್ಸ್‌ವಾದಿಗಳು ದಲಿತ ಚಳುವಳಿಯ ತರುಣರಿಗೂ, ತರುಣ ಮಾರ್ಕ್ಸಿಸ್ಟರಿಗೂ ಚಿಂತನ ಶಿಬಿರ ನಡೆಸುತ್ತಿದ್ದುದರಿಂದಲೂ ಕನ್ನಡ ದಲಿತ ಚಿಂತನೆಯಲ್ಲಿ ಮಾರ್ಕ್ಸ್‌ವಾದ ಬೆರೆಯಿತು.
ಕನ್ನಡ ಸಾಮಾಜಿಕ ವಿಮರ್ಶೆಯ ನುಡಿಗಟ್ಟು, ವಿಶ್ಲೇಷಣೆಗಳು ಮಾರ್ಕ್ಸ್‌ವಾದಿ ವಿಮರ್ಶೆಯಿಂದ ಪ್ರಭಾವಿತಗೊಂಡಿವೆ. ಪ್ರಗತಿಶೀಲ ಘಟ್ಟದಲ್ಲಿ ನಿರಂಜನರು ಕಮ್ಯುನಿಸ್ಟ್ ಪಕ್ಷದ ಜೊತೆಯಲ್ಲಿದ್ದರು; ಅನಕೃ, ಬಸವರಾಜ ಕಟ್ಟೀಮನಿ, ತರಾಸು ಸಮಾಜದ ಬಗೆಗಿನ ಕಾಳಜಿಯ ಮಟ್ಟದಲ್ಲಿ ಮಾರ್ಕ್ಸ್ ಚಿಂತನೆಯ ಜೊತೆಗೆ ಸಂಬಂಧ ಸಾಧಿಸಿದ್ದರು. ಡಿ. ಆರ್. ನಾಗರಾಜ್, ಸಿದ್ಧಲಿಂಗಯ್ಯ, ಬರಗೂರರ ಚಿಂತನೆಯ ಆರಂಭ ಮಾರ್ಕ್ಸ್‌ವಾದದಿಂದಲೇ ಆಯಿತು. ಪ್ರಗತಿಶೀಲ ಹಾಗೂ ಬಂಡಾಯ ಪ್ರಣಾಳಿಕೆಗಳೆರಡರಲ್ಲೂ ಮಾರ್ಕ್ಸ್‌ವಾದದ ಪ್ರೇರಣೆಯಿದೆ. ಸಾಹಿತ್ಯಕ ಸಂಸ್ಕೃತಿಯ ಮೂಲಕ ಕರ್ನಾಟಕದಲ್ಲಿ ಹಬ್ಬಿರುವ ಕಮ್ಯುನಿಸಂ ಸ್ಥಳೀಯ ಬೇರುಗಳನ್ನೂ ಪಡೆದಿದೆ.
ಕಾರ್ಮಿಕ ಚಳುವಳಿಗಳು, ಕಮ್ಯುನಿಸ್ಟ್ ಪಕ್ಷಗಳ ರಾಜಕಾರಣಗಳೂ ಮಾರ್ಕ್ಸ್‌ವಾದವನ್ನು ಕನ್ನಡ ಸಂಸ್ಕೃತಿಯಲ್ಲಿ ಹಬ್ಬಿಸಿವೆ. ಕನ್ನಡ ರಂಗಭೂಮಿಗೆ ಬರ್ಟೋಲ್ಟ್ ಬ್ರೆಕ್ಟ್ ಮೂಲಕವೂ ಮಾರ್ಕ್ಸ್‌ವಾದ ಬಂತು; ರಂಗಭೂಮಿಯ ಮೂಲಕವೂ ಕಮ್ಯುನಿಸಂ ಕರ್ನಾಟದಲ್ಲಿ ಹಬ್ಬಿತು. ಎಪ್ಪತ್ತರ ದಶಕದ ’ಸಮುದಾಯ’ ಸಾಂಸ್ಕೃತಿಕ ಜಾಥಾ ಕರ್ನಾಟಕದುದ್ದಕ್ಕೂ ಎಡಪಂಥೀಯ ರಂಗಭೂಮಿಯನ್ನು, ಮಾರ್ಕ್ಸ್‌ವಾದಿ ಚಿಂತನೆಯನ್ನು ಗಟ್ಟಿಯಾಗಿ ಪ್ರತಿಷ್ಠಾಪಿಸಿತು. ಮಾಲತಿ, ಸಿಜಿಕೆ, ಪ್ರಸನ್ನ, ಗಂಗಾಧರಸ್ವಾಮಿ, ಗುಂಡಣ್ಣ, ಜನ್ನಿ, ಬಸವಲಿಂಗಯ್ಯ, ಮೊದಲಾದವರ ಜೊತೆ ರಾಜ್ಯದ ನೂರಾರು ನಟ, ನಟಿಯರು ಊರೂರು ಸುತ್ತಿ ಹಾಡು, ಬೀದಿ ನಾಟಕಗಳ ಮೂಲಕ ವೈಚಾರಿಕ ಆಲೋಚನೆಗಳನ್ನು, ಜನರ ಸ್ಥಿತಿಯ ಬದಲಾವಣೆಯ ಸಾಧ್ಯತೆಗಳನ್ನು ಬಿತ್ತುತ್ತಾ ಬಂದರು. ರಂಗ ಚಟುವಟಿಕೆಗಳಿಗೆ ಸಾಮಾಜಿಕ ಜವಾಬ್ದಾರಿಯ ಆಯಾಮ ದೊಡ್ಡ ಮಟ್ಟದಲ್ಲಿ ಬಂದದ್ದು ಆಗ. ದಲಿತ ಸಂಘರ್ಷ ಸಮಿತಿಯ ಒಂದು ಧಾರೆ ಗದ್ದರ್ ಹಾಡುಗಳಲ್ಲಿರುವ ವರ್ಗಪ್ರಜ್ಞೆಯನ್ನು ಕರ್ನಾಟಕದಲ್ಲಿ ಹಬ್ಬಿಸಲೆತ್ನಿಸಿತು.
ಡಿ. ಆರ್.ನಾಗರಾಜ್, ಜಿ. ರಾಜಶೇಖರ್, ಚಂದ್ರಶೇಖರ ನಂಗಲಿಯವರ ಬರಹಗಳ ಮೂಲಕವೂ ಕನ್ನಡ ವಿಮರ್ಶೆ, ಸಂಸ್ಕೃತಿ ಚಿಂತನೆಗಳಲ್ಲಿ ಮಾರ್ಕ್ಸ್‌ವಾದಿ ವಿಮರ್ಶೆಯ ಖಚಿತ ಚೌಕಟ್ಟುಗಳು ಸೇರಿಕೊಂಡವು. ಬಂಡಾಯ ಮಾರ್ಗದ ಬರಗೂರು ರಾಮಚಂದ್ರಪ್ಪ, ರಂಜಾನ್ ದರ್ಗಾ, ರಹಮತ್ ತರೀಕೆರೆಯವರಿಂದ ಹಿಡಿದು ಹಲವರ ವಿಮರ್ಶಾ ನೋಟಕ್ರಮಗಳು ಮಾರ್ಕ್ಸ್‌ನ ಸಮಾಜ, ಸಂಸ್ಕೃತಿಗಳ ಗ್ರಹಿಕೆಯನ್ನು ಆಧರಿಸಿವೆ. ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಕೂಡ ಕೊನೆಗೆ ವರ್ಗಸಂಘರ್ಷವೊಂದೇ ಉತ್ತರ ಎಂಬ ನಿಲುವಿಗೆ ತಲುಪಿದ್ದರು.
ಕನ್ನಡ ಸಂಸ್ಕೃತಿಯ ವೈಶಿಷ್ಟ್ಯ ಇದು: ಮಾರ್ಕ್ಸ್‌ವಾದದತ್ತ ಆಕರ್ಷಿತರಾದ ಡಿ. ಆರ್. ನಾಗರಾಜ್, ಸಿಜಿಕೆ, ಬರಗೂರು, ಸಿದ್ಧಲಿಂಗಯ್ಯ ಥರದವರು ಕಮ್ಯುನಿಸ್ಟ್ ಪಾರ್ಟಿಗಳ ನಿರ್ದೇಶನಕ್ಕಾಗಿ ಕಾಯುವವರಾಗಿರಲಿಲ್ಲ. ಕನ್ನಡ ಲೇಖಕರನ್ನು ಮಾರ್ಕ್ಸ್‌ವಾದದತ್ತ ಸೆಳೆದ ಎಂ.ಕೆ. ಭಟ್ ಹಾಗೂ ಪಾರ್ಟಿಯತ್ತ ಕರೆದೊಯ್ದ ಕೊಂಡಜ್ಜಿ ಮೋಹನ್ ನೆನಪಾಗುತ್ತಾರೆ. ಮಾರ್ಕ್ಸಿಸ್ಟ್ ನಾಯಕ ನಂಬೂದಿರಿಪಾಡ್ ‘ನೀವು ಕಲಾವಿದರೆಲ್ಲ ಐಡಿಯಾಲಜಿಗೆ ಕಟ್ಟು ಬೀಳದೆ ಮುಕ್ತವಾಗಿ ಯೋಚಿಸಿ’ ಎಂದಿದ್ದು ತಮಗೆಲ್ಲ ಹೊಸ ಹಾದಿ ತೋರಿಸಿತೆಂದು ’ಸಮುದಾಯ’ದ ಜನ್ನಿ ನೆನೆಯುತ್ತಾರೆ. ಗುಂಡಣ್ಣ, ಶಶಿಧರ್ ಬಾರಿಘಾಟ್ ಮೊದಲಾದವರು ಇದೇ ಹಾದಿಯಲ್ಲಿ ಮುಂದುವರಿದಿದ್ದಾರೆ.
ಕರ್ನಾಟಕದಲ್ಲಿ ನೀಲಾ, ವಿಮಲಾ, ವಸು ಮಳಲಿ, ಗಾಯತ್ರಿ, ರಾಜೇಶ್ವರಿ, ಮೀನಾಕ್ಷಿ ಬಾಳಿಯವರಂತೆ ಸ್ತ್ರೀವಾದದ ಜೊತೆಗೆ ಮಾರ್ಕ್ಸ್‌ವಾದದ ಮೂಲ ಗ್ರಹಿಕೆಗಳನ್ನು ಬೆಸೆದವರಿದ್ದಾರೆ. ಕಮ್ಯುನಿಸ್ಟ್ ಆಗದೆಯೇ ಮಾರ್ಕ್ಸ್‌ವಾದದ ಮೂಲ ಸತ್ವ , ವರ್ಗ ಪ್ರಜ್ಞೆ, ವರ್ಗಸಂಘರ್ಷದ ಐಡಿಯಾಗಳ ಮೂಲಕ ಇಲ್ಲಿನ ಜಾತಿ ಸಮಾಜವನ್ನು ಗ್ರಹಿಸಿದ ಲೇಖಕ, ಲೇಖಕಿಯರೂ ಇದ್ದಾರೆ.
ಎಂಬತ್ತರದ ದಶಕದಲ್ಲಿ ಸೋವಿಯತ್ ಯೂನಿಯನ್ ಒಡೆದಾಗ ಕರ್ನಾಟಕದಲ್ಲೂ ಮಾರ್ಕ್ಸ್‌ವಾದದ ಬಗ್ಗೆ ಅನುಮಾನಗಳೆದ್ದವು. ಆದರೆ ಮಾರ್ಕ್ಸ್ ಚಿಂತನೆಗಳು ಬಂಡವಾಳಶಾಹಿಯ ರಾಕ್ಷಸ ವರ್ತನೆಯನ್ನು, ಜಾಗತೀಕರಣ-ಖಾಸಗೀಕರಣದ ವಿನಾಶಕರ ಮುಖವನ್ನು ಗ್ರಹಿಸಲು ಕನ್ನಡ ಚಿಂತಕ, ಚಿಂತಕಿಯರಿಗೆ ನೆರವಾದವು. ಈ ಹಂತದಲ್ಲಿ ಕಾರ್ಪೊರೇಟ್ ವಲಯಗಳ ಬೆಳವಣಿಗೆ, ಸರ್ಕಾರಿ ವಲಯದಲ್ಲಿ ಖಾಸಗೀಕರಣದ ಭರಾಟೆ ಹಾಗೂ ಕಾನೂನಿನ ಕುಣಿಕೆಗಳು ಹೋರಾಟದ ಹಕ್ಕುಗಳ ದಮನದಲ್ಲಿ ತೊಡಗಿದವು; ಖಾಸಗಿ ಕ್ಷೇತ್ರಗಳ ಆರಾಮ ಕುರ್ಚಿಯ ಚಿಂತಕರು ಹಾಗೂ ಬಲಪಂಥೀಯರು ತಮ್ಮ ಲಾಭಕ್ಕಾಗಿ ಮಾರ್ಕ್ಸ್‌ವಾದದ ವಿರುದ್ಧ ಅಸಹನೆ ಬಿತ್ತಲೆತ್ನಿಸಿದರು. ವಿಶ್ವವಿದ್ಯಾಲಯಗಳ ಇಬ್ಬರು ಸುಪಾರಿ ಕುಲಪತಿಗಳು ಮಾರ್ಕ್ಸ್‌ವಾದವನ್ನು ಪಠ್ಯದಿಂದಲೇ ಓಡಿಸುವಂತೆ ಕಿರುಚತೊಡಗಿದರು.
2011ರ ಹೊತ್ತಿಗೆ ಟೆರಿ ಈಗಲ್ಟನ್ ಅವರ ಮಹತ್ವದ ಪುಸ್ತಕ ‘ವೈ ಮಾರ್ಕ್ಸ್ ವಾಸ್ ರೈಟ್’ ಬಂತು. ‘ಚಿಂತನ ಪುಸ್ತಕ’ದ ವಸಂತರಾಜ್ ನನಗೆ ಈ ಪುಸ್ತಕ ಕೊಟ್ಟ ಗಳಿಗೆ ನೆನಪಿದೆ. ಮಾರ್ಕ್ಸ್‌ವಾದವನ್ನು ಒಪ್ಪಿದ್ದ ಸರ್ಕಾರಗಳು ಚೆಲ್ಲಿದ ಹಿಂಸೆ; ಮಾರ್ಕ್ಸ್‌ವಾದದ ನಿರಂತರ ಸಾಧ್ಯತೆ-ಎರಡನ್ನೂ ಈ ಪುಸ್ತಕ ಚರ್ಚಿಸುತ್ತದೆ; ‘ಪ್ರಜಾಪ್ರಭುತ್ವವಾದಿ’ ಎನ್ನಲಾದ ಸರ್ಕಾರಗಳು ಸೃಷ್ಟಿಸುವ ದಮನಗಳನ್ನೂ ವಿಶ್ಲೇಷಿಸುತ್ತದೆ. ಆರ್. ಕೆ. ಹುಡಗಿ, ಜಿ. ರಾಮಕೃಷ್ಣ ಮಾಡಿರುವ ಈ ಪುಸ್ತಕದ ಎರಡು ಕನ್ನಡಾನುವಾದಗಳು ಈ ಚರ್ಚೆಯನ್ನು ಕರ್ನಾಟಕದಲ್ಲೂ ಮುಂದುವರಿಸಿವೆ. ನವಕರ್ನಾಟಕ, ಕ್ರಿಯಾ ಪ್ರಕಾಶನ, ಚಿಂತನ ಪುಸ್ತಕ, ಲಡಾಯಿ ಪ್ರಕಾಶನಗಳು ಮಾರ್ಕ್ಸ್‌ವಾದಿ ಚಿಂತನೆಯನ್ನು ನಿರಂತರವಾಗಿ ಹಬ್ಬಿಸುತ್ತಿವೆ.
ಮಾರ್ಕ್ಸ್‌ವಾದ ಕ್ರಿಯೆ, ಪ್ರಯೋಗಗಳ ಜೊತೆಗೇ ಬೆಳೆಯುವ ಸಿದ್ಧಾಂತ. ಇವತ್ತಿಗೂ ವಿವಿಧ ವಲಯಗಳ ಕಾರ್ಮಿಕರನ್ನಾಗಲೀ, ಅಂಗನವಾಡಿ ಕಾರ್ಯಕರ್ತೆಯರನ್ನಾಗಲೀ, ಅಸಂಘಟಿತ ವಲಯಗಳ ಕಾರ್ಯಕರ್ತರನ್ನಾಗಲೀ ಕಮ್ಯುನಿಸ್ಟರು ತಾತ್ವಿಕವಾಗಿ ಸಂಘಟಿಸಬಲ್ಲರು. ಕಮ್ಯುನಿಸ್ಟರಲ್ಲಿ ದೀರ್ಘ ಹೋರಾಟಗಳನ್ನು ಕಟ್ಟಬಲ್ಲ ಸಂಘಟನೆ ಹಾಗೂ ಅನುಭವಗಳು ಇನ್ನೂ ಉಳಿದಿವೆ. ಉಳಿದವರಲ್ಲಿ ಆ ಕಾಳಜಿ, ಸ್ಪಷ್ಟತೆ, ತಾತ್ವಿಕ ಬದ್ಧತೆ ಕಡಿಮೆ.
ಕೋಮುವಾದ ವಿರೋಧಿ ಚಳುವಳಿ ಹಾಗೂ ಜಾತ್ಯತೀತ ಸಂಸ್ಕೃತಿ ನಿರ್ಮಾಣಕ್ಕೆ ಮಾರ್ಕ್ಸ್‌ವಾದಿಗಳ ಕೊಡುಗೆ ವಿಶಿಷ್ಟವಾದುದು. ಭಾರತದ ಸ್ವಾತಂತ್ರ್ಯ ಚಳುವಳಿಯ ಘಟ್ಟದಲ್ಲಿ ಕೋಮುವಾದಿ ವಿಭಜನೆಯನ್ನು ಕಮ್ಯುನಿಸ್ಟ್ ಚಿಂತನೆ ತಡೆಗಟ್ಟಿದ್ದನ್ನು ಇತಿಹಾಸಕಾರ ಎಸ್. ಚಂದ್ರಶೇಖರ್ ಗುರುತಿಸುತ್ತಾರೆ. ಇಂದಿಗೂ ಎಲ್ಲ ಕಮ್ಯುನಿಸ್ಟ್ ಬಣಗಳೂ ಕೋಮುವಾದವನ್ನು ಪ್ರಬಲವಾಗಿ ವಿರೋಧಿಸುತ್ತಿವೆ.
ಜಗತ್ತಿನ ಎಲ್ಲೆಡೆಯಲ್ಲಾದಂತೆ ಕನ್ನಡದಲ್ಲೂ ಸರಳ ಮಾರ್ಕ್ಸ್‌ವಾದಿ ವಿಮರ್ಶೆಯ ರೂಪಗಳು ಸಾಹಿತ್ಯ ಕೃತಿಗಳ ಓದನ್ನು ಸೀಮಿತಗೊಳಿಸಿವೆ; ಆದರೆ ಮಾರ್ಕ್ಸ್‌ವಾದದ ಮೂಲ ಗ್ರಹಿಕೆಗಳನ್ನು ವಿಮರ್ಶಾ ದೃಷ್ಟಿಯಿಂದ ಮರು ಪರಿಶೀಲಿಸಿ ವಿಸ್ತರಿಸಿದ ವಾಲ್ಟರ್ ಬೆಂಜಮಿನ್, ಫ್ರಾಂಕ್‌ಫರ್ಟ್ ಸ್ಕೂಲ್ ಚಿಂತನೆಗಳಿಂದಲೂ ತಾರಕೇಶ್ವರ್, ರಾಜೇಂದ್ರ ಚೆನ್ನಿಯಂಥವರ ವಿಮರ್ಶೆ ಸೂಕ್ಷ್ಮ ಪ್ರೇರಣೆಗಳನ್ನು ಪಡೆದಿದೆ. ಶಿವಸುಂದರ್, ಮುಝಾಫರ್ ಅಸಾದಿ ಥರದ ಹಲವು ಸಮಾಜವಿಜ್ಞಾನಿಗಳ ಮಾರ್ಕ್ಸ್‌ವಾದಿ ದೃಷ್ಟಿಕೋನ ಕನ್ನಡ ಸಮಾಜವಿಜ್ಞಾನಕ್ಕೆ ಖಚಿತ ತಾತ್ವಿಕ ಚೌಕಟ್ಟನ್ನು ಕೊಟ್ಟಿದೆ.
ಎಲ್ಲ ಬಗೆಯ ಬಿಡುಗಡೆಯ ಚಿಂತನೆ, ಕ್ರಿಯೆಗಳನ್ನು ನಿರ್ಗತಿಕರನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಬೇಕು ಎಂಬ ಮಾರ್ಕ್ಸ್‌ವಾದದ ಆಶಯ ಹಾಗೂ ಎಂಥ ಭೌತಿಕ ಸ್ಥಿತಿಯನ್ನಾದರೂ ವ್ಯವಸ್ಥಿತ ಅಧ್ಯಯನ ಹಾಗೂ ಸಂಘಟಿತ ಕ್ರಿಯೆಗಳಿಂದ ಬದಲಿಸಬಹುದು ಎಂಬ ಮಾರ್ಕ್ಸ್‌ವಾದದ ಸ್ಪಿರಿಟ್ ಎಲ್ಲ ಕಾಲಕ್ಕೂ ಮರು ಹುಟ್ಟು ಪಡೆಯಬಲ್ಲದು. ಮಾರ್ಕ್ಸ್‌ವಾದದ ಜೊತೆ ಸೆಣಸುತ್ತಾ ಅಥವಾ ಅದನ್ನು ವಿಸ್ತರಿಸುತ್ತಲೇ ಕಳೆದ ನೂರೈವತ್ತು ವರ್ಷಗಳ ಬಹುತೇಕ ಪ್ರಗತಿಪರ ಚಿಂತನೆಗಳು ಹುಟ್ಟಿವೆ ಎಂಬುದನ್ನು ಮಾರ್ಕ್ಸ್ ಹುಟ್ಟು ಹಬ್ಬದ ದಿನ ಮತ್ತೆ ನೆನೆಯೋಣ!
ಲೇಖನ ಪ್ರಕಟವಾದ ನಂತರ ಹಿರಿಯ ಕಾಮ್ರೇಡ್ ಗುಂಡಣ್ಣ ಚಿಕ್ಕಮಗಳೂರು ಸಲಹೆಗಳು:
ಲೇಖನ ಸಮಗ್ರವಾಗಿದೆ. ಕೆಲವು ಘಟನೆಗಳು ಹಳೆಯ ನೆನಪುಗಳನ್ನು ತಂದಿತು.
ಸಮುದಾಯ ಸಂಘಟನೆಗೆ ಸಂಬಂದಿಸಿದ ಹಾಗೆ ಹಲವು ಹೆಸರುಗಳು ತಪ್ಪಾಗಿವೆ.
gangadhara Murthy ಗಂಗಾಧರ ಸ್ವಾಮಿ ಆಗಬೇಕು. ಈ ಹೆಸರುಗಳ ಒಟ್ಟಿಗೇ, ಲಿಂಗದೇವರು ಹಳೆಮನೆ, ಎಮ್. ಜಿ. ವೆಂಕಟೇಶ್, ಸಿ. ಆರ್. ಭಟ್ , ಯತಿರಾಜ್ ಹೆಸರುಗಳು ಸೇರ್ಪಡಬೇಕು. ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದು ನಮ್ಮನೆಲ್ಲ ಪಕ್ಷದ ಸಂಪರ್ಕಕ್ಕೆ ತಂದದ್ದು ಕಾಂ.ಎಂ ಕೆ ಭಟ್ ಅವರೇ.
ಮಹಿಳಾ ಸಂಘಟನೆಯ ಹೆಸರುಗಳಲ್ಲಿ ಹರಿಣಿ ಕಕ್ಕೇರಿ ಮಾತು ಗಾಯತ್ರಿ ದೇವಿ ಹೆಸರುಗಳು ಸೇರ್ಪಡೆ ಆಗಬೇಕು.
ಇದು ಸಂಘಟನೆಯ ವಿಷಯ ಆಗಿರುವುದರಿಂದ ದಯವಿಟ್ಟು ಸರಿಪಡಿಸಲು ಕೋರುತ್ತೇನೆ.
ಕೊನೆ ಟಿಪ್ಪಣಿ
‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ ಐದನೇ ಕಂತು ಇದೀಗ ಮಾರುಕಟ್ಟೆಯಲ್ಲಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಸಾಹಿತ್ಯದ ಓದುಗರು ಬಾವಿಯೊಳಗಿನ ಕಪ್ಪೆಗಳಾದರೆ ಕೊನೆಗೂ ನಷ್ಟವಾಗುವುದು ಅವರಿಗೇ! ನಾವು ಮೀಡಿಯೋಕರ್ ಸಂಸ್ಕೃತಿಯನ್ನೇ ಆದರ್ಶ ಸಂಸ್ಕೃತಿ ಎಂದು ಬಿಂಬಿಸುತ್ತಿದ್ದರೆ ತಲೆಮಾರುಗಳೇ ಅಭಿರುಚಿಹೀನವಾಗುತ್ತವೆ. ನಮಗೆ ಟಾಲ್‌ಸ್ಟಾಯ್ ಯಾಕೆ? ಶೇಕ್‌ಸ್ಪಿಯರ್ ಯಾಕೆ ಎಂದು ‘ದೇಶಭಕ್ತ’ರಂತೆ ಚೀರುತ್ತಿದ್ದರೆ ಮಾನವ ಮನಸ್ಸಿನ ಸಂಕೀರ್ಣತೆಯನ್ನು, ಚರಿತ್ರೆಯ ಊಹಾತೀತ ಚಲನೆಗಳನ್ನು ಗ್ರಹಿಸುವ ಜೀನಿಯಸ್‌ಗಳ ಒಳನೋಟಗಳೇ ನಮಗೆ ದಕ್ಕದೆ ಹೋಗುತ್ತವೆ.
ಹದಿಹರೆಯದಲ್ಲಿ ಟಾಲ್‌ಸ್ಟಾಯ್‌ನ ‘ರೆಸರಕ್ಷನ್’ ಕಾದಂಬರಿಯ ದೇಜಗೌ ಕನ್ನಡಾನುವಾದ ’ಪುನರುತ್ಥಾನ’ ಲೈಬ್ರರಿಯಲ್ಲಿ ಸಿಕ್ಕಿತ್ತು; ಆದರೆ ದೇಜಗೌ ಬಗೆಗಿನ ಪೂರ್ವಗ್ರಹದಿಂದಲೋ, ಅವರ ಅನುವಾದದ ಜಡತೆಯಿಂದಲೋ ಓದಿರಲಿಲ್ಲ! ಕೆಲವು ವರ್ಷಗಳ ಕೆಳಗೆ ‘ರೆಸರಕ್ಷನ್’ ಓದುತ್ತಿದ್ದಾಗ ಇದನ್ನು ಓದುವುದು ಇಷ್ಟು ತಡವಾಯಿತಲ್ಲ ಎಂದು ವಿಷಾದ ಹುಟ್ಟಿತು.
ಯಾಕೆಂದರೆ, ಶ್ರೇಷ್ಠ ಲೇಖಕರ ಕೃತಿಗಳು ಎಲ್ಲ ಕಾಲದ ಎಲ್ಲ ದೇಶಗಳ ಸತ್ಯವನ್ನೂ ಹೇಳುತ್ತಿರುತ್ತವೆ. ಆದ್ದರಿಂದಲೇ ಯಾವುದೇ ಲೇಖಕ, ಲೇಖಕಿಯರು ಯಾವ ಜಾತಿ, ಉಪಜಾತಿ, ವರ್ಗ, ದೇಶದಿಂದ ಬಂದಿದ್ದಾರೆ ಎಂಬುದರ ಬಗೆಗೇ ತಲೆ ಕೆಡಿಸಿಕೊಳ್ಳುವ ಕೆಟ್ಟ ಹಳ್ಳಕ್ಕೆ ಬಿದ್ದರೆ ನಮ್ಮ ಓದೇ ಸೀಮಿತವಾಗುತ್ತದೆ.
ಈ ಕಾದಂಬರಿ ಇವತ್ತಿನ ಇಂಡಿಯಾಕ್ಕೆ ಹಿಡಿದ ಕನ್ನಡಿಯಂತೆಯೂ ಕಂಡಿದ್ದನ್ನು ಹಿಂದೊಮ್ಮೆ ಬರೆದಿರುವೆ. ಚಾರಿತ್ರಿಕವಾಗಿ ನೋಡಿದರೆ, ‘ರೆಸರಕ್ಷನ್’ ಹತ್ತೊಂಬತ್ತನೇ ಶತಮಾನದ ರಶ್ಯಾದ ಕತೆ:
ಇಲ್ಲಿ ಹೊಸ ಹುಡುಗರು ನ್ಯಾಯ ಕೇಳುತ್ತಿದ್ದಾರೆ. ಓದಿದ ಹುಡುಗಿಯರು ಬಂಡೆದಿದ್ದಾರೆ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಪರಾಧ ಮಾಡಿದವರೂ, ಅಪರಾಧ ಮಾಡದಿರುವವರೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಕೊಡುತ್ತಿರುವ ನ್ಯಾಯಾಧೀಶರು ಅಪರಾಧಿಗಳಿಗಿಂತ ಘೋರ ಅಪರಾಧಗಳನ್ನು ಮಾಡಿದ್ದಾರೆ. ಸರ್ಕಾರದ ಮಂದಿಯಂತೂ ತಮ್ಮ ಅಧಿಕಾರ, ಆದಾಯಗಳನ್ನು ಕಾಯ್ದುಕೊಳ್ಳುವುದರಲ್ಲೇ ನಿರತರಾಗಿದ್ದಾರೆ.
ಕಾದಂಬರಿಯ ಕೇಂದ್ರ ಪಾತ್ರ ಮೂವತೈದರ ಹರೆಯದ ಸೂಕ್ಷ್ಮ ಮನಸ್ಸಿನ ರಾಜಕುಮಾರ ಡಿಮಿಟ್ರಿ ನೆಕ್ಲುಡೋಫ್; ಆದರೆ ಕಾದಂಬರಿಯ ನಿಜವಾದ ಕೇಂದ್ರ ಪಾತ್ರ ಕಟುಶಾ. ಕಟುಶಾಳ ಕೊನೆಯೇ ಇಲ್ಲದ ದುಃಖ ಲೋಕದ ಹೆಂಗಸರ ಕೊನೆಯಿಲ್ಲದ ದುಃಖದ ಪ್ರತಿನಿಧಿಯಂತಿದೆ. ತನ್ನ ಬದುಕಿನ ಘೋರ ತಿರುವುಗಳಿಂದಾಗಿ ವೇಶ್ಯೆಯಾಗುವ ಅವಳ ಹೆಸರು ಮಾಸ್ಲೋವ ಆಗುತ್ತದೆ. ಗಿರಾಕಿಯೊಬ್ಬನಿಗೆ ವಿಷವುಣ್ಣಿಸಿದ ಆಪಾದನೆಯ ಮೇಲೆ ಮಾಸ್ಲೋವ ವಿಚಾರಣೆ ಎದುರಿಸುತ್ತಿದ್ದಾಳೆ.
ಹತ್ತೊಂಬತ್ತನೆಯ ಶತಮಾನದ ರಶ್ಯಾದಲ್ಲಿ ಈಗಿನ ಥರದ ನ್ಯಾಯಾಲಯಗಳಿರಲಿಲ್ಲ. ಸಮಾಜದ ‘ಗಣ್ಯರು’ ನ್ಯಾಯಮಂಡಲಿಗಳ ಸದಸ್ಯರು. ಅವತ್ತು ನ್ಯಾಯಮಂಡಲಿಯಲ್ಲಿ ಕೂತು ನ್ಯಾಯ ನೀಡಲಿರುವವರಿಗೆ ‘ತುರ್ತು’ ಕೆಲಸಗಳಿವೆ: ಮಂಡಲಿಯ ಅಧ್ಯಕ್ಷನಿಗೆ ಸರಸರನೆ ವಿಚಾರಣೆ ಮುಗಿಸಿ ಪ್ರೇಯಸಿಯನ್ನು ಕಾಣುವ ಕಾತರ. ಬೆಳಗಿನ ಜಾವದವರೆಗೂ ಪಾರ್ಟಿಯೊಂದರಲ್ಲಿ ಇಸ್ಪೀಟಾಡುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಅವತ್ತಿನ ಕೇಸಿನ ಎಳೆಗಳೇ ಗೊತ್ತಿಲ್ಲ. ಬ್ರಾಂಡಿಯ ಸುವಾಸನೆ ಸೂಸುತ್ತಿರುವ ಮತ್ತೊಬ್ಬ ಸದಸ್ಯನಿಗೆ ಬಾಯಿಗೆ ಬಂದದ್ದನ್ನು ಬೊಗಳುವ ಚಪಲ!
ಇಂಥ ಬೂಟಾಟಿಕೆಯ ನ್ಯಾಯಮಂಡಲಿಯಲ್ಲಿ ಒಲ್ಲದ ಮನಸ್ಸಿನಿಂದ ಕೂತಿರುವ ರಾಜಕುಮಾರ ನೆಕ್ಲುಡೋಫ್ ತನ್ನ ಕಾಲದ ಹೊಸ ಆಲೋಚನೆಗೆ ತಕ್ಕಂತೆ ಭೂಮಿ ಎಲ್ಲರಿಗೂ ಸೇರಿದ್ದು, ಅದು ಖಾಸಗಿ ಸ್ವತ್ತಲ್ಲ ಎಂದು ನಿರ್ಧರಿಸಿದವನು; ಸಾವಿರಾರು ಎಕರೆ ಪಿತ್ರಾರ್ಜಿತ ಭೂಮಿಯನ್ನು ರೈತರಿಗೆ ಕೊಟ್ಟಿರುವವನು.
ನ್ಯಾಯಮಂಡಳಿಯೆದುರು ಮಾಸ್ಲೋವ ಹಾಜರಾಗುತ್ತಾಳೆ. ಖೈದಿಯ ಉಡುಪನ್ನು ಮೀರಿ ಅವಳ ಸೌಂದರ್ಯ ಎಲ್ಲ ಗಂಡಸರ ಕಣ್ಣು ಕುಕ್ಕುತ್ತಿದೆ. ನೆಕ್ಲುಡೋಫ್ ಅವಳನ್ನು ನೋಡಿದವನೇ ಬೆಚ್ಚುತ್ತಾನೆ. ತಾನು ಹರೆಯದಲ್ಲಿ ಪ್ರೇಮಿಸಿ ಕೈಬಿಟ್ಟು ಬಂದ ಕಟುಶಾಳೇ ಮಾಸ್ಲೋವ ಎಂಬ ಸತ್ಯ ಅವನ ಮುಖಕ್ಕೆ ಹೊಡೆಯುತ್ತದೆ. ಇದು ಅವನ ಜ್ಞಾನೋದಯದ ಮೊದಲ ಘಟ್ಟ. ಇನ್ನೇನು ಅವಳು ನನ್ನತ್ತ ನೋಡುತ್ತಾಳೆ; ಗುರುತಿಸುತ್ತಾಳೆ; ನಾನೀಗ ಎದ್ದು ಲೋಕಕ್ಕೆ ನಿಜವನ್ನು ಸಾರಬೇಕು ಎಂದು ನೆಕ್ಲುಡೋಫ್ ಚಡಪಡಿಸುತ್ತಾನೆ. ಆದರೆ ಆಕೆ ಅವನನ್ನು ಗಮನಿಸುವುದೇ ಇಲ್ಲ.
ಮಾಸ್ಲೋವ ನಿರಪರಾಧಿ ಎಂಬುದು ನೆಕ್ಲುಡೋಫ್‌ಗೆ ಗೊತ್ತಾಗುತ್ತದೆ. ಆಕೆಗೆ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತಾನೆ. ಆದರೆ ಮನುಷ್ಯರೇ ಇಲ್ಲದ ಕೋರ್ಟಿನಲ್ಲಿ ಅವಳಿಗೆ ನಾಲ್ಕು ವರ್ಷಗಳ ಶಿಕ್ಷೆಯಾಗುತ್ತದೆ. ಸೈಬೀರಿಯಾದ ಜೈಲಿಗೆ ಅವಳನ್ನು ಕಳಿಸುವ ಮುನ್ನ ನೆಕ್ಲುಡೋಫ್ ಅಪೀಲು ಹಾಕಿ ಅವಳನ್ನು ಉಳಿಸಲು ನಿರ್ಧರಿಸುತ್ತಾನೆ. ಜೈಲಿಗೆ ಹೋಗಿ ಮಾಸ್ಲೋವಳನ್ನು ಕಂಡು ತನ್ನ ಗುರುತು ಹೇಳುತ್ತಾನೆ; ಅವಳನ್ನು ಅಲ್ಲಿಂದ ಬಿಡಿಸಿ, ಮದುವೆಯಾಗುವುದಾಗಿ ಹೇಳುತ್ತಾನೆ.
ಅಲ್ಲಿಂದಾಚೆಗೆ ಅವನಿಗೆ ಸಮಾಜದ ವಾಸ್ತವದ ದರ್ಶನವಾಗುತ್ತದೆ:
ಜೈಲಿನಲ್ಲಿರುವ ಯಾರ ಕತೆ ಕೇಳಿದರೂ ಅವೆಲ್ಲ ಜೈಲಿನ ಹೊರಗಿರುವ ಎಲ್ಲರೂ ಮಾಡಿರುವ ಅಪರಾಧಗಳಂತೆಯೇ ನೆಕ್ಲುಡೋಫ್‌ಗೆ ಕಾಣುತ್ತವೆ: ಅವನ ಹರೆಯದ ಬೇಜವಾಬ್ದಾರಿತನಕ್ಕೆ ಬಲಿಯಾಗಿದ್ದ ಮಾಸ್ಲೋವ ಹೆತ್ತ ಮಗು ಆರೈಕೆಯಿಲ್ಲದೆ ತೀರಿಕೊಂಡಿದೆ. ಮಾಸ್ಲೋವ ವೇಶ್ಯೆಯಾಗಿ ಬದುಕು ನೂಕಿದ್ದಾಳೆ; ನ್ಯಾಯಮಂಡಲಿಯ ಅಚಾತುರ್ಯದಿಂದಾಗಿ ಶಿಕ್ಷೆಗೆ ಗುರಿಯಾಗಿದ್ದಾಳೆ.
ಈ ಜೈಲನ್ನು ನೋಡನೋಡುತ್ತಾ ನೆಕ್ಲುಡೋಫ್‌ಗೆ ಪ್ರಭುತ್ವ, ಧರ್ಮ, ಅಧಿಕಾರಿ ವರ್ಗ, ಪೊಲೀಸ್ ವ್ಯವಸ್ಥೆ ಎಲ್ಲ ಸೇರಿ ಇಡೀ ನಾಡನ್ನೇ ಜೈಲಾಗಿರಿಸಿರುವ ಭಯಾನಕ ದೃಶ್ಯಗಳು ಕಾಣತೊಡಗುತ್ತವೆ. ಜೈಲಿನ ಹೊರಗೆ ಬದುಕುತ್ತಿರುವ ರೈತರ, ಮಹಿಳೆಯರ ಬಡತನ, ಅಸಹಾಯಕತೆಗಳು ಕೂಡ ಜೈಲಿನೊಳಗಿರುವ ನಿರ್ಗತಿಕರ ಸ್ಥಿತಿಯಂತೆಯೇ ಇರುವುದು ಗೊತ್ತಾಗುತ್ತದೆ.
ಆ ಕಾಲದ ರಷ್ಯಾದಲ್ಲಿ ಇಂಥ ಅನ್ಯಾಯಗಳ ವಿರುದ್ಧ ದನಿಯೆತ್ತುತ್ತಿರುವ ಲಿಬರಲ್ ಹುಡುಗ ಹುಡುಗಿಯರಿದ್ದಾರೆ; ಆದರೆ ಅವರೆಲ್ಲ ರಾಜಕೀಯ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಜೈಲಿಗೆ ಹಾಕಿದರೂ ಅವರ ಸ್ಪಿರಿಟ್ ಬತ್ತಿಲ್ಲ; ಹೋರಾಟ ಕುರಿತು ವಿಷಾದವಿಲ್ಲ. ಆದರೆ ಉದಾರವಾದಿ ನೆಕ್ಲುಡೋಫ್‌ಗೆ ವ್ಯವಸ್ಥೆಯ ಬದಲಾವಣೆಗಾಗಿ ರಾಜಕೀಯ ಹೋರಾಟ ಮಾಡುತ್ತಿರುವ ಹುಡುಗ ಹುಡುಗಿಯರ ಬಗ್ಗೆ ಸ್ಪಷ್ಟತೆಯಿಲ್ಲ. ಹೊಸ ರಾಜಕೀಯ ಮಾಡುತ್ತಿರುವವರು ಅತಿ ಮಾಡುತ್ತಿದ್ದಾರೆ ಎಂಬುದು ಅವನ ಅನುಮಾನ.
ಮಾರ್ಕ್ಸ್‌ವಾದಿ ವಿಮರ್ಶೆ ಹೇಳುವಂತೆ ಮನುಷ್ಯ ತಾನು ಯಾವ ವರ್ಗದ ಭಾಗಿಯಾಗಿದ್ದಾನೋ ಆ ವರ್ಗದ ಧೋರಣೆಗಳು ಅವನನ್ನು ನಿಯಂತ್ರಿಸುತ್ತಲೇ ಇರುತ್ತವೆ; ಅದನ್ನು ಮೀರಲು ಅವನ ಪ್ರಜ್ಞೆಯಲ್ಲಿ ದೊಡ್ಡ ಪಲ್ಲಟವೇ ಆಗಬೇಕಾಗುತ್ತದೆ. ಇದೆಲ್ಲ ಟಾಲ್‌ಸ್ಟಾಯ್ ಸ್ವತಃ ಹಾದು ಬಂದ ಸ್ಥಿತಿ ಕೂಡ. ಈ ಕಾದಂಬರಿ ಬರೆದಾಗ ಎಪ್ಪತ್ತು ತಲುಪಿದ್ದ ಭಾರಿ ಜಮೀನ್ದಾರ ಟಾಲ್‌ಸ್ಟಾಯ್ ತನ್ನ ಸಾವಿರಾರು ಎಕರೆ ಜಮೀನನ್ನು ತ್ಯಜಿಸಲು ಹೊರಟು ತನ್ನ ಕುಟುಂಬದಲ್ಲೇ ವಿರೋಧ ಕಟ್ಟಿಕೊಂಡವನು. ಬೀಸುತ್ತಿರುವ ಕಮ್ಯುನಿಸಮ್ಮಿನ ಹೊಸ ಗಾಳಿಯ ಬಗ್ಗೆ ಟಾಲ್‌ಸ್ಟಾಯ್‌ಗೂ ಅನುಮಾನ, ಆತಂಕಗಳಿವೆ. ಆದರೆ ಭೂಮಿಯ ಬಗ್ಗೆ, ಖಾಸಗಿ ಸ್ವತ್ತಿನ ಬಗ್ಗೆ ಕಮ್ಯುನಿಸ್ಟರು ಎತ್ತುತ್ತಿರುವ ಪ್ರಶ್ನೆಗಳು ಅವನ ಒಳಗಿನಿಂದಲೂ ಮೂಡಿವೆ.
ಆ ಘಟ್ಟದ ಭೂಮಾಲೀಕರು, ಶ್ರೀಮಂತರು, ರಾಜಪ್ರಭುತ್ವ, ಕಮ್ಯುನಿಸಂ...ಇವೆಲ್ಲದರ ನಡುವೆ ನಿಂತಿರುವ ಟಾಲ್‌ಸ್ಟಾಯ್ ಕಾದಂಬರಿಯ ನೆಕ್ಲುಡೋಫ್ ಈ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಮಾರ್ಕ್ಸ್‌ವಾದದ ಮೂಲ ಸಂದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೂ, ಸಾವಿರಾರು ಎಕರೆಗಳ ಮೋಹ ತೊರೆದಿರುವ ಅವನಿಗೆ ರಾಜಕೀಯ ಪ್ರಶ್ನೆಗಳೂ, ಹೊಸ ನ್ಯಾಯದ ಪ್ರಶ್ನೆಗಳೂ ನಿಧಾನಕ್ಕೆ ಅರ್ಥವಾಗತೊಡಗುತ್ತವೆ. ಧರ್ಮ, ಪ್ರಭುತ್ವ, ಅಧಿಕಾರಿ ವರ್ಗ, ಪೊಲೀಸ್ ವ್ಯವಸ್ಥೆ ಎಲ್ಲವೂ ಸೇರಿ ತಂತಮ್ಮ ವರ್ಗಗಳ ಹಿತರಕ್ಷಣೆಗಾಗಿ ಸಮಾಜವನ್ನೇ ಜೈಲಾಗಿ ಪರಿವರ್ತಿಸಿರುವುದನ್ನು ನೆಕ್ಲುಡೋಫ್ ನೋಡುತ್ತಾನೆ. ನಿಜಕ್ಕೂ ಜೈಲಿನಲ್ಲಿರಬೇಕಾದವರು ಜೈಲಿನ ಹೊರಗಿದ್ದಾರೆ ಎನ್ನಿಸುತ್ತದೆ.
ಮಾಸ್ಲೋವಳನ್ನು ಬಿಡಿಸುವ ಅವನ ಪ್ರಯತ್ನ ಕೈಗೂಡುವುದಿಲ್ಲ. ಶಿಕ್ಷೆಯ ಅವಧಿ ಮುಗಿಸಲು ಆಕೆ ಸೈಬೀರಿಯಾಕ್ಕೆ ಹೊರಡುವ ಕಾಲ ಬರುತ್ತದೆ. ತಾನೂ ಸೈಬೀರಿಯಾಕ್ಕೆ ಹೋಗಿ, ಅವಳ ಜೈಲು ಶಿಕ್ಷೆ ಮುಗಿಯುವವರೆಗೂ ಸೈಬೀರಿಯಾದಲ್ಲೇ ಇದ್ದು, ಬಿಡುಗಡೆಯ ನಂತರ ಅವಳನ್ನು ಮದುವೆಯಾಗಲು ನೆಕ್ಲುಡೋಫ್ ಖೈದಿಗಳ ಜೊತೆಗೇ ಸೈಬೀರಿಯಾಕ್ಕೆ ಹೊರಡುತ್ತಾನೆ; ಆ ಕೈದಿಗಳ ಸ್ಥಿತಿ ನೋಡುತ್ತಾ, ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ವ್ಯವಸ್ಥೆ ತನ್ನ ತಪ್ಪನ್ನು ಸರಿಮಾಡಿಕೊಳ್ಳದೆ ಜನರಿಗೇ ಶಿಕ್ಷೆ ಕೊಡುತ್ತಿರುವ ಧೂರ್ತತನ ಅವನ ಕಣ್ಣಿಗೆ ರಾಚತೊಡಗುತ್ತದೆ.
ಕೊನೆಗೆ ಅಪೀಲೊಂದರಲ್ಲಿ ಮಾಸ್ಲೋವಗೆ ಬಿಡುಗಡೆ ಸಿಕ್ಕರೂ ಅವಳು ಬಿಡುಗಡೆಗೆ ಒಪ್ಪದೆ ಜೈಲಿನಲ್ಲೇ ಉಳಿಯತ್ತಾಳೆ. ಕಾರಣ, ರಾಜಕೀಯ ಹೋರಾಟದಲ್ಲಿ ಭಾಗಿಯಾಗಿ ಸೈಬೀರಿಯಾ ಜೈಲಿಗೆ ಹೊರಟಿರುವ ಹೊಸ ಕಾಲದ ಕ್ರಾಂತಿಕಾರಿಯೊಬ್ಬ ಮಾಸ್ಲೋವ ಹೇಗಿದ್ದಾಳೋ ಹಾಗೆಯೇ ಒಪ್ಪಿಕೊಂಡಿದ್ದಾನೆ. ಶಿಕ್ಷೆಯ ಅವಧಿಯ ನಂತರ ಅವನನ್ನೇ ಮದುವೆಯಾಗಲು ಮಾಸ್ಲೋವ ನಿರ್ಧರಿಸುತ್ತಾಳೆ; ನೆಕ್ಲುಡೋಫ್‌ನನ್ನು ಬೀಳ್ಕೊಡುತ್ತಾಳೆ.
ಬದುಕಿನ ಎಲ್ಲ ಸುಖ, ಸವಲತ್ತುಗಳನ್ನು ಅನುಭವಿಸಿ, ನಂತರ ಕಷ್ಟ, ನಿರಾಶೆಗಳನ್ನು ಆಹ್ವಾನಿಸಿಕೊಳ್ಳುವ, ಹಾದು ಹೋಗುವ ನೆಕ್ಲುಡೋಫ್ ಮೂಲಕ ಟಾಲ್‌ಸ್ಟಾಯ್ ರಶ್ಯನ್ ಬುದ್ಧನೊಬ್ಬನನ್ನು ಸೃಷ್ಟಿಸುತ್ತಾನೆ.
ನೂರಿಪ್ಪತ್ತೈದು ವರ್ಷಗಳ ಕೆಳಗೆ ಬಂದ ‘ರೆಸರೆಕ್ಷನ್’ ಕ್ರಾಂತಿಯ ಮುಂಚಿನ ದಶಕಗಳ ರಶ್ಯಾದ ಕತೆ. ಆದರೆ ಒಂದು ಕಾಲವನ್ನು ಪ್ರಾಮಾಣಿಕವಾಗಿ, ನಿಷ್ಠುರವಾಗಿ ನೋಡುವ ಲೇಖಕ ಎಲ್ಲ ಕಾಲಕ್ಕೂ ಕನ್ನಡಿಯಾಗುತ್ತಾನೆ. ಸ್ವಂತದ ಸುಳ್ಳುಗಳನ್ನು ಸೀಳಿ, ತನ್ನ ವ್ಯಕ್ತಿತ್ವವನ್ನೇ ತೀವ್ರ ಪರೀಕ್ಷೆಗೆ ಒಳಪಡಿಸಿ, ತನ್ನ ಚರ್ಮದಿಂದ ಆಚೆ ಬಂದು ಲೋಕವನ್ನು ಅರಿತ ಟಾಲ್‌ಸ್ಟಾಯ್ ತನ್ನ ಕಾಲದ ಸಂದಿಗ್ಧ, ಗೊಂದಲ, ನಿಯಂತ್ರಣ, ದಮನಗಳನ್ನು ಹೇಳಿದ. ಅವನ ದರ್ಶನಕ್ಕೆ ದಕ್ಕಿದ ಈ ಲೋಕ ಇವತ್ತಿನ ಇಂಡಿಯಾದ ಕ್ರೂರ ಸತ್ಯಗಳನ್ನೂ ಹೇಳುತ್ತದೆ.
‘ಟಾಲ್‌ಸ್ಟಾಯ್ ರಶ್ಯನ್ ಕ್ರಾಂತಿಯ ಕನ್ನಡಿ’ ಎಂದು ಮುಂದೊಮ್ಮೆ ಲೆನಿನ್ ಬಣ್ಣಿಸಿದ. ಆದರೆ ಸಾಹಿತ್ಯ ಕೃತಿಗಳ ಕನ್ನಡಿಗಳು ಕಾಲಾತೀತ; ದೇಶಾತೀತ! ಕಾಲ ಉರುಳಿದಂತೆ ಟಾಲ್‌ಸ್ಟಾಯ್ ಕನ್ನಡಿ ಸ್ವತಃ ಲೆನಿನ್ ರೂಪಿಸಿದ ಕಮ್ಯುನಿಸ್ಟ್ ಆಳ್ವಿಕೆಯೂ ಸೇರಿದಂತೆ ಎಲ್ಲ ಬಗೆಯ ಆಳ್ವಿಕೆಗಳ ಕ್ರೌರ್ಯವನ್ನೂ ಪ್ರತಿಫಲಿಸುತ್ತಿದೆ. ಕಮ್ಯುನಿಸ್ಟ್ ದೇಶಗಳಾದ ರಶ್ಯಾ, ಚೈನಾ,ಕ್ಯೂಬಾ; ಪ್ರಜಾಪ್ರಭುತ್ವವಾದಿ ರಾಷ್ಟ್ರ ಗಳೆನ್ನಲಾದ ಭಾರತ, ಅಮೆರಿಕಾ, ಇಸ್ರೇಲ್, ನೈಜೀರಿಯ...ಎಲ್ಲವೂ ದೇಶವನ್ನೇ ಜೈಲಾಗಿಸುವ ಕ್ರೂರ ಪ್ರಭುತ್ವಗಳನ್ನು ಕಂಡಿವೆ.
ಶೇಕ್‌ಸ್ಪಿಯರ್ ಬಿಟ್ಟರೆ ಜಗತ್ತಿನ ಅತ್ಯಂತ ಶ್ರೇಷ್ಠ ಲೇಖಕ ಎನ್ನಲಾದ ಟಾಲ್‌ಸ್ಟಾಯ್ ಕನ್ನಡಿಯಲ್ಲಿ ಎಲ್ಲ ದೇಶಗಳ, ಕಾಲಗಳ ಜನರೂ, ರಾಜಕಾರಣಿಗಳೂ ತಂತಮ್ಮ ದೇಶಗಳ ಮುಖಗಳನ್ನು ನೋಡಿಕೊಂಡರೆ, ಅವರ ಕಣ್ಣು ಅಷ್ಟಿಷ್ಟಾದರೂ ತೆರೆಯಬಲ್ಲದು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಆ ಮೋಟಾರ್ ಕಂಪನಿಯ ವಿಸಿಟರ‍್ಸ್ ಲೌಂಜ್‌ನಲ್ಲಿ ಟೆಲಿವಿಶನ್ ನ್ಯೂಸ್ ಚಾನಲ್ ಹೊಡೆದುಕೊಳ್ಳುತ್ತಲೇ ಇತ್ತು. ಇನ್ನೂ ಅರ್ಧ ಗಂಟೆ ಕಾಯಬೇಕಿದ್ದರಿಂದ ಲ್ಯಾಪ್‌ಟಾಪ್ ತೆಗೆದು ನನ್ನ ಕೆಲಸದಲ್ಲಿ ಮುಳುಗಲೆತ್ನಿಸಿದೆ. ಕಣ್ಣು ಲ್ಯಾಪ್‌ಟ್ಯಾಪ್ ತೆರೆಯ ಮೇಲಿದ್ದರೂ ನ್ಯೂಸಿಣಿ ಕಿವಿ ಕೊರೆಯುತ್ತಲೇ ಇದ್ದಳು.
ಎಷ್ಟೋ ಸಲ ಸುತ್ತಮುತ್ತಲಿನ ಯಾವ ಗಲಾಟೆಯೂ ಕೇಳದಂತೆ ನಾವು ಮಾಡುತ್ತಿರುವ ಕೆಲಸಗಳು ನಮ್ಮನ್ನು ಒಳಸೆಳೆದು ಹೊರಲೋಕದಿಂದ ಪಾರು ಮಾಡುತ್ತಿರುತ್ತವೆ. ಅವತ್ತು ಆ ಭಾಗ್ಯ ಇನ್ನೂ ಬಂದಿರಲಿಲ್ಲ. ಕತ್ತೆತ್ತಿ ಟೆಲಿವಿಷನ್ ನೋಡಿದೆ. ಅದೇ ನಿರೀಕ್ಷಿತ ಏಕಮುಖೀ ಚುನಾವಣೆಯ ಬೊಂಬಡಾ! ನ್ಯೂಸಿಣಿಯ ಚರ್ಯೆಗಳು ವಿಚಿತ್ರವಾಗಿದ್ದವು. ಇನ್ನೇನು ಸಿಂಹಿಣಿಯಾಗಿ ವೀಕ್ಷಕ, ವೀಕ್ಷಕಿಯರ ಮೇಲೆ ಮೂರನೇ ಮಹಾಯುದ್ಧ ಘೋಷಿಸಲು ತಯಾರಿರುವಂತೆ ಕಂಡಳು. ಏಳೆಂಟು ವರ್ಷಗಳಿಂದ ಟೆಲಿವಿಷನ್ ನೋಡುವ ಅಭ್ಯಾಸವಿಲ್ಲದ ನನಗೆ ಈಕೆ ಸಣ್ಣ, ಪುಟ್ಟ ವಿಷಯಗಳಿಗೂ ಯಾಕಿಷ್ಟು ಉಗ್ರ ಸ್ವರೂಪ ತಾಳುತ್ತಿದ್ದಾಳೆ ಎಂಬುದು ವಿಸ್ಮಯ ಹುಟ್ಟಿಸಿತು.
ಅಲ್ಲಿ ಕಾಯುತ್ತಿದ್ದ ಇತರರು ಈಕೆಯ ಯುದ್ಧಪ್ರಸಾರವನ್ನು ಹೇಗೆ ನೋಡುತ್ತಿರಬಹುದು ಎಂದು ಸುತ್ತ ನೋಡಿದೆ. ಅವರು ನನಗಿಂತ ಜಾಣರಾಗಿದ್ದರು; ಅಂದರೆ, ತಂತಮ್ಮ ಸ್ಮಾರ್ಟ್ ಫೋನುಗಳಲ್ಲಿ ಮುಳುಗಿದ್ದರು! ಅಲ್ಲಿ ಯಾರು, ಏನನ್ನು ಇವರ ತಲೆಯಲ್ಲಿ ಬಿತ್ತುತ್ತಿದ್ದಾರೋ? ಈ ಜನ ಕಾಮಿಡಿ ನೋಡಿ ನಗುತ್ತಿದ್ದಾರೋ? ಅಥವಾ ಇಂಥ ಸುದ್ದಿಗಳನ್ನೇ ಜನ ಕಾಮಿಡಿಗಳಂತೆ ನೋಡುತ್ತಿದ್ದಾರೋ! ಸುಳ್ಳು ಯಾವುದು, ನಿಜ ಯಾವುದು ಎಂಬುದನ್ನು ಬಿಡಿಸಿ ನೋಡುವ ಮನಸ್ಥಿತಿಯೇ ಮಾಯವಾದಂತಿರುವ ಕಾಲ ಇದು. ಇದೀಗ ಚುನಾವಣೆಯ ಕಾಲದಲ್ಲಿ ಹುಟ್ಟುವ ಸುಳ್ಳುಗಳನ್ನು, ಯೋಜಿತ ಸಮೀಕ್ಷೆಗಳನ್ನು ಮೀರಿ ಜನ ವೋಟು ಹಾಕಬಲ್ಲರೇ ಎಂಬ ಪ್ರಶ್ನೆ ಸೂಕ್ಷ್ಮ ಮನಸ್ಸುಗಳಲ್ಲಿ ಹುಟ್ಟುತ್ತಲೇ ಇರುತ್ತದೆ.
ಅವತ್ತು ಟೆಲಿವಿಷನ್ ಸುದ್ದಿ ಚೀತ್ಕಾರ ಕೇಳಿದ ಕೆಲದಿನಗಳ ನಂತರ ಸಲ್ಮಾನ್ ರಶ್ದಿಯವರ ‘ವಿಕ್ಟರಿ ಸಿಟಿ’ ಕಾದಂಬರಿ ಕುರಿತು ಹಿಂದೊಮ್ಮೆ ಬರೆದ ಟಿಪ್ಪಣಿಗಳನ್ನು ಈಗ ಬೇರೆ ಥರ ನೋಡಬಹುದೆನ್ನಿಸಿತು:
ಮೇಲುನೋಟಕ್ಕೆ ಫ್ಯಾಂಟಸಿಯಂತೆ ಕಾಣುವ ಈ ಕಾದಂಬರಿಯಲ್ಲಿ ಪಂಪ ಕಂಪನಾ ಎಂಬ ಕಥನಕಾರ್ತಿ ಆದರ್ಶ ಸಾಮ್ರಾಜ್ಯವೊಂದನ್ನು ತನ್ನ ಅಪೂರ್ವ ಬೀಜಗಳಿಂದ ಸೃಷ್ಟಿಸುತ್ತಾಳೆ. ಈ ವಿಶಿಷ್ಟ ಕಾದಂಬರಿಯ ಘಟನಾವಳಿಗಳು ನಡೆಯುವ ‘ಬಿಸ್ನಾಗ’ ಸಾಮ್ರಾಜ್ಯ ಹಳೆಯ ಸಿದ್ಧ ಜಾಡಿನಿಂದ ತಪ್ಪಿಸಿಕೊಂಡು ಹೊಸ ಹಾದಿ ತೆರೆಯುವ ರಾಜ್ಯವಾಗಲೆತ್ನಿಸುತ್ತದೆ.
ಈ ಸಾಮ್ರಾಜ್ಯ ಸೃಷ್ಟಿಸಿ ನೂರಾರು ವರ್ಷ ಬದುಕುವ ಪಂಪ ಕಂಪನಾ ಮುಂದೊಮ್ಮೆ ಕಲೆ, ಸಂಗೀತ, ಸ್ವಾತಂತ್ರ‍್ಯ, ಸರ್ವಧರ್ಮ ಸ್ವೀಕಾರ ಮುಂತಾದ ಉದಾರ ಚಿಂತನೆಗಳು ರಾಜ ಕೃಷ್ಣದೇವರಾಯನ ಅಂತರಂಗದಲ್ಲಿ ಉಕ್ಕುವಂತೆ ಉಸುರುತ್ತಾಳೆ. ಈ ಚಿಂತನೆಗಳನ್ನು ಜನರ ಕಿವಿಯಲ್ಲೂ ಉಸುರಿ ನಾಡಿನುದ್ದಕ್ಕೂ ಹಬ್ಬಿಸುತ್ತಾಳೆ. ಇದು ಸಾಂಪ್ರದಾಯಿಕ ಸಾಮ್ರಾಜ್ಯವೊಂದು ಉದಾರವಾದಿಯಾದ ಸುಂದರ ವಿದ್ಯಮಾನವನ್ನು ವಿವರಿಸಲು ಕಾದಂಬರಿಕಾರ ಬಳಸಿರುವ ಮಾಂತ್ರಿಕ ವಾಸ್ತವತಾವಾದಿ ಕಥಾತಂತ್ರ! ಆದರೇನಂತೆ! ವೈವಿಧ್ಯಮಯ ಜಾತಿ, ಧರ್ಮ, ಜನಾಂಗಗಳನ್ನು ಒಳಗೊಂಡ ಹೊಸ ರೀತಿಯ ಆಳ್ವಿಕೆ, ಹೊಸ ಸಮಾಜಗಳು ಜನರ ಅಂತರಂಗದ ಪಿಸುಮಾತಿನಿಂದಲೂ ಸೃಷ್ಟಿಯಾಗುತ್ತವೆ ಎಂಬ ಶಾಶ್ವತ ಸತ್ಯವನ್ನು ಕಾದಂಬರಿ ಅದ್ಭುತವಾಗಿ ಹೇಳುತ್ತದೆ.
ರಶ್ದಿಯ ಕಾದಂಬರಿಯ ಕಥನಕಾರ್ತಿ ಪಂಪ ಕಂಪನಾಳ ಅಂತರಂಗದ ಮೃದಂಗದ ದನಿ ಹಬ್ಬಿಸಿದ ಉದಾರವಾದಿ ಸಾಮ್ರಾಜ್ಯ ಕಂಡು ಪುಳಕಗೊಳ್ಳುವ ನಮ್ಮ ಕಾಲದ ಓದುಗರೆದುರು ಇದಕ್ಕೆ ಪೂರಾ ವಿರುದ್ಧವಾದ ಈ ಕಾಲದ ಸೈತಾನ ಕಾರ್ಖಾನೆಗಳ ಗಟ್ಟಿ ಗಂಟಲಿನ, ಜೋರು ದನಿಗಳ ಅಬ್ಬರ ಮೂಡತೊಡಗಿದರೆ ಅಚ್ಚರಿಯಲ್ಲ.
ಏಕಕಾಲಕ್ಕೆ ಕೆಟ್ಟ ಪಿಸುಮಾತನ್ನೂ, ಲಜ್ಜೆಗೇಡಿ ಗಂಟಲನ್ನೂ ಬಳಸಿ ಲಾಭ ಮಾಡಿಕೊಳ್ಳುವ ನೀಚರ ಚಿತ್ರಗಳು ನಿತ್ಯ ನಮ್ಮ ಕಣ್ಣಿಗೆ ರಾಚುತ್ತಿರುತ್ತವೆ. ಚುನಾವಣೆಯ ಕಾಲದಲ್ಲಿ ಅವುಗಳ ಅಬ್ಬರ ಇನ್ನೂ ಜೋರು!
ನಿತ್ಯ ನೀವು ಕೇಳಿಸಿಕೊಳ್ಳುವ ಈ ಅಸಂಬದ್ಧ ಹೇಳಿಕೆಗಳನ್ನು ಈ ಮಹನೀಯರೇ ಸೃಷ್ಟಿಸುತ್ತಾರೋ, ಇವರಿಗೆ ಉಚಿತಾನುಚಿತ ಸಲಹೆಗಳನ್ನು ಕೊಡುವ ‘ಸಂಶೋಧಕ’ರು ಸೃಷ್ಟಿಸುತ್ತಾರೋ, ತಿಳಿಯದು! ಈ ಥರದ ಮಾತುಗಳನ್ನು ಈ ಕಾಲದ ಇಂಗ್ಲಿಷ್ ಪತ್ರಿಕೋದ್ಯಮ ಅನಗತ್ಯ ಗೌರವ ಕೊಟ್ಟು ‘ನೆರೇಟಿವ್’ ಎನ್ನುತ್ತಿದೆ.
‘ನೆರೇಟಿವ್’ (Narrative) ಎಂಬ ಪದ ಮೂವತ್ತು ವರ್ಷಗಳ ಕೆಳಗೆ ಬೇರೆ ಥರದಲ್ಲಿ ಜಗತ್ತಿನ ಗಂಭೀರ ಅಕಡೆಮಿಕ್ ವಲಯದಲ್ಲಿ ಹೆಚ್ಚು ಚಾಲ್ತಿಗೆ ಬಂದಾಗ ಸಂಸ್ಕೃತಿ ಚಿಂತಕ ಡಿ. ಆರ್. ನಾಗರಾಜ್ ಈ ಪರಿಕಲ್ಪನೆಯನ್ನು ‘ಕಥನ’ ಎಂದು ಕರೆದರು; ತಮ್ಮ ಪುಸ್ತಕಕ್ಕೆ ‘ಸಾಹಿತ್ಯ ಕಥನ’ ಎಂದು ಹೆಸರಿಟ್ಟರು. ಅದಕ್ಕೂ ಮೊದಲು ಯು.ಆರ್. ಅನಂತಮೂರ್ತಿ ತಮ್ಮ ‘ಪೂರ್ವಾಪರ’ ಪುಸ್ತಕದ ‘ನೆರೇಟಿವ್’ಗಳನ್ನು ‘ಆಖ್ಯಾನ’ ಎಂದು ಕರೆದರು. ಕನ್ನಡದ ಈ ಎರಡು ಶ್ರೇಷ್ಠ ಪುಸ್ತಕಗಳ ಗಂಭೀರ ಕಥನಗಳನ್ನು ಓದಿ ಬಲ್ಲವರಿಗೆ ‘ನೆರೇಟಿವ್’ ಪದವನ್ನು ಈಗ ಎಷ್ಟು ಅಗ್ಗವಾಗಿ ಬಳಸಲಾಗುತ್ತಿದೆ ಎಂಬುದರ ಅರಿವಾಗಬಲ್ಲದು.
ಗಂಭೀರ ಅರ್ಥಗಳುಳ್ಳ ಪದಗಳನ್ನು ದುರ್ಬಳಕೆ ಮಾಡಿಕೊಂಡು, ಅವುಗಳ ಅರ್ಥಗಳನ್ನು ಅಗ್ಗವಾಗಿಸುವುದು ಇಂದಿನ ವಿದ್ಯಾವಂತರ ಕಾಯಿಲೆ! ಈ ಕಾಯಿಲೆ ರಾಜಕೀಯ, ಮಾಧ್ಯಮ, ಶಿಕ್ಷಣ, ಡಿಜಿಟಲ್ ಹಾಗೂ ಸಮಾಜ ವಿಭಜಕ ವಲಯಗಳಲ್ಲಿ ವ್ಯಾಪಕವಾಗಿದೆ. ವಿಶಾಲ ಸಾಂಸ್ಕೃತಿಕ ಸಾಧ್ಯತೆಯುಳ್ಳ ‘ನೆರೇಟಿವ್’ ಪದವನ್ನು ಅತಿ ವಾಚ್ಯಗೊಳಿಸಿ, ಇದೀಗ ‘ಕಟ್ಟು ಕತೆ’ ಎಂಬ ಅರ್ಥಕ್ಕೆ ಇಳಿಸಲಾಗಿದೆ. ರಾಜಕೀಯ ಪಕ್ಷವೊಂದು ಹರಿಯಬಿಡುವ ಸುಳ್ಳುಗಳನ್ನೇ ‘ನೆರೇಟಿವ್’ ಎಂದು ಕರೆಯುವವರಿದ್ದಾರೆ. ‘ಆ ಪಕ್ಷಕ್ಕೆ ಒಂದು ‘ನೆರೇಟಿವ್’ ಇದೆ, ಮತ್ತೊಂದು ಪಕ್ಷಕ್ಕೆ ‘ನೆರೇಟೀವ್’ ಇಲ್ಲ’...ಹೀಗೆ ಏನನ್ನು ಬೇಕಾದರೂ ಥಿಯರೈಸ್ ಮಾಡುವವರಿದ್ದಾರೆ!
ಆದರೆ ರಾಜಕೀಯ ಪಕ್ಷಗಳು ಸೃಷ್ಟಿಸುವ ಕಟ್ಟುಕತೆಗಳಿಗೆ, ಅವುಗಳನ್ನು ಆಧರಿಸಿ ಪೆಯ್ಡ್ ಸರ್ವೆಂಟ್ಸ್ ಸೃಷ್ಟಿಸುವ ಸೋ ಕಾಲ್ಡ್ ನೆರೇಟಿವ್‌ಗಳಿಗೆ ಪ್ರತಿಯಾಗಿ ಜನರೂ ತಮ್ಮ ಕತೆಗಳನ್ನು ರೂಪಿಸಬಲ್ಲರು. ಲಂಕೇಶರ ಕಾಲದ ‘ಲಂಕೇಶ್ ಪತ್ರಿಕೆ’ಯಲ್ಲಿ ಗೆಳೆಯ ಬಿ. ಚಂದ್ರೇಗೌಡರ ‘ಕಟ್ಟೆ ಪುರಾಣ’ ಎಂಬ ವಿಶಿಷ್ಟ ವಿನೋದದ ಅಂಕಣವನ್ನು ಓದುತ್ತಿದ್ದೆ. ಅಲ್ಲಿ ನಾಗಮಂಗಲದ ಸುತ್ತಮುತ್ತಲ ಪಾತ್ರಗಳು ತಮ್ಮ ಜವಾರಿ ಭಾಷೆಯಲ್ಲಿ ರಾಜಕೀಯ ವಿಶ್ಲೇಷಣೆ ಮಾಡುತ್ತಿದ್ದವು. ಪತ್ರಿಕೆಗಳಲ್ಲಿ ಬರುವ ರಾಜಕಾರಣಿಗಳ ಹೇಳಿಕೆಗಳನ್ನು ತಮ್ಮದೇ ರೀತಿಯಲ್ಲಿ ಗೇಲಿ ಮಾಡಿ ವ್ಯಾಖ್ಯಾನಿಸುತ್ತಿದ್ದವು. ಈ ಪುರಾಣಗಳನ್ನು ಚಂದ್ರೇಗೌಡರು ಅನೇಕ ಸಲ ನಾಗಮಂಗಲದ ಸುತ್ತಮುತ್ತ ಅಡ್ಡಾಡುತ್ತಲೂ ಬರೆಯುತ್ತಿದ್ದರು; ಕೆಲವು ಸಲ ಕಲ್ಪನಾವಿಲಾಸದ ಬೆನ್ನೇರಿ ಕೂಡ ಬರೆಯುತ್ತಿದ್ದರು.
ಇಪ್ಪತ್ತೈದು ವರ್ಷಗಳ ಹಿಂದೆ ಓದಿದ ಕಟ್ಟೆ ಪುರಾಣಗಳನ್ನು ನೆನಪಿಸಿಕೊಂಡು ಹೇಳುವುದಾದರೆ, ಅವು ಆರೋಗ್ಯಕರ ಡೆಮಾಕ್ರಸಿಯ ಮುಕ್ತ ಜನತಾ ಪ್ರತಿಕ್ರಿಯೆಗಳಂತಿರುತ್ತಿದ್ದವು. ಮಂಡ್ಯ ಪ್ರದೇಶದ ಜನ ಯಾವ ದೊಡ್ಡ ನಾಯಕರಿಗೂ ಕೇರ್ ಮಾಡದೆ ತಂತಮ್ಮ ಸ್ವತಂತ್ರ ಟೀಕೆ ಟಿಪ್ಪಣಿ ಮಾಡುವುದನ್ನೂ, ಯಾರು ಎಷ್ಟೇ ದುಡ್ಡು ಕೊಟ್ಟರೂ ತಮಗೆ ಬೇಕಾದಂತೆ ವೋಟು ಹಾಕುತ್ತಿದ್ದ ಮಾದರಿಯನ್ನೂ ಅವು ಬಿಂಬಿಸುತ್ತಿದ್ದವು.
ಚಂದ್ರೇಗೌಡರ ‘ಕಟ್ಟೆ ಪುರಾಣ’ ಕಾಲಂ ನಿಂತಿರಬಹುದು. ಆದರೆ ಇವತ್ತಿಗೂ ಕರ್ನಾಟಕದ ಹಳ್ಳಿಗಾಡಿನ ಜನ ನಮ್ಮ ನಾಯಕರುಗಳ ‘ನಿತ್ಯ ಪುರಾಣ ಸೃಷ್ಟಿ’ಗಳಿಗೆ ಕಟ್ಟೆಗಳಲ್ಲಿ, ಹಾದಿಬೀದಿಗಳಲ್ಲಿ ತಮ್ಮ ಪುರಾಣಗಳ ಟಾಂಗ್ ಕೊಡುವುದಂತೂ ನಿಂತಿಲ್ಲ. ಇದು ನಿಮ್ಮೂರಿನ ಬೀದಿಗಳಲ್ಲೂ ನಡೆಯುತ್ತಿರುವುದನ್ನು ನೀವು ನೋಡಿರಬಹುದು. ಜನ ತಮ್ಮದೇ ಆದ ಒರಿಜಿನಲ್ ಚುನಾವಣಾ ಪುರಾಣ ಸೃಷ್ಟಿ ಮಾಡುತ್ತಾ ತಂತಮ್ಮ ವ್ಯಾಖ್ಯಾನಗಳನ್ನು ಕೊಡುತ್ತಿರುತ್ತಾರೆ. ಟೀವಿಯಲ್ಲಿ ಯಾರು ಯಾರನ್ನಾದರೂ ಅತಿಯಾಗಿ ಹೊಗಳುತ್ತಿದ್ದರೆ ಅಥವಾ ಬಯ್ಯುತ್ತಿದ್ದರೆ, ‘ಓ! ಪೇಮೆಂಟಾಗಿದೆ ಬಿಡಲೇ!’ ಎನ್ನುತ್ತಿರುತ್ತಾರೆ!
ರಶ್ದಿ ಕಾದಂಬರಿಯಲ್ಲಿ ಬರುವ ಪಿಸುಮಾತುಗಳಂತಿರುವ ಈ ಪ್ರತಿಕ್ರಿಯೆಗಳು, ನಮ್ಮ ಜನರು ಚುನಾವಣಾ ಕಟ್ಟು ಕತೆಗಾರರು ಹೇಳಿದ್ದನ್ನೆಲ್ಲ ನಂಬುವ ದಡ್ಡರಲ್ಲ ಎಂಬುದನ್ನು ಸಾರುತ್ತವೆ. ಎಲ್ಲ ಬಗೆಯ ಜನರೂ ತಮ್ಮ ಕತೆ ಕಟ್ಟುತ್ತಿರುತ್ತಾರೆ; ಈ ಜನರು ನೀವು ಹೇಳುವ ಕತೆಗಳನ್ನು ಸುಮ್ಮನೆ ನುಂಗುವುದಿಲ್ಲ. ಇದಕ್ಕೆ ದೊಡ್ಡ ಪುರಾವೆ ಎರಡು ವರ್ಷಗಳ ಕೆಳಗೆ ದೇಶದ ಶೇರು ಮಾರುಕಟ್ಟೆಯ ಪ್ರತಿಕ್ರಿಯೆಯಲ್ಲಿ ನನಗೆ ಕಂಡಿತ್ತು. ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್ ವರದಿ ಬಂದಾಗ ಅದಾನಿ ಉದ್ಯಮ ಏರುಪೇರಾಯಿತು. ಅದಾನಿ ಸಮೂಹ ಪುಟಗಟ್ಟಲೆ ಜಾಹಿರಾತು ಕೊಟ್ಟು ತನ್ನದೇ ಆದ ‘ನೆರೇಟಿವ್’ ಸೃಷ್ಟಿಸಲು ಯತ್ನಿಸಿತು. ತನ್ನ ವಿರುದ್ಧ ಬಂದಿರುವ ವರದಿ ದೇಶದ ಮೇಲಿನ ದಾಳಿ ಎಂದೇ ಬಣ್ಣಿಸಿಕೊಂಡಿತು. ಆದರೆ ಶೇರು ಮಾರುಕಟ್ಟೆಯ ಸಹಭಾಗಿಗಳು ಮಾತ್ರ ತಮ್ಮದೇ ಆದ ‘ನೆರೇಟಿವ್’ ಸೃಷ್ಟಿಸಿಕೊಂಡರು! ಜನ ತಮ್ಮ ಕತೆಯನ್ನೇ ನೆಚ್ಚಿಕೊಂಡರು. ಅದಾನಿ ಉದ್ಯಮಗಳ ಶೇರುಮೌಲ್ಯ ಕುಸಿಯತೊಡಗಿತು.
ಇವೆಲ್ಲ ಒಂದು ಇನ್ನೊಂದನ್ನು ಮುಗಿಸುವ ‘ನೆರೇಟಿವ್’ಗಳೋ? ಅಥವಾ ಗಟ್ಟಿ ಸಂಶೋಧನೆಯೊಂದು ಬೃಹತ್ ವ್ಯಾಪಾರೋದ್ಯಮವನ್ನೇ ಉರುಳಿಸಬಹುದು ಎಂಬ ಹೊಸ ಕಥನದ ಉದಯವನ್ನು ಇದು ಹೇಳುತ್ತಿದೆಯೋ?
ಇಂಥ ಬೆಳವಣಿಗೆಗಳ ನಡುವೆ, ‘ವಿಕ್ಟರಿ ಸಿಟಿ’ ಕಾದಂಬರಿ ಹೇಳುತ್ತಿರುವಂತೆ ಒಳಿತನ್ನು ಬಿತ್ತಿ ಬೆಳೆಯಬಯಸುವವರ ಅಂತರಂಗದ ಪಿಸುದನಿಗಳು ಕೂಡ ಜನರ ಅಂತರಂಗದ ಒಳಿತಿನ ಪಿಸುದನಿಗಳಾಗಿ ಬೆಳೆಯಬಹುದು. ಜೋರುಗಂಟಲ ಚೀರುದನಿಯ ಕಟ್ಟುಕತೆಗಳಿಗೆ ಜನರ ಪಿಸುಮಾತುಗಳು ಗಟ್ಟಿ ಉತ್ತರವಾಗಬಲ್ಲವು ಎಂಬ ನಂಬಿಕೆಯನ್ನು ನಾವು ಎಂದೂ ಕಳೆದುಕೊಳ್ಳಬಾರದು.
ರಾಜಕೀಯದ ಅಬ್ಬರದ ಕಟ್ಟುಕತೆಗಳ ಎದುರು ಪ್ರಾಮಾಣಿಕರ ಮೆಲುದನಿಗಳು ಕೂಡ ಜನಾಭಿಪ್ರಾಯ ರೂಪಿಸಬಲ್ಲವು. ಇದು ಎಲ್ಲ ಚುನಾವಣೆಗಳಲ್ಲೂ ಸಾಬೀತಾಗುತ್ತಿರುತ್ತದೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಹೊಸ ತಲೆಮಾರಿನ ಪ್ರತಿಭಾವಂತ ಗಾಯಕ ಚಿಂತನ್ ವಿಕಾಸ್ ಕಂಠದಿಂದ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ ಆಲವೆ’ ಹಾಡು ಮತ್ತೆ ಕೇಳಿ ಬರತೊಡಗಿತು.
ನೋಡನೋಡುತ್ತಲೇ ‘ಅಂಬೇಡ್ಕರ್’ ಕವಿತೆಗೆ ಐವತ್ತು ವರ್ಷ ತುಂಬಿತ್ತು! ಕೆಲವು ವರ್ಷಗಳ ಕೆಳಗೆ ಒಂದು ಮಧ್ಯಾಹ್ನ ಇದೇ ‘ಅಂಬೇಡ್ಕರ್’ ಪದ್ಯದ ಸುತ್ತ ನಡೆದ ಒಂದು ಕಚಗುಳಿಯ ಕವಿಸಂವಾದ ನೆನಪಾಯಿತು:
ಅವತ್ತು ಗೆಳೆಯ, ಕನ್ನಡ ಅಧ್ಯಾಪಕ ಎಂ.ಜಿ. ಚಂದ್ರಶೇಖರಯ್ಯ ಪದವಿ ತರಗತಿಗಳ ಪಠ್ಯ ಪುಸ್ತಕದ ಡ್ರಾಫ್ಟ್ ರೆಡಿ ಮಾಡಿಕೊಂಡು ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಕಚೇರಿಗೆ ಬಂದಿದ್ದರು. ಆ ಪಠ್ಯದಲ್ಲಿ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಪದ್ಯವೂ ಸೇರಿತ್ತು. ಪಠ್ಯಪುಸ್ತಕದ ಕೊನೆಗೆ ಕವಿ-ಕಾವ್ಯ ಪರಿಚಯದ ಭಾಗ ಖಾಲಿಯಿತ್ತು. ಎಂ.ಜಿ. ಚಂದ್ರಶೇಖರಯ್ಯ ಕೊಂಚ ಮೋಹಕವಾಗಿ, ಮತ್ತು ಸೂಚ್ಯವಾಗಿ, ನನ್ನೆಡೆಗೆ ನೋಡಿದರು! ಸರಿ, ಬರೆಯಲು ರೆಡಿಯಾದೆ. ಕವಿತೆ ಚೆನ್ನಾಗಿ ನೆನಪಿತ್ತು; ಎಷ್ಟೋ ಸಲ ನಿಜಕ್ಕೂ ಭಾವುಕನಾಗಿ ನನಗೆ ನಾನೇ ಹಾಡಿಕೊಂಡಿದ್ದರಿಂದ ಬಾಯಿಪಾಠವಾಗಿತ್ತು.
ಕೂತಲ್ಲೇ ಕವಿ ಸಿದ್ದಲಿಂಗಯ್ಯನವರ ಬಗ್ಗೆ, ಅಂಬೇಡ್ಕರ್ ಕವಿತೆಯ ಬಗ್ಗೆ ಎರಡು ಪ್ಯಾರಾ ಕವಿ-ಕಾವ್ಯ ಪರಿಚಯ ಬರೆದವನು ಕೊನೆಯ ಪಂಕ್ತಿಗೆ ಬಂದು ಕೊಂಚ ಕೈ ತಡೆದಂತಾಗಿ ನಿಂತೆ. ಪಕ್ಕದಲ್ಲೇ ಬುದ್ಧನಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿದ್ದ ಕವಿಗಳತ್ತ ನೋಡಿದೆ.
‘ಸಾರ್?’
‘ಏನ್ ನಟರಾಜ್?’ ಸಣ್ಣಗೆ ಕಣ್ಣು ತೆರೆದ ಕವಿಗಳು ಎಂದಿನಂತೆ ಮೆಲುದನಿಯ ರಾಗದಲ್ಲಿ ಕೇಳಿದರು.
‘ಸಾರ್! ಈ ಸ್ಟ್ಯಾಂಝಾದಲ್ಲಿ ಎರಡು ಮೂರು ಅರ್ಥ ಬರ್ತಾ ಇದೆಯಲ್ಲ… ಯಾವುದನ್ನ ಬರೆಯೋದು?’
‘ಬಿಟ್ಬಿಡಿ ನಟರಾಜ್!’
‘ಏನ್ ಬಿಡೋದು ಸಾರ್?’
‘ಅದೇ ಆ ಸ್ಟ್ಯಾಂಝಾನ!’
‘ಅದೆಂಗಾಗುತ್ತೆ ಸಾರ್!
‘ಅದು ಮೊದಲೇ ಸ್ವಲ್ಪ ಕಾಂಟ್ರೋವರ್ಶಿಯಲ್ ಆಗಿದೆ…’ ಎಂದು ಕವಿಗಳು ಸುಮ್ಮನಾದರು.
ಆ ಸೋ ಕಾಲ್ಡ್ ‘ಕಾಂಟ್ರೊವರ್ಸಿ’ಯ ಸುತ್ತಣ ಪ್ರಶ್ನೆಗಳು ನನಗೂ ನೆನಪಿದ್ದವು. ಮೊದಲಿಗೆ ಕವಿಗಳು ಕಾಂಟ್ರೋವರ್ಶಿಯಲ್ ಎಂದ ಪಂಕ್ತಿಯನ್ನು ನೋಡಿ:
ಕಪ್ಪುಕ್ಕಿನ ಕೋಳಗಳನು
ಕಡಿದು ಎಸೆದ ವಜ್ರವೆ
ಬಂಗಾರದ ಕೋಳವೊಕ್ಕ
ಮಹಾಬೌದ್ಧ ಭಿಕ್ಷುವೆ
ಕವಿತೆಯಲ್ಲಿ ಒಂದಕ್ಕೊಂದು ಕೂಡಿಕೊಳ್ಳುವ ಪ್ರತಿಮೆಗಳನ್ನು ನಾನು ‘ಸಹಚರಿ ಪ್ರತಿಮೆಗಳು’ ಎನ್ನುತ್ತೇನೆ. ಇದು ಇಂಗ್ಲಿಷಿನ ‘ಅಸೋಸಿಯೇಟಿವ್ ಇಮೇಜಸ್’ ಎಂಬ ನುಡಿಗಟ್ಟಿನಿಂದ ನಾನು ರೂಪಿಸಿಕೊಂಡಿರುವ ಪರಿಭಾಷೆ. ಇಂಥ ಪ್ರತಿಮೆಗಳು ಒಂದರ ಅರ್ಥವನ್ನು ಮತ್ತೊಂದು ವಿಸ್ತಾರ ಮಾಡುತ್ತಿರುತ್ತವೆ. ಮೇಲಿನ ಪಂಕ್ತಿಯಲ್ಲಿರುವ ಕಪ್ಪುಕ್ಕಿನ ಕೋಳ, ಬಂಗಾರದ ಕೋಳಗಳನ್ನು ಸಹಚರಿ ರೂಪಕಗಳು ಎನ್ನಬಹುದು; ಅಥವಾ ವಿರುದ್ದಾರ್ಥದ ರೂಪಕಗಳು ಎಂದು ಕೂಡ ಹೇಳಬಹುದು. ಇಲ್ಲಿ ಒಂದರ ಅರ್ಥ ಇನ್ನೊಂದರಿಂದ ಬೆಳೆಯುವುದನ್ನು ಗಮನಿಸಿ.
ಅದಿರಲಿ. ಕವಿಸೃಷ್ಟಿಯಲ್ಲಿ ಯಾವ ಪ್ರತಿಮೆ, ಯಾವ ರೂಪಕ ಹೇಗೆ, ಯಾಕೆ ಚಿಮ್ಮುತ್ತದೋ ಯಾರು ಬಲ್ಲರು! ಎಷ್ಟೋ ಸಲ ಮೊದಲು ಹೊಳೆದ ಒಂದು ಪದವೇ ಇನ್ನೊಂದಕ್ಕೆ ಹಾದಿ ಮಾಡಿಕೊಡುತ್ತದೆ; ಒಂದು ಪ್ರಾಸ ಇನ್ನೊಂದನ್ನು ಸೃಷ್ಟಿಸುತ್ತದೆ… ಇವೆಲ್ಲ ತಾರ್ಕಿಕವಾಗೇ ನಡೆಯಬೇಕೇಂದೇನಿಲ್ಲ. ಇದು ಕವಿತೆ ಬರೆಯುವವರಿಗೆ, ಓದುವವರಿಗೆಲ್ಲ ಗೊತ್ತಿರುತ್ತದೆ.
ಆದರೆ ‘ಅಂಬೇಡ್ಕರ್’ ಕವಿತೆ ಬಂದ ಹಲವು ವರ್ಷಗಳ ನಂತರ ಕೆಲವು ಓದುಗರು, ‘ಇದೇನಿದು! ಇಲ್ಲಿ ಬಂಗಾರದ ಕೋಳ ಎಂದರೇನರ್ಥ? ಹಾಗಾದರೆ ಬೌದ್ಧ ಧರ್ಮವೂ ಒಂದು ಬಂಧನವೇ? ಎಂದು ಕೇಳಿದರಂತೆ.
ಕವಿಯೊಬ್ಬ ತನ್ನ ಕವಿತೆಯ ಬಗ್ಗೆ ಕವಿ ತಾನೇ ಉತ್ತರ ಕೊಡುವುದು ಕಷ್ಟ. ಕವಿಗಳು ಸುಮ್ಮನೆ ಇದ್ದುಬಿಟ್ಟರು. ಬಂಗಾರ ಎಂದರೆ ಆಕರ್ಷಕವಾದುದು, ಉತ್ತಮವಾದುದು ಎಂಬ ಅರ್ಥದಲ್ಲಿ ಈ ಬಂಗಾರದ ಕೋಳ ಹುಟ್ಟಿತೋ? ಅಥವಾ ಅದು ನವಧರ್ಮ ಸ್ವೀಕಾರದ ವಿಮರ್ಶೆಯೋ? ಕವಿಯೇ ಇದಕ್ಕೆಲ್ಲ ಉತ್ತರ ಕೊಡುವುದು ಕಷ್ಟ.
ಕವಿಗಳ ಮನಸ್ಸಿನಲ್ಲಿ ಹಿನ್ನೆಲೆಗೆ ಸರಿದಿದ್ದ ಈ ಪ್ರಶ್ನೆ ಇದೀಗ ಮತ್ತೆ ಪಠ್ಯಪುಸ್ತಕದ ಸಂದರ್ಭದಲ್ಲಿ ಎದುರಾಗಿತ್ತು!
‘ಮತ್ತೆ ಟೆಕ್ಸ್ಟ್ ಬುಕ್ಕಲ್ಲಿ ಯಾಕೆ ಕಾಂಟ್ರೊವರ್ಸಿ? ಆ ಸ್ಟ್ಯಾಂಝಾ ಬಿಟ್ಬಿಡಿ’ ಎಂದರು ಕವಿಗಳು.
‘ಹಾಗೇನಿಲ್ಲ ಸಾರ್. ಇದು ಕವಿಯ ಒಂದು ಘಟ್ಟದ ಗ್ರಹಿಕೆ ಎಂದು ವಿವರಿಸಿದರಾಯಿತು’ ಎಂದೆ.
ಕವಿಗಳು ಸುಮ್ಮನಿದ್ದರು. ನಾನು ಅಲ್ಲಿಂದ ಹೋದ ನಂತರವಾದರೂ ಅವರು ಆ ಪಂಕ್ತಿ ತೆಗೆಸುವ ಸಾಧ್ಯತೆ ಇತ್ತು! ಎಷ್ಟೋ ವರ್ಷಗಳ ನಂತರ ಆ ಪಠ್ಯಪುಸ್ತಕ ನೋಡಿದೆ. ಆ ಪಂಕ್ತಿ ಇರಲಿಲ್ಲ. ನನ್ನ ಅಪೂರ್ಣ ಟಿಪ್ಪಣಿ ಕೂಡ ಹಾಗೇ ಇತ್ತು! ಈ ಅಂಕಣದ ಕೊನೆಗೆ ಕೊಟ್ಟಿರುವ ಲಿಂಕ್‌ನಲ್ಲಿ ಸಿದ್ಧಲಿಂಗಯ್ಯನವರು ಓದಿರುವ ‘ಅಂಬೇಡ್ಕರ್’ ಕವಿತೆಯಲ್ಲಿ ಕೂಡ ಆ ಪಂಕ್ತಿ ಇಲ್ಲ. ಅದು ಕವಿಯ ಆಯ್ಕೆಯೂ ಇರಬಹುದು.
ಇದಕ್ಕೂ ಮೊದಲು ಕೆಲವು ಹಾಡುಗಾರರು ಇದೇ ‘ಅಂಬೇಡ್ಕರ್’ ಕವಿತೆಯ ಮತ್ತೊಂದು ಪಂಕ್ತಿಯನ್ನು ಬದಲಿಸಿ ಹಾಡುತ್ತಿದ್ದರು. ಕವಿತೆಯ ಮೂಲ ಪಂಕ್ತಿ ಹೀಗಿದೆ:
ಮಲಗಿದ್ದವರ ಕೂರಿಸಿದೆ
ನಿಲಿಸುವವರು ಯಾರೋ?
ಛಲದ ಜೊತೆಗೆ ಬಲದ ಪಾಠ
ಕಲಿಸುವವರು ಯಾರೋ?
ಇಪ್ಪತ್ತನೆಯ ಶತಮಾನದ ತೊಂಬತ್ತರ ದಶಕದಲ್ಲಿ ಬಹುಜನ ಸಮಾಜ ಪಕ್ಷದ ರಾಜಕಾರಣ ಗಟ್ಟಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕೆಲವು ಹಾಡುಗಾರರು ಇದನ್ನು ಬದಲಿಸಿ, ‘ಮಲಗಿದವರ ಕೂರಿಸಿದೆ, ನಿಲಿಸುವವರು ನಾವು; ಛಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು’ ಎಂದು ಹಾಡಲು ಶುರು ಮಾಡಿದರು.
ಮೊದಲ ಸಲ ಈ ಹೊಸ ಪದಪಲ್ಲಟ ಕಿವಿಗೆ ಬಿದ್ದಾಗ ವಿಸ್ಮಯವಾಯಿತು. ಇದು ಹೊಸ ತಲೆಮಾರಿನ ಹೋರಾಟಗಾರ-ಗಾಯಕರ ಕುತೂಹಲಕರವಾದ ಪೊಲಿಟಿಕಲ್ ರೀಡಿಂಗ್, ಪೊಲಿಟಿಕಲ್ ಕರೆಕ್ಷನ್ ಕೂಡ ಆಗಿತ್ತು. ಬಾಬಾಸಾಹೇಬರು ದಲಿತರ ಹಾಗೂ ಎಲ್ಲ ಬಡವರ ಬದುಕನ್ನು ಇಲ್ಲಿಯವರೆಗೆ ತಂದಿದ್ದಾರೆ; ಅದರ ಮುಂದಿನ ಹೊಣೆಯನ್ನು ನಾವು ಹೊರುತ್ತೇವೆ; ಹೊರಬೇಕು ಎಂಬ ದನಿ ಆ ಬದಲಾವಣೆಯಲ್ಲಿತ್ತು. ಬರೆದ ಪಠ್ಯವೊಂದು ಹಾಡುಪಠ್ಯವಾಗಿ ಹೊಸ ಹೊಸ ಅರ್ಥ ಪಡೆಯುತ್ತಿತ್ತು; ಬೇಂದ್ರೆಯವರ ‘ಭಾವಗೀತ’ ಕವಿತೆಯ ಪ್ರತಿಮೆಯ ಮೂಲಕವೇ ಹೇಳುವುದಾದರೆ, ‘ಅಂಬೇಡ್ಕರ್’ ಕವಿತೆಯ ಸಾಲು ‘ದಿಕ್ತಟಗಳ ಹಾಯುತಿತ್ತು!’
ಇಷ್ಟಾಗಿಯೂ ಅವತ್ತು ಸಿದ್ಧಲಿಂಗಯ್ಯನವರ ಸ್ವ-ಸೆನ್ಸಾರ್‌ಗೆ ಕಾರಣವೇನಿರಬಹುದು ಎಂದು ಹಲವು ಸಲ ಯೋಚಿಸಿದ್ದೇನೆ: ಸಿದ್ಧಲಿಂಗಯ್ಯನವರು ಮಾರ್ಕ್ಸ್‌ವಾದಕ್ಕೆ ಒಲಿದಿದ್ದ ತಾರುಣ್ಯದಲ್ಲಿ, ‘ಧರ್ಮ ಎನ್ನುವುದು ಜನರಿಗೆ ತಿನ್ನಿಸಿದ ಅಫೀಮು; ಭರವಸೆಯಿಲ್ಲದ ಜಗತ್ತಿನ ಭರವಸೆ’ ಎಂಬ ಕಾರ್ಲ್ ಮಾರ್ಕ್ಸ್‌ನ ಹೇಳಿಕೆಯ ಮೊದಲ ಭಾಗ ಈ ಕವಿತೆಯ ಬಂಗಾರದ ಕೋಳದ ರೂಪಕವನ್ನು ರೂಪಿಸಿತ್ತೆ? ಮುಂದೆ ಸ್ವತಃ ಕವಿಯ ನಿಲುವಿನಲ್ಲೇ ಬದಲಾವಣೆಯಾಗಿ ಈ ಬಣ್ಣನೆಯ ಬಗ್ಗೆ ಸಂದೇಹ ಹುಟ್ಟಿತೆ? ಅಥವಾ ಓದುಗರ ಹೊಸ ಓದು ಕವಿಯನ್ನು ಸ್ವ ವಿಮರ್ಶೆಗೆ ಒಯ್ದಿತೆ?
ಅಲ್ಲಮಪ್ರಭುಗಳು ಹೇಳಿದಂತೆ ‘ತೊಡೆಯಲಾಗದ ಲಿಪಿಯನು ಬರೆಯಬಾರದು.’ ಸರಿ! ಬರೆದರೇನಂತೆ, ಮರು ಮುದ್ರಣದಲ್ಲಿ ತೊಡೆಯಲೂಬಹುದು ಎಂದು ಇದೀಗ ನಮ್ಮ ಕವಿಗಳು ಸೂಚಿಸುತ್ತಿದ್ದರು!
ಅದೇನೇ ಇರಲಿ. ಸಿದ್ಧಲಿಂಗಯ್ಯನವರ ಈ ಕವಿತೆಯಂತೆಯೇ ಅವರ ಒಟ್ಟು ಕಾವ್ಯವೇ ಅಂಬೇಡ್ಕರ್‌ವಾದವನ್ನು ಹಲವು ತಲೆಮಾರುಗಳಲ್ಲಿ ಹಬ್ಬಿಸಿರುವುದನ್ನು ಕೃತಜ್ಞತೆಯಿಂದ ನೆನೆಯೋಣ. ಐವತ್ತು ತಂಬಿದ ‘ಅಂಬೇಡ್ಕರ್’ ಕವಿತೆಯಂತೂ ಈವರೆಗೆ ನೂರಾರು ಅಂಬೇಡ್ಕರ್ ಕವಿತೆಗಳನ್ನು ಬರೆಸಿದೆ; ಹಾಡಿಸಿದೆ. ಸಿದ್ಧಲಿಂಗಯ್ಯನವರ ಕಾವ್ಯದ ಮೂಲಕವೂ ಅಂಬೇಡ್ಕರ್ ಕಡೆಗೆ ತಿರುಗಿದ ಲಕ್ಷಾಂತರ ಓದುಗರಲ್ಲಿ ನಾನೂ ಒಬ್ಬ. ಗಿರೀಶ್ ಹಂದಲಗೆರೆ ಸಂಪಾದಿಸಿದ ‘ಅರಿವೇ ಅಂಬೇಡ್ಕರ್’ ಎಂಬ ಸಂಗ್ರಹಯೋಗ್ಯ ಕವನ ಸಂಕಲನದಲ್ಲಿ ಅಂಬೇಡ್ಕರ್ ಕುರಿತ ಹತ್ತಾರು ಕವಿ, ಕವಯಿತ್ರಿಯರ ಹೊಸ ಹೊಸ ಬಣ್ಣನೆಗಳಿದ್ದರೂ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯೇ ನನ್ನ ಸೆಳೆಯುವುದೇಕೆ! ಬಹುತೇಕ ಹಾಡುಗಾರರು ಆ ಕವಿತೆಯನ್ನು ಶಿವರಂಜಿನಿ ರಾಗದಲ್ಲಿ ಹಾಡಿರುವ ಧಾಟಿ ಮತ್ತೆ ಮತ್ತೆ ನನ್ನ ಕಿವಿಗೆ ಬಿದ್ದಿರುವ ಕಾರಣದಿಂದ ಕೂಡ ಈ ಕವಿತೆ ನನ್ನಲ್ಲಿ ಕಾಯಮ್ಮಾಗಿ ಉಳಿದಿದೆ.
ಕನ್ನಡ ಕಾವ್ಯದ ಕೆಲವು ಮೂಲ ಮಾದರಿಗಳನ್ನು ಸೃಷ್ಟಿಸಿದ ಸಿದ್ಧಲಿಂಗಯ್ಯ ‘ಅಂಬೇಡ್ಕರ್’ ಎಂಬ ಈ ಕಾವ್ಯಾತ್ಮಕ ವ್ಯಕ್ತಿಚಿತ್ರದಲ್ಲೂ ಮೂಲ ಮಾದರಿಯೊಂದನ್ನು ಸೃಷ್ಟಿಸಿದಂತಿದೆ; ಆ ಮಾದರಿ ಕನ್ನಡದಲ್ಲಿ ಮತ್ತೆ ಮತ್ತೆ ರಿಪೀಟಾದಂತೆ ಕಾಣುತ್ತದೆ. ಕೆಲವು ವರ್ಷಗಳ ಕೆಳಗೆ ಅಂಬೇಡ್ಕರ್ ಜೊತೆ ಸಂವಾದ ಮಾಡುವ ಧಾಟಿಯಲ್ಲಿ ಕೋಟಗಾನಹಳ್ಳಿ ರಾಮಯ್ಯನವರು ಓದಿದ ಪದ್ಯಗಳು ಬೇರೆ ಹಾದಿ ಹಿಡಿದಂತೆ ಕಂಡಿದ್ದವು.
ನಾಳೆ ನಡೆಯಲಿರುವ ಅಂಬೇಡ್ಕರ್ ಜಯಂತಿಯಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಕುರಿತ ಭಾಷಣಕ್ಕೆ ಟಿಪ್ಪಣಿ ಮಾಡಿಕೊಳ್ಳುತ್ತಾ, ಸಿದ್ಧಲಿಂಗಯ್ಯನವರ ಕವಿತೆಯನ್ನು ನೆನೆಯುತ್ತಿರುವಾಗಲೇ ಅವರು ಅಂಬೇಡ್ಕರ್ ಡೇ ಬಗ್ಗೆ ಹೇಳಿದ ಅನುಭವವೊಂದು ನೆನಪಾಯಿತು. ಅಂಬೇಡ್ಕರ್ ಜಯಂತಿಯ ತಿಂಗಳೆಂದರೆ ಸಿದ್ಧಲಿಂಗಯ್ಯನವರ ಬಿಡುವಿಲ್ಲದ ತಿಂಗಳು. ಅವರ ಬದುಕಿನ ಕೊನೆಕೊನೆಯವರೆಗೂ ಅದು ಹಾಗೇ ಇತ್ತು.
ಇಂಥದೇ ಒಂದು ಏಪ್ರಿಲ್ ತಿಂಗಳಲ್ಲಿ ಕವಿಗಳು ತಮ್ಮ ಎಂದಿನ ಸಸ್ಪೆನ್ಸ್ ತುಂಬಿದ ಶೈಲಿಯಲ್ಲಿ ಮಾತು ಶುರು ಮಾಡಿದರು:
‘ಏನ್ ನಟರಾಜ್! ಎರಡು ಪರವಾಗಿಲ್ಲ! ಮೂರೂ ಓಕೇ! ತೀರಾ ಐದೋ ಆರೋ ಅದರೆ ಭಾಳಾ ಕಷ್ಟ!’
ಓಹೋ! ಕವಿಗಳು ಸಂಧ್ಯಾಕಾರ್ಯಕ್ರಮದ ಸವಾಲಿನ ಬಗ್ಗೆ ಹೇಳುತ್ತಿರಬಹುದು ಎಂದುಕೊಂಡ ನಾನು ಕುತೂಹಲದಿಂದ, ‘ಏನ್ ಸಾರ್?’ ಎಂದೆ.
‘ಅದೇ! ಅಂಬೇಡ್ಕರ್ ಜಯಂತಿ ಭಾಷಣ… ಮೊನ್ನೆ ಭಾನುವಾರ ಐದು ಮುಗಿಸೋವತ್ಗೆ ಸುಸ್ತಾದೆ!’
ಈ ಸಲದ ಅಂಬೇಡ್ಕರ್ ಜಯಂತಿಯ ಮುನ್ನಾ ದಿನ ೧೯೭೫ರಿಂದ ಇವತ್ತಿನವರೆಗೂ ಅರ್ಧ ಶತಮಾನ ಕಾಲ ಅಂಬೇಡ್ಕರ್ ಸ್ಪಿರಿಟ್, ಜ್ವಾಲೆ, ಬೆಳಕು ಎಲ್ಲವನ್ನೂ ನಾಡಿನ ತುಂಬ ಹಬ್ಬಿಸಿದ ಕವಿ ಸಿದ್ಧಲಿಂಗಯ್ಯನವರ ಕವಿತೆಗಳನ್ನು ನೆನೆದು ಮೌನ ಆವರಿಸತೊಡಗುತ್ತದೆ; ಜೊತೆಗೇ ಗಾಢ ಕೃತಜ್ಞತೆ…ಕವಿಗೂ, ಕವಿತೆಯ ಕೇಂದ್ರವಾದ ಬಾಬಾಸಾಹೇಬರಿಗೂ.
ಕೊನೆ ಟಿಪ್ಪಣಿ: ಹ್ಯಾಪಿ ಬರ್ತ್‌ಡೇ ಬಾಬಾ ಸಾಹೇಬ್!
ಮೂರು ವರ್ಷಗಳ ಕೆಳಗೆ ಕೊರೋನಾ ಸೆರೆಮನೆಯ ಕಾಲದಲ್ಲಿ ಅಂಬೇಡ್ಕರ್ ಜಯಂತಿಯೂ ಬಂತು. ಗೆಳೆಯರೂ ನಟರೂ ಆದ ಅಚ್ಯುತ್‌ಕುಮಾರ್ ಹಾಗೂ ಸತೀಶ್ ನೀನಾಸಂಗೆ ಫೋನ್ ಮಾಡಿ. ‘ಅಂಬೇಡ್ಕರ್ ಜಯಂತಿಯ ಮುನ್ನಾ ದಿನದ ರಾತ್ರಿ ಝೂಂನಲ್ಲಿ ಅಂಬೇಡ್ಕರ್ ಡೇ ಆಚರಿಸೋಣ’ ಎಂದೆ; ಸತೀಶ್ ಅದನ್ನು ಹೆಚ್ಚು ರೀಚ್ ಇರುವ ಇನ್ಸ್ಟಾಗ್ರಾಂನಲ್ಲೇ ಮಾಡಲು ಹೊರಟರು; ನಟ-ನಿರ್ದೇಶಕ ಚನ್ನಕೇಶವ ಛಕ್ಕನೆ ಪೋಸ್ಟರ್ ತೇಲಿ ಬಿಟ್ಟರು.
ನೋಡನೋಡುತ್ತಿದ್ದಂತೆಯೇ ಪೂರ್ವಿ ಕಲ್ಯಾಣಿ ಕಂಬಾರರ ಅಂಬೇಡ್ಕರ್ ಕವಿತೆಗೆ ಗಿಟಾರ್ ಹಿಡಿದು ರಾಗ ಹಾಕಿಬಿಟ್ಟರು; ನಟರಾದ ಬಾಲಾಜಿ ಮನೋಹರ್, ಕಿರಣ್ ನಾಯಕ್; ನಿರ್ದೇಶಕರಾದ ಬಿ.ಎಂ.ಗಿರಿರಾಜ್, ರಾಘು ಶಿವಮೊಗ್ಗ; ಕವಿ ಸುಬ್ಬು ಹೊಲೆಯಾರ್, ಕವಯಿತ್ರಿ ಎಚ್ ಎಲ್ ಪುಷ್ಪ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ…ಚಿಂತನ್ ವಿಕಾಸ್ ಸಿಡಿಸಿದ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ’ ಹಾಡು; ಎಲ್ಲವನ್ನೂ ಅಂಬೇಡ್ಕರ್ ಮಾತುಗಳ ಜೊತೆಜೊತೆಗೇ ಪೋಣಿಸಿ ನಿರ್ವಹಿಸಿದ ಜವಾರಿ ನಟ ಸತೀಶ್ ನೀನಾಸಂ…ಇವರೆಲ್ಲರ ಉತ್ಸಾಹದಿಂದ ತಯಾರಾಗಿದೆ ಈ ಅಂಕಣ ಬರಹದ ಕೆಳಗಿರುವ ವಿಡಿಯೋ. ಮೇಲೆ ಹೇಳಿದ ಚಿಂತನ್ ವಿಕಾಸ್ ಹಾಡಿದ ‘ಅಂಬೇಡ್ಕರ್’ ಹಾಡು ಈ ವಿಡಿಯೋದಲ್ಲಿದೆ.
VIDEO LINK - CLICK HERE
ಸದಾ ನನ್ನೊಡನೆ ಸ್ಪಂದಿಸುವ ಈ ಗೆಳೆಯ, ಗೆಳತಿಯರ ಸುಂದರ ಬಳಗಕ್ಕೆ, ಈ ವಿಡಿಯೋ ಸಿದ್ಧಪಡಿಸಿದ ಸತೀಶ್ ನೀನಾಸಂ ಹಾಗೂ ಅದನ್ನು ಕೊಂಚ ಮರುರೂಪಿಸಿದ ನವ ಟೆಕ್ಕಿ ಸಮಂತ್ ಪತ್ತಾರ್‌ಗೆ ಥ್ಯಾಂಕ್ಸ್.
ವಿಡಿಯೋ ನೋಡಿ. ಶೇರ್ ಮಾಡಿ. ಬಾಬಾಸಾಹೇಬರಿಗೆ ವಿಶ್ ಮಾಡಿ. ಈ ಬರಹ ಇಷ್ಟವಾದರೆ ಲೈಕ್ ಒತ್ತಿ. ಶೇರ್ ಮಾಡಿ.
ಸ್ವತಃ ಸಿದ್ಧಲಿಂಗಯ್ಯನವರೇ ಓದಿರುವ ‘ಅಂಬೇಡ್ಕರ್’ ಪದ್ಯ ನನ್ನ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನಲ್ ನಿರ್ವಹಿಸುವ ಸಮಂತ ಅವರ ‘ಕನ್ನಡಿ’ ಯೂಟ್ಯೂಬ್ ಚಾನಲ್‌ನಲ್ಲಿದೆ. ನೋಡಿ: CLICK HERE
ಹ್ಯಾಪಿ ಬರ್ತ್ ಡೇ ಬಾಬಾ ಸಾಹೇಬ್!
Read Moreಚುನಾವಣೆಯ ಕಾಲ. ಚಿತ್ತ ರಾಜಕೀಯದ ಸುತ್ತಲೇ ಸುತ್ತುತ್ತದೆ; ನಾಯಕರ ಹಸಿ ಸುಳ್ಳುಗಳನ್ನು ಕಂಡು ಅಸಹ್ಯ ಹುಟ್ಟುತ್ತದೆ. ಇಂಥದರ ನಡುವೆಯೂ ಏನಾದರೂ ಬದಲಾಗಬಹುದೆಂದು ವೋಟು ಹಾಕುವ ಮತದಾರರನ್ನು, ಅದರಲ್ಲೂ ಮುಖ್ಯವಾಗಿ ಮತದಾರ್ತಿಯರನ್ನು, ಕಂಡು ನಮ್ಮಂಥವರ ಸಿನಿಕತೆ ಚದುರಿ ಹೋಗುತ್ತದೆ.
ಹತ್ತು ವರ್ಷಗಳ ಕೆಳಗೆ ಕರ್ನಾಟಕದ ಅಪೂರ್ವ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ (೧೯೨೩-೧೯೭೨) ಜೀವನಚರಿತ್ರೆ ಬರೆಯಲು ತೀರ್ಥಹಳ್ಳಿಯ ಸುತ್ತಮುತ್ತ ಓಡಾಡುತ್ತಿದ್ದಾಗ ನನಗನ್ನಿಸಿದ್ದು: ಮಾನವಂತ ನಾಯಕರಿದ್ದರೆ ಮಾತ್ರ ಮರ್ಯಾದಸ್ಥ ಮತದಾರ, ಮತದಾರ್ತಿಯರೂ ಇರುತ್ತಾರೆ; ಆಗ ಮಾತ್ರ ಚುನಾವಣೆಗಳು ಸಂಭ್ರಮ ಉಕ್ಕಿಸುವ ಸಾತ್ವಿಕ ಹಬ್ಬದಂತೆ ನಡೆಯುತ್ತಿರುತ್ತವೆ!
ಅವತ್ತು ಗೋಪಾಲಗೌಡರ ಕಾಲದ ಚುನಾವಣೆಗಳನ್ನು ನೆನಸಿಕೊಳ್ಳುತ್ತಿದ್ದ ಹಿರಿಯರು ಇನ್ನೂ ಇದ್ದರು. ಒಬ್ಬರಂತೂ ‘ಗೋಪಾಲಗೌಡ್ರು ತೀರಿಕೊಂಡ ಮೇಲೆ ನಾನು ಯಾರಿಗೂ ವೋಟೇ ಹಾಕಿಲ್ಲ’ ಅಂದರು! ಅಲ್ಲಿ ಕಿವಿಗೆ ಬಿದ್ದ ಕತೆಗಳು ಹಾಗೂ ಅವರ ಸಮಕಾಲೀನರ ಬರಹಗಳ ಹಿನ್ನೆಲೆಯಲ್ಲಿ ಗೋಪಾಲಗೌಡರ ರಾಜಕಾರಣ-ಚುನಾವಣೆಗಳ ಘನತೆಯ ಚಿತ್ರಗಳನ್ನು ಮತ್ತೆ ಕೊಡುತ್ತಿರುವೆ:
ಚುನಾವಣೆ ೧: ಗೋಪಾಲಗೌಡ ಹೈಸ್ಕೂಲ್ ಹುಡುಗನಾಗಿದ್ದಾಗಲೇ ಗಾಂಧೀಜಿಯ ಕರೆ ಕೇಳಿ, ’ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಧುಮುಕಿದ್ದರು; ೧೯೫೧ರ ಕಾಗೋಡು ಗೇಣಿ ಹೋರಾಟದಲ್ಲಿ ತೊಡಗಿ ದೊಡ್ಡ ನಾಯಕನಾಗಿ ಬೆಳೆಯತೊಡಗಿದ್ದರು. ಇಪ್ಪತ್ತೊಂಬತ್ತನೆಯ ವಯಸ್ಸಿಗಾಗಲೇ ೧೯೫೨ರ ಮೈಸೂರು ರಾಜ್ಯದ ಪ್ರಥಮ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದರು. ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ಕ್ಷೇತ್ರದ ಚುನಾವಣೆ ಕುರಿತು ಶಾಮ ಐತಾಳ ಬರೆಯುತ್ತಾರೆ: ‘ಗೋಪಾಲಗೌಡರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷದಿಂದ ನಿಂತಿದ್ದ ಆಗರ್ಭ ಶ್ರೀಮಂತರಾದ ಬದರಿನಾರಾಯಣ್ ಅಯ್ಯಂಗಾರ್‌ಗೆ ಎಷ್ಟಾದರೂ ಹಣ ಚೆಲ್ಲುವ ಚೈತನ್ಯವಿತ್ತು. ಜಮೀನ್ದಾರರ ಬೆಂಬಲವಿತ್ತು. ಗೌಡರಿಗೆ ಹಣವೊಂದನ್ನು ಬಿಟ್ಟು ಉಳಿದೆಲ್ಲ ಬಂಡವಾಳವೂ ಇತ್ತು. ಗೌಡರ ೨೫೦ ರೂಪಾಯಿ ಠೇವಣಿ ಹಣವನ್ನು ಸ್ನೇಹಿತರಿಂದ ಸಂಗ್ರಹ ಮಾಡಿ ಕಟ್ಟಿದ್ದೆವು.’
ಗೋಪಾಲಗೌಡರ ಪ್ರಚಾರ ಸರಳವಾಗಿತ್ತು: ಜನರ ಸಮಸ್ಯೆಗಳನ್ನು ಬಿಡಿಸಿಟ್ಟು ಭಾಷಣ ಮಾಡುವುದು; ‘ನೀವು ಜಾತಿ ನೋಡಿ ಮತ ಕೊಟ್ಟರೆ ಅದು ನನಗೆ ಬೇಡ’ ಎಂದು ನೇರವಾಗಿ ಮತದಾರರಿಗೆ ಹೇಳುವುದು; ಎದುರಾಳಿಯ ವಿರುದ್ಧ ತಾತ್ವಿಕವಾದ ಟೀಕೆಗಳನ್ನಷ್ಟೇ ಮಾಡುವುದು; ಬಹುತೇಕ ಕಾಲ್ನಡಿಗೆಯಲ್ಲೋ ಬಸ್ಸಿನಲ್ಲೋ ಪ್ರಯಾಣ ಮಾಡುವುದು; ಮತದಾರರ ಮನೆಯಲ್ಲಿ ಊಟ, ತಿಂಡಿ ಮಾಡಿ ಮುಂದಕ್ಕೆ ಹೋಗುವುದು.
ನಡುರಾತ್ರಿಯಾದರೂ ಜನ ಗೌಡರ ಭಾಷಣಕ್ಕಾಗಿ ಕಾಯುತ್ತಿದ್ದರು. ನಡುರಾತ್ರಿಯ ಭಾಷಣಗಳಲ್ಲೂ ಸಮಾನತೆ, ಸಮಾಜವಾದ, ರೈತರ ಹೋರಾಟಗಳ ಪರಿಚಯ ಮತದಾರರಿಗೆ ಆಗುತ್ತಿತ್ತು. ರಾತ್ರಿ ಗೌಡರು ಎಲ್ಲರನ್ನೂ ನಗಿಸಿಕೊಂಡು, ಮಧ್ಯೆಮಧ್ಯೆ ಹಾಡು ಹೇಳಿಕೊಂಡು ದಾರಿ ಸವೆಸುತ್ತಿದ್ದರು. ಗೌಡರ ಜಾತ್ಯತೀತ ವ್ಯಕ್ತಿತ್ವಕ್ಕೆ ಎಲ್ಲ ಜಾತಿಯ ಜನರೂ ಮಾರು ಹೋಗಿ ವೋಟು ಹಾಕಿದರು; ಭಾರೀ ಜಮೀನ್ದಾರರೊಬ್ಬರನ್ನು ಹಣಬಲವಿಲ್ಲದ ಸಮಾಜವಾದಿ ತರುಣ ಗೋಪಾಲಗೌಡರು ಸೋಲಿಸಿದರು.
ಬಡವರಿಗೆ, ಭೂಹೀನರಿಗೆ, ನಿರ್ಗತಿಕರಿಗೆ, ಗೇಣಿದಾರರಿಗೆ ದೊಡ್ಡ ಚೈತನ್ಯ ಬಂತು. ‘ಉಳುವವನೇ ನೆಲದೊಡೆಯನಾಗಬೇಕು’, ‘ಗೇಣಿ ಪದ್ಧತಿ ರದ್ದಾಗಬೇಕು’ ಎಂಬ ಕೂಗು ಶಾಸನಸಭೆಯಲ್ಲಿ ಮೊಳಗಿತು. ಗೌಡರ ಚುನಾವಣಾ ವೆಚ್ಚ ಐದು ಸಾವಿರ ಮೀರಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಮಾಡಿ, ಜೊತೆಗೆ ಅಧಿವೇಶನದಲ್ಲಿ ಬರುತ್ತಿದ್ದ ದಿನಭತ್ಯೆ, ಪ್ರಯಾಣ ಭತ್ಯದಲ್ಲಿ ಉಳಿಸಿದ್ದ ಎರಡು ಸಾವಿರ ರೂಪಾಯಿ, ಸಿಜಿಕೆ ರೆಡ್ಡಿಯವರ ಸಾವಿರ ರೂಪಾಯಿ ಸೇರಿಸಿ ಚುನಾವಣೆಯ ಸಾಲ ತೀರಿಸಿದರು. ಶಾಸಕತ್ವದ ಅವಧಿ ಮುಗಿಯುವ ಹೊತ್ತಿಗೆ ಕರ್ನಾಟಕದ ಪ್ರಬಲ ವಿರೋಧಿನಾಯಕನಾಗಿ ರೂಪುಗೊಂಡಿದ್ದರು.
ಚುನಾವಣೆ ೨: ೧೯೫೭ರಲ್ಲಿ ಎರಡನೇ ಚುನಾವಣೆ ಬಂತು. ಸಮಕಾಲೀನರ ಪ್ರಕಾರ, ‘ಗೌಡರನ್ನು ಮುಗಿಸಿಯೇ ತೀರಬೇಕೆಂದು ಹಠತೊಟ್ಟ ಕಾಂಗ್ರೆಸ್ಸಿಗರೂ, ಭಾರಿ ಜಮೀನ್ದಾರರೂ, ಜಾತಿವಾದಿಗಳೂ ಸನ್ನದ್ಧರಾದರು. ಗೌಡರಿಗೆ ಕೊಡಬಾರದ ಕಿರುಕುಳ ಕೊಟ್ಟರು. ನೀರಿನಂತೆ ಹಣ ಚೆಲ್ಲಿದರು. ಸಮಾಜವಾದಿ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರುಗಳ ಕೋಟೆಯನ್ನು ಬಿರುಕುಗೊಳಿಸಿದರು. ’
ಈ ಸಲ ಗೌಡರ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಲೋಹಿಯಾ, ಸಾಗರದ ಬಹಿರಂಗ ಸಭೆಯಲ್ಲಿ ಮತದಾರರನ್ನು ಛೇಡಿಸಿದರು: ‘ನೀವು ಚುನಾಯಿಸಿ ಕಳುಹಿಸಿದ ಗೋಪಾಲಗೌಡರು ರೈತರ ಬಗ್ಗೆ, ಕೂಲಿಕಾರರ ಬಗ್ಗೆ, ಶ್ರೀಸಾಮಾನ್ಯರ ಬಗ್ಗೆ ಏನು ಕ್ರಾಂತಿ ಮಾಡಿದ್ದಾರೆ? ಪಕ್ಷದ ಸಂಘಟನೆ ಹೇಗೆ ನಡೆದಿದೆ? ರೈತರ ಬೇಡಿಕೆಗಳ ಬಗ್ಗೆ ಸತ್ಯಾಗ್ರಹ ಹೂಡಿ, ಎಷ್ಟು ಸಲ ಜೈಲಿಗೆ ಹೋಗಿದ್ದಾರೆ? ನೀವು ಈ ಬಗ್ಗೆ ನಿಮ್ಮ ಶಾಸಕರಾದ ಅವರನ್ನು ವಿಚಾರಿಸಿಕೊಂಡಿದ್ದೀರಾ?’
ಮತದಾರರನ್ನು ಎಚ್ಚರಿಸಲು ಲೋಹಿಯಾ ಆಡಿದ ಮಾತು ವಿರುದ್ಧ ಪರಿಣಾಮ ಬೀರಿತು! ಎದುರಾಳಿಗಳು ಇದನ್ನೇ ಪ್ರಚಾರ ಮಾಡಿದರು! ಈ ಕಾರಣವೂ ಸೇರಿ, ಗೋಪಾಲ ಗೌಡರು ಸೋತರು. ಚುನಾವಣೆಯ ಖರ್ಚು ಆರು ಸಾವಿರದಷ್ಟಾಗಿತ್ತು.
ಸೋತ ಗೋಪಾಲಗೌಡರಿಗೆ ತೀರ್ಥಹಳ್ಳಿ ತಾಲೂಕಿನ ಆರಗ ಎಂಬ ಹಳ್ಳಿಯ ಗುಡಿಸಲು ಬಿಟ್ಟರೆ ಬೇರೆಲ್ಲೂ ಮನೆಯಿರಲಿಲ್ಲ. ಬೆಂಗಳೂರಿನ ಸಮಾಜವಾದಿ ಪಕ್ಷದ ಕಛೇರಿಯೇ ಗೌಡರ ಮನೆಯಾಯಿತು. ಸಮಾಜವಾದಿ ರಾಜಕಾರಣ ರೂಪಿಸಲು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಪ್ರಚಾರ ಮಾಡಲು ಗೌಡರು ರಾಜ್ಯಾದ್ಯಂತ ಓಡಾಡುತ್ತಿದ್ದರು. ಆ ಓಡಾಟಗಳಿಗೆ ಅವರ ಬಳಿ ಹಣವೇ ಇರುತ್ತಿರಲಿಲ್ಲ.
ಅನಿಶ್ಚಿತ ಹಣಕಾಸಿನ ಪರಿಸ್ಥಿತಿ, ಇತರರ ಬಳಿ ಹಣ ಕೇಳುವಾಗ ವ್ಯಕ್ತಿತ್ವಕ್ಕೆ ಆಗುತ್ತಿದ್ದ ಘಾಸಿ, ಬೇರೆಯವರಿಂದ ಹಣ ಪಡೆಯುವಾಗ ಉಂಟಾಗುವ ಸಂಕೋಚ, ಮುತ್ತುತ್ತಿದ್ದ ಕಾಯಿಲೆಗಳು... ಇವೆಲ್ಲ ಸೇರಿಕೊಂಡು ಮೂವತ್ತಮೂರನೆಯ ವಯಸ್ಸಿಗಾಗಲೇ ಗೋಪಾಲಗೌಡರ ದೇಹ ಶಿಥಿಲವಾಗತೊಡಗಿತ್ತು. ಕರ್ನಾಟಕದ ಧೀಮಂತ ನಾಯಕನ ರಾಜಕೀಯ ಹಿನ್ನಡೆಯ ಕಾಲದ ರಾಜಕೀಯ ಚಟುವಟಿಕೆಗಳು; ಸಾರ್ವಜನಿಕ ಜವಾಬ್ದಾರಿಗಳು; ಬಡತನ, ಅಭದ್ರತೆ, ಒಂಟಿತನ; ಸಂಜೆಯ ಊಟದ ಗ್ಯಾರಂಟಿಯೇ ಇರದ ಅಸಹಾಯಕ ಸ್ಥಿತಿ; ಆತ್ಮಾಭಿಮಾನಕ್ಕೆ ಮತ್ತೆ ಮತ್ತೆ ಬೀಳುವ ಪೆಟ್ಟು...ಹೀಗೆ ಒಬ್ಬ ಸೂಕ್ಷ್ಮ ನಾಯಕನನ್ನು ಎಲ್ಲ ದಿಕ್ಕುಗಳಿಂದಲೂ ಹತಾಶೆ ಮುತ್ತಿದಾಗ ಎದುರಾಗುವ ಮನಸ್ಥಿತಿ... ಇವೆಲ್ಲವನ್ನೂ ಇವತ್ತು ನೆನೆಯುತ್ತಿದ್ದರೆ, ಎಂಥ ಅಸಹಾಯಕ ಪರಿಸ್ಥಿತಿಯಲ್ಲೂ ಅನ್ಯರ ಎಂಜಲಿಗೆ ಕೈ ಚಾಚದ ಗೋಪಾಲಗೌಡರ ಸ್ವಾಭಿಮಾನಿ ವ್ಯಕ್ತಿತ್ವದೆದುರು ನಮ್ಮ ತಲೆ ತಂತಾನೇ ಬಾಗತೊಡಗುತ್ತದೆ.
ಗೋಪಾಲಗೌಡರ ಈ ಘಟ್ಟದ ಬಗ್ಗೆ ಅವರ ಗೆಳೆಯ ಲಂಕೇಶರು ಕೊಡುವ ಚಿತ್ರ: ‘ಮಹಾ ಸ್ವಾಭಿಮಾನಿಯಾಗಿದ್ದು ಸದಾ ತಣ್ಣಗೆ ಮಾತಾಡುತ್ತಿದ್ದ ಗೋಪಾಲ್ ಆಗಾಗ ಸ್ಫೋಟಗೊಳ್ಳುತ್ತಿದ್ದರು. ಆತ ಸ್ವಾಭಿಮಾನದ ಮನುಷ್ಯ. ಹಾಗಾಗಿ ಅವರು ಬರೀ ನೀರು ಕುಡಿದು ಮಲಗಿಬಿಟ್ಟಾರೇ ಹೊರತು ನನ್ನಂಥ ಚಿಕ್ಕವನ ಹತ್ತಿರ ಕಾಸಿಗೆ ಕೈ ಚಾಚಲಾರರು. ಅವರು ತಮ್ಮ ಕಷ್ಟಗಳನ್ನು ಎಂದೂ ಹೇಳಿಕೊಳ್ಳುತ್ತಿರಲಿಲ್ಲ....ಅಂತೂ ಗೋಪಾಲ್ ಒಂದು ಹಂತದಲ್ಲಿ ಎಲ್ಲರ ಗೆಳೆಯರಾಗಿ ಖುಷಿಯಾಗಿದ್ದರು; ಇನ್ನೊಂದು ಹಂತದಲ್ಲಿ ಸಮಾಜವಾದಿ ಪಕ್ಷಕ್ಕೆ ಭವಿಷ್ಯವೇ ಇಲ್ಲವೆಂದು ದುಗುಡಗೊಳ್ಳುತ್ತಿದ್ದರು.’
ಹತಾಶೆ, ನಿರಾಶೆಗಳ ನಡುವೆಯೂ ಗೋಪಾಲಗೌಡ ಮತ್ತವರ ಸಂಗಾತಿಗಳು ಚಳುವಳಿ ರಾಜಕಾರಣದ ಮೂಲಕ ಸಮಾಜವಾದಿ ಹೋರಾಟವನ್ನು ಜೀವಂತವಾಗಿ ಇರಿಸಿದ್ದರು. ಹರತಾಳ, ಅರಣ್ಯಭೂಮಿ ಆಕ್ರಮಿಸಿ ಉಪವಾಸ ಸತ್ಯಾಗ್ರಹ, ಇಂಗ್ಲಿಷ್ ತೊಲಗಿಸಿ ಆಂದೋಲನ, ಸಾಮಾನುಗಳನ್ನು ದಾಸ್ತಾನು ಮಾಡಿದ ಗೋಡೌನುಗಳ ಎದುರು ಸತ್ಯಾಗ್ರಹ, ಕಾನೂನುಭಂಗ ಚಳುವಳಿ, ಕೋರ್ಟುಗಳ ಎದುರು ಪಿಕೆಟಿಂಗ್, ಬಂಧನ ಇತ್ಯಾದಿಗಳು ನಡೆಯುತ್ತಿದ್ದವು. ಈ ಎಲ್ಲದರ ನಿರಾಶಾದಾಯಕ ಫಲಿತಾಂಶಗಳು ಸಮಾಜವಾದಿ ಕಾರ್ಯಕರ್ತರ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದವು. ಈ ನಡುವೆಯೂ ಗೌಡರು ಪಿ. ಕಾಳಿಂಗರಾಯರ ಹಾಡು ಕೇಳಿ ಮೈಮರೆಯುವುದು; ರೇಡಿಯೋದಲ್ಲಿ ಅಲಿ ಅಕ್ಬರ್ ಸರೋದ್ ವಾದನ ಕೇಳಿಸಿಕೊಳ್ಳುವುದು; ‘ಅಳಿದ ಮೇಲೆ’ ಥರದ ಕಾದಂಬರಿಗಳನ್ನು ಓದುವುದು ಇವೆಲ್ಲವೂ ಇದ್ದವು. ೧೯೬೨ರ ಚುನಾವಣೆ ಬರುವ ಕಾಲಕ್ಕೆ ಗೌಡರು ರಾಜ್ಯಮಟ್ಟದ ನಾಯಕರಾಗಿ ಬೆಳೆದಿದ್ದರು.
ಚುನಾವಣೆ ೩-೪: ೧೯೬೨ರ ವಿಧಾನಸಭಾ ಚುನಾವಣೆ ಬಂತು. ಈ ಸಲ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವಾಯಿತು. ಗೋಪಾಲಗೌಡರು ಪ್ರಚಂಡ ಬಹುಮತದಿಂದ ಗೆದ್ದರು. ೧೯೬೭ರಲ್ಲಿ ಮತ್ತೆ ಚುನಾವಣೆಗೆ ನಿಂತರು. ಕಾಂಗ್ರೆಸ್ಸಿನ ವಿಶ್ವನಾಥರೂ ಗೌಡರ ಶಿಷ್ಯರೇ. ‘ಗುರು-ಶಿಷ್ಯರ ಸ್ಪರ್ಧೆ ಪ್ರಬಲವಾಗಿತ್ತು. ಅನೇಕ ಮಂತ್ರಿಗಳು ಗೌಡರ ರಾಜಕೀಯವನ್ನೇ ಮುಗಿಸಲು ಕಣಕ್ಕಿಳಿದರು. ಹಣ ಸುರಿದರು. ಮುಖ್ಯಮಂತ್ರಿಯೇ ತೀರ್ಥಹಳ್ಳಿಗೆ ಬಂದಿದ್ದರು. ಯಾಕೆಂದರೆ, ಗೌಡರು ಕಾಂಗ್ರೆಸ್ ಪಕ್ಷಕ್ಕೆ, ಮಂತ್ರಿಮಂಡಲಕ್ಕೆ ದುಃಸ್ವಪ್ನವಾಗುವಷ್ಟರ ಮಟ್ಟಿನ ಮಹಾನ್ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಇಂಥ ತತ್ವನಿಷ್ಠೆಯ, ನಿರ್ಭಯ ರಾಜಕಾರಣಿಯ ವಿರುದ್ಧ ಚುನಾವಣೆಯಲ್ಲಿ ಮುಯ್ಯಿ ತೀರಿಸಿಕೊಳ್ಳಲು ಅವರೆಲ್ಲ ಹವಣಿಸುತ್ತಿದ್ದರು’ ಎಂದು ಗೌಡರ ಸಮಕಾಲೀನರು ಬರೆಯುತ್ತಾರೆ.
ಈ ಚುನಾವಣೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ಸಮಾಜವಾದಿ ಪಕ್ಷದ ಬಹಳ ಜನರಿಗೆ ಲಾಠಿ ಏಟು ಬಿದ್ದಿತ್ತು. ಚುನಾವಣೆಯಲ್ಲಿ ಗೌಡರಿಗೆ ತಾಲ್ಲೂಕಿನ ಸಿ.ಪಿ.ಎಂ. ಪೂರ್ಣ ಬೆಂಬಲ ನೀಡಿತು. ಗೋಪಾಲಗೌಡರು ಪ್ರಚಂಡ ಬಹುಮತದಿಂದ ಗೆದ್ದರು. ಎಣಿಕೆ ಮುಗಿದು ಹೊರಬೀಳುವಾಗ ಸೋತ ಅಭ್ಯರ್ಥಿ ವಿಶ್ವನಾಥ್ ಹೇಳಿದರು: ‘ಇನ್ನು ಈ ಕ್ಷೇತ್ರದಲ್ಲಿ ಗೋಪಾಲಗೌಡರ ಎದುರು ಯಾರು ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಿಲ್ಲ.’
೧೯೭೨ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಗೌಡರು ಆಸ್ಪತ್ರೆಯಲ್ಲಿದ್ದರು. ಪಾರ್ಶ್ವವಾಯುವಿಗೆ ತುತ್ತಾಗಿ ಮಾತು ಹೊರಡದಿದ್ದ ಗೌಡರೆದುರು ಆ ಸಲದ ಚುನಾವಣೆಗೆ ಸ್ಪರ್ಧಿಸಲಿದ್ದ ಸಮಾಜವಾದಿ ಸಂಗಾತಿ ಕೋಣಂದೂರು ಲಿಂಗಪ್ಪ ನಿಂತಿದ್ದರು. ಗೌಡರು ತಲೆದಿಂಬಿನಡಿಯಲ್ಲಿದ್ದ ತಮ್ಮ ಮಫ್ಲರ್ ತೆಗೆದು ಕೊಟ್ಟು ಲಿಂಗಪ್ಪನವರಿಗೆ ಶುಭ ಹಾರೈಸಿದರು.
ಸಮಾಜವಾದಿ ಪಕ್ಷದ ಬಡ ಕಾರ್ಯಕರ್ತ ಲಿಂಗಪ್ಪ ಆ ಮಫ್ಲರ್ ಹಾಕಿಕೊಂಡು ರಾತ್ರಿಯ ಬಸ್ಸಿನಲ್ಲಿ ತೀರ್ಥಹಳ್ಳಿಗೆ ಬಂದಿಳಿದರು; ಹಲವು ವರ್ಷಗಳಿಂದ ಆ ಬಸ್‌ನಿಲ್ದಾಣದಲ್ಲೇ ಲಿಂಗಪ್ಪನವರ ತಂದೆ ಮೂಟೆ ಹೊರುವ ಹಮಾಲಿ ಕೆಲಸ ಮಾಡುತ್ತಿದ್ದರು.
ಗೋಪಾಲಗೌಡರು ಶುಭ ಹಾರೈಸಿ ಕೊಟ್ಟ ಮಫ್ಲರನ್ನು ಕೋಣಂದೂರು ಲಿಂಗಪ್ಪ ಚುನಾವಣಾ ಸಭೆಗಳಲ್ಲಿ ಪ್ರದರ್ಶಿಸುತ್ತಿದ್ದರು! ಜಾತಿಬಲ, ಹಣಬಲ ಇಲ್ಲದೆ, ಬೋವಿ ಜನಾಂಗದ ಹಮಾಲಿಯೊಬ್ಬರ ಮಗ ಲಿಂಗಪ್ಪ ಜನಬಲದಿಂದಲೇ ಗೆದ್ದರು. ಈ ಗೆಲುವು ಗೋಪಾಲಗೌಡರ ಮಾನವಂತ ನಾಯಕತ್ವ ರೂಪಿಸಿದ್ದ ಮತದಾರ ವಲಯದ ಮರ್ಯಾದಸ್ಥ ಮತದಾನದ ಗೆಲುವೂ ಆಗಿತ್ತು. ಆ ಕಾಲದ ಪತ್ರಿಕೆಗಳು ‘ಮಫ್ಲರ್ ಗೆದ್ದಿತು!’ ಎಂದು ಈ ಗೆಲುವನ್ನು ಬಣ್ಣಿಸಿದ್ದವು.
ಅದೇ ಸರಳತೆಯ ಕೋಣಂದೂರು ಲಿಂಗಪ್ಪ ಈಗಲೂ ಶಿವಮೊಗ್ಗದಲ್ಲಿ ಸಿಗುತ್ತಾರೆ. ಇದನ್ನೆಲ್ಲ ಈಗ ಓದುತ್ತಿರುವವರಿಗೆ ಇದು ಗತಕಾಲದ ಕತೆಯಂತೆ ಕಂಡರೆ ಅಚ್ಚರಿಯಲ್ಲ. ಆದರೆ ಕೆಲವಾದರೂ ನಾಯಕ, ನಾಯಕಿಯರಲ್ಲಿ; ಶೇಕಡ ಐವತ್ತರಷ್ಟು ಮತದಾರರಲ್ಲಿ, ಅದರಲ್ಲೂ ಮತದಾರ್ತಿಯರಲ್ಲಿ ಇಂಥ ನೈತಿಕ ಶಕ್ತಿ ಇನ್ನೂ ಉಳಿದಿರಬಹುದು ಎಂಬ ಆಶಾವಾದ ಹುಟ್ಟದಿದ್ದರೆ ಯಾವ ಹೊಸ ರಾಜಕಾರಣವೂ ಸಾಧ್ಯವಿಲ್ಲ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
ಎದುರಿಗೆ ಕೂತಿದ್ದ ಗೆಳೆಯ-ವಿಮರ್ಶಕ ದಂಡಪ್ಪನವರು ವಿಸ್ಮಯಗೊಂಡರು. ಆಗ ಅವರಿನ್ನೂ ಈಗಿನಂತೆ ಪೂರ್ಣಪ್ರಮಾಣದ ವಿಮರ್ಶಕರಾಗಿರಲಿಲ್ಲ; ಆಗಾಗ್ಗೆ ವಿಮರ್ಶಾಲೇಖನ ಬರೆಯುತ್ತಿದ್ದ ಅವರು ತೆರಿಗೆ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ಆಗಿದ್ದರು. ಅವರ ಆ ಗಳಿಗೆಯ ವಿಸ್ಮಯಕ್ಕೆ ಅವತ್ತಿನ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ನನ್ನ ಬಾಯಿಂದ ಅಕಸ್ಮಾತ್ ಹೊರ ಬಂದ ತಕ್ಷಣದ ಪ್ರತಿಕ್ರಿಯೆ ಕಾರಣವಾಗಿತ್ತು.
ಸಾರ್ವಜನಿಕ ಜೀವನದಲ್ಲಿರುವ ಎಲ್ಲರಿಗೂ ಹೀಗಾಗಿರುತ್ತದೆ: ನೀವು ತಯಾರು ಮಾಡಿಕೊಂಡ ಭಾಷಣದ ಟಿಪ್ಪಣಿಗಳು ಎಲ್ಲೋ ಚೆಲ್ಲಾಪಿಲ್ಲಿಯಾಗಿ, ಆ ಕ್ಷಣದ ಸತ್ಯವೊಂದು ಹುಟ್ಟುವ, ಅಥವಾ ನೀವು ಯೋಚಿಸಿರದ ಸತ್ಯವೊಂದು ನಿಮ್ಮ ಬಾಯಿಂದ ಹೊರಬರುವ ವಿಚಿತ್ರ-ವಿಶಿಷ್ಟ ಗಳಿಗೆ ಅದು. ಈ ದೃಷ್ಟಿಯಿಂದ ನೋಡಿದಾಗ, ಸ್ಪಾಂಟೇನಿಯಸ್ ಆದ ಮಾತು, ಬರಹ, ಹೂ ಬುಟ್ಟಿ ಹೆಣೆವವಳ ಹೊಸ ಪ್ರಯೋಗ, ಪ್ಲಂಬರ್ ಕೈ ಚಳಕ... ಎಲ್ಲವೂ ಕ್ರಿಯೇಟಿವ್ ಎಂದು ನನಗೆ ಮತ್ತೆ ಮತ್ತೆ ಅನ್ನಿಸುತ್ತಿರುತ್ತದೆ. ಯಾವುದು ನಮ್ಮೊಳಗಿನ ಕೇಡನ್ನು ಉದ್ದೀಪಿಸದೆ, ನಮ್ಮ ನಿಜವಾದ ಸತ್ವ ಹಾಗೂ ಪಾಸಿಟಿವ್ ಶಕ್ತಿಯನ್ನು ಹೊರ ತರುತ್ತದೋ ಅದು ಕ್ರಿಯೇಟಿವ್ ಆಗಿರಬಲ್ಲದು ಎಂದು ನನ್ನ ನಂಬಿಕೆ.
ಈ ಬರಹದ ಶುರುವಿನಲ್ಲಿ ಹೇಳಿದ ಪುಟ್ಟ ವಿಸ್ಮಯದ ಸಂದರ್ಭದ ಹಿನ್ನೆಲೆ: ಅವತ್ತು ದಂಡಪ್ಪ ಸಂಪಾದಿಸಿದ ಸಿದ್ಧಲಿಂಗಯ್ಯ ವಾಚಿಕೆ, ವಾಸುದೇವಮೂರ್ತಿ ಬರೆದ ಕಿ.ರಂ. ನಾಗರಾಜ್ ಕುರಿತ ಪುಸ್ತಕ… ಇತ್ಯಾದಿಗಳ ಬಿಡುಗಡೆಯಿತ್ತು. ವೇದಿಕೆಯಲ್ಲಿ ಸಿದ್ಧಲಿಂಗಯ್ಯ, ಚಂದ್ರಶೇಖರ ಕಂಬಾರ, ಅನಂತಮೂರ್ತಿ, ವೆಂಕಟೇಶಮೂರ್ತಿಯವರ ಜೊತೆಗೆ ನಾನೂ ಒಬ್ಬ ಅತಿಥಿ.
ಪುಸ್ತಕಗಳನ್ನು ಬಿಡುಗಡೆ ಮಾಡಿದ ಅನಂತಮೂರ್ತಿ ಮಾತುಮಾತಾಡುತ್ತಲೇ ಯಾವುದೋ ಉತ್ಸಾಹದಲ್ಲಿ ‘ಅಡಿಗರ ನಂತರದ ಮಹತ್ವದ ಕವಿ ವೆಂಕಟೇಶಮೂರ್ತಿ’ಎಂದರು.
ಈ ಉಬ್ಬಿದ ಮಾತು ಕೇಳಿದ ತಕ್ಷಣ ಅವತ್ತು ಕಿ.ರಂ ನಾಗರಾಜರ ಮೇಲೆ ಮಾತಾಡಬೇಕಾಗಿದ್ದ ನನ್ನ ಸಿದ್ಧ ಟಿಪ್ಪಣಿಗಳು ಹಿನ್ನೆಲೆಗೆ ಸರಿದುಹೋದವು! ಅನಂತಮೂರ್ತಿಯವರ ಮಾತು ಗುಂಗೆ ಹುಳುವಿನಂತೆ ನನ್ನ ಕಿವಿಯಲ್ಲಿ ಗುಯ್‌ಗುಟ್ಟತೊಡಗಿತು; ನನ್ನ ಸರದಿ ಬಂದಾಗ ಕಿ.ರಂ. ಬಗ್ಗೆ ಮಾತಾಡುವುದು ಪಕ್ಕಕ್ಕೆ ಸರಿದು, ಅನಂತಮೂರ್ತಿಯವರನ್ನು ಉದ್ದೇಶಿಸಿದ ನನ್ನ ಪ್ರಶ್ನೆ ಹೊರ ಬಂದೇಬಿಟ್ಟಿತು:
‘ಸಾರ್! ನಿಮ್ಮ ಪಕ್ಕದಲ್ಲೇ ಕಂಬಾರರು ಕೂತಿದ್ದಾರೆ. ಇಲ್ಲೇ ಕನ್ನಡ ಕಾವ್ಯದ ಹೊಸ ಮಾರ್ಗ ತೆರೆದ ಸಿದ್ಧಲಿಂಗಯ್ಯ ಕೂತಿದ್ದಾರೆ. ಈಗಾಗಲೇ ಶಿವಪ್ರಕಾಶ್ ಕನ್ನಡದ ಗಂಭೀರವಾದ ಕವಿಯಾಗಿದ್ದಾರೆ. ಹೀಗಿದ್ದಾಗ ನೀವು ಇದ್ದಕ್ಕಿದ್ದ ಹಾಗೆ ‘ಅಡಿಗರ ನಂತರ... ವೆಂಕಟೇಶಮೂರ್ತಿ’ ಎಂದು ಸ್ವೀಪಿಂಗ್ ಸ್ಟೇಟ್‌ಮೆಂಟ್ ಮಾಡಿದರೆ ಹೇಗೆ? ವೆಂಕಟೇಶಮೂರ್ತಿಯವರು ಮುಖ್ಯ ಕವಿ, ನನಗೂ ಇಷ್ಟವಾದ ಕವಿ. ಆ ಮಾತು ಬೇರೆ...’
ನನ್ನ ಮಾತು ಮುಗಿಯುವ ಮೊದಲೇ ಅನಂತಮೂರ್ತಿ ಕೂತಲ್ಲಿಂದಲೇ, ‘ನೀನು ಅವ್ರನ್ನೂ ಇಷ್ಟ ಪಡ್ತೀಯ, ಇವ್ರನ್ನೂ ಇಷ್ಟ ಪಡ್ತೀಯ!’ ಎಂದು ತಮಾಷೆ ಮಾಡುತ್ತಾ ನಕ್ಕರು. ಅದೊಂದು ಪುಟ್ಟ ಸಾಹಿತ್ಯಕ ಜುಗಲ್‌ಬಂದಿಯೇ ಆಗತೊಡಗಿತು!
`ಸಾರ್! ವೆಂಕಟೇಶಮೂರ್ತಿಯವರ ಕಾವ್ಯದ ಬಗ್ಗೆ ನನಗೂ ಮೆಚ್ಚುಗೆ ಇದೆ. ಆದರೆ ಪುಸ್ತಕ ಬಿಡುಗಡೆಯ ಭರದಲ್ಲಿ ಮುಖ್ಯವಾದ ಸಾಹಿತ್ಯಕ ತೀರ್ಮಾನಗಳು ಹೀಗೆ ಪೂರಾ ಕಿತ್ತು ಹರಿದುಕೊಂಡು ಹೋದರೆ ಹೇಗೆ?’ ಎಂದು ಹೇಳಲೆತ್ನಿಸಿದೆ...
ಅನಂತಮೂರ್ತಿ ನಮ್ಮ ಮುಖ್ಯ ಸೃಜನಶೀಲ ವಿಮರ್ಶಕರಲ್ಲಿ ಒಬ್ಬರು. ಒಳ್ಳೆಯ ಕಾದಂಬರಿ, ಕತೆ ಬರೆಯುತ್ತಲೇ ಸಾಹಿತ್ಯ ಕೃತಿಗಳಿಗೆ ಪ್ರಖರವಾದ ಒಳನೋಟ ಕೊಡಬಲ್ಲವರಾಗಿದ್ದರು. ಅವರು ಸಾರ್ವಜನಿಕ ಸಭೆಗಳಲ್ಲಿ ಹುಸಿ ಗಣ್ಯತೆಗೆ ಬೆಲೆ ಕೊಡದೆ ನೇರವಾಗಿ ಮಾತಾಡುತ್ತಿದ್ದ ಸಂದರ್ಭಗಳಿದ್ದವು; ಪುಸ್ತಕ ಬಿಡುಗಡೆಯ ಔಪಚಾರಿಕ ಸಭೆಗಳಲ್ಲಿ ಕೂಡ ಅವರು ಸ್ಪಷ್ಟವಾದ ವಿಮರ್ಶೆಯ ಹಾದಿಯಲ್ಲೇ ಮಾತಾಡುತ್ತಿದ್ದರು. ಹಿಂದೊಮ್ಮೆ ರಾಮಚಂದ್ರ ಶರ್ಮರ ‘ದೆಹಲಿಗೆ ಬಂದ ಹೊಸ ವರ್ಷ’ ಕವನ ಸಂಕಲನದ ಬಿಡುಗಡೆಯಲ್ಲಿ ನಡೆದ ಕತೆಯನ್ನು ನನ್ನ ‘ಗಾಳಿ ಬೆಳಕು’ಪುಸ್ತಕದ ‘ಕವಿ ಮತ್ತು ವಿಮರ್ಶೆ: ವಿಮರ್ಶೆಯೆಂಬ ಹೂ ಬಾಣ’ಲೇಖನದಲ್ಲಿ ಬರೆದಿರುವೆ. ಈ ಬಗ್ಗೆ ಹಿಂದೆಯೂ ಉಲ್ಲೇಖಿಸಿರುವೆ:
ಅವತ್ತು ಒಬ್ಬ ಕವಿಯ ಸಾಂಸ್ಕೃತಿಕ ಬೇರುಗಳು ಕಡಿದು ಹೋದಾಗ ಅವನ ಕಾವ್ಯಕ್ಕೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಅನಂತಮೂರ್ತಿ ಗಂಭೀರವಾಗಿ ಚರ್ಚಿಸಿದ್ದರು. ಸಭೆಯಲ್ಲಿದ್ದ ಕಿ.ರಂ. ನಾಗರಾಜ್ ಕೂಡ ಇದೇ ಧಾಟಿಯಲ್ಲಿ ಮಾತಾಡಿದ್ದರು. ಹೀಗೆ ಅನಂತಮೂರ್ತಿ, ಕಿ.ರಂ. ಮಾತಾಡಿದ ವಿಮರ್ಶಾತ್ಮಕ ರೀತಿಗೆ ಶರ್ಮರು ವ್ಯಗ್ರರಾಗಿ, ‘ಪುಸ್ತಕ ಬಿಡುಗಡೆ ಎಂದರೆ ಶಾಲಿನಲ್ಲಿ ಸುತ್ತಿ ಹೊಡೆಯುವುದು’ಎಂದಿದ್ದರು; ಈ ರೇಗುಮಾತನ್ನು ಮತ್ತೆ ಮತ್ತೆ ನೆನೆಯುವ ವಿಕ್ರಮ ವಿಸಾಜಿಯವರ ರಾಗಮಯ ನಗು ಕೂಡ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ!
ಶರ್ಮರ ಕಾವ್ಯದ ಬಗ್ಗೆ ಅನಂತಮೂರ್ತಿ, ಕಿ.ರಂ. ಕೊಂಚ ಓವರ್‌ರಿಯಾಕ್ಟ್ ಮಾಡಿದರೇನೋ ಎಂದು ಮುಂದೊಮ್ಮೆ ಅನ್ನಿಸಿದರೂ ಅವರ ವಿಮರ್ಶೆಯ ಖಚಿತತೆಯ ಬಗ್ಗೆ ಅವತ್ತು ಗೌರವವಂತೂ ಮೂಡಿತ್ತು; ಆ ಗೌರವ ಇವತ್ತಿಗೂ ಹಾಗೇ ಇದೆ. ಸಾರ್ವಜನಿಕ ಸಭೆಯಿರಲಿ, ಖಾಸಗಿ ಮಾತುಕತೆಯಿರಲಿ, ಸತ್ಯ ಮಾತಾಡುವವರ ಬಗ್ಗೆ, ಅಥವಾ ಕೊನೇ ಪಕ್ಷ ಸತ್ಯಕ್ಕೆ ಹತ್ತಿರವಾಗಿ ಮಾತಾಡುವವರ ಬಗ್ಗೆ, ಎಲ್ಲ ಸೂಕ್ಷ್ಮ ಜನರಲ್ಲೂ ಗೌರವ ಮೂಡುತ್ತಲೇ ಇರುತ್ತದೆ; ಅಂಥ ಗೌರವ ಹುಟ್ಟಿಸಬಲ್ಲವರು ಹುಟ್ಟುತ್ತಲೇ ಇರಬೇಕು. ಇಲ್ಲದಿದ್ದರೆ ಇಡೀ ಸಂಸ್ಕೃತಿ ಸಾಹಿತ್ಯ ಪರಾವಲಂಬಿಗಳ ಭೋಳೆ ಸಂಸ್ಕೃತಿಯಾಗುತ್ತದೆ.
ತಮಾಷೆಯೆಂದರೆ ಅವತ್ತು ಶರ್ಮರ ಕವನ ಸಂಕಲನದ ಬಗ್ಗೆ ಅಷ್ಟೊಂದು ನಿಖರವಾದ ವಿಮರ್ಶೆಯ ಸೂತ್ರಗಳನ್ನು ಬಳಸಿದ್ದ ಕಿ.ರಂ. ನಾಗರಾಜರೇ ಮತ್ತೊಂದು ಪುಸ್ತಕ ಬಿಡುಗಡೆಯಲ್ಲಿ ಉತ್ಪ್ರೇಕ್ಷಾಲಂಕಾರ ಝಳಪಿಸಿದರು; ಆಗ ಮತ್ತೊಮ್ಮೆ ನನ್ನ ಸಿದ್ಧ ಟಿಪ್ಪಣಿಗಳು ಹಿನ್ನೆಲೆಗೆ ಸರಿವ ಪ್ರಸಂಗ ಬಂತು! ಅವತ್ತು ಕೆ.ಬಿ. ಸಿದ್ದಯ್ಯನವರ ‘ದಕ್ಲದೇವಿ ಕಥಾಕಾವ್ಯ’ ಖಂಡಕಾವ್ಯವನ್ನು ಇಷ್ಟಪಟ್ಟ ಕಿ.ರಂ., ‘ಈ ಕಾವ್ಯವನ್ನು ವಿವರಿಸಲು ಕನ್ನಡ ವಿಮರ್ಶೆಯ ಮಾನದಂಡಗಳೇ ಬದಲಾಗಬೇಕು’ ಎಂದುಬಿಟ್ಟರು! ಇದು ಪುಸ್ತಕ ಬಿಡುಗಡೆಗೂ ಮುನ್ನ ಕೃಷ್ಣಮೂರ್ತಿ ಬಿಳಿಗೆರೆಯವರ ದೇಶಿ ಸಂಸ್ಕೃತಿ ಪ್ರಚಾರದ ಪರಿಣಾಮವೂ ಇರಬಹುದು ಎಂದು ಗುಮಾನಿ ಪಟ್ಟವರಿದ್ದಾರೆ!
ಆ ಖಂಡಕಾವ್ಯದ ವಿಶೇಷ, ಅದರ ಹಿಮ್ಮುಖಿ ಸಾಂಸ್ಕೃತಿಕ ರಾಜಕಾರಣ, ಹಾಗೂ ಅದು ಕಾವ್ಯದ ಜಾಣ ಓದುಗರನ್ನು ಕೂಡ ತಲುಪಲು ಉಬ್ಬಸಪಡುತ್ತಿದ್ದ ರೀತಿ… ಎಲ್ಲವನ್ನೂ ಗಮನಿಸಿದ್ದ ನನಗೆ ಈ ಪುಸ್ತಕ ಓದಲು ವಿಮರ್ಶೆಯ ಮಾನದಂಡಗಳು ಯಾಕೆ ಬದಲಾಗಬೇಕು ಎಂಬುದು ಮಾತ್ರ ಅರ್ಥವಾಗಲಿಲ್ಲ!
‘ಅಲ್ಲಾ ಸಾರ್! ಬೇಂದ್ರೆ ಕಾವ್ಯ ಓದಲು ನಮ್ಮ ವಿಮರ್ಶೆಯ ಮಾನದಂಡ ಬದಲಿಸಿಕೊಂಡಿಲ್ಲ, ಅಡಿಗರ ಕಾವ್ಯವನ್ನಾಗಲೀ, ಕಂಬಾರರ ಕಾವ್ಯವನ್ನಾಗಲೀ ಓದುವಾಗ; ಅಥವಾ ಸಿದ್ಧಲಿಂಗಯ್ಯನವರ ಕಾವ್ಯ ಅಥವಾ ಇನ್ನಾವುದೇ ಮುಖ್ಯ ಕವಿಗಳ ಕಾವ್ಯ ಬಂದಾಗ... ನಮ್ಮ ವಿಮರ್ಶೆಯ ಮಾನದಂಡಗಳನ್ನು ಏಕಾಏಕಿ ಬದಲಿಸಿಕೊಂಡಿಲ್ಲ; ಈಗ ಯಾಕೆ ಇದ್ದಕ್ಕಿದ್ದಂತೆ ಮಾನದಂಡಗಳನ್ನು ಬದಲಿಸಬೇಕು?’ ಎಂಬ ಪ್ರಶ್ನೆ ನಿಜಕ್ಕೂ ಸ್ಪಾಂಟೇನಿಯಸ್ ಆಗಿ ನನ್ನ ಬಾಯಿಂದ ಬಂತು. ಕಿ.ರಂ. ಒಮ್ಮೆ ಕತ್ತೆತ್ತಿ ನನ್ನತ್ತ ನೋಡಿ ಸಣ್ಣಗೆ ಸಿಡಿಮಿಡಿಗೊಂಡರು; ಆದರೆ ಆ ಪ್ರಶ್ನೆಯ ಅಂತರಾಳವನ್ನು ಅವರು ಒಪ್ಪಿಕೊಂಡರೆಂದು ಅವತ್ತಿನ ಬಿಡುಗಡೆಯೋತ್ತರ ಗೋಷ್ಠಿಯಲ್ಲಿದ್ದವರು ಹೇಳಿದರು.
ಈ ಎರಡೂ ‘ನುಡಿಮರೆವು’ಗಳ (ಮೈಮರೆವಿನ ಹಾಗೇ ನುಡಿಮರೆವೂ ಇದೆ!) ಪ್ರಸಂಗಗಳ ನಂತರ ಅನಂತಮೂರ್ತಿಯವರ ಜೊತೆಯಾಗಲೀ, ಕಿ.ರಂ. ನಾಗರಾಜರ ಜೊತೆಯಾಗಲೀ ನಾನು ಆರಾಮಾಗೇ ಇದ್ದೆ; ಅವರೂ ನನ್ನೊಡನೆ ಆರಾಮಾಗಿದ್ದರು. ಕಿರಿಯವನಾದ ನನ್ನ ಪ್ರಶ್ನೆಯಲ್ಲಿ ಇದ್ದಿರಬಹುದಾದ ಒಂದು ಮಟ್ಟದ ಸತ್ಯವನ್ನು ಅವರ ಒಳಮನಸ್ಸು ಒಪ್ಪಿರಬಹುದು.
ಎಷ್ಟೋ ಸಲ ಹೀಗೆ ನಮ್ಮ ಸಿದ್ಧ ಟಿಪ್ಪಣಿ ಮೀರಿ ಹೊಳೆಯುವ ಆ ಕ್ಷಣದ ಸತ್ಯಗಳು ಎಲ್ಲರಲ್ಲೂ ಮೂಡಿರುತ್ತವೆ. ಅವನ್ನು ಅನಗತ್ಯವಾಗಿ ಅದುಮಿಡದೆ ಅವು ಸುಮ್ಮನೆ ನುಡಿಯಲು ಬಿಡುವುದು ನಮಗೂ ಒಳ್ಳೆಯದು; ಸಂಸ್ಕೃತಿಯ ಆರೋಗ್ಯಕ್ಕೂ ಒಳ್ಳೆಯದು. ನಮಗೆ ಓದಲು ಕೊಟ್ಟ ಪುಸ್ತಕ ಓದಿ ನಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಠೇಂಕಾರವೂ ನಮಗೆ ಇರಬೇಕಿಲ್ಲ; ಅಥವಾ ಪುಸ್ತಕಕ್ಕಾಗಲೀ, ಅದನ್ನು ಬರೆದ ಲೇಖಕ ಲೇಖಕಿಯರಿಗಾಗಲೀ ವಿಧೇಯರಾಗಿರಲೂ ಬೇಕಾಗಿಲ್ಲ; ಒಂದು ಪುಸ್ತಕದ ಮುನ್ನುಡಿಯಲ್ಲೋ, ಪುಸ್ತಕದ ಬಿಡುಗಡೆಯಲ್ಲೋ ಈ ಪುಸ್ತಕವನ್ನು ಲೋಕದ ಅತ್ಯುತ್ತಮ ಪುಸ್ತಕವೆಂದು ಸಾಬೀತು ಮಾಡುತ್ತೇನೆ ಎಂದು ಹೊರಡುವ ಸಾಹಿತ್ಯ ಪರಾವಲಂಬಿಗಳ ಹುಂಬ ಹುಮ್ಮಸ್ಸು ಕೂಡ ಸಿಲ್ಲಿಯೇ! ಒಂದು ಪುಸ್ತಕವೇ ನಮಗೆ ನಿಜಕ್ಕೂ ಏನನ್ನು ನುಡಿಯುತ್ತದೋ ಅದನ್ನು ಮಾತ್ರ ನೆಚ್ಚಿ ಮಾತಾಡುವವರು, ಬರೆಯುವವರು ಒಂದು ಸಂಸ್ಕೃತಿಗೆ ಜೀವ ತುಂಬುತ್ತಾರೆ; ಉಳಿದದ್ದೆಲ್ಲ ಶವಶೃಂಗಾರ!
ಇಂಥ ಸರಳ, ಗಂಭೀರ ಸತ್ಯಗಳನ್ನು ಎಲ್ಲರಿಗೂ ಹೇಳಿಕೊಟ್ಟಿರುವ ಕನ್ನಡ, ಇಂಗ್ಲಿಷಿನ ದೊಡ್ಡ ಲೇಖಕ, ಲೇಖಕಿಯರಿದ್ದಾರೆ. ಈಚೆಗೆ ಪೂರ್ಣ ಪ್ರಮಾಣದಲ್ಲಿ ವಿಮರ್ಶೆ ಬರೆಯುವ, ನಿಜಕ್ಕೂ ಶ್ರಮ ವಹಿಸಿ ಬರೆಯುವ, ಮಾತಾಡುವ ಹೊಸ ತಲೆಮಾರಿನ ಮೂವರು ಅಧ್ಯಾಪಕ ಗೆಳೆಯರಿಗೆ ಇವನ್ನೆಲ್ಲ ಕಿವಿಮಾತಿನಂತೆ ಹೇಳಬೇಕೆನ್ನಿಸಿತು. ಈ ಕಿವಿಮಾತು ಇಂಥ ಇನ್ನೂ ಹತ್ತಾರು ಸೂಕ್ಷ್ಮ ಕಿವಿಗಳಿಗೆ ಉಪಯುಕ್ತವಾದೀತು ಎಂದು ಈ ಸಾರ್ವಜನಿಕ ವೇದಿಕೆಯಲ್ಲಿ ಹೇಳಿರುವೆ.
ಕೊನೆ ಟಿಪ್ಪಣಿ
ಕಳೆದ ವಾರದ ಅಂಕಣದಲ್ಲಿ ಸೂಚಿಸಿದಂತೆ, ಲೋಹಿಯಾ ಜೊತೆಗಿನ ನನ್ನ ಜೀವಮಾನದ ಸುಂದರ ಗೀಳಿನ ಫಲ ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’. ಈ ಧಾರಾವಾಹಿ ಗುರುವಾರ (೪ ಏಪ್ರಿಲ್ ೨೦೨೪) ಮಾರುಕಟ್ಟೆಗೆ ಬರುವ ‘ಸುಧಾ’ವಾರಪತ್ರಿಕೆಯಲ್ಲಿ ಹಲವು ವಾರಗಳು ಬರಲಿದೆ. ಇಂಡಿಯಾದ ಶ್ರೇಷ್ಠ ಚಿಂತಕರಲ್ಲೊಬ್ಬರಾದ ಲೋಹಿಯಾಲೋಕಕ್ಕೆ ಕನ್ನಡಿತಿಯರನ್ನು, ಕನ್ನಡಿಗರನ್ನು ಮತ್ತೆ ಮತ್ತೆ ಒಯ್ಯವ ಅಯಾಚಿತ ಭಾಗ್ಯ ನನ್ನದು! ಸಾಧ್ಯವಾದರೆ ಪ್ರತಿವಾರ ಓದಿರಿ, ಓದಿಸಿರಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
ನಿಮಗೂ ಹೀಗಾಗಿರಬಹುದು: ಒಂದು ಒಳ್ಳೆಯ ವಸ್ತು ಅಥವಾ ಗುರಿಯನ್ನು ನೀವು ಬೆನ್ನು ಹತ್ತಿದರೆ, ಅಥವಾ ನಿಮ್ಮ ಅದೃಷ್ಟಕ್ಕೆ ಒಂದು ಮಹಾನ್ ವಸ್ತುವೋ, ಗುರಿಯೋ ನಿಮ್ಮ ಬೆನ್ನು ಹತ್ತಿದರೆ, ಅದರಿಂದ ಹೊರಬರಲು ಮನಸ್ಸು ಒಲ್ಲೆನೆನ್ನುತ್ತದೆ, ಮುಷ್ಕರ ಹೂಡುತ್ತದೆ!
ಹೀಗೆ ಒಬ್ಬ ಪ್ರೇಮಿಯ ಇಂಥ ಸುಂದರ ಗೀಳು-ಅಥವಾ ಲವ್ಲಿ ಅಬ್ಸೆಶನ್-ಇಲ್ಲದಿದ್ದರೆ ಯಾರೂ ಲೇಖಕಿ-ಲೇಖಕ-ಓದುಗಿ-ಓದುಗ-ಪತ್ರಕರ್ತೆ-ಟೀಚರ್-ವಿಜ್ಞಾನಿ… ಏನೂ ಆಗುವುದಿಲ್ಲ; ಇಲ್ಲಿ ’ಸುಂದರ ಗೀಳು’ ಅಥವಾ ’ಲವ್ಲಿ ಅಬ್ಸೆಶನ್’ ಬಣ್ಣನೆಗಳನ್ನು ಪಾಸಿಟಿವ್ ಅರ್ಥದಲ್ಲಿ ಬಳಸಿರುವೆ. ನಮಗೆ ಇಂಥ ಸುಂದರ ಗೀಳಿಲ್ಲದಿದ್ದರೆ ಮೇಲೆ ಹೇಳಿದ ಎಲ್ಲ ವಲಯಗಳಲ್ಲೂ ಸಾಧಾರಣವಾದ, ಕಳಪೆಯಾದ ಅಥವಾ ಉತ್ತಮವಾದ ಜೀತಗಾರರಾಗಬಹುದು, ಅಷ್ಟೆ! ನಮ್ಮ ಆಳದಲ್ಲಿ ಇಷ್ಟವಾಗದೆ, ನಮ್ಮ ಮನಸ್ಸಿಗೆ ಒಗ್ಗದೆ, ನಾವು ಮಾಡುವು ಕೆಲಸವೆಲ್ಲವೂ ಜೀತವೇ ಎಂಬರ್ಥದ ಮಾತುಗಳನ್ನು ಲಂಕೇಶರ ನೀಲು ಹೇಳಿದ ನೆನಪು.
ಬೆಳ್ಳಂಬೆಳಗಿಗೇ ಏಕ್‌ದಂ ಇಂಥ ಫಿಲಸಾಫಿಕಲ್ ಮೂಡಿನ ಮಾತುಗಳು ಹುಟ್ಟಲು ಕಾರಣವಿತ್ತು: ನಿನ್ನೆಮೊನ್ನೆಯ ತನಕ ರಾಮಮನೋಹರ ಲೋಹಿಯಾ (೨೩ ಮಾರ್ಚ್ ೧೯೧೦- ೧೨ ಅಕ್ಟೋಬರ್ ೧೯೬೭) ಹುಟ್ಟುಹಬ್ಬದ ಸುತ್ತ ಪತ್ರಿಕೆಗಳಿಗೆ ಲೋಹಿಯಾ ವ್ಯಕ್ತಿತ್ವ, ರಾಜಕಾರಣ ಕುರಿತು ಬರೆಯುತ್ತಿದ್ದವನಿಗೆ ಭಾನುವಾರದ ‘ಗಾಳಿ ಬೆಳಕು’ಅಂಕಣಕ್ಕೂ ಲೋಹಿಯಾ ಅವರೇ ಬಂದಿದ್ದು ಅಚ್ಚರಿಯಲ್ಲ. ಈ ಅಂಕಣದ ಓದುಗಿ-ಓದುಗ ವಲಯಕ್ಕೆ ಕೊಂಚ ಉಪಯುಕ್ತವಾಗಬಹುದಾದ ‘ಲೇಖಕ ಲೋಹಿಯಾ’, ‘ವಿಮರ್ಶಕ ಲೋಹಿಯಾ’, ‘ಸಂಸ್ಕೃತಿ ವಿಮರ್ಶಕ ಲೋಹಿಯಾ’… ಮುಂತಾದ ಲೋಹಿಯಾ ಮುಖಗಳ ಬಗ್ಗೆ ಕೆಲವು ಟಿಪ್ಪಣಿಗಳು:
ವಿದ್ಯಾರ್ಥಿಯಾಗಿದ್ದಾಗ ಲೋಹಿಯಾ ಅಪಾರ ಬೌದ್ಧಿಕ ಚಡಪಡಿಕೆಯ ಹುಡುಗನಾಗಿದ್ದರು. ಮೇಷ್ಟರು ಪಾಠ ಮಾಡುತ್ತಿದ್ದ ಪುಸ್ತಕದಲ್ಲಿ ಏನಾದರೂ ಅಸಂಬದ್ಧವಾದದ್ದು ಕಂಡರೆ ತರ್ಕಬದ್ಧ ಪ್ರಶ್ನೆಗಳನ್ನು ಹಾಕುತ್ತಿದ್ದರು; ಬ್ರಿಟಿಷರ ಕಾಲದಲ್ಲಿ ಬರೆದ ಚರಿತ್ರೆಯ ಪುಸ್ತಕಗಳಲ್ಲಿ ಇಂಡಿಯಾದ ಬಗ್ಗೆ ಇರುವ ವಿವರಗಳನ್ನು ಪರೀಕ್ಷಕ ದೃಷ್ಟಿಯಿಂದ ನೋಡುತ್ತಿದ್ದರು. ಪರೀಕ್ಷೆಯಲ್ಲಂತೂ ಪಠ್ಯಗಳ ಬಗ್ಗೆ ಸ್ವತಂತ್ರವಾದ ವ್ಯಾಖ್ಯಾನವನ್ನೇ ಬರೆಯುತ್ತಿದ್ದರು; ತಮಗೆ ಇಷ್ಟವಾದ ಪ್ರಶ್ನೆಗಳಿಗಷ್ಟೇ ಉತ್ತರ ಬರೆಯಲು ಹೋಗಿ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯ ಸಾಲದೆ ಎದ್ದು ಬರುತ್ತಿದ್ದರು...ಲೋಹಿಯಾಗೆ ಒಳ್ಳೆಯ ಅಂಕ ಬರುತ್ತಿರಲಿಲ್ಲ ಎಂದು ಬಿಡಿಸಿ ಹೇಳಬೇಕಾಗಿಲ್ಲ!
ಆದರೆ ಮುಂದೆ ಪೂರ್ಣಚಂದ್ರ ತೇಜಸ್ವಿ ಗುರುತಿಸಿದಂತೆ ಇಂಡಿಯಾದ ‘ಅತ್ಯಂತ ಒರಿಜಿನಲ್ ಚಿಂತಕ’ರಾಗಿದ್ದ ಲೋಹಿಯಾ ಅಷ್ಟು ಮಹತ್ವದ ಚಿಂತಕರಾಗಲಿದ್ದ ಸೂಚನೆಗಳು ಅವರ ವಿದ್ಯಾರ್ಥಿ ದೆಸೆಯಲ್ಲಿವೆ.
ಲೇಖಕ ಮಿತ್ರ ಟಿ.ಎಸ್. ಗೊರವರ್ ಸಂಪಾದಿಸುವ ‘ಅಕ್ಷರ ಸಂಗಾತ’ಕ್ಕೆ ‘ಲೋಹಿಯಾ ಬರವಣಿಗೆಯಲ್ಲಿ ಕೃತಿ ವಿಮರ್ಶೆಯ ಮಾದರಿಗಳು’ (ಸಂಚಿಕೆ: ಆಗಸ್ಟ್ 2022) ಎಂಬ ಲೇಖನ ಬರೆಯುತ್ತಿದ್ದಾಗ ನನಗೆ ಮತ್ತೆ ಮನದಟ್ಟಾದ ಅಂಶ ಇದು: ವಿಮರ್ಶೆಯ ಚಟುವಟಿಕೆ ಅಖಂಡವಾದದ್ದು; ಅದು ನಾವು ಪುಸ್ತಕ, ಸಂಸ್ಕೃತಿ, ವ್ಯಕ್ತಿಗಳು, ಸಮಾಜ, ಪತ್ರಿಕೋದ್ಯಮ, ರಾಜಕಾರಣ, ಲೋಕದ ವಿದ್ಯಮಾನಗಳು… ಎಲ್ಲವನ್ನೂ ನೋಡುವ ಬಗೆಯನ್ನು ಕಲಿಸುತ್ತದೆ; ಅಷ್ಟೇ ಅಲ್ಲ, ಕತೆ, ಕವಿತೆ, ನಾಟಕ ಏನು ಬರೆದರೂ ಈ ವಿಮರ್ಶಾ ಪ್ರಜ್ಞೆ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ.
‘ಸೃಜನಶೀಲ ಬರವಣಿಗೆಯಲ್ಲಿ ಬಹುಪಾಲು ಇರುವುದು ವಿಮರ್ಶೆಯ ಶ್ರಮವೇ’ ಎಂಬ ಟಿ.ಎಸ್. ಎಲಿಯಟ್‌ನ ಪ್ರಖ್ಯಾತ ಮಾತನ್ನು ನೀವು ಕೇಳಿರಬಹುದು. ಈ ಅರ್ಥದಲ್ಲಿ ಲೋಹಿಯಾ ಗದ್ಯ ಸೃಜನಶೀಲ. ಅವರ ‘ಕೃಷ್ಣ’, ‘ರಾಮ, ಕೃಷ್ಣ, ಶಿವ’, ‘ಸೌಂದರ್ಯ ಮತ್ತು ಮೈಬಣ್ಣ’, ‘ಯೋಗದಲ್ಲಿ ಒಂದು ಅಧ್ಯಾಯ’ಮೊದಲಾದವು ’ಸಾಂಸ್ಕೃತಿಕ ಲೇಖನಗಳು’ ಎಂದು ಕರೆಸಿಕೊಳ್ಳುವ ಸೃಜನಶೀಲ ಲೇಖನಗಳು; ಆದರೆ ‘ಜಾತಿಭೇದ, ಲಿಂಗಭೇದ’ ಥರದ ಸಮಾಜ ವಿಶ್ಲೇಷಣೆಯ ಭಾಷಣವೂ ಇಷ್ಟೇ ಸೃಜನಶೀಲ!
ಹಾಗೆಯೇ ‘ದ್ರೌಪದಿ ಯಾ ಸಾವಿತ್ರಿ?’ (ದ್ರೌಪದಿಯೋ, ಸಾವಿತ್ರಿಯೋ?) ಎಂಬ ಸಂಸ್ಕೃತಿ ವಿಶ್ಲೇಷಣೆ ಕೂಡ. ಈ ಹಿಂದಿ ಲೇಖನದಲ್ಲಿ ಪುರಾಣ ಪಾತ್ರಗಳನ್ನು ಕುರಿತು ಮೈ ದುಂಬಿ ಬರೆಯುತ್ತಿರುವ ಲೋಹಿಯಾಗೆ ದ್ರೌಪದಿ-ಸತಿ ಸಾವಿತ್ರಿ ಈ ಇಬ್ಬರ ನಡುವೆ ಯಾರು ತಮ್ಮ ಪ್ರಿಯ ಪಾತ್ರ ಎಂಬ ಪ್ರಶ್ನೆ ಎದುರಾಗುತ್ತದೆ. ಬರೆಯುತ್ತಾ ಬರೆಯುತ್ತಾ ಲೋಹಿಯಾ ಮನಸ್ಸು ಕೊನೆಗೆ ಕಡುಜಾಣೆಯಾದ, ಮುಕ್ತ ಪ್ರೀತಿಯ ದ್ರೌಪದಿಯ ಕಡೆಗೆ ಒಲಿಯುತ್ತದೆ!
ಹಾಗೆ ದ್ರೌಪದಿಯ ಕಡೆಗೆ ಲೋಹಿಯಾ ವಾಲುತ್ತಿದ್ದರೂ, ಸಾವಿತ್ರಿಯ ತೀವ್ರ ನಂಟಿನ ಪ್ರೀತಿಯನ್ನೂ, ಯಮನ ದವಡೆಯಿಂದ ಗಂಡನನ್ನು ಬಿಡಿಸಿಕೊಳ್ಳ ಹೊರಟ ಅವಳ ಪ್ರೀತಿಯ ಅದ್ಭುತ ರೂಪಕವನ್ನೂ ಅವರ ಮನಸ್ಸು ಮೆಚ್ಚಿಕೊಳ್ಳಲಾರಂಭಿಸುತ್ತದೆ. ಇಂಥ ಮೆಚ್ಚುಗೆಯ ನಡುವೆಯೇ ಅವರ ವಿಮರ್ಶಕ ಮನಸ್ಸು ಜಾಗೃತವಾಗುತ್ತದೆ. ಲೋಹಿಯಾ ಬರೆಯುತ್ತಾರೆ: ‘ಹಿಂದೂ ದಂತಕತೆಗಳಲ್ಲಿ ಸಾವಿತ್ರಿಯಂಥ ಪತಿವ್ರತೆಯ ಕತೆ -ಯಮನ ಕೈಗಳಿಂದ ಗಂಡನನ್ನು ಬಿಡಿಸಿಕೊಂಡು ಬಂದ ಹೆಣ್ಣಿನ ಕತೆ- ಇರುವ ಹಾಗೆ, ತನ್ನ ಹೆಂಡತಿ ಸತ್ತಾಗ ಆಕೆಯನ್ನು ಯಮನ ಕೈಯಿಂದ ಅನುರಾಗದಿಂದ ಬಿಡಿಸಿಕೊಂಡು ಬಂದ ಗಂಡನ ಒಂದು ಕತೆಯಾದರೂ ಇದ್ದರೆ ಹೇಳಿ ಎಂದು ನಾನು ಅನೇಕರನ್ನು ಕೇಳಿದ್ದೇನೆ.’
ಮನೋವಿಜ್ಞಾನಿ ಕಾರ್ಲ್ ಯೂಂಗ್ ಪ್ರಕಾರ, ಪುರಾಣಗಳು ಸಮುದಾಯ ಅಥವಾ ಸಮಷ್ಟಿಯ ಅಪ್ರಜ್ಞೆಯಿಂದ ಸೃಷ್ಟಿಯಾಗುತ್ತವೆ. ಆದರೆ ಸ್ತ್ರೀವಾದಿ ಚಿಂತನೆ ಈ ಪುರಾಣ ಕತೆಗಳನ್ನು ನೋಡುವ ಇನ್ನೊಂದು ಬಗೆಯನ್ನು ನಮಗೆ ತೋರಿಸುತ್ತದೆ: ಇಂಥ ಪಾತಿವ್ರತ್ಯದ ಕತೆಗಳನ್ನು ಸೃಷ್ಟಿಸಿದ್ದು ಇಡೀ ಸಮುದಾಯದ ಅಪ್ರಜ್ಞೆಯಲ್ಲ; ಬದಲಿಗೆ ’ಗಂಡು’ ಸಮುದಾಯದ ಅಪ್ರಜ್ಞೆ; ಹೀಗಾಗಿ ಗಂಡು ಸಮುದಾಯದ ಹಿತಾಸಕ್ತಿ ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಈ ಥರದ ಕತೆಗಳು ಹುಟ್ಟಿರಬಹುದು; ಹೆಣ್ಣು ಪತಿವ್ರತೆಯಾಗಿದ್ದರೆ ಮಾತ್ರ ಗಂಡು ಸಾವಿನ ದವಡೆಗೆ ಸಿಕ್ಕರೂ ರಕ್ಷಿಸಿಕೊಳ್ಳಬಹುದು ಎಂಬುದನ್ನು ಒತ್ತಿ ಹೇಳಲು ಗಂಡು ಮನಸ್ಸು ಈ ಪುರಾಣ ಕತೆಗಳನ್ನು ಸೃಷ್ಟಿಸಿರಬಹುದು…
ಈ ರೀತಿಯ ಎಚ್ಚರದಿಂದ ಓದುವ ಹಲವು ಕ್ರಮಗಳನ್ನು ಇವತ್ತು ಸ್ತ್ರೀವಾದಿ ವಿಮರ್ಶೆ ನಮಗೆ ಹೇಳಿಕೊಟ್ಟಿದೆ. ಸ್ತ್ರೀವಾದಿ ವಿಮರ್ಶೆ ಕುರಿತು ಬರೆಯುತ್ತಿರುವಾಗ, ಲೋಹಿಯಾ ಸ್ತ್ರೀವಾದದ ಮುಂಚೂಣಿ ತತ್ವಜ್ಞಾನಿ ಸಿಮೊನ್ ದ ಬುವಾರನ್ನು ಪ್ರಸ್ತಾಪಿಸಿದ್ದು ನೆನಪಾಗುತ್ತದೆ: ೧೯೨೯-೩೩ರ ನಡುವೆ ಪಿಎಚ್. ಡಿ. ಸಂಶೋಧನೆ ಮಾಡಲು ಜರ್ಮನಿಗೆ ಹೋಗಿ ಬಂದಿದ್ದ ಲೋಹಿಯಾಗೆ ಐವತ್ತರ ದಶಕದ ಕೊನೆಯ ಹೊತ್ತಿಗೆ ಸಿಮೊನ್ ದ ಬುವಾರ ಚಿಂತನೆಗಳ ಪರಿಚಯವಾದಂತಿದೆ. ಅದರ ಜೊತೆಗೇ, ಸಾವಿತ್ರಿ-ಸತ್ಯವಾನರ ಕತೆ ಕುರಿತ ಈ ಪ್ರಶ್ನೆ ಲೋಹಿಯಾಗೆ ಇಂಡಿಯಾದ ಜಾತಿಭೇದ, ಲಿಂಗಭೇದ ಹಾಗೂ ಸಾಂಪ್ರದಾಯಿಕ ಭಾರತದಲ್ಲಿ ಗಂಡಿನ ಯಜಮಾನಿಕೆಯ ಲೋಕದ ಬಗೆಗಿನ ತಿಳುವಳಿಕೆಯಿಂದ ಕೂಡ ಹುಟ್ಟಿದೆ.
ಮುಂದೊಮ್ಮೆ ಲೋಹಿಯಾ ತಮ್ಮ ಗೆಳತಿ ರಮಾ ಮಿತ್ರಾರನ್ನು ಓದಲು ಜರ್ಮನಿಗೆ ಕಳಿಸಿದಾಗ ಸಿಮೊನ್ ದ ಬುವಾರನ್ನು ಕಾಣಲು ಹೇಳುತ್ತಾರೆ. ರಮಾ ಮಿತ್ರಾಗೆ ಲೋಹಿಯಾ ಬರೆದ ಪತ್ರಗಳಲ್ಲಂತೂ ಮೈ-ಮನ-ಬುದ್ಧಿ-ಒಳನೋಟಗಳು ಬೆರೆತು ಹುಟ್ಟುವ ತೀವ್ರತೆ, ತೀಕ್ಷ್ಣತೆ, ಸೃಜನಶೀಲತೆಗಳು ಎಲ್ಲೆಡೆ ನಮ್ಮನ್ನು ತಾಕುತ್ತವೆ. ಬೆಚ್ಚಗಿನ ಮಾತುಗಳ ನಡುನಡುವೆಯೇ ಗೆಳತಿ ರಮಾ ಮಿತ್ರಾಗೆ ಪುಸ್ತಕ ವಿಮರ್ಶೆ ಬರೆಯುವುದನ್ನು ಕಲಿಸಲು ಲೋಹಿಯಾ ಬರೆದ ಮಾತುಗಳು:
‘ವಿಮರ್ಶೆ ಮಾಡುವಾಗ ನಿನ್ನ ಬುದ್ಧಿಯ ಓಟ ಮುಕ್ತವಾಗಿರಲಿ. ಮೊದಲ ಪ್ಯಾರಾದಲ್ಲಿ ಕೃತಿಯ ಮುಖ್ಯಾಂಶವಿರಲಿ; ಮುಂದಿನ ಅರ್ಧ ಪ್ಯಾರಾದಷ್ಟು ಕೃತಿ ನೀಡುವ ಹೊಸ ವಿಚಾರ ಕುರಿತು ಬರೆ. ನಂತರ ಕೃತಿಯಲ್ಲಿ ಬರುವ ವೈಶಿಷ್ಟ್ಯ, ವಿಚಿತ್ರಗಳನ್ನು ಕುರಿತು ಬರೆ. ಕೊನೆಯಲ್ಲಿ ನಿನ್ನ ಸರಿಯಾದ ತೀರ್ಮಾನವಿರಲಿ. ಕೃತಿ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಅಭಿಪ್ರಾಯ ಕೊಡದೆ, ಕೃತಿಯಲ್ಲಿ ನಿನ್ನನ್ನು ಮುಟ್ಟಿದ ಯಾವುದೇ ವಿಚಾರ ಯಾವ ದಿಕ್ಕಿನಲ್ಲಿ ಬೆಳೆಯಬಹುದಿತ್ತು ಎಂಬುದನ್ನು ಕುರಿತು ಹೇಳು.’
ಪುಸ್ತಕ ವಿಮರ್ಶೆಯ ಬಗ್ಗೆ ಲೋಹಿಯಾಗಿದ್ದ ಖಚಿತತೆ ಇತರ ಬಗೆಯ ವಿಮರ್ಶೆಯಲ್ಲೂ ಇತ್ತು. ಲೋಹಿಯಾರ ಅಖಂಡ ವಿಮರ್ಶೆಯಲ್ಲಿ ಸಾಮಾಜಿಕ- ಖಾಸಗಿ-ಸಾಂಸ್ಕೃತಿಕ ಎಲ್ಲವೂ ಬೆರೆಯುವುದು ಹೀಗೆ. ಹಾಗೆ ಬೆರೆತಾಗ ಮಾತ್ರ ನಮಗೆ ಪುಸ್ತಕದಂತೆಯೇ ನಮ್ಮ ಸುತ್ತಣದ ಎಲ್ಲವನ್ನೂ ಅಖಂಡವಾಗಿ, ಒಟ್ಟಾಗಿ, ಕ್ರಿಟಿಕಲ್ ಆಗಿ, ನೋಡುವ ನೋಟ ಬೆಳೆಯುತ್ತದೆ. ಇವೆಲ್ಲ ನನಗೆ ಕಾಲಕಾಲಕ್ಕೆ ಪರಿಚಯವಾಗಿರುವುದು ಲೋಹಿಯಾ ಬರಹಗಳಿಂದ. ನಂತರದ ದಿನಗಳಲ್ಲಿ ಸಿಕ್ಕಿದ ಲಂಕೇಶ್, ಡಿ. ಆರ್. ನಾಗರಾಜರ ಸಂಗ, ಬರಹ, ಮಾತುಗಳಿಂದ.
ಅದಿರಲಿ. ಈ ಅಂಕಣಕಾರ ಮತ್ತೆ ಮತ್ತೆ ತನ್ನ ಸುಂದರ ಗೀಳಾದ ಲೋಹಿಯಾಗೆ ಮರಳುವುದರಿಂದ ಉಂಟಾದ ಒಂದು ಅರ್ಥಪೂರ್ಣ ಬೆಳವಣಿಗೆಯ ವಿವರಗಳು… ಬರುವ ವಾರಕ್ಕಿರಲಿ!
ಕೊನೆ ಟಿಪ್ಪಣಿ
ಗಾಂಧೀಜಿಯ ಬಗೆಗೆ ಬರೆಯುವಾಗ ಆಗಾಗ್ಗೆ ಉಲ್ಲೇಖಿಸಿರುವ ಈ ಲೋಹಿಯಾ ಒಳನೋಟವನ್ನು ಇಲ್ಲಿ ಮತ್ತೆ ಉಲ್ಲೇಖಿಸುವೆ. ಗಾಂಧೀಜಿಯ ಅನೇಕ ವಿಚಾರಗಳನ್ನು ವಿಮರ್ಶಾತ್ಮಕವಾಗಿ ನೋಡಿ, ನಂತರ ತಮ್ಮ ಕಾಲಕ್ಕೆ ತಕ್ಕಂತೆ ವಿವರಿಸುತ್ತಿದ್ದ ಲೋಹಿಯಾ ತಮ್ಮೊಳಗೆ ಇಳಿದಿದ್ದ ಗಾಂಧೀ ವ್ಯಕ್ತಿತ್ವವನ್ನು ಕಂಡುಕೊಳ್ಳುವ ಈ ಪರಿಯ ಸೊಬಗು ನೋಡಿ:
‘…ಹೆಣ್ಣು ಮತ್ತು ದೇವರು ಇವೆರಡೇ ಪ್ರಾಯಶಃ [ಗಂಡಿನ ]ಜೀವನದ ಉದ್ದೇಶಗಳು ಎಂದೊಮ್ಮೆ ಹೇಳಿದೆ. ನಾನು ದೇವರನ್ನು ಭೇಟಿಯಾಗಿಲ್ಲ; ಹೆಣ್ಣು ನನ್ನ ಕೈಗೆ ಎಟುಕಿಯೂ ಎಟುಕದಂತೆ ತಪ್ಪಿಸಿಕೊಳ್ಳುತ್ತಲೇ ಇದ್ದಾಳೆ. ಆದರೆ ದೇವರು ಹಾಗೂ ಹೆಣ್ಣು- ಈ ಎರಡರ ಹೊಳಹುಗಳನ್ನುಳ್ಳ ಒಬ್ಬ ಮನುಷ್ಯನನ್ನು ಸಂಧಿಸುವ ಅವಕಾಶ ನನಗೆ ಸಿಕ್ಕಿತು. ಅದರ ಜೊತೆಗೇ ಈ ಹೊಳಹಿನ ಹುಡುಕಾಟ ಹೊಸದಾಗಿ ಆರಂಭವಾಗಿದೆ…’
ಲೋಹಿಯಾರ ಜೀವನದುದ್ದಕ್ಕೂ ಸಮಾಜವಾದದ ಹಾಗೆ ಗಾಂಧೀಜಿ ಕೂಡ ಒಂದು ಸುಂದರ, ಅರ್ಥಪೂರ್ಣ ಗೀಳಿನಂತಿದ್ದರು ಎನ್ನಿಸುತ್ತದೆ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
ಫ್ರೆಂಚ್ ಫಿಲಾಸಫರ್ ರೂಸೋಗೆ ಹದಿನಾರು ವರ್ಷವಾಗಿದ್ದಾಗ ಅವನ ಬದುಕಿನ ಒಂದು ನಿರ್ಣಾಯಕ ತಿರುವು ಘಟಿಸಿತು. ಕನ್ವರ್ಶನ್ ಅಥವಾ ನವಧರ್ಮ ಸ್ವೀಕಾರ ಎಂದರೆ ಏನೆಂಬುದೇ ಗೊತ್ತಿಲ್ಲದ ಹುಡುಗ ರೂಸೋ ಕ್ಯಾಥೊಲಿಕ್ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಬೇಕಾಯಿತು. ಇದರಿಂದ ತನಗೊಂದು ಹೊಸ ಲೋಕ ತೆರೆಯುತ್ತದೆ ಎಂದು ಹುಡುಗ ರೂಸೋ ಅಂದುಕೊಂಡಿದ್ದ. ಹಾಗಾಗಲಿಲ್ಲ. ಅವನ ಮನಸ್ಸು ಧರ್ಮವನ್ನು ಬಿಟ್ಟು ಇನ್ನೆಲ್ಲವನ್ನೂ ಯೋಚಿಸತೊಡಗಿತು! ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವ ಚಡಪಡಿಕೆ ಶುರುವಾಯಿತು. ನವ ಧರ್ಮ ಸ್ವೀಕಾರದ ಹೆಜ್ಜೆಗಳಲ್ಲಿ ರೂಸೋ ನೆರವಿಗೆ ನಿಂತ ಮೇಡಮ್ ವಾರೆನ್ಸ್ ತನಗಿಂತ ಕಿರಿಯವನಾದ ರೂಸೋ ಜೊತೆ ಪ್ರಣಯವನ್ನಾರಂಭಿಸುತ್ತಾಳೆ. ಮುಂದೆ ಆಕೆ ಕ್ಯಾನ್ಸರ್ ಆಗಿ ತೀರಿಕೊಳ್ಳುತ್ತಾಳೆ. ಮತ್ತೆ ರೂಸೋನ ಪ್ರೇಮದ ಹುಡುಕಾಟ ಶುರುವಾಗುತ್ತದೆ.
ಈ ನಿವೇದನೆಗಳನ್ನು ರೂಸೋನ ‘ಕನಫೆಶನ್ಸ್’ನ (ಆತ್ಮನಿವೇದನೆಗಳು) ಎರಡನೆಯ ಸಂಪುಟದಲ್ಲಿ ಓದುತ್ತಿರುವಾಗಲೇ ಕರ್ನಾಟಕದಲ್ಲಿ ಸ್ವಾಮೀಜಿಯೊಬ್ಬರು ಬಂಧನಕ್ಕೊಳಗಾದ ಸುದ್ದಿ ಕಣ್ಣಿಗೆ ಬಿತ್ತು. ಅದು ಹೇಗೋ ಇವೆರಡೂ ನನ್ನ ಮನಸ್ಸಿನಲ್ಲಿ ಕನೆಕ್ಟ್ ಆದವು. ಎಷ್ಟೋ ಸಲ ಕಣ್ಣೆದುರಿನ ಘಟನೆಗಳು ಹೆಚ್ಚು ಸ್ಪಷ್ಟವಾಗುವುದು ಗಂಭೀರವಾದ ಓದು, ಬರಹಗಳ ಬೆಳಕಿನಲ್ಲಿ ಎಂಬ ನನ್ನ ಅನುಭವ, ನಂಬಿಕೆಗಳು ಮತ್ತೆ ಗಟ್ಟಿಯಾಗತೊಡದವು.
ತನ್ನ ಐವತ್ತಮೂರು-ಐವತ್ತನೆಯ ವಯಸ್ಸಿನ ನಡುವೆ ಈ ನಿವೇದನೆಗಳ ಸಂಪುಟಗಳನ್ನು ಬರೆದ ಜೆ.ಜೆ. ರೂಸೋ ಹದಿನೆಂಟನೆಯ ಶತಮಾನದ ದೊಡ್ಡ ತತ್ವಜ್ಞಾನಿ. ಫ್ರೆಂಚ್ ಕ್ರಾಂತಿಯ ನಾಯಕರನ್ನು, ರೊಮ್ಯಾಂಟಿಕ್ ಸಾಹಿತ್ಯ ಚಳುವಳಿಯನ್ನು ಪ್ರಭಾವಿಸಿದವನು. ಯೂರೋಪಿನ ಜನ ಜಗತ್ತನ್ನು ನೋಡುವ ಕ್ರಮ ಅವನಿಂದಲೂ ಬದಲಾಯಿತು.
ರೂಸೋನ ನಿವೇದನೆಗಳು ಧರ್ಮದ ಹೆಸರಿನಲ್ಲಿ ಮನುಷ್ಯರ ಮೇಲೆ ಹೇರಿರುವ ಕಟ್ಟಳೆಗಳು ಸೃಷ್ಟಿಸಿರುವ ಸಮಾಜದ ಅಸಹಜ ನೀತಿಗಳಿಗೂ ಮನುಷ್ಯನ ದೇಹಕ್ಕೂ ಏನೇನೂ ಸಂಬಂಧವಿರುವುದಿಲ್ಲ ಎಂಬ ಎಲ್ಲ ಕಾಲದ ಸತ್ಯಗಳನ್ನು ಮತ್ತೆ ನೆನಪಿಸುತ್ತವೆ. ಇದು ಎಲ್ಲ ಕಾಲದಲ್ಲೂ ಎಲ್ಲರೂ ಬಲ್ಲ ವಿಷಯ. ಆದರೂ ಧರ್ಮ, ಧಾರ್ಮಿಕ ಸಂಸ್ಥೆಗಳು ಹಾಗೂ ಸಂಪ್ರದಾಯಸ್ಥ ಸಮಾಜಗಳು ಧರ್ಮಗುರು, ಪಾದ್ರಿ, ಸ್ವಾಮೀಜಿಗಳ ಮೇಲೆ ಹಲ ಬಗೆಯ ಅಸಹಜ ಕಟ್ಟಳೆಗಳನ್ನು ಹೇರುತ್ತಾ ಬಂದಿವೆ. ಆ ಕಟ್ಟಳೆಗಳು ಸೃಷ್ಟಿಸುವ ಕಷ್ಟ, ಸುಖ, ಬಿಕ್ಕಟ್ಟು, ಉಲ್ಲಂಘನೆಗಳು ಕೂಡ ಸಮಾಜದಲ್ಲಿ ಎಲ್ಲರಿಗೂ ಗೊತ್ತಿರುತ್ತವೆ; ಆದರೂ ಜನ ಜಾಣ ಕಿವುಡು, ಜಾಣ ಕುರುಡುಗಳಲ್ಲಿ ಅವುಗಳನ್ನು ಕಡೆಗಣಿಸಿ ತಮ್ಮ ಪಾಡಿಗೆ ತಾವಿರುತ್ತಾರೆ.
ಅಕಸ್ಮಾತ್ ರೂಸೋನಂಥವರು ಬರೆದದ್ದನ್ನು ಓದಿದಾಗ, ಅಥವಾ ಅಮೆರಿಕನ್ ಕಾದಂಬರಿಕಾರ ನಥಾನಿಯಲ್ ಹಾತಾನ್‌ನ ‘ಸ್ಕಾರ್ಲೆಟ್ ಲೆಟರ್’ ಕಾದಂಬರಿಯಲ್ಲಿ ತನ್ನ ಲೈಂಗಿಕ ಸಂಬಂಧದ ಹೊಣೆ ಹೊರಲಾಗದ ತಳಮಳದಲ್ಲಿರುವ ಧರ್ಮಗುರುವಿನ ತೊಳಲಾಟ ಕಂಡಾಗ, ‘ಅರೆ! ನಮ್ಮ ಸ್ವಾಮೀಜಿಗಳಿಗೂ ಈ ಕಷ್ಟಗಳಿರಬಹುದಲ್ಲವೆ?’ ಎಂದುಕೊಂಡು ಸುಮ್ಮನಾಗುತ್ತಾರೆ.
ಈ ಕುರಿತು ಬರೆಯುತ್ತಿರುವಾಗ ಹದಿಹರೆಯದಲ್ಲಿ ಸ್ವಾಮೀಜಿಗಳಾಗಬೇಕಾಗಿದ್ದು, ನಂತರ ಅದನ್ನು ತಪ್ಪಿಸಿಕೊಂಡ ಗೆಳೆಯರ ನೆನಪಾಯಿತು. ಹಾಗೆ ತಪ್ಪಿಸಿಕೊಂಡ ಮೂವರು ಗೆಳೆಯರು ಮುಂದೆ ಸಾಹಿತ್ಯ, ಸಾರ್ವಜನಿಕ ಜೀವನ, ವೃತ್ತಿ, ರಂಗಭೂಮಿ, ಸಿನಿಮಾಗಳಲ್ಲಿ ತೊಡಗಿಕೊಂಡು ತಂತಮ್ಮ ಬದುಕನ್ನು ಬದುಕುತ್ತಾ ಬಂದಿದ್ದಾರೆ. ಈ ಗೆಳೆಯರ ಅನುಭವಗಳು ಪ್ರಾತಿನಿಧಿಕವಾದ್ದರಿಂದ ಅವರ ಹೆಸರು, ಹಿನ್ನೆಲೆಗಳ ಅಗತ್ಯವಿಲ್ಲ; ಇಲ್ಲಿನ ಹೆಸರುಗಳು ಕಾಲ್ಪನಿಕ ಎಂದು ಬಿಡಿಸಿ ಹೇಳಬೇಕಾಗಿಲ್ಲ:
ಮಠವೊಂದರ ಶಾಲೆಯಲ್ಲಿ ಓದುತ್ತಿದ್ದ ಚುರುಕು ಹುಡುಗ ರಾಮು ಸ್ವಾಮಿಯಾಗಲು ತಕ್ಕವನೆಂದು ಹಿರಿಯರು ತೀರ್ಮಾನಿಸಿದರು; ಹತ್ತನೆಯ ತರಗತಿಯಲ್ಲಿ ಓದುವ ಕಾಲಕ್ಕಾಗಲೇ ರಾಮು ಧರ್ಮ, ಆಧ್ಯಾತ್ಮಗಳ ಬಗ್ಗೆ ಬ್ರೇಕಿಲ್ಲದೆ ಮಾತಾಡುವುದನ್ನು ಕಲಿತ. ಒಳ್ಳೆಯ ಊಟೋಪಚಾರ, ಭಕ್ತರ ಅಯಾಚಿತ ಗೌರವ, ತನ್ನ ಮಾತಿನ ಕಿಕ್... ಎಲ್ಲವನ್ನೂ ಆನಂದಿಸತೊಡಗಿದ. ವರ್ಷದ ನಂತರ ರಾಜು ಪೂರ್ಣ ಪ್ರಮಾಣದ ಸ್ವಾಮಿಯಾಗುವ ಕಾಲ ಬಂತು. ‘ಸ್ವಾಮೀಜಿಯಾಗುವುದು ಅವನ ಪಾಲಿಗೆ ಬಂದಿದ್ದರೆ ಆಗಲಿ’ಎಂದು ಅಪ್ಪ ನಿರ್ಲಿಪ್ತನಾದ. ತಾಯಿ ಮಾತ್ರ ‘ಮಗ ಯಾವ ಕಾರಣಕ್ಕೂ ಸ್ವಾಮಿಯಾಗಬಾರದು ಎಂದು ಪಟ್ಟು ಹಿಡಿದಳು. ರಾಮು ಮಠದ ಹಾದಿ ಬಿಟ್ಟು, ಓದಿ, ಕೆಲಸ ಹಿಡಿದು ಸಂಸಾರಿಯಾದ.
ಎರಡನೆಯದು, ರಾಜುವಿನ ಕತೆ: ‘ಮಗ ಧರ್ಮಕಾರ್ಯಕ್ಕೆ ಮುಡಿಪಾಗಿರಲಿ’ ಎಂಬ ನಿಜವಾದ ಶ್ರದ್ಧೆಯಿಂದಲೇ ಅಪ್ಪ ರಾಜುವನ್ನು ಮಠಕ್ಕೆ ಬಿಟ್ಟರು. ಸುಮಾರು ಹತ್ತು ವರ್ಷ ಸ್ವಾಮಿಯಾಗಲು ತಯಾರಾದ ರಾಜುವಿಗೆ ಧರ್ಮ, ಪ್ರವಚನಗಳ ಜೊತೆಜೊತೆಗೆ ಲೋಕದ ವಾಂಛಲ್ಯಗಳೂ ಕಾಡುತ್ತಿದ್ದವು. ಅಕಸ್ಮಾತ್ ಓದಿದ ಪುಸ್ತಕಗಳು, ಕಣ್ಣಿಗೆ ಬಿದ್ದ ಚಿತ್ರಗಳು ಬೇರೆಯ ಲೋಕವನ್ನೇ ಕಾಣಿಸುತ್ತಿದ್ದವು. ರಂಗಭೂಮಿಯ ನಿರ್ದೇಶಕರೊಬ್ಬರ ಮಾತುಗಳಲ್ಲಿದ್ದ ಜೀವಂತಿಕೆ ರಾಜುವನ್ನು ಹೆಚ್ಚು ಸೆಳೆಯತೊಡಗಿತು. ಸ್ವಾಮಿಯಾಗುವ ಗೊಡವೆ ಬಿಟ್ಟು ಓದು ಮುಂದುವರಿಸಿದ. ರಂಗಭೂಮಿಗೆ ಹೊರಳಿದ; ‘ಇಲ್ಲಿನ ಏಳು ಬೀಳುಗಳು ಏನೇ ಇದ್ದರೂ ಕಲೆಯ ಲೋಕದಲ್ಲೇ ಆರಾಮಾಗಿರುವೆ’ ಎನ್ನುತ್ತಾನೆ ರಾಜು.
ಮತ್ತೊಬ್ಬ ಗೆಳೆಯ ಚೆನ್ನಪ್ಪನನ್ನು ಬಡತನದ ಕಾರಣದಿಂದ ಮನೆಯವರು ಸ್ವಾಮಿಯಾಗಲು ಮಠವೊಂದಕ್ಕೆ ಸೇರಿಸಿದರು. ಚೆನ್ನಪ್ಪ ಒಂದು ದಿನ ಮಠ ಬಿಟ್ಟು ಓಡಿ ಹೋಗಿ ಕಾಲೇಜು ಸೇರಿಕೊಂಡ; ಮುಂದೆ ಮೇಷ್ಟರೂ ಆದ.
ಈ ಕತೆಗಳೆಲ್ಲ ನಮಗೆ ಪರಿಚಿತವೇ. ಇವರಂತೆ ಧಾರ್ಮಿಕ ಆವರಣದಿಂದ ಓಡಿ ಹೋಗದೆ, ಅದೇ ಆವರಣದಲ್ಲಿದ್ದು ಅರ್ಥಪೂರ್ಣ ಕೆಲಸ ಮಾಡಿಕೊಂಡಿರುವವರೂ ಇದ್ದಾರೆ. ವಿದ್ವಾಂಸರೂ, ಜ್ಞಾನಿಗಳೂ ಆಗಿ ವಿಕಾಸಗೊಂಡವರಿದ್ದಾರೆ; ಎಲ್ಲ ವಲಯಗಳಂತೆ ಇಲ್ಲೂ ಲೋಕಕಂಟಕರೂ ಇದ್ದಾರೆ! ಆದರೂ ಹನಿಟ್ರ‍್ಯಾಪ್, ಪೋಕ್ಸೋ ಪ್ರಕರಣ ಮುಂತಾದವು ಶುರುವಾದ ಮೇಲೆ ಸ್ವಾಮೀಜಿಗಳ ಆತ್ಮಹತ್ಯೆ, ಬಂಧನಗಳ ಪ್ರಕರಣಗಳೂ ಶುರುವಾಗಿವೆ; ಅವರ ಭಕ್ತರು ಕೂಡ ಈ ರೋಚಕ ಸುದ್ದಿಗಳನ್ನು ಜಗಿಯತ್ತಿರುತ್ತಾರೆ ಅಥವಾ ಚಣ ಬೆಚ್ಚುತ್ತಾರೆ; ಆದರೆ ಇದಕ್ಕೆ ಪರಿಹಾರ ಹುಡುಕುವ ಕಾಳಜಿ ತೋರುವವರು ಮಾತ್ರ ಕಡಿಮೆ. ಸಾಮಾನ್ಯವಾಗಿ ಯಾವ ವಲಯಗಳು ಸಮಸ್ಯೆ ಎದುರಿಸುತ್ತವೆಯೋ ಅವು ಆ ಸಮಸ್ಯೆಯನ್ನು ಚರ್ಚಿಸಿದಾಗ ಮಾತ್ರ ಆ ಚರ್ಚೆಗೆ ಅಧಿಕೃತತೆ ಬರುತ್ತದೆ. ಆದರೆ ಎಲ್ಲವನ್ನೂ ಸಾರ್ವಜನಿಕ ಭಾಷೆಯಲ್ಲೇ ಮಾತಾಡಬೇಕಾದ ನೈತಿಕ ಒತ್ತಡವಿರುವ ಧರ್ಮಗುರುಗಳ ವಲಯದಲ್ಲಿ ಈ ಮಾತನ್ನು ಕೊನೆಯ ಪಕ್ಷ ಚರ್ಚಿಸಲಾದರೂ ತಕ್ಕ ಭಾಷೆಯಾಗಲೀ, ಅವಕಾಶವಾಗಲೀ ಇದ್ದಂತಿಲ್ಲ.
ಈ ನಡುವೆ ಸಮಾಜದ ಇತರ ವಲಯಗಳಲ್ಲಿನ ಬಲಾಢ್ಯರು ತಾವು ಮಾಡಿದ ಅನಾಚಾರಗಳನ್ನು ದಕ್ಕಿಸಿಕೊಳ್ಳುವಂತೆ ಧಾರ್ಮಿಕ ವಲಯದ ಬಲಾಢ್ಯರು ಕೂಡ ತಮ್ಮ ದುರಾಚಾರಗಳನ್ನು ದಕ್ಕಿಸಿಕೊಳ್ಳುವಷ್ಟು ಪ್ರಭಾವಿಗಳಾಗಿದ್ದಾರೆ. ಅಂಥವರು ತಮ್ಮ ಬಲಿಪಶುಗಳನ್ನೇ ಆತ್ಮಹತ್ಯೆಗೆ ತಳ್ಳುತ್ತಿರುತ್ತಾರೆ. ಕೆಲವರ ವಿಚಾರಣೆಯಿಂದ ನ್ಯಾಯಮೂರ್ತಿಗಳೇ ಹಿಂಜರಿದ ಪ್ರಸಂಗಗಳಿವೆ. ಇಂಥ ಬಲಾಢ್ಯರ ಬಗ್ಗೆ ಕೂಗುಮಾರಿ ಮಾಧ್ಯಮಗಳು ಸೊಲ್ಲೆತ್ತುವುದಿಲ್ಲ; ಆದರೆ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ, ಅಷ್ಟಿಷ್ಟು ಅಳುಕಿನ ಸ್ವಾಮಿಗಳು ಮಾತ್ರ ಮಾಧ್ಯಮಗಳ ಹಲ್ಲಿಗೆ ಸಿಕ್ಕಿ ಬೀಳುತ್ತಾರೆ.
ಇವೆಲ್ಲವನ್ನೂ ಚರ್ಚೆಗೆ ತಂದಿರುವ ಉದ್ದೇಶವಿಷ್ಟೆ: ಧರ್ಮಗುರು ಎನ್ನಿಸಿಕೊಂಡ ವ್ಯಕ್ತಿ ಕೂಡ ಮೂಳೆ ಮಾಂಸಗಳ ಮನುಷ್ಯ ಎಂಬುದನ್ನು ಕ್ಷಿಪ್ರ ಮಾಧ್ಯಮ ಸಂಸ್ಕೃತಿಯ ಮಂಪರಿನಲ್ಲಿ ನಾವು ಮರೆತಿದ್ದೇವೆ. ಧರ್ಮಗುರು ಕೂಡ ಸಾಮಾನ್ಯರು ಮಾಡುವ ಸರಿ, ತಪ್ಪುಗಳನ್ನು ಮಾಡುತ್ತಿರುತ್ತಾನೆ. ಪರಮ ಅಧಿಕಾರವಿರುವಂತೆ ಕಾಣುವ ಈತನಿಗೂ ಮಠೀಯ ವ್ಯವಸ್ಥೆಯಲ್ಲಿ ಬಿಕ್ಕಟ್ಟುಗಳು ಸೃಷ್ಟಿಯಾಗುತ್ತಿರುತ್ತವೆ. ಈತನ ಕುರ್ಚಿಯೂ ಅಲುಗಾಡುತ್ತಿರುತ್ತದೆ. ಧಾರ್ಮಿಕ ಸಂಸ್ಥೆಗಳಿಗೆ ಹರಿದು ಬರುವ ಹಣದ ವಾರಸುದಾರರಿಂದಾಗಿ ಅವು ಅಧಿಕಾರದ ತಿಕ್ಕಾಟದ ರಣರಂಗಗಳಾಗತೊಡಗುತ್ತವೆ.
ಈ ನಡುವೆ ಎಲ್ಲ ಹುಲುಮಾನವರಂತೆ ಧರ್ಮಗುರುವಿಗೆ ಕೂಡ ವಾಂಚಲ್ಯಗಳಿರುತ್ತವೆ; ಅದುಮಿಟ್ಟ ಪ್ರೇಮ, ಕಾಮಗಳು ಸ್ಫೋಟಗೊಳ್ಳುತ್ತಿರುತ್ತವೆ. ಅವು ಇನ್ನೊಬ್ಬರ ಬದುಕಿಗೆ ಧಕ್ಕೆ ತಂದಾಗ ಮಾತ್ರ ಅವಕ್ಕೂ ಸಮಾಜಕ್ಕೂ ಸಂಬಂಧವಿರಬಲ್ಲದೇ ಹೊರತು, ಸ್ವಾಮೀಜಿಯೊಬ್ಬ ಜಿತೇಂದ್ರಿಯನಾಗಿರಲೇಬೇಕು ಎಂದು ಇತರರು ಕಿರುಚುವುದು ಬರ್ಬರವಾಗಿರಬಲ್ಲದು.
ಧರ್ಮಗುರುಗಳ, ಸ್ವಾಮಿಗಳ ಲೋಕದ ಸಂಕೀರ್ಣತೆ ಹೆಚ್ಚು ನನ್ನ ಅರಿವಿಗೆ ಬರತೊಡಗಿದ್ದು ನನ್ನ ಕಾದಂಬರಿ ’ಕಾಮನ ಹುಣ್ಣಿಮೆ’ಯಲ್ಲಿ (ಪಲ್ಲವ ಪ್ರಕಾಶನ) ಸ್ವಾಮೀಜಿಯ ಪಾತ್ರವೊಂದು ತಂತಾನೇ ಸೃಷ್ಟಿಯಾದಾಗ; ಏಳೆಂಟು ವರ್ಷ ಕಾಲ ಬರೆದ ಈ ಕಾದಂಬರಿಯೊಳಕ್ಕೆ ಯಾವುದೋ ಗಳಿಗೆಯಲ್ಲಿ ಸ್ವಾಮೀಜಿಯ ಪಾತ್ರ ಪ್ರವೇಶಿಸಿತು. ಕಾದಂಬರಿ ಬರೆಯುತ್ತಾ ಹೋದಂತೆ ಸ್ವಾಮೀಜಿಯ ಪಾತ್ರ ನನ್ನ ಪ್ರಿಯ ಪಾತ್ರಗಳಲ್ಲೊಂದಾಯಿತು. ಸ್ವಾಮೀಜಿಯೊಬ್ಬ ನಮ್ಮಂತೆಯೇ ಓದು ಬರಹ, ಕೆಲಸ ಮಾಡುವ ವ್ಯಕ್ತಿ; ಅಥವಾ ನಮ್ಮಂತೆಯೇ ಸೋಲಬಲ್ಲ, ದಿಟ್ಟನಾಗಿ ನಿಲ್ಲಬಲ್ಲ ವ್ಯಕ್ತಿ ಎಂಬ ಸತ್ಯವನ್ನು ಬರವಣಿಗೆಯ ಅಪ್ರಜ್ಞಾಪೂರ್ವಕ ಪ್ರಕ್ರಿಯೆಯೇ ನನಗೆ ಹೇಳಿಕೊಡತೊಡಗಿತು.
ಆದರೂ ಧರ್ಮದೊಳಗೆ ಸೆರೆಯಾದವರ ಅದುಮಿಟ್ಟ ವಾಂಛಲ್ಯಗಳ ಲೋಕ ನನಗೆ ಇನ್ನಷ್ಟು ಚೆನ್ನಾಗಿ ಅರ್ಥವಾಗತೊಡಗಿದ್ದು ಈಚೆಗೆ ರೂಸೋನ ನಿವೇದನೆಗಳನ್ನು, ‘ದ ಸ್ಕಾರ್ಲೆಟ್ ಲೆಟರ್’ ಕಾದಂಬರಿಯ ಧರ್ಮಗುರುವಿನ ತೊಳಲಾಟಗಳನ್ನು ಓದಿದಾಗ. ಎಷ್ಟೋ ಸಲ ನಾವು ಕಣ್ಣಾರೆ ಕಂಡಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ ಎಂದುಕೊಳ್ಳುವ ನಿಜಜೀವನದ ವ್ಯಕ್ತಿಗಳು ನಮ್ಮ ಬರವಣಿಗೆಯ ಪ್ರಕ್ರಿಯೆಯಲ್ಲಿ ಅಥವಾ ಮತ್ತೊಬ್ಬರ ಬರವಣಿಗೆಯಲ್ಲಿ ನಮಗೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗತೊಡಗುತ್ತಾರೆ. ಕಾರಣ, ನಾವು ಆಳವಾಗಿ ತೊಡಗಿ ಮಾಡುವ ಓದು, ಬರವಣಿಗೆಗಳು ಲೋಕದ ಎಲ್ಲ ಬಗೆಯ ಪಾತ್ರಗಳನ್ನು ಗಾಢ ಅನುಕಂಪದಿಂದ ಅರ್ಥ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ.
ಆದರೆ ತೆರೆಯುಗದ ವಾಚಾಳಿ ಸಮಾಜದ ಚೀರಾಟದಲ್ಲಿ ಇತರರನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವೇ ಕಣ್ಮರೆಯಾಗತೊಡಗಿದೆ; ವರ್ಷಗಟ್ಟಲೆ ಧ್ಯಾನಿಸಿ ಬರೆದ ಸಾಹಿತ್ಯ ಕೃತಿಗಳ ಮೂಲಕ ನಮ್ಮ ಸುತ್ತಣ ಗಂಡು, ಹೆಣ್ಣುಗಳ ಸಂಕೀರ್ಣ ಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಮಾಯವಾಗತೊಡಗಿದೆ; ಛಕಛಕ ಬೆರಳಿನಾಟದ ಮೊಬೈಲ್ ಸ್ಕ್ರೀನ್‌ನಲ್ಲಿ ಕೂಡ ರೂಸೋ ನಿವೇದನೆ, ‘ದ ಸ್ಕಾರ್ಲೆಟ್ ಲೆಟರ್’ ಕಾದಂಬರಿ ಎಲ್ಲವೂ ಸಿಗುತ್ತವೆ. ಆದರೆ ಅವನ್ನು ಓದಲಾಗದಂಥ, ಓದಬಾರದಂಥ, ಧಾವಂತವನ್ನು ತೆರೆಯ ಮೇಲಿನ ಇನ್ನಿತರ ‘ಸ್ಟೋರಿ’ಗಳು ಸೃಷ್ಟಿಸುತ್ತಿರುತ್ತವೆ. ಆದ್ದರಿಂದಲೇ ಸ್ವಾಮೀಜಿಯೊಬ್ಬನ ಬ್ರೇಕಿಂಗ್ ಸ್ಟೋರಿಯನ್ನು ಚೀರುವವನ ಜೊತೆಗೆ ನೋಡುಗರ ಕೊರಳು, ಬೆರಳುಗಳೂ ಅವರಿಗೆ ಅರಿವಿಲ್ಲದೆಯೇ ಸೇರಿಕೊಳ್ಳತೊಡಗುತ್ತವೆ.
ಇಂಥ ಅರ್ಥಹೀನ ಧಾವಂತದಲ್ಲಿ ಸುತ್ತಣ ಜನರಿರಲಿ, ಸ್ವತಃ ನಾವೇ ಏಕೆ ಹೀಗೆ ರಕ್ತದೊತ್ತಡ ಏರಿದವರಂತೆ ಏನನ್ನೋ ಬಡಬಡಿಸುತ್ತಿದ್ದೇವೆ, ಬರೆಯುತ್ತಿದ್ದೇವೆ ಎಂಬುದು ಕೂಡ ನಮಗೆ ಅರ್ಥವಾಗುವುದಿಲ್ಲ. ಇನ್ನು ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಅಥವಾ ‘ಸ್ಕಾರ್ಲೆಟ್ ಲೆಟರ್’ ಥರದ ಸಾಹಿತ್ಯ ಕೃತಿಗಳ ಮೂಲಕ ಮೈಮನಗಳ ಕಷ್ಟ ಸುಖಗಳನ್ನು ಅರಿಯಬಲ್ಲ ಗಾಢ ಅನುಕಂಪ ಎಲ್ಲಿಂದ ತಾನೇ ಹುಟ್ಟೀತು!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
'ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಗುಂಗಿನಲ್ಲಿದ್ದ ಆ ಓದುಗ, ಓದುಗಿಯರು ಮುಗ್ಧತೆಯ ಮ್ಯೂಸಿಯಂನಿಂದ ಹೊರ ಹೋಗಲು ಸಿದ್ಧವೇ ಇರಲಿಲ್ಲ! ಕಳೆದ ವಾರ ಈ ಅಂಕಣದಲ್ಲಿ ಪ್ರಕಟವಾದ ‘ಕಾದಂಬರಿ, ಮ್ಯೂಸಿಯಂ ಮತ್ತು ಮುಗ್ಧತೆ’ READ HERE ಬರೆದವನಿಗಂತೂ ಆ ಮಂಪರಿನಿಂದ ಹೊರ ಬರುವ ತುರ್ತೂ ಇರಲಿಲ್ಲ, ಇರಾದೆಯೂ ಇರಲಿಲ್ಲ! ಅತ್ತ ಇಸ್ತಾನ್‌ಬುಲ್‌ನ ಒರಾನ್ ಪಾಮುಕ್ ೨೦೦೮ರಲ್ಲಿ 'ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಬರೆದು, ೨೦೧೨ರಲ್ಲಿ 'ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಸಂಗ್ರಹಾಲಯ ಮಾಡಿದ ಮೇಲೂ ಮುಗ್ಧತೆಯ ಗುಂಗಿನಲ್ಲೇ ಇದ್ದ; ಮ್ಯೂಸಿಯಂ ಕ್ಯಾಟಲಾಗ್ ಬರೆವ ನೆಪದಲ್ಲಿ ‘ಇನ್ನೊಸೆನ್ಸ್ ಆಫ್ ಆಬ್ಜೆಕ್ಸ್ಟ್’ ಪುಸ್ತಕ ಬರೆದ; ಅಲ್ಲಿ ಮುಗ್ಧತೆಯ ಇನ್ನಷ್ಟು ಹೊಸ ವ್ಯಾಖ್ಯಾನಗಳಿದ್ದವು!
ಪಾಮುಕ್ ಇದೇ ಲಹರಿಯಲ್ಲಿದ್ದಾಗ ಸಿನಿಮಾ ನಿರ್ದೇಶಕ ಗ್ರಾಂಟ್ ಗೀ ಇಸ್ತಾನ್‌ಬುಲ್ ನಗರಕ್ಕೆ ಬಂದು ಮ್ಯೂಸಿಯಂ ನೋಡಿ ಬೆರಗಾದ; `ಇನ್ನೊಸೆನ್ಸ್ ಆಫ್ ಮೆಮೊರೀಸ್’ ಎಂಬ ಸಿನಿಮಾ ಮಾಡಲು ಹೊರಟ. ಈ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆಯಲು ಗೀ ಜೊತೆ ಸೇರಿಕೊಂಡ ಪಾಮುಕ್ ಅವನ ಜೊತೆ ಹಲವು ರಾತ್ರಿ ಇಸ್ತಾನ್‌ಬುಲ್ ಸುತ್ತಿದ. ಹೀಗೆ ಸುತ್ತಿ ಸುಳಿದು ‘ಎ ಸ್ಟ್ರೇಂಜ್‌ನೆಸ್ ಇನ್ ಮೈ ಮೈಂಡ್’ ಕಾದಂಬರಿ ಬರೆದ!
ಈ ರಾತ್ರಿಗಳ ಅಡ್ಡಾಟದಲ್ಲಿ ಹಲವು ಫಿಲಸಾಫಿಕಲ್ ಪ್ರಶ್ನೆಗಳು ಪಾಮುಕ್‌ಗೆ ಎದುರಾದವು: ‘ಈ ನಗರದಲ್ಲಿ ನಾವು ಸುಂದರವಾದ ಏನೋ ಒಂದನ್ನು ನೋಡುತ್ತಿರುವಾಗ ಅಲ್ಲಿ ಕಾಣುವ ಸೌಂದರ್ಯ ಆ ವಸ್ತುವಿನಲ್ಲಿದೆಯೋ? ಅಥವಾ ಆ ಸೌಂದರ್‍ಯ ನಮ್ಮ ನಾಸ್ಟಾಲ್ಜಿಯಾದಲ್ಲಿ-ಹಿಂದಣ ನೆನಪಿನ ವಿಷಾದಮಯ ಮಧುರ ಯಾತನೆಯಲ್ಲಿ- ಇದೆಯೋ? ...ಹೀಗೆ ಯೋಚಿಸುತ್ತಾ ನಮ್ಮ ಸುತ್ತಣ ಇರುವ ಪ್ರತಿ ವಸ್ತುವಿನಲ್ಲೂ ಒಂದು ಕತೆಯಿದೆ ಎಂಬುದು ಪಾಮುಕ್‌ಗೆ ಮನವರಿಕೆಯಾಯಿತು: ‘ಮ್ಯೂಸಿಯಂ ಎನ್ನುವುದು ರಾಜರ ಚರಿತ್ರೆಯ, ರಾಷ್ಟ್ರದ ಚರಿತ್ರೆಯ ಸಂಗ್ರಹಾಲಯವಾಗಬಾರದು; ಅಲ್ಲಿ ಆಧುನಿಕ ಕಾದಂಬರಿಯಂತೆ ಸಾಮಾನ್ಯ ಮನುಷ್ಯರ ಬದುಕು, ಹಾಗೂ ಅವರ ವಸ್ತುಗಳನ್ನು ಜೋಡಿಸಿಡಬೇಕು’ ಎನ್ನಿಸಿತು.
‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಬರೆಯಲು, ಅದರ ಜೊತೆಗೆ ಕಾದಂಬರಿಯ ಕಥಾನಾಯಕ ಕೇಮಲ್ ಮಾಡಿದಂಥ ಮ್ಯೂಸಿಯಂ ಮಾಡಲು ವಸ್ತುಗಳನ್ನು ಸಂಗ್ರಹಿಸಲು ಅಡ್ಡಾಡಿದ ಅನುಭವ ಕುರಿತು ಪಾಮುಕ್ ಬರೆಯುತ್ತಾನೆ: ‘ಸೇದಿ ಬಿಟ್ಟ ಸಿಗರೇಟ್ ತುಂಡುಗಳು, ಆಶ್ ಟ್ರೇಗಳು, ಮಾತ್ರೆಯ ಡಬ್ಬಿಗಳು , ಐಡೆಂಟಿಟಿ ಕಾರ್ಡುಗಳು, ಪಾಸ್‌ಪೋರ್‍ಟ್ ಫೋಟೋಗಳು… ಇವನ್ನೆಲ್ಲ ಕಲೆಕ್ಟ್ ಮಾಡುತ್ತಾ ನನಗೆ ಹೊಳೆಯಿತು: ‘ಕಾದಂಬರಿ ಬರೆಯಲು ವಾಸ್ತವಾಂಶಗಳನ್ನು, ಕತೆಗಳನ್ನು ಕಲೆಕ್ಟ್ ಮಾಡುವುದು ಮ್ಯೂಸಿಯಂಗೆ ವಸ್ತುಗಳನ್ನು ಸಂಗ್ರಹಿಸುವುದಕ್ಕಿಂತ ಭಿನ್ನವಲ್ಲ.’
‘ಕಾದಂಬರಿ ಬರೆಯುವಾಗ ಮ್ಯೂಸಿಯಂ ಕುರಿತು ಯೋಚಿಸುತ್ತಿದ್ದೆ; ಮ್ಯೂಸಿಯಂ ಮಾಡುವಾಗ ಕಾದಂಬರಿ ಕುರಿತು ಯೋಚಿಸುತ್ತಿದ್ದೆ’ ಎನ್ನುವ ಪಾಮುಕ್, ಮ್ಯೂಸಿಯಂನಲ್ಲಿರುವ ಒಂದೊಂದು ವಸ್ತುವಿನ ಮೂಲಕವೂ ಕತೆ ಹೇಳುವ ತಂತ್ರ ಬಳಸಲು ಯೋಚಿಸಿದ್ದ; ಆದರೆ ಅದು ಕೈಗೂಡಲಿಲ್ಲ. ಕಾದಂಬರಿಯ ವಸ್ತುವೇ ತನ್ನ ತಂತ್ರವನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂದು ಇಂಗ್ಲಿಷ್ ನವ್ಯ ವಿಮರ್ಶೆ ಹಾಗೂ ಕನ್ನಡ ನವ್ಯ ವಿಮರ್ಶೆಗಳು ಹೇಳಿದ್ದು ಕರಾರುವಾಕ್ಕಾಗಿದೆ!
ಅದಿರಲಿ. ಪಾಮುಕ್ ಕಾದಂಬರಿ ಹಾಗೂ ಮ್ಯೂಸಿಯಮ್ಮಿನ ಮುಗ್ಧತೆಯ ಸ್ವರೂಪ ಕುರಿತು ಕನ್ನಡದ ವಿಶಿಷ್ಟ ಲೇಖಕ, ಲೇಖಕಿಯರು ಕಳೆದ ವಾರ ಮಾಡಿದ ಕಾಮೆಂಟುಗಳಲ್ಲಿ ಮುಗ್ಧತೆಯ ಕಲ್ಪನೆಯನ್ನು ವಿಸ್ತರಿಸಿದ ಕ್ರಮ ಅನನ್ಯವಾಗಿದೆ. ಅಂಥ ಕೆಲವು ಬರಹಗಳು ಕಳೆದ ವಾರದ ಅಂಕಣದ ಕಾಮೆಂಟ್ ವಿಭಾಗದಲ್ಲಿವೆ: READ HERE
ಈ ಬಗೆಯ ತೀವ್ರ ಸ್ಪಂದನಗಳನ್ನು ನಾನು ‘ಪ್ರತಿಕ್ರಿಯೆ’ ಎನ್ನದೆ ‘ಸಹ-ಬರವಣಿಗೆ’ ಎನ್ನುತ್ತೇನೆ. ಈ ವೆಬ್‌ಸೈಟ್ ಹಾಗೂ ಅಂಕಣ ಶುರುವಾದಾಗಿನಿಂದಲೂ ನಾನು ಇದು ಸಾಹಿತ್ಯ, ಸಂಸ್ಕೃತಿಗಳ ಸಹಪಯಣಿಗರ ‘ಕಲೆಕ್ಟೀವ್ ಹುಡುಕಾಟ’ ಎಂದೇ ನಂಬಿ ಬರೆಯುತ್ತಾ, ಹಲವರಿಂದ ಕಲಿಯುತ್ತಾ ಬಂದಿರುವೆ.
ಗೆಳೆಯರಾದ ಬಂಜಗೆರೆ ಜಯಪ್ರಕಾಶ್, ಗುಂಡಣ್ಣ ಚಿಕ್ಕಮಗಳೂರು, ಚಂದ್ರಶೇಖರ ತಾಳ್ಯ- ಮೂವರೂ ವಿಭಿನ್ನ ಧಾರೆಯ ಲೇಖಕ-ಬುದ್ಧಿಜೀವಿಗಳು. ಬಂಜಗೆರೆ ಹಾಗೂ ಗುಂಡಣ್ಣ ಮಾರ್ಕ್ಸಿಸ್ಟ್ ಸಿದ್ಧಾಂತವನ್ನು ಹೆಚ್ಚು ಒಪ್ಪಿದವರು. ಚಂದ್ರಶೇಖರ ತಾಳ್ಯ ಕವಿ ಹಾಗೂ ಪ್ರಗತಿಪರ ಧಾರೆಗಳನ್ನು ಒಪ್ಪಿದ ಚಿಂತಕ. ಈ ಮೂವರೂ ತಾವು ಕಂಡ ಮಗ್ಧತೆಯ ಲೋಕಗಳನ್ನು ಕುರಿತು ಬರೆದಿದ್ದಾರೆ. ಬಂಜಗೆರೆ ಹುಡುಕಿದ ಭಾರತೀಯ ಕಾದಂಬರಿಗಳು, ಸಿನಿಮಾಗಳವರೆಗಿನ ಪ್ರೇಮಲೋಕ; ಮಗ ಶಶಾಂಕನ ವಸ್ತುಗಳ ಬಗ್ಗೆ ಗುಂಡಣ್ಣನವರ ಎದೆಯ ದನಿ; ಸಲೀಂ-ಅನಾರ್ಕಲಿ, ದೇವದಾಸ್, ಅಮೃತಾ ಪ್ರೀತಂವರೆಗೂ ಕೈ ಚಾಚಿದ ಕವಿ ಚಂದ್ರಶೇಖರ ತಾಳ್ಯ…
ಈ ಪಟ್ಟಿ ಬೆಳೆಯುತ್ತದೆ… ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಮೂಲಕ ಹಬ್ಬಿದ ಮುಗ್ಧತೆಯ ಲೋಕ ಕಂಡು ಭಾವಪರವಶರಾದ ಕೆ. ಪುಟ್ಟಸ್ವಾಮಿ ಸಿನಿಮಾ ಚರಿತ್ರಕಾರರು, ವಿಜ್ಞಾನ ಬರಹಗಾರರು. ಕ್ಲಾಸ್ ರೂಮಿನಲ್ಲಿ ಮುಗ್ಧತೆಯ ಹುಡುಕಾಟ ನಡೆಸಿರುವ ಮಂಜುನಾಥ ನೆಟ್ಕಲ್, ಶಿವಲಿಂಗೇಗೌಡ ನನ್ನ ಎಂ.ಎ. ವಿದ್ಯಾರ್ಥಿಗಳಾಗಿದ್ದವರು; ಈಗ ಕನ್ನಡ ಅಧ್ಯಾಪಕರು. ಮ್ಯೂಸಿಯಮ್ಮಿನ ಮುಗ್ಧತೆಗೆ ಮನಸೋತವರಲ್ಲಿ ಮೂವರು ಕನ್ನಡದ ಪ್ರಖರ ಸ್ತ್ರೀವಾದಿ ಚಿಂತಕಿಯರು. ಶೂದ್ರ ಶ್ರೀನಿವಾಸ್ ಹಲಬಗೆಯ ಚಿಂತನೆಗಳ ವೇದಿಕೆಯಾಗಿದ್ದ ‘ಶೂದ್ರ’ ಮಾಸಪತ್ರಿಕೆ ನಡೆಸಿದವರು; ಕತೆಗಾರರು… ಎ.ಎಸ್. ಪ್ರಭಾಕರ್ ವಿಶಿಷ್ಟ ಸಮಾಜ ವಿಜ್ಞಾನಿ; ಹಿರಿಯರಾದ ಬಿ.ಸಿ. ಪ್ರಭಾಕರ್ ಫಿಸಿಕ್ಸ್ ಪ್ರೊಫೆಸರ್.; ಹರಿಹರದ ಗುರುಪ್ರಸಾದ್ ವಿಶಿಷ್ಟ ಸಾಹಿತ್ಯಜೀವಿ, ನಿರಂಜನ್ ಇಂಗ್ಲಿಷ್ ಪ್ರೊಫೆಸರ್, ಡಾಮಿನಿಕ್ ಕನ್ನಡ ಪ್ರೊಫೆಸರ್…
ಇದು ವಂದನಾರ್ಪಣೆಯ ಪಟ್ಟಿಯಲ್ಲ! ನಮ್ಮ ಈ ಕಾಲದಲ್ಲಿ ಮುಗ್ಧತೆಯ ಹುಡುಕಾಟ ಎಲ್ಲ ವಲಯಗಳಲ್ಲೂ ನಡೆಯುತ್ತಿರುತ್ತಿದೆ; ಇದು ಎಂದೂ ಬತ್ತದ ಒರತೆ ಎಂಬ ಸಂಭ್ರಮವನ್ನು ಹಂಚಿಕೊಳ್ಳಲು ಈ ಕೆಲವು ಹೆಸರುಗಳನ್ನು ಉಲ್ಲೇಖಿಸಿರುವೆ. ಕನ್ನಡ ಪ್ರಗತಿಪರ ವಲಯದ ಈ ಎಲ್ಲರೂ ಒರಾನ್ ಪಾಮುಕ್ ಕೊಟ್ಟ ಮ್ಯೂಸಿಯಮ್ಮಿನ ಮುಗ್ಧತೆಯ ಹೊಸ ರೂಪಕ ಕಂಡು ರೋಮಾಂಚನಗೊಂಡವರು; ಗೆಳೆಯ, ಗೆಳತಿಯರ ಆಪ್ತ ಲೋಕದಲ್ಲಿ ಶುರುವಾದ ಮುಗ್ಧತೆಯ ಮರು ಹುಡುಕಾಟ ಕಂಡು ಮುಗ್ಧತೆಯ ಹುಡುಕಾಟದ ಇನ್ನಷ್ಟು ಚರ್ಚೆಗಳತ್ತ ತಿರುಗಿದೆ.
ಮನೋವಿಜ್ಞಾನಿ ರೋಲೋ ಮೇ ಹೇಳುವ ಎರಡು ಬಗೆಯ ಮುಗ್ಧತೆಗಳನ್ನು ಅಶೀಶ್ ನಂದಿ ಉಲ್ಲೇಖಿಸುತ್ತಾರೆ; ಈ ಬಗ್ಗೆ ನನ್ನ ಇನ್ನಿತರ ಪುಸ್ತಕಗಳಲ್ಲಿ ಚರ್ಚಿಸಿರುವೆ: ಒಂದು, ನಿಜ ಮುಗ್ಧತೆ (ಅಥೆಂಟಿಕ್ ಇನ್ನೊಸೆನ್ಸ್). ಮತ್ತೊಂದು, ಭೋಳೆ ಮುಗ್ಧತೆ (ಸ್ಯೂಡೋ ಇನ್ನೊಸೆನ್ಸ್). ರೋಲೋ ಮೇ ಪ್ರಕಾರ, ನಿಜ ಮುಗ್ಧತೆಗೆ ಕೇಡಿನ ಅರಿವಿರುತ್ತದೆ; ಭೋಳೆ ಮುಗ್ಧತೆ ಕೇಡನ್ನು ಅರಿಯದೆ ಅಥವಾ ಕಡೆಗಣಿಸಿ ಮುಂದೆ ಸಾಗುತ್ತದೆ.
ಮಾನವರ ಒಳಿತಿನ ಶಕ್ತಿಯಲ್ಲಿ, ಅವರೊಳಗಿನ ಒಳಿತನ್ನು ಹೊರ ತರುವುದರಲ್ಲಿ, ನಂಬಿಕೆಯಿದ್ದ ಗಾಂಧೀಜಿಗೆ ವಸಾಹತುಕಾರ ವ್ಯವಸ್ಥೆ ಸೃಷ್ಟಿಸುವ ಕೇಡಿನ ಸಂಪೂರ್ಣ ಅರಿವಿತ್ತು. ಕೇಡಿನ ವ್ಯಾಪಕ ಸ್ವರೂಪ ಕಂಡು ಅದನ್ನು ಬದಲಿಸಲು ಹೋರಾಡಿದ ಅಂಬೇಡ್ಕರ್, ಲೋಹಿಯಾ ಥರದವರಲ್ಲಿ ಕಾಣುವ ಪ್ರಖರ ಬೌದ್ಧಿಕತೆ ಹಾಗೂ ತೀಕ್ಷ್ಣ ವಿಮರ್ಶಾತ್ಮಕ ನೋಟದ ನಂತರ ಚಿಮ್ಮುವ ನಿಜ ಮುಗ್ಧತೆಯ ಸ್ವರೂಪವೇ ಬೇರೆ! ಅದು ಒಂದು ಬೃಹತ್ ಥೀಸಿಸ್ ಬರೆಯುವಂಥ ವಿಸ್ತೃತ ವಲಯ!
ಆದರೆ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಈ ಎರಡೂ ಮುಗ್ಧತೆಗಳಿಗಿಂತ ಭಿನ್ನವಾದ, ನಮ್ಮೊಳಗೆ ಹುದುಗಿರುವ, ಯಾವ ವೈಚಾರಿಕ ವ್ಯಾಖ್ಯಾನಕ್ಕೂ ಸಿಕ್ಕದ ಕೋಮಲ ಮುಗ್ದತೆ. ಇದನ್ನು ರೊಮ್ಯಾಂಟಿಕ್ ಮುಗ್ಧತೆ ಎನ್ನುವುದು ಕೂಡ ಸೀಮಿತವಾಗಿಬಿಡುತ್ತದೆ. ‘ಸಾಹಿತ್ಯ ಅಥವಾ ಕಲೆಗೆ ಮಾತ್ರ ಈ ಮುಗ್ಧತೆಯನ್ನು ಕಾಯಮ್ಮಾಗಿ ರಕ್ಷಿಸುವ, ಆದರ್ಶವಾಗಿ ಬಿಂಬಿಸುವ ಸಾಧ್ಯತೆಯಿದೆ’ ಎಂದರೆ, ‘ಇದು ರೊಮ್ಯಾಂಟಿಕ್’ ಎಂದು ಮೂಗು ಮುರಿಯುವವರು ಇರಬಹುದು. ಆದರೂ ಉಛಾಯಿಸಿ ಹೇಳಿಯೇ ಬಿಡುವೆ: ‘ನೋಡಿ! ಕೊನೆಗೂ ಈ ಕೆಳಕಂಡವರೆಲ್ಲ ನಮಗೆ ಸಿಕ್ಕುವುದು ಸಾಹಿತ್ಯದಲ್ಲೇ’:
ಬೇಂದ್ರೆ ಹಾಗೂ ಕುವೆಂಪು ಕಾವ್ಯದ ನೂರಾರು ಕಣ್ಣುಗಳು, ಪಾತ್ರಗಳು; ಸೀತೆ-ಹೂವಯ್ಯ, ಗುತ್ತಿ (ಕುವೆಂಪು: ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು); ಸರಸ್ವತಿ (ಶಿವರಾಮ ಕಾರಂತ: ಮರಳಿ ಮಣ್ಣಿಗೆ); ವೆಂಕಟಶಾಮಿ (ಮಾಸ್ತಿ: ವೆಂಕಟಶಾಮಿಯ ಪ್ರಣಯ); ಅಪ್ಪು, ಚಿರಕುಂಡ (ನಿರಂಜನ: ಚಿರಸ್ಮರಣೆ); ಮಂದಣ್ಣ-ಕರ್ವಾಲೋ (ತೇಜಸ್ವಿ: ಕರ್ವಾಲೋ); ಸಾಕವ್ವ, ಪುಟಗೌರಿ; ಕುಸುಮ- ಚೆನ್ನ (ಕೇರಾಫ್ ದೇವನೂರು: ಒಡಲಾಳ, ಕುಸುಮಬಾಲೆ); ದೇವದಾಸ್ (ಶರತ್ ಚಂದ್ರ ಚಟ್ಟೋಪಾಧ್ಯಾಯ/ಅಕ್ಕಿನೇನಿ ನಾಗೇಶ್ವರರಾವ್/ ಶಾರೂಖ್ ಖಾನ್: ದೇವದಾಸ್); ಸನಾದಿ ಅಪ್ಪಣ್ಣ(ಕೃಷ್ಣಮೂರ್ತಿ ಪುರಾಣಿಕ/ ರಾಜ್‌ಕುಮಾರ್: ಸನಾದಿ ಅಪ್ಪಣ್ಣ); ಚ.ಸರ್ವಮಂಗಳ-ಸ. ಉಷಾ-ಸವಿತಾ ನಾಗಭೂಷಣ-ಪ್ರತಿಭಾ ನಂದಕುಮಾರ್-ಎಚ್.ಎಲ್.ಪುಷ್ಪ-ತೇಜಶ್ರೀ-ಭುವನಾ ಹಿರೇಮಠ… ಮೊದಲಾದ ನೂರಾರು ಕವಯಿತ್ರಿಯರ ಕವಿತೆಗಳ ಸಾವಿರಾರು ಸ್ತ್ರೀಯರು; ದು. ಸರಸ್ವತಿಯವರ ಸಣ್ತಿಮ್ಮಿ; ರಾಜೀವ (ಟಿ.ಕೆ. ರಾಮರಾವ್/ ರಾಜ್‌ಕುಮಾರ್: ಬಂಗಾರದ ಮನುಷ್ಯ); ಜೂಲಿಯೆಟ್ (ಶೇಕ್‌ಸ್ಪಿಯರ್: ರೋಮಿಯೋ ಜೂಲಿಯೆಟ್); ಹಕೀಮ ಅಲಾವಿಖಾನ್, ಪಾರ್ವತಜ್ಜಿ (ಲಂಕೇಶ್: ಗುಣಮುಖ; ವೃಕ್ಷದ ವೃತ್ತಿ), ಹಡೆ ವೆಂಕಟ (ಅನಂತಮೂರ್ತಿ: ಸೂರ್‍ಯನ ಕುದುರೆ); ಮೊಗಳ್ಳಿ ಗಣೇಶರ ಕಥಾಪಾತ್ರಗಳು; ಕೃಷ್ಣಮೂರ್ತಿ ಬಿಳಿಗೆರೆಯವರ ಕೃತಿಗಳ ಹಳ್ಳಿಗರು; ಫ್ಲೋರೈಂಟೈನೋ ಅರಿಝಾ (ಮಾರ್ಕ್ವೆಜ್: ಲವ್ ಇನ್ ದ ಟೈಮ್ ಆಫ್ ಕಾಲರಾ); ರೈತ ಲೆವಿನ್ (ಟಾಲ್‌ಸ್ಟಾಯ್ : ಅನ್ನಾಕರೆನಿನಾ)…
ಈ ಬರಹ ಬರೆವ ಗಳಿಗೆಯಲ್ಲಿ ಸಹಜವಾಗಿ, ಛಕ್ಕನೆ ಹೊಳೆದ ಈ ಪಾತ್ರಗಳ ಪಟ್ಟಿಗೆ ಕೊನೆಯೇ ಇಲ್ಲ…ನಿಮ್ಮ ನಿಮ್ಮ ಆಯ್ಕೆಯ ಪಾತ್ರಗಳನ್ನು ಈ ಪಟ್ಟಿಗೆ ಸೇರಿಸಿರಿ! ಕಾಲದಲ್ಲಿ ಕೊಂಚ ಹಿಂದಕ್ಕೆ ಹೋಗಿ ವಚನಯುಗಕ್ಕೆ ಹೋದರಂತೂ, ಅಕ್ಕಮಹಾದೇವಿ, ನೀಲಮ್ಮ, ಆಯ್ದಕ್ಕಿ ಲಕ್ಕಮ್ಮ, ಬಸವ, ಅಲ್ಲಮಾದಿಗಳ ವಚನಗಳಲ್ಲಿ ಹರಿವ ಮುಗ್ಧತೆಯ ರಸ… ಜ್ಞಾನೋದಯದ ನಂತರ ಬುದ್ಧನಿಗೆ ದಕ್ಕಿರಬಹುದಾದ ಮುಗ್ಧತೆ…. ಈ ಎಲ್ಲರನ್ನೂ ಮೈದುಂಬಿ ವಿವರಿಸುತ್ತಿದ್ದ ಕಿ.ರಂ. ನಾಗರಾಜ್ ಅವರಿಗೆ ಸಾಹಿತ್ಯ ಸಂಭ್ರಮವೇ ಕೊಟ್ಟ ಅನನ್ಯ ಮುಗ್ಧತೆ…
ಮೇಲೆ ಹೇಳಿರುವ ಸಾಹಿತ್ಯ ಕೃತಿಗಳ ಅನೇಕ ಪಾತ್ರಗಳು ಎಲ್ಲೋ ಒಂದೆಡೆಯಲ್ಲಿ ಲೋಕದ ಅಸಲಿ ಜನರ ಕಲಾ ತದ್ರೂಪಿಗಳು, ಅಥವಾ ಆದರ್ಶೀಕರಿಸಿದ ಪಾತ್ರಗಳು, ನಿಜ; ಆದರೆ ಅವರ ಮುಗ್ಧತೆ, ಸುಂದರವಾಗಿ, ಪ್ರಿಯವಾಗಿ ಕಾಣುವುದು ಸಾಹಿತ್ಯ ಲೋಕದಲ್ಲೇ; ಅವರೆಲ್ಲ ನಮ್ಮೊಳಗಿನ ಮುಗ್ದತೆ, ಆದರ್ಶ, ಸಹನೆ, ತಾಳಿಕೆ, ಒಳಿತಿನ ಲೋಕಗಳನ್ನು ಪ್ರತಿನಿಧಿಸಲೆತ್ನಿಸುತ್ತಾರೆ; ಆದ್ದರಿಂದ ಅವರು ನಮ್ಮ ಆರಾಧನೆ, ವಿಸ್ಮಯ, ಪ್ರೀತಿಗಳಿಗೆ ಪಾತ್ರರು!
ಹ್ಯಾಪಿ ಇನ್ನೊಸೆನ್ಸ್!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
ಈ ಮೂರು ಕಾದಂಬರಿಗಳನ್ನು ಜಗತ್ತಿನ ಗಂಭೀರ-ಪ್ರಖ್ಯಾತ ಪ್ರೇಮ ಕಾದಂಬರಿಗಳು ಎನ್ನುತ್ತಾರೆ: ಅನ್ನಾಕರೆನಿನಾ (ಟಾಲ್‌ಸ್ಟಾಯ್), ಮೇಡಂ ಬೋವರಿ (ಗುಸ್ತಾವ್ ಫ್ಲೋಬೋ), ಲವ್ ಇನ್ ದ ಟೈಮ್ ಆಫ್ ಕಾಲರಾ, (ಮಾರ್ಕ್ವೆಝ್). ನನ್ನ ಪ್ರಕಾರ, ಈ ಸಾಲಿನಲ್ಲಿ ಹತ್ತೊಂಬತ್ತನೇ ಶತಮಾನದ ಎಮಿಲಿ ಬ್ರಾಂಟೆಯ ಸಂಕೀರ್ಣ ಪ್ರೇಮ ಕಾದಂಬರಿ ‘ವದರಿಂಗ್ ಹೈಟ್ಸ್’ ಕೂಡ ಇರುತ್ತದೆ. 2008ರಲ್ಲಿ ಬಂದ ಒರಾನ್ ಪಾಮುಕ್‌ನ 'ಮ್ಯೂಸಿಯಂ ಆಫ್ ಇನ್ನೊಸೆನ್ಸ್' ಕೂಡ ಈ ಕಾದಂಬರಿಗಳ ಸಾಲಿಗೆ ಸೇರಿಕೊಂಡಿದೆ. 'ಮ್ಯೂಸಿಯಂ ಆಫ್ ಇನ್ನೊಸೆನ್ಸ್' ಇದ್ದಕ್ಕಿದ್ದಂತೆ ನನ್ನನ್ನು ಹಿಡಿದಿದ್ದು 2012ರಲ್ಲಿ! ಅಂಕಣವೊಂದನ್ನು ಬರೆಯಲು ಈ ಕಾದಂಬರಿಯನ್ನು ಮತ್ತೆ ಕೈಗೆತ್ತಿಕೊಂಡರೆ ಹಿಂದೆ ಮಾರ್ಕ್ ಮಾಡಿದ ನೂರಾರು ಸಾಲುಗಳು ಎರಡು ದಿನ-ರಾತ್ರಿ ನನ್ನನ್ನು ಆವರಿಸಿಕೊಂಡವು!
‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ನಿರೂಪಕ-ನಾಯಕ ಕೆಮಾಲ್ ತನ್ನ ಪ್ರಿಯತಮೆ ಎಸೆದ ಚಾಕಲೇಟ್ ಕವರ್, ಆಕೆ ಟೀ ಕುಡಿದಿದ್ದ ಕಪ್, ಹ್ಯಾಂಡ್ ಕರ್ಚಿಫ್, ಸೋಡಾ ಬಾಟಲ್, ಪೆನ್ಸಿಲ್… ಹೀಗೆ ಅವಳ ವಸ್ತುಗಳನ್ನು ಎತ್ತಿಕೊಂಡು ಜೇಬಿಗೆ ಇಳಿಬಿಟ್ಟುಕೊಳ್ಳುತ್ತಿರುವಾಗಲೇ ನನಗೆ ಹೊಳೆದುಹೋಯಿತು: ಇದು ನಮ್ಮ ಕಾಲದ ಮಹಾಪ್ರತಿಭಾಶಾಲಿ ಕಾದಂಬರಿಕಾರನೊಬ್ಬ ಕೊಡಲಿರುವ ಕಾದಂಬರಿಯ ಹೊಸ ವ್ಯಾಖ್ಯಾನ! 'ಮ್ಯೂಸಿಯಂ ಆಫ್ ಇನ್ನೊಸೆನ್ಸ್' ಕಾದಂಬರಿ ಓದಿದಾಗಿನಿಂದ ಕಾದಂಬರಿ ಪ್ರಕಾರವೇ ಮುಗ್ಧತೆಯ ಮ್ಯೂಸಿಯಂ ಎಂಬುದು ನನ್ನ ನೆಚ್ಚಿನ ವ್ಯಾಖ್ಯಾನವಾಗಿಬಿಟ್ಟಿತು.
ಕಾಲದ ಓಟದಲ್ಲಿ ಪೂರ್ಣವಾಗಿ ನಾಶವಾಗದ ಮಾನವರ ಮುಗ್ಧತೆಯ ರಕ್ಷಕಿಯಾಗಿ ಕಾದಂಬರಿ ಕೆಲಸ ಮಾಡುತ್ತಿರುತ್ತದೆ. ಮುಗ್ಧತೆಯನ್ನು ರಕ್ಷಿಸಲು ಅತ್ಯಗತ್ಯವಾದ ಸಾವಧಾನ, ವ್ಯವಧಾನಗಳೂ ಕಾದಂಬರಿ ಪ್ರಕಾರದಲ್ಲಿವೆ. ಕಾಲ ದೇಶಗಳ ವ್ಯಾಪ್ತಿ ಎಷ್ಟು ಬೇಕಾದರೂ ಹಿಗ್ಗಬಲ್ಲಷ್ಟು ವಿಸ್ತಾರ ಕಾದಂಬರಿ ಪ್ರಕಾರದಲ್ಲಿದೆ. ಈ ದೃಷ್ಟಿಯಿಂದ ಕೂಡ ಕಾದಂಬರಿಯೇ ಮುಗ್ಧತೆಯ ಕಾಯಂ ಮ್ಯೂಸಿಯಂ!
ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ನೆಲೆಸಿರುವ ಒರಾನ್ ಪಾಮುಕ್ ಬರೆದ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯಲ್ಲಿ ಮೂಡಿದ ಹೊಸ ವ್ಯಾಖ್ಯಾನ ಹುಟ್ಟುವ ಹಲವು ದಶಕಗಳ ಕೆಳಗೆ ಇಂಗ್ಲಿಷ್ ಕಾದಂಬರಿಕಾರ ಡಿ.ಎಚ್. ಲಾರೆನ್ಸ್, ‘ಕಾದಂಬರಿ ಎನ್ನುವುದು ಬದಲಾಗುತ್ತಾ ಹೋಗುವ ಜೀವಂತ ಸಂಬಂಧಗಳ ಕಾಮನಬಿಲ್ಲು’ ಎಂದಿದ್ದ; ಇದು ನನ್ನ ಪ್ರಿಯವಾದ ಕಾದಂಬರಿ ವ್ಯಾಖ್ಯಾನವಾಗಿತ್ತು. ಇನ್ನೂರು ವರ್ಷಗಳ ಕೆಳಗೆ ಪಶ್ಚಿಮದಲ್ಲಿ ಕಾದಂಬರಿ ವಿಕಾಸಗೊಳ್ಳುತ್ತಿದ್ದ ಕಾಲದಲ್ಲಿ ಅದನ್ನು ‘ಪಾಕೆಟ್ ಥಿಯೇಟರ್’ ಎನ್ನುತ್ತಿದ್ದರು. ಕುವೆಂಪು ಇದನ್ನು ಇನ್ನಷ್ಟು ಚಿತ್ರಕಗೊಳಿಸಿ, ‘ಕಾನೂರು ಹೆಗ್ಗಡಿತಿ’ಯ ಮುನ್ನುಡಿಯಲ್ಲಿ ‘ಕಾದಂಬರಿ ಕರತಲ ರಂಗಭೂಮಿ’ ಎಂದರು. ಕುವೆಂಪು ಬಣ್ಣನೆಯಲ್ಲಿರುವ ‘ಕರತಲ’ಕ್ಕೆ ಅಕ್ಕಮಹಾದೇವಿಯ ‘ಕರಸ್ಥಲ’ (‘ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಾ) ಕೂಡ ಕನೆಕ್ಟಾಗಿ ಥ್ರಿಲ್ಲಾಗಿತ್ತು!
ಕಾದಂಬರಿ ಕುರಿತ ಹಳೆಯ ವ್ಯಾಖ್ಯಾನಗಳನ್ನೆಲ್ಲ ಹೊಡೆದೋಡಿಸುವಂತೆ ಇಪ್ಪತ್ತೊಂದನೆಯ ಶತಮಾನದಲ್ಲಿ ಪಾಮುಕ್ ಕೊಟ್ಟ ಕಾದಂಬರಿ ವ್ಯಾಖ್ಯಾನ ಈಚಿನ ವರ್ಷಗಳಲ್ಲಿ ನನ್ನಲ್ಲಿ ಉಳಿದುಬಿಟ್ಟಿದೆ. ಸಾರಾಂಶ ಕೊಟ್ಟರೆ ಕಾದಂಬರಿ ಬಡವಾಗುತ್ತದೆ. ಆದರೂ ಅದರ ಪುಟ್ಟ ಹಂದರ ಹೀಗಿದೆ:
ಕಾದಂಬರಿಯ ನಾಯಕ ಕೆಮಾಲ್ ಬೇ, ಸಿಬೆಲ್ ಎಂಬ ಸುಂದರಿಯನ್ನು ಮದುವೆಯಾಗಲಿದ್ದಾಗ ತನ್ನ ಸಂಬಂಧಿ, ಬಡ ಹುಡುಗಿ, ಫುಸುನ್ ಬಗ್ಗೆ ಮೋಹ ಹುಟ್ಟುತ್ತದೆ. ಅಪಾರ್ಟ್‌ಮೆಂಟೊಂದರಲ್ಲಿ ಕೆಮಾಲ್–ಫುಸುನ್ ತೀವ್ರ ಪ್ರೇಮ ಶುರುವಾಗುತ್ತದೆ. ತನ್ನ ನರನಾಡಿಗಳಲ್ಲಿ ಫುಸುನ್ ಆವರಿಸಿರುವಾಗ, ಕೆಮಾಲ್‌ಗೆ ಸಿಬೆಲ್ ಜೊತೆ ಲೈಂಗಿಕ ಸಂಬಂಧ ಅಸಾಧ್ಯವಾಗುತ್ತದೆ. ಮದುವೆಯ ನಿಶ್ಚಿತಾರ್ಥದ ಉಂಗುರ ಮರಳಿಸಿದ ಸಿಬೆಲ್ ಬೇರೊಬ್ಬನನ್ನು ಮದುವೆಯಾಗಲು ಹೊರಟಾಗ ಕೆಮಾಲ್ ನಿರಾಳನಾಗುತ್ತಾನೆ. ಆದರೆ ಕೆಮಾಲ್ ಮತ್ತೆ ಹುಡುಕಿ ಹೊರಟ ಫುಸುನ್ ಊರು ಬಿಟ್ಟು ದೂರದ ನಾಡಿಗೆ ಹೊರಟು ಹೋಗಿದ್ದಾಳೆ.
ಕಾಲಾನಂತರ ಫುಸುನ್ ಮರಳಿ ಬರುತ್ತಾಳೆ. ನಟಿಯಾಗುವ ಅವಳ ಕನಸಿಗೆ ನೀರೆರೆದ ಚಿತ್ರಕಥಾಲೇಖಕನ ಜೊತೆ ಅವಳ ಮದುವೆಯಾಗಿದೆ. ಆದರೇನಂತೆ! ಕೆಮಾಲ್‌ಗೆ ಇನ್ನೇನೂ ಬೇಡ! ಸುಮ್ಮನೆ ಫುಸುನ್ ಸಾನ್ನಿಧ್ಯದಲ್ಲಿದ್ದರೆ ಸಾಕು! ಪಾಪಪ್ರಜ್ಞೆ, ಅವಳನ್ನು ಕಳೆದುಕೊಂಡ ನೋವು ಎರಡೂ ಕೂಡಿ, ಕಾತರ ಹೆಚ್ಚಾಗಿ, ಕೆಮಾಲ್ ತೀವ್ರ ಪ್ರೇಮ ಹುಚ್ಚಾಗಿ ಹಬ್ಬುತ್ತದೆ. ಫುಸುನ್‌ಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನೂ ಸಂಗ್ರಹಿಸಲು ಶುರು ಮಾಡುತ್ತಾನೆ. ಇದು ಕೆಮಾಲ್ ಉತ್ಕಟ ಪ್ರೀತಿಯನ್ನು ಕಾಪಾಡಿಕೊಳ್ಳುವ ರೀತಿ; ಅಗಲಿಕೆಯಲ್ಲೂ ಸಖಿಯೊಡನೆ ಬದುಕುವ ಸುಂದರ ರೀತಿ!
ಏಳುನೂರೈವತ್ತು ಪುಟಗಳ ಕಾದಂಬರಿ ಮುಗಿಯಲು ನೂರೈವತ್ತು ಪುಟಗಳಿರುವಾಗ ಫುಸುನ್ ಕಾರ್ ಡ್ರೈವಿಂಗ್ ಕಲಿಯಲು ಹೊರಟ ತಕ್ಷಣ ನನ್ನ ಕತೆಗಾರ ಮನಸ್ಸು ಫುಸುನ್ ತೀರಿಕೊಳ್ಳುತ್ತಾಳೆ ಎಂದು ಬೆಚ್ಚಿತು; ಬೆಚ್ಚಿದ ಮನಸ್ಸು ಕಾದಂಬರಿ ಓದುವುದನ್ನೇ ಮುಂದೂಡಲು ಹವಣಿಸತೊಡಗಿತು. ಬರಬರುತ್ತಾ ಕಾದಂಬರಿಯ ರೊಮ್ಯಾಂಟಿಕ್ ಲೋಕ ಹೇಗೆ ನನ್ನೊಳಗಿನ ರಮ್ಯಲೋಕವನ್ನು ಆಕ್ರಮಿಸಿಕೊಂಡಿತೆಂದರೆ, ಈ ಕಾದಂಬರಿಯನ್ನು ಓದಿ ಮುಗಿಸಲೇಬಾರದು ಅನ್ನಿಸತೊಡಗಿತು. ಕಾದಂಬರಿಯೊಂದನ್ನು ಹೀಗೆ ಓದಿಕೊಂಡರೆ ಮಾತ್ರ ಅದು ಕಾದಂಬರಿಯ ಅನುಭವ ಹೀರಿಕೊಳ್ಳುವ ಪಯಣ; ಇಲ್ಲದಿದ್ದರೆ ಇಡೀ ಪಯಣವೇ ವ್ಯರ್ಥ!
ಕಾದಂಬರಿ ಓದುವ ಹಲವರಿಗೆ ಇಂಥ ಅನುಭವವಾಗಿ, ಅವರು ನೋಡುವ ನೋಟವೇ ಬದಲಾಗಿರಬಹುದು. ಸಾಹಿತ್ಯದ ಮೇಡಂ, ಮೇಷ್ಟ್ರುಗಳಿಗೆ ತಂತಮ್ಮ ಓದಿನಲ್ಲಿ ಈ ಥರದ ಅನುಭವವಾಗಿದ್ದರೆ, ಕ್ಲಾಸ್ ರೂಮಿನ ವಾತಾವರಣವೇ ‘ಛಾರ್ಜ್’ ಆಗತೊಡಗುತ್ತದೆ! ಆಗ ಕೃತಿಯ ಅನುಭವ ಹುಡುಗ, ಹುಡುಗಿಯರಿಗೆ ತೀವ್ರವಾಗಿ ತಲುಪತೊಡಗುತ್ತದೆ; ‘ಅನ್ನಾಕರೆನಿನಾ’, ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ‘ವದರಿಂಗ್ ಹೈಟ್ಸ್’ ಥರದ ಅನನ್ಯ ಪ್ರೇಮ ಕಾದಂಬರಿಗಳನ್ನು ಟೀಚ್ ಮಾಡುವಾಗ ಆದ ನನ್ನ ಕ್ಲಾಸ್ ರೂಂ ಅನುಭವದಿಂದ ಈ ಮಾತು ಹೇಳುತ್ತಿರುವೆ. ಇಂಥ ಕಾದಂಬರಿಗಳು ನಮ್ಮೊಳಗೆ ಇರುವ, ಮುದುಡಿ ಮಲಗಿರುವ ಮುಗ್ಧಲೋಕವನ್ನು ಮೆಲ್ಲಗೆ ತಟ್ಟಿ ಮೇಲೇಳಿಸುತ್ತವೆ; ನಾವು ಕಾದಂಬರಿಯ ಪಾತ್ರಗಳ ಮುಗ್ಧ ರಮ್ಯಲೋಕದ ಸಹಪಾತ್ರಗಳಾಗುತ್ತೇವೆ. ಕಾದಂಬರಿ ಎಂಬ ಮುಗ್ಧತೆಯ ಮ್ಯೂಸಿಯಂನಲ್ಲಿ ವಿಹರಿಸುವ ದಣಿವಿರದ ಪಯಣಿಗರಾಗುತ್ತೇವೆ; ನಮ್ಮ ಮುಗ್ಧತೆ ಅರಳತೊಡಗುತ್ತದೆ.
ನಾನು ಊಹಿಸಿದ್ದಂತೆಯೇ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ಫುಸುನ್ ಕಾರ್ ಅಪಘಾತದಲ್ಲಿ ತೀರಿಕೊಳ್ಳುತ್ತಾಳೆ. ಚಿರವಿರಹಿ ಕೆಮಾಲ್ ಪ್ರಿಯಸಖಿಯ ನೆನಪಿನ ಮನೆಯನ್ನೇ ಮ್ಯೂಸಿಯಂ ಮಾಡುತ್ತಾನೆ; ಅಲ್ಲಿ ಅವಳ ನೆನಪಿಗೆ ಸಂಬಂಧಿಸಿದ ವಸ್ತುಗಳನ್ನೆಲ್ಲ ಜೋಡಿಸಿಡುತ್ತಾನೆ. ಶಹಜಹಾನ್ ಕಟ್ಟಿದ ತಾಜಮಹಲ್ ಕತೆ ನೆನಪಿಸಿಕೊಳ್ಳಿ: ಕೆಮಾಲ್ ಮಾಡಿದ ಮ್ಯೂಸಿಯಂ ಹಿಂದಿರುವ ತೀವ್ರ ಮೋಹ ಅರ್ಥವಾಗುತ್ತದೆ. ಜೊತೆಗೆ, ಬೇಂದ್ರೆಯ ‘ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಸಬಹುದೆ?’ ರುದ್ರಗೀತ -ಅದರಲ್ಲೂ ಅಗಲಿದ ಕವಿ, ಗೆಳೆಯ ಎನ್.ಕೆ. ಹನುಮಂತಯ್ಯ ‘ಮದ್ಯ’ರಾತ್ರಿಗಳಲ್ಲಿ ಹಾಡುತ್ತಿದ್ದ ರುದ್ರಗೀತ!- ಗುಂಗಾಗಿ ಕಾಡಿದರೆ, ಈ ಕಾದಂಬರಿಯ ರುದ್ರ-ರಮ್ಯ ದುಃಖ ನಿಮ್ಮ ನರನಾಡಿಗಳಲ್ಲಿ ಹಬ್ಬತೊಡಗುತ್ತದೆ.
ಮುಂದೊಮ್ಮೆ ತನ್ನ ಪ್ರಣಯ–ವಿರಹ-ಯಾತನೆ-ಹುಡುಕಾಟಗಳ ಕಥಾನಕವನ್ನು ಕೆಮಾಲ್ ತನ್ನ ದೂರದ ಸಂಬಂಧಿ, ಕಾದಂಬರಿಕಾರ, ಒರಾನ್ ಪಾಮುಕ್‌ಗೆ ಹೇಳುತ್ತಾನೆ. ಒರಾನ್ ಅದನ್ನು ಕೆಮಾಲ್ ಭಾಷೆ, ಮೂಡುಗಳಲ್ಲೇ ನಿರೂಪಿಸುತ್ತಾನೆ. ಇದೊಂದು ಕಥಾತಂತ್ರ ಎಂದೇ ನನ್ನ ಕಸಬುದಾರ ಊಹೆ! ಕೆಮಾಲ್ ರೂಪಿಸುತ್ತಿರುವ ಮ್ಯೂಸಿಯಂನಲ್ಲಿ ಒರಾನ್ ಕೂಡ ಜೊತೆಯಾಗುತ್ತಾನೆ. ಗತಿಸಿದ ಬದುಕಿನ ಜೀವಂತ ನೆನಪುಗಳ ತಂಗುದಾಣವಾದ ಕಾದಂಬರಿಯೂ, ಗತಕಾಲದ ನೆನಪುಗಳ ಸಂಗ್ರಹವಾದ ಮ್ಯೂಸಿಯಮ್ಮೂ ಒಂದರೊಡನೊಂದು ಬೆರೆಯುತ್ತವೆ! ಎರಡು ಪ್ರಕಾರಗಳ ಈ ಅದ್ಭುತ ಬೆಸುಗೆ ಕಾದಂಬರಿಕಾರನ ಒರಿಜಿನಲ್ ಮಾಸ್ಟರ್ ಸ್ಟ್ರೋಕ್!
‘ಕಾದಂಬರಿ ಯಾವಾಗ ಮುಗಿಯುತ್ತೆ’ ಎನ್ನುತ್ತಾನೆ ಕೆಮಾಲ್. ‘ನಿನ್ನ ಮ್ಯೂಸಿಯಂ ಮುಗಿದ ತಕ್ಷಣ’ ಎನ್ನುತ್ತಾನೆ ಒರಾನ್. ಈ ಪ್ರಶ್ನೋತ್ತರ ಅವರ ನಿತ್ಯದ ಜೋಕ್! ಕಾದಂಬರಿಯ ಕೊನೆಗೆ ಕೆಮಾಲ್ ಬೀದಿ ದೀಪದ ಬೆಳಕಿನಲ್ಲಿ ತನ್ನ ಜೇಬಿನಿಂದ ಫೋಟೋವೊಂದನ್ನು ತೆಗೆದು ತೋರಿಸುತ್ತಾ ಕೇಳುತ್ತಾನೆ: ‘ಲವ್ಲಿಯಾಗಿದಾಳೆ, ಅಲ್ವಾ?’. ಕಥಾನಾಯಕನೂ, ಕಾದಂಬರಿಕಾರನೂ ಫುಸುನ್ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಾರೆ.
‘ಈ ಫೋಟೋನ ನಿನ್ನ ಮ್ಯೂಸಿಯಂನಲ್ಲಿಡು ಕೆಮಾಲ್ ಬೇ’ ಎನ್ನುತ್ತಾನೆ ಒರಾನ್.
ಈ ಫೋಟೋವನ್ನು ಮಾತ್ರ ಮ್ಯೂಸಿಯಮ್ಮಿನಲ್ಲಿಡದೆ ಜೋಪಾನವಾಗಿ ಜೇಬಿನಲ್ಲಿಟ್ಟುಕೊಳ್ಳುವ ಕೆಮಾಲ್ ಹೇಳುತ್ತಾನೆ: ‘ಒರಾನ್ ಬೇ, ನಿನ್ನ ಪುಸ್ತಕದಲ್ಲಿ ನನ್ನ ಕೊನೆಯ ಮಾತು ಇದೇ ಆಗಿರಬೇಕು: ‘ನಾನು ಅತ್ಯಂತ ಆನಂದದಿಂದ ಜೀವಿಸಿದೆ. ಇದು ಎಲ್ಲರಿಗೂ ತಿಳಿದಿರಲಿ.’
ಪ್ರಿಯಸಖಿಯ ವಸ್ತುಗಳ ಜೊತೆಗೆ ಮನದಲ್ಲೂ, ಮನೆಯಲ್ಲೂ ಬದುಕಿರುವುದೇ ಕೆಮಾಲ್ ಆನಂದದ ಬದುಕಿನ ಗುಟ್ಟು. ಕಾದಂಬರಿಯಲ್ಲಿ ಕೆಮಾಲ್ ಮಾಡಿದ ಮ್ಯೂಸಿಯಂ ಥರದ ಮ್ಯೂಸಿಯಮ್ಮನ್ನೇ 2012ರಲ್ಲಿ ಒರಾನ್ ಪಾಮುಕ್ ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ಮಾಡಿದ ಸುದ್ದಿ ಓದಿದೆ: ಕಾದಂಬರಿಯ ಒಡಲನೂಲಿನಿಂದಲೇ ಮೂಡಿದ್ದ ‘ಮುಗ್ಧತೆಯ ಮ್ಯೂಸಿಯಂ’ನಲ್ಲಿ ಮೂಡಿದ್ದ ರೂಪಕಾರ್ಥ ವಾಚ್ಯಾರ್ಥಕ್ಕಿಳಿದಿದೆ ಎನ್ನಿಸಿ, ಪೆಚ್ಚೆನ್ನಿಸಿತು. ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ಗೆ ಇರುವ ವ್ಯಾಪಕಾರ್ಥ ಕುಬ್ಜಗೊಂಡಂತಿತ್ತು!
‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಹಾಗೂ ಮ್ಯೂಸಿಯಂ ಒಂದೇ ದಿನ ಲೋಕಾರ್ಪಣೆಯಾಗಬೇಕೆಂದು ಪಾಮುಕ್ ಆಸೆಯಾಗಿತ್ತು. ಕಾದಂಬರಿಯೇ ಮೊದಲು ಪ್ರಕಟವಾಯಿತು; ಆಮೇಲೆ ಮ್ಯೂಸಿಯಂ. ಈ ಕುರಿತ ಡಾಕ್ಯುಮೆಂಟರಿ ಸಿನಿಮಾ ಕೂಡ ಬಂತು. ಇಂಗ್ಲಿಷ್ ಅಧ್ಯಾಪಕ ಚಾಂದ್ ಬಾಶ ಒರಾನ್ ಪಾಮುಕ್ ಕೃತಿಗಳ ಮೇಲೆ ಸಂಶೋಧನೆ ಮಾಡುವಾಗ ಇಸ್ತಾನ್‌ಬುಲ್‌ಗೂ ಹೋಗಿ, ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ನೋಡಿಕೊಂಡು ಬಂದು ಫೋಟೋಗಳನ್ನು ಕಳಿಸಿದರು. ನನಗೂ ಎಷ್ಟೋ ಸಲ ಯುರೋಪು-ಏಷ್ಯಾ ಎರಡೂ ಖಂಡಗಳಲ್ಲಿ ಚಾಚಿಕೊಂಡಿರುವ ಇಸ್ತಾನ್‌ಬುಲ್‌ಗೆ ಹೋಗಿ ಪಾಮುಕ್ ಅವರನ್ನು ಕಂಡು, ಮ್ಯೂಸಿಯಂ ಆಫ್ ಇನ್ನೊಸೆನ್ಸ್ ನೋಡಿಕೊಂಡು ಬರಬೇಕು ಅನ್ನಿಸುತ್ತಿರುತ್ತದೆ. ಆದರೆ ಕಾದಂಬರಿ ನನ್ನೊಳಗೆ ನಿರ್ಮಿಸಿರುವ ಮುಗ್ಧತೆಯ ಮ್ಯೂಸಿಯಮ್ಮನ್ನು ಸಾಕಾರದಲ್ಲಿ ನೋಡಲು ಮನಸ್ಸು ಹಿಂಜರಿಯುತ್ತಲೇ ಇದೆ!
‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ರಮ್ಯಲೋಕದಲ್ಲಿ ಮುಳುಗಿ ತೇಲುತ್ತಿದ್ದ ಕಾಲದಲ್ಲೇ ಗೆಳೆಯರೊಬ್ಬರು ಶಿವಮೊಗ್ಗೆಗೆ ಹನ್ನೆರಡು ಕಿಲೋಮೀಟರ್ ದೂರವಿರುವ ಲಕ್ಕಿನಕೊಪ್ಪ ಸರ್ಕಲ್ ಬಳಿ 'ಒಂದು ಹಿಸ್ಟರಿ ಮ್ಯೂಸಿಯಂ ಇದೆ’ ಎಂದರು. ಮ್ಯೂಸಿಯಂ ಎಂದ ತಕ್ಷಣ ಹುಟ್ಟಿದ ಪುಳಕದಲ್ಲಿ ಅಲ್ಲಿಗೆ ಹೋಗಿ ಅದರ ವಿವರ ಓದುತ್ತಿರುವಂತೆ ಅಚ್ಚರಿಯಾಯಿತು! ಅನೇಕ ಸಲ ಘಟನೆಗಳು, ಸಾಹಿತ್ಯಕೃತಿಗಳ ವಿವರಗಳೆಲ್ಲ ಮರೆತು ಹೋಗಿ, ಅವುಗಳ ಕೇಂದ್ರ ಭಾವವಷ್ಟೇ ನಮ್ಮ ಆಳದಲ್ಲಿ ಉಳಿಯುತ್ತದಲ್ಲವೆ? ಲಕ್ಕಿನಕೊಪ್ಪ ಸರ್ಕಲ್‌ನಲ್ಲಿರುವ ‘ಅಮೂಲ್ಯ ಶೋಧ’ ಮ್ಯೂಸಿಯಂನ ಹಿನ್ನೆಲೆಯಲ್ಲಿರುವ ಕೇಂದ್ರ ಭಾವವಷ್ಟೇ ನನ್ನ ಮನಸ್ಸಿನಲ್ಲಿ ಗಾಢವಾಗಿ ಉಳಿದಿದೆ:
ಹಿಸ್ಟರಿ ಉಪನ್ಯಾಸಕ ಖಂಡೋಬರಾವ್, ಅಗಲಿದ ತಮ್ಮ ಪತ್ನಿ ಯಶೋಧ ಅವರ ನೆನಪಿನಲ್ಲಿ ಒಂದು ಎಕರೆ ಫಾರ್ಮ್ ಹೌಸಿನಲ್ಲಿ, 2007ರಲ್ಲಿ ‘ಅಮೂಲ್ಯ ಶೋಧ’ ಮ್ಯೂಸಿಯಂ ಮಾಡಿದ್ದರು! ಹಿಸ್ಟರಿ ಉಪನ್ಯಾಸಕಿಯಾಗಿದ್ದ ಯಶೋಧ, ‘ತಾಜ್‌ಮಹಲ್ ಪ್ರೇಮದ ಸಂಕೇತ ಮಾತ್ರ ಅಲ್ಲ; ನಿಜವಾದ ಪ್ರೇಮಿಗಳ ಆತ್ಮ’ ಎನ್ನುತ್ತಿದ್ದರಂತೆ. ಒರಾನ್ ಪಾಮುಕ್ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಬರೆದು, ಮ್ಯೂಸಿಯಂ ಮಾಡುವ ಮೊದಲೇ ಖಂಡೋಬರಾವ್ ತಮ್ಮ ಹಣ ಹಾಕಿ ಇಲ್ಲೊಂದು ಮುಗ್ಧತೆಯ ಮ್ಯೂಸಿಯಂ ಮಾಡಿದ್ದರು. ರಮ್ಯ, ಕೋಮಲ ಭಾವಗಳು ನಿಜಕ್ಕೂ ಯೂನಿವರ್ಸಲ್. ಎಲ್ಲಿಯ ಇಸ್ತಾನ್‌ಬುಲ್! ಎಲ್ಲಿಯ ಮಲೆನಾಡಿನ ಲಕ್ಕಿನಕೊಪ್ಪ! ಎತ್ತಣಿಂದ ಎತ್ತಣಾದರೂ ನೋಡಿ; ಎಲ್ಲಿಂದ ಎಲ್ಲಿಗಾದರೂ ಹೋಗಿ: ಮಾನವರ ಮುಗ್ಧ ಭಾವಗಳು, ಅದರಲ್ಲೂ ಗಂಡು-ಹೆಣ್ಣಿನ ಸಂಬಂಧದ ಮೂಲ ಮುಗ್ಧ ಭಾವಗಳು… ಎಲ್ಲೆಡೆ ಒಂದೇ ಥರ!
ಕೊನೆ ಟಿಪ್ಪಣಿ
ಈ ಅಂಕಣ ಮುಗಿಸುವ ಹೊತ್ತಿಗೆ ‘ಫ್ರಂಟ್ ಲೈನ್’ ಪತ್ರಿಕೆಯ ಉಪಸಂಪಾದಕರಾದ ವಿಖಾರ್ ಅಹ್ಮದ್ ಸಯೀದ್ ಸ್ವತಃ ಇಸ್ತಾನ್ ಬುಲ್‌ಗೆ ಹೋಗಿ ಬರೆದ ಲೇಖನ ಸಿಕ್ಕಿತು.
ಲೇಖನ ಓದತೊಡಗಿದಂತೆ ಇಸ್ತಾನ್‌ಬುಲ್‌ಗೆ ಹೋಗಿ ಮ್ಯೂಸಿಯಂ ಆಫ್ ಇನ್ನೊಸೆನ್ಸ್ ಕಟ್ಟಡ ಹೊಕ್ಕು, ವಿರಾಮವಾಗಿ ಅಡ್ಡಾಡಿದಂತೆ ಅನ್ನಿಸತೊಡಗಿತು. ವಿಖಾರ್ ಲೇಖನದಲ್ಲಿ ಕಾದಂಬರಿಯ ಒಳ್ಳೆಯ ಸಾರಾಂಶವೂ ಇದೆ. ವಿಖಾರ್ ಖುದ್ದು ಕಂಡ ಮ್ಯೂಸಿಯಂ; ನಾನು ಇದ್ದಲ್ಲೇ ಓದಿ ಸ್ಪರ್ಶಿಸಿದ ಮುಗ್ಥತೆಯ ಮ್ಯೂಸಿಯಂ- ಎರಡನ್ನೂ ಒಟ್ಟಿಗೇ ಓದಿ ನೋಡಿ: ಒರಾನ್ ಪಾಮುಕ್ ಮ್ಯಾಜಿಕ್ ಹಾಗೂ ಜೀನಿಯಸ್ ನಿಮ್ಮ ಅನುಭವಕ್ಕೆ ಬರಬಲ್ಲವು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
‘ಫೆಬ್ರವರಿಯಲ್ಲಿ ಉಳವಿಯ ಜಾತ್ರೆ ಶುರುವಾಗಲಿದೆ’ ಎಂದು ‘ಕರಾವಳಿ ಮುಂಜಾವು’ ಪತ್ರಿಕೆಯ ಸಂಪಾದಕರೂ, ಗೆಳೆಯರೂ ಆದ ಗಂಗಾಧರ ಹಿರೇಗುತ್ತಿಯವರು ಹೇಳಿದ ತಕ್ಷಣ, ಮನಸ್ಸು ಹನ್ನೆರಡನೆಯ ಶತಮಾನಕ್ಕೆ ಹೊರಳಿತು.
ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಉಳವಿ ಎಂಬ ಪುಟ್ಟ ಊರಿನ ಚಾರಿತ್ರಿಕ ಮಹತ್ವ ನನಗೆ ಮೊದಲು ಗೊತ್ತಾಗಿದ್ದು ಚೆನ್ನಪ್ಪ ಕವಿಯ ‘ಶರಣಲೀಲಾಮೃತ’ ಕೃತಿ ಓದಿದಾಗ. ಈ ಕೃತಿಯನ್ನು 1750ರ ಹೊತ್ತಿಗೆ ಬರೆದ ಚೆನ್ನಪ್ಪ ಕವಿ [ನನ್ನ ಜಿಲ್ಲೆಯೂ ಆಗಿರುವ] ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡುಗಲ್ಲಿನಲ್ಲಿ ಜೀವಿಸಿದ್ದ ಎಂಬುದನ್ನು ಓದಿದಾಗ ರೋಮಾಂಚನವಾಯಿತು. ಈ ಕೃತಿಯಲ್ಲಿ ಕವಿ ಬಣ್ಣಿಸುವ ‘ಉಳುವೆ’ಯೇ ಮುಂದೆ ಉಳವಿಯಾಯಿತೇನೋ. ಉಳುವೆಯನ್ನು ಕವಿ ಕಂಡಿದ್ದನೋ ಇಲ್ಲವೋ, ತಿಳಿಯದು. ಆದರೆ ವಚನಕಾರರಿಗೆ ಆಶ್ರಯತಾಣವಾದ ಉಳುವೆ ಹಾಗೂ ಉಳುವೆಯ ಮಹಾಮನೆಯ ಬಗ್ಗೆ ಕವಿಯ ಮನಸ್ಸಿನಲ್ಲಿ ತುಂಬಿರುವ ಪ್ರೀತಿ, ಕೃತಜ್ಞತೆಗಳು ‘ಶರಣ ಲೀಲಾಮೃತ’ದ ಕೊನೆಯ ಭಾಗದಲ್ಲಿ ಉಕ್ಕಿ ಹರಿಯುತ್ತವೆ.
ಈ ಮಾತುಗಳ ಹಿನ್ನೆಲೆ ಅರ್ಥವಾಗಲು ಹನ್ನೆರಡನೆಯ ಶತಮಾನದ ವಚನಯುಗದ ಚರಿತ್ರೆಯ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಈಗಾಗಲೇ ಪರಿಚಿತವಾಗಿರುವ ವಿವರಗಳನ್ನು ಚಣ ನೆನಪಿಸಿಕೊಳ್ಳಿ:
ಬಸವಣ್ಣನವರ ನಿರ್ಗಮನದ ನಂತರ ಕಲ್ಯಾಣದಲ್ಲಿ ಕೋಲಾಹಲವುಂಟಾಯಿತು; ಬಿಜ್ಜಳ ದೊರೆಯ ಭೀಕರ ಹತ್ಯೆಯಾಯಿತು. ಹತ್ಯೆಯ ನಂತರ ಹಬ್ಬಿದ ಅರಾಜಕ ದಿನಗಳಲ್ಲಿ ವಚನಕಾರರ ಮೇಲೆ, ಶರಣರ ಮೇಲೆ ಹಲ್ಲೆಗಳು ಶುರುವಾದವು; ಹತ್ಯೆಗಳು ನಡೆದವು. ಬಸವಣ್ಣ ಕಟ್ಟಿದ ಕಲ್ಯಾಣದ ಮಹಾಮನೆ ವಚನಕಾರರ ಪಾಲಿಗೆ ಇಲ್ಲವಾಯಿತು. ಆ ಘಟ್ಟದಲ್ಲಿ ಕಲ್ಯಾಣವನ್ನು ತೊರೆಯಬೇಕಾಗಿ ಬಂದ ವಚನಕಾರರ ಒಂದು ತಂಡ ಉಳುವೆಯ ಮಹಾಮನೆ ತಲುಪಲು ಕಾಡುಮೇಡಿನ ಹಾದಿ ಹಿಡಿಯಿತು. ‘ಉಳುವೆ ದಾರಿಯಲ್ಲಿ ಇರುವಂಥಾ ವನದ ಶೃಂಗಾರಮಂ ಪೇಳ್ವೆನದೆಂತೆನೆ’ ಎಂದು ಆರಂಭವಾಗುವ ಕವಿಬಣ್ಣನೆಯಲ್ಲಿ ಹಾದಿಯ ಚೆಲುವು ಕಣ್ತುಂಬತೊಡಗುತ್ತದೆ:
‘ಕಾರೆ ತಾರೆಯು ಬಿಲ್ವ ಬೋರೆ ಬೊಬ್ಬುಲಿ ಬೇಲ
ಗೇರು ಕಾಮಾರೆ ಕಾಂತಾರದೊಳು
ತೂರಬಾರದ ಸೀಗೆ ಲತೆ ಗುಲ್ಮ ತರುಮಧ್ಯ
ದಾರಿಯಿಮ್ಮಯ್ಯಲೊಪ್ಪಿರುವುವು.’
ಇನ್ನೂರೈವತ್ತು ವರ್ಷಗಳ ಕೆಳಗೆ ಚೆನ್ನಪ್ಪ ಕವಿ ಬರೆದ ಇಂಥ ಹತ್ತಾರು ಪದ್ಯಗಳ ಬಣ್ಣನೆ ಓದುತ್ತಿದ್ದರೆ ಉಳುವೆಯ ಹಾದಿಯ ಪ್ರಕೃತಿಲೋಕದಲ್ಲಿ ನಾವೇ ಹಾದು ಹೋಗುತ್ತಿರುವಂತೆ ಭಾಸವಾಗತೊಡಗುತ್ತದೆ.
ಚೆನ್ನಪ್ಪ ಕವಿ ಬಣ್ಣಿಸುವ ಈ ಉಳುವೆಯ ಬಗ್ಗೆ ನನಗೆ ಮೋಹ ಹಾಗೂ ಅಪಾರ ಕೃತಜ್ಞತೆ ಹುಟ್ಟಿದ್ದು ಆರೇಳು ವರ್ಷಗಳ ಕೆಳಗೆ ನನ್ನ ‘ಮುಂದಣ ಕಥನ’ ನಾಟಕ ಬರೆಯಲು ರಿಸರ್ಚ್ ಮಾಡುತ್ತಿರುವಾಗ. ಶಿವಪ್ರಕಾಶರ ‘ಮಹಾಚೈತ್ರ’ ನಾಟಕದ ಮುನ್ನುಡಿಯಲ್ಲಿ ಈ ಕೃತಿಯ ಉಲ್ಲೇಖವಿತ್ತು; ಆಗ ನನ್ನ ರಿಸರ್ಚ್ ವಿದ್ಯಾರ್ಥಿಯಾಗಿದ್ದ ಚೆನ್ನರಾಜು ಬಸಪ್ಪನದೊಡ್ಡಿ ಈ ಪುಸ್ತಕ ಹುಡುಕಿ ಕೊಟ್ಟರು; ರಿಸರ್ಚ್ ವಿದ್ಯಾರ್ಥಿನಿ ಸೋನಿಯಾ ವಚನಯುಗ ಕುರಿತ ಬಗೆಬಗೆಯ ಪುಸ್ತಕಗಳನ್ನು ತಂದುಕೊಟ್ಟರು. ಮೇಷ್ಟರೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕಣ್ಣು ಪಡೆಯುವ ಅರ್ಥಪೂರ್ಣ ಸಂದರ್ಭಗಳು ಇವು. ಆ ಪುಸ್ತಕಗಳಲ್ಲಿ ವಚನಯುಗದ ನಂತರ ವಚನಗಳಿಗೇನಾಯಿತು ಎಂಬುದನ್ನು ಹುಡುಕಲು ಹೊರಟ ನನಗೆ ಕನ್ನಡ ಸಾಂಸ್ಕೃತಿಕ ಭೂಪಟದಲ್ಲಿ ಉಳುವೆಗೆ ಎಂಥ ಮಹತ್ವದ ಸ್ಥಾನವಿದೆಯೆನ್ನುವುದು ಅರಿವಿಗೆ ಬರತೊಡಗಿತು. ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದ ಪತನದ ನಂತರ ನಡೆದ ಈ ಮಹಾಶರಣಪಯಣವನ್ನು ಊಹಿಸಿಕೊಳ್ಳಿ: ಎಲ್ಲಿಯ ಉಳುವೆ! ಎಲ್ಲಿಯ ಕಲ್ಯಾಣ! ಇಂದಿನ ಬಸವಕಲ್ಯಾಣದಿಂದ ಉಳುವೆಗೆ ಕಾಡುಮೇಡುಗಳ ಹಾದಿಯಲ್ಲಿ ನಡೆದರೂ ಆರುನೂರು ಕಿಲೋಮೀಟರ್ ದೂರ.
ಎಂಟುನೂರು ವರ್ಷಗಳ ಕೆಳಗೆ ಸೈನಿಕರ ಭೀತಿ, ಆತಂಕಗಳ ನಡುವೆ ಶರಣ, ಶರಣೆಯರು ಉಳುವೆಯತ್ತ ಹೊರಟ ಹಿನ್ನೆಲೆ ನೆನಪಿಸಿಕೊಳ್ಳಿ: ಒಂದು ಕಾಲಕ್ಕೆ ಬಸವಣ್ಣನವರಿಗೆ ಬೆಂಬಲವಾಗಿ ನಿಂತು, ನಂತರ ಕವಲೊಡೆದ ಬಿಜ್ಜಳ ದೊರೆಯ ಹತ್ಯೆಯ ನಂತರ ಕಲ್ಯಾಣದಲ್ಲಿ ಸಾಂಪ್ರದಾಯಿಕ ಶಕ್ತಿಗಳ ಆರ್ಭಟ ಶುರುವಾಯಿತು. ಬಸವಣ್ಣ ತಂದ ಬದಲಾವಣೆಗೆ ವಿರುದ್ಧವಾಗಿದ್ದ ಇಂಥ ಶಕ್ತಿಗಳ ಕೈಗೊಂಬೆಯಾಗಿ ಹೂಂಕರಿಸುತ್ತಿದ್ದ ಅಳಿಯ ಬಿಜ್ಜಳನ ಸೈನಿಕರು ಶರಣರನ್ನು, ವಚನಕಾರರನ್ನು ಬೇಟೆಯಾಡತೊಡಗಿದರು. ದಿಕ್ಕೆಟ್ಟ ವಚನಕಾರರು ಮಾಚಿದೇವರ ಹೋರಾಟ, ರಕ್ಷಣೆಯ ಆಸರೆಯಲ್ಲಿ ವಚನಗಳ ಕಟ್ಟುಗಳನ್ನು ಹೊತ್ತು ನಾಡಿನ ಹಲವು ದಿಕ್ಕುಗಳಿಗೆ ಹೊರಡುವ ಕಾಲ ಬಂತು. ಚೆನ್ನಬಸವಣ್ಣನವರು ಕಲ್ಯಾಣದಿಂದ ಹೊರಟು ನಿಂತ ಗಳಿಗೆಯನ್ನು ಚೆನ್ನಪ್ಪ ಕವಿ ಬಣ್ಣಿಸುತ್ತಾನೆ:
ನಡುಗಿತಾ ಕಲ್ಯಾಣ ತನ್ನಯ ಒಡಲ ಜೀವವು ಹೊರಡುತಿದೆ ಇದ
ತಡೆದು ಸಲಹುವರಿಲ್ಲವೆನುತಲಿ- ನಡುಗಿತಾ ಪುರವು.
ಈ ಕಾಲ ಬರುವುದಕ್ಕಿಂತ ಹಿಂದೆಯೇ ಅಲ್ಲಮಪ್ರಭುಗಳು ‘ಉಳುಮೆಯಲ್ಲಿ ನಿಜವನೆಯ್ದು ನಡೆ ಚೆನ್ನಬಸವಣ್ಣ’ ಎಂದು ಕೊಟ್ಟಿದ್ದ ನಿರೂಪ ಇದೇ ಉಳುವೆಯನ್ನು ಕುರಿತಾದದ್ದಿರಬಹುದು; ಆ ನಿರೂಪದಂತೆ ಕೂಡ ಚೆನ್ನಬಸವಣ್ಣನವರು ಉಳುವೆಯ ಹಾದಿ ಹಿಡಿದಿರಬಹುದು. ಶರಣ, ಶರಣೆಯರ ತಂಡದ ಜೊತೆಗೆ ಮಡಿವಾಳ ಮಾಚಿದೇವರ ಪಡೆಯ ರಕ್ಷಣೆಯಲ್ಲಿ ಕವಿ-ತತ್ವಜ್ಞಾನಿ ಚೆನ್ನಬಸವಣ್ಣನವರು ಉಳುವೆಯ ಹಾದಿ ಹಿಡಿದ ಮೇಲೂ ಅಳಿಯ ಬಿಜ್ಜಳನ ಸೈನಿಕರು ವಚನಕಾರರ ಬೆನ್ನು ಹತ್ತುತ್ತಲೇ ಇದ್ದರು. ಮಡಿವಾಳ ಮಾಚಿದೇವರ ನೇತೃತ್ವದಲ್ಲಿ ವಚನಕಾರ, ವಚನಕಾರ್ತಿಯರು ಯೋಧರೂ ಆಗಿ ಹೋರಾಡಿದರು. ಸಾವು, ನೋವುಗಳನ್ನು ಅನುಭವಿಸಿದರು. ಇತ್ತ ಚೆನ್ನಬಸವಣ್ಣನವರ ತಾಯಿ, ಬಸವಣ್ಣನವರ ಸೋದರಿ, ಅಕ್ಕನಾಗಮ್ಮನವರು ಶರಣರಿಗೆ ವಚನರಕ್ಷಣೆಯ ಮಾರ್ಗಗಳನ್ನು ಹೇಳಿಕೊಡುತ್ತಿದ್ದರು. ವಚನಕಾರ ಡೋಹರ ಕಕ್ಕಯ್ಯನವರು ಕಕ್ಕೇರಿಯಲ್ಲಿ ಹುತಾತ್ಮರಾದರು.
ವಚನಸಂಗಾತಿಗಳನ್ನು ಕಳೆದುಕೊಂಡು ಮುನ್ನಡೆದ ಚೆನ್ನಬಸವಣ್ಣನವರು ಕೊನೆಗೆ ಅಳಿದುಳಿದ ಶರಣ ಶರಣೆಯರ ಜೊತೆ ಉಳುವೆಯ ಕಡೆಗೆ ಆರಂಭಿಸಿದ ಪಯಣದ ವಿವರಗಳು ನಮ್ಮಲ್ಲಿ ರುದ್ರ ವಿಷಾದ ಹುಟ್ಟಿಸುತ್ತವೆ. ‘ನಡೆದು ದಾರಿಯ ಪಾದಗಳು ಬಳಲಿದವು’ ಎನ್ನುತ್ತಾನೆ ಕವಿ. ಈ ಪಯಣದ ಕೊನೆಯ ಘಟ್ಟದಲ್ಲಿ ಕರಿ ಹೊಳೆ (ಕಾಳೀ ನದಿ) ಎದುರಾಗುತ್ತದೆ. ಆವರೆಗಿನ ಕಾಳಗಗಳಲ್ಲಿ ತೊಡಗಿ ರಕ್ತಸಿಕ್ತವಾಗಿದ್ದ ತಮ್ಮ ಕತ್ತಿಯನ್ನು ಕರಿ ಹೊಳೆಯಲ್ಲಿ ತೊಳೆದಿಟ್ಟ ಮಡಿವಾಳ ಮಾಚಿದೇವರು ಪಿಪ್ಪಲಿಗೆ ಎಂಬ ಊರಿಗೆ ಹೊರಟು ನಿಂತು, ಚೆನ್ನಬಸವಣ್ಣನವರನ್ನು ಬೀಳ್ಕೊಡುತ್ತಾ ಹೇಳುತ್ತಾರೆ: ‘ನೀವು ಉಳುವೆಗೆ ಪೋಗಿ, ಯಾವ ಭಯ ನಮಗಿಲ್ಲ…ನಾವು ಪಿಪ್ಪಲಿಗೆಯ ಠಾವಿಗೈದುವೆವು.’ ಆವರೆಗೆ ತಮ್ಮ ಬೆಂಗಾವಲಿಗೆ ನಿಂತ ತುರಗ ವಜೀರರನ್ನು ಹರಸಿದ ಚೆನ್ನಬಸವಣ್ಣನವರು ಅವರನ್ನು ದಿಳ್ಳಿಪುರಿಗೆ ಕಳಿಸಿಕೊಡುತ್ತಾರೆ.
ಇದಾದ ಕೆಲ ದಿನಗಳಲ್ಲಿ ಉಳುಮೆ ತಲಪಿದ ಶರಣರು ‘ಗಿರಿಯ ಮಧ್ಯದೆಸೆಯೊಳಗಿರುವ ಮಹಮನೆಯನ್ನು ಕಂಡರು.’ ಉಳುಮೆ ತಲುಪಿದ ಮೇಲೂ ಶತ್ರುಗಳ ಭೀತಿಯಿದ್ದ ಕಾರಣಕ್ಕಾಗಿ ಅಕ್ಕನಾಗಮ್ಮ, ನುಲಿಯ ಚಂದಯ್ಯ, ಕಿನ್ನರಿ ಬೊಮ್ಮಯ್ಯ, ಉಳಿದ ಶರಣರು ಸುತ್ತಣ ಗುಹೆಗಳಲ್ಲಿ ವಾಸಿಸಿರಬಹುದು ಎನ್ನುವವರಿದ್ದಾರೆ. ಕಲ್ಯಾಣದಲ್ಲಿ ಅಲ್ಲಮಪ್ರಭುಗಳ ಗೈರುಹಾಜರಿಯಲ್ಲಿ ಶೂನ್ಯ ಸಿಂಹಾಸನ ನಿರ್ವಹಣೆ ಮಾಡುತ್ತಿದ್ದ ಚೆನ್ನಬಸವಣ್ಣನವರು ಉಳುವೆಯಲ್ಲಿ ಮತ್ತೆ ಮಹಾಮನೆಯ ಹಿರಿಮೆಯನ್ನು ಮರು ಸೃಷ್ಟಿಸಲು ಪ್ರಯತ್ನಿಸಿದರು ಎಂದು ಊಹಿಸಬಹುದು…
ಚರಿತ್ರೆಯ ಮಹಾಸಾಧನೆಗಳ ಕಾಲ ಕಣ್ಣ ಮುಂದೆಯೇ ಕಣ್ಮರೆಯಾದದ್ದನ್ನು ಕಂಡವರಲ್ಲಿ ಎಂಥ ದಿಗ್ಭ್ರಮೆ ಹುಟ್ಟಿರಬಹುದು! ತಾವು ಸಾಕ್ಷಿಯಾಗಿದ್ದ ಅರ್ಥಪೂರ್ಣ ಘಟ್ಟಗಳನ್ನು ಮತ್ತೆ ಸೃಷ್ಟಿ ಮಾಡುವ ಕೆಲಸ ಎಂಥ ಸವಾಲಾಗಿರಬಲ್ಲದು! ಈ ಸ್ಥಿತಿಗಳನ್ನು ಚೆನ್ನಬಸವಣ್ಣ ಹಾಗೂ ಶರಣರ ಉಳುವೆಯ ಪಯಣ, ಆ ಪಯಣದ ನಂತರದ ದಿನಗಳು ಸೂಚಿಸುತ್ತವೆ. ಇದೆಲ್ಲದರ ನಡುವೆಯೂ, ಕಲ್ಯಾಣದ ಕೋಲಾಹಲದಲ್ಲಿ ಕಣ್ಮರೆಯಾಗಲಿದ್ದ ವಚನಗಳಲ್ಲಿ ಹಲವಾದರೂ ಈ ಪಯಣದಲ್ಲಿ ಉಳಿದುಕೊಂಡಂತೆ ಕಾಣುತ್ತದೆ. ವಚನ ಸಾಹಿತ್ಯ ಉಳುವೆಯಲ್ಲಿ ಉಳಿದುಕೊಂಡದ್ದು ಹೀಗೆ. ಕಾಲಾನಂತರ ಉಳುವೆಯಿಂದಲೂ ಕನ್ನಡನಾಡಿನ ಹಲವು ದಿಕ್ಕುಗಳಿಗೆ ಹೊರಟ ಶರಣರು ವಚನಗಳನ್ನು ಕಾಪಾಡಿಕೊಂಡು, ಅವನ್ನು ಪ್ರತಿ ಮಾಡುತ್ತಾ ಕನ್ನಡನಾಡಿನ ಬೇರೆ ಬೇರೆ ಭಾಗಗಳಲ್ಲೂ ಹಂಚುತ್ತಾ ಹೋಗಿರಬಹುದು.
ಸಾಹಿತ್ಯ ಕೃತಿಗಳು ಕೊಡುವ ವಚನಯುಗದ ಈ ಚಿತ್ರಗಳು ಇತಿಹಾಸದ ವಿವರಗಳಿಗೆ ಎಷ್ಟು ಹೊಂದಿಕೊಳ್ಳುತ್ತವೆ ಎಂಬುದನ್ನು ಆ ಕಾಲದ ಇತಿಹಾಸವನ್ನು ಅಧಿಕೃತವಾಗಿ ಹೇಳಬಲ್ಲ ವಿದ್ವಾಂಸರು ನಿರ್ಧರಿಸಬಲ್ಲರು. ಆದರೆ, ‘ಹಾಡೆ ಹಾದಿಯ ತೋರಿತು’ ಎಂಬ ಕೆ.ಎಸ್.ನರಸಿಂಹಸ್ವಾಮಿಯವರ ರೂಪಕದ ಅರ್ಥವನ್ನು ನೀವು ಒಪ್ಪುವುದಾದರೆ, ಈವರೆಗೆ ಕೊಟ್ಟಿರುವ ವಚನ ಪಯಣದ ಚಿತ್ರಗಳು ಚೆನ್ನಪ್ಪಕವಿಯ ಹಾಡು ತೋರಿದ ಹಾದಿಯಲ್ಲಿ ನನ್ನ ಕಣ್ಣಿಗೆ ಕಂಡವು ಎಂದಷ್ಟೇ ಹೇಳಬಲ್ಲೆ.
ಇವತ್ತಿಗೂ ಉಳುವೆಯಲ್ಲಿ ಚೆನ್ನಬಸವಣ್ಣನವರ ಗದ್ದುಗೆಯಿದೆ. ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ವರ್ಷ ಬಸವಣ್ಣನವರು ನಮ್ಮ ಸಾಂಸ್ಕೃತಿಕ ನಾಯಕರೆಂದು ಕರ್ನಾಟಕ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇದೆಲ್ಲ ಒಟ್ಟಿಗೆ ಸೇರಿ, ಉಳವಿಯ ಜಾತ್ರೆಯ ಸಂಭ್ರಮದಲ್ಲಿ ವಚನಗಳ ಸಮಾನತೆಯ ಆಶಯ ಮೊಳಗುವಂತಾದರೆ ಜಾತ್ರೆಗೆ ಹೊಸ ಅರ್ಥ ಬರಬಲ್ಲದು. ಉಳವಿಯಲ್ಲಿ ಕೆಲ ಕಾಲ ನೆಲೆ ನಿಂತ ಅನನ್ಯ ವಚನಕಾರ ಚೆನ್ನಬಸವಣ್ಣನವರ ವಚನಗಳ ಹೊಸ ಹೊಸ ಓದು, ವ್ಯಾಖ್ಯಾನಗಳು ಕೂಡ ಉಳವಿ ಜಾತ್ರೆಯ ಸಂಭ್ರಮಕ್ಕೆ ಗಂಭೀರ ಸಾಂಸ್ಕೃತಿಕ ಸ್ಪರ್ಶ ನೀಡಬಲ್ಲವು. ಆ ಕೆಲಸ ಮುಂದಿನ ವರ್ಷದ ಜಾತ್ರೆಯಲ್ಲಾದರೂ ಆಗಲಿ!
ವಚನಕಾರರು ಉಳುವೆಯವರೆಗೂ ಕಾಲ್ನಡಿಗೆಯಲ್ಲಿ ಹೊರಟು ಕನ್ನಡದ ಅಪೂರ್ವ ವಚನ ಸಾಹಿತ್ಯಪಯಣವನ್ನು ಮುಂದುವರಿಸಿದ ರೀತಿಯಂತೂ ನಾವು ಇತಿಹಾಸದ ಪುಟಗಳಿಂದ ಪಡೆಯಲೇಬೇಕಾದ ಸ್ಫೂರ್ತಿಗಳು ಎಂಥವು ಎಂಬುದನ್ನು ಸೂಚಿಸುತ್ತದೆ. ಇತಿಹಾಸದ ರಾಡಿಗಳನ್ನು ಹೊರತೆಗೆದು ಹರಡಿ ಶಾಂತಿ ಕದಡುವ ಗಲಭೆಕೋರ ಮನಸ್ಸುಗಳು ಇತಿಹಾಸದ ಇಂಥ ದಿವ್ಯ ಸಾಂಸ್ಕೃತಿಕ ಪಯಣಗಳಿಂದ ಪಾಠ ಕಲಿಯುವ ಕಾಲ ಬರಬಹುದೆ?
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
ಮೊನ್ನೆ ‘ಶೂದ್ರ’ ಪತ್ರಿಕೆಯ ಐವತ್ತು ವರ್ಷದ ನಡಿಗೆಯ ಬಗ್ಗೆ ಟಿಪ್ಪಣಿ ಬರೆಯಲು ಶುರು ಮಾಡಿದಾಗ ಹಿರಿಯ ಲೇಖಕರಾದ ಎಚ್.ಎಸ್. ರಾಘವೇಂದ್ರರಾವ್ ಈಚೆಗೆ ನನಗೆ ಬರೆದ ಮಾತು ನೆನಪಾಯಿತು. ಆ ಮಾತಿಗೂ ಸಾಹಿತ್ಯ ಲೋಕದಲ್ಲಿ ‘ಶೂದ್ರ’ಕ್ಕೆ ಇದ್ದ ಮಹತ್ವಕ್ಕೂ ಸಂಬಂಧವಿರುವುದರಿಂದ ಮಾತ್ರ ಅದನ್ನಿಲ್ಲಿ ಉಲ್ಲೇಖಿಸುವೆ: “…‘ಶೂದ್ರ’ದಲ್ಲಿ ಪ್ರಕಟವಾದ ನಿಮ್ಮ ‘ಗದ್ದೆ ಬದುವಿನಗುಂಟ ಕಾರ್ಲ್ ಮಾರ್ಕ್ಸ್ ಎಂಬೋನು’ (1988) ಪದ್ಯ ಓದಿ ನಿಮ್ಮ ಬರವಣಿಗೆಯ ಬಗ್ಗೆ ಆಸಕ್ತಿ ಹುಟ್ಟಿತು’ ಎಂದು ನನ್ನ ಪದ್ಯವೊಂದನ್ನು ಎಚ್ಚೆಸ್ಸಾರ್ ನೆನೆದಿದ್ದರು.
ಇದರ ಜೊತೆಗೇ ಇನ್ನೊಂದು ಘಟನೆ ನೆನಪಾಗುತ್ತದೆ. ಲಂಕೇಶರ ‘ಟೀಕೆ ಟಿಪ್ಪಣಿ’ಯ ಹತ್ತು ವರ್ಷದ ಬರಹಗಳು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಬಂದಾಗ ಶೂದ್ರ ಶ್ರೀನಿವಾಸ್ ಆ ಪುಸ್ತಕದ ಬಗ್ಗೆ ‘ಶೂದ್ರ’ಕ್ಕೆ ಬರೆಯಲು ಹೇಳಿದರು. ‘ಲಂಕೇಶರ ಟೀಕೆ ಟಿಪ್ಪಣಿ: ಒಂದು ಖಾಸಗಿ ಪ್ರತಿಕ್ರಿಯೆ’ ಎಂಬ ಪುಟ್ಟ ಬರಹದಲ್ಲಿ ‘ಟೀಕೆ ಟಿಪ್ಪಣಿ’ಯ ಬರಹಗಳ ಬಗ್ಗೆ ನನ್ನ ಮೆಚ್ಚುಗೆಯನ್ನೂ, ಒಂದೆರಡು ಆಕ್ಷೇಪಗಳನ್ನೂ ಬರೆದ ನೆನಪು. ಅದು ಲಂಕೇಶರ ಕಣ್ಣಿಗೆ ಬಿದ್ದು, ಅವರು ‘ಲಂಕೇಶ್ ಪತ್ರಿಕೆ’ಯಲ್ಲಿ ಪುಸ್ತಕ ವಿಮರ್ಶೆ ಬರೆಯಲು ನನಗೆ ಸೂಚಿಸಿದಂತೆ ಕಾಣುತ್ತದೆ. ಕಾರಣ, ‘ಲಂಕೇಶ್ ಪತ್ರಿಕೆ’ಯ ಆಫೀಸಿನಿಂದ ಬಿಳುಮನೆ ರಾಮದಾಸ್ ಅವರ ‘ವ್ಯಾಮೋಹ’ ಕಾದಂಬರಿ ತಂದುಕೊಟ್ಟು, ‘ಲಂಕೇಶ್ ಪತ್ರಿಕೆಗೆ ವಿಮರ್ಶೆ ಮಾಡಬೇಕು ಅಂತ ಮೇಷ್ಟ್ರು ಹೇಳಿದಾರೆ’ ಎಂದು ಪುಳಕ ಹುಟ್ಟಿಸಿದವರು ಶ್ರೀನಿವಾಸ್ ಅವರೇ!
ಇವೆರಡೂ ಕೇವಲ ವೈಯಕ್ತಿಕ ಪ್ರಸಂಗಗಳಲ್ಲ; ಪ್ರಾತಿನಿಧಿಕ ಪ್ರಸಂಗಗಳು. ಅವತ್ತು ‘ಶೂದ್ರ’ದಂಥ ಸಾಹಿತ್ಯ ಪತ್ರಿಕೆಗಳ ಬರಹಗಳನ್ನು ಕನ್ನಡದ ದೊಡ್ಡ ಲೇಖಕರು ಗಮನಿಸುವ ಸಾಧ್ಯತೆ ಇತ್ತು. ಹಾಗೆ ಗಮನಿಸುತ್ತಾ, ಕಾಲಕಾಲಕ್ಕೆ ಎಳೆಯರನ್ನು ಬೆಳೆಸಿ, ಒಳ್ಳೆಯ ‘ಸಾಹಿತ್ಯಕ ಸಂಸ್ಕೃತಿ’ಯನ್ನು ರೂಪಿಸುವ ಹಂಬಲವೂ ಅಂಥ ಹಿರಿಯರಲ್ಲಿದ್ದಂತಿತ್ತು. ನನಗಾದ ಅನುಭವ ಇತರರಿಗೂ ಆಗಿರಬಹುದು. ಕನ್ನಡ ಸಂಸ್ಕೃತಿಯಲ್ಲಿ ಇಂಥ ಚಾರಿತ್ರಿಕ ಮಹತ್ವವುಳ್ಳ ‘ಶೂದ್ರ’ ತಿಂಗಳ ಪತ್ರಿಕೆ ನಡೆದು ಬಂದ ಹಾದಿಯ ಪುಟ್ಟ ಹಿನ್ನೋಟ:
ಇಸವಿ 1973. ಸಮಾಜವಾದಿ ಯುವಜನ ಸಭಾ, ವೈಚಾರಿಕ ಪ್ರತಿಭಟನೆಗಳಲ್ಲಿ ಉತ್ಸಾಹದಿಂದ ಓಡಾಡುತ್ತಿದ್ದ ಎಂ. ಶ್ರೀನಿವಾಸರೆಡ್ಡಿ ಒಂದು ಸಾಂಸ್ಕೃತಿಕ ಪತ್ರಿಕೆ ಮಾಡಬೇಕೆಂದು ಎಂ.ಡಿ. ನಂಜುಂಡಸ್ವಾಮಿಯವರ ಬಳಿ ಬಂದರು. ಎಂಡಿಎನ್ ಈ ಪತ್ರಿಕೆಗೆ ‘ಶೂದ್ರ’ ಎಂದು ಹೆಸರಿಟ್ಟು, ಮೊದಲ ಸಂಚಿಕೆಯ ಮುಖಪುಟ ರೂಪಿಸಿದರು. ಸಮಾಜವಾದಿ ಯುವಜನ ಸಭಾದ ಮೂಲಕ ತರುಣ, ತರುಣಿಯರನ್ನು ದಿಟ್ಟ, ಸ್ವತಂತ್ರ ವ್ಯಕ್ತಿಗಳನ್ನಾಗಿ ರೂಪಿಸುತ್ತಿದ್ದ ಎಂಡಿಎನ್ ಗ್ರೀಕ್ ತತ್ವಜ್ಞಾನಿ ಸಾಕ್ರೆಟೀಸ್ ಮಾಡಿದಂಥ ಕೆಲಸವನ್ನು ಕನ್ನಡನಾಡಿನಲ್ಲಿ ಮುಂದುವರಿಸುತ್ತಿದ್ದರು.
23 ಸೆಪ್ಟೆಂಬರ್ 1973. ಮೈಸೂರಿನಲ್ಲಿ ನಡೆದ ಐತಿಹಾಸಿಕ ಜಾತಿವಿನಾಶ ಸಮ್ಮೇಳನದಲ್ಲಿ ‘ಶೂದ್ರ’ದ ಮೊದಲ ಸಂಚಿಕೆಯನ್ನು ಹಂಚಿದ ಶ್ರೀನಿವಾಸ್, ಸಮ್ಮೇಳನ ಉದ್ಘಾಟಿಸಿದ ಕುವೆಂಪು ಅವರಿಗೂ ಪತ್ರಿಕೆ ಕೊಟ್ಟರು.
ಕುವೆಂಪು: ನಿಮ್ಮ ಹೆಸರೇನು?
ಸಂಪಾದಕ: ಶ್ರೀನಿವಾಸ ರೆಡ್ಡಿ.
ಕುವೆಂಪು: ನೀವು ಶೂದ್ರ ಶ್ರೀನಿವಾಸ.
ಅವತ್ತಿನಿಂದ ಸಂಪಾದಕರು ಶೂದ್ರ ಶ್ರೀನಿವಾಸ್ ಅಥವಾ ‘ಶೂದ್ರ’ ಆದರು! ಆಗ ‘ಶ್ರೀನಿವಾಸ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾತ್ರ ‘ಶೂದ್ರ’ದ ಸಂಪಾದಕರನ್ನು ‘ನಾನು ನಿಮ್ಮನ್ನ ಶೂದ್ರ ಅನ್ನೋಲ್ಲಪ್ಪ! ಶ್ರೀನಿವಾಸ ರೆಡ್ಡಿ ಅಂತಲೇ ಕರೀತೀನಿ’ ಎನ್ನುತ್ತಿದ್ದರಂತೆ; ಇದು ಕೂಡ ಮಾಸ್ತಿ-ಕುವೆಂಪು ನಡುವಣ ಸಾಂಸ್ಕೃತಿಕ ವಾಗ್ವಾದದ ಅಡಿಟಿಪ್ಪಣಿಯಂತಿದೆ!
ಈಚೆಗೆ ಗೆಳೆಯ-ವಿಮರ್ಶಕ ಎಚ್. ದಂಡಪ್ಪ ಸಂಪಾದಿಸಿದ ‘ಶೂದ್ರ ಶ್ರೀನಿವಾಸ್: ಬದುಕು ಬರಹ’ ಪುಸ್ತಕ ‘ಶೂದ್ರ’ ಪತ್ರಿಕೆ, ಹಾಗೂ ಲೇಖಕ-ಸಂಪಾದಕ ಶ್ರೀನಿವಾಸರ ಸಾಧನೆಗಳನ್ನು ದಾಖಲಿಸಿದೆ. ಸೋಷಲಿಸ್ಟ್ ಚಿಂತನೆಗಳ ಜೊತೆಜೊತೆಗೇ ಬೆಳೆದ ಶ್ರೀನಿವಾಸ್ ಜನಪರ ಚಳುವಳಿಗಳನ್ನು ಹತ್ತಿರದಿಂದ ಬಲ್ಲವರು. ಕನ್ನಡದ ಹಿರಿಯ, ಕಿರಿಯ ಸಾಹಿತಿಗಳ ಒಡನಾಡುತ್ತಾ ಅವರ ಸರಸಮಯ-ವಿರಸಮಯ ಪ್ರಸಂಗಗಳಿಗೆ ಸಾಕ್ಷಿಯಾದವರು. ಸಂಪಾದಕರ ಈ ಬಗೆಯ ಪೂರ್ಣಾವಧಿ ಸಾರ್ವಜನಿಕ ಸಾಹಿತ್ಯಕ ಬದುಕು ‘ಶೂದ್ರ’ಕ್ಕೆ ನೆರವಾಗಿದೆ; ಎಪ್ಪತ್ತರ ದಶಕದಿಂದ ಬಹುತೇಕ ಪ್ರಗತಿಪರರು, ಉದಾರವಾದಿಗಳು, ಹಲವು ಪಂಥದವರು ಇಲ್ಲಿ ಬರೆದಿದ್ದಾರೆ. ಲಂಕೇಶ್, ಡಿ ಆರ್. ನಾಗರಾಜ್ ಥರದ ದೊಡ್ಡ ಲೇಖಕರಿಗೂ ಅವತ್ತು ‘ಶೂದ್ರ’ವೇ ವೇದಿಕೆಯಾಗಿತ್ತು. ಶಿವಪ್ರಕಾಶ್, ಕಂಬಾರ, ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿಯವರಂಥ ಕವಿಗಳು; ಸ.ಉಷಾ, ಭಾಗ್ಯಲಕ್ಷ್ಮಿ, ಪ್ರತಿಭಾ ನಂದಕುಮಾರ್, ಶಶಿಕಲಾ ವಸ್ತ್ರದ ಥರದ ಕವಯಿತ್ರಿಯರು; ಎಚ್. ಎಸ್. ರಾಘವೇಂದ್ರರಾವ್, ಜಿ. ರಾಜಶೇಖರ, ಕಿ.ರಂ. ನಾಗರಾಜ್, ಬಸವರಾಜ ಕಲ್ಗುಡಿಯವರಂಥ ವಿಮರ್ಶಕರು; ಚರಿತ್ರಕಾರ ಎಸ್.ಚಂದ್ರಶೇಖರ್, ಅರ್ಥಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್; ಕಲಾವಿಮರ್ಶಕರು, ಮನೋವಿಶ್ಲೇಷಕರು, ಸಮಾಜವಿಜ್ಞಾನಿಗಳು ‘ಶೂದ್ರ’ದಲ್ಲಿ ಬರೆದರು.
1974ರಲ್ಲಿ ‘ಇವು ಕವಿತೆಗಳೋ ಅಲ್ಲವೋ’ ಎಂಬ ಅನುಮಾನದಲ್ಲಿ ಇನ್ನೂ ಸ್ಕೂಲ್ ನೋಟ್ ಬುಕ್ಕಿನ ಹಾಳೆಗಳಲ್ಲಿದ್ದ ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಸಂಕಲನದ ಪದ್ಯಗಳನ್ನು ‘ಶೂದ್ರ’ ಧೈರ್ಯವಾಗಿ ಪ್ರಕಟಿಸಿತು. ನಾಲ್ಕು ಕನ್ನಡ ಸಾಹಿತ್ಯ ಚಳುವಳಿಗಳ ಸಂಗಾತಿಯಾಗಿದ್ದ ‘ಶೂದ್ರ’ದಲ್ಲಿ ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ ಮಾರ್ಗಗಳ ಥಿಯರಿಗಳು, ಬರಹಗಳು, ಈ ಮಾರ್ಗಗಳ ಜೊತೆಜೊತೆಗೇ ಸೃಷ್ಟಿಯಾದ ವಿಮರ್ಶೆಗಳು ವಿಕಾಸಗೊಂಡಿವೆ. ಸಮಾಜವಾದ, ಅಂಬೇಡ್ಕರ್‌ವಾದ, ಸ್ತ್ರೀವಾದ, ದಲಿತ ಚಳುವಳಿಗಳ ಥಿಯರಿಗಳು ಇಲ್ಲಿ ರೂಪುಗೊಂಡಿವೆ. ಜಾಗೃತ ಸಾಹಿತ್ಯ ಸಮ್ಮೇಳನಕ್ಕೂ ‘ಶೂದ್ರ’ ಜೊತೆಗಾರನಾಗಿತ್ತು. ಯಾವುದನ್ನೂ ಗಟ್ಟಿಯಾಗಿ ಘೋಷಿಸದೆ, ತಾನು ಚಾರಿತ್ರಿಕ ಮಹತ್ವದ ಕೆಲಸದಲ್ಲಿ ತೊಡಗಿದ್ದೇನೆಂಬ ಹಮ್ಮು ಸಂಪಾದಕರಲ್ಲೂ ಇಲ್ಲದೆ ಪ್ರಕಟವಾಗುತ್ತಿದ್ದ ಸಾಂಸ್ಕೃತಿಕ ಪತ್ರಿಕೆಯೊಂದು ಸಂಸ್ಕೃತಿ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡ ಅನನ್ಯ ಪರಿ ವಿಸ್ಮಯ ಹುಟ್ಟಿಸುತ್ತದೆ.
ಚಂದಾ ಕೊಡಲಿ, ಬಿಡಲಿ, ‘ಶೂದ್ರ’ ಹಲವು ಮುಖ್ಯ ಲೇಖಕ, ಲೇಖಕಿಯರ ಮನೆ ತಲುಪುತ್ತಿತ್ತು. ಸಂಪಾದಕರೇ ಪೋಸ್ಟ್ ಆಫೀಸಿಗೆ ಅಲೆಯುತ್ತಾ, ಟಿವಿಎಸ್ ವಾಹನದಲ್ಲಿ ಅಡ್ಡಾಡುತ್ತಾ, ‘ಶೂದ್ರ’ವನ್ನು ತಲುಪಿಸುತ್ತಿದ್ದರು. ಸಾಹಿತ್ಯ ಬರಹಗಳನ್ನು ಮೆಚ್ಚುವವರಿಗೆ, ರಿಸರ್ಚ್ ಮಾಡುವವರಿಗೆ, ವಿಮರ್ಶೆ ಬರೆಯುವುದನ್ನು ಕಲಿಯುವವರಿಗೆ ಇಲ್ಲಿ ಹಲವು ಮಾರ್ಗಗಳ ಬರಹಗಳಿರುತ್ತಿದ್ದವು. ಕನ್ನಡ ವಿಮರ್ಶಾ ಪರಿಭಾಷೆಯ ವಿಕಾಸ, ಇಂಗ್ಲಿಷ್ ಹಾಗೂ ಕನ್ನಡ ಟೀಚರುಗಳು ವಿಮರ್ಶೆಯನ್ನು ಬೆಳೆಸಿದ ಕನ್ನಡ ವಿಮರ್ಶೆಯ ಚರಿತ್ರೆಯ ಘಟ್ಟಗಳು ‘ಶೂದ್ರ’ದ ನಾಲ್ಕೂವರೆ ದಶಕಗಳ 400 ಸಂಚಿಕೆಗಳಲ್ಲಿ ದಾಖಲಾಗಿವೆ.
ಈ ನಡುವೆ ‘ಶೂದ್ರ’ ಮತ್ತು ಶ್ರೀನಿವಾಸ್ ಅನುಭವಿಸಿದ ಕಷ್ಟಗಳೂ ಹತ್ತಾರು. 1976ರ ಎಮರ್ಜೆನ್ಸಿಯ ಕಾಲದಲ್ಲಿ ಶ್ರೀನಿವಾಸ್ ಅರೆಸ್ಟಾದಾಗ ಅವರ ಮನೆಯಿಂದ ಪೊಲೀಸರು ವಶಪಡಿಸಿಕೊಂಡ ಪುಸ್ತಕಗಳಲ್ಲಿ ‘ಶೂದ್ರ’ದ ಆರಂಭದ ಸಂಚಿಕೆಗಳೂ ಇದ್ದವು. ಎಮರ್ಜೆನ್ಸಿಯಲ್ಲಿ ‘ಶೂದ್ರ’ವನ್ನು ಅಚ್ಚು ಹಾಕಲು ಹಿಂಜರಿದ ಮುದ್ರಕರೂ ಇದ್ದರು. ಅಂಥ ಕಾಲದಲ್ಲಿ ‘ಶೂದ್ರ’ವನ್ನು ಅಚ್ಚು ಮಾಡಿದ್ದಷ್ಟೇ ಅಲ್ಲ, ಹಲವು ಸಂಕಷ್ಟಗಳಲ್ಲಿ ಪತ್ರಿಕೆಯ ಜೊತೆ ಗಟ್ಟಿಯಾಗಿ ನಿಂತ ಇಳಾ ವಿಜಯಾ ಅವರು ‘ಇಳಾ ಮುದ್ರಣ’ದಲ್ಲಿ ಎಷ್ಟೋ ವರ್ಷ ಪತ್ರಿಕೆಯನ್ನು ಅಚ್ಚು ಹಾಕುತ್ತಿದ್ದರು. ಇವತ್ತಿಗೂ ‘ಶೂದ್ರ’ದ ಮೊದಲ ಸಂಚಿಕೆ ಸಂಪಾದಕರ ಬಳಿ ಇಲ್ಲ. ಈ ಅಂಕಣ ಓದುತ್ತಿರುವ ಯಾರ ಬಳಿಯಾದರೂ ‘ಶೂದ್ರ’ದ ಮೊದಲ ಸಂಚಿಕೆಯಿದ್ದರೆ ದಯಮಾಡಿ ತಿಳಿಸಿ.
ಹೈಸ್ಕೂಲ್ ಮೇಷ್ಟರ ಕೆಲಸ ಮಾಡುತ್ತಲೇ ಬೆಂಗಳೂರಿನ ಸೆಮಿನಾರುಗಳು, ಪ್ರಗತಿಪರ ರಾಜಕೀಯ ಚಟುವಟಿಕೆಗಳ ಜೊತೆಗಿರುತ್ತಿದ್ದ ಶ್ರೀನಿವಾಸ್ ಲೇಖನ, ಕವಿತೆ, ವಿಮರ್ಶೆಗಳನ್ನು ಕಾಡಿ ಬೇಡಿ ಬರೆಸಿ, ‘ಶೂದ್ರ’ವನ್ನು ತರುತ್ತಿದ್ದರು. ಮುದ್ರಣಾಲಯವನ್ನೂ ಶುರು ಮಾಡಿ ಸುಸ್ತಾದರು. ಪ್ರತಿ ಸಂಚಿಕೆಯ ತಯಾರಿಯ ಪ್ರಯಾಸ, ಪುಳಕಗಳನ್ನು ಅನುಭವಿಸಿದಂತೆಯೇ ಗೇಲಿ, ಅವಮಾನಗಳನ್ನೂ ನುಂಗಿಕೊಳ್ಳುತ್ತಿದ್ದರು. ‘ಓಕೇ ಓಕೇ ನೈಸ್ ನೈಸ್!’ ಎನ್ನುತ್ತಾ ಥಣ್ಣನೆಯ ಬಿಯರ್ ಗುಟುಕಿನಲ್ಲಿ ಲೇಖಕರ ಕುಟುಕುಗಳನ್ನು ನೆನೆದು ನಕ್ಕು ಮೀರುತ್ತಿದ್ದರು. ತಮ್ಮ ಕಾಳರಾತ್ರಿಗಳ ಅಲೆದಾಟದಲ್ಲಿ ಕಂಡ ಅಸ್ಪಷ್ಟ ಚಿತ್ರಗಳನ್ನು, ಸಾಹಿತ್ಯಲೋಕದ ಗಾಸಿಪ್ಪುಗಳನ್ನು ತಮ್ಮದೇ ಶೈಲಿಯ ವಿಚಿತ್ರ ಪ್ರಜ್ಞಾಪ್ರವಾಹದಲ್ಲಿ ಬರೆಯುತ್ತಾ ಕ್ರಿಯೇಟಿವ್ ಆಗುತ್ತಿದ್ದರು. ಹಟಾತ್ತನೆ ಎಲ್ಲೋ ಜಿಗಿವ ಶೂದ್ರ ವಾಕ್ಯಗಳು ಓದುಗರ ಗಲಿಬಿಲಿ, ಕಚಗುಳಿಗಳಿಗೂ ಕಾರಣವಾಗುತ್ತಿದ್ದವು!
ಇವತ್ತು ಹಿಂತಿರುಗಿ ನೋಡಿದರೆ, ಅವತ್ತು ‘ಶೂದ್ರ’ ಪತ್ರಿಕೆ ಜನಪ್ರಿಯ ಸಂಸ್ಕೃತಿಯ ಭರಾಟೆಯ ವಿರುದ್ಧ ತನ್ನ ಮಟ್ಟದಲ್ಲಿ ಗಂಭೀರವಾಗಿ ಸೆಣಸಿದ ಚಿತ್ರಗಳು ಕಾಣತೊಡಗುತ್ತವೆ. ಸಾವಿರ ಜನ ಹೊಸ ಲೇಖಕ, ಲೇಖಕಿಯರಿಗಾದರೂ ಬರೆವ ಆತ್ಮವಿಶ್ವಾಸ ಹುಟ್ಟಿ, ಅವರ ಬರವಣಿಗೆ ಬೆಳೆಯುವಲ್ಲಿ ‘ಶೂದ್ರ’ದ ಪಾಲೂ ಇರಬಲ್ಲದು. ಒಂದು ಕಾಲಕ್ಕೆ ಐನೂರು, ಸಾವಿರ ಪ್ರತಿಗಳಿಂದ ಹಿಡಿದು ತೊಂಬತ್ತರ ದಶಕದಲ್ಲಿ 3000 ಪ್ರತಿಗಳವರೆಗೂ ಅಚ್ಚಾದ ‘ಶೂದ್ರ’ಕ್ಕೆ ಎಂ.ಪಿ.ಪ್ರಕಾಶ್, ಬಿ. ಬಸವಲಿಂಗಪ್ಪ, ಕೆ.ಎಚ್. ರಂಗನಾಥ್, ಜೆ.ಎಚ್. ಪಟೇಲರಂಥ ಸೂಕ್ಷ್ಮ ರಾಜಕಾರಣಿಗಳೂ ಓದುಗರಾಗಿದ್ದರು.
ಇವೆಲ್ಲವೂ ಕಾಲದ ಕೂಸಾಗಿ ಹುಟ್ಟಿದ ಕನ್ನಡ ಸಾಹಿತ್ಯಪತ್ರಿಕೆಯೊಂದು ನಿರ್ವಹಿಸಿದ ಜವಾಬ್ದಾರಿಗಳನ್ನು ಸೂಚಿಸುತ್ತವೆ. ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಿ, ವ್ಯವಧಾನದಿಂದ, ಆತ್ಮಪರೀಕ್ಷೆಯ ಮೂಲಕ ಹುಟ್ಟುವ ಬರವಣಿಗೆಗೆ ವೇದಿಕೆಯಾಗುವ ‘ಶೂದ್ರ’ದಂಥ ಪತ್ರಿಕೆಗಳಿಂದಲೂ ಸೂಕ್ಷ್ಮಜೀವಿಗಳು ಸೃಷ್ಟಿಯಾಗುತ್ತಾರೆ; ಲೇಖಕ, ಲೇಖಕಿಯರಾಗಿ, ಬುದ್ಧಿಜೀವಿಗಳಾಗಿ ಬೆಳೆಯುತ್ತಾರೆ. ಈಗ ಮತ್ತೆ ಬರಲಾರಂಭಿಸಿರುವ ಆರ್. ಜಿ. ಹಳ್ಳಿ ನಾಗರಾಜ್-ಪುಷ್ಪ ಅವರ ‘ಅನ್ವೇಷಣೆ’ಯಾಗಲೀ, ಹೊಸ ತಲೆಮಾರಿನ ಟಿ.ಎಸ್. ಗೊರವರ್ ಸಂಪಾದಿಸುವ ‘ಅಕ್ಷರ ಸಂಗಾತ’ವಾಗಲೀ ಈ ಥರದ ಜವಾಬ್ದಾರಿಗಳನ್ನು ಈ ಕಾಲದಲ್ಲಿ ಮುಂದುವರಿಸಲು ‘ಶೂದ್ರ’ದ ನಲವತ್ತೈದು ವರ್ಷಗಳ ನಡಿಗೆ ಅಪೂರ್ವ ಪ್ರೇರಣೆಯಾಗಬಲ್ಲದು.
2018ರವರೆಗೂ ಬಂದ ‘ಶೂದ್ರ’ದ ಎಷ್ಟೋ ಸಂಚಿಕೆಗಳು ಸಿಗದಿರುವ ಕಾಲದಲ್ಲಿ ಲೇಖಕಿ ಸಂಧ್ಯಾರೆಡ್ಡಿ ತಮ್ಮ ಬಳಿ ಇದ್ದ ಸಂಚಿಕೆಗಳನ್ನು ಬೈಂಡ್ ಮಾಡಿಸಿ ಸಂಪಾದಕರಿಗೆ ಕೊಟ್ಟಿದ್ದಾರೆ. ಶೂದ್ರ ಸಂಚಿಕೆಗಳು ಡಿಜಿಟಲೈಸ್ ಆಗುವ ಕಾಲವೂ ಬರಲಿದೆ. ಐವತ್ತು ವರ್ಷಗಳ ಕೆಳಗೆ ಅಂಬೆಗಾಲಿಟ್ಟ ‘ಶೂದ್ರ’ದ ನಡಿಗೆ ಇನ್ನೂ ನಿಂತಿಲ್ಲ! ಲಾಂಗ್ ಲಿವ್ ಶೂದ್ರ!
ಕಾಮೆಂಟ್ ಸೆಕ್ಷನ್: ಪುಟ್ಟ ಸೂಚನೆ: ಈ ಅಂಕಣ ಓದಿ ನೀವು ಬರೆಯುವ ಕಾಮೆಂಟುಗಳು ಅಡ್ಮಿನ್ ಗಮನಕ್ಕೆ ಬಂದ ನಂತರ ಪ್ರಕಟವಾಗುತ್ತವೆ. ಮೊದಲ ಕಾಲಂನಲ್ಲಿ ನಿಮ್ಮ ಹೆಸರು, ಅಥವಾ ಇನಿಶಿಯಲ್ಸ್, ಅಥವಾ ಸಂಕ್ಷಿಪ್ತನಾಮ; ಎರಡನೇ ಕಾಲಂನಲ್ಲಿ ನಿಮ್ಮ ಯಾವುದಾದರೂ ಮೇಲ್ ಐಡಿ ನಮೂದಿಸಿ. ಹೆಸರು ಅಥವಾ ಸಂಕ್ಷಿಪ್ತನಾಮ ಮಾತ್ರ ಪ್ರಕಟವಾಗುತ್ತದೆ. ಮೇಲ್ ಐಡಿ ಪ್ರಕಟವಾಗುವುದಿಲ್ಲ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
ಪ್ರೇಮಿಗಳ ದಿನ ಹತ್ತಿರ ಬರುತ್ತಿರುವುದನ್ನು ಗಮನಿಸುತ್ತಾ, ಪ್ರಖ್ಯಾತ ಪ್ರೇಮಪದ್ಯಗಳ ಕಡೆಗೆ ಕಣ್ಣಾಡಿಸಲು ನನ್ನ ‘ಕಿಂಡಲ್’ನಲ್ಲಿರುವ UNTIL I LOVED I NEVER LIVED ಸಂಗ್ರಹ ತೆರೆದೆ. ಟೈಟಲ್ ಕೆಳಗೆ ‘ಎ ಲಿಟರರಿ ಸೆಲೆಬ್ರೇಶನ್ ಆಫ್ ಲವ್ ಇನ್ ಆಲ್ ಇಟ್ಸ್ ಫಾರ್ಮ್ಸ್’ ಎಂಬ ಟ್ಯಾಗ್ ಲೈನ್!
ಈ ಪುಸ್ತಕದಲ್ಲಿ ಈಚೆಗೆ ನನಗೆ ಪ್ರಿಯವಾದ ಕವಯಿತ್ರಿಯೊಬ್ಬಳಿದ್ದಾಳೆ. ಎರಡು ವರ್ಷಗಳ ಕೆಳಗೆ ನಾನು ಬರೆದ ‘ಕವಿಜೋಡಿಯ ಆತ್ಮಗೀತ’ ಕಥಾಕಾವ್ಯ ಓದಿದ ಇಂಗ್ಲಿಷ್ ಪ್ರೊಫೆಸರೊಬ್ಬರು ಎಲಿಝಬೆತ್ ಬ್ಯಾರೆಟ್ ಬ್ರೌನಿಂಗ್ ಕವಿತೆಗಳನ್ನು ನೆನಪಿಸಿದರು. ಎಲಿಝಬೆತ್ ಕಾವ್ಯಲೋಕಕ್ಕೆ ಕೈಚಾಚಿದಂತೆಲ್ಲ ಆ ಕೋಮಲತೆಯಲ್ಲಿ ಕರಗಿ ಹೋಗತೊಡಗಿದೆ.
ಇಂಗ್ಲಿಷ್ ಸಾಹಿತ್ಯದ ವಿಕ್ಟೋರಿಯನ್ ಯುಗದ ಕವಿಸಂಗಾತಿಗಳಾದ ಎಲಿಝಬೆತ್ ಬ್ಯಾರೆಟ್ ಬ್ರೌನಿಂಗ್ ಹಾಗೂ ಅವಳ ಪತಿ-ಸಖ ರಾಬರ್ಟ್ ಬ್ರೌನಿಂಗ್ ಇವರ ಕಾವ್ಯಲೋಕ ನಿಮಗೆ ಪರಿಚಿತವಿರಬಹುದು. ಎಲಿಝಬೆತ್ ಕವಿತೆಗಳನ್ನು ಓದುವಾಗಲೆಲ್ಲ ನನ್ನ ಕಣ್ಣೆದುರು ಮೂಡುವ ಚಿತ್ರ: ಪುಟ್ಟ ಹೆಣ್ಣುಮಗುವೊಂದು ಕೆಂಪು ತುಟಿ ಅರಳಿಸಿ ಕೇಡಿನ ಲವಲೇಶವೂ ಇಲ್ಲದೆ ಮುಗ್ಧವಾಗಿ ಕಣ್ಣರಳಿಸಿ ತನಗೆ ತಾನೇ ಏನೋ ಉಸುರಿಕೊಳ್ಳುತ್ತಿದೆ! ಎಲಿಝಬೆತ್ ಪದ್ಯವೊಂದರ ಒಂದು ಕೋಮಲ ಪಂಕ್ತಿ:
ಅವನು ಮೊಟ್ಟ ಮೊದಲು ಮುತ್ತಿಡುವಾಗ
ನಾ ಬರೆವ ಕೈ ಬೆರಳುಗಳಿಗೆ ಮುತ್ತಿಟ್ಟ
ಆ ಚಣದಿಂದ ಈ ಬೆರಳುಗಳು ಶ್ವೇತ, ಶುಭ್ರ…
ಎಲಿಝಬೆತ್ ಬರೆದ ಸಾನೆಟ್ ‘How Do I Love Thee, Let Me Count the Ways’ ಪ್ರೇಮಿಗಳ ಕೈಪಿಡಿಯಂತಿದೆ:
‘ನಿನ್ನ ಹೇಗೆಲ್ಲ ಪ್ರೀತಿಸುವೆನು? ಆ ಪ್ರೀತಿಯ ರೀತಿಗಳ ಎಣಿಸಿ ನೋಡುವೆನು’ ಎಂದು ಶುರುವಾಗುವ ಕವಿತೆಯಲ್ಲಿನ ಹೆಣ್ಣು ‘ನೀ ನನ್ನ ಕಣ್ಣೆದುರು ಇಲ್ಲ ಎನ್ನಿಸಿದಾಗ, ನನ್ನಾತ್ಮಕ್ಕೆ ನಿಲುಕುವ ಆಳ ಅಗಲ ಎತ್ತರಗಳುದ್ದಕ್ಕೂ ನಿನ್ನ ಪ್ರೀತಿಸುವೆ..’ ಎನ್ನುವಳು. ಪ್ರೀತಿಯ ಸುಂದರ ಎಳೆಗಳನ್ನು ಸಂಭ್ರಮಿಸುತ್ತಾ ಕೊನೆಗೆ, ‘ನನ್ನಿಡೀ ಬದುಕಿನ ಉಸಿರು, ನಗೆ, ಕಣ್ಣೀರಿನ ಜೊತೆಜೊತೆಗೆ ನಿನ್ನ ಪ್ರೀತಿಸುವೆ/ ದೇವರ ದಯೆಯಿದ್ದರೆ…ಮರಣದ ನಂತರ ನಿನ್ನ ಇನ್ನಷ್ಟು ಗಾಢವಾಗಿ ಪ್ರೀತಿಸುವೆ’ ಎನ್ನುವಳು.
ಎಲಿಝಬೆತ್ ಪ್ರೀತಿಯ ಮತ್ತೊಂದು ಮಿಂಚು:
ನೀನು ಏನಾಗಿರುವೆ ಅದಕಾಗಿಯಷ್ಟೆ ನಿನ್ನ ಪ್ರೀತಿಸುವುದಿಲ್ಲ;
ಅದಕಿಂತ ಮಿಗಿಲಾಗಿ,
ನಿನ್ನೊಡನಿರುವಾಗ ನಾನು ಏನಾಗಿರುವೆ, ಅದಕಾಗಿ ನಿನ್ನ ಪ್ರೀತಿಸುವೆ…
ಮತ್ತೊಂದೆಡೆ, ಪ್ರಿಯತಮ ಕೊಟ್ಟ ಹೂಗಳನ್ನು ನೋಡನೋಡುತ್ತಾ ಹುಟ್ಟಿದ ಭಾವಗಳ ನಿವೇದನೆ: ‘ಈ ಹೂಗಳಿಂದ ಹುಟ್ಟಿದ ಹೂಭಾವಗಳನ್ನು ಕಾಪಿಡು- ನಾ ನಿನ್ನ ಹೂಗಳನ್ನು ಕಾಪಾಡಿದ ಹಾಗೆ.’ ಈ ಪದ್ಯದ ಕೊನೆಯ ಸಾಲುಗಳು:
ಈ ಹೂಗಳು ಎಲ್ಲಿ ಅಳಿಯಲಾರವೋ ಅಲ್ಲಿಡು.
ಈ ಹೂಗಳ ಬಣ್ಣಗೆಡದಂತೆ ನೋಡಿಕೊಳ್ಳಲು ನಿನ್ನ ಕಂಗಳಿಗೆ ಹೇಳು
ಈ ಹೂಗಳ ಬೇರುಗಳು ನನ್ನಾತ್ಮದಲ್ಲಿವೆಯೆಂದು ನಿನ್ನಾತ್ಮಕ್ಕೆ ಹೇಳು.
ಹತ್ತೊಂಬತ್ತನೇ ಶತಮಾನದ ಇಂಗ್ಲೆಂಡಿನಲ್ಲಿ ಇನ್ನೂ ಹುಡುಗಿಯರು ಶಾಲೆಗೆ ಹೋಗುವಂತಿರಲಿಲ್ಲ. ಮನೆ ಪಾಠ ಹೇಳಿಸಿಕೊಂಡ ಎಲಿಝಬೆತ್ (1806-1861) ಆರನೇ ವಯಸ್ಸಿಗಾಗಲೇ ಕಾದಂಬರಿ ಓದುತ್ತಿದ್ದಳು. ಎಂಟನೇ ವಯಸ್ಸಿನಲ್ಲಿ ಹೋಮರ್ ಮಹಾಕಾವ್ಯಗಳ ಅನುವಾದಗಳನ್ನು ಓದುತ್ತಿದ್ದಳು. ಹತ್ತನೇ ವಯಸ್ಸಿಗೆ ಗ್ರೀಕ್ ಕಲಿಯುತ್ತಿದ್ದಳು. ‘ದ ಬ್ಯಾಟಲ್ ಆಫ್ ಮ್ಯಾರಥಾನ್’ ಎಂಬ ಹೋಮರಿಕ್ ಮಹಾಕಾವ್ಯ ಬರೆಯುತ್ತಿದ್ದಳು. ವಿಕ್ಟೋರಿಯನ್ ಕವಿ ರಾಬರ್ಟ್ ಬ್ರೌನಿಂಗ್ ಜೊತೆ ಮದುವೆ. ಮುಂದೆ ಕವಿಗಳಿಬ್ಬರ ಸುಂದರ ಕಾವ್ಯಯಾನ…
'ವ್ಯಾಲಂಟೈನ್ಸ್ ಡೇ' ಸಂದರ್ಭದಲ್ಲಿ ಶೇಕ್‌ಸ್ಪಿಯರನ ‘ರೋಮಿಯೋ ಅಂಡ್ ಜೂಲಿಯೆಟ್’ ಬಿಟ್ಟು ಪ್ರೇಮದ ಮಾತಾಡುವುದುಂಟೆ! ಪ್ರೇಮದ ಮೂಲಮಾದರಿಯಂತಿರುವ ಈ ನಾಟಕದ ರಮ್ಯ ಭಾವಗೀತಾತ್ಮಕ ಭಾಗಗಳನ್ನು ಹತ್ತು ವರ್ಷಗಳ ಕೆಳಗೆ ಬರೆದ ನನ್ನ ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕಕ್ಕೆ ಹಾಡಾಗಿಸಿದಾಗಿನ ಕಂಪನ ನೆನಪಾಗುತ್ತದೆ. ಜೂಲಿಯಟ್ ಮೊಟ್ಟ ಮೊದಲ ಬಾರಿಗೆ ಕಂಡಾಗ ರೋಮಿಯೋ ಬಾಯಿಂದ ಚಿಮ್ಮುವ ಉದ್ಗಾರ: O, She doth teach the torches to burn bright…
ರೋಮಿಯೋ ಬಣ್ಣನೆ ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕದಲ್ಲಿ ಹಾಡಾಗಿ ರೂಪಾಂತರಗೊಂಡಿತು:
ಅವಳ ಕೆನ್ನೆಯ ಹೊಳಪು ಕಂಡು
ತಾರೆಗಳು ನಾಚಿ ಕಣ್ ಮುಚ್ಚುವುವು-
ಸೂರ್ಯಕಿರಣಗಳ ಕಂಡು ಹಣತೆ ನಾಚುವ ಹಾಗೆ!
ಸ್ವರ್ಗದಲಿ ಅವಳ ಕಣ್ಬೆಳಕು ಬಾನು ಬೆಳಗಿರಲು
ಹಕ್ಕಿಗಳು ಹಾಡುವುವು ಬೆಳಗಾಯಿತೆಂದು.
ರೋಮಿಯೋ-ಜೂಲಿಯಟ್ ಉತ್ಕಟ ಪ್ರೀತಿಯಲ್ಲಿ ಮಿಲನದ ಗಳಿಗೆಯಂತೆ ಸಾವಿನ ವಿದಾಯವೂ ಕಡು ರಮ್ಯ ಗಳಿಗೆಯಾಗುತ್ತದೆ: ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕದಲ್ಲಿ ರೋಮಿಯೋ ತೀರಿಕೊಂಡಾಗ ಜೂಲಿಯಟ್ ನಿವೇದನೆಯ ಹಾಡು:
ಬಾ ರಾತ್ರಿಯೇ ಬಾ
ಬಾ ರೋಮಿಯೋ ಬಾ
ಬಾ ಬಾ ನೀ ರಾತ್ರಿಯ ಹಗಲೇ ಬಾ
ಬಾ ರೋಮಿಯೋ ಬಾ
ಬಾ ಕೋಮಲ ರಾತ್ರಿಯೇ ಬಾ
ಬಾ ಪ್ರೀತಿಯ ಕಾರಿರುಳೇ ಬಾ
ಕೊಡು ನನ್ನ ರೋಮಿಯೋ ಕೊಡು
ಅವನು ಸತ್ತಾಗ ಕೊಡುವೆ ಈಗ ಕೊಡು;
ಸತ್ತಾಗ ಅವನನು ಕತ್ತರಿಸು
ಪುಟ್ಟ ತಾರೆಗಳಂತೆ ಕತ್ತರಿಸು
ಈ ಕರಿರಾತ್ರಿಯ ಮುಖವನು ಅವನು
ಫಳಫಳ ಹೊಳೆವಂತೆ ಮಾಡುವನು
ಆಗ ನೋಡುತ್ತಿರು ರಾತ್ರಿಯೇ ನೋಡುತ್ತಿರು
ಲೋಕದ ಜನ ಬರಿ ರಾತ್ರಿಯನೆ ರಮಿಸುವರು
ಆಗ ನೋಡುತ್ತಿರು ರಾತ್ರಿಯೇ ನೋಡುತ್ತಿರು
ಉರಿವ ಸೂರ್ಯನ ಕಂಡು ಜನ ಉರಿದು ಬೀಳುವರು
ಬಾ ಕೋಮಲ ರಾತ್ರಿಯೇ ಬಾ
ಬಾ ಪ್ರೀತಿಯ ಕಾರಿರುಳೇ ಬಾ
ಈ ಎರಡೂ ಹಾಡಿನ ದೃಶ್ಯಗಳು ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕದಲ್ಲಿವೆ. CLICK HERE
‘ವ್ಯಾಲಂಟೈನ್ಸ್ ಡೇ’ ನೆನಪಾದ ತಕ್ಷಣ ಹೊಳೆದ ಪ್ರೀತಿ, ಪ್ರೇಮಗಳ ಕೆಲವೇ ಪ್ರತಿಮೆಗಳನ್ನು ಕೊಟ್ಟಿರುವೆ. ಈ ಅಂಕಣದಲ್ಲಿ ಈಚೆಗೆ ಬರೆದ ಪಾಬ್ಲೊ ನೆರೂಡ…READ HERE, ಅಕ್ಕಮಹಾದೇವಿಯ ಉತ್ಕಟ ಪ್ರತಿಮೆಗಳು, ರಾಬರ್ಟ್ ಬರ್ನ್ಸ್ ಬರೆದ ‘ಮೈ ಲವ್ ಈಸ್ ಲೈಕ್ ಎ ರೆಡ್ ರೆಡ್ ರೋಸ್’ (‘ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ’- ಕನ್ನಡರೂಪ: ಬಿ. ಆರ್. ಲಕ್ಷ್ಮಣರಾವ್), ಉಮರ್ ಖಯಾಂ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಇವರೆಲ್ಲರ ನೂರಾರು ಭಾವಗೀತೆಗಳು, ಅಡಿಗರ ‘ಸಖಿ ಬಾ’, ಲಂಕೇಶರ ನೀಲು ಪದ್ಯಗಳು, ಅಥವಾ ಹಲಬಗೆಯ ಪ್ರೇಮಪದ್ಯಗಳನ್ನು ಬರೆಯುತ್ತಲೇ ಇರುವ ಇವತ್ತಿನ ಕವಿ, ಕವಯಿತ್ರಿಯರ ಸಾಲುಗಳು… ಇವೆಲ್ಲ ನಿಮ್ಮ ಚಿತ್ತವನ್ನು ಮುತ್ತಲಿ; ಅವನ್ನೆಲ್ಲ ಸುತ್ತಮುತ್ತ ಹಂಚಲು ವ್ಯಾಲಂಟೈನ್ ಡೇ ಒಂದು ಸುಂದರ ನೆಪವಾಗಲಿ.
ಕೊನೆಯದಾಗಿ, ಪ್ರತಿವರ್ಷ ಇಷ್ಟೆಲ್ಲ ರಮ್ಯತೆ ಸೃಷ್ಟಿಸುವ 'ವ್ಯಾಲಂಟೈನ್ಸ್ ಡೇ' ಸುತ್ತ ಹುಟ್ಟಿರುವ ರಮ್ಯ ಕತೆಗಳು:
ಕತೆ 1 : ಹದಿನೈದು ಶತಮಾನಗಳ ಕೆಳಗೆ ಫೆಬ್ರವರಿ ತಿಂಗಳಲ್ಲಿ ರೋಮ್ ನಲ್ಲಿ ನಡೆಯುತ್ತಿದ್ದ Lupercalia ವಸಂತ ಮಾಸವನ್ನು ಸ್ವಾಗತಿಸುವ ಹಬ್ಬವಾಗಿತ್ತು. ಫಲವಂತಿಕೆಯ ಸಂಭ್ರಮಾಚರಣೆಯಾಗಿದ್ದ ಈ ಹಬ್ಬದಲ್ಲಿ ಗಂಡು-ಹೆಣ್ಣುಗಳ ಜೋಡಿಯನ್ನು ಲಾಟರಿ ಎತ್ತುವ ಮೂಲಕ ಆರಿಸಿಕೊಳ್ಳುತ್ತಿದ್ದರು! ಐದನೇ ಶತಮಾನದ ಕೊನೆಗೆ ಮೊದಲನೇ ಪೋಪ್ ಜೆಲಾಸಿಯಸ್ ಈ ಆಚರಣೆಯನ್ನು ನಿಷೇಧಿಸಿದ; ಬದಲಿಗೆ ‘ಸೇಂಟ್ ವ್ಯಾಲಂಟೈನ್ಸ್ ಡೇ’ ಹಾಲಿಡೇ ಘೋಷಿಸಿದ.
ಕತೆ 2: ಕ್ರಿ.ಶ. 270ರ ಸುಮಾರಿಗೆ ಹುತಾತ್ಮನಾದ ಸೇಂಟ್ ವ್ಯಾಲಂಟೈನ್ ನೆನಪಿನಲ್ಲಿ ಈ ದಿನ ಘೋಷಣೆಯಾಯಿತು. ಗೋಥಿಕಸ್ ರಾಜ ಎರಡನೇ ಕ್ಲಾಡಿಯಸ್ಸಿನ ಕಾಲದಲ್ಲಿ ಶಿಕ್ಷೆಗೊಳಗಾಗಿ ಬಂಧಿಯಾಗಿದ್ದ ಪಾದ್ರಿ ವ್ಯಾಲಂಟೈನ್‌ಗೆ ಜೈಲರ್ ಮಗಳ ಗೆಳೆತನವಾಯಿತು. ಕಣ್ಣು ಕಳೆದುಕೊಂಡಿದ್ದ ವ್ಯಾಲಂಟೈನ್ ಅವಳಿಂದ ಕಣ್ಣು ಪಡೆದ. ಅವಳಿಗೆ ಬರೆದ ಪತ್ರದಲ್ಲಿ ‘ನಿನ್ನ ವ್ಯಾಲಂಟೈನ್’ ಎಂದು ಬರೆದ.
ಕತೆ 3: ಸೇಂಟ್ ವ್ಯಾಲಂಟೈನ್ ರಾಜಾಜ್ಞೆಯನ್ನು ಧಿಕ್ಕರಿಸಿ ಹಲವು ಜೋಡಿಗಳಿಗೆ ಗುಟ್ಟಾಗಿ ಮದುವೆ ಮಾಡಿಸಿದ; ಆ ಮೂಲಕ ಗಂಡಸರು ಯುದ್ಧಕ್ಕೆ ಹೋಗುವುದನ್ನು ತಪ್ಪಿಸಿ, ಪ್ರೇಮವನ್ನು ರಕ್ಷಿಸಿದ ವ್ಯಾಲಂಟೈನ್ ಹೆಸರಿನಲ್ಲಿ ‘ಪ್ರೇಮದಿನ’ ‘ಪ್ರೇಮಿಗಳ ದಿನ’ ಘೋಷಣೆಯಾಯಿತು!
ಹದಿನಾಲ್ಕನೇ ಶತಮಾನದ ಹೊತ್ತಿಗೆ, ‘ವ್ಯಾಲಂಟೈನ್ಸ್ ಡೇ’ ಪ್ರೇಮದಿನವಾಗಿ ಹಬ್ಬಲು ಇಂಗ್ಲಿಷ್ ಆದಿ ಕವಿ ಜೆಫ್ರಿ ಚಾಸರ್ ಬರೆದ 24 ಕಥನಕಾವ್ಯಸರಣಿಯ ‘ಕ್ಯಾಂಟರ್‌ಬರಿ ಟೇಲ್ಸ್’ ಕಾರಣ ಎನ್ನುತ್ತಾರೆ. ಚಾಸರ್ ಕೃತಿಯಲ್ಲಿರುವ ‘ಪಾರ್ಲಿಮೆಂಟ್ ಆಫ್ ಫೌಲ್ಸ್’ ಭಾಗದಲ್ಲಿ ಹಕ್ಕಿಗಳು ಸಂಗಾತಿಯನ್ನು ಆರಿಸಿಕೊಳ್ಳುವ ಕಾಲದ ಬಣ್ಣನೆಯಿದೆ. ಮೂರು ಗಂಡು ಗರುಡಗಳು ಒಬ್ಬ ಗರುಡಿಯನ್ನು ಮದುವೆಯಾಗಲು ಕಾತರಿಸುತ್ತವೆ. ಗರುಡಿಗೆ ತನ್ನ ಜೋಡಿ ಯಾರೆಂದು ತೀರ್ಮಾನಿಸುವುದು ಕಷ್ಟವಾಗಿ, ಪ್ರಕೃತಿಮಾತೆಯನ್ನು, ‘ಒಂದು ವರ್ಷ ಟೈಮ್ ಕೊಡಲು’ ಕೇಳಿಕೊಳ್ಳುತ್ತದೆ. ‘ತಾಳಿಕೊಳ್ಳಲು ಒಂದು ವರ್ಷ ತೀರಾ ದೀರ್ಘವೇನಲ್ಲ’ ಎಂದು ಪ್ರಕೃತಿಮಾತೆ ಈ ಕೋರಿಕೆಯನ್ನು ಒಪ್ಪುತ್ತಾಳೆ; ಪ್ರೀತಿಯ ಮೇಲೆ ಹೇರಲಾಗಿದ್ದ ನಿಯಮಗಳನ್ನು ಧಿಕ್ಕರಿಸಿ, ಹೆಣ್ಣಿನ ಸಹಜ ಆಯ್ಕೆಯನ್ನು ಎತ್ತಿ ಹಿಡಿಯುತ್ತಾಳೆ!
ಚಾಸರ್ ಕತೆಯ ಹಿನ್ನೆಲೆಯಲ್ಲಿ ಆ ಕಾಲದ ಅರಮನೆಯೊಳಗಿನ ಒಂದು ಆಯ್ಕೆಯ ಕತೆಯಿದೆ ಎನ್ನುವವರಿದ್ದಾರೆ: ಇಂಗ್ಲೆಂಡಿನ ರಾಜ ಎರಡನೇ ರಿಚರ್ಡ್ ಐದು ವರ್ಷ ಕೇಳಿಕೊಂಡ ಮೇಲೆ ಬೊಹೆಮಿಯಾದ ಆನ್ನೆ ಅವನನ್ನು ಮದುವೆಯಾಗಲು ಒಪ್ಪುತ್ತಾಳೆ. ಆ ಮದುವೆಯನ್ನು ಸಂಭ್ರಮಿಸಲು ಚಾಸರ್ ಬರೆದ ಭಾಗವಿದು ಎನ್ನುತ್ತಾರೆ!
‘ವ್ಯಾಲಂಟೈನ್ಸ್ ಡೇ’ ಕಥಾಮೂಲಗಳೇನೇ ಇರಲಿ, ಆ ದಿನ ಲೋಕದಲ್ಲಿ ಪ್ರೇಮವನ್ನು ಆರಾಧಿಸುವ ದಿನವಾಗಿ, ಎಲ್ಲ ವಯೋಮಾನದ ಗಂಡು ಹೆಣ್ಣುಗಳಲ್ಲೂ ಪ್ರೀತಿ ಪ್ರೇಮಗಳ ಸೆಲೆಗಳನ್ನು ಉಕ್ಕಿಸುತ್ತಲೇ ಇರುತ್ತದೆ! ಆ ಸೆಲೆ ಉಕ್ಕಿದ ನಿಮಗೆ ಪ್ರಿಯವಾದ ಒಲವಿನ ಪದ್ಯಗಳು, ಪ್ರತಿಮೆಗಳು ನಿಮ್ಮ ನಿಮ್ಮ ವೇದಿಕೆಗಳಲ್ಲೂ, ಈ ಅಂಕಣದ ಕಾಮೆಂಟ್ ಸೆಕ್ಷನ್ನಿನಲ್ಲೂ ಹರಿದು ಬರಲಿ! ಹ್ಯಾಪಿ ವ್ಯಾಲಂಟೈನ್ಸ್ ಡೇ!
ಕಾಮೆಂಟ್ ಸೆಕ್ಷನ್: ಪುಟ್ಟ ಸೂಚನೆ: ಈ ಅಂಕಣ ಓದಿ ನೀವು ಬರೆಯುವ ಕಾಮೆಂಟುಗಳು ಅಡ್ಮಿನ್ ಗಮನಕ್ಕೆ ಬಂದ ನಂತರ ಪ್ರಕಟವಾಗುತ್ತವೆ. ಮೊದಲ ಕಾಲಂನಲ್ಲಿ ನಿಮ್ಮ ಹೆಸರು, ಅಥವಾ ಇನಿಶಿಯಲ್ಸ್, ಅಥವಾ ಸಂಕ್ಷಿಪ್ತನಾಮ; ಎರಡನೇ ಕಾಲಂನಲ್ಲಿ ನಿಮ್ಮ ಯಾವುದಾದರೂ ಮೇಲ್ ಐಡಿ ನಮೂದಿಸಿ. ಹೆಸರು ಅಥವಾ ಸಂಕ್ಷಿಪ್ತನಾಮ ಮಾತ್ರ ಪ್ರಕಟವಾಗುತ್ತದೆ. ಮೇಲ್ ಐಡಿ ಪ್ರಕಟವಾಗುವುದಿಲ್ಲ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
‘ನಾನು ಸಣ್ಣವನಾಗಿದ್ದಾಗ ಅಜ್ಜಿ ಸರೊತ್ತಿನಲ್ಲಿ ಸದ್ದು ಮಾಡದಂತೆ ಎದ್ದು ನಾನು ಮಲಗಿದ್ದ ಕಡೆಗೆ ಬರುತ್ತಿದ್ದಳು... ನನ್ನ ಎಬ್ಬಿಸಿ ಕತೆ ಹೇಳುತ್ತಿದ್ದಳು... ಅವಳಿಂದ ಕತೆ ಬರೆಯುವ ಕಲೆ ಕಲಿತೆ’ ಎನ್ನುತ್ತಾನೆ ಮಾರ್ಕ್ವೆಜ್. ‘ಬೆಕ್ಕು ಓಣಿಯಲ್ಲಿ ತಿರುಗುವುದನ್ನು ಹೇಗೆ ಬರೆಯಬೇಕೆಂಬುದನ್ನು ಹೆಮಿಂಗ್ವೆಯಿದ ಕಲಿತೆ’ ಎಂದು ಮುಂದೊಮ್ಮೆ ಹೇಳುತ್ತಾನೆ.
ಮಾರ್ಕ್ವೆಜ್ ಕಣ್ಣೇ ವಿಚಿತ್ರ. ನಾವು ನೋಡುತ್ತಿರುವ ಸನ್ನಿವೇಶಗಳನ್ನೇ ಅವನೂ ನೋಡುತ್ತಾನೆ; ಅವನಿಗೆ ಹೊಳೆಯುವ ಸತ್ಯಗಳೇ ಬೇರೆ. ನೀವು ಹೊರವಾಸ್ತವದ ಕತೆಗಳನ್ನೇ ಮೆಚ್ಚುವ ವೈಚಾರಿಕ ಮನಸ್ಸಿನವರಾದರೆ ಈ ಕತೆಗಳು ‘ಫ್ಯಾಂಟಸಿ’ ಎನ್ನುತ್ತೀರಿ; ಮೇಲುನೋಟಕ್ಕೆ ‘ಅವಾಸ್ತವ’ ಎನ್ನಿಸುವ ಈ ಕತೆಗಳನ್ನು ಹೇಗೆ ವಿವರಿಸಬೇಕು ಎಂದು ಪರದಾಡಿದ ಪಶ್ಚಿಮದ ವಿಮರ್ಶಕರು ಇದು ‘ಮಾಂತ್ರಿಕ ವಾಸ್ತವತಾವಾದ’ ಎಂದರು! ಮಾರ್ಕ್ವೆಜ್, ‘ನಮ್ಮ ಲ್ಯಾಟಿನ್ ಅಮೆರಿಕದ ವಾಸ್ತವ ಇರೋದೇ ಹೀಗೆ. ಇದು ವಾಸ್ತವತಾವಾದಿ ಬರವಣಿಗೆ’ ಅಂದ.
ಎಲ್ಲ ಸೃಜನಶೀಲರಲ್ಲಿ ಸಂದಿಗ್ಧತೆ ಹುಟ್ಟಿಸುವ ಸವಾಲು ಇದು: ಕತೆ ಬರೆಯುವಾಗ ಅತಿಯಾದ ತರ್ಕ, ಅತಿ ವೈಚಾರಿಕತೆ ಪ್ರಧಾನವಾಗಿಬಿಟ್ಟರೆ ಮಾನವ ವರ್ತನೆಯ ನಿಗೂಢಗಳು ಅರ್ಥವಾಗದೆ ಉಳಿದುಬಿಡುತ್ತವೆ. ಆದರೆ ಕತೆ ಬರೆಯಲು ಹೋಗಿ ವೈಚಾರಿಕತೆಯನ್ನು ಪೂರಾ ಕೈಬಿಟ್ಟರೆ, ಅಂಧಶ್ರದ್ಧೆಗಳು ಸವಾರಿ ಮಾಡತೊಡಗುತ್ತವೆ! ಇದು ತಂತಿಯ ಮೇಲಿನ ನಡಿಗೆ. ಇಂಗ್ಲಿಷ್ ಕವಿ ಕೋಲರಿಜ್ ‘ಸಸ್ಪೆನ್ಷನ್ ಆಫ್ ಡಿಸ್‌ಬಿಲೀಫ್’ ಎಂಬ ಪರಿಕಲ್ಪನೆ ಕೊಟ್ಟು ಈ ಗೊಂದಲವನ್ನು ಬಗೆಹರಿಸಿದ; ಸಾಹಿತ್ಯ ಕೃತಿಗಳನ್ನು ಓದುವಾಗ ‘ಅಪನಂಬಿಕೆಯನ್ನು ಅಮಾನತ್ತಿನಲ್ಲಿಟ್ಟು ಓದಬೇಕು’ ಎಂದ.
ಕೊಲಂಬಿಯಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಕತೆಗಳ ವಿವರಗಳನ್ನು ಓದುಗರು ಅಪನಂಬಿಕೆಯಿಂದ ತಳ್ಳಿ ಹಾಕಲಾರದಂತೆ ಬರೆಯುತ್ತಾನೆ. ಅವನ ಕಥಾಶೈಲಿಗೆ ಅವನ ಸುತ್ತಮುತ್ತಲ ಜನ, ಅವರ ವಾಸ್ತವಗಳು, ನಂಬಿಕೆಗಳು ಸಲೀಸಾಗಿ ಬಂದು ಕೂಡಿಕೊಳ್ಳುತ್ತವೆ. ಮಾನವ ಲೋಕದ ಅವಿತಿಟ್ಟ ಗುಟ್ಟುಗಳನ್ನು, ವಿಚಿತ್ರ ವಿವರಗಳನ್ನು ನಮ್ಮ ಒಳಮನಸ್ಸು ಒಪ್ಪಿ ಅಹುದಹುದೆನುವಂತೆ ಮಾರ್ಕ್ವೆಜ್ ಬರೆಯುತ್ತಾನೆ. ಅವನಂತೆ ಬರೆಯುವ ಇನ್ನೊಬ್ಬ ಲೇಖಕನನ್ನು ನಾನು ಕಂಡಿಲ್ಲ. ಸರಳ ತರ್ಕಕ್ಕೆ ದಕ್ಕದ ಅವನ ಕತೆಗಳು ತಮ್ಮದೇ ಆಂತರಿಕ ತರ್ಕವನ್ನು ಸೃಷ್ಟಿಸಿಕೊಳ್ಳುತ್ತವೆ. ಮನುಷ್ಯರು ಯಾವ ಗಳಿಗೆಯಲ್ಲಿ ಹೇಗೆ ವರ್ತಿಸುತ್ತಾರೆ, ಅವರ ವರ್ತನೆಯ ಪರಿಣಾಮಗಳೇನು, ಮಾನವ ಮನಸ್ಸು ಸತ್ಯಗಳನ್ನು ಹೇಗೆಲ್ಲ ಗ್ರಹಿಸುತ್ತದೆ...ಇವನ್ನೆಲ್ಲ ಮಾರ್ಕ್ವೆಜ್ ಕಣ್ಣು ಹುಡುಕುತ್ತಲೇ ಇರುತ್ತದೆ.
ಮಾರ್ಕ್ವೆಜ್ ಒಂದು ಸಂದರ್ಶನದಲ್ಲಿ ಹೇಳಿದ ಮಾತು: ‘ಹದಿನೇಳು ವರ್ಷದ ಹುಡುಗನಾಗಿದ್ದಾಗಿಂದ ಹಿಡಿದು ಇವತ್ತಿನ ಬೆಳಗ್ಗೆಯ ತನಕ ನಾನು ಮಾಡಿರುವುದು ಇಷ್ಟೇ: ಪ್ರತಿ ದಿನ ಬೇಗ ಏಳುವುದು, ಹಿಂದೆಂದೂ ಯಾರೂ ಹೇಳದ ಕತೆಯೊಂದನ್ನು ಹೇಳಿ, ಅಸ್ತಿತ್ವದಲ್ಲೇ ಇಲ್ಲದ ಓದುಗನ ಬದುಕನ್ನು ಖುಷಿಯಲ್ಲಿಡುವ ಏಕಮಾತ್ರ ಉದ್ದೇಶದಿಂದ ಟೈಪ್‌ರೈಟರ್ ಮೇಲಿನ ಖಾಲಿ ಹಾಳೆಯನ್ನು ತುಂಬಿಸಲು ಕೀಗಳ ಮೇಲೆ ಬೆರಳಿಡುವುದು... ಅಬ್ಬ! ನನ್ನ ರೂಮಿನ ಏಕಾಂತದಲ್ಲಿ ಕೂತು ಬರೇ ಇಪ್ಪತ್ತೆಂಟು ಅಕ್ಷರಗಳನ್ನು, ಎರಡು ಬೆರಳುಗಳನ್ನು, ನನ್ನ ಏಕಮಾತ್ರ ಸಾಧನವಾಗಿ ಬಳಸಿ ಬರೆದದ್ದನ್ನು ಹತ್ತು ಲಕ್ಷ ಜನ ಓದುತ್ತಾರೆ ಅಂದರೆ... ಇದು ನಿಜಕ್ಕೂ ಒಂದು ಹುಚ್ಚಲ್ಲವೆ!’
ಈ ‘ಹುಚ್ಚಿ’ನಲ್ಲಿ ಮಾರ್ಕ್ವೆಜ್ ಕತೆಗಳು ಹುಟ್ಟಿವೆ. ‘ಕೃತಕ ಗುಲಾಬಿಗಳು’ ಕತೆಯಲ್ಲಿ ಕಣ್ಣು ಕಾಣದ ಮುದುಕಿಯೊಬ್ಬಳು ತರುಣಿಯೊಬ್ಬಳ ಪ್ರೇಮಲೋಕದ ಗುಟ್ಟನ್ನು ಕರಾರುವಾಕ್ಕಾಗಿ ಗಮನಿಸುತ್ತಿರುತ್ತಾಳೆ. ಪ್ರೇಮದ ಭಾಷೆ ಅರಿಯಲು ಕಣ್ಣೇಕೆ ಬೇಕು! ‘ನೀರು ಪಾಲಾಗಿದ್ದ ಲೋಕದ ಕಡು ಚೆಲುವ’ ಕತೆಯಲ್ಲಿ ಭಾರೀ ವಿಲಕ್ಷಣ ದೇಹವೊಂದು ಕಡಲಲ್ಲಿ ತೇಲಿ ಬರುತ್ತದೆ. ಆ ವಿಲಕ್ಷಣ ದೇಹಕ್ಕೆ ಊರಿನ ಹೆಂಗಸರು ಬಗೆಬಗೆಯ ಅಲಂಕಾರ ಮಾಡುತ್ತಾ, ಆವರೆಗೆ ಪುರುಷ ದೇಹದ ಬಗ್ಗೆ ತಮ್ಮೊಳಗೇ ಅವಿತುಕೊಂಡಿದ್ದ ಭಾವಗಳನ್ನು ಮೆಲ್ಲಗೆ ಹೊರಚೆಲ್ಲತೊಡಗುತ್ತಾರೆ! ಕತೆ ಮೇಲುನೋಟಕ್ಕೆ ಅವಾಸ್ತವ; ಆದರೆ ಈ ಹೆಂಗಸರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡರೆ ಅದು ಅವರೊಳಗೆ ಹುದುಗಿರುವ ಅಸಲಿ ಲೈಂಗಿಕ ಭಾವಗಳ ಸ್ಫೋಟ. ಎಲ್ಲೂ ಹೇಳಲಾಗದ ಭಾವಗಳನ್ನು ನಾವು ವ್ಯಕ್ತಪಡಿಸುವುದು ಸಂಕೇತದಲ್ಲಿ; ಗುಪ್ತ ಭಾಷೆಯಲ್ಲಿ. ಮಾನವಜೀವಿಗಳ ಸೂಕ್ಷ್ಮ ಸತ್ಯಗಳನ್ನು ಗ್ರಹಿಸಲು ಪರಕಾಯ ಪ್ರವೇಶ ಮಾಡುವ ಮಾರ್ಕ್ವೆಜ್ ಈ ಗುಪ್ತ ಭಾಷೆಗೆ ಕಿವಿಗೊಡುತ್ತಾನೆ.
ಮಾರ್ಕ್ವೆಜ್ ಕತೆಗಳ ಲೋಕದಲ್ಲಿ ತೀರಿಕೊಂಡವರು ‘ತೀರಿ’ ಹೋಗುವುದಿಲ್ಲ; ಅವರು ಇದ್ದೇ ಇರುತ್ತಾರೆ. ತೀರಿಕೊಂಡವರು ನಮ್ಮ ಚಿತ್ತದಲ್ಲಿರುವುದರ ಜೊತೆಗೇ, ಇಲ್ಲೇ ಎಲ್ಲೋ ನಮ್ಮ ಸುತ್ತಮುತ್ತ ಇರುವಂತೆ ಕಾಣುತ್ತಾರಲ್ಲವೆ? ಅವರ ಜೊತೆ ನಾವು ಒಳಗೊಳಗೇ ಮಾತಾಡುತ್ತಲೇ ಇರುತ್ತೇವೆ. ಒಮ್ಮೊಮ್ಮೆ ನಮ್ಮ ಚಿತ್ತದಲ್ಲಿ ನಡೆಯುವುದಕ್ಕೂ, ಹಾಲಿ ಪ್ರಪಂಚದಲ್ಲಿ ನಡೆಯುವುದಕ್ಕೂ ವ್ಯತ್ಯಾಸವೇ ಮರೆಯಾಗುತ್ತಿರುತ್ತದೆ. ಇಂಥ ಚಣಗಳನ್ನು ಹಿಡಿಯುವುದರಲ್ಲಿ ಮಾರ್ಕ್ವೆಜ್ ರುಸ್ತುಮ! ‘ಜೋಡಿಸಿಟ್ಟ ಗುಲಾಬಿಗಳನ್ನು ಯಾರೋ ಕೆದರುತ್ತಿದ್ದಾರೆ’ ಕತೆಯಲ್ಲಿ ಎಷ್ಟೋ ವರ್ಷಗಳ ಕೆಳಗೆ ತೀರಿಕೊಂಡವರ ಜೊತೆ ಹೆಂಗಸರು ನಿತ್ಯ ಮಾತಾಡಿಕೊಳ್ಳುತ್ತಾರೆ; ಕತೆ ಓದುವವರಿಗೆ ಇದು ಅಸಹಜ ಅನ್ನಿಸುವುದೇ ಇಲ್ಲ.
ಕತೆಯೊಂದರ ಶಕ್ತಿ ಓದುಗರಿಗೆ ಪಾತ್ರ, ಘಟನೆ, ಪರಿಸರಗಳನ್ನು ಕಾಣಿಸುವ ರೀತಿಯಲ್ಲೂ ಇರುತ್ತದೆ. ಮಾರ್ಕ್ವೆಜ್ ಕತೆಗಳ ವಿವರಗಳಲ್ಲಿ, ಬಣ್ಣನೆಗಳಲ್ಲಿ ಮೈದಾಳುವ ಕೆರೆಬಿಯನ್ ಪ್ರದೇಶಗಳ ಬದುಕನ್ನು ಓದುಗರು ಮುಟ್ಟಿ ಅನುಭವಿಸಬಲ್ಲರು. ಅವನ ಕತೆಗಳಲ್ಲಿ ಲ್ಯಾಟಿನ್ ಅಮೆರಿಕದ ಭೀಕರ ಬಿಸಿಲು ಸೃಷ್ಟಿಸುವ ಗರ ಬಡಿದ ಸ್ಥಿತಿ, ಬಿಸಿಲಿನ ತೀವ್ರ ಝಳ ಓದುಗರ ಮೈ ಮುಖಕ್ಕೆ ರಾಚುತ್ತಿರುತ್ತದೆ. ‘ಮಕೊಂಡೊದಲ್ಲಿ ಸುರಿವ ಮಳೆ ನೋಡುತ್ತಾ ತನಗೆ ತಾನೇ ಮಾತಾಡಿಕೊಳ್ಳುವ ಇಸಬೆಲ್ಲಾ’ ಕತೆಯಲ್ಲಿ ಒಮ್ಮೆ ಶುರುವಾದ ಜಡಿ ಮಳೆ ಎಂದೆಂದಿಗೂ ಮುಗಿಯುವುದಿಲ್ಲವೇನೋ ಎನ್ನಿಸತೊಡಗುತ್ತದೆ. ಕತೆ ಓದುತ್ತಾ ಓದುಗ, ಓದುಗಿಯರಿಗೂ ಮಳೆಯಲ್ಲಿ ತೊಯ್ದು ತೊಪ್ಪೆಯಾದಂಥ ಅನುಭವವಾಗುತ್ತದೆ; ಮನಸ್ಸು ಸ್ವೆಟರ್, ರಗ್ಗು ಹುಡುಕತೊಡಗುತ್ತದೆ; ಮೈ ಬಿಸಿಯೇರಿಸುವ ಮದ್ಯಕ್ಕಾಗಿ ಕೈ ತಡಕಾಡತೊಡಗುತ್ತದೆ. ‘ಕಳೆದು ಹೋದ ಕಾಲದ ಕಡಲು’ ಕತೆಯ ಊರಿನಲ್ಲಿ ವರ್ಷಗಟ್ಟಲೆ ಹಬ್ಬುವ ವಿಚಿತ್ರ ವಾಸನೆ ನಮ್ಮ ಮೂಗಿಗೂ ಅಡರತೊಡಗುತ್ತದೆ!
ಮಾರ್ಕ್ವೆಜ್ ಪಾತ್ರಗಳ ಕಣ್ಣೆದುರು ವಿಚಿತ್ರ ಸತ್ಯಗಳು ಫಳಾರನೆ ಮಿಂಚುತ್ತವೆ: ‘ಜನ ತಾವು ಸಾಯಬೇಕಾದ ಕಾಲಕ್ಕೆ ಸಾಯುವುದಿಲ್ಲ; ಸಾಯಬೇಕೆಂದುಕೊಂಡಾಗ ಸಾಯುತ್ತಾರೆ.’ ಮಾರ್ಕ್ವೆಜ್ ಬಣ್ಣನೆಯ ಚಿತ್ರಗುಣ ನಮ್ಮನ್ನು ಅಲುಗಾಡಿಸುತ್ತದೆ: ‘ಆ ಸುಕ್ಕುಗಟ್ಟಿದ ಒಣ ಮುಖ ನೋಡಿದರೆ ಆಕೆ ಅದೇ ಆಗ ಗೋರಿಯಿಂದ ಎದ್ದು ಬಂದಂತಿದ್ದಳು.’
ಮಾರ್ಕ್ವೆಜ್ ಕತೆಗಳ ತಾಜಾ ಹೆಸರುಗಳು ನಮ್ಮನ್ನು ವಿಸ್ಮಯಗೊಳಿಸುತ್ತವೆ: ‘ಇವಾ ಅವಳ ಬೆಕ್ಕಿನಲ್ಲಿದ್ದಾಳೆ’, ‘ನೀಲಿ ನಾಯಿಯ ಕಣ್ಣು’, ‘ಮೂವರು ನಿದ್ರಾ ಸಂಚಾರಿಗಳ ಕಹಿತನ’, ‘ಜೋಡಿಸಿಟ್ಟ ಗುಲಾಬಿಗಳನ್ನು ಯಾರೋ ಕೆದರುತ್ತಿದ್ದಾರೆ.’
ತಾರುಣ್ಯದಲ್ಲಿ ಪತ್ರಕರ್ತನಾಗಿದ್ದ ಮಾರ್ಕ್ವೆಜ್ ಉತ್ತಮ ಪತ್ರಿಕಾ ಬರವಣಿಗೆಯ ಸದ್ಯತನವನ್ನು, ಕ್ಷಿಪ್ರತೆಯನ್ನು ಕಥಾ ಬರವಣಿಗೆಗೆ ತಂದ. ಹೀಗಾಗಿ ಅವನ ಬರವಣಿಗೆಯಲ್ಲಿ ನೀರಸ ಸಾಲುಗಳಾಗಲೀ, ನಿರ್ಜೀವ ವಿವರಗಳಾಗಲೀ ಕಡಿಮೆ. ಈ ಕತೆಗಳ ಲೋಕದಲ್ಲಿ ನಿಧಾನವಾಗಿ, ವಿರಾಮವಾಗಿ ಹಾದು ಮುಂದೆ ಸಾಗುವ, ನಿಂತು ವಿವರಗಳನ್ನು ಹೀರಿಕೊಳ್ಳುವ ವ್ಯವಧಾನ ಓದುವವರಿಗಿರಬೇಕು; ಆಗ ಮಾತ್ರ ಮಾರ್ಕ್ವೆಜ್ ಲೋಕಗಳನ್ನು ಮುಟ್ಟಿ, ಅಲ್ಲಿ ಮಿಂದು, ಅನುಭವಿಸಬಹುದು. ಇಂಥ ಕಥಾಲೋಕಗಳನ್ನು ಸೃಷ್ಟಿಸಿ ನಾವು ‘ಅತ್ತಲಿತ್ತ ಹೋಗದಂತೆ’ ಅಲ್ಲೇ ತಂಗುವಂತೆ ಮಾಡುವ, ಎಲ್ಲೂ ಅಗ್ಗವಾಗದಂತೆ ಬರೆಯಬಲ್ಲ, ಕತೆಗಾರರು ಲೋಕದಲ್ಲಿ ತೀರಾ ಕಡಿಮೆ.
ಗತಿಸಿದ ಕಾಲವೊಂದರಲ್ಲಿ ನಿಂತು ಕತೆ ಬರೆಯುವವನಂತೆ ಕಾಣುವ ಮಾರ್ಕ್ವೆಜ್ ತನ್ನ ಕಾಲದಲ್ಲಿ ನಿಂತು ಸಮಾಜದ ರಾಜಕೀಯ ಬಿಕ್ಕಟ್ಟುಗಳನ್ನು ಕಣ್ಣು ಬಿಟ್ಟು ನೋಡುವ, ಅನುಭವಿಸುವ ಲೇಖಕನೂ ಆಗಿದ್ದ. ‘ಐ ಓನ್ಲಿ ಕೇಮ್ ಟು ಯೂಸ್ ದ ಫೋನ್’ (ನಾನು ಒಂದು ಫೋನ್ ಮಾಡಲು ಬಂದೆ, ಅಷ್ಟೆ’) ಕತೆ ಹುಟ್ಟಿಸಿದ ದಿಗ್ಭ್ರಮೆ, ಕತೆಯ ವ್ಯಾಪಕ ಅರ್ಥ ಕುರಿತು ಡಿ. ಆರ್. ನಾಗರಾಜ್ ಕಣ್ಣರಳಿಸಿ ಮಾತಾಡಿದ ಗಳಿಗೆ ನೆನಪಾಗುತ್ತದೆ. ಈ ಕತೆಯಲ್ಲಿ ಮಾರ್ಕ್ವೆಜ್ ದಮನಕಾರಿ ರಾಜಕೀಯ ವ್ಯವಸ್ಥೆಯನ್ನು ಚಿತ್ರಿಸುವ ರೀತಿ ಅವನ ದೇಶದ ಕತೆಯನ್ನೂ, ಇಂದಿನ ಭಾರತದ ದಮನಕಾರಿ ಪ್ರಭುತ್ವದ ಕತೆಯನ್ನೂ ಹೇಳುತ್ತದೆ. ‘ದ ಇನ್‌ಕ್ರೆಡಿಬಲ್ ಅಂಡ್ ಸ್ಯಾಡೆಸ್ಟ್ ಟೇಲ್ ಆಫ್ ಇನ್ನೊಸೆಂಟ್ ಎರೆಂದಿರಾ ಅಂಡ್ ಹರ್ ಹಾರ್ಟ್‌ಲೆನ್ ಗ್ರ್ಯಾಂಡ್ ಮದರ್’ ನೀಳ್ಗತೆ ಅಸಹಾಯಕ ಎರೆಂದಿರಾ ಮೂಲಕ ಇಡೀ ಸ್ತ್ರೀಸಂಕುಲದ ಎಣೆಯಿಲ್ಲದ ಕಷ್ಟಗಳನ್ನು, ಎಲ್ಲ ಕಾಲದ ಸ್ತ್ರೀ ದಮನದ ಕತೆಯನ್ನು ಹೇಳತೊಡಗುತ್ತದೆ.
ಮಾರ್ಕ್ವೆಜ್ ಕತೆಗಳು ಕನ್ನಡವೂ ಸೇರಿದಂತೆ ಜಗತ್ತಿನ ನೂರಾರು ಭಾಷೆಗಳಿಗೆ ಅನುವಾದವಾಗಿವೆ; ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ; ಕೋಟ್ಯಾಂತರ ಓದುಗರನ್ನು ಮುಟ್ಟಿವೆ. ಆರೇಳು ದಶಕಗಳ ಕಾಲ ಬರೆದ ಮಾರ್ಕ್ವೆಜ್ ಒಂದು ಶತಮಾನದ ಲ್ಯಾಟಿನ್ ಅಮೆರಿಕದ ಚರಿತ್ರೆಗೆ ಸಾಕ್ಷಿಯಾಗಿ ನಿಂತು ತನ್ನ ಕಾಲವನ್ನೂ, ಕಾಲದ ವಿದ್ಯಮಾನಗಳನ್ನೂ ಕತೆಯಾಗಿಸಿದ; ಅದರ ಹಿಂದಿನ ಶತಮಾನದ ಚರಿತ್ರೆಯನ್ನು ಹಿರಿಯರ ನೆನಪು, ಕಥಾನಕಗಳ ಮೂಲಕ ಪಡೆದುಕೊಂಡು ಕಳೆದುಹೋದ ಕಾಲವನ್ನು ಸೃಷ್ಟಿಸಿದ. ಮಾರ್ಕ್ವೆಜ್ ಕತೆಗಳಲ್ಲಿ ಹಿಂದಣವೂ ಮುಂದಣವೂ ಬೆರೆತು ಹುಟ್ಟುವ ಕಾಲಜ್ಞಾನ, ಸಮುದಾಯದ ಸಾಮೂಹಿಕ ಜ್ಞಾನ ಎಲ್ಲ ಬೆರೆತು ಹೊಸ ನೋಟಗಳು ಮೂಡುತ್ತವೆ. ‘ಕಳೆದು ಹೋದ ಕಾಲ ಹಾಗೂ ಇಂದಿನ ಕಾಲ ಎರಡೂ ಮುಂದಿನ ಕಾಲದಲ್ಲಿ ಹಾಜರಿರುತ್ತವೆ’ ಎಂಬ ಟಿ.ಎಸ್. ಎಲಿಯಟ್ ಕಾಣ್ಕೆ ಮಾರ್ಕ್ವೆಜ್ ಕತೆಗಳಲ್ಲಿ ಸಾಕಾರವಾಗುತ್ತಿರುತ್ತದೆ.
ಕೊನೆಕೊನೆಗೆ ಮಾರ್ಕ್ವೆಜ್ ಪೂರ್ಣ ಮರೆವಿನ ಕಾಯಿಲೆಗೆ ತುತ್ತಾದ ಘಟ್ಟ ಕುರಿತು ಹಿಂದೆ ಈ ಅಂಕಣದಲ್ಲೇ ಬರೆದಿರುವೆ: (READ HERE) ನೆನಪು ಹಠಾತ್ತನೆ ಕಂತುವ ತನಕವೂ ಸೃಜನಶೀಲನಾಗಿಯೇ ಉಳಿದಿದ್ದ ಮಾರ್ಕ್ವೆಜ್ ಕತೆಗಳು ನಿಜಕ್ಕೂ `ಭುವನದ ಭಾಗ್ಯ'ದಂತಿವೆ. ಬರೆಯುವವರಿಗೆ ಇನ್ನೊಬ್ಬ ಲೇಖಕಿ ಅಥವಾ ಲೇಖಕನೇ ಗುರು ಎಂದು ನನ್ನಂತೆ ನೀವೂ ನಂಬುವುದಾದರೆ, ಮಾರ್ಕ್ವೆಜ್ ಕತೆಗಳೇ ಬರೆವವರ ಗುರುವಾಗಬಲ್ಲವು!
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ (೧೯೨೭-೨೦೧೪) ತಾನು ಬರೆದಿದ್ದು ನಿಜಕ್ಕೂ ಕಲೆಯಾಗಿದೆಯೆಂದು ತನ್ನೊಳಗಿಗೆ ಪೂರಾ ಒಪ್ಪಿಗೆಯಾಗುವ ಸಾಲು ಮೂಡುವವರೆಗೂ ದಿನಗಟ್ಟಲೆ, ವರ್ಷಗಟ್ಟಲೆ ಸೆಣಸುತ್ತಿದ್ದ; ಶ್ರಮ, ಪ್ರತಿಭೆ, ಕಾಣ್ಕೆ ಬೆರೆತು ಹುಟ್ಟಿದ ಅವನ ಕತೆಗಳು ಅದ್ಭುತ ಕಲೆಗಳಾಗುತ್ತಿದ್ದವು. ‘ಕಲ್ಪನೆ ಗಿಲ್ಪನೆ… ಇವೆಲ್ಲ ನನಗೆ ಹೇಳಲೇಬೇಡಿ; ಇದು ರಿಯಾಲಿಟಿ. ಕೊನೆಗೂ ಸಾಹಿತ್ಯ ರಚನೆ ಬಡಗಿ ಕೆಲಸದ ಥರಾನೇ. ಎರಡೂ ಶ್ರಮದ ಕೆಲಸಗಳೇ’ ಎನ್ನುತ್ತಿದ್ದ ಮಾರ್ಕ್ವೆಜ್, ಶ್ರೇಷ್ಠವಾದದ್ದನ್ನೇ ಬರೆಯಬೇಕೆಂದು ಬೆವರು ಹರಿಸುತ್ತಿದ್ದ. ಕೆ.ವಿ. ಸುಬ್ಬಣ್ಣನವರು ಯಾವುದೋ ಸಿನಿಕ ಸಂದರ್ಭದಲ್ಲಿ ಹೇಳಿದ ‘ಶ್ರೇಷ್ಠತೆಯ ವ್ಯಸನ’ ಎಂಬ ಮಾತನ್ನೇ ಕಣ್ಣು ಮುಚ್ಚಿ ಪಠಿಸುವವರಿದ್ದಾರೆ! ಬರೆವ ವೃತ್ತಿಯಲ್ಲಿ ಗಂಭೀರವಾಗಿ ತೊಡಗಿರುವವರು ಮಾರ್ಕ್ವೆಜ್ ಆಗಲಿ, ಕುವೆಂಪು, ಬೇಂದ್ರೆ, ತೇಜಸ್ವಿ ಆಗಲಿ, ನಮ್ಮ ಕಾಲದ ಎನ್.ಕೆ.ಹನುಮಂತಯ್ಯ ಆಗಲಿ ಯಾಕೆ ಶ್ರೇಷ್ಠವಾದದ್ದನ್ನು ಬರೆಯಬೇಕೆಂದು ಹಂಬಲಿಸುತ್ತಿದ್ದರು ಎಂಬುದನ್ನು ಧ್ಯಾನಿಸಿ ನೋಡಬೇಕಾಗುತ್ತದೆ. ಈ ಧ್ಯಾನವಿಲ್ಲದೆ ಬರೆವ ಬದುಕು ಬರವಣಿಗೆಯ ಜೀತದಂತಿರುತ್ತದೆ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಕಳೆದ ಸಲದ ಅಂಕಣದಲ್ಲಷ್ಟೇ ಇಪ್ಪತ್ತೈದು ವರ್ಷಗಳ ಕೆಳಗೆ ಅಗಲಿದ ಲಂಕೇಶರ ಬಗ್ಗೆ ಬರೆದಿದ್ದ ಬೆರಳುಗಳು ಮತ್ತೆ ಅಗಲಿದ ಆತ್ಮೀಯರ ಬಗ್ಗೆ ಬರೆಯಲು ಹಿಂಜರಿಯುತ್ತವೆ… ವಸು, ಎಂಡಿಎನ್ ತೀರಿಕೊಂಡ ದಿನಾಂಕ ಫೆಬ್ರವರಿ 3 ಎಂಬುದು ನೆನಪಾಗಿ, ‘ಅಳಿದ ಮೇಲೆ ಉಳಿದದ್ದೇನು?’ ಎಂಬ ಶಿವರಾಮ ಕಾರಂತರ ‘ಅಳಿದ ಮೇಲೆ’ ಕಾದಂಬರಿಯ ದನಿ ಮರುದನಿಸತೊಡಗುತ್ತದೆ…
ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ನಾಡಿನ ಹಾಗೂ ಜಗತ್ತಿನ ರೈತ ಹೋರಾಟದಲ್ಲಿ, ಕನ್ನಡ ಸಮಾಜವಾದಿ ಚಿಂತನೆಯಲ್ಲಿ, ರೈತ ನಾಯಕರಲ್ಲಿ, ಕಾರ್ಯಕರ್ತರಲ್ಲಿ, ರೈತ ಪರ ಜನರಲ್ಲಿ, ಪುಸ್ತಕಗಳಲ್ಲಿ, ಬರಹಗಳಲ್ಲಿ, ಯುಟ್ಯೂಬ್ ಭಾಷಣಗಳಲ್ಲಿ ಉಳಿದು ಬೆಳೆದು ಹಬ್ಬುತ್ತಿದ್ದಾರೆ. ಇತಿಹಾಸದ ಪ್ರೊಫೆಸರ್ ಡಾ. ವಸು ಮಳಲಿ ‘ಮೌಖಿಕ ಇತಿಹಾಸ’, ‘ಕನ್ನಡದೊಳ್ ಭಾವಿಸಿದ ಜನಪದಂ’, ‘ಕಳ್ಳು ಬಳ್ಳಿ’ ಪುಸ್ತಕಗಳಲ್ಲಿ, ನನ್ನ ‘ನೆತ್ತರು ಮತ್ತು ಗುಲಾಬಿ’ ಕತೆಯನ್ನು ಆಧರಿಸಿ ಮಾಡಿದ ‘ಶಸ್ತ್ರ’ ಅಪೂರ್ಣ ಸಿನಿಮಾದ ರೀಲುಗಳಲ್ಲಿ ಜೀವಂತವಾಗಿದ್ದಾರೆ; ಟೀಚಿಂಗಿನ ಪ್ರಭಾವದ ಬಗ್ಗೆ ಅಪಾರ ನಂಬಿಕೆಯಿಂದ ಎಂ.ಎ. ತರಗತಿಗಳಲ್ಲಿ ಇತಿಹಾಸ ಪಾಠ ಮಾಡಿ ಬೆಳೆಸಿದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಉಳಿದು ಬೆಳೆಯುತ್ತಿದ್ದಾರೆ.
ಎಂಡಿಎನ್ ಬಗ್ಗೆ ಕಳೆದ ತಿಂಗಳು ಇದೇ ಅಂಕಣದಲ್ಲಿ (READ HERE) ಬರೆದಿರುವುದರಿಂದ ವಸು ಮಳಲಿಯವರ ಬಗ್ಗೆ ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಬರೆದ ಟಿಪ್ಪಣಿಯ ಭಾಗಗಳನ್ನು ಕೊಡುತ್ತಿರುವೆ:
‘ಮುಂದೂಡಿದ ಕನಸಿಗೆ ಏನಾಗುತ್ತದೆ?’
ಇದು ಲ್ಯಾಂಗ್ಸ್‌ಟನ್ ಹ್ಯೂಸ್ ಬರೆದ ‘HARLEM’ ಎಂಬ ಹಾಡುಗವಿತೆಯ ಆರಂಭದ ಪ್ರಶ್ನೆ.
‘ಅದು ಬಿಸಿಲಲ್ಲಿ ಒಣಗಿದ ದ್ರಾಕ್ಷಿಯಂತೆ ಒಣಗುವುದೆ?’ ಎಂಬ ಉತ್ತರ ರೂಪದ ಪ್ರಶ್ನೆ ಶುರುವಿನಲ್ಲಿದೆ. ಮುಂದೂಡಿದ ಕನಸಿಗೆ ಏನೇನಾಗಬಹುದು ಎಂಬುದನ್ನು ಓದುಗರೇ ಕೇಳಿಕೊಳ್ಳುವಂತೆ ಪ್ರೇರೇಪಿಸುತ್ತಾ ಕವಿತೆ ಬೆಳೆಯುತ್ತದೆ.
‘ಅದು ಸ್ಫೋಟಗೊಳ್ಳುವುದೆ?’ ಎಂದು ಕವಿತೆ ನಿಲ್ಲುತ್ತದೆ; ಆದರೆ ಕವಿತೆ ಅಲ್ಲಿಗೇ ಮುಗಿಯುವುದಿಲ್ಲ.
ವಸು ಮಳಲಿ ಇನ್ನಿಲ್ಲವೆಂಬ ಸುದ್ದಿ (3 ಫೆಬ್ರವರಿ 2015) ಎರಗಿದ ತಕ್ಷಣ ಹುಟ್ಟಿದ ದುಃಖದ ಜೊತೆಗೇ ‘What happens to a dream deferred?’ ಎಂಬ ಸಾಲು ಮುತ್ತತೊಡಗಿತು. ರೂಪಕಗಳ ಸತ್ಯ ರುದ್ರ ಭೀಕರ ಅನ್ನಿಸತೊಡಗಿತು. ಇನ್ನು ಕಾಯಮ್ಮಾಗಿ ಮುಂದೂಡಲ್ಪಟ್ಟ ವಸುವಿನ ಕನಸುಗಳು ಕೇವಲ ಖಾಸಗಿ ಕನಸುಗಳಾಗಿರಲಿಲ್ಲ. ಕರ್ನಾಟಕದ ವಿವಿಧ ವೇದಿಕೆಗಳಲ್ಲಿ ಮಾಡಬೇಕಾದ ಗಂಭೀರ ಉಪನ್ಯಾಸಗಳು, ಸಿನಿಮಾ ಸ್ಕ್ರಿಪ್ಟುಗಳು, ಸಂಗೀತ, ಹೊಸ ತಲೆಮಾರಿಗಾಗಿ ಪ್ರಗತಿಪರ ಚಿಂತನೆಗಳ ಪುಸ್ತಕ ಸಂಪಾದನೆ, ಇತಿಹಾಸದ ವಿದ್ಯಾರ್ಥಿಗಳಿಗೆ ಆಧುನಿಕೋತ್ತರ ಚಿಂತನ ಮಾರ್ಗಗಳು, ಮಹಿಳಾ ವೇದಿಕೆಗಳಿಗಾಗಿ ಅನೇಕ ಬಗೆಯ ಸಂಶೋಧನಾ ಸಾಮಗ್ರಿಗಳ ತಯಾರಿ... ಹೀಗೆ ಒಂದಲ್ಲ ಒಂದು ಕನಸಿನ ಹಣ್ಣನ್ನು ಅಂಗೈಲಿ ಹಿಡಿದವರಂತೆ ವಸು ಕಣ್ಣರಳಿಸಿ ಮಾತಾಡುತ್ತಿದ್ದರು.
ನಮ್ಮ ಹತ್ತಿರದವರಿಗೆ ಕಾಯಿಲೆಯಾದಾಗ ನಮ್ಮೊಳಗೆ ವಿಚಿತ್ರ ಭಯ ಶುರುವಾಗುತ್ತದೆ. ಈ ಭಯ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಒಂದು: ಅವರನ್ನು ಕಳೆದುಕೊಳ್ಳುವ ಭಯ. ಇನ್ನೊಂದು: ನಾವು ಅವರ ಕಷ್ಟ ಕೊನೆಗಾಣಿಸಲು ಏನೂ ಮಾಡಲಿಲ್ಲವಲ್ಲ ಎಂದು ಒಳಗೊಳಗೇ ಹಬ್ಬುವ ಪಾಪಪ್ರಜ್ಞೆ.
ನನ್ನ ಜೊತೆಗೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಚರಿತ್ರೆಯ ಪ್ರಾಧ್ಯಾಪಕರಾಗಿದ್ದ ವಸು ಕ್ಯಾನ್ಸರಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ವಾಪಸು ಬಂದ ದಿನ ನನಗೂ ಹೀಗಾಗಿತ್ತು. ವಸು ಕೆಲವೇ ದಿನಗಳ ಕೆಳಗೆ ಕಿಮೋಥೆರಪಿ ಮುಗಿಸಿಕೊಂಡು ಕ್ಲಾಸಿಗೆ ಹಾಜರಾಗಿದ್ದರು. ಕೂದಲು ಉದುರಿದ ತಲೆಗೆ ಹಸಿರು ನೀಲಿ ಬೆರೆತ ಸ್ಕಾರ್ಫ್ ಕಟ್ಟಿಕೊಂಡಿದ್ದರು. ಗಂಡಸಾದ ಕಾರಣಕ್ಕೆ… ನನ್ನ ಗಂಟಲಲ್ಲಿ ಉಕ್ಕಿ ಅಲ್ಲೇ ನೆಲೆನಿಂತ ಅಳು; ವಸು ಕಷ್ಟದಲ್ಲಿದ್ದಾಗ ಏನೂ ಮಾಡಲಿಲ್ಲವಲ್ಲ ಎಂಬ ಕಸಿವಿಸಿ.
ಆ ಕಸಿವಿಸಿಯ ಭಾವವನ್ನೇ ನನ್ನಿಂದ ಹೊಡೆದು ಓಡಿಸುವಂತೆ ವಸು ನಕ್ಕರು. ಅದೇ ಆಗ ಚೇತರಿಸಿಕೊಂಡ ರೋಗಿಯಂತೆ ತನ್ನನ್ನು ನೋಡಕೂಡದೆಂದು ಸೂಚಿಸುವಂತೆಯೂ ನಕ್ಕರು. ವಸು ಆಸ್ಪತ್ರೆಯಲ್ಲಿದ್ದಾಗ ಹೋಗಿ ನೋಡಲಾಗದ ನನಗೆ ಅವರಿಗೆ ಕಾಯಿಲೆಯಾಗಿದ್ದೇ ಸುಳ್ಳಿರಬೇಕು ಎನ್ನಿಸುವಷ್ಟು ಅವರ ಮುಖ ಫ್ರೆಶ್ ಆಗಿತ್ತು. ನೀವು ಅಷ್ಟೆಲ್ಲ ಕಷ್ಟಗಳನ್ನು ಹಾದು ಬಂದಿದ್ದೀರಿ ಎಂದು ನಿಮ್ಮ ಮುಖ ನೋಡಿದರೆ ಅನ್ನಿಸುವುದೇ ಇಲ್ಲ ಎಂದು ನಿಜಕ್ಕೂ ಅನಿಸಿದ್ದನ್ನು ಹೇಳಿದೆ. ವಸು ಅಪಾರ ಸಮಾಧಾನದಿಂದ ನಕ್ಕರು. ವಸು ಸಾವನ್ನು ಗೆದ್ದಿದ್ದಾರೆ ಎಂದುಕೊಂಡೆ.
ಪ್ರಜಾವಾಣಿಯಲ್ಲಿ ‘ಕಳ್ಳು ಬಳ್ಳಿ’ ಎಂಬ ಅಂಕಣ ಶುರು ಮಾಡಿದ ದಿನ ಅವರು ಬರೆದ ‘ಒಡಲ ಬೆಂಕಿ ಆರದಿರಲಿ’ ಬರಹದಲ್ಲಿ ಅವರ ಕಾಯಿಲೆಯ ಘಟ್ಟದ ತಲ್ಲಣಗಳೆಲ್ಲ ಇರುವಂತೆ ಕಂಡಿತು. ಆ ವಿವರಗಳನ್ನು ಎದುರಿಸಲಾರದೆ ನಾನು ಆ ಅಂಕಣ ಓದುವುದನ್ನೇ ತಪ್ಪಿಸಿಕೊಂಡೆ. ಅಂಕಣ ಬರವಣಿಗೆ ವಸುವಿಗೆ ಅಪಾರ ಸಾರ್ಥಕ್ಯ ಭಾವವನ್ನೂ ಹೊಸ ಜೀವನೋದ್ದೇಶವನ್ನೂ ಕೊಟ್ಟು ಅವರನ್ನು ಪೊರೆಯತೊಡಗಿತು. ಅಂಕಣ ಪ್ರಕಟವಾದ ದಿನ ಬರುತ್ತಿದ್ದ ಫೋನ್ ಕರೆಗಳು ಹಾಗೂ ಟೀಕೆಗಳು ಅವರಲ್ಲಿ ಹೊಸ ಜೀವ ತುಂಬುತ್ತಿದ್ದವು.
ಆಸ್ಪತ್ರೆಯಿಂದ ಬಂದ ನಂತರದ ಒಂದೆರಡು ವರ್ಷಗಳಲ್ಲಿ ವಸು ಬದುಕಿದ ಒಂದೊಂದು ದಿನವೂ, ಅವರು ತೊಡಗಿಕೊಂಡ ಪ್ರತಿ ಬೌದ್ಧಿಕ ಹಾಗೂ ಸೃಜನಶೀಲ ಕೆಲಸವೂ ಅವರು ಸಾವಿನ ಜೊತೆ ನಡೆಸಿದ ಸೆಣಸಾಟವೇ ಆಗಿದ್ದುದರ ಸುಳಿವು ನನ್ನ ಕಣ್ಣಿಗೂ ಹತ್ತುತ್ತಿತ್ತು. ಸೂಕ್ಷ್ಮಜೀವಿಗಳು ಆಳವಾಗಿ ತೊಡಗಿ ನಡೆಸುವ ಪ್ರತಿ ಕೆಲಸವೂ ಎಲ್ಲೋ ಆಳದಲ್ಲಿ ಸಾವನ್ನು ಮುಂದೂಡುವ ಪ್ರಯತ್ನವೇ! ಕಾಲೇಜು ಹುಡುಗಿಯಾಗಿದ್ದಾಗಿನಿಂದ ಸಹಜ ನಾಯಕತ್ವದ ಗುಣ ಚಿಮ್ಮುತ್ತಿದ್ದ ವಸು ಎಂಥ ಕಷ್ಟ ಬರಲಿ, ಸುಮ್ಮನೆ ಕೂತಿರುವುದು ಸಾಧ್ಯವೇ ಇರಲಿಲ್ಲ. ಕಾಲೇಜಿನ ಯೂನಿಯನ್ ಎಲೆಕ್ಷನ್ ಗೆದ್ದ ವಸು ಮೈಸೂರು ವಿಶ್ವವಿದ್ಯಾಲಯದ ಖೊಖೋ ಟೀಮಿನ ನಾಯಕಿಯಾಗಿದ್ದವರು. ಜೊತೆಯಲ್ಲಿದ್ದವರನ್ನು ತನ್ನೊಡನೆ ಮುಂದೊಯ್ಯಬೇಕೆಂಬ ನಾಯಕಿಧ್ವನಿ ಅವರು ಮಾತಾಡಿದಾಗ, ಬರೆದಾಗ, ಸಂವಾದ ಮಾಡಿದಾಗ ಮತ್ತೆ ಮತ್ತೆ ಕಾಣುತ್ತಿತ್ತು.
‘ಸಮಾಜದಲ್ಲಿ ಮತ್ತು ಚರಿತ್ರೆಯಲ್ಲಿ ಧ್ವನಿ ಕಳೆದುಕೊಂಡವರ ಧ್ವನಿಯಾಗಬೇಕಾದುದು ಮೌಖಿಕ ಇತಿಹಾಸ’ ಎಂಬ ಉದ್ದೇಶದಿಂದ ‘ಮೌಖಿಕ ಇತಿಹಾಸ’ ಪುಸ್ತಕ ಬರೆದ ವಸು, ಕರ್ನಾಟಕದ ಚರಿತ್ರೆಯನ್ನು ಅರಿಯಲು ಮೌಖಿಕ ಆಕರಗಳನ್ನು ಬಳಸಲು ಉತ್ಸುಕರಾಗಿದ್ದರು. ಅನನ್ಯ ಇತಿಹಾಸಕಾರ ಇರ್ಫಾನ್ ಹಬೀಬ್ ಮಾದರಿಯಲ್ಲಿ ಜನ ಸಮುದಾಯದ ಚರಿತ್ರೆಯನ್ನು ನೋಡಲೆತ್ನಿಸಿದ ವಸು ಆ ದಿಕ್ಕಿನಲ್ಲಿ ಅಪಾರ ಕೆಲಸ ಮಾಡುವ ಸಾಧ್ಯತೆಯಿತ್ತು. ಅವರು ನನ್ನ ಕಣ್ಣೆದುರೇ ಕೆಲವೇ ತಿಂಗಳಲ್ಲಿ ‘ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ಬೃಹತ್ ರೆಫರೆನ್ಸ್ ಪುಸ್ತಕವನ್ನು ಸಂಪಾದಿಸಿ ಕೊಟ್ಟರು. ಈ ಪುಸ್ತಕದಲ್ಲಿ ವಸು ಎಡತಾಕುತ್ತಿದ್ದ ಹಲಬಗೆಯ ಅಕಡೆಮಿಕ್ ಶಿಸ್ತುಗಳನ್ನು ಬಳಸಿದ ಲೇಖಕ, ಲೇಖಕಿಯರ ಬರಹಗಳಿವೆ.
ಕರ್ನಾಟಕದಲ್ಲಿ ಎಸ್. ಚಂದ್ರಶೇಖರ್, ಷ. ಶೆಟ್ಟರ್, ಅಶೋಕ ಶೆಟ್ಟರ್ ಮುಂತಾದ ಚರಿತ್ರಕಾರರಂತೆ, ಅವರ ನಂತರದ ತಲೆಮಾರಿನ ಸಿ.ಆರ್.ಗೋವಿಂದರಾಜು, ವಸು ಕೂಡ ಕನ್ನಡ ಸಾಹಿತ್ಯದೊಂದಿಗೆ ನಿಕಟ ಸಂಬಂಧವಿಟ್ಟುಕೊಂಡು ಇತಿಹಾಸಲೇಖನವನ್ನು ಮುಂದುವರೆಸಿದರು. ವಸುವಿನಲ್ಲಿ ಸ್ತ್ರೀವಾದ-ಎಡಪಂಥೀಯ ನೋಟಕ್ರಮ ಎರಡೂ ಬೆರೆತು, ಈ ಎಲ್ಲರಿಗಿಂತ ಭಿನ್ನವಾಗಿ ನಡೆಯಲೆತ್ನಿಸಿದರು.
ವಸು ಹಲಬಗೆಯ ಕಲಾಪ್ರಕಾರಗಳ ಜೊತೆಗೆ ಒಡನಾಡುತ್ತಿದ್ದುದರಿಂದ ಅವರು ಚರಿತ್ರೆಯನ್ನು ನೋಡುತ್ತಿದ್ದ ಕ್ರಮವೂ ಹೆಚ್ಚು ಜೀವಂತವಾಗಿತ್ತು. ಅನಿಮೇಷನ್ ಮೂಲಕ ಇಂಡಿಯಾದ ಇತಿಹಾಸವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವನ್ನೂ ವಸು ಮಾಡಿದರು; ಅದು ನಿಂತುಹೋಯಿತು. ಈ ನಡುವೆ ಹಾಲಿವುಡ್‌ಗೆ ಹೋಗಿ ಅಲ್ಲಿ ಒಂದು ಸಿನಿಮಾ ಕೋರ್ಸ್ ಕೂಡ ಮಾಡಿ ಬಂದರು. ಆ ನಂತರ ವಸು ‘ಶಸ್ತ್ರ’ ಸಿನಿಮಾ ಶೂಟ್ ಮಾಡುತ್ತಿದ್ದರು. ಈ ಸಿನಿಮಾ ಶೂಟಿಂಗಿನ ಕಾಲದಲ್ಲಿ ಹಟಾತ್ತನೆ ಕಾಣಿಸಿಕೊಂಡ ಎದೆನೋವನ್ನು ಅವರು ಉದಾಸೀನ ಮಾಡಲಿಲ್ಲ. ಈ ಎಚ್ಚರ ಇದ್ದಕ್ಕಿದ್ದಂತೆ ಎರಗಿದ ವಿಪತ್ತನ್ನು ಎದುರಿಸುವ, ಬದುಕುವ ವಸುವಿನ ಛಲದ ಭಾಗವಾಗಿತ್ತು. ಕಿಮೋಥೆರಪಿಗಳ ಭೀಕರ ಯಾತನೆಗಳನ್ನು ಅವರು ಹಾದು ಬಂದರು. ನಾನು ಭೇಟಿಯಾಗುವ ಹೊತ್ತಿಗೆ ವಸು ಆತಂಕದಿಂದ ಪಾರಾದಂತಿದ್ದರು.
ಇನ್ನೇನು ಹರಳುಗಟ್ಟುತ್ತಿದ್ದ ಚಿಂತಕಿಯಾಗಿ ವಸು ವಿದ್ಯಮಾನಗಳನ್ನು ನೋಡುತ್ತಿದ್ದ ರೀತಿಯಲ್ಲಿ ಎಡಪಂಥೀಯ ಒಲವಿತ್ತು; ಎಡಪಂಥೀಯ ಹಣೆಪಟ್ಟಿ ಹಚ್ಚಿಕೊಳ್ಳಲು ಅವರೊಳಗೆ ಹಿಂಜರಿಕೆಯಿತ್ತು. ಆದರೆ ಜನವಾದಿ ಮಹಿಳಾ ಸಂಘಟನೆಯ ಬಗ್ಗೆ ಅವರಿಗೆ ಅಪಾರ ವಿಶ್ವಾಸವಿತ್ತು. ಮೊಗಳ್ಳಿ ಗಣೇಶರಂಥ ಚಿಂತಕರ ಹಾಗೆ ವಸು ಕೂಡ ಸಮೂಹಪ್ರಜ್ಞೆ ಎಂಬುದನ್ನು ಜಾನಪದ ನೆಲೆಯಲ್ಲಿ ವಿವರಿಸಿಕೊಳ್ಳಲೆತ್ನಿಸುತ್ತಿದ್ದರು. ಮೂರು ವರ್ಷಗಳ ಕೆಳಗೆ ಹಾಸನ ಜಿಲ್ಲೆಯಲ್ಲಿರುವ ತಮ್ಮೂರು ಮಳಲಿಗೆ ಹೋಗಿ ಗ್ರಾಮದೇವತೆ ಮಳಲಿ ಗಿಡ್ಡಮ್ಮನ ಜಾತ್ರೆಯನ್ನು ಚಿತ್ರೀಕರಿಸಿಕೊಂಡು ಬಂದಿದ್ದರು. ‘ಅದೆಲ್ಲ ಟೈಂ ವೇಸ್ಟ್ ಅಲ್ಲವೆ!’ ಎಂದು ನಾನು ಕುಟುಕಿದರೆ ಅದನ್ನೂ ನಕ್ಕು ಸ್ವೀಕರಿಸುತ್ತಿದ್ದರು.
ಸಿದ್ಧಾಂತಗಳು ಒಂದೆಡೆ ಎಳೆದರೆ, ಕಾಲದ ಒತ್ತಾಯಗಳು ವಸುವನ್ನು ಮತ್ತೊಂದೆಡೆಗೆ ಎಳೆಯುತ್ತಿದ್ದಂತೆ ಕಾಣುತ್ತಿತ್ತು. ಇವೆರಡರ ನಡುವಣ ಬಿರುಕು ಅವರಿಗೂ ಗೊತ್ತಿತ್ತು. ಅವನ್ನು ಕುರಿತು ನಮ್ಮಂಥವರ ಟೀಕೆಗೂ ಅವರಲ್ಲೊಂದು ವಿಶಾಲ ಸ್ಪೇಸ್ ಇತ್ತು. ಅವರು ಮೆಚ್ಚುವ ಸಿನಿಮಾಗಳನ್ನು, ಹೆಣೆಯುವ ಸ್ರ‍್ಕೀನ್ ಪ್ಲೇಗಳನ್ನು ಕುರಿತು ನಾನು ರೇಗಿಸಿದಾಗ ವಸು ಕೊಂಚ ಮುದುಡಿದರೂ, ವಿಷಯ ಬದಲಿಸಿ ನನ್ನನ್ನೇ ಹಗುರಗೊಳಿಸಲೆತ್ನಿಸುತ್ತಿದ್ದರು. ಮತ್ತೆ ಸಿಕ್ಕಾಗ ಅವತ್ತು ಮುದುಡಿದ ಕುರುಹು ಅವರಲ್ಲಿ ಒಂಚೂರೂ ಇರುತ್ತಿರಲಿಲ್ಲ. ಹೆಣ್ಣಿನ ರಿಯಾಯತಿಯನ್ನಾಗಲೀ, ಹೆಣ್ಣೆಂಬ ಕಾರಣಕ್ಕೆ ತನ್ನ ಮಾತಿಗೆ ಮನ್ನಣೆ ನೀಡಬೇಕೆಂದಾಗಲೀ ವಸು ನಿರೀಕ್ಷಿಸುತ್ತಿರಲಿಲ್ಲ.
ತಮ್ಮ ತಾತ್ವಿಕತೆಗಳನ್ನೂ, ತಮ್ಮ ವೈಯಕ್ತಿಕ ಸ್ವಾತಂತ್ರ‍್ಯವನ್ನೂ, ತಾವು ಹೇಳಬಯಸಿದ್ದನ್ನು ಹೇಳಲು ತಕ್ಕ ಪ್ರಕಾರಗಳನ್ನೂ ತಮಗೆ ಸರಿಕಂಡಂತೆ ರೂಪಿಸಿಕೊಂಡಿದ್ದ ವಸು ಚರಿತ್ರೆ, ಸಂಶೋಧನಾ ಉಪನ್ಯಾಸ, ಸಿನಿಮಾ, ಜಾನಪದ, ಸಂಸ್ಕೃತಿ ವಿಮರ್ಶೆ… ಹೀಗೆ ಎಲ್ಲ ವಲಯಗಳಲ್ಲೂ ಗಟ್ಟಿಯಾದದ್ದನ್ನು ತಮ್ಮ ಡೆಸ್ಕ್ ಟಾಪಿನಲ್ಲಿ, ತಮ್ಮ ಡೈರಿ ಹಾಗೂ ನೋಟ್ ಬುಕ್ಕುಗಳಲ್ಲಿ ಬಿಟ್ಟು ಹೋದಂತಿದೆ. ಅವು ಸಂಪುಟಗಳಲ್ಲಿ ಪ್ರಕಟವಾದರೆ ವಸುವಿನ ಒಟ್ಟು ಸತ್ವ ಇನ್ನಷ್ಟು ಪ್ರಖರವಾಗಿ ಕಾಣಬಲ್ಲದು.
ವಸು ತೀರಿಕೊಂಡದ್ದು 3 ಫೆಬ್ರವರಿ 2015ರಂದು. 3 ಫೆಬ್ರವರಿ 2004ರಂದು ನಮ್ಮೆಲ್ಲರ ಪ್ರಿಯ ಚಿಂತಕರೂ ಕನ್ನಡನಾಡಿನ ಶ್ರೇಷ್ಠ ಧೀಮಂತ ನಾಯಕರೂ ಆಗಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ಕೂಡ ಕ್ಯಾನ್ಸರಿಗೆ ಬಲಿಯಾದದ್ದು ನೆನಪಾಗುತ್ತಿದೆ. ಈ ಬಗೆಯ ಖಚಿತ ನಿಲುವುಗಳುಳ್ಳ ಚಿಂತಕ, ಚಿಂತಕಿಯರ ನಿರ್ಗಮನ ನಮ್ಮೆಲ್ಲರ ಸಾಮೂಹಿಕ ವೈಚಾರಿಕ ಪ್ರಯತ್ನಗಳಿಗೆ ಎಂಥ ಹಿನ್ನಡೆ ತರುತ್ತವೆ ಎಂಬುದನ್ನು ನೆನೆದರೆ ದುಗುಡ ಮುತ್ತತೊಡಗುತ್ತದೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ರಾತ್ರಿ ಒಂಬತ್ತೂವರೆ ದಾಟಿದ ಮೇಲೆ ಅವರು ತಮ್ಮ ಕಛೇರಿಯ ಕುರ್ಚಿ ಬಿಟ್ಟು ಮೇಲೆದ್ದರು. ಅವರಿಗಿಂತ ಎರಡು ಗಳಿಗೆ ಮೊದಲು ಆಫೀಸಿನ ಮೆಟ್ಟಲಿನಿಂದ ಕೆಳಗಿಳಿದ ನಾನು ಬೈಕ್ ಹತ್ತುವ ಮುನ್ನ ಅವರು ಕೆಳಗಿಳಿದು ಬರುವುದನ್ನು ಸುಮ್ಮನೆ ನೋಡುತ್ತಾ ನಿಂತೆ. ಅವರು ಕೊಂಚ ತಡವರಿಕೆಯ ಹೆಜ್ಜೆ ಇಡುತ್ತಲೇ ಮೆಟ್ಟಲಿಳಿಯುತ್ತಾ, ‘ಬರ್ಲೇನೋ…’ ಎಂದು ಕೊರಗುವ ದನಿಯಲ್ಲಿ ಹೇಳಿದರು. ‘ಹೂಂ ಸಾರ್’ ಅಂದೆ.
ಇಸವಿ 2000. ಜನವರಿ 24. ರಾತ್ರಿ: 9.45.
‘ಬರ್ಲೇನೋ?’ ಎಂದ ಅವರು ಬರಲಿಲ್ಲ. ಪಿ. ಲಂಕೇಶ್ ಇನ್ನು ಮರಳಿ ಬರುವುದಿಲ್ಲ ಎಂಬ ಸುದ್ದಿಯನ್ನು ಬೆಳಗ್ಗೆ ಫೋನ್ ಮಾಡಿ ಹೇಳಿದವರು ಕವಿ ಮಿತ್ರ ಚಿಂತಾಮಣಿ ಕೊಡ್ಲೆಕೆರೆ. ಅದಕ್ಕಿಂತ ಮೊದಲು, ಎಷ್ಟೋ ವರ್ಷಗಳ ಕೆಳಗೆ, ತಮ್ಮ ಹುಟ್ಟು ಹಬ್ಬದ ದಿನ ‘ಸಾವು ಎನ್ನುವುದು ಕನಸಿಲ್ಲದ ನಿದ್ರೆ’ ಎಂದು ಲಂಕೇಶರು ಹೇಳಿದ್ದು ಈಗ ಮತ್ತೆ ನೆನಪಾಗುತ್ತಿದೆ.
‘ಇಂತಿ ನಮಸ್ಕಾರಗಳು: ಲಂಕೇಶ್-ಡಿ.ಆರ್.ನಾಗರಾಜ್ ಕುರಿತ ಸಾಂಸ್ಕೃತಿಕ ಕಥಾನಕ’ ಎಂಬ ನನ್ನ ಪುಸ್ತಕದಲ್ಲಿ ದಾಖಲಾಗಿರುವ ಆ ಕೊನೆಯ ರಾತ್ರಿಯ ಗಳಿಗೆಗಳ ಕೆಲವು ವಿವರಗಳನ್ನು ಕೆಳಗೆ ಕೊಟ್ಟಿರುವೆ:
‘೨೪ ಜನವರಿ. ಸೋಮವಾರ. ಅದು ‘ಲಂಕೇಶ್ ಪತ್ರಿಕೆ’ಯ ಹೊಸ ಸಂಚಿಕೆಯ ತಯಾರಿಯ ದಿನ. ನಾನು ಸಾಮಾನ್ಯವಾಗಿ ಸೋಮವಾರಗಳಂದು ಸಂಪಾದಕ ಲಂಕೇಶರನ್ನು ನೋಡುತ್ತಿರಲಿಲ್ಲ. ಆದರೆ ಅವತ್ತು ಮಾತ್ರ ಹೋಗಲೋ ಬೇಡವೋ ಎಂದು ಅರೆಮನಸ್ಸಿನಿಂದಲೇ ಅವರ ಛೇಂಬರಿನೊಳಕ್ಕೆ ಅಡಿಯಿಟ್ಟೆ. ಸಂಪಾದಕರು ಟೆಲಿವಿಷನ್ನಿನೆದುರು ಕೂತಿದ್ದರು. ‘ಬಾ’ ಎನ್ನುವಂತೆ ಸುಮ್ಮನೆ ಕತ್ತು ಹಾಕಿ ಮತ್ತೆ ತಮ್ಮ ಕೋಶದೊಳಗೆ ಹೂತು ಹೋದರು. ವಿಡಿಯೋದಲ್ಲಿ ಅವರ ಮೆಚ್ಚಿನ ಚಿತ್ರವಾದ ‘ಪ್ರೈಡ್ ಅಂಡ್ ಪ್ರಿಜುಡೀಸ್’ನ ದೃಶ್ಯಗಳು ತೇಲಿ ಹೋಗುತ್ತಿದ್ದವು. …ಮಾತಾಡುವುದನ್ನು ತಪ್ಪಿಸಿಕೊಳ್ಳಲೆಂದೋ ಏನೋ ಅವರು ಸಿನಿಮಾದಲ್ಲೇ ಮುಳುಗಿಬಿಟ್ಟರು. ಅವರಿಗೆ ಪ್ರಿಯವಾದ ಲಿಟರರಿ ಗಾಸಿಪ್ಪಿಗೆ ಎಳೆದರೆ ಅವರು ಕೊಂಚ ಹೊರ ಬರುತ್ತಾರೆ ಎನ್ನಿಸಿ, ‘…ಜೇನ್ ಆಸ್ಟಿನ್ ಬರೆದ ‘ಪ್ರೈಡ್ ಅಂಡ್ ಪ್ರಿಜುಡೀಸ್’ ಕಾದಂಬರಿಯನ್ನು ದೇಜಗೌ ‘ಹಮ್ಮು-ಬಿಮ್ಮು’ ಎಂದು ಅನುವಾದಿಸಿದ್ದಾರಲ್ಲ!’ ಎಂದೆ. ತಕ್ಷಣ ಅವರು ದೇಜಗೌ ಬಳಸುವ ಕನ್ನಡದ ವೈಖರಿ ನೆನೆದು ನಕ್ಕರು. ‘ಆ ದೇಜಗೌಗೆ ಅನುವಾದ ಎನ್ನುವುದು ಕಾಟೇಜ್ ಇಂಡಸ್ಟ್ರೀ ಥರ. ಆತ ‘ಅನ್ನಾ ಕರೇನಿನಾ’, ‘ವಾರ್ ಅಂಡ್ ಪೀಸ್’ ಎಲ್ಲವನ್ನೂ ಕೊಲೆ ಮಾಡಿದಂತಿದೆ!’ ಎಂದು ಮುಗುಳ್ನಕ್ಕರು.
ಅವತ್ತು ಲಂಕೇಶರು ಎಂದಿಗಿಂತ ಮುಂಚೆಯೇ ಮೇಲೆದ್ದು ಆ ರಾತ್ರಿ ಓದುವ ಪುಸ್ತಕಗಳನ್ನು ಆಯ್ದುಕೊಂಡರು. ಆಗ ಅವರ ಟೇಬಲ್ ಮೇಲಿದ್ದ ಪುಸ್ತಕವೊಂದಕ್ಕೆ ನಾನೂ ಕೈ ಹಾಕಿದೆ. ಅವರೂ ಕೈ ಹಾಕಿದರು. ಅದು ಡಿ.ಎನ್. ಶಂಕರಭಟ್ಟರ ‘ಕನ್ನಡ ಶಬ್ದರಚನೆ’ ಎಂಬ ಪುಸ್ತಕ. ನಾನು, ‘ಇಂಥ ಪುಸ್ತಕಗಳನ್ನೆಲ್ಲಾ ನೀವು ಓದುವುದಿಲ್ಲವೆಂದು ತಿಳಿದಿದ್ದೆನಲ್ಲ!’ ಎಂದೆ. ‘ನೋ, ನೋ, ಭಟ್ಟ ಬಾಳಾ ಚೆನ್ನಾಗಿ ಬರೀತಾನೆ’ ಎನ್ನುತ್ತಾ ಪುಸ್ತಕವನ್ನು ಕಾರಿನಲ್ಲಿಡಲು ಡ್ರೈವರ್ ರೇವಣ್ಣನಿಗೆ ಹೇಳಿದರು. ನಾನು ಪತ್ರಿಕೆಯ ಆಫೀಸಿನ ಮೆಟ್ಟಲಿಳಿದು ಬೈಕ್ ಹತ್ತಿ ಯಾಕೋ ಹಿಂತಿರುಗಿ ನೋಡಿದೆ: ಎಂದಿನಂತೆ ಜಾರುತ್ತಿದ್ದ ಪ್ಯಾಂಟನ್ನು ಮೇಲೆಳೆದುಕೊಳ್ಳುತ್ತಾ ಅಸ್ಥಿರವಾದ ಹೆಜ್ಜೆಗಳನ್ನಿಡುತ್ತಾ ಅವರು ಕಾರಿನ ಬಳಿ ಬರುತ್ತಿದ್ದುದನ್ನು ಕಂಡು ಪಿಚ್ಚೆನ್ನಿಸಿ ಕತ್ತಲಲ್ಲಿ ಕರಗಿದೆ…’
ಇದಾದ ಕೆಲವು ವರ್ಷ ಗೆಳೆಯ ಬಸವರಾಜು ಪ್ರತಿ ವರ್ಷ ಜನವರಿ 24ರ ರಾತ್ರಿ ಪೋನ್ ಮಾಡಿ, ‘ಬನ್ನಿ! ಮೇಷ್ಟ್ರ ಹೆಸರಲ್ಲಿ ಒಂದು ಸ್ಮಾಲ್ ಹಾಕೋಣ!’ ಎನ್ನುತ್ತಿದ್ದರು. ವರ್ಷಗಳುರುಳಿದಂತೆ ಆ ದಿನಾಂಕವೂ ಮರೆತು ಹೋಗತೊಡಗಿತು. ಲಂಕೇಶರನ್ನಾಗಲೀ, ಲಂಕೇಶರ ಪತ್ರಿಕೆಯನ್ನಾಗಲೀ ಎಂದೂ ನೋಡದ ಹೊಸ ತಲೆಮಾರಿನ ಗೆಳೆಯ ಶೈಲೇಶ್ ಈಚೆಗೆ ಲಂಕೇಶರ ಬಗ್ಗೆ ಅಭಿಮಾನದಿಂದ ಮಾತಾಡುತ್ತಿದ್ದಾಗ ಇಪ್ಪತ್ತೈದು ವರ್ಷಗಳ ಹಿಂದಿನ ರಾತ್ರಿಯ ವಿವರಗಳು ಒಂದರ ಹಿಂದೊಂದರಂತೆ ನೆನಪಾದವು. ಲಂಕೇಶ್ ಕೃತಿಗಳು ಇವತ್ತಿಗೂ ಬೆಳೆಯುತ್ತಿರುವ ರೀತಿಗೆ ಹೊಸ ತಲೆಮಾರಿನ ಶೈಲೇಶ್ ಥರದವರನ್ನು ಲಂಕೇಶ್ ಕೃತಿಗಳು ಹಿಡಿದಿಟ್ಟಿರುವ ಬಗೆ ಒಳ್ಳೆಯ ಉದಾಹರಣೆ.
ಲಂಕೇಶರ ನಿರ್ಗಮನದ ನಂತರದ ಇಪ್ಪತ್ತೈದು ವರ್ಷಗಳಲ್ಲಿ ಲಂಕೇಶರ ಕೃತಿಗಳ ಜೀವಂತ ಗುಣದಿಂದ ಹೊಸ ಉಸಿರು ಪಡೆದವರು ಅವರನ್ನು ಇನ್ನೊಬ್ಬರಿಗೆ ದಾಟಿಸುತ್ತಾ ಹೋಗುವ ಸುಂದರ ರೀತಿಯನ್ನು ಸದಾ ಕಂಡಿರುವೆ. ಯಾರಾದರೂ ಬರವಣಿಗೆಯ ಕಲೆ ಕಲಿಯುವ ಬಗ್ಗೆ, ಅದರಲ್ಲೂ ಗದ್ಯ ಬರವಣಿಗೆ, ಪತ್ರಿಕಾ ಬರವಣಿಗೆ ಕಲಿಯುವ ಬಗ್ಗೆ, ನನ್ನನ್ನು ಕೇಳಿದರೆ ನಾನು ಸೂಚಿಸುವುದು ಲಂಕೇಶರ ಗದ್ಯವನ್ನೇ. ಲಂಕೇಶರ ‘ಟೀಕೆ ಟಿಪ್ಪಣಿ’ ಹಾಗೂ ‘ಮರೆಯುವ ಮುನ್ನ’ ಸಂಪುಟಗಳನ್ನು ಮತ್ತೆ ಮತ್ತೆ ಓದುವ ಲೇಖಕರಾಗಲೀ, ಪತ್ರಕರ್ತರಾಗಲೀ ಸೂಕ್ಷ್ಮ ಬರವಣಿಗೆಯ ರೀತಿಗಳನ್ನು ಗ್ಯಾರಂಟಿ ಕಲಿಯಬಲ್ಲರು; ಇವತ್ತಿಗೂ ಸುಮ್ಮನೆ ಕನ್ನಡದಲ್ಲಿ ಏನಾದರೂ ಓದಬೇಕೆನ್ನಿಸಿದಾಗ ನನ್ನ ಕೈ ತಂತಾನೇ ಹೋಗುವುದು ಲಂಕೇಶರ ಪುಸ್ತಕಗಳ ಕಡೆಗೆ. ಅಲ್ಲಿ ಯಾವ ಪುಟ ತೆಗೆದರೂ ಜೀವ ಸ್ಪರ್ಶವಾಗದ ಭಾಗವೇ ಇಲ್ಲ! ಈಚೆಗೆ ಇತಿಹಾಸ ಬರವಣಿಗೆ ಕುರಿತು ನಾನೊಂದು ಕತೆ ಬರೆದಾಗ, ‘ಮೊನ್ನೆ ಮೊನ್ನೆ ತಾನೇ ಲಂಕೇಶ್, ‘ದಾಳಿ’ ಎನ್ನುವ ಐತಿಹಾಸಿಕ ಕತೆಯನ್ನೇ ಅವರ ಎಂದಿನ ಕತೆಗಳ ಭಾಷೆಯಲ್ಲೇ, ಸಹಜವಾಗೇ, ಬರೆದಿದ್ದಾರಲ್ಲ!’ ಎಂಬ ಡಯಲಾಗ್ ಕಥಾ ಪಾತ್ರದ ಬಾಯಲ್ಲಿ ಇದ್ದಕ್ಕಿದ್ದಂತೆ ಬಂತು!
ಕಳೆದ ವರ್ಷ ಕುವೆಂಪು ಯೂನಿವರ್ಸಿಟಿಯಲ್ಲಿ ಹುಡುಗ, ಹುಡುಗಿಯರಿಗಾಗಿ ಲಂಕೇಶ್ ಕಮ್ಮಟ ನಡೆಸುತ್ತಿದ್ದಾಗ ಅವರ ಕತೆಗಳ ಹೊಸ ಅರ್ಥಗಳು ಚಿಮ್ಮತೊಡಗಿದ್ದವು. ಲಂಕೇಶರ ಆರಂಭದ ಕತೆಗಳಲ್ಲೊಂದಾದ ‘ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ’ ಹುಡುಗನೊಬ್ಬ ಸ್ಕಾಲರ್‌ಶಿಪ್ ಹಣ ಪಡೆಯಲು ನಡೆಸಿದ ಅವಮಾನ-ಅಸಹಾಯಕತೆಗಳ ‘ಯಾತ್ರೆ’ ಎಂಬಂತೆ ಮೇಲುನೋಟಕ್ಕೆ ಕಾಣುತ್ತದೆ; ಆದರೆ ಇದು ಹುಡುಗನೊಬ್ಬ ತನ್ನ ಕಾಮಲೋಕದ ಸಂಕೀರ್ಣ ಸ್ಥಿತಿಯ ಬಗ್ಗೆ ಜ್ಞಾನ (ಸ್ಕಾಲರ್‌ಶಿಪ್) ಪಡೆದುಕೊಳ್ಳುವ ಒಳಲೋಕದ ಯಾತ್ರೆ ಎನ್ನುವುದು ನಿಧಾನಕ್ಕೆ ಅರ್ಥವಾಗಿತೊಡಗುತ್ತದೆ! ಇದು ಲಂಕೇಶ್ ಬರಹಗಳು ನಿತ್ಯ ಬೆಳೆಯುವ ರೀತಿ. ಅದೇ ರೀತಿ, ಧರ್ಮಗಳ ನಡುವೆ ಜಗಳ ತಂದು ಹಾಕುವವರ ಬಗ್ಗೆ ಮಾತಾಡುತ್ತಿರುವಾಗಲೆಲ್ಲ ‘ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ’ ಎಂಬ ಲಂಕೇಶರ ಗಾಂಧಿಯನ್ ಹೇಳಿಕೆ ನನ್ನ ಬಾಯಿಂದ ಬರುತ್ತದೆ.
1978ರ ಕೊನೆಯ ಭಾಗದಲ್ಲೊಂದು ದಿನ ಹುಳಿಯಾರ್ ಎಂಬ ನಮ್ಮೂರಿನ ನನ್ನ ಪುಟ್ಟ ರೂಮಿನ ಗೋಡೆಯ ಮೇಲೆ ‘ರೂಪತಾರಾ’ ಸಿನಿಮಾಪತ್ರಿಕೆಯ ಪುಟಗಳಿಂದ ಹೊರ ಸೆಳೆದು, ಮನೆಯಲ್ಲಿದ್ದ ಯಾರದೋ ಹಳೆಯ ಫೋಟೋದ ಕಟ್ಟು ಗಾಜು ತೆಗೆದು, ಅಂಟು ಹಾಕಿದ ಹೊಳೆವ ಹಾಳೆಯ ಫೋಟೋ ಆಗಿ ತೂಗಿದ್ದ ಲಂಕೇಶರ ಕಪ್ಪು ಬಿಳುಪು ಚಿತ್ರ ಕಣ್ಣ ಮುಂದೆ ಬರುತ್ತಿದೆ! ಆ ಫೋಟೋದಲ್ಲಿದ್ದ ಪಿ. ಲಂಕೇಶ್ ಎಂಬ ‘ಶತಮಾನದ ಪ್ರತಿಭೆ’ಯ ಕೃತಿಗಳು ಅವತ್ತಿನಿಂದಲೂ ನನ್ನೊಳಗೆ ನೆಲೆಸಿ ಹಲವು ದಿಕ್ಕಿನಲ್ಲಿ ಬೆಳೆಯುತ್ತಲೇ ಇರುವ ಪರಿ ಅದ್ಭುತ ಎನ್ನಿಸುತ್ತದೆ!
ಲಂಕೇಶರ ಅಧಿಕಾರವಿರೋಧಿ ಬರವಣಿಗೆಯ ಮಾದರಿ ಕನ್ನಡದ ದಿಟ್ಟ ತಲೆಮಾರುಗಳಲ್ಲಿ ಇವತ್ತಿಗೂ ಮುಂದುವರಿದಿದೆ. ಆದರೆ ಲಂಕೇಶರ ಒಟ್ಟು ಬರವಣಿಗೆಯನ್ನು ಅನೇಕರು ಅವರ ಪತ್ರಿಕಾ ಬರಹಗಳಿಗೆ ಸೀಮಿತವಾಗಿಸುತ್ತಿರುವುದು ಅಪಾಯಕರ. ಏಕರೂಪದ ಸಾಹಿತ್ಯ ಸಂಸ್ಕೃತಿಯನ್ನು ಸೃಷ್ಟಿಸುತ್ತಿರುವ ಡಿಜಿಟಲ್ ಲೋಕದ ಜೊತೆಗೆ ಸಾರವಿಲ್ಲದ ಗದ್ಯ, ವಾದ ರೂಪದ ಗದ್ಯ, ಪ್ರಗತಿಪರತೆಯ ಹೆಸರಿನಲ್ಲಿ ಏಕರಾಗದ ತೆಳು ಗದ್ಯ ಕೂಡ ಸೇರಿ ಮೀಡಿಯೋಕರ್ ಸಾಹಿತ್ಯ ಸಂಸ್ಕೃತಿಯೂ ಸೃಷ್ಟಿಯಾಗುತ್ತಿದೆ. ಇಪ್ಪತ್ತನೆಯ ಶತಮಾನದ ಎಂಬತ್ತರ ದಶಕದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ವಲಯದಲ್ಲಿ ವಿಜೃಂಭಿಸತೊಡಗಿದ್ದ ಮೀಡಿಯೋಕ್ರಿಟಿಯನ್ನು ಎದುರಿಸುವ ಸಲುವಾಗಿ ಕೂಡ ಲಂಕೇಶ್ ಜನಪ್ರಿಯ ಪತ್ರಿಕೆಯ ವೇದಿಕೆಯನ್ನು, ಹಲ ಬಗೆಯ ಓದುಗ, ಓದುಗಿಯರಿಗೆ ಹತ್ತಿರವಾದ ಜೀವಂತ ಶೈಲಿಯನ್ನು ರೂಪಿಸಿಕೊಂಡರು. ಅದು ಹಲವು ಸಿದ್ಧಾಂತಗಳನ್ನು ಅರಗಿಸಿಕೊಂಡು ಹುಟ್ಟಿದ ಎಲ್ಲರಿಗೂ ತಲುಪುವ ಶೈಲಿ ಕೂಡ.
ಇವತ್ತು ಸುಲಭವಾಗಿ, ಅತಿ ವೇಗವಾಗಿ ಓದುಗ ಓದುಗಿಯರನ್ನು ತಲುಪುವ ವೇದಿಕೆಗಳನ್ನು ಸೃಷ್ಟಿಸಿಕೊಳ್ಳುವ ಲೇಖಕ, ಲೇಖಕಿಯರಿಗೆ ಲಂಕೇಶ್ ಮಾಡೆಲ್ ನಿಜಕ್ಕೂ ಐಡಿಯಲ್ ಮಾಡೆಲ್. ಲಂಕೇಶರ ಗಂಭೀರ-ಸಂಕೀರ್ಣ-ಆರೋಗ್ಯಕರ-ಪರೀಕ್ಷಕ-ಜೀವಂತ ಬರವಣಿಗೆಯ ನೈತಿಕ ಮಾದರಿ ಎಲ್ಲ ಕ್ಷಿಪ್ರ ಬರಹಗಾರರ ಕೈ ತಡೆದು, ಕೈ ಹಿಡಿದು, ನಡೆಸಿದರೆ ಅದು ಕನ್ನಡ ಸಂಸ್ಕೃತಿಯನ್ನು ಪೊರೆಯುವ ರೀತಿ ಆರೋಗ್ಯಕರವಾಗಿರಬಲ್ಲದು!
ಇಪ್ಪತ್ತೈದು ವರ್ಷಗಳು ಉರುಳಿದ ಮೇಲೆ ಲಂಕೇಶರ ಕೊನೆಯ ರಾತ್ರಿಯನ್ನು ಮತ್ತೆ ನೆನೆಯುತ್ತಿರುವಾಗ, ಅವರ ಕೊನೆಯ ಕ್ಷೀಣ ಸ್ವರ ನನ್ನ ಕಿವಿಯಲ್ಲಿ ಮೊರೆಯುತ್ತಲೇ ಇದೆ: ‘ಬರ್ಲೇನೋ…’
ನನ್ನ ಲೋಕಕ್ಕಂತೂ ಲಂಕೇಶ್ ನಿತ್ಯ ಬರುತ್ತಲೇ ಇರುತ್ತಾರೆ: ಒಳನೋಟವಾಗಿ. ವಿಮರ್ಶೆಯಾಗಿ. ನಿಷ್ಠುರ ಪರೀಕ್ಷೆಯ ಗದ್ಯವಾಗಿ. ಸದ್ಯತನ-ತಾಜಾತನಗಳ ಕತೆ, ನಾಟಕವಾಗಿ. ಆ ಕ್ಷಣದ ಲೋಕಸತ್ಯ ಕಾಣಿಸುವ ನೀಲು ಕಾವ್ಯವಾಗಿ. ಮನುಷ್ಯನ ಕೇಡನ್ನೂ, ಆಗಾಗ್ಗೆ ಚಿಮ್ಮುವ ಒಳಿತನ್ನೂ ಕಾಣಿಸಬಲ್ಲ ಸೂಕ್ಷ್ಮ ನೋಟವಾಗಿ. ಮನುಷ್ಯನ ಊಹಾತೀತ ವರ್ತನೆಯನ್ನು ದಣಿವರಿಯದೆ ಗ್ರಹಿಸುವ ಶೋಧಕ ಕಣ್ಣಾಗಿ.
ನನ್ನ ಲೋಕಕ್ಕೆ ಹೀಗೆ ಬರುತ್ತಲೇ ಇರುವ ಲಂಕೇಶ್ ನಿಮ್ಮೊಳಗಿಗೂ ಬರುತ್ತಿರಲಿ; ಬರೆವವರ, ಓದುವವರ, ಬದುಕಲು ಬಯಸುವವರ ಮರುಹುಟ್ಟಿಗೆ ಅತ್ಯಗತ್ಯವಾದ ಜೀವದ್ರವವಾಗಿ ಲಂಕೇಶ್ ಎಂಬ ಬತ್ತದ ತೊರೆ ಹರಿಯುತ್ತಲೇ ಇರಲಿ.
Read More
ರಾಜಕೀಯ ಚಿಂತನೆ, ಸಾಂಸ್ಕೃತಿಕ ವಿಶ್ಲೇಷಣೆ, ಸಾರ್ವಜನಿಕ ಬದುಕಿನ ಗೊಂದಲಗಳು, ಜನರ ತಟವಟಗಳು, ನಿತ್ಯದ ರೊಟೀನುಗಳು… ಇತ್ಯಾದಿಗಳಲ್ಲಿ ಕಂಗೆಟ್ಟ ನಮ್ಮಂಥವರ ಅಲೆಯುವ ಮನಗಳು ಎಷ್ಟೋ ರಾತ್ರಿಗಳಲ್ಲಿ ಲೋಕದ ದೊಡ್ಡ ಕವಿಗಳ ಪ್ರತಿಮೆಗಳಲ್ಲಿ ಅಡ್ಡಾಡುತ್ತಾ ತಂಗುದಾಣ ಹುಡುಕಿ ನೆಮ್ಮದಿ ಪಡೆಯುವುದು ಸಹಜ! ಈ ತಂಗುದಾಣಗಳ ನೆಮ್ಮದಿ ನಿಮ್ಮ ಅನುಭವಕ್ಕೂ ಬಂದಿರಬಹುದು. ಇಂಥ ಗಳಿಗೆಗಳಲ್ಲಿ ನಮಗೆ ಪ್ರಿಯವಾದ ಕವಿತೆಗಳನ್ನು ಬೇಕೆಂದ ಹಾಗೆ ನಮ್ಮ ಭಾಷೆಗೆ ಒಗ್ಗಿಸಿಕೊಳ್ಳುವ ಸೃಜನಶೀಲ ಚಟುವಟಿಕೆ ಕೂಡ ಅಪಾರ ಎನರ್ಜಿ ಉಕ್ಕಿಸುತ್ತದೆ. ಇದನ್ನೂ ನೀವು ಅನುಭವಿಸಿರಬಹುದು.
ಕೆಲವು ತಿಂಗಳ ಕೆಳಗೆ ಗೆಳೆಯ-ನಟ ಅಚ್ಯುತ್ ಕುಮಾರ್ ಸ್ಪ್ಯಾನಿಷ್ ಕಲಿಯುತ್ತಿದ್ದೇನೆಂದು ಹೆದರಿಸುತ್ತಾ ನೆರೂಡನ ಕವಿತೆಗಳ ಜೊತೆ ವಿಹಾರ ಮಾಡುತ್ತಿದ್ದುದನ್ನು ಕಂಡೆ; ನೆರೂಡನ ಬಗ್ಗೆ ಮಾತು ಮಾತಾಡುತ್ತಾ ಮತ್ತೆ ನೆರೂಡ ಕಾವ್ಯಲೋಕಕ್ಕೆ ಮರಳಿ ಮುದಗೊಂಡೆ. ಈಗಾಗಲೇ ಹಲವರು ಕನ್ನಡಿಸಿರುವ ಪಾಬ್ಲೋ ನೆರೂಡನ ‘ಟುನೈಟ್ ಐ ಕೆನ್ ರೈಟ್’ ಪದ್ಯದ ಎರಡು, ಮೂರು ಬಗೆಯ ಇಂಗ್ಲಿಷ್ ಅನುವಾದಗಳು, ಅವುಗಳ ಓದುಗಳು ಹೊರಡಿಸುತ್ತಿರುವ ವಿಭಿನ್ನ ಧ್ವನಿಗಳನ್ನು ನೋಡಿ ವಿಸ್ಮಯಗೊಂಡೆ. ಕೆಲವು ರಾತ್ರಿಗಳಲ್ಲಿ, ಹಲವು ಡ್ರಾಫ್ಟುಗಳಲ್ಲಿ, ಈ ಕವಿತೆಯನ್ನು ಕನ್ನಡಿಸಲೆತ್ನಿಸಿದೆ. ಅವುಗಳಲ್ಲಿ ಒಂದು ಆವೃತ್ತಿ ಕೆಳಗಿದೆ:
ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು.
‘ದಿಕ್ಕೆಟ್ಟ ಕನಸು, ಕನವರಿಕೆ ಕಿಕ್ಕಿರಿದು ರಾತ್ರಿ ಕಂಗೆಟ್ಟಿದೆ;
ಎಲ್ಲೋ ದೂರದಲ್ಲಿ ನೀಲಿ ತಾರೆಗಳು ಥರಥರ ನಡುಗುತ್ತಿವೆ…’
ಹೀಗೆಲ್ಲ ಬರೆಯಬಲ್ಲೆ.
ಇರುಳಗಾಳಿ ಬಾನಲ್ಲಿ ಸುತ್ತರಗಾಣ ಹೊಡೆದು ಸುಯ್ಯೆಂದು ಹಾಡುತ್ತಿದೆ.
ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು
ನಾನವಳ ಪ್ರೀತಿಸಿದೆ; ಅವಳೂ ಆಗೀಗ ನನ್ನ ಪ್ರೀತಿಸಿದಳು.
ಇಂಥ ಇರುಳುಗಳಲ್ಲಿ ಈ ತೋಳ ತೆಕ್ಕೆಯಲ್ಲಿ ಅವಳ ಬಾಚಿಕೊಂಡಿದ್ದೆ.
ತುದಿಮೊದಲಿಲ್ಲದಾಕಾಶದಡಿಯಲ್ಲಿ ಮತ್ತೆ ಮತ್ತೆ ಮುತ್ತಿಕ್ಕಿದ್ದೆ.
ಅವಳು ನನ್ನ ಪ್ರೀತಿಸಿದಳು. ನಾನೂ ಅವಳ ಪ್ರೀತಿಸಿದೆ.
ಅವಳ ಆ ವಿಶಾಲ ನಿಶ್ಚಲ ಕಣ್ಣುಗಳನ್ನು ಪ್ರೀತಿಸದಿರಲಾದೀತೆ?
ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು
ನನ್ನ ಪಾಲಿಗೆ ಅವಳಿಲ್ಲ ಎಂಬ ಚಿಂತೆಯಲ್ಲಿ ಮುಳುಗಿರಲು;
ಅವಳನ್ನು ಕಳೆದುಕೊಂಡೆ ಎಂಬ ಭಾವದಲ್ಲಿ ನಲುಗಿರಲು…
ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು.
ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು
ಈ ದಟ್ಟ ರಾತ್ರಿಯನು ಕಿವಿದುಂಬಿಕೊಳ್ಳಲು;
ಅವಳಿಲ್ಲದೆ ಮತ್ತೂ ದಟ್ಟವಾದ ರಾತ್ರಿಯನ್ನು ಕಿವಿದುಂಬಿಕೊಳ್ಳಲು.
ಆಗ… ಹಸುರು ಹುಲ್ಲಿನ ಮೇಲೆ ಇಬ್ಬನಿ ತೊಟ್ಟಿಕ್ಕಿದ ಹಾಗೆ
ಆತ್ಮದ ಮೇಲೆ ತೊಟ್ಟಿಕ್ಕುವುದು ನನ್ನ ಹಾಡು.
ಏನಾದರೇನು, ನನ್ನ ಪ್ರೀತಿ ಅವಳನ್ನು ಕಾಪಿಡದೆ ಸೋತಿತಲ್ಲಾ;
ರಾತ್ರಿ ದಿಕ್ಕೆಟ್ಟು ಹೋಗಿದೆ; ಅವಳು ನನ್ನೊಡನಿಲ್ಲ.
ಇಷ್ಟೇ!
ಎಲ್ಲೋ ದೂರದಲ್ಲಿ ಯಾರೋ ಹಾಡುತ್ತಿದ್ದಾರೆ. ಎಲ್ಲೋ ದೂರದಲ್ಲಿ.
ಆ ಹಾಡು ಮುದ ನೀಡುತ್ತಿಲ್ಲ; ಅವಳ ಕಳಕೊಂಡ ನನ್ನಾತ್ಮ ತಪ್ತಗೊಂಡಿದೆ.
ಕಣ್ಣು ಅಡ್ಡಾಡುತ್ತಿದೆ ಅವಳ ಹುಡುಕಿ ಬಳಿ ಸಾರಿ ಸೆಳೆಯುವ ಹಾಗೆ;
ಹೃದಯ ಅವಳ ಹುಡುಕಾಡುತ್ತಲಿದೆ; ಅವಳಿಲ್ಲ ನನ್ನೊಡನೆ.
ಅದೇ ಗಿಡ ಮರಗಳ ಮೇಲೆ ಮಂಜು ಇಳಿಬಿದ್ದು ಬೆಳ್ಳಗಾಗುವ ಅದೇ ರಾತ್ರಿ;
ಅದೇ ಕಾಲದ ನಾನೂ ಅವಳೂ ಮಾತ್ರ ಇನ್ನೆಂದೂ ಅದೇ ಆಗಿರಲಾರೆವು.
ಇನ್ನು ನಾನವಳ ಪ್ರೀತಿಸೆನು; ಇದು ಖಾತ್ರಿ. ಆದರೆ ಆ ಅವಳ ಅದೆಷ್ಟು ಪ್ರೀತಿಸಿದೆ!
ನನ್ನ ದನಿ ಗಾಳಿ ಜಾಡನು ಹುಡುಕಿ ಅವಳ ದನಿಯ ಮುಟ್ಟಲು ಕಾತರಿಸುತ್ತಿತ್ತು.
ಅವಳೀಗ ಬೇರೊಬ್ಬನವಳು; ಅವಳಿನ್ನು ಬೇರೊಬ್ಬನವಳು
ನನ್ನ ತುಟಿಗಳು ಅವಳ ಮುತ್ತಿಕ್ಕುವ ಮುನ್ನ ಇದ್ದ ಹಾಗೆ ಅವಳೀಗ ಬೇರೊಬ್ಬನವಳು.
ಅವಳ ದನಿ, ಅವಳ ಹೊಳೆವ ಮೈ. ಅವಳ ಎಣೆಯಿಲ್ಲದ ಕಣ್ಣು…
ಇನ್ನು ನಾನವಳ ಪ್ರೀತಿಸೆನು; ಇದು ಖಾತ್ರಿ.
ಹಾಂ…ಪ್ರೀತಿಸುತ್ತಿರಲೂಬಹುದು.
ಪ್ರೀತಿ ನೋಡನೋಡುತ್ತಲೇ ಮುಗಿಯುವುದು; ಮರೆಯಲು ಕಾಲ ಬಹಳಾಗುವುದು.
ಇದಕೆ ಕಾರಣವುಂಟು:
ಇಂಥ ರಾತ್ರಿಗಳಲ್ಲಿ ಅವಳನ್ನು ನನ್ನ ತೋಳತೆಕ್ಕೆಯಲ್ಲಿ ಬಾಚಿಕೊಂಡಿದ್ದೆ
‘ಅವಳಿನ್ನು ನನ್ನ ಪಾಲಿಗೆ ಇಲ್ಲ’ ಎನ್ನುತ್ತ ತಪ್ತಗೊಂಡಿದೆ ಆತ್ಮ.
ಆದರೇನಂತೆ! ಇದು ಅವಳು ನನಗೆ ಕೊಡಬಲ್ಲ ಕಟ್ಟ ಕಡೆಯ ನೋವು
ಇದು ನಾನು ಅವಳಿಗೆಂದು ಬರೆದ ಕಟ್ಟ ಕಡೆಯ ಹಾಡು.
ಇಪ್ಪತ್ತರ ಹರೆಯದ ನೆರೂಡನ ಈ ತೀವ್ರ ವಿದಾಯಗೀತೆಯಲ್ಲಿ ಸಣ್ಣಗೆ ಬಿಡುಗಡೆಯ ನಿರಾಳತೆಯೂ ಬೆರೆತಿರುವ ರೀತಿ ಕಂಡು ನಗು ಬಂತು! ಈ ಮಿಶ್ರ ಭಾವ ನೆರೂಡನ ಜೀವನದುದ್ದಕ್ಕೂ ಇದ್ದಂತಿದೆ. ಪ್ರೀತಿ, ಕ್ರಾಂತಿ ಈ ಎರಡೂ ಕವಿಯಲ್ಲಿ, ಕವಿತೆಯಲ್ಲಿ ರಮ್ಯ ಭಾವವನ್ನೂ, ಲಿರಿಕಲ್ ಎಮರ್ಜಿಯನ್ನೂ ಚಿಮ್ಮಿಸುತ್ತಿರುತ್ತವೆ. ಕನ್ನಡದಲ್ಲಿ ಆ ಥರದ ಎನರ್ಜಿ ಗೆಳೆಯ ಬಂಜಗೆರೆ ಜಯಪ್ರಕಾಶರ ಒಂದು ಕಾಲದ ಕಾವ್ಯವನ್ನೂ ರೂಪಿಸಿರುವುದನ್ನು ಆಗಾಗ್ಗೆ ನೋಡಿ, ಬರೆದಿರುವೆ.
ಅದಿರಲಿ. ಮತ್ತೆ ಅನುವಾದ ಎನ್ನುವ ನಿತ್ಯದ ಸೃಜನಶೀಲ ಚಟುವಟಿಕೆಗೆ ಮರಳೋಣ: ನೀವು ಗಮನಿಸಿರಬಹುದು: ಕವಿತೆಯನ್ನಾಗಲೀ, ಕತೆಯನ್ನಾಗಲೀ ಸುಮ್ಮನೆ ಪ್ರತಿ ಸಲ ಓದುವಾಗಲೂ ನಮ್ಮ ನಮ್ಮ ಭಾಷೆಗೆ ಅನುವಾದಿಸಿಕೊಳ್ಳುತ್ತಿರುತ್ತೇವೆ. ಹಾಗೆ ಅನುವಾದಿಸಿಕೊಳ್ಳದೆ ಅರ್ಥವಿಲ್ಲ. ಅನೇಕ ಸಲ ನಮಗರಿವಿಲ್ಲದೆಯೇ ಪದ್ಯವನ್ನು ಗದ್ಯಕ್ಕೆ ಭಾಷಾಂತರಿಸಿಕೊಂಡು ಕೂಡ ಅರ್ಥ ಹೇಳುತ್ತಿರುತ್ತೇವೆ. ಕನ್ನಡವನ್ನೇ ಕನ್ನಡಕ್ಕೆ ಅನುವಾದಿಸಿ ಅರ್ಥ ಮಾಡಿಕೊಳ್ಳುತ್ತಿರುತ್ತೇವೆ.
ಹೀಗೆ ನೆರೂಡನ ಕವಿತೆಯನ್ನು ಅರ್ಥ ಮಾಡಿಕೊಳ್ಳಲು ಕೆಲವು ಸಲ ನಾನು ಕನ್ನಡಿಸಿಕೊಂಡಿರುವ ಈ ಸುಂದರ ಕವಿತೆಗೆ ಮತ್ತೆ ಕೈಯಿಟ್ಟರೆ ಅನುವಾದ ಇನ್ನಷ್ಟು ಚಂದವಾಗಬಹುದು; ಅತಿ ವಿವರಣೆಯಿದ್ದರೆ ಅದನ್ನು ಮೊಟಕಾಗಿಸಬಹುದು; ಅಥವಾ ಕವಿತೆ ಅಂದಗೆಡಲೂಬಹುದು! ಈ ಕವಿತೆಯನ್ನು ಇಂಗ್ಲಿಷಿನಲ್ಲಿ ಓದುವ ಇತರ ಕವಿ, ಕವಯಿತ್ರಿಯರು ಇದನ್ನು ಅವರವರ ಭಾವಕ್ಕೆ, ಅವರವರ ಸಂವೇದನೆಗೆ ತಕ್ಕಂತೆ ಇನ್ನಷ್ಟು ದಕ್ಷವಾಗಿ ಅನುವಾದಿಸಿಕೊಳ್ಳಲೂಬಹುದು; ಆಗ ಅವರು ಬೇರೆ ಬೇರೆ ಅರ್ಥಗಳನ್ನು ಎದುರಾಗಲೂಬಹುದು. ಯಾರಾದರೂ ಇನ್ನಷ್ಟು ನಿಕಟವಾಗಿ ಮೂಲ ಕವಿತೆಯನ್ನು ಓದಿ ತೋರಿಸಿದಾಗ ಈ ಅನುವಾದವನ್ನೂ ಮತ್ತಷ್ಟು ತಿದ್ದಬಹುದು. ಸ್ಪ್ಯಾನಿಷ್ ಬಲ್ಲವರು, ಆ ಭಾಷೆಯಲ್ಲಿ ತೀವ್ರವಾಗಿ ಓದುವುದನ್ನು ಅರ್ಥ ಮಾಡಿಕೊಳ್ಳಬಲ್ಲವರು, ಇದನ್ನು ಇನ್ನೊಂದು ಬಗೆಯ ತೀವ್ರತೆಯತ್ತ ಒಯ್ಯಬಹುದು. ಯೂಟ್ಯೂಬಿನಲ್ಲಿರುವ ಆ್ಯಂಡಿ ಗಾರ್ಸಿಯಾನ ರುದ್ರ ಗಂಭೀರ ದನಿಯಲ್ಲಿ ಈ ಕವಿತೆಯನ್ನು ಕೇಳಿಸಿಕೊಂಡು ಕನ್ನಡಿಸಿದರೆ ಪ್ರತಿ ಪ್ರತಿಮೆಯಲ್ಲೂ ವಿಷಾದ ತೊಟ್ಟಿಕ್ಕುವ ಅನುವಾದ ಹುಟ್ಟಬಹುದು. ಆಗ ನೀವು ನೆರೂಡನ ಮುದ್ರಿತ ಕವಿತೆ ಹಾಗೂ ಗಾರ್ಸಿಯಾ ತನ್ನದಾಗಿಸಿಕೊಂಡು ಓದಿದ ಕವಿತೆ… ಎರಡನ್ನೂ ಅನುವಾದಿಸುತ್ತಿರುತ್ತೀರಿ!
ಐವತ್ತು ವರ್ಷಗಳ ಕೆಳಗೆ (1973) ಕ್ಯಾನ್ಸರಿಗೆ ತುತ್ತಾದ ನೆರೂಡನಿಗೆ ವಿಷ ಹಾಕಲಾಗಿತ್ತು ಎಂದು ಇವತ್ತಿಗೂ ನಂಬುವವರಿದ್ದಾರೆ. ನೆರೂಡನ ಕೊನೆಯ ಕೆಲವು ಸಾಲುಗಳು ಹದಿನೆಂಟು ವರ್ಷಗಳ ಕೆಳಗೆ ನಾನು ಪ್ರಜಾವಾಣಿಯಲ್ಲಿ ಬರೆದ ನೆರೂಡ: ಪ್ರೀತಿ ಮತ್ತು ಕ್ರಾಂತಿಯ ಕವಿ (ಗಾಳಿ ಬೆಳಕು, ಪಲ್ಲವ ಪ್ರಕಾಶನ) ಲೇಖನದಲ್ಲಿವೆ:
ಆ ಮುದುಡಿದ ಗುಲಾಬಿಯನ್ನು ಹರಿದೊಗೆವ ಹೊತ್ತಾಗಿದೆ ಗೆಳತಿ
ತಾರೆಗಳನ್ನು ಮುಚ್ಚಿಡುವ ಹೊತ್ತು ಬಂದಿದೆ. ನೆಲದಲ್ಲಿ ಬೂದಿ ಹುಗಿದಿಡುವ ಹೊತ್ತಾಗಿದೆ
ಮೆಲ್ಲಗೆ ಮೇಲೇಳುವ ಬೆಳಕಲ್ಲಿ ಮೇಲೆದ್ದವರ ಜೊತೆ ಮೇಲೇಳುವ ಹೊತ್ತಾಗಿದೆ
ಅಥವಾ…
ಕನಸಲ್ಲಿ ಸುಮ್ಮನೆ ನಡೆಯುತ್ತಾ ಕಡಲಿನ ಆ ದಂಡೆ ಮುಟ್ಟುವ ಹೊತ್ತಾಗಿದೆ
ಇನ್ನಾವುದೋ ತೀರವೇ ಇರದ ಆ ತೀರ ತಲುಪುವ ಹೊತ್ತಾಗಿದೆ…
ನೆರೂಡನ ಕೊನೆಕೊನೆಯ ಕವಿತೆಯೊಂದರಲ್ಲೂ ಕವಿಯ ಹರೆಯದ ಪ್ರತಿಮೆಗಳು ಮತ್ತೆ ಮರಳಿರುವ ಬಗೆ ಕಂಡು ಅಚ್ಚರಿಯಾಗುತ್ತದೆ. ಮೊನ್ನೆ ನೆರೂಡನ ‘ಟುನೈಟ್ ಐ ಕೆನ್ ರೈಟ್’ ಕವಿತೆಯ ವಿಷಣ್ಣ ಆನಂದದ ಮೂಡುಗಳನ್ನು ಮತ್ತೆ ಮತ್ತೆ ಮುಟ್ಟಲೆತ್ನಿಸುತ್ತಾ, ಕನ್ನಡಿಸಿಕೊಳ್ಳುತ್ತಾ... ಅವನ ಪ್ರತಿಮೆಗಳು ನಿಧಾನಕ್ಕೆ ನನ್ನೊಳಗಿಳಿಯತೊಡಗಿದವು; ಇಂಥ ಗಳಿಗೆಗಳು ಸೃಷ್ಟಿಸುವ ಪರವಶ ಸ್ಥಿತಿಗೆ ಬೇರಾವುದೂ ಸಾಟಿಯಿಲ್ಲ ಎನ್ನಿಸತೊಡಗಿತು. ಇಂಥ ಜೀವಂತ ಗಳಿಗೆಗಳನ್ನು ಓದುವವರಲ್ಲಿ ಮತ್ತೆ ಮತ್ತೆ ಸೃಷ್ಟಿಸುವವರನ್ನು ಮಾತ್ರ ಜೀವಂತ ಕವಿ ಎನ್ನಬಹುದೇನೋ! ಎಲ್ಲ ಸೂಕ್ಷ್ಮಜೀವಿಗಳ ಪಾಲಿಗೂ ದಕ್ಕುವ ಇಂಥ ಗಳಿಗೆಗಳು ನೂರ್ಮಡಿಯಾದರೆ ಮಾತ್ರ ನಿತ್ಯದ ಸಾವಿನ ನಡುವೆ ನಮ್ಮ ಮರು ಹುಟ್ಟು!
HAPPY POETRY!
Read More‘ಬರೆಯುವವರಲ್ಲಿ ‘ಕಾರಯಿತ್ರೀ ಪ್ರತಿಭೆ’ (ಸೃಜನಶೀಲ ಪ್ರತಿಭೆ) ಇರುತ್ತದೆ; ಓದುಗರಲ್ಲಿ ‘ಭಾವಯಿತ್ರೀ ಪ್ರತಿಭೆ’ ಇರುತ್ತದೆ…’ ಈ ಕಾವ್ಯಮೀಮಾಂಸೆಯ ಮಾತನ್ನು ಸಾಹಿತ್ಯದ ಅಧ್ಯಯನ ಮಾಡುವವರೆಲ್ಲ ಕೇಳಿರುತ್ತಾರೆ. ಆದರೆ ಓದುಗರ ಕ್ರಿಯೇಟಿವ್ ಇಮ್ಯಾಜಿನೇಶನ್ ಕಂಡವರಿಗೆ ಈ ಥರದ ವರ್ಗೀಕರಣ ಸರಳ ಹಾಗೂ ಸ್ಥೂಲ ಎನ್ನಿಸುತ್ತಿರುತ್ತದೆ.
ಈ ಮಾತು ಬರೆಯುವ ಹಿನ್ನೆಲೆಯಲ್ಲಿ ಗೆಳೆಯ ಸಂದೀಪ್ ನಾಯಕ್ ಹಿಂದೊಮ್ಮೆ ನನಗೆ ಕಳಿಸಿದ ಪ್ರಶ್ನೆಗಳು ಹಾಗೂ ಕೊಟ್ಟ ಉತ್ತರಗಳು ನನ್ನೆದುರಿಗಿವೆ. ‘ಕತೆ ಬರೆದ ಮೇಲೆ ಓದುಗರಿಂದ ಏನನ್ನು ನಿರೀಕ್ಷಿಸುತ್ತೀರಿ?’ ಎಂಬ ಸಂಕೀರ್ಣ ಪ್ರಶ್ನೆ ಕೂಡ ಸಂದೀಪ್ ಕಳಿಸಿದ ಪ್ರಶ್ನೆಗಳ ನಡುವೆ ಇತ್ತು. ಆಗ ಸಂದೀಪ್ ‘ಮಯೂರ’ ಮಾಸಪತ್ರಿಕೆಯ ಮುಖ್ಯ ಉಪಸಂಪಾದಕರಾಗಿದ್ದರು.
ಈ ಪ್ರಶ್ನೆಗೆ ನನ್ನ ಉತ್ತರಗಳು ಹೀಗಿದ್ದವು:
1. ಒಂದು ಕತೆಯಲ್ಲಿ ಎಲ್ಲೋ ನಾನು ಹಿಡಿಯಲೆತ್ನಿಸಿದ ಸತ್ಯವನ್ನು, ಸೂಕ್ಷ್ಮಗಳನ್ನು ಓದುಗರೂ ಹಿಡಿದದ್ದನ್ನು ಕಂಡಾಗ ಪುಳಕಗೊಳ್ಳುತ್ತೇನೆ.
2. ಓದುಗರು ಗಂಭೀರವಾಗಿ ಕತೆಯನ್ನು ಓದಿ, ನಾನು ಗ್ರಹಿಸಿದ್ದಕ್ಕಿಂತ ಭಿನ್ನವಾದ ಸತ್ಯವನ್ನು ತೋರಿಸಿದರೆ ಕೃತಜ್ಞನಾಗುತ್ತೇನೆ.
3. ನನ್ನ ಯಾವ ಕತೆಯಲ್ಲಿ ಯಾರಿಗೆ ಕ್ರಾಸ್ ರೆಫರೆನ್ಸುಗಳಿವೆ ಎಂಬುದನ್ನು ಗೆಳೆಯ, ಗೆಳತಿಯರು ಸರಿಯಾಗಿ ಊಹಿಸಿದರೆ ಖುಷಿಯಾಗುತ್ತೇನೆ.
4. ಓದುಗರು ಅವರವರ ಭಾವಕ್ಕೆ ತಕ್ಕಂತೆ ಕತೆ ಓದಿದಾಗ ಚಕಿತನಾಗುತ್ತೇನೆ.
5. ಎಲ್ಲ ಲೇಖಕರಂತೆ ನನ್ನ ಬರವಣಿಗೆಗೆ ಓದುಗವಲಯದ ಸಮ್ಮತಿ ಪಡೆಯುವ ಬಯಕೆ ಹಾಗೂ ನಿರೀಕ್ಷೆ ನನ್ನಲ್ಲೂ ಇರುತ್ತದೆ. ಆದರೆ ನಾನೇ ಒಬ್ಬ ಓದುಗನಾಗಿ ಅದನ್ನು ಓದಿದಾಗ ಅದು ಸತ್ಯವಾಗಿದೆಯೇ, ಇಲ್ಲವೇ ಎಂಬುದನ್ನು ನೋಡುತ್ತಿರುತ್ತೇನೆ.
6. ಆ ಕತೆಯೊಳಗೇ ಮೂಡುವ ‘ಸತ್ಯ’ ‘ಕನ್ವಿನ್ಸಿಂಗ್’ ಆಗಿಲ್ಲದಿದ್ದರೆ ಪೆಚ್ಚಾಗುತ್ತೇನೆ.
7. ಕತೆಯ ಭಾಷೆ, ಗ್ರಹಿಕೆಗಳು ದುರ್ಬಲವಾಗಿರುವುದು ಕತೆ ಪ್ರಕಟವಾದ ಮೇಲೆ ಹೊಳೆದರೆ ಕಸಿವಿಸಿಗೊಳ್ಳುತ್ತೇನೆ… ರಾಮಚಂದ್ರಶರ್ಮರ ಪದ್ಯವೊಂದರ ಸಾಲಿನಂತೆ, ‘ತಡವಾಗಿ ಬಂದ ಬೆಳಕೇ…’ ಎನ್ನಿಸಿ ‘ಛೇ!’ ಅಂದುಕೊಂಡು ಪೆಚ್ಚಾಗುತ್ತೇನೆ…
ಓದುಗರ ಪ್ರತಿಕ್ರಿಯೆಗಳನ್ನು ಕುರಿತು ಬರೆಯುತ್ತಿರುವ ಈ ಘಟ್ಟದಲ್ಲಿ, ನಾನು ‘ಸುಧಾ’ ವಾರಪತ್ರಿಕೆಯಲ್ಲಿ ಬರೆದ ‘ಜ್ಞಾನಪೀಠದ ಹಾದಿಯಲ್ಲಿ’ ಕತೆಗೆ ಬಂದ ನಾಲ್ಕು ಕುತೂಹಲಕರವಾದ ವಿಭಿನ್ನ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಡಬಹುದೆಂದು ಕಾಣುತ್ತದೆ. ಮುಂದೆ ಈ ಕತೆ ನನ್ನ ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ (ಪಲ್ಲವ ಪ್ರಕಾಶನ) ಕಥಾ ಸಂಕಲನದಲ್ಲೂ ಸೇರಿದೆ. ‘ಜ್ಞಾನಪೀಠದ ಹಾದಿಯಲ್ಲಿ’ ಲೇಖಕನೊಬ್ಬನಿಗೆ ಜ್ಞಾನಪೀಠ ಬರುವ ಸುದ್ದಿ ಅಧಿಕೃತವಾಗಿ ಪ್ರಕಟವಾಗುವ ಹಿಂದಿನ ದಿನ ನಡೆಯುವ ಕತೆ. ಈ ಕತೆಯಲ್ಲಿ ದಕ್ಷ, ನಿಷ್ಠುರ ವಿಮರ್ಶಕನೊಬ್ಬ ಆ ಲೇಖಕನ ಸಂದರ್ಶನ ಮಾಡಲು ಬರುತ್ತಾನೆ. ಅವರಿಬ್ಬರ ಮುಖಾಮುಖಿಯನ್ನು ಕತೆ ಮಂಡಿಸುತ್ತದೆ… ಈ ಕತೆಯ ಮತ್ತಷ್ಟು ವಿವರಣೆಯನ್ನು ನಾನೇ ಕೊಡುವುದು ಕಷ್ಟ! ಜೊತೆಗೆ, ಲೇಖಕನೊಬ್ಬ ತನ್ನ ಬಗ್ಗೆ ತಾನೇ ಮಾತಾಡಿಕೊಳ್ಳುವುದು ಅಶ್ಲೀಲವಾಗಿರುತ್ತದೆ ಎಂದು ಒಂದೆರಡು ಕಡೆ ನಾನೇ ಬರೆದ ನೆನಪು!
‘ಜ್ಞಾನಪೀಠದ ಹಾದಿಯಲ್ಲಿ’ ಕತೆಗೆ ಬಂದ ಹಲ ಬಗೆಯ ಪ್ರತಿಕ್ರಿಯೆಗಳ ನಡುವೆ ನಾಲ್ಕು ಕುತೂಹಲಕರವಾದ ವಿಭಿನ್ನ ಮಾದರಿಗಳು ಹೀಗಿದ್ದವು:
1. ‘ಸುಧಾ’ದಲ್ಲಿ ಈ ಕತೆ ಪ್ರಕಟವಾದ ವಾರ ಕನ್ನಡ ಅಧ್ಯಾಪಕಿಯೂ, ಅನಂತಮೂರ್ತಿಯವರ ಅಭಿಮಾನಿಯೂ ಆದ ಒಬ್ಬ ಲೇಖಕಿಯ ಪ್ರತಿಕ್ರಿಯೆ: ‘…ಆ ನಟರಾಜ್ ಹುಳಿಯಾರ್ ಆ ಕತೇಲಿ ಅನಂತಮೂರ್ತಿಯನ್ನ ತೀಡಿ ಹಾಕಿದ್ದಾನೆ!’
2. ಈ ಕತೆ ಮುಂದೆ ನನ್ನ ಕಥಾ ಸಂಕಲನದದಲ್ಲಿ ಪ್ರಕಟವಾದಾಗ, ಅದನ್ನು ಓದಿದ ಅನಂತಮೂರ್ತಿಯವರು ನಗುತ್ತಾ ನೀಡಿದ ಪ್ರತಿಕ್ರಿಯೆ: ‘ಏಯ್! ಆ ಜ್ಞಾನಪೀಠದ ಕತೆ…ಭಾಳಾ wittyಯಾಗಿದೆ ಕಣಯ್ಯಾ.’
(ಅಷ್ಟೊತ್ತಿಗೆ ಅನಂತಮೂರ್ತಿಯವರಿಗೆ ಜ್ಞಾನಪೀಠ ಬಂದು ಹದಿನೈದು ವರ್ಷವಾಗಿತ್ತು. ಅದರಲ್ಲಿ ತಮ್ಮ ಪ್ರತಿಬಿಂಬವನ್ನೇನೂ ಅವರು ಕಂಡಂತಿರಲಿಲ್ಲ!)
3. ಈ ಕಥಾ ಸಂಕಲನ ಪ್ರಕಟವಾದ ಕೆಲವು ವರ್ಷಗಳ ನಂತರ ಈ ಕತೆಯನ್ನು ಓದಿದ ಚಂದ್ರಶೇಖರ ಕಂಬಾರರು ನಗುತ್ತಾ ಫೋನಿನಲ್ಲಿ ಹೇಳಿದ ಮಾತು: ‘ನನಗಂತೂ ಈ ಕತೆ ನನ್ನ ಮೇಲೇ ಬರೆದ್ಹಾಂಗಿದೆ ಅನ್ಸುತ್ತೆ ಕಣ್ರೀ!’
(ಆಗಿನ್ನೂ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರಲಿಲ್ಲ. ವಿಚಿತ್ರವೆಂದರೆ, ಈ ಕತೆಯಲ್ಲಿರುವ ಲೇಖಕನ ಹೆಸರು ಚಂದ್ರಶೇಖರ ಗೌಡ! ಆದರೆ ಚಂದ್ರಶೇಖರ ಕಂಬಾರರ ಸುಳಿವೇನೂ ಈ ಕತೆ ಬರೆಯುವಾಗ ಇದ್ದಂತಿರಲಿಲ್ಲ!)
4. ಎಷ್ಟೋ ಸಂಜೆ ಲಂಕೇಶರ ಜೊತೆ ನಾನು ಮಾತಾಡುತ್ತಾ ಕೂತಿರುತ್ತಿದ್ದುದನ್ನು ಆಗಾಗ್ಗೆ ಕಂಡಿದ್ದ ‘ಲಂಕೇಶ್ ಪತ್ರಿಕೆ’ಯ ‘ಕಟ್ಟೆ ಪುರಾಣ’ ಕಾಲಮಿಸ್ಟ್ ಬಿ. ಚಂದ್ರೇಗೌಡರ ಜವಾರಿ ಪ್ರತಿಕ್ರಿಯೆ: ‘ಏ! ಈ ಕತೇಲಿ ನೀನೂ ಲಂಕೇಶ್ನೂ ಕುಂತ್ಕಂಡು ಮಾತಾಡ್ದಂಗಾಯ್ತಪ್ಪಾ!’
ಈ ಎಲ್ಲ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ನನ್ನ ಕತೆಯನ್ನು ಹಿಂತಿರುಗಿ ನೋಡಿದಾಗಲೆಲ್ಲ ನಾನು ಕತೆ ಬರೆಯಹೊರಟಾಗ ಈ ಯಾವ ಪಾತ್ರಗಳೂ ಹೀಗೆ ನನ್ನ ಮನಸ್ಸಿನಲ್ಲಿರಲಿಲ್ಲವಲ್ಲ ಎಂದು ಅಚ್ಚರಿಯಾಗುತ್ತದೆ. ಆದರೆ ಕಥಾ ಬರವಣಿಗೆಯ ಪ್ರಕ್ರಿಯೆಯಲ್ಲಿ ಏನೇನಾಯಿತೋ… ಓದುಗರು ಅದನ್ನು ಹೇಗೆ ಸ್ವೀಕರಿಸಿದರೋ ಎಂದು ವಿಸ್ಮಯಗೊಳ್ಳುತ್ತಿರುವಾಗ… ಯಾಕೋ ನನಗೂ ಓದುಗರು ಓದುತ್ತಿರುವ ರೀತಿಯೇ ಸರಿಯಿರಬಹುದೇನೋ ಅನ್ನಿಸತೊಡಗಿತು! ಅದರ ಜೊತೆಗೆ, ಆಧುನಿಕೋತ್ತರ ಕತೆಗಾರ, ಗೆಳೆಯ ವಿ. ಎಂ. ಮಂಜುನಾಥ್ ಈ ಕತೆಗೆ ಬರೆದ ಚಿತ್ರಗಳು ಬೇರೆ ಬೇರೆ ಅರ್ಥಗಳನ್ನೇ ಕೊಡತೊಡಗಿದವು!
ಯಾವುದೇ ಬರೆವ ವ್ಯಕ್ತಿಯನ್ನು ನಿತ್ಯ ಬೆಳೆಸುವ ದ್ರವ್ಯಗಳಲ್ಲಿ ಇಂಥ ಸೃಜನಶೀಲ ಪ್ರತಿಕ್ರಿಯೆಗಳ ವಿಸ್ಮಯಗಳೂ ಇರುತ್ತವೆ. ಭಾವಯಿತ್ರೀ ಪ್ರತಿಭೆಯು ಕಾರಯಿತ್ರೀ ಪ್ರತಿಭೆಯಾಗುವ ಈ ವಿಸ್ಮಯವನ್ನು ಬರವಣಿಗೆಯಲ್ಲಿ ತೊಡಗಿರುವವರೆಲ್ಲ ಕಂಡಿರುತ್ತಾರೆ. ಅಂಥದೊಂದು ವಿಸ್ಮಯ ಈಚೆಗೆ ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ‘ಇತಿಹಾಸ ಚಕ್ರದ ಎದುರು’ ಕತೆಯ ಸಂದರ್ಭದಲ್ಲೂ ಎದುರಾಯಿತು. ಈ ಕತೆ ನನ್ನ ಹೊಸ ಕಥಾ ಸಂಕಲನ ‘ಕಥಾನಂತರ’ದಲ್ಲೂ (ಪಲ್ಲವ ಪ್ರಕಾಶನ) ಇದೆ. ಈ ಕತೆಯಲ್ಲಿ ಬರುವ ಹಿಸ್ಟರಿ ರಿಸರ್ಚ್ ಸ್ಕಾಲರ್ ತನ್ನ ವಸ್ತು ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಡಿ. ಆರ್. ನಾಗರಾಜ್ ಅವರು ಇದ್ದಕ್ಕಿದ್ದಂತೆ ಪ್ರವೇಶಿಸಿದರು! ಡಿ. ಆರ್. ಈ ಕತೆಯೊಳಗೆ ಬಂದಿದ್ದು, ಸಂಶೋಧಕನೊಡನೆ ಅವನ ಟಾಪಿಕ್ ಚರ್ಚಿಸುವ ಸನ್ನಿವೇಶ ಕತೆಯಲ್ಲಿ ಸೇರಿಕೊಂಡಿದ್ದು, ಅವನೊಡನೆ ಅವರು ವಿಸ್ಮೃತಿ ಕುರಿತು ಮಾತಾಡಿದ್ದು… ಇವೆಲ್ಲ ಹೇಗೆ ಬಂದವು ಎಂಬುದು ಇವತ್ತಿಗೂ ನನಗೆ ವಿಸ್ಮಯವೇ!
ಆದರೆ ಆ ಕತೆ ಓದಿ ಸೂಕ್ಷ್ಮ ಕನ್ನಡ ಅಧ್ಯಾಪಕಿ ವತ್ಸಲ ಬರೆದ ಪ್ರತಿಕ್ರಿಯೆ ಇನ್ನಷ್ಟು ವಿಸ್ಮಯಕರವಾಗಿತ್ತು: “…‘ಇತಿಹಾಸ ಚಕ್ರದ ಎದುರು’ ಕತೆಯಲ್ಲಿ ಡಿ. ಆರ್. ನಾಗರಾಜ್ ಅವರ ಹಾಜರಿ, ಕೆಳಸಮುದಾಯಗಳನ್ನು ಆವರಿಸಿರುವ ವಿಸ್ಮೃತಿಯನ್ನು ಹೋಗಲಾಡಿಸುವ ಬಗ್ಗೆ ಅವರು ಮಾತನಾಡಿದ್ದು ಹಾಗೂ ಅನಂತರ ಅವರು ಆ ನಿಟ್ಟಿನಲ್ಲಿ ಕೈಗೊಂಡ ಕೆಲಸ… ಎಲ್ಲವೂ ಪುನರ್ ಮನನ ಆಯಿತು.” ಎಷ್ಟೋ ವರ್ಷಗಳ ಕೆಳಗೆ ಕನ್ನಡ ಎಂ.ಎ. ಕ್ಲಾಸುಗಳಲ್ಲಿ ಡಿ. ಆರ್. ನಾಗರಾಜರ ಪಾಠ ಕೇಳಿದ್ದ ವತ್ಸಲ ಕತೆಯನ್ನು ಮತ್ತೊಂದು ದಿಕ್ಕಿನಿಂದ ಓದಿದ್ದರು; ಈ ರೀತಿಯೂ ಓದಬಹುದಲ್ಲ ಎಂದು ವಿಸ್ಮಯಗೊಂಡೆ.
ಯಾವುದೇ ಲೇಖಕ, ಲೇಖಕಿಯರಿಗೆ, ಟೀಚರುಗಳಿಗೆ ಇಂಥ ಜೀವಂತ ಓದುಗಳು ದೊರೆತಂತೆಲ್ಲ ಅವರ ಸೃಜನಶೀಲತೆ ವಿಸ್ತಾರವಾಗುತ್ತಿರುತ್ತದೆ. ಇಂಥ ನೂರಾರು ಓದುಗಿಯರು, ಓದುಗರು, ಲೇಖಕ, ಲೇಖಕಿಯರು ತಮ್ಮ ಜೀವಂತ ಸ್ಪಂದನದ ಮೂಲಕ ಈ ‘ಗಾಳಿ ಬೆಳಕಿ’ನ ಬರಹಗಳನ್ನು ಬೆಳೆಸುತ್ತಿರುವ ರೀತಿಗೆ ಹಾಗೂ ಹತ್ತಾರು ಮಂದಿ ಸಹೃದಯರು ಅವನ್ನು ತನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಶೇರ್ ಮಾಡಿ ಸಾವಿರಾರು ಓದುಗರಿಗೆ ತಲುಪಿಸುತ್ತಿರುವ ಕಾಳಜಿಗೆ ಕೇವಲ ಥ್ಯಾಂಕ್ಸ್ ಹೇಳಿದರೆ ಸಾಕೆ?
ಅದಿರಲಿ, ‘ರೀಡರ್ಸ್ ರೆಸ್ಪಾನ್ಸ್’ ಥಿಯರಿ ರೂಪಿಸಿದ ರೊಲಾ ಬಾರ್ಥ್ ಬಗ್ಗೆ ಮುಂದೊಮ್ಮೆ ಬರೆದಾಗ ‘ಓದುಗ ಸ್ಪಂದನ’ದ ಬಗ್ಗೆ ಇನ್ನಷ್ಟು ಥಿಯರಿಟಿಕಲ್ ಆಗಿ ಮಾತಾಡಬಹುದು!
Read More1
ನವಪದ ನಿರ್ಮಾಣ; ನವ ತತ್ವಗಳ ವಿಕಾಸ
‘ನೇಗಿಲಯೋಗಿ’ ಭಾವಗೀತೆಯಲ್ಲಿ ಕುವೆಂಪು ‘ಯೋಗಿ’ ಎಂಬ ಪದ ಹಾಗೂ ಪರಿಕಲ್ಪನೆಯ ಹಲವು ಹಳೆಯ ಚಿತ್ರಗಳನ್ನು ಏಕ್ ದಂ ಒಡೆದು ಹಾಕಿದ್ದಾರಲ್ಲ ಎಂದೊಮ್ಮೆ ಅಚ್ಚರಿಯಾಗಿತ್ತು.
‘ಯೋಗಿ’ ಎಂದ ತಕ್ಷಣ ನಿಮ್ಮ ಕಣ್ಣೆದುರು ಬರುವ ಚಿತ್ರಗಳನ್ನು ಚಣ ನೆನಪಿಸಿಕೊಳ್ಳಿ: ‘ಕಣ್ಣು ಮುಚ್ಚಿ ತಪಸ್ಸು ಮಾಡುವ ಜೀವಿ’, ‘ಗಡ್ಡ ಬಿಟ್ಟ ಆಧ್ಯಾತ್ಮಜೀವಿ’, ಒಂಥರಾ ‘ಆರಾಮ್ ಜೀವಿ’, ‘ನಿರ್ಲಿಪ್ತ ಸಾಧಕ…’, ‘ಮೂಗು ಹಿಡಿದು ಯೋಗಾಭ್ಯಾಸದಲ್ಲಿ ತೊಡಗಿರುವ ವ್ಯಕ್ತಿ’… ಇಂಥ ಹಲವು ಸಿದ್ಧ ಚಿತ್ರಗಳು ಮೂಡತೊಡಗುತ್ತವೆ! ಆದರೆ ಕುವೆಂಪು ‘ಉಳುವಾ ಯೋಗಿಯ ನೋಡಲ್ಲಿ…’ ಎಂದು ತೋರಿಸುತ್ತಿರುವ ಕಡೆ ನೋಡಿ: ಯೋಗಿಯ ಸಿದ್ಧ ಅರ್ಥಗಳನ್ನು ಒಡೆದು, ಶ್ರಮಜೀವಿ ‘ನೇಗಿಲಯೋಗಿ’ ಮುನ್ನೆಲೆಗೆ ಬರತೊಡಗುತ್ತಾನೆ… ನಾವೆಂದೂ ಕಾಣದ ನೇಗಿಲಯೋಗಿಯ ಅಪೂರ್ವ ಮುಖಗಳು ಕಣ್ಣ ಮುಂದೆ ಬರತೊಡಗುತ್ತವೆ.
ಈ ಬಗೆಯ ಓದಿನ ಗುಂಗಿನಲ್ಲಿದ್ದಾಗ ‘ಶೂದ್ರ ತಪಸ್ವಿ’ ನಾಟಕವೂ ನೆನಪಾಯಿತು: ಅಲ್ಲಿ ಕುವೆಂಪು ‘ತಪಸ್ವಿ’ ಎಂಬ ಪದದ ಹಳೆಯ ಬ್ರಾಹ್ಮಣೀಯ ಅರ್ಥ ಒಡೆದು ಹೊಸ ಶೂದ್ರ ವ್ಯಕ್ತಿತ್ವ ಸೃಷ್ಟಿಸಿದ್ದಾರೆ! ಹೀಗೆ ಕುವೆಂಪು ಲೋಕದಲ್ಲಿ ಸೃಷ್ಟಿಯಾಗುವ ನವಪದ ಪ್ರಯೋಗಗಳ ಜೊತೆಜೊತೆಗೇ ಸೃಷ್ಟಿಯಾಗುವ ಅವರ ಹೊಸ ತಾತ್ವಿಕ, ಸೈದ್ಧಾಂತಿಕ ಅರ್ಥಗಳನ್ನು ಗ್ರಹಿಸಿತೊಡಗಿದರೆ ಕುವೆಂಪು ಯಾಕೆ ಕನ್ನಡದ ಅತ್ಯಂತ ವಿಶಿಷ್ಟ ಫಿಲಾಸಫರ್ ಕೂಡ ಎಂಬುದು ಅರ್ಥವಾಗತೊಡಗುತ್ತದೆ.
ನನಗೆ ಈ ‘ನವಪದ ನಿರ್ಮಾಣ ಪ್ರತಿಭೆ’ಯ ಐಡಿಯಾ ಕೊಟ್ಟವರು ಈ ಅಂಕಣದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೀರಂ ನಾಗರಾಜ್ ಅವರೇ! ಒಮ್ಮೆ ಕೀರಂ ಜಾಣ ವಿದ್ಯಾರ್ಥಿನಿಯೊಬ್ಬಳಿಗೆ ಕುವೆಂಪು ಕಾವ್ಯದಲ್ಲಿನ ನವ ಪದ ನಿರ್ಮಾಣ ಕುರಿತ ಟಾಪಿಕ್ ಕೊಟ್ಟರು. ಆ ಸರಿಸುಮಾರಿನಲ್ಲಿ ಒಂದು ಮಧ್ಯಾಹ್ನ ಅವರು ಕುವೆಂಪು ಅವರ ನವಪದ ನಿರ್ಮಾಣ ಪ್ರತಿಭೆಯ ಬಗ್ಗೆ ನನ್ನೆದುರು ಮೈದುಂಬಿ ಮಾತಾಡಿದರು: ‘ಉದಾಹರಣೆಗೆ ನೋಡಿ ಸಾರ್! ‘ಪಕ್ಷಿ’ ಅಂತ ಒಂದು ಪದ ಇರುತ್ತೆ, ‘ಕಾಶಿ’ ಅಂತ ಇನ್ನೊಂದು ಪದ ಇರುತ್ತೆ. ಕುವೆಂಪು ಇಮ್ಯಾಜಿನೇಶನ್ ಈ ಎರಡನ್ನೂ ಸೇರಿಸಿ ‘ಪಕ್ಷಿಕಾಶಿ’ ಅಂತ ನವಪದ ಮಾಡಿಬಿಡುತ್ತೆ! ಪ್ರೇಮ ಅನ್ನೋ ಪದ, ಕಾಶ್ಮೀರ ಅನ್ನೋ ಪದ ಎರಡನ್ನೂ ಸೇರಿಸಿ ಕುವೆಂಪು ‘ಪ್ರೇಮಕಾಶ್ಮೀರ’ ಅನ್ನೋ ನವಪದ ಮಾಡಿಬಿಡ್ತಾರೆ… ಇವು ಕನ್ನಡದ ಹೊಸ ನುಡಿಗಟ್ಟುಗಳಾಗುತ್ತವೆ, ನವರೂಪಕಗಳಾಗುತ್ತವೆ…ಏನ್ ಸಾರ್!’
‘ಮಾತು ಮಾತು ಮಥಿಸಿ ಬಂದ ನಾದದ ನವನೀತ’ದಂತೆ ಕೀರಂ ಕಾಣಿಸಿದ ಕುವೆಂಪು ಕಾವ್ಯದ ನವಪದ ನಿರ್ಮಾಣ ಸಾಧ್ಯತೆಗಳನ್ನು ನೆನೆಯುತ್ತಾ ಮುಂದೆ ಕುವೆಂಪು ಸಾಹಿತ್ಯವನ್ನು ಬೇರೊಂದು ದಿಕ್ಕಿನಿಂದ ನೋಡತೊಡಗಿದೆ. ಆಗ ನವಪದ ನಿರ್ಮಾಣಗಳ ಹಿಂದಿರುವ ಕುವೆಂಪು ಅವರ ನವ ತಾತ್ವಿಕತೆ ಹೊಳೆಯತೊಡಗಿತು. 2020ರ ಸುಮಾರಿಗೆ ಕನ್ನಡ ವಿಶ್ವವಿದ್ಯಾಲಯ ಹೊರತಂದ ಕುವೆಂಪು ಸಮಗ್ರ ಸಾಹಿತ್ಯದ 12 ಸಂಪುಟಗಳನ್ನು ಒಟ್ಟಿಗೇ ನೋಡುತ್ತಾ ಬರೆದ ಟಿಪ್ಪಣಿಗಳನ್ನು ಇಲ್ಲಿ ಮತ್ತೆ ಕೊಡುತ್ತಿರುವೆ: ಈ ಸಂಪುಟಗಳನ್ನು ಹೀಗೆ ಒಟ್ಟಿಗೆ ತರಲು ಇಪ್ಪತ್ತು ವರ್ಷ ದುಡಿದವರು ಕೀರಂ ಪ್ರಿಯ ಶಿಷ್ಯ, ಗೆಳೆಯ ಕೆ.ಸಿ. ಶಿವಾರೆಡ್ಡಿ. ಪೂರ್ಣಚಂದ್ರ ತೇಜಸ್ವಿ ರೂಪಿಸಿದ ವಿನ್ಯಾಸ ಹಾಗೂ ರಕ್ಷಾಪುಟಗಳ ಐಡಿಯಾಗಳ ಸಮೇತ ಈ ಸಂಪುಟಗಳು ನಮ್ಮೆದುರಿಗಿವೆ. ನಾಡಿನೆಲ್ಲೆಡೆ ಕುವೆಂಪು, ಬೇಂದ್ರೆ ಮುಂತಾಗಿ ಎಲ್ಲ ದೊಡ್ಡ ಲೇಖಕರ ಗುಂಗನ್ನು ಹಬ್ಬಿಸುತ್ತಿದ್ದ ಕೀರಂ, ಶಿವಾರೆಡ್ಡಿಗೂ ಕುವೆಂಪು ಗುಂಗು ಹಿಡಿಸಿದ್ದರೆ ಅಚ್ಚರಿಯಲ್ಲ. ಹಾಗೆ ನೋಡಿದರೆ, ಬೇಂದ್ರೆ ಪಾರ್ಟಿಯಲ್ಲಿದ್ದ ನನ್ನನ್ನು ಕುವೆಂಪು ಕಡೆಗೂ ಮತ್ತೆ ಸೆಳೆದವರು ಈ ಗುರು-ಶಿಷ್ಯರೇ!
2
ಭಾವಗೀತೆಯ ಕೇಂದ್ರದಿಂದ ಸಕಲ ದಿಕ್ಕುಗಳ ಕಡೆಗೆ
ಕುವೆಂಪು ಸಮಗ್ರ ಕಾವ್ಯ ಸಂಪುಟಗಳನ್ನು (ಸಂಪುಟ 1,2,3) ಇವತ್ತು ನೋಡುತ್ತಿದ್ದರೆ ಭಾವಗೀತೆಯ ಥರಥರದ ತೀವ್ರ ಧಾಟಿಗಳು ಕಾಣತೊಡಗುತ್ತವೆ. ‘ರೂಪಾಂತರಗೊಂಡ ಬಂಡೆಗಳು ನೀರೊಡೆದು ಕರಗುವ ಹಾಗೆ ಲಿರಿಕ್ ಪ್ರಕಾರ ನಾವು ನೋಡುವ ಎಲ್ಲವನ್ನೂ ಬದಲಿಸಿಬಿಡುತ್ತದೆ’ ಎಂದ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಚಿಂತಕನೊಬ್ಬನ ಮಾತು ಕುವೆಂಪು ಭಾವಗೀತೆ ಓದುವಾಗಲೂ, ಕೇಳುವಾಗಲೂ ನಿಜವಾಗತೊಡಗುತ್ತದೆ. ‘ಬೇಸರದ ಸಂಜೆಯಿದು ಬೇಕೆನಗೆ ನಿನ್ನ ಜೊತೆ…’ ನಮ್ಮೆದೆಯ ಅಳಲಾಗತೊಡಗುತ್ತದೆ. ಕುವೆಂಪು ಕಾವ್ಯದಲ್ಲಿ ಪ್ರೇಮವೂ ಕೋಪವೂ ಶೋಕವೂ ಭಾವಗೀತೆಯಲ್ಲೇ ಸ್ಫೋಟಗೊಳ್ಳುತ್ತವೆ! ‘ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ’ ಎಂಬ ಕೋಮಲ ರಮ್ಯತೆ; ‘ಬಡಬಗ್ಗರ ಜಠರಾಗ್ನಿಯು ಎದ್ದು/ ಗುಡಿಸಲುಗಳಿಗೇ ಬೆಂಕಿಯು ಬಿದ್ದು/ ಬಡವರ ಬೆಂಕಿಯ ನಾಲಗೆ ಚಾಚಿ/ ಶ್ರೀಮಂತರನಪ್ಪಿತು ನಾಚಿ’ ಎಂಬ ಕಮ್ಯುನಿಸ್ಟ್ ರೋಷ; ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಎಂಬ ಸ್ವಾತಂತ್ರ್ಯ ಹೋರಾಟದ ಸ್ಪಿರಿಟ್, ‘ಕರಿಸಿದ್ಧ’ದ ಶೋಕ… ಹೀಗೆ ವಿಭಿನ್ನ ದನಿಗಳಿಗೆ ಕುವೆಂಪು ಭಾವಗೀತೆಗಳು ಬಾಯಾಗುತ್ತವೆ.
ಮುಂದೆ ನವ್ಯ ಸಾಹಿತ್ಯದ ಕಾಲದಲ್ಲಿ ಪರಿಚಿತವಾದ ಗದ್ಯ ಲಯವನ್ನೂ ಕುವೆಂಪು ಆಗ ಪದ್ಯಗಳಲ್ಲಿ ಪ್ರಯೋಗಿಸಿದ್ದರು: ‘ಕರಿಯ ತಲೆ, ಗಾಜುಗಣ್ಣು; ಬಾಯಲ್ಲಿ ಹೊಗೆ, ಮೂಗಿನಲ್ಲಿ ಕಿಡಿ, ರೈಲಿನೆಂಜಿಣ್ಣು! ಹರಿಯುತಿದೆ ಗಡಗಡನೆ ಸದ್ದು ಮಾಡಿ ದೊಡ್ಡದೊಂದೊನಕೆ ಹುಳು! ಹೊಟ್ಟೆಯೆಲ್ಲಾ ಗಾಡಿ!’ ಇವೆಲ್ಲದರ ಜೊತೆಗೆ, ಸಾನೆಟ್ ಚೌಕಟ್ಟಿನ ಶಿಸ್ತು, ಕಿಂದರಿಜೋಗಿಯ ಶಿಶು ಲಯ, ಪ್ರಾಸ, ನಾಟಕಗಳ ಕಾವ್ಯಮಯತೆ …ಎಲ್ಲವೂ ಮುಂದೆ ಬರಲಿದ್ದ ಅವರ ಮಹಾಕಾವ್ಯಕ್ಕೆ ಸಿದ್ಧತೆಗಳಂತಿದ್ದವು.
ಕಾಡಿನ ಸದ್ದುಗಳಿಗೆ ಕಿವಿಗೊಟ್ಟು ಸಹಜ ಕವಿಯಾದ ಕುವೆಂಪು, ಶೇಕ್‌ಸ್ಪಿಯರ್ ನಾಟಕ, ವರ್ಡ್ಸ್‌ವರ್ತ್, ಶೆಲ್ಲಿ, ಕೀಟ್ಸ್ ಕಾವ್ಯ; ರಾಘವಾಂಕ, ಹರಿಹರ, ಜನ್ನ ಎಲ್ಲರಿಂದಲೂ ಕಲಿಯುತ್ತಾ ಬರೆಯುತ್ತಿದ್ದರು. ಇದೆಲ್ಲದರ ನಡುವೆ ಮಹಾಕಾವ್ಯ ಬರವಣಿಗೆ ಕುವೆಂಪುವಿನ ಕನಸಿನಲ್ಲೂ ಕಾಡತೊಡಗಿತ್ತು: ‘ನಾನೊಂದು ಬೃಹತ್ ಗಾತ್ರದ ಎಪಿಕ್ ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ. ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ!’
ಕನಸಿನಲ್ಲೂ ಕವಿ ಎಂದಿನಂತೆ ತನ್ನ ಕೃತಿಗೆ ತಾನೇ ಮಣಿಯುತ್ತಿದ್ದಾನೆ! ಕನಸೊಡೆಯುತ್ತದೆ! ಆಹಾ! ‘ಇನ್ನೆಲ್ಲಿಯ ನಿದ್ದೆ!’
ಮಹಾಕಾವ್ಯದ ಕನಸು ತಕ್ಷಣಕ್ಕೆ ಕೈಗೂಡದೆ ಕಾವ್ಯವನ್ನೇ ಕೇಂದ್ರ ಸಂವೇದನೆಯಾಗಿಸಿಕೊಂಡು ಮುಂದುವರಿದ ಕುವೆಂಪು ಕಾದಂಬರಿಯತ್ತ ಹೊರಳಿದ್ದು ಆಕಸ್ಮಿಕ. ‘ಕಾದಂಬರಿ ಎಂದರಂತೂ [ನನಗೆ] ಒಂದು ಬಗೆಯ ತಿರಸ್ಕಾರವಿತ್ತು’ ಎನ್ನುವ ಕುವೆಂಪು, ಟಾಲ್‌ಸ್ಟಾಯ್ ಬರೆದ ‘ರಿಸರಕ್ಷನ್’ ಕಾದಂಬರಿ ಓದಿ, ಫ್ರೆಂಚ್, ಇಂಗ್ಲಿಷ್, ರಷ್ಯನ್ ಭಾಷೆಯ ಕಾದಂಬರಿಗಳನ್ನು ವೇಗವಾಗಿ ಓದಲಾರಂಭಿಸುತ್ತಾರೆ. ಸಣ್ಣ ಕತೆ ಬರೆದಿದ್ದ ಕುವೆಂಪುವಿಗೆ ‘ವಾರ್ ಅಂಡ್ ಪೀಸ್’ ಥರದ ಬೃಹತ್ ಕಾದಂಬರಿ ಬರೆಯುವ ಆಸೆ; ಕಾದಂಬರಿ ಬರೆಯಬಲ್ಲೆನೆ ಎಂಬ ಅಳುಕು! ಈ ಅಳುಕು ಕಂಡ ಗುರು ಟಿ.ಎಸ್. ವೆಂಕಣ್ಣಯ್ಯ, ‘ಕಥನ, ಸಂವಾದ ಮತ್ತು ವರ್ಣನೆ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಬೃಹತ್ ಕಾದಂಬರಿಯನ್ನೇ ಬರೆಯಿರಿ’ ಎಂದು ಧೈರ್ಯ ತುಂಬಿದರು; ಕುವೆಂಪು ಕಾದಂಬರಿ ಶುರು ಮಾಡಿದರು. ಇಂಗ್ಲಿಷ್ ಕವಿಯಾಗಲು ಹೊರಟು ಕನ್ನಡದತ್ತ ಬಂದಿದ್ದ ಕುವೆಂಪು ಕನ್ನಡದಲ್ಲಿ ಆಗಲೇ ರೂಪುಗೊಂಡಿದ್ದ ಕಾದಂಬರಿ ಪ್ರಕಾರವನ್ನು ದೊಡ್ಡ ಕ್ಯಾನ್ವಾಸ್, ಸ್ಥಳೀಯ ಭಾಷಾ ವೈವಿಧ್ಯ, ನೆಲದ ಗಂಧ, ನವ ಆದರ್ಶಗಳ ಸಂಗಮವನ್ನಾಗಿಸಿದರು.
ಕಾದಂಬರಿ ಬರವಣಿಗೆಯ ನಡುವೆ ತತ್ವಶಾಸ್ತ್ರ, ಮನೋವಿಜ್ಞಾನ, ಆಧ್ಯಾತ್ಮ… ಎಲ್ಲವನ್ನೂ ಕುವೆಂಪು ಓದುತ್ತಿದ್ದರು. ಓದಿನ ಜೊತೆಗೇ ರೈತರ ಕಷ್ಟ, ದಲಿತರ ಯಾತನೆ, ಸುತ್ತಣ ನೋವು, ಸ್ವಾತಂತ್ರ್ಯ ಚಳುವಳಿ, ಗಾಂಧೀಜಿಯ ಬಗ್ಗೆ ಗೌರವ, ರಾಜಪ್ರಭುತ್ವದ ವಿರುದ್ಧ ಸಿಟ್ಟು…ಎಲ್ಲಕ್ಕೂ ಮಿಡಿಯುತ್ತಾ, ಜೊತೆಗೆ ಗುಪ್ತಪ್ರೇಮವೊದರಲ್ಲಿ ಅರಳುತ್ತಾ ಕುವೆಂಪು ಬರೆಯುತ್ತಿದ್ದರು. ತನ್ನವು ‘ಓದು ನಾಟಕಗಳು’ ಎಂದೊಮ್ಮೆ ಘೋಷಿಸಿದ ಕುವೆಂಪು, ತಮ್ಮ ‘ಯಮನ ಸೋಲು’ ನಾಟಕದಲ್ಲಿ ಸತ್ಯವಾನನಾಗಿಯೂ ನಟಿಸಿದರು! ತಮ್ಮ ಕವಿತೆಗಳನ್ನು ಗಟ್ಟಿಯಾಗಿ ಹಾಡಿದರು.
ಹೀಗೆ ಕುವೆಂಪುವಿನಲ್ಲಿ ಹಲವು ವ್ಯಕ್ತಿತ್ವಗಳು ಬೆರೆಯುತ್ತಿದ್ದವು; ಮುಖಾಮುಖಿಯಾಗುತ್ತಿದ್ದವು. ಗಾಂಧೀಜಿ ಜೈಲಿನಿಂದ ಬಿಡುಗಡೆಯಾದಾಗ ಹರೆಯದ ಕುವೆಂಪು ಭಾವುಕರಾಗಿ, ‘Sing, temples, sing…Ring, Churches, ring… Ye Mosques, your incense burn and pray for him...’ ಎಂದು ಕವಿತೆ ಬರೆದರು; ಮುಂದೊಮ್ಮೆ ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ’ ಎಂಬ ದಿಟ್ಟ ಕರೆಯನ್ನೂ ನೀಡಿದರು. ಶೂದ್ರರನ್ನು ಪುರೋಹಿತಶಾಹಿಯ ದಾಸ್ಯದಿಂದ ಬಿಡಿಸಲು ವೈಚಾರಿಕ ಬರಹ, ಭಾಷಣಗಳ ಮೂಲಕ ಪ್ರಯತ್ನಿಸುತ್ತಿದ್ದ ಕುವೆಂಪು ತಮ್ಮ ಪೋಸ್ಟ್ ಕಾರ್ಡ್, ಪತ್ರಗಳ ಶುರುವಿನಲ್ಲಿ ‘ಓಂ ಶಾಂತಿಃ’ಗೆ ಬದಲಾಗಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು! ಅವರ ಕವಿತೆಗಳು ಸ್ವಾತಂತ್ಯ ಚಳುವಳಿ, ಸಾಮಾಜಿಕ ಚಳುವಳಿಗಳ ಭಾಗಗಳಾದವು.
3
ಪ್ರೇಮಿ, ಹುಚ್ಚ, ಕವಿ ಮತ್ತು ಆಧ್ಯಾತ್ಮಜೀವಿ!
‘ಕವಿ, ಹುಚ್ಚ, ಪ್ರೇಮಿ ಕಲ್ಪನಾವಿಲಾಸದಿಂದ ತುಂಬಿ ತುಳುಕುತ್ತಿರುತ್ತಾರೆ’ ಎಂಬ ಶೇಕ್‌ಸ್ಪಿಯರನ ವರ್ಣನೆ ಬಲ್ಲ ಕುವೆಂಪುವಿಗೆ ಈ ಮೂರರ ಜೊತೆಗೆ ಆಧ್ಯಾತ್ಮವೂ ಸೇರಿಕೊಂಡಿತ್ತು! ಹರೆಯದಲ್ಲಿ ಮಲೇರಿಯಾ ಸೇರಿದಂತೆ ಹಲ ಬಗೆಯ ಕಾಯಿಲೆಗಳಿಗೆ ತುತ್ತಾಗಿದ್ದ ಕುವೆಂಪುವಿಗೆ ಒಮ್ಮೆ ತೀವ್ರ ಕಾಯಿಲೆಯೊಂದರ ಸ್ಥಿತಿಯಲ್ಲಿ ಉನ್ಮಾದ ಭುಗಿಲೆದ್ದಿತು. ಈ ಉನ್ಮಾದ, ‘ಪುಟ್ಟಪ್ಪ ತೀರಿಕೊಂಡಿದ್ದಾನೆ; ಈಗ ನಾನು ವಿವೇಕಾನಂದ’ ಎಂದು ಕುವೆಂಪುವೇ ನಂಬಿ ಹೇಳುವಲ್ಲಿಗೂ ಮುಟ್ಟಿತು! ಈ ಅನುಭವ ಕುರಿತು ಕುವೆಂಪು 1973ರಲ್ಲಿ ಬರೆಯುತ್ತಾರೆ: ‘ಈಗಲೂ ಕೂಡ ನನ್ನ ಕವಿಚೇತನದ ಭಾವಾನುಭವಗಳನ್ನೂ ಚಿಂತನಗಳನ್ನೂ ಮುಚ್ಚುಮರೆಯಿಲ್ಲದೆ ಲೋಕರಂಗದಲ್ಲಿ ಬಿಚ್ಚಿದೆನಾದರೆ ನಾನು ಅಂದಿಗಿಂತಲೂ ಹೆಚ್ಚಾಗಿ ಹುಚ್ಚನಾಗಿ ಕಾಣುವುದರಲ್ಲಿ ಸಂಶಯವಿಲ್ಲ!’
ಬರವಣಿಗೆಯ ಸ್ತರವನ್ನು ದಿವ್ಯಸ್ವಪ್ನದ ಸ್ಥಿತಿಯೆಂದು ನಂಬಿದ್ದ ಕುವೆಂಪುವಿನ ಬರವಣಿಗೆಯಲ್ಲಿ ಆದರ್ಶ ನಾಯಕರು, ನೆಲ ಮೀರಿದ ಪಾತ್ರಗಳು, ಪರವಶ ಸ್ಥಿತಿಗಳು ಮತ್ತೆಮತ್ತೆ ಬರುತ್ತಲೇ ಇರುತ್ತಿದ್ದವು. ಈ ಸ್ಥಿತಿಗಳನ್ನೆಲ್ಲ ಅಣಕಿಸುವಂತೆ ಕಟುವಾಸ್ತವದ ಚಿತ್ರಗಳು, ನಿತ್ಯದ ಸಂಕಟಗಳಲ್ಲಿ ಕುಸಿವ ಪಾತ್ರಗಳು ಕೂಡ ಅವರ ಕಾದಂಬರಿಗಳಲ್ಲಿ ಸೃಷ್ಟಿಯಾಗುತ್ತಿದ್ದವು. ಲೇಖಕ, ಲೇಖಕಿಯರು ತಾವು ಹೊಕ್ಕ ಸಾಹಿತ್ಯ ಪ್ರಕಾರ ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ಹೋಗಲು ಸಿದ್ಧರಿರಬೇಕು! ಹೀಗೆ ಕುವೆಂಪು ತಾವು ಹೊಕ್ಕ ಎಲ್ಲ ಸಾಹಿತ್ಯ ಪ್ರಕಾರಗಳೂ ತಮ್ಮನ್ನು ಹಲ ಬಗೆಯ ದಿಕ್ಕಿನಲ್ಲಿ ಒಯ್ಯಲು ಬಿಟ್ಟಿದ್ದರಿಂದ ಕೂಡ ಅವರ ಬರವಣಿಗೆಯಲ್ಲಿ ಇಷ್ಟೊಂದು ವೈವಿಧ್ಯವಿದೆ. ಆದರೆ ‘ನೆನಪಿನ ದೋಣಿಯಲ್ಲಿ’ ಆತ್ಮಕತೆಯ ಬರವಣಿಗೆಯ ಕಾಲಕ್ಕೆ ಲೇಖಕನ ಅತಿ ಆತ್ಮವಿಶ್ವಾಸದಿಂದಲೋ ಏನೋ ಈ ‘ಪ್ರಕಾರ ಪ್ರಜ್ಞೆ’ ಕೊಂಚ ಹಿನ್ನೆಲೆಗೆ ಸರಿದು ಬರವಣಿಗೆ ಅನಗತ್ಯವಾಗಿ ಹಿಗ್ಗಿಬಿಟ್ಟಿದೆ.
4
ವಿಭಿನ್ನ ಹೊಣೆಗಳು; ವಿವಿಧ ಪಾತ್ರಗಳು
ಇನ್ನು ಕುವೆಂಪು ಸೃಷ್ಟಿಸಿರುವ 11750 ಪುಟಗಳನ್ನುಳ್ಳ 12 ಸಂಪುಟಗಳ ಸುತ್ತ ಸಣ್ಣ ಕಣ್ಣೋಟ:
ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ಮಹಾಕಾವ್ಯ, ಭಾವಗೀತೆ, ನಾಟಕ- ಈ ಮೂರು ಮೂಲ ಸಾಹಿತ್ಯ ಪ್ರಕಾರಗಳು ಎನ್ನುತ್ತಾರೆ. ಕುವೆಂಪು ಐವತ್ತು ವರ್ಷ ತಲುಪುವ ಹೊತ್ತಿಗೆ ಈ ಮೂರೂ ಮೂಲ ಪ್ರಕಾರಗಳಲ್ಲಿ ಎತ್ತರದ ಕೃತಿಗಳನ್ನು ಸೃಷ್ಟಿಸಿದ್ದರು; ಒಟ್ಟಾರೆ ಎಲ್ಲ ಆಧುನಿಕ ಸಾಹಿತ್ಯ ಪ್ರಕಾರಗಳನ್ನೂ ನಿರ್ವಹಿಸಿದರು. ಕಾದಂಬರಿ, ಕತೆ, ಗದ್ಯ, ಕಾವ್ಯ ಮೀಮಾಂಸೆ, ವಿಮರ್ಶೆ, ಜೀವನ ಚರಿತ್ರೆ, ಆತ್ಮಕತೆ, ಮಕ್ಕಳ ಸಾಹಿತ್ಯ, ಸರಳ ಕನ್ನಡದಲ್ಲಿ ‘ಜನಪ್ರಿಯ ವಾಲ್ಮೀಕಿ ರಾಮಾಯಣ’…ಹೀಗೆ ಕುವೆಂಪು ಅವರ 80 ಪುಸ್ತಕಗಳು ಈ ಹನ್ನೆರಡು ಸಂಪುಟಗಳಲ್ಲಿ ಹರಡಿವೆ.
ಕುವೆಂಪು ಇಷ್ಟೊಂದು ಪುಟಗಳನ್ನು ಕೈಬರಹದಲ್ಲಿ ಬರೆದದ್ದು ಹೇಗೆ ಎಂಬ ಪ್ರಶ್ನೆ ಈ ಕಾಲದ ಹೊಸ ಓದುಗರಲ್ಲಿ ಸಹಜವಾಗಿಯೇ ಮೂಡಬಹುದು! ಕುವೆಂಪು ಕಾಲಕಾಲಕ್ಕೆ ತಮ್ಮ ವಿಭಿನ್ನ ಹೊಣೆಗಳು ಹಾಗೂ ಪಾತ್ರಗಳನ್ನು ವಿವರಿಸಿಕೊಂಡ ಕ್ರಮದಿಂದಾಗಿ ಕೂಡ ಅಷ್ಟೊಂದು ಪ್ರಕಾರಗಳಲ್ಲಿ ಬರೆಯಲೇಬೇಕಾಯಿತು. ತಾರುಣ್ಯದಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ಕರ್ತವ್ಯ- ಗುರಿ ಏನೆಂಬುದನ್ನು ಸ್ಪಷ್ಟಪಡಿಸಿಕೊಂಡ ಕುವೆಂಪು ಪ್ರಾಚೀನ ಕೃತಿಗಳನ್ನು ಓದುವ ರೀತಿಗಳನ್ನು ಕಲಿಸಲು ವಿಮರ್ಶೆ, ಕಾವ್ಯಮೀಮಾಂಸೆ ಎಲ್ಲವನ್ನೂ ಬರೆಯಬೇಕಾಯಿತು. ಭಾರತೀಯ ಕಾವ್ಯ ಮೀಮಾಂಸೆ, ಪಶ್ಚಿಮದ ಕಾವ್ಯಮೀಮಾಂಸೆ ಎರಡರ ಕಡೆಗೂ ನೋಡಬೇಕಾಯಿತು. ‘ತಪೋನಂದನ,’ ‘ರಸೋವೈಸಃ’, ‘ದ್ರೌಪದಿಯ ಶ್ರೀಮುಡಿ’ ಥರದ ವಿಮರ್ಶಾ ಕೃತಿಗಳು ಆ ಕಾಲದ ವಿಮರ್ಶೆಯ ಭಾಷೆ, ಪರಿಕಲ್ಪನೆ, ತೌಲನಿಕ ನೋಟ, ಸದಭಿರುಚಿಗಳನ್ನು ರೂಪಿಸಲೆತ್ನಿಸಿದವು. ಯಾವುದೇ ಕನ್ನಡ ಅಧ್ಯಾಪಕಿಯ, ಅಧ್ಯಾಪಕನ ಕೆಲಸ ಕ್ಲಾಸಿನೊಳಗೆ ಮುಗಿಯುವುದಿಲ್ಲ; ಕ್ಲಾಸಿನ ಹೊರಗೂ ಅವರು ಕನ್ನಡ ಸಾಹಿತ್ಯದ ಮೂಲಕ ಹೊಸ ಸಂವೇದನೆ, ವೈಚಾರಿಕ ಜಾಗೃತಿ, ವಿಮರ್ಶಾ ಪ್ರಜ್ಞೆ ಇವನ್ನೆಲ್ಲ ರೂಪಿಸಬೇಕು ತಾನೇ? ಈ ನಿಟ್ಟಿನಲ್ಲೂ ಕುವೆಂಪು ನಮಗೆ ದೊಡ್ಡ ಮಾಡೆಲ್. ತರಗತಿಗಳಲ್ಲಿ ಕನ್ನಡ ಬೋಧನೆಯ ಶ್ರೇಷ್ಠ ಮಾದರಿಯನ್ನೂ ಕುವೆಂಪು ತೋರಿಸಿದರು.
ಅದರ ಜೊತೆಗೆ, ಸಾಮಾನ್ಯ ಓದುಗರೂ ಪ್ರಾಚೀನ ಕೃತಿಗಳನ್ನು ಹೊಸ ನೆಲೆಯಲ್ಲಿ ಆಧುನಿಕ ಅರ್ಥಗಳ ಸಹಿತ ನೋಡಬೇಕೆಂಬ ತುಡಿತವೂ ಕುವೆಂಪುವಿಗಿತ್ತು. ತಮ್ಮನ್ನು ತುಳಿಯುತ್ತಿದ್ದ ಪುರೋಹಿತಶಾಹಿ ಹಾಗೂ ಫ್ಯೂಡಲ್ ಮೂಲಗಳನ್ನು ಆಗಷ್ಟೇ ಅರಿಯತೊಡಗಿದ್ದ ಶೂದ್ರ ಜನಾಂಗಕ್ಕೆ ಹೊಸ ಆತ್ಮವಿಶ್ವಾಸ ತುಂಬಲು ಶೂದ್ರ ತಪಸ್ವಿಯ ಅಥವಾ ಏಕಲವ್ಯನ ಕತೆಯನ್ನು ಆಧುನಿಕ ಪ್ರಜ್ಞೆಯ ಮೂಲಕ ನಾಟಕವಾಗಿಸಿ ಹೇಳಬೇಕು; ಈ ನಾಟಕಗಳನ್ನು ಶೂದ್ರ ಸಮುದಾಯದ ಬಿಡುಗಡೆಯ ದೊಡ್ಡ ಚಳುವಳಿಗಳ ಜೊತೆಗೆ ತಾತ್ವಿಕವಾಗಿ ಬೆಸೆಯಬೇಕು; ಜನರು ರಾಮಾಯಣವನ್ನು ಹಳೆಯ ರೀತಿಯಲ್ಲಿ ಓದಿ ಮನಸ್ಸನ್ನು ಕಗ್ಗಂಟಾಗಿಸಿಕೊಳ್ಳದೆ ಒಂದು ಬೃಹತ್ ಕಾದಂಬರಿಯಂತೆ ಮುಕ್ತವಾಗಿ ಓದಬೇಕು… ಈ ಥರದ ಹೊಣೆಗಳನ್ನು ಹೊತ್ತ ಕುವೆಂಪು ಸಾಹಿತ್ಯಕೃತಿಗಳ ಜೊತೆಗೇ ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳ ಸೃಷ್ಟಿ, ವಿಜ್ಞಾನಮತಿಯ ಬೆಳವಣಿಗೆ, ವಿಶ್ವ ಮಾನವ ವಿಕಾಸ…ಇವೆಲ್ಲದರಲ್ಲೂ ತೊಡಗಿದ್ದರು.
ಮಕ್ಕಳಿಗಾಗಿ, ತರುಣ, ತರುಣಿಯರಿಗಾಗಿ, ಪ್ರಬುದ್ಧರಿಗಾಗಿ, ಕೇಳುಗರಿಗಾಗಿ, ಪಾಠ ಹೇಳುವವರಿಗಾಗಿ… ಹೀಗೆ ಕುವೆಂಪು ಕಾಲಕಾಲಕ್ಕೆ ಬರೆದ ಬರವಣಿಗೆಗಳೆಲ್ಲ ಕನ್ನಡ ಪರಂಪರೆಯ ಭಾಗವಾಗಿವೆ. ಆದ್ದರಿಂದಲೇ ಒಮ್ಮೆ ಶುರುವಾದ ನಮ್ಮ ಕುವೆಂಪುಯಾನ ಕುವೆಂಪು ಪುಸ್ತಕಗಳಿಗೇ ನಿಲ್ಲುವುದಿಲ್ಲ. ಕುವೆಂಪು ಸಂವೇದನೆ ಕಾರಂತ, ಬೇಂದ್ರೆಯವರ ಕಡೆಗೂ ನಮ್ಮನ್ನು ಒಯ್ಯುತ್ತದೆ; ಕೆಲವು ವಿಚಾರಗಳಲ್ಲಿ ಕುವೆಂಪುವಿಗಿಂತ ಸೂಕ್ಷ್ಮವಾಗಿ, ಸಂಕೀರ್ಣವಾಗಿ, ಮೊನಚಾಗಿ, ಆಧುನಿಕವಾಗಿ, ನೇರವಾಗಿ ಬರೆಯುವ ಲಂಕೇಶ್, ತೇಜಸ್ವಿಯವರ ಕಡೆಗೆ ನಾವು ಚಲಿಸುತ್ತೇವೆ. ಕುವೆಂಪು ಕೈ ಚಾಚಿದ ಜಗತ್ತಿನ ದೊಡ್ಡ ಲೇಖಕರ ಕಡೆಗೂ ನೋಡುತ್ತೇವೆ. ಹೀಗೆ ಕುವೆಂಪು ಬರಹಗಳ ದೋಣಿ ನಮ್ಮನ್ನು ಜಗತ್ತಿನ ಅತ್ಯುತ್ತಮ ಸಾಹಿತ್ಯದ ಕಡೆಗೆ ಒಯ್ಯುತ್ತದೆ. ಅಕಸ್ಮಾತ್ ನಾವು ಕೇವಲ ಕುವೆಂಪು ಭಕ್ತರಾಗಿ ಕುವೆಂಪುವಿನಲ್ಲೇ ‘ಸ್ಟಕ್’ ಆದರೆ, ಈ ಕುವೆಂಪುಯಾನ ಅಪೂರ್ಣವಾಗುತ್ತದೆ!
ಈ ಕುವೆಂಪುಯಾನವನ್ನು ತರಗತಿಗಳಲ್ಲಿ ಮುಂದುವರಿಸಿದ ಸಾವಿರಾರು ಕನ್ನಡ ಟೀಚರುಗಳಂತೆ, ಕುವೆಂಪು ಅವರ ಕ್ರಾಂತಿಕಾರಿ ಸಂದೇಶಗಳನ್ನು ಪ್ರಖರ ಸಾಮಾಜಿಕ ಜವಾಬ್ದಾರಿಯ ಲೇಖಕ,ಲೇಖಕಿಯರು ಕೂಡ ತಮ್ಮ ಬರವಣಿಗೆಗಳಲ್ಲಿ ವಿಸ್ತರಿಸಿದ್ದಾರೆ. ಪ್ರಗತಿಪರ ಸಂಘಟನೆಗಳಿಗೆ ಕುವೆಂಪು ಸ್ಫೂರ್ತಿಯಾಗಿದ್ದಾರೆ. ಕರ್ನಾಟಕದ ದಲಿತ ಸಂಘಟನೆ, ರೈತ ಸಂಘಟನೆಗಳಲ್ಲಿ ಕುವೆಂಪು ಮರುದನಿ ಕೇಳುತ್ತದೆ. ರೈತನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕುವೆಂಪು ಕೃತಿ, ವ್ಯಕ್ತಿತ್ವಗಳ ವಿಶಿಷ್ಟ ವ್ಯಾಖ್ಯಾನಕಾರಲ್ಲೊಬ್ಬರಾಗಿದ್ದರು. ಕರ್ನಾಟಕದ ಬಹುಜನ ಸಮಾಜ ಪಕ್ಷ ಕುವೆಂಪುವನ್ನು ತನ್ನ ಸಾಂಸ್ಕೃತಿಕ ಐಕಾನ್‌ಗಳ ನಡುವೆ ಇರಿಸಿಕೊಂಡಿದೆ. ಕನ್ನಡ ಅಧ್ಯಯನ, ವಿಮರ್ಶೆ, ಸಿನಿಮಾ, ಟೆಲಿಧಾರಾವಾಹಿ, ರಂಗಭೂಮಿ, ಸಮೂಹಗಾನ… ಹೀಗೆ ಎಲ್ಲವೂ ಕುವೆಂಪುವನ್ನು ಮುಂದೊಯ್ಯುತ್ತಿವೆ.
ಈ ಕುವೆಂಪುಯಾನವನ್ನು ಈ ಕಾಲದ ಹೊಸ ಲೇಖಕ, ಲೇಖಕಿಯರು ಅರ್ಥಪೂರ್ಣವಾಗಿ ಮುನ್ನಡೆಸಿದಾಗ ಮಾತ್ರ ಕುವೆಂಪು ಮೂಲಕ ಕನ್ನಡದಲ್ಲಿ ಹಬ್ಬಿರುವ ಆಧುನಿಕ ವೈಚಾರಿಕತೆ, ಕಲಾಪ್ರಜ್ಞೆ, ಬರವಣಿಗೆಯ ಶಿಸ್ತು, ಸೌಂದರ್ಯ ತತ್ವಗಳು ಹೊಸ ಹೊಸ ಆಯಾಮಗಳನ್ನು ಪಡೆಯಬಲ್ಲವು. ಏಕಾಕಿತನ, ಖಾಲಿತನಗಳನ್ನು ಅನುಭವಿಸುವ ಯಾವುದೇ ಸೂಕ್ಷ್ಮ ವ್ಯಕ್ತಿಗಳಿಗೆ ಕುವೆಂಪು ಸಾಹಿತ್ಯ ಆತ್ಮೀಯ ಸಂಗಾತಿಯಾಗಬಲ್ಲದು; ಕುವೆಂಪು ಸಮಗ್ರ ಸಾಹಿತ್ಯದೊಡನೆ ಕನ್ನಡದ ಜಾಣ ಜಾಣೆಯರು ತಮ್ಮ ಜೀವಮಾನವಿಡೀ ಅರ್ಥಪೂರ್ಣವಾಗಿ ಬದುಕಬಹುದು ಎಂಬುದು ನನ್ನ ನಂಬಿಕೆ. ಹೀಗೆ ಕುವೆಂಪು ಕೃತಿಗಳ ದೋಣಿಯಲ್ಲಿ ನಡೆಯುತ್ತಲೇ ಇರಲಿ ನಮ್ಮ ‘ದೂರ ತೀರ ಯಾನ…’
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
Read More
‘ಓದು ಎನ್ನುವುದು ಅರ್ಥದ ನಿರಂತರ ಮುಂದೂಡಿಕೆ…’
ಫ್ರೆಂಚ್ ಥಿಯರಿಸ್ಟ್ ಜಾಕ್ವೆಸ್ ಡೆರಿಡಾ ಹೇಳಿದ ಈ ಮಾತನ್ನು ಇಪ್ಪತ್ತು ವರ್ಷಗಳ ಕೆಳಗೆ ಓದಿದಾಗ ವಿಸ್ಮಯವಾಗಿತ್ತು. ಅರೆರೆ! ಸಾಮಾನ್ಯವಾಗಿ ನಾವೆಲ್ಲ ಸಾಹಿತ್ಯದ ಓದು-ಟೀಚಿಂಗ್-ವಿಮರ್ಶೆ- ವ್ಯಾಖ್ಯಾನಗಳನ್ನು ಮಾಡುವಾಗಲೆಲ್ಲ, ‘ಏನು ಈ ಪದ್ಯದ ಅರ್ಥ?’ ‘ಈ ಕತೆಯ ಸಂಕೇತ ಏನು ಹೇಳುತ್ತದೆ?’ ‘ಈ ರೂಪಕ ಏನು ಸೂಚಿಸುತ್ತದೆ?’ ಎಂದೆಲ್ಲ ಹುಡುಕುತ್ತಾ, ಕೊನೆಗೆ ಯಾವುದಾದರೂ ಒಂದು ಅರ್ಥವನ್ನು ನಿರ್ದಿಷ್ಟಗೊಳಿಸುವ ಕೆಲಸವನ್ನೇ ಮಾಡುತ್ತಿದ್ದೇವಲ್ಲ ಎನ್ನಿಸಿತ್ತು. ಆದರೂ ಒಂದು ಪದ್ಯಕ್ಕೋ, ನಾಟಕದ ಭಾಗಕ್ಕೋ ಒಂದಕ್ಕಿಂತ ಹೆಚ್ಚಿನ ಅರ್ಥಗಳನ್ನು ಕೊಡುತ್ತಾ, ಹೊಸ ಹೊಸ ವ್ಯಾಖ್ಯಾನಗಳನ್ನು ಮಾಡುತ್ತಾ ನಾವೂ ಡೆರಿಡಾ ಮಾತಿಗೆ ಹತ್ತಿರವಿದ್ದೇವೆ ಎಂದು ಕೂಡ ಅನ್ನಿಸತೊಡಗಿತು.
ಡೆರಿಡಾ ಮಾತಿನ ವಿಶಾಲ ಅರ್ಥ ಒಳಗಿಳಿದವರಿಗೆ, ಈ ಮಾತಿನ ಜಾಡು ಹಿಡಿದು ಆಗಾಗ ಪದ್ಯವನ್ನೋ ಕತೆಯನ್ನೋ ಓದುವವರಿಗೆ, ತಾವು ನಿಜಕ್ಕೂ ಒಂದು ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿದ್ದೇವೆ ಎಂಬ ಉತ್ಸಾಹ ಉಕ್ಕುತ್ತಿರುತ್ತದೆ. ಈಚಿನ ವರ್ಷಗಳಲ್ಲಿ ಈ ಬಗೆಯ ಡೆರಿಡಾ ಗುಂಗಿನಲ್ಲಿದ್ದಾಗ, ಸಿದ್ಧಲಿಂಗಯ್ಯನವರ ‘ದಲಿತರು ಬರುವರು’ ಪದ್ಯದ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಎಂಬ ನೇರ, ಸರಳ ಸಾಲು ಕೂಡ ಹೊಸ ಅರ್ಥ ಸೂಚಿಸತೊಡಗಿತು. ಎಂಬತ್ತರ ದಶಕದ ಕೆಲವು ಲೇಖಕರು, ವಿಮರ್ಶಕರು ‘ಇದು ಘೋಷಣೆಯ ಕಾವ್ಯ’ ಎನ್ನುತ್ತಿದ್ದಾಗ, ವಿದ್ಯಾರ್ಥಿಗಳಾದ ನಾವು ಅದನ್ನೇ ನಂಬಿಕೊಂಡು ಇದೆಲ್ಲ ಘೋಷಣೆಯ ಕಾವ್ಯ ಎಂದು ಮೂಗು ಮುರಿಯುತ್ತಿದ್ದೆವು! 1995ರಲ್ಲಿ ಮಾಯಾವತಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ, ಸಿದ್ಧಲಿಂಗಯ್ಯನವರ ಘೋಷಣೆಯಂಥ ಸಾಲು ಮಂತ್ರದಂತೆ ನಿಜವಾಯಿತಲ್ಲ ಎಂದು ರೋಮಾಂಚನವಾಯಿತು. ಸಿದ್ಧಲಿಂಗಯ್ಯನವರ ಈ ಸಾಲು ಪಶ್ಚಿಮ ಬಂಗಾಳದ ಕಲಕತ್ತಾದ ಗೋಡೆಬರಹವಾಗಿ ರಾರಾಜಿಸಿದ್ದನ್ನು ಗೆಳೆಯ ವಿಕ್ರಮ ವಿಸಾಜಿ ಹೇಳಿದಾಗಲಂತೂ ಒಂದು ಕನ್ನಡ ಪದ್ಯದ ಆಶಯ-ಘೋಷಣೆ ದೇಶದುದ್ದಕ್ಕೂ ಪಡೆದ ಪ್ರತಿಧ್ವನಿ ಕಂಡು ಕಾವ್ಯದ ಶಕ್ತಿಯ ಬಗ್ಗೆ ವಿಶ್ವಾಸ ಉಕ್ಕತೊಡಗಿತು. ಬಂಗಾಳೀಕರಣಗೊಂಡ ಸಿದ್ಧಲಿಂಗಯ್ಯನವರ ಪದ್ಯದ ಸಾಲು:
ದಲಿತೇರ್ ಆಸ್ಚಿನ್ ರಾಸ್ತಾ ದಾವ್
ದಲಿತೇರ್ ಹಾಥೇ ರಾಜ್ಯಾ ದಾವ್
ಇದಾದ ಎಷ್ಟೋ ವರ್ಷಗಳ ನಂತರ ‘ದಲಿತರು ಬರುವರು ದಾರಿ ಬಿಡಿ’ ಸಾಲನ್ನು ಎಂ.ಎ. ವಿದ್ಯಾರ್ಥಿನಿಯರು-ವಿದ್ಯಾರ್ಥಿಗಳ ಜೊತೆ ಚರ್ಚಿಸುತ್ತಿರುವಾಗ, ಇದು ಹಿಂದೊಮ್ಮೆ ಇಂಡಿಯಾದ ಬರ್ಬರ ಸಾಂಪ್ರದಾಯಿಕತೆಯ ಕಾಲದಲ್ಲಿ ದಲಿತರು ಅನುಭವಿಸಿದ ಭೀಕರ ಅಸ್ಪೃಶ್ಯ ಸ್ಥಿತಿಯನ್ನು ನೆನಪಿಸುತ್ತಲೇ ಅದನ್ನು ಪಲ್ಲಟಗೊಳಿಸುವ ಗಾಢ ರೂಪಕ ಎನ್ನಿಸತೊಡಗಿತು. ದಲಿತರು ಬರುತ್ತಿದ್ದಾರೆ ಎನ್ನುವುದು ಸವರ್ಣೀಯರಿಗೆ ತಿಳಿಯುವಂತೆ ದಲಿತರು ಕೂಗಿಕೊಂಡು ಬರಬೇಕು; ಅವರ ನೆರಳು ಕೂಡ ಬೀಳದಂತೆ ಸವರ್ಣೀಯರು ದೂರ ಸರಿಯಬೇಕು ಎಂಬ ಹಿಂದೂ ಸಮಾಜದ ಒತ್ತಾಯವನ್ನು ಸಿದ್ಧಲಿಂಗಯ್ಯನವರ ಸಾಲು ಅಣಕಿಸಿ ಪಲ್ಲಟಗೊಳಿಸುತ್ತಿತ್ತು; ಅಂಬೇಡ್ಕರ್ ಯುಗದಲ್ಲಿ ವಿಮೋಚನೆಗೊಂಡ ದಲಿತರು ಅಧಿಕಾರ ಹಿಡಿಯಲು ಸಜ್ಜಾಗಿ ಬರುತ್ತಿದ್ದಾರೆ; ಅವರಿಗೆ ದಾರಿ ತೆರವುಗೊಳಿಸಿ ಎಂದು ಈ ಸಾಲು ಗುಡುಗುತ್ತಿರುವಂತೆ ತೋರಿತು.
ಈ ಅರ್ಥ ಹೊಳೆದ ಕೆಲವು ವರ್ಷಗಳ ನಂತರ, ಬಿಬಿಎಂಪಿ ಹಾಗೂ ಪೌರ ಕಾರ್ಮಿಕ ಇಲಾಖೆಯ ವ್ಯಾನುಗಳಲ್ಲಿ ಮನೆ ಮನೆಯ ಕಸವನ್ನು ಕೊಡಲು ಕೋರಿ ಮೈಕ್ ಹಾಕಿಕೊಂಡು ಬರುವವರು ಬಹುತೇಕ ದಲಿತರೇ ಎಂದ ದಸಂಸ ನಾಯಕ ಮಾವಳ್ಳಿ ಶಂಕರ್ ಸಿಟ್ಟಿನಿಂದ ಹೇಳಿದ ಮಾತು: ‘ಹಿಂದಿನ ಕಾಲದಲ್ಲಿ ದಲಿತರು ದಾರಿಯಲ್ಲಿ ಗಂಟೆ ಬಾರಿಸಿಕೊಂಡು ಬರುತ್ತಾ ಸವರ್ಣೀಯರಿಗೆ ಸೂಚನೆ ಕೊಡುತ್ತಿದ್ದ ಕೆಟ್ಟ ಪದ್ಧತಿ ಈಗ ಮತ್ತೆ ಬಂದಿದೆ.’ ಹೀಗೆ ಹೋರಾಟಗಾರರೊಬ್ಬರ ಕಣ್ಣಿಂದ ನೋಡಿದಾಗ, ಸಿದ್ಧಲಿಂಗಯ್ಯನವರ ಸಾಲು ಮತ್ತೊಂದು ಅರ್ಥ ಪಡೆಯತೊಡಗಿತು. ಡೆರಿಡಾ ಹೇಳಿದ ಅರ್ಥದ ನಿರಂತರ ಮುಂದೂಡಿಕೆ ನಡೆಯುತ್ತಲೇ ಇತ್ತು!
ಎರಡು ತಿಂಗಳ ಕೆಳಗೆ ಸಂಗೀತಗಾರ ಗೆಳೆಯ ಎಸ್. ಆರ್. ರಾಮಕೃಷ್ಣ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಸಾಲುಗಳಿಗೆ ಸೈನ್ಯದ ನಡಿಗೆಯ ತೀವ್ರ ಲಯದ ಟ್ಯೂನ್ ಮಾಡಿ ತೋರಿಸಿದರು; ಅವರ ಟ್ಯೂನಿನಲ್ಲಿ ಈ ಸಾಲು ಎಚ್ಚೆತ್ತ ದಲಿತ ಸೇನೆಯ ಬಿರುಸು ನಡಿಗೆಯನ್ನು ಬಿಂಬಿಸತೊಡಗಿತು. ಇದೆಲ್ಲದರ ನಡುವೆ, ನಲವತ್ತು ವರ್ಷಗಳ ಕೆಳಗೆ ಸಿದ್ಧಲಿಂಗಯ್ಯನವರ ಸಾಲನ್ನು ವಾಚ್ಯವಾಗಿ ಉಲ್ಲೇಖಿಸಿದ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಸೃಷ್ಟಿಸಿದ ತಮಾಷೆಯ ಪ್ರಸಂಗವೂ ಒಂದಿದೆ: ‘ದಲಿತರು ಬರುವರು’ ಪದ್ಯ ಪ್ರಖ್ಯಾತವಾಗಿದ್ದ ಆ ಕಾಲದಲ್ಲಿ ಸಿದ್ಧಲಿಂಗಯ್ಯನವರು ಮಿತ್ರಕೂಟವೊಂದಕ್ಕೆ ಹೋದರು; ತಕ್ಷಣ ಶ್ರೀಕೃಷ್ಣ ಆಲನಹಳ್ಳಿ ‘ದಲಿತರ ಕೈಗೆ ರಾಜ್ಯ ಕೊಡಿ’ ಎಂದು ಗಹಗಹಿಸಿ ನಗುತ್ತಾ, ಮೇಲೆದ್ದು ಸಿದ್ದಲಿಂಗಯ್ಯನವರಿಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟರು. ಇದು ಮಿತ್ರಕೂಟವನ್ನು ನಗಿಸಿದ ರೀತಿಯನ್ನು ಒಮ್ಮೆ ಹೇಳಿಕೊಂಡು ಲಂಕೇಶ್ ಮನಸಾರೆ ನಕ್ಕಿದ್ದರು.
ಹೀಗೆ ಕೊಂಚ ಸರಳವಾಗಿ ಡೆರಿಡಾನ ‘ಅರ್ಥದ ನಿರಂತರ ಮುಂದೂಡಿಕೆ’ಯ ಐಡಿಯಾವನ್ನು ವಿವರಿಸುತ್ತಿರುವಾಗ ಈ ಮಾತಿಗಿರುವ ಗಂಭೀರವಾದ ಸಂಕೀರ್ಣಾರ್ಥಗಳೂ ಗೋಚರವಾಗತೊಡಗುತ್ತವೆ. ಮೂಲತಃ ಸಾಹಿತ್ಯ ಕೃತಿಗಳಾದ, ‘ಧಾರ್ಮಿಕ’ ಎನ್ನಲಾದ ಗ್ರಂಥಗಳಿಗೆ ನಿರ್ದಿಷ್ಟವಾದ ಸರ್ವಾಧಿಕಾರಿ ಅರ್ಥಗಳನ್ನು ಕೊಡುವ, ಅದರಲ್ಲೂ ತಮ್ಮ ಹಿತಾಸಕ್ತಿ ಕಾಪಾಡುವ ಅರ್ಥಗಳನ್ನು ಕೊಡುವ ಧಾರ್ಮಿಕ ಪಟ್ಟಭದ್ರರ ಸಂಕುಚಿತ ಅರ್ಥಗಳನ್ನು ವಿಚಾರವಂತ ಓದುಗ, ಓದುಗಿಯರು ಮುರಿಯುವ ಸಾಧ್ಯತೆಯನ್ನೂ ಡೆರಿಡಾ ಮಾರ್ಗ ತೆರೆಯುತ್ತದೆ.
ಈ ಟಿಪ್ಪಣಿಯ ಕೊನೆಗೆ ಸಿ.ಜಿ.ಕೃಷ್ಣಸ್ವಾಮಿಯವರು ನಿರ್ದೇಶಿಸಿದ ಮಂಜುನಾಥ ಬೆಳಕೆರೆಯವರ ‘ಶರೀಫ’ ನಾಟಕದ ದೃಶ್ಯವೊಂದು ಫಟಾರನೆ ಚಿಮ್ಮಿಸಿದ ಅರ್ಥ ನೆನಪಾಗುತ್ತದೆ. ಶಿಶುವಿನಹಾಳ ಶರೀಫರ ಬದುಕು, ತತ್ವ, ಪದಗಳನ್ನೆಲ್ಲ ಒಳಗೊಂಡಿದ್ದ ‘ಶರೀಫ’ ನಾಟಕದ ಒಂದು ದೃಶ್ಯದಲ್ಲಿ ಶರೀಫರು ‘ಏನ್ ಕೊಡನೇನ್ ಕೊಡವಾ’ ಪದವನ್ನು ಹಾಡತೊಡಗುತ್ತಾರೆ. ಆಗ ಇದ್ದಕ್ಕಿದ್ದಂತೆ ತರುಣಿಯೊಬ್ಬಳು ಸೊಂಟದಲ್ಲಿ ಕೊಡ ಇರುಕಿಕೊಂಡು ಛಂಗನೆ ರಂಗದ ಮೇಲೆ ಜಿಗಿದು ಕುಣಿಯುತ್ತಾ, ಹಾಡಿನ ಲಯಕ್ಕೆ ತಕ್ಕಂತೆ ನರ್ತಿಸತೊಡಗುತ್ತಾಳೆ. ಶರೀಫರ ಪದವನ್ನು ಕೇಳಿಸಿಕೊಳ್ಳುತ್ತಾ ಈ ನರ್ತನ ನೋಡುತ್ತಿದ್ದ ನನಗೆ ಸಡನ್ನಾಗಿ ಹೊಸ ಅರ್ಥವೊಂದು ಹೊಳೆದು ನಗು ಉಕ್ಕಿತು! ಕಿಲಾಡಿ ಶರೀಫ ಅಂದುಕೊಂಡೆ! ಈವರೆಗೆ ನಮ್ಮ ವ್ಯಾಖ್ಯಾನಕಾರರು ಆಧ್ಯಾತ್ಮದ ನೆಲೆಯಲ್ಲಿ ವ್ಯಾಖ್ಯಾನಿಸುತ್ತಿದ್ದ ‘ಏನ್ ಕೊಡನೇನ್ ಕೊಡವ’ ಪದಕ್ಕೆ ಅಪಾರ ಜೀವಂತಿಕೆಯ ರಸಿಕ ಅರ್ಥ ಬಂದಿತ್ತು! ಅಂದರೆ, ಶರೀಫ ಕೊಡದ ರೂಪಕದ ಮರೆಯಲ್ಲಿ ಹುಬ್ಬಳ್ಳಿಯ ಹುಡುಗಿಯನ್ನೇ ವರ್ಣಿಸುತ್ತಿರಬಹುದು! ಯಾಕಿರಬಾರದು? ಇಂಗ್ಲಿಷ್ ಕವಿಗಳಾದ ಜಾನ್ ಡನ್, ಆ್ಯಂಡ್ರೂ ಮಾರ್ವೆಲ್ ಥರದವರು ಬರೆದ ಮೆಟಫಿಸಿಕಲ್ ಕಾವ್ಯದಲ್ಲಿ ಎಂಥೆಂಥ ರಸಿಕ ವರ್ಣಗಳಿವೆಯಲ್ಲವೆ! ಶಭಾಸ್ ಸಿ.ಜಿ.ಕೆ.! ಶಭಾಸ್ ಶರೀಫ!
ನಾವು ‘ಇದೇ ಇದರ ಅರ್ಥ’ ಎಂದುಕೊಳ್ಳುವ ಅರ್ಥಗಳು ನಿತ್ಯ ಚಿಂದಿಯಾಗುವುದು ಹೀಗೆ. ಕೃತಿಯ ಅರ್ಥ ನಿರಂತರವಾಗಿ ಮುಂದೂಡುತ್ತಾ ಹೋಗಿ ಹೊಸ ಹೊಸ ಅರ್ಥಗಳು ಮೂಡುವುದು ಹೀಗೆ. ಹೀಗೆ ಅರ್ಥವನ್ನು ಮುಂದೂಡುವುದನ್ನು ಸದಾ ಆನಂದಿಸುತ್ತಿದ್ದ ಕಿ.ರಂ. ನಾಗರಾಜ್ ಒಂದು ಸಂಜೆ ಇದ್ದಕ್ಕಿದ್ದಂತೆ ಬೇಂದ್ರೆಯವರ ‘ಭಾವಗೀತ’ ಪದ್ಯದ ‘ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತ’ ಎಂಬ ಸಾಲನ್ನು ಒಗೆದರು; ‘ಅರ್ಥ ಅಂದ್ರೆ ದುಡ್ಡು ಅಂತಾನೂ ಅರ್ಥ! ‘ಅರ್ಥ’ವಿಲ್ಲ ಅಂದರೆ, ಭಾವಗೀತೆ ಬರೆಯೋನಿಗೆ ದುಡ್ಡಿಲ್ಲ ಅಂತ ಅರ್ಥ ಸಾರ್!’ ಎಂದು ಕಣ್ಣು ಮಿಟುಕಿಸುತ್ತಾ ನಕ್ಕರು. ತಕ್ಷಣ ಅವರ ಓದಿನ ಜಾಡನ್ನೇ ಮುಂದುವರಿಸಿ, ‘ಸ್ವಾರ್ಥವಿಲ್ಲ ಅಂದರೆ ಭಾವಗೀತೆಯಲ್ಲಿ ಕವಿಯ ‘ಸ್ವ- ಅರ್ಥವಿಲ್ಲ’ ಎಂದು ಕೂಡ ಅರ್ಥ ಬರುತ್ತೆ’ ಎಂದೆ; ಕೀರಂ ‘ಯೆಸ್!’ ಎಂದು ಉಲ್ಲಾಸದಿಂದ ನಕ್ಕರು.
ಡೆರಿಡಾರನ್ನು ಓದುವ ಮೊದಲೇ ಅರ್ಥದ ನಿರಂತರ ಮುಂದೂಡಿಕೆಯಲ್ಲಿ ‘ಪಂಟರ್’ ಆಗಿದ್ದ ಕೀರಂ ತಮ್ಮ ಓದಿನ ಮಾರ್ಗ ನನ್ನಂಥವರಲ್ಲೋ, ಆಶಾದೇವಿಯವರಲ್ಲೋ ಮುಂದುವರಿಯುವ ಕ್ರಮ ಕಂಡು ಕೃತಾರ್ಥ ಭಾವ ಹೊತ್ತು, ಚಣ ಸಂಕೋಚದಿಂದ ನಸು ಬಾಗಿ ನಿಂತರು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
ಎಂ.ಡಿ. ನಂಜುಂಡಸ್ವಾಮಿ ಹದಿಹರೆಯದಲ್ಲಿದ್ದಾಗ ಅವರ ಅಕ್ಕ ಲೀಲಾ ಪತಿಯನ್ನು ಕಳೆದುಕೊಂಡರು. ಮನೆಯವರು ಲೀಲಾ ಮೇಲೆ ವೈಧವ್ಯವನ್ನು ಹೇರಲು ಹೊರಟಾಗ ನಂಜುಂಡಸ್ವಾಮಿ ಬಂಡಾಯವೆದ್ದು, ‘ನಮ್ಮಕ್ಕನ್ನ ಮುಟ್ಟೀರಿ ಜೋಕೆ’ ಎಂದು ಕೆರಳಿ ನಿಂತರು.
ಬಾಲ್ಯದಲ್ಲೇ ವೈಚಾರಿಕ ನೋಟ ಬೆಳೆಸಿಕೊಂಡಿದ್ದ ನಂಜುಂಡಸ್ವಾಮಿಗೆ ವಿಜ್ಞಾನ ಪ್ರಿಯವಾದ ವಿಷಯವಾಗಿತ್ತು. ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳನ್ನು ಚೆನ್ನಾಗಿ ಕಲಿತ ಅವರು ಬಿ.ಎಸ್ಸಿ., ಓದಿ, ನಂತರ ಲಾ ಓದಿದರು, ಜರ್ಮನಿಯಲ್ಲಿ ಪಿಎಚ್.ಡಿ. ಮಾಡಲು ಹೋಗಿ ಅರ್ಧದಲ್ಲೇ ಬಿಟ್ಟು ಬಂದರು. ಬೆಂಗಳೂರಿನ ಬಿ.ಎಂ.ಎಸ್. ಈವನಿಂಗ್ ಲಾ ಕಾಲೇಜಿನಲ್ಲಿ ಕಾನೂನು ಬೋಧಿಸುವ ಮೇಷ್ಟ್ರರಾದರು. ಅವರು ‘ಕಾನ್ ಸ್ಟಿಟ್ಯೂಶನ್ ಲಾ’ ಬೋಧಿಸಿದ ರೀತಿ ರವಿವರ್ಮಕುಮಾರ್ ಥರದ ವಿಚಾರವಂತ ತರುಣ ಲಾಯರುಗಳ ಪಡೆಯನ್ನೇ ಸೃಷ್ಟಿಸಿತು. ಒಮ್ಮೊಮ್ಮೆ ಎಂ.ಡಿ.ಎನ್. ರಾತ್ರಿ ಪಾಠ ಮುಗಿಸಿದ ನಂತರ ಅಲ್ಲೇ ಹತ್ತಿರವಿದ್ದ ಕಿ.ರಂ. ನಾಗರಾಜರ ಮನೆಯಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ಚರ್ಚೆಯೂ ನಡೆಯುತ್ತಿತ್ತು. ಆಗಿನ್ನೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರಾಗಿ ಸೇರಿದ್ದ ಕೀರಂ ಮಾತಿನ ನಡುವೆ ಅವರನ್ನು ಕೇಳಿದರು: ‘ಸಾರ್, ಸಾಹಿತ್ಯ ಪಾಠ ಮಾಡುವಾಗ ರಾಜಕೀಯ, ಸಮಾಜವಾದ ಇವೆಲ್ಲವನ್ನೂ ಬೆರೆಸಿ ಹೇಳುವುದು ಹೇಗೆ?’
‘ಅವೆಲ್ಲವನ್ನೂ ನೇರವಾಗಿ ಹೇಳಬಾರದು’ ಎಂದ ಎಂ.ಡಿ.ಎನ್., ಪಠ್ಯದ ಸಂದರ್ಭಕ್ಕೆ ತಕ್ಕಂತೆ ಸಮಾಜವಾದವನ್ನು ಬೆರೆಸಿ ಪಾಠ ಮಾಡುವ ಕಲೆಯನ್ನು ಕೀರಂಗೆ ಹೇಳಿಕೊಟ್ಟರು. ಅಗ್ರಹಾರ ಕೃಷ್ಣಮೂರ್ತಿ, ಕರಿಗೌಡ ಬೀಚನಹಳ್ಳಿ ಮುಂತಾದ ಜಾಣ ತರುಣರು ಕೂತಿರುತ್ತಿದ್ದ ಎಂ.ಎ. ತರಗತಿಗಳಲ್ಲಿ ಕುಮಾರವ್ಯಾಸನ ಕೃಷ್ಣನನ್ನು ವ್ಯಾಖ್ಯಾನಿಸಲು ಕೀರಂ ಲೋಹಿಯಾರ ‘ರಾಮ, ಕೃಷ್ಣ ಶಿವ’ ಲೇಖನವನ್ನು ಓದಿಕೊಂಡು ಹೋದರು; ಲೋಹಿಯಾ ಚಿಂತನೆಯನ್ನು ಬಿತ್ತಿದರು. ಕನ್ನಡ ಅಧ್ಯಯನ ಕೇಂದ್ರದ ತರುಣರು ಸಮಾಜವಾದದತ್ತ ತಿರುಗಿ, ಉದಾರವಾದಿ ಜಾತ್ಯತೀತ ಲೇಖಕರಾದ ಹಿನ್ನೆಲೆಯಲ್ಲಿ ಇವೆಲ್ಲವೂ ಇವೆ.
ಆ ಸರಿಸುಮಾರಿನಲ್ಲಿ ಬೆಂಗಳೂರಿನ ಕೃಷಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಶ್ರೀಧರ ಕಲಿವೀರ, ಕೆ. ಪುಟ್ಟಸ್ವಾಮಿ ಎಂ.ಡಿ.ಎನ್. ಅವರನ್ನು ಕಾಲೇಜಿನ ಸಮಾರಂಭಕ್ಕೆ ಕರೆದರು. ಅಲ್ಲಿ ಎಂ.ಡಿ.ಎನ್ ಮಾತಿನ ಪ್ರಭಾವದಿಂದ ಕೂಡ ವಿಚಾರವಂತ ಹುಡುಗರು ಸೃಷ್ಟಿಯಾದರು. ಈ ನಡುವೆ ಲಕ್ಮೀಪತಿಬಾಬು, ರಾ.ನ. ವೆಂಕಟಸ್ವಾಮಿ ಥರದ ಮೆಡಿಕಲ್ ವಿದ್ಯಾರ್ಥಿಗಳು ಎಂ.ಡಿ.ಎನ್. ಸೂಚಿಸುವ ವೈಚಾರಿಕ ಸಭೆಗಳನ್ನು ಏರ್ಪಡಿಸುತ್ತಿದ್ದರು. ಇಂಥ ಐದಾರು ತರುಣರು ವೈಚಾರಿಕ ಪ್ರತಿಭಟನೆಗಳನ್ನು ಮಾಡಿ ರಾಜ್ಯದಾದ್ಯಂತ ಸುದ್ದಿಯಾಗುತ್ತಿದ್ದರು.
ಒಂದು ದಿನ ಎಂಡಿಎನ್ ಸೂಚನೆಯಂತೆ ಅಗ್ರಹಾರ ಕೃಷ್ಣಮೂರ್ತಿ, ಕವಿ ಸಿದ್ಧಲಿಂಗಯ್ಯ, ಕರಿಗೌಡ ಬೀಚನಹಳ್ಳಿ, ಕಲ್ಲೂರು ಮೇಘರಾಜ್, ಗಂಗಣ್ಣ, ಉಮಾಕಾಂತ ಗುಬ್ಬಿಗ, ಲಕ್ಮೀಪತಿಬಾಬು ಬೆಂಗಳೂರಿನ ವಿಧಾನಸಭೆಯ ಗ್ಯಾಲರಿಗೆ ಹೋದರು; ರಾಜ್ಯದ ಶಾಸಕರು ಬರಗಾಲ ಪರಿಸ್ಥಿಯನ್ನು ನಿರ್ಲಕ್ಷಿಸುತ್ತಿರುವುದನ್ನು ಟೀಕಿಸಿ ಎಂ.ಡಿ.ಎನ್ ಬರೆದು ಕೊಟ್ಟ ಕರಪತ್ರಗಳನ್ನು ತೂರಿ ಅರೆಸ್ಟಾದರು. ರಾಜ್ಯದ ದಿನಪತ್ರಿಕೆಗಳು ಇಂಥ ಬಂಡಾಯಗಳನ್ನು ನಾಡಿನ ಎಲ್ಲೆಡೆ ತಲುಪಿಸಿ ಕರ್ನಾಟಕದುದ್ದಕ್ಕೂ ವೈಚಾರಿಕತೆ ಹಾಗೂ ರಾಜಕೀಯ ಎಚ್ಚರ ಮೂಡಿಸುತ್ತಿದ್ದವು.
ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ವಲಯಗಳಲ್ಲಿ ವಿಚಾರವಂತ ತರುಣರನ್ನು ತಯಾರು ಮಾಡುತ್ತಿದ್ದ ಎಂ.ಡಿ.ಎನ್. ಎಂಬತ್ತರ ದಶಕದಲ್ಲಿ ದೊಡ್ಡ ಮಟ್ಟದ ರೈತ ಸಂಘಟನೆಗೆ ಇಳಿದರು. ‘ಕರ್ನಾಟಕ ರಾಜ್ಯ ರೈತ ಸಂಘ’ ಸ್ಥಾಪಿಸಿ ಎನ್. ಡಿ. ಸುಂದರೇಶ್, ಎಚ್.ಎಸ್. ರುದ್ರಪ್ಪ, ಕಡಿದಾಳು ಶಾಮಣ್ಣರ ಜೊತೆಗೆ ಎಂ.ಡಿ.ಎನ್. ರಾಜ್ಯಾದ್ಯಂತ ರೈತರನ್ನು ಸಂಘಟಿಸಿದರು. ಬರಬರುತ್ತಾ ಕೆ.ಟಿ. ಗಂಗಾಧರ್, ಎನ್. ಜಿ. ರಾಮಚಂದ್ರ, ಶ್ರೀನಿವಾಸಕುಮಾರ್, ನಟರಾಜಪ್ಪ, ಜನಾರ್ಧನ್ ಗುಂಗರಮಳೆ, ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ಬಸವರಾಜಪ್ಪ, ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದ ನೂರಾರು ನಾಯಕರು ಸೃಷ್ಟಿಯಾದರು. ಇವರಲ್ಲನೇಕರು ತಂತಮ್ಮ ವಲಯಗಳಲ್ಲಿ ಇವತ್ತಿಗೂ ರೈತ ಚಳುವಳಿಯನ್ನು ಜೀವಂತವಾಗಿಟ್ಟಿರುವ ರೀತಿ, ಎಲ್ಲ ಚಳುವಳಿಗಳಂತೆ ರೈತ ಚಳುವಳಿಯೂ ಒಡೆದ ರೀತಿ… ಇವೆಲ್ಲವೂ ನಿಮಗೆ ಗೊತ್ತಿದೆ.
ಧೀಮಂತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿಯವರ ಹೋರಾಟ-ಮಾತು-ಬರಹಗಳು ನನ್ನಂಥ ಸಾವಿರಾರು ಲೇಖಕರನ್ನು ರೂಪಿಸಿವೆ. ನಾನು ಬಿ.ಎ. ವಿದ್ಯಾರ್ಥಿಯಾಗಿದ್ದಾಗ ತಿಪಟೂರಿನಲ್ಲಿ ನಟರಾಜ ಹೊನ್ನವಳ್ಳಿಯ ಜೊತೆ ಮೊದಲು ನೋಡಿದ ಎಂ.ಡಿ.ಎನ್. ನನ್ನ ಪ್ರಜ್ಞೆಯಲ್ಲಿ ಬೆಳೆಯುತ್ತಲೇ ಇದ್ದಾರೆ. ರೈತ ಚಳುವಳಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ನಾನು, ಎಂ.ಡಿ.ಎನ್. ತೀರಿಕೊಂಡಾಗ ಅವರನ್ನು ಕುರಿತು ಹಲವರು ಬರೆದ ‘ಹಸಿರು ಸೇನಾನಿ’ ಪುಸ್ತಕ ಮಾಡಿದೆ; ಲಕ್ಮೀಪತಿಬಾಬು ಪ್ರಕಟಿಸಿದರು. ನಟರಾಜ ಹೊನ್ನವಳ್ಳಿ ಎಂ.ಡಿ.ಎನ್ ಸ್ಪಿರಿಟ್ಟಿನಲ್ಲಿ ರಂಗಭೂಮಿ ಮಾಡಿದ. ಮುಂದೆ ಗೆಳೆಯ ರವಿಬಾಗಿ ನನ್ನ ಜೊತೆಗೂಡಿ ಮಾಡಿದ ಎಂ.ಡಿ.ಎನ್ ಮಾತು-ಬರಹಗಳ ಸಂಗ್ರಹ ‘ಬಾರುಕೋಲು’ ಪ್ರಕಟಿಸಿದ ಪಲ್ಲವ ವೆಂಕಟೇಶ್ ‘ಹಸಿರು ಸೇನಾನಿ’ಯನ್ನೂ ಎಲ್ಲೆಡೆ ತಲುಪಿಸಿದರು. ಈ ವಿವರಗಳು ಈ ವೆಬ್ ಸೈಟಿನಲ್ಲಿವೆ. READ HERE (https://natarajhuliyar.com/books/)
ಹಲವು ದಶಕಗಳಿಂದ ನನ್ನನ್ನು ಆವರಿಸಿಕೊಳ್ಳುತ್ತಲೇ ಇದ್ದ ಎಂ.ಡಿ.ಎನ್. ನನ್ನೊಳಗೆ ಬೆಳೆದು ನನ್ನ ನಾಟಕದಲ್ಲೂ ಮೂಡತೊಡಗಿದರು. ಕನ್ನಡ ರಂಗಭೂಮಿಯಿಂದ ಮೂಡಿದ ಎರಡು ಅಪ್ಪಟ ಪ್ರತಿಭೆಗಳಾದ ಕಬಡ್ಡಿ ನರೇಂದ್ರಬಾಬು ಹಾಗೂ ಸಂಪತ್ ಮೈತ್ರೇಯ ಈ ನಾಟಕಕ್ಕೆ ಸ್ಪಂದಿಸಿದ ಜೀವಂತ ರೀತಿ ನಾಟಕದ ಎಲ್ಲೆಗಳನ್ನು ವಿಸ್ತರಿಸತೊಡಗಿತು. ನರೇಂದ್ರಬಾಬು ‘ಕಬಡ್ಡಿ’ ಹಾಗೂ ಶಿವರಾಜ್ ಕುಮಾರ್ ಅವರ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾ ಮಾಡಿ ಖ್ಯಾತರಾದವರು. ಮೊನ್ನೆ ತಾನೇ ವಿಜಯ್ ತೆಂಡೂಲ್ಕರ್ ಅವರ ‘ಪಾಯಿಜೇ ಜಾತಿ ಛೇ’ ನಾಟಕ ಆಧರಿಸಿ ಒಳ್ಳೆಯ ಮರಾಠಿ ಸಿನಿಮಾ ಮಾಡಿದವರು. ರೈತ, ದಲಿತ ಚಳುವಳಿಗಳನ್ನು ಹತ್ತಿರದಿಂದ ಕಂಡವರು.
‘ಕವಲು ದಾರಿ’, ‘ಕೆ.ಜಿ.ಎಫ್.’ ‘ಬಿಸಿಲುಗುದುರೆ’ ಸಿನಿಮಾಗಳಲ್ಲಿ ವಿಶಿಷ್ಟವಾಗಿ ನಟಿಸಿರುವ ಸಂಪತ್ ‘ಡೈರೆಕ್ಟ್ ಆ್ಯಕ್ಷನ್’ ನಾಟಕದಲ್ಲಿ ಆಳವಾಗಿ ತೊಡಗಿ, ಚಿಂತನೆ-ಲುಕ್ ಎರಡರಲ್ಲೂ ಎಂ.ಡಿ.ಎನ್ ಆಗತೊಡಗಿದರು! ಈ ಇಬ್ಬರ ಜೊತೆಗೆ 'ನಗ್ನ ಥಿಯೇಟರ್' ತಂಡದ ವಿಷ್ಣುಕುಮಾರ್ ಜೊತೆ ಹೊಸ ಉತ್ಸಾಹಿ ಹುಡುಗ, ಹುಡುಗಿಯರು ಜೊತೆಯಾದರು. ಎಂಡಿಎನ್ ಅವರ ಕೊನೆಯ ಘಟ್ಟದಲ್ಲಿ ಜೊತೆಗಿದ್ದ ಐಡಿಯಲ್ ಹೋಮ್ಸ್ ರಾಜಕುಮಾರ್ ತುಂಬು ಔದಾರ್ಯದಿಂದ ನೂರು ದಿನ ರಿಹರ್ಸಲ್ ಮಾಡಲು ಸ್ಥಳ ಒದಗಿಸಿಕೊಟ್ಟರು. ಪಚ್ಚೆ ನಂಜುಂಡಸ್ವಾಮಿ, ರವಿಕುಮಾರ್ ಬಾಗಿ, ಸುಬ್ರಹ್ಮಣ್ಯಸ್ವಾಮಿ, ಆತ್ಮಾನಂದ ಹಲ ಬಗೆಯಲ್ಲಿ ನೆರವಾಗತೊಡಗಿದರು. ಇವರೆಲ್ಲರ ಅಪಾರ ಪರಿಶ್ರಮದಿಂದ ‘ಡೈರೆಕ್ಟ್ ಆ್ಯಕ್ಷನ್ ‘ಇದೀಗ ನಿಮ್ಮೆದುರು ಪ್ರದರ್ಶನಗೊಳ್ಳಲು ಸಿದ್ಧ. ಪ್ರದರ್ಶನದ ಕಾಲಾವಧಿ ಒಂದೂವರೆ ಗಂಟೆ.
ನಾಟಕ: ಡೈರೆಕ್ಟ್ ಆ್ಯಕ್ಷನ್: ಎಂ.ಡಿ ನಂಜುಂಡಸ್ವಾಮಿ ಹೋರಾಟ ಗಾಥೆ
ಪ್ರದರ್ಶನ: 18, 19 ಡಿಸೆಂಬರ್ 2023. ಸಮಯ: ಸಂಜೆ 7 ಗಂಟೆಗೆ
ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಪ್ಯಾಲೇಸ್ ರೋಡ್, ಏಟ್ರಿಯಾ ಹೋಟೆಲ್ ಎದುರು ಬೆಂಗಳೂರು 560001
ದಯಮಾಡಿ ಕೆಳಗೆ ಕೊಟ್ಟಿರುವ ಪೋಸ್ಟರ್ ಗಮನಿಸಿ. ಎರಡು ದಿನವೂ ಗೆಳೆಯ, ಗೆಳತಿಯರು, ಬಂಧುಗಳೊಂದಿಗೆ ಬನ್ನಿ. ಎಂ.ಡಿ.ಎನ್ ಲೋಕದಲ್ಲಿ ಭಾಗಿಯಾಗಿ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಮೊದಲಿಗೆ, ನನ್ನ ಹಿಂದಿನ ಕಥಾ ಸಂಕಲನಕ್ಕೆ ಬರೆದ ಮುನ್ನುಡಿಯ ಭಾಗಗಳು:
ನೀಷೆಯಂಥ ದೊಡ್ಡ ತತ್ವಜ್ಞಾನಿಯನ್ನು ಓದುತ್ತಾ ಓದುತ್ತಾ ಅವನು ಎಷ್ಟೋ ಸಲ ಒಂದೇ ಸಾಲಿನಲ್ಲಿ ಅಥವಾ ಒಂದು ಪುಟ್ಟ ಟಿಪ್ಪಣಿಯಲ್ಲಿ ತಲುಪುವ ಸೂಕ್ಷ್ಮ ಸತ್ಯಗಳನ್ನು ಕಂಡು ಅಚ್ಚರಿಯಾಗುತ್ತದೆ; ಅವನ ಬಗ್ಗೆ ಕೃತಜ್ಞತೆ ಮೂಡುತ್ತದೆ. ಈ ಥರದ ತೀಕ್ಷ್ಣ ಸತ್ಯ ತಲುಪಲು ಕತೆ ಬರೆಯುವ ವ್ಯಕ್ತಿ ಎಷ್ಟೊಂದು ಸರ್ಕಸ್ ಮಾಡಬೇಕಾಗುತ್ತದಲ್ಲ ಎನಿಸತೊಡಗುತ್ತದೆ...
ಆದರೂ ಕತೆ ಬರೆಯವ ವ್ಯಕ್ತಿಗೆ ಎಂದೋ ಕಂಡ, ಹೊಳೆದ, ಬೆಳೆದ ಘಟನೆಗಳಿಗೆ ಅಥವಾ ಘಟನೆಗಳಂಥ ರೂಪಕಕ್ಕೆ ಬರಬರುತ್ತಾ ಹೊಸ ಮುಖಗಳು ಸೇರಿಕೊಳ್ಳತೊಡಗುತ್ತವೆ; ಕಥಾಮಾಧ್ಯಮವೇ ಕಾಣಿಸುವ ಸತ್ಯಗಳು ಕತೆ ಬರೆಯುವ ಕೆಲಸದ ಬಗ್ಗೆ ಹೊಸ ಉಮೇದು ಹುಟ್ಟಿಸತೊಡಗುತ್ತವೆ. ಆ ಉಮೇದು ಯಾವುದೋ ಗಳಿಗೆಯಲ್ಲಿ ಹಾಗೇ ನಿಂತುಹೋಗುತ್ತದೆ; ಮುಂದೆಂದೋ, ಯಾವ ವರ್ಷವೋ ಆ ಕತೆಗೆ ಇನ್ನೇನೋ ಕೂಡಿಕೊಂಡಂತಾಗಿ ಬರೆಯುವ ಒತ್ತಾಯ ಶುರುವಾಗುತ್ತದೆ. ಇದು ಒಂದು ಕತೆಯನ್ನು ವರ್ಷಗಟ್ಟಲೆ ಬರೆಯವ ನನ್ನ ಅನುಭವ.
ಇದೆಲ್ಲದರ ನಡುವೆ ಒಂದು ದೃಶ್ಯ:
ಬೆಂಗಳೂರಿನ ಜೆ.ಪಿ.ನಗರದ ವೈನ್ ಸ್ಟೋರಿನ ಹೊರಗಿನ ಮಂದ ಬೆಳಕಿನಲ್ಲಿ ಗೋಡೆಗೊರಗಿ ಬಿಳಿಯ ಹತ್ತಿ ಸೀರೆ ಉಟ್ಟ ಆ ಕಪ್ಪನೆಯ ತಮಿಳು ಹೆಂಗಸು ಅದೇ ಆಗ ಒಂದೇ ಗುಟುಕಿಗೆ ಮದ್ಯವನ್ನು ಗಂಟಲಿಗಿಳಿಸಿ ಹುಡುಗನೊಬ್ಬನಿಗೆ ಏನನ್ನೋ ತಿನ್ನಲು ಕೊಡುತ್ತಾ, ಅವನ ಬಗೆಗೆ ಪ್ರೀತಿಯನ್ನೋ, ಮತ್ತಾವುದೋ ಭಾವವನ್ನೋ ತೋರುತ್ತಿರುವ ದೃಶ್ಯ ನೆನಪಾಗುತ್ತದೆ. ಆ ಗಳಿಗೆಯಲ್ಲಿ ಆ ಹೆಣ್ಣು ಮುಖದ ಮೇಲಿದ್ದ ಭಾವ ಏನನ್ನು ಹೇಳುತ್ತಿತ್ತು ಎಂಬ ಪ್ರಶ್ನೆ ಮುತ್ತತೊಡಗುತ್ತದೆ. ಆ ಹುಡುಗನನ್ನು ಸಾಕಲಾಗದ ಅಸಹಾಯಕತೆಯೇ? ಅಗಲಿಕೆಯ ಭಾವವೇ? ಆ ಹುಡುಗನ ಮುಖದ ಭಾವವೇನು? ಅವನ ಮನಸ್ಸಿನಲ್ಲಿ ನಡೆಯುತ್ತಿರಬಹುದಾದ ವ್ಯಾಪಾರ ಏನಿರಬಹುದು...?
ಫೋಟೋದ ಫ್ರೇಮಿನಂತೆ ಆ ಚಿತ್ರ ನನ್ನ ಚಿತ್ತದಲ್ಲಿ ಹಾಗೇ ಇದೆ, ಮಾಸಲು ಮಾಸಲಾಗಿ. ಆ ಹೆಂಗಸಿನ ಜೊತೆಗೆ ಅಲ್ಲೇ ಇದ್ದ ಮತ್ತೊಬ್ಬ ಹೆಂಗಸಿನ ಮುಖವೂ ಈ ಫೋಟೋದೊಳಗೆ ಸೇರಿಕೊಳ್ಳಲೆತ್ನಿಸುತ್ತದೆ.
ಅವತ್ತು ಅಲ್ಲೇ ನಿಂತು ವಿಚಾರಿಸಿದ್ದರೆ ಆ ಮೂವರ ಆ ಕ್ಷಣದ ಮನೋಲೋಕ ನನ್ನ ಅರಿವಿಗೆ ಬರುತ್ತಿತ್ತೇ? ಅವರು ತಮಿಳರಿರಬಹುದೆಂಬ ಊಹೆಯ ಮೇಲೆ ಹೇಳುವುದಾದರೆ, ಅವರ ಭಾಷೆ ಬರದ ನನಗೆ ಅವರ ಮನಸ್ಸು ತಿಳಿಯುವುದು ಸಾಧ್ಯವಿತ್ತೇ? ಅಕಸ್ಮಾತ್ ತಮಿಳು ಬಂದಿದ್ದರೂ ಆ ಭಾವ ತಿಳಿಯುತ್ತಿತ್ತೇ? ನಾನು ಅವರನ್ನು ವಿಚಾರಿಸಿದ್ದರೂ ಅವರು ತಮ್ಮ ಮನಸ್ಸಿನಲ್ಲಿ ನಡೆಯುತ್ತಿದ್ದುದನ್ನು ವಿವರಿಸುವುದು ಸಾಧ್ಯವಿತ್ತೇ...
ಹೀಗೆ ಆ ಚಿತ್ರ ನೆನಪಾದಾಗಲೆಲ್ಲ ಆ ಸನ್ನಿವೇಶದ ಅಸಲಿ ಅರ್ಥ ಇನ್ನೆಂದೂ ಹೊಳೆಯುವುದು ಸಾಧ್ಯವಿಲ್ಲ ಎನ್ನಿಸುತ್ತದೆ. ಅಷ್ಟೇ ಯಾಕೆ, ಇವತ್ತು ಕೂಡ ಆ ಸನ್ನಿವೇಶ ಅರ್ಥವಾಗುವ ಸಾಧ್ಯತೆ ತೀರಾ ಕಮ್ಮಿಯಿತ್ತು.
ಅಂದರೆ, ಮಾನವ ಸನ್ನಿವೇಶ ಹಾಗೂ ಸ್ಥಿತಿಗಳು ನನಗೆ ಅರ್ಥವಾಗಿವೆ ಎಂದು ಬರೆಯಹೊರಡುವುದೇ ಒಂದು ಭ್ರಮೆಯೇನೋ! ಬರೆವ ಕ್ರಿಯೆಯಲ್ಲೇ ಕೆಲವು ಅರ್ಥಗಳು ಹೊಳೆಯುತ್ತವೆ ಎಂಬ ಗ್ರಹಿಕೆ ಕೂಡ ಪೂರ್ತಿ ನಿಜವಿರಲಿಕ್ಕಿಲ್ಲ. ಬರೆಯುವವರು ಕೊನೆಗೂ ಮತ್ತೊಬ್ಬನ ಅಥವಾ ಮತ್ತೊಬ್ಬಳ ಬಗೆಗಿನ ಹೊರ ವಿವರಗಳನ್ನು ಕೊಡಬಹುದೇ ಹೊರತು ಅವರೊಳಗೆ ನಿಜಕ್ಕೂ ಏನಾಗುತ್ತಿದೆ ಎಂದು ಹೇಳುವುದು ಕಷ್ಟ...
ಈ ಅರಿವಿನ ಎದುರು, ಬರವಣಿಗೆಯ ಮೂಲಕ `ಕಂಡಿರುವೆ’, `ಕಾಣುತ್ತಿರುವೆ’ ಎಂಬ ಠೇಂಕಾರ ಝರ್ರನೆ ಇಳಿದು, ಅಷ್ಟಿಷ್ಟು ಸತ್ಯ ಮಾತ್ರ ಅಕಸ್ಮಾತ್ ಹೊಳೆದಿರಬಹುದು ಹಾಗೂ ಕೆಲಬಗೆಯ ವೈರುಧ್ಯಗಳಾದರೂ ಈ ಬರವಣಿಗೆಯ ಕ್ರಿಯೆಯಲ್ಲಿ ಗೋಚರಿಸಿರಬಹುದು ಎಂಬ ಅನುಮಾನದಿಂದ ಈ ಕತೆಗಳನ್ನು ನಿಮಗೆ ದಾಟಿಸುತ್ತಿರುವೆ...
ಈ ಮಾತುಗಳನ್ನು ಬರೆದು ಹದಿನೈದು ವರ್ಷಗಳಾದ ಮೇಲೂ ಕತೆ ಬರೆಯುವ ಬಗೆಗಿನ ಅಳುಕು ಹಾಗೇ ಇದೆ. ಈಚೆಗೆ ಕತೆಗಳನ್ನು ಬರೆದ ನಂತರವೂ ಕತೆಗಳು ಬೆಳೆಯುತ್ತಲೇ ಇರುವ ವಿಸ್ಮಯಗಳೂ ಬಂದು ನನ್ನನ್ನು ಕೆಣಕುತ್ತವೆ; ಆ ಸೃಜನಶೀಲ ಕೆಣಕಿನ ಫಲವೇ ನನ್ನ ಮೂರನೆಯ ಕಥಾ ಸಂಕಲನ: 'ಕಥಾನಂತರ'.
ನಿಮಗೆ ಬಿಡುವಿದ್ದರೆ 14 ಡಿಸೆಂಬರ್ 2023 ಗುರುವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜಿನ ಎಚ್. ಎನ್. ಸಭಾಂಗಣದಲ್ಲಿ ನಡೆಯುವ ‘ಕಥಾನಂತರ’ ಕಥಾ ಸಂಕಲನದ ಬಿಡುಗಡೆಯಲ್ಲಿ ನಮ್ಮೊಡನೆ ಇರಬೇಕೆಂದು ಕೋರುವೆ. ಕಾರ್ಯಕ್ರಮ ನಿಜಕ್ಕೂ ವಿಶೇಷವಾಗಿರುತ್ತದೆ ಎಂದು ಗ್ಯಾರಂಟಿ ಕೊಡುವೆ.
ಕಥಾನಂತರದ ಅನುಭವ ಹಂಚಿಕೊಳ್ಳಲು ಪ್ರಿಯರಾದ ಮೊಗಳ್ಳಿ ಗಣೇಶ್, ದು. ಸರಸ್ವತಿ; ಜೊತೆಗೆ ರವಿಕುಮಾರ್ ಬಾಗಿ ವೇದಿಕೆಯಲ್ಲಿರುತ್ತಾರೆ. ಸಿನಿಮಾನಟರಾದ ಕಿರಣ್ ನಾಯಕ್, ಶಿವಪ್ರಸಾದ್ ಕೆಲವು ಕಥಾಭಾಗಗಳನ್ನು ಮಂಡಿಸುತ್ತಾರೆ.
ಆಹ್ವಾನ ಪತ್ರಿಕೆಯಲ್ಲಿ ವಿವರಗಳಿವೆ. ಸಾಧ್ಯವಾದರೆ ಬನ್ನಿ.
1956 ರ ಒಂದು ಸಂಜೆ ಬಾಬಾಸಾಹೇಬರ ದುಗುಡ ತುಂಬಿದ ಮಾತುಗಳನ್ನು ಕೇಳುತ್ತಿದ್ದ ನಾನಕ್ ಚಂದ್ ರತ್ತುವಿಗೆ ಅವರ ಕೊನೆಯ ದಿನಗಳು ಹತ್ತಿರವಿದ್ದಂತೆ ಕಂಡಿತು. ಈಚೆಗೆ ಅಂಬೇಡ್ಕರ್ ಸದಾ ದುಃಖದಲ್ಲಿ ಮುಳುಗಿರುತ್ತಿದ್ದನ್ನು ಕಂಡಿದ್ದ ರತ್ತು ಜುಲೈ ೩೧ರ ಸಂಜೆ ಕೇಳಿಯೇಬಿಟ್ಟರು: ‘ಸರ್, ಈಚೆಗೆ ತಾವು ಯಾಕೆ ಇಷ್ಟೊಂದು ದುಃಖಿಯಾಗಿರುತ್ತೀರಿ? ಆಗಾಗ ಅಳುತ್ತಿರುತ್ತೀರಿ. ದಯವಿಟ್ಟು ನಿಮ್ಮ ದುಃಖಕ್ಕೆ ಕಾರಣವೇನು, ಹೇಳಿ.’
ಚಣ ಸುಮ್ಮನಾದ ಬಾಬಾಸಾಹೇಬರ ಗದ್ಗದ ಕಂಠದಿಂದ ಹೊರಬಿದ್ದ ಮಾತುಗಳಿವು: ‘ನಾನು ಯಾಕಿಷ್ಟು ದಃಖಿಯಾಗಿದ್ದೇನೆ, ನನ್ನನ್ನು ಯಾವ ಚಿಂತೆ ಮುತ್ತಿದೆ ಎಂಬುದು ನಿನಗೆ ಅರ್ಥವಾಗಲಾರದು. ನನ್ನ ಬದುಕಿನ ಉದ್ದೇಶ ಇನ್ನೂ ಈಡೇರಿಲ್ಲ; ಇದು ನನ್ನ ಮೊದಲ ಚಿಂತೆ; ನನ್ನ ಜನ ಇತರ ಸಮುದಾಯಗಳೊಡನೆ ಸಮಾನವಾಗಿ ರಾಜಕೀಯ ಅಧಿಕಾರ ಹಂಚಿಕೊಂಡು ಆಳುವ ವರ್ಗವಾಗುವುದನ್ನು ಕಾಣಬೇಕೆಂದುಕೊಂಡಿದ್ದೆ. ಅನಾರೋಗ್ಯ ನನ್ನೆಲ್ಲ ಚಟುವಟಿಕೆಗಳನ್ನು ಕುಂಠಿತಗೊಳಿಸಿದೆ. ಈವರೆಗೆ ನಾನು ಸಾಧಿಸಿದ ಅಷ್ಟಿಷ್ಟು ಗುರಿಗಳಿಂದಾಗಿ ಅನುಕೂಲ ಪಡೆದಿರುವ ವಿದ್ಯಾವಂತರು ದಮನಕ್ಕೊಳಗಾದ ತಮ್ಮ ಅಣ್ಣತಮ್ಮಂದಿರ ಬಗ್ಗೆ ಅನುಕಂಪ ತೋರಿಸುತ್ತಿಲ್ಲ. ಇವತ್ತಿಗೂ ಹಳ್ಳಿಗಳಲ್ಲಿ ಯಾತನೆ ಪಡುತ್ತಾ, ಆರ್ಥಿಕವಾಗಿ ಒಂದಿಷ್ಟೂ ಬದಲಾಗದ ಆ ಬೃಹತ್ ಅನಕ್ಷರಸ್ಥ ಸಮುದಾಯಕ್ಕಾಗಿ ನಾನು ಕೆಲಸ ಮಾಡಬೇಕೆಂದುಕೊಂಡಿದ್ದೆ. ಆದರೆ ನನ್ನ ಬದುಕು ಮುಗಿಯತೊಡಗಿದೆ...
‘ನನ್ನ ಮಹತ್ವದ ಪುಸ್ತಕಗಳಾದ ‘ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್’, ‘ಪ್ರಾಚೀನ ಇಂಡಿಯಾದಲ್ಲಿ ಕ್ರಾಂತಿ-ಪ್ರತಿಕ್ರಾಂತಿ’, ‘ಹಿಂದೂ ಧರ್ಮದ ಒಗಟುಗಳು’ ಇವನ್ನು ಬರೆದು ಮುಗಿಸಲು ಆಗುತ್ತಿಲ್ಲ. ನಾನು ತೀರಿಕೊಂಡ ಮೇಲೆ ಇವನ್ನು ಯಾರೂ ಪ್ರಕಟಿಸಲಾರರು... ನಾನು ಬದುಕಿರುವಾಗಲೂ, ಮುಂದೆಯೂ ದಲಿತ ವರ್ಗಗಳ ಚಳುವಳಿಯನ್ನು ಮುನ್ನಡೆಸಬಲ್ಲವರನ್ನು ಹುಡುಕುತ್ತಿದ್ದೇನೆ. ಒಬ್ಬರೂ ಕಾಣುತ್ತಿಲ್ಲ. ದೇಶದ ವಿದ್ಯಮಾನಗಳಲ್ಲಿ ಆಸಕ್ತಿ ಇರಿಸಿಕೊಳ್ಳುವುದು ಕೂಡ ನನಗೀಗ ಕಷ್ಟವಾಗಿದೆ. ಯಾಕೆಂದರೆ, ಈ ದೇಶದ ಜನ ಪ್ರಧಾನಮಂತ್ರಿಯ ವಲಯದ ಮಾತುಗಳನ್ನು ಬಿಟ್ಟರೆ ಇನ್ನಾರ ಮಾತುಗಳನ್ನೂ ಕೇಳಲು ಸಿದ್ಧರಿಲ್ಲ. ಈ ದೇಶದ, ಈ ಜನರ ಸೇವೆ ಮಾಡಬೇಕೆಂದು ನಾನು ಹೊರಟಿದ್ದೆ. ಆದರೆ ಇಷ್ಟೊಂದು ಜಾತಿಪೀಡಿತವಾದ, ಪೂರ್ವಗ್ರಹಗಳಿರುವ ದೇಶದಲ್ಲಿ ಹುಟ್ಟುವುದೇ ಪಾಪ... ಈ ದೇಶ ಎಂಥ ಪ್ರಪಾತಕ್ಕೆ ಬೀಳತೊಡಗಿದೆ...’
ತಮ್ಮ ಮಾತು ಕೇಳಿ ಕಣ್ಣೀರಿಟ್ಟ ರತ್ತುವಿಗೆ ಅಂಬೇಡ್ಕರ್ ಹೇಳಿದರು: ‘ಧೈರ್ಯ ತಂದುಕೋ. ಬದುಕು ಒಂದಲ್ಲ ಒಂದು ದಿನ ಮುಗಿಯಲೇಬೇಕು.’ ಚಣ ಸುಮ್ಮನಾದ ಅಂಬೇಡ್ಕರ್ ಕಣ್ಣೀರೊರೆಸಿಕೊಳ್ಳುತ್ತಾ, ಕೊಂಚ ಕೈ ಮೇಲೆತ್ತಿ ಮಾತಾಡತೊಡಗಿದರು. ಕಣ್ಣು ಮಿನುಗುತ್ತಿದ್ದವು:
‘ನಾನಕ್ ಚಂದ್, ನನ್ನ ಜನರಿಗೆ ಹೇಳು. ನಾನು ಏನೆಲ್ಲ ಸಾಧಿಸಿದ್ದೇನೋ ಅದನ್ನೆಲ್ಲ ಅಸಂಖ್ಯಾತ ಕಷ್ಟಕೋಟಲೆಗಳನ್ನು ಎದುರಿಸುತ್ತಾ, ಈ ನನ್ನ ಏಕಾಂಗಿ ಕೈಗಳಿಂದ ನಾನೊಬ್ಬನೇ ಸಾಧಿಸಿದ್ದೇನೆ. ಎಲ್ಲ ಕಡೆಯಿಂದ ಎರಗಿದ ನಿಂದನೆಗಳನ್ನು, ಅದರಲ್ಲೂ ಹಿಂದೂಗಳ ಪತ್ರಿಕೋದ್ಯಮ ನನ್ನ ಮೇಲೆ ಸುರಿದ ಬೈಗುಳಗಳನ್ನು ಎದುರಿಸುತ್ತಾ, ನನ್ನ ಎದುರಾಳಿಗಳ ಜೊತೆ ಹೋರಾಡುತ್ತಾ, ತಮ್ಮ ಸ್ವಾರ್ಥಕ್ಕಾಗಿ ನನಗೆ ಮೋಸ ಮಾಡಿದ ನನ್ನ ಜನರ ಜೊತೆಗೂ ಹೋರಾಡುತ್ತಾ, ಇಷ್ಟನ್ನು ಮಾಡಿದ್ದೇನೆ. ನನ್ನ ಕೊನೆಯ ಉಸಿರಿನವರೆಗೂ ಈ ದೇಶಕ್ಕಾಗಿ, ಇಲ್ಲಿನ ದಮನಿತರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. ತುಂಬ ಕಷ್ಟಪಟ್ಟು ಈ ಬಂಡಿಯನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಈ ಬಂಡಿ ಎಲ್ಲ ಅಡೆತಡೆಗಳನ್ನು ದಾಟಿ ಮುಂದುವರಿಯಲಿ. ನನ್ನ ಜನ ಹಾಗೂ ನನ್ನ ಜೊತೆಯವರು ಈ ಬಂಡಿಯನ್ನು ಮುಂದೊಯ್ಯಲು ಆಗದಿದ್ದರೆ, ಕೊನೆಯ ಪಕ್ಷ ಅದು ಈಗ ಎಲ್ಲಿದೆಯೋ ಅಲ್ಲೇ ಇರಲಾದರೂ ಬಿಡಲಿ. ಆದರೆ ಯಾವ ಕಾರಣಕ್ಕೂ ಅವರು ಈ ಬಂಡಿ ಹಿಂದೆ ಹೋಗಲು ಬಿಡದಿರಲಿ. ಇದು ನನ್ನ ಸಂದೇಶ. ಪ್ರಾಯಶಃ ನನ್ನ ಅತ್ಯಂತ ಗಂಭೀರವಾದ ಕೊನೆಯ ಸಂದೇಶ. ಇದನ್ನು ನನ್ನ ಜನ ಕೇಳಿಸಿಕೊಳ್ಳುತ್ತಾರೆ ಎಂದು ನಂಬಿದ್ದೇನೆ. ಹೋಗು, ಅವರಿಗೆ ಈ ಮಾತನ್ನು ಹೇಳು. ಹೋಗು, ಅವರಿಗೆ ಈ ಮಾತನ್ನು ಹೇಳು. ಹೋಗು, ಅವರಿಗೆ ಈ ಮಾತನ್ನು ಹೇಳು.’
ಕೊನೆಯ ಮಾತನ್ನು ಮೂರು ಸಲ ಹೇಳಿದ ಬಾಬಾಸಾಹೇಬ್ ಬಿಕ್ಕಿ ಬಿಕ್ಕಿ ಅತ್ತರು. ಕಣ್ಣೀರು ಹರಿಯುತ್ತಿತ್ತು. ಅದು ನಿಜಕ್ಕೂ ಬಾಬಾಸಾಹೇಬರ ಕೊನೆಯ ಸಂದೇಶವಾಗುವುದೆಂದು ರತ್ತು ಊಹಿಸಿರಲಿಲ್ಲ. ಅವರ ಮುಖದಲ್ಲಿ ಕವಿದಿದ್ದ ನಿರಾಶೆ ರತ್ತುವನ್ನು ಕಂಗೆಡಿಸಿತ್ತು.
ಇದಾದ ನಾಲ್ಕು ತಿಂಗಳ ನಂತರ, ಡಿಸೆಂಬರ್ ೩ರಂದು, ಕಾಯಿಲೆಯಾಗಿ ಮಲಗಿದ್ದ ತಮ್ಮ ಕೈತೋಟದ ಮಾಲಿಯ ಆರೋಗ್ಯ ವಿಚಾರಿಸಲು ಅಂಬೇಡ್ಕರ್ ಮಾಲಿಯ ಮನೆಗೆ ಹೋಗಿದ್ದರು. ಮಾಲಿಯ ಕಣ್ಣೀರು ಕಂಡ ಅಂಬೇಡ್ಕರ್ ರತ್ತುವಿಗೆ ಹೇಳಿದರು: `ನೋಡು, ಈ ಮನುಷ್ಯ ಸಾವಿನ ಕಲ್ಪನೆಯಿಂದ ಅಂಜಿಕೊಂಡಿದ್ದಾನೆ. ನನಗೆ ಸಾವಿನ ಭಯವೆಂಬುದಿಲ್ಲ. ಮರಣ ಯಾವಾಗಲಾದರೂ ಬರಲಿ, ನಾನು ಅದನ್ನು ಬರಮಾಡಿಕೊಳ್ಳಲು ಸಿದ್ಧನಿದ್ದೇನೆ.’
ಡಿಸೆಂಬರ್ ೫ರ ಸಂಜೆ ಅಂಬೇಡ್ಕರ್ ಉದ್ವಿಗ್ನರಾಗಿದ್ದಂತೆ ರತ್ತುವಿಗೆ ಕಂಡಿತು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಜೈನ ಸಮಾಜದ ನಾಯಕರು ಬಂದು ‘ಜೈನ್ ಔರ್ ಬುದ್ಧ’ ಪುಸ್ತಕವನ್ನು ಅಂಬೇಡ್ಕರ್‌ಗೆ ಕೊಟ್ಟು, ಜೈನಸಭೆಯೊಂದಕ್ಕೆ ಆಹ್ವಾನಿಸಿ ಹೋದರು. ನಂತರ ರತ್ತು ಬಾಬಾಸಾಹೇಬರ ದಣಿದ ಕಾಲುಗಳನ್ನು ಒತ್ತಿ, ಅವರ ತಲೆಗೆ ಎಣ್ಣೆ ಹಚ್ಚಿದರು. ಹಾಯೆನ್ನಿಸಿದಂತಾಗಿ, ಅಂಬೇಡ್ಕರ್ ಕಂಠದಿಂದ ಮೆಲುವಾಗಿ ಹೊರಟ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆ ಬರಬರುತ್ತಾ ಗಟ್ಟಿಯಾಗಿ ಕೇಳತೊಡಗಿತು. ಅವರ ಬಲಗೈ ಬೆರಳುಗಳು ಸೋಫಾದ ಮೇಲೆ ತಾಳ ಹಾಕುತ್ತಿದ್ದವು. ತಮ್ಮ ಇಚ್ಛೆಯಂತೆ ರತ್ತು ರೇಡಿಯೋಗ್ರಾಂನಲ್ಲಿ ಹಾಕಿದ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆಗೆ ಅಂಬೇಡ್ಕರ್ ದನಿಗೂಡಿಸಿದರು. ಮೇಲೆದ್ದು ಕಪಾಟುಗಳಿಂದ ಹಲವು ಪುಸ್ತಕಗಳನ್ನು ತೆಗೆದುಕೊಂಡು, ಅವನ್ನು ಹಾಸಿಗೆಯ ಪಕ್ಕದ ಮೇಜಿನ ಮೇಲಿಡಲು ರತ್ತುವಿಗೆ ಹೇಳಿದರು.
ಒಂಚೂರು ಊಟ ಮಾಡಿ, ಕೋಲೂರಿಕೊಂಡು ಮೇಲೆದ್ದ ಅಂಬೇಡ್ಕರ್ ಬಾಯಿಂದ ಕಬೀರರ ‘ಚಲ್ ಕಬೀರ್ ತೇರ ಭವಸಾಗರ್ ಡೇರಾ’ ಸಾಲು ತೇಲಿ ಬರುತ್ತಿತ್ತು. ಜೀವನಪಯಣದ ತಾತ್ಕಾಲಿಕತೆಯನ್ನು ಹೇಳುವ ‘ನಡೆ ಕಬೀರಾ ನಿನ್ನ ಭವಸಾಗರವು ಡೇರೆಯಂತೆ…’ಎಂಬ ಹಾಡು ಗುಣುಗುಣಿಸುತ್ತಿರುವಾಗಲೇ ಅವರ ಕಣ್ಣ ರೆಪ್ಪೆಗಳು ದಣಿವಿನಿಂದ ಮುಚ್ಚಿಕೊಳ್ಳತೊಡಗಿದ್ದವು. ಮನೆಗೆ ಹೊರಡುವ ಮುನ್ನ ರತ್ತು ಟೇಬಲ್ ಮೇಲಿದ್ದ ಪುಸ್ತಕಗಳನ್ನು ಸರಿಸಿದ; ಅಂಬೇಡ್ಕರ್ ಕಣ್ತೆರೆದರು. ರಾತ್ರಿ ೧೨ ಗಂಟೆಗೆ ರತ್ತು ಸೈಕಲ್ಲೇರಿ ಬಾಬಾಸಾಹೇಬರ ಮನೆ ‘ರಾಜಗೃಹ’ದ ಗೇಟು ದಾಟುತ್ತಿದ್ದಂತೆ, ಅಡಿಗೆಯ ಸುದಾಮ ರತ್ತುವನ್ನು ಕರೆಯಲು ಓಡೋಡಿ ಬಂದ.
ಮತ್ತೆ ಬಂದ ರತ್ತುವಿಗೆ ಅಂಬೇಡ್ಕರ್ ತಾವು ಬರೆದಿಟ್ಟಿದ್ದ ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕದ ಮುನ್ನುಡಿ ಹಾಗೂ ಪ್ರಸ್ತಾವನೆಗಳ ಟೈಪಾದ ಹಾಳೆಗಳನ್ನು, ಪತ್ರಗಳನ್ನು ತರಲು ಹೇಳಿದರು. ಸುದಾಮ ಎಂದಿನಂತೆ ಕಾಫಿ ಫ್ಲಾಸ್ಕ್ ಹಾಗೂ ಸಿಹಿತಿಂಡಿಗಳನ್ನು ತಂದು ಹಾಸಿಗೆಯ ಬದಿಯಲ್ಲಿಟ್ಟ. ರತ್ತು ತಂದ ಹಾಳೆಗಳು, ಪತ್ರಗಳನ್ನು ನೋಡುತ್ತಾ ಅಂಬೇಡ್ಕರ್, ‘ಹೊರಡು. ಬೆಳಗ್ಗೆ ಬಂದು ಇವನ್ನೆಲ್ಲ ತಪ್ಪದೆ ಕಳಿಸಬೇಕು. ಇವನ್ನೆಲ್ಲ ರಾತ್ರಿಯೇ ಓದಿ ಮುಗಿಸುತ್ತೇನೆ’ ಎಂದರು. ಇದು ರತ್ತು ಕೇಳಿಸಿಕೊಂಡ ಅಂಬೇಡ್ಕರ್ ಅವರ ಕೊನೆಯ ಮಾತು. ಆ ರಾತ್ರಿ ಅಲ್ಲಿಂದ ಹೊರಟ ರತ್ತುವಿಗೆ ಬಾಬಾಸಾಹೇಬರ ಸಾವಿನ ಸೂಚನೆ ಕಂಡಿರಲಿಲ್ಲ.
ಈ ವಿವರಗಳೆಲ್ಲ ಬಾಬಾಸಾಹೇಬರ ಪ್ರಿಯ ಶಿಷ್ಯ ನಾನಕ್ ಚಂದ್ ರತ್ತು ಬರೆದ ‘ಲಾಸ್ಟ್ ಫ್ಯೂ ಯಿಯರ್ಸ್ ಆಫ್ ಅಂಬೇಡ್ಕರ್’ ಪುಸ್ತಕದಲ್ಲಿವೆ. ಆ ಕೊನೆಯ ರಾತ್ರಿ-ಬೆಳಗಿನ ನಡುವೆ ಅಂಬೇಡ್ಕರ್ ತಮ್ಮ ಕೊನೆಯ ಕರ್ತವ್ಯವನ್ನು ಮುಗಿಸುವಂತೆ ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕಕ್ಕೆ ತಾವು ಬರೆದ ಮುನ್ನುಡಿ, ಪ್ರಸ್ತಾವನೆಗಳ ಮೇಲೂ ಕಣ್ಣಾಡಿಸಿ, ತಿದ್ದಿರಬಹುದು ಎಂದು ಊಹಿಸಬಹುದು. ಪ್ರಸ್ತಾವನೆ ಮುಗಿದಂತಿದೆ. ಅವರ ಅಪೂರ್ಣ ಮುನ್ನುಡಿಯ ಕೆಲವು ಮಾತುಗಳು:
‘ನೀವು ಯಾಕೆ ಬೌದ್ಧಧರ್ಮದತ್ತ ವಾಲಿದ್ದೀರಿ?’ ಎಂದು ಜನ ಆಗಾಗ್ಗೆ ನನ್ನನ್ನು ಕೇಳುತ್ತಾರೆ. ಇದಕ್ಕೆ ನನ್ನ ಉತ್ತರ: ‘ನನ್ನ ಪ್ರಕಾರ ಬುದ್ಧನ ಧಮ್ಮ ಶ್ರೇಷ್ಠ ಧರ್ಮ. ಬೇರಾವ ಧರ್ಮವನ್ನೂ ಈ ಧಮ್ಮಕ್ಕೆ ಹೋಲಿಸಲಾಗದು. ವಿಜ್ಞಾನ ಗೊತ್ತಿರುವ ಯಾವುದೇ ಮನುಷ್ಯನಿಗೆ ಧರ್ಮ ಬೇಕೆನ್ನಿಸಿದರೆ, ಅವನು ಆರಿಸಿಕೊಳ್ಳುವುದು ಬೌದ್ಧ ಧರ್ಮವನ್ನು ಮಾತ್ರ. ಕಳೆದ ೩೫ ವರ್ಷಗಳಲ್ಲಿ ಎಲ್ಲ ಧರ್ಮಗಳನ್ನೂ ಅಧ್ಯಯನ ಮಾಡಿದ ಮೇಲೆ, ಈ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ.
“ನನಗೆ ಬುದ್ಧಿಸಮ್ ಕುರಿತ ಪ್ರೇರಣೆ ಎಲ್ಲಿಂದ ಬಂತು ಎನ್ನುವುದನ್ನು ಹೇಳಹೊರಟರೆ ಅದೇ ಒಂದು ಕತೆಯಾಗುತ್ತದೆ: ನಾನು ಇಂಗ್ಲಿಷ್ ನಾಲ್ಕನೇ ತರಗತಿ ಪಾಸಾದಾಗ ನಮ್ಮ ಸಮುದಾಯದವರು ನನ್ನನ್ನು ಅಭಿನಂದಿಸಲು ಮುಂದಾದರು. ನಮ್ಮ ಸಮುದಾಯದಲ್ಲಿ ಈ ಹಂತಕ್ಕೇರಿದ ಮೊದಲ ಹುಡುಗ ನಾನೆಂದು ಅವರಿಗೆ ಹೆಮ್ಮೆ. ಅಪ್ಪ ಅದೆಲ್ಲ ಬೇಡವೆಂದರು. ಆಗ ನಮ್ಮ ಜನ ಆ ಕಾಲದ ದೊಡ್ಡ ಲೇಖಕರಾದ ಕೇಳುಸ್ಕರ್ ಅವರಿಂದ ಅಪ್ಪನಿಗೆ ಹೇಳಿಸಿದರು. ಆ ಸಭೆಗೆ ಬಂದ ಕೇಳುಸ್ಕರ್ ತಾವು ಬರೆದ ‘ಲೈಫ್ ಆಫ್ ಗೌತಮ ಬುದ್ಧ’ ಪುಸ್ತಕವನ್ನು ನನಗೆ ಕೊಟ್ಟರು. ಆ ಪುಸ್ತಕವನ್ನು ಅಪಾರ ಆಸಕ್ತಿಯಿಂದ ಓದಿದೆ; ಭಾವುಕನಾದೆ, ಪ್ರಭಾವಿತನಾದೆ...
‘...ನಮ್ಮಪ್ಪ ಯಾಕೆ ನಮಗೆ ಬೌದ್ಧ ಸಾಹಿತ್ಯದ ಪರಿಚಯ ಮಾಡಿಕೊಡಲಿಲ್ಲ ಎಂಬ ಪ್ರಶ್ನೆ ಆಗ ನನ್ನಲ್ಲಿ ಹುಟ್ಟಿತು. ಅಪ್ಪನಿಗೆ ಹೇಳಿದೆ: ‘ಯಾಕೆ ಮಹಾಭಾರತ, ರಾಮಾಯಣಗಳನ್ನೇ ಓದಲು ನಮ್ಮನ್ನು ಒತ್ತಾಯ ಮಾಡುತ್ತಿದ್ದಿರಿ? ಅವು ಬ್ರಾಹ್ಮಣರ, ಕ್ಷತ್ರಿಯರ ಹಿರಿಮೆಯನ್ನು ಒತ್ತಿ ಹೇಳುತ್ತವೆ; ಶೂದ್ರರ, ಅಸ್ಪೃಶ್ಯರ ಹೀನಸ್ಥಾನವನ್ನು ಪ್ರತಿಪಾದಿಸುತ್ತವೆ.’ ಅಪ್ಪನಿಗೆ ನನ್ನ ಮಾತಿನ ಧಾಟಿ ಇಷ್ಟವಾಗಲಿಲ್ಲ; ಆದರೂ ಹೇಳಿದೆ: ‘ಭೀಷ್ಮ, ದ್ರೋಣ, ಕೃಷ್ಣರನ್ನು ನಾನು ಇಷ್ಟಪಡುವುದಿಲ್ಲ. ಭೀಷ್ಮ ಮತ್ತು ದ್ರೋಣರು ಬೂಟಾಟಿಕೆಯ ವ್ಯಕ್ತಿಗಳು. ತಾವು ಹೇಳಿದ್ದಕ್ಕೆ ತದ್ವಿರುದ್ಧವಾದುದನ್ನು ಮಾಡುತ್ತಿದ್ದರು. ಕೃಷ್ಣ ಕಪಟದಲ್ಲಿ ನಂಬಿಕೆ ಇಟ್ಟಿದ್ದ; ರಾಮನು ಶೂರ್ಪನಖಿ ಹಾಗೂ ವಾಲಿ-ಸುಗ್ರೀವ ಪ್ರಕರಣಗಳಲ್ಲಿ ನಡೆದುಕೊಂಡ ರೀತಿ, ಸೀತೆಯನ್ನು ಕುರಿತ ಅವನ ಕ್ರೂರ ವರ್ತನೆ ನನಗೆ ಇಷ್ಟವಾಗುವುದಿಲ್ಲ.’
ಅಪ್ಪ ಮಾತಾಡಲಿಲ್ಲ. ಸುಮ್ಮನಿದ್ದರು. ಮನೆಯಲ್ಲಿ ಒಂದು ದಂಗೆಯೆದ್ದಿದೆ ಎಂಬುದು ಅವರ ಅರಿವಿಗೆ ಬರತೊಡಗಿತ್ತು...
‘ನಾನು ಬುದ್ಧನೆಡೆಗೆ ತಿರುಗಿದ್ದು ಹೀಗೆ. ನಾನು ಖಾಲಿ ತಲೆಯಲ್ಲಿ ಬುದ್ಧನೆಡೆಗೆ ತಿರುಗಲಿಲ್ಲ. ಬುದ್ಧನ ಸಾಹಿತ್ಯ ಓದುತ್ತಾ, ಇತರ ಧರ್ಮಗಳಿಗೂ ಬೌದ್ಧ ಧರ್ಮಕ್ಕೂ ಇರುವ ಹೋಲಿಕೆ, ವ್ಯತ್ಯಾಸಗಳನ್ನು ಗಮನಿಸಿದೆ. ಇದು ಬುದ್ಧ ಮತ್ತು ಅವನ ಧಮ್ಮದ ಬಗೆಗಿನ ನನ್ನ ಆಸಕ್ತಿಯ ಮೂಲ. ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕ ಬರೆಯಲು ಶುರು ಮಾಡಿದ ಕಾಲಕ್ಕೆ ನನ್ನ ಆರೋಗ್ಯ ಕೆಡತೊಡಗಿತ್ತು; ಈಗಲೂ ಸುಧಾರಿಸಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ಆರೋಗ್ಯ ಹಲವು ಏರಿಳಿತಗಳನ್ನು ಕಂಡಿದೆ. ಎಷ್ಟೋ ಸಲ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ಡಾಕ್ಟರು ನನ್ನನ್ನು ‘ನಂದಿಹೋಗುತ್ತಿರುವ ಜ್ವಾಲೆ’ ಎಂದಿದ್ದರು. ಆದರೆ ನಂದಿಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಶಾರದಾ ಮತ್ತು ಡಾ. ಮಲ್ವಂಕರ್ ಅವರ ವೈದ್ಯಕೀಯ. ಈ ಪುಸ್ತಕವನ್ನು ಮುಗಿಸಲು ನೆರವಾದವರು ಅವರಿಬ್ಬರೇ.’
ಅಂಬೇಡ್ಕರ್ ತಮ್ಮ ಕೊನೆಯ ರಾತ್ರಿ ತಿದ್ದಿರಬಹುದಾದ ಈ ಮುನ್ನುಡಿಯ ಜೊತೆಗೇ ಪುಸ್ತಕದ ಪ್ರಸ್ತಾವನೆಯೂ ಇತ್ತು. ಈ ಪ್ರಸ್ತಾವನೆಯಲ್ಲಿ ಬೌದ್ಧ ಧರ್ಮವನ್ನು ಆರ್ಯರ ಸುಳ್ಳುಗಳಿಂದ ಬಿಡಿಸುವ ತಮ್ಮ ಬೌದ್ಧಿಕ ಪ್ರಯತ್ನ ಕುರಿತು ಹೇಳುತ್ತಾ, ಕೊನೆಗೆ ಬರೆಯುತ್ತಾರೆ: ‘ನಾನು ಈ ಪುಸ್ತಕದಲ್ಲಿ ಎತ್ತಿರುವ ಪ್ರಶ್ನೆಗಳು ಓದುಗರನ್ನು ಆ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಪ್ರೇರೇಪಿಸುತ್ತವೆಂದು ನಿರೀಕ್ಷಿಸುವೆ.’
ಬಾಬಾಸಾಹೇಬರ ನಿರೀಕ್ಷೆ ಒಂದರ್ಥದಲ್ಲಿ ಸಫಲವಾಗಿದೆ. ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕ ಇಂಡಿಯಾದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಲಕ್ಷಾಂತರ ಓದುಗರು ಈ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಪ್ರೇರೇಪಿಸಿದೆ. ಬಾಬಾಸಾಹೇಬರ ಹದಿಹರೆಯದ ಬೌದ್ಧ ಧರ್ಮದ ಹುಡುಕಾಟ ಹಾಗೂ ಬೌದ್ಧ ಪಯಣ 1956ರ ಡಿಸೆಂಬರ್ 6ರ ರಾತ್ರಿ ಅವರು ಕೊನೆಯ ಉಸಿರೆಳೆಯುವವರೆಗೂ ಮುಂದುವರಿದೇ ಇತ್ತು. ಬದುಕಿನಲ್ಲಿ ಕೈಗೆತ್ತಿಕೊಂಡ ಮಹತ್ವದ ಕೆಲಸವೊಂದನ್ನು ಮುಗಿಸುವ ಸಂಕಲ್ಪ ಅವರ ಕೊನೆಯ ಗಳಿಗೆಯವರೆಗೂ ಜೀವಂತವಾಗಿತ್ತು. ಬಾಬಾಸಾಹೇಬರ ಈ ಅನನ್ಯ ಬೌದ್ಧಿಕ ಹೊಣೆ ಹಾಗೂ ಬದ್ಧತೆ ನಮ್ಮ ಅನುದಿನದ ಸ್ಫೂರ್ತಿಯಾಗಿರಲಿ. ಬಾಬಾಸಾಹೇಬರ ಕೊನೆಯ ಸಂದೇಶ ನಮ್ಮ ಕರ್ತವ್ಯಗಳ ದಿಕ್ಕನ್ನು ರೂಪಿಸುತ್ತಿರಲಿ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಎಫ್. ಆರ್. ಲೀವಿಸ್ ಬರೆದ ವಿಮರ್ಶಾ ಬರಹಗಳ ಪುಸ್ತಕ ‘ದ ಕಾಮನ್ ಪರ್ಸೂಟ್’ ನಿಮಗೆ ಪರಿಚಯವಿರಬಹುದು. ಲೀವಿಸ್ ಈ ಪುಸ್ತಕದ ಶೀರ್ಷಿಕೆಯನ್ನು ಕವಿ, ವಿಮರ್ಶಕ ಎಲಿಯಟ್‌ನ ‘ವಿಮರ್ಶೆ ಎಂದರೆ ಸತ್ಯವಾದ ತೀರ್ಮಾನದ ಸರ್ವಸಾಮಾನ್ಯ ಹುಡುಕಾಟ’ (‘ದ ಕಾಮನ್ ಪರ್ಸ್ಯೂಟ್ ಆಫ್ ಟ್ರೂ ಜಡ್ಜ್ ಮೆಂಟ್’) ಎಂಬ ಮಾತಿನಿಂದ ರೂಪಿಸಿಕೊಂಡ. ಈ ಮಾತಿನಲ್ಲಿ ವಿಮರ್ಶೆ ಎನ್ನುವುದು ಒಂದು ಸಂಸ್ಕೃತಿಯ ಅಥವಾ ಹಲವು ಸಂಸ್ಕೃತಿಗಳ ಹಲವರು ಸೇರಿ ಮಾಡುವ ಹುಡುಕಾಟ ಎಂಬ ಅರ್ಥವೂ ಇದೆ.
‘ದ ಕಾಮನ್ ಪರ್ಸ್ಯೂಟ್’ ಎಂಬ ಮಾತನ್ನು ಕ್ಲಾಸುಗಳಲ್ಲಿ, ಸೆಮಿನಾರುಗಳಲ್ಲಿ ಮತ್ತೆ ಮತ್ತೆ ಬಳಸಿದ್ದರೂ, ಅದು ಸರಿಯಾಗಿ ನನ್ನ ಅನುಭವಕ್ಕೆ ಬರತೊಡಗಿದ್ದು ಈಚಿನ ತಿಂಗಳುಗಳಲ್ಲಿ; ಈ ವೆಬ್‌ಸೈಟಿನಲ್ಲಿ ಬರಹಗಳನ್ನು ಬರೆಯಲು ಶುರು ಮಾಡಿದ ಮೇಲೆ; ಹಲವು ಸೂಕ್ಷ್ಮ ಲೇಖಕ, ಲೇಖಕಿಯರು ಸತ್ಯದ ಹಲವು ಮುಖಗಳನ್ನು ಆ ಬರಹಗಳಿಗೆ ಜೋಡಿಸತೊಡಗಿದ ಮೇಲೆ. ‘ಸರ್ವರೊಳಗೊಂದೊಂದು ನುಡಿ ಕಲಿವ’ ಈ ಪರಿಯ ಸೊಬಗು ರೋಚಕ ಕೂಡ!
ಈ ಮಾತು ಬರೆಯಲು ಕಾರಣವಿದೆ: ಈ ಅಂಕಣದ ಕಳೆದೆರಡು ವಾರಗಳ ಬರಹಗಳಲ್ಲಿ ಕತೆ, ಕಲೆ, ಬರವಣಿಗೆಯ ಕಲಿಕೆ ಕುರಿತ ಪ್ರಶ್ನೆಗಳನ್ನು ಎತ್ತಿದಾಗಿನಿಂದ ಲೇಖಕ, ಲೇಖಕಿಯರು, ಕಲಾವಿದರು, ಸಿನಿಮಾ ನಿರ್ದೇಶಕರು ಬರೆಯುತ್ತಿರುವ ಮಾತುಗಳು ಆ ಬರಹಗಳ ಗ್ರಹಿಕೆಗಳನ್ನು ವಿಸ್ತರಿಸುತ್ತಲೇ ಇವೆ. ಸಿನಿಮಾದ ಗೆಳೆಯರಿಬ್ಬರು ಯಾವ ಕಲೆಯನ್ನೇ ಆಗಲಿ ‘ಕಲಿಸುವುದು’ ಕಷ್ಟ ಅಂದಾಗ, ತಮ್ಮ ಆಳದ ನಿಜಾರ್ಥವನ್ನೇ ಹೇಳಿದ್ದರು. ಆದರೆ ಕಲಿಯಲು ತಯಾರಿರುವ, ಕಲಿಕೆ ನಿಜಕ್ಕೂ ಬೇಕಾಗಿರುವ ತಲೆಮಾರುಗಳು ಬರುತ್ತಲೇ ಇರುವಾಗ, ಕಲೆಯನ್ನು ಕಲಿಸಲಾಗದಿದ್ದರೂ ಕೌಶಲವನ್ನಂತೂ ಕಲಿಸಬಹುದು ಎಂದು ವಾದಿಸುವ ಗೆಳೆಯರೂ ಇದ್ದರು. ಈ ವಾದದ ಒಂದು ಪ್ರಾತಿನಿಧಿಕ ರೂಪವಾಗಿ ನಾಟಕ, ಧಾರಾವಾಹಿ, ಸಿನಿಮಾಗಳ ನಿರ್ದೇಶಕರಾದ ಗೆಳೆಯ ಬಿ. ಸುರೇಶ್ ಬರೆದ ಪತ್ರ:
‘ಕಲಿಸುವುದು ‘ಅಸಾಧ್ಯ’ ಎನ್ನುವವರ ಸಂಖ್ಯೆ ಹೆಚ್ಚಿರುವಾಗ 'ಇದೂ ಸಾಧ್ಯ' ಎನ್ನುವ ಅಲ್ಪಸಂಖ್ಯಾತ ಗುಂಪಿನವನಾಗಿ ಕೆಲವು ಮಾತುಗಳನ್ನು ಹಂಚಿಕೊಳ್ಳುವೆ.
‘ಯಾವುದೇ ಕಲೆಯನ್ನು ಅದು ಕಲಿಯುವ ವ್ಯಕ್ತಿಗೆ ಬದುಕಿನ ಪ್ರಶ್ನೆಯಾಗದೆ ಇದ್ದರೆ ಕಲಿಸುವುದು ಅಸಾಧ್ಯ. ಬಹುತೇಕ ಕಲಿಯಲು ಬರುವವರು ಚಿತ್ರಕತೆ ರಚನೆ ಅಥವಾ ಕತೆ ಬರೆಯುವುದನ್ನು ಹವ್ಯಾಸವಾಗಿ ಕಲಿಯಲು ಬರುತ್ತಾರೆ. ಅಂತಹವರಿಗೆ ‘ಸಾಧನಗಳನ್ನು, ಕೌಶಲಗಳನ್ನು ಕಲಿಸಬಹುದು. ನಂತರ ಆಯಾ ಕಲಿಯುವ ವ್ಯಕ್ತಿಯ ಸ್ವಂತ ಪರಿಶ್ರಮ ಹಾಗೂ ತೊಡಗಿಕೊಳ್ಳುವ ದೃಷ್ಟಿಕೋನವನ್ನು ಆಧರಿಸಿ ಆಯಾ ವ್ಯಕ್ತಿ ಲೇಖಕ ಆಗಬಹುದು, ಆಗದೆಯೂ ಉಳಿಯಬಹುದು’ ಎಂಬುದು ಪ್ರಚಲಿತದಲ್ಲಿರುವ ಮಾತು. ಆದರೆ ನನ್ನ ಅನುಭವ ಭಿನ್ನವಾದುದು.
‘ಕಳೆದ ನಾಲ್ಕು ದಶಕದಿಂದ ದೃಶ್ಯ ಮಾಧ್ಯಮಗಳಿಗೆ ಬರೆಯುತ್ತಿರುವ ನಾನು ಹಲವು ಹೊಸಬರನ್ನು ಈ ಉದ್ಯಮಕ್ಕೆ ಶೃತಿಗೊಳಿಸಿದ್ದೇನೆ. ಅವರಲ್ಲಿ ಹಲವರು ಇಂದು ದೃಶ್ಯ ಮಾಧ್ಯಮದ ಖ್ಯಾತನಾಮರಾಗಿದ್ದಾರೆ. ಇವರೆಲ್ಲರೂ ನನ್ನ ಬಳಿ ಕೆಲಸಕ್ಕೆ ಬಂದಾಗ ದೃಶ್ಯ ಮಾಧ್ಯಮಕ್ಕೆ ಬರೆಯುವುದರ ಗಂಧ ಗಾಳಿ ಇಲ್ಲದವರಾಗಿದ್ದರು ಎಂಬುದಂತೂ ಸತ್ಯ. ಇವರನ್ನು ಶೃತಿಗೊಳಿಸಲು ನಾನೇನು ಮಾಡುತ್ತಿದ್ದೆ ಎಂಬುದನ್ನು ಗಮನಿಸೋಣ.
‘ಒಂದು ತಂಡ ಕಟ್ಟುವುದು ಎಂದರೆ ಅದೊಂದು ಬಹುಮುಖ್ಯ ಪ್ರೊಸೆಸ್. ಇಲ್ಲಿಗೆ ನಾವೇ ಆರಿಸಿದ ವ್ಯಕ್ತಿಗಳು ಬರಬಹುದು ಅಥವಾ ಓದು ಮುಂದುವರೆಸಲಾಗದೆ, ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು ಬರುವವರೂ ಇರಬಹುದು. ನನ್ನ ತಂಡದಲ್ಲಿ ಬಹುತೇಕ ಎರಡನೆಯ ಬಗೆಯವರೇ ಹೆಚ್ಚು. ಹೀಗೆ ತಂಡಕ್ಕೆ ಸೇರಿದವರಿಗೆ ನಾನು ನೀಡುತ್ತಿದ್ದ ಮೊದಲ ಕೆಲಸ- ನನ್ನ ಲೈಬ್ರರಿಯಲ್ಲಿ ಇರುವ ಪುಸ್ತಕಗಳನ್ನು ಓದಿ ಮತ್ತು ಸಿನಿಮಾಗಳನ್ನು ನೋಡಿ, ಅವುಗಳ ಕುರಿತು- ವಿಮರ್ಶೆ ಅನ್ನಲಾಗದ ಆದರೆ ಕಥನ ಬರೆಯಲು ಬೇಕಾದ- ಅಗತ್ಯವಾಗಿ ಗಮನಿಸಬೇಕಾದ ಟಿಪ್ಪಣಿ ಬರೆಯಲು ತಿಳಿಸುವುದು. ಆರಂಭದಲ್ಲಿ ತೆಳುವಾಗಿ, ಓದಿದ ಕತೆಯನ್ನು ಮರಳಿ ಬರೆದಂತೆ ಬರೆಯುವ ಹೊಸಬರಿಗೆ, ನಿಧಾನವಾಗಿ ಅವುಗಳಲ್ಲಿ ಇರುವ ಗ್ರಾಫ್ ಗುರುತಿಸುವುದನ್ನು, ಚಿತ್ರಿಕೆಗಳ (ಷಾಟ್ಸ್) ಪಟ್ಟಿ ಮಾಡುವುದನ್ನು ಕಲಿಯುವ ಶಕ್ತಿ ಬರುತ್ತದೆ.
ಆ ಹಂತ ಕೆಲವರಿಗೆ ಎರಡು ಮೂರು ತಿಂಗಳಲ್ಲಿ ಸಾಧ್ಯವಾದರೆ, ಕೆಲವರಿಗೆ ವರ್ಷಗಳ ಅವಧಿ ದಾಟಬಹುದು. ನಂತರದ ಕೆಲಸ ನಮ್ಮ ತಂಡ ಬೇರೆ ಬೇರೆ ಚಿತ್ರಕತೆಗಳನ್ನು ಸಿದ್ಧಪಡಿಸುವಾಗ ನಡೆಸುವ ಚರ್ಚೆಗಳಲ್ಲಿ ಹೊಸಬರಿಗೆ ಹಾಜರಿದ್ದು, ಟಿಪ್ಪಣಿ ಮಾಡಲು ಅವರಿಗೆ ಹೇಳುವುದು. ಈ ಪ್ರಯೋಗದಿಂದ ಹೊಸಬರಿಗೆ ತಾವು ನೋಡುತ್ತಿದ್ದ ಸಿನಿಮಾ, ಓದುತ್ತಿದ್ದ ಕತೆ, ಕಾದಂಬರಿ ಅರ್ಥಗ್ರಹಿಕೆ ಬದಲಾಗಲು ಆರಂಭ ಆಗುತ್ತದೆ. ಈ ಹಂತ ಸಂಪೂರ್ಣ ದಾಟುವ ಮೊದಲೇ ಅವರಿಗೆ ನಾವೇ ಮಾಡಬೇಕು ಎಂದುಕೊಂಡಿರುವ ಕಥೆಯೊಂದನ್ನು ಕೊಟ್ಟು, ಸ್ವತಂತ್ರವಾಗಿ ಚಿತ್ರಕತೆ ಬರೆಯಲು ಹೇಳುತ್ತೇವೆ. ಬರೆದರೆ ಮಾತ್ರ ಸಂಬಳ ಸಿಗುತ್ತದೆ ಎಂದು ತಿಳಿಸುತ್ತೇವೆ. ಬದುಕುವ ಹಸಿವು ಆಯಾ ಹೊಸಬರಿಂದ ಬರೆಸುತ್ತದೆ. ಅದರಿಂದ ಬರುವ ಮೊದಲ ಬರಹ ಸಂಪೂರ್ಣ ತಪ್ಪೇ ಆಗಿರಬಹುದು. ಆ ತಪ್ಪು ಸರಿಪಡಿಸುತ್ತಾ, ಅದರಲ್ಲಿ ಇರುವ ಹೊಸತನ್ನು ಮೆಚ್ಚುತ್ತಾ ಪೂರ್ಣ ಪ್ರಮಾಣದ ಚಿತ್ರಕಥೆಯನ್ನು ನಾವು ರೂಪಿಸುವಾಗ ಹೊಸಬರಿಗೆ ಬೃಹತ್ ಅನುಭವ ಸಹಿತ ಪಾಠ ಆಗುತ್ತದೆ. ಹೀಗೆ ಬರೆಯುತ್ತಾ, ಎಡವುತ್ತಾ ಏದುಸಿರು ಬಿಟ್ಟು ಓಡುತ್ತಾ ಹೊಸಬರು ಕೆಲಸ ಕಲಿಯಲು ಆರಂಭಿಸುತ್ತಾರೆ.
‘ಅಲ್ಲಿಂದಾಚೆಗೆ ಹೊಸಬರಿಗೆ ಚಿತ್ರೀಕರಣದಲ್ಲಿ ಭಾಗವಹಿಸಲು ಹೇಳಲಾಗುತ್ತದೆ. ಆಗ ಚಿತ್ರ ತಯಾರಿಯ ನೇರ ಅನುಭವ ಹೊಸಬರಿಗೆ ಮತ್ತಷ್ಟು ಕಲಿಕೆ ನೀಡುತ್ತದೆ. ನಂತರ ಸಂಕಲನ ವಿಭಾಗದಲ್ಲಿ ಕೆಲಸ ಮಾಡುವಾಗ ಹೊಸಬರಿಗೆ ಚಿತ್ರ ತಯಾರಿಯ ದೊಡ್ಡ ಸತ್ಯಗಳು ಅರಿವಾಗತೊಡಗುತ್ತದೆ. ಹೀಗೆ ದೃಶ್ಯ ಮಾಧ್ಯಮದ ಎಲ್ಲಾ ಮಜಲುಗಳನ್ನು ಕಲಿತವರಿಗೆ ದಿಢೀರನೆ ದೊಡ್ಡ ಜವಾಬ್ದಾರಿ ಕೊಟ್ಟು ಸ್ವತಂತ್ರವಾಗಿ ಕೆಲಸ ಮಾಡಲು ಹಚ್ಚಲಾಗುತ್ತದೆ. ಆಗ ಅವರು ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ನಾವೇ ಸರಿಪಡಿಸಿ, ಕೃತಿ ತಯಾರಿ ಆದಾಗ ಹೊಸಬರು ಬೃಹತ್ ಅನುಭವ ಕೋಶ ಹೊಂದಿದವರಾಗಿರುತ್ತಾರೆ.
‘ಈ ಕ್ರಮದಲ್ಲಿ ನನ್ನ ತಂಡದ ಭಾಗವಾಗಿ ಚಿತ್ರಕತೆ, ಸಂಭಾಷಣೆ ಬರೆಯುವುದನ್ನು ಕಲಿತವರ ಬೃಹತ್ ಪಟ್ಟಿಯನ್ನು ಕೊಡಬಹುದು. ಅವರಲ್ಲಿ ಕೆಲವರು ಈಗಾಗಲೇ ಕತೆ, ಕವನ ಬರೆಯುವುದನ್ನು ಕಲಿತಿದ್ದವರು ನಮ್ಮ ತಂಡದಲ್ಲಿ ಚಿತ್ರಕತೆ ಬರೆಯುವುದನ್ನು ರೂಢಿಸಿಕೊಂಡವರು; ಇನ್ನು ಹಲವರು ಏನನ್ನೂ ಸರಿಯಾಗಿ ಬರೆಯಲು ಕಲಿತಿಲ್ಲದವರು ನಮ್ಮ ತಂಡದ ಜೊತೆಗೆ ಕೆಲಸ ಮಾಡುತ್ತಾ ಇಂದು ನಾಡಿನ ಖ್ಯಾತನಾಮ ಬರಹಗಾರರಾಗಿದ್ದಾರೆ.
‘ಈ ಪ್ರೊಸೆಸ್ಸನ್ನು ಸರಳವಾಗಿ ಹೀಗೆನ್ನಬಹುದು; ಈಜು ಬರದವನನ್ನು ಒಮ್ಮೆಗೇ ನೀರಿಗೆ ತಳ್ಳುವುದು. ಆಗ ಬದುಕುವ ಅನಿವಾರ್ಯವೇ ಆಯಾ ವ್ಯಕ್ತಿಗೆ ಕೈ ಕಾಲು ಬಡಿಯುತ್ತಾ ಈಜುವುದನ್ನು ಕಲಿಸುತ್ತದೆ. ಈ ಬಗೆಯ ಪ್ರಯೋಗದಿಂದ ಈವರೆಗೆ ನಮ್ಮ ತಂಡದ ಮೂಲಕ ಹೊರಬಂದಿರುವ ದೊಡ್ಡ ಪಡೆಯೇ ಇದೆ ಎಂಬುದು "ಬರೆಯುವುದನ್ನು ಕಲಿಸಲು ಸಾಧ್ಯ" ಎಂದು ಸಾಬೀತುಪಡಿಸುತ್ತದೆ.
‘ಇದೇ ಪ್ರೊಸೆಸ್ ಮೂಲಕ ಸೋತು ಹತಾಶರಾಗಿದ್ದ ಮತ್ತು ಅವಕಾಶ ಇಲ್ಲದಂತಾಗಿದ್ದ ನಿರ್ದೇಶಕರನ್ನು ಮರಳಿ "ಯಶಸ್ವಿ ನಿರ್ದೇಶಕರು" ಎನಿಸಿಕೊಳ್ಳುವಂತೆ ಮಾಡಿದ ಉದಾಹರಣೆಗಳು ಸಹ ಹೇರಳವಾಗಿವೆ.’
ಬಿ. ಸುರೇಶರ ಅಭಿಪ್ರಾಯವನ್ನು ವಿಸ್ತರಿಸುವ ಹಿರಿಯ ಲೇಖಕ ಉದಯಕುಮಾರ ಹಬ್ಬು ಹಾಗೂ ಕತೆಗಾರ, ನಿರ್ದೇಶಕ ಮೌನೇಶ್ ಬಡಿಗೇರ್ ಮಾತುಗಳನ್ನು ಕಳೆದ ವಾರದ ಬರಹದ (READ HERE) ಕಾಮೆಂಟ್ಸ್ ವಿಭಾಗದಲ್ಲಿ ನೀವು ಗಮನಿಸಿರಬಹುದು.
ಕೊನೆ ಟಿಪ್ಪಣಿ
ಮತ್ತೆ ಬಂದ ಗಾಳಿ ಬೆಳಕು!
ಶೇಕ್‌ಸ್ಪಿಯರನ ‘ರೋಮಿಯೋ ಅ್ಯಂಡ್ ಜೂಲಿಯೆಟ್’ ನಾಟಕದಲ್ಲಿ ಜೂಲಿಯಟ್ ರೋಮಿಯೋಗೆ ಪ್ರಶ್ನೆಯೆಸೆದು ತಾನೇ ಉತ್ತರ ಕೊಡುವ ಕೋಮಲ ಆಟ ನೋಡಿ:
What is in a name? That which we call a rose
By any name would smell as sweet’
ಜೂಲಿಯಟ್ ಬಣ್ಣನೆಯನ್ನು ಓದಿರುವಂತೆ ಕಾಣುವ ಕವಯಿತ್ರಿ ಗರ್ಟ್ರೂಡ್ ಸ್ಟೈನ್ ‘ಸೇಕ್ರೆಡ್ ಎಮಿಲಿ’ ಪದ್ಯದಲ್ಲಿ ಈ ರೂಪಕವನ್ನು ಇನ್ನಷ್ಟು ಸುಂದರವಾಗಿಸಿದಳು: Rose is a rose is a rose is a rose. ಗದ್ಯದಲ್ಲಿ ಕಿರಿಕಿರಿ ಎನ್ನಿಸುವ ಪುನರಾವರ್ತನೆ ಪದ್ಯದಲ್ಲಿ ಆಟವಾಗಿ, ಆನಂದ ಹುಟ್ಟಿಸಬಲ್ಲದು! ಈ ಸಾಲಿನಲ್ಲಿ ಮೊದಲು ಬರುವ Rose ಒಬ್ಬ ಹುಡುಗಿಯ ಹೆಸರು ಕೂಡ ಎಂದು ಊಹಿಸಬಹುದು. ಈ ಪದ್ಯ ಪ್ರಖ್ಯಾತ ಅಮೆರಿಕನ್ ಕವಯಿತ್ರಿ ಎಮಿಲಿ ಡಿಕಿನ್ಸನ್ ಕುರಿತಾದದ್ದು ಎನ್ನುವವರಿದ್ದಾರೆ. ಈ ಸಾಲನ್ನು ಶೇಕ್‌ಸ್ಪಿಯರನದೆಂದೇ ತಿಳಿದವರಿದ್ದಾರೆ. ಹಾಗೇ ತಿಳಿದಿದ್ದ ನನ್ನನ್ನೂ ಗೂಗಲ್ ತಿದ್ದಿದೆ!
ಇದ್ದಕ್ಕಿದ್ದಂತೆ ಈ ಬಗೆಯ ಹೆಸರಿನ ರೂಪಕಗಳು ನೆನಪಾಗಲು ಈ ಅಂಕಣಕ್ಕೆ ‘ಗಾಳಿ ಬೆಳಕು’ ಎಂಬ ಹೆಸರು ಬಂದ ಗಳಿಗೆ ಕೂಡ ಕಾರಣ. ಕಳೆದ ವಾರ ಸಂಜೆ, ‘ನಿಮ್ಮ ಬ್ಲಾಗಿನಲ್ಲಿ ನಿಮ್ಮ ಹಳೆಯ ‘ಗಾಳಿ ಬೆಳಕು’ ಮತ್ತೆ ಮುಂದುವರಿದಿದೆ’ ಎಂದು ಗೆಳೆಯ, ವಿಮರ್ಶಕ ಸಿರಾಜ್ ಅಹಮದ್ ಹೇಳಿದೇಟಿಗೇ, ‘ಯಾರಪ್ಪ ನೀನು- ನನ್ನೊಳಗಿನ ಬಯಕೆಯನ್ನೇ ಬಡಿದೆಬ್ಬಿಸುತ್ತಿರುವೆ?’ ಎಂಬ ಎಲಿಯಟ್‌ನ ‘ಮರ್ಡರ್ ಇನ್ ದಿ ಕೆಥೆಡ್ರಲ್’ನ ನಾಟಕದ ಥಾಮಸ್ ಬೆಕೆಟ್ ಉದ್ಗರಿಸಿದ ಸಾಲು ನೆನಪಾಗತೊಡಗಿತು. ಯಾಕೆಂದರೆ, ಗಾಳಿ ಬೆಳಕು ಎಂಬ ಹೆಸರನ್ನು ಈ ಅಂಕಣಕ್ಕೂ ಇಡಬೇಕೆಂಬುದು ನನ್ನ ಒಳಾಸೆಯೂ ಆಗಿತ್ತು!
‘ಗಾಳಿ ಬೆಳಕು’ ಅಂಕಣ ಮೊದಲು ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲಿ ಶುರುವಾಗಿ, ಆಮೇಲೆ ಚಂದ್ರಶೇಖರ ಐಜೂರ್ ಸಂಪಾದಕತ್ವದ ‘ಕನ್ನಡ ಟೈಮ್ಸ್’ ಪತ್ರಿಕೆಯಲ್ಲಿ ಮುಂದುವರಿದು, ಪುಸ್ತಕವಾಯಿತು. ಈಗ ಅದೇ ಹೆಸರನ್ನು ಮತ್ತೆ ಕಂಡ ಇಂಗ್ಲಿಷ್ ಪ್ರೊಫೆಸರುಗಳು ಶೇಕ್‌ಸ್ಪಿಯರ್, ಗರ್ಟ್ರೂಡ್ ಸ್ಟೈನ್ ಇಬ್ಬರ ಮಾತನ್ನೂ ಪಲ್ಲಟಗೊಳಿಸಿ, ‘ಎ ಥಾರ್ನ್ ಈಸ್ ಎ ಥಾರ್ನ್ ಈಸ್ ಎ ಥಾರ್ನ್ ಈಸ್ ಎ ಥಾರ್ನ್, ಕಾಲ್ ಇಟ್ ಬೈ ಎನಿ ನೇಮ್’ ಎಂದು ಆಡಿಕೊಳ್ಳದಿರಲಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಹಾಲಿವುಡ್ ಸ್ಕ್ರೀನ್‌ಪ್ಲೇ ಗುರು ಸಿಡ್ ಫೀಲ್ಡ್ ಜಗತ್ತಿನ ಹಲವೆಡೆ ಸಿನಿಮಾಕ್ಕೆ ಚಿತ್ರಕತೆಗಳನ್ನು ಬರೆಯುವ ಕ್ಲಾಸುಗಳನ್ನು ನಡೆಸುತ್ತಿದ್ದ. ಹಲವು ದಿಕ್ಕುಗಳಿಂದ ಉದಯೋನ್ಮುಖ ಚಿತ್ರಕಥಾಲೇಖಕರು ಬಂದು ಸೇರಿಕೊಳ್ಳುತ್ತಿದ್ದ ಆ ಕ್ಲಾಸುಗಳಲ್ಲಿ ದೊಡ್ಡ ದೊಡ್ಡ ಕಾದಂಬರಿಕಾರರಿಂದ ಕಲಿತ ಗಂಭೀರ ಪಾಠಗಳನ್ನು ಕೂಡ ಸಿಡ್ ಫೀಲ್ಡ್ ಬಳಸುತ್ತಿದ್ದ. ಒಂದು ಕ್ಲಾಸಿನಲ್ಲಿ ಸಿಡ್ ಫೀಲ್ಡ್ ಅಮೆರಿಕದ ಮಹತ್ವದ ಕಾದಂಬರಿಕಾರ ಹೆನ್ರಿ ಜೇಮ್ಸ್ ರೂಪಿಸಿದ ‘ಪಾತ್ರ ಪ್ರಕಾಶ ತತ್ವ’ (ಥಿಯರಿ ಆಫ್ ಇಲ್ಯುಮಿನೇಶನ್) ಪರಿಕಲ್ಪನೆಯನ್ನು ಬಳಸಿದ. ಪ್ರಖ್ಯಾತ ‘ಪೋರ್ಟ್ರೈಟ್ ಆಫ್ ಎ ಲೇಡಿ’ ಕಾದಂಬರಿ ಬರೆದ ಹೆನ್ರಿ ಜೇಮ್ಸ್, ಪ್ರತಿ ಪಾತ್ರಗಳ ಜೊತೆಗಿನ ಮಾತುಕತೆ, ಪ್ರತಿಕ್ರಿಯೆಗಳು ಕೇಂದ್ರ ಪಾತ್ರವನ್ನು ಬೆಳಗಿಸುವ ರೀತಿಯನ್ನು ತನ್ನ ಕಾದಂಬರಿ ಬರವಣಿಗೆಯಲ್ಲಿ ಕಂಡುಕೊಂಡಿದ್ದ. ಸಿಡ್ ಫೀಲ್ಡ್ ಈ ತತ್ವವನ್ನು ಸಿನಿಮಾಕ್ಕೂ ವಿಸ್ತರಿಸಿಕೊಂಡು ಉಳಿದ ಪಾತ್ರಗಳ ಜೊತೆಗಿನ ಮುಖಾಮುಖಿಗಳು ಕೇಂದ್ರ ಪಾತ್ರವನ್ನು ಬೆಳಗಿಸುವ ರೀತಿಯನ್ನು ತೋರಿಸಲೆತ್ನಿಸಿದ.
ಇಂಥದೊಂದು ಕ್ಲಾಸಿನಲ್ಲಿ ಸಿಡ್ ಫೀಲ್ಡ್ ಜಗತ್ತಿನ ಶ್ರೇಷ್ಠ ಕಾದಂಬರಿಕಾರರ ಸಾಲಿನಲ್ಲಿರುವ ಜೇಮ್ಸ್ ಜಾಯ್ಸ್ ಮಾತೊಂದನ್ನು ಉಲ್ಲೇಖಿಸುತ್ತಾನೆ: ‘ಬರೆಯುವುದೆಂದರೆ ಪರ್ವತ ಹತ್ತಿದ ಹಾಗೆ. ಪರ್ವತವನ್ನೇರುವಾಗ ನೀವು ನೋಡುವುದು ಆ ಕ್ಷಣಕ್ಕೆ ನಿಮ್ಮ ಎದುರಿಗಿರುವ ಬಂಡೆಯನ್ನು ಹಾಗೂ ನಿಮ್ಮ ಹಿಂದಿರುವ ಬಂಡೆಯನ್ನು. ನೀವು ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುತ್ತಿದ್ದೀರಿ…ಇದ್ಯಾವುದೂ ನಿಮಗೆ ಕಾಣುವುದಿಲ್ಲ.’
ಅದೇ ಆಗ ಸ್ಕ್ರೀನ್ ಪ್ಲೇ ಕ್ಷೇತ್ರದಲ್ಲಿ ತಡವರಿಸುತ್ತಾ ನಡೆಯಲೆತ್ನಿಸುತ್ತಿದ್ದ ನನಗೆ ಸಿಡ್ ಫೀಲ್ಡ್ ಪುಸ್ತಕಗಳ ಪಾಠಗಳ ಜೊತೆಗೇ ಹೆನ್ರಿ ಜೇಮ್ಸ್, ಜೇಮ್ಸ್ ಜಾಯ್ಸ್ ಒಳನೋಟಗಳಿಂದ ಝಗ್ಗಂತ ಬೆಳಕಾಯಿತು! ಅವುಗಳಿಂದ ಕಲಿಯುತ್ತಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ರಿಫ್ರೆಶರ್ ಕೋರ್ಸುಗಳಲ್ಲಿ ಅಧ್ಯಾಪಕ, ಅಧ್ಯಾಪಕಿಯರಿಗೆ ಈ ಬೆಳಕನ್ನು ಹಂಚಿಕೊಂಡ ನೆನಪಿದೆ. 2020ರ ಸುಮಾರಿಗೆ ಸಿಡ್ ಫೀಲ್ಡ್ ಪುಸ್ತಕಗಳು ನನಗೆ ಸಿಕ್ಕಿದ್ದು ಕೂಡ ಆಕಸ್ಮಿಕ. ಚಿತ್ರಕತೆಯೊಂದನ್ನು ಬರೆಯಲು ಪ್ರಯತ್ನಿಸುತ್ತಿದ್ದ ನನಗೆ ಈ ಥರದ ಬರವಣಿಗೆಗೆ ಆವರೆಗಿನ ನನ್ನ ನಾಟಕ ಬರವಣಿಗೆಯ ಅನುಭವವಷ್ಟೇ ಸಾಕಾಗಲಿಕ್ಕಿಲ್ಲ ಎಂಬುದು ಮನದಟ್ಟಾಗತೊಡಗಿತು. ಆ ತಡವರಿಕೆಯ ಕಾಲದಲ್ಲಿ ಗೆಳೆಯ, ಚಲನಚಿತ್ರ ನಿರ್ದೇಶಕ ರಾಘು ಶಿವಮೊಗ್ಗ ಪ್ರತಿ ಪುಟದ ಬರವಣಿಗೆಯಲ್ಲೂ ಕಲಿಸಿದ ದೃಶ್ಯಪಾಠಗಳು ಮೊನ್ನೆ ತಾನೇ ಕಲಿತ ಪಾಠಗಳಂತಿವೆ. ಇದರ ಜೊತೆಗೆ ಗೆಳೆಯ, ನಟ ಕಿರಣ್ ನಾಯಕರ ನಟನೆಯ ಅನುಭವದಿಂದ ಹುಟ್ಟಿದ ಪ್ರತಿಕ್ರಿಯೆಗಳೂ ಸೇರಿಕೊಂಡವು; ಈ ಮಾತುಕತೆಗಳ ಬೆಳಕಿನಲ್ಲಿ ಚಿತ್ರಕತೆ ಬರೆಯತೊಡಗಿದಾಗ ಬರವಣಿಗೆಯ ಹೊಸ ಕಲೆಯೊಂದನ್ನು ಕಲಿಯಬಹುದು ಎಂಬ ನಂಬಿಕೆ ಬರತೊಡಗಿತು; ಸಿಡ್ ಫೀಲ್ಡ್ ಬರೆದ ‘ಸ್ಕ್ರೀನ್‌ಪ್ಲೇ’, ‘ದ ಸ್ಕ್ರೀನ್ ರೈಟರ್ಸ್ ವರ್ಕ್ ಬುಕ್’, ‘ಗೋಯಿಂಗ್ ಟು ದ ಮೂವೀಸ್’ ಪುಸ್ತಕಗಳನ್ನು ಓದುತ್ತಾ ಇನ್ನಷ್ಟು ಸ್ಪಷ್ಟತೆ ಬರತೊಡಗಿತು. ಸ್ಕ್ರೀನ್‌ಪ್ಲೇ ವರ್ಕ್ ಶಾಪ್ ಮಾಡುತ್ತಾ ಸಿಡ್ ಫೀಲ್ಡ್ ರೂಪಿಸಿದ ಈ ಪುಸ್ತಕಗಳು ನನಗೆಂದೂ ಗೊತ್ತಿರದ ಹೊಸ ಬಗೆಯ ಬರವಣಿಗೆಯನ್ನು, ಸಿನಿಮಾ ಬರವಣಿಗೆಯ ಒಳಹೊರಗನ್ನು, ಕಾಣಿಸತೊಡಗಿದವು.
ಸಿಡ್ ಫೀಲ್ಡ್ ಬಗ್ಗೆ ಇನ್ನಷ್ಟು ಗೌರವ ಮೂಡತೊಡಗಿದ್ದು ದೊಡ್ಡ ದೊಡ್ಡ ನಿರ್ದೇಶಕರು, ಮಹತ್ವದ ಸಿನಿಮಾಗಳು ಹಾಗೂ ಕಾದಂಬರಿಕಾರರಿಂದ ಕಲಿತ ಬರವಣಿಗೆಯ ಪಾಠಗಳನ್ನು ಅವನು ತನ್ನ ಸ್ಕ್ರೀನ್‌ಪ್ಲೇ ಕ್ಲಾಸುಗಳಲ್ಲಿ ಬಳಸುವ ಕ್ರಿಯೇಟಿವ್ ಪ್ರಯೋಗ ಕಂಡಾಗ. ಸಿಡ್ ಫೀಲ್ಡ್ ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡಿಕೊಳ್ಳುತ್ತಾ ಹತ್ತಾರು ಸಲ ತಿದ್ದಿ ಬರೆದ ಚಿತ್ರಕತೆಯನ್ನು ರಾಘು ಶಿವಮೊಗ್ಗ ಹಾಗೂ ನಟ ಕಿಶೋರ್ ಇಬ್ಬರೂ ಒಪ್ಪಿದ ಮೇಲೆ, ವೃತ್ತಿಪರ ನಿರ್ದೇಶಕರಾದ ಬಿ.ಸುರೇಶ್, ಕೃಷ್ಣ ಮಾಸಡಿ, ಕಬಡ್ಡಿ ನರೆಂದ್ರಬಾಬು, ನಟರಾಜ್ ಹೊನ್ನವಳ್ಳಿಯವರ ಎದುರು ಕೂಡ ಓದಿ ಪಾಸಾದೆ! ನಾವು ಹಲ ಬಗೆಯ ಬರವಣಿಗೆಗಳನ್ನು ನಿಜಕ್ಕೂ ಒಂದು ಮಟ್ಟದವರೆಗಾದರೂ ಕಲಿಯಬಹುದು ಎಂದು ಸೂಚಿಸಲು ಮಾತ್ರ ಈ ಅನುಭವವನ್ನು ಇಲ್ಲಿ ಹೇಳಿರುವೆ. ಹಾಗೆ ಹೇಳಲು ಕಳೆದ ವಾರದ ಅಂಕಣದಲ್ಲಿ ಪ್ರಕಟವಾದ ‘ಬರೆವ ಕಲೆ: ಕಲಿಯಬಹುದೆ? ಕಲಿಸಬಹುದೆ?’ (READ HERE) ಎಂಬ ಪ್ರಶ್ನೆಗಳಿಗೆ ಬಂದ ಪ್ರತಿಕ್ರಿಯೆಗಳ ಕಚಗುಳಿಯೂ ಪ್ರೇರಣೆಯಾಗಿದೆ! ಆ ಪ್ರತಿಕ್ರಿಯೆಗಳನ್ನು ಆ ಬರಹದ ಕಾಮೆಂಟ್ಸ್ ವಿಭಾಗದಲ್ಲೂ ನೀವು ನೋಡಬಹುದು.
ಈ ನಡುವೆ ಕಂಡ ಕವಿ ಚಂದ್ರಶೇಖರ ತಾಳ್ಯರ ಏಕಲವ್ಯ ಸಾಧನೆಯ ಅನುಭವ ಬರವಣಿಗೆಯ ಕಲಿಕೆಯ ಮತ್ತೊಂದು ಲೋಕವನ್ನು ತೋರಿಸುವಂತಿದೆ:
‘ನಾನು ಬರೆಯುವುದನ್ನು ಕಲಿತ ರೀತಿ ವಿಚಿತ್ರವಾಗಿದೆ, ಹಳ್ಳಿಯಲ್ಲಿ ಬೆಳೆದ ನನಗೆ ಬರಹ ಕಲೆಯ ಮರ್ಮ ತಿಳಿಯುವುದು ಅಷ್ಟು ಸಲೀಸಾಗಿರಲಿಲ್ಲ. ನಮ್ಮ ಮನೆಯಲ್ಲಿ ಮೊದಲ ಅಕ್ಷರಸ್ಥ ನಾನೇ. ಹೇಗೋ ಏನೋ ಮಹಾಕವಿ ಕುವೆಂಪು ಅವರ ವಿಳಾಸ ಹುಡುಕಿ ಅವರ ಯಾವುದಾದರೂ ಪುಸ್ತಕವನ್ನು ವಿ.ಪಿ.ಪಿ. ಮೂಲಕ ಕಳಿಸಿಕೊಡುವಂತೆ ಪತ್ರ ಬರೆದು ಪ್ರಾರ್ಥಿಸಿದ್ದೆ. ಕುವೆಂಪು ಅವರು ಮರುಟಪಾಲಿನಲ್ಲೇ ‘ಕೊಳಲು’, ‘ಬೊಮ್ಮನಹಳ್ಳಿ ಕಿಂದರಿಜೋಗಿ’ ಪುಸ್ತಕಗಳನ್ನು ಕಳಿಸಿದ್ದರು; ‘ಬೊಮ್ಮನಹಳ್ಳಿ ಕಿಂದರಿಜೋಗಿ’ಗೆ ಹಣ ತೆಗೆದುಕೊಳ್ಳದೆ ‘ಆಶೀರ್ವಾದ’ ಎಂದು ಬರೆದು ತಮ್ಮ ಸಹಿ ಹಾಕಿ ಕಳಿಸಿದ್ದರು.
‘ನಂತರ ನಾನು ವರಕವಿ ಬೇಂದ್ರೆಯವರ ಧಾರವಾಡದ ‘ಶ್ರೀಮಾತಾ’ಕ್ಕೆ ಅವರ ‘ಮೇಘದೂತ’ ಮತ್ತು ‘ಗರಿ’ ಸಂಕಲನಗಳನ್ನು ಕೊಂಡುಕೊಂಡು ಹೋಗಿದ್ದೆ. ಅಲ್ಲಿ ಅವರು ‘ಮೇಘದೂತ’ದ ಕೆಲವು ಭಾಗವನ್ನು, ‘ಗರಿ’ಯ ಕೆಲವು ಕವನಗಳನ್ನು ಸುಮಾರು ಅರ್ಧ ಗಂಟೆ ವಾಚಿಸಿ ಆಶೀರ್ವಾದ ಮಾಡಿ ಕಳಿಸಿಕೊಟ್ಟರು. ಇದೆಲ್ಲ ನಡೆದದ್ದು ನನ್ನ ಹೈಸ್ಕೂಲ್ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿ. ಮುಂದೆ ನಾನು ಈ ಮಹಾಕವಿಗಳಿಬ್ಬರೂ ಬರೆವ ರೀತಿಯಲ್ಲಿ ಬರೆಯಲು ಪ್ರಯತ್ನಿಸಿದೆ. ನಂತರ ನವ್ಯರು, ಅದರಲ್ಲೂ ಲಂಕೇಶ್, ಚಂದ್ರಶೇಖರ ಪಾಟೀಲ (ಚಂಪಾ), ಬರೆದಂತೆ ಬರೆಯಲು ಯತ್ನಿಸಿದೆ. ಇಲ್ಲಿಂದ ನಿಧಾನವಾಗಿ ಒಂದು ತಿಳಿವು ಮೂಡುತ್ತಾ ನನ್ನ ದಾರಿ ಕಂಡುಕೊಳ್ಳಲು ಕಾತರಿಸಿದೆ.
https://youtube.com/@bendrepedia
‘ಈಗಲೂ ನಾನು ನನ್ನ ನಂತರದ ಪೀಳಿಗೆಯ ಬರಹಗಾರರಿಂದಲೂ ಪ್ರಭಾವಗೊಂಡಿರುವುದೂ ಉಂಟು. ಕವಿತೆ ಅಥವಾ ಯಾವುದೇ ಪ್ರಕಾರದ ಬರವಣಿಗೆಯ ಕಲಿಕೆಗೆ ಕೊನೆ ಇಲ್ಲ. ಹೀಗೆ ಕಲಿಯುತ್ತಲೇ ನಮ್ಮದೇ ಆದ ಈಡಿಯಂ ಒಂದನ್ನು ಕಂಡುಕೊಳ್ಳುವುದು ಕ್ರಮ ಅನಿಸುತ್ತದೆ.’
ಕ್ರಮೇಣ ಚಂದ್ರಶೇಖರ ತಾಳ್ಯ ಒಬ್ಬ ಒಳ್ಳೆಯ ಕವಿಯಾಗಿ ಬೆಳೆದ ಹಾದಿ ಇದು.
ನಾವು ನಂಬಿದ ಮಾರ್ಗಗಳು ಅಥವಾ ಗ್ರಹಿಕೆಗಳ ಬಗೆಗೆ ಒಂದಿನಿತೂ ಸಂದೇಹವಿಲ್ಲದ ಬದ್ಧತೆ ನಮ್ಮನ್ನು ‘ಕನ್ಸರ್ವೇಟಿಸಂ’ ಕಡೆಗೆ, ಅಂದರೆ ನಾವು ಹಿಂದೊಮ್ಮ ನಂಬಿದ್ದೇ ಸರಿಯೆಂದು ತಿಳಿಯುವ ಅತಿಸಾಂಪ್ರದಾಯಿಕತೆಯ ಕಡೆಗೆ, ಜಗ್ಗುತ್ತಿರುತ್ತದೆ; ಆಗ ಹೊಸ ಪ್ರಯೋಗಗಳ, ಹೊಸ ಸತ್ಯಗಳ ಸಾಧ್ಯತೆಗಳ ಬಗೆಗೆ ನಮ್ಮ ಮನಸ್ಸು ಮುಚ್ಚಿಕೊಳ್ಳುತ್ತದೆ; ಡಿಮ್ಮಾಗತೊಡಗುತ್ತದೆ. ಚಿತ್ರಕತೆ ಬರೆಯುವ ಕಲೆಯನ್ನು ತಕ್ಕಮಟ್ಟಿಗೆ ಕಲಿತ ನನ್ನ ಅನುಭವ ಹಾಗೂ ಕವಿತೆ ಬರೆಯುವುದನ್ನು ಕಲಿತ ತಾಳ್ಯರ ಅನುಭವಗಳು ಬರೆವ ಕಲೆಯನ್ನು ಕಲಿಯಬಹುದು ಹಾಗೂ ನಮಗರಿವಿಲ್ಲದೆ ಕಲಿಸಲೂಬಹುದು ಎಂದು ಸಣ್ಣಗೆ ಸೂಚಿಸುವಂತಿದೆ.
ಹೀಗೆ ಯಾರು ಯಾರಿಗಾದರೂ ಕಲಿಸುತ್ತಲೇ ಇರಬಹುದು ಎಂಬುದನ್ನು ನಾವು ನಿತ್ಯ ನೋಡುತ್ತಿರುತ್ತೇವೆ. ಒಳ್ಳೆಯ ಸಿನಿಮಾದಿಂದ ಕತೆ ಬರೆಯುವವರು ಕಲಿಯಬಲ್ಲರು; ಹಾಗೆಯೇ ಕಾದಂಬರಿ ಬರೆಯುವವರಿಂದ ಚಿತ್ರ ಬರೆಯುವವರು; ನಾಟಕ ನಿರ್ದೇಶಕರಿಂದ ನಾಟಕಕಾರರು; ಪೇಂಟರ್ ಸಾಲ್ವೆಡಾರ್ ಡಾಲಿಯಿಂದ ಕವಯಿತ್ರಿಯರು;…ಅಥವಾ ಬಡಗಿ, ಶಿಲ್ಪಿಗಳ ಅನುದಿನದ ಏಕಾಗ್ರ ಕೆತ್ತನೆಯಿಂದ ಕವಿ…ಹೀಗೆ ಕಲಿಯುವ ಕೆಲಸ ನಡೆಯುತ್ತಲೇ ಇರುತ್ತದೆ. ಏನನ್ನಾದರೂ ಕಲಿಯಬಲ್ಲೆ ಎಂದು ಹೊರಡುವ ಇಪ್ಪತ್ತೊಂದನೆಯ ಶತಮಾನದ ಎಳೆಯರ ಝೀಲ್ ನೋಡಿದ ಹಿರಿಯರಿಗೆ ಕೂಡ ಬರೆಯುವುದನ್ನು ಕಲಿಯಬಹುದು ಅಥವಾ ಕಲಿಸಬಹುದು ಎಂಬ ಹುಮ್ಮಸ್ಸು ಹುಟ್ಟಬಲ್ಲದು! ಅದರ ಜೊತೆಗೆ, ‘ಕಲಿಸದಿದ್ದರು ಕೂಡ ಕಲಿತಿಲ್ಲ ಎಂಬ ನೆನಪುಳಿಸು’ ಎಂಬ ಅಡಿಗರ ‘ಪ್ರಾರ್ಥನೆ’ಯ ಮನವಿ ನೆನಪಾದರೆ, ಆ ವಿವೇಕ ನಮ್ಮನ್ನು ಸದಾ ಎಚ್ಚರದಲ್ಲಿಡಬಲ್ಲದು!
ಈ ಮಧ್ಯೆ ಮೂವರು ವಿಭಿನ್ನ ಸಿನಿಮಾ ನಿರ್ದೇಶಕರು ಈ ಬಗೆಯ ಕಲಿಕೆ ಕುರಿತು ಕೊಟ್ಟ ಮೂರು ದಿಕ್ಕಿನ ಪ್ರತಿಕ್ರಿಯೆಗಳು ಈ ಬಗ್ಗೆ ಬೇರೆ ಬೇರೆ ದಿಕ್ಕಿನಿಂದ ಯೋಚಿಸುವಂತೆ ಕೆಣಕತೊಡಗಿವೆ. ಈ ಗೆಳೆಯರ ಜೊತೆಗಿನ ಮತ್ತೊಂದು ಸುತ್ತಿನ ಮಾತುಕತೆಯ ನಂತರ ಅದನ್ನೆಲ್ಲ ಮುಂದಿನ ಅಂಕಣಗಳಲ್ಲಿ ವಿಸ್ತೃತವಾಗಿ ಚರ್ಚಿಸಬಹುದೇನೋ!
ಡಯಲಾಗ್
ಲೋಕದ ವಿಸ್ಮಯ ಸೃಷ್ಟಿಗಳಾದ ಗ್ರೀಕ್ ಟ್ರ್ಯಾಜಿಡಿಗಳನ್ನೆಲ್ಲ ಅರೆದು ಕುಡಿದ ಅರಿಸ್ಟೋಫನಿಸ್ (446 ಬಿ.ಸಿ.-386 ಬಿ.ಸಿ.) ಆ ಟ್ರ್ಯಾಜಿಡಿ ನಾಟಕಕಾರರನ್ನು, ಸರ್ವಾಧಿಕಾರಿ ರಾಜರನ್ನು, ನಾಟಕ ನೋಡುವವರನ್ನು ಗೇಲಿ ಮಾಡುತ್ತಲೇ ಶ್ರೇಷ್ಠ ಕಾಮಿಡಿನಾಟಕಕಾರನಾಗಿ ಬೆಳೆದ. ‘ಕಾಮಿಡಿ ಜನಕ’ ಅರಿಸ್ಟೋಫನಿಸ್ ಗ್ರೀಕ್ ದುರಂತ ನಾಟಕಕಾರರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದ ಎಂಬುದು ಅವನ ನಾಟಕಗಳನ್ನು ನೋಡಿದರೆ ಹೊಳೆಯುತ್ತದೆ. ಈಚೆಗೆ ಅವನ ‘ದ ಬರ್ಡ್ಸ್’ ನಾಟಕ ಓದುತ್ತಿರುವಾಗ ಅವನ ಇನ್ನಿತರ ನಾಟಕಗಳನ್ನೂ ಓದದೇ ಇರಲಾಗಲೇ ಇಲ್ಲ! ‘ದ ಬರ್ಡ್ಸ್’ ನಾಟಕದಲ್ಲಿ ಒಬ್ಬ ಧಣಿ, ಅವನ ಆಳು ಇಬ್ಬರೂ ಹಕ್ಕಿಯಾಗಿ ಪರಿವರ್ತನೆಯಾಗುತ್ತಾರೆ; ಆಗ ನಡೆಯುವ ಒಂದು ಡಯಲಾಗ್:
ಯೂಲ್ಪಿಡೀಸ್: ಎಂಥಾ ಪ್ರಾಣೀನಯ್ಯ ನೀನು?
ಟ್ರಾಕಿಲಸ್: ಯಾಕಣ್ಣ! ನಾನು ಗುಲಾಮ ಹಕ್ಕಿ!
ಯೂಲ್ಪಿಡೀಸ್: ಯಾಕೆ… ಕೋಳಿ ಏನಾರ ಬಂದು ನಿನ್ನ ಮೇಲೆ ಆಕ್ರಮಣ ಮಾಡ್ತಾ?
ಟ್ರಾಕಿಲಸ್: ಇಲ್ಲ ಇಲ್ಲ! ನನ್ನ ಧಣಿ ಟಿಟ್ಟಿಭ ಹಕ್ಕಿ ಆದಾಗ, ‘ನೀನೂ ಹಕ್ಕಿ ಆಗಿ ನನ್ನ ಸೇವೆ ಮಾಡ್ಕಂಡಿರುವಂತೆ… ನನ್ ಹಿಂದೆ ಬಾ’ ಅಂದ!
ಯೂಲ್ಪಿಡೀಸ್: ಹಂಗಾರೆ ಹಕ್ಕೀಗೂ ಆಳು ಬೇಕೂನ್ನು!
ಟ್ರಾಕಿಲಸ್: ನಮ್ಮ ದಣಿ ಮನಷಾ ಆಗಿದ್ನಲ್ಲ, ಅದುಕ್ಕೆ! ಈಗ…ಅವನಿಗೆ ಕುಡಿಯೋಕೆ ಸೂಪ್ ಬೇಕೂಂದ್ರೆ ನಾನು ಕುಡಿಕೆ ತಗೊಂಡು ಓಡೋಗ್ತೀನಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಗೆಳೆಯ ಸುನಿಲ್ ಬರೆದ ಮಾತು ಚಕಿತಗೊಳಿಸುವಂತಿತ್ತು: ‘ಮರೆತ ಬರಹವ ಮತ್ತೆ ನೆನಪಿಗೆ ಬರುವಂತೆ ಮಾಡಿದ ನಿಮಗೆ…’ ಎಂದು ಶುರು ಮಾಡಿದ್ದ ಸುನಿಲ್, ತಾನು ಇಂಗ್ಲಿಷ್ ಮೇಷ್ಟರಾದ ಹೊಸದರಲ್ಲಿ ಕತೆ ಬರೆಯಲು ಪ್ರೇರೇಪಿಸಿದ್ದ ಗಳಿಗೆಯ ಬಗ್ಗೆ ಬರೆದಿದ್ದು ಮನ ಕರಗಿಸುವಂತಿತ್ತು.
ಸುನಿಲ್‌ನ ಕ್ಲಾಸಿನಲ್ಲಿ ಕೂತಿದ್ದ ಕಣ್ಣಿಲ್ಲದ ನತದೃಷ್ಟ ವಿದ್ಯಾರ್ಥಿಯೊಬ್ಬ ಕೇಳಿದ: ‘ಹುಡುಗೀರು ಹೇಗಿರ್ತಾರೆ ಸಾ…ಸ್ಪರ್ಶಕ್ಕೆ…’
ಆ ಹುಡುಗನ ‘ಭಾವಗಳಿಗೆ ಪದ ಒದಗಿಸಲು ಆರಂಭವಾದ ನೀಳ್ಗತೆ… ತರಗತಿ ಬದಲಾವಣೆಯಿಂದ ಅರ್ಧಕ್ಕೆ ನಿಂತಿತು’ ಎಂದ ಸುನಿಲ್.
‘ಅಲ್ಲೇ ಕತೆ ಇರೋದು, ಸುನಿಲ್! ಆ ಹುಡುಗನ ಪ್ರಶ್ನೆಯಿಂದಲೇ ನೀನು ಮತ್ತೆ ಕತೆ ಶುರು ಮಾಡಬಹುದು. ಸಂಭಾಷಣೆಯ ಮೂಲಕವೇ ಕತೆ ಬೆಳೆಸಬಹುದು…’ ಎಂದೆ.
ಸುನಿಲ್ ಮುಂದೆ ಏನು ಮಾಡುತ್ತಾನೋ, ಅದು ಅವನ ಕ್ರಿಯೇಟಿವಿಟಿಗೆ ಬಿಟ್ಟಿದ್ದು! ಆದರೆ ಕ್ರಿಯೇಟಿವಿಟಿಯ ಮೇಲೆ ಭಾರ ಹಾಕಿ, ಓದು, ಬರಹ, ಸ್ವಂತದ ಅನುಭವ, ಇತರರ ಅನುಭವಗಳ ಲೋಕದ ಜೊತೆಗೆ ಸೆಣಸಾಡಿ, ಶ್ರಮ ಪಡದ ಲೇಖಕರ ಸ್ಥಿತಿ ವಿಧಿಗೆ ಎಲ್ಲವನ್ನೂ ಬಿಟ್ಟ ಹಳಬರ ಸ್ಥಿತಿಯಂತೆಯೇ ಇರುತ್ತದೆಂಬುದು ಮಾತ್ರ ಖಾತ್ರಿ!
‘…ವರುಷಗಳುರುಳಿದ ನಂತರ ಇತ್ತೀಚಿನ ನಿಮ್ಮ ಬರಹಗಳು ಮತ್ತೆ ಪದಗಳ ಚಡಪಡಿಕೆಗೆ ಕಾರಣವಾಗಿ, ಈತನಕ ಚುಟುಕಗಳಲ್ಲೇ ನಿಂತಿದ್ದ ಭಾವಲಹರಿ ಬರವಣಿಗೆಯ ಸುಳಿಗೆ ಸಿಕ್ಕಿ, ‘ಜಂಗಮವಾಣಿ’ ಬಿಟ್ಟು ಮತ್ತೆ ಲೇಖನಿ ಹಿಡಿಯುವಂತೆ ಮಾಡಿದ ನಿಮಗೆ ಥ್ಯಾಂಕ್ಸ್’ ಎಂದು ಸುನಿಲ್ ಪತ್ರ ಮುಗಿಯುತ್ತದೆ.
ಸುನಿಲ್ ಮಾತಿನ ಮೂಲಕ ಈ ಸಲದ ಅಂಕಣಕ್ಕೆ ‘ಬರೆವ ಕಲೆಯನ್ನು ಕಲಿಸಬಹುದೆ, ಕಲಿಬಹುದೆ?’ ಎಂಬ ವಸ್ತು ಮೂಡತೊಡಗಿದ್ದರಿಂದ ಆ ಸಾಲುಗಳನ್ನು ಇಲ್ಲಿ ಉಲ್ಲೇಖಿಸಿರುವೆ.
ಹೀಗೆ ಪ್ರಾಮಾಣಿಕವಾಗಿ ತಡವರಿಸುತ್ತಾ ಬರೆಯಲೆತ್ನಿಸುವ ಗೆಳೆಯ, ಗೆಳತಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳ ಬಗ್ಗೆ ನನಗೆ ಎಂದೂ ಬತ್ತದ ಕುತೂಹಲ ನಿರೀಕ್ಷೆಗಳು ಮೂಡುತ್ತಿರುತ್ತವೆ. ರಾಮಚಂದ್ರ ಶರ್ಮರ ‘ಏಳು ಸುತ್ತಿನ ಕೋಟೆ’ ಪದ್ಯದಲ್ಲಿರುವ ‘ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು?/ ಬಂತೆ ಮಗು/ ಅಥವಾ ಮನೆಯೊಳಗಿತ್ತೊ?/ ಅಜ್ಞಾತದಾಳದೊಳು ತಲೆ ಮರೆಸಿ ಕುಳಿತೊಂದು ನೆನಹಂತೆ ಆಗ ಅದು ಹೊರಬಿತ್ತೊ!’ ಎಂಬ ಪ್ರಶ್ನೆಗಳು ನೆನಪಾಗುತ್ತವೆ. ಆ ಪದ್ಯದಲ್ಲಿ ಆ ಪ್ರಶ್ನೆಗೆ ‘ಕಾಮಾಂಕುರವಾದ ಗಳಿಗೆ ಯಾವುದು? ಅದು ಈಗಾಗಲೇ ಅಪ್ರಜ್ಞೆಯಲ್ಲಿತ್ತೋ…’ ಮುಂತಾದ ಅರ್ಥಗಳು ಹೊರಡುತ್ತವೆ. ಇವಷ್ಟೇ ಇಲ್ಲಿನ ಅರ್ಥಗಳಲ್ಲ. ನೀವು ಅನೇಕಾನೇಕ ಅರ್ಥ ಹೊರಡಿಸಬಹುದು. ಕತೆ, ಪದ್ಯ ಬರೆಯುವ ಸುಂದರ ಬಯಕೆ ಹುಟ್ಟಿದ ಗಳಿಗೆ ಯಾವುದು ಹೇಳು ಎಂದು ಕೂಡ ಆ ಸಾಲು ನಮ್ಮನ್ನು ಕೇಳುವಂತಿದೆ!
ಸುನಿಲ್ ಹೇಳಿದ ವಿದ್ಯಾರ್ಥಿಗೆ ಅದು ಕಾಮಾಂಕುರವಾದ ಗಳಿಗೆಯೋ ಅಥವಾ ಅದನ್ನು ಅವನು ಬಾಯ್ಬಿಟ್ಟು ಹೇಳಿದ ಗಳಿಗೆಯೋ ಇವೆಲ್ಲವೂ ಮುಂದೆ ಸುನಿಲ್ ಈ ಅನುಭವವನ್ನು ಬರೆಯುವ ಹಾದಿಯಲ್ಲೇ ಸ್ಪಷ್ಟವಾಗಬಲ್ಲವು. ರೈಟಿಂಗ್ ಈಸ್ ಥಿಂಕಿಂಗ್ ಎಂದು ಖಚಿತವಾಗಿ ನಂಬಿರುವ ನನಗಂತೂ ಬರೆಯುವುದೂ ಚಿಂತಿಸುವ ರೀತಿಯೇ ಹೌದು ಎಂಬುದು ಪ್ರತಿ ದಿನ ಮನದಟ್ಟಾಗುತ್ತಿರುತ್ತದೆ.
ಅದಿರಲಿ, ಸುನಿಲ್ ಜೊತೆ ಕತೆ ಬರೆಯುವ ಬಗ್ಗೆ ಮಾತಾಡುತ್ತಿರುವಾಗಲೇ ಒಂದು ಹಳೆಯ ಪ್ರಶ್ನೆ ಮತ್ತೆ ಎದುರಾಯಿತು: ಬರೆಯುವುದನ್ನು, ಅದರಲ್ಲೂ ಕತೆ, ಕವನ, ಕಾದಂಬರಿ ಬರೆಯುವುದನ್ನು, ಯಾರು ಯಾರಿಗಾದರೂ ಕಲಿಸಬಹುದೇ? ಇದೊಂದು ಹಳೆಯ ಪ್ರಶ್ನೆ. ಇದಕ್ಕೆ ಉತ್ತರವೆಂಬಂತೆ ಪಶ್ಚಿಮದ ಕ್ರಿಯೇಟಿವ್ ರೈಟಿಂಗ್ ಕೋರ್ಸುಗಳು ನೆನಪಾಗುತ್ತವೆ. ಇಂಥ ಕೋರ್ಸುಗಳ ಮೂಲಕ ಬರವಣಿಗೆಯ ಕಲೆ ಕಲಿತೆ ಎಂದು ಹಲವು ದೇಶಗಳ ಹೊಸ ಲೇಖಕ ಲೇಖಕಿಯರು ಬರೆದಿರುವುದನ್ನು ಓದಿರುವೆ.
ಈ ಮಾರ್ಗದವರಿಗಿಂತ ಭಿನ್ನವಾಗಿ, ‘ಬರವಣಿಗೆಯನ್ನು ಕಲಿಸಲು ಸಾಧ್ಯವಿಲ್ಲ’ ಎನ್ನುವವರೂ ಇದ್ದಾರೆ.
ಬರವಣಿಗೆಯ ಕಲಿಕೆ ಸಮಾಜವಿಜ್ಞಾನ, ಇಂಜಿನಿಯರಿಂಗ್, ಚರಿತ್ರೆಗಳ ಕ್ಲಾಸುಗಳ ರೀತಿ ಇಲ್ಲದಿರಬಹುದು; ಆದರೆ ಅದು ಒಬ್ಬ ಲೇಖಕ ಅಥವಾ ಲೇಖಕಿ ಇನ್ನೊಬ್ಬರಿಗೆ ನೇರವಾಗಿ ಕಲಿಸದೆಯೇ ಕಲಿಸುವ ರೀತಿಯಾಗಿರಬಲ್ಲದು. ಈ ಅಂಕಣಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡಿರುವ ಮಾರ್ಕ್ವೆಜ್ ಕ್ರಿಯೇಟಿವ್ ರೈಟಿಂಗಿನ ಕ್ಲಾಸುಗಳನ್ನು ಕೂಡ ನಡೆಸಿದ್ದ; ಜಗತ್ತಿನ ವಿವಿಧ ಭಾಗಗಳಿಂದ ಹೊಸ ಲೇಖಕ ಲೇಖಕಿಯರು ಬಂದು ಈ ಕ್ಲಾಸುಗಳಿಗೆ ಸೇರಿಕೊಳ್ಳುತ್ತಿದ್ದರು. ಅಷ್ಟು ದೂರ ಯಾಕೆ, ನೂರಾರು ವಚನಕಾರ, ವಚನಕಾರ್ತಿಯರು ಅನುಭವ ಮಂಟಪದ ಸಂವಾದಗಳಲ್ಲಿ ಭಾಗಿಯಾಗಿ ಅಥವಾ ಇತರರ ವಚನಗಳಿಗೆ ಕಿವಿಗೊಟ್ಟು ತಾವೂ ಕವಿತೆಯಂಥ ವಚನಗಳನ್ನು ಕಟ್ಟುವ, ಹೇಳುವ, ಬರೆಯುವ ಕಲೆ ಕಲಿತ ಅದ್ಭುತ ಉದಾಹರಣೆಗಳು ನಮ್ಮಲ್ಲೇ ಇವೆ! ಜನಪದ ಸಾಹಿತಿಗಳಂತೂ ಲೋಕದ ಎಲ್ಲ ಭಾಷೆಗಳಲ್ಲೂ ಇದ್ದಾರೆ.
ಆದರೂ ಈ ಕಾಲದಲ್ಲಿ ನಾನು ಕಂಡುಕೊಂಡಂತೆ ಒಬ್ಬ ಲೇಖಕನಿಗೆ ಇನ್ನೊಬ್ಬ ಲೇಖಕ, ಲೇಖಕಿಯ ಕೃತಿಗಳೇ ಗುರು. ಕುವೆಂಪು ಕೂಡ ಮಹಾಕಾವ್ಯ ಬರೆಯಲು ವ್ಯಾಸ, ವಾಲ್ಮೀಕಿ, ಹೋಮರ್, ಡಾಂಟೆ ಥರದ ಮಹಾಕವಿಗಳಿಂದ ಕಲಿತ ಏಕಲವ್ಯ! ಕ್ರಿಯೇಟಿವ್ ರೈಟಿಂಗ್ ಕೋರ್ಸುಗಳನ್ನು ಕೊಟ್ಟ ಮಾರ್ಕ್ವೆಜ್ ಕೂಡ ‘ಒಂದು ಬೆಕ್ಕು ಓಣಿಯಲ್ಲಿ ತಿರುಗುವ ಕಲೆಯನ್ನು ನಾನು ಹೆಮಿಂಗ್ವೆಯಿಂದ ಕಲಿತೆ’ ಎನ್ನುತ್ತಾನೆ. ಒಂದು ಸಂಜೆ ‘ಕ್ಯಾಥರಿನ್ ಆ್ಯನ್ ಪೋರ್ಟರ್ ನಮಗೆಲ್ಲ ಕತೆ ಬರೆಯೋದನ್ನ ಕಲಿಸಿದವಳು’ ಎಂದ ಲಂಕೇಶ್, ಆಕೆಯ ಕತೆಗಳ ಪುಸ್ತಕವೊಂದನ್ನು ಓದಲು ಕೊಟ್ಟಿದ್ದು ನೆನಪಾಗುತ್ತದೆ. ಅಪ್ರತಿಮ ಕತೆಗಾರ ಲಂಕೇಶರಿಗೆ ಕ್ಯಾಥರಿನ್ ಆ್ಯನ್ ಪೋರ್ಟರ್ ಏನೇನು ಕಲಿಸಿರಬಹುದು ಎಂಬ ಕುತೂಹಲದಿಂದ ಆಕೆಯ ಕತೆಗಳನ್ನು ಓದಿದೆ. ಆದರೆ ‘ಆಕೆಯಿಂದ ಏನು ಕಲಿತಿರಿ?’ ಎಂದು ಆಗ ಕೇಳಿ ತಿಳಿದುಕೊಳ್ಳದಿದ್ದುದಕ್ಕೆ ಈಗ ‘ಛೆ!’ಅನ್ನಿಸುತ್ತದೆ.
ಹಲವು ಪ್ರಕಾರಗಳಲ್ಲಿ ಕೆಲಸ ಮಾಡುತ್ತಿದ್ದ ಲಂಕೇಶರ ಕತೆಗಳಲ್ಲಿ ಸಿನಿಮಾ, ಜರ್ನಲಿಸಂ, ಕಾವ್ಯ, ನಾಟಕ ಎಲ್ಲವೂ ಬೆರೆಯುತ್ತಿದ್ದವು; ಇವೆಲ್ಲ ಪ್ರಕಾರಗಳು ಬೆರೆತು ಹುಟ್ಟಿದ ಅವರ ಟೀಕೆ ಟಿಪ್ಪಣಿಗಳಿಂದಲೇ ಬರೆಯುವುದನ್ನು ಕಲಿತ ನೂರಾರು ಜನರನ್ನು ಕಂಡಿರುವೆ. ಮುಂದೆ ನಾನು ಅವರ ಟೀಕೆ ಟಿಪ್ಪಣಿಯ ಎರಡು ಸಂಪುಟಗಳನ್ನು ಎಡಿಟ್ ಮಾಡಿ, ನಂತರ ಅವರ ಸಮಗ್ರ ಕಾವ್ಯ ‘ಚಿತ್ರ ಸಮೂಹ’ಕ್ಕೆ ಪದ್ಯಗಳನ್ನು ಅಚ್ಚಿಗೆ ಸಿದ್ಧಪಡಿಸಿದ ನಂತರ, ಲಂಕೇಶರು ‘ಚಿತ್ರಸಮೂಹ’ದ ಬೆನ್ನುಡಿಯಲ್ಲಿ ಬರೆದ ಒಂದು ಮಾತು ಫಳಾರನೆ ಸುಳಿದ ಹೊಸ ಮಿಂಚಿನಂತೆ ನನ್ನ ತಲೆಯಲ್ಲಿ ಕಾಯಮ್ಮಾಗಿ ಉಳಿದುಬಿಟ್ಟಿದೆ: ‘ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು ಪ್ರಕಾರಗಳಲ್ಲಿ ಪರಿಶುದ್ಥತೆ ಅಲ್ಲ ಅನ್ನಿಸುತ್ತದೆ.’
ಇದೀಗ ಈ ಮಾತನ್ನು ನನ್ನ ಓರಿಗೆಯ ಸೀರಿಯಸ್ ಸಮಾಜವಿಜ್ಞಾನಿ, ಕ್ಯಾಸ್ಟ್ ಕೆಮಿಸ್ಟ್ರಿ ಎಕ್ಸ್‌ಪರ್ಟ್ ಲಕ್ಷ್ಮೀಪತಿಗೆ ನೆನಪಿಸಬೇಕೆನ್ನಿಸಿತು. ತಾನು ಎಷ್ಟೊಂದು ಗಂಭೀರ ಥಿಯರಿಟಿಕಲ್ ಲೇಖನಗಳನ್ನು ಬರೆದರೂ, ನನ್ನ ಅನುಭವಗಳನ್ನೆಲ್ಲ ಕತೆಯಾಗಿಸಲು ಆಗುತ್ತಿಲ್ಲವಲ್ಲ ಎಂದು ಲಕ್ಷ್ಮೀಪತಿ ಒಮ್ಮೆ ಸಣ್ಣಗೆ ವಿಷಾದಪಟ್ಟರು. ಲಂಕೇಶರ ಈ ಮಾತಿನಲ್ಲಿ ಲಕ್ಷ್ಮೀಪತಿಗೂ ಒಂದು ದಾರಿ ಕಾಣಬಹುದು. ಲಂಕೇಶರ ಎಲ್ಲ ಕತೆಗಳನ್ನೂ ಕತೆ ಬರೆಯುವ ಕಸುಬು ಕಲಿಯುವ ವಿದ್ಯಾರ್ಥಿಯಂತೆ ಓದಿದರೆ ಕತೆ ಹೇಳುವ ಹಲವು ದಾರಿಗಳು ಕಾಣಬಲ್ಲವು.
ಉದಾಹರಣೆಗೆ, ಲಂಕೇಶರ ‘ವೃಕ್ಷದ ವೃತ್ತಿ’ ಎಂಬ ಕತೆ ನೋಡಿ. ಈ ಕತೆ ನಿವೃತ್ತ ಮಿಲಿಟರಿ ಆಫೀಸರನ ಶ್ರದ್ದಾಂಜಲಿ ಭಾಷಣದ ವಿನ್ಯಾಸದಲ್ಲಿದೆ! ಪಾರ್ವತಜ್ಜಿಯಾಗಿ ತೀರಿಕೊಂಡ ಪಾರ್ವತಿ ತೆಂಗಿನ ಮರದ ಜೊತೆಗೆ ಗಳಿಸಿದ– ಅದು ನನ್ನ ಪ್ರಕಾರ, ‘ಕಳೆದ’ ಬದುಕಲ್ಲ; ಗಳಿಸಿದ ಬದುಕು- ಅರ್ಥಪೂರ್ಣ ಬದುಕನ್ನು ಕುರಿತಂತೆ ಈ ಆಫೀಸರ್ ಆಡುವ ಮಾತುಗಳಲ್ಲಿ ಇಡೀ ಕತೆ ಬೆಳೆಯುತ್ತದೆ. ಈ ಕತೆ ಓದಿ ಅಚ್ಚರಿಗೊಂಡ ನಾನು, ‘ಇದೇನ್ಸಾರ್! ನಿಮ್ಮ ಕೈಯಲ್ಲಿ ಶ್ರದ್ಧಾಂಜಲಿ ಭಾಷಣವೇ ಒಂದು ಬ್ಯೂಟಿಫುಲ್ ಕಥಾತಂತ್ರವಾಗಿ ಬಿಡುತ್ತಲ್ಲ!’ ಎಂದೆ. ಆ ಕತೆ ಓದಿದಾಗ ಹುಟ್ಟಿದ ಅಚ್ಚರಿಯ ದನಿ ಆ ಮಾತು ಹೇಳುವಾಗಲೂ ಹಾಗೇ ಇತ್ತು; ಈಗಲೂ ಹಾಗೇ ಇದೆ. ಲಂಕೇಶ್ ಸಂಕೋಚದ ಹೆಮ್ಮೆ ಸೂಸಿ ಹುಬ್ಬೇರಿಸಿ ನಕ್ಕರು. ನಿವೃತ್ತ ಮಿಲಿಟರಿ ಆಫೀಸರನ ವೃತ್ತಿಯ ಶಿಸ್ತು; ವೃತ್ತಿ ಎಂದು ಕರೆಯಲಾಗದ ಪಾರ್ವತಿಯ ವೃಕ್ಷದ ವೃತ್ತಿ ಹಾಗೂ ಅವಳ ಸಹಜ ಜೀವನ ಶೈಲಿಯ ಶಿಸ್ತು; ಅವಳ ತಮ್ಮನ ಲಂಗುಲಗಾಮಿಲ್ಲದ, ಶಿಸ್ತಿಲ್ಲದ ಬದುಕಿನ ದುರಂತ…ಎಲ್ಲವೂ ಆ ಭಾಷಣದಲ್ಲೇ ಮೈದಾಳುವ ರೀತಿ ಕುರಿತು ಹೇಳುತ್ತಲೇ ಇದ್ದೆ. ಲಂಕೇಶ್, ‘ಲವ್ಲಿ! ಗ್ಲಾಡ್ ಯು ಸೇ ದಟ್’ ಎಂದರು.
ಆ ಕತೆ ಓದುತ್ತಾ, ಮೆಚ್ಚುತ್ತಲೇ ನಾನು ಕತೆ ಹೇಳುವ ಹೊಸ ಹೊಸ ರೀತಿಯನ್ನು, ಕಥಾತಂತ್ರದ ಪಾಠಗಳನ್ನು ಕಲಿಯುತ್ತಿದ್ದೆ ಎಂದು ನನಗೆ ಈಗ ಅನ್ನಿಸುತ್ತಿದೆ. ಯಾರನ್ನಾದರೂ ಮೆಚ್ಚುವುದು ಅವರಂತಾಗುವ ಬಯಕೆಯಿಂದಲೂ ಹುಟ್ಟಿರಬಲ್ಲದು; ಹಾಗೆಯೇ, ಏನನ್ನಾದರೂ ಮೆಚ್ಚುವುದರ ಹಿಂದೆ ಅದನ್ನು ನಾವೂ ಸಾಧಿಸುವ ಆಸೆಯೂ ಇರಬಲ್ಲದು!
ಒಂದು ಕಾಲಕ್ಕೆ ಕ್ಯಾಥರಿನ್ ಆ್ಯನ್ ಪೋರ್ಟರ್ ಕತೆಗಳನ್ನು ಮೆಚ್ಚಿದ್ದ ಲಂಕೇಶರು ಆಕೆಯ ಕತೆಯೊಂದರಿಂದ ಪ್ರೇರಣೆ ಪಡೆದು ‘ಎಲ್ಲಿಂದಲೋ ಬಂದವರು’ ಸಿನಿಮಾ ಮಾಡಿದ್ದರು. ಆದರೆ ಆಕೆಗೆ ಹೋಲಿಸಿ ನೋಡಿದರೆ, ಲಂಕೇಶರೇ ಉತ್ತಮ ಕತೆಗಾರ ಎನ್ನಿಸುತ್ತದೆ; ಲಂಕೇಶರ ಕೈಯಲ್ಲಿ ಕನ್ನಡ ಭಾಷೆ ನುಡಿವ ರೀತಿ, ಅವರು ಮನುಷ್ಯನ ಊಹಾತೀತ ಮುಖಗಳು, ವರ್ತನೆಗಳನ್ನು ಹಿಡಿಯುವ ರೀತಿಯಿಂದಾಗಿಯೂ ಹೀಗನ್ನಿಸಿರಬಹುದು. ಲಂಕೇಶರ ಬಹುತೇಕ ಎಲ್ಲ ಬರಹಗಳನ್ನೂ ಹತ್ತಿರದಿಂದ ಓದಿರುವ ನನಗೆ, ಅವರು ತೀರಿಕೊಂಡ ಇಪ್ಪತ್ಮೂರು ವರ್ಷಗಳ ನಂತರ ಕೂಡ ಅವರ ಕತೆಗಳಷ್ಟೇ ಅಲ್ಲ, ಅವರ ಯಾವುದೇ ಪುಸ್ತಕದ ಪುಟ ತೆಗೆದು ಓದಿದರೂ ಜೀವ ಸಂಚಾರವಾಗುತ್ತದೆ; ಮುತ್ತಿದ ಜಡತೆ ಚದುರಿ ಹೋಗಿ, ಸ್ಪಂದಿಸುವ, ಬರೆಯುವ ಉತ್ಸಾಹ ಚಿಮ್ಮತೊಡಗುತ್ತದೆ.
ಅದು ಇಂಗ್ಲಿಷ್ ಮೇಷ್ಟ್ರು ಸುನಿಲ್, ಸಮಾಜವಿಜ್ಞಾನದ ಮೇಷ್ಟ್ರು ಲಕ್ಷ್ಮೀಪತಿಗೂ ಆಗಬಲ್ಲದು ಎಂಬ ನಂಬಿಕೆಯಿಂದ ಈ ಟಿಪ್ಪಣಿ; ಅದರ ಜೊತೆಗೆ, ಈ ಅಂಕಣ ಬರಹಗಳು ಬೆರಳೆಣಿಕೆಯಷ್ಟು ಎಳೆಯರಲ್ಲಾದರೂ ಓದುವ, ಬರೆಯುವ ಕಾತರ ಹುಟ್ಟಿಸಿರುವುದನ್ನು ಕೇಳಿ ಕೊಂಚ ಧನ್ಯತೆಯ ಭಾವ; ಜೊತೆಗೇ ಅಂಕಣದ ಫೋಕಸ್ ಕುರಿತಂತೆ ಇನ್ನಷ್ಟು ಸ್ಪಷ್ಟತೆ...
ಕಣ್ಣಿಗೆ ಬಿದ್ದ ಸಾಲು
ಜೋಸೆಫ್ ಕಾರ್ನಾಡನ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕಾದಂಬರಿಯಲ್ಲಿ ಇದ್ದಕ್ಕಿದ್ದಂತೆ ಕಂಡ ಸಾಲು:
‘…he had the pose of a Buddha preaching in European clothes and without a lotus–flower…’
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಒಂದು ಬರಹ ಯಾರಲ್ಲಿ ಎಂಥ ಪ್ರತಿಧ್ವನಿ ಹೊರಡಿಸುತ್ತದೆ ಎಂಬುದು ನಿಜಕ್ಕೂ ಕುತೂಹಲಕರ.
ಕಳೆದ ಭಾನುವಾರ ಈ ಅಂಕಣದಲ್ಲಿ ಪ್ರಕಟವಾದ ‘ಮಾಂತ್ರಿಕ ಕತೆಗಾರನಿಗೆ ಮರೆವು ಬಂದಾಗ’ (READ HERE) ಬರಹಕ್ಕೆ ಹಿರಿಯರ ಹಾಗೂ ಕಿರಿಯರ ಪ್ರತಿಕ್ರಿಯೆ ವಿಭಿನ್ನವಾಗಿತ್ತು. ಹಿರಿಯರು ಮಾರ್ಕ್ವೆಜ್ ದುರಂತಕ್ಕೆ ಮಿಡಿದಿದ್ದರೂ, ಅವನ ಸ್ಥಿತಿ ಕಂಡು ಅಧೀರರಾಗಿರಲಿಲ್ಲ; ಆದರೆ ಕೆಲವು ಕಿರಿಯರು ಮಾರ್ಕ್ವೆಜ್ ಸ್ಥಿತಿ ನಮಗೂ ಬಂದರೇನು ಗತಿ ಎಂದು ಈಗಲೇ ಕಂಗಾಲಾಗಿದ್ದರು! ಅವರಲ್ಲಿ ನನ್ನ ಜಾಣ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಇದ್ದರು. ‘ಎಲ್ಲರಿಗೂ ಹಾಗಾಗುವುದಿಲ್ಲ. ಸಣ್ಣ ಪುಟ್ಟ ಮರೆವು ಎಲ್ಲರಿಗೂ ಸಾಮಾನ್ಯ. ಮಾರ್ಕ್ವೆಜ್ ಸ್ಥಿತಿ ಎಲ್ಲೋ ಅಪರೂಪಕ್ಕೆ ಬರುವಂಥದು. ಸಿಗ್ಮಂಡ್ ಫ್ರಾಯ್ಡ್ ಕೂಡ ನಮ್ಮ ಮನಸ್ಸಿನ ಆಳದಲ್ಲಿ ಅಷ್ಟು ಇಷ್ಟ ಪಡದವರ ಅಥವಾ ಉದಾಸೀನ ಮಾಡುವವರ ಹೆಸರುಗಳು ಮರೆತು ಹೋಗುತ್ತವೆ ಎಂದಿದ್ದಾನೆ. ಟೇಕ್ ಇಟ್ ಈಸಿ!’ ಎಂದೆ.
ಈ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಂಗಾಲನ್ನು ಕಂಡ ನನಗೆ, ಸಾಹಿತ್ಯ ಹಾಗೂ ಇನ್ನಿತರ ಬರಹಗಳನ್ನು ಓದುವಾಗ ಎಷ್ಟು ಅಂತರವಿರಬೇಕು ಎಂಬುದನ್ನು ನಾನು ಕ್ಲಾಸಿನಲ್ಲಿ ಅವರಿಗೆ ಸರಿಯಾಗಿ ಹೇಳಿಕೊಟ್ಟಿಲ್ಲ ಅನ್ನಿಸಿತು! ಆ ಕುರಿತು ಈ ಬರಹದ ಕೊನೆಯ ಭಾಗದಲ್ಲಿ ಚರ್ಚಿಸುವೆ.
ಮೊದಲಿಗೆ, ಹಿರಿಯರ ಪ್ರತಿಕ್ರಿಯೆ: ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ಬಿಸಲಯ್ಯ ಹೇಳಿದರು: ‘ನನ್ನ ಮೆಮೊರಿ ಪರವಾಗಿಲ್ಲ ಪ್ರೊಫೆಸರ್! ನನಗೀಗ ಎಂಬತ್ತೈದು. ಒಂದೊಂದ್ ಸಲ ಅವರಿವರ ಹೆಸರು ಮರೆತು ಹೋಗುತ್ತೆ. ಅದರ್ವೈಸ್ ಐ ಆ್ಯಮ್ ಓಕೇ!’
ಪ್ರೊ. ಬಿಸಲಯ್ಯ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿ, ವೈಸ್ ಚಾನ್ಸಲರ್ ಆಗಿದ್ದವರು. ವರ್ಲ್ಡ್ ಬ್ಯಾಂಕಿನಿಂದ ಹಿಡಿದು ಹಲವು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಕೆಲಸ ಮಾಡಿದವರು. ಈಚಿನ ವರ್ಷಗಳವರೆಗೂ ಬೆಂಗಳೂರಿನ ‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಅಕಡೆಮಿಕ್ ಹೆಡ್ ಆಗಿದ್ದವರು. ಬಿಸಲಯ್ಯನವರಿಗಿಂತ ಏಳು ವರ್ಷ ಕಿರಿಯರಾದ, ಪ್ರಸಿದ್ಧ ಕಾದಂಬರಿಕಾರ ಬಿ.ಎಲ್. ವೇಣು ಕೂಡ ‘ಎಲ್ಲೋ ಕೆಲವರ ಹೆಸರು ಮರೆತು ಹೋಗೋದನ್ನ ಬಿಟ್ಟರೆ ನನ್ನ ನೆನಪೂ ಪರವಾಯಿಲ್ಲ’ ಎಂದರು. ಕಳೆದ ವರ್ಷ ‘ದುರ್ಗದ ಬೇಡರ ದಂಗೆ’ ಕಾದಂಬರಿ ಪ್ರಕಟಿಸಿ, ಮೊನ್ನೆ ಸಿನಿಮಾಲೋಕದ ಮೇಲೆ ಪುಸ್ತಕ ಬರೆದು ಮುಗಿಸಿರುವ ವೇಣು, ಸದಾ ಒಂದರಿಂದ ಮತ್ತೊಂದು ಹೊಸ ಪುಸ್ತಕಕ್ಕೆ ಸಿದ್ಧರಾಗುವ ಪರಿ ನಿಜಕ್ಕೂ ಮೋಹಕ! ಬಿಸಲಯ್ಯನವರಿಗಿಂತ ದಶಕಗಳಷ್ಟು ಕಿರಿಯರಾದ, ದಣಿವರಿಯದ ಇಂಗ್ಲಿಷ್ ಪ್ರೊಫೆಸರ್-ವಿಮರ್ಶಕ-ಅನುವಾದಕ ಪ್ರೊ. ಸಿ. ನಾಗಣ್ಣ ‘ಮರೆವು ಶಾಪವಲ್ಲ, ವರ!’ ಎಂದರು.
ಈ ಮೂವರೂ ಸದಾ ಅಕ್ಷರಲೋಕದ ಸಂಗದಲ್ಲಿರುವವರು. ವೇಣು ಬೆಳಗ್ಗೆ ಹನ್ನೊಂದರಿಂದ ಮೂರರವರೆಗೆ ಹಾಗೂ ಸಂಜೆ ಮತ್ತೆ ಕೆಲವು ಗಂಟೆಗಳ ಕಾಲ ಓದು-ಬರಹಗಳ ಸಂಗದಲ್ಲಿರುವವರು. ಬಿಸಲಯ್ಯನವರು ಚರಿತ್ರೆ, ಸಂಸ್ಕೃತಿ, ಕಾದಂಬರಿ ಹೀಗೆ ಹಲಬಗೆಯ ಹೊಸ ಪುಸ್ತಕಗಳನ್ನು ಅಮೆಜಾನ್ ಮೂಲಕ ತರಿಸಿ ಓದುವವರು. ನನ್ನಂಥವರ ಪುಸ್ತಕಗಳನ್ನು ಕೂಡ ಓದಿ ತಮಗನಿಸಿದ್ದನ್ನು ವಿವರವಾಗಿ ಹೇಳಬಲ್ಲವರು. ಒಂದು ವಸ್ತುವಿನ ಮೇಲೆ ಗಂಭೀರವಾಗಿ ಭಾಷಣ ಮಾಡಲು ಸಮಗ್ರವಾಗಿ ಟಿಪ್ಪಣಿಗಳನ್ನು ಬರೆದುಕೊಂಡು ಸಿದ್ಧವಾಗಬಲ್ಲವರು. ಈಗಲೂ ಒಂದು ಪುಸ್ತಕ ರೂಪಿಸಬೇಕೆಂದು ಚಡಪಡಿಸುತ್ತಿರುವವರು. ನಾಗಣ್ಣ ಇವತ್ತಿಗೂ ಓದು, ಬರಹ, ಟೀಚಿಂಗು, ವಿಚಾರ ಸಂಕಿರಣಗಳಲ್ಲಿ ಬಿಜಿಯಾಗಿ ಲವಲವಿಕೆಯಿಂದ ಇರುವವರು.
ಈ ಹಿರಿಯರನ್ನು ಇಲ್ಲಿ ಉಲ್ಲೇಖಿಸಲು ಕಾರಣವಿದೆ: ಮಾರ್ಕ್ವೆಜ್ ಮರೆವಿನ ದುರಂತ ಓದಿ ಅಧೀರರಾಗಿದ್ದ ಕಿರಿಯರಲ್ಲಿ ಈ ಹಿರಿಯರ ಉತ್ಸಾಹದ ಒರತೆ, ಎಡೆಬಿಡದ ಬೌದ್ಧಿಕ ಚಟುವಟಿಕೆಯ ಬದುಕು ಸ್ಫೂರ್ತಿ ತುಂಬಬಲ್ಲದು. ಈಚೆಗೆ ತೀರಿಕೊಂಡ ಝೆಕ್ ಕಾದಂಬರಿಕಾರ ಮಿಲನ್ ಕುಂದೇರ (1 ಏಪ್ರಿಲ್ 1929 - 11 ಜುಲೈ 2023) ತನ್ನ 84ನೆಯ ವಯಸ್ಸಿನಲ್ಲಿ ಪ್ರಕಟಿಸಿದ ‘ಫೆಸ್ಟಿವಲ್ ಆಫ್ ಇನ್ ಸಿಗ್ನಿಫಿಕೆನ್ಸ್’ ಕಾದಂಬರಿಯಲ್ಲಿ ಉಕ್ಕಿ ಚೆಲ್ಲಿರುವ ಜೀವಚೈತನ್ಯ ಹಾಗೂ ಜೀವನದ ಹೊಸ ಹೊಸ ನೋಟಗಳು ನಮ್ಮನ್ನು ಮರುಜೀವಗೊಳಿಸಬಲ್ಲವು. ಅತ್ತ ಮಾರ್ಕ್ವೆಜ್ ಮರೆವು ಮುತ್ತುವ ಮೊದಲು, ಎಪ್ಪತ್ತೈದನೆಯ ವಯಸ್ಸಿನಲ್ಲಿ ಕ್ಯಾನ್ಸರ್ ಎದುರಿಸಿದ್ದ; ಸಾವನ್ನು ಮುಂದೂಡುವವನಂತೆ ತನ್ನ ಆತ್ಮಚರಿತ್ರೆ ‘ಲಿವಿಂಗ್ ಟು ಟೆಲ್ ದ ಟೇಲ್’ನ ಮೊದಲ ಸಂಪುಟವನ್ನು ತಾರುಣ್ಯದ ಘಟ್ಟಕ್ಕೆ ನಿಲ್ಲಿಸಿ ಪ್ರಕಟಿಸಿದ; ಇನ್ನೂ ಎರಡು ಸಂಪುಟ ಬರೆಯುತ್ತೇನೆಂದು ಸಾವಿಗೆ ಸವಾಲ್ ಹಾಕಲು ನೋಡಿದ!
ಈ ಎಲ್ಲ ಮಾದರಿಗಳಿಂದ ಓದು-ಬರಹಗಳು ನಿತ್ಯ ಚೈತನ್ಯ ಸೃಷ್ಟಿಸುವ ರೀತಿ, ಬರೆವವರ ಜೀವಂತಿಕೆ, ಅವರ ಸ್ಫೂರ್ತಿಲೋಕದ ಅರಿವಾಗಬಲ್ಲದು; ಬರೆಯದವರು ಕೂಡ ಓದುತ್ತಲೇ ಈ ಜೀವಂತಿಕೆ, ಚೈತನ್ಯಗಳನ್ನು ಸೃಷ್ಟಿಸಿಕೊಳ್ಳಬಹುದು. ಓದುವುದೂ ಬರೆಯುವ ಕ್ರಿಯೆಯೇ ಎಂಬುದನ್ನು ಹಲವರು ಅರಿತಿರಲಿಕ್ಕಿಲ್ಲ. ಓದುತ್ತಾ ಓದುತ್ತಾ ನಂನಮ್ಮ ಭಾಷೆಯಲ್ಲಿ ನಮ್ಮೊಳಗೇ ಅದನ್ನು ಬರೆದುಕೊಳ್ಳುತ್ತಿರುತ್ತೇವೆ, ಅಲ್ಲವೆ! ಆದ್ದರಿಂದ ಓದೂ ಬರವಣಿಗೆಯಷ್ಟೇ ಸೃಜನಶೀಲ. ಓದಿನ ಕಿಕ್ ಕೂಡ ನಮ್ಮನ್ನು ಸದಾ ಲವಲವಿಕೆಯಲ್ಲಿಡುತ್ತದೆ.
ಈ ಹಿನ್ನೆಲೆಯಲ್ಲಿ, ನಾವು ಓದುವ ಕೃತಿಗಳನ್ನು ಎಷ್ಟು ದೂರ ನಿಂತು ಓದಬೇಕು ಎಂಬ ಬಗ್ಗೆ ನನ್ನ ಕ್ಲಾಸ್ ರೂಮ್ ಟಿಪ್ಪಣಿಗಳನ್ನು ಕೊಂಚ ತಿದ್ದಿ ಕೊಟ್ಟಿರುವೆ:
ಸೌಂದರ್ಯ ಮೀಮಾಂಸಕ ಎಡ್ವರ್ಡ್ ಬುಲ್ಲೋ 1912ರಲ್ಲಿ ‘Psychical Distance as a Factor in Art and an Aesthetic Principle’ ಎಂಬ ಲೇಖನ ಬರೆದ. ಅದರಲ್ಲಿ ಸಾಹಿತ್ಯ ಕೃತಿಗಳನ್ನು ಓದುವಾಗ ಬೇಕಾದ ‘ಮಾನಸಿಕ ದೂರ’ವನ್ನು ಚರ್ಚಿಸುತ್ತಾ, ‘ಅತಿ ದೂರ’, ‘ಅತಿ ಹತ್ತಿರ’ದ ಸಮಸ್ಯೆಗಳನ್ನೂ ಚರ್ಚಿಸಿದ. ಅವನಿಗಿಂತ ಮೊದಲೇ ಇಮ್ಯಾನ್ಯುಯೆಲ್ ಕಾಂಟ್ ಸಾಹಿತ್ಯ ಕೃತಿಯ ಪೂರ್ಣ ಸೌಂದರ್ಯಾನುಭವ ಆಗಬೇಕೆಂದರೆ, ನಿರ್ಲಿಪ್ತವಾದ ಧ್ಯಾನಶೀಲ ಗ್ರಹಿಕೆ (disinterested contemplation) ಅಗತ್ಯ ಎಂದಿದ್ದ. ಇವೆಲ್ಲ ಇವತ್ತಿಗೂ ಓದುವ ಕಲೆ ಕಲಿಯಲು, ಬರೆಯಲು, ಸಾಹಿತ್ಯವನ್ನು ಗಂಭೀರವಾಗಿ ಟೀಚ್ ಮಾಡಲು, ನಾಟಕ ನಿರ್ದೇಶಿಸಲು ನೆರವಾಗಬಲ್ಲವು. ಎಡ್ವರ್ಡ್ ಬುಲ್ಲೋ ಕೊಡುವ ಉದಾಹರಣೆಯೊಂದನ್ನು ಗಮನಿಸಿ:
ತನ್ನ ಹೆಂಡತಿಯ ಬಗ್ಗೆ ಅಸೂಯೆ ಪಡುವ ಗಂಡಸೊಬ್ಬ ಶೇಕ್ ಸ್ಪಿಯರನ ‘ಒಥೆಲೊ’ ನಾಟಕದ ಪ್ರದರ್ಶನ ನೋಡಲು ಹೋಗುತ್ತಾನೆಂದಿಟ್ಟುಕೊಳ್ಳಿ. ಅಲ್ಲಿ ಈ ಪ್ರೇಕ್ಷಕ ಪತ್ನಿ ಡೆಸ್ಡಿಮೋನಳ ಬಗ್ಗೆ ಅಸೂಯೆಯಿಂದ ನರಳುವ ಒಥೆಲೋನ ನಡವಳಿಕೆ, ಸ್ವಭಾವಗಳನ್ನು ಪೂರಾ ಮೆಚ್ಚಿದಷ್ಟೂ ಒಥೆಲೋನ ಭಾವನೆಗಳು-ಅನುಭವಗಳು ಈ ಪ್ರೇಕ್ಷಕನ ಭಾವನೆ-ಅನುಭವಗಳಿಗೆ ಹೊಂದಾಣಿಕೆಯಾಗುವಂತೆ ತೋರುತ್ತವೆ! ಆಗ ಅವನು ಒಥೆಲೋನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲ; ಬದಲಿಗೆ, ತಾನೂ ಅಂಥದೇ ಸ್ಥಿತಿಯಲ್ಲಿದ್ದೇನೆ ಎಂಬಂತೆ ನೋಡತೊಡಗುತ್ತಾನೆ. ಅಂದರೆ, ಅವನು ನಾಟಕವನ್ನು ನೋಡಲು ಅಗತ್ಯವಾಗಿ ಬೇಕಾಗಿದ್ದ ದೂರ ಅಥವಾ ಅಂತರವನ್ನು ಕಳೆದುಕೊಂಡಿದ್ದಾನೆ. ಇದು ಸ್ಥೂಲವಾಗಿ ಎಡ್ವರ್ಡ್ ಬುಲ್ಲೋ ಗ್ರಹಿಕೆ.
ಮೇಲೆ ಹೇಳಿದ ಪ್ರೇಕ್ಷಕನ ಇನ್ನಿತರ ಸಮಸ್ಯೆಗಳನ್ನೂ ಇವತ್ತು ನೋಡಬಹುದು. ‘ಒಥೆಲೊ’ ನಾಟಕ ಪ್ರದರ್ಶನವನ್ನು ಈ ಥರ ‘ಪರ್ಸನಲ್’ ಆಗಿ ನೋಡುವ ಪ್ರೇಕ್ಷಕನಿಗೆ, ಒಥೆಲೊ ಸರಿಯಾಗಿ ವಿಚಾರಿಸದೆ ಪತ್ನಿ ಡೆಸ್ಡಿಮೋನಳನ್ನು ಅನುಮಾನಿಸುತ್ತಿರುವ ಕ್ರೌರ್ಯ ಅರ್ಥವಾಗುವುದಿಲ್ಲ. ಒಥೆಲೊ ಡೆಸ್ಡಿಮೋನಳಿಗೆ ಕೊಟ್ಟ ಸುಗಂಧಮಯ ಕರವಸ್ತ್ರ ಕ್ಯಾಸಿಯೋ ಬಳಿ ಇದೆಯೆಂದು ಬಣ್ಣ ಕಟ್ಟಿ ಹೇಳುವ ಇಯಾಗೋನ ಧೂರ್ತತನವೂ ಅರ್ಥವಾಗುವುದಿಲ್ಲ; ಒಥೆಲೊ, ಡೆಸ್ಟಿಮೋನರ ದುರಂತವೂ ತಟ್ಟುವುದಿಲ್ಲ. ಪತ್ನಿಯ ಬಗೆಗಿನ ಅಸೂಯೆಯಿಂದ ತಪ್ತವಾದ ಈ ಪ್ರೇಕ್ಷಕನ ಮನಸ್ಸು ಒಥೆಲೊ ಡೆಸ್ಟಿಮೋನಳನ್ನು ಕೊಂದಿದ್ದು ಸರಿ ಎಂದು ತನ್ನನ್ನೇ ತಾನು ನಂಬಿಸಿಕೊಳ್ಳತೊಡಗುತ್ತದೆ! ಅಕಸ್ಮಾತ್ ಒಥೆಲೊ ಪಾತ್ರ ಮಾಡುತ್ತಿರುವ ವ್ಯಕ್ತಿಯೂ ಈ ಪ್ರೇಕ್ಷಕನಂತೆ ಅಸೂಯೆಯ ಮನಸ್ಥಿತಿಯವನೇ ಆಗಿದ್ದರೆ, ಆತ ಇನ್ನೆಷ್ಟು ‘ನೈಜ’ವಾಗಿ, (ಅಂದರೆ ಕ್ರೂರವಾಗಿ!) ನಟಿಸಿ, ರಂಗದ ಮೇಲೆ ಇನ್ನೂ ಏನೇನಾಗಬಹುದೆಂದು ಊಹಿಸಿಕೊಳ್ಳಿ!
ಅದೇನೇ ಇರಲಿ, ಈ ಥರದ ‘ಮಾನಸಿಕ ದೂರ’ದ ಓದು ‘ಮಾಂತ್ರಿಕ ಕತೆಗಾರನಿಗೆ ಮರೆವು ಬಂದಾಗ’ ಲೇಖನಕ್ಕೆ ಪೂರಾ ಅನ್ವಯವಾಗಲಾರದೇನೋ! ಯಾಕೆಂದರೆ ಮತ್ತೊಬ್ಬರ ದಾರುಣ ಅನುಭವವನ್ನು ನಮ್ಮದೆಂಬಂತೆ ಓದಿಕೊಳ್ಳದಿದ್ದರೆ ಆ ಅನುಭವಕ್ಕೆ ಮಿಡಿಯಲಾರೆವು. ಮಾರ್ಕ್ವೆಜ್ ಮರೆವಿನ ಅನುಭವ ಓದಿ, ಕನ್ನಡ ಸ್ತ್ರೀವಾದಕ್ಕೆ ಸುಭದ್ರ ತಳಹದಿ ಹಾಕಿಕೊಟ್ಟ ವಿಜಯಾ ದಬ್ಬೆ ಅಪಘಾತಕ್ಕೀಡಾಗಿ ನೆನಪು ಕಳೆದುಕೊಂಡ ದುರಂತವನ್ನು ನೆನೆದ ರೂಪಾ; ಜಾರ್ಜ್ ಫರ್ನಾಂಡಿಸರ ಕೊನೆಯ ವರ್ಷಗಳನ್ನು ನೆನೆದ ಪ್ರೊ. ಕೆ. ಮರುಳಸಿದ್ಧಪ್ಪ, ಇನ್ನಿತರರು ತಮ್ಮ ಸುತ್ತಮುತ್ತಲಿನವರ ದುರಂತಗಳನ್ನೂ ನೆನೆಯುತ್ತಿದ್ದರು.
ಇಷ್ಟಾಗಿಯೂ, ಕಳೆದ ವಾರ ಮಾರ್ಕ್ವೆಜ್ ಮರೆವಿನ ದುರಂತ ಓದಿಸಿ ಅಕಸ್ಮಾತ್ ಯಾರನ್ನಾದರೂ ಅಧೀರರಾಗಿಸಿದ್ದರೆ ಕ್ಷಮೆಯಿರಲಿ. ಆದರೆ ಮಾರ್ಕ್ವೆಜ್ ಸ್ಥಿತಿ ಓದಿ ಕೆಲವರಲ್ಲಿ ಹುಟ್ಟಿದ ಭಯ ‘ಅತಿ ಸಮೀಪ’ದ ಓದಿನ ದೋಷದಿಂದಲೂ ಹುಟ್ಟಿದೆ ಎಂದು ಬುಲ್ಲೋ ಚಿಂತನೆ ಎಚ್ಚರಿಸುತ್ತಿರಲಿ; ಓದಲು ಅಗತ್ಯವಾದ ಮಾನಸಿಕ ದೂರದ ಬಗೆಗಿನ ಅವನ ಒಳನೋಟ ನಮ್ಮನ್ನು ಉತ್ತಮ ಓದುಗರನ್ನಾಗಿ ಮಾಡಲಿ. ಹಾಗೆಯೇ, ಹತ್ತಾರು ಲೇಖಕ, ಲೇಖಕಿಯರು ಮೆಚ್ಚಿ, ಥ್ರಿಲ್ಲಾಗಿರುವ ‘ತುಂಬ ಚೆನ್ನಾಗಿ ಬರೆದ ಬರವಣಿಗೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ’ ಎಂಬ ಮುತ್ತಿನಂಥ ಮಾರ್ಕ್ವೆಜ್ ಮಾತು ಸದಾ ನಮ್ಮೊಳಗಿರಲಿ.
ಮೊನ್ನೆ ಓದಿದ ಮಾತು
ಈ ಕಾಲದ ಮುಂಚೂಣಿ ಚಿಂತಕ ನೋಮ್ ಚಾಮ್‌ಸ್ಕಿ ಚಿಂತನೆಯನ್ನು ಲೋಕದ ಜನ ಎಷ್ಟೊಂದು ಉಲ್ಲೇಖಿಸುತ್ತಿದ್ದಾರೆಂಬುದು ತಿಳಿದು ಖುಷಿಯಾಯಿತು!
ಈಗ ಜಗತ್ತಿನಲ್ಲಿ ಹೆಚ್ಚು ಉಲ್ಲೇಖವಾಗುವ ಲೇಖಕರು ಹಾಗೂ ಕೃತಿಗಳ ಪಟ್ಟಿಯಲ್ಲಿ ಮಾರ್ಕ್ಸ್, ಲೆನಿನ್, ಶೇಕ್ ಸ್ಪಿಯರ್, ಅರಿಸ್ಟಾಟಲ್, ಬೈಬಲ್, ಪ್ಲೇಟೋ, ಸಿಗ್ಮಂಡ್ ಫ್ರಾಯ್ಡ್ ನಂತರ ಚಾಮ್‌ಸ್ಕಿಗೆ ಎಂಟನೆಯ ಸ್ಥಾನ.
ಈ ಕಾಲದ ಅಂತರರಾಷ್ಟ್ರೀಯ ರಾಜಕಾರಣದ ಕುತಂತ್ರಗಳನ್ನು, ಅದರಲ್ಲೂ ಅಮೆರಿಕದ ಯಜಮಾನೀ ಹಿಡಿತಗಳನ್ನು ಅರಿಯಲು ಚಾಮ್‌ಸ್ಕಿ ಪುಸ್ತಕಗಳು, ಸಂದರ್ಶನಗಳು ಬಹು ಮುಖ್ಯ ರೆಫರೆನ್ಸುಗಳು.
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಎಪ್ಪತ್ತನೆಯ ವಯಸ್ಸು ತಲುಪಲಿದ್ದಾಗ ಒಂದು ರಾತ್ರಿ ಮಗ ರೋಡ್ರಿಗೊ ಕೇಳಿದ: ‘ಅಪ್ಪಾ, ರಾತ್ರಿ ಲೈಟಾಫ್ ಮಾಡಿದ ಮೇಲೆ ಏನು ಯೋಚಿಸ್ತಾ ಇರ್ತೀಯ?’
‘ಇನ್ನೇನು ಎಲ್ಲ ಕೆಲಸ ಹೆಚ್ಚು ಕಡಿಮೆ ಮುಗೀತಾ ಬಂದಿದೆ ಅನ್ಸುತ್ತೆ’ ಎಂದ ಮಾರ್ಕ್ವೆಜ್ ನಕ್ಕು ಹೇಳಿದ: ‘ಇನ್ನೂ ಟೈಮಿದೆ. ಆದರೆ…ಒಂದಿನ ಇದ್ದಕ್ಕಿದ್ದಂತೆ ಎದ್ದು ನೋಡ್ತೀನಿ. ವಯಸ್ಸಾಗೇಬಿಟ್ಟಿದೆ. ಹಿಂಗೇ… ಅದು ಹಠಾತ್ತನೆ ಬರುತ್ತೆ. ಯಾವ ಸೂಚನೇನೂ ಕೊಟ್ಟಿರಲ್ಲ. ದಿಗ್ಭ್ರಮೆ ಆಗುತ್ತೆ. ಯಾರೋ ಹೇಳಿದ್ರು- ‘ಲೇಖಕನ ಜೀವನದಲ್ಲಿ ಒಂದು ಕಾಲ ಬರುತ್ತೆ. ಆಗ ಅವನ ಕೈಲಿ ದೊಡ್ಡ ಕಾದಂಬರಿ ಬರೆಯೋಕಾಗಲ್ಲ. ತಲೇಲಿ ದೊಡ್ಡ ಆರ್ಕಿಟೆಕ್ಚರ್ ಹಿಡಿಯೋ ಶಕ್ತಿ ಇರಲ್ಲ. ಅಪಾಯಕಾರಿ ಸಾಹಸ ಮಾಡಿ ದೊಡ್ಡ ಕಾದಂಬರೀನ ನಿಭಾಯಿಸೋಕಾಗಲ್ಲ’ ಅಂತ. ಈಗ ನನಗೂ ಹಂಗೇ ಅನ್ನಿಸುತ್ತೆ. ಇನ್ನು ಮೇಲೆ ಪುಟ್ಟ ಪುಟ್ಟ ಕೃತಿ ಬರೀಬೌದು, ಅಷ್ಟೇ…’
ಅಪ್ಪನಿಗೆ ಎಂಬತ್ತಾದಾಗ ಮಗ ಮತ್ತೆ ಕೇಳಿದ: ‘ಅಪ್ಪಾ, ಈಗ ಹೆಂಗನ್ಸುತ್ತೆ?
‘ಎಂಬತ್ತರ ನೋಟ ಅಚ್ಚರಿ ಹುಟ್ಟಿಸುತ್ತೆ. ಕೊನೆಗಾಲ ಹತ್ತಿರ ಬರ್ತಾ ಇದೆ.’
‘ಭಯ ಆಗುತ್ತಾ?’
‘ಭಾಳಾ ದುಃಖ ಆಗುತ್ತೆ’
ಇದಾದ ಮೇಲೊಂದು ದಿನ ಮಾರ್ಕ್ವೆಜ್ ಹೇಳಿದ್ದ: ‘ನಾನು ಸಾವನ್ನ ಅಷ್ಟೊಂದು ಯಾಕೆ ದ್ವೇಷಿಸ್ತೀನಿ ಗೊತ್ತಾ? ನನ್ನ ಕೈಲಿ ಬರೆಯೋಕೇ ಆಗದೇ ಇರೋ ನನ್ನ ಜೀವನದ ಏಕ ಮಾತ್ರ ಅಂಶ ಅಂದ್ರೆ ಸಾವು; ಅದಕ್ಕೇ ನನಗೆ ಸಾವು ಕಂಡ್ರಾಗಲ್ಲ.’ ಜೊತೆಯಲ್ಲಿದ್ದವರೆಲ್ಲ ಸಾಯಲಾರಂಭಿಸಿದಾಗ, ‘ಹಿಂದೆ ಸಾಯದೇ ಇದ್ದೋರೆಲ್ಲ ಈಗ ಸಾಯ್ತಾ ಇದಾರೆ’ ಎಂದು ಎಲ್ಲರನ್ನೂ ನಗಿಸಿದ್ದ ಮಾರ್ಕ್ವೆಜ್, ಯಾರು ಸತ್ತರೂ ಶವಸಂಸ್ಕಾರಕ್ಕೆ ಹೋಗುತ್ತಿರಲಿಲ್ಲ. ‘ಗೆಳೆಯರನ್ನ ಹೂಳೋದು ನಂಗೆ ಇಷ್ಟ ಇಲ್ಲ’ ಅನ್ನುತ್ತಿದ್ದ.
ಕೊಲಂಬಿಯಾದ ಮಾರ್ಕ್ವೆಜ್ (1927-2014) ಜಗತ್ತಿನ ಅತಿ ಶ್ರೇಷ್ಠ ಕಾದಂಬರಿಕಾರರಲ್ಲೊಬ್ಬ. ಸಾವಿಗೆ ಮೊದಲೇ ಮರಣದಂಥ ಮರೆವಿನ ಕಾಯಿಲೆ ಅವನನ್ನು ಆವರಿಸತೊಡಗಿತು. ನೆನಪಿನ ಜೊತೆ ಸೆಣಸತೊಡಗಿದ್ದ ಮಹಾಪ್ರತಿಭೆ (ಜೀನಿಯಸ್) ಮಾರ್ಕ್ವೆಜ್‌ಗೆ ಪೂರ್ಣ ಮರೆವು ಆವರಿಸುವ ಎರಡು ವರ್ಷಗಳ ಮೊದಲೇ ಮನಸ್ಸು ದಿಕ್ಕೆಡುತ್ತಿದೆ ಎಂಬುದು ಗೊತ್ತಾಗತೊಡಗಿತ್ತು. ‘ನೆನಪು ಹೋಗ್ತಾ ಇದೆ, ಏನಾರೂ ಮಾಡಿ, ಏನಾರೂ ಮಾಡಿ’ ಎಂದು ಅವರಿವರನ್ನು ಕೇಳುತ್ತಲೇ ಇದ್ದ.
ದಿಗ್ಭ್ರಮೆಗೊಂಡ ಮಾರ್ಕ್ವೆಜ್, ‘ಅಲ್ರಪ್ಪಾ, ನಾನು ಕೆಲಸ ಮಾಡೋದೇ ನೆನಪಿನಿಂದ. ನೆನಪೇ ನನ್ನ ಸಾಧನ. ನೆನಪೇ ನನ್ನ ಮೂಲದ್ರವ್ಯ. ನೆನಪೇ ಇಲ್ಲದೆ ನನಗೆ ಏನೇನೂ ಮಾಡೋಕಾಗಲ್ಲ, ಹೆಲ್ಪ್ ಮಿ’ ಎನ್ನುತ್ತಲೇ ಇರುವನು. ಒಂದೊಂದು ದಿನ ಒಂದು, ಒಂದೂವರೆ ಗಂಟೆ ಇದನ್ನೇ ಹೇಳುತ್ತಾ ಹೇಳುತ್ತಾ ಸುಮ್ಮನಾಗುವನು. ಆಮೇಲೆ ಒಂಚೂರು ಪ್ರಶಾಂತವಾಗುತ್ತಾ ಹೇಳುವನು: ‘ನೆನಪು ಹೊರಟೋಗ್ತಾ ಇದೆ. ನನ್ನ ಅದೃಷ್ಟ ಅಂದ್ರೆ ನೆನಪಿನ ಶಕ್ತಿ ಹೋಗ್ತಾ ಇದೆ ಅನ್ನೋದೂ ಮರೆತು ಹೋಗ್ತಾ ಇದೆ!’
ನೆನಪು ಕಂತತೊಡಗಿದ ಕಾದಂಬರಿಕಾರನ ಎದುರು ಮನೆಯವರು ಅವನು ಬರೆದ ಪುಸ್ತಕಗಳನ್ನು ತಂದಿಡುವರು. ಮಾರ್ಕ್ವೆಜ್ ಇವನ್ನೆಲ್ಲ ಎಲ್ಲೋ ನೋಡಿರುವೆನೆಂಬಂತೆ ಕಣ್ಣರಳಿಸುವನು. ಹಿಂದೆಲ್ಲ, ‘ಯಾವ ಪುಸ್ತಕದಲ್ಲಿ ಏನು ತಪ್ಪಿರುತ್ತೋ, ನಾನು ಬರೆದಿದ್ದನ್ನೆಲ್ಲ ಈಗ ಮತ್ತೆ ಓದಿದರೆ ಎಲ್ಲಿ ನನ್ನ ಕ್ರಿಯೇಟಿವಿಟಿಗೆ ಹೊಡೆತ ಬೀಳುತ್ತೋ’ ಎಂಬ ದಿಗಿಲಿನಲ್ಲಿ ಮಾರ್ಕ್ವೆಜ್ ತನ್ನ ಪುಸ್ತಕಗಳನ್ನು ಮತ್ತೆ ಓದಿದವನಲ್ಲ. ಈಗ ಅಲ್ಲಲ್ಲಿ ಅವನ್ನು ಓದಲೆತ್ನಿಸಿ, ‘ಅರೆರೆ! ಇದೆಲ್ಲ ಎಲ್ಲಿಂದ ಬಂತಪ್ಪಾ?’ ಎಂದು ಅಚ್ಚರಿಯಿಂದ ಮಗನನ್ನು ಕೇಳುವನು. ಆ ಪುಸ್ತಕದಲ್ಲಿರುವ ಏನೊಂದೂ ತಿಳಿಯುತ್ತಿಲ್ಲ. ಪುಸ್ತಕ ಮುಚ್ಚಿ, ಹಿಂಬದಿಯ ಕವರ್ ಮೇಲೆ ತನ್ನ ಫೋಟೋ ನೋಡಿ ವಿಸ್ಮಯಗೊಳ್ಳುವನು. ಪುಸ್ತಕ ತೆರೆದು ಓದಲೆತ್ನಿಸುವನು.
ಮಂಕಾಗಿ ಮುದುಡಿದ್ದ ಮಾರ್ಕ್ವೆಜ್ ಸ್ಪ್ಯಾನಿಶ್ ಸಾಹಿತ್ಯದ ಸುವರ್ಣಯುಗದ ಕವಿತೆಗಳನ್ನು ನೆನಸಿಕೊಂಡು ಹೇಳತೊಡಗುವನು. ಹಲವಾರು ಕವಿತೆಗಳು ಅವನಿಗೆ ಬಾಯಿಪಾಠವಾಗಿದ್ದವು. ಹಿಂದೊಮ್ಮೆ ಅವನು ಗಂಟೆಗಟ್ಟಲೆ ನಡೆಯಲಿದ್ದ ಸ್ಕ್ಯಾನಿಂಗ್ ಭಯದಿಂದ ಪಾರಾಗಲು ನಲವತ್ತೈದು ನಿಮಿಷ ಎಡೆಬಿಡದೆ ನೆನಪಿನಿಂದ ಕವಿತೆಗಳನ್ನು ಹೇಳುತ್ತಲೇ ಇದ್ದ! ಅದನ್ನು ನೆನೆದ ಮನೆಯವರು ಅವನಿಗೆ ಪ್ರಿಯವಾದ ಸಂಗೀತ ಹಾಕುವರು. ಮಾರ್ಕ್ವೆಜ್ ಕಣ್ಣರಳುವುದು. ಹಿಂದೆಲ್ಲ ರೊಮ್ಯಾಂಟಿಕ್ ಹಾಡುಗಳೆಂದರೆ ಅವನಿಗೆ ಪ್ರಾಣ. ‘ಲವ್ ಇನ್ ದಿ ಟೈಮ್ ಆಫ್ ಕಾಲರಾ’ ಕಾದಂಬರಿ ಬರೆಯುತ್ತಿದ್ದಾಗ ಆ ರೊಮ್ಯಾಂಟಿಕ್ ಹಾಡುಗಳನ್ನು ಮತ್ತೆ ಮತ್ತೆ ಕೇಳಿಸಿಕೊಂಡು ಅವುಗಳ ಭಾವುಕತೆ, ಭಾವತೀವ್ರತೆಯ ಉಕ್ಕು, ಅದರ ಪರಿಣಾಮ… ಇವನ್ನೆಲ್ಲ ಸ್ಟಡಿ ಮಾಡುತ್ತಿದ್ದ. ಈಗ ಆ ಸೆಂಟಿಮೆಂಟಲ್ ಹಾಡುಗಳು ಅವನಲ್ಲಿ ಜೀವ ಸೆಲೆ ಉಕ್ಕಿಸಲಾರವು.
ಹಾಗೆಂದು ಅವನಿಗೆ ಎಲ್ಲವೂ ಮರೆತು ಹೋಗಿತ್ತೆಂದು ಹೇಳುವುದು ಕೂಡ ಕಷ್ಟ. ಎಲ್ಲೋ ಆಳದಲ್ಲಿ ಯಾವುದೋ ಪ್ರತಿಧ್ವನಿ ಹುಟ್ಟಿ, ಎದುರಿಗಿದ್ದವರನ್ನು, ‘ಎಲ್ಲಾ ಆರಾಮ?’ ‘ಈಗ ಯಾವೂರಲ್ಲಿದೀರ?’ ‘ಮನೆ ಕಡೆ ಎಲ್ಲ ಚೆನ್ನಾಗಿದಾರ?’ ಎಂದೆಲ್ಲ ಕೇಳುವನು. ಇದಕ್ಕಿಂತ ಮುಖ್ಯವಾದ ಏನನ್ನೋ ಕೇಳಲು ತಡವರಿಸುತ್ತಾ ಶಬ್ದ ಹೊರಡದೆ ಸುಮ್ಮನಾಗುವನು. ಸಣ್ಣಗೆ ಹೊಗೆ ಮೇಲೆದ್ದು ಮರೆಯಾದಂತೆ ಮುಖದ ಮೇಲೆ ಚಣ ವಿಸ್ಮಯ, ಮುಜುಗರ ಮೂಡಿ ಮಾಯವಾಗುವುವು. ತಮಾಷೆಯ, ಕೇಳುಗರನ್ನು ಬಡಿದೆಬ್ಬಿಸುವ, ಪ್ರಚೋದಿಸುವ ಮಾತುಗಾರ ಮಾರ್ಕ್ವೆಜ್ ಈಗ ಪದಗಳಿಗಾಗಿ ತಡಕಾಡುವನು. ಪದಗಳು ಅವನ ಪ್ರಜ್ಞೆಯೊಳಗಿಲ್ಲವಲ್ಲ ಎಂದು ಮನೆಯವರು ಖಿನ್ನರಾಗಿದ್ದಾಗ, ಸಂಜೆ ಹಠಾತ್ತನೆ ಮಾರ್ಕ್ವೆಜ್ ಕೇಳುವನು: ‘ರಾತ್ರಿ ಎಲ್ಲಿಗೆ ಹೋಗೋಣ? ನಗನಗ್ತಾ ಇರೋ ಕಡೆಗೆ ಹೋಗೋಣಾ? ಡ್ಯಾನ್ಸ್ ಮಾಡೋಣಾ? ಆಂ? ಯಾಕೆ? ಯಾಕಾಗಲ್ಲ?’
ಹೆಂಡತಿ ಮರ್ಸಿಡಿಸ್ ರೂಮಿನೊಳಕ್ಕೆ ಅಡಿಯಿಡುವಳು. ಮಾರ್ಕ್ವೆಜ್‌ಗೆ ಅವಳ ಗುರುತು ಹತ್ತುವುದು. ‘ಮೆಶೆ! ಮರ್ಸಿಡಿಸ್! ಅಮ್ಮ! ಹೋಲಿ ಮದರ್!’ ಎನ್ನುವನು. ಒಂದೆರಡು ತಿಂಗಳ ಹಿಂದೆ ಮರ್ಸಿಡಿಸ್ ಒಳ ಬಂದಿದ್ದಾಗ, ಮಾರ್ಕ್ವೆಜ್ ಮಗನನ್ನು ಕೇಳಿದ್ದ: ‘ಇವಳ್ಯಾರಯ್ಯಾ ಅವಳ ಥರಾನೇ ಆಡ್ತಿದಾಳೆ? ಇವಳ್ಯಾಕೆ ಎಲ್ಲಾರ್ಗೂ ಆರ್ಡರ್ ಮಾಡ್ತಿದಾಳೆ? ಇವಳೇ ಮನೇ ನಡೆಸ್ತಿದಾಳಲ್ಲ? ನನಗೂ ಇವಳಿಗೂ ಏನೂ ಸಂಬಂಧ ಇಲ್ವಲ್ಲ?’
ಇದಾದ ಕೆಲವೇ ದಿನಗಳಲ್ಲಿ ಮಾರ್ಕ್ವೆಜ್‌ಗೆ ಮರ್ಸಿಸಿಡ್ ನೆನಪು ಹತ್ತುವುದು. ಅವಳು ತನ್ನ ಪರಮಾಪ್ತ ಸಖಿ ಎಂಬುದು ನೆನಪಾಗುವುದು. ಸೆಕ್ರೆಟರಿ, ಅಡುಗೆಯವಳು, ಮನೆಗೆಲಸದವರು ಎಲ್ಲರನ್ನೂ ಗುರುತಿಸುವನು. ಅಯ್ಯೋ, ಏನು ಮಾಡಿದರೂ ಅವರ ಹೆಸರು ಹೊಳೆಯದು. ಅವನ ಇಬ್ಬರು ಮಕ್ಕಳು -ರೋಡ್ರಿಗೊ, ಗೊಂಝಾಲೊ- ಬಂದಾಗ ಕಡುಕುತೂಹಲದಿಂದ ಅವರನ್ನೇ ನೋಡುವನು. ಎಲ್ಲೋ ನೋಡಿದ ನೆನಪು. ಯಾರೂಂತ ಗೊತ್ತಾಗುತ್ತಿಲ್ಲ. ಮಾರ್ಕ್ವೆಜ್ ಮನೆಗೆಲಸದವಳನ್ನು ಕೇಳುವನು:
‘ಈಗ ಪಕ್ಕದ ರೂಮಿಗೆ ಹೋದ್ರಲ್ಲ, ಯಾರವರು?’
‘ನಿಮ್ಮ ಮಕ್ಳು’
‘ನಿಜಾನ? ಅವರಾ? ಫಕ್! ನಾನಂತೂ ನಂಬಲ್ಲ”
ಮಾರ್ಕ್ವೆಜ್ ಸ್ಥಿತಿ ಹೀಗಿದ್ದಾಗ, ರೋಡ್ರಿಗೋಗೆ ಫೋನಿನಲ್ಲಿ ಗೆಳತಿ ಕೇಳಿದಳು:‘ನಿಮ್ಮಪ್ಪ ಹೇಗಿದ್ದಾನೆ?’
‘ಅಪ್ಪ ವರ್ತಮಾನದಲ್ಲಿ ಬದುಕುತ್ತಿದ್ದಾನೆ. ಅವನಿಗೆ ಭೂತಕಾಲದ ಹೊರೆಯಿಲ್ಲ. ಭವಿಷ್ಯದ ಬಗ್ಗೆ ನಿರೀಕ್ಷೆಗಳಿಲ್ಲ. ಆದರೆ…ಕತೆ ಹೇಳಲು ಬೇಕಾದ ಮೂಲ ದ್ರವ್ಯವಾದ ಹಿಂದಣ ಅನುಭವವಾಗಲೀ, ಆ ಅನುಭವದ ಆಧಾರದಿಂದ ಮುಂದೇನಾಗುತ್ತದೆ ಅಂತ ಹೇಳುವ ಕೆಲಸವಾಗಲೀ ಇನ್ನು ಮುಂದೆಂದೂ ಅವನ ಜೀವನದಲ್ಲಿ ಇರಲ್ಲ’ ಎಂದ ರೋಡ್ರಿಗೊ.
ಫೊಟೋಗ್ರಾಫರ್ ರೋಡ್ರಿಗೊ ಸಿನಿಮಾಗಳನ್ನೂ ಮಾಡುತ್ತಿದ್ದ. ನೆನಪು ಕೈ ಕೊಡಲಾರಂಭಿಸಿದ್ದ ಕಾಲದಲ್ಲಿ ಮಾರ್ಕ್ವೆಜ್ ಮಗನ ಜೊತೆ ಕೂತು ಅವನ ಸಿನಿಮಾಕ್ಕಾಗಿ ಚಿತ್ರಕತೆ ಬರೆಯಲು ಹೊರಟಿದ್ದ. ಕತೆಯ ಹಂದರ ಕುತೂಹಲಕರವಾಗಿತ್ತು: ವೃತ್ತಿ ಜೀವನದಲ್ಲಿ ಯಶಸ್ವಿಯಾದ ಮಧ್ಯವಯಸ್ಕ ಮಹಿಳೆಗೆ ತನ್ನ ಗಂಡ ಇನ್ಯಾರದೋ ಪ್ರೇಮದಲ್ಲಿ ಸಿಲುಕಿರಬಹುದು ಎಂಬ ಅನುಮಾನ ಶುರುವಾಗುತ್ತದೆ. ಬರಬರುತ್ತಾ ಅದು ನಿಜವೆಂದೂ ಗೊತ್ತಾಗುತ್ತದೆ. ವಿಚಿತ್ರವೆಂದರೆ, ಆ ಹೆಂಗಸು ಕೂಡ ಇವಳ ಥರವೇ ಇದ್ದಾಳೆ. ಇವಳದೇ ರೂಢಿ ರಿವಾಜು, ಇವಳದೇ ಅಭಿರುಚಿ. ಅವಳು ಇರುವ ಮನೆ ಕೂಡ ಇವಳ ಮನೆಯ ಥರವೇ ಇದೆ. ‘ಈ ಎರಡೂ ಪಾತ್ರಗಳನ್ನ ಒಬ್ಬಳೇ ನಟಿ ಮಾಡಬೇಕು’ ಅನ್ನುತ್ತಿದ್ದ ಮಾರ್ಕ್ವೆಜ್.
ಇದೀಗ ಮಾರ್ಕ್ವೆಜ್ ಮಗನ ಜೊತೆ ಕೂತು ಚಿತ್ರಕತೆ ಬೆಳೆಸಲು ಹೊರಟರೆ ನೆನಪು ಕೈ ಕೊಡುತ್ತಿದೆ. ಏನೋ ಹೇಳಲು ಹೊರಡುತ್ತಾನೆ. ತಕ್ಕ ಪದ ಸಿಗುತ್ತಿಲ್ಲ. ಅವನು ಹೇಳುವುದು ಮಗನಿಗೆ ತಿಳಿಯುತ್ತಿಲ್ಲ. ಖಿನ್ನನಾದ ಮಗ ಆ ಪ್ರಯತ್ನವನ್ನೇ ಕೈ ಬಿಡುತ್ತಾನೆ. ಹಿಂದೆಲ್ಲ ಅಪ್ಪ ಅಸಾಧಾರಣ ಧ್ಯಾನದಲ್ಲಿ ಬರೆಯುತ್ತಾ ಕೂತಿರುತ್ತಿದ್ದ ಚಿತ್ರಗಳು ಮಗನ ಕಣ್ಣೆದುರು ಮೂಡುತ್ತವೆ. ‘ಅಬ್ಬ!ಇಷ್ಟು ಫೋಕಸ್ಡ್ ಆಗಿದ್ರೆ ಇವನು ಸಾಧಿಸೋಕಾಗದೇ ಇರೋದು ಏನಾದರೂ ಉಂಟಾ!’ ಎಂದು ಮಗ ಅಪ್ಪನ ಮಹಾಮಗ್ನತೆಯನ್ನು ವಿಸ್ಮಯದಿಂದ, ಹೆಮ್ಮೆಯಿಂದ ನೆನೆಯುವನು. ಅಪ್ಪ ಆಯಾ ದಿನದ ಕಂತು ಬರೆದು ಮಗಿಸಿ ಡೈನಿಂಗ್ ಟೇಬಲ್ಲಿನಲ್ಲಿ ಕೂತು ಅಂದಿನ ಬರವಣಿಗೆಯ ಏಳುಬೀಳನ್ನು ಹೇಳುತ್ತಿದ್ದ ಚಿತ್ರ ನೆನಪಾಗುವುದು. ಸದಾ ಚಡಪಡಿಕೆ, ಚಟುವಟಿಕೆ, ಕ್ರಿಯೇಟಿವಿಟಿಗಳ ಲೋಕಶ್ರೇಷ್ಠ ಕಾದಂಬರಿಗಾರನ ಅದ್ಭುತ ಸೃಜನಶೀಲ ಕಾಲ ಇನ್ನು ಮರಳಿ ಬಾರದ ಹಾಗೆ ಕಳೆದು ಹೋಗಿತ್ತು. ಮಾರ್ಕ್ವೆಜ್‌ಗೆ ಅದ್ಯಾವುದೂ ನೆನಪಿರಲಿಲ್ಲ.
2014ಕ್ಕೆ ಮಾರ್ಕ್ವೆಜ್‌ಗೆ ಎಂಬತ್ತೇಳು ತುಂಬುವ ಹೊತ್ತಿಗೆ ಪೂರ್ಣ ಮರೆವು ಆವರಿಸಿತ್ತು. ಒಂದಿನ ಜೋರು ನೆಗಡಿಯಾಯಿತು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಸಿದ ತಕ್ಷಣ ಮಾರ್ಕ್ವೆಜ್ ಸಣ್ಣ ದನಿಯಲ್ಲಿ ಗೊಣಗುತ್ತಾನೆ: ‘ಮನೇಗೋಗ್ಬೇಕು.’ ‘ಮನೇಲೇ ಇದೀರಲ್ಲ’ ಎನ್ನುತ್ತಾಳೆ ಮರ್ಸಿಡಿಸ್. ಮಾರ್ಕ್ವೆಜ್ ಸುತ್ತ ನೋಡುತ್ತಾನೆ. ಮನೆಯ ಯಾವ ಕುರುಹೂ ಕಾಣದೆ ಖಿನ್ನನಾಗುತ್ತಾನೆ. ನಡುಗುವ ಬಲಗೈ ಎತ್ತಿ ಇದು ನನ್ನದೇ ಹೌದು ಅಂದುಕೊಳ್ಳುತ್ತಾನೆ. ಅದೇ ಕೈ ಮೆಲ್ಲಗೆ ಕೆಳ ಜಾರಿ ಕಣ್ಣೆವೆಗಳನ್ನು ಮುಚ್ಚುತ್ತದೆ. ಹುಬ್ಬು ಗಂಟಿಕ್ಕಿಕೊಳ್ಳುತ್ತವೆ. ತುಟಿ ಕಚ್ಚಿಕೊಳ್ಳುತ್ತವೆ. ಹಾಸಿಗೆಯಲ್ಲಿ ಉರುಳಿ ಬಿದ್ದಿದ್ದ ಮಾರ್ಕ್ವೆಜ್ ನಡುನಡುವೆ ಮೇಲೇಳುತ್ತಾನೆ.
ರೌಂಡ್ಸಿಗೆ ಬಂದ ಡಾಕ್ಟರ್, ‘ಹೇಗಿದೀರ?’ ಅಂದರೆ, ಮಾರ್ಕ್ವೆಜ್, ‘ಸ್ಕ್ರೂಡ್!’ ಅನ್ನುತ್ತಾನೆ. ಜೀವನದುದ್ದಕ್ಕೂ ಅವನನ್ನು ಲವಲವಿಕೆಯಲ್ಲಿಟ್ಟಿದ್ದ ಸ್ತ್ರೀಚೈತನ್ಯ ಈಗಲೂ ಅವನಲ್ಲಿ ಮುದ ಉಕ್ಕಿಸುತ್ತವೆ. ಸುತ್ತ ಹೆಂಗಳೆಯರ ದನಿ ಕೇಳಿ ಮಾರ್ಕ್ವೆಜ್ ಕಣ್ಣು ಬಿಡುತ್ತಾನೆ. ಹೆಂಗಳೆಯರೆಲ್ಲ ಅವನತ್ತ ಧಾವಿಸಿ ಅಕ್ಕರೆಯಿಂದ ಮಾತಾಡತೊಡಗುತ್ತಾರೆ. ಮಾರ್ಕ್ವೆಜ್ ಕಣ್ಣು ಫಳಗುಡುತ್ತವೆ.
ಶ್ವಾಸಕೋಶದ ಕ್ಯಾನ್ಸರ್ ತಗುಲಿರುವ ಮಾರ್ಕ್ವೆಝ್, ‘ಅಬ್ಬಬ್ಬ ಅಂದರೆ ಇನ್ನು ಕೆಲವು ತಿಂಗಳಷ್ಟೇ ಉಳಿದಾನಷ್ಟೇ, ಇರುವಷ್ಟು ದಿನ ಮನೆಯಲ್ಲೇ ಇರಲು ಬಿಡೋದು ಒಳ್ಳೇದು’ ಎನ್ನುತ್ತಾರೆ ಡಾಕ್ಟರು. ಆಸ್ಪತ್ರೆಯ ಹಾಸಿಗೆ, ರೆಸ್ಪಿರೇಟರ್ ಸಮೇತ ಮಾರ್ಕ್ವೆಜ್ ಮರಳಿ ಮನೆ ಸೇರುತ್ತಾನೆ. ಮಹಾಪ್ರತಿಭೆಯ ಕೊನೆಯ ದಿನಗಳು ಹತ್ತಿರವಾಗುತ್ತಿವೆ. ಇದ್ದಕ್ಕಿದ್ದಂತೆ ಮನೆಯಲ್ಲಿ ಹಕ್ಕಿಯೊಂದು ಸತ್ತು ಬೀಳುತ್ತದೆ. ‘ಇದು ಶುಭಶಕುನವೋ? ಅಪಶಕುನವೋ? ಈ ಹಕ್ಕೀನ ಆಚೆ ಎಸೀಬೇಕೋ? ಹೂಗಿಡಗಳ ಮಧ್ಯೆ ಹೂಳಬೇಕೋ?’ ಎಂಬ ಚರ್ಚೆ ಶುರುವಾಗುತ್ತದೆ. ಲ್ಯಾಟಿನ್ ಅಮೆರಿಕದ ನಂಬಿಕೆ, ಜಾನಪದ, ನಿಗೂಢತೆ, ಮೂಢನಂಬಿಕೆಗಳ ಮಾಂತ್ರಿಕ ವಾಸ್ತವದ ಪರಿಸರವನ್ನು ಸೂರೆ ಹೊಡೆದು ‘ಒನ್ ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿ ಬರೆದಿದ್ದ ಮಾರ್ಕ್ವೆಝ್ ಮನೆಯಲ್ಲಿ ಈ ಚರ್ಚೆ ನಡೆದಿದ್ದು ಸಹಜವಾಗಿತ್ತು! ಅವತ್ತು ಮಧ್ಯಾಹ್ನ ಮಾರ್ಕ್ವೆಜ್ ಎದೆಬಡಿತ ನಿಂತುಹೋಯಿತು.
2020ರಲ್ಲಿ ರೋಡ್ರಿಗೊ ಗಾರ್ಸಿಯಾ ‘ಎ ಫೇರ್ ವೆಲ್ ಟು ಗ್ಯಾಬೊ ಅಂಡ್ ಮರ್ಸಿಡಿಸ್: ದ ಪಬ್ಲಿಕ್, ದ ಪ್ರೈವೇಟ್, ದ ಸೀಕ್ರೆಟ್’ ಎಂಬ ಪುಟ್ಟ ಪುಸ್ತಕ ಪ್ರಕಟಿಸಿದ. ಈ ಪುಸ್ತಕದಲ್ಲಿ ಮಾರ್ಕ್ವೆಜ್ ಮರೆವಿನ ವರ್ಷಗಳ ಕತೆ ಓದುತ್ತಾ, ವ್ಯಾಸ ಸೃಷ್ಟಿಸಿದ ಕರ್ಣನ ಮರೆವು, ಕಾಳಿದಾಸನ ದುಶ್ಯಂತನ ಮರೆವು… ಇವೆಲ್ಲ ನೆನಪಾದವು. ಇವು ಕೇವಲ ಪುರಾಣ ಕತೆಗಳಲ್ಲ; ನಮ್ಮ ಪ್ರಾಚೀನ ಮಹಾಪ್ರತಿಭೆಗಳು ಸೃಷ್ಟಿಸಿದ ಮರೆವಿನ ಕಾಯಿಲೆಯ ಅನನ್ಯ ರೂಪಕಗಳು ಎನ್ನಿಸತೊಡಗಿತು. ಎಲ್ಲ ಲೇಖಕ, ಲೇಖಕಿಯರ ಬದುಕಿನ ಕೊನೆಕೊನೆಗೆ ಅಕಸ್ಮಾತ್ ನೆನಪು ಇನ್ನೂ ಉಳಿದಿದ್ದರೂ ಬರೆಯಲಾಗದಂಥ ಗರ ಬಡಿದ ಸ್ಥಿತಿಯ, ಸೃಜನಶೀಲತೆ ಕಂತುವ ಘಟ್ಟದ ದುರಂತ ಕೂಡ ಹೆಚ್ಚುಕಡಿಮೆ ಮಾರ್ಕ್ವೆಜ್ ನ ಕೊನೆಯ ವರ್ಷಗಳ ಮರೆವಿನ ದುರಂತದಂತೆಯೇ ಇರಬಹುದೇನೋ…
ಅದೇನೇ ಇರಲಿ, ಮಾರ್ಕ್ವೆಜ್ ತೀರಿಕೊಂಡ ದಿನ ಅಪ್ಪನ ಹಲವು ಮಾತುಗಳು ಮಗನ ಕಿವಿಯಲ್ಲಿ ಮೊರೆಯತೊಡಗಿದವು. ಆ ಮಾತುಗಳಲ್ಲಿ ಅಪ್ಪ ಹೇಳಿದ್ದ ಅಪ್ಪಟ ಚಿನ್ನದಂಥ ಮಾತೊಂದನ್ನು ಕೊನೆವರೆಗೂ ನೆನಪಿಟ್ಟುಕೊಳ್ಳಬೇಕೆಂದು ಮಗನಿಗನ್ನಿಸಿತು:
‘ತುಂಬ ಚೆನ್ನಾಗಿ ಬರೆದ ಬರವಣಿಗೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ.’
ಉತ್ತಮ ಬರವಣಿಗೆಯ ಬಗ್ಗೆ, ನಿಜಕ್ಕೂ ಚೆನ್ನಾಗಿ ಬರೆಯುವ ಬಗ್ಗೆ, ಮಾರ್ಕ್ವೆಜ್ ಥರದ ಕಾತರ, ತಹತಹ, ಶ್ರದ್ಧೆ, ಪ್ರೀತಿ, ನಂಬಿಕೆ, ನಿರೀಕ್ಷೆ ಇಲ್ಲದಿದ್ದರೆ ಯಾರೂ ಒಳ್ಳೆಯ ಬರಹಗಾರರಾಗಲಾರರು…
ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಶಾಲಾಪಠ್ಯಗಳ ಪರಿಷ್ಕರಣೆಗೆ ಹೊಸ ಸಮಿತಿಯೊಂದನ್ನು ನೇಮಿಸಿದೆ. ಮಕ್ಕಳ ಮನಸ್ಸನ್ನು ಹದಗೊಳಿಸುವ, ಮುದಗೊಳಿಸುವ ಪ್ರಾಥಮಿಕ ಕೆಲಸವನ್ನು ಪಠ್ಯಗಳು ಸದಾ ಮಾಡುತ್ತಿರಬೇಕು ಹಾಗೂ ಎಳೆಯರನ್ನು ಕೊಲ್ಲುವ ವಿಷಮದ್ದುಗಳಾಗುವ ಪಠ್ಯಗಳನ್ನು ಹೊರಗಿಡಬೇಕು ಎಂಬ ಖಚಿತ ಅರಿವು ಪಠ್ಯಪುಸ್ತಕ ಸಮಿತಿಯ ತಜ್ಞ ಮಹಿಳೆಯರು, ಮಹನೀಯರಿಗೆ ಇದೆಯೆಂದು ನಿರೀಕ್ಷಿಸೋಣ. ಈ ಹಿನ್ನೆಲೆಯಲ್ಲಿ ಈ ಹಿಂದೆ ನನ್ನ ‘ಪ್ರಜಾವಾಣಿ’ ಅಂಕಣವೊಂದರಲ್ಲಿ ಬರೆದ ಟಿಪ್ಪಣಿಗಳನ್ನು ಮರು ವಿಸ್ತರಿಸಿ, ಅನಂತರ ಪಠ್ಯಪುಸ್ತಕಗಳನ್ನು ಕುರಿತ ಈ ಕಾಲದ ‘ಕಲೆಕ್ಟೀವ್ ವಿಸ್ಡಂ’ -ಸಾಮೂಹಿಕ ಜ್ಞಾನ- ಒಗ್ಗೂಡಿಸಲು ಪ್ರಯತ್ನಿಸುವೆ.
ಕಳೆದೆರಡು ವರ್ಷಗಳಲ್ಲಿ ಪಠ್ಯಪುಸ್ತಕಗಳಲ್ಲಿ ವಿಕೃತ ಸೇರ್ಪಡೆಗಳನ್ನು ಮಾಡಿದ ದುಷ್ಟರನ್ನು ಮತದಾರರು ಕಸದ ಬುಟ್ಟಿಗೆ ಎಸೆದಿರುವುದು ಎಲ್ಲ ಆರೋಗ್ಯವಂತ ಮನಸ್ಸುಗಳಲ್ಲಿ ನೆಮ್ಮದಿಯ ಭಾವ ತಂದಿದೆ. ಈ ದುಷ್ಟರು ಪಠ್ಯಪುಸ್ತಕಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡುತ್ತಿದ್ದಾಗ, ಹಲವಾರು ವರ್ಷ ಪಾಠ ಮಾಡಿರುವ ಮೇಡಂ ಒಬ್ಬರು ರೇಗಿ ಹೇಳಿದ್ದರು: ‘ಈ ಜನ ಕ್ಲಾಸ್ ರೂಮುಗಳನ್ನಾಗಲೀ, ಟೀಚರುಗಳನ್ನಾಗಲೀ, ಮಕ್ಕಳನ್ನಾಗಲೀ ಸರಿಯಾಗಿ ನೋಡಿಯೇ ಇಲ್ಲ. ತರಗತಿಗಳಲ್ಲಿ ಯಾವ ಪಾಠ ಹೇಗೆ ಬೆಳೆಯುತ್ತದೆ, ಹೇಗೆ ತಲುಪುತ್ತದೆ ಎಂಬ ಅಂದಾಜೇ ಈ ಥರ ಪಠ್ಯಪುಸ್ತಕ ಮಾಡುವವರಿಗೆ ಇಲ್ಲ.’
ಈ ಮಾತನ್ನು ಹಲವು ತಲೆಮಾರುಗಳ ಗೆಳೆಯ ಗೆಳತಿಯರಿಗೆ ಹೇಳಿದಾಗ, ಅವರಲ್ಲನೇಕರು ತಂತಮ್ಮ ಶಾಲಾ ಪಾಠಗಳನ್ನು ನೆನಸಿಕೊಳ್ಳತೊಡಗಿದರು. ಕೆಲವು ಕತೆ, ಕವಿತೆಗಳು ವಿದ್ಯಾರ್ಥಿ ದೆಸೆಯಿಂದಲೂ ತಮ್ಮೊಳಗೆ ಬೆಳೆದು, ತಾವು ದೊಡ್ಡವರಾದ ಮೇಲೆ ಅವು ಮತ್ತಷ್ಟು ಬೆಳೆದ ರೀತಿಯನ್ನು ಕೆಲವು ಮೇಷ್ಟ್ರು, ಮೇಡಂಗಳು ಕಂಡುಕೊಂಡಿದ್ದರು. ಅವರೆಲ್ಲ ಎಲ್ಲ ಕಾಲಕ್ಕೂ ಸ್ಫೂರ್ತಿ ನೀಡುವ ಪಾಠಗಳ ಮೆಲುಕು ಹಾಕತೊಡಗಿದರು. ಹಲವು ತಲೆಮಾರುಗಳಿಗೆ ಗೋವಿನ ಹಾಡಿನ ಲಯ, ನೀತಿಸಂದೇಶಗಳು ನೆನಪಿನಲ್ಲಿದ್ದವು. ಗೋವಿನ ಹಾಡಿನ ಅಪ್ಪಟ ಕನ್ನಡ ಛಂದಸ್ಸು ಎಳೆಯ ಮನಸ್ಸುಗಳಲ್ಲಿ ಬೆಳೆದು, ಉಳಿದು ಕೋಟಿಗಟ್ಟಲೆ ಕನ್ನಡ ಮಕ್ಕಳಲ್ಲಿ ಕಾವ್ಯದ ಲಯಗಳು ಮೊಳೆತಿವೆ; ಕವಿತೆ ಬರೆಯುವ ಆಸೆ, ಕಾತರಗಳು ಮಕ್ಕಳ ಮನಸ್ಸಿನಲ್ಲಿ ಹುಟ್ಟಿವೆ. ‘ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ’ ಪದ್ಯ ಇತ್ತೀಚಿನ ಮಗುವಿನಲ್ಲೂ ಪ್ರಾಸದ ಮೋಹ ಹುಟ್ಟಿಸುತ್ತದೆ. ಹುತ್ತರಿ ಹಾಡಿನ ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಅಲ್ಲೆ ಕೊಡಗರ ನಾಡಲಾ’ ಗೇಯತೆ ದಶಕಗಳುದ್ದಕ್ಕೂ ಕನ್ನಡ ಮಕ್ಕಳ ಕಿವಿಯಲ್ಲಿ ಮರುದನಿಸುತ್ತಲೇ ಬಂದಿದೆ. ಇವೆಲ್ಲವೂ ಎಳವೆಯಲ್ಲಿ ನಾನು ಪದ್ಯ ಬರೆಯಲು ಶುರು ಮಾಡಿದ ಕಾಲದಿಂದಲೂ ನನ್ನೊಳಗೆ ಬೆಳೆಯುತ್ತಾ ಬಂದಿವೆ.
ಶಾಲೆಯಲ್ಲಿ ತಾವು ಓದಿದ ಪಠ್ಯಗಳನ್ನು ಮುಂದೊಮ್ಮೆ ತಾವೇ ಪಾಠ ಮಾಡಿದವರಿಗೆ ಕೆಲವು ಪಠ್ಯಗಳು ಎಲ್ಲ ಕಾಲಕ್ಕೂ ಬೇಕಾದಂಥವು ಎಂಬುದು ಸ್ಪಷ್ಟವಾಗಿ ಕಂಡಿದೆ. ಗೆಳೆಯ ಗುರುಮೂರ್ತಿ ಕೊಟಿಗೆಮನೆ ಚಿಕ್ಕನಾಯಕನಹಳ್ಳಿಯಲ್ಲಿ ನಾಲ್ಕನೆಯ ಕ್ಲಾಸಿನಲ್ಲಿದ್ದಾಗ, ‘ಮೂಡುವನು ರವಿ ಮೂಡುವನು, ಕತ್ತಲೊಡನೆ ಜಗಳಾಡುವನು’ ಬಣ್ಣನೆಗೆ ಬೆರಗಾಗಿದ್ದ. ಮುಂದೆ ಗುರುಮೂರ್ತಿ ಅದೇ ಊರಿನಲ್ಲಿ ಮೇಷ್ಟರಾದಾಗ, ಕತ್ತಲೊಡನೆ ಸೂರ್ಯ ಜಗಳಾಡುವ ಚಿತ್ರ ತನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲೂ ಅಂಥದೇ ಪುಳಕ ಹುಟ್ಟಿಸಿದ್ದನ್ನು ಕಂಡ. ನನಗೆ ಐದನೇ ತರಗತಿಯಲ್ಲಿ ‘ಸಂಡೇ’ ‘ಮಂಡೇ’ಗಳನ್ನು ಹೇಳಿಕೊಟ್ಟಿದ್ದ ‘ಸಾಲೊಮನ್ ಗ್ರಂಡಿ, ಬಾರ್ನ್ ಆನ್ ಎ ಮಂಡೇ’ ಇಂಗ್ಲಿಷ್ ಶಿಶುಗೀತವನ್ನು ಗುರುಮೂರ್ತಿ ಕೂಡ ಹೇಳಿಕೊಟ್ಟ ಪರಿಗೆ ಮಕ್ಕಳು ಅರಳಿದ್ದಾರೆ; ಗುರುಮೂರ್ತಿಯ ತರಗತಿಗಳಲ್ಲಿ ‘ಮಾಲ್ಗುಡಿ ಡೇಸ್’ನ ಸ್ವಾಮಿಯ ಗೊಂದಲ, ಸಂಭ್ರಮಗಳು ತಮ್ಮದೇ ಎಂಬಂತೆ ಮಕ್ಕಳು ಮಿಡಿದಿದ್ದಾರೆ; ಹಿಮಾಲಯ ಕುರಿತ ಪಾಠವೊಂದು ಹಳೆಯ ಕಗ್ಗಗಳನ್ನೆಲ್ಲ ಬದಿಗೆ ಸರಿಸಿ, ವಾಸ್ತವದ ಹಿಮಾಲಯವನ್ನು ಕಾಣಿಸಿದಾಗ ಹೊಸ ಲೋಕ ಕಂಡಂತೆ ಪುಳಕಗೊಂಡಿದ್ದಾರೆ. ಈ ಅನುಭವ ಲಕ್ಷಾಂತರ ಶಾಲಾ ಟೀಚರುಗಳಿಗೆ ಆಗಿರಬಲ್ಲದು.
ಆದ್ದರಿಂದಲೇ ಪಠ್ಯಪುಸ್ತಕ ಮಾಡುವವರಿಗೆ ಮಕ್ಕಳ ಮನೋವಿಜ್ಞಾನ, ಭಾಷೆ, ಸಾಹಿತ್ಯ, ಹಾಗೂ ವಿವಿಧ ಜ್ಞಾನಕ್ಷೇತ್ರಗಳ ಆಳವಾದ ಜ್ಞಾನ ಇರಲೇಬೇಕು; ಅಥವಾ ಇವೆಲ್ಲ ವಲಯಗಳ ತಜ್ಞರ ಒಡನಾಟವಿರಬೇಕು. ಪಠ್ಯಗಳ ಉತ್ತಮ ಪರಿಣಾಮಗಳ ಬಗ್ಗೆ ಸದಾ ಗಮನವಿರಬೇಕು. ಕ್ಷುಲ್ಲಕ ಉದ್ದೇಶಗಳಿಗಾಗಿ ತಮ್ಮ ತಲೆಯ ಕಸವನ್ನು ಮುಗ್ಧ ಮಕ್ಕಳ ತಲೆಗೆ ತುಂಬಬಾರದು. ಉತ್ತಮ ಭಾಷೆ, ಉತ್ತಮ ಬರವಣಿಗೆಗಳು ಟೀಚರುಗಳ ಹಾಗೂ ಮಕ್ಕಳ ಮನಸ್ಸನ್ನು ತೆರೆಯುತ್ತವೆ. ಕಣ್ಣು, ಕಿವಿ, ಬುದ್ಧಿಗಳನ್ನು ಚುರುಕಾಗಿಸುತ್ತವೆ. ಒಂದು ದಿನದ ಆರಂಭದ ತರಗತಿಗಳಲ್ಲಿ ಲವಲವಿಕೆ ತುಂಬುವ ಕತೆ, ಕವಿತೆಗಳು, ಹುಮ್ಮಸ್ಸು ತುಂಬುವ ಚರಿತ್ರೆಯ ಪಾಠಗಳಿದ್ದರೆ, ಅವು ನಂತರದ ಪಿರಿಯಡ್ಡುಗಳಲ್ಲಿ ಕಠಿಣವಾದ ವಿಜ್ಞಾನ, ಗಣಿತ ಪಾಠಗಳಿಗೆ ಮಕ್ಕಳು ಸಜ್ಜಾಗುವಂತೆ ಮಾಡಬಲ್ಲವು.
ಪಠ್ಯಪುಸ್ತಕಗಳು ಮಕ್ಕಳ ಮನಸ್ಸನ್ನು, ಅಭಿರುಚಿಯನ್ನು ಸದಾ ತಿದ್ದುತ್ತಿರಬೇಕು. ಅನೇಕ ಬಗೆಯ ಭೇದಭಾವಗಳಿಗೆ ‘ಮನೆಯೆ ಮೊದಲ ಪಾಠಶಾಲೆ’ಯಾಗಿ, ಮನೆಯ ಹಿರಿಯರಿಂದಾಗಿಯೇ ಮಕ್ಕಳಲ್ಲಿ ಮೊಳೆಯುವ ವಿಕಾರಗಳನ್ನು ತೊಡೆಯುವಂತಿರಬೇಕು. ಆರನೆಯ ತರಗತಿಯಲ್ಲಿ ಓದಿದ ಭಾರತೀಪ್ರಿಯರ ‘ಮೋಚಿ’ ಕತೆ ನನ್ನಂಥ ಹಲವರಲ್ಲಿ ಜಾತಿ ಮೀರಿದ ಸಂಬಂಧಗಳ ಬಗ್ಗೆ ಅರಿವು ಮೂಡಿಸಿದ್ದು ನೆನಪಾಗುತ್ತದೆ. ‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’ ಎಂಬ ರಾಘವಾಂಕನ ಮಧ್ಯಕಾಲೀನ ಕನ್ನಡ ಬಣ್ಣನೆ ಈ ಕಾಲದ ಮಕ್ಕಳಿಗೂ ಪ್ರಿಯವಾಗಿದೆಯಲ್ಲ! ಹತ್ತನೆಯ ತರಗತಿಯಲ್ಲಿ ನಮ್ಮ ಕನ್ನಡ ಮೇಷ್ಟ್ರು ರಾಮಯ್ಯನವರು ಬಸವಣ್ಣನ ವಚನದ ಪಾಠ ಹೇಳುತ್ತಾ, ‘ಕೂಡಲ ಸಂಗಮದೇವಾ, ನಿನ್ನ ಚರಣಕಮಲದೊಳಗಾನು ತುಂಬಿ’ ಎಂದವರು, ಚಣ ನಿಲ್ಲಿಸಿ, ‘ತುಂಬಿ’ ಎಂಬ ಪದಕ್ಕೆ ‘ದುಂಬಿ’ ಹಾಗೂ ‘ತುಂಬುವುದು’ ಎಂಬ ಎರಡು ಅರ್ಥಗಳನ್ನು ಹೇಳಿದರು; ಈ ಶ್ಲೇಷಾಲಂಕಾರ ಕಂಡು ನಾನು ಅಚ್ಚರಿಗೊಂಡೆ. ಇಂಗ್ಲಿಷಿನಲ್ಲಿ ಇದನ್ನು PUN ಎನ್ನುತ್ತಾರೆ. ಅಂದಿನಿಂದ ನನ್ನೊಳಗೆ ಕಾವ್ಯದ ಮಾಂತ್ರಿಕ ಸಾಧ್ಯತೆಗಳ ಹುಡುಕಾಟ ಶುರುವಾಯಿತು. ಹಾಡುವ ಮೇಡಂ, ಮೇಷ್ಟ್ರುಗಳಂತೂ ಕವಿತೆಗಳನ್ನು ಕಾಯಮ್ಮಾಗಿ ಮಕ್ಕಳ ನೆನಪಿನಲ್ಲಿ ಉಳಿಸಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮವ’ ಓದಿ, ಹಾಡಿ, ಕುಣಿದ ಮಕ್ಕಳು, ಮೇಷ್ಟ್ರುಗಳಿದ್ದಾರೆ. ‘ಡೊಂಕು ಬಾಲದ ನಾಯಕರೇ’ ಎಂಬ ದಾಸರ ಪದ ಕೇಳಿ ಮಕ್ಕಳು ಬಿದ್ದು ಬಿದ್ದು ನಕ್ಕಿದ್ದಾರೆ.
ಹಾಗೆಯೇ, ವಿಜಯನಗರ ಸಾಮ್ರಾಜ್ಯದ ಚರಿತ್ರೆ ಹಾಗೂ ಟಿಪ್ಪೂಸುಲ್ತಾನ್ ಚರಿತ್ರೆ ಎರಡನ್ನೂ ಮಕ್ಕಳು ಹಲವು ದಶಕಗಳಿಂದ ಇಷ್ಟಪಡುತ್ತಾ ಬಂದಿದ್ದಾರೆ. ಚರಿತ್ರೆಯ ಪಠ್ಯದ ಮಾಹಿತಿಗಳು ಶ್ರೇಷ್ಠ ಇತಿಹಾಸತಜ್ಞರಿಂದ ಸಾಧಾರವೆಂದು ಸಿದ್ಧವಾಗಿರಬೇಕು; ಅಧಿಕೃತವಾಗಿರಬೇಕು. ಚರಿತ್ರೆಯ ಹೆಸರಿನಲ್ಲಿ ಅಸಂಬದ್ಧವಾದ ಹುಸಿ ಅಂಶಗಳನ್ನು ತುರುಕಿದರೆ, ಕರ್ನಾಟಕದ ಮಕ್ಕಳು ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಹಿಡಿದು ಕೆಎಎಸ್, ಐಎಎಸ್ ಪರೀಕ್ಷೆಗಳವರೆಗೂ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ವಿಜ್ಞಾನ ಪಠ್ಯದಂತೆಯೇ ಎಲ್ಲ ಪಠ್ಯಗಳಲ್ಲೂ ಸೇರಿಸಬೇಕಾದ ಹೊಸ ವಿವರಗಳು ಅಧಿಕೃತ ಸಂಶೋಧನೆಗಳನ್ನಷ್ಟೇ ಆಧರಿಸಿರಬೇಕು; ಹುಸಿ ಊಹಾಪೋಹಗಳನ್ನಲ್ಲ.
ಜೊತೆಗೆ ಶಿಕ್ಷಣ ಇಲಾಖೆಯಲ್ಲಿರುವ ಪಠ್ಯಪುಸ್ತಕ ಸಿಬ್ಬಂದಿ ಪ್ರತಿ ವರ್ಷವೂ ಪಠ್ಯಗಳನ್ನು ಕುರಿತು ಬೋಧಕ, ಬೋಧಕಿಯರ, ಮಕ್ಕಳ, ಪೋಷಕರ ಸ್ವತಂತ್ರ ಅಭಿಪ್ರಾಯಗಳನ್ನು ತಪ್ಪದೆ ದಾಖಲು ಮಾಡುತ್ತಿರಬೇಕು. ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿದ್ದ ಹೊಣೆಯರಿತ ಅಧಿಕಾರಿಗಳು ಈ ಕೆಲಸವನ್ನು ಅಪಾರ ಶ್ರದ್ಧೆಯಿಂದ ಮಾಡುತ್ತಿದ್ದುದು ನೆನಪಿದೆ. ಈ ಅಧಿಕಾರಿಗಳು ಎಲ್ಲರ ಅಭಿಪ್ರಾಯಗಳನ್ನು ಒಗ್ಗೂಡಿಸಿ ತಜ್ಞರ ಸಮಿತಿಯ ಮುಂದಿಟ್ಟು ಪಠ್ಯಗಳನ್ನು ಮರುಪರಿಶೀಲಿಸಲು ಅನುವು ಮಾಡಿಕೊಡುತ್ತಿದ್ದರು. ಹತ್ತು ವರ್ಷಗಳ ಕೆಳಗೆ ಮೊದಲನೆಯ ಪಿಯುಸಿ ಓದುತ್ತಿದ್ದ ಜಾಣ ಹುಡುಗಿಯೊಬ್ಬಳು ‘ಪ್ರಥಮ ಪಿಯುಸಿ ಪಠ್ಯ ಹದಿ ಹರೆಯದ ಮಕ್ಕಳಲ್ಲಿ ಉತ್ಸಾಹ ಹುಟ್ಟಿಸುವಂತಿರಲಿಲ್ಲ’ ಎಂದು ದೂರಿದಳು; ಆಗ ಪಠ್ಯಪುಸ್ತಕದ ಸಲಹಾ ಸಮಿತಿಯಲ್ಲಿದ್ದ ನಾನು, ಎರಡನೆಯ ಪಿಯುಸಿಯ ಇಂಗ್ಲಿಷ್ ಪಠ್ಯಕ್ಕೆ ಶೇಕ್‌ಸ್ಪಿಯರನ ‘ರೋಮಿಯೋ ಅ್ಯಂಡ್ ಜೂಲಿಯಟ್’ ನಾಟಕದ ಪ್ರೇಮಿಗಳ ಲವಲವಿಕೆಯ ವರ್ಣನೆಯ ಭಾಗವನ್ನೂ, ಪುಸ್ತಕಗಳ ಮಹತ್ವ ಕುರಿತು ಅರ್ಜೆಂಟೀನಾದ ಪ್ರಖ್ಯಾತ ಲೇಖಕ ಬೋರ್ಹೆಸ್ ಸಂದರ್ಶನವನ್ನೂ ಸೇರಿಸಲು ಪಠ್ಯಪುಸ್ತಕ ಸಮಿತಿಗೆ ಸಲಹೆ ಮಾಡಿದೆ. ಅವು ಇಂದಿಗೂ ಹುಡುಗ, ಹುಡುಗಿಯರ ಪ್ರಿಯ ಪಠ್ಯಗಳಾಗಿವೆ ಎಂದು ಕೇಳಿರುವೆ. ಆಯಾ ವಯಸ್ಸಿನ ಮಕ್ಕಳು ತಮ್ಮನ್ನು ಗುರುತಿಸಿಕೊಳ್ಳಬಲ್ಲ, ಕನ್ನಡಿಯಂತೆ ತಮ್ಮನ್ನು ನೋಡಿಕೊಳ್ಳಬಲ್ಲ, ಆಯಾ ವಯೋಮಾನಕ್ಕೆ ಒಗ್ಗುವ ಕೆಲವಾದರೂ ಪಾಠಗಳು ಪಠ್ಯಪುಸ್ತಕದಲ್ಲಿದ್ದಾಗ ಕ್ಲಾಸುಗಳಲ್ಲಿ ಜೀವಂತ ಸ್ಪಂದನವಿರುತ್ತದೆ; ಇದು ಪಿಯುಸಿ, ಡಿಗ್ರಿ, ಸ್ನಾತಕೋತ್ತರದವರೆಗೂ ಟೀಚ್ ಮಾಡುತ್ತಾ, ಪಠ್ಯಪುಸ್ತಕ ರೂಪಿಸುವ ಸಮಿತಿಗಳಲ್ಲಿ ಕೆಲಸ ಮಾಡುತ್ತಾ ಬಂದಿರುವ ನನ್ನ ಅನುದಿನದ ಅನುಭವ.
ಅದೆಲ್ಲದರ ಜೊತೆಗೇ ಪಠ್ಯಪುಸ್ತಕಗಳು ಮಕ್ಕಳ ಮನೋಲೋಕಕ್ಕೆ ಆರೋಗ್ಯ ತುಂಬುವ ಹೊಸ ಹೊಸ ಜ್ಞಾನವನ್ನು ಸೇರಿಸುತ್ತಿರಬೇಕು ಎಂಬ ದೃಷ್ಟಿಯಿಂದ ಪಠ್ಯಪುಸ್ತಕ ರೂಪಿಸುವವರು ಸದಾ ನೆನಪಿಡಬೇಕಾದ ಕೆಲವು ಅಂಶಗಳನ್ನು ಪಟ್ಟಿ ಮಾಡಬಹುದು:
1. ಪಠ್ಯಗಳು ಪಾಠ ಮಾಡುವವರಲ್ಲೂ, ಮಕ್ಕಳಲ್ಲೂ ನವಚೈತನ್ಯ ಹುಟ್ಟಿಸುತ್ತಿರಬೇಕು.
2. ಬೋಧನೆಯ ಸಂದರ್ಭದಲ್ಲಿ ಒಳ್ಳೊಳ್ಳೆಯ ವ್ಯಾಖ್ಯಾನಗಳನ್ನು ತಂತಾವೇ ಚಿಮ್ಮಿಸಬಲ್ಲ ಪಠ್ಯಗಳಿರಬೇಕು.
3. ಕೇವಲ ಜಡವಾದ ಹಳೆಯ ನೀತಿ ಹೇಳುವುದಷ್ಟೇ ಪಠ್ಯಗಳ ಕೆಲಸವಲ್ಲ; ಅವು ಹಲ ಬಗೆಯ ಸತ್ಯಗಳನ್ನು ಸೂಚಿಸುವಂತಿರಬೇಕು.
4. ಕನ್ನಡವಾಗಲಿ, ಇಂಗ್ಲಿಷಾಗಲಿ, ಭಾಷೆಯನ್ನು ಚೆನ್ನಾಗಿ, ದಕ್ಷವಾಗಿ, ಸೃಜನಶೀಲವಾಗಿ ಬಳಸಿರುವ ಕೃತಿಗಳು ಪಠ್ಯದಲ್ಲಿರಬೇಕು.
5. ಪಠ್ಯಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಓದುವ, ಬರೆಯುವ ಆಸೆ, ಸಾಧ್ಯತೆಗಳನ್ನು ಮೂಡಿಸುವಂತಿರಬೇಕು. ಪದ್ಯ, ಗದ್ಯಗಳ ಅನುಕರಣೆಯನ್ನಾದರೂ ಮಾಡಿ ಮಕ್ಕಳು ಬರವಣಿಗೆ ಕಲಿಯುವಂತಿಬೇಕು.
6. ತರಗತಿಗಳಲ್ಲಿ ಎರಡು, ಮೂರು ಭಾಷೆಗಳನ್ನು ಬಲ್ಲ ಮಕ್ಕಳಿದ್ದರೆ ಪಠ್ಯಗಳನ್ನು ಅನುವಾದಿಸಲು ಆಹ್ವಾನಿಸುವಂತಿರಬೇಕು.
7. ಮಕ್ಕಳು ಮನೆಗೆ ಹೋದ ಮೇಲೆ ಮನೆಮಂದಿಯ ಜೊತೆ ಹಂಚಿಕೊಳ್ಳುವಂಥ ಕುತೂಹಲಕರ, ಆರೋಗ್ಯಕರ ಸಂಗತಿಗಳು ಪಠ್ಯದಲ್ಲಿರಬೇಕು.
8. ಮೈ-ಮನಗಳ ಆರೋಗ್ಯಕ್ಕೆ ಸಂಬಂಧಿಸಿದ ಪಾಠಗಳಿರಬೇಕು.
9. ಮಕ್ಕಳಲ್ಲಿ ವಿಮರ್ಶಾ ಪ್ರಜ್ಞೆಯನ್ನು, ಸಮಾನತೆಯ ಪ್ರಜ್ಞೆಯನ್ನು, ಉದಾರ ಮನೋಭಾವವನ್ನು ಬೆಳೆಸುವ ಪಠ್ಯಗಳಿರಬೇಕು.
10. ಮಕ್ಕಳು ತಮ್ಮ ನಿತ್ಯದ ನಡೆ ನುಡಿಗಳನ್ನು ಪರೀಕ್ಷೆ ಮಾಡಿಕೊಳ್ಳುವಂಥ ಪಠ್ಯಗಳಾಗಿರಬೇಕು.
ಇವೆಲ್ಲ ಕೆಲವು ಉದಾಹರಣೆಗಳಷ್ಟೇ. ಇಂಥ ಇನ್ನೂ ಅನೇಕ ಉತ್ತಮ ಉದ್ದೇಶ, ಗುರಿಗಳನ್ನು ತಲುಪಬೇಕೆಂದರೆ, ಆಯಾ ಕ್ಷೇತ್ರಗಳಲ್ಲಿ ಹಲವು ವರ್ಷ ಕೆಲಸ ಮಾಡಿರುವ ಆರೋಗ್ಯಕರ ಮನಸ್ಸಿನ ವಿಷಯತಜ್ಞರು ಪಠ್ಯಪುಸ್ತಕಗಳನ್ನು ರೂಪಿಸಬೇಕು. ಸಮಿತಿಗಳಲ್ಲಿ ವೈವಿಧ್ಯಮಯ ಸಾಮಾಜಿಕ ವರ್ಗಗಳನ್ನು ಪ್ರತಿನಿಧಿಸುವ ವಿಷಯತಜ್ಞ-ತಜ್ಞೆಯರಿರಬೇಕು. ಎಲ್ಲ ಪಠ್ಯಗಳಲ್ಲೂ ಹಿರಿಯರ ಶ್ರೇಷ್ಠ ಕೃತಿಗಳ ಭಾಗಗಳಿರಲೇಬೇಕು; ಹೊಸ ತಲೆಮಾರುಗಳ ಉತ್ತಮ ಬರಹಗಳಿರಬೇಕು. ‘ಪ್ರಗತಿಪರ’ವಾಗಿದೆ ಎಂಬ ಒಂದೇ ಕಾರಣದಿಂದ ಕಳಪೆ ಪಠ್ಯಗಳನ್ನು ಸೇರಿಸಬಾರದು! ಬಹುತೇಕ ಕರ್ನಾಟಕದ ಮಕ್ಕಳು, ಅದರಲ್ಲೂ ಬಡ ಮಕ್ಕಳು ಓದುತ್ತಿರುವ ಸರ್ಕಾರಿ, ಅನುದಾನಿತ ಶಾಲೆಗಳ ಪಠ್ಯಗಳಲ್ಲಿ ಮಾತ್ರ ಬಳಕೆಯಾಗುವ ಈ ಪಠ್ಯಗಳಿಗೆ ಹಲವು ತಲೆಮಾರುಗಳನ್ನು ಬೆಳೆಸುವ ದೊಡ್ಡ ಜವಾಬ್ದಾರಿಯಿದೆ. ಪಠ್ಯಪುಸ್ತಕಗಳು ಸಂಕುಚಿತತೆ ಮೀರುವ, ವಿಶಾಲ ಮನಸ್ಸನ್ನು ಬೆಳೆಸುವ ತಾಣಗಳಾಗಬೇಕು.
ಕನ್ನಡ ಮಕ್ಕಳ ಇಂಥ ಜೀವನ್ಮರಣದ ಪ್ರಶ್ನೆಗಳನ್ನು ಕುರಿತು ಗಂಭೀರವಾಗಿ ಯೋಚಿಸಬೇಕಾಗಿರುವುದು ಯಾವುದೇ ಜವಾಬ್ದಾರಿಯುಳ್ಳ ಸರ್ಕಾರದ ಆದ್ಯ ಕರ್ತವ್ಯ. ಶಾಸಕರು, ಮಂತ್ರಿಗಳು, ಶಿಕ್ಷಣ ಮಂತ್ರಿಗಳು ತಾವು ಶಾಲೆಗಳಲ್ಲಿ ಓದಿರಬಹುದಾದ ಒಳ್ಳೆಯ ಪಠ್ಯಗಳನ್ನಾದರೂ ನೆನೆದು, ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕಾಗುತ್ತದೆ. ಕೊನೇ ಪಕ್ಷ ನಮ್ಮ ತಜ್ಞರು, ಅಧಿಕಾರಿಗಳು ಈಗಾಗಲೇ ಟೀಚಿಂಗಿನಲ್ಲಿ ತೊಡಗಿರುವ ಉತ್ತಮ ಮೇಡಂ, ಮೇಷ್ಟ್ರುಗಳು, ಫಲಾನುಭವಿ ಮಕ್ಕಳು ಎಲ್ಲರ ಜೊತೆ ಅಷ್ಟಿಷ್ಟಾದರೂ ಸಂವಾದ ನಡೆಸಿ ಉತ್ತಮ ಪಠ್ಯಗಳನ್ನು ರೂಪಿಸಿದರೆ ನಿಜಕ್ಕೂ ಆರೋಗ್ಯವಂತ ತಲೆಮಾರುಗಳನ್ನು ರೂಪಿಸಬಹುದು.
ಈ ಹಿನ್ನೆಲೆಯಲ್ಲಿ, ಈ ಬ್ಲಾಗಿನ ಓದುಗರು ಇಲ್ಲಿನ ಕಾಮೆಂಟ್ಸ್ ವಿಭಾಗದಲ್ಲಾಗಲೀ ಅಥವಾ ತಂತಮ್ಮ ಜಾಲತಾಣಗಳಲ್ಲಾಗಲೀ ತಾವು ಓದಿದ ಉತ್ತಮ ಪಠ್ಯಗಳನ್ನು ಹೆಸರಿಸಬಹುದು; ವಿವರಿಸಬಹುದು; ಉಲ್ಲೇಖಿಸಬಹುದು. ನನಗೂ ಬರೆಯಬಹುದು. ಇವನ್ನೆಲ್ಲ ಒಗ್ಗೂಡಿಸುವುದರ ಮೂಲಕವೂ ಪಠ್ಯ ಪುಸ್ತಕಗಳನ್ನು ಕುರಿತಂತೆ ಒಂದು ಬಗೆಯ ಕನ್ನಡ ‘ಕಲೆಕ್ಟೀವ್ ವಿಸ್ಡಂ’ ರೂಪಿಸಬಹುದು. ಈ ಬ್ಲಾಗಿನ ಮುಖ್ಯ ಉದ್ದೇಶಗಳಲ್ಲಿ ಇಂಥ ‘ಕಲೆಕ್ಟೀವ್ ವಿಸ್ಡಂ’ ರೂಪಿಸುವುದೂ ಒಂದು ಎಂಬುದನ್ನು ಮತ್ತೆ ನೆನಪಿಸುವೆ.
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
Read Moreವಿಮಲಾಗೆ ನಿಜಕ್ಕೂ ಸಿಟ್ಟು ಬಂದಿತ್ತು. ಅದು ಒಳ್ಳೆಯ ಸಾಹಿತ್ಯ ಅಧ್ಯಾಪಕಿಯ ನಿಸ್ವಾರ್ಥ ಕೋಪ. ಕಳೆದ ವಾರ ಈ ಅಂಕಣದಲ್ಲಿ ಪ್ರಕಟವಾದ ‘ಕೃತಿಯೊಂದು ಪಿಸು ನುಡಿವ ಮೋಹಕ ಪರಿ’ ಲೇಖನದಲ್ಲಿ ‘ಪುಸ್ತಕ ಬಿಡುಗಡೆಯ ದೇಶಾವರಿ ವೇದಿಕೆ’ ಎಂಬ ವರ್ಣನೆ ನೋಡಿದೇಟಿಗೇ ವಿಮಲಾಗೆ ಇಂಥದೊಂದು ದೇಶಾವರಿ ವೇದಿಕೆಯ ಪರಸಂಗದ ದಿನ ಸಿಟ್ಟು ಬಂದಿದ್ದು ನೆನಪಾಯಿತು; ಆ ಸಿಟ್ಟಿನ ಮೂಲ ಕುರಿತು ವಿಮಲಾ ಬರೆದ ಮಾತುಗಳು:
‘ಸರ್, ಕೆಲ ವಾರಗಳ ಕೆಳಗೆ ಒಂದು ‘ಪುಸ್ತಕ ಬಿಡುಗಡೆಯ ದೇಶಾವರಿ ವೇದಿಕೆಯಲ್ಲಿ’ ಗಂಭೀರ ಲೇಖಕರೊಬ್ಬರು ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ, ಕಾವ್ಯವನ್ನು ಯಾವ ಸಿದ್ಧತೆಯೂ ಇಲ್ಲದೆ ಸುಮ್ಮನೆ ಓದಬೇಕು ಎಂಬರ್ಥದಲ್ಲಿ ಹೇಳುತ್ತಾ, ‘ಯಾರೋ ಖಡ್ಗವಾಗಲಿ ಕಾವ್ಯ ಅಂದಿದ್ರು. ಕಾವ್ಯ ಖಡ್ಗಾನೋ ಗುರಾಣಿಯೋ ಆಗಬೇಕಿಲ್ಲ’ ಅಂದ್ರು. ಶಾಕ್ ಆಯ್ತು. ಒಂದು ಕಾಲಕ್ಕೆ ಸಾಹಿತ್ಯದ ದಿಕ್ಕನ್ನು ಬದಲಿಸಿಕೊಳ್ಳಬೇಕಾದ ಅಗತ್ಯವನ್ನು ಶಕ್ತವಾಗಿ ಹಿಡಿದಿಟ್ಟ ಆ ಮಾತು ಸಾಹಿತ್ಯಕ ಚಳುವಳಿಗಳ ಅರಿವೇ ಇಲ್ಲದ ಗುಂಪಿನ ನಗುವಿಗೆ ಕಾರಣವಾಗಿದ್ದು ಬೇಜಾರಾಯ್ತು. ಹಾಗೆ ಮಾತಾಡಿದವರು ನನಗೆ ಪರಿಚಯವಿದ್ದಿದ್ದರೆ ಖಂಡಿತ ಪ್ರಶ್ನೆ ಮಾಡ್ತಿದ್ದೆ ಸರ್…’
ದೊಡ