ಹ್ಯಾಪಿ ವ್ಯಾಲಂಟೈನ್ಸ್ ಡೇ!
by Nataraj Huliyar
ಪ್ರೇಮಿಗಳ ದಿನ ಹತ್ತಿರ ಬರುತ್ತಿರುವುದನ್ನು ಗಮನಿಸುತ್ತಾ, ಪ್ರಖ್ಯಾತ ಪ್ರೇಮಪದ್ಯಗಳ ಕಡೆಗೆ ಕಣ್ಣಾಡಿಸಲು ನನ್ನ ‘ಕಿಂಡಲ್’ನಲ್ಲಿರುವ UNTIL I LOVED I NEVER LIVED ಸಂಗ್ರಹ ತೆರೆದೆ. ಟೈಟಲ್ ಕೆಳಗೆ ‘ಎ ಲಿಟರರಿ ಸೆಲೆಬ್ರೇಶನ್ ಆಫ್ ಲವ್ ಇನ್ ಆಲ್ ಇಟ್ಸ್ ಫಾರ್ಮ್ಸ್’ ಎಂಬ ಟ್ಯಾಗ್ ಲೈನ್!
ಈ ಪುಸ್ತಕದಲ್ಲಿ ಈಚೆಗೆ ನನಗೆ ಪ್ರಿಯವಾದ ಕವಯಿತ್ರಿಯೊಬ್ಬಳಿದ್ದಾಳೆ. ಎರಡು ವರ್ಷಗಳ ಕೆಳಗೆ ನಾನು ಬರೆದ ‘ಕವಿಜೋಡಿಯ ಆತ್ಮಗೀತ’ ಕಥಾಕಾವ್ಯ ಓದಿದ ಇಂಗ್ಲಿಷ್ ಪ್ರೊಫೆಸರೊಬ್ಬರು ಎಲಿಝಬೆತ್ ಬ್ಯಾರೆಟ್ ಬ್ರೌನಿಂಗ್ ಕವಿತೆಗಳನ್ನು ನೆನಪಿಸಿದರು. ಎಲಿಝಬೆತ್ ಕಾವ್ಯಲೋಕಕ್ಕೆ ಕೈಚಾಚಿದಂತೆಲ್ಲ ಆ ಕೋಮಲತೆಯಲ್ಲಿ ಕರಗಿ ಹೋಗತೊಡಗಿದೆ.
ಇಂಗ್ಲಿಷ್ ಸಾಹಿತ್ಯದ ವಿಕ್ಟೋರಿಯನ್ ಯುಗದ ಕವಿಸಂಗಾತಿಗಳಾದ ಎಲಿಝಬೆತ್ ಬ್ಯಾರೆಟ್ ಬ್ರೌನಿಂಗ್ ಹಾಗೂ ಅವಳ ಪತಿ-ಸಖ ರಾಬರ್ಟ್ ಬ್ರೌನಿಂಗ್ ಇವರ ಕಾವ್ಯಲೋಕ ನಿಮಗೆ ಪರಿಚಿತವಿರಬಹುದು. ಎಲಿಝಬೆತ್ ಕವಿತೆಗಳನ್ನು ಓದುವಾಗಲೆಲ್ಲ ನನ್ನ ಕಣ್ಣೆದುರು ಮೂಡುವ ಚಿತ್ರ: ಪುಟ್ಟ ಹೆಣ್ಣುಮಗುವೊಂದು ಕೆಂಪು ತುಟಿ ಅರಳಿಸಿ ಕೇಡಿನ ಲವಲೇಶವೂ ಇಲ್ಲದೆ ಮುಗ್ಧವಾಗಿ ಕಣ್ಣರಳಿಸಿ ತನಗೆ ತಾನೇ ಏನೋ ಉಸುರಿಕೊಳ್ಳುತ್ತಿದೆ! ಎಲಿಝಬೆತ್ ಪದ್ಯವೊಂದರ ಒಂದು ಕೋಮಲ ಪಂಕ್ತಿ:
ಅವನು ಮೊಟ್ಟ ಮೊದಲು ಮುತ್ತಿಡುವಾಗ
ನಾ ಬರೆವ ಕೈ ಬೆರಳುಗಳಿಗೆ ಮುತ್ತಿಟ್ಟ
ಆ ಚಣದಿಂದ ಈ ಬೆರಳುಗಳು ಶ್ವೇತ, ಶುಭ್ರ…
ಎಲಿಝಬೆತ್ ಬರೆದ ಸಾನೆಟ್ ‘How Do I Love Thee, Let Me Count the Ways’ ಪ್ರೇಮಿಗಳ ಕೈಪಿಡಿಯಂತಿದೆ:
‘ನಿನ್ನ ಹೇಗೆಲ್ಲ ಪ್ರೀತಿಸುವೆನು? ಆ ಪ್ರೀತಿಯ ರೀತಿಗಳ ಎಣಿಸಿ ನೋಡುವೆನು’ ಎಂದು ಶುರುವಾಗುವ ಕವಿತೆಯಲ್ಲಿನ ಹೆಣ್ಣು ‘ನೀ ನನ್ನ ಕಣ್ಣೆದುರು ಇಲ್ಲ ಎನ್ನಿಸಿದಾಗ, ನನ್ನಾತ್ಮಕ್ಕೆ ನಿಲುಕುವ ಆಳ ಅಗಲ ಎತ್ತರಗಳುದ್ದಕ್ಕೂ ನಿನ್ನ ಪ್ರೀತಿಸುವೆ..’ ಎನ್ನುವಳು. ಪ್ರೀತಿಯ ಸುಂದರ ಎಳೆಗಳನ್ನು ಸಂಭ್ರಮಿಸುತ್ತಾ ಕೊನೆಗೆ, ‘ನನ್ನಿಡೀ ಬದುಕಿನ ಉಸಿರು, ನಗೆ, ಕಣ್ಣೀರಿನ ಜೊತೆಜೊತೆಗೆ ನಿನ್ನ ಪ್ರೀತಿಸುವೆ/ ದೇವರ ದಯೆಯಿದ್ದರೆ…ಮರಣದ ನಂತರ ನಿನ್ನ ಇನ್ನಷ್ಟು ಗಾಢವಾಗಿ ಪ್ರೀತಿಸುವೆ’ ಎನ್ನುವಳು.
ಎಲಿಝಬೆತ್ ಪ್ರೀತಿಯ ಮತ್ತೊಂದು ಮಿಂಚು:
ನೀನು ಏನಾಗಿರುವೆ ಅದಕಾಗಿಯಷ್ಟೆ ನಿನ್ನ ಪ್ರೀತಿಸುವುದಿಲ್ಲ;
ಅದಕಿಂತ ಮಿಗಿಲಾಗಿ,
ನಿನ್ನೊಡನಿರುವಾಗ ನಾನು ಏನಾಗಿರುವೆ, ಅದಕಾಗಿ ನಿನ್ನ ಪ್ರೀತಿಸುವೆ…
ಮತ್ತೊಂದೆಡೆ, ಪ್ರಿಯತಮ ಕೊಟ್ಟ ಹೂಗಳನ್ನು ನೋಡನೋಡುತ್ತಾ ಹುಟ್ಟಿದ ಭಾವಗಳ ನಿವೇದನೆ: ‘ಈ ಹೂಗಳಿಂದ ಹುಟ್ಟಿದ ಹೂಭಾವಗಳನ್ನು ಕಾಪಿಡು- ನಾ ನಿನ್ನ ಹೂಗಳನ್ನು ಕಾಪಾಡಿದ ಹಾಗೆ.’ ಈ ಪದ್ಯದ ಕೊನೆಯ ಸಾಲುಗಳು:
ಈ ಹೂಗಳು ಎಲ್ಲಿ ಅಳಿಯಲಾರವೋ ಅಲ್ಲಿಡು.
ಈ ಹೂಗಳ ಬಣ್ಣಗೆಡದಂತೆ ನೋಡಿಕೊಳ್ಳಲು ನಿನ್ನ ಕಂಗಳಿಗೆ ಹೇಳು
ಈ ಹೂಗಳ ಬೇರುಗಳು ನನ್ನಾತ್ಮದಲ್ಲಿವೆಯೆಂದು ನಿನ್ನಾತ್ಮಕ್ಕೆ ಹೇಳು.
ಹತ್ತೊಂಬತ್ತನೇ ಶತಮಾನದ ಇಂಗ್ಲೆಂಡಿನಲ್ಲಿ ಇನ್ನೂ ಹುಡುಗಿಯರು ಶಾಲೆಗೆ ಹೋಗುವಂತಿರಲಿಲ್ಲ. ಮನೆ ಪಾಠ ಹೇಳಿಸಿಕೊಂಡ ಎಲಿಝಬೆತ್ (1806-1861) ಆರನೇ ವಯಸ್ಸಿಗಾಗಲೇ ಕಾದಂಬರಿ ಓದುತ್ತಿದ್ದಳು. ಎಂಟನೇ ವಯಸ್ಸಿನಲ್ಲಿ ಹೋಮರ್ ಮಹಾಕಾವ್ಯಗಳ ಅನುವಾದಗಳನ್ನು ಓದುತ್ತಿದ್ದಳು. ಹತ್ತನೇ ವಯಸ್ಸಿಗೆ ಗ್ರೀಕ್ ಕಲಿಯುತ್ತಿದ್ದಳು. ‘ದ ಬ್ಯಾಟಲ್ ಆಫ್ ಮ್ಯಾರಥಾನ್’ ಎಂಬ ಹೋಮರಿಕ್ ಮಹಾಕಾವ್ಯ ಬರೆಯುತ್ತಿದ್ದಳು. ವಿಕ್ಟೋರಿಯನ್ ಕವಿ ರಾಬರ್ಟ್ ಬ್ರೌನಿಂಗ್ ಜೊತೆ ಮದುವೆ. ಮುಂದೆ ಕವಿಗಳಿಬ್ಬರ ಸುಂದರ ಕಾವ್ಯಯಾನ…
'ವ್ಯಾಲಂಟೈನ್ಸ್ ಡೇ' ಸಂದರ್ಭದಲ್ಲಿ ಶೇಕ್‌ಸ್ಪಿಯರನ ‘ರೋಮಿಯೋ ಅಂಡ್ ಜೂಲಿಯೆಟ್’ ಬಿಟ್ಟು ಪ್ರೇಮದ ಮಾತಾಡುವುದುಂಟೆ! ಪ್ರೇಮದ ಮೂಲಮಾದರಿಯಂತಿರುವ ಈ ನಾಟಕದ ರಮ್ಯ ಭಾವಗೀತಾತ್ಮಕ ಭಾಗಗಳನ್ನು ಹತ್ತು ವರ್ಷಗಳ ಕೆಳಗೆ ಬರೆದ ನನ್ನ ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕಕ್ಕೆ ಹಾಡಾಗಿಸಿದಾಗಿನ ಕಂಪನ ನೆನಪಾಗುತ್ತದೆ. ಜೂಲಿಯಟ್ ಮೊಟ್ಟ ಮೊದಲ ಬಾರಿಗೆ ಕಂಡಾಗ ರೋಮಿಯೋ ಬಾಯಿಂದ ಚಿಮ್ಮುವ ಉದ್ಗಾರ: O, She doth teach the torches to burn bright…
ರೋಮಿಯೋ ಬಣ್ಣನೆ ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕದಲ್ಲಿ ಹಾಡಾಗಿ ರೂಪಾಂತರಗೊಂಡಿತು:
ಅವಳ ಕೆನ್ನೆಯ ಹೊಳಪು ಕಂಡು
ತಾರೆಗಳು ನಾಚಿ ಕಣ್ ಮುಚ್ಚುವುವು-
ಸೂರ್ಯಕಿರಣಗಳ ಕಂಡು ಹಣತೆ ನಾಚುವ ಹಾಗೆ!
ಸ್ವರ್ಗದಲಿ ಅವಳ ಕಣ್ಬೆಳಕು ಬಾನು ಬೆಳಗಿರಲು
ಹಕ್ಕಿಗಳು ಹಾಡುವುವು ಬೆಳಗಾಯಿತೆಂದು.
ರೋಮಿಯೋ-ಜೂಲಿಯಟ್ ಉತ್ಕಟ ಪ್ರೀತಿಯಲ್ಲಿ ಮಿಲನದ ಗಳಿಗೆಯಂತೆ ಸಾವಿನ ವಿದಾಯವೂ ಕಡು ರಮ್ಯ ಗಳಿಗೆಯಾಗುತ್ತದೆ: ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕದಲ್ಲಿ ರೋಮಿಯೋ ತೀರಿಕೊಂಡಾಗ ಜೂಲಿಯಟ್ ನಿವೇದನೆಯ ಹಾಡು:
ಬಾ ರಾತ್ರಿಯೇ ಬಾ
ಬಾ ರೋಮಿಯೋ ಬಾ
ಬಾ ಬಾ ನೀ ರಾತ್ರಿಯ ಹಗಲೇ ಬಾ
ಬಾ ರೋಮಿಯೋ ಬಾ
ಬಾ ಕೋಮಲ ರಾತ್ರಿಯೇ ಬಾ
ಬಾ ಪ್ರೀತಿಯ ಕಾರಿರುಳೇ ಬಾ
ಕೊಡು ನನ್ನ ರೋಮಿಯೋ ಕೊಡು
ಅವನು ಸತ್ತಾಗ ಕೊಡುವೆ ಈಗ ಕೊಡು;
ಸತ್ತಾಗ ಅವನನು ಕತ್ತರಿಸು
ಪುಟ್ಟ ತಾರೆಗಳಂತೆ ಕತ್ತರಿಸು
ಈ ಕರಿರಾತ್ರಿಯ ಮುಖವನು ಅವನು
ಫಳಫಳ ಹೊಳೆವಂತೆ ಮಾಡುವನು
ಆಗ ನೋಡುತ್ತಿರು ರಾತ್ರಿಯೇ ನೋಡುತ್ತಿರು
ಲೋಕದ ಜನ ಬರಿ ರಾತ್ರಿಯನೆ ರಮಿಸುವರು
ಆಗ ನೋಡುತ್ತಿರು ರಾತ್ರಿಯೇ ನೋಡುತ್ತಿರು
ಉರಿವ ಸೂರ್ಯನ ಕಂಡು ಜನ ಉರಿದು ಬೀಳುವರು
ಬಾ ಕೋಮಲ ರಾತ್ರಿಯೇ ಬಾ
ಬಾ ಪ್ರೀತಿಯ ಕಾರಿರುಳೇ ಬಾ
ಈ ಎರಡೂ ಹಾಡಿನ ದೃಶ್ಯಗಳು ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕದಲ್ಲಿವೆ. CLICK HERE
‘ವ್ಯಾಲಂಟೈನ್ಸ್ ಡೇ’ ನೆನಪಾದ ತಕ್ಷಣ ಹೊಳೆದ ಪ್ರೀತಿ, ಪ್ರೇಮಗಳ ಕೆಲವೇ ಪ್ರತಿಮೆಗಳನ್ನು ಕೊಟ್ಟಿರುವೆ. ಈ ಅಂಕಣದಲ್ಲಿ ಈಚೆಗೆ ಬರೆದ ಪಾಬ್ಲೊ ನೆರೂಡ…READ HERE, ಅಕ್ಕಮಹಾದೇವಿಯ ಉತ್ಕಟ ಪ್ರತಿಮೆಗಳು, ರಾಬರ್ಟ್ ಬರ್ನ್ಸ್ ಬರೆದ ‘ಮೈ ಲವ್ ಈಸ್ ಲೈಕ್ ಎ ರೆಡ್ ರೆಡ್ ರೋಸ್’ (‘ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ’- ಕನ್ನಡರೂಪ: ಬಿ. ಆರ್. ಲಕ್ಷ್ಮಣರಾವ್), ಉಮರ್ ಖಯಾಂ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಇವರೆಲ್ಲರ ನೂರಾರು ಭಾವಗೀತೆಗಳು, ಅಡಿಗರ ‘ಸಖಿ ಬಾ’, ಲಂಕೇಶರ ನೀಲು ಪದ್ಯಗಳು, ಅಥವಾ ಹಲಬಗೆಯ ಪ್ರೇಮಪದ್ಯಗಳನ್ನು ಬರೆಯುತ್ತಲೇ ಇರುವ ಇವತ್ತಿನ ಕವಿ, ಕವಯಿತ್ರಿಯರ ಸಾಲುಗಳು… ಇವೆಲ್ಲ ನಿಮ್ಮ ಚಿತ್ತವನ್ನು ಮುತ್ತಲಿ; ಅವನ್ನೆಲ್ಲ ಸುತ್ತಮುತ್ತ ಹಂಚಲು ವ್ಯಾಲಂಟೈನ್ ಡೇ ಒಂದು ಸುಂದರ ನೆಪವಾಗಲಿ.
ಕೊನೆಯದಾಗಿ, ಪ್ರತಿವರ್ಷ ಇಷ್ಟೆಲ್ಲ ರಮ್ಯತೆ ಸೃಷ್ಟಿಸುವ 'ವ್ಯಾಲಂಟೈನ್ಸ್ ಡೇ' ಸುತ್ತ ಹುಟ್ಟಿರುವ ರಮ್ಯ ಕತೆಗಳು:
ಕತೆ 1 : ಹದಿನೈದು ಶತಮಾನಗಳ ಕೆಳಗೆ ಫೆಬ್ರವರಿ ತಿಂಗಳಲ್ಲಿ ರೋಮ್ ನಲ್ಲಿ ನಡೆಯುತ್ತಿದ್ದ Lupercalia ವಸಂತ ಮಾಸವನ್ನು ಸ್ವಾಗತಿಸುವ ಹಬ್ಬವಾಗಿತ್ತು. ಫಲವಂತಿಕೆಯ ಸಂಭ್ರಮಾಚರಣೆಯಾಗಿದ್ದ ಈ ಹಬ್ಬದಲ್ಲಿ ಗಂಡು-ಹೆಣ್ಣುಗಳ ಜೋಡಿಯನ್ನು ಲಾಟರಿ ಎತ್ತುವ ಮೂಲಕ ಆರಿಸಿಕೊಳ್ಳುತ್ತಿದ್ದರು! ಐದನೇ ಶತಮಾನದ ಕೊನೆಗೆ ಮೊದಲನೇ ಪೋಪ್ ಜೆಲಾಸಿಯಸ್ ಈ ಆಚರಣೆಯನ್ನು ನಿಷೇಧಿಸಿದ; ಬದಲಿಗೆ ‘ಸೇಂಟ್ ವ್ಯಾಲಂಟೈನ್ಸ್ ಡೇ’ ಹಾಲಿಡೇ ಘೋಷಿಸಿದ.
ಕತೆ 2: ಕ್ರಿ.ಶ. 270ರ ಸುಮಾರಿಗೆ ಹುತಾತ್ಮನಾದ ಸೇಂಟ್ ವ್ಯಾಲಂಟೈನ್ ನೆನಪಿನಲ್ಲಿ ಈ ದಿನ ಘೋಷಣೆಯಾಯಿತು. ಗೋಥಿಕಸ್ ರಾಜ ಎರಡನೇ ಕ್ಲಾಡಿಯಸ್ಸಿನ ಕಾಲದಲ್ಲಿ ಶಿಕ್ಷೆಗೊಳಗಾಗಿ ಬಂಧಿಯಾಗಿದ್ದ ಪಾದ್ರಿ ವ್ಯಾಲಂಟೈನ್‌ಗೆ ಜೈಲರ್ ಮಗಳ ಗೆಳೆತನವಾಯಿತು. ಕಣ್ಣು ಕಳೆದುಕೊಂಡಿದ್ದ ವ್ಯಾಲಂಟೈನ್ ಅವಳಿಂದ ಕಣ್ಣು ಪಡೆದ. ಅವಳಿಗೆ ಬರೆದ ಪತ್ರದಲ್ಲಿ ‘ನಿನ್ನ ವ್ಯಾಲಂಟೈನ್’ ಎಂದು ಬರೆದ.
ಕತೆ 3: ಸೇಂಟ್ ವ್ಯಾಲಂಟೈನ್ ರಾಜಾಜ್ಞೆಯನ್ನು ಧಿಕ್ಕರಿಸಿ ಹಲವು ಜೋಡಿಗಳಿಗೆ ಗುಟ್ಟಾಗಿ ಮದುವೆ ಮಾಡಿಸಿದ; ಆ ಮೂಲಕ ಗಂಡಸರು ಯುದ್ಧಕ್ಕೆ ಹೋಗುವುದನ್ನು ತಪ್ಪಿಸಿ, ಪ್ರೇಮವನ್ನು ರಕ್ಷಿಸಿದ ವ್ಯಾಲಂಟೈನ್ ಹೆಸರಿನಲ್ಲಿ ‘ಪ್ರೇಮದಿನ’ ‘ಪ್ರೇಮಿಗಳ ದಿನ’ ಘೋಷಣೆಯಾಯಿತು!
ಹದಿನಾಲ್ಕನೇ ಶತಮಾನದ ಹೊತ್ತಿಗೆ, ‘ವ್ಯಾಲಂಟೈನ್ಸ್ ಡೇ’ ಪ್ರೇಮದಿನವಾಗಿ ಹಬ್ಬಲು ಇಂಗ್ಲಿಷ್ ಆದಿ ಕವಿ ಜೆಫ್ರಿ ಚಾಸರ್ ಬರೆದ 24 ಕಥನಕಾವ್ಯಸರಣಿಯ ‘ಕ್ಯಾಂಟರ್‌ಬರಿ ಟೇಲ್ಸ್’ ಕಾರಣ ಎನ್ನುತ್ತಾರೆ. ಚಾಸರ್ ಕೃತಿಯಲ್ಲಿರುವ ‘ಪಾರ್ಲಿಮೆಂಟ್ ಆಫ್ ಫೌಲ್ಸ್’ ಭಾಗದಲ್ಲಿ ಹಕ್ಕಿಗಳು ಸಂಗಾತಿಯನ್ನು ಆರಿಸಿಕೊಳ್ಳುವ ಕಾಲದ ಬಣ್ಣನೆಯಿದೆ. ಮೂರು ಗಂಡು ಗರುಡಗಳು ಒಬ್ಬ ಗರುಡಿಯನ್ನು ಮದುವೆಯಾಗಲು ಕಾತರಿಸುತ್ತವೆ. ಗರುಡಿಗೆ ತನ್ನ ಜೋಡಿ ಯಾರೆಂದು ತೀರ್ಮಾನಿಸುವುದು ಕಷ್ಟವಾಗಿ, ಪ್ರಕೃತಿಮಾತೆಯನ್ನು, ‘ಒಂದು ವರ್ಷ ಟೈಮ್ ಕೊಡಲು’ ಕೇಳಿಕೊಳ್ಳುತ್ತದೆ. ‘ತಾಳಿಕೊಳ್ಳಲು ಒಂದು ವರ್ಷ ತೀರಾ ದೀರ್ಘವೇನಲ್ಲ’ ಎಂದು ಪ್ರಕೃತಿಮಾತೆ ಈ ಕೋರಿಕೆಯನ್ನು ಒಪ್ಪುತ್ತಾಳೆ; ಪ್ರೀತಿಯ ಮೇಲೆ ಹೇರಲಾಗಿದ್ದ ನಿಯಮಗಳನ್ನು ಧಿಕ್ಕರಿಸಿ, ಹೆಣ್ಣಿನ ಸಹಜ ಆಯ್ಕೆಯನ್ನು ಎತ್ತಿ ಹಿಡಿಯುತ್ತಾಳೆ!
ಚಾಸರ್ ಕತೆಯ ಹಿನ್ನೆಲೆಯಲ್ಲಿ ಆ ಕಾಲದ ಅರಮನೆಯೊಳಗಿನ ಒಂದು ಆಯ್ಕೆಯ ಕತೆಯಿದೆ ಎನ್ನುವವರಿದ್ದಾರೆ: ಇಂಗ್ಲೆಂಡಿನ ರಾಜ ಎರಡನೇ ರಿಚರ್ಡ್ ಐದು ವರ್ಷ ಕೇಳಿಕೊಂಡ ಮೇಲೆ ಬೊಹೆಮಿಯಾದ ಆನ್ನೆ ಅವನನ್ನು ಮದುವೆಯಾಗಲು ಒಪ್ಪುತ್ತಾಳೆ. ಆ ಮದುವೆಯನ್ನು ಸಂಭ್ರಮಿಸಲು ಚಾಸರ್ ಬರೆದ ಭಾಗವಿದು ಎನ್ನುತ್ತಾರೆ!
‘ವ್ಯಾಲಂಟೈನ್ಸ್ ಡೇ’ ಕಥಾಮೂಲಗಳೇನೇ ಇರಲಿ, ಆ ದಿನ ಲೋಕದಲ್ಲಿ ಪ್ರೇಮವನ್ನು ಆರಾಧಿಸುವ ದಿನವಾಗಿ, ಎಲ್ಲ ವಯೋಮಾನದ ಗಂಡು ಹೆಣ್ಣುಗಳಲ್ಲೂ ಪ್ರೀತಿ ಪ್ರೇಮಗಳ ಸೆಲೆಗಳನ್ನು ಉಕ್ಕಿಸುತ್ತಲೇ ಇರುತ್ತದೆ! ಆ ಸೆಲೆ ಉಕ್ಕಿದ ನಿಮಗೆ ಪ್ರಿಯವಾದ ಒಲವಿನ ಪದ್ಯಗಳು, ಪ್ರತಿಮೆಗಳು ನಿಮ್ಮ ನಿಮ್ಮ ವೇದಿಕೆಗಳಲ್ಲೂ, ಈ ಅಂಕಣದ ಕಾಮೆಂಟ್ ಸೆಕ್ಷನ್ನಿನಲ್ಲೂ ಹರಿದು ಬರಲಿ! ಹ್ಯಾಪಿ ವ್ಯಾಲಂಟೈನ್ಸ್ ಡೇ!
ಕಾಮೆಂಟ್ ಸೆಕ್ಷನ್: ಪುಟ್ಟ ಸೂಚನೆ: ಈ ಅಂಕಣ ಓದಿ ನೀವು ಬರೆಯುವ ಕಾಮೆಂಟುಗಳು ಅಡ್ಮಿನ್ ಗಮನಕ್ಕೆ ಬಂದ ನಂತರ ಪ್ರಕಟವಾಗುತ್ತವೆ. ಮೊದಲ ಕಾಲಂನಲ್ಲಿ ನಿಮ್ಮ ಹೆಸರು, ಅಥವಾ ಇನಿಶಿಯಲ್ಸ್, ಅಥವಾ ಸಂಕ್ಷಿಪ್ತನಾಮ; ಎರಡನೇ ಕಾಲಂನಲ್ಲಿ ನಿಮ್ಮ ಯಾವುದಾದರೂ ಮೇಲ್ ಐಡಿ ನಮೂದಿಸಿ. ಹೆಸರು ಅಥವಾ ಸಂಕ್ಷಿಪ್ತನಾಮ ಮಾತ್ರ ಪ್ರಕಟವಾಗುತ್ತದೆ. ಮೇಲ್ ಐಡಿ ಪ್ರಕಟವಾಗುವುದಿಲ್ಲ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
Comments
11 Comments
| Banjagere Jayaprakash
ಪ್ರೇಮದ ಬಗ್ಗೆ ಬರೆಯಲು ಇರುವ ಅರ್ಹತೆಯೇನು? ಪ್ರೇಮಿಸುವ ವಯಸ್ಸೇ, ಪ್ರೇಮಿಸಿ ತಿಳಿದಿರುವ ಅನುಭವವೇ, ಪ್ರೇಮದ ಎಲ್ಲಾ ಗುಣಾವಗುಣಗಳನ್ನು ನಿರುದ್ವಿಗ್ನವಾಗಿ ಅವಲೋಕಿಸಬಲ್ಲ ಮನಸ್ಥಿತಿಯೇ? ಅದೇನೋ, ಪ್ರೇಮ ಸಿಕ್ಕವರಿಗೂ, ಪ್ರೇಮಿಸಲಾಗದೆ ಪರಿತಪಿಸುವವರಿಗೂ ಒಟ್ಟಾರೆ ಜಗತ್ತಿಗೆ ಪ್ರೇಮದಿಂದ ಬಿಡುಗಡೆಯಿಲ್ಲ. ಪ್ರೇಮವೇ ಇಲ್ಲವೆಂದಾದಲ್ಲಿ ಜಗತ್ತಿಗೂ ಉಳಿಗಾಲವಿಲ್ಲ. ಪ್ರೇಮದ ಆಳ ಮತ್ತು ಎತ್ತರಗಳನ್ನು ಮನಗಾಣಿಸುವ ಕವಿತೆಗಳನ್ನು ಪರಿಚಯಿಸುತ್ತಿರುವ ಈ ಅಂಕಣ ಪ್ರೇಮಿಗಳ ದಿನಕ್ಕೊಂದು ಒಳ್ಳೆಯ ಉಪೋದ್ಗಾತದಂತಿದೆ. ಪ್ರೇಮಕ್ಕೆ ಗೆಲುವಾಗಲಿ, ಪ್ರೇಮದ ಚೇಷ್ಟೆಗಳು ಎಲ್ಲ ಕಡೆ ತುಂಬಿ ತುಳುಕಾಡಲಿ. ಪ್ರೇಮಪೂರ್ವಕ ಶುಭಾಶಯಗಳು ಸರ್
\r\n| Mamatha
'ಗರುಡಿ' ಪದ ಈಗಲೇ ಕೇಳಿದ್ದು!
\r\n| Dr. SUBRAMANYASWAMY
History of Valentine’s Day and Elizabeth Browning’s Poetry are well connected. Stories surrounding Valentine's Day are very Meaningful.
\r\n| Dr.Raju
A lively and lovely write up on Valentine's Day
\r\n| Chandrashekhara Talya
ಪ್ರೇಮದ ಬಗ್ಗೆ ನೀವು ಬರೆದ ಲವಲವಿಕೆಯ ಬರಹ ಇಷ್ಟವಾಯಿತು, ಈ ದುಷ್ಟ ಕಾಲದಲ್ಲಿ ಪ್ರೇಮವನ್ನು ಬಿಟ್ಟರೆ ಬೇರೆ ಸಾಂತ್ವನದ ಸಾಧ್ಯತೆ ಇಲ್ಲವೇನೋ. ಪ್ಲೇಟೋನಿಕ್ ಪ್ರೇಮದ ನವಿರುತನ ಮೀರಿದ ಇಂದಿನ ಲಷ್ಟ್ ಪ್ರೇಮದ ಪವಿತ್ರ ಉನ್ಮಾದವನ್ನು ಉಕ್ಕಿಸಲಾರದಲ್ಲವೇ? ಪ್ರೇಮ ಮತ್ತು ಕಾವ್ಯ ಎರಡರ ನಡುವೆ ಅಷ್ಟೇನೂ ಅಂತರವಿರಲಾರದೆಂದರೆ ಉತ್ಪ್ರೇ ಕ್ಷೆಯಾಗಲಾರದೆಂಬುದು ನನ್ನ ಎಳಸು ತಿಳಿವಳಿಕೆ, ಹಾಗಾಗಿ ಕಾವ್ಯದಲ್ಲಿ ಅಭಿವ್ಯಕ್ತಿಯಾಗುವ ಪ್ರೇಮವು ವಿರಹ, ಹತಾಷೆ,ಗೆಲುವು,ಸಂಭ್ರಮದ ವಿಭಿನ್ನ ರೂಪಗಳಲ್ಲೂ ನಮ್ಮೊಡನೆ ಅನುಸಂಧಾನಮಾಡುತ್ತಾ ನಮ್ಮನ್ನು ಬಿಡುಗಡೆಗೊಳಿಸಬಲ್ಲದು.
\r\n| Dr. Narasimhamurthy Halehatti
ಪ್ರೀತಿಯೇ ಸಾಹಿತ್ಯ ಮತ್ತು ಬದುಕಿನ ಸ್ಥಾಯಿಭವವಾಗಿರುವಾಗ ಯಾವ ಕವಿಯೇ ಆಗಲಿ ಪ್ರೇಮದ ಬಗ್ಗೆ ಬರೆಯದೆ ಇರಲು ಸಾಧ್ಯವೆ? ನಿಮ್ಮ ಈ ಬರಹ ಪ್ರೇಮಿಗಳಿಗೊಂದು ಒಲವಿನ ಕಾಣಿಕೆ. ಅಭಿನಂದನೆಗಳು ಸರ್. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು...!
\r\n| Baamani
ವ್ಯಾಲಂಟೈನ್ಸ್ ಡೇ ಬಗ್ಗೆ ಹುಳಿಯಾರರ ಬರವಣಿಗೆ ಮಧುರವಾಗಿದೆ. ಹಲವಾರು ಪ್ರೇಮಕವಿಗಳ ಪ್ರೇಮ ತುಂಬಿದ ಭಾವನೆಗಳನ್ನು ಮತ್ತವುಗಳನ್ನು ಒಡಲಲ್ಲಿ ಹೊತ್ತ ಪದಗಳನ್ನು ನವಿರಾಗಿ ಕೊಡುವ ಅವರ ಅನುವಾದ ತುಂಬಾ ಮುದ ನೀಡಿತು. ನಮನಗಳು.
\r\n| Dr. Prabhakar
Lovely!
\r\n\r\nLove flourishes when lovers are apart. Love withers when start living together.
\r\nIt's a nature's trap to produce progeny!
| Lola
ಪ್ರೇಮಿಗಳ ದಿನವನ್ನೂ ಹೀಗೆ ಸಾಹಿತ್ಯದ ಸಿಂಚನದೊಂದಿಗೆ ನವಿರಾಗಿ ನಿರೂಪಿಸುವ ಕಲೆಯಲ್ಲಿಯೇ ಪ್ರೇಮ ದಿನ ಉದಯಿಸಿ ಬಿಟ್ಟಿದೆ ಸರ್
\r\n| Narasimhamurthy
Your article is very good
\r\n| ಪ್ರಕಾಶ್ ಮಂಟೇದ
ಸದ್ಯ ನಾನೂ ಪ್ರೇಮಿಯಾಗಿದ್ದೆ ಎಂಬುದೇ ಒಂತರ ಏನೋ ಪುಳಕ. ಈಗಲೂ ನಾನು ಪ್ರೇಮಿಯಾಗಿಯೇ ಎಲ್ಲಕ್ಕೂ, ಎಲ್ಲಾದರೂ ಜೊತೆಗಿರಲು ಸಾಧ್ಯವೇ ಯೋಚಿಸುತ್ತಿರುತ್ತೇನೆ. ಆದರಿದು ನನ್ನ ಭ್ರಮೆ ಅಲ್ಲವೇ, ನನ್ನ ಅತಿ ಭಾವುಕತೆ ಎಂದು ದ್ವಂದ್ವಕ್ಕೆ ಒಳಗಾಗಿ ಈ ಬಗ್ಗೆ ಸುಮ್ಮನಾಗುತ್ತೇನೆ. ಆದರೆ ನಾನು ಎರಿಕ್ ಫ್ರಾಂಕ್ ದೇವರನ್ನು ಓದಿದಾಗ ಏನೋ ಹೊಸ ಶ್ರದ್ಧೆ ಮತ್ತು ಜೀವನ ಶಕ್ತಿಯಾಗಿ ಮತ್ತೆ ನನ್ನೊಳಗೆ ಅಮೂರ್ತವಾಗಿ ಗರಿಗೆದರುತ್ತದೆ. ಪ್ರೇಮದ ಕನವರಿಕೆ ಇಲ್ಲದೆ ಬದುಕುವುದು ಹೇಗೆ ಅಂತ ತುಂಬಾ ಸಲ ನನಗೆ ನಾನೇ ಮಾತಾಡಿಕೊಂಡದ್ದಿದೆ. ........
\r\n\r\nಹೀಗೆ ನಮ್ಮನ್ನ ಎದಕುವ ಕೆಣಕುವ ಹಾಗೆ ನಿಮ್ಮ ಪ್ರೇಮದ ಬರಹ ಪ್ರೇಮಿಯಾಗಿಯೇ ಉಳಿಯುವ ಹುಚ್ಚೆಬ್ಬಿಸುತ್ತದೆ....
\r\n\r\nAdd Comment