ಕತೆಗಾರನ ಕೊನೇ ಪ್ರತಿಮೆಗಳು
by Nataraj Huliyar
ಕಳೆದ ವಾರ ಗೆಳೆಯ ಮೊಗಳ್ಳಿಯನ್ನು ದೂರದ ಊರಿಂದಲೇ ಬೀಳ್ಕೊಟ್ಟು ಬೆಂಗಳೂರಿಗೆ ಬಂದ ಮೇಲೆ ಗೆಳೆಯರು ಅವರ ಕತೆ, ಪದ್ಯ, ನಿಲುವು ಇತ್ಯಾದಿಗಳನ್ನೇ ಕುರಿತು ಮಾತಾಡುತ್ತಿದ್ದರು. ಅಕ್ಟೋಬರ್ ೯ನೇ ತಾರೀಕಿನ 'ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ 'ಸ್ಪೆಕ್ಟ್ರಮ್’ಗೆ ಮೊಗಳ್ಳಿ ಕುರಿತು ಟಿಪ್ಪಣಿ ಬರೆಯವ ಕೆಲಸವೂ ಬಿತ್ತು. ಗೆಳೆಯ, ಗೆಳತಿಯರು ಮೊಗಳ್ಳಿಯ ಕೊನೆಯ ಕತೆ, ಪದ್ಯಗಳನ್ನು ಕಳಿಸುತ್ತಲೇ ಇದ್ದರು. ಗಣೇಶ್ ೨೦೨೩ರ ಡಿಸೆಂಬರಿನಲ್ಲಿ ನನ್ನ ’ಕಥಾನಂತರ’ ಸಂಕಲನದ ಬಿಡುಗಡೆಯ ದಿನ ಮಾತಾಡಿದ ಬುಕ್ ಬ್ರಹ್ಮ ವಿಡಿಯೋವನ್ನು ಶಿವವೆಂಕಟಯ್ಯ, ದೇವು ಪತ್ತಾರ್ ಕಳಿಸಿದ್ದರು. ಅದರಲ್ಲಿ ಮೊಗಳ್ಳಿ ತನ್ನ ಕತೆಗಳನ್ನು ಬರೆದ ನಂತರ- ಕಥಾನಂತರ- ಏನಾಯಿತು ಎಂಬ ಬಗ್ಗೆ ಆಡಿದ ಮಾತುಗಳು ಕೇಳತೊಡಗಿದವು; ವಿಡಿಯೋದಲ್ಲಿರುವ ಕತೆಗಾರ ಈಗ ’ಇಲ್ಲ’ ಎಂಬ ವಾಸ್ತವ ಸತ್ಯ ಬೇಗುದಿ ಹುಟ್ಟಿಸತೊಡಗಿತು…
ಈ ವಿಡಿಯೋದಲ್ಲಿ ಮೊಗಳ್ಳಿ ಗಣೇಶ್ ತಮ್ಮೂರಿನ ಬಗ್ಗೆ ಹೇಳುತ್ತಿದ್ದ ರೀತಿಯ ವಿವರಗಳನ್ನು ೧೯೯೬ರ ಸೆಪ್ಟೆಂಬರ್ ನಲ್ಲಿ ‘ಲಂಕೇಶ್ ಪತ್ರಿಕೆ’ಯ ನನ್ನ ’ಬರೆವ ಬದುಕು’ ಅಂಕಣದಲ್ಲಿ ಬರೆದಿದ್ದು ನೆನಪಾಯಿತು. ೨೦೨೩ರ ಮೊಗಳ್ಳಿಯ ಮಾತುಗಳಲ್ಲೂ ತನ್ನ ಮನೆಯ ಪಾತ್ರಗಳನ್ನು ಕತೆಗಳಲ್ಲಿ ತಂದಿದ್ದು; ನೆಂಟರಿಗೆ ಕೋಪ ಬಂದಿದ್ದು; ಇವತ್ತಿಗೂ ಊರಿಗೆ ಕಾಲಿಡಲು ಆಗದಿರುವುದು ಇದೆಲ್ಲ ಇತ್ತು. ಮೊಗಳ್ಳಿ ಈ ಮಾತುಗಳನ್ನಾಡುವ ಕೆಲವೇ ತಿಂಗಳುಗಳ ಕೆಳಗೆ ಸ್ವಾಮಿ ಆನಂದ್ ಮುಂತಾದ ಗೆಳೆಯರು, ಮೊಗಳ್ಳಿಯವರ ಮನೆಯವರು ಎಲ್ಲ ಸೇರಿ ಮೊಗಳ್ಳಿಯನ್ನು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಸುಧಾರಿಸಿ, ಗೆಲುವಾಗಿಸಿಕೊಂಡು ಬಂದಿದ್ದರು.
ನನ್ನ ಪುಸ್ತಕ ಬಿಡುಗಡೆಯ ದಿನ ಮೊಗಳ್ಳಿ ಆಡುತ್ತಿದ್ದ ಮಾತಿನಲ್ಲಿ ಮತ್ತೆ ಹಳೆಯ ಕಸುವು, ಸ್ವಂತದ ಬಗೆಗೆ ಮಾತಾಡುವಾಗಿನ ಆನಂದದ ನಿರಾಳ ಧಾಟಿ, ಸ್ವ-ಗೇಲಿ, ತನ್ನ ಕಥಾಪಾತ್ರಗಳಾದ ಊರಿನ ನಂಟರ ಬಗೆಗಿನ ಆದಿಮ ಸೆಡವು… ಇವೆಲ್ಲವೂ ಮಗುವಿನ ರಚ್ಚೆಯ ಹಾಗೆ, ಜಾಣನ ಹಿನ್ನೋಟದ ಹಾಗೆ ಬಿಚ್ಚಿಕೊಂಡಿದ್ದವು. ಅಂದು ರಾತ್ರಿ ಗೆಳೆಯರ ಔತಣಕೂಟದಲ್ಲಿ 'ನಮ್ಮ ಕೋಟಾ ಓವರ್’ ಎಂದ ಮೊಗಳ್ಳಿ, ವಿದ್ಯಾರಣ್ಯ ಋಷಿಯ ಹಾಗೆ ಕೇವಲ ಜೂಸ್ ಕುಡಿದು ಆರಾಮಾಗಿ ಮಾತಾಡುತ್ತಾ ರಾತ್ರಿ ಹನ್ನೊಂದರವರೆಗೂ ಕೂತಿದ್ದಾಗ ಆ ಮುಖದಲ್ಲಿ, ಮಾತಿನಲ್ಲಿ ಕಾಲನ ಆಕ್ರಮಣದ ಸುಳಿವು ಒಂಚೂರೂ ಇರಲಿಲ್ಲ.
ಅವತ್ತು ನನ್ನ 'ಕಥಾನಂತರ’ ಕಥಾಸಂಕಲನವನ್ನು ಮೊಗಳ್ಳಿಗೆ ಅರ್ಪಿಸಿ ಮೊಗಳ್ಳಿಯ ಮೂವತ್ತು ವರ್ಷಗಳ ಗೆಳೆತನದ ಅಷ್ಟಿಷ್ಟು ಋಣ ತೀರಿಸಿದ್ದೆನೇನೋ ಎನ್ನಿಸುತ್ತದೆ...
ಆ ಅರ್ಪಣೆಯ ಪ್ರಜ್ಞೆ ಅವತ್ತು ನನ್ನಲ್ಲಿ ಹುಟ್ಟಿದ್ದಕ್ಕೆ, ಆ ಅರ್ಪಣೆಗೆ, ಗೆಳೆತನ ಮೀರಿದ ಕಾರಣವಿತ್ತು. ನನ್ನ ವಾರಗೆಯ ಕತೆಗಾರರ ನಡುವೆ ತನ್ನ ಕತೆಗಳನ್ನು ಬರೆಯುವ ಮುನ್ನ ಏನಾಗಿತ್ತು, ಮತ್ತು ಕಥಾನಂತರ ಏನಾಯಿತು ಎಂದು ಹೇಳುತ್ತಾ ಅದನ್ನು ಹೆಚ್ಚು ಎಂಜಾಯ್ ಮಾಡುತ್ತಿದ್ದವನು ಮೊಗಳ್ಳಿಯೇ. ಅದು ಅವನ ಕಥಾಮೀಮಾಂಸೆಗೆ ಸಂಬಂಧಿಸಿದ ವಿಷಯ. ಪ್ರತಿ ಕತೆಗಾರ, ಕತೆಗಾರ್ತಿ ಅರಿವಿದ್ದೋ ಅರಿವಿಲ್ಲದೆಯೋ ಕತೆ ಬರೆಯುವ ಬಗ್ಗೆ ತಮ್ಮದೇ ಥಿಯರಿ, ಮೀಮಾಂಸೆ ಎಲ್ಲವನ್ನೂ ಬೆಳೆಸಿಕೊಂಡಿರುವ ಸಾಧ್ಯತೆ ಇದ್ದೇ ಇರುತ್ತದೆ.
ಮೊಗಳ್ಳಿ ಕೊನೆ ಕೊನೆಗೆ ಬರೆದ ‘ಹೊಸಿಲು ದಾಟಿದವರು’ ಕತೆಯ ಹಸ್ತ ಪ್ರತಿಯನ್ನು ರವಿ ಬಾಗಿ ಮೊನ್ನೆ ಕಳಿಸಿದರು. ಕತೆಯಲ್ಲಿ ಮೊಗಳ್ಳಿ ಅದು ಯಾಕೋ ಏನೋ ಬಸವಣ್ಣನವರ ಕಡೆಗೆ ಹೋಗಿಬಿಟ್ಟಿದ್ದ! ಮೊಗಳ್ಳಿ ಇಲ್ಲೇ ಎಲ್ಲೋ ಇರಬಹುದೇನೋ ಎನ್ನುವಂತೆ ’ಬಸವಣ್ಣಾರ ಹತ್ರ ಯಾಕ್ ಹೋದ್ಯಲೇ, ಎಲ್ಲೆಲ್ಲೋ ಅಲೀತಾ ಇದೀಯಲ್ಲೋ’ ಎನ್ನಬೇಕೆನ್ನಿಸುವಷ್ಟರಲ್ಲಿ, ಈ ಕೊನೆಯ ಕತೆಯಲ್ಲೂ ಮೊಗಳ್ಳಿಯ ಕತೆಗಾರಿಕೆಯ ಸಹಜ ಶಕ್ತಿ ನನ್ನನ್ನು ಮುತ್ತತೊಡಗಿತು:
‘ಕಾಲದ ಅಲೆಯಲ್ಲಿ ಹಿಂದೆ ಸರಿಯುತ್ತಿದ್ದ ಮನೆಯ ಶೀತಗೋಡೆಗಳು ಮಳೆಗಾಲದಲ್ಲಿ ಅಲ್ಲಲ್ಲಿ ಕುಸಿದು ಹೋಗಿ, ಮುರುಕು ಗೋಡೆಗಳು ಅಲ್ಲಲ್ಲಿ ತಗಡನ್ನೂ ಪ್ಲಾಸ್ಟಿಕ್ ಹಾಳೆಗಳನ್ನೂ ಹೊದ್ದುಕೊಂಡು ಗಾಳಿ ಬೀಸಿದಾಗಲೆಲ್ಲ ಇದು ನ್ಯಾಯವೇ ಎಂದು ಅಂಗಲಾಚುತ್ತಿದ್ದವು. ಇದು ಬದುಕಿ ಉಳಿಯಲು ಏನಾದರೊಂದು ಅನ್ಯ ಮಾರ್ಗ ಸಾಕು ಎಂಬ ಹಳಹಳಿಕೆ ಅಲ್ಲ. ಕಾಗೆ ಹಿತ್ತಿಲಲ್ಲಿ ವರಗುಟ್ಟುತ್ತಿದೆ. ಅನಾದಿ ನಾಯಿ ಗತಕಾಲದ ವಾಸನೆಗಳ ಕನಸಲ್ಲಿ ಮುದುರಿಕೊಂಡು ಬಿದ್ದಿದೆ. ಬೀಸುವ ಗಾಳಿಗೆ ಏನೇನೊ ಸುಟ್ಟು ಹೊಗೆಯ ಅಡರು. ಆ ಹಿತ್ತಿಲಲ್ಲಿ ಸಮಗಾರ ಹರಳಯ್ಯ ಬಂದು ಕೂತು ಭಂಗಿ ಸೇದಿ ಒಮ್ಮೆ ‘ನಾನಿಲ್ಲದ ನಾಳೆಗೆ ಬಸವಣ್ಣನೂ ಇರಲಾರ. ನಾನೂ ನನ್ನವರೂ ಉಳಿಯಲಾರರು; ಕೊನೆಗೆ ಇರುವವರೆಲ್ಲ ಇರುವೆಗಳಂತೆ ಸುಟ್ಟು ಹೋಗುವರು. ಆಗ ಯಾರಾದರೂ ಬಯಲಿಗೆ ಬಂದು ಬಾಗಿಲ ಹಾಕಿಕೊಳ್ಳಿ ಎಂದರೆ ಆಗ ಅಲ್ಲಮನ ಆತ್ಮ ಯಾವ ಕರೆಯ ನೀಡುವುದು... ಸಮಗಾರ ಭೀಮವ್ವ ಯಾವ ಎದೆ ಹಾಲ ನೀಡುವಳು’ ಎಂದು ಒಗಟು ನುಡಿದಿದ್ದ… ಕಾಲಚಕ್ರ ಉರುಳುತ್ತಲೇ ಇತ್ತು. ಚರಿತ್ರೆಗೆ ರುಂಡ ಮಾಲೆಗಳೆಂದರೆ ಅದೆಷ್ಟು ಆನಂದವೊ...’
ಕತೆಗಾರನೊಬ್ಬನ ಅಪರೂಪದ ವಿಚಿತ್ರ ’ವಿಶನ್’ಗೆ ಮಾತ್ರ ದಕ್ಕುವ ಈ ಥರದ ಚಿತ್ರಗಳಿದ್ದ ಕತೆಯನ್ನು ಮೊಗಳ್ಳಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಫೈನಲ್ ಮಾಡಿ, ಒಂದು ರಾತ್ರಿ ಗೆಳೆಯ ಸುಬ್ಬುವಿಗೆ ಓದಿದ್ದ. ಮೊಗಳ್ಳಿ ಹೊಸಿಲು ದಾಟುವ ಮುನ್ನ ಕೈಬರಹದಲ್ಲಿ ಕೊನೆಯ ಪ್ರತಿ ರೆಡಿ ಮಾಡಿ, ತಪ್ಪಿದ್ದ ಕಡೆ ವೈಟ್ನರ್ ಹಾಕಿ ಕರೆಕ್ಷನ್ ಮಾಡಿ ಸುಬ್ಬು, ರವಿಬಾಗಿಗೆ ಮೇಲ್ ಮಾಡಿದ್ದ. ’ಹೊಸಿಲು ದಾಟಿದವರು’ ಕತೆ ಕಲಬುರ್ಗಿಯವರ ಕೊಲೆಯನ್ನು ಪ್ರತಿಭಟಿಸುವ ಜನರ ನಡಿಗೆಯೊಂದಿಗೆ ಕೊನೆಯಾಗುತ್ತದೆ:
‘ದೂರದಿಂದ ಧಿಕ್ಕಾರ ಮೊಳಗುತ್ತಿತ್ತು. ಇನ್ನು ಮುಂದೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಪ್ರತಿರೋಧದ ಮಹಾಯಾನಕ್ಕೆ ನಿಗೂಢವಾಗಿ ಜನ ಎಲ್ಲೆಲ್ಲಿಂದಲೋ ಜನ ಒಟ್ಟಾಗಿ ಕಾಲು ಕಿತ್ತು ನಡೆದಿತ್ತು. ’ಯುವ ಜನಾಂಗ ಇದೇನಿದು?’ ಎಂದು ಬೆರಗಾಗಿ ಗಮನಿಸುತ್ತಿತ್ತು.
೨೦೨೫ರ ಆಗಸ್ಟ್-ಸೆಪ್ಟೆಂಬರ್ ನಡುವೆ ಬರೆದಂತಿರುವ ಮೊಗಳ್ಳಿಯ ’ಲಾಸ್ಟ್ ಸಪ್ಪರ್’ ಕತೆ ಹೀಗೆ ಕೊನೆಯಾಗುತ್ತದೆ:
‘ರಣಬಿಸಿಲು ತಣತಣಿಸುತ್ತಿತ್ತು. ಯಾರೋ ಬರುತ್ತಿರುವಂತೆ ಕಂಡು ಕಂಡು ಮಾಯವಾದಂತೆ ಭಾಸವಾಗುತ್ತಿತ್ತು. ಅಚಲ ಆತ್ಮವಿಶ್ವಾಸದಲ್ಲಿ ಅವರು ಕಾಯುತ್ತಲೇ ಇದ್ದರು.’
ಕೊನೆಕೊನೆಗೆ ಬರೆದ-ಮೊಗಳ್ಳಿಯ ಕೊನೆಯ ಪದ್ಯವೇ ಆಗಿರಬಹುದಾದ- ’ಇಲ್ಲಿ ಎಲ್ಲವೂ ಸಾಧ್ಯ’ ಪದ್ಯ ಹೀಗೆ ಕೊನೆಯಾಗುತ್ತದೆ:
ಹಳ್ಳ ಹೊಳೆ ತೊರೆ ನದಿ
ಕಡಲೆಲ್ಲ ಬೇರೆ ಬೇರೆಯೇ
ಮಳೆಯ ನೀರಾಗುವ ಆಸೆ
ಆಗಲಾದರೂ ನಾನು ಎಲ್ಲರ ದಾಹಕ್ಕೆ ಪನ್ನೀರಾಗುವೆ.
ಲೇಖಕನೊಬ್ಬನ ಬದುಕಿನ ಕೊನೆಕೊನೆಯ ಕತೆ, ಕವಿತೆಗಳ ವಸ್ತುಗಳನ್ನು, ಕೊನೆಯ ಸಾಲುಗಳನ್ನು ತೀರಾ ಸರಳವಾಗಿ ಮನೋವಿಶ್ಲೇಷಣೆಗೆ ಒಳಪಡಿಸುವುದು; ಅಥವಾ ಕತೆಗಾರನಿಗೂ ಕತೆಗಳಿಗೂ ಅತಿಯಾದ ಸಂಬಂಧ ಕಲ್ಪಿಸುವುದು ಸರಿಯಲ್ಲ. ಆದರೆ ಈ ಎರಡು ಕತೆಗಳ ಕೊನೆಯಲ್ಲಿರುವ ‘ಕಾಯುತ್ತಿದ್ದರು’, ‘ಬೆರಗಾಗಿ ನೋಡುತ್ತಿದ್ದರು’ ಎಂಬ ಚಿತ್ರಗಳು; ಕೊನೆಯ ಕವಿತೆಯ ಕೊನೆಯಲ್ಲಿರುವ ‘ಪನ್ನೀರಾಗುವೆ’ ಎಂಬ ನಿರೀಕ್ಷೆ…ಹೀಗೆ ಒಂಥರದಲ್ಲಿ ‘ಪಾಸಿಟಿವ್’ ಎನ್ನಬಹುದಾದ ಕೊನೆಗಳನ್ನು ನೋಡಿದರೆ ಮೊಗಳ್ಳಿ ಬರಹ ಬೇರೊಂದು ದಿಕ್ಕಿಗೆ ತಿರುಗತೊಡಗಿತ್ತೇನೋ ಅನ್ನಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ‘ತಕರಾರು’ ಥರದ ವಾದಮಯ ಬರಹಗಳ ಗೊಡವೆಗೆ ಹೋಗದೆ, ಗಾಂಧಿ, ಅಂಬೇಡ್ಕರರನ್ನು ಹುಡುಕಿಕೊಂಡು ಬರೆದ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಪುಸ್ತಕ ಮೊಗಳ್ಳಿಯ ಹೊಸ ಬೆಸುಗೆಯನ್ನೂ ಸೂಚಿಸುತ್ತಿತ್ತು. ಈ ಪುಸ್ತಕ ರಾಣೆಬೆನ್ನೂರಿನಲ್ಲಿ ಬಿಡುಗಡೆಯಾದಾಗ ನಾನು ಮೆಚ್ಚಿ ಮಾತಾಡಿದ್ದು; ಬೆಂಗಳೂರಿನಲ್ಲಿ ‘ಬಯಲು ಬಳಗ’ ನಡೆಸಿದ ಮೊಗಳ್ಳಿಯ ‘ಜಾತಿಮೀಮಾಂಸೆ’ ಪುಸ್ತಕ ಬಿಡುಗಡೆಯಲ್ಲೂ ಮಾತಾಡಿದ್ದು ನೆನಪಾಗುತ್ತದೆ.
ಆಗಾಗ ‘ಅದು ಸರಿಯಿದೆ’; ‘ಇದು ಸರಿಯಲ್ಲ’; ‘ಪುಣ್ಯಕೋಟಿ ಎಂಬ ಕನ್ನಡ ರೂಪಕವನ್ನು ಒಂದೇಟಿಗೆ ಫಿನಿಶ್ ಮಾಡಬಾರದು’ ಎಂದೆಲ್ಲ ಮೊಗಳ್ಳಿಗೆ ಹೇಳುತ್ತಿದ್ದುದು… ’ಕಾಮನ ಹುಣ್ಣಿಮೆ’ ಕಾದಂಬರಿಯನ್ನು ಮೊಗಳ್ಳಿ ಮತ್ತು ಪತ್ನಿ ಇಬ್ಬರೂ ಮನಸಾರೆ ಮೆಚ್ಚಿ ಮಾತಾಡಿದ್ದು…ಎರಡನೆಯ ಮುದ್ರಣಕ್ಕೆ ಮೊಗಳ್ಳಿ ಬ್ಲರ್ಬ್ ಬರೆದಿದ್ದು ಇವೆಲ್ಲವೂ ನಮ್ಮಿಬ್ಬರ ನಡುವೆ ಇದ್ದವು…ನಾವು ಇನ್ನೂ ಏನೇನು ಹೇಳುವುದಿತ್ತೋ, ಕೇಳುವುದಿತ್ತೋ…ಇನ್ನು ಉಳಿದಿರುವುದು ಅಡೆತಡೆಗಳಿಲ್ಲದ ಸಂವಾದ ಅಷ್ಟೇ...
ಕಳೆದ ಎರಡು ಮೂರು ವರ್ಷಗಳಿಂದಲಂತೂ ಮೊಗಳ್ಳಿಯ ಕುಟುಕುಜೀವವನ್ನು ಹಿಡಿದಿಟ್ಟಿದ್ದು ಅವನ ನಿರಂತರ ಬರವಣಿಗೆ. ಈಚಿನ ವರ್ಷಗಳಲ್ಲಿ ಮೊಗಳ್ಳಿ ೨೪/೭ ಬರಹಗಾರನಾಗಿರುವುದನ್ನು ಕುರಿತು ಗೆಳೆಯರು ಮಾತಾಡುತ್ತಿದ್ದರು. ನಿತ್ಯ ಬರೆಯುತ್ತಾ, ನಾಳೆ ಬರೆಯುವುದು ಇದೆ ಎಂದು ಧಾವಂತದಲ್ಲಿ ಏಳುತ್ತಾ, ಬರೆವ ಕಾಯಕದಲ್ಲಿ ಮೊಗಳ್ಳಿ ಉಸಿರಾಡುತ್ತಿದ್ದಂತಿತ್ತು. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ‘ಲಿವಿಂಗ್ ಟು ಟೇಲ್ ದ ಟೇಲ್’ ಆತ್ಮಕತೆಯ ಒಂದು ಭಾಗ ಬರೆದು, ‘ಕತೆ ಹೇಳಲು ಬದುಕಿದ್ದೇನೆ ’ ಎನ್ನುತ್ತಾ ಕ್ಯಾನ್ಸರಿಗೆ ಸವಾಲು ಹಾಕಲು ನೋಡಿದ್ದ! ‘ಬರೆಯಲು ಬದುಕಿರುವೆ’ ಎಂಬ ಜಿಗುಟು ಛಲ ಇಪ್ಪತ್ತೈದು ವರ್ಷಗಳ ಕೆಳಗೆ ಲಂಕೇಶರ ಕೊನೆಯ ವರ್ಷಗಳಲ್ಲಿ ಕಂಡಂತೆ ಮೊಗಳ್ಳಿಯಲ್ಲೂ ಕಾಣತೊಡಗಿತ್ತು…
ಹದಿಹರೆಯದ ಶುರುವಿನಲ್ಲಿ ‘ಹೆಂಗೋ ಬದುಕಿಕೊಳ್ಳುವ ಆಸೆ’ಯಿಂದ ಸಂತೆಮೊಗೇನಹಳ್ಳಿಯ ಹುಟ್ಟುಮನೆ ಬಿಟ್ಟು ಮೈಸೂರಿಗೆ ಓಡಿ ಹೋದ ಮೊಗಳ್ಳಿ, ಎಷ್ಟೋ ವರ್ಷಗಳ ನಂತರ ಅಪಾರ ಆಸೆ ಪಟ್ಟು ಹೊಸಪೇಟೆಯಲ್ಲಿ ದೊಡ್ಡ ಮನೆ ಕಟ್ಟಿಸಿದ್ದು, ಆನಂದ ಪಟ್ಟಿದ್ದು ಸಹಜವಾಗಿತ್ತು. ಯಾಕೋ ಈಚೆಗೆ ಆ ಮನೆ ಬಿಟ್ಟು ತನ್ನ ಅಪಾರ ಗೆಳೆಯರ ಬಳಗವಿರುವ ಮೈಸೂರಿನ ಕಡೆಗೆ ಮತ್ತೆ ಹೋಗಿ ಇದ್ದುಬಿಡುವ ಆಸೆ ಮೊಗಳ್ಳಿಯಲ್ಲಿ ಹೊಸ ಸಾಧ್ಯತೆಗಳನ್ನು ಚಿಗುರಿಸಿತ್ತು.
ಲಿಯನಾರ್ಡೊ ಡವಿಂಚಿಯ ಪ್ರಖ್ಯಾತ ಚಿತ್ರ ’ಲಾಸ್ಟ್ ಸಪ್ಪರ್’ ಎಂಬ ರೂಪಕ ಬಳಸಿ ‘ಲಾಸ್ಟ್ ಸಪ್ಪರ್’ (ಕೊನೆಯ ರಾತ್ರಿಯೂಟ) ಕತೆ ಬರೆದ ಮೊಗಳ್ಳಿ ಅಕ್ಟೋಬರ್ ೪ರ ಶನಿವಾರ ರಾತ್ರಿ ತನಗೆ ಸೇರಿದಷ್ಟು ಊಟ ಮಾಡಿ ಒಬ್ಬನೇ ಕೊನೆಯ ಗಳಿಗೆಗಳತ್ತ ಸರಿದಂತಿದೆ…
ನನಗೆ ಪ್ರಿಯರಾದ ಡಿ. ಆರ್. ನಾಗರಾಜ್, ಲಂಕೇಶ್, ನನ್ನ ತಾಯಿ…ಗಣೇಶ್ ಎಲ್ಲರೂ ನಡುರಾತ್ರಿಯೇ ಕೊನೆಯುಸಿರೆಳೆದಿದ್ದು ನೆನಪಾಗಿ ದುಗುಡ ಆವರಿಸತೊಡಗುತ್ತದೆ.
Comments
16 Comments
| Krishna Kumar
It's heart touching, tribute
| ಭೀಮೇಶ ಯರಡೋಣಿ
ತಾವು ೧೯೯೬ರ ಸೆಪ್ಟೆಂಬರ್ ನಲ್ಲಿ ‘ಲಂಕೇಶ್ ಪತ್ರಿಕೆ’ಯ ’ಬರೆವ ಬದುಕು’ ಅಂಕಣ ಓದಿ ತುಂಬಾ ಖುಷಿಯಾಯಿತು. ಆಯಾ ಕಾಲ, ಆಯಾ ಭಾಷೆಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ತಲುಪುವಂತೆ ನೀಡುವ ನಿಮ್ಮ ಕ್ರಾಫ್ಟ್ ಮನ್ಶಿಪ್ ನನ್ನಲ್ಲಿ ಬೆರಗು ಮೂಡಿಸಿದೆ. ಬರಹಕ್ಕಾಗಿ ಬದುಕಿಗಾಗಿ ಮೊಗಳ್ಳಿ ಸರ್ ಹಿಡಿದಿಟ್ಟಿದ್ದ ಕುಟುಕು ಜೀವವಿದ್ದಾಗಲೇ ಇಂದು ಅವರನ್ನು ಕುರಿತು ಬರುತ್ತಿರುವ ಎಲ್ಲಾ ಬರಹಗಳು ಬಂದಿದ್ದರೆ ಅವರ ಜೀವ ಗೆಲುವಾಗುತ್ತಿತ್ತು.
| Dr.G.Gangaraju
ಕಣ್ಮರೆಯಾದ ಕಥೆಗಾರ ಗೆಳೆಯನ ಕುರಿತ ಆಪ್ತ ಹಾಗೂ ಒಳನೋಟಗಳ ಬರಹ. ಮೊಗಳ್ಳಿ ಕಥಾಸಾಹಿತ್ಯ ಮೀಮಾಂಸೆ ಕುರಿತ ಗ್ರಹಿಕೆ ಮೊಗಳ್ಳಿ ಕಥೆಕಾದಂಬರಿ ಸಾಹಿತ್ಯ ವಿಮರ್ಶೆಗೆ ನೀಡಿರುವ ಒಂದು ಮುಖ್ಯ ಸೂಚನೆ .
| Ravi Kumar
Heart touching write up
| Prashanth HD
ಹೃದಯ ಸ್ಪರ್ಶಿ ಬರಹ
| ಹರಿಪ್ರಸಾದ್ ಬೇಸಾಯಿ
ಕಲಕಿಬಿಟ್ರಿ ಸಾ
| Nagaraju C.V.
Two words touched me most-'nanna thaayi'. Remember you telling, in a vedio, that your mother struggled a lot for the family. Hope she saw your growth and was happy. Write about that some time.
| ದೇವಿಂದ್ರಪ್ಪ ಬಿ.ಕೆ.
ಮೊಗಳ್ಳಿ ಗಣೇಶ್ ಸರ್ ಕುರಿತ ಆಪ್ತ ಲೇಖನ ಇದು. ಒಬ್ಬ ಕತೆಗಾರರಾಗಿ ಅವರು ಬರೆದ ಕೊನೆಯ ಕಥೆ ಲಾಸ್ಟ್ ಸಪ್ಪರ್ ಹೆಸರು ಕೇಳಿಯೇ ಕತೆಗೂ ಮತ್ತು ಕಥೆಗಾರನ ಜೀವನಕ್ಕೂ ಎಷ್ಟು ಸಾತತ್ಯ ಸಂಬಂಧವಿದೆ ಎನ್ನಿಸುತ್ತದೆ. ಗಿರಡ್ಡಿ ಗೋವಿಂದರಾಜ ಅವರ ಮಣ್ಣು ಕಥೆ ಅವರ ಸಾವಿಗೆ ಹತ್ತಿರವಾಗಿರುವ ವಸ್ತುವನ್ನೊಳಗೊಂಡದ್ಡು. ಬಹುತೇಕ ಲೇಖಕರು ತಮ್ಮ ಜೀವನದ ಕೊನೆಯ ಬರಹವನ್ನು ಅತ್ಯಂತ ಅರ್ಥಪೂರ್ಣವಾಗಿ ಬರೆದು ಹೋಗುತ್ತಾರೆ. ಮಾರ್ಕ್ವೆಜ್ ಆಗಲಿ, ಡಿ ಆರ್ ನಾಗರಾಜ್ ಅವರಾಗಲಿ, ಲಂಕೇಶ್ ಆಗಲಿ ಕೊನೆಗೆ ಮೊಗಳ್ಳಿ ಅವರೂ ಸಹ. ಇಲ್ಲಿ ನೀವು ನಿಮ್ಮ ಇಷ್ಟದ ಲೇಖಕರ ಕೊನೆಯ ದಿನದ ಘಟನೆಯನ್ನು ವಿವರಿಸುತ್ತಾ ನಿಮ್ಮ ತಾಯಿಯ ಸಾವಿನ ಬಗೆಗೂ ಹೇಳಿದ್ದೀರಿ. ಹೆಚ್ಚು ಕಾಡುವ ಪ್ರಶ್ನೆಗಳಲ್ಲಿ ಬದುಕಿನಲ್ಲಿ ಏನಾದರೂ ಒಂದು ಹೊಸ ಸಾಹಸ ಮತ್ತು ಲೋಕವಿರೋಧಿಯಾಗಿ ಬದುಕುವವರಿಗೆ ರಾತ್ರಿ ಹೊತ್ತು ಸಾವು ಸಂಭವಿಸುತ್ತದೆ ಎಂಬ ಸಂಗತಿ ನಮ್ಮಲ್ಲಿ ದುಗುಡ ಆವರಿಸುತ್ತದೆ.
| Mahalingeshwar
Mogalli....a Unique Story Teller
| ಚೆನ್ನರಾಜು ಎಂ
ಇಂತಿ ನಮಸ್ಕಾರಗಳು ಪುಸ್ತಕದಲ್ಲಿ ಡಿ.ಆರ್. ತೀರಿಕೊಂಡಾಗಿನ ಕ್ಷಣ ಹಾಗೂ ಪಿ. ಲಂಕೇಶ್ ತಮ್ಮ ಕೊನೆಯ ರಾತ್ರಿ ಓದಲು ತೆಗೆದಿಟ್ಟ ಪುಸ್ತಕಗಳ ರೂಪಕಗಳ ವಿವರಣೆಯಂತೆ ಮೊಗಳ್ಳಿಯವರ ನೆನಪುಗಳು, ಅವರ ಕೊನೆಯ ಕ್ಷಣಗಳು ಇಲ್ಲಿ ಎಲ್ಲರನ್ನು ಕಲಕಬಲ್ಲವು. ಮೊಗಳ್ಳಿಯವರ ಭೂಮಿ ಕಥೆಯ ದೊಂಬನಂತೆ ಅವರ ಕಥೆಗಳು ನರಗಳೆಲ್ಲ ಬೇರುಗಳಾಗಿ ಇಳಿದು ಚಾಚಿಕೊಂಡಂತೆ ಒಮ್ಮೆಲೆ ನೆನಪಾಗುತ್ತಿವೆ.
| ಗುರು ಜಗಳೂರು
ಸರ್ ಈ ತಿಂಗಳ ಮಯೂರದಲ್ಲಿ ಮೊಗಳ್ಳಿಯವರ ಬಹಳ ಒಳ್ಳೆಯ ಸಂದರ್ಶನ ಪ್ರಕಟವಾಗಿದೆ(ಸಂ.ವಿಕ್ರಮ್ ವಿಸಾಜಿ).ಇದೇ ತಿಂಗಳಲ್ಲಿ ನಿಧನರಾದದ್ದು ನೋವಿನ ಸಂಗತಿ.ಔಷದವಿಲ್ಲದ ಖಾಯಿಲೆ ಕಾನ್ಸರ್ ವೇಗವಾಗಿ ಹಬ್ಬುತ್ತಿದೆ.ಇದೇ ಸಂದರ್ಶನದಲ್ಲಿ ಮೊಗಳ್ಳಿಯವರು ಸಿದ್ದ ಮಾದರಿಯ ವಿಚಾರಗಳನ್ನು ಬದಿಗಿಟ್ಟು ಸಾಹಿತ್ಯದ ಹಳೇ ಬೇರುಗಳನ್ನು ನೆನೆದು ಚೇತೋಹಾರಿಯಾಗಿ ಮಾತನಾಡಿದ್ದಾರೆ.ಇಂತಹ ಚಿಂತಕನನ್ನು ಭೇಟಿಯಾಗದಿದ್ದದು ನಮಗೆ ಕೊರತೆಯಾಗಿ ಕಂಡಿದೆ.
| Thammaiah
A heartfelt tribute, beautifully written by Nataraj Huliyar sir. Through his words, we once again feel the depth and spirit of Mogalli Ganesh — a writer who truly lived through his stories and will continue to live through them.
| Alur
ಮನ ಕಲಕಿತು
| Vasantha
ಹೃದಯಕ್ಕೆ ಹತ್ತಿರವಾಗಿದೆ
| ಚರಣ್
ಹೃದಯ ತಾಕುವ ಭಾವಗಳು.
| ಡಾ. ನಿರಂಜನ ಮೂರ್ತಿ ಬಿ ಎಂ
ಮನಮುಟ್ಟಿ ತಟ್ಟುವ ಬರಹ. ಬರೆಯಲಿಕ್ಕಾಗಿಯೇ ಬದುಕುವ ಮೊಗಳ್ಳಿಯವರ ಛಲ ಹೃದಯವನ್ನು ಕಲಕಿತು.
Add Comment