ಸಾಹಿತಿಗಳಿಗೆ ಶಾಂತವೇರಿ ಪಾಠ

ನಮ್ಮ ರಾಜಕಾರಣಿಗಳು ಲೋಕಸಭೆಯಲ್ಲಿ, ವಿಧಾನಸಭೆಯಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಿರುವ ರೀತಿಗೂ, ತಂತಮ್ಮ ಭಾಷೆಗಳ ಅರ್ಥಪೂರ್ಣ ಸಾಹಿತ್ಯ ಕೃತಿಗಳ ಜೊತೆಗೆ, ಜವಾಬ್ದಾರಿಯುತ ಸಾಹಿತಿಗಳ ಜೊತೆಗೆ ಅವರ ನಂಟು ಕಡಿದು ಹೋಗಿರುವುದಕ್ಕೂ ಸಂಬಂಧ ಇರುವಂತಿದೆ. ಇದು ನಿಮಗೂ ಹೊಳೆದಿರುತ್ತದೆ: ಒಂದು ಕಾಲಕ್ಕೆ ದೇಶದ ಗಂಭೀರ ರಾಜಕಾರಣಿಗಳು ಉತ್ತಮ ಸಾಹಿತ್ಯ-ಸಾಹಿತಿಗಳ ಜೊತೆ ಇರಿಸಿಕೊಂಡಿದ್ದ ಸಂಬಂಧದಿಂದ ರಾಜಕಾರಣ ಹಾಗೂ ಸಾಹಿತ್ಯಸಂಸ್ಕೃತಿ ಎರಡೂ ಪರಸ್ಪರ ಹಲವು ಕೊಡುಗೆಗಳನ್ನು ಪಡೆಯುತ್ತಿದ್ದವು. ಇವತ್ತಿಗೂ ಹೀಗೆ ಪಡೆಯುವುದನ್ನು ಅಪರೂಪಕ್ಕೆ ನೋಡುತ್ತೇನೆ. ಆದರೆ ಅಂಥವರ ಸಂಖ್ಯೆ ಹೆಚ್ಚು ಇಲ್ಲ. ಅಂಥವರು ಕೂಡ ಕೆಳಗಿನ ಕೆಲವು ಉದಾಹರಣೆಗಳಿಂದ ಸ್ಫೂರ್ತಿ ಪಡೆಯಲಿ ಎಂದು ನಿರೀಕ್ಷಿಸೋಣ:

ಕರ್ನಾಟಕದ ಅನನ್ಯ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರು ಕನ್ನಡ ಲೇಖಕರಾದ ತರಾಸು, ಬಸವರಾಜ ಕಟ್ಟೀಮನಿ, ತೇಜಸ್ವಿ, ಲಂಕೇಶ್, ನಿಸಾರ್ ಅಹಮದ್, ಚಂದ್ರಶೇಖರ ಪಾಟೀಲ, ಅನಂತಮೂರ್ತಿ ಮುಂತಾದವರನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಕಾವ್ಯ ಸಂವೇದನೆಯುಳ್ಳ ಗೋಪಾಲಗೌಡರು ಕನ್ನಡ ಕವಿಗಳ ಕವನಗಳ ಸಾಲುಗಳನ್ನೂ, ಆಶಯಗಳನ್ನೂ ತಮ್ಮ ಸಮಾಜವಾದಿ ಚಿಂತನೆ, ಭಾಷಣಗಳಲ್ಲಿ ಬಳಸುತ್ತಿದ್ದರು.

ಹೀಗೆ ಕವಿಸಾಲುಗಳನ್ನು ಬಳಸುತ್ತಿದ್ದ ಗೋಪಾಲಗೌಡರ ಬಗ್ಗೆ ಅಂದಿನ ಲೇಖಕರು ಹೆಮ್ಮೆ ಪಡುತ್ತಿದ್ದರು. ಆದರೆ ಹಾಗೆ ಬಳಸುವುದನ್ನು ಆಕ್ಷೇಪಿಸಿದ ಜನರೂ ಆ ಕಾಲದಲ್ಲಿದ್ದರು ಎಂಬುದನ್ನು ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದಲ್ಲಿ ಕಂಡಾಗ ಅಚ್ಚರಿಯಾಯಿತು. ಈ ಪುಸ್ತಕದ ಅಧ್ಯಾಯವೊಂದರಲ್ಲಿ ಕುತೂಹಲಕರ ವಿವರವೊಂದು ಬರುತ್ತದೆ. ತೇಜಸ್ವಿ ಒಮ್ಮೆ ಕುವೆಂಪು ಜೊತೆ ಕುಪ್ಪಳಿ ಬಳಿಯ ಇಂಗ್ಲಾದಿಗೆ ಹೋಗುತ್ತಾರೆ. ಆಗಿನ್ನೂ ತೇಜಸ್ವಿಯವರಿಗೆ ಗೋಪಾಲಗೌಡರ ಪರಿಚಯ ಇರಲಿಲ್ಲ. ಅವತ್ತು ಗೋಪಾಲಗೌಡರ ಬಗ್ಗೆ ಅಲ್ಲಿ ಒಂದು ‘ದೂರು’ ಕೇಳಿ ಬರುತ್ತದೆ. ಆಗಿನ್ನೂ ಗೋಪಾಲಗೌಡರ ಬಗ್ಗೆ ಹೆಚ್ಚು ಕೇಳಿರದಿದ್ದ ತೇಜಸ್ವಿಗೆ ಈ ವಿಚಿತ್ರ ‘ದೂರು’ ಕೇಳಿ ಅವರ ಬಗ್ಗೆ ಕುತೂಹಲ ಹುಟ್ಟುತ್ತದೆ. 

ಈ ಕುರಿತು ತೇಜಸ್ವಿ ಬರೆಯುತ್ತಾರೆ: ‘ಮಾನಪ್ಪನವರೂ, ವಿಜಯದೇವ ಅವರೂ ಅಣ್ಣನ ಜೊತೆ [ಕುವೆಂಪು ಜೊತೆ] ಮಾತಾಡುತ್ತಾ, ಗೋಪಾಲಗೌಡ ಚಳವಳಿಯಲ್ಲಿ ಹಾಗೂ ಇತರೆಡೆಗಳಲ್ಲಿ ಭಾಷಣ ಮಾಡುತ್ತಾ ನಿಮ್ಮ ‘ಕಲ್ಕಿ’, ‘ನೇಗಿಲಯೋಗಿ’ ಮುಂತಾದ ಪದ್ಯಗಳನ್ನೇ ಉಪಯೋಗಿಸಿ ಉದಾಹರಣೆ ಕೊಡುತ್ತಾನಂತೆ ಎಂದು ಅಣ್ಣನ ಪದ್ಯಗಳನ್ನು ದುರುಪಯೋಗ ಮಾಡುತ್ತಿದ್ದಾರೆ ಎನ್ನುವಂತೆ ಹೇಳಿದ್ದು ನನಗೆ ನೆನಪಿದೆ. ಇದರಿಂದ ನನಗೆ ಗೋಪಾಲಗೌಡರ ಬಗ್ಗೆ ಕುತೂಹಲವೂ ಸ್ವಲ್ಪ ಸದಭಿಪ್ರಾಯವೂ ಪಾರಂಭವಾಯ್ತು... ಗೋಪಾಲಗೌಡ ಕಥೆ, ಕವನಗಳನ್ನು ಓದುವ ಮನುಷ್ಯನಾದರೆ, ರಾಜಕೀಯಕ್ಕೆ ಅಣ್ಣನ ಕವಿತೆಗಳನ್ನು ಬಳಸುವಷ್ಟು ಸೂಕ್ಷ್ಮಜ್ಞನಾದರೆ ಈತ ವಿಶಿಷ್ಟ ರೀತಿಯ ರಾಜಕಾರಣಿಯೇ ಸರಿ ಎಂದು ಅನ್ನಿಸಿತ್ತು.’  

ಇದಾದ ನಂತರದ ದಿನಗಳಲ್ಲಿ ತೇಜಸ್ವಿ-ಗೋಪಾಲಗೌಡರ ಗೆಳೆತನ ಬೆಳೆಯಿತು. ಸಮಾಜವಾದಿ ರಾಜಕಾರಣ ಚಿಂತನೆಗಳ ಸಂಗದಲ್ಲಿ ತೇಜಸ್ವಿಯವರ ಬರವಣಿಗೆಯ ದಿಕ್ಕು ಬದಲಾಯಿತು. ‘ಅಬಚೂರಿನ ಪೋಸ್ಟಾಫೀಸು’ ಕಥಾ ಸಂಕನಲಕ್ಕೆ ಬರೆದ ‘ಹೊಸ ದಿಗಂತದೆಡೆಗೆ’ ಎಂಬ ಮುನ್ನುಡಿಯಲ್ಲಿ ಸ್ವತಃ ತೇಜಸ್ವಿ ಈ ಕುರಿತು ಬರೆದದ್ದು ಈಗ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಚಿರಪರಿಚಿತ. ಇದೇ ರೀತಿ ಲಂಕೇಶ್ ಶಿವಮೊಗ್ಗದಲ್ಲಿ ಇಂಗ್ಲಿಷ್ ಮೇಷ್ಟರಾಗಿದ್ದಾಗ ಗೋಪಾಲಗೌಡ ಹಾಗೂ ಸಮಾಜವಾದಿಗಳ ಸಂಗ ತಮ್ಮ ನೋಟವನ್ನು ಬದಲಿಸಿದ್ದನ್ನು ಕುರಿತು ತಮ್ಮ ಆತ್ಮಚರಿತ್ರೆ `ಹುಳಿಮಾವಿನಮರ’ದಲ್ಲಿ ಬರೆಯುತ್ತಾರೆ:

‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು, ರೈತರು, ಕಾರ್ಮಿಕರು ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗೆನ್ನಿಸುತ್ತದೆ.’ 

ವ್ಯಕ್ತಿಯ ಅಸ್ವಸ್ಥತೆಗಳನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಿದ್ದ ಲಂಕೇಶರ ಕಥಾಲೋಕ ವ್ಯಕ್ತಿಯ ಮೂಲಕವೇ ಸಮಾಜಪರೀಕ್ಷೆಯತ್ತ ವ್ಯಾಪಕವಾಗಿ ಹೊರಳಿಕೊಂಡ ಘಟ್ಟ ಇದು. ಅದಕ್ಕೆ ಗೋಪಾಲಗೌಡರ ಸಂಗ ಕೂಡ ಕಾರಣವಾಗಿತ್ತು. 

ಗೋಪಾಲಗೌಡರು ಅವತ್ತು ಲೇಖಕರನ್ನು ಅಷ್ಟು ಹಚ್ಚಿಕೊಳ್ಳಲು ಕಾರಣವಿತ್ತು: ರಾಜಕಾರಣಿಗಳ ಪತನವನ್ನು ಕಂಡಿದ್ದ ಗೋಪಾಲಗೌಡರಿಗೆ ಸಾಹಿತಿಗಳ ಸಾಮಾಜಿಕ ಜವಾಬ್ದಾರಿಯ ಬಗ್ಗೆ, ಸಾಹಿತ್ಯ ಹಾಗೂ ಸಾಹಿತಿಗಳು ಜನರ ಮೇಲೆ ಬೀರಬಲ್ಲ ಪ್ರಭಾವದ ಬಗೆಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಗೋಪಾಲಗೌಡರೇ ಸ್ವತಃ ಹಾಡಿ ಮಂಡಿಸುತ್ತಿದ್ದ ಕುಮಾರವ್ಯಾಸ ಭಾರತದ ಜೊತೆಗೆ ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯಗಳ ಪರಿಚಯವೂ ಅವರಿಗಿತ್ತು. ಸಾಹಿತ್ಯದ, ಸಾಹಿತಿಗಳ ಪ್ರಭಾವದ ಬಗ್ಗೆ ಗೋಪಾಲಗೌಡರಿಗೆ ಇದ್ದ ನಿರೀಕ್ಷೆ ಕಾದಂಬರಿಕಾರ ತರಾಸು ಜೊತೆ ಅವರು ನಡೆಸಿದ ಒಂದು ಗಂಭೀರ ತಾತ್ವಿಕ ಚಕಮಕಿಯಲ್ಲಿ ವ್ಯಕ್ತವಾಗುತ್ತದೆ. ಈ ಚಕಮಕಿ ಕುರಿತು ತರಾಸು ಬರೆಯುತ್ತಾರೆ: 

‘ಗತಿಸಿದ ಮೈಸೂರು ಮಹಾರಾಜರ ಕಲಾಪ್ರಜ್ಞೆಯ ಬಗ್ಗೆ ನಾನು ಮಾತಾಡುತ್ತಿದ್ದೆ. ನಾನು ಈ ಮಾತಾಡುತ್ತಿರುವಾಗ ಗೋಪಾಲಗೌಡರು ಪಿ. ಕಾಳಿಂಗರಾಯರೊಡನೆ ಅಲ್ಲಿಗೆ ಬಂದರು. ರಾಜಶಾಹಿ ಎಂದರೆ ಗೋಪಾಲಗೌಡರ ರಕ್ತ ಕುದಿಯುತ್ತಿತ್ತು. ಅಂಥವರಿಗೆ ನಾನು ಮಹಾರಾಜರ ಬಗ್ಗೆ ಮೆಚ್ಚಿಗೆಯ ಮಾತಾಡಿದ್ದನ್ನು ಕೇಳಿ ವಿಪರೀತ ಸಿಟ್ಟು ಬಂತು. ಎಲ್ಲ ಹಂಗು ಬಿಟ್ಟು ನನ್ನನ್ನು ಮೂದಲಿಸಿದರು. ‘ನೀನೊಬ್ಬ ಹಿಪೋಕ್ರೇಟ್’ ಎನ್ನುವವರೆಗೂ ಮಾತು ಬೆಳೆಯಿತು. ಕೈ ಕೈ ಕಲೆಯಬೇಕಾಗಿತ್ತು. ಮಧ್ಯದ ಸ್ನೇಹಿತರ ಪ್ರಯತ್ನದಿಂದ ಅದು ತಪ್ಪಿ, ನನ್ನ ಮೇಲೆ ಕೋಪ ಮಾಡಿಕೊಂಡೇ ಗೋಪಾಲಗೌಡರು ಶಾಸಕರ ಭವನಕ್ಕೆ ಹೋದರು...’  

ಗೋಪಾಲಗೌಡರು ಮಾರನೆಯ ದಿನ ಬೆಳಗ್ಗೆಯೇ ತರಾಸು ಅವರನ್ನು ಹುಡುಕಿಕೊಂಡು ಬಂದರು. ‘ನಿನ್ನೆ ರಾತ್ರಿ ಆದದ್ದನ್ನು ಮರೆತುಬಿಡಿ’ ಎಂದು ತರಾಸುಗೆ ಹೇಳುತ್ತಲೇ ಗೋಪಾಲಗೌಡರು ಹೇಳಿದ ಅವರ ಆಳದ ಮಾತುಗಳು ಎಲ್ಲ ಕಾಲದ ಲೇಖಕ ಲೇಖಕಿಯರಿಗೂ, ಅಧ್ಯಾಪಕ ಅಧ್ಯಾಪಕಿಯರಿಗೂ ಅನ್ವಯವಾಗುವಂತಿವೆ: ‘ಮಾಮೂಲಿ ಜನ ಯಾರ ಬಗ್ಗೆ ಏನು ಮಾತಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಯೋಚನೆ ಇಲ್ಲ. ನೀವು ಸಾಹಿತಿಗಳು. ನಿಮ್ಮ ಮಾತಿಗೆ ಜನ ಬೆಲೆ ಕೊಡುತ್ತಾರೆ. ಹಾಗಿರುವಾಗ ಒಂದು ಕಡೆ ರಾಜಶಾಹಿಯ ವಿರುದ್ಧ ಮಾತನಾಡಿ, ಮತ್ತೊಂದು ಕಡೆ ರಾಜರನ್ನು ಹೊಗಳಿದರೆ ನಮ್ಮ ದಡ್ಡ ಜನ ನೀವು ಹೊಗಳಿದ್ದನ್ನು ಜ್ಞಾಪಕ ಇಟ್ಟುಕೊಳ್ಳುತ್ತಾರೆ. ಬೈದುದನ್ನು ಮರೆತುಬಿಡುತ್ತಾರೆ. ಆದ್ದರಿಂದ ಈ ಕೆಟ್ಟ ಪದ್ಧತಿಗಳ ಬಗ್ಗೆ ನೀವು ಯಾವತ್ತೂ ಒಳ್ಳೆಯ ಮಾತನ್ನು ಆಡಬಾರದು. ಸತ್ತ ಮೇಲಷ್ಟೇ ಅದಕ್ಕೆ ಬೊಜ್ಜ ಮಾಡಬೇಕು. ನೀವು ಸಾಹಿತಿಗಳು ಭಾರೀ ಅಪಾಯದ ಜನ; ಅಷ್ಟೇ ಹುಂಬತನವೂ ನಿಮ್ಮಲ್ಲಿದೆ. ಅದಕ್ಕೇ ನಿಮ್ಮನ್ನು ಕಂಡರೆ ನನಗೆ ಎಷ್ಟು ಪ್ರೀತಿಯೋ, ಅಷ್ಟೇ ಭಯ.’ 

ಗೋಪಾಲಗೌಡರಾಗಲೀ, ಅವರ ಗುರು ರಾಮಮನೋಹರ ಲೋಹಿಯಾ ಆಗಲೀ ಸಾಹಿತಿಗಳು ತಮ್ಮ ಪಕ್ಷದ ಅನುಯಾಯಿಗಳಾಗಬೇಕೆಂದಾಗಲೀ, ಪಕ್ಷದ ತುತ್ತೂರಿ ಊದಬೇಕೆಂದಾಗಲೀ ಎಂದೂ ಕೇಳಿದವರಲ್ಲ. ಲೋಹಿಯಾರಿಂದ ಪ್ರಭಾವಿತರಾದ ಖ್ಯಾತ ಮರಾಠಿ ಲೇಖಕ ಪು.ಲ. ದೇಶಪಾಂಡೆ ಈ ಕುರಿತು ಬರೆಯುವ ಮಾತು: ‘ಲೋಹಿಯಾರ ರಾಜಕೀಯ ಪಕ್ಷದೊಡನೆ ನನಗೆ ಯಾವ ಸಂಬಂಧವೂ ಇರಲಿಲ್ಲ. ಅದು ಇರಬೇಕೆಂದು ಅವರು ತಪ್ಪಿಯೂ ಕೂಡ ಸೂಚಿಸಲಿಲ್ಲ. ಅವರ ಕಲಾಭಿರುಚಿ ಉನ್ನತ ಮಟ್ಟದ್ದಾಗಿತ್ತು. ಆದ್ದರಿಂದ ಕಲಾವಿದರನ್ನು ಪಕ್ಷದ ಕಿನ್ನರಿ ಬಾರಿಸಲು ಹಚ್ಚುವ ಕಲಾಹೀನ ವಿಚಾರ ಅವರ ಮನಸ್ಸನ್ನು ಸೋಕುವುದೂ ಸಾಧ್ಯವಿರಲಿಲ್ಲ.’

ಇಪ್ಪತ್ತನೆಯ ಶತಮಾನದ ಅರವತ್ತರ ದಶಕದ ಹೊತ್ತಿಗಾಗಲೇ ಲೋಹಿಯಾ ದೇಶದ ಮಹತ್ವದ ಚಿಂತಕರಾಗಿ, ಧೀಮಂತ ವಿರೋಧಿ ನಾಯಕರಾಗಿ ರೂಪುಗೊಂಡಿದ್ದರು. ಸಾಮಾಜಿಕ-ರಾಜಕೀಯ ಕಾಳಜಿಗಳ ಚಿಂತಕರು, ಪತ್ರಕರ್ತರು, ಕಲಾವಿದರು, ಲೇಖಕ ಲೇಖಕಿಯರು, ಹೊಸ ತಲೆಮಾರಿನ ರಾಜಕಾರಣಿಗಳು ಲೋಹಿಯಾರ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದರು. ಆಗ ಲೋಹಿಯಾರತ್ತ ತಿರುಗಿದ ಆ ಕಾಲದ ಬಹುಮುಖ್ಯ ಸೃಜನಶೀಲ ಲೇಖಕರಿದ್ದಾರೆ: ಧರ್ಮವೀರ ಭಾರತಿ, ಶ್ರೀಕಾಂತ ವರ್ಮ, ಪು. ಲ. ದೇಶಪಾಂಡೆ, ತೇಜಸ್ವಿ, ಲಂಕೇಶ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಲೋಹಿಯಾ ವಿವರಿಸುತ್ತಿದ್ದ ಭಾರತೀಯ ಸಮಾಜವಾದದ ಮಾದರಿ ಹಾಗೂ ಬರಹಗಾರರ ಸ್ವಾತಂತ್ರ್ಯದ ಬಗ್ಗೆ ಲೋಹಿಯಾಗಿದ್ದ ಗೌರವ, ನಂಬಿಕೆ; ಲೋಹಿಯಾರ ಸಮಾನತಾವಾದಿ ರಾಜಕಾರಣ, ಉದಾರವಾದಿ ನೋಟ; ಹಾಗೂ ಸಂಸ್ಕೃತಿ, ಸಮಾಜಗಳ ಹೊಸ ವ್ಯಾಖ್ಯಾನಗಳು ಅಂದಿನ ನೂರಾರು ಲೇಖಕ, ಲೇಖಕಿಯರನ್ನು ಅವರತ್ತ ಸೆಳೆದಂತಿದೆ. ಸ್ವತಃ ಲೋಹಿಯಾ ಗಂಭೀರ ಲೇಖಕರಾಗಿದ್ದುದು ಕೂಡ ಈ ಸೆಳೆತಕ್ಕೆ ಮತ್ತೊಂದು ಕಾರಣವಾಗಿತ್ತು.  

ಇಂಥ ಸಂಬಂಧದ ಪರಂಪರೆಯಿರುವ ದೇಶದಲ್ಲಿ ಇವತ್ತು ಇಡೀ ಭಾರತದಲ್ಲಿ ರಾಜಕಾರಣಿಗಳು ಇಷ್ಟೊಂದು ಅಸೂಕ್ಷ್ಮವಾಗಿ ಮಾತಾಡುತ್ತಿರುವ ರೀತಿಗೆ ತಂತಮ್ಮ ಭಾಷೆಯ ಶ್ರೇಷ್ಠ ಸಾಹಿತ್ಯದಲ್ಲಿ ಭಾಷೆ, ಚಿಂತನೆಗಳು ಬಳಕೆಯಾಗುವ ರೀತಿಯ ಬಗೆಗಿನ ಅವರ ಸಂಪೂರ್ಣ ಅಜ್ಞಾನ ಕೂಡ ಒಂದು ಕಾರಣವಿರಬಹುದು, ಅಲ್ಲವೆ?

ಇಷ್ಟಾಗಿಯೂ, ಈ ಸತ್ಯ ರಾಜಕಾರಣಿಗಳಿಗಷ್ಟೇ ಅನ್ವಯಿಸುತ್ತದೆ ಎಂದು ಪ್ರಲಾಪಿಸಲಾಗದು. ಗಂಭೀರ ಸಾಹಿತ್ಯದ ಸಂಪರ್ಕ ಕಳೆದುಕೊಂಡು ಜಡರಾಗತೊಡಗುವ ಲೇಖಕ ಲೇಖಕಿಯರು, ಅಧ್ಯಾಪಕ ಅಧ್ಯಾಪಕಿಯರು, ಪತ್ರಕರ್ತರು, ಲಾಯರುಗಳು, ಕಲಾವಿದರು ಎಲ್ಲರಿಗೂ ಈ ಸತ್ಯ ಅನ್ವಯಿಸಬಲ್ಲದು. ಹಲವು ಬಗೆಯ ವೃತ್ತಿಗಳಲ್ಲಿ ತೊಡಗಿರುವ ಮಂದಿ ಸುಲಭ ಮನರಂಜನೆಯ ಮೊಬೈಲ್ ಬಿಟ್ಟು ಕೊನೇ ಪಕ್ಷ ರಾತ್ರಿ ಒಂದೇ ಒಂದು ಗಂಟೆ ಕಾಲ ಉತ್ತಮ ಸಾಹಿತ್ಯದ ಸಂಗದಲ್ಲಿದ್ದರೆ ಸಾಕು: ಅದು ಭಾಷೆ, ನಡವಳಿಕೆ, ಚಿಂತನೆಗಳ ಸೂಕ್ಷ್ಮತೆಗಳನ್ನು ಕಲಿಸಬಲ್ಲದು ಎಂಬುದರ ಬಗ್ಗೆ ಅನುಮಾನವಿರಬೇಕಾಗಿಲ್ಲ. ಈ ಸರಳ ಸತ್ಯವನ್ನು ಅನುಮಾನಿಸುವ ಸಿನಿಕತೆ, ವಿತಂಡವಾದಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ! 

Share on:

Comments

17 Comments



| ಹರಿಪ್ರಸಾದ್ ಬೇಸಾಯಿ

ಯಸ್ ಸಾ. ಯಸ್ ಸಾ


| Banjagere Jayaprakash

ಹೊಲಸು ಮಾತು, ತೂಕವಿಲ್ಲದ ನಡವಳಿಕೆ ತೋರುತ್ತಿರುವ ರಾಜಕಾರಣಿಗಳಿಗೆ ಒಳ್ಳೆ ಸಾಹಿತ್ಯದ ನಂಟಿದ್ದಿದ್ದರೆ ಖಂಡಿತ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಕರೆನ್ಸಿ ಹಾಳೆಗಳನ್ನು ಮಾತ್ರ ತಿರುವಿ ಹಾಕಿ ಗೊತ್ತಿರುವ ಇವರು ಪುಸ್ತಕದ ಹಾಳೆಗಳನ್ನು ತಿರುವಿ ಹಾಕುವಂತಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಊಹಿಸುವುದರಲ್ಲೇ ಒಂದು ಸುಖವಿದೆ


| Kaavya

Thank you. The article is very timely and exceptionally well-articulated. I truly appreciate the clarity and depth of your thoughts.


| Dr. Narasimhamurthy Halehatti

ಶಾಂತವೇರಿ ಗೋಪಾಲಗೌಡರ ನಿಷ್ಠುರತೆ, ಸರಳತೆ ಹಾಗೂ ನಾಡು-ನುಡಿಯ ಬಗೆಗಿನ ಕಾಳಜಿ ಎಲ್ಲ ಕಾಲಕ್ಕೂ ಮಾದರಿ. ಲೋಹಿಯಾರ ತತ್ವಚಿಂತನೆಯ ಪ್ರಭಾವದಿಂದಾಗಿ ಕನ್ನಡ ಸಾಹಿತ್ಯ ಹೊಸ ರೀತಿಯಲ್ಲಿ ಅಭಿವ್ಯಕ್ತಿ ಆಗಿದೆ. ಇಂಥ ಹೊಸ ವಿಚಾರಗಳನ್ನು ಓದುಗರಿಗೆ ದಾಟಿಸುತ್ತಿರುವ ನಿಮಗೆ ಅಭಿನಂದನೆಗಳು.


| ಜಯಶಂಕರ ಹಲಗೂರು

ಸದ್ಯದ ರಾಜಕಾರಣದ ಭಾಷೆ ಮತ್ತು ನಡವಳಿಕೆಯೊಳಗಿನ ಹೊಲಸುತನವನ್ನು ಸರಿಯಾಗಿಯೇ ಗಮನಿಸಿದ್ದೀರಿ. ಶಾಂತವೇರಿ ಗೋಪಾಲಗೌಡರು ನಿಧರರಾದಾಗ, ಮುಂದೆ ಸದನದಲ್ಲಿ ಅವರ ಗೈರುಹಾಜರಿಯನ್ನು ನೆನೆದು ಪರಿತಪಿಸುವ ಪುತಿನ ಅವರ ಸಾಲುಗಳು ನೆನಪಾದವು.


| Venkatesh murthy

ಲೋಹಿಯಾ, ಗೋಪಾಲ್ ಗೌಡ್ರು ಹಾಗೂ ಸಮಾಜವಾದ ಮತ್ತು ಸಂವೇದನಾಶೀಲ ಕನ್ನಡ ಲೇಖಕರ ಸಂವಾದ ಸಮಾಗಮ ಇವುಗಳಿಂದ 80ರ ಸಂದರ್ಭದವರೆಗೂ ಕರ್ನಾಟಕ ಬಹುಪಾಲುಆರೋಗ್ಯಕರವಾದ ಸಮಾಜ ವಾಗಿತ್ತು. ಈಗ ಈ ಸಂಬಂಧವಿದ್ದರೂ ರಾಜಕಾರಣಿ_ ಪುಡಾರಿ ರಾಜಕಾರಣಿಗಳ ಸಂಬಂಧವಾಗಿ ಬಿಟ್ಟಿದೆ. ಸಾಹಿತಿಗಳು ಮತ್ತು ಕೆಲವು ಅಧ್ಯಾಪಕರು ಪಕ್ಷದ ಚೇಲ ಗಳಂತೆ ವರ್ತಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಗಂಭೀರವಾದ ಓದು, ಮಾತು ,ಚರ್ಚೆ ,ವಿಚಾರ ಸಂಕಿರಣ ಗಳಂತೂ ಕೇಳುವ ಹಾಗೆ ಇಲ್ಲ.. ಈಗ ರಾಜಕಾರಣಿಗಳಿಗೆ ಮತ್ತು ಸಾಹಿತ್ಯ ವಿದ್ಯಾರ್ಥಿಗಳಿಗೆ ಮೋಟಿವೇಟ್ ಮಾಡುವಂತಹ ಲೇಖಕರು ಎಲ್ಲೋ ಬೆರಳೆಣಿಕೆಯಷ್ಟು ಮಾತ್ರ. ಆದ್ದರಿಂದ ಬಹುಪಾಲು ಎಲ್ಲಾ ವರ್ಗದವರು ಸತ್ಯಾಶ್ರಯ ಎಂದೇ ಭಾವಿಸಿರುವ ಮೊಬೈಲ್ ಮತ್ತು ಐಎ ಗಳಿಗೆ ದಾಸರಾಗಿರುವುದು.


| ತುಂಬಾಡಿ ರಾಮಯ್ಯ

ಎಂತಹ ಅಸೂಕ್ಷ್ಮವಾದ ಸಂದರ್ಭದಲ್ಲಿ ಎಷ್ಟು ಸೂಕ್ಷ್ಮ ವಿಷಯ ಪ್ರಸ್ಥಾಪಿಸಿರುವಿರಿ ಗುರುಗಳೇ. ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ ವ್ಯೆಕೆ ರಾಮಯ್ಯ ಅಧಿಕಾರಿಗಳನ್ನು ಕಂಡರೆ ಕೆಂಡದಂತೆ ಕೆನ್ನೆಗೆ ಭಾರಿಸುವಷ್ಟು ಕಠಿಣವಾಗುತ್ತಿದ್ದರು. ಸಾಹಿತ್ಯ ಓದಿನ ಜನರ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳನ್ನು ಹತ್ತಿರಕ್ಕೆ ಕರೆದು ಬೆನ್ನುತಟ್ಟುತಿದ್ದರು ಕುವೆಂಪು ಬಗ್ಗೆ ಹೆಚ್ಚು ತಿಳಿದಿದ್ದ ಅವರು ಇಂತಹ ಗೊಟ್ಟುಗಾಲದಲ್ಲಿ ಇರಬೇಕಿತ್ತು ಅನಿಸುವಂಟಾಯಿತು ನಿಮ್ಮಲೇಖನ ಓದಿ ನಮಸ್ಕಾರ


| DEVINDRAPPA

ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು ಇಂತಹ ಅನೇಕ ಅಸಂಬದ್ಧ ಪದಗಳನ್ನು ಬಳಸಿದ ಕಾರಣ. ಒಂದು ಕಾಲಕ್ಕೆ ವಿಧಾನಸಭಾದಲ್ಲಿ ನಡೆಯುವ ಚರ್ಚೆಗಳು ಇಡೀ ನಾಡಿನ ಏಳ್ಗೆಗೆ ಪೂರಕವಾಗಿರುತ್ತಿದ್ದವು. ಆದರೆ ಇಂದು ಅಲ್ಲಿ ಚರ್ಚೆಗಿಂತ ಅನಗತ್ಯ ವಾದವೇ ಹೆಚ್ಚಾಗಿದೆ. ಏನಾದರೂ ಮಾತನಾಡಿ ನಂತರ ನನ್ನ ಮಾತನ್ನು ತಿರುಚಲಾಗಿದೆ ಎನ್ನುವ ಸಮಜಾಯಿಷಿ ಬೇರೆ ನೀಡುತ್ತಾರೆ. ಅಲ್ಲದೆ ಅವರು ಬಳಸಿದ ಪದವನು ಕಡತದಿಂದ ತೆಗೆದು ಹಾಕಲಾಗಿದೆ ಎಂದು ಹೇಳುತ್ತಾರೆ. ಜನಪ್ರತಿನಿಧಿಗಳಿಗೆ ತಾವು ಏನು ಮಾತನಾಡುತ್ತಿದ್ದೇವೆ ಎನ್ನುವುದೇ ಗೊತ್ತಿಲ್ಲ. ಮಾತಿನ ಬಗ್ಗೆ ನಮ್ಮ ಜನಪದರಲ್ಲಿ ಅತ್ಯಂತ ಗೌರವವಿದೆ. ಮಾತಿನೊಳಗ ಮಾತಿಲ್ಲದವನ ಮೋತಿ ನೋಡಬಾರದು ಎಂಬುದು ಅವರು ಪಾಲಿಸಿಕೊಂಡು ಬಂದಿರುವ ಜೀವನ ತತ್ವ. ಆದರೆ ರಾಜಕಾರಣಿಗಳಿಗೆ ಇವು ಯಾವುವು ಅನ್ವಯಿಸಿಲ್ಲ. ಕಳೆದ ಎರಡು ದಶಕದ ರಾಜಕಾರಣವನ್ನು ಗಮನಿಸಿದರೆ ನಮ್ಮ ರಾಜಕಾರಣಿಗಳ ಭಾಷೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಸಿಗುತ್ತದೆ. ಇಂದಿನ ಸಂದರ್ಭದಲ್ಲಿ ರಾಜಕೀಯ ನಾಯಕರು ಸಾಹಿತ್ಯದ ಒಡನಾಟವನ್ನು ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ದೇವರಾಜ ಅರಸು ಅಂತಹವರು ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದಿರುವ ಉದಾಹರಣೆಗಳಿವೆ. ಅವರ ನಂತರದ ಪೀಳಿಗೆಯ ನಾಯಕರು ಇದನ್ನು ಅನುಸರಿಸಿ ಉತ್ತಮ ಆಡಳಿತ, ಮಾನವೀಯ ಮೌಲ್ಯಗಳನ್ನು ಹೊಂದಿದ್ದರು. ಆದರೆ ಇಂದಿನವರಿಗೆ ಮೊಬೈಲ್ ನಲ್ಲಿ ಬರುವ ರೀಲ್ಸ್ ಗಳನ್ನು ನೋಡುವುದೇ ಹೆಮ್ಮೆಯ ವಿಷಯವಾಗಿದೆ. ಇನ್ನೂ ಬಳಸುವ ಭಾಷೆಯ ಮೇಲೆ ಅವರಿಗೆಲ್ಲಿ ಹಿಡಿತ ಬಂದಿತು. ಅಲ್ಲಮ ಇವರನ್ನು ಕಂಡು ' ಭಾಷೆಯೆಂಬುದು ಪ್ರಾಣಾಘಾತಕ ' ಎಂದು ಹೇಳಿದ್ದು.


| Venkatesh murthy

, ಸಾಹಿತ್ಯಮತ್ತು ರಾಜಕಾರಣ ಇವುಗಳ ನಡುವಿನ ಸಂಬಂಧ, ಸಮನ್ವಯತೆ, ಪರಸ್ಪರ ಸೂಕ್ಷ್ಮ ಬಗೆಯ ವೈರುಧ್ಯ ಸಂವಾದಗಳು ಪಂಪನ ಕಾಲದಿಂದ ಈಚಿನ 80ರ ದಶಕದವರೆಗೂ ಆರೋಗ್ಯಕರವಾಗಿತ್ತು ಒಬ್ಬರು ಮತ್ತೊಬ್ಬರ ಮಾತುಗಳನ್ನ ಕೇಳುತ್ತಿದ್ದರು. ಆಗಾಗ ರಾಜಕಾರಣಿಗಳಿಗೆ ಕಿವಿ ಹಿಂಡುವ ಕೆಲಸವನ್ನು ಸಾಹಿತಿಗಳು ಮಾಡಿದ್ದಾರೆ. ಆದರೆ ಇತ್ತೀಚಿಗಂತೂ ಪಕ್ಷಪಾತಿ ಓಲೆ ಕೆ ರಾಜಕಾರಣ ಮಾಡಿಕೊಂಡು ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಬಹು ಪಾಲು ಲೇಖಕ ವರ್ಗ ಮುಳುಗಿ ಹೋಗಿದೆ. ಗಂಭೀರವಾಗಿ ಓದಿಕೊಂಡು ಸಂವೇದನಶೀಲತೆಯಿಂದ ಮಾತನಾಡಿದರೆ ಕೇಳಿಸಿಕೊಳ್ಳುವ, ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಕೆಲವೇ ಕೆಲವು. ರಾಶಿ ರಾಶಿ ಪುಸ್ತಕಗಳ ನಡುವೆ ಬಚ್ಚಿಟ್ಟುಕೊಂಡು ಮೊಬೈಲ್ ನಲ್ಲಿ ಮುಳುಗಿ ಹೋಗಿರುವ ಓದುಗರೆ ಹೆಚ್ಚು


| Shamarao

ಸಾಹಿತ್ಯ ಕಲೆಗಳ ಸಾಂಗತ್ಯವಿದ್ದಷ್ಟೂ ಮನುಷ್ಯ ಮತ್ತಷ್ಟು ಮನುಷ್ಯನಾಗುತ್ತಾನೆಂಬ ಮಾತನ್ನು ನಿಜ ಮಾಡಿದ್ದೀರಿ.ನಮ್ಮರಾಜಕಾರಣಿಗಳ್ಯಾರು ದಶಕಗಳಿಂದ ಪುಸ್ತಕಗಳನ್ನು ಓದಿದಂತಿಲ್ಲ!ಆದರೆ ಡಿಂಡಿಮ ಬಾರಿಸುವ ಸಾಹಿತಿಗಳ ಸಂಸರ್ಗದಲ್ಲಂತೂ ಇರುತ್ತಾರೆ.ಇನ್ನು ನಮ್ಮ ಮಂಕಿ ಬಾತ್ ನಲ್ಲಿ ಎಂದೂ ಸಾಹಿತ್ಯದ ಹೆಸರು ಕೇಳಿದಂತಿಲ್ಲ!


| Murthy

ಇತ್ತೀಚೆಗೆ ನಡೆದ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಾವು ಪುಸ್ತಕ ಮಳಿಗೆ ಇಟ್ಟಿದ್ದೆವು. ಆ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಮಧುಗಿರಿ ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಎಲ್ಲ ಮಳಿಗೆಗಳಿಗೂ ಭೇಟಿ ಕೊಡುವಾಗ, ನಮ್ಮ ಮಳಿಗೆಗೂ ಬಂದು ನಿಮ್ಮ 'ಶಾಂತವೇರಿ ಗೋಪಾಲಗೌಡ' ಪುಸ್ತಕವನ್ನು ನೋಡಿ, ಖರೀದಿಸಿದರು.


| Azeempasha

Professor Nataraj Sir, your article touched me stating that there was a day when politicians bent towards non-political writers but today writers not only bent towards half -naked-politicians but they are sold for awards and chairs. (No doubt there are some exceptional writers- neither bent nor meant for crooked politics and politicians.) It can be witnessed that some writers changed their writings no sooner did the other political parties come to power. One who had never dared to speak about Ambedkar in the previous government can start writing about him in next other party government! If asked, his or her answer could be that " I was making notes about Ambedkar in a closed door" . Sir your voice through words sparkles many for the debate and enlightens for new line thinking. Materially, writers die poor but making others 𝙍𝙞𝙘𝙝. Banjagere Jayaprakash, Narasimha, Devendrappa, Venkatesh Murthy, Shamarao and others enhanced the quality of contribution for debate on this topic. Words of Banjagere Jayaprakash caught my eyes before reading this article. Thank you professor.


| ಡಾ. ನಿರಂಜನ ಮೂರ್ತಿ ಬಿ ಎಂ

ಸಾಹಿತ್ಯ ಮತ್ತು ರಾಜಕಾರಣದ ನಡುವಿನ ಸಂಬಂಧದ ವಿಶ್ಲೇಷಣೆ ಸಮಂಜಸ ಮತ್ತು ಸಕಾಲಿಕ. ಸಮಾಜಮುಖೀ ಚಿಂತನೆಗಳನ್ನುಳ್ಳ ಸಾಹಿತ್ಯ-ಸಾಹಿತಿಗಳ ಮತ್ತು ಅದೇ ಸಮಾಜದ ಉದ್ಧಾರದ ಉದ್ದೇಶವುಳ್ಳ ರಾಜಕಾರಣ-ರಾಜಕಾರಣಿಗಳ ಸಂಬಂಧ ಯಾವತ್ತೂ ಚೆನ್ನಾಗಿರಲೇಬೇಕು. ಅವು ಪರಸ್ಪರ ಪೂರಕ. ಇಂತಹ ವಿಷಯವನ್ನು ಮತ್ತೆ ನೆನಪಿಸಿದ ಹುಳಿಯಾರರಿಗೆ ನಮನಗಳು.


| ಸಂಗನಗೌಡ

ಸೂಕ್ಷ್ಮ ಬರೆಹ . ಇಂಥ ಕಾಲದಲ್ಲಿ ಎಲ್ಲಾ ಲೇಖಕರು ಈ ಬರೆಹ ಓದಲೇಬೇಕು. ಮುಖ್ಯವಾಗಿ ನಮ್ಮ ತಲೆಮಾರಿನ ಯುವ ಲೇಖಕರಂತೂ ಓದಲೇಬೇಕು..‌ಧನ್ಯವಾದಗಳು


| ಗುರು ಜಗಳೂರು

ಸರ, ಬಹಳ ಸೊಗಸಾದ ಲೇಖನ.ನಾನು ಬಹಳ ವರ್ಷಗಳಿಂದ ಸದನದ ಕಲಾಪಗಳನ್ನು ವೀಕ್ಷಿಸುವ ಅಭ್ಯಾಸ ಇಟ್ಟುಕೊಂಡಿದ್ದೇನೆ.ಯೂಟ್ಯೂಬ್ ನಿಂದ ಇನ್ನೂ ಅನುಕೂಲವಾಗಿದೆ.ಈಗಂತೂ ಸದನದ ಚರ್ಚೆಗಳು ಪಾತಾಳ ಕಂಡಿದೆ.ಸಾಹಿತ್ಯದ ಓದಿನಿಂದ ವಿಮುಖವಾಗಿರುವುದರಿಂದ ಈ ಸ್ಥಿತಿ ಇದೆ. ಪಕ್ಷಾತೀತವಾಗಿ ಹೇಳಬೇಕೆಂದರೆ ಕಾಂಗ್ರೇಸ್ ನಲ್ಲಿಯೇ ಸದನದಲ್ಲಿ ಉತ್ತಮವಾಗಿ ಮಾತನಾಡುವವರು ವಿರಳವಾಗಿದ್ದಾರೆ.ಇದರ ಬಗ್ಗೆ ಕಾಂಗ್ರೇಸ್ ಚಿಂತಿಸಲಿ. ಬಿಜೆಪಿಯಲ್ಲಿ ಸುನಿಲ್ ಕುಮಾರ್,ಸುರೇಶ್ ಕುಮಾರ್,ಮಾಧುಸ್ವಾಮಿ(ಈಗ ಸೋತಿದ್ದಾರೆ) ಚೆನ್ನಾಗಿ ಮಾತನಾಡುತ್ತಿದ್ದಾರೆ. ಮತದಾರರು ಸಹ ಚೆನ್ನಾಗಿ ಓದಿಕೊಂಡಿರುವ ವೈ ಎಸ್ ವಿ ದತ್ತರಂಥವರನ್ನು ಸೋಲಿಸಬಾರದು ಅಲ್ಲವೇ?


| Talya

ವಿಚಿತ್ರ ಪರಿಸ್ಥಿತಿಯಲ್ಲಿದ್ದೇವೆ, ಅಕ್ಷರದ ಅರಿವೇ ಇರದ ರಾಜಕಾರಣಿಗಳು ಅನೇಕರಿದ್ದಾರೆ, ಅವರ ಹೆಸರಿಗೆ ಡಾ. ಕೂಡ ಇರುತ್ತೆ. ಇದು ಅಚ್ಚರಿಯಲ್ಲವೇ, ಇಂಥವರಿಗೆ ಸಾಹಿತ್ಯ, ಸಾಹಿತಿಗಳು ಪಥ್ಯವಾಗುವುದು ಅಸಾಧ್ಯ, ಹೋಗಲಿ ಅವರು ಸಾಹಿತಿಗಳ ಸ್ನೇಹವನ್ನಾದರೂ ಬಯಸುತ್ತಾರೆಂದರೆ ಅದೂ ಸೊನ್ನೆ quite pathetic,


| ಡಾ. ಕಿಶೋರ್ ಚಿಂತಾಮಣಿ

ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯ ಮತ್ತು ರಾಜಕಾರಣದ ನಡುವಿನ ಸಂಬಂಧದ ಸ್ವರೂಪ ಬೌದ್ಧಿಕ ನೆಲೆಯಿಂದ ಭೌತಿಕ ನೆಲೆಗೆ ಸ್ಥಿತ್ಯಂತರಗೊಂಡಿದೆ ಹೀಗಾಗಿಯೇ ರಾಜಕಾರಣಿಗಳು ಸಮಕಾಲೀನ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅನಿಸುತ್ತದೆ ಸರ್.




Add Comment


Mundana Kathana Nataka

YouTube






Recent Posts

Latest Blogs