ಹೋಮ ಹವನದ ಹೊಗೆ ನಡುವೆ

ನಾವೆಲ್ಲ ಹೈಸ್ಕೂಲ್ ಬಿಟ್ಟು ಕಾಲೇಜಿಗೆ ಹೊರಡುತ್ತಿದ್ದ ಕಾಲದಲ್ಲಿ ಅಬ್ರಹಾಂ ಕೊವೂರ್ ಎಂಬ ಹೆಸರು ನಮ್ಮ ಕಿವಿಯ ಮೇಲೆ ಬೀಳತೊಡಗಿತ್ತು. ಕೊಂಚ ಕಣ್ಣು ಬಿಟ್ಟ ಮೇಲೆ ಪ್ರೊಫೆಸರ್ ಅಬ್ರಹಾಂ ಕೊವೂರ್ ಶ್ರೀಲಂಕಾದ ಖ್ಯಾತ ವಿಚಾರವಾದಿ ಎಂಬುದು ತಿಳಿಯಿತು. ಅವರನ್ನು ಸಮಾಜವಾದಿ ಯುವಜನಸಭಾದ ನಾಯಕ ಎಂ.ಡಿ. ನಂಜುಡಸ್ವಾಮಿ ಕರ್ನಾಟಕಕ್ಕೂ ಆಹ್ವಾನಿಸಿದರು. ವಿಚಾರವಾದ, ವೈಚಾರಿಕತೆಗಳನ್ನು ಹಬ್ಬಿಸುತ್ತಾ, ಪವಾಡ ಪುರುಷರ ಮೋಸಗಳನ್ನು ಬಯಲು ಮಾಡುತ್ತಿದ್ದ ಕೋವೂರರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಎಂ.ಡಿ.ಎನ್. ಹೊಸ ತಲೆಮಾರಿನ ಹುಡುಗರನ್ನು ವಿಚಾರವಂತರನ್ನಾಗಿ ಮಾಡುತ್ತಿದ್ದರು. ಅವುಗಳಲ್ಲಿ ಭಾಗಿಯಾಗುತ್ತಿದ್ದ ಕವಿ ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್ ಥರದವರು ಈ ಕುರಿತು ಮುಂದೆ ನಮ್ಮಂಥವರಿಗೆ ಹೇಳುತ್ತಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಎಚ್. ನರಸಿಂಹಯ್ಯನವರು ಕರ್ನಾಟಕದಲ್ಲಿ ಅಬ್ರಹಾಂ ಕೊವೂರರ ಭಾಷಣಗಳನ್ನು, ಪವಾಡ ಬಯಲು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ತೇಜಸ್ವಿ, ಲಂಕೇಶ್ ಥರದವರ ವೈಚಾರಿಕ ಪ್ರಜ್ಞೆ ಕೂಡ ಈ ಕಾಲದ ಈ ಚಟುವಟಿಕೆಗಳಲ್ಲಿ ರೂಪುಗೊಂಡಿತು. ಈ ವೈಚಾರಿಕ ಪರಂಪರೆಯನ್ನು ಬೆಳೆಸಿದ ಕೆ. ರಾಮದಾಸ್, ಬರಗೂರು ರಾಮಚಂದ್ರಪ್ಪ, ಶ್ರೀಕಂಠ ಕೂಡಿಗೆ, ಎಸ್. ಎಸ್. ಹಿರೇಮಠ್ ಥರದ ಸಾವಿರಾರು ಮೇಷ್ಟರು ಕರ್ನಾಟಕದಲ್ಲಿದ್ದರು; ಈಗಲೂ ಅಂಥವರು ಇದ್ದಾರೆ. ಇಂಥ ನೂರಾರು ಹೆಸರುಗಳನ್ನು ನೀವು ನೆನಪಿಸಿಕೊಳ್ಳಬಹುದು. ದೂರದ ಸಣ್ಣ ಪುಟ್ಟ ಊರುಗಳಲ್ಲಿದ್ದ ನಮ್ಮಂಥ ಸಾವಿರಾರು ಹುಡುಗರು ಇದೆಲ್ಲದರಿಂದ ಸ್ಫೂರ್ತಿಗೊಂಡು ತಕ್ಕ ಮಟ್ಟಿನ ವಿಚಾರವಂತರೂ, ಲೇಖಕರೂ ಆದದ್ದು ಕೂಡ ಕರ್ನಾಟಕದಲ್ಲಿ ನಡೆಯುತ್ತಾ ಬಂದಿದೆ.
ಅಬ್ರಹಾಂ ಕೊವೂರ್ ಐವತ್ತು ವರ್ಷಗಳ ಕೆಳಗೆ ಜ್ಯೋತಿಷಿಗಳಿಗೆ ಹಾಕಿದ ಒಂದು ಸವಾಲು ಆಗ ಎಲ್ಲೆಡೆ ವೈಚಾರಿಕ ಕಂಪನವನ್ನೆಬ್ಬಿಸಿತು: 

ನಾವು ಒದಗಿಸುವ ಜಾತಕ ಅಥವಾ ಹಸ್ತರೇಖೆಯ ಮುದ್ರಿತ ಪ್ರತಿಯ ಆಧಾರದ ಮೇಲೆ ಜ್ಯೋತಿಷಿಗಳು ಎರಡು ಪ್ರಶ್ನೆಗಳಿಗೆ ಖಚಿತವಾದ ಉತ್ತರ ನೀಡಬೇಕು: 

೧.ಈ ವ್ಯಕ್ತಿ ಗಂಡೋ, ಹೆಣ್ಣೋ?
೨.ಈ ವ್ಯಕ್ತಿ ಬದುಕಿದ್ದಾರೋ? ತೀರಿಕೊಂಡಿದ್ದಾರೋ? 

ಈ ಅಂಶಗಳನ್ನು ನಿರ್ಣಯಿಸಿ ಹೇಳಲು ಜ್ಯೋತಿಷಿಗಳಿಗೆ ಹತ್ತು ಜಾತಕಗಳು ಹಾಗೂ ಹತ್ತು ಹಸ್ತರೇಖೆಗಳ ಮುದ್ರಿತ ಪ್ರತಿಗಳನ್ನು ಒಸಗಿಸಲಾಗುವುದು: ಇವುಗಳ ಜೊತೆಗೆ ಕೆಳಕಂಡ ವಿವರಗಳ ಆಧಾರಗಳನ್ನು ಕೂಡ ಒದಗಿಸಲಾಗುವುದು: 

೧. ಮಗು ಹುಟ್ಟಿದ ಖಚಿತ ನಿಮಿಷ.
೨.ಮಗು ಹುಟ್ಟಿದ ಸ್ಥಳ ಹಾಗೂ ಹುಟ್ಟಿದ ಸರಿಯಾದ ದಿಕ್ಕುಗಳ ವಿವರಗಳನ್ನು ಒದಗಿಸಲಾಗುವುದು.    

ಈ ಸವಾಲನ್ನು ಸ್ವೀಕರಿಸಿ ಸರಿಯಾದ ಉತ್ತರ ಹೇಳಿದವರಿಗೆ ೧೯೭೦ರ ದಶಕದಲ್ಲಿ ಕೊವೂರ್ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದರು. ಅಂದಿನ ಒಂದು ಲಕ್ಷ ರೂಪಾಯಿ ಇಂದಿನ ಎಷ್ಟು ಲಕ್ಷ ರೂಪಾಯಿಗೆ ಸಮ ಎಂಬುದನ್ನು ಅರ್ಥಶಾಸ್ತ್ರಜ್ಞರು ಲೆಕ್ಕ ಹಾಕಿ ಹೇಳಬೇಕು. ಕೊವೂರ್ ಈ ಬಹುಮಾನ ಘೋಷಿಸಿದಾಗ ಜ್ಯೋತಿಷಿಗಳಿಗೆ ಕೆಲವು ರಿಯಾಯಿತಿಗಳನ್ನೂ ಕೊಟ್ಟರು: ಈ ಬಹುಮಾನ ಪಡೆಯಲು ಜ್ಯೋತಿಷಿಗಳು ಸದರಿ ವ್ಯಕ್ತಿಗಳ ಭವಿಷ್ಯ ಕುರಿತು ಹೇಳಬೇಕಾಗಿಲ್ಲ; ಇವರಿಗೆ ಸಿಗಬಹುದಾದ ಪದವಿ, ಹುದ್ದೆ, ಮುಂದಿನ ಘಟನಾವಳಿಗಳ ಬಗ್ಗೆ ಏನೂ ಹೇಳಬೇಕಾಗಿಲ್ಲ. ಈ ಹತ್ತೂ ವ್ಯಕ್ತಿಗಳ ಬಗ್ಗೆ ಮೇಲೆ ಕೇಳಿದ ಎರಡು ವಿಷಯಗಳಿಗೆ ಉತ್ತರ ಕೊಟ್ಟರೆ ಸಾಕು. 

ಕೊವೂರ್ ೧೯೭೮ರಲ್ಲಿ ತೀರಿಕೊಂಡರು. ಅವರ ಜೀವಿತಕಾಲದಲ್ಲಿ ಹಾಗೂ ಅನಂತರವೂ ಯಾರೂ ಈ ಸವಾಲನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಇಂಡಿಯನ್ ರ‍್ಯಾಷನಲಿಸ್ಟ್ ಅಸೋಸಿಯೇಶನ್ ಈ ಸವಾಲನ್ನು, ಬಹುಮಾನವನ್ನು ಇವತ್ತಿಗೂ ಹಾಗೇ ಮುಂದುವರಿಸಿದೆ. ಇನ್ನೂ ಯಾರೂ ಬಹುಮಾನ ಪಡೆದಿಲ್ಲ. 

ಇದೆಲ್ಲವನ್ನೂ ಕಂಡುಂಡ ಕರ್ನಾಟಕದ ಈ ವೈಚಾರಿಕ ಯಗದಲ್ಲಿ ಮೂಡಿದ ಬಸವಲಿಂಗಪ್ಪನವರು ದಿಟ್ಟ ವಿಚಾರವಾದಿ ರಾಜಕಾರಣಿಯಾಗಿ ಆ ಮಾರ್ಗವನ್ನು ಸಮಾಜದಲ್ಲೂ ಹಬ್ಬಿಸಿದರು. ಕರ್ನಾಟಕದ ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲಗೌಡ, ಕೃಷ್ಣನ್, ಪಂಪಾಪತಿ, ಕೆ.ಎಚ್. ರಂಗನಾಥ್, ಎಂ.ಡಿ. ನಂಜುಂಡಸ್ವಾಮಿ ಥರದವರು; ವಿಧಾನ ಪರಿಷತ್ತಿನಲ್ಲಿ ಎಚ್. ನರಸಿಂಹಯ್ಯ, ಸಿದ್ಧಲಿಂಗಯ್ಯ, ಎಲ್ ಹನುಮಂತಯ್ಯ ಮೊದಲಾದ ಹಲವರು ಪ್ರಖರ ವೈಚಾರಿಕ ವಿಷಯಗಳನ್ನು ಮಂಡಿಸಿದ್ದಾರೆ. ಮೊನ್ನೆ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟ ಸಿದ್ಧರಾಮಯ್ಯನವರು ಕೂಡ ಬಹುತೇಕವಾಗಿ ಸಾರ್ವಜನಿಕ ಜೀವನದಲ್ಲಿ ವೈಚಾರಿಕ ಭಾಷೆಯನ್ನು ಬಳಸುತ್ತಲೇ ಬಂದಿದ್ದಾರೆ.     

ಇಂಥದೊಂದು ಕರ್ನಾಟಕ ಇರುವುದನ್ನೇ ಮರೆತಂತಿರುವ ಇಂದಿನ ನಾಯಕರಿಗೆ, ಸಾರ್ವಜನಿಕ ವ್ಯಕ್ತಿಗಳಿಗೆ ಇದನ್ನು ಮತ್ತೆ ಗಟ್ಟಿಯಾಗಿ ನೆನಪಿಸುವ ಕಾಲ ಈಗ ಇದ್ದಕ್ಕಿದ್ದಂತೆ ಬಂದಿದೆ: 
ಮೊನ್ನೆ ಕರ್ನಾಟಕದ ರಾಜಕಾರಣದಲ್ಲಿ ಕ್ಷಿಪ್ರ ಬದಲಾವಣೆಗಳು ನಡೆದ ದಿನ, ಹೊಸ ಮುಖ್ಯಮಂತ್ರಿಯ ಹೆಸರು ಪ್ರಕಟವಾಗುವ ಮುನ್ನ, ಬಂದ ವರದಿಗಳು ಹೀಗಿದ್ದವು: 

೧. ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಜಿ. ಪರಮೇಶ್ವರ್ ಹೋಮ-ಹವನ ಮುಗಿಸಿ ಮನೆಯಿಂದ ಹೊರ ಬಂದರು. 
೨. ಮುಖ್ಯಮಂತ್ರಿ ಪದವಿ ನಿಕ್ಕಿಯಾಗಿದ್ದ ಡಿ. ಕೆ. ಶಿವಕುಮಾರರ ದಿಕ್ಕು ದೆಸೆ ತಿರುಗುವ ಮೊದಲೇ ಅವರ ಪ್ರೈವೇಟ್ ರಾಜಗುರುಗಳು ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಬಾಗಿಲಿನ ದಿಕ್ಕು, ಕುರ್ಚಿಯ ದಿಕ್ಕುಗಳನ್ನು ಕ್ಷಿಪ್ರವಾಗಿ ತಿರುಗಿಸುತ್ತಿದ್ದರು.

ಡಾ. ಪರಮೇಶ್ವರ್ ಕೃಷಿ ವಿಜ್ಞಾನದಲ್ಲಿ ವಿದೇಶದಲ್ಲಿ ಡಾಕ್ಟರೇಟ್ ಪಡೆದವರು. ಡಿ.ಕೆ. ಶಿವಕುಮಾರ್ ಪೊಲಿಟಿಕಲ್ ಸೈನ್ಸ್ ಎಂ.ಎ. ಪದವಿ ಪಡೆದವರು ಎಂಬುದು ನೆನಪಾಗುತ್ತದೆ. ಮೈ ತುಂಬ ನಿಂಬೆ ಹಣ್ಣು, ಮಣಿಕಟ್ಟಿನ ತುಂಬ ಬಣ್ಣದ ದಾರಗಳನ್ನು ಕಟ್ಟಿಕೊಂಡವರ ಕುಟುಂಬದ ಮೇಲೆರಗಿದ ಭೀಕರ ‘ದುರಿತಗಳ ಬಲ್ಲುಲಿ’ (ಇದು ಕವಿ ಜನ್ನನ ಬಣ್ಣನೆ) ಹೇಳಿದವರು ಯಾರೂ ಇಲ್ಲ ಎಂಬ ವಾಸ್ತವ ಸತ್ಯ ನಮ್ಮ ಕಣ್ಣ ಮುಂದೇ ಇದೆ. ‘ವಾಸ್ತವ ಸ್ಥಿತಿ’ ಮರೆತು ‘ವಾಸ್ತು ಸ್ಥಿತಿ’ಗೆ ಆತುಕೊಳ್ಳುವವರು ಈ ಸತ್ಯಗಳನ್ನು ಕಣ್ಣು ಬಿಟ್ಟು ನೋಡಬೇಕು.

ಈ ಥರದ ‘ಧರ್ಮಕಾರಣ’ ಕಂಡ ಆಧುನಿಕ ಮನಸ್ಸಿನವರಿಗೆ ’ಭಯವೇ ಧರ್ಮದ ಮೂಲವಯ್ಯ’ ಎನ್ನಿಸಿದರೆ ಅಚ್ಚರಿಯಲ್ಲ. ಇಂದಿನ ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳು ಈ ಬಗೆಯ ಬಹಿರಂಗ ಸಂದೇಶ ಕೊಡುತ್ತಿರುವಾಗ ರಾಜ್ಯದ ಯಾವ್ಯಾವ ಥರದ ಕುರ್ಚಿ ಆಕಾಂಕ್ಷಿಗಳು ಯಾವ್ಯಾವ ಜೋತಿಷ್ಯ, ಹಲ್ಲಿ ಶಕುನ, ಗಿಳಿಶಾಸ್ತ್ರ, ಮಾಟ ಮಂತ್ರಗಳ ಮೊರೆ ಹೋಗುತ್ತಿರಬಹುದು ಎಂಬುದನ್ನು ನೀವೇ ಊಹಿಸಬಹುದು.  ಮೇಲೆ ಕೊಟ್ಟಿರುವ ಬಿಡಿ ಬಿಡಿ ಚಿತ್ರಗಳ ಅರ್ಥಗಳನ್ನು ಈ ಅಂಕಣದ ಓದುಗ ಓದುಗಿಯರಿಗೆ ಬಿಡಿಸಿ ಹೇಳಬೇಕಾಗಿಲ್ಲ.

ಇಂಥ ಕರ್ನಾಟಕದ ಎದುರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೇವಲ ಏಳೆಂಟು ವರ್ಷಗಳ ಕೆಳಗೆ ಎಂ.ಎ. ವಿದ್ಯಾರ್ಥಿನಿಯರು-ವಿದ್ಯಾರ್ಥಿಗಳು ಒಂದು ಸೂರ್ಯಗ್ರಹಣದ ದಿನ ನನ್ನ ಕ್ಲಾಸಿಗೆ ಬಂದಿದ್ದ ಗಳಿಗೆಯನ್ನು ಹೆಮ್ಮೆಯಿಂದ ನೆನೆಯುತ್ತೇನೆ. ಆ ಸಲ ಸೂರ್ಯಗ್ರಹಣದ ದಿನ ಜನ ಹೊರಗೆ ಸುಳಿಯಬಾರದೆಂದು ಕಂದಾಚಾರಿಗಳು ಭಾರೀ ಗಾಳಿ ಸುದ್ದಿ ಹಬ್ಬಿಸಿದ್ದರು. ಇದೇ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಹಲವು ಮೇಷ್ಟ್ರುಗಳು, ಮೇಡಂಗಳು ಕೂಡ ಅವತ್ತು ಹತ್ತು ಗಂಟೆಯ ಸುಮಾರಿಗೆ ಕ್ಯಾಂಪಸ್ಸಿಗೆ ಕಾಲಿಟ್ಟಿರಲಿಲ್ಲ! 

ಇವತ್ತು ಕ್ಲಾಸು ತಪ್ಪಿದರೂ ತಪ್ಪಬಹುದು ಎಂಬ ಒಳಾಸೆಯಿಂದಲೇ ಕನ್ನಡ ಅಧ್ಯಯನ ಕೇಂದ್ರದ ಕಾರಿಡಾರ್‌ಗೆ ಅಡಿಯಿಟ್ಟ ನನಗೆ ಹುಡುಗ ಹುಡುಗಿಯರು ಧಡ ಧಡ ಕ್ಲಾಸ್ ರೂಮಿನತ್ತ ಹೋಗುತ್ತಿದ್ದ ದೃಶ್ಯ ಕಂಡು ಬಂತು. ಅವತ್ತು ಕ್ಲಾಸಿಗೆ ಹೋಗಿ ಯಾವ ಪಾಠ ಮಾಡಿದೆ ಎಂಬುದು ಮರೆತು ಹೋಗಿದೆ. ಆದರೆ ಅವತ್ತು ನಿಜಕ್ಕೂ ಹೃದಯ ತುಂಬಿಬಂದು, ‘ನಿಮ್ಮ ಬಗ್ಗೆ ನನಗೆ ಅಪಾರ ಹೆಮ್ಮೆ ಅಭಿಮಾನ ಎನ್ನಿಸುತ್ತಿದೆ’ ಎಂದು ಆ ಹುಡುಗ ಹುಡುಗಿಯರಿಗೆ ಬಾಯ್ತುಂಬ ಹೇಳಿದ್ದು ಸ್ಪಷ್ಟವಾಗಿ ನೆನಪಿದೆ. ಆ ಪ್ರಾಮಾಣಿಕ ಮೆಚ್ಚುಗೆ ಅವರ  ವೈಚಾರಿಕ ನೋಟವನ್ನು ಇನ್ನಷ್ಟು ಗಟ್ಟಿಗೊಳಿಸಿರಬಹುದು ಎಂದು ನಂಬುವೆ.     

ಇದೇ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕೆಲವೇ ದಶಕಗಳ ಕೆಳಗೆ ಜಿ.ಎಸ್. ಶಿವರುದ್ರಪ್ಪ, ಸಿದ್ಧಲಿಂಗಯ್ಯ, ಡಿ. ಆರ್. ನಾಗರಾಜ್, ಬರಗೂರು ರಾಮಚಂದ್ರಪ್ಪ ಥರದವರು ಪಾಠ ಮಾಡಿದ್ದಕ್ಕೆ ಸಾಕ್ಷಿಯೆಂಬಂತೆ; ಗಂಭೀರವಾದ ಕನ್ನಡ ಸಾಹಿತ್ಯಾಧ್ಯಯನವೇ ಕಲಿಸಿದ ಸ್ಪಷ್ಟ ವೈಚಾರಿಕ ನೋಟಗಳಿಗೆ ಪುರಾವೆಯೆಂಬಂತೆ ಆ ಹೊಸ ಕಾಲದ ಹುಡುಗ ಹುಡುಗಿಯರ ಅವತ್ತಿನ ನಡೆಯಿತ್ತು. ಇದೇ ಅಧ್ಯಯನ ಕೇಂದ್ರದಲ್ಲಿ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳ ಹುಟ್ಟಿನ ಕಾಲದಲ್ಲಿ ನಡೆದ ತೀಕ್ಷ್ಣ ಚರ್ಚೆಗಳು ಸಾಹಿತ್ಯ ಕೃತಿಗಳ ಆಳವಾದ ವಿಶ್ಲೇಷಣೆಗಳು ಎಲ್ಲವೂ ಅಂತರಗಂಗೆಯಂತೆ ಅಲ್ಲಿ ಹರಿಯುತ್ತಲೇ ಇದ್ದಂತಿತ್ತು. ಇದೆಲ್ಲರ ಫಲವಾಗಿ ಮೂಡಿದ ಹೊಸ ಕಾಲದ ಗ್ರೂಪ್ ಫೋಟೋದಂತೆ ಅವತ್ತಿನ ಕ್ಲಾಸ್ ರೂಂ ಚಿತ್ರ ನನ್ನ ಚಿತ್ತದಲ್ಲಿ ನೆಲೆಸಿ ಹೆಮ್ಮೆ ಮೂಡಿಸುತ್ತಲೇ ಇರುತ್ತದೆ. 

ನಾನು ಇವತ್ತಿಗೂ ನಂಬಿಕೆಯಿಟ್ಟಿರುವುದು ಇಂಥ ಹೊಸ ತಲೆಮಾರುಗಳಲ್ಲಿ; ತಮ್ಮದೇ ರೀತಿಯಲ್ಲಿ ಕರ್ನಾಟಕದ ವೈಚಾರಿಕ ಪರಂಪರೆಯನ್ನು ಗಟ್ಟಿಗೊಳಿಸುವ, ಹೆಚ್ಚಿನ ಸ್ವಾರ್ಥವಿಲ್ಲದ ಹುಡುಗ ಹುಡುಗಿಯರ ತಂಡಗಳಲ್ಲಿ ಹಾಗೂ ಬಿಡಿ ಬಿಡಿ ವ್ಯಕ್ತಿಗಳಲ್ಲಿ. ‘ಹಸಿವು ಮುಕ್ತ ಕರ್ನಾಟಕ’ ದ ಕನಸು ‘ಹವನಯುಕ್ತ ಕರ್ನಾಟಕ’ದ ದುಸ್ವಪ್ನವಾಗದಂತೆ; ಈಗ ರಾಜ್ಯದಲ್ಲಿರುವ ‘ಗ್ಯಾರಂಟಿ’ ‘ಭಾಗ್ಯ’ಗಳ ಬದಲಿಗೆ ನಿಂಬೆಹಣ್ಣು, ಮಣಿಕಟ್ಟಿನ ದಾರಗಳ ಉಚಿತ ಭಾಗ್ಯದತ್ತ ಕರ್ನಾಟಕ ಹೊರಳುವ ಮುನ್ನ ಕನ್ನಡ ಹೊಸ ತಲೆಮಾರು ಖಚಿತ ದನಿ ಎತ್ತತೊಡಗಿದೆ. 

ಹೋಮ-ಹವನಗಳು ಎಬ್ಬಿಸುವ ಹೊಗೆಯಲ್ಲಿ ಬಡವರ, ನೊಂದವರ ಮುಖಗಳು ಕಣ್ಮರೆಯಾಗುತ್ತವೆ ಎಂಬ ಸರಳ ಸತ್ಯ ಈ ಹುಡುಗ ಹುಡುಗಿಯರಿಂದಲಾದರೂ ನಮ್ಮ ನಾಯಕರ ಮಬ್ಬುಗಣ್ಣುಗಳಿಗೆ ಕಾಣುವಂತಾಗಲಿ.

Share on:

Comments

19 Comments



| ಬಂಜಗೆರೆ ಜಯಪ್ರಕಾಶ

ವಿಚಾರವಾದಿ ಚಳವಳಿ ಬೆಳೆದು ಬಂದ ಹಾದಿಯ ನೆನಪು ಚೆನ್ನಾಗಿದೆ. ಆ ಸಮಯದಲ್ಲಿ ಪೆರಿಯಾರ್ ಅವರ ವಿಚಾರಗಳಿಂದ ಪ್ರೇರಣೆಗೊಂಡ ಚಿಂತಕರ ಚಾವಡಿ ಬೆಂಗಳೂರಿನಲ್ಲಿ ಕ್ರಿಯಾಶೀಲವಾಗಿತ್ತು. ಪೆರಿಯಾರ್ ಅವರನ್ನು ಬೆಂಗಳೂರಿಗೆ ಕರೆಸಿ ಭಾಷಣ ಏರ್ಪಡಿಸಿತ್ತು ಎಂದು ನೆನಪು. ೮೦ ರ ದಶಕದಲ್ಲಿ ಮೈಸೂರಿನಲ್ಲಿ ವಿಚಾರವಾದಿ ಒಕ್ಕೂಟ ಎನ್ನುವ ವೇದಿಕೆಯಿತ್ತು. ಕೆ. ರಾಮದಾಸ್, ಡಾ. ಎ. ರಾಮಲಿಂಗಂ, ಶಿವರಾಮು ಕಾಡನಕುಪ್ಪೆ, ಹಿ ಶಿ ರಾಮಚಂದ್ರೇಗೌಡ ಮುಂತಾದವರೆಲ್ಲ ಅದರ ಮುಂಚೂಣಿಯಲ್ಲಿದ್ದರು. ವಿಚಾರವಾದಿ ಅನ್ನಿಸಿಕೊಳ್ಳುವುದು ಆಗ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದ ನಮ್ಮ ಗೆಳೆಯರ ಗುಂಪಿಗೆ ಫ್ಯಾಶನ್ ಆಗಿತ್ತು. ಅದಕ್ಕೆ ಕುವೆಂಪು ಸಾಹಿತ್ಯಾಭಿಮಾನಿಗಳ ಬೆಂಬಲವೂ ಇತ್ತು. ಸರ್ಕಾರದ ಹೊಸ ಮುಂದಾಳುಗಳ ಹೋಮಾಗ್ನಿಯ ವ್ಯಸನವನ್ನು ಟೀಕಿಸಿ ಎಚ್ಚರಿಸಿರುವುದು ಸಕಾಲಿಕವಾಗಿದೆ.


| Subramanyaswamy Swamy

ಅಧಿಕಾರದ ಕುರ್ಚಿಯಲ್ಲಿ ಮತ್ತು ಅಧಿಕಾರದ ಕುರ್ಚಿಯಿಂದ ಎದ್ದಿರುವ ಈ ಹೋಮ ಹವನದ ಹೋಗೆ ಆರದಿದ್ದರೂ ಈ ಲೇಖನ ಸಮಾಜದ ಯುವ ಜನರಲ್ಲಿ ಜಾಗೃತಿ ಮೂಡಿಸಲು ಒಂದು ರೀತಿಯ ಪ್ರಯತ್ನ ಹಾಗೂ ಸಾಮಾಜಿಕ ಎಚ್ಚರ.


| Nataraj Huliyar Replies

Thank you Banjagere for your relevant details from history. I acknowledge you are one of those public intellectuals who have spread rational ideas relentlessly.


| Somashankara N

ಪರಂಪರೆ ಮತ್ತು ವರ್ತಮಾನದ ವೈರುಧ್ಯಗಳನ್ನು ವೈಚಾರಿಕತೆಯ ಹಿನ್ನೆಲೆಯಲ್ಲಿ ಲೇಖನ ಕಟ್ಟಿಕೊಟ್ಟಿದೆ. ಮೌಡ್ಯಾನುಸರಣೆ ದೇಶದ ಪ್ರಗತಿಯ ದೃಷ್ಟಿಯಿಂದ ಎಷ್ಟು ಅಪಾಯಕಾರಿಯೆಂಬ ವಿಚಾರಗಳನ್ನೂ ಲೇಖನ ಧ್ವನಿಸಿದೆ. ಹೀಗೆ ದ್ವನಿಸುತ್ತಲೇ, ಪಾರಂಪರಿಕ ಬುದ್ಧಿಜೀವಿಗಳ ವೈಚಾರಿಕ ಹೇಳಿಕೆಗಳು ಮತ್ತು ಅಂಥವರನ್ನು ಹಾಗೂ ಅಂಥವರ ಹೇಳಿಕೆಗಳನ್ನು ಬೆಂಬಲಿಸಿ ಒಳಗೊಳ್ಳುವಿಕೆಗಳು ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. you made me more sensible to come out of my unconscious bias. thank you so much sir.. "ಮೌಢ್ಯಾನುಕರಣ ಮರುಕಳಿಸದಿದ್ದರೆ ವ್ಯಸನ ಮುಕ್ತ ಸಮಾಜದ ನಿರ್ಮಾಣ ಸಾಧ್ಯ" ಎಂಬ ವಿಚಾರ ಲೇಖನದ ಹಿನ್ನೆಲೆಯಲ್ಲಿ ಬಲಗೊಳ್ಳುತ್ತದೆ.


| Dr. Rajaram

It was a pleasure reading Homa Havana🍀🌹


| Guruprasad Kantalagere

ಐದು ವರ್ಷದ ಅವದಿಗೆ ಆರಿಸಿ ಕಳುಹಿಸಿದ ಕನ್ನಡ ಜನತೆಗೆ ಮೂರು ವರ್ಷ ವೈಚಾರಿಕ ಗ್ಯಾರಂಟಿ, ಉಳಿದೆರೆಡು ವರ್ಷ ಮೌಡ್ಯ ಗ್ಯಾರಂಟಿ.


| ಮಂಜುನಾಥ್ ಸಿ ನೆಟ್ಕಲ್

ವೈಚಾರಿಕ ಕರ್ನಾಟಕವನ್ನು ಕಟ್ಟುತ್ತಿರುವ ಯುವ ಸಮೂಹ ಈ ಅವೈಜ್ಞಾನಿಕ ಅವೈಚಾರಿಕ ಮೌಢ್ಯವನ್ನು ದಿಟ್ಟವಾಗಿ ವಿರೋಧಿಸುತ್ತಾರೆ.... ಕುವೆಂಪು ತೋರಿಸಿದ ದಾರಿಯಲ್ಲಿ ನಮ್ಮ ಯುವ ಜನತೆ ಸಾಗುತ್ತಾರೆ ಎಂಬ ಭರವಸೆ ನನಗಿದೆ ಸರ್... ಆದರೂ ದುರ್ಬಲ ಮನಸ್ಸಿನವರು ಇವುಗಳಿಗೆ ಬಲಿಯಾಗದಂತೆ ಧೈರ್ಯ ಸ್ಥೈರ್ಯ ತುಂಬಿ ಈ ಮೂಢನಂಬಿಕೆ ಗಳತ್ತ ವಾಲದಂತೆ ಮೌಢ್ಯ ಕರ್ನಾಟಕ ಆಗದಂತೆ ತಡೆಗಟ್ಟಲು ಎಲ್ಲಾ ವಿಚಾರವಂತರು ಮತ್ತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಲೇ ಇರಬೇಕಾಗುತ್ತದೆ.


| Mahalingeshwar S.P. Parashuram

Sakalika. One of your fine articles. Before 1970, A N Murthy Rao, K Shivarama Karanth etc., propagated this in our Kannada literature. However, Politicians do not read this. Your article is commendable and an eye-opener.


| V Syeed

I read your column with interest highlighting the rationalist tradition in Karnataka.


| Nagaraj

🌹🌷


| Sanganagouda

ಲೇಖನ ಅರ್ಥಪೂರ್ಣವಾಗಿದೆ ಸರ್.


| Mahalingeshwar

Thought provoking


| Shamarao

ನೀವೇನೋ ತುಂಬಾ ಹೋಪ್ ಇಟ್ಟುಕೊಂಡಿದ್ದೀರಿ. ಆದರೆ ಸ್ವಯಂಭೂ ಅವತಾರ ಪುರುಷರೇ ದೇಶವಾಳುವಾಗ, ಪ್ರಮಾಣ ವಚನ ಸ್ವೀಕಾರ ವೇ ಅಜ್ಜಯ್ಯನ ಸನ್ನಿಧಿಯಲ್ಲಿ ನಡೆಯುವಾಗ....!


| Subhash

Nice article


| ಗುರು ಜಗಳೂರು

ಸರ್ ಈಗಿನ ಸನ್ನಿವೇಶದಲ್ಲಿ ಸ್ವಾಮಿಗಳು, ಜ್ಯೋತಿಷಿಗಳು ಸದನಕ್ಕೂ ಕಾಲಿಡಬಹುದು.ಅಷ್ಟರಮಟ್ಟಿಗೆ ಸಿದ್ದರಾಮಯ್ಯನವರು ಬುಡುಬುಡುಕೆ ದಾಸಯ್ಯಗಳನ್ನು ಇರಬೇಕಾದ ಜಾಗದಲ್ಲಿ ಇಟ್ಟಿದ್ದರು.ಪ್ರಥಮವಾಗಿ ಇದೆಲ್ಲವನ್ನು ಹುಟ್ಟುಹಾಕಿದ್ದೇ ಯಡಯೂರಪ್ಪ. ಮಠ ಮಾನ್ಯಗಳಿಗೆ ದುಡ್ಡಿನ ರುಚಿಯನ್ನು ಕಲಿಸಿದ್ದು ಅವರೇ. ಒಂದು ಇತ್ತೀಚಿನ ಡಿ.ಕೆ.ಶಿವಕುಮಾರರ ಹಳೇ ಸಂದರ್ಶನದಲ್ಲಿ ಎಸ್ ಎಂ ಕೃಷ್ಣರ ಜತೆಗಿನ ಬೀಗತನ ಹೇಗಾಯ್ತು ಎಂದರೆ ಅದು ಮುಂಚಯೇ ಹೀಗೆ ಆಗುತ್ತೆ ಯಾರೋ ಜ್ಯೋತಿಷಿಗಳು ಹೇಳಿದ್ದರಂತೆ.ಸಿದ್ದಾರ್ಥರ ಸಾವಿನ ನಂತರ ಬದಲಾದ ಅವರ ಮನಸ್ಥಿತಿಯನ್ನು ಯಾರು ಬೇಕಾದರೂ ಹೇಳಬಹುದಲ್ಲವೇ? ತಮ್ಮ ಅಧಿಕಾರದ ಬಲದಿಂದ ಅಪಾರ ಆಸ್ತಿ,ಹಣ ಸಂಪಾದಿಸಿರುವ ಈ ಮನುಷ್ಯನಿಗೆ ಹುದ್ದೆಗಿರಬೇಕಾದ ಕನಿಷ್ಟ ಮಾತಿನ ಸೂಕ್ಷ್ಮತೆಗಳು ಇಲ್ಲದಿರುವುದು ವಿಷಾದನೀಯ ಸಂಗತಿ.


| Vasantha

ಲೇಖನ ಪ್ರಸ್ತುತ ರಾಜಕಾರಣದ ಹಾದಿ ಎತ್ತ ಸಾಗುತ್ತಿದೆ.ಎಂಬುದರ ಮುನ್ನೋಟ


| ಸೋಮಶೇಖರ್ ಕದಿರೇಹಳ್ಳಿ

ನಂಬಿಕೆ ಎನ್ನುವ ಭಾವನಾತ್ಮಕ ಅಭಿಪ್ರಾಯ ಬೇರೆ, ಅದು ಇದ್ದರೆ ಅದು ಮಾತ್ರ ಮನೆಯ ಮನದ ಚೌಕಟ್ಟಿನ ಗಡಿಯೊಳಗೆ ಇರಬೇಕು, ಕೆಲವು ಪ್ರಸಿದ್ಧ ವ್ಯಕ್ತಿಗಳು ನಡೆಸುತ್ತಿರುವ ಆಚರಣೆ, ಅನುಕರಣೆಗಳನ್ನು ನೋಡಿ, ಭವಿಷ್ಯವನ್ನು ವಿಜ್ಞಾನದಂತೆ ಎಗ್ಗಿಲ್ಲದೆ ರೋಡಿಗೆ ತಂದು ಮಾರಾಟಮಾಡುತ್ತಿದ್ದಾರೆ, ಇದರ ಎಪೆಕ್ಟ್ ಹೇಗಿತ್ತು ಎಂದರೆ 'ನಿನ್ನ ಆಯುಸ್ಸು ಕಡಿಮೆ ಎಂದು ಹೇಳಿದ್ದಕ್ಕೆ ಮನೆಗೆ ಬಂದು ಹುಡಿಗಿಯೊಬ್ಬಳು ಆತ್ಮಹತ್ಯೆ, ಇವತ್ತಿಗೂ ಪೇಸ್ ಬುಕ್ ನಲ್ಲಿ ಕೆಲ ಭವಿಷ್ಯಧಾರಿ ಆಸಾಮಿಗಳು ಕೆಲವು ಡೇಟ್ ಗಳನ್ನು ಸ್ಕ್ರೀನ್‌ ಮೇಲೆ ಕೊಟ್ಟು ಈ ಡೇಟ್ ನವರಿಗೆ ಬೇಗ ಕೆಲವು ರೋಗಗಳು ಬರುತ್ತವೆ, ಪರಿಹಾರಕ್ಕಾಗಿ ಸಂಪರ್ಕಿಸಿ ಎಂದು ಜಾಹೀರಾತು ನೀಡುತ್ತಾರೆ,ಇಂತ ಸಮಾಜದಲ್ಲಿ ಬದುಕುತ್ತಿದ್ದೇವೆ, ಹೆಚ್ ನರಸಿಂಹಯ್ಯ ನವರಂತಹವರು ಇನ್ನು ಎಷ್ಟು ಜನ ಹೇಳಬೇಕು ಎನಿದುತ್ತದೆ,, ಸಮಾಜದ ಸೂಕ್ಷ್ಮ ಕಣ್ಣುಗಳು ಪ್ರಸಿದ್ದ ವ್ಯಕ್ತಿ ಗಳ ಮೇಲೆ ಸದಾ ಇರುತ್ತದೆ ಹಾಗಾಗಿ ಸಮಾಜದ ಐಕಾನ್ ಗಳು ಎಚ್ಚರದಿಂದ ನಡೆಯಬೇಕು, ಸಮಾಜವನ್ನು ಎಚ್ಚರಿಸುವ ಲೇಖನ ಸರ್ ಧನ್ಯವಾದಗಳು


| Somanna

ಲೇಖನ ಅತ್ಯಂತ ಸಮಯೋಚಿತವಾಗಿದೆ ಪ್ರಸ್ತುತ ರಾಜಕಾರಣಿಗಳ ಮನಸ್ಥಿತಿಯನ್ನು ಓದುಗರಿಗೆ ತಿಳಿಯಪಡಿಸುತ್ತೀರಿ. ಅಲ್ಲದೆ ಕರ್ನಾಟಕದ ವೈಚಾರಿಕ ಪರಂಪರೆಯ ಒಂದು ಸ್ಥೂಲ ನೋಟವೇ ತೆರೆದುಕೊಂಡಿದೆ. ಇದರಿಂದ ಎಷ್ಟೋ ಮನಸ್ಸುಗಳು ಹರಳುತ್ತವೆ. ನಮಸ್ಕಾರಗಳು ಸರ್ ಸೋಮಣ್ಣ ಹೊಂಗಳ್ಳಿ


| Ganesha t c

ಶ್ರೀ ನಟರಾಜ್ ಹುಳಿಯಾರ್ ಸರ್ ಅವರಿಗೆ ನಮಸ್ಕಾರ. ತಮ್ಮ ಲೇಖನಗಳನ್ನು ಓದುತ್ತೇನೆ. ನಿಮ್ಮ ಲೇಖನಗಳು ಯುವ ಜನತೆಗೆ ಎಚ್ಚರಿಸುವಲ್ಲಿ ಸಕಾಲಿಕವಾಗಿವೆ. ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮನ್ನು ಮಾತನಾಡಿಸಿದೆ. ವಿಚಾರಸಾಹಿತ್ಯ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ನನ್ನ ಬಳಿ ಸುಮಾರು 1000 ಕ್ಕೂ ಹೆಚ್ಚು ಪುಸ್ತಕಗಳಿವೆ. ನಮಸ್ಕಾರ




Add Comment


Mundana Kathana Nataka

YouTube






Recent Posts

Latest Blogs