ಆಗಸ್ಟ್ ಕ್ರಾಂತಿ ಮರೆತುಹೋಯಿತೆ?
by Nataraj Huliyar
ಈ ಅಂಕಣಕ್ಕೆ ಆರಂಭದ ಟಿಪ್ಪಣಿ ಮಾಡುತ್ತಿರುವ ದಿನ ಆಗಸ್ಟ್ ೮ನೆಯ ತಾರೀಕು. ‘ಆಗಸ್ಟ್ ಕ್ರಾಂತಿ ದಿನ.’ ಎಂಬತ್ತನಾಲ್ಕು ವರ್ಷಗಳ ಕೆಳಗೆ ೧೯೪೨ರ ಆಗಸ್ಟ್ ೮ರಂದು ಆರಂಭವಾದ ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಚಳುವಳಿಯ ನೆನಪಿನ ಆಚರಣೆಯ ದಿನ. ಮಾರನೆಯ ದಿನ ಆಗಸ್ಟ್ ೯. ಅಂದು ಜನತಾಕ್ರಾಂತಿಯ ಸಹಜ ಸ್ಫೋಟವಾಗಿತ್ತು.
ಭಾರತದ ಸ್ವಾತಂತ್ರ‍್ಯ ಚಳುವಳಿಯ ಉಜ್ವಲ ಘಟ್ಟವಾದ ‘ಆಗಸ್ಟ್ ಕ್ರಾಂತಿ’ಯ ಮಹತ್ವ ಹೊಸ ತಲೆಮಾರುಗಳಿಗಿರಲಿ, ನಮ್ಮ ಸಾರ್ವಜನಿಕ ವ್ಯಕ್ತಿಗಳಿಗೂ, ಆಗಸ್ಟ್ ಕ್ರಾಂತಿಯ ಮುಂಚೂಣಿಯಲ್ಲಿದ್ದ ಪಕ್ಷದ ಇಂದಿನ ವಾರಸುದಾರರಿಗೂ ಮರೆತುಹೋದಂತಿದೆ!
ಆಗಸ್ಟ್ ೮, ೧೯೪೨. ಆ ಸಂಜೆ ಗಾಂಧೀಜಿ ಬ್ರಿಟಿಷರಿಗೆ ‘ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಎಂಬ ಅಂತಿಮ ಎಚ್ಚರಿಕೆ ಕೊಟ್ಟರು. ಬಾಂಬೆಯ ಗ್ವಾಲಿಯರ್ ಕೆರೆ ಮೈದಾನದ ಸುತ್ತ ಕಾಯುತ್ತಿದ್ದ ಜನಸಮೂಹಕ್ಕೆ ‘ಡೂ ಆರ್ ಡೈ’ (ಮಾಡು ಇಲ್ಲವೇ ಮಡಿ) ಕರೆ ಕೊಟ್ಟರು. ದೇಶದುದ್ದಕ್ಕೂ ಮಿಂಚಿನ ಸಂಚಾರವಾಯಿತು. ಮಾರನೆಯ ಬೆಳಗಿಗೇ ಗಾಂಧೀಜಿ ಹಾಗೂ ಕಾಂಗ್ರೆಸ್ಸಿನ ಮುಂಚೂಣಿ ನಾಯಕರಾದ ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಝಾದ್ ಸೇರಿದಂತೆ ರಾಷ್ಟ್ರಾದ್ಯಂತ ಹಿರಿಯ, ಕಿರಿಯ ಚಳುವಳಿಯ ನಾಯಕರ ಬಂಧನವಾಯಿತು.
ಅವತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಸುತ್ತಮುತ್ತಲ ಸ್ವಾತಂತ್ರ‍್ಯ ಚಳುವಳಿಗಾರರು ಹೈಸ್ಕೂಲಿನ ಬಳಿ ಬಂದಾಗ, ಪರೀಕ್ಷೆಯನ್ನು ಅರ್ಧಕ್ಕೇ ಬಿಟ್ಟು ಹೊರ ಬಂದು, ಚಳುವಳಿಗಾರರ ಜೊತೆ ಸೇರಿಕೊಂಡ ಹುಡುಗರಲ್ಲಿ ಶಾಂತವೇರಿ ಗೋಪಾಲಗೌಡ ಎಂಬ ಹುಡುಗನೂ ಇದ್ದ. ಇಂಥ ಲಕ್ಷಾಂತರ ಹುಡುಗ, ಹುಡುಗಿಯರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಮುಂದೆ ಹೊಸ ರಾಜಕೀಯ ನಾಯಕ ನಾಯಕಿಯರಾಗಿ ಬೆಳೆದ ಅಪೂರ್ವ ಚರಿತ್ರೆಯನ್ನು ಭಾರತದ ಹೊಸ ತಲೆಮಾರುಗಳು ಎಂದೂ ಮರೆಯಬಾರದು. ಮೊನ್ನೆ ಸರ್ಕಾರದ ಭಕ್ತ ಲಾಯರೊಬ್ಬರು ಹದಿನೆಂಟು ವರ್ಷ ವಯಸ್ಸಿನೊಳಗಿನ ಹುಡುಗಿಯೊಬ್ಬಳನ್ನು ವಿದ್ಯಾರ್ಥಿ ಚಳುವಳಿಗೆ ಕರೆತಂದವರಾರು ಎಂಬ ಚಿಲ್ಲರೆ ‘ಲೀಗಲ್’ ಪ್ರಶ್ನೆಯನ್ನೆತ್ತಿ ಸರ್ಕಾರವನ್ನು ನೇವರಿಸಿದರು. ಇಂಥವರಿಗೆ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾರತದ ಸ್ವಾತಂತ್ರ‍್ಯ ಚಳುವಳಿಯಲ್ಲೂ ಭಾಗವಹಿಸಿದ್ದರು ಎಂಬ ಚರಿತ್ರೆಯ ವಿವರಗಳೇ ಅರಿವಿರಲಿಕ್ಕಿಲ್ಲ.
೯ ಆಗಸ್ಟ್ ೧೯೪೨. ರಾಷ್ಟ್ರ ನಾಯಕರ ಬಂಧನದಿಂದ ಸಿಟ್ಟಿಗೆದ್ದ ಜನ ತಂತಾವೇ ನಾಯಕರಾದರು. ತಮತಮಗೆ ತೋಚಿದಂತೆ ‘ಮಾಡು ಇಲ್ಲವೇ ಮಡಿ’ ಕರೆಯನ್ನು ಜಾರಿಗೊಳಿಸತೊಡಗಿದರು. ಪೊಲೀಸ್ ಠಾಣೆಗಳು, ಅಂಚೆ ಕಛೇರಿಗಳು, ಟೆಲಿಫೋನ್ ವೈರುಗಳು, ರೈಲ್ವೆ ಹಳಿಗಳು...ಮುಂತಾಗಿ ಸರ್ಕಾರಿ ಆಸ್ತಿಯನ್ನು ಧ್ವಂಸ ಮಾಡತೊಡಗಿದರು. ಕಾಂಗ್ರೆಸ್ಸಿನ ಮುಂಚೂಣಿ ನಾಯಕರು ಜೈಲಿನಲ್ಲಿರುವಾಗ ಸ್ವಾತಂತ್ರ‍್ಯ ಚಳುವಳಿಯನ್ನು ಬಗ್ಗು ಬಡಿಯುವುದು ಸುಲಭ ಎಂದು ಭ್ರಮಿಸಿದ್ದ ಬ್ರಿಟಿಷ್ ಆಡಳಿತ ಭಾರತೀಯ ಪೊಲೀಸರನ್ನೇ ಭಾರತೀಯ ಚಳುವಳಿಗಾರರ ಮೇಲೆ ಛೂಬಿಟ್ಟಿತು. ಜನರನ್ನು ಜೈಲಿಗಟ್ಟಿದ ಮೇಲೆ ಚಳುವಳಿಯ ಕತೆ ಮುಗಿಯಿತು ಎಂದುಕೊಂಡಿತ್ತು.
ಆದರೆ ‘ಆಗಸ್ಟ್ ಕ್ರಾಂತಿ’ ಅದೇ ಆಗ ಶುರುವಾಗಿತ್ತು!
೯ ಆಗಸ್ಟ್ ೧೯೪೨. ಆ ರಾತ್ರಿ ೩೨ ವರ್ಷದ ರಾಮಮನೋಹರ ಲೋಹಿಯಾ ಸಮಾಜವಾದಿ ಸಂಗಾತಿಗಳಾದ ಅಚ್ಯುತ್ ಪಟವರ್ಧನ್, ಅರುಣಾ ಅಸಫ್ ಆಲಿ, ಸುಚೇತಾ ಕೃಪಲಾನಿ ಮೊದಲಾದವರ ಜೊತೆಗೆ ಭೂಗತರಾದರು. ಈ ವಿವರಗಳೆಲ್ಲ ಚರಿತ್ರೆಯ ಪುಸ್ತಕಗಳಲ್ಲಿವೆ; ಆದರೆ ಲೋಹಿಯಾರ ಪುಟ್ಟ ತಂಡ ಕಾಂಗ್ರೆಸ್ ರೇಡಿಯೋ ಮೂಲಕ ಆಗಸ್ಟ್ ಕ್ರಾಂತಿಯ ಚೈತನ್ಯವನ್ನು ಕಾಯ್ದಿಟ್ಟುಕೊಂಡು ಚಳುವಳಿಯನ್ನು ಮುನ್ನಡೆಸಿದ ರೋಮಾಂಚಕಾರಿ ಸಾಹಸದ ವಿವರಗಳು ಹಿನ್ನೆಲೆಗೆ ಸರಿದುಬಿಟ್ಟಿವೆ; ‘ಡೂ ಆರ್ ಡೈ’ ಘೋಷಣೆ ರೂಪಿಸಿದವರು ಸೋಷಲಿಸ್ಟ್ ಯೂಸುಫ್ ಮೆಹರಾಲಿ ಎಂಬ ಸತ್ಯವೂ ಹುದುಗಿಹೋಗಿದೆ!
ಆ ಕಾಲದ ಸಾವಿರಾರು ಸಾಹಸಗಳ ನಡುವೆ ಒಂದು ಪುಟ್ಟ ಗುಂಪು ನಡೆಸಿದ ‘ಕಾಂಗ್ರೆಸ್ ರೇಡಿಯೋ’ ಸಾಹಸ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಒಂದು ಸಂಜೆ ಇದ್ದಕ್ಕಿದ್ದಂತೆ ‘ಇದು ಕಾಂಗ್ರೆಸ್ ರೇಡಿಯೋ! ಭಾರತದ ಯಾವುದೋ ಭಾಗದಿಂದ ನಾವು ಮಾತಾಡುತ್ತಿದ್ದೇವೆ! ತರಂಗಾಂತರ ೪೧.೪೨’ ಎಂದು ಬಾನುಲಿಯಲ್ಲಿ ಹೆಣ್ಣು ದನಿಯೊಂದು ಘೋಷಿಸಿತು! ಬ್ರಿಟಿಷ್ ಸರ್ಕಾರ ಬೆಚ್ಚಿತು. ಮರುಗಳಿಗೆಗೇ ರೇಡಿಯೋದಲ್ಲಿ ಗಂಡಿನ ದನಿಯಲ್ಲಿ ಸ್ವಾತಂತ್ರ‍್ಯ ಚಳುವಳಿಗೆ ಮಾರ್ಗದರ್ಶನ ಶುರುವಾಯಿತು.
ಈ ಭೂಗತ ರೇಡಿಯೋ ಪ್ರಸಾರಗಳಲ್ಲಿ ಬ್ರಿಟಿಷ್ ಪೊಲೀಸರು ನಡೆಸುತ್ತಿದ್ದ ಹಿಂಸೆಗಳ ವರದಿಗಳು ಬಿತ್ತರವಾಗತೊಡಗಿದವು. ಪ್ರತಿರಾತ್ರಿ ೮.೩೦ರ ಸುಮಾರಿಗೆ ಕವಿ ಇಕ್ಬಾಲರ ‘ಸಾರೆ ಜಹಾಂ ಸೆ ಅಚ್ಛಾ’ ಹಾಡು ಮೊಳಗುತ್ತಿತ್ತು; ಹಿಂದೂಸ್ತಾನಿ ಅಥವಾ ಇಂಗ್ಲಿಷಿನಲ್ಲಿ ಶುರುವಾಗುತ್ತಿದ್ದ ಪ್ರಸಾರ ‘ವಂದೇ ಮಾತರಂ’ ಹಾಡಿನೊಂದಿಗೆ ಮುಗಿಯುತ್ತಿತ್ತು. ಕಾಂಗ್ರೆಸ್ ರೇಡಿಯೋ, ಫ್ರೀಡಂ ರೇಡಿಯೋ, ಆಝಾದಿ ರೇಡಿಯೋ ಎಂದು ಕರೆಯಲಾಗುತ್ತಿದ್ದ ಈ ರೇಡಿಯೋವನ್ನು ಬ್ರಿಟಿಷ್ ಪೊಲೀಸರು ‘ಇಲ್ಲೀಗಲ್ ಕಾಂಗ್ರೆಸ್ ರೇಡಿಯೋ’ ಎನ್ನುತ್ತಿದ್ದರು! ಈ ಭೂಗತ ರೇಡಿಯೋ ಪ್ರಸಾರದ ಕೆಲವು ತುಣುಕುಗಳು:
‘ಬ್ರಿಟಿಷರು ಸ್ವಾತಂತ್ರ‍್ಯ ಚಳುವಳಿಯನ್ನು ತುಳಿಯಲು ಏನೆಲ್ಲಾ ಮಾಡುತ್ತಿದ್ದಾರೆ. ಆದರೆ ಭಾರತೀಯರು ಜಗ್ಗದೆ ಎದುರಾಳಿಯನ್ನು ಎದುರಿಸುತ್ತಿದ್ದಾರೆ, ಸ್ವಾತಂತ್ರ‍್ಯಕ್ಕಾಗಿ ಪ್ರಾಣ ಬಿಡಲೂ ತಯಾರಾಗಿದ್ದಾರೆ ಎಂಬುದು ಬ್ರಿಟಿಷರಿಗೆ ಅರಿವಾಗತೊಡಗಿದೆ...ದಬ್ಬಾಳಿಕೆಯ ಆಳ್ವಿಕೆಯನ್ನು ಮೂಕ ಪ್ರಾಣಿಗಳಂತೆ ಸಹಿಸಲು ಭಾರತೀಯರು ಸಿದ್ಧರಿಲ್ಲ ಎಂಬುದನ್ನು ಚಳುವಳಿ ಸಿದ್ಧ ಮಾಡಿ ತೋರಿಸಿದೆ...ಬ್ರಿಟಿಷ್ ಆಡಳಿತ ಕೊನೆಗೊಂಡು ಭಾರತೀಯರ ಆಳ್ವಿಕೆ ಬರುವ ತನಕ ಚಳುವಳಿ ಮುಂದುವರಿಯುತ್ತಲೇ ಇರುತ್ತದೆ...’
‘ಬ್ರಿಟಿಷ್ ಸರ್ಕಾರ ಮತ್ತು ಕಾಂಗ್ರೆಸ್ಸಿನ ನಡುವೆ ರಾಜಿಕಬೂಲಿ ಮಾಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಗಾಂಧೀಜಿ ಜೈಲು ಸೇರುವ ಮುನ್ನ ‘ಇದು ಕೊನೇ ಯುದ್ಧ’ ಎಂದು ಸಾರಿ ಹೋಗಿದ್ದಾರೆ; ಅವರ ಕರೆಯಂತೆ ‘ಮಾಡು ಇಲ್ಲವೇ ಮಡಿ’ ಈ ಎರಡರ ನಡುವೆ ನಮ್ಮ ಆಯ್ಕೆ ಯಾವುದೆಂಬುದನ್ನು ನಿರ್ಧರಿಸಬೇಕಾಗಿದೆ.’
‘ಹಿಂದೂಗಳು, ಮಹಮ್ಮದೀಯರು, ಕ್ರಿಶ್ಚಿಯನ್ನರು, ಪಾರ್ಸಿಗಳು ಎಲ್ಲರೂ ಸ್ವಾತಂತ್ರ‍್ಯಕ್ಕಾಗಿ ಹಂಬಲಿಸುತ್ತಿದ್ದಾರೆ. ಆದರೆ ಈ ಕಾಲದಲ್ಲಿ ಸುಳ್ಳು ಹೇಳುವುದು ಕಾನೂನುಬದ್ಧವಾಗಿಬಿಟ್ಟಿದೆ! ಈಗಿನ ದೊಡ್ಡ ಸುಳ್ಳು- ‘ಕೆಲವೇ ಮಂದಿ ಮಾತ್ರ ಸ್ವಾತಂತ್ರ‍್ಯ ಕೇಳುತ್ತಿದ್ದಾರೆ; ಆದರೆ ಒಂಬತ್ತು ಕೋಟಿ ಮಹಮ್ಮದೀಯರು ಸ್ವಾತಂತ್ರ‍್ಯಕ್ಕೆ ವಿರುದ್ಧವಾಗಿದ್ದಾರೆ’ ಎನ್ನುವುದು. ಇಂಥ ಸುಳ್ಳನ್ನು ಬ್ರಿಟಿಷರನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ! ಲಕ್ಷಗಟ್ಟಲೆ, ಕೋಟಿಗಟ್ಟಲೆ ಮುಸ್ಲಿಮರು ನಮಗೆ ಹೆಗಲೆಣೆಯಾಗಿ ಈ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ ಎಂಬುದನ್ನು ಚರಿತ್ರೆ ಸಾರಿ ಹೇಳುತ್ತಿದೆ...’
‘ಚಳುವಳಿಗಾರರನ್ನು ಬಂಧಿಸಲು ಪೊಲೀಸ್ ಅಧಿಕಾರಿಯೊಬ್ಬ ಪೊಲೀಸ್ ತಂಡದೊಂದಿಗೆ ಹಳ್ಳಿಯೊಂದಕ್ಕೆ ಬಂದ; ಆದರೆ ಹಳ್ಳಿಯ ಜನ ಅಲ್ಲಿ ಹೇಗೆ ಮುತ್ತಿಕೊಂಡರೆಂದರೆ ಪೊಲೀಸರು ಕಂಗಾಲಾಗಿ ಯಾರನ್ನೂ ಬಂಧಿಸಲಾಗದೆ ಅಲ್ಲಿಂದ ಹೊರಟರು. ಡಾರ್ಜಿಲಿಂಗ್ ಗೋಲಿಬಾರಿನಲ್ಲಿ ಹಲವರು ಗಾಯಗೊಂಡರು; ಮೂವರು ಮೃತಪಟ್ಟರು. ಭಾರತೀಯರು ಇದನ್ನೆಲ್ಲ ಸಹಿಸುವುದಿಲ್ಲ.’
‘ವಿದೇಶಿ ವಸ್ತುಗಳ ಫ್ಯಾಕ್ಟರಿ, ಕಛೇರಿಗಳೆದುರು ಶಾಂತಿಯುತವಾಗಿ ಪಿಕೆಟಿಂಗ್ ನಡೆಸಿ. ಸರ್ಕಾರಿ ನೌಕರಿ ಬಿಟ್ಟುಬನ್ನಿ. ಮನೆಮನೆಗಳಲ್ಲಿ ಚರಕಾ ಇರಲಿ. ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ. ಹಿಂದೂ-ಮುಸ್ಲಿಂ ಸಾಮರಸ್ಯ ಕಾಪಾಡಿ.’
ಈ ಪ್ರಸಾರಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗದ ಪೊಲೀಸ್ ಹಿಂಸೆ, ಜನರ ಹೋರಾಟಗಳ ವಿವರಗಳಿರುತ್ತಿದ್ದವು. ಬಾಂಬೆ, ನಾಸಿಕ್, ಕಲ್ಕತ್ತಾಗಳ ಗುಪ್ತ ಕೇಂದ್ರಗಳಿಂದ ಕಾಂಗ್ರೆಸ್ ರೇಡಿಯೋ ಬಿತ್ತರವಾಗುತ್ತಿತ್ತು.
ಅತ್ತ ಎಚ್.ವಿ.ಆರ್. ಅಯ್ಯಂಗಾರ್ ಎಂಬ ಬಾಂಬೆ ಬ್ರಿಟಿಷ್ ಸರ್ಕಾರದ ಅಡಿಶನಲ್ ಸೆಕ್ರೆಟರಿ ಈ ಕಾಂಗ್ರೆಸ್ ರೇಡಿಯೋ ಪ್ರಸಾರಗಳನ್ನು ನಿತ್ಯ ಕೇಳಿಸಿಕೊಳ್ಳುತ್ತಾ, ಆ ಮಾತುಗಳ ವಿಷಯ, ಭಾಷೆ, ಧೋರಣೆಗಳನ್ನೆಲ್ಲ ‘ಸ್ಟಡಿ’ ಮಾಡುತ್ತಿದ್ದ. ಕೊನೆಗೆ, ‘ಈ ಪ್ರಸಾರದಲ್ಲಿ ಕಾಂಗ್ರೆಸ್ ಸೋಷಲಿಸ್ಟ್ ಫಿಲಾಸಫಿ ಇದೆ; ಭೂಗತವಾಗಿರುವ ರಾಮಮನೋಹರ ಲೋಹಿಯಾ ಈ ಪ್ರಸಾರಗಳ ಹಿನ್ನೆಲೆಯಲ್ಲಿದ್ದಂತಿದೆ’ ಎಂದು ಅಯ್ಯಂಗಾರ್ ತೀರ್ಮಾನಿಸಿದ. ‘ಸ್ವತಂತ್ರ ಇಂಡಿಯಾ ರೈತರ, ಕಾರ್ಮಿಕರ, ಕೂಲಿಕಾರರದಾಗಿರುತ್ತದೆ’; ‘ಸ್ವಾತಂತ್ರ‍್ಯಕ್ಕೋಸ್ಕರ ಕ್ರಾಂತಿ ಎಂದರೆ ಬಡವರಿಗಾಗಿ ಕ್ರಾಂತಿ…’ ಇಂಥ ವಾಕ್ಯಗಳನ್ನು ಅಯ್ಯಂಗಾರ್ ಹೆಕ್ಕಿ ತೋರಿಸಿದ. ‘ಇದು ಸೋಷಲಿಸ್ಟರ ಕ್ರಾಂತಿಕಾರಿ ಚಳುವಳಿ’ ಎಂದು ಬ್ರಿಟಿಷ್ ಸರ್ಕಾರ ತೀರ್ಮಾನಿಸಿತು.
ಭೂಗತ ರೇಡಿಯೋದ ಐಡಿಯಾ ಕೊಟ್ಟ ರಾಮಮನೋಹರ ಲೋಹಿಯಾ ಹಣಕಾಸನ್ನೂ ಕಲೆ ಹಾಕಿದ್ದರು; ಪ್ರಸಾರಕ್ಕಾಗಿ ವರದಿ, ವಿಶ್ಲೇಷಣೆಗಳನ್ನು ಸಿದ್ಧಪಡಿಸುತ್ತಿದ್ದರು. ೨೨ ವರ್ಷದ ಕಾನೂನು ವಿದ್ಯಾರ್ಥಿನಿ ಉಷಾ ಮೆಹ್ತಾ ವಿಠ್ಠಲದಾಸ ಮಾಧವಜೀ, ಬಾಬುರಾವ್ ಜವೇರಿ ಮೊದಲಾದವರ ಜೊತೆಗೂಡಿ ‘ಕಾಂಗ್ರೆಸ್ ರೇಡಿಯೋ’ದ ಉಸ್ತುವಾರಿ, ಪ್ರಸಾರ ನೋಡಿಕೊಳ್ಳುತ್ತಿದ್ದರು. ಜೀವದ ಹಂಗು ತೊರೆದ ತರುಣಿ ಉಷಾ ಮೆಹ್ತಾರ ಸಾಹಸ ಅದ್ಭುತವಾದುದು. ೯೦ ದಿನಗಳ ನಂತರ, ಈ ಅಲೆಮಾರಿ ರೇಡಿಯೋ ಸ್ಟೇಶನ್ನಿನ ಮೇಲೆ ಪೊಲೀಸರ ದಾಳಿಯಾಯಿತು; ಆಗ ಲೋಹಿಯಾ ದೇಶದ ಯಾವುದೋ ಮೂಲೆಯಲ್ಲಿದ್ದರು. ವಿಠಲದಾಸ್, ಜವೇರಿ, ಉಷಾ ಮೆಹ್ತಾ ಜೈಲು ಶಿಕ್ಷೆಗೊಳಗಾದರು.
ಮುಂದೆ ಸ್ವತಂತ್ರ ಭಾರತದಲ್ಲಿ ಓದು ಮುಂದುವರಿಸಿ, ಡಾಕ್ಟರೇಟ್ ಪಡೆದ ಉಷಾ ಮೆಹ್ತಾ ಮುಂಬೈ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್ ಪ್ರೊಫೆಸರ್ ಆದರು; ಇಂಡಿಯಾದ ಸಾರ್ವಜನಿಕ ಜೀವನದ ಪತನ ಕಂಡು ‘ಇದಕ್ಕಾಗಿ ನಾವು ಅಂದು ಹೋರಾಡಬೇಕಿತ್ತೇ?’ ಎಂದು ನೊಂದುಕೊಳ್ಳುತ್ತಿದ್ದರು. ೨೦೧೦ರಲ್ಲಿ ತೀರಿಕೊಂಡ ಉಷಾ ಮೆಹ್ತಾರ ಜೀವನವನ್ನಾಧರಿಸಿ ಕಣ್ಣನ್ ಅಯ್ಯರ್ ನಿರ್ದೇಶಿಸಿದ `ಏ ವತನ್ ಮೇರೆ ವತನ್’ ಸಿನಿಮಾದಲ್ಲಿ (೨೦೨೪) ಸಾರಾ ಆಲಿ ಖಾನ್ ಉಷಾ ಮೆಹ್ತಾ ಪಾತ್ರ ಮಾಡಿದ್ದರು.
ಒಂದು ಅಂಕಿ ಅಂಶದ ಪ್ರಕಾರ, ಆಗಸ್ಟ್ ಕ್ರಾಂತಿಯಲ್ಲಿ ೬೦೨೨೯ ಜನ ಬಂಧನಕ್ಕೊಳಗಾದರು; ಡಿಫೆನ್ಸ್ ಕಾಯ್ದೆಯಡಿಯಲ್ಲಿ ೧೮೦೦೦ ಜನ ಬಂಧನಕ್ಕೊಳಗಾದರು; ಪೊಲೀಸರು, ಹಾಗೂ ಸೈನಿಕರು ೯೪೦ ಜನರನ್ನು ಕೊಂದರು; ೧೬೩೦ ಜನ ಗಾಯಗೊಂಡರು; ೪೪ ಜನ ಗಲ್ಲು ಶಿಕ್ಷೆ ಅನುಭವಿಸಿದರು. ವಿಷಾದದ ಸಂಗತಿಯೆಂದರೆ, ‘ಆಗಸ್ಟ್ ಕ್ರಾಂತಿ ದಿನ’ ವನ್ನು ನೆನೆದ ಸುದ್ದಿ ಕಣ್ಣಿಗೆ ಬೀಳಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯನ್ನು ಮುನ್ನಡೆಸಿದ ಅಜ್ಞಾತ ಗುಂಪುಗಳು; ಪೊಲೀಸರ ಹಿಂಸೆಯನ್ನು ಎದುರಿಸಿದ ಸಾಮಾನ್ಯ ಭಾರತೀಯರ ಕೆಚ್ಚು, ಬಲಿದಾನ ಮಾಡಿದವರ ತ್ಯಾಗ; ರಾತ್ರೋರಾತ್ರಿ ಕರಪತ್ರಗಳನ್ನು ಹಂಚುತ್ತಿದ್ದ ನಿರ್ಭೀತ ತರುಣ ತರುಣಿಯರು; ಭೂಗತ ಬಾನುಲಿಯ ಮೂಲಕ ದೇಶವನ್ನು ಎಚ್ಚರದಲ್ಲಿಟ್ಟ ಧೀರರು ಮುಂತಾದ ಸ್ಫೂರ್ತಿದಾಯಕ ಸತ್ಯಗಳು ಕಣ್ಮರೆಯಾಗಲು ಬಿಡಬಾರದು.
೧೯೬೭ರ ಆಗಸ್ಟ್ ಕ್ರಾಂತಿಯ ಬೆಳ್ಳಿ ಮಹೋತ್ಸವದ ಕಾಲದಲ್ಲಿ ಬರೆದ ಲೇಖನವೊಂದರಲ್ಲಿ ಆಗಸ್ಟ್ ಕ್ರಾಂತಿ ನಿಜವಾದ ಅರ್ಥದಲ್ಲಿ ಜನತಾ ಕ್ರಾಂತಿಯಾಗಿತ್ತು ಎಂಬುದನ್ನು ಲೋಹಿಯಾ ನೆನೆದರು:
‘ಆಗಸ್ಟ್ ೯, ೧೯೪೨ ಜನರ ಸಂಕಲ್ಪವನ್ನು ವ್ಯಕ್ತಪಡಿಸಿತು: ನಾವು ಸ್ವತಂತ್ರರಾಗಬಯಸುತ್ತೇವೆ ಮತ್ತು ಸ್ವತಂತ್ರರಾಗುತ್ತೇವೆ ಎಂಬ ಸಂಕಲ್ಪ ಅದು. ನಮ್ಮ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಟಿಗಟ್ಟಲೆ ಜನರು ಸ್ವತಂತ್ರರಾಗುವ ಆಸೆಯನ್ನು ವ್ಯಕ್ತಪಡಿಸಿದರು. ಕೆಲವು ಸ್ಥಳಗಳಲ್ಲಿ ಇದನ್ನು ಸಾಕಷ್ಟು ಶಕ್ತಿಯುತವಾಗಿಯೇ ವ್ಯಕ್ತಪಡಿಸಲಾಯಿತು. ಬಲ್ಲಿಯಾ ಎಂಬ ಜಿಲ್ಲೆ ಕೆಲ ಕಾಲ ಸ್ವತಂತ್ರವಾಯಿತು… ನೂರಾರು ಪೊಲೀಸ್ ವಲಯಗಳು ಸ್ವತಂತ್ರವಾದವು. ಆದರೆ ಜನರ ಸಂಕಲ್ಪ ಸಾಕಷ್ಟು ಶಕ್ತಿಯುತವಾಗಿತ್ತಾದಾರೂ ಅದರ ಆಯುಷ್ಯ ದೀರ್ಘವಾಗಿರಲಿಲ್ಲ.’
ಜಗತ್ತಿನ ಸ್ವಾತಂತ್ರ‍್ಯ ಹೋರಾಟಗಳ ಚರಿತ್ರೆಯಲ್ಲೇ ಅನನ್ಯವಾದ ‘ಕ್ವಿಟ್ ಇಂಡಿಯಾ’ ಚಳುವಳಿ ದೇಶದ ಸಾವಿರಾರು ನಾಯಕ ನಾಯಕಿಯರು, ಲಕ್ಷಾಂತರ ಚಳುವಳಿಗಾರರು, ಜನಸಾಮಾನ್ಯರು ತ್ಯಾಗ, ಬಲಿದಾನಗಳ ಮೂಲಕ ಗಳಿಸಿಕೊಟ್ಟಿರುವ ಸ್ವಾತಂತ್ರ‍್ಯ ಅತ್ಯಂತ ಅಮೂಲ್ಯವಾದುದು ಎಂದು ನೆನಪಿಸುತ್ತಲೇ ಇರುತ್ತದೆ. ಇಂಥ ಸ್ವಾತಂತ್ರ‍್ಯವನ್ನು ನಾವು ರಕ್ಷಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ ಎಂಬುದನ್ನು ನಾವು ದಣಿವರಿಯದೆ ನೆನಪು ಮಾಡುತ್ತಿರಲೇಬೇಕು.
Comments
11 Comments
| Aswathanarayana
Worth reminiscing. Well narrated. Congratulations
| B.Suresh
❤️ to ' ಆಗಸ್ಟ್ ಕ್ರಾಂತಿ ಮರೆತು ಹೋಯಿತೆ?
| ಮಂಜುನಾಥ್ ಸಿ ನೆಟ್ಕಲ್
ಅಂದು ದೇಶದ ಸ್ವಾತಂತ್ರಕ್ಕಾಗಿ ನಡೆದ ಆಗಸ್ಟ್ ಕ್ರಾಂತಿಯ ನೆನಪಿನಿಂದ ಸ್ಫೂರ್ತಿ ಪಡೆದು ನಮ್ಮ ಇಂದಿನ ಭ್ರಷ್ಟ ವ್ಯವಸ್ಥೆಯಿಂದ ಬಿಡುಗಡೆಗಾಗಿ ಮತ್ತು ವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಳ್ಳಲಿಕ್ಕಾಗಿ ಹೋರಾಡುತ್ತಿರುವ ಹೊಸ ತಲೆಮಾರಿನ ಹುಡುಗ, ಹುಡುಗಿಯರು ಯುವ ಸಮೂಹ ಹೋರಾಟದ ಕೆಚ್ಚನ್ನು ಉಳಿಸಿಕೊಂಡು ಮುಂದುವರೆಯಲಿ
| Y C Ravikumar
Very interesting piece of people's history. The GenZ struggle can gain a couple of points from the pages of this history. Unfortunately, the most of the major Kannada writers stuck to their pens complacently while ordinary people with less education and ideas than them actively took part in the Quit India Movement.
| Somashankara N
ಕಡಲುಗಳ್ಳರ ಕಾಟ ಕೊನೆಗೊಂಡರೇನಂತೆ? ಒಡಲುಗಳ್ಳರು ಇನ್ನು ಇಲ್ಲೆ ಇಹರೊ; - ಬೂಟುಕಾಲಿನೇಟು ಬಿದ್ದರಿನ್ನು ಸುಮ್ಮನಿರುವರೆ? ಕಿವಿಯ ತುಂಬ ಕಲ್ಲಿನೇಟು ತಿಂದ ಕುನ್ನಿ ಮರಿಯ ಕೂಗು/ಕೇಳದಲ್ಲೋ ಗರ್ಜನೆ. -ಡಾ. ಬಿ. ಸಿ. ರಾಮಚಂದ್ರ ಶರ್ಮರವರ 'ಎಂದಿಗೆ' ಪದ್ಯದ ಈ ಸಾಲುಗಳನ್ನು "ಆಗಸ್ಟ್ ಕ್ರಾಂತಿ ಮರೆತು ಹೋಯಿತೇ?" ಲೇಖನ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿತು. ಇತಿಹಾಸದ ಕೆಲವು ಸಂಗತಿಗಳು ನಮ್ಮನ್ನು ಉದ್ವೇಗದಿಂದ ಮಾತಾಡುವಂತೆ ಮಾಡುತ್ವೆ. ಆ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ನೇತೃತ್ವದಲ್ಲಿ ಜನಸಾಮಾನ್ಯರ ಮುತುವರ್ಜಿ, ಕೆಚ್ಚು, ಛಲ ಹಾಗೂ ಹೋರಾಟದ ಬಲ, ಸಂಘಟನಾ ಶಕ್ತಿ ಇವುಗಳನ್ನು ಅರಿತಾಗ ಅಂದಿನ ಭಾರತೀಯ ಪ್ರಜೆಗಳ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಅಂದಿನ ಸಾವಿಗೂ ಒಂದು ಬೆಲೆ ಇತ್ತು; ಡಿಗ್ನಿಟಿ ಇತ್ತು. ಅವತ್ತಿನ ಕಾಂಗ್ರೆಸ್ ರೇಡಿಯೋ ನಿರ್ವಹಿಸಿದ ಕಾರ್ಯ ಈ ಮಣ್ಣಿನ ಗುಣದ ದನಿಯಾಗಿತ್ತು. ದೇಶವನ್ನು ಬ್ರಿಟೀಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ವಜ್ರದಂತಹ 'ಆತ್ಮ ಬಲವೇ' ಆ ಬಾನುಲಿಯಲ್ಲಿ ಅನುರಣಿಸಿತ್ತು. ದುರಂತವೆಂದರೆ, ಇವತ್ತು ಸಾವಿಗೂ ಬೆಲೆ ಇಲ್ಲ, ವ್ಯಕ್ತಿಗೂ ಬೆಲೆ ಇಲ್ಲ. ಸಾಮಾನ್ಯ ಜನರ ಬದುಕಿನಲ್ಲಿ ಹಿಂಸೆ ರಾಕ್ಷಸೀ ರೂಪ ತಾಳಿ ನರ್ತಿಸುತ್ತಿದೆ. ಅಹಿಂಸೆಯ ಭಾರತವನ್ನು ಮರಳಿ ರೂಪಿಸುವುದು ಘೋರ ತಪಸ್ಸನ್ನು ಜಯಿಸಿ ಬಂದ ಯಾವ ಋಷಿವರ್ಯನಿಂದಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಈ ಆಧುನೀಕರಣದ ಭೂತ ನಮ್ಮನ್ನು ಹೊಸ ರೀತಿಯ ದಾಸ್ಯದಲ್ಲಿ ಬಂಧಿಸಿದೆ. ಈ ಬಂಧನವೇ ನಮ್ಮ ಬಿ. ಸಿ. ರಾಮಚಂದ್ರ ಶರ್ಮ ಕವಿಗಳು ಹೇಳಿರುವ 'ಚಿತ್ತದಾಸ್ಯ'. ಈ ದಾಸ್ಯ ವ್ಯಕ್ತಿ ತನ್ನತನವನ್ನು ಕಳೆದುಕೊಂಡು, ಸ್ವಂತಿಕೆಯನ್ನು ಮರೆತು 'ಭೂತಗಣವನ್ನು ಮೆಲುಕು ಹಾಕುವಂತೆ' ಮಾಡಿ, ಅತಿಯಾದ ಯಂತ್ರ ನಾಗರಿಕತೆಯ ಸೋಗಿನಲ್ಲಿ ಘಟಕಗಳಾಗಿ ಒಡೆದು ಹೋಗಿ, ದೇಸೀ ಸಂಸ್ಕೃತಿಯನ್ನೇ ಮರೆಯುವಂತೆ ಪ್ರೇರೇಪಿಸುತ್ತಿದೆ. ಇಂಥ ಸಂದರ್ಭದಲ್ಲಿ. ಭಾರತೀಯರ ಸಂಕಲ್ಪ ಶಕ್ತಿಯನ್ನು ಕುಂದಿಸುತ್ತಿರುವ ಆಧುನಿಕರಣದ ಪ್ರಭಾವಗಳು ಮರು ನವೀಕರಣಗೊಂಡು ಹೊಸ ಬದಲಾವಣೆಯಾಗಬೇಕು. ಬಿ. ಸಿ. ರಾಮಚಂದ್ರ ಶರ್ಮ ರವರ ಸ್ವವಿಮರ್ಶೆಯ ದಾರಿ, ರಾಮ ಮನೋಹರ ಲೋಹಿಯಾ ರವರ ಚಿಂತನೆಯ ಬರಹಗಳ ಸ್ಪೂರ್ತಿಯ ಅಡಿಪಾಯದ ಮೇಲೆ ದೇಶವನ್ನು ಕಟ್ಟುವ ಸಂಕಲ್ಪ ಪ್ರತಿಯೊಬ್ಬ ಭಾರತೀಯನಲ್ಲೂ ಬರಬೇಕು. ಆಗ ತಾವು ಬರೆದಿರುವ "ಆಗಸ್ಟ್ ಕ್ರಾಂತಿ ಮರೆತು ಹೋಯಿತೇ?" ಲೇಖನದ ಆಂತರ್ಯದಲ್ಲಿ ಅಡಗಿರುವ ವಿಚಾರ ಶಕ್ತಿ ಪಲ್ಲವಿಸಿ, ದೇಸೀ ಸಂಸ್ಕೃತಿಯನ್ನು ಹೀರಿ ಬೆಳೆದ ಭವ್ಯ ಭಾರತದ ಭವಿಷ್ಯ ಕಾಣಲು ಸಾಧ್ಯ ಅನ್ನಿಸುತ್ತಿದೆ. 'ಸತ್ತಂತಿಹರನು ಬಡಿದೆಚ್ಚರಿಸಿ'ದ ತಮ್ಮ ಈ ಸಕಾಲದ ಲೇಖನಕ್ಕಾಗಿ ತಮಗೆ ಅನಂತ ಅನಂತ ನಮನಗಳು.
| ಸೋಮಶಂಕರ ವಿ ಸುಣ್ಣಂಗೂರು
'ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಟಿಸಲಾರ' ಎಂಬ ಅಂಬೇಡ್ಕರ್ ರವರ ನುಡಿ ಅಕ್ಷರಶಃ ಸತ್ಯವಾದದ್ದು. ಆದರೆ ಭಾರತದ ಭವಿಷ್ಯತೆಗೆ ಭದ್ರ ಬುನಾದಿಯಾಗಿ ಗತಿಸಿ ಹೋದ ಇತಿಹಾಸದ ದಿನ ಆಗಸ್ಟ್ ೮ನೆಯ ತಾರೀಕು. ‘ಆಗಸ್ಟ್ ಕ್ರಾಂತಿ ದಿನ.’ ಎಂಬತ್ತನಾಲ್ಕು ವರ್ಷಗಳ ಕೆಳಗೆ ೧೯೪೨ರ ಆಗಸ್ಟ್ ೮ರಂದು ಆರಂಭವಾದ ಐತಿಹಾಸಿಕ ‘ಕ್ವಿಟ್ ಇಂಡಿಯಾ’ ಚಳುವಳಿಯ ನೆನಪಿನ ಆಚರಣೆಯ ದಿನ. ಮಾರನೆಯ ದಿನ ಆಗಸ್ಟ್ ೯. ಅಂದು ಜನತಾಕ್ರಾಂತಿಯ ಸಹಜ ಸ್ಫೋಟವಾಗಿತ್ತು ಎಂಬುದು ಅಪ್ಪಟ ಭಾರತೀಯ ಮರೆಯಲಾರದ ದಿನ. ಭಾರತದ ಸ್ವಾತಂತ್ರ‍್ಯ ಚಳುವಳಿಯ ಉಜ್ವಲ ಘಟ್ಟವಾದ ‘ಆಗಸ್ಟ್ ಕ್ರಾಂತಿ’ಯ ಮಹತ್ವ ಹೊಸ ತಲೆಮಾರು ಸಹಜವಾಗಿ ಮರೆತು ಹೋಗಿರುವುದೊಂದು ಅತಿರೇಕದ ವರ್ತನೆಯ ಸರಿ ಅದಕ್ಕೆ ಡಿಜಿಟಲ್ ಪ್ರಭಾವವು ಇರಬಹುದು ಅದನ್ನು ನೆನಪಿಸುವ ಪ್ರಯತ್ನದಿಂದ ಸಾಧ್ಯವಾಗಿಸುವುದರ ಸೃಜನತ್ವ ಈ ಲೇಖನದಲ್ಲಿ ದಟ್ಟವಾಗಿ ಇದೆ ಸರ್ ನಿಮಗೆ ಧನ್ಯವಾದಗಳು.
| Vijay Thambanda
ಸ್ವಾತಂತ್ರದ ಇತಿಹಾಸದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ರ ಹೋರಾಟಗಳ ಬಗ್ಗೆ ಸಾಕಷ್ಟು ಓದಿದ್ದರೂ ಸೋಶಿಯಲಿಸ್ಟ್ ರ ಹೋರಾಟದ ಬಗ್ಗೆ ಅಷ್ಟಾಗಿ ಓದಿಲ್ಲ ಎನ್ನುವುದು ದಿಟ. ಹುಳಿಯಾರ್ ಅವರು ಕರ್ನಾಟಕ ದ ಗೋಪಾಲಗೌಡರ ಹೋರಾಟ ವನ್ನು, ಅದಕ್ಕಿಂತ ಹೆಚ್ಚಾಗಿ ಉಷಾ ಮೆಹತಾ ಅವರ ಬಗೆಗಿನ ರೋಚಕ ಹೋರಾಟದ ಬಗ್ಗೆ ಗಮನ ಸೆಳೆದಿದ್ದಾರೆ. ಸ್ವಾತಂತ್ರ ದಿನದ ಶುಭಾಶಯಗಳು
| R. Manjula
1942 ರ ಸುಮಾರಿಗೆ, ಭಾರತದ ಆರ್ಥಿಕ ಸ್ಥಿತಿಯು ಎರಡನೇ ಮಹಾಯುದ್ಧದಿಂದ ತೀವ್ರವಾಗಿ ಸಂಕಷ್ಟಕ್ಕೊಳಗಾಯಿತು. ಹಠಾತ್ ಹಣದುಬ್ಬರ, ತೀವ್ರ ಆಹಾರ ಕೊರತೆ ಮತ್ತು ಕಠಿಣ ಬ್ರಿಟಿಷ್ ಮಿಲಿಟರಿ ಬೇಡಿಕೆಗಳು ವ್ಯಾಪಕ ಸಂಕಷ್ಟಕ್ಕೆ ಕಾರಣವಾಯಿತು. ಕೆಲವು ಭಾರತೀಯ ಕೈಗಾರಿಕೋದ್ಯಮಿಗಳು ಬಂಡವಾಳ ಮತ್ತು ಯುದ್ಧ ಒಪ್ಪಂದಗಳನ್ನು ಸಂಗ್ರಹಿಸಿದರೆ, ಸಾಮಾನ್ಯ ನಾಗರಿಕರು ಅಕ್ಕಿಯಂತಹ ಮೂಲಭೂತ ವಸ್ತುಗಳಿಗೆ ಗಗನಕ್ಕೇರುವ ಬೆಲೆಗಳನ್ನು ಎದುರಿಸಬೇಕಾಯಿತು, ಇದು ದುರಂತ ಕ್ಷಾಮಗಳಿಗೆ ಅಡಿಪಾಯ ಹಾಕಿತು. ಇಂತಹ ಪರಿಸ್ಥಿತಿಯಲ್ಲಿಯೂ ನಮ್ಮ ಜನರು ಆಗಸ್ಟ್ ಕ್ರಾಂತಿಯನ್ನು ಮುನ್ನಡೆಸಿದ್ದು ನಮ್ಮ ಕಣ್ಣನ್ನು ತೇವಗೊಳಿಸುತ್ತದೆ. ಹೀಗೆ ಸಿಕ್ಕಿದ ಸ್ವಾತಂತ್ರ್ಯ ಇಂದು ಎಲ್ಲ ಪಕ್ಷಗಳ ಮತ ರಾಜಕೀಯ ಹಾಗು ಭ್ರಷ್ಟಾಚಾರದ ಕೀಲಿಕೈ ಆಗಿಬಿಟ್ಟಿದೆ.
| C Naganna
Dr. Nataraj Huliyar's title is rhetorical, in the sense that we cannot forget the August Kranthi. Revolutions appear in mutated forms establishing their enduring nature. "Jantar Mantar" is a living example of the preceding revolutions. We asked the White man to Quit India. Now we cannot ask our own Brown Sahibs to leave the country. We have to make them understand their excesses and teach them humility and grace. More than anything, we have to safeguard the interest of our young men and women who are out future. Thank you Dr. Huliyar for prodding our conscience.
| Rajappa Dalavayi
ಅರ್ಥಪೂರ್ಣ ಲೇಖನ. ಉಷಾ ಮೆಹತ ಅವರ ಬಗ್ಗೆ ಚನ್ನಾಗಿ ಬರೆದಿದ್ದೀರಿ. ಶಿಕಾರಿಪುರ ತಾಲ್ಲೂಕಿನ ಈಸೂರು ಕೂಡ ಸ್ವತಂತ್ರ ಹಳ್ಳಿ ಎಂದು ಘೋಷಿಶಿಕೊಳ್ಳುತ್ತದೆ.
| Ramachandra Naik
ಇಂದಿನ zenzee ಚಳುವಳಿ ಇದೇ ರೀತಿಯ ಕ್ರಾಂತಿಗೆ ಮುನ್ನುಡಿಯಾಗಲಿ, ಅದು ಮುಂದೊಂದು ದಿನ ಜುಲೈ ಕ್ರಾಂತಿ ಎಂದು ಹೆಸರಾದೀತು 🙏🏻
Add Comment