ಕಲಿತಿಲ್ಲವೆಂಬ ನೆನಪುಳಿಸು

'ನೋಡಿದ್ರೆ ಗೊತ್ತಾಗಲ್ವ? ಅವನು ಎಂಥವನೂಂತ?' ಎಂದು ಮತ್ತೊಬ್ಬರ ಒಳಹೊರಗು ಬಲ್ಲವರಂತೆ ಜನ ಆರಾಮಾಗಿ ಹೇಳುವುದನ್ನು ಕೇಳಿದಾಗ ಅಚ್ಚರಿಯಾಗುತ್ತದೆ. ಅದರಲ್ಲೂ ಹೆಂಗಸರು, 'ಅವನ್ನ ನೋಡಿದ್ರೆ ಕಳ್ಳನ ಥರ ಇದ್ದ ಕಣ್ರೀ' ಎಂದು ಕಳ್ಳರಿಗೂ ಒಂದು ಯೂನಿಫಾರ್ಮ್ ಇದೆ ಅನ್ನುವಂತೆ ಮಾತಾಡುವುದನ್ನು ಕೇಳಿದಾಗ ಇನ್ನಷ್ಟು ವಿಸ್ಮಯವಾಗುತ್ತದೆ. 

ಈ ಥರದ ಸಲೀಸು ಮಾತುಗಳನ್ನು ಕೇಳಿಸಿಕೊಂಡಿದ್ದರೆ ಮನೋವಿಜ್ಞಾನಿ ಫ್ರಾಯ್ಡ್‌ಗೋ, ತತ್ವಜ್ಞಾನಿ ನೀಷೆಗೋ ಏನನ್ನಿಸುತ್ತಿತ್ತೋ! ನಿಮಗೆ ಗೊತ್ತಿದೆ- ಜೀವಮಾನವಿಡೀ ಕನಸುಗಳ ಅಧ್ಯಯನ ಮಾಡಿ ಮನುಷ್ಯರ ಹೊರ ಭಾವ, ಒಳ ಲೋಕ, ಪ್ರಜ್ಞೆ, ಅಪ್ರಜ್ಞೆಗಳ ಬಗ್ಗೆ ತಾನು ಕಂಡ ಸತ್ಯವನ್ನು ಥಿಯರಿ ಮಾಡಿ ಹೇಳಿದವನು ಫ್ರಾಯ್ಡ್. ಸಮಯ ಸಿಕ್ಕಾಗಲೆಲ್ಲ ಸುಮ್ಮನೆ ಫ್ರಾಯ್ಡ್ ಬರಹಗಳ ಒಳ ಹೊಕ್ಕರೆ ಸಾಕು, ನನ್ನಂಥವನಿಗೆ, ಒಂದು ಜೀವಮಾನಕ್ಕಾಗುವಷ್ಟು ಒಳನೋಟಗಳು ಕಾಣತೊಡಗುತ್ತವೆ. ಹಾಗೇ ನೀಷೆಯ ಫಿಲಸಾಫಿಕಲ್ ಲೋಕ. ಇವೆರಡೂ ನಮ್ಮಂಥ ಕೇವಲ ಮನುಷ್ಯರಿಗೆ ಸುಲಭವಾಗಿ ಕಾಣದ, ನಮಗೆ ಸುಲಭವಾಗಿ ದಕ್ಕದ ಲೋಕ. ಫ್ರಾಯ್ಡ್, ನೀಷೆ ಇಬ್ಬರೂ ನನ್ನ ಪ್ರಿಯ ಲೇಖಕರ ಪಟ್ಟಿಯ ಮೊದಲ ಸಾಲಿನಲ್ಲಿರುವುದು ಈ ಕಾರಣಕ್ಕೇ. ನನ್ನಂಥವರಿಗೆ ಅವರು ಹಾಗೆ ಪ್ರಿಯರಾಗುವುದು ಅವರ ಬರಹಗಳು ಕಾಣಿಸುವ ಸತ್ಯದ ಜೊತೆಗೇ ಅವರ ಬರವಣಿಗೆಯ ಶಕ್ತಿಯಿಂದ ಕೂಡ. 

ನಾನು ಆಗಾಗ ಕನ್ನಡಿಸಿರುವ ನೀಷೆಯ ಕೆಲವು ಗಾಢ ಸತ್ಯಗಳನ್ನು, ಈ ಅಂಕಣದಲ್ಲಿ ಗದ್ಯ-ಪದ್ಯ ರೂಪದಲ್ಲಿ 'ನೀಷೆಗೆ ಹೊಳೆದ ಸತ್ಯ' ಎಂಬ ತಲೆಬರಹದಡಿ ಇಲ್ಲಿ ಆಗಾಗ ಕೊಡುವುದನ್ನು ನೀವು ಗಮನಿಸಿರಬಹುದು: ಹಿಂದೆ ನಮ್ಮ ಕನ್ನಡ ಟೈಮ್ಸ್ ಪತ್ರಿಕೆಗಾಗಿ ಶುರು ಮಾಡಿದ ಈ ನೀಷೆ ಪಯಣ ಸಾಗುತ್ತಲೇ ಇದೆ. ನನ್ನ ಡೈರಿಯಲ್ಲಿರುವ ಅಂಥ ಇನ್ನೊಂದು ನೀಷೆಗೆ ಹೊಳೆದ ಸತ್ಯ: 
ನೀವು ನಿಮ್ಮ ಬಾಯಿಂದ ಸುಳ್ಳು ಹೇಳಬಹುದು;

ಆದರೆ, 
ಆ ಸುಳ್ಳಿನ ಜೊತೆಗೇ ಮೂಡುವ 
ತಿರುಚಿದ, ಕಹಿ ವ್ಯಗ್ರ ಮುಖ
ಹೇಗೂ ಸತ್ಯವನ್ನು ಹೇಳಿಯೇ ತೀರುವುದು.

ಇಂಥ ನಿಷ್ಠುರ ಸತ್ಯ ತಲುಪಲು ಕತೆಯೋ ಕವಿತೆಯೋ ಎಷ್ಟೊಂದು ಸರ್ಕಸ್ ಮಾಡಬೇಕಾಗುತ್ತದಲ್ಲ ಎನ್ನಿಸಿ ಫಿಲಾಸಫಿಯ ಅಡಕ ಗುಣದ ಬಗ್ಗೆ ವಿಸ್ಮಯವಾಗುತ್ತದೆ. ನನ್ನ ಕಥಾ ಸಂಕಲನವೊಂದಕ್ಕೆ ಮುನ್ನುಡಿ ಬರೆಯುವಾಗ ತತ್ವಜ್ಞಾನಿ ನೀಷೆ ತಲುಪುವ ಸತ್ಯಗಳ ಬಗ್ಗೆ ಹುಟ್ಟಿದ ಅಚ್ಚರಿ ಇವತ್ತಿಗೂ ಹಾಗೇ ಇದೆ. ಆ ಮುನ್ನುಡಿಯ ಕೆಲವು ಭಾಗಗಳು: 

ನೀಷೆಯಂಥ ದೊಡ್ಡ ತತ್ವಜ್ಞಾನಿಯನ್ನು ಓದುತ್ತಾ ಓದುತ್ತಾ ಅವನು ಎಷ್ಟೋ ಸಲ ಒಂದೇ ಸಾಲಿನಲ್ಲಿ ಅಥವಾ ಒಂದು ಪುಟ್ಟ ಟಿಪ್ಪಣಿಯಲ್ಲಿ ತಲುಪುವ ಸೂಕ್ಷ್ಮ ಸತ್ಯಗಳನ್ನು ಕಂಡು ಅಚ್ಚರಿಯಾಗುತ್ತದೆ. ಅವನ ಬಗ್ಗೆ ಕೃತಜ್ಞತೆ ಮೂಡುತ್ತದೆ. ಈ ಥರದ ತೀಕ್ಷ್ಣ ಸತ್ಯ ತಲುಪಲು ಕತೆ ಬರೆಯುವ ವ್ಯಕ್ತಿ ಎಷ್ಟೊಂದು ಸರ್ಕಸ್ ಮಾಡಬೇಕಾಗುತ್ತದಲ್ಲ ಎನಿಸತೊಡಗುತ್ತದೆ...

ಆದರೂ ಕತೆ ಬರೆಯವ ವ್ಯಕ್ತಿಗೆ ಎಂದೋ ಕಂಡ, ಹೊಳೆದ, ಬೆಳೆದ ಘಟನೆಗಳಿಗೆ ಅಥವಾ ಘಟನೆಗಳಂಥ ರೂಪಕಕ್ಕೆ ಬರಬರುತ್ತಾ ಹೊಸ ಮುಖಗಳು ಸೇರಿಕೊಳ್ಳತೊಡಗುತ್ತವೆ; ಕಥಾಮಾಧ್ಯಮವೇ ಕಾಣಿಸುವ ಸತ್ಯಗಳು ಕತೆ ಬರೆಯುವ ಕೆಲಸದ ಬಗ್ಗೆ ಹೊಸ ಉಮೇದು ಹುಟ್ಟಿಸತೊಡಗುತ್ತವೆ. ಆ ಉಮೇದು ಯಾವುದೋ ಗಳಿಗೆಯಲ್ಲಿ ಹಾಗೇ ನಿಂತುಹೋಗುತ್ತದೆ; ಮುಂದೆಂದೋ, ಯಾವ ವರ್ಷವೋ ಆ ಕತೆಗೆ ಇನ್ನೇನೋ ಕೂಡಿಕೊಂಡಂತಾಗಿ ಬರೆಯುವ ಒತ್ತಾಯ ಶುರುವಾಗುತ್ತದೆ. ಇದು ಒಂದು ಕತೆಯನ್ನು ವರ್ಷಗಟ್ಟಲೆ ಬರೆಯವ ನನ್ನ ಅನುಭವ. 

ಇದೆಲ್ಲದರ ನಡುವೆ ಒಂದು ದೃಶ್ಯ: 

ಬೆಂಗಳೂರಿನ ಜೆ.ಪಿ.ನಗರದ ವೈನ್ ಸ್ಟೋರಿನ ಹೊರಗಿನ ಮಂದ ಬೆಳಕಿನಲ್ಲಿ ಗೋಡೆಗೊರಗಿ ಬಿಳಿಯ ಹತ್ತಿ ಸೀರೆ ಉಟ್ಟ ಆ ಕಪ್ಪನೆಯ ತಮಿಳು ಹೆಂಗಸು ಅದೇ ಆಗ ಒಂದೇ ಗುಟುಕಿಗೆ ಮದ್ಯವನ್ನು ಗಂಟಲಿಗಿಳಿಸಿ ಹುಡುಗನೊಬ್ಬನಿಗೆ ಏನನ್ನೋ ತಿನ್ನಲು ಕೊಡುತ್ತಾ, ಅವನ ಬಗೆಗೆ ಪ್ರೀತಿಯನ್ನೋ, ಮತ್ತಾವುದೋ ಭಾವವನ್ನೋ ತೋರುತ್ತಿರುವ ದೃಶ್ಯ ನೆನಪಾಗುತ್ತದೆ. ಆ ಗಳಿಗೆಯಲ್ಲಿ ಆ ಹೆಣ್ಣಿನ ಮುಖದ ಮೇಲಿದ್ದ ಭಾವ ಏನನ್ನು ಹೇಳುತ್ತಿತ್ತು ಎಂಬ ಪ್ರಶ್ನೆ ಮುತ್ತತೊಡಗುತ್ತದೆ. ಆ ಹುಡುಗನನ್ನು ಸಾಕಲಾಗದ ಅಸಹಾಯಕತೆಯೇ? ಅವನನ್ನು ಎಂದೋ ಬಿಟ್ಟ ಅಗಲಿಕೆಯ ಭಾವವೇ? ಆ ಹುಡುಗನ ಮುಖದ ಭಾವವೇನು? ಅವನ ಮನಸ್ಸಿನಲ್ಲಿ ನಡೆಯುತ್ತಿರಬಹುದಾದ ವ್ಯಾಪಾರ ಏನಿರಬಹುದು...?  ಫೋಟೋದ ಫ್ರೇಮಿನಂತೆ ಆ ಚಿತ್ರ ನನ್ನ ಚಿತ್ತದಲ್ಲಿ ಹಾಗೇ ಇದೆ, ಮಾಸಲು ಮಾಸಲಾಗಿ. ಆ ಹೆಂಗಸಿನ ಜೊತೆಗೆ ಅಲ್ಲೇ ಇದ್ದ ಮತ್ತೊಬ್ಬ ಹೆಂಗಸಿನ ಮುಖವೂ ಈ ಫೋಟೋದೊಳಗೆ ಸೇರಿಕೊಳ್ಳಲೆತ್ನಿಸುತ್ತದೆ.  ಅವತ್ತು ಅಲ್ಲೇ ನಿಂತು ವಿಚಾರಿಸಿದ್ದರೆ ಆ ಮೂವರ ಆ ಕ್ಷಣದ ಮನೋಲೋಕ ನನ್ನ ಅರಿವಿಗೆ ಬರುತ್ತಿತ್ತೇ? ಅವರು ತಮಿಳರಿರಬಹುದೆಂಬ ಊಹೆಯ ಮೇಲೆ ಹೇಳುವುದಾದರೆ, ಅವರ ಭಾಷೆ ಬರದ ನನಗೆ ಅವರ ಮನಸ್ಸು ತಿಳಿಯುವುದು ಸಾಧ್ಯವಿತ್ತೇ? ಅಕಸ್ಮಾತ್ ತಮಿಳು ಬಂದಿದ್ದರೂ ಆ ಭಾವ ತಿಳಿಯುತ್ತಿತ್ತೇ? ನಾನು ಅವರನ್ನು ವಿಚಾರಿಸಿದ್ದರೂ ಅವರು ತಮ್ಮ ಮನಸ್ಸಿನಲ್ಲಿ ನಡೆಯುತ್ತಿದ್ದುದನ್ನು ವಿವರಿಸುವುದು ಸಾಧ್ಯವಿತ್ತೇ... 

ಹೀಗೆ ಆ ಚಿತ್ರ ನೆನಪಾದಾಗಲೆಲ್ಲ ಆ ಸನ್ನಿವೇಶದ ಅಸಲಿ ಅರ್ಥ ಇನ್ನೆಂದೂ ಹೊಳೆಯುವುದು ಸಾಧ್ಯವಿಲ್ಲ ಎನ್ನಿಸುತ್ತದೆ. ಅಷ್ಟೇ ಯಾಕೆ, ಇವತ್ತು ಕೂಡ ಆ ಸನ್ನಿವೇಶ ಅರ್ಥವಾಗುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಅಂದರೆ, ಮಾನವ ಸನ್ನಿವೇಶ ಹಾಗೂ ಸ್ಥಿತಿಗಳು ನನಗೆ ಅರ್ಥವಾಗಿವೆ ಎಂದು ಬರೆಯಲು ಹೊರಡುವುದೇ ಒಂದು ಭ್ರಮೆಯೇನೋ! ಬರೆವ ಕ್ರಿಯೆಯಲ್ಲೇ ಕೆಲವು ಅರ್ಥಗಳು ಹೊಳೆಯುತ್ತವೆ ಎಂಬ ಗ್ರಹಿಕೆ ಕೂಡ ಪೂರ್ತಿ ನಿಜವಿರಲಿಕ್ಕಿಲ್ಲ. ಬರೆಯುವವರು ಕೊನೆಗೂ ಮತ್ತೊಬ್ಬನ ಅಥವಾ ಮತ್ತೊಬ್ಬಳ ಬಗೆಗಿನ ಹೊರ ವಿವರಗಳನ್ನು ಕೊಡಬಹುದೇ ಹೊರತು ಅವರೊಳಗೆ ನಿಜಕ್ಕೂ ಏನಾಗುತ್ತಿದೆ ಎಂದು ಹೇಳುವುದು ಕಷ್ಟ...

ಈ ಅರಿವಿನ ಎದುರು, ಬರವಣಿಗೆಯ ಮೂಲಕ `ಕಂಡಿರುವೆ’, `ಕಾಣುತ್ತಿರುವೆ’ ಎಂಬ ಠೇಂಕಾರ ಝರ್ರನೆ ಇಳಿದು, ಅಷ್ಟಿಷ್ಟು ಸತ್ಯ ಮಾತ್ರ ಅಕಸ್ಮಾತ್ ಹೊಳೆದಿರಬಹುದು ಹಾಗೂ ಕೆಲಬಗೆಯ ವೈರುಧ್ಯಗಳಾದರೂ ಈ ಬರವಣಿಗೆಯ ಕ್ರಿಯೆಯಲ್ಲಿ ಗೋಚರಿಸಿರಬಹುದು ಎಂಬ ಅನುಮಾನದಿಂದ ಈ ಕತೆಗಳನ್ನು ನಿಮಗೆ ದಾಟಿಸುತ್ತಿರುವೆ... 

ಇವು ಅಂದು ಬರೆದ ಮಾತುಗಳು. ಈ ಮಾತುಗಳನ್ನು ಬರೆದು ಹದಿನೇಳು ವರ್ಷಗಳಾದ ಮೇಲೂ ಕತೆ ಬರೆಯುವ ಬಗೆಗಿನ ಅಳುಕು ಹಾಗೇ ಇದೆ. ‘ಕಲಿತಿಲ್ಲವೆಂಬ ನೆನಪುಳಿಸು’ ಎಂಬ ಅಡಿಗರ ಸಾಲು ಎಚ್ಚರಿಸುತ್ತಲೇ ಇರುತ್ತದೆ.

ಈ ಅಂಕಣ ಬರೆಯುವ ಶನಿವಾರ, ಧಾರವಾಡದ ರಿಫ್ರೆಶರ್ ಕೋರ್ಸ್ ನಲ್ಲಿ ಮಾತಾಡಲು ಯೋಚಿಸುತ್ತಿದ್ದ ರೀಡರ್ ರೆಸ್ಪಾನ್ಸ್ ಥಿಯರಿಯ ಸುತ್ತ ಅಡ್ಡಾಡುತ್ತಿದ್ದ ಮನಸ್ಸು  ಯಾಕೋ ಹಲವು ವರ್ಷಗಳ ಕೆಳಗೆ ಆ ವೈನ್ ಸ್ಟೋರಿನ ಬಳಿ ಕಂಡ ಫೋಟೋ ಫ್ರೇಮಿನ ಕಡೆ ಹೊರಳಿತು. ಲೇಖಕ ಅಥವಾ ಲೇಖಕಿ ಏನು ಬೇಕಾದರೂ ಹೇಳ ಹೊರಟಿರಲಿ, ರೀಡರ್ ಅವನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದೇ ಮುಖ್ಯ ಎನ್ನುತ್ತದೆ ಈ ರೀಡರ್ ರೆಸ್ಪಾನ್ಸ್ ಥಿಯರಿ. ಆ ಚಿತ್ರಗಳ ಓದುಗನಾಗಿ ನನಗೇನೆನ್ನಿಸುತ್ತದೆ ಎಂಬ ಸುಂದರ ಕಸರತ್ತಿನಲ್ಲಿ ಇದೀಗ ತೊಡಗಬೇಕೆನ್ನಿಸಿತು...

ಅಕಸ್ಮಾತ್ ಈ ಅಂಕಣದ ಓದುಗ, ಓದುಗಿಯರು ಈ ಚಿತ್ರಕ್ಕೆ ಸ್ಪಂದಿಸದೆ ಕತೆಯಾಗಿಸಬಹುದೆ ಎಂದು ಕಾದು ನೋಡಲು ನಿರ್ಧರಿಸಿದೆ! ಅಕಸ್ಮಾತ್ ನೀವು ಮೇಲಿನ ಚಿತ್ರವನ್ನು ಕತೆಯಾಗಿಸಿದರೆ ವಿಸ್ತರಿಸಿ ಕಳಿಸಿ, ಅದನ್ನು ಮುಂದೆ ಬೆಳೆಸೋಣ.



ನೆನಪು ಹೇಳುವುದು:
‘ನಾನು ಅದನ್ನು ಮಾಡಿದ್ದೇನೆ.’  
ಸ್ವಾಭಿಮಾನ ಹೇಳುವುದು: 
‘ನಾನು ಅದನ್ನು ಮಾಡುವುದು ಸಾಧ್ಯವೇ ಇಲ್ಲ.’  
ಹಾಗೇ ಸೆಟೆದುಕೊಂಡೇ ಇರುವುದು ಸ್ವಾಭಿಮಾನ;
ಕೊನೆಗೆ ನೆನಪು ಶರಣಾಗುವುದು.  


ನಾವು ಕೊನೆಗೂ ಪ್ರೀತಿಸುವುದು
ನಮ್ಮ ಬಯಕೆಗಳನ್ನು ಮಾತ್ರ;
ಬಯಸಿದ ವಸ್ತುವನ್ನಲ್ಲ.

Share on:

Comments

0 Comments





Add Comment


Mundana Kathana Nataka

YouTube






Recent Posts

Latest Blogs