ಗೆಳೆಯರೊಬ್ಬರು ರಿಸರ್ಚ್ ಪ್ರಾಜೆಕ್ಟಿಗಾಗಿ ದಲಿತ ಆತ್ಮಚರಿತ್ರೆಗಳನ್ನು ಹುಡುಕುತ್ತಿದ್ದರು. ಅವರ ಹುಡುಕಾಟದ ಜಾಡಿನಲ್ಲಿ ಹೊರಟ ನಾನು ದಯಾ ಪವಾರರ ಮರಾಠಿ ಆತ್ಮಚರಿತ್ರೆ ‘ಬಲುತ’ ಭಾರತದ ಮೊದಲ ದಲಿತ ಆತ್ಮಚರಿತ್ರೆ ಎಂದು ದಾಖಲಾಗಿದ್ದನ್ನು ಗಮನಿಸಿದೆ. ‘ಬಲುತ’ಕ್ಕೂ ಮೊದಲು, ಆಧುನಿಕ ಕನ್ನಡದ ಮೊದಲ ದಲಿತ ಸಾಹಿತಿ ಡಿ. ಗೋವಿಂದದಾಸ್ ೧೯೪೦-೪೪ರ ನಡುವೆ ಬರೆದ ಅಪೂರ್ಣ ಆತ್ಮಚರಿತ್ರೆಯ ಪುಟಗಳು ಎಂ.ಎಸ್. ಶೇಖರ್ ಸಂಪಾದಿಸಿರುವ ‘ಡಿ. ಗೋವಿಂದದಾಸ್ ಸಮಗ್ರ ಸಾಹಿತ್ಯ’ ಪುಸ್ತಕದಲ್ಲಿವೆ. ಗೋವಿಂದದಾಸ್ ಅವರ ‘ನನ್ನ ಆತ್ಮಚರಿತೆ’ ಕನ್ನಡದ ಮೊದಲ ದಲಿತ ಆತ್ಮಚರಿತ್ರೆ ಎಂದು ಹೊಂಬಯ್ಯ ಹೊನ್ನಲಗೆರೆ ತಮ್ಮ ಥೀಸಿಸ್ಸಿನಲ್ಲಿ ತೋರಿಸಿಕೊಟ್ಟಿದ್ದು ನೆನಪಾಯಿತು. ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಕನ್ನಡದ ಮೊದಲ ಪೂರ್ಣ ದಲಿತ ಆತ್ಮಕತೆಯೆಂಬುದು ಕೂಡ ಈಗಾಗಲೇ ದಾಖಲಾಗಿದೆ.
ಅದೇನೇ ಇದ್ದರೂ, ಅಂಬೇಡ್ಕರ್ ಅವರ ‘ವೆಯ್ಟಿಂಗ್ ಫಾರ್ ಎ ವೀಸಾ’ ಎಂಬ ಆತ್ಮಚರಿತ್ರಾತ್ಮಕ ಬರವಣಿಗೆಯ ಮೂವತ್ತು-ನಲವತ್ತು ಪುಟಗಳೇ ಇಂಡಿಯಾದ ಮೊದಲ ದಲಿತ ಆತ್ಮಚರಿತ್ರೆ ಎಂದು ನನಗನ್ನಿಸಿದೆ. ಕಾರಣ, ಮುಂದೆ ಬಂದ ದಲಿತ ಆತ್ಮಚರಿತ್ರೆಗಳಲ್ಲಿ ಆತ್ಮಚರಿತ್ರೆಯೇ ಸಮುದಾಯದ ಪ್ರಾತಿನಿಧಿಕ ಚರಿತ್ರೆಯಾಗಲು ಅಗತ್ಯವಾಗಿದ್ದ ಮೂಲ ಮಾದರಿಗಳು ‘ವೆಯ್ಟಿಂಗ್ ಫಾರ್ ಎ ವೀಸಾ’ದ ಪುಟಗಳಲ್ಲಿವೆ. ಈ ಮೂಲ ಮಾದರಿಗಳನ್ನು ಹೀಗೆ ಪಟ್ಟಿ ಮಾಡಬಹುದು:
೧. ದಲಿತ ಲೇಖಕ, ಲೇಖಕಿಯರು ತಮ್ಮ ಅನುಭವವನ್ನು ಪ್ರಾಮಾಣಿಕವಾಗಿ ಹೇಳುತ್ತಲೇ ಅದು ದಲಿತ ಸಮುದಾಯದ ಕತೆಯಾಗುವುದು; ತಮ್ಮ ಕತೆಯ ಜೊತೆಗೇ ತಮ್ಮಂತೆ ಅವಮಾನಕ್ಕೊಳಗಾದ ಇತರರ ಕತೆಯನ್ನೂ ಹೇಳುವುದು.
೨. ದಲಿತ ಬದುಕಿನ ಅವಮಾನದ ಕತೆ ಹೇಳುತ್ತಲೇ ಅದು ಸವರ್ಣೀಯ ಸಮಾಜದ ಕ್ರೌರ್ಯದ ಹಾಗೂ ಭಾರತದ ಸಾವಿರಾರು ವರ್ಷಗಳ ಭೀಕರ ಅಸ್ಪೃಶ್ಯತೆಯ ಚರಿತ್ರೆಯ ದಾಖಲೆಯೂ ಆಗುವುದು.
೩. ಅತಿ ಆಭರಣಾತ್ಮಕ ಶೈಲಿಯಿಲ್ಲದೆ ನೇರವಾಗಿ ಅನುಭವವನ್ನು ನಿರೂಪಿಸುವುದು.
೪.ವಾಸ್ತವದ ಕಟು ವಿವರಗಳನ್ನು ಹೇಳುವುದರ ಮೂಲಕವೇ ಶೋಷಕ-ಶೋಷಿತರಿಬ್ಬರನ್ನೂ ಬದಲಾಯಿಸಲೆತ್ನಿಸುವುದು.
೫. ಎಲಿನಾರ್ ಝೆಲಿಯಟ್ ತಮ್ಮ ‘ಫ್ರಂ ಅನ್ಟಚಬಲ್ ಟು ದಲಿತ್’ ಪುಸ್ತಕದಲ್ಲಿ ತೋರಿಸುವಂತೆ ‘ಅಸ್ಪೃಶ್ಯತೆ’ಯಿಂದ ಕುಗ್ಗಿದ ವ್ಯಕ್ತಿತ್ವ ಸ್ವಾಭಿಮಾನದ, ‘ದಲಿತ್ ಐಡೆಂಟಿಟಿ’ಯ ಕಡೆಗೆ ನಡೆಯುವುದನ್ನು ದಾಖಲಿಸುವುದು…
೬. ಇದೆಲ್ಲದರ ಜೊತೆಗೆ ಯಾವುದೇ ದಮನಿತ ಸಮುದಾಯಗಳ ಲೇಖಕ, ಲೇಖಕಿಯರು ಹಾಗೂ ಒಟ್ಟಾರೆಯಾಗಿ ದಮನಿತರು ತಮ್ಮ ಆತ್ಮಚರಿತ್ರೆಯನ್ನು ಬರೆಯುವ ಹಾದಿಯನ್ನೂ ತೋರಿಸುವುದು.
ಇವೆಲ್ಲ ಮಾದರಿಗಳನ್ನೂ ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯ ಬಿಡಿಬಿಡಿ ಭಾಗಗಳ ಮೂಲಕ ಸೂಕ್ಷ್ಮವಾಗಿ ಸೂಚಿಸುತ್ತಾ ಭಾರತದ ದಲಿತ ಆತ್ಮಚರಿತ್ರೆಗಳ ಸ್ವರೂಪವನ್ನೂ, ಭಾರತದಲ್ಲಿ ಆವರೆಗೆ ಬರೆಯದ ದಮನಿತರ ಆತ್ಮಚರಿತ್ರೆಗಳ ಮಾದರಿಯನ್ನೂ ರೂಪಿಸಿದಂತಿದೆ. ಇಂಡಿಯಾದ ದಲಿತ ವರ್ಗಗಳ, ಅಂಚಿನ ವರ್ಗಗಳ, ಶೂದ್ರ ವರ್ಗಗಳ ವಿಮೋಚನಾ ಸಿದ್ಧಾಂತಗಳನ್ನು ರೂಪಿಸಿದ ಅಂಬೇಡ್ಕರ್ ದಲಿತ ಸ್ವಾನುಭವವನ್ನು, ದಮನಿತರ ಅನುಭವಗಳನ್ನು ಹೇಗೆ ಬರೆಯಬೇಕು ಎಂದು ಕೂಡ ‘ವೆಯ್ಟಿಂಗ್ ಫಾರ್ ಎ ವೀಸಾ’ದಲ್ಲಿ ತೋರಿಸಿಕೊಟ್ಟಿದ್ದಾರೆಂದು ನನಗನ್ನಿಸಿದೆ.
ತಮ್ಮ ಆತ್ಮಚರಿತ್ರೆಯ ಭಾಗಗಳನ್ನು ಇಂಗ್ಲಿಷಿನಲ್ಲಿ ಬರೆಯಲಾರಂಭಿಸಿದ ಅಂಬೇಡ್ಕರ್, ‘ಸವರ್ಣೀಯ ಹಿಂದೂಗಳು ಅಸ್ಪೃಶ್ಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ವಿದೇಶೀಯರಿಗೆ ಅಂದಾಜು ಕೊಡುವುದು ತಮ್ಮ ಈ ಬರವಣಿಗೆಯ ಉದ್ದೇಶ’ ಎಂದಿದ್ದರು. ‘ವೆಯ್ಟಿಂಗ್ ಫಾರ್ ಎ ವೀಸಾ’ದ ಎಪ್ಪತ್ತು, ಎಂಬತ್ತು ಪುಟಗಳಲ್ಲಿ ಅನೇಕ ಪುಟಗಳು ಕಾಣೆಯಾಗಿವೆ ಎಂಬ ಅಸ್ಪಷ್ಟ ಮಾಹಿತಿಯೂ ಇದೆ. ಈ ಆತ್ಮಚರಿತ್ರೆಯ ಕೊನೆಯ ಭಾಗದಲ್ಲಿ ೧೯೩೮ರ ಮಾರ್ಚ್ ೬ರಂದು ಬಾಂಬೆಯ ದಾದರ್ ನಲ್ಲಿ ನಡೆದ ಭಂಗಿ ಸಮುದಾಯದ ಸಭೆಯಲ್ಲಿ ಭಂಗಿ ಹುಡುಗ ಪರ್ಮಾರ್ ಕಾಳಿದಾಸ್ ಶಿವರಾಂ ತಾನು ‘ತಲಾಟಿ’ಯಾಗಿ ನೌಕರಿಗೆ ಸೇರಿದ ಕಾರಣದಿಂದಾಗಿ ಪಟ್ಟ ದಾರುಣ ಅನುಭವಗಳನ್ನು ಹೇಳಿಕೊಂಡಿದ್ದನ್ನು ಅಂಬೇಡ್ಕರ್ ದಾಖಲಿಸುತ್ತಾರೆ. ಈ ದಾಖಲೆಯ ಆಧಾರದಿಂದ ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯ ಭಾಗಗಳನ್ನು ೧೯೩೮ರಿಂದಲೋ, ಅನಂತರವೋ ಬರೆದಿರಬಹುದು ಎಂದು ಊಹಿಸಬಹುದು; ಅಥವಾ ಬಿಡಿಬಿಡಿ ಭಾಗಗಳನ್ನು ಈ ಹಿಂದೆಯೂ ಆಗಾಗ್ಗೆ ಬರೆದಿರಬಹುದು. ಅಂಬೇಡ್ಕರ್ ನಿರ್ಗಮನದ ನಂತರ ಈ ಭಾಗಗಳು ಪ್ರಕಟವಾದವು.
ಕುತೂಹಲಕರ ವಿಚಾರವೆಂದರೆ, ಅಂಬೇಡ್ಕರ್ `ವೆಯ್ಟಿಂಗ್ ಫಾರ್ ಎ ವೀಸಾ’ದ ಪುಟಗಳನ್ನು ಬರೆದ ನಂತರದ ಕಾಲದಲ್ಲಿ, ೧೯೪೦ರಲ್ಲಿ, ಕನ್ನಡ ಲೇಖಕ ಡಿ. ಗೋವಿಂದದಾಸ್ ತಮ್ಮ ಆತ್ಮಚರಿತ್ರೆಯ ‘ನಾಲ್ಕು ಪಂಕ್ತಿಗಳನ್ನು’ ಬರೆದು ಸುಮ್ಮನಾದರು. ೧೯೪೪ರಲ್ಲಿ ಮತ್ತೆ ಬರವಣಿಗೆ ಮುಂದುವರಿಸಿದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಮ್ಮನಿಂಗಳ ಗ್ರಾಮದ ಡಿ. ಗೋವಿಂದದಾಸರ ಆತ್ಮಕತೆ ಕೂಡ ಅಪೂರ್ಣವಾಗಿದೆ. ಈ ಪುಟಗಳನ್ನು ಬರೆದು ಕೈಬಿಟ್ಟ ಗೋವಿಂದದಾಸ್ ೮ ಆಗಸ್ಟ್ ೧೯೮೬ರವರೆಗೂ ಬದುಕಿದ್ದರು ಎಂದು ಗೋವಿಂದದಾಸರ ಮಗ ರಾಜಬಾನು ಈಚೆಗೆ ಹೇಳಿದರು. ಆ ನಡುವೆ ಅಂಬೇಡ್ಕರ್ ಬರಹಗಳನ್ನು ಓದಿದ್ದ ಗೋವಿಂದದಾಸರ ಆತ್ಮಕತೆ ಮುಂದುವರಿದಿದ್ದರೆ ಆ ಕಾಲದ ಕರ್ನಾಟಕದ ದಲಿತ ಹಾಗೂ ಸವರ್ಣೀಯ ಸಮಾಜಗಳ ಚರಿತ್ರೆ ಇನ್ನಷ್ಟು ವಿವರವಾಗಿ ದಾಖಲಾಗುತ್ತಿತ್ತು. ಈ ಬರವಣಿಗೆ ಅರ್ಧದಲ್ಲೇ ನಿಂತಿದ್ದು ವಿಷಾದ ಹುಟ್ಟಿಸುತ್ತದೆ.
ಅಂಬೇಡ್ಕರ್ ಆತ್ಮಚರಿತ್ರೆಯ ಸಿಕ್ಕದ ಪುಟಗಳು ಅಥವಾ ಬರೆಯದ ಪುಟಗಳು ಇನ್ನಷ್ಟು ಆಳವಾದ ವಿಷಾದ ಹುಟ್ಟಿಸುತ್ತವೆ. ಕಾರಣ, ಪ್ರಖರ ವಿದ್ವಾಂಸರಾಗಿದ್ದ ಅಂಬೇಡ್ಕರ್ ಅವರ ಪ್ರಾಮಾಣಿಕ ಬರವಣಿಗೆಯಲ್ಲಿ ಆವರೆಗೆ ದಾಖಲಾಗದಿದ್ದ ದಲಿತ ಸಮುದಾಯದ ಅಧಿಕೃತ ಚರಿತ್ರೆ ಬಿಚ್ಚಿಕೊಳ್ಳತೊಡಗಿತ್ತು. ಅಂಬೇಡ್ಕರ್ ಈ ಬರವಣಿಗೆಯನ್ನು ಮುಂದುವರಿಸಲಿದ್ದ ಸೂಚನೆಗಳಿದ್ದವು. ಇದಕ್ಕೂ ಮೊದಲು ಅಂಬೇಡ್ಕರ್ ಲಂಡನ್ನಿನ ದುಂಡುಮೇಜಿನ ಪರಿಷತ್ತಿನ ಸಭೆಗೆ ಹೊರಟಾಗ ಅವರ ಶಾಲಾ ಮೇಷ್ಟರು ಪ್ರೀತಿಯಿಂದ ಪತ್ರ ಬರೆದಿದ್ದರು. ಅದನ್ನು ನೆನೆಯುತ್ತಾ ಅಂಬೇಡ್ಕರ್ ಬರೆಯುತ್ತಾರೆ: ‘ನಾನು ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಲಂಡನ್ಗೆ ಹೊರಟಾಗ ಅವರು ಪ್ರೀತಿಯ ಪತ್ರವೊಂದನ್ನು ಬರೆದಿದ್ದರು. ಮುಂದೊಮ್ಮೆ ನಾನೇನಾದರೂ ಆಟೋಬಯಾಗ್ರಫಿ ಬರೆದರೆ ಆ ಪತ್ರವನ್ನು ಪ್ರಕಟಿಸುತ್ತೇನೆ'. ಅಂದರೆ, ೧೯೩೦ ಅಥವಾ ೧೯೩೨ರ ನಂತರ ಅಂಬೇಡ್ಕರ್ ತಮ್ಮ ಆತ್ಮಚರಿತ್ರಾತ್ಮಕ ಘಟನೆಗಳನ್ನು ಬರೆಯಲಾರಂಭಿಸಿರಬಹುದು. ಸಿದ್ಧಾರ್ಥ ಕಾಲೇಜಿನ ಲೈಬ್ರರಿಯನ್ ಎಸ್. ಎಸ್. ರೇಗೆಯವರಿಗೆ ಸಿಕ್ಕ ಟಿಪ್ಪಣಿಗಳು ಅಂಬೇಡ್ಕರ್ ತಮ್ಮ ಆತ್ಮಚರಿತ್ರೆಯನ್ನು ಮೂರು ಭಾಗಗಳಲ್ಲಿ ಬರೆಯಹೊರಟಿದ್ದರು ಎಂದು ಸೂಚಿಸುತ್ತವೆ.
ನಿಷ್ಕರುಣಿ ಕಾಲ ಅಂಬೇಡ್ಕರ್ ಅವರಿಗೆ ಸಮಯಾವಕಾಶ ಕೊಡಲಿಲ್ಲ. ಅಂಬೇಡ್ಕರ್ ಬದುಕಿದ್ದಾಗಲೇ ಅವರ ಸಂಬಂಧಿ ಖೈರ್ಮೋಡೆ ಅಂಬೇಡ್ಕರ್ ಜೀವನಚರಿತ್ರೆಯನ್ನು ಬರೆಯಹೊರಟರು. ಖೈರ್ಮೋಡೆಯವರ ನಿರೂಪಣೆಯ ಮೊದಲ ಸಂಪುಟದ ವಿವರಗಳನ್ನು ಅಂಬೇಡ್ಕರ್ ಗಮನಿಸಿದಂತಿದೆ. ಧನಂಜಯ್ ಕೀರ್ ಅಂಬೇಡ್ಕರ್ ಜೀವನಚರಿತ್ರೆ ಬರೆಯಹೊರಟಾಗ ಅಂಬೇಡ್ಕರ್ ತಮ್ಮ ಜೀವನದ ಕೆಲವು ವಿವರಗಳನ್ನು ಹೇಳಿದಂತಿದೆ. ಆದರೆ ಧನಂಜಯ ಕೀರ್ ಬರೆದ ‘ಡಾ. ಅಂಬೇಡ್ಕರ್: ಲೈಫ್ ಅಂಡ್ ಮಿಷನ್’ ಜೀವನಚರಿತ್ರೆಯಲ್ಲಿ ಅನೇಕ ದೋಷಗಳು ಕಾಣುತ್ತವೆ. ಸಾವರ್ಕರ್ ಜೀವನಚರಿತ್ರೆಯನ್ನೂ ಬರೆದಿರುವ ಕೀರ್ ಅವರ ಸೈದ್ಧಾಂತಿಕ ಗೊಂದಲಗಳು ಹಲವೆಡೆ ಎದ್ದು ಕಾಣುತ್ತವೆ. ಆದರೂ ಅಂಬೇಡ್ಕರ್ ಕುರಿತು ಹೆಚ್ಚಿನ ವಿವರಗಳೇ ಇಲ್ಲದಿದ್ದ ಕಾಲದಲ್ಲಿ ಕೀರ್ ಬರೆದ ಜೀವನಚರಿತ್ರೆಗೆ ಒಂದು ಮಟ್ಟದ ಮಹತ್ವವಿದೆ. ಆದರೆ ಕೀರ್ ಮಾಡುವ ಕೆಲ ಬಗೆಯ ವಿಶ್ಲೇಷಣೆ, ವ್ಯಾಖ್ಯಾನಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅಗತ್ಯವಿದೆ.
ನಂತರ ಅಂಬೇಡ್ಕರ್ ಅವರ ಹಲ ಬಗೆಯ ಜೀವನಚರಿತ್ರೆಗಳು ಬಂದವು: ಖೈರ್ಮೋಡೆಯವರ ‘ಬಾಬಾಸಾಹೇಬ್ ಡಾ. ಅಂಬೇಡ್ಕರ್: ಜೀವನ್ ಔರ್ ಚಿಂತನ್’ ಎಂಬ ಮರಾಠಿ, ಹಿಂದಿ ಸಂಪುಟಗಳು; ವಸಂತ ಮೂನ್ ಬರೆದ Dr. Babasaheb Ambedkar; ಅಶೋಕ್ ಗೋಪಾಲ್ ಅವರ A Part Apart: The Life and Thought of B.R. Ambedkar; ಶಶಿ ಥರೂರ್ ಬರೆದ Ambedkar: A Life; ಆನಂದ್ ತೇಳ್ತುಂಬ್ಡೆಯವರ The Iconoclast: Reflective Biography of Dr. Babasaheb Ambedkar ಇತ್ಯಾದಿ.
ಇವೆಲ್ಲವನ್ನೂ ಕುರಿತು ಟಿಪ್ಪಣಿ ಮಾಡುತ್ತಿರುವಾಗಲೇ ತುಂಬಾಡಿ ರಾಮಯ್ಯನವರ ಆತ್ಮಚರಿತ್ರೆ ‘ಮಣೆಗಾರ’ಕ್ಕೆ ಇಪ್ಪತ್ತೈದು ವರ್ಷ ತುಂಬಿತೆಂದು ಗೆಳೆಯರು ಹೇಳಿದರು. ‘ಮಣೆಗಾರ’ ಕುರಿತು ಇಪ್ಪತ್ತೈದು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾದ ’ಗಾಳಿ ಬೆಳಕು’ ಅಂಕಣದ ಬರಹವನ್ನು ಗೆಳೆಯರಾದ ಚಂದ್ರಶೇಖರ ಐಜೂರ್, ಶ್ರೀಧರ್ ತಮ್ಮ ‘ಫೇಸ್ ಬುಕ್’ನಲ್ಲಿ ಪ್ರಕಟಿಸಿ ಮತ್ತೆ ಲೋಕಕ್ಕೆ ತಲುಪಿಸಿದ್ದರು. ಈ ನೆಪದಲ್ಲಿ ಅಂಬೇಡ್ಕರ್ ಆತ್ಮಚರಿತ್ರೆ ಪ್ರೇರೇಪಿಸಿದ ನನ್ನ ಈಚಿನ ಟಿಪ್ಪಣಿಗಳ ಭಾಗಗಳನ್ನು ಇಲ್ಲಿ ಕೊಟ್ಟಿರುವೆ. ಈ ಟಿಪ್ಪಣಿಗಳು ತುಂಬಾಡಿ ರಾಮಯ್ಯನವರ ‘ಮಣೆಗಾರ’ದವರೆಗೂ ಚಾಚಿಕೊಳ್ಳಬಲ್ಲವು ಎಂದು ಊಹಿಸುವೆ. ‘ಮಣೆಗಾರ’ದ ಬರವಣಿಗೆ ರಾಮಯ್ಯನವರ ಮುಂದಿನ ಪುಸ್ತಕಗಳನ್ನೂ ಬರೆಸಿದಂತಿದೆ.
ಅಂದರೆ, ಆತ್ಮಚರಿತ್ರೆಯ ಬರವಣಿಗೆಯ ಪ್ರಯತ್ನ ಪ್ರತಿ ವ್ಯಕ್ತಿಯ ಒಳಗಿರುವ ಕತೆ ಹೇಳುವ ಎನರ್ಜಿಯನ್ನು ರಿಲೀಸ್ ಮಾಡಬಲ್ಲದು. ಬರೆಯುವುದು ತೊಡಕಾದಾಗ ಕೊನೆಯ ಪಕ್ಷ ನಿಮ್ಮ ಕತೆಯನ್ನು ನಿಮಗೇ ಹೇಳಿಕೊಳ್ಳಲು ಪ್ರಯತ್ನಿಸಿ; ಮುಂದೆ ಸಾಗುವುದಿಲ್ಲವೆಂದು ಮೊಂಡು ಹಿಡಿದಿರುವ ಬರವಣಿಗೆ ಸರಾಗವಾಗಿ ಹರಿದರೂ ಹರಿಯಬಹುದು! ಆದರೆ ಅಂಥ ಬರವಣಿಗೆಯ ಸುಳ್ಳು, ನಿಜ, ಉತ್ಪ್ರೇಕ್ಷೆಗಳ ಸ್ವ-ಪರೀಕ್ಷೆ ಕೂಡ ಬರವಣಿಗೆಯ ಅತ್ಯಗತ್ಯ ಭಾಗವಾಗಿರಬೇಕಾಗುತ್ತದೆ.
ಇಂಥ ಸ್ವ-ಪರೀಕ್ಷೆ ಎಲ್ಲ ಜಾತಿ, ವರ್ಗ, ಸಮುದಾಯಗಳ ಲೇಖಕ, ಲೇಖಕಿಯರ ಆತ್ಮಚರಿತ್ರೆಗಳ ಪ್ರಾಥಮಿಕ ಅಗತ್ಯವಾಗಿರಬೇಕು ಹಾಗೂ ಮೂಲ ತುಡಿತವಾಗಿರಬೇಕು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ದಲಿತ ಆತ್ಮಕತೆಯಿರಲಿ, ಮಹಿಳಾ ಆತ್ಮಕತೆಯಿರಲಿ, ಯಾರದೇ ಆತ್ಮಕತೆಯಿರಲಿ, ಬರೆವವರಲ್ಲಿ ನಿಷ್ಠುರ ಸ್ವ-ಪರೀಕ್ಷೆಯಿಲ್ಲದಿದ್ದರೆ ಅವು ಸಾರ್ವಜನಿಕ ಭಾಷಣಗಳಾಗುತ್ತವೆ. ಆತ್ಮಕತೆ ’ಆತ್ಮಕಹಳೆ’ಯಾಗದಂತೆ ಅಂಬೇಡ್ಕರ್ ಅಪೂರ್ಣ ಆತ್ಮಚರಿತ್ರೆಯ ಪುಟಗಳು ನಮ್ಮನ್ನು ಎಚ್ಚರಿಸುತ್ತಿರಲಿ!