ಪದಾರ್ಥವನರಿಯಬಹುದೆ?

ಬರಬರುತ್ತಾ ಒಂದು ವ್ಯಕ್ತಿತ್ವದಲ್ಲಿ ಒಂದು ಗುಣವೇ ಎದ್ದು ಕಾಣತೊಡಗಿದರೆ ಏನಾಗುತ್ತದೆ? 

ಈ ಪ್ರಶ್ನೆ ಹುಟ್ಟಿದ್ದು ಹಿರಿಯ ಗೆಳೆಯರಂತಿದ್ದ ಕವಿ ಸಿದ್ಧಲಿಂಗಯ್ಯನವರ ವ್ಯಕ್ತಿತ್ವ ಯಾಕೋ ನೆನಪಾದಾಗ. ಮೊದಲು ಸಿಟ್ಟಿನ ಕವಿ ಎನ್ನಿಸಿಕೊಂಡಿದ್ದ ಸಿದ್ದಲಿಂಗಯ್ಯ ಸಂಜೆಯ ಗೋಷ್ಠಿಗಳಲ್ಲಿ ತಮಾಷೆಯ ಪ್ರಸಂಗಗಳನ್ನು ಹೇಳುವ ವ್ಯಕ್ತಿಯಾದರು. ಸಭೆಗಳಲ್ಲೂ ಪಂಚಿಂಗ್ ಜೋಕುಗಳನ್ನು ಪ್ರಯೋಗಿಸತೊಡಗಿದರು. ಅವರ ಈ ವ್ಯಕ್ತಿತ್ವವೇ ಮುಂಚೂಣಿಗೆ ಬಂದು ಅವರ ಕವಿ ವ್ಯಕ್ತಿತ್ವ, ಸ್ಕಾಲರ್ ವ್ಯಕ್ತಿತ್ವ, ವಿಧಾನ ಪರಿಷತ್ತಿನಲ್ಲಿ ಮುಖ್ಯ ಪ್ರಶ್ನೆಗಳನ್ನೆತ್ತುತ್ತಿದ್ದ ದಿಟ್ಟ ವ್ಯಕ್ತಿತ್ವ ಇವೆಲ್ಲ ಹಿನ್ನೆಲೆಗೆ ಸರಿಯತೊಡಗಿದವು; ಎಲ್ಲರೂ 'ಕವಿಗಳು’ ಎಂದು ಕರೆಯುತ್ತಿದ್ದ ಕವಿ ವ್ಯಕ್ತಿತ್ವವೂ ಮಬ್ಬಾಗತೊಡಗಿತು.

ಸಿದ್ಧಲಿಂಗಯ್ಯನವರು ಹಲ ಬಗೆಯ ಪುಸ್ತಕಗಳನ್ನು ಬೆನ್ನು ಹತ್ತುತ್ತಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಒಂದು ಸಂಜೆ ಭಾಷಣ ಮುಗಿಸಿ ನನ್ನ ಜೊತೆ ಹೊರಟ ಅವರು ವೇದಾಂತ ಬುಕ್ ಹೌಸ್ ಹೊಕ್ಕರು. ಅಲ್ಲಿ ಕೆಲವು ಪುಸ್ತಕಗಳನ್ನು ಕೊಂಡರು. ಉಳಿದ ಹಣದಲ್ಲಿ ಸಂಜೆ ಪುಟ್ಟ ಪಾರ್ಟಿ. ಕವಿಗಳ ವೇದಾಂತ ಪುಸ್ತಕ ಮಳಿಗೆಯ ಭೇಟಿ ನನ್ನ ಮನಸ್ಸಿನಲ್ಲಿ ಸುತ್ತರಗಾಣ ಹೊಡೆಯುತ್ತಿತ್ತು! ಮಾತಿನ ನಡುವೆ ಅವರೇ ಹೇಳಿದರು: 'ಇವರೆಲ್ಲ ಏನು ಬರೀತಾರೆ… ಇವೆಲ್ಲ ಗೊತ್ತಿರಬೇಕು. ಅದಕ್ಕೇ ಅಲ್ಲಿಗೆ ಹೋಗ್ತಿರ್‍ತೀನಿ.’ 

ಇಂಥ ಪುಸ್ತಕಗಳು ಯಜಮಾನಿಕೆಯ ಸಂಕಥನ ಸೃಷ್ಟಿಸುತ್ತಿದ್ದುದನ್ನು ಅರಿತಿದ್ದ ಅಂಬೇಡ್ಕರ್ ಇವನ್ನು ಮೂಲ ಸಂಸ್ಕೃತದಲ್ಲೇ ಓದಿದ್ದರು. ಈ ಮಾದರಿ ಯಾವುದೇ ಅಕಡೆಮಿಕ್ ಸಂಶೋಧನೆ ಮಾಡುವವರಿಗೆ ಮುಖ್ಯ ಪಾಠವಾಗಬಲ್ಲದು: ಮೂಲ ಪಠ್ಯಗಳನ್ನು ನಿಕಟವಾಗಿ ಓದಿದರೆ ಮಾತ್ರ ಹೊಸತೇನಾದರೂ ಕಾಣುತ್ತದೆ.

ಸಿದ್ಧಲಿಂಗಯ್ಯ ಹಲಬಗೆಯ ಪುಸ್ತಕಗಳನ್ನು ಓದುತ್ತಿದ್ದರು: ಬುದ್ಧಿಸಂ, ಅಂಬೇಡ್ಕರ್ ಕುರಿತ ಹತ್ತಾರು ಪುಸ್ತಕಗಳನ್ನು ಓದಿದ್ದರು. ಅಲ್ಲಮ ಮತ್ತು ಬೌದ್ಧರ ನಡುವಣ ಜಗಳದ ಬಗ್ಗೆ ಸುದೀರ್ಘವಾಗಿ ಮಾತಾಡಿದ್ದರು. ಲಂಕೇಶರ ಮಾತಿನಂತೆ ಗಾಂಧೀಜಿಯವರ 'ಹರಿಜನ್’ ಪತ್ರಿಕೆಯ ಬರಹಗಳನ್ನೆಲ್ಲ ಓದಿದ್ದರು. ಅವರು ಇವೆಲ್ಲ ವಿಚಾರಗಳನ್ನೂ ಯಾಕೆ ಸಂಭಾಷಣೆಯಲ್ಲಿ, ಭಾಷಣದಲ್ಲಿ ತರುವುದಿಲ್ಲ ಎಂದು ವಿಸ್ಮಯವಾಗುತ್ತಿತ್ತು. 

ಎಲಿನಾರ್ ಝೆಲಿಯಟ್ ಬರೆದ 'ಫ್ರಂ ಅನ್ ಟಚಬಲ್ ಟು ದಲಿತ್’ ಪುಸ್ತಕದ ಬಗ್ಗೆ ಮೊದಲು ನನಗೆ ಹೇಳಿದವರು ಅವರೇ. ಎಲ್ಲೋ ಆ ಪುಸ್ತಕದ ವಿವರಗಳನ್ನು ಓದಿದ್ದ ಅವರು ಹೇಳಿದ್ದು ಕುತೂಹಲಕರವಾಗಿತ್ತು:

ಒಬ್ಬ 'ಅಸ್ಪೃಶ್ಯ’ನು 'ದಲಿತ’ನಾಗುವ ಪ್ರಕ್ರಿಯೆ ಎಂದರೆ, ಪ್ರಜ್ಞಾಪೂರ್ವಕವಾಗಿ ಸಿಟ್ಟಿನ, ಹೊಸ ಸ್ವಾಭಿಮಾನದ ವ್ಯಕ್ತಿತ್ವವನ್ನು ಪ್ರಧಾನವಾಗಿ ಗಳಿಸಿಕೊಳ್ಳುವುದು ಎಂಬ ಆ ಪುಸ್ತಕದ ಒಂದು ಗ್ರಹಿಕೆಯನ್ನು ಸಿದ್ಧಲಿಂಗಯ್ಯ ವಿವರಿಸಿದರು. ಎಲಿನಾರ್ ಝೆಲಿಯಟ್ ಪುಸ್ತಕ ಈ ಅಂಶವನ್ನು ದಲಿತ ಸಾಹಿತ್ಯ, ಚಳುವಳಿ ಎಲ್ಲದರಲ್ಲೂ ಕಂಡುಕೊಳ್ಳುತ್ತದೆ.

ಅವತ್ತು 'ಅನ್‌ಟಚಬಲ್ಸ್' ಎಂಬ ಇಂಗ್ಲಿಷ್ ಸಿನಿಮಾವನ್ನೂ ಕವಿಗಳು ನೆನಸಿಕೊಂಡರು. ಅದಕ್ಕೂ ನಾವು ಚರ್ಚಿಸುವ 'ಅನ್‌ಟಚಬಲಿಟಿ’ಗೂ ಯಾವ ಸಂಬಂಧವೂ ಇರಲಿಲ್ಲ. ಇಂಗ್ಲಿಷ್ ಸಿನಿಮಾದ ಟೈಟಲ್ಲನ್ನು 'ಅಸ್ಪೃಶ್ಯ’ ಪದಕ್ಕೆ ಕನೆಕ್ಟ್ ಮಾಡುತ್ತಾ ಸಿದ್ಧಲಿಂಗಯ್ಯ ಹೇಳಿದರು: 'ಇದು ಮುಟ್ಟಬಾರದ ವ್ಯಕ್ತಿಯೊಬ್ಬ ಯಾರೂ ಸುಲಭವಾಗಿ ಮುಟ್ಟಲಾಗದ ವ್ಯಕ್ತಿಯಾಗುವ ರೀತಿ! ಅಂದರೆ, ಒಂದು ಕಾಲಕ್ಕೆ ದೈನ್ಯದ ವ್ಯಕ್ತಿತ್ವ ಪಡೆದಿದ್ದ ವ್ಯಕ್ತಿಯೊಬ್ಬ ಹೊಸ ವಿದ್ಯಾಭ್ಯಾಸ ಪಡೆದು, ವಿಮೋಚನೆಗೊಂಡು, ಸಂಘಟಿತನಾಗಿ, ಹೋರಾಡುತ್ತಾ, 'ಎಲ್ಲಿ! ಟಚ್ ಮಾಡ್ ನೋಡಿ' ಎಂದು ಸವಾಲೆಸೆಯುವ ವ್ಯಕ್ತಿತ್ವವನ್ನು ಪಡೆಯುತ್ತಾನೆ.’

೧೯೭೨ರಲ್ಲಾಗಲೇ 'ದಲಿತ’ ಎಂಬ ಪದಕ್ಕೆ ಆತ್ಮಗೌರವ, ಸ್ವಾಭಿಮಾನ, ಪ್ರತಿಭಟನೆ ಮುಂತಾದ ಕ್ರಾಂತಿಕಾರಕ ಅರ್ಥಗಳನ್ನು ಮಹಾರಾಷ್ಟ್ರದ 'ದಲಿತ್ ಪ್ಯಾಂಥರ್‍ಸ್’ ಪ್ರತಿಪಾದಿಸಿದ್ದರು. ಅಮೆರಿಕದ ಆಫ್ರೋ-ಅಮೆರಿಕನ್ ಹೋರಾಟಗಾರರು ತಮ್ಮನ್ನು ತಾವು 'ಬ್ಲ್ಯಾಕ್ ಪ್ಯಾಂಥರ್‍ಸ್’ (ಕಪ್ಪು ಚಿರತೆಗಳು) ಎಂದು ಬಣ್ಣಿಸಿಕೊಂಡಿದ್ದರು. ಯಾವುದನ್ನು ಬಿಳಿಯರು 'ಕಪ್ಪು’ ಎಂದು ಹೀಗಳೆದಿದ್ದರೋ, ಅದನ್ನೇ ಪಾಸಿಟಿವ್ ಆಗಿ 'ಬ್ಲ್ಯಾಕ್’ ಪ್ಯಾಂಥರ್‍ಸ್ ಚಳುವಳಿ ಶುರು ಮಾಡಿದ್ದರು. 'ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಘೋಷಣೆಯನ್ನೂ ಕೊಟ್ಟರು. ದಲಿತ್ ಪ್ಯಾಂಥರ್‍ಸ್ ಈ ಹಾದಿಯಲ್ಲಿ ಮುಂದುವರಿದು, 'ದಲಿತ’ ಪದವನ್ನು ಸ್ವಾಭಿಮಾನದ ಪದವನ್ನಾಗಿ ಮಾಡಿತು. ದಲಿತ ಕಾವ್ಯದ, ದಲಿತ ಸಾಹಿತ್ಯದ ಆರಂಭ ಘಟ್ಟವನ್ನೂ ಉದ್ಘಾಟಿಸಿತು.

ಈಚೆಗೆ ವಿಧಾನಸಭೆಯಲ್ಲಿ 'ದಲಿತ’ ಪದದ ಬಗೆಗಿನ ಚರ್ಚೆ ಕೇಳಿಸಿಕೊಂಡಾಗ 'ದಲಿತ’ ಪದದ  ಸುದೀರ್ಘ ನಡಿಗೆ ನೆನಪಾಯಿತು. 

ದಲಿತ ಪದವನ್ನು ಮೊದಲು ಬಳಸಿದವರು ಜ್ಯೋತಿಬಾ ಫುಲೆ ಎನ್ನುತ್ತಾರೆ. ಅಂಬೇಡ್ಕರ್ ಕುರಿತು ಅಶೋಕ್ ಗೋಪಾಲ್ ಬರೆದ ಜೀವನ ಚರಿತ್ರೆ 'ಎ ಪಾರ್ಟ್ ಅಪಾರ್ಟ್’ನಲ್ಲಿ 'ದಲಿತ’ ಎಂಬ ಪದ ಸಾವಿತ್ರಿಬಾಯಿ ಫುಲೆ ೧೮೫೪ರಲ್ಲಿ ಬರೆದ 'ಕಾವ್ಯಫುಲೆ’ (ಹೂ ಕವಿತೆಗಳು) ಕವನ ಸಂಕಲನದಲ್ಲಿ ಮೊದಲು ಸಾಹಿತ್ಯಕವಾಗಿ ಕಾಣಿಸಿಕೊಂಡಿತು’ ಎಂಬ ದಾಖಲೆಯಿದೆ.

'ದಲಿತ’ ಪದ ಕುರಿತು ಎಲಿನಾರ್ ಝೆಲಿಯಟ್, ಆನಂದ್ ತೇಳ್‌ತುಂಬ್ಡೆ, ಅಶೋಕ್ ಗೋಪಾಲ್ ಪುಸ್ತಕಗಳಿಂದ ಕೆಲವು ಗ್ರಹಿಕೆಗಳು: 

ಆರಂಭದಲ್ಲಿ 'ಅನ್‌ಟಚಬಲ್ಸ್’ ಪದವನ್ನು ಬಳಸುತ್ತಿದ್ದ ಬಾಬಾಸಾಹೇಬರಿಗೆ ಮುಂದೆ ಬ್ರಿಟಿಷರು ಬಳಸುತ್ತಿದ್ದ 'ಡಿಪ್ರೆಸ್ಡ್ ಕ್ಲಾಸಸ್’ ಎಂಬ ಪದ ಸರಿಯಾಗಿ ಕಂಡಿತು. ನಂತರ ೧೯೨೪ರಲ್ಲಿ'ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪಿಸಿದ ಕಾಲಕ್ಕೆ 'ಬಹಿಷ್ಕೃತ’ ಪದವನ್ನು ಬಳಸಿದರು. 'ಬಹಿಷ್ಕೃತ್ ಭಾರತ್’ ಪತ್ರಿಕೆಯ ಒಂದು ಲೇಖನದಲ್ಲಿ'ದಲಿತ’ ಪದವನ್ನು ಅಲ್ಲಲ್ಲಿ ಬಳಸಿದರು. ಸಾಮಾಜಿಕ ಶ್ರೇಣಿಯಲ್ಲಿ ನಡೆಯುತ್ತಿದ್ದ ದಮನ, ತುಳಿತವನ್ನು ಚರ್ಚಿಸುವಾಗ 'ಅನ್‌ಟಚಬಲ್ಸ್’ ಪದ ಬಳಸಿದರು. ಸರ್ಕಾರಿ ಕಾರ್ಯಕ್ರಮಗಳು, ಮೀಸಲಾತಿಗಳ ಸಂದರ್ಭದಲ್ಲಿ 'ಪರಿಶಿಷ್ಟ ಜಾತಿ’ಯನ್ನು ಬಳಸಿದರು.  

ಮೊದಲು 'ಸಪ್ರೆಸ್ಡ್ ಕ್ಲಾಸಸ್’ ಪದಗುಚ್ಛ ಬಳಸಿದ್ದ ಗಾಂಧೀಜಿ ಮುಂದೆ 'ಹರಿಜನ್’ ಎಂಬ ಪದ ಬಳಸಿದರು. 'ಹರಿಜನ್’ ಪದವನ್ನು ಮೊದಲು ಬಳಸಿದವರು ಗಾಂಧೀಜಿಯಲ್ಲ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಗಾಂಧೀಜಿ ಸಂಪಾದಿಸುತ್ತಿದ್ದ 'ನವಜೀವನ್’ ಪತ್ರಿಕೆಯ ಓದುಗರೊಬ್ಬರು ೧೯೩೧ರಲ್ಲಿ ಗಾಂಧೀಜಿಗೆ ಪತ್ರ ಬರೆದರು: 'ಅಂತ್ಯಜ’, 'ಅಸ್ಪೃಶ್ಯ’ ಮುಂತಾದ ಪದಗಳಿಂದ ನಮಗೆ ನೋವಾಗುತ್ತದೆ. ಹದಿನೈದನೇ ಶತಮಾನದ ಗುಜರಾತಿ ಕವಿ ನರಸಿಂಹ ಮೆಹ್ತಾ ತಮ್ಮ ಕವಿತೆಯೊಂದರಲ್ಲಿ ನೊಂದ ಸಮುದಾಯಗಳ ಜನರನ್ನು 'ಹರಿಜನ’ ಎಂದಿದ್ದಾರೆ. ನೀವೂ ಆ ಹೆಸರನ್ನು ಬಳಸಬಹುದು.’ 

೧೯೩೨ರಿಂದೀಚೆಗೆ ಗಾಂಧೀಜಿ 'ಹರಿಜನ’ ಪದ ಬಳಸಿದರು; ಇದರಿಂದ ಸವರ್ಣೀಯರ ಧಾರ್ಮಿಕ ಭಾವನೆ ಉದ್ದೀಪನಗೊಂಡು, ಅಸ್ಪೃಶ್ಯತೆಯ ಆಚರಣೆಯನ್ನು ಕೈಬಿಡುತ್ತಾರೆ ಎಂದು ನಂಬಿದ್ದರು. ಆದರೆ ಜಡ ಮನಸ್ಸು ಬದಲಾಗಲಿಲ್ಲ. ಈ ಪದವನ್ನು ಅಂಬೇಡ್ಕರ್ ಹಾಗೂ ಎಚ್ಚೆತ್ತ ದಲಿತರು ಒಪ್ಪಲಿಲ್ಲ.

೧೯೭೨ರಲ್ಲಿ ದಲಿತ್ ಪ್ಯಾಂಥರ್‍ಸ್ ಹುಟ್ಟಿದ ನಂತರ ದೇಶಾದ್ಯಂತ ಅಂಬೇಡ್ಕರ್ ವಾದಿಗಳು 'ಎಚ್ಚೆತ್ತ’ 'ಸ್ವಾಭಿಮಾನ’ದ, 'ವಿಮೋಚನೆ’ಗೊಂಡ’, 'ಹಕ್ಕುಗಳಿಗಾಗಿ ಹೋರಾಡುವ’ ಎಂಬ ಪಾಸಿಟಿವ್ ಅರ್ಥದಲ್ಲಿ 'ದಲಿತ’ ಪದವನ್ನು ಬಳಸಿದರು. ಅದು ದಲಿತ ಚಿಂತನೆ, ದಲಿತ ಸ್ತ್ರೀವಾದ, ದಲಿತಾಧ್ಯಯನ, ದಲಿತ ರಾಜಕಾರಣ…ಹೀಗೆ ಕಳೆದ ಐವತ್ತು ವರ್ಷಗಳಲ್ಲಿ ಬೆಳೆದು ಮಹತ್ವದ ಚಾರಿತ್ರಿಕ ಸ್ಥಾನ ಪಡೆದಿದೆ.

ದಾದಾಸಾಹೇಬ್ ಕಾನ್ಷೀರಾಂ ಬಹುಜನ ಸಮಾಜ ಪಕ್ಷದ ಮೂಲಕ ದಲಿತ ರಾಜಕಾರಣವನ್ನು ರಾಜಕೀಯ ಅಧಿಕಾರದತ್ತ ಒಯ್ದರು. ತಮಿಳುನಾಡಿನಲ್ಲಿ 'ದಲಿತ್ ಪ್ಯಾಂಥರ್‍ಸ್’ನ ತಮಿಳು ರೂಪವಾದ 'ವಿಡುದಲೈ ಚಿರುದೈಗಳ್ ಕಚ್ಚಿ’ (ವಿಸಿಕೆ) ರಾಜಕೀಯ ಪಕ್ಷದಲ್ಲಿ ಈಗ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರೂ ಇದ್ದಾರೆ.

'ದಲಿತ’ ಎಂಬ ಪರಿಕಲ್ಪನೆ ಇಡೀ ದೇಶದಲ್ಲಿ ಸೃಷ್ಟಿಸಿರುವ ಐಕ್ಯತೆ, ಕ್ರಾಂತಿಕಾರಕತೆ ಹಾಗೂ ಸ್ವಾಭಿಮಾನದ ಚಳುವಳಿ ರಾಜಕಾರಣವನ್ನು ಕಂಡು ದಿಗಿಲುಗೊಂಡು, 'ದಲಿತ’ ಎಂಬ ಪದಕ್ಕೇ ಕುತ್ತು ತರುವ ಹುನ್ನಾರವೂ ನಡೆದಿತ್ತು. ಆದ್ದರಿಂದ ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಗಳು, ದಲಿತ ಸಾಹಿತ್ಯ, ದಲಿತ ಚಳುವಳಿ, ದಲಿತ ಚಿಂತನೆ, ದಲಿತ ರಾಜಕಾರಣ ಹಾಗೂ ಒಟ್ಟಾರೆ ಪ್ರಗತಿಪರ ಚಿಂತನೆ ಆಳವಾಗಿ ಚರ್ಚಿಸಿ ಮುನ್ನಡೆಯಬೇಕಾದ ಅಗತ್ಯವಿದೆ ಎನ್ನಿಸುತ್ತದೆ.

ಓದುಗಿ-ಓದುಗ ಸ್ಪಂದನ
ಕಳೆದ ವಾರ ಬರೆದ 'ರೂಪಕ ತೋರುವ ಹಾದಿ’ಯಲ್ಲಿ ಚರ್ಚಿಸಿದ ಹ್ಯಾಮ್ಲೆಟ್‌ನ 'ಟು ಬಿ ಆರ್ ನಾಟ್ ಟು ಬಿ ದಟ್ ಈಸ್ ದಿ ಕ್ವೆಶ್ಚನ್’ ಸ್ವಗತದಲ್ಲಿ ಪ್ರಶ್ನೆ, ಆತ್ಮಪರೀಕ್ಷೆ, ಆತ್ಮಮರುಕ, ಕೋಪ, ಪ್ರತಿಪಾದನೆ... ಇನ್ನೂ ಏನೇನೋ ಇವೆ ಅನ್ನಿಸುತ್ತಲೇ ಇತ್ತು…ಅಷ್ಟೊತ್ತಿಗೆ ಈ ಅಂಕಣ ಓದಿದ ಕನ್ನಡ ಪ್ರಾಧ್ಯಾಪಕಿಯೊಬ್ಬರು ಅಡಿಗರ 'ಮೋಹನ ಮುರಲಿ’ ಪದ್ಯದ ಕೊನೆಯ ಸಾಲನ್ನು ಕಳಿಸುತ್ತಾ ಬರೆದರು:

“…'ರೂಪಕ ತೋರುವ ಹಾದಿ’ ಲೇಖನದಲ್ಲಿ ಹ್ಯಾಮ್ಲೆಟ್‌ನ 'to be or not be' ಸಾಲನ್ನು ವಿವಿಧ ಅನುವಾದಗಳ ಹಿನ್ನೆಲೆಯಲ್ಲಿ ಚರ್ಚಿಸಿರುವುದನ್ನು ಓದಿದಾಗ, ಅಂಥದೇ ಸಾಲುಗಳು ನೆನಪಾದವು. ಉದಾಹರಣೆಗೆ, ಅಡಿಗರ 'ಮೋಹನ ಮುರಲಿ’ ಪದ್ಯದ ಕೊನೆಯ ಸಾಲು: 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ!’

'ಒಂದು ಚರ್ಚೆಯಲ್ಲಿ ಈ ಸಾಲು ಪ್ರಶ್ನೆಯೋ, ತೀರ್ಮಾನವೋ, ಹೇಳಿಕೆಯೋ, ಉದ್ಗಾರವೋ?’ ಈ ಪ್ರಶ್ನೆ ಬಂತು. 'ಕೊನೆಯಲ್ಲಿ ಆಶ್ಚರ್ಯ ಸೂಚಕ ಚಿಹ್ನೆ -!- ಇರುವುದರಿಂದ ಇದು ಉದ್ಗಾರ’ ಎಂದು ಒಬ್ಬರು ಹೇಳಿದರು. ಮತ್ತೊಬ್ಬರು, ‘ಅಲ್ಲಿ ಫುಲ್‌ಸ್ಟಾಪ್ ಇದೆ; ಇದು ತೀರ್ಮಾನ’ ಎಂದರು. ಆದರೆ, ಯಾರೋ ಹಾಡಿದ್ದನ್ನು ಕೇಳಿಸಿಕೊಂಡಾಗ, ನನಗೆ ಅವರು ದೈನ್ಯವಾಗಿ ಪ್ರಶ್ನಿಸುತ್ತಿದ್ದಾರೆ ಅನ್ನಿಸಿತು.’

ಪ್ರಾಧ್ಯಾಪಕಿಯ ಸ್ಪಂದನ ಓದುತ್ತಾ, ಹಿಂದೊಮ್ಮೆ ನಾನೂ ಹೀಗೇ ಓದುತ್ತಿದ್ದುದು ನೆನಪಾಯಿತು. ಆದರೆ ಒಂದು ಬೆಳಗ್ಗೆ ಸುಮತೀಂದ್ರ ನಾಡಿಗರು ಒಂದು ರೇಡಿಯೋ ಟಾಕ್‌ನಲ್ಲಿ 'ಈ ಸಾಲಿನ ಕೊನೆಗೆ ಪ್ರಶ್ನೆಯಿರುವುದನ್ನು ಓದುಗರು ಗಮನಿಸಿಲ್ಲ’ ಎಂದಿದ್ದು ಕೇಳಿಸಿತು!    

ನಾಡಿಗರ ಮಾತು ಕೇಳಿ ಅಡಿಗರ 'ಸಮಗ್ರ ಕಾವ್ಯ’ ತೆಗೆದು ನೋಡಿದೆ; ಅಡಿಗರ ಒರಿಜಿನಲ್ ಸಾಲು ಹೀಗಿತ್ತು: 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’

ಈ ಸಾಲಿನ ಬಗ್ಗೆ ೧೯೯೮ರಲ್ಲಿ 'ಲಂಕೇಶ್ ಪತ್ರಿಕೆ’ಯಲ್ಲಿ ನನ್ನ 'ಗಾಳಿ ಬೆಳಕು' ಅಂಕಣದ 'ಸುಗಮ ಸಂಗೀತ ಹಾಗೂ ಸುಗಮ ಸಾಹಿತ್ಯ' ಲೇಖನದಲ್ಲಿ (ಪಲ್ಲವ ಪ್ರಕಾಶನ) ಚರ್ಚಿಸಿದ್ದು ನೆನಪಾಗುತ್ತದೆ.
ಅಡಿಗರ ಕವಿತೆಯ ಕೊನೆಯ ಸಾಲಿಗೆ ತಾತ್ವಿಕ ಹೇಳಿಕೆಯ ಅರ್ಥ ಬಂದಿರುವುದು ರತ್ನಮಾಲಾರ ಒಳತೋಟಿಯ ಗಾಯನದಿಂದ ಕೂಡ ಎಂದು ಕಂಡುಕೊಂಡಿರುವೆ. ಈ ಸಾಲನ್ನು ವಿದ್ಯಾರ್ಥಿನಿ-ವಿದ್ಯಾರ್ಥಿಗಳ ಸಂಗದಲ್ಲಿ ಹಲ ಬಗೆಯಲ್ಲಿ ವಿಸ್ತರಿಸಿಕೊಳ್ಳುತ್ತಾ ಡೆರಿಡಾ ಹೇಳಿದಂತೆ ಅರ್ಥದ ನಿರಂತರ ಮುಂದೂಡಿಕೆಯಲ್ಲಿ ನಿರತನಾದೆ:

೧. ಜೀವನವು ಇರುವುದೆಲ್ಲವನ್ನೂ ಬಿಟ್ಟು ತುಡಿಯುವುದೇ?
೨. ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವೇ?
೩. ಇರುವುದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವ ಶಕ್ತಿ ಜೀವನಕ್ಕೆ ಇದೆಯೇ?
೪. ’ಇರವು’ ಎಂದರೆ ಅಸ್ತಿತ್ವ, ಜೀವನ, ಹಾಜರಿ… ಈ ಅರ್ಥಗಳೂ ಇವೆ. ಇರವನ್ನು ಬಿಟ್ಟು, ಗೊತ್ತಿಲ್ಲದ, ಇರದ ಏನೋ ಒಂದರತ್ತ, ಅಥವಾ ಇರದ ಮತ್ತೊಂದು ಜನ್ಮದತ್ತ ನಡೆಯುವುದೇ? 

ಹೀಗೆಲ್ಲ ಬರೆಯುತ್ತಿರುವಾಗ… 'ಇರುವ ಅರ್ಥವನ್ನೆಲ್ಲ ಬಿಟ್ಟು ಇರದುದರೆಡೆಗೆ ತುಡಿವುದೇ ಓದಿನ ಜೀವನ ಅಲ್ಲವೆ?’ ಎಂಬ ಅರ್ಥವನ್ನೂ ಈ ಸಾಲು ಉಸುರತೊಡಗಿತು! ಥ್ಯಾಂಕ್ಯೂ ಡೆರಿಡಾ!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 
 

Share on:


Recent Posts

Latest Blogs



Kamakasturibana

YouTube



Comments

13 Comments



| ಶಿವಲಿಂಗಮೂರ್ತಿ

ದಲಿತ ಶಬ್ದದ ಅರ್ಥ ವಿವರಣೆಯ ವಿವಿಧ ಮಜಲುಗಳು ನಿಮ್ಮಿಂದ ನಮ್ಮ ಜ್ಞಾನಬುತ್ತಿಗೆ ಸಿಕ್ಕಿದ ಉಪಯುಕ್ತ ಮಾಹಿತಿಗಳು ಇದಕ್ಕಾಗಿ ನಿಮಗೆ ಶರಣು ಗುರುಗಳೆ


| Ahmed

Interesting piece on the usage of the term \'Dalit\'. Well written 👏


| AHMED

Intreresting piece on the usage of Dalit, Well written


| ಬಂಜಗೆರೆ ಜಯಪ್ರಕಾಶ

ಬರಹ ಬಹಳ ಹೃದ್ಯವಾಗಿದೆ. ಸಿದ್ದಲಿಂಗಯ್ಯನವರ ಬಹುಶ್ರುತತೆ ಮತ್ತು ವಿದ್ವತ್ತಿಗಿಂತ ಅವರ ಭಾಷಣಗಳ ರಂಜನೀಯತೆಯೇ ಹೆಚ್ಚು ಪ್ರತಿಫಲಿತಗೊಂಡಿದ್ದರ ಬಗ್ಗೆ ಬರಹ ವ್ಯಕ್ತವಡಿಸಿರುವ ವಿಷಾದ ಕೂಡ ಚಿಂತನಾರ್ಹ. ಹರಿಜನ ಪದವನ್ನು ಗಾಂಧೀಜಿ ಬಳಸತೊಡಗಿದ ಹಿನ್ನೆಲೆಯ ಮಾಹಿತಿ ಉಪಯುಕ್ತಕರವಾಗಿದೆ. ರಾಮಾನುಜಾಚಾರ್ಯರು ಅಸ್ಪೃಸ್ಯರನ್ನು ತಿರುಕುಲದವರು(ಶ್ರೀ ಕುಲದವರು, ಅಂದರೆ ಹರಿಗೆ ಪ್ರಿಯಳಾದ ಲಕ್ಷ್ಮಿ ಕುಲದವರು) ಎಂದಿದ್ದು ಗಾಂಧೀಜಿಯವರ ಹರಿಜನ ಪ್ರಯೋಗಕಕ್ಕೆ ಪ್ರೇರಣೆ ಎಂದು ನಾನು ತಿಳಿದಿದ್ದೆ.


| Sandeep

ಅಂಕಣ ಬಹಳ ಚೆನ್ನಾಗಿದೆ. ನಿಮ್ಮ ಉಳಿದ ಬರಹಗಳಂತೆಯೇ ಅರ್ಥದ ಸಾಧ್ಯತೆಗಳನ್ನು ಇದೂ ವಿಸ್ತರಿಸುತ್ತಲೇ ಇದೆ. ಓದುಗನ ಗ್ರಹಿಕೆಯನ್ನು ಆಳವಾಗಿಸುವ, ಸೂಕ್ಷ್ಮವಾಗಿಸುವ ಇಂತಹ ಬರಹಗಳು ಯಾವತ್ತಿಗೂ ಬೆಳೆಯುತ್ತಲೇ ಇರುತ್ತವೆ. ಮತ್ತೆ ಮತ್ತೆ ಓದುವಂತಹ (ಅಥವಾ ಮರು ಓದಿಗೆ ಎಳೆಸುವ) ಬರಹಕ್ಕಾಗಿ ಧನ್ಯವಾದ.


| Sachin

\r\nIt\'s a really nice peice sir. I read it just today. Ambedkar is relevant, and perhaps will forever be relavent for this country\r\n\r\n\r\n


| ಷಾಕಿರಾ ಖಾನಂ

ಯಾವುದೇ ಒಬ್ಬ ವ್ಯಕ್ತಿಯನ್ನು ವ್ಯಕ್ತಿಯಾಗಿ ನೋಡದೆ ಒಂದು ಜಾತಿಗೆ, ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ಅವನ ವ್ಯಕ್ತಿತ್ವವನ್ನು ಅಳಿಯುವ ಸಮಾಜದ ಸಂಕುಚಿತ ಮನೋಭಾವ ಮನುಷ್ಯನಲ್ಲಿ ಸುಪ್ತವಾಗಿರುವ ರಕ್ತಗತ ಗುಣದ ಸೂಕ್ಷ್ಮತೆ ಯು ಈ ಬರಹ\r\nಗಾಂಧೀಜಿ \'ಹರಿ\'ಜನರೆಂದು ಹೇಳಿ ದೇವರ ಇರುವಿಕೆಯನ್ನು ಸಮರ್ಥಿಸಿ ಕೊಂಡಿದ್ದಾರೆ ಎಂಬುದನ್ನು ಹೇಳಿರುವಂತೆ ಇದೆ.ಒಳ್ಳೆಯ ಲೇಖನ


| Dr.Prabhakar

I found an answer to my doubt in the blog where you write \'writing is thinking\' . I used to tell my PhD students \'mere having data is not enough, only when you start writing and interpreting then you see new insights, in a way that is thinking process \'. But I had apprehension of my own on this understanding, but it cleared when I read your words.\r\nMay your thoughts keep flourishing and spreading the aroma of intellectual fragrance !


| Dr.Prabhakar

I found an answer to my doubt in the blog where you write \'writing is thinking\' . I used to tell my PhD students \'mere having data is not enough, only when you start writing and interpreting then you see new insights, in a way that is thinking process \'. But I had apprehension of my own on this understanding, but it cleared when I read your words.\r\nMay your thoughts keep flourishing and spreading the aroma of intellectual fragrance !


| ಡಾ. ನಿರಂಜನ ಮೂರ್ತಿ ಬಿ ಎಂ

ಕವಿ ಸಿದ್ಧಲಿಂಗಯ್ಯನವರ ವ್ಯಕ್ತಿತ್ವದಲ್ಲಿನ ಹಲವು ಗುಣಗಳಲ್ಲಿ ಒಂದು ಗುಣವು ಅವರ ಇಡೀ ವ್ಯಕ್ತಿತ್ವದೊಂದಿಗೆ ಗುರುತಿಸಲ್ಪಟ್ಟು ಅದೇ ವ್ಯಕ್ತಿತ್ವದ ಹೆಗ್ಗುರುತಾಗುವುದರ ವಿವರಣೆ ಸಮಂಜಸ. ಹಾಗೆಯೇ ಅವರ ವೈವಿಧ್ಯಮಯ ಮತ್ತು ವಿಭಿನ್ನ ಓದಿನ ವಿಶಾಲ ಹರವು ಚಕಿತಮಯ. ಜ್ಯೋತಿಬಾಪುಲೆಯವರಿಂದ ಆರಂಭವಾದ ದಲಿತ ಪದದ ಪ್ರಥಮ ಬಳಕೆ ಮತ್ತು ಬೆಳವಣಿಗೆಯೊಂದಿಗೆ ಅದರ ವ್ಯಾಖ್ಯಾನ; ಅಂಬೇಡ್ಕರ್ ಅವರು ದಮನಿತರನ್ನು ಕುರಿತು ಬಳಸಿದ ಪದಗಳ ವಿವರ; ಮತ್ತು ಗಾಂಧೀಜಿಯವರ ಹರಿಜನ ಪದ ಬಳಕೆಯ ಬಗೆಗಿನ ವಿವರಗಳು ಉಪಯುಕ್ತ. ಇವೆಲ್ಲವುಗಳನ್ನು ಈ ಅಂಕಣ ಬರಹದಲ್ಲಿ ಓದಿದಾಗ, ಸರಾಗವಾಗಿ ಪದಾರ್ಥವನರಿಯಬಹುದೆಂಬ ವಿಶ್ವಾಸ ಮೂಡಿದೆ.


| ಡಾ. ಮಾನಸ

ದಲಿತ ಪದದ ಬಗೆಗಿನ ಅಂಕಣ ಚೆನ್ನಾಗಿದೆ.


| ವಿ ಅಹ್ಮದ್

Excellent clarity about the word Dalit


| Shamarao

ಕವಿಗಳನ್ನು ಬಲ್ಲವರಿಗೆ ಈ ರೂಪಾಂತರದ ಬಗ್ಗೆ ಅಚ್ಚರಿ ಯಾಕೊ!




Add Comment