ಆಫ್ರಿಕಾದ ಗೂಗಿ: ಬರಹ ಮತ್ತು ಬಂಡಾಯ

ಪೂರ್ವ ಆಫ್ರಿಕಾದ ಖ್ಯಾತ ಲೇಖಕ ಗೂಗಿ ವಾ ಥಿಯಾಂಗೋ ತೀರಿಕೊಂಡ ಸುದ್ದಿಯನ್ನು ಗೆಳೆಯ ವಿಜಯಾನಂದ್ ಹೇಳಿದಾಗ ಮೂವತ್ತು ವರ್ಷಗಳ ಕೆಳಗೆ ಮೇಷ್ಟ್ರು ಬಾಬಯ್ಯನವರು ಕೊಟ್ಟ ಪಿಂಕ್ ಬಣ್ಣದ ಬೈಂಡಿನ ಜೆರಾಕ್ಸ್ ಪ್ರತಿ ಕಣ್ಣೆದುರು ಬಂತು. ಅದರೊಳಗೆ ಗೂಗಿಯ ’ಡಿಕಾಲನೈಸಿಂಗ್ ದ ಮೈಂಡ್’ ಎಂಬ ಥಿಯರಿಯ ಪುಸ್ತಕ, 'ಐ ವಿಲ್ ಮ್ಯಾರಿ ವೆನ್ ಐ ವಾಂಟ್' ನಾಟಕ ಎರಡೂ ಇದ್ದವು. 

ನಮ್ಮ ಉತ್ತರ ಕನ್ನಡದ ಕಡೆಯ ಸಿದ್ದಿಗಳ ಅಣ್ತಮ್ಮಗಳಂತೆ ಕಾಣುವ ಗೂಗಿಯ ನಿರ್ಗಮನದೊಂದಿಗೆ ಆಧುನಿಕ ಆಫ್ರಿಕನ್ ಸಾಹಿತ್ಯದ ಎರಡನೆಯ ತಲೆಮಾರಿನ ಮುಖ್ಯ ಕೊಂಡಿಯೊಂದು ಕಳಚಿಕೊಂಡಿತು. ೧೯೩೮ರಲ್ಲಿ ಬ್ರಿಟಿಷ್ ಆಡಳಿತದ ಕೀನ್ಯಾದಲ್ಲಿ ಹುಟ್ಟಿದ ಜೇಮ್ಸ್ ಗೂಗಿ (೫ ಜನವರಿ ೧೯೩೮- ೨೮ ಮೇ ೨೦೨೫) ತಾರುಣ್ಯದಲ್ಲಿ ತನ್ನ ಮೊದಲ ಕಾದಂಬರಿ ’ವೀಪ್ ನಾಟ್, ಚೈಲ್ಡ್’ ಬರೆದು, ಅಷ್ಟೊತ್ತಿಗಾಗಲೇ ಖ್ಯಾತನಾಗಿದ್ದ ಆಫ್ರಿಕನ್ ಲೇಖಕ ಚಿನುವ ಅಚೀಬೆಗೆ ಕಳಿಸಿದ. ಅಚೀಬೆ ಅದನ್ನು ಪ್ರಕಾಶಕರಿಗೆ ಕಳಿಸಿಕೊಟ್ಟ. ಗೂಗಿಯ ಮೊದಲ ಕಾದಂಬರಿಯೇ ಆಫ್ರಿಕನ್ ಕಾದಂಬರಿ ಲೋಕದಲ್ಲಿ ಅವನಿಗೆ ಮಹತ್ವದ ಸ್ಥಾನ ದಕ್ಕಿಸಿತು.

ಎಪ್ಪತ್ತರ ದಶಕದಲ್ಲಿ ಜೇಮ್ಸ್ ಗೂಗಿ ತನ್ನ ಹೆಸರಿನಲ್ಲಿದ್ದ ಜೇಮ್ಸ್ ಎಂಬ ಕ್ರಿಶ್ಚಿಯನ್ ಭಾಗವನ್ನು ಕೈಬಿಟ್ಟು, ಗೂಗಿ ವಾ ಥಿಯಾಂಗೋ ಎಂಬ ಆಫ್ರಿಕನ್ ಹೆಸರಿಟ್ಟುಕೊಂಡ. ಇಂಗ್ಲಿಷಿನಲ್ಲಿ ಬರೆಯುವುದನ್ನು ಬಿಟ್ಟು ತನ್ನ ಬುಡಕಟ್ಟಿನ ಗಿಕುಯು ಭಾಷೆಯಲ್ಲಿ ಬರೆಯಲು ತೀರ್ಮಾನಿಸಿದ. ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಗೂಗಿ ’ಹೋಮ್ ಕಮಿಂಗ್ ಅಂಡ್ ಅದರ್‍ ಎಸ್ಸೇಸ್’ ಎಂಬ ಪುಸ್ತಕ ಪ್ರಕಟಿಸಿದ. ’ಡಿಕಾಲನೈಸಿಂಗ್ ದ ಮೈಂಡ್’ ಪುಸ್ತಕ ಬರೆದು, ಆಫ್ರಿಕಾದ ಬೇರುಗಳಿಗೆ ಮರಳಲೆತ್ನಿಸಿದ. ಇವೆಲ್ಲ ಆಫ್ರಿಕನ್ ಪ್ರಜ್ಞೆಯ ನಿರ್ವಸಾಹತೀಕರಣದ ಪ್ರಯತ್ನಗಳಾಗಿದ್ದವು.  

ಆ ಸರಿಸುಮಾರಿನಲ್ಲಿ ಕೀನ್ಯಾದ ಜೊಮೊ ಕೆನ್ಯಾಟ್ಟನ ಭ್ರಷ್ಟ ಸರ್ಕಾರ ನೇರ ನಡೆನುಡಿಯ ಗೂಗಿಯನ್ನು ವಿಚಾರಣೆಯಿಲ್ಲದೆ ಜೈಲಿನಲ್ಲಿಟ್ಟಿತು. ಗೂಗಿಯ ಸ್ವಂತ ತಮ್ಮ ಪೊಲೀಸರ ಗುಂಡಿಗೆ ಬಲಿಯಾದ ಸನ್ನಿವೇಶ ಭೀಕರವಾಗಿತ್ತು. ಮಾವೋವಾದಿ ಮಾದರಿಯ ’ಮಾವುಮಾವು’ ಹೋರಾಟದಲ್ಲಿ ಭಾಗಿಯಾಗಿದ್ದವರನ್ನು ಪೊಲೀಸರು ಕೊಲ್ಲತೊಡಗಿದ್ದರು. ಒಂದು ಸಂದರ್ಭದಲ್ಲಿ ಪೊಲೀಸರು ಶೂಟೌಟ್ ಮಾಡುವ ಮುನ್ನ ಹೋರಾಟಗಾರರಿಗೆ ಚದುರುವಂತೆ ಎಚ್ಚರಿಕೆ ಕೊಟ್ಟರು. ಆದರೆ ಕಿವಿ ಕೇಳಿಸದಿದ್ದ ಗೂಗಿಯ ತಮ್ಮ ನಿಂತಲ್ಲಿಂದ ಕದಲದೆ ಗುಂಡಿಗೆ ಬಲಿಯಾದ. 

ಸೆರೆಮನೆಯಲ್ಲೂ ಗೂಗಿಯ ಲೇಖಕ ಚೈತನ್ಯ ಉಡುಗಿರಲಿಲ್ಲ. ಜೈಲಿನ ಟಾಯ್ಲೆಟ್ ಪೇಪರಿನ ಮೇಲೆ ಇಂಗ್ಲಿಷ್ ಲಿಪಿ ಬಳಸಿ, ಗಿಕುಯು ಭಾಷೆಯಲ್ಲಿ ಬರೆಯತೊಡಗಿದ. ಅದು ‘ಕೈತಾನಿ ಮುತರಾಬಾಇನಿ’ ಎಂಬ ಕಾದಂಬರಿಯಾಯಿತು. ಕಾದಂಬರಿ ಪ್ರಕಾರವನ್ನು  ಆಫ್ರಿಕೀಕರಣಗೊಳಿಸತೊಡಗಿದ್ದ ಗೂಗಿ ಆಫ್ರಿಕದ ಜನಪದರು ಕತೆ ಹೇಳುವ ರೀತಿ ಬಳಸಿ ಕಾದಂಬರಿ ಬರೆಯಹೊರಟಿದ್ದ. ನಾವು ಕತೆ ಹೇಳುವ ಕ್ರಮಕ್ಕೂ ನಮ್ಮ ತಾಯ್ನುಡಿಯ ಓಟಕ್ಕೂ ಬೆಸುಗೆಯರಿಯದ ಸಂಬಂಧವಿರುತ್ತದಲ್ಲವೆ? ಗೂಗಿ ಗಿಕುಯುನಲ್ಲಿ ಕಾದಂಬರಿ ಬರೆಯುವ ಮೂಲಕ ಹದಿನೆಂಟನೆಯ ಶತಮಾನದಿಂದಲೂ ಜಗತ್ತಿಗೆ ಪರಿಚಿತವಿದ್ದ ’ಓದು ಕಾದಂಬರಿ’ಯ ಬದಲಿಗೆ ’ಕೇಳು ಕಾದಂಬರಿ’ ಬರೆದ. ಪಬ್‌‌ಗಳಲ್ಲಿ ಆಫ್ರಿಕನ್ ತರುಣ, ತರುಣಿಯರು ಅವನ ಕಾದಂಬರಿಗಳನ್ನು ಓದಿ ಹೇಳತೊಡಗಿದರು. 

ಹಿಂದೊಮ್ಮೆ ಗೆಳೆಯ ಕೇಶವ ಮಳಗಿಯವರ ಜೊತೆಗೂಡಿ ನಾನು ಕುವೆಂಪು ಭಾಷಾಭಾರತಿಗಾಗಿ ಸಂಪಾದಿಸಿದ ’ಲೋಕ ಸಾಹಿತ್ಯ ಮಾಲಿಕೆ’ಗೆ ಮಿತ್ರ ಬಂಜಗೆರೆ ಜಯಪ್ರಕಾಶ್ ’ಕೈತಾನಿ ಮುತರಾ ಬಾಇನಿ’ಯ ಇಂಗ್ಲಿಷ್ ರೂಪವಾದ ’ಡೆವಿಲ್ ಆನ್ ದ ಕ್ರಾಸ್’ ಕಾದಂಬರಿಯನ್ನು ಅನುವಾದಿಸಿದರು. ಗೂಗಿ ಈ ಕಾದಂಬರಿ ಬರೆದ ದಿನಗಳನ್ನು ಬಂಜಗೆರೆ ತಮ್ಮ ಮುನ್ನುಡಿಯಲ್ಲಿ ನೆನೆಯುತ್ತಾರೆ: 

‘೧೯೭೭ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಕಾದಂಬರಿಯನ್ನು ೧೯೭೮ರ ಸೆಪ್ಟೆಂಬರ್‌ವರೆಗೆ ಟಾಯ್ಲೆಟ್ ಪೇಪರ್ ಮೇಲೆ ಬರೆಯುತ್ತಿದ್ದ ಗೂಗಿಗೆ ಈ ಕಾದಂಬರಿ ಪೂರ್ಣಗೊಳಿಸಿದರೆ ತನ್ನ ಬಿಡುಗಡೆಯಾಗುತ್ತದೆಂಬ ಹುಚ್ಚು ನಂಬಿಕೆ ಹುಟ್ಟಿತ್ತು. ಕೆನ್ಯಾದ ಅಧ್ಯಕ್ಷ ಜೋಮೋ ಕೆನ್ಯಾಟ್ಟ ತೀರಿಕೊಂಡಾಗ ಜೈಲಿನಲ್ಲಿದ್ದ ಎಲ್ಲರಿಗೂ ತಾವು ಬಿಡುಗಡೆಯಾಗುತ್ತೇವೆಂಬ ಆಶಾವಾದ ಹುಟ್ಟಿತು. 

ಸೆಪ್ಟೆಂಬರ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಈ ಸೆರೆಮನೆವಾಸಿಗಳ ಸೆಲ್‌ಗಳಲ್ಲಿ ‘ಸರ್ಚ್’ ನಡೆಸುತ್ತಿದ್ದ ಸಾರ್ಜೆಂಟ್, ಅಲ್ಲಿ ರಾಶಿ ಬಿದ್ದಿದ್ದ ಟಾಯ್ಲೆಟ್ ಪೇಪರ್‌ಗಳನ್ನು ನೋಡಿ ಅದರ ಮೇಲೆ ಮುಗಿಬಿದ್ದ. ಗೆದ್ದವನಂತೆ ಅಧಿಕಾರಿಯೆಡೆಗೆ ತಿರುಗಿ ಕೂಗಿಕೊಂಡ: ‘ನೋಡಿ ಸಾರ್! ಇವನು ಟಾಯ್ಲೆಟ್ ಪೇಪರ್ ಮೇಲೆ ಪುಸ್ತಕ ಬರೆದಿದಾನೆ!’

‘ವಶಪಡಿಸಿಕೋ!’ ಎಂದ ಅಧಿಕಾರಿ. `ಇದೆಲ್ಲಾ ಪೂರ್ತಿ ಅದೇನಾ? ಜೈಲ್ನಲ್ಲಿ ಪುಸ್ತಕ ಬರಿ ಅಂತ ಯಾರು ನಿನಗೆ ಹೇಳಿದ್ದು?’ ಎಂದು ಅಧಿಕಾರಿ ಕೂಗಿದ. ಈತನಿಗಿಂತ ಮೊದಲು ಅಲ್ಲಿದ್ದ ಒಬ್ಬ ಕ್ರೂರಿ ಜೈಲು

ಸೂಪರಿಂಟೆಂಡೆಂಟ್, ’ಜೈಲಿನಲ್ಲಿ ಕವಿತೆ ಬರೆಯಬೇಡ, ನನ್ನ ಅನುಮತಿಯಿಲ್ಲದೆ ಏನನ್ನೂ ಬರೆಯಬೇಡ’ ಎಂದು ಮೊದಲೇ ಗೂಗಿಯನ್ನು ಎಚ್ಚರಿಸಿದ್ದ. ‘ಬರೆದೇ ಬರೆಯುತ್ತೇನೆ’ ಎಂದು ಗೂಗಿ ಅವತ್ತೇ ತೀರ್ಮಾನಿಸಿದ!

ಆದರೆ ಟಾಯ್ಲೆಟ್ ಪೇಪರ್ ಮೇಲೆ ಗೂಗಿ ಶ್ರಮಪಟ್ಟು ಬರೆದ ಕಾದಂಬರಿ ಅಧಿಕಾರಿಗಳ ದುರಾಕ್ರಮಣಕ್ಕೆ ಗುರಿಯಾಗಿತ್ತು. ಜೈಲಿಗೆ ಬಂದು ಹೋಗುತ್ತಿದ್ದ ಕ್ರೈಸ್ತ ಧರ್ಮಗುರು ಕೊಟ್ಟಿದ್ದ ಬೈಬಲ್‌ನ ಖಾಲಿ ಹಾಳೆಗಳಲ್ಲಿ ಬರೆದಿದ್ದ ಎರಡು ಅಧ್ಯಾಯಗಳು ಮಾತ್ರ ಅವರ ದೃಷ್ಟಿಗೆ ಬೀಳಲಿಲ್ಲ; ಹೀಗಾಗಿ ಅವು ಉಳಿದುಕೊಂಡಿದ್ದವು. ಈ ಕಾದಂಬರಿ ಬರೆಯುವಾಗ ಗೂಗಿ ಭಾಷೆ, ಸಂಕೇತಗಳ ಜೊತೆ ಸೆಣಸಾಡಿದ್ದ. ಜೈಲಿನ ಕಹಿ ನೆನಪುಗಳು, ನಿರಾಶೆಯ ಕ್ಷಣಗಳು, ಸೆರೆಮನೆವಾಸದಲ್ಲಿ ಮಾನಸಿಕವಾಗಿ, ಭಾವನಾತ್ಮಕವಾಗಿ, ಅನಿವಾರ್ಯವಾಗಿ ಅನುಭವಿಸಬೇಕಾದ ಪ್ರತಿಕೂಲ ಪರಿಸ್ಥಿತಿ… ಇವೆಲ್ಲವುಗಳೊಂದಿಗೆ ಹೋರಾಡಿದ್ದ. ಈಗ ಅದೆಲ್ಲ ವ್ಯರ್ಥವಾಯಿತು. 

ಹೀಗೇ ಮೂರು ವಾರಗಳು ಕಳೆದವು. ಗೂಗಿ ರಕ್ತ ಬಸಿದುಹೋಗಿ ನಿಸ್ಸಾರಗೊಂಡ ಮನುಷ್ಯನಂತಾಗಿಬಿಟ್ಟಿದ್ದ. ಆದರೂ ಕಾದಂಬರಿಯನ್ನು ಮತ್ತೆ ಬರೆಯಬೇಕೆಂದು ತೀರ್ಮಾನಿಸಿದ. ಈ ಸಲ ಚೆಖಾಫ್, ಗಾರ್ಕಿ, ಥಾಮಸ್‌ಮನ್ ಮೊದಲಾದವರ ಕಾದಂಬರಿಗಳ ನಡುವೆ, ಬೈಬಲ್ಲಿನ ಪಂಕ್ತಿಗಳ ನಡುವೆ, ಕಾದಂಬರಿಯನ್ನು ಮತ್ತೆ ಬರೆಯಬೇಕೆಂದುಕೊಂಡ. ಧರ್ಮದಲ್ಲಿ ಹೊಸದಾಗಿ ಭಕ್ತಿ ಹುಟ್ಟಿದವನಂತೆ ಧರ್ಮಗುರುವಿನಿಂದ ಬೇರೆ ಬೇರೆ ಗಾತ್ರಗಳ ಮೂರ‍್ನಾಲ್ಕು ಬೈಬಲ್ ಪ್ರತಿಗಳನ್ನು ಕೇಳಿ ತರಿಸಿಕೊಂಡು, ಅದರಲ್ಲಿ ಬರೆಯಬೇಕೆಂದುಕೊಂಡ. ಕಾದಂಬರಿಯನ್ನು ನಾನು ಪೂರ್ತಿಯಾಗಿ ಕಳೆದುಕೊಂಡಿಲ್ಲ, ಸೋಲೊಪ್ಪಿಕೊಳ್ಳಬಾರದು ಎಂದುಕೊಂಡ.

ಮತ್ತೆ ಕಥಾಹಂದರವನ್ನು, ಕತೆಯ ಘಟ್ಟಗಳನ್ನು ನೆನಪು ಮಾಡಿಕೊಂಡು ಚೆಕಾಫನ ಕಥಾಸಂಪುಟದೊಳಗೆ ಬರೆಯತೊಡಗಿದ. ಆಗ ಹೊಸ ಪೊಲೀಸ್ ಅಧಿಕಾರಿ ಬಂದಿದ್ದ. ಆತ ಇದನ್ನೆಲ್ಲ ಓದಿ ಗೂಗಿಗೆ ವಾಪಸ್ ಕೊಡುತ್ತಾ, ’ಇದರಲ್ಲಿ ನನಗೆ ತಪ್ಪೇನೂ ಕಾಣಿಸುತ್ತಿಲ್ಲ. ಆದರೆ ನೀವು ಬಹಳ ಕ್ಲಿಷ್ಟವಾದ ಗಿಕುಯುನಲ್ಲಿ ಬರೆಯುತ್ತೀರಿ’ ಅಂದ.

‘ಥ್ಯಾಂಕ್ಯೂ’ ಅಂದ ಗೂಗಿ.

‘ನೀವು ಟಾಯ್ಲೆಟ್ ಪೇಪರ್ ಮೇಲೆ ಬರೆಯಬೇಕಾಗಿರಲಿಲ್ಲ. ಬಿಳಿ ಹಾಳೆಗಳನ್ನು ಕೊಡಲು ಚೀಫ್ ವಾರ್ಡರ್‍‌ಗೆ ಹೇಳುತ್ತೇನೆ. ನನ್ನ ಆಫೀಸಿನಲ್ಲಿ ಬೇಕಾದಷ್ಟಿದೆ. ಟಾಯ್ಲೆಟ್ ಪೇಪರ್ ಮೇಲಿರುವುದೆಲ್ಲವನ್ನೂ ಕಾಗದದ ಮೇಲೆ ಬರೆಯಿರಿ’ ಎಂದ.

ಗೂಗಿ ಬರೆಯುತ್ತಾನೆ: ’ರಾತ್ರಿ ಮಾತ್ರವಲ್ಲದೆ, ಹಗಲು ಕೂಡ ಬರೆಯಲಾರಂಭಿಸಿದೆ. ಜೊತೆಗೆ, ಈ ಕಾದಂಬರಿಯ ಮುಕ್ತಾಯದೊಂದಿಗೆ ನನ್ನ ಬಿಡುಗಡೆಯ ಗಡುವು ಬೇರೆ ಮನಸ್ಸಿನಲ್ಲಿ ಗಂಟು ಹಾಕಿಕೊಂಡಿದೆ. ಚೀಫ್ ವಾರ್ಡರ್ ಕೊಟ್ಟ ಕಾಗದ ಸಾಕಾಗಲಿಲ್ಲ. ಜೊತೆಯ ಜೈಲುವಾಸಿಗಳು ಕೂಡ ತಮ್ಮ ಹಾಳೆಗಳನ್ನು ಕೊಟ್ಟರು. ಬಹಳ ಜನ ತಾವು ಉಳಿಸಿಟ್ಟುಕೊಂಡಿದ್ದ ಎಲ್ಲ ಪೇಪರನ್ನೂ ಕೊಟ್ಟರು.’

ಡಿಸೆಂಬರ್ ೧೨, ೧೯೭೮ರ ರಾತ್ರಿ. ಕಾದಂಬರಿ ಪೂರ್ಣಗೊಳ್ಳುವುದರಲ್ಲಿತ್ತು... ಗೂಗಿಯ ಕಲ್ಪನೆಯ ಸಮಕ್ಕೆ ಓಡಲು ಅವನ ಕೈಗಳಿಗೆ ಕಷ್ಟವಾಗುತ್ತಿದೆ. ದೂರದಿಂದ ತನ್ನನ್ನು ಯಾರೋ ನೋಡುತ್ತಿದ್ದಾರೆ. ಕಾಗದ ಸಾಕಾಗದೆ ಟಾಯ್ಲೆಟ್ ಪೇಪರ್ ಮೇಲೆ ಬರೆಯಬೇಕಾಗಿ ಬಂದಿದೆ. ಗೂಗಿ ತಲೆಯೆತ್ತಿ ನೋಡಿದ: ಸೂಪರಿಂಟೆಂಡೆಂಟ್ ಆಫ್ ಪೊಲೀಸನ ಕಣ್ಣೋಟ ಗೂಗಿಯ ನೋಟದೊಡನೆ ಬೆರೆಯಿತು.

`ಗೂಗಿ, ನೀವಿನ್ನು ಸ್ವತಂತ್ರ ಜೀವಿ’ಎಂದ ಎಸ್.ಪಿ.

ಗೂಗಿಗೆ ಕೊಟ್ಟಿದ್ದ ೬.೭೭ ಎಂಬ ನಂಬರಿಗೆ ಬದಲಾಗಿ ಮತ್ತೆ ಗೂಗಿ ಥಿಯಾಂಗೋ ಎಂಬ ಹೆಸರು ವಾಪಸ್ ಬಂತು.’

ಇವೆಲ್ಲವನ್ನೂ ತಮ್ಮ ಮುನ್ನುಡಿಯಲ್ಲಿ ದಾಖಲಿಸಿರುವ ಬಂಜಗೆರೆ, ಗೂಗಿಯ ಕಾದಂಬರಿಯನ್ನು ಇಷ್ಟಪಟ್ಟು ಅನುವಾದಿಸಿದ್ದಾರೆ; ಬಂಜಗೆರೆಯವರ ತಾತ್ವಿಕತೆಗೂ ಈ ಕೃತಿ ಹತ್ತಿರವಾಗಿತ್ತು.

ಮಾರ್ಕ್ಸಿಸ್ಟ್ ಗೂಗಿ ಈ ಕಾದಂಬರಿಯಲ್ಲಿ ಆಫ್ರಿಕದ ನೆಲದಲ್ಲೇ ಅರಳಿದ ವಿಶಿಷ್ಟ ಕಮ್ಯುನಿಸ್ಟ್ ಮಾರ್ಗದ ಹೋರಾಟದ ಸಾಧ್ಯತೆಯನ್ನು ಶೋಧಿಸಿದ್ದ. ಜೈಲಿನಿಂದ ಬಿಡುಗಡೆಯಾದ ಗೂಗಿಯ ನಿಷ್ಠುರ ಹೋರಾಟಗಾರ-ಬುದ್ಧಿಜೀವಿ ವ್ಯಕ್ತಿತ್ವವನ್ನು ಮುಂದಿನ ಕೀನ್ಯಾ ಸರ್ಕಾರಗಳೂ ಸಹಿಸಿಕೊಳ್ಳಲಿಲ್ಲ. ಬಂಧನ-ಬಿಡುಗಡೆಗಳ ಚಕ್ರದಲ್ಲಿ ನರಳಿದ ಗೂಗಿ ಬರೆಯುತ್ತಲೇ ಹೋದ. ಒಮ್ಮೆ ವಿದೇಶದಿಂದ ವಾಪಸ್ ಬಂದ ಗೂಗಿಯ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ಮಾಡಿತು. ಗೂಗಿಯ ಪತ್ನಿಯ ಮೇಲೆ ಅತ್ಯಾಚಾರ ಎಸಗಲಾಯಿತು. ಇದೆಲ್ಲ ತನ್ನ ಚೈತನ್ಯವನ್ನು ಉಡುಗಿಸುವ ರಾಜಕೀಯ ಸಂಚು ಎಂಬುದು ಗೂಗಿಗೆ ಖಾತ್ರಿಯಾಗಿತ್ತು. 

‘ವಿಝರ್ಡ್ ಆಫ್ ದ ಕ್ರೋ’ (ಕಾಗೆ ಮಂತ್ರವಾದಿ) ಥರದ ಕ್ರಾಂತಿಕಾರಿ ಕಾದಂಬರಿ ಬರೆದ ಗೂಗಿ ಅದರಲ್ಲಿ ಕೂಡ ಆಫ್ರಿಕದ ನೆಲದಲ್ಲಿದ್ದ ಹೋರಾಟದ ಮಾದರಿಗಳನ್ನು ಕಮ್ಯುನಿಸ್ಟ್ ನೆಲೆಯಲ್ಲಿ ಮರುಸೃಷ್ಟಿಸಲೆತ್ನಿಸಿದ. ಕೀನ್ಯಾದ ದೇಶಿ ಸಂಸ್ಕೃತಿಯ ಕಾಮಿರುತು ರಂಗಭೂಮಿಯನ್ನು ಮರು ಸೃಷ್ಟಿಸಿ, ಆಫ್ರಿಕನ್ ಲಯಕ್ಕೆ ಹತ್ತಿರವಿರುವ ’ಐ ವಿಲ್ ಮ್ಯಾರಿ ವೆನ್ ಐ ವಾಂಟ್’ ನಾಟಕ ಬರೆದ. ಆದರೆ ಆಫ್ರಿಕನ್ ಬೇರುಗಳಿಗೆ ಸದಾ ಮರಳುತ್ತಿದ್ದ ಗೂಗಿ ಆಫ್ರಿಕದ ದೇಶಿ ಸರ್ಕಾರಗಳ ಕಾಟ ತಾಳಲಾರದೆ ಕೊನೆಗೆ ನೈಜೀರಿಯಾದ ಪ್ರಸಿದ್ಧ ಲೇಖಕ ವೋಲೆ ಶೋಯಿಂಕಾನಂತೆ ಅಮೆರಿಕದಲ್ಲಿ ನೆಲೆಸಿದ. ಗೂಗಿಯ ಮಗಳು, ಮಗ ಕೂಡ ಬರವಣಿಗೆಗೆ ತೊಡಗಿದ್ದರು. ‘ಮನೆಯಲ್ಲೇ ಭಾಳಾ ಕಾಂಪಿಟೀಶನ್ ಇದೆ’ ಎಂದು ನಗುತ್ತಿದ್ದ ಗೂಗಿ, ತನ್ನ ೮೮ನೆಯ ವಯಸ್ಸಿನಲ್ಲಿ ತೀರಿಕೊಂಡ.

ವಸಾಹತು ಆಡಳಿತ ಕಾಲದ ದಾಸ್ಯ, ಹೋರಾಟಗಳನ್ನು ಕಂಡಿದ್ದ ಗೂಗಿ, ವಸಾಹತೋತ್ತರ ಕಾಲದ ಆಫ್ರಿಕನ್ ಆಡಳಿತದ ಭ್ರಷ್ಟಾಚಾರವನ್ನು ಪ್ರತಿಭಟಿಸಿ ಸಂಕಷ್ಟಕ್ಕೊಳಗಾದ. ಆದರೆ ಹಿಮ್ಮೆಟ್ಟದ ಗೂಗಿ ಇತರ ಆಫ್ರಿಕನ್ ಲೇಖಕರಂತೆ ಲಕ್ಷಾಂತರ ಆಫ್ರಿಕನ್ನರ ಹೊಸ ಪ್ರಜ್ಞೆಯನ್ನು ರೂಪಿಸಿದ. ಗೂಗಿಯ ’ಮಾನಸಿಕ ನಿರ್ವಸಾಹತೀಕರಣ’ದ ಥಿಯರಿ ಆಫ್ರಿಕಾದಾಚೆಗೆ ಭಾರತದಂಥ ದೇಶಗಳಿಗೂ ಕೈಪಿಡಿಯಂತಿದೆ. ಅದನ್ನು ಗೆಳೆಯ ರಹಮತ್ ತರೀಕೆರೆ ಕನ್ನಡದಲ್ಲೂ ನಿರೂಪಿಸಿದ್ದಾರೆ. 

ಇಂಡಿಯಾದ ದ್ರಾವಿಡ ಲೇಖಕರಂತೆಯೇ ಇರುವ, ಬರೆಯುವ ಗೂಗಿ, ಅಚೀಬೆ, ಶೋಯಿಂಕಾ ಥರದ ಲೇಖಕರನ್ನು ಎಷ್ಟೋ ವರ್ಷಗಳಿಂದ ಓದುತ್ತಿರುವ ನನಗೆ ಅವರು ಕನ್ನಡ ಲೇಖಕಿ, ಲೇಖಕರಂತೇ ಆತ್ಮೀಯರು. ಶೋಯಿಂಕಾಗೆ ಬಂದ ನೊಬೆಲ್ ಪ್ರಶಸ್ತಿ ಅಚೀಬೆಗೆ ಬರದಿದ್ದುದನ್ನು ನೋಡಿ ನೊಬೆಲ್ ಮಾನದಂಡಗಳ ಬಗೆಗೇ ಅನುಮಾನ ಹುಟ್ಟುತ್ತದೆ. ಗೂಗಿಗೂ ನೊಬೆಲ್ ಬರಬೇಕಿತ್ತು ಎನ್ನುವವವರಿದ್ದಾರೆ. ಆದರೆ ಗೂಗಿಯ ಕಾದಂಬರಿಗಳಲ್ಲಿ ಕೊಂಚ ಅತಿಯಾಗಿ ಎದ್ದು ಕಾಣುವ ತಾತ್ವಿಕತೆ ಅವನ ಕಾದಂಬರಿ ಕಲೆಗೆ ಅಲ್ಲಲ್ಲಿ ತೊಡಕಾಯಿತು ಎನ್ನಿಸುತ್ತದೆ. 

ಅದೇನೇ ಇರಲಿ, ಈಚಿನ ದಶಕಗಳಲ್ಲಿ ಇಂಗ್ಲಿಷ್ ಲಿಪಿ ಬಳಸಿ ಗಿಕುಯು ಭಾಷೆಯಲ್ಲಿ ಬರೆದರೂ, ತನ್ನ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿ ಲೋಕದ ತುಂಬ ಹಬ್ಬಿದ ಗೂಗಿ ವಾ ಥಿಯಾಂಗೋ ಬದುಕು-ಬರಹಗಳು ಚಿಂತನೆ-ಬರವಣಿಗೆಗಳಲ್ಲಿ ತೊಡಗುವವರಿಗೆ ಹಲವು ಪಾಠಗಳನ್ನು ಕಲಿಸಬಲ್ಲವು. 
 

Share on:

Comments

25 Comments



| ಬಂಜಗೆರೆ ಜಯಪ್ರಕಾಶ

ಡೆವಿಲ್ ಆನ್ ದ ಕ್ರಾಸ್ ನ ಪೀಠಿಕೆಯ ಭಾಗಗಳನ್ನು ಉಲ್ಲೇಖಿಸಿ ನೀವು ಬರೆದ ಮಾತುಗಳಿಗಾಗಿ ಕೃತಜ್ಞನಾಗಿದ್ದೇನೆ. ಗೂಗಿ ಚಿಂತನೆಗಳು ನಮಗೆ ಡಿಕಾಲನೈಜಿಂಗ್ ಗಾಗಿ ಮಾತ್ರವಲ್ಲ ಡಿಕಾಸ್ಟಿಫೈಯಿಂಗ್ ಆಗಲಿಕ್ಕೂ ನಮಗೆ ನೆರವು ನೀಡಬಲ್ಲವು.


| Vijayananda

ಸಾರ್, ಇದೂ ಕೆನ್ಯಾ ದೇಶದ ಪ್ರಸಿದ್ಧಿ ಲೇಖಕ ಗೂಗಿ ವಾ ಥಿಯಾಂಗೋ ಅವರಿಗೇ ತಮ್ಮ ಚಿರವಾದ ಹೃದಯಸ್ಪರ್ಶಿ ಶ್ರದ್ಧಾಂಜಲಿ.... ಕೆನ್ಯಾ ದೇಶದ ಲೇಖಕ ಎಲ್ಲಿ ಕರ್ನಾಟಕದ ಲೇಖಕ ಎಲ್ಲಿ.... "ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ?" (ಅಲ್ಲಮ ಪ್ರಭು)


| ಮಂಜುನಾಥ್ ಸಿ ನೆಟ್ಕಲ್

ಕನ್ನಡ ಎಂ ಎಂ ಪದವಿಗಾಗಿ ತೌಲನಿಕ ಅಧ್ಯಯನ ತೆಗೆದು ಕೊಂಡ ನನಗೆ ವಸಾಹತುಶಾಹಿ ಪ್ರಜ್ಞೆ ಮತ್ತು ನಿರ್ವಸಾಹತೀಕರಣ ಇವುಗಳ ಅರ್ಥವಾಗುತ್ತಿರಲಿಲ್ಲ.. ಆಗ ಗೂಗಿ ವಾ ಥಿಯಾಂಗೋ ಬರೆದ ಪುಸ್ತಕಗಳೇ ವಸಾಹತೀಕರಣವನ್ನು ಅರ್ಥ ಮಾಡಿಕೊಳ್ಳಲು ನೆರವಾದವು... ಮತ್ತೊಮ್ಮೆ ಈ ಲೇಖಕನ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.


| Abdul khalak

Nice write up sir


| Sahana B

The life and writings of Gugi Va Thiongo are the indelible marks of sacrifice, struggle and the love for his people deep rooted in the conscience of an epoch. Whoever may agree or contest this, I feel that Kannada (or even India) did not get a writer of this kind. Kuvempu, who is a high model for us, also did not use his pen forfreedom struggle in any significant measure (he remains great for many other contributions, of course). Same with the other writers, more or less. Nelson Mandela fought for justice and spent all his life in jail and yet pardoned all his enemies, when he got power! It seems it is a healthier way to empower our necessary resistances in the light of this kind of forgiveness.


| ವಿಜಯಾನಂದ

ಸಾರ್, ಇದೂ ಕೆನ್ಯಾ ದೇಶದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ಅವರಿಗೇ ತಮ್ಮ ಚಿರವಾದ ಹೃದಯಸ್ಪರ್ಶಿ ಶ್ರದ್ಧಾಂಜಲಿ.... ಕೆನ್ಯಾ ದೇಶದ ಲೇಖಕ ಎಲ್ಲಿ ಕರ್ನಾಟಕದ ಲೇಖಕ ಎಲ್ಲಿ.... "ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ? (ಅಲ್ಲಮ ಪ್ರಭು)


| Rupa

Beautiful


| Hari Prasad

ಗೂಗಿಯ ಬರವಣಿಗೆಯಲ್ಲಿ ತಾತ್ವಿಕತೆ ಹೆಚ್ಚೇ ಅನಿಸುವಷ್ಟು ಇದೆ ಎಂಬ ನೋಟಕ್ಕೊಂದು ಥ್ಯಾಂಕ್ಸ್ ಸಾ


| sanganagouda

ಪೂರ್ತಿ ಓದಿದೆ ಸರ್. ನಾನು ಕೇಶವ ಮಳಗಿ ಸರ್ ಅವರ 'ಗುಂಡಿಗೆಯ ಬಿಸಿ ರಕ್ತ' ತರೀಕೆರೆ ಸರ್ ಅವರು ಗೂಗಿ ವಾ ಥಿಯಾಂಗೋ ಅವರ ಅನುವಾದ ಪುಸ್ತಕ, ಜ ನಾ ತೇಜಶ್ರೀ ಅವರು ಅನುವಾದಿಸಿದ 'ವೊಲೆ ಶೊಯಾಂಕ್ ' ಈ ಮೂರೂ ಕೃತಿಗಳನ್ನು ಓದಿರುವೆ. ನಿಮ್ಮ ಬರೆಹ ಅದೆಷ್ಟು ಹೊಸತನ ಹೊಂದಿರುತ್ತದೆ!! ಕನ್ನಡದ ವಿಮರ್ಶೆ ಸತ್ತಿರುವ ಸಂದರ್ಭದಲ್ಲಿ ನೀವು ಗಟ್ಟಿ ಬರೆಹ ಯಾವುದೇ ಇರಲಿ ಅದನ್ನು ನಿಮ್ಮ ಬರಹದಲ್ಲಿ ಪ್ರಸ್ತಾಪಿಸುತ್ತಲೇ ಬಂದಿರುವಿರಿ 🙏🙏


| Rajaram

Superb article. Enjoyed reading it. Thank you.


| ಕಲ್ಪನಾ ಟಿ

ವಸಾಹತೀಕರಣ ಮತ್ತು ನಿರ್ವಸಾಹತೀಕರಣ ಎರಡೂ ಸಾಪೇಕ್ಷವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇಕಾಗಿ/ಬೇಡವಾಗುತ್ತದೆ ಭಾರತದ ಸಂದರ್ಭದಲ್ಲಿ ಕೆಲವು ಸಲ ಕೆಲವು ವಲಯಗಳಿಗೆ ಕಾಲನಿಸಿಂಗ್ ಉಪಯುಕ್ತವಾದರೆ ಡಿಕಾಲನೈಸಿಂಗ್ ಮತ್ತೆ ಕೆಲವು ಬೇರೆ ವಲಯಗಳಿಗೆ ಉಪಯೋಗಕಾರಿಯಾಗಿ ಕಾಣುತ್ತದೆ. ನಾವು ಸಾಮಾನ್ಯವಾಗಿ ಸಮಷ್ಟಿಯಾಗಿ ನೋಡುವುದನ್ನು ಗೊತ್ತಿದ್ದೂ ಕಡಿಮೆ ಮಾಡಿಕೊಂಡಿದ್ದೇವೆ ಎನಿಸುತ್ತದೆ.


| ಗುರುಪ್ರಸಾದ್ ಕಂಟಲಗೆರೆ

ಬಂಜಗೆರೆಯವರ ಅನುವಾದವನ್ನು ಓದಬೇಕೆಂದು ಈಗ ತೀವ್ರವಾಗಿ ಅನಿಸುತಿದೆ ಸರ್. ಧನ್ಯವಾದಗಳು


| Nataraj Huliyar Replies

Dear Kalpana, Never ever think colonisation is useful. Freedom is the ideal state


| Dr.C.B. Inalli

ಗೂಗಿಯನ್ನು ನಮ್ಮದೇ ಭಾಷೆಯ ಲೇಖಕನೆಂಬಂತೆ ನೆನಪಿಸಿಕೊಂಡು ನಮನಗಳನ್ನು ಸಲ್ಲಿಸಿದ್ದು ಅರ್ಥಪೂರ್ಣ ಸರ್. ಗೂಗಿ ಸೋಯಂಕ ಅಚಬೆ - ಎಂ.ಎ ಓದುವಾಗ ಇಂಗ್ಲಿಷ್ ಸಾಹಿತ್ಯದಲ್ಲಿ ನಮ್ಮ ಬದುಕೂ ಇಣುಕಿದೆ ಎಂಬಂತೆ ಭಾವಿಸಲು ಕಾರಣರಾದವರು. ಗೂಗಿಯಂತೂ ತನ್ನ ಡಿಕಲೋನೈಸಿಂಗ್ ದಿ ಮೈಂಡ್ಸ್ ಮೂಲಕ ನನ್ನನ್ನು ಆಳವಾಗಿ ಕಲಕಿದಾತ. ಈ ಪ್ರಬಂಧವನ್ನು ತೀವ್ರ ತನ್ಮಯತೆಯಿಂದ ಬೋಧಿಸಿದ ನನಗೆ ಮಗನ ಶಿಕ್ಷಣ ಮಾಧ್ಯಮದ ಬಗ್ಗೆ ಇದ್ದ ಗೊಂದಲಗಳು ಕರಗಿ ಹೋದವು. ಅವನು ಕನ್ನಡ ಮಾಧ್ಯಮ ಶಾಲೆಯಲ್ಲಿ ಈಗ ನಾಲ್ಕನೇ ತರಗತಿ. ಹಿಂದಿನ ತಿಂಗಳು ಊರಿಂದ ನನ್ನ ತಮ್ಮನ ಮಗಳು ಬಂದಿದ್ದಳು. ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ಅವಳು ತುಂಬಾ ಜಾಣೆ. ಅವಳೂ ನಾಲ್ಕನೇ ತರಗತಿ. ನಮ್ಮಪ್ಪನ ಇಚ್ಛೆ ಮತ್ತು ಸಹವಾಸದಿಂದಾಗಿ ತುಂಬಾ ವಚನಗಳನ್ನು ಬಾಯಿಪಾಠ ಮಾಡಿದ್ದಾಳೆ. ಸ್ಪಷ್ಟವಾಗಿ ಹೇಳುತ್ತಾಳೆ. ಅವುಗಳನ್ನು ಅರ್ಥೈಸಲು ಅವಳನ್ನು ಕೇಳಿದೆ. ಆಗಲಿಲ್ಲ. ನನ್ನ ಮಗನಿಗೆ ವಚನಗಳ ಅಷ್ಟೊಂದು ಪರಿಚಯವಿಲ್ಲ. ಆದರೆ, ಇವನು ಅವಳು ಹೇಳಿದ ವಚನಗಳನ್ನು ಬಹುತೇಕ ಸರಿಯಾದ ಕ್ರಮದಲ್ಲಿ ಅರ್ಥೈಸಲು ಪ್ರಯತ್ನಿಸಿದ: ಅವನ ವಯಸ್ಸಿನ ಮಿತಿಯಲ್ಲಿ. ಆ ದಿನ ಗೂಗಿ ನೆನಪಾಗಿದ್ದ. ಶಿಕ್ಷಣ ಮಾಧ್ಯಮದ ಕುರಿತಾಗಿ ನನ್ನ ಸ್ವಂತ ಆಲೋಚನೆಗಳು ಇದೇ ನಿಟ್ಟಿನಲ್ಲಿದ್ದವು. ಆದರೂ ಆತಂಕವಿತ್ತು. ಗೂಗಿಯ ಪ್ರಖರ ಚಿಂತನೆಗಳ ಬಲ ನನ್ನ ನಿಲುವನ್ನ ಖಚಿತಪಡಿಸಿತು. ಆತ ನನಗೆ ಬರೀ ಒಂದು ನೆನಪಲ್ಲ. ತಮಗೆ ಧನ್ಯವಾದಗಳು ಸರ್.


| ರವಿಕುಮಾರ್ ನೀಹ

ರಹಮತ್ ತರೀಕೆರೆ ಅವರ ಅನುವಾದವನ್ನಷ್ಟೇ ಓದಿ ಗೂಗಿಯ ವ್ಯಕ್ತಿತ್ವ ಕಟ್ಟಿಕೊಂಡಿದ್ದೆ. ಈ ಬರಹದಿಂದ ಗೂಗಿಯ ಭಿನ್ನ ವ್ಯಕ್ತಿತ್ವ ಕಾಣುವಂತಾಯಿತು.. ವಂದನೆಗಳು ಸರ್..


| ಗುರು ಜಗಳೂರು

ಸರ್ ,ಮೇಲಿನ ಲೇಖಕರ ಮಾಹಿತಿಯನ್ನು ಸೊಗಸಾಗಿ ಕೊಟ್ಟಿದ್ದೀರಿ.ಧನ್ಯವಾದಗಳು. ಹೇಳಬೇಕಾದ ಮಾತು,ನಿಮ್ಮ" ಶೇಕ್ಸಪಿಯರ್ ಮನೆಗೆ ಬಂದ ಎಷ್ಟು ಒಳ್ಳೆಯ ಪರಿಕಲ್ಪನೆ. ಓದಿ ಮೂಕವಿಸ್ಮಿತನಾದೆ. ಒಟ್ಟಾರೆ ಶೇಕ್ಸಪಿಯರ್ ನ ಮಹತ್ವದ ಕೃತಿಗಳನ್ನು ಇಟ್ಟುಕೊಂಡು ಅದರ ಹಿರಿದಾದ,ನವಿರಾದ ವಾಕ್ಯಗಳನ್ನು ಕನ್ನಡಕ್ಕೆ ಅನುವಾದಗೊಳಿಸಿ ಒಂದು ನಾಟಕವಾಗಿ ಅದನ್ನು ಪುಸ್ತಕ ರೂಪಕ್ಕೆ ತರುವ ಸಂಗತಿ ಸಾಮಾನ್ಯವಾದುದಲ್ಲ.ತಮ್ಮ ಅಪಾರವಾದ ಇಂಗ್ಲಿಷ್ ಜ್ಞಾನವನ್ನು ಮಾತೃಭಾಷೆಯಲ್ಲಿ ಕನ್ನಡಿಗರಿಗೆ ನೀಡಿದ್ದೀರಿ. .ಎಷ್ಟು ಜನ ಬರಹಗಾರರು ಈಥರದ ಕನಸು ಕಾಣಲು ಸಾಧ್ಯ.ಪತ್ರಿಕೆಯೇ ಓದದ ಕೃತಕ ಖುಷಿಯ ಆನಂದದಲ್ಲಿರುವ ನಮ್ಮ ಓರಿಗೆಯ ಉಪನ್ಯಾಸಕ ಸ್ಹೇಹಿತರು ಇವುಗಳನ್ನು ಕೊಂಡು ಓದಿ ಚರ್ಚೆ ಮಾಡುವ ಮಾತು ದೂರವೇ ಆಗಿರುವುದು ದುರಂತ.ಈ ಕೃತಿ ಕನ್ನಡದ ಆಸ್ತಿಯಾಗಿದೆ.


| Harish M

You don't want to 'never ever think colonisation is useful. Freedom is the ideal state' The second part is true. However, the first part is a truncated consideration but a vehemently popularized idea losing a holistic view. The use of categorical, overconfident 'never ever' is baffling. You have enough cases of select positive effects of colonialism of lighter hue all over the world, of course, subject to debate. The education system introduced by the Britishers has set in motion the liberation of both the socially affluent and the down-trodden as well. There is a lot of literature available on this-one, for example: https://www.nas.org/academic-questions/31/2/the_case_for_colonialism. You have supported the idea "ನಾವು ಸಾಮಾನ್ಯವಾಗಿ ಸಮಷ್ಟಿಯಾಗಿ ನೋಡುವುದನ್ನು ಗೊತ್ತಿದ್ದೂ ಕಡಿಮೆ ಮಾಡಿಕೊಂಡಿದ್ದೇವೆ ಎನಿಸುತ್ತದೆ"!


| Devindrappa

ಪೂರ್ವ ಆಫ್ರಿಕಾದ ಲೇಖಕ ಗೂಗಿ ವಾ ಥಿಯಾಂಗೋ ಕುರಿತ ಆಪ್ತ ಬರಹ ಇದು.ಜೇಮ್ಸ್ ಗೂಗಿ ಆಗಿದ್ದವರು ಗೂಗಿ ವಾ ಥಿಯಾಂಗೋ ಆಗುವುದರ ಕಡೆಗಿನ ಚಲನೆಯೇ ವಸಾಹತುಶಾಹಿ ವಿರೋಧಿ ನಿಲುವಿನ ತೀವ್ರ ಪ್ರತಿಭಟನೆ ಎಂದೇ ಹೇಳಬಹುದು. ಹೆಸರು, ಪ್ರದೇಶ, ಭಾಷೆ ಭಾವನೆಗೆ ಸಂಬಂಧಪಟ್ಟಿದ್ದು ಅನ್ನುವುದನ್ನು ಅನೇಕ ಪಾಶ್ಚಾತ್ಯ ಲೇಖಕರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕುವೆಂಪು ಅವರಿಗೆ ಇಂಗ್ಲಿಷ್ ಕವಿ ಜೇಮ್ಸ್ ಕಸಿನ್ಸ್ ನಿಮ್ಮ ಮಾತೃಭಾಷೆಯಲ್ಲಿ ಸಾಹಿತ್ಯ ರಚನೆ ಮತ್ತು ಮಾಡಿ ಅಂತ ಹೇಳಿದ ಸಂದರ್ಭ. ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅತ್ಯಂತ ಆಪ್ತವಾದ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದು, ಇಲ್ಲಿ ಗೂಗಿ ಅವರು ಇಂಗ್ಲಿಷ್ ಭಾಷೆ ತ್ಯಜಿಸಿ ತಮ್ಮ ಬುಡಕಟ್ಟಿನ ಗಿಕುಯು ಭಾಷೆಯಲ್ಲಿ ಬರೆಯುವುದು ಎಂದರೆ ತಾಯ್ನುಡಿಯ ಬೆಸುಗೆಯ ಸಂಬಂಧ ಎಂದು ಹೇಳುತ್ತಾರೆ. ಕನ್ನಡದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಭಾಷೆ ಕುರಿತ ಚರ್ಚೆಗಳಿಗೆ ಈ ಲೇಖಕನ ಸಾಹಿತ್ಯ ಉತ್ತರವಾಗಲಿ. ಬಂಜಗೆರೆ ಜಯಪ್ರಕಾಶ್ ಅವರು ಅನುವಾದ ಮಾಡಿರುವ ಡೆವಿಲ್ ಆನ್ ದ ಕ್ರಾಸ್ ಕಾದಂಬರಿ ಓದುವ ಕುತೂಹಲ ಹೆಚ್ಚಿದೆ.


| Gangadhar

Wonderful


| Sumanpriya Mendonca

Thanks for the beautiful write-up. A salute to the great writer who did not forget his roots. RIP Ngũgĩ bwana 🙏 ED. Note: bwana is sir, master, lord in Swahili and other African languages.


| Dr. Siddagangaiah Holatalu

Ngugi has given a lot of confidence to writers in Vernacular languages. The whole world will remember him.


| Arundhati D

ಸರ್ , "ಸಿದ್ದಿಗಳ ಅಣ್ತಮ್ಮ " ಅಲ್ಲ ತೇಟ್ ನಮ್ಮ ದೊಡ್ಡೀರಚಿಕ್ಕಪ್ಪ 👍.


| ಡಾ. ನಿರಂಜನ ಮೂರ್ತಿ ಬಿ ಎಂ

ಗೂಗಿ ವಾ ಥಿಯಾಂಗೋರ ವ್ಯಕ್ತಿ ಚಿತ್ರಣವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿರುವ ಈ ಲೇಖನ ತುಂಬಾ ಇಷ್ಟವಾಯಿತು. ಗೂಗಿ ವಿದೇಶೀ ಭಾಷೆಯ ವ್ಯಾಮೋಹವನ್ನು ತೊರೆದು, ಮಾತೃಭಾಷೆಯ ಮಡಿಲಲ್ಲಿ ಬಾಳುತ್ತಾ, ವಸಾಹತುಶಾಹಿಯ ವಿರುದ್ಧ ಸೆಣಸಿದ ಅದ್ಭುತ ವಾದ ಲೇಖಕ. ಮಾನಸಿಕ ನಿರ್ವಸಾಹತೀಕರಣದ ಅಗತ್ಯವನ್ನು ಸಾರಿ, ಎಲ್ಲರಿಗೂ, ವಿಶೇಷವಾಗಿ ನಮಗೆ, ಅಂದರೆ ಭಾರತೀಯರಿಗೆ, ಹತ್ತಿರವಾಗಿರುವ ಬೇರನರಿತ ಬಂಡಾಯ ಬರಹಗಾರನಿಗೆ ನಮನಗಳು.


| ಡಾ. ಎಸ್ ಕೃಷ್ಣಪ್ಪ..ತುಮಕೂರು

ಆಫ್ರಿಕಾ ನೆಲದ ಜೇಮ್ಸ್ ಗೂಗಿಯ ಜೀವನ ಕಥನ , ಬಾಬಾ ಸಾಹೇಬರ ಹೋರಾಟದ ಮುಂದುವರಿದ ಸಂಕಥನದಂತೆ ಕಾಣಿಸಿಕೊಳ್ಳುತ್ತಿದ್ದು,, ಸಮಕಾಲೀನ ಭಾರತೀಯ ನೈಜ ಹೋರಾಟಗಾರಿಗೆ ಮತ್ತಷ್ಟು ಸ್ಫೂರ್ತಿ ಮತ್ತು ಗಟ್ಟಿತನವನ್ನು ಒದಗಿಸುತ್ತಿದೆ ಈ ಲೇಖನ....


| Rupa

Beautiful




Add Comment


Nataraj Huliyar on Book Prize Awardees

YouTube






Recent Posts

Latest Blogs