ಎಲ್ಲ ಗೆಲ್ಲುವ ಹೀರೋನ ಹಿಂದೆ

 ಹೀರೋಗಳನ್ನು ಸೃಷ್ಟಿಸುವ ಲೇಖಕರ ಫ್ಯಾಂಟಸಿ-ಭ್ರಾಮಕಲೋಕ-ಕುರಿತು ಮಾತಾಡುತ್ತಾ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಒಂದು ಪರಿಚಿತ ಮಾದರಿಯನ್ನು ಚರ್ಚಿಸುತ್ತಾನೆ: ಇಂಥ ಕೃತಿಗಳಲ್ಲಿ- ಉದಾಹರಣೆಗೆ, ಕಾದಂಬರಿಗಳಲ್ಲಿ- ಹೀರೋ ಸುತ್ತ ಎಲ್ಲವೂ ಜರುಗುತ್ತದೆ. ಹೀರೋ ಬಗ್ಗೆ ಎಲ್ಲರಿಗೂ ಒಲವು ಇರುವಂತೆ, ಹೀರೋಗೆ ಒಂದು ವಿಶೇಷ ಶಕ್ತಿಯಿರುವಂತೆ,  ಅಪಾಯಗಳಿಂದ ಅವನಿಗೆ ವಿಶೇಷ ರಕ್ಷಣೆ ದೊರೆಯುವಂತೆ ಲೇಖಕ ‘ನೋಡಿಕೊಳ್ಳುತ್ತಾನೆ’. 

ಉದಾಹರಣೆಗೆ, ಕಾದಂಬರಿಯ ಅಧ್ಯಾಯವೊಂದರ ಕೊನೆಗೆ ಹೀರೋ ತೀವ್ರ ಗಾಯವಾಗಿ ಪ್ರಜ್ಞೆ ತಪ್ಪಿ ಬೀಳುತ್ತಾನೆ; ಮುಂದಿನ ಅಧ್ಯಾಯದಲ್ಲಾಗಲೇ ಅವನು ಚೇತರಿಸಿಕೊಂಡು ಗುಣಮುಖನಾಗುವಂತೆ ಕಾದಂಬರಿಕಾರ ನೋಡಿಕೊಳ್ಳುತ್ತಾನೆ. ಕಾದಂಬರಿಯ ಮೊದಲ ಭಾಗದಲ್ಲಿ ಹೀರೋ ಕಡಲಿನಲ್ಲಿ ಪ್ರಯಾಣ ಮಾಡುತ್ತಿದ್ದಾನೆ; ಇದ್ದಕ್ಕಿದ್ದಂತೆ ಕಡಲಿನಲ್ಲಿ ಬಿರುಗಾಳಿಯೆದ್ದು ಹಡಗು ಮುಳುಗಿ ಹೋಗುತ್ತದೆ. ಮುಂದಿನ ಭಾಗದ ಶುರುವಿನಲ್ಲಾಗಲೇ ಹೀರೋ ಅಚ್ಚರಿ ಹುಟ್ಟಿಸುವಂತೆ ಪಾರಾಗಿದ್ದಾನೆ! ಆಗ ‘ಹಿಸ್ ಮೆಜೆಸ್ಟಿ ಇಗೋ’- ಅಹಂ ಸಾಹೇಬರು- ಹೇಳುತ್ತಾರೆ: ‘ನನಗೆ ಏನೂ ಆಗಲ್ಲ.’ ಹೀರೋ ಎನ್ನುವವನು ‘ಲೇಖಕನ ಅಹಮ್ಮಿನ ವಿಸ್ತರಣೆ’ ಎಂಬ ಸೂಕ್ಷ್ಮ ಗ್ರಹಿಕೆಯನ್ನು ಮುಂದೊಮ್ಮೆ ಫ್ರಾಯ್ಡ್ ಮಂಡಿಸಿದ್ದು ಈ ಹಿನ್ನೆಲೆಯಲ್ಲಿ. 

ಫ್ರಾಯ್ಡ್ ಹೇಳುವ ನಾಯಕನ ಮಾದರಿ ಅನೇಕ ಕೃತಿಗಳಲ್ಲಿ ಕಾಣುತ್ತಲೇ ಇರುತ್ತದಾದರೂ, ಅದೆಲ್ಲ ಹಳೆಯ ಮಾತಾಯಿತು ಎಂದುಕೊಂಡಿದ್ದೆ. ಆದರೆ ಮೊನ್ನೆ ಸಂಜೆ, ‘ಇಲ್ಲ ಇಲ್ಲ! ಫ್ರಾಯ್ಡ್ ಹೇಳಿದ್ದು ಇವತ್ತಿಗೂ ನಿಜ!’ ಅನ್ನಿಸತೊಡಗಿತು. ಲೇಖಕರು ತಮ್ಮ ಅಹಮ್ಮಿಗೆ ತೃಪ್ತಿಯಾಗುವಂತೆ, ತಮ್ಮ ಹಗಲುಗನಸುಗಳನ್ನು ಈಡೇರಿಸಿಕೊಳ್ಳಲು ಹೀರೋನನ್ನು ಸೃಷ್ಟಿಸುತ್ತಾರೆ ಎಂಬ ಬಗ್ಗೆ ಫ್ರಾಯ್ಡ್ ಹೇಳಿದ್ದು ಸರಿಯೆನ್ನಿಸಿತು. ಕಾರಣ, ಆ ಸಂಜೆ ನನ್ನೆದುರಿಗೆ ಕೂತಿದ್ದ ಒಬ್ಬ ಹೊಸ ಕಾದಂಬರಿಕಾರ ಫ್ರಾಯ್ಡ್ ಹೇಳುತ್ತಿರುವ ಹೀರೋನ ಮಾದರಿಯನ್ನೇ ಮುಂದುವರಿಸುತ್ತಿರುವಂತೆ ಕಂಡ:

‘ಹದಿಮೂರನೇ ಶತಮಾನದ ನನ್ನ ಕಥಾನಾಯಕ ಬಾಲ್ಯದಲ್ಲಿ ಒಬ್ಬನೇ ಕುದುರೆಯೇರಿ ಶಾಲೆಗೆ ಹೋಗುತ್ತಾನೆ. ದಾರಿಯಲ್ಲಿ ಏರಿ ಬಂದ ಗೂಳಿಯ ಕೋಡು ಹಿಡಿದು ಹಿಮ್ಮೆಟ್ಟಿಸುತ್ತಾನೆ. ಶಾಲೆಯ ಹುಡುಗರ ಲೀಡರ್ ಆಗುತ್ತಾನೆ... ಆಟದಲ್ಲಿ ಎಲ್ಲರ ಮಣ್ಣು ಮುಕ್ಕಿಸುತ್ತಾನೆ...’ 

ಸದರಿ ಕಾದಂಬರಿಕಾರನ ಹೀರೋ ಸೃಷ್ಟಿಯ ಬಣ್ಣನೆ ಹೀಗೇ ನಡೆದಿತ್ತು.

‘ಅದು ಹೇಗೆ ಸಾಧ್ಯ? ನಿಮಗೆ ಅನ್ನಿಸಿದ್ದನ್ನೆಲ್ಲ ಹದಿಮೂರನೇ ಶತಮಾನದ ಹೀರೋ ಪಾತ್ರದ ಮೇಲೆ ಹಾಕಿದರೆ ಹೇಗಾಗುತ್ತೆ...’ ಎಂದು ಗೊಣಗುತ್ತಾ ಸುಮ್ಮನಾದ ನನ್ನೊಳಗೆ ಹೀರೋ ಸೃಷ್ಟಿಯ ಬಗ್ಗೆ ಫ್ರಾಯ್ಡ್ ಹೇಳಿದ ಮಾತುಗಳು ಗುಂಯ್‌ಗುಡತೊಡಗಿದವು. 

ಹತ್ತಾರು ವರ್ಷ ಕ್ಲಾಸುಗಳಲ್ಲಿ ಮತ್ತೆ ಮತ್ತೆ ಚರ್ಚಿಸಿರುವ ಫ್ರಾಯ್ಡ್ ಕಲಾಮೀಮಾಂಸೆಯ ಸಾರ ಇದು: ಲೇಖಕನ ಇಷ್ಟಾರ್ಥಗಳ ಈಡೇರಿಕೆಯಂತೆ ಅವನ ಕೃತಿ-ಉದಾಹರಣೆಗೆ, ಒಂದು ಕಾದಂಬರಿ- ಕೆಲಸ ಮಾಡುತ್ತಿರುತ್ತದೆ. ಕೃತಿಯ ಹೀರೋ ಅಂತಿಮವಾಗಿ ಲೇಖಕನ ‘ನಾನು’ ಎಂಬುದರ ವಿಸ್ತರಣೆ. ಕೃತಿಕಾರ ತನ್ನ ಹಗಲುಗನಸುಗಳನ್ನು ಈಡೇರಿಸಿಕೊಳ್ಳಲು ಹೀರೋನನ್ನು ಸೃಷ್ಟಿಸುತ್ತಾನೆ. ಉದಾಹರಣೆಗೆ, ಎಲ್ಲರಿಗೂ ಇರುವಂತೆ ಕಾದಂಬರಿಕಾರನಿಗೂ ಖ್ಯಾತಿಯ ಆಸೆ ಇದೆ ಎಂದಿಟ್ಟುಕೊಳ್ಳಿ. ಅವನ ಹೀರೋ ಖ್ಯಾತನಾಗುತ್ತಾನೆ. ಲೇಖಕನಿಗೆ ಊರಿನ ಹೆಣ್ಣಗಳೆಲ್ಲ ತನ್ನನ್ನು ಪ್ರೀತಿಸಲಿ ಎಂಬ ಆಸೆ. ಸರಿ, ಅದು ಕೃತಿಯಲ್ಲಿ ಈಡೇರುತ್ತದೆ. ಕೃತಿಯಲ್ಲಿ ಇರುವವರು ಒಳ್ಳೆಯವರು, ಕೆಟ್ಟವರು ಎಂದು ಎರಡು ಭಾಗವಾಗಿದ್ದಾರೆ. ಒಳ್ಳೆಯವರೆಲ್ಲ ಹೀರೋಗೆ ಸಹಾಯ ಮಾಡುವವರು; ಕೆಟ್ಟವರು ಹೀರೋಗೆ ತೊಂದರೆ ಕೊಡುವವರು. ಏನೇ ಆದರೂ ಹೀರೋ ‘ಹೀರೋ’ ಆಗಿಯೇ ಉಳಿಯುತ್ತಾನೆ!  

ಫ್ರಾಯ್ಡ್ ಬರೆದಿರುವ ‘ಕ್ರಿಯೇಟಿವ್ ರೈಟರ‍್ಸ್ ಅಂಡ್ ಡೇಡ್ರೀಮಿಂಗ್’ ಎಂಬ ಪ್ರಖ್ಯಾತ ಲೇಖನದ ಕೆಲವು ಗ್ರಹಿಕೆಗಳನ್ನು ಇಲ್ಲಿ ಸರಳಗೊಳಿಸಿ ಹೇಳಿದ್ದೇನೆ. ಅಂಥದೊಂದು ಮಹತ್ವದ ಲೇಖನದ ಸಾರಾಂಶ ಕೊಡುವುದು ಅಷ್ಟು ಸರಿಯಲ್ಲ. ಕಾರಣ, ಫ್ರಾಯ್ಡ್ ಒಬ್ಬ ಬಹುದೊಡ್ಡ ಮನೋವಿಜ್ಞಾನಿ ಹೇಗೋ ಹಾಗೆಯೇ ಜರ್ಮನ್ ಭಾಷೆಯ ದೊಡ್ಡ ಲೇಖಕ ಕೂಡ. ಇಂಗ್ಲಿಷಿನಲ್ಲೇ ಅವನ ಬರವಣಿಗೆ ಇಷ್ಟೊಂದು ಶಕ್ತವಾಗಿ ಕಾಣುವುದಾದರೆ, ಮೂಲ ಜರ್ಮನ್ ಭಾಷೆಯಲ್ಲಿ ಅದು ಇನ್ನೆಷ್ಟು ವಿಶಿಷ್ಟವಾಗಿರಬಹುದು ಎಂದು ಮಾತ್ರ ಊಹಿಸಲೆತ್ನಿಸುತ್ತೇನೆ. 

ಹಗಲುಗನಸುಗಳು ಎಲ್ಲ ಸಮಾಜಗಳ ಲೇಖಕ, ಲೇಖಕಿಯರ ಕತೆ, ಕಾದಂಬರಿಗಳಲ್ಲೂ ಇರಬಹುದು: ಉದಾಹರಣೆಗೆ, ಹತಾಶನಾದ ನಿರುದ್ಯೋಗಿಯೊಬ್ಬ ದಾರಿಯಲ್ಲಿ ಹೋಗುತ್ತಿರುವಾಗ ತರುಣಿಯ ಕಾರೊಂದು ಅವನಿಗೆ ಡಿಕ್ಕಿ ಹೊಡೆಯುತ್ತದೆ. ಆಕ್ಸಿಡೆಂಟ್ ಮಾಡಿದ ತರುಣಿ ಅವನನ್ನು ಆಸ್ಪತ್ರೆಗೆ ಸೇರಿಸುತ್ತಾಳೆ. ಆಸ್ಪತ್ರೆಯಲ್ಲಿ ಅವನು ಗುಣವಾಗುತ್ತಿರುವಾಗ…ಆಹಾ! ಆ ತರುಣಿಗೆ ಅವನಲ್ಲಿ ಪ್ರೀತಿ ಮೊಳೆಯುತ್ತದೆ; ಅವನನ್ನು ಮದುವೆಯಾಗುತ್ತಾಳೆ. ಆತ ಆ ತರುಣಿಯ ಆಸ್ತಿಗೆ ಒಡೆಯನಾಗುತ್ತಾನೆ!  

ಲೇಖಕನ ಇಷ್ಟಾರ್ಥದ ಈಡೇರಿಕೆಯ ಹೀರೋ ಸೃಷ್ಟಿಯ ಬಗ್ಗೆ ತಾನು ಹೇಳುತ್ತಿರುವ ಮಾತುಗಳು ಸಾಧಾರಣ ಕೃತಿಗಳಿಗೆ ಅನ್ವಯವಾಗುತ್ತವೆ, ಕ್ಲಾಸಿಕ್ಸ್‌ಗೆ- ಕಾಲಾತೀತ ಶ್ರೇಷ್ಠ ಕೃತಿಗಳಿಗೆ- ಇವು ಅನ್ವಯವಾಗುವುದಿಲ್ಲ ಎಂಬುದನ್ನು ಕೂಡ ಫ್ರಾಯ್ಡ್ ಹೇಳುತ್ತಾನೆ. ಆದ್ದರಿಂದಲೇ ಫ್ರಾಯ್ಡ್ ಕಥಾಮೀಮಾಂಸೆಯ ಮಾತುಗಳನ್ನು ಎಲ್ಲ ಲೇಖಕ, ಲೇಖಕಿಯರಿಗೂ ಮಕ್ಕಿಕಾಮಕ್ಕಿ ಅನ್ವಯಿಸಲಾಗದು. ಹಾಗೆ ಅನ್ವಯಿಸಿದರೆ, ಲೇಖಕಿ ಅಥವಾ ಲೇಖಕ ತನ್ನನ್ನು ತಾನು ಮೀರಿ ಬರೆಯುವ, ಅಥವಾ ಕೃತಿಯೇ ಬರೆಸಿಕೊಳ್ಳುವ ಕ್ರಿಯೆಯನ್ನೇ ನಾವು ಅಲ್ಲಗಳೆದಂತಾಗುತ್ತದೆ. 

ನೂರು ವರ್ಷಗಳ ಕೆಳಗೆ ಪಶ್ಚಿಮದ ಕೆಲವು ಆಧುನಿಕ ಲೇಖಕ, ಲೇಖಕಿಯರು ಹಳೆಯ ಮಾದರಿಯ ಹೀರೋ ಕಲ್ಪನೆಯನ್ನೇ ಕೈಬಿಟ್ಟಿದ್ದು ನಿಮಗೆ ಗೊತ್ತಿರಬಹುದು. ಪಶ್ಚಿಮದ ನವ್ಯ, ನವ್ಯೋತ್ತರ ಸಾಹಿತ್ಯ ವಿಮರ್ಶೆ ‘ಹೀರೋ’ ಅಥವಾ ‘ನಾಯಕ’ ಎಂಬ ಪದವನ್ನೇ ಕೈಬಿಟ್ಟು ಅದರ ಬದಲಿಗೆ ಸೆಂಟ್ರಲ್ ಕ್ಯಾರಕ್ಟರ್- ಕೇಂದ್ರ ಪಾತ್ರ- ಎಂಬ ಪದವನ್ನು ಹೆಚ್ಚು ಬಳಸಿತು. ಹೀರೋಗಳು ಕೂಡ ಎಲ್ಲ ಹುಲುಮಾನವರ ಹಾಗೆ ಅವಮಾನಕ್ಕೊಳಗಾದರು; ಸಿದ್ಧಲಿಂಗಯ್ಯನವರ ‘ನನ್ನ ಜನ’ಗಳಂತೆ ಒದೆಸಿಕೊಂಡು ಒರಗಿದರು; ಸೋತು ಸುಣ್ಣವಾದರು. ‘ನವ್ಯದ ದುರ್ಬಲ ನಾಯಕ’ಎಂಬ ಗಿಳಿಪಾಠದ ವಿಮರ್ಶೆಗೆ ಈ ಥರದ ಸೂಕ್ಷ್ಮಗಳು ಹೊಳೆಯುವುದು ಕಷ್ಟ!

ಅದೇನೇ ಇದ್ದರೂ, ಪಶ್ಚಿಮ, ಪೂರ್ವ ಮುಂತಾಗಿ ಎಲ್ಲ ದಿಕ್ಕುಗಳಲ್ಲೂ ಸೃಷ್ಟಿಯಾಗಿರುವ ಮಹಾಕಾವ್ಯಗಳಿಂದ ಒಂದು ಸಂಸ್ಕೃತಿಯಲ್ಲಿ ಹರಿದು ಬಂದಿರುವ ಹೀರೋ ಮಾದರಿ-ಎಲ್ಲವನ್ನೂ, ಎಲ್ಲರನ್ನೂ ಗೆಲ್ಲುವ ಹೀರೋ ಮಾದರಿ- ಅಷ್ಟು ಸುಲಭವಾಗಿ ಮಾಯವಾಗುವುದಿಲ್ಲ. ಶ್ರೇಷ್ಠ ಲೇಖಕರಲ್ಲಿ ಕೂಡ ಈ ಸುಪ್ತ ಬಯಕೆ ಅಡಗಿದ್ದರೆ ಅಚ್ಚರಿಯಲ್ಲ. ನಾವು ಇಷ್ಟ ಪಡುವವರನ್ನು ಸಮರ್ಥಿಸಿಕೊಳ್ಳುವ ನಮ್ಮೊಳಗಿನ ಸಾಧಾರಣ ಬಯಕೆಯ ರೀತಿಯ ಒಂದು ಬಯಕೆ ಲೇಖಕ, ಲೇಖಕಿಯರಲ್ಲೂ ಅಡಗಿರಬಹುದು. ಆಧುನಿಕ ಕಾದಂಬರಿಕಾರರಾದ ಕುವೆಂಪು ಅವರ ಹೂವಯ್ಯ; ತೇಜಸ್ವಿಯವರ ಕರ್ವಾಲೋ; ಅನಂತಮೂರ್ತಿಯವರ ಪ್ರಾಣೇಶಾಚಾರ್ಯ ಥರದ ಪಾತ್ರಗಳು ಕೂಡ ವಿಶಾಲ ಅರ್ಥದಲ್ಲಿ ‘ಗೆಲ್ಲುವ ಹೀರೋ’ನ ಮಾದರಿಯಲ್ಲೇ ಸೃಷ್ಟಿಯಾಗಿವೆಯಲ್ಲವೆ? 

ಇಂಥ ಬಯಕೆ ಆಯಾ ಲೇಖಕ, ಲೇಖಕಿಯರಲ್ಲಿ ಮೂಡಿರುವ ಆದರ್ಶ ಪಾತ್ರದ ಸೃಷ್ಟಿಯ ಬಯಕೆಯ ಫಲವೂ ಇರಬಹುದು. ಎಲ್ಲರಲ್ಲೂ ಇರುವಂತೆ ಹೀರೋನಲ್ಲೂ ಈವಿಲ್ ಗುಣ ಇರುತ್ತದೆ ಎಂಬ ಅನುಮಾನದಲ್ಲೇ ಸದಾ ಬರೆದ ಲಂಕೇಶರ ಬರವಣಿಗೆಯಲ್ಲಿ ಕೂಡ ‘ಗುಣಮುಖ’ದ ಹಕೀಮನಂಥ ಆದರ್ಶ ಮಾದರಿ ಸೃಷ್ಟಿಯಾಯಿತು. ಹೀಗಾಗಿ ಎಲ್ಲ ಗೆಲ್ಲುವ ಹೀರೋನನ್ನು ಸೃಷ್ಟಿಸುವ ಆಸೆ ಮಾನವಜೀವಿಗಳ ಆದಿಕಾಲದ ಆಸೆಯೂ ಇರಬಹುದು. ಇದು ಲೇಖಕ ಅಥವಾ ಲೇಖಕಿ ತಾವು ಯಾವುದನ್ನು ಸರಿ ಅಥವಾ ನ್ಯಾಯವೆಂದು ನಂಬುತ್ತಾರೋ ಅದನ್ನು ಹೀರೋ, ಹೀರೋಯಿನ್, ಕೇಂದ್ರಪಾತ್ರಗಳ ಮೂಲಕ ಸಾಧಿಸಿ ತೋರುವ ಹಾಗೂ ತಾವು ಈಡೇರಿಸಿಕೊಳ್ಳುವ ಕನಸು ಅಥವಾ ಹಗಲುಗನಸಿನ ಸಾಕಾರ ರೂಪವೂ ಆಗಿರಬಹುದು. ಅದೇ ವೇಳೆಗೆ, ‘ಹೀರೋ ವರ್ಶಿಪ್’ ಎನ್ನುವುದು ಮಾನವನ ಆದಿಮ ಪ್ರವೃತ್ತಿಯೂ ಇರಬಹುದು.

ಇದೆಲ್ಲದರ ನಡುವೆ ಹೀರೋ ಕುರಿತಂತೆ ಬ್ರೆಕ್ಟ್‌ನ ‘ಗೆಲಿಲಿಯೋ’ ನಾಟಕದಲ್ಲಿ ವಿಜ್ಞಾನಿ ಗೆಲಿಲಿಯೋ ಮತ್ತು ಅವನ ವಿದ್ಯಾರ್ಥಿ ಆಂದ್ರಿಯಾ ನಡುವಣ ಸಂಭಾಷಣೆ ಕೂಡ ನಮ್ಮನ್ನು ಎಚ್ಚರಿಸುತ್ತಿರಬೇಕಾಗುತ್ತದೆ:

ಆಂದ್ರಿಯಾ: ನಾಯಕರಿಲ್ಲದ ನಾಡು ದುಃಖಿಯಾಗಿರುತ್ತದೆ.

ಗೆಲಿಲಿಯೋ: ಅಲ್ಲ! ನಾಯಕರು ಬೇಕು ಅಂತ ಕಾಯೋ ನಾಡು ದುಃಖಿಯಾಗಿರುತ್ತದೆ.    

ಬ್ರೆಕ್ಟ್ ಅನನ್ಯ ಪೊಲಿಟಿಕಲ್ ಲೇಖಕನಾದ್ದರಿಂದ ಅವನ ನಾಟಕದಲ್ಲಿ ಈ ಹೊಸ ದರ್ಶನ ಹುಟ್ಟಿತು. ತನ್ನ ಕಾಲದ ಜರ್ಮನಿಯಲ್ಲಿ ಹಿಟ್ಲರನಂಥ ಕ್ರೂರ ಸರ್ವಾಧಿಕಾರಿಯನ್ನು ಕೊನೆಗಾಣಿಸಲು ಯಾರೋ ಹೀರೋ ಬರುತ್ತಾನೆ ಎಂದು ಕಾಯುತ್ತಾ ಜನರು ಮೂರ್ಖರಾಗದೆ, ತಾವೇ ಒಟ್ಟಾಗಿ ಸರ್ವಾಧಿಕಾರವನ್ನು ಕೊನೆಗಾಣಿಸಬೇಕು ಎಂಬುದನ್ನು ಬ್ರೆಕ್ಟ್ ಸೃಷ್ಟಿಸಿದ ಗೆಲಿಲಿಯೋನ ಮಾತು ಸೂಚಿಸುತ್ತಿತ್ತು.
ಇದು ನಾಝಿವಾದಿ ಹಿಟ್ಲರನ ಕಾಲಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವದಲ್ಲೇ ಸರ್ವಾಧಿಕಾರಿಗಳಾಗುವ ನಾಯಕರಿಗೂ ಅನ್ವಯವಾಗುತ್ತದೆ. ಎಲ್ಲವನ್ನೂ ಮಾಡಬಲ್ಲೆ ಎನ್ನುವ ಸರ್ವಾಧಿಕಾರಿಯೊಬ್ಬ ಹೀರೋ ಥರವೇ ಆಡುತ್ತಿರುತ್ತಾನೆ; ಅಷ್ಟೇ ಅಲ್ಲ, ಆತ ಹಲವರಿಗೆ ಹೀರೋ ಥರ ಕೂಡ ಕಾಣುತ್ತಿರುತ್ತಾನೆ. ಈ ವಿಚಿತ್ರಸತ್ಯವನ್ನು ಹಿಟ್ಲರನ ಕಾಲದಲ್ಲಿ ಕಂಡಿದ್ದ ಬ್ರೆಕ್ಟ್ ತನ್ನ ನಾಟಕಗಳಲ್ಲಿ ಹೀರೋಗಳನ್ನು ರೂಪಿಸಿದ ರೀತಿಯೇ ವಿಭಿನ್ನವಾಯಿತು. 

ಆದರೆ ಸರ್ವಾಧಿಕಾರಿಯನ್ನು ಹೀರೋ ಮಾಡುವ ‘ಜನರು-ಪತ್ರಕರ್ತರು-ಮಾಧ್ಯಮಗಳು ಹಾಗೂ ಭಟ್ಟಂಗಿ ಲೇಖಕರ’ ದುಷ್ಟಕೂಟಕ್ಕೂ, ಆದರ್ಶ ಹೀರೋ ಪಾತ್ರವನ್ನು ಸೃಷ್ಟಿ ಮಾಡಬಯಸುವ ಲೇಖಕರ ಹಗಲುಗನಸಿಗೂ ವ್ಯತ್ಯಾಸವಿದೆ. ಸರ್ವಾಧಿಕಾರಿಯನ್ನು ಹೀರೋ ಮಾಡಿ, ಹಾಡಿ ಹೊಗಳುವ ಭಟ್ಟಂಗಿ ಲೇಖಕರು ಸರ್ವಾಧಿಕಾರಿಯೊಬ್ಬ ನಿರ್ಮಾಣ ಮಾಡಲು ಹೊರಟಿರುವ ಭಯಗ್ರಸ್ತ ಸಮಾಜವನ್ನು ಕುಕ್ಕಿ ತಿನ್ನುವ ರಣಹದ್ದುಗಳಂತೆ ಹೃದಯಹೀನ ಲಾಭಕೋರರಾಗಿರುತ್ತಾರೆ. 

ಆದರೆ ಅಂಥ ಸರ್ವಾಧಿಕಾರಿಯ ವಿರುದ್ದ ಸೆಣಸುವ ಹೀರೋ ಅಥವಾ ಹೀರೋಯಿನ್ ಒಬ್ಬಳನ್ನು ಸೃಷ್ಟಿಸುವ ಲೇಖಕ ಅಥವಾ ಲೇಖಕಿಯ ಹಗಲುಗನಸು ಕೂಡ ಒಂದು ಬಗೆಯ ನೈತಿಕತೆಯಿಂದ, ಸರ್ವಾಧಿಕಾರಿಯ ವಿರುದ್ಧ ಪ್ರತಿಭಟಿಸುವ ಪ್ರಾಮಾಣಿಕ ತುಡಿತದಿಂದ, ಹುಟ್ಟಿರಬಲ್ಲದು. ಈಚೆಗೆ ತೀರಿಕೊಂಡ ಗೂಗಿ ವಾ ಥಿಯಾಂಗೊ ತನ್ನ 'ವಿಝರ್ಡ್ ಆಫ್ ದ ಕ್ರೋ' ಕಾದಂಬರಿಯಲ್ಲಿ ಇಂಥದೊಂದು ಮಾದರಿಯನ್ನು ಸೃಷ್ಟಿಸಿದ್ದ. ಆ ಬಗ್ಗೆ ಮುಂದೆಂದಾದರೂ ಮಾತಾಡೋಣ.

 


 ೧

ಬದುಕುವುದೆಂದರೆ 
ನವೆಯುವುದು,
ಯಾತನೆ ಪಡುವುದು;
ಬದುಕಿ ಉಳಿಯುವುದೆಂದರೆ 
ಆ ಯಾತನೆಯಲ್ಲೂ 
ಏನಾದರೊಂದು
ಅರ್ಥ ಹುಡುಕುವುದು. 


ರಾಕ್ಷಸನ ವಿರುದ್ಧ ಹೋರಾಡುವ ವ್ಯಕ್ತಿ
ತಾನೇ ರಾಕ್ಷಸನಾಗದಂತೆ ನೋಡಿಕೊಳ್ಳಬೇಕಾಗುತ್ತದೆ.
ನೀವು ತಳವಿಲ್ಲದ ಕತ್ತಲಕೂಪದಲ್ಲಿ  
ಇಣುಕಿ ಬಹುಕಾಲ ನೋಡಿದಂತೆಲ್ಲ
ಅದಕ್ಕೆ ಪ್ರತಿಯಾಗಿ 
ಆ ಕತ್ತಲಕೂಪವೂ ನಿಮ್ಮನ್ನು
ದಿಟ್ಟಿಸುತ್ತಿರುತ್ತದೆ. 

Share on:

Comments

11 Comments



| ಹರಿಪ್ರಸಾದ್ ಬೇಸಾಯಿ

ಮಿಯಾಂವ್


| ಭೀಮೇಶ ಯರಡೋಣಿ

ತಮಗೆ ಕಾಡಿದ ತಮ್ಮ ಬದುಕಿನ ಘಟನೆಯ ಅನುಭವವನ್ನು ಆಧರಿಸಿ ಇತ್ತೀಚಿಗೆ ರಾಯಚೂರಿನ ಮುದಿರಾಜ್ ಬಾಣದ್ ಸಿಕ್ಕು ಎಂಬ ಕಾದಂಬರಿಯನ್ನು ಬರೆದಿರುವರು. ಇಲ್ಲಿನ ಮುಖ್ಯ ಪಾತ್ರ ಲಂಕ್ಯಾ. ಹಾಡುಹಗಲೇ ನಡೆಯುವ ಅತ್ಯಾಚಾರದಂತೆ ಅಂಬ್ಯಾನಿಂದ ಕುಂಡೆ ಚಿವುಟಿಸಿಕೊಂಡು, ಮೊಲೆ ಗಿಂಡಿಸಿಕೊಂಡು ಅವಮಾನಕ್ಕೊಳಗಾಗಿ ಓಡಿ ಹೋಗುತ್ತದೆ. ಬದುಕೇ ಬೇಸರವಾಗಿ ಸಾವಿಗೆ ಹಾತೊರೆಯುತ್ತದೆ. ಅಜನ್ಮಶತ್ರುವಿನಂತೆ ಹೆಂಡತಿಯಿಂದ ದ್ವೇಷಕ್ಕೊಳಗಾಗುವ, ನಿನ್ನಂತಹ ಭಂಡ ಬಾಳೇವು ಮಾಡಾಕ ನನಗೆ ಇಷ್ಟ ಇಲ್ಲ ಎಂದು ತಾಯಿಯಿಂದ ಬೈಯ್ಸ್ಕೊಳ್ಳುವ, ಅಕ್ಕನಿಂದ ಷಂಡನೆಂದು ತಿರಸ್ಕೃತಕ್ಕೊಳಗಾಗುವ ಹಲವು ಸಿಕ್ಕುಗಳಲ್ಲಿ ಈ ಪಾತ್ರದ ಚಲನೆಯಿದೆ.


| Sadananda R

ಉತ್ತಮವಾದುದು ತಾನಾಗಿಯೇ (ಅವರವರ ಭಾವಕ್ಕೆ ತಕ್ಕಂತೆ ಇದು ಬದಲಾಗುತ್ತದೆ) ಸಂಭವಿಸಬೇಕು... ಮೈ ನೋಯಬಾರದು... ಶ್ರಮವಾಗಬಾರದು... ಅಷ್ಟೇ. ಹಾಗಾಗಿ ಹೀರೋ ಇದ್ದರೆ ಚೆನ್ನ... ಹಾಗಾಗಿ ಹಿರೋ(ಯಿನ್) ಗಾಗಿ ಎಲ್ಲರು ಕಾಯುತ್ತಾರೆ... ಫ್ಯಾಂಟಸಿ ಮತ್ತು ಮಿಥ್ಗಳು ಹುಟ್ಟುವುದು ಹೀಗೆ... ಎಂದು ಎಲ್ಲೋ ಓದಿದ ನೆನಪು ನನಗೆ ಸರ್. ನೀವು ಬ್ರೆಕ್ಟ್ ನ ಮಾತುಗಳನ್ನು ಉಲ್ಲೇಖಿಸಿರುವುದು ನೇಪಾಳದಲ್ಲಿ/ಬಾಂಗ್ಲಾ ದಲ್ಲಿ ಆಗಿದೆ... ನಾಯಕ ನಿಗಾಗಿ ಯಾರು ಕಾಯಲ್ಲೇ ಇಲ್ಲ... ಅಧಿಕಾರದಲ್ಲಿದ್ದವರು ಖುಚಿ೯ ಬಿಟ್ಟು ಇಳಿಯಲೇ ಬೇಕಾಯಿತು. ಧನ್ಯವಾದಗಳು ಸರ್


| Dr. Sanganagouda

ನಾನು ಇತ್ತೀಚೆಗೆ ಓದಿದ ಉತ್ತಮ ಲೇಖನ ಇದು ಸರ್. ಸೃಜನಶೀಲತೆ, ಮನೋವಿಜ್ಞಾನ, ರಾಜಕಾರಣ ಈ ಮೂರು ಸಂಗತಿಗಳು ಭೂತ, ವರ್ತಮಾನ, ಭವಿಷ್ಯದ ಕಾಂಟೆಸ್ಟ್ ಒಳಗೆ ತಂದಿರುವುದು. ನನಗೆ ಹಿಡಿಸಿತು. ಅದರಲ್ಲಿ ಬ್ರೆಕ್ಟ್ ನ ಗೆಲಿಲಿಯೋ ನಾಟಕದ ಮಾತುಗಳು ಲೇಖನಕ್ಕೆ ಮತ್ತಷ್ಟು ಕಸುವು ತುಂಬಿದೆ


| ದೇವಿಂದ್ರಪ್ಪ ಬಿ.ಕೆ.

ಎಲ್ಲ ಗೆಲ್ಲುವ ಹೀರೋನ ಹಿಂದೆ ಓದಿದಾಗ ನನಗೆ ಹೊಳೆದ ಅಂಶಗಳಿವು. ಯಾವ ಒಬ್ಬ ಲೇಖಕನು ತಾನು ಅನುಭವಿಸದೇ ಇರುವ ಬದುಕನ್ನು, ಅನುಭವಿಸಬೇಕಾದ ಬದುಕನ್ನು ಚಿತ್ರಿಸದೆ ಇರಲಾರ. ಕೆಲವು ಸಲ ಅದು ಓದುಗನ ಬದುಕು ಆಗಿರುತ್ತದೆ.ಲೇಖಕ ತನ್ನ ಕೃತಿ ರಚಿಸುವ ಹಿಂದಿನ ಉದ್ದೇಶವನ್ನು ಅವರ ಸಿದ್ಧಾಂತವನ್ನು ಸ್ಪಷ್ಟವಾಗಿ ಹೇಳಿರುತ್ತಾರೆ. ಬಹುತೇಕ ಕೃತಿಗಳಲ್ಲಿ ಇದನ್ನು ಕಾಣುತ್ತೇವೆ. ಆದರೆ ಎಷ್ಟೋ ಸಲ ಅದು ಅವರ ಸ್ನೇಹಿತರ, ಬಂಧುಗಳ ನಡುವೆ ಬಿರುಕು ಉಂಟು ಮಾಡಿರುವ ಉದಾಹರಣೆಗಳಿವೆ. ಸೃಜನಶೀಲ ಕೃತಿಗಳ ಮೂಲಕ ಲೇಖಕ ಸಮಾಜದಲ್ಲಿ ಆಗಬೇಕಾದ ಬದಲಾವಣೆ ಕುರಿತು ರಚಿಸುತ್ತಲೇ ಅವನೊಳಗೆ ಸುಪ್ತವಾಗಿ ಅಡಗಿರುವ ಕನಸನ್ನು ಕೃತಿಯ ನಾಯಕನ ಮೂಲಕ ಹೇಳುತ್ತಾ ಹೋಗುತ್ತಾನೆ. ವಾಸ್ತವದಲ್ಲಿ ಜಾತಿ ಮೀರುವ, ಸಂಪ್ರದಾಯ ಧಿಕ್ಕರಿಸುವ, ಪರಸತಿ ವ್ಯಾಮೋಹ ಉಳ್ಳವರು ಇದ್ದರೆ ಅದನ್ನು ಕೃತಿಯ ಮೂಲಕ ವ್ಯಕ್ತಪಡಿಸಿರುವುದನ್ನು ನೋಡಬಹುದು. ಇನ್ನೂ ಆತ್ಮಕತೆ ವಿಷಯಕ್ಕೆ ಬಂದಾಗ ಎಲ್ಲವೂ ತೆರೆದ ಕಣ್ಣಿಂದಲೇ ಬರೆಯಬೇಕಾಗುತ್ತದೆ. ಕೆಲವು ಸಲ ಅದು ಆತ್ಮರತಿಗೂ ದಾರಿ ಮಾಡಿಕೊಡುತ್ತದೆ. ಬಹುಶಃ ಲಂಕೇಶರು ತಮ್ಮ ಬದುಕಿನ ಅನೇಕ ಸಂಗತಿಗಳನ್ನು ಕಥೆ, ಕಾದಂಬರಿ, ಆತ್ಮಕತೆಯ ಮೂಲಕವೇ ಓದುಗರಿಗೆ ದಕ್ಕಿಸಿಕೊಟ್ಟಿದ್ದಾರೆ ಎನ್ನಬಹುದು. ನವ್ಯ ಸಾಹಿತ್ಯದ ವ್ಯಕ್ತಿ ವಿಶಿಷ್ಟವಾದದ ಮೂಲಕ ಅನೇಕ ಲೇಖಕರ ಬರವಣಿಗೆ ಹೀರೋ ಪ್ರಧಾನವಾಗಿದ್ದು ಹುಡುಕಾಟದ ನೆಲೆಯಲ್ಲಿಯೇ ರಚನೆಯಾಗಿದ್ದನ್ನು ಕಾಣಬಹುದು. ನನಗೆ ಅತೀ ಹೆಚ್ಚು ಕಾಡಿದ ಕಾದಂಬರಿಯ ಪಾತ್ರಗಳಾದ ಮುಕ್ತಿಯ ಗೌರೀಶ ಮತ್ತು ಮೂರು ದಾರಿಗಳು ಕಾದಂಬರಿಯ ನಿರ್ಮಲೆ. ಗೆಲಿಲಿಯೋ ನಾಟಕದ ಸಾಲುಗಳು ಅಂದಿನ ಸಂದರ್ಭದಲ್ಲಿ ಎಷ್ಟು ಮುಖ್ಯವಾಗಿತ್ತೋ ಇಂದಿಗೂ ಅಷ್ಟೇ ಮುಖ್ಯವಾಗಿ ಕಾಡುವ ಸಾಲುಗಳು. ಮೊನ್ನೆ ತಮಿಳುನಾಡಿನಲ್ಲಿ ನಟ ವಿಜಯ್ ನನ್ನು ನೋಡಲು ಬಂದ ಅಭಿಮಾನಿಗಳ ಸಾವು ಕೂಡ ನಾಯಕನನ್ನು ನೋಡಲು ಕಾಯುವ ಜನರ ನಿರೀಕ್ಷೆಯೂ ಕೂಡ ದುಃಖದಲ್ಲಿಯೇ ಅಂತ್ಯಗೊಂಡಿರುವುದು ಬದುಕಿನ ವಿಪರ್ಯಾಸ.


| Anil Gunnapur

ಇಷ್ಟವಾಯಿತು ಬರಹ


| NAGESHA B

ಹೀರೋಗಳನ್ನು ಸೃಷ್ಟಿಸುವ ಲೇಖಕರ ಫ್ಯಾಂಟಸಿ-ಭ್ರಾಮಕಲೋಕ-ಕುರಿತು ಮಾತಾಡುತ್ತಾ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಆಲೋಚನೆಗಳು....... ಸರ್ವಾಧಿಕಾರಿಯನ್ನು ಹೀರೋ ಮಾಡುವ ‘ಜನರು-ಪತ್ರಕರ್ತರು-ಮಾಧ್ಯಮಗಳು....... ಅಂಥ ಸರ್ವಾಧಿಕಾರಿಯ ವಿರುದ್ದ ಸೆಣಸುವ ಹೀರೋ ಅಥವಾ ಹೀರೋಯಿನ್ ಒಬ್ಬಳನ್ನು ಸೃಷ್ಟಿಸುವ ಲೇಖಕ ಅಥವಾ ಲೇಖಕಿಯ ಹಗಲುಗನಸು..... ಇವೆಲ್ಲವನ್ನೂ ನೋಡಿದಾಗ ೧೨ ಶತಮಾನದ ವಚನಕಾರರ ಕೆಲಕಾಲದ ತರುವಾಯ ಬಂದ ಹರಿಹರ ತನ್ನ ರಗಳೆಗಳಲ್ಲಿ ಸೃಷ್ಟಿಸಿದ ನಾಯಕ ಪಾತ್ರಗಳು ನನ್ನ ಮನಸ್ಸಿಗೆ ಬಂದವು. ಅವನಲ್ಲಿ ಅದೆಷ್ಟು ವೈವಿದ್ಯಮಯ ನಾಯಕ ಪಾತ್ರಗಳಿವೆ ಎನಿಸಿತು. ಪುರಾತನರ ರಗಳೆಗಳಲ್ಲಿ ಬರುವ ಪಾತ್ರ ಒಂದು ತೆರನಾದ ಆದರ್ಶ ಭಕ್ತರುಗಳ ಪಾತ್ರಗಳಾದರೆ. ತನಗಿಂತ ಕೆಲಕಾಲ ಹಿಂದೆ ಬದುಕಿದ್ದ ಕನ್ನಡ ನಾಡಿನ ಶರಣರುಗಳೆ ನಾಯಕ ಪಾತ್ರಗಳಾದ ರಗಳೆಗಳೂ ಇವೆ. ತಮಿಳುನಾಡಿನ ಪುರಾತನರಲ್ಲಿಯೂ ಬಿಯಣ್ಣನಂತಹ ಸುಖಪುರುಷರು, ಇಳೆಯಾಂಡ ಗುಡಿಮಾರನಂತಹ ತ್ಯಾಗಜೀವಿಗಳು ಒಂದೆಡೆಯಿದ್ದರೇ ಬಸವಣ್ಣ, ಅಲ್ಲಮ, ಚನ್ನಯ್ಯ, ಅಕ್ಜನಂತಹ ಇತಿಹಾಸದ ಪಾತ್ರಗಳು ಮತ್ತೊಂದುಕಡೆಯಿವೆ. ಹರಿಹರನೂ ತನ್ನ ಕಾಲದಲ್ಲಿ ಅದರ್ಶ ಬದುಕಿಗಾಗಿ ಹಂಬಲಿಸಿ ಕಾಯುತ್ತಿದ್ದ ಹಗಲುಗನಸು ಕಾಣುವ ವ್ಯಕ್ತಿಯಂತೆಯೇ ಕಾಣುತ್ತಾನೆ. ಪ್ರಭುತ್ವವನ್ನು ಓಲೈಸುವುದನ್ನು ತಿರಸ್ಕರಿಸಿ ಬಂದರೂ ಆತ ಅದಕ್ಕಿಂತ ಹೆಚ್ಚು ಕ್ರಾಂತಿಕಾರಿಯಾಗಲಾರದೇಹೊದನೇನೊ ಅನಿಸುತ್ತೆ. ಒಳ್ಳೆಯ ಲೇಖನ ಸರ್ ಧನ್ಯವಾದಗಳು


| NATARAJ HULIYAR replies

ಹೀರೋ ಕುರಿತ ವ್ಯಾಖ್ಯಾನವನ್ನು ಪ್ರಾಚೀನ, ಆಧುನಿಕ ಪಠ್ಯಗಳ ಹೀರೋಗಳ ಜೊತೆಗೆ ಅಂತರ್ ಪಠ್ಯೀಯವಾಗಿ ವಿವರಿಸಿದ ಸೂಕ್ಷ್ಮ ಚಿಂತಕರಾದ ಭೀಮೇಶ್ ಯರಡೋಣಿ, ಸದಾನಂದ್, ದೇವೀಂದ್ರಪ್ಪ, ನಾಗೇಶ್ ಅವರಿಗೆ ಕೃತಜ್ಞತೆಗಳು. ನೀನು ಬೆಳೆದರೆ ನಾನು ಬೆಳೆವೆ! ಥ್ಯಾಂಕ್ಯೂ. ಭೀಮೇಶ್ ವಿವರಿಸಿರುವ ಮುದಿರಾಜ್ ಬಾಣದ್ ಅವರ ಪುಸ್ತಕ ಈಚೆಗೆ ತಲುಪಿದೆ. ಗಮನಿಸುತ್ತೇನೆ.


| ಡಾ. ನಿರಂಜನ ಮೂರ್ತಿ ಬಿ ಎಂ

'ಎಲ್ಲ ಗೆಲ್ಲುವ ಹೀರೋನ ಹಿಂದೆ' ಲೇಖನದ ಸೂಕ್ಷ್ಮ ವಿಶ್ಲೇಷಣೆ ಚೆನ್ನಾಗಿದೆ. ಅದಕ್ಕಾಗಿ ಹುಳಿಯಾರರಿಗೆ ನಮನಗಳು. ತನ್ನ ಕಲ್ಪನೆಯಲ್ಲಿ ಮೂಡಿದ, ತನ್ನ ಈಡೇರದ, ತಾನು ಸಾಧಿಸಲಾಗದ, ತಾನು ಅನುಭವಿಸಲಾಗದ, ತನ್ನ ಕನಸು, ಆಸೆ, ಬಯಕೆಗಳನ್ನು ನನಸಾಗಿಸಲು, ಈಡೇರಿಸಿಕೊಳ್ಳಲು, ಮತ್ತು ಅನುಭವಿಸಲು, ತನ್ನನ್ನೇ ಹೀರೋನನ್ನಾಗಿ ಸೃಷ್ಟಿಸಿಕೊಳ್ಳುವ ಕರ್ತೃಗಳ ಭ್ರಮಾಲೋಕ ತುಂಬಾ ವಿಸ್ಮಯ. ಬಹುಶಃ ಓದುಗನೂ ಕೂಡ ತನ್ನೆಲ್ಲ ಕನಸು, ಆಸೆ, ಬಯಕೆಗಳನ್ನು ಹೀರೋನ ಮೂಲಕವೇ ಅನುಭವಿಸುತ್ತಾನೆ ಎಂದು ಅನಿಸುತ್ತದೆ. ಆದರೆ ಇಂತಹ ಅತ್ಯದ್ಭುತ, ಅತಿಮಾನುಷ ಶಕ್ತಿಗಳನ್ನು ಹೊಂದಿರುವ ಹೀರೋನನ್ನು ಒಪ್ಪುವುದು ವಾಸ್ತವವಾದಿ ಓದುಗರಿಗೆ ಕಷ್ಟವಾಗುವುದಿಲ್ಲವೆ ಎಂಬುದು ಚರ್ಚಿಸಬೇಕಾದ ವಿಷಯ.


| ಗುರು ಜಗಳೂರು

ಕೃತಿ ಮತ್ತು ಸಮಾಜದಲ್ಲಿ ಎರಡೂ ಕಡೆಯೂ ಹಿರೋಗಳನ್ನು ಸೃಷ್ಟಿಸುವವರು ನಾವುಗಳೇ ಅಲ್ಲವೇ?.ಸಮಯ ಸಿಕ್ಕರೆ ಜನಸಾಮಾನ್ಯನೂ ಸಹ ಅರಾಜಕತೆ ಸೃಷ್ಟಿಸಬಲ್ಲನಲ್ಲವೇ?.ನಾಯಕತ್ವ ಗುಣದವನು ಹೃದಯವಂತನೂ ಮತ್ತು ಆಯಾ ಸಂದರ್ಭದಲ್ಲಿ ದಂಡಿಸುವವನೂ ಆಗಿರಬೇಕು.ಯಾಕೆ ಕೆಲವರಿಗೆ ಹಿರೋಗಳು ಹಾಗೆಯೇ ಲೇಖಕರೂ ಆಗಲು ಸಾಧ್ಯ ಎಂದು ವಿಸ್ಮಯಗೊಳ್ಳುತ್ತೇನೆ.ಜನಗಳನ್ನು ಸೆಳೆಯುವ ಚುಂಬಕ ಶಕ್ತಿಯೂ ಇರಬೇಕಲ್ಲವೇ?


| Vijaya

ಅಪರೂಪದ ವಸ್ತುವನ್ನು ಹುಡುಕುವ ,ಅದನ್ನು ಹುಬ್ಬೇರಿಸುವಂತೆ ವಿವರಿಸುವ ನಿಮ್ಮ ಚಾತುರ್ಯಕ್ಕೆ ಒಂದು ಸಲಾಂ ನಟರಾಜ್.




Add Comment


Nataraj Huliyar on Book Prize Awardees

YouTube






Recent Posts

Latest Blogs