ಆನಂದದ ನಿಗೂಢ ಒರತೆಗಳು!
by Nataraj Huliyar
‘ನಮಗೆ ಇಷ್ಟವಾದ, ಪ್ರಿಯವಾದ, ಕೆಲಸ ಮಾಡುತ್ತಿದ್ದರೆ ನಮ್ಮ ಹ್ಯಾಪಿನೆಸ್ ಹಾರ್ಮೋನುಗಳು ಹೆಚ್ಚು ಜಾಗೃತವಾಗುತ್ತವೆ’ ಎಂದರು ಡಾ. ಆರ್. ಕೆ. ಸರೋಜ. ಹಿರಿಯರಾದ ಡಾ. ಸರೋಜ ನನ್ನ ಬಹುಕಾಲದ, ಅಪರೂಪದ ‘ಡಾಕ್ಟರ್ ಮದರ್’; ಅವರ ಬಗ್ಗೆ ಮುಂದೊಮ್ಮೆ ಬರೆಯುವೆ ಎಂದಷ್ಟೆ ಹೇಳಿ ಈ ಸಲದ ಅಂಕಣದ ವಸ್ತುವಿಗೆ ಹೊರಳುವೆ. ಪ್ರತಿ ವಾರ ಈ ಅಂಕಣ ಬರೆಯುವ ಕಾಯಕ ಹಾಗೂ ಇದನ್ನು ಓದುವ ಸುಂದರ ಮನಸ್ಸುಗಳು ಯಾವಯಾವುವು ಎಂಬುದನ್ನು ಊಹಿಸಿಕೊಳ್ಳುವ ಲಹರಿ ಕೂಡ ಹ್ಯಾಪಿನೆಸ್ ಹಾರ್ಮೋನುಗಳ ಉಬ್ಬರಕ್ಕೆ ಕಾರಣವಾಗುತ್ತದೆ ಎಂಬುದನ್ನೂ ಇಲ್ಲಿ ದಾಖಲಿಸದಿದ್ದರೆ ತಪ್ಪಾಗುತ್ತದೆ!
ಡಾಕ್ಟರ್ ಮಾತಿನ ಸುತ್ತ ಅಡ್ಡಾಡುತ್ತಲೇ ಯಾವ ದೇಶ ಹೆಚ್ಚು ಸುಖಿ ಎಂಬುದನ್ನು ಕುರಿತಂತೆ ಪ್ರತಿ ವರ್ಷ ನಡೆಯುವ ಜಾಗತಿಕ ಸಮೀಕ್ಷೆ ಕೂಡ ನನ್ನ ಮನಸ್ಸಿಗೆ ಬಂತು. ಹತ್ತು ವರ್ಷಗಳ ಕೆಳಗೆ ಇಂಥದೊಂದು ಸಮೀಕ್ಷೆಯ ಬಗ್ಗೆ ನನ್ನ ಪ್ರಜಾವಾಣಿಯ ‘ಕನ್ನಡಿ’ ಅಂಕಣದಲ್ಲಿ ಬರೆದಿದ್ದನ್ನು ನೀವು ಅಕಸ್ಮಾತ್ ಗಮನಿಸಿರಬಹುದು; ಹಾಗೆಯೇ ೨೦೨೫ರಲ್ಲಿ ನಡೆದ ಸುಖೀ ನಾಡುಗಳ ವಿಶ್ವಸಮೀಕ್ಷೆಯನ್ನೂ ನೀವು ನೋಡಿರಬಹುದು.
ಯಾವ ದೇಶ ಹೆಚ್ಚು ಸಂತೋಷದ ನಾಡು, ಯಾವುದು ಹೆಚ್ಚು ಸುಖೀ ದೇಶ ಎಂಬುದನ್ನು ಗುರುತಿಸುವ ಈ ವಿಶ್ವ ಸಮೀಕ್ಷೆಯಲ್ಲಿ ಬಳಸುವ ಮಾನದಂಡಗಳು ಇವು: ಒಂದು ದೇಶದ ಆರ್ಥಿಕ ಅಭಿವೃದ್ಧಿ ಸೂಚ್ಯಂಕ; ಜನರ ತಲಾ ಆದಾಯ; ಸಾಮಾಜಿಕ ಭದ್ರತೆ; ಜನರಲ್ಲಿ ಆರೋಗ್ಯಕರ ಬದುಕಿನ ಸಾಧ್ಯತೆಗಳ ನಿರೀಕ್ಷೆ ಎಷ್ಟಿದೆ; ವ್ಯಕ್ತಿಗಳಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಕಾಣಬರುವ ಉದಾರ ಗುಣ; ಜೀವನದ ಆಯ್ಕೆಗಳನ್ನು ಮಾಡಲು ಜನರಿಗಿರುವ ಸ್ವಾತಂತ್ಯ್ರ, ಹಾಗೂ ದೇಶದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಇರುವುದು.
ಕಳೆದ ಏಳು ವರ್ಷದಿಂದ ಫಿನ್ಲೆಂಡ್ ಜಗತ್ತಿನ ಅತ್ಯಂತ ಸುಖೀ ದೇಶ ಎಂಬ ಸ್ಥಾನ ಉಳಿಸಿಕೊಂಡಿದೆ; ೨೦೨೫ರಲ್ಲಿ ಪ್ರಕಟವಾದ ಸಮೀಕ್ಷೆಯಲ್ಲೂ ಫಿನ್ಲೆಂಡ್ ಮೊದಲ ಸ್ಥಾನದಲ್ಲಿದೆ. ೨೦೨೫ರ ಮಾರ್ಚ್ ತಿಂಗಳಲ್ಲಿ ಬಂದ ಈ ಸುಖೀನಾಡಿನ ಸಮೀಕ್ಷೆಯ ಪಟ್ಟಿಯಲ್ಲಿ ಡೆನ್ಮಾರ್ಕ್, ಸ್ವೀಡನ್ ಥರದ ದೇಶಗಳು ಇವೆ. ಈ ಸಲ ಈ ಪಟ್ಟಿಯಲ್ಲಿ ಮಹಾನರಮೇಧದಲ್ಲಿ ತೊಡಗಿರುವ ಇಸ್ರೇಲ್ ಕೂಡ ಇರುವುದನ್ನು ನೋಡಿದ ಮೇಲೆ ಈ ಸಮೀಕ್ಷೆಯ ಮೆಥೆಡಾಲಜಿಯ ಬಗೆಗೆ ತೀವ್ರ ಅನುಮಾನ ಹುಟ್ಟಿತು.
ಅದಿರಲಿ, ಯಾರನ್ನು ಮುಟ್ಟಬೇಕು, ಯಾರನ್ನು ಮುಟ್ಟಬಾರದು ಎಂಬ ಜಾತಿನಿಯಮಗಳ ಬಗ್ಗೆ ಸದಾ ತಲೆ ಕೆಡಿಸಿಕೊಳ್ಳುತ್ತಿದ್ದರೂ ವಿಶ್ವಗುರುವಾಗುವೆನೆಂದು ಬೀಗುವ ಭಾರತ ೨೦೨೫ರ ವರ್ಷದ ಸುಖೀ ನಾಡುಗಳ ಪಟ್ಟಿಯಲ್ಲಿ ೧೧೮ನೇ ಸ್ಥಾನದಲ್ಲಿದೆ. ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ನಮ್ಮ ಕ್ರಿಕೆಟ್ ಕ್ಯಾಪ್ಟನ್‌ಗಳು ಕೈಕುಲುಕಲು ನಿರಾಕರಿಸುವ ಕ್ಯಾಪ್ಟನ್‌ಗಳ ದೇಶ ೧೦೯ನೇ ಸ್ಥಾನದಲ್ಲಿದೆ. ನೇಪಾಳ ೯೨ನೇ ಸ್ಥಾನದಲ್ಲಿದೆ. ಇದೆಲ್ಲ ಏಕೆ ಹೀಗೆ ಎಂಬ ಬಗ್ಗೆ ಈ ಅಂಕಣದ ಜಾಣ ಓದುಗ ಓದುಗಿಯರಿಗೇ ಹೆಚ್ಚು ಗೊತ್ತಿರುವುದರಿಂದ ಇಲ್ಲಿ ಹೆಚ್ಚು ಹೇಳುವ ಅಗತ್ಯವಿಲ್ಲ.
ವಿಶ್ವದ ದೇಶಗಳ ಹ್ಯಾಪಿನೆಸ್ ಇಂಡೆಕ್ಸ್ ಸುತ್ತ ಅಲೆಯುತ್ತಿದ್ದ ಮನ ನನ್ನ ನೆಚ್ಚಿನ ಲೇಖಕರಲ್ಲೊಬ್ಬನಾದ ಪಾಲೋ ಕೊಲ್ಹೋನ ಕಥಾಲೋಕದತ್ತ ಹೊರಳಿತು. ೧೯೪೭ರಲ್ಲಿ ಹುಟ್ಟಿದ ಪಾಲೋ ಕೊಲ್ಹೋ ಬ್ರೆಜಿಲ್ ದೇಶದ ಹಾಗೂ ವಿಶ್ವದ ವಿಶಿಷ್ಟ ಲೇಖಕ. ಆಳ-ಸರಳ-ಗೂಢ ಈ ಮೂರೂ ಸ್ತರ ಬೆರೆತು ಆಕರ್ಷಕವಾಗಿ ಬರೆಯಬಲ್ಲ ಜ್ಞಾನಿ-ಲೇಖಕ. ಈವರೆಗೆ ಹದಿನೈದು ಕೋಟಿ ಪ್ರತಿಗಳು ಮಾರಾಟವಾಗಿರುವ ಅವನ ಪ್ರಖ್ಯಾತ, ಸುಂದರ, ಜನಪ್ರಿಯ ಕಾದಂಬರಿ 'ಆಲ್ಕೆಮಿಸ್ಟ್’ನಲ್ಲಿ ಚಮಚೆಯಲ್ಲಿರುವ ಎರಡು ಹನಿ ಎಣ್ಣೆಯ ಬಗ್ಗೆ ಇರುವ ಮಾತು ಈಗ ಚಿರಪರಿಚಿತವಾಗಿದೆ. ಆ ಕತೆಯನ್ನು ಪಾಲೋ ಕೊಲ್ಹೋ ಬಾಯಲ್ಲೇ ಕೇಳಿ:
ಆನಂದದ ಗುಟ್ಟು ಏನು ಎಂಬುದನ್ನು ಅತ್ಯಂತ ಜ್ಞಾನಿಗಳಾದವರ ಬಳಿ ಹೋಗಿ ಕೇಳಿ ತಿಳಿದುಕೊಂಡು ಬಾ ಎಂದು ವ್ಯಾಪಾರಿಯೊಬ್ಬ ಮಗನಿಗೆ ಹೇಳಿದ. ಮಗ ಮರುಭೂಮಿಯುದ್ದಕ್ಕೂ ನಲವತ್ತು ದಿನ ತಿರುಗಾಡಿ, ಬೆಟ್ಟವೊಂದರ ತುದಿಯಲ್ಲಿದ್ದ ಒಂದು ಸುಂದರ ಕೋಟೆಯನ್ನು ತಲುಪಿದ. ತರುಣ ಹುಡುಕುತ್ತಿದ್ದ ಸಂತ-ಜ್ಞಾನಿ ಆ ಕೋಟೆಯಲ್ಲಿದ್ದ.
ಏನಾಯಿತೆಂದರೆ, ನಮ್ಮ ನಾಯಕನಿಗೆ ಆ ಪವಿತ್ರ ಸಂತ ತಕ್ಷಣ ಕಾಣದೆ ಅವನು ಅಪಾರ ಚಟುವಟಿಕೆಗಳು ನಡೆಯುತ್ತಿದ್ದ ರೂಮೊಂದಕ್ಕೆ ಬಂದು ನಿಂತ. ಅಲ್ಲಿ ವ್ಯಾಪಾರಿಗಳು ಬರುತ್ತಿದ್ದರು; ಹೋಗುತ್ತಿದ್ದರು. ಮೂಲೆಯೊಂದರಲ್ಲಿ ಜನ ಹರಟೆ ಹೊಡೆಯುತ್ತಿದ್ದರು. ಸಂಗೀತಗಾರರ ಪುಟ್ಟ ಮೇಳವೊಂದು ಸುಮಧುರ ಹಾಡುಗಳನ್ನು ಹಾಡುತ್ತಿತ್ತು. ಅಲ್ಲೇ ಒಂದು ಮೇಜಿನ ಮೇಲೆ ಆ ಪ್ರದೇಶದ ರುಚಿರುಚಿಯಾದ ತಿಂಡಿ ತಿನಿಸುಗಳಿದ್ದವು.
ಅಲ್ಲಿದ್ದ ಸಂತ-ಜ್ಞಾನಿ ಎಲ್ಲರನ್ನೂ ಮಾತಾಡಿಸುತ್ತಿದ್ದ. ನಮ್ಮ ತರುಣ ಎರಡು ಗಂಟೆ ಕಾಯ್ದ ನಂತರ ಅವನಿಗೆ ಜ್ಞಾನಿಯ ಜೊತೆ ಮಾತಾಡುವ ಅವಕಾಶ ಸಿಕ್ಕಿತು. ತರುಣ ಯಾಕೆ ಬಂದಿದ್ದಾನೆಂದು ಸಂತ ಗಮನವಿಟ್ಟು ಕೇಳಿಸಿಕೊಂಡು, ‘ಈಗ ನಿನಗೆ ಆನಂದದ ಗುಟ್ಟು ಹೇಳಿಕೊಡುವಷ್ಟು ಟೈಮಿಲ್ಲವಲ್ಲಪ್ಪ’ ಅಂದ.
ಚಣ ಬಿಟ್ಟು ‘ಈ ಅರಮನೆ ಸುತ್ತ ಅಡ್ಡಾಡಿಕೊಂಡು ಎರಡು ಗಂಟೆ ಬಿಟ್ಟು ಬಾ’ ಅಂದ ಸಂತ, ‘ನೀನು ನನಗೊಂದು ಸಹಾಯ ಮಾಡಬೇಕಲ್ಲ’ ಅನ್ನುತ್ತಾ, ತರುಣನ ಕೈಗೆ ಒಂದು ಟೀ ಸ್ಪೂನ್ ಕೊಟ್ಟ; ಅದರಲ್ಲಿ ಎರಡು ಹನಿ ಎಣ್ಣೆ ಹಾಕುತ್ತಾ ಹೇಳಿದ: ‘ಹಾಂ! ನೀನು ಅಡ್ಡಾಡುವಾಗ ಚಮಚದಲ್ಲಿರೋ ಎಣ್ಣೆ ಚೆಲ್ಲದ ಹಾಗೆ ನೋಡಿಕೊ.’
ಸರಿ, ತರುಣ ಅರಮನೆಯ ಮಹಡಿಯ ಮೆಟ್ಟಲುಗಳನ್ನು ಹತ್ತಿ, ಇಳಿದು ಅಡ್ಡಾಡಲು ಶುರು ಮಾಡಿದ. ಹಾಗೆ ಅಡ್ಡಾಡುವಾಗಲೂ ಚಮಚೆಯಲ್ಲಿರುವ ಎಣ್ಣೆ ಚೆಲ್ಲದಂತೆ ಅದರ ಮೇಲೆ ಕಣ್ಣಿಟ್ಟೇ ಇದ್ದ. ಎರಡು ಗಂಟೆ ಕಳೆದ ಮೇಲೆ ಸಂತನಿದ್ದ ಜಾಗಕ್ಕೆ ಬಂದ.
‘ಹಾಂ! ನಮ್ಮ ಡೈನಿಂಗ್ ರೂಮಲ್ಲಿ ಮೇಲಿಂದ ತೂಗುಬಿಟ್ಟಿರೋ ಪರ್ಷಿಯಾದ ನೆಯ್ದ ವಸ್ತ್ರಗಳನ್ನು ನೋಡಿದೆಯಾ? ತೋಟಗಾರರ ಮುಂದಾಳು ಹತ್ತು ವರ್ಷ ಕೆಲಸ ಮಾಡಿ ಬೆಳೆಸಿರೋ ತೋಟ ನೋಡಿದೆಯಾ? ನನ್ನ ಲೈಬ್ರರಿಯಲ್ಲಿ ಸುಂದರವಾದ ತೊಗಲು ಹಾಳೆಗಳಿವೆಯಲ್ಲ, ಅವನ್ನ ನೋಡಿದೆಯಾ?’ ಎಂದ ಸಂತ.
ತರುಣ ಕಸಿವಿಸಿಗೊಂಡು, ‘ಅಯ್ಯೋ! ನಾನು ಒಂದೂ ನೋಡಿಲ್ಲ’ ಎಂದು ನಿವೇದಿಸಿಕೊಂಡ. ಸಂತ ಕೊಟ್ಟ ಚಮಚದಲ್ಲಿದ್ದ ಎಣ್ಣೆ ಚೆಲ್ಲದಂತೆ ನೋಡಿಕೊಳ್ಳುವುದೊಂದೇ ಅವನ ಕಾಳಜಿಯಾಗಿತ್ತು!
‘ಹಾಗಾದರೆ ವಾಪಸ್ ಹೋಗಿ ಈ ನನ್ನ ಲೋಕದಲ್ಲಿರುವ ವಿಶೇಷವಾದದ್ದು, ಸುಂದರವಾದದ್ದು, ಅದ್ಭುತವಾದದ್ದು ಏನಿದೆ, ಅದೆಲ್ಲವನ್ನೂ ನೋಡು. ಒಬ್ಬ ಮನುಷ್ಯನ ಮನೆಯನ್ನೇ ಸರಿಯಾಗಿ ನೋಡಿ ಅರಿಯದೆ, ಆತನನ್ನು ನಂಬಬಾರದು.’
ತರುಣ ಹಗುರಾದ. ಮತ್ತೆ ಎರಡು ಹನಿ ಎಣ್ಣೆಯಿದ್ದ ಚಮಚ ತೆಗೆದುಕೊಂಡ. ಅರಮನೆ ತುಂಬ ಅಡ್ಡಾಡಿದ. ಗೋಡೆಯಲ್ಲಿದ್ದ ಹಾಗೂ ತೊಲೆಗಳಿಂದ ತೂಗು ಬಿಟ್ಟಿದ್ದ ಕಲಾಕೃತಿಗಳನ್ನೆಲ್ಲ ಗಮನವಿಟ್ಟು ನೋಡಿದ.
ತೋಟಗಳನ್ನು ನೋಡಿದ. ಅರಮನೆಯ ಸುತ್ತ ಇರುವ ಬೆಟ್ಟಗುಟ್ಟಗಳನ್ನು ನೋಡಿದ. ಹೂಗಳ ಕೋಮಲತೆ ನೋಡಿದ. ಒಂದೊಂದು ಕಲಾಕೃತಿಯನ್ನೂ ಅದಕ್ಕೆ ತಕ್ಕ ಜಾಗದಲ್ಲಿ ಜೋಡಿಸಿಟ್ಟವರ ಅಭಿರುಚಿಯ ಪ್ರಜ್ಞೆಯನ್ನು ಗಮನಿಸಿದ. ವಾಪಸ್ ಸಂತ-ಜ್ಞಾನಿಯ ಬಳಿ ಬಂದು ತಾನು ನೋಡಿದ್ದ ಎಲ್ಲವನ್ನೂ ವಿವರವಾಗಿ ಒಪ್ಪಿಸಿದ.
‘ಸರಿ. ನಾನು ನಿನಗೆ ಕೊಟ್ಟ ಎರಡು ಹನಿ ಎಣ್ಣೆ ಏನಾಯಿತು?’ ಎಂದ ಸಂತ.
ತರುಣ ಈಗ ಚಮಚೆಯ ಕಡೆ ನೋಡುತ್ತಾ ಎಣ್ಣೆ ಚೆಲ್ಲಿಹೋಗಿದ್ದನ್ನು ಗಮನಿಸಿದ.
’ಹಾಂ, ಇದೇ ನಾನು ನಿನಗೆ ಹೇಳುವ ಬುದ್ಧಿಮಾತು: ಆನಂದದ ಗುಟ್ಟು ಏನು ಗೊತ್ತಾ? ಜಗತ್ತಿನಲ್ಲಿ ಸುಂದರವಾದದ್ದನ್ನು, ಅದ್ಭುತವಾದದ್ದನ್ನು ನೋಡುವುದು; ಅದರ ಜೊತೆಗೇ ಚಮಚೆಯಲ್ಲಿರುವ ಎರಡು ಹನಿ ಎಣ್ಣೆಯನ್ನು ಎಂದೂ ಮರೆಯದಿರುವುದು.’
ಈ ಕತೆಯನ್ನು ಇಲ್ಲಿ ಕೊಡುತ್ತಾ ಒಬ್ಬ ವೃತ್ತಿಜೀವಿ ಮೇಷ್ಟರ ಹಾಗೆ ಈ ಕತೆಯ ಅಥವಾ ರೂಪಕದ ಅರ್ಥಗಳನ್ನು ಹೆಕ್ಕಿ ತೆಗೆಯಲು ಮನಸ್ಸು ತವಕಿಸುತ್ತದೆ. ಆದರೆ ಈ ಅಂಕಣದ ಜಾಣಜಾಣೆಯರು ಈ ಕತೆಯ ಸೂಚನೆಗಳನ್ನು ತಂತಾವೇ ಹುಡುಕಿಕೊಳ್ಳಲಿ, ನನಗೂ ಬರೆದು ತಿಳಿಸಲಿ ಎಂದು ಹಾಗೇ ಬಿಡುತ್ತೇನೆ.
ಈ ಅಂಕಣದ ಮೊದಲ ಭಾಗದಲ್ಲಿ ಹೇಳಿದ ಸುಖ ಸಂತೋಷಗಳ ನಾಡುಗಳ ಕಲ್ಪನೆಗಳನ್ನು ಕುರಿತ ವಿಶ್ವ ಸಮೀಕ್ಷೆಗಳ ಮಾನದಂಡಗಳೇನೇ ಇರಲಿ, ಪ್ರತಿಯೊಬ್ಬರ ಸುಖ, ಆನಂದದ ಕಲ್ಪನೆಗಳೇ ಭಿನ್ನ ಹಾಗೂ ವೈಯಕ್ತಿಕ ಎಂಬ ಬಗ್ಗೆ ಯಾರಿಗೂ ಅನುಮಾನವಿರಲಾರದು. ಆದ್ದರಿಂದಲೇ, ಆನಂದ, ಸಂತೋಷಗಳ ಕಲ್ಪನೆಗಳನ್ನು ಕುರಿತ ಅಂತರ‍್ರಾಷ್ಟ್ರೀಯ ಸಮೀಕ್ಷಾ ಫಲಿತಾಂಶಗಳ ಎದುರು ನಮ್ಮ ಸಣ್ಣಪುಟ್ಟ ಸುಖಗಳ ಪಟ್ಟಿಯನ್ನು ನಾವು ಎಂದೂ ಮರೆಯಬಾರದು.
ಈ ನಮ್ಮ ಸ್ವಂತ ಪಟ್ಟಿಯ ಜೊತೆಗೇ ಪಾಲೋ ಕೊಲ್ಹೋನ ಕತೆಯ ಸಂತ ಹೇಳುವ ಚಮಚೆಯಲ್ಲಿರುವ ಎರಡು ಹನಿ ಎಣ್ಣೆ ಚೆಲ್ಲದಂತೆ ನೋಡಿಕೊಂಡೇ ಲೋಕದ ಎಲ್ಲ ಸುಂದರವಾದದ್ದನ್ನು ನೋಡುವ, ಅರಿಯುವ ಕಣ್ಣೂ ದಕ್ಕಿದರೆ…ಆಗ ನಮ್ಮ ಹ್ಯಾಪಿ ಹಾರ್ಮೋನುಗಳು ಉಕ್ಕುತ್ತಲೇ ಇದ್ದರೆ…
Comments
16 Comments
| ಚರಣ್
ಈ ರೂಪಕ ನಮ್ಮ ಮುಂದಿರುವ ಭಿನ್ನವಿಭಿನ್ನ ಜವಬ್ದಾರಿಗಳ ನಡುವೆ ಅವನ್ನು ಮೀರಿದ ಮನುಷ್ಯ ಸಹಜವಾದ ಕುತೂಹಲ, ಸಂಬಂಧಗಳು, ಇರುವಿಕೆಯ ಆಶ್ಚರ್ಯವನ್ನು ಸೂಚಿಸುತ್ತದೆ. ಹಾಗೆಯೇ "ಎಣ್ಣೆ," ಎಲ್ಲರೊಡನಿದ್ದು ಎಲ್ಲರಂತಾಗದೆ ಎಂಬುದನ್ನು ತಿಳಿಪಡಿಸುತ್ತದೆ. ಸಿಂಪಲ್ ಆದ ಸಾವಯವ ಆನಂದ ಅನ್ನೋದು ನಮ್ಮ ಆಟಗಳಿಂದ, ಹರಟೆಗಳಿಂದ ಚಿಕ್ಕವಯಸ್ಸಲ್ಲಿ ಬರುತ್ತಿದ್ದವು. ಆಗ ನಾವು ಬೀದಿಯಲ್ಲಿ ಎರಡು-ಮೂರು ಇಟ್ಟಿಗೆ ಕಲ್ಲು ಇಟ್ಕೊಂಡು, ಸ್ನೇಹಿತರೆಲ್ಲ ಹತ್ಹತ್ತು ರೂಪಾಯಿ ಹಾಕಿ "ಅಡುಗೆ" ಮಾಡ್ಕೊಂಡು ಪಕ್ಕಾ ವಿಶ್ವಮಾನವರಂತೆ ಇದ್ವೀ! ಬೆಳಿತಾ ಬೆಳಿತಾ ಆನಂದದ ಮಾನದಂಡಗಳು ಬಟ್ಟೆಗಳಿಂದ, ಪಬ್ಬು, ಪಾರ್ಟಿ, ಸ್ಟೇಟಸ್ಸು ಹಾಕೋದು, ಟ್ರಿಪ್ ಅಂತ ಹೋಗಿ ಫೋನಿನಲ್ಲೇ ಕಣ್ಣೆದುರಿಗೆ ಇರುವ diverse ಲೋಕವನ್ನು ಕಾಣಲಾಗದೆ ಆಂತರಿಕವಾಗಿ ಬಡವರಾಗ್ತಿದ್ದೇವೆ ಅನ್ನಿಸುತ್ತದೆ. ಈ ಪಟ್ಟಿಯನ್ನು ಇನ್ನು ಬೆಳೆಸಬಹುದು. "Socially correct" ಎನ್ನುವ ಲೋಕ ಹೇರುವ ಸಂತೋಷದ ಮಾನಂಡಗಳ ಭಾಷೆಯಿಂದ ಬಿಡಿಸಿಕೊಂಡು ನಡೆಯಬೇಕಿದೆ.
| ಮಂಜುನಾಥ್ ಸಿ ನೆಟ್ಕಲ್
ಆನಂದ ಹುಡುಕುವ ಹುರುಪು, ಉತ್ಸಾಹ ಹಾಗೂ ಉಮೇದಿನ ಪ್ರಯತ್ನದಲ್ಲಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಎಂದಿಗೂ ಮರೆಯಬಾರದು ಹಾಗೆಯೇ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುವ ಕಡೆಗಷ್ಟೇ ನಮ್ಮ ಗಮನವಿದ್ದರೆ ಜೀವನದ ಆನಂದವನ್ನು ಸಹ ಕಡೆಗಣಿಸಿಬಿಡುತ್ತೇವೆ... ಇವೆರಡನ್ನೂ ಸಮತೋಲನದಲ್ಲಿ ನಿಭಾಯಿಸುವ ವ್ಯಕ್ತಿ ಮಾತ್ರ ಬದುಕಿನ ಆನಂದವನ್ನು ಯಾವುದೇ ಆತಂಕವಿಲ್ಲದೆ ಅನುಭವಿಸಬಲ್ಲ ಎಂದು ನಾನು ಅರ್ಥ ಮಾಡಿಕೊಂಡೆ ಸರ್ ಇದು ನನಗೆ ದಕ್ಕಿದ ಅರಿವು... ಲೇಖನವನ್ನು ಮತೊಮ್ಮೆ ಓದುವಂತೆ ಪ್ರೇರೇಪಿಸುವ ಹಾಗೆ ಸೋದಾಹರಣವಾಗಿ ಅರ್ಥಪೂರ್ಣವಾಗಿ ಬರೆದಿದ್ದೀರಿ. ಜೀವನದಲ್ಲಿ ಏರುಪೇರುಗಳನ್ನು ಕಾಣುವವರಿಗೆ ಲೇಖನ ದಾರಿ ದೀಪವಾಗಲಿ ಧನ್ಯವಾದಗಳು...
| Ravi P K
ಅನೇಕ ಸಮೀಕ್ಷೆಗಳಂತೆ ಹ್ಯಾಪಿನೆಸ್ ಸಮೀಕ್ಷೆಯೂ ಅನೇಕ ದೋಷಗಳಿಂದ ಕೂಡಿದೆ. ಸುಖದ ಕಲ್ಪನೆಯ ಅಸಮಗ್ರತೆ, ಅನೇಕ ಬಗೆಯ ದತ್ತಾಂಶ ದೋಷ, ಸಾಂಸ್ಕೃತಿಕ ಪಕ್ಷಪಾತ, ಸೂಕ್ಷ್ಮತೆ ಇಲ್ಲದಿರುವುದು, ಪೌರ್ವಾತ್ಯ ದೇಶಗಳ ಭಾವನೆಗಳ ನಿರ್ಲಕ್ಷ್ಯ ಮುಂತಾದ ಸಮಸ್ಯೆಗಳಿವೆ. ಈ ವರದಿಯನ್ನು ಒಂದು ಥಿಯರಿ ಅಥವಾ ಹೈಪಾಪಿಸಿಸ್ ನಷ್ಟು ಗಂಭೀರವಾಗಿ ಪರಿಗಣಿಸುವಂತಿಲ್ಲ.
| K.Padmakshi
ನಿಮ್ಮ ಲೇಖನದಲ್ಲಿ Paulo Coelho ನ Alchemist ಎಂದು ನೀವು ಶುರು ಮಾಡುತ್ತಿದ್ದಂತೆ ನಾನು ಈ ಕಥೆ ಬಗ್ಗೆನೇ ಮುಂದೆ ಬರೀತೀರಿ ಅಂತ ನಿರೀಕ್ಷಿಸಿದ್ದೆ, ಹಾಗೆಯೇ ಆಯಿತು.ಆ ಕಥೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ.ಖುಷಿಯಾಯಿತು. ಈ ಕಥೆಯನ್ನು ಎಷ್ಟು ಜನರೊಂದಿಗೆ ಹಂಚಿಕೊಂಡಿದ್ದೇನೋ? ಬೇರೆ ಬೇರೆ ಆಯಾಮಗಳಿವೆ ಅಂತ ಅನಿಸುವಂತಹ ಕಥೆ. Alchemist ನಲ್ಲಿ ಬರುವ ಕೆಲವು ಮಾತುಗಳಂತೂ ಎಷ್ಟು ಅರ್ಥಪೂರ್ಣ ಅಂತ ಅನ್ನಿಸುತ್ತೆ. ಅದರಲ್ಲಿ ಬರುವ ತಕ್ಷಣಕ್ಕೆ ನೆನಪಾದ ಮಾತುಗಳು.... When you want something all the universe conspires in helping you to achieve it. The darkest hour of the night comes just before the dawn.
| ಹಳೆಮನೆ ರಾಜಶೇಖರ
ತತ್ವಪದಗಳಲ್ಲಿ ವ್ಯಕ್ತವಾದ ಆನಂದದ ಸ್ಥಿತಿ ನೆನಪಾಯಿತು ಲೋಕದ ಸೊಗಸು ಮತ್ತು ಕೇಡಿನ ಜೊತೆ ಅಂತರಂಗದ ತನ್ಮಯಯತೆಯಿಂದ ಅನುಸಂಧಾನಗೊಳ್ಳುತ್ತಲೇ ಇರುವುದು ಆನಂದದ ಒಂದು ಒರತೆಯಾಗುತ್ತದೆ ಅನಿಸುತ್ತದೆ
| ಹರಿಪ್ರಸಾದ್ ಬೇಸಾಯಿ
ಸುತ್ತಮುತ್ತಲಿನ ವಾತಾವರಣ ದುಷ್ಟಗೊಳ್ಳುತ್ತಿರುವಾಗ, ದಾರುಣವಾಗುತ್ತಿರುವಾಗ ಮನುಷ್ಯನಾಗಿ ಉಳಿದುಕೊಳ್ಳಲು ಏನಾದರೊಂದು ಹುಡುಕುವ ದಾರಿಯಂತೆ ಈ ಬರಹ ಕಾಣುತೈತೆ. ಥ್ಯಾಂಕ್ಸ್ ಸಾ
| Puttarangaiah K
ಸಂತೋಷದ ಬಗೆಗಿನ ಚರ್ಚೆ ಎಲ್ಲ ಸಲ ಸಂತೋಷವಾದದ್ದಲ್ಲ. ಸಾಲ ಮಾಡಿ ಮಜಾ ಮಾಡುತ್ತಾ ಸುಖವಾಗಿರಬಹುದು. ನಶೆಯಿಂದ ಸುಖವಾಗಿರಬಹುದು. ತಳಮಳದ ಲಂಕೇಶ್ ಸಾಹಿತ್ಯ ಬಿಟ್ಟು ಕೆ ಎಸ್ ನ ಅವರನ್ನು ಹಿಡಿದು ಸುಖವಾಗಿರಬಹುದು. ಫ್ರೀಬಿಗಳಿಂದ ಸುಖವಾಗಿರಬಹುದು. ಕಡಿಮೆ ವ್ಯಾಸಂಗದಿಂದ ಸುಖವಾಗಿರಬಹುದು. ಚಿಲ್ಲರೆ ಕಾಸು ಪಡೆದು ವೋಟು ಹಾಕಿ ಸುಖವಾಗಿರಬಹುದು. ಭ್ರಷ್ಟಾಚಾರದಿಂದ ಸುಖವಾಗಿರಬಹುದು. ವೃದ್ಧ ಪೋಷಕರನ್ನು ದೂರ ಬಿಟ್ಟು ಸುಖವಾಗಿರಬಹುದು. ಸುಳ್ಳು ಹೇಳಿ ಸುಖವಾಗಿರಬಹುದು. ಡಿಜಿಟಲ್ ಗೀಳಿನಿಂದ ಸುಖವಾಗಿರಬಹುದು. ಕಪ್ಪು ಹಣದಿಂದ ಸುಖವಾಗಿರಬಹುದು. ಕಳ್ಳ ದುಡ್ಡು ಮಾಡಿ ಸುಖವಾಗಿರಬಹುದು. ಎಡಬಲಕ್ಕೆ ಕಣ್ಣು ಮುಚ್ಚಿ ಸುಖವಾಗಿರಬಹುದು. ಕಾಪಿ ಹೊಡೆದು ಪಾಸಾಗಿ ಸುಖವಾಗಿರಬಹುದು......... ಸುಖಕ್ಕೆ ಬೇಷರತ್ತಾಗಿ ಸದಾ ಜೈ ಎನ್ನಲಾದೀತೆ?
| Philomina J
ಸಂತೋಷ ಮತ್ತು ಅದರ ಭ್ರಮೆಯ ಬಗ್ಗೆ ಹುಷಾರಾಗಿರಬೇಕು. ಡಯಾಬಿಟಿಸ್ನವರಿಗೂ ಸಿಹಿತಿನಿಸು ಸಂತೋಷವನ್ನು ಕೊಡುತ್ತದೆ. ಆಶ್ವಾಸನೆಗಳು ಪ್ರಜೆಗಳಿಗೆ ಸಂತೋಷವನ್ನು ಕೊಡುತ್ತವೆ. ಫಿನ್ಲೆಂಡಿನವರೇ ಬಹಳ ಮಂದಿ ಈ ಸಮೀಕ್ಷೆ ಬಗ್ಗೆ ನಗಾಡುತ್ತಾರೆ. ಸಂತೋಷಕ್ಕಿಂತ ಹೆಚ್ಚಾಗಿ ತೃಪ್ತಿಯಭಾವ ತಮ್ಮಲ್ಲಿದೆಯೆಂದು ಅವರು ಹೇಳುತ್ತಾರೆ.
| Shakira Khanum
ಆನಂದದ ಗುಟ್ಟು ಏನು ಎಂದು ತಿಳಿಯಲು ಹೋದ ತರುಣನಿಗೆ ಸಂತ-ಜ್ಞಾನಿ ಎರಡು ಹನಿ ಎಣ್ಣೆಯ ಚಮಚ ಕೊಟ್ಟು, ಅದನ್ನು ಚೆಲ್ಲದಂತೆ ಅರಮನೆ ಸುತ್ತಾಡಿ ಬರಲು ಹೇಳುತ್ತಾನೆ. ಮೊದಲು ತರುಣ ಎಣ್ಣೆಯ ಚಿಂತೆಯಲ್ಲೇ ಅರಮನೆಯ ಸೊಬಗನ್ನು ನೋಡದೆ ಹಿಂತಿರುಗುತ್ತಾನೆ. ಮತ್ತೆ ಎಣ್ಣೆಯ ಚಮಚ ಕೊಟ್ಟು ಅರಮನೆ ಸುತ್ತಾಡಲು ಹೇಳಿದಾಗ, ತರುಣ ಅರಮನೆಯ ಸೊಬಗನ್ನು ನೋಡಿ, ಎಣ್ಣೆ ಚೆಲ್ಲಿದ್ದನ್ನು ಗಮನಿಸಿ, ಆನಂದದ ಗುಟ್ಟನ್ನು ಅರಿಯುತ್ತಾನೆ. ಅಂದರೆ, ಸುಖ-ದುಃಖಗಳನ್ನು ಸಮತೂಕದಲ್ಲಿ ಇರಿಸಿಕೊಂಡು ಜೀವನವನ್ನು ಆನಂದಿಸುವುದು ಎಂದರ್ಥ. ವಿಷ್ಣು ನಾರದನ ಭಕ್ತಿಯನ್ನು ರೈತನ ಭಕ್ತಿಗೆ ಹೋಲಿಸಿದಂತೆ.
| Ramesh Aroli
Very interesting sir. In Japan, I read it somewhere that people go to prayer halls and whisper their wishes in an empty pot and then they cover it with lid. So, happiness index, as you have narrated it is unique and culturally different from community to community and land to land. Thanks for this interesting write up sir. 🙏🏾
| Shamarao
ಆನಂದ ದ ನಿಗೂಢ ಒರತೆಗಳು ನೂರೋ ಸಾವಿರ ವೋ ಇದ್ದಾವು.ಆದರೂ ಈ ಕತೆ ಎಣ್ಣೆ ಚೆಲ್ಲುವ ಕುರಿತು ಕಾಳಜಿ ಬೇಡ, ಸುತ್ತಲಿನ ಸೊಬಗು ನೋಡಿ ಆನಂದಿಸು ಎಂದಂತಿದೆ!
| Kusuma BM
ವಡ್ಡಾರಾಧನೆಯಲ್ಲಿ ಬರುವ ನಂದಿಮಿತ್ರ ಎಂಬ ಮುನಿಯ ಕಥೆ ವಿಶೇಷವಾಗಿದೆ ಸರ್. ಊಟದ ಸವಿಯಲ್ಲಿ ಸುಖ ಕಾಣುವ ಅವನು ಅದಕ್ಕಾಗಿಯೇ ತಪಸ್ವಿಯಾಗುತ್ತಾನೆ. ನಂತರದಲ್ಲಿ ಆ ಊಟದ ಆಸೆಯನ್ನು ಮೀರುವಲ್ಲಿ ಸುಖ ಅನುಭವಿಸುತ್ತಾನೆ. ಎಂದರೆ ಸುಖ ಎಂಬ ಕಲ್ಪನೆಯೇ ಕ್ಷಣಿಕವೋ? ಕಟ್ಟುಕಥೆಯೋ? ಭ್ರಮೆಯೋ? ಅಥವಾ ನಮ್ಮ ನಂಬಿಕೆಯೋ ಎನಿಸಿತು ಸರ್ ಭೋಗಸಂಸ್ಕೃತಿ ಎಂಬುದರ ನಿಜ ಅರ್ಥವನ್ನು ಇನ್ನೂ ತಿಳಿಯಬೇಕಿದೆ ಸರ್. ಸುಖದ ನೆಲೆಯನ್ನು ಕುರಿತು ಕೆಲ ಸಮಯ ಚಿಂತನೆಗೆ ಪ್ರೇರಣೆ ನೀಡಿದ ಲೇಖನ ಸರ್ thank you
| Dr. Eraiah
ಪ್ರಸ್ತುತಕ್ಕೆ ಅನ್ವಯವಾಗುವ, ವಾಸ್ತವಕ್ಕೆ ಕೈಗನ್ನಡಿ ಯಂತಿದೆ ತಮ್ಮ ಅದ್ಭುತ ಲೇಖನ.
| ಸೋಮಶೇಖರ್ ಕದಿರೇಹಳ್ಳಿ
ಜನಪ್ರಿಯ ಕಾದಂಬರಿ 'ಆಲ್ಕೆಮಿಸ್ಟ್’ ನಲ್ಲಿ ಸಂತ ಹೇಳುವ ಕತೆಯಂತು ಅದ್ಬುತವಾದ ರೂಪಕದಂತಿದೆ , ವಿಶ್ವ ಸಂತೋಷದ ಸೂಚ್ಯಂಕ ಪಟ್ಟಿಯಲ್ಲಿ ಹತ್ತಾರು ಅಂಶಗಳು ಇದ್ದರು ನರಹಿಂಸೆಯಲ್ಲಿ ಪ್ರಮುಖ ಪಾತ್ರವಹಿಸುವ ದೇಶಗಳು ಆ ಪಟ್ಟಿಯಲ್ಲಿ ಸೇರಿರುವುದು, ನಮ್ನ ದೇಶ ನೂರರ ನಂತರದ ಸ್ಥಾನ ಪಡೆದಿರುವುದು ಕೂತುಹಲ ಹುಟ್ಟಿಸುತ್ತದೆ, ಓದುಗರಿಗಂತು ಒಂದು ನಿಗೂಢ ರಹಸ್ಯ ಮನದೊಳು ಹೊಕ್ಕುವುದಂತು ಸತ್ಯ, ಈ ಕತೆ ಓದುವುದು ಸಂತೋಷದ ಭಾಗವಾಗಿಯೇ ಸೇರಿಕೊಂಡಿದೆ, ಧನ್ಯವಾದಗಳು ಹುಳಿಯಾರ್ ಸರ್
| ಡಾ. ನಿರಂಜನ ಮೂರ್ತಿ ಬಿ ಎಂ
'ಆನಂದದ ನಿಗೂಢ ಒರತೆಗಳು' ಕಣ್ಣು ತೆರೆಸುವ, ನಮ್ಮ ಮನೋಧರ್ಮವನ್ನು ಬದಲಾಯಿಸಯವ, ಮತ್ತು ಆನಂದದೆಡೆಗಿನ ನಮ್ಮ ದೃಷ್ಟಿಕೋನವನ್ನು ತಿದ್ದುವ ಲೇಖನ. ಆನಂದವೆನ್ನುವುದು ಹೊರಗಿನ ಪ್ರಪಂಚದ ಮೇಲೆ ಅವಲಂಬಿತವಾಗಿರುವ ಒಳಗಿನ ಭಾವವೆಂಬುದು ಬಲ್ಲವರು ಹೇಳುವ ಮಾತು ನಿಜವೆನಿಸುತ್ತೆ. ಎರಡು ಹನಿ ಎಣ್ಣೆಯ ಕತೆ ಚೆನ್ನಾಗಿದೆ.
| ಗುರು ಜಗಳೂರು
ಸುಖ,ಸಂತೋಷ ಎನ್ನುವುದು ಸಾರ್ವತ್ರಿಕವಾದುದಲ್ಲ, ವೈಯಕ್ತಿಕವಾದದು ಎನ್ನುವುದು ನನ್ನ ಭಾವನೆ.ಕಾಲ,ದೇಶ ಮೀರಿದ್ದು. ಜಾತ್ರೆಯಲ್ಲಿ ಮಿಂದು ಬಾಳೆ,ಮೆಣಸನ್ನು ತೇರಿಗೆ ತೂರಿ ಖುಷಿಯಾದವ ಹಳ್ಳಿಯವನಿಗೆ ಇರುವ ಸರ್ಕಾರ ಯಾವುದನ್ನೆವುವ ಪರಿವೆ ಇರದಿರುವುದೇ ನಿಜವಾದ ಖುಷಿ ಎನ್ನುವ ಅನಂತಮೂರ್ತಿಯವರ ಮಾತು ನೆನಪಾಯಿತು. ಕೆ ಎಸ್ ನ ರವರು ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎನ್ನುವ ಅರ್ಥ ಇದೆ ಅಲ್ಲವೇ?
Add Comment