ಕೈ ಹಿಡಿದು ನಡೆಸುವ ಕರುಣಾಳು ರೂಪಕ
by Nataraj Huliyar
ಮೊನ್ನೆ ಮೇ ೧೫, ೨೦೨೬ ರ ಸಂಜೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕನಕದಾಸರ ಬಹುಭಾಷಾ ಅನುವಾದಗಳ ಸಂಪುಟಗಳನ್ನು ಬಿಡುಗಡೆ ಮಾಡುತ್ತಾ, ತಮ್ಮ ಮಾತಿನ ಕೊನೆಗೆ ವಿಚಿತ್ರವಾದ ಗಟ್ಟಿ ದನಿಯಲ್ಲಿ ಹೇಳಿದ ಮಾತು: ‘ಇಲ್ಲಿಂದ ನಿರ್ಗಮಿಸ್ತೇನೆ.’
ಅದು ಯಾಕೋ, ಈ ನಿರ್ಗಮನದ ರೂಪಕ ಧಡ್ಡಂತ ನನ್ನೆದೆಗೆ ಹೊಡೆದಂತಾಯಿತು. ಗೆಳೆಯ ದಂಡಪ್ಪನವರಿಗೆ ‘ಕೇಳಿಸಿಕೊಂಡ್ರಾ?’ ಅಂದೆ. ‘ಹೂಂ ಗುರೂಜಿ! ನನಗೂ ಯಾಕೋ ಒಂಥರಾ ಅನ್ನಿಸ್ತು’ ಎಂದರು.
ಅವತ್ತು ಬಿಡುಗಡೆಯಾದ ಸಂಪುಟಗಳಲ್ಲಿ ನಾನು ಸಂಪಾದಿಸಿದ ‘ಮೋಹನ ತರಂಗಿಣಿ’ಯ ಇಂಗ್ಲಿಷ್ ಅನುವಾದವೂ ಇತ್ತು. ಅವತ್ತಿನ ಭಾಷಣದಲ್ಲಿ ಸಿದ್ಧರಾಮಯ್ಯನವರು ಬಸವಣ್ಣನವರ ಚಿರಪರಿಚಿತ ರೂಪಕವನ್ನು ಮತ್ತೆ ನೆನಪಿಸಿದ್ದರು:
ಇವನಾರವ
ಇವನಾರವ
ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ
ಈ ವಚನವನ್ನು ಸಿದ್ಧರಾಮಯ್ಯನವರು ವಿಧಾನಸಭೆಯಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಪುಟ್ಟ ಅಭಿನಯದ ಮೂಲಕವೂ ಸಾವಿರಾರು ಸಲ ಹೇಳಿದ್ದಾರೆ. ಸುಳ್ಳನ್ನು ಸಾವಿರ ಸಲ ಹೇಳಿ ನಿಜ ಮಾಡುವ ಜಾತಿಪೀಡಿತ-ಕೋಮುಪೀಡಿತ ರಾಜಕಾರಣದಲ್ಲಿ ಸದಾಶಯದ ರೂಪಕವನ್ನು ಮತ್ತೆ ಮತ್ತೆ ಹೇಳಿ ಜನರನ್ನು ತಿದ್ದುವ ಈ ಸಕಾರಾತ್ಮಕ ರಾಜಕಾರಣ ಕೂಡ ಗೆದ್ದಿದೆ. ಅನೇಕ ಸ್ವಾಮೀಜಿಗಳು ಇದೇ ವಚನವನ್ನು ಬಹುತೇಕ ತಮ್ಮದೇ ಜಾತಿಯ ಜನಗಳಿಗೆ ತುಟಿಯಂಚಿನಲ್ಲಿ ಹೇಳಿ ಮಾಡಲಾಗದ ಪರಿಣಾಮವನ್ನು ಸಿದ್ದರಾಮಯ್ಯನವರ ವಚನ ಮಂಡನೆ ಸಾಧಿಸಿದಂತಿದೆ. ಯಾಕೆಂದರೆ ಅವರ ರಾಜಕಾರಣದಲ್ಲಿ, ಯೋಜನೆಗಳಲ್ಲಿ ‘ಇವ ನಮ್ಮವ’ದ ಸರ್ವಸ್ವೀಕಾರ ರಾಜಕಾರಣ (ಇನ್ಕ್ಲೂಸಿವ್ ಪಾಲಿಟಿಕ್ಸ್) ನಿರಂತರವಾಗಿದೆ. ವಿವಿಧ ಜಾತಿಗಳ ಜನ, ಅಧಿಕಾರಿಗಳು, ಕಾರ್ಯಕರ್ತರು ಅವರಿಗೆ ಸ್ಪಂದಿಸುತ್ತಿದ್ದ ರೀತಿಯೇ ‘ಇವ ನಮ್ಮವ’ ರೂಪಕ ಅವರ ಆಳಕ್ಕೆ ಇಳಿದು ಪ್ರತಿಫಲಿಸಿದ್ದನ್ನು ತೋರಿಸುವಂತಿತ್ತು.
ಇದು ಅಪ್ಪಟ ಕನ್ನಡ ನೆಲದ, ಕನ್ನಡ ಪದಗಳೇ ತುಂಬಿದ, ವಚನ ರೂಪಕದ ಅನನ್ಯ ಪ್ರಭಾವ, ಸಾಧನೆ ಎಂದು ಸಾಹಿತ್ಯದ ಶಕ್ತಿಯಲ್ಲಿ ನಂಬಿಕೆಯಿರುವವರಾದರೂ ನಂಬಬೇಕಾಗುತ್ತದೆ.
ಈ ಅಂಕಣದಲ್ಲಿ ರಾಜ್ಯ-ರಾಷ್ಟ್ರ ರಾಜಕಾರಣವನ್ನು ಪೂರ್ಣಾವಧಿ ವಸ್ತುವನ್ನಾಗಿಸಿ ಬರೆಯುವುದು ಕಡಿಮೆ. ಆದರೆ ಈ ಸಲ ತನ್ನ ತಲೆಯಲ್ಲಿ ಅಡ್ಡಾಡುತ್ತಿರುವ ‘ಇವ ನಮ್ಮವ’ ಬಿಟ್ಟು ಬೇರೇನೂ ಬರೆಯಲು ಕೈಯೇ ಬರಲಿಲ್ಲ!
ನಿನ್ನೆ ಶನಿವಾರ (೩೦ ಜೂನ್ ೨೦೨೬) ಪ್ರಜಾವಾಣಿಯಲ್ಲಿ ಪ್ರಕಟವಾದ ‘ಸಿದ್ಧರಾಮಯ್ಯ: ಇವ ನಮ್ಮವ’ ಲೇಖನ ಓದಿದ ಗೆಳೆಯ ಗಂಗರಾಜು ತಾತಗುಣಿ ನನ್ನ ೨೦೧೩ರ ಪ್ರಜಾವಾಣಿ ಲೇಖನವನ್ನು ನೆನಪಿಸಿದರು. ಇಲ್ಲಿ ಪ್ರಜಾವಾಣಿ ನನಗಾಗಿ ಸೃಷ್ಟಿಸಿದ ಪುಟ್ಟ ‘ಚಾರಿತ್ರಿಕ ಅವಕಾಶ’ದ ವೈಶಿಷ್ಟ್ಯವನ್ನೂ ಹೇಳಬೇಕು:
೧೧ ಮೇ ೨೦೧೩. ಪ್ರಜಾವಾಣಿಯ ಸಹಸಂಪಾದಕರಾಗಿದ್ದ ಸಿ.ಜಿ. ಮಂಜುಳಾ ‘ನೀವು ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಕ್ಕಾಗಿ ಲೇಖನ ಬರೆಯಬೇಕು?’ ಎಂದರು.
ಚಣ ಹಿಂಜರಿದರೂ ಸಂಜೆಯ ಹೊತ್ತಿಗೆ ಬರೆದೆ. ಆ ಲೇಖನದ ಶೀರ್ಷಿಕೆ: ‘ಹೊಸ ಸರ್ಕಾರ; ಹೊಸ ಕನಸು’.
ನಂತರ ಸಿದ್ಧರಾಮಯ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಬರೆದ ಲೇಖನದ ಹೆಸರು: ‘ಕಾಂಗ್ರೆಸ್ ಸರ್ಕಾರ: ಮೂರನೇ ಹುಟ್ಟು ಹಬ್ಬದ ಎದುರು’. ಲೇಖನದ ಇಂಟ್ರೊ: ‘ತನ್ನ ಕಾರ್ಯವೈಖರಿಯನ್ನು ತೀವ್ರಪರೀಕ್ಷೆಗೆ ಒಡ್ಡಿಕೊಳ್ಳದಿದ್ದರೆ ಈ ಸರ್ಕಾರಕ್ಕೆ ಭವಿಷ್ಯವಿಲ್ಲ…’
ಈ ಲೇಖನ ಬಂದಾಗ ಸಿದ್ಧರಾಮಯ್ಯನವರು ದೆಹಲಿಯ ಕರ್ನಾಟಕ ಭವನದಲ್ಲಿದ್ದರು. ಈ ಲೇಖನವನ್ನು ಮುಖ್ಯಮಂತ್ರಿಗಳು ಬಿಡುವಾಗಿ ಓದಿದರೆಂದು ಗೆಳೆಯರು ಹೇಳಿದರು.
೨೦೨೩ರಲ್ಲಿ ಮತ್ತೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದಾಗ ಸಹ ಸಂಪಾದಕರಾಗಿದ್ದ ಉದಯಕುಮಾರ್ ಲೇಖನ ಬರೆಯಲು ಹೇಳಿದರು. ಆಗ ಬರೆದ ಲೇಖನದ ತಲೆಬರಹ: ‘ಕಾಂಗ್ರೆಸ್ ಪುನರಾಗಮನ: ನಿರೀಕ್ಷೆ ಸವಾಲು.’ ಅದರ ಇಂಟ್ರೊ: ‘ಜಾಗೃತ ಮತದಾರರು, ಅತಿ ನಿರೀಕ್ಷೆ ಹಾಗೂ ಲೋಕಸಭಾ ಚುನಾವಣೆಯ ನೆರಳಲ್ಲಿ ಹೊಸ ಸರ್ಕಾರ…’
ಮೊನ್ನೆ ೨೮ರಂದು ಬಕ್ರೀದ್ ಹಬ್ಬದ ದಿನ ಸಿದ್ಧರಾಮಯ್ಯನವರು ರಾಜಿನಾಮೆ ಕೊಟ್ಟ ಸಂಜೆ ಗೆಳೆಯರಾದ ಗುರುಪ್ರಸಾದ್ ಕಂಟಲಗೆರೆ, ಭಗತ್ ಸಿಂಗ್ ಕುಂದೂರು, ಕಲಾವಿದ ಸಂತೋಷ್, ಶೋಯಿಂಕಾ ಜೊತೆಯಲ್ಲಿ ಕಂಟಲಗೆರೆಯಲ್ಲಿದ್ದೆ. ಬೆಂಗಳೂರಿಗೆ ಬರುವ ಹಾದಿಯಲ್ಲಿ ಸಿದ್ಧರಾಮಯ್ಯನವರ ಚಿತ್ರಗಳು ಮೂಡತೊಡಗಿದವು. ಭಗತ್ ಸಿಂಗ್ ಸಿದ್ಧರಾಮಯ್ಯನವರು ಪಂಚೆಯನ್ನು ಕೊಂಚ ಹರಡಿಕೊಂಡು ಬಿಡುಬೀಸಾಗಿ ಕೂರುವ ಗತ್ತನ್ನು ವರ್ಣಿಸಿದ್ದು ನೆನಪಾಯಿತು. ರಾತ್ರಿ ಎಂಟೂವರೆಗೆ, ಪ್ರಜಾವಾಣಿಯ ಸಹ ಸಂಪಾದಕ ಚ.ಹ. ರಘುನಾಥರಿಗೆ ನಾನೇ ಬರೆಯುವೆನೆಂದು ಹೇಳಿದೆ.
ಈ ಒಂದೂವರೆ ದಶಕದಲ್ಲಿ ಸಿದ್ಧರಾಮಯ್ಯ ಕರ್ನಾಟಕದ ಅಪರೂಪದ ನಾಯಕರಾಗಿ ಬೆಳೆದಿದ್ದರು. ಕೆಲವೇ ಗಂಟೆಗಳಲ್ಲಿ ಬರೆದ ಈ ಲೇಖನಕ್ಕೆ ಹಲವು ತಲೆಬರಹಗಳನ್ನು ಪ್ರಯತ್ನಿಸಿದೆ: ‘ಸಿದ್ಧರಾಮಯ್ಯನವರ ಪಾಸಿಟಿವ್ ಪಾಲಿಟಿಕ್ಸ್’; ‘ಸಿದ್ಧರಾಮಯ್ಯನವರ ಸರ್ವಸ್ವೀಕಾರ ರಾಜಕಾರಣ’ (ಇನ್ಕ್ಲೂಸಿವ್ ಪಾಲಿಟಿಕ್ಸ್); ‘ಸಿದ್ಧರಾಮಯ್ಯನವರ ಸಕಾರಾತ್ಮಕ ರಾಜಕಾರಣ’… ಹೀಗೆ.
ಕೊನೆಗೆ ರಘು, ‘ಸಿದ್ಧರಾಮಯ್ಯ: ಇವ ನಮ್ಮವ’ ಎಂದರು.
‘ಎಡಿಟೋರಿಯಲ್ ಸ್ಮಾರ್ಟಿ!’ ಎಂದೆ.
೨೦೨೬ರ ಮಾರ್ಚ್ ತಿಂಗಳಲ್ಲಿ ಅಂತರ್ಜಾತೀಯ ವಿವಾಹಿತರಿಗೆ ರಕ್ಷಣೆ ನೀಡುವ ‘ಇವ ನಮ್ಮವ’ ಚಾರಿತ್ರಿಕ ಮಸೂದೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಂಡಿಸಿದಾಗಲೂ ಇದೇ ಅಂಕಣದಲ್ಲಿ ಬರೆದಿದ್ದೆ. ವಚನಯುಗದ ‘ಇವ ನಮ್ಮವ’ ಆದರ್ಶ ರೂಪಕ ಐದು ಜನ ಲಿಂಗಾಯತರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಕರ್ನಾಟಕದಲ್ಲಿ ಹೀಗೆ ಅರ್ಥಪೂರ್ಣ ಪ್ರತಿಧ್ವನಿ ಪಡೆದಿರಲಿಲ್ಲ. ಯಾಕೆಂದರೆ, ಈ ರೂಪಕವನ್ನು ‘ಇನ್ಕ್ಲೂಸೀವ್ ರಾಜಕಾರಣ’ ಅಥವಾ ‘ಸರ್ವಸ್ವೀಕಾರ ರಾಜಕಾರಣ’ದ ಮೂಲಕ ಎಲ್ಲ ಜಾತಿ, ವರ್ಗಗಳ ಧರ್ಮಗಳ ಜನರನ್ನೂ ಒಳಗೊಳ್ಳುವ ರೂಪಕವಾಗಿಸುವ ಬಯಕೆ, ಬದ್ಧತೆ, ವಿಶಾಲ ದೃಷ್ಟಿ ಆ ಮುಖ್ಯಮಂತ್ರಿಗಳಲ್ಲಿ ಯಾರಿಗೂ ಇರಲಿಲ್ಲ.
ಸಿದ್ಧರಾಮಯ್ಯನವರ ‘ಇವ ನಮ್ಮವ’ದ ಜಾತ್ಯತೀತ, ಪ್ರೋಗ್ರೆಸೀವ್ ವ್ಯಕ್ತಿತ್ವದ ವಿಕಾಸದ ಯಶಸ್ಸು ಅವರಿಗಷ್ಟೇ ಅಲ್ಲದೆ, ಕರ್ನಾಟಕದ ಸಾವಿರಾರು ತೆರೆಮರೆಯ ಉತ್ಸಾಹಿ ಸೋಶಿಯಲ್ ಮೀಡಿಯಾದ ತರುಣ ತರುಣಿಯರಿಗೆ, ಅಸಂಖ್ಯಾತ ದಲಿತ ಬಹುಜನ ಲೇಖಕ ಲೇಖಕಿಯರಿಗೆ ಸಲ್ಲುತ್ತದೆ; ಸಣ್ಣಪುಟ್ಟ ಕುರ್ಚಿಗಳಿಗಾಗಿ ಸಿದ್ಧರಾಮಯ್ಯನವರ ಸುತ್ತ ಸುಳಿದ ಪರಪುಟ್ಟ ಲೇಖಕ, ಲೇಖಕಿಯರಿಗಿಂತ ಇಂಥ ಕಾಳಜಿಯ ಹೊಸ ತಲೆಮಾರು ಸ್ವಯಂಪ್ರೇರಣೆಯಿಂದ, ಯಾವ ಲಾಭದ ಆಸೆಯೂ ಇಲ್ಲದೆ ಕಟ್ಟಿದ ಸಿದ್ಧರಾಮಯ್ಯನವರ ವ್ಯಕ್ತಿತ್ವ, ಹಬ್ಬಿಸಿದ ವಿಡಿಯೋಗಳ ಕೆಲಸ ಅತ್ಯಂತ ಚಾರಿತ್ರಿಕವಾದುದು. ಸದ್ದಿಲ್ಲದೆ ಅವರ ಭಾಷಣಗಳು, ಟ್ವೀಟುಗಳನ್ನು ವರದಿಗಳನ್ನು ರೂಪಿಸಿದ ಕಾಳಜಿಯ, ಜವಾಬ್ದಾರಿಯುತ ಮನಸ್ಸುಗಳಿಗೂ ಈ ಕ್ರೆಡಿಟ್ ಸಲ್ಲುತ್ತದೆ. ನಾನೇ ಬಲ್ಲಂತೆ ಲೇಖಕ-ಅಧಿಕಾರಿ ವೆಂಕಟೇಶಯ್ಯ, ಪತ್ರಕರ್ತರಾದ ದಿನೇಶ್ ಅಮೀನ ಮಟ್ಟು, ಕೆ.ವಿ. ಪ್ರಭಾಕರ್, ಗಿರೀಶ್ ಕೋಟೆ ಈ ಕೆಲಸವನ್ನು ತಮ್ಮ ಕರ್ತವ್ಯವೆಂಬಂತೆ ಹಗಲೂರಾತ್ರಿ ಮಾಡಿದ್ದಾರೆ. ಬೇರೆ ಬೇರೆ ಪತ್ರಿಕೆಗಳು, ಮಾಧ್ಯಮಗಳ ಅಸಂಖ್ಯಾತ ಸಮಾನತೆಯ ಆಶಯದ ನೂರಾರು ಪತ್ರಕರ್ತ, ಪತ್ರಕರ್ತೆಯರು ಕರ್ನಾಟಕ ಕೋಮುವಾದಿಗಳ ಪಾಲಾಗಬಾರದೆಂಬ ಆಶಯದಿಂದ ಕೂಡ ಸಿದ್ಧರಾಮಯ್ಯನವರ ವ್ಯಕ್ತಿತ್ವವನ್ನು ನಿರಂತರ ಹಬ್ಬಿಸಿದ್ದಾರೆ.
ಅಂದರೆ, ‘ಇವ ನಮ್ಮವ’ ರೂಪಕ ಹಬ್ಬಿಸಿದ ಭಾವ ಈ ಎಲ್ಲರೊಳಗೆ ಸಹಜವಾಗಿ ಉಕ್ಕಿದ್ದರಿಂದ ಕೂಡ ಇದೆಲ್ಲ ಆಗಿದೆ. ಇಂಥ ಭಾವನೆಯನ್ನು ಕರ್ನಾಟಕದಲ್ಲಿ ಈಚಿನ ದಶಕಗಳಲ್ಲಿ ಯಾವ ರಾಜಕಾರಣಿಯೂ ಉಕ್ಕಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಇಂಥ ರಾಜಕಾರಣಿಯೊಬ್ಬ ರೂಪುಗೊಳ್ಳುವ ಸೂಚನೆಗಳು ಇವತ್ತಂತೂ ಕಾಣುತ್ತಿಲ್ಲ. ನಿನ್ನೆ ಶನಿವಾರ ಮಧ್ಯಾಹ್ನ ಗೆಳೆಯರೊಬ್ಬರ ಫೋನಿನಲ್ಲಿ ಸ್ವತಃ ಸಿದ್ಧರಾಮಯ್ಯನವರೇ ‘ ನಟರಾಜ್, ಲೇಖನ ಚೆನ್ನಾಗಿದೆ. ಥ್ಯಾಂಕ್ಸ್ ’ ಎಂದರು; ನನಗೆ ಮಾತೇ ಹೊರಡಲಿಲ್ಲ.
೨
ಮೇಲಿನ ಟಿಪ್ಪಣಿಗಳನ್ನು ಬರೆದ ನಂತರ ಮತ್ತೆ ಮೊನ್ನೆಯ ಸಿದ್ಧರಾಮಯ್ಯನವರ ಅಧಿಕಾರ ವಿದಾಯದ ಚಿತ್ರಗಳು ಎದುರು ಬರುತ್ತವೆ: ಹಟಾತ್ತನೆ ಎರಗಿದ ಹೈಕಮ್ಯಾಂಡ್ ಆದೇಶದಿಂದ ಕೆಲವು ಗಂಟೆಗಳ ಕಾಲ ಸಿದ್ಧರಾಮಯ್ಯ ವಿಚಲಿತರಾದರೂ ಘನತೆಯಿಂದ ಮುಖ್ಯಮಂತ್ರಿ ಹುದ್ದೆ ಬಿಟ್ಟು ಹೊರ ಬಂದದ್ದು ಕೂಡ ಬಹುಕಾಲ ನೆನಪಿನಲ್ಲಿ ಉಳಿಯುವ ಚಾರಿತ್ರಿಕ ಚಿತ್ರವೇ ಆಗಿದೆ. ಅದರಲ್ಲೂ ಇಡೀ ಪ್ರಕರಣವನ್ನು ವಾರಗಟ್ಟಲೆ ಹಿಂಜಿ, ಬಾಯಿಗೆ ಬಂದದ್ದು ಚೀರಿ, ಜನರಿಗೆ ಉಚಿತ ಮನರಂಜನೆ ಕೊಡಲು ಹೊಂಚುತ್ತಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಕಿಂಚಿತ್ ಆಹಾರವನ್ನೂ ಕೊಡದೆ ಸಿದ್ಧರಾಮಯ್ಯ ಘನತೆಯಿಂದ ನಿರ್ಗಮಿಸಿದ್ದಾರೆ.
ಈ ಅಂಕಣ ಸಂದರ್ಭ, ಸನ್ನಿವೇಶಗಳನ್ನು ಸಾಹಿತ್ಯದ ಕಾಣ್ಕೆಗಳ ಮೂಲಕ ನೋಡುವುದರಿಂದ, ಹಿಂದೊಮ್ಮೆ ಇಲ್ಲಿ ಉಲ್ಲೇಖಿಸಿದ ತತ್ವಜ್ಞಾನಿ ನೀಷೆ ’ವಿದಾಯ’ ಕುರಿತು ಹೇಳಿದ ಮಾತೊಂದನ್ನು ಈ ವಿದಾಯದ ಸನ್ನಿವೇಶದಲ್ಲಿ ಮತ್ತೆ ನೆನಪಿಸುವ ಕಾತರ ಹುಟ್ಟುತ್ತಿದೆ. ಗ್ರೀಕ್ ಮಹಾಕಾವ್ಯ ‘ಓಡಿಸ್ಸಿ’ಯ ಸನ್ನಿವೇಶವೊಂದನ್ನು ವ್ಯಾಖ್ಯಾನಿಸುತ್ತಾ ನೀಷೆ ‘ವಿದಾಯ’ ಕುರಿತ ಅಪೂರ್ವ ಫಿಲಸಾಫಿಕಲ್ ಹೊಳಹನ್ನು ಕೊಡುವ ಪ್ರಸಂಗ ಇದು:
ಟ್ರೋಜನ್ ಯುದ್ಧ ಮುಗಿದು ಎಷ್ಟೋ ವರ್ಷ ಕಾಲ ಮರಳಿ ಮನೆ ಸೇರಲಾರದೆ ಓಡಿಸ್ಯೂಸ್ ಅನಾಥನಂತೆ ಕಡಲ ತಡಿಯಲ್ಲಿ ಬೀಳುತ್ತಾನೆ. ಯೂಲಿಸಿಸನನ್ನು ಕಂಡು ಮೋಹಗೊಂಡ ಆಲ್ಸಿನೌಸಿನ ರಾಜಕುಮಾರಿ ಓಡಿಸ್ಯೂಸ್‌ನನ್ನು ತನ್ನ ಅರಮನೆ ತಲುಪುವಂತೆ ಮಾಡುತ್ತಾಳೆ. ಆಲ್ಸಿನೌಸಿನ ರಾಜನ ಅತಿಥಿಯಾಗಿ ನೆಮ್ಮದಿಯಿಂದ ಕೆಲ ಕಾಲ ಕಳೆದ ಒಡಿಸ್ಯೂಸ್, ನಂತರ ತನ್ನೂರು ಇಥಕದ ಕಡೆಗೆ ಹೊರಡಲು ಅಣಿಯಾಗುತ್ತಾನೆ. ಆ ಗಳಿಗೆಯಲ್ಲಿ ಹೋಮರ್ ಸೃಷ್ಟಿಸುವ ಕೋಮಲ ಸನ್ನಿವೇಶವನ್ನು ಕವಿಯ ಬಣ್ಣನೆಯಲ್ಲೇ ಕೇಳಿ:
ಅರಮನೆಯ ಕಂಬದ ಬದಿ ನಿಂತು ಕಾಯುತ್ತಿದ್ದ ನೌಸಿಕಾ
ಓಡಿಸ್ಯೂಸ್ ಕಂಬದ ಬಳಿ ಹಾಯುವ ಗಳಿಗೆ
ಕಂಗಳಲ್ಲಿ ಬೆರಗು ಚೆಲ್ಲಿ ಸರ‍್ರನೆ ಮೆಲುನುಡಿದಳು:
‘ಎಲ್ಲಿಂದಲೋ ಬಂದವನೇ, ಹೋಗಿ ಬಾ!
ನಿಮ್ಮೂರಿನಲ್ಲಿ ನನ್ನ ನೆನಸಿಕೋ
ನಿನ್ನ ಕಂಡವಳನ್ನು, ನಿನ್ನ ಉಳಿಸಿದವಳನ್ನು ನೆನೆದುಕೋ
ನೆನೆನೆನೆದು ಹಾಯೆಂದುಕೋ.’
ನೌಸಿಕಾಳ ಮೆಲುನುಡಿ ಕೇಳಿ ಒಡಿಸ್ಯೂಸ್ ಮರುನುಡಿದನು:
‘ನೌಸಿಕಾ, ಆಲ್ಸಿನೌಸನ ಮಗಳೆ,
ಸ್ಯೂಸ್ ದೇವನ ದಯೆಯಿಂದ ಮತ್ತೊಮ್ಮೆ
ನಮ್ಮೂರಲ್ಲಿ ನನಗೆ ಬೆಳಕು ಹರಿಯಲಿ;
ಆ ನೆಲದಲ್ಲಿ ಆ ಗಳಿಗೆಯಲ್ಲಿ
ಮತ್ತು ಆಹೊತ್ತಿನಿಂದ ಅನುದಿನವು
ನನ್ನ ಕಟ್ಟ ಕಡೆಯ ಉಸಿರಿರುವ ತನಕ,
ನನ್ನ ಜೀವ ಉಳಿಸಿದ ರಾಜಕುವರಿಯೇ,
ದೇವಿಯೊಬ್ಬಳ ನೆನೆದಂತೆ
ನಾ ನಿನ್ನ ನೆನೆಯುವಂತಾಗಲಿ.’
ಹೀಗೆಂದ ಒಡಿಸ್ಯೂಸ್ ಮುಂದಡಿಯನಿಟ್ಟನು.
ನೀಷೆಯಂಥ ಮಹಾನ್ ತತ್ವಜ್ಞಾನಿ ಈ ವಿದಾಯ ಸನ್ನಿವೇಶವನ್ನು ದಾರ್ಶನಿಕ ರೂಪಕವಾಗಿ ಓದುತ್ತಿರುವಾಗ, ನಾವು ಬದುಕಿನಿಂದ ಅಥವಾ ಯಾವುದೇ ಗಾಢ ಸನ್ನಿವೇಶದಿಂದ ಹೇಗೆ ನಿರ್ಗಮಿಸಬೇಕೆಂಬುದರ ಬಗ್ಗೆ ಪ್ರಬುದ್ಧ ಜೀವನದರ್ಶನ ಹೊರಹೊಮ್ಮುತ್ತದೆ:
‘ಒಡಿಸ್ಯೂಸ್ ಒಂದು ಘಟ್ಟದಲ್ಲಿ ರಾಜಕುಮಾರಿ ನೌಸಿಕಾಳನ್ನು ಬಿಟ್ಟು ಅರಮನೆಯಿಂದ ಹೊರಡುತ್ತಾನಲ್ಲಾ, ಹಾಗೆ ಬದುಕಿನಿಂದ ತೆರಳಬೇಕು- ಶುಭ ಕೋರುತ್ತಾ...ಬದುಕಿನ ಬಗೆಗಿನ ತೀವ್ರ ಮೋಹವನ್ನು ತೊರೆಯುತ್ತಾ.’
ನನ್ನ ಮಟ್ಟಿಗಂತೂ, ಯಾವುದಕ್ಕಾದರೂ, ಯಾರಿಗಾದರೂ ವಿದಾಯ ಹೇಳಲೇಬೇಕಾಗಿ ಬಂದಾಗ ಓಡಿಸ್ಯೂಸನ ವಿದಾಯವನ್ನು ರೂಪಕವಾಗಿ ಓದುತ್ತಾ ನೀಷೆ ಕಂಡುಕೊಂಡ ಸತ್ಯ ಯಾವುದೇ ಬಗೆಯ ವಿದಾಯದ ವಿಷಣ್ಣಭಾವದಿಂದ ತಕ್ಷಣ ಹೊರಬರಲು ನನಗೆ ನೆರವಾಗುತ್ತಿರುತ್ತದೆ.
ಸಾಹಿತ್ಯವನ್ನು ಅರಿಯುವವರನ್ನು ಕೈಹಿಡಿದು ನಡೆಸುವ ರೂಪಕಗಳ ಹಾಗೆಯೇ ಸಿದ್ಧರಾಮಯ್ಯನವರಂಥ ಸೂಕ್ಷ್ಮ ರಾಜಕಾರಣಿಯನ್ನು ‘ಇವ ನಮ್ಮವ’ ಎಂಬ ಆದರ್ಶ ರೂಪಕ ಸದಾ ಪೊರೆಯುತ್ತಾ ಬಂದಿದೆ ಎಂದು ನಂಬಲು ನನಗೆ ಇಷ್ಟ.
ಕೊನೆಯದಾಗಿ, ಈ ಅಂಕಣದ ತಲೆಬರಹಕ್ಕೆ ಪ್ರೇರಣೆಯಾದ ‘ಕೈ ಹಿಡಿದು ನಡೆಸೆನ್ನನು’ ರೂಪಕ ಬಿಎಂಶ್ರೀಯವರ ಸೃಷ್ಟಿ. ಜಾನ್ ಹೆನ್ರಿ ನ್ಯೂಮನ್ ಪದ್ಯದಲ್ಲಿ Lead kindly light/ amid the encircling gloom/ lead thou me on’ ಎಂಬ ಸಾಲಿನ ಆಶಯ ಬಿಎಂಶ್ರೀಯವರಲ್ಲಿ ‘ಕೈ ಹಿಡಿದು ನಡೆಸೆನ್ನನು’ ಎಂಬ ರೂಪಕವಾಯಿತು…
Comments
22 Comments
| ರಾಜಪ್ಪ ದಳವಾಯಿ
ನಿನ್ನೆಯ ಪ್ರಜಾವಾಣಿ ಲೇಖನ, ಇಂದಿನ ವಿದಾಯ ಎರಡೂ ಚೆನ್ನಾಗಿವೆ. ಸಮಾಜವಾದಿಯೊಬ್ಬರ ನಡೆಯಲ್ಲಿ ಕೊಡುವುದರಲ್ಲೂ ಸುಖವಿದೆ. ಕಿತ್ತುಕೊಂಡು ಅಭ್ಯಾಸವಿರದ ಜನರ ನಡೆ ಹೀಗೇ ಇರುತ್ತದೆ. ಅರಸು, ದೇವೇಗೌಡ, ಯಡಿಯೂರಪ್ಪ, ಬಂಗಾರಪ್ಪ ಮುಂತಾದವರ ವಿದಾಯಕ್ಕಿಂತ ಹೆಚ್ಚು ರಾಜಕೀಯ , ಸಂಸದೀಯ ತಿಳುವಳಿಕೆಯ ವಿದಾಯ ಇದು.
| Dr. Kavyashree H.
Thank you for writing this beautiful piece on our (ex) Chief Minister. A rare visionary and a truly kind soul who can never be replaced. It truly feels like the end of an era, and as you beautifully noted what an exit it was! As they step down and walk away from the throne, they leave behind a blueprint of what leadership should be. ಇನ್ನು ಮುಂದೆ ಇಂಥ ಮುಖ್ಯಮಂತ್ರಿಯೊಬ್ಬರನ್ನು ಪಡೆಯುವುದು ಕಾಣುವುದು ಎರಡೂ ಅಸಾಧ್ಯ.
| B L Venu
ಕೊನೆಯ ದಿನಗಳಲ್ಲಿ ಸಿದ್ದರಾಮಯ್ಯನವರು ನಡೆದು ಕೊಳ್ಳುತ್ತಿರುವ ಮಾದರಿ ಅನುಕರಣೀಯ. ಅವರಿಲ್ಲದೆ ಕೈ ಕಂಗೆಡಬಹುದು. ಮಂಕಾಗಲೂಬಹುದು. ಕಾಂಗ್ರೆಸ್ ನ ಅಚ್ಚೇ ದಿನ್ ಗಳು ಮುಗಿದವೇನೋ ಎಂಬ ಭಯವೂ ಕಾಡುತ್ತದೆ. ಕಾಲಾಯ ತಸ್ಮೈ ನಮಃ!
| ಮಂಜುನಾಥ್ ಸಿ ನೆಟ್ಕಲ್
ಸಿದ್ದರಾಮಯ್ಯ ನವರ ವಿದಾಯದ ದಿನ ಅಭಿಮಾನಿಗಳ ಕಣ್ಣಂಚಿನಲ್ಲಿ ಅಸಲಿ ದುಃಖದ ಕಣ್ಣೀರು ಚಿಮ್ಮಿಸಿದ್ದು ಯಾರಿಗೂ ಆಶ್ಚರ್ಯ ಅನಿಸಲಿಲ್ಲ ಏಕೆಂದರೆ ಅವರು ರಾಜಕಾರಣದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಬಡವರ ಪರವಾದ ಯೋಜನೆಯನ್ನು ಜಾರಿಗೆ ತಂದಿದ್ದರು... ಎಲ್ಲರೊಳಗೊಂದಾಗಿ ಬೆರೆಯುತ್ತಿದ್ದರು...ಅವರ ಮಾತುಗಳನ್ನು ಕೇಳಲೆಂದೇ ಜನ ಎಲ್ಲಾ ದಿಕ್ಕುಗಳಿಂದ ಒಗ್ಗೂಡುತ್ತಿದ್ದರು... ಹಳ್ಳಿಯ ಸಹಜ ಒರಟು ಭಾಷೆಯಲ್ಲಿ ಆತ್ಮೀಯ ಭಾವ ತುಂಬಿರುತ್ತಿತ್ತು... ಕೊಂಚ ತಮಾಷೆಯ ಜೊತೆಜೊತೆಗೆ ಗಂಭೀರ ವಿಚಾರಗಳನ್ನು ವಿವರಿಸುತ್ತಿದ್ದರು... ಹೀಗೆ ಇನ್ನೂ ಅನೇಕ ಅವರ ಜನಪರ ನಿಲುವುಗಳಿಂದಾಗಿ ಅವರ ನಿರ್ಗಮನ ಬುದ್ಧನ ಮಹಾ ನಿಷ್ಕ್ರಮಣ ದಂತೆ ನನಗೆ ಭಾಸವಾಯಿತು
| ಗುರು ಜಗಳೂರು
ಸರ್ ,ನಿಮ್ಮ ಲೇಖನ ಪ್ರಜಾವಾಣಿಯಲ್ಲಿ ಓದಿದ್ದೇನೆ.ಆದರೆ ನನ್ನ ನಿಲುವು ಕೊಂಚ ಭಿನ್ನವಾಗಿದೆ.ಬಿಜೆಪಿಯ ಅತ್ಯಂತ ಕೆಟ್ಟ ಆಡಳಿತ 2023 ಕ್ಕೆ ಅಂತ್ಯವಾದ ಮೇಲೆ ಸಿದ್ದರಾಮಯ್ಯನವರ ಮೇಲೆ ಬಹಳ ನೀರಿಕ್ಷೆಗಳಿದ್ದವು.ಶಿಕ್ಷಣ ಕ್ಷೇತ್ರ,kpsc ಭ್ರಷ್ಟಾಚಾರ,ಮೀಸಲಾತಿ ಹಂಚಿಕೆ ,ಕಾಂತರಾಜ್ ವರದಿ ಸ್ವೀಕರಿಸುವುದು ಇತ್ಯಾದಿ.ಆದರೆ ಹಳೆಯ ಖದರ್ ಸಿದ್ದರಾಮಯ್ಯನವರಿಗೆ ಈಗ ಇರಲಿಲ್ಲ.ಕೊಂಚ ಬಳಲಿದಂತೆ ಕಾಣುತ್ತಿದ್ದರು.ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ಕೆಲ ಘಟನೆಗಳು ಅವರಿಗೆ ಕೆಟ್ಟ ಹೆಸರನ್ನು ತಂದಿದ್ದನ್ನು ಮರೆಯುವ ಹಾಗಿಲ್ಲ.ಕಾಂತರಾಜ್ ವರದಿ ಜಾರಿ ಮಾಡಲು ,ಕ್ಯಾಬಿನೆಟ್ ರೀಶಫಲ್ ಮಾಡಲು ಅವರಿಗೆ ಸಾಧ್ಯವೇ ಆಗಲಿಲ್ಲ.ಕಳೆದ 6 ತಿಂಗಳಿನಿಂದ ಅವರನ್ನು ಇಳಿಸಲು ಡಿಕೆ ಶಿವಕುಮಾರರ ಮಾಡಿದ ಪ್ರಯತ್ನಗಳು ಗುಟ್ಟಾಗಿ ಏನು ಇರಲಿಲ್ಲ.ರಾಹುಲ್ ಕರೆದು ರಾಜೀನಾಮೆ ಕೇಳುವ ಮುನ್ನವೇ ಡಿಸಂಬರ್ ನಲ್ಲಿ ಅವರು ರಾಜೀನಾಮೆ ಕೊಟ್ಟಿದ್ದರೆ ತೂಕ ಇನ್ನೂ ಹೆಚ್ಚಾಗುತ್ತಿತ್ತು. ಗ್ಯಾರಂಟಿಗಳನ್ನು ಸಾರ್ವತ್ರಿಕವಾಗಿ ನೀಡುವ ಬದಲು ಮಾನದಂಡ ರೂಪಿಸಿದ್ದರೆ ಚೆನ್ನ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
| Somashankara N
ನನ್ನ ಅಲ್ಪ ತಿಳುವಳಿಕೆಯ ಮಟ್ಟಿಗೆ ಶ್ರೀ ಸಿದ್ದರಾಮಯ್ಯರವರು ವಾಸ್ತವ ಮತ್ತು ಅತಿ ವಾಸ್ತವದ ಹೊಯ್ದಾಟದ ನಡುವೆ ರಾಜಕೀಯವಾಗಿ ಕನಸುಗಳನ್ನು ಹೆಣೆಯಲು ನಿರಂತರವಾಗಿ ಪ್ರಯತ್ನಿಸಿದವರು. ಅವರು ಸಾರ್ವಜನಿಕವಾಗಿ ಕೆಲವೊಮ್ಮೆ ತೋರಿಸುತ್ತಿದ್ದ ಸಿಟ್ಟು ಕೋಪ ಮತ್ತು ಅಸಹನೀಯತೆಯ ಪ್ರತಿಕ್ರಿಯೆಗಳು ನನ್ನ ಕಣ್ಣಿಗೆ ಕಾವ್ಯಾತ್ಮಕವಾಗಿ ಸತ್ಯಕ್ಕೆ ಒರೆಗಚ್ಚಿದ ಸಂಗತಿಗಳಾಗಿ ಕಾಣಿಸಿವೆ. ಬಹುಶಃ ಈ ನಿರಂತರವಾದ ರಾಜಕೀಯ ಹೋರಾಟದ ಫಲ ಕವಿಗೆ ಕಾವ್ಯದ ಉತ್ಕೃಷ್ಟ ಫಲ ಇದ್ದಂತೆ. ಶ್ರೀಯುತರು 'ವಿದಾಯ' ಎಂಬುದಕ್ಕಿಂತ ಒಬ್ಬ ಉತ್ತಮ ಸಂಸ್ಕಾರಯುಕ್ತ ರಾಜಕಾರಣಿಯ "ಬಿಡುಗಡೆ" ಒಬ್ಬ ಜಾನಪದೀಯ ಗುಣವುಳ್ಳ ಕವಿಯ ಬಿಡುಗಡೆ ಎಂದೇ ನಾನು ಭಾವಿಸುತ್ತೇನೆ. ಅವರು ಹಾಕಿಕೊಟ್ಟ ಈ ಮೌಲ್ಯಗಳ ತಳಹದಿ ಮುಂದಿನ ತಲೆಮಾರಿಗೂ ಸೂಕ್ತ ವೇದಿಕೆ ಮತ್ತು ಅನುಕರಣೀಯ. ನಿಮ್ಮ ಲೇಖನವು ಅವರನ್ನು ಮತ್ತಷ್ಟು ಅರ್ಥೈಸಿಕೊಳ್ಳಲು ಅವರ ಸದಾಶಯದ ಕಣ್ಣುಗಳಿಂದ ಮುಂದಿನ ರಾಜಕೀಯ ಭವಿಷ್ಯವನ್ನು ನೋಡಲು ಅನುವು ಮಾಡಿಕೊಟ್ಟಿದೆ ಸರ್... thanks for this wonderful and thoughtful essay sir...
| Dr. Sanganagouda
ಮುಳುಗುವ ದೋಣಿಯಲ್ಲಿ ಸಣ್ಣ ಇಲಿಯೂ ಕೂಡ ಇರಬಯಸುವುದಿಲ್ಲ. ಆದರೆ ಸಿದ್ದರಾಮಯ್ಯನವರು ನಾನು ಇರುತ್ತೇನೆ. ಆಕ್ಟಿವ್ ಆಗಿ ಇರುತ್ತೇನೆ ಅಂದಿದ್ದು ಹೆಮ್ಮೆ ಅನಿಸಿತು. ಒಂದು ರೀತಿ ಕರ್ನಾಟಕದ ಬಾಹುಬಲಿ ಆಗಿಬಿಟ್ಟರು
| ಡಾ. ಬಸಯ್ಯ ಸ್ವಾಮಿ
ನಮಸ್ತೆ ಸರ್ ನಿಮ್ಮ ‘ಸಿದ್ದರಾಮಯ್ಯ ಸೇಸ್ ಗುಡ್‌ಬೈ’ ಲೇಖನವು ಕೇವಲ ಒಬ್ಬ ರಾಜಕಾರಣಿಯ ನಿವೃತ್ತಿಯ ಬಗೆಗಿನ ಬರಹವಾಗಿರದೆ, ಸಮಕಾಲೀನ ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಚರಿತ್ರೆಯ ಮಹತ್ವದ ದಸ್ತಾವೇಜಿನಂತೆ ಮೂಡಿಬಂದಿದೆ. ನಿಮ್ಮ ಬರಹದ ಓದು ನನ್ನಲ್ಲಿ ಹಲವು ಆಳವಾದ ಆಲೋಚನೆಗಳನ್ನು ಜಾಗೃತಗೊಳಿಸಿತು. ಸಿದ್ದರಾಮಯ್ಯನವರೆಂದರೆ ಕೇವಲ ಅಧಿಕಾರ ರಾಜಕಾರಣದ ಮುಖವಲ್ಲ; ಬದಲಿಗೆ ಅವರು ಲೋಹಿಯಾ ಜಗತ್ತಿನ ಸಮಾಜವಾದಿ ಹಿನ್ನೆಲೆಯಿಂದ ಬಂದು, ಶೋಷಿತ ಮತ್ತು ಹಿಂದುಳಿದ ವರ್ಗಗಳ ಧ್ವನಿಯಾಗಿ ನಿಂತ ಸಾಂಸ್ಕೃತಿಕ ಪ್ರತೀಕ. ಇಂದಿನ ಧ್ರುವೀಕೃತ ರಾಜಕಾರಣದ ಕಾಲಘಟ್ಟದಲ್ಲಿ, ತತ್ವ ಸಿದ್ಧಾಂತಗಳಿಗಿಂತ ವೈಯಕ್ತಿಕ ಲಾಭಗಳೇ ಪ್ರಧಾನವಾಗುತ್ತಿರುವಾಗ, ಸಿದ್ದರಾಮಯ್ಯನವರ ವೈಚಾರಿಕ ಬದ್ಧತೆ ಮತ್ತು ನೇರ ನಡೆ-ನುಡಿಗಳನ್ನು ನೀವು ಹಿಡಿದಿಟ್ಟಿರುವ ಕ್ರಮ ಶ್ಲಾಘನೀಯ. ಒಬ್ಬ ಸಂವೇದನಾಶೀಲ ಬರಹಗಾರರಾಗಿ ಅವರ ಆಡಳಿತಾತ್ಮಕ ನಿರ್ಧಾರಗಳ ಹಿಂದಿದ್ದ ಮಾನವೀಯ ಮತ್ತು ವೈಚಾರಿಕ ಮೌಲ್ಯಗಳನ್ನು ನೀವು ವಿಶ್ಲೇಷಿಸಿರುವುದು, ಇಂದಿನ ತಲೆಮಾರಿನ ಸಂಶೋಧಕರು ಹಾಗೂ ಸಾಹಿತ್ಯಾಸಕ್ತರು ಗಮನಿಸಬೇಕಾದ ಸಂಗತಿಯಾಗಿದೆ. ಕರ್ನಾಟಕದ ಸಾಮಾಜಿಕ ನ್ಯಾಯದ ಪರಂಪರೆಯಲ್ಲಿ ದೇವರಾಜ ಅರಸು ಅವರ ನಂತರದ ಅತಿ ದೊಡ್ಡ ಧ್ವನಿಯನ್ನು ಅತ್ಯಂತ ವಸ್ತುನಿಷ್ಠವಾಗಿ ಕಟ್ಟಿಕೊಟ್ಟ ನಿಮ್ಮ ಲೇಖನಿಗೊಂದು ಗೌರವಪೂರ್ವಕ ವಂದನೆಗಳು. - ಡಾ. ಬಸಯ್ಯ ಸ್ವಾಮಿ
| Pushpa HL
ಮೊನ್ನೆಯ ಪ್ರಜಾವಾಣಿಯ ಸಿದ್ಧರಾಮಯ್ಯನವರ ವಿದಾಯದ ಬಗ್ಗೆ ಬರೆ ನಿಮ್ಮ ಚೆನ್ನಾಗಿತ್ತು. ಈ ಲೇಖನವೂ ಸಹ ಒಡೆಸ್ಸಿಯ ವಿದಾಯದ ರೂಪಕದ ಹಿನ್ನೆಲೆಯಲ್ಲಿ ಹೇಳಬೇಕಾದ್ದನ್ನು ಸರಿಯಾಗಿಯೇ ಹೇಳುತ್ತದೆ. ಆಗಮನ, ಬೆನ್ನ ಹಿಂದಿನ ಪಿತೂರಿಗಳು, ರಾಜೀನಾಮೆ, ವಿದಾಯ- ಇವುಗಳೆಲ್ಲಾ ಇತ್ತೀಚೆಗಿನ ರಾಜಕಾರಣದ ಸಹಜ ನಡೆಗಳಾಗಿವೆ. ಆದರೆ ಸಿದ್ಧರಾಮಯ್ಯನವರ ವಿದಾಯ ಭಾವುಕವಾಗಿ ಕಾಡಿದ್ದು ನಿಜ, ಅವರು ಇವ ನಮ್ಮವ, ಇವ ನಮ್ಮವ ಅನಿಸಿಕೊಂಡದ್ದೂ ನಿಜ. ಇದೊಂದು ವೈಚಾರಿಕ ರಾಜಕಾರಣದ ಅಂತ್ಯವೂ ಹೌದು.
| Guruprasad Kantalagere
ವಿದಾಯ ಲೇಖನ ಅಷ್ಟೇ ಭಾವುಕವಾಗಿದೆ ಸರ್.. ಆ ದಿನ ನಮ್ಮೂರಲ್ಲಿ ಚಂದ್ರನ ನೋಡುತ್ತ ಕಲೆ, ಸಾಹಿತ್ಯ, ರಾಜಕರಣ ಏನೇನೊ ಮೆಲುಕಿದ್ದು ಚಾರಿತ್ರಿಕವೆ. ಅರ್ಥಪೂರ್ಣ..
| Shamarao
ಸುಂದರ ಬರೆಹ. ಸಿದ್ಧರಾಮಯ್ಯನವರ ಪ್ರಬುದ್ಧತೆಯನ್ನು ಚೆನ್ನಾಗಿ ಗುರುತಿಸಿದ್ದೀರಿ
| Ramachandra Naik
ಒಂದು ಯುಗಾಂತ್ಯ, ಬರೀ ಕರ್ನಾಟಕವಲ್ಲ, ಭಾರತದ ರಾಕಾರಣಕ್ಕೂ ಸಹ, ಎಲ್ಲಾ ಕಾಂಗ್ರೆಸ್ಸಿಗರಂತೆ ಟ್ರೋಲ್ ಗೆ ಒಳಗಾದರೂ ಅವನ್ನೆಲ್ಲಾ ಮೀರಿ ಬೆಳೆವ image ಇದ್ದ ವ್ಯಕ್ತಿ, ಹಳೆಯ ರಾಜಕಾರಣದ ಒಂದು ತುಂಡು ರಾಜ್ಯದ ಮಟ್ಟಿಗೆ ನೇಪಥ್ಯಕ್ಕೆ ಸರಿದಿದೆ, ಕಾಲಾಯ ತಸ್ಮೈ ನಮಹಃ🙏🏻
| Dr. Japhet
Excellent article. Proud of you
| Dr.Rajaram
Nice article on Siddaramaiah
| AD
What a wonderful article!
| TSG
'ಸಿದ್ಧರಾಮಯ್ಯ: ಇವ ನಮ್ಮವ' ಪ್ರಜಾವಾಣಿಯಲ್ಲಿ ಅರ್ಥಪೂರ್ಣ ಲೇಖನ.
| Umesh
🌷🌷🌷🌷🍀
| Vijaya
ಬಹಳ ಅರ್ಥಪೂರ್ಣ ಲೇಖನ. ಮನಸ್ಸು ಆರ್ದ್ರವಾಯಿತು. ಕಟೆದು ಕೆತ್ತಿ ನಿಲ್ಲಿಸಿದ ಶಿಲ್ಪ ಚಿತ್ತಾಕರ್ಷಕ. ಧನ್ಯವಾದ.
| ಡಾ. ನಿರಂಜನ ಮೂರ್ತಿ ಬಿ ಎಂ
ಕರ್ನಾಟಕ ಕಂಡ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಗಳಾಗಿದ್ದ, ಎಲ್ಲರಿಗೂ ಇವ ನಮ್ಮವರೆನಿಸಿದ, ಅಪರೂಪದ ರಾಜಕಾರಣಿ ಸಿದ್ಧರಾಮಯ್ಯನವರ ವಾಸ್ತವ ವ್ಯಕ್ತಿತ್ವದ ದರ್ಶನ! ತುಂಬಾ ಚೆನ್ನಾಗಿ ಮೂಡಿಬಂದಿದೆ.
| K j suresh
ಸಿದ್ದರಾಮಯ್ಯ ಅವರ ಕುರಿತಂತೆ ಅವರ ವಿರೋಧ ಪಕ್ಷದ ನಾಯಕರಾಗಿಯೆ ಹೆಚ್ಚು ಇಷ್ಟ. ಸಾಧ್ಯವಾದರೆ ಸಾಮ್ರಾಟ ಅಶೋಕ ಅವರೊಂದಿಗೆ ಹೋಲಿಸಿ.
| ಚಂದ್ರಶೇಖರ್ ತಾಳ್ಯ
ಬೆಚ್ಚನೆಯ ಬರಹ. ನಿಜ ನಾಯಕನಿಗೆ ಸಲ್ಲಬೇಕಾದ ಗೌರವ.
| D Gopalakris Dyarangula
Authentic & apt description the visionary cm_..who can NEVER be replaced while recording the history of Karnataka politics. I am so happy & proud that my Guru & his Guru in our Lives was Prof M D NanjundaSwamy in_ we were fortunate to have been moulded by himin SYS_ samaja adi Yuvajana Sabha of which he was the Chieftain in Karnataka _ the then Mysore State in 1973 circa... Very nice article indeed
Add Comment