‘ಸುಳ್ಳು’ ಎಂಬುದರ ಸತ್ಯ ರೂಪಗಳು!

ಇಪ್ಪತ್ತು ವರ್ಷಗಳ ಕೆಳಗೆ ಬರೆಯಲು ಶುರು ಮಾಡಿದ್ದ ’ಆರ್ಟ್ ಆಫ್ ಲೈಯಿಂಗ್’ (೨೦೧೫-೧೦) ಎಂಬ ನನ್ನದೊಂದು ಸಣ್ಣ ಕತೆಯ ಮೊದಲ ಸಾಲು ಇದು: 

‘ಕಳೆದ ಐದಾರು ವರ್ಷಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾದ ಮೇಲೆ ಜನ ಸುಳ್ಳು ಹೇಳುವುದು ಸುಮಾರು ಐವತ್ತು ಪರ್ಸೆಂಟ್ ಜಾಸ್ತಿಯಾಗಿದೆ...’

ನಮ್ಮ ಮಾತುಗಳನ್ನು ನಾವೇ ಕೋಟ್ ಮಾಡಿಕೊಳ್ಳುವುದು ಅಶ್ಲೀಲ, ನಿಜ! ಆದರೆ ಇಪ್ಪತ್ತು ವರ್ಷಗಳ ಕೆಳಗೆ ಈ ಅಂಕಣಕಾರನಿಗೆ ಹೊಳೆದ ಆ ಸತ್ಯಕ್ಕೆ ನಂತರದ ದಶಕಗಳಲ್ಲಿ ಇನ್ನಷ್ಟು ಹೊಸ ಸತ್ಯಗಳು ಸೇರಿಕೊಂಡಿರುವುದರಿಂದ ಆ ವಸ್ತು ಮತ್ತೆ ಬೆಳೆಯತೊಡಗಿದೆ. ಈಗ ಮೊಬೈಲ್ ಹಿಡಿದ ಮೇಲೆ ಸುಳ್ಳು ಹೇಳುವುದು ಕಡ್ಡಾಯವಾಗಿರುವಂತಿದೆ. ಮೊಬೈಲ್ ಎಂಬ ಸಾಧನವೇ ‘ಏನೋ ಒಂದು ಹೇಳು’ ಎಂದು ಸೂಚಿಸುವಂತೆ ಕಾಣುತ್ತದೆ. ನೂರು ಮೈಲಿ ದೂರ ಇದ್ದರೂ ‘ಇಲ್ಲೇ ಇದೀನಿ ಸಾರ್’ ಎನ್ನುವುದು; ‘ಟೂ ಮಿನಿಟ್‌ನಲ್ಲಿ ಬರ್ತಿನಿ’ ಎಂದವರು ಎರಡು ದಿನವಾದರೂ ಬರದೇ ಇರುವುದು ಈಗ ಕಾಮನ್!

ಹಿಂದೊಮ್ಮೆ ಯಾವುದೋ ಲೇಖನ ಬರೆಯಲು ಬಳಸಿದ ಆಸ್ತ್ರೇಲಿಯಾದ ಜನಪ್ರಿಯ ಮನೋವಿಶ್ಲೇಷಕ ಜೋಸೆಫ್ ಡನ್ ಬರೆದ ‘ಪೆಯ್ನ್‌ಫುಲ್ ಪೀಪಲ್' ಪುಸ್ತಕದ ಕೆಲವು ಗ್ರಹಿಕೆಗಳನ್ನು ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮತ್ತೆ ಕೊಡಬಹುದೆನ್ನಿಸುತ್ತದೆ. ಇಪ್ಪತ್ತು ವರ್ಷಗಳ ಕೆಳಗೆ ಆ ಪುಸ್ತಕ ಓದಿದಾಗ ನಾವು ನಿತ್ಯ ಎದುರಾಗುವ ಜನ ಹಾಗೂ ಈ ಜನರು ಆರಿಸಿದ ನಾಯಕರು ಉಸಿರಾಟದಷ್ಟೇ ಸಹಜವಾಗಿ ಹೇಳುವ ಸುಳ್ಳುಗಳ ಬಗ್ಗೆ ಸಾಕಷ್ಟು ಸ್ಪಷ್ಟನೆ ಸಿಕ್ಕಿತ್ತು. ಡನ್ ಪ್ರಕಾರ, ಸಾಮಾನ್ಯವಾಗಿ ನಾಲ್ಕು ಬಗೆಯ ಸುಳ್ಳುಗಳಿರುತ್ತವೆ. ಇಲ್ಲಿ ‘ಸುಳ್ಳು' ಎಂದರೆ ಅಸತ್ಯಗಳು, ತಪ್ಪು ಮಾಹಿತಿಗಳು, ನೀವು ನಂಬಲಾಗದ, ನಂಬಲಾರದ ಸಂಗತಿಗಳು ಎಂಬುದು ಡನ್ ವಿವರಣೆ.

ಡನ್ ಗುರುತಿಸುವ ನಾಲ್ಕು ಸುಳ್ಳುಗಳು ಇವು: ೧. ಬಿಳಿ ಸುಳ್ಳುಗಳು ೨. CRAP (ಕಾನ್ಫಿಡೆಂಟ್ ರ‍್ಯಾಶನಲೈಸೇಷನ್ ಅಂಡ್ ಪ್ರೊಜೆಕ್ಷನ್. ಅಂದರೆ ನಮ್ಮನ್ನು ನಾವು ಸರಿಯೆಂದು ನಂಬುವ, ನಮ್ಮ ತಪ್ಪುಗಳನ್ನು ಕೂಡ ಸರಿಯೆಂದು ನಂಬಿಸಿಕೊಂಡು ಬಿಂಬಿಸಿಕೊಳ್ಳುವ ನಮ್ಮ ಬುದ್ಧಿಯ ಆಟ.) ೩. ಕರಿ ಸುಳ್ಳುಗಳು ೪. ಭ್ರಾಂತಿಗಳು. 

ಈ ಪಟ್ಟಿಯಲ್ಲಿ ಕೊನೆಯಲ್ಲಿರುವ ‘ಭ್ರಾಂತಿಗಳು' ನಿಜವಾದ ಅರ್ಥದಲ್ಲಿ ಸುಳ್ಳುಗಳಲ್ಲ. ಯಾಕೆಂದರೆ, ಇವನ್ನು ಹೇಳುತ್ತಿರುವ ವ್ಯಕ್ತಿಗೆ ಅವೆಲ್ಲ ನಿಜವೆಂಬುದು ಖಾತ್ರಿಯಾಗಿಬಿಟ್ಟಿದೆ. ಉದಾಹರಣೆಗೆ, ಈತ ಹರಕಲು ಬಟ್ಟೆಯಲ್ಲಿದ್ದಾನೆ. ದೇವರು ನನ್ನನ್ನು ಯಾವುದೋ ಒಂದು ಕೆಲಸಕ್ಕೆ ನೇಮಿಸಿದ್ದಾನೆ ಎಂದು ನಂಬಿರುವ ಈತ ಆ ಕೆಲಸದ ಬಗ್ಗೆ ಎಲ್ಲೆಡೆ ಹೇಳುತ್ತಾ ಓಡಾಡುತ್ತಿದ್ದಾನೆ. ಆ ಸುಳ್ಳನ್ನು ಅವನು ನಂಬಿರುವಂತೆಯೂ ಕಾಣುತ್ತದೆ. ಡನ್ ಪ್ರಕಾರ, ಇದು ಮತಿಭ್ರಾಂತಿಯ ಕೇಸ್. ಧರ್ಮ, ದೇವರು ಎಲ್ಲವೂ ಸಂದೇಹಾಸ್ಪದವಾಗಿರುವ ಈ ಕಾಲದ ‘ಧರ್ಮರಕ್ಷಕ’ರಲ್ಲಿ ಕೆಲವರದಂತೂ ಇದೇ ಕೇಸ್. 

ಡನ್ ಪ್ರಕಾರ, ‘ಕರಿ ಸುಳ್ಳು’ ಹೀಗಿರುತ್ತದೆ: ಉದಾಹರಣೆಗೆ, ಯಾರೋ ಬಾಗಿಲು ಬಡಿಯುತ್ತಾರೆ. ನೀವು ಬಾಗಿಲು ತೆರೆದರೆ, ‘ಚಂದ್ರು ಇದಾನಾ?' ಎನ್ನುತ್ತಾನೆ ಆತ. ‘ಇಲ್ಲ, ಚಂದ್ರು ಅನ್ನೋರು ಯಾರೂ ಇಲ್ಲವಲ್ಲ?' ಎಂದು ನಿಮ್ಮ ಉತ್ತರ. ‘ತಪ್ಪಿ ಬೇರೆ ಯಾವುದೋ ಮನೆಗೆ ಬಂದಿದೀನಿ' ಎಂದು ಗೊಣಗುತ್ತಾ ಆತ ಹೊರಡುತ್ತಾನೆ. ಆತ ಬಂದಿರುವುದೇ ನಿಮಗೆ ಟೋಪಿ ಹಾಕಿ ನಿಮ್ಮ ಮನೆಯ ವಿಸಿಆರ್ ಕದಿಯಲು. ಆದರೆ ಯಾಕೋ ಗಿಟ್ಟಲಿಲ್ಲ ಎಂದು ಆತ ಹೊರಡುತ್ತಾನೆ.

ಇನ್ನು ಡನ್ ಹೇಳುವ ‘ಕ್ರಾಪ್’ ಅಥವಾ ‘ಕಾನ್ಫಿಡೆಂಟ್ ರ‍್ಯಾಶನಲೈಷನ್ ಅಂಡ್ ಪ್ರೊಜೆಕ್ಷನ್' ಮಾದರಿಯ ಸುಳ್ಳುಗಾರರಲ್ಲಿ ವ್ಯಕ್ತಿ, ಅದರಲ್ಲೂ ಸಾಮಾನ್ಯವಾಗಿ ಗಂಡು, ತನಗೆ ಬೇಕಾದ ರೀತಿಯ ಹಾಗೂ ತನಗೆ ಅನುಕೂಲವಾದ ಸತ್ಯ ಹೇಳುತ್ತಿರುತ್ತಾನೆ. ಜೊತೆಗೆ, ಆ ‘ಸತ್ಯ'ವನ್ನು ಒಂದು ರೀತಿಯಲ್ಲಿ ನಂಬಿಯೂ ಇರುತ್ತಾನೆ. ಎಲ್ಲರೂ ಒಪ್ಪುವಂತೆ ಅತಿಯಾದ ಆತ್ಮವಿಶ್ವಾಸದಿಂದ ಆ ‘ಸತ್ಯ'ವನ್ನು ಹೇಳಲು ಈ ಥರದ ನಂಬಿಕೆ ಆತನಿಗೆ ಅಗತ್ಯ. ಈ ಕೆಲಸವನ್ನು ಧಾರ್ಮಿಕ ನಾಯಕರು, ವೃತ್ತಿ ರಾಜಕಾರಣಿಗಳು ಅತ್ಯಂತ ‘ದಕ್ಷ'ವಾಗಿ ಮಾಡುತ್ತಿರುತ್ತಾರೆ. ಈ ‘ಕ್ರಾಪ್' ಆಸಾಮಿಗಳು ತಮ್ಮ ಸರಿತನದಲ್ಲಿ ಹಾಗೂ ಪಾವಿತ್ರ‍್ಯದಲ್ಲಿ ಅಪಾರ ನಂಬಿಕೆಯಿಟ್ಟುಕೊಂಡಿರುತ್ತಾರೆ. ಉಳಿದವರೆಲ್ಲಾ ಕೆಟ್ಟವರು, ತಪ್ಪು ಹಾದಿಯಲ್ಲಿರುವವರು, ಪಾಪಿಗಳು ಎಂಬುದು ಅವರ ನಂಬಿಕೆ. ಆದರೆ ಈ ಕ್ರಾಪ್‌ಗಳ ಸುಳ್ಳು ಒಂದಲ್ಲ ಒಂದು ದಿನ ಬೇರೆಯವರಿಗೆ ಗೊತ್ತಾಗುವ ಸಾಧ್ಯತೆಯೂ ಇರುತ್ತದೆ. ಈ ಸುಳ್ಳು ಗೊತ್ತಾದಾಗ, ಆ ಸುಳ್ಳಿಗೆ ಬಲಿಯಾದವರು ಮೆಲ್ಲಗೆ ಅವರಿಂದ ಬಿಡಿಸಿಕೊಳ್ಳಲೆತ್ನಿಸುತ್ತಾರೆ. ಆದರೆ ಭಾರತ ದೇಶವನ್ನು ನೋಡಿದರೆ ಇಲ್ಲಿ ಸುಳ್ಳಿಗೆ ಬಲಿಯಾದವರು ಮತ್ತೆ ಆ ಸುಳ್ಳರಿಗೇ ಅಂಟಿಕೊಳ್ಳುತ್ತಿರುವಂತೆ ಕಾಣುತ್ತದೆ. ಇದ್ಯಾವ ‘ಸಿಂಡ್ರೋಮ್’ ಎನ್ನುವುದನ್ನು ಸಿಗ್ಮಂಡ್ ಫ್ರಾಯ್ಡಿನಲ್ಲೇ ಹುಡುಕಬೇಕೇನೋ! ಸಮಕಾಲೀನ ಭಾರತ ಕುರಿತ ಈ ಸಂಶೋಧನೆಯನ್ನು ಮನೋವಿಶ್ಲೇಷಕ ಡನ್‌ಗೆ ಹೇಳೋಣವೆಂದು ವಿಳಾಸ ಹುಡುಕುತ್ತಿರುವೆ. 

ಇನ್ನು ‘ಬಿಳಿಸುಳ್ಳು' ಹೀಗಿರುತ್ತದೆ: 

ನಿಮಗೆ ಯಾರೋ ಫೋನ್ ಮಾಡುತ್ತಾರೆ. ಸಂಜೆ ಅವರ ಜೊತೆ ಪಾರ್ಟಿಗೆ ಬರಬೇಕು; ಅಥವಾ ಟೂರಿಗೆ ಹೊರಡಬೇಕು... ಹೀಗೆ ಏನೋ ಒಂದು ಕೋರಿಕೆ ಅವರದು. ಆದರೆ ನಿಮಗೆ ಅವರ ಜೊತೆ ಹೋಗಲು ಮನಸ್ಸಿಲ್ಲ. ಹೀಗಾಗಿ ‘ನನಗೆ ಬೇರೆ ಯಾವುದೋ ಕಾರ್ಯಕ್ರಮ ಇದೆ. ಇನ್ನೊಂದು ವಾರ ಬಿಡುವಿಲ್ಲ' ಎನ್ನುತ್ತೀರಿ. ಫೋನಿನ ಆ ಕಡೆಯಲ್ಲಿರುವ ವ್ಯಕ್ತಿಗೆ ಸ್ವಲ್ಪ ನೋವಾಗುತ್ತದೆ. ನೀವೂ ಕೂಡ ‘ಛೇ, ಬರೋಕೆ ಆಗ್ತಿಲ್ಲವಲ್ಲ' ಎನ್ನುವಂತೆ ನಿಟ್ಟುಸಿರಿಡುತ್ತಾ ಫೋನಿಡುತ್ತೀರಿ. ಇದು ಬಿಳಿ ಸುಳ್ಳು; ಯಾಕೆಂದರೆ, ಈ ಸುಳ್ಳು ಹೇಳಿದ್ದರ ಬಗ್ಗೆ ನಿಮಗೆ ಸ್ವಲ್ಪ ಪಾಪಪ್ರಜ್ಞೆ ಇದೆ. ಆದರೆ ಇದನ್ನು ಕೇಳಿಸಿಕೊಂಡ ವ್ಯಕ್ತಿಗೆ ಇದರಿಂದ ಹೆಚ್ಚು ನೋವಾದಂತಿಲ್ಲ. ಈ ರೀತಿಯ ಸುಳ್ಳು ಸಾಮಾನ್ಯವಾಗಿ ಎಲ್ಲರಿಗೂ ಹೊಳೆಯುತ್ತದೆ. ಹೇಳಿದವರಿಗೂ ಕೇಳಿಸಿಕೊಂಡವರಿಗೂ ಇದು ಸುಳ್ಳು ಎಂಬುದು ಗೊತ್ತಾಗುತ್ತದೆ. ‘ನಿನ್ನಂಥ ಕತ್ತೆಯ ಜೊತೆ ಈ ಸಂಜೆ ಕಳೆಯಲು ಇಷ್ಟವಿಲ್ಲ' ಎಂದು ಯಾರಿಂದಲಾದರೂ ಹೇಳಿಸಿಕೊಳ್ಳುವುದಕ್ಕಿಂತ, ‘ಬೇರೇನೋ ಕಾರ್ಯಕ್ರಮವಿದೆ' ಎಂದು ಹೇಳಿಸಿಕೊಳ್ಳುವುದು ಸಮಾಧಾನಕರ!

ಹಾಗಾದರೆ ಹಲ ಬಗೆಯ ಸುಳ್ಳುಗಳನ್ನು ಹೇಗೆ ನಿಭಾಯಿಸುವುದು? ಈ ಪ್ರಶ್ನೆಗೆ ಡನ್ ಮನೋವಿಶ್ಲೇಷಣೆಯ ಉತ್ತರ: ’ಬಿಳಿಸುಳ್ಳಿನ ಬಗ್ಗೆ ನಕ್ಕು ಸುಮ್ಮನಾಗಿ, ಯಾಕೆಂದರೆ ನಾವೆಲ್ಲ ಆಗಾಗ್ಗೆ ಈ ಥರದ ಸುಳ್ಳು ಹೇಳುತ್ತಲೇ ಇರುತ್ತೇವೆ. ಆದರೆ ಕರಿಸುಳ್ಳುಗಳ ಬಗ್ಗೆ ಮಾತ್ರ ಸಂದೇಹ ಇಟ್ಟುಕೊಂಡೇ ಇರಿ. ಈ ಸುಳ್ಳುಗಾರರ ಸುಳ್ಳುಗಳ ಬಗ್ಗೆ ಎಚ್ಚರವಾಗಿರಿ.'

’ಕ್ರಾಪ್’ಗಳ ಬಗ್ಗೆ ಡನ್ ಹೇಳುವ ಮಾತು: ‘ನಿಮ್ಮನ್ನು ಸದಾ ಕೆಳ ಮಟ್ಟದಲ್ಲೇ ಇರಿಸಲು, ನಿಮ್ಮ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಈ ಕ್ರಾಪ್‌ಗಳು ಹೇಳುವ ಸುಳ್ಳುಗಳನ್ನು ನೀವು ಕೇಳಿಸಿಕೊಳ್ಳುತ್ತಲೇ ಇದ್ದರೆ ನಿಮಗೆ ಅಪಾಯ ತಪ್ಪಿದ್ದಲ್ಲ. ಅವರ ಜೊತೆ ಹೇಗೋ ಸಂಭಾಳಿಸಿಕೊಳ್ಳಿ ಅಥವಾ ಅವರ ವರ್ತನೆಯನ್ನು ಬದಲಾಯಿಸಲು ಪ್ರಯತ್ನಿಸಿ ಅಥವಾ ಜಾಗ ಖಾಲಿಮಾಡಿ. ಅಂಥವರಿದ್ದರೆ, ನಾನಂತೂ ಜಾಗ ಖಾಲಿ ಮಾಡುವವನೇ.'

’ಇನ್ನು ಸುಳ್ಳು ಹೇಳುವ ಭ್ರಾಂತುಗಳ ವಿಚಾರದಲ್ಲಿ ನೀವೇ ಸ್ವತಃ ಏನನ್ನಾದರೂ ಮಾಡುವುದು ಕಷ್ಟ. ಆ ಭ್ರಾಂತುಗಳ ಜೊತೆ ಅವರ ಭ್ರಾಂತಿಗಳ ವಿರುದ್ಧ ವಾದ ಮಾಡುವುದು ಅಸಾಧ್ಯ. ಅವರು ತಮ್ಮ ಭ್ರಾಂತಿಯನ್ನು ಬಿಟ್ಟುಕೊಡುವಂತೆ ಮಾಡುವುದೂ ಸಾಧ್ಯವಿಲ್ಲ. ಅವರನ್ನು ಚಿಕಿತ್ಸೆಗೆ ಒಳಪಡಿಸುವುದೊಂದೇ ದಾರಿ' ಎನ್ನುತ್ತಾನೆ ಡನ್.

ಅವತ್ತು ಜೋಸೆಫ್ ಡನ್ ಪುಸ್ತಕದ ಈ ವಿವರಗಳನ್ನು ನೆನೆಯುತ್ತಾ ನಮ್ಮ ಜನನಾಯಕರ ಮಾತುಗಳನ್ನು ಕೇಳಿಸಿಕೊಳ್ಳತೊಡಗಿದೆ. ಮಿಂಚಿಗಿಂತ ವೇಗವಾಗಿ ಬದಲಾಗುತ್ತಿದ್ದ ಅವರ ಹರಕು ನಾಲಗೆಯ ವ್ಯಾಖ್ಯಾನಗಳು ಡನ್‌ನ ನಾಲ್ಕೂ ಸುಳ್ಳುಗಳ ಮಾದರಿಗಳಿಗೆ ಬಗ್ಗದೆ ಐದನೆಯ ಭಾರತೀಯ ಮಾದರಿಯೊಂದನ್ನು ರೂಪಿಸಲು ಹವಣಿಸುತ್ತಿರುವಂತೆ ಕಂಡವು! ಆದರೂ ಡನ್ ಕೊಡುವ ಕರಿಸುಳ್ಳುಗಳ ಪಟ್ಟಿಗೆ ನಮ್ಮ ನಾಯಕರು ಸಾಕಷ್ಟು ಫಿಟ್ ಆಗುತ್ತಾರೆ! ಈ ನಾಯಕರಷ್ಟೇ ಏಕೆ, ನಮ್ಮ ‘ಸಂಸ್ಕೃತಿ'ಯನ್ನು ರೂಪಿಸುತ್ತಿರುವ ಹಲಬಗೆಯ ಪತ್ರಕರ್ತರು, ಚೀರುಮಾರಿಗಳು, ಲೇಖಕರು, ಕಾರ್ಪೊರೇಟ್‌ಗಳು ಎಲ್ಲ ವಲಯದವರೂ ಈ ಪಟ್ಟಿಗೆ ಫಿಟ್ ಆಗುತ್ತಾರೆ! 

ಅದೇನೇ ಇರಲಿ, ಜೋಸೆಫ್ ಡನ್ ಸುಳ್ಳುಗಳನ್ನು ವಿಂಗಡಿಸಲು ಕರಿ-ಬಿಳಿ ಎಂಬ ‘ವಿರುದ್ಧ ಪದ ಜೋಡಿ’ಯನ್ನು- ಬೈನರಿ ಆಪೋಸಿಟ್ಸ್‌ಗಳನ್ನು- ತನ್ನ ಪರಿಕಲ್ಪನೆಗೆ ಬಳಸಿರುವುದು ಮಾತ್ರ ಇರಿಸುಮುರಿಸು ಉಂಟುಮಾಡುತ್ತದೆ. ಪಶ್ಚಿಮದ ಮಾದರಿಗಳನ್ನು ಬಿಟ್ಟು ಸ್ವತಂತ್ರವಾಗಿ ಅಧ್ಯಯನ ಮಾಡಬೇಕೆನ್ನುವ ದೇಶಿ ಸಂಶೋಧಕ, ಸಂಶೊದಕಿಯರು ಪುಣ್ಯಭೂಮಿ ಭಾರತದಲ್ಲಿ ಹುಟ್ಟುವ ಸುಳ್ಳುಗಳ ಬಗ್ಗೆ, ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಕೊಂದ ಬಗ್ಗೆ ಧರ್ಮರಾಯನ ಬಾಯಲ್ಲಿ ಅರೆ ಸುಳ್ಳು ಹೊರಡಿಸಿದ ದೇವರುಗಳ ಬಗ್ಗೆ ದೇಶೀ ಮಾನದಂಡಗಳನ್ನು ಆಧರಿಸಿ ಮಾಡಬಹುದಾದ ಸಂಶೋಧನೆಗೆ ವಿಸ್ತಾರವಾದ ಸ್ಕೋಪ್ ಇದೆ ಎಂದು ವಿನಮ್ರವಾಗಿ ಸೂಚಿಸಬಹುದು! ‘ಕನ್ನಡ ಅನೃತ ಮೀಮಾಂಸೆ’ ಎಂಬ ನವ ಮೀಮಾಂಸೆಯನ್ನು ನವ ಮೀಮಾಂಸಕರು ಒಂದು ಕೈ ನೋಡಬಹುದು! 

ಜೋಸೆಫ್ ಡನ್ ವಿವರಣೆಯನ್ನು ಮತ್ತೆ ನೋಡುತ್ತಿರುವಾಗ ಲಂಕೇಶರ ಕಲ್ಲು ಕರಗುವ ಸಮಯದ ದಿಟ್ಟ ಹುಡುಗಿ ಶ್ಯಾಮಲಾ ಜೊತೆ ಮಾತಾಡುತ್ತಿರುವ ಸ್ವಾಮೀಜಿ ಇದ್ದಕ್ಕಿದ್ದಂತೆ ಅನ್ನುವ ಮಾತು ನೆನಪಾಗುತ್ತದೆ: 

‘ಮನುಷ್ಯ ಬಾಯಿ ಬಿಟ್ಟೊಡನೆ ಒಂದು ಸುಳ್ಳಾಡಿರ್‍ತಾನೆ.’

ಸುಳ್ಳು ಎಂಬುದರ ಅತಿ ಸೂಕ್ಷ್ಮ ಸತ್ಯ ರೂಪ ಕುರಿತು ಇದಕ್ಕಿಂತ ಗಾಢವಾದ ಸತ್ಯವನ್ನು ನಾನು ಈವರೆಗೆ ಕೇಳಿಲ್ಲ. 

ದೊಡ್ಡ ಲೇಖಕನೊಬ್ಬ ಸೂಕ್ಷ್ಮ ಫಿಲಾಸಫರ್ ಆಗುವ ಗಳಿಗೆಗಳು ಇಂಥವು.   


ಕೊನೆ ಟಿಪ್ಪಣಿ:

ಓದುಗಿಯರಿಗೆ-ಓದುಗರಿಗೆ ಸಲಹೆಗಳು: 

೧. ಪ್ರತಿವಾರ ಈ ಅಂಕಣ ಪ್ರಕಟವಾದ ತಕ್ಷಣ ಓದಲು ಬ್ಲಾಗ್ ಚಾನಲ್ ಫಾಲೋ ಮಾಡಿ

WHATSAPP CHANNEL LINK: (CLICK HERE)

೨. ಇಷ್ಟವಾದರೆ ತಪ್ಪದೆ ಲೈಕ್ ಸಂಕೇತ ಒತ್ತಿ.

೩. ಆರೋಗ್ಯಕರ ಪ್ರತಿಕ್ರಿಯೆಗಳನ್ನು ಕಾಮೆಂಟ್ಸ್ ಅಂಕಣಕ್ಕೆ ಬರೆಯಿರಿ.

Share on:

Comments

14 Comments



| ಸೋಮಶಂಕರ ಎನ್

"‘ಸುಳ್ಳು’ ಎಂಬುದರ ಸತ್ಯ ರೂಪಗಳು!" ಲೇಖನವು ಕೇವಲ ಸುಳ್ಳಿನ ಕುರಿತು ಮಾಡಿದ ಚರ್ಚೆಯಲ್ಲ; ಅದು ನಮ್ಮ ಸಮಕಾಲೀನ ಸಮಾಜದ ಮನಸ್ಥಿತಿ, ರಾಜಕೀಯ, ಸಂಸ್ಕೃತಿ ಹಾಗೂ ಮಾನವ ಮನಸ್ಸಿನ ಸಂಕೀರ್ಣತೆಯನ್ನು ಮನೋವೈಜ್ಞಾನಿಕ ಮತ್ತು ತಾತ್ವಿಕ ನೆಲೆಯಲ್ಲಿ ವಿಶ್ಲೇಷಿಸುವ ಅಪರೂಪದ ವೈಚಾರಿಕ ಲೇಖನವಾಗಿದೆ. ಸುಳ್ಳು ಎಂಬುದು ಕೇವಲ ನೈತಿಕ ದೋಷವಲ್ಲ; ಅದು ಸಂದರ್ಭ, ಉದ್ದೇಶ ಮತ್ತು ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೂಪಗಳನ್ನು ತಾಳುತ್ತದೆ ಎಂಬುದನ್ನು ಜೋಸೆಫ್ ಡನ್ ಅವರ ಪರಿಕಲ್ಪನೆಗಳೊಂದಿಗೆ ಭಾರತೀಯ ಸಾಮಾಜಿಕ ವಾಸ್ತವವನ್ನು ಬೆಸೆದು ನೀವು ನಿರೂಪಿಸಿರುವ ವಿಧಾನ ಅತ್ಯಂತ ಪರಿಣಾಮಕಾರಿಯಾಗಿದೆ. ಬಿಳಿ ಸುಳ್ಳು, ಕರಿ ಸುಳ್ಳು, CRAP ಹಾಗೂ ಭ್ರಾಂತಿ ಎಂಬ ನಾಲ್ಕು ಆಯಾಮಗಳನ್ನು ಸಮಕಾಲೀನ ಬದುಕಿನ ಉದಾಹರಣೆಗಳ ಮೂಲಕ ವಿಶ್ಲೇಷಿಸಿರುವ ರೀತಿ ಓದುಗರನ್ನು ಆತ್ಮಾವಲೋಕನಕ್ಕೆ ಕರೆದೊಯ್ಯುತ್ತದೆ. ಲೇಖನದ ಕೊನೆಯಲ್ಲಿ ಲಂಕೇಶ್ ಅವರ "ಮನುಷ್ಯ ಬಾಯಿ ಬಿಟ್ಟೊಡನೆ ಒಂದು ಸುಳ್ಳಾಡಿರ್ತಾನೆ" ಎಂಬ ವಾಕ್ಯವನ್ನು ಉಲ್ಲೇಖಿಸುವ ಮೂಲಕ, ಸುಳ್ಳಿನ ಅತಿ ಸೂಕ್ಷ್ಮ ತಾತ್ವಿಕ ಸತ್ಯವನ್ನು ಅನಾವರಣಗೊಳಿಸಿರುವುದು ಈ ಲೇಖನದ ವಿಶೇಷ ಮೌಲ್ಯವಾಗಿದೆ. ವ್ಯಂಗ್ಯ, ಹಾಸ್ಯ, ತರ್ಕ, ಮನೋವಿಜ್ಞಾನ ಮತ್ತು ಸಾಮಾಜಿಕ ಹೊಣೆಗಾರಿಕೆ—ಈ ಐದು ಅಂಶಗಳು ಒಂದೇ ಲೇಖನದಲ್ಲಿ ಸಹಜವಾಗಿ ಬೆರೆತಿರುವುದು ನಿಮ್ಮ ಬರವಣಿಗೆಯ ವೈಶಿಷ್ಟ್ಯ. ಇಂತಹ ಚಿಂತನೋದ್ದೀಪಕ ಲೇಖನಗಳ ಮೂಲಕ ಕನ್ನಡದ ವೈಚಾರಿಕ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿರುವ ತಮ್ಮ ಲೇಖನಿಯು ಇನ್ನಷ್ಟು ತೀಕ್ಷ್ಣವಾಗಲಿ, ಹೊಸ ತಲೆಮಾರಿಗೆ ವಿಮರ್ಶಾತ್ಮಕ ಚಿಂತನೆಯ ದಾರಿದೀಪವಾಗಲಿ ಎಂದು ಬಯಸುತ್ತೇನೆ. ನಿಮ್ಮ ಶಿಷ್ಯನಾಗಿ, ನಿಮ್ಮ ಚಿಂತನೆಯ ಆಳ ಮತ್ತು ಬರವಣಿಗೆಯ ವೈಚಾರಿಕತೆ ನನಗೆ ಸದಾ ಪ್ರೇರಣೆಯಾಗಿವೆ. ಆದರಣೀಯ ಗುರುಗಳೇ, ತಮ್ಮ ಸಾಹಿತ್ಯಯಾನ ಇನ್ನಷ್ಟು ಸಮೃದ್ಧವಾಗಲಿ. ಇನ್ನಷ್ಟು ಮೌಲಿಕ ಲೇಖನಗಳು ಕನ್ನಡ ಸಮಾಜಕ್ಕೆ ದೊರಕಲಿ ಎಂಬ ಮಹದಾಸೆಯೊಂದಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಗೌರವಪೂರ್ವಕ ಶುಭಾಶಯಗಳು. ಈ ಲೇಖನ ಓದಿದ ಮೇಲೆ ನನ್ನದೇ ಬದುಕಿನಲ್ಲಿ ಘಟಿಸಿರುವ ನಾಲ್ಕು ಜನಸಮುದಾಯದ ಜಾಮಿತಿಯ ವಿನ್ಯಾಸಗಳ (geographical shapes) ಸ್ವರೂಪದ ನಡುವೆ ಹೇಗೆ ಬದುಕಬೇಕೆಂದು ತಿಳಿದು ನಿರಾಳವಾಗಿ ನಿದ್ರಿಸುವೆ. thank you so much for this wonderful writing sir.. ಶುಭರಾತ್ರಿ


| ಡಾ. ನಿರಂಜನ ಮೂರ್ತಿ ಬಿ ಎಂ

'ಸುಳ್ಳು ಎಂಬುದರ ಸತ್ಯ ರೂಪಗಳು' ತಾನೇ ತಾನಾಗಿ ಓದಿಸಿಕೊಂಡು ಹೋಗುತ್ತಾ, ಸುಳ್ಳಿನ ಹಲವು ರೂಪಗಳನ್ನು ತೋರಿಸಿತು. ಜೋಸೆಫ್ ಡನ್ ಅವರು ಗುರುತಿಸಿದ ಬಿಳಿಸುಳ್ಳು, ಕರಿಸುಳ್ಳು, ಕ್ರಾಪ್ (ವಿನರೂಸುಳ್ಳು) (ವಿಶ್ವಾಸಭರಿತ ನಂಬುಗೆ ರೂಪದ ಸುಳ್ಳು), ಮತ್ತು ಭ್ರಾಂತಿಗಳೆಂಬ ನಾಲ್ಕು ವಿಧದ ಸುಳ್ಳುಗಳ ವಿಶ್ಲೇಷಣೆ ಮತ್ತು ಅವುಗಳು ನಮ್ಮ ಸಮಾಜದಲ್ಲಿ ಹೇಗೆ ಬಳಕೆಯಾಗುತ್ತವೆಂಬ ವಿವರಣೆ ಮುದ ನೀಡಿತು. 🙏🏻🙏🏻


| Nataraj Huliyar Replies

Thank you Niranjan. Good Kannada equivalent for CRAP: ಕ್ರಾಪ್ (ವಿನರೂಸುಳ್ಳು) (ವಿಶ್ವಾಸಭರಿತ ನಂಬುಗೆ ರೂಪದ ಸುಳ್ಳು),


| ಗುರು ಜಗಳೂರು

ಸರ್ ಲೇಖನ ಮುದ ನೀಡಿತು.ಈ ಸಂದರ್ಭದಲ್ಲಿ ಈಗಿನ ಕಾಲ ಘಟ್ಟದಲ್ಲಿ ನನಗೆ ವೈಯಕ್ತಿಕವಾಗಿ ಲಂಕೇಶ್ ಮತ್ತು ರಜನೀಶ್ ಪರಿಹಾರ ಎನ್ನಿಸಿತು.ಇಬ್ಬರಲ್ಲೂ ಈಶನಿದ್ದಾನೆ.ಅದರಲ್ಲೇನೋ‌‌ ವಿಶೇಷವಿರಬಹುದು.ಈ ಸುಳ್ಳಿನ ಬಗ್ಗೆ ಇತ್ತೀಚೆಗೆ ಟೀಕೆ ಟಿಪ್ಪಣಿ ಓದುವಾಗ ಈ ಕೆಳಗಿನ ಆಯ್ದ ಲಂಕೇಶರ ಬರವಣಿಗೆ ಸೂಕ್ತವಾಗಿ ಕಂಡವು. ಐವತ್ತರ ಸೇತುವೆ ಮೇಲೆ ಲೇಖನದಲ್ಲಿ ಹೀಗೆ ಹೇಳುತ್ತಾರೆ"ವೈಚಾರಿಕತೆಯ ಬಗ್ಗೆ ಮಾತಾಡುವ ನಾನು ಅತ್ಯಂತ ಸರಳವಾದ ದೆವ್ವದ ಕಲ್ಪನೆಯ ಬಗ್ಗೆ ದ್ವನಿಯೆತ್ತರಿಸಿ ವಾದಿಸಲು ಹಿಂಜರಿಯುತ್ತೇನೆ.ಯಾವುದೇ ವಸ್ತು ದ್ವನಿಯೆತ್ತರಿಸಿ ಮಾತನಾಡಿದೊಡನೆ ಸುಳ್ಳಿನ ಕಂತೆಯೆನಿಸುತ್ತದೆ.ವೈಚಾರಿಕತೆ ಕೂಡ ಲಜ್ಜೆ,ನೋವು,ಸಂಕೋಚದಿಂದಲೇ ಹುಟ್ಟಿ ಮೆಲುದನಿಯಲ್ಲಿ ಮಾತಾಡಿ ನನ್ನನ್ನು ದೆವ್ವಗಳಿಂದ ದೂರ ಮಾಡಬೇಕಾಗುತ್ತದೆ.ಅದೇ ರೀತಿ" ಇಂದಿನ ಭ್ರಷ್ಟ ವಾತಾವರಣದಲ್ಲಿ ಸರ್ ಎಂ ವಿ ನೆನಪು" ಲೇಖನದಲ್ಲಿ ಯಾವನೇ ಹಿಂದುಳಿದ ವರ್ಗದ ನಾಯಕ ಇವತ್ತು ಈ ಕರ್ನಾಟಕ ರಾಜ್ಯದ ಬಗ್ಗೆ ಪ್ರೇಮ ತೋರಿಸಬೇಕೆಂದಿದ್ದರೆ ಆತ ವಿಶ್ವೇಶ್ವರಯ್ಯನವರಲ್ಲಿದ್ದ ಕ್ಲುಪ್ತತೆ,ದಕ್ಷತೆ,ಪ್ರಾಮಾಣಿಕತೆಯನ್ನು ಪಡೆದಿರಬೇಕು.ಆತನ ಕರ್ನಾಟಕದ ಪ್ರೇಮ ಕೇವಲ ಬೋಳೆಯಾಗಿರದೆ ಆತನಲ್ಲಿ ಈ ರಾಜ್ಯ ಮುಂದುವರಿಯಲು ಬೇಕಾದ ಯೋಜನೆ ಇರಬೇಕು; ಬಹುಮುಖ್ಯವಾಗಿ ಆತ ಭ್ರಷ್ಟತೆ,ಸ್ವಜನಪಕ್ಷಪಾತ,ಜಾತಿಯತೆಯಿಂದ ಪೂರ್ಣ ಮುಕ್ತನಾಗಿರಬೇಕು; ತನ್ನ ಸಿದ್ದಾಂತ,ನಂಬಿಕೆಗಾಗಿ ಸ್ಥಾನಮಾನಗಳನ್ನು ತಿರಸ್ಕರಿಸುವ ಛಲ ಹೊಂದಿರಬೇಕು.ಇತ್ತೀಚಿಗೆ ಪದೇ,ಪದೇ ಟೀಕೆಗೊಳಗಾಗುವ ವಿಶ್ವೇಶ್ವರಯ್ಯನವರು ಇಂದಿನ ಸುಳ್ಳಿನ ಕಾಲದಲ್ಲಿ ಅವರ ಕೆಲಸಗಳು ಮಹತ್ವ ಪಡೆದಿವೆ ಎಂದು ಮಾತ್ರ ಹೇಳಬಹದು.


| ಗುರು ಜಗಳೂರು

ಸರ್ ಎಂವಿಯವರ ಲೇಖನದಲ್ಲಿ ಈ ಸಂದರ್ಭದಲ್ಲಿ ಬರೀ ಹಿಂದುಳಿದವರೇ ಅಲ್ಲ ಎಲ್ಲ ಜನಾಂಗದ ನುಂಗಣ್ಣಗಳು ಎಂದು ಓದಿಕೊಳ್ಳಬಹುದು ಅಲ್ಲವೇ?


| Arundhati.D -

ಲೇಖನ ಸುಲಭಕ್ಕೆ ಅರ್ಥವಾಗುವಂತದ್ದಲ್ಲ, ಇನ್ನು ಒಂದೆರೆಡು ಸಾರಿ ಓದಬೇಕು . ಬಿಳಿ ಸುಳ್ಳು - ಕರಿ ಸುಳ್ಳು ಬದಲಾಗಿ ಬೇರೆ ಪದ ಪ್ರಯೋಗ ಅಗತ್ಯವಿದೆ. ಸಾದ ಸುಳ್ಳು - ವಿಪರೀತದ ಸುಳ್ಳು 👍


| Guruprasad Kantalagere

ನಾನು ಹೇಳುವ ಸುಳ್ಳುಗಳು ಯಾವ ಬಗೆಯವೆಂದು ಹುಡುಕಿಕೊಂಡೆ ಅಂಕಣದ ಉದ್ದಕ್ಕೂ.. ಹಲವು ಬಗೆಯ ಸುಳ್ಳುಗಳಲ್ಲಿ ನಮ್ಮ ಸ್ವಲ್ಪವಾದರೂ ಪಾತ್ರವಿರುವಂತಿದೆ.


| Guruprasad Kantalagere

ನಾನು ಹೇಳುವ ಸುಳ್ಳುಗಳು ಯಾವ ಬಗೆಯವೆಂದು ಹುಡುಕಿಕೊಂಡೆ ಅಂಕಣದ ಉದ್ದಕ್ಕೂ.. ಹಲವು ಬಗೆಯ ಸುಳ್ಳುಗಳಲ್ಲಿ ನಮ್ಮ ಸ್ವಲ್ಪವಾದರೂ ಪಾತ್ರವಿರುವಂತಿದೆ.


| Arundhati.D -

ಕಪ್ಪು ಬಿಳಿ ಸುಳ್ಳು ಅನ್ನುವುದಕ್ಕೆ , ಸಾದ ಸುಳ್ಳು ವಿಪರೀತದ ಸುಳ್ಳು ಅನ್ನಬಹುದು 👍


| Rupa

ನಿಧಾನವಾಗಿ ಎಲ್ಲ ಸುಳ್ಳುಗಳೂ ಸಮಾಜ ಒಪ್ಪಿತವೇ ಆಗುತ್ತಿರುವ ಈ ಕಾಲಘಟ್ಟದಲ್ಲಿ, ಸತ್ಯ/ ಸುಳ್ಳಿಗೆ ಹೆಚ್ಚಿನ ವ್ಯತ್ಯಾಸಗಳು ಉಳಿಯುತ್ತಿಲ್ಲ ಎಂಬುದೇ ವಿಪರ್ಯಾಸ...


| ಸೋಮಶಂಕರ ವಿ ಸುಣ್ಣಂಗೂರು

ಜಗತಿನಲ್ಲಿ ಪ್ರಸ್ತುತ ಸುಳ್ಳಿನ ಪರಂಪರೆಯೊಂದು ಬೆಳೆದು ಚೀನಾದ ಮಹಗೋಡೆಯ ಆಕೃತಿಯನ್ನು ಪಡೆಯುತ್ತಿದೆ, ಅದರ ನಿರ್ಮಾಣ ನಿಂತಿದೆ ಇದರ ನಿರ್ಮಾಣ ನಿಲ್ಲುತ್ತಿಲ್ಲ. ಮನುಷ್ಯನ ಮನದಾಳದಲ್ಲಿ ಸುಪ್ತವಾಗಿರುವ ಈ ಸುಳ್ಳು, ಸೃಷ್ಟಿಸುವ ಅವಾಂತರ ಅಷ್ಟಿಷ್ಟಲ್ಲ ಅದೊಂದು ದೊಡ್ಡ ವಿನಾಶಿಕಾರಿ ಅಂಶ, ನಮಗರಿವಿಲ್ಲದಂತೆ ನಮ್ಮನ್ನು ಸುಡುವ ಬೆಂಕಿ ಅಂಥಹ ಬೆಂಕಿಯನ್ನು ಒಳಿತಿನಾಗರವಾಗಿ ಕಾಣುವ ಮನುಷ್ಯನ ವಿಕಾರ ಸ್ಥಿತಿಯನ್ನು ಅವಲೋಕಿಸಿಕೊಳ್ಳುವ , ತನ್ನ ತಾನು ಅರಿತು ವಿಶ್ಲೇಷಿಸಿಕೊಳ್ಳುವ ಮನೋಪ್ರವೃತ್ತಿಯನ್ನು ಬೆಳೆಸುವಲ್ಲಿ ಈ ಲೇಖನ ಯಶಸ್ವಿಯಾಗಿದೆ, ಪೂರಕವೂ ಕೂಡ.. ಧನ್ಯವಾದಗಳು ಸರ್.


| Aiyasha

ಸುಳ್ಳು ಸತ್ಯದ ಮಧ್ಯೆ ಬದುಕುವುದೇ ಜೀವನ.


| Aiyasha

ಸುಳ್ಳು ಸತ್ಯದ ಮಧ್ಯೆ ಬದುಕುವುದೇ ಜೀವನ.


| Sanganagouda

ಸುಳ್ಳರೇ ಕಳ್ಳರು, ಕಳ್ಳರೆಂದರೆ ಕದ್ದವರು, ಕದ್ದವರೆಂದರೆ ಇದ್ದವರು. ಸರ್




Add Comment


Mundana Kathana Nataka

YouTube






Recent Posts

Latest Blogs