ಬರವಣಿಗೆ: ಶ್ರಮವೋ? ಸ್ಫೂರ್ತಿಯೋ?
by Nataraj Huliyar
ಒಂದೆಡೆ, ನಮ್ಮ ಹೊಸ ಲೇಖಕ ಲೇಖಕಿಯರು, ರಿಸರ್ಚ್ ಹುಡುಗ ಹುಡುಗಿಯರು ಬರೆಯಲು ಏದುಸಿರು ಬಿಡುತ್ತಿರುವ ದೃಶ್ಯ; ಮತ್ತೊಂದೆಡೆ, ಹಲ ಬಗೆಯ ಡಿಜಿಟಲ್ ವೇದಿಕೆಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಕೆಲವರು ಬಾಯಿಗೆ ಬಂದಂತೆ ಪಟ ಪಟ ಬರೆಯುವ, ಬರಹದ ಭ್ರಮೆ ಹುಟ್ಟಿಸುವ ವಾಕ್ಯಗಳ ಮೆರವಣಿಗೆಯ ದೃಶ್ಯ…
ಈ ಎರಡೂ ಪರಿಯನ್ನು ಕಂಡಾಗ ಕನ್ನಡದಲ್ಲಿ ಬರೆಯುವ ಕಲೆ ಕುರಿತ ಬರಹಗಳು ಕಡಿಮೆ ಇವೆಯೇನೋ ಅನ್ನಿಸುತ್ತದೆ; ಅಥವಾ ಈ ಹೊಸ ಮಹಿಳೆಯರು, ಮಹನೀಯರು ಅಂಥ ಬರಹಗಳನ್ನು ಹುಡುಕಿಕೊಂಡು ಓದಿ ಅವುಗಳಿಂದ ಕಲಿಯುತ್ತಿಲ್ಲವೋ? ಈ ಹಿನ್ನೆಲೆಯಲ್ಲಿ, ಕೊನೆಯ ಪಕ್ಷ ಬರೆಯಲೆತ್ನಿಸುವ ಹೊಸಬರಿಗಾದರೂ ಉಪಯುಕ್ತವಾಗಲೆಂದು ಬರವಣಿಗೆಯ ಕಲೆಯ ಬಗೆಗೇ ಹೊಸ ಏನನ್ನಾದರೂ ಓದಿದಾಗಲೆಲ್ಲ ಈ ಅಂಕಣದಲ್ಲಿ ಕೊಡುತ್ತಲೇ ಇರುತ್ತೇನೆ. ಅದು ಕೊನೇ ಪಕ್ಷ ಅಂಕಣಕಾರನಿಗಾದರೂ ಪಾಠ ಕಲಿಸುತ್ತಿರುತ್ತದೆ; ಆ ಮಾತು ಬೇರೆ!
ಹೀಗೇ ಬರೆವ ಕ್ರಿಯೆಯ ಬಗ್ಗೆ ಯೋಚಿಸುತ್ತಿರುವಾಗ, ಅಮೆರಿಕದ ದೊಡ್ಡ ಲೇಖಕ ಅರ್ನೆಸ್ಟ್ ಹೆಮಿಂಗ್ವೆ ದಿನವಿಡೀ ಒಂದು ಪಕ್ಕಾ ಸಾಲು ಬರೆಯಲು ಪಡುವ ಶ್ರಮ, ಅವನ ಬರವಣಿಗೆಯ ಕ್ರಮ, ಅವನ ಬರವಣಿಗೆಯ ಶಿಸ್ತು- ಇವೆಲ್ಲವನ್ನೂ ಕುರಿತು ಆಗಾಗ ಓದಿದ ಮಾತುಗಳು ನೆನಪಾಗುತ್ತವೆ:
‘ಸೂರ್ಯೋದಯವಾದ ಮೇಲೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬರೆಯಲು ಶುರು ಮಾಡುತ್ತೇನೆ’ ಎಂದು ಹೆಮಿಂಗ್ವೆ ಒಮ್ಮೆ ಬರೆದ. ಹೀಗೆ ಶುರು ಮಾಡುವ ಹೆಮಿಂಗ್ವೆ ಅದನ್ನು ಮುಂದುವರಿಸುವ ರೀತಿ ಇದು:
‘ಪ್ರತಿ ದಿನವೂ ಹಿಂದಿನ ದಿನ ಎಲ್ಲಿಗೆ ನಿಲ್ಲಿಸಿದ್ದೆನೋ, ಅಲ್ಲಿಯತನಕ ಮತ್ತೆ ಬರೆಯುತ್ತೇನೆ. ಆಮೇಲೆ ಇಡೀ ದಿನ ಮುಂದಿನದನ್ನೋ, ಹೊಸದನ್ನೋ ಬರೆಯುತ್ತೇನೆ. ಮತ್ತೆ ಮಾರನೆಯ ದಿನ ಅದೇ ಬರವಣಿಗೆಗೆ ವಾಪಸಾಗಿ ರಿವೈಸ್ ಮಾಡುತ್ತೇನೆ. ಬರೆದಿದ್ದನ್ನು ಮತ್ತೆ ಓದುತ್ತೇನೆ. ಅದನ್ನು ಹೇಗೆ ಓದುತ್ತೇನೆಂದರೆ, ಇನ್ನೂ ಏನಾದರೂ ಹಿಂಡಲು ರಸ ಉಳಿದಿದೆಯೇ ಎನ್ನುವ ತನಕವೂ ನೋಡುತ್ತೇನೆ. ಆಗ ಮುಂದೇನಾಗುತ್ತದೆ ಎಂಬುದರ ಅಂದಾಜು ಸಿಗುತ್ತದೆ. ಅಲ್ಲಿಗೆ ನಿಲ್ಲಿಸಿ, ನಾಳೆಯತನಕ, ಅಂದರೆ ನಾಳೆ ಬರೆಯುವ ತನಕ ಬದುಕಿ ಉಳಿಯಲು ನೋಡುತ್ತೇನೆ.
ಈ ಬರೆವ ಬದುಕಿನ ದಿನಚರಿ ನಾಳೆಯತನಕ ಅಥವಾ ಹಲವು ದಿನಗಳ ತನಕ ಆ ಬರವಣಿಗೆಯ ಎಳೆಯನ್ನೋ, ಪ್ರೇರಣೆಯನ್ನೋ ಜೀವಂತವಾಗಿಡಲು ಹೆಮಿಂಗ್ವೆಗೆ ಸಹಾಯಕವಾಗುತ್ತಿತ್ತು. ‘ಆದರೆ ನಾಳೆಯತನಕ ಕಾಯುವುದಿದೆಯಲ್ಲಾ ಅದು ಬಲು ಕಷ್ಟದ ಕೆಲಸ’ ಎಂದು ಹೆಮಿಂಗ್ವೆಗೆ ಅನ್ನಿಸುತ್ತಿತ್ತು.
ಈ ಬರಹ ಓದುತ್ತಿರುವ ಹಲವರಿಗೆ ಹೆಮಿಂಗ್ವೆಯ ಬರವಣಿಗೆ ಒಂದು ‘ಲಕ್ಷುರಿ’ ಎನ್ನಿಸುವುದು ಸಹಜ. ಅದು ನಿಜ. ಇಂಥ ಲಕ್ಷುರಿಯು ಆಯ್ಕೆಗಳೇ ಇಲ್ಲದ ನಮ್ಮಂಥ ದೇಶಗಳಲ್ಲಿ ಇರುವುದಿಲ್ಲ. ನಮ್ಮಲ್ಲೂ ಕಾರಂತ, ತೇಜಸ್ವಿ ಆ ಥರ ಆಯ್ಕೆಯಿಂದಲೇ ಪೂರ್ಣಾವಧಿ ಲೇಖಕರಾಗಿದ್ದರು. ಪಶ್ಚಿಮದಲ್ಲಿ ಹಲವರಿಗೆ ಪೂರ್ಣಾವಧಿ ಲೇಖಕರಾಗುವ ಆಯ್ಕೆ, ಸಾಧ್ಯತೆ ಇತ್ತು. ಹಾಗೆ ಬದುಕುವ ಸಾಧ್ಯತೆಯೂ ಇತ್ತು. ಈಗಲೂ ಇದೆ. ಹೆಮಿಂಗ್ವೆ ಅಂಥವರಲ್ಲೊಬ್ಬ. ಅದೇನೇ ಇದ್ದರೂ, ಬರೆವ ಈ ಶ್ರಮದ ಕೆಲಸ ಹೆಮಿಂಗ್ವೆಯನ್ನು ತೀವ್ರವಾಗಿ ತೊಡಗಿಸುವ ಕೆಲಸ ಆಗಿರದಿದ್ದರೆ, ಈ ಕೆಲಸ ಎಲ್ಲೋ ಅವನ ಆಳದಲ್ಲಿ ಸೌಂದರ್ಯಾತ್ಮಕ ಆನಂದದ ಅನುಭವ ಕೊಡದಿದ್ದರೆ ಅವನು ಬರೆವ ಕೆಲಸವನ್ನು ಆನಂದಿಸುತ್ತಿರಲಿಲ್ಲವೇನೋ. ಹೀಗೆ ಲೀನವಾಗುವ ಆಳದ ಅಗೋಚರ ಆನಂದವಿರದಿದ್ದರೆ ಯಾರೂ ಬರೆಯುವುದಿಲ್ಲ. ಹಾಗೆ ಸುಮ್ಮನೆ ಬರೆಯುತ್ತಿದ್ದರೆ ಅದು ಜೀತದ ನೊಗ, ಅಷ್ಟೆ!
ಹೆಮಿಂಗ್ವೆಯ ರೀತಿಯಲ್ಲಿ ಶ್ರಮದ ಬರವಣಿಗೆಯಲ್ಲಿ ಲೀನವಾಗುವವರು ಒಂದೆಡೆಯಿದ್ದರೆ, ಸಹಜಸ್ಫೂರ್ತಿಯಲ್ಲಿ ಬರೆವ ಲೇಖಕ ಲೇಖಕಿಯರೂ ಮತ್ತೊಂದೆಡೆ ಇದ್ದಾರೆ.
ಇಂಗ್ಲಿಷ್ ಕವಿ ಜಾನ್ ಕೀಟ್ಸ್ ಕವಿತೆಯ ಬಗ್ಗೆ ಹೇಳಿದ ಪ್ರಖ್ಯಾತ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು: ‘ಗಿಡಗಳಿಗೆ ಎಲೆಗಳು ಮೂಡುವಂತೆ ಕವಿತೆ ಮೂಡದಿದ್ದರೆ ಅದು ಬಾರದಿದ್ದರೇ ಲೇಸು.’
ಕೀಟ್ಸ್ ಗಿಂತ ಹಿರಿಯನಾದ ವರ್ಡ್ಸ್‌ವರ್ತ್ ಕೂಡ ‘ಕಾವ್ಯ ಎನ್ನುವುದು ಶಕ್ತ ಭಾವನೆಗಳ ಸಹಜ ಉಕ್ಕುವಿಕೆ; ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಸು ನೆನಸಿಕೊಂಡ ಭಾವನೆ’ ಎಂದಿದ್ದ.
ಈ ಬಗೆಯ ಸಹಜ ಉಕ್ಕು ಅಥವಾ ತುಳುಕಿ, ಕೋಡಿ ಬೀಳುವ ಅನುಭವ ಎಲ್ಲ ಬಗೆಯ ಬರಹಗಳಲ್ಲಿ ತೊಡಗಿದವರಿಗೂ ಆಗುತ್ತಿರುತ್ತದೆ. ೧೯೭೮ರಲ್ಲಿ ಪ್ರಕಟವಾದ ‘ಅವಸ್ಥೆ’ ಕಾದಂಬರಿಯ ಮುನ್ನುಡಿಯಲ್ಲಿ 'ಸುಮಾರು ಮೂವತ್ತು ದಿನಗಳ ಕಾಲ ಈ ಕಾದಂಬರಿ ನನ್ನಿಂದ ಬರೆಸಿಕೊಂಡಿದೆ’ ಎಂದು ಅನಂತಮೂರ್ತಿ ಬರೆದಿದ್ದರು. ಈ ನಿವೇದನೆಯ ಬಗ್ಗೆ ಕೊಂಕು ನುಡಿಯಲೆತ್ನಿಸಿದ ಅರೆವಿಚಾರವಾದಿ ಇಂಗ್ಲಿಷ್ ಮೇಷ್ಟರೊಬ್ಬ, 'ಒಬ್ಬ ಲೇಖಕ ತಾನೇ ಬರೆಯೋಲ್ವೆ? ಈ ಮನುಷ್ಯ ’ಬರೆಸಿಕೊಂಡಿತು’ ಅಂತ ಬರೆದಿರೋದನ್ನ ನೋಡಿ!’ ಎಂದು ಕಹಿಯಾಗಿ ನಗಲೆತ್ನಿಸಿದ. ಆ ಕೊಂಕಿನ ಹಿಂದೆ ಅನಂತಮೂರ್ತಿ ಹಿಂದೊಮ್ಮೆ ಭೈರಪ್ಪನವರ ಕಾದಂಬರಿಗಳನ್ನು ವಿಮರ್ಶಿಸಿದ್ದನ್ನು ಕುರಿತು ಈ ಇಂಗ್ಲಿಷ್ ಮೇಷ್ಟ್ರರಿಗಿದ್ದ ಅಸಹನೆಯೂ ಸೇರಿತ್ತೆಂಬುದು ನಂತರ ತಿಳಿಯಿತು.
‘ನಿಮಗೆ ಸೃಜನಶೀಲ ಬರವಣಿಗೆ ಅಥವಾ ಯಾವುದೇ ನಿಜವಾದ ಬರವಣಿಗೆಯ ಪ್ರಕ್ರಿಯೆ ಎಷ್ಟು ಸಂಕೀರ್ಣವಾದುದು ಎಂಬುದು ಗೊತ್ತಿರಲಿಕ್ಕಿಲ್ಲ’ ಎಂದು ರೇಗಿ ಸುಮ್ಮನಾದೆ.
ಬರವಣಿಗೆಯನ್ನು ಈ ಥರ ಯಾಂತ್ರಿಕವಾಗಿ ನೋಡುವವರಿಗೆ ‘ಗದುಗಿನ ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎಂಬ ಕುಮಾರವ್ಯಾಸನ ವಿನಯ ಕೂಡ ಅರ್ಥವಾಗಿರಲಾರದು
ಹಾಗೆ ನೋಡಿದರೆ, ಬರವಣಿಗೆಯ ನಿತ್ಯ ಶ್ರಮದ ಬಗ್ಗೆ ಹೇಳಿದ್ದ ಹೆಮಿಂಗ್ವೆಗೂ ಕೃತಿಯೊಂದು ತಂತಾನೇ ಬರೆಸಿಕೊಳ್ಳುವುದರ ಅನುಭವವಾಗಿತ್ತು. ‘ಎ ಮೂವಬಲ್ ಫೀಸ್ಟ್’ ಎಂಬ ಪ್ಯಾರಿಸ್ ಅನುಭವಗಳ ತನ್ನ ಪುಸ್ತಕ ಕುರಿತು ಹೆಮಿಂಗ್ವೆ ಬರೆಯುವ ಮಾತು: ‘ಈ ಕತೆ ತಂತಾನೇ ಬರೆದುಕೊಂಡಿತು, ಅದರ ಜೊತೆ ಓಡಲು ಭಾಳಾ ಕಷ್ಟಪಟ್ಟೆ.’
ಹೆಮಿಂಗ್ವೆಯ ಅನುಭವದಲ್ಲಿ ಕಾಣುವ ಶ್ರಮ, ಸಹಜ ತುಳುಕು ಇವೆರಡೂ ಎಲ್ಲ ಬಗೆಯ ಸೃಜನಶೀಲ ಕೆಲಸದಲ್ಲಿ ತೊಡಗಿರುವವರಿಗೂ ಅನುಭವಕ್ಕೆ ಬಂದಿರುತ್ತದೆ. ಇವೆರಡೂ ಅನುಭವಗಳು ಲೇಖಕಿಯಲ್ಲೂ, ಕವಯಿತ್ರಿಯಲ್ಲೂ, ಬಡಗಿಯ ಕೆಲಸದಲ್ಲೂ, ಶಿಲ್ಪಿಯಲ್ಲೂ ಇರುತ್ತವೆ. ಮೊನ್ನೆ ತಾನೇ ಇದೇ ಅಂಕಣದಲ್ಲಿ, ಬರವಣಿಗೆಯ ಇತಿಹಾಸದಲ್ಲೇ ಅತ್ಯಂತ ಶ್ರಮ ಪಟ್ಟು ಬರೆದಿರಬಹುದಾದ ಜಾನ್ ಬಾಬಿಯ ಕಣ್ಣ ರೆಪ್ಪೆಯ ಬರವಣಿಗೆಯ ಬಗ್ಗೆ ಬರೆದಿದ್ದೇನೆ.
ಇವತ್ತು ಬರವಣಿಗೆ ಶುರು ಮಾಡುವವರಿಗೆ ಹಾಗೂ ಈಗಾಗಲೇ ಶುರು ಮಾಡಿರುವವರಿಗೆ ಹೆಮಿಂಗ್ವೆಯ ಅನುಭವದಂತೆಯೇ, ಲಂಕೇಶರು ಎಂಬತ್ತರ ದಶಕದಲ್ಲಿ ಸಣ್ಣ ಕತೆಗಳ ಕಮ್ಮಟವೊಂದರಲ್ಲಿ ಆಡಿದ ಮಾತುಗಳು ಕೂಡ ದಾರಿ ತೋರಿಸಬಲ್ಲವು. ೧೬ ಫೆಬ್ರವರಿ ೧೯೮೬ರ ‘ಲಂಕೇಶ್ ಪತ್ರಿಕೆ’ಯ ಸಂಚಿಕೆಯಲ್ಲಿ ಲಂಕೇಶ್ ಆ ಮಾತುಗಳನ್ನು ‘ತರುಣ ಸಾಹಿತಿಗಳನ್ನು ಕುರಿತು’ ಎಂಬ ಟೀಕೆ ಟಿಪ್ಪಣಿಯಾಗಿಸಿದರು. ಅಲ್ಲಿ ಅವರು ಕತೆ ಬರೆಯುವವರಿಗೆ ಹೇಳುವ ಕೆಲವು ಮಾತುಗಳು:
'ಚಿಕ್ಕವರಾದ ನಿಮ್ಮಲ್ಲಿ ನನ್ನದೊಂದು ಅರಿಕೆ, ನೇರವಾದದ್ದನ್ನು ತಿರುಚಿ, ಕ್ಲಿಷ್ಟವಾದದ್ದನ್ನು ಸರಳಗೊಳಿಸಲು ಹೋಗಬೇಡಿ. ನೀವು ನಿಮ್ಮ ಬಗ್ಗೆ ಕಂಡುಕೊಂಡ ಸತ್ಯಗಳನ್ನು ಸಮಾಜಕ್ಕೆ ಹೆದರಿ ಸಂಕೇತಗಳ ಮೂಲಕ ಹೇಳಲು ಅನಗತ್ಯವಾಗಿ ಯತ್ನಿಸಬೇಡಿ. ನಿಮ್ಮ ಹೆಂಡತಿಯೊಂದಿಗಿನ ನಿಮ್ಮ ವಿರಸವನ್ನು ಇನ್ನೊಬ್ಬರ ಹೆಂಡತಿಯ ವಿರಸವನ್ನಾಗಿ ಬರೆದಾಗ ಅದು ಕೆಲವು ಮುಖ್ಯ ಗುಣಗಳನ್ನು ಕಳೆದುಕೊಳ್ಳುತ್ತದೆ. ನಿಮ್ಮ ಪಾಪವನ್ನೂ ಗುಟ್ಟುಗಳನ್ನೂ ದೌರ್ಬಲ್ಯಗಳನ್ನೂ ಏಕಾಂತತೆಯನ್ನೂ ಎದುರಿಸುವುದನ್ನು ಕಲಿತುಕೊಳ್ಳಿ. ಹಾಗೆ ಕಲಿತೊಡನೆ ನಿಮ್ಮ ಬರವಣಿಗೆಗೆ ವಿಚಿತ್ರ ಶಕ್ತಿ ಮತ್ತು ಸೌಂದರ್ಯ ಬರುತ್ತದೆ, ನಿಮ್ಮ ಮಾತಿಗೆ ಮಾತೃಭಾಷೆಗೆ ಕಾಣಿಕೆ ಸಲ್ಲಿಸುವ ಶಕ್ತಿ ಬರುತ್ತದೆ. ಉದಾಹರಣೆಗೆ, ನಿಮ್ಮ ಏಕಾಂತತೆ ಎಂದರೆ ಅರ್ಥ ಏನು? ನಿಮ್ಮ ಒಬ್ಬಂಟಿತನದ ಸ್ವಾರಸ್ಯ ಏನು? ಸಮಾಜದ ಎಲ್ಲ ಕಾಣ್ಕೆಯ ಸಂಪತ್ತು ಸಾಹಿತ್ಯ ಸಂಪತ್ತಾಗಿ ಬರುವುದು ಇಂಥ ಪ್ರಶ್ನೆಗಳಿಗೆ ದೊರೆತ ಗಾಢ ಉತ್ತರಗಳಿಂದ.’
ಈ ಮಾತುಗಳನ್ನು ಬರೆಯುವ ಮುನ್ನ, ‘ಇವು ನನಗೆ ನಾನೇ ಹೇಳಿಕೊಳ್ಳುತ್ತಿರುವ ಮಾತುಗಳಾದ್ದರಿಂದ ನಾನು ಹಿತವಚನದ ಧಾಟಿಯಲ್ಲಿ ಮಾತಾಡಿದರೂ ಅದು ಹಾಗಲ್ಲವೆಂದು ನೀವು ನೆನಪಿಡಬೇಕು’ ಎಂದು ಲಂಕೇಶ್ ಸೂಚಿಸುತ್ತಾರೆ. ನಮಗೆ ನಾವೇ ಹೇಳಿಕೊಂಡ ಮಾತುಗಳು ಸತ್ಯಕ್ಕೆ ಹೆಚ್ಚು ಹತ್ತಿರವಾಗಿರಬಲ್ಲವು. ಅವು ಓದುವವರ ಸತ್ಯಕ್ಕೂ ಹತ್ತಿರವಾಗಬಲ್ಲವು ಎಂಬುದು ನನ್ನ ನಂಬಿಕೆ ಕೂಡ.
ಕಮಲಬರವಣಿಗೆಯ ಕೆಲವು ಮೂಲ ಸಲಕರಣೆಗಳಲ್ಲಿ ನಮ್ಮ ನಮ್ಮ ಸತ್ಯದ ಹುಡುಕಾಟ ಮುಖ್ಯವಾದುದು ಎಂದು ನಂಬಿರುವವರಲ್ಲಿ ನಾನೂ ಒಬ್ಬ. ಅದರಲ್ಲೂ, ಯಾರೂ ಎದುರಿಗಿಲ್ಲದೆ, ಯಾರನ್ನೂ ಒಪ್ಪಿಸದೆ, ನನಗೆ ನಾನೇ ಹೇಳಿಕೊಳ್ಳುವ ಅದ್ಭುತ ಅವಕಾಶ ಅಥವಾ ಲಕ್ಷುರಿ ಇರುವುದು ಬರವಣಿಗೆಯಲ್ಲಿ ಮಾತ್ರ. ಮೇಲೆ ಹೇಳಿದ ಹೆಮಿಂಗ್ವೆ, ಕೀಟ್ಸ್, ಅನಂತಮೂರ್ತಿ, ಲಂಕೇಶ್ ಥರದ ದೊಡ್ಡವರ ಅನುಭವಗಳು ಬರೆವ ಎಲ್ಲರಿಗೂ ನೆರವಾಗಬಲ್ಲವು.
ಮೇಲೆ ಹೇಳಿದ ಲಂಕೇಶರ ಈ ಲೇಖನ ೧೯೯೧ರಲ್ಲಿ ಪ್ರಕಟವಾದ ಲಂಕೇಶರ ‘ಟೀಕೆ ಟಿಪ್ಪಣಿ’ ಪುಸ್ತಕದ ಮೊದಲ ಮುದ್ರಣದಲ್ಲಿದೆ. ನಂತರ ೧೯೯೭ರಲ್ಲಿ ಈ ಅಂಕಣಕಾರ ಸಂಪಾದಿಸಿದ ‘ಟೀಕೆ ಟಿಪ್ಪಣಿ’ ಸಂಪುಟ-೧ರಲ್ಲೂ ಇದೆ. ನಂತರ ಬಂದ ‘ಸಾಹಿತಿ ಸಾಹಿತ್ಯ ವಿಮರ್ಶೆ’ ಸಂಪುಟದಲ್ಲೂ ಈ ಲೇಖನ ಇದೆ.
ನಲವತ್ತು ವರ್ಷಗಳ ಕೆಳಗೆ ನಾನು ಓದಿದ ಲಂಕೇಶರ ‘ತರುಣ ಸಾಹಿತಿಗಳನ್ನು ಕುರಿತು’ ಎಂಬ ಟೀಕೆ ಟಿಪ್ಪಣಿ ಅವತ್ತಿನಿಂದ ಇವತ್ತಿನವರೆಗೂ ನನ್ನ ಬರವಣಿಗೆಯ ಹತಾರಗಳನ್ನು, ಮಾದರಿಗಳನ್ನು ಕೆಣಕಿ ಹೊಸ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ಹಾಗೆಯೇ, ಹೆಮಿಂಗ್ವೆ ಅನಂತಮೂರ್ತಿ, ಕೀಟ್ಸ್, ವರ್ಡ್ಸ್ ವರ್ತ್…
೧
ನೀನೊಂದು ಜಿರಲೆಯ ಕೊಂದರೆ
ನೀನೊಬ್ಬ ಹೀರೋ;
ನೀನು ಒಂದು ಚಿಟ್ಟೆಯ ಕೊಂದರೆ
ನೀನೊಬ್ಬ ಕೇಡಿ
ನೀತಿನಿಯಮಗಳಿಗೆ
ಸೌಂದರ್ಯಾತ್ಮಕ
ಮಾನದಂಡಗಳಿರುತ್ತವೆ.
೨
ಪ್ರತಿಭಾಶಾಲಿಯಲ್ಲಿ
ಕೊನೇ ಪಕ್ಷ
ಈ ಎರಡು ಗುಣಗಳಿಲ್ಲದಿದ್ದರೆ
ಅವನನ್ನು ಸಹಿಸಿಕೊಳ್ಳುವುದು ಕಷ್ಟ:
ಕೃತಜ್ಞತೆ ಮತ್ತು ಶುಭ್ರತೆ.
Comments
5 Comments
| ಮಂಜುನಾಥ್ ಸಿ ನೆಟ್ಕಲ್
ಬರವಣಿಗೆ ಕುರಿತ ಈ ಬರಹ ಉದಯೋನ್ಮುಖ ಲೇಖಕರಿಗೂ, ಈಗಾಗಲೇ ಬರೆಯುತ್ತಿರುವವರಿಗೂ ಏಕಕಾಲಕ್ಕೆ ಹೊಸ ಹೊಳಹು. ಮತ್ತು ತಿಳಿವು ನೀಡುವಂತಿದೆ. ಬರವಣಿಗೆ ಆರಂಭಿಸಲು ಮತ್ತು ಮುಂದುವರೆಸಲು ಸ್ಫೂರ್ತಿ ನೀಡುವಂತೆ ಬರೆದಿದ್ದೀರಿ. ಈ ವಾರದ ಈ ಅತ್ಯುತ್ತಮ ಲೇಖನಕ್ಕೆ ಹೃತ್ಪೂರ್ವಕ ಧನ್ಯವಾದಗಳು ಸರ್
| Somashankara N
ಪದವಿಟ್ಟಳಿಪುದೊಂದಗ್ಗಳಿಕೆ ಬರವಣಿಗೆಯ ಶಿಸ್ತು ಮತ್ತು ಸಂಯಮಗಳ ತಳಾತಳಗಳನ್ನು ತಲುಪಿ ತಡೆದುಕೊಳ್ಳಲಾಗದ ಯಾವುದೇ ಕವಿಗೆ ಬರವಣಿಗೆಯಲ್ಲಿ ನಾಳೆಯೂ ಜೀವಿಸುವ ಭಾಗ್ಯವಿಲ್ಲ (ಕೊಡುಗೆ) ಎಂಬ ಉಪಯುಕ್ತವಾದ ಮಾಹಿತಿಯನ್ನು ಲೇಖನ ಒದಗಿಸಿಕೊಟ್ಟಿದೆ. ಇದು ಇವತ್ತಿನ "ಕೃಜಾ" ಸಂದರ್ಭದಲ್ಲಿ ಬರೆಯಲಿಚ್ಚಿಸುವ ಬರಹಗಾರರಿಗೆ ಒಂದೊಳ್ಳೆ ಮಾಹಿತಿ ಎಂದನ್ನಿಸಿತು. "ಆಳದ ಅಗೋಚರವಿರದಿದ್ದರೆ ಯಾರೂ ಬರೆಯುವುದಿಲ್ಲ. ಹಾಗೆ ಸುಮ್ಮನೆ ಬರೆಯುತ್ತಿದ್ದರೆ ಅದು ಜೀತದನೊಗ"ಎಂಬ ಈ ವಾಕ್ಯ ಬರಹಗಾರನ ವಾಸ್ತವಿಕ ನರಕವನ್ನು ಸಾದೃಶ್ಯೀಕರಿಸಿಕೊಟ್ಟಿದೆ. ನನಗೆ ತುಂಬಾ ಇಷ್ಟ ಆಯ್ತು ಸರ್... ಲಂಕೇಶರು "ತರುಣ ಸಾಹಿತಿಗಳನ್ನು ಕುರಿತು" ಹೇಳಿರುವ ಮಾತುಗಳನ್ನು ಆಲೋಚಿಸಿದಾಗ ಬರಹಗಾರನೊಬ್ಬನ ಶೀಲ ಗುಣದ ತಾಳುವಿಕೆಯಿಂದ ಜನ್ಮಿಸುವ ಬರವಣಿಗೆಯ ಬಿಡುಗಡೆಯ ಸುಖ ಎಂಥ ಅಲೌಕಿಕವಾದದ್ದು ಎಂದನ್ನಿಸುತ್ತದೆ. Thank you, Sir, for sharing such valuable and thought-provoking information with us. 🙏
| ಡಾ. ಸಂಪತ್ ಬೆಟ್ಟಗೆರೆ, ಮೂಡಿಗೆರೆ
ನಮಸ್ತೆ ನಟರಾಟ್ ಸರ್, ನಿಮ್ಮ ಈ ಲೇಖನವನ್ನು ಓದಿದೆ. ಸಂದರ್ಭೋಚಿತ ಬರಹ. ವಿಚಾರಪೂರ್ಣ ಆಗಿದೆ. ಇದು ಪ್ರಸ್ತುತ ತರುಣ ಸಾಹಿತಿಗಳಲ್ಲದೆ ವಿಶ್ವವಿದ್ಯಾಲಯದ ಕೆಲವು ಮೇಷ್ಟರು ಹೆಸರಿನ ವಿದ್ವಾಂಸರು, ಅಧ್ಯಾಪಕ ಲೇಖಕರು ಗಂಭೀರವಾಗಿ ಚಿಂತಿಸಬೇಕಾದ ಸಂಗತಿ. ಯಾವುದೇ ಒಂದು ವಿಷಯ ಅಥವಾ ವ್ಯಕ್ತಿಯ ಕುರಿತಂತೆ ವಿಮರ್ಶೆ ಬರೆಯುವ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಓದು ಮತ್ತು ಅಧ್ಯಯನ ಅಗತ್ಯ. ಆದರೆ ಇಂದಿನ ಕೆಲವು ಹಿರಿಯರೆನಿಸಿಕೊಂಡವರು ಅರೆಬರೆ ಓದನ್ನೇ ಜ್ಞಾನ ಎಂಬಂತೆ ಬಗೆದು ತಮ್ಮ ಬರವಣಿಗೆ ಹಾಗೂ ಅಭಿಪ್ರಾಯಗಳ ಮುಖೇನ ಕನ್ನಡ ಸಾಹಿತ್ಯ ಲೋಕವನ್ನು ರಾಡಿಗೊಳಿಸುತ್ತಿರುವುದಲ್ಲದೆ, ಜೊತೆಗೆ ಅವರ ಅಭಿಮಾನದ ವಿದ್ಯಾರ್ಥಿಗಳನ್ನೂ ದಿಕ್ಕು ತಪ್ಪಿಸುತ್ತಿದ್ದಾರೆ. ಇಂಥವರಿಗೂ ಇದು ಕಿವಿಮಾತಾಗಿರಲಿ ಎಂದು ಆಶಿಸುತ್ತೇನೆ. -ಡಾ.ಸಂಪತ್ ಬೆಟ್ಟಗೆರೆ, ಮೂಡಿಗೆರೆ
| ಡಾ. ಸಂಪತ್ ಬೆಟ್ಟಗೆರೆ, ಮೂಡಿಗೆರೆ
ನಮಸ್ತೆ ನಟರಾಟ್ ಸರ್, ನಿಮ್ಮ ಈ ಲೇಖನವನ್ನು ಓದಿದೆ. ಸಂದರ್ಭೋಚಿತ ಬರಹ. ವಿಚಾರಪೂರ್ಣ ಆಗಿದೆ. ಇದು ಪ್ರಸ್ತುತ ತರುಣ ಸಾಹಿತಿಗಳಲ್ಲದೆ ವಿಶ್ವವಿದ್ಯಾಲಯದ ಕೆಲವು ಮೇಷ್ಟರು ಹೆಸರಿನ ವಿದ್ವಾಂಸರು, ಅಧ್ಯಾಪಕ ಲೇಖಕರೂ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ. ಯಾವುದೇ ಒಂದು ವಿಷಯ ಅಥವಾ ವ್ಯಕ್ತಿಯ ಕುರಿತಂತೆ ವಿಮರ್ಶೆ ಬರೆಯುವ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಓದು ಮತ್ತು ಅಧ್ಯಯನ ಅಗತ್ಯ. ಆದರೆ ಇಂದಿನ ಕೆಲವು ಹಿರಿಯರೆನಿಸಿಕೊಂಡವರು ಅರೆಬರೆ ಓದನ್ನೇ ಜ್ಞಾನ ಎಂಬಂತೆ ಬಗೆದು ತಮ್ಮ ಬರವಣಿಗೆ ಹಾಗೂ ಅಭಿಪ್ರಾಯಗಳ ಮುಖೇನ ಕನ್ನಡ ಸಾಹಿತ್ಯ ಲೋಕವನ್ನು ರಾಡಿಗೊಳಿಸುತ್ತಿರುವುದಲ್ಲದೆ, ಜೊತೆಗೆ ಅವರ ಅಭಿಮಾನದ ವಿದ್ಯಾರ್ಥಿಗಳನ್ನೂ ದಿಕ್ಕು ತಪ್ಪಿಸುತ್ತಿದ್ದಾರೆ. ಇಂಥವರಿಗೂ ಇದು ಕಿವಿಮಾತಾಗಿರಲಿ ಎಂದು ಆಶಿಸುತ್ತೇನೆ. -ಡಾ.ಸಂಪತ್ ಬೆಟ್ಟಗೆರೆ, ಮೂಡಿಗೆರೆ
| B Suresha
ಜಿರಲೆ ಕೊಂದವನು ಹೀರೊ ಎನ್ನುವುದು ಆ ಕಾಲಕ್ಕೆ ಸರಿ ಇತ್ತೇನೋ... ಇವತ್ತು ಒಪ್ಪಲಾಗದು. ಜಿರಲೆಗೇನು ಕಮ್ಮಿ ಉಪಾದಿ, ಅದೂ ಕೂಡ ಚಿಟ್ಟೆಯ ಹಾಗೆ ಅಷ್ಟಪಾದಿ. ಚಿಟ್ಟೆ ಸುಂದರ ಎನಿಸುವುದಾದರೆ ಜಿರಲೆಯೂ ಸುಂದರೆ. ಯಾಕೆಂದರೆ ಜಿರಲೆ ಬದುಕುವುದು ಸಹ ಇದೇ ಧರೆ ಚಿಟ್ಟೆ ಬೊಮ್ಮನ್ ಅದಕೆ ಪಾಸುಪೋರ್ಟು ಉಂಟು ಎಲ್ಲ ಕಡೆಗೆ ಹೋಗಲು ಜಿರಲೆ ಪಾಪ ದಲಿತ ಎಲ್ಲ ಕಡೆಗೆ ಎಂಟ್ರಿ ಅದಕೆಲ್ಲುಂಟು ಕಂಡ ಕ್ಷಣ ಕೊಲ್ಲಲು ರೆಡಿ ಇರುತ್ತಾರೆ ಎಲ್ಲೆಲ್ಲೂ... ಈ ಶುಭ್ರತೆಯ ಮಾತು ಒಪ್ಪಲಾಗದು ಇನಿತೂ... - ಬಿ ಸುರೇಶ
Add Comment