ವ್ಯಕ್ತಿಚಾರಿತ್ರ್ಯ v/s ಅಧಿಕಾರ

ಈಚೆಗೆ ನೂರು ತುಂಬಿದ ಅಪರೂಪದ ಸಮಾಜವಾದಿ ಅಮ್ಮೆಂಬಳ ಆನಂದರ ಬಗ್ಗೆ ಟಿಪ್ಪಣಿ ಮಾಡುತ್ತಿದ್ದ ಸಂಜೆ ಗೆಳೆಯರೊಬ್ಬರ ‘ಸಂಕ್ಷಿಪ್ತ ಮೇಘಸಂದೇಶ’ (ಎಸ್ಎಂಎಸ್) ಪ್ರತ್ಯಕ್ಷವಾಯಿತು. ೨೦೨೪ರಲ್ಲಿ ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿಯವರನ್ನು ಕುರಿತ ನನ್ನ ‘ಪ್ರಜಾವಾಣಿ’ ಲೇಖನವನ್ನು ಸಮುದಾಯದ ಸುರೇಂದ್ರ ಫೇಸ್‌ಬುಕ್‌ನಲ್ಲಿ ಹಂಚಿದ್ದನ್ನು ಓದಿದ್ದ ಗೆಳೆಯ ಬರೆದಿದ್ದರು: ‘ಒಬ್ಬ ಸಮಾಜವಾದಿಯಾಗಿ ನೀವು ಕಮ್ಯುನಿಸ್ಟರೊಬ್ಬರ ಬಗ್ಗೆ ಗೌರವಯುತವಾಗಿ ಬರೆದಿದ್ದು ಇಷ್ಟವಾಯಿತು.’ 

ಈ ಪ್ರತಿಕ್ರಿಯೆಗೆ ಚಣ ಸ್ಟನ್ನಾದೆ. ’ಸಮಾಜವಾದ, ಕಮ್ಯುನಿಸಂಗಳನ್ನು ಪೂರಾ ತಿಳಿಯದೆ, ಅನುಸರಿಸದೆ ಸಮಾಜವಾದಿ ಎಂದುಕೊಳ್ಳಲಾರೆ’ ಎಂದು ಅವರಿಗೆ ಹೇಳಿದರೂ, ಸಮತಾವಾದ ಸಮಾಜವಾದ, ಮಾರ್ಕ್ಸ್‌ವಾದ, ಸ್ತ್ರೀವಾದ ಇತ್ಯಾದಿ ಯುಗಪ್ರವರ್ತಕ ಚಿಂತನೆಗಳ ಗಂಭೀರ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ ಎಂದುಕೊಳ್ಳಲು ಹಿಂಜರಿಕೆಯೇನಿಲ್ಲ! ಮೂಲತಃ ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಸಮತೆಯ ವಿವಿಧ ಪಾಠಗಳನ್ನು ಕಲಿಸುವ ಸಿಮೊನ್ ದ ಬುವಾ, ಮಾರ್ಕ್ಸ್, ಲೋಹಿಯಾ, ಯೆಚೂರಿ, ಅಂಬೇಡ್ಕರ್ ಎಲ್ಲರೂ ಸಹಜವಾಗೇ ನನ್ನ ಬರವಣಿಗೆಯಲ್ಲಿ ಒದಗಿ ಬರುತ್ತಾರೆಂದು ಕಾಣುತ್ತದೆ. ಅವರ ಚಿಂತನೆಗಳು ಅಂಕಣ, ಟೀಚಿಂಗ್, ಕಾದಂಬರಿ, ಜೀವನಚರಿತ್ರೆ, ಸಂಕಿರಣ, ಮಾತುಕತೆ… ಹೀಗೆ ಕಾಲಕಾಲಕ್ಕೆ ನನ್ನನ್ನು ತೊಡಗಿಸುವ ಪ್ರಕಾರಗಳಲ್ಲಿ ಹರಿದು ಬರುತ್ತವೆಂದು ಕಾಣುತ್ತದೆ. ಈ ಅಂಕಣಕ್ಕೆ ಟಿಪ್ಪಣಿ ಮಾಡುತ್ತಿದ್ದ ಸಂಜೆ ಕೂಡ ಲೋಹಿಯಾ, ಸಿಮೊನ್ ದ ಬುವಾ, ಯೆಚೂರಿ, ಅಮ್ಮೆಂಬಳ ಆನಂದ ಮೊದಲಾದವರ ಬಗೆಗೆ ಅವರಿವರ ಜೊತೆ ಮಾತಾಡಿದ್ದು, ಬರೆದಿದ್ದು ಆಕಸ್ಮಿಕವಲ್ಲ! 

ಅದೇನೇ ಇರಲಿ. ಮೊನ್ನೆ ಉತ್ತರಕನ್ನಡದ ‘ಕರಾವಳಿ ಮುಂಜಾವು’ ಪತ್ರಿಕೆಯಲ್ಲಿ ನೂರಕ್ಕೆ ಅಡಿಯಿಟ್ಟ ಸಮಾಜವಾದಿ ಅಮ್ಮೆಂಬಳ ಆನಂದರು ಅಂಕೋಲದಲ್ಲಿ 'ಅಂಕೋಲೆ' ಗಿಡಕ್ಕೆ ನೀರೆರೆಯುತ್ತಿದ್ದ ಫೋಟೋ ನೋಡುತ್ತಿದ್ದಾಗ ಇದು ಈಚೆಗೆ ನಾನು ನೋಡಿದ ಅತ್ಯಂತ ಅರ್ಥಪೂರ್ಣ ಫೋಟೋಗಳಲ್ಲಿ ಒಂದು ಎನ್ನಿಸಿತು. ಭಾರತದ  ಸ್ವಾತಂತ್ರ‍್ಯ ಹೋರಾಟಕ್ಕೆ, ಸಮಾಜವಾದಿ ಚಳುವಳಿಗೆ ನೀರೆರೆದ ಕೋಟ್ಯಂತರ ಕೈಗಳಲ್ಲಿ ದಕ್ಷಿಣ ಕನ್ನಡದ ಬಂಟ್ವಾಳದ ಅಮ್ಮೆಂಬಳ ಆನಂದರ ಈ ಪುಟ್ಟ ಕೈಗಳೂ ಇದ್ದವು ಎಂಬುದನ್ನು ಹೊಸ ತಲೆಮಾರುಗಳಿಗೆ ನೆನಪಿಸುತ್ತಿದ್ದೇನೆ. ಐವತ್ತು ವರ್ಷ ಅಂಕೋಲದಲ್ಲಿದ್ದ ಆನಂದರು ಈಗ ಮಣಿಪಾಲದ ಮಗಳ ಮನೆಯಲ್ಲಿದ್ದಾರೆ ಎಂದು ಗೆಳೆಯರು ಹೇಳಿದಾಗ, ಪ್ರೀತಿಯ ಲೇಖಕಿ ವೈದೇಹಿಯವರಿಗೆ ಫೋನ್ ಮಾಡಿ, ‘ಅಮ್ಮೆಂಬಳ ಆನಂದ ಮಣಿಪಾಲದಲ್ಲಿದ್ದಾರಾ?’ ಎಂದೆ. 

ಆನಂದರ ಹೆಸರು ಹೇಳುತ್ತಿದ್ದಂತೆ, ವೈದೇಹಿ ‘ಅವರಾ? ‘ಬಂಗಾರದ ಮನುಷ್ಯ’ ಎಂದರು. ಆನಂದ ತಮ್ಮ ತೊಂಬತ್ತೊಂದನೆಯ ವಯಸ್ಸಿನವರೆಗೂ ವೈದೇಹಿಯವರ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದರು. ವೈದೇಹಿ, ‘ಅವರೊಬ್ಬ ಪ್ರೀತಿ ತುಂಬಿದ ಮನುಷ್ಯ, ಪ್ರೀತಿಯಲ್ಲದೆ ಅವರಲ್ಲಿ ಬೇರೇನನ್ನೂ ಕಾಣಲಿಲ್ಲ. ಎಲ್ಲರ ಬಗೆಗೂ ಅವರಿಗೆ ಪ್ರೀತಿ’ ಎನ್ನುತ್ತಾ  ಸಮಾಜವಾದಿಗಳು, ಕಮಲಾದೇವಿ ಚಟ್ಟೋಪಾಧ್ಯಾಯ,ಜಾರ್ಜ್ ಫರ್ನಾಂಡಿಸ್... ಎಲ್ಲರನ್ನೂ ನೆನೆಸಿಕೊಂಡರು.      

ಕರ್ನಾಟಕದ ಸಮಾಜವಾದಿ ಚರಿತ್ರೆಯಲ್ಲಿ ನನ್ನ ಮನಸ್ಸಿನಲ್ಲಿ ಉಳಿದಿರುವ ಹಲವು ಹೆಸರುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಮೆಂಬಳ ಊರಿನ ಆನಂದ ಹಾಗೂ ಅವರ ಚಿಕ್ಕಪ್ಪ ಅಮ್ಮೆಂಬಳ ಬಾಳಪ್ಪ ಇಬ್ಬರೂ ಹಸಿರಾಗಿದ್ದಾರೆ.  ಸ್ವಾತಂತ್ರ‍್ಯ ಚಳುವಳಿಯ ಕಾಲಘಟ್ಟದ ಸ್ಪಿರಿಟ್ ಹಾಗೂ ಗಾಂಧಿ, ಜೆ.ಪಿ., ಲೋಹಿಯಾ ಥರದವರು ಇಂಥ ಕ್ರಿಯಾಶಾಲಿಗಳಲ್ಲಿ ಬೆಳೆಸಿದ ಆದರ್ಶ ಸಮಾಜದ ಕಲ್ಪನೆಗಳು, ಅವು ಸಾಕಾರವಾಗುವಂತೆ ಅವರು ಸಹಜವಾಗಿ ಬದುಕಿದ ರೀತಿ ಇವತ್ತಿಗೂ ಧನ್ಯತೆಯ ಭಾವ ಹುಟ್ಟಿಸುತ್ತವೆ.  ಸ್ವಾತಂತ್ರ‍್ಯ ಚಳುವಳಿಯ ಆದರ್ಶದ ಫಲವಾಗಿ ಕೂಡ ಅಮ್ಮೆಂಬಳ ಆನಂದ ೧೯೫೪ರಲ್ಲಿ ವಿಧವೆ ಗಂಗಮ್ಮನವರನ್ನು ಮದುವೆಯಾದರು; ಗಂಗಮ್ಮನವರ ಮಗಳನ್ನೂ ತಮ್ಮ ಮಗಳಾಗಿ ಸ್ವೀಕರಿಸಿದರು. ಆ ದಿನವನ್ನು ದಾಖಲಿಸಿರುವ ಪಾಟೀಲ ಪುಟ್ಟಪ್ಪನವರ ಮಾತನ್ನು ನೆನೆಯುವ ಅಂಕೋಲದ ಕವಿ ವಿಷ್ಣುನಾಯ್ಕರು ಅಮ್ಮೆಂಬಳ ಆನಂದರನ್ನು ಕುರಿತು ಕೊಡುವ ವಿವರಗಳು:  

ಬಂಟ್ವಾಳದಲ್ಲಿ ಹುಟ್ಟಿದ ಅಮ್ಮೆಂಬಳ ಆನಂದ (೧೭ ಸೆಪ್ಟೆಂಬರ್ ೧೯೨೭) ಮೆಟ್ರಿಕ್ ಶಿಕ್ಷಣ ಮುಗಿಸುವ ಹೊತ್ತಿಗೆ ಮಂಗಳೂರಿನ ಪ್ರಖರ ಸಮಾಜವಾದಿ ಕಮಲಾದೇವಿ ಚಟ್ಟೋಪಾಧ್ಯಾಯಯರ ವಲಯಕ್ಕೆ ಬಂದರು. ಕಮಲಾದೇವಿ ಅಷ್ಟೊತ್ತಿಗಾಗಲೇ ಲೋಹಿಯಾ, ಜಯಪ್ರಕಾಶ ನಾರಾಯಣರ ಸಂಪರ್ಕಕ್ಕೆ ಬಂದು ‘ಕಾಂಗ್ರೆಸ್ ಸಮಾಜವಾದಿ ಪಕ್ಷ’ದಲ್ಲಿದ್ದರು. ಸ್ವಾತಂತ್ರ‍್ಯ ಚಳುವಳಿಯ ಕಾಲದಲ್ಲಿ ಕಮಲಾದೇವಿಯವರ ಸೂಚನೆಯಂತೆ ಆನಂದ ಹುಬ್ಬಳ್ಳಿಗೆ ಬಂದು ಪ್ರಾಂತ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾದರು. ಅಲ್ಲಿ ರೈಲ್ವೆ ಕೆಲಸಗಾರರನ್ನು ಸಂಘಟಿಸಿದರು. ನಂತರ ಆನಂದ ‘ನವಯುಗ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಸಮಾಜವಾದಿ ಚಟುವಟಿಕೆಯನ್ನು ಸಹಿಸದ ಪತ್ರಿಕೆ ಅವರನ್ನು ಕೆಲಸದಿಂದ ತೆಗೆದುಹಾಕಿತು. ಮುಂದೆ ವಡ್ಡರ್ಸೆ ರಘುರಾಮಶೆಟ್ಟರ ಸಹಾಯದಿಂದ ಮುಂಬೈಗೆ ಬಂದ ಆನಂದ, ಹೋಟೆಲ್ ಕಾರ್ಮಿಕರಿಗೆ ರಾತ್ರಿ ಪಾಠಶಾಲೆಯಲ್ಲಿ ಪಾಠ ಹೇಳಿದರು. ನಂತರ ಮಂಗಳೂರಿಗೆ ಬಂದು ಮೇಷ್ಟರಾದರು. ‘ನವಭಾರತ’ ಪತ್ರಿಕೆಯ ಉಪಸಂಪಾದಕರಾದರು. 

ಕವಿ-ರಾಜಕಾರಣಿ ದಿನಕರ ದೇಸಾಯಿ ಆನಂದರನ್ನು ‘ಜನಸೇವಕ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಲು ಅಂಕೋಲಕ್ಕೆ ಕರೆತಂದರು. ಜೊತೆಗೆ ಗಂಗಮ್ಮನವರನ್ನು ಹಳ್ಳಿ ಮಹಿಳೆಯರ ಪ್ರಸೂತಿ ಕೆಲಸದಲ್ಲಿ ತೊಡಗಿಸಿದರು. ಅಮ್ಮೆಂಬಳ ಕುಟುಂಬ ಅಂಕೋಲದಲ್ಲಿ ಅರ್ಥಪೂರ್ಣವಾಗಿ ಬೆರೆತದ್ದು ಹೀಗೆ. ‘ಜನಸೇವಕ’ ಆನಂದರಲ್ಲಿ ಮೊಳೆಯುತ್ತಿದ್ದ ಬರವಣಿಗೆಗೆ ವೇದಿಕೆಯಾಯಿತು. ಅಲ್ಲಿ ಅವರು ‘ನೇಗಿಲಯೋಗಿ’ ಎಂಬ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದರು. ದಿನಕರ ದೇಸಾಯಿ ಬಿಜಿಯಾಗಿದ್ದಾಗ ಮುಖಪುಟ ಲೇಖನಗಳು ಹಾಗೂ ಸಂಪಾದಕೀಯ ಲೇಖನಗಳನ್ನೂ ಆನಂದ ಬರೆಯುತ್ತಿದ್ದರು.  

ಐವತ್ತರ ದಶಕದಲ್ಲಿ ಸ್ವತಃ ವಿಷ್ಣುನಾಯ್ಕರ ಜೀವನದಲ್ಲೇ ಆನಂದರು ನೆರವಾದ ಬಗೆ ವಿಶಿಷ್ಟವಾದುದು. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮದರ್ಜೆ ಪಡೆದು ಕಾಲೇಜು ಸೇರಲು ಹಣವಿಲ್ಲದೆ ಅಳುತ್ತಾ ನಿಂತಿದ್ದ ಹದಿಹರೆಯದ ವಿಷ್ಣುನಾಯ್ಕ ಎಂಬ ಹುಡುಗನ ಬಡತನದ ಕಷ್ಟ ದಿನಕರ ದೇಸಾಯಿ, ಆನಂದರಿಗೂ ತಲುಪಿತು. ಆನಂದ ಹಾಗೂ ನಾಡಕರ್ಣಿ ‘ಜನಸೇವಕ’ ಕಛೇರಿಯಲ್ಲಿ ಒಂದು ದೇಣಿಗೆ ರಿಜಿಸ್ಟರ್ ಇಟ್ಟರು. ಕಛೇರಿಗೆ ಬಂದವರು ಈ ಹುಡುಗನಿಗೆ ತಮ್ಮ ಕೈಲಾದ ದೇಣಿಗೆ ಕೊಟ್ಟು ಓದಲು ನೆರವಾದರು. ಮುಂದೆ ಉತ್ತರ ಕನ್ನಡದ ದೊಡ್ಡ ವ್ಯಕ್ತಿತ್ವವಾಗಿ, ಕವಿಯಾಗಿ ಬೆಳೆದ ವಿಷ್ಣುನಾಯ್ಕರ ಹದಿಹರೆಯದಲ್ಲಿ ಆನಂದರು ನೆರವಾದ ರೀತಿಯೂ ದಾಖಲಾಗಬೇಕಾಗುತ್ತದೆ. 

ತಮ್ಮ ಐವತ್ತು ವರ್ಷಗಳ ಅಂಕೋಲೆಯ ನಂಟಿನಲ್ಲಿ ಆನಂದ ತಮ್ಮ ಓದುಗಓದುಗಿಯರನ್ನು ರೈತಪರವಾಗಿ, ಕಾರ್ಮಿಕರ ಪರವಾಗಿ ಬೆಳೆಸಿದರು. ರೈತ ಕಾರ್ಮಿಕರ ಮನೆಮನೆಗೆ ಹೋಗಿ ಸಂಘಟಿಸಿದರು. ಅಂಕೋಲ ತಾಲೂಕು ೧೯೬೦ರ ದಶಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾಜವಾದಿಗಳ ಆಡಳಿತಕ್ಕೆ ಒಳಪಟ್ಟಿದ್ದರ ಹಿನ್ನೆಲೆಯಲ್ಲಿ ಆನಂದರ ಶ್ರಮ ಇದ್ದದ್ದನ್ನೂ ವಿಷ್ಣುನಾಯ್ಕ ನೆನೆಯುತ್ತಾರೆ. ೧೯೬೭ರಲ್ಲಿ ದಿನಕರ ದೇಸಾಯಿ ಪ್ರಜಾಸಮಾಜವಾದಿ ಪಕ್ಷದ ಬೆಂಬಲ ಪಡೆದು ಲೋಕಸಭಾ ಚುನಾವಣೆ ಗೆದ್ದ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಿಂದ ಐದು ಜನ ಪ್ರಜಾ ಸಮಾಜವಾದಿ ಪಕ್ಷದ ಶಾಸಕರು ಗೆದ್ದದ್ದರ ಹಿನ್ನೆಲೆಯಲ್ಲಿ ದಿನಕರ ದೇಸಾಯಿ, ನಾಡಕರ್ಣಿ, ಟಿ.ಕೆ. ಮಹಮೂದ್, ಶಂಕರ ಕೇಣಿಯವರು ರೂಪಿಸಿದ ರಾಜಕೀಯ ಕಾರ್ಯತಂತ್ರದಲ್ಲಿ ಅಮ್ಮೆಂಬಳ ಆನಂದರ ಕೊಡುಗೆಯೂ ಮುಖ್ಯವಾಗಿತ್ತು. 

ಆನಂದರ ಚಿಕ್ಕಪ್ಪ ಅಮ್ಮೆಂಬಳ ಬಾಳಪ್ಪ ತಮ್ಮ ಕಣ್ಣಿಗೆ ಅಕಸ್ಮಾತ್ ಬಿದ್ದ ಮಂಗಳೂರಿನ ಬಿಜೈನ ಹುಡುಗ ಜಾರ್ಜ್ ಫರ್ನಾಂಡಿಸರನ್ನು ಸಮಾಜವಾದಿ ಪಕ್ಷದ ಕಚೇರಿಗೆ ಕರೆದೊಯ್ದರು. ಜಾರ್ಜ್ ಮುಂದೆ ದೇಶದ ದೊಡ್ಡ ಕಾರ್ಮಿಕ ನಾಯಕರಾಗಿ, ಸಮಾಜವಾದಿ ನಾಯಕರಾಗಿ ಬೆಳೆದರು. ಆನಂದರಿಗಿಂತ ಮೂರು ವರ್ಷ ಕಿರಿಯರಾಗಿದ್ದ ಜಾರ್ಜ್ ಹಾಗೂ ಆನಂದ ಒಟ್ಟಿಗೇ ಓದಿದವರು, ಕೆಲವು ಹೋರಾಟಗಳಲ್ಲಿ ಒಟ್ಟಿಗೇ ಭಾಗಿಯಾದವರು ಎಂಬುದನ್ನು ನೆನೆಯುತ್ತಾ ವಿಷ್ಣುನಾಯ್ಕರು ಈ ಇಬ್ಬರ ಭೇಟಿಯ ಪ್ರಸಂಗವೊಂದನ್ನು ಉಲ್ಲೇಖಿಸುತ್ತಾರೆ: ತೊಂಬತ್ತರ ದಶಕದ ಆರಂಭದಲ್ಲಿ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಕಾರವಾರದಲ್ಲಿ ಆರಂಭವಾಗಲಿದ್ದ ನೌಕಾಪಡೆಯ ಅಡಿಗಲ್ಲು ಸಮಾರಂಭಕ್ಕೆ ಬಂದಿದ್ದರು. ಅಲ್ಲಿ ಆನಂದರನ್ನು ಕಂಡ ಜಾರ್ಜ್ ‘ಆನಂದ್, ನೀವಿಲ್ಲಿ!’ ಎನ್ನುತ್ತಾ ಅಭಿಮಾನದಿಂದ ಅಪ್ಪಿಕೊಂಡರು.

ಜೀವಮಾನದುದ್ದಕ್ಕೂ ಸಮಾಜವಾದಿಯಾಗಿಯೇ ಉಳಿದಿರುವ ಅಮ್ಮೆಂಬಳ ಆನಂದರಿಗೆ ಮುಂದೆ ಜಾರ್ಜ್ ಫರ್ನಾಂಡಿಸ್ ಸಮಾಜವಾದದ ಹಾದಿ ಬಿಟ್ಟು ಕೋಮುವಾದಿಗಳ ಜೊತೆ ಕೈ ಜೋಡಿಸಿದ್ದನ್ನು ಕಂಡು ಏನೆನ್ನಿಸಿತೋ, ಏನೋ.  ಜಾರ್ಜರ ಪತನ ಕಂಡು ದೇಶದ ಹಲವಾರು ಸಮಾಜವಾದಿಗಳಿಗೆ, ಪ್ರಗತಿಪರರಿಗೆ ಆದಂತೆ ಆನಂದರಿಗೂ   ದಿಗ್ಭ್ರಮೆಯಾಗಿರಬಹುದು. ಈ ಮಾತು ಬರೆಯುತ್ತಿರುವಾಗ, ಚರಿತ್ರೆಯ ಚಕ್ರದ ಈಚಿನ ಉರುಳುವಿಕೆಯಲ್ಲಿ ಒಂದು ಅಂಶ ನನ್ನಂಥವರಿಗೆ ಎದ್ದು ಕಾಣುತ್ತದೆ: 

ಜಾರ್ಜ್ ಫರ್ನಾಂಡಿಸ್ ಪಕ್ಷದಿಂದ ಪಕ್ಷಕ್ಕೆ ಸಾಗುತ್ತಾ, ಚುನಾವಣೆ ಗೆಲ್ಲುತ್ತಾ, ಸೋಲುತ್ತಾ ಮಂತ್ರಿಗಿರಿಯ ಸವಲತ್ತುಗಳನ್ನು ಅನುಭವಿಸುತ್ತಾ ಬದುಕಿದ್ದರೂ ಕೊನೆಗೆ ಅವರ ಹೋರಾಟಗಾರ ವ್ಯಕ್ತಿತ್ವ ಪತನಗೊಂಡಿತು. ಆದರೆ ಯಾವ ಅಧಿಕಾರಕ್ಕೂ ಕೈಚಾಚದೆ, ಸ್ವಂತ ಹಾಗೂ ಸಾರ್ವಜನಿಕ ಬದುಕಿನಲ್ಲಿ ಶುಭ್ರತೆ, ಘನತೆಗಳನ್ನು ಉಳಿಸಿಕೊಂಡ ಅಮ್ಮೆಂಬಳ ಆನಂದ ನೂರಕ್ಕೆ ಅಡಿಯಿಟ್ಟು ಈ ನೆಲದಲ್ಲಿ ಇನ್ನೂ ಏನಾದರೂ ಹೊಸತು ಹುಟ್ಟಬಹುದು ಎಂದು ಸೂಚಿಸುವಂತೆ ಅಂಕೋಲದಲ್ಲಿ ಗಿಡವೊಂದಕ್ಕೆ ನೀರೆರೆಯುತ್ತಿದ್ದಾರೆ. ವ್ಯಕ್ತಿಯ ಬದುಕಿನಲ್ಲಿ ಕೊನೆಗೂ ಉಳಿಯುವುದು ವ್ಯಕ್ತಿತ್ವದ ಶುಭ್ರತೆ ಹಾಗೂ ವ್ಯಕ್ತಿತ್ವದ ಸಮಗ್ರತೆಗಳೇ ಎಂಬುದನ್ನು ನೆನಪಿಸುತ್ತಿದ್ದಾರೆ.  

ಅಮ್ಮೆಂಬಳ ಆನಂದರ ವ್ಯಕ್ತಿತ್ವದ ಶುಭ್ರತೆ ಕುರಿತು ಬರೆಯುವ ಹೊತ್ತಿಗೆ ಮತ್ತೆ ಕಣ್ಣಿಗೆ ಬಿದ್ದ ಗಾಂಧೀ-ಲೋಹಿಯಾ ಮಾತುಕತೆ ಈ ವ್ಯಕ್ತಿತ್ವದ ಶುಭ್ರತೆಯ ಮಾತನ್ನು ವಿಸ್ತರಿಸುವಂತೆ ಕಂಡಿತು. ಲೋಹಿಯಾ ದಾಖಲಿಸಿರುವ ಆ ಮಾತುಕತೆಯ ಭಾಗ:

ಒಮ್ಮೆ ಗಾಂಧೀಜಿ ಲೋಹಿಯಾರನ್ನು ‘ಧೈರ್ಯಶಾಲಿ' ಎನ್ನುತ್ತಾ, ‘ನಿಮ್ಮ ಬಳಗದಲ್ಲಿ ಇನ್ನೂ ಧೈರ್ಯಶಾಲಿಗಳಿರಬಹುದು’ ಎಂದರು. ಬಳಿಕ, ‘ಧೈರ್ಯಶಾಲಿ' ಎಂಬ ಪರಿಕಲ್ಪನೆಯ ಬಗೆಗೇ ನಗುತ್ತಾ, ‘ಹುಲಿಯೂ ಧೈರ್ಯಶಾಲಿ ಎನಿಸಿಕೊಂಡಿರುತ್ತದಲ್ಲ!' ಎಂದರು. ‘ನಿಮ್ಮ ಬಳಗದಲ್ಲಿ ನಿಮಗಿಂತಲೂ ಹೆಚ್ಚಿಗೆ ಕಲಿತವರಿರಬಹುದು' ಎಂದವರೇ, ‘ವಕೀಲರೂ ಕಲಿತಿರುತ್ತಾರಲ್ಲ!' ಎಂದು ಒಟ್ಟು ಕಲಿಕೆಯ ಪರಿಕಲ್ಪನೆಯ ಬಗೆಗೇ ನಕ್ಕರು. ನಂತರ, ‘ಆದರೆ ನಿಮ್ಮಲ್ಲಿರುವಂತೆ ಕ್ಯಾರಕ್ಟರ್ ಅಥವಾ ವ್ಯಕ್ತಿ ಚಾರಿತ್ರ್ಯವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಂಡು ಬರುವ ಸಾಮರ್ಥ್ಯ ನಿಮ್ಮ ಬಳಗದ ಬೇರೆಯವರಲ್ಲಿ ಸಿಗಲಾರದು' ಎಂದರು.

ಗಾಂಧೀ ನಿರ್ಗಮನದ ನಂತರ ಈ ಮಾತನ್ನು ನೆನೆಯುವ ಲೋಹಿಯಾಗೆ ಹೀಗೆನ್ನಿಸಿತು: ‘ನನ್ನ ಬಗೆಗಿನ ಪ್ರೀತಿ ಹಾಗೂ ನನ್ನ ಬಗೆಗೆ ಪೂರ್ಣ ಮಾಹಿತಿಯಿಲ್ಲದ ಕಾರಣ ಅವರು ನನ್ನ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿರಲೂಬಹುದು. ಆದರೆ ಅವರು ಹೇಳಿದ್ದು ಸತ್ಯವೇ ಆಗಿದ್ದರೆ ನನಗಂತೂ ನಿಜಕ್ಕೂ ಸಂತೋಷವೇ. ಅಂದರೆ, ಧೈರ್ಯವಲ್ಲ; ಜ್ಞಾನವೂ ಅಲ್ಲ; ಬದಲಿಗೆ, ವ್ಯಕ್ತಿ ಚಾರಿತ್ರ್ಯವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದು ಒಂದು ದೊಡ್ಡ ಮಾನವ ಗುಣ ಎಂಬುದು ಗಾಂಧೀಜಿಯ ನಿಲುವಾಗಿತ್ತು.'  

ವ್ಯಕ್ತಿಯ ಕ್ಯಾರಕ್ಟರ್ ಅಥವಾ ವ್ಯಕ್ತಿಚಾರಿತ್ರ್ಯ ಕುರಿತ ಲೋಹಿಯಾ-ಗಾಂಧಿ ಸಂವಾದವನ್ನು ದಾಖಲಿಸುತ್ತಿರುವಾಗ ಲೋಹಿಯಾರ ಸಂಗಾತಿ ಜಾರ್ಜ್ ಮತ್ತೆ ನೆನಪಾಗುತ್ತಾರೆ. ಒಂದು ಕಾಲಕ್ಕೆ ಇಡೀ ಮುಂಬೈ ಸ್ತಬ್ದವಾಗುವಂಥ ಕಾರ್ಮಿಕ ಚಳುವಳಿ ನಡೆಸಿದ್ದ ಜಾರ್ಜ್ ದೇಶದ ದೊಡ್ಡ ನಾಯಕರಾಗಿದ್ದರು. ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದೇ ಲೋಕಸಭಾ ಚುನಾವಣೆಯಲ್ಲಿ ಅದ್ಭುತವಾಗಿ ಗೆದ್ದವರು. ದೇಶದ ಲಕ್ಷಾಂತರ ಕಾರ್ಮಿಕರು ಅವರ ಹೋರಾಟದ ಫಲ ಪಡೆದಿದ್ದಾರೆ. ಹಲವು ಖಾತೆಗಳ ಸಚಿವರಾಗಿ ಜಾರ್ಜ್ ಜನಪರ ಕೆಲಸ ಮಾಡಿದ್ದಾರೆ. ಆದರೆ ಅಧಿಕಾರಕ್ಕಾಗಿ ಕೊನೆಯ ಘಟ್ಟದ ರಾಜಿ ಮತ್ತು ಪತನ ಅವರ ಇತರ ಎಲ್ಲ ಸಾಧನೆಗಳನ್ನು ಮಣ್ಣಾಗಿಸಿದ್ದು ದುಗುಡ ಹುಟ್ಟಿಸುತ್ತದೆ. ಇಂಥ ದುಗುಡ ಜಾರ್ಜರನ್ನು ಹತ್ತಿರದಿಂದ ಬಲ್ಲ ಅಮ್ಮೆಂಬಳ ಆನಂದರಂಥವರಲ್ಲಿ ಇನ್ನೂ ಆಳವಾಗಿ ಮುತ್ತಿರುತ್ತದೆ.

ಆದರೆ ತಮ್ಮ ಬದುಕಿನ ಕೊನೆಯ ಒಂಬತ್ತು ವರ್ಷ ಆಲ್ಜೀಮರ್ಸ್ ಹಾಗೂ ಪಾರ್ಕಿನ್‌ಸನ್ಸ್ ಕಾಯಿಲೆಗಳಿಗೆ ತುತ್ತಾಗಿದ್ದ ಜಾರ್ಜ್‌ಗೆ  ವ್ಯಕ್ತಿಚಾರಿತ್ರ್ಯ ಮತ್ತು ಅಧಿಕಾರ ಕುರಿತು ನಿಜಕ್ಕೂ ಏನೆನ್ನಿಸಿತ್ತೋ, ಕೊನೆಗೂ ಯಾರಿಗೂ ತಿಳಿಯಲಿಲ್ಲ.

Share on:

Comments

13 Comments



| ಎಂ ಜಿ ಚಂದ್ರಶೇಖರಯ್ಯ

ಅಮ್ಮೆಂಬಳ‌ ಆನಂದರ ಬಗ್ಗೆ ‌ನಿಮ್ಮ‌ಲೇಖನ ಓದಿ ಸಮಾಜವಾದಿ ಚಳವಳಿಯ ಅಪರಂಜಿಯಂತಹ‌ ಅನೇಕ ವ್ಯಕ್ತಿಗಳು ಮನಃಪಟಲದಲ್ಲಿ ಸುಳಿದು ಹೋದರು. ಅಭಿನಂದನೆಗಳು


| Nataraj Huliyar Replies

Dear MGC Please mention those names for me and our readers


| Mohan Mirle

ವ್ಯಕ್ತಿ ಚಾರಿತ್ರ್ಯದ ಮಹತ್ವ ತಿಳಿಸುವ ಮಹತ್ವದ ಬರಹ


| Chandrashekhara Talya

ಫರ್ನಾಂಡಿಸ್ ಅವರೊಬ್ಬರೇ ಅಲ್ಲ, ಅವರಂತೆ ಅನೇಕ ಸಮಾಜವಾದಿಗಳು ತಮ್ಮ ವ್ಯಕ್ತಿತ್ವದ ಪಾವಿತ್ರ್ಯತೆಯನ್ನು ಹಾಳು ಮಾಡಿಕೊಂಡರು, ಅಧಿಕಾರ ದಾಹ ಅವರನ್ನು ಹಾಗೆ ಕೂಪಕ್ಕೆ ತಳ್ಳಿತು, ಆದರೆ ಅವರೆಲ್ಲ ಅಧಿಕಾರ, ಹಣ, ಖ್ಯಾತಿಯ ಹಿಂದೆ ಬಿದ್ದಿದ್ದರು. ನೈತಿಕತೆ ಅವರಿಂದ ಮೈಲುಗಟ್ಟಲೆ ಅಂತರದಲ್ಲಿತ್ತು. ಇಂದಿನ ನಮ್ಮ ಸಮಾಜದ ಹೀನ ಸ್ಥಿತಿಗೆ ಇವರೆಲ್ಲರ ಕೊಡುಗೆ ಇದೆ. ಅಮ್ಮೆಂಬಳರಂತಹ ಅಪರೂಪದ ವ್ಯಕ್ತಿತ್ವ ಮಾತ್ರ ತನ್ನ ಶುಭ್ರತೆಯನ್ನು ಕೊನೆಯತನಕ ಕಾಪಿಟ್ಟುಕೊಂಡಿರುತ್ತೆ. ಅದಕ್ಕೇ ಗಾಂಧಿ ಲೋಹಿಯಾ ಸಂಭಾಷಣೆಯಲ್ಲಿ ಗಾಂಧಿ ಮೆಚ್ಚುವುದು ಶುಭ್ರತೆಯನ್ನೇ ವಿನಾ ಹುಲಿಯ ಧೈರ್ಯವನ್ನಲ್ಲ. ಶುಭ್ರತೆ ಸಸಿಗೆ ನೀರೆರೆದು ಪೋಶಿಸುತ್ತದೆ.


| Kaavya

Nice write up


| Shobha

ಲೇಖನ ತುಂಬಾ ಚೆನ್ನಾಗಿದೆ."ವ್ಯಕ್ತಿಯ ಬದುಕಿನಲ್ಲಿ ಕೊನೆಗೂ ಉಳಿಯುವುದು ವ್ಯಕ್ತಿತ್ವದ ಶುಭ್ರತೆ ಹಾಗೂ ವ್ಯಕ್ತಿತ್ವದ ಸಮಗ್ರತೆಗಳೇ" ಎಂಬ ಮಾತು ಬಹಳ ಇಷ್ಟವಾಯಿತು. ಏನೆಲ್ಲ ಸವಾಲುಗಳ, ತಡೆಗಳ ನಡುವೆಯೂ ವ್ಯಕ್ತಿತ್ವದ ಶುಭ್ರತೆ ಮತ್ತು ಸಮಗ್ರತೆಗಳನ್ನು ಉಳಿಸಿಕೊಂಡು ಬದುಕುವುದು ನಿಜಕ್ಕೂ ದೊಡ್ಡ ಸಾಧನೆ, ಇದು ಬದುಕಿನ ಸಾರ್ಥಕತೆಯೂ ಹೌದು ಎನಿಸುತ್ತದೆ


| Hari Prasad

ಇದು ನೀವು ಮಾತ್ರ ಬರೆಯಬೇಹುದಾದ ಲೇಖನ. ನೀವು ನೀವೇ...


| SOMASHANKARA N

ಸನ್ಮಾನ್ಯ, ಆನಂದರ ಊರು 'ಅಮ್ಮೆಂಬಳ' ಮತ್ತು 'ಗಿಡಕ್ಕೆ ನೀರೆರೆವ' ದೃಶ್ಯ ಇವೆರಡೂ ಇಡೀ ವ್ಯಕ್ತಿತ್ವವನ್ನು ಅವರ ಬಗ್ಗೆ ತಿಳಿಯದವರೂ ಊಹಿಸಿಕೊಳ್ಳಬಹುದಾದ ಸಂಕೇತಗಳು. ಅವರ ವ್ಯಕ್ತಿತ್ವ ಅರಳಿದ್ದು ಮಾತೃಭೂಮಿಯ (ಅಮ್ಮೆಂಬಳ) ಆಳವಾದ ಪ್ರೇಮ ಮತ್ತು ಆ ನೆಲದ ಸ್ವತಂತ್ರ ಹಸಿರನ್ನು ಸಾರ್ವಕಾಲಿಕವಾಗಿ ಚಿರಂಜೀವಿಯಾಗಿಸುವ ಅದಮ್ಯ ಚೇತನದ ಜೀವಂತ ಕ್ರಿಯಾತ್ಮಕ ಸಾಚಾತನದಲ್ಲಿ. ಯಾವುದೇ ಪ್ರಭಾವಗಳಿಗೆ ಮಾಸದ ಸ್ವಚ್ಛಂದ ಶುಭ್ರ ವ್ಯಕ್ತಿತ್ವ ಅವರದು ಎಂದು ಈ ಲೇಖನದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು. ಆನಂದ ರವರ ಸ್ನೇಹ ಸಂಸರ್ಗ ಎಂಬುದು ಆನಂದವನ್ನೇ ಹಂಚುವ ಅದಮ್ಯ ಮಾತೃ ಪ್ರೇಮ ಎಂದು ವೈದೇಹಿ ಅವರು ಉಸಿರಾಡುವ ಅವರ ಮಾತುಗಳಲ್ಲಿ ಅಂದಾಜಿಸಬಹುದು. ಇನ್ನು, ಆನಂದರ ಒಡನಾಡಿ ಜಾರ್ಜ್ ಫರ್ನಾಂಡಿಸ್ ಅಧಿಕಾರದ ಲಾಲಸೆಯಿಂದ ನಿಂತ ನೆಲವನ್ನೇ ಮರೆತು ಆಕಾಶ ಮತ್ತು ಭೂಮಿಯ ನಡುವೆ ಕೆಟ್ಟು ನಿಂತ 'ಲಿಫ್ಟಿ'ನಂತೆ ರೂಪಿಸಿಕೊಂಡ ಬದುಕಿನ ದುರಂತವನ್ನು ತಿಳಿದಾಗ ಯಾರಿಗಾದರೂ ಬೇಸರವಾಗುತ್ತದೆ. ಅಪರಿಚಿತ ಭಾವನೆಗಳಿಗೆ ಮನಸ್ಸಿನಲ್ಲಿ ಜಾಗ ಮಾಡಿಕೊಟ್ಟರೆ ಇಡೀ ಮನಸ್ಸನ್ನೇ ಕೆಡಿಸುತ್ತದೆ. ಕ್ರಮೇಣ ಅದು ರೋಗವಾಗಿ ಹಬ್ಬುತ್ತದೆ ಎಂಬುದಕ್ಕೆ ಜಾರ್ಜ್ ರವರು ತಮ್ಮ ಕೊನೆ ಘಳಿಗೆಯಲ್ಲಿ ಅನುಭವಿಸಿದ ಆ ಎರಡು ರೋಗಗಳು ಸಾಕ್ಷಿ. ಸಮಾಜಕ್ಕೂ ಒಂದು ವ್ಯಕ್ತಿತ್ವವಿದೆ ಎಂದಾದರೆ ಈ ರೋಗ ಅಲ್ಲೂ ಹಬ್ಬುವುದು ಎಂಬುದಕ್ಕೆ ಇವತ್ತಿನ ರೋಗ ಗ್ರಸ್ತ ಸಮಾಜವೇ ಉದಾಹರಣೆ. ಪೂಜ್ಯರಾದ ಆನಂದರವರ 'ಅಮ್ಮೆಂಬಳ' ಮತ್ತು 'ಗಿಡಕ್ಕೆ ನೀರೆರೆವ' ಎರಡು ಸಂಕೇತಗಳು ಭವ್ಯ ಸಮಾಜದ ಭವಿಷ್ಯವನ್ನು ನಿರ್ಮಿಸುವ ಆರೋಗ್ಯದ ಲಕ್ಷಣಗಳಾದರೆ, ಜಾರ್ಜ್ ರವರ ಕೊನೇ ಘಳಿಗೆಯ ಆ ಎರಡು ರೋಗಗಳು ಅನಾರೋಗ್ಯದ ಅವಲಕ್ಷಣಗಳಾಗಿ ಕಂಡುಬರುತ್ತವೆ. ಕೊನೆಯದಾಗಿ, ಲೇಖಕರಾದ ತಮಗೆ ತಮ್ಮ ಬರವಣಿಗೆಯ ಸಂದರ್ಭದಲ್ಲಿ ತಾವು ಆಳವಾಗಿ ಪ್ರೀತಿಸುವ ಇತರೆ ಬರಹಗಾರರ ನುಡಿಮುತ್ತುಗಳು ಸಹಜವಾಗಿಯೇ ಒದಗಿ ಬರುತ್ತವೆ ಎಂದು ಹೇಳಿರುವುದು ತಾವು ಧೀಮಂತ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವ ವಿಚಾರ ಶಕ್ತಿಯೇ ಅದಕ್ಕೆ ಕಾರಣ ಅನ್ನಿಸಿತು. ಹೇಗೆ ಆನಂದರಿಗೆ ಮಾತೃ'ಭೂಮಿ' ಆಸ್ತಿಯಾಗದೆ ತಮ್ಮ ಜೀವನ ಶೈಲಿಯನ್ನು ಹೇಗೆ ಬೇಕೋ ಹಾಗೆ ಕಟ್ಟಿಕೊಳ್ಳುವುದಕ್ಕೆ ಹೂರಣವಾಗಿ ಒದಗಿ ಬಂದಿಹುದೋ, ಹಾಗೆ ತಮಗೂ ಸಿಮೆನ್ ದೆ ಬೊವಾ, ಮಾರ್ಕ್ಸ್, ಲೋಹಿಯಾ, ಯೆಚೂರಿ, ಅಂಬೇಡ್ಕರ್ ಮುಂತಾದ ಮಹನೀಯರು ತಮ್ಮ ಬರಹಕ್ಕೆ ಹೂರಣವಾಗಿ ಒದಗಿ ಬಂದು ತಮ್ಮ ಬರಹದಲ್ಲಿ ವೈಚಾರಿಕ ಸವಿ ಮೂಡಿಸಿ ನಮ್ಮಂಥವರಿಗೆ ಹೊಸ ಅಭಿರುಚಿಯನ್ನು ಕಾಣಿಸುತ್ತಿದೆ ಅನ್ನಿಸಿತು. ಒಟ್ಟಾರೆ "ವ್ಯಕ್ತಿ ಚಾರಿತ್ರ್ಯ VS ಅಧಿಕಾರ" ಎಂಬ ಬರಹದಲ್ಲಿ ಕಂಡು ಬರುವ ಸಂಗತಿಗಳು, ಸನ್ನಿವೇಶಗಳು, ವೈಯುಕ್ತಿಕ ಅಭಿಪ್ರಾಯಗಳು, ಸಾಮಾಜಿಕ ಪರಂಪರೆ, ವೈಚಾರಿಕತೆ, ಅಧಿಕಾರದ ನಡಾವಳಿ, ವ್ಯಕ್ತಿ - ವ್ಯಕ್ತಿತ್ವ ಬಿಡಿ ಹೂಗಳ ಹಾಗೆ ಹರಡಿಹೋಗಿವೆ, ಹೀಗೆ ಹರಡಿ ಹೋದ ಬಿಡಿ ಹೂಗಳನ್ನು ಪ್ರಜ್ಞೆಯ ದಾರದಲ್ಲಿ ಪೋಣಿಸಿದಾಗ ಲೇಖನ ಮಾಲಿಕೆಯ ಶಾರೀರಿಕ ಸ್ವರೂಪ ಸಿಗುತ್ತದೆ ಅನ್ನಿಸಿತು. ಎಲ್ಲಕ್ಕಿಂತ ಮಿಗಿಲಾಗಿ ಇವತ್ತು ಸಾಮಾಜಿಕ ಸಂಬಂಧಗಳೇ ವಿರಳ ಅನ್ನುವ ಸಂದರ್ಭದಲ್ಲಿ ಆನಂದರಂಥವರ ವ್ಯಕ್ತಿತ್ವ ಆದರಣೀಯ, ಅನುಕರಣೀಯ, ಆದರ್ಶಮಯ ಮತ್ತು ಆಪ್ಯಾಯ ಅನ್ನಿಸಿತು. ಥ್ಯಾಂಕ್ ಯೂ ಸೋ ಮಚ್ ಫಾರ್ ದಿಸ್ ಥಾಟ್ ಫುಲ್ ರೈಟಿಂಗ್ ಸರ್...🙏


| ಡಾ. ನಿರಂಜನ ಮೂರ್ತಿ ಬಿ ಎಂ

ವ್ಯಕ್ತಿಚಾರಿತ್ರ್ಯ Vs ಅಧಿಕಾರಗಳ ದ್ವಂದ್ವದಲ್ಲಿ ಕೊನೆಗೆ ಉಳಿಯುವುದು, ಮೊಳೆಯುವುದು, ಬೆಳೆಯುವುದು, ಮತ್ತು ಬಾಳುವುದು ವ್ಯಕ್ತಿಚಾರಿತ್ರ್ಯ ಮಾತ್ರ, ಎಂಬುದನ್ನು ಅಪರೂಪದ ಸಮಾಜವಾದಿ, ಅಆರವರ ಮನ ಮುಟ್ಟುವ ವ್ಯಕ್ತಿ ಚಿತ್ರಣದ ಮೂಲಕ ಋಜುವಾತುಪಡಿಸುತ್ತದೆ ಹುಳಿಯಾರರ ಈ ಅನುಪಮ ಲೇಖನ. ಇದಕ್ಕೆ ಸಮರ್ಪಕ ವಿವರಣೆ-ವಿಶ್ಲೇಷಣೆಗಳನ್ನೊಳಗೊಂಡ, ಸುದೀರ್ಘವಾಗಿರುವ ಶ್ರೀ ಸೋಮಶಂಕರ ಎನ್., ಅವರ ಪ್ರತಿಕ್ರಿಯೆಯೂ ಉತ್ತಮವಾಗಿದೆ. 'ವ್ಯಕ್ತಿಯ ಬದುಕಿನಲ್ಲಿ ಕೊನೆಗೂ ಉಳಿಯುವುದು ವ್ಯಕ್ತಿತ್ವದ ಶುಭ್ರತೆ ಹಾಗೂ ವ್ಯಕ್ತಿತ್ವದ ಸಮಗ್ರತೆಗಳೇ' ಎಂಬ ಹುಳಿಯಾರರ ನುಡಿಗಳು; '.... ಹರಡಿ ಹೋದ ಬಿಡಿ ಹೂಗಳನ್ನು ಪ್ರಜ್ಞೆಯ ದಾರದಲ್ಲಿ ಪೋಣಿಸಿದಾಗ ಲೇಖನ ಮಾಲಿಕೆಯ ಶಾರೀರಿಕ ಸ್ವರೂಪ ಸಿಗುತ್ತದೆ,' ಎಂಬ ಸೋಮಶಂಕರ ಅವರ ನುಡಿಗಳು ಮೆಲುಕು ಹಾಕುವ ಹಾಗಿವೆ. ಈರ್ವರಿಗೂ ಅಭಿನಂದನೆಗಳು. ಸಮಾಜವಾದದ ಅಆಇಈ ತಿಳಿಯಬೇಕೆನ್ನುವವರು, ಸಮಾಜವಾದಿಯಾಗಬೇಕೆನ್ನುವವರು ಮೊದಲು ಅಆರವರನ್ನು ಅಧ್ಯಯನ-ಅನುಕರಣೆ ಮಾಡಬೇಕು.


| Vaidehi janaki Srinivasamurthy

ಆನಂದರನ್ನು ಶೀಘ್ರವೇ ನೋಡಿ ಶುಭಾಶಯ ಹೇಳಿ ಬರಲು ಹೋಗುತ್ತಿದ್ದೇವೆ. ನೂರು ತುಂಬುತ್ತದಲ್ಲವೇ. ಒಂದು ಯುಗದ ಕಣ್ಣಿನಂತೆ, ಕನ್ನಡಿಯಂತೆ ಇರುವವರು ಅವರೆಲ್ಲ... ನಿಮ್ಮ ಲೇಖನ ಓದಿದೆ. ಅವರೂ ಓದುವಂತಿದ್ದರೆ ಅಂತ ಅನಿಸಿತು. ಅವರನ್ನು ಭೇಟಿ ಆದಾಗ ನೀವು ಬರೆದಿರುವುದನ್ನು ತಿಳಿಸುವೆ.


| Vaidehi janaki Srinivasamurthy

ಆನಂದರನ್ನು ಶೀಘ್ರವೇ ನೋಡಿ ಶುಭಾಶಯ ಹೇಳಿ ಬರಲು ಹೋಗುತ್ತಿದ್ದೇವೆ. ನೂರು ತುಂಬುತ್ತದಲ್ಲವೇ. ಒಂದು ಯುಗದ ಕಣ್ಣಿನಂತೆ, ಕನ್ನಡಿಯಂತೆ ಇರುವವರು ಅವರೆಲ್ಲ... ನಿಮ್ಮ ಲೇಖನ ಓದಿದೆ. ಅವರೂ ಓದುವಂತಿದ್ದರೆ ಅಂತ ಅನಿಸಿತು. ಅವರನ್ನು ಭೇಟಿ ಆದಾಗ ನೀವು ಬರೆದಿರುವುದನ್ನು ತಿಳಿಸುವೆ.


| Mahalingeshwar S.P. Parashuram

Ammembala Ananda avarannu Kela u dashakadinda balle.samajavaadi Matra alla, indina rajakeeyadalli vyakti charitra embedded marichike aagide. One and only embankment Anandaru iddare. Neevu baredaddu aksharasha satya. My salutations.


| Vikhar Ahmed

Really look iked your note on Ammembala Anand




Add Comment


Mundana Kathana Nataka

YouTube






Recent Posts

Latest Blogs