೯/೧೧: ಮರುಕಳಿಸಿದ ಸಂಕೇತ  

ಸಂಕೇತಗಳು ಸೃಷ್ಟಿಯಾಗುವ ರೀತಿ ಹಾಗೂ ಸಂಕೇತಗಳನ್ನು ಸಂದರ್ಭ, ಸಮುದಾಯ, ಕಾಲ, ದೇಶ, ಗುಂಪುಗಳು ಸೃಷ್ಟಿಸುವ ರೀತಿ ಈಗ ಎಲ್ಲರಿಗೂ ಪರಿಚಿತ. ವಿದ್ಯಮಾನಗಳು ಕೂಡ ಸಂಕೇತಗಳನ್ನು ಸೃಷ್ಟಿಸುತ್ತವೆ. ಅನೇಕ ಸಲ ಈ ಸಂಕೇತಗಳ ಅರ್ಥ ಒಂದೇ ರೂಪದ್ದಾಗಿರುವುದಿಲ್ಲ. ಸಂಕೇತ, ರೂಪಕಗಳ ವಿದ್ಯಾರ್ಥಿಯಾದ ಈ ಅಂಕಣಕಾರನಿಗೆ ಈ ಥರದ ವಿದ್ಯಮಾನಗಳು ಸಾಂಸ್ಕೃತಿಕ-ರಾಜಕೀಯ ಅಧ್ಯಯನಗಳಿಗೆ ಹೊಸ ಹೊಳಹುಗಳನ್ನು ಕೊಡುತ್ತಿರುತ್ತವೆ. ಇಂಥದೊಂದು ಸಂಕೇತ ಈ ಅಂಕಣಕ್ಕೆ ಟಿಪ್ಪಣಿ ಮಾಡುತ್ತಿದ್ದ ಸೆಪ್ಟೆಂಬರ್ ೧೧ನೆಯ ತಾರೀಕು ಮತ್ತೆ ಎದುರಾಯಿತು. 

ಅವತ್ತು ಜಗತ್ತಿನ ಸುದ್ದಿಜಾಲಗಳಲ್ಲಿ ೯/೧೧ ಎಂಬ ಶೀರ್ಷಿಕೆ ಮತ್ತೆ ಮತ್ತೆ ಕಾಣತೊಡಗಿತು. ಈಚಿನ ದಶಕಗಳಲ್ಲಿ ಜಗತ್ತಿನ ನೆನಪಿನಲ್ಲಿ ಕಾಯಮ್ಮಾಗಿ ಉಳಿದಿರುವ ೯/೧೧ ಎಂಬ ಸಂಕೇತ ಜಗತ್ತಿನ ಮಾಧ್ಯಮಗಳಲ್ಲಿ ಇದೀಗ ಮತ್ತೆ ಎದ್ದು ಕಾಣಲು ಕಾರಣವಿತ್ತು: ಈ ಸಾಂಕೇತಿಕ ದಿನಾಂಕದ ಹುಟ್ಟಿಗೆ ಕಾರಣವಾದ ಭಯಾನಕ ಘಟನೆಗಳು ನಡೆದು ಇದೇ ಸೆಪ್ಟೆಂಬರ್ ೧೧ಕ್ಕೆ ಇಪ್ಪತ್ತೈದು ವರ್ಷವಾಯಿತು.  
ಇಪ್ಪತ್ತೈದು ವರ್ಷಗಳ ಕೆಳಗೆ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಹಾಗೂ ಪೆಂಟಗನ್ ಮೇಲೆ ನಡೆದ ದಾಳಿ ನಿಮಗೆ ನೆನಪಿರಬಹುದು. ಅವತ್ತು ಇದು ಅತಿಭೀಕರ ಭಯೋತ್ಪಾದನೆಯೆಂದು ಅಮೆರಿಕ ಹಾಗೂ ಯೂರೋಪು ಬಣ್ಣಿಸಿದರೆ, ಅಮೆರಿಕವನ್ನು ಕಂಡರಾಗದವರು ಇದು ಅಮೆರಿಕದ ಭಯೋತ್ಪಾದನೆಗೆ ಆದ ಗರ್ವಭಂಗ ಎಂದರು. ಒಬ್ಬನ ಪಾಲಿಗೆ ಭಯೋತ್ಪಾದಕನಾದವನು ಮತ್ತೊಬ್ಬನ ಪಾಲಿಗೆ ಸ್ವಾತಂತ್ರ್ಯ ಹೋರಾಟಗಾರನಾಗುವ ರೀತಿ ಈ ವಿದ್ಯಮಾನಕ್ಕೆ ಬಂದ ಪ್ರತಿಕ್ರಿಯೆಯಲ್ಲೂ ಕಾಣುತ್ತಿತ್ತು! ಈ ಹಿನ್ನೆಲೆಯಲ್ಲಿ, ೯/೧೧ ಎಂಬ ಸಂಕೇತ ಜಗತ್ತಿನ ವಿವಿಧ ಭಾಗಗಳಲ್ಲಿ, ವಿವಿಧ ಧರ್ಮಗಳು, ಪಂಥಗಳ ಅನುಯಾಯಿಗಳಲ್ಲಿ ಯಾವ ಯಾವ ಯಾವ ಅರ್ಥ ಹುಟ್ಟಿಸುತ್ತಾ ಬಂದಿದೆ ಎಂಬುದನ್ನು ಊಹಿಸಬಹುದು.

೨೦೦೧ನೆಯ ಇಸವಿಯ ೯/೧೧ ದಿನವನ್ನು ಅಮೆರಿಕನ್ ಚರಿತ್ರೆಯ ಭೀಕರ ದಿನವೆಂದು ಮತ್ತೆ ಮತ್ತೆ ನೆನೆಯುತ್ತಿದ್ದ ಅಮೆರಿಕಕ್ಕೆ, ಅದಕ್ಕಿಂತ ಇಪ್ಪತ್ತೆಂಟು ವರ್ಷಗಳ ಕೆಳಗೆ ಹುಟ್ಟಿದ್ದ ೯/೧೧ ಸಂಕೇತವನ್ನೂ ಖ್ಯಾತ ಚಿಂತಕ ನೋಮ್ ಚಾಮ್‌ಸ್ಕಿ ಒಮ್ಮೆ ನೆನಪಿಸಿದರು. ‘ಫಸ್ಟ್ ೯/೧೧’ ಎನ್ನಲಾಗುವ ಈ ಸಂಕೇತ ಲ್ಯಾಟಿನ್ ಅಮೆರಿಕದ ಚಿಲಿಯಲ್ಲಿ ಸೃಷ್ಟಿಯಾಗಲು ಅಮೆರಿಕದ ಹುನ್ನಾರ ಕಾರಣವಾಗಿತ್ತು. 

೯. ೧೧. ೧೯೭೩. ಅವತ್ತು ಚಿಲಿ ದೇಶದಲ್ಲಿ ಒಂದು ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆಯಿತು.  ಚಿಲಿಯ ರಾಷ್ಟ್ರಾಧ್ಯಕ್ಷ ಸಾಲ್ವಡಾರ್‍ ಅಯಂಡೆಯ ಬದುಕಿನ ಕೊನೆಯಾಯಿತು. ‘ಪಾಪ್ಯುಲರ್‍ ಸೋಷಲಿಸ್ಟ್ ಪಾರ್ಟಿ’ಯ ನಾಯಕ ಅಯಂಡೆ ಚಿಲಿಯಲ್ಲಿ ಜನರಿಂದ ಚುನಾಯಿತನಾದ ಪ್ರಥಮ ಮಾರ್ಕ್ಸಿಸ್ಟ್ ಅಧ್ಯಕ್ಷನಾಗಿದ್ದ. ‌ಅವತ್ತಿನ ಮಿಲಿಟರಿ ಕ್ಷಿಪ್ರಕ್ರಾಂತಿಯ ಹಿನ್ನೆಲೆಯಲ್ಲಿ ಅಮೆರಿಕದ ಕೈವಾಡವಿತ್ತು ಎಂಬುದು ಈಗ ಜನಜನಿತವಾಗಿದೆ. ಅಯಂಡೆಯ ಸಾವು ಆತ್ಮಹತ್ಯೆಯೋ, ಹತ್ಯೆಯೋ ಎಂಬುದು ವಿವಾದಾಸ್ಪದವಾಗಿಯೇ ಉಳಿದಿದೆ. ಅಮೆರಿಕನ್ ಕೈವಾಡ ಮಿಲಿಟರಿ ಸರ್ವಾಧಿಕಾರಿ ಆಗಸ್ಟೊ ಪೀನೋಶೆಯನ್ನು ಚಿಲಿಯ ಆಡಳಿತದಲ್ಲಿ ತಂದು ಕೂರಿಸಿತು. 

ಸವಾಧಿಕಾರಿ ಪೀನೋಶೆ ಚಿಲಿಯಲ್ಲಿ ನಾಗರಿಕ ಹಕ್ಕುಗಳ ಹರಣದ ಬರ್ಬರ ಹಿಂಸಾಸರಣಿಯನ್ನೇ ಶುರು ಮಾಡಿದ. ಸರ್ವಾಧಿಕಾರ ಹೊಸ ಹೊಸ ಹಿಂಸೆಗಳನ್ನು ಸೃಷ್ಟಿಸುವ ರೀತಿಯನ್ನು ಚರಿತ್ರೆ ಮತ್ತೊಮ್ಮೆ ಕಂಡಿತು. ಪ್ರಜಾಪ್ರಭುತ್ವ ಮಾರ್ಗದಲ್ಲಿ ಚುನಾಯಿತನಾಗಿದ್ದ ಕಮ್ಯುನಿಸ್ಟ್ ಅಧ್ಯಕ್ಷನನ್ನು ಕೆಳಗಿಳಿಸಿ ಜನಕಂಟಕ ಸರ್ವಾಧಿಕಾರಿಯನ್ನು ಪ್ರತಿಷ್ಠಾಪಿಸಿದ ಅಮೆರಿಕದ ಪಾಪಕೃತ್ಯದ ಫಲವಾಗಿ ಫಸ್ಟ್ ೯/೧೧ ‌ಎಂಬ ದಿನ ಲ್ಯಾಟಿನ್ ಅಮೆರಿಕದಲ್ಲಿ ಭೀಕರ ನೆನಪಾಗಿ ದಾಖಲಾಯಿತು. ಚಿಲಿಯ ಜನಮಾನಸದಲ್ಲಿ ಉಳಿದಿರುವ ಈ ೯/೧೧ರ ಸಂಕೇತವನ್ನು ಮರೆತಂತಿದ್ದ ಅಮೆರಿಕವನ್ನು ಇಪ್ಪತ್ತೆಂಟು ವರ್ಷದ ನಂತರ ಮತ್ತೊಂದು ೯/೧೧ ಬೆಚ್ಚಿ ಬೀಳಿಸಿತು.

ಇಪ್ಪತ್ತೈದು ವರ್ಷಗಳ ಕೆಳಗೆ ಜಗತ್ತನ್ನು ಅಲುಗಾಡಿಸಿದ್ದ ೯/೧೧ ದಿನದ ಘಟನೆಯ ವಿವರಗಳನ್ನು ನೆನಪಿಸಿಕೊಳ್ಳಿ: 

೨೦೦೧ನೇ ಇಸವಿಯ ಸೆಪ್ಟೆಂಬರ್ ೧೧ರ ಬೆಳಗ್ಗೆ ಅಲ್ ಖೈದಾ ಸಂಘಟನೆಯ ತಂಡ ಎರಡು ವಿಮಾನಗಳನ್ನು ಹೈಜಾಕ್ ಮಾಡಿ ಅಮೆರಿಕದ ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರಿನ ಉತ್ತರ ಟವರ್ ಹಾಗೂ ದಕ್ಷಿಣ ಟವರ್ ಕಡೆಗೆ ನುಗ್ಗಿಸಿತು. ಮೂರನೆಯ ವಿಮಾನವನ್ನು ವಾಶಿಂಗ್ಟನ್‌ನ ಪೆಂಟಗನ್ ಕಡೆಗೆ ನುಗ್ಗಿಸಲಾಯಿತು. ಅಮೆರಿಕದ ಪಾರ್ಲಿಮೆಂಟ್ ವೈಟ್‌ಹೌಸ್ ಕಡೆಗೆ ನುಗ್ಗಲು ಹೊರಟಿತ್ತೆಂದು ಊಹಿಸಲಾದ ನಾಲ್ಕನೆಯ ವಿಮಾನದ ದಿಕ್ಕನ್ನು ಆ ವಿಮಾನದ ಪ್ರಯಾಣಿಕರೇ ಧೀರೋದಾತ್ತವಾಗಿ ಮುನ್ನುಗ್ಗಿ ಬದಲಿಸಿದ್ದರು. ಈ ಪ್ರಯಾಣಿಕರು ತಮ್ಮ ಕೈಗೆ ಸಿಕ್ಕ ಫುಡ್ ಟ್ರಾಲಿ, ಬೆಂಕಿ ನಂದಿಸುವ ಸಿಲಿಂಡರ್, ಕುದಿವ ನೀರಿನ ಪಾತ್ರೆ ಇತ್ಯಾದಿಗಳನ್ನು ಹಿಡಿದುಕೊಂಡು ಪೈಲಟ್ ಕೂರುವ ಕಾಕ್‌ಪಿಟ್ ಕಡೆಗೆ ನುಗ್ಗಿದರು. ಹೈಜಾಕರ್-ಪೈಲಟ್ ವಿಮಾನವನ್ನು ಬೇರೆ ದಿಕ್ಕಿಗೆ ನುಗ್ಗಿಸಿದ. ವಿಮಾನ ಪೆನ್ಸೆಲ್ವಿಯಾದ ಬಯಲಿಗೆ ಅಪ್ಪಳಿಸಿತು.  

ವಿಮಾನದಲ್ಲಿದ್ದ ಯಾರೊಬ್ಬರೂ ಬದುಕಿ ಉಳಿಯಲಿಲ್ಲ. ಕಂಟ್ರೋಲ್ ರೂಮಿನ ಸಂಭಾಷಣೆಯ ದಾಖಲೆಗಳು, ವಾಯ್ಸ್ ರೆಕಾರ್ಡರುಗಳು, ಟೆಲಿಫೋನ್ ಕರೆಗಳ ಆಧಾರದ ಮೇಲೆ ವಿಮಾನದ ಪ್ರಯಾಣಿಕರ ಬದುಕಿನ ಕೊನೆಗಳಿಗೆಯ ಧೀರೋದಾತ್ತ ಸಾಹಸ ಅನಂತರ ಲೋಕಕ್ಕೆ ಗೊತ್ತಾಯಿತು. ಈ ಪ್ರಯಾಣಿಕರನ್ನು ನೆನೆಯುವ ರಾಷ್ಟ್ರೀಯ ಸ್ಮಾರಕ ಪೆನ್ಸೆಲ್ವಿಯಾದ ಸ್ಟೋನಿಕ್ರೀಕ್ ಟೌನ್‌ಶಿಪ್ ನಲ್ಲಿದೆ. 

ಈ ದಾಳಿಯನ್ನು ರೂಪಿಸಿದ ಒಸಾಮ ಬಿನ್ ಲ್ಯಾಡನ್, ‘ಇನ್ನು ಮುಂದೆ ಅಮೆರಿಕ ಸದಾ ಸಣ್ಣಪುಟ್ಟ ಯುದ್ಧದಲ್ಲಿ ತೊಡಗುವಂತೆ ಮಾಡುವ ಮೂಲಕ ಅದರ ಆರ್ಥಿಕತೆಯನ್ನು ಭಗ್ನಗೊಳಿಸುವ ಯತ್ನವಿದು’ ಎಂದಿದ್ದ. ಜಗತ್ತಿನ ಅತ್ಯಂತ ತೀಕ್ಷ್ಣವಾದ ಇಂಟೆಲೆಜೆನ್ಸ್ ಸರ್ವಿಸ್ ಎನ್ನಲಾದ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್.ಬಿ.ಐ.) ಈ ಮಟ್ಟದ ಅಪಾಯವನ್ನು ನಿರೀಕ್ಷಿಸಿರಲಿಲ್ಲ. ಒಸಾಮಾಗಾಗಿ ಅಮೆರಿಕ ಮುಂದಿನ ಹತ್ತು ವರ್ಷ ಹುಡುಕುತ್ತಲೇ ಇತ್ತು. ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನದ ಎಲ್ಲೆಯೊಳಕ್ಕೆ ಪ್ರವೇಶಿಸಿದ ಅಮೆರಿಕನ್ ಗುಪ್ತ ಪಡೆ ಮೇ ೨೦೧೧ರ ಸಂಜೆ ಅಲ್ಲಿನ ಅಬ್ಬೊತ್ತಾಬಾದಿನ ಮನೆಯಲ್ಲಿದ್ದ ಒಸಾಮನನ್ನು ಹತ್ಯೆ ಮಾಡಿತು. 

೯/೧೧ರ ಪರಿಣಾಮಗಳನ್ನು ಹಾಗೂ ಬಿನ್ ಲ್ಯಾಡನ್ ಹತ್ಯೆಯನ್ನು ಅಮೆರಿಕ ದಕ್ಕಿಸಿಕೊಂಡಿದೆಯೋ ಅಥವಾ ಬಿನ್ ಲ್ಯಾಡನ್ ಮಾಡಿದ್ದ ಊಹೆಯಂತೆ ತನ್ನ ಸೂಪರ್ ಪವರ್ ಇಮೇಜನ್ನು ಉಳಿಸಿಕೊಳ್ಳಲು ಹಲವು ಯುದ್ಧಗಳಿಗೆ ಸಿಕ್ಕಿಕೊಂಡು ತನ್ನ ಆರ್ಥಿಕ ಬಿಕ್ಕಟ್ಟು-ಸಂಕಟಗಳನ್ನು ಹೆಚ್ಚಿಸಿಕೊಳ್ಳುತ್ತಿದೆಯೋ? ಇಂಥ ಗಂಭೀರ ಪ್ರಶ್ನೆಗಳನ್ನು  ಅಂತರ ರಾಷ್ಟ್ರೀಯ ವಿದ್ಯಮಾನಗಳ ವಸ್ತುನಿಷ್ಠ ತಜ್ಞರಷ್ಟೇ ಉತ್ತರಿಸಬಲ್ಲರು. ಲ್ಯಾಡನ್ ಹತ್ಯೆಯ ನಂತರ, ೧೩ ಮೇ ೨೦೧೩ರಂದು ಅಮೆರಿಕದ ಅಧ್ಯಕ್ಷ ಒಬಾಮ ‘ಟೆರರಿಸಂ ವಿರುದ್ಧ ಯುದ್ಧ ಮುಗಿಯಿತು’ ಎಂದು ಘೋಷಿಸಿದ್ದೂ ಆಯಿತು. ೯/೧೧ರ ಘಟನೆಯಿಂದ ನೊಂದ ಅಮೆರಿಕನ್ನರು ಈ ಘೋಷಣೆಯನ್ನು ಬೆಂಬಲಿಸಿದರೂ, ಅಮೆರಿಕ ಆ ಹಾದಿ ಬಿಟ್ಟು ಹೊರಳಲಿಲ್ಲ.  ಲೋಕದ ಎಲ್ಲ ಬಗೆಯ ಶಸ್ತ್ರಾಸ್ತ್ರಗಳ ಹಿಂಸಾಸರಣಿಯ ಜುಟ್ಟು ಈಗ ದೇಶಗಳ ಕೈಯಲ್ಲಿಲ್ಲ; ಅದು ವಿಶ್ವದ ಶಸ್ತ್ರಾಸ್ತ್ರ ಮಾರುಕಟ್ಟೆಯ ಕೈಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ಇಂಥ ಲೋಕದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್‍ ಪತನದ ನಡುವೆಯೂ  ಬದುಕುಳಿದ ‘ದ ಡಸ್ಟ್ ಲೇಡಿ’ ಎಂದೇ ಹೆಸರಾದ ಮಾಸೀ ಬಾರ್ಡರ್‍ಸ್ ದನಿಯನ್ನು ಯಾರು ತಾನೇ ಕೇಳಿಸಿಕೊಳ್ಳುತ್ತಾರೆ?

೨೦೦೧ರ ಘಟನೆ ನಡೆದು ಇಪ್ಪತ್ತೈದು ವರ್ಷಗಳಾಗಿದ್ದರಿಂದ ಈ ವರ್ಷದ ಸೆಪ್ಟೆಂಬರ್ ೧೧ರಂದು ಇದನ್ನೊಂದು ‘ಲೀಡ್ ಸ್ಟೋರಿ’ ಮಾಡಲು ಜಗತ್ತಿನ ಮಾಧ್ಯಮಗಳು ಸಿದ್ಧತೆ ಮಾಡಿಕೊಂಡಿದ್ದವು; ಅವಲೋಕನ, ಸಂದರ್ಶನ, ಸ್ಪೆಷಲ್ ಸ್ಟೋರಿಗಳ ಪ್ರಸಾರಗಳನ್ನು ಶುರು ಮಾಡಲು ಹೊರಟಿದ್ದವು. ಆದರೆ ಅವತ್ತೇ ೯/೧೧ರ ಸಂಕೇತವನ್ನು ಹಿಮ್ಮೆಟ್ಟಿಸಿ ಮತ್ತೊಂದು ಸಂಕೇತವನ್ನು ಸ್ಥಾಪಿಸುವ ರೀತಿಯಲ್ಲಿ ಇರಾನ್ ಬೆಂಬಲಿತ ‘ಹೂಥಿ’ಗಳು ಯಮನ್ ಮೇಲೆ ಹಿಡಿತ ಸಾಧಿಸಲೆತ್ನಿಸಿದರು. ಈ ಹೂಥಿ ಆಕ್ರಮಣ ಈ ವರ್ಷದ ಸೆಪ್ಟೆಂಬರ್ ೧೧ರಂದೇ ಪೂರ್ಣಗೊಂಡಿದ್ದು ಪೂರ್ವಯೋಜಿತವೋ, ಆಕಸ್ಮಿಕವೋ ಊಹಿಸುವುದು ಕಷ್ಟ. ಆದರೂ ಈ  ಹೂಥಿ ದಾಳಿ ಇಪ್ಪತ್ತೈದು ವರ್ಷಗಳ ಹಿಂದಿನ ಸೆಪ್ಟೆಂಬರ್ ೧೧ರ ನೆನಪನ್ನು ಹಿಮ್ಮೆಟ್ಟಿಸಿ ಜಗತ್ತಿನ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ನಿಜ. ಇಪ್ಪತ್ತೈದು ವರ್ಷಗಳ ಹಿಂದಿನ ಒಸಾಮಾ ನಡೆಯನ್ನು ಅಮೆರಿಕ ಹೇಗೆ ಊಹಿಸಿರಲಿಲ್ಲವೋ ಹಾಗೆಯೇ ಇವತ್ತು ಹೂಥಿಗಳ ಈ ನಡಿಗೆಯನ್ನೂ ಅಮೆರಿಕವೂ ಸೇರಿದಂತೆ ವಿವಿಧ ದೇಶಗಳ ಭದ್ರತಾ ಪಡೆಗಳು ಊಹಿಸಿದ್ದಂತೆ ಕಾಣುತ್ತಿಲ್ಲ.

ಪ್ರತಿ ವರ್ಷ ೯/೧೧ ಎಂಬ ಭೀಕರ ನೆನಪಿಗೆ ಮರಳುವ ಅಮೆರಿಕ ಆ ಭೀಕರ ಘಟನೆಯ ನಂತರವೂ ಕಾಲು ಕೆರೆದು ಯುದ್ಧಕ್ಕಿಳಿಯುವ ಚಾಳಿ ಬಿಟ್ಟಿಲ್ಲ. ಅಮೆರಿಕ, ಇಸ್ರೇಲ್ ಆರಂಭಿಸಿದ ಯುದ್ಧದ ಭಾಗವಾಗಿಯೇ ಈಗ ಇರಾನ್ ಬೆಂಬಲಿತ ಹೂಥಿ ಪಡೆಗಳ ಆಕ್ರಮಣ ನಡೆದಿರುವುದು ಸ್ಪಷ್ಟ. ಹೂಥಿಗಳು ಯಮನ್ ಬಳಿಯ ಕೆಂಪು ಸಮುದ್ರದ ಕರಾವಳಿಯ ಮೇಲೆ ಹಿಡಿತ ಸಾಧಿಸಿರುವುದರಿಂದ ಇರಾನಿನ ಕೈ ಮೇಲಾಗಲಿದೆ ಎಂದು ಕೆಲವರು ಹೇಳುತ್ತಿದ್ದರೆ, ಇದು ತಾತ್ಕಾಲಿಕ ಗೆಲುವು ಎನ್ನುವವರಿದ್ದಾರೆ. ತನ್ನ ದೇಶದ ಸಂರಕ್ಷಣೆಗಾಗಿ ಅಮೆರಿಕವನ್ನು ನಂಬಿಕೊಂಡಿದ್ದ ಸೌದಿ ಅರೇಬಿಯಾದ ಯುವರಾಜ ನೆರವಿಗಾಗಿ ಮಾಡುತ್ತಿರುವ ಮೊರೆಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಈತನಕ ಕಿವಿಗೊಟ್ಟಿಲ್ಲ! ನಿತ್ಯ ಬದಲಾಗುವ ಅಮೆರಿಕದ ಅಧ್ಯಕ್ಷೀಯ ವರಸೆಯ ಲೆಕ್ಕಾಚಾರಗಳೇ ಬೇರೆ. ಅಥವಾ ಮತ್ತೊಂದು ೯/೧೧ ಸಂಕೇತದ ದೀರ್ಘಕಾಲಿಕ ಅರ್ಥ ಅಮೆರಿಕಕ್ಕೆ ಹೊಳೆದಿರಬಹುದೆ?

ಕಾರಣ, ೧೯೭೩ರಲ್ಲಿ ಮೊದಲನೆಯ ೯/೧೧ನ್ನು ಸೃಷ್ಟಿಸಿದ ಅಮೆರಿಕ, ೨೦೦೧ರಲ್ಲಿ ಮತ್ತೊಂದು ೯/೧೧ಕ್ಕೆ ಬಲಿಯಾಯಿತು. ಇದೀಗ ೨೦೨೬ರ ಇನ್ನೊಂದು ೯/೧೧ರ ಹೊಸ ಬೆಳವಣಿಗೆ, ಸಣ್ಣ ಪುಟ್ಟ ಗುಂಪುಗಳು ಕೂಡ ಸೂಪರ್ ಪವರ್ ಗಳನ್ನು ಎದುರಾಗಬಲ್ಲ ಸಾಧ್ಯತೆಯನ್ನು ತೋರಿಸುತ್ತಿರುವ ರೀತಿ ಲೋಕದ ಯುದ್ಧೋನ್ಮಾದದ ಅಮಲನ್ನು ಇಳಿಸಬಲ್ಲದೆ? ಅದು ಸಂಕೇತಗಳನ್ನು ಯಾರು ಯಾವ ರೀತಿ ಓದುತ್ತಾರೆ ಎಂಬುದನ್ನೂ ಅವಲಂಬಿಸಿದೆ!
 

Share on:

Comments

3 Comments



| Somashankara N

ನಮಸ್ತೆ ಸರ್, "೯/೧೧ : ಮರುಕಳಿಸಿದ ಸಂಕೇತ"ಲೇಖನದಲ್ಲಿ ಒಂದೇ ದಿನಾಂಕವು ಬೇರೆ ಬೇರೆ ಕಾಲ, ದೇಶ ಮತ್ತು ರಾಜಕೀಯ ಸಂದರ್ಭಗಳಲ್ಲಿ ಹೇಗೆ ವಿಭಿನ್ನ ಅರ್ಥಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ತಾವು ಅತ್ಯಂತ ಗಮನಾರ್ಹವಾಗಿ ವಿಶ್ಲೇಷಿಸಿದ್ದೀರಿ. ೧೯೭೩ರ ಸೆಪ್ಟೆಂಬರ್ ೧೧ ರಂದು ಚಿಲಿಯಲ್ಲಿ ನಡೆದ ಮಿಲಿಟರಿ ಕ್ಷಿಪ್ರ ಕ್ರಾಂತಿ, ೨೦೦೧ರ ಸೆಪ್ಟೆಂಬರ್ ೧೧ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿ ಹಾಗೂ ಲೇಖನದಲ್ಲಿ ಚರ್ಚಿಸಲಾದ ೨೦೨೬ರ ಬೆಳವಣಿಗೆಗಳನ್ನು ಪರಸ್ಪರ ಸಂಬಂಧಿಸಿ, "೯/೧೧" ಎಂಬುದು ಕೇವಲ ದಿನಾಂಕವಲ್ಲ; ಅದು ರಾಜಕೀಯ ಅಧಿಕಾರ, ಹಿಂಸೆ, ಯುದ್ಧ ಮತ್ತು ಪ್ರತಿರೋಧದ ಸಂಕೇತವಾಗಿ ರೂಪುಗೊಂಡಿದೆ ಎಂದು ಹೇಳಿರುವುದು ನನ್ನಲ್ಲಿ ಕುತೂಹಲಕ್ಕೆ ಕಾರಣವಾಯಿತು. ಯಾಕೆಂದರೆ, ನಮ್ಮ ಕನ್ನಡದ ವಿಚಾರಶೀಲ ಬರಹಗಾರರಾದ ಪ್ರೀತಿಯ ಡಾ. ಡಿ. ಆರ್. ನಾಗರಾಜ್ ರವರು ಸಹ ತಮ್ಮ "ಮಣ್ಣಿನ ಪವಿತ್ರೀಕರಣ"ಎಂಬ ಲೇಖನದಲ್ಲಿ ಇದೇ ರೀತಿಯ ವಿಚಾರಗಳನ್ನು ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ರಾಷ್ಟ್ರೀಯತೆ ಪರಿಕಲ್ಪನೆಗಳನ್ನು ಮೂರು ರೀತಿಯ ಕಲ್ಪನೆಯ ಆಧಾರದ ಮೇಲೆ 'ರಾಷ್ಟ್ರ' 'ರಾಷ್ಟ್ರ ಪ್ರಭುತ್ವ' ಹಾಗೂ 'ರಾಷ್ಟ್ರೀಯತೆ'ಗಳು ಎಂದು ಪರಿಶೀಲಿಸಿ ವಿಚಾರ ಮಾಡುತ್ತಾರೆ. ಅಂದು 'ರಾಷ್ಟ್ರ' (ನೇಷನ್). ಇಂದಿರುವುದು 'ರಾಷ್ಟ್ರಪ್ರಭುತ್ವ' (ನೇಷನ್ ಸ್ಟೇಟ್). ಪ್ರಾಥಮಿಕ ಹಂತದಲ್ಲಿ ಮೋಹಕವಾಗಿ ಕಾಣುವ ರಾಷ್ಟ್ರವು (ರಾಷ್ಟ್ರವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ), ರಾಷ್ಟ್ರಪ್ರಭುತ್ವವಾಗಿ ಬೆಳೆದಾಕ್ಷಣ ಭಯಾನಕವಾಗಿ ಕಾಣಿಸುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತಾವು ತಮ್ಮ ಲೇಖನದಲ್ಲಿ ಚರ್ಚಿಸಿರುವ ಚಿಲಿ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟುಗಳು ಡಿ ಆರ್ ಎನ್ ಹೇಳುವಂತೆ ವಿಶ್ವಮಟ್ಟದ "ಕಲ್ಪಿತ ಕುಲ"ಗಳ ಬಳುವಳಿ ಎಂದೆನಿಸುತ್ತದೆ. ಹಾಗೆ ಮುಂದುವರೆದು, ರಾಷ್ಟ್ರೀಯತೆಯ ಕೆಲವು ಲಾಂಛನಗಳ ಪ್ರಸ್ತಾಪ ಮಾಡಿ "ಪ್ರಾಚೀನ ಭಾರತದ ರಾಜತ್ವ ಹಾಗೂ ರಾಷ್ಟ್ರತ್ವದ ಲಾಂಛನಗಳು ಮುಖ್ಯವಾಗಿ ನಾಲ್ಕು ಎಂದು ಗುರುತಿಸುತ್ತಾರೆ. ಅವುಗಳೆಂದರೆ, ಒಂದು ಶ್ವೇತ ಛತ್ರ, ಎರಡು ರಾಜ ದಂಡ; ಮೂರು ಕಿರೀಟ ಮತ್ತು ನಾಲ್ಕು ಸಿಂಹಾಸನ. ಇವುಗಳಲ್ಲಿ ಯಾವುದೇ ಒಂದಕ್ಕೆ ಅವಮಾನವಾದರೂ ಅದು ರಾಜನಿಗೆ, ರಾಷ್ಟ್ರಕ್ಕೆ ಆದ ಅವಮಾನವೆಂದೇ ಭಾವಿಸಲಾಗುತ್ತದೆ. ಈ ರೀತಿಯ ಲಾಂಛನಗಳು ಸಾಂಕೇತಿಕ ಮಹತ್ವವನ್ನು ಪಡೆದಿರುವಂಥವು ಎಂದು ಗುರುತಿಸುತ್ತಾರೆ. ಅಷ್ಟೇ ಅಲ್ಲ, ಆಧುನಿಕ ರಾಷ್ಟ್ರತ್ವವೂ ಕೊಂಚ ಭಿನ್ನರೂಪದ ಇಂಥ ಲಾಂಛನಗಳನ್ನು ಹೊಂದಿದೆ. ಎಂದು ಹೇಳುತ್ತಾ, ಅವುಗಳನ್ನು ಒಂದು ರಾಷ್ಟ್ರಧ್ವಜ; ಎರಡು ಸೈನ್ಯ; ಮೂರು ಅಭಿವೃದ್ಧಿ ಮಾದರಿ ಹಾಗೂ ನಾಲ್ಕು ವಿಜ್ಞಾನ ತಂತ್ರಜ್ಞಾನ ನೀತಿ ಎಂದು ಗುರುತಿಸಿ, ಈ ನಾಲ್ಕು ಲಾಂಛನ ಗಳಿಲ್ಲದೆ ಆಧುನಿಕ ರಾಷ್ಟ್ರ ಪ್ರಭುತ್ವ ಎಂದು ಎನಿಸಿಕೊಳ್ಳಲಾರದು ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ಯುದ್ಧೋನ್ಮಾದದಲ್ಲಿ ತೊಡಗಿರುವ ಅಧಿಕಾರ ಶಾಹಿ ರಾಷ್ಟ್ರಗಳು ತಮ್ಮದೇ ನೀತಿಗಳಿಂದ ಹುಟ್ಟುವ ಪ್ರತಿರೋಧ ಮತ್ತು ಹಿಂಸೆಯ ಪರಿಣಾಮಗಳನ್ನು ಒಂದೇ ದಿನಾಂಕದ '೯/೧೧'ಸಂಕೇತಗಳ ಹಿನ್ನೆಲೆಯಲ್ಲಿ ಚರ್ಚಿಸಿರುವುದು ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ. ಡಿ ಆರ್ ಎನ್ ವೈಚಾರಿಕ ಚಕ್ಷುಗಳನ್ನು ಧರಿಸಿ ಅವರ ರಾಷ್ಟ್ರೀಯತೆಯ ಪರಿಕಲ್ಪನೆಯ ಸಂಕೇತಗಳನ್ನು ವಿಶ್ವ ಭ್ರಾತೃತ್ವದ ಮಟ್ಟದಲ್ಲಿ ಇಟ್ಟು ನೋಡಿದಾಗ ಡಿಆರ್‌ಎನ್ ಬಳಸಿರುವ ಎಲ್ಲ ಲಾಂಛನಗಳು ಅಧಿಕಾರಶಾಹಿ ರಾಷ್ಟ್ರಗಳ ಸ್ವಹಿತಾಸಕ್ತಿಯ ಸಾಧನಗಳಾಗಿವೆ ಎಂದನ್ನಿಸಿತು. ಪುರಾತನ ಮಾನವ ಕುಲದ ರಾಜತ್ವ ಯುದ್ಧಗಳಿಗಾಗಿ ಆಯುಧಗಳನ್ನು ತಯಾರು ಮಾಡುತ್ತಿದ್ದ ಆ ಕಾಲಕ್ಕೂ; ಇಂದು ಆಯುಧಗಳಿಗಾಗಿ ಯುದ್ಧವನ್ನೇ ಮಾಡುತ್ತಿರುವ ಈ ಕಾಲಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿದರೆ "ಕಾಲಧರ್ಮ" ಹಿಂದೆ ಸರಿದು ಮಾನವನ "ಕಲ್ಪಿತ ಕುಲದ" ಮನುಷ್ಯ ನಿರ್ಮಿತ "ಸಾಂಕೇತಿಕ ಧರ್ಮ" ತನ್ನ ಯಾಂತ್ರಿಕ ನಡಾವಳಿಯ ಪೈಶಾಚಿಕ ಪ್ರಭುತ್ವವನ್ನು ವಿಶ್ವಮಟ್ಟದಲ್ಲಿ ಬಹಳ ನಿಷ್ಠೆಯಿಂದ ನಿಭಾಯಿಸುತ್ತಿದೆ; ಸೂಕ್ಷ್ಮ ಜೀವಿಗಳ ನಿದ್ದೆ ಕೆಡಿಸುತ್ತಿದೆ. ಸಂಕೇತಗಳಲ್ಲಿ ಬಲವಿದೆ ಎಂದು ಹುಂಬುತನದಿಂದ ನಂಬುವುದು ನನ್ನ ತಿಳುವಳಿಕೆಯ ಮಟ್ಟಿಗೆ ಲೇಖನ ಓದಿದ ಮೇಲೆ ಮಾನವಕುಲದ ಕಲ್ಯಾಣಕ್ಕೆ ಯೋಗ್ಯವಲ್ಲ ಎಂದನಿಸಿತು. ವಾರದ ಅಂತ್ಯದಲ್ಲಿ ತುಂಬಾ ಒಳ್ಳೆ ಲೇಖನ ಬರೆದು ಕೊಟ್ಟಿರಿ ಗುರುಗಳೇ, ಇದು ಅಂತ್ಯವಲ್ಲ ನನ್ನ ಓದಿನ ಹೊಸತನಕ್ಕೆ ಆರಂಭವೆಂದು ಭಾವಿಸುವೆ. ಧನ್ಯವಾದಗಳು 🙏


| Nataraj Huliyar Replies

Thanks Somashankar for your detailed analysis. That is a good research. Keep it up


| Subramanyaswamy Swamy

ಮಾಡಿದ್ದುಣ್ಣೋ ಮಹರಾಯ ಎಂಬಂತೆ ಕಂಡುಬರುತ್ತದೆ, ಸೂಪರ್ ಪವರ್ ಕೂಡ ಒಂದು ಹಂತದಲ್ಲಿ ವಿಶ್ರಾಂತಿ ಬಯಸಿ ಗಾಂಧಿ ಮಾರ್ಗದ ಕಡೆಗೆ ಮುಖ ಮಾಡಬಹುದು ಎನಿಸುತ್ತದೆ.




Add Comment


Mundana Kathana Nataka

YouTube






Recent Posts

Latest Blogs