ಮನಸಿನ ಮನ ಅರಿಯುವ ಅನ್ವೇಷಣೆ
by Nataraj Huliyar
ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳಿಯುವ ಮನ
ಬ್ಯಾರೆಲೋ ಮನಸೇ
ಶಿಶುನಾಳ ಶರೀಫರ ಈ ಅಪೂರ್ವ ಸಾಲು ೧೯೯೦ರ ಸುಮಾರಿನಲ್ಲಿ ನನ್ನ ಕಿವಿಗೆ ಬಿದ್ದಾಗಿನಿಂದ ಕೆಣಕುತ್ತಲೇ ಇದೆ. ಮನಸಿನ ಮನ ತಿಳಿಯುವ ಆ ಬ್ಯಾರೆ ಮನಸು ಶರೀಫರಿಗೂ ಸಿಕ್ಕಿದಂತಿಲ್ಲ! ಆದರೆ ಮನಸನ್ನು ತಿಳಿಯುವ ಮನ ಬ್ಯಾರೆ ಇದೆ ಎಂಬ ಪ್ರಜ್ಞೆ ಆಧುನಿಕ ಕನ್ನಡದ ಆರಂಭದ ಕವಿ ಶರೀಫರಿಗಿತ್ತು ಎಂಬುದು ರೋಮಾಂಚನ ಹುಟ್ಟಿಸುತ್ತದೆ. ‘ಮುಟ್ಟಿದ ಮನಮನೆ ತೊಟ್ಟನೆ ಪಸಾಯದಾನಂಗೊಟ್ಟಳ್’ ಎಂದು ಅಮೃತಮತಿಯ ಬಗ್ಗೆ ಫಟ್ಟನೆ ಬರೆದಿರಬಹುದಾದ ‘ಯಶೋಧರ ಚರಿತೆ’ಯ ಜನ್ನನಿಗೆ ಶರೀಫರ ಸಂದೇಹ ಇದ್ದಿರಲಿಕ್ಕಿಲ್ಲ!
ಯಾವುದೇ ಥರದ ಬರವಣಿಗೆಯಲ್ಲಿ ಮಾನವ ಮನಸ್ಸನ್ನು, ಮಾನವ ಪ್ರಜ್ಞೆಯನ್ನು ಹಿಡಿಯುವುದು ಅತ್ಯಂತ ಕಠಿಣ, ಕ್ಲಿಷ್ಟ, ಸಂಕೀರ್ಣ ಎಂಬುದು ಎಲ್ಲ ಕಾಲದ ಪ್ರಾಮಾಣಿಕ ಲೇಖಕ ಲೇಖಕಿಯರಿಗೂ ಗೊತ್ತಿರುತ್ತದೆ. ‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಾ' ಎಂದ ಬಸವಣ್ಣನಿಗೂ ಇದರ ಅರಿವಿತ್ತು.ಇಪ್ಪತ್ತನೆಯ ಶತಮಾನದ ಪಶ್ಚಿಮದ ಲೇಖಕ ಲೇಖಕಿಯರಿಗೆ ‘ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೇ’ ಎಂಬ ಸತ್ಯ ಹೊಳೆದ ನಂತರ, ಆ ಮನಸನ್ನು ಹಿಡಿಯಲು ಈಗಿರುವ ಬರವಣಿಗೆಯ ನಿರೂಪಣಾಕ್ರಮಗಳು ಸಾಲದು ಅನ್ನಿಸಿತು. ಆ ಹುಡುಕಾಟದಲ್ಲಿ ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ ಎಂಬ ಬರವಣಿಗೆಯ ಕ್ರಮ ರೂಪುಗೊಂಡಿತು.
ಪ್ರೊಫೆಸರ್ ಹಸನ್ ಮನ್ಸೂರ್ ನಮ್ಮ ಎಂ.ಎ. ಕ್ಲಾಸಿನಲ್ಲಿ ಜೇಮ್ಸ್ ಜಾಯ್ಸ್ನ ‘ಯೂಲಿಸಿಸ್’ ಕಾದಂಬರಿ ಪಾಠ ಮಾಡುತ್ತಾ, ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ ಪರಿಕಲ್ಪನೆಯನ್ನು ಪರಿಚಯಿಸಿದ ದಿನವೇ ಅದು ನನ್ನನ್ನು ಹಿಡಿದುಬಿಟ್ಟಿತು. ಮನಸ್ಸಿನಲ್ಲಿ ಹಾದು ಹೋಗುವ ಅಣುರೇಣುವನ್ನು ಹಿಡಿದಾಗ ಮಾತ್ರ ವ್ಯಕ್ತಿಯ ನಿಜ-ಒಳಲೋಕದ ಅರಿವಾಗುತ್ತದೆ ಎಂಬ ಅಸಲಿ ಅನ್ವೇಷಣೆ ಇಪ್ಪತ್ತನೆಯ ಶತಮಾನದ ಮೊದಲ ಭಾಗದ ಪಶ್ಚಿಮದ ಸಾಹಿತ್ಯದಲ್ಲಿ ಕಾಣಿಸಿಕೊಂಡಿತು. ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ ಬರವಣಿಗೆಯ ರೀತಿಯನ್ನು, ಟೆಕ್ನಿಕ್ ಅಥವಾ ತಂತ್ರವನ್ನು ಅವರು ರೂಪಿಸಿಕೊಳ್ಳಲೆತ್ನಿಸಿದ್ದು ಆಗ. ತಮ್ಮ ಕತೆ, ಕಾದಂಬರಿಗಳ ಪಾತ್ರಗಳ ಒಳಲೋಕ ಹೊಳೆಯೊಂದು ಹರಿದು ಬರುವಂತೆ ಬರೆಯಬೇಕು ಎಂಬ ಲೇಖಕ ಲೇಖಕಿಯರ ತಹತಹ ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ ಬರವಣಿಗೆಯ ಹುಟ್ಟಿನ ಹಿನ್ನೆಲೆಯಲ್ಲಿದೆ.
ಕನ್ನಡ ಸಾಹಿತ್ಯ-ಸಾಹಿತ್ಯವಿಮರ್ಶೆ ೧೯೬೦-೭೦ರ ದಶಕದಲ್ಲಿ ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ ಪದಗುಚ್ಛವನ್ನು ಅನುವಾದಿಸಿಕೊಂಡಾಗ ರೂಪುಗೊಂಡ ‘ಪ್ರಜ್ಞಾಪ್ರವಾಹ ತಂತ್ರ’ ಎಂಬ ಪದಗುಚ್ಛ ನನ್ನನ್ನು ಚಕಿತಗೊಳಿಸುತ್ತಲೇ ಇದೆ. ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ಗಿಂತ ವಿಸ್ತಾರ ವ್ಯಾಪ್ತಿಯುಳ್ಳ ‘ಪ್ರಜ್ಞಾಪ್ರವಾಹ’ವನ್ನು ರೂಪಿಸಿಕೊಂಡ ನಮ್ಮ ಲೇಖಕ ಲೇಖಕಿಯರಿಗೆ ಆ ಬರವಣಿಗೆಯ ತಂತ್ರ ದಕ್ಕಿತೇ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿಯುತ್ತದೆ. ಕನ್ನಡ ಸಾಹಿತ್ಯದಲ್ಲಿ ಪ್ರಜ್ಞಾಪ್ರವಾಹ ತಂತ್ರ ಯಾಕೆ ಹೆಚ್ಚು ಬಳಕೆಯಾಗಿಲ್ಲ ಎಂಬ ಪ್ರಶ್ನೆ ಎರಡು ದಶಕಗಳ ಕೆಳಗೆ ‘ಕನ್ನಡ ಟೈಮ್ಸ್’ ಕಛೇರಿಯಲ್ಲಿ ಗೆಳೆಯರ ಮಾತಿನ ನಡುವೆ ಬಂದಿತ್ತು. ಆಗಿನ ಟಿಪ್ಪಣಿಯ ಭಾಗಗಳು ಹಾಗೂ ನಂತರದ ನೋಟಗಳು:
ಯುರೋಪು-ಪಶ್ಚಿಮದಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ ಕಾದಂಬರಿ ಪ್ರಕಾರ ಸಮರ್ಥವಾಗಿ ರೂಪುಗೊಂಡು, ಬೆಳೆದು ನೂರು ವರ್ಷ ಕಳೆದ ಮೇಲೆ, ಇಪ್ಪತ್ತನೆಯ ಶತಮಾನದ ಹೊಸ ಲೇಖಕ, ಲೇಖಕಿಯರಿಗೆ ಆವರೆಗಿನ ಕಥಾನಿರೂಪಣೆಯ ಅರಕೆ-ಕೊರತೆಗಳು ಕಾಣತೊಡಗಿದವು. ಮಾನವ ಪ್ರಜ್ಞೆಯ ಒಳಸೂಕ್ಷ್ಮಗಳನ್ನು ಹಿಡಿಯಲು ಇನ್ನಷ್ಟು ಸೂಕ್ಷ್ಮವಾದ ಸಾಧನಗಳು ಬೇಕು ಎಂದು ಈ ಆಧುನಿಕರಿಗೆ ಅನಿಸತೊಡಗಿತು. ತಮ್ಮ ಬರವಣಿಗೆಯ ನಿಖರವಾದ ವಾಕ್ಯಗಳಲ್ಲಿ ಪ್ರಜ್ಞೆಯ ಛಿದ್ರವಿಚ್ಛಿದ್ರವಾದ ನಿಜಸ್ಥಿತಿ ಮೂಡುತ್ತಿಲ್ಲ ಎಂಬ ಅನುಮಾನ ಅವರನ್ನು ಕಾಡಿತು. ಆಗ ಹೆನ್ರಿ ಜೇಮ್ಸ್, ಜೇಮ್ಸ್ ಜಾಯ್ಸ್, ವರ್ಜೀನಿಯಾ ವುಲ್ಫ್, ವಿಲಿಯಂ ಫಾಕ್ನರ್ ಮೊದಲಾದವರು ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ ಬರವಣಿಗೆಯನ್ನು ರೂಪಿಸಿಕೊಳ್ಳತೊಡಗಿದರು.
ಒಂದು ಪಾತ್ರದ ಮಾನಸಿಕ ಲೋಕ ಹೇಗೆ ಎತ್ತೆಂದರತ್ತ ಹರಿಯುತ್ತದೆಯೋ, ‘ಹಾಗ್ಹಾಗೇ’ ಅದನ್ನು ಮಂಡಿಸುವ ಕಲೆಯನ್ನು ‘ಸ್ಟ್ರೀಮ್ ಆಫ್ ಕಾನ್ಷಿಯಸ್ನೆಸ್’ ಬರವಣಿಗೆ ಹುಡುಕಾಡತೊಡಗಿತು. ಪ್ರಜ್ಞೆ, ಅಪ್ರಜ್ಞೆ, ಆಲೋಚನೆ, ನೆನಪು, ನಿರೀಕ್ಷೆ, ಭಾವನೆಗಳು- ಇವುಗಳ ಜೊತೆಗೆ ಬಂದು ಸೇರಿಕೊಳ್ಳುವ ಯಾವಯಾವುದೋ ತಂತುಗಳು ಹಾಗೂ ಚಿತ್ರಗಳನ್ನು ಹಾಗೇ ಮಂಡಿಸುವ ಪ್ರಯತ್ನ ಇದು. ಮೇಲೆ ಹೇಳಿದ ನಾಲ್ವರೂ ಈ ಮಾದರಿ ಬಳಸಿ ಮನಸ್ಸಿನ ಒಡಕು ಸತ್ಯಗಳ ಅಣುರೂಪದ ವಿವರಗಳಿಗೆ ಹತ್ತಿರ ಹತ್ತಿರ ಹೋದರು. ವಾಕ್ಯಗಳ ಬಂಧನಕ್ಕೆ ಸಿಕ್ಕ ತಕ್ಷಣ ಮುಕ್ಕಾಗುವ ಪ್ರಜ್ಞೆಯ ಅಸಲಿ ಸ್ಥಿತಿ-ಗತಿಗಳನ್ನು ತುಂಡುತುಂಡು ಚಿತ್ರಗಳ ಮೂಲಕ ಇಡಲೆತ್ನಿಸಿದರು. ಈ ಅಣುರೂಪದ ಚಿತ್ರಗಳ ಮೂಲಕ ಅವ್ಯಕ್ತವಾದ ಅಪ್ರಜ್ಞೆಯನ್ನು ಹಿಡಿಯಲೆತ್ನಿಸಿದ ಕಾದಂಬರಿಗಳಲ್ಲಿ ವರ್ಜೀನಿಯಾ ವುಲ್ಫ್ ಬರೆದ ‘ಟು ದಿ ಲೈಟ್ ಹೌಸ್', ‘ಮಿಸೆಸ್ ಡಾಲೊವೇ; ಜೇಮ್ಸ್ ಜಾಯ್ಸ್ನ ‘ಯೂಲಿಸಿಸ್', ಹೆನ್ರಿಜೇಮ್ಸ್ನ ‘ದಿ ಪೋರ್ಟ್ರೇಟ್ ಆಫ್ ಎ ಲೇಡಿ', ವಿಲಿಯಂ ಫಾಕ್ನರ್ನ ‘ದಿ ಸೌಂಡ್ ಅಂಡ್ ಫ್ಯುರಿ' ಈಗ ಪ್ರಖ್ಯಾತವಾಗಿವೆ.
ಕನ್ನಡದ ‘ಪ್ರಜ್ಞಾಪ್ರವಾಹ' ಎಂಬ ಪದಕ್ಕೆ ಇಂಗ್ಲಿಷಿಗಿಂತ ವ್ಯಾಪಕವಾದ ಅರ್ಥವಿದ್ದರೂ ಪಶ್ಚಿಮದ ಕಾದಂಬರಿಕಾರರಷ್ಟು ಸೂಕ್ಷ್ಮವಾಗಿ, ತೀರಾ ಹತ್ತಿರದಿಂದ ಮಾನವಪ್ರಜ್ಞೆಯನ್ನು ಹಿಡಿಯುವ ಸವಾಲನ್ನು ಕನ್ನಡ ಕಾದಂಬರಿಕಾರ, ಕಾದಂಬರಿಕಾರ್ತಿಯರು ಕೈಗೆತ್ತಿಕೊಳ್ಳಲು ಆಗಿಲ್ಲ ಎಂಬ ನಮ್ಮ ಅವತ್ತಿನ ಪುಟ್ಟ ಚರ್ಚೆ ಇವತ್ತಿಗೂ ಅಪೂರ್ಣವಾಗೇ ಇರುವಂತಿದೆ. ಯಾಕೆಂದರೆ, ತೋರಿಕೆಯ ಅಥವಾ ಕಲಾತ್ಮಕವಾದ ಭಾಷಿಕ ಆಟಗಳನ್ನೆಲ್ಲ ಬದಿಗಿಟ್ಟು, ಸಾಧಾರಣ ವಾಕ್ಯರಚನೆಯ ನಿಯಮಗಳನ್ನು ಮೀರಿ, ಪ್ರಜ್ಞೆಯ ಆಳದಲ್ಲಿ ಹರಿಯುತ್ತಿರುವ ಎಲ್ಲವನ್ನೂ ನಗ್ನವಾಗಿ, ಹಸಿಯಾಗಿ, ಅತ್ಯಂತ ಪ್ರಾಮಾಣಿಕವಾಗಿ ಮಂಡಿಸಬೇಕಾದ ಸವಾಲು ಪ್ರಜ್ಞಾಪ್ರವಾಹ ಬರವಣಿಗೆಯಲ್ಲಿರುತ್ತದೆ. ಈ ಕ್ರಿಯೆ ಸೃಜನಶೀಲ ಮನಸ್ಸಿಗೆ ಅತ್ಯಂತ ತ್ರಾಸವಾಗುವ, ಕಠಿಣ ಸವಾಲಿನ ಕ್ರಿಯೆ ಕೂಡ.
ಪ್ರಜ್ಞಾಪ್ರವಾಹ ಬರವಣಿಗೆಗೆ ಎಲ್ಲವನ್ನೂ ಭೇದಿಸುವ ಅಸಾಧ್ಯ ಶಕ್ತಿ ಇರಬೇಕಾಗುತ್ತದೆ. ಲೇಖಕನೊಬ್ಬ ತನ್ನನ್ನು ತಾನು- ಅದರಲ್ಲೂ ತನ್ನ ಮನಸ್ಸು, ಪ್ರಜ್ಞೆಗಳನ್ನು- ನಿಷ್ಠುರವಾಗಿ, ತೀಕ್ಷ್ಣವಾಗಿ, ರಾಜಿಯಿಲ್ಲದೆ ನೋಡಿಕೊಳ್ಳಬೇಕಾಗುತ್ತದೆ. ನೋಡುವುದು ಎಂದರೆ ನಿಜಕ್ಕೂ ‘ನೋಡುವುದು’, ‘ಕಾಣುವುದು’; ಅಲ್ಲಿ ಕಂಡದ್ದು ಎಂಥ ಭಯಾನಕ, ಕಹಿ ಸತ್ಯವೇ ಆಗಿದ್ದರೂ ಅದನ್ನು ದಾಖಲಿಸುವುದು. ಬರೆಯುವ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಲಾಗಲೀ, ತನ್ನ ಪ್ರೀತಿಯ ಪಾತ್ರವೊಂದು ಅತ್ಯಂತ ಸಂಭಾವಿತ ಪಾತ್ರ ಎಂದು ಸ್ಥಾಪಿಸಲು ತೋರುಗಾಣಿಕೆಯ ಚಿತ್ರ ಕೊಡಲಾಗಲೀ ಇಲ್ಲಿ ಅವಕಾಶವಿಲ್ಲ. ತನ್ನೊಳಗಿನ ಎಲ್ಲವನ್ನೂ ಹೇಳುತ್ತಿದ್ದೇನೆ ಎಂಬ ಸ್ವಪ್ರದರ್ಶನದ ದುರಹಂಕಾರಕ್ಕೂ ಇಲ್ಲಿ ಎಡೆಯಿಲ್ಲ. ತಾನು ಕಂಡದ್ದನ್ನು ಕಾಣಿಸುವುದರ ಮೂಲಕ ಒಂದು ಸ್ಥಿತಿಯ ಏರಿಳಿತ, ಮೂಡುಗಳನ್ನು ಮಂಡಿಸುತ್ತಿದ್ದೇನೆ ಎಂಬ ಸ್ಥಿತಿ ಮಾತ್ರ ಇಲ್ಲಿರುತ್ತದೆ. ಪ್ರಜ್ಞಾಪ್ರವಾಹ ತಂತ್ರ ಬರವಣಿಗೆ ಎಷ್ಟೋ ಸಲ ಕಾಮಾ, ಫುಲ್ಸ್ಟಾಪುಗಳೂ ಇಲ್ಲದೆ ಚಿತ್ರಗಳನ್ನು ಚೆಲ್ಲುತ್ತಾ ಹೋಗುವ ಬರವಣಿಗೆ. ಇದನ್ನು ಜಾಯ್ಸ್ ತನ್ನ ಯೂಲಿಸಿಸ್' ಕಾದಂಬರಿಯ ಕೊನೆಯ ಭಾಗದಲ್ಲಿ ತೋರಿಸಿದ.
ಈ ಭಾಗದಲ್ಲಿ ಜಾಯ್ಸ್ ಒಂದು ಹೆಣ್ಣಿನ ಪ್ರಜ್ಞೆಯಲ್ಲಿ ಹರಿಯುತ್ತಿರುವ ಛಿದ್ರಛಿದ್ರ ಚಿತ್ರಗಳ ಲೋಕಕ್ಕೆ ತೀರಾ ಸನಿಹ ಬರಲೆತ್ನಿಸಿದ್ದ. ೧೯೨೨ರಲ್ಲಿ ಪ್ರಕಟವಾದ ‘ಯೂಲಿಸಿಸ್’ ಕಾದಂಬರಿ ಓದಿದ ಮೇಲೆ, ನನಗೆ ಟಾಲ್ಸ್ಟಾಯ್ ‘ಅನ್ನಾ ಕರೆನಿನಾ'ದಂಥ ಶ್ರೇಷ್ಠ ಕಾದಂಬರಿಯ ಕೊನೆಯಲ್ಲಿ ಅನ್ನಾಳ ಬಿಕ್ಕಟ್ಟಿನ ಮನಸ್ಥಿತಿಯ ಚಿತ್ರಣ ಕೂಡ ಅಪೂರ್ಣ ಎನ್ನಿಸತೊಡಗಿತು. ‘ಅನ್ನಾಕರೆನಿನಾ' ಕಾದಂಬರಿಯ ಕೊನೆಯಲ್ಲಿ ಅನ್ನಾಗೆ ಬಗೆಬಗೆಯ ಪ್ರಶ್ನೆಗಳು ಹರಿದು ಬರತೊಡಗುತ್ತವೆ. ಮಗುವನ್ನು ಬಿಟ್ಟು, ಗಂಡನನ್ನು ಬಿಟ್ಟು, ಒಲಿದು ಬಂದವನ ಜೊತೆಯಲ್ಲಿ ಇರಲೆ? ಇರಬಲ್ಲೆನೆ? ಎಲ್ಲಿಗೆ ಹೋಗಲಿ, ಯಾವುದು ನನ್ನ ದಿಕ್ಕು? ಈ ಎಲ್ಲ ಪ್ರಶ್ನೆಗಳು ‘ಅನ್ನಾ ಕರೆನಿನಾ’ ಕಾದಂಬರಿಯಲ್ಲಿ ಸ್ಪಷ್ಟವಾದ ವಾಕ್ಯಗಳಲ್ಲಿ ಕಾಣುತ್ತವೆ. ಆದರೆ ಜಾಯ್ಸನ ಪ್ರಜ್ಞಾಪ್ರವಾಹದಲ್ಲಿ ಮೂಡಿದ ಹೆಣ್ಣಿನ ‘ಮನಸಿನ ಮನ’ ಕಂಡ ನನಗೆ, ಟಾಲ್ಸ್ಟಾಯ್ನ ಅನ್ನಾಳ ಪ್ರಜ್ಞೆಯ ಚಿತ್ರಣ ‘ಯೂಲಿಸಿಸ್’ನಲ್ಲಿ ಬರುವಷ್ಟು ಸಂಕೀರ್ಣವಲ್ಲ ಎನ್ನಿಸತೊಡಗಿತು. ಎಲ್ಲ ಚೌಕಟ್ಟುಗಳನ್ನೂ ಧಿಕ್ಕರಿಸುವ ಅಂತರಂಗದ ದನಿಗಳು ವಾಕ್ಯಗಳಲ್ಲಿ ಬಂಧಿಯಾಗಲು ನಿರಾಕರಿಸುತ್ತವೆ ಎಂಬ ಅನುಮಾನ ಗಾಢವಾಗತೊಡಗಿತು. ವಿರುದ್ಧ ಧ್ರುವಗಳ ನಡುವೆ ಸೀಳಿಕೊಂಡ ಅನ್ನಾಳಂಥ ಸೂಕ್ಷ್ಮ ಹೆಣ್ಣಿನ ಮನಸ್ಸಿನಲ್ಲಿ ನಡೆಯುತ್ತಿರುವುದನ್ನು ಸಮರ್ಪಕವಾದ ವಾಕ್ಯಗಳಲ್ಲಿ ಟಾಲ್ಸ್ಟಾಯ್ ಮಂಡಿಸುವ ಹೆಣ್ಣಿನ ಮನಸ್ಸಿನ ಚಿತ್ರ ಅಪೂರ್ಣವಾಗಿ ಕಾಣತೊಡಗಿತು.
ಇದು ಮನಸ್ಸನ್ನು ಕುರಿತ ಬರವಣಿಗೆಯ ಸವಾಲು! ಇಂಥ ಸವಾಲಿನೆದುರು ಯಾವುದೇ ನಿಜವಾದ ಲೇಖಕಿಗೆ, ಲೇಖಕನಿಗೆ ಮಾನವ ಪ್ರಜ್ಞೆಯ ನಿಜ ಚಿತ್ರಗಳು ತಮ್ಮ ಶಬ್ದಗಳಿಗೆ ಸಿಕ್ಕದೆ ಜಾರಿ ಹೋಗುತ್ತಿವೆ ಎಂಬ ಚಡಪಡಿಕೆ ಹುಟ್ಟಿದರೆ ಆಶ್ಚರ್ಯವಲ್ಲ. ಬರವಣಿಗೆ ಅತ್ಯಂತ ಕಷ್ಟದ ಕಾಯಕ ಎಂಬ ಜ್ಞಾನೋದಯವಾಗುವುದು ಆ ಗಳಿಗೆಗಳಲ್ಲೇ. ಟಾಲ್ಸ್ಟಾಯ್ನಂಥ ಶ್ರೇಷ್ಠ ಬರಹಗಾರ ಮಾನವಮನಸ್ಸಿನ ಬಗ್ಗೆ ಬರೆದರೂ, ಅದು ಅಪೂರ್ಣವಾಗಿ ಕಾಣುತ್ತದೆಯೆಂದರೆ, ನಮ್ಮಂಥ ಬರಹಗಾರರ ಪಾಡೇನು ಎಂಬ ಆತ್ಮನಿರೀಕ್ಷೆ ಆರಂಭವಾಗುವುದು ಇಂಥ ಗಳಿಗೆಗಳಲ್ಲೇ.
ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಈ ಸವಾಲನ್ನು ಎದುರಿಸಿದ ಜಾಯ್ಸ್, ಮಾನವ ಪ್ರಜ್ಞೆಯಲ್ಲಿ ಒಂದಕ್ಕೊಂದು ಸಂಬಂಧವಿರದೆ, ತರ್ಕವಿಲ್ಲದಂತೆ ಮೂಡುವ ಶಬ್ದಗಳನ್ನು, ಚಿತ್ರಗಳನ್ನು ಹಾಳೆಯ ಮೇಲಿಟ್ಟ. ಹಾಸಿಗೆಯ ಮೇಲೆ ಮೈಚಾಚಿದ ಮೋಲಿಯ ಚಿತ್ತದಲ್ಲಿ ಡಬ್ಲಿನ್ ನಗರದಲ್ಲಿ ಆಕೆ ಈಗಾಗಲೇ ಕಂಡ ಎಲ್ಲ ದೃಢಕಾಯ ಪುರುಷರ ಚಿತ್ರಗಳು ಮೂಡುವುದನ್ನು ಸೂಚಿಸಿದ. ಹಾಗೆಯೇ ವರ್ಜೀನಿಯಾ ವುಲ್ಫ್ ‘ಮಿಸೆಸ್ ಡೊಲೋವೇ' ಕಾದಂಬರಿಯಲ್ಲಿ ಡಾಲೋವೇ ತನ್ನ ಇಳಿಗಾಲದಲ್ಲಿ ಪಾರ್ಟಿಯೊಂದಕ್ಕೆ ಸಿದ್ಧತೆ ನಡೆಸುತ್ತಿರುವಾಗ ಅವಳ ಪ್ರಜ್ಞೆಗೆ ಹರಿದುಬಂದ ಚಿತ್ರಗಳ ಮೂಲಕವೇ ಅವಳ ಖಾಸಗಿ ಜಗತ್ತಿನ ಕತೆ ಹೇಳಲೆತ್ನಿಸಿದಳು. ಯೂಟ್ಯೂಬ್ನಲ್ಲಿರುವ ‘ಮಿಸೆಸ್ ಡೊಲೋವೇ’ ಸಿನಿಮಾ ನೋಡಿದರೂ, ಅವಳ ಪ್ರಜ್ಞಾಪ್ರವಾಹ ನಿಮ್ಮನ್ನು ತಟ್ಟಬಲ್ಲದು.
ಆಧುನಿಕ ಕನ್ನಡ ಲೇಖಕರು ಕೂಡ ಮಾನವ ಪ್ರಜ್ಞೆಯನ್ನು ಹಿಡಿದಿಡುವ ಈ ಸವಾಲನ್ನು ಹಲ ಬಗೆಯಲ್ಲಿ ಎದುರಿಸಲೆತ್ನಿಸಿದರು. ತನ್ನೊಳಗೂ ನೋಡಿಕೊಂಡು ಹುಟ್ಟಿದ ತೀಕ್ಷ್ಣ ಒಳನೋಟಗಳ ಜೊತೆಗೆ ಫ್ರಾಯ್ಡಿಯನ್ ಮನೋವಿಜ್ಞಾನದ ಅರಿವನ್ನೂ ಬೆರೆಸಿ ಮನಸಿನ ಮನ ಹಿಡಿಯಲೆತ್ನಿಸಿದರು. ಶಾಂತಿನಾಥ ದೇಸಾಯಿ, ಲಂಕೇಶ್, ಬಿ.ಸಿ.ದೇಸಾಯಿ ಥರದವರು ಪ್ರಜ್ಞಾಪ್ರವಾಹ ತಂತ್ರವನ್ನು ವರ್ಜೀನಿಯಾ ವುಲ್ಫ್ ಥರ ದಕ್ಷವಾಗಿ ಬಳಸದಿದ್ದರೂ ತಮ್ಮ ನಿಷ್ಠುರ ಹುಡುಕಾಟದ ಗಳಿಗೆಗಳಲ್ಲಿ ಮಾನವ ಪ್ರಜ್ಞೆಯ ಬಿರುಕುಗಳನ್ನು ಹತ್ತಿರದಿಂದ ಕಾಣುವ ಧೈರ್ಯ ತೋರಿದರು. ಲಂಕೇಶರ ‘ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ’ ಕತೆ ಓದಿರುವವರಿಗೆ ಮನಸ್ಸನ್ನು ಹಿಡಿದಿಡುವ ಈ ಸೃಜನಶೀಲ ಪ್ರಯತ್ನದ ಅಂದಾಜು ಸಿಕ್ಕಬಲ್ಲದು. ಆದರೂ ಪ್ರಜ್ಞೆಯ ಪ್ರವಾಹವನ್ನು ಜಾಯ್ಸ್, ವುಲ್ಫ್ ಅಥವಾ ಹೆನ್ರಿ ಜೇಮ್ಸರಷ್ಟು ಧೈರ್ಯದಿಂದ ಹಿಡಿಯಲು ಕನ್ನಡ ಲೇಖಕ, ಲೇಖಕಿಯರಿಗೆ ಸಾಧ್ಯವೇ ಆಗಲಿಲ್ಲವೇನೋ!
ಖಾಸಗಿ ಡೈರಿಯನ್ನೂ ಪ್ರಾಮಾಣಿಕವಾಗಿ ಬರೆದುಕೊಳ್ಳಲು ಆಗದ ಸಂಸ್ಕೃತಿಯಲ್ಲಿ ಪ್ರಜ್ಞಾಪ್ರವಾಹ ಬರವಣಿಗೆ ಕೊನೆಗೂ ಅಸಾಧ್ಯವೇನೋ! ತಾವು ಮಹಾನ್ ಧೈರ್ಯಶಾಲಿಗಳೆಂದು ತಿಳಿದು ಅಥವಾ ಭ್ರಮಿಸಿ ಅಥವಾ ತೋರಿಸಿಕೊಳ್ಳಲು ಬರೆಯುವ ಲೇಖಕ ಲೇಖಕಿಯರು ತಮ್ಮೊಳಗಿನ ಆಳ ಆಳಕ್ಕೆ ಇಣುಕಿಣುಕಿ ಮೊಗೆದುಕೊಂಡಾಗ ಮಾತ್ರ ಮನಸಿನ ಮನ ತಿಳಿಯಲೆತ್ನಿಸುವ ಬರವಣಿಗೆ ಸಾಧ್ಯವೇನೋ!
Comments
9 Comments
| ಮಂಜುನಾಥ್ ಸಿ ನೆಟ್ಕಲ್
ನಾನು ಮೊದಲಿಗೆಪ್ರಜ್ಞಾ ಪ್ರವಾಹ ತಂತ್ರದಲ್ಲಿ ಬರೆದ ಕತೆ ಓದಿದ್ದು ಪೂರ್ಣಚಂದ್ರ ತೇಜಸ್ವಿ ಅವರದು. 'ಸ್ವರೂಪ'ನೀಳ್ಗತೆಯನ್ನು. ಮೊದಲ ಬಾರಿಗೆ ಅದನ್ನು ಓದಿದಾಗ ನನಗೆ ಗೊತ್ತಿರಲಿಲ್ಲ ಇದು ಪ್ರಜ್ಞಾಪ್ರವಾಹ ತಂತ್ರದಲ್ಲಿ ಬರದ ಕಥೆ ಎಂದು.ಆದರೆ ಆ ಕಥೆ ಓದಿಸಿಕೊಂಡು ಹೋಗುವ ರಭಸಕ್ಕೆ ನಾನು ದಂಗಾಗಿದ್ದೆ. ಆ ಕಥೆಯನ್ನು ಪೂರ್ತಿ ಓದಿ ಮುಗಿಸುವವರೆಗೂ ಎಲ್ಲಿಯೂ ನಿಲ್ಲಿಸುವ ಮನಸೇ ಬರಲಿಲ್ಲ. ಈ ಕಥೆಯನ್ನು ಓದಿದ ನಂತರ ನಿಮ್ಮೊಂದಿಗೆ ಚರ್ಚಿಸಿದಾಗ ಈ ಬಗೆಯ ಬರವಣಿಗೆ ತಂತ್ರದ ಬಗ್ಗೆ ಮೊದಲ ಬಾರಿಗೆ ತಿಳಿಯಿತು. ತೇಜಸ್ವಿ ಅವರ 'ಸ್ವರೂಪ' ನೀಳ್ಗತೆ ಯಲ್ಲಿ ನಾಯಕನ ಅಸ್ತಿತ್ವವಾದಿ ಚಿಂತನೆಗಳು ಹಾಗೂ ಆಂತರಿಕ ಮಥನವನ್ನು ನಿರೂಪಿಸಲು ಪ್ರಜ್ಞಾಪ್ರವಾಹ ಅನುಸರಿಸಿದ್ದಾರೆ ಮತ್ತು ಇದೇ ಲೇಖಕರ ಹುಲಿಯೂರಿನ ಸರಹದ್ದು ಹಾಗೂ ಶಾಂತಿನಾಥ ದೇಸಾಯಿ ಅವರ ಮುಕ್ತಿ ಕಾದಂಬರಿ ಓದಿದಾಗ ಈ ಬಗೆಯ ಬರವಣಿಗೆಯ ಓದಿನ ಪರಿಣಾಮ ಅರಿವಾಯಿತು. ಈಗ ಮತ್ತೊಮ್ಮೆ ಪ್ರಜ್ಞಾ ಪ್ರವಾಹ ಎಂಬುದನ್ನು ನಿಮ್ಮ ಲೇಖನ ಹೆಚ್ಚು ಮನದಟ್ಟಾಗುವಂತೆ ಮಾಡಿದೆ ಧನ್ಯವಾದಗಳು ಸರ್
| Suma
Very Nice
| Shamarao
ಎಷ್ಟೋ ವರ್ಷಗಳ ನಂತರ ಈ ಪರಿಕಲ್ಪನೆಯನ್ನು ನೆನಪುಮಾಡಿದಿರಿ. ಧನ್ಯವಾದಗಳು.ನಲವತ್ತೋ ಐವತ್ತೋ ವರ್ಷಗಳ ಹಿಂದೆ ಓದಿದ ಯೂಲಿಸಿಸ್ ಮತ್ತೆ ಓದಬೇಕೆಂಬ ಅಪೇಕ್ಷೆಯಾಯಿತು.ಪುಸ್ತಕ ನನ್ನಲ್ಲಿರಲಿಲ್ಲ.ಅಮೆಜಾನ್ ಮೂಲಕ ತರಿಸಿಕೊಳ್ಳುತ್ತಿದ್ದೇನೆ.
| Dr.Doreswamy
My Phd Scholar is using the stream of consciousness technique to explore somatic state of trauma from North-east poet, Easterine Kire in his PH.D. work
| Dr.Sanganagowda
'ಪ್ರಜ್ಞಾ ಪ್ರವಾಹ' ಎಂದರೆ ಒಬ್ಬ ಲೇಖಕ 'ಕಾಣುವಿಕೆ' ಮೂಲಕ ಲೋಕವನ್ನು ಹಿಡಿಯುವುದು ಅಂತ ಅನಿಸ್ತಿದೆ. ನೋಡುವುದಕ್ಕೂ, ಕಾಣುವುದಕ್ಕೂ ಕೊಂಚ ಮಾನಸಿಕ ಅಂತರ ಕಾಣ್ತಿದೆ. ನೋಡುವುದು ಅಂದ್ರೆ ನೋಡುಗ-ನೋಡುಗಿ, ವಿಷಯ ಅಥವಾ ಸಂಗತಿ ಕುರಿತು ಒಂದು ಮಾನಸಿಕ ಅಂತರ ಕಾಯ್ದುಕೊಂಡಿರುತ್ತಾರೆ. 'ಕಾಣುವುದು' ಅಂದ್ರೆ ಅದು ಒಳಗಣ್ಣಿನಿಂದ ಬರುವಂಥದ್ದು. ಅದಕ್ಕೆ ಅಕ್ಕ " ನೀವು ಕಾಣಿರೆ, ನೀವು ಕಾಣಿರೆ" ಎಂದು ಎರಡೆರಡು ಸರತಿ ಹೇಳುತ್ತಾಳೆ.. ಇನ್ನು ಅಲ್ಲಮ " ಹಿಂದಣದ ಹೆಜ್ಜೆ ನೋಡಿ ಕಂಡಲ್ಲದೆ" ಅಂದ್ರೆ, ಬಸವಣ್ಣ "ಕಂಡಾಗಳ್ ಅಶ್ರುಜಲಂಗಳ್ ಸುರಿಯದಿದ್ದಡೆ" ಎಂದು ಹೇಳುತ್ತಾನೆ. ಹಾಗಾಗಿಯೇ ನಾವು 'ರವಿಕಾಣದ್ದನ್ನು ಕವಿಕಂಡ' ಎಂದು ಹೇಳುತ್ತೇವೆ.
| Mahalingeshwar S.P. Parashuram
Really TRUE. thought provoking one. Deep insightful analysis. Congratulations sir.
| Mahalingeshwar S.P. Parashuram
Really TRUE. thought provoking one. Deep insightful analysis. Congratulations sir.
| ಡಾ. ನಿರಂಜನ ಮೂರ್ತಿ ಬಿ ಎಂ
'ಮನಸಿನ ಮನ ಅರಿಯುವ ಅನ್ವೇಷಣೆ'ಯಲ್ಲಿ ಪ್ರಜ್ಞಾ ಪ್ರವಾಹ ತಂತ್ರದ ವಿವರಣೆ-ವಿಶ್ಲೇಷಣೆ ಚೆನ್ನಾಗಿದೆ. ಸ್ರ್ಟೀಮ್ ಆಫ್ ಕಾನ್ಶಿಯಸ್ನೆಸ್ ಟೆಕ್ನಿಕ್ ಗಿಂತ ಕನ್ನಡದ ಪ್ರಜ್ಞಾ ಪ್ರವಾಹ ತಂತ್ರದ ಬೀಸು, ಹರಹು, ಸೂಕ್ಷ್ಮತೆ ಹೆಚ್ಚಿದೆಯೆಂಬ ವಿವರಣೆ ಬೆರಗು ಮೂಡಿಸಿತು. ಮತ್ತು ಈ ಲೇಖನದ ಮೂಲಕ ನಮ್ಮ ಪ್ರೊ. ಹಸನ್ ಮನ್ಸೂರ್ ಅವರನ್ನು ನೆನಪಿಸಿದ್ದು ಸಂತೋಷದ ವಿಷಯ. ಹಾಗೆಯೇ ಉಳಿದೆಲ್ಲ ಪ್ರೊಫೆಸರ್ ಗಳು ಮತ್ತು ಸಹಪಾಠಿಗಳೂ ಸ್ಮೃತಿಪಟಲದೊಳಗೆ ಹಾದು ಹೋದರು, ನಟರಾಜ್ ಹುಳಿಯಾರರ ಜೊತೆಗೆ. ನಮನಗಳು ನಿಮಗೆ.
| SOMASHANKARA N
ಲೋಕ ಎಂದರೆ ಲೆಕ್ಕವಿರದಷ್ಟು ಘಟನೆಗಳ ಮಹಾಪ್ರವಾಹ. ಮನೋ ಲೋಕವೂ ಸಹ ಇಂಥ ಘಟನೆಗಳ ಅನುಭವ ಜನ್ಯ ಪ್ರವಾಹವೇ. ಮನವೆಂಬ ಘಟವು ಸಮಾಧಿ ಸ್ಥಿತಿಗೇರಿ ಘಟನೆಗಳನ್ನು ಪ್ರತ್ಯಯಿಸಿ ಘಟಿಸುವ ಸಂದರ್ಭದಲ್ಲಿ ಇಂಥ "ಪ್ರಜ್ಞಾ ಪ್ರವಾಹ" ಹುಟ್ಟ ಬಹುದು ಎಂದು ತಮ್ಮ ಲೇಖನ ಓದಿದ ಮೇಲೆ ಅನ್ನಿಸಿತು. ಕವಿಯ "ಪ್ರಜ್ಞಾ ಪ್ರವಾಹ" ಓತಪ್ರೋತವಾಗಿ ಹರಿದು ಬಂದಾಗ ಮನೋಸ್ಥಿತಿ ತನ್ನ ಬರವಣಿಗೆಯಲ್ಲಿ ತದ್ವತ್ತಾಗಿ ಮಂಡಿಸಲ್ಪಡುತ್ತದೆ. ಇದಕ್ಕೆ ದಾಸ್ತೋವೆಸ್ಕಿಯ "ಅಪರಾಧ ಮತ್ತು ಶಿಕ್ಷೆ" ಎಂಬ ಕಾದಂಬರಿಯಲ್ಲಿ ನಾಯಕನ ಪಾತ್ರವೂ ಹೊರತಲ್ಲ ಅನ್ನಿಸಿತು. ಕಾದಂಬರಿಯ ರಸ್ಕೋಲ್ನಿಕೋವ್ ಒಬ್ಬ ಬಡ ಮಾಜಿ ವಿದ್ಯಾರ್ಥಿ. ಅವನು ಅತ್ಯಂತ ಬುದ್ಧಿವಂತನಾಗಿದ್ದರೂ, ಬಡತನ, ಏಕಾಂತ ಮತ್ತು ತನ್ನದೇ ಆದ ತಾತ್ವಿಕ ಚಿಂತನೆಗಳಿಂದ ಮಾನಸಿಕವಾಗಿ ಗೊಂದಲಕ್ಕೊಳಗಾಗಿರುತ್ತಾನೆ. ಅವನಿಗೆ ಒಂದು ವಿಚಿತ್ರವಾದ ಸಿದ್ದಾಂತವಿರುತ್ತದೆ. ಸಮಾಜದ ಸಾಮಾನ್ಯ ನಿಯಮಗಳನ್ನು ಮೀರಿದ ಕೆಲವು ಅಸಾಧಾರಣ ವ್ಯಕ್ತಿಗಳು ಮಾನವ ಕುಲದ ಒಳಿತಿಗಾಗಿ ಅಗತ್ಯವೆಂದು ಭಾವಿಸಿದರೆ, ಸಾಮಾನ್ಯ ನೈತಿಕ ನಿಯಮಗಳನ್ನು ಉಲ್ಲಂಘಿಸಬಹುದೆಂದು ಅವನು ಯೋಚಿಸುತ್ತಾನೆ. ಈ ವಿಚಾರಧಾರೆಯ ಪ್ರಭಾವದಿಂದ ಅವನು ಒಂದು ಅಪರಾಧವನ್ನು ಎಸಗುತ್ತಾನೆ. ಆದರೆ ಅಪರಾಧ ಮಾಡಿದ ನಂತರ ಅವನ ಮನಸ್ಸಿನಲ್ಲಿ ಭಯ, ಪಾಪ ಪ್ರಜ್ಞೆ, ಆತಂಕ ಮತ್ತು ನೈತಿಕ ಸಂಘರ್ಷಗಳು ಆರಂಭವಾಗುತ್ತವೆ. ಕಾದಂಬರಿಯ ಮುಖ್ಯ ಸಂಘರ್ಷವೆಂದರೆ ಕಾನೂನಿನಿಂದ ದೊರೆಯುವ ಶಿಕ್ಷೆ ಗಿಂತಲೂ ಮನುಷ್ಯನ ಅಂತಃಕರಣವೇ ಅವನಿಗೆ ಹೇಗೆ ಶಿಕ್ಷೆ ನೀಡುತ್ತದೆ ಎಂಬುದು. ಮಾನವ ಪ್ರಕೃತಿ ನಿರ್ಮಿಸಿದ "ಪ್ರಜ್ಞಾ ಪ್ರವಾಹ"ದಲ್ಲಿ ಸದಾ ಅಪರಾಧಿಪ್ರಜ್ಞೆಯಿಂದ ಬಿಡುಗಡೆ ಹೊಂದುವ ತನಕ ಇಲ್ಲಿನ ನಾಯಕನಿಗೆ ನೆಮ್ಮದಿ ಇಲ್ಲ. ಹಾಗೆಂದ ಮಾತ್ರಕ್ಕೆ ಇಲ್ಲಿನ ನಾಯಕ ನಮ್ಮ ಕಥೆಗಳಲ್ಲಿ ಬರುವ ಸತ್ಯ ಹರಿಶ್ಚಂದ್ರನಲ್ಲ. ಯಾವ ಆದರ್ಶದ ಗುಣವೂ ಅವನಲ್ಲಿ ಇಲ್ಲ. ಅಪರಾಧವೆಸಗಿದ ಮೇಲೆ ನಾಯಕನ ಮನೋ ಲೋಕ ಏನೆಲ್ಲಾ ವಿಚಿತ್ರ ಪರಿಪಾಠಲಿಗೆ ತನ್ನ ಪ್ರಜ್ಞಾಸ್ತರದಲ್ಲಿ ಗುರಿಯಾಗುತ್ತದೆ ಎಂಬುದನ್ನು ಕಾದಂಬರಿ ಮಂಡಿಸುತ್ತದೆ. ತಾವು ಹೇಳಿದ ಹಾಗೆ ಬರಹಗಾರ "ತಾನು ಕಂಡದ್ದನ್ನು ಕಂಡರಿಸುವ ಮೂಲಕ ಒಂದು ಸ್ಥಿತಿಯ ಏರಿಳಿತ, ಮೂಡು ಮಂಡಿಸುತ್ತಿದ್ದೇನೆ ಎಂಬ ಸ್ಥಿತಿ ಮಾತ್ರ ಇಲ್ಲಿರುತ್ತದೆ" ಇದಕ್ಕೆ ಸೂಕ್ತವಾದ ಉದಾಹರಣೆ ದಾಸ್ತೋವೆಸ್ಕಿಯ "ಅಪರಾಧಿ ಮತ್ತು ಶಿಕ್ಷೆ"ಯಲ್ಲಿ ಬರುವ ನಾಯಕನ ಪಾತ್ರವೂ ಹೊರತಲ್ಲ ಅನ್ನಿಸಿತು. ಮತ್ತು ಇಡೀ ಲೇಖನದ electricity generate ಆಗಿರೋದೇ ತಮ್ಮ ಈ ಮೇಲ್ಕಂಡ ವಾಕ್ಯದಲ್ಲಿ ಎಂದೂ ಅನ್ನಿಸಿತು. ಹಾಗೆಯೇ, Mrs. Dolloway ಸಿನಿಮಾ ನೋಡಿದೆ. ತಾವು ಹೇಳಿದ ಹಾಗೆ "ಪ್ರಜ್ಞಾ ಪ್ರವಾಹ" ವಿಶ್ಲೇಷಣೆಯ ನಿಖರ ಮಾಹಿತಿ ಇಲ್ಲಿ ಸಿಕ್ಕಿತು. ಇದು "ಅಪರಾಧಿ ಮತ್ತು ಶಿಕ್ಷೆ" ಗಿಂತ ಪಾತ್ರ ಪೋಷಣೆಯಲ್ಲಿ ಭಿನ್ನ ಅನ್ನಿಸಿತು. ಕ್ಲಾರಿಸ್ಸಾ ಡಲ್ಲೋವೇ ಮತ್ತು ಸೆಪ್ಟಿಮಸ್ ವಾರೆನ್ ಸ್ಮಿತ್ ರವರ ಪಾತ್ರಗಳು ಸಂಗತಿಗಳನ್ನು ಎಳೆ ಎಳೆಯಾಗಿ ಬಿಡಿಸುವ ಸಂದರ್ಭ, ಸಂಗತಿ, ಸನ್ನಿವೇಶಗಳಲ್ಲಿ "ಪ್ರಜ್ಞಾ ಪ್ರವಾಹ" ಸ್ವರೂಪದ ಮಂಡನೆ ಮನದಟ್ಟಾಯಿತು. ಧನ್ಯವಾದಗಳು ಸರ್. Thanks for this new thought in writing skills sir
Add Comment