ವಿಧಾನಸಭೆಯಲ್ಲಿ ಸ್ತ್ರೀವಾದ  

ಕಳೆದ ಆಗಸ್ಟ್ ತಿಂಗಳಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ‘ಪಟ್ಟಳಿ ಮಕ್ಕಳ್ ಕಚ್ಚಿ’ ಪಾರ್ಟಿಯ ಸೌಮ್ಯಾ ಅನ್ಬುಮಣಿ ಹಾಗೂ ಸಿ.ಪಿ.ಎಂ.ನ ಕವಿತಾ ಮಾತಾಡುತ್ತಿದ್ದರು.    ಇಂಗ್ಲಿಷಿನಲ್ಲಿ ಯಾವುದೇ ಮೊದಲ ಭಾಷಣವನ್ನು ಬಣ್ಣಿಸಲು ಬಳಸುವ ‘ಮೇಡನ್ ಸ್ಪೀಚ್’ ಎಂಬ ನುಡಿಗಟ್ಟಿನ ತಮಿಳು ಅನುವಾದವನ್ನು ವಿಧಾನಸಭೆಯಲ್ಲೂ ಬಳಸುತ್ತಿದ್ದ  ಬಗ್ಗೆ ಈ ಇಬ್ಬರೂ ಶಾಸಕಿಯರು ಆಕ್ಷೇಪಿಸಿದರು.

‘ವಿಧಾನಸಭೆಯಲ್ಲಿ ಶಾಸಕ, ಶಾಸಕಿಯರು ಮಾಡುವ ಮೊದಲ ಭಾಷಣವನ್ನು ಬಣ್ಣಿಸಲು ‘ಕನ್ನಿ ಪೀಚು’ (ಕನ್ಯಾ ಭಾಷಣ) ಎಂಬ ಪದವನ್ನು ಬಳಸಬಾರದು. ಅದರಲ್ಲಿ ಲಿಂಗತಾರತಮ್ಯದ ಭಾವವಿದೆ; ಅದರ ಬದಲಿಗೆ ‘ಮುದಲ್ ಉರೈ’ (ಮೊದಲ ಭಾಷಣ ಅಥವಾ ಆರಂಭ ಭಾಷಣ) ಎಂಬ ಪದಗಳನ್ನು ಬಳಸಬೇಕೆಂದು ಸೌಮ್ಯಾ ಸಲಹೆ ಕೊಟ್ಟರು. 

ಈ ವರದಿ ಓದಿದ ಮೂರ್‍ನಾಲ್ಕು ದಿನಗಳಲ್ಲಿ ಪ್ರೊಫೆಸರ್‍ ಶಾರದ ಅವರು ಏರ್ಪಡಿಸಿದ್ದ ಕುಪ್ಪಂ ವಿಶ್ವವಿದ್ಯಾಲಯದ ವಿಚಾರ ಸಂಕಿರಣದಲ್ಲಿ ಮಾತಾಡುತ್ತಾ ಈ ಶಾಸಕಿಯರ ಆಕ್ಷೇಪವನ್ನು ಉಲ್ಲೇಖಿಸಿದೆ. ‘ಜನರು ಸಾಮಾನ್ಯವಾಗಿ ಬಳಸುವ ನಿತ್ಯದ ಭಾಷೆ, ಪರಿಭಾಷೆಗಳ ಹಿನ್ನೆಲೆಯಲ್ಲಿರುವ ಪುರುಷ ಪೂರ್ವಗ್ರಹಗಳ ಬಗೆಗೆ ಈ ಶಾಸಕಿಯರಿಗೆ ಬಂದ ಅರಿವು ನಿಮ್ಮಂಥವರ ಕ್ಲಾಸ್‌ರೂಂ ಪಾಠದಿಂದಲೂ ಬಂದಿರಬಹುದು’ ಎಂದು ಕುಪ್ಪಂ ವಿಶ್ವವಿದ್ಯಾಲಯದ ಅಧ್ಯಾಪಕಿಯರಿಗೆ, ಅಧ್ಯಾಪಕರಿಗೆ ನೆನಪಿಸಲೆತ್ನಿಸಿದೆ. 

ಈ ಥರದ ಸೂಕ್ಷ್ಮ ಅರಿವು ಕ್ಲಾಸ್‌ರೂಂ ಪಾಠಗಳು, ಪತ್ರಕರ್ತೆಯರ ಬರವಣಿಗೆ ಅಥವಾ ಆಕ್ಟಿವಿಸ್ಟರ ವಿಶ್ಲೇಷಣೆಗಳು- ಹೀಗೆ ಎಲ್ಲಿಂದಲಾದರೂ ಬಂದಿರಬಹುದು. ಆದ್ದರಿಂದಲೇ, ಲಾಯರ್, ಟೀಚರ್, ರಾಜಕಾರಣಿ, ಮೇಡಂ, ಮೇಷ್ಟ್ರು, ಸಂಘಟನೆಗಳ ಕಾರ್ಯಕರ್ತರು ಮುಂತಾಗಿ ಸಾರ್ವಜನಿಕವಾಗಿ ಮಾತಾಡುವ ವರ್ಗಗಳು ಅವಕಾಶ ಸಿಕ್ಕಾಗಲೆಲ್ಲ ಪುರುಷ ಪೂರ್ವಗ್ರಹಪೀಡಿತ ಭಾಷೆಯ ಬಗ್ಗೆ ಸುತ್ತಮುತ್ತ ಅರಿವು ಮೂಡಿಸುತ್ತಲೇ ಇರಬೇಕಾಗುತ್ತದೆ. ಕೆಲವು ದಶಕಗಳ ಕೆಳಗೆ ಇಂಗ್ಲಿಷಿನ ‘ಚೇರ್‌ಮನ್’, ‘ಸ್ಪೋಕ್ಸ್‌ಮನ್’ ಪದಗಳು ಪುರುಷರಿಗೇ ಅನ್ವಯಿಸುವಂತಿವೆ ಎಂದು ಸ್ತ್ರೀವಾದಿಗಳು ಪ್ರಶ್ನೆಯೆತ್ತಿದ ಮೇಲೆ ‘ಚೇರ್‌ಪರ್ಸನ್, ‘ಸ್ಪೋಕ್ಸ್ ಪರ್ಸನ್’ ಎಂಬ ಪದಗಳು ಚಾಲ್ತಿಗೆ ಬಂದವು. ಪುರುಷ ಪೂರ್ವಗ್ರಹಗಳನ್ನು ಮೊದಲು ಭಾಷೆಯ ಮಟ್ಟದಲ್ಲಿ ಒಡೆದಾಗ ಬುದ್ಧಿಯ ಮಟ್ಟದಲ್ಲಿ, ನಂತರ ಸಮಾಜ, ಸಂಸ್ಕೃತಿಗಳ ಮಟ್ಟದಲ್ಲಿ ಒಡೆಯಬಹುದು ಎಂಬುದನ್ನು ಸ್ತ್ರೀವಾದಿಗಳು ತೋರಿಸಿಕೊಟ್ಟರು. ಇದೆಲ್ಲ ಈಗ ಪರಿಚಿತವಾಗಿದೆ.

ತಮಿಳುನಾಡಿನ ವಿಧಾನಸಭೆಯಲ್ಲಿ ಶಾಸಕಿಯರು ಎತ್ತಿದ ಈ ಪ್ರಶ್ನೆಯನ್ನು ಧಾರವಾಡದ ಕನ್ನಡ ರಿಫ್ರೆಶರ್ ಕೋರ್ಸಿನಲ್ಲೂ ಪ್ರಸ್ತಾಪಿಸಿದೆ. ಆಗ ಜಾನಪದ ವಿಶ್ವವಿದ್ಯಾಲಯದ ಮೇಡಂ ಒಬ್ಬರು ‘ರಾಷ್ಟ್ರಪತಿ’ ಎಂಬ ಪದದಲ್ಲಿ ಕೂಡ ಇಂಥದೇ ಪುರುಷ ಪೂರ್ವಗ್ರಹ ಇರುವುದನ್ನು ಹೇಳಿದರು. ಈ ಕುರಿತು ನಾನೂ ಆಗಾಗ್ಗೆ ಕ್ಲಾಸುಗಳಲ್ಲಿ ಚರ್ಚಿಸಿದ್ದು ನೆನಪಾಯಿತು. ಭಾರತದಲ್ಲಿ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ಆರಂಭವಾಗಲಿದ್ದ ಕಾಲದಲ್ಲಿ, ಸಂಯುಕ್ತ ವಿಧಾನಸಭೆಯ ಚರ್ಚೆಗಳಲ್ಲಿ ಹಾಗೂ ಅನಂತರದಲ್ಲಿ ರಾಷ್ಟ್ರದ ‘ಪ್ರೆಸಿಡೆಂಟ್’ ಎಂಬ ಪದಕ್ಕೆ ಹಿಂದಿಯ ‘ನೇತಾ’, ‘ಪ್ರಧಾನ್’, ‘ರಾಷ್ಟ್ರಾಧ್ಯಕ್ಷ’ ಮುಂತಾದ ಸಂವಾದಿ ಪದಗಳು ಚರ್ಚೆಗೆ ಬಂದವು. ಆದರೆ ಕೊನೆಗೆ ‘ರಾಷ್ಟ್ರಪತಿ’ ಎಂಬ ಪದವನ್ನೇ ನಮ್ಮ ಹಿರಿಯರು ಆರಿಸಿಕೊಂಡರು. 

ಅವತ್ತು ‘ರಾಷ್ಟ್ರಾಧ್ಯಕ್ಷ’ ಎಂಬ ಪದವನ್ನು ಆರಿಸಿಕೊಂಡಿದ್ದರೆ, ಮುಂದೆ ಪ್ರತಿಭಾ ಪಾಟೀಲ್ ಭಾರತದ ಪ್ರೆಸಿಡೆಂಟ್ ಆದಾಗ ‘ರಾಷ್ಷ್ರಾಧ್ಯಕ್ಷೆ’ ಅಥವಾ ‘ರಾಷ್ಟ್ರಾಧ್ಯಕ್ಷಿಣಿ’ ಎಂಬ ಪದಗಳನ್ನು ಬಳಸಬಹುದಾಗಿತ್ತು. ಪ್ರಾಯಶಃ ಮಹಿಳೆಯೊಬ್ಬರು ರಾಷ್ಟ್ರದ ‘ಪ್ರೆಸಿಡೆಂಟ್’ ಆಗಬಲ್ಲರೆಂಬ ಊಹೆ ನಮ್ಮ ಹಿರಿಯರಿಗೆ ಇರಲಿಲ್ಲವೋ ಏನೋ! ಅಂಬೇಡ್ಕರ್ ಅವರು ಹಿಂದೂ ಮಹಿಳೆಯರಿಗೆ ಆಸ್ತಿಯ ಹಕ್ಕು, ವಿವಾಹ ವಿಚ್ಛೇದನದ ಹಕ್ಕುಗಳನ್ನು ದೊರಕಿಸಿಕೊಡಲು ಲೋಕಸಭೆಯಲ್ಲಿ ‘ಹಿಂದೂ ಕೋಡ್ ಬಿಲ್’ ಮಂಡಿಸಿದಾಗ ಅದನ್ನು ವಿರೋಧಿಸಿದ ನೂರಾರು ಮಹನೀಯರಲ್ಲಿ ರಾಷ್ಟ್ರ‘ಪತಿ’ ಬಾಬೂ ರಾಜೇಂದ್ರ ಪ್ರಸಾದ್ ಮಹಾಶಯರೂ ಇದ್ದರು! ಇದನ್ನು ನೋಡಿದರೆ, ಅಂದಿನ ಪಾರ್ಲಿಮೆಂಟಿನ ಪುರುಷ ಪೂರ್ವಗ್ರಹದ ಹಿಡಿತ ಸ್ಪಷ್ಟವಾಗಬಲ್ಲದು. ಕಾಲ ಉರುಳಿದಂತೆ ಕಾಂಗ್ರೆಸ್ಸಿನ ಮನಮೋಹನಸಿಂಗ್ ನೇತೃತ್ವದ ‘ಯುನೈಟೆಡ್ ಪ್ರೋಗ್ರೆಸೀವ್ ಅಲೈಯನ್ಸ್’ ಸರ್ಕಾರದಲ್ಲಿ ಮಹಿಳಾ ಆಸ್ತಿಯ ಹಕ್ಕಿನ ಕಾಯ್ದೆ ಸಂಪೂರ್ಣ ಜಾರಿಗೆ ಬಂತು. ಆಗ ಸೋನಿಯಾಗಾಂಧಿ ‘ಯು.ಪಿ.ಎ.’  ಒಕ್ಕೂಟದ ಅಧ್ಯಕ್ಷೆಯಾಗಿ ಕೊಟ್ಟ ಒತ್ತಾಸೆ ಕೂಡ ಮಹಿಳಾ ಹಕ್ಕುಗಳ ಜಾರಿಗೆ ಕಾರಣವಾಗಿತ್ತು. ಇದಕ್ಕೂ ಮೊದಲು ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ಮಹಿಳೆಯರಿಗೆ ಸಮಾನ ಆಸ್ತಿಯ ಹಕ್ಕಿನ ಕಾಯ್ದೆ ಜಾರಿಯಾಯಿತು. ಇವೆಲ್ಲವೂ ಚರಿತ್ರೆಯಲ್ಲಿ ದಾಖಲಾಗಬೇಕಾದ ವಿಚಾರಗಳು.

ಭಾರತದಲ್ಲಿ ನಡೆದ ಮಹಿಳೆಯರ ಹಕ್ಕಿನ ರಕ್ಷಣೆಯ ಬೆಳವಣಿಗೆಗಳ ಹಿಂದೆ ಯುರೋಪಿನಲ್ಲಿ, ಒಟ್ಟಾರೆ ಪಶ್ಚಿಮದಲ್ಲಿ, ನಂತರ ಭಾರತದಲ್ಲಿ ಮಹಿಳಾಪರ ಚಿಂತನೆ, ಫೆಮಿನಿಸಂ, ಸ್ತ್ರೀವಾದ ಮುಂತಾದ ಥಿಯರಿಗಳು ಪ್ರಖರವಾಗಿ ಕೆಲಸ ಮಾಡಿರುವುದನ್ನು ಮಹಿಳಾ ಅಧ್ಯಯನಗಳು ದಾಖಲಿಸಿವೆ. ಮೇರಿ ವುಲ್ಸ್ಟನ್ ಕ್ರಾಫ್ಟ್ ಎಂಬ ಇಂಗ್ಲಿಷ್ ಫಿಲಾಸಫರ್-ಲೇಖಕಿ ೧೭೯೨ರಲ್ಲಿ ‘ವಿಂಡಿಕೇಶನ್ ಆಫ್ ದ ರೈಟ್ಸ್ ಆಫ್ ವುಮನ್’ ಪುಸ್ತಕ ಬರೆದಳು. ಅದು ಥಾಮಸ್ ಪೇನ್ ೧೭೯೧ರಲ್ಲಿ ಬರೆದ ‘ರೈಟ್ಸ್ ಆಫ್ ಮ್ಯಾನ್’ಗೆ ಕೊಟ್ಟ ಉತ್ತರ ಕೂಡ ಆಗಿತ್ತು. ಆ ಕಾಲದ ಬುದ್ಧಿಜೀವಿ ಥಾಮಸ್ ಪೇನ್ ತನ್ನ ‘ಮಾನವನ ಹಕ್ಕುಗಳು’ ಎಂಬ ಪುಸ್ತಕ ಒಟ್ಟಾರೆಯಾಗಿ ‘ಮಾನವರ’ ಬಗ್ಗೆ ಇರುವುದರಿಂದ ಅದು ಮಹಿಳೆಯ ಹಕ್ಕನ್ನೂ ಒಳಗೊಳ್ಳುತ್ತದೆ ಎಂದುಕೊಂಡಿದ್ದ. ಆದರೆ ಮೇರಿ ವಿಶೇಷವಾಗಿ ಮಹಿಳೆಯ ಹಕ್ಕುಗಳ ಪ್ರತಿಪಾದನೆಯ ಪುಸ್ತಕ ಬರೆದಳು. ಇದು ಮಹಿಳೆಯ ಸಮಾನ ಹಕ್ಕುಗಳ ಪ್ರತಿಪಾದನೆಯ ಥಿಯರಿಯ ಮೊದಲ ಮುಖ್ಯ ಘಟ್ಟ. ನಂತರ ೧೯೪೯ರಲ್ಲಿ ಫ್ರೆಂಚ್ ಲೇಖಕಿ ಸಿಮೊನ್ ದ ಬುವಾ ಬರೆದ ‘ದ ಸೆಕೆಂಡ್ ಸೆಕ್ಸ್’ ಎಂಬ ಯುಗಪ್ರವರ್ತಕ ಪುಸ್ತಕ ಆಧುನಿಕ ಸ್ತ್ರೀವಾದವನ್ನು ಉದ್ಘಾಟಿಸಿತು. ಸಿಮನ್ ದ ಬುವಾ ಪುಸ್ತಕದ ಪ್ರಖ್ಯಾತ ಹೇಳಿಕೆಯನ್ನು ಎಚ್. ಎಸ್. ಶ್ರೀಮತಿ ಅನುವಾದಿಸಿದ್ದಾರೆ: 

‘ಶಾಸಕರು, ಪುರೋಹಿತರು, ತಾತ್ವಿಕರು, ಲೇಖಕರು ಮತ್ತು ವಿಜ್ಞಾನಿಗಳು ಹೆಂಗಸಿನ ಅಧೀನತೆಯು ಸ್ವರ್ಗದಲ್ಲೇ ನಿರ್ಧಾರವಾದದ್ದು ಎಂದು ಸಾಧಿಸಿ ತೋರಿಸಲು ಯತ್ನಿಸಿದರು. ಗಂಡಸರೇ ರೂಪಿಸಿದ ಧರ್ಮಗಳು ಈ ಯಾಜಮಾನ್ಯವನ್ನು ಬಿಂಬಿಸುತ್ತವೆ. ಈವ್ ಮತ್ತು ಪಂಡೋರ ಐತಿಹ್ಯಗಳಲ್ಲಿ ಗಂಡಸರು ಹೆಂಗಸರ ಮೇಲೆ ಶಸ್ತ್ರ ಹಿಡಿದು ದಾಳಿ ಮಾಡಿದ್ದಾರೆ. ಅರಿಸ್ಟಾಟಲ್ ಮತ್ತು ಸಂತ ಥಾಮಸ್ ಅವರ ಮಾತುಗಳಲ್ಲಿ ಸೂಚಿತವಾದಂತೆ ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ. ಬಹಳ ಹಿಂದಿನಿಂದಲೂ ನೀತಿವಾದಿಗಳು ಮತ್ತು ಹಾಸ್ಯ ಬರಹಗಾರರು ಹೆಂಗಸರ ದೌರ್ಬಲ್ಯವನ್ನು ಎತ್ತಿ ಹಿಡಿಯುವುದರಲ್ಲೇ ಆನಂದ ಕಂಡುಕೊಂಡಿದ್ದಾರೆ. ಫ್ರೆಂಚ್ ಸಾಹಿತ್ಯದಲ್ಲಿ ಹೆಂಗಸರ ವಿರುದ್ಧ ಪ್ರಕಟಗೊಂಡ ಅನಾಗರಿಕ ನಿರ್ಣಯಗಳನ್ನಂತೂ ನಾವು ಬಲ್ಲೆವು. ಈ ಶತ್ರುತ್ವವು ಹಲವೊಮ್ಮೆ ಸಹಾನುಭೂತಿಯ ಧೋರಣೆಯನ್ನು ತಾಳಬಹುದು. ಹೀಗಿದ್ದರೂ, ಗಂಡಿನ ಸ್ವಸಮರ್ಥನೆಯೇ ಅದರ ಉದ್ದೇಶವೆಂಬುದನ್ನು ಈ ಧೋರಣೆಯು ಯಶಸ್ವಿಯಾಗಿ ಮುಚ್ಚಿಟ್ಟಿದೆ.’

ಅಲ್ಲಿಂದಾಚೆಗೆ ಪುರುಷರು ಸೃಷ್ಟಿಸಿದ ಈ ಬಗೆಯ ಧೋರಣೆ-ನೋಟ-ಕತೆಗಳನ್ನು, ಹಾಗೂ ಇವೆಲ್ಲವುಗಳನ್ನು ಬೆರೆಸಿ ಪುರುಷರು ಸೃಷ್ಟಿಸಿದ ‘ಸಂಕಥನ’ ಅಥವಾ ಡಿಸ್ಕೋರ್ಸುಗಳನ್ನು, ಮುಖಾಮುಖಿಯಾಗುವುದು, ಅದನ್ನು ಹಿಮ್ಮೆಟ್ಟಿಸುವುದು ಸ್ತ್ರೀವಾದದ ಗುರಿ ಮತ್ತು ಉದ್ದೇಶವಾಯಿತು. ಒಟ್ಟಾರೆಯಾಗಿ ಸ್ತ್ರೀ-ಪುರುಷ ಸಮಾನತೆಯನ್ನು ಸಾಧಿಸುವುದು ಸ್ತ್ರೀವಾದದ ಗುರಿಯಾಯಿತು. ಇದಾದ ನಂತರ ಆಗಿರುವ ಪ್ರಗತಿ ನಮ್ಮ ಕಣ್ಣ ಮುಂದೇ ಇದೆ. ೧೯೬೬ರಲ್ಲಿ ಇಂದಿರಾಗಾಂಧಿಯವರು ಭಾರತದ ಪ್ರಧಾನಮಂತ್ರಿಯಾದರು. ೧೯೭೯ರಲ್ಲಿ ಬ್ರಿಟನ್ನಿನಲ್ಲಿ ಮಾರ್ಗರೆಟ್ ಥ್ಯಾಚರ್ ಪ್ರಧಾನಮಂತ್ರಿಯಾದರು. ಶ್ರೀಲಂಕಾದಲ್ಲಿ ಸಿರಿಮಾವೋ ಬಂಡಾರನಾಯಿಕೆ ಪ್ರಧಾನಮಂತ್ರಿಯಾದರು. ಪ್ರತಿಭಾ ಪಾಟೀಲರ ನಂತರ ಈಗ ದ್ರೌಪದಿ ಮುರ್ಮು ಭಾರತದ ಪ್ರೆಸಿಡೆಂಟ್ ಆಗಿದ್ದಾರೆ. ಪಂಚಾಯತ್ ಆಡಳಿತದಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ.

ಇವೆಲ್ಲ ಸಾಧ್ಯವಾದದ್ದು ಕಳೆದ ಇನ್ನೂರು ವರ್ಷಗಳಿಂದ ವಿಕಾಸಗೊಂಡ ಫೆಮಿನಿಸ್ಟ್ ಥಿಯರಿಯಿಂದ ಹಾಗೂ ನಂತರದ ಮಹಿಳಾ ಹೋರಾಟಗಳಿಂದ; ಕಾಯ್ದೆ ಕಾನೂನುಗಳಿಂದ. ಜ್ಞಾನೋದಯಗೊಂಡ ಪುರುಷರೂ ಈ ಥಿಯರಿಗಳಿಗೆ, ಹೋರಾಟಗಳಿಗೆ ಆಗಾಗ ಕೈ ಜೋಡಿಸಿದ್ದಾರೆ. ಪುರುಷ ನಿರ್ಮಿತ ಪೂರ್ವಗ್ರಹಗಳ ಭಾಷೆಯ ಬಳಕೆಯ ಬಗ್ಗೆ ವಿದ್ಯಾವಂತರಲ್ಲಿ ಅಷ್ಟಿಷ್ಟು ಎಚ್ಚರ ಮೂಡತೊಡಗಿದೆ. ಮೊನ್ನೆ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಂವಾದದಲ್ಲಿ ಮಾತಾಡುತ್ತಾ, ನಾನೇ ‘ಹಿರಿಯಕ್ಕನ ಚಾಳಿ’ ಎಂದವನು, ಎದುರಿಗಿದ್ದ ಸ್ತ್ರೀವಾದಿ ಚಿಂತಕಿ ಎಲ್. ಜಿ. ಮೀರಾ ಅವರನ್ನು ನೋಡಿ, ‘ಸಾರಿ, ಹಿರಿಯಣ್ಣನ ಚಾಳಿ’ ಎಂದೆ. ‘ಈ ಥರದ ಸೂಕ್ಷ್ಮತೆಯನ್ನು ಆಶಾದೇವಿ, ಮೀರಾ, ತಾರಿಣಿ ಮೊದಲಾದ ಸ್ತ್ರೀವಾದಿಗಳು ನಮಗೆ ಹೇಳಿಕೊಟ್ಟಿದ್ದಾರೆ’ ಎಂದು ಕೂಡ ಸೇರಿಸಿದೆ. ಹಿಂದೊಮ್ಮೆ ಲೇಖಕ ವಿಕ್ರಮ ವಿಸಾಜಿ ಕೂಡ ‘ಹಿರಿಯಕ್ಕನ ಚಾಳಿ’ ಬಳಕೆಯ ಬಗ್ಗೆ ಆಕ್ಷೇಪವೆತ್ತಿದ್ದು ನೆನಪಾಯಿತು.

ಈ ಅಂಕಣದ ಶುರುವಿನಲ್ಲಿ ಹೇಳಿದ ತಮಿಳುನಾಡು ವಿಧಾನಸಭೆಯಲ್ಲಿ ಶಾಸಕಿಯರು ಎತ್ತಿದ ಪ್ರಶ್ನೆಯ ಹಿಂದಿರುವ ಜ್ಞಾನೋದಯದ ಹಿನ್ನೆಲೆಯಲ್ಲಿ ಇನ್ನೂರು ವರ್ಷಗಳ ಕಾಲ ಜಗತ್ತಿನ ಮಹಿಳೆಯರು ಕಟ್ಟಿದ ವಿಮೋಚನಾ ಸಿದ್ಧಾಂತವಾದ ಫೆಮಿನಿಸಂ ಇದೆ. ಇದರ ಜೊತೆಗೆ, ನಮ್ಮ ಅಧ್ಯಾಪಕಿಯರು, ಅಲ್ಲಿ ಇಲ್ಲಿ ಕೆಲವು ಅಧ್ಯಾಪಕರು ತರಗತಿಗಳಲ್ಲಿ ಹೇಳಿಕೊಟ್ಟ ಫೆಮಿನಿಸಂ, ಫೆಮಿನಿಸ್ಟ್ ಚಿಂತನೆಗಳು, ಸ್ತ್ರೀವಾದಿ ಪಾಠಗಳು, ಕವಿತೆಗಳು ಕೂಡ ಕೆಲಸ ಮಾಡಿವೆ. 

ಇಂಥ ಚಿಂತನೆಗಳು ತಮಿಳುನಾಡಿನ ವಿಧಾನಸಭೆಯನ್ನೂ ತಲುಪಿವೆ. ಆದರೆ ಮೂವತ್ತಕ್ಕೂ ಹೆಚ್ಚು ಪುರುಷ ಸಚಿವರಿರುವ ಕರ್ನಾಟಕದ ಸಚಿವ ಸಂಪುಟದಲ್ಲಿ ವಿಧಾನಸಭೆಯಲ್ಲಿ ಸಚಿವೆಯ ಸ್ಥಾನದಲ್ಲಿ ನಿಂತು ಮಾತಾಡಲು ಇವತ್ತು ಒಬ್ಬ ಮಹಿಳೆಯೂ ಇಲ್ಲ ಎಂಬ ವಿರೋಧಾಭಾಸ ಹಾಗೂ ಪುರುಷ ಭಂಡತನ ಕರ್ನಾಟಕದ ಮಹಿಳೆಯರು, ಮಹನೀಯರಲ್ಲಿ ಕೋಪ ಉಕ್ಕಿಸಿದಂತಿಲ್ಲ. ಈ ಕುರಿತು ಮೊನ್ನೆ ಮೂಡಿಗೆರೆಯ ಶಾಸಕಿ-ನ್ಯಾಯವಾದಿ ನಳಿನಿ ಮೋಟಮ್ಮನವರ ಸಣ್ಣ ಗೊಣಗು ಸ್ಟಿಂಗ್ ಆಪರೇಶನ್ ನಿರತ ಕ್ಷುದ್ರ ಪುರುಷ ರಾಜಕಾರಣಿಗಳಿಗೆ ಎಲ್ಲಿಂದ ಕೇಳಿಸೀತು?

ಕೊನೆ ಟಿಪ್ಪಣಿ

ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ‘ಡಾಕ್ಟರ್‍ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ದ ಎರಡನೇ ಮುದ್ರಣ ಗುಲಬರ್ಗಾ, ಮೈಸೂರುಗಳಲ್ಲಿ ಬಿಡುಗಡೆಯಾದ ಸುದ್ದಿ ನಿಮ್ಮ ಕಿವಿಗೆ ಬಿದ್ದಿರಬಹುದು. 

ಈ ಪುಸ್ತಕ ಸಂಚಾರದ ಎರಡು ಫೋಟೋಗಳು ಈ ಅಂಕಣಕಾರನಲ್ಲಿ ಧನ್ಯತೆಯ ಭಾವ ಹುಟ್ಟಿಸಿದವು. ಈ ಪೋಟೋಗಳ ಸುತ್ತ ಎರಡು ಮಾತು:


‘ಕಟ್ಟೇಪುರಾಣ’ದ ಗೆಳೆಯ ಚಂದ್ರೇಗೌಡರಿಂದ ನಮ್ಮ ಸೂಕ್ಷ್ಮ ರಾಜಕಾರಣಿ ಕಿಮ್ಮನೆ ರತ್ನಾಕರ್‍ ಎರಡು ‘ಡಾಕ್ಟರ್‍ ಸಾಹೇಬ್’ ಪುಸ್ತಕಗಳನ್ನು ಕೊಂಡರು. ಒಂದನ್ನು ತಕ್ಷಣ ಕಡಿದಾಳು ಶಾಮಣ್ಣನವರ ಮನೆಗೆ ಕಳಿಸಿದರು. ಕಡಿದಾಳು ಶಾಮಣ್ಣ ಕಳೆದ ಕೆಲವು ವರ್ಷಗಳಿಂದ ಆರೋಗ್ಯ-ಅನಾರೋಗ್ಯ, ನೆನಪು-ಮರೆವುಗಳ ನಡುವೆ ಮಗುವಿನಂತೆ ಜೀವಿಸಿದ್ದಾರೆ. ಕಿಮ್ಮನೆಯವರ ಗೆಳೆಯರು ಈ ಪುಸ್ತಕ ಕೊಟ್ಟ ತಕ್ಷಣ ಶಾಮಣ್ಣನವರ ಮುಖ ಅರಳಿತು. ಲೋಹಿಯಾ ಶಾಮಣ್ಣನವರಿಗೂ ಗುರು. ತಕ್ಷಣ ಶಾಮಣ್ಣ ತಮ್ಮ ಪತ್ನಿ ಶ್ರೀದೇವಿಯವರಿಗೆ  ಹೇಳಿದ ಮಾತು ‘ಪುಸ್ತಕದ ದುಡ್ಡನ್ನು ಅವರಿಗೆ ಕೊಡು’ ಎಂದರು. ಪುಸ್ತಕ ಕೊಟ್ಟ ಗೆಳೆಯರು, ‘ಕಿಮ್ಮನೆಯವರು ನಿಮಗಾಗಿ ಬರೆದುಕೊಟ್ಟಿದ್ದಾರೆ’ ಎಂದರೂ ಕಡಿದಾಳ್ ‘ದುಡ್ಡು ಕೊಡಬೇಕು’ ಎಂದು ಹೇಳುತ್ತಲೇ ಇದ್ದರು. ಶ್ರೀದೇವಿ ಪ್ರತಿ ದಿನ ‘ಡಾಕ್ಟರ್‍ ಸಾಹೇಬ್’ ಪುಸ್ತಕದ ಒಂದೊಂದು ಅಧ್ಯಾಯವನ್ನು ಶಾಮಣ್ಣನವರಿಗೆ ಓದಿ ಹೇಳುತ್ತಿದ್ದಾರೆ.  

ಮತ್ತೊಂದು ಫೋಟೋ: 

ತಾರುಣ್ಯದಲ್ಲೇ ಲೋಹಿಯಾ ಚಿಂತನೆಗಳಿಗೆ ಒಲಿದು, ಎಂ.ಡಿ. ನಂಜುಂಡಸ್ವಾಮಿಯವರ ಸಮಾಜವಾದಿ ಯುವಜನ ಸಭಾ ಸೇರಿ, ದೇಶದ ಸಮಾಜವಾದಿ ಚಿಂತಕರ ಜೊತೆಗೂಡಿದ ಪ್ರೊಫೆಸರ್‍ ರವಿವರ್ಮಕುಮಾರ್‍ ‘ಡಾಕ್ಟರ್ ಸಾಹೇಬ್’ ಪುಸ್ತಕದ ನೂರು ಪ್ರತಿಗಳನ್ನು ಕೊಂಡರು. ಶಿರಾ ಬಳಿಯ ಸಮತಾ ವಿದ್ಯಾಲಯದಲ್ಲಿ ನಡೆದ ಮಹಿಳಾ ಕಮ್ಮಟದಲ್ಲಿ ಕೃತಿ ಬಿಡುಗಡೆಯಾಯಿತು. ರವಿವರ್ಮಕುಮಾರ್‍ ಲೋಹಿಯಾರ ಮಹಿಳಾ ಕಾಳಜಿ ಕುರಿತು ಸುದೀರ್ಘವಾಗಿ ಮಾತಾಡಿದರು. ಮೊದಲ ಬಾರಿಗೆ ಲೋಹಿಯಾ ಚಿಂತನೆ ಕೇಳಿಸಿಕೊಂಡ ಮಹಿಳೆಯರು ವಿಸ್ಮಯಗೊಂಡಿದ್ದರು.

ಸಮಾಜವಾದಕ್ಕೆ ಸ್ತ್ರೀವಾದವನ್ನೂ ಬೆಸೆದ ಲೋಹಿಯಾ ಸಿಮೊನ್ ದ ಬುವಾ ಅವರನ್ನು ಐವತ್ತರ ದಶಕದಲ್ಲೇ ಓದಿ, ತಮ್ಮ ಗೆಳತಿ ರಮಾ ಮಿತ್ರಾಗೆ ಓದಲು ಹೇಳಿ, ಬರೆದ ಮಾತುಗಳು: 
‘ಸಿಮೊನ್ ದಿ ಬುವಾ ಎಂಬ ಪ್ರಸಿದ್ಧ ಲೇಖಕಿ ಇದ್ದಾರೆ. ಅವರು ‘ದಿ ಸೆಕೆಂಡ್ ಸೆಕ್ಸ್’  ಎಂಬ ಶ್ರೇಷ್ಠ ಗ್ರಂಥ ಬರೆದಿದ್ದಾರೆ. ಹೆಣ್ಣನ್ನು ಇತಿಹಾಸ, ಸಾಹಿತ್ಯ, ಜೀವಶಾಸ್ತ್ರಗಳ ನೆಲೆಯಿಂದ ಶೋಧಿಸುವ ಶ್ರೇಷ್ಠ ಪುಸ್ತಕ ಇದು. ಎಂಥೆಂಥ ಜನರಿಗೋ ನೊಬೆಲ್ ಪುರಸ್ಕಾರ ಸಿಗುತ್ತಿದೆ; ಬುವಾ ಯಾವಾಗಲೋ ಈ ಪುರಸ್ಕಾರಕ್ಕೆ ಅರ್ಹರಾಗಿದ್ದರು ಎಂದು ನಾನು ಭಾವಿಸುತ್ತೇನೆ’

`ಡಾಕ್ಟರ್ ಸಾಹೇಬ್' ಪುಸ್ತಕದ ಕೆಲವು ಅಧ್ಯಾಯಗಳು, ‘ರಮಾ-ರಾಮಮನೋಹರ: ಸಖ್ಯದ ಆಖ್ಯಾನ’, ‘ಸಮಾಜವಾದಿ ಕಂಡ ಸ್ತ್ರೀಲೋಕ’ ಥರದ ಅಧ್ಯಾಯಗಳು ಲೋಹಿಯಾರನ್ನು ಆರಂಭದ ಭಾರತೀಯ ಸ್ತ್ರೀವಾದಿ ಚಿಂತಕರ ಸಾಲಿನಲ್ಲಿ ಇರಿಸಬೇಕೆಂದು ನಮ್ಮನ್ನು ಒತ್ತಾಯಿಸುತ್ತವೆ. ಈ ಬಗ್ಗೆ ನಮ್ಮ ಗಂಭೀರ ಚಿಂತಕಿಯರು, ಚಿಂತಕರು ಗಮನ ಕೊಡಲಿ ಎಂದು ಈ ಅಂಕಣಕಾರನ ನಮ್ರ ವಿನಂತಿ.

 
  
 

Share on:

Comments

0 Comments





Add Comment


Mundana Kathana Nataka

YouTube






Recent Posts

Latest Blogs