ಒಳನೋಟದ ಒರತೆಗಳು
by Nataraj Huliyar
ಕಳೆದ ತಿಂಗಳು ಗುಲಬರ್ಗಾದ ಸಭೆಯೊಂದರಲ್ಲಿ ಜೀವನಚರಿತ್ರೆಯ ಪ್ರಕಾರ ಕುರಿತು ಮಾತಾಡುತ್ತಾ, ‘ಬರೆಯಲು ಶುರು ಮಾಡುವವರು ಸಣ್ಣಪುಟ್ಟ ಜೀವನಚರಿತ್ರಾತ್ಮಕ ಟಿಪ್ಪಣಿ ಬರೆಯುವುದು ಒಳ್ಳೆಯ ಮೆಂಟಲ್ ಎಕ್ಸರ್ಸೈಸ್ ಅಥವಾ ಬೌದ್ಧಿಕ ವ್ಯಾಯಾಮ ಆಗಬಲ್ಲದು’ ಎಂದೆ. ಆ ಮಾತು ಹೇಳಿದ ಕೆಲ ದಿನಗಳ ನಂತರ, ಇಂಗ್ಲೆಂಡಿನ ಕತೆಗಾರ-ಕಾದಂಬರಿಕಾರ ಎಚ್. ಇ. ಬೇಟ್ಸ್ ಬಗ್ಗೆ ಹಿಂದೊಮ್ಮೆ ಅಂಕಣವೊಂದರಲ್ಲಿ ಬರೆದ ಟಿಪ್ಪಣಿಯೊಂದು ಕಣ್ಣಿಗೆ ಬಿತ್ತು. ಎಷ್ಟೋ ವರ್ಷಗಳ ನಂತರ ಈ ಟಿಪ್ಪಣಿಯ ಮೇಲೆ ಕಣ್ಣಾಡಿಸುತ್ತಿರುವಾಗ, ಇದೀಗ ಬೇಟ್ಸ್ ಬಗ್ಗೆ ಇನ್ನೊಂದು ಕುತೂಹಲಕರ ವಿವರ ಕಣ್ಣಿಗೆ ಬಿತ್ತು:
ಎರಡನೆಯ ಮಹಾಯುದ್ಧದ ಕಾಲದಲ್ಲಿ, ೧೯೪೧ರಲ್ಲಿ, ಇಂಗ್ಲೆಂಡಿನ ರಾಯಲ್ ಏರ್ ಫೋರ್ಸ್ ವಾಯುಪಡೆಯ ಸಾರ್ವಜನಿಕ ಸಂಪರ್ಕದ ಅಧಿಕಾರಿಯೊಬ್ಬ ಬೇಟ್ಸ್ಗೆ ಕತೆ ಬರೆಯುವ ಒಂದು ಅಸೈನ್ಮೆಂಟ್ ಕೊಟ್ಟ. ಯುದ್ಧದಲ್ಲಿ ಹೋರಾಡುತ್ತಿದ್ದ ಯೋಧರ ಬಗೆಗೆ ವಾಸ್ತವಾಂಶದ ವರದಿಗಳಿಗಿಂತ ಈ ಥರದ ಕತೆಗಳು ಯೋಧರನ್ನು ಕುರಿತು ಸಾರ್ವಜನಿಕರಲ್ಲಿ ಉತ್ತೇಜನಕರ ಅಭಿಪ್ರಾಯ ಮೂಡಿಸಬಲ್ಲವು ಎಂಬ ನಂಬಿಕೆ ಇಂಗ್ಲೆಂಡಿನ ವಾಯುಪಡೆ ಸಚಿವಾಲಯಕ್ಕೆ ಇದ್ದಂತಿತ್ತು. ಆಗ ಬೇಟ್ಸ್ ಬರೆದ ಕತೆಗಳು ಸೈನಿಕರು ಹಾಗೂ ಜನರ ಮೇಲೆ ಯುದ್ಧದ ಪರಿಣಾಮವನ್ನು ಶೋಧಿಸಿಲೆತ್ನಿಸಿದವು. ಈ ಕತೆಗಳು ಸೈನಿಕರ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಕೆಲಸ ಮಾಡಿದವು ಎನ್ನುವವರೂ ಇದ್ದರು.
ಬೇಟ್ಸ್ ಬರೆಯುತ್ತಿದ್ದ ಈ ಕತೆಗಳು ‘ಫ್ಲೈಯಿಂಗ್ ಆಫೀಸರ್ ಎಕ್ಸ್’ ಎಂಬ ಗುಪ್ತನಾಮದಲ್ಲಿ ‘ನ್ಯೂಸ್ ಕ್ರಾನಿಕಲ್’ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ನಂತರ ಈ ಕತೆಗಳು ಪುಸ್ತಕ ರೂಪದ ಸಂಕಲನದಲ್ಲಿ ಬಂದಾಗ ಬೇಟ್ಸ್ ಹೆಸರಿನಲ್ಲೇ ಪ್ರಕಟವಾದವು. ವಾಯು ಪಡೆಯ ಫ್ಲೈಟ್ ಲೆಫ್ಟಿನೆಂಟ್ ಆಗಿ, ನಂತರ ಸ್ಕ್ಯಾಡ್ರನ್ ಲೀಡರ್ ಆದ ಬೇಟ್ಸ್ನನ್ನು ಮುಂದೆ ವಾಯುಪಡೆ ಬರ್ಮಾಕ್ಕೆ ಕಳಿಸಿತು; ಬೇಟ್ಸ್ ಬರ್ಮಾ ಅನುಭವದ ಬಗೆಗೂ ಕಾದಂಬರಿ ಬರೆದ. ಭಾರತದ ಪರಿಸರದಲ್ಲಿ ನಡೆಯುವ ‘ದ ಸ್ಕಾಲೆಟ್ ಸ್ವೋರ್ಡ್’ (ಕಡುಗೆಂಪು ಕತ್ತಿ) ಎಂಬ ಅವನ ಕಾದಂಬರಿ ಮುಂದೆ ೧೯೫೦ರಲ್ಲಿ ಪ್ರಕಟವಾಯಿತು.
ಕತೆಗಾರ ಬೇಟ್ಸ್ಗೆ ಇದ್ದ ವಿಶಿಷ್ಟ ಶಕ್ತಿಯೊಂದನ್ನು ಗಮನಿಸಿ ಈ ಅಸೈನ್ ಮೆಂಟ್ ಕೊಡಲಾಗಿತ್ತೇನೋ ಎಂದು ಈಗ ಊಹಿಸಲೆತ್ನಿಸುತ್ತಿದ್ದೇನೆ. ಬೇಟ್ಸ್ನ ಈ ಅಸಾಧಾರಣ ಶಕ್ತಿಯನ್ನು ಹಿಂದೊಮ್ಮೆ ನನ್ನ ಬರಹವೊಂದರಲ್ಲಿ ಚರ್ಚಿಸಿದ್ದೆ:
ಬೇಟ್ಸ್ಗೆ ಒಂದು ವಿಚಿತ್ರ-ವಿಸ್ಮಯಕರ ಅಭ್ಯಾಸವಿತ್ತು. ಬೇಟ್ಸ್ ಕಂಡ ವ್ಯಕ್ತಿಗಳಲ್ಲಿ ಅಥವಾ ಅವನಿಗೆ ಎದುರಾದ ವ್ಯಕ್ತಿಗಳಲ್ಲಿ ಯಾರಾದರೂ ಅವನ ಕಲ್ಪನೆಯನ್ನು, ಒಳ ಮನಸ್ಸನ್ನು ತಟ್ಟಿದರೆ, ತಕ್ಷಣ ಅವರ ಬಗೆಗೆ ಪುಟ್ಟ ಜೀವನಚರಿತ್ರೆಯ ರೀತಿಯ ಟಿಪ್ಪಣಿಗಳನ್ನೋ ಅಥವಾ ಅವರು ಮಾಡಿರಬಹುದಾದ ಸಾಹಸಗಳನ್ನೋ ಊಹಿಸಿ ಬರೆದುಬಿಡುತ್ತಿದ್ದ. ಇದಾದ ಮೇಲೆ ಅವನು ಸ್ವಲ್ಪ ಚೆಕ್ ಮಾಡಿ ನೋಡಿದರೆ ಅದು ಹೇಗೋ ಈ ಫ್ಯಾಂಟಸಿಗಳೆಲ್ಲ ಆಯಾ ವ್ಯಕ್ತಿಗಳ ಬಗೆಗಿನ ಅತ್ಯಂತ ನಿಖರವಾದ ನೈಜಸಂಗತಿಗಳಾಗಿರುತ್ತಿದ್ದವು!
ವಿಚಿತ್ರವೆಂದರೆ, ಬೇಟ್ಸ್ ಮಾತ್ರ ಇದನ್ನೆಲ್ಲ ಬರೆಯುವಾಗ ಇದೆಲ್ಲ ತಾನು ಕಲ್ಪಿಸಿಕೊಂಡದ್ದು ಮಾತ್ರ ಎಂದುಕೊಂಡಿರುತ್ತಿದ್ದ. ಆದರೆ ಬೇಟ್ಸ್ ವ್ಯಕ್ತಿಯೊಬ್ಬನನ್ನು ಸುಮ್ಮನೆ ನೋಡುತ್ತಿದ್ದರೆ ಸಾಕು, ಅದು ಹೇಗೋ ಆ ವ್ಯಕ್ತಿಯ ಎಲ್ಲ ವಿವರಗಳೂ ಅವನ ಪ್ರಜ್ಞೆಯನ್ನು ತಲುಪಿರುತ್ತಿದ್ದವು.
ಪ್ರತಿ ವ್ಯಕ್ತಿಯಲ್ಲೂ ಇರಬಹುದಾದ ಟ್ರಾನ್ಸೆಂಡೆಂಟಲ್ ಶಕ್ತಿಯ ಬಗ್ಗೆ, ಅಂದರೆ ನಮ್ಮ ಸಾಧಾರಣ ಕಾಮನ್ಸೆನ್ಸ್ ಮೀರಿ ಸೂಕ್ಷ್ಮಗಳನ್ನು ಕಾಣುವ ಶಕ್ತಿಯ ಬಗ್ಗೆ ಈ ಕಾಲದ ಲೇಖಕ ಲೇಖಕಿಯರು ಅಷ್ಟಾಗಿ ಗಮನ ಕೊಡುವಂತೆ ಕಾಣುತ್ತಿಲ್ಲ. ಅಂಥ ಶಕ್ತಿ ಪ್ರತಿಭಾಶಾಲಿಗಳಲ್ಲಿ ಇನ್ನಷ್ಟು ಹೆಚ್ಚಿಗೆ ಇರಬಹುದು; ಬೇಟ್ಸ್ ಥರದವರಲ್ಲಿ ವಿಶಿಷ್ಟ ನೋಟವಾಗಿ ಬೆಳೆಯಲೂಬಹುದು. ಮನೋವಿಜ್ಞಾನಿಯ ಅಂಥ ವಿಶಿಷ್ಟ ಶಕ್ತಿಯ ಬಗ್ಗೆ ಮತ್ತೊಂದು ಉದಾಹರಣೆಯನ್ನೂ ನನ್ನ ಬರಹವೊಂದರಲ್ಲಿ ಕೊಟ್ಟಿದ್ದೆ:
ಮನೋವಿಜ್ಞಾನಿ ಕಾರ್ಲ್ ಯೂಂಗ್ಗೆ ಇದ್ದ ಇಂಥ ವಿಚಿತ್ರ ಶಕ್ತಿ ಕುರಿತಂತೆ ಒಂದು ಕುತೂಹಲಕರ ಪ್ರಸಂಗವಿದೆ. ಇದು ಯೂಂಗ್ ತನ್ನ ಹೆಂಡತಿಯ ಗೆಳತಿಯೊಬ್ಬಳ ಮದುವೆಯ ಪಾರ್ಟಿಗೆಂದು ಹೋದಾಗ ನಡೆದ ಘಟನೆ. ಆ ಗೆಳತಿ ಹಾಗೂ ಅವಳ ಕುಟುಂಬದವರೆಲ್ಲರೂ ಯೂಂಗ್ಗೆ ಸಂಪೂರ್ಣ ಅಪರಿಚಿತರು. ಊಟ ಮಾಡುವಾಗ ಮಧ್ಯಮ ವಯಸ್ಸಿನ ಬ್ಯಾರಿಸ್ಟರೊಬ್ಬ ಯೂಂಗ್ ಜೊತೆ ಸಲಿಗೆ ಬೆಳೆಸಿ ಮಾತಾಡತೊಡಗಿದ. ಮಾತು ಕ್ರಿಮಿನಲ್ ಸೈಕಾಲಜಿಯ ಕಡೆಗೆ ತಿರುಗಿತು; ಚರ್ಚೆ ಕಾವೇರಿತು. ಚರ್ಚೆಯ ನಡುವೆ ಯಾವುದೋ ಕ್ಲಿಷ್ಟವಾದ ಅಂಶವೊಂದನ್ನು ಸರಿಯಾಗಿ ವಿವರಿಸಲು ಒಂದು ಉದಾಹರಣೆ ಕೊಡಬೇಕೆಂದು ಯೂಂಗ್ಗೆ ಅನ್ನಿಸಿತು. ಆಗ ಯೂಂಗ್ ಕೂತಲ್ಲೇ ಒಂದು ಕತೆ ಕಟ್ಟಿ ಹೇಳತೊಡಗಿದ. ಕತೆಗೆ ಬೇಕಾದ ಪಾತ್ರಗಳು, ವಿವರಗಳು ಅವನ ಕಲ್ಪನೆಗೆ ತಂತಾನೇ ಒದಗಿಬರತೊಡಗಿದವು. ಯೂಂಗ್ನ ಕತೆ ಮುಂದುವರಿಯತೊಡಗಿದಂತೆ ಆ ಕತೆ ಕೇಳಿಸಿಕೊಳ್ಳುತ್ತಿದ್ದ ಬ್ಯಾರಿಸ್ಟರ್ ಮುಖ ಕಿವುಚಿಕೊಳ್ಳತೊಡಗಿದ. ಊಟದ ಟೇಬಲ್ಲಿನಲ್ಲಿ ವಿಚಿತ್ರ ನಿಶ್ಯಬ್ದ ಆವರಿಸತೊಡಗಿತು.
ಗೊಂದಲಗೊಂಡ ಯೂಂಗ್ ಮಾತಾಡುವುದನ್ನು ನಿಲ್ಲಿಸಿದ. ಸದ್ಯ, ಊಟ ಮುಗಿದಿತ್ತು. ತಕ್ಷಣ ಎದ್ದ ಯೂಂಗ್ ಹೋಟೆಲ್ನ ಹಜಾರಕ್ಕೆ ಹೋದ. ಒಬ್ಬನೇ ಮೂಲೆಯಲ್ಲಿ ನಿಂತು ಸಿಗರೇಟ್ ಹತ್ತಿಸಿ 'ಯಾಕೆ ಹೀಗಾಯಿತು? ಎಲ್ಲಿ ತಪ್ಪಾಯಿತು?' ಎಂದು ಯೋಚಿಸತೊಡಗಿದ. ಆಗ ಅದೇ ಟೇಬಲ್ಲಿನಲ್ಲಿ ಕೂತಿದ್ದ ವ್ಯಕ್ತಿಯೊಬ್ಬ ಇವನತ್ತ ಧಾವಿಸಿ ಬಂದು, 'ಏನ್ ಸಾರ್, ಇಂಥ ಕೆಲಸ ಮಾಡಿಬಿಟ್ರಿ?’ ಅಂದ. ಯೂಂಗ್ ಬೆಚ್ಚಿ, 'ಅಂಥದ್ದೇನಾಯ್ತು?' ಎಂದು ಕೇಳಿದರೆ, ಆ ವ್ಯಕ್ತಿ’ ‘ಅಯ್ಯೋ ನೀವು ಮಾತಾಡ್ತಾ ಮಾತಾಡ್ತಾ ನಿಮ್ಮ ಎದುರಿಗಿದ್ದ ಆ ಬ್ಯಾರಿಸ್ಟರ್ ಕತೇನೇ ಯಥಾವತ್ತಾಗಿ ಹೇಳಿಬಿಟ್ರಲ್ಲ?' ಅಂದ.
'ಖಂಡಿತಾ ಇಲ್ಲ. ನಾನು ಅದೇ ಆಗ ಉದಾಹರಣೆ ಕೊಡಬೇಕೂಂತ ಕಟ್ಟಿದ ಕತೆ ಅದು' ಎಂದ ಯೂಂಗ್, ಅಚ್ಚರಿಯಿಂದ.
ಅದು ಹೇಗಾಗಿತ್ತೆಂದರೆ, ಮನೋವಿಜ್ಞಾನಿ ಯೂಂಗ್ ಮನುಷ್ಯನ ಅಪರಾಧಿ ಮನೋಭಾವ ಕುರಿತು ತನ್ನಾಳದಲ್ಲಿ ತಡಕುತ್ತಾ ಮೂಡಿದ ವಿವರಗಳನ್ನೇ ಕತೆಯಾಗಿ ಕಟ್ಟುತ್ತಾ, ಎದುರಿಗಿದ್ದವನನ್ನು ನೋಡನೋಡುತ್ತಲೇ ಅವನ ಬಗೆಗಿನ ಎಲ್ಲ ವಿವರಗಳನ್ನೂ ತನಗರಿವಿಲ್ಲದೆಯೇ ಹೇಳಿಬಿಟ್ಟಿದ್ದ. ಇದು ನಾವು ಸಾಧಾರಣ ಅರ್ಥದಲ್ಲಿ ಹೇಳುವ ಟೆಲಿಪತಿಯಲ್ಲ.
ಈ ಪ್ರಸಂಗ ನಡೆದ ಕೆಲದಿನಗಳ ನಂತರ ಯೂಂಗ್ ಅವತ್ತು ತಾನು ಹೇಳಿದ ಕತೆಯನ್ನು ನೆನಪಿಸಿಕೊಳ್ಳಲೆತ್ನಿಸುತ್ತಾನೆ. ಅದರ ಒಂದು ವಿವರವೂ ಅವನಿಗೆ ಹೊಳೆಯುವುದಿಲ್ಲ. ಹೀಗೇ ಯೋಚಿಸುತ್ತಿರುವಾಗ ಅವನಿಗೆ ಸ್ವಿಶ್ ಕಾದಂಬರಿಕಾರ ಝುಕೋಕೆಯ ನೆನಪಾಗುತ್ತದೆ. ಇತಿಹಾಸ ಪುಸ್ತಕಗಳನ್ನೂ, ಐತಿಹಾಸಿಕ ಕಾದಂಬರಿಗಳನ್ನೂ ಬರೆದಿರುವ ಝುಕೋಕೆ ತನ್ನ ಪುಸ್ತಕವೊಂದರಲ್ಲಿ ಇಂಥದೇ ಘಟನೆಯ ಬಗ್ಗೆ ಹೇಳುವುದನ್ನು ಯೂಂಗ್ ನೆನೆಸಿಕೊಳ್ಳುತ್ತಾನೆ. ಝುಕೋಕೆ ಹೋಟೆಲೊಂದರಲ್ಲಿ ಕೂತು ಅಲ್ಲೇ ಇದ್ದ ಅಪರಿಚಿತ ತರುಣನೊಬ್ಬನನ್ನು ನೋಡಿದ ಕೂಡಲೇ ಅವನೊಬ್ಬ ಕಳ್ಳ ಎನ್ನಿಸುತ್ತದೆ. ಯಾಕೆಂದರೆ, ಆ ತರುಣ ಏನನ್ನೋ ಕದ್ದ ಚಿತ್ರ ಅವನ ಒಳಗಣ್ಣಿನಲ್ಲಿ ಮೂಡಿರುತ್ತದೆ. ನಂತರ ತನಿಖೆ ಮಾಡಿ ನೋಡಿದಾಗ ಆ ಅಪರಿಚಿತ ತರುಣ ನಿಜಕ್ಕೂ ಕಳ್ಳನೇ ಆಗಿರುವುದು ಗೊತ್ತಾಗುತ್ತದೆ.
ಯೂಂಗ್ ಹೇಳುವ ಸಹಜ ಮನಸ್ಸಿನ (Natural mind) ಶಕ್ತಿ ಇಂಥದ್ದು; ಅದು ಅತ್ಯಂತ ನೇರವಾಗಿ ಹಾಗೂ ಕಠೋರವಾಗಿ ಸತ್ಯ ನುಡಿದುಬಿಡುತ್ತದೆ. ಇಂಥ ಮನಸ್ಸಿನ ಪ್ರತಿಕ್ರಿಯೆಗಳು ಅದರ ಸಹಜ ಮೂಲಗಳಿಂದ ಚಿಮ್ಮುತ್ತಿರುತ್ತವೆಯೇ ಹೊರತು ಪುಸ್ತಕಗಳಿಂದ ಮೂಡಿದ ಅಭಿಪ್ರಾಯಗಳಿಂದಲ್ಲ. ಅದು ನೆಲದಿಂದ ಚಿಮ್ಮುವ ನೀರಿನ ಚಿಲುಮೆಯೊಂದು ಪ್ರಕೃತಿಯ ಹಲಬಗೆಯ ದ್ರವ್ಯ, ಲವಣಗಳನ್ನು ಹೊರ ತರುವಂತೆ ನಮ್ಮ ಒಳ ಮನಸ್ಸಿನ ಅಪರೂಪದ ಜ್ಞಾನವನ್ನು ತನ್ನೊಡನೆ ಹೊತ್ತು ತರುತ್ತದೆ.
ಕೇವಲ ಯೂಂಗ್ ಅಥವಾ ಬೇಟ್ಸ್ ಥರದ ಪ್ರತಿಭಾಶಾಲಿಗಳಿಗೆ ಮಾತ್ರವಲ್ಲ, ಸಾಮಾನ್ಯರಿಗೂ ಇತರರನ್ನು ಗ್ರಹಿಸುವ ಶಕ್ತಿ ನಿರಂತರವಾದ ವೈವಿಧ್ಯಮಯ ಓದು, ಆಳವಾದ ಚಿಂತನೆ ಹಾಗೂ ಸುತ್ತಮುತ್ತಣ ಜನರನ್ನು ಹಾಗೂ ಸುತ್ತಣ ವಿದ್ಯಮಾನಗಳನ್ನು ನೋಡುವ ಅನುಭವದಿಂದಲೂ ಬರುತ್ತಿರುತ್ತದೆ; ಇದು ನನ್ನ ನಂಬಿಕೆ. ಇದು ಕೂಡ ಅನೇಕ ಸಲ ವ್ಯಕ್ತಿಗಳು ಕೆಲಸ ಮಾಡುವ ತಂತಮ್ಮ ಕ್ಷೇತ್ರಗಳ ಆಳವಾದ ಅಧ್ಯಯನಗಳಿಂದ ಹುಟ್ಟುವ ಒಳನೋಟದ ಫಲ ಕೂಡ. ಈ ಒಳನೋಟಗಳು ಲಾಯರೊಬ್ಬನಿಗೆ ಅಥವಾ ವೈದ್ಯೆಗೆ, ಲೇಖಕಿಗೆ, ಪತ್ರಕರ್ತನಿಗೆ ನಿತ್ಯದ ಮುಕ್ತ ನೋಟದಿಂದ ಅಥವಾ ಪರಿಶ್ರಮದಿಂದಲೂ ದಕ್ಕಬಲ್ಲವು; ಈ ಥರದ ವೃತ್ತಿಗಳಲ್ಲಿ ಕೆಲಸ ಮಾಡುವ ನನ್ನ ಪರಿಚಿತರಲ್ಲಿ, ಉದಾಹರಣೆಗೆ, ಸಿ.ಎಚ್. ಹನುಮಂತರಾಯರಂಥ ಪರಿಣತ ಲಾಯರುಗಳಲ್ಲಿ, ಕಂಡು ಬರುವ ವಿಶೇಷ ಶಕ್ತಿಯನ್ನು ಕಂಡು ಈ ಮಾತು ಹೇಳುತ್ತಿದ್ದೇನೆ. ಇದು ನಿಮ್ಮಲ್ಲೂ ಇರಬಹುದು ಎಂಬುದನ್ನು ಹುಡುಕಿಕೊಳ್ಳಲು ಯೂಂಗ್ ಅಥವಾ ಬೇಟ್ಸ್ ಥರದವರ ಅನುಭವಗಳು ಪ್ರೇರಣೆಯಾಗಬಲ್ಲವು. ಆದ್ದರಿಂದಲೇ, ಬರವಣಿಗೆಯಲ್ಲಿ ತೊಡಗುವ ಎಲ್ಲರೂ ಒಂದು ಎಕ್ಸರ್ಸೈಸ್ ರೀತಿಯಲ್ಲಾದರೂ, ತಮ್ಮೊಳಗಿನ ವಿಶಿಷ್ಟ ಶಕ್ತಿ ಯಾವುದು ಎಂಬುದನ್ನು ಸದಾ ಹುಡುಕಿಕೊಳ್ಳುತ್ತಿರುವುದು ಮುಖ್ಯ ಎಂದು ನನಗೆ ಆಗಾಗ ಅನ್ನಿಸಿದೆ.
ಇಷ್ಟಾಗಿಯೂ, ಕತೆಗಾರ ಬೇಟ್ಸ್ಗೆ ಇದ್ದ ಅಸಾಧಾರಣ ಶಕ್ತಿಯನ್ನು ಸೇನಾ ವ್ಯವಸ್ಥೆ ಬಳಸಿಕೊಂಡಿದ್ದು ನೈತಿಕವೋ, ಅನೈತಿಕವೋ ಎಂಬ ಪ್ರಶ್ನೆ ಉಳಿಯುತ್ತದೆ. ಆದರೆ ಅಸೈನ್ ಮೆಂಟಿನ ನಂತರ ಬೇಟ್ಸ್ ಬರೆದ ಕತೆಗಳು ಅವನ ಅಸೈನ್ ಮೆಂಟಿನ ಉದ್ದೇಶವನ್ನೂ ಮೀರಿ ತಾವು ಕಂಡ ಸತ್ಯವನ್ನು ಕತೆಗಾರ ದಾಖಲಿಸಿದವೇ ಎಂಬುದನ್ನು ಅವನ ಕತೆಗಳ ಸೂಕ್ಷ್ಮ ಅಧ್ಯಯನ ಮಾತ್ರ ತಿಳಿಸಬಲ್ಲದು. ನಾವು ಬರೆದ ಕತೆಗಳ ಬಗ್ಗೆ ಇತರರ ಅಭಿಪ್ರಾಯಕ್ಕಾಗಿ ಹಾತೊರೆಯುವುದಕ್ಕಿಂತ ಇಂಥ ಕತೆಗಾರರ ಅನುಭವಗಳನ್ನು ಗ್ರಹಿಸುವುದು ನಮ್ಮನಮ್ಮ ಕಥಾ ಸೃಷ್ಟಿಯ ಕಲೆಗೆ ಹೆಚ್ಚು ಲಾಭಕರ.
Comments
1 Comments
| ಮಂಜುನಾಥ್ ಸಿ ನೆಟ್ಕಲ್
ಮನುಷ್ಯನಲ್ಲಿ ಸುಪ್ತವಾಗಿರುವ ಈ ಅಗೋಚರ ಶಕ್ತಿ ನಿಜಕ್ಕೂ ವಿಸ್ಮಯಕಾರಿ ಸರ್.. ಸ್ವಯಂ ಮನೋವಿಜ್ಞಾನಿಗೇ ಇಂತಹ ವಿಶಿಷ್ಟ ಶಕ್ತಿ ಇದೆ ಅಂದ ಮೇಲೆ ವಿಜ್ಞಾನಕ್ಕೂ ನಿಲುಕದ ಅನೇಕ ವಿಚಿತ್ರ ವಿಸ್ಮಯಗಳು ಇರುವುದು ಖಚಿತವಾದಂತೆ ಆಯಿತು. ಇಂತಹ ಶಕ್ತಿ ಪಡೆದ ಕೆಲವರು ಇದನ್ನು ಸ್ವಾರ್ಥಕ್ಕೆ ಬಳಸಿಕೊಂಡು ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ.... ಶಕ್ತಿ ಇಲ್ಲದವರೂ ಇರುವಂತೆ ತೋರಿಸಿಕೊಂಡು... ಮೋಸದ ವ್ಯವಹಾರ ಮಾಡುತ್ತಿದ್ದಾರೆ
Add Comment