ಬಾಬಾಸಾಹೇಬರ ಬೌದ್ಧ ಧರ್ಮ ಸ್ವೀಕಾರ: ಗುಲ್ಬರ್ಗ ಟಿಪ್ಪಣಿಗಳು
by Nataraj Huliyar
ಮೊನ್ನೆ ವಿಜಯದಶಮಿಯ ದಿವಸ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರು ಗುಲಬರ್ಗಾದಲ್ಲಿ ಸ್ಥಾಪಿಸಿರುವ ‘ಬುದ್ಧ ವಿಹಾರ’ದಲ್ಲಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರದ ದಿನದ ಆಚರಣೆಯ ಸಭೆಯಲ್ಲಿ ಮಾತಾಡುವುದಿತ್ತು. ಗುಲಬರ್ಗಾದಲ್ಲಿದ್ದಾಗ ನನ್ನ ಪ್ರಿಯವಾದ ತಾಣಗಳಲ್ಲಿ ಬುದ್ಧ ವಿಹಾರ ಮುಖ್ಯವಾದ ತಾಣವಾಗಿತ್ತು. ಬಂದೇ ನವಾಝ್ ದರ್ಗಾ ಕೂಡ ಗುಲಬರ್ಗಾದಲ್ಲಿ ನನ್ನ ಪ್ರಿಯ ತಾಣವಾಗಿತ್ತು.
ಅಂಬೇಡ್ಕರ್ ಅವರ ಬೌದ್ಧ ಧರ್ಮ ಸ್ವೀಕಾರ ಕುರಿತು ಈಗಾಗಲೇ ನನ್ನ ‘ಗಾಳಿ ಬೆಳಕು’ ಪುಸ್ತಕದಲ್ಲಿ ‘ಬಾಬಾ ಸಾಹೇಬರ ಜ್ಞಾನೋದಯ ಮತ್ತು ಅನಂತರ’ ಲೇಖನ ಬರೆದಿರುವುದರಿಂದ, ಅದನ್ನು ಬಿಟ್ಟು ಏನಾದರೂ ಮಾತಾಡಲು ವಿವರಗಳನ್ನು ಹುಡುಕತೊಡಗಿದೆ. ಈ ವಿವರಗಳಲ್ಲಿ ನನ್ನನ್ನುಸೆಳೆದ ಕೆಲವು ಸಂಗತಿಗಳು:
ಮೊದಲನೆಯದು, ಬೌದ್ಧ ಧರ್ಮ ಸ್ವೀಕಾರಕ್ಕೂ ಮುನ್ನ, ೨೪ ಮೇ ೧೯೫೬ರಂದು ನರೆ ಪಾರ್ಕಿನಲ್ಲಿ ಅಂಬೇಡ್ಕರ್ ಸುಮಾರು ೭೫೦೦೦ ಅನುಯಾಯಿಗಳ ಎದುರು ಮಾತಾಡುತ್ತಾ ತಮ್ಮನ್ನು ತಾವು ಬೈಬಲ್ಲಿನ ಮೋಸೆಸ್ಗೆ ಹೋಲಿಸಿಕೊಳ್ಳುವ ರೀತಿ: ‘ಗುಲಾಮರನ್ನು ಬಿಡುಗಡೆಗೊಳಿಸಿದ ಬೈಬಲ್ನ ಮೋಸೆಸ್ ಥರ ನಾನು ಈಗ ಇದ್ದೇನೆ ಎನ್ನಿಸುತ್ತದೆ. ಮೋಸೆಸ್ಗೆ ಹಲವು ಸವಾಲುಗಳು ಎದುರಾದವು. ನಾನೂ ಅಂಥ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೂ ನಾನು ನನ್ನ ಅಸ್ಪೃಶ್ಯ ಸಮುದಾಯದೊಂದಿಗೆ ಬೌದ್ಧ ಧಮ್ಮವನ್ನು ಸ್ವೀಕರಿಸುತ್ತೇನೆ.
ಈ ಹೋಲಿಕೆ ನೋಡಿ ಕುತೂಹಲದಿಂದ ಮೋಸೆಸ್ ಕುರಿತ ವಿವರಗಳನ್ನು ಹುಡುಕಿದೆ: ಮೋಸೆಸ್ ಈಜಿಪ್ಟಿನಲ್ಲಿ ಹೀಬ್ರೂ ಮನೆತನದಲ್ಲಿ ಹುಟ್ಟಿದ ಕಾಲದಲ್ಲಿ ಗಂಡು ಮಕ್ಕಳನ್ನು ಎಳವೆಯಲ್ಲೇ ಕೊಲ್ಲಲಾಗುತ್ತಿತ್ತು; ಹೀಗಾಗಿ ಮೋಸೆಸ್ ತಾಯಿ ಅವನನ್ನು ಬುಟ್ಟಿಯಲ್ಲಿ ಹುದುಗಿಸಿ ನೈಲ್ ನದಿಯಲ್ಲಿ ತೇಲಿಬಿಟ್ಟಳು. ಆಕಸ್ಮಿಕವಾಗಿ ಸಿಕ್ಕ ಮಗು ಮೋಸೆಸ್ನನ್ನು ಫರೋಹನ ಮಗಳು ಸಾಕಿದಳು.
ಒಂದು ದಿನ ಹೀಬ್ರೂ ಗುಲಾಮನನ್ನು ಈಜಿಪ್ಟಿನ ಒಡೆಯನೊಬ್ಬ ಹೊಡೆಯುತ್ತಿದ್ದ; ಮೋಸೆಸ್ ಆ ಒಡೆಯನನ್ನು ಕೊಂದು, ಮಿದಿಯನ್ ಎಂಬ ಊರಿಗೆ ಒಡಿ ಹೋದ. ಕುರಿ ಕಾಯುವ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಮದುವೆಯಾದ. ಒಂದು ದಿನ ಹೊರಬ್ ಪರ್ವತದ ಉರಿವ ಪೊದೆಗಳಿಂದ ಮೇಲೆದ್ದ ದೇವರು ಮೋಸೆಸ್ಗೆ, ‘ನೀನು ಈಜಿಪ್ಟಿಗೆ ತೆರಳಿ ಗುಲಾಮರಾಗಿರುವ ಇಸ್ರೇಲಿಗಳ ಸ್ವಾತಂತ್ಯ್ರಕ್ಕಾಗಿ ಹಕ್ಕೊತ್ತಾಯ ನಡೆಸು’ ಎಂದು ತಾಕೀತು ಮಾಡಿದ. ದೇವರು ಈಜಿಪ್ಟಿಗೆ ಹತ್ತು ಪ್ಲೇಗುಗಳು ಎರಗುವಂತೆ ಮಾಡಿದ. ಆಗ ಮೋಸೆಸ್ ಇಸ್ರೇಲಿಗಳನ್ನು ಈಜಿಪ್ಟಿನಿಂದ ಹೊರಗೆ ಕರೆದೊಯ್ದ. ಬೆನ್ನು ಹತ್ತಿದ ಈಜಿಪ್ಟಿನ ಸೇನೆಯಿಂದ ತಪ್ಪಿಸಿಕೊಳ್ಳಲು ಮೋಸೆಸ್ ಅವರೊಡನೆ ಕೆಂಪು ಸಮುದ್ರವನ್ನು ದಾಟಿದ. ಕಾಡುಮೇಡುಗಳಲ್ಲಿ ನಲವತ್ತು ವರ್ಷ ಈ ಜನರನ್ನು ಮುನ್ನಡೆಸಿದ. ಹೀಗೆ ಕತೆ ಬೆಳೆಯುತ್ತದೆ.
ಈ ಕತೆಯ ಚಾರಿತ್ರಿಕತೆ ಏನೇ ಇರಲಿ, ಈ ಕತೆಯ ರೂಪಕ ಸತ್ಯ ಜಗತ್ ಸಾಹಿತ್ಯದ ಗಂಭೀರ ಓದುಗರಾಗಿದ್ದ ಅಂಬೇಡ್ಕರ್ ಅವರನ್ನು ಸೆಳೆಯಿತು. ತಾವು ಅದೇ ಆಗ ಆರಂಭಿಸಿದ್ದ ದಲಿತರ ಬಿಡುಗಡೆಯ ಮಹಾಪಯಣವನ್ನು ಮೋಸೆಸನ ಮಹಾಪಯಣಕ್ಕೆ ಅಂಬೇಡ್ಕರ್ ಅವತ್ತು ಹೋಲಿಸಿಕೊಂಡಿದ್ದು; ಮೋಸೆಸನಂತೆ ತಾನೂ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಅವರಿಗನ್ನಿಸಿದ್ದು ಸಹಜವಾಗಿತ್ತು.
ಆದರೆ ಅಂಬೇಡ್ಕರ್ ಅವರ ಬೌದ್ಧ ಧರ್ಮ ಸ್ವೀಕಾರದ ಘಟ್ಟದಲ್ಲಿ ತೀರಾ ದೊಡ್ಡ ಸವಾಲುಗಳು ಎದುರಾಗಲಿಲ್ಲ. ಸಣ್ಣ ಪುಟ್ಟ ಗೊಣಗಾಟಗಳು, ವಿರೋಧಗಳು ಇದ್ದವು. ೧೯೫೬ರ ಅಕ್ಟೋಬರ್ ತಿಂಗಳ ವಿಜಯದಶಮಿಯಂದು ಐದು ಲಕ್ಷ ಜನ ಅಂಬೇಡ್ಕರ್ ಜೊತೆ ಬೌದ್ಧ ಧರ್ಮ ಸ್ವೀಕಾರ ಮಾಡಿದಾಗ ಆ ಗೊಣಗಾಟಗಳು ಕರಗಿಹೋದವು. ಚರಿತ್ರೆಯಲ್ಲಿ ಕ್ರಿಸ್ತಪೂರ್ವ ೨೬೨ನೇ ಇಸವಿಯ ಆ ದಿನ ಅಶೋಕ ಅಹಿಂಸೆಯನ್ನು ಸ್ವೀಕರಿಸಿದ ದಿನ. ಹಿಂಸೆಯ ಮೇಲೆ ಅಹಿಂಸೆ ದಿಗ್ವಿಜಯ ಸಾಧಿಸಿದ ದಿನ. ಆ ದಿನವನ್ನು ಅಂಬೇಡ್ಕರ್ ‘ಅಶೋಕ ವಿಜಯದಶಮಿ’ ಎಂದು ಘೋಷಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಆ ದಿನದಂದು ಬುದ್ಧ ವಿಹಾರದಲ್ಲಿ ಪ್ರತಿ ವರ್ಷ ಬುದ್ಧವಂದನೆ, ಉಪನ್ಯಾಸ, ಸಂಸ್ಕೃತಿಹಬ್ಬಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ.
ಅವತ್ತು ಬುದ್ಧವಿಹಾರದ ಉಪನ್ಯಾಸಕ್ಕೆ ಟಿಪ್ಪಣಿ ಮಾಡಿಕೊಳ್ಳುತ್ತಿರುವಾಗ ಹೊಳೆದ ಮತ್ತೊಂದು ಸತ್ಯ: ಸಾಮಾನ್ಯವಾಗಿ ಇಂಡಿಯಾದಲ್ಲಿ ಧರ್ಮ, ಧಾರ್ಮಿಕತೆಗಳು ವೈರಾಗ್ಯ, ಜೀವನವಿಮುಖತೆಗಳಂಥ ಬೆಳವಣಿಗೆಗಳೊಂದಿಗೆ ತಳಕು ಹಾಕಿಕೊಂಡಿವೆ. ಆದರೆ ಅಂಬೇಡ್ಕರರ ಬೌದ್ಧ ಧರ್ಮ ಸ್ವೀಕಾರ ಹಾಗೂ ಹೊಸ ರಾಜಕೀಯ ಪಕ್ಷ ರೂಪಿಸುವ ಸಿದ್ಧತೆ ಎರಡೂ ಜೊತೆ ಜೊತೆಗೇ ಶುರುವಾಗಿದ್ದವು. ‘ಎ ಪಾರ್ಟ್ ಅಪಾರ್ಟ್’ ಪುಸ್ತಕದಲ್ಲಿ ಅಶೋಕ್ ಗೋಪಾಲ್ ಕೊಡುವ ವಿವರಗಳನ್ನು ಓದಿದ ನಂತರ, ಈ ಬೌದ್ಧ ಧಮ್ಮ ಸ್ವೀಕಾರ ಅಂಬೇಡ್ಕರ್ ಆರಂಭಿಸಲಿದ್ದ ಹೊಸ ರಾಜಕೀಯದ ಭಾಗವೂ ಅಗಿತ್ತು ಎನ್ನಿಸುತ್ತದೆ:
೧೫ ಅಕ್ಟೋಬರ್ ೧೯೫೬ರಂದು [ತಮ್ಮ ಅನುಯಾಯಿಗಳಿಗೆ ಬೌದ್ಧ ಧಮ್ಮ ದೀಕ್ಷೆ ಕೊಟ್ಟ ನಂತರ] ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ನಿಂದ ಬಂದ ಎಸ್.ಸಿ.ಎಫ್.ನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಅಂಬೇಡ್ಕರ್ ಹಿಂದಿಯಲ್ಲಿ ಮಾತಾಡುತ್ತಾ ಹೇಳಿದರು:
‘ನಮ್ಮ ಸುತ್ತಮುತ್ತ ನಮ್ಮ ಯಾತನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಜನರು ಯಾರೆಲ್ಲ ಇದ್ದಾರೆ ಎಂಬುದನ್ನು ಹುಡುಕಿಕೊಳ್ಳುವ ಕೆಲಸವನ್ನು ಶುರು ಮಾಡಬೇಕು. ಅಂಥ ಜನರನ್ನು ಒಗ್ಗೂಡಿಸಿ ಅವರೊಡನೆ ಕೆಲಸ ಮಾಡಲು ನಾವು ಸಿದ್ಧರಿರಬೇಕು. ನಾನು ಅಂಥ ಜನರನ್ನು ಒಟ್ಟಿಗೆ ತರಲು ಪ್ರಯತ್ನಿಸುತ್ತಿದ್ದೇನೆ. ಆ ಪ್ರಯತ್ನ ಯಶಸ್ವಿಯಾದರೆ, ನಾವು ಹೊಸ ಪಕ್ಷವೊಂದನ್ನು ಕಟ್ಟಬೇಕಾಗುತ್ತದೆ ಹಾಗೂ ಅದರ ಬಾಗಿಲುಗಳು ನಮ್ಮ ವಲಯದಿಂದ ಆಚೆಗೆ ಇರುವ ಜನರಿಗೂ ತೆರೆದಿರಬೇಕಾಗುತ್ತದೆ.'
ಅವತ್ತು ‘ಅಂಬೇಡ್ಕರ್ ಪ್ರಸ್ತಾಪಿಸಿದ ಈ ‘ಜನ’ರಲ್ಲಿ ತಾವು ಈಗಾಗಲೇ ಮಾತುಕತೆ ಶುರು ಮಾಡಿದ್ದ ಸಮಾಜವಾದಿ ನಾಯಕರಾದ ರಾಮಮನೋಹರ ಲೋಹಿಯಾ ಹಾಗೂ ಎಸ್.ಎಂ. ಜೋಶಿ ಕೂಡ ಸೇರಿದ್ದರು. ಅಂಬೇಡ್ಕರ್ ಅವರ ಈ ನಡೆಯಲ್ಲಿ, ತಾವು ೧೯೩೬ರಲ್ಲಿ ಆರಂಭಿಸಿದ್ದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ವರ್ಗಾಧಾರಿತ ರಾಜಕೀಯಕ್ಕೆ ಮರಳುವ ಸೂಚನೆಯಿತ್ತು' ಎಂದು ಅಶೋಕ್ ಗೋಪಾಲ್ ಬರೆಯುತ್ತಾರೆ.
ಕಾಲ ಅಂಬೇಡ್ಕರ್ಗೆ ಈ ಅವಕಾಶ ಕೊಡಲಿಲ್ಲ ಎಂಬುದು ಇವತ್ತು ದುಗುಡ ಹುಟ್ಟಿಸುತ್ತದೆ. ಅದರಲ್ಲೂ ಬೌದ್ಧ ಧರ್ಮದ ಸ್ವೀಕಾರದ ನಂತರ ಅಂಬೇಡ್ಕರ್ ರೂಪಿಸಲಿದ್ದ ರಾಜಕೀಯ ಪಕ್ಷ ಹೇಗಿರುತ್ತಿತ್ತು, ಪಕ್ಷದ ಪ್ರಣಾಳಿಕೆ ಹೇಗಿರುತ್ತಿತ್ತು, ಅವರು ಲೋಹಿಯಾ ಥರದವರ ಜೊತೆಗೂಡಿ ಮುನ್ನಡೆಸಲಿದ್ದ ರಾಜಕೀಯ ಹೇಗಿರುತ್ತಿತ್ತು, ಅವರ ಬರವಣಿಗೆ ಯಾವ ದಿಕ್ಕು ಹಿಡಿಯುತ್ತಿತ್ತು…ಇಂಥ ಉತ್ತರವಿಲ್ಲದ ಪ್ರಶ್ನೆಗಳು ಆಗಾಗ ನನ್ನನ್ನು ಮುತ್ತಿವೆ; ಹಾಗೆಯೇ ಬೌದ್ಧ ಧರ್ಮ ಸ್ವೀಕಾರದ ನಂತರ ಅಂಬೇಡ್ಕರ್ ಅವರ ಹಟಾತ್ ನಿರ್ಗಮನದ ವಿಷಾದ ಕೂಡ. ಅದರ ಜೊತೆಗೆ, ಕೊನೆಯ ರಾತ್ರಿ ಅಂಬೇಡ್ಕರ್ ಬಾಯಲ್ಲಿ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆ ಸಣ್ಣಗೆ ಕೇಳಿ ಬರುತ್ತಿದ್ದುದನ್ನು ನಾನಕ್ ಚಂದ್ ರತ್ತು ದಾಖಲಿಸಿರುವುದು ಕೂಡ ನನ್ನಲ್ಲಿ ಉಳಿದಿದೆ.
ಸಾಮ್ರಾಟ್ ಅಶೋಕನ ನಂತರ ಬೌದ್ಧ ಧರ್ಮವನ್ನು ಮರುಜೀವಗೊಳಿಸಿದ ಶ್ರೇಷ್ಠ ಬೌದ್ಧರಲ್ಲಿ ಅಂಬೇಡ್ಕರ್ ಮುಂಚೂಣಿಯಲ್ಲಿದ್ದಾರೆ ಎಂಬ ಸತ್ಯ ಚರಿತ್ರೆಯಲ್ಲಿ ಖಚಿತವಾಗಿ ದಾಖಲಾಗಿದೆ. ನಮ್ಮಂಥ ನಾಸ್ತಿಕ ಉದಾರವಾದಿಗಳಿಗೂ ಪ್ರಿಯವಾಗುವಂತೆ ಬೌದ್ಧ ಧಮ್ಮವನ್ನು ವಿವರಿಸಿದ ಅಂಬೇಡ್ಕರ್ ಅವರ ‘ನವಯಾನ’ ಬುದ್ಧಿಸಂ ಇವತ್ತಿಗೂ ಆಧುನಿಕ ಮನಸ್ಸುಗಳಿಗೆ ಪ್ರಿಯವಾಗಬಲ್ಲ ಧಮ್ಮವಾಗಿ ಉಳಿದಿದೆ. ಅಂಬೇಡ್ಕರ್ ವಿವರಿಸಿರುವ ಈ ಬೌದ್ಧ ಧರ್ಮ ಕುರಿತು ನಾನು ಆಗಾಗ್ಗೆ ಪಟ್ಟಿ ಮಾಡಿರುವ ವಿಶಿಷ್ಟ ಗುಣಗಳನ್ನು ಗುಲಬರ್ಗಾದ ಬೌದ್ಧ ವಿಹಾರದಲ್ಲಿ ಮತ್ತೆ ಮಂಡಿಸಿದೆ. ಅವನ್ನು ಇಲ್ಲಿ ಕೊಡುತ್ತಿರುವೆ.
೧. ಉದಾರವಾದಿ ಪ್ರಜಾಪ್ರಭುತ್ವ, ಮಾನವತಾವಾದ, ವೈಜ್ಞಾನಿಕತೆ ಹಾಗೂ ವಿಚಾರವಾದ ಗಳನ್ನು ಒಪ್ಪುವ ಆಧುನಿಕ ಮನಸ್ಸಿಗೆ ಬೌದ್ಧ ಧಮ್ಮ ಒಪ್ಪಿತವಾಗಿದೆ.
೨. ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಗಳ ತತ್ವವನ್ನು ಈ ಧರ್ಮ ಪ್ರತಿಪಾದಿಸುತ್ತದೆ.
೩. ಧರ್ಮದ ಹೆಸರಿನಲ್ಲಿ ಅನಿಷ್ಠವಾದ ಆಚರಣೆಗಳನ್ನು ಬೌದ್ಧಧಮ್ಮ ಒಪ್ಪುವುದಿಲ್ಲ.
೪. ಬೌದ್ಧ ಧಮ್ಮ ಜಾತಿಯ ಮೇಲು, ಕೀಳುಗಳನ್ನು ತಿರಸ್ಕರಿಸುತ್ತದೆ.
೫. ಈ ಧರ್ಮದ ಮಾರ್ಗಗಳನ್ನು ಪ್ರಶ್ನಿಸುವ, ವಿವರಣೆಯ ಮೂಲಕ ಅದಕ್ಕೆ ತಿದ್ದುಪಡಿ ತರುವ ಸ್ವಾತಂತ್ರ್ಯ ಈ ಧರ್ಮದ ಅನುಯಾಯಿಗೆ ಇದೆ.
೬. ಪವಾಡಗಳು, ಅಲೌಕಿಕ ಘಟನೆಗಳು ಹಾಗೂ ಅಲೌಕಿಕ ಶಕ್ತಿಗಳ ಸುತ್ತ ಕಟ್ಟಿದ ಸುಳ್ಳುಗಳ ಮೂಲಕ ಧರ್ಮಗಳು ಜನರ ಮೇಲೆ ಯಜಮಾನಿಕೆ ಸ್ಥಾಪಿಸುತ್ತಿರುತ್ತಿವೆ. ಹಿಂದೂಧರ್ಮ ಹೆಚ್ಚಾಗಿ ಈ ಬಗೆಯಲ್ಲೇ ಜನಸಮುದಾಯವನ್ನು ನಿಯಂತ್ರಿಸುತ್ತಾ ಬಂದಿದೆ. ಈ ದೃಷ್ಟಿಯಿಂದ ನೋಡಿದಾಗ, ಬೌದ್ಧ ಧಮ್ಮ ಪವಾಡಗಳಾಗಲೀ ಅಲೌಕಿಕವಾದ ದೈವದ ಕಲ್ಪನೆಯಾಗಲೀ ಇಲ್ಲದ ಧಮ್ಮ. ತನ್ನ ಧಾರ್ಮಿಕ ನಾಯಕರಲ್ಲಿ ಅಲೌಕಿಕ ಶಕ್ತಿಯಿದೆಯೆಂದು ಬೌದ್ಧಧಮ್ಮ ಬಿಂಬಿಸುವುದಿಲ್ಲ.
೭. ಸಮಾನತೆಯ ಆಶಯವನ್ನು ಪ್ರತಿಪಾದಿಸುವ ರಾಜಕೀಯ ಕ್ರಾಂತಿಗೆ ಪೂರಕವಾಗಬಲ್ಲ ಧಾರ್ಮಿಕ ಕ್ರಾಂತಿಯನ್ನು ರೂಪಿಸಲು ಬೌದ್ಧಧಮ್ಮ ನೆರವಾಗಬಲ್ಲದು.
೮. ಬುದ್ಧನ ಪ್ರಕಾರ 'ಧಮ್ಮ' ಎನ್ನುವುದು ಮೂಲತಃ ನ್ಯಾಯ ಹಾಗೂ ಸಾಮಾಜಿಕ ನೈತಿಕತೆ; ಈ ಧಮ್ಮದಲ್ಲಿ ತೀರ್ಥಯಾತ್ರೆಗಳು, ಬಲಿಗಳು ಇತ್ಯಾದಿಗಳಿಗೆ ಅವಕಾಶವಿಲ್ಲ.
೯. ಚರಿತ್ರೆಯುದ್ದಕ್ಕೂ ಅನೇಕ ಧರ್ಮಗಳು ಯಾಜಮಾನ್ಯದ ರಾಜಕಾರಣದ ಹಾಗೂ ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಲಾಭಕೋರ ರಾಜಕಾರಣದ ಮುಖವಾಡಗಳಾಗಿ ಬಳಕೆಯಾಗುತ್ತಾ ಬಂದಿವೆ. ಇದನ್ನು
ಮನಗಂಡಿದ್ದ ಅಂಬೇಡ್ಕರ್ ‘ನನಗೆ ಧರ್ಮದ ಅಗತ್ಯವಿದೆಯೇ ಹೊರತು ಧರ್ಮದ ಹೆಸರಿನಲ್ಲಿ ಗೋಸುಂಬೆ ತನವಲ್ಲ’ ಎಂದು ಹೇಳಿದರು. ಒಂದು ಉತ್ತಮ ಜೀವನಮಾರ್ಗವಾಗಿ ಕೂಡ ಅವರು ಬೌದ್ಧ ಮಾರ್ಗವನ್ನು ಒಪ್ಪಿಕೊಂಡರು.
೧೦.ಬೌದ್ಧ ಧಮ್ಮ ವೈದಿಕವಾದ ಹಾಗೂ ಬ್ರಾಹ್ಮಣವಾದದ ವಿರುದ್ಧ ಹೋರಾಡುತ್ತಾ ಅಸ್ಪೃಶ್ಯತೆಯನ್ನು ದೃಢವಾಗಿ ವಿರೋಧಿಸಿತ್ತು ಹಾಗೂ ಅಸ್ಪಶ್ಯರನ್ನು ತನ್ನ ತೆಕ್ಕೆಗೆ ಸ್ವೀಕರಿಸಿತ್ತು. ಈ ತಾತ್ವಿಕ ಹಾಗೂ ಧಾರ್ಮಿಕ ಬುನಾದಿ ಅಂಬೇಡ್ಕರ್ ಅವರು ವೈದಿಕ ವಿಕಾರಗಳ ವಿರುದ್ಧ ನಡೆಸುತ್ತಿದ್ದ ಹೋರಾಟಕ್ಕೆ ಪೂರಕವಾದ ಅಗತ್ಯವಾಗಿತ್ತು.
ಆಧುನಿಕ ಜಗತ್ತಿನ ಶ್ರೇಷ್ಠ ಬೌದ್ಧ ವ್ಯಾಖ್ಯಾನಕಾರರಾದ ಅಂಬೇಡ್ಕರ್ ಅವರು ಧಮ್ಮವನ್ನು ವಿವರಿಸಿಕೊಂಡ ಕ್ರಮದಿಂದಾಗಿ ಬೌದ್ಧಧಮ್ಮ ಹೊಸ ಕಾಲದಲ್ಲಿನ ವಿಮೋಚನೆಯ ಧರ್ಮವಾಗಿ ಪರಿವರ್ತಿತವಾದದ್ದನ್ನು ಗೇಲ್ ಓಂವೆಡ್ತ್ ಚರ್ಚಿಸುತ್ತಾರೆ. ಜಾತಿ ಅಸಮಾನತೆಯ ಜೊತೆಜೊತೆಗೇ ಗಂಡು-ಹೆಣ್ಣಿನ ನಡುವಣ ಅಸಮಾನತೆ ಕುರಿತು ಅಂಬೇಡ್ಕರ್ ನಡೆಸಿದ ಚಿಂತನೆಗೂ ಬೌದ್ಧಧಮ್ಮದಲ್ಲಿ ಪ್ರೇರಣೆಗಳಿದ್ದವು. ಅದರ ಜೊತೆಗೇ, ಬೌದ್ಧಧಮ್ಮದ ಮೂಲಕ ಅಂಬೇಡ್ಕರ್ ರೂಪಿಸಿಕೊಂಡ ವೈಜ್ಞಾನಿಕ ವಿಮರ್ಶಾ ವಿಧಾನ ಕೂಡ ಅಷ್ಟೇ ಮುಖ್ಯವಾದುದು.
ಅವತ್ತು ಗುಲಬರ್ಗಾದಲ್ಲಿ ಈ ದಿಕ್ಕಿನಲ್ಲಿ ಮಾತಾಡಿದ ನಂತರ, ಸಂಘಟಕರಿಗೆ ಕೊಟ್ಟ ಸಲಹೆ: ‘ಬೌದ್ಧ ಪ್ರಾರ್ಥನೆಗಳ ಅರ್ಥವನ್ನು ಸರಳಗನ್ನಡದಲ್ಲಿ ಹೇಳಿ ಪ್ರಾರ್ಥನೆ ಮಂಡಿಸಿದರೆ ಎಲ್ಲರಿಗೂ ಆ ಪ್ರಾರ್ಥನೆಯ ಸತ್ಯ ಹಾಗೂ ಸತ್ವ ತಿಳಿಯಬಲ್ಲದು.’ ಕಾರಣ, ‘ಬುದ್ಧ ಶರಣಂ ಗಚ್ಛಾಮಿ’ ಎಂದರೆ ’ನಾನು ಬುದ್ಧನಲ್ಲಿ ಆಸರೆ-ಆಶ್ರಯ ಹುಡುಕುತ್ತೇನೆ’ ಎಂದರ್ಥ ಎಂಬುದು ಮೊನ್ನೆ ಮೊನೆಯವರೆಗೂ ನನಗೂ ಗೊತ್ತಿರಲಿಲ್ಲ
ಅವತ್ತಿನ ಭೇಟಿಯ ಕೊನೆಗೆ ಈಚೆಗೆ ಬಿಡುಗಡೆಯಾದ ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ ಪುಸ್ತಕವನ್ನು ಖರ್ಗೆಯವರಿಗೆ ಕೊಟ್ಟೆ. ಅವರು ಲೋಹಿಯಾ ಗುಲಬರ್ಗಾಕ್ಕೆ ಬಂದ ದಿನಗಳನ್ನು ನೆನೆದರು; ಆ ವಿವರಗಳನ್ನು ಮುಂದೊಮ್ಮೆ ಈ ಜೀವನ ಚರಿತ್ರೆಯಲ್ಲಿ ಸೇರಬೇಕು ಎಂದುಕೊಂಡೆ.
Comments
0 Comments
Add Comment