ಜೆನ್ ಝೀ: ಪ್ರಾಯದ ಪೆಂಪು, ಪ್ರಬುದ್ಧತೆ…

ಮೊನ್ನೆ ಜಂತರ್ ಮಂತರ್ ಪ್ರದೇಶದಲ್ಲಿ ಮತಗಳ್ಳತನದ ವಿರುದ್ಧ ಪ್ರತಿಭಟಿಸಿದ ಒಬ್ಬಿಬ್ಬರ ವಯಸ್ಸು ಕೇಳಿದ ನ್ಯಾಯಾಧೀಶರೊಬ್ಬರು ‘ನೀವೇನೂ ಜೆನ್ ಝೀಗಳಲ್ಲ’ ಎಂದು ತಮ್ಮ ಅಸಾಧಾರಣ ಹಾಸ್ಯ-ಕಟಕಿ ಪ್ರಜ್ಞೆಯನ್ನು ಅನಾವರಣಗೊಳಿಸಿದರು. ಎತ್ತು ಈಯ್ದರೆ ಕೊಟ್ಟಿಗೆಗೆ ಕಟ್ಟಲು ಹೊರಡುವ ವಾಚ್ಯವಾದಿಗಳಿಗೆ ಜೆನ್ ಝೀ ಎಂಬುದು ಒಂದು ‘ಸ್ಪಿರಿಟ್’ ಒಂದು ‘ಮನಸ್ಥಿತಿ’ ಒಂದು ‘ಅಲೆ’ ಕೂಡ ಎಂಬುದರ ಅರಿವಿರಲಿಕ್ಕಿಲ್ಲ. ಈ ಕಟಕಿ ಕುರಿತು ‘ಕಾಕ್ರೋಚ್ ಜನತಾ ಪಾರ್ಟಿ’ಯ ವಕ್ತಾರೆ ರತ್ನಾಸಿಂಗ್ ನಗುತ್ತಾ ಹೇಳಿದ ಮಾತು: ‘ಸೌರವ್ ದಾಸ್‌ಗೆ ಇಪ್ಪತ್ತೇಳು ವರ್ಷ- ಈತ ಡೆಫನೆಟ್ಲಿ ಜೆನ್ ಝೀ. ಅಶುತೋಷ್ ಬಾರ್ಡರ್ ಜೆನ್ ಝೀ. ಅದೆಲ್ಲ ಮುಖ್ಯವಲ್ಲ. ನಾವೆಲ್ಲ ಒಂದು ಉದ್ದೇಶಕ್ಕಾಗಿ ಇಲ್ಲಿ ಸೇರಿದ್ದೇವೆ. ಅದು ಮುಖ್ಯ.’

ಜೆನ್ ಝಡ್ ಅಥವಾ ಜೆನ್ ಝೀ ಎಂಬ ಬಣ್ಣನೆಯನ್ನು ಕೆಲವರು ಇದೇನೋ ‘ಒಂಥರದ ಯುವ ಜನಾಂಗ’ ಎಂದು ಅಂದಾಜಿನಲ್ಲಿ ತಿಳಿದಿರುವಂತಿದೆ. ಜೆನ್ ಝಡ್ ಎನ್ನುವುದು ಜನರೇಶನ್ ಝಡ್ ಅಥವಾ ‘ಜನರೇಶನ್ ಝೂಮರ‍್ಸ್’ ಎಂಬುದರ ಸಂಕ್ಷಿಪ್ತ ರೂಪ. ೧೯೯೭-೨೦೧೨ನೆಯ ಇಸವಿಯ ನಡುವೆ ಹುಟ್ಟಿದ ತಲೆಮಾರನ್ನು ‘ಜನ್ ಝಡ್’ ಎನ್ನುತ್ತಾರೆ. ಬಾಲ್ಯದಿಂದಲೇ ಇಂಟರ್‌ನೆಟ್, ಸ್ಮಾರ್ಟ್ ಫೋನ್, ಸೋಷಿಯಲ್ ಮೀಡಿಯಾ ಇತ್ಯಾದಿಗಳ ಜೊತೆ ಬೆಳೆದ ತಲೆಮಾರು ಇದು. ಮುದ್ರಿತ ಪುಸ್ತಕಗಳನ್ನು ಹೆಚ್ಚು ಓದದ ಈ ತಲೆಮಾರು ಲೋಕವನ್ನು ನೋಡುವ ಪರಿ ಹಿಂದಿನವರಿಗಿಂತ ಭಿನ್ನ; ಇದರ ಗ್ರಹಿಕೆ ಕ್ಷಿಪ್ರ.  

ಈ ಜೆನ್ ಝೀ ತಲೆಮಾರು ಈಗ ಲೋಕದ ಎಲ್ಲೆಡೆ ಅತೃಪ್ತವಾಗಿದೆ. ಭ್ರಷ್ಟರ ಆಳ್ವಿಕೆ ಕಂಡು ರೊಚ್ಚಿಗೆದ್ದಿದೆ. ಓದಿದ್ದಕ್ಕೆ ತಕ್ಕ ಕೆಲಸವಿಲ್ಲ. ಸರಿಯಾದ ಅವಕಾಶಗಳಿಲ್ಲ. ಗಳಿಸಿದ ಡಿಗ್ರಿಗಳಿಗೆ ಬೆಲೆಯಿಲ್ಲ. ಈ ಕುಪಿತ ತಲೆಮಾರಿನ ತರುಣ ತರುಣಿಯರ ತಳಮಳ, ಆತಂಕಗಳು ಒಂದಲ್ಲ, ನೂರು. ಇಲ್ಲಿ ಪರೀಕ್ಷೆಗಳು ನೆಪ ಮಾತ್ರಕ್ಕಿವೆ. ಪ್ರಶ್ನೆಪತ್ರಿಕೆಗಳು ಮಾರಾಟವಾಗುತ್ತಿವೆ. ಈ ಪ್ರಶ್ನೆಪತ್ರಿಕೆಗಳನ್ನು ಕೊಳ್ಳುವವರಲ್ಲಿ ಕಳ್ಳಮಾರ್ಗ ಹಿಡಿದ ಒಂದು ವರ್ಗದ ಜೆನ್ ಝೀಗಳ ಅವಸರ-ಅತಿಯಾಸೆ ಹಾಗೂ ಅಪ್ಪ-ಅಮ್ಮಂದಿರ ದುರಾಸೆಗಳೂ ಸೇರಿವೆ. ಆಳುವವರೇ ಕಳ್ಳ ಮಾರ್ಗ ಹಿಡಿದಾಗ ನಾವೂ ಆ ಮಾರ್ಗ ಹಿಡಿದರೆ ತಪ್ಪೇನು ಎಂದು ಸಮರ್ಥಿಸಿಕೊಳ್ಳುವ ಭಂಡ   ವರ್ಗಗಳೂ ಸೃಷ್ಟಿಯಾಗಿದೆ.  

ಆದರೆ ಜೆನ್ ಝೀಗಳ ಎಚ್ಚೆತ್ತ ವರ್ಗ ಈ ಭ್ರಷ್ಟತೆಯ ವಿರುದ್ಧ ಸಿಟ್ಟಾಗಿ ಬೀದಿಗಿಳಿಯಿತು. ಅದರ ಸಿಟ್ಟಿನ ಸ್ಫೋಟಕ್ಕೆ ಕೇಂದ್ರ ಶಿಕ್ಷಣ ಮಂತ್ರಿ ರಾಜಿನಾಮೆ ಕೊಟ್ಟಿದ್ದಾಯಿತು. ಈ ತಲೆಮಾರು ಈಗ ಮತದಾರ ಪಟ್ಟಿಯ ಅಕ್ರಮಗಳ ವಿರುದ್ಧ ಬೀದಿಗಿಳಿದಿದೆ. ಇವೆಲ್ಲ ನಮ್ಮ ಕಣ್ಣ ಮುಂದಿವೆ. ಈ ವಿದ್ಯಮಾನಗಳಲ್ಲಿ ನನ್ನನ್ನು ಸೆಳೆದ ಅನೇಕ ಅಂಶಗಳ ನಡುವೆ ಕಾಕ್ರೋಚ್ ಜನತಾ ಪಾರ್ಟಿಯ ನಾಯಕ ಅಭಿಜಿತ್ ದೀಪ್ಕೆಯವರ ಒಂದು ಘೋಷಣೆ ವಿಶಿಷ್ಟವಾಗಿದೆ: ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದ ಬೆನ್ನು ಮೂಳೆ; ಜವಾಹರಲಾಲ್ ನೆಹರೂ ಭಾರತದ ಮನಸ್ಸು. ಗಾಂಧಿ ನಮ್ಮ ಆತ್ಮ.’  ಈ ಹೊಸ ಬೆಸುಗೆ ನನ್ನಂಥ ಅನೇಕರಲ್ಲಿ ಪುಳಕ ಹುಟ್ಟಿಸಿದೆ. ನನ್ನಂಥವರು ಲೋಹಿಯಾ, ಜೆ.ಪಿ. ಥರದವರನ್ನೂ ಈ ಪಟ್ಟಿಗೆ ಸೇರಿಸುವ ತವಕ ತೋರಬಹುದು. ಸ್ವಾತಂತ್ರ್ಯ ಬಂದ ನಂತರದ ಭಾರತದಲ್ಲಿ ಅಹಿಂಸಾತ್ಮಕ, ಪ್ರಜಾಪ್ರಭುತ್ವವಾದಿ ಬೀದಿ ಹೋರಾಟಗಳನ್ನು ರೂಪಿಸಿದ ಈ ಇಬ್ಬರ ಹಾದಿಯೂ ಹೊಸ ತಲೆಮಾರಿಗೆ ಬೇಕಾಗಬಹುದು. ಬ್ರಿಟಿಷರು ಗಲ್ಲಿಗೇರಿಸಿದ ತರುಣ ಕಮ್ಯುನಿಸ್ಟ್ ಭಗತ್‌ಸಿಂಗ್ ಹೆಸರು ಕೂಡ ಜೆನ್ ಝೀಗಳ ನಾಲಗೆಯ ಮೇಲಿದೆ. ಒಮ್ಮೆ ತೆರೆದುಕೊಂಡ ಆರೋಗ್ಯಕರ ಮನಸ್ಸು ಈ ಎಲ್ಲರನ್ನೂ ನಿಧಾನಕ್ಕೆ ಹೀರಿಕೊಳ್ಳಬಲ್ಲದು.

ಪ್ರತಿ ತಲೆಮಾರೂ ತನ್ನ ನಾಯಕ, ನಾಯಕಿಯರನ್ನು ಸೃಷ್ಟಿಸಿಕೊಳ್ಳುವ ವಿಸ್ಮಯಕರ, ಸಹಜ ವಿದ್ಯಮಾನ ಭಾರತದ ಜೆನ್ ಝೀ ಅಲೆಯಲ್ಲಿದೆ. ಈ ತಲೆಮಾರು ತಂತಾನೇ ತನ್ನ ಹಿರಿಯ ತಲೆಮಾರುಗಳಿಂದ, ತನ್ನ ಕಾಲದ ಅನುಭವಗಳಿಂದ ತನ್ನ ಹೋರಾಟಗಳ ‘ವಿಸ್ಡಂ’ ರೂಪಿಸಿಕೊಳ್ಳಲಿ ಎಂದು ಬಿಡುವುದು ಒಳ್ಳೆಯದು. ಕಾಂಗ್ರೆಸ್ಸಾಗಲೀ, ಎಡ ಪಂಥಗಳಾಗಲೀ, ದಲಿತ, ರೈತ ಚಳುವಳಿಗಳಾಗಲೀ ಈ ತಲೆಮಾರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸದೆ, ತಂತಮ್ಮ ಅನುಭವ, ಸಲಹೆಗಳನ್ನು ಇವರೊಡನೆ ಹಂಚಿಕೊಳ್ಳುವುದು ಒಳ್ಳೆಯದು. 

ಈಚೆಗೆ ಅರಳಿದ ಹೆಸರುಗಳು ಎಲ್ಲರಿಗೂ ಗೊತ್ತಿವೆ: ಅಭಿಜಿತ್ ದೀಪ್ಕೆ, ನೇಹಾ ಬೋರಾ, ಸೌರವ್ ದಾಸ್, ಅಶುತೋಷ್ ಹೀಗೆ ಹಲವರು. ಇವರ ನಡುವೆ ಯಾರೋ ಒಬ್ಬರಿಗೆ ಹೆಚ್ಚು ಪ್ರಚಾರ ಕೊಟ್ಟು ಕಿರಿಯ ಚಳುವಳಿಗಾರರ ಮನಸ್ಸಿನಲ್ಲಿ ಹುಳಿ ಹಿಂಡುವ ಹೀನ ಮೀಡಿಯಾಗಳ ಸೈತಾನ ಕಾರ್ಖಾನೆ ಕೂಡ ಚಾಲ್ತಿಯಲ್ಲಿದೆ. ‘ಅಭಿಜಿತ್ ದೀಪ್ಕೆಗಿಂತ ನೇಹಾ ಬೋರಾ ಹೆಚ್ಚು ಇಂಪ್ರೆಸೀವ್’ ಎಂದು ಕೆಲವರು ಟ್ರೆಂಡ್ ಮಾಡಲು ನೋಡಿದಾಗ, ಅಭಿಜಿತ್ ‘ಐ ಅಗ್ರೀ’ ಎಂದು ಆ ಚಿಲ್ಲರೆ ರಾಜಕಾರಣಕ್ಕೆ ಕೊನೆ ಹಾಡಿದರು. 

ಈ ಅಂಕಣ ಬರೆಯುವ ದಿನ ಭಾರತದ ಹಿರಿಯ ಲೇಖಕರೊಬ್ಬರು ಕಳಿಸಿದ ವಿಡಿಯೋ ಕಣ್ಣಿಗೆ ಬಿತ್ತು: ಅದರಲ್ಲಿ ಅಭಿಜಿತ್ ‘ಅಶುತೋಷ್, ಸೌರವ್ ನನಗಿಂತ ಬುದ್ಧಿವಂತರು, ನಾವೆಲ್ಲ ಕುಟಂಬದಂತೆ ಒಬ್ಬರಿಗೊಬ್ಬರು ಪಡೆಯುವುದು, ಕೊಳ್ಳುವುದು ನಡೆಯುತ್ತಿರುತ್ತದೆ’ ಎಂದಿದ್ದಾರೆ. ಇದು ಈ ತಂಡದ ಪ್ರಬುದ್ಧತೆಯನ್ನೂ ಸೂಚಿಸುತ್ತದೆ. ಈ ಪ್ರಬುದ್ಧತೆ ೨೦೨೨ರ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಮಿಂಚಿದ ಕನ್ಹಯ್ಯ ಕುಮಾರರನ್ನು ಹಿನ್ನೆಲೆಗೆ ಸರಿಸಲೆತ್ನಿಸಿದ ತೇಜಸ್ವಿ ಯಾದವ್ ಥರದ ‘ಚೀಫ್ ಮಿನಿಸ್ಟರ್‍ ಅಭ್ಯರ್ಥಿ’ಗೆ ಇರಲಿಲ್ಲ. ಆಗ ಕನ್ಹಯ್ಯರನ್ನು ಅಸೆಂಬ್ಲಿ ಚುನಾವಣೆಗೆ ನಿಲ್ಲಿಸಿ ತೇಜಸ್ವಿ-ಕನ್ಹಯ್ಯ ಒಟ್ಟಿಗೇ ಪ್ರಚಾರ ಮಾಡಿದ್ದರೆ ಅವತ್ತಿನ ಬಿಹಾರ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂಬುದು ನನ್ನ ಊಹೆ.  

ಅದಿರಲಿ, ಜೆನ್ ಝೀ ಕುರಿತು ಓದುತ್ತಿರುವಾಗ, ಮೊನ್ನೆ ‘ಅಲ್ ಜಝೀರ’ ಚಾನಲ್ ವೆಬ್‌ಸೈಟಿನಲ್ಲಿ ಯಶ್‌ರಾಜ್ ಶರ್ಮ ಬರೆದ ನೇಹಾ ಬೋರಾ ಕುರಿತ ಸ್ಟೋರಿ ಎದುರಾಯಿತು: 
ಉತ್ತರಾಖಂಡದ ಮಿಲಿಟರಿ ಅಧಿಕಾರಿಯೊಬ್ಬರ ಮಗಳು ನೇಹಾ ಬೋರಾ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಥಿಯೇಟರ್ ಅಧ್ಯಯನದ ಪೋಸ್ಟ್ ಡಾಕ್ಟರಲ್   ವಿದ್ಯಾರ್ಥಿಯಾಗಿದ್ದವರು. ಮನೆಮಂದಿಯ ಜೊತೆಗೆ ರಾಜಕೀಯ ಭಿನ್ನಾಭಿಪ್ರಾಯ ಬಂದು ಮನೆ ಬಿಟ್ಟು ಬಂದ ನೇಹಾ ಈಗ ‘ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಶನ್’ (ಐಸಾ) ಅಧ್ಯಕ್ಷೆ. ಜಂತರ್ ಮಂತರ್‌ನಲ್ಲಿ ಇಪ್ಪತ್ಮೂರು ದಿನ ಉಪವಾಸ ಕೂತ ನೇಹಾಗೆ ಒಂದು ದಿನ ಗುಂಪಿನಲ್ಲಿದ್ದ ಯಾರೋ ಕೂಗಿ ಹೇಳಿದರು: ‘ಇವರು ನಿಮ್ಮಮ್ಮ ಅಂತ ಹೇಳ್ತಿದಾರೆ. ಕಳಿಸಲಾ?’ ಅಮ್ಮ ಬಂದು ನೇಹಾರ ಕಾಲಿಗೆ ಮಸಾಜ್ ಮಾಡಿದರು. ಈ ಉಪವಾಸ ಸತ್ಯಾಗ್ರಹ ನೇಹಾರನ್ನು ಏಕ್‌ದಂ ಹೊಸ ನಾಯಕಿಯಾಗಿಸಿತು.

ಮೊನ್ನೆ ಜಂತರ್‌ಮಂತರ್‌ನಲ್ಲಿ ಧರಣಿ ಕೂತ ಹುಡುಗ, ಹುಡುಗಿಯರನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಾಗ ನೇಹಾ ಕಾಣೆಯಾದರು. ಹಠಾತ್ತನೆ ಬೀದಿಯೊಂದರಲ್ಲಿ ಹೊಸ ತಂಡದೊಂದಿಗೆ ಘೋಷಣೆ ಕೂಗುತ್ತಾ ಪ್ರತ್ಯಕ್ಷರಾದರು. ಪೊಲೀಸರು ಆಕೆಯನ್ನು ಹೊತ್ತೊಯ್ದ ಕ್ರೌರ್ಯ, ಅದನ್ನು ಆಕೆ ದಿಟ್ಟವಾಗಿ ಪ್ರತಿಭಟಿಸಿದ ರೀತಿ ಇವೆಲ್ಲ ನೇಹಾರನ್ನು ರಾಷ್ಟ್ರದ ನವ ತಾರೆಯನ್ನಾಗಿಸಿದವು. ಒಬ್ಬ ಉತ್ಸಾಹಿ, ‘ನೇಹಾರನ್ನು ಗಾಡೆಸ್ ಆಫ್ ಡೆಮಾಕ್ರೆಸಿ ಎನ್ನಬಹುದೇ?’ ಎಂದು ಉದ್ಗರಿಸಿದ. ಸ್ಟ್ರೀಟ್ ಪಾಲಿಟಿಕ್ಸ್ ನೇಹಾರನ್ನು ಇದ್ದಕ್ಕಿದ್ದಂತೆ ‘ಕಲ್ಟ್ ಫಿಗರ್’ (ತೀವ್ರ ಭಾವನೆಗಳ ಪುಟ್ಟ ಗುಂಪಿನ ಆರಾಧನಾ ವ್ಯಕ್ತಿ) ಆಗಿಸಿತು. ಮೊನ್ನೆ ಮತಗಳ್ಳತನದ ವಿರುದ್ಧದ ಪ್ರದರ್ಶನದಲ್ಲಿ ರಾಹುಲ್ ಗಾಂಧಿ ಇಬ್ಬರು ಮಹಿಳೆಯರ ಜೊತೆ ಹೆಜ್ಜೆ ಹಾಕುತ್ತಿದ್ದರು. ಇಬ್ಬರನ್ನೂ ಜನಜಂಗುಳಿಯಿಂದ ರಕ್ಷಿಸುವಂತೆ ಒಮ್ಮೊಮ್ಮೆ ಕೈ ಅಡ್ಡ ಹಿಡಿಯುತ್ತಿದ್ದರು: ಆ ಇಬ್ಬರಲ್ಲಿ ಒಬ್ಬರು ಪ್ರಿಯಾಂಕ ಗಾಂಧಿ. ಮತ್ತೊಬ್ಬರು ನೇಹಾ ಬೋರಾ. ರಾಹುಲ್ ಈ ಇಬ್ಬರ ಭುಜದ ಮೇಲೆ ಕೈಯಿಟ್ಟು ನಡೆದದ್ದು ಹಲವರಿಗೆ ಹೊಸ ಸಂಕೇತದಂತೆ ಗೋಚರಿಸಿದ್ದು ಅಚ್ಚರಿಯಲ್ಲ. 

ಯಶ್‌ರಾಜ್ ಶರ್ಮ ಬರಹದಲ್ಲಿ ನೇಹಾ ಬಗ್ಗೆ ಕಂಡ ಕೆಲವು ಚಿತ್ರಗಳನ್ನು, ಅವು ನನ್ನಲ್ಲಿ ಹುಟ್ಟಿಸಿದ ಭಾವಗಳನ್ನು ಮೇಲೆ ಕಾಣಿಸಿದ್ದೇನೆ. ಸೋಷಿಯಲ್ ಮೀಡಿಯಾದ ಕ್ಷಿಪ್ರ ಚಿತ್ರಗಳು ಚಿತ್ತದಲ್ಲಿ ಬಹುಕಾಲ ಉಳಿಯದೆ, ಮಿಂಚಿ ಮಾಯವಾಗುವುದರಿಂದ ಈ ಹುಡುಗ ಹುಡುಗಿಯರು ತಮ್ಮ ಕಾಲದ ರಾಜಕಾರಣವನ್ನು ಮುಂದೆ ಹೇಗೆ ಕಟ್ಟುತ್ತಾರೆ ಎಂಬ ಕುತೂಹಲ, ಆತಂಕ, ನಿರೀಕ್ಷೆ ಕೋಟ್ಯಂತರ ಸಜ್ಜನರಲ್ಲಿದೆ. ಅದೇನೇ ಇರಲಿ, ‘ಯಾರು ಆಳಿದರೆ ನಮಗೇನು’ ಎಂದು ಜಡಮತಿಗಳಾಗಿದ್ದ ಲಕ್ಷಾಂತರ ಹಿರಿಯರು ಎದ್ದು ಕೂತು ಯೋಚಿಸುವಂತೆ ಈ ಹುಡುಗ, ಹುಡುಗಿಯರು ಮಾಡಿರುವುದು ಜೆನ್ ಝೀ ಅಲೆಯ ಅಪೂರ್ವ ಶಕ್ತಿ ಹಾಗೂ ಸಾಧನೆ. 

ಈ ಹಿಂದೆ ಭಾರತದಲ್ಲಿ ಅಹಿಂಸಾತ್ಮಕ ಚಳುವಳಿಗಳನ್ನು ಕಟ್ಟಿದ ಹಿರಿಯರ ಅನುಭವ ಜೆನ್ ಝೀ ತಲೆಮಾರನ್ನೂ ಮುನ್ನಡೆಸಬಹುದೇ ಎಂಬ ಯೋಚನೆ ನನ್ನಂಥವರಲ್ಲಿ ಸುಳಿಯುತ್ತದೆ. ಚಳುವಳಿಗಳಿಲ್ಲದ ಕಾಲದಲ್ಲಿ ಗಾಂಧೀಜಿ ಗ್ರಾಮ ನಿರ್ಮಾಣ, ಚರಕಾ, ಬರವಣಿಗೆ ಇತ್ಯಾದಿಗಳನ್ನು ಶುರು ಮಾಡುತ್ತಿದ್ದರು. ಮಹಾಡ್ ಸತ್ಯಾಗ್ರಹದ ನಂತರ ಅಂಬೇಡ್ಕರ್ ಅವರು ಥಿಯರಿ ರೂಪಿಸುವುದು, ಬರವಣಿಗೆ, ಭಾಷಣ, ಸಂಘಟನೆ ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ಮಾಣದತ್ತ ಗಮನ ಕೊಟ್ಟರು. ಮೊನ್ನೆ ಕಾಕ್ರೋಚ್ ಜನತಾ ಪಾರ್ಟಿಯ ಅಭಿಜಿತ್ ದೀಪ್ಕೆ ‘ದೀಪಾವಳಿಯನ್ನು ಮನೆಯವರ ಜೊತೆ ಕಳೆಯಿರಿ’ ಎಂದು ಮಹಾರಾಷ್ಟ್ರಕ್ಕೆ ಹಿಂತಿರುಗಿದ್ದಾರೆ. ಹಠಾತ್ತನೆ ರೂಪುಗೊಂಡ ಒಂದು ಚಳುವಳಿಯಲ್ಲಿ ಹೊರ ಚಿಮ್ಮಿದ ತರುಣ ಎನರ್ಜಿ ನಿರ್ಮಾಣ ಚಟುವಟಿಕೆಗಳತ್ತ ನಡೆದು ಮತ್ತೊಂದು ಹಾದಿ ಹಿಡಿಯಲೂಬಹುದು. ಇವೆಲ್ಲ ಊಹೆಗಳಷ್ಟೆ. ಪ್ರಾಯದ ಪೆಂಪಿನ ಅಸಾಧ್ಯ ಎನರ್ಜಿ ಏನನ್ನು ಬೇಕಾದರೂ ಸೃಷ್ಟಿಬಲ್ಲದು; ಇದು ಭಾರತದ ಸ್ವಾತಂತ್ರ್ಯ ಚಳುವಳಿಯ ಕಾಲದಿಂದಲೂ ಮತ್ತೆ ಮತ್ತೆ ಸಾಬೀತಾಗಿದೆ. ಆ ಮಾದರಿಗಳು -ಈ ಕಾಲದ ಭಾಷೆಯಲ್ಲೇ ಹೇಳಬೇಕೆಂದರೆ ‘ಟೆಂಪ್ಲೆಟ್‌’ಗಳು- ಈ ನೆಲದಲ್ಲಿ ಇನ್ನೂ ಜೀವಂತವಾಗಿವೆ ಎಂಬುದು ಈಗ ಸ್ಪಷ್ಟವಾಗಿದೆ.

ಅಂದ ಹಾಗೆ, ಈ ಅಂಕಣಕ್ಕೆ ತಲೆಬರಹ ಕೊಟ್ಟ ‘ಪ್ರಾಯದ ಪೆಂಪು’ ಎಂಬ ಬಣ್ಣನೆ ಆದಿ ಕವಿ ಪಂಪನದು. ‘ವಿಕ್ರಮಾರ್ಜುನ ವಿಜಯ’ದ ಕೊನೆಗೆ (೧೪ನೇ ಆಶ್ವಾಸ, ಪದ್ಯ ೧೭) ಪಂಪನ ಧರ್ಮರಾಯ ಕಿರಿಯನಾದ ಅರಿಕೇಸರಿ ಅರ್ಜುನನು ರಾಜ್ಯಪಟ್ಟವನ್ನು ಸ್ವೀಕರಿಸಬೇಕೆಂದು ಕೋರುತ್ತಾ ಹೇಳುವ ಮಾತು: ‘ಪ್ರಾಯದ ಪೆಂಪೆ ಪೆಂಪೆಮಗೆ…’ 

ಪೆಂಪು ಎಂದರೆ, ಹಿರಿಮೆ, ಘನತೆ, ಶೋಭೆ, ಸೊಗಸು, ಎತ್ತರ… ಇತ್ಯಾದಿ ಅರ್ಥಗಳಿವೆ. ಈ ಸುಂದರ ಬಣ್ಣನೆಯನ್ನು ದಶಕಗಳ ಕೆಳಗೆ ನೆನಪಿಸಿ, ನನ್ನ ಕಿವಿಯಲ್ಲಿ ಉಳಿಯುವಂತೆ ಮಾಡಿದ ಕವಿಗುರು ಕೀರಂ ನಾಗರಾಜರಿಗೂ ಥ್ಯಾಂಕ್ಸ್ ಹೇಳಬೇಕು. 
 

Share on:

Comments

0 Comments





Add Comment


Mundana Kathana Nataka

YouTube






Recent Posts

Latest Blogs