ಪ್ರೊಫೆಸರ್ ಜಿ.ಕೆ.ಜಿ: ಮುಕ್ತ ನಗೆಯ ನೆನಪು

ನಮ್ಮಲ್ಲಿ ಅನೇಕರ ಹಿರಿಯ ಸ್ನೇಹಿತರಾಗಿದ್ದ ಪ್ರೊಫೆಸರ್ ಜಿ.ಕೆ. ಗೋವಿಂದರಾವ್ (೨೭-೪-೧೯೩೭-೧೫.೧೦.೨೦೨೧) ತೀರಿಕೊಂಡು ಮೊನ್ನೆ ಅಕ್ಟೋಬರ್ ೧೫ಕ್ಕೆ ಐದು ವರ್ಷವಾಯಿತು. ಈ ನೆನಪಿನಲ್ಲಿ ಹಿಂದೆ ಬರೆದ ಅವರನ್ನು ಕುರಿತ ಕೆಲವು ಟಿಪ್ಪಣಿಗಳನ್ನು  ಕೊಡುತ್ತಿರುವೆ: 

ಶೇಕ್‌ಸ್ಪಿಯರ್ ಬಿಟ್ಟರೆ ಇನ್ನಿಲ್ಲವೆಂಬಂತೆ ಕ್ಲಾಸ್ ರೂಮಿನಲ್ಲಿ ಭಾವತೀವ್ರ ಸ್ಥಿತಿ ತಲುಪಿ  ತನ್ಮಯರಾಗುತ್ತಿದ್ದ ಪ್ರೊಫೆಸರ್ ಜಿ.ಕೆ.ಜಿ. ‘ಹ್ಯಾಮ್ಲೆಟ್’, ‘ಮ್ಯಾಕ್‌ಬೆತ್’, ‘ಕಿಂಗ್ ಲಿಯರ್’ ‘ಒಥೆಲೊ’ ನಾಟಕಗಳನ್ನು ಪಾಠ ಮಾಡುತ್ತಾ, ಆ ನಾಟಕಗಳ ಪಾತ್ರಗಳನ್ನು ನುಡಿಸಲೆತ್ನಿಸುತ್ತಿದ್ದರು. ಆ ಪಾತ್ರಗಳನ್ನು ತಮ್ಮ ಸುತ್ತಮುತ್ತ ಅಡ್ಡಾಡುತ್ತಿರುವ ಜೀವಂತ ಮನುಷ್ಯರೆಂಬಂತೆ ಛೇಡಿಸುತ್ತಾ, ವಿಮರ್ಶಿಸುತ್ತಾ, ಈ ಕಾಲಕ್ಕೆ ಅವರನ್ನು ಕರೆತಂದು  ಜೋಡಿಸುತ್ತಿದ್ದ ಅವರು, ೧೯೬೫-೧೯೯೮ರ ನಡುವೆ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಜನಪ್ರಿಯ ಇಂಗ್ಲಿಷ್ ಅಧ್ಯಾಪಕರಾಗಿದ್ದರು. ಇಪ್ಪತ್ತನೆಯ ಶತಮಾನದ ಎಪ್ಪತ್ತು-ಎಂಬತ್ತರ ದಶಕದಲ್ಲಿ ಹೊಸ ಅಲೆಯ ನಾಟಕಗಳಲ್ಲೂ, ಹೊಸ ಅಲೆಯ ಸಿನಿಮಾಗಳಲ್ಲೂ ನಟಿಸುತ್ತಾ, ಬುದ್ಧಿಜೀವಿ ನಟನಾಗಿ ವಿಕಾಸಗೊಂಡರು; ಇಪ್ಪತ್ತನೆಯ ಶತಮಾನದ ಕೊನೆಗೆ ಕನ್ನಡದ ಬಹುಮುಖ್ಯ ಸಾರ್ವಜನಿಕ ಬುದ್ಧಿಜೀವಿಯಾಗಿ, ಕ್ರಿಯಾಶೀಲ ಚಿಂತಕರಾಗಿ ರೂಪುಗೊಂಡರು.

ಮೂಲತಃ ಲಿಬರಲ್ ಸಮಾಜವಾದಿ, ಲೋಹಿಯಾವಾದಿಯಾಗಿದ್ದ ಜಿಕೆಜಿ, ತಾತ್ವಿಕ ಭಿನ್ನಾಭಿಪ್ರಾಯಗಳು ಬಂದಾಗ ರೇಗಿ ಸಿಡಿಯುತ್ತಿದ್ದರು. ಸ್ವಾರ್ಥವಿಲ್ಲದೆ ತಾತ್ವಿಕವಾಗಿ ಜಗಳವಾಡುತ್ತಿದ್ದ ಜಿಕೆಜಿ ಸಾಮಾನ್ಯವಾಗಿ ನಿರ್ಮಲ ಮುಗುಳ್ನಗೆಯ ಮಮತೆ ಸೂಸುತ್ತಾ ಎಲ್ಲರನ್ನೂ ಒಳಗೊಳ್ಳುವ ಉದಾರ ವ್ಯಕ್ತಿಯಾಗಿದ್ದರು. ಅವರ ನಿಷ್ಠುರ ಜಾತ್ಯತೀತ ವ್ಯಕ್ತಿತ್ವ ಈ ಕಾಲದ ಹೊಸ ರಾಜಕೀಯ ಸವಾಲುಗಳಿಗೆ ಸ್ಪಂದಿಸುತ್ತಲೇ ಇತ್ತು. ಎಪ್ಪತ್ತರ ದಶಕದಲ್ಲಿ ಅವರ ನೋಟಕ್ರಮಗಳೊಳಗೆ ಬೆಸೆದುಕೊಂಡ ಲೋಹಿಯಾ ಚಿಂತನೆ ಅವರನ್ನು ಸಮಾಜವಾದಿ ಚಿಂತನೆಗಳತ್ತ ಒಯ್ದಿತು. ಕಳೆದೆರಡು ದಶಕಗಳಲ್ಲಿ ದಲಿತ ಚಳುವಳಿಯ ಸಂಪರ್ಕ ಹೆಚ್ಚಾದಂತೆ ಅವರು ಅಂಬೇಡ್ಕರ್ ಚಿಂತನೆಗಳ ಮಹತ್ವವನ್ನು ಕಂಡುಕೊಂಡರು. ಅವರ ‘ನಾಗರಿಕತೆ ಮತ್ತು ಅರಾಜಕತೆ’ ಪುಸ್ತಕದಲ್ಲಿರುವ ವ್ಯಕ್ತಿ ಬಂಡಾಯದ ಚಿಂತನೆಯೂ ಅವರ ವ್ಯಕ್ತಿತ್ವ ಹಾಗೂ ಚಿಂತನೆಗಳ ಕೇಂದ್ರದಲ್ಲಿತ್ತು. ರವೀಂದ್ರನಾಥ ಠಾಕೂರರ ‘ಎಲ್ಲಿ ಮನ ನಿರ್ಭಯವಾಗಿರುವುದೋ ಅಲ್ಲಿ...’ (ವೇರ್ ದ ಮೈಂಡ್ ಈಸ್ ವಿಥೌಟ್ ಫಿಯರ್) ಹುಡುಕಾಟ ಕೂಡ ಅವರ ವ್ಯಕ್ತಿತ್ವದಲ್ಲಿದ್ದ ನಿರ್ಭಯ ಗುಣವನ್ನು ರೂಪಿಸಿದಂತಿತ್ತು. ಹೀಗೆ ತಮ್ಮ ಅಧ್ಯಾಪಕ-ಕಲಾವಿದ ವ್ಯಕ್ತಿತ್ವ, ಸಾಹಿತ್ಯ, ರಂಗಭೂಮಿ ಹಾಗೂ ಸಾಮಾಜಿಕ ಚಿಂತನೆಗಳು ರೂಪಿಸಿದ ‘ವ್ಯವಸ್ಥಾವಿರೋಧಿ’ ಚಿಂತಕರಾಗಿ ವಿಕಾಸಗೊಂಡ ಜಿಕೆಜಿ ದಲಿತ ಚಳುವಳಿ ಸೇರಿದಂತೆ ಹಲವು ಪ್ರೋಗ್ರೆಸಿವ್ ವೇದಿಕೆಗಳ ಜೊತೆಗಿದ್ದರು.

ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕಗಳಲ್ಲಿ ಜಿಕೆಜಿ ತಮ್ಮ ಬರಹ, ಸಂವಾದ ಸಾರ್ವಜನಿಕ ಭಾಷಣಗಳ ಮೂಲಕ ನಿತ್ಯದ ರಾಜಕಾರಣದ ನಿಷ್ಠುರ ವಿಮರ್ಶಕರಾಗಿದ್ದರು.   ಯಾವ ಸರ್ಕಾರವೇ ಇರಲಿ, ಸಾರ್ವಜನಿಕವಾಗಿ, ಮುಕ್ತವಾಗಿ ಟೀಕಿಸಿ ಜನರನ್ನು ಆ ಕುರಿತು ಯೋಚನೆಗೆ ಹಚ್ಚುತ್ತಿದ್ದರು. ಕೋಮುವಾದದ ವಿಕಾರಗಳ ಬಗ್ಗೆ, ಆಳುವವರ ಸಮಯಸಾಧಕತನಗಳ ಬಗ್ಗೆ ಜಿಕೆಜಿ ನಿಷ್ಠುರವಾಗಿ ಮಾತಾಡುತ್ತಿದ್ದರು. ಯಾವ ವಯಸ್ಸಿನ ಲೇಖಕ, ಲೇಖಕಿಯರೇ ಆಗಲಿ, ಈ ವಿಷಯಗಳ ಸುತ್ತ ಬರೆದದ್ದು ಕಂಡರೆ ಫೋನ್ ಮಾಡಿ ಮೆಚ್ಚುಗೆ ತೋರುತ್ತಿದ್ದರು; ಅಂಥ ಬರಹಗಳಲ್ಲಿದ್ದ ಉದಾರವಾದಿ, ಪ್ರೋಗ್ರೆಸೀವ್ ಐಡಿಯಾಗಳ ಬಗ್ಗೆ ಸಂಭ್ರಮಿಸುತ್ತಿದ್ದರು. ಅವು ಆ ಕ್ಷಣದ ಪ್ರೋತ್ಸಾಹದ ಪ್ರತಿಕ್ರಿಯೆಗಳಾಗಿರದೆ, ತಾವು ನಂಬಿ, ಬಿತ್ತಲೆತ್ನಿಸಿದ್ದ ಆರೋಗ್ಯಕರ ಧೋರಣೆಗಳು ಎಳೆಯರ ಮೂಲಕ ಬೇರೆ ಬೇರೆ ಥರದಲ್ಲಿ ಹಬ್ಬುವುದನ್ನು ಕಂಡು ಹುಟ್ಟಿದ ಹಿರಿಯ ಚಿಂತಕರೊಬ್ಬರ ನೆಮ್ಮದಿಯ, ಆಶಾವಾದದ ಪ್ರತಿಕ್ರಿಯೆಗಳೂ ಆಗಿದ್ದವು.

ದೇಶ ಕೋಮುವಾದದ ದಳ್ಳುರಿಗೆ ಸಿಕ್ಕಿ ನಾಶವಾಗುತ್ತಿರುವುದನ್ನು ಕಂಡು ದುಗುಡಗೊಂಡು ಸಿಡಿಯುತ್ತಿದ್ದ ಕರ್ನಾಟಕದ ಮುಂಚೂಣಿ ಕ್ರಿಯಾಶಾಲಿ ಬುದ್ಧಿಜೀವಿ ಜಿಕೆಜಿ ಜಾತೀಯತೆ, ಕೋಮುವಾದ, ಭ್ರಷ್ಟಾಚಾರ, ಬಿಜೆಪಿ, ಆರೆಸ್ಸೆಸ್‌ಗಳ ಕಟುವಿಮರ್ಶಕರಾಗಿದ್ದರು; ಧರ್ಮದ ವಿಶಾಲ ಅರ್ಥವನ್ನು ಒಪ್ಪಿದ್ದ ಜಿಕೆಜಿ ಮಠಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಹಿಪೋಕ್ರೈಟ್ ರಾಜಕಾರಣಿಗಳನ್ನು ಟೀಕಿಸುವ ರೀತಿಯಲ್ಲೇ ಬೂಟಾಟಿಕೆಯ ಸ್ವಾಮಿಗಳನ್ನು ಕೂಡ ಅವರು ಛೇಡಿಸುತ್ತಿದ್ದರು. ತಾವು ವಿರೋಧಿಸುವವರ ಜೊತೆ ಕೂಡ ಮುಕ್ತ ಸಂವಾದಕ್ಕೆ ಸಿದ್ಧವಿರುತ್ತಿದ್ದರು. ಧರ್ಮಪ್ರಸಾರದ ಹಾದಿಯನ್ನು ಕೈಬಿಟ್ಟು ಅಗ್ಗದ ರಾಜಕೀಯ ಪ್ರಚಾರಕ್ಕಿಳಿದಿದ್ದ ಪೇಜಾವರರನ್ನು ಜಿಕೆಜಿ ಸಂವಾದಕ್ಕೆಳೆಯುತ್ತಿದ್ದರು. 

ಇಪ್ಪತ್ತು ವರ್ಷಗಳ ಕೆಳಗೆ ಟೆಲಿವಿಷನ್‌ ಸಂವಾದವೊಂದರಲ್ಲಿ ಜಿಕೆಜಿ ಪೇಜಾವರರನ್ನು ತಬ್ಬಿಬ್ಬಾಗಿಸುವ ತಾರ್ಕಿಕ ಪ್ರಶ್ನೆಯೊಂದನ್ನು ಕೇಳಿದ್ದರು: ‘ಆ ಕಾಲದ ಸಂಪ್ರದಾಯದ ಪ್ರಕಾರ ರಾಮ ತಾಯಿ ಕೌಸಲ್ಯೆಯ ತವರುಮನೆಯಲ್ಲಿ ಹುಟ್ಟಿರುವ ಸಾಧ್ಯತೆಯಿದೆಯಲ್ಲವೇ? ಅಯೋಧ್ಯೆ ಎಂದು ಹೇಗೆ ಹೇಳುತ್ತೀರಿ?!’ ಈ ಪ್ರಶ್ನೆಗೆ ಪೇಜಾವರರು ಉತ್ತರಿಸಲಾಗದೇ ಹಾರಿಕೆಯ ಉತ್ತರ ಕೊಟ್ಟಿದ್ದರು! ಪೇಜಾವರರಿಗೆ ಆಗಾಗ್ಗೆ ಬಹಿರಂಗ ಪ್ರಶ್ನೆಗಳನ್ನು ಕೇಳುತ್ತಿದ್ದ ಜಿಕೆಜಿ, ಈ ಪ್ರಶ್ನೆಗಳಿಂದ ಕೊನೆಯ ಪಕ್ಷ ಬ್ರಾಹ್ಮಣ ಸಮುದಾಯದ ಬುದ್ಧಿಜೀವಿಗಳಾದರೂ ಕೋಮುವಾದಿ ಧಾರ್ಮಿಕ ರಾಜಕಾರಣದ ಅಪಾಯವನ್ನು ಅರ್ಥ ಮಾಡಿಕೊಂಡು ಮುಕ್ತವಾಗಿ ಯೋಚಿಸಲೆತ್ನಿಸಲಿ ಎಂದು ಬಯಸಿದ್ದರು.

ಸಾಹಿತ್ಯವನ್ನು ತೀವ್ರವಾಗಿ ಅನುಭವಿಸಿ, ಸಾಹಿತ್ಯದ ಪರಿವರ್ತಕ ಶಕ್ತಿಯಲ್ಲಿ ನಿಜವಾದ ನಂಬಿಕೆಯಿಟ್ಟು ಪಾಠ ಮಾಡಬಲ್ಲ ಗಟ್ಟಿ ಮೇಷ್ಟ್ರುಗಳ ಪರಂಪರೆಯಲ್ಲಿ ಜಿಕೆಜಿ ಮುಂಚೂಣಿಯಲ್ಲಿದ್ದರು. ಸಾಹಿತ್ಯ ಕುರಿತ ಈ ಬದ್ಧತೆ ಎಲ್ಲ ಕಾಲದ ಮೇಷ್ಟ್ರುಗಳಿಗೂ, ಮೇಡಂಗಳಿಗೂ ಪ್ರೇರಣೆ ನೀಡಬಲ್ಲದು. ಭಾವತೀವ್ರ ಸ್ತರದಲ್ಲಿಯೇ ಸಾಹಿತ್ಯ ಪಠ್ಯಗಳ ಭಾವಗಳನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಎದುರು ಹರಡುತ್ತಿದ್ದ ಅವರು ತಮ್ಮ ಪರ್ಫಾರ್ಮರ್ ಗುಣವನ್ನು ತರಗತಿಗಳಲ್ಲಿ ಹೊಣೆಯರಿತು ಬಳಸಿ, ಪಠ್ಯದ ಸೂಕ್ಷ್ಮ   ಅಂಶಗಳನ್ನು ಪರಿಣಾಮಕಾರಿಯಾಗಿ ತಲುಪಿಸುತ್ತಿದ್ದರು. ಸಾಹಿತ್ಯ ಕೃತಿಗಳಲ್ಲಿ ಅಡಗಿರುವ   ವಿಶಿಷ್ಟ ಜ್ಞಾನವನ್ನು ತೀವ್ರವಾಗಿ ತಲುಪಿಸಿದರೆ ಅದು ಕೇಳುಗರನ್ನು ಸೂಕ್ಷ್ಮ ನಾಗರಿಕರನ್ನಾಗಿಸುತ್ತದೆ ಎಂಬ ನಂಬಿಕೆ ಅವರಿಗಿತ್ತು. ಇಂಥ ನಂಬಿಕೆಯಿಲ್ಲದ ಜಡ, ಸಿನಿಕ ಅಧ್ಯಾಪಕ ಅಧ್ಯಾಪಕಿಯರು ಸಾಹಿತ್ಯದ ತರಗತಿಗಳಲ್ಲಿ ಪಾಠ ಮಾಡುವುದು ವೇಸ್ಟ್ ಎನ್ನುವುದು ಅವರ ನಿಲುವು! 

ಕೋಮುವಾದ ಸೃಷ್ಟಿಸಿರುವ ಭಯಾನಕ ಭಾರತದಲ್ಲಿ ಆರ್ಥಿಕತೆ, ರಾಜಕೀಯ, ಧರ್ಮ, ಸಂಸ್ಕೃತಿಗಳು ದಿಕ್ಕೆಟ್ಟು ಹೋಗುತ್ತಿರುವುದನ್ನು ಕುರಿತ ಇತ್ತೀಚಿನ ಮುಖ್ಯ ಇಂಗ್ಲಿಷ್ ಪುಸ್ತಕಗಳು ಅವರ ಟೇಬಲ್ ಮೇಲಿರುತ್ತಿದ್ದವು. ಅವುಗಳ ಪಕ್ಕದಲ್ಲೇ ಅವರು ಬಿಳಿಯ ಕಾರ್ಡುಗಳಲ್ಲಿ ಮಾಡಿಕೊಂಡ ಸುಂದರ ಕೈಬರಹಗಳ ಟಿಪ್ಪಣಿಗಳಿರುತ್ತಿದ್ದವು. ಆ ಪುಸ್ತಕಗಳಲ್ಲಿ ಅವರು ಓದಿ ಒಪ್ಪಿದ್ದ ವಾಕ್ಯಗಳ ಕೆಳಗೆ ಸ್ಕೇಲ್ ಇಟ್ಟು ಮಾಡಿರುತ್ತಿದ್ದ ಅಂಡರ್‌ಲೈನ್‌ಗಳು, ಬರೆದುಕೊಂಡ ಟಿಪ್ಪಣಿಗಳು ಅತ್ಯಂತ ನೀಟಾಗಿರುತ್ತಿದ್ದವು; ಇವೆಲ್ಲವೂ ಮುಂದೊಮ್ಮೆ ಈ ವಿಷಯಗಳನ್ನು ಕುರಿತು ಬರೆಯಲಿರುವ, ಉಲ್ಲೇಖಿಸಲಿರುವ ನಿಜವಾದ ಬುದ್ಧಿಜೀವಿ-ವಿದ್ವಾಂಸರೊಬ್ಬರ ಗಂಭೀರ ಸಿದ್ಧತೆಗಳಂತಿದ್ದವು. 

ಸಾಹಿತ್ಯದ ಭಾವತೀವ್ರ ಓದಿನಿಂದ ಪಡೆದ ಮಾನವ ವರ್ತನೆಯ ಗ್ರಹಿಕೆಗಳು ಜಿಕೆಜಿಯವರ ಚಿಂತನೆಯನ್ನು ರೂಪಿಸುತ್ತಿದ್ದವು. ಶೇಕ್‌ಸ್ಪಿಯರನ ‘ಜೂಲಿಯಸ್ ಸೀಸರ್’ ಬಗ್ಗೆ ಗಂಟೆಗಟ್ಟಲೆ ಮಾತಾಡಬಲ್ಲವರಾಗಿದ್ದ ಜಿಕೆಜಿ, ನಾನೊಮ್ಮೆ ಆ ನಾಟಕದ ವಾಕ್ಪಟು ಆಂಟೋನಿಯ ಭಾಷಣದ ಕೃತ್ರಿಮ ಏರಿಳಿತಗಳನ್ನು ಮೋದಿ ಭಾಷಣದ ಧಾಟಿಗೆ ಹೋಲಿಸಿದಾಗ ಥ್ರಿಲ್ಲಾಗಿ ನಕ್ಕಿದ್ದರು. ನಿತ್ಯದ ರಾಜಕಾರಣವನ್ನು, ಬದುಕಿನ ಬಿಕ್ಕಟ್ಟುಗಳನ್ನು ವಿವರಿಸಲು ಸಾಹಿತ್ಯದ ಉದಾಹರಣೆಗಳನ್ನು ಬಳಸುತ್ತಿದ್ದ ಜಿಕೆಜಿಗೆ ಈ ಕಾಲದ ರಾಜಕಾರಣದ ಸಂಚು-ಪ್ರತಿಸಂಚುಗಳ ಲೋಕ, ದ್ರೋಹ, ಕಪಟ, ಭಾಷೆಯ ಸುಳ್ಳು, ನಿಜಗಳು ಶೇಕ್‌ಸ್ಪಿಯರ್ ಕನ್ನಡಿಯ ಮೂಲಕವೂ ಅರ್ಥವಾಗುತ್ತಿದ್ದವು. ಶೇಕ್‌ಸ್ಪಿಯರ್ ನಾಟಕಗಳ ಮೇಲೆ ಅವರು ಪುಸ್ತಕವನ್ನೂ ಬರೆದರು. ಅವರು ಬರೆದ ಏಕಮಾತ್ರ ನೀಳ್ಗತೆ ‘ಈಶ್ವರ ಅಲ್ಲಾ’ ಅವರ ಜಾತ್ಯತೀತತೆಯ ಕನಸಿನ ಕಥಾರೂಪವಾಗಿತ್ತು. ಎಪ್ಪತ್ತು-ಎಂಬತ್ತರ ದಶಕದ ಹೊಸ ಅಲೆಯ ಸಿನಿಮಾಗಳಲ್ಲಿ ಅವರ ನಟನೆ ಹಾಗೂ ಕೆಲವು ಟೆಲಿ ಧಾರಾವಾಹಿಗಳಲ್ಲಿನ ಅವರ ಪಾತ್ರಗಳು ಅವರ ನಟನಾ ಪ್ರತಿಭೆಯ ದಾಖಲೆಗಳಾಗಿವೆ. 

ನಟರಾಗಿ ಅವರು ಪಡೆದಿದ್ದ ಸಾರ್ವಜನಿಕ ಖ್ಯಾತಿ ಹಾಗೂ ರೂಪಿಸಿಕೊಂಡಿದ್ದ ಆಕರ್ಷಕ ವ್ಯಕ್ತಿತ್ವ ಕೂಡ ಜನ ಅವರ ಮಾತುಗಳನ್ನು ಗಮನವಿಟ್ಟು ಕೇಳುವಂತೆ ಸೆಳೆಯುತ್ತಿತ್ತು. ನಟನಾಗಿ, ಮೇಷ್ಟರಾಗಿ ತಮ್ಮ ದನಿಯ ಏರಿಳಿತಗಳನ್ನು ಸೂಕ್ತವಾಗಿ ಬಳಸುವ ಕಲೆಯನ್ನು ರೂಢಿಸಿಕೊಂಡಿದ್ದ ಅವರು ಆ ಕಲೆಯನ್ನು ಬೃಹತ್ ಸಭೆಗಳಲ್ಲಿ ಸೆಕ್ಯುಲರ್‍ ಚಿಂತನೆಗಳನ್ನು ಬಿತ್ತಲು ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಅಂಥ ಪರಿಣಾಮಕಾರಿ ಭಾಷಣ ತಮ್ಮೊಳಗೆ ಉಕ್ಕಿಸುತ್ತಿದ್ದ ಅಸಾಧ್ಯ ಎನರ್ಜಿಯನ್ನು, ತಮ್ಮ ಮಾತುಗಳಿಗೆ ಸಿಕ್ಕ ಸ್ಪಂದನ ತಮ್ಮೊಳಗೆ ಸೃಷ್ಟಿಸುತ್ತಿದ್ದ ತೀವ್ರ ಬದುಕಿನ ಸಾಧ್ಯತೆಗಳನ್ನು, ಜೀವನೋತ್ಸಾಹವನ್ನು ಅವರು ಸಂಭ್ರಮಿಸುತ್ತಿದ್ದರು. ‘ಹೇಗಿತ್ತು ನಿನ್ನೆಯ ಭಾಷಣ?’ ಎಂಬ ಅವರ ಫೋನ್ ಕರೆ ಅವರ ವಲಯದವರಿಗೆ ಚಿರಪರಿಚಿತವಿತ್ತು!

೨೦೦೫ರಲ್ಲಿ ಜನತಾದಳ ಸಿದ್ಧರಾಮಯ್ಯನವರನ್ನು ಪಕ್ಷದಿಂದ ಉಚ್ಚಾಟಿಸಿದಾಗ ನಡೆದ ಐತಿಹಾಸಿಕ ಚಾಮುಂಡೇಶ್ವರಿ ವಿಧಾನಸಭಾ ಉಪಚುನಾವಣೆಯಲ್ಲಿ ಜಿಕೆಜಿ ಸಿದ್ಧರಾಮಯ್ಯನವರ ಪರವಾಗಿ ಚುನಾವಣಾ ಪ್ರಚಾರಕ್ಕಿಳಿದರು. ನಂತರದ ಚುನಾವಣೆಗಳಲ್ಲಿ   ಕಾಂಗ್ರೆಸ್ ಪರ ಕೆಲವೆಡೆ ಚುನಾವಣಾ ಭಾಷಣ ಮಾಡಿದ ಜಿಕೆಜಿ, ಆ ರಾಜಕೀಯ ಪ್ರಚಾರವನ್ನು ತಾತ್ವಿಕ ಕಾರಣಗಳಿಗಾಗಿ ಮಾಡಿದ್ದರು. ಸಿದ್ಧರಾಮಯ್ಯನವರಂಥ ನಾಯಕರು ಕರ್ನಾಟಕದ ರಾಜಕಾರಣಕ್ಕೆ ಅತ್ಯಗತ್ಯ ಎಂಬ ಖಚಿತ ನಿಲುವಿನಿಂದ ಅವರು ಚುನಾವಣಾ ಪ್ರಚಾರ ಮಾಡಿದ್ದರು. ಅನಂತರ ಯಾವ ಹುದ್ದೆಗೂ ಅಂಗಲಾಚದೆ ತಮ್ಮ ಓದು, ಬರಹ, ಭಾಷಣಗಳ ಲೋಕದಲ್ಲಿ ತಮ್ಮ ಕೆಲಸ ಮುಂದುವರಿಸಿದ್ದರು.

ಪುಸ್ತಕಗಳ ಸಂಗದಲ್ಲಿರುತ್ತಿದ್ದ ಜಿಕೆಜಿ ಕೊನೆಯ ವರ್ಷಗಳಲ್ಲಿ ಕಾದಂಬರಿಯೊಂದನ್ನು ಬರೆಯಲು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಮಾತಾಡುವಾಗ, ‘ಏನ್ ಗೊತ್ತಾ! ನಾನು ಬರೀತಿರೋದು ಆರ್ಡಿನರಿ ನಾವೆಲ್ ಅಲ್ಲ; ಏಕ್‌ದಂ ನೋಬೆಲ್ ಬರಬೇಕು! ಹುಷಾರಾಗಿರಿ!’ ಎಂದು ತಮ್ಮನ್ನು ತಾವು ತಮಾಷೆ ಮಾಡಿಕೊಳ್ಳುತ್ತಿದ್ದರು. ಅದರ ಜೊತೆಗೇ, ‘ಏಜ್ ಈಸ್ ನಾಟ್ ಆನ್ ಮೈ ಸೈಡ್... ನನಗೆ ಇನ್ನು ಉಳಿದಿರೋ ವರ್ಷಗಳಲ್ಲಿ ಎಷ್ಟಾಗುತ್ತೋ ಅಷ್ಟು...’ ಎಂದಾಗ ಅಲ್ಲಿ ಸಣ್ಣ ವಿಷಾದದ ಎಳೆಯ ಜೊತೆಗೇ ನಿರ್ಲಿಪ್ತ ನಗುವೂ ಇರುತ್ತಿತ್ತು. ಎಂಬತ್ತು ದಾಟಿದ್ದಾಗಲೂ ನಡೆಯುವಾಗ ಇನ್ನೊಬ್ಬರ ಸಹಾಯವನ್ನು ಕೋರದ, ನೆರವಾಗಲು ಬಂದವರನ್ನು ರೇಗಿ ಓಡಿಸುತ್ತಿದ್ದ ಜಿಕೆಜಿ, ತಮ್ಮ ಆರೋಗ್ಯದ ಏರುಪೇರಿನ ಬಗ್ಗೆ ಸಾಮಾನ್ಯವಾಗಿ ಮಾತಾಡಿದವರಲ್ಲ. ಅಷ್ಟರಮಟ್ಟಿಗೆ ಅವರು ಔಷಧಿಗಳು, ಆಹಾರಗಳ ಶಿಸ್ತಿನ ಮೂಲಕ ದೈಹಿಕ ಆರೋಗ್ಯವನ್ನು ಸಾಕಷ್ಟು ಕಾಪಾಡಿಕೊಂಡಂತಿದೆ.

ಖ್ಯಾತ ಗಾಯಕ ಜನ್ನಿ ಎಂಬತ್ತರ ದಶಕದಲ್ಲಿ ತಾವು ಜಿಕೆಜಿಯವರ ಜೊತೆಗೆ ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯ ನಾಟಕರೂಪದಲ್ಲಿ ಅಭಿನಯಿಸಿದ್ದನ್ನು ಒಮ್ಮೆ ನೆನಸಿಕೊಂಡರು: ಆ ನಾಟಕದಲ್ಲಿ ಜಿಕೆಜಿ ‘ಸಂಸ್ಕಾರ’ ಕಾದಂಬರಿಯ  ಪ್ರಾಣೇಶಾಚಾರ್ಯರ ಪಾತ್ರ ಮಾಡಿದ್ದರು; ಜನ್ನಿ ಪ್ರಾಣೇಶಾಚಾರ್ಯರಿಗೆ ಶೂದ್ರ, ದಲಿತ ಲೋಕಗಳ ದರ್ಶನ ಮಾಡಿಸುವ ಮಾಲೇರ ಪುಟ್ಟ! ನಾಟಕದಲ್ಲಿ ಮಾಲೇರ ಪುಟ್ಟ ತನಗರಿವಿಲ್ಲದೆಯೇ ಪ್ರಾಣೇಶಾಚಾರ್ಯರನ್ನು ಅಗ್ರಹಾರದ ಜಡತೆಯಿಂದ ಹೊರ ತರುವ ಕೆಲಸ ಮಾಡುತ್ತಾನೆ. ಆದರೆ ಕಲಾಕ್ಷೇತ್ರದ ಶೆಡ್ಡಿನಲ್ಲಿ ನಿತ್ಯ ಈ ನಾಟಕದ ರಿಹರ್ಸಲ್ ಶುರುವಾಗುವ ಮೊದಲೇ ಬೆಂಗಳೂರು ಪ್ರಾಣೇಶಾಚಾರ್ಯ ಜಿಕೆಜಿಯವರು ಮಾಲೇರ ಪುಟ್ಟ ಹಾಡುಗಾರ ಜನ್ನಿಗೆ ಬೆಂಗಳೂರು ಬಾರ್‌ಗಳ ದರ್ಶನ ಮಾಡಿಸುತ್ತಿದ್ದ ಕತೆ ಕೂಡ ರೋಚಕವಾಗಿದೆ!  ಚಳುವಳಿಯ ಗೆಳೆಯರ ಜೊತೆ ಸೇರುತ್ತಾ ಅಂಬೇಡ್ಕರ್ ಕಡೆಗೆ ನಡೆದ ಕತೆ ಕೂಡ ಇದರಲ್ಲಿ ಅಡಗಿದೆ. ತಮ್ಮ ಕೊನೆಯ ಹತ್ತು ವರ್ಷಗಳಲ್ಲಿ ಅವರು ಅಂಬೇಡ್ಕರ್ ಅವರನ್ನು ಆಳವಾಗಿ ಓದಲಾರಂಭಿಸಿದ್ದರು. ‘ಮನು ವರ್ಸಸ್ ಅಂಬೇಡ್ಕರ್’ ಎಂಬ ಅವರ ಪುಸ್ತಕ ಅವರ ಚಿಂತನೆಯ ಮುಖ್ಯ ಪಲ್ಲಟವೊಂದನ್ನು ಸೂಚಿಸುತ್ತದೆ.  

ಯಾವ ಸ್ವಂತ ಆಸ್ತಿಯೂ ಇರದ ಲೋಹಿಯಾ ವ್ಯಕ್ತಿತ್ವದ ಬಗ್ಗೆ ಜಿಕೆಜಿಗೆ ಎಷ್ಟೊಂದು ಆಕರ್ಷಣೆ, ಗೌರವ ಇತ್ತೆಂದರೆ, ಸ್ವತಃ ಜಿಕೆಜಿ ಕೂಡ ತಮ್ಮ ಹೆಸರಿನಲ್ಲಿ ಯಾವ ಆಸ್ತಿಯನ್ನೂ ಹೊಂದಿರಲಿಲ್ಲ. ಅವರ ಪತ್ನಿ ಮಂಜುಳಾ ಹಾಗೂ ಇಬ್ಬರು ಹೆಣ್ಣುಮಕ್ಕಳು ಎಷ್ಟೊಂದು ಪ್ರೀತಿ ಹರಿಸಿ ಅವರನ್ನು ನೋಡಿಕೊಳ್ಳುತ್ತಿದ್ದರು ಎಂಬುದು ನಮ್ಮಂಥವರಿಗೆಲ್ಲ ಗೊತ್ತು. ಎರಡು ವರ್ಷಗಳ ಕೆಳಗೆ ಅವರ ಮಗಳು ವರ್ಣಚಿತ್ರ ಕಲಾವಿದೆ ಶಾಮಲಾ ಅಪ್ಪನನ್ನು ಕುರಿತ ಆತ್ಮೀಯ ಪುಸ್ತಕವನ್ನೂ ಬರೆದರು.

೨೦೨೧ರ ಸೆಪ್ಟೆಂಬರ್‌ ತಿಂಗಳಲ್ಲಿ ಜಿಕೆಜಿ ಹುಬ್ಬಳ್ಳಿಯಲ್ಲಿ ಶ್ಯಾಮಲಾರ ಮನೆಯಲ್ಲಿದ್ದರು. ಮಹಿಳಾ ಮೀಸಲಾತಿ ಕುರಿತು ನಾನು ಬರೆದ ಬರಹವೊಂದನ್ನು ಹುಡುಕಿ ಓದಿದ್ದ ಜಿಕೆಜಿ ಆ ಬಗ್ಗೆ ಮಾತಾಡಿ, ಹುಬ್ಬಳ್ಳಿಗೆ ಬಾ ಎಂದಿದ್ದರು. ಮಾತಿನ ಕೊನೆಗೆ ಕಿಂಗ್ ಲಿಯರ್ ಪಾತ್ರ ತೇಲಿ ಬಂತು. ಕಿಂಗ್ ಲಿಯರ್ ಬಗ್ಗೆ ಬರೆದು, ನಾಟಕದಲ್ಲಿ ಕಿಂಗ್ ಲಿಯರ್ ಪಾತ್ರವನ್ನೂ ಮಾಡಿದ್ದ ಜಿಕೆಜಿಯವರಿಗೆ, ‘ನಿಮ್ಮ ಇಬ್ಬರೂ ಹೆಣ್ಣುಮಕ್ಕಳೂ ಕಿಂಗ್ ಲಿಯರ್‌ನ ಕೊನೆಯ ಮಗಳು ಕರುಣಾಳು ಕಾರ್ಡೀಲಿಯಾಳಂತೆ ಇರುವುದು ನಿಮ್ಮ ಭಾಗ್ಯ!’ ಎಂದೆ. ಜಿಕೆಜಿ ಮನತುಂಬಿ ನಕ್ಕರು.  

ನನಗೆ ಅದು ಅವರ ಕೊನೆಯ ನಗುವಿನ ದನಿ.  ಮೂವತ್ತೈದು ವರ್ಷಗಳಿಂದ ಅದು ನನ್ನ ಚಿರಪರಿಚಿತ ನಗುವಾಗಿತ್ತು. ಅದು ಹೆಚ್ಚಿನ ಕೇಡಿಲ್ಲದ, ತೀರಾ ಸ್ವಂತದಲ್ಲಿ ಮುಳುಗದ, ಎಲ್ಲವನ್ನೂ ಸ್ವಾರ್ಥದ ದೃಷ್ಟಿಯಿಂದಷ್ಟೇ ನೋಡದ, ಮುಕ್ತ ವ್ಯಕ್ತಿತ್ವದಿಂದ ಹುಟ್ಟಿದ ಶುಭ್ರ ನಗುವಾಗಿತ್ತು. ಆ ಮುಗ್ಧ ನಿರಾಳ ನಗೆ ಜಿಕೆಜಿಯ ಸಾವಿರಾರು ಗೆಳೆಯ, ಗೆಳತಿಯರ ಮನಸ್ಸಿನಲ್ಲಿ ಹಾಗೇ ಉಳಿದಿರುತ್ತದೆ. ಜಿಕೆಜಿಯವರ ಶುಭ್ರ ಬದುಕು, ಕಹಿಯಿಲ್ಲದ ಮನೋಲೋಕ, ಸ್ವಂತದ ಅಹಮ್ಮುಗಳಿಲ್ಲದ ತಾತ್ವಿಕ ಜಗಳ; ಗಟ್ಟಿ ಸಾಮಾಜಿಕ ಬದ್ಧತೆಯ ಒಳಲೋಕ; ಸ್ವಾರ್ಥವಿಲ್ಲದ ಕಾಳಜಿ, ಪ್ರೀತಿ ಬಿಟ್ಟುಕೊಡದ ನಿಷ್ಠುರತೆ, ಸ್ಪಷ್ಟ ಆಧುನಿಕ ಧೋರಣೆ, ವ್ಯಕ್ತಿತ್ವದ  ಇಂಟಿಗ್ರಿಟಿ... ಇವೆಲ್ಲ ಎಲ್ಲರ ಆದರ್ಶಗಳಾಗಿರಲಿ!

Share on:

Comments

9 Comments



| ಚರಣ್

ಬಹುತೇಕರಿಗೆ ಇವರು ನಟರಾಗಿಯಷ್ಟೇ ಪರಿಚಯ. ಈ ಅಂಕಣ ಓದುತ್ತಿದ್ದಂತೆ, ನನಗೆ ಅವರ ಮಾತು, ದನಿ ಕಿವಿಗೆ ತಾಗುತ್ತಲೇ ಇತ್ತು. ಗಟ್ಟಿಯಾದ, ತಿದ್ದುವ, ತಬ್ಬುವ ಅವರ ದನಿ ಸಿನಿಮಾಗಳಿಂದ ನಮಗೆಲ್ಲಾ ಪರಿಚಿತ. ಇವರು ಸೈಂಟ್ ಜೋಸೆಫ್ ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು ಎಂಬುದನ್ನು ಕೇಳಿ ಬಹಳ ಖುಷಿಯಾಯಿತು. ಓದು,‌ ಬರಹ, ಕಲೆ, ವೃತ್ತಿಯಲ್ಲಿ ಇರುವ ಅನೇಕರು ತಮ್ಮ ಸುತ್ತ ಬಗೆಬಗೆಯ ಗೋಡೆಗಳನ್ನು ಕಟ್ಟಿಕೊಂಡು ಓಡಾಡುವಾಗ, ಕೆಲವರು ವಿದ್ಯಾರ್ಥಿಗಳನ್ನು ವೀಕ್ಷಕರನ್ನು ದಾರಿ ತಪ್ಪಿಸುವಾಗ ಇಂತಹ ಮಹನೀಯರು ಬದುಕಿದ್ದ ರೀತಿ ಮತ್ತು ಇಟ್ಟುಕೊಂಡಿದ್ದ ಮುಕ್ತತೆ ನಮ್ಮಲ್ಲಿ ಆರೋಗ್ಯಕರವಾದ ಭಾವನೆ ಮೂಡಿಸುತ್ತದೆ. ಶೇಕ್ಸ್ಪಿಯರ್ ನನ್ನು ನಾನು ಇನ್ನು ಮುಟ್ಟದಿರುವುದು ಒಂದು ಕಡೆ ಹಲವು ಕಾರಣಗಳಿಗಾಗಿ ಭಯ ಹುಟ್ಟಿಸಿದ್ದರೆ, ಮತ್ತೊಂದು ಕಡೆ ಇಂತಹ ಅಂಕಣಗಳನ್ನು ಓದಿ "ಇಲ್ಲ ಇಲ್ಲ ಅವ ನಮ್ಮೋನೆ, ತಡವಾದರೂ ತೊಂದರೆಯಿಲ್ಲ" ಅನ್ನಿಸುತ್ತೆ!


| ಮಂಜುನಾಥ್ ಸಿ ನೆಟ್ಕಲ್

ಜಿಕೆಜಿಯವರ ಪಾಠ ಕೇಳುವ ಅದೃಷ್ಟ ಪಡೆದವರಲ್ಲಿ ನಾನೂ ಒಬ್ಬ. ನಮ್ಮ ಕನ್ನಡ ಎಂ ಎ ತರಗತಿಯಲ್ಲಿ ಸಹ ಅವರ ಭಾವಾಭಿನಯದಿಂದಲೇ ಪಾಠ ಮಾಡುತ್ತಿದ್ದರು. ಪಾಠ ಮುಗಿದ ಮೇಲೆ "ಏನಯ್ಯಾ ಬಾಲಕ ಎಲ್ಲಾ ಅರ್ಥವಾಯ್ತೆ " ಎನ್ನುತ್ತಾ ಹೆಗಲ ಮೇಲೆ ಕೈ ಇಡುತ್ತಿದ್ದ ರೀತಿ ನಮಗೆ ಅಚ್ಚರಿ ಮೂಡಿಸುತ್ತಿತ್ತು. ಇಷ್ಟು ಸರಳವಾಗಿ ನಮ್ಮೊಡನೆ ಬೆರೆಯುತ್ತಿದ್ದ ಮಾನವೀಯ ಹೃದಯದ ಬರೆದ ಬಗ್ಗೆ ನೆನಪಿಸಿಕೊಳ್ಳುವಂತೆ ನಿಮಗೆ ವಂದನೆಗಳು ಸರ್.


| Subramanyaswamy Swamy

GkG ,very good professor and human being, he very much socialist idiolist sir. Thank for rembring him sir.


| Venkatesh Murthy

ಜಿಕೆಜಿ ಅವರು ಸಮಾಜವಾದ ,,ಮಾಕ್ಸಿಸ್ಟ್ ಚಿಂತನೆಗಳು ,ಅಂಬೇಡ್ಕರ್ ವಾದ ,ಲೋಹಿಯಾ ಚಿಂತನೆಗಳು ,ಹಾಗೆಯೇ ಗಾಂಧೀಜಿಯವರ ಚಿಂತನೆಗಳನ್ನು ಹಲವಾರು ಭಿನ್ನತೆಗಳ ನಡುವೆಯೂ ಸಮರ್ತಿಸಿಕೊಳ್ಳುವ ಚಿಂತಕರಾಗಿದ್ದರು. ಪ್ರಬಲ ಮೂಲಭೂತವಾದಿಗಳ ನಡುವೆಯೂ ಪ್ರಗತಿಪರ ಚಿಂತಕರಾಗಿ ಹೆಸರು ಮಾಡಿದವರು, ಶೇಕ್ಸ್ ಪೆರ್ನ ಬಹುಪಾಲು ನಾಟಕಗಳನ್ನು ಪರಾಮರ್ಶಿಸಿದ ಕೀರ್ತಿ ಇವರದು... ಇವರನ್ನು ನೆನಪಿಸಿದಕ್ಕಾಗಿ ಲೇಖಕರಿಗೆ ಧನ್ಯವಾದಗಳು...


| Dr Rudresh

ಜಿಕೆಜಿ ಅವರನ್ನು ಕುರಿತ ಲೇಖನ ಅವರ ವ್ಯಕ್ತಿತ್ವಕ್ಕೆ ಹಿಡಿದ ದರ್ಪಣ. ಒಂದು ಲಲಿತ ಪ್ರಬಂಧ ಹಾಗೂ ಏಕ ಕಾಲದಲ್ಲಿ ಇದು ವ್ಯಕ್ತಿ ಚಿತ್ರಣ ಕೂಡ. ಲೇಖನದಲ್ಲಿ ಇರುವ ನಾಟಕೀಯತೆ ಓದುಗರ ಮನೋರಂಗಭೆಮೀಯ ಬಿತ್ತಿಯಲ್ಲಿ ದೃಗ್ಗೋಚರ.


| SOMASHANKARA N

ನಮಸ್ತೆ ಸರ್.. 'ಡಾಕ್ಟರ್ ಸಾಹೇಬ್' ಪುಸ್ತಕ ಪ್ರತಿ ದಿನ ಶಾಂತ ಮನಸ್ಥಿತಿ ತಂದುಕೊಂಡು ಓದುತ್ತಿದ್ದೇನೆ. ಈವರೆಗೂ ಓದಿದ ನಾಲ್ಕು ಚಾಪ್ಟರ್ಗಳಲ್ಲಿ ಯಾವೊಂದು ಪದವನ್ನೂ ತೆಗೆಯಬೇಕು ಅನ್ನಿಸಲಿಲ್ಲ. ಬಯೋಗ್ರಫಿಯನ್ನು ದಾಖಲಿಸಲು ಬೇಕಾದ ಸಹಜ ಸ್ವಾಭಾವಿಕ ಭಾಷೆ ಬರವಣಿಗೆಗೆ ಒದಗಿ ಬಂದಿದೆ ಅನ್ನಿಸಿತು. ಕಾರ್ಯಕ್ರಮದಲ್ಲಿ ಕೇಳಿ ಬಂದ 'ಕಿಲಾಡಿ'ಎಂಬ ಪದವೂ ಸಾಂದರ್ಭಿಕವಾಗಿ ಸ್ವಾಭಾವಿಕ ಮತ್ತು proper word in a proper place ಅನ್ನಿಸಿತು. ಇಂಥ ಪದಗಳನ್ನು ಬಹುತೇಕ ಕವಿಗಳು ಕೂಡ ಬಳಸಿರುವ ಉದಾಹರಣೆಗಳು ಇವೆ. ಹಂಸಲೇಖರವರು ಕೂಡ "ಕಿಲಾಡಿ ಹೆಣ್ಣು ಚಕೋತ ಹಣ್ಣು" ಎಂಬ ಜನಪ್ರಿಯ ಹಾಡೊಂದನ್ನು ಕೂಡ ಬರೆದಿದ್ದಾರೆ. ಸಮಾಜ ಆ ಹಾಡನ್ನು ಆರೋಗ್ಯಕರವಾಗಿ ಸ್ವಾಗತಿಸಿದೆ ಕೂಡ. ನನ್ನ ತಿಳುವಳಿಕೆಯ ಮಟ್ಟಿಗೆ ಕಿಲಾಡಿತನ ಎಂಬುದು ಯಾವ ಸಾಮಾಜಿಕ ಸಂದರ್ಭದಲ್ಲೂ ಅಸಾಧುವಲ್ಲ ಅನ್ನಿಸಿತು. ಒಂದು ಪದ ಓದುಗನನ್ನು ಕೆಣಕುತ್ತದೆ ಎಂದರೆ, ಮನೋ ಕಾಯಕಲ್ಪ ನಡೆಯುತ್ತಿದೆ ಎಂದೇ ಅರ್ಥ. ಪುಸ್ತಕದ ಭಾಷೆ ದೀಪ್ತವಾಗಿದೆ. ಓದುಗನಿಗೆ ಒಬ್ಬ ಒಳ್ಳೆ ಬರಹಗಾರ ಹೇಗೆ inspiration ಮಾಡ್ತಾರೋ ಹಾಗೇ irritation ಕೂಡ ಅಗತ್ಯ. ಪುಸ್ತಕದ ಮರು ಮುದ್ರಣದಲ್ಲಿ ಯಾವ ಪದವನ್ನೂ ಕೈ ಬಿಡುವ ಅಗತ್ಯವಿಲ್ಲ ಎಂಬುದು ನನ್ನ ಪ್ರಬಲವಾದ ನಂಬಿಕೆ. ಇನ್ನು ಜಿಕೆಜಿ ಯವರ ಬಹುಮುಖೀ ವ್ಯಕ್ತಿತ್ವದ ಸ್ಮರಣಾರ್ಥ ಆದರ್ಶಮಯವೂ, ಅನುಕರಣೀಯವೂ ಆಗಿದೆ. ನನ್ನ ತಿಳುವಳಿಕೆಯ ಮಟ್ಟಿಗೆ ಕುತೂಹಲವೇ ಎಲ್ಲಾ ಬಗೆಯ ಜ್ಞಾನ ಶಾಖೆಗಳ ಅನ್ವೇಷಣೆಗೆ ಮೂಲ ಕಾರಣ. ಜಿಕೆಜಿ ಮೇಷ್ಟ್ರ ಕುತೂಹಲವೇ ಅವರ ಅಂತರಂಗ ಮತ್ತು ಬಹಿರಂಗದ ಕಾರ್ಯ ತತ್ಬರತೆಗೆ ಕಾರಣವಾಗಿತ್ತು ಎಂದನ್ನಿಸುತ್ತದೆ. ಅವರ ದಿನವಹೀ ತೊಡಗುವಿಕೆಯಲ್ಲಿ ಕಂಡುಬರುವ ಅಚ್ಚುಕಟ್ಟು ತನ ಕೂಡ ನಮ್ಮ ಓದುವ ಕ್ರಮದಲ್ಲಿ ಸೇರಿಸಿಕೊಳ್ಳಬಹುದಾದ ಮೌಲ್ಯ ಅನಿಸಿತು. ಇಂಥ ಧೀಮಂತ ವ್ಯಕ್ತಿತ್ವವನ್ನು ಸ್ಮರಿಸಿಕೊಂಡು ನಮಗೆ ಸ್ಪೂರ್ತಿಯ ಹೊಸ ದಾರಿ ದರ್ಶನ ಮಾಡಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು.


| ಡಾ. ವಿಜಯಾ

ಲೇಖನ ಇವತ್ತಿಗೂ ಹೊಸತರಂತೆ‌ ಓದಿಸಿಕೊಳ್ಳುತ್ತದೆ.ಅಗಲಿದ‌ ಗೆಳೆಯನ ನೆನಪು ಕಣ್ಣೀರು ತರಿಸುತ್ತದೆ. ಜೊತೆ ಜೊತೆಯಾಗಿ ಚಳವಳಿಗಳು,ಹೋರಾಟಗಳು,ಭಾಷಣಗಳು,ಜಾಥಾಗಳು ಒಂದೇ ಎರಡೇ.ಜೊತೆಗಾರನನ್ನು ಕಳೆದುಕೊಂಡ ಸಂಕಟ ಸಣ್ಣದಲ್ಲ. ಸುರೇಶನ ಸೀರಿಯಲ್ ನಲ್ಲಿ ನಟಿಸಿದರು.ಸುರೇಶ ಅವರ ಮನೆಗೇ ಹೋಗಿ ಗೌರವಧನ ಕೊಟ್ಟು ನಮಸ್ಕರಿಸಿದರೆ ಹೀಗೆ ಮನೆಗೇ ಬಂದು ಹಣ ಕೊಡುವುದೂ ಸಾಧ್ಯವೆ? ನಾನು ಕನಸು ಕಾಣುತ್ತಿಲ್ಲ ತಾನೇ ಅಂದರು. ಮಗ ಗುರು ಮದುವೆಯಾದ ಇಪ್ಪತೈದನೆಯ‌ವರ್ಷಕ್ಕೆ ಕರೆದು ದಂಪತಿ ಪೂಜೆ ಮಾಡಿದಾಗ ಇದೆಲ್ಲ ಇಷ್ಟ ಇಲ್ಲ ಆದರೆ ಈ ಕುಟುಂಬದ ಪ್ರೀತಿ ಕಟ್ಟಿ ಹಾಕಿದೆ ಎನ್ನುತ್ತ ದಂಪತಿ ಉಡುಗೊರೆ ಸ್ವೀಕರಿಸಿದರು. ಬಾಬಾ ಬುಡನ್ ಗಿರಿ ಹೋರಾಟಗಳಲ್ಲಿ ನಮ್ಮ ಜೊತೆಗಿದ್ದರು. ಒಮ್ಮೆ ಅಲ್ಲಿ ನಡೆದ ಸಣ್ಣದೊಂದು ಅಚಾತುರ್ಯಕ್ಕೆ ಎದುರಾದಾಗೆಲ್ಲ ಕ್ಷಮೆ ಕೇಳಿ ನನ್ನನ್ನು ನಾಚುವಂತೆ ಮಾಡಿಬಿಡುತ್ತಿದ್ದರು. ಹೌದು, ಕಾಂಗ್ರೆಸ್ ಪರ ಪ್ರಚಾರ ಮಾಡಿ ,ನಾವು ಟೀಕಿಸಿದಾಗ ಸಂಕೋಚದಿಂದ ಮುಗುಳ್ನಗುತ್ತ ಕೈ ಮುಗಿಯುತ್ತಿದ್ದ ಸಜ್ಜನ.ಅದೆಷ್ಟು ಮಂತ್ರ ಮಾಂಗಲ್ಯ ಗಳನ್ನು ಜೊತೆಯಾಗಿ ಮಾಡಿಸಿದೆವೋ. ಇವತ್ತಿಗೂ ನೆಲ್ಲುಕುಂಟೆ ವೆಂಕಟೇಶಯ್ಯ ತಮ್ಮ ಮದುವೆಯ ಫೋಟೋ ಕಳಿಸಿ,ನಾವಿಬ್ಬರೂ ಮದುವೆ ಮಾಡಿಸಿದ್ದನ್ನು ಹೆಮ್ಮೆಯಿಂದ ಹೇಳುತ್ತಾರೆ. ಆತ್ಮೀಯ ಗೆಳೆಯನನ್ನು ಕಳೆದುಕೊಂಡ ನೋವು ನುಂಗಿ ನಾನಿನ್ನೂ ಇದ್ದೇನೆ.ಮುಜುಗರವಾಗುತ್ತಿದೆ. ಬೇಗ ಅಗಲಿದ ಗೆಳೆಯರನ್ನು ಹಿಂಬಾಲಿಸುವ ಕ್ಷಣಕ್ಕೆ ಕಾಯುತ್ತಿರುವೆ. ಜಿಕೆಜಿ🫡


| Kaavya

Your write-up is truly inspiring. It reminds us of our responsibilities as teachers, the significant social role a professor plays, and the transformative power of literature. It is also a heartfelt nudi namana to a great personality. More than anything, it reinforces a conviction I have always held: being emotional while teaching is never a waste of energy. Rather, it is this emotional connection that breathes life into our teaching , touches hearts, and leaves a lasting impact on students.


| Nataraj Huliyar Replies

ತಾವೆಲ್ಲರೂ ಜಿಕೆಜಿ ವ್ಯಕ್ತಿತ್ವ, ಟೀಚಿಂಗ್ ಇತ್ಯಾದಿಗಳಿಗೆ ಸ್ಪಾಂಟೇನಿಯಸ್ ಆಗಿ ಸ್ಪಂದಿಸಿದ ರೀತಿಗೆ ಅಂಕಣಕಾರನ ಕೃತಜ್ಞತೆಗಳು.




Add Comment


Mundana Kathana Nataka

YouTube






Recent Posts

Latest Blogs