ನೈತಿಕ ಅಂಕುಶ… ಒಂದೆ, ಎರಡೆ !

ಮೊನ್ನೆ ಅಕ್ಟೋಬರ್ ೨ರ ಗಾಂಧೀಜಯಂತಿಯ ದಿನ ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಮಾತಾಡುತ್ತಾ, ‘ಹಿರಿಯರೇ, ವಿದ್ಯಾರ್ಥಿನಿಯರೇ, ವಿದ್ಯಾರ್ಥಿಗಳೇ’ ಎಂದು ಶುರು ಮಾಡುತ್ತಿರುವಂತೆ, ‘ಇಲ್ಲೇ ಎಲ್ಲೋ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ಗಾಂಧೀಜಿಯವರೇ’ ಎಂಬ ಮಾತು ನನ್ನ ಬಾಯಿಂದ ಹೊರಬಿತ್ತು. ಅದು ಅದೇ ಆಗ ಸಭೆಯಲ್ಲಿ ಕೂತಾಗ ನನ್ನ ತಲೆಯಲ್ಲಿ ಸುಳಿದಿದ್ದ ಸಂಬೋಧನೆ. ಮಾತಾಡಲು ನಿಂತಾಗ ಅನ್ನಿಸಿದ್ದನ್ನೂ ಹೇಳಿದೆ: ‘ನಾವು ನಮ್ಮಾಳದಲ್ಲಿ ಗೌರವಿಸುವ ಹಿರಿಯರು ಏನೆನ್ನುತ್ತಾರೋ ಎಂಬ ಭಯಕ್ಕಾದರೂ ಕೊಂಚ ಲಜ್ಜೆಯಿಂದ, ಸರಿಯಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ.’

ಮಾತು ಮುಗಿಸಿದ ಮೇಲೆ, ಗಾಂಧೀಜಿಯ ಜೊತೆಗಿದ್ದ ನೆಹರೂ, ಪಟೇಲ್, ಜೆ.ಪಿ., ಲೋಹಿಯಾ ಥರದವರ ಮೇಲೂ ಈ ಗಾಂಧೀ ನೈತಿಕ ಅಂಕುಶ ಕೆಲಸ ಮಾಡಿರಬಹುದು ಅನ್ನಿಸಿತು. ಮೊದಲು ಮಾರ್ಕ್ಸ್‌ವಾದಕ್ಕೆ ಒಲಿದು, ನಂತರ ಭಾರತಕ್ಕೆ ಅಗತ್ಯವಾದ ಸಮಾಜವಾದ ರೂಪಿಸುವ ಕಡೆಗೆ ಹೊರಟವರು ಜೆ.ಪಿ; ತಾರುಣ್ಯದಲ್ಲಿ ಮಾರ್ಕ್ಸ್‌ವಾದ ಅಧ್ಯಯನ ಮಾಡಿದ ರಾಮಮನೋಹರ ಲೋಹಿಯಾ ಭಾರತೀಯ ಸಮಾಜವಾದ ರೂಪಿಸಲು ಜೆ.ಪಿ. ಜೊತೆ ಸೇರಿಕೊಂಡರು. ಈ ಇಬ್ಬರೂ ಗಾಂಧೀ ಮಾತನ್ನು ಕೇಳಿಸಿಕೊಳ್ಳತೊಡಗಿದರು.    

ಮೊನ್ನೆಯ ಸಭೆ ಮುಗಿದ ಮೇಲೆ, ಗಾಂಧೀಜಿಯ ಪ್ರಿಯ ಶಿಷ್ಯರಲ್ಲೊಬ್ಬರಾಗಿದ್ದ ಲೋಹಿಯಾ ಹಿಂದೊಮ್ಮೆ ಬರೆದಿದ್ದು ಮತ್ತೆ ನೆನಪಾಯಿತು:

‘ಗಾಂಧೀಜಿಯವರ ನಿಧನದಿಂದಾಗಿ ನನ್ನ ಮೇಲಾದ ಒಳ್ಳೆಯದೋ ಕೆಟ್ಟದೋ ಆದ ಪರಿಣಾಮವೆಂದರೆ, ನಾನಿನ್ನು ನನ್ನ ಮನಸ್ಸಿಗೆ ಬಂದಂತೆ ಏನನ್ನು ಮಾಡುವುದಕ್ಕೂ ಸ್ವತಂತ್ರ ಎಂಬ ಭಾವನೆ ಮೂಡಿದ್ದು. ಅವರು ಜೀವಿಸಿದ್ದಾಗ ನನ್ನ ಮೇಲೊಂದು ಅಂಕುಶವಿದೆಯೆಂದೇ ಭಾಸವಾಗುತ್ತಿತ್ತು. ಅಂದರೆ, ನಾನು ಅವಿವೇಕದ ಕೆಲಸಗಳನ್ನು ಮಾಡಬಾರದು ಎಂಬ ಭಾವನೆಯಿತ್ತು. ನಾನು ಗಾಂಧೀಜಿಗೆ ಹೆದರಿಕೊಂಡಿರುತ್ತಿದ್ದೆನೆಂದು ಇದರರ್ಥವಲ್ಲ. ಅವರೊಡನೆ ಮಾತಾಡುತ್ತಿರುವಾಗ ಒರಟಾದ ಮಾತುಗಳನ್ನೂ ಬಳಸುತ್ತಿದ್ದೆ. ಹಾಗೆ ಮಾತಾಡುವಾಗ ನನಗೆ ಎಳ್ಳಷ್ಟೂ ಭಯವೆನಿಸುತ್ತಿರಲಿಲ್ಲ. ಆದರೆ, ಅವರು ಬದುಕಿರುವವರೆಗೆ ನಾನು ತೀರಾ ಕೆಡುಕಿನವನಾಗಬಾರದು ಎಂಬ ಆಸೆಯಿತ್ತು.' 

ಗಾಂಧೀ ನಿರ್ಗಮನದ ನಂತರ ಲೋಹಿಯಾ ದಾರಿ ತಪ್ಪಿದರು ಎಂಬುದು ಇದರ ಅರ್ಥವಲ್ಲ! ಆದರೆ ಎಷ್ಟೋ ಸಲ, ನಾವು ಯಾರ ಬಗ್ಗೆ ಕೊಂಚ ನೈತಿಕ ಭಯ ಇರಿಸಿಕೊಂಡಿರುತ್ತೇವೋ ಅಂಥವರು ಏನೆನ್ನುತ್ತಾರೋ ಎಂಬ ಅಳುಕಿನಿಂದಲೂ ನಾವು ಒಳ್ಳೆಯ ಹಾದಿಯಲ್ಲಿರುತ್ತೇವೆ ಎಂಬುದು ನಿಜ. ನಾನು ಗೌರವಿಸುತ್ತಿದ್ದ ಹಾಗೂ ಈಗಲೂ ಗೌರವಿಸುವ ಲಂಕೇಶ್, ಡಿ.ಆರ್. ನಾಗರಾಜ್, ಕಿ.ರಂ. ನಾಗರಾಜ್ ಥರದ ಹಿರಿಯ ಚಿಂತಕರು, ಈಗ ನಮ್ಮಂಥವರೊಡನೆ ಮಾತುಕತೆಯಾಡುವ ದೇವನೂರ ಮಹಾದೇವ ಥರದ ಹಿರಿಯ ಲೇಖಕರು ನಾನು ಏನಾದರೂ ತಪ್ಪು ಬರೆದರೆ ಏನೆನ್ನುತ್ತಾರೋ ಎಂಬ ಅಳುಕು ಈಗಲೂ ಇರುತ್ತದೆ. 

ಈ ಮಾತು ಬರೆಯುವಾಗ ನೆನಪಾದ ಪ್ರಸಂಗ: ಒಮ್ಮೆ ಒಬ್ಬ ವ್ಯಕ್ತಿಯ ಸಂಕಷ್ಟ ಕುರಿತು ಬರೆದ ನನ್ನ ಬರಹ ಓದಿದ್ದ ಡಿ. ಆರ್‍.  ನಾಗರಾಜ್, ‘ಏನ್ರೀ! ಆತನ ಅನುಭವದ ನ್ಯಾರೇಟಿವ್ ಬರೆಯಲು ಹೋಗಿ ಫಿಕ್ಷನ್ ಮಾಡಿದ್ದೀರಲ್ರೀ!’ ಅಂದರು. ಅವರ ಮಾತು ಕೇಳಿ, ಆ ಬರಹವನ್ನು ಗಮನಿಸಿದಾಗ, ಓದುವವರಲ್ಲಿ ಆ ವ್ಯಕ್ತಿಯ ಬಗ್ಗೆ ಸಹಾನುಭೂತಿ ಹುಟ್ಟಿಸಲು ಕೆಲವೆಡೆ ಉತ್ಪ್ರೇಕ್ಷೆಯ ವಿಶೇಷಣಗಳು, ಬಣ್ಣನೆಗಳು, ಪದಗಳು ಇರುವುದು ನನ್ನ ಅರಿವಿಗೆ ಬರತೊಡಗಿತು. ಇಂಥ ಬರವಣಿಗೆ ಕೊಂಚ ಅನೈತಿಕ ಎನ್ನಿಸತೊಡಗಿತು. ‘ನಮ್ಮ ಕಾಲದಲ್ಲಿ ಅತಿ ಭಾವುಕತೆಯೇ ಅಶ್ಲೀಲ’ ಎಂದು ರೊಲಾ ಬಾರ್ಥ್ ಹೇಳಿದ್ದನ್ನು ಯಾರೋ ನೆನಪಿಸಿದರು. ಮುಂದೆ ಬರೆಯುವಾಗಲೆಲ್ಲ ರೊಲಾ ಬಾರ್ಥ್ ಮಾತು ಕೂಡ ನೈತಿಕ ಅಂಕುಶದಂತೆ ಕೆಲಸ ಮಾಡತೊಡಗಿತು.

ಇದೊಂದು ಉದಾಹರಣೆ ಮಾತ್ರ. ನಮ್ಮನ್ನು ಎಚ್ಚರಿಸುವ ಇಂಥ ಮಾತುಗಳು ಹಿರಿಯರದೇ, ದೊಡ್ಡ ಬುದ್ಧಿಜೀವಿಗಳದೇ ಆಗಬೇಕಾಗಿಲ್ಲ; ವಾರಗೆಯವರು, ಕಿರಿಯರು, ಮಕ್ಕಳು, ಯಾರದೇ ಪ್ರತಿಕ್ರಿಯೆಯಾಗಿರಲಿ, ಅದು ಪ್ರಾಮಾಣಿಕ ಎಂದು ನಮ್ಮಾಳದಲ್ಲಿ ಅನ್ನಿಸಿದರೆ ಅದು ಕೂಡ ನೈತಿಕ ಅಂಕುಶವಾಗಬಹುದು. ನಮ್ಮೊಳಗೇ ಗಟ್ಟಿಯಾದ ಅಂತಸ್ಸಾಕ್ಷಿಯ -ಕಾನ್ಷನ್ಸ್‌ನ- ನೈತಿಕ ಅಂಕುಶ ಇದ್ದರೂ ಸಾಕು; ನಮ್ಮ ನಡವಳಿಕೆ, ಮಾತು, ಬರವಣಿಗೆ ತೀರಾ ಅನೈತಿಕವಾಗಲಿಕ್ಕಿಲ್ಲ ಎಂಬುದು ನನ್ನ ನಂಬಿಕೆ.  ಆದರೆ, ಅಂತಸ್ಸಾಕ್ಷಿ ಕೂಡ ಕೈ ಕೊಡಬಲ್ಲದು! ‘ನಾವು ನಮ್ಮ ಅಂತಸ್ಸಾಕ್ಷಿಯನ್ನು ತರಬೇತುಗೊಳಿಸಿದರೆ ಅದು ನಮ್ಮನ್ನು ಘಾಸಿಗೊಳಿಸುತ್ತಲೇ,  ಮುತ್ತಿಕ್ಕುತ್ತಲೂ ಇರುತ್ತದೆ’ ಎಂಬ ನೀಷೆಯ ಮಾತು ಕೂಡ ನನ್ನನ್ನು ಕೆಣಕುತ್ತಾ ಎಚ್ಚರಿಸುತ್ತಿರುತ್ತದೆ. 

ನಾವು ಯೋಚಿಸುವಾಗ ಕುವೆಂಪು ಹೇಳಿದಂತೆ ‘ನಿರಂಕುಶ’ವಾಗಿರುವುದು ಒಳ್ಳೆಯದಾದರೂ, ಬರೆದಾಗ, ಮಾತಾಡಿದಾಗ, ಪ್ರತಿಕ್ರಿಯಿಸುವಾಗ ಕೊನೇ ಪಕ್ಷ ಸ್ವ-ವಿಮರ್ಶೆಯ ನೈತಿಕ ಅಂಕುಶ ಬೇಕಾಗುತ್ತದೆ. ‘ಸೃಜನಶೀಲ ಬರವಣಿಗೆಯ ಬಹುತೇಕ ಭಾಗ ವಿಮರ್ಶೆಯ ಶ್ರಮವೇ ಇರುತ್ತದೆ’ ಎಂದ ಎಲಿಯಟ್ ಮಾತನ್ನು ಈ ಅಂಕಣದ ವಸ್ತುವಿಗೆ ತಕ್ಕಂತೆ ಮಾರ್ಪಡಿಸಿ ಹೀಗೆ ಹೇಳಬಹುದು: ‘ಒಳ್ಳೆಯ ಬರವಣಿಗೆಯ ಬಹುತೇಕ ಭಾಗದಲ್ಲಿ ಸ್ವ-ವಿಮರ್ಶೆಯ ಶ್ರಮವೇ ಇರುತ್ತದೆ.’ ಉಛಾಯಿಸಿ ಬರೆಯುತ್ತಾ, ತನ್ನ ಸಂಸ್ಕೃತಿಯಲ್ಲಿರುವ ಪುರುಷ ಪೂರ್ವಗ್ರಹಗಳನ್ನು ಬಿತ್ತುವ ಗಂಡಸೊಬ್ಬ ಸ್ತ್ರೀವಾದಿ ನೋಟಗಳನ್ನು ಅರಿತರೆ, ಅವು ನೈತಿಕ ಅಂಕುಶವಾಗಿ ಕೆಲಸ ಮಾಡಬಲ್ಲವು. ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಮಾಡೆಲ್ ಆಗಿ ಇರಿಸಿಕೊಂಡಿರುವ ಬರವಣಿಗೆ ಕೂಡ ನಮ್ಮನ್ನು ಎಚ್ಚರಿಸುತ್ತಿರಬಹುದು. ಮೊನ್ನೆ ಅಂಕೋಲದಲ್ಲಿ ಪ್ರೊಫೆಸರ್‍ ಜಿ. ಎಚ್. ನಾಯಕರ ಬಗ್ಗೆ ಮಾತಾಡುತ್ತಿರುವಾಗ, ಅವರ ಪಾಠವನ್ನು ಸರಿಯಾಗಿ ಕೇಳಿಸಿಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು; ಅವರು ಪಠ್ಯವನ್ನು ಹತ್ತಿರದಿಂದ ನೋಡುವ ಕ್ರಮವನ್ನು ಗ್ರಹಿಸಿದ ವಿಮರ್ಶಕ, ವಿಮರ್ಶಕಿಯರನ್ನು ಪಠ್ಯ ಬಿಟ್ಟು, ಎಲ್ಲೋ ‘ಜಾಲಿ ವಾಕಿಂಗ್’ ಹೋಗದಂತೆ ನಾಯಕರು ಸದಾ ಎಚ್ಚರಿಸುತ್ತಿರಬಲ್ಲರು ಎನ್ನಿಸಿತು.   

ಹಾಗೆಯೇ ಗಾಂಧೀ ಬರವಣಿಗೆಯ ನೈತಿಕತೆ ಕೂಡ. ಗಾಂಧೀ ಬರವಣಿಗೆ ನಿಮಗೆ ಜಡ ಅನ್ನಿಸಬಹುದು. ಕ್ಲೀಷೆ ಅನ್ನಿಸಬಹುದು. ಆದರೆ ಸುಳ್ಳು ಎನ್ನಿಸುವುದಿಲ್ಲ. ಈ ಗಾಂಧೀ ಬರವಣಿಗೆಯ ನೈತಿಕತೆ ಅವರ ಪತ್ರಿಕೋದ್ಯಮದ ಬರವಣಿಗೆಯ ಮೂಲಕ ಗಟ್ಟಿಯಾಯಿತು ಎಂಬುದು ಕುತೂಹಲಕರ. ಗೊರೂರು ರಾಮಸ್ವಾಮಿ ಅಯ್ಯಂಗಾರ್‍ ಅನುವಾದಿಸಿರುವ ಗಾಂಧೀ ಆತ್ಮಚರಿತ್ರೆ ‘ನನ್ನ ಸತ್ಯಾನ್ವೇಷಣೆ’ಯಲ್ಲಿ ಗಾಂಧೀಜಿ ಬರೆಯುವ ಮಾತು: 

‘ಯೋಚನೆ ಮಾಡದೆ, ವಿಚಾರ ಮಾಡದೆ ಬರೆದ ಒಂದು ಮಾತನ್ನಾಗಲೀ, ಉದ್ದೇಶಪೂರ್ವಕವಾದ ಅತಿಶಯೋಕ್ತಿಯನ್ನಾಗಲೀ ಈ ಯಾವುದನ್ನೂ ಬರೆದುದು ನನಗೆ ನೆನಪಿಲ್ಲ. ಈ ದೃಷ್ಟಿಯಿಂದ ಆಫ್ರಿಕಾದಲ್ಲಿ ನಾವು ಹೊರಡಿಸಿದ ‘ಇಂಡಿಯನ್ ಒಪೀನಿಯನ್’ ಪತ್ರಿಕೆ ನಿಜಕ್ಕೂ ನನಗೆ ಆತ್ಮಸಂಯಮದ ಪ್ರಯೋಗಕ್ಷೇತ್ರವಾಯಿತು…ವಾಸ್ತವವಾಗಿ ‘ಇಂಡಿಯನ್ ಒಪೀನಿಯನ್’ನ ಧ್ವನಿ ಟೀಕಾಕಾರರೂ ಸಹ ತಮ್ಮ ಲೇಖನಿಯನ್ನು ಸಂಯಮದಿಂದ ಉಪಯೋಗಿಸುವಂತೆ ನಿರ್ಬಂಧಪಡಿಸುತ್ತಿದ್ದಿತು…

‘ಇಂಡಿಯನ್ ಒಪೀನಿಯನ್’ ಪ್ರಾರಂಭವಾದ ತಿಂಗಳಿನೊಳಗಾಗಿಯೇ ನಾನು ವೃತ್ತಪತ್ರಿಕೆಗಳ ಒಂದೇ ಗುರಿ ಸೇವೆಯಾಗಿರಬೇಕೆಂದು ಅರಿತೆನು. ವೃತ್ತಪತ್ರಿಕೆ ಒಂದು ದೊಡ್ಡಶಕ್ತಿ. ಆದರೆ ಹತೋಟಿಯಿಲ್ಲದೆ ನೀರಿನ ಪ್ರವಾಹ ಹಳ್ಳಗಳನ್ನೆಲ್ಲ ಮುಳುಗಿಸಿ ಪೈರನ್ನು ನಾಶಮಾಡುವಂತೆ, ಹಿಡಿತವಿಲ್ಲದ ಲೇಖನಿ ಸಹ ನಾಶಕ್ಕೆ ಸಾಧನವಾಗುತ್ತದೆ. ಹತೋಟಿ ಹೊರಗಿನದಾದರೆ ಅದರಿಂದ ಹತೋಟಿಯಿಲ್ಲದಿರುವುದಕ್ಕಿಂತ ಹೆಚ್ಚು ಅಪಾಯವಾಗುತ್ತದೆ. ಅಂಕುಶ ಒಳಗಿನಿಂದ ಬಂದಾಗ ಮಾತ್ರ ಲಾಭದಾಯಕವಾಗಬಲ್ಲದು. ಈ ದೃಷ್ಟಿಯಿಂದ ನೋಡಿದರೆ, ಪ್ರಪಂಚದಲ್ಲಿ ಎಷ್ಟು ಪತ್ರಿಕೆಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಬಲ್ಲವು? ಆದರೆ ಆ ಪ್ರಯೋಜಕವಾದುವುಗಳನ್ನು ಹಿಡಿದೆತ್ತಿ ನಿಲ್ಲಿಸುವವರು ಯಾರು? ಅಪ್ರಯೋಜಕವೆಂದು ತೀರ್ಮಾನಿಸುವವರು ಯಾರು? ಪ್ರಯೋಜನಕರವಾದುವುಗಳೂ, ಅಪ್ರಯೋಜಕ ವಾದವುಗಳೂ ಒಳ್ಳೆಯದು ಮತ್ತು ಕೆಟ್ಟದ್ದು ಪ್ರಪಂಚದಲ್ಲಿರುವಂತೆ ಒಟ್ಟಿಗೆಯೇ ಇರುತ್ತವೆ. ಇವುಗಳಲ್ಲಿ ಮನುಷ್ಯ ತನಗೆ ಬೇಕಾದುದನ್ನು ಆರಿಸಿಕೊಳ್ಳಬೇಕು.’ 

ಇವು ೧೯೦೫ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ‘ಇಂಡಿಯನ್ ಒಪೀನಿಯನ್’ ಪತ್ರಿಕೆಯ   ಅನುಭವ ಕುರಿತ ಮಾತುಗಳು. ೧೯೨೭ರ ಹೊತ್ತಿಗೆ ಅವರು ‘ಯಂಗ್ ಇಂಡಿಯಾ’ದ ಸಂಪಾದಕರಾಗಿದ್ದಾಗ ಕ್ಯಾಥರಿನ್ ಮೇಯೋ ಬರೆದ ‘ಮದರ್ ಇಂಡಿಯಾ’ ಪುಸ್ತಕ ಬಂತು. ಆ ಕುರಿತು ಗಾಂಧಿ ಬರೆಯುವ ಟಿಪ್ಪಣಿ:

‘ಕೆಲವು ಓದುಗರು ಕ್ಯಾಥರಿನ್ ಮೇಯೊ ಬರೆದ ‘ಮದರ್ ಇಂಡಿಯಾ' ಪುಸ್ತಕ ಕುರಿತ ಪ್ರತಿಭಟನೆ, ವಿಮರ್ಶೆಗಳ ತುಣುಕುಗಳನ್ನು ನನಗೆ ಕಳಿಸಿದ್ದಾರೆ. 
ಈ ಪುಸ್ತಕವನ್ನು ಶಕ್ತವಾಗಿ, ಜಾಣತನದಿಂದ ಬರೆಯಲಾಗಿದೆ. ಇಲ್ಲಿ ಎಚ್ಚರದಿಂದ ಆಯ್ದುಕೊಂಡಿರುವ ಹೇಳಿಕೆಗಳು ಮೇಲುನೋಟಕ್ಕೆ ಇದೊಂದು ಪ್ರಾಮಾಣಿಕವಾದ ಪುಸ್ತಕ ಎನ್ನಿಸುವಂತೆ ಮಾಡುತ್ತವೆ. ಆದರೆ ಇದು ಈ ದೇಶದಲ್ಲಿರುವ ಚರಂಡಿಗಳನ್ನು ತೆರೆಸಿ, ಪರೀಕ್ಷೆ ಮಾಡಿ, ವರದಿ ಮಾಡುವ, ಅಥವಾ ತೆರೆದ ಚರಂಡಿಗಳಿಂದ ಹುಟ್ಟುವ ದುರ್ವಾಸನೆಯನ್ನು ವಿವರವಿವರವಾಗಿ ಬಣ್ಣಿಸುವ ಏಕಮಾತ್ರ ಉದ್ದೇಶದಿಂದ ಒಬ್ಬ ಚರಂಡಿ ತಪಾಸಣೆ ಮಾಡುವ ಇನ್‌ಸ್ಪೆಕ್ಟರನ್ನು ಇಲ್ಲಿಗೆ ಕಳಿಸಿ ತಯಾರಿಸಿದ ವರದಿ ಎನ್ನಿಸುತ್ತದೆ. ಮಿಸ್ ಮೇಯೋ ತಾವು ಇಂಡಿಯಾಕ್ಕೆ ಹೋಗಿದ್ದೇ ಅಲ್ಲಿನ ಚರಂಡಿಗಳನ್ನು ತೆರೆದು ಪರೀಕ್ಷೆ ಮಾಡುವುದಕ್ಕೆ ಎಂದು ಹೇಳಿಕೊಂಡಿದ್ದರೆ ಅವರ ಪುಸ್ತಕದ ಈ ಜೋಡಣೆಗಳ ಬಗ್ಗೆ ನಾವು ಅಷ್ಟೇನೂ ಗೊಣಗಬೇಕಾಗುತ್ತಿರಲಿಲ್ಲ. ಆದರೆ, ಮೇಡಮ್ ಮೇಯೋ ಒಂದು ಬಗೆಯಲ್ಲಿ ಗೆದ್ದವರಂತೆ ‘ಚರಂಡಿಗಳೇ ಇಂಡಿಯಾ’ ಎಂದು ಒಟ್ಟಾರೆಯಾಗಿ ಹೇಳಿಬಿಡುತ್ತಾರೆ...  

...ಈ ಪುಸ್ತಕವನ್ನು ಅಮೆರಿಕನ್ನರೆದುರೋ, ಇಂಗ್ಲಿಷಿನವರೆದುರೋ ಇಡುವುದರಿಂದ ಪ್ರಯೋಜನವಿಲ್ಲ ಅನ್ನಿಸುತ್ತದೆ; ಆದರೆ ಈ ಪುಸ್ತಕವನ್ನು ಪ್ರತಿಯೊಬ್ಬ ಭಾರತೀಯನೂ ಒಂದು ಮಟ್ಟದ ಲಾಭದ ದೃಷ್ಟಿಯಿಂದಲಂತೂ ಓದಬಹುದು. ಈ ಲೇಖಕಿ ತನ್ನ ಪುಸ್ತಕದಲ್ಲಿ ಮಾಡಿರುವ ಅನೇಕ ಆರೋಪಗಳ ಸಾರಾಂಶವನ್ನು ಅಲ್ಲಗಳೆಯಲು ಆಗುವುದಿಲ್ಲ. ಬೇರೆಯವರು ನಮ್ಮನ್ನು ನೋಡಿದ ರೀತಿಯಲ್ಲೇ ನಾವು ಕೂಡ ನಮ್ಮನ್ನು ನೋಡಿಕೊಳ್ಳುವುದು ಒಳ್ಳೆಯದೇ. ಈ ಪುಸ್ತಕ ಬರೆಯುವುದರ ಹಿಂದಿರುವ ಉದ್ದೇಶವನ್ನು ನಾವು ಪರೀಕ್ಷಿಸಬೇಕಾದ ಅಗತ್ಯವೂ ಇಲ್ಲ.’ (ಅನುವಾದ: ಶೋಯಿಂಕಾ ಎಚ್.ಎನ್.)

ಅಮೆರಿಕನ್ ಲೇಖಕಿ ಇಂಡಿಯಾದ ಬಗ್ಗೆ ಬರೆದ ವಿಮರ್ಶಾತ್ಮಕ ಪುಸ್ತಕವೊಂದು ಗಾಂಧೀಜಿಗೂ ನೈತಿಕ ಎಚ್ಚರ ಮೂಡಿಸುವುದು ಹೀಗೆ. ಈ ಬಗೆಯ ಎಚ್ಚರವನ್ನು ಸ್ವೀಕರಿಸುವಾಗ,  ಯಾವುದು ನಿಜವಾದ ವಿಮರ್ಶೆ, ಯಾವುದು ನಮ್ಮನ್ನು ತಿದ್ದುವ ಹೇಳಿಕೆ, ಯಾವುದು ತರಲೆಯ ಕುಟುಕು- ಇವುಗಳನ್ನು ಗ್ರಹಿಸುವ ಪ್ರಜ್ಞೆ ಕೂಡ ನಮಗಿರಬೇಕಾಗುತ್ತದೆ. ಇದು ಲೇಖಕ ಗಾಂಧೀಜಿಯಲ್ಲಿ, ಪತ್ರಕರ್ತ ಗಾಂಧೀಜಿಯಲ್ಲಿ ಇತ್ತು. ಬಗೆಬಗೆಯ ಕ್ಷಿಪ್ರ ಮಾಧ್ಯಮಗಳನ್ನು ಬಳಸುವವರು ಇಂಥ ನೈತಿಕ ಅಂಕುಶಗಳತ್ತ ನೋಡುವುದು ಬರವಣಿಗೆಯ ಆರೋಗ್ಯಕ್ಕೆ ಒಳ್ಳೆಯದು.
 

ಕೊನೆ ಟಿಪ್ಪಣಿ:

ಮೊನ್ನೆ ಗಾಂಧೀಜಯಂತಿಯಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಈ ಅಂಕಣಕಾರನ ‘ಗಾಂಧೀ ನಾಯಕತ್ವದ ನಿತ್ಯವಿಕಾಸ’ ಬರಹವನ್ನು ಚರ್ಚಿಸುತ್ತಾ, ಗೆಳೆಯ ಎಂ.ಜಿ. ಚಂದ್ರಶೇಖರ್ ಬರೆದ ಒಂದು ಮಾತು: ‘ಈ ಲೇಖನ ಇಷ್ಟವಾಗಲು ಇನ್ನೊಂದು ಕಾರಣ: ಗಾಂಧಿ ಹೆಸರು ಬಂದ ತಕ್ಷಣ ಅಂಬೇಡ್ಕರ್‍ ಹೆಸರು ತಂದು ಕಾಕ್‌ಟೇಲ್ ಮಿಶ್ರಣ ಮಾಡದಿರುವುದು. ನೀವು ಬ್ಲಾಗ್‌ನಲ್ಲಿ ಬರೆದಿರುವ ಅನೇಕ ಲೇಖನಗಳಲ್ಲಿ ಈ ರೀತಿ ಆಗಿರುವುದನ್ನು ಗಮನಿಸಿದ್ದೆ.’  

ಸಾಮಾನ್ಯವಾಗಿ ಬರಹವೊಂದು ಪ್ರಕಟವಾದ ಮೇಲೆ ಮತ್ತೆ ಓದಲು ಕೊಂಚ ಅಳುಕುವ ಈ ಅಂಕಣಕಾರನನ್ನು ಚಂದ್ರಶೇಖರ್‍ ಸೂಚಿಸಿದ ಹಿಂದಿನ ಬರಹಗಳನ್ನು ಮತ್ತೆ ನೋಡುವಂತೆ ಈ ಮಾತು ಕೆಣಕತೊಡಗಿತು!

Share on:

Comments

1 Comments



| ಚರಣ್‌

"ಬೇರೆಯವರು ನಮ್ಮನ್ನು ನೋಡಿದ ರೀತಿಯಲ್ಲೇ ನಾವು ಕೂಡ ನಮ್ಮನ್ನು ನೋಡಿಕೊಳ್ಳುವುದು ಒಳ್ಳೆಯದೇ" . ನಮ್ಮ ದೈನಿತ್ಯದ ಸೊರಗಿದ ಮಾತುಗಳಲ್ಲಿ ಈ ಮೇಲಿನ ತದ್ವಿರುದ್ಧ ಅಭಿಪ್ರಾಯವನ್ನೇ ಕೇಳುವುದು, ಹೇಳುವುದು ಹೆಚ್ಚು. ನಾವೇ ಶ್ರಮಪಟ್ಟರೂ ಇಂತಹ ಯೋಚನೆ ಹೊಳೆಯುವುದಕ್ಕೆ ಬಹುಕಾಲ ಬೇಕಾಗಬಹುದು. ಗಾಂಧಿ ಜಯಂತಿ ಬಂತೆಂದರೆ ಅವರನ್ನು ಅಪಹಾಸ್ಯ ಮಾಡುವ, ಸಾವನ್ನು ಸಂಭ್ರಮಿಸುವ ಜನವರ್ಗ ಒಂದುಕಡೆಯಾದರೆ. ಅವರ ಕುರಿತಾದ ಕೇವಲ ಟೀಕೆಗಳನ್ನೇ ಹರಿದುಬಿಡುವ ವರ್ಗ ಇನ್ನೊಂದು ಕಡೆ. ವಿದ್ಯಾರ್ಥಿ ಹಂತದಲ್ಲಿ ಇರುವಂತ ನನ್ನಂಥವರಿಗೆ ಗೊಂದಲಗಳ ಜೊತೆಗೆ ಸದಾ ಟ್ರೆಂಡ್ ಜೊತೆ ಕಾಲ್ಹಾಕುವ instinct ಇರುತ್ತದೆ. ಇದು ಸುಲಭವು ಕೂಡ. ವಾದ-ವಿವಾದಗಳು ನಿರಸನಗೊಳಿಸುವುದನ್ನು ಬಿಟ್ಟರೆ ಏನ್ನನ್ನಾಗಲಿ ಕಲಿಸಿಕೊಡುವುದು, ಸ್ಪಷ್ಟತೆ ತಂದುಕೊಡುವುದು ಬಹಳ ಕಡಿಮೆ. "ಗಾಂಧಿಯನ್ನು ವಿಮರ್ಶಿಸುತ್ತಲೇ ಗಾಂಧಿವಾದ ಜೀವಂತವಾಗಿರುತ್ತದೆ" (ಇಂತಿ ನಮಸ್ಕಾರ) ಎಂಬ ಮಾತು, ಲಂಕೇಶ್ ರನ್ನು ಓದುವಾಗ ನಿರೂಪಿತವಾಗುತ್ತಿತ್ತು. ಆ ವಿಮರ್ಶೆಯಿಂದ ಮೂಡುವ ಗಾಂಧಿಯನ್ನು ನನ್ನಂತ ಯುವಕರು ಕಾಯುತ್ತಿರಬಹುದು ಎಂಬುದು ನನ್ನ ಊಹೆ. "ಉತ್ಪ್ರೇಕ್ಷೆಯೂ ಸುಳ್ಳೇ" ಎಂದು ದಶಕದ ಹಿಂದೆ ಯಾವುದೋ ನ್ಯೂಸ್ ಚಾನೆಲ್ ನಲ್ಲಿ ತಾವು ಆಡಿದ ಮಾತು ನನ್ನೊಳಗೆ ನೆಲೆಸಿ, ಅದು ನಮ್ಮನ್ನು, ರಾಜಕಾರಣಿಗಳನ್ನು, "ವಾಗ್ಮಿ"ಗಳನ್ನು ಸಾಹಿತಿ-ಚಿಂತಕರುಗಳನ್ನು ಎಲ್ಲರನ್ನು ಒಂದು ಹಂತದಲ್ಲಿ ಪರೀಕ್ಷಿಸುವ Touchstone ಆಗಿದೆ. . ಬರವಣಿಗೆ ಟೀಕೆ-ವೀಮರ್ಶೆಯದ್ದೇ ಆಗಿದ್ದರೂ ಅದು ಓದುಗರ ಮನಸ್ಸಿನಲ್ಲಿ ಆರೋಗ್ಯಕರ ಭಾವನೆ ಮೂಡಿಸದೆ ಇದ್ದರೆ ನಾವು ಕ್ರಮೇಣ ಕುಸಿಕುಸಿದು ಹೋಗುತ್ತೇವೆ ಅನಿಸುತ್ತದೆ. ಟೀಕೆ-ಟಿಪ್ಪಣೆಯಲ್ಲಿ ಲಂಕೇಶರು ತಮ್ಮನ್ನು ಕೆಣಕುವ, ಕಾಡಿಸುವ ಹಲವು ವೈಯುಕ್ತಿಕ, ಸಾಮಾಜಿಕ,‌ ಮತ್ತು ರಾಜಕೀಯ ವಿಚಾರಗಳನ್ನು ಚರ್ಚಿಸುವಾಗಲೂ ನಮ್ಮನ್ನು ಕೆರಳಿಸದೆ ಮುಕ್ತವಾದ ಬಯಲಿಗೆ ಹೊರಳಿಸುತ್ತಲೇ ವಿವೇಕಿಗಳಾಗಿಸುತ್ತಾರೆ. ಕೊನೆಯದಾಗಿ, ನೈತಿಕ ಅಂಕುಶವೂ ಭ್ರಮೆಯ ಅಂಕುಶದಿಂದ ಸುಳ್ಳಿನ ಅಂಕುಶದಿಂದ ಭಯದ ಅಂಕುಶದಿಂದ ಪಾರುಮಾಡುವ ಪ್ರಭೆ ಹೊಂದಿದೆ ಎಂಬುದರಲ್ಲಿ ಅನುಮಾನವಿರಲಾರದು.




Add Comment


Mundana Kathana Nataka

YouTube






Recent Posts

Latest Blogs