ಮತ್ತೆ ನೆರೂಡನ ಜೊತೆ

ಪ್ರಿಯರ ಬಗ್ಗೆ ಮಾತಾಡಲು ಒಂದು ನೆವ ಬೇಕಷ್ಟೆ! ಅದು ಹೇಗೆಂದರೆ, ಪ್ರೀತಿಸಿದ ಹೊಸದರಲ್ಲಿ ಏನಾದರೂ ನೆವ ತೆಗೆದು ಅವನ ಅಥವಾ ಅವಳ ಬಗ್ಗೆ ಏನನ್ನಾದರೂ ಮೆಚ್ಚಿಕೊಂಡು, ಹೇಳಿಕೊಂಡು ಆನಂದಿಸುವ ಹಾಗೆ! ಈ ಅಂಕಣ ಪ್ರಕಟವಾಗುವ ದಿನ (ಜುಲೈ ೧೨) ಚಿಲಿಯ ಕವಿ ಪಾಬ್ಲೋ ನೆರೂಡ (೧೯೦೪-೧೯೭೩) ಹುಟ್ಟುಹಬ್ಬ ಎಂಬುದು ಮೊನ್ನೆ ನೆನಪಾದಾಗ, ಇವತ್ತಿಗೂ ಲೋಕದ ಪ್ರಗತಿಪರ ಕವಿಗಳ ಕಣ್ಮಣಿಯಂತಿರುವ ನೆರೂಡನ ಬಗ್ಗೆ ಆಗಾಗ ಬರೆದ ಟಿಪ್ಪಣಿಗಳನ್ನು ಮತ್ತೆ ಕೊಡುವ ಉಮೇದು ಹುಟ್ಟಿತು:

ನಮ್ಮ ಹದಿಹರೆಯದ ಕಾವ್ಯೋತ್ಸಾಹದಲ್ಲಿ ಪಾಬ್ಲೋ ನೆರೂಡ ಎಂಬ ಕವಿಯ ಕಮ್ಯುನಿಸ್ಟ್ ವ್ಯಕ್ತಿತ್ವದ ಬಗ್ಗೆ ಕೇಳಿಯೇ ರೋಮಾಂಚನವಾಗುತ್ತಿತ್ತು. ಹದಿನಾರು ವರ್ಷದವನಾಗಿದ್ದಾಗಲೇ ಯಾವುದೇ ಸಂಕೋಚವಿಲ್ಲದೆ 'ನಾನು ಕವಿ' ಎಂದು ಘೋಷಿಸಿಕೊಂಡ ಅವನ ಧೈರ್ಯ ಕಂಡು ಅಚ್ಚರಿ ಆಗುತ್ತಿತ್ತು. 'ಬಾ ಬೀದಿಯ ಮೇಲೆ ಚೆಲ್ಲಿದ ನೆತ್ತರು ನೋಡು' ಎಂಬ ಅವನ ಕಾವ್ಯದ ಕರೆಯನ್ನು ಕನ್ನಡದ ಎಡಪಂಥೀಯ ಕವಿಗಳು ದಾಸ್ ಕ್ಯಾಪಿಟಲ್ಲಿನ ವಾಕ್ಯದಂತೆ ಒಪ್ಪಿಸುತ್ತಿದ್ದರು. 'ಕವಿಯೊಬ್ಬನಿಗೆ ರಾಜಕೀಯ ಬದ್ಧತೆಯಿದ್ದರೂ ಅವನ ಕಾವ್ಯ ಮುಕ್ಕಾಗುವುದಿಲ್ಲ ನೋಡಿ' ಎಂದು ಬಂಡಾಯ ಕವಿಗಳು ನೆರೂಡನನ್ನೋ ಬ್ರೆಕ್ಟನನ್ನೋ ಗುರಾಣಿಯಂತೆ ಬಳಸುತ್ತಿದ್ದರು. ಅತ್ತ ನೆರೂಡನ ಚಿಲಿಯಲ್ಲಿ ಅವನ ಪ್ರೇಮಪದ್ಯಗಳ ಸಾಲುಗಳನ್ನು ಜನ ಗಾದೆ ಮಾತುಗಳಂತೆ ಬಾಯಾಡಿಸುತ್ತಿದ್ದರೆಂಬ ಕತೆಗಳಿದ್ದವು. ಎಡಪಂಥೀಯ ಕ್ರಾಂತಿಕಾರಿಗಳ ಹೆಗಲು ಚೀಲಗಳಲ್ಲಿ ನೆರೂಡನ ಪದ್ಯಗಳು ಇರುತ್ತಿದ್ದವೆಂಬ ಸುದ್ದಿ ಕೇಳಿಬರುತ್ತಿತ್ತು...  ಭಾರತದಂಥ ಸನ್ನಿವೇಶಗಳಲ್ಲಿ ನೆರೂಡನ ಕಾವ್ಯ ಹಾಗೂ ಕಾವ್ಯ ಸಿದ್ಧಾಂತ ಇವತ್ತಿಗೂ ಅತ್ಯಂತ ಜೀವಂತವಾಗಿಯೇ ಇವೆ.

ಕವಿಯೊಬ್ಬನ ಆರಂಭದ ತೀವ್ರ ಎಳೆಯೊಂದು ಅವನ ಕೊನೆಯವರೆಗೂ ಕಂಡೋ, ಕಾಣದೆಯೋ ಉಳಿದೇಬಿಡುತ್ತದೆಯೆ? ನೆರೂಡನ ಕಾವ್ಯದ ರೊಮ್ಯಾಂಟಿಕ್ ತೀವ್ರತೆ; ಬೋದಿಲೇರ್‌ ಮುಖಾಮುಖಿಯಾದ ಪಾಪ; ಅಥವಾ ಎಲಿಯಟ್‌ನ ವಿಷಣ್ಣತೆ ಇವೆಲ್ಲವೂ ಈ ಕವಿಗಳ ಕಾವ್ಯದ ಕೊನೆಯವರೆಗೂ ಹರಿದಿರುವುದನ್ನು ನೋಡಿದರೆ ಹಾಗೆನ್ನಿಸುತ್ತದೆ. ತನ್ನ ಇಪ್ಪತ್ತರ ವಯಸ್ಸಿಗೆ ತಕ್ಕ ಹಾಗೆ ‘ಇಪ್ಪತ್ತು ಪ್ರೇಮ ಪದ್ಯಗಳು ಮತ್ತು ಒಂದು ನಿರಾಶೆಯ ಹಾಡು' ರೂಪಿಸಿದ ನೆರೂಡನ ಕಾವ್ಯದ ಹುಡುಗ, 'ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು; ಬೇಕಾದರೆ ಬರೆಯಬಲ್ಲೆ- ರಾತ್ರಿ ತತ್ತರಿಸಿಹೋಗಿದೆ, ದೂರದಲ್ಲಿ ನೀಲಿ ಚುಕ್ಕಿಗಳು ನಡುಗುತ್ತವೆ' ಎಂದು ಅಲವತ್ತುಕೊಳ್ಳುತ್ತಾನೆ; 'ಪ್ರೀತಿ ಎಷ್ಟೊಂದು ಬೇಗ ಮುಗಿಯುತ್ತದೆ; ಅದನ್ನು ಮರೆಯುವುದು ಮಾತ್ರ ಎಷ್ಟೋ ಕಾಲ ತೆಗೆದುಕೊಳ್ಳುತ್ತದೆ' ಎಂದು ನಿಟ್ಟುಸಿರುಬಿಡುತ್ತಾನೆ. 'ದಿನದಿನವೂ ನೀನು ಜಗದ ಬೆಳಕಿನೊಡನಾಡುತ್ತೀಯ, ಕಂಡೂ ಕಾಣದ ಅತಿಥಿಯೆ, ನೀನು ಹೂವಲ್ಲಿ, ನೀರಲ್ಲಿ ಹಣಿಕಿಕ್ಕುತ್ತೀಯ' ಎಂದು ಸಂಭ್ರಮಗೊಳ್ಳುತ್ತಾನೆ, 'ಬೆಚ್ಚಿಬಿದ್ದವಳಂತೆ ನನಗೆ ತೆಕ್ಕೆ ಬೀಳು' ಎಂದು ಕೂಗಿ ಕರೆಯುತ್ತಾ ರಮ್ಯ ಚಿತ್ರಗಳನ್ನು ಚೆಲ್ಲುತ್ತಾನೆ.

ಮೊದಲ ಘಟ್ಟದ ಈ ರೊಮ್ಯಾಂಟಿಕ್ ತೀವ್ರತೆ ನೆರೂಡನ ವ್ಯಕ್ತಿತ್ವ ಮತ್ತು ಕಾವ್ಯದಿಂದ ಕೊನೆತನಕ ಮಾಯವಾಗಲಿಲ್ಲ. ‘ವಸಂತು ಋತು ಚೆರ್‍ರಿ ಮರಗಳಿಗೆ ಮಾಡುವುದನ್ನು ನಿನ್ನೊಡನೆ ಮಾಡುವಾಸೆ’ ಎಂದು ಮುಂದಿನ ಪದ್ಯವೊಂದರಲ್ಲಿ ಬರೆದ. 

ಕಾಲ ಕಾಲಕ್ಕೆ ಬೇರೆ ಬೇರೆ ಹೆಣ್ಣುಗಳ ಜೊತೆ ಪ್ರೇಮದಲ್ಲಿ ಮುಳುಗಿದ ನೆರೂಡ ನಡುವಯಸ್ಸಿನಲ್ಲಿ ಬರ್ಮಾದಲ್ಲಿದ್ದಾಗ ಪ್ರೀತಿಸಿದ ಹೆಣ್ಣನ್ನು ತನ್ನ ಕವನಗಳಲ್ಲಿ 'ಜೋಸಿ ಬ್ಲಿಸ್' ಎಂದು ಕರೆಯುತ್ತಾ, ಆ ಘಟ್ಟದ ತನ್ನ ಪ್ರೀತಿಯ ರೀತಿಯನ್ನೂ ತೋಡಿಕೊಂಡ. ಆಕೆ ತನ್ನನ್ನೂ ತನ್ನ ಕಾವ್ಯವನ್ನೂ ಮುಗಿಸಿಬಿಡುತ್ತಾಳೆ ಎಂಬ ಭಯದಿಂದ ಅವಳನ್ನು ಬಿಟ್ಟು ಓಡಬೇಕಾಗಿ ಬಂದದ್ದನ್ನು ಕುರಿತು ತನ್ನ ಮೆಮೈರ್‍ಸ್ (ನೆನಪುಗಳು) ಪುಸ್ತಕದಲ್ಲಿ ಹುಡುಗುಹುಡುಗಾಗಿ ಬರೆದುಕೊಂಡ: ‘ನನ್ನ ಕನಸಿನಲ್ಲಿ ಜೋಸಿ ಕತ್ತಿ ಝಳಪಿಸುತ್ತಾ ನನ್ನನ್ನು ಕೊಲ್ಲಲೋ ಬೇಡವೋ ಎಂದು ಸುತ್ತುತ್ತಿದ್ದಳು. ಬೆಳಗ್ಗೆ ಎದ್ದ ಮೇಲೆ ನಾನು ಅವಳಿಗೆ ನಿಷ್ಠನಾಗಿ ಉಳಿಯುವಂತೆ ನಿಗೂಢ ಆಚರಣೆಗಳನ್ನು ಮಾಡುತ್ತಿದ್ದಳು.’ ಅವಳನ್ನು ತೊರೆದ ಗಳಿಗೆಗಳನ್ನು ಪದ್ಯವೊಂದರಲ್ಲಿ ನೆನೆದ ನೆರೂಡ, 'ಈ ಮಧ್ಯಾಹ್ನ ಒಬ್ಬಳೇ ಟೀ ಕುಡಿಯುತ್ತಾ, ಇನ್ನು ಎಂದೆಂದಿಗೂ ಖಾಲಿಯಾಗಿರುವ ಆ ನನ್ನ ಶೂಗಳನ್ನು ನೋಡುತ್ತಿರುವ ನಿನ್ನ ಕಣ್ಣು' ಎಂಬಂಥ ಬೆಚ್ಚಿಸುವ ಚಿತ್ರ ಕೊಟ್ಟ. 

ನೆರೂಡನ ಕಾವ್ಯದಲ್ಲಿ ಪ್ರೀತಿ, ವಿರಹ, ವಿದಾಯದ ಭಾವಗಳನ್ನು ಉಕ್ಕಿಸಿದ ರೊಮ್ಯಾಂಟಿಕ್ ಎಳೆಯೇ ಅವನು ಕ್ರಾಂತಿಯ ಕನಸು ಕಂಡ ಪದ್ಯಗಳಲ್ಲೂ ಇತ್ತು. ತನ್ನ ನಾಡಿನ ಜನರನ್ನು ಪ್ರೀತಿಯಿಂದ ನೋಡುವವನು, ಚರಿತ್ರೆಗೆ ಹಿಂತಿರುಗುವವನು ಈ ಬಗೆಯ ರಮ್ಯ ತೀವ್ರತೆಯಿಲ್ಲದೆ ನೋಡಲಾರ. ಸಾಹಿತ್ಯಕ ವಲಯದಿಂದ ಆಚೆ ಇರುವ ಸಾವಿರಾರು ಜನರ ಕಿವಿಗೆ ಬೀಳುವ ಕಾತುರದಿಂದ ಅವನು ’ಓದು ಕಾವ್ಯ'ವನ್ನು ರೂಪಿಸಿದಾಗಲೂ ಇಂಥದೇ ಭಾವವಿತ್ತು. ಹೊರಗೆ ಓದಲೆಂದೇ ಹುಟ್ಟಿದಂತಿದ್ದ ಪದ್ಯಗಳನ್ನೂ ತನ್ನೊಳಗೇ ಹಾಗೂ ತನ್ನ ಆತ್ಮಚರಿತ್ರೆಯಂತೆಯೇ ಬರೆದುಕೊಂಡಿದ್ದ. 'ನೀವು ನನ್ನ ಕಾವ್ಯವನ್ನು ಕೇಳಿ, ಅದು ನಾನು ಯಾರು ಎಂಬುದನ್ನು ಹೇಳುತ್ತದೆ' ಎಂದ. 'ಕವಿ ಕಸರತ್ತು ಮಾಡುತ್ತಾ ಕೂರಬಾರದು; ಬದುಕನ್ನು ಸೀಳಿ ಒಳಗಿಳಿಯಬೇಕು ಎಂದು ಅವನಿಗೆ ಜನಾದೇಶವಿದೆ' ಎಂದು ಅವನು 'ನಿರುದ್ದೇಶ ಕಾವ್ಯಪ್ರಯೋಗ ಪರಿಣತಮತಿ'ಗಳಾಗಿದ್ದ ಆ ಕಾಲದ ಕವಿಗಳನ್ನು ತಿವಿದ; ಆದರೆ, ತನ್ನ ಕಾವ್ಯವನ್ನು ಅಸಲು ಕಸುಬುದಾರನಂತೆಯೇ ಕಟ್ಟಿದ. ಅವನ ಕಾವ್ಯದ ಸಾಮಾಜಿಕ ದನಿ ಅವನ ಖಾಸಗಿ ದನಿಯೊಳಗೆ ಬೆಸುಗೆಯರಿಯದ ಹಾಗೆ ಬೆರೆತು ಹೋಗಿತ್ತು.

ಹೊರಗಿನ ಪ್ರಕೃತಿಯನ್ನು ಆರಾಧಿಸುತ್ತಾ, ಒಳಗೊಳಗೇ ಸುತ್ತಿದ ಕವಿಗಳ ಹಾಗೆಯೇ ಕ್ರಾಂತಿಯನ್ನು ಪ್ರೀತಿಸುತ್ತಾ ತಮ್ಮೊಳಗೇ ಕಳೆದು ಹೋದ ಕವಿಗಳೂ ಇದ್ದಾರೆ. ಪ್ರೀತಿ, ಪ್ರಕೃತಿ, ಕ್ರಾಂತಿಗಳನ್ನು ಕುರಿತು ಬರೆದ ನೆರೂಡನಿಗೆ ಹಾಗಾಗದೇ ಹೋದದ್ದು ಅವನು ಮಾರ್ಕ್ಸ್‌ವಾದಿ ಸಿದ್ಧಾಂತವನ್ನು ಗ್ರಹಿಸಿದ ಒಂದು ವಿಶಿಷ್ಟ ಕ್ರಮದಿಂದಾಗಿ. ಚಿಲಿಯ ಕಮ್ಯುನಿಸ್ಟ್ ಪಕ್ಷದ ಸದಸ್ಯ, ರಾಯಭಾರಿ, ಸೆನೆಟರ್ ಆಗಿದ್ದ ನೆರೂಡ, ಮಾರ್ಕ್ಸ್‌ವಾದವನ್ನು ಚರಿತ್ರೆಯ ಸಂಘರ್ಷಗಳನ್ನು ಅರಿಯುವ ಚೌಕಟ್ಟನ್ನಾಗಿ ಮಾತ್ರ ಬಳಸಲಿಲ್ಲ; ತನ್ನ ಕಾಲದ ಕಾವ್ಯಪ್ರಪಂಚದ ಸೀಮಿತ 'ಅ-ಸಾಮಾಜಿಕ ಜಗತ್ತನ್ನು ವಿಸ್ತರಿಸುವ ಕಣ್ಣಾಗಿ ಮಾರ್ಕ್ಸ್‌ವಾದಿ ಸಿದ್ದಾಂತವನ್ನು ಬಳಸಿದ.

ಮಾರ್ಕ್ಸ್ ಯಾವ ಸಾಮಾನ್ಯ ಜನರ ಬಗೆಗಿನ ಆಳದ ಕಾಳಜಿಯಿಂದ ತನ್ನ ಸಿದ್ಧಾಂತವನ್ನು ರೂಪಿಸಿದನೋ ಅಂಥ ಜನರ ಅಸಲಿ ಜಗತ್ತನ್ನು ನೆರೂಡ ತನ್ನ ಕಾವ್ಯಕ್ಕೆ ತಂದ. ಆದ್ದರಿಂದಲೇ ‘ನನ್ನ ಪಾರ್ಟಿಗೆ' ಎಂಬ ಪದ್ಯದಲ್ಲಿ ನಾನು ನನ್ನೊಳಗೆ ಮುಗಿದು ಹೋಗದೆ ಎಂದೆಂದಿಗೂ ಉಳಿಯುವಂತೆ ಮಾಡಿದ್ದಕ್ಕಾಗಿ ಕಮ್ಯುನಿಸ್ಟ್ ಪಾರ್ಟಿಗೆ ಅವನು ಕೃತಜ್ಞತೆ ಹೇಳುತ್ತಾನೆ. ಅನ್ಯರನ್ನು ಅರಿಯುವ, ತನ್ನನ್ನು ಮೀರಿ ಅನುಭವವನ್ನು ನೋಡುವ ಕಲೆಯನ್ನು ಕಮ್ಯುನಿಸ್ಟ್ ಪಾರ್ಟಿ ಅವನ ಕಾವ್ಯಕ್ಕೆ ಕಲಿಸಿತು. ತನ್ನ ದೇಶದ ಸರ್ಕಾರದಿಂದಲೇ ಬಂಧನಕ್ಕೊಳಗಾಗುವ ಅಪಾಯ ಬಂದಾಗ ಅವನನ್ನು ಕಾಪಾಡಿದ ಮನೆಗಳು, ಕಾರ್ಮಿಕರು, ಹಳ್ಳಿಗರು ಕೂಡ ಅವನ ಕಾವ್ಯದಲ್ಲಿರುವ ಸಮೂಹಪ್ರಜ್ಞೆಯನ್ನು ವಿಸ್ತರಿಸಿದಂತಿದೆ.

ನೆರೂಡನ ಕಾವ್ಯಕ್ಕೆ ವಿಶ್ವಕೋಶದ ವಿಸ್ತಾರ ಕೊಟ್ಟ 'ಕ್ಯಾಂಟೋ ಜನರಲ್' ಮಹಾಕಾವ್ಯದ ಭಾಗಗಳು ನೆರೂಡ ಮಾರ್ಕ್ಸ್‌ವಾದದ ಒಳ ಸತ್ವಗಳಿಂದ ಸ್ಫೂರ್ತಿ ಪಡೆದ ರೀತಿಯನ್ನು ಹೇಳುತ್ತದೆ. ನೆರೂಡ ಮಾರ್ಕ್ಸ್‌ನನ್ನು ಸಿದ್ಧಾಂತದಿಂದ ಕಾವ್ಯಕ್ಕೆ ಒಯ್ದ ದೊಡ್ಡ ಕವಿ ಎಂದು ವಿಮರ್ಶಕರು ಹೇಳುತ್ತಾರೆ. 'ನಾನು ಚರಿತ್ರೆಯನ್ನು ಕತೆ ಮಾಡಿ ಹೇಳಲು ಇಲ್ಲಿದ್ದೇನೆ' ಎಂಬ ಆತ್ಮವಿಶ್ವಾಸದಿಂದ ಶುರುವಾಗುವ 'ಕ್ಯಾಂಟೋ ಜನರಲ್' ಮಾನವನ ಆರಂಭದ ಘಟ್ಟದಿಂದ ಕಣ್ಣೆದುರಿನ ಭವಿಷ್ಯದವರೆಗೂ ಚಾಚುತ್ತದೆ.

ಚರಿತ್ರೆ-ವರ್ತಮಾನಗಳ ನಡುವೆ ಚಲಿಸುತ್ತಾ, ಚರಿತ್ರೆಯನ್ನು ಬರೆಯುವ ಸಿದ್ಧ ಮಾದರಿಗಳಿಗಿಂತ ಭಿನ್ನವಾಗಿ ಅಂಚಿನ ಜನರ ನೋಟದ ಮೂಲಕ ಚರಿತ್ರೆ ಬರೆಯುವ ಬಗೆಯನ್ನು ನೆರೂಡ ರೂಢಿಸಿಕೊಂಡ. ಕಳೆದು ಹೋದ ಕಾಲಕ್ಕೆ ವಾಪಸಾಗುತ್ತಲೇ, 'ಹಿಂದುಹಿಂದಕ್ಕೆ ನಡೆಯುವುದು ಅಪಾಯಕರ. ಏಕೆಂದರೆ ಹಠಾತ್ತನೆ ಭೂತಕಾಲ ಸೆರೆಮನೆಯಾಗಿಬಿಡುವುದು' ಎಂಬ ಎಚ್ಚರದ ಮಾತನ್ನು ತನಗೆ ತಾನೇ ಹೇಳಿಕೊಂಡ. ಆದರೆ, ಅದೇ ವೇಳೆಗೆ ಸಮಕಾಲೀನ ಬದುಕನ್ನೇ ಮಂಡಿಸಬೇಕೆಂಬ ತವಕದಲ್ಲಿ ಮನುಷ್ಯರನ್ನು ವರ್ಗಗಳಾಗಿ, ಟೈಪ್‌ಗಳಾಗಿ ಕಾಣಿಸುತ್ತಿದ್ದ ಸರಳ ಎಡಪಂಥೀಯ ಕಾವ್ಯದ ಎದುರು, ಚರಿತ್ರೆಯನ್ನು ರೂಪಿಸುವ ಜನರನ್ನು, ಅವರ ದನಿಗಳನ್ನು, ತಾಣಗಳನ್ನು ಕಾವ್ಯಕ್ಕೆ ತಂದ, ದರ್ಜಿಯ ಅಂಗಡಿಗಳು, ಕ್ಷೌರದ ಸಲೂನುಗಳ ವಾಸನೆಯನ್ನು, ಸುಕುಮಾರ ಕಾವ್ಯಲೋಕ ಹೊರಗಿಟ್ಟ 'ಅಶುದ್ಧ ವಾಸನೆ’ಗಳನ್ನು ಪದ್ಯದ ಪದಗಳಿಗೆ ತಂದ.

ರೆಡಿಮೇಡ್ ಪ್ರತಿಮೆಗಳನ್ನು ಬಿಟ್ಟು, ದೈನಂದಿನ ತಾಜಾ ಚಿತ್ರಗಳನ್ನು ಕಾವ್ಯ ಪ್ರತಿಮೆಗಳನ್ನಾಗಿಸುವುದು ಹೇಗೆಂದು ನೆರೂಡ ನೋಡುತ್ತಿದ್ದ. ಅವನ ಕಾವ್ಯದಲ್ಲಿ ತಂತಿಯ ಮೇಲೆ ಒಣಗಲು ಹಾಕಿದ ಬಟ್ಟೆಗಳು ತಲೆ ಕೆಳಗಾಗಿ ತೂಗುಬಿದ್ದ ನೊಂದ ದೇಹಗಳಂತೆ, ಆ ಬಟ್ಟೆಗಳಿಂದ ತೊಟ್ಟಿಕ್ಕುವ ನೀರು ಕಣ್ಣೀರಿನಂತೆ ಓದುಗರಿಗೆ ಕಂಡದ್ದು ಆಶ್ಚರ್ಯವಲ್ಲ. ತನ್ನ ಮೇಲೆ ಬಿದ್ದ ಮಳೆ ಈ ಸತ್ತ ಜಗತ್ತಿನಲ್ಲಿ ತನ್ನಂತೆಯೇ ಒಂಟಿಯಾಗಿದೆ ಎಂದು ಕವಿಗೆ ಅನ್ನಿಸುತ್ತದೆ! ನೆರೂಡ ಕಾಲಚಕ್ರವನ್ನು ವರ್ಣಿಸುವಾಗ ಅಮೂರ್ತವಾದ ಋತುಗಳ ಪ್ರತಿಮೆಗಳನ್ನು ಬಳಸದೆ, 'ಸೋಮವಾರದ ಬೆಳಗು ಎಣ್ಣೆಯ ಹಾಗೆ ಹತ್ತಿ ಉರಿಯುತ್ತಿದೆ' ಎಂಬ ಪರಿಚಿತ ಚಿತ್ರವನ್ನೇ ಹೊಸ ಕಾಲಘಟ್ಟದ ಪ್ರತಿಮೆಯನ್ನಾಗಿಸಿದ. 'ಚಕ್ರಗತಿಯ ಕವಿ'ಯಾದ ನೆರೂಡ ತನ್ನ ಕಾವ್ಯದಲ್ಲಿ ಆ ಚಕ್ರದ ಚಲನೆ ಕ್ಷಣವನ್ನು ಮೀರಿ ವಿಶಾಲ ಅನಂತದೆಡೆಗೆ ಚಲಿಸಬೇಕು' ಎಂದು ಆಶಿಸಿದ; ಅವನ ಆಸೆಯನ್ನು ಅವನ ಕಾವ್ಯಜಗತ್ತು ಹಲವು ಘಟ್ಟಗಳಲ್ಲಿ ಈಡೇರಿಸಿದ್ದರಿಂದಲೇ ಅವನು ಎಲ್ಲ ಕಾಲಕ್ಕೂ ಸಲ್ಲುವ ಕವಿಯಾದ.

ರಾಯಭಾರಿಯಾಗಿ ದೇಶ ವಿದೇಶಗಳನ್ನು ಸುತ್ತುತ್ತಿದ್ದ ನೆರೂಡನಿಗೆ ಕವಿಯೊಬ್ಬ ತನ್ನ ಭಾಷೆಯ ಆಡುಮಾತಿನ ವಾತಾವರಣದಿಂದ ದೂರವಾಗುವುದು ಆತ್ಮಹತ್ಯೆಯ ಹಾದಿ ಎಂಬುದು ಅರಿವಿಗೆ ಬರತೊಡಗಿತು. ಒಮ್ಮೆ ತನ್ನ ಸ್ಪ್ಯಾನಿಷ್ ಭಾಷೆ ಕಿವಿಗೇ ಬೀಳದ ಬರ್ಮಾದಲ್ಲಿದ್ದ ನೆರೂಡ, 'ತಕ್ಷಣ ಒಂದು ಸ್ಪ್ಯಾನಿಷ್ ನಿಘಂಟು ಕಳಿಸಿಕೊಡು, ಇಲ್ಲದಿದ್ದರೆ ನನ್ನ ಭಾಷೆಯೇ ಮರೆತುಹೋಗಿಬಿಡಬಹುದು' ಎಂದು ಕವಿಮಿತ್ರನೊಬ್ಬನಿಗೆ ಪತ್ರ ಬರೆದ. ಕವಿಯೊಬ್ಬ ಜಗತ್ತಿನ ಯಾವುದೇ ದಿಕ್ಕಿನಿಂದ ಏನನ್ನು ಪಡೆದರೂ ಕೊನೆಗೆ ಅದನ್ನೆಲ್ಲ ತನ್ನ ಮಣ್ಣಿನ ಮಾತುಗಳ ಲಯಗಳಲ್ಲಿ ಮಾತ್ರ ಕಾವ್ಯವಾಗಿಸಬಲ್ಲ! 'ನಾನು ನನ್ನ ನಾಡಿನಲ್ಲಿ ಮಾತ್ರ ಜೀವಿಸಬಲ್ಲೆ. ನನ್ನ ಕಾಲು, ಕೈಗಳನ್ನು ಈ ನೆಲದ ಮೇಲಿಡದೆ, ಈ ನೆಲಕ್ಕೆ ಕಿವಿಗೊಡದೆ, ಈ ನೀರಿನ ಚಲನೆ ಹಾಗೂ ನೆರಳುಗಳಿಲ್ಲದೆ ನಾನು ಬದುಕಲಾರೆ' ಎಂದು ನೆರೂಡ ತನ್ನೂರಿಗೆ ಮರಳುವಾಗ ಬರೆದ. 

ಇಂಥ ಒಂದು ಮರುಪ್ರಯಾಣದಲ್ಲಿ ಗತಕಾಲದ ಸಂಕೇತವಾದ ಮಾಚ್ಚುಪಿಚ್ಚು ಶಿಖರಗಳ ಅವಶೇಷಗಳ ನಡುವೆ ತನ್ನ ಕಾವ್ಯ ಹೊಸ ನಂಬಿಕೆಯನ್ನು ಕಂಡುಕೊಂಡದ್ದನ್ನು ನೆರೂಡ ನೆನೆಸಿಕೊಳ್ಳುತ್ತಾನೆ: 
'ಒಂದಾನೊಂದು ಕಾಲದಲ್ಲಿ ಈ ನೆಲವನ್ನು ನಾನೇ ಕೈಯಾರೆ ಅಗೆದ ಹಾಗೆ, ಈ ಬಂಡೆಗಳನ್ನು ಕೆತ್ತಿ ನುಣುಪಾಗಿಸಿದ ಹಾಗೆ ಅನ್ನಿಸತೊಡಗಿತು. ನಾನು ಚಿಲಿಯವನು, ನಾನು ಪೆರುವಿನವನು ಎಂಬ ಭಾವ ಮುತ್ತತೊಡಗಿತು. ಆ ಕಠಿಣ ಶಿಖರಗಳಲ್ಲಿ, ಚೆಲ್ಲಾಪಿಲ್ಲಿಯಾದ ಆ ಭವ್ಯ ಅವಶೇಷಗಳ ನಡುವೆ ನಿಂತಾಗ ನನ್ನ ಕಾವ್ಯವನ್ನು ಮುಂದುವರಿಸಲು ಬೇಕಾದ ನಂಬಿಕೆಯ ತತ್ವಗಳು ನನಗೆ ಸಿಕ್ಕವು.'

ಈ ಹಿನ್ನೆಲೆಯಲ್ಲಿ ಹುಟ್ಟಿದ ನೆರೂಡನ ‘ಮಾಚ್ಚುಪಿಚ್ಚು ಶಿಖರಗಳು' ಖಂಡಕಾವ್ಯದಲ್ಲಿ ಅಲ್ಲಿನ ಕಲ್ಲುಗಳು ತಮ್ಮನ್ನು ಕುಟ್ಟಿ ಕಟ್ಟಿದವರನ್ನು ಕುರಿತು ಮಾತನಾಡುತ್ತವೆ. ಕವಿ ತಾನೇ ಒಂದು ಪಾತ್ರವಾಗಿ ಇದಕ್ಕೆಲ್ಲಾ ಸಾಕ್ಷಿಯಾಗಿ ನಿಂತು ನೋಡಿದವನಂತೆ, ಚರಿತ್ರೆಯ ಸತ್ಯವನ್ನು ಎಲ್ಲರಿಗೂ ತಲುಪಿಸುವವನಂತೆ ಕಾವ್ಯದಲ್ಲಿ ನಾಟಕೀಯವಾಗಿ ಪ್ರವೇಶಿಸುತ್ತಾನೆ. ಹೀಗೆ ಏರಿದ ಎತ್ತರ, ಪತನ, ಕಟ್ಟುವ ಕನಸು ಎಲ್ಲವನ್ನೂ ನೋಡಲೆತ್ನಿಸಿದ ನೆರೂಡ ಕೊನೆಗಾಲದಲ್ಲಿ ಪ್ರೋಸ್ಟೇಟ್ ಕ್ಯಾನ್ಸರಿನಿಂದ ಬಳಲುತ್ತಿದ್ದಾಗ ತನ್ನ ದೇಶದ ಸರ್ವಾಧಿಕಾರಿ ಆಡಳಿತದ ಸೈನಿಕರು ತನ್ನ ಮನೆಯ ಮೇಲೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ತೀರಿಕೊಂಡ. ಕೇವಲ ಎರಡು ವರ್ಷದ ಹಿಂದಷ್ಟೇ ನೊಬೆಲ್ ಪ್ರಶಸ್ತಿ ಪಡೆದು ಜಗತ್ತಿನ ಕಾವ್ಯಚರಿತ್ರೆಯ ಶ್ರೇಷ್ಠ ಕವಿಗಳಲ್ಲಿ ಒಬ್ಬನೆಂದು ಮಾನ್ಯನಾಗಿದ್ದ ಕವಿ, ಚರಿತ್ರೆಯ ಸಂಚಿಗೆ ಬಲಿಯಾಗಿದ್ದ. ಸರ್ವಾಧಿಕಾರಿ ಪಿನೋಚೆಟ್ ಕಡೆಯವರು ಆಸ್ಪತ್ರೆಯಲ್ಲಿ ವಿಷ ಉಣಿಸಿರುವ ಸಾಧ್ಯತೆಯಿದೆಯೆಂದು ನಂತರದ ತನಿಖೆಯೊಂದು ಆಧಾರಗಳನ್ನು ಕೊಡಲೆತ್ನಿಸಿತು.

ಹರೆಯದಲ್ಲಿ ಶುರು ಮಾಡಿ, ಕೊನೆತನಕ ಕವಿತೆ ಬರೆಯುತ್ತಲೇ ಇದ್ದ ನೆರೂಡ ೧೯೭೩ರ ಸೆಪ್ಟೆಂಬರ್‍  ೨೩ರಂದು ತೀರಿಕೊಳ್ಳುವ ಮುನ್ನ, ತನ್ನ ಪತ್ನಿ ಮೆಟಿಲ್ಡೆಗೆ ಹಾಸಿಗೆಯ ಮೇಲೊರಗಿ ಪದ್ಯ ಬರೆದ. ಮೆಟಿಲ್ಡೆಗಾಗಿಯೇ ನೆರೂಡ ಸ್ಯಾಂಟಿಯಾಗೋದಲ್ಲಿ ಮನೆ ಕಟ್ಟಿದ್ದ. ಆ ಮನೆಯಲ್ಲಿ ನೆರೂಡನ ಕಲಾವಿದ ಗೆಳೆಯ ಡಿಯೆಗೋ ರಿವೆರಾ ಚಿತ್ರಿಸಿದ ಎರಡು ಮುಖದ ಮೆಟಿಲ್ಡೆಯ ಭಾವಚಿತ್ರವಿತ್ತು.  ಅವನ ಕೊನೆಯ ಪದ್ಯ ’ಫಿನಾಲೆ’ (ಕೊನೆಯಾಟ) ‘ಮೆಟಿಲ್ಡೆ’ ಎಂದು ಶುರುವಾಗುತ್ತದೆ. ನೆರೂಡನ ಕೊನೆಯ ಪದ್ಯದ ಕೊನೆಯ ಸಾಲುಗಳು:

ನೀ ಜೀವ ತುಂಬಿ ಇರುವಾಗ
ಬದುಕುವುದು ಎಷ್ಟೊಂದು ಚಂದವಿತ್ತು! 
ನಿನ್ನ ಪುಟ್ಟ ತೋಳುಗಳಲ್ಲಿ 
ಇಡಿಯಾಗಿ ಮೈ ಚಾಚಿ ಗಾಢವಾಗಿ ಮಲಗಿರುವಾಗ
ಈ ಲೋಕ ಕಡು ನೀಲಿಯಾಗಿದೆ,
ಈ ರಾತ್ರಿ ಅದು ಈ ಭುವಿಯ ವಶವಾಗಿದೆ.

ಹುಟ್ಟುಕವಿ ನೆರೂಡನ ಹುಟ್ಟುಹಬ್ಬದ ದಿನ ನೆರೂಡನನ್ನು ಕನ್ನಡದವನನ್ನಾಗಿಸಿದ ಕವಿ ಕವಯಿತ್ರಿಯರು, ಓದುಗ ಓದುಗಿಯರು  ಈ ಪ್ರೀತಿ ಮತ್ತು ಕ್ರಾಂತಿಯ ಕವಿಯೆಡೆಗೆ ಮತ್ತೆ ತಿರುಗಲಿ ಎಂಬ ಆಶಯದಿಂದ ಈ ಮರು ಟಿಪ್ಪಣಿ.
 

Share on:

Comments

1 Comments



| Somashankara N

ಹುಟ್ಟುಹಬ್ಬವೆಂದರೆ ಶುಭಾಶಯಗಳ ಸಂಭ್ರಮ ಮಾತ್ರವೆಂದುಕೊಂಡಿದ್ದ ನಮಗೆ, ಪ್ರಿಯ ಕವಿಯ ಹುಟ್ಟಿದ ದಿನ ಅವನ ಕಾವ್ಯವನ್ನು ಮತ್ತೆ ಓದುವ, ಅವನ ಚಿಂತನೆಯೊಂದಿಗೆ ಮತ್ತೆ ಸಂವಾದಿಸುವ ದಿನವೂ ಹೌದು ಎಂಬ ಹೊಸ ಆಯಾಮವನ್ನು ಕೊಟ್ಟಿದ್ದೀರಿ. ನೆರೂಡನ Love ಕವಿತೆಯ — “I have forgotten your love, yet I seem to glimpse you in every window” — ಎಂಬ ಸಾಲಿನಂತೆ, ಕಾಲದ ಕಿಟಕಿಗಳಲ್ಲಿ ನೆರೂಡ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾನೆ. ‘ಮತ್ತೆ ನೆರೂಡನ ಜೊತೆ’ ಅಂಕಣದ ಮೂಲಕ ಪ್ರೀತಿ, ಕಾವ್ಯ, ಕ್ರಾಂತಿ ಮತ್ತು ಚರಿತ್ರೆಯ ನಡುವೆ ನಮ್ಮನ್ನು ಮತ್ತೊಮ್ಮೆ ನಡೆಸಿದ ಮೇಷ್ಟ್ರಿಗೆ ಹೃದಯತುಂಬಿದ ಅಭಿನಂದನೆಗಳು ಮತ್ತು ಪ್ರೀತಿಪೂರ್ವಕ ಶುಭಾಶಯಗಳು. ಹುಟ್ಟುಹಬ್ಬದ ನೆವದಲ್ಲಿ ಕವಿಯನ್ನು ನೆನೆಯುವುದಷ್ಟೇ ಅಲ್ಲ, ಅವನನ್ನು ಮತ್ತೆ ಓದುವಂತೆ ಮಾಡಿದ ಈ ಅಕ್ಷರಪ್ರೀತಿಗೆ ನಮನಗಳು. ನಿಮ್ಮ ಅಕ್ಷರಯಾನ ಹೀಗೆ ನಿರಂತರವಾಗಿ ನಮ್ಮ ಓದಿನ ದಿಗಂತವನ್ನು ವಿಸ್ತರಿಸುತ್ತಿರಲಿ...




Add Comment


Mundana Kathana Nataka

YouTube






Recent Posts

Latest Blogs