ಏಐ: ಮಾಯಾವಿ, ಬಂಟ, ಬುಲ್ಡೋಝರ್

ಈಗ ಕರ್ನಾಟಕದ ಮುಖ್ಯಮಂತ್ರಿಗಳೂ ಸೇರಿದಂತೆ, ಎಲ್ಲಿ ನೋಡಿದರೂ ಮೇಲ್ವರ್ಗ, ಮಧ್ಯಮ ವರ್ಗಗಳ ಜನ ‘ಏಐ’ ‘ಏಐ’ ಎಂಬ ಜಪ ಶುರು ಮಾಡಿದ್ದಾರೆ! 

ಈ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ಗೆ ಈ ಅಂಕಣದಲ್ಲಿ ಕೊಟ್ಟ ‘ಕೃತಕ ಜಾಣತನ’ ಅಥವಾ ‘ಕೃಜಾ’ ಎಂಬ ಕನ್ನಡ ಪದಗಳು ನಿಮಗೆ ನೆನಪಿರಬಹುದು. 

ಮೊನ್ನೆ ಲಂಡನ್ನಿನಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿಯವರನ್ನು ‘ಸೃಜನಶೀಲ ಕ್ರಿಯೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಏನು ಪಾತ್ರ ನಿರ್ವಹಿಸುತ್ತದೆ?’ ಎಂದು ಯಾರೋ ಕೇಳಿದರು. 
‘ಝೀರೋ’ ಎನ್ನುತ್ತಾ ರಶ್ದಿ ವಿವರಿಸಿದರು: 

‘ಕತೆ, ಕಾದಂಬರಿ, ಕವಿತೆ ಬರೆಯುವವರಿಗೆ ಕೃಜಾದಿಂದ ಏನೂ ಪ್ರಯೋಜನವಿಲ್ಲ. ಯಾಕೆಂದರೆ ಕೃಜಾಕ್ಕೆ ಒರಿಜಿನಾಲಿಟಿ ಇಲ್ಲ. ಅದೇನಿದ್ದರೂ ಭಾರೀ ಪ್ರಮಾಣದ ಮಾಹಿತಿ ಹೆಕ್ಕಿ, ಹೀರಿಕೊಂಡು ಅದರ ಬೇರೆ ಬೇರೆ ರೂಪಗಳನ್ನು ಕೊಡುತ್ತದೆ. ಆದರೆ ಈ ಹಿಂದೆ ಯಾರೂ ಮಾಡಿರದಿದ್ದನ್ನು ಅದು ಮಾಡಲಾರದು. ಕಲೆಯ ಕೆಲಸ ಏನೆಂದರೆ, ಜನ ಈವರೆಗೆ ಏನನ್ನು ಮಾಡಿಲ್ಲವೋ ಅದನ್ನು ಮಾಡುವುದು. ಆದ್ದರಿಂದ ನನಗೆ ಕೃಜಾದಲ್ಲಿ ಝೀರೋಕ್ಕಿಂತ ಕಡಿಮೆ ಆಸಕ್ತಿ.’ 

ರಶ್ದಿ ಹೇಳುವುದರಲ್ಲಿ ಅರ್ಥವಿದೆ. ರಶ್ದಿಯ ‘ವಿಕ್ಟರಿ ಸಿಟಿ’ (ವಿಜಯನಗರ) ಥರದ ಕಾದಂಬರಿಯನ್ನೋ, ಮಾರ್ಕ್ವೆಝ್‌ನ ‘ಒನ್ ಹಂಡ್ರಡ್ ಯಿರ‍್ಸ್ ಆಫ್ ಸಾಲಿಟ್ಯೂಡ್’ ಥರದ ಕಾದಂಬರಿಯನ್ನೋ, ಬ್ರೆಕ್ಟ್‌ನ ‘ಕಕೇಶಿಯನ್ ಚಾಕ್ ಸರ್ಕಲ್’ ಥರದ ವಿಶಿಷ್ಟ ನ್ಯಾಯದ ನಾಟಕವನ್ನೋ, ಅಥವಾ ಕನ್ನಡದ ‘ಕರ್ವಾಲೊ’ ಥರದ ‘ಒರಿಜಿನಲ್’ ಐಡಿಯಾದ ಕಾದಂಬರಿಯನ್ನೋ ಕೃಜಾ ಸಷ್ಟಿಸಲಾರದು.  

ಆದರೆ ವಿವಿಧ ಅತ್ಯಾಧುನಿಕ ವಲಯಗಳಲ್ಲಿ ಕೆಲಸದಲ್ಲಿ ತೊಡಗಿರುವವರಲ್ಲಿ ಕೃಜಾ  ಅವರ ಅಸ್ತಿತ್ವದ ಬಗ್ಗೆಯೇ ಭಯ ಸೃಷ್ಟಿಸಿರುವುದು ನಿಜ: ಗೆಳೆಯರೊಬ್ಬರ ಸಂಸ್ಥೆಯಲ್ಲಿ ಇಪ್ಪತ್ತೈದು ಜನರನ್ನು ಕೆಲಸದಿಂದ ತೆಗೆದರು. ಕಾರಣ, ಈ ಇಪ್ಪತ್ತೈದು ಜನ ಮಾಡುತ್ತಿದ್ದ ಯಾವುದೋ ಬಗೆಯ ಅನಾಲಿಸಿಸ್‌ನ ಕೆಲಸವನ್ನು ಒಂದು ಎಐ ಟೂಲ್ ಮಾಡುತ್ತದೆ. 

ಆ ಗೆಳೆಯರನ್ನು ಒಂದು ಸರಳ ಪ್ರಶ್ನೆ ಕೇಳಿದೆ: ‘ಈ ಇಪ್ಪತ್ತೈದು ಜನರ ಸಂಬಳ ತಿಂಗಳಿಗೆ ತಲಾ ಒಂದು ಲಕ್ಷ ಎಂದಿಟ್ಟುಕೊಳ್ಳಿ. ಅಂದರೆ ಇಪ್ಪತ್ತೈದು ಲಕ್ಷ. ಈಗ ನಿಮ್ಮ ಸಂಸ್ಥೆ ಏಐಗೆ ಕೊಟ್ಟಿರುವ ಫೀಸು ಒಂದೆರಡು ಕೋಟಿ ಇರಬಹುದು. ಮೊದಲು ಆ ಕೆಲಸ ಮಾಡುತ್ತಿದ್ದ ಜನರೆಲ್ಲ ಹೋದ ಮೇಲೆ ಆ ಏಐ ಸಂಸ್ಥೆ ಒಂದು ವರ್ಷದಲ್ಲಿ ತನ್ನ ಕೆಲಸದ ತಿಂಗಳ ಶುಲ್ಕವನ್ನೋ, ಅಥವಾ ಹೊಸ ಸಾಧನಗಳಿಗೆ ತಕ್ಕ ಫೀಸನ್ನೋ ಏರಿಸಿ ಅದನ್ನು ತಿಂಗಳಿಗೆ ಇಪ್ಪತ್ತೈದು ಲಕ್ಷಕ್ಕೇ ತರಬಹುದು. ಇದರಿಂದ ಆ ಇಪ್ಪತ್ತೈದು ಜನರ ಜೀವನ ಸಾಧನವನ್ನು ಕಿತ್ತುಕೊಂಡು ಒಬ್ಬ ಬಂಡವಾಳಶಾಹಿಗೆ ಕೊಟ್ಟಂತಾಗಲಿಲ್ಲವೆ?’

ಅದಕ್ಕೆ ಗೆಳೆಯರ ಉತ್ತರ: ‘ಕಾಲಾನಂತರ ಎಐ ವೆಚ್ಚ ಅಲ್ಲಿಗೇ ಬಂದು ನಿಲ್ಲಲೂಬಹುದು. ಆದರೆ ಇಡೀ ಸಮಸ್ಯೆಯ ಒಂದು ಮೂಲ ಏನಾದರೂ ಮಾಡಿ ಮನುಷ್ಯರನ್ನು ಓಡಿಸಬೇಕು ಎಂಬ ಬಂಡವಾಳಶಾಹಿ ದಾಹದಲ್ಲಿದೆ. ಈ ಟೆಕ್ನೋ-ಡಿಜಿಟಲ್ ಬಂಡವಾಳಶಾಹಿ ವ್ಯವಸ್ಥೆಗೆ ಮನುಷ್ಯರನ್ನು ಕಂಡರಾಗುವುದಿಲ್ಲ. ಏನಾದರೂ ಮಾಡಿ ಮನುಷ್ಯರನ್ನು ಓಡಿಸುವುದೇ ಅದರ ಹಟ.’ 

‘ಇದೇ ಕಂಪನಿಯಲ್ಲಿ ಎಐ ಮಾಡತೊಡಗಿರುವ ಅನಾಲಿಸಿಸ್ ಅಕಸ್ಮಾತ್ ಕರಾರುವಾಕ್ಕಾಗದೆ,  ತಾನು ತೆಗೆದು ಹಾಕಿದ ಜನರನ್ನೇ ವಾಪಸ್ ಕರೆಯುವ ಕಾಲವೂ ಬರಬಹುದು. ಆಗ ಮ್ಯಾನೇಜ್‌ಮೆಂಟಿನ ಅಹಮ್ಮಿಗೆ ಪೆಟ್ಟು ಬೀಳುವುದರಿಂದ ಅವರನ್ನು ವಾಪಸ್ ಕರೆಯದೆ ಬೇರೆಯವರನ್ನು ಕರೆಯಬಹುದು’ ಎಂದೆ. 

ಇದು ಕೃಜಾ ಪರ ನಿಂತಿರುವ ಮನುಷ್ಯರ ಸಹಜ ಅಹಮ್ಮಿನ ಸಂಕೀರ್ಣ ಆಟ! ಅವರು ಯಂತ್ರಕ್ಕೆ ಗುಲಾಮರಾದಾರೇ ಹೊರತು, ಮನುಷ್ಯರೆದುರು ಒಂಚೂರು ಬಾಗಲಾರರು! 

ಈ ಮಾತುಕತೆಯಾದ ಒಂದೇ ತಿಂಗಳಲ್ಲಿ ‘ಬಿಬಿಸಿ.ಕಾಂ’ನಲ್ಲಿ ಒಂದು ಸುದ್ದಿ ಕಂಡು  ಚಕಿತಗೊಂಡೆ: 

‘ಕ್ವಾಲಿಟ್ ಚೆಕ್ ಮಾಡಲು ಎಐ ವಿಫಲ; ಮತ್ತೆ ಮಾನವ ಇಂಜಿನಿಯರುಗಳನ್ನು ಕೆಲಸಕ್ಕೆ ಕರೆದ ಫೋರ್ಡ್.’

ಅರೆರೆ! ತಿಂಗಳ ಕೆಳಗೆ ನಾನು ಕೇಳಿದ ಕಾಮನ್‌ಸೆನ್ಸ್ ಪ್ರಶ್ನೆಗೆ ಇಲ್ಲೇ ಉತ್ತರವಿದೆ ಅನ್ನಿಸಿತು! ಕೃಜಾ ಜಾಗಕ್ಕೆ ಮತ್ತೆ ಸಜಾಗಳು -ಸಹಜ ಜಾಣರು- ಬಂದ ಈ ನಿಜ ಪ್ರಸಂಗ ಹೀಗಿದೆ: 

ತನ್ನ ಉತ್ಪಾದನೆಯ ವೆಚ್ಚ ಕಡಿಮೆ ಮಾಡಿಕೊಳ್ಳಲು ಕಾರ್ ತಯಾರಿಸುವ ಅಮೆರಿಕದ ಪ್ರಖ್ಯಾತ ಫೋರ್ಡ್ ಕಂಪನಿ ಹಲವು ಇಂಜಿನಿಯರುಗಳನ್ನು ಮನೆಗೆ ಕಳಿಸಿತು. ಅದರಲ್ಲಿ ಕ್ವಾಲಿಟಿ ಚೆಕ್ ಇಂಜಿನಿಯರುಗಳೂ ಇದ್ದರು. ಆದರೆ ಈ ಕ್ವಾಲಿಟಿ ಚೆಕ್ ಕೆಲಸವನ್ನು ಎಐ ದಕ್ಷವಾಗಿ ನಿಭಾಯಿಸಲಾಗಲಿಲ್ಲ. ಹೀಗಾಗಿ ಫೋರ್ಡ್ ಸಂಸ್ಥೆ ಮುನ್ನೂರು ಅನುಭವಸ್ಥ ಇಂಜಿನಿಯರುಗಳನ್ನು ಮತ್ತೆ ಕರೆಸಿಕೊಳ್ಳಬೇಕಾಯಿತು.

ಈ ಸುದ್ದಿ ಬಂದ ಮೇಲೆ ಪಶ್ಚಿಮದ ವಾಹನಗಳ ಹಾರ್ಡ್ ವೇರ್ ಇಂಜಿನಿಯರಿಂಗ್ ಉಪಾಧ್ಯಕ್ಷ ಹೇಳಿದ: ‘ಎಐ ಒಂದು ಫ್ಯಾಂಟಾಸ್ಟಿಕ್ ಸಾಧನ, ನಿಜ. ಆದರೆ ನೀವು ತರಬೇತಿ ಕೊಡುವಾಗ ಎಷ್ಟು ಮಾಹಿತಿ ಕೊಡುತ್ತೀರೋ ಅಷ್ಟರ ಮಟ್ಟಕ್ಕೆ ಅದರ ಜಾಣತನ ತಲುಪುತ್ತದೆ. ಏಐ ನಂಬಿಕೊಂಡು, ಎಷ್ಟೋ ವರ್ಷಗಳಿಂದ ಉತ್ಪಾದನೆಯಲ್ಲಿ ಭಾಗಿಯಾಗಿರುವ ನಮ್ಮ ಅತ್ಯಂತ ಜ್ಞಾನಿಗಳಾದ ಇಂಜಿನಿಯರುಗಳ ಅನುಭವಕ್ಕೆ ಕೊಡಬೇಕಾದಷ್ಟು ಬೆಲೆ ಕೊಡದೇ ಹೋದೆವು.’

ರಶ್ದಿ ಹೇಳಿದ್ದು ಅದೇ! ಈ ಕ್ವಾಲಿಟಿ ಚೆಕ್ ಎಐಗೆ ಒದಗಿಸಿದ್ದ ಮಾಹಿತಿಯನ್ನು ದಾಟಿ ಅದು ಸಾಗಲಿಲ್ಲ. ಹೀಗಾಗಿ ಫೋರ್ಡ್ ಸಂಸ್ಥೆ ಎಐ ಬಳಸಿ ಮಾಡಿದ ಕ್ವಾಲಿಟಿ ಚೆಕ್ ದಕ್ಷವಾಗಿರಲಿಲ್ಲ;  ಮತ್ತೆ ಈಗ ಅದು ಮಾನವ ಜ್ಞಾನಕ್ಕೆ ಮೊರೆ ಹೋಗಬೇಕಾಯಿತು. 

‘ಹಣ ಉಳಿಸುವುದೆಂದರೆ ಮನುಷ್ಯರನ್ನು ಕೆಲಸದಿಂದ ತೆಗೆಯುವುದು’ ಎಂಬ ದುಷ್ಟ ಧೋರಣೆ ಈ ಕಾಲದ ಸಂಸ್ಥೆಗಳಲ್ಲಿ ಮಹಾನ್ ಫಿಲಾಸಫಿಯ ಮಟ್ಟಕ್ಕೆ ಬೆಳೆದು ನಿಂತಿದೆ! ಅದು ವ್ಯಕ್ತಿಗಳಲ್ಲೂ ಹಬ್ಬಿದೆ. ಒಮ್ಮೆ ಒಬ್ಬ ಮಧ್ಯಮ ವರ್ಗದ ಮಹಿಳೆ ಮನೆಕೆಲಸದವಳನ್ನು ಬಿಡಿಸಿ ಮನೆ ಗುಡಿಸುವ ಕೆಲಸಕ್ಕೆ ರೊಬೋಟ್ ತರುತ್ತೇನೆಂದು ಹೇಳುತ್ತಿದ್ದಳು. ಕೆಲಸದವಳಿಗೆ ತಿಂಗಳಿಗೆ ಕೊಡುತ್ತಿದ್ದ ಮೂರು ಸಾವಿರ ಉಳಿಸಲು ಈ ಮಹಿಳೆ ರೊಬೋಟ್ ತರಲು ಬಯಸಿದ್ದಳೋ? ಅಥವಾ ಇದು ಆಕೆ ಲೇಟೆಸ್ಟ್ ಸಾಧನಗಳನ್ನು ಬಳಸುತ್ತಿರುವೆ ಎಂಬ ಅಹಂಕಾರವನ್ನು ಉಬ್ಬಿಸಿಕೊಳ್ಳುವ ಶೋಕಿಯೋ? ಅದು ಮನೋವಿಶ್ಲೇಷಕರು ತೀರ್ಮಾನಿಸಬೇಕಾದ ವಿಚಾರ!  

ಈ ಥರದ ಮನೋಭಾವ ಮ್ಯಾನೇಜ್‌ಮೆಂಟ್ ಪದವೀಧರರಿಂದ ಮಾಧ್ಯಮ ಸಂಸ್ಥೆಗಳಿಗೂ ಹಬ್ಬಿರುವುದನ್ನು ನೀವು ನೋಡಿರಬಹುದು. ಏನನ್ನು ಬೇಕಾದರೂ ‘ಮ್ಯಾನೇಜ್ ಮಾಡುತ್ತೇವೆ’ ಎಂದು ಹೂಂಕರಿಸುವ ಈ ಮಂದಿ ಮ್ಯಾನೇಜ್‌ಮೆಂಟಿಗೆ ಹೇಳಿಕೊಡುತ್ತಿರುವ ಉಳಿತಾಯದ ಪಾಠ: ‘ಒಬ್ಬ ಉಪಸಂಪಾದಕನನ್ನು ಕೆಲಸದಿಂದ ತೆಗೆದರೆ ಮೂವರು ಹೊಸ ವರದಿಗಾರರನ್ನು ನೇಮಿಸಿಕೊಳ್ಳಬಹುದು.’ 

ಆದರೆ ಈ ಹೊಸ ವರದಿಗಾರರ ಕ್ವಾಲಿಟಿ, ಭಾಷಾಜ್ಞಾನ, ಬರವಣಿಗೆಯ ಮಟ್ಟ ಇವೆಲ್ಲದರ ಬಗ್ಗೆ ಈ ಮ್ಯಾನೇಜ್‌ಮೆಂಟ್ ಮಹನೀಯರಿಗೆ ಯಾವ ಐಡಿಯಾವೂ ಇಲ್ಲ! ಒಮ್ಮೆ ಒಂದು ಇಂಗ್ಲಿಷ್ ಪತ್ರಿಕೆಯ ಜಾಹಿರಾತು ವಿಭಾಗದ ಹೆಡ್ಡು ಮತ್ತು ವರದಿಗಾರನ ನಡುವೆ ನಡೆದ ಮಾತುಕತೆ: 

ಜಾಹಿರಾತು ಹೆಡ್ಡ: ಮುಖ್ಯಮಂತ್ರಿ, ಮಂತ್ರಿಗಳನ್ನು ಸುಮ್ಮನೆ ಹೊಗಳಿ ಬರೀರ‍್ರೀ. ಹೆಚ್ಚು ಹೆಚ್ಚು ಜಾಹಿರಾತು ತರಬಹುದು.

ವರದಿಗಾರ: ಅದೆಂಗೆ ಸುಮ್ಮಸುಮ್ಮನೆ ಬರೆಯೋಕಾಗುತ್ತೆ?

ಜಾಹೆ: ಯಾಕೆ ಬರೆಯೋಕಾಗಲ್ರೀ? 

ಇಂಥವರೂ ಒಂಥರದಲ್ಲಿ ಕೃಜಾಗಳೇ! ಕೃತಕ ಬರವಣಿಗೆ ಬರೆಯುವಂತೆ ಹೇಳುವ ಮಾನವ ಕೃಜಾಗಳಿಗೆ ಬರವಣಿಗೆಯ ಸತ್ಯಶೋಧಕ ಗುಣ, ವರದಿಯ ಸತ್ಯಬದ್ಧತೆ, ನೈತಿಕ ದೃಷ್ಟಿ, ಭಾಷೆಯ ಬಳಕೆಯ ನೈತಿಕತೆ, ಪದ ಬಳಕೆ ಕುರಿತ ಹಿಂಜರಿಕೆ… ಇತ್ಯಾದಿಗಳ ಬಗ್ಗೆ ಏನನ್ನಾದರೂ ಹೇಳಿದರೆ ಅರ್ಥವಾಗುವ ಸಾಧ್ಯತೆ ಇಲ್ಲ! ಇದೆಲ್ಲ ತಂಟೆಯೇ ಬೇಡವೆಂದು ಪಕ್ಷಗಳು, ಸಂಸ್ಥೆಗಳು ತಮತಮಗೆ ಬೇಕಾದಂತೆ ಲೇಖನ ಬರೆದುಕೊಡುವ, ಬರೆಸಿಕೊಟ್ಟದ್ದನ್ನು ಕಂಡೂ ಕಾಣದಂತೆ ಸಣ್ಣಕ್ಷರದಲ್ಲಿ ನಮೂದಿಸುವ, ‘ಅಡ್ವೆಟೋರಿಯಲ್’ ಅಥವಾ ‘ಜಾಹಿರಾತು ಪುರವಣಿ’ಯ ಮಾದರಿಗಳು ಬಂದಿವೆ. ಈ ಪೇಯ್ಡ್ ನ್ಯೂಸ್ ‘ಕೃಜಾ’ ಥರದ ಒಂದು ‘ಮಾಜಾ’ ಅನ್ನಬಹುದು; ಅಂದರೆ, ಮಾರ್ಕೆಟ್ ಜಾಣತನ! 

ಅದೇನೇ ಇರಲಿ. ನಿಜಕ್ಕೂ ಸೃಜನಶೀಲರಾಗಿರಬೇಕು ಎನ್ನುವ ಯಾರೇ ಆಗಲಿ, ಬರವಣಿಗೆ, ಕಲೆ ಇತ್ಯಾದಿಗಳಲ್ಲಿ ಎಐ ಬಗ್ಗೆ ರಶ್ದಿಯ ನಿಲುವನ್ನೇ ತಳೆಯುವುದು ಒಳ್ಳೆಯದು. ಎಐ ಬಳಸಿ ಕಾಗುಣಿತ ದೋಷ, ವಾಕ್ಯ ರಚನೆಯ ದೋಷಗಳನ್ನು ಸರಿಪಡಿಸಿಕೊಳ್ಳುವ ಸಾಧ್ಯತೆ ಈಗ ಕನ್ನಡದಲ್ಲೂ ಇದೆ. ಆದರೆ ಅದೇ ರೂಢಿಯಾದರೆ ಕಾಗುಣಿತ, ವ್ಯಾಕರಣ ಎಲ್ಲವೂ ಮರೆತು ಹೋಗುತ್ತದೆ. ನಮ್ಮ ಸ್ವಂತದ ಸೃಜನಶೀಲ ಶ್ರಮದ ಸುಖ ಕಣ್ಮರೆಯಾಗುತ್ತದೆ. 

ಈ ಕುರಿತ ಒಂದು ಈಚಿನ ಅನುಭವ: ಮೊನ್ನೆ ಯಾವುದೋ ಪುಸ್ತಕಕ್ಕಾಗಿ ಇಂಗ್ಲಿಷ್ ಲೇಖನವೊಂದರ ಒಂದು ಪುಟವನ್ನು ಅರ್ಧ ಗಂಟೆಯಲ್ಲಿ ಅನುವಾದಿಸಿದೆ. ಏನನ್ನೋ ಹೊಸದಾಗಿ ಬರೆದ ಖುಷಿಯಾಯಿತು. ಅಕಸ್ಮಾತ್ ಇದೇ ಲೇಖನವನ್ನು ಕೃಜಾ ಮೂಲಕ ಅನುವಾದ ಮಾಡಿ, ಅದನ್ನು ಒರಿಜಿನಲ್ ಜೊತೆ ಹೋಲಿಸಿ, ಅರ್ಧ ಗಂಟೆ ತಿದ್ದಿ ತೀಡಿದ್ದರೆ ಏನೋ ಕೆಲಸ ಮಾಡಿದ ಭಾವ, ಬರವಣಿಗೆಯಲ್ಲೇ, ಭಾಷೆಯ ಬಳಕೆಯಲ್ಲೇ, ಹುಟ್ಟುವ ಆನಂದ ಮೂಡುತ್ತಿರಲಿಲ್ಲ. 

ಅಂದರೆ, ನಮ್ಮ ಸಹಜ ಜಾಣತನದ ಸತ್ವ, ಬೆಂಬಲ, ಸೃಜನಶೀಲತೆಯನ್ನು ಕಳೆದುಕೊಳ್ಳುವುದು ನಮಗೇ ಭಾರಿ ನಷ್ಟವಾಗಬಲ್ಲದು. ಒಮ್ಮೆ ಡಾಕ್ಟರೊಬ್ಬರು ಹೇಳಿದ ನಾಲ್ಕು ವಸ್ತುಗಳಲ್ಲಿ ಒಂದನ್ನು ಮರೆತು ಮತ್ತೆ ಅವರನ್ನು ಕೇಳಿದೆ; ಆಗ ಅವರು ಹೇಳಿದ ಮಾತು ಚೆನ್ನಾಗಿ ನೆನಪಿದೆ: ‘ಬ್ರೈನ್ ಗೆ ಒಂಚೂರು ಕೆಲಸ ಕೊಡಿ, ಅದು ಜ್ಞಾಪಿಸಿಕೊಳ್ಳುತ್ತೆ.’  ಪ್ರಯತ್ನ ಮಾಡಿದೆ. ಮರೆತ ವಸ್ತುವನ್ನು ನೆನಸಿಕೊಂಡೆ!  

ಈ ಬರಹ ಮುಗಿಸುವ ಮುನ್ನ ಕೃಜಾದ ಮತ್ತೊಂದು ಭಯಾನಕ ಪ್ರಸಂಗ:

‘ಹಗ್ಗಿಂಗ್ ಫೇಸ್’ ಎಂಬ ಎಐ ಟೂಲ್‌ಗಳ ಆ್ಯಪ್ ಸ್ಟೋರನ್ನು ‘ಓಪನ್ ಎಐ’ ಹ್ಯಾಕ್ ಮಾಡಿದೆಯಂತೆ! ‘ಹಗ್ಗಿಂಗ್ ಫೇಸ್’ ಕಂಪನಿ ಪೊಲೀಸು, ಸೈಬರ್‍ ಕ್ರೈಂ ಎಲ್ಲರನ್ನೂ ಮೊರೆ ಹೊಕ್ಕಿತು. ಏನು ಜಾಲಾಡಿದರೂ, ಯಾವ ಮಾನವರೂ ಈ ಕ್ರೈಂನಲ್ಲಿ ಭಾಗಿಯಾಗಿರಲಿಲ್ಲ ಎಂಬುದು ತಿಳಿಯಿತು. ನಂತರ ಡಿಜಿಟಲ್ ಲೋಕ ಬಲ್ಲವರಿಗೆಲ್ಲ ಪರಿಚಿತವಿರುವ ‘ಚಾಟ್ ಜಿಪಿಟಿ’ ಈ ಹ್ಯಾಕಿಂಗ್ ಮಾಡಿದೆ ಎಂಬ ಸುದ್ದಿ ಬಂತು! ಇದು ಯಾರೂ ಊಹಿಸಲಾಗದ ಪ್ರಮಾಣದ ಮಾನವೇತರ ಸೈಬರ್ ಕ್ರೈಂ. 

ಮಾನವನ ಸಹಜ ಜಾಣತನ ಸೃಷ್ಟಿಸಿದ ಈ ಕೃತಕ ಜಾಣತನದ ಮಾಯಾರಾಕ್ಷಸ ಎಂಬ ಬುಲ್ಡೋಜರ್ ತಾನು ಯಾವ ವಲಯವನ್ನೂ ಹೊಗದೆ ಬಿಡುವುದಿಲ್ಲ ಎಂದು ಹೂಂಕರಿಸುತ್ತಿರುವಂತಿದೆ! ‘ಏಳಿ!ಎಚ್ಚರಗೊಳ್ಳಿ!’ ಎಂದು ಸಹಜ ಜ್ಞಾನತನ ಎಚ್ಚರಿಸುತ್ತಿದೆ!  

ಸಹ ಸ್ಪಂದನ...ಸಹಸ್ಪಂದನ

ಕಳೆದ ವಾರ ಪ್ರಕಟವಾದ ‘ಸುಳ್ಳು ಎಂಬುದರ ಸತ್ಯ ರೂಪಗಳು’ ಲೇಖನದಲ್ಲಿ ಜೋಸೆಫ್ ಡನ್ ಗುರುತಿಸಿದ ಸುಳ್ಳುಗಳ ಬಗ್ಗೆ ಚರ್ಚಿಸುತ್ತಾ ಇಬ್ಬರು ಬಹುಕಾಲದ ಫ್ರೆಂಡುಗಳು ಕೊಟ್ಟ ಸಂವಾದಿ ಪದಗಳು ಕುತೂಹಲಕರವಾಗಿವೆ:

ಡಾ. ನಿರಂಜನಮೂರ್ತಿ:  CRAPಗೆ ಸಂವಾದಿ ಪದ: (ವಿಶ್ವಾಸಭರಿತ ನಂಬುಗೆ ರೂಪದ ಸುಳ್ಳು- ವಿನರೂಸುಳ್ಳು).  CRAP (ಕಾನ್ಫಿಡೆಂಟ್ ರ‍್ಯಾಶನಲೈಸೇಷನ್ ಅಂಡ್ ಪ್ರೊಜೆಕ್ಷನ್)  ಎನ್ನುವುದು ನಮ್ಮನ್ನು ನಾವು ಸರಿಯೆಂದು ನಂಬುವ, ನಮ್ಮ ತಪ್ಪುಗಳನ್ನು ಕೂಡ ಸರಿಯೆಂದು ನಂಬಿಸಿಕೊಂಡು ಬಿಂಬಿಸಿಕೊಳ್ಳುವ ನಮ್ಮ ಬುದ್ಧಿಯ ಆಟ ಎನ್ನುತ್ತಾನೆ ಡನ್.

ಡಾ. ಅರುಂಧತಿ: ‘ಬಿಳಿ ಸುಳ್ಳು’ ‘ಕರಿ ಸುಳ್ಳು’ ಪದಗಳ ಬದಲಾಗಿ ಬೇರೆ ಪದ ಪ್ರಯೋಗಗಳ ಅಗತ್ಯವಿದೆ: ‘ಸಾದಾ ಸುಳ್ಳು’ ‘ವಿಪರೀತದ ಸುಳ್ಳು.’

ಇಂಥ ನಿರಂತರ ಬುದ್ಧೀಜೀವಿ ಸಹಸ್ಪಂದನವನ್ನೇ ನಾನು ಈ ಹಿಂದೆ ಕುವೆಂಪು ಸಾಲಿನ ಮೂಲಕ ಸೂಚಿಸಿದ್ದು: 

‘ನೀನು ಬೆಳೆದರೆ ನಾನು ಬೆಳೆವೆ!’

ಥ್ಯಾಂಕ್ಯೂ.
 

Share on:

Comments

4 Comments



| ಚರಣ್‌

ಕೃಜಾ ಡೇಟಾ ಕೇಂದ್ರಗಳನ್ನು ತಂಪಾಗಿಡಲು ಪ್ರತಿದಿನ ಮಿಲಿಯನ್ ಲೀಟರ್ ಕುಡಿಯುವ ನೀರು ಬೇಕಾಗುತ್ತದೆ. ಬೆಂಗಳೂರಲ್ಲೇ ಸುಮಾರು ೩೧ ಎಐ ಕೇಂದ್ರಗಳಿವೆ. ಬಹುತೇಕ ಜನರಿಗೆ ಕುಡಿಯುವ ನೀರು ತಲುಪದಿದ್ದರು, ಇವಕ್ಕಂತು ನಿತ್ಯ ಜಲಧಾರೆ. ಇದರ ಜೊತೆಗೆ ಎಐ ಕೇಂದ್ರಗಳನ್ನು ಸ್ಥಾಪಿಸಲು ನೂರಾರು ಎಕ್ಕರೆ ಕೃಷಿ ಭೂಮಿಯನ್ನು ಸರ್ಕಾರ ದೊಡ್ಡ ದೊಡ್ಡ ಕಂಪನಿಗಳಿಗೆ ಕೊಡಲು ಸಜ್ಜಾಗಿವೆ. ಆಂಧ್ರದ ತರಳುವಾಡಾದಲ್ಲಿ ರೈತರ ಭೂಮಿಯನ್ನು ರಾಜ್ಯ ಸರ್ಕಾರ ಬಲವಂತವಾಗಿ ಒತ್ತುವರಿ ಮಾಡಿಕೊಂಡದಕ್ಕೆ ಅಲ್ಲಿನ ರೈತರು ಈಗಲೂ ಪ್ರತಿಭಟಿಸುತ್ತಿದ್ದಾರೆ. ಅದರಲ್ಲಿ ಸುಮಾರು ೨೦೦ ಎಕ್ಕರೆ ಭೂಮಿ ದಲಿತರದ್ದು ಮತ್ತು ಅವು ಭೂಸುಧಾರಣೆಯಿಂದ ಅವರಿಗೆ ದೊರಕಿದಂತವು. . ಕಾಲೇಜುಗಳಲ್ಲಿ ಭಾಷಣ ಮಾಡಲು ಬರುವವರು ವಿಷಯದ ಬಗ್ಗೆ ಏನೂ ಗೊತ್ತಿಲ್ಲದಿದ್ದರು "ಎಐ, ಎಐ, ಜೆನ್ ಜಿ," ಗಂಜೀ ಅಂದ್ಕೊಂಡು ಮುಗಿಸಿಬಿಡುತ್ತಾರೆ. ಬಹುಶಃ ಅವರುಗಳ ಭಾಷಣದ ಕರ್ತೃ ಕೃಜವೇ ಇರಬಹುದು! "ಜೆನ್ ಜೀ" ಅನ್ನುವ ಪದಕ್ಕೆ ತಮ್ಮ ವರ್ಗದ ಸವಲತ್ತು, ಪೂರ್ವಗ್ರಹ ಎಲ್ಲವನ್ನು ಪೋಣಿಸಿ ಸಾಮಾನ್ಯಕರಿಸಿಬಿಡುವುದು ಇವತ್ತು ಎಲ್ಲೆಲ್ಲೂ ಪಾಪ್ಯೂಲರ್ ಆಗಿದೆ. ಹಲವರು ಈ ತಂತ್ರಜ್ಞಾನದ ಬೆಳವಣಿಗೆಯನ್ನು ಮಾನವನ ಎವಲೂಷ್ನರಿಯ ಭಾಗವೆನ್ನುವಂತೆ ಭಾವಿಸಿದ್ದಾರೆ. ಆದರೆ ಇವು ಕೆಲವೇ ಕೆಲವರ ಹೊಟ್ಟೆ ಊದಿಸುವಂತದ್ದು ಎಂದು ಅವರಿಗೆ ತಿಳಿಯುವುದಿಲ್ಲ. ಜೆಪ್ಟೋ, ಬ್ಲಿಂಕಿಟ್ ಅಂತ "೧೦ ನಿಮಿಷದಲ್ಲಿ ಡಿಲಿವರಿ" ಪ್ಲಾಟ್ಫಾರ್ಮ್ಗಳು ಜನರ ಅವಶ್ಯಕತೆಯಿಂದ ಮೂಡಿದಂತವಲ್ಲ. ಬದಲಿಗೆ ಜನರಲ್ಲಿ ಈ ಅವಶ್ಯಕತೆಯನ್ನು ಅವಸರವನ್ನು ಬಿತ್ತಿ, ಬೆಳಸಿ ಅದನ್ನು ಸಹಜ ವಾಸ್ತವವನ್ನಾಗಿ ಮಾಡಲಾಗುತ್ತಿದೆ. ಮೆಟೀರಿಯಲಿಸ್ಟಿಕ್ ಮನಸ್ಥಿತಿಯನ್ನು ಬೆಳೆಸುತ್ತಿರುವ ಇವೆಲ್ಲವೂ ನಮಗೆ, ಸಮಾಜಕ್ಕೆ, ಪರಿಸರಕ್ಕೆ ಬಹಳ ಹಾನಿ ಉಂಟುಮಾಡುತ್ತಿದೆ ಎಂದು ಅನಿಸುತ್ತದೆ.


| Somashankara N

ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ | ಕೂಸು ಕಂದಯ್ಯ ಒಳಹೊರಗ | ಆಡಿದರ । ಬೀಸಣಿಗೆ ಗಾಳಿ ಸುಳಿದಾವ ॥ ಈ ಜನಪದ ತ್ರಿಪದಿಯಲ್ಲಿ ಹೆತ್ತ ಕರುಳ ಮಿಡಿತ ಯಾರನ್ನೂ ಭಾವಕರನ್ನಾಗಿಸುತ್ತದೆ. ಇಲ್ಲಿ ಮಗುವಿನ ಇರುವಿಕೆಯೇ ಸಂತೋಷ, ಸಂಭ್ರಮ, ತಂದೆ ತಾಯಿಗಳ ಭರವಸೆಯ ಬೆಳಕು. ಮಗ ಅಥವಾ ಮಗಳು ಎಷ್ಟೇ ಬೆಳೆದು ದೊಡ್ಡವರಾದರೂ ತಂದೆ ತಾಯಿಗೆ ಮಕ್ಕಳೆ ತಾನೇ? ಒಂದು ಆರೋಗ್ಯಕರ ಮನಸ್ಸಿನ ತಂದೆ ತಾಯಿಗಳು ಉಸಿರಾಡಿದಂತೆ ಮಗು ಬದುಕಿನುದ್ದಕ್ಕೂ ಇದ್ದುಬಿಟ್ಟರೆ ಅಂಥ ಮನೆಗೆ ಕೃತಕವಾದ ಬೀಸಣಿಗೆ ಯಾತಕ? ಇಂಥವರ ಮನೆಯಲ್ಲಿ ಸಂಸ್ಕಾರಯುಕ್ತ ಬೀಸಣಿಗೆ ಗಾಳಿ ಸ್ವಾಭಾವಿಕವಾಗಿಯೇ ಸುಳಿದಾವು. ನಾಳೆ ಎಂಬುದು ಅದು gift ಆದೀತು; ನಿತ್ಯ ನೂತನವಾದೀತು. ಈ "ಏಐ: ಮಾಯಾವಿ, ಬಂಟ, ಬುಲ್ಡೋಝರ್" ಲೇಖನ ಓದಿದ ಮೇಲೆ ಮಾನವನ ಜೀವಿತ ಕ್ರಮದ ಸಹಜ ಸ್ವಾಭಾವಿಕ ಬುದ್ಧಿ ಪಲ್ಲಟಗೊಂಡು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಲ್ಲದು ಎಂಬ ಸೂಕ್ಷ್ಮ ಅರಿವಾಯಿತು. ಈ ಬಂಡವಾಳ ಶಾಹಿಗಳು ಈ "ಕೃಜಾ"ವನ್ನು ಬಳಸಿಕೊಂಡು ಹೇಗೆ ತಮ್ಮ ಸ್ವಾಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುತ್ತಾರೆ ಎಂಬ ಬಗ್ಗೆ ತಿಳಿದು "ಕೂಸು ಇದ್ದ ಮನೆಗೆ" ತ್ರಿಪದಿ ನೆನಪಾಯಿತು. ತನ್ಮೂಲಕ ಮಾನವನ ಅಸ್ತಿತ್ವದಲ್ಲಿ ಎಷ್ಟು ಸುಖವಿದೆ ಇದನ್ನ್ಯಾಕೆ ಈ ಲೋಕ ಮರೆತಿದೆ ಎಂಬ ಪ್ರಶ್ನೆ ಮೂಡಿತು. ಅಷ್ಟೇ ಅಲ್ಲದೆ, ಮಾನವನ ಅಹಮ್ಮಿಕೆಯಿಂದ ಉದ್ಯೋಗ ರಂಗದಲ್ಲಿ ಸೃಷ್ಟಿಯಾಗುವ ವ್ಯಕ್ತಿ ಯೂನಿಟ್ ಗಳ ಸ್ವರೂಪ ತಿಳಿದು ಬೇಸರವಾಯಿತು. ಈ ಎಲ್ಲದಕ್ಕೂ "ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ" ಸ್ವಾಭಾವಿಕ ವಿಚಾರದ ಅರಿವಾಗಿ "ಮಾನವ ಕೃಜಾ"ವಾಗಿ ಇರುವುದು ಬೇಡವೆನಿಸಿತು. ಒಟ್ಟಾರೆ, ನೀವು ಬರೆದಿರುವ "ಈ ಪೇಯ್ಡ್ ನ್ಯೂಸ್ 'ಕೃಜಾ' ಥರದ ಒಂದು 'ಮಾಜಾ' ಅನ್ನಬಹುದು; ಅಂದರೆ, ಮಾರ್ಕೆಟ್ ಜಾಣತನ!" ಮತ್ತು "ಕೃಜಾ ಜಾಗಕ್ಕೆ ಮತ್ತೆ ಸಜಾಗಳು -ಸಹಜ ಜಾಣರು- ಬಂದ ಈ ನಿಜ ಪ್ರಸಂಗ ಹೀಗಿದೆ:" ಎಂಬ ಈ ಸಾಲುಗಳು ರೋಗಗ್ರಸ್ತ ಸಮಾಜವನ್ನು ಕುಟುಕಿ ಚಿಕಿತ್ಸೆ ನೀಡುವಂತಿವೆ. ನನಗೆ ನಗುತರೆಸಿವೆ!


| Somashankara N

ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ | ಕೂಸು ಕಂದಯ್ಯ ಒಳಹೊರಗ | ಆಡಿದರ । ಬೀಸಣಿಗೆ ಗಾಳಿ ಸುಳಿದಾವ ॥ ಈ ಜನಪದ ತ್ರಿಪದಿಯಲ್ಲಿ ಹೆತ್ತ ಕರುಳ ಮಿಡಿತ ಯಾರನ್ನೂ ಭಾವಕರನ್ನಾಗಿಸುತ್ತದೆ. ಇಲ್ಲಿ ಮಗುವಿನ ಇರುವಿಕೆಯೇ ಸಂತೋಷ, ಸಂಭ್ರಮ, ತಂದೆ ತಾಯಿಗಳ ಭರವಸೆಯ ಬೆಳಕು. ಮಗ ಅಥವಾ ಮಗಳು ಎಷ್ಟೇ ಬೆಳೆದು ದೊಡ್ಡವರಾದರೂ ತಂದೆ ತಾಯಿಗೆ ಮಕ್ಕಳೆ ತಾನೇ? ಒಂದು ಆರೋಗ್ಯಕರ ಮನಸ್ಸಿನ ತಂದೆ ತಾಯಿಗಳು ಉಸಿರಾಡಿದಂತೆ ಮಗು ಬದುಕಿನುದ್ದಕ್ಕೂ ಇದ್ದುಬಿಟ್ಟರೆ ಅಂಥ ಮನೆಗೆ ಕೃತಕವಾದ ಬೀಸಣಿಗೆ ಯಾತಕ? ಇಂಥವರ ಮನೆಯಲ್ಲಿ ಸಂಸ್ಕಾರಯುಕ್ತ ಬೀಸಣಿಗೆ ಗಾಳಿ ಸ್ವಾಭಾವಿಕವಾಗಿಯೇ ಸುಳಿದಾವು. ನಾಳೆ ಎಂಬುದು ಅದು gift ಆದೀತು; ನಿತ್ಯ ನೂತನವಾದೀತು. ಈ "ಏಐ: ಮಾಯಾವಿ, ಬಂಟ, ಬುಲ್ಡೋಝರ್" ಲೇಖನ ಓದಿದ ಮೇಲೆ ಮಾನವನ ಜೀವಿತ ಕ್ರಮದ ಸಹಜ ಸ್ವಾಭಾವಿಕ ಬುದ್ಧಿ ಪಲ್ಲಟಗೊಂಡು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಲ್ಲದು ಎಂಬ ಸೂಕ್ಷ್ಮ ಅರಿವಾಯಿತು. ಈ ಬಂಡವಾಳ ಶಾಹಿಗಳು ಈ "ಕೃಜಾ"ವನ್ನು ಬಳಸಿಕೊಂಡು ಹೇಗೆ ತಮ್ಮ ಸ್ವಾಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುತ್ತಾರೆ ಎಂಬ ಬಗ್ಗೆ ತಿಳಿದು "ಕೂಸು ಇದ್ದ ಮನೆಗೆ" ತ್ರಿಪದಿ ನೆನಪಾಯಿತು. ತನ್ಮೂಲಕ ಮಾನವನ ಅಸ್ತಿತ್ವದಲ್ಲಿ ಎಷ್ಟು ಸುಖವಿದೆ ಇದನ್ನ್ಯಾಕೆ ಈ ಲೋಕ ಮರೆತಿದೆ ಎಂಬ ಪ್ರಶ್ನೆ ಮೂಡಿತು. ಅಷ್ಟೇ ಅಲ್ಲದೆ, ಮಾನವನ ಅಹಮ್ಮಿಕೆಯಿಂದ ಉದ್ಯೋಗ ರಂಗದಲ್ಲಿ ಸೃಷ್ಟಿಯಾಗುವ ವ್ಯಕ್ತಿ ಯೂನಿಟ್ ಗಳ ಸ್ವರೂಪ ತಿಳಿದು ಬೇಸರವಾಯಿತು. ಈ ಎಲ್ಲದಕ್ಕೂ "ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ" ಸ್ವಾಭಾವಿಕ ವಿಚಾರದ ಅರಿವಾಗಿ "ಮಾನವ ಕೃಜಾ"ವಾಗಿ ಇರುವುದು ಬೇಡವೆನಿಸಿತು. ಒಟ್ಟಾರೆ, ನೀವು ಬರೆದಿರುವ "ಈ ಪೇಯ್ಡ್ ನ್ಯೂಸ್ 'ಕೃಜಾ' ಥರದ ಒಂದು 'ಮಾಜಾ' ಅನ್ನಬಹುದು; ಅಂದರೆ, ಮಾರ್ಕೆಟ್ ಜಾಣತನ!" ಮತ್ತು "ಕೃಜಾ ಜಾಗಕ್ಕೆ ಮತ್ತೆ ಸಜಾಗಳು -ಸಹಜ ಜಾಣರು- ಬಂದ ಈ ನಿಜ ಪ್ರಸಂಗ ಹೀಗಿದೆ:" ಎಂಬ ಈ ಸಾಲುಗಳು ರೋಗಗ್ರಸ್ತ ಸಮಾಜವನ್ನು ಕುಟುಕಿ ಚಿಕಿತ್ಸೆ ನೀಡುವಂತಿವೆ. ನನಗೆ ನಗುತರೆಸಿವೆ!


| Kjs

Neet ಕುರಿತಂತೆ ಬರೆಯಿರಿ ಸರ್




Add Comment


Mundana Kathana Nataka

YouTube






Recent Posts

Latest Blogs