ಪ್ರಿಯ ಮೊಗಳ್ಳಿ...

ಪ್ರಿಯ ಮೊಗಳ್ಳಿ,
ಕೆಲವು ತಿಂಗಳ ಕೆಳಗೆ ರವಿಬಾಗಿಯವರ ಊರಿನ ಹಾದಿಯಲ್ಲಿ ನಿಮ್ಮೂರು ಮೊಗಳ್ಳಿ ಆಕಸ್ಮಿಕವಾಗಿ ಕಂಡು ಸಂಭ್ರಮಗೊಂಡು, ನಿನ್ನ ಹುಟ್ಟುಮನೆಗೆ ಭೇಟಿಕೊಟ್ಟು, ಅಲ್ಲಿ ನಡೆದ ಸಮಸ್ತ ಡ್ರಾಮಾ ಬಗ್ಗೆ ನಿನಗೆ ವರದಿ ಕೊಟ್ಟ ಮೇಲೆ ಮತ್ತೆ ನಿನ್ನನ್ನು ಕಾಣಲಾಗಲಿಲ್ಲ. ಕಳೆದ ವಾರವಷ್ಟೇ ನಿಮ್ಮ ಮನೆಗೆ ಹೊರಟವನಿಗೆ ಯಾಕೋ ಅಲ್ಲಿಯವರೆಗೆ ತಲುಪಲಾಗಲಿಲ್ಲ.  

ಇವತ್ತು ಬೆಳಗ್ಗೆ ಬಹು ದಿನಗಳ ಮೇಲೆ ಸ್ವಾಮಿಆನಂದ್ ಫೋನ್ ಮಾಡಿದಾಗ ಕೇರಳದ ಬಡಗರಾದಲ್ಲಿದ್ದೆ; ಏನೋ ದುಗುಡದ ಸುದ್ದಿಯೇ ಇರಬೇಕೆಂದು ಸಮಾವೇಶದತ್ತ ಹೊರಡತೊಡಗಿದೆ. ಗೆಳೆಯರ ಮೇಲೆ ಗೆಳೆಯರು ಫೋನ್ ಮಾಡತೊಡಗಿದಾಗ ಇಷ್ಟು ಬೇಗ ಬರಬಾರದ ಸುದ್ದಿ ತಲುಪಿಯೇ ಬಿಟ್ಟಿತು. ಈ ದುಗುಡ ಆವರಿಸಲು ಬಿಟ್ಟರೆ ಮಾತಾಡುವುದು ಕಷ್ಟ ಎನ್ನಿಸಿ ಉಪನ್ಯಾಸದ ಗಳಿಗೆಯ ಟಿಪ್ಪಣಿ ಮಾಡತೊಡಗಿದೆ. ನನಗರಿವಿಲ್ಲದೆಯೇ ಟಿಪ್ಪಣಿಯ ಪುಸ್ತಕದಲ್ಲಿ ನೀನು ಸಾಲುಗಳಾಗಿ ಮೂಡತೊಡಗಿದೆ: 

ಗೆಳೆಯ ಮೊಗಳ್ಳಿ ತೀರಿಕೊಂಡಿದ್ದಾನೆ
ತನ್ನ ಬುಗುರಿ ತೊಟ್ಟಿಲು ಎಲ್ಲ ನನಗೆ ಬಿಟ್ಟು;

ಮೊಗಳ್ಳಿಯ ಛಲ ನೆನಪಾಗುತ್ತದೆ-
ಅವನ ಚಾರ್ಲಿ ಚಾಪ್ಲಿನ್ ವರಸೆ
ಬರೆಯುವ ಆಸೆ,
ತಮಾಷೆ ಕಟಕಿ ಸಿಟ್ಟು 
ಯಾರನ್ನಾದರೂ ಫಿನಿಶ್ ಮಾಡುವ ಉತ್ಸಾಹ-
ಎಲ್ಲ ಒಂದರ ಹಿಂದೆ ಒಂದರಂತೆ 
ನುಗ್ಗಿ ಬರುತ್ತಿವೆ...

ಇನ್ನೇನು ಗಾಂಧಿ, ಲೋಹಿಯಾ ಕುರಿತ 
ಮಾತಾಡಬೇಕಿದ್ದ ನನಗೆ 
ಮೊಗಳ್ಳಿಯಲ್ಲಿ ಗಾಂಧಿ, ಸಮಾಜವಾದ
ಇವೆಲ್ಲ ಅಂಬೇಡ್ಕರ್‍ ಜೊತೆಗೆ ಬೆರೆತದ್ದು,
ಅವೆಲ್ಲ ಅವನ ಅದಮ್ಯ ಕಥಾಶಕ್ತಿಯಲ್ಲಿ 
ಒಸರಿದ್ದು ನೆನಪಾಗುತ್ತದೆ. 

ಮೊನ್ನೆ ಅವನ ಮೊಗಳ್ಳಿ ಊರಲ್ಲಿ
ಎಂದೋ ಅವನ ಬಾಯಲ್ಲೇ ಕೇಳಿದ್ದ
ಅವನ ಕತೆಯ ಪಾತ್ರಗಳು-
ಹಿಂದೆಂದೋ ಒಮ್ಮೆ ಅವನ ಮೇಲೆ ಹರಿ ಹಾಯ್ದಂತೆ
ಈಗಲೂ ಹರಿಹಾಯುತ್ತಿದ್ದ 
ಅವನ ಹುಟ್ಟುಮನೆಯವರ ವ್ಯಗ್ರ ಮುಖಗಳು-
ಈಗ ಕಣ್ಣೆದುರು ಬರುತ್ತವೆ;

‘ಮೊಗಳ್ಳಿ ಜೀತಗಾರನಾಗೇ ಅಲ್ಲಿ ಉಳಿದಿದ್ದರೆ 
ಅಲ್ಲಿ ಕಂಡ ಅವನ ಚಿಕ್ಕಪ್ಪನೊಬ್ಬನ ಥರ ಇರುತ್ತಿದ್ದ’ 
ಎಂದು ನಾನು ಗೆಳೆಯರಿಗೆ ಹೇಳಿದ್ದು ಮೊನ್ನೆ ಹೇಳಿದಂತಿದೆ…

 ಆ ಮಾತನ್ನು ಮೊಗಳ್ಳಿಗೂ ಒಪ್ಪಿಸಿ ಸೈ ಎನ್ನಿಸಿಕೊಂಡ 
ಅವನ ಊಂಕಾರ ನೆನಪಾಗುತ್ತದೆ;

ಹಾಗೆಯೇ ಅವನು ಕಲಾಕ್ಷೇತ್ರದ ಹಜಾರದಲ್ಲಿ 
ತಿಂಗಳುಗಳ ಕೆಳಗೆ ಹೇಳಿದ ಕೊನೆಯ ಗುಡ್ ಬೈ… 

ನನ್ನ ಜೊತೆಜೊತೆಗೇ ಬರೆದು ಬೆಳೆದ
ಮೊಗಳ್ಳಿ ನಿಜಕ್ಕೂ ಏನು ಎಂದು
ಮತ್ತೊಮ್ಮೆ ಅವನ ಪುಸ್ತಕಗಳ ತುಂಬ
ಹುಡುಕಬೇಕೆನ್ನಿಸುತ್ತದೆ…
ಅವು ಎಲ್ಲೋ ದೂರದ ಬೆಂಗಳೂರಿನಲ್ಲಿದ್ದವು… 

ಗೆಳೆಯನಿಗೆ ಕೃತಜ್ಞತೆ-
ಅವನು ಕೊಟ್ಟ ಎಲ್ಲ ಜೀವಂತ ಗಳಿಗೆ 
ಅವನ ಭೀಕರ ತಮಾಷೆಗಳಿಗೆ;
ಎಲ್ಲಕ್ಕಿಂತ ಹೆಚ್ಚಾಗಿ ಅವನ 
ಮೊಗಳ್ಳಿಗನ್ನಡದ ಅಪರೂಪದ ಕತೆಗಳಿಗೆ…

ಇಷ್ಟನ್ನು ಬರೆದು ನಿಲ್ಲಿಸಿ, ಗಾಂಧೀ ಲೋಹಿಯಾ, ಕ್ವಿಟ್ ಇಂಡಿಯಾ ಇತ್ಯಾದಿ ಮಾತಾಡಲು ಹೋದೆ. ಮಾತಾಡುವ ಧಾವಂತದಲ್ಲಿ ಮೊಗಳ್ಳಿ ಹಿನ್ನೆಲೆಗೆ ಸರಿಯುತ್ತಿದ್ದ. ಸ್ಟೇಜು ಹತ್ತುತ್ತಿದ್ದಂತೆ ಮತ್ತೆ ಮೂಡಿ ಬಂದ. ಇದ್ದಕ್ಕಿದ್ದಂತೆ ಮೊಗಳ್ಳಿಯ ಬಗ್ಗೆ ಮಾತಾಡಿ ’ಈ ಭಾಷಣವನ್ನು ಮೊಗಳ್ಳಿಗೇ ಅರ್ಪಿಸುತ್ತಿದ್ದೇನೆ’ ಎಂದೆ. ಸಭೆ ಸ್ತಬ್ದವಾಯಿತು.

ಆ ಮೌನದಲ್ಲಿ ಅವನಿಗೂ ನನಗೂ ಪ್ರಿಯವಾದ, ನಾನೂ ಅವನೂ ಒಪ್ಪುವ ರಾಜಕೀಯ, ಸಮಾಜವಾದ, ಸಂಸ್ಕೃತಿ, ದಲಿತ ಚಳುವಳಿ… ಎಲ್ಲದರ ಬಗೆಗೂ ಅನಿಸಿದ್ದನ್ನು ಮಾತಾಡಿದೆ…ಗೆಳೆಯ ವಿಕ್ರಮ ವಿಸಾಜಿಗೆ ಕೊಟ್ಟ ಸಂದರ್ಶನದಲ್ಲಿ ‘ಮೊಗಳ್ಳಿ ನಿನ್ನ ರಾಜಕೀಯ ಪ್ರಜ್ಞೆಯ ಬಗ್ಗೆ ಮೆಚ್ಚಿ ಮಾತಾಡಿದ್ದಾನೆ’ ಎಂದು ಗೆಳೆಯ ವಿಶುಕುಮಾರ್ ಫೋನಿನಲ್ಲಿ ಓದಿ ಹೇಳಿದ್ದು ನೆನಪಾಯಿತು…ಜೊತೆಗೆ ಗೆಳೆಯ ಶ್ರೀಧರ್ ಕಳಿಸಿದ್ದ ಮೊಗಳ್ಳಿಯ ಅಪರೂಪದ ಫೋಟೋದಲ್ಲಿ ಕಂಡ ನನ್ನ ಹಳ್ಳಿ ಮುಖ ಕೂಡ... ಜೊತೆಗೆ, ಈ ಬರಹ ಆಗಸವೇರುವ ಗಳಿಗೆಯಲ್ಲಿ ಗೆಳೆಯ ಉಮೇಶ್ ನಾಯಕ್ ಕಳಿಸಿದ ಮೈಸೂರಿನ ಫೋಟೋ...

(ಬಡಗರಾ, ಕೇರಳ. ದಿನಾಂಕ ೫ ಅಕ್ಟೋಬರ್‍ ೨೦೨೫, ಮಧ್ಯಾಹ್ನ ೩,೨೮) 


ಮೊಗಳ್ಳಿಯ ನಿರ್ಗಮನದ ಜೊತೆಗೆ ಮೊನ್ನೆ ಕೊಟ್ಟ ನೀಷೆಯ ಮಾತು ನೆನಪಾಗಿ ಅದನ್ನೇ ಮತ್ತೆ ಕೊಟ್ಟಿರುವೆ:

ಒಡಿಸ್ಯೂಸ್ ಒಂದು ಘಟ್ಟದಲ್ಲಿ 
ರಾಜಕುಮಾರಿ ನೌಸಿಕಾಳನ್ನು 
ಬಿಟ್ಟು ಹೊರಡುತ್ತಾನಲ್ಲಾ,  
ಹಾಗೆ ಜೀವನದಿಂದ ತೆರಳಬೇಕು-
ಶುಭ ಕೋರುತ್ತಾ ತೆರಳಬೇಕು;                                 

ಬದುಕಿನ ಬಗ್ಗೆ ತೀವ್ರ ಅನುರಕ್ತಿಯಿಂದಲ್ಲ.
 

Share on:

Comments

11 Comments



| Jyothi

Heart touching tribute to a friend...gone too early...


| ಮಂಜುನಾಥ್ ಸಿ ನೆಟ್ಕಲ್

ಅಯ್ಯೋ ಮೊಗಳ್ಳಿ ಗಣೇಶ್ ಅವರು ಇಷ್ಟು ಬೇಗ ನಿರ್ಮಿಸ ಬೇಕಿತ್ತೆ ? ... ಮೊನ್ನೆಯಷ್ಟೇ ಈ ತಿಂಗಳ ಮಯೂರ ಮಾಸ ಪತ್ರಿಕೆಯಲ್ಲಿ ಅವರು ಸಂದರ್ಶನ ಓದಿ 28ರ ಭಾನುವಾರ ಹೊಸಪೇಟೆಗೆ ಹೋಗಿದ್ದಾಗ ಪಲ್ಲವ ವೆಂಕಟೇಶ್ ಅವರು ಮೊಗಳ್ಳಿ ಗಣೇಶ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ತಿಳಿಸಿದ್ದರು... ಕೇಳಿ ಮನಸ್ಸಿಗೆ ಕಳವಳವಾಗಿತ್ತು. ಇಷ್ಟು ಬೇಗ ಈ ಸುದ್ದಿ ಕೇಳುವೆ ಅನಿಸಿರಲಿಲ್ಲ... ಅವರು ಇನ್ನಷ್ಟು ವರ್ಷ ಬದುಕಬೇಕಿತ್ತು ಹಾಗೂ ಇನ್ನಷ್ಟು ಬರೆಯಬೇಕಿತ್ತು...ಅವರ ಕತೆಗಳು ನಮ್ಮನ್ನು ಕಾಡುತ್ತಲೇ ಇವೆ.... ಕನ್ನಡ ಸಾಹಿತ್ಯಕ್ಕೆ ಈ ಸಾವು ನಿಜ ಅರ್ಥದಲ್ಲಿ ತುಂಬಲಾರದ ನಷ್ಟ ಸರ್... ಅಂತಿಮ ನಮನಗಳು‌ ಮೊಗಳ್ಳಿ ಗಣೇಶ್ ಅವರಿಗೆ


| Suresha B

ನಿನ್ನೆ ಮೊನ್ನೆಯವರೆಗೆ ಪರಿಚಿತರಾಗಿದ್ದವರು‌ ದಿಢೀರನೆ ಹೀಗೆ ಹೋದರು ಎಂಬ ಸುದ್ದಿ ಬಂದಾಗ ತಲ್ಲಣವಾಗುತ್ತದೆ. 😢


| ಹರಿಪ್ರಸಾದ್ ಬೇಸಾಯಿ

ಹೋಗಿ ಬನ್ನಿ ಮೊಗಳ್ಳಿ. ಮತ್ತೆ ಬಂದು ಇನ್ನೊಂದು ಬುಗುರಿ ಕತೆ ಬರೆದು ಸಾಹಿತ್ಯ ಲೋಕವನ್ನು ತಲ್ಲಣಗೊಳಿಸಿ......


| Krishnakumar

ಅಕ್ಷರ ಲೋಕದ ಚಿಲುಮೆಗಳಿಗೆ ಲಾಲ್ ಸಲಾಂ


| Shivaprakasha DR

ನಿವೃತ್ತಿಯ ನಂತರ, ಮಾಗಿದ ವಯಸ್ಸು, ವಿಚಾರಗಳ ಹರಿತದಲ್ಲಿ ಮತ್ತಷ್ಟ್ಟು ಬರವಣಿಗೆ ಹರಿಯುತ್ತದೆ ಅನ್ನುವ ನೀರೇಕ್ಷೆಯಲ್ಲಿದ್ದವರಿಗೆ ನಿರಾಸೆಯ ಬೇಗೆ ತಟ್ಟಿದೆ.ಹೇಳಬೇಕಾದ್ದನ್ನು ಹೇಳೇ ತೀರುವ ನಿಷ್ಠುರ ಬರವಣಿಗೆಯ ವ್ಯಕ್ತಿತ್ವವೊಂದು ಇನ್ನು ಮುಂದೆ ಒಂದು ರೂಪಕವಷ್ಟೇ.ದ್ವೀಪದಂತೆ ಉಳಿದು ಕನ್ನಡ ಸಾಹಿತ್ಯ ಬೆಳಗಿದ ದೀಪವೊಂದು ಆರಿದೆ. ಮೊಗಳ್ಳಿ ಅವರ ಕಥಾ ಬರವಣಿಗೆಯ ಬೆಳಕು ಮಾತ್ರ ಸದಾ ಕಾಡುತ್ತಲೇ ಇರುತ್ತದೆ. ಆಕಾಶವಾಣಿಯ ಕಥಾಕಣಜ ಸರಣಿಗೆ ಅವರ 'ನನ್ನಜ್ಜನಿಗೊಂದು ಆಸೆ ಇತ್ತು 'ಕಥೆ ಆರಿಸಿಕೊಂಡಾಗ ಕಥೆಗಾರನ ಮಾತಿಗಾಗಿ ಅವರ ಪರಿಚಯ ಸುಬ್ಬುಹೊಲೆಯರ್ ಮೂಲಕ ಆದದ್ದು, ನಂತರ ಪ್ರಕಟವಾಗುತ್ತಿದ್ದ ಅವರ ಬರವಣಿಗೆಯನ್ನು ಕುರಿತು ಫೋನಿನ ಮೂಲಕವೇ ನಡೆಯುತ್ತಿದ್ದ ಚರ್ಚೆ ಹೆಚ್ಚು ದಿನ ಮುಂದುವರಿಯಲಿಲ್ಲ. ಕಾರಣ, ದ್ವೀಪದಂಥ ನಿಮ್ಮ ಒಂಟಿತನದ ಬರವಣಿಗೆಗೆ ಜನರ ನಡುವೆ ಬೆರೆಯುವ ಸ್ಪರ್ಶ ಬೇಕಿದೆ ಅನಿಸುತ್ತದೆ. ಅದನ್ನು ನೀಗಿಕೊಂಡರೆ ನಿಮ್ಮ ವಿಚಾರ ಸಾಹಿತ್ಯ ಹಾಗೂ ವಿಮರ್ಶೆ ಮತ್ತಷ್ಟು ಶಕ್ತಿ ತುಂಬಿಕೊಳ್ಳುತ್ತದೆ ಅಂದೆ. ಈ ಮಾತು ಅವರಿಗೆ ಹಿಡಿಸದೆ ಫೋನ್ ಕರೆ ಕಟ್ ಮಾಡಿದ್ದರು. ಬೆಳವಣಿಗೆ ಹಂತದ ಆಘಾತಗಳು ವ್ಯಕ್ತಿಯನ್ನು ವ್ಯಕ್ತಿತ್ವವನ್ನು ಗಾಯಗೊಳಿಸಿರುತ್ತವೆ ಶಿವು.. ಅವು ಮಾಯಲಾರದ ವ್ರಣಗಳು. ನೀವು ಬೇಸರ ಮಾಡಿಕೊಳ್ಳಬೇಡಿ ಅಂದಿದ್ದರು ಸುಬ್ಬಣ್ಣ. ಮೊಗಳ್ಳಿಯವರ ಕಠಿಣತೆಗೆ ಅದು ಕಾರಣವೂ ಇರಬಹುದು. ನಟರಾಜ್ ಸರ್ ನಿಮ್ಮ ಅಕ್ಷರ ನಮನಕ್ಕೆ ಧನ್ಯವಾದಗಳು 🌹🙏🌹


| ಗುರು ಜಗಳೂರು

ಸರ್ ಬೇಸರವಾಯಿತು.ಸಾಯಬಾರದ ವಯಸ್ಸು.ಒಂದು ಸಮಯದಲ್ಲಿ ಸತತವಾಗಿ ಬರೆಯುತ್ತಿದ್ದ ಮೊಗಳ್ಳಿಯವರ ಸಮಗ್ರ ಕಥೆಗಳು ನನ್ನ ಕಪಾಟಿನಲ್ಲಿದೆ."ಅಗ್ನಿ ಪತ್ರಿಕೆಯಲ್ಲಿ"ಅನಂತಮೂರ್ತಿಯವರನ್ನು ತೀರ್ವ ವಿಮರ್ಶೆಯಲ್ಲಿ ಕಾಡಿದ್ದು ನೆನಪಾಯಿತು.


| Prakashmanteda

ಮನದ ಆಳದ ಸತ್ಯವು ಸಾವಿನ ಸಂದರ್ಭದಲ್ಲಿ ಮಾತ್ರ ಪ್ರಕಟವಾಗುತ್ತದೆಂಬುದೇ ಆಶ್ಚರ್ಯ . ಈ ಬರಹ ನನ್ನಲ್ಲಿ ತಣ್ಣನೆಯ ವಿಷಾದವನ್ನಷ್ಟೆ ಉಳಿಸುತ್ತದೆ......


| ಬಂಜಗೆರೆ ಜಯಪ್ರಕಾಶ

ಲೇಖನ ಬಹಳ ಅಪ್ತವಾಗಿದೆ. ಮೊಗಳ್ಳಿ ವ್ಯಕ್ತಿತ್ವದ ಗುಣ ದೋಷಗಳೆರಡನ್ನೂ ಹಂಗಿಸದೆ ಕಟ್ಟಿಕೊಟ್ಟ ರೀತಿ ಸೃಜನಾತ್ಮಕವಾಗಿದೆ. ಮೊಗಳ್ಳಿಯ ಸೃಜನಶೀಲತೆಗೆ ನಮನಗಳು.


| ದೇವಿಂದ್ರಪ್ಪ ಬಿ.ಕೆ.

ಕನ್ನಡದ ಪ್ರಮುಖ ಕಥೆಗಾರರಾದ ಮೊಗಳ್ಳಿ ಗಣೇಶ ಸರ್ ಅವರ ಬಗೆಗಿನ ನಿಮ್ಮ ಅಕ್ಷರ ನಮನ ಓದಿದೆ. ನಮ್ಮ ಸಾಹಿತ್ಯ ಲೋಕ ಇಂಥವರನ್ನು ಕಳೆದುಕೊಂಡು ಬಡವಾಗುತ್ತಿದೆ. ಯಾವ ಅಧಿಕಾರವನ್ನು ಬಯಸದೇ ತಮ್ಮ ಬರಹಗಳ ಮೂಲಕವೇ ಸಮಾಜವನ್ನು ತಿದ್ದಲು ಬಯಸಿ  ಕೊನೆಗೆ ಮನನೊಂದು ಎಲ್ಲದಕ್ಕೂ ನಮಸ್ಕಾರ ಹೇಳಿ ಹೋಗಿ ಬಿಟ್ಟರು. ಅವರು ಇಲ್ಲಿಂದ ನಿರ್ಗಮಿಸಿದರೂ ಅವರ ಬರಹಗಳು ಮತ್ತೆ ಅವರನ್ನು ಜೀವಂತವಾಗಿ ಇರಿಸುತ್ತವೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಅವರನ್ನು ತೀರಾ ಹತ್ತಿರದಿಂದ ನೋಡಿದ್ದೆ ಮಾತನಾಡಿಸುವ ಧೈರ್ಯವಾಗಲಿ ಬರಲಿಲ್ಲ. ಕಾರಣ ಅವರ ಬಗ್ಗೆ ಈಗಾಗಲೇ ವಿವಿಯಲ್ಲಿ ಹಬ್ಬಿದ ಅನಿರೀಕ್ಷಿತ ವಿಚಾರಗಳು. ಹಿರಿಯ ಸಂಶೋಧನಾ ವಿದ್ಯಾರ್ಥಿಗಳು ಅವರಿಂದ ಏನನ್ನೋ ನಿರೀಕ್ಷೆ ಇಟ್ಟುಕೊಂಡು ಹೋದಾಗ ಅದು ಈಡೇರದೇ ಇದ್ದಾಗ ಅವರ ಬಗ್ಗೆ ಅನೇಕ ಗಾಸಿಪ್ ಗಳು ಚಾಲ್ತಿಯಲ್ಲಿದ್ದವು. ಕೊನೆಗೆ ಅವರು ತಮ್ಮ ಪಾಡಿಗೆ ತಾವು ಒಂದು ದ್ವೀಪದ ರೀತಿಯಲ್ಲಿ ಇರದೇ  ಮುಕ್ತವಾಗಿ ಸಮಾಜದೊಂದಿಗೆ  ಬೆರೆತುಕೊಂಡಿದ್ದರೆ ಎಲ್ಲದಕ್ಕೂ ಉತ್ತರ ಸಿಕ್ಕಿರುತ್ತಿತ್ತು ಏನೋ. ಈಗ ಅವರೇ ಇಲ್ಲ. ಎಲ್ಲ ಪ್ರಶ್ನೆಗಳು ನಮ್ಮಲ್ಲೇ ಉಳಿದಿವೆ.


| ಡಾ. ನಿರಂಜನ ಮೂರ್ತಿ ಬಿ ಎಂ

ಮೊಗಳ್ಳಿಯವರಿಗೆ ಸಲ್ಲಿಸಿದ ಹುಳಿಯಾರರ ವಿದಾಯ ನುಡಿನಮನಕ್ಕೆ ನಮನಗಳು. ಮೊಗಳ್ಳಿಯವರು ಇಷ್ಟು ಬೇಗನೆ ಮರೆಯಾಗಿರುವುದು ತುಂಬಾ ನೋವಿನ ಸಂಗತಿ. ಮರೆಯಾಗಿ ಹೋದರೂ ಮರೆಯಲಾಗದ ತಮ್ಮ ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಾರೆ ಮೊಗಳ್ಳಿಯವರು. ವಿಷಯ ತಿಳಿದಾಕ್ಷಣಕ್ಕೆ, ಹುಳಿಯಾರ್ ಮತ್ತು ಮೊಗಳ್ಳಿಯವರೊಡನೆ ದ್ಯಾಮಪ್ಪ ಮತ್ತು ನಾನು ಒಮ್ಮೆ ದಾವಣಗೆರೆಯಲ್ಲಿ ಸಂಧ್ಯಾಕೂಟದಲ್ಲಿ ಜೊತೆಯಾಗಿ ಹರಟಿದ್ದು ನೆನಪಾಗಿ, ಮನಸ್ಸು ಭಾರವಾಯಿತು. ಇನ್ನೂ ಸ್ವಲ್ಪ ಕಾಲ ಅವರು ಬದುಕಿದ್ದು, ಅವರ ಪರಿಪಕ್ವ ಲೇಖನಿಯಿಂದ ಇನ್ನಷ್ಟು ಕಥೆ-ಕವನಗಳನ್ನೊಳಗೊಂಡ ಮೌಲ್ಯಯುತ ಸಾಹಿತ್ಯ ಹೊರಬರಬೇಕಿತ್ತು ಮತ್ತು ಸಮಾಜಕ್ಕೆ ಬೆಳಕಾಗಿ ದಾರಿತೋರಬೇಕಿತ್ತು. ಹಾಗಾಗಲಿಲ್ಲವೆಂಬುದು ತೀವ್ರ ವೇದನೆಯ ವಿಷಯ. ಈ ನೋವಿನಲ್ಲಿಯೇ ಮೊಗಳ್ಳಿಯವರಿಗೆ ವಿದಾಯದ ನಮನಗಳು.




Add Comment


Nataraj Huliyar on Book Prize Awardees

YouTube






Recent Posts

Latest Blogs