ಸ್ವಂತದ ಬಗ್ಗೆ ಬರೆಯುವುದು

ಸ್ವಂತದ ಬಗ್ಗೆ ಬರೆಯುವುದು ಕಷ್ಟ ಎನ್ನುವುದು ನನ್ನ ಅನುಭವ. ಆದ್ದರಿಂದಲೋ ಏನೋ, ಸಣ್ಣ ಸಣ್ಣ ವಯಸ್ಸಿನಲ್ಲೇ ಆತ್ಮಚರಿತ್ರೆ ಬರೆದು ಪ್ರಕಟಿಸುವವರನ್ನು ಕಂಡು ವಿಸ್ಮಯವಾಗುತ್ತದೆ. ಆತ್ಮಚರಿತ್ರೆಗಳ ಬಗ್ಗೆ ಸಲೀಸಾಗಿ ವಿಮರ್ಶೆ, ಪ್ರತಿಕ್ರಿಯೆ ಬರೆಯುವವರ ಬಗೆಗೂ ಅಷ್ಟೇ ಅಚ್ಚರಿಯಾಗುತ್ತದೆ. ಕಾರಣ: ಎಷ್ಟೋ ಸಲ ಇನ್ನೊಬ್ಬರ ಆತ್ಮಚರಿತ್ರೆಯ ಬಗ್ಗೆ ವಿಮರ್ಶೆ ಬರೆಯುವವರು ತಮ್ಮ ಆತ್ಮಚರಿತ್ರೆ ಬರೆಯಲು ಶುರು ಮಾಡಿರುತ್ತಾರೆ! ಆತ್ಮಚರಿತ್ರಾತ್ಮಕ ಬರವಣಿಗೆಗಳನ್ನು ಕುರಿತು ಮಾತಾಡುವವರ ವೈಖರಿ, ಅವುಗಳಿಗೆ ಪ್ರತಿಕ್ರಿಯಿಸುವವರ ಭಾಷೆ, ಧೋರಣೆ ಒಮ್ಮೊಮ್ಮೆ ನಗೆ ಉಕ್ಕಿಸುವಂತಿರುತ್ತದೆ. 

ಅಂಥದೊಂದು ಪ್ರಸಂಗ: 

ಕೆಲವು ವರ್ಷಗಳ ಕೆಳಗೆ ಲೇಖಕರೊಬ್ಬರು ತೀರಿಕೊಂಡ ನಂತರ ಅವರ ಪತ್ನಿ ತಮ್ಮ ಪತಿಯನ್ನು ಕುರಿತ ನೆನಪುಗಳ ಪುಸ್ತಕವನ್ನು ಬರೆದು ಪ್ರಕಟಿಸಿದರು. ಆಗ ಈ ಪುಸ್ತಕವನ್ನು ಪತ್ರಿಕೆಯೊಂದರಲ್ಲಿ ಪರಿಚಯಿಸಿದ್ದ ಲೇಖಕರೊಬ್ಬರು, ಕಳೆದ ವರ್ಷ ತೀರಿಕೊಂಡ ಮತ್ತೊಬ್ಬ ಲೇಖಕ 'ಚಂದ್ರಕೀರ್ತಿ’ಯವರ ಪತ್ನಿಗೆ ಒಂದು ಉಚಿತ ಸುಪಾರಿ ಸಲಹೆ ಕೊಟ್ಟರು: 'ನೀವು ನಿಮ್ಮ ನೆನಪುಗಳನ್ನು ಬರೆಯಿರಿ; ಆಗ 'ಚಂದ್ರಕೀರ್ತಿ’ಯವರ ಬಗ್ಗೆ ನಾವು ಈವರೆಗೆ ಕಾಣದಿರುವ ಮುಖಗಳು ಕಾಣುತ್ತವೆ.’ 

ಈ ಸಲಹೆ ಓದಿದಾಗ ನನಗೂ ಒಂದು ಸಲಹೆ ಕೊಡಬೇಕೆನ್ನಿಸಿತು: ಈ ಥರದ ಉಚಿತಾನುಚಿತ ಸಲಹೆ ಕೊಟ್ಟಿರುವ ಸದರಿ ಲೇಖಕ ತನ್ನ ಸ್ವಂತ ಪತ್ನಿಗೆ ಈಗಲೇ ಸುಪಾರಿ ಕೊಟ್ಟು, ಸ್ವತಃ ತಾನು ’ಕಾಣದ’ ಮುಖಗಳನ್ನು ಬರೆಯಲು ಕೇಳಿಕೊಳ್ಳುವುದು ಒಳ್ಳೆಯದಲ್ಲವೆ! ತನ್ಮೂಲಕ ಈ ಲೇಖಕ ತಾನು ಕಾಣದ ತನ್ನ ಅಗೋಚರ ವ್ಯಕ್ತಿತ್ವವನ್ನು ತನ್ನ ಪತ್ನಿಯ ಮೂಲಕ ಕಂಡುಕೊಂಡು ಬದುಕಿದ್ದಾಗಲೇ ಆನಂದಪಡುವುದು ಅಥವಾ ದುಃಖಪಡುವುದು ಲಾಭಕರವಲ್ಲವೆ! 

ಲೇಖಕಿ ಅಥವಾ ಲೇಖಕ ತನ್ನ ಸ್ವಂತವನ್ನು ಅಥವಾ ಸೆಲ್ಫ್ ಅನ್ನು ಶೋಧಿಸಿಕೊಂಡು ಬರೆಯುವ ‘ಆಟೋಬಯಾಗ್ರಫಿ’ ಪ್ರಕಾರ ಇಂಗ್ಲಿಷಿನಿಂದ ಭಾರತೀಯ ಭಾಷೆಗಳಿಗೆ ಬಂತೋ ಅಥವಾ ಮೊಘಲ್ ದೊರೆ ಬಾಬರ್ ಬರೆದ 'ಬಾಬರ್ ನಾಮಾ’ ಥರದ ಬರವಣಿಗೆಗಳಿಂದ ಭಾರತೀಯರಿಗೆ ಹೆಚ್ಚು ಪರಿಚಿತವಾಯಿತೋ ಹೇಳುವುದು ಕಷ್ಟ. ತೊಂಬತ್ತು ಪುಟಗಳ 'ಬಾಬರ್ ನಾಮಾ’ ಕುರಿತು ಲಂಕೇಶರು ೧೯೯೧ರಲ್ಲಿ ಬರೆದ ’ಬಾಬರ್’ ಎಂಬ ಟೀಕೆ ಟಿಪ್ಪಣಿ ಓದಿದಾಗ  'ಬಾಬರ್ ನಾಮಾ’ ಭಾರತದ ಆತ್ಮಚರಿತ್ರೆಯ ಆರಂಭದ ಮುಖ್ಯ ಮಾದರಿಯಂತೆ ಕಂಡಿತ್ತು. ಈ ಟೀಕೆಟಿಪ್ಪಣಿಯನ್ನು ಗೆಳೆಯ ರಿಷಿಕೇಶ್ ಬಹದ್ದೂರ್ ’ದ ಸೋರ್ ಮ್ಯಾಂಗೋ ಟ್ರೀ’ ಸಂಕಲನಕ್ಕಾಗಿ ಇಂಗ್ಲಿಷಿಗೆ ಅನುವಾದಿಸಿದಾಗ ಆತ್ಮಚರಿತ್ರೆಯ ಪ್ರಾಮಾಣಿಕ ಬರವಣಿಗೆ ಬಾಬರ್ ಗೆ ಸಹಜವಾಗಿ ಒಗ್ಗಿರುವುದನ್ನು ಮತ್ತೆ ಗಮನಿಸಿದೆ. ಆತ್ಮಚರಿತ್ರೆಯ ಪ್ರಕಾರ ಬಾಬರ್ ಗೆ ಒಲಿದಿರುವ ರೀತಿಯನ್ನು ಕನ್ನಡ ಜಾಣಜಾಣೆಯರಿಗೆ ತೋರಿಸಿದ ಲಂಕೇಶರ ಟೀಕೆ ಟಿಪ್ಪಣಿಯ ಶಕ್ತಿ ಕೂಡ ಅಷ್ಟೇ ಮಹತ್ವದ್ದು ಎನ್ನಿಸಿತು. 

ಇದಾದ ಕೆಲವು ವರ್ಷಗಳ ನಂತರ, ೧೯೯೭ರಲ್ಲಿ ಲಂಕೇಶ್ 'ಹುಳಿಮಾವಿನ ಮರ’ ಆತ್ಮಕತೆ ಬರೆದರು. ಇಂಗ್ಲಿಷಿನ ’ಆಟೋಬಯಾಗ್ರಫಿ’ ಪ್ರಕಾರ ಸೃಷ್ಟಿಸಿದ ಮಾದರಿಗೆ ಅತ್ಯಂತ ಹತ್ತಿರವಿರುವ ಕನ್ನಡ ಆತ್ಮಚರಿತ್ರೆಯೆಂದರೆ 'ಹುಳಿಮಾವಿನ ಮರ’ ಎಂದು ನನಗೆ ಇವತ್ತಿಗೂ ಅನ್ನಿಸುತ್ತದೆ. ಆತ್ಮಚರಿತ್ರೆಗಳ ಬಗ್ಗೆ ಈಚಿನ ಪ್ರತಿಕ್ರಿಯೆಯೊಂದನ್ನು ನೋಡುತ್ತಿದ್ದಾಗ, ಲಂಕೇಶರ ಆತ್ಮಚರಿತ್ರೆ ಪ್ರಕಟವಾದಾಗ ಕೇಳಿಬಂದ ಕೆಲವು ಗೊಣಗುಗಳು ನೆನಪಾದವು: 

ಲಂಕೇಶರ ಆತ್ಮಚರಿತ್ರೆಯಲ್ಲಿ 'ನನ್ನ ಹೆಸರಿಲ್ಲ’; 'ನಾನು ಲಂಕೇಶ್‌ಗೆ ಅಷ್ಟು ಹತ್ತಿರವಾಗಿದ್ದೆ, ನನ್ನ ಬಗ್ಗೆ ಬರೆದಿಲ್ಲ’; 'ನಾನು ಲಂಕೇಶ್‌ಗೆ ಬ್ಯಾಂಕಿನಲ್ಲಿ ಸಾಲ ಕೊಡಿಸಿದ್ದೆ. ಅದರ ಬಗ್ಗೆ ಲಂಕೇಶ್ ಬರೆದೇ ಇಲ್ಲ…’ ಇತ್ಯಾದಿಯಾಗಿ ಕೆಲವರು ಗೊಣಗಿದ್ದರು. ಆ ಕಾಲದಲ್ಲಿ ನಾನು ಬರೆದ 'ಆತ್ಮಚರಿತ್ರೆಯ ಆತ್ಮ’ ಎಂಬ ಟಿಪ್ಪಣಿಯೊಂದರಲ್ಲಿ ಇಂಥ ಪ್ರತಿಕ್ರಿಯೆಗಳನ್ನು ಕುರಿತು ಪ್ರತಿಕ್ರಿಯೆ ಬರೆದ ನೆನಪು: ಆತ್ಮಚರಿತ್ರೆ ಬರೆದವರ ಆತ್ಮಕ್ಕೆ ಹತ್ತಿರವಾಗಿರುವ ಸಂಗತಿಗಳು ಮಾತ್ರ ಅವರ ಆತ್ಮಚರಿತ್ರೆಯಲ್ಲಿ ಬರುತ್ತವೆ; ನೀವು ಲೇಖಕನೊಬ್ಬನ ಆತ್ಮಕ್ಕೆ ತಲುಪಿಯೇ ಇಲ್ಲ ಎಂದರೆ, ಅವನ ಆತ್ಮಚರಿತ್ರೆಯಲ್ಲಿ ನೀವು ಬರುವ ಸಂಭವವೇ ಇರುವುದಿಲ್ಲ, ಅಲ್ಲವೆ?

ಮೊನ್ನೆ ಗೆಳೆಯನೊಬ್ಬ ತನ್ನ ವಾರಿಗೆಯ ಲೇಖಕನೊಬ್ಬ ಬರೆದ ಆತ್ಮಚರಿತ್ರೆಯೊಂದಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿ ನೋಡಿದಾಗ ಲಂಕೇಶರ 'ಹುಳಿಮಾವಿನ ಮರ’ದ ಬಗ್ಗೆ ನಾನು ಬರೆದ ಆ ಟಿಪ್ಪಣಿ ಮತ್ತೆ ಮನಸ್ಸಿಗೆ ಬಂತು. ಈ ಗೆಳೆಯನ ಹೆಸರು 'ರಾಜು’ ಎಂದಿಟ್ಟುಕೊಳ್ಳೋಣ. ಅವತ್ತು ರಾಜು ಚರ್ಚಿಸುತ್ತಿದ್ದ ಆತ್ಮಚರಿತ್ರೆಯನ್ನು ಬರೆದಿದ್ದ ಲೇಖಕ ಹುಬ್ಬಳ್ಳಿಯಲ್ಲಿದ್ದ; ರಾಜು ಕೂಡ ಆಗ ಹುಬ್ಬಳ್ಳಿಯಲ್ಲಿದ್ದ.  ಇಬ್ಬರೂ ಪರಿಚಿತರು. ಆದರೆ ಸದರಿ ಲೇಖಕ ಹುಬ್ಬಳ್ಳಿಯಲ್ಲಿದ್ದ ಕಾಲವನ್ನು ಕುರಿತು ಬರೆದದ್ದರಲ್ಲಿ ರಾಜುವಿಗೆ ಕೆಲವು ದೋಷಗಳು ಕಾಣಿಸಿದವು: ಉದಾಹರಣೆಗೆ, ಐದು ವರ್ಷ ತನ್ನನ್ನು ಸಾಕಿದ್ದ ಹುಬ್ಬಳ್ಳಿಯ ಬಗ್ಗೆ ಈತ ಎರಡೇ ಎರಡು ಪ್ಯಾರಾ ಮಾತ್ರ ಬರೆದಿದ್ದಾನೆ. ತನಗೆ ಕೆಲಸ ಕೊಡಿಸಲು ನೆರವಾದ 'ಪುಟ್ಟಪ್ಪ’ ಹಾಗೂ 'ಚಂದ್ರಪ್ಪ’ನವರ ಬಗ್ಗೆ ಅವನ ಆತ್ಮಚರಿತ್ರೆಯಲ್ಲಿ ಒಂದು ಕೃತಜ್ಞತೆಯ ಸಾಲು ಕೂಡ ಇಲ್ಲ… ಇತ್ಯಾದಿ. 

ಬರೆವ ವ್ಯಕ್ತಿಯ ಆತ್ಮವನ್ನು ಸೋಕದ ವಿಚಾರಗಳು ಆತನ ಆತ್ಮಚರಿತ್ರೆಯಲ್ಲಿ, ಅದರಲ್ಲೂ ಅದನ್ನು ಬರೆಯುವ ಕಾಲದಲ್ಲಿ, ಬರಬೇಕಾಗಿತ್ತೆಂದು ಇತರರು ಹುಡುಕುವುದರಲ್ಲಿ ಅರ್ಥವೇನಿದೆ ಎಂಬ ಪ್ರಶ್ನೆ ಈಗ ಮತ್ತೆ ಎದುರಾಯಿತು. ಹಿಂದೊಮ್ಮೆ ವಿ.ಎಸ್. ನಯಪಾಲ್ ಎಂ.ಕೆ. ಗಾಂಧಿಯವರ ಆತ್ಮಚರಿತ್ರೆ 'ಮೈ ಎಕ್ಸ್‌ಪರಿಮೆಂಟ್ ವಿತ್ ಟ್ರೂತ್’ ಆರ್ 'ದ ಸ್ಟೋರಿ ಆಫ್ ಮೈ ಲೈಫ್’ ಕುರಿತು ಎತ್ತಿದ ಪ್ರಶ್ನೆಗಳ ಸಂದರ್ಭದಲ್ಲೂ ಹೀಗೆನ್ನಿಸಿತ್ತು. ಮೋಹನದಾಸ್ ಕರಮಚಂದ ಗಾಂಧಿ ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ಪ್ರತಿ ವಾರ 'ನವಜೀವನ’ ಪತ್ರಿಕೆಯಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಆತ್ಮಚರಿತ್ರೆಯಲ್ಲಿ ಸರಳ ಹಾಗೂ ಸತ್ಯದ ಬರವಣಿಗೆಯ ಮಾದರಿಯನ್ನು ಸೃಷ್ಟಿಸಿದರು. ಯಾರಾದರೂ ಬರವಣಿಗೆ ಕಲಿಯಲು ಇದು ಒಳ್ಳೆಯ ಆರಂಭದ ಮಾಡೆಲ್ ಕೂಡ.

ಆದರೆ ಮುಂದೆ ನಯಪಾಲ್‌ಗೆ ಈ ಆತ್ಮಚರಿತ್ರೆಯಲ್ಲಿ ಒಂದು ಮುಖ್ಯ ದೋಷ ಕಂಡಿತು: ಎಷ್ಟೋ ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದ ಗಾಂಧಿ ಅಲ್ಲಿನ ಲ್ಯಾಂಡ್‌ಸ್ಕೇಪ್‌ಗಳ ಬಗ್ಗೆ ಒಂದು ಸಾಲನ್ನೂ ಬರೆದಿಲ್ಲ; ಅವರು ಅಷ್ಟೊಂದು ತಮ್ಮೊಳಗೇ ಹೂತು ಹೋಗಿದ್ದರು ಎಂಬರ್ಥದ ಮಾತುಗಳನ್ನು ನಯಪಾಲ್ ತಮ್ಮ ‘ಇಂಡಿಯಾ: ಎ ವೂಂಡೆಡ್ ಸಿವಿಲೈಸೇಶನ್’ ಪುಸ್ತಕದಲ್ಲಿ ಬರೆದಿದ್ದರು. ಅದನ್ನು ಓದಿದಾಗ, ‘ಅರೆ! ಮೋಹನದಾಸ ಕರಮಚಂದ ಗಾಂಧಿ ತನ್ನನ್ನು ತಾನು ಕಂಡುಕೊಳ್ಳಲು, ತಾನು ಯಾರು ಎಂಬುದನ್ನು ಹುಡುಕಿಕೊಳ್ಳಲು ಈ ಆತ್ಮಚರಿತ್ರೆ ಬರೆದಿದ್ದಾರೆ; ಆದರೆ ಅಂಥ ದೊಡ್ಡ ಲೇಖಕ ನಯಪಾಲ್‌ಗೆ- ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಈ ಕೆರಿಬಿಯನ್ ಲೇಖಕನಿಗೆ- ಕೂಡ ಆತ್ಮಚರಿತ್ರೆಯ ಬರವಣಿಗೆಯ ಸೂಕ್ಷ್ಮಗಳು ಹೊಳೆಯಲಿಲ್ಲವಲ್ಲ!’ ಎಂದು ಸೋಜಿಗವಾಯಿತು.  ತನ್ನ ವ್ಯಕ್ತಿತ್ವದ 'ಇನ್ ಸ್ಕೇಪ್' ಹುಡುಕುತ್ತಿದ್ದ ಲೇಖಕನಿಗೆ ಹೊರಗಿನ ಲ್ಯಾಂಡ್‌ಸ್ಕೇಪ್ ಅಷ್ಟು ಮುಖ್ಯ ಅನ್ನಿಸದಿದ್ದರೆ ಅದು ಸಹಜವೇ!

ಅದೇನೇ ಇರಲಿ, ಲೇಖಕ, ಲೇಖಕಿಯರು ಬರವಣಿಗೆಯ ಸ್ಟಾರ್ಟಿಂಗ್ ಟ್ರಬಲ್ ಬಗ್ಗೆ ಮಾತಾಡಿದಾಗ ನಾನು ಕೊಡುವ ಸಲಹೆ: 'ಬರೇ ಪ್ರಾಕ್ಟೀಸಿಗಾದರೂ ಪರವಾಗಿಲ್ಲ; ನಿಮ್ಮ ಅನುಭವದ ವಿವರಗಳನ್ನೇ ಬರೆಯಲು ಪ್ರಯತ್ನಿಸಿ. ಅದನ್ನೆಲ್ಲ ಪ್ರಕಟಿಸದಿದ್ದರೂ ಪರವಾಯಿಲ್ಲ.’ ಯಾಕೆಂದರೆ, ಸ್ವಂತದ ಬಗ್ಗೆ ಬರೆಯತೊಡಗಿದಾಗ ನೆನಪುಗಳು ಉಕ್ಕಿ ಹರಿದು ಬಂದು- ಅಥವಾ ಕವಿ ವರ್ಡ್ಸ್‌ವರ್ತ್ ಹೇಳುವಂತೆ ’ಶಕ್ತ ಭಾವನೆಗಳ ಸಹಜ ಉಕ್ಕುವಿಕೆ’ ಆಗಿ- ನಮ್ಮ ಕೈ ಬರವಣಿಗೆಗೆ ಕುದುರಿಕೊಳ್ಳತೊಡಗುತ್ತದೆ.  ತುಂಬಾಡಿ ರಾಮಯ್ಯನವರು ಒಂದು ಕಾಲದಲ್ಲಿ ಇದ್ದಕ್ಕಿದ್ದಂತೆ ತಮ್ಮ ಅನುಭವದ ಬಗ್ಗೆ ಗೆಳೆಯರೊಡನೆ ಮಾತಾಡುತ್ತಲೇ ಬರವಣಿಗೆಗೆ ಕುದುರಿಕೊಂಡಿದ್ದು ಹೀಗೇ ಎಂಬುದನ್ನು ಗಮನಿಸಿದ್ದೇನೆ.  

ರಾಮಯ್ಯನವರ 'ಮಣೆಗಾರ’ ಆತ್ಮಕತೆಯ ಆರಂಭದ ಪ್ರಯತ್ನ, ಆವರೆಗೆ ’ಸಾಹಿತ್ಯ’ ಎನ್ನುವುದನ್ನು ಎಂದೂ ಬರೆಯದೇ ಇದ್ದ ಅಧಿಕಾರಿಯೊಬ್ಬ ಆತ್ಮಕತೆಯ ಮೂಲಕವೇ ಲೇಖಕನಾದ ಪರಿಯನ್ನೂ ಹೇಳುತ್ತದೆ. ಆತ್ಮಚರಿತ್ರೆ ಪ್ರತಿ ವ್ಯಕ್ತಿಯ ಒಳಗಿರುವ ಕತೆ ಹೇಳುವ ಎನರ್ಜಿಯನ್ನು ರಿಲೀಸ್ ಮಾಡಬಲ್ಲದು. ಆದ್ದರಿಂದಲೇ ಬರೆಯಲು ತೊಡಕಾದಾಗ ಕೊನೆಯ ಪಕ್ಷ ನಿಮ್ಮ ಕತೆಯನ್ನು ನಿಮಗೇ ಹೇಳಿಕೊಳ್ಳಲು ಪ್ರಯತ್ನಿಸಿ; ಮೊಂಡು ಹಿಡಿದಿರುವ ಬರವಣಿಗೆ ಸರಾಗವಾಗಿ ಹುಟ್ಟಬಹುದು ಎಂದು ನಾನು ಹೇಳಿದ್ದು. ಗೆಳೆಯರೊಬ್ಬರಿಗೆ ಮರೆವಿನ ಕಾಯಿಲೆ ಬಂದಾಗ ನಾನು ಅವರಿಗೆ ಕೊಟ್ಟ ಸಲಹೆ ಕೂಡ ಇದೇ. ಅವರು ಈ ನಿಟ್ಟಿನಲ್ಲಿ ಒಂಚೂರು ಪ್ರಯತ್ನ ಮಾಡಿದಾಗ ಅವರ ನೆನಪು ಅಷ್ಟಿಷ್ಟು ಮರಳಿ ಬಂದದ್ದೂ ಇದೆ. 

ಬರೆಯಲು ಆಗುತ್ತಿಲ್ಲ ಎಂದು ಚಡಪಡಿಸುವವರು ಸ್ವಂತದ ಬಗ್ಗೆ ಬರೆಯುವ ನಿಷ್ಠುರ ಸವಾಲನ್ನು ಕೈಗೆತ್ತಿಕೊಂಡರೆ ಬರವಣಿಗೆ ಕೇವಲ ಚಿಮ್ಮುವುದಷ್ಟೇ ಅಲ್ಲ, ಅದು ಪ್ರಾಮಾಣಿಕವಾಗಿಯೂ ಚಿಮ್ಮತ್ತಿದೆಯೋ ಎಂದು ಸ್ವ-ಪರೀಕ್ಷೆ ಮಾಡಿಕೊಳ್ಳುವ ಅವಕಾಶ ಕೂಡ ಸೃಷ್ಟಿಯಾಗಬಹುದು. ಬರವಣಿಗೆಯ ಸುಳ್ಳು, ನಿಜಗಳ ಪರೀಕ್ಷೆ ಅತ್ಯಂತ ಸವಾಲಿನದು. ಆದರೆ ಪ್ರಾಮಾಣಿಕವಾಗಿ ಒಂದು ಡೈರಿ ಬರೆದುಕೊಳ್ಳುವುದು, ಬರೆದಿಡುವುದು ಕೂಡ ಕಷ್ಟವಾಗಿರುವ ಸಮಾಜದಲ್ಲಿ ಇಂಥ ಬರವಣಿಗೆಯ ಕಷ್ಟಗಳು ಕೂಡ ಅಸಂಖ್ಯ. 

ಹತ್ತೊಂಬತ್ತನೆಯ ಶತಮಾನದಲ್ಲಿ ಇಂಗ್ಲಿಷ್ ಕವಿ ಕೋಲರಿಜ್ ತಾನು ನಿತ್ಯ ಓದಿದ್ದನ್ನು, ಯೋಚಿಸಿದ್ದನ್ನು ಬರೆದಿಡುತ್ತಿದ್ದ ಜರ್ನಲ್ ನನ್ನ ಕಿಂಡಲ್ ಸಂಗ್ರಹದಲ್ಲಿದೆ. ಇಂಥ ಜರ್ನಲ್ ಬರವಣಿಗೆ ಪಶ್ಚಿಮದ ಲೇಖಕರಲ್ಲಿ ತೀರಾ ಸಾಮಾನ್ಯ. ಇದು ’ಸ್ವಂತ’ದ ಬರವಣಿಗೆಯಾದರೂ ತೀರಾ ಖಾಸಗಿ ಅಲ್ಲ. ಬರೆಯುವ ಅಸಲಿ ಚಡಪಡಿಕೆ ಉಳ್ಳವರು ಇಂಥ ಜರ್ನಲ್ಲುಗಳಲ್ಲಿ ತಾವು ಕಂಡ, ಓದಿದ, ಕೇಳಿದ,  ಎಲ್ಲದರ ಬಗೆಗೂ ತಮ್ಮ ಸ್ಪಂದನವನ್ನು ದಾಖಲಿಸುವುದು ಅವರವರ ಮಾತು, ಬರಹ, ಟೀಚಿಂಗ್, ಚರ್ಚೆ, ಪತ್ರಿಕೋದ್ಯಮ, ಭಾಷಣ ಹಾಗೂ ನಿರಂತರ ಬೌದ್ಧಿಕ ಬೆಳವಣಿಗೆ… ಎಲ್ಲದಕ್ಕೂ ನೆರವಾಗಬಲ್ಲದು. 

Share on:

Comments

13 Comments



| ಹರಿಪ್ರಸಾದ್

ಕೇವಲ ಅದ್ಭುತ ಸಾ


| Gangadhara BM

ನಮಸ್ತೆ ಸರ್. ಇಂದಿನ ಲೇಖನವು, ಓದಲು ಆಸಕ್ತಿ ಮೂಡಿಸುವ ಬರಹ. ಬರೆಯಲು ಕಲಿಸುವ ಬರಹ. ಸ್ವಂತ ದ ಬಗ್ಗೆ ಬರೆದು ನಿರ್ಬಿಡೆಯಿಂದ ಪ್ರಕಟಿಸುವವರಿಗೆ ಎಚ್ಚರಿಕೆಯ ಬರಹ. ಹಲವು ಹೊಸ ಸಂಗತಿ ಮತ್ತು ವಿಚಾರ ತಿಳಿಸುವ ಬರಹ.‌ ಧನ್ಯವಾದಗಳು ಸರ್


| ಕಾವ್ಯ

ನಾವು ನಮಗೇ ಸಿಗದೆ ಕಳೆದು ಹೋಗಿರುವ ಇಂತಹ ಸಂದರ್ಭದಲ್ಲಿ ಈ ಅನುಭವ ಜನ್ಯ ಬರವಣಿಗೆಯ ಅಭ್ಯಾಸ ನಮ್ಮನ್ನು ನಮಗೆ ಹುಡುಕಿಕೊಡಬಹುದೇನೋ ಎಂಬ ಭರವಸೆ ಮೂಡಿಸಿದೆ ಈ ಲೇಖನ.


| sanganagouda

ಸರ್, ಇನ್‍ಸ್ಕೇಪ್ ಮತ್ತು ಲ್ಯಾಂಡ್ ‍ಸ್ಕೇಪ್ ಎರಡು ಪದಗಳಲ್ಲಿ ಒಂದು ಹೇಳಲೇಬೇಕಾದ್ದು, ಇನ್ನೊಂದು ಹೇಳಿದರಾಯ್ತು ಎನ್ನುವಂತಿದೆ..


| ಮಂಜುನಾಥ್ ಸಿ ನೆಟ್ಕಲ್

ಸ್ವಂತ ಅನುಭವ ಬರೆಯಲು ತೊಡಗಿರುವವರಿಗೆ ಬರವಣಿಗೆ ಸಲೀಸಾಗಿ ಸಾಗುತ್ತದೆ ಎಂಬ ಮಾತಿಗೆ ನನ್ನ ಸಹಮತವಿದೆ ಸರ್....ಇದು ಸ್ವಾನುಭವ ಸಹ. ಬರೆವ ತುಡಿತ ಇದ್ದೂ ಬರೆಯಲು ಹಿಂಜರಿಯುವ ಬಹುತೇಕರಿಗೆ ಆತ್ಮ ವಿಶ್ವಾಸ ತುಂಬುವ ಈ ಬರಹ ಬರೆದಿದ್ದಕ್ಕೆ ಧನ್ಯವಾದಗಳು...... ನಮ್ಮ ಆತ್ಮ ಚರಿತ್ರೆ ಬರೆದರೂ ಅದನ್ನು ನಾವು ಮಾತ್ರ ಓದಿ ಕೊಂಡರೆ ಸಾಕು... ನಾವು ಎಂದಾದರೂ ಮಹತ್ವದ ಸಾಧನೆ ಸಮಾಜಕ್ಕೆ ಉಪಯುಕ್ತವಾದರೆ ಆಗ ಬೇರೆಯವರು ಓದಬಹುದು


| Tumbadiramaiah

ಸರ್, ಧನ್ಯವಾದಗಳು


| Tumbadiramaiah

ಸರ್, ಧನ್ಯವಾದಗಳು


| Aiyasha

ಬರಹಗಳೇ ಹಾಗೆ. ಕೆಲವೊಮ್ಮೆ ಹೇಳಿಕೊಳ್ಳಲು ಆಗದೆ .ಇರುವಂತದ್ದು


| ರಾಜಣ್ಣ ತಗ್ಗಿ

ನಮಸ್ತೆ ಸರ್ ತಮ್ಮ “ಸ್ವಂತದ ಬದ್ಗೆ ಬರೆಯುವ” ಲೇಖನ ಓದಿದೆ. ಆತ್ಮಕತೆಗಳ ಬಗ್ಗೆ ಬಹಳ ವಿಶೇಷ ಸಂಗತಿಗಳನ್ನು ತಿಳಿಸಿರುವುದು ತುಂಬ ಇಷ್ಟವಾಯಿತು ಸರ್. ತೇಜಸ್ವಿ ಅವರ ಕತೆಗಳಲ್ಲಿ ಪಾತ್ರಗಳು ಲೇಖಕನನ್ನು ಮಾತಾಡಿಸಿದಂತೆ ಆತ್ಮಕತೆಗಳಲ್ಲಿ ಪಾತ್ರಗಳಾಗದವರು ಮಾತಾಡಿಸುವ ಪರಿ ಸೊಗಸಾಗಿದೆ. ತುಂಬ ವಿಶಿಷ್ಟ ಬರಹ ಸರ್ ಧನ್ಯವಾದಗಳು ಸರ್


| ಕುಸುಮ ಬಿ. ಎಂ

ಆತ್ಮಕಥನಗಳಲ್ಲಿ ಮುಖ್ಯವಾಗುವ ಅನುಭವದ ಆಯ್ಕೆ, ನಿವೇದನೆಯ ಸ್ವರೂಪ, ನಿರೂಪಣೆಯ ಸವಾಲಿನ ಜೊತೆಗೆ ಓದುಗನ ಬಾದ್ಯತೆಯನ್ನು ಸೇರಿಸಿ ವಿವರಿಸುವುದು. ಸಾಂಸ್ಕೃತಿಕ ಚರಿತ್ರೆಯೊಂದರ ಅನಾವರಣವಾಗಿ ಭಾಸವಾಗುತ್ತದೆ ಸರ್


| ಡಾ. ನಿರಂಜನ ಮೂರ್ತಿ ಬಿ ಎಂ

ಆತ್ಮಕತೆಯಂತಹ ಒಂದು ಆಸಕ್ತಿಕರ ವಿಷಯದ ಬಗೆಗಿನ ಬರವಣಿಗೆ ಕುತೂಹಲಭರಿತವಾಗಿದೆ.ಸ್ವಂತದ ಬಗ್ಗೆ ಬರೆಯುತ್ತಾ ಬರವಣಿಗೆಯನ್ನು ರೂಢಿಸಿಕೊಳ್ಳಬಹುದೆಂಬ ಸಲಹೆ ಸಮಂಜಸವಾಗಿದೆ. ಆದರೆ ಸ್ವಂತದ ಬಗ್ಗೆ ಪ್ರಾಮಾಣಿಕವಾಗಿ ಬರೆಯಲು ಸ್ವಲ್ಪ ಭಂಡತನ ಮತ್ತು ಹೆಚ್ಚು ಧೈರ್ಯ ಬೇಕಾಗಬಹುದೆನಿಸುತ್ತದೆ. ರಸಹೀನ, ಕಳಾಹೀನ, ಮತ್ತು ಸಾಮಾನ್ಯ ಬದುಕಿನ ವಿವರಗಳು ಯಾವ ಅರಿವು ಮತ್ತು ಆನಂದವನ್ನು ನೀಡಲು ಸಾಧ್ಯ? ಆದರೆ, ಬರೆಯುವ ತುಡಿತವಿದ್ದೂ ಬರೆಯಲಾಗದ ಸೋಮಾರಿಗಳಿಗೆ ಸ್ವಂತದ ಬಗ್ಗೆ ಬರೆಯುವುದು ನೆರವಾಗಬಹುದು ಮತ್ತು ವರವಾಗಬಹುದು.


| ದೇವಿಂದ್ರಪ್ಪ ಬಿ.ಕೆ.

ಸ್ವಂತದ ಬಗ್ಗೆ ಬರೆಯುವುದು ಕಡುಕಷ್ಟ ಅಂತ ಈ ಲೇಖನ ಓದಿದ ಮೇಲೆ ತಿಳಿಯಿತು. ಯಾಕೆಂದರೆ ಬದುಕಿದ್ದಾಗಲೇ ಹೊಗಳಿಕೆ, ತೆಗಳಿಕೆ ಎರಡನ್ನೂ ಅನುಭವಿಸಬೇಕಾಗುತ್ತದೆ. ಕೆಲವು ಸಾರಿ ಸಂಬಂಧಗಳು ದೂರ ಆಗಿದ್ದಾವೆ. ಲಂಕೇಶ್ ಅವರ ಆತ್ಮಕಥೆ ಹುಳಿ ಮಾವಿನ ಮರ ಕನ್ನಡ ಆತ್ಮಚರಿತ್ರೆಗೆ ಹೊಸ ಹಾದಿಯನ್ನು ಹಾಕಿಕೊಟ್ಟಿತು. ಅದೇ ಸಮಯಕ್ಕೆ ದಲಿತ ಬಂಡಾಯ ಸಾಹಿತ್ಯದ ಪ್ರಭಾವದಿಂದ ಮರಾಠಿಯಿಂದ ಕನ್ನಡಕ್ಕೆ ಅನೇಕ ಆತ್ಮಕತೆಗಳು ಅನುವಾದಗೊಂಡವು. ಅದರಲ್ಲೂ ತೀವ್ರವಾಗಿ ಓದುಗರನ್ನು ಕಾಡಿದ ಆತ್ಮಕಥೆಗಳಲ್ಲಿ ಮರಾಠಿ ಆತ್ಮಕತೆಗಳು ಮೊದಲಿಗೆ ನಿಲ್ಲುತ್ತವೆ. ತನ್ನೊಳಗಿನ ಆತ್ಮಕ್ಕೆ ಬದ್ಧನಾಗಿ ಬರೆಯುವ ಲೇಖಕರು ಇಂದು ಕಡಿಮೆಯಾಗುತ್ತಿದ್ದಾರೆ. ಆದರೆ ಆತ್ಮಕಥನದಂತಹ ಅನೇಕ ವಿಚಾರಗಳನ್ನು ನಾವು ಕನ್ನಡದ ಮಟ್ಟಿಗೆ ಪಂಪನ ಆದಿಯಾಗಿ ಅದರಲ್ಲೂ ವಚನಕಾರರಲ್ಲಿ ಹೆಚ್ಚಾಗಿ ಕಾಣಬಹುದು. ವಚನಕಾರರಲ್ಲಿ ಬಸವಣ್ಣನ ಅನೇಕ ವಚನಗಳು ಆತ್ಮಶುದ್ಧಿಯ ಕುರಿತಾಗಿಯೇ ಮಾತನಾಡುತ್ತವೆ. ಮತ್ತು ತನ್ನೊಳಗಿನ ದೋಷವನ್ನು ತಿದ್ದಿಕ್ಕಳ್ಳುವುದರ ಕಡೆಗೆ ಇರುವುದನ್ನು ಗಮನಿಸಬಹುದು. ಯಾರಿಗೂ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ಈ ತತ್ವ ಸ್ವಂತದ ಬಗ್ಗೆ ಬರೆಯುವವರಿಗೆ ಹೊಸ ಒಳನೋಟವನ್ನು ಒದಗಿಸುತ್ತದೆ.


| ಮಾಲತಿ ಪಟ್ಟಣಶೆಟ್ಟಿ

ನಾನೂ ಬರೆಯುತ್ತಿರುವೆ ಆತ್ಮಕಥೆ .. ಆದರೆ ಬಿ ಟ್ಟುಬಿಟ್ಟು ಬರೆಯುತ್ತಿರುವೆ.. ಎಂಜಾಯ್ ಮಾಡ್ತಾ ಬರೆಯುತ್ತಿರುವೆ. ನಿಮ್ಮ ಲೇಖನವು ಆತ್ಮ ಕಥೆಗಾರರ ಜೀವ ನಕ್ಕೂ ಕಥಾಬರಹಕ್ಕೂ ಇರುವ ಸಂಬಂಧ ಗಳ ಬಗೆಗಿನ ನಿಮ್ಮ ಅಭಿಪ್ರಾಯ ಓದಿದೆ. ಬಾಬರ್ ನಾಮಾ ಓದಬೇಕೆನ್ನಿಸಿತು..




Add Comment


Nataraj Huliyar on Book Prize Awardees

YouTube






Recent Posts

Latest Blogs