‘ಗಾಳಿ ಬೆಳಕು’ ನಟರಾಜ್ ಹುಳಿಯಾರ್ ಓದು, ಬರಹ, ಸೃಜನಶೀಲತೆ, ಜನಪ್ರಿಯ ಸಂಸ್ಕೃತಿ, ರಾಜಕಾರಣಗಳ ಕುರಿತು ಚಿಂತಿಸಿದ ಫಲವಾಗಿ ಮೂಡಿಬಂದ ಹೊಸ ಮಾರ್ಗದ ಕಥನಕ್ರಮವಾಗಿದೆ. ‘ಲಂಕೇಶ್ ಪತ್ರಿಕೆ’, ‘ಕನ್ನಡ ಟೈಮ್ಸ್’ ಪತ್ರಿಕೆಗಳಲ್ಲಿ ಅಂಕಣವಾಗಿ ಪ್ರಕಟವಾದ ಈ ಬರಹಗಳು ಹೊಸ ಹೊಳಹುಗಳನ್ನು, ಭರವಸೆ ಮತ್ತು ಕನಸುಗಾರಿಕೆಯನ್ನು ತೆರೆದಿಡುತ್ತವೆ. ವರ್ತಮಾನಕ್ಕೆ ತಾವು ಕನಸಿದ ಅರ್ಥವನ್ನು ತಂದುಕೊಡಲು, ವಿದ್ಯಮಾನಗಳನ್ನು ಸಮರ್ಪಕವಾಗಿ ಅರಿಯಲು ಹೊಸ ರಾಜಕೀಯ ಭಾಷೆಯ ಅಗತ್ಯವಿದೆ ಎಂಬ ಅರಿವು ಲೇಖಕರಿಗಿದೆ; ಅಂತಹ ಭಾಷೆಯನ್ನೇ ರೂಪಿಸಲು ಸಾಹಿತ್ಯವೇ ಅವರ ಮುಖ್ಯ ಆಕರವಾಗಿದೆ. ಅವರ ವಿಸ್ತಾರ ಓದು, ಪಡೆದ ಅನುಭವ, ಅರ್ಥೈಸಿಕೊಂಡ ರಾಜಕೀಯ ಸಿದ್ಧಾಂತ ಮತ್ತು ಒಡನಾಟಗಳು ಉತ್ತಮ ಚಿಂತನೆಯನ್ನು ರೂಪಿಸಲು ಸಹಕಾರಿಯಾಗಿವೆ. ಪತ್ರಕರ್ತನ ಕುತೂಹಲ, ಸೂಕ್ಷ್ಮತೆ, ಕ್ರಿಯಾಶೀಲ ಲೇಖಕನ ಸಂವೇದನೆ ಮತ್ತು ಒಳನೋಟವನ್ನು ಉಳಿಸಿಕೊಳ್ಳುವ ಬರಹದ ಮಾದರಿ ಇಲ್ಲಿದೆ. ಪುಸ್ತಕದಲ್ಲಿರುವ ೭೧ ಲೇಖನಗಳನ್ನು ಐದು ಭಾಗಗಳಲ್ಲಿ ಕೊಡಲಾಗಿದೆ: ೧. ಬರೆವ ಕಾಯಕ. ೨. ಓದಿನ ಹಾದಿ. ೩. ವೃತ್ತಿ, ಪ್ರವೃತ್ತಿ, ವ್ಯಕ್ತಿತ್ವ. ೪. ರಾಜಕಾರಣ, ಧರ್ಮ, ಚಳವಳಿ. ೫. ಜನಪ್ರಿಯ ಸಂಸ್ಕೃತಿ.
ಪ್ರತಿ ಭಾಗದಲ್ಲಿ ಪ್ರಸ್ತಾಪಿಸುವ ವಿಷಯಗಳು ಇತರ ಭಾಗಗಳೊಡನೆ ಅಂತಃಸಂಬಂಧ ಹೊಂದಿದ್ದು, ಲೇಖಕನ ಆಶಯ, ಹೊಸಬಗೆಯ ದೃಷ್ಟಿಕೋನಗಳು ಅತ್ಯಂತ ಮುಕ್ತ ನಿಲುವುಗಳನ್ನೇ ತೆರೆದಿಡುತ್ತವೆ. ಸಂವೇದನಾಶೀಲ ಲೇಖಕನೊಬ್ಬನ ಅಂಕಣಗಳು ಹೇಗಿರಬೇಕು ಎಂಬುದಕ್ಕೆ ‘ಗಾಳಿ ಬೆಳಕು’ ಮಾದರಿಯಾಗಿದೆ. ಒಂದು ಕಾಲಮಾನದ ಚಿಂತನಾಕ್ರಮ ರೂಪುಗೊಂಡ ಬಗೆಯನ್ನು ತಿಳಿಯಲು ಹೊಸ ಜನಾಂಗದ ಲೇಖಕರು ‘ಗಾಳಿ ಬೆಳಕು’ ಕೃತಿಯನ್ನು ಓದುವುದು ಅಗತ್ಯವಾಗಿದೆ
-ಕೇಶವ ಮಳಗಿ