ರೂಪಕ ತೋರುವ ಹಾದಿ!

'ಈ ಅಂಕಣದಲ್ಲಿ ನೀವೇಕೆ ರಾಜಕೀಯದ ಬಗ್ಗೆ ಬರೆಯುತ್ತಿಲ್ಲ?  ರಾಜಕೀಯದ ಬಗ್ಗೆ ಬರೆಯಿರಿ’ ಎಂದು ಕೇಳುವ, ಹೇಳುವ ಕೆಲವು ಗೆಳೆಯರಿದ್ದಾರೆ. ಗೆಳತಿಯರು ಈ ಪ್ರಶ್ನೆ ಕೇಳಿದಂತಿಲ್ಲ!

ಅದಕ್ಕೊಂದು ಸರಳ ಉತ್ತರ: 'ನೀವು ಕೇಳುವ ರೀತಿಯ ಸಮಕಾಲೀನ ರಾಜಕಾರಣದ ಬಗ್ಗೆ ’ಪ್ರಜಾವಾಣಿ’ಯಲ್ಲಿ ಬರೆಯುತ್ತಿರುತ್ತೇನೆ. ಈ ಅಂಕಣದ ಕೆಲಸ, ಉದ್ದೇಶ ಬೇರೆ.’

ಹಾಗೆ ನೋಡಿದರೆ, ನಾವು ಮಾಡುವ ಅನೇಕ ಬಗೆಯ 'ಸಾಂಸ್ಕೃತಿಕ’ ಎನ್ನಬಹುದಾದ ಕೆಲಸಗಳು ರಾಜಕಾರಣದ ವಿಶಾಲ ವ್ಯಾಪ್ತಿಗೇ ಸೇರುತ್ತವೆ. ಮೊನ್ನೆ ಚುನಾವಣೆಯ ಕಾಲದಲ್ಲಿ ಅಧ್ಯಾಪಕಿಯೊಬ್ಬರು ಮಾಡಿದ ಸಾಹಿತ್ಯದ ಪಾಠದಲ್ಲೇ ಖಚಿತ ರಾಜಕೀಯ ಸಂದೇಶವಿತ್ತು. ಬಹುತೇಕ ಮಹಿಳಾ ಕಾವ್ಯದಲ್ಲಿ ಒಂದಲ್ಲ ಒಂದು ಬಗೆಯ ರಾಜಕೀಯ ಪ್ರಶ್ನೆ ಇದ್ದೇ ಇರುತ್ತದೆ. ನಟರಾಜ್ ಹೊನ್ನವಳ್ಳಿ, ಬಸವಲಿಂಗಯ್ಯ, ಕೆ.ಪಿ. ಲಕ್ಷ್ಮಣ್ ಥರದ ರಂಗ ನಿರ್ದೇಶಕರು ಮಾಡುವ ಯಾವುದೇ ಕಲಾತ್ಮಕ ನಾಟಕದಲ್ಲೂ ರಾಜಕೀಯ ಎಳೆಗಳು ಇದ್ದೇ ಇರುತ್ತವೆ. 

ಹೀಗೆಲ್ಲ ಅನ್ನಿಸತೊಡಗಿದ್ದಕ್ಕೆ ಒಂದು ಮೊಬೈಲ್ ಮೆಸೇಜ್ ಕಾರಣವಾಗಿತ್ತು. ಅದು ತಮ್ಮದೇ ಆದ ಸ್ಟೈಲ್‌ನಲ್ಲಿ ರಾಜಕೀಯ ರಂಗದಲ್ಲಿರುವ ಗೆಳೆಯರೊಬ್ಬರ ಹುಟ್ಟುಹಬ್ಬದ ಎಸ್. ಎಂ. ಎಸ್. ಅಥವಾ ನನ್ನ ಭಾಷೆಯಲ್ಲೇ ಹೇಳುವುದಾದರೆ, ಸಂಕ್ಷಿಪ್ತ ಮೇಘ ಸಂದೇಶ; ಸಂಮೇಸಂ!

'ಜುಲೈ ೧೪ರಂದು ರವಿಕೃಷ್ಣಾರೆಡ್ಡಿ ಅವರ ೫೦ನೇ ಹುಟ್ಟುಹಬ್ಬ. ಅಂದು ನಾವು ಕೆಲವು ಸ್ನೇಹಿತರು ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತಾವು ದಯವಿಟ್ಟು ಬರಬೇಕು. ಕಾರ್ಯಕ್ರಮ ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಇರುತ್ತದೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.’ 

ಅದ್ಯಾಕೋ ಏನೋ, ಈ ಸಂಮೇಸಂ ನೋಡುತ್ತಿದ್ದಂತೆ ನನಗೆ ಶೇಕ್‌ಸ್ಪಿಯರ್‌ನ ಹ್ಯಾಮ್ಲೆಟ್‌ನ ಪಿಸುಮಾತು (ಹ್ಯಾಮ್ಲೆಟ್ ಎಲ್ಲೂ ’ಕಿರುಚು ಮಾತು’ ಆಡಿದಂತಿಲ್ಲ!) ನೆನಪಾಯಿತು: 

‘The time is out of joint- Oh, cursed spite, 

That ever I was born to set it right!

ನನ್ನ 'ಶೇಕ್‌ಸ್ಪಿಯರ್ ಮನೆಗೆ ಬಂದ' ನಾಟಕದಲ್ಲಿ ಸ್ಟ್ರಾಟ್‌ಫರ್ಡ್ ಲೋಕಲ್ ನಟರು ಹ್ಯಾಮ್ಲೆಟ್‌ ನಾಟಕದ ರಿಹರ್ಸಲ್‌ ಮಾಡುವ ತಮಾಷೆಯ ದೃಶ್ಯದಲ್ಲಿ ಚೀರುವುದಕ್ಕಾಗಿ ಈ ಮಾತಿನ ಭಾಗವನ್ನು ಕೊಂಚ ಸಂಕ್ಷಿಪ್ತವಾಗಿ ಅನುವಾದಿಸಿಕೊಂಡಿದ್ದೆ: 'ಕಾಲದ ಕೊಂಡಿ ಕಳಚಿ ಬಿದ್ದಿದೆ. ನಾನಿದನ್ನು ಸರಿಪಡಿಸಲು ಹುಟ್ಟಿರುವೆನೆ?' ಆ ಭಾಗವನ್ನು ನನ್ನ ಯೂಟ್ಯೂಬ್ ಚಾನಲ್‌ನಲ್ಲಿರುವ ನಾಟಕದಲ್ಲಿ ನೋಡಬಹುದು.

ಅದಿರಲಿ, ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆ.ಆರ್.ಎಸ್) ಗೆಳೆಯರ ಸಂಮೇಸಂ ನೋಡಿದ ತಕ್ಷಣ ರವಿಕೃಷ್ಣಾರೆಡ್ಡಿಯ ಬಗೆಗೆ ಏನೋ ಬರೆಯಬೇಕೆನ್ನಿಸಿ ಲ್ಯಾಪ್‌ಟಾಪ್ ಮೇಲೆ ಬೆರಳಿಟ್ಟರೆ ಹ್ಯಾಮ್ಲೆಟ್ ಮಾತು ಬಾಯಿಗೆ ಬಂತು! 

ರೈಟಿಂಗ್ ಈಸ್ ಥಿಂಕಿಂಗ್ ಎಂಬುದು ನನ್ನ ಈಚಿನ ಆಳದ ನಂಬಿಕೆ; ಇದನ್ನು ನಿತ್ಯದ ಅನುಭವದ ಮೂಲಕ ಮತ್ತೆ ಮತ್ತೆ ಕಂಡುಕೊಂಡಿರುವೆ. ಸರಿ! ಶೇಕ್‌ಸ್ಪಿಯರ್ ಸಾಲು ಕರೆದೊಯ್ದ ಕಡೆ ಹೊರಡಲು ಸಿದ್ಧನಾದೆ. ಕಾರಣ, ಸಾಹಿತ್ಯದ ರೂಪಕಗಳ ವಿಸ್ಡಂ ಅಥವಾ ಪರಮಜ್ಞಾನ ವಿನಾಕಾರಣ ನೆನಪಾಗುವುದಿಲ್ಲ ಎಂಬುದು ನನ್ನ ಅನುಭವ. ನಮಗೆ ಬೀಳುವ ಕನಸುಗಳ ಹಾಗೆ ಈ ರೂಪಕಗಳು ನೆನಪಾಗುವುದಕ್ಕೂ ಅದರದೇ ಆದ ತರ್ಕವಿರಬಹುದು. ಗೆಳೆಯರ ಆಹ್ವಾನದ ಸಂದೇಶ ನೋಡಿದ ಗಳಿಗೆಯಲ್ಲಿ ಹ್ಯಾಮ್ಲೆಟ್ ಮಾತು ಯಾಕೆ ಹೊಳೆಯಿತು ಎಂಬುದು ನಂತರ ಹೊಳೆಯಿತು! ಅದನ್ನು ಹೊಳೆಯಿಸಿದ್ದು ಕೂಡ ಶೇಕ್‌ಸ್ಪಿಯರ್‌ನ ಮತ್ತೊಂದು ದರ್ಶನ-ಸ್ವಗತವೇ: 

'ಟು ಬಿ ಆರ್ ನಾಟ್ ಟು ಬಿ- ದಟ್ ಈಸ್ ದ ಕ್ವೆಶ್ಚನ್’  

ಈ ಸ್ವಗತ ಹೊಳೆದಿದ್ದು ರವಿಕೃಷ್ಣಾರೆಡ್ಡಿಯ ರಾಜಕೀಯ ರೀತಿ ಒಂಥರದಲ್ಲಿ ಭಿನ್ನ ಎಂದುಕೊಂಡಾಗ. ರವಿ ಹ್ಯಾಮ್ಲೆಟ್ ಥರ ’ಟು ಬಿ ಆರ್‍ ನಾಟ್ ಟು ಬಿ’ ಎಂದು ನಾನಾರ್ಥ ತೂಗಿ, ಮುಂದಡಿಯಿಡುವ ವ್ಯಕ್ತಿಯಲ್ಲ! ’ಹೌದು! ಕಾಲದ ಕೊಂಡಿ ಕಳಚಿ ಬಿದ್ದಿದೆ. ನಾನಿದನ್ನು ಸರಿಪಡಿಸಲು ಹುಟ್ಟಿದ್ದೇನೆ’ ಎಂದು ನಂಬಿ ಏಕ್‌ದಂ ಕ್ರಿಯೆಗಿಳಿಯುವ ಮನುಷ್ಯ. ರವಿ ಹ್ಯಾಮ್ಲೆಟ್ ಥರ ’ನಾನಿದನ್ನು ಸರಿಪಡಿಸಲು ಹುಟ್ಟಿರುವೆನೆ?’ ಎಂದು ಅಳೆದು ತೂಗುತ್ತಾ ನಿರ್ಧಾರ ಮುಂದೂಡುವ ಅತಿ ಸೂಕ್ಷ್ಮ ಮನುಷ್ಯನಲ್ಲ!

ಹ್ಯಾಮ್ಲೆಟ್ ಮಾತುಗಳ, ಸ್ವಗತಗಳ ಅನುವಾದದ ಕಷ್ಟಗಳು ಒಂದಲ್ಲ, ಎರಡಲ್ಲ. ಖ್ಯಾತ ಶೇಕ್‌ಸ್ಪಿಯರ್ ವಿದ್ವಾಂಸ-ಭಾಷಾಂತರಕಾರ ಭಗವಾನ್ 'ಟೈಮ್ ಈಸ್ ಔಟ್ ಆಫ್ ಜಾಯಿಂಟ್’ ಎಂಬ ಸಾಲನ್ನು 'ಕಾಲ ಕೀಲು ತಪ್ಪಿದೆ’ ಎಂದು ಅನುವಾದಿಸಿದ ನೆನಪು; ಅದೇ ಸರಿಯೆನ್ನಿಸುತ್ತದೆ. ಶೇಕ್‌ಸ್ಪಿಯರ್ ಪಾತ್ರಗಳ ಮಾತುಗಳನ್ನು ಒಂದು ರೀತಿಯಲ್ಲಿ ಅನುವಾದ ಮಾಡಿದರೆ, ಮತ್ತೊಂದು ಅರ್ಥ ಕೈ ಕೊಡುತ್ತದೆ. 'ಟು ಬಿ ಆರ್ ನಾಟ್ ಟು ಬಿ’ಯ ಕನ್ನಡ ಅನುವಾದವೊಂದು ನೆನಪಾಗುತ್ತದೆ: 

'ಇರಲೆ ಅಥವ ಇಲ್ಲದೆ ಇರಲೆ-ಇದು ಪ್ರಶ್ನೆ’ 

ಇದು ರಾಮಚಂದ್ರ ದೇವರ ಅನುವಾದ. ಭಗವಾನ್ ಅವರಿಗೆ ಫೋನ್ ಮಾಡಿ, ‘ಇದನ್ನು ನೀವು ಹೇಗೆ ಅನುವಾದಿಸಿದ್ದೀರಿ?’ ಎಂದೆ. 

“…‘ಇರುವುದೇ ಅಥವಾ ಇಲ್ಲವಾಗುವುದೇ?’ ಎಂದು ಅನುವಾದಿಸಿದ್ದೇನೆ ಅನ್ನಿಸುತ್ತದೆ” ಎಂದರು. 

'ಆಗ 'be’ ಎಂಬ ಕ್ರಿಯಾಪದಕ್ಕಿರುವ ನಾನಾರ್ಥಗಳು ಮರೆಯಾಗುತ್ತವಲ್ಲ?’ ಎಂದೆ.  

'ನಿಜ. ಅದಕ್ಕೇ ಎಪ್ಪತ್ತೈದು ಭಾಷೆಗಳಲ್ಲಿ ಈ ವಾಕ್ಯವನ್ನು ಅನುವಾದಿಸದೆ ಹಾಗೇ ಇಟ್ಟುಕೊಂಡಿದ್ದಾರೆ’ ಎಂದರು ಭಗವಾನ್. ಸಾರ್ತರ್‌ನ ‘being’ and ’becoming’ ಪರಿಕಲ್ಪನೆಗಳನ್ನು ಕೂಡ ಭಗವಾನ್ ನೆನಪಿಸಿದರು. ಅವರ ಅಧ್ಯಯನ, ತಕ್ಷಣಕ್ಕೆ ಅವರಿಗೆ ಒದಗುವ ನೆನಪು ಕಂಡು ವಿಸ್ಮಯವಾಯಿತು.

'be’ ಎಂಬ ಕ್ರಿಯಾಪದಕ್ಕೆ ಅಸ್ತಿತ್ವ, ಹಾಜರಿ, ಇರುವುದು, ಬಿದ್ದಿರುವುದು, ಬದುಕಿರುವುದು….ಹೀಗೆ ಹಲವು ಅರ್ಥಗಳಿವೆ. ವಾಕ್ಯದಲ್ಲಿ ಬಳಕೆಯಾದಾಗ ಅದಕ್ಕೆ ಇನ್ನಷ್ಟು ಚಹರೆಗಳು ಬರುತ್ತವೆ.  
ಹೀಗಾಗಿ, ಹ್ಯಾಮ್ಲೆಟ್‌ಗೆ ಎದುರಾಗುವ ‘ಟು ಬಿ ಆರ್ ನಾಟ್ ಟು ಬಿ’ ಹೊಯ್ದಾಟ, ತುಯ್ದಾಟಗಳು ’ಹ್ಯಾಮ್ಲೆಟ್’ ಅನುವಾದಕರಿಗೂ ಎದುರಾಗುವುದು ಗ್ಯಾರಂಟಿ. ಆದರೆ… ಪ್ರಖರ ವಿಚಾರವಾದಿ ಭಗವಾನ್‌ ನಿತ್ಯ ವಿವಾದದ ಹೇಳಿಕೆ ಕೊಡುವ ಮುನ್ನ ಅವರೊಳಗಿರುವ ಶೇಕ್‌ಸ್ಪಿಯರಿಯನ್ ಸ್ಕಾಲರ್ ಭಗವಾನ್ ’ಟು ಬಿ ಆರ್ ನಾಟ್ ಟು ಬಿ…’ ಎಂದು ಬ್ರೇಕ್ ಹಾಕುವುದಿಲ್ಲವೆ? 

ks bhagavan from indianexpress.comಈ ಪ್ರಶ್ನೆ ಇದ್ದಕ್ಕಿದ್ದಂತೆ ಹುಟ್ಟಿದ್ದು ಈ ಮಾತು ಬರೆಯುತ್ತಿರುವ ಭಾನುವಾರದ ಶುಭ್ರ ಬೆಳಗಿನಲ್ಲಿ!  ಇದನ್ನೇ ರೈಟಿಂಗ್ ಈಸ್ ಥಿಂಕಿಂಗ್ ಎಂದು ನಾನು ನೆಚ್ಚಿಕೊಂಡಿರುವುದು. ನಿಜಕ್ಕೂ ನಮ್ಮ ಹೆಮ್ಮೆಯ ಶೇಕ್‌ಸ್ಪಿಯರ್ ವಿದ್ವಾಂಸರಾದ ಭಗವಾನ್ ಅವರ ಇಮೇಜನ್ನು ಕ್ಷುಲ್ಲಕ ವಿವಾದಗಳ ಭಗವಾನ್ ಇಮೇಜ್ ನುಂಗಿ ಹಾಕದಿರಲಿ. ಸಾವಿರಾರು ಕನ್ನಡಿಗರಿಗೆ ಅತ್ಯಂತ ದಕ್ಷವಾಗಿ ಶೇಕ್‌ಸ್ಪಿಯರ್ ಸಂವೇದನೆಯನ್ನು ಹಬ್ಬಿಸಿರುವ ಅವರ ಅನನ್ಯ ಕೊಡುಗೆಯನ್ನು ವಾಚಾಳಿ ಹೇಳಿಕೆಗಳು ಮರೆಯಾಗಿಸದಿರಲಿ.

ಮತ್ತೆ ರವಿಕೃಷ್ಣಾರೆಡ್ಡಿಯ ಕತೆಗೆ: ಇಪ್ಪತ್ತು ವರ್ಷಗಳ ಕೆಳಗೆ ರವಿಕೃಷ್ಣಾರೆಡ್ಡಿ ಏನೋ ಒಂದನ್ನು ಮಾಡಬೇಕೆಂದು ಹೊರಟಾಗ ಅವರೆದುರು ಹ್ಯಾಮ್ಲೆಟ್‌ನ ‘ಟು ಬಿ ಆರ್ ನಾಟ್ ಟು ಬಿ’ ತೂಗುಯ್ಯಾಲೆಯಿರಲಿಲ್ಲ! ಅದರಿಂದ ಅವರು ನೇರ ಕ್ರಿಯೆಗಿಳಿದರು. ಅವರ ರೀತಿ ಬೇರೆ: 

ಆಗ ರವಿ ಅಮೆರಿಕದಲ್ಲಿ ಟೆಕ್ಕಿಯಾಗಿ ದುಡಿಯುತ್ತಿದ್ದರು. ಅಷ್ಟಿಷ್ಟು ಹಣ ಸಂಪಾದಿಸಿದ ಮೇಲೆ ಇಂಡಿಯಾದಲ್ಲಿ ಏನಾದರೂ ಮಾಡಬೇಕೆಂದುಕೊಂಡು ‘ವಿಕ್ರಾಂತ ಕರ್ನಾಟಕ’ ಪತ್ರಿಕೆ ಮಾಡಿದರು. ಆದರೆ ಅವರು ಮಾಡಬಯಸಿದ್ದ ರಾಜಕಾರಣಕ್ಕೆ ನೆರವಾಗಲು ನಿಜಕ್ಕೂ ಬೇಕಾದದ್ದು ೧೨-೧೬ ಪುಟಗಳ ಟ್ಯಾಬ್ಲಾಯ್ಡ್ ಎಂದು ನನಗನ್ನಿಸಿತ್ತು. 'ಸುಧಾ’ ಸೈಜಿನ ಈ ವಾರಪತ್ರಿಕೆ ಕೆಲ ವರ್ಷ ನಡೆಯಿತು. ಚಂದ್ರಶೇಖರ್ ಐಜೂರ್ ಸಂಪಾದಕತ್ವದಲ್ಲಿ ನಾವೆಲ್ಲ ಗೆಳೆಯರು ಮಾಡುತ್ತಿದ್ದ ‘ಕನ್ನಡ ಟೈಮ್ಸ್’ ವಾರಪತ್ರಿಕೆ ಮಾಡಿದ ಚುನಾವಣಾ ಸಂಚಿಕೆಯಲ್ಲಿ ರವಿಕೃಷ್ಣಾರೆಡ್ಡಿ ವಿಶಿಷ್ಟ ನಾಯಕರ ಪಟ್ಟಿಯಲ್ಲೂ ಇದ್ದರು. 
ನಮ್ಮ ಪರಿಚಯ - ಕರ್ನಾಟಕ ರಾಷ್ಟ್ರ ...

ರವಿ ಚುನಾವಣಾ ರಾಜಕೀಯಕ್ಕಿಳಿದರು; ಅದೂ ಜಯನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ. ಅವರ ಚುನಾವಣಾ ಜಿಗಿತವನ್ನು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮೊದಲ ಪತ್ರಿಕಾಗೋಷ್ಠಿಯ ಮೂಲಕ ಲಾಂಚ್ ಮಾಡಿದ ದಾಖಲೆ ನನ್ನ ಹೆಸರಲ್ಲೇ ಇದೆ! ನಂತರ ರವಿ ಚುನಾವಣೆಯ ಮೇಲೆ ಚುನಾವಣೆಗೆ ನಿಂತರು. ಆಮ್ ಆದ್ಮಿ ಪಾರ್ಟಿಯ ಆರಂಭದ ಸ್ಪಿರಿಟ್‌ಗೆ ರವಿ ಹೇಳಿ ಮಾಡಿಸಿದಂತಿದ್ದರು. ಕರ್ನಾಟಕದ ಆಮ್ ಆದ್ಮಿ ಪಾರ್ಟಿಯ ಆರಂಭದ ನಾಯಕರಲ್ಲಿ ರವಿ ಕೂಡ ಮುಖ್ಯರಾಗಿದ್ದರು. ಅಲ್ಲಿ ಕೂಡ ಅವರು ಇರಲಾಗಲಿಲ್ಲ. ರವಿಯ ಹೋರಾಟ, ಪಯಣ ಮುಂದುವರಿಯಿತು. 

ಕೆಲವು ತಿಂಗಳ ಕೆಳಗೆ ಸೇಂಟ್ ಜೋಸೆಫ್ ಕಾಲೇಜಿನ ಹುಡುಗ ಚರಣ್ ’ನಾನು ರವಿಕೃಷ್ಣಾರೆಡ್ಡಿಯವರ ಕೆ.ಆರ್.ಎಸ್ ಜೊತೆ ಇದ್ದೇನೆ’ ಅಂದ. ಜರ್ನಲಿಸಂ ಓದುತ್ತಿದ್ದ ಚರಣ್‌‌ಗೆ ರವಿ ಮಾಡುತ್ತಿರುವ ರಾಜಕಾರಣದಲ್ಲಿ ಅರ್ಥ ಕಂಡಿತ್ತು. ಚರಣ್ ಮಾತು ಕೇಳಿದಾಗ ರವಿಯ ರಾಜಕೀಯ  ಮುಂದುವರಿದೇ ಇದೆ; ಅದಕ್ಕೆ ಹೊಸ ಅನುಯಾಯಿಗಳೂ ಹುಟ್ಟುತ್ತಿದ್ದಾರೆ ಎಂದುಕೊಂಡೆ. 

ನನ್ನಂಥವರು ಅವರ ಜೊತೆ ಬರುತ್ತಿಲ್ಲ ಎಂದು ರವಿ ಕಾಲೆಳೆಯುವುದುಂಟು. ಅವರ ಕೆಲಸ ಅರ್ಥಪೂರ್ಣವೋ; ನನ್ನಂಥವರ, ನಿಮ್ಮಂಥವರ ಕೆಲಸ; ಭಗವಾನ್ ಅನುವಾದ, ಭಾಷಣ; ರಂಗಭೂಮಿಯವರ ಕೆಲಸ…ಇವು ಅರ್ಥಪೂರ್ಣವೋ… ಇವೆಲ್ಲ ಒಣ ಚರ್ಚೆಗಳಷ್ಟೆ. ಹೀಗೆಂದುಕೊಳ್ಳುವಾಗ ಫಳಾರನೆ ಮಿಂಚಿದ ಒಂದು ಎಲಿಯಟ್ ದರ್ಶನ-ರೂಪಕ: 

‘Mole digs, eagle flies. Both want to live.’

’ಹೆಗ್ಗಣ ಅಗೆಯುವುದು, ಹದ್ದು ಹಾರುವುದು. ಎರಡೂ ಬದುಕಲು ಬಯಸುವುವು.’

ನಾನು ಹಿಂದೆ ಕಂಡಂತೆ, ತಾನು ದುಡಿದ ದುಡ್ಡಿನಲ್ಲಿ ತನಗೆ ಬೇಕಾದ ರೀತಿಯ ರಾಜಕೀಯ ಮಾಡುತ್ತಿದ್ದ ರವಿಕೃಷ್ಣಾರೆಡ್ಡಿ, ಹೋರಾಟದ ಕಷ್ಟ ನಷ್ಟ, ಸವಾಲು, ಅರ್ಥಪೂರ್ಣತೆ ಎಲ್ಲವನ್ನೂ ಅನುಭವಿಸಿರುವವರು. ಸೋಲು, ಗೆಲುವುಗಳ ಹಂಗಿಲ್ಲದೆ ಮಾಡುವ ರಾಜಕೀಯ ಅವರ ಪಾಲಿಗೆ ಅರ್ಥಪೂರ್ಣ ಅನ್ನಿಸಿರಬಹುದು. ಅದನ್ನು ಈಗಿನ ಪರಿಚಿತ ರಾಜಕಾರಣದ ಹಿನ್ನೆಲೆಯಲ್ಲಿ ಅಳೆದು ತೂಗುವ ತಕ್ಕಡಿಯ ಅಗತ್ಯ ಇರಲಾರದು. 

ಎಲ್ಲರೂ ಹ್ಯಾಮ್ಲೆಟ್ ಥರ ’ಸೂಕ್ಷ್ಮ’ವಾಗಿಯೇ ಯಾಕಿರಬೇಕು, ಅಲ್ಲವೆ? ಕ್ಷಿಪ್ರ ಕ್ರಿಯೆಗಳ ಸುಖ ದುಃಖಗಳನ್ನೂ ಶೇಕ್‌ಸ್ಪಿಯರ್‍ ಪಾತ್ರಗಳೇ ತೋರಿಸಿವೆಯಲ್ಲ! 

ಕೊನೆಯದಾಗಿ, ‘ರಾಜಕೀಯ ಬರಹ’, ‘ರಾಜಕೀಯ ಕ್ರಿಯೆಗಳು’ ಎಂದರೆ ಒಂದೇ ಎರಕದಲ್ಲಿ ಇರುವುದಿಲ್ಲ ಎಂಬುದನ್ನು ವಿನಮ್ರವಾಗಿ ಸೂಚಿಸಬಯಸುವೆ. 

Share on:

Comments

10 Comments



| sanganagouda

ಒಂದು ಎಳೆ ಇಟ್ಟುಕೊಂಡು ಎಲ್ಲಿಂದ ಎಲ್ಲಿಗೆ ಹೊರಡುತೀರಿ. ನಿಜಕ್ಕೂ ಗ್ರೇಟ್ ಸರ್


| sanganagouda

ಇಂಥದ್ದೇ ಚರ್ಚೆ ಕುಪ್ಪಳಿಯಲ್ಲಿ ಬ್ರೆಕ್ಟ್ ನ having and being ಎನ್ನುವ ಪದಗಳನ್ನಿಟ್ಟುಕೊಂಡು ಎರಡು ದಿನ ಚರ್ಚೆ ಮಾಡಿದ್ದು ನೆನಪಿಸಿತು ಸರ್


| ಬಂಜಗೆರೆ ಜಯಪ್ರಕಾಶ

ದುಡುಕು ಇರದಿದ್ದರೆ ಒಳ್ಳೆಯದು ಎನ್ನುವುದು ನಿಮ್ಮ ಲೇಖನದ ಒಟ್ಟು ಸಾರಾಂಶ ಇರಬಹುದೇ ಎಂದು ನಾನು ಯೋಚಿಸುತ್ತಿದ್ದೇನೆ. ರವಿ ಮತ್ತು ಭಗವಾನ್ ಇಬ್ಬರೂ ರಾಜಕೀಯವಾಗಿ ಸಕ್ರಿಯವಾಗಿರುವವರೇ- ಒಬ್ಬರದು ರಾಜಕೀಯ ಕ್ರಿಯೆ, ಇನ್ನೊಬ್ಬರದು ಸಾಂಸ್ಕೃತಿಕ ರಾಜಕೀಯ ಕ್ರಿಯೆ.ಇಬ್ಬರ ಪ್ರಾಮಾಣಿಕತೆಯನ್ನೂ ಅನುಮಾನಿಸುವಂತಿಲ್ಲ. ಸೋಲು ಗೆಲುವುಗಳ ಪರಿವೆ ಇಲ್ಲದೆ ನಡೆಯುವ ಕ್ರಿಯಾ ಸರಣಿಯ ಬಗ್ಗೆ ನೀವು ಎತ್ತಿರುವ ಧ್ವನಿಪೂರ್ಣ ಪ್ರಶ್ನೆಗಳು ಖಂಡಿತವಾಗಿ ಚಿಂತನಾರ್ಹ.


| ಗುರುಪ್ರಸಾದ್

ಗಬ್ಬೆದ್ದು ಹೋಗಿರುವ ಕರ್ನಾಟಕದ ಚುನಾವಣಾ ರಾಜಕಾರಣದಲ್ಲಿ ರವಿಕೃಷ್ಣಾರೆಡ್ಡಿಯಂಥವರು ಯಶಸ್ವಿಯಾಗದಿರುವುದು ನೋವಿನ ಸಂಗತಿ ಮತ್ತು ನಮ್ಮ ಸೋಲಾಗಿದೆ.\r\nಸರ್ ಹೋದವಾರದ ಇರ್ಫಾನ್ ಅಂಕಣದಲ್ಲಿ ಅವರ ಅತ್ಯುತ್ತಮ ಚಿತ್ರವಾದ \"ಪೀಕು\" ಬಗ್ಗೆ ಪ್ರಸ್ತಾಪವಾಗಬೇಕಿತ್ತು..


| ಡಾ. ನಿರಂಜನ ಮೂರ್ತಿ ಬಿ ಎಂ

ರೂಪಕ ತೋರಿದ ಹಾದಿಯಲ್ಲಿ ಸಾಗುತ್ತಾ, ಸಮಾಜದ ಸಾಂಸ್ಕೃತಿಕ ಬದುಕಿನಿಂದ ರಾಜಕೀಯವನ್ನು ಸಂಪೂರ್ಣವಾಗಿ ಬೇರ್ಪಡಿಸಲಾಗುವುದಿಲ್ಲವೆಂಬ ಸತ್ಯವನ್ನು ಸಾರುವ ಈ ಲೇಖನ ಅರ್ಥಪೂರ್ಣ. ಲೇಖಕರಿಗೆ ನಮನಗಳು.\r\n\r\nರವಿಕೃಷ್ಣಾರೆಡ್ಡಿಯವರಂತಹ ಸಿದ್ಧಾಂತಬದ್ಧ, ತತ್ವನಿಷ್ಠ, ಪ್ರಾಮಾಣಿಕ, ವಿಭಿನ್ನ, ವಿಶಿಷ್ಟ ರಾಜಕಾರಣಿಗಳು ಇಂದಿನ ಸನ್ನಿವೇಶದಲ್ಲಿ ಸಫಲರಾಗುವುದು ದುರ್ಲಭ. ಆದರೂ ರವಿಕೃಷ್ಣಾರೆಡ್ಡಿಯವರು ರಾಜಕೀಯ ಹೋರಾಟ ನಡೆಸುತ್ತಾ ಬಂದಿರುವುದು ತುಂಬಾ ವಿಶೇಷ. ಯಾವುದೇ ಸಫಲತೆಯಿಲ್ಲದಿದ್ದರೂ, ಕನಿಷ್ಠ ಹೋರಾಟವನ್ನಾದರೂ ಮಾಡಿದ ಆತ್ಮತೃಪ್ತಿಯಾದರೂ ಅವರಿಗೆ ಸಿಕ್ಕುತ್ತದೆಂಬುದೇ ಸಮಾಧಾನ. ಅವರಂತಹ ಅಪರೂಪದ ರಾಜಕಾರಣಿಗಳನ್ನು ಅನುಸರಿಸುವ ಮತ್ತು ಬೆಂಬಲಿಸುವ ಕರ್ತವ್ಯಪೂರ್ಣ ಜಾಗೃತಿ ಎಲ್ಲಾ ಪ್ರಜ್ಞಾವಂತರಲ್ಲಿ ಮೂಡಲಿ!\r\n\r\nಇನ್ನು ಶೇಕ್ಸ್‌ಪಿಯರ್ ವಿದ್ವಾಂಸ, ಭಾಷಾಂತರಕಾರ, ಮತ್ತು ಪ್ರಖರ ವಿಚಾರವಾದಿ ಪ್ರೊ. ಭಗವಾನ್ ರವರು ನಮ್ಮೆಲ್ಲರ ಹೆಮ್ಮೆ. ನನಗೆ ಶೇಕ್ಸ್‌ಪಿಯರ್ ನಾಟಕಗಳು ಪೂರ್ಣವಾಗಿ ಅರ್ಥವಾಗಿದ್ದೇ ಅವರ ಅನುವಾದಗಳನ್ನು ಓದಿದ ಮೇಲೆ! ಹುಳಿಯಾರರು ಭಗವಾನರ ಬಗ್ಗೆ ವ್ಯಕ್ತಪಡಿಸಿರುವ ಆಗ್ರಹಪೂರ್ವಕ ಕಿವಿಮಾತಿನಂತಹ ಆಶಯ ಸಮಂಜಸ. ಒಂದಿಡೀ ಲೇಖನವನ್ನು ಭಗವಾನರ ಬಗ್ಗೆ ಬರೆದರೆ ತುಂಬಾ ಸಂತೋಷ.


| ಡಾ. ನಿರಂಜನ ಮೂರ್ತಿ ಬಿ ಎಂ

ರೂಪಕ ತೋರಿದ ಹಾದಿಯಲ್ಲಿ ಸಾಗುತ್ತಾ, ಸಮಾಜದ ಸಾಂಸ್ಕೃತಿಕ ಬದುಕಿನಿಂದ ರಾಜಕೀಯವನ್ನು ಸಂಪೂರ್ಣವಾಗಿ ಬೇರ್ಪಡಿಸಲಾಗುವುದಿಲ್ಲವೆಂಬ ಸತ್ಯವನ್ನು ಸಾರುವ ಈ ಲೇಖನ ಅರ್ಥಪೂರ್ಣ. ಲೇಖಕರಿಗೆ ನಮನಗಳು.\r\n\r\nರವಿಕೃಷ್ಣಾರೆಡ್ಡಿಯವರಂತಹ ಸಿದ್ಧಾಂತಬದ್ಧ, ತತ್ವನಿಷ್ಠ, ಪ್ರಾಮಾಣಿಕ, ವಿಭಿನ್ನ, ವಿಶಿಷ್ಟ ರಾಜಕಾರಣಿಗಳು ಇಂದಿನ ಸನ್ನಿವೇಶದಲ್ಲಿ ಸಫಲರಾಗುವುದು ದುರ್ಲಭ. ಆದರೂ ರವಿಕೃಷ್ಣಾರೆಡ್ಡಿಯವರು ರಾಜಕೀಯ ಹೋರಾಟ ನಡೆಸುತ್ತಾ ಬಂದಿರುವುದು ತುಂಬಾ ವಿಶೇಷ. ಯಾವುದೇ ಸಫಲತೆಯಿಲ್ಲದಿದ್ದರೂ, ಕನಿಷ್ಠ ಹೋರಾಟವನ್ನಾದರೂ ಮಾಡಿದ ಆತ್ಮತೃಪ್ತಿಯಾದರೂ ಅವರಿಗೆ ಸಿಕ್ಕುತ್ತದೆಂಬುದೇ ಸಮಾಧಾನ. ಅವರಂತಹ ಅಪರೂಪದ ರಾಜಕಾರಣಿಗಳನ್ನು ಅನುಸರಿಸುವ ಮತ್ತು ಬೆಂಬಲಿಸುವ ಕರ್ತವ್ಯಪೂರ್ಣ ಜಾಗೃತಿ ಎಲ್ಲಾ ಪ್ರಜ್ಞಾವಂತರಲ್ಲಿ ಮೂಡಲಿ!\r\n\r\nಇನ್ನು ಶೇಕ್ಸ್‌ಪಿಯರ್ ವಿದ್ವಾಂಸ, ಭಾಷಾಂತರಕಾರ, ಮತ್ತು ಪ್ರಖರ ವಿಚಾರವಾದಿ ಪ್ರೊ. ಭಗವಾನ್ ರವರು ನಮ್ಮೆಲ್ಲರ ಹೆಮ್ಮೆ. ನನಗೆ ಶೇಕ್ಸ್‌ಪಿಯರ್ ನಾಟಕಗಳು ಪೂರ್ಣವಾಗಿ ಅರ್ಥವಾಗಿದ್ದೇ ಅವರ ಅನುವಾದಗಳನ್ನು ಓದಿದ ಮೇಲೆ! ಹುಳಿಯಾರರು ಭಗವಾನರ ಬಗ್ಗೆ ವ್ಯಕ್ತಪಡಿಸಿರುವ ಆಗ್ರಹಪೂರ್ವಕ ಕಿವಿಮಾತಿನಂತಹ ಆಶಯ ಸಮಂಜಸ. ಒಂದಿಡೀ ಲೇಖನವನ್ನು ಭಗವಾನರ ಬಗ್ಗೆ ಬರೆದರೆ ತುಂಬಾ ಸಂತೋಷ.


| Dr. Hiremath

ರೂಪಕಗಳನ್ನು ಅನ್ವಯಿಸಿ ಹೇಳಿದಾಗ ವಿಶೇಷ ಅರ್ಥ ಬರುತ್ತದೆ ಮಾತಿಗೆ. ನೀವೇ ಹೇಳಿದಂತೆ ಕಾಲು ಕೀಲು ತಪ್ಪಿದೆ ಅನುವಾದ ಹೆಚ್ಚು ಸಮರ್ಪಕ .


| Raghu n

ತಾವು ರೈತ ಚಳವಳಿಗಾರರ ಸಂಪರ್ಕದಲ್ಲಿದ್ದೀರಿ ಒಂದು ಚಿಕ್ಕ ಪ್ರಯತ್ನ ಮಾಡಿ ನೋಡಿ, ಕೆಲವು ಸಮಾನ ಮನಸ್ಕ ಯುವ ಹೋರಾಟಗಾರರು ಸರಿಯಾದ ಮಾರ್ಗ ದರ್ಶನವಿಲ್ಲದೆ ತಟಸ್ಥವಾಗಿದ್ದಾರೆ ಹಾಗೂ ಏನೇನೋ ಮಾಡುತ್ತಿದ್ದಾರೆ. ಒಂದು ಬಹಿರಂಗ ಚರ್ಚೆಗೆ ವ್ಯವಸ್ತೆ ಮಾಡಿ ನೋಡಿ ರೈತ ಚಳವಳಿಗಾದರೂ ಹೊಸ ರೂಪ ಸಿಗುತ್ತದೆ ಇಲ್ಲವಾದರೆ ರವಿಕೃಷ್ಣರೆಡ್ಡಿ ಯವರಿಗಾದರು ದೊಡ್ಡ ಸಂಖ್ಯೆಯ ಬೆಂಬಲ ಸಿಗುತ್ತದೆ. ❤️ Raghu KRRS ಹುಸ್ಕೂರು \r\n(GREEN BRIGADE ಬೆಂಗಳೂರು)


| ರವಿ ರೆಡ್ಡಿ

ಚೆನ್ನಾಗಿದೆ.ಶೇರ್ ಮಾಡುವೆ


| ರವಿ ರೆಡ್ಡಿ

ಚೆನ್ನಾಗಿದೆ.ಶೇರ್ ಮಾಡುವೆ




Add Comment






Recent Posts

Latest Blogs



Kamakasturibana

YouTube