ಮೈಕೇಲ್ ಜಾಕ್ಸನ್- ಜಾನೆಟ್ ಜಾಕ್ಸನ್

ನಿನ್ನೆ ಪತ್ರಿಕೆಯೊಂದಕ್ಕೆ ಮೈಕೇಲ್ ಜಾಕ್ಸನ್-ಜಾನೆಟ್ ಜಾಕ್ಸನ್ ಬಗ್ಗೆ ಟಿಪ್ಪಣಿ ಬರೆಯುವಾಗ ಇದ್ದಕ್ಕಿದ್ದಂತೆ ನಮ್ಮ ಕಾಳೇಗೌಡ ನಾಗವಾರರ ನೆನಪಾಯಿತು. ರಾಮಮನೋಹರ ಲೋಹಿಯಾ ಬರೆದ ಅಪೂರ್ವ ಸೌಂದರ್ಯಮೀಮಾಂಸೆ ‘ಸೌಂದರ್ಯ ಮತ್ತು ಮೈಬಣ್ಣ’ ಪ್ರಬಂಧವನ್ನು ಅಮೆರಿಕದ ಮೈಕೇಲ್ ಜಾಕ್ಸನ್ ಓದಿದ್ದರೆ ಅಥವಾ ಈ ಲೇಖನ ಕುರಿತು ನಾವೆಲ್ಲ ಕೇಳಿಸಿಕೊಂಡ ಕಾಳೇಗೌಡರ ಸಂಭ್ರಮದ ವ್ಯಾಖ್ಯಾನವನ್ನು ಮೈಕೇಲ್ ಕೇಳಿಸಿಕೊಂಡಿದ್ದರೆ ಚರ್ಮದ ಬಣ್ಣ ಬದಲಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿದ್ದನೇನೋ ಅನ್ನಿಸಿತು! ಲೋಹಿಯಾ ೧೯೫೧ರಲ್ಲಿ ಅಮೆರಿಕಕ್ಕೆ ಹೋಗಿ ಆಫ್ರೋ-ಅಮೆರಿಕನ್ನರ ಹೋರಾಟ ಬೆಂಬಲಿಸಿ ಮಾತಾಡಿದಾಗ ಮೈಕೇಲ್ ಇನ್ನೂ ಹುಟ್ಟಿರಲಿಲ್ಲ. ೧೯೬೦ರಲ್ಲಿ ಲೋಹಿಯಾ ‘ಬ್ಯೂಟಿ ಅಂಡ್ ಸ್ಕಿನ್ ಕಲರ್‍’ ಹಾಗೂ ‘ಕ್ವೆಶ್ಚನ್ ಆಫ್ ಸ್ಕಿನ್ ಕಲರ್‍’ ಲೇಖನಗಳನ್ನು ಬರೆದಾಗ ಮೈಕೇಲ್ ಎರಡು ವರ್ಷದ ಹುಡುಗ! 

ಮೊನ್ನೆ ಆಫ್ರಿಕನ್-ಅಮೆರಿಕನ್ ಸೆಮಿನಾರಿನ ನನ್ನ ಟಿಪ್ಪಣಿಗಳನ್ನು ನೋಡನೋಡುತ್ತಾ ಜಗತ್ತಿನ ಜನಪ್ರಿಯ ಸಂಸ್ಕೃತಿಯನ್ನು ಆಳಿದ ಅಮೆರಿಕದ ‘ಪಾಪ್ ಕಿಂಗ್’ ಮೈಕೇಲ್ ಜಾಕ್ಸನ್ ಕತೆ ಮತ್ತೆ ಮನಸ್ಸಿಗೆ ಬಂತು. ಮೈಕೇಲ್ ಎಂಬತ್ತರ ದಶಕದಲ್ಲಿ ಅತ್ಯಾಧುನಿಕ ಮಾರ್ಗಗಳನ್ನು ಹಾದು ಹೋಗಿ ಬಿಳಿಯನಾದ. ಮೈಕೇಲ್ ಬಿಳಿಯನಾದ ನಂತರ ಒಮ್ಮೆ ಅವನ ತಂಗಿ ಹಾಡುಗಾರ್ತಿ ಜಾನೆಟ್ ಜಾಕ್ಸನ್ ಫೋಟೋ ನೋಡಿದೆ. ಆಕೆ ಬಾಲ್ಯದಲ್ಲಿದ್ದಂತೆಯೇ ಇದ್ದಳು. ಮೈಕೇಲ್ ಕೂಡ ತಾರುಣ್ಯದ ತನಕ ಅವಳಂತೆಯೇ ಇದ್ದ. ಅಯ್ಯೋ! ಬಿಳಿಯನಾಗಲು ಹೋಗಿ ಮೈಕೇಲ್ ತನ್ನ ಮುಗ್ಧ ಮುಖವನ್ನೇ ಕಳಕೊಂಡನಲ್ಲ ಎನ್ನಿಸಿ ಪೆಚ್ಚೆನ್ನಿಸಿತು.

ಕರಿಯರಿಗೂ ಬಿಳಿಯರಿಗೂ ಆರಾಧ್ಯದೈವವಾಗಿದ್ದ ಡ್ಯಾನ್ಸರ್-ಸಿಂಗರ್‍ ಮೈಕೇಲ್ ಜಾಕ್ಸನ್‌ಗೆ ತನ್ನ ಬದುಕಿನ ಒಂದು ಹಂತದಲ್ಲಿ ತನ್ನ ಕಪ್ಪು ಚರ್ಮವನ್ನು ಒಪ್ಪಿಕೊಳ್ಳಲಾಗದಂಥ ಕೀಳರಿಮೆ ಬೆಳೆದ ಕತೆ ನಿಮಗೆ ಗೊತ್ತಿರಬಹುದು. ಮೈಕೇಲ್ ಜಾಕ್ಸನ್ ಕುರಿತು ಸೋಶಿಯಾಲಜಿಸ್ಟ್-ಐಡಿಯಲಾಗ್ ಡಾ. ಸಿ.ಜಿ. ಲಕ್ಮ್ಮೀಪತಿ ಬರೆದ ಪುಸ್ತಕವನ್ನು ನೀವು ಗಮನಿಸಿರಬಹುದು. ಮೈಕೇಲ್ ತನ್ನ ಚರ್ಮ ಬಿಳಿಯಾಗಿಸಿಕೊಳ್ಳಲು ಸುರಿದ ಹಣ, ಅದಕ್ಕಾಗಿ ಅವನು ಹಾದುಹೋಗಿರಬಹುದಾದ ಮಾನಸಿಕ ಪಡಿಪಾಟಲು, ಪಟ್ಟ ದೈಹಿಕ ಕಷ್ಟಗಳು… ಇವೆಲ್ಲ ನಮ್ಮ ಊಹೆಗೆ ಬಿಟ್ಟದ್ದು. 

ಮೈಕೇಲ್ ಜಾಕ್ಸನ್‌ನ ಈ ನಡೆಯ ಹಿಂದೆ ಕಪ್ಪಿನ ಬಗ್ಗೆ ಬಿಳಿಯರ ಭೀಕರ ಪೂರ್ವಗ್ರಹ, ಕಪ್ಪು ಜನರ ಕೀಳರಿಮೆ ಎರಡೂ ಕೆಲಸ ಮಾಡಿದ್ದವು. ಜಗತ್ತಿನ ಚರಿತ್ರೆಯಲ್ಲಿ ಎಷ್ಟೆಲ್ಲ ಬದಲಾವಣೆಗಳಾದರೂ, ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾದರೂ, ಯೂರೋಪಿನ ಬಿಳಿಯರಲ್ಲಿ ಕರಿಯರ ಬಗೆಗೆ ಇದ್ದ ಪೂರ್ವಗ್ರಹಗಳು ಮಾಯವಾಗುವುದು ಇನ್ನೂ ಸುಲಭವಾಗಿಲ್ಲ. ಕಪ್ಪು ಬಣ್ಣದ ಬಗೆಗಿನ ಬಿಳಿಯರ ಅಸಹನೆಯಂತೂ ಕರಿಯರ ಮನಸ್ಥಿತಿಯ ಮೇಲೆ ಸದಾ ಒತ್ತಡ ಹೇರುತ್ತಲೇ ಬಂದಿದೆ. 

ಇವತ್ತಿಗೂ ಅಮೆರಿಕದಲ್ಲಿ ಕರಿಯ-ಬಿಳಿಯ ಗಂಡು-ಹೆಣ್ಣುಗಳ ಜೋಡಿಯನ್ನು ನೋಡಿದಾಗ ಬಿಳಿಯರು ಅದನ್ನು ಅಸಹಜವಾಗಿ ಕಾಣುತ್ತಾರಂತೆ. ಈಗ ಕರಿಯರ ಶಕ್ತಿ ಹೆಚ್ಚಿರುವುದರಿಂದ ಬಿಳಿಯರ ಅಸಹನೆ ಹೆಚ್ಚು ಕಾಣಿಸಿಕೊಳ್ಳದಿರಬಹುದು. ಒಬ್ಬ ಉದಾರವಾದಿ ಬಿಳಿಯ ಲೇಖಕ ತನ್ನ ನಿಷ್ಠುರ ಆತ್ಮಪರೀಕ್ಷೆಯ ಗಳಿಗೆಯಲ್ಲಿ ‘ಇವತ್ತಿಗೂ ನೀಗ್ರೋಗಳ ಬಗ್ಗೆ ನನಗೆ ಇರುವ ಅಸಹನೆ ಇನ್ನಿತರ ಯಾವುದೇ ವಿಚಾರಗಳ ಬಗ್ಗೆ ನನಗೆ ಇರುವ ಅಸಹನೆಗಿಂತ ಭಿನ್ನವಾದದ್ದು’ ಎಂದು ಐವತ್ತು ವರ್ಷಗಳ ಕೆಳಗೆ ಬರೆದಿದ್ದ. ‘ಈಗಲೂ ಬಿಳಿಯ ಪೊಲೀಸರು ಕರಿಯ ವಿಚಾರಣಾಧೀನ ಖೈದಿಗಳನ್ನು ಹಿಂಸಿಸುವುದು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತದೆ; ಆದರೆ ಕರಿಯರನ್ನು ಮುಟ್ಟುವುದು ಕಷ್ಟ ಎಂಬ ಅಷ್ಟಿಷ್ಟು ಭಯ ಅಮೆರಿಕಾದ ಬಿಳಿಯರಲ್ಲಿ ಈಚಿನ ವರ್ಷಗಳಲ್ಲಿ ಹುಟ್ಟಿದೆ. ಅದು ಕರಿಯರ ಸಂಘಟನೆಯ ಗೆಲುವು ಎನ್ನಬಹುದು’ ಎಂದು ಕೆಲವು ವರ್ಷಗಳ ಕೆಳಗೆ ಅಮೆರಿಕಕ್ಕೆ ಹೋಗಿ ಬಂದ ಪ್ರೊಫೆಸರ್ ಜಾಫೆಟ್ ಹೇಳಿದ್ದರು.

ಪ್ರೊ. ಜಾಫೆಟ್ ನ್ಯಾಶನಲ್ ಲಾ ಯೂನಿವರ್ಸಿಟಿಯಲ್ಲಿ ಕೆಲವು ವರ್ಷಗಳ ಕೆಳಗೆ ಆಫ್ರೋ ಅಮೆರಿಕನ್ನರು ಹಾಗೂ ಇಂಡಿಯಾದ ದಲಿತರನ್ನು ಕುರಿತ ಮಹತ್ವದ ವಿಚಾರ ಸಂಕಿರಣ ನಡೆಸಿದಾಗ ಬೆಂಗಳೂರಿಗೆ ಬಂದಿದ್ದ ಅಮೆರಿಕದ ಪ್ರೊ. ಕೆವಿನ್ ಬ್ರೌನ್ ಹಾಗೂ ಅವರ ಮಗ ಡೆವಿನ್ ಬ್ರೌನ್ ಜೊತೆ ಕೆಲವು ಗಂಟೆಗಳ ಕಾಲ ಮಾತಾಡುವ ಅವಕಾಶ ಸಿಕ್ಕಿತ್ತು. ಆಫ್ರಿಕನ್-ಅಮೆರಿಕನ್ನರ ಬಗ್ಗೆ ಇವತ್ತಿಗೂ ಬಿಳಿಯರಲ್ಲಿ ತರ್ಕಾತೀತ ಅಸಹನೆ ಕಾಣಿಸಿಕೊಳ್ಳುತ್ತಲೇ ಇರುವುದನ್ನು ಕೆವಿನ್ ಹೇಳುತ್ತಿದ್ದರು. ಕೆವಿನ್ ಹೆಂಡತಿ ಬಿಳಿಯ ಕಕೇಷಿಯನ್ ಸಮುದಾಯದವರು. ಅವರ ಮಗ ಡೆವಿನ್ ಬ್ರೌನ್‌ಗೆ ಗೋಧಿ ಮೈಬಣ್ಣವಿದೆ. ಆದರೂ ಅವನು ಪಬ್ಲಿಕ್ ಸ್ಕೂಲಿನಲ್ಲಿ ಓದುವಾಗ ಒಂದಿಬ್ಬರು ಬಿಳಿಯ ಹುಡುಗರು ‘ನಿಗ್ಗರ್’ ಎಂದು ಹೀಗಳೆಯುತ್ತಿದ್ದರು. 

ಕೆಲವು ದಶಕಗಳಿಂದ ‘ನೀಗ್ರೋ’ ‘ನಿಗ್ಗರ್’ ಎಂಬ ಬೈಗುಳದ ಪದಗಳನ್ನು ಬಳಸಬಾರದು ಎಂಬ ಪ್ರಜ್ಞೆ ಹಬ್ಬಿದೆ. ಡೆವಿನ್ ವಾರಿಗೆಯ ಉದಾರವಾದಿ ಗೆಳೆಯರು ಕೂಡ ಅವನನ್ನು ‘ನೀನು ಕರಿಯರಲ್ಲೆಲ್ಲ ಅತ್ಯಂತ ಬಿಳಿಯ’ ಎಂದಾರೇ ಹೊರತು, ‘ನನ್ನನ್ನು ನಾನಿರುವಂತೆಯೇ ಪೂರ್ತಿ ಒಪ್ಪಿಕೊಳ್ಳಲು ತಯಾರಿಲ್ಲ’...ಇದೆಲ್ಲವೂ ಹುಡುಗ ಡೆವಿನ್‌ನನ್ನು ಕಾಡಿದೆ. ಮಾತಿನ ನಡುವೆ ಅವನ ತಂದೆ ಕೆವಿನ್, ‘ಇಂಡಿಯಾದಲ್ಲಿ ಅನೇಕರು ‘ನೀನು ಇಂಡಿಯನ್ನಾ?’ ಎಂದಾಗ ನನಗೆ ರೋಮಾಂಚನವಾಯಿತು’ ಎಂದರು. ಪ್ರಾಯಶಃ ಇಲ್ಲಿ ಯಾರೂ ತನ್ನನ್ನು ‘ಬ್ಲ್ಯಾಕ್’ ಎನ್ನುತ್ತಿಲ್ಲವೆಂದು ಕೆವಿನ್ ಬ್ರೌನ್‌ಗೆ ಹಾಯೆನ್ನಿಸಿದಂತಿತ್ತು. 
ಅವತ್ತು ಈ ಮಾತುಕತೆಯಲ್ಲಿ ಗೆಳೆಯ ಚಂದ್ರಶೇಖರ್ ಐಜೂರ್ ಕೂಡ ಜೊತೆಗಿದ್ದರು. ಅವರು ತೆಗೆದ ಫೋಟೋ ಕೂಡ ಇಲ್ಲಿದೆ. ಈ ಕುರಿತ ಸುದೀರ್ಘ ಲೇಖನ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಯಿತು.

ಕಳೆದ ನೂರು ವರ್ಷಗಳಲ್ಲಿ, ಅದರಲ್ಲೂ ‘ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಚಳುವಳಿಯ ನಂತರ ಅಮೆರಿಕದ ಬ್ಲ್ಯಾಕ್ ಲಿಟರೇಚರ್ ಹಾಗೂ ಚಿಂತನೆಗಳು ಗಟ್ಟಿಯಾದ ಕಪ್ಪು ಸೌಂದರ್ಯ ಮೀಮಾಂಸೆಯನ್ನು ಸೃಷ್ಟಿಸಿಕೊಂಡಿವೆ. ಕರಿಯರ ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಬದಲಾಗಿದೆ. ಆದರೂ ಅವರ ಕೆಲವು ವರ್ಗಗಳು ಕಪ್ಪು ಚರ್ಮದ ಬಗೆಗಿನ ಕೀಳರಿಮೆಯಿಂದ ತಪ್ಪಿಸಿಕೊಳ್ಳಲಾಗಿಲ್ಲ. ಆಫ್ರಿಕನ್ ದೇಶವಾಸಿಗಳಿಗೆ ಇರದಿದ್ದ ಬಣ್ಣ ಕುರಿತ ಕೀಳರಿಮೆ ಅಮೆರಿಕಾದ ಕರಿಯರನ್ನು ಆಗಾಗ್ಗೆ ಕಾಡಿದೆ. ಐದಾರು ಶತಮಾನಗಳ ಕೆಳಗೆ ಆಫ್ರಿಕಾ ಖಂಡಗಳಿಗೆ ಬಿಳಿಯರು ಬರುವ ತನಕ ದೇಶಿ ಆಫ್ರಿಕನ್ನರು ತಮ್ಮನ್ನು ತಾವು ‘ಕಪ್ಪು’ ಎಂದು ಜರಿದುಕೊಂಡಿರಲಿಲ್ಲ ಎಂಬುದು ನೆನಪಾಗುತ್ತದೆ.

ಅದೇನೇ ಇರಲಿ, ಕಳೆದ ದಶಕಗಳಲ್ಲಿ ಕೆಲವು ವರ್ಗಗಳ ಆಫ್ರೋ-ಅಮೆರಿಕನ್ನರು ಚರ್ಮದ ಬಣ್ಣದ ಬದಲಾವಣೆಗೆ ಮಾಡುತ್ತಿರುವ ಪ್ರಯತ್ನಗಳು ಕೆಲ ಬಗೆಯ ಆಳದ ಮಾನಸಿಕ ಸಂಕೀರ್ಣತೆಗಳನ್ನು ಥಿಯರಿಗಳಿಂದ ನಿವಾರಿಸುವುದು ಕಷ್ಟ ಎಂಬುದನ್ನೂ ಸೂಚಿಸುತ್ತವೆ. ಕಳೆದ ನಾಲ್ಕು ಶತಮಾನಗಳ ಕೆಳಗೆ ಜಮೈಕಾದ ಕಡೆಯಿಂದ ಗುಲಾಮರಾಗಿ ಬಂದು ಅಮೆರಿಕದಲ್ಲಿ ನೆಲೆಸಿದವರ ಸಂತತಿಯ ಒಂದು ವರ್ಗ ತಮ್ಮ ಚರ್ಮವನ್ನು ಬ್ಲೀಚ್ ಮಾಡಿಸಿಕೊಳ್ಳುತ್ತಿರುವ ರೀತಿಯನ್ನು ರೊನಾಲ್ಡ್ ಹಾಲ್ ಅಧ್ಯಯನ ಮಾಡಿದ್ದಾರೆ. ಅವರು ಕೂಡ ಅವತ್ತು ಬೆಂಗಳೂರಿನ ವಿಚಾರ ಸಂಕಿರಣಕ್ಕೆ ಬಂದಿದ್ದರು. ರೊನಾಲ್ಡ್ ತಮ್ಮ ಅಧ್ಯಯನದಲ್ಲಿ ‘ವರ್ಣಭೇದದ ಹೊಡೆತ ತಪ್ಪಿಸಿಕೊಳ್ಳಲು ಕೊಂಚ ಸಿರಿವಂತರಾದ ಕರಿಯರು ಕಂಡುಕೊಂಡಿರುವ ಮಾರ್ಗ ಚರ್ಮದ ಬಣ್ಣವನ್ನೇ ತಕ್ಕ ಮಟ್ಟಿಗೆ ಬದಲಾಯಿಸಿಕೊಳ್ಳುವುದು’ ಎಂಬುದನ್ನು ದಾಖಲಿಸಿದ್ದಾರೆ.

ಮಧ್ಯವಯಸ್ಸಿನ ಮಹಿಳೆಯರು, ಹೊಸ ಕಾಲದ ಹುಡುಗಿಯರು ಹಾಗೂ ಕೆಲವೆಡೆ ಗಂಡಸರು ಕೂಡ ತಮ್ಮ ಚರ್ಮವನ್ನು ಬ್ಲೀಚ್ ಮಾಡಿಸಿಕೊಳ್ಳುವುದನ್ನು ದಾಖಲಿಸಿದ್ದ ರೊನಾಲ್ಡರ ವಿಡಿಯೋಗಳನ್ನೂ ನೋಡಿದೆ. ‘ಮಧ್ಯಮ, ಮೇಲುಮಧ್ಯಮ ವರ್ಗದ ಕಪ್ಪು ಮಹಿಳೆಯರ ತಿಂಗಳ ಖರ್ಚಿನಲ್ಲಿ ಸೌಂದರ್ಯಸಾಧನಗಳನ್ನು ಕೊಳ್ಳುವ ಖರ್ಚೇ ಹೆಚ್ಚು ಇದೆ’ ಎನ್ನುತ್ತಾರೆ ರೊನಾಲ್ಡ್! ‘ಇದು ಇನ್ನು ಕೆಲವು ದಶಕಗಳಲ್ಲಿ ನಿರ್ಣಾಯಕ ಫಲಿತಾಂಶ ನೀಡಲಿದೆ’ ಎಂಬುದು ಅವರ ನಂಬಿಕೆ. ‘ಆದರೆ ಇದು ಜಮೈಕಾ ಮೂಲದ ಕೆಲವು ಕರಿಯರಲ್ಲಿ ಮಾತ್ರ ಕಾಣಿಸಿಕೊಂಡಿರುವ ಪ್ರವೃತ್ತಿ ಅಷ್ಟೆ’ ಎಂದರು ಕೆವಿನ್ ಬ್ರೌನ್. 

ಆಫ್ರೋ-ಅಮೆರಿಕನ್ನರ ಈ ಸಂಕೀರ್ಣ ಸವಾಲುಗಳ ಹಿನ್ನೆಲೆಯಲ್ಲಿ ಕೂಡ ನನಗೆ ಲೋಹಿಯಾ  ಲೇಖನ ಹಲವು ಸಲ ನೆನಪಾಗುತ್ತಿರುತ್ತದೆ. ‘ಸೌಂದರ್ಯ ಮತ್ತು ಮೈಬಣ್ಣ’ ಲೇಖನ ಭಾರತದ ಸ್ಥಿತಿಯ ಜೊತೆಜೊತೆಗೇ ಯುರೋಪಿನ ಬಿಳಿಯರು ಕರಿಯರಲ್ಲಿ ಸೃಷ್ಟಿಸಿದ ಕೀಳರಿಮೆಯ ರಾಜಕಾರಣವನ್ನೂ ಚರ್ಚಿಸುತ್ತದೆ. ಕೆ.ವಿ.ಸುಬ್ಬಣ್ಣನವರ ಅನುವಾದ:

‘ಯೂರೋಪಿನ ಬಿಳಿಯ ಜನ ಸುಮಾರು ಮೂರು ಶತಮಾನಗಳಿಗೂ ಹೆಚ್ಚು ಕಾಲದಿಂದ ಜಗತ್ತನ್ನೇ ಅಡಿಯಾಳಾಗಿಸಿಕೊಂಡಿದ್ದಾರೆ. ಯೂರೋಪಿನ ಈ ಬಿಳಿಯರಂತೆ ಆಫ್ರಿಕಾದ ನೀಗ್ರೋಗಳು ಜಗತ್ತನ್ನು ಆಳಿದ್ದರೆ ಹೆಣ್ಣಿನ ಸೌಂದರ್ಯದ ಲಕ್ಷಣಗಳು ನಿಸ್ಸಂದೇಹವಾಗಿ ಬೇರೆಯಾಗುತ್ತಿದ್ದವು. ಆಗ ಕವಿಗಳೂ ಲೇಖಕರೂ ನೀಗ್ರೋ ಜನರ ಚರ್ಮದ ಮೃದುವಾದ ರೇಶಿಮೆ ನುಣುಪನ್ನೂ, ಸತ್ವೋದ್ರೇಕಗೊಳಿಸುವ ಅದರ ಸ್ಪರ್ಶವನ್ನೂ, ಕಣ್ತುಂಬುವ ಸೊಬಗನ್ನೂ ಕುರಿತು ಮಾತಾಡುತ್ತಿದ್ದರು, ಹಾಡಿಕೊಳ್ಳುತ್ತಿದ್ದರು. ಅವರ ತುಟಿ ಮೂಗುಗಳಲ್ಲಿ ಮಾರ್ದವ ಕೋಮಲತೆಗಳನ್ನು ಕಾಣುವ ರಸಕಲ್ಪನೆಯ ಕಡೆಗೆ ಸೌಂದರ‍್ಯ ಪ್ರಜ್ಞೆ ಹೊರಳುತ್ತಿತ್ತು. ರಾಜಕಾರಣವೂ ಸೌಂದರ್ಯಕಲ್ಪನೆಯನ್ನು ರೂಪಿಸಬಲ್ಲದು.’ 

ಮೈಕೇಲ್ ಜಾಕ್ಸನ್ ಇಂಡಿಯನ್ ಫಿಲಾಸಫರ್ ಲೋಹಿಯಾರ ಮಾತನ್ನು ಕೇಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಿತ್ತು. ಬಣ್ಣ ಕುರಿತು ಅಣ್ಣನ ಕೀಳರಿಮೆಯನ್ನು ಅಂಟಿಸಿಕೊಳ್ಳದೆ ತನ್ನ ಪಾಡಿಗೆ ತನ್ನ ಸಂಗೀತದಲ್ಲಿ ಮುಳುಗಿ, ತನ್ನ ವ್ಯಕ್ತಿತ್ವದ ಸೌಂದರ್ಯ ಇಮ್ಮಡಿಗೊಳ್ಳುವಂತೆ ಹಾಡಿದ ಜಾನೆಟ್ ಜಾಕ್ಸನ್‌ಗೆ ಇದ್ದ ಶಕ್ತಿ ತನ್ನ ಕಲೆಯಿಂದ ಜಗತ್ತನ್ನೇ ಆಳಿದ ಅಣ್ಣನಿಗೆ ಇರಲಿಲ್ಲ! ಜಗತ್ತೇ ತನ್ನನ್ನು ಆರಾಧಿಸಿದರೂ ಮೈಕೇಲ್ ಜಾಕ್ಸನ್ ಒಳಗಿದ್ದ ಬಣ್ಣದ ಕೀಳರಿಮೆ ಮಾಯವಾಗಲಿಲ್ಲ ಎಂದರೆ, ಬಣ್ಣ ಕುರಿತ ಎಂಥೆಂಥ ಮಾನಸಿಕ ಸಾಂಸ್ಕೃತಿಕ ಆಯುಧಗಳು ಈ ಲೋಕದಲ್ಲಿವೆ ಎನ್ನಿಸುತ್ತದೆ. ಇನ್ನು ಜಾತಿ, ಬಣ್ಣ ಕುರಿತ ಇಂಥ ಭೀಕರ ಆಯುಧಗಳ ನಿತ್ಯ ತವರಾದ ಭಾರತದಲ್ಲಿ ಇವತ್ತಿಗೂ ತಯಾರಾಗುವ ತಕ್ಷಣ ಕಾಣುವ-ತಕ್ಷಣ ಕಾಣದ ಇಂಥ ಆಯುಧಗಳ ಕತೆ  ಜಾಣ ಓದುಗ, ಓದುಗಿಯರಿಗೆ ಬಿಡಿಸಿ ಹೇಳಬೇಕಾಗಿಲ್ಲ.

Share on:

Comments

12 Comments



| Krishna kumar

ಕಪ್ಪು ಬಿಳಿಯ ತಾರತಮ್ಯ, ಒಂದು ಮಾನಸಿಕ ಸ್ಥಿತಿ, ಭಾರತದಲ್ಲಿ ಹೇಗೆ ಹುಟ್ಟಿನಿಂದ ಬರುವ ಜಾತಿ, ಜಾತಿ ಕೀಳರಿಮೆ ಒಂದು ಸಾಮಾಜಿಕ ಅಸಮಾನತೆಗೆ, ಧರ್ಮದ ಲೇಪನ ಕೊಟ್ಟು, ನೀನು ಹುಟ್ಟಿನಿಂದ ಕೀಳು, ನಿನ್ನಿಂದ ಏನು ಮಾಡಲಾಗದು? ಏನೇ ನೀ ಸ್ವಂತ ಪರಿಶ್ರಮದಿಂದ ಮೇಲೆ ಬಂದರು ಇತರರು ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ, ಎನ್ನುವ ಪರಿಕಲ್ಪನೆ, ಶ್ರೇಣಿಕೃತ ವರ್ಣಶ್ರಮ ವೇದ ಉಪನಿಷದ ಗೀತೆ ನಿರ್ದೇಸಿಸಾಲ್ಪಟ್ಟಿದೆಯೆಂದು ಒಂದು ಏಕೋ ಸಿಸ್ಟಮ್ ಸೃಷ್ಟಿಯಾಗಿದ್ದಾರ ಫಲ. ವರ್ಣ ಎಂದರೆ ಅದು ಕಪ್ಪು ಬಿಳಿಗೇ ಸಂವಾದಿಯಾಗಿ ಬಳಕೆ ಆಗದಿರುವುದು, ಅದು ವೃತ್ತಿಗೆ ಸಂಬಂಧ ಮಾತ್ರ. ವರ್ಣ ಸಂಕರದಿಂದ ಜಾತಿಗಳು,ರಾಜಕೀಯ ಧಾರ್ಮಿಕ ಸಾಮಾಜಿಕ ಕಾರಣದಿಂದ ಹುಟ್ಟಿದ್ದರೂ, ಪಾಚಿಮತ್ಯಾ ನೆಲೆಯಲ್ಲಿ, ಹೊರಗಿನವರಿಗೆ ಬಹುಶ, ವರ್ಣ ಹಾಗೂ ಜಾತಿಗಳು ವ್ಯವಸ್ಥೆ ಅರ್ಥವಾಗಿಲ್ಲ ಅನಿಸಿರುತ್ತೆ, ಇದಕ್ಕೆ ಕಾರಣ, ವರ್ಣ ಮತ್ತು ಜಾತಿಗಳು ಭಾರತದಲ್ಲಿ, ಕಪ್ಪು ಬಿಳಿಯ ಹೇಗೋ ಜನಾಂಗಿಯ ತರತಮ್ಯಮ್ಯವೋ ಹಾಗೆಯೇ, ಭಾರತದಲ್ಲಿ ಜಾತಿ ವರ್ಣಗಳು ಅಸಮಾನತೆಯ ಸೂಚಕಗಳು. ಬಹುಪಾಲು ಸ್ವಂತರೋತ್ತರ ಪ್ರಗತಿಪರರರು ಅದರ ನೇತೃತ್ವ ವಹಿಸಿದ್ದರು ಎಡ ಪಂತಿಯ ಲೇಖಕರ ಮತ್ತು ಅದರ ನೇತೃತ್ವ ವಹಿಸಿದ್ದ ತೀವ್ರಗಾಮಿ ನಕ್ಸಲ್ ಚಳುವಳಿಗಳು ದಲಿತ ಕೇಂದ್ರೀತ ವಾಗಿದ್ದರೂ ಜಾತಿ ವರ್ಣ ತಾರತಮ್ಯ ಗುರುತಿಸದೆ ಆರ್ಥಿಕ ಸಮಾನತೆ, ಸಾಮಾಜಿಕ ಅಸಮಾನತೆಯ ಮೂಲ ಎಂದು ಜಾತಿ ವರ್ಣ ಮನಸ್ಥಿತಿಯನ್ನು ಮಾಕ್ಸ್ ಲೆನಿನ್ ದೃಷ್ಟಿಯಲ್ಲಿ ನೋಡಿದ್ದು, ಅಥವಾ ಬಹುತೇಕ ನಾಯಕರು ಬ್ರಾಹ್ಮಣ್ಯಕ್ಕೆ ವ್ಯತಿರೇಕ ಇರದೇ ಇದ್ದದು ಅಥವಾ ನಾಸ್ತಿಕತೇ ಆಚರಿಸುತ್ತಿದು ಕಂಡುಬರುತ್ತದೆ. Dr ಅಂಬೇಡ್ಕರ್ ಚಿಂತನೆಗಳು ಸ್ವಂತತೋತ್ತರ ದಲ್ಲಿ ಇಲ್ಲದೆ ಅಥವಾ ಲಿಖಿತ ಅದರವಿಲ್ಲದೆ, ಸಾಂಸ್ಕೃತಿಕ ನೆಲೆ ಇಲ್ಲದೆ ಚರ್ಚೆಗಳು ಸಾಧ್ಯವಿಲ್ಲದಗಿದ್ದು ಅನಿಡುತ್ತದೆ, ಭಾರತದಲ್ಲಿ ಜಾತಿ ವರ್ಣ ಒಂದು ಸಂಕಲನ ಸಾಂಸ್ಕೃತಿಕ ರಾಷ್ಟ್ರೀಯತೆ ಎಂದು ಒಂದು ಸಾಂಸ್ಕೃತಿಕ ಸಂಘ ಹೇಳುತ್ತಿರುವ ಕಘಟ್ಟದಲ್ಲಿ ಅಂಬೇಡ್ಕರ್ ವಾದ ಇದೆಲ್ಲವನ್ನ ಸೂಕ್ತ ಅದರಾಗಳ ಮೂಲಕ ಬೆತ್ತಳಾಗಿಸಿ, ಬಹುಸಂಖ್ಯಾತರೂಆಚರಿಸುವ ಮಾನಸಿಕ ವರ್ಣ ಜಾತಿ ಮಾನಸಿಕತೆಗೆ ಸ್ವಾಭಿಮಾನದ ನೆಲೆ ಯಲ್ಲಿ ಉತ್ತರಿಸಿದೆ


| ಮಂಜುನಾಥ್ ಸಿ ನೆಟ್ಕಲ್

ವರ್ಣ ಭೇದ ಮನೋಭಾವ ಇಂದಿಗೂ ಸಹ ನಮ್ಮ ಕಣ್ಮುಂದೆ ಢಾಳಾಗಿ ಕಾಣುತ್ತಿದೆ ಸರ್.....ಇತ್ತೀಚೆಗೆ ಕೇರಂ ಬೋರ್ಡ್ ಪಾನ್ ಗಳ ಕುರಿತ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೇರಂ ಬೋರ್ಡ್ ನ ಅಧಿಕೃತ ಗೇಮ್ ಹೊರತಾಗಿ ಪಾಪರ್ ಆಟ ಅಂತ ಒಂದಿದೆ. ಅದಕ್ಕೆ ಬೇರೆಯವರು ಏನನ್ನುತ್ತಾರೆ ಗೊತ್ತಿಲ್ಲ. ಅದರಲ್ಲಿ ಬಿಳಿಯ ಬಣ್ಣದ ಪಾನ್ ಗಳಿಗೆ 10 ಪಾಯಿಂಟ್ ಗಳು ಕರಿಯ ಬಣ್ಣದ ಪಾನ್ ಗಳಿಗೆ 5 ಪಾಯಿಂಟ್ ಗಳು ಮತ್ತು ಕೆಂಪು ಬಣ್ಣದ ಪಾನ್ ಗೆ 25 ಪಾಯಿಂಟ್ ಗಳನ್ನು ನಿಗದಿ ಮಾಡಿದ್ದಾರೆ... ಇಂದಿಗೂ ಸಹ ಈ ಆಟದ ನಿಯಮಗಳು ಮುಂದುವರೆಯುತ್ತಲೇ ಇದೆ. ನಾವು ಸಹ ಆಡುತ್ತಲೇ ಇದ್ದೇವೆ.... ಕಪ್ಪು ಬಣ್ಣದ ಪಾನ್ ಗಳ ಅಪಮೌಲ್ಯವನ್ನು ಮತ್ತು ಬಿಳಿ , ಕೆಂಪು ಬಣ್ಣದ ಹೆಚ್ಚುಗಾರಿಕೆಯ ಈ ವರ್ಣಭೇದ ನೀತಿಯನ್ನು ನಮಗೆ ಅರಿವಿಲ್ಲದಂತೆಯೇ ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸುತ್ತಲೇ ಇದ್ದೇವೆ.‌ ಎಂದು ಯೋಚಿಸುವಾಗ ಅಚ್ಚರಿಯಾಯಿತು ನಿಮ್ಮ ಬರಹ ಮತ್ತೊಮ್ಮೆ ಶ್ವೇತ ವರ್ಣೀಯರು ರೂಪಿಸಿರುವ ಈ ಪುರಾತನ ಸಂಕಥನ ಕುರಿತು ಚಿಂತಿಸುವಂತೆ ಮಾಡಿದೆ ಧನ್ಯವಾದಗಳು.


| ಚರಣ್

ಬಿಳಿಪಲ್ಲಿ ಮಾತ್ರ ಸೌಂದರ್ಯ ಕಂಡೇವಾ? ಕಪ್ಪಲ್ಲಿ ಸೌಂದರ್ಯ ಕಾಣಲು ಸೋತೆವಾ? ಇದಕ್ಕೆ ಉತ್ತರ ನೀವು ಉಲ್ಲೇಖಿಸಿದ ಲೋಹಿಯಾರ ಕೊನೆಯ ಸಾಲಲ್ಲಿ ಇದೆ ಅನ್ನಿಸಿತು. "ರಾಜಕಾರಣವೂ ಸೌಂದರ್ಯಕಲ್ಪನೆಯನ್ನು ರೂಪಿಸಬಲ್ಲದು."


| ಹರಿಪ್ರಸಾದ್ ಬೇಸಾಯಿ

ಇದೆಲ್ಲಾ ಎಷ್ಟು ಸಂಕೀರ್ಣ ಸಂಗತಿಗಳು ಸಾ. ನನ್ನಿ


| Subramanyaswamy Swamy

ಬಣ್ಣ ಮತ್ತು ಜಾತಿ ಹಾಗೂ ಧರ್ಮದ ಸಾಂಸ್ಕೃತಿಕ ಮಾನಸಿಕ ಆಯುಧಗಳು ಭಾರತ ಒಳಗೊಂಡಂತೆ ವಾಸ್ತವವಾಗಿ ಮನುಷ್ಯನ ಅವಿವೇಕದ ಬದುಕಿನ ಕನ್ನಡಿ ಆದರೆ ನಾವು ಮನುಷ್ಯರಾಗಬೇಕಾಗಿದೆ.


| Dhruva Kumar S N

ಮೈಕಲ್‌ ಜಾಕ್ಸನ್‌ ತನ್ನ ಕಪ್ಪು ಬಣ್ಣದ ಕೀಳರಿಮೆಯಿಂದ ಬ್ಲೀಚ್‌ ಮಾಡಿಕೊಳ್ಳಲಿಲ್ಲ. ಅವನಿಗೆ ತೊನ್ನು ಸಮಸ್ಯೆ ಉಂಟಾಗಿತ್ತು. ಅದನ್ನು ತಾನೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದಾನೆ. ಅವನ ಶವಪರೀಕ್ಷೆ ಕೂಡಾ ಈ ಅಂಶವನ್ನು ದೃಢಪಡಿಸಿದೆ. ತನ್ನ ಕಪ್ಪು ಬಣ್ಣದ ಬಗ್ಗೆ ಹೆಮ್ಮೆಯಿದೆಯೆಂದು ಅವನು ಹೇಳಿಕೊಂಡಿದ್ದಾನೆ. ಅವನ ಕೀಳರಿಮೆಗೆ ಕಾರಣ ಅವನ ತಂದೆಯಿಂದ ಬಾಲ್ಯದಲ್ಲಿ ನಡೆಯುತ್ತಿದ್ದ ಸತತ ಕಿರುಕುಳ, ಮೂದಲಿಕೆಗಳಿಗೆ ಒಳಗಾಗಿದ್ದುದು, ಒಂಟಿತನ ಮತ್ತು ವೃತ್ತಿಯ ಒತ್ತಡ.


| Puttaraju B

ಧ್ರುವಕುಮಾರ್‌ ಅವರ ಮಾಹಿತಿ ಸರಿಯೇ? ಹಾಗಾದಲ್ಲಿ ಲೇಖನವೇ ಅಪ್ರಸ್ತುತವಾಗಿಬಿಡುತ್ತದಲ್ಲವೆ? ವಾಸ್ತವದಲ್ಲಿ ಕಪ್ಪಿನ ಕಾರಣಕ್ಕೆ ಕೀಳರಿಮೆ ಬೆಳಸಿಕೊಂಡು, ಬೆಳ್ಳಗಾಗಲು ಪ್ರಯತ್ನಿಸಿರಬಹುದೆ? ಸಾರ್ವಜನಿಕವಾಗಿ ಬೇರೊಂದು ಹೇಳಿರಬಹುದೆ? ಚಿಕ್ಕವರೆಂದು ತೋರಲು ಹೇರ್‌ ಡೈ ಮಾಡುವವರನ್ನು ಹೇಗೆ ಪರಿಗಣಿಸಬಹುದು? ಖೋಟಾ ವ್ಯಕ್ತಿತ್ವವೆ? ವಾಸ್ತವ ಒಪ್ಪಿಕೊಳ್ಳದ ಅಳುಕಿನ ವ್ಯಕ್ತಿತ್ವವೆ? ಅನೇಕ ವಿದೇಶಿಯರು ಬಿಳಿ ಕೂದಲನ್ನು ಹಾಗೇ ಬಿಡುತ್ತಾರೆ. ಜನಸಾಮಾನ್ಯರಿಗೆ ಬಣ್ಣ ಮುಖ್ಯವಾದಾಗ ಜಾಕ್ಸನ್‌ನಂಥ ಕಲಾವಿದನಿಗೆ ಅದು ಮುಖ್ಯವಾದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಲ್ಲವೆ?


| Dr.CG Lakshmipathi

ಪ್ರಸಿದ್ಧ ಪಾಪ್ ಸಂಗೀತಗಾರ ಡಾನ್ಸರ್ ಮೈಕೆಲ್ ಜಾಕ್ಸನ್ ದೇಹ ಮತ್ತು ಮುಖದಲ್ಲಿ ಆದ ಬದಲಾವಣೆ ಕುರಿತಂತೆ ಹಲವು ಥಿಯರಿಗಳಿವೆ. ಈ ಆಧುನಿಕೋತ್ತರ ಕಾಲದಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂದು ಬೇರ್ಪಡಿಸುವುದು ಕಷ್ಟ. ಆತ ತನ್ನ ಚರ್ಮವನ್ನು ಬೆಳ್ಳಗೆ ಮಾಡಿಸಿಕೊಳ್ಳಲು ಬ್ಲೀಚ್ ಮಾಡಿಸಿಕೊಂಡ, ಸರ್ಜರಿಗೊಳಗಾದ ಎಂಬುದು ಬಹುತೇಕರು ನಂಬಿರುವ ಥಿಯರಿ. ಬಿಳಿಯರು ಸದಾ ಅವನ ವಿರುದ್ಧ ನಡೆಸಿದ ಅಪಪ್ರಚಾರದ ಭಾಗ. ಆದರೆ ಅವನ ಆತ್ಮಕತೆ 'ಮೂನ್ ವಾಕ್' ಹಾಗೂ ಅವನ ಆರೋಗ್ಯ ಕುರಿತ ವೈದ್ಯಕೀಯ ವರದಿಗಳು ಬೇರೆಯ ಕತೆಯನ್ನೇ ಹೇಳುತ್ತವೆ. ೧೯೮೪ರಲ್ಲಿ ಮೈಕೆಲ್ ಪೆಪ್ಸಿ ಕಂಪನಿಯ ಜಾಹೀರಾತಿಗಾಗಿ ನಡೆದ ಶೂಟಿಂಗ್ ವೇಳೆಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಅವನ ನೆತ್ತಿ, ತಲೆಯ ಇತರ ಭಾಗ ಸುಟ್ಟು ಹೋಯಿತು. ಚಿಕಿತ್ಸೆ ಮತ್ತು ನೋವನ್ನು ತಡೆಯಲಾಗದೆ ವಿಪರೀತ ಪೇನ್ ಕಿಲ್ಲರ್ ಗಳನ್ನು ಬಳಸಿದ ಕಾರಣದಿಂದ ಅಡ್ಡ ಪರಿಣಾಮಗಳು ಉಂಟಾದವು. ಚರ್ಮಕ್ಕೆ ಬಳಸಿದ ಕ್ರೀಮ್ ಗಳು ನಿಧಾನಕ್ಕೆ ಅವನ ಚರ್ಮ ಬದಲಾವಣೆ ಉಂಟು ಮಾಡಿದವು. ಅದನ್ನೇ ಬಿಳಿಯರು ಅಪಪ್ರಚಾರದ ಸಾಧನವನ್ನಾಗಿ ಮಾಡಿಕೊಂಡರು.


| Mallikarjunaiah T

ನಾವೀಗ ಪೋಸ್ಟ್‌ಮಾಡರ್ನಿಸಂ ದಾಟಿ ಮೆಟಾಮಾಡರ್ನಿಸಂ ತಲುಪಿಕೊಂಡಿದ್ದೇವೆ. ಮೈಕೆಲ್‌ ಜಾಕ್ಸನ್‌ 1993ರಲ್ಲಿ ಓಪ್ರಾ ವಿನ್‌ಫ್ರೀ ಜೊತೆಗಿನ ಸಂದರ್ಶನದಲ್ಲಿ ತನಗೆ ಚರ್ಮದ ಬಣ್ಣದ ಕಾಯಿಲೆಯಿದೆಯೆಂದೂ ಅದು ಅವನ ಚರ್ಮದ ಬಣ್ಣವನ್ನು ನಾಶ ಮಾಡುತ್ತದೆಂದೂ ಹೇಳಿ ಜನರು ತಾನು ತನ್ನ ಮೂಲ ಅಸ್ಮಿತೆಯನ್ನು ದೂರಿಕರಿಸುತ್ತಿದ್ದೇನೆ ಎಂದಾಗ ತನಗೆ ನೋವಾಗುತ್ತದೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾನೆ. ಈ ಚರ್ಮದ ಕಾಯಿಲೆ ವಿಟಿಲಿಗೊ (ತೊನ್ನು) ಎಂದು ಸ್ಪಷ್ಟವಾಗಿದೆ. ಇಷ್ಟಾಗಿಯೂ ಅವನ ಅಭಿಪ್ರಾಯದ ಬಗ್ಗೆ ಪತ್ತೇದಾರಿಕೆಗೆ ಇಳಿಯುವುದು, ಪೀತ ಪತ್ರಿಕೆಗಳನ್ನು ನೆಚ್ಚುವುದು ಸಾಧುವಲ್ಲ ಹಾಗೂ ಅವನ ಖಾಸಗಿತನದ ಮೇಲಿನ ದಾಳಿಯಾಗುತ್ತದೆ.


| ಡಾ. ನಿರಂಜನ ಮೂರ್ತಿ ಬಿ ಎಂ

ಮನುಷ್ಯನ ಮನಸ್ಸು ತುಂಬಾ ವಿಚಿತ್ರ ಮತ್ತು ಅತಾರ್ಕಿಕ. ವರ್ಗ, ಕುಲ, ಜಾತಿ, ಮತ, ಪಂಥ, ಧರ್ಮ, ಪಂಗಡ, ಪ್ರದೇಶ, ಭಾಷೆ, ಮುಂತಾದವುಗಳ ಆಧಾರದ ಮೇಲೆ ಮೇಲು-ಕೀಳುಗಳ ಭಾವನೆಗಳನ್ನು ಸೃಷ್ಟಿಸುವುದರ ಜೊತೆಗೆ, ತನ್ನ ಹಿಡಿತವಿಲ್ಲದ ತನ್ನ ಮೈಬಣ್ಣದ ಆಧಾರದ ಮೇಲೂ ಮೇಲು-ಕೀಳುಗಳ ತರತಮಗಳನ್ನು ಸೃಷ್ಟಿಸಿಕೊಂಡಿದ್ದಾನೆ ಈ ಮಾನವ ಬೊಂಬೆ. ಮೈ ಕಪ್ಪನ್ನು ಬಿಳುಪಾಗಿಸುವ ಮಾನವ ಪ್ರಯತ್ನಗಳು ನಿರಂತರ ಮತ್ತು ಆಶ್ಚರ್ಯಕರ. ಕಪ್ಪು ಬಣ್ಣದಲ್ಲೇ ನಿಜವಾಗಿಯೂ ಇರುವ ಸೌಂದರ್ಯವನ್ನು ಕಾಣುವ ಪ್ರಯತ್ನವೇ ಚೆನ್ನ ಅಲ್ಲವೆ? ಎಂದೆಂದಿಗೂ ಮರೆಯಾಗದ ಇಂತಹ ವಿಷಯವನ್ನು ವಿವರವಾಗಿ ವಿಶ್ಲೇಷಿಸಿರುವ ಲೇಖಕರಿಗೆ ನಮನಗಳು.


| Naveen S

ಬಿಳಿಗೆ ತಾರತಮ್ಯದ ಆದ್ಯತೆ ನಿಜವಾದರೂ ಕಪ್ಪಿಗೆ ತಾತ್ಸಾರ ಮಾಡದಿರುವ ಆಯಾಮಗಳೂ ಇವೆ. ರಾಮ, ಕೃಷ್ಣ, ಅರ್ಜುನ, ದ್ರೌಪದಿ ಮತ್ತಿತರರು ಕಪ್ಪಾದರೂ ಭಕ್ತಿ/ಗೌರವ ಪಡೆದವರು. ಸ್ವಲ್ಪ ಹಿಂದೆ ಎಲ್ಲ ಜಾತಿಗಳಲ್ಲೂ ಕಪ್ಪು-ಬಿಳಿ ದಂಪತಿಗಳು ವ್ಯಾಪಕವಾಗಿ ಕಾಣಸಿಗುತ್ತಿದ್ದರು. ಪಾಶ್ಚಿಮಾತ್ಯ ಬಿಳಿಯರಿಗೂ ತಮ್ಮ ಅತಿ ಬಿಳಿ ಬಗ್ಗೆ ಬೇಜಾರಿದೆ. ಅದಕ್ಕೇ ಅವರಿಗೆ ಟ್ಯಾನಿಂಗ್‌ ಮಾಡಿಕೊಳ್ಳುವ ಹುಚ್ಚು. ಕಪ್ಪಿನ ವಿಚಾರದ ಜೊತೆಯಲ್ಲಿ ಇದರ ಮಾನಸಿಕತೆ,ಸಾಮಾಜಿಕತೆ ಹಾಗೂ ಆರೋಗ್ಯಪರತೆಗಳನ್ನು ಗಮನಿಸಬೇಕು. ಕಪ್ಪುಜನರ ವಿರುದ್ಧದ ರೇಸಿಸಂ, ತಾರತಮ್ಯ ಹಾಗೂ ದೌರ್ಜನ್ಯಗಳನ್ನು ಮೈಕೆಲ್‌ ಜಾಕ್ಸನ್‌ ಸ್ಪಷ್ಟವಾಗಿ ಪದೇಪದೇ ತನ್ನ ಕಲೆ ಮತ್ತು ವೇದಿಕೆಗಳ ಮೂಲಕ ಖಂಡಿಸಿದ. ಕಲಾನಾಜೂಕಯ್ಯಗಳ ಮಧ್ಯೆ ಇದು ಮಹತ್ವದ ಸಂಗತಿ


| ಗುರು ಜಗಳೂರು

ಕೂದಲು ಕಪ್ಪಾಗಿರಲು ಹೇರ್ ಡೈ ಬಳಸುವ ನಾವು ಕಪ್ಪನೆಯ ಚರ್ಮದವರನ್ನು ಕೀಳಾಗಿ ಕಾಣುತ್ತೇವೆ.ದ್ರಾವಿಡರಾದ ನಾವುಗಳು ಮೂಲತಃ ಕರಿಯರು.ಪೂರ್ವಜರ ಐತಿಹಾಸಿಕ ಪ್ರಮಾದದಿಂದ ಬಿಳಿಯರಾಗಿದ್ದೇವೆ ಎಂದು ಹೇಳುವ ನನ್ನ ಸ್ಹೇಹಿತನ ಮಾತು ನಿಜವೋ,ಸುಳ್ಳೋ ಪ್ರಗ್ನಾವಂತರು ತಿಳಿಸಬೇಕು.ಸಿನಿ ತಾರೆಯರಲ್ಲಿ ಹಿಂದಿನ ಸರಿತಾ,ಪದ್ಮಪ್ರಿಯ ಈಗಿನ ಹಿಂದಿಯ ನಂದಿತಾ ದಾಸ್, ಕೊಂಕಣ್ ಸೇನ್ ಸಹಜ ಸೌಂದರ್ಯ ,ಪ್ರತೀಭೆಯ ಮುಂದೆ ಬೇರೆಯವರೆಲ್ಲ ಸಪ್ಪೆ ಎನಿಸುತ್ತದೆ.




Add Comment


Mundana Kathana Nataka

YouTube






Recent Posts

Latest Blogs