ಕರೆಕ್ಷನ್ V/S ಕರಪ್ಷನ್
by Nataraj Huliyar
'ಸಾರ್! ನೀವೂ, ನಿಮ್ಮ ಮೈಸೂರಿನಲ್ಲಿರುವ ಆ ಇನ್ನೊಬ್ಬ ಲೇಖಕರೂ ಹಳೇ ಹಿಂದಿ ಸಿನಿಮಾಗಳಲ್ಲಿ ಬಾಲ್ಯದಲ್ಲಿ ಬೇರ್ಪಟ್ಟ ಅವಳಿ-ಜವಳಿಗಳ ಹಾಗೆ ಅಂತ ನನಗೆ ಒಂದೊಂದ್ಸಲ ಅನ್ನಿಸುತ್ತೆ...'
ಮಾತಾಡುತ್ತಲೇ ಕಣ್ಣಂಚಿನಲ್ಲಿ ಅವರನ್ನು ಗಮನಿಸಿದೆ. ಅವರ ಮುಖದಲ್ಲಿ ರೇಗು ಹರಡುತ್ತಿತ್ತು...
ಈ ಹೋಲಿಕೆಯ ಪರಿಣಾಮವನ್ನು ಊಹಿಸಿದ್ದ ನಾನು, ಟಿಪ್ಪಣಿ ಮಾಡಿಕೊಂಡಿದ್ದ ಮುಂದಿನ ಮಾತನ್ನು ತಕ್ಷಣ ಹೇಳಿದೆ: ‘...ಆ ಹಳೇ ಸಿನಿಮಾಗಳ ಅವಳಿಗಳಲ್ಲಿ ಒಬ್ಬ ಒಳ್ಳೆಯವನಾಗುತ್ತಾನೆ, ಇನ್ನೊಬ್ಬ ಕೆಟ್ಟವನಾಗುತ್ತಾನೆ. ನೀವು ಸೀರಿಯಸ್ ರೈಟರ್ ಆದ್ರಿ. ಅವರು ಜನಪ್ರಿಯ ರೈಟರ್ ಆದರು...'
ಅವರ ಮುಖದ ಗಂಟು ಸಡಿಲಾಯಿತು. ಅದೇ ಆಗ ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಅವರು ಮನಸಾರೆ ನಕ್ಕರು. ಮರುಗಳಿಗೆಗೇ ನನ್ನತ್ತ ತಮ್ಮ ಬ್ರಾಂಡ್ ಮೋಹಕ ನಗೆಯನ್ನೂ ತೂರಿಬಿಟ್ಟರು!
ಅದು ನಡೆದಿದ್ದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ಇಪ್ಪತ್ತನೆಯ ಶತಮಾನದ ಮೊದಲಲ್ಲಿ 'ಕನ್ನಡ ಸಾಹಿತ್ಯ ಪರಿಷತ್ ಈಸ್ ನಥಿಂಗ್ ಬಟ್ ಕನ್ನಡ ಸಾಹಿತ್ಯದ ಶರಬತ್!’ ಎಂದು ಟಿ.ಪಿ. ಕೈಲಾಸಂ ತಮಾಷೆ ಮಾಡಿದ್ದು ನೆನಪಾಗುತ್ತದೆ. ಅಲ್ಲಿ ಇಪ್ಪತ್ತೊಂದನೆಯ ಶತಮಾನದಲ್ಲೂ ಒಮ್ಮೊಮ್ಮೆ ಸಾಹಿತ್ಯದ ಚರ್ಚೆಗಳು ನಡೆಯುತ್ತಿದ್ದವು! ನಲ್ಲೂರು ಪ್ರಸಾದ್ ಅಧ್ಯಕ್ಷರಾಗಿದ್ದಾಗ ನಡೆದ ಒಂದು ಸಂಜೆಯ ಕಾರ್ಯಕ್ರಮ ಅಲ್ಲಿದ್ದ ಕೆಲವರಿಗಾದರೂ ನೆನಪಿರಬಹುದು. ಅನಂತಮೂರ್ತಿಯವರ ಹುಟ್ಟುಹಬ್ಬದ ಕಾರ್ಯಕ್ರಮ. ಅದರಲ್ಲಿ ನಾನೂ ಒಬ್ಬ ಸ್ಪೀಕರ್.
ಅವತ್ತು ಭೈರಪ್ಪ-ಅನಂತಮೂರ್ತಿಯವರ ನಡುವೆ ತಮಾಷೆಯ ಹೋಲಿಕೆ ಮಾಡಿದ್ದರೂ, ಅದರ ಹಿಂದೆ ಒಬ್ಬ ಓದುಗನಾಗಿ ನನ್ನ ಅನುಭವದ ಪ್ರಾಮಾಣಿಕ ಥೀಸಿಸ್ ಕೂಡ ಇತ್ತು. ಹದಿಹರೆಯದಲ್ಲಿ ಎನ್. ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿಯವರ ಪತ್ತೇದಾರಿ ಕಾದಂಬರಿಗಳು, ಅಶ್ವಿನಿ, ಸಾಯಿಸುತೆಯವರ ಧಾರಾವಾಹಿಗಳನ್ನು ಓದುತ್ತಾ ಓದುತ್ತಾ… ಭೈರಪ್ಪನವರ ಕಾದಂಬರಿಗಳಿಗೆ ಬಡ್ತಿ ಪಡೆದು ಮುಂದೆ ಹೊರಟ ಕನ್ನಡ ಓದುಗರಲ್ಲಿ ನಾನೂ ಒಬ್ಬ. ಅಷ್ಟೊತ್ತಿಗಾಗಲೇ ಕಾರಂತರನ್ನೂ ಓದಿದ್ದ ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಏನೋ ಸಮಸ್ಯೆ ಇದೆ ಎನ್ನಿಸುತ್ತಿತ್ತು.
ಓದಲು ಚೆನ್ನಾಗಿದೆ, ಕತೆಯ ಓಟ ಸರಾಗವಾಗಿದೆ…ಆದರೆ ಏನೋ ಸಮಸ್ಯೆಯಿದೆ ಎನ್ನಿಸುತ್ತಿತ್ತು; ಏನು ಅನ್ನುವುದು ಮಾತ್ರ ಗೊತ್ತಾಗುತ್ತಿರಲಿಲ್ಲ! ಈ ಕಾದಂಬರಿಗಳಲ್ಲಿ ಹಸು, ಕಾಳಿಂಗ, ವಿದೇಶಿ ಹೆಂಡತಿ ಏನೇನೋ ಬರುತ್ತಿವೆ...ಪಾತ್ರಗಳು ತಲೆಯಲ್ಲೇ ಮಾತಾಡುತ್ತಿವೆ… ಅದ್ಯಾಕೋ ಏನೋ ಅವೆಲ್ಲ ನನ್ನ ಹುಡುಗುಮನಸ್ಸಿಗೆ ಕನ್ವಿನ್ಸ್ ಆಗುತ್ತಿರಲಿಲ್ಲ. ಆ ಪುಟ್ಟ ಊರಿನಲ್ಲಿ ಹದಿನಾರನೆಯ ವಯಸ್ಸಿನ ಈ ಓದುಗನಿಗೆ ಕಾದಂಬರಿಯ ವಿಮರ್ಶೆಯ ಬಗ್ಗೆ ಅಷ್ಟಾಗಿ ಏನೂ ಗೊತ್ತಿಲ್ಲದ ಕಾಲ ಅದು. ಅವು ಯಾವ ವಿಮರ್ಶಾ ತರಬೇತಿಯೂ ಇಲ್ಲದ ಮುಗ್ಧ, ಸರಳ ಓದುಗನೊಬ್ಬನ ಒಳಗೇ ಹುಟ್ಟಿದ ನಿಜವಾದ ಅನುಮಾನಗಳು.
ಅವತ್ತಿನ ಗೊಂದಲ, ಅನುಮಾನಗಳನ್ನು ನೆನೆಯುತ್ತಾ, ಈ ಅಂಕಣ ಬರೆಯುತ್ತಿರುವಾಗ ಇದ್ದಕ್ಕಿದ್ದಂತೆ ಹೀಗನ್ನಿಸಿತು: ಕಾದಂಬರಿಕಾರನೊಬ್ಬ ‘ಜಾಣ’ ಓದುಗನಿಗೆ ಮಂಕುಬೂದಿ ಎರಚಬಹುದು; ಆದರೆ ಹದಿನಾರು ವರ್ಷದ ಮುಗ್ಧ ಓದುಗನ ವಿಚಾರದಲ್ಲಿ ಅದೆಲ್ಲ ನಡೆಯುವುದಿಲ್ಲ!
ಅದೇನೇ ಇರಲಿ, ಅದೇ ಸರಿಸುಮಾರಿನಲ್ಲಿ ಈ ಮುಗ್ಧ ಗೊಂದಲ, ಅನುಮಾನಗಳಿಗೆ ಆಕಸ್ಮಿಕವಾಗಿ ಒಂದು ಉತ್ತರ ಸಿಕ್ಕ ಗಳಿಗೆ ಮಾತ್ರ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಅದು ನಾನು ಸಿಕ್ಕಸಿಕ್ಕ ಕನ್ನಡ ಪುಸ್ತಕಗಳನ್ನು ಓದಿ ಮುಕ್ಕುತ್ತಿದ್ದ ಅಸಾಧ್ಯ ‘ಪುಸ್ತಕ ಹಸಿವಿನ’ ಕಾಲ. ಒಂದು ಬಿಸಿಲ ಮಧ್ಯಾಹ್ನ. ನಮ್ಮೂರಿನ ಒಂದು ಕಲ್ಲು ಬೆಂಚಿನ ಮೇಲೆ ಸಗಣಿ ಎತ್ತಲು ಬಳಸಿ, ಬರಿದಾಗಿ ಒಣಗಿ ಹೋಗಿದ್ದ ಬಿದಿರು ತಟ್ಟಿ. ಆ ತಟ್ಟಿಯೊಳಗೆ ಒಂದು ಪುಸ್ತಕ. ಅದರ ಮುಖಪುಟ, ಮೊದಲ ಪುಟಗಳು, ಕೊನೆಯ ಪುಟಗಳು ಎಲ್ಲವೂ ಹರಿದು ಹೋಗಿ, ಏಕ್‌ದಂ ಯಾವುದೋ ಲೇಖನ ಕಣ್ಣಿಗೆ ಬಿದ್ದ ಪುಸ್ತಕ. ಆಸೆಯಿಂದ ಕೈಗೆತ್ತಿಕೊಂಡೆ. ಪುಸ್ತಕದ ಹೆಸರು ಇತ್ತೋ, ಇರಲಿಲ್ಲವೋ, ಮರೆತುಹೋಗಿದೆ. ಬರೆದವರಂತೂ ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ.
ಸರಸರ ಪುಸ್ತಕದ ಪುಟ ತಿರುಗಿಸಿ ಕಣ್ಣಾಡಿಸಿದ ತಕ್ಷಣ ಇದು ಯಾವುದೋ ಬುದ್ಧಿಜೀವಿ ಪುಸ್ತಕವೇ ಹೌದು ಎಂದು ಎದೆ ರೋಮಾಂಚನದಿಂದ ಡವಗುಟ್ಟತೊಡಗಿತು. ಓಡುನಡಿಗೆಯಲ್ಲಿ ಮನೆಗೆ ಬಂದು ಕಾತರದಿಂದ ಓದಲು ಶುರು ಮಾಡಿದಾಗ ಇದು ಯಾರೋ ದೊಡ್ಡವರ ಪುಸ್ತಕವೇ ಎಂಬುದಂತೂ ಹೊಳೆಯಿತು. ಅದು ಯಾರ ಪುಸ್ತಕ ಎಂದು ಗುರುತಿಸಿ ಹೇಳಬಲ್ಲ ಜ್ಞಾನಿಗಳು ಯಾರೂ ಆ ಊರಿನಲ್ಲಿರಲಿಲ್ಲ! ಆದರೆ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ನಾಗರಹಾವು’ ಸಿನಿಮಾದ ಜನಪ್ರಿಯತೆ, ಹುಸಿತನ ಹಾಗೂ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆ- ಎರಡೂ ಒಂದೇ ಎಂದು ತೋರಿಸಿದ್ದ ಆ ಬರಹದ ಒಳನೋಟಕ್ಕೆ ಬೆರಗಾದೆ. ಆ ಲೇಖನ ನನಗರಿವಿಲ್ಲದೆಯೇ ನನ್ನ ಅಭಿರುಚಿಯನ್ನು ತಿದ್ದಿಬಿಟ್ಟಿತ್ತು.
ಇದಾದ ಐದಾರು ವರ್ಷಗಳ ನಂತರ ವಿಮರ್ಶೆಯ ಕೆಲಸವೆಂದರೆ ‘ಕರೆಕ್ಷನ್ ಆಫ್ ಟೇಸ್ಟ್’ ಎಂಬ ಟಿ.ಎಸ್. ಎಲಿಯಟ್‌ನ ಪ್ರಖ್ಯಾತ ಮಾತನ್ನು ಓದಿದೆ. ಹದಿಹರೆಯದಲ್ಲಿ 'ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಲೇಖನ ಓದಿದಾಗ ನನಗಾದದ್ದು ಅಭಿರುಚಿಯನ್ನು ತಿದ್ದಿದ ಅನುಭವ ಎಂಬುದು ಆಗ ಅರಿವಾಯಿತು. ಮುಂದೆ ಎಲಿಯಟ್ ಪಾಠ ಮಾಡುವಾಗ ನಮ್ಮ ಟೀಚಿಂಗ್, ವಿಮರ್ಶೆ, ಪಠ್ಯಪುಸ್ತಕ ಇವೆಲ್ಲವೂ ಓದುಗ, ಓದುಗಿಯರ, ವಿದ್ಯಾರ್ಥಿ, ವಿದ್ಯಾರ್ಥಿನಿಯರ 'ಕರೆಕ್ಷನ್ ಆಫ್ ಟೇಸ್ಟ್’ ಆಗಿರಬೇಕೇ ಹೊರತು, ಅಭಿರುಚಿ ಕೆಡಿಸುವ ‘ಕರಪ್ಷನ್ ಆಫ್ ಟೇಸ್ಟ್’ ಆಗಬಾರದು ಎಂಬುದನ್ನೂ ಹೇಳತೊಡಗಿದೆ.
ಅವತ್ತು ಇದ್ದಕ್ಕಿದ್ದಂತೆ ನನ್ನ ಅಭಿರುಚಿ ತಿದ್ದಿದ 'ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಬರಹ ಬರೆದವರು ಯು. ಆರ್. ಅನಂತಮೂರ್ತಿ ಹಾಗೂ ಅವರ ಪುಸ್ತಕದ ಹೆಸರು ‘ಸನ್ನಿವೇಶ’ ಎಂಬುದು ಗೊತ್ತಾಗಲು ಎರಡು ವರ್ಷ ಹಿಡಿಯಿತು. ಅಕ್ಷರ ಪ್ರಕಾಶನದ ಯಾವುದೇ ಪುಸ್ತಕ ಬಂದರೂ, ಅದು ಗಂಭೀರವಾದ ಪುಸ್ತಕ, ಅದನ್ನು ಹೇಗಾದರೂ ಹುಡುಕಿ ಓದಬೇಕು ಎಂದುಕೊಂಡೆ. ಅವತ್ತು ಒಂದೇ ಏಟಿಗೆ ಭೈರಪ್ಪನವರನ್ನು ಕೈಬಿಟ್ಟ ಜಾಣ ಓದುಗನೊಬ್ಬ ಅನಂತಮೂರ್ತಿಯವರ ಓದುಗನಾದದ್ದು ಸಹಜವಾಗಿತ್ತು.
ಮುಂದೊಮ್ಮೆ ಅನಂತಮೂರ್ತಿಯವರ ಆಯ್ದ ಬರಹಗಳ ಪುಸ್ತಕಗಳ ಬಿಡುಗಡೆಯಲ್ಲಿ ಮಾತಾಡಲು ಗೆಳೆಯ ಇಸ್ಮಾಯಿಲ್ ಕರೆದಾಗ, ‘ಸನ್ನಿವೇಶ’ ಎಂಬ ಪುಸ್ತಕ ಹೀಗೆ ನನಗೆ ಸಿಕ್ಕ ಕತೆ ಹೇಳಿದೆ; ‘ನಿಮ್ಮ ಲೇಖನ ಏಕ್‌ದಂ ನನ್ನನ್ನು ತಿದ್ದಿತು’ ಎಂಬುದನ್ನೂ ಅನಂತಮೂರ್ತಿಯವರಿಗೆ ಹೇಳಿದೆ. ಅವರಿಗೆ ಆ ಪುಸ್ತಕ, ಲೇಖನ ಎಲ್ಲವೂ ಮರೆತುಹೋಗಿತ್ತು. ಆದರೂ ನನ್ನ ಮಾತು ಕೇಳಿದಾಗ ಕೆಲವು ವರ್ಷಗಳ ಹಿಂದೆ ಸಾಹಿತ್ಯ ಪರಿಷತ್ತಿನಲ್ಲಿ ಮೂಡಿದ್ದ ಅದೇ ಸಂತೃಪ್ತ ಭಾವ ಅವರ ಮುಖದಲ್ಲಿ ಮೂಡಿತು! ಮುಂದೊಮ್ಮೆ ಈ ಪುಸ್ತಕದಲ್ಲಿರುವ `ಕಾದಂಬರಿ ಮತ್ತು ಹೊಸ ನೈತಿಕ ಪ್ರಜ್ಞೆ’ ಎಂಬ ಕಾದಂಬರಿ ಥಿಯರಿಯ ಲೇಖನವನ್ನು ನಾನೇ ಎಂ.ಎ. ಪಠ್ಯವಾಗಿ ಆಯ್ಕೆ ಮಾಡುವ ಕಾಲ ಬಂತು. ಅದನ್ನು ಇಷ್ಟಪಟ್ಟು, ವಿಸ್ತೃತವಾಗಿ ಟೀಚ್ ಮಾಡಿದ ನೆನಪು ಹಸಿರಾಗಿದೆ. ಈ ಲೇಖನದಲ್ಲಿ ಕಾದಂಬರಿಕಾರ ಒತ್ತಾಯಪೂರ್ವಕವಾಗಿ ಏನನ್ನಾದರೂ ಹೇರಿದರೆ, ಕಾದಂಬರಿಗಿಂತಲೂ ತಾನು ದೊಡ್ಡವನಾಗಲು ಹೊರಟರೆ ಏನಾಗುತ್ತದೆ ಎಂಬ ಬಗ್ಗೆ ಆರ್ಟಿಗಾ ಗ್ಯಾಸೆಯ ಸೂಕ್ಷ್ಮ ನೋಟ ಕಾದಂಬರಿ ಕುರಿತ ನನ್ನ ಅಭಿರುಚಿಯನ್ನು ಮತ್ತಷ್ಟು ತಿದ್ದಿತು.
ಮೇಲೆ ಹೇಳಿರುವ ಆರ್ಟಿಗಾ ಗ್ಯಾಸೆಯ ಮಾತು; ಕಾದಂಬರಿಕಾರ ತನಗಿಂತ ಹೆಚ್ಚಿನವನಾಗಲು ಹೊರಟರೆ ಕಾದಂಬರಿ ಅವನ ಮೇಲೆ ಸೇಡು ತೀರಿಸಿಕೊಳ್ಳುತ್ತದೆ ಎಂಬ ಅವನ ಅಪೂರ್ವ ಒಳನೋಟ; ಹಾಗೂ 'ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಎಂಬ ಲೇಖನ ಈ ಮೂರನ್ನೂ ಓದಿ ಧ್ಯಾನಿಸಿದ್ದರೆ ಭೈರಪ್ಪನವರ ಕಲೆಗೆ ಒಳ್ಳೆಯದಾಗುತ್ತಿತ್ತೇನೋ. ಸ್ವತಃ ಅನಂತಮೂರ್ತಿಯವರೇ ತಮ್ಮ 'ಭಾರತೀಪುರ’ ಕಾದಂಬರಿ ಬರೆಯುವಾಗ ಆರ್ಟಿಗಾ ಗ್ಯಾಸೆಯನ್ನು ಗ್ರಹಿಸಿದ್ದರೆ ಅವರಿಗೂ ಒಳ್ಳೆಯದಾಗುತ್ತಿತ್ತೇನೋ!
ಈ ಬರಹದ ಶುರುವಿನಲ್ಲಿ ಹೇಳಿದ ತಮಾಷೆಯ ಹೋಲಿಕೆ ಮಾಡುವ ಹೊತ್ತಿಗಾಗಲೇ ಅನಂತಮೂರ್ತಿಯವರ ಎಲ್ಲ ಕಾದಂಬರಿಗಳನ್ನೂ ಓದಿದ್ದ ನನಗೆ, ಅನಂತಮೂರ್ತಿ ಕೂಡ ಭೈರಪ್ಪ ಶೋಧಿಸಿದ ರೀತಿಯ ವಸ್ತುಗಳನ್ನು ಬೇರೆ ಥರ ಶೋಧಿಸಿದ್ದನ್ನು ಕಂಡು ಅಚ್ಚರಿಯಾಗಿತ್ತು; ಈ ಅವಳಿ-ಜವಳಿ ಹೋಲಿಕೆ ಹುಟ್ಟಿದ್ದು ಆಗ. ಬ್ರಾಹ್ಮಣರ ಶವಸಂಸ್ಕಾರದ ಕಾಲದ ಬಿಕ್ಕಟ್ಟು, ದೇವಾಲಯ ಪ್ರವೇಶದ ಸಮಸ್ಯೆ, ಬ್ರಾಹ್ಮಣ ಹುಡುಗರ ಬಂಡಾಯ... ಕೊನೆಗೆ ಈ ಸಂಸ್ಕೃತಿಯಲ್ಲಿ 'ಹೊಂಡವೆಂದುಕೊಂಡಿದ್ದ ಕಡೆ ದಿವ್ಯ ಸರಸ್ಸೂ ಇದೆ' ಎಂಬ ದಿವ್ಯ ಜ್ಞಾನ...ಇವೆಲ್ಲ ನೆನಪಾದಂತೆ, ಎಲ್ಲೋ ಈ ಬೇರ್ಪಟ್ಟ ಅವಳಿಗಳ ‘ತಾತ್ವಿಕ ಭೇಟಿ’ ನಡೆದಿರಬಹುದೇ ಎನ್ನಿಸತೊಡಗಿತು.
ಇದೆಲ್ಲದರ ನಡುವೆ ಈ ಇಬ್ಬರನ್ನೂ ಕುರಿತ ಒಂದು ಕುತೂಹಲಕರ ವಿವರ ನೆನಪಾಗುತ್ತದೆ: ಅನಂತಮೂರ್ತಿ, ಭೈರಪ್ಪ ಇಬ್ಬರೂ ಕೆಲ ಕಾಲ ತಂತಮ್ಮ ಜಾತಿಸಮುದಾಯದ ವಿರುದ್ಧ ಒಂದು ಕಾಲಕ್ಕೆ ಬಂಡೆದ್ದವರೇ; ಒಳಗಿನ ಹುಳುಕನ್ನು ಬಯಲಿಗೆಳೆದವರೇ; ಸ್ವಜಾತಿಗಳ ವಿಮರ್ಶಕರಾಗಿದ್ದವರೇ. ಲೋಹಿಯಾ ಸಮಾಜವಾದಿ ಫಿಲಾಸಫಿಯ ಪ್ರಭಾವ ಅನಂತಮೂರ್ತಿಯವರಿಗೆ ಜಾತಿಸಮಾಜದ ಹಿಂಸೆಗಳನ್ನು ಗ್ರಹಿಸುವ ಕಣ್ಣನ್ನು, ತಾತ್ವಿಕ ಚೌಕಟ್ಟನ್ನು ಕೊಟ್ಟಿತು. ಲೋಹಿಯಾ ಚಿಂತನೆ ಇಂಗ್ಲಿಷ್ ಪ್ರೊಫೆಸರ್ ಅನಂತಮೂರ್ತಿಯವರ ನೋಟವನ್ನು ತಿದ್ದಿದ್ದರಿಂದ ಅವರು ಗಟ್ಟಿಯಾದರು. ಆದರೆ ಫಿಲಾಸಫಿ ಪ್ರೊಫೆಸರ್ ಭೈರಪ್ಪ ತಮ್ಮ ಬರವಣಿಗೆಗೆ ಬೇಕಾದ ಅಸಲಿ ಫಿಲಾಸಫಿಯೊಂದನ್ನು ಹುಡುಕಿಕೊಳ್ಳಲಾರದೆ ಹೋದರು. ಎಲ್ಲಕ್ಕಿಂತ ಮುಖ್ಯವಾಗಿ, ಸ್ವಜಾತಿಯ ವಿಮರ್ಶಕನಾಗಿ ಒಂದು ಕಾಲಕ್ಕೆ ತಮ್ಮ ಬರವಣಿಗೆ ಪಡೆದ ಒಗರನ್ನು ಉಳಿಸಿಕೊಳ್ಳಲಾಗದೆ ಭೈರಪ್ಪ ದೂರ ಸರಿದರು. ಕೊನೆಕೊನೆಗೆ ಬಂದ ಅನಂತಮೂರ್ತಿಯವರ ‘ದಿವ್ಯ’, ‘ಭವ’ ಕಾದಂಬರಿಗಳೂ ಕಾದಂಬರಿಕಾರನ ಆರಂಭಘಟ್ಟದ ಸ್ವವಿಮರ್ಶೆಯ ತೀಕ್ಷ್ಣತೆಯನ್ನು ಕಳೆದುಕೊಂಡಿದ್ದವು.
ಆದರೆ ಅನಂತಮೂರ್ತಿಯವರ ಸಮಾಜ ವಿಮರ್ಶೆ ಹಾಗೂ ಸಂಸ್ಕೃತಿ ವಿಮರ್ಶೆ ಅವರ ಬರಹಗಳನ್ನು ಕೊನೆಯತನಕ ಹಾಗೂ ಹೀಗೂ ಉಳಿಸಿತು. ಭೈರಪ್ಪ ಮಾತ್ರ ಸ್ವಧರ್ಮ ವೈಭವೀಕರಣದ ಹಳ್ಳಕ್ಕೆ ಬಿದ್ದು ಹೊಸ ಸಾಧ್ಯತೆಯೇ ಇಲ್ಲದೆ, ಹಳೆಯ ಕಸುವನ್ನೂ ಕಳೆದುಕೊಂಡು ಕಣ್ಮರೆಯಾದರು.
ತನ್ನ ಬರವಣಿಗೆಯ ಬಗ್ಗೆ ಕಾಲಕಾಲದ ಸ್ವವಿಮರ್ಶೆಯಿಲ್ಲದ ಯಾವುದೇ ಲೇಖಕ ಉಳಿಯುವುದು ಕಷ್ಟ…
ಒಬ್ಬರಿಗಾಗಿಯೇ
ಪ್ರೀತಿಯನ್ನು ಮುಡಿಪಾಗಿಡುವುದು ಬರ್ಬರ;
ಯಾಕೆಂದರೆ ಆ ಪ್ರೀತಿ
ಉಳಿದೆಲ್ಲರನ್ನೂ ಕಡೆಗಾಣಿಸುವುದು;
ದೇವರ ಮೇಲಣ ಪ್ರೀತಿಯೂ ಹಾಗೆಯೇ.
Comments
5 Comments
| ವಿಜಯಾ
ನಟರಾಜ್,ಇನ್ನು ನಿಮ್ಮಂಥ ಓದಿ,ಅನುಭವಿಸಿ ತಿಳಿದವರು ನಿಮ್ಮ ಪರಿಕಲ್ಪನೆಗಳನ್ನು ಹೇಳುತ್ತ ಹೋದರೆ ಹೊಸದೇನಾದರೂ ಹುಟ್ಟುತ್ತದೇನೋ.ಇನ್ನೂ ಎಷ್ಟು ಕಾಲ ಹಿಂದಿನ ತಲೆಮಾರಿನ ಮಾತು,ತಿಳಿವು,ಕ್ರಿಯೆ ಕುರಿತು ವಿಶ್ಲೇಷಿಸುತ್ತೀರಿ. ಬದುಕನ್ನು ಕಂಡವರು,ವಿಶಿಷ್ಟ ನೋಟ ಉಳ್ಳವರು ನಿಮ್ಮ ಥಿಯರಿ ಕಟ್ಟಿದರೆ ಈ ಸಂಕೀರ್ಣ ಕಾಲಘಟ್ಟದಲ್ಲಿ ಹೊಸ ಓದುಗನಿಗೆ ವಿವೇಚಿಸಲು ಆಹಾರ ಸಿಕ್ಕೀತು. ಎಲ್ಲ ಸಾಧ್ಯತೆ,ಸಿದ್ಧತೆ ಇರುವ ನಿಮ್ಮಂಥವರು ಮಾಡಬೇಕಾ್ದ ಕೆಲಸ ಬಹಳ ಇದೆ. ನೀವು ಪದೇ ಪದೇ ಉದ್ಧರಿಸುವ ಆರಾಧಿಸುತ್ತಿರುವಿರೋ ಎಂಬಷ್ಟು ನಿಮ್ಮನ್ನು ಕಾಡುತ್ತಿರುವ ಮಾತುಗಳನ್ನು ಮೀರಿದೆ ನಿಮ್ಮ ಅಧ್ಯಯನ. ತಪ್ಪಿಯೂ ಹೆಣ್ಣನ್ನು ಟೀಕಿಸದೆ ಕಾರ್ಯ ಕರಣಗಳನ್ನು ಸಮರ್ಥವಾಗಿ ವಿಶ್ಲೇಷಿಸಿ ನೋಡುವ ನಿಮ್ಮ ಲಿಂಗಾತೀತ ಸಮಸ್ಥಿತಿ ನೀವು ಪದೇ ಪದೇ ಮೆಚ್ಚುವ ಲೇಖಕರಲ್ಲಿ ಇರಲೇ ಇಲ್ಲ. ಯಾರ ಟೀಕೆಯೂ ನನಗೆ ಬೇಡ.ಹೊಸ ಆಲೋಚನೆ ಕೊಡಿ.ಮಥಿಸಲು ಹೇಳಿ.ನಿಮಗೆ ಸಾಧ್ಯ ಎಂಬ ಕಾರಣಕ್ಕೇ ಹೇಳುತ್ತಿರುವೆ.ಆಗಬೇಕಾದ ಕೆಲಸ ಬಹಳ ಇದೆ ಅಲ್ಲವೆ?
| ಮಂಜುನಾಥ್ ಸಿ ನೆಟ್ಕಲ್
ಬರಹಗಾರನ/ಳ ಅಳಿವು ಹಾಗೂ ಉಳಿವನ್ನು ಕಾಲವೇ ನಿರ್ಧರಿಸುತ್ತದೆ. "ತನ್ನ ಬರವಣಿಗೆಯ ಬಗ್ಗೆ ಕಾಲಕಾಲದ ಸ್ವವಿಮರ್ಶೆಯಿಲ್ಲದ ಯಾವುದೇ ಲೇಖಕ ಉಳಿಯುವುದು ಕಷ್ಟ" ನಿಮ್ಮ… ಈ ಮಾತನ್ನು ಪ್ರತಿಯೊಬ್ಬ ಲೇಖಕ/ಲೇಖಕಿಯರು ತಮ್ಮ ಪ್ರತಿ ಬರವಣಿಗೆ ಕಾಲದಲ್ಲಿ ನೆನೆಯುತ್ತಾ ಇದ್ದರೆ ಬಹುಶಃ ಕೆಲವು ಕಾಲವಾದರೂ ಉಳಿಯಬಹುದು... ಅನಿಸುತ್ತದೆ... ಕಾಲದ ನಿರ್ದಯತೆಯಲ್ಲಿ ಕೊಚ್ಚಿ ಹೋಗದಂತೆ ಇರಬಹುದು... ನಿಮ್ಮ ಬಾಲ್ಯದ ನೆನಪುಗಳು ಓದಲು ಕುತೂಹಲಕಾರಿಯಾಗಿದೆ ಸರ್ ಧನ್ಯವಾದಗಳು
| ಶ್ರೀಧರ್ ಆರ್.
ಸರ್, ನಮಸ್ಕಾರ... ಡಿ.ಆರ್. ನಾಗರಾಜ್ ತಾರುಣ್ಯದಲ್ಲಿ ಮಾಡಿಕೊಂಡಿದ್ದ ಟಿಪ್ಪಣಿಯ ಒಂದು ಭಾಗ. ಎಸ್.ಎಲ್. ಭೈರಪ್ಪ ಒಬ್ಬ ಜನಪ್ರಿಯ ಕಾದಂಬರಿಕಾರ... 1. ಒಬ್ಬ ಲೇಖಕ ತೀರ ಸುಲಭವಾಗಿ ಜನಪ್ರಿಯನಾದ ಎಂದರೆ, ಆತ ಹೊಸ ರುಚಿಗಳನ್ನು ಸೃಷ್ಟಿಸುತ್ತಿದ್ದಾನೆ ಎನ್ನುವುದಕ್ಕಿಂತ ಒಗ್ಗಿರುವ ರುಚಿಗೇ ಬರೆಯುತ್ತಿದ್ದಾನೆ. 2. ಹೀಗೆ ಜನಪ್ರಿಯವಾಗುವ ಕೃತಿಗಳು ಆ ಜನಾಂಗದ ಮೇಲ್ಪದರದ ಅಭಿರುಚಿಯನ್ನು, ಆಲೋಚನಾ ಕ್ರಮವನ್ನು ಬಿಂಬಿಸುತ್ತವೆ; ಇವು ಸರಳ ಮತ್ತು ಮಾದಕವಾಗಿರುತ್ತವೆ. -ಡಿ.ಆರ್. ನಾಗರಾಜ್ (1974) ಉಲ್ಲೇಖ: -'ಡಿ.ಆರ್. ನಾಗರಾಜರ ತಾರುಣ್ಯದ ಟಿಪ್ಪಣಿಗಳು' ಕೃಪೆ: -ಮಯೂರ (ಮಾಸಿಕ, ಪುಟ: 93, ಏಪ್ರಿಲ್ 2022) ನಿರೂಪಣೆ: -ನಟರಾಜ್ ಹುಳಿಯಾರ್
| Sanganagouda
ಆ ವಯಸ್ಸಿಗೆ ನಿಮ್ಮ ಹಿರಿಯ ತಲೆಮಾರನ್ನು ಓದಿಕೊಂಡಿದ್ದೀರಿ. ನಮ್ಮ ತಲೆಮಾರು ಕನಿಷ್ಠ ತಮ್ಮ ತಲೆಮಾರೂ ಓದಿಕೊಳ್ಳುತ್ತಿಲ್ಲ ಸರ್
| ಡಾ. ಶಿವಲಿಂಗೇಗೌಡ ಡಿ.
ಜನಪ್ರಿಯ ಮತ್ತು ಗಂಭೀರ ಸಾಹಿತ್ಯದ ರಚನೆ ಮತ್ತು ಓದನ್ನು ಕುರಿತ ನಿಮ್ಮ ಅಭಿಪ್ರಾಯಗಳು ನಿಜಕ್ಕೂ ಸಾಹಿತ್ಯಾಭಿರುಚಿಗಳನ್ನು ತಿದ್ದುವಂತವು. ಲೇಖಕನಿಗಿರಬೇಕಾದ ಸ್ವವಿಮರ್ಶೆ, ಓದುಗ ಮತ್ತು ವಿಮರ್ಶಕನಿಗಿರಬೇಕಾದ ಅಭಿರುಚಿಗಳ ಬಗೆಗಿನ ಎಚ್ಚರದ ಅಗತ್ಯವನ್ನು ಈ ಲೇಖನ ಪ್ರತಿಪಾದಿಸುತ್ತಿದೆ. ಧನ್ಯವಾದಗಳು ಸರ್
Add Comment