ಪ್ರಬುದ್ಧ ನಟ ಇರ್ಫಾನ್ ಜೊತೆ ಒಂದು ದಿನ

ಸೂಕ್ಷ್ಮ ಸಂವೇದನೆಯ ನಟ ಇರ್ಫಾನ್ ಖಾನ್ ಬಗ್ಗೆ ನನ್ನ ಅಂಕಣವೊಂದರಲ್ಲಿ ಬರೆದ ಟಿಪ್ಪಣಿ ಓದಿ ಗೆಳೆಯ ಸಂದೀಪ್ ನಾಯಕ್ ಬರೆದರು: 

‘ಇರ್ಫಾನ್ ತನ್ನ ಕಣ್ಣು, ದೇಹ ಎರಡನ್ನೂ ನಟನೆಯಲ್ಲಿ ಬಳಸುತ್ತಿದ್ದ. ಎರಡರ ನಡುವೆ ಸಮತೋಲನವಿತ್ತು. ಹಾಗಾಗಿಯೇ ಇರ್ಫಾನ್ ನಟನೆಯಲ್ಲಿ ಜೀವಂತಿಕೆ ಕಾಣಿಸುತ್ತದೆ. ಆತ ಸಂವೇದನಾಶೀಲ ಮಾತ್ರವಲ್ಲ, ತನ್ನ ಸುತ್ತಣ ಜಗತ್ತಿಗೆ ಸ್ಪಂದಿಸುವ ಸೂಕ್ಷ್ಮಜ್ಞನೂ ಆಗಿದ್ದರಿಂದಲೇ ಉತ್ತಮ ನಟನೂ ಆಗಿದ್ದ. ದಂತಗೋಪುರದಲ್ಲಿ ಇರುವ ಜಡಗೊಂಡ ನಟರು ಹೇಗಿರುತ್ತಾರೆ ಎಂಬುದು ನಿಮ್ಮ ಗಮನಕ್ಕೂ ಬಂದಿರುತ್ತದೆ; ಅಥವಾ ದಂತಗೋಪುರದಲ್ಲಿ ಇರುವುದರಿಂದಲೇ ಅವರು ಜಡಗೊಂಡಿರುತ್ತಾರೇನೋ! ಈ ಮಾತನ್ನು ನಮ್ಮ ಕೆಲವು ಲೇಖಕರಿಗೂ ಅನ್ವಯಿಸಬಹುದು. ದುರದೃಷ್ಟವೆಂದರೆ, ಇರ್ಫಾನ್ ತರಹದ ನಟರು ಕಡಿಮೆ.

ಇರ್ಫಾನ್ ಬಗ್ಗೆ ಹಿಂದೆ ’ಸುಧಾ’ ವಾರಪತ್ರಿಕೆಯಲ್ಲಿ ನಾನು ಬರೆದಿದ್ದ ಟಿಪ್ಪಣಿ ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಈಚೆಗೆ ‘ಸುಧಾ’ದಲ್ಲಿ ಬರುತ್ತಿರುವ ರಾಮಮನೋಹರ ಲೋಹಿಯಾ ಕುರಿತ ನನ್ನ ಧಾರಾವಾಹಿಯನ್ನು ಸಿನಿಮಾ ಮಾಡುವ ಮಾತು ಬಂದಾಗ ಮತ್ತೆ ಇರ್ಫಾನ್ ನೆನಪು ಬಂತು.

`ಲೋಹಿಯಾ ಪಾತ್ರಕ್ಕೆ ಪಕ್ಕಾ ಸೂಟಾಗಬಲ್ಲ ನಟ ನವಾಜುದ್ದೀನ್ ಸಿದ್ದಿಕಿ’ ಎಂದು ಸಿನಿಮಾ ನಿರ್ದೇಶಕ ಕಬಡ್ಡಿ ನರೇಂದ್ರಬಾಬು ಹೇಳಿದ್ದರು. ಅದೇಕೋ ಇರ್ಫಾನ್ ಖಾನ್ ಮುಖ ನನ್ನೆದುರು ತೇಲಿ ಬಂತು. ಇರ್ಫಾನ್ ಲೋಹಿಯಾ ಪಾತ್ರಕ್ಕೆ ನಿಜಕ್ಕೂ ಲಾಯಕ್ಕಾಗಿದ್ದರು. ಆದರೆ ನಾಲ್ಕು ವರ್ಷಗಳ ಕೆಳಗೆ ಇರ್ಫಾನ್ ತೀರಿಕೊಂಡಿದ್ದರು. ಪೆಚ್ಚೆನ್ನಿಸಿತು.

ಇರ್ಫಾನ್ ಬಗ್ಗೆ ಹಿಂದೊಮ್ಮೆ ಬರೆದ ಟಿಪ್ಪಣಿಗಳು ನೆನಪಾದವು. ಐದಾರು ವರ್ಷಗಳ ಕೆಳಗೆ ಮೈಸೂರಿನಲ್ಲಿ ಒಂದೇ ದಿನದ ಮೂರು ಭೇಟಿಗಳಲ್ಲಿ ಇರ್ಫಾನ್ ನನಗೆ ಪ್ರಿಯರಾಗಿದ್ದರು.  ತಾನೊಬ್ಬ ಸೆಲೆಬ್ರಿಟಿ ನಟ ಎಂಬ ನೆನಪೇ ಇಲ್ಲದವರಂತೆ ಇರ್ಫಾನ್ ಬಹುಕಾಲದ ಗೆಳೆಯನಂತೆ ಆರಾಮಾಗಿ ನಮ್ಮೊಡನೆ ಬೆರೆತಿದ್ದರು. ಇರ್ಫಾನ್ ರಂಗಾಯಣದ ‘ಬಹುರೂಪಿ’ ಸಮಾರೋಪಕ್ಕೆ ಬಂದಿದ್ದರು. ರಂಗಾಯಣದ ನಿರ್ದೇಶಕರಾಗಿದ್ದ ಜನ್ನಿ ದೆಹಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಇರ್ಫಾನ್‌ಗೆ ಸೀನಿಯರ್. ಜನ್ನಿಯವರ ಪತ್ನಿ ರಂಗನಿರ್ದೇಶಕಿ ಸುಮತಿ ಎನ್‌ಎಸ್‌ಡಿಯಲ್ಲಿ ಇರ್ಫಾನ್, ಅವರ ಪತ್ನಿ ಸುತಾಪ ಇಬ್ಬರಿಗೂ ಕ್ಲಾಸ್‌ಮೇಟ್. 

ಸಿನಿಮಾ ನೋಡುವುದನ್ನು ಕೂಡ ಒಪ್ಪದ ಕುಟುಂಬದಿಂದ ಬಂದ ಇರ್ಫಾನ್ ನಾಟಕಶಾಲೆ ಸೇರುವುದನ್ನು ಅಮ್ಮ ಒಪ್ಪಿರಲಿಲ್ಲ; ‘ಎನ್‌ಎಸ್‌ಡಿಯಲ್ಲಿ ಕಲಿತು ಬಂದು ಲೆಕ್ಚರರ್ ಆಗುತ್ತೇನೆ’ ಎಂದು ಅಮ್ಮನನ್ನು ನಂಬಿಸಿ ಇರ್ಫಾನ್ ಅಲ್ಲಿ ಸೇರಿದರಂತೆ! ಎನ್‌ಎಸ್‌ಡಿಯಲ್ಲಿ ತಮ್ಮ ಗುರುವಾಗಿದ್ದ ಪ್ರಸನ್ನ ಬದನವಾಳಿನಲ್ಲಿ ಮಾಡುತ್ತಿದ್ದ ಸತ್ಯಾಗ್ರಹವನ್ನು ಬೆಂಬಲಿಸಲು ಇರ್ಫಾನ್ ಹಿಂದೊಮ್ಮೆ ಬಂದಿದ್ದರು. ‘ಪ್ರಸನ್ನ ನಿರ್ದೇಶನ ಮಾಡಿದರೆ ರಂಗಭೂಮಿಗೆ ಬಂದು ನಟಿಸುತ್ತೇನೆ’ ಎಂದಿದ್ದರು. 

ನಮ್ಮ ಭೇಟಿಯಲ್ಲಿ ರಂಗಭೂಮಿಯ ಬಗ್ಗೆ ಇರ್ಫಾನ್ ಹೇಳಿದ ಮಾತು ರಂಗ ನಟ, ನಟಿಯರಿಗೆ ದಿಕ್ಸೂಚಿಯಂತಿತ್ತು: ‘ನಾಟಕದಲ್ಲಿ ಆ್ಯಕ್ಟ್ ಮಾಡೋಕೆ ನನಗೆ ನಿಜಕ್ಕೂ ಇಷ್ಟ. ಆದರೆ ಇವತ್ತು ನಟನೆ ಮಾಡಿದಂತೆ ನಾಳೆ ಮಾಡಬಾರದು; ಇದು ನನ್ನಾಸೆ. ನಟನೆ, ಡೈಲಾಗ್ ಡೆಲಿವರಿ…ಎಲ್ಲದರಲ್ಲೂ ನಾಳಿನ ಪ್ರಯೋಗ ಬೇರೆಯದೇ ಆಗಿರಬೇಕು’ ಎಂದರು ಇರ್ಫಾನ್. 
ಇರ್ಫಾನ್ ಮಾತು ಬರವಣಿಗೆ, ನೃತ್ಯ, ಟೀಚಿಂಗ್ ಎಲ್ಲದಕ್ಕೂ ಅನ್ವಯಿಸಬಲ್ಲದು ಎಂಬುದು ನನಗೆ ನಂತರ ಹೊಳೆಯಿತು. 

‘Maturity is indivisible’ ಎನ್ನುತ್ತಾನೆ ಝೆಕ್ ಕಾದಂಬರಿಕಾರ ಮಿಲನ್ ಕುಂದೇರ. ಅಂದರೆ, ವ್ಯಕ್ತಿಯೊಬ್ಬ ನಿಜಕ್ಕೂ ಪ್ರಬುದ್ಧನಾಗಿದ್ದರೆ ಅವನ ಮಾತು, ಕ್ರಿಯೆ, ಪ್ರತಿಕ್ರಿಯೆ ಎಲ್ಲದರಲ್ಲೂ ಒಂದೇ ಬಗೆಯ ಪ್ರಬುದ್ಧತೆ ಇರುತ್ತದೆ. ವಿಶಿಷ್ಟ ಸಂವೇದನೆಯ ನಟನಾಗಿದ್ದ ಇರ್ಫಾನ್‌ಗೆ ಅಂಥ ಮೆಚುರಿಟಿ ಇತ್ತು. ಅಮೀರ್ ಖಾನ್, ಶಾರೂಕ್ ಖಾನ್ ಇಂಥ ಮೆಚುರಿಟಿ ಉಳ್ಳವರು ಎಂದು ನನಗನ್ನಿಸುತ್ತಿರುತ್ತದೆ. 

ಅದಿರಲಿ, ಅವತ್ತು ಸಂಜೆ ರಂಗಾಯಣದಲ್ಲಿ ಇರ್ಫಾನ್ ಮಾತಾಡಬೇಕಾಗಿತ್ತು. ‘ಇರ್ಫಾನ್ ಓಪನ್ನಾಗಿ ಮಾತಾಡುತ್ತಾ ಹೋದರೆ ನೇರವಾಗಿ ಸತ್ಯ ಹೇಳುತ್ತಾರೆ; ಅದು ಮತ್ತೆಲ್ಲಿಗೋ ಹೋಗಿ ವಿವಾದವಾಗುತ್ತದೆ’ ಎಂದು ಸುತಾಪ ಆತಂಕದಲ್ಲಿದ್ದರು. ಅಷ್ಟೊತ್ತಿಗಾಗಲೇ ಇರ್ಫಾನ್, ಶಾರೂಖ್ ಥರದ ದೊಡ್ಡ ನಟರ ಸಾಮಾಜಿಕ ಪ್ರತಿಕ್ರಿಯೆಗಳಿಗೆ ಮತೀಯ ಬಣ್ಣ ಬಳಿಯುವ ಕೋಮುವಾದಿ ಸೈತಾನ ಕಾರ್ಖಾನೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು.  

ಸಂಜೆ ಇರ್ಫಾನ್ ಸಭಿಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ, ಈ ದೇಶದಲ್ಲಿ ‘ನಾನು ಏನು ಹೇಳಿದರೂ ಅದನ್ನು ಒಬ್ಬ ಮುಸ್ಲಿಂ ಹೇಳುತ್ತಿದ್ದಾನೆ ಎಂದು ತಿರುಚಿದರೆ ನನಗೆಷ್ಟು ನೋವಾಗುತ್ತದೆ, ಯೋಚಿಸಿ’ ಎಂದರು. ಕೋಮು ವಿಕಾರಗಳ ಬಗ್ಗೆ ಸಿಟ್ಟಾದರು. ರಂಗಾಯಣದ ಪ್ರೇಕ್ಷಕರಿಗೆ ಇರ್ಫಾನ್ ನೋವು, ಕಾಳಜಿ, ಆತಂಕ ಅರ್ಥವಾಗತೊಡಗಿತು. ನಿಜಕ್ಕೂ ತಮ್ಮ ಆಳದಲ್ಲಿ ಅನ್ನಿಸಿದ್ದನ್ನು ಇರ್ಫಾನ್ ಹೇಳುತ್ತಿದ್ದರು. ದೇಶದಲ್ಲಿ ಒಂದೇ ಮಾರ್ಗ,ಧ್ವನಿ ಪ್ರಬಲವಾದರೆ ಆಗುವ ಅಪಾಯದ ಬಗ್ಗೆ, ನಟರು ಸಾಮಾಜಿಕ ಪ್ರಶ್ನೆಗಳ ಬಗ್ಗೆ ಮಾತಾಡಲೇಬೇಕಾದ ಬಗ್ಗೆ ಮಾತಾಡುತ್ತಾ ಹೋದರು. 

ರಾತ್ರಿ ಪಾರ್ಟಿಯಲ್ಲಿ ಇರ್ಫಾನ್ ಇನ್ನಷ್ಟು ಮುಕ್ತವಾಗಿದ್ದರು. ಇರ್ಫಾನ್ ಆರಾಮಾಗಿ ಹರಟುತ್ತಿದ್ದನ್ನು ನೋಡುತ್ತಿದ್ದ ನನಗೆ, ಅವರು ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಕಾಣುವ ತೆಳ್ಳಗಿನ ಮುಸ್ಲಿಂ ತರುಣರ ಹಾಗೆ ಕಂಡರು! ಅದಕ್ಕೆ ಸರಿಯಾಗಿ ಕೊರಳಿಗೆ ಮಫ್ಲರ್ ಬೇರೆ! ಎನ್‌ಎಸ್‌ಡಿಯಲ್ಲಿ ವಿದ್ಯಾರ್ಥಿಯಾಗಿದ್ದ ಇರ್ಫಾನ್ ದಪ್ಪಗಾಗಲಿ ಎಂದು ಅವರ ಅಮ್ಮಿ ಕ್ಯಾರಿಯರ್ ತುಂಬ ತುಪ್ಪ ತಂದು ಕೊಡುತ್ತಿದ್ದುದನ್ನೂ, ಅದನ್ನು ಇರ್ಫಾನ್ ಯಾರಿಗೂ ಕೊಡದೆ ತಿನ್ನುತ್ತಿದ್ದುದನ್ನೂ ಸುಮತಿ ನೆನಪಿಸಿದರು. ‘ನಾನು ಕಡ್ಡೀ ಪೈಲ್ವಾನ್ ಥರಾ ಇದ್ನಲ್ಲಾ, ದಪ್ಪ ಆಗಬೇಕೂಂತ ತುಪ್ಪಾನ ಯಾರಿಗೂ ಕೊಡದೆ ಒಬ್ಬನೇ ತಿನ್ನುತ್ತಿದ್ದೆ. ದಪ್ಪ ಆಗಬೇಕು ಅಂತ ರೋಡ್‌ಸೈಡ್ ತಿಂಡೀನೂ ತಿನ್ನುತ್ತಿದ್ದೆ.…ಏನೂ ಪ್ರಯೋಜನವಾಗಲಿಲ್ಲ!’ ಎಂದು ಇರ್ಫಾನ್ ನಕ್ಕರು.

ಆ ಕಾಲಕ್ಕೆ ನನಗೆ ಇರ್ಫಾನ್ ಒಬ್ಬ ವಿಶಿಷ್ಟ ನಟನೆಂಬ ಅಂದಾಜಿತ್ತೇ ಹೊರತು, ಅವರ ಮುಖ್ಯ ಸಿನಿಮಾಗಳನ್ನು ನೋಡಿರಲಿಲ್ಲ. ‘ಸ್ಲಂ ಡಾಗ್ ಮಿಲಿಯನೇರ್’, ‘ಲಂಚ್ ಬಾಕ್ಸ್’ ಥರದ ಸಿನಿಮಾಗಳನ್ನು, ಅವರ ನಟನೆಯ ತುಣುಕುಗಳನ್ನು ಗಮನಿಸಿದ್ದೆ. ಆದರೆ ಒಬ್ಬ ವ್ಯಕ್ತಿ ನಿಜವಾದ ನಟನೋ, ನಟಿಯೋ ಅಲ್ಲವೋ ಎಂಬುದನ್ನು ತಿಳಿಯಲು ಒಂದೇ ಸಿನಿಮಾ, ಒಂದೇ ಪಾತ್ರ ಸಾಕು! ನಾನು ಗಮನಿಸಿದ್ದ ಕೆಲವೇ ಪಾತ್ರಗಳಲ್ಲೇ ಇರ್ಫಾನ್ ಪಾತ್ರಕ್ಕೆ ತಕ್ಕಂತೆ ‘ನಟಿಸದೆ’ ಪಾತ್ರವನ್ನು ಮರು ಸೃಷ್ಟಿಸುವ ಸೃಜನಶೀಲ ಕಲಾವಿದ ಎಂಬುದು ಮನದಟ್ಟಾಗಿತ್ತು. 

ಇದೆಲ್ಲ ಆ ರಾತ್ರಿ ನೆನಪಾಗಿ, ‘ಒಂದಲ್ಲ ಒಂದು ದಿನ ನಿಮಗೆ ಆಸ್ಕರ್ ಪ್ರಶಸ್ತಿ ಬಂದೇ ಬರುತ್ತದೆ’ ಎಂದೆ. ಇರ್ಫಾನ್ ಕಣ್ಣರಳಿಸಿದರು. ನಾನು ವಿವರಿಸಿದೆ: ‘ಒಂದು ಕಾಲಕ್ಕೆ ನಾಸಿರುದ್ದೀನ್ ಶಾ ನಟನೆಗೆ ಆಸ್ಕರ್ ಬರಬಹುದೆಂದುಕೊಂಡಿದ್ದೆ; ಅವರ ನಟನೆ ಇಳಿಮುಖವಾಯಿತು; ನಾನಾ ಪಾಟೇಕರ್ ಸತ್ವ ಕಳಕೊಂಡು ‘ಟೈಪ್ಡ್’ ನಟನಾದರು. ನೀವು ಈಗಿನ ಹಾದಿಯಲ್ಲೇ ಮುಂದುವರಿದರೆ ಮುಂದೊಮ್ಮೆ ಆಸ್ಕರ್ ಬರುವುದು ಗ್ಯಾರಂಟಿ; ಇದು ನನ್ನ ನಂಬಿಕೆ.’

ಇರ್ಫಾನ್ ಅಚ್ಚರಿಗೊಳ್ಳಲಿಲ್ಲ. ಇರ್ಫಾನ್‌ಗೆ ದೊಡ್ಡ ದೊಡ್ಡ ರಾಷ್ಟ್ರೀಯ, ಅಂತರ‍್ರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು. ನಟನಾಲೋಕದ ನಿತ್ಯವಿದ್ಯಾರ್ಥಿಯಂತಿದ್ದ ಇರ್ಫಾನ್‌ಗೆ ಆಸ್ಕರ್ ಆತ್ಮವಿಶ್ವಾಸವೂ ಇದ್ದಂತಿತ್ತು! 

‘ಹೌ ಡೂ ಯೂ ಸೇ ದಟ್?’ ಎಂದರು ಇರ್ಫಾನ್.

‘ಬಿಕಾಸ್… ಐ ನೋ ಎ ಬಿಟ್ ಆಫ್ ಅಸ್ಟ್ರಾಲಜಿ!’ ಎಂದೆ. 

‘ರಿಯಲಿ?’ ಎನ್ನುತ್ತಾ, ‘ನನ್ನ ಕೈ ನೋಡಿ!’ ಎಂದು ಇರ್ಫಾನ್ ಹಸ್ತ ಚಾಚಿದರು. 

‘ತಮಾಷೆಗೆ ಅಸ್ಟ್ರಾಲಜಿ ಅಂದೆ, ಅಷ್ಟೆ! ಆಸ್ಕರ್ ಬಗ್ಗೆ ಹೇಳಿದ್ದು ಮಾತ್ರ ನನ್ನ ಆಳದ ನಂಬಿಕೆಯಿಂದ’ ಎಂದೆ. 

ಇರ್ಫಾನರ ‘ಮಖಬೂಲ್’ ‘ಪಾನ್ ಸಿಂಗ್ ತೋಮರ್’ ಸೇರಿದಂತೆ ಅವರ ಇನ್ನಿತರ ಮುಖ್ಯ ಸಿನಿಮಾಗಳನ್ನು ನೋಡಿರುವವರು ಈ ಮಾತನ್ನು ಒಪ್ಪಿಯಾರು. 

ರಾತ್ರಿ ಹನ್ನೊಂದಾಗುತ್ತಿತ್ತು. ಇರ್ಫಾನ್, ಸುತಾಪ ಬೆಂಗಳೂರಿನಲ್ಲಿ ಮಧ್ಯರಾತ್ರಿಯ ವಿಮಾನ ಹಿಡಿಯಬೇಕಾಗಿತ್ತು. ವಾಚ್ ನೋಡುತ್ತಾ ಮೇಲೆದ್ದ ಇರ್ಫಾನ್, ತಮ್ಮ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ಕೊಂಚ ಮೇಲೆತ್ತಿ, ‘ಶಲ್ ಐ ಟೇಕ್ ದಿಸ್?’ ಎಂದರು. ಆ ರಾತ್ರಿ ನಸುನಗುತ್ತಾ ಭವಿಷ್ಯ ಕೇಳಲು ಇರ್ಫಾನ್ ನನ್ನೆದುರು ಚಾಚಿದ ಕೈ, ಗ್ಲಾಸ್ ಹಿಡಿದ ಕೈ ಎರಡೂ ನನ್ನ ಕಣ್ಣ ಮುಂದಿವೆ. ಈ ಆತ್ಮೀಯ ಭೇಟಿಯ ನಂತರ ಇರ್ಫಾನ್ ಸಿನಿಮಾಗಳನ್ನು ಹೆಚ್ಚು ಗಮನಿಸಿದೆ. 

ಕರಕುಶಲಿಗಳ ಪರವಾಗಿ ಪ್ರಸನ್ನ ರೂಪಿಸಿದ ಹೋರಾಟಕ್ಕೂ ಇರ್ಫಾನ್ ಬಂದರು; ‘ಕೈ, ಕಾಲು, ಆತ್ಮ, ಭಾವನೆ, ಮಾತುಗಳನ್ನು ಬಳಸಿ ನಟನೆ ಮಾಡುವ ನನಗೆ, ಕೈಗಳನ್ನು ಬಳಸಿ ಕೆಲಸ ಮಾಡುವ ಕುಶಲಕರ್ಮಿಗಳು ನನ್ನ ಅಣ್ಣ ತಂಗಿಯರಂತೆ ಕಾಣುತ್ತಾರೆ. ನನಗೆ ದುಡ್ಡು ಬರುತ್ತೆ; ಆದರೆ ಈ ಕುಶಲಕರ್ಮಿಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ’ ಎಂದು ಇರ್ಫಾನ್ ಕಾಳಜಿಯಿಂದ ಹೇಳಿದ್ದರು.  

ಇರ್ಫಾನ್‌ಗೆ ಬ್ರೈನ್ ಟ್ಯೂಮರ್ ಆದಾಗ ದುಗುಡಗೊಂಡವರಲ್ಲಿ ನಾನೂ ಒಬ್ಬ. ನಂತರ ಇರ್ಫಾನ್ ಸಾವನ್ನು ಗೆದ್ದು ಬಂದವರಂತೆ ‘ಆಂಗ್ರೇಝಿ ಮೀಡಿಯಂ’ ಸಿನಿಮಾದಲ್ಲೂ ನಟಿಸಿದರು. ಕೊನೆಯ ಸಿನಿಮಾದಲ್ಲೂ ಅವರ ಸತ್ವ ಮುಕ್ಕಾಗಿರಲಿಲ್ಲ. ಇರ್ಫಾನ್‌ಗೆ ಕಲೆಯೇ ಮರುಜೀವ ತುಂಬಿದಂತಿತ್ತು. ಸಾವಿನೊಂದಿಗೆ ಸೆಣಸಿದ್ದ ಇರ್ಫಾನ್ ತಮ್ಮ ಬದುಕಿನಲ್ಲಿ ಇಂಗ್ಲಿಷಿನೊಂದಿಗೂ ಸೆಣಸಿದ್ದರು! ಅದು ಕೂಡ ಈ ಸಿನಿಮಾದಲ್ಲಿತ್ತು. 

ಒಳ್ಳೆಯ ಇಂಗ್ಲಿಷ್ ಬರದೆ ಮುಂಬೈನಲ್ಲಿ ಸೆಲೆಬ್ರಿಟಿ ನಟನಾಗುವುದು ಸಾಧ್ಯವಿಲ್ಲ ಎಂಬ ಮೂಢನಂಬಿಕೆಯ ನಡುವೆ ತಮಗೆ ಗೊತ್ತಿದ್ದಷ್ಟೇ ಇಂಗ್ಲಿಷಿನಲ್ಲಿ ಹಾಲಿವುಡ್ ಸಿನಿಮಾಗಳಲ್ಲೂ ಇರ್ಫಾನ್ ನಟಿಸಿ ಗೆದ್ದಿದ್ದರು; ಅಸಲಿ ನಟನಾ ಪ್ರತಿಭೆ ಏನನ್ನಾದರೂ ಅನುಕರಿಸಬಲ್ಲದು, ಮರು ಸೃಷ್ಟಿಸಬಲ್ಲದು ಎಂಬುದನ್ನು ಇಪ್ಪತ್ತು ವರ್ಷಗಳಲ್ಲಿ ಸಾಧಿಸಿ ತೋರಿಸಿದರು. ‘ಈ ಪಾತ್ರವನ್ನು ಇರ್ಫಾನ್ ಅಲ್ಲದೆ ಬೇರೆ ಯಾರೂ ನಿಭಾಯಿಸಲಾರರು’ ಎನ್ನುವಷ್ಟರ ಮಟ್ಟಿಗೆ ಬೆಳೆಯುತ್ತಾ ಹೋದರು.

ಒಮ್ಮೆ ಕ್ಲಿಕ್ಕಾದ ರೀತಿಯ ಪಾತ್ರವನ್ನು ಮತ್ತೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಇರ್ಫಾನ್ ನಂಬಿದ್ದರು. ‘ಹೀರೋ’ಗೆ ಇಂಥದೇ ಮುಖವಾಗಲೀ, ಇಂಥದೇ ಮೈಕಟ್ಟಾಗಲೀ ಮುಖ್ಯವಲ್ಲ; ಅಸಲಿಗೆ, ನಟನೊಬ್ಬ ‘ಹೀರೋ’ ಆಗಲೇಬೇಕಾಗಿಲ್ಲ; ನಟನೊಳಗಿನ ಸತ್ವ ಮಾತ್ರ ಅವನನ್ನು ಕಲಾವಿದನನ್ನಾಗಿ ಮಾಡುತ್ತದೆ ಎಂದು ಇರ್ಫಾನ್ ತೋರಿಸಿದರು. ಪ್ರತಿ ಪಾತ್ರದ ಒಳಸತ್ವವನ್ನು ಗುರುತಿಸಿ, ವ್ಯಾಖ್ಯಾನಿಸಿ, ವಿಸ್ತರಿಸಿ, ಆಯಾ ವ್ಯಕ್ತಿತ್ವಗಳ ಅಗೋಚರ ಸತ್ಯಗಳನ್ನು ಕಾಣಿಸಿದರು.  

ಇರ್ಫಾನ್ ಎಷ್ಟು ಗಂಭೀರ ನಟನೆಂದರೆ, ರಾತ್ರಿ ಎಷ್ಟೋ ಹೊತ್ತಿನ ತನಕ ನಾಳೆಯ ಶೂಟಿಂಗ್ ಸ್ಕ್ರಿಪ್ಟ್ ಓದುತ್ತಿದ್ದರು. ಬಜಾರಿನಲ್ಲಿ, ರಸ್ತೆಯಲ್ಲಿ, ಲಿಫ್ಟಿನಲ್ಲಿ ಇರ್ಫಾನ್ ಡೈಲಾಗುಗಳನ್ನು ಗಟ್ಟು ಮಾಡಿಕೊಳ್ಳುತ್ತಿದ್ದುದನ್ನು ಸುತಾಪ ತಮಾಷೆ ಮಾಡುತ್ತಿದ್ದರು. ಇವೆಲ್ಲ ಪ್ರತಿ ಪಾತ್ರದ ಮನೋಲೋಕ ಅರಿತು, ಆ ಪಾತ್ರದ ಸಾಧ್ಯತೆಗಳನ್ನು ವಿಸ್ತರಿಸಬೇಕು ಎಂದು ನಂಬಿದ್ದ ಇರ್ಫಾನರ ನಿತ್ಯ ತಯಾರಿಗಳಾಗಿದ್ದವು. ಪ್ರತಿ ಜೀವಿಗೂ ತನ್ನದೇ ಆದ ವಿಶಿಷ್ಟ ಅಸ್ತಿತ್ವ, ಮಹತ್ವ ಇರುತ್ತದೆ ಎಂಬ ಸತ್ಯವನ್ನು ಅವರ ನಟನೆ ಹುಡುಕುತ್ತಿತ್ತು. ವಿಶಾಲ್ ಭಾರದ್ವಾಜ್ ಹೆಂಡತಿಗೆ ಹೊಡೆಯುವ ಪಾತ್ರವೊಂದನ್ನು ಇರ್ಫಾನರಿಗೆ ಕೊಟ್ಟರು; ಆ ಪಾತ್ರ ಮಾಡಲು ಮೊದಮೊದಲು ಒಲ್ಲೆನೆಂದಿದ್ದ ಇರ್ಫಾನ್, ‘ಆ ಪಾತ್ರದಲ್ಲಿ ನಾನು ಶೋಧಿಸುವುದಾಗಲೀ, ಕಲಿಯುವುದಾಗಲೀ ಏನೂ ಇಲ್ಲ’ ಎಂದಿದ್ದರು. 

ಮನುಷ್ಯನ ಒಳಲೋಕದ ವಿಚಿತ್ರಗಳನ್ನು, ಮಾನವರ ಸೂಕ್ಷ್ಮಗಳನ್ನು ಎಲ್ಲ ಬಗೆಯ ಪ್ರೇಕ್ಷಕರಿಗೂ ಕಾಣಿಸಬಲ್ಲ ಇರ್ಫಾನ್ ಥರದ ಪ್ರತಿಭೆಗಳು ತೀರ ಕಡಿಮೆ. ಇಂಥ ಅಪರೂಪದ ನಟರು ಹಠಾತ್ತನೆ ನಿರ್ಗಮಿಸಿದಾಗ ಒಟ್ಟಾರೆ ಪ್ರಬುದ್ಧ ನಟನೆಯ ಲೋಕಕ್ಕೇ ನಿಜಕ್ಕೂ ದೊಡ್ಡ ನಷ್ಟ. ಈಚೆಗೆ ಲೋಹಿಯಾ ಪಾತ್ರದ ಚರ್ಚೆ ಬಂದಾಗ ಇರ್ಫಾನ್ ಮತ್ತೆ ನೆನಪಾದರು; ಈ ನೆಪದಲ್ಲಿ  ಮರುಟಿಪ್ಪಣಿ. ಜೊತೆಗೆ ನಟ ಕಿರಣ್ ನಾಯಕ್ ಕಳಿಸಿದ, ಖ್ಯಾತ ಸಿನಿಮಾ ನಿರ್ದೇಶಕ ಮನ್ಸೋರೆ ಮಾಡಿದ ಇರ್ಫಾನ್ ಸ್ಕೆಚ್! 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:


Recent Posts

Latest Blogs



Kamakasturibana

YouTube



Comments

7 Comments



| ಶಿವಲಿಂಗೇಗೌಡ ಡಿ.

ನಟ ಇರ್ಪಾನ್ ಖಾನ್ ವ್ಯಕ್ತಿತ್ವವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ ಸರ್. ಧನ್ಯವಾದಗಳು

\r\n


| Gangadhara BM

ದಿವಂಗತ ನಟ ಇರ್ಫಾನ್ ಖಾನ್ ರ ನೆನಪುಗಳು ಹಿತವಾಗಿವೆ ಸರ್. ಅವರ ಅಕಾಲಿಕ ಸಾವು ಬೇಸರದ ಸಂಗತಿ. ಕಲಾವಿದನ ಸೂಕ್ಷ್ಮತೆ ತೆರೆಯಾಚೆಗೂ ವಿಸ್ತರಿಸಿದರೆ ಇರ್ಫಾನ್ ರಂತರ ಕಲಾವಿದರು ತಯಾರಾಗುತ್ತಾರೆ.

\r\n


| Sandeep

ಇರ್ಫಾನ್ ಖಾನ್ ಲೇಖನ ಸೂಕ್ಷ್ಮವಾಗಿದೆ .ಪ್ರಖರವಾಗಿದೆ. ನನಗೆ ಇಷ್ಟವಾಯಿತು

\r\n


| Jaya V

Good one.ನಟನನ್ನು ಬದುಕಿಸುವ ಪ್ರಕ್ರಿಯೆ ಈ ಲೇಖನ. ಅವರ ನಟನೆಯ ಮೂಲಕ ಇರ್ಫಾನ್ ಬದುಕಿದ್ದಾರೆ

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಇರ್ಫಾನ್ ಖಾನ್ ಅವರು ಒಬ್ಬ ನಟ, ಹಲವು ನಟರಲ್ಲಿ ಒಬ್ಬರು; ಆದರೆ ಅವರ ನಟನೆ ನಟನೆಯಲ್ಲ ಅದು ಸಹಜ ವರ್ತನೆ ಅಂತ ಮಾತ್ರ ಗೊತ್ತಿತ್ತು. ಆದರೆ ಅವರೊಬ್ಬ ಅದ್ಭುತ ನಟ, ಅಂತಃಕರಣವುಳ್ಳ ನಟ, ನಿಜ ಅರ್ಥದಲ್ಲಿ ಮಾನವನಾಗಿದ್ದ ನಟ ಎಂದು ತಿಳಿದಿದ್ದೇ ಈಗ! ಅಂತಹ ನಟನನ್ನು ಗುರುತಿಸಿ, ಗೌರವಿಸಿ, ಗುಣಗಾನ ಮಾಡಿ, ಸಮಸ್ತ ಓದುಗರಿಗೆ ಪರಿಚಯಿಸುವ ಹುಳಿಯಾರರ ಈ ಲೇಖನವೂ ಅದ್ಭುತ!

\r\n


| Deepika B

ನಮಸ್ತೆ ಸರ್. ವಿಮರ್ಶೆಗಾಗಿ ಯಾವ ಪುಸ್ತಕ ಪರಾಮರ್ಶನ ಮಾಡಬೇಕು ತಿಳಿಸಿ ಸರ್.


| Subramanya Swamy Tara

ನಾನು ನನ್ನ ಮಡದಿ ಓದಿದೆವು ತುಂಬಾ ಚೆನ್ನಾಗಿ ಹೇಳಿದ್ದೀರಿ ಇರ್ಫಾನ್ ಮರೆಯಲಾಗದ ನಟ ಒಂದುಕಡೆ ಆದರೆ ಇನ್ನೂಂದು ಕಡೆ ಅದ್ಬುತ ಮನುಷ್ಯ ಸಾರ್ \r\n




Add Comment