ಕಣ್ಣ ರೆಪ್ಪೆಯ ಬರವಣಿಗೆ!

ಮೊನ್ನೆ ಬೆಂಗಳೂರಿನ ಜಯನಗರ ನ್ಯಾಶನಲ್ ಕಾಲೇಜಿನಲ್ಲಿ ಕತೆಗಾರ-ಗೆಳೆಯ ಮೊಗಳ್ಳಿ ಗಣೇಶರ ಸಾಹಿತ್ಯ ಕುರಿತು ಮಾತಾಡುತ್ತಾ, ಮೊಗಳ್ಳಿ ಎಡೆಬಿಡದೆ ಬರೆಯುತ್ತಿದ್ದುದು ನೆನಪಾಗಿ, ‘ಬರೆಯುವುದು ೨೪/೭ ಕೆಲಸ; ಅದು ಪಾರ್ಟ್ ಟೈಮ್ ಕೆಲಸ ಅಲ್ಲ’ ಅಂದೆ.  ಗಣೇಶ್ ಸಾವಿನ ಹಾಸಿಗೆಯಲ್ಲಿ ಬರೆದ ‘ಹೊಸಿಲು ದಾಟಿದವರು’ ಎಂಬ ಕೊನೆಯ ಕತೆಯ ಹಸ್ತಪ್ರತಿಯ ಹಾಳೆಗಳು ಕಣ್ಣೆದುರು ಬಂದವು. ಸಾವನ್ನು ಮುಂದೂಡಲು ‘ಅರೇಬಿಯನ್ ನೈಟ್ಸ್’ನ ಶಹರ್ಜಾದೆ ಹೇಳಿದ ಸಾವಿರದೊಂದು ಕತೆಗಳಂತೆ ಗಣೇಶ್ ಕೂಡ ಸಾವನ್ನು ಮುಂದೂಡಲು ಕತೆ ಬರೆಯುತ್ತಿದ್ದನೇನೋ ಅನ್ನಿಸಿತು. 

ಈ ಅಂಕಣದಲ್ಲಿ ಹಿಂದೊಮ್ಮೆ ಚರ್ಚಿಸಿದ ಮಾರ್ಕ್ವೆಜ್ ಆತ್ಮಕತೆ ‘ಲಿವಿಂಗ್ ಟು ಟೆಲ್ ದ ಟೇಲ್’ ನೆನಪಾಯಿತು. ಪ್ರೊಸ್ಟೇಟ್ ಕ್ಯಾನ್ಸರಿನಿಂದ ಚೇತರಿಸಿಕೊಂಡು ಬರೆದ ತನ್ನ ಅರ್ಧ ಆತ್ಮಕತೆಗೆ ಮಾರ್ಕ್ವೆಜ್ ಕೊಟ್ಟ ಹೆಸರಿನ ಇನ್ನೊಂದು ಅರ್ಥ ಈಗ ಹೊಳೆಯುತ್ತಿದೆ: ಮಾರ್ಕ್ವೆಜ್ ಅರ್ಧಕ್ಕೆ ಬರೆದು ಬಿಟ್ಟು ಹೋದ ಕತೆ ಈಗ ಬದುಕಿ ಲೇಖಕನ ಕತೆ ಹೇಳುತ್ತಿದೆ! ಅಂದರೆ, ‘ದ ಟೇಲ್ ಈಸ್ ಲಿವಿಂಗ್ ಟು ಟೆಲ್ ದ ಟೇಲ್ ಆಫ್ ದಿ ಆಥರ್!’ 

ಬರೆಯುವ ಆಸೆ, ಕಾತರ, ಒತ್ತಡ, ಬರೆದು ಹಗುರಾಗುವ ತುಡಿತ ಇವೆಲ್ಲ ಸೇರಿ ಸಾವನ್ನು ಕೊಂಚ ಮುಂದೂಡಿದ ಒಂದು ಅಪೂರ್ವ ಜೀವನಗಾಥೆ ಕುರಿತು ಹಿಂದೊಮ್ಮೆ ನಮ್ಮ ‘ಕನ್ನಡ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿದ್ದು ನೆನಪಾಯಿತು. ಆಗ ಗೆಳೆಯ ಲಿಂಗದಹಳ್ಳಿ ಚೇತನ್‌ಕುಮಾರ್ ‘ದ ಡೈವಿಂಗ್ ಬೆಲ್ ಅಂಡ್ ದ ಬಟರ್‍ ಫ್ಲೈ’ ಸಿನಿಮಾದ ಸಿ.ಡಿ. ತಂದುಕೊಟ್ಟಾಗ ಜಾನ್ ಡೊಮಿನೀಕ್ ಬಾಬಿಯ ಮೂಲ ಪುಸ್ತಕ ಸಿಕ್ಕಿರಲಿಲ್ಲ. ೧೯೯೭ರಲ್ಲಿ ಪ್ರಕಟವಾದ ಈ ಪುಸ್ತಕ ಮೊನ್ನೆ ಕಣ್ಣಿಗೆ ಬಿತ್ತು. 

ನೂರ ನಲವತ್ತು ಪುಟಗಳ ‘ದ ಡೈವಿಂಗ್ ಬೆಲ್ ಅಂಡ್ ದ ಬಟರ್ ಫ್ಲೈ’ ಎಂಬ ಪುಟ್ಟ ಪುಸ್ತಕ ಹೀಗೆ ಶುರುವಾಗುತ್ತದೆ: 

'ಕಿಟಕಿಯ ಸವೆದ ಪರದೆಯ ಮೂಲಕ ಮಂದ ಬೆಳಕು ಬೆಳಗಾಯಿತು ಎಂದು ಘೋಷಿಸುತ್ತದೆ. ನನ್ನ ಹಿಮ್ಮಡಿ ನೋಯುತ್ತಿದೆ. ತಲೆಯ ಮೇಲೆ ಹೆಣ ಭಾರವಿದೆ. ಎಂಥದೋ ಅಗೋಚರವಾದ ಡೈವಿಂಗ್ ಬೆಲ್ ನನ್ನ ದೇಹವನ್ನು ಸೆರೆಯಾಳಾಗಿಸಿಬಿಟ್ಟಿದೆ. ನನ್ನ ರೂಮು ಕತ್ತಲೆಯಿಂದ ಮೆಲ್ಲಗೆ ಹೊರಗಿಣುಕುತ್ತಿದೆ. ನನ್ನ ವಸ್ತುಗಳ ಮೇಲೆ ಕಣ್ಣಾಡಿಸುತ್ತೇನೆ:  ಪ್ರಿಯರ ಫೋಟೋಗಳು, ನನ್ನ ಮಕ್ಕಳು ಬರೆದ ಚಿತ್ರಗಳು, ಪೋಸ್ಟರುಗಳು, ಗೆಳೆಯ ಕಳಿಸಿದ ಪುಟ್ಟ ತಗಡಿನ ಸೈಕ್ಲಿಸ್ಟ್… ಕಳೆದ ಆರು ತಿಂಗಳಿಂದ, ಬಂಡೆಗೆ ಅಂಟಿಕೊಂಡ ಒಂಟಿ ಏಡಿಯ ಥರ ನಾನು ಅಂಟಿಕೊಂಡಿರುವ ಈ ಹಾಸುಗೆಯ ಮೇಲೆ ತೂಗುತ್ತಿರುವ ನಾಲ್ಕನೇ ಕಂಬಿ… ನನ್ನ ಚಿರಪರಿಚಿತ ಬದುಕು ಕಳೆದ ವರ್ಷದ ೮ನೇ ಡಿಸೆಂಬರ್ ಆರಿಹೋಯಿತು ಎಂಬುದನ್ನು ಮತ್ತೆ ನೆನೆಯಬೇಕಾದ್ದೇ ಇಲ್ಲ.’

ಈ ಪುಸ್ತಕವನ್ನು ಆಧರಿಸಿದ ಸಿನಿಮಾ ಮಾನವನ ಮೈ ಮನಸ್ಸು ಪ್ರಜ್ಞೆಗಳ ಹೋರಾಟದ ಹೊಸ ಮುಖವನ್ನು ಕಾಣಿಸಿದ್ದನ್ನು ಕುರಿತ ಹಳೆಯ ಟಿಪ್ಪಣಿಗಳು:

೮ ಡಿಸೆಂಬರ್ ೧೯೯೫. ‘ಎಲ್ಲೆ’ ಎಂಬ ಫ್ರೆಂಚ್ ಪತ್ರಿಕೆಯ ಸಂಪಾದಕನಾಗಿದ್ದ ಜಾನ್ ಡೊಮಿನೀಕ್ ಬಾಬಿಗೆ ಇದ್ದಕ್ಕಿದ್ದಂತೆ ಸ್ಟ್ರೋಕ್ ಆಯಿತು. ಮೂರು ವಾರಗಳಿಂದ ಕೋಮಾ ಸ್ಥಿತಿಯ ನಂತರ ಇದೀಗ ಪ್ರಜ್ಞೆ ಬಂದಿದೆ. ಡಾಕ್ಟರ್ ಮಾತಾಡುತ್ತಿದ್ದಾರೆ. ಅದು ಬಾಬಿಗೆ ಅರ್ಥವಾಗುತ್ತಿದೆ. 

‘ಆದರೆ, ಡಾಕ್ಟರೇ, ನನ್ನ ಮಾತೇಕೆ ನಿಮಗೆ ಕೇಳಿಸುತ್ತಿಲ್ಲ…' ಬಾಬಿಯ ಮನಸ್ಸು ಚೀರುತ್ತಿದೆ...ನರಶಾಸ್ತ್ರಜ್ಞ ಡಾ. ಅಲನ್ ಲೆಪಾಗ್ ಹೇಳುತ್ತಾನೆ. 'ನಿನಗೆ ಸೆರೆವಾಸ್ಕುಲಾರ್ ಅಪಘಾತ ಆಗಿದೆ. ಇದರಿಂದಾಗಿ ನಿನ್ನ ಮಿದುಳು ಮತ್ತು ಸ್ಟೈನಲ್ ಕಾರ್ಡಿನ ನಡುವಣ ಕೊಂಡಿ ಕಳಚಿಹೋಗಿದೆ. ಮೊದಲಾಗಿದ್ದರೆ, ಇಷ್ಟಕ್ಕೇ ನೀನು ಸತ್ತೆ ಅಂತ ತೀರ್ಮಾನಿಸುತ್ತಿದ್ದರು. ಈಗ ಹಾಗಲ್ಲ, ನಾವು ನಿನ್ನನ್ನು ಇನ್ನಷ್ಟು ಕಾಲ ಜೀವಿಸುವ ಥರ ಮಾಡಬಲ್ಲೆವು.' 

'ಇದು ಜೀವನವೇ?' ಎಂದುಕೊಳ್ಳುತ್ತಾನೆ ಬಾಬಿ. ಅದು ಯಾರಿಗೂ ಕೇಳಿಸುವುದಿಲ್ಲ. 

ಡಾಕ್ಟರು, 'ನಿನಗೆ ಸಂಪೂರ್ಣ ಪಾರ್ಶ್ವವಾಯು ಬಡಿದಿದೆ. ಇದಕ್ಕೆ 'ಲಾಕ್ಡ್ ಇನ್ ಸಿಂಡ್ರೋಮ್' ಅಂತಾರೆ. ಅಲ್ಲಪ್ಪಾ, ನೀನು ಸಿಗರೇಟ್ ಸೇದ್ತಾ ಇರಲಿಲ್ಲ. ಈ ಸ್ಟ್ರೋಕ್‌ಗೆ ಕಾರಣಾನೇ ಗೊತ್ತಾಗ್ತಾ ಇಲ್ಲ. ಆದರೂ ಒಂದು ಭರವಸೆ ಇದೆ. ಅದೇನೂ ಅಂದ್ರೆ, ನಿನ್ನ ಮಿದುಳು ಚೆನ್ನಾಗಿ ಕೆಲಸ ಮಾಡ್ತಾ ಇದೆ. ನಿನ್ನ ಒಂದು ಕಣ್ಣು ಕೆಲಸ ಮಾಡ್ತಾ ಇದೆ. ಹಾಂ, ನಿನ್ನ ನೋಡಿಕೊಳ್ಳೋಕೆ ಇಬ್ಬರು ಸುಂದರಿಯರು ಬರ್ತಾರೆ. ಟ್ರೈ ಮಾಡೋಣ' ಎನ್ನುತ್ತಾರೆ.

ಮಾರನೆಯ ದಿನ ಹೆನ್ರಿಟ್ ಮತ್ತು ಮಾರೀ ಎಂಬ ಇಬ್ಬರು ಸುಂದರಿಯರು ಬಾಬಿಗೆ ಫಿಸಿಯೋ ಥೆರಪಿ ಮಾಡಲು ಒಳಬರುತ್ತಾರೆ! ‘ಅರೆ! 'ನಾನೇನು ಸ್ವರ್ಗದಲ್ಲಿದ್ದೀನಾ!' ಎನಿಸುತ್ತದೆ ಬಾಬಿಗೆ.
'ನಾನು ಸ್ಪೀಚ್ ಥೆರಪಿಸ್ಟ್, ನಿನ್ನ ನಾಲಿಗೆ ಮತ್ತು ತುಟಿಗಳ ಮೇಲೆ ವರ್ಕ್ ಮಾಡೋಳು' ಎನ್ನುತ್ತಾಳೆ ಹೆನ್ರಿಟ್.

'ಇದೊಳ್ಳೆ ತಮಾಷೆಯಾಗಿದೆಯಲ್ಲ!' ಬಾಬಿ ಅಂದುಕೊಂಡ.

'ಈಗ ಒಂದು ಕೆಲಸ ಮಾಡೋಣ. ನಾನೀಗ ಕೆಲವು ಪ್ರಶ್ನೆ ಕೇಳೀನಿ. ನೀನು ಒಂದು ಸಲ ರೆಪ್ಪೆ ಬಡಿದರೆ 'ಹೌದು' ಅಂತ. ಎರಡು ಸಲ ರೆಪ್ಪೆ ಬಡಿದರೆ ‘ಇಲ್ಲ’ ಅಂತ. ಈಗ ಹೇಳು- ‘ನಾನು, ಅಂದರೆ ಹೆನ್ರಿಟ್, ಗಂಡಸಾ?' ಹೆನ್ರಿಟ್ ಕೇಳುತ್ತಾಳೆ.

ಬಾಬಿಯ ರೆಪ್ಪೆ ‘ಇಲ್ಲ’ ಎಂದು ಸೂಚಿಸಲು ಎರಡು ಸಲ ಬಡಿಯುತ್ತದೆ. 

ಹೆನ್ರಿಟ್, 'ನಾನು ಹೆಂಗಸಾ?' ಎಂದಾಗ, ಬಾಬಿಯ ರೆಪ್ಪೆ ಒಂದು ಸಲ ಬಡಿಯುತ್ತದೆ. ಬಾಬಿ ಈಗ ‘ರೆಪ್ಪೆ ಭಾಷೆ’ ಕಲಿಯಲು ಶುರುಮಾಡಿದ್ದಾನೆ!

ಬಾಬಿಯ ಹೆಂಡತಿ ಬರುತ್ತಾಳೆ. ರೆಪ್ಪೆ ಭಾಷೆಯ ಮೂಲಕ ಬಾಬಿಯ ಜೊತೆ ಮಾತಾಡುತ್ತಾಳೆ.  

ಮರುದಿನ ಥೆರಪಿಸ್ಟ್ ಹೆನ್ರಿಟ್ ಹೇಳುತ್ತಾಳೆ: 'ನಾವೆಲ್ಲ ಸೇರಿ ಒಂದು ಮೆಥೆಡ್ ಹುಡುಕಿದೀವಿ, ನಾನೀಗ ಆರ್ ಇ ಎಸ್ ಎ ಆರ್‍ ಐ ಎನ್ - ಹೀಗೆ ಫ್ರೆಂಚ್ ಅಕ್ಷರ ತೋರಿಸ್ತೀನಿ. ನೀನು ಏನಾದರೂ ಹೇಳಬೇಕೂಂತ ಅನ್ನಿಸಿದಾಗ ರೆಪ್ಪೆ ಮಿಟುಕಿಸು. ನಾನು ಒಂದೊಂದೇ ಅಕ್ಷರ ಓದ್ತೀನಿ, ನಿನಗೆ ಬೇಕಾದ ಮೊದಲನೇ ಅಕ್ಷರ ಬಂದಾಗ ಒಂದ್ಬಲ ರೆಪ್ಪೆ ಬಡಿ. ನಾನು ಬರ್ಕೋತೀನಿ. ಇದೇ ಥರ ಶಬ್ದ, ವಾಕ್ಯ ರಚನೆ ಮಾಡೋಣ.'
ಈ ರೆಪ್ಪೆ ಬಡಿತದ ಶಬ್ದರಚನೆ ಬಾಬಿಗೆ ತ್ರಾಸವೆನ್ನಿಸತೊಡಗುತ್ತದೆ. 

ನರ್ಸುಗಳು ನೀರಿನಲ್ಲಿ ಥೆರಪಿ ಮಾಡುತ್ತಿದ್ದರೆ, ‘ಇದೇನು! ನನ್ನನ್ನು ದೊಡ್ಡ ಮಗೂ ಥರ ಆಡಿಸ್ತಿದಾರಲ್ಲ! ಇದೇನು ನಗೆಪಾಟಲಪ್ಪ!’ ಎನಿಸುತ್ತದೆ. 'ಒಬ್ಬ ಹುಚ್ಚ ಮಾತ್ರ ನಗೋದಕ್ಕೆ ಏನೂ ಇರದಿದ್ದರೂ ನಗ್ತಾ ಇರ್ತಾನೆ' ಅಂದ ಕವಿಯೊಬ್ಬನ ಮಾತು ನೆನಪಿಗೆ ಬರುತ್ತದೆ.

ಬಾಬಿಯ ಹೆಂಡತಿ ಅವನಿಗೆ ಕನ್ನಡಿ ತೋರಿಸಿ ಮುತ್ತು ಕೊಡುವುದನ್ನು ಕಲಿಸಲೆತ್ನಿಸುತ್ತಾಳೆ. ಕನ್ನಡಿ ಕಿತ್ತೆಸೆಯಬೇಕೆನಿಸುತ್ತದೆ.  

ಹೆನ್ರಿಟ್‌ ರೆಪ್ಪೆ ಸಂವಹನದ ಪಾಠ ಶುರುವಾಗುತ್ತದೆ. ಒಂದೊಂದೇ ಅಕ್ಷರಕ್ಕೆ ಬಾಬಿ ರೆಪ್ಪೆ ಬಡಿದಂತೆ, 'ಐ ವಾಂಟ್ ಟು ಡೈ' ಎಂಬ ವಾಕ್ಯ ಮೂಡುತ್ತದೆ.

'ಆಂ! ಎಷ್ಟು ಧೈರ್ಯ ನಿನಗೆ! ನಿನಗಾಗಿ ಕಾಳಜಿ ತೋರಿಸೋರು, ಇಷ್ಟೊಂದು ಪ್ರೀತಿಸೋರು ಇದಾರೆ. ಹೀಗಿದ್ದೂ ನಾನು ಸಾಯಬೇಕು ಅಂತೀಯಲ್ಲ?' ಎನ್ನುತ್ತಾಳೆ ಹೆನ್ರಿಟ್.

ಹಿಂದೊಮ್ಮೆ ಬಾಬಿ ಪ್ರಕಾಶಕಿಯೊಬ್ಬಳಿಗೆ ಪುಸ್ತಕ ಬರೆದು ಕೊಡಲು ಒಪ್ಪಿದ್ದ. 'ಈಗಲೂ ಬಾಬಿ ಪುಸ್ತಕ ಬರೆಯಬಲ್ಲ' ಎಂದು ಹೆನ್ರಿಟ್ ಆ ಪ್ರಕಾಶಕಿಗೆ ಪೋನ್ ಮಾಡುತ್ತಾಳೆ. 

ಬಾಬಿ ತನ್ನ ರೆಪ್ಪೆ ಭಾಷೆಯ ಮೂಲಕ ಸೂಚಿಸಿದ್ದನ್ನು ಕ್ಲಾಡ್ ಎಂಬ ಹುಡುಗಿ ಅಪಾರ ಸಹನೆಯಿಂದ ಬರೆದುಕೊಳ್ಳಲಾರಂಭಿಸುತ್ತಾಳೆ. ಲ್ಯಾಟಿನ್ ಭಾಷೆಯಲ್ಲಿ ಈ ಥರದ ಬರವಣಿಗೆಯನ್ನು amanuensis ಎನ್ನುತ್ತಾರೆ. ಅಂದರೆ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಬರೆದುಕೊಳ್ಳುವುದು. ಡಿಕ್ಟೇಶನ್, ಉಕ್ತಲೇಖನದ ಥರ ಬಾಬಿಯ ಬರವಣಿಗೆಯನ್ನು ‘ಸಂಜ್ಞಾಲೇಖನ’ ಅನ್ನಬಹುದೇನೋ.

ಬಾಬಿಯ ರೆಪ್ಪೆ ಭಾಷೆ ಹೇಳಿದ್ದನ್ನು ಕ್ಲಾಡ್ ಬರೆದುಕೊಳ್ಳುವ ಕಸರತ್ತು ಶುರುವಾಗುತ್ತದೆ:

'ನನ್ನಿಡೀ ಜೀವನ ವೈಫಲ್ಯಗಳ ಸರಣಿಯಂತೆ ಕಾಣುತ್ತಿದೆ…ನಾನು ಪ್ರೀತಿಸಲಾಗದ ಹೆಂಗಸರು, ಕೈ ತಪ್ಪಿದ ಅವಕಾಶಗಳು, ನಾನೇ ಜಾರಿಹೋಗಲು ಬಿಟ್ಟ ಸಂತೋಷದ ಗಳಿಗೆಗಳು... ಯಾರು ಗೆಲ್ಲುತ್ತಾರೆ ಎಂಬುದು ಗೊತ್ತಿದ್ದರೂ, ಗೆಲ್ಲುವವನ ಮೇಲೆ ಬೆಟ್ ಕಟ್ಟದೇ ಕಳೆದುಕೊಂಡ ರೇಸುಗಳು... ನಾನೇನು ಕುರುಡಾಗಿದ್ದೆನೆ? ಮೂರ್ಖನಾಗಿದ್ದೆನೆ?’

ಬಾಬಿಯ ಬದುಕು-ಬರವಣಿಗೆ ಹೀಗೆ ನಡೆದಿರುವಾಗ ಒಂದು ದಿನ ಬಾಬಿಯ ತಂದೆಯ ಫೋನ್ ಬರುತ್ತದೆ. ಫೋನ್ ರಿಸೀವರನ್ನು ಬಾಬಿಯ ಕಿವಿಗಿಡುತ್ತಾರೆ: ‘ಅತ್ತ ನೀನು ನಿನ್ನ ದೇಹದಲ್ಲಿ, ಇತ್ತ ನಾನು ನನ್ನ ಅಪಾರ್ಟ್‌ಮೆಂಟ್‌ನಲ್ಲಿ ’ಲಾಕ್ಡ್ ಇನ್ ಸಿಂಡ್ರೋಮ್‌’ನಲ್ಲಿ ಸಿಕ್ಕಿಬಿದ್ದಿದ್ದೇವೆ' ಎಂದು ತಂದೆ ಅಳಲಾರಂಭಿಸುತ್ತಾನೆ. 

ಆಮೇಲೆ, ಐನಸ್ ಎಂಬ ಬಾಬಿಯ ಹಳೆಯ ಪ್ರೇಯಸಿ 'ನಾನು ಬರಲೇ' ಎಂದು ಬಾಬಿಯ ಪತ್ನಿ ಸಿಲಿನಾ ಎದುರೇ ಫೋನ್ ಮಾಡುತ್ತಾಳೆ. ಬಾಬಿ ರೆಪ್ಪೆಭಾಷೆಯಲ್ಲಿ 'ಪ್ರತಿ ದಿನ ನಿನಗಾಗಿ ಕಾಯುತ್ತಿರುವೆ' ಎನ್ನುತ್ತಾನೆ! 

ಬಾಬಿಯ ರೆಪ್ಪೆ ಭಾಷೆ ಬರೆಸುತ್ತಾ ಹೋಗುತ್ತದೆ: 'ನನಗೆ ಭಾನುವಾರ ಎಂದರೆ ಭಯ. ಇವತ್ತು ಫಿಸಿಯೋಥೆರಪಿಸ್ಟ್ ಬರಲ್ಲ. ಭಾನುವಾರ ಅನ್ನೋದು ಸುದೀರ್ಘ ಮರುಭೂಮಿಯ ಹಾಗೆ...' 
ಬಾಬಿಯ ರೆಪ್ಪೆಬರವಣಿಗೆ ಮುಂದುವರೆಯುತ್ತದೆ. ಈಜುಕೊಳದಲ್ಲಿ ಡೈವಿಂಗ್ ಸೂಟ್‌ನಲ್ಲಿ ಜಲಚಿಕಿತ್ಸೆ ಪಡೆಯುತ್ತಿರುವ ಬಾಬಿಗೆ ತಾನು ಬರೆಯುತ್ತಿರುವ ಅನುಭವ ಕಥನಕ್ಕೆ ‘ಪ್ರೆಷರ್ ಕುಕ‌ರ್‍’ ಅಥವಾ 'ಡೈವಿಂಗ್ ಬೆಲ್' ಅಂತ ಹೆಸರಿಡಬಹುದು ಅನಿಸುತ್ತದೆ.

ಪವಾಡಗಳು ಜರುಗುವುದಿಲ್ಲ ಎಂಬ ಕಟು ಸತ್ಯ ಬಾಬಿಗೆ ಗೊತ್ತಿತ್ತು. ಆದರೂ ಏನಾದರೂ ಪವಾಡವಾಗಿ, ನಾನು ಹಾಡಬಲ್ಲೆ ಎಂದುಕೊಳ್ಳುತ್ತಾನೆ. ‘ನೀನು ಹಾಡಬಲ್ಲೆ’ ಎಂದು ಎಲ್ಲರೂ ಹುರಿದುಂಬಿಸುತ್ತಾರೆ. ಆದರೆ ಕೊನೆಗೂ ಹಾಡಲಾಗದ ಬಾಬಿಯ ಪುಸ್ತಕವೇ ಅವನ ಹಾಡಾಗಿತ್ತು. 

ಜಾನ್ ಡೊಮಿನೀಕ್ ಬಾಬಿ 'ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್ ಫ್ಲೈ' ಪುಸ್ತಕವನ್ನು ಎರಡು ಲಕ್ಷ ಸಲ ತನ್ನ ಎಡಗಣ್ಣಿನ ರೆಪ್ಪೆ ಬಡಿದು ಬರೆಸಿದ. ಇದನ್ನು ಬರೆದುಕೊಂಡ ಕ್ಲಾಡ್ ಎಂಬ ಹುಡುಗಿಯ ಸಹನೆ, ಬದ್ಧತೆಗಳು ಊಹಿಸಲೂ ಅಸಾಧ್ಯವಾದುವು. ಅದು ಪಶ್ಚಿಮ. ಅದರಲ್ಲೂ ಫ್ರಾನ್ಸ್. ಅಲ್ಲಿನ ವೃತ್ತಿಪರತೆಯ ಬದ್ಧತೆ, ಶಿಸ್ತುಗಳ ಥರವೇ ಬೇರೆ.

ಪುಸ್ತಕದ ಕೊನೆಯ ಪ್ಯಾರಾದ ಆರಂಭದ ಸಾಲುಗಳು: 

‘ಕಳೆದ ಎರಡು ತಿಂಗಳಿಂದ ಪ್ರತಿ ಮದ್ಯಾಹ್ನದ ಮೌನದಲ್ಲಿ, ಶೂನ್ಯದಲ್ಲಿ ನಾವು ತಾಳ್ಮೆಯಿಂದ ಅಗೆದು ತೆಗೆದ ಈ ಪುಟಗಳನ್ನು ಕ್ಲಾಡ್ ಗಟ್ಟಿಯಾಗಿ ಓದುತ್ತಿದ್ದಾಳೆ.  ಕೆಲವು ಪುಟಗಳನ್ನು ಮತ್ತೆ ನೋಡಿದಾಗ ಖುಷಿ. ಇನ್ನು ಕೆಲವನ್ನು ಕಂಡಾಗ ಬೇಜಾರು. ಇದೆಲ್ಲ ಸೇರಿ ಒಂದು ಪುಸ್ತಕ ಆಗುತ್ತದೆಯೆ?’ 

ಪುಸ್ತಕದ ಕೊನೆಯ ಸಾಲುಗಳು:

‘ನನ್ನ ಡೈವಿಂಗ್ ಬೆಲ್ ತೆರೆಯುವ ಕೀಲಿಕೈಗಳು ಈ ಬ್ರಹ್ಮಾಂಡದಲ್ಲಿವೆಯೆ? ನಿಲ್ದಾಣವಿಲ್ಲದ ಒಂದು ಸುರಂಗ ಮಾರ್ಗ? ನನ್ನ ಸ್ವಾತಂತ್ಯ್ರವನ್ನು ಮರಳಿ ಪಡೆಯುವ ಶಕ್ತಿಯಿರುವ ನಾಣ್ಯ ಇದೆಯೆ? ನಾವು ಹೀಗೇ ನೋಡುತ್ತಾ. ಕಾಯುತ್ತಾ ಇರಬೇಕು. ಈಗ ವಿರಮಿಸುವೆ.                                              (ಬರ್ಕ್-ಪ್ಲೇಗ್ ಜುಲೈ ಆಗಸ್ಟ್ ೧೯೯೬)

೭ ಮಾರ್ಚ್ ೧೯೯೭.  ‘ದ ಡೈವಿಂಗ್ ಬೆಲ್ ಅಂಡ್ ದ ಬಟರ್ ಫ್ಲೈ’ಪುಸ್ತಕ ಪ್ರಕಟವಾದ ಮೊದಲ ದಿನವೇ ೨೫೦೦೦ ಪ್ರತಿಗಳು ಖರ್ಚಾದವು. ಈ ಫ್ರೆಂಚ್ ಪುಸ್ತಕ ಬಿಡುಗಡೆಯಾದ ಎರಡೇ ದಿನಕ್ಕೆ, ೯ ಮಾರ್ಚ್ ೧೯೯೭ರಂದು ಜಾನ್ ಬಾಬಿ ನ್ಯುಮೋನಿಯಾದಿಂದ ತೀರಿಕೊಂಡ. ಆ ವಾರ ಪುಸ್ತಕದ ಒಂದೂವರೆ ಲಕ್ಷ ಪ್ರತಿಗಳು ಖರ್ಚಾದವು. ಈಗ ಮರಾಠಿ, ತಮಿಳು ಅನುವಾದಗಳೂ ಸೇರಿದಂತೆ ಮಿಲಿಯನ್‌ಗಟ್ಟಲೆ ಪ್ರತಿಗಳು ಓದುಗ, ಓದುಗಿಯರನ್ನು ತಲುಪಿವೆ. ಇಂಗ್ಲಿಷ್ ಅನುವಾದದ ಪಿಡಿಎಫ್ ಪ್ರತಿ ಕೂಡ ಜಾಲತಾಣದಲ್ಲಿದೆ. 

ಈ ಹಿಂದೆ ’ಮಯೂರ’ ದಲ್ಲಿ ಮೊಗಳ್ಳಿ ಕುರಿತು ಸುದೀರ್ಘ ಲೇಖನ ಬರೆದ ಮೇಲೆ, ಮತ್ತೆ ಮೊಗಳ್ಳಿ ಗಣೇಶ್ ಸಾವಿನ ಹಾಸಿಗೆಯಲ್ಲಿ ಬರೆದ ಕತೆಗಳ ಬಗ್ಗೆ ಮೊನ್ನೆ ಮಾತಾಡಿದ ನಂತರ ಯಾಕೋ ನನ್ನ ಅಲೆವ ಮನ ಜಾನ್ ಬಾಬಿಯ ಬರವಣಿಗೆಯ ಬದುಕಿನತ್ತ ಹೊರಳಿತು; ಹೀಗಾಗಿ ಬಾಬಿಯ ಅಪೂರ್ವ ಬರಹ ಸಾಹಸವನ್ನು ಇಲ್ಲಿ ಕೊಟ್ಟಿರುವೆ.

ಅದರ ಜೊತೆಗೇ, ರೆಪ್ಪೆ ಬರವಣಿಗೆಯನ್ನು ಸಹಜವಾಗಿ ಬಲ್ಲ, ಆದರೆ ಬರೆಯದ, ಬರೆಯಲಾಗದ, ಮಹಿಳೆಯರು ಕೊನೇಪಕ್ಷ ರೆಪ್ಪೆ ಬರವಣಿಯ ಮೂಲಕವಾದರೂ ತಮ್ಮ ಬರವಣಿಗೆಯನ್ನು ಮುನ್ನಡೆಸಲು ಇದೆಲ್ಲ ಸ್ಫೂರ್ತಿಯಾಗಲಿ ಎಂದು ಹಾರೈಸುವೆ!

 


 

Share on:

Comments

10 Comments



| ಮಂಜುನಾಥ್ ಸಿ ನೆಟ್ಕಲ್

ಕಣ್ರೆಪ್ಪೆಯ ಭಾಷೆಯಲ್ಲಿ ಪುಸ್ತಕ ಬರೆದ ಈ ಅಮೋಘ ಸಾಹಸಗಾಥೆ ನಂಬಲು ಅಸಾಧ್ಯ ಸರ್... ಜಾನ್ ಡೊಮಿನೀಕ್ ಬಾಬಿ 'ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್ ಫ್ಲೈ' ಪುಸ್ತಕವನ್ನು ಎರಡು ಲಕ್ಷ ಸಲ ತನ್ನ ಎಡಗಣ್ಣಿನ ರೆಪ್ಪೆ ಬಡಿದು ಬರೆಸಿದ. ಇದನ್ನು ಬರೆದುಕೊಂಡ ಕ್ಲಾಡ್ ಎಂಬ ಹುಡುಗಿಯ ಸಹನೆ, ಬದ್ಧತೆಗಳು ಊಹಿಸಲೂ ಅಸಾಧ್ಯವಾದುವು. ಅದು ಪಶ್ಚಿಮ. ಅದರಲ್ಲೂ ಫ್ರಾನ್ಸ್. ಅಲ್ಲಿನ ವೃತ್ತಿಪರತೆಯ ಬದ್ಧತೆ, ಶಿಸ್ತುಗಳ ಥರವೇ ಬೇರೆ. .., ನಿಜ ಸರ್ ಈ ಲೇಖನ ಓದುತ್ತಿದ್ದಂತೆ ನಮ್ಮಲ್ಲಿ ಅಡಗಿರುವ ಸೋಮಾರಿತನಕ್ಕೆ ನಾಚಿಕೆ ಆಗುತ್ತದೆ. ನಮ್ಮ ಬದುಕೇ ವ್ಯರ್ಥವೇನೋ ಅನಿಸುತ್ತದೆ... ನಾವೆಲ್ಲಾ ಈ ಕತೆಯಿಂದ ಕಲಿಯಬೇಕಾದದ್ದು ಬಹಳ ಇದೆ. ಲೇಖನಕ್ಕೆ ಧನ್ಯವಾದಗಳು


| ಚಂದ್ರಶೇಖರ ತಾಳ್ಯ

ರೆಪ್ಪೆ ಬರವಣಿಗೆ ಹೆಣ್ಣು ಮಕ್ಕಳಿಗೆ ಸಹಜವಾಗಿಯೇ ಕರಗತ, ಪುರುಷ ಸಮಾಜದ ಕಟ್ಟುಪಾಡುಗಳ ಮೀರುವ ಒಂದು ಸಾಧನವೂ ಹೌದು, ಬಾಬಿಯ ರೆಪ್ಪೆ ಭಾಷೆಯನ್ನು ಅರ್ಥಮಾಡಿಕೊಂಡು ಅಕ್ಷರಕ್ಕೆ ಇಳಿಸಿದ್ದು ಹೆಣ್ಣೇ, ಆಕೆ ಆ ಸಂಜ್ಞಾಭಾಷೆಯನ್ನು ಬರವಣಿಗೆಗೆ ತರುವುದು ಈ ಕಾರಣಕ್ಕೇ ಸುಲಭವಾಗಿದ್ದೀತು. ಏನೇ ಇರಲಿ ಬಾಬಿಯ ಬದುಕಿನ ಕೊನೆ ಘಳಿಗೆಯಲ್ಲಿ ಸಂಭವಿಸಿದ ಈ ಕೃತಿ ಅವನ ಆಂತರ್ಯವನ್ನೆಲ್ಲ ತೆರೆದು ತೋರಿಸುವುದಿದೆಯಲ್ಲಾ ಅದು ಸಾವಿನ ಅಂಚಿನಲ್ಲಿರುವವನ ಆಸೆ, ನಿರರ್ಥಕತೆ,ಬದುಕುವ ತವಕ, ಅದಕ್ಕಾಗಿಯೇ ಕತೆ ಹೇಳುವ ತುಡಿತ. ಕತೆ ಸಾವನ್ನು ಮುಂದೂಡುವ ಕಲೆ, ಸತ್ತ ಮೇಲೂ ಬದುಕುವ ಅದ್ಭುತ ಕಲೆ. ಗಣೇಶ್, ಬಾಬಿ ತಮ್ಮ ಕಥೆಗಳಲ್ಲಿ ಈಗಲೂ ಬದುಕಿದ್ದಾರೆ.


| Kusuma Kushi

‘ದ ಟೇಲ್ ಈಸ್ ಲಿವಿಂಗ್ ಟು ಟೆಲ್ ದ ಟೇಲ್ ಆಫ್ ದಿ ಆಥರ್!’ ಈ ವಿಷಯವನ್ನು ಇನ್ನಷ್ಟು ತಿಳಿಯಬೇಕೆಂಬ ಆಸಕ್ತಿ ಇದೆ ಸರ್. ಸಾಹಿತ್ಯ ರಚನೆಗೊಂಡು ಲೇಖಕನಿಂದ ಸ್ವತಂತ್ರವಾಗುವುದು ಒಂದು ಕಡೆಯಾದರೆ. ಈ ನೋಟ ಹೊಸದಗಿದೆ. ಲೇಖನ ಚೆನ್ನಾಗಿದೆ.


| ಕವಿವೇದ

ಕಣ್ಣ ರೆಪ್ಪೆಯ ಬರವಣಿಗೆ: ಬದುಕಿನ ಅನಿಶ್ಚಿತತೆಯೊ? ಸಾಧ್ಯತೆಯೊ! ಮೊದಲಿಗೆ ಈ ತಲೆಬರಹವನ್ನು ನೋಡಿದಾಗ ಯಾವುದೋ ಕಣ್ಸನ್ನೆಯ ಪ್ರೇಮಕಥೆ ಎಂದುಕೊಂಡೆ; ಆದರೆ ಇದು ಕಣ್ಸನ್ನೆಯ ಕಥೆಯಲ್ಲ ಕಣ್ತೆರೆಸುವ ಕಥೆ! (ಪ್ರೇಮ ಕಥೆಗಳು ಕಣ್ತೆರೆಸುವ ಕಥೆಗಳಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ )ಬದುಕಿನ ಅನಿಶ್ಚಿತತೆ ಮತ್ತು ಅದರ ಆಚೆಗಿನ ಮಾನವ ಸಾಮರ್ಥ್ಯದ ಸಾಧ್ಯತೆ ಈ ಎರಡು ದ್ವಂದ್ವಗಳು ನಮ್ಮನ್ನು ಕಾಡುತ್ತವೆ. ಪತ್ರಕರ್ತನಾಗಿ ಭಾಷೆ - ಬರವಣಿಗೆಯೊಂದಿಗೆ ಹಲವು ತೆರನಾದ ಸಹಜ ಒಡನಾಟವನ್ನು ಹೊಂದಿದ್ದವನಿಗೆ ಈಗ ಪ್ರತಿಯೊಂದು ಅಕ್ಷರವನ್ನು ಆಯ್ಕೆ ಮಾಡಲು ಅಪಾರ ಸಮಯ ಬೇಕಾಗುತ್ತದೆ. ಒಂದು ವಾಕ್ಯ ರಚಿಸಲು ಅಕ್ಷರಗಳನ್ನು ಕೇಳಬೇಕು, ಸರಿಯಾದ ಅಕ್ಷರ ಬಂದಾಗ ಕಣ್ಣು ಮಿಟುಕಿಸಬೇಕು, ತಪ್ಪಾದರೆ ಮತ್ತೆ ಆರಂಭಿಸಬೇಕು. ಅಬ್ಬಾ! ಈ ಪ್ರಕ್ರಿಯೆ ಎಂಥವರನ್ನಾದರೂ ರೋಸಿಹೋಗುವಂತೆ ಮಾಡಿಬಿಡುತ್ತದೆ. ಆದರೆ ಬಾಬಿಯ ಈ ಕಣ್ಸನ್ನೆಯ ಬರವಣಿಗೆಯಲ್ಲಿ ಪ್ರತಿಯೊಂದು ಪದವೂ ಹಲವಾರು ಮೌನಗಳ ನಂತರ ಒಂದು ಪದವಾಗಿ ಹುಟ್ಟುತ್ತದೆ. ನಾವು ಇಲ್ಲಿಯ ತನಕ ಭಾಷೆ ಸಂವಹನಕ್ಕೆ, ಸಂಪರ್ಕಕ್ಕೆ ಅತ್ಯಗತ್ಯ ಎಂದು ನಂಬಿದ್ದೇವೆ; ಆದರೆ ಇಲ್ಲಿ ಭಾಷೆ ಕೇವಲ ಸಂವಹನವಲ್ಲ; ಅವನ ಅಸ್ತಿತ್ವದ ಏಕ ಮಾತ್ರ ಪ್ರತಿನಿಧಿತ್ವದ ದೃಢೀಕರಣದಂತಿದೆ. ಚಲಿಸಲಾರದ, ಮಾತನಾಡಲಾರದ, ಚರ್ಚಿಸಲಾರದ ಸ್ಥಿತಿಯಲ್ಲಿರುವ ಬಾಬಿಗೆ ಕೃತಿ ರಚಿಸಲು ನೆನಪುಗಳೇ ಏಕಮಾತ್ರ ಆಧಾರ. ಇಲ್ಲಿ ಅವನ ನೆನಪುಗಳು ಕೇವಲ ಹಿಂದಿನ ಘಟನೆಗಳಲ್ಲ; ಅವು ವರ್ತಮಾನದಲ್ಲಿ ಮತ್ತೆ ಬದುಕುವ ಅನುಭವಗಳಾಗುತ್ತವೆ. ಬಾಬಿಯವರ ಅತ್ಯಂತ ದೊಡ್ಡ ಸ್ವಾತಂತ್ರ್ಯ ಕಲ್ಪನೆ. ಇಲ್ಲಿ ಕಲ್ಪನೆ ಅದು ವಾಸ್ತವವನ್ನು ಮೀರಿಸುವ ಮಾನಸಿಕ ಶಕ್ತಿ. ಬಾಬಿ ತಮ್ಮ ದೇಹದ ಮಿತಿಗಳನ್ನು ಕಲ್ಪನೆಯ ಮೂಲಕ ನಿರಂತರವಾಗಿ ಉಲ್ಲಂಘಿಸುತ್ತಾರೆ. ದೇಹ ಅಚಲವಾದಾಗ ಕಾಲದ ಅನುಭವ ಸಂಪೂರ್ಣವಾಗಿ ಬದಲಾಗುತ್ತದೆ. ಒಂದು ನಿಮಿಷವೂ ಅನಂತವಾಗಬಹುದು. ಒಂದು ಕಣ್ಣು ಮಿಟುಕಿಸುವಿಕೆಯೂ ಒಂದು ಘಟನೆ? ಅಲ್ಲ ಅದೊಂದೇ ಎಲ್ಲಕ್ಕೂ ಮೂಲ! ಬಾಬಿಯ ಕಾಲ ಗಡಿಯಾರದ ಕಾಲದೊಂದಿಗೆ ತಾಳೆಯಾಗಲಾರುದು. ಇಲ್ಲಿ ಬಾಬಿಗೆ ನೆನಪುಗಳೇ ಏಕಮಾತ್ರ ಆಧಾರ: ಅವನ ಸ್ಮೃತಿ ಭೂತಕಾಲವನ್ನು ವರ್ತಮಾನವನ್ನಾಗಿಸಿದರೆ; ಕಲ್ಪನೆ ಭವಿಷ್ಯವನ್ನು ವರ್ತಮಾನವಾಗಿಸುತ್ತದೆ. ಮುಂದುವರೆದು ಸ್ಮೃತಿ ಕೇವಲ ನೆನಪಾಗಿ ಉಳಿಯದೆ ಅದು ಉಳಿದ ಬದುಕಿನ ಆಯಾಮವಾಗುತ್ತದೆ. ಅವನು ನೆನಪಿನ ಮೂಲಕ ಮತ್ತೆ ಬದುಕುತ್ತಾನೆ. ಹಾಗಾಗಿಯೇ ಮಾನವ ಅಸ್ತಿತ್ವ ಕೇವಲ ದೈಹಿಕ ಚಲನೆಯಲ್ಲ; ಅದು: ಸ್ಮೃತಿ, ಭಾಷೆ, ಕಲ್ಪನೆ, ಸಂಬಂಧ, ಆಶೆ ಇತ್ಯಾದಿ ಏನೇನೋ ಆಗಿದೆ. ಅವರ ದೇಹವನ್ನು ಯಾರೂ ಮುಕ್ತಗೊಳಿಸಲಾರರು ನಿಜ, ಆದರೆ ಅವರ ಕಲ್ಪನೆಯನ್ನು ಯಾರೂ ಬಂಧಿಸಲಾರರು ಕೂಡ. ಈ ಕಾರಣದಿಂದ ಕಲ್ಪನೆ ಅಸ್ತಿತ್ವದ ಸ್ವಾತಂತ್ರ್ಯವಾಗಿ ಕಾಣುತ್ತದೆ. ಸುಲಭವಾಗಿ ಮಾತನಾಡಲಾಗದ ಪರಿಸ್ಥಿತಿಯಲ್ಲಿ ಭಾಷೆಯ ನಿಜವಾದ ಮೌಲ್ಯ ಗೋಚರಿಸುತ್ತದೆ. ಪ್ರತಿಯೊಂದು ಅಕ್ಷರವೂ ಇಲ್ಲಿ ಅನಂತ ಮೌನಗಳ ನಂತರದ ಫಲ. ಬಹುಶಃ ಬಾಬಿಯ ಕೊನೆಯ ಕಾಲದ ಬದುಕು: ಮಾನವನನ್ನು ಯಾರೂ, ಯಾವುದೂ ಸಂಪೂರ್ಣವಾಗಿ ಬಂಧಿಸಲಾಗುವುದಿಲ್ಲ; ದೇಹವನ್ನು ಬಂಧಿಸಬಹುದು, ಆದರೆ ಅವನ ಸ್ಮೃತಿ, ಕಲ್ಪನೆ ಮತ್ತು ಚೈತನ್ಯವನ್ನು (ಕೆಲವೊಮ್ಮೆ ನಿಯಂತ್ರಿಸುವ ಪ್ರಯತ್ನ ಮಾಡಬಹುದೇನೋ) ಬಂಧಿಸಲಾಗುವುದಿಲ್ಲ ಎಂದು ಸಾರುತ್ತದೆ.


| Rupa

ಮನೋಜ್ಞವೂ, ಬೆರಗು ಹುಟ್ಟಿಸುವಂತೆಯೂ ಇದೆ ಬರಹ. ಆದರೆ ಹೀಗೆ ಸಂಜ್ಞೆಯ ಭಾಷೆಯನ್ನು ಬರಹಕ್ಕಿಳಿಸಲು ಸಾಧ್ಯವಾಗಿದ್ದು ಹೆಣ್ಣಿಗೆ ಎಂಬುದೂ ಮನನೀಯ. ಆ ಸಹನೆ, ತಾಳ್ಮೆ, ಸಮಯ ನೀಡುವಿಕೆ... ಗಂಡಿಗೆ ಸಾಧ್ಯವಿತ್ತೆ ಎಂಬುದೂ ಪ್ರಶ್ನಾರ್ಹ. ಅಪರೂಪದ ವಿಷಯಗಳನ್ನು ಬರೆದು ಓದಿಸುವ ನಿಮಗೆ ನಮನಗಳು


| ಗುರು ಜಗಳೂರು

ಸರ್,ಬಹಳ ಒಳ್ಳೆಯ ಲೇಖನ.ನಾವೆಲ್ಲರೂ ಬದುಕಿದ್ದು ಸತ್ತಂತ್ತಿರುತ್ತೇವೆ.ಇದು ಸತ್ತ ಮೇಲೆಯೂ ಬದುಕಿದಂತೆ.ಸಾವಿನ ದವಡೆಯಲ್ಲಿರುವ ವ್ಯಕ್ತಿಯ ಮನೆಯ ವಾತಾವರಣದಲ್ಲಿ ಭೀಕರ ಮೌನ ಆವರಿಸಿರುತ್ತದೆ.ಅಲ್ಲಿಯೂ ಕ್ರೀಯಾಶೀಲತೆ ಇದೆಯೆಂದರೆ ಅದು ಸಾಮಾನ್ಯ ಸಂಗತಿಯಲ್ಲ.


| Vinay

A good piece of writing.


| Somashankara N

ದೇಹಕ್ಕೆ ಬಂಧನವಿದ್ದರೂ ಮನಸ್ಸಿನ ಸೃಜನಶೀಲತೆಗೆ ಬಂಧನವಿಲ್ಲ ಎಂಬುದನ್ನು ಲೇಖನ ಸಾಕ್ಷ್ಯಾಧಾರಗಳ ಮೂಲಕ ಪ್ರಕಟಿಸಿದೆ. ಬರೆಯುವ ಸಾಮರ್ಥ್ಯವಿರುವ ಪ್ರತಿಯೊಬ್ಬರೂ ತಮ್ಮ ಅನುಭವ ಮತ್ತು ಭಾವನೆಗಳನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಬೇಕು ಎಂಬ ಆಶಯವನ್ನು ತಿಳಿದಾಗ ಅಭಿರುಚಿಯನ್ನು ಕಳೆದುಕೊಳ್ಳುವುದೇ ನಿಜವಾದ 'ಸಾವು' ಅನ್ನಿಸಿತು. ಇವತ್ತಿನ 'ಕೃಜಾ'ವನ್ನು ಹಿಮ್ಮೆಟ್ಟಿಸುವುದಕ್ಕೆ ಇದಕ್ಕಿಂತ ಸೃಜನಶೀಲ ಕಲೆ ಇನ್ನೊಂದಿಲ್ಲ. ನನ್ನ ಪ್ರಜ್ಞೆಗೆ ಹೊಸಮೇವು ಸಿಕ್ಕಿದಂತಾಗಿ ತೃಪ್ತಿಯಾಯಿತು. ಥ್ಯಾಂಕ್ ಯೂ ಸೋ ಮಚ್ ಸರ್...🥰


| ಡಾ. ನಿರಂಜನ ಮೂರ್ತಿ ಬಿ ಎಂ

'ಕಣ್ಣ ರೆಪ್ಪೆಯ ಬರವಣಿಗೆ' ನಂಬಲು ಕಷ್ಟವಾಗುತ್ತಿದೆ. ದೇಹದ ಭಾಷೆ ಸರಿ, ಮುಖದ ಭಾಷೆ ಸರಿ, ಕಣ್ಣ ನೋಟದ ಭಾಷೆ ಸರಿ. ಆದರೆ ಕಣ್ಣ ರೆಪ್ಪೆಯ ಭಾಷೆ ಹೊಸದು. ಅದೂ ಲಕ್ಷಾಂತರ ಬಾರಿ ರೆಪ್ಪೆ ಬಡಿದು ಬರೆಸುವ ಮತ್ತದನ್ನು ಬರೆದುಕೊಳ್ಳುವ ಇಬ್ಬರೂ ಮಹಾನ್ ಸಾಧಕರಾಗಿದ್ದಾರೆ. ಈ ಜಗದಲ್ಲಿ ಎಂತೆಂತಹ ಅದ್ಭುತ ವ್ಯಕ್ತಿಗಳಿದ್ದಾರೋ! ಇಂತಹ ಇಬ್ಬರು ಅದ್ಭುತ ವ್ಯಕ್ತಿಗಳ ಬಗ್ಗೆ ತಿಳಿಸುವೀ ಲೇಖನವೂ ಅದ್ಭುತ! 🙏🏻🙏


| Vimala

ಕಣ್ ರೆಪ್ಪೆ ಬಹಳಾ ಅಂದ್ರೆ ಬಹಳಾನೇ ಇಷ್ಟವಾಯ್ತು




Add Comment


Mundana Kathana Nataka

YouTube






Recent Posts

Latest Blogs