ಪಾಬ್ಲೋ ನೆರೂಡನ ಪ್ರತಿಮಾಲೋಕದಲ್ಲಿ


ರಾಜಕೀಯ ಚಿಂತನೆ, ಸಾಂಸ್ಕೃತಿಕ ವಿಶ್ಲೇಷಣೆ, ಸಾರ್ವಜನಿಕ ಬದುಕಿನ ಗೊಂದಲಗಳು, ಜನರ ತಟವಟಗಳು, ನಿತ್ಯದ ರೊಟೀನುಗಳು… ಇತ್ಯಾದಿಗಳಲ್ಲಿ ಕಂಗೆಟ್ಟ ನಮ್ಮಂಥವರ ಅಲೆಯುವ ಮನಗಳು ಎಷ್ಟೋ ರಾತ್ರಿಗಳಲ್ಲಿ ಲೋಕದ ದೊಡ್ಡ ಕವಿಗಳ ಪ್ರತಿಮೆಗಳಲ್ಲಿ ಅಡ್ಡಾಡುತ್ತಾ ತಂಗುದಾಣ ಹುಡುಕಿ ನೆಮ್ಮದಿ ಪಡೆಯುವುದು ಸಹಜ! ಈ ತಂಗುದಾಣಗಳ ನೆಮ್ಮದಿ ನಿಮ್ಮ ಅನುಭವಕ್ಕೂ ಬಂದಿರಬಹುದು. ಇಂಥ ಗಳಿಗೆಗಳಲ್ಲಿ ನಮಗೆ ಪ್ರಿಯವಾದ ಕವಿತೆಗಳನ್ನು ಬೇಕೆಂದ ಹಾಗೆ ನಮ್ಮ ಭಾಷೆಗೆ ಒಗ್ಗಿಸಿಕೊಳ್ಳುವ ಸೃಜನಶೀಲ ಚಟುವಟಿಕೆ ಕೂಡ ಅಪಾರ ಎನರ್ಜಿ ಉಕ್ಕಿಸುತ್ತದೆ. ಇದನ್ನೂ ನೀವು ಅನುಭವಿಸಿರಬಹುದು.

ಕೆಲವು ತಿಂಗಳ ಕೆಳಗೆ ಗೆಳೆಯ-ನಟ ಅಚ್ಯುತ್ ಕುಮಾರ್ ಸ್ಪ್ಯಾನಿಷ್ ಕಲಿಯುತ್ತಿದ್ದೇನೆಂದು ಹೆದರಿಸುತ್ತಾ ನೆರೂಡನ ಕವಿತೆಗಳ ಜೊತೆ ವಿಹಾರ ಮಾಡುತ್ತಿದ್ದುದನ್ನು ಕಂಡೆ; ನೆರೂಡನ ಬಗ್ಗೆ ಮಾತು ಮಾತಾಡುತ್ತಾ ಮತ್ತೆ ನೆರೂಡ ಕಾವ್ಯಲೋಕಕ್ಕೆ ಮರಳಿ ಮುದಗೊಂಡೆ. ಈಗಾಗಲೇ ಹಲವರು  ಕನ್ನಡಿಸಿರುವ ಪಾಬ್ಲೋ ನೆರೂಡನ ‘ಟುನೈಟ್ ಐ ಕೆನ್ ರೈಟ್’ ಪದ್ಯದ ಎರಡು, ಮೂರು ಬಗೆಯ ಇಂಗ್ಲಿಷ್ ಅನುವಾದಗಳು, ಅವುಗಳ ಓದುಗಳು ಹೊರಡಿಸುತ್ತಿರುವ ವಿಭಿನ್ನ ಧ್ವನಿಗಳನ್ನು ನೋಡಿ ವಿಸ್ಮಯಗೊಂಡೆ. ಕೆಲವು ರಾತ್ರಿಗಳಲ್ಲಿ, ಹಲವು ಡ್ರಾಫ್ಟುಗಳಲ್ಲಿ, ಈ ಕವಿತೆಯನ್ನು ಕನ್ನಡಿಸಲೆತ್ನಿಸಿದೆ. ಅವುಗಳಲ್ಲಿ ಒಂದು ಆವೃತ್ತಿ ಕೆಳಗಿದೆ:

 

ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು.

 

‘ದಿಕ್ಕೆಟ್ಟ ಕನಸು, ಕನವರಿಕೆ ಕಿಕ್ಕಿರಿದು ರಾತ್ರಿ ಕಂಗೆಟ್ಟಿದೆ;

ಎಲ್ಲೋ ದೂರದಲ್ಲಿ ನೀಲಿ ತಾರೆಗಳು ಥರಥರ ನಡುಗುತ್ತಿವೆ…’

ಹೀಗೆಲ್ಲ ಬರೆಯಬಲ್ಲೆ.

 

ಇರುಳಗಾಳಿ ಬಾನಲ್ಲಿ ಸುತ್ತರಗಾಣ ಹೊಡೆದು ಸುಯ್ಯೆಂದು ಹಾಡುತ್ತಿದೆ.

ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು

 

ನಾನವಳ ಪ್ರೀತಿಸಿದೆ; ಅವಳೂ ಆಗೀಗ ನನ್ನ ಪ್ರೀತಿಸಿದಳು.

ಇಂಥ ಇರುಳುಗಳಲ್ಲಿ ಈ ತೋಳ ತೆಕ್ಕೆಯಲ್ಲಿ ಅವಳ ಬಾಚಿಕೊಂಡಿದ್ದೆ.

 

ತುದಿಮೊದಲಿಲ್ಲದಾಕಾಶದಡಿಯಲ್ಲಿ ಮತ್ತೆ ಮತ್ತೆ ಮುತ್ತಿಕ್ಕಿದ್ದೆ.

ಅವಳು ನನ್ನ ಪ್ರೀತಿಸಿದಳು. ನಾನೂ ಅವಳ ಪ್ರೀತಿಸಿದೆ.

 

ಅವಳ ಆ ವಿಶಾಲ ನಿಶ್ಚಲ ಕಣ್ಣುಗಳನ್ನು ಪ್ರೀತಿಸದಿರಲಾದೀತೆ?

ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು

 

ನನ್ನ ಪಾಲಿಗೆ ಅವಳಿಲ್ಲ ಎಂಬ ಚಿಂತೆಯಲ್ಲಿ ಮುಳುಗಿರಲು;

ಅವಳನ್ನು ಕಳೆದುಕೊಂಡೆ ಎಂಬ ಭಾವದಲ್ಲಿ ನಲುಗಿರಲು…

ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು.

 

ಈ ರಾತ್ರಿ ಬರೆಯಬಲ್ಲೆ ಕಡು ದುಃಖದ ಸಾಲುಗಳನ್ನು

ಈ ದಟ್ಟ ರಾತ್ರಿಯನು ಕಿವಿದುಂಬಿಕೊಳ್ಳಲು;

ಅವಳಿಲ್ಲದೆ ಮತ್ತೂ ದಟ್ಟವಾದ ರಾತ್ರಿಯನ್ನು ಕಿವಿದುಂಬಿಕೊಳ್ಳಲು.     

 

ಆಗ… ಹಸುರು ಹುಲ್ಲಿನ ಮೇಲೆ ಇಬ್ಬನಿ ತೊಟ್ಟಿಕ್ಕಿದ ಹಾಗೆ

ಆತ್ಮದ  ಮೇಲೆ ತೊಟ್ಟಿಕ್ಕುವುದು ನನ್ನ ಹಾಡು.

 

ಏನಾದರೇನು, ನನ್ನ ಪ್ರೀತಿ ಅವಳನ್ನು ಕಾಪಿಡದೆ ಸೋತಿತಲ್ಲಾ;

ರಾತ್ರಿ ದಿಕ್ಕೆಟ್ಟು ಹೋಗಿದೆ; ಅವಳು ನನ್ನೊಡನಿಲ್ಲ.

                          

ಇಷ್ಟೇ!

ಎಲ್ಲೋ ದೂರದಲ್ಲಿ ಯಾರೋ ಹಾಡುತ್ತಿದ್ದಾರೆ. ಎಲ್ಲೋ ದೂರದಲ್ಲಿ.

ಆ ಹಾಡು ಮುದ ನೀಡುತ್ತಿಲ್ಲ; ಅವಳ ಕಳಕೊಂಡ ನನ್ನಾತ್ಮ ತಪ್ತಗೊಂಡಿದೆ.

 

ಕಣ್ಣು ಅಡ್ಡಾಡುತ್ತಿದೆ ಅವಳ ಹುಡುಕಿ ಬಳಿ ಸಾರಿ ಸೆಳೆಯುವ ಹಾಗೆ;

ಹೃದಯ ಅವಳ ಹುಡುಕಾಡುತ್ತಲಿದೆ; ಅವಳಿಲ್ಲ ನನ್ನೊಡನೆ.

 

ಅದೇ ಗಿಡ ಮರಗಳ ಮೇಲೆ ಮಂಜು ಇಳಿಬಿದ್ದು ಬೆಳ್ಳಗಾಗುವ ಅದೇ ರಾತ್ರಿ;

ಅದೇ ಕಾಲದ ನಾನೂ ಅವಳೂ ಮಾತ್ರ ಇನ್ನೆಂದೂ ಅದೇ ಆಗಿರಲಾರೆವು.

 

ಇನ್ನು ನಾನವಳ ಪ್ರೀತಿಸೆನು; ಇದು ಖಾತ್ರಿ. ಆದರೆ ಆ ಅವಳ ಅದೆಷ್ಟು ಪ್ರೀತಿಸಿದೆ!

ನನ್ನ ದನಿ ಗಾಳಿ ಜಾಡನು ಹುಡುಕಿ ಅವಳ ದನಿಯ ಮುಟ್ಟಲು ಕಾತರಿಸುತ್ತಿತ್ತು.

 

ಅವಳೀಗ ಬೇರೊಬ್ಬನವಳು; ಅವಳಿನ್ನು ಬೇರೊಬ್ಬನವಳು

ನನ್ನ ತುಟಿಗಳು ಅವಳ ಮುತ್ತಿಕ್ಕುವ ಮುನ್ನ ಇದ್ದ ಹಾಗೆ ಅವಳೀಗ ಬೇರೊಬ್ಬನವಳು.

ಅವಳ ದನಿ, ಅವಳ ಹೊಳೆವ ಮೈ. ಅವಳ ಎಣೆಯಿಲ್ಲದ ಕಣ್ಣು…

 

ಇನ್ನು ನಾನವಳ ಪ್ರೀತಿಸೆನು; ಇದು ಖಾತ್ರಿ.

ಹಾಂ…ಪ್ರೀತಿಸುತ್ತಿರಲೂಬಹುದು.

ಪ್ರೀತಿ ನೋಡನೋಡುತ್ತಲೇ ಮುಗಿಯುವುದು; ಮರೆಯಲು ಕಾಲ ಬಹಳಾಗುವುದು. 

 

ಇದಕೆ ಕಾರಣವುಂಟು:

ಇಂಥ ರಾತ್ರಿಗಳಲ್ಲಿ ಅವಳನ್ನು ನನ್ನ ತೋಳತೆಕ್ಕೆಯಲ್ಲಿ ಬಾಚಿಕೊಂಡಿದ್ದೆ

‘ಅವಳಿನ್ನು ನನ್ನ ಪಾಲಿಗೆ ಇಲ್ಲ’ ಎನ್ನುತ್ತ ತಪ್ತಗೊಂಡಿದೆ ಆತ್ಮ.

 

ಆದರೇನಂತೆ! ಇದು ಅವಳು ನನಗೆ ಕೊಡಬಲ್ಲ ಕಟ್ಟ ಕಡೆಯ ನೋವು

ಇದು ನಾನು ಅವಳಿಗೆಂದು ಬರೆದ ಕಟ್ಟ ಕಡೆಯ ಹಾಡು.

 

ಇಪ್ಪತ್ತರ ಹರೆಯದ ನೆರೂಡನ ಈ ತೀವ್ರ ವಿದಾಯಗೀತೆಯಲ್ಲಿ ಸಣ್ಣಗೆ ಬಿಡುಗಡೆಯ ನಿರಾಳತೆಯೂ ಬೆರೆತಿರುವ ರೀತಿ ಕಂಡು ನಗು ಬಂತು! ಈ ಮಿಶ್ರ ಭಾವ ನೆರೂಡನ ಜೀವನದುದ್ದಕ್ಕೂ ಇದ್ದಂತಿದೆ. ಪ್ರೀತಿ, ಕ್ರಾಂತಿ ಈ ಎರಡೂ ಕವಿಯಲ್ಲಿ, ಕವಿತೆಯಲ್ಲಿ ರಮ್ಯ ಭಾವವನ್ನೂ, ಲಿರಿಕಲ್ ಎಮರ್ಜಿಯನ್ನೂ ಚಿಮ್ಮಿಸುತ್ತಿರುತ್ತವೆ. ಕನ್ನಡದಲ್ಲಿ ಆ ಥರದ ಎನರ್ಜಿ ಗೆಳೆಯ ಬಂಜಗೆರೆ ಜಯಪ್ರಕಾಶರ ಒಂದು ಕಾಲದ ಕಾವ್ಯವನ್ನೂ ರೂಪಿಸಿರುವುದನ್ನು ಆಗಾಗ್ಗೆ ನೋಡಿ, ಬರೆದಿರುವೆ.

ಅದಿರಲಿ. ಮತ್ತೆ ಅನುವಾದ ಎನ್ನುವ ನಿತ್ಯದ ಸೃಜನಶೀಲ ಚಟುವಟಿಕೆಗೆ ಮರಳೋಣ: ನೀವು ಗಮನಿಸಿರಬಹುದು: ಕವಿತೆಯನ್ನಾಗಲೀ, ಕತೆಯನ್ನಾಗಲೀ ಸುಮ್ಮನೆ ಪ್ರತಿ ಸಲ ಓದುವಾಗಲೂ ನಮ್ಮ ನಮ್ಮ ಭಾಷೆಗೆ ಅನುವಾದಿಸಿಕೊಳ್ಳುತ್ತಿರುತ್ತೇವೆ. ಹಾಗೆ ಅನುವಾದಿಸಿಕೊಳ್ಳದೆ ಅರ್ಥವಿಲ್ಲ. ಅನೇಕ ಸಲ ನಮಗರಿವಿಲ್ಲದೆಯೇ ಪದ್ಯವನ್ನು ಗದ್ಯಕ್ಕೆ ಭಾಷಾಂತರಿಸಿಕೊಂಡು ಕೂಡ ಅರ್ಥ ಹೇಳುತ್ತಿರುತ್ತೇವೆ. ಕನ್ನಡವನ್ನೇ ಕನ್ನಡಕ್ಕೆ ಅನುವಾದಿಸಿ ಅರ್ಥ ಮಾಡಿಕೊಳ್ಳುತ್ತಿರುತ್ತೇವೆ.  

ಹೀಗೆ ನೆರೂಡನ ಕವಿತೆಯನ್ನು ಅರ್ಥ ಮಾಡಿಕೊಳ್ಳಲು ಕೆಲವು ಸಲ ನಾನು ಕನ್ನಡಿಸಿಕೊಂಡಿರುವ ಈ ಸುಂದರ ಕವಿತೆಗೆ ಮತ್ತೆ ಕೈಯಿಟ್ಟರೆ ಅನುವಾದ ಇನ್ನಷ್ಟು ಚಂದವಾಗಬಹುದು; ಅತಿ ವಿವರಣೆಯಿದ್ದರೆ ಅದನ್ನು ಮೊಟಕಾಗಿಸಬಹುದು; ಅಥವಾ ಕವಿತೆ ಅಂದಗೆಡಲೂಬಹುದು! ಈ ಕವಿತೆಯನ್ನು ಇಂಗ್ಲಿಷಿನಲ್ಲಿ ಓದುವ ಇತರ ಕವಿ, ಕವಯಿತ್ರಿಯರು ಇದನ್ನು ಅವರವರ ಭಾವಕ್ಕೆ, ಅವರವರ ಸಂವೇದನೆಗೆ ತಕ್ಕಂತೆ ಇನ್ನಷ್ಟು ದಕ್ಷವಾಗಿ ಅನುವಾದಿಸಿಕೊಳ್ಳಲೂಬಹುದು; ಆಗ ಅವರು ಬೇರೆ ಬೇರೆ ಅರ್ಥಗಳನ್ನು ಎದುರಾಗಲೂಬಹುದು. ಯಾರಾದರೂ ಇನ್ನಷ್ಟು ನಿಕಟವಾಗಿ ಮೂಲ ಕವಿತೆಯನ್ನು ಓದಿ ತೋರಿಸಿದಾಗ ಈ ಅನುವಾದವನ್ನೂ ಮತ್ತಷ್ಟು ತಿದ್ದಬಹುದು. ಸ್ಪ್ಯಾನಿಷ್ ಬಲ್ಲವರು, ಆ ಭಾಷೆಯಲ್ಲಿ ತೀವ್ರವಾಗಿ ಓದುವುದನ್ನು ಅರ್ಥ ಮಾಡಿಕೊಳ್ಳಬಲ್ಲವರು, ಇದನ್ನು ಇನ್ನೊಂದು ಬಗೆಯ ತೀವ್ರತೆಯತ್ತ  ಒಯ್ಯಬಹುದು. ಯೂಟ್ಯೂಬಿನಲ್ಲಿರುವ ಆ್ಯಂಡಿ ಗಾರ್ಸಿಯಾನ ರುದ್ರ ಗಂಭೀರ ದನಿಯಲ್ಲಿ ಈ ಕವಿತೆಯನ್ನು ಕೇಳಿಸಿಕೊಂಡು ಕನ್ನಡಿಸಿದರೆ ಪ್ರತಿ ಪ್ರತಿಮೆಯಲ್ಲೂ ವಿಷಾದ ತೊಟ್ಟಿಕ್ಕುವ ಅನುವಾದ ಹುಟ್ಟಬಹುದು. ಆಗ ನೀವು ನೆರೂಡನ ಮುದ್ರಿತ ಕವಿತೆ ಹಾಗೂ ಗಾರ್ಸಿಯಾ ತನ್ನದಾಗಿಸಿಕೊಂಡು ಓದಿದ ಕವಿತೆ… ಎರಡನ್ನೂ ಅನುವಾದಿಸುತ್ತಿರುತ್ತೀರಿ!   

ಐವತ್ತು ವರ್ಷಗಳ ಕೆಳಗೆ (1973) ಕ್ಯಾನ್ಸರಿಗೆ ತುತ್ತಾದ ನೆರೂಡನಿಗೆ ವಿಷ ಹಾಕಲಾಗಿತ್ತು ಎಂದು ಇವತ್ತಿಗೂ ನಂಬುವವರಿದ್ದಾರೆ. ನೆರೂಡನ ಕೊನೆಯ ಕೆಲವು ಸಾಲುಗಳು ಹದಿನೆಂಟು ವರ್ಷಗಳ ಕೆಳಗೆ ನಾನು ಪ್ರಜಾವಾಣಿಯಲ್ಲಿ ಬರೆದ ನೆರೂಡ: ಪ್ರೀತಿ ಮತ್ತು ಕ್ರಾಂತಿಯ ಕವಿ (ಗಾಳಿ ಬೆಳಕು, ಪಲ್ಲವ ಪ್ರಕಾಶನ) ಲೇಖನದಲ್ಲಿವೆ:

ಆ ಮುದುಡಿದ ಗುಲಾಬಿಯನ್ನು ಹರಿದೊಗೆವ ಹೊತ್ತಾಗಿದೆ ಗೆಳತಿ

ತಾರೆಗಳನ್ನು ಮುಚ್ಚಿಡುವ ಹೊತ್ತು ಬಂದಿದೆ. ನೆಲದಲ್ಲಿ ಬೂದಿ ಹುಗಿದಿಡುವ ಹೊತ್ತಾಗಿದೆ

ಮೆಲ್ಲಗೆ ಮೇಲೇಳುವ ಬೆಳಕಲ್ಲಿ ಮೇಲೆದ್ದವರ ಜೊತೆ ಮೇಲೇಳುವ ಹೊತ್ತಾಗಿದೆ

ಅಥವಾ…

ಕನಸಲ್ಲಿ ಸುಮ್ಮನೆ ನಡೆಯುತ್ತಾ ಕಡಲಿನ ಆ ದಂಡೆ ಮುಟ್ಟುವ ಹೊತ್ತಾಗಿದೆ

ಇನ್ನಾವುದೋ ತೀರವೇ ಇರದ ಆ ತೀರ ತಲುಪುವ ಹೊತ್ತಾಗಿದೆ…

 

ನೆರೂಡನ ಕೊನೆಕೊನೆಯ ಕವಿತೆಯೊಂದರಲ್ಲೂ ಕವಿಯ ಹರೆಯದ ಪ್ರತಿಮೆಗಳು ಮತ್ತೆ ಮರಳಿರುವ ಬಗೆ ಕಂಡು ಅಚ್ಚರಿಯಾಗುತ್ತದೆ. ಮೊನ್ನೆ ನೆರೂಡನ ‘ಟುನೈಟ್ ಐ ಕೆನ್ ರೈಟ್’ ಕವಿತೆಯ ವಿಷಣ್ಣ ಆನಂದದ ಮೂಡುಗಳನ್ನು ಮತ್ತೆ ಮತ್ತೆ ಮುಟ್ಟಲೆತ್ನಿಸುತ್ತಾ, ಕನ್ನಡಿಸಿಕೊಳ್ಳುತ್ತಾ... ಅವನ ಪ್ರತಿಮೆಗಳು ನಿಧಾನಕ್ಕೆ ನನ್ನೊಳಗಿಳಿಯತೊಡಗಿದವು; ಇಂಥ ಗಳಿಗೆಗಳು ಸೃಷ್ಟಿಸುವ ಪರವಶ ಸ್ಥಿತಿಗೆ ಬೇರಾವುದೂ ಸಾಟಿಯಿಲ್ಲ ಎನ್ನಿಸತೊಡಗಿತು. ಇಂಥ ಜೀವಂತ ಗಳಿಗೆಗಳನ್ನು ಓದುವವರಲ್ಲಿ ಮತ್ತೆ ಮತ್ತೆ ಸೃಷ್ಟಿಸುವವರನ್ನು ಮಾತ್ರ ಜೀವಂತ ಕವಿ ಎನ್ನಬಹುದೇನೋ! ಎಲ್ಲ ಸೂಕ್ಷ್ಮಜೀವಿಗಳ ಪಾಲಿಗೂ ದಕ್ಕುವ ಇಂಥ ಗಳಿಗೆಗಳು ನೂರ್ಮಡಿಯಾದರೆ ಮಾತ್ರ ನಿತ್ಯದ ಸಾವಿನ ನಡುವೆ ನಮ್ಮ ಮರು ಹುಟ್ಟು!

HAPPY POETRY! 

Share on:


Recent Posts

Latest BlogsKamakasturibana

YouTubeComments

4 Comments| Dr. mohan

ಒಂದೇ ಕವಿತೆಯಲ್ಲಿ ಅಗಾಧ ವಿಷಾದವನ್ನೂ ಅದರಿಂದ ಹೊರಬರುವ ಹಾದಿಯನ್ನೂ ಕಾಣಿಸುವ ಇಲ್ಲಿನ ಸಾಲುಗಳು ಕವಿಯ ಯವ್ವನದ ದಿನಗಳಲ್ಲಿಯೇ ಕಂಡುಕೊಂಡ ಪ್ರಬುದ್ಧ ಮಾದರಿಯೆನಿಸುತ್ತದೆ. ಬ್ಲಾಗ್ ಓದುತ್ತಾ ಓದುತ್ತಾ ಪ್ರೀತಿ ಮತ್ತು ಕ್ರಾಂತಿ ಎರಡೂ ಎಲ್ಲ ಕಾಲದ ಕವಿಗಳಿಗೂ ಆಪ್ಯಾಯಮಾನವಾದ ವಸ್ತುಗಳೇನೋ ಎನಿಸಿತು. ಮತ್ತೆ ಅನುವಾದಗಳೇ ಇಲ್ಲದಿದ್ದರೆ ನಾವು ಜಗತ್ತಿನ ಎಷ್ಟೋ ಕಾವ್ಯಾನುಭವಗಳಿಂದ ವಂಚಿತರಾಗಬೇಕಾಗುತ್ತಿದ್ದಿತಲ್ಲಾ ಎಂದೂ ಅನಿಸಿತು. ಅನುವಾದಗಳು ಬಹುತೇಕ ಸಂದರ್ಭಗಳಲ್ಲಿ ಕವಿಯ ಮೂಲಭಾವನೆಗಳನ್ನು ತಲುಪಲಾಗದಿದ್ದರೂ, ಅದು ಹೊರಡಿಸುವ ಅರ್ಥಸಾಧ್ಯತೆಗಳ ಸುತ್ತ ರೂಪಕಗಳ ಜಾಡು ಹಿಡಿದು ನಮ್ಮ ನಮ್ಮ ಭಾಷೆಗಳಲ್ಲಿ ಭಿನ್ನ ಭಿನ್ನ ಆವೃತ್ತಿಗಳನ್ನು ಓದಿ ವಿಸ್ಮಯಗೊಳ್ಳವ ಪರಿ ನಿಜಕ್ಕೂ ಅಚ್ಚರಿಯೇ ಹೌದು. ಬ್ಲಾಗ್ ನ ಕೊನೆಯ ಸಾಲು “..ಇಂಥ ಗಳಿಗೆಗಳು ನೂರ್ಮಡಿಯಾದರೆ ಮಾತ್ರ ನಿತ್ಯದ ಸಾವಿನ ನಡುವೆ ನಮ್ಮ ಮರುಹುಟ್ಟು!” ಎಂಬುದು ನಿಜಕ್ಕೂ ಉತ್ತಮ ಕವಿತೆಗಳ ಓದಿನ ಸುಖವನ್ನು ಮಾರ್ದನಿಸುವಂತಿದೆ.

\r\n\r\n

ಕಾವ್ಯಸಂಭ್ರಮದ ಈ ಲೋಕಯಾನಕ್ಕೆ ನಮ್ಮನ್ನೂ ಕೊಂಡೊಯ್ದುದಕ್ಕೆ ಧನ್ಯವಾದಗಳು

\r\n


| SUNIL B

ಬರೆಯಬಲ್ಲೆ ನಾ ಇಂದಿರುಳಲಿ
\r\n
\r\nಬರೆಯಬಲ್ಲೆ ನಾ ದುಃಖಿತ ಸಾಲುಗಳ ಇಂದಿರುಳಲಿ
\r\nಹೀಗೆ, ನೀಲಾಕಾಶದ ಮಿನುಗುವ ನಕ್ಷತ್ರಗಳು ರಾತ್ರಿಯಲಿ
\r\nಮರುಕಳಿಸುವ ಆಗಸದಿರುಳ ಗಾಳಿಯು ಹಾಡಿನಲಿ
\r\n
\r\nಬರೆಯಬಲ್ಲೆ ನಾ ದುಃಖಿತ ಸಾಲುಗಳ ಇಂದಿರುಳಲಿ
\r\nಮೋಹಿಸಿದೆನಾ ಅವಳ ಅವಳಿಗಿಂತಲು
\r\nಚಾಚಿದ ರಾತ್ರಿಗಳಲಿ ಒಮ್ಮೆ ಬಾಚಿದ ತೋಳುಗಳಲಿ
\r\nಚುಂಬಿಸಿದೆನಾ ಅವಳವಿರತ ಅನಂತದಲು
\r\nಮೋಹಿಸಿದಳೆನ್ನವಳು ಎನಗಿಂತಲು ಹೆಚ್ಚಾಗಿ
\r\nಮೋಹಿಸದಿರಲಾದೀತೆ ನಿಶ್ಚಲ ಕಣ್ಣುಗಳ ತಾವಾಗಿ
\r\n
\r\nಬರೆಯಬಲ್ಲೆ ನಾ ದುಃಖಿತ ಸಾಲುಗಳ ಇಂದಿರುಳಲಿ
\r\nಯೋಚಿಸಿ ಅವಳಿಲ್ಲದಂತೆ
\r\nಭಾವಿಸಿ ಅವಳ ಕಳೆದಂತೆ
\r\nನೀರವ ರಾತ್ರಿ ಅವಳಿಲ್ಲದ ನೀರಸ ರಾತ್ರಿ
\r\nಆತ್ಮಕಾವರಿಸಿದ ಪದಗಳಂತೆ
\r\nಇಬ್ಬನಿ ಹುಲ್ಲುಗಾವಲ ತಬ್ಬಿದಂತೆ
\r\n
\r\nಹೇಳಬೇಕಿದೆ ಕಾಪಿಟ್ಟುಕೊಳ್ಳಲಿಲ್ಲ ಅವಳನ್ನ
\r\nಈ ಎನ್ನ ಪ್ರೀತಿ
\r\nಸಹಿಸಬೇಕಿದೆ ಅವಳಿಲ್ಲದ ನಕ್ಷತ್ರಯುಕ್ತ ಮೌನ ರಾತ್ರಿ
\r\nಇದಷ್ಟೇ. ದೂರದಲಿ ಯಾರದೋ ಹಾಡು. ದೂರದಲಿ.
\r\nಅತೃಪ್ತ ಅವಳಿಲ್ಲದಾತ್ಮ
\r\nನೋಟದಲಿ ಹುಡುಕಿದವಳ ಸೇರಲು ಸನಿಹ
\r\nಹೃದಯ ಮಿಡಿದಿದೆ ಇರದವಳ ಕಾಣದ ವಿರಹ
\r\n
\r\nಅದೇ ರಾತ್ರಿ ಹಿಮ ಹೊದಿಸಿ ಅವೇ ಮರಗಳಿಗೆ
\r\nನಾವು ನಾವಲ್ಲ, ಆದರದೇ ಗಳಿಗೆಗೆ
\r\n
\r\nಮೊದಲಿನ ಮೋಹವಿಲ್ಲ, ನಿಜವಾದರೆ, ಅವಳ ಮೇಲಿದ್ದ ಪ್ರೀತಿಯೆಲ್ಲಾ
\r\n
\r\nಕಾತುರವಿದೆ ಕೇಳಲವಳ ಮಧುರ ಮಾತಿನ ಮೊರೆತವ 
\r\nಆದರಾಕೆ. ಇನ್ನೊಬ್ಬರಾಕೆ. ಸಿಕ್ಕಂತೆನಗೆ ಅದರಕೆ
\r\nಸಿಹಿದನಿಯ ಜತನದೇಹಿ ಅಮಿತ ನೋಟಕೆ
\r\n
\r\nಮೊದಲಿನ ಮೋಹವಿಲ್ಲ, ನಿಜವಾದರೆ, ಅವಳ ಮೇಲಿನ ಪ್ರೀತಿಯೆಲ್ಲಾ.
\r\n
\r\nಪ್ರೀತಿ ಕ್ಷಣಿಕ ಮರೆವು ನರಕ
\r\n
\r\nಬಾಹು ಬಂಧದಲಿ ಕಳೆದ ಕ್ಷಣಗಳ ಮರುಕವಿದೆ
\r\nಕಳೆದವಳ ನೆನೆದು ಎನ್ನಾತ್ಮಕಿರದ ಪುಳಕವಿದೆ
\r\n
\r\nನಾನನುಭವಿಸಲು ಕೊಟ್ಟ ಕೊನೆಯ ನೋವವಳು
\r\nಅವಳಿಗಾಗಿ ಬರೆದ ನನ್ನೀ ಕೊನೆಯ ಪದಗಳಿವು 

\r\n


| Talya

ಕನ್ನಡಕ್ಕೆ ಬಂದ ಈ ಕವಿತೆ ಅನುವಾದದ ವ್ಯಾಖ್ಯಾನವನ್ನು ವಿಸ್ತರಿಸಿದೆ.ಬಿಎಂಶ್ರೀ, ಒ.ಎಲ್. ನಾಗಭೂಷಣ ಸ್ವಾಮಿ ಹೀಗೆ ಮಾಡಬಲ್ಲವರು. ನೀವು ಆ ಸಾಲಿಗೆ ಸೇರಿದವರು. ಮೂಲಕ್ಕೆ ನಿಷ್ಠವಾಗಿಯೂ, ಅದನ್ನು ಮೀರುವ ಗುಣ ಈ ರೀತಿಯ ಅನುವಾದದಲ್ಲಿರುತ್ತದೆ. ಬೇರೊಂದು ಭಾಷೆಯ ಸಮೂಹವನ್ನು ಕನ್ನಡ ಮನಸ್ಸು ತನ್ನದೇ ನುಡಿಗಟ್ಟಿನಲ್ಲಿ ಕನ್ನಡಿಸುವ  ಕಾಯಕ ಸಾಮಾನ್ಯದ್ದಲ್ಲ. ನಿಮ್ಮ ಈ ಅನುವಾದ ದಲ್ಲಿ ಈ ಲಕ್ಷಣ ದಟ್ಟವಾಗಿದೆ. ಒಂದು ತಿದ್ದುಪಡಿ ಸೂಚಿಸುವೆ.

\r\n\r\n

 

\r\n\r\n

 

\r\n


| ಪ್ರಕಾಶ್

ಪ್ರೀತಿಯನ್ನು ಕಳೆದುಕೊಳ್ಳುವ ಕಡು ದುಃಖದ ಆಳದಲ್ಲಿ ಬಿಡುಗಡೆಯ ಸಂತಸದ ಒಂದು ಎಳೆ ಇರಬಹುದೇ ಎಂಬ ಧ್ವನ್ಯಾರ್ಥ ಬಹಳ ತಾಜಾ ಆಗಿದೆ

\r\n
Add Comment