ಮುನ್ನುಡಿ
by Nataraj Huliyar
ನಿಜಕ್ಕೂ ಆಳದಲ್ಲಿ ಅನ್ನಿಸಿದ್ದನ್ನು ಗೆಳೆಯ, ಗೆಳತಿಯರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಒಟ್ಟಾರೆ ಲೋಕದ ಎಲ್ಲ ಮುಕ್ತ ಮನಸ್ಸುಗಳಿಗೆ ತಲುಪಿಸುವ ಕಾತರ; ಆದರೆ, ಕ್ಷಿಪ್ರ ವೇದಿಕೆಯಾದ ಫೇಸ್ ಬುಕ್ ಬಳಸಲು ಹಿಂಜರಿಕೆ…ಈ ಮನಸ್ಥಿತಿಯಲ್ಲಿದ್ದವನಿಗೆ ಕಂಡ ದಾರಿಯಾಗಿ ಈ ಬ್ಲಾಗ್ ನಿಮ್ಮ ಕಣ್ಣೆದುರಿಗಿದೆ. ಇಲ್ಲಿ ಆಗಾಗ್ಗೆ ಬರೆಯವುದರ ಜೊತೆಗೇ ನನ್ನ ಹಳೆಯ ಬರಹಗಳು, ಹೊಸ ಬರಹಗಳು, ಪುಸ್ತಕಗಳ ವಿವರಗಳು, ಪುಸ್ತಕಗಳ ಭಾಗಗಳು, ಫೋಟೋಗಳು, ವಿಡಿಯೋ ಲಿಂಕ್ಸ್, ಸುದ್ದಿಗಳು, ಕೃತಿ ವಿಮರ್ಶೆ ಮುಂತಾದವನ್ನು ಒಂದೆಡೆ ತರುವ ಈ ಬ್ಲಾಗ್ ಐಡಿಯಾ ಹುಟ್ಟಿದ್ದು ಪ್ರಿಯ ಗೆಳೆಯ ಕಿರಣ್ ಕುಮಾರ್ ಜೊತೆಗಿನ ಮಾತುಕತೆಯಲ್ಲಿ. ‘ಆಕೃತಿ ಕಿರಣ್’, ‘ಓಪನ್ ಮೈಂಡ್ಸ್ ಕಿರಣ್’ ಎಂದು ನಾವೆಲ್ಲ ಕರೆಯುವ ಕಿರಣ್ ಎರಡು ವರ್ಷಗಳ ಕೆಳಗೆ ಈ ಬ್ಲಾಗ್ ಸೃಷ್ಟಿಸುವ ಕೆಲಸ ಶುರು ಮಾಡಿದರು. ಇದೀಗ ಈ ಬ್ಲಾಗ್ ನಾನು ಪ್ರೀತಿಯಿಂದ ‘ಟೆಕ್ಕಿ ಗುರು’ ಎಂದು ಕರೆಯುವ ಸಮಂತ ಪತ್ತಾರ ಹಾಗೂ ವಿನ್ಯಾಸ ಬಡಿಗೇರ ಎಂಬ ಇಬ್ಬರು ಹದಿಹರೆಯದ ಪಡ್ಡೆಗಳ ಕೈ ಚಳಕ ಹಾಗೂ ಶ್ರಮದಿಂದ ಸೃಷ್ಟಿಯಾದ ಪೂರ್ಣ ವಿನ್ಯಾಸದೊಡನೆ ಬಾನೇರಿದೆ. ಈ ಇಬ್ಬರ ಜೊತೆಗೆ ಗೆಳೆಯ ದೇವು ಪತ್ತಾರ ಕೂಡ ಇದ್ದಾರೆ. ಈ ಗೆಳೆಯರಿಗೆ ನನ್ನ ಕೃತಜ್ಞತೆಗಳು. ಪ್ರತಿ ಭಾನುವಾರ ಬೆಳಗ್ಗೆ ಪುಟ್ಟ ಅಥವಾ ದೊಡ್ಡ ಟಿಪ್ಪಣಿಯ ಜೊತೆಗೆ ಇಲ್ಲಿ ಹಾಜರಾಗಲು ಪ್ರಯತ್ನಿಸುವೆ. ಜೊತೆಗೆ ದಿನ-ರಾತ್ರಿಗಳ ಯಾವ ಗಳಿಗೆಯಲ್ಲಾದರೂ ಓದುಗಿಯರೊಡನೆ, ಓದುಗರೊಡನೆ ಹಂಚಿಕೊಳ್ಳಬೇಕಾದ ಪುಸ್ತಕಗಳು, ಅನಿಸಿಕೆಗಳು, ನನ್ನನ್ನು ಕಾಡುವ ಲೇಖಕ, ಲೇಖಕಿಯರ ಮಾತುಗಳು, ಉಲ್ಲೇಖಗಳು, ಕ್ಲಾಸ್ ರೂಂನಲ್ಲಿ ಹೊಳೆದ ಐಡಿಯಾಗಳು, ಅನಿಸಿಕೆಗಳು ಕೂಡ ಆಗಾಗ್ಗೆ ಇಲ್ಲಿರುತ್ತವೆ. ಈ ಬ್ಲಾಗ್ ಉಸಿರಾಡತೊಡಗಿದಂತೆ ಯಾವ ದಿಕ್ಕು ಹಿಡಿದು ಯಾವ ಥರದ ಜೀವ ಪಡೆಯುತ್ತದೋ ಎಂಬ ಬಗ್ಗೆ ನನಗೂ ನಿಮ್ಮಷ್ಟೇ ಕುತೂಹಲ. ಸಾಧ್ಯವಾದಾಗ ಬ್ಲಾಗ್ ಶೇರ್ ಮಾಡಿ. ಗೆಳೆಯ ಗೆಳತಿಯರಿಗೆ ತಲುಪಿಸಿ. ಪ್ರತಿಕ್ರಿಯಿಸಿ.
ಪ್ರೀತಿಯಿಂದ
ನಟರಾಜ್ ಹುಳಿಯಾರ್
(20 ಆಗಸ್ಟ್ 2023, ಭಾನುವಾರ)
Comments
0 Comments
Add Comment