’ಇನ್ನಷ್ಟು ಟೈಟಲ್ಸ್ ಬೇಕೆ?’ ಎಂದು ಅದು ಕೇಳಿತು!

 ವಾರಗೆಯ ಲೇಖಕ, ಲೇಖಕಿಯರು ತಂತಮ್ಮ ಬರಹಗಳಿಗೆ ಹೇಗೆ ಟೈಟಲ್ ಕೊಡುತ್ತಾರೆ ನೋಡೋಣವೆಂದು ಅವರವರ ಟೈಟಲ್ ಥಿಯರಿಯ ಬಗ್ಗೆ ಕೇಳಿದೆ. ದೊಡ್ಡ ದೊಡ್ಡ ಲೇಖಕರು ತಮ್ಮ ಕೃತಿಗಳಿಗೆ ಹೇಗೆ ಟೈಟಲ್ ಕೊಡಬಹುದು ಎಂಬ ಕುತೂಹಲದಿಂದ ನನ್ನ ಪ್ರಿಯ ಲೇಖಕ ಮಾರ್ಕ್ವೆಜ್ ಸಂದರ್ಶನಗಳನ್ನು ನೋಡಲು ಹೋದೆ… ಇದೆಲ್ಲ ಕಳೆದ ವಾರದ `ಕಲಾಕೃತಿಯ ಹೆಸರು’ (READ HERE) ಎಂಬ ಅಂಕಣಬರಹದ ಮಳೆ ನಿಂತ ಮೇಲಿನ ಮರದ ಹನಿ ಎಂಬುದು ನಿಮಗೆ ಹೊಳೆದಿರಬಹುದು!

ಗೂಗಲ್ ಹಾದಿಯಲ್ಲಿ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆಯಲ್ಲ! ಮಾರ್ಕ್ವೆಝ್ ಸಂದರ್ಶನ ಹುಡುಕುತ್ತಿರುವಂತೆ ಒಂದು ವೆಬ್‌‌ಸೈಟ್ ಪ್ರತ್ಯಕ್ಷವಾಯಿತು. ಹೆಸರು: Poem Title Generator. ಅದರ ಕೆಳಗೆ `ನಮ್ಮ ಪೊಯೆಮ್ ಟೈಟಲ್ ಜನರೇಟರ್ ಆಟೊಮ್ಯಾಟಿಕ್ ಆಗಿ ಕವಿತೆಯ ಶೀರ್ಷಿಕೆಗಳನ್ನು ಉತ್ಪಾದಿಸಲು `ಆರ್ಟಿಫಿಶಿಯಲ್ ಇಂಟಲಿಜೆನ್ಸ್’ನ ಶಕ್ತಿ ಬಳಸುತ್ತದೆ’ ಎಂಬ ಒಕ್ಕಣೆಯಿತ್ತು!

ಏಳೆಂಟು ತಿಂಗಳ ಕೆಳಗೆ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಇಂಗ್ಲಿಷಿನಲ್ಲಿ ಪ್ರಬಂಧ ಬರೆಯುವುದನ್ನು ಸಮಾಜವಿಜ್ಞಾನಿ ಸಿ.ಜಿ. ಲಕ್ಷ್ಮೀಪತಿ ತೋರಿಸಿದ್ದರು. ಆಗ ಆ ವೇದಿಕೆಗೆ ಕೈ ಕೊಡಲು ಅಂಬೇಡ್ಕರ್ ಬಗ್ಗೆ ಯಾರೂ ಕೊಡದ ವಿಶೇಷ ವಸ್ತುವನ್ನು ಕೊಟ್ಟು `ಟ್ರೈ ಮಾಡಿ’ ಎಂದೆ. ಅದು ಅಸಂಬದ್ಧವಾದ ಬರಹವೊಂದನ್ನು ಸೃಷ್ಟಿಸಿತು. 

ಆದರೆ ಈ ಸಲ ಸಿಕ್ಕ ಪೊಯೆಮ್ ಟೈಟಲ್ ಜನರೇಟರ್’ ಸೃಜನಶೀಲವಾಗಿತ್ತು. ಮೊದಲಿಗೆ `ನಿನ್ನ ಕವಿತೆಯ ವಸ್ತುವೇನು?’ ಎಂದು ಟೈಟಲ್ ಜನರೇಟರ್ ಕೇಳಿತು. ರೈಟಿಂಗ್ ಈಸ್ ಥಿಂಕಿಂಗ್ ಎಂದು ನಂಬುವ ನಾನು ಕೀಬೋರ್ಡ್ ಮೇಲೆ ಬೆರಳಿಟ್ಟ ತಕ್ಷಣ ಸುಮ್ಮಸುಮ್ಮನೆ ಕವಿತೆಯ ವಸ್ತುವೊಂದು ಟೈಪಾಗತೊಡಗಿತು: My poem deals with a lonely girl who has lost her way in the woods and it is dark and she is helpless… 

'ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಎದುರು ನನ್ನ 'ಸಹಜ ಇಂಟಲಿಜೆನ್ಸ್’ ಇಷ್ಟನ್ನು ಟೈಪ್ ಮಾಡಿ ಸುಮ್ಮನಾಯಿತು. ಈ ಸಾಲು ಏಕೆ, ಹೇಗೆ ಮೂಡಿತೋ ತಿಳಿಯದು! ಈ ವಿವರಣೆಗೊಂದು ಟೈಟಲ್ ಬಂತು: ’Whispers of the Lost Woods.’ ಅಂದರೆ, `ಕಳೆದು ಹೋದ ಕಾಡಿನ ಪಿಸುಮಾತುಗಳು’! ಲವ್ಲಿ! `ಇನ್ನಷ್ಟು ಟೈಟಲ್ಸ್ ಬೇಕೆ?’ ಎಂದು ಅದು ಕೇಳಿತು. `ಹೂಂ’ ಎಂದೆ. ಟೈಟಲ್ ಬಂತು: Tales from the Mystic Vale ಅಂದರೆ, ನಿಗೂಢ ಕಣಿವೆಯ ಕತೆಗಳು. 
ನೋಡನೋಡುತ್ತಾ ಹಲವು ಟೈಟಲ್‌ಗಳು ಮೂಡತೊಡಗಿದವು.`Fables Beneath Canopy's Veil’; `Laments of the Shrouded Thorns’ ಇತ್ಯಾದಿ…
ಇನ್ನು ಮುಂದೆ ಶಬ್ದವಿಲ್ಲ! 

ನಿನ್ನೆ ತಾನೆ ಕವಿ ಚಂದ್ರಶೇಖರ ತಾಳ್ಯ ತಮ್ಮ ಕವಿತೆಗೆ ಹೆಸರಿಡುವುದರ ಬಗ್ಗೆ ಮಾತಾಡಿದ್ದು ನೆನಪಾಯಿತು. ಆ ಕವಿತೆಯ ಹೆಸರು `ಕಾಲದ ಹಾಡು’ ಎಂದ ತಕ್ಷಣ, `ಅದು ಕವಿತೆಯ ವಸ್ತು, ಆಶಯ, ಕೇಂದ್ರ ಧ್ವನಿ…ಎಲ್ಲವನ್ನೂ ಹೇಳಿಬಿಟ್ಟಿದೆಯಲ್ಲ? ಇನ್ನು ಕವಿತೆಯನ್ನೇಕೆ ಓದಬೇಕು?’ ಎಂದೆ. ಕವಿತೆಯ ಎಲ್ಲ ಗೂಢಗಳನ್ನು ಟೈಟಲ್ ಬಿಟ್ಟುಕೊಡಬಾರದೆಂಬ ಕಾರಣಕ್ಕೋ ಏನೋ, ಅನೇಕರು ಅನೇಕ ಅರ್ಥಗಳನ್ನು ಹೊರಡಿಸುವ ರೂಪಕವೊಂದನ್ನು ಟೈಟಲ್ ಮಾಡಲು ಹುಡುಕಾಡುತ್ತಿರುತ್ತಾರೆ. ಮೇಲೆ ಹೇಳಿದ ‘ಟೈಟಲ್ ಜೆನರೇಟರ್’ ಕೂಡ ರೂಪಕಗಳನ್ನೇ ಹುಡುಕಿ ಕೊಟ್ಟಿತ್ತು! ಆದರೆ ಬರೆವವರೆಲ್ಲರೂ ಕೊನೆಗೆ ತಮ್ಮ `ಒಳಪಿಸುಮಾತು’ ಅಥವಾ `ಇಂಟ್ಯೂಶನ್’ ಆಧಾರದ ಮೇಲೆ ಟೈಟಲ್ ಕೊಡುತ್ತಾರೆಂದು ಕಾಣುತ್ತದೆ. ಈ ಕುರಿತು ಇಬ್ಬರ ಪ್ರತಿಸ್ಪಂದನವನ್ನು ಇಲ್ಲಿ ಕೊಡುವೆ: 

ಚಂದ್ರಶೇಖರ ತಾಳ್ಯ: `ಕವಿತೆಗೆ ಹೆಸರು ಅನಿವಾರ್ಯವೇ ಎನ್ನುವುದು ಜಿಜ್ಞಾಸೆಯ ವಿಷಯವೇ. ಆದರೆ ಅದೊಂದು ರೀತಿಯಲ್ಲಿ ನದಿ ದಾಟುವಾಗಿನ ಪುಟ್ಟ ದೋಣಿ ಇದ್ದಂತೆ. ನಾವು ದೋಣಿಯಲ್ಲಿ ಕುಳಿತು ನದಿಯ ವಿಸ್ತಾರ, ಅದರ ಹರಿವಿನ ವಯ್ಯಾರ, ಅಲೆಗಳ ಮೋಹಕತೆ, ಆಚೆ ದಡದ ಸೆಳೆತ, ದಂಡೆಯಲ್ಲಿ ಬೆಳೆದ ಹಸಿರು ಮರಗಳ ನೋಟಗಳನ್ನು ಗಮನಿಸುತ್ತಾ ಕುಂತ ದೋಣಿಯನ್ನು ಮರೆತೇಬಿಟ್ಟಿರುತ್ತೇವೆ. ದಂಡೆ ಮುಟ್ಟಿದ ಮೇಲೂ ದೋಣಿ ನೆನಪಷ್ಟೇ ಆಗಿ ಉಳಿಯುತ್ತದೆ. ಹೀಗೇ ಕವಿತೆಯ ಹೆಸರು.

ನಾನು ಕವಿತೆ ಬರೆದಾದ ಮೇಲೆ ಕವಿತೆ ಇಡಿಯಾಗಿ ಏನು ಹೇಳುತ್ತದೆ ಎನ್ನುವುದರ ಮೇಲೆ ಹೆಸರು ನೀಡುತ್ತೇನೆ. ಅದು ಕವಿತೆಯ ಕೇಂದ್ರ ಧ್ವನಿಯೂ ಆಗಿರಬಹುದು; ಅದರ ಭಾವಸೂಚಕವೂ ಆಗಿರಬಹುದು. ಏನೇ ಇದ್ದರೂ ಇದೊಂದು ಇಬ್ಬದಿಯ ಅಲಗಿನ ಪ್ರಶ್ನೆಯೇ. ಕೊನೆಗೂ ಉಳಿಯುವುದು ಓದುಗರ ಪ್ರತಿಭೆ. ಗಿಣಿ, ನೈಟಿಂಗೇಲ್ ನೆಪದಲ್ಲಿ ಕವಿ ಮತ್ತೇನೋ ವಿಭಿನ್ನ ದರ್ಶನವೊಂದನ್ನು ಕಟ್ಟಿ ಕೊಡಲು ಯತ್ನಿಸುವಂತೆ ಕಾಣಿಸುತ್ತಾನೆ. ಅದನ್ನು ಬಗೆವ ಬಗೆ ಕವಿತೆಯ ಹೆಸರನ್ನು ಮೀರಿ ಹೋಗಿರುತ್ತದೆ.

ಅಂತಿಮವಾಗಿ, ಕವಿತೆಗೆ ಟೈಟಲ್ ಅನಿವಾರ್ಯವೋ ಅಲ್ಲವೋ ಎಂಬುದು 'ಜಿಜ್ಞಾಸೆಯ' ವಿಷಯವೇ!

ಎಂ. ಎಸ್. ಆಶಾದೇವಿ: `ಶೀರ್ಷಿಕೆಗಳನ್ನು ಕೊಡುವುದು ಕೆಲವು ಸಲ ಹೆತ್ತ ಮಕ್ಕಳಿಗೆ ಹೆಸರಿಡುವಷ್ಟೇ ಉತ್ಕಟವಾದ ಹುಡುಕಾಟ; ಇದು ಕೆಲವೊಮ್ಮೆ ಸರಿಯಾದ, ಸರಳವಾದ ಶೀರ್ಷಿಕೆ ಕೊಟ್ಟರೆ ಸಾಕಪ್ಪಾ ಎನ್ನಿಸುವ ಒತ್ತಡದ ಸಂಗತಿಯೂ ಆಗಿಬಿಡುತ್ತದೆ. ಆದರೆ ಅದು ನಾನು ಹೇಳಹೊರಟಿರುವುದನ್ನು ಧ್ವನಿಸುವ ಶೀರ್ಷಿಕೆಯಾಗಿರಬೇಕು ಎನ್ನುವ ಆಸೆ! ಕೆಲವು ಸಲ ಲೇಖನ ಬರೆದು ಎಷ್ಟು ಹೊತ್ತಾದರೂ ಶೀರ್ಷಿಕೆ ಹೊಳೆಯದೆ ಕಂಗಾಲಾಗುವುದೂ ಇದೆ. ಶೀರ್ಷಿಕೆಯೇ ಮೊದಲು ಹೊಳೆದು ಅದೇ ಲೇಖನದ ಭಿತ್ತಿಯನ್ನು ರೂಪಿಸಿದ್ದೂ ಇದೆ… ಕೆಲವೊಮ್ಮ ಶೀರ್ಷಿಕೆ ಕಾವ್ಯಮಯವಾಗಿರಲಿ ಎಂಬ ಭಾವ ಮಿಂಚಿ ಮರೆಯಾಗುತ್ತಿರುತ್ತದೆ. 

ಕಳೆದ ವಾರ ಟೈಟಲ್ ಎಂಬ ಪರಿಕಲ್ಪನೆಯನ್ನು ’ಪ್ರಾಬ್ಲಮೆಟೈಸ್’ ಮಾಡಿದ್ದು ಎಲ್ಲೆಲ್ಲಿಗೆ ಕರೆದೊಯ್ಯತ್ತಿದೆ ನೋಡಿ! ಈ ಟೈಟಲ್ ಸವಾಲು ಇಟಲಿಯ ಸುಪ್ರಸಿದ್ಧ ಲೇಖಕ ಅಂಬರ್ತೊ ಇಕೋಗೂ ಎದುರಾಯಿತು. ಹಲವು ಬಗೆಯ ‘ನ್ಯಾರೇಟೀವ್’ ಅಥವಾ ‘ಕಥನ’ಗಳನ್ನು ಬರೆಯುತ್ತಿದ್ದ ಇಕೋ ತನ್ನ ಬರೆವ ಬದುಕಿನಲ್ಲಿ ಕೊಂಚ ತಡವಾಗಿ, ೧೯೮೦ರಲ್ಲಿ, ತನ್ನ ಮೊದಲ ಕಾದಂಬರಿ ಬರೆದ. ‘ಈ ಕಾದಂಬರಿಗೆ ಯಾವ ಹೆಸರಿಡಲಿ?’ ಎಂದು ಹತ್ತು ಹೆಸರುಗಳನ್ನು ಬರೆದು ಗೆಳೆಯ, ಗೆಳತಿಯರಿಗೆ ಕಳಿಸಿದ. ಅವರು ಆ ಹೆಸರುಗಳಲ್ಲಿ ‘ದ ನೇಮ್ ಆಫ್ ದಿ ರೋಸ್' ಎಂಬ ಟೈಟಲ್ ಆರಿಸಿದರು. ಆದರೆ ಇಕೋ ಕಾದಂಬರಿಯ ಆಶಯವನ್ನು, ವಸ್ತುವನ್ನು ಒಡೆದು ಹೇಳದಿರುವಂಥ ‘Adso of Melk’ ಎಂಬ `ನ್ಯೂಟ್ರಲ್’ ಟೈಟಲ್ ಹುಡುಕಿ ಅದನ್ನೇ ಫೈನಲೈಸ್ ಮಾಡಿದ. ಪ್ರಕಾಶಕರು ಅದನ್ನು ಒಪ್ಪಲಿಲ್ಲ. 

ಕೊನೆಗೆ, `ದ ನೇಮ್ ಆಫ್ ದಿ ರೋಸ್’ ಟೈಟಲ್ ಕೊಡುತ್ತಾ ಇಕೋ ಹೇಳಿದ: `ಈ ಹೆಸರಿಟ್ಟಿದ್ದು ನಿಜಕ್ಕೂ ಆಕಸ್ಮಿಕ. `ಗುಲಾಬಿ’ ಎನ್ನುವುದು ಎಷ್ಟೊಂದು ಸಮೃದ್ಧ ಅರ್ಥಗಳನ್ನು ಕೊಡುವ ಸಾಂಕೇತಿಕ ಚಿತ್ರವಾಗಿದೆಯೆಂದರೆ, ಈಗಂತೂ ಅದರಲ್ಲಿ ಇನ್ಯಾವ ಅರ್ಥವೂ ಉಳಿದಂತಿಲ್ಲ.’ 

`ದ ನೇಮ್ ಆಫ್ ದಿ ರೋಸ್’ ಕಾದಂಬರಿಯ ಐವತ್ತು ಮಿಲಿಯನ್ ಪ್ರತಿಗಳು ಮಾರಾಟವಾದವು. ಕೊಲೆಯ ರಹಸ್ಯವೂ ಕೇಂದ್ರದಲ್ಲಿರುವ ಈ ಕಾದಂಬರಿ ಮುಂದೆ ಅದೇ ಹೆಸರಿನ ಜನಪ್ರಿಯ ಸಿನಿಮಾ ಕೂಡ ಆಯಿತು. ಈ ಕಾದಂಬರಿಯ ಜನಪ್ರಿಯತೆಯಲ್ಲಿ ಗುಲಾಬಿ ಎಂಬ ಹೆಸರಿನ ಆಕರ್ಷಣೆ ಕೂಡ ಸೇರಿರಬಹುದೇನೋ.

ಇಂಗ್ಲಿಷ್ ಕವಯಿತ್ರಿ ಗರ್ಟ್ರೂಡ್ ಸ್ಟೆಯ್ನ್ ಬರೆದ `ಸೇಕ್ರೆಡ್ ಎಮಿಲಿ’ ಪದ್ಯದಲ್ಲಿ ಬರುವ ‘ರೋಸ್ ಈಸ್ ಎ ರೋಸ್ ಈಸ್ ಎ ರೋಸ್ ಈಸ್ ಎ ರೋಸ್’ ಎಂಬ ಪ್ರಖ್ಯಾತ ಸಾಲು ನಿಮ್ಮ ಕಿವಿಗೆ ಬಿದ್ದಿರಬಹುದು. ಈ ಸಾಲಿನಲ್ಲಿ ಗುಲಾಬಿ ಎಂಬ ಒಂದೇ ಸಂಕೇತದ ಪುನರಾವರ್ತನೆ ಹಾಗೂ `ಈಸ್’ ಎಂಬ ಕ್ರಿಯಾಪದದ ಪುನರಾವರ್ತನೆಯ ಹಟಮಾರಿ ಚೀತ್ಕಾರ…ಈ ಎರಡರಿಂದ ಅರ್ಥಸಮೃದ್ಧತೆ ಹುಟ್ಟುವುದನ್ನು ನೀವು ಗಮನಿಸಿರಬಹುದು. `ಗುಲಾಬಿಯನ್ನು ಯಾವ ಹೆಸರಿನಿಂದಾದರೂ ಕರೆಯಿರಿ, ಅದು ಗುಲಾಬಿಯಾಗಿಯೇ ಇರುತ್ತದೆ; ಹಾಗೆಯೇ ಎಮಿಲಿಯ ವ್ಯಕ್ತಿತ್ವದ ಶುಭ್ರತೆ ಕೂಡ’ ಎಂದು ಕೂಡ ಗರ್ಟ್ರೂಡ್ ಸ್ಟೆಯ್ನ್ ಅಲ್ಲಿ ಸೂಚಿಸಿದ್ದರು.  

ಅಂಬರ್ತೋ ಇಕೋ ತನ್ನ ಕಾದಂಬರಿಗೆ `ದ ನೇಮ್ ಆಫ್ ದ ರೋಸ್’ ಟೈಟಲ್ ಕೊಟ್ಟಾಗ ಗರ್ಟ್ರೂಡ್ ಸ್ಟೆಯ್ನ್ ಕವಿತೆಯ ಸಾಲನ್ನು ಗಮನಿಸಿರಬಹುದು ಅಥವಾ ಇಲ್ಲದಿರಬಹುದು. ಅನೇಕ ಸಲ ನಾವು ಓದಿದ, ಕೇಳಿದ, ನಮ್ಮೊಳಗಿಳಿದ ಸಂಕೇತ, ರೂಪಕಗಳು ಕೂಡ ಆಧುನಿಕ, ಅತ್ಯಾಧುನಿಕ ಕೃತಿಗಳಲ್ಲಿ ನೇರವಾಗಿ ಅಥವಾ ಮಾರ್ಪಟ್ಟು ಟೈಟಲ್‌ಗಳಾಗುತ್ತವೆ. ನಾನು ಹಿಂದೊಮ್ಮೆ ಬರೆದ ರಮ್ಯ ಪ್ರೇಮಕತೆಯೊಂದಕ್ಕೆ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯೊಂದರಲ್ಲಿರುವ ’ದಾರಿಯೆರಡರ ನಡುವೆ ದಟ್ಟ ಮಂಜು’ (ಮತ್ತೊಬ್ಬ ಸರ್ವಾಧಿಕಾರಿ, ಪಲ್ಲವ ಪ್ರಕಾಶನ) ಎಂಬ ಸಂಕೇತ ಟೈಟಲ್ ಆಗಿದ್ದು ನೆನಪಾಗುತ್ತದೆ!

ನಿಮಗೂ ಹಾಗಾಗಬಹುದು. ಮೇ ಟೈಟಲ್ ಫೈಂಡ್ ಯು!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK

Share on:


Recent Posts

Latest Blogs



Kamakasturibana

YouTube



Comments

8 Comments



| vali R

\r\nನಮಸ್ತೆ ಸರ್,\r\n\r\nನಾನು ಕಾಯುತ್ತಿರುವಂತೆ ಅದೇ ವಿಷಯವನ್ನು ಇಂದೂ ಚರ್ಚಿಸಿದ್ದಕ್ಕಾಗಿ ಧನ್ಯವಾದಗಳು ಸರ್.\r\nಕಳೆದ ಮೂರು ವಾರಗಳ ವಿಷಯ- ಕವಿತೆಯ ಹಿನ್ನೆಲೆ ಮತ್ತು ಶೀರ್ಷಿಕೆಗೆ ಸಂಬಂಧಿಸಿದ್ದು ನನ್ನಂತಹ ಹಲವು ಅಧ್ಯಾಪಕರಿಗೆ ಉಪಯುಕ್ತ. ಯಾವುದಕ್ಕೂ ಜೋತು ಬೀಳದೆ ಕವಿತೆ ಇಂದು ಏನನ್ನು ಹೇಳುತ್ತಿದೆ ಎಂಬುದೇ ಮುಖ್ಯ.\r\nಶೀರ್ಷಿಕೆ, ಹಿನ್ನೆಲೆ ಎರಡೂ ಹಿನ್ನೆಲೆಗೆ ಸರಿದು ಕವಿತೆ ಮುನ್ನೆಲೆಗೆ \r\nಬರಬೇಕು.\r\nನನ್ನ ಯಾವ ಕವಿತೆಗಳಿಗೂ ಹೆಸರಿಟ್ಟಿರುವುದಿಲ್ಲ. ಮುದ್ರಣಕ್ಕೆ ಕಳಿಸುವಾಗ ನನಗನಿಸಿದ್ದು ಅಥವಾ ಗೆಳೆಯರೊಂದಿಗೆ ಚರ್ಚಿಸಿ ಯಾವುದಾದರೊಂದನ್ನು ನಿರ್ಧರಿಸುತ್ತೇನೆ. ನನಗೆ ನಿಜವಾಗಿಯೂ ಕವಿತೆಗಳಿಗೆ ಹೆಸರಿಡುವುದು ಇಷ್ಟವಿಲ್ಲ. ಈ ಲೇಖನಗಳನ್ನು ಓದಿ ನನ್ನದೇ \'ಹೆಸರಿಲ್ಲದ ಕವಿತೆ\' ಎಂಬ ಶೀರ್ಷಿಕೆಯ ಕವಿತೆ ನೆನಪಾಯಿತು.\r\n\r\nಧನ್ಯವಾದಗಳು ಸರ್..


|


|


| Anil Gunnapur

೧. ಶೀರ್ಷಿಕೆ ಇಡುವಾಗ ಒಂದಷ್ಟು ಗೊಂದಲಗಳು ಆಗುತ್ತವೆ.. ಬರೆಯುವಾಗ ಅಂದುಕೊಂಡಿದ್ದು ಮುಗಿದ ಮೇಲೆ ಬೇರೆಯೇ ಆಗಿರುತ್ತದೆ. ಒಟ್ಟು ಕೃತಿಯ ಆಶಯಕ್ಕೆ ಹೊಂದುವಂತೆ ಇರಿಸಲು ಪ್ರಯತ್ನಿಸುವೆ. ಆದರೂ ಒಂದೊಂದು ಸಲ ತೃಪ್ತಿ ಅನ್ನಿಸುವುದಿಲ್ಲ. ೨) ಕೊನೆ ಕ್ಷಣದ ತನಕ ಹೆಸರು ಬದಲಾವಣೆ ಮಾಡಲು ಪ್ರಯತ್ನಿಸುವೆ. ಒಂದೊಂದು ಸಲ ಒಂದೇ ಸಲ ಇಷ್ಟ ಆಗಿ ಬಿಡುತ್ತೆ. ೩) ನನ್ನ ಪುಸ್ತಕ \'ಕಲ್ಲು ಹೂವಿನ ನೆರಳು\' ಏಳೆಂಟು ಜನರ ಜೊತೆ ಚರ್ಚೆ ಮಾಡಿ, ಆ ಪದವನ್ನು ಮತ್ತೆ ಮತ್ತೆ ಅವರಿಂದ ಕೇಳಿಸಿಕೊಂಡಿರುವೆ. 4) ನಾನು ಇರಿಸಿದ ಶೀರ್ಷಿಕೆ ಕೇಳಲು ಆಪ್ತವಾಗಿದೆ ಅನ್ನಿಸಬೇಕು.


|


|


| ಡಾ. ನಿರಂಜನ ಮೂರ್ತಿ ಬಿ ಎಂ

\'ಇನ್ನಷ್ಟು ಟೈಟಲ್ಸ್ ಬೇಕೆ?\' ಲೇಖನದಲ್ಲಿ ಶೀರ್ಷಿಕೆಯ ಬಗ್ಗೆ ಮುಂದುವರಿದ ಚರ್ಚೆ ಅರ್ಥಪೂರ್ಣವಾಗಿದೆ. ಧನ್ಯವಾದಗಳು.\r\n\r\nಪೊಯಮ್ ಟೈಟಲ್ ಜನರೇಟರ್ ತನ್ನ ಕೃಬುತ್ತೆ (ಕೃತಕ ಬುದ್ಧಿಮತ್ತೆ) ಯನ್ನು ಬಳಸಿ ಜನರೇಟಿಸಿ ಕೊಟ್ಟ ಶೀರ್ಷಿಕೆಗಳು, ಹುಳಿಯಾರರು ಹೇಳಿರುವ ಹಾಗೆ, ನಿಜವಾಗಿಯೂ ಚೆನ್ನಾಗಿಯೇ ಇವೆ. ಆದರೆ, ಬರೀ ಶೀರ್ಷಿಕೆಗಳೇ ಏಕೆ, ಕವಿತೆಗಳನ್ನೂ ಜನರೇಟಿಸಿ ಕೊಟ್ಟುಬಿಡುತ್ತವೆ ಈ ಕೃಬುತ್ತೆಗಳು! ಇದು ಹೀಗೇ ಮುಂದುವರಿದರೆ, ಮುಂದೆ ನಮ್ಮೀ ಸಮಾಜದಲ್ಲಿ ಬರಹಗಾರರಿಗೆ, ಲೇಖಕರಿಗೆ, ಸಾಹಿತಿಗಳಿಗೆ, ಕವಿಗಳಿಗೆ, ಕಲಾವಿದರಿಗೆ ಜಾಗವೇ ಇರುವುದಿಲ್ಲವೇನೊ! ಇದು ಎಲ್ಲರೂ ಚಿಂತಿಸಬೇಕಾದ ವಿಷಯ. ಈ ಕೃಬುತ್ತೆಗಳ ಬಗ್ಗೆಯೂ ಒಮ್ಮೆ ನಿಮ್ಮೀ ಬ್ಲಾಗಿನಲ್ಲಿ ಬರೆಯಿರಿ.\r\n\r\nಈ ಹೆಸರಿಡುವ ಘನ ಮತ್ತು ಗಹನ ಕ್ರಿಯೆಯ ಸಂತಸಭರಿತ ಸಂಕಟವನ್ನು, ತಾಳ್ಯರ ದೋಣಿಪಯಣದ ಹೋಲಿಕೆ ಮತ್ತು ಆಶಾದೇವಿಯವರ ಹೆತ್ತ ಮಗುವಿನ ನಾಮಕರಣದ ಹೋಲಿಕೆಗಳು ಅರ್ಥಪೂರ್ಣವಾಗಿ ಧ್ವನಿಸುತ್ತವೆ.


| Dr.Prabhakar

I read with curiosity the intricacies attached to giving a suitable or apt titles to any writings. I as m amazed at the critical analysis you have made even on as freak issue like this! Congrats




Add Comment