ಮೊನಾ ಲಿಸಾ ಮುಗುಳುನಗೆ
by Nataraj Huliyar
ನೀವು ಎಲ್ಲಿ ನಿಂತು ನೋಡಿದರೂ, ಯಾವ ದಿಕ್ಕಿನಿಂದ ನೋಡಿದರೂ ಆ ಮುಗುಳುನಗೆಯ ಯಕ್ಷಿಣಿ ನಿಮ್ಮನ್ನು ಸಮ್ಮೋಹನಗೊಳಿಸುತ್ತಲೇ ಇರುತ್ತದೆ. ಮೊನಾ ಲಿಸಾಳ ಈ ನಿಗೂಢ ಮುಗುಳುನಗೆ ಲಿಯನಾರ್ಡೊ ಡವಿಂಚಿಯ ಕುಂಚಕ್ಕೆ, ಬಣ್ಣಗಳಿಗೆ ಹೇಗೆ ದಕ್ಕಿರಬಹುದು ಎಂಬ ಆಳದ ಕ್ರಿಯೇಟಿವ್ ಹಾಗೂ ಮನೋವೈಜ್ಞಾನಿಕ ಸಂಶೋಧನಾ ಕುತೂಹಲ ಸಿಗ್ಮಂಡ್ ಫ್ರಾಯ್ಡ್‌ಗೆ ಹುಟ್ಟಿತು.
ಇಬ್ಬರೂ ಮಹಾನ್ ಧೀಮಂತರು. ಇಟಲಿಯ ರೆನೈಸಾನ್ಸ್ ಕಾಲದ ಡವಿಂಚಿ ಕಲಾಲೋಕದ ಚಕ್ರವರ್ತಿ; ಆಸ್ಟ್ರಿಯಾದ ಫ್ರಾಯ್ಡ್ ಮಾನವರ ಅಪ್ರಜ್ಞೆಯ ಆಳ-ಆಳದ ದಣಿವರಿಯದ ಅನ್ವೇಷಕ ಮನೋವಿಜ್ಞಾನಿ; ಜರ್ಮನ್ ಭಾಷೆಯಲ್ಲಿ ಬರೆದ ಅನನ್ಯ ಲೇಖಕ. ಫ್ರಾಯ್ಡ್‌ನ ಅನ್ವೇಷಣೆಗಳು ಮಂಕಾದರೂ ಅವನ ಬರವಣಿಗೆಯ ಹೊಳಪು ಮಾಯವಾಗಿಲ್ಲ! ಡವಿಂಚಿಯ ಬಾಲ್ಯಕ್ಕೂ ಅವನ ಸೃಜನಶೀಲ ಸೃಷ್ಟಿಗೂ ಇರುವ ಸಂಬಂಧ ಹುಡುಕುತ್ತಾ 'ಲಿಯನಾರ್ಡೊ ಡವಿಂಚಿ: ಎ ಮೆಮೊಯ್ರ್ ಆಫ್ ಹಿಸ್ ಚೈಲ್ಡ್ ಹುಡ್’ (೧೯೧೦) ಎಂಬ ಜೀವನಚರಿತ್ರಾತ್ಮಕ ಕಥನ ಬರೆಯಲು ಫ್ರಾಯ್ಡ್ ಹೊರಟಿದ್ದು ಬೌದ್ಧಿಕ ಲೋಕದ ಅದೃಷ್ಟ. ತೊಂಬತ್ತೇಳು ಪುಟಗಳ ಈ ಮಹತ್ವದ ಪುಸ್ತಕವನ್ನು ಅಗಲಿದ ಕತೆಗಾರ-ಗೆಳೆಯ ಯೋಗಪ್ಪನವರ್ ಇಪ್ಪತ್ತು ವರ್ಷಗಳ ಕೆಳಗೆ ನನಗೆ ಓದಲು ಕೊಟ್ಟಿದ್ದು ನನ್ನ ಅದೃಷ್ಟ. ಅವತ್ತಿನಿಂದ ಇವತ್ತಿನವರೆಗೂ ನನಗೆ ಹಲವು ನೋಟಗಳನ್ನು ಕೊಡುತ್ತಿರುವ ಪುಸ್ತಕ ಇದು:
ಇಟಲಿಯ ಫ್ಲಾರೆನ್ಸಿನ ರೇಶ್ಮೆ ವ್ಯಾಪಾರಿ ಫ್ರಾನ್ಸೆಸ್ಕೊ ಡೆಲ್ ಗಿಯೊಕೊಂಡೋ(೧೪೬೫-೧೫೪೨) ತನ್ನ ಪತ್ನಿ ಲಿಸಾ ಘೆರಾಡಿನಿಯ ಚಿತ್ರ ಬರೆಯಲು ಡವಿಂಚಿಗೆ ಅಸೈನ್‌ಮೆಂಟ್ ಕೊಟ್ಟ. ಅದು ಮುಗಿಯಲೇ ಇಲ್ಲ. ಕಾರಣ, ಎಲ್ಲ ಮಹಾನ್ ಸೃಜನಶೀಲರಂತೆ ಪರಿಪೂರ್ಣತೆಗಾಗಿ ಹಂಬಲಿಸಿದ ಡವಿಂಚಿಯ ಕ್ರಿಯೇಟಿವ್ ಅತೃಪ್ತಿ, ಚಡಪಡಿಕೆ… ಇತ್ಯಾದಿ. ಅಷ್ಟೊತ್ತಿಗಾಗಲೇ ಡವಿಂಚಿ ಅರ್ಧಕ್ಕೆ ಕೈಬಿಟ್ಟ ಹತ್ತಾರು ಚಿತ್ರಗಳಿದ್ದವು. ಈಗ ಪ್ರಖ್ಯಾತವಾಗಿರುವ ಏಸು ಕ್ರಿಸ್ತನ 'ಲಾಸ್ಟ್ ಸಪ್ಪರ್’ ಪೇಂಟಿಂಗ್ ಮುಗಿಸಲು ಡವಿಂಚಿ ಮೂರು ವರ್ಷ ತೆಗೆದುಕೊಂಡಿದ್ದ. ಮೊನಾ ಲಿಸಾ (ಅಂದರೆ ಮೇಡಂ ಲಿಸಾ, ಶ್ರೀಮತಿ ಲಿಸಾ) ಚಿತ್ರ ಮುಗಿಯದೆ ಅದನ್ನು ಗಿಕೊಂಡೋಗೆ ಕೊಡಲಾಗದ ಲಿಯನಾರ್ಡೊ ಕೊನೆಗೆ ಅದನ್ನು ಫ್ರಾನ್ಸ್‌ಗೆ ಒಯ್ದ. ಚಿತ್ರ ಬರೆದು ಮುಗಿಸಲು ನಾಲ್ಕು ವರ್ಷ ಹಿಡಿಯಿತು. ಒಂದನೆಯ ದೊರೆ ಫ್ರಾನ್ಸಿಸ್ ಅದನ್ನು ಕೊಂಡುಕೊಂಡು ತನ್ನ ಕಲಾ ಸಂಗ್ರಹಾಲಯದಲ್ಲಿಟ್ಟ.
ಕಲಾಕೃತಿಗಳ ರಚನೆಯ ಮುಂದೂಡಿಕೆ ಡವಿಂಚಿಯ ಒಟ್ಟು ಸೃಜನಶೀಲ ಬದುಕಿನುದ್ದಕ್ಕೂ ಇರುವುದನ್ನು ಫ್ರಾಯ್ಡ್ ಗಮನಿಸುತ್ತಾನೆ. ಅವನು ಚಿತ್ರಿಸಿ ಮುಗಿಸಿದ ಪೇಟಿಂಗುಗಳಿಗಿಂತ ಮುಗಿಸದೆ ಹಾಗೇ ಬಿಟ್ಟ ಚಿತ್ರಗಳೇ ಹೆಚ್ಚು! ಇದು ಸಾಹಿತ್ಯ, ಚಿತ್ರಕಲೆ, ಶಿಲ್ಪ ಮುಂತಾದ ವಲಯಗಳ ಮಹಾನ್ ಕಲಾವಿದ, ಕಲಾವಿದೆಯರ ಸೃಜನಶೀಲ ಅತೃಪ್ತಿಯ ಫಲ ಕೂಡ. ಇವರು ಈ ಗಳಿಗೆ ತಮ್ಮ ಕಲೆಯನ್ನು ಸೃಷ್ಟಿಸಿ, ಮರುಗಳಿಗೆಗಾಗಲೇ ತಕ್ಷಣದ ಲೋಕಾಭಿಪ್ರಾಯಕ್ಕೆ ಬಾಯಿಬಾಯಿಬಿಡುವ ಅಲ್ಪತೃಪ್ತಿಯ ಹುಲು ಮಾನವರಲ್ಲ!
ಸೃಜನಶೀಲ ಮನೋವಿಜ್ಞಾನಿ ಫ್ರಾಯ್ಡ್ ಮಹಾನ್ ಚಿಂತಕ. ಅವನೂ ಡವಿಂಚಿಯಂಥ ಋಷಿಯೇ. ಮನುಷ್ಯರ ಅಪ್ರಜ್ಞೆ, ಕನಸು, ಕನವರಿಕೆಗಳನ್ನು ಆಳವಾಗಿ ಧ್ಯಾನಿಸಿ ಹುಡುಕುವ ಋಷಿ. ಅವನು ತಕ್ಷಣ ಮನಸ್ಸಿಗೆ ಹೊಳೆದದ್ದನ್ನೇ ಸುಪ್ತ ಮನಸ್ಸಿನ ಸತ್ಯ ಎಂದು ಹೇಳಿ ವಿಜೃಂಭಿಸುವ ಮಾರ್ಕೆಟ್ ಮನೋವಿಶ್ಲೇಷಕನಲ್ಲ. ಫ್ರಾಯ್ಡ್ ಡವಿಂಚಿಯ ಕಲಾಕೃತಿಗಳನ್ನು ನೋಡನೋಡುತ್ತಾ ಯಾವುದು ಮೊನಾ ಲಿಸಾಳ ಮುಗುಳುನಗೆಯ ಮೂಲ ಎಂದು ಹುಡುಕುತ್ತಾ ಹೋದ. ಆ ಹುಡುಕಾಟ ಬೇಂದ್ರೆಯ ಅಪೂರ್ವ ರೂಪಕದಂತೆ ’ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ’ಬಿಡುವಂಥ ಅನ್ವೇಷಣೆಯೇ ಹೌದು!
ಇವತ್ತಿಗೂ 'ನಿಚ್ಚಂಪೊಸತು’ ಆಗಿರುವ ಮೊನಾ ಲಿಸಾಳ ಮುಗುಳುನಗೆಯ ಮೂಲದ ಹುಡುಕಾಟದ ಒಂದು ಹಂತದಲ್ಲಿ ಫ್ರಾಯ್ಡ್ ಎಲ್ಲ ಸೃಜನಶೀಲರ ಆಳದ ಮೂಲ ಒರತೆಯಾದ ಬಾಲ್ಯಕ್ಕೆ, ಅದಕ್ಕಿಂತ ಹಿಂದಿನ ಶಿಶುಘಟ್ಟದ ವಿವರಗಳಿಗೆ, ಹೊರಳುತ್ತಾನೆ. ಡವಿಂಚಿಯ ಆಳದಲ್ಲಿ ಅವನಿಗರಿವಿಲ್ಲದೆಯೇ ಹುದುಗಿದ ಯಾವ ಭಾವಗಳು ಮೊನಾಲಿಸಾಳ ಅಮರ ಮುಗುಳುನಗೆಯನ್ನು ಸೃಷ್ಟಿಸಿದವು ಎಂಬ ನಿಗೂಢ ಪ್ರಶ್ನೆಯನ್ನು ಫ್ರಾಯ್ಡ್ ಬೆನ್ನು ಹತ್ತುತ್ತಾನೆ.
ಲಿಯನಾರ್ಡೋನ ಬಾಲ್ಯದ ನೆನಪೊಂದು ಫ್ರಾಯ್ಡನನ್ನು ಸೆಳೆಯುತ್ತದೆ. ಅದು ಲಿಯನಾರ್ಡೋ ತಾಯಿಯ ಮೊಲೆಹಾಲು ಕುಡಿಯುತ್ತಿದ್ದ ಕಾಲದ ನೆನಪಿನ ಬಗ್ಗೆ ಅವನ ಡೈರಿಯಲ್ಲಿರುವ ದಾಖಲೆ: 'ನಾನು ತೊಟ್ಟಿಲಲ್ಲಿ ಮಲಗಿದ್ದೇನೆ. ಹದ್ದೊಂದು ತನ್ನ ಗರಿಬಾಲದಿಂದ ಮತ್ತೆ ಮತ್ತೆ ನನ್ನ ತುಟಿಗೆ ಹೊಡೆಯುತ್ತಿದೆ.’
'ಶಿಶುವಿಗೆ ಮೊಲೆಹಾಲು ಕುಡಿಯುವ ಕಾಲದ ನೆನಪು ಇರುವ ಸಾಧ್ಯತೆಯನ್ನು ಪೂರಾ ತಳ್ಳಿ ಹಾಕುವಂತಿಲ್ಲ’ ಎಂದುಕೊಳ್ಳುವ ಫ್ರಾಯ್ಡ್, 'ಇದು ತಾಯಿ ಮುಂದೆ ಮಗುವಿಗೆ ಆಗಾಗ್ಗೆ ಹೇಳಿರುವ ಪ್ರಸಂಗವೂ ಆಗಿರಬಹುದು; ಬರಬರುತ್ತಾ ಅದು ಮಗುವಿಗೆ ತನಗೇ ಆದ ಅನುಭವದ ಘಟನೆಯಂತೆ ನೆನಪಿನಲ್ಲಿ ಉಳಿದಿರಬಹುದು’ ಎನ್ನುತ್ತಾನೆ. ಐದು ವರ್ಷಕ್ಕೇ ತಾಯಿಯಿಂದ ದೂರವಾದ ಲಿಯನಾರ್ಡೊಗೆ ತಂದೆಯ ಅಕ್ಕರೆಯಿರಲಿಲ್ಲ. ನಂತರ ಮತ್ತೊಬ್ಬ ತಾಯಿಯ ಪ್ರೀತಿಯ ಆಶ್ರಯದಲ್ಲಿ ಬೆಳೆದ. ಇದನ್ನೆಲ್ಲ ಪರಿಶೀಲಿಸುತ್ತಾ ಮತ್ತೆ ಲಿಯನಾರ್ಡೋನ ತೊಟ್ಟಿಲ ನೆನಪಿಗೆ ಫ್ರಾಯ್ಡ್ ಮರಳುತ್ತಾನೆ:
ಈಜಿಪ್ಟಿನ ಪುರಾಣಗಳಲ್ಲಿರುವ ತಾಯಿಯ ಹಲವು ಮುಖಗಳಲ್ಲಿ ಹದ್ದಿನ ಮುಖವೂ ಇದೆ ಎಂಬ ವಿಸ್ಮಯ ಫ್ರಾಯ್ಡ್‌ನ ಸೃಜನಶೀಲ ಸಂಶೋಧನೆಗೆ ಹೊಳೆಯುತ್ತದೆ. ಲಿಯನಾರ್ಡೊ ನೆನೆಯುವ ಹದ್ದಿನ ಕತೆ ಹೊರಡಿಸುವ ಲೈಂಗಿಕ ಸೂಚನೆಗಳನ್ನು ವಿಶ್ಲೇಷಿಸುತ್ತಾ ಫ್ರಾಯ್ಡ್ ಮತ್ತೊಂದು ಸುತ್ತಿನ ವ್ಯಾಖ್ಯಾನಕ್ಕೆ ಹೊರಳುತ್ತಾನೆ: ಮಗುವಿನ ತುಟಿಯ ಮೇಲೆ ತಾಯಿಯ (ಹದ್ದಿನ) ಆಟದ ಈ ಫ್ಯಾಂಟಸಿಯಲ್ಲಿ ಮಗುವಿನ ಪೂರಕ ನೆನಪೂ ಸೇರಿಕೊಂಡಿದೆ. ಅದನ್ನು ಹೀಗೆ ವಿವರಿಸಬಹುದು: 'ನಮ್ಮಮ್ಮ ನನ್ನ ತುಟಿಗೆ ಲೆಕ್ಕವಿಲ್ಲದಷ್ಟು ಮುತ್ತುಗಳನ್ನು ಕೊಟ್ಟಳು’ ಎಂದು ಡವಿಂಚಿಯ ನೆನಪು ಸೂಚಿಸುತ್ತದೆ. ತಂದೆಯಿಲ್ಲದ ಮಗುವಿಗೆ ಕೊಂಚ ಅತಿ ಪ್ರೀತಿಯಿಂದ ಕೊಟ್ಟ ಅಮ್ಮನ ಮುತ್ತುಗಳು ಬಿರುಸಾಗಿಯೂ ಇದ್ದವು. ಈ ಭಾವ ಲಿಯನಾರ್ಡೋನ ಅಪ್ರಜ್ಞೆಯಲ್ಲಿ ಹುದುಗಿಬಿಟ್ಟಿದೆ.
ಆಳದಲ್ಲಿ ಹುದುಗಿದ ಭಾವಗಳು ಕಲಾವಿದರಲ್ಲಿ ಮಾತ್ರ ಹೇಗೆ ಹೊರಬರುತ್ತವೆ ಎಂಬ ಪ್ರಶ್ನೆಗೆ ಫ್ರಾಯ್ಡ್ ಕೊಡುವ ಸುಂದರ ಒಳನೋಟ ಇದು:
'ಕರುಣಾಳು ಪ್ರಕೃತಿ (’ನೇಚರ್’: ಮನುಷ್ಯ ಪ್ರಕೃತಿ ಅಥವಾ ಒಟ್ಟಾರೆ ಪ್ರಕೃತಿ) ಕಲಾವಿದರಿಗೆ ಗುಟ್ಟಾದ ಮಾನಸಿಕ ತೀವ್ರ ಸಹಜಭಾವಗಳನ್ನು (ಮೆಂಟಲ್ ಇಂಪಲ್ಸಸ್) -ಸ್ವತಃ ಆ ಕಲಾವಿದರಿಗೂ ಅರಿವಿಲ್ಲದೆ ಆಳದಲ್ಲಿ ಅವಿತಿರುವ ತೀವ್ರ ಒಳಭಾವಗಳನ್ನು- ತಾವು ಸೃಷ್ಟಿಸುವ ಕೃತಿಗಳಲ್ಲಿ ಹೊರಚೆಲ್ಲುವಂಥ ಶಕ್ತಿ ಕೊಟ್ಟಿರುತ್ತದೆ; ಈ ಕಲಾವಿದರ ಬಗ್ಗೆ ಏನೇನೂ ಗೊತ್ತಿಲ್ಲದ, ತಮ್ಮ ಭಾವನೆಗಳ ಮೂಲ ಯಾವುದೆಂಬುದು ಕೂಡ ಗೊತ್ತಿರದ, ಅಪರಿಚಿತರ ಮೇಲೂ ಈ ಕೃತಿಗಳು ಮಹತ್ತರ ಪರಿಣಾಮ ಬೀರುತ್ತವೆ.’
ಹೀಗೆ ವಿಶ್ಲೇಷಿಸುತ್ತಾ, ಫ್ರಾಯ್ಡ್ ಲಿಯನಾರ್ಡೋನ ಇತರ ಪೇಂಟಿಂಗುಗಳ ಮುಗುಳುನಗೆಗಳತ್ತ ಹೊರಳುತ್ತಾನೆ. ಕನ್ನಡದಲ್ಲಿ ಮುಗುಳು ಎಂದರೆ ಮೊಗ್ಗು; ಅಂದರೆ ಅರಳಲಿರುವ ಮೊಗ್ಗು ನಗೆ! ಪ್ರೋಟೋ-ಇಂಡೋ-ಯುರೋಪಿಯನ್ ಬೇರಿನ Smei ಧಾತುವಿನಿಂದ Smile ಮೂಡಿದೆ. ಸಂಸ್ಕೃತದ 'ಸ್ಮಿತ’ದ ಜೊತೆಗಿರುವ ’ಮಂದಸ್ಮಿತ’ಕ್ಕೆ ಮುಗುಳುನಗೆಯ ಚಿತ್ರಕ ಶಕ್ತಿ ಇದ್ದಂತಿಲ್ಲ. ಅದೇನೇ ಇರಲಿ, ಲಿಯನಾರ್ಡೋನ ಪೇಂಟಿಂಗುಗಳಲ್ಲಿರುವ ಎಲ್ಲ ಹೆಣ್ಣುಗಳ ತುಟಿಗಳಲ್ಲೂ ಅವನು ಮೂಡಿಸಿರುವ ಅಪೂರ್ವ ಮುಗುಳುನಗೆ ನೋಡುವವರನ್ನು ಆಕರ್ಷಿಸುತ್ತಾ, ವಿಸ್ಮಯಗೊಳಿಸುತ್ತಲೇ ಇರುತ್ತದೆ. ಕೊಂಚ ಅರಳಿದ ವಿಶಾಲ ತುಟಿಯ ಮೇಲೆ ಎಂದೂ ಬದಲಾಗದ ಮುಗುಳು ನಗೆ; ’ಲಿಯನಾರ್ಡೊಸ್ಕ್’ ಎಂದೇ ಕರೆಯಲಾಗುವ ಈ ನಗೆ ಮೊನಾ ಲಿಸಾ ಚಿತ್ರಕ್ಕೆ ರೂಪದರ್ಶಿಯಾಗಿ ಕೂತಿರುತ್ತಿದ್ದ ವಿಚಿತ್ರ ಸೌಂದರ್ಯದ ಲಿಸಾ ಡೆಲ್ ಗಿಕೊಂಡೋಳ ಮೊಗದ ಮೇಲೆ ಮೂಡಿ, ಈ ಚಿತ್ರವನ್ನು ಯಾರೇ ನೋಡಿದರೂ ಅವರಲ್ಲಿ ಚಕಿತತೆ, ಗಲಿಬಿಲಿ ಇತ್ಯಾದಿ ಭಾವಗಳ ಬಲವಾದ ಪರಿಣಾಮ ಮಾಡುತ್ತದೆ.
ಈ ಮುಗುಳುನಗೆ ಮೊನಾ ಲಿಸಾಳ ತುಟಿತುಂಬ, ಮೊಗತುಂಬ, ಮೈತುಂಬ, ವ್ಯಕ್ತಿತ್ವದ ತುಂಬ, ಇರವಿನ ತುಂಬ… ಹಬ್ಬಲೆಂದು ಈ ಚಿತ್ರ ಬರೆಯುವಾಗ ಲಿಯನಾರ್ಡೊ ಬಗೆಬಗೆಯಲ್ಲಿ ಅವಳನ್ನು ಖುಷಿಯಲ್ಲಿಡುವ ವಸ್ತುಗಳನ್ನು ತರಿಸಿಟ್ಟಿರುತ್ತಿದ್ದ. ಮೊನಾ ಲಿಸಾಳ ಮುಗುಳು ನಗೆ ಕುರಿತು ನೂರಾರು ಕವಿಗಳು ಬರೆದಿದ್ದಾರೆ. ಕವಿಗಳು, ಲೇಖಕರು ಈ ನಗೆಯಲ್ಲಿರುವ ಆಹ್ವಾನ, ಬಿಗುಪು ಬಿಂಕ, ಸೆಳೆಯುವ, ಮೆಲ್ಲಗೆ ಆವರಿಸುವ, ಕಬಳಿಸುವ…ಹತ್ತಾರು ಭಾವಗಳನ್ನು ಕಂಡಿದ್ದಾರೆ. ಆದರೂ ಇನ್ನೂ ಈ ಮುಗುಳು ನಗೆಯ ನಿಗೂಢ ಅರ್ಥವನ್ನು ಹಿಡಿದಿಡಲಾಗಿಲ್ಲ ಎಂದು ಫ್ರಾಯ್ಡ್‌ಗೆ ಅನ್ನಿಸುತ್ತದೆ. ಅಷ್ಟೇ ಅಲ್ಲ, ಈ ಪೇಂಟಿಂಗ್ ಮಾಡುವಾಗ ಬ್ರಶ್ ಸ್ಟ್ರೋಕುಗಳಲ್ಲಿ ಕ್ಯಾನ್ವಾಸಿನ ಮೇಲೆ ಮೂಡಿ, ಮುಳುಗುತ್ತಿದ್ದ ಗಳಿಗೆಯ ಸೊಬಗಿನಲ್ಲಿ ಅರ್ಧ ಕೂಡ ಅಂತಿಮ ಚಿತ್ರದಲ್ಲಿ ಇರಲಿಕ್ಕಿಲ್ಲ ಎಂದುಕೊಳ್ಳುತ್ತಾನೆ.
ಹೀಗೇ ಹುಡುಕುತ್ತಾ ಹುಡುಕುತ್ತಾ ಲಿಯನಾರ್ಡೊನ ತಾರುಣ್ಯ ಕಾಲದ ಮತ್ತೊಂದು ವಿವರ ಫ್ರಾಯ್ಡ್‌ಗೆ ಎದುರಾಗುತ್ತದೆ: ಲಿಯನಾರ್ಡೋ ಮಣ್ಣಿನಲ್ಲಿ ಮಾಡುತ್ತಿದ್ದ ನಗುವ ಹೆಣ್ಣಿನ ತಲೆಯ ಕಲಾಕೃತಿಗಳು ಹಾಗೂ ನಗುವ ಮಕ್ಕಳ ತಲೆಯ ಕಲಾಕೃತಿಗಳು ಕೂಡ ಸಿದ್ಧಹಸ್ತನಾದ ಕಲಾವಿದ ಮಾಡಿದಂತೆಯೇ ಇದ್ದವು. ಸುಂದರವಾಗಿದ್ದವು. ಮತ್ತೆ ಮತ್ತೆ ಕಾಣಿಸಿಕೊಂಡ ಆ ಹೆಣ್ಣು ಮುಖಗಳ ನಗು ಅವನ ತಾಯಿ ಕೆಟರೀನಾಳದು; ಮಕ್ಕಳ ಮುಖ ಸ್ವತಃ ಅವನದೇ ಆಗಿತ್ತು. ಇವನ್ನೆಲ್ಲ ನೋಡನೋಡುತ್ತಾ ಫ್ರಾಯ್ಡ್ ಒಂದು ಸಾಧ್ಯತೆಯನ್ನು ಕಾಣುತ್ತಾನೆ: ಲಿಯನಾರ್ಡೋ ಬಾಲ್ಯದಲ್ಲಿ ಕಳೆದುಕೊಂಡ ತಾಯಿಯ ನಿಗೂಢ ನಗು ಮೊನಾ ಲಿಸಾ ಎಂಬ ಹೆಣ್ಣಿನಲ್ಲಿ ಮತ್ತೆ ಕಂಡಿತು. ಅದು ಅವನನ್ನು ಸಮ್ಮೋಹಿನಿಯಂತೆ ಹಿಡಿಯಿತು… ಬಾಲ್ಯದಿಂದಲೂ ಅವನ ಒಳಗೆ ಉಳಿದಿದ್ದ ಆ ಮುಗುಳುನಗೆಯನ್ನು ಕ್ಯಾನ್ವಾಸಿನ ಮೇಲೆ ಮೂಡಿಸಲೆತ್ನಿಸಿದ ಸಾಹಸವೇ ಮೊನಾ ಲಿಸಾ…
ಮುಂದೆ ಈ ಮುಗುಳುನಗೆಯ ಮಾಯೆ ಲಿಯನಾರ್ಡೊನ ‘ಮಡೋನಾ ಅಂಡ್ ಚೈಲ್ಡ್ ವಿತ್ ಸೇಂಟ್ ಆನ್ನೆ’ ಪೇಂಟಿಂಗಿನಲ್ಲಿ ಮೂಡಿತು. ಅಲ್ಲಿ ಲಿಯನಾರ್ಡೋನ ಬಾಲ್ಯದ ಇಬ್ಬರು ತಾಯಂದಿರೂ ಮೂಡಿ ಬಂದರು. ಅವನ ಇತರ ಪೇಂಟಿಂಗುಗಳು, ಅವನ ವಿದ್ಯಾರ್ಥಿಗಳ ಪೇಂಟಿಂಗುಗಳಲ್ಲೂ ಈ ಮುಗುಳುನಗೆ ಮುಂದುವರಿಯಿತು; ಹಾಗೇ ಏಸುವಿನ ತಾಯಿ ಮೇರಿಯ ಇತರ ಚಿತ್ರಗಳಲ್ಲೂ ಈ ಮುಗುಳುನಗೆಯ ಅನುಕಂಪ ನೆಲೆಸತೊಡಗಿತು…
ಕಾಲದ ಓಟದಲ್ಲಿ ಮೊನಾಲಿಸಾಳ ಅಮರ ಮುಗುಳುನಗೆ ಕೊಂಚ ಮಂಕಾಗಿದ್ದರೇನಂತೆ; ಅದು ನೋಡುವವರ ಮೇಲೆ ಎಂದೋ ಮಾಡಿದ್ದ ಮಾಯೆ, ಈಗಲೂ ಹಬ್ಬಿಸುವ ಮಾಯೆ ಮಾತ್ರ ನಿರಂತರ. ಹಾಗೆಯೇ ಫ್ರಾಯ್ಡ್‌ನ ಅದ್ಭುತ ಅನ್ವೇಷಕ ಪ್ರತಿಭೆ ಬೆನ್ನು ಹತ್ತಿದ ಆ ಮುಗುಳುನಗೆಯ ಮೂಲದ ಹುಡುಕಾಟ ಹುಟ್ಟಿಸುವ ವಿಸ್ಮಯದ ಮುಗುಳುನಗೆ ಕೂಡ ನಮ್ಮ ಚಿತ್ತದಲ್ಲಿ ಉಳಿದುಬಿಡುತ್ತದೆ. ಒಂದು ಮುಗುಳುನಗೆಯ ನಿರ್ಮಲ ಆನಂದಭಾವ ನಮ್ಮ ಕಣ್ಣಿಂದ ಮರೆಯಾದರೂ, ಅದು ಕೊನೆಗೂ ಉಳಿಯುವುದು ನಮ್ಮ ಚಿತ್ತದಲ್ಲಿ ತಾನೆ!
Comments
3 Comments
| ಹರಿಪ್ರಸಾದ್
ಥ್ಯಾಂಕ್ಸ್ ಟು ಯೋಗಪ್ಪನವರ್
| Dr.Mohan Mirle
Fine interpretation of Mona Lisa from the Freudian point of view
| ಕುಸುಮ ಬಿ ಎಂ
ಕಲೆ ಮತ್ತು ಕಲೆಗಾರನ ನಂಟಿನಲ್ಲಿ ಅಡಗಿರುವ ಮಾನಸಿಕ ಛಾಯೆ ಕುರಿತ ಸರಳ ನಿರೂಪಣೆಯು ನಮಗೆ ಉಪಯುಕ್ತವಾಯಿತು ಸರ್. ಧನ್ಯವಾದಗಳು
Add Comment