ಕವಿ ಕಲಿಸಿದ ತುರ್ತು ಪಾಠ
by Nataraj Huliyar
‘ಇತಿಹಾಸದಿಂದ ನಾವು ಕಲಿಯುವ ಒಂದೇ ಪಾಠ ಏನೆಂದರೆ, ನಾವು ಇತಿಹಾಸದಿಂದ ಏನನ್ನೂ ಕಲಿಯುವುದಿಲ್ಲ ಎಂಬುದು.’
ಜರ್ಮನ್ ತತ್ವಜ್ಞಾನಿ ಜಾರ್ಜ್ ಫ್ರೆಡ್ರಿಕ್ ಹೆಗೆಲ್ (೧೭೭೦-೧೮೩೧) ಹೇಳಿದ ಪ್ರಖ್ಯಾತ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು.
ಇಂಡಿಯಾದಲ್ಲಿ ೧೯೭೫ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯ ಐವತ್ತನೆಯ ವರ್ಷದ ಕಹಿ ನೆನಪಿನ ಸಂದರ್ಭದಲ್ಲಿ ಹಲವರು ಹಲ ಬಗೆಯಲ್ಲಿ ಮಾತಾಡುತ್ತಿದ್ದಾರೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ತಮ್ಮ ವಾಕ್ ಸ್ವಾತಂತ್ರ‍್ಯದ ಹರಣವಾಗಿತ್ತು ಎನ್ನುತ್ತಿರುವ ಕೆಲವರು ಇತಿಹಾಸದ ಪಾಠವನ್ನೇ ಮರೆತು, ತಮಗಾಗದವರನ್ನು ‘ಜೈಲಿಗೆ ಕಳಿಸುತ್ತೇವೆ’ ಎಂದು ಕ್ರೂರವಾಗಿ ಅರಚುತ್ತಿರುವ ವಿರೋಧಾಭಾಸ ಇವತ್ತು ಎದ್ದು ಕಾಣುತ್ತಿದೆ.
ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಸೆರೆಮನೆವಾಸ ಅನುಭವಿಸಿದ್ದ ಕನ್ನಡ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಆ ಇತಿಹಾಸದ ಪಾಠಗಳನ್ನು ಎಂದೂ ಮರೆಯಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದ ಏಕಮಾತ್ರ ಕನ್ನಡ ಕವಿ ಚಂಪಾ ಮುಂದೆ ಇಪ್ಪತ್ತೊಂದನೆಯ ಶತಮಾನದಲ್ಲಿ ಇಂಡಿಯಾದ ರಾಜಕೀಯ ಮತ್ತೆ ತುರ್ತು ಪರಿಸ್ಥಿತಿಯೆಡೆಗೆ ತಿರುಗುತ್ತಿರುವುದನ್ನು ಕುರಿತು ಎಚ್ಚರಿಸುತ್ತಲೇ ಇದ್ದರು. ಲೋಹಿಯಾವಾದದಿಂದ ಪ್ರಭಾವಿತರಾಗಿದ್ದ ಕವಿ, ನಾಟಕಕಾರ, ಇಂಗ್ಲಿಷ್ ಪ್ರೊಫೆಸರ್ ಚಂದ್ರಶೇಖರ ಪಾಟೀಲ್ (೧೮ ಜೂನ್ ೧೯೩೯- ೧೦ ಜನವರಿ ೨೦೨೨) ನಮ್ಮೊಡನೆ ಇದ್ದಿದ್ದರೆ ಮೊನ್ನೆ ಜೂನ್ ಹದಿನೆಂಟಕ್ಕೆ ಅವರಿಗೆ ಎಂಬತ್ತಾರು ವರ್ಷ ತುಂಬುತ್ತಿತ್ತು. ತುರ್ತುಪರಿಸ್ಥಿತಿಯ ನಂತರ ಚಂಪಾ ಪ್ರಕಟಿಸಿದ ‘ಗಾಂಧೀ ಸ್ಮರಣೆ’ಎಂಬ ಚಾರಿತ್ರಿಕ ರಾಜಕೀಯ ಕವನ ಸಂಕಲನ ಎಪ್ಪತ್ತರ ದಶಕದಲ್ಲಿ ನನ್ನಂಥ ಎಳೆಯ ವಿದ್ಯಾರ್ಥಿಗಳಲ್ಲಿ ಕೂಡ ರಾಜಕೀಯ ಪ್ರಜ್ಞೆ ಬಿತ್ತಿದ್ದು ನೆನಪಾಗುತ್ತದೆ.
ಚಂಪಾ ಜೈಲಿನಲ್ಲಿದ್ದ ಕಾಲದ ಅನುಭವವನ್ನು ಹಾಗೂ ಆ ಕಾಲದ ಇಂಡಿಯಾದ ರಾಜಕೀಯ ವಿಮರ್ಶೆಯನ್ನು ಬಿಂಬಿಸುವ ‘ಗಾಂಧೀ ಸ್ಮರಣೆ’ ಸಂಕಲನದ ಕವನಗಳಲ್ಲಿ ಸರ್ವಾಧಿಕಾರದ ವಿರುದ್ಧ- ಚಂಪಾ ಮಾತಿನಲ್ಲೇ ಹೇಳುವುದಾದರೆ 'ದುಶ್ಶಾಸನ ಪರ್ವ'ದ ವಿರುದ್ಧ- ಕಟಕಿಯಿತ್ತು; ಗಾಂಧಿ ಮಾರ್ಗಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾದದ್ದರ ಬಗ್ಗೆ ಗಾಢ ವಿಷಾದವಿತ್ತು; ಸರ್ವಾಧಿಕಾರದ ವಿರುದ್ಧ ಕವಿಯ ಸುಪ್ತ, ಗಂಭೀರ ಪ್ರತಿಭಟನೆಯೂ ಅಲ್ಲಿತ್ತು. ಇಂಡಿಯಾದ ವಿಕಾರಗಳ ವಿಮರ್ಶೆಯಿತ್ತು. ಈ ಸಂಕಲನದಲ್ಲಿರುವ ‘ಅತಿಥಿ’ ಪದ್ಯದ ಗಾಢ ವ್ಯಂಗ್ಯದ ರಾಜಕೀಯ ಚಿತ್ರಗಳನ್ನು ಗಮನಿಸಿ:
ಹಿಂದಿಬ್ಬರು ಮುಂದಿಬ್ಬರು ರಾಜಭಟರ ನಡುವೆ
ನಡೆದಾಗ ದೊಡ್ಡ ಗೇಟು ಕಿರುಗುಡುತ್ತದೆ.
ಒಂದು ಮೂಲೆಗೆ ಗಾಂಧಿ. ಇನ್ನೊಂದು ಮೂಲೆಗೆ ನೆಹರೂ.
ಗೋಡೆಯ ತುಂಬ ಮತ್ತೊಬ್ಬ ಗಾಂಧಿಯ ಅಮರ ಸಂದೇಶ.
‘ಗಾಂಧೀ ಸ್ಮರಣೆ’ ಸಂಕಲನದ ನಂತರ, ‘ಜೂನ್ ೭೫- ಮಾರ್ಚ್ ೭೭’ ಎಂಬ ತುರ್ತು ಕವನಗಳ ಚಾರಿತ್ರಿಕ ಮಹತ್ವದ ಪ್ರಾತಿನಿಧಿಕ ಸಂಕಲನವನ್ನು ಸಂಪಾದಿಸಿದ ಚಂಪಾ, ೨೦೧೧ರಲ್ಲಿ ಈ ಸಂಕಲನದ ಎರಡನೆಯ ಮುದ್ರಣ ಬಂದಾಗ ಬರೆದ ಮಾತು: ‘ಮೂವತ್ತಮೂರು ವರ್ಷಗಳ ನಂತರ...ಈಗ ಇಂಡಿಯಾದ ಸಮಕಾಲೀನ ರಾಜಕೀಯ ಪರಿಸ್ಥಿತಿಯೂ ಆ ಕರಾಳ ದಿನಗಳನ್ನು ನೆನಪಿಗೆ ತರುವಂತಿದೆ.’
ತಮ್ಮ ಸೆರೆಮನೆ ದಿನಚರಿಯಲ್ಲಿ ತಮ್ಮ ಜೈಲು ಅನುಭವವನ್ನು ದಾಖಲಿಸಿರುವ ಚಂಪಾ ೧೯೭೬ರಲ್ಲಿ ಪ್ರಕಟಿಸಿದ ಕವನಗಳಲ್ಲಿರುವ ರಾಜಕೀಯ ವಿಮರ್ಶೆ ಇದೀಗ ಮತ್ತೆ ದುಶ್ಶಾಸನ ಪರ್ವ ಮುತ್ತುತ್ತಿರುವ ಕಾಲಘಟ್ಟದಲ್ಲಿ ಹೊಸ ಪ್ರತಿಧ್ವನಿ ಪಡೆಯುವ ರೀತಿ ಅವರ ‘ಗಾಂಧೀ ಸ್ಮರಣೆ’ ಪದ್ಯದಲ್ಲಿದೆ. ಕವಿತೆ ಕಾಲಾತೀತ, ದೇಶಾತೀತ; ಕಾಲದ ಕನ್ನಡಿಯಲ್ಲಿ ಕವಿತೆಯ ಸಮಕಾಲೀನ ಅರ್ಥಗಳು ವಿಸ್ತಾರಗೊಳ್ಳುತ್ತಿರುತ್ತವೆ. ತುರ್ತು ಪರಿಸ್ಥಿತಿಯಲ್ಲಿ ವಿಭಿನ್ನ ತಾತ್ವಿಕತೆಗಳ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಲು ಹೋದ ಲೋಕನಾಯಕ ಜಯಪ್ರಕಾಶ ನಾರಾಯಣರ ಪ್ರಯೋಗದಲ್ಲಿ ಕೋಮುವಾದಿ ಶಕ್ತಿಗಳಿಗ ರೆಕ್ಕೆ ಪುಕ್ಕ ಬಂದದ್ದರಿಂದ ಅನಂತರ ಭಾರತಕ್ಕೆ ಬಂದ ಕುತ್ತು ನಮ್ಮ ಕಣ್ಣೆದುರಿಗೇ ಇದೆ. ಎಪ್ಪತ್ತರ ದಶಕದ ‘ಗಾಂಧೀ ಸ್ಮರಣೆ’ಯ ಗಾಢ ವ್ಯಂಗ್ಯ ಅಂದಿನ ತುರ್ತುಪರಿಸ್ಥಿತಿಗಿಂತ ಹಿಂಸಾಮಯವಾದ ಸನ್ನಿವೇಶವನ್ನು ಈಗ ಸೃಷ್ಟಿಸುತ್ತಿರುವ ಇಂಡಿಯಾದ ಚಿತ್ರವನ್ನೂ ಕೊಡುತ್ತದೆ:
ಸರಕಾರದ ಕೆಲಸ ದೇವರ ಕೆಲಸವಾಗಿ
ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ.
ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ
ಜಿಟಿ ಜಿಟಿ ಮಳೆ ಹಿಡಿದಿದೆ
ನಮ್ಮ ತ್ರಿವರ್ಣ ಧ್ವಜ ತೊಯ್ದು ತಪ್ಪಡಿಯಾಗಿ
ಅಶೋಕ ಚಕ್ರ ಸ್ಥಿರವಾಗಿದೆ.
ಹೆದ್ದಾರಿಯ ಮೇಲೆ ಕೆಟ್ಟು ನಿಂತ ಟ್ರಕ್ಕು ಕೂಡ
‘ನಾಡು ಮುನ್ನಡೆದಿದೆ’ ಎಂಬ ಸಂದೇಶ ಹೊತ್ತಿದೆ.
ರೇಡಿಯೋದ ಗಿಳಿವಿಂಡು, ಅದೋ,
ಒಕ್ಕೊರಲಿನಿಂದ ಅದೇ ಹಾಡು ಹಾಡುತ್ತಿದೆ.
‘ಗಾಂಧೀ ಸ್ಮರಣೆ’ಯ ಕಾಲದಲ್ಲಿ ಗಾಢ ವಿಷಾದ, ಚೂಪು ತಿವಿತಗಳ ರಾಜಕೀಯ ಕವಿತೆಗಳನ್ನು ಕೊಟ್ಟಿದ್ದ ಚಂಪಾ ಆ ಹೊತ್ತಿಗಾಗಲೇ ಕನ್ನಡದ ವಿಶಿಷ್ಟ ಬಂಡುಕೋರ ಕವಿಯಾಗಿದ್ದರು. ೧೯೭೮ರಲ್ಲಿ ಸಾಮಾಜಿಕ ಬದ್ಧತೆ, ಸಾಮಾಜಿಕ ವಿಶ್ಲೇಷಣೆ, ರಾಜಕೀಯ ವಿಮರ್ಶೆಗಳಿಗೆ ಒತ್ತು ಕೊಟ್ಟ ಬಂಡಾಯ ಕಾವ್ಯ ಆರಂಭವಾದಾಗ ಸಮಾಜವಾದಿ ಚಂಪಾ ಬಂಡಾಯ ಕಾವ್ಯದ ದಿಕ್ಕನ್ನು ರೂಪಿಸಿದ ಕವಿಗಳಲ್ಲಿ ಒಬ್ಬರಾದರು. ಚಂಪಾ ಸಂಪಾದಕತ್ವದಲ್ಲಿ ‘ಸಂಕ್ರಮಣ’ ಪತ್ರಿಕೆ ಬಂಡಾಯ ಮಾರ್ಗದ ತಾತ್ವಿಕತೆಯ ಸಮರ್ಥನೆ, ಬಂಡಾಯ ಕಾವ್ಯತತ್ವದ ಪ್ರತಿಪಾದನೆ, ದಲಿತ, ಬಂಡಾಯ ಹಾಗೂ ಸ್ತ್ರೀವಾದಿ ಕವಿತೆ, ಕತೆ, ವೈಚಾರಿಕ ಬರಹಗಳನ್ನು ಹೆಚ್ಚು ಪ್ರಕಟಿಸತೊಡಗಿತು. ದಲಿತ ಹಾಗೂ ಬಂಡಾಯ ಮಾರ್ಗಗಳ ಕವಿಗಳ, ವಿಮರ್ಶಕರ ಬರಹಗಳನ್ನು ಚಂಪಾ ನಿರಂತರವಾಗಿ ಪ್ರಕಟಿಸಿದರು. ಈ ಮೂಲಕ ‘ಸಂಕ್ರಮಣ’ ಕನ್ನಡದ ಪ್ರಗತಿಪರ ದನಿಗಳನ್ನು ಗಟ್ಟಿಗೊಳಿಸಿತು.
ತಮ್ಮ ಕಾವ್ಯ ಹಾಗೂ ಬಂಡಾಯ ಕಾವ್ಯ ಏಕರಾಗ ಹಾಡತೊಡಗಿದಾಗ ತಮ್ಮ ಕಾವ್ಯಪ್ರತಿಮೆಗಳ ಧಾಟಿಯೇ ಬದಲಾಗಬೇಕು ಎಂಬ ತುರ್ತು ಚಂಪಾಗೆ ಎದುರಾಯಿತು. ಆಗ ಅವರು ಬರೆದ ‘ಹೂವು ಹೆಣ್ಣು ತಾರೆ’ ಕವಿತೆಯಲ್ಲಿರುವ ಸ್ವ-ಪಾಠ, ಪರ-ಪಾಠ:
ನಾವು ಹೂವಿನ ಬಗ್ಗೆ
ನಾವು ತಾರೆಯ ಬಗ್ಗೆ
ಬರೆಯುವುದು ಬೇಡ
ಅಂತ ಹೇಳುವುದು ಬೇಡ ಗೆಳೆಯ.
ಪ್ರಖರ ರಾಜಕೀಯ ಪದ್ಯಗಳನ್ನು ಬರೆದ ಚಂದ್ರಶೇಖರ ಪಾಟೀಲರ ಕಾವ್ಯ ಮುಂದಿನ ಘಟ್ಟದಲ್ಲಿ, ಧಾರವಾಡ ಪ್ರದೇಶದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಶಾಲ್ಮಲಾ ರೂಪಕಕ್ಕೆ ಮತ್ತೆ ಮತ್ತೆ ಮರಳಿತು. ಶಾಲ್ಮಲಾ ನದಿಯಂತೆ ಚಂದ್ರಶೇಖರ ಪಾಟೀಲರ ಕಾವ್ಯದ ರಾಜಕೀಯ ಪ್ರಜ್ಞೆ, ಇತಿಹಾಸ ಪ್ರಜ್ಞೆ, ಸಮಕಾಲೀನ ಪ್ರಜ್ಞೆ ಕೂಡ ನಮ್ಮೊಳಗೇ ಹರಿಯುತ್ತಲೇ ಇರಬೇಕಾಗುತ್ತದೆ.
ಚಂಪಾರ ’ಉಳಿದ ನದಿಗಳ ಹಾಗೆ’ ಕವಿತೆಯ ಕೊನೆಯ ಸಾಲುಗಳು:
ಉಳಿದ ನದಿಗಳ ಹಾಗೆ ನೀನಲ್ಲ ಶಾಲ್ಮಲೆ
ನಿನ್ನ ಕಂಡವರಿಲ್ಲ ನಿನ್ನೊಳಗೆ ಮೈಯ ತೊಳಕೊಂಡವರಿಲ್ಲ
ನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲ
ಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋ
ನೀನು ಹರಿಯಬೇಕೆಂದಿರುವುದು ಮಾತ್ರ ಒಂದೇ ಖರೆ;
ಬಹುಶಃ
ನಾನು ಬದುಕಬೇಕೆಂದಿರುವ ಬದುಕಿನಂತೆ
ನಾನು ಬರೆಯಬೇಕೆಂದಿರುವ ಕಾವ್ಯದಂತೆ.
ಈ ಕೊನೆಯ ಸಾಲು ಕೇವಲ ಕವಿ ಚಂದ್ರಶೇಖರ ಪಾಟೀಲರ ತುಡಿತ ಮಾತ್ರ ಅಲ್ಲ; ಬರೆವ ಬದುಕಿನ ಎಲ್ಲರ ತಹತಹವೂ ಆಗಿರಬಹುದು!
ಸಹ ಸ್ಪಂದನ:
ಕಳೆದ ವಾರ ’ಕೀರ್ತನೆ ಕವಿತೆಯಾದಾಗ’ ಎಂಬ ಅಂಕಣ ಓದಿದ ಪ್ರೊಫೆಸರೊಬ್ಬರು ಕನಕದಾಸರು ತಮ್ಮ ಕೀರ್ತನೆಗೆ ಸೂಚಿಸಿದ ರಾಗ ’ಧನ್ಯಾಸಿ’ಯನ್ನು ಆಧರಿಸಿದ ’ವಾಲ್ಮೀಕಿ’ ಚಿತ್ರದ ’ಜಲಲ ಜಲಲ ಜಲ ಧಾರೆ’ ಎಂಬ ಪ್ರಖ್ಯಾತ ಹಾಡನ್ನು ನೆನಪಿಸಿದರು; ಆ ಅಂಕಣದಲ್ಲಿ ರಾಗ ಕುರಿತ ಪ್ರಶ್ನೆ ಎತ್ತಿದ್ದು ನಿಜಕ್ಕೂ ಸಾರ್ಥಕ ಅನ್ನಿಸಿತು.
ಕಳೆದ ವಾರದ ’ಕೀರ್ತನೆ ಕವಿತೆಯಾದಾಗ’ ಅಂಕಣ ಬರೆಯುವ ಮುನ್ನ ಕನ್ನಡ ರಿಫ್ರೆಶರ್ ಕೋರ್ಸಿಗಾಗಿ ಧನ್ಯಾಸಿ ಅಥವಾ ಶುದ್ಧ ಧನ್ಯಾಸಿ ರಾಗವನ್ನು ಆಧರಿಸಿದ ಹಾಡುಗಳನ್ನು ಹುಡುಕಿದ್ದೆ. ಯೂಟ್ಯೂಬ್‌ನಲ್ಲಿ ರಾಗಾಧಾರಿತ ಜನಪ್ರಿಯ ಹಾಡುಗಳ ಮಾಲಿಕೆಯಲ್ಲಿ ಕರ್ನಾಟಿಕ್ ಸಂಗೀತವನ್ನು ಪರಿಚಯಿಸುವ ಗಾಯಕಿ ರಕ್ಷಾ ಎಂ. ಧನ್ಯಾಸಿ ರಾಗವನ್ನು ಪರಿಚಯಿಸಿದ್ದನ್ನು ಕುರಿತ ಟಿಪ್ಪಣಿ ಮಾಡಿಕೊಳ್ಳುತ್ತಾ ಒಂದು ಗಂಟೆ ಆ ಹಾಡುಗಳಲ್ಲೇ ಮುಳುಗಿ ಹೋದೆ! ಇಂಥ ಆನಂದದ ರಿಸರ್ಚುಗಳು ಟೀಚಿಂಗಿಗೆ ಹೊಸ ಬಣ್ಣ ತರಬಲ್ಲವು!
ರಕ್ಷಾ ಪರಿಚಯಿಸಿದ ಧನ್ಯಾಸಿ ರಾಗಾಧಾರಿತ ಕೆಲವು ಜನಪ್ರಿಯ ಹಾಡುಗಳು:
’ಗೋರಿ ತೇರ ಗಾಂವ್ ಬಡಾ ಪ್ಯಾರಾ…’
’ಏನೇನೋ ಆಸೆ…ನೀ ತಂದ ಭಾಷೆ…’
’ಮನಸು ಪಲಿಕೆ… ಮಧುರ ಗೀತಂ…’
’ರಾ ರಾ ಸರಸಕು ರಾರಾ…’
’ನನಗಾಗಿಯೇ ನಿನ್ನಂದವು…ನಿನಗಾಗಿಯೇ ಈ ಜನ್ಮವು…’
ಹೀಗೆ ರಾಗಾಧಾರಿತ ಹಾಡುಗಳ ಬೆನ್ನು ಹತ್ತುವುದು ರಾಗಗಳನ್ನು ನೆನಪಿಟ್ಟುಕೊಳ್ಳುವ ನನ್ನ ಬಗೆ ಕೂಡ. ಅವತ್ತು ರಿಫ್ರೆಶರ್ ಕೋರ್ಸಿನಲ್ಲಿ ಈ ಹಾಡುಗಳನ್ನು ನೆನಪಿಸುತ್ತಿರುವಂತೆ ಅಲ್ಲಿದ್ದ ಮೇಡಂಗಳ ಕಣ್ಣುಗಳು ಇದ್ದಕ್ಕಿದ್ದಂತೆ ಮಿನುಗತೊಡಗಿದವು! ಅದರಲ್ಲೂ ’ವಾಲ್ಮೀಕಿ’ ಸಿನಿಮಾದ ’ಜಲಲ ಜಲಲ ಜಲ ಧಾರೆ’ ಹಾಡಿನ ಪ್ರಸ್ತಾಪ ಬಂದ ತಕ್ಷಣ, ಒಂದು ಕಾಲಕ್ಕೆ ಕವಿ ಕುವೆಂಪು ಅಡ್ಡಾಡಿದ್ದ ಮಾನಸಗಂಗೋತ್ರಿಯ ಕ್ಲಾಸಿನಲ್ಲಿದ್ದ ಕೋಗಿಲೆ, ಕಾಜಾಣಗಳು ತುಟಿಯೊಳಗೇ ಈ ಹಾಡುಗಳನ್ನು ಗುನುಗತೊಡಗಿದವು! ಆವರೆಗೆ ನಡೆದಿದ್ದ ಆಧುನಿಕೋತ್ತರ ಚಿಂತನೆ ಕುರಿತ ಆ ’ಬೌದ್ಧಿಕ’ ಕ್ಲಾಸಿನಲ್ಲಿ ಹಠಾತ್ತನೆ ಭಾವಗೀತಾತ್ಮಕ ಎನರ್ಜಿ ಚಿಮ್ಮಿದಂತಿತ್ತು…
ನಮ್ಮ ಬರಹ, ಮಾತು, ಚಿಂತನೆ ನಮ್ಮಲ್ಲೂ, ಇತರರಲ್ಲೂ ಇಂಥ ಎನರ್ಜಿ ಉಕ್ಕಿಸಿದಾಗ ಅವು ನಿಧಾನಕ್ಕೆ ಎಲ್ಲೆಡೆ ಹಬ್ಬಬಲ್ಲವು…
Comments
11 Comments
| Subramanya Swamy
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುತಿಹಳು ನನ್ನ ಶಾಲ್ಮಲ ಪದ್ಯ ಬರೆದ ಕವಿ ಚಂಪಾ ಅವರು ಕನ್ನಡ ಮತ್ತು ಉತ್ತಮ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ , ಸಮಾನತೆ ಸಹಬಾಳ್ವೆ ಇಲ್ಲದ ಸಮಾಜ ದುರಂತಕ್ಕೆ ಚಲಿಸುವಂತೆ ಆಗುತ್ತದೆ ಎನ್ನುತ್ತಿದ್ದರು ಚಂಪಾ. ಕನ್ನಡದ ಅಪ್ರತಿಮ ತುರ್ತುಪರಿಸ್ಥಿತಿ ಹೋರಾಟಗಾರ, ಪತ್ರಕರ್ತ ಮೇಲಾಗಿ ಒಬ್ಬ ಮೇಷ್ಟು.. ಹುಳಿಯಾರ್ ಸಾರ್ ಅವರ ಈ ಬರಹ ಸಮಕಾಲೀನ ರಾಜಕೀಯ ಸಾಮಾಜಿಕ ಆರ್ಥಿಕ ವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ನನಗೆ ತುಂಬಾ ಪ್ರಮುಖ ಎನಿಸುತ್ತದೆ.
| Kaavya
Good one
| Mohan
Timely contemporary analysis. Thank you
| Padmakshi K
ಧನ್ಯಾಸಿ ರಾಗದ ಸಿನಿಮಾ ಹಾಡುಗಳು ಮತ್ತು ಕನಕದಾಸರ ಸ್ನಾನವ ಮಾಡಿರೋ ಜ್ಞಾನ ತೀರ್ಥದಲ್ಲಿಎಂಬ ಕೀರ್ತನೆಯ ಬಗ್ಗೆ ಹೋದ ವಾರ ಬರೆದಿದ್ದಿರಿ.ನನಗೆ ತಕ್ಷಣ ನೆನಪಾಗಿದ್ದು ತ್ಯಾಗರಾಜರ ಸಂಗೀತಜ್ಞಾನಮು ಭಕ್ತಿ ವಿನಾ ಎಂಬ ಕೃತಿ. ಎರಡೂ ಕೀರ್ತನೆಗಳಲ್ಲೂ ಜ್ಞಾನದ ಬಗ್ಗೆ ಮತ್ತು ಅರಿಷಡ್ವರ್ಗಗಳನ್ನು ಮೀರುವ ಬಗ್ಗೆ ಹೇಳುತ್ತಾರೆ.ಸಂಗೀತಜ್ಞಾನಮು ಎಂಬ ಕೃತಿಯಲ್ಲಿ ಭಕ್ತಿಯಿಲ್ಲದ ಜ್ಞಾನ ಸರಿಯಾದ ಮಾರ್ಗದಲ್ಲಿ ಕರೆದೊಯ್ಯಲಾರದು ಎಂದಿದ್ದಾರೆ.ಅಂದರೆ ದುರ್ಗುಣಗಳಿಂದ ದೂರ ಇರಬೇಕು ಎನ್ನುವುದೇ ಭಕ್ತಿ ಎನ್ನಬಹುದೇನೋ? ಜ್ಞಾನತೀರ್ಥದಲ್ಲಿ ಸ್ನಾನ ಮಾಡುವ ಬಗ್ಗೆ ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ಇವೆರಡು ಕೀರ್ತನೆಗಳು ಧನ್ಯಾಸಿ ರಾಗದಲ್ಲಿ ಸಂಯೋಜಿಸಲ್ಪಟ್ಟಿವೆ. ಈ ವಾರದ ಬ್ಲಾಗ್ ನಲ್ಲಿ ಉಲ್ಲೇಖಿಸಿರುವ ಹಾಡುಗಳೆಲ್ಲಾ ಶುದ್ಧ ಧನ್ಯಾಸಿ ರಾಗದಲ್ಲಿವೆ.ಧನ್ಯಾಸಿ ರಾಗ ತೋಡಿ ರಾಗದಲ್ಲಿ ಜನ್ಯ ರಾಗ.ಶುದ್ಧಧನ್ಯಾಸಿ ಖರಹರಪ್ರಿಯ ರಾಗದಲ್ಲಿ ಜನ್ಯ. ಧನ್ಯಾಸಿ:ಸಗಾಮಪನಿಸ,ಸನಿದಪಮಗಾರಿಸ.ಔಡವ ಸಂಪೂರ್ಣ ರಾಗ.ಶುದ್ಧ ರಿಷಭ,ಸಾಧಾರಣ ಗಾಂಧಾರ,ಶುದ್ಧ ಮಧ್ಯಮ,ಚತುಶ್ರುತಿ ದೈವತ.ಕೈಶಿಕಿ ನಿಷಾಧ ಸ್ವರಸ್ಥಾನಗಳು.ಶುದ್ಧ ಧನ್ಯಾಸಿ:ಸಗಮಪನಿಸ,ಸನಿಪಮಗಸ,ಇದ ಅಭೇರಿ ರಾಗಕ್ಕೆ ಹತ್ತಿರವಿದೆ,ಅಂದರೆ ಅಭೇರಿ ರಾಗದ ಅವರೋಹಣದಲ್ಲಿ ಸನಿದಪಮಗರಿಸ ಎಂದು ಸಂಪೂರ್ಣ ಸ್ವರಗಳಿವೆ.ಧನ್ಯಾಸಿ ರಾಗದಲ್ಲಿ ಶುದ್ಧ ರಿಷಭ ಇದ್ದರೆ,ಇವೆರಡೂ ರಾಗಗಳಲ್ಲಿ ಚತುಶ್ರುತಿ ರಿಷಭ ಇದೆ.ಮುತ್ತುಸ್ವಾಮಿ ದೀಕ್ಷಿತರ ಶ್ರೀ ಪಾರ್ಥಸಾರಥಿನಾ,ತ್ಯಾಗರಾಜರ ಎಂತನೇರ್ಚಿನ ಎಂಬ ಕೃತಿಗಳು ತಕ್ಷಣ ನೆನಪಿಗೆ ಬರುತ್ತದೆ. ರಾಗಗಳ ಬಗ್ಗೆ ಬರೆದಿದ್ದು ಖುಷಿಯಾಯಿತು
| Dr.G.Gangaraju
ಸಕಾಲಿಕ ಬರಹ. ಹಾಗೆ ನೋಡಿದರೆ ಚಂಪಾ ಅವರ ರಾಜಕೀಯ ಕಾವ್ಯ ಅಡಿಗರ ರಾಜಕೀಯ ಕಾವ್ಯಕ್ಕಿಂಥ ಪ್ರಖರ ಶಕ್ತಿಯುಳ್ಳದು. ಕನ್ನಡ ವಿಮರ್ಶೆ ಈ ಬಗ್ಗೆ ಚಿಂತಿಸಲಿಲ್ಲ.
| Nataraj Huliyar Replies
Thanks Ms Padmakshi for your educative and insightful take on the raagas. Kind of you to have enlightened the columnist and his readers.
| Goutham Jyothsna
Great tribute to Prof. Champa! Just when time looked as if it’s conspiring to make him obscure already... Calling him a poet is just perfect, for above anything, he is a true poet at heart. All rebels are true poets at heart
| ಡಾ. ನಿರಂಜನ ಮೂರ್ತಿ ಬಿ ಎಂ
ಚಂದ್ರಶೇಖರ ಪಾಟೀಲರ ವೈಭವೀಕರಣಗಳಿಲ್ಲದ ವಾಸ್ತವ ಚಿತ್ರಣ ಸೊಗಸಾಗಿದೆ. ಅವರ ಕಾವ್ಯದ ಖಾರ, ಘಾಟು, ವಿಡಂಬನೆ, ಮತ್ತು ವಿಷಾದಗಳನ್ನು ಮರೆಯಲು ಸಾಧ್ಯವಿಲ್ಲ. ಅವರೊಮ್ಮೆ 'ಕನ್ನಡದ ಆದಿಕವಿ ಪಂಪ ಅಂತ್ಯಕವಿ ಚಂಪಾ' ಎಂದು ಹೇಳಿದ್ದು ಈಗಲೂ ನೆನಪಿದೆ. ಚಂಪಾರನ್ನು ಅರ್ಥಪೂರ್ಣವಾಗಿ ಸ್ಮರಿಸಿರುವ ಹುಳಿಯಾರರಿಗೆ ನಮನಗಳು.
| ಅನಿಲ್ ಗುನ್ನಾಪೂರ
ಇಷ್ಟವಾಯಿತು ಸರ್
| ಮಾಲತಿ ಪಟ್ಟಣಶೆಟ್ಟಿ
ಚಂಪಾ ನನಗಿಂತ ಸೀನಿಯರ್ ಆಗಿ ಇಂಗ್ಲಿಷ್ MA ನಲ್ಲಿ ಕೆಲವು ಕ್ಲಾಸ್ ಕೂಡಿ ಕಲಿತಿದ್ದೇವೆ. ಧೈರ್ಯವಂತ, ಚಾಣಾಕ್ಷ, ಕ್ರಾಂತಿಕಾರಿ. ಜಯಪ್ರಕಾಶ್ ನಾರಾಯಣ ಪಕ್ಷ ಅನುಸರಿಸಿ ಉತ್ತರ ಕರ್ನಾಟಕ ದ ಹಳ್ಳಿ ಹಳ್ಳಿ ಪ್ರಚಾರ ಮಾಡಿದ್ದೆವು.... ಅವರ ಜೊತೆಗಿದ್ದು ಅವರನ್ನು ಬಲ್ಲೆ, ಅವರನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್.
| Devindrappa
ಕೀರ್ತನೆ ಕವಿತೆಯಾದಾಗ ಓದಿದ ನಂತರ ನನಗೆ ಅನ್ನಿಸಿದ್ದು ನಮ್ಮ ಓದಿನ ದಾರಿಗಳು ಬದಲಾಗಬೇಕಿದೆ ಎಂದು. ಕೃತಿನಿಷ್ಟ ಓದು, ಲೇಖಕನಿಷ್ಟ ಓದು ಎಂಬ ಪ್ರಕಾರಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಆದರೆ ಕೃತಿನಿಷ್ಠ ಓದು ನವ್ಯ ಸಂದರ್ಭದಲ್ಲಿ ಮಾಡಿದ ಪರಿಣಾಮ ಅನೇಕ ವಚನಗಳನ್ನು, ಕೀರ್ತನೆಗಳನ್ನು, ತತ್ವಪದಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಅಧ್ಯಯನ ಮಾಡಲು ಸಹಾಯಕವಾದವು. ಒಂದು ಕವಿತೆಗೆ ಹಲವು ಅರ್ಥಗಳು ಇರುತ್ತವೆ ಎನ್ನುವುದಕ್ಕೆ ಹಲವು ಓದುಗರ ಪ್ರತಿಕ್ರಿಯೆ ಸಾಕ್ಷಿ. ಬೇಂದ್ರೆ ಅವರ ಹುಬ್ಬಳಿಯಾಂವ ಕವಿತೆ ಇಂದಿಗೂ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಏಕಕಾಲಕ್ಕೆ ಅದು ಓದುಗನಲ್ಲಿ ಹುಟ್ಟಿಸುವ ಭಾವ ರೂಪ ಹಲವು ಎನ್ನುವುದು ನನ್ನ ಓದಿನ ಗ್ರಹಿಕೆ .
Add Comment