ಕಲಾಕೃತಿಯ ಹೆಸರು

`ಕವಿತೆಗೂ ಅದರ ಟೈಟಲ್‌ಗೂ ಏನು ಸಂಬಂಧ?’ 

ಈ ಪ್ರಶ್ನೆ ಸಾಹಿತ್ಯಪ್ರಕಾರಗಳ ಅನುಸಂಧಾನದ ಚರ್ಚೆಯ ನಡುವೆ ನುಸುಳಿ ಬಂತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮೊನ್ನೆ ನಡೆದ ಕನ್ನಡ ಅಧ್ಯಾಪಕ, ಅಧ್ಯಾಪಕಿಯರ ರಿಫ್ರೆಶರ್ ಕೋರ್ಸ್‌ನಲ್ಲಿ ಈ ಪ್ರಶ್ನೆಗೆ ಕೆಲವು ಉತ್ತರಗಳು ತೇಲಿ ಬಂದವು. 

`ಕವಿತೆಯ ಕೇಂದ್ರ ಅರ್ಥ ಟೈಟಲ್‌ನಲ್ಲಿರುತ್ತದೆ’ ಎಂದರು ಮೇಡಂ. 
`ಕವಿತೆಯ ತಾತ್ವಿಕತೆ ಕವಿತೆಯ ಟೈಟಲ್‌ನಲ್ಲಿರುತ್ತದೆ’ ಎಂದರು ಮೇಷ್ಟರು. 
`ಕವಿತೆಗೊಂದು ಹೆಸರು ಬೇಕೆ?’ ಎಂದರು ಮತ್ತೊಬ್ಬ ಮೇಷ್ಟರು.  
`ಕವಯಿತ್ರಿ ಅಥವಾ ಕವಿ ಹೇಗೆ ಮತ್ತು ಯಾಕೆ ಟೈಟಲ್ ಕೊಡುತ್ತಾರೆ ಎಂಬುದು ಯಾರಿಗೆ ಗೊತ್ತು? ಈ ಹೆಸರು ಕವಿತೆಯ ಒಟ್ಟು ಅರ್ಥವನ್ನೋ, ಕೇಂದ್ರ ಅರ್ಥವನ್ನೋ ಹೇಳುತ್ತದೆ ಎಂಬುದಕ್ಕೆ ಖಾತ್ರಿಯೇನು? ಒಂದು ಕವಿತೆಯ ಟೈಟಲ್ ಎಷ್ಟೋ ಸಲ ಆ ಕವಿತೆಯನ್ನು ಒಂದು ನಿರ್ದಿಷ್ಟ ಅರ್ಥಕ್ಕೆ, ನಿರ್ದಿಷ್ಟ ಭಾವಕ್ಕೆ ಕಟ್ಟಿ ಹಾಕಬಹುದಲ್ಲವೆ? ಉದಾಹರಣೆಗೆ,  ಹಿಂದೆ ಈ ಅಂಕಣದಲ್ಲಿ ಚರ್ಚಿಸಿರುವ ಬೇಂದ್ರೆಯವರ `ಬೆಳಗು’ ಪದ್ಯದ ಟೈಟಲ್ ಬೆಳಗಿನ  ರೂಪಕದ ಸುತ್ತ ಒಂದು ದಿಕ್ಕಿನ ಅರ್ಥವನ್ನು ನಿರ್ದಿಷ್ಟಗೊಳಿಸುತ್ತದೆಯೇ? ಎಷ್ಟೋ ಸಲ ಈ ಟೈಟಲ್‌ಗಳು ಕವಿತೆಯ ನಾನಾರ್ಥಗಳಿಗೆ ಅವಕಾಶ ಕೊಡದೆ, ಇದೇ ಕವಿತೆಯ ಮುಖ್ಯ ಅರ್ಥ ಎಂದು ನಿರ್ದೇಶನ ಮಾಡುತ್ತವೆಯೇ? ಕವಿತೆಯ ಹೆಸರುಗಳು ಅರ್ಥವಿಸ್ತಾರಕ್ಕೆ ಅವಕಾಶ ಮಾಡಿಕೊಡುತ್ತವೆಯೋ, ಇಲ್ಲವೋ?’

…ಹೀಗೆಲ್ಲ ಅನ್ನಿಸಿದ್ದನ್ನು ಅಲ್ಲಿದ್ದ ಅಧ್ಯಾಪಕಿಯರು, ಅಧ್ಯಾಪಕರೊಡನೆ ಹೇಳಿಕೊಳ್ಳುತ್ತಾ, `ಟೈಟಲ್’ ಎಂಬ ಪರಿಕಲ್ಪನೆಯನ್ನು `ಪ್ರಾಬ್ಲಮೆಟೈಸ್’ ಮಾಡಲೆತ್ನಿಸಿದೆ. 

“…`ಪ್ರಾಬ್ಲಮೆಟೈಸ್’ ಮಾಡುವುದು ಅಂದರೆ, ನಾವು ಪರೀಕ್ಷಿಸಬೇಕಾದ ಅಥವಾ ಉತ್ತರ ಕಂಡುಕೊಳ್ಳಬೇಕಾದ ಯಾವುದೇ ಐಡಿಯಾ, ಪದ, ನಂಬಿಕೆ ಇತ್ಯಾದಿಗಳನ್ನು ಒಂದು ಪ್ರಶ್ನೆ ಅಥವಾ ಸಮಸ್ಯೆ ಎಂದು ಪರಿಗಣಿಸುವುದು; ಆ ಪದ ಅಥವಾ ಐಡಿಯಾ ಜನರು ಈಗ ತಿಳಿದಿರುವಷ್ಟು ಸರಳವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು.” 

ಇದು ಕೇಂಬ್ರಿಡ್ಜ್ ನಿಘಂಟು `ಪ್ರಾಬ್ಲಮೆಟೈಸ್’ ಪರಿಕಲ್ಪನೆಯ ಬಗ್ಗೆ ಕೊಡುವ ಸರಳ ವಿವರಣೆ. ’ಪ್ರಾಬ್ಲಮೆಟೈಸೇಶನ್’ ಎಂಬ ಪದವನ್ನು ಮಕ್ಕಿಕಾಮಕ್ಕಿಯಾಗಿ ‘ಸಮಸ್ಯೀಕರಣ’ ಎಂದು ಕನ್ನಡದಲ್ಲಿ ಅನುವಾದಿಸಿಕೊಂಡಿದ್ದು ಕೊಂಚ ಸಮಸ್ಯಾತ್ಮಕವಾದಂತಿದೆ! ಯಾವುದೇ ಪ್ರಶ್ನೆಯನ್ನಾಗಲಿ ’ಪ್ರಾಬ್ಲಮೆಟೈಸ್’ ಮಾಡುವುದೆಂದರೆ, ಒಂದು ಪ್ರಶ್ನೆಯ ಸರಳ, ಸಿದ್ಧ, ಪರಿಚಿತ ಅರ್ಥದ ಆಚೆಗೆ ಹೋಗಿ ಆ ಪ್ರಶ್ನೆಯನ್ನು ವಿಸ್ತರಿಸಿ, ಪರಿಶೀಲಿಸುವುದು; ಅದರ ಹೊಸ ಮುಖಗಳನ್ನು ಹುಡುಕುವುದು. ಇದನ್ನು ‘ಪ್ರಶ್ನವಿಸ್ತಾರ’ ಅಥವಾ ‘ಸಿದ್ಧ ಅರ್ಥ ಪರಿಶೀಲನೆ’ ಎಂದು ಕೂಡ ಕರೆಯಬಹುದು. ‘ಪ್ರಾಬ್ಲಮೆಟೈಸೇಶನ್’ ಎಂಬ ಪದಕ್ಕೆ ಮತ್ತೊಂದು ಸಂವಾದಿ ಪದ ಹುಡುಕಬಹುದೇ? ಮುಂದೆ ನೋಡೋಣ.    

ಅದೇನೇ ಇರಲಿ. ಕವಿತೆಯನ್ನೋ, ಲೇಖನವನ್ನೋ ಪ್ರತಿನಿಧಿಸಲು ಕೊಟ್ಟ ಟೈಟಲ್‌ನ ಕೇಂದ್ರದಿಂದಲೇ ಪದ್ಯವೊಂದನ್ನು ಓದುವುದು ಪದ್ಯದ ಇನ್ನಿತರ, ಅನೇಕ ಓದುಗಳನ್ನು ಕಡೆಗಣಿಸಬಲ್ಲದು. ಒಂದು ಕೇಂದ್ರ ಪ್ರತಿಮೆಯ ಸುತ್ತಲೇ ಕವಿತೆಯನ್ನು ಓದುವುದು ಈ ಕೃತಿಯನ್ನು ಬೇರೆ ಥರವೂ ಓದಲು ಸಾಧ್ಯ ಎಂಬುದನ್ನು ಕಡೆಗಣಿಸುತ್ತಿರುತ್ತದೆ. ಕೆಲವು ವರ್ಷಗಳ ಕೆಳಗೆ ‘ಲಂಕೇಶ್ ಪತ್ರಿಕೆ’ಯ ‘ಗಾಳಿ ಬೆಳಕು’ ಅಂಕಣದಲ್ಲಿ ಬರೆದ ಲೇಖನವೊಂದರ ವಿವರಗಳನ್ನು ಕೊಂಚ ತಿದ್ದಿ ಇಲ್ಲಿ ಕೊಡುತ್ತಿರುವೆ:

ಕವಿ ಎಲಿಯಟ್ ತನ್ನ ಪ್ರಖ್ಯಾತ ‘ಟ್ರೆಡಿಷನ್ ಅಂಡ್ ದಿ ಇಂಡಿವಿಜುಯಲ್ ಟ್ಯಾಲೆಂಟ್’ ಲೇಖನದಲ್ಲಿ ಜಾನ್ ಕೀಟ್ಸ್‌ನ ‘ಓಡ್ ಟು ಎ ನೈಟಿಂಗೇಲ್’ ಕವಿತೆಯನ್ನು ಪ್ರಸ್ತಾಪಿಸುತ್ತಾನೆ. 

ಕವಿತೆಯ ತಲೆಬರಹವನ್ನು ನೋಡುವವರಿಗೆ ಇದು ನೈಟಿಂಗೇಲ್ ಹಕ್ಕಿಯನ್ನು ಕೇಂದ್ರದಲ್ಲಿಟ್ಟುಕೊಂಡು ಅಥವಾ ನೈಟಿಂಗೇಲ್ ಹಕ್ಕಿಯನ್ನು ಉದ್ದೇಶಿಸಿ ಬರೆದ ಓಡ್ ಅಥವಾ ಪ್ರಗಾಥ ಎನ್ನಿಸುತ್ತದೆ. ಇಪ್ಪತ್ತೈದನೆಯ ವಯಸ್ಸಿನಲ್ಲೇ ತೀರಿಕೊಂಡ ಕೀಟ್ಸ್ (೧೩.೧೦.೧೭೯೫-೨೩.೨.೧೮೨೧) ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ, ೧೮೧೯ರಲ್ಲಿ, ಈ ಕವಿತೆ ಬರೆದಿದ್ದ. ಕವಿ ಎಲಿಯಟ್‌ ಈ ಕವಿತೆಯನ್ನು ನೂರು ವರ್ಷಗಳ ನಂತರ, ೧೯೧೯ರ ಪ್ರಬಂಧದಲ್ಲಿ ಚರ್ಚಿಸಿದ. ಕವಿತೆ ಓದುವಾಗ ಎಲಿಯಟ್‌ಗೆ ಹೀಗೆನ್ನಿಸಿತು: ‘...ಕೀಟ್ಸ್‌ನ ಪದ್ಯದಲ್ಲಿ ತುಂಬಿರುವ ಅನೇಕ ರೀತಿಯ ಭಾವಗಳಿಗೂ ನೈಟಿಂಗೇಲ್ ಹಕ್ಕಿಗೂ ನಿರ್ದಿಷ್ಟ ಸಂಬಂಧವೇನೂ ಇಲ್ಲ. ಆದರೆ ನೈಟಿಂಗೇಲ್ ಎಂಬ ಆಕರ್ಷಕ ಹೆಸರು ಅಥವಾ ಹಕ್ಕಿಗಿರುವ ಕೀರ್ತಿ ಈ ಎಲ್ಲ ಭಾವಗಳನ್ನು ಒಟ್ಟಾಗಿ ತರಲು ಸಹಾಯಕವಾಗಿದೆ.’ 

ಒಂದು ಕವಿತೆಯ ಬಗ್ಗೆ ಒಬ್ಬ ವಿಮರ್ಶಕ ಬರೆದ ಮಾತು ಇನ್ನೊಂದು ಕವಿತೆಯನ್ನು ಓದುವ ಹಾದಿ ತೋರಿಸಬಲ್ಲದು. ಈ ಅನುಭವ ನನಗೂ ಆಯಿತು. ಕೀಟ್ಸ್ ಕವಿತೆಯ ಬಗ್ಗೆ ಎಲಿಯಟ್ ಬರೆದಿದ್ದನ್ನು ಓದಿದ ಮೇಲೆ ಬೇಂದ್ರೆಯ ‘ಮಲ್ಲಾಡದ ಗಿಣಿ’ ಕವಿತೆಯನ್ನು ಓದುವ ಹೊಸ ಹಾದಿ ತೆರೆಯಿತು. ಈ ಕವಿತೆ ಕೂಡ ಹೀಗೆ ಹಲವು ಭಾವಗಳನ್ನು ತಂದು ಸೇರಿಸುತ್ತದೆ. ಎಲ್ಲ ಉತ್ತಮ ಕವಿತೆಗಳೂ, ಕತೆಗಳೂ ಒಂದು ಕೇಂದ್ರ ಪ್ರತಿಮೆಗೆ ಬಗೆಬಗೆಯ ಸರಕನ್ನು ತಂದು ಜೋಡಿಸುವುದನ್ನು ನೀವು ಗಮನಿಸಿರಬಹುದು.

ಅಂದರೆ, ನಿಮಿತ್ತಮಾತ್ರವಾಗಿ ಒಂದು ಗಿಣಿ ಅಥವಾ ನೈಟಿಂಗೇಲ್ ಕವಿತೆಯ ಆಯಕಟ್ಟಿನ ಸ್ಥಳವೊಂದರಲ್ಲಿ ಕೂತು ಕವಿಯಿಂದ ಏನೇನನ್ನೋ ಹೇಳಿಸಲೆತ್ನಿಸುತ್ತಿರುತ್ತದೆ. ಭಾವಗಳನ್ನು ಒಂದರಿಂದ ಇನ್ನೊಂದಕ್ಕೆ ಹಾರಿಸಲೆತ್ನಿಸುತ್ತಿರುತ್ತದೆ. ಆದರೆ ಅವುಗಳ ಜೊತೆಗೆ ಹಾರಲೊಲ್ಲದ, ಹಾರಲಾಗದ ಓದುಗರು ಅಥವಾ ಕವಿತೆಯ ಸಂದರ್ಭಸೂಚಕರು ‘ಕವಿ ನೈಟಿಂಗೇಲ್ ಬಗ್ಗೆ ಹೀಗೆ ಹೇಳಿದ್ದಾನೆ ಅಥವಾ ‘ಗಿಣಿಯನ್ನು ಈ ರೀತಿ ವರ್ಣಿಸಿದ್ದಾನೆ’ ಎಂದು ಎಲ್ಲವನ್ನೂ ಕವಿತೆಯ ಕೇಂದ್ರಕ್ಕೇ ಆರೋಪಿಸಿ ಮಾತಾಡುತ್ತಿರುತ್ತಾರೆ. ಇದು ಕೇವಲ ಈ ಬಗೆಯ ಓದುಗ, ಓದುಗಿಯರ ಸಮಸ್ಯೆ ಮಾತ್ರ ಅಲ್ಲ. ‘ಕವಿತೆಯೊಂದರಲ್ಲಿ ಬರುವ ಎಲ್ಲವೂ ಕೇಂದ್ರ ಅರ್ಥಕ್ಕೇ ದುಡಿಯಬೇಕು’ ಎಂದು ನಂಬುವ ನವ್ಯ ವಿಮರ್ಶಕರು ಕೂಡ ಈ ತಪ್ಪು ಮಾಡುತ್ತಿರುತ್ತಾರೆ.

ಹಿಂದೆ ಬೇರೊಂದು ಸಂದರ್ಭದಲ್ಲಿ ಬರೆದ ಮಾತುಗಳು ಈಗ ಕವಿತೆಯ ಟೈಟಲ್ ಕುರಿತ ಚರ್ಚೆಗೂ ಒಗ್ಗುವಂತಿರುವರಿಂದ ಇಲ್ಲಿ ಕೊಟ್ಟಿರುವೆ. ಹೀಗೆ ಟೈಟಲ್ ಪರಿಕಲ್ಪನೆಯನ್ನು ‘ಪ್ರಾಬ್ಲಮೆಟೈಸ್’ ಮಾಡುತ್ತಿದ್ದಾಗ, ಲಂಕೇಶರು ತಮ್ಮ ಆತ್ಮಚರಿತ್ರೆ ಬರೆಯುವಾಗ ಕಾಲಕಾಲಕ್ಕೆ ಯೋಚಿಸಿದ ಹೆಸರುಗಳು ನೆನಪಾದವು. ಮೊದಲು ಅವರು ತಮ್ಮ ಆತ್ಮಚರಿತ್ರೆಗೆ ‘ಅರಿವು’ ಎಂದು ಹೆಸರಿಡಬೇಕೆಂದುಕೊಂಡರು. ನಂತರ, ಅದನ್ನು ಶಿಶುನಾಳ ಶರೀಫರ ಸಾಲು ಬಳಸಿ ‘ನನ್ನೊಳಗ ನಾ ತಿಳಕೊಂಡೆ’ ಎಂದು ಕರೆಯಬೇಕೆಂದುಕೊಂಡರು. ಈ ಟೈಟಲ್ ತೀರಾ ಪಾಂಪಸ್ ಅನ್ನಿಸಿತೇನೋ; ನನ್ನೊಳಗನ್ನು ತಿಳಿಯುವುದು ಆತ್ಮಚರಿತ್ರೆಯ ಗುರಿಯಾದರೂ, ‘ತಿಳಕೊಂಡೆ’ ಎನ್ನುವುದು ತೀರಾ ಉಛಾಯಿಸಿ, ಅಹಂಕಾರದಿಂದ ಹೇಳಿದಂತೆ ಆದೀತೇನೋ ಎಂದು ಲಂಕೇಶರಿಗೆ ಅನ್ನಿಸಿರಬಹುದು. 

ನಂತರ, ಎಲ್ಲೋ ತಮ್ಮ ಬಾಲ್ಯದಲ್ಲಿ ಕಂಡ ಆಲೆಮನೆಯ ಕಂಪು, ಸಿಹಿ ನೆನಪಾಗಿ ‘ಆಲೆಮನೆ’ಯೇ ಒಳ್ಳೆಯ ರೂಪಕಾತ್ಮಕ ಹೆಸರು ಎಂದು ಲಂಕೇಶರಿಗೆ ಅನ್ನಿಸಿತು. ಕೊನೆಗೆ ಅವರ ಕೈಬರಹ ಟೈಪಾಗಿ, ಅದರ ಮೊದಲ ಪ್ರತಿ ಒಂದು ಸೋನೆ ಮಳೆಯ ಸಂಜೆ ನನ್ನ ಕೈ ಸೇರಿದಾಗ ಅದರ ಹೆಸರು ‘ಹುಳಿಮಾವಿನ ಮರ’ ಆಗಿತ್ತು; ‘ಆಲೆಮನೆ’ಗೆ ವಿರುದ್ಧವಾದ ಹೆಸರು ನಿಕ್ಕಿಯಾಗಿತ್ತು!

ಲಂಕೇಶ್ ತಾರುಣ್ಯದಲ್ಲಿ ‘ಹುಳಿಮಾವಿನ ಮರ’ ಎಂಬ ಪದ್ಯ ಬರೆದಿದ್ದರು. ಕೊನೆಗೆ ‘ಹುಳಿಮಾವಿನ ಮರ’ವೇ ತಮ್ಮ ಆತ್ಮಚರಿತ್ರೆಗೆ ಹೆಚ್ಚು ರೂಪಕಾತ್ಮಕ ಟೈಟಲ್ ಎಂದು ಅವರಿಗೆ ಅನ್ನಿಸಿರಬಹುದು. ಅದೇನೇ ಇರಲಿ, ಕನ್ನಡದ ಅತ್ಯುತ್ತಮ ಆತ್ಮಚರಿತ್ರೆ ಎನ್ನಬಹುದಾದ ಈ ಪುಸ್ತಕದ ತೀವ್ರ ಬರವಣಿಗೆ ಹೇಗಿದೆಯೆಂದರೆ, ಅದು ಬೇರೆ ಯಾವ ಹೆಸರು ಹೊತ್ತು ಬಂದಿದ್ದರೂ ಅದಕ್ಕೆ ಈಗ ಇರುವ ಶ್ರೇಷ್ಠತೆ, ಎತ್ತರ ಇದ್ದೇ ಇರುತ್ತಿತ್ತು.

ಇದೆಲ್ಲದರ ಹಿನ್ನೆಲೆಯಲ್ಲಿ, ಕವಿತೆಗೆ ಹೆಸರಿಡುವ ಕೆಲಸ ಹಾಗೂ ಕವಿತೆಯ ಹೆಸರಿಗೂ ಕವಿತೆಗೂ ಇರುವ ಸಂಬಂಧ ತೀರಾ ಸಂಕೀರ್ಣ ಎಂದಷ್ಟೇ ಸೂಚಿಸಬಯಸುವೆ! ಹೇಳಬೇಕೆಂದರೆ, ಈ ಬರಹದ ಹೆಸರನ್ನೇ ಮೂರು ನಾಲ್ಕು ಸಲ ಬದಲಿಸಬೇಕಾಗಿ ಬಂತು! 

ಸಹ ಸ್ಪಂದನ

ಕೆಲವು ವಾರಗಳ ಕೆಳಗೆ ಈ ಅಂಕಣದಲ್ಲಿ ಪ್ರಕಟವಾದ ‘ಕವಿ ಮೂಲ; ಕಾವ್ಯ ಮೂಲ’ ಬರಹದ ಆಲೋಚನೆಗಳನ್ನು ವಿಸ್ತರಿಸುತ್ತಾ, ಕತೆಗಾರ-ಕಾದಂಬರಿಕಾರ ಮಲ್ಲಿಕಾರ್ಜುನ ಹಿರೇಮಠರು ಬರೆದ ಕುತೂಹಲಕರ ಟಿಪ್ಪಣಿ:
“…‘ಕವಿಮೂಲ; ಕಾವ್ಯ ಮೂಲ’ ಓದಿದೆ. ಈ ಮೂಲಗಳು ನಮ್ಮ ಕಲ್ಪನೆಗೆ, ನಮ್ಮ ಹಲವಾರು ಅರ್ಥಸಾಧ್ಯತೆಗಳಿಗೆ ವ್ಯತ್ಯಯ ತರುತ್ತದೆ ಎಂದು ಅನಿಸುತ್ತದೆ. ಬೇಂದ್ರೆಯವರ ‘ಕುಣಿಯೋಣು ಬಾರಾ’ ಕವಿತೆ ಎರಡು ಕಾಗೆಗಳು ಕುಣಿಯೋದನ್ನು ನೋಡಿ ಬರೆದ ಕವಿತೆಯಂತೆ. ಇದನ್ನು ತಿಳಿದ ಮೇಲೆ ನನಗೆ ರಸಭಂಗ ಆದಂತಾಯಿತು. ಆದರೆ ‘ನೀ ಹೀಂಗ ನೋಡಬ್ಯಾಡ’ದಂಥ ಕವಿತೆಗಳಿಗೆ clue, ಸಂದರ್ಭ ಇದ್ದರೆ ಒಳ್ಳೆಯದೇನೋ!” 

ಆದರೆ ‘ನೀ ಹೀಂಗ ನೋಡಬ್ಯಾಡ’ ಕವಿತೆಯ ಬಗ್ಗೆ ಲೇಖಕಿಯೊಬ್ಬರಿಗೆ ಹೀಗೆನ್ನಿಸಿತು: 

“ಈ ಕವಿತೆಯನ್ನು ಡಿಗ್ರಿ ತರಗತಿಗಳಲ್ಲಿ ಓದುವಾಗ ಹೊಸ ಓದು ಹುಟ್ಟಿತ್ತು. ಆದರೆ ಮುಂದೆ ಬೇಂದ್ರೆ ತಮ್ಮ ಮಗುವಿನ ಸಾವಿನ ಹಿನ್ನೆಲೆಯಲ್ಲಿ ನೊಂದ ಮಡದಿಯನ್ನು ಸಮಾಧಾನ ಮಾಡುವ ಹಿನ್ನೆಲೆಯಿಂದ ಹುಟ್ಟಿದ ಪದ್ಯ ಇದು. ಕವನದ ನಿರೂಪಕನ ಬಡತನ ಮಗುವಿನ ಸಾವಿಗೆ ಕಾರಣವಾಯಿತು… ಇತ್ಯಾದಿ ಅಂಶಗಳು ತಿಳಿಯದಿದ್ದರೆ, ಕವಿತೆಯ ಓದು ಬೇರೆಯೇ ಆಗಿ ಉಳಿಯುತ್ತಿತ್ತು…’

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:


Recent Posts

Latest Blogs



Kamakasturibana

YouTube



Comments

6 Comments



| Dr. Mohan Mirle

ಕವಿತೆಗೂ ಅದರ ಟೈಟಲ್‌ಗೂ ಏನು ಸಂಬಂಧ?” ಎಂಬ ಕುತೂಹಲಕರ ಪ್ರಶ್ನೆಯ ಇಂದಿನ ಬ್ಲಾಗ್ ಬರಹ, ಇಲ್ಲಿಯೂ ‘ಕಲಾಕೃತಿಯ ಹೆಸರು!’ ಎಂಬ ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ. ಶೀರ್ಷಿಕೆ ಕುರಿತ ಇಂತಹ ಪ್ರಶ್ನೆಗಳು ನಮ್ಮ ನಡುವೆಯೂ ಆಗಾಗ್ಗೆ ಬಂದು ಹೋಗಿದ್ದರೂ ಒಂದು ಸ್ಪಷ್ಟತೆ ಸಿಕ್ಕಿರಲಿಲ್ಲ. ಈ ಸ್ಪಷ್ಟತೆ ಓದುಗರಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ, ಮತ್ತು ಬರಹಗಾರರಿಗೆ ಬಹಳ ಮುಖ್ಯ. ಇಲ್ಲಿನ ದುಷ್ಟಾಂತ, ವಿವರಣೆ, ವಿಶ್ಲೇಷಣೆ, ವ್ಯಾಖ್ಯಾನವೆಲ್ಲಾ ಆ ಸ್ಪಷ್ಟತೆಗೆ ನೆರವಾಗಿವೆ.\r\n\r\nಖಂಡಿತಾ ಶೀರ್ಷಿಕೆಗೆ ಅಂಟಿಕೊಳ್ಳುವುದು ಕವಿತಾ ಆಸ್ವಾದನೆಗೆ ಹೇರಿದ ಮಿತಿಯೆ. ಒಮ್ಮೊಮ್ಮೆ ಕವಿತೆಗಳಿಗೆ ಕ್ರಮ ಸಂಖ್ಯೆ ಕೊಟ್ಟರೆ ಸಾಕು ಎನಿಸುತ್ತದೆ. ಆದರೆ ಮತ್ತೊಮ್ಮೆ, ಇಷ್ಟ ಪಟ್ಟ ಒಂದು ಕವಿತೆಯನ್ನು ಹುಡುಕಲು, ಓದಲು, ಉಲ್ಲೇಖಿಸಲು ಪರಿವಿಡಿಯಲ್ಲಿ ಶೀರ್ಷಿಕೆ ಇದ್ದರೆ ಅನುಕೂಲ ಎನಿಸುತ್ತದೆ. ಇಲ್ಲಿ ಅನುಕೂಲ ಮತ್ತು ಅನಾನುಕೂಲ ಎರಡೂ ಇರುವುದರಿಂದ ಶೀರ್ಷಿಕೆ ಏನೇ ಇದ್ದರೂ ಅದು ಧ್ವನಿಸುವ ಭಿನ್ನ ಅರ್ಥಗಳನ್ನು ಹೊಳೆಯಿಸುವ ಸ್ವಾತಂತ್ರ್ಯವನ್ನು ಮಾತ್ರ ನಾವು ಉಳಿಸಿಕೊಳ್ಳಲೇಬೇಕು.\r\n\r\n \r\n\r\nಲಂಕೇಶರ ಆತ್ಮಕಥೆಯ ಶೀರ್ಷಿಕೆ ರೂಪುಗೊಳ್ಳುವಿಕೆಯ ಹಂತಗಳು ಕುತೂಹಲಕಾರಿಯಾಗಿವೆ. ‘ಪ್ರಾಬ್ಲಮೆಟೈಸೇಶನ್’ ಪರಿಕಲ್ಪನೆಯನ್ನು ‘ಪ್ರಶ್ನ ವಿಸ್ತಾರ’ ಅಥವಾ ‘ಸಿದ್ಧ ಅರ್ಥ ಪರಿಶೀಲನೆ’ ಎಂದು ಕನ್ನಡೀಕರಿಸಿರುವುದು ಅರ್ಥಪೂರ್ಣವಾಗಿದೆ. ಬ್ಲಾಗ್ ನ ಈ ಬಗೆಯ ಚರ್ಚೆಗಳು ಸಾಹಿತ್ಯಿಕವಾಗಿ ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳಲು ತುಂಬಾ ನೆರವಾಗುತ್ತಿವೆ.


| Kaavya

Nice one


| Gangadhar

ಕವಿತೆಯನ್ನು ಗ್ರಹಿಸಬೇಕಾದ ನವೀನ ಪರಿಕರಗಳನ್ನು ಕೊಟ್ಟಿದ್ದೀರಿ. ನಮಗಿದು ಸಾಹಿತ್ಯ ಪಾಠ


| ಡಾ. ನಿರಂಜನ ಮೂರ್ತಿ ಬಿ ಎಂ

\'ಕಲಾಕೃತಿಯ ಹೆಸರು\' ಎಂಬ ಶೀರ್ಷಿಕೆಯೇ ಅದು ಏನನ್ನು ಕುರಿತು ಚರ್ಚಿಸುತ್ತದೆ ಎಂದು ಸೂಚಿಸುತ್ತದೆ. ಇದು ಕತೆ, ಕವಿತೆ, ಕಾವ್ಯ, ಅಥವಾ ಯಾವುದೇ ಕಲಾಕೃತಿಗೆ ಅನ್ವಯವಾಗಬೇಕೆಂಬ ನಿಯಮವೇನೂ ಇರಲಾರದು. ಏಕೆಂದರೆ ಅಂತಹ ಕಲಾಕೃತಿಗಳಗೆ ಹಲವು ಆಯಾಮಗಳಿರುತ್ತವೆ. ಹೆಸರೊಂದು ಕಲಾಕೃತಿಯ ಅರ್ಥದ ಪಥವನ್ನು ಅಥವಾ ಅದರ ಅರ್ಥವನ್ನು ನಿರ್ಬಂಧಿಸುವ ಸಾಧ್ಯತೆ ಇದ್ದರೂ ಕೂಡ, ಕಲಾಕೃತಿಯನ್ನು ಗುರುತಿಸಲು ಮತ್ತು ಸೂಚಿಸಲು ಹೆಸರೊಂದು ಬೇಕೇಬೇಕು. ಹೆಸರಿಲ್ಲದೇ ಹೋದರೆ ಬರೀ ಸಂಖ್ಯೆಯನ್ನು ಕೊಟ್ಟು ಗುರುಸಲು ಸಾಧ್ಯವೆ? \r\n\r\nಕವಿ ತನ್ನ ಕವಿತೆಯನ್ನು ಮೊದಲೇ ಹೆಸರಿಟ್ಟು ಬರೆಯುವರೆ ಅಥವಾ ಬರೆದು ಹೆಸರಿಡುವರೆ ಆಮೇಲೆ? ಎಂಬುದೇ ವಿಸ್ಮಯ!!!


|


|




Add Comment