ಪ್ರಾಚೀನ ಸಾಹಿತ್ಯ ನಮಗ್ಯಾಕ್ರೀ?

’ಸಾರ್, ಒಂದು ಪ್ರಶ್ನೆ: ಈಚಿನ ಕೆಲವು ಕವಿಗಳು 'ನಮಗೆ ಪ್ರಾಚೀನ ಪಠ್ಯಗಳು ಯಾಕೆ ಬೇಕು? ನನಗ್ಯಾಕೆ ವಡ್ಡಾರಾಧನೆ? ನನಗ್ಯಾಕೆ ಪಂಪ?' ಎಂದೆಲ್ಲಾ ಕೇಳುತ್ತಾರೆ. ಈಗ ಏನಿದೆಯೋ ಆ ಭಾಷೇಲಿ ನಾನು ಬರೀತೀನಿ ಅಂತಾರೆ. ಇದಕ್ಕೇನು ಹೇಳೋದು?'

ಈ ಪ್ರಶ್ನೆ ಕೇಳುತ್ತಿದ್ದವರು ಒಬ್ಬ ತರುಣ ಕವಿ; ಕನ್ನಡ ಮೇಷ್ಟ್ರು. ಅವರನ್ನು ಆ ಪ್ರಶ್ನೆ ನಿಜಕ್ಕೂ ಕಾಡಿದಂತಿತ್ತು. ಕೆಲವು ಹೊಸ ಕವಿಗಳಿಗೆ ಪ್ರಾಚೀನ, ಮಧ್ಯಕಾಲೀನ ಕಾವ್ಯ ಪಠ್ಯಗಳನ್ನು ಓದಲು ಸಲಹೆ ಕೊಟ್ಟು ಅವರು ಕೊಂಚ ನಿರಾಶರಾದಂತಿತ್ತು.

'ಅವ್ರನ್ನ ಬಿಟ್ಟಾಕಿ! ನೀವು ಆ ಪಠ್ಯಗಳನ್ನು ಓದಿಕೊಂಡು ಕವಿತೆ ಬರೀರಿ' ಅಂದೆ. ಮತ್ತೆ ಮಾತಿನ ನಡುವೆ, 'ಪ್ರಾಚೀನ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯ ನನಗೆ ಬೇಡ ಎನ್ನುವುದು ಉಡಾಫೆ, ಅಹಂಕಾರ. ವಡ್ಡಾರಾಧನೆಯಂಥ ಸುಲಭವಾಗಿ ಓದಬಲ್ಲ ಗದ್ಯಕೃತಿಯಲ್ಲಿ ಎಲ್ಲೂ ಎಳೆ ತಪ್ಪದಂತೆ ಕತೆ ಹೇಳುವ ಕಲೆಯ ಬಗ್ಗೆ ಹೊಸ ಕವಿಗೆ ಕೊಂಚ ಕುತೂಹಲವಾದರೂ ಇಲ್ಲದಿದ್ದರೆ ಹೇಗೆ?’ ಅಂದೆ. 

ತುಮಕೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಯುವಕವಿಗೋಷ್ಠಿಯಲ್ಲಿ ಎದ್ದ ಈ ಪ್ರಶ್ನೆಗಳು ನನ್ನನ್ನು ಮತ್ತೆ ಕೆಣಕತೊಡಗಿದವು. ಅವತ್ತಿನ ನನ್ನ ಮಾತಿನಲ್ಲಿ ಒಂದು ಭಾಷೆಯಲ್ಲಿ, ಒಂದು ಸಾಹಿತ್ಯ ಪರಂಪರೆಯಲ್ಲಿ ಬರೆಯುವ ಕವಿಗಳಲ್ಲಿ, ಕವಯಿತ್ರಿಯರಲ್ಲಿ ಹಿಂದಿನ ಪರಂಪರೆ ಮುಂದುವರಿಯುವ ಬಗೆಗಿನ ಒಂದು ಎಳೆಯೂ ಇತ್ತು. 

ಟಿ.ಎಸ್. ಎಲಿಯಟ್ ಇಂಗ್ಲಿಷ್ ಕವಿಯೊಬ್ಬ ಇಡೀ ಯುರೋಪಿನ ಪರಂಪರೆಯನ್ನು ಹೇಗೆ ದಕ್ಕಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದನ್ನು ಈ ಹೊಸಬರಿಗೆ ನೆನಪಿಸಿದ್ದೆ. ಸಂಪ್ರದಾಯವನ್ನು ಅನುಸರಿಸುವುದು ಸುಲಭ; ಆದರೆ ಪರಂಪರೆಯನ್ನು ಶ್ರಮಪಟ್ಟು ಗಳಿಸಿಕೊಳ್ಳಬೇಕಾಗುತ್ತದೆ ಎಂದಿದ್ದ ಎಲಿಯಟ್, ಅದನ್ನು ತನ್ನ ಕಾವ್ಯ ರಚನೆಯಲ್ಲೇ ಕಂಡುಕೊಂಡ. ಎಲಿಯಟ್ ಗ್ರೀಕ್ ಪರಂಪರೆಯಿಂದ, ಡಾಂಟೆಯಿಂದ ಕಲಿತಿದ್ದರಿಂದಾಗಿ ಪುರಾಣದ ಪ್ರತಿಮೆಗಳು, ನೋಟಗಳು ಅವನ ಆಧುನಿಕ ಪ್ರತಿಮೆಗಳ ಜೊತೆ ಬೆರೆತು ಗಾಢವಾದ ಗಂಭೀರವಾದ ಕಾವ್ಯಸೃಷ್ಟಿಯಾಯಿತು. 

ಸಹಸ್ರಾರು ವರ್ಷಗಳಿಂದ ಹರಿದು ಬಂದಿರುವ ಭಾಷೆಯಲ್ಲಿ ಸಾಟಿಯಿಲ್ಲದ ಜ್ಞಾನ ಇರುತ್ತದೆ ಎಂಬ ಸಿಗ್ಮಂಡ್ ಫ್ರಾಯ್ಡ್ ಮಾತನ್ನೂ ಅವತ್ತು ನೆನಪಿಸಿದ್ದೆ. ಇವತ್ತು ಬರೆಯುವ ಕನ್ನಡ ಕವಿ, ಕವಯಿತ್ರಿಯರು ಸಾವಿರ ವರ್ಷಕ್ಕೂ ಹೆಚ್ಚಿನ ಕನ್ನಡ ಲಿಖಿತ ಸಾಹಿತ್ಯದ ಪ್ರತಿಮೆಗಳು, ಬಣ್ಣನೆ, ತಂತ್ರ, ಕಥಾಮಂಡನೆಯನ್ನೋ; ಅಥವಾ ಸಾವಿರಾರು ವರ್ಷಗಳಿಂದ ಹರಿದು ಬಂದ ಜನಪದ ಸಾಹಿತ್ಯದ ಅಥವಾ ಜನಜೀವನದ ಭಾಷೆಯನ್ನೋ ಬಳಸುತ್ತಿರುತ್ತಾರೆ; ಆದ್ದರಿಂದ ಒಂದಲ್ಲ ಒಂದು ಹಂತದಲ್ಲಿ ಆ ಭಾಷೆಯ ಪರಂಪರೆಯನ್ನು ಮುಂದುವರಿಸುತ್ತಲೇ ಇರುತ್ತಾರೆ. 

ಹಾಗೆ ಸ್ವೀಕರಿಸಿದ ಭಾಷೆ ಕ್ಲೀಷೆಯಾಗದಂತೆ ನೋಡಿಕೊಳ್ಳಲು ಕವಯಿತ್ರಿಯೊಬ್ಬಳು ಆ ಭಾಷೆಯ ದೊಡ್ಡ ಸಾಹಿತ್ಯ ಕೃತಿಗಳ ಜೊತೆ ಸಂವಾದ, ಸರಸ, ಓದು, ಗುದ್ದಾಟ… ಇವನ್ನೆಲ್ಲ ನಡೆಸುತ್ತಲೇ ಇರಬೇಕಾಗುತ್ತದೆ. ಸಂತೆಗೆ ಮೂರು ಮೊಳ ನೇಯುವ ಮಂದಿಗೆ ಇದು ಅನಗತ್ಯ ಅನ್ನಿಸಬಹುದು. ಇದೀಗ ಹಠಾತ್ತನೆ ನನ್ನ ಬೆರಳು ಟೈಪ್ ಮಾಡಿದ ’ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ’ ನುಡಿಗಟ್ಟನ್ನೇ ಗಮನಿಸಿ: ಇದು ಭಾಷೆಯ ಜೊತೆಗಿನ ಒಡನಾಟದಿಂದ ಅನಾಯಾಸವಾಗಿ ಬಂದಂತಿದೆ; ಆದರೆ ’ಸಂತೆಯೊಳಗೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ’ ಎಂಬ ನುಡಿಗಟ್ಟು ಈಗಿನ ಕವಯತ್ರಿಗೋ ಕವಿಗೋ ವಚನ ಪರಂಪರೆಯ ಅಕ್ಕಮಹಾದೇವಿಯ ವಚನಗಳ ಒಡನಾಟದಿಂದ ಬಂದಿರುತ್ತದೆ. 

ಅಕಸ್ಮಾತ್ ಅಕ್ಕಮಹಾದೇವಿಯ ವಚನಗಳನ್ನು ನಾವು ಹೆಚ್ಚು ಓದಿರದಿದ್ದರೂ, ಅವು ಹಾಡಿನ ರೂಪದಲ್ಲೋ, ನುಡಿಗಟ್ಟಿನ ರೂಪದಲ್ಲೋ ನಮ್ಮ ಕಿವಿಗೆ ಬಿದ್ದು, ನಮ್ಮ ಬರವಣಿಗೆಯಲ್ಲಿ ಬರತೊಡಗುತ್ತವೆ. ’ನನಗೇಕೆ ಹಳೆಯ ಸಾಹಿತ್ಯ?’ ಎನ್ನುವವನಿಗೂ ವಚನಗಳು, ಪುರಂದರದಾಸ, ಕನಕದಾಸರ ಗೀತೆಗಳು, ಜನಪದ ಹಾಡುಗಳು ಜನಬಳಕೆಯ ಮಾಧ್ಯಮಗಳ ಮೂಲಕ ಕಿವಿಗೆ ಬಿದ್ದಿರುತ್ತವೆ! ಸ್ಕೂಲಿನಲ್ಲಿ ಓದಿದ ಹುತ್ತರಿ ಹಾಡಿನ ’ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ’, ಅಥವಾ ಪುಣ್ಯಕೋಟಿಯ ಹಾಡಿನ ’ಧರಣಿ ಮಂಡಲ ಮಧ್ಯದೊಳಗೆ’ ಇವೆಲ್ಲ ಹೇಗೋ ನಮ್ಮ ಅಪ್ರಜ್ಞೆಯಲ್ಲಿ ನೆಲೆಸಿ ನಮ್ಮ ಕವಿತೆಗಳ ಮೂಲ ಲಯಗಳಾಗಿಬಿಟ್ಟಿರುತ್ತವೆ. 

ಕವಿ ಸಿದ್ಧಲಿಂಗಯ್ಯನವರು ಒಮ್ಮೆ ಸಿನಿಮಾ ಹಾಡು ಬರೆಯುವಾಗ ನನ್ನ ಜೊತೆಯಿದ್ದರು. ಆ ರಾತ್ರಿ‘ಗಗನದೊಡಲು ಗುಡುಗು ಸಿಡಿಲು’ ಎಂಬ ಪ್ರಾಥಮಿಕ ಶಾಲಾಪಠ್ಯದ ಪದ್ಯವೊಂದನ್ನು ಗುಣುಗುಣಿಸುತ್ತಾ, ‘ಹಿಂಗೆ ಒತ್ತಕ್ಷರಗಳಿಲ್ಲದೆ ಬರೆದರೆ ಹಾಡು ಸಲೀಸಾಗಿ ಹರಿಯುತ್ತೆ’ ಎಂದು ಅಂಥ ಹರಿವಿಗಾಗಿ ಕವಿ ಚಡಪಡಿಸುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಅಂಥದೊಂದು ಹಾಡು ಬರೆದು ’ಗಂಡುಗೂಳಿಗಳು’ ಸಿನಿಮಾದ ಸಂಗೀತ ನಿರ್ದೇಶಕನಿಗೆ ಒಪ್ಪಿಸಿದರು. ಹೋರಾಟದ ಹಾಡುಗಳನ್ನು ಬರೆದ ಸಹಜ ಕವಿ ಸಿದ್ಧಲಿಂಗಯ್ಯ ಅವತ್ತು ಅರವತ್ತು ಎಪ್ಪತ್ತು ವರ್ಷಗಳ ಹಿಂದಿನ ನವೋದಯದ ಕಾವ್ಯದ ಸರಳ ಮಾದರಿಯನ್ನು ಹುಡುಕುತ್ತಿದ್ದರು. ಸಿದ್ಧಲಿಂಗಯ್ಯನವರ ಇಡೀ ಕಾವ್ಯ ಹಲವೆಡೆ ಕನ್ನಡದ ಸಹಜ ಲಯಗಳನ್ನು, ಕುವೆಂಪು ಕಾವ್ಯದ ಸರಳ ಲಯಗಳನ್ನು ಮರು ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತಿದೆ. 

ಎಂಟು ನೂರು ವರ್ಷಗಳ ವಚನ ಪರಂಪರೆ ಕೂಡ ಈ ರೀತಿ ಕನ್ನಡ ಪರಂಪರೆಯನ್ನು ಭಾಷೆಯ ಮಟ್ಟದಲ್ಲಾದರೂ ಮುಂದುವರಿಸಿದ ಉದಾಹರಣೆಗಳಿವೆ. ಕೆಲವೊಮ್ಮೆ ಮೇಲುನೋಟಕ್ಕೆ ಆ ಕ್ಷಣದ ತಾತ್ವಿಕ ಪ್ರತಿಕ್ರಿಯೆಯಂತೆ ಕಾಣುವ ವಚನಗಳು ಕೂಡ ಪರಂಪರೆಯ ಕೃತಿಗಳನ್ನು ಅರಗಿಸಿಕೊಂಡು ಮುಂದೆ ಸಾಗಿದಂತಿವೆ. ಅಕ್ಕಮಹಾದೇವೀಯ ಪ್ರಖ್ಯಾತ ವಚನ ‘ಚಿಲಿಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೇ’ ಎಂಬ ವಚನ ಎಲ್ಲೋ ಪಂಪನ ’ತಳಿತ ಮಾಮರನೆ, ಕುಕಿಲ್ವ ಕೋಗಿಲೆಯೆ…’ ಪದ್ಯಕ್ಕೆ ಅಂತರ್ ಪಠ್ಯೀಯವಾಗಿದೆ. ಪಂಪ, ಅಕ್ಕಮಹಾದೇವಿಯವರ ಈ ಧಾಟಿ ಮುಂದೆ ಕನಕದಾಸರ ‘ಮೋಹನ ತರಂಗಿಣಿ’ಯಲ್ಲೂ ಕಾಣಿಸಿಕೊಳ್ಳುತ್ತದೆ. ಇಟಲಿಯ ಕವಿ ಪೆಟ್ರಾರ್ಕ್ ರೂಪಿಸಿಕೊಂಡ ಸಾನೆಟ್ ಪ್ರಕಾರವನ್ನು ಶೇಕ್‌ಸ್ಪಿಯರ್ ಕೊಂಚ ಮಾರ್ಪಡಿಸಿ, ತನ್ನ ಸಾನೆಟ್ಟಿನ ರಾಚನಿಕ ಚೌಕಟ್ಟನ್ನು ರೂಪಿಸಿಕೊಂಡ. ಕನ್ನಡದ ಆರು ಸಾಲುಗಳ ಷಟ್ಪದಿ ಹಾಗೂ ಶೇಕ್‌‌ಸ್ಪಿಯರನ  ಹದಿನಾಲ್ಕು ಸಾಲುಗಳ ಸಾನೆಟ್ ಎರಡನ್ನೂ ಬಲ್ಲ ಬೇಂದ್ರೆ ಹಾಗೂ ಕಣವಿ ಇವೆರಡರ ಬೆಳಕಿನಲ್ಲಿ ಅಷ್ಟಷಟ್ಪದಿ ಬರೆದರು. 

ಆನು ಒಲಿದಂತೆ ಹಾಡುವೆ ಎಂದ ಬಸವಣ್ಣ ಕೂಡ ಒಂದೆಡೆ ‘ಬಾಣನವ ನಾನು, ಮಯೂರನವ ನಾನು…’ ಎಂದು ಹೇಳುವುದು ಕುತೂಹಲಕರ! ಅಲ್ಲಮಪ್ರಭುವಿನ ‘ಹಿಂದಣ ಕವಿಗಳೆನ್ನ ತೊತ್ತುಗಳೆಂಬೆ’ ಎಂಬ ಮಾತನ್ನು ಹಿಂದಣ ಕವಿಗಳ ಭಾಷಾ ಲೋಕ, ಪ್ರತಿಮಾಲೋಕ ನನ್ನ ಕಾವ್ಯಕ್ಕೆ ತೊತ್ತಿನಂತೆ ದುಡಿಯುತ್ತದೆ ಎಂದು ಕೂಡ ಓದಲು ಸಾಧ್ಯವಿದೆ.  

ಆಧುನಿಕ ಕನ್ನಡ ಸಾಹಿತ್ಯದಲ್ಲೇ ನೋಡಿ. ಕುವೆಂಪು, ಬೇಂದ್ರೆಯವರ ಭಾಷೆ ಎರಡು ಮೂರು ಭಾಷಾ ಪರಂಪರೆ-ಸಾಹಿತ್ಯ ಪರಂಪರೆಗಳಿಂದ ರೂಪುಗೊಂಡಿದೆ. ಹೊಸ ಕವಿ, ಕವಯಿತ್ರಿಯರು ಈ ಹಿರಿಯರಂತೆ ಪ್ರಾಚೀನ ಕೃತಿಗಳನ್ನು ಓದಿರಲಿ, ಇಲ್ಲದಿರಲಿ ಅವರು ಕನ್ನಡ ಭಾಷೆಯಲ್ಲಿ ಬರೆಯುತ್ತಿರುವುದರಿಂದ ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕ ಅಂತರ್ ಪಠ್ಯೀಯತೆ ನಡೆಯುತ್ತಿರುತ್ತದೆ. ಈ ಕಾಲದ ವಿಮರ್ಶೆಯಲ್ಲಿ ‘ಅಂತರ್ ಪಠ್ಯೀಯತೆ’ ಎಂಬುದನ್ನು ಲೇಖಕನೊಬ್ಬ ಯಾವುದಾದರೂ ಕೃತಿಯನ್ನು ಪ್ರಜ್ಞಾಪೂರ್ವಕವಾಗಿಯೇ ಬಳಸುವುದನ್ನು ಬಣ್ಣಿಸಲು ಬಳಸುತ್ತಾರೆ. ಆದರೂ ಅಂತರ್ ಪಠ್ಯೀಯತೆಯ ಕಲ್ಪನೆಯನ್ನು ಕೊಂಚ ಹಿಗ್ಗಿಸಿ, ಒಬ್ಬರಿಂದ ಮತ್ತೊಬ್ಬರಿಗೆ ಪ್ರತಿಮೆಗಳ ನಿರಂತರ ಹರಿಯುವಿಕೆಯನ್ನು ಹೇಳಲು ಬಳಸಿರುವೆ.

ಮಹತ್ವಾಕಾಂಕ್ಷೆಯಿಂದ ಬರೆಯುವವರಿಗೆ ನನಗೆ ದಕ್ಕಿರುವ ಈ ಭಾಷೆ ಸಾಲದು, ಇನ್ನೂ ಏನೋ ಬೇಕು ಎಂಬ ತುಡಿತ ಇದ್ದೇ ಇರುತ್ತದೆ. ಇಂಥವರು ಮತ್ತೆ ಮತ್ತೆ ತಮ್ಮ ಭಾಷೆಯ ಬಗೆಬಗೆಯ ಕೃತಿಗಳಿಗೆ ಮರಳುತ್ತಿರಬೇಕಾಗುತ್ತದೆ; ಕವಿತೆ ಬರೆಯುವವರು ಕೇವಲ ಕಾವ್ಯಪ್ರಕಾರದಿಂದ ಮಾತ್ರ ಅಲ್ಲ; ಗದ್ಯ, ನಾಟಕ, ಕಾದಂಬರಿ… ಅಷ್ಟೇ ಅಲ್ಲ ವಿಮರ್ಶೆಯಿಂದಲೂ ಕಲಿಯುತ್ತಿರಬೇಕಾಗುತ್ತದೆ. ‘ಆಂ? ವಿಮರ್ಶೆಯಿಂದ ಕೂಡ?’ ಎಂಬ ಉದ್ಗಾರ ಎತ್ತುವವರು ಇರಬಹುದು. ಅವರಿಗೆ ಎಲಿಯಟ್ ಹೇಳಿದ ಮಾತನ್ನು ನೆನಪಿಸುವೆ: ‘ಸೃಜನಶೀಲ ಬರವಣಿಗೆಯ ಬಹುತೇಕ ಭಾಗದಲ್ಲಿ ವಿಮರ್ಶಾ ಶ್ರಮವೇ ಬೆರೆತಿರುತ್ತದೆ.’ ಯಾವುದು ಅರ್ಥಪೂರ್ಣ, ಯಾವುದು ಸಡಿಲ, ಯಾವುದು ಬಿಗಿ, ಯಾವುದು ಕ್ಲೀ಼ಷೆ… ಇವೆಲ್ಲವನ್ನೂ ಕವಿತೆ ಬರೆಯುವವರ ವಿಮರ್ಶಾ ಪ್ರಜ್ಞೆಯೇ ಗೈಡ್ ಮಾಡುತ್ತಿರುತ್ತದೆ. 

ಹಾಗೆಯೇ ಹಿಂದಿನ ಸಾಹಿತ್ಯ ಕೃತಿಗಳಿಂದ ಏನನ್ನು ಪಡೆಯಬೇಕು ಎಂಬುದನ್ನೂ ಬರೆಯುವವರ ವಿಮರ್ಶಾ ಪ್ರಜ್ಞೆಯೇ ನಿರ್ಧಾರ ಮಾಡುತ್ತಿರಬೇಕಾಗುತ್ತದೆ. ಗೋಪಾಲಕೃಷ್ಣ ಅಡಿಗರು ಹರಿಹರನ ರಗಳೆಗಳ ಓಟದಿಂದ ಪಡೆಯಬೇಕಾದ್ದನ್ನು ಪಡೆದಿರುವುದನ್ನು, ಕಂಬಾರರು ಜನಪದ ನಾಟಕ, ಕಾವ್ಯದಿಂದ ಪಡೆದ ಲಯ ನೋಟಕ್ರಮಗಳನ್ನು ನೀವು ಗಮನಿಸಿರಬಹುದು. ಶಿವಪ್ರಕಾಶ್, ಸವಿತಾ ನಾಗಭೂಷಣ ಚಂದ್ರಶೇಖರ ತಾಳ್ಯರಂಥವರು ಸಾವಿರ ವರ್ಷಗಳ ಕನ್ನಡದ ಹಿಂದಣ ಕವಿಗಳಿಂದಲೂ, ಜಗತ್ತಿನ ಇತರ ಕವಿಗಳಿಂದಲೂ ತಮಗೆ ಬೇಕಾದ್ದನ್ನು ಪಡೆಯುತ್ತಲೇ ಇರುವುದಕ್ಕೆ ಅವರ ಕವಿತೆಗಳೇ ಸಾಕ್ಷಿಯಾಗಿವೆ. ಹಾಗೆಯೇ ಮಲೆಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳಿಂದ ಲಯವನ್ನೂ, ನೋಟವನ್ನೂ ಪಡೆದಿರುವ ಹೊಸ ಕವಿ ಲಕ್ಷ್ಮೀನಾರಾಯಣಸ್ವಾಮಿ; ಅಥವಾ ಗಝಲ್ ಪರಂಪರೆಯಿಂದ ಪ್ರೇರಣೆ ಪಡೆದಿರುವ ರಮೇಶ್ ಅರೋಲಿಯಂಥ ಹೊಸ ಕವಿಗಳು ಕೂಡ ಪರಂಪರೆಯ ಸಖರೇ. ಇವೆಲ್ಲ ತಕ್ಷಣಕ್ಕೆ ಹೊಳೆದ ಹೆಸರುಗಳಷ್ಟೆ; ಇಂಥ ಹತ್ತಾರು ಉದಾಹರಣೆಗಳನ್ನು ನೀವೂ ಕೊಡಬಹುದು. 

‘ನಿಯಮಗಳನ್ನು ಮುರಿಯಲು ಮೊದಲು ಆ ನಿಯಮಗಳು ನಮಗೆ ಗೊತ್ತಿರಬೇಕು’ ಎಂದ ಅರ್ಜೆಂಟೀನಾದ ಕವಿ-ಕತೆಗಾರ ಬೋರ್ಹೆಸ್ ತನ್ನ ಜೀವಿತದ ನಡುಹಾದಿಯಲ್ಲಿ ದೃಷ್ಟಿ ಕಳೆದುಕೊಂಡ. ಅನಂತರ, ತಾನು ಕೇಳಿಸಿಕೊಂಡ ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯ ಕೃತಿಗಳ ಪರಂಪರೆಯಿಂದ ನಿತ್ಯ  ಪಡೆದು ದೊಡ್ಡ ಲೇಖಕನಾದ. ಬೋರ್‍ಹೆಸ್ ಹೇಳಿದ ಮುತ್ತಿನಂಥ ಮಾತು: ಉತ್ತಮವಾದುದು [ಅಂದರೆ ಉತ್ತಮ ಸಾಹಿತ್ಯ] ಕೊನೆಗೆ ಯಾರಿಗೂ ಸೇರುವುದಿಲ್ಲ; ಅದು ಭಾಷೆಗೂ, ಪರಂಪರೆಗೂ ಸೇರಿಕೊಳ್ಳುತ್ತದೆ.

ಇವತ್ತು ಬರೆಯುವ ನಾವು ಪಡೆಯುವುದು, ಪಡೆಯಬೇಕಾಗಿರುವುದು ಆ ಪರಂಪರೆಯಿಂದ.

ಕೊನೆಯದಾಗಿ, ಒಂದು ಹಳೆಯ ನೆನಪು:  ‘ನನಗ್ಯಾಕೆ ಪಂಪ? ನನಗ್ಯಾಕೆ ಕುಮಾರವ್ಯಾಸ?’ ಎಂದು ಕೆಲವು ವರ್ಷಗಳ ಕೆಳಗೆ ಲೇಖಕನೊಬ್ಬ ಸಮಾವೇಶವೊಂದರಲ್ಲಿ ಮುನಿಸಿಕೊಂಡವನಂತೆ ಘೋಷಿಸಿದ್ದ. ಅದಾದ ಮೇಲೆ ಆತನ ಬರವಣಿಗೆ ಯಾವ ದಿಕ್ಕಿಗೆ ಹೋಯಿತೋ ಕಾಣೆ, ಬಲ್ಲವರು ಹೇಳಬೇಕು.
 

 

Share on:

Comments

24 Comments



| ಮಂಜುನಾಥ್ ಸಿ ನೆಟ್ಕಲ್

ಹಿಂದಣ ಹೆಜ್ಜೆಯನ್ನರಿತಲ್ಲದೆ ಮುಂದಣ ಹೆಜ್ಜೆಯನ್ನರಿಯಲಾಗದು...ಎಂಬ ಅಲ್ಲಮ ಪ್ರಭುವಿನ ಸಾಲನ್ನು ನೆನಪಿಸಿದ ಬರಹ ಸರ್....ಇದೇ ಪ್ರಶ್ನೆಯನ್ನು ಇಂದಿನ ಪೀಳಿಗೆಯ ವಿದ್ಯಾರ್ಥಿಗಳೂ ಸಹ ಕೇಳುತ್ತಿರುತ್ತಾರೆ, ಅವರಿಗೆ ಉತ್ತರಿಸಲು ನೆರವಾಯಿತು ನಿಮ್ಮ ಲೇಖನ ಧನ್ಯವಾದಗಳು ಸರ್.


| Suma

ಪರಂಪರೆಯಿಂದಲೇ ಪಡೆದು ಪರಂಪರೆಯನ್ನೇ ಹೀಗಳೆಯುವ ಮನಸ್ಥಿತಿಗೆ ಅರಿವು ನೀಡುವ ಬರಹ. ವಾಸ್ತವವನ್ನು ಬಹಳ ಸರಳವಾಗಿ ತಲೆಗೆ ಹತ್ತಿಸುತ್ತದೆ.


| ಜಿ.ಎನ್.ಧನಂಜಯ ಮೂರ್ತಿ

ಮಹತ್ವದ ಬರಹ ಎಲಿಯಟ್ ಹೇಳಿದ ಪರಂಪರೆಯ ಪ್ರಶ್ನೆ ಯಾವತ್ತಿಗೂ ಮುಖ್ಯವೆ. ಇದಕ್ಕೆ ಪೂರಕವಾಗಿ ಅವರು ಫ್ರಾಯ್ಡ್ ನನ್ನು ಬಳಸಿಕೊಂಡಿದ್ದಾರೆ. ಫ್ರಾಯ್ಡ್ ನ ತರುವಾಯ ಬಂದ ಕಾರ್ಲ್ ಯೂಂಗ್ ನಲ್ಲಿ ಈ ಕುರಿತ ಹಲವಾರು ಮನೋವೈಜ್ಞಾನಿಕ ವಿಶ್ಲೇಷಣೆಗಳು ಲಭಿಸುತ್ತವೆ. ಅಂತವುಗಳಲ್ಲಿ ಯೂಂಗ್ ಹೇಳುವ Collective sub conscious ಇಲ್ಲಿ ಉಲ್ಲೇಖಾರ್ಹ. ಕನ್ನಡದಲ್ಲಿ ಇದನ್ನು ಸಾಮೂಹಿಕ ಸುಪ್ತ ಚೇತನ ಎನ್ನಬಹುದು. ಮಾನವನ ವಿಕಾಸದ ಹಾದಿಯಲ್ಲಿ ಉಳಿದು ಬಂದಿರುವ ಮಾನಸಿಕ ಅವಶೇಷವೆ ಸಾಮೂಹಿಕ ಸುಪ್ತ ಚೇತನ. ಪ್ರತಿಯೊಂದು ವರ್ಗ, ಜನಾಂಗ ಹಾಗೂ ವಂಶದ ಜೀವಿಗಳು ನಿರಂತರವಾಗಿ ಅನುಭವಿಸಿದ ಆಗುಹೋಗುಗಳ ಸಾರಸರ್ವಸ್ವವೆಲ್ಲ ಇಲ್ಲಿ ಹುದುಗಿರುತ್ತದೆ. ಮುಂದುವರಿದು ಯೂಂಗ್ ಪೌರಾಣಿಕ ಹಾಗೂ ಸಾಹಿತ್ಯಿಕ ಪ್ರತಿಮೆಗಳನ್ನು ರಚಿಸಿರುವುದು ಸಾಮೂಹಿಕ ಸುಪ್ತಚೇತನದ ಪ್ರಭಾವದಿಂದಲೆ ಎಂದು ವಾದ ಮಂಡಿಸುತ್ತಾನೆ. ಹಾಗಾಗಿ ಈ ಪರಂಪರೆಯ ಚರ್ಚೆಗೆ ಫ್ರಾಯ್ಡ್ ಗಿಂತ ಯೂಂಗ್ ಹೆಚ್ಚು ನೆರವಿಗೆ ಬರುತ್ತಾನೆ. ಲೇಖನದಲ್ಲಿ ಅಡಿಗರು ಹರಿಹರನ ಓಘದಿಂದ ಸ್ಫೂರ್ತಿ ಪಡೆದರು ಎಂಬಂತಿದೆ. ಇದು ನನ್ನ ಮಿತಿಯಲ್ಲಿ ತಪ್ಪು ಎಂದು ಕಾಣುತ್ತದೆ. ಅಡಿಗರ ಬಹುತೇಕ ಅಂದರೆ ಶೇ ೯೮ ಕಾವ್ಯ ಪುರಾಣಪ್ರತಿಮೆಗಳನ್ನು ಅರ್ವಾಚೀನ ಗೊಳಿಸುವ ನಿಟ್ಟಿನಲ್ಲಿವೆ. ಬತ್ತಲಾರದ ಗಂಗೆ, ಕಟ್ಟುವೆವು ನಾವು, ಶ್ರೀ ರಾಮನವಮಿಯ ದಿವಸ ಈ ತರದ ಕೆಲವು ಪದ್ಯಗಳು ಉಳಿದೆರಡು ಪರ್ಸೆಂಟ್. ಸಾಲದೆಂಬಂತೆ ಕನ್ನಡ ವಿಮರ್ಶೆಯಲ್ಲಿ ಅಡಿಗರ ಕುರಿತಂತೆ ಒಂದು ಹೇಳಿಕೆ ಸುಪ್ರಸಿದ್ಧವಾಗಿದೆ "ಅಡಿಗರು ಬರೆದದ್ದು ಒಂದೇ ಪದ್ಯ" ಏನನ್ನೂ ಓದದೆ ಕಾವ್ಯಬರೆಯುತ್ತೇನೆಂಬ ಪ್ರಭೃತಿಯ ಕವಿಗಳು ತುಸು ಹೆಚ್ಚೇ ಇದ್ದಾರೆ. ಈಗ ಅವರು ನಮಗೆ ದರ್ಶನಕ್ಕೂ ಸಿಗುತ್ತಾರೆ.


| Nataraj Huliyar Replies

೧. ಅಡಿಗರ ಸುದೀರ್ಘ ಕವಿತೆಗಳ ನಿಕಟ ಓದು ಈ ಅಂಶವನ್ನು ಸೂಚಿಸುತ್ತದೆ. ೨. ಯೂಂಗ್ ಪರಿಕಲ್ಪನೆ Collective Unconscious. ಸಾಮೂಹಿಕ ಅಪ್ರಜ್ಞೆ


| ನವೀನ್ ಕುಮಾರ್

ಕವಿ ಪರಂಪರೆಯ ಅರಿವಿಲ್ಲದೆ ವರ್ತಮಾನದಲ್ಲಿ ಸಾಹಿತ್ಯವನ್ನು ಸೃಜಿಸಲಾರ. ಇಡೀ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಪರಂಪರೆಯ ಮಹತ್ವ ಗೊತ್ತಾಗುತ್ತದೆ. ಇಂದಿನ ಕಾವ್ಯ ರಚನೆಯನ್ನು ಗಮನಿಸಿದಾಗ ತೋಚಿದ್ದನ್ನು ಗೀಚುವಂತೆ ಆಗಿದೆ. ಪರಂಪರೆಯ ಬಗ್ಗೆ ಎಲಿಯಟ್ ನ ಅಭಿಪ್ರಾಯ ಒಪ್ಪುವಂತಹದ್ದೆ.


| ಎಂ.ಜಿ. ಚಂದ್ರಶೇಖರಯ್ಯ

"ಪರರ ಓದದೆ ಬರೆವುದೊಂದಗ್ಗಳಿಕೆ" ಎಂದು ಭ್ರಮಿಸಿದವರೂ "ನಾನು ಸಂಸ್ಕೃತದಲ್ಲಿರುವುದನ್ನು ಓದಲ್ಲ, ಅದು ಬ್ರಾಹ್ಮಣರದು" ಎಂಬ "ಜಾತ್ಯತೀತ"ರಿಂದ ಕನ್ನಡ ಸಾಹಿತ್ಯಕ್ಕೆ ಬಿಡುಗಡೆ ಬೇಕಾಗಿದೆ.


| ರವಿಕುಮಾರ್ ನೀಹ

ಹಿಂದಿನವರನ್ನು ಓದಿಕೊಳ್ಳುವುದೆಂದರೆ ಹೊರೆ ಎಂದು ಈಗಿನ ಬರಹಗಾರರು ಭಾವಿಸಿದ್ದರೆ. ಹಿಂದಣ ಅನಂತವನು ಅರಿಯದೆ ಇಂದನ್ನು ಹೇಗೆ ಕಾಣುವುದು. ಹೊಸಬರಹಗಾರರಿಗೆ ಪರಂಪರೆಯ ಕತೆ, ಕಾವ್ಯಗಳನ್ನು ಓದಿಕೊಳ್ಳಿ ಎಂದರೆ ಅವುಗಳನ್ನು ಓದಿದರೆ ಸ್ವತಂತ್ರವಾಗಿ ಬರೆಯಲಿಕ್ಕಾಗಲ್ಲ.. .. ಅದನ್ನೇ ಭಟ್ಟಿ ಇಳಿಸಿದ್ದೀಯಾ ?ಅಂತ ಓದುಗರು ಆಡಿಕೊಳ್ಳುತ್ತಾರೆ ಎಂದುತ್ತರಿಸುತ್ತಾರೆ.. ಮುಂದುವರಿದು ನಿಮ್ಮ ಕತೆಗಳಲ್ಲಿ ದೇವನೂರು, ಬೆಸಗರಹಳ್ಳಿ ನೆರಳಿದೆ. ಕಾವ್ಯದಲ್ಲಿ ಎನ್ ಕೆ ನೆರಳಿದೆಯಲ್ಲ ಎಂದರೆ.. ನಾನು ಅವರನ್ನು ಓದೇ ಇಲ್ಲ. ಇವೆಲ್ಲಾ ನನ್ನವೇ ಎಂದು ಪ್ರಮಾಣ ಮಾಡುತ್ತಾರೆ... ಇಂಥ ಬರಹಗಾರಿಗೆ ತುಂಬಾ ಮುಖ್ಯವಾದ ನೆಲೆಯನ್ನು ಸೂಚಿಸಿದ್ದೀರಿ ಸಾರ್.. ಫರಂಪರೆ ಅರಿವಿಲ್ವದೆ ಹೊಸದನ್ನು ಕಟ್ಟುವ ಬಗೆ ನನಗಂತೂ ಕಾಣುತ್ತಿಲ್ಲ..


| ವಲಿ ಆರ್

ಆಧುನಿಕೋತ್ತರ ಸಾಹಿತ್ಯದ ಪ್ರಧಾನ ಲಕ್ಷಣವಾದ ಅಂತರ್ ಪಠ್ಯೀಯತೆ ಬಗ್ಗೆ ಎರಡೂ ಲೇಖನಗಳಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಸರ್.


| ಕೆ. ಪುಟ್ಟಸ್ವಾಮಿ

ನಿಯಮಗಳನ್ನು ಮುರಿಯಲು ಮೊದಲು ನಿಯಮಗಳು ತಿಳಿದಿರ್ಬೇಕು ಎನ್ನುವ ಭೋರ್ಹೆಸ್ ಮಾತುಗಳ ಬಗ್ಗೆ ಹಿಂದಿನ ಸಾಹಿತಿಗಳಲ್ಲಿ ನಂಬಿಕೆಯಿತ್ತು. ಹದಿಂನೆಂಟು ವರ್ಷದ ತೇಜಸ್ವಿ ಬರೆದ ಕವನಗಳನ್ನು ಓದಿ ಹಸುಳೆಯ ಮೊದಲ ತೊದಲು ನುಡಿಯಂತೆ ಮನೋಹರವಾಗಿವೆ ಎಂದು ಪತ್ರ ಬರೆದು ಹೇಳುವ ಕುವೆಂಪು ಕಾವ್ಯ ಬರೆಯುವ ಮುನ್ನ ನೀನು ನಾನು ಹಿಂದೆ ಹೇಳಿದಂತೆ ಕನ್ನಡ ಛಂದಸ್ಸಿನ ಸ್ಥೂ ಲ ಪರಿಚಯ ವನ್ನಾದರೂ ಪರಿಚಯ ಮಾಡಿಕೊಳ್ಳಬೇಕು ಎನ್ನುತ್ತಾರೆ. ಯಾಕೆಂದರೆ ಭಾಷೆಗೆ ಸಾಹಿತ್ಯದ ಶುದ್ಧಿ ಹೇಗೆ ಮುಖ್ಯವೋ ಹಾಗೆ ಕಾವ್ಯ ರಚನೆಗೆ ಛಂದಸ್ಸು. ಕಾವ್ಯ ಪರಂಪರೆ, ಛಂದಸ್ಸು ಮತ್ತು ಭಾಷೆಯನ್ನು ಅರಿತುಕೊಳ್ಳಲು ಸಲಹೆ ಮಾಡುತ್ತಾರೆ. ಬೈಸಿಕಲ್ಲ ಸವಾರಿಯನ್ನು ಚನ್ನಾಗಿ ಸವಾರಿ ಮಾಡುವುದು ಕಲಿತ ಮೇಲೆ ಕೈಬಿಟ್ಟೋ ಕಾಲು ಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ಕವಿ ತನಗೆ ಬೇಕಾದ ಹಾಗೆ ಬರೆಯುವ ಸ್ವಾತಂತ್ರ್ಯ ಪಡೆಯುತ್ತಾನೆ. ಎಲ್ಲವನ್ನೂ ಒಂದು ನಿಯಮಕ್ಕೆ ಅಧೀನವಾಗಿ ಕಲಿಯಬೇಕು, ನನ್ನ ಅನುಭವದಿಂದ ಹೇಳುತ್ತಿದ್ದೇನೆ ಎನ್ನುತ್ತಾರೆ. ಭೋರ್ಹೆಸ್ ಹೇಳಿದ ಮಾತುಗಳನ್ನೇ ಕುವೆಂಪು ಬೇರೊಂದು ರೀತಿಯಲ್ಲಿ ಹೇಳಿದ್ದಾರೆ ಅನಿಸಿತು. ಅಂದಹಾಗೆ ಬರಹಗಾರ ಮಿತ್ರನೊಬ್ಬ ಪೂರ್ವಸೂರಿಗಳನ್ನು ಓದಿದರೆ ಅವರ ಅನಗತ್ಯ ಪ್ರಭಾವದಿಂದ ತನ್ನ ಒರಿಜಿನಾಲಿಟಿ ಹಾಳಾಗಿಬಿಡುತ್ತೆ ಎಂದು ಆತಂಕದಿಂದ ಯಾರನ್ನೂ ಓದತ್ತಿರಲಿಲ್ಲ. ಕೊನೆಗೆ ಏನೂ ಬರೆಯಲಿಲ್ಲ.


| Dr.G.Gangaraju

'ಸಂತೆಯ ಹೊತ್ತಿಗೆ ಮೂರು ಮೊಳ' ಎನ್ನುವ ನುಡಿಗಟ್ಟು ತೇಜಸ್ವಿಯವರ ಸೀರೆಯಂಗಡಿಯಲ್ಲಿ ಮಾದರಿಗೆ ನಿಲ್ಲಿಸಿರುವ ಪದ್ಯದಲ್ಲಿ " ಸರ್ವರ ಸಮ್ನತಿ ಸಂತೆಯ ಹಾದಿ" ಎನ್ನುವ ಪ್ರತೀಕವಾಗಿ ಪ್ರಯೋಗವಾಗಿರುವುದನ್ನು ಗಮನಿಸಬಹುದು. ಹಾಗೇ ಕಾವ್ಯಮೀಮಾಂಸೆಯಂಥ ಪ್ರಸ್ತುತವಲ್ಲದ ವಿಷಯಗಳನ್ನು ಏಕೆ ಓದಬೇಕು ಎನ್ನುವ ಎಂ.ಎ. ವಿದ್ಯಾರ್ಥಿ ತೇಜಸ್ವಿಯವರ ಆಕ್ಷೇಪಣಾತ್ಮಕ ಪ್ರಶ್ನೆಗೆ ತೀ.ನಂ.ಶ್ರೀ ಯವರು ಕೊಟ್ಟ ಉತ್ತರ ಮತ್ತು ಕಾವ್ಯರಚನೆಯ ಆರಂಭದ ಹಂತದಲ್ಲಿ ಹೊಸ ಕವಿಗಳಿಗೆ ಛಂದಸ್ಸಿನ ಅಗತ್ಯ ಹಾಗೂ ಆನಂತರ ಅದರಿಂದ ಬಿಡುಗಡೆ ಕುರಿತು ತೇಜಸ್ವಿಯವರಿಗೆ ಕುವೆಂಪುರವರು ಸೈಕಲ್ ಕಲಿಕೆ ಹಂತದಲ್ಲಿನ ಎಚ್ಚರ ಮತ್ತು ಪಳಗಿದ ನಂತರದ ಲೀಲಾಜಾಲ ಚಾಲನೆ ಕುರಿತು ನೀಡುವ ನಿದರ್ಶನ ಸಹ ಯುವ ಲೇಖಕರಿಗೆ ಪರಂಪರೆ ಮಹತ್ವ ಕುರಿತ ಮುಖ್ಯ ಪಾಠಗಳೇ ಹೌದು


| Huchegowda H

ಯಾವುದೇ ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡುವವರು ಅದೇ ಪ್ರಕಾರವನ್ನು ವಿಶೇಷವಾಗಿ ಅಧ್ಯಯನ ಮಾಬೇಕು ಅಂದುಕೊಂಡಿದ್ದೇನೆ. ತಾವು ಯಾವುದೇ ಪ್ರಕಾರವೇ ಆಗಲಿ ನಿಕಟ ಓದು ಬೇಕು ಎಂದಿದ್ದೀರಿ.. ಸಂತೋಷ. ನಿಮ್ಮ ಲೇಖನ ಹಲವರಿಗೆ ಪ್ರಚೋದನೆ ನೀಡಿ ಪ್ರತಿಕ್ರಿಯೆಗೆ ಕಾರಣವಾಗಿ ವಿಷಯದ ವಿವಿಧ ಮಗ್ಗಲುಗಳು ಹೊರಬಂದಿವೆ. ಬರೆಯುವ ಹೊಸ ತಲೆಮಾರಿನ ಬಗೆಗೆ ತಮಗೆ ಅದಮ್ಯ ಕುತೂಹಲ, ಆಸಕ್ತಿ. ಅದು ಈ ಲೇಖನದಲ್ಲೂ ವ್ಯಕ್ತವಾಗಿದೆ. ಧನ್ಯವಾದಗಳು ಸರ್.


| Shamarao

ಪ್ರಾಚೀನ ಸಾಹಿತ್ಯ ನಮಗೇಕೆ ಎನ್ನುವ ಪ್ರಶ್ನೆಗೆ ಪರಿಣಾಮಕಾರಿ ಉತ್ತರ. ಬೇರುಗಳಿಲ್ಲದೆ ಬೆಳೆಯುವ ಸಾಹಸಿಗಳು ಎಷ್ಟು ಕಾಲ ಬದುಕಬಲ್ಲರು?


| ಬಿದರಿ ಚಂದ್ರಕಲಾ

ಲೇಖನ, ಭಾಷಾ ಕಲಿಕಾಥಿ೯ಗಳನೇಕರು ಇಂದು ಕೇಳುತ್ತಿರುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದೆ. ಕೆಲ ವಿದ್ಯಾರ್ಥಿಗಳು, ಪಠ್ಯ ಸರಿಯಾಗಿ ಅಥ೯ವಾಗಲಿ ಎಂದು ನೀಡುತ್ತಿದ್ದ ವಿವರಣೆಯನ್ನು ತಡೆದು ಪರೀಕ್ಷೆಗೆ ಬೇಕಾದಷ್ಟನ್ನೇ ಹೇಳಿ ಹೆಚ್ಚಿನದು ಯಾಕೇ ಎಂದದ್ದಿದೆ. ಹಳಗನ್ನಡ ಪಠ್ಯದಲ್ಲಿ ಆಸಕ್ತಿ ಬೆಳೆಸಿಕೊಂಡವರು ಆಸ್ವಾದಿಸಿದ್ದೂ ಇದೆ. ಹಳೆಯದೆಲ್ಲ ಕೊಳೆಯಲ್ಲ. ಅರಿತವರ ಜೇನ್ಗೊಡ ಎಂಬುದನ್ನು ತಿಳಿಸಲು ಇಂಥ ಬರಹಗಳನ್ನು ಯುವಕರು ಮತ್ತೆ ಮತ್ತೆ ಓದುವಂತೆ ಮಾಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಪ್ರಸ್ತುತ ಲೇಖನ ಪರಂಪರೆಯ ತಿಳುವಳಿಕೆಯ ಅವಶ್ಯಕತೆಯನ್ನು ಮನಗಾಣಿಸಿದೆ. ಧನ್ಯವಾದಗಳು


| ವೈದೇಹಿ

ತುಂಬಾ ಚೆನ್ನಾಗಿ ಹೇಳಿದ್ದೀರಿ ನಟರಾಜ್. ಕಣ್ಣು ತೆರೆಸುವಂತಿದೆ.


| ರಾಮಚಂದ್ರ ನಾಯಕ

ಪರಂಪರೆಯ ಪ್ರತೀಕವನ್ನು ದಕ್ಕಿಸಿಕೊಳಲಾರದೆ ಬೆಳೆಯಲು ಸಾಧ್ಯವಿಲ್ಲ


| ತಿಪ್ಪೇಸ್ವಾಮಿ

ಮಾದರಿ ಬರಹ


| Shiv

ಎಲ್ಲಾ ಯುವ ಕವಿಗಳೂ ನಿಗಾ ಮಾಡಿ ಓದಬೇಕಾದ ಉತ್ಕೃಷ್ಟ ಬರಹ


| Sanganagouda

ನಮ್ಮ ಸಮಕಾಲಿನ ಕಥೆಗಾರರ ಕಥೆಗಳನ್ನು ಓದಿದಾಗ ನನಗೆ ಹೀಗೆ ಅನಿಸಿದ್ದಿದೆ ಸರ್. ನಾನು ಎಮ್ ಎ ಕನ್ನಡ ಮಾಡಿ ಕನ್ನಡ ಸಾಹಿತ್ಯ ಪಠ್ಯವನ್ನಾಗಿ ಓದಿದವನಾಗಿದ್ದರಿಂದ. ಈ ನೆಲದಲ್ಲಿನ ಸಾಂಸ್ಕೃತಿಕ ರಾಜಕಾರಣದ ಅರಿವಿಟ್ಟುಕೊಂಡೇ ಒಂಭತ್ತು ಕಥೆಗಳನ್ನು ಬರೆದಿರುವೆ. ನಾನ್ ಅಕಾಡೆಮಿಕ್ ಗೆಳೆಯರು ಕಥೆ ಬರೆಯುತ್ತಿದ್ದಾರೆ . ಅವರಾರೂ ಹಿಂದಿನ ಪರಂಪರೆ ಬಗ್ಗೆ ಒಲವು ಆಸಕ್ತಿ ಇಲ್ಲ.... ನೀವು ಹೇಳಿದ್ದ ಸತ್ಯ. ನೀವು ಬರೆದ "ಕವಿ ಜೋಡಿಯ ಆತ್ಮಗೀತ " ಇಂಥದ್ದೊಂದು ಗುರುತಿಸಿದ್ದೆ...


| ಗುರು ಜಗಳೂರು

ಈ ವಾರದ ಬರಹ ಬಹಳ ಮೌಲಿಕವಾದುದು.ಎಷ್ಟೊಂದು ಉದಾಹರಣೆಗಳು.ಅರ್ಜೆಂಟಿನಾದಿಂದ ಅಕ್ಕಮಹಾದೇವಿಯವರೆಗೆ ಸುಧೀರ್ಘ ಪಯಣ!


| ಡಾ. ನಿರಂಜನ ಮೂರ್ತಿ ಬಿ ಎಂ

ಅತ್ಯಂತ ಮೌಲ್ಯಯುತ ಬರಹ. ಪರಂಪರೆಯ ಬುನಾದಿಯಿಲ್ಲದೆ ಸಾಹಿತ್ಯದ ಮಹಲು ಕಟ್ಟಲಾಗದು, ನಿಲ್ಲಿಸಲಾಗದು. ಕಟ್ಟಿ ನಿಲ್ಲಿಸಿದರೂ ಅದು ಬಹಳ ದಿನ ಬಾಳಲಾರದು. ಬೇರಿಲ್ಲದ ಗಿಡಮರಗಳುಂಟೆ? ಕಣ್ಣು ತೆರೆಸುವ ಅತ್ಯುತ್ತಮ ವಿಶ್ಲೇಷಣೆ! ಧನ್ಯವಾದಗಳು.


| ಮಾಲತಿ ಪಟ್ಟಣಶೆಟ್ಟಿ

ಬರಹಗಳಲ್ಲಿ ಸೃಜನಶೀಲತೆ ಹಳೆಯದರಲ್ಲಿಯೇ ಇರಲಿ, ಹೊಸದರಲ್ಲಿಯೇ ಇರಲಿ ಓದುಗರಿಗೆ ಮುದ ನೀಡುತ್ತದೆ. ಸಾಹಿತ್ಯ ರಚನಾಕಾರರು ಸಮಗ್ರ ಸಾಹಿತ್ಯವನ್ನು ಓದಿಕೊಳ್ಳು ವಗತ್ಯವಿದೆ. ಅಷ್ಟೇ ಅಲ್ಲ ಬೇರೆ ಭಾಷಾಸಾಹಿತ್ಯವನ್ನೂ ಓದಿಕೊಳ್ಳಬೇಕು. ಏಕೆಂದರೆ ನಮಗೆ ನಮ್ಮ ರಚನೆ ಗೆ ಯಾ ವುದು ಪ್ರೇರಣೆ ಕೊಡುತ್ತದೋ!


| Aiyasha

ಇಂದಿನ ವಿದ್ಯಾರ್ಥಿಗಳಿಗಂತೂ ಕಣ್ಣು ತೆರೆಸುವ ಲೇಖನವೇ ಹೌದು. ಇಂದಿನ ವಿದ್ಯಾರ್ಥಿಗಳು ಕೇಳುವುದು ನಾವು ಭಾಷೆಯನ್ನು ಏಕೆ ಓದಬೇಕು ಎಂದು.


| ರವಿಕುಮಾರ ಎನ್.ಎಸ್.

ಪಂಪ, ಕುಮಾರವ್ಯಾಸ, ಅಥವಾ ಪ್ರಾಚೀನ ಪಠ್ಯಗಳು ನಮಗೇಕೆ ಬೇಕು ಎನ್ನುವ ಪ್ರಶ್ನೆ ವಯಸ್ಸಾದ ತಂದೆ ತಾಯಿಗಳು ನಮಗೆ ಏಕೆ ಬೇಕು ಎಂದಂತೆ, ಪ್ರಾಚೀನ ಕಾಲದ ಆಚಾರ ವಿಚಾರಗಳು, ಸಂಸ್ಕ್ರತಿ ಸಂಪ್ರದಾಯಗಳು ನಮಗೇಕೆ ಬೇಕು ಎಂದಂತೆ, ಅಪಕ್ವ ಮನಸ್ಸಿಗೆ ಮಾತ್ರ ಇಂಥಹ ಆಲೋಚನೆಗಳು ಉದ್ಬವಿಸಲು ಸಾಧ್ಯ. ಹಳೆಯದನ್ನು ತಿಳಿಯದವ ಹೊಸದನ್ನು ಸೃಷ್ಠಿಸಲಾರ.


| ರವಿಕುಮಾರ ಎನ್.ಎಸ್.

ಪಂಪ, ಕುಮಾರವ್ಯಾಸ, ಅಥವಾ ಪ್ರಾಚೀನ ಪಠ್ಯಗಳು ನಮಗೇಕೆ ಬೇಕು ಎನ್ನುವ ಪ್ರಶ್ನೆ ವಯಸ್ಸಾದ ತಂದೆ ತಾಯಿಗಳು ನಮಗೆ ಏಕೆ ಬೇಕು ಎಂದಂತೆ, ಪ್ರಾಚೀನ ಕಾಲದ ಆಚಾರ ವಿಚಾರಗಳು, ಸಂಸ್ಕ್ರತಿ ಸಂಪ್ರದಾಯಗಳು ನಮಗೇಕೆ ಬೇಕು ಎಂದಂತೆ, ಅಪಕ್ವ ಮನಸ್ಸಿಗೆ ಮಾತ್ರ ಇಂಥಹ ಆಲೋಚನೆಗಳು ಉದ್ಬವಿಸಲು ಸಾಧ್ಯ. ಹಳೆಯದನ್ನು ತಿಳಿಯದವ ಹೊಸದನ್ನು ಸೃಷ್ಠಿಸಲಾರ.




Add Comment


Nataraj Huliyar on Book Prize Awardees

YouTube






Recent Posts

Latest Blogs