ಕಾಮಿಡಿಯ ಪಾಲಿಟಿಕ್ಸ್

 ಸಾಕ್ರೆಟಿಸ್ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೨೪೦೦ ವರ್ಷಗಳ ಕೆಳಗೆ ಬದುಕಿದ್ದ ದಿಟ್ಟ, ಸ್ವತಂತ್ರ ಗ್ರೀಕ್ ಫಿಲಾಸಫರ್. ಸಾಕ್ರೆಟಿಸ್ ತರುಣ ಜನಾಂಗವನ್ನು ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಿದ್ದ. ‘ನಮ್ಮನ್ನು ನಾವು ಪರೀಕ್ಷೆಗೆ ಒಡ್ಡಿಕೊಳ್ಳದ ಜೀವನ ಬದುಕಲು ಲಾಯಕ್ಕಲ್ಲ’ ಎಂದು ಹೇಳುತ್ತಿದ್ದ. ಸಾಕ್ರೆಟಿಸ್ ಹೊಸ ತಲೆಮಾರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾನೆಂದು ಹಳೆಯ ತಲೆಮಾರಿನವರು ಸಿಟ್ಟಾಗಿದ್ದರು. 

ಸಾಕ್ರೆಟಿಸ್ ಬಗ್ಗೆ ಹಳಬರ ಪೂರ್ವಗ್ರಹಗಳು ಗ್ರೀಕ್ ವಿನೋದ ನಾಟಕಕಾರ ಅರಿಸ್ಟೋಫನಿಸ್‌ನ ನಾಟಕಗಳಲ್ಲೂ ಸೇರಿಕೊಂಡವು. ಅರಿಸ್ಟೋಫನಿಸ್ (೪೪೬ ಬಿ.ಸಿ.- ೩೮೬ ಬಿ.ಸಿ.) ಮಹಾ ಪ್ರತಿಭಾವಂತ ನಾಟಕಕಾರ. ಕಾಮಿಡಿ ನಾಟಕ ಪ್ರಕಾರದ ಪಿತಾಮಹ. ತನ್ನ ಕಾಲದ ರಾಜನನ್ನೇ ಗೇಲಿ ಮಾಡುತ್ತಿದ್ದ; ರಾಜನ ಬಗ್ಗೆ ಪ್ರಜೆಗಳ ಮನಸ್ಸಿನಲ್ಲಿದ್ದ ಅಸಮಾಧಾನ, ಸಿಟ್ಟು, ಭಿನ್ನಮತಗಳಿಗೆ ದನಿಯಾಗಿದ್ದ. ಡಯೋನಿಸಿಸ್ ಎಂಬ ಕಾಳಶಕ್ತಿಗಳ ದೇವತೆಯನ್ನು ಕೂಡ ಗೇಲಿ ಮಾಡುತ್ತಿದ್ದ.

ಹೀಗೆ ಅರಿಸ್ಟೋಫನಿಸ್ ಜನರನ್ನು ಆಳುವ ರಾಜ, ದೇವತೆ ಎಂಬ ಎರಡೂ ಬಗೆಯ ಸರ್ವಾಧಿಕಾರಗಳನ್ನು ನೋಡಿ ಜನ ನಗುವಂತೆ ಮಾಡುತ್ತಿದ್ದ; ಆ ಮೂಲಕ ನಾಟಕದ ನೋಡುಗರು ನಿರ್ಭಯ ಮನಸ್ಸಿನ ವ್ಯಕ್ತಿಗಳಾಗುವಂತೆ ಮಾಡುತ್ತಿದ್ದ. ಆ ಮೂಲಕ ತನ್ನ ಕಾಲದ ಜನಾಭಿಪ್ರಾಯವನ್ನು ರೂಪಿಸುತ್ತಿದ್ದ.

ಆದರೆ ಅದೇ ಕಾಲದಲ್ಲಿ ಅಥೆನ್ಸಿಗೆ ಹೊಸ ಚಿಂತನೆಗಳನ್ನು ತಂದ ಹೊರಗಿನವರ ಬಗೆಗೆ, ಇತರ ದೇಶಗಳ ಚಿಂತಕರ ಬಗೆಗೆ, `ವಿದೇಶೀಯರ’ ಬಗ್ಗೆ ಅರಿಸ್ಟೋಫನಿಸ್ ಪೂರ್ವಗ್ರಹ ಬೆಳೆಸಿಕೊಂಡ. ಆ ಕಾಲದಲ್ಲಿ ಗ್ರೀಸ್ ದೇಶದ ಅಥೆನ್ಸ್ ಹೊಸ ಚಿಂತನೆಗಳ ಚರ್ಚೆಯ ನೆಲೆವೀಡಾಗಿತ್ತು. ಅಥೆನ್ಸಿಗೆ ಹೊಸ ಡಯಲೆಕ್ಟಿಕಲ್ ಚಿಂತನೆಯ ಸೋಫಿಸ್ಟರೂ ಬಂದರು. ಅವರು ಕೂಡ ಹಾಲಿಯಿದ್ದ ರೂಢಿ ಮಾರ್ಗಗಳನ್ನು ಪ್ರಶ್ನಿಸುವವರೇ ಆಗಿದ್ದರು.

ಅಥೆನ್ಸಿನ ಹಳಬರಿಗೆ ಅದು ಹೇಗೋ ಏನೋ ತಮ್ಮ ಅಥೆನ್ಸಿನಲ್ಲಿರುವ ತತ್ವಜ್ಞಾನಿ ಸಾಕ್ರೆಟಿಸ್ ಈ ಸೋಫಿಸ್ಟ್ ಮಾರ್ಗದ ಚಿಂತಕರ ಪರವಾಗಿದ್ದಾನೆ ಎಂಬ ಪೂರ್ವಗ್ರಹ ಬೆಳೆಯಿತು. ಅಥವಾ ಅದು ಅರಿಸ್ಟೋಫನಿಸ್ ಎಂಬ ನಾಟಕಕಾರನ ಮನಸ್ಸಿನಲ್ಲಿ ಹೆಚ್ಚು ಬೆಳೆಯಿತೋ ಏನೋ! ಹೇಳುವುದು ಕಷ್ಟ. 

ತನ್ನ ಕಾಲದ ಕ್ರಾಂತಿಕಾರಿ ತತ್ವಜ್ಞಾನಿ ಸಾಕ್ರೆಟಿಸ್ ಬಗ್ಗೆ ತನ್ನ ಪೂರ್ವಗ್ರಹ ಹಾಗೂ ಆ ಕಾಲದ ಪೂರ್ವಗ್ರಹ ಎರಡೂ ಅರಿಸ್ಟೋಫನಿಸನಲ್ಲಿ ಸೇರಿಕೊಂಡಂತಿವೆ. ಅರಿಸ್ಟೋಫನಿಸ್ ತನ್ನ ’ದ ಕ್ಲೌಡ್ಸ್’ ನಾಟಕದಲ್ಲಿ ಸಾಕ್ರಟಿಸ್‌ನನ್ನು ಪಾತ್ರವಾಗಿ ಮಾಡಿ ಕ್ರೂರವಾಗಿ ಅಣಕಿಸಿದ. ಆ ಕಾಲದ ಅಥೆನ್ಸ್‌ನಲ್ಲಿ ಪ್ರತಿ ವರ್ಷ ನಾಟಕ ಸ್ಪರ್ಧೆಗಳು ನಡೆಯುತ್ತಿದ್ದವು. ಅಲ್ಲಿ ಗೆಲ್ಲಲು ನಾಟಕಕಾರರು ಸಣ್ಣ ಪುಟ್ಟ ಟ್ರಿಕ್‌ಗಳನ್ನು ಕೂಡ ಮಾಡುತ್ತಿದ್ದಂತೆ ಕಾಣುತ್ತದೆ!

ಆದರೆ ಅರಿಸ್ಟೋಫನಿಸ್ ನಾಟಕದ ಬರ್ಬರ ಅಣಕ ಹಳಬರ ಮನಸ್ಸಿನಲ್ಲಿ ಸಾಕ್ರೆಟಿಸ್‌ನ ಸ್ವತಂತ್ರ ಮನೋಭಾವದ ಬಗ್ಗೆ, ವೈಚಾರಿಕತೆಯ ಬಗ್ಗೆ ಇದ್ದ ವಿಷವನ್ನು ಮತ್ತಷ್ಟು ಹೆಚ್ಚಿಸಿತು. ಕೊನೆಗೆ ಅಥೆನ್ಸಿನ ನ್ಯಾಯಮಂಡಲಿ ಸಾಕ್ರೆಟಿಸ್‌ಗೆ ವಿಷ ಕುಡಿಸುವ ಶಿಕ್ಷೆ ಕೊಟ್ಟಿದ್ದರಲ್ಲಿ ಅರಿಸ್ಟೋಫನಿಸ್ ನಾಟಕದ ಕ್ರೂರ ಪ್ರಭಾವವೂ ಇತ್ತು ಎಂದು ಪ್ಲೇಟೋ ಟೀಕಿಸುತ್ತಾನೆ. 

ಹೆಮ್ಲಾಕ್ ಎಂಬ ವಿಷ ಕುಡಿಸುವ ಆಜ್ಞೆ ಮಾಡುವ ಮುನ್ನ ನ್ಯಾಯಮಂಡಲಿ ಸಾಕ್ರಟಿಸ್‌ನನ್ನು `ನೀನು ಹೇಳಿರುವುದು ತಪ್ಪು ಎಂದು ಒಪ್ಪಿಕೊಂಡರೆ ನಿನ್ನ ಶಿಕ್ಷೆ ರದ್ದು ಮಾಡುತ್ತೇವೆ’ ಎಂದು ಹೇಳಿತು. ಆಗ ಸಾಕ್ರೆಟಿಸ್ ಹೇಳಿದ: `ನೀವು ನನ್ನನ್ನು ಬಿಡುಗಡೆ ಮಾಡಿದರೂ, ಬಿಡುಗಡೆ ಮಾಡದಿದ್ದರೂ ನಾನು ಹೇಳಿದ್ದು ಸರಿ ಎಂದೇ ಹೇಳುತ್ತೇನೆ.’ 

ಇಂಥ ದಿಟ್ಟ ತತ್ವಜ್ಞಾನಿ ಸಾಕ್ರೆಟಿಸ್ ಬಗ್ಗೆ ಅರಿಸ್ಟೋಫನಿಸ್ ಥರದವರಿಗೆ ಇದ್ದ ಪೂರ್ವಗ್ರಹ ಈ ಕಾಲದ ಕಾಮಿಡಿಗಳಲ್ಲೂ ಇರಬಲ್ಲದು. ಆದ್ದರಿಂದಲೇ ಕಾಮಿಡಿ ನೋಡಿ ನಗುವ ಮುನ್ನ ಅಥವಾ ನಕ್ಕ ನಂತರ, ನಗಿಸುವವರ ಉದ್ದೇಶ ಏನೆಂಬುದನ್ನು ಕಾಣುವ ವೈಚಾರಿಕ ನೋಟ ನಮಗಿರಬೇಕಾಗುತ್ತದೆ. ಒಂದು ಕಾಲಕ್ಕೆ `ಜನಪ್ರಿಯ’ ಎನ್ನಿಸಿಕೊಂಡಿದ್ದ ಮಾಸ್ಟರ್ ಹಿರಣ್ಣಯ್ಯ ಥರದವರ ಅಗ್ಗದ ಕಾಮಿಡಿಗಳು ನೇರವಾಗಿಯೇ ಶೂದ್ರವಿರೋಧಿಗಳಾಗಿದ್ದವೆಂಬುದು ನಿಮಗೆ ನೆನಪಿರಬಹುದು. ಆದ್ದರಿಂದಲೇ ಜನರನ್ನು ನಗಿಸುವ ಮುಸುಕಿನ ಮರೆಯಲ್ಲಿ ಕಾಮಿಡಿಗಳು ಮಾಡುವ ಕ್ರೂರ, ಚಿಲ್ಲರೆ ರಾಜಕಾರಣವನ್ನು ಜಾಣ ಜಾಣೆಯರು ವಿಮರ್ಶಾತ್ಮಕವಾಗಿ ಗಮನಿಸುತ್ತಿರಬೇಕಾಗುತ್ತದೆ. 

ತನ್ನ ಬಗೆಗಿನ ಅಣಕವಿದ್ದ ನಾಟಕದ ಪ್ರದರ್ಶನ ನಡೆಯುತ್ತಿದ್ದಾಗ ಸಾಕ್ರೆಟಿಸ್ ಹೇಗೆ ಪ್ರತಿಕ್ರಿಯಿಸಿದ? ಎ.ಎನ್. ಮೂರ್ತಿರಾವ್ ಅನುವಾದಿಸಿರುವ ‘ಸಾಕ್ರೆಟಿಸನ ಕೊನೆಯ ದಿನಗಳು’ ಪುಸ್ತಕದಲ್ಲಿ ಒಂದು ಭಾಗವಿದೆ: ಒಮ್ಮೆ ಅಥೆನ್ಸಿನ ಬಯಲು ರಂಗಭೂಮಿಯಲ್ಲಿ ‘ದ ಕ್ಲೌಡ್ಸ್’ ನಾಟಕ ನಡೆಯುತ್ತಿತ್ತು. ಸಾಕ್ರೆಟಿಸ್‌ ಪಾತ್ರ ರಂಗದ ಮೇಲೆ ಬಂತು. ಈ ನಾಟಕ ತನ್ನನ್ನು ಗೇಲಿ ಮಾಡಿ, ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿ ಮಾಡಿದ್ದನ್ನು ಸಾಕ್ರೆಟಿಸ್ ಖುದ್ದು ನೋಡಿದ. ಸಾಕ್ರೆಟಿಸ್‌ಗೆ ಎಷ್ಟು ಆತ್ಮವಿಶ್ವಾಸ ಇತ್ತೆಂದರೆ, ಅವನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ‘ಈ ನಾಟಕದಲ್ಲಿ ಗೇಲಿಗೊಳಗಾಗುತ್ತಿರುವವನು ನಾನೇ’ ಎಂಬುದು ಎಲ್ಲರಿಗೂ ಕಾಣುವಂತೆ ಎದ್ದು ನಿಂತುಕೊಂಡ! 

ಸಾಕ್ರೆಟಿಸ್‌ಗೆ ಸಾವಿರಾರು ವರ್ಷಗಳ ಕೆಳಗೆ ಇದ್ದ ಆತ್ಮವಿಶ್ವಾಸ, ಹಾಸ್ಯಪ್ರಜ್ಞೆ ಹುಂಬ ಜನರ ಹುಸಿ ಭಜನೆಯ ಪರಾಕು ಪಂಪುಗಳಿಂದ ಉಬ್ಬುವ ಬಲೂನುಗಳಾದ ಈ ಕಾಲದ ನಾಯಕರಿಗೆ ಎಲ್ಲಿಂದ ಬಂದೀತು! ಅರವತ್ತು ವರ್ಷಗಳ ಕೆಳಗೆ, ತಮ್ಮನ್ನು ಗೇಲಿ ಮಾಡಿ ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಬರೆದ ಕಾರ್ಟೂನನ್ನು ನೆಹರು ತಮ್ಮ ಕಛೇರಿಯ ಗೋಡೆಯ ಮೇಲೆ ತೂಗು ಹಾಕಿಕೊಂಡಿದ್ದರು. ಆದರೆ ಅವರ ಪುತ್ರಿ ಇಂದಿರಾಗಾಂಧಿಯವರನ್ನು ಗೇಲಿ ಮಾಡಿದ್ದ ನಾಟಕವೊಂದು ನಡೆಯಲು ಇಂದಿರಾ ಭಕ್ತರು ಬಿಡಲಿಲ್ಲ! 
ಈ ಕಾಲದ ಸರ್ಕಾರಗಳಂತೂ ಸ್ಟ್ಯಾಂಡಪ್ ಕಾಮಿಡಿ ಮಾಡುವ ಹುಡುಗ, ಹುಡುಗಿಯರಿಗೆ ನಿತ್ಯ ಕಿರಿಕಿರಿ ಮಾಡುತ್ತಲೇ ಇರುತ್ತವೆ; ನಿತ್ಯವೂ ಈ ‘ಕಿರುಕುಳಜೀವಿ’(‘ಕಿಕುಜೀ’) ಗುಂಪುಗಳ ಉಪಟಳ ನಡೆಯುತ್ತಲೇ ಇರುತ್ತದೆ. ಮೊನ್ನೆ ಶ್ಯಾಮ್ ರಂಗೀಲ ಎಂಬ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಹಾಲಿ ಪ್ರೈಂ ಮಿನಿಸ್ಟರ್ ಎದುರು ವಾರಣಾಸಿಯಲ್ಲಿ ಚುನಾವಣೆಗೆ ನಿಲ್ಲಲು ಹೋದರೆ ಅವರ ನಾಮಪತ್ರವೇ ತಿರಸ್ಕೃತವಾದ ಪವಾಡ ನಡೆಯಿತು! 

ಇದು ನಮ್ಮ ದೇಶದ ಕತೆ! ಸಹಜ ನಗೆ ಕಳೆದುಕೊಂಡ ನಾಡು ಅಸಹನೆಯ ಬೀಡಾಗತೊಡಗುತ್ತದೆ. ಸಂಗೀತ, ಕಲೆ ಸಾಹಿತ್ಯಗಳ ಖದರ್ ಕಳೆದುಕೊಂಡ ಸಮಾಜಗಳು ಸ್ಮಶಾನಗಳಾಗುತ್ತವೆ; ಮನುಷ್ಯರು ರಕ್ಕಸರಾಗತೊಡಗುತ್ತಾರೆ. ಸರ್ವಾಧಿಕಾರ ಸೃಷ್ಟಿಯಾಗುತ್ತದೆ. 

ಆದರೆ ಅರಿಸ್ಟೋಫನಿಸ್ `ದ ಕ್ಲೌಡ್ಸ್’ ಥರದ ಕಾಮಿಡಿಯನ್ನು ನೋಡಿದಾಗ ಬರೆವ ಕಲೆಯ ಮತ್ತೊಂದು ಪ್ರಶ್ನೆ ಎದುರಾಗುತ್ತದೆ: ವೈನೋದಿಕ ನಾಟಕಕಾರನಾಗಲೀ, ಯಾವುದೇ ಥರದ ಲೇಖಕಿಯಾಗಲಿ, ಲೇಖಕನಾಗಲಿ, ಅವರ ಜೀವನ ದರ್ಶನ ಸಂಕುಚಿತವಾದರೆ, ವಸ್ತುನಿಷ್ಠ ನೋಟ ಮಂಕಾದರೆ ಅವರ ಬರವಣಿಗೆಗೆ, ಕಲೆಗೆ ಮಾರಕ ಹೊಡೆತ ಬೀಳುತ್ತದೆ. ಅದರ ಕೆಟ್ಟ ಪರಿಣಾಮ ಬರೆವವರ ಮೇಲೂ ಆಗುತ್ತದೆ. ಓದುವವರ ಮೇಲೂ ಆಗುತ್ತದೆ. 

ಅರಿಸ್ಟೋಫನಿಸ್‌ನ ಅದ್ಭುತ ಕಾಮಿಡಿ ಲೋಕದ ಬಗ್ಗೆ ಮುಂದೊಮ್ಮೆ ಬರೆಯುವೆ. ಸದ್ಯಕ್ಕೆ ಅಂಥ ಪ್ರತಿಭಾವಂತ ನಾಟಕಕಾರನ ಪೂರ್ವಗ್ರಹಗಳು ವಿಚಾರವಾದಿ ಸಾಕ್ರೆಟಿಸ್ ವ್ಯಕ್ತಿತ್ವಕ್ಕೆ ತಂದ ಕುತ್ತು ಎಂಥದೆಂಬುದನ್ನು ಮಾತ್ರ ದುಗುಡದಿಂದ ದಾಖಲಿಸುತ್ತಿರುವೆ. 

ಈ ಮಾತು ಬರೆವ ಗಳಿಗೆಯಲ್ಲಿ ನಮ್ಮ ಪ್ರತಿಭಾವಂತ ಲೇಖಕ ಲಂಕೇಶ್ ಒಮ್ಮೆ ರೈತ ಚಳುವಳಿಯನ್ನು ಬೆಂಬಲಿಸಿದ್ದರೂ, ಮುಂದೆ ನಾಡಿನ ದೊಡ್ಡ ರೈತನಾಯಕರಾದ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರ ಮೇಲೆ ಗೇಲಿಯ ಅಸ್ತ್ರ ಬಳಸಿ ಹಣಿಯಲೆತ್ನಿಸಿದ್ದು ನೆನಪಾಗುತ್ತದೆ. ಅರಿಸ್ಟೋಫನಿಸ್‌ನ ಬರ್ಬರತೆ ನನ್ನ ಕಣ್ಣ ಮುಂದೆಯೇ ನಡೆದಿರುವುದನ್ನು ಕಂಡು ದಟ್ಟ ವಿಷಾದ ಆವರಿಸತೊಡಗುತ್ತದೆ. ಈ ಬಗ್ಗೆ ಲಂಕೇಶರ ಜೊತೆ ವಾದಿಸಿದ್ದೂ ನೆನಪಾಗುತ್ತದೆ. ಮುಂದೆ ಎಂ.ಡಿ.ಎನ್. ಕುರಿತು ಬಂದ ಹೊಸ ಹೊಸ ಪುಸ್ತಕಗಳು ಈ ಗೇಲಿಯನ್ನು ಹಿಮ್ಮೆಟ್ಟಿಸಿರಬಹುದು ಎಂಬ ನೆಮ್ಮದಿಯೂ ಮೂಡುತ್ತದೆ!   

ಮೊನ್ನೆ ಗೆಳೆಯ ದೇವು ಪತ್ತಾರ್, `ನೀವು ಹಿಂದೊಮ್ಮೆ ಕಾರ್ಟೂನ್ ಬರೆಯುತ್ತಿದ್ದ ಕಾಲದ ಬಗ್ಗೆ  ಪ್ರಜಾವಾಣಿಯ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ನೆನಪಿಸಿದ್ದಾರೆ. ಆ ಬಗ್ಗೆ ಬರೆಯಿರಿ’ ಎಂದರು. 
ಅದನ್ನು ಬರೆಯಬೇಕಾಗಿದ್ದವನು ಇದನ್ನು ಬರೆದೆ! 

ಓದುಗಿ- ಓದುಗ ಸ್ಪಂದನ

ಓದುಗಿ :  ಕಳೆದ ವಾರದ ‘ಗಾಳಿ ಬೆಳಕು’ ಅಂಕಣದಲ್ಲಿರುವ ’ರೀಡರ್ ಅಥವಾ ಓದುಗಿಯ ಹುಟ್ಟು’ ಲೇಖನದಲ್ಲಿ ಹೇಳಿದಂತೆ ಓದುಗ- ಓದುಗಿ/ ಓದುಗಿತ್ತಿ; ಪ್ರೇಕ್ಷಕ - ಪ್ರೇಕ್ಷಕಿ; ಮತದಾರ - ಮತದಾರ್ತಿ; ವಿದ್ಯಾರ್ಥಿ - ವಿದ್ಯಾರ್ಥಿನಿ;  ಶಿಕ್ಷಕ-ಶಿಕ್ಷಕಿ….ಇವೆಲ್ಲ ಸರಿ. ಆದರೆ ಪುರುಷಸೂಚಿ ’ರಾಷ್ಟ್ರಪತಿ’ಯನ್ನು ಏನು ಮಾಡುವುದು?

ಅಂಕಣಕಾರ: ‘ಪ್ರೆಸಿಡೆಂಟ್’ ಪದಕ್ಕೆ ‘ರಾಷ್ಟ್ರಪತಿ’ ಎಂಬ ಅನುವಾದ ಸೂಚಿಸಿದವರು ಕನ್ನಡದ ತೀನಂಶ್ರೀ ಎಂದು ಎಲ್ಲೋ ಓದಿದ ನೆನಪು. 
ಆದರೆ, ಅವತ್ತು ಮಹಿಳೆಯೊಬ್ಬರು ಪ್ರೆಸಿಡೆಂಟ್ ಆಗುವುದನ್ನು ಅವರು ನಿರೀಕ್ಷಿಸಿರಲಿಲ್ಲವೇನೋ! ಅವರು ರಾಷ್ಟ್ರಾಧ್ಯಕ್ಷ ಎಂದು ಅನುವಾದಿಸಿದ್ದರೆ, ರಾಷ್ಟ್ರಾಧ್ಯಕ್ಷೆ, ರಾಷ್ಟ್ರಾಧ್ಯಕ್ಷಿಣಿ ಎನ್ನಬಹುದಾಗಿತ್ತು! 
ಅದಕ್ಕೇ ಮೇಡಂ, ಎಲ್ಲದಕ್ಕೂ ಫೆಮಿನಿಸ್ಟ್ ತಲೆಯಿರಬೇಕು ಅನ್ನುವುದು! 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK

Share on:

Comments

6 Comments



| ಶಿವಲಿಂಗಮೂರ್ತಿ

ಅರಿಸ್ಟೋಫೆನಿಸ್ ನು ಮಾಡಿದ ಇಂತ ಕೃತ್ಯಗಳನ್ನು ಓದುಗ ವರ್ಗ ಕ್ಷಮಿಸುವುದಾದರೂ ಹೇಗೆ ಸಾಧ್ಯ? (ತೇಜಸ್ವಿ ಅಂತವರನ್ನು ಗೇಲಿ ಮಾಡಿದ್ದನ್ನು ಲಂಕೇಶ್ ಪತ್ರಿಕೆಯಲ್ಲಿಓದಿದ ನೆನಪು) ಎಂ ಡಿ ನಂಜುಂಡಸ್ವಾಮಿ ಅಂತವರನ್ನು ಗೇಲಿ ಮಾಡುವ ಸಂದರ್ಭದಲ್ಲಿ ವಿಚಾರವಂತರಾದ ಲಂಕೇಶ್ ಅವರು ಎಚ್ಚರದಿಂದ ಇರಬೇಕಿತ್ತು. ಅಂತ ಸಂದರ್ಭದಲ್ಲಿ ಲಂಕೇಶ್ ಅವರೊಂದಿಗೆ ನೀವು ತೋರಿದ ಪ್ರತಿಕ್ರಿಯೆ ಸಮಯೋಚಿತವಾದದ್ದು. ಜನಪ್ರಿಯತೆಯ ಬೆನ್ನು ಹತ್ತಿದ ಮಾಸ್ಟರ್ ಹಿರಣ್ಣಯ್ಯ ಮಾಡಿದ್ದು ನಿಜಕ್ಕೂ ಅಗ್ಗದ ಹಾಸ್ಯವೇ.\r\nಇಂದು ಬಹುಜನರನ್ನು ಆವರಿಸಿಕೊಳ್ಳುತ್ತಿರುವ ಸಿನಿಮಾ ಮತ್ತು ವಾಹಿನಿಗಳಲ್ಲಿ ಬಿತ್ತರ ವಾಗುವ ಹಾಸ್ಯ ನಿಜಕ್ಕೂ ವಿಷಾದವನ್ನುಂಟುಮಾಡುತ್ತದೆ .\r\nವಿಶ್ವವಿಖ್ಯಾತ ಚಾರ್ಲಿ ಚಾಪ್ಲಿನ್ ತನ್ನೆಲ್ಲಾ ಮೂಕಿ ಮತ್ತು ಟಾಕೀ ಚಿತ್ರಗಳಲ್ಲಿ ತಂದಿರುವ ಹಾಸ್ಯ ವೈಚಾರಿಕ ಮತ್ತು ವೈಜ್ಞಾನಿಕತೆ ಯಿಂದ ಕೂಡಿದೆ. ಜೊತೆಗೆ ಅಲ್ಲಿ ಸಾಮಾಜಿಕ ಬದ್ಧತೆಯೂ ಇದೆ \r\nಅದಕ್ಕೆ ನಿದರ್ಶನವಾಗಿ ಅವನ \'ದ ಗ್ರೇಟ್ ಡಿಕ್ಟೇಟರ್ \'ಸಿನಿಮಾವನ್ನು ನೆನಪಿಸಿಕೊಳ್ಳಬಹುದು.\r\nಏನೆಲ್ಲಾ ಒಳನೋಟಗಳನ್ನು ನಿಮ್ಮ ಗಾಳಿ ಬೆಳಕು ಹೊಂದಿರುತ್ತದೆ ನಿಜಕ್ಕೂ ಅಚ್ಚರಿ ಅದಕ್ಕಾಗಿ ನಿಮಗೆ ಧನ್ಯವಾದಗಳು ಸರ್


| ಡಾ. ಶಿವಲಿಂಗೇಗೌಡ ಡಿ

ಇಂದಿನ ಟಿ.ವಿ. ಗಳಲ್ಲಿ ಬಿತ್ತರಗೊಳ್ಳುವ ರಿಯಾಲಿಟಿ ಶೋಗಳೂ ಕೂಡ ಇಂಥ ಅಗ್ಗದ ಹಾಸ್ಯ ಮಾಡುತ್ತಿವೆ. ಇವುಗಳ ಹಿಂದಿನ ಉದ್ದೇಶವನ್ನ ಅರಿಯಬೇಕಾದ ಅಗತ್ಯವಿದೆ. ಬಡತನ, ಹಳ್ಳಿ ಬದುಕು, ಇಂಗ್ಲೀಷ್ ಬಾರದಿರುವಿಕೆ, ಇಂಗ್ಲೀಷ್ ಪದಗಳ ಉಚ್ಛಾರಣಾ ದೋಷ, ನಗರದ ಜೀವನ ಶೈಲಿಯ ಪರಿಚಯವಿಲ್ಲದಿರುವುದು ಇವೆಲ್ಲ ರಿಯಾಲಿಟಿ ಶೋಗಳ ಹಾಸ್ಯದ ವಸ್ತುಗಳಾಗುತ್ತಿವೆ. ಇಂಗ್ಲೀಷ್ ಪದಗಳಿಗೆ ಸ್ಲೆಲಿಂಗ್ ಕೇಳುವುದು, ಪದಗಳನ್ನ ಉಚ್ಛರಿಸುವಂತೆ ಹೇಳಿ ತಪ್ಪಾಗಿ ಉಚ್ಚರಿಸಿದುದನ್ನೇ ದೊಡ್ಡದಾಗಿ ಬಿಂಬಿಸಿ ಹಾಸ್ಯ ಮಾಡುವುದು. ಇತ್ಯಾದಿ ಹಾಸ್ಯ ಪ್ರಸಂಗಗಳು ಅವರಿಗೆ ಆಗುವ ಮಾನಸಿಕ ಹಿಂಸೆಗಳ ಬಗೆಗೆ ಕಿಂಚಿತ್ತೂ ಯೋಚಿಸುವುದೇ ಇಲ್ಲ. ಈ ಲೇಖನ ಇಂಥ ಸೂಕ್ಷ್ಮ ಒಳನೋಟಗಳನ್ನ ನೀಡಿದೆ. ಧನ್ಯವಾಗಳು ಸರ್


| ಡಾ. ನಿರಂಜನ ಮೂರ್ತಿ ಬಿ ಎಂ

ಕಾಮೆಡಿಯ ಪಾಲಿಟಿಕ್ಸ್ ಓದುಗರಲ್ಲಿ ನಗು ಮೂಡಿಸುವುದಿಲ್ಲ, ಆದರೆ ಬೆರಗು ಮೂಡಿಸುತ್ತದೆ ಮತ್ತು ಅವರನ್ನು ಬೆಚ್ಚಿಬೀಳಿಸುತ್ತದೆ. ಕಾಮೆಡಿ ಅಂದರೆ ಹಾಸ್ಯ ಮನಸ್ಸು ಹೃದಯಗಳ ಹೊರೆಯಿಳಿಸಿ, ಹಗುರಾಗಿಸಿ, ಅವುಗಳ ಆರೋಗ್ಯವನ್ನು ಹಿಗ್ಗಿಸಿ ಮುದಗೊಳಿಸಬೇಕು. ಮುಖಗಳಲ್ಲಿ ಮಂದಹಾಸವ ಮೂಡಿಸಬೇಕು. ನಕ್ಕು ನಲಿಸಬೇಕು. ಮನುಷ್ಯರ ಬಾಳ ಬೆಳಗಿಸಬೇಕು. ಸಮಾಜದಲ್ಲಿ ಸಾಮರಸ್ಯವ ಮೂಡಿಸಬೇಕು. ಹೀಗೆ ಮಾಡುವಂತಹುದು ಹಾಸ್ಯವೆಂಬುದು ನಮ್ಮ ಸಾಮಾನ್ಯ ನಂಬಿಕೆ. ಹೆಚ್ಚೆಂದರೆ, ಬೇರೆಯವರಿಗೆ ತುಸು ಚುಚ್ಚುವ ಹಾಗಿರುವ ಹಾಸ್ಯವನ್ನು ಅಪಹಾಸ್ಯವೆಂದೇ ಗೇಲಿ ಮಾಡಲಾಗುತ್ತದೆ.\r\n\r\nಹುಳಿಯಾರರು ಈ ಬರಹದಲ್ಲಿ ಕಾಮೆಡಿಯ ಹಿಂದಿರುವ ಕೇಡಿನ ಪಾಲಿಟಿಕ್ಸನ್ನು ಬಯಲೆಗೆಳೆದಿದ್ದಾರೆ. ಜೀವಪೋಷಕವಾಗಬೇಕಿದ್ದ ಕಾಮೆಡಿ ಈ ಜಗದ ಒಬ್ಬ ಶ್ರೇಷ್ಠ ತತ್ವಜ್ಞಾನಿಯ ಜೀವಭಕ್ಷಕವಾಗಿದ್ದು ಭೀಕರ ದುರಂತವೇ ಸರಿ; ಅದೂ ಹಾಸ್ಯನಾಟಕಗಳ ಪಿತಾಮಹನೆನಿಸಿರುವ ಒಬ್ಬ ಮಹಾನಾಟಕಕಾರನೇ ಇದಕ್ಕೆ ಕಾರಣಕರ್ತನಾಗಿರುವುದು ಭಾರೀ ಭೀಕರ ದುರಂತವೇ ಸರಿ.\r\n\r\nವರ್ತಮಾನದ ನಮ್ಮೀ ಬದುಕಿನಲ್ಲಿಯೂ \'ಸಾಕ್ರೆಟಿಸ್ ಬಗ್ಗೆ ಅರಿಸ್ಟೋಫನಿಸ್ ಥರದವರಿಗೆ ಇದ್ದ ಪೂರ್ವಗ್ರಹ ಈ ಕಾಲದ ಕಾಮಿಡಿಗಳಲ್ಲೂ ಇರಬಲ್ಲದು. ಆದ್ದರಿಂದಲೇ ಕಾಮಿಡಿ ನೋಡಿ ನಗುವ ಮುನ್ನ ಅಥವಾ ನಕ್ಕ ನಂತರ, ನಗಿಸುವವರ ಉದ್ದೇಶ ಏನೆಂಬುದನ್ನು ಕಾಣುವ ವೈಚಾರಿಕ ನೋಟ ನಮಗಿರಬೇಕಾಗುತ್ತದೆ\' ಎಂಬ ಲೇಖಕರ ಕಿವಿಮಾತುಗಳು ಓದುಗರನ್ನು ಎಚ್ಚರಿಸುತ್ತವೆ. ನಗುವುದಕ್ಕೂ ಯೋಚಿಸಬೇಕಾಗಿರುವುದು ಶೋಚನೀಯ. ನಗು ಸಹಜವಾಗಿ ಹೊರಳಬೇಕು, ಅರಳಬೇಕು. ಏನೇ ಆಗಲಿ, ಕಾಮೆಡಿಯ ಬಗ್ಗೆ ಅದ್ಭುತ ಒಳನೋಟಗಳನ್ನು ತೋರಿರುವ ಹುಳಿಯಾರರಿಗೆ ನಮನಗಳು.


| Neelamma.Ishwarappa Holi

Very good 👍


| DEVENDRAPPA

ಕಾಮಿಡಿಯ ಪಾಲಿಟಿಕ್ಸ್ ಓದಿದ ಮೇಲೆ ಸಾಕ್ರೆಟಿಸ್ ನ ಬಗೆಗೆ ಹೊಸ ಆಲೋಚನೆ ದಕ್ಕಿತು. ಈಗಾಗಲೇ ರಾಜ್ಯಶಾಸ್ತ್ರ ಓದುವಾಗ ಸಾಕ್ರೆಟಿಸ್ ಬಗ್ಗೆ ಸ್ವಲ್ಪ ವಿವರ್ ಸಿಕ್ಕಿತ್ತು. ಆತನ ಸ್ವತಂತ್ರ ನಿಲುವು, ಪ್ಲೇಟೋನ ಗುರು, ಕೊನೆಗೆ ವಿಷ ಸೇವಿಸಿ ಮೃತನಾದದ್ದು. ಇದರಾಚೆಗೆ ಅಲ್ಲಿನ ಅರಿಸ್ಟೋಫನಿಸ್ ನು ಸಾಕ್ರೆಟಿಸ್ ಕುರಿತಾದ ನಾಟಕ ದ ಕ್ಲೌಡ್ಸ್ ನಲ್ಲಿ ಆತನ ಕುರಿತು ಅಭಿನಯಿಸುವಾಗ ಇದು ತಾನೇ ಎಂದು ಹೇಳುವ ಧೈರ್ಯ ಮೆಚ್ಚುವಂತಹದೇ. ಈ ರೀತಿಯ ವ್ಯಂಗ್ಯವನ್ನು ಸ್ವತಃ ಒಪ್ಪಿಕೊಂಡಾಗ ಒಂದು ಆರೋಗ್ಯಕರ ಸಮಾಜ ಸೃಷ್ಟಿ ಆಗಲು ಸಾಧ್ಯವೆಂದು ನನ್ನ ನಂಬಿಕೆ. ರಾಜಕೀಯ ಒಳನೋಟಗಳು ಈ ಲೇಖನಕ್ಕಿವೆ. ಇಂದಿನ ದಿನಮಾನದಲ್ಲಿ ಹಾಸ್ಯ ಎಂದರೆ ಬರೀ ಅಶ್ಲೀಲವಾಗಿ ಇನ್ನೊಬ್ಬರ ಕುರಿತು ಮಾತನಾಡುವುದೇ ಆಗಿದೆ. ಆದರೆ ಇಲ್ಲಿ ನೋಡುಗನ ದೃಷ್ಟಿಕೋನವನ್ನು ಅವರು ಯೋಚಿಸುವುದೇ ಇಲ್ಲ. ಅದರಿಂದ ಸಮಾಜಕ್ಕೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು.\r\nಆದರೆ ಜವಾಹರ ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ತಮ್ಮ ಕುರಿತು ಪ್ರಕಟವಾಗುವ ವ್ಯಂಗ್ಯ ಚಿತ್ರಗಳನ್ನು ನೋಡಿ ತಮ್ಮಲ್ಲಿರುವ ದೋಷವನ್ನು ತಿದ್ದಿಕೊಳ್ಳುತ್ತಿದರು ಎಂದನ್ನಿಸುತ್ತದೆ. ಬಹುಶಃ ಈ ರೀತಿಯ ಕಲೆ, ಸಾಹಿತ್ಯ, ನಾಟಕ,ಹಾಸ್ಯ ಇಲ್ಲದ ಸಮಾಜ ರೋಗಪೀಡಿತದಿಂದ ಕೂಡಿರುತ್ತದೆ. ಇವೆಲ್ಲ ಕೇವಲ ಮನೋರಂಜನೆ ಆಗದೇ ಬದುಕಿನ ಭಾಗವಾದಾಗ ಅದಕ್ಕೊಂದು ಅರ್ಥ ಬರುತ್ತದೆ.\r\nಲೇಖಕ ಮತ್ತು ಓದುಗನ ನಡುವಿನ ಬಾಂಧವ್ಯಕ್ಕೆ ಕನ್ನಡದ ಕೃತಿಗಳು ಮಾತ್ರವಲ್ಲದೆ ಪ್ರಪಂಚದ ಬೇರೆ ಬೇರೆ ಭಾಷೆಯೇ ಕೃತಿಗಳಿಗೆ ಒಂದಿಷ್ಟು ಮನ ಮಿಡಿದಿದೆ. ಇದು ನೈಜ ಓದುಗ ಮತ್ತು ಲೇಖಕನ ನಡುವಿನ ಬೆಸುಗೆ ಎಂದೇ ಹೇಳಬಹುದು.


| ಎಂ.ಜಿ. ಚಂದ್ರಶೇಖರಯ್ಯ

ಈ ಅಂಕಣವನ್ನು ಈಗ‌ ಓದಿದೆ.\r\nಕರ್ನಾಟಕದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ನಮ್ಮ ಲೇಖಕರು ನೆನಪಾದರು. \r\nದಿಟ್ಟತನದಿಂದ ಬಿಕ್ಕಟ್ಟು ಎದುರಿಸಲಾರದ ರಾಜಕೀಯ ನಾಯಕರು ಮತ್ತು ಅದನ್ನು ವಿಮರ್ಶೆ ಮಾಡಲು ಆಗದ ವಂದಿಮಾಗದ ಸಾಹಿತಿಗಳು ಒಮ್ಮೆ ಕ್ಲೌಡ್ಸ್ ನಾಟಕ ಓದಲಿ ಅಥವಾ ಅಷ್ಟು ಬಿಡುವು ಇಲ್ಲದಿದ್ದರೆ ನಿಮ್ಮ ಅಂಕಣವನ್ನಾದರೂ ಓದಲಿ.




Add Comment






Recent Posts

Latest Blogs



Kamakasturibana

YouTube