ನೊಂದವರ ನಂಟುಗಳು

ಮೊನ್ನೆ ಡಿಸೆಂಬರ್ ಆರರಂದು ಬಾಬಾಸಾಹೇಬರ ಪರಿನಿಬ್ಬಾಣದ ದಿನ ಅವರ ಬಗ್ಗೆ ಹೊಸದೇನನ್ನಾದರೂ ಓದಬೇಕೆಂದು ಈಚೆಗೆ ಕೊಂಡ ಪುಸ್ತಕಗಳನ್ನು ತಿರುವಿ ಹಾಕತೊಡಗಿದೆ; ಅಲ್ಲಿ ಈವರೆಗೆ ನಾನು ಓದಿರದ ಘಟನೆಯೊಂದು ಕುತೂಹಲ ಹುಟ್ಟಿಸಿತು: 

೧೯೫೯ರಲ್ಲಿ ಅಮೆರಿಕದ ಕಪ್ಪು ಜನರ ವಿಮೋಚನೆಯ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಅವರ ಹೆಂಡತಿ ಭಾರತಕ್ಕೆ ಬಂದಾಗ ಕೇರಳದ ತ್ರಿವೆಂಡ್ರಂನ ಹೈಸ್ಕೂಲೊಂದರ ದಲಿತ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಮಕ್ಕಳಿಗೆ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಪರಿಚಯಿಸುತ್ತಾ ಸ್ಕೂಲ್ ಪ್ರಿನ್ಸಿಪಾಲರು ಹೇಳಿದರು: 'ಎಳೆಯರೇ. ಅಮೆರಿಕದಿಂದ ಬಂದಿರುವ ಒಬ್ಬ `ಸಹಅಸ್ಪೃಶ್ಯ’ನನ್ನು ನಾನೀಗ ನಿಮಗೆ ಪರಿಚಯಿಸುತ್ತಿದ್ದೇನೆ.’

ಈ ಮಾತು ಕಿವಿಗೆ ಬಿದ್ದ ತಕ್ಷಣ ಕಿಂಗ್ `ಸ್ತಂಭೀಭೂತರಾದರು’ ಎನ್ನುವ ಅಮೆರಿಕನ್ ಪತ್ರಕರ್ತೆ ಇಸಬೆಲ್ ವಿಲ್ಕೆರ್‍ಸನ್ ಆ ಗಳಿಗೆಯನ್ನು ದಾಖಲಿಸುತ್ತಾರೆ: 

`ಈ [ಅಸ್ಪೃಶ್ಯ] ಎಂಬ ಪದ ತನಗೂ ಅನ್ವಯವಾಗಬಹುದೆಂದು ಕಿಂಗ್ ನಿರೀಕ್ಷಿಸಿರಲಿಲ್ಲ. ಮೊದಲಿಗೆ, ಅವರು ಕೊಂಚ ಕಸಿವಿಸಿಗೊಂಡಂತೆ ಕಂಡರು. ಅವರು ಭೂಭಾಗದ ಬೇರೊಂದು ಖಂಡದಿಂದ ಭಾರತಕ್ಕೆ ಬಂದಿದ್ದರು. ಭಾರತದ ಪ್ರಧಾನಮಂತ್ರಿಯ ಜೊತೆ ಔತಣದಲ್ಲಿ ಪಾಲ್ಗೊಂಡಿದ್ದರು. ಈ ಸ್ಕೂಲ್ ಪ್ರಿನ್ಸಿಪಾಲ್ ಮಾಡಿದ ಬಣ್ಣನೆಗೂ, ತನಗೂ ಏನು ಸಂಬಂಧ ಎಂಬುದು ಕಿಂಗ್‌ಗೆ ತಕ್ಷಣ ಹೊಳೆಯಲಿಲ್ಲ. ತನಗೂ ಇಂಡಿಯಾದ ಜಾತಿಪದ್ಧತಿಗೂ ಯಾವ ನೇರ ಸಂಬಂಧವೂ ಇದ್ದಂತೆ ಅವರಿಗೆ ಕಾಣಲಿಲ್ಲ. `ಅಮೆರಿಕನ್ ನೀಗ್ರೋ’ ಎಂದು ಕರೆಯಲಾದ ಈ ಗಣ್ಯ ಅತಿಥಿಯನ್ನು ಇಂಡಿಯಾದ ಕೆಳ ಜಾತಿಗಳಿಗೆ ಸೇರಿದವರು ತಮ್ಮಂತೆಯೇ ಕೆಳ ಜಾತಿಯ ವ್ಯಕ್ತಿಯೆಂದು ಯಾಕೆ ನೋಡುತ್ತಾರೆ, ಯಾಕೆ ಅವನನ್ನು ತಮ್ಮವನಂತೆ ಕಾಣುತ್ತಾರೆ ಎಂಬುದು ಅವರಿಗೆ ಆ ಗಳಿಗೆಯಲ್ಲಿ ಹೊಳೆಯಲಿಲ್ಲ.      

`ಒಂದು ಚಣ ನನಗೆ ಶಾಕ್ ಆಯ್ತು. ನನ್ನನ್ನು `ಅಸ್ಪೃಶ್ಯ’ ಎಂದು ಕರೆದರಲ್ಲ ಎಂದು ನೋವೂ ಆಯ್ತು’ ಎಂದು ಕಿಂಗ್ ಮುಂದೊಮ್ಮೆ ಬರೆದರು. ನಂತರ, ಅವರಿಗೆ ಅಮೆರಿಕದಲ್ಲಿ ತಮ್ಮ ಹೋರಾಟ ಪ್ರತಿನಿಧಿಸುತ್ತಿದ್ದ ಇಪ್ಪತ್ತು ಮಿಲಿಯನ್ ಜನರ ನೆನಪಾಯಿತು; ಶತಮಾನಗಳಿಂದ ಅಮೆರಿಕದ ಕಟ್ಟ ಕಡೆಯ ವರ್ಗವಾಗಿ ಬಡತನದ ಗೂಡುಗಳಲ್ಲಿ ಉಸಿರುಕಟ್ಟಿ ನರಳುತ್ತಿರುವ, ತಮ್ಮ ದೇಶದಲ್ಲೇ ಪರದೇಸಿಗಳಾಗಿರುವ, ಕರಿಯರ ನೆನಪಾಯಿತು. ಆಗ ಕಿಂಗ್ ತಮಗೆ ತಾವೇ ಹೇಳಿಕೊಂಡರು: `ನಿಜ. ನಾನು ಅಸ್ಪೃಶ್ಯ. ಅಮೆರಿಕದ ಪ್ರತಿಯೊಬ್ಬ ನೀಗ್ರೋ ಕೂಡ ಅಸ್ಪೃಶ್ಯ.’ 
ಆಗ ಕಿಂಗ್‌ಗೆ ತಾನು ಕೂಡ ತನ್ನ ಇಡೀ ಜೀವಮಾನದಲ್ಲಿ ಇಂಡಿಯಾದಲ್ಲಿ ಹೇರಲಾದ ಜಾತಿ ಪದ್ಧತಿಯಂಥದೇ ವ್ಯವಸ್ಥೆಯಡಿ ನರಳಿದ್ದೇನೆ ಎಂಬುದು ಗೊತ್ತಾಯಿತು. ತಾನು ಅಮೆರಿಕದಲ್ಲಿ ಯಾವ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದೇನೋ, ಆ ಶಕ್ತಿಗಳ ಹಿನ್ನೆಲೆಯಲ್ಲಿ ಇರುವುದು ಇಂಥ ಕ್ರೂರ ಪದ್ಧತಿಯೇ ಎಂಬುದು ಕಿಂಗ್‌ಗೆ ಆಗ ಅರಿವಾಯಿತು. 

ಈ ಪ್ರಸಂಗವನ್ನು ಚರ್ಚಿಸುವ ಇಸಬೆಲ್ ಆಫ್ರೋ-ಅಮೆರಿಕನ್ ಪತ್ರಕರ್ತೆ. ಪುಲಿಟ್ಝರ್ ಪ್ರಶಸ್ತಿ ಪಡೆದವರು. ಇಸಬೆಲ್ ಅವರ ಕಪ್ಪು ಹಿನ್ನೆಲೆ ಕೂಡ ಈ ಪ್ರಸಂಗದ ಚಾರಿತ್ರಿಕ ಮಹತ್ವವನ್ನು ಅರಿಯಲು ನೆರವಾಗಿದೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಬಗ್ಗೆ ಹೆಚ್ಚು ತಿಳಿಯದವರಿಗಾಗಿ ಅವರ ಒಂದು ಪುಟ್ಟ ಪರಿಚಯ: 

೧೯೫೦ರ ದಶಕದಲ್ಲಿ ಅಮೆರಿಕದಲ್ಲಿ ಕರಿಯರು ನಡೆಸುತ್ತಿದ್ದ ಬಡವರ ಮಾರುಕಟ್ಟೆಯ ವ್ಯಾಪಾರ- ವಹಿವಾಟಿನ ಮೇಲೆ ಅಮೆರಿಕನ್ ಸರ್ಕಾರ ನಿರ್ಬಂಧ ಹೇರಿತು; ಆಗ ಅಲಬಾಮಾ ರಾಜ್ಯದ ಬರ್ಮಿಂಗ್ ಹ್ಯಾಂ ಕಡೆ ಗಲಭೆಗಳಾದವು. ಗುಡ್ ಫ್ರೈಡೇಯ ದಿನ ಚರ್ಚೊಂದನ್ನು ಸುತ್ತುವರಿದು ಪೊಲೀಸರು ಹಲವರನ್ನು ಬಂಧಿಸಿದರು. ಅವತ್ತು ಬಂಧನಕ್ಕೊಳಗಾದವರಲ್ಲಿ ಕ್ರೈಸ್ತ ಗುರು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೂಡ ಇದ್ದರು; ಮುಂದೆ ಅವರು ಕರಿಯರ ಹಕ್ಕುಗಳ ಹೋರಾಟಗಾರರಾದರು. 

‘ನಾವು ಹಿಂಸೆಯನ್ನು ಅಹಿಂಸೆಯ ಮೂಲಕ ಎದುರಿಸಬೇಕು’ ಎಂದು ಘೋಷಿಸಿದ ಕಿಂಗ್ ಗಾಂಧೀಜಿಯಿಂದ ಸ್ಫೂರ್ತಿ ಪಡೆದಿದ್ದರು. ಕಿಂಗ್ ಬಂಧನದಲ್ಲಿದ್ದಾಗ ಜೈಲಿನಲ್ಲಿ ಸಿಕ್ಕ ಟಾಯ್ಲೆಟ್ ಪೇಪರ್ ಹಾಗೂ ದಿನಪತ್ರಿಕೆಗಳ ಮೇಲೆ ಹತ್ತೊಂಬತ್ತು ಪುಟಗಳ ಪತ್ರ ಬರೆದು ಕಪ್ಪು ಜನರ ಅಸಹನೆಗೆ ಕಾರಣಗಳನ್ನು ವಿವರಿಸಿದರು. ‘ಲೆಟರ್ ಫ್ರಂ ಎ ಬರ್ಮಿಂಗ್‌ಹ್ಯಾಮ್ ಜೈಲ್’ ಎಂಬ ಪ್ರಖ್ಯಾತ ಪತ್ರ ಅದು. ‘ಬರ್ಮಿಂಗ್‌ಹ್ಯಾಮ್‌ನಲ್ಲಿ ನೀಗ್ರೋಗಳ ಮನೆಯ ಮೇಲೆ ಆದಷ್ಟು ಬಾಂಬ್ ದಾಳಿ ಇನ್ಯಾವ ನಗರದಲ್ಲೂ ಆಗಿಲ್ಲ…ಏಷ್ಯಾ ಹಾಗೂ ಆಫ್ರಿಕಾದ ದೇಶಗಳು ಸ್ವಾತಂತ್ರ್ಯ ಗಳಿಸಲು ಜೆಟ್ ವೇಗದಲ್ಲಿ ಚಲಿಸುತ್ತಿವೆ; ಆದರೆ, ನಾವಿಲ್ಲಿ ಜಟಕಾ ಗಾಡಿಯ ವೇಗದಲ್ಲಿ ಲಂಚ್ ಕೌಂಟರಿನಲ್ಲಿ ಒಂದು ಕಪ್ ಕಾಫಿ ಪಡೆಯಲು ಹೋರಾಡುತ್ತಿದ್ದೇವೆ’ ಎಂದು ಕಿಂಗ್ ಬರೆದರು. ಆ ನಂತರ ಕಿಂಗ್ ಅಮೆರಿಕಾದ ಕರಿಯರ ಮುಂಚೂಣಿ ನಾಯಕರಾದರು. 

ಅವರ ಪ್ರಖ್ಯಾತ ಭಾಷಣದ ‘ಐ ಹ್ಯಾವ್ ಎ ಡ್ರೀಮ್’ನ ಸಾಲುಗಳಿವು: 

ನನಗೊಂದು ಕನಸಿದೆ…
ಒಂದಲ್ಲ ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ 
ಮಾಜಿ ಗುಲಾಮರ ಮಕ್ಕಳೂ, ಮಾಜಿ ಗುಲಾಮರ ಒಡೆಯರ ಮಕ್ಕಳೂ 
ಅಣ್ಣತಮ್ಮಂದಿರಂತೆ ಮೇಜಿನೆದುರು ಒಟ್ಟಾಗಿ ಕೂರಬಲ್ಲರು… 
ಹೀಗೆ …ನನಗೊಂದು ಕನಸಿದೆ. 

‘ಐ ಹ್ಯಾವ್ ಎ ಡ್ರೀಮ್’ ಪಲ್ಲವಿ ನಂತರದಲ್ಲಿ ಜಗತ್ತಿನ ಹಲ ಬಗೆಯ ಹೋರಾಟಗಳಲ್ಲಿ ಪ್ರತಿಧ್ವನಿಸುತ್ತಾ ಬಂದಿದೆ. ೧೯೬೪ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಕಿಂಗ್ ನಾಲ್ಕು ವರ್ಷಗಳ ನಂತರ, ತಮ್ಮ ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ಹತ್ಯೆಯಾದರು.  

ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಬೆಂಗಳೂರಿಗೂ ಬಂದಿದ್ದ ಕಿಂಗ್ ಅದೇ ಪ್ರವಾಸದಲ್ಲಿ ಕೇರಳಕ್ಕೆ ಹೋಗಿದ್ದರು. ಮೇಲೆ ಕೊಟ್ಟಿರುವ ಅವರ ಅನುಭವ ಶಶಿ ಥರೂರ್‍ ಈಚೆಗೆ ಬರೆದ ’ಅಂಬೇಡ್ಕರ್‍: ಎ ಲೈಫ್’ ಪುಸ್ತಕದಲ್ಲಿದೆ.  

ಕಿಂಗ್ (೧೯೨೯-೧೯೬೮) ಹುಟ್ಟುವ ಮುನ್ನ, ೧೯೧೨ರಲ್ಲಿ ಅಂಬೇಡ್ಕರ್‍ ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಓದಲು ಹೋಗಿದ್ದರು. ಕರಿಯರು, ಯಹೂದಿಗಳ ಬಗೆಗೆ ಕ್ಯಾಂಪಸ್ ಆಡಳಿತದ ಪೂರ್ವಗ್ರಹದ ಬಗ್ಗೆ ಅವರಿಗೆ ಅರಿವಿತ್ತು. ಮುಂದೆ ಭಾರತದಲ್ಲಿ ದಲಿತರ ಹಕ್ಕುಗಳ ಹೋರಾಟ ಮುನ್ನಡೆಸುತ್ತಿದ್ದ ಅಂಬೇಡ್ಕರ್‍ ೧೯೪೦ರಲ್ಲಿ ಅಮೆರಿಕದ ಹೋರಾಟಗಾರ W.E. B ಡುಬಾಯ್ಸ್ ಅವರಿಗೆ ಪತ್ರ ಬರೆಯುತ್ತಾರೆ. ಆಗ ಡುಬಾಯ್ಸ್ ಜಾರ್ಜಿಯಾದ ಯೂನಿವರ್ಸಿಟಿ ಆಫ್ ಅಟ್ಲಾಂಟದಲ್ಲಿ ಪ್ರೊಫೆಸರ್ ಆಗಿದ್ದರು. 

ಡಿಯರ್ ಪ್ರೊ. ಡುಬಾಯ್ಸ್

ನಾನು ನಿಮ್ಮನ್ನು ಮುಖತಃ ಭೇಟಿಯಾಗಿಲ್ಲವಾದರೂ, ದಮನಿತ ಜನರ ವಿಮೋಚನೆಗಾಗಿ ದುಡಿಯುತ್ತಿರುವ ಎಲ್ಲರಿಗೂ ನೀವು ಪರಿಚಿತರಿರುವಂತೆ ನನಗೂ ಪರಿಚಯವಿರುವಿರಿ. ನಾನು ಇಂಡಿಯಾದ ಅಸ್ಪೃಶ್ಯ ಸಮುದಾಯಕ್ಕೆ ಸೇರಿದವನು. ಪ್ರಾಯಶಃ ನೀವು ನನ್ನ ಹೆಸರನ್ನು ಕೇಳಿರಬಹುದು. ನಾನು ನೀಗ್ರೋ ಸಮಸ್ಯೆಯನ್ನು ಅರಿಯುವ ವಿದ್ಯಾರ್ಥಿಯಾಗಿ ನಿಮ್ಮ ಬರಹಗಳನ್ನು ಓದುತ್ತಲೇ ಬಂದಿರುವೆ. ಇಂಡಿಯಾದ ಅಸ್ಪೃಶ್ಯರ ಸ್ಥಿತಿಗೂ ಅಮೆರಿಕದ ನೀಗ್ರೋಗಳ ಸ್ಥಿತಿಗೂ ಎಷ್ಟೊಂದು ಹೋಲಿಕೆಯಿದೆ ಎಂದರೆ, ನೀಗ್ರೋಗಳ ಸ್ಥಿತಿಯ ಅಧ್ಯಯನ ನನಗೆ ಸಹಜವಾದ ಕೆಲಸವಷ್ಟೇ ಅಲ್ಲ, ಅಗತ್ಯ ಕೂಡ ಆಗಿದೆ. 
ಅಮೆರಿಕದ ನೀಗ್ರೋಗಳು ವಿಶ್ವ ಸಂಸ್ಥೆಯಲ್ಲಿ ಒಂದು ಮನವಿ ಸಲ್ಲಿಸಿದ್ದಾರೆಂಬ ಸಂಗತಿ ನನ್ನಲ್ಲಿ ವಿಶೇಷ ಆಸಕ್ತಿ ಹುಟ್ಟಿಸಿತು. ಇಂಡಿಯಾದ ಅಸ್ಪೃಶ್ಯರು ಕೂಡ ಇಂಥದೇ ಮನವಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ನೀಗ್ರೋಗಳ ಈ ಮನವಿಗಳ ಎರಡು ಮೂರು ಪ್ರತಿಗಳನ್ನು ದಯಮಾಡಿ ನನ್ನ ವಿಳಾಸಕ್ಕೆ ಕಳಿಸಲು ಸಾಧ್ಯವೆ? ಈ ನಿಟ್ಟಿನಲ್ಲಿನ ನಿಮ್ಮ ಶ್ರಮಕ್ಕೆ ನಾನೆಷ್ಟು ಋಣಿಯಾಗಿರುತ್ತೇನೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.   

ನಿಮ್ಮ ವಿಶ್ವಾಸಿ
ಬಿ. ಆರ್. ಅಂಬೇಡ್ಕರ್

ಈ ಪತ್ರಕ್ಕೆ ಉತ್ತರವಾಗಿ ದುಬಾಯ್ಸ್ ಬರೆದ ಮಾತುಗಳು: ’ಡಿಯರ್‍ ಅಂಬೇಡ್ಕರ್‍, ನಾನು ನಿಮ್ಮ ಹೆಸರನ್ನು ಹಾಗೂ ನೀವು ಮಾಡುತ್ತಿರುವ ಕಾರ್ಯ ಕುರಿತು ಆಗಾಗ್ಗೆ ಕೇಳಿ ಬಲ್ಲೆ. ಇಂಡಿಯಾದ ಅಸ್ಪೃಶ್ಯರ ಬಗೆಗೆ ನನ್ನ ಸಂಪೂರ್ಣ ಸಹಾನುಭೂತಿಯಿದೆ, ಮುಂದೆ ನನ್ನಿಂದ ಏನಾದರೂ ಆಗಬೇಕೆಂದರೆ ನನ್ನಿಂದ ಸಾಧ್ಯವಾದದ್ದನ್ನು ಮಾಡುವೆ. ಮನವಿಯ ಪ್ರತಿಯನ್ನು ಕಳಿಸುತ್ತಿರುವೆ.’

ಅಮೆರಿಕದ ಕಪ್ಪು ಜನರ ಹೋರಾಟವನ್ನೂ ಅಧ್ಯಯನ ಮಾಡಿದ್ದ ಅಂಬೇಡ್ಕರ್ ಭಾರತೀಯ ಸಂವಿಧಾನದಲ್ಲಿ ಖಚಿತವಾಗಿ ರೂಪಿಸಿದ ಮೀಸಲಾತಿಯ ಕಲ್ಪನೆ ಮುಂದೆ ಅಮೆರಿಕದಲ್ಲಿ ಕರಿಯರಿಗೆ ವಿಶೇಷಾವಕಾಶಗಳನ್ನು ಕಲ್ಪಿಸುವ `ಅಫರ್ಮೆಟೀವ್ ಆಕ್ಷನ್’ ಜಾರಿಗೆ ನೆರವಾಯಿತು. ೧೯೯೪ರಲ್ಲಿ  ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಮೇಲೆ ಅಂಬೇಡ್ಕರ್ ಹಾಕಿಕೊಟ್ಟ ಸಾಮಾಜಿಕ ನ್ಯಾಯದ ಮಾರ್ಗ ಅವರ ಸರ್ಕಾರದ ನೆರವಿಗೆ ಬಂತು. 

ಇದಕ್ಕೂ ಮೊದಲು, ೧೯೭೧ರಲ್ಲಿ ಅಂಬೇಡ್ಕರ್ ವಾದದಿಂದ ಪ್ರಭಾವಿತರಾದ ಮಹಾರಾಷ್ಟ್ರದ ದಲಿತರ ಕವಿಗಳು-ಹೋರಾಟಗಾರರು ತಮ್ಮ ಹೋರಾಟದ ಆರಂಭದಲ್ಲೇ ಅಮೆರಿಕದ ಕಪ್ಪು ಹೋರಾಟಗಾರರಾದ `ಬ್ಲ್ಯಾಕ್ ಪ್ಯಾಂಥರ್‍ಸ್’ ಪಂಥದಿಂದ ಪ್ರೇರಣೆ ಪಡೆದರು; `ದಲಿತ್ ಪ್ಯಾಂಥರ್‍ಸ್’ ಆರಂಭಿಸಿದರು. ಅಮೆರಿಕದ ಆಪ್ರೋ-ಅಮೆರಿಕನ್ನರ ಜೊತೆ ತಮ್ಮನ್ನು ತಾವು ಗುರುತಿಸಿಕೊಂಡರು. ೨೦೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂಬೇಡ್ಕರ್ ೧೨೫ನೇ ಹುಟ್ಟು ಹಬ್ಬದ ಆಚರಣೆಗಾಗಿ ಮಾರ್ಟಿನ್ ಲೂಥರ್ ಕಿಂಗ್ ಮಗ ಮಾರ್ಟಿನ್ ಲೂಥರ್ ಕಿಂಗ್-III ಬಂದಾಗ, ದಲಿತ ಸಂಘಟನೆಗಳ ನಾಯಕರು, ಕಾಯರ್ಕರ್ತರು ಹಿರಿಯ ಮಾರ್ಟಿನ್ ಲೂಥರ್‍ ಕಿಂಗ್ ಅವರನ್ನು ನೋಡಿದಷ್ಟೇ ಸಂಭ್ರಮಪಟ್ಟರು. ಅವತ್ತಿನ ಭಾಷಣದಲ್ಲಿ ಕಿಂಗ್-III, `ಮಾರ್ಟಿನ್ ಲೂಥರ್‍ ಕಿಂಗ್ ಹಾಗೂ ಅಂಬೇಡ್ಕರ್‍ ಕ್ರಾಂತಿಕಾರಿ ಸೋದರರು’ ಎಂದು ಬಣ್ಣಿಸಿದ್ದರು. 

ಜಗತ್ತಿನಲ್ಲಿ ನೊಂದ ಜನತೆಯ ಪರಸ್ಪರ ಸೋದರಭಾವ ಹಾಗೂ ಸಮಾನ ದುಃಖಿಗಳ ಹೋರಾಟಗಳ ಸಂಬಂಧ ನಮಗೆ ಸದಾ ದಾರಿ ತೋರಬಲ್ಲದು. ಪ್ರತಿ ವರ್ಷ ಅಂಬೇಡ್ಕರ್‍ ಸ್ಮರಣೆ ಹಾಗೂ ಹುಟ್ಟು ಹಬ್ಬದ ದಿನ ಅಂಬೇಡ್ಕರ್‍ ಚಿಂತನೆ, ವ್ಯಕ್ತಿತ್ವಗಳ ಸಾರವನ್ನು ಕೂಡ ಹೇಳದೆ, ಬಾಯಿಗೆ ಬಂದದ್ದು ಬೊಗಳುವ ವೃತ್ತಿ ಭಾಷಣಕಾರರಿಗೆ, ರಾಜಕಾರಣಿಗಳಿಗೆ ಇವೆಲ್ಲ ತಿಳಿದು, ಇವನ್ನೆಲ್ಲ ಜನರಿಗೆ ಅರ್ಥವಾಗುವಂತೆ ಹೇಳಿದರೆ ಎಷ್ಟು ಉಪಯುಕ್ತವಾಗಿರುತ್ತದೆ, ಅಲ್ಲವೆ?   
 
 

Share on:

Comments

11 Comments



| ಗಂಗಪ್ಪ ತಳವಾರ್

ಸರ್. ನಿಮಗೆ ನನ್ನ ನಮಸ್ಕಾರ.. ನೊಂದವರ ನಂಟುಗಳು ನಿಮ್ಮ ಈ ಅಂಕಣ ನನ್ನ ಕಣ್ಣು ತೆರಿಸಿತು.ಇಲ್ಲಿಯವರೆಗೂ ನಾವು ಕೇಳಿರದ ಚಾರಿತ್ರಿಕ ಸಂದರ್ಭವೊಂದರ ಕುರಿತಾದ ವಿಷಯಗಳನ್ನು ಕೇಳಿ ಎದೆ ತುಂಬಿ ಬಂತು. ಆಫ್ರಿಕಾದ . ನಿಗ್ರೋ ಕಲರ್ಡ ಭಾರತದ ಅಸ್ಪುರ್ಶ ಗಳ ತರತಮಗಳು ಒಂದೇ ನಾಣ್ಯದ ಎರಡು ಮುಖಗಳ ಜೊತೆಗಿನ ಹತ್ತಿರದ ಭಿನ್ನತೆ ಎರಡು ನೆಲಗಳಲ್ಲಿ, ಎರಡು ನೆಲೆಗಳಲ್ಲಿ ತಿಳಿದಂತಾಯಿತು..ಮಾರ್ಟಿನ್ ಲೂತರ್ ಕಿಂಗ್ ಮತ್ತು ಬಾಬಾ\r\n ಸಾಹೇಬ್ಅಂಬೇಡ್ಕರ್ ಇಬ್ಬರೂ ಕಂಡುಕೊಂಡ ಒಂದೇ ಬಗೆಯ ಹೋರಾಟ ಮಹತ್ವವಾದದ್ದು. ನಿಮಗೆ ಧನ್ಯವಾದಗಳು ಸರ್ 🙏..


| ಗಂಗಪ್ಪ ತಳವಾರ್

ಸರ್. ನಿಮಗೆ ನನ್ನ ನಮಸ್ಕಾರ.. ನೊಂದವರ ನಂಟುಗಳು ನಿಮ್ಮ ಈ ಅಂಕಣ ನನ್ನ ಕಣ್ಣು ತೆರಿಸಿತು.ಇಲ್ಲಿಯವರೆಗೂ ನಾವು ಕೇಳಿರದ ಚಾರಿತ್ರಿಕ ಸಂದರ್ಭವೊಂದರ ಕುರಿತಾದ ವಿಷಯಗಳನ್ನು ಕೇಳಿ ಎದೆ ತುಂಬಿ ಬಂತು. ಆಫ್ರಿಕಾದ . ನಿಗ್ರೋ ಕಲರ್ಡ ಭಾರತದ ಅಸ್ಪುರ್ಶ ಗಳ ತರತಮಗಳು ಒಂದೇ ನಾಣ್ಯದ ಎರಡು ಮುಖಗಳ ಜೊತೆಗಿನ ಹತ್ತಿರದ ಭಿನ್ನತೆ ಎರಡು ನೆಲಗಳಲ್ಲಿ, ಎರಡು ನೆಲೆಗಳಲ್ಲಿ ತಿಳಿದಂತಾಯಿತು..ಮಾರ್ಟಿನ್ ಲೂತರ್ ಕಿಂಗ್ ಮತ್ತು ಬಾಬಾ\r\n ಸಾಹೇಬ್ಅಂಬೇಡ್ಕರ್ ಇಬ್ಬರೂ ಕಂಡುಕೊಂಡ ಒಂದೇ ಬಗೆಯ ಹೋರಾಟ ಮಹತ್ವವಾದದ್ದು. ನಿಮಗೆ ಧನ್ಯವಾದಗಳು ಸರ್ 🙏..


| ವಿಜಯೇಂದ್ರ ಕುಮಾರ್ ಜಿ. ಎಲ್.

\"ನೊಂದವರ ನೋವ ನೋಯದವರು ಬಲ್ಲರೇ?\"\r\n\r\nವರ್ಣಭೇದ ಮತ್ತು ಜಾತಿಭೇದಗಳೆರಡೂ ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂಬ ವರ್ಗಿಕರಣದ ಮೇಲೆ ನಿಂತ; ಹೆಚ್ಚುಕಡಿಮೆ ಒಂದೇ ಬಗೆಯ ಅಮಾನವೀಯ ಆಚರಣೆಗಳು. ಇವು ಸಾಮಾಜಿಕ ಅಸಮಾನತೆಗೆ ಸಂಬಂಧಿಸಿದುವು. ಚರ್ಮದ ಬಣ್ಣ ಮತ್ತು ಜಾತಿಗಳು ಹುಟ್ಟಿನ ಮೂಲದಿಂದ, ಅಂದರೆ ವಂಶಾವಳಿಯಿಂದ, ನಿರ್ಧರಿತವಾಗುವಂಥವು. ಇಂತಹ ಮೇಲುಕೀಳಿನ ಶ್ರೇಣೀಕರಣ ವ್ಯವಸ್ಥೆಯಿಂದ ವ್ಯಕ್ತಿಗೆ ಬಿಡುಗಡೆ ಎಂಬುದೇ ಇರುವುದಿಲ್ಲ. ಆ ಕಾರಣಕ್ಕಾಗಿಯೇ ಈ ಶ್ರೇಣೀಕರಣ ಹುಟ್ಟುಹಾಕುವ ನೋವು ಅಸಾಧ್ಯವಾದುದು. \r\n\r\nಈ ಹಿನ್ನೆಲೆಯಲ್ಲಿ ವರ್ಣಭೇದ ಮತ್ತು ಜಾತಿಭೇದಗಳ ವಿರುದ್ಧ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರುಗಳು \'ಸಾಮಾಜಿಕ ನ್ಯಾಯ\'ಕ್ಕಾಗಿ ಹೋರಾಡಿದ ಧೀಮಂತರು. ತಮ್ಮ ಜನಾಂಗಗಳು ಅನುಭವಿಸಿದ ಯಾತನೆಯ ಸ್ವತಃ ಕಂಡು ಉಂಡವರು. ನೊಂದು ಬೆಂದವರು. \r\n\r\nಈ ದಿಸೆಯಲ್ಲಿ ನೊಂದವರ ಸ್ಪಂದನ-ಪ್ರತಿಸ್ಪಂದನಗಳನ್ನು ಮತ್ತು ಈ ಎರಡೂ ಬಗೆಯ ಸಾಮಾಜಿಕ ಚಳುವಳಿಗಳಲ್ಲಿನ ಸಾಮ್ಯತೆಗಳನ್ನು ತಮ್ಮ ಬರಹದಲ್ಲಿ ತಾವು ಸರಿಯಾಗಿಯೇ ಗುರುತಿಸಿದ್ದೀರಿ ಸರ್.\r\n\r\nಈ ಸಂದರ್ಭದಲ್ಲಿ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ ಸರ್. ವರ್ಗಭೇದವು ಆರ್ಥಿಕ ಅಸಮಾನತೆಗೆ ಸಂಬಂಧಿಸಿದ್ದೇ ಇರಬಹುದು. ಆದರೂ, ಸಮಾನತೆಯ ತತ್ವದ ಮೇಲೆ ನಂಬಿಕೆ ಇಟ್ಟು ವರ್ಗವ್ಯವಸ್ಥೆಯ ಬಗ್ಗೆ ಅತ್ಯಂತ ತೀವ್ರವಾಗಿ ಚಿಂತಿಸಿ, ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಬರೆದು, ಕ್ರಾಂತಿಗೆ ಕರೆಕೊಟ್ಟ ಕಾರ್ಲ್ ಮಾರ್ಕ್ಸ್ ಆಫ್ರಿಕ ಮತ್ತು ಅಮೆರಿಕ ಖಂಡಗಳನ್ನು ಅಪಾರವಾಗಿ ಭಾದಿಸಿದ ವರ್ಣಭೇದ ಬಗ್ಗೆ ಏನಾದರೂ ಬರೆದಿದ್ದಾನೆಯೇ?\r\nಭಾರತದ ಜಾತಿಭೇದದ ಬಗ್ಗೆ ಕಾರ್ಲ್ ಮಾರ್ಕ್ಸ್ ಗೆ ಮಾಹಿತಿ ಇತ್ತೇ?


| tsvenkatesh7@gmail.com

Very good information sir.\r\nThank you gurugale.


| Prabhu

ಅಪರೂಪದ ಮಾಹಿತಿಯುಳ್ಳ ಬರೆಹ ಸಾರ್, ಕೊನೆಯ ಸಾಲುಗಳು ಮಾರ್ಮಿಕವಾಗಿವೆ.


| ಮಹೇಶ್ ಹರವೆ

ಹೊಸ ಹೊಸ ವಿಚಾರಗಳಿಂದ ನಮ್ಮ ಮತಿಯನ್ನು ಸೂಕ್ಷ್ಮಗೊಳಿಸುತ್ತಿರುವ ನಿಮಗೆ ಶರಣು.


| ಡಾ. ಶಿವಲಿಂಗೇಗೌಡ ಡಿ.

ಅರಿವನ್ನು ಹಿಗ್ಗಿಸುವ ಬರಹ . ಧನ್ಯವಾದಗಳು ಸರ್


| ದೇವಿಂದ್ರಪ್ಪ ಬಿ.ಕೆ.

ನೊಂದವರ ನಂಟುಗಳು ಲೇಖನ ಓದಿದ ತಕ್ಷಣ ನನಗೆ ಅಕ್ಕಮಹಾದೇವಿಯ ಒಂದು ವಚನ ನೊಂದವರ ನೋವ ನೋಯದವರೇನು ಬಲ್ಲರಯ್ಯಾ ನೆನಪಾಯಿತು. ಮಾರ್ಟಿನ್ ಲೂಥರ್ ಕಿಂಗ್ ಮತ್ತು ಅಂಬೇಡ್ಕರ್ ಇಬ್ಬರೂ ಅಸ್ಪೃಶ್ಯತೆ ವಿರುದ್ಧ ಮಾಡಿದ ಹೋರಾಟ ತಂದ ಕ್ರಾಂತಿಕಾರಿ ಬದಲಾವಣೆಯಿಂದಾಗಿ ಇಂದು ನಾವೆಲ್ಲ ಸಮಾನತೆಯ ಅಡಿಯಲ್ಲಿ ಶಿಕ್ಷಣ, ಉದ್ಯೋಗ ಪಡೆಯುವಂತಾಗಿದೆ. ಒಂದು ಚಳುವಳಿಯ ಸಂದರ್ಭದಲ್ಲಿ ನಾಯಕರಾಗಿ ಯಾರೂ ಹುಟ್ಟುವುದಿಲ್ಲ ,ನಮ್ಮೊಳಗೆ ನಾಯಕರು ಜನ್ಮ ತಾಳುತ್ತಾರೆ. ಹಾಗೆಯೇ ಅಂಬೇಡ್ಕರ್, ಮಾರ್ಟಿನ್ ಲೂಥರ್ ಕಿಂಗ್ ಮುಂತಾದವರು. ಇವರು ತಮ್ಮ ಸಮುದಾಯದ ಜನರ ನೋವನ್ನು ಅನುಭವಿಸಿದವರಾಗಿದ್ದರು. ಹಾಗಾಗಿ ಅವರು ನೊಂದವರ ಪರವಾಗಿ ಸದಾ ಹೋರಾಟ ಮಾಡುತ್ತಲೇ ಬಂದರು.


| Shamarao

ಶೀರ್ಷಿಕೆಯೇ ಎಲ್ಲವನ್ನೂ ಹೇಳುತ್ತದೆ.


| ಡಾ. ನಿರಂಜನ ಮೂರ್ತಿ ಬಿ ಎಂ

\'ನೊಂದವರ ನಂಟುಗಳು\' ಅರಿವಿನ ಹರಹನ್ನು ವಿಸ್ತರಿಸುವ ಉತ್ತಮ ಬರಹ. ನೋವು ಯಾವಾಗಲೂ ನೊಂದವರನ್ನು ಬಲವಾಗಿ ಒಗ್ಗೂಡಿಸುವ ಅಂಶವಾಗಿದೆ; ಅಮೆರಿಕಾದ ವರ್ಣನೀತಿ ಮತ್ತು ಭಾರತದ ಜಾತಿನೀತಿ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಗುರುತಿಸಿ ವಿಶ್ಲೇಷಿಸುವ ಈ ಲೇಖನ ಉತ್ತಮವಾಗಿದೆ. ಹುಳಿಯಾರರಿಗೆ ನಮನಗಳು.


| ಗುರು ಜಗಳೂರು

ಸರ್ ಇದರ ಬಗ್ಗೆ ಎಷ್ಟೊಂದು ಓದಿದ್ದೇವೆ.ಆದರೆ ಕಾಲ ಎಷ್ಟು ಬದಲಾಗಿದೆ.ಅಮೆರಿಕಾದಲ್ಲಿ ಓಬಾಮ ಅಧ್ಯಕ್ಷರಾದರು,ಇಂಗ್ಲೆಂಡ್ ನಲ್ಲಿ ಭಾರತೀಯ ಸುನಕ್ ಆದರು(ನೆನಪಿರಲಿ ಇಂಗ್ಲೆಂಡ್ ನಲ್ಲಿ ನಾವು ಕರಿಯರು.) ನಮ್ಮಲ್ಲಿ ದೇಶದ ಪ್ರಧಾನಿ ಹುದ್ದೆ ದಲಿತರಿಗೆ ಇನ್ನೂ ಏಕಿಲ್ಲ.ಹೋಗಲಿ ಖರ್ಗೆ ಎಷ್ಟು ಸವೆಸಿದ್ದಾರೆ ,ಮುಖ್ಯ ಮಂತ್ರಿಯಾದರೆ? ಆತ್ಮವಿಮರ್ಶೆ ಮಾಡಿಕೊಳ್ಳಬೇಕು.\r\n. ನಮ್ಮ ದಲಿತ ಮುಖಂಡ ಹರಿಹರದ ಹನುಮಂತಪ್ಪನವರು ಹೇಳುತ್ತಿದ್ದರು ಬಲಗೈನವರಿಗೆ(ಛಲವಾದಿ) ಎಡಗೈ ಗಿಂತ ನಾವು ಮೇಲು ಎಂಬ ಭಾವನೆ ಇದೆ ಎಂಬುದು.ಇದನ್ನು ಕೇಳಿ ನಾನು ಆಶ್ಚರ್ಯಚಕಿತನಾದೆ.ಇದಕ್ಕೆ ಕೊನೆ ಇದೆಯೇ?\r\nಉತ್ತರ ಕರ್ನಾಟಕದಲ್ಲಿ ಒಬ್ಬ ದಲಿತನಿಗೆ ತಮ್ಮ ಊರಿನ ಸವರ್ಣೀಯರ ದೇವಲಾಯಕ್ಕೆ ಹೋಗುವ ತನ್ನ ಆಸೆ ಇಡೇರುವುದಿಲ್ಲ. ಅದೇ ವ್ಯಕ್ತಿ ಮಹಾರಾಷ್ಟ್ರ ದಲ್ಲಿ ಸ್ಥಿತಿವಂತನಾದ ಮೇಲೆ ಊರಿನಲ್ಲಿ ಎಲ್ಲರಿಗೆ ಬೇಕಾಗುವ ವ್ಯಕ್ತಿಯಾಗುತ್ತಾನೆ.ಇದು ನಮ್ಮ ಜನಗಳು ಇರುವ ರೀತಿ.(,ಪ್ರಜಾವಾಣಿಯಲ್ಲಿ ಬಂದಿತ್ತು)




Add Comment






Recent Posts

Latest Blogs



Kamakasturibana

YouTube