ಬರವಣಿಗೆಯ ಹಿನ್ನೆಲೆಯ ಪತ್ತೇದಾರಿ!

ಕೊಂಚ ನಿಷ್ಠುರ ನಿಲುವು-ಬರವಣಿಗೆಗಳ ತರುಣ ಅಧ್ಯಾಪಕನೊಬ್ಬ ಹಿರಿಯ ಕತೆಗಾರನೊಬ್ಬನ ಹೊಸ ಕಥಾಸಂಕಲನದ ಬಗ್ಗೆ ಪತ್ರಿಕೆಯೊಂದರಲ್ಲಿ ರಿವ್ಯೂ ಥರದ ವಿಮರ್ಶೆ ಬರೆದ. ಅದನ್ನು ಓದಿದ ಕತೆಗಾರ ಪತ್ರಿಕೆಯ ಸಂಪಾದಕರಿಗೆ ಫೋನ್ ಮಾಡಿದ; 'ಆ ವಿಮರ್ಶಕ ಒಬ್ಬ ಕುಡುಕ. ನನ್ನ ಕತೆಗಳ ಬಗ್ಗೆ ಬಾಯಿಗೆ ಬಂದಂತೆ ಬರೆದಿದ್ದಾನೆ. ಅದನ್ನೇಕೆ ಪ್ರಕಟಿಸಿದಿರಿ? ನನ್ನ ತೇಜೋವಧೆ ಮಾಡಲು ನೀವೇ ಅದನ್ನು ಹೇಳಿ ಬರೆಸಿದಂತಿದೆ' ಎಂದು ಜಗಳಕ್ಕಿಳಿದ. ಗಲಿಬಿಲಿಗೊಂಡ ಸಂಪಾದಕರು ಆ ವಿಮರ್ಶೆಯನ್ನು ಮತ್ತೆ ಓದಿ ನೋಡಿದರು. ಈಗಾಗಲೇ ಆ ಕತೆಗಾರನ ಎಲ್ಲ ಕತೆಗಳನ್ನೂ ಓದಿದ್ದ ಸಂಪಾದಕರಿಗೆ ಆ ವಿಮರ್ಶೆಯಲ್ಲಿ ಅಂಥ ದೋಷವೇನೂ ಕಾಣಲಿಲ್ಲ. ತರುಣ ವಿಮರ್ಶಕ ಆ ಕತೆಗಾರನ ಎರಡು ಘಟ್ಟಗಳನ್ನು ಹೋಲಿಸಿ ನೋಡಿದ್ದ; ಈ ಕತೆಗಳು ಅವನ ಹಿಂದಿನ ಕತೆಗಳಷ್ಟು ಉತ್ತಮ ಮಟ್ಟದಲ್ಲಿ ಇಲ್ಲವೆಂದು ಬರೆದಿದ್ದ, ಅಷ್ಟೆ. 

ಸಂಪಾದಕ ಮಿತ್ರರು ಈ ಪ್ರಸಂಗ ಹೇಳಿದ್ದು ಮೊನ್ನೆ ಶುಕ್ರವಾರ. ತಾರೀಕು ೨೪ ಜನವರಿ ೨೦೨೫. ಇಪ್ಪತ್ತಾರು ವರ್ಷಗಳ ಕೆಳಗೆ ಇಂಥದೇ ಒಂದು ಜನವರಿಯ ರಾತ್ರಿ ೨೪-೨೫ನೆಯ ತಾರೀಕಿನ ನಡುವೆ ಪಿ. ಲಂಕೇಶರು ತೀರಿಕೊಂಡದ್ದು, ಲಂಕೇಶರ ಕೊನೆಯ ರಾತ್ರಿ ಕುರಿತು ಕಳೆದ ವರ್ಷದ ಜನವರಿಯಲ್ಲಿ ಇದೇ ಅಂಕಣದಲ್ಲಿ ಬರೆದಿದ್ದು ಅದೇ ಆಗ ನೆನಪಾಗತೊಡಗಿತ್ತು. READ HERE ಮೇಲೆ ಹೇಳಿದ ಕತೆಗಾರನ ಕೂಗಾಟದ ಪ್ರಸಂಗ ಕೇಳಿದಾಗ, ಲಂಕೇಶರ ಮೇಲೆ ಇಂಥದೇ ಆಪಾದನೆ ಮಾಡಿದ್ದ ಮತ್ತೊಬ್ಬ ಕತೆಗಾರನ ನೆನಪಾಯಿತು:

ಲಂಕೇಶರನ್ನು ಮೆಚ್ಚುತ್ತಿದ್ದ ಆ ಕತೆಗಾರ ತನ್ನ ಕತೆಗಳಿಗೆ ಮುನ್ನುಡಿ ಬರೆಯಲು ಲಂಕೇಶರನ್ನು ಕೇಳಿಕೊಂಡಿದ್ದ. ಲಂಕೇಶ್ ಮುನ್ನುಡಿ ಬರೆದು ಕಳಿಸಿದ ನಂತರ ಅವನಿಂದ ಪತ್ರ ಬಂತು. ಮುನ್ನುಡಿಯಲ್ಲಿದ್ದ ಲಂಕೇಶರ ಅಭಿಪ್ರಾಯಗಳು ಅವನಿಗೆ ಇಷ್ಟವಾದಂತಿರಲಿಲ್ಲ. ‘ನೀವು ಕುಡಿದು ಈ ಮುನ್ನುಡಿ ಬರೆದಂತಿದೆ…’ ಎಂದೆಲ್ಲ ಆತ ಬರೆದಿದ್ದ. ಲಂಕೇಶರ ಮುನ್ನುಡಿ ಅವನ ಪುಸ್ತಕದಲ್ಲಿ ಪ್ರಕಟವಾಗಲಿಲ್ಲ. 

ತಮಾಷೆಯೆಂದರೆ, ಮೇಲೆ ಪ್ರಸ್ತಾಪಿಸಿದ ಕತೆಗಾರರಿಬ್ಬರೂ ಮದ್ಯಪಾನದ ವಿಚಾರದಲ್ಲಿ ತೀರಾ ಮಹಾತ್ಮ ಗಾಂಧೀಜಿಯವರ ಅನುಯಾಯಿಗಳೇನಲ್ಲ! ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಆಗಾಗ ’ಏರಿಸುವ’ವರೇ! ಅಕಸ್ಮಾತ್ ಅವರು ಗುಂಡಿನ ಮತ್ತಿನಲ್ಲಿ ಬರೆದಿರಬಹುದಾದ ಕತೆಗಳಲ್ಲಿ ಲೇಖಕನ ವಕ್ರದೃಷ್ಟಿಗೆ ಒಳಗಾಗಿ ಖಳರಾದ ಪಾತ್ರಗಳಿವೆ ಎಂದಿಟ್ಟುಕೊಳ್ಳಿ. ಈ ಕತೆಗಳನ್ನು ’ಕತೆಗಾರರು ಕುಡಿದು ಬರೆದದ್ದರಿಂದ ನಮಗೆ ಅನ್ಯಾಯವಾಗಿದೆ, ನಮ್ಮನ್ನು ತೇಜೋವಧೆ ಮಾಡಲೆಂದೇ ಈ ಕತೆಗಾರರು ಹೀಗೆ ಬರೆದಿದ್ದಾರೆ’ ಎಂದು ಆ ಪಾತ್ರಗಳಿಗೆ ರೇಗಿ, ಅವು ಕತೆಯೊಳಗಿಂದ ಹೊರ ಬಂದು, ಸದರಿ ಕತೆಗಾರರಿಗೆ ಇದ್ದದ್ದನ್ನು ಇದ್ದಂತೆ ಹೇಳಿದರೆ ಏನಾಗುತ್ತದೆ? ಆಗ ಎದ್ದು ಬಂದು ಎದೆಗೆ ಒದ್ದಂತಾಗುತ್ತದೆಯೋ ಇಲ್ಲವೋ ಅದನ್ನು ಆಯಾ ಕತೆಗಾರರೇ ಕಂಡುಕೊಳ್ಳಬೇಕಾಗುತ್ತದೆ!    

ಈ ಎರಡು ಪ್ರಸಂಗಗಳನ್ನು ಇಲ್ಲಿ ಹೇಳಿದ ಕಾರಣ ಇಷ್ಟೆ: ಕನ್ನಡ ವಿಮರ್ಶೆಗೆ ನೂರು ವರ್ಷ ಮೀರಿದ ಚರಿತ್ರೆಯಿದ್ದರೂ ವಿಮರ್ಶೆ ಎನ್ನುವುದು ಶಿಸ್ತುಬದ್ಧ ಓದು, ವ್ಯಾಖ್ಯಾನ, ಮೌಲ್ಯಮಾಪನ ಎಂಬ ಬಗ್ಗೆ ಅನೇಕರಿಗೆ ಸ್ಪಷ್ಟತೆಯಿದ್ದಂತಿಲ್ಲ. ಕತೆಗಾರನಿಗೆ ತನ್ನ ಕಣ್ಣೆದುರಿನ ಘಟನೆಗಳನ್ನು, ಪಾತ್ರಗಳನ್ನು ವಿಮರ್ಶಿಸುವ ಅವಕಾಶವಿರುತ್ತದಲ್ಲವೆ? ಹಾಗೆಯೇ ಆ ಕತೆಗಳಿಗೆ ಪ್ರತಿಕ್ರಿಯಿಸುವ, ಓದುವ, ವಿಮರ್ಶಿಸುವ ಮಂದಿಗೆ ಕೂಡ ಈ ಕತೆಗಳ ಶೈಲಿ, ಪಾತ್ರ, ಮಂಡನೆ ಎಲ್ಲವನ್ನೂ ವಿಮರ್ಶಿಸುವ ಅವಕಾಶವಿರುತ್ತದೆ. ಘಟನೆ, ಪಾತ್ರಗಳನ್ನು ಮಂಡಿಸುವವರಿಗೆ ಅವರದೇ ಆದ ತರಬೇತಿ, ಕಲ್ಪನೆ, ಪ್ರತಿಭೆ ಇರುವಂತೆ, ಅವನ್ನು ವಿಮರ್ಶಿಸುವವರಿಗೂ, ಟೀಚ್ ಮಾಡುವವರಿಗೂ ವಿಮರ್ಶೆಯ ತರಬೇತಿ, ಪ್ರತಿಭೆ ಇರುತ್ತದೆ. ಕವಿ-ವಿಮರ್ಶಕ ಟಿ.ಎಸ್.ಎಲಿಯಟ್ 'ವಿಮರ್ಶೆ ಎನ್ನುವುದು ನಿಜವಾದ ತೀರ್ಮಾನದ ಸಾಮೂಹಿಕ ಹುಡುಕಾಟ’ (‘common pursuit of true judgement’) ಎಂದ. ನಂತರ ಎಫ್. ಆರ್. ಲೀವಿಸ್ ತನ್ನ ಮಹತ್ವದ ವಿಮರ್ಶಾ ಸಂಕಲನಕ್ಕೆ Common Pursuit ಎಂದು ಹೆಸರಿಟ್ಟ. ಮೇಲೆ ಹೇಳಿದ ಇಬ್ಬರು ಕತೆಗಾರರು, ತರುಣ ವಿಮರ್ಶಕ, ಇಬ್ಬರು ಸಂಪಾದಕರು ಎಲ್ಲರೂ ಎಲಿಯಟ್, ಲೀವಿಸರ ಹೇಳಿಕೆ, ಪುಸ್ತಕಗಳ ಬಗ್ಗೆ ತಿಳಿವಳಿಕೆಯುಳ್ಳವರೇ ಹೌದು. 

ಹುಲುಮಾನವರ ಒಂದು ನಿತ್ಯದ ಸವಾಲಿನ ಬಗ್ಗೆ ಇದೇ ಅಂಕಣದಲ್ಲಿ ಹಿಂದೊಮ್ಮೆ  ಬರೆದಿದ್ದನ್ನು ಮತ್ತೆ ನಿಮಗೆ ನೆನಪಿಸುವೆ: 'ನಮಗೆ ಎಲ್ಲಾ ಉತ್ತರಗಳು ಗೊತ್ತಿದ್ದರೂ ಅವು ಸಕಾಲದಲ್ಲಿ ನೆನಪಿಗೆ ಬರುವುದಿಲ್ಲ.’ ಕಥಾ ಬರವಣಿಗೆ, ಕಥಾ ವಿಮರ್ಶೆ ಎಲ್ಲವನ್ನೂ ಬಲ್ಲ, ಮೇಲೆ ಹೇಳಿದ ಕತೆಗಾರರ ಕತೆಯೂ ಅದೇ! ಹೆತ್ತವಳ ಹೆಗ್ಗಣ, ಕೂಡಿದವಳ ಕೋಡಗಗಳನ್ನು ಕುರಿತ ಗಾದೆಮಾತು ಸತ್ಯ ಎನ್ನಿಸುವುದು ಇಂಥ ಸಂದರ್ಭಗಳಲ್ಲೇ. ತನ್ನ ಮಗುವನ್ನು ಟೀಕಿಸಿದ ತಕ್ಷಣ ತಾಯಿಯೊಬ್ಬಳು ರೇಗುವಂತೆ ತಮ್ಮ ಕೃತಿಯನ್ನು ವಿಮರ್ಶಿಸಿದ ತಕ್ಷಣ ಲೇಖಕ, ಲೇಖಕಿಯರೂ ಚೀರುತ್ತಿರುತ್ತಾರೆ. ಇವರನ್ನು ಮಟ್ಟ ಹಾಕುತ್ತೇವೆಂದು ವಿಮರ್ಶಕರೂ ಗುರಾಯಿಸುತ್ತಿರಬಹುದು. ಇಂಥ ಅಸಾಂಸ್ಕೃತಿಕ ಚಿಲ್ಲರೆ ರಾಜಕೀಯ ಸನ್ನಿವೇಶಗಳಲ್ಲಿ ಲೇಖಕರು ಪರಸ್ಪರ ಮೆಚ್ಚಿಕೊಳ್ಳುವ ‘ಲೇಖಕ ಸಹಕಾರಿ ಸಂಘ’ಗಳು ಹುಟ್ಟುತ್ತವೆ ಎಂದು ಗೆಳೆಯ ಎಲ್ಸಿ ನಾಗರಾಜ್ ಹಿಂದೊಮ್ಮೆ ತಮಾಷೆ ಮಾಡಿದ್ದು ನೆನಪಾಗುತ್ತದೆ! 

ಒಬ್ಬ ವ್ಯಕ್ತಿ ಪಾರ್ಕಿನಲ್ಲಿ ಕೂತು ಬರೆದನೋ, ಒಬ್ಬಳು ಅಡುಗೆಮನೆಯಲ್ಲಿ ಕೂತು ಬರೆದಳೋ, ಮತ್ತೊಬ್ಬ ಕಾಫಿ ಕುಡಿದು ಬರೆದನೋ, ಇನ್ನೊಬ್ಬ ಗುಂಡು ಹಾಕಿ ಬರೆದನೋ ಇವೆಲ್ಲದರ ತಾಪೇದಾರಿ ಉಸಾಬರಿ ಅವರ ಬರಹಗಳನ್ನು ಓದುವವರಿಗೆ ನಿಜಕ್ಕೂ ಅಗತ್ಯವಿಲ್ಲ. ಈ ಥರದ ಪತ್ತೇದಾರಿಗಿಳಿಯುವವರು ಓದುವುದನ್ನು ಬಿಟ್ಟು ಉಳಿದೆಲ್ಲ ತರಲೆ ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ! ಈ ಕಾಲದ ಲೇಖಕ, ಲೇಖಕಿಯರು ಗದುಗಿನ ನಾರಣಪ್ಪನಂತೆ ಬೆಳಗ್ಗೆ ಒದ್ದೆ ಬಟ್ಟೆ ಉಟ್ಟು, ಅದು ಆರುವವರೆಗೂ ಷಟ್ಪದಿಗಳ ಮೇಲೆ ಷಟ್ಪದಿ ಬರೆಯತ್ತಾ ಕೂರಬೇಕೆಂದು ನಿರೀಕ್ಷಿಸುವುದು ಕಷ್ಟ! ತಮ್ಮ ಜೀವಮಾನವಿಡೀ ಮದ್ಯದ ಬಾಟಲ್ ಕೂಡ ನೋಡದೆ ವಿಮರ್ಶೆ ಬರೆದ ಸಜ್ಜನರಾವ್ ಸರ್ಕಲ್ ವಿಮರ್ಶಕರು ಕೂಡ ಮೇಲೆ ಹೇಳಿದಂಥ ಸ್ವರತ ಕತೆಗಾರರು 'ಮೆಚ್ಚಿ ಅಹುದಹುದೆನುವಂತೆ’ ಬರೆಯುವುದು ಅನುಮಾನ! 

ಯಾವುದೇ ಓದಿನಲ್ಲಿ ಅಥವಾ ವಿಮರ್ಶೆಯಲ್ಲಿ ಕೊನೆಗೂ ನಿಮ್ಮ ಎದುರಿಗಿರುವ, ನೀವು ಓದುತ್ತಿರುವ, ಕೃತಿಯಷ್ಟೇ ಮುಖ್ಯ. ಹಾಗೇ ವಿಮರ್ಶೆಯ ವಿಮರ್ಶೆ ಕೂಡ ಒಂದು ಓದು ಅಷ್ಟೆ! ವಿಮರ್ಶೆಗಿರುವಂತೆ ವಿಮರ್ಶೆಯ ವಿಮರ್ಶೆಗೂ ಖಚಿತ ವಿಮರ್ಶಾ ಚೌಕಟ್ಟುಗಳಿರಬೇಕಾಗುತ್ತದೆ. ಕೈಯಲ್ಲಿರುವ ಕೃತಿಯನ್ನು ಓದುವುದು, ಅನುಭವಿಸುವುದು,ವಿವರಿಸುವುದು, ಪರೀಕ್ಷೆ ಮಾಡುವುದು, ತೂಗುವುದು, ಬೆಲೆ ಕಟ್ಟುವುದು… ಇದು ವಿಮರ್ಶೆಯ ಮುಖ್ಯ ಕೆಲಸ. ಆ ಕೆಲಸ ಬಿಟ್ಟು, ಬರೆದವನು ಎಲ್ಲಿ ಬರೆದ, ಹೇಗೆ ಬರೆದ ಎಂದು ತಲೆ ಕೆಡಿಸಿಕೊಳ್ಳುವುದರಿಂದ ಸಮಯ ಬುದ್ಧಿ ಎರಡೂ ಹಾಳಾಗಬಲ್ಲವು.

ಅಕಸ್ಮಾತ್ ನೀವು ಬರೆದವರ ಹಿನ್ನೆಲೆಯನ್ನೂ, ಅವರ ಬರಹವನ್ನೂ ಒಟ್ಟಿಗೆ ಓದಲು ಬಯಸಿದರೆ ಅದಕ್ಕೂ ವ್ಯವಸ್ಥಿತವಾದ ವಿಮರ್ಶಾ ಮಾರ್ಗವೊಂದಿದೆ. ಅದನ್ನು ’ಜೀವನ ಚರಿತ್ರಾತ್ಮಕ ವಿಮರ್ಶೆ’ ಎನ್ನುತ್ತಾರೆ. ಈ ಮಾರ್ಗದ ಮುಖ್ಯ ಮಾದರಿಯನ್ನು ’ಲೈವ್ಸ್ ಆಫ್ ದಿ ಪೊಯೆಟ್ಸ್’ ಎಂಬ ಪ್ರಖ್ಯಾತ ಪುಸ್ತಕ ಬರೆದ ಡಾ. ಸ್ಯಾಮುಯೆಲ್ ಜಾನ್ಸನ್ ಸೃಷ್ಟಿಸಿದ. ಕವಿಯ ಜೀವನ-ಕಾವ್ಯ ಎರಡನ್ನೂ ಹತ್ತಿರದಿಂದ ಅಧ್ಯಯನ ಮಾಡಿ ನೈತಿಕ ನಿಷ್ಠುರತೆಯಿಂದ ಬರೆದ ಬರವಣಿಗೆಯ ಮಾದರಿ ಅವನದು.

ಒಂದು ಕಾಲಕ್ಕೆ ಬಾಟಲ್‌ಗಟ್ಟಲೆ ವೈನ್ ಕುಡಿಯುತ್ತಿದ್ದ ಸ್ಯಾಮ್ಯುಯೆಲ್ ಜಾನ್ಸನ್, ತನ್ನ ಜೀವನದ ಮತ್ತೊಂದು ಘಟ್ಟದಲ್ಲಿ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಕೂಡ ಬರೀ ನೀರು ಕುಡಿಯುತ್ತಿದ್ದ. ಅವನ ಪುಸ್ತಕಗಳಲ್ಲಿ ಯಾವುದು 'ಮದ್ಯ’ಕಾಲೀನ ಬರವಣಿಗೆ; ಯಾವುದು 'ಮದ್ಯವಿಹೀನ’ಕಾಲದ ಬರವಣಿಗೆ ಎಂದು ವಿಂಗಡಿಸುವುದು ಹೇಗೆ?! ಪಶ್ಚಿಮದ ಶೀತ ಪ್ರದೇಶಗಳಲ್ಲಿ ವಾಸಿಸುವ ಇತರರಂತೆ ಅಲ್ಲಿನ ಲೇಖಕ, ಲೇಖಕಿಯರು ಕೂಡ ದಿನಕ್ಕೆ ಒಂದೆರಡು ಡ್ರಿಂಕ್ ಇಲ್ಲದೆ ಬದುಕುವುದು ಕಷ್ಟ. ಉಮರ್ ಖಯಾಂ ‘ತುಂಬು ಬಾ ಮದುಬಟ್ಟಲನು’ ಎನ್ನುತ್ತಿದ್ದ. ಹಾಗಾದರೆ ಇವರೆಲ್ಲ ಬರೆಯುವ  ವಿಮರ್ಶೆ, ವಿಶ್ಲೇಷಣೆ, ಕತೆ, ಕವಿತೆಗಳನ್ನು ಏನೆನ್ನಬೇಕು!  'ಕ್ರೈಂ ಅಂಡ್ ಪನಿಶ್‌ಮೆಂಟ್’ನಂಥ ಲೋಕಪ್ರಸಿದ್ಧ ಕಾದಂಬರಿ ಬರೆದ ದಾಸ್ತೋವ್‌ಸ್ಕಿ ಚೈನ್ ಸ್ಮೋಕರ್, ಹೆವಿ ಡ್ರಿಂಕರ್, ವ್ಯಸನಿ ಗ್ಯಾಂಬ್ಲರ್ ಆಗಿದ್ದ. ಅದಕ್ಕೂ ಅವನ ಕಾದಂಬರಿಗಳಿಗೂ ಸಂಬಂಧ ಕಲ್ಪಿಸಿ ಓದಬಾರದೆಂಬ ಕನಿಷ್ಠ ತಿಳಿವಳಿಕೆ ಓದುಗ, ಓದುಗಿಯರಿಗಿರಬೇಕು. ಅಷ್ಟೇ ಮುಖ್ಯವಾಗಿ, ತಮ್ಮ ಕೃತಿಯೊಂದಕ್ಕೆ ತಮಗೆ ಇಷ್ಟವಾಗದ ವಿಮರ್ಶೆ ಬಂದ ತಕ್ಷಣ ಅದು ಕುಡಿತದ ಪರಿಣಾಮ ಎಂಬ ಬಾಲಿಶ ಮನೋವಿಶ್ಲೇಷಣೆಗೆ ಇಳಿಯುವುದು ಮೂರ್ಖತನ ಎಂಬ ಪ್ರಾಥಮಿಕ ತಿಳಿವಳಿಕೆ ಬರೆಯುವವರಿಗೂ ಇರಬೇಕು.  

Share on:

Comments

26 Comments



| Subramanya Swamy

ವಿಮರ್ಶಕ ಮುಖ್ಯ ಅಲ್ಲ ,ಅವರ ಬರಹವನ್ನು ಮಾತ್ರ ಯಾವುದೇ ಪೂರ್ವಾಪರಗಳಿಗೆ ಗಮನ ಕೊಡದೆ ಓದಿ ಗ್ರಹಿಸುವ ಕ್ರಮ ಮುಖ್ಯ ಎಂಬ ನಿಲುವು ಈ ಬರಹದಿಂದ ಗೊಚರಿಸುತ್ತದೆ. ಸಾಹಿತ್ಯ ಓದುಗನಿಗೆ ಪ್ರಜಾಪ್ರಭುತ್ವದ ನಿಲುವು ಕೂಡ ಇದೆ ಅನಿಸುತ್ತದೆ. ಡಾ . ಸುಬ್ರಹ್ಮಣ್ಯ ಸ್ವಾಮಿ


| vali R

ಹೌದು ಸರ್. ಯಾರು ಹೇಗೆ ಬರೆದರು ಎಂಬುದಕ್ಕಿಂತ ಏನು ಬರೆದರು ಎಂಬುದು ಮುಖ್ಯ. ಹೆಂಡಗುಡುಕ ರತ್ನನ ಪದ ಬರೆದ ಜಿ ಪಿ ರಾಜರತ್ನಮ್ ಕುಡಿಯುತ್ತಿರಲಿಲ್ಲ ಎಂದಾಗ ಅಚ್ಚರಿ ಆಗುತ್ತದೆ. ಇಲ್ಲಿ ರತ್ನ ಬೇರೆ, ರಾಜರತ್ನಮ್ ಬೇರೆ ಎಂಬುದು ಅರಿಯಬೇಕು.\r\nಕಾವ್ಯ ಓದುಗರಿಗೆ ಮತ್ತು ಬೋಧಿಸುವವರಿಗೆ ತುಂಬಾ ಉಪಯುಕ್ತ ಲೇಖನ.\r\nಲೇಖನದ ಕೊನೆಯಲ್ಲಿ ಓದುಗಿಯರಿಗೆ ಎಂಬುದು \r\n\'ಓದುಗಿರಿಗೆ \' ಎಂದು ಕಣ್ತಪ್ಪಿನಿಂದ ಆಗಿರುವುದು ಓದುಗರಿಗೆ ಒಂದು ಗರಿಮೆ ಸಿಕ್ಕಂತಾಗಿದೆ. ಇನ್ನು ನಮ್ಮದು ಓದುಗಿರಿ ಬಳಗ.


| Nataraj Huliyar Replies

Thanks Vali. \'ಗಾಧೀಗಿರಿ\' ಎಂಬಂತೆ \'ಓದುಗಿರಿ\'. ಕುತೂಹಲಕರ ಪ್ರಯೋಗ!


| ಮಂಜುನಾಥ ಸಿ. ನೆಟ್ಕಲ್

D.H.Lawrence said- Never trust the teller, trust the tale. proper function of a critic is to save the tale from the artist who created it. ಲಾರೆನ್ಸ್ ನ ಪ್ರಕಾರವೂ ನಮಗೆ ಕೃತಿಯಷ್ಟೇ ಮುಖ್ಯ ಕೃತಿಕಾರನಲ್ಲ. ಹೀಗಿರುವಾಗ ಆತ ಕೃತಿ ರಚಿಸಲು ಅನುಸರಿಸುವ ಮಾರ್ಗ ನಮಗೇಕೆ ಮುಖ್ಯವಾಗಬೇಕು. .... ಆದರೂ ಈ ಚರ್ಚೆಗೆ ಕೊನೆ ಇಲ್ಲ ಅನಿಸುತ್ತದೆ ... ನಾವು ಕೃತಿಯನ್ನು ನಂಬಿ ಅದರ ವಿಮರ್ಶೆ ಮಾಡಿದರೆ ಮಾತ್ರ ಸಾಹಿತ್ಯ ಕೃತಿಗೆ ನ್ಯಾಯ ಸಲ್ಲಿಸಿದಂತೆ ಆಗಬಹುದು. ಆದರೂ \\\"ಮದ್ಯ\\\" ಕಾಲೀನ ವಿಮರ್ಶೆಗಳೇ ಕೆಲವೊಮ್ಮೆ ನಿಷ್ಠುರ ವಿಮರ್ಶೆಯೂ ಆಗಿರಲೂಬಹುದಲ್ಲವೇ?


| ಡಾ. ಮೋಹನ್ ಮಿರ್ಲೆ

ಬರವಣಿಗೆ ಮತ್ತು ವಿಮರ್ಶೆಯ ಬಗೆಗಿನ ಮೂಲಭೂತ ನೋಟಗಳಿಗಾಗಿ ಧನ್ಯವಾದಗಳು ಸರ್..


| ಸುನೀಲ

ಬರದ ಬರವಣಿಗೆ ಬಾರದ ಮೆರವಣಿಗೆ ಕುಡಿಯುವವರ ಪಕ್ಕ ಕುಡಿಯದೆ ಕುಳಿತುಕೊಳ್ಳುವ ರೀತಿ...ಹಾಗೆ\r\nಬರಹಗಾರ ಬೇರೆ... ಬರವಣಿಗೆ ಬೇರೆ ...ಅನಿಸಿಕೆ ಅನುಭವ ಕೂಡ ಬೇರೆ ಬೇರೆ... ಅನಿಸಿಕೆ ಅನುಭವವಲ್ಲ ಅದೇ ರೀತಿ ಅನುಭವ ಅನಿಸಿಕೆಯಾಗುವುದಿಲ್ಲ... ವ್ಯಕ್ತಿಯ ಸ್ಪಗತ ಸಮಾಜ ಸ್ವಾಗತ ಕೋರುವಷ್ಟು ಸ್ಪಷ್ಟವಾಗಿ ಇರುವುದಿಲ್ಲ.\r\n\"ಕಿರಿಯರಿಗೆ ಮುದ್ದೇ ಮದ್ದು...\r\nಹಿರಿಯರಿಗೆ ಮುದ್ದೇ ಮದ್ದು\". ಇಲ್ಲಿ ಹಿರಿಯ ಕಿರಿಯರ ನಡುವಿನ ವ್ಯತ್ಯಾಸದ ಅರಿವಿಲ್ಲದಿದ್ದರೆ ಸಮಸ್ಯೆ.... ಇದೆ ಅನಿಸಿಕೆ ಹಾಗೂ ಅನುಭವಗಳ ನಡುವಿನ ವ್ಯತ್ಯಾಸ... ಕ್ಷಣಿಕದ ಕಲ್ಪನೆಯಲ್ಲಿ ಎಲ್ಲದಕ್ಕೂ ಅನಿಸಿಕೆಯ ಸ್ವಾಗತ ಇರುತ್ತದೆ. ಆದರೆ ಭವದ ಕ್ಷಿಹಿಸುವ ಕ್ಷಣಿಕ ಜೀವನದಲ್ಲಿ ಎಲ್ಲವೂ ಅನುಭವಗಳೇ..


| Suresha J H

ಸರ್ ಕೃತಿನಿಷ್ಠ ವಿಮರ್ಶೆಯ ಬಗೆಗೆ ತಮ್ಮ ಲೇಖನ ಆಸಕ್ತವಾಗಿದೆ. ಕವಿ /ಕವಯತ್ರಿ ಅಥವಾ ಲೇಖಕ/ಲೇಖಕಿಯರ ಪೂರ್ವಾಪರ ವೃತ್ತಾಂತಗಳ ಮೂಲಕ ಕೃತಿಯನ್ನು ನೋಡುವ ಕ್ರಮ ಸೂಕ್ತವಾದುದಲ್ಲ. ಆದರೆ ಚಾರಿತ್ರಿಕ ಸಂಗತಿಗಳಿದ್ದಲ್ಲಿ ಅದನ್ನೂ ಕೃತಿಯಲ್ಲಿಯೇ ಶೋಧಿಸಿ ಕಂಡುಕೊಳ್ಳಬಹುದು. ಆಯಾ ಕಾಲದ ಕೃತಿಕಾರರ ಮೇಲಿನ ಪ್ರಭಾವವೂ ಪ್ರೇರಣೆಯೂ ಕೃತಿಯಲ್ಲಿಯೇ ಕಾಣಬೇಕು.


|


| Shamarao

ಬರಹವಷ್ಟೇ ಮುಖ್ಯವಲ್ಲವೇ? ಬರಹಗಾರ ಹೇಗಿದ್ದು ಬರೆದರೇನು? ಇವೆಲ್ಲ ಕ್ಷುಲ್ಲಕ ವಿಚಾರಗಳು


| vali R

ಕವಿಜೋಡಿಯ ಆತ್ಮಗೀತ ಓದುತ್ತಿದ್ದೆ ಮತ್ತೆ ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆ ನೀಡಿತು ಕವಿಜೋಡಿ. ಅದನ್ನೇ ಇಲ್ಲಿ ಬರೆದಿರುವೆ.\r\n\"ಗಾಯನದಲ್ಲಿ ಗಾಯಕನನ್ನು,\r\nಕವಿತೆಯಲ್ಲಿ ಕವಿಯನ್ನು \r\nಹುಡುಕಲು ಹೊರಡುವ \r\nಚಿಲ್ಲರೆ ಚಾಳಿಗೆ ಸಿಲುಕಿ \r\nಅವಳ ಹೊಟ್ಟೆ ಕಿಚ್ಛೆದ್ದಿತು.\r\n\"ಕಾವ್ಯದಲ್ಲಿ ಕವಿಯನ್ನು ಹುಡುಕುವ ಚಿಲ್ಲರೆ ಕೆಲಸ ಮಾಡಬಾರದು.\"


| ಗುರು ಜಗಳೂರು

ಸರ್ ಹೋದ ವಾರದ ವಚನಗಳ ಬಗ್ಗೆ.ಅಂಬಯ್ಯ ನುಲಿಯವರ ಗಾಯನ ಕೇಳಿದ್ದೇನೆ. ಮೂಡುಬಿದಿರೆ ಯಲ್ಲಿ ಉದಯರಾಗದಲ್ಲಿನ ಹಾಡು ಮನಸ್ಸಿಗೆ ತಟ್ಟಿದ್ದವು. ವಚನಗಳು ಅನುಭವ ಮಂಟಪ ,ಬಸವಣ್ಣನವರು ಎಲ್ಲದರ ಬಗ್ಗೆ ಸೊಗಸಾಗಿ ಮಾತನಾಡುತ್ತೇವೆ ಭಾಷಣ ಕುಟ್ಟುತ್ತೇವೆ.ಮತ್ತೆ ಮನೆಗೆ ತೆರಳಿ ಜಾತೀಯತೆ ಮಾಡುತ್ತೇವೆ. ಎಲ್ಲದಕ್ಕೂ ಕೋಮುವಾದ ಪದ ಒಂದು ಆಶ್ರಯ. ಪ್ರೀತಿಯಲ್ಲಿ ಬಿದ್ದ ತಮ್ಮ ಮಕ್ಕಳನ್ನು ಅನ್ಯ ಜಾತಿಯವರಿಗೆ ಕೊಡಲು ಹಿಂಜರಿಯುತ್ತಾರೆ ಅಥವಾ ಕೊಲ್ಲಲು ಹೇಸುವುದಿಲ್ಲ.ಇವರಿಗಿಂತ ಇದಾವುದೂ ಗೊತ್ತಿರದ(ಜ್ಯಾತ್ಯಾತೀತತೆ) ಸೌಮ್ಯವಾದಿಗಳು ಗೊಣಗುತ್ತಲೇ ಪರಿಸ್ಥಿತಿಗೆ ಒಗ್ಗಿಕೊಳ್ಳುವುದನ್ನು ನೋಡಿದ್ದೇವೆ. ಬಹುಸಂಖ್ಯಾತರು,ಸವರ್ಣೀಯರ ತಪ್ಪುಗಳನ್ನು ದಿಟ್ಖವಾಗಿ ಖಂಡಿಸಿದ್ದು ಗೌರಿ ಲಂಕೇಶ್ ಒಬ್ಬರೇ. ಹಲ್ಲೆ‌ ನಡೆಯಬಹುದು ಎಂದು ಹೆದರಿ ಪುರೋಹಿತಶಾಹಿ ಪದವನ್ನು ಹಿಡಿದುಕೊಂಡಿರುತ್ತಾರೆ. ಬದಲಾವಣೆಯನ್ನು ಗುರುತಿಸಲು ವಿಫಲಾಗಿರುತ್ತಾರೆ


| ಗುರು ಜಗಳೂರು

ಬದಲಾವಣೆಯು ವೈಯಕ್ತಿಕ ನೆಲೆಯಲ್ಲಿ ಆಗುವಂತಹುದು.ಇದನ್ನು ಒಂದು ಸಮುದಾಯವಾಗಿ ವಿಂಗಡಿಸುವುದು ಅಪಾಯಕಾರಿ. ಹೌದುಲಂಕೇಶ್ ಮತ್ತು ಅವರ ಸಮಕಾಲೀನ ಲೇಖಕರ ವಚನದ ಬರಹಗಳು ವ್ಯಕ್ತಿಯ ಪರಿವರ್ತನೆಗೆ ಸಹಕಾರಿಯಾಗಿದೆ. ಆದರೆ ಏನನ್ನೂ ಓದದವರು ಭಾರೀ ಸಂಖ್ಯೆಯಲ್ಲಿದ್ದಾರೆ,ಓದಿಯೂ ಬದಲಾವಣೆಯಾಗದವರು ಸಹ ಇದ್ದಾರೆ


| Shylesh

I agree with this comment- ಬರಹವಷ್ಟೇ ಮುಖ್ಯವಲ್ಲವೇ? ಬರಹಗಾರ ಹೇಗಿದ್ದು ಬರೆದರೇನು? ಇವೆಲ್ಲ ಕ್ಷುಲ್ಲಕ ವಿಚಾರಗಳು\r\n\r\n


| Mallikarjun Hiremath

ವಿಮರ್ಶೆಯನ್ನಾಗಲಿ,ಸೃಜನ ಬರಹವನ್ನಾಗಲಿ ಲೇಖಕ ಕುಡಿದು ಬರೆದಿದ್ದಾನೋ,ಕುಡಿಯದೇ ಬರೆದಿದ್ದಾನೊ ಎಂಬುದು ಮುಖ್ಯವಾಗದು. ಓದುಗನಿಗೆ ಅವನ ಬರವಣಿಗೆ ಹೇಗಿದೆ ಎಂದು ಕಾಣುವದಷ್ಟೇ ಮುಖ್ಯ. ವಿಮರ್ಶಕ ಕೂಡ prejudices ದಿಂದ ಮುಕ್ತವಾಗಿ ಬರೆಯಬೇಕಲ್ಲವೆ? ಒಂದು ಕಾಲ/ಸಂದರ್ಭದಲ್ಲಿ ಟೀಕೆಗೆ ಒಳಗಾದ ಕೃತಿ ಇನ್ನೊಂದು ಕಾಲ/ ಸಂದರ್ಭದಲ್ಲಿ ಮಹತ್ವದ ಕೃತಿಯಾಗಿ ಪರಿಗಣಿತವಾಗಿರುವದನ್ನು ಕಂಡಿದ್ದೇವೆ. ತಾನು ಹೇಳಿದ್ದೇ ಪರಮ ಸತ್ಯ, ಅಂತಿಮ ಸತ್ಯಎನ್ನುವ ಹಾಗೆ ದಾರ್ಷ್ಟದಿಂದ ವಿಮರ್ಶಿಸಬಾರದು. ತನ್ನ ಓದಿನಿಂದ ಕಂಡ ಸತ್ಯವನ್ನು ಸಹೃದಯತೆಯಿಂದ, ವಿನಯದಿಂದ ಮಂಡಿಸಬೇಕು.


|


| Muniyappa

ಕತೆಗಾರ ಮತ್ತು ವಿಮರ್ಶಕರ ಕುರಿತ ಅರ್ಥಪೂರ್ಣ ಲೇಖನ ಸಾರ್, ನಮಸ್ತೆ


| Krishnakumar

ವಿಮರ್ಶೆಯು ಚರ್ಚೆಗೆ ಅವಕಾಶ ಕಲ್ಪಿಸುವ ಕೃತಿಯ ವಸ್ತುನಿಷ್ಠ ವಿಮರ್ಶೆ ಆಗಿರಬೇಕೇ ಹೊರತು ಹಾಗೂ ವಿಮರ್ಶೆಯ ಮನೋಧರ್ಮ ಮುಖ್ಯವೇ ಹೊರತು ವಿಮರ್ಶಿಸುವವನ ಹಿನ್ನೆಲೆಯನ್ನು ನೋಡಿ ಆರೋಪಿಸುವುದು ತರ್ಕಬದ್ಧವಾಗಿ ಕಾಣಿಸುವುದಿಲ್ಲ . ವಿಮರ್ಶಕರ ಮೂಲ ಮತ್ತು ಅವರ ಪೂರ್ವಾವಲೋಕನ ಅನಗತ್ಯ. ಪೂರ್ವಗ್ರಹ ಪೀಡಿತ ವಿಮರ್ಶಕನ ಚರ್ಚೆ ಕೃತಿಕಾರನ ಆಯ್ಕೆಯಾಗಬಾರದು. ಏಕೆಂದರೆ ಓದುವುದು ಓದುಗನ ಆಯ್ಕೆ. ವಿಮರ್ಶೆ ವಿಮರ್ಶಕನ ಸ್ವಾತಂತ್ರ್ಯ. ವಿಮರ್ಶೆ ವಸ್ತುನಿಷ್ಠವಾಗಿದೆಯೇ ಇಲ್ಲವೇ ಎಂಬುದನ್ನು ನೋಡಬಹುದೇ ಹೊರತು, ವಿಮರ್ಶಕ ಅಮಲಿನಲ್ಲಿದ್ದಾನೆಯೇ, ಹೇಗೆ ಬರೆದ...ಎಂಬುದೆಲ್ಲಾ ಮುಖ್ಯವಲ್ಲ.\r\n


| Krishnakumar

ವಸ್ತುನಿಷ್ಠ ವಿಮರ್ಶೆ ಇಂದಿನ ಅಗತ್ಯ


| Kallaiah

ಬರಹಗಾರನ ಬರಹ ಮುಖ್ಯವೇ ಹೊರತು ಬರಹಗಾರ ಯಾವ ಸ್ಥಿತಿಯಲ್ಲಿದ್ದು ಬರೆದ ಎಂಬುದಲ್ಲ.ಈ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಧನ್ಯವಾದಗಳು .


| Prof. Prabhakar

\r\nYou have provided lovely insights on criticism in a simple language laced with humour. Congradulations


| Dr.Ramaiah

ನಿಜವಾದ ವಿಮರ್ಶೆಗೆ ತನ್ಹದೇ ಆದ ಮಜಲುಗಳಿರುತ್ತವೆ ಎಂಬುದನ್ನು ಲೇಖನ ನೆನಪಿಸಿತು.


| ಅನಿಲ್ ಗುನ್ನಾಪುರ

ಬರವಣಿಗೆಯ ಹಿನ್ನೆಲೆ ಮತ್ತು ಬರಹ ಬಹಳ ವಿಶೇಷವಾಗಿದೆ. ಇಷ್ಟವಾಯಿತು.


| Sanganagowda

ಬರವಣಿಗೆ ಹಿನ್ನಲೆಯ ಪತ್ತೆದಾರಿ ಬರೆಹ ಓದಿದೆ. ಮಜವಾಗಿದೆ ಅಷ್ಟೇ ಗಂಭೀರವಾಗಿಯೂ ಇದೆ ಸರ್. ಈಗಿಗ ನಮ್ಮ ತಲೆಮಾರು (ನನ್ನನ್ನೂ ಒಳಗೊಂಡಂತೆ) ಫೇಸ್ ಬುಕ್ ಒಳಗೆ ಗುಡ್ಡದಷ್ಟು ಪ್ರಚಾರ, ಪುಸ್ತಕ ತಿರುವಿದರೆ ಹುಲ್ಲುಕಡ್ಡಿಯಷ್ಟು ಗಟ್ಟಿಯಲ್ಲದ ಬರೆಹ...🙏


| ಡಾ. ನಿರಂಜನ ಮೂರ್ತಿ ಬಿ ಎಂ

ಅತ್ಯಂತ ಕುತೂಹಲದಿಂದ ಓದಿಸಿಕೊಳ್ಳುವ ಈ ಲೇಖನ ತುಂಬಾ ಮುದನೀಡಿತು. ಕಾರಣ ಬರವಣಿಗೆ-ವಿಮರ್ಶೆಯ ಬಗೆಗಿನ ಈ ಚರ್ಚೆ ನವಿರಾದ, ಅಲ್ಲಲ್ಲಿ ಖಡಕ್ಕಾದ, ಮತ್ತು ಅರ್ಥಪೂರ್ಣವಾದ ಹಾಸ್ಯದಿಂದಾಗಿ, ಸವಿಯಾದ ಓದನ್ನು ಉಣಬಡಿಸುತ್ತದೆ! \r\n’ಏರಿಸುವವರು,\'\r\n‘ಲೇಖಕ ಸಹಕಾರಿ ಸಂಘ’ಗಳು; \'ಸಜ್ಜನರಾವ್ ಸರ್ಕಲ್ ವಿಮರ್ಶಕರು;\' \r\n\'ಮದ್ಯ’ಕಾಲೀನ ಬರವಣಿಗೆ; \'ಮದ್ಯವಿಹೀನ’ಕಾಲದ ಬರವಣಿಗೆ ಮುಂತಾದ ಲೇಖಕರ ಪದಪುಂಜಗಳು ಹಾಸ್ಯದ ಹೊನಲನ್ನು ಹರಿಸಿವೆ! ಅರ್ಥವನ್ನೂ ಪಸರಿಸಿವೆ!\r\n\r\nವಿಮರ್ಶೆ ಶಿಸ್ತುಬದ್ಧವಾಗಿ ವಸ್ತುನಿಷ್ಠವಾಗಿರಬೇಕು; ಜೊತೆಗೆ ಪ್ರಾಮಾಣಿಕವಾಗಿರಬೇಕು. ವೈಯುಕ್ತಿಕವಾದ ಆರೋಪ-ನಿಂದನೆಗಳಿಂದ ದೂರವಿರಬೇಕು ಮತ್ತು ಹಾಗಿರಬೇಕೆಂದರೆ ಕೃತಿಯಷ್ಟೇ ಮುಖ್ಯವಾಗಿರಬೇಕು, ಕೃತಿಕಾರನಲ್ಲ; ವಿಮರ್ಶೆಯ ವಿಮರ್ಶೆ ಕೂಡ ಒಂದು ಓದು ಎಂಬ ಲೇಖಕರ ವಿಚಾರಗಳು ಸರ್ವಸಮ್ಮತ.\r\n\r\nಕೃತಿಕಾರ ಓದುಗರಿಗೆ ಪರಿಚಯವಿದ್ದಾಗ, ಕೃತಿಕಾರನೂ ಮುಖ್ಯವೆನಿಸಬಹುದು. ಏಕೆಂದರೆ ಕೃತಿಕಾರನ ಬರವಣಿಗೆ, ಆತನ ವಿಚಾರಗಳ ಮೆರವಣಿಗೆ, ಮತ್ತು ಆತನ ಬದುಕಿನ ಆಚರಣೆಗಳೂ ಪ್ರಾಮುಖ್ಯತೆ ತಂದುಕೊಡುತ್ತವೆ ಆತನ ಕೃತಿಗಳಿಗೆ. ವಿಚಾರ-ಆಚಾರ ಮತ್ತು ನುಡಿ-ನಡೆಗಳು ಒಂದಾಗಿ ಮೂಡಿಬರುವ ಕೃತಿಗಳು ಓದುಗರಿಗೆ ಬಲು ಅಚ್ಚುಮೆಚ್ಚು ಎಂಬುದು ನನ್ನ ಭಾವನೆ. ಅಂತಹ ಕೃತಿಗಳು ಜನಮಾನಸದಲ್ಲಿ ಬಹಳ ಕಾಲ ಬದುಕಿ, ಓದುಗರಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬಲ್ಲವು. ಈ ಸಂದರ್ಭಗಳಲ್ಲಿ ಲೇಖಕರು ಪ್ರಸ್ತಾಪಿಸಿರುವ \'ಜೀವನ ಚರಿತ್ರಾತ್ಮಕ ಓದು ಮತ್ತು ವಿಮರ್ಶೆ\' ಪ್ರಸ್ತುತವಾಗುತ್ತದೆ. ಒಟ್ಟಾರೆ ಲೇಖನ ಅದ್ಭುತವಾಗಿದೆ. ಹುಳಿಯಾರರಿಗೆ ಅಭಿನಂದನೆಗಳು.


|


| ದೇವಿಂದ್ರಪ್ಪ ಬಿ.ಕೆ.

ಸಾಹಿತ್ಯವನ್ನು ಓದುವ ಮತ್ತು ವಿಮರ್ಶಿಸುವ ಎರಡು ತರಹದ ವ್ಯಕ್ತಿಗಳು ಇದ್ದಾರೆ. ಓದುಗ ಸಹೃದಯನಾದರೆ, ವಿಮರ್ಶೆ ಮಾಡುವವನು ವಿಮರ್ಶಕನಾಗುತ್ತಾನೆ. ಕೃತಿ ಮುಖ್ಯವೇ ಹೊರತು ರಚನೆಯ ವ್ಯಕ್ತಿ ಮತ್ತು ಆತನ ಹಿನ್ನೆಲೆ ಮುಖ್ಯ ಅಲ್ಲ ಎಂಬುದು ನವ್ಯದವರ ತತ್ವ. ಅವರು ಕೃತಿನಿಷ್ಠ ಓದನ್ನು ಮುನ್ನೆಲೆಗೆ ತಂದರು. ಆಗ ವಿಮರ್ಶಿಸುವ ಗುಣ ವಿಸ್ತಾರ ಪಡೆಯಿತು. ಆದರೆ ನವೋದಯ ಕಾಲಘಟ್ಟದಲ್ಲು ವ್ಯಕ್ತಿ, ಕೃತಿಯ ಜೊತೆಗೆ ಆತನ ಹಿನ್ನೆಲೆಯನ್ನು ಕೂಡ ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಂಡಿದ್ದರು. ಹಾಗಾಗಿ ನವೋದಯ ವಿಮರ್ಶೆ ಜನರಿಗೆ ತಲುಪಲಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕುವೆಂಪು ಮತ್ತು ಮಾಸ್ತಿಯವರ ಆರೋಗ್ಯಕರ ಚರ್ಚೆಯಾದ ಜಲಗಾರ ನಾಟಕದ ಕುರಿತ ನಿಲುವನ್ನು ಗಮನಿಸಬಹುದು. \r\n\r\nನವ್ಯದ ಅಸ್ತಿತ್ವವಾದ ಪರಿಕಲ್ಪನೆ ಇಡೀ ಕನ್ನಡ ಸಾಹಿತ್ಯ ವಿಮರ್ಶೆಯನ್ನು ಹೊಸ ಓದಿಗೆ ಒಳಪಡಿಸಿತು. ನಂತರ ಬಂದ ಅನೇಕ ವಿಮರ್ಶಕರು ತೀರಾ ನಿಷ್ಠುರವಾಗಿ ವಿಮರ್ಶೆ ಮಾಡುತ್ತಾ ಬಂದರು. ಇದು ಹೆಚ್ಚು ದಿನ ಉಳಿಯಲಿಲ್ಲ. ನಂತರದಲ್ಲಿ ದಲಿತ ಸಂವೇದನೆ, ಮುಸ್ಲಿಂ ಸಂವೇದನೆಗಳ ಮೂಲಕ ವಿಮರ್ಶೆ ಮುನ್ನೆಲೆಗೆ ಬಂದಿತು. ಇದರ ಪರಿಣಾಮವಾಗಿ ನೊಂದವರ ನೋವ ನೋಯದವರೆತ್ತ ಬಲ್ಲರು ಎಂಬ ಮಾತು ಮಹತ್ವ ಪಡೆದುಕೊಂಡಿತು. ಬೇರೆಯವರ ಬದುಕಿನ ಕುರಿತು ನೋಡಿ ಬರೆಯುವುದಕ್ಕೂ ಅನುಭವಿಸಿ ಬರೆಯುವುದಕ್ಕೂ ಭಿನ್ನತೆ ಇದೆ ಎಂಬ ಕಾರಣಕ್ಕೆ ಸಾಹಿತ್ಯ ವಿಮರ್ಶೆ ಗಟ್ಟಿಯಾಗಿ ಬೆಳೆಯಲಿಲ್ಲ. ಆಗ ಕೃತಿಗಳ ಮೇಲೆ ಬಂದವಿಮರ್ಶೆಗಳಿಗೆ ಜಾತಿ, ವರ್ಗ, ಅಧಿಕಾರದ ಲೇಬಲ್ ಹಚ್ಚಲಾಯಿತು. ಏನಾದರೂ ನೇರವಾಗಿ ಬರೆದರೆ ಒಪ್ಪಿಕೊಳ್ಳದೆ ಇರುವ ಮನಸ್ಥಿತಿ ಬೆಳೆಯಿತು. ರಹಮತ್ ತರೀಕೆರೆ ಅವರ ಬಾಗಿಲ ಮಾತು ಕೃತಿಯು ಲೇಖಕರ ಅನೇಕ ಕೃತಿಗಳಿಗೆ ಬರೆದ ಮುನ್ನುಡಿಯ ಪುಸ್ತಕವಾಗಿದೆ. ಅದರಲ್ಲಿ ಅವರು ಇಲ್ಲಿ ಪ್ರಕಟವಾದ ಲೇಖನಗಳನ್ನು ಹಲವರು ಅವರ ಪುಸ್ತಕಕ್ಕೆ ಮುನ್ನುಡಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಮಾತನ್ನು ಹೇಳುತ್ತಾರೆ. ಸದ್ಯದ ಸ್ಥಿತಿಯಲ್ಲಿ ಕನ್ನಡ ವಿಮರ್ಶೆ ಓಲೈಸುವ ಗುಣದ ಕಡೆಗಿದೆ. ಪಂಪ ಹೇಳುವ ಹಾಗೆ ಓಲಗಿಸಿ ಬಾಳ್ವುದೆ ಕಷ್ಟಂ ಇಳಾದಿನಾಥರಂ ಎಂಬ ಮಾತನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರಬೇಕು.




Add Comment






Recent Posts

Latest Blogs



Kamakasturibana

YouTube