ಇಪ್ಪತ್ತೈದು ವರ್ಷಗಳ ಕೆಳಗೆ…

ರಾತ್ರಿ ಒಂಬತ್ತೂವರೆ ದಾಟಿದ ಮೇಲೆ ಅವರು ತಮ್ಮ ಕಛೇರಿಯ ಕುರ್ಚಿ ಬಿಟ್ಟು ಮೇಲೆದ್ದರು. ಅವರಿಗಿಂತ ಎರಡು ಗಳಿಗೆ ಮೊದಲು ಆಫೀಸಿನ ಮೆಟ್ಟಲಿನಿಂದ ಕೆಳಗಿಳಿದ ನಾನು ಬೈಕ್ ಹತ್ತುವ ಮುನ್ನ ಅವರು ಕೆಳಗಿಳಿದು ಬರುವುದನ್ನು ಸುಮ್ಮನೆ ನೋಡುತ್ತಾ ನಿಂತೆ. ಅವರು ಕೊಂಚ ತಡವರಿಕೆಯ ಹೆಜ್ಜೆ ಇಡುತ್ತಲೇ ಮೆಟ್ಟಲಿಳಿಯುತ್ತಾ, ‘ಬರ್ಲೇನೋ…’ ಎಂದು ಕೊರಗುವ ದನಿಯಲ್ಲಿ ಹೇಳಿದರು. ‘ಹೂಂ ಸಾರ್’ ಅಂದೆ.

ಇಸವಿ 2000. ಜನವರಿ 24. ರಾತ್ರಿ: 9.45.

‘ಬರ್ಲೇನೋ?’ ಎಂದ ಅವರು ಬರಲಿಲ್ಲ. ಪಿ. ಲಂಕೇಶ್ ಇನ್ನು ಮರಳಿ ಬರುವುದಿಲ್ಲ ಎಂಬ ಸುದ್ದಿಯನ್ನು ಬೆಳಗ್ಗೆ ಫೋನ್ ಮಾಡಿ ಹೇಳಿದವರು ಕವಿ ಮಿತ್ರ ಚಿಂತಾಮಣಿ ಕೊಡ್ಲೆಕೆರೆ.  ಅದಕ್ಕಿಂತ ಮೊದಲು, ಎಷ್ಟೋ ವರ್ಷಗಳ ಕೆಳಗೆ, ತಮ್ಮ ಹುಟ್ಟು ಹಬ್ಬದ ದಿನ ‘ಸಾವು ಎನ್ನುವುದು ಕನಸಿಲ್ಲದ ನಿದ್ರೆ’ ಎಂದು ಲಂಕೇಶರು ಹೇಳಿದ್ದು ಈಗ ಮತ್ತೆ ನೆನಪಾಗುತ್ತಿದೆ.

‘ಇಂತಿ ನಮಸ್ಕಾರಗಳು: ಲಂಕೇಶ್-ಡಿ.ಆರ್.ನಾಗರಾಜ್ ಕುರಿತ ಸಾಂಸ್ಕೃತಿಕ ಕಥಾನಕ’ ಎಂಬ ನನ್ನ ಪುಸ್ತಕದಲ್ಲಿ ದಾಖಲಾಗಿರುವ ಆ ಕೊನೆಯ ರಾತ್ರಿಯ ಗಳಿಗೆಗಳ ಕೆಲವು ವಿವರಗಳನ್ನು ಕೆಳಗೆ ಕೊಟ್ಟಿರುವೆ:

‘೨೪ ಜನವರಿ. ಸೋಮವಾರ. ಅದು ‘ಲಂಕೇಶ್ ಪತ್ರಿಕೆ’ಯ ಹೊಸ ಸಂಚಿಕೆಯ ತಯಾರಿಯ ದಿನ. ನಾನು ಸಾಮಾನ್ಯವಾಗಿ ಸೋಮವಾರಗಳಂದು ಸಂಪಾದಕ ಲಂಕೇಶರನ್ನು ನೋಡುತ್ತಿರಲಿಲ್ಲ. ಆದರೆ ಅವತ್ತು ಮಾತ್ರ ಹೋಗಲೋ ಬೇಡವೋ ಎಂದು ಅರೆಮನಸ್ಸಿನಿಂದಲೇ ಅವರ ಛೇಂಬರಿನೊಳಕ್ಕೆ ಅಡಿಯಿಟ್ಟೆ. ಸಂಪಾದಕರು ಟೆಲಿವಿಷನ್ನಿನೆದುರು ಕೂತಿದ್ದರು. ‘ಬಾ’ ಎನ್ನುವಂತೆ ಸುಮ್ಮನೆ ಕತ್ತು ಹಾಕಿ ಮತ್ತೆ ತಮ್ಮ ಕೋಶದೊಳಗೆ ಹೂತು ಹೋದರು. ವಿಡಿಯೋದಲ್ಲಿ ಅವರ ಮೆಚ್ಚಿನ ಚಿತ್ರವಾದ ‘ಪ್ರೈಡ್ ಅಂಡ್ ಪ್ರಿಜುಡೀಸ್’ನ ದೃಶ್ಯಗಳು ತೇಲಿ ಹೋಗುತ್ತಿದ್ದವು. …ಮಾತಾಡುವುದನ್ನು ತಪ್ಪಿಸಿಕೊಳ್ಳಲೆಂದೋ ಏನೋ ಅವರು ಸಿನಿಮಾದಲ್ಲೇ ಮುಳುಗಿಬಿಟ್ಟರು. ಅವರಿಗೆ ಪ್ರಿಯವಾದ ಲಿಟರರಿ ಗಾಸಿಪ್ಪಿಗೆ ಎಳೆದರೆ ಅವರು ಕೊಂಚ ಹೊರ ಬರುತ್ತಾರೆ ಎನ್ನಿಸಿ, ‘…ಜೇನ್ ಆಸ್ಟಿನ್ ಬರೆದ ‘ಪ್ರೈಡ್ ಅಂಡ್ ಪ್ರಿಜುಡೀಸ್’ ಕಾದಂಬರಿಯನ್ನು ದೇಜಗೌ ‘ಹಮ್ಮು-ಬಿಮ್ಮು’ ಎಂದು ಅನುವಾದಿಸಿದ್ದಾರಲ್ಲ!’ ಎಂದೆ. ತಕ್ಷಣ ಅವರು ದೇಜಗೌ ಬಳಸುವ ಕನ್ನಡದ ವೈಖರಿ ನೆನೆದು ನಕ್ಕರು. ‘ಆ ದೇಜಗೌಗೆ ಅನುವಾದ ಎನ್ನುವುದು ಕಾಟೇಜ್ ಇಂಡಸ್ಟ್ರೀ ಥರ. ಆತ ‘ಅನ್ನಾ ಕರೇನಿನಾ’, ‘ವಾರ್ ಅಂಡ್ ಪೀಸ್’ ಎಲ್ಲವನ್ನೂ ಕೊಲೆ ಮಾಡಿದಂತಿದೆ!’ ಎಂದು ಮುಗುಳ್ನಕ್ಕರು.

ಅವತ್ತು ಲಂಕೇಶರು ಎಂದಿಗಿಂತ ಮುಂಚೆಯೇ ಮೇಲೆದ್ದು ಆ ರಾತ್ರಿ ಓದುವ ಪುಸ್ತಕಗಳನ್ನು ಆಯ್ದುಕೊಂಡರು. ಆಗ ಅವರ ಟೇಬಲ್ ಮೇಲಿದ್ದ ಪುಸ್ತಕವೊಂದಕ್ಕೆ ನಾನೂ ಕೈ ಹಾಕಿದೆ. ಅವರೂ ಕೈ ಹಾಕಿದರು. ಅದು ಡಿ.ಎನ್. ಶಂಕರಭಟ್ಟರ ‘ಕನ್ನಡ ಶಬ್ದರಚನೆ’ ಎಂಬ ಪುಸ್ತಕ. ನಾನು, ‘ಇಂಥ ಪುಸ್ತಕಗಳನ್ನೆಲ್ಲಾ ನೀವು ಓದುವುದಿಲ್ಲವೆಂದು ತಿಳಿದಿದ್ದೆನಲ್ಲ!’ ಎಂದೆ. ‘ನೋ, ನೋ, ಭಟ್ಟ ಬಾಳಾ ಚೆನ್ನಾಗಿ ಬರೀತಾನೆ’ ಎನ್ನುತ್ತಾ ಪುಸ್ತಕವನ್ನು ಕಾರಿನಲ್ಲಿಡಲು ಡ್ರೈವರ್‌ ರೇವಣ್ಣನಿಗೆ ಹೇಳಿದರು. ನಾನು ಪತ್ರಿಕೆಯ ಆಫೀಸಿನ ಮೆಟ್ಟಲಿಳಿದು ಬೈಕ್ ಹತ್ತಿ ಯಾಕೋ ಹಿಂತಿರುಗಿ ನೋಡಿದೆ: ಎಂದಿನಂತೆ ಜಾರುತ್ತಿದ್ದ ಪ್ಯಾಂಟನ್ನು ಮೇಲೆಳೆದುಕೊಳ್ಳುತ್ತಾ ಅಸ್ಥಿರವಾದ ಹೆಜ್ಜೆಗಳನ್ನಿಡುತ್ತಾ ಅವರು ಕಾರಿನ ಬಳಿ ಬರುತ್ತಿದ್ದುದನ್ನು ಕಂಡು ಪಿಚ್ಚೆನ್ನಿಸಿ ಕತ್ತಲಲ್ಲಿ ಕರಗಿದೆ…’  

ಇದಾದ ಕೆಲವು ವರ್ಷ ಗೆಳೆಯ ಬಸವರಾಜು ಪ್ರತಿ ವರ್ಷ ಜನವರಿ 24ರ ರಾತ್ರಿ ಪೋನ್ ಮಾಡಿ, ‘ಬನ್ನಿ! ಮೇಷ್ಟ್ರ ಹೆಸರಲ್ಲಿ ಒಂದು ಸ್ಮಾಲ್ ಹಾಕೋಣ!’ ಎನ್ನುತ್ತಿದ್ದರು. ವರ್ಷಗಳುರುಳಿದಂತೆ ಆ ದಿನಾಂಕವೂ ಮರೆತು ಹೋಗತೊಡಗಿತು. ಲಂಕೇಶರನ್ನಾಗಲೀ, ಲಂಕೇಶರ ಪತ್ರಿಕೆಯನ್ನಾಗಲೀ ಎಂದೂ ನೋಡದ ಹೊಸ ತಲೆಮಾರಿನ ಗೆಳೆಯ ಶೈಲೇಶ್ ಈಚೆಗೆ ಲಂಕೇಶರ ಬಗ್ಗೆ ಅಭಿಮಾನದಿಂದ ಮಾತಾಡುತ್ತಿದ್ದಾಗ ಇಪ್ಪತ್ತೈದು ವರ್ಷಗಳ ಹಿಂದಿನ ರಾತ್ರಿಯ ವಿವರಗಳು ಒಂದರ ಹಿಂದೊಂದರಂತೆ ನೆನಪಾದವು. ಲಂಕೇಶ್ ಕೃತಿಗಳು ಇವತ್ತಿಗೂ ಬೆಳೆಯುತ್ತಿರುವ ರೀತಿಗೆ ಹೊಸ ತಲೆಮಾರಿನ  ಶೈಲೇಶ್ ಥರದವರನ್ನು ಲಂಕೇಶ್ ಕೃತಿಗಳು ಹಿಡಿದಿಟ್ಟಿರುವ ಬಗೆ ಒಳ್ಳೆಯ ಉದಾಹರಣೆ.  

ಲಂಕೇಶರ ನಿರ್ಗಮನದ ನಂತರದ ಇಪ್ಪತ್ತೈದು ವರ್ಷಗಳಲ್ಲಿ ಲಂಕೇಶರ ಕೃತಿಗಳ ಜೀವಂತ ಗುಣದಿಂದ ಹೊಸ ಉಸಿರು ಪಡೆದವರು ಅವರನ್ನು ಇನ್ನೊಬ್ಬರಿಗೆ ದಾಟಿಸುತ್ತಾ ಹೋಗುವ ಸುಂದರ ರೀತಿಯನ್ನು ಸದಾ ಕಂಡಿರುವೆ. ಯಾರಾದರೂ ಬರವಣಿಗೆಯ ಕಲೆ ಕಲಿಯುವ ಬಗ್ಗೆ, ಅದರಲ್ಲೂ ಗದ್ಯ ಬರವಣಿಗೆ, ಪತ್ರಿಕಾ ಬರವಣಿಗೆ ಕಲಿಯುವ ಬಗ್ಗೆ, ನನ್ನನ್ನು ಕೇಳಿದರೆ ನಾನು ಸೂಚಿಸುವುದು ಲಂಕೇಶರ ಗದ್ಯವನ್ನೇ. ಲಂಕೇಶರ ‘ಟೀಕೆ ಟಿಪ್ಪಣಿ’ ಹಾಗೂ ‘ಮರೆಯುವ ಮುನ್ನ’ ಸಂಪುಟಗಳನ್ನು ಮತ್ತೆ ಮತ್ತೆ ಓದುವ ಲೇಖಕರಾಗಲೀ, ಪತ್ರಕರ್ತರಾಗಲೀ ಸೂಕ್ಷ್ಮ ಬರವಣಿಗೆಯ ರೀತಿಗಳನ್ನು ಗ್ಯಾರಂಟಿ ಕಲಿಯಬಲ್ಲರು; ಇವತ್ತಿಗೂ ಸುಮ್ಮನೆ ಕನ್ನಡದಲ್ಲಿ ಏನಾದರೂ ಓದಬೇಕೆನ್ನಿಸಿದಾಗ ನನ್ನ ಕೈ ತಂತಾನೇ ಹೋಗುವುದು ಲಂಕೇಶರ ಪುಸ್ತಕಗಳ ಕಡೆಗೆ. ಅಲ್ಲಿ ಯಾವ ಪುಟ ತೆಗೆದರೂ ಜೀವ ಸ್ಪರ್ಶವಾಗದ ಭಾಗವೇ ಇಲ್ಲ! ಈಚೆಗೆ ಇತಿಹಾಸ ಬರವಣಿಗೆ ಕುರಿತು ನಾನೊಂದು ಕತೆ ಬರೆದಾಗ, ‘ಮೊನ್ನೆ ಮೊನ್ನೆ ತಾನೇ ಲಂಕೇಶ್, ‘ದಾಳಿ’ ಎನ್ನುವ ಐತಿಹಾಸಿಕ ಕತೆಯನ್ನೇ ಅವರ ಎಂದಿನ ಕತೆಗಳ ಭಾಷೆಯಲ್ಲೇ, ಸಹಜವಾಗೇ, ಬರೆದಿದ್ದಾರಲ್ಲ!’ ಎಂಬ ಡಯಲಾಗ್ ಕಥಾ ಪಾತ್ರದ ಬಾಯಲ್ಲಿ ಇದ್ದಕ್ಕಿದ್ದಂತೆ ಬಂತು!

ಕಳೆದ ವರ್ಷ ಕುವೆಂಪು ಯೂನಿವರ್ಸಿಟಿಯಲ್ಲಿ ಹುಡುಗ, ಹುಡುಗಿಯರಿಗಾಗಿ ಲಂಕೇಶ್ ಕಮ್ಮಟ ನಡೆಸುತ್ತಿದ್ದಾಗ ಅವರ ಕತೆಗಳ ಹೊಸ ಅರ್ಥಗಳು ಚಿಮ್ಮತೊಡಗಿದ್ದವು. ಲಂಕೇಶರ ಆರಂಭದ ಕತೆಗಳಲ್ಲೊಂದಾದ ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’ ಹುಡುಗನೊಬ್ಬ ಸ್ಕಾಲರ್‌ಶಿಪ್ ಹಣ ಪಡೆಯಲು ನಡೆಸಿದ ಅವಮಾನ-ಅಸಹಾಯಕತೆಗಳ ‘ಯಾತ್ರೆ’ ಎಂಬಂತೆ ಮೇಲುನೋಟಕ್ಕೆ ಕಾಣುತ್ತದೆ; ಆದರೆ ಇದು ಹುಡುಗನೊಬ್ಬ ತನ್ನ ಕಾಮಲೋಕದ ಸಂಕೀರ್ಣ ಸ್ಥಿತಿಯ ಬಗ್ಗೆ ಜ್ಞಾನ (ಸ್ಕಾಲರ್‌ಶಿಪ್) ಪಡೆದುಕೊಳ್ಳುವ ಒಳಲೋಕದ ಯಾತ್ರೆ ಎನ್ನುವುದು ನಿಧಾನಕ್ಕೆ ಅರ್ಥವಾಗಿತೊಡಗುತ್ತದೆ! ಇದು ಲಂಕೇಶ್ ಬರಹಗಳು ನಿತ್ಯ ಬೆಳೆಯುವ ರೀತಿ. ಅದೇ ರೀತಿ, ಧರ್ಮಗಳ ನಡುವೆ ಜಗಳ ತಂದು ಹಾಕುವವರ ಬಗ್ಗೆ ಮಾತಾಡುತ್ತಿರುವಾಗಲೆಲ್ಲ ‘ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ’ ಎಂಬ ಲಂಕೇಶರ ಗಾಂಧಿಯನ್ ಹೇಳಿಕೆ ನನ್ನ ಬಾಯಿಂದ ಬರುತ್ತದೆ.

1978ರ ಕೊನೆಯ ಭಾಗದಲ್ಲೊಂದು ದಿನ ಹುಳಿಯಾರ್ ಎಂಬ ನಮ್ಮೂರಿನ ನನ್ನ ಪುಟ್ಟ ರೂಮಿನ ಗೋಡೆಯ ಮೇಲೆ ‘ರೂಪತಾರಾ’ ಸಿನಿಮಾಪತ್ರಿಕೆಯ ಪುಟಗಳಿಂದ ಹೊರ ಸೆಳೆದು, ಮನೆಯಲ್ಲಿದ್ದ ಯಾರದೋ ಹಳೆಯ ಫೋಟೋದ ಕಟ್ಟು ಗಾಜು ತೆಗೆದು, ಅಂಟು ಹಾಕಿದ ಹೊಳೆವ ಹಾಳೆಯ ಫೋಟೋ ಆಗಿ ತೂಗಿದ್ದ ಲಂಕೇಶರ ಕಪ್ಪು ಬಿಳುಪು ಚಿತ್ರ ಕಣ್ಣ ಮುಂದೆ ಬರುತ್ತಿದೆ! ಆ ಫೋಟೋದಲ್ಲಿದ್ದ ಪಿ. ಲಂಕೇಶ್ ಎಂಬ ‘ಶತಮಾನದ ಪ್ರತಿಭೆ’ಯ ಕೃತಿಗಳು ಅವತ್ತಿನಿಂದಲೂ ನನ್ನೊಳಗೆ ನೆಲೆಸಿ ಹಲವು ದಿಕ್ಕಿನಲ್ಲಿ ಬೆಳೆಯುತ್ತಲೇ ಇರುವ ಪರಿ ಅದ್ಭುತ ಎನ್ನಿಸುತ್ತದೆ!                    

ಲಂಕೇಶರ ಅಧಿಕಾರವಿರೋಧಿ ಬರವಣಿಗೆಯ ಮಾದರಿ ಕನ್ನಡದ ದಿಟ್ಟ ತಲೆಮಾರುಗಳಲ್ಲಿ ಇವತ್ತಿಗೂ ಮುಂದುವರಿದಿದೆ. ಆದರೆ ಲಂಕೇಶರ ಒಟ್ಟು ಬರವಣಿಗೆಯನ್ನು ಅನೇಕರು ಅವರ ಪತ್ರಿಕಾ ಬರಹಗಳಿಗೆ ಸೀಮಿತವಾಗಿಸುತ್ತಿರುವುದು ಅಪಾಯಕರ. ಏಕರೂಪದ ಸಾಹಿತ್ಯ ಸಂಸ್ಕೃತಿಯನ್ನು ಸೃಷ್ಟಿಸುತ್ತಿರುವ ಡಿಜಿಟಲ್ ಲೋಕದ ಜೊತೆಗೆ ಸಾರವಿಲ್ಲದ ಗದ್ಯ, ವಾದ ರೂಪದ ಗದ್ಯ, ಪ್ರಗತಿಪರತೆಯ ಹೆಸರಿನಲ್ಲಿ ಏಕರಾಗದ ತೆಳು ಗದ್ಯ ಕೂಡ ಸೇರಿ ಮೀಡಿಯೋಕರ್ ಸಾಹಿತ್ಯ ಸಂಸ್ಕೃತಿಯೂ ಸೃಷ್ಟಿಯಾಗುತ್ತಿದೆ. ಇಪ್ಪತ್ತನೆಯ ಶತಮಾನದ ಎಂಬತ್ತರ ದಶಕದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ವಲಯದಲ್ಲಿ ವಿಜೃಂಭಿಸತೊಡಗಿದ್ದ ಮೀಡಿಯೋಕ್ರಿಟಿಯನ್ನು ಎದುರಿಸುವ ಸಲುವಾಗಿ ಕೂಡ ಲಂಕೇಶ್ ಜನಪ್ರಿಯ ಪತ್ರಿಕೆಯ ವೇದಿಕೆಯನ್ನು, ಹಲ ಬಗೆಯ ಓದುಗ, ಓದುಗಿಯರಿಗೆ ಹತ್ತಿರವಾದ ಜೀವಂತ ಶೈಲಿಯನ್ನು ರೂಪಿಸಿಕೊಂಡರು. ಅದು ಹಲವು ಸಿದ್ಧಾಂತಗಳನ್ನು ಅರಗಿಸಿಕೊಂಡು ಹುಟ್ಟಿದ ಎಲ್ಲರಿಗೂ ತಲುಪುವ ಶೈಲಿ ಕೂಡ.

ಇವತ್ತು ಸುಲಭವಾಗಿ, ಅತಿ ವೇಗವಾಗಿ ಓದುಗ ಓದುಗಿಯರನ್ನು ತಲುಪುವ ವೇದಿಕೆಗಳನ್ನು ಸೃಷ್ಟಿಸಿಕೊಳ್ಳುವ ಲೇಖಕ, ಲೇಖಕಿಯರಿಗೆ ಲಂಕೇಶ್ ಮಾಡೆಲ್ ನಿಜಕ್ಕೂ ಐಡಿಯಲ್ ಮಾಡೆಲ್. ಲಂಕೇಶರ ಗಂಭೀರ-ಸಂಕೀರ್ಣ-ಆರೋಗ್ಯಕರ-ಪರೀಕ್ಷಕ-ಜೀವಂತ ಬರವಣಿಗೆಯ ನೈತಿಕ ಮಾದರಿ ಎಲ್ಲ ಕ್ಷಿಪ್ರ ಬರಹಗಾರರ ಕೈ ತಡೆದು, ಕೈ ಹಿಡಿದು, ನಡೆಸಿದರೆ ಅದು ಕನ್ನಡ ಸಂಸ್ಕೃತಿಯನ್ನು ಪೊರೆಯುವ ರೀತಿ ಆರೋಗ್ಯಕರವಾಗಿರಬಲ್ಲದು! 

ಇಪ್ಪತ್ತೈದು ವರ್ಷಗಳು ಉರುಳಿದ ಮೇಲೆ ಲಂಕೇಶರ ಕೊನೆಯ ರಾತ್ರಿಯನ್ನು ಮತ್ತೆ ನೆನೆಯುತ್ತಿರುವಾಗ, ಅವರ ಕೊನೆಯ ಕ್ಷೀಣ ಸ್ವರ ನನ್ನ ಕಿವಿಯಲ್ಲಿ ಮೊರೆಯುತ್ತಲೇ ಇದೆ: ‘ಬರ್ಲೇನೋ…’

ನನ್ನ ಲೋಕಕ್ಕಂತೂ ಲಂಕೇಶ್ ನಿತ್ಯ ಬರುತ್ತಲೇ ಇರುತ್ತಾರೆ: ಒಳನೋಟವಾಗಿ. ವಿಮರ್ಶೆಯಾಗಿ. ನಿಷ್ಠುರ ಪರೀಕ್ಷೆಯ ಗದ್ಯವಾಗಿ. ಸದ್ಯತನ-ತಾಜಾತನಗಳ ಕತೆ, ನಾಟಕವಾಗಿ. ಆ ಕ್ಷಣದ ಲೋಕಸತ್ಯ ಕಾಣಿಸುವ ನೀಲು ಕಾವ್ಯವಾಗಿ. ಮನುಷ್ಯನ ಕೇಡನ್ನೂ, ಆಗಾಗ್ಗೆ ಚಿಮ್ಮುವ ಒಳಿತನ್ನೂ ಕಾಣಿಸಬಲ್ಲ ಸೂಕ್ಷ್ಮ ನೋಟವಾಗಿ. ಮನುಷ್ಯನ ಊಹಾತೀತ ವರ್ತನೆಯನ್ನು ದಣಿವರಿಯದೆ ಗ್ರಹಿಸುವ ಶೋಧಕ ಕಣ್ಣಾಗಿ.

ನನ್ನ ಲೋಕಕ್ಕೆ ಹೀಗೆ ಬರುತ್ತಲೇ ಇರುವ ಲಂಕೇಶ್ ನಿಮ್ಮೊಳಗಿಗೂ ಬರುತ್ತಿರಲಿ; ಬರೆವವರ, ಓದುವವರ, ಬದುಕಲು ಬಯಸುವವರ ಮರುಹುಟ್ಟಿಗೆ ಅತ್ಯಗತ್ಯವಾದ ಜೀವದ್ರವವಾಗಿ ಲಂಕೇಶ್ ಎಂಬ ಬತ್ತದ ತೊರೆ ಹರಿಯುತ್ತಲೇ ಇರಲಿ.  

Share on:


Recent Posts

Latest BlogsKamakasturibana

YouTubeComments

7 Comments| Dr. MOHAN

ಮೇಷ್ಟ್ರು ಲಂಕೇಶ್ ಅವರು ನಿಧನರಾಗಿ ಈ ಜನವರಿ 25ಕ್ಕೆ 25 ವರ್ಷಗಳು ಕಳೆದಿರುವ ಹೊತ್ತಿನಲ್ಲಿ ಅವರನ್ನು ನೆನಪಿಸಿಕೊಳ್ಳುವ ಒಂದು ಅರ್ಥಪೂರ್ಣ ಪ್ರಯತ್ನವಾಗಿ ಈ ವಾರದ ಬ್ಲಾಗ್ ಮೂಡಿ ಬಂದಿದೆ. ಲಂಕೇಶ್ ಅವರೊಡನೆ ಸಮೀಪದ ಸಾಹಿತ್ಯಿಕ ಒಡನಾಟವನ್ನು ಇಟ್ಟುಕೊಂಡು ಅವರನ್ನು ಅಷ್ಟು ಸನಿಹದಿಂದ ನೋಡುವ, ಅರಿಯುವ, ಕಲಿಯುವ ಅವಕಾಶ ನಿಮಗೆ ದೊರೆತಿರುವುದು ಸೌಭಾಗ್ಯವೇ ಸರಿ. ಮರಣದ ಹಿಂದಿನ ದಿನವೂ ಅವರು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಸಮಾಜೋ-ಸಾಹಿತ್ಯಿಕ ಚಟುವಟಿಕೆಗಳಲ್ಲಿನ ಅವರ ಬದ್ಧತೆ ಮತ್ತು ಪ್ರೀತಿಯನ್ನು ಸಾರುತ್ತದೆ. ಅಂಬೇಡ್ಕರ್, ಕಲಾಂ, ಗಾಂಧೀಜಿ ಹೀಗೆ ಹಲವು ಮಹನೀಯರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಲೋಕಸೇವೆಯಲ್ಲಿ ನಿರತರಾಗಿರುವಾಗಲೇ ಜೀವತೆತ್ತಿರುವುದೂ ನಮಗೆಲ್ಲಾ ಬದ್ಧತೆಗೆ ಒಂದು ಮಾದರಿ. ಕೊನೆಯ ದಿನ ನೀವು ಅವರೊಂದಿಗೆ ‘ಪ್ರೈಡ್ ಅಂಡ್ ಪ್ರಿಜುಡೀಸ್’ನ ದೇಜಗೌ ಅವರ ಅನುವಾದದ ಕುರಿತು ಪ್ರಸ್ತಾಪಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಅನುವಾದ ಮಾಡುವವರೆಲ್ಲರಿಗೂ ಎಚ್ಚರಿಕೆಯ ಘಂಟೆಯಾಗಿದೆ. ಹಾಗೆಯೇ ಲಂಕೇಶ್ ಅವರು ಇಂದಿಗೂ ಹೊಸ ತಲೆಮಾರನ್ನು ಪ್ರಭಾವಿಸುತ್ತಿರುವ ಪರಿಯೂ ವಿಸ್ಮಯವೆನಿಸುತ್ತದೆ. ಹತ್ತಾರು ಲಂಕೇಶ್ ಅವರ ಹೆಸರಿನ ವಾಟ್ಸಾಪ್ ಗುಂಪುಗಳಿದ್ದು, ಅಲ್ಲಿ ನಿತ್ಯವೂ ಲಂಕೇಶ್ ಮೇಷ್ಟ್ರ ವಿಚಾರಗಳನ್ನು ಅವರ ಸಾಹಿತ್ಯದಲ್ಲಿನ ಕೋಟ್ ಗಳನ್ನು ಪರಸ್ಪರ ಹಂಚುತ್ತಾ ಹಬ್ಬಿಸುತ್ತಿದ್ದಾರೆ. ಗದ್ಯ ಬರವಣಿಗೆಯನ್ನು ಸುಧಾರಿಸು ಲಂಕೇಶರ ಗದ್ಯವನ್ನು ಓದುವಂತೆ ನೀವು ನನಗೂ ಸಹೆ ನೀಡಿದ್ದಿರಿ. ವಿಮರ್ಶೆಗೂ ಅವರ “ಸಾಹಿತಿ, ಸಾಹಿತ್ಯ, ವಿಮರ್ಶೆ” ಕೃತಿಯನ್ನು ಓದಲು ಸೂಚಿಸಿದ್ದಿರಿ. ಲಂಕೇಶ್ ಹೀಗೂ ಹಬ್ಬುತ್ತಿದ್ದಾರೆ. ಅರ್ಥಪೂರ್ಣವಾದ ಲಂಕೇಶ್ ಸ್ಮರಣೆಗಾಗಿ ಧನ್ಯವಾದಗಳು

\r\n


| Dr. Vijaya

ಸೊಗಸಾದ ಲೇಖನ.ಯಾಕೋ ಕಣ್ಣುಗಳು ತೇವವಾದವು.ಲಂಕೇಶರನ್ನು ನೋಡಲು ಆಸ್ಪತ್ರೆ ಗೇ ಹೋಗಿದ್ದೆ,ಮಕ್ಕಳೊಂದಿಗೆ.
\r\nಹೂ ಕೊಟ್ಟು ವಿಷ್ ಮಾಡಿದಾಗ
\r\n" ನಾನು ನಿನಗೆ ಅನ್ಯಾಯ ಮಾಡಿದೆ" ಎಂದರು.ಅದೆಲ್ಲ ಮರೆತುಬಿಡಿ.ಬೇಗ ಹುಷಾರಾಗಿ ಬನ್ನಿ ಅಂದಿದ್ದೆ.ಅವರ ಜೊತೆ ಗೌರಿ ಇದ್ದಳು.st johns ಆಸ್ಪತ್ರೆಯಲ್ಲಿ.
\r\nನೆನಪುಗಳು ನೋವು ಕೊಡುತ್ತವೆ. 

\r\n


| Gurupradad

ಇಂತಿ ನಮಸ್ಕಾರಗಳು  ಶೂದ್ರ ಶ್ರೀನಿವಾಸ್ ಗೆ ಡಾಕ್ಟರೇಟ್  ಬಂದಾಗ ಲಂಕೇಶ್ ಮಾಡಿದ ಹಾಸ್ಯ ರಂಜನೀಯವಾಗಿತ್ತು.ಹಾಗೆಯೇ ದೇಜಗೌ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ಮೆರವಣಿಗೆಯಲ್ಲಿ ಹೋಗುವುದನ್ನು ವಿನೋದವಾಗಿ "ಸಾಹಿತಿ,ಸಾಹಿತ್ಯ ವಿಮರ್ಶೆಯಲ್ಲಿ "ಬರೆದಿದ್ದಾರೆ. ಲಂಕೇಶರು ಹಾಸ್ಯಕ್ಕೂ ಸೈ.ಬಂ,ಗುಂ ಅದಕ್ಕೆ ಉದಾಹರಣೆ..ಮಂಗಳವಾರ ಪತ್ರಿಕೆಗಾಗಿ ಕಾಯುತ್ತಿದ್ದೆವು.ರಾಜಕಾರಣ,ಸಾಹಿತ್ಯ ಹದಬೆರೆತ ಬರೆವಣಿಗೆ ಈಗ ಎಲ್ಲಿದೆ?  ಸರ್,ಎಲ್ಲಿಯೂ ಸಿಗದ ಅವರ "ಸಾಹಿತಿ,ಸಾಹಿತ್ಯ ವಿಮರ್ಶೆ "ಮರುಮುದ್ರಣವಾಗಬೇಕಿದೆ.

\r\n


| MAMATHA ARASIKERE

ಲಂಕೇಶರನ್ನು ಕುರಿತ ಲೇಖನ ಅದ್ಭುತವಾಗಿದೆ. ಲಂಕೇಶರು ಆವರಿಸಿರುವ ರೀತಿ, ನೀವು ಅವರನ್ನು ಪ್ರಸ್ತುತ ಪಡಿಸಿರುವ ವಿಧಾನ ಎಲ್ಲವೂ ಮೌಲಿಕವಾಗಿದೆ. ಓದಿ ಸಂತೋಷವಾಯಿತು.  

\r\n


| BANJAGERE JAYAPRAKASH

ಲವ್ಲಿ. ನೆನೆವ ಪರಿ, ಲಂಕೇಶರ ವ್ಯಕ್ತಿತ್ವ  ಮತ್ತು ಅವರ ಬರವಣಿಗೆಯ ವೈಶಿಷ್ಟ್ಯವನ್ನು ನೀವು ನೆನಪಿಸಿಕೊಂಡ ರೀತಿ ಬಹಳ ಆರ್ದ್ರವಾಗಿದೆ

\r\n


| B L VENU

ಲಂಕೇಶರನ್ನು ತುಂಬಾ ಆತ್ಮೀಯವಾಗಿ ನೆನಪು ಮಾಡಿಕೊಂಡಿದ್ದೀರಿ. ಇಷ್ಟವಾಯಿತು

\r\n


| ಎಂ.ಜವರಾಜ್

ಪಿ.ಲಂಕೇಶ್ ನೆನಪಿನ ಈ ಸಂಚಿಕೆ ನನನ್ನು ಮತ್ತೆ 90 ದಶಕದ ಮಧ್ಯಭಾಗಕ್ಕೆ ಎಳೆದೊಯ್ಯಿತು. ಇವತ್ತಿಗೂ ಅವರ 'ಲಂಕೇಶ್ ಪತ್ರಿಕೆ' ಪುಟಪುಟವೂ ಕಣ್ಮುಂದೆ ಬಂದಂಗೆ ಆಗುತ್ತದೆ. ಅವರ ಬರಹಕ್ಕೆ ಎಷ್ಟು ಜೋತು ಬಿದ್ದಿದ್ದೆ ಎಂದರೆ ಅವತ್ತು  ಗುರುವಾರ ಡಿಗ್ರಿ ಎಕ್ಸಾಂ ಇತ್ತು.  ಬೆಳಗ್ಗೆ 9 ಕ್ಕೆ ಹಿಸ್ಟರಿ ಪೇಪರ್. ಬುಧವಾರ ಬೆಳಗ್ಗೆ ಪ್ರತಿವಾರದ ಅಭ್ಯಾಸದಂತೆ ಬಸ್ಟ್ಯಾಂಡ್ ಗೆ ಹೋಗಿ ಲಂಕೇಶ್ ಪತ್ರಿಕೆ ತಂದು ಹಿಸ್ಟರಿ ನೋಟ್ಸ್ ಎತ್ತಿ ಓದುವ ಬದಲು ಲಂಕೇಶ್ ಪತ್ರಿಕೆ ಓದತೊಡಗಿದೆ. ನನ್ನ ಮಿತ್ರ ಇದೇನೊ ಮಾಡ್ತ ಇರೋದು ನಾಳೆ ಎಕ್ಸಂ ಇಟ್ಕೊಂಡು ಪೇಪರ್ ಓದ್ತಾ ಇದಿಯಲ್ಲೊ ಅಂತ ರೇಗತೊಡಗಿದ. ನಾನು ಅವನ ಮಾತಿಗೆ ಕಿವಿಗೊಡದೆ ಅವತ್ತು ಮದ್ಯಾಹ್ನದ ತನಕ ಆ ಸಂಚಿಕೆ ಓದಿ ಮುಗಿಸಿಯೇ ಹಿಸ್ಟರಿ ನೋಟ್ಸ್ ಕೈಗೆತ್ತಿಕೊಂಡದ್ದು. ಆತರ ಪಿ.ಲಂಕೇಶ್ ಅವರ ಪತ್ರಿಕೆ ಮತ್ತು ಸಾಹಿತ್ಯ ಬರಹಗಳು ಅವತ್ತು ಅನೇಕರ ಓದುಗರನ್ನು ತನ್ಬತ್ತ ಸೆಳೆದುಕೊಂಡಿದ್ದರು. ಅಂಥ ಮಾಂತ್ರಿಕ ಶಕ್ತಿ ಲಂಕೇಶರಿಗಿತ್ತು. ನನ್ನ ಎಷ್ಟೊ ಸಾಹಿತ್ಯ ಬರಹಗಳಿಗೆ ಲಂಕೇಶ್ ಬರಹಗಳು ಸ್ಪೂರ್ತಿ. 

\r\n\r\n

ನಿಮ್ಮ ಈ ಬ್ಲಾಗ್ ನ ಈ ಲೇಖನ ನನ್ನನ್ನು ಮತ್ತೆ ಅವತ್ತಿನ ದಿನಗಳತ್ತ ಚಿತ್ತ ಹರಿಸುವಂತೆ ಮಾಡಿ ಮರು ಅವಲೋಕನಕ್ಕೆ ಇಂಬು ನೀಡಿತು ಎಂಬುದು. ಧನ್ಯವಾದಗಳು ಸರ್ಕಾರದಿಂದ

\r\n
Add Comment