‘ಶೂದ್ರ’ ಪಯಣ

ಮೊನ್ನೆ ‘ಶೂದ್ರ’ ಪತ್ರಿಕೆಯ ಐವತ್ತು ವರ್ಷದ ನಡಿಗೆಯ ಬಗ್ಗೆ ಟಿಪ್ಪಣಿ ಬರೆಯಲು ಶುರು ಮಾಡಿದಾಗ ಹಿರಿಯ ಲೇಖಕರಾದ ಎಚ್.ಎಸ್. ರಾಘವೇಂದ್ರರಾವ್ ಈಚೆಗೆ ನನಗೆ ಬರೆದ ಮಾತು ನೆನಪಾಯಿತು. ಆ ಮಾತಿಗೂ ಸಾಹಿತ್ಯ ಲೋಕದಲ್ಲಿ ‘ಶೂದ್ರ’ಕ್ಕೆ ಇದ್ದ ಮಹತ್ವಕ್ಕೂ ಸಂಬಂಧವಿರುವುದರಿಂದ ಮಾತ್ರ ಅದನ್ನಿಲ್ಲಿ ಉಲ್ಲೇಖಿಸುವೆ: “…‘ಶೂದ್ರ’ದಲ್ಲಿ ಪ್ರಕಟವಾದ ನಿಮ್ಮ ‘ಗದ್ದೆ ಬದುವಿನಗುಂಟ ಕಾರ್ಲ್ ಮಾರ್ಕ್ಸ್ ಎಂಬೋನು’ (1988) ಪದ್ಯ ಓದಿ ನಿಮ್ಮ ಬರವಣಿಗೆಯ ಬಗ್ಗೆ ಆಸಕ್ತಿ ಹುಟ್ಟಿತು’ ಎಂದು ನನ್ನ  ಪದ್ಯವೊಂದನ್ನು ಎಚ್ಚೆಸ್ಸಾರ್ ನೆನೆದಿದ್ದರು.

ಇದರ ಜೊತೆಗೇ ಇನ್ನೊಂದು ಘಟನೆ ನೆನಪಾಗುತ್ತದೆ. ಲಂಕೇಶರ ‘ಟೀಕೆ ಟಿಪ್ಪಣಿ’ಯ ಹತ್ತು ವರ್ಷದ ಬರಹಗಳು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಬಂದಾಗ ಶೂದ್ರ ಶ್ರೀನಿವಾಸ್ ಆ ಪುಸ್ತಕದ ಬಗ್ಗೆ ‘ಶೂದ್ರ’ಕ್ಕೆ ಬರೆಯಲು ಹೇಳಿದರು. ‘ಲಂಕೇಶರ ಟೀಕೆ ಟಿಪ್ಪಣಿ: ಒಂದು ಖಾಸಗಿ ಪ್ರತಿಕ್ರಿಯೆ’ ಎಂಬ ಪುಟ್ಟ ಬರಹದಲ್ಲಿ ‘ಟೀಕೆ ಟಿಪ್ಪಣಿ’ಯ ಬರಹಗಳ ಬಗ್ಗೆ ನನ್ನ ಮೆಚ್ಚುಗೆಯನ್ನೂ, ಒಂದೆರಡು ಆಕ್ಷೇಪಗಳನ್ನೂ ಬರೆದ ನೆನಪು. ಅದು ಲಂಕೇಶರ ಕಣ್ಣಿಗೆ ಬಿದ್ದು, ಅವರು ‘ಲಂಕೇಶ್ ಪತ್ರಿಕೆ’ಯಲ್ಲಿ ಪುಸ್ತಕ ವಿಮರ್ಶೆ ಬರೆಯಲು ನನಗೆ ಸೂಚಿಸಿದಂತೆ ಕಾಣುತ್ತದೆ. ಕಾರಣ, ‘ಲಂಕೇಶ್ ಪತ್ರಿಕೆ’ಯ ಆಫೀಸಿನಿಂದ ಬಿಳುಮನೆ ರಾಮದಾಸ್ ಅವರ ‘ವ್ಯಾಮೋಹ’ ಕಾದಂಬರಿ ತಂದುಕೊಟ್ಟು, ‘ಲಂಕೇಶ್ ಪತ್ರಿಕೆಗೆ ವಿಮರ್ಶೆ ಮಾಡಬೇಕು ಅಂತ ಮೇಷ್ಟ್ರು ಹೇಳಿದಾರೆ’ ಎಂದು ಪುಳಕ ಹುಟ್ಟಿಸಿದವರು ಶ್ರೀನಿವಾಸ್ ಅವರೇ!

ಇವೆರಡೂ ಕೇವಲ ವೈಯಕ್ತಿಕ ಪ್ರಸಂಗಗಳಲ್ಲ; ಪ್ರಾತಿನಿಧಿಕ ಪ್ರಸಂಗಗಳು. ಅವತ್ತು ‘ಶೂದ್ರ’ದಂಥ ಸಾಹಿತ್ಯ ಪತ್ರಿಕೆಗಳ ಬರಹಗಳನ್ನು ಕನ್ನಡದ ದೊಡ್ಡ ಲೇಖಕರು ಗಮನಿಸುವ ಸಾಧ್ಯತೆ ಇತ್ತು. ಹಾಗೆ ಗಮನಿಸುತ್ತಾ, ಕಾಲಕಾಲಕ್ಕೆ ಎಳೆಯರನ್ನು ಬೆಳೆಸಿ, ಒಳ್ಳೆಯ ‘ಸಾಹಿತ್ಯಕ ಸಂಸ್ಕೃತಿ’ಯನ್ನು ರೂಪಿಸುವ ಹಂಬಲವೂ ಅಂಥ ಹಿರಿಯರಲ್ಲಿದ್ದಂತಿತ್ತು. ನನಗಾದ ಅನುಭವ ಇತರರಿಗೂ ಆಗಿರಬಹುದು. ಕನ್ನಡ ಸಂಸ್ಕೃತಿಯಲ್ಲಿ ಇಂಥ ಚಾರಿತ್ರಿಕ ಮಹತ್ವವುಳ್ಳ ‘ಶೂದ್ರ’ ತಿಂಗಳ ಪತ್ರಿಕೆ ನಡೆದು ಬಂದ ಹಾದಿಯ ಪುಟ್ಟ ಹಿನ್ನೋಟ:   

ಇಸವಿ 1973. ಸಮಾಜವಾದಿ ಯುವಜನ ಸಭಾ, ವೈಚಾರಿಕ ಪ್ರತಿಭಟನೆಗಳಲ್ಲಿ ಉತ್ಸಾಹದಿಂದ ಓಡಾಡುತ್ತಿದ್ದ ಎಂ. ಶ್ರೀನಿವಾಸರೆಡ್ಡಿ ಒಂದು ಸಾಂಸ್ಕೃತಿಕ ಪತ್ರಿಕೆ ಮಾಡಬೇಕೆಂದು ಎಂ.ಡಿ. ನಂಜುಂಡಸ್ವಾಮಿಯವರ ಬಳಿ ಬಂದರು. ಎಂಡಿಎನ್ ಈ ಪತ್ರಿಕೆಗೆ ‘ಶೂದ್ರ’ ಎಂದು ಹೆಸರಿಟ್ಟು, ಮೊದಲ ಸಂಚಿಕೆಯ ಮುಖಪುಟ ರೂಪಿಸಿದರು. ಸಮಾಜವಾದಿ ಯುವಜನ ಸಭಾದ ಮೂಲಕ ತರುಣ, ತರುಣಿಯರನ್ನು ದಿಟ್ಟ, ಸ್ವತಂತ್ರ ವ್ಯಕ್ತಿಗಳನ್ನಾಗಿ ರೂಪಿಸುತ್ತಿದ್ದ ಎಂಡಿಎನ್ ಗ್ರೀಕ್ ತತ್ವಜ್ಞಾನಿ ಸಾಕ್ರೆಟೀಸ್ ಮಾಡಿದಂಥ ಕೆಲಸವನ್ನು ಕನ್ನಡನಾಡಿನಲ್ಲಿ ಮುಂದುವರಿಸುತ್ತಿದ್ದರು.

23 ಸೆಪ್ಟೆಂಬರ್ 1973. ಮೈಸೂರಿನಲ್ಲಿ ನಡೆದ ಐತಿಹಾಸಿಕ ಜಾತಿವಿನಾಶ ಸಮ್ಮೇಳನದಲ್ಲಿ ‘ಶೂದ್ರ’ದ ಮೊದಲ ಸಂಚಿಕೆಯನ್ನು ಹಂಚಿದ ಶ್ರೀನಿವಾಸ್, ಸಮ್ಮೇಳನ ಉದ್ಘಾಟಿಸಿದ ಕುವೆಂಪು ಅವರಿಗೂ ಪತ್ರಿಕೆ ಕೊಟ್ಟರು.

ಕುವೆಂಪು: ನಿಮ್ಮ ಹೆಸರೇನು?

ಸಂಪಾದಕ: ಶ್ರೀನಿವಾಸ ರೆಡ್ಡಿ.

ಕುವೆಂಪು: ನೀವು ಶೂದ್ರ ಶ್ರೀನಿವಾಸ.  

ಅವತ್ತಿನಿಂದ ಸಂಪಾದಕರು ಶೂದ್ರ ಶ್ರೀನಿವಾಸ್ ಅಥವಾ ‘ಶೂದ್ರ’ ಆದರು! ಆಗ ‘ಶ್ರೀನಿವಾಸ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾತ್ರ ‘ಶೂದ್ರ’ದ ಸಂಪಾದಕರನ್ನು ‘ನಾನು ನಿಮ್ಮನ್ನ ಶೂದ್ರ ಅನ್ನೋಲ್ಲಪ್ಪ! ಶ್ರೀನಿವಾಸ ರೆಡ್ಡಿ ಅಂತಲೇ ಕರೀತೀನಿ’ ಎನ್ನುತ್ತಿದ್ದರಂತೆ; ಇದು ಕೂಡ ಮಾಸ್ತಿ-ಕುವೆಂಪು ನಡುವಣ ಸಾಂಸ್ಕೃತಿಕ ವಾಗ್ವಾದದ ಅಡಿಟಿಪ್ಪಣಿಯಂತಿದೆ!

ಈಚೆಗೆ ಗೆಳೆಯ-ವಿಮರ್ಶಕ ಎಚ್. ದಂಡಪ್ಪ ಸಂಪಾದಿಸಿದ ‘ಶೂದ್ರ ಶ್ರೀನಿವಾಸ್: ಬದುಕು ಬರಹ’ ಪುಸ್ತಕ ‘ಶೂದ್ರ’ ಪತ್ರಿಕೆ, ಹಾಗೂ ಲೇಖಕ-ಸಂಪಾದಕ ಶ್ರೀನಿವಾಸರ ಸಾಧನೆಗಳನ್ನು ದಾಖಲಿಸಿದೆ. ಸೋಷಲಿಸ್ಟ್ ಚಿಂತನೆಗಳ ಜೊತೆಜೊತೆಗೇ ಬೆಳೆದ ಶ್ರೀನಿವಾಸ್ ಜನಪರ ಚಳುವಳಿಗಳನ್ನು ಹತ್ತಿರದಿಂದ ಬಲ್ಲವರು. ಕನ್ನಡದ ಹಿರಿಯ, ಕಿರಿಯ ಸಾಹಿತಿಗಳ ಒಡನಾಡುತ್ತಾ ಅವರ ಸರಸಮಯ-ವಿರಸಮಯ ಪ್ರಸಂಗಗಳಿಗೆ ಸಾಕ್ಷಿಯಾದವರು. ಸಂಪಾದಕರ ಈ ಬಗೆಯ ಪೂರ್ಣಾವಧಿ ಸಾರ್ವಜನಿಕ ಸಾಹಿತ್ಯಕ ಬದುಕು ‘ಶೂದ್ರ’ಕ್ಕೆ ನೆರವಾಗಿದೆ; ಎಪ್ಪತ್ತರ ದಶಕದಿಂದ ಬಹುತೇಕ ಪ್ರಗತಿಪರರು, ಉದಾರವಾದಿಗಳು, ಹಲವು ಪಂಥದವರು ಇಲ್ಲಿ ಬರೆದಿದ್ದಾರೆ. ಲಂಕೇಶ್, ಡಿ ಆರ್. ನಾಗರಾಜ್ ಥರದ ದೊಡ್ಡ ಲೇಖಕರಿಗೂ ಅವತ್ತು ‘ಶೂದ್ರ’ವೇ ವೇದಿಕೆಯಾಗಿತ್ತು. ಶಿವಪ್ರಕಾಶ್, ಕಂಬಾರ, ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿಯವರಂಥ ಕವಿಗಳು; ಸ.ಉಷಾ, ಭಾಗ್ಯಲಕ್ಷ್ಮಿ, ಪ್ರತಿಭಾ ನಂದಕುಮಾರ್, ಶಶಿಕಲಾ  ವಸ್ತ್ರದ ಥರದ ಕವಯಿತ್ರಿಯರು; ಎಚ್. ಎಸ್. ರಾಘವೇಂದ್ರರಾವ್, ಜಿ. ರಾಜಶೇಖರ, ಕಿ.ರಂ. ನಾಗರಾಜ್, ಬಸವರಾಜ ಕಲ್ಗುಡಿಯವರಂಥ ವಿಮರ್ಶಕರು; ಚರಿತ್ರಕಾರ ಎಸ್.ಚಂದ್ರಶೇಖರ್, ಅರ್ಥಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್; ಕಲಾವಿಮರ್ಶಕರು, ಮನೋವಿಶ್ಲೇಷಕರು, ಸಮಾಜವಿಜ್ಞಾನಿಗಳು ‘ಶೂದ್ರ’ದಲ್ಲಿ ಬರೆದರು.

1974ರಲ್ಲಿ ‘ಇವು ಕವಿತೆಗಳೋ ಅಲ್ಲವೋ’ ಎಂಬ ಅನುಮಾನದಲ್ಲಿ ಇನ್ನೂ ಸ್ಕೂಲ್ ನೋಟ್ ಬುಕ್ಕಿನ ಹಾಳೆಗಳಲ್ಲಿದ್ದ ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಸಂಕಲನದ ಪದ್ಯಗಳನ್ನು ‘ಶೂದ್ರ’  ಧೈರ್ಯವಾಗಿ ಪ್ರಕಟಿಸಿತು. ನಾಲ್ಕು ಕನ್ನಡ ಸಾಹಿತ್ಯ ಚಳುವಳಿಗಳ ಸಂಗಾತಿಯಾಗಿದ್ದ ‘ಶೂದ್ರ’ದಲ್ಲಿ ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ ಮಾರ್ಗಗಳ ಥಿಯರಿಗಳು, ಬರಹಗಳು, ಈ ಮಾರ್ಗಗಳ ಜೊತೆಜೊತೆಗೇ ಸೃಷ್ಟಿಯಾದ ವಿಮರ್ಶೆಗಳು ವಿಕಾಸಗೊಂಡಿವೆ. ಸಮಾಜವಾದ, ಅಂಬೇಡ್ಕರ್‌ವಾದ, ಸ್ತ್ರೀವಾದ, ದಲಿತ ಚಳುವಳಿಗಳ ಥಿಯರಿಗಳು ಇಲ್ಲಿ ರೂಪುಗೊಂಡಿವೆ. ಜಾಗೃತ ಸಾಹಿತ್ಯ ಸಮ್ಮೇಳನಕ್ಕೂ ‘ಶೂದ್ರ’ ಜೊತೆಗಾರನಾಗಿತ್ತು. ಯಾವುದನ್ನೂ ಗಟ್ಟಿಯಾಗಿ ಘೋಷಿಸದೆ, ತಾನು ಚಾರಿತ್ರಿಕ ಮಹತ್ವದ ಕೆಲಸದಲ್ಲಿ ತೊಡಗಿದ್ದೇನೆಂಬ ಹಮ್ಮು ಸಂಪಾದಕರಲ್ಲೂ ಇಲ್ಲದೆ ಪ್ರಕಟವಾಗುತ್ತಿದ್ದ ಸಾಂಸ್ಕೃತಿಕ ಪತ್ರಿಕೆಯೊಂದು ಸಂಸ್ಕೃತಿ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡ ಅನನ್ಯ ಪರಿ ವಿಸ್ಮಯ ಹುಟ್ಟಿಸುತ್ತದೆ. 

ಚಂದಾ ಕೊಡಲಿ, ಬಿಡಲಿ, ‘ಶೂದ್ರ’ ಹಲವು ಮುಖ್ಯ ಲೇಖಕ, ಲೇಖಕಿಯರ ಮನೆ ತಲುಪುತ್ತಿತ್ತು. ಸಂಪಾದಕರೇ ಪೋಸ್ಟ್ ಆಫೀಸಿಗೆ ಅಲೆಯುತ್ತಾ, ಟಿವಿಎಸ್ ವಾಹನದಲ್ಲಿ ಅಡ್ಡಾಡುತ್ತಾ, ‘ಶೂದ್ರ’ವನ್ನು ತಲುಪಿಸುತ್ತಿದ್ದರು. ಸಾಹಿತ್ಯ ಬರಹಗಳನ್ನು ಮೆಚ್ಚುವವರಿಗೆ, ರಿಸರ್ಚ್ ಮಾಡುವವರಿಗೆ, ವಿಮರ್ಶೆ ಬರೆಯುವುದನ್ನು ಕಲಿಯುವವರಿಗೆ ಇಲ್ಲಿ ಹಲವು ಮಾರ್ಗಗಳ ಬರಹಗಳಿರುತ್ತಿದ್ದವು. ಕನ್ನಡ ವಿಮರ್ಶಾ ಪರಿಭಾಷೆಯ ವಿಕಾಸ, ಇಂಗ್ಲಿಷ್ ಹಾಗೂ ಕನ್ನಡ ಟೀಚರುಗಳು ವಿಮರ್ಶೆಯನ್ನು ಬೆಳೆಸಿದ ಕನ್ನಡ ವಿಮರ್ಶೆಯ ಚರಿತ್ರೆಯ ಘಟ್ಟಗಳು ‘ಶೂದ್ರ’ದ ನಾಲ್ಕೂವರೆ ದಶಕಗಳ 400 ಸಂಚಿಕೆಗಳಲ್ಲಿ ದಾಖಲಾಗಿವೆ.

ಈ ನಡುವೆ ‘ಶೂದ್ರ’ ಮತ್ತು ಶ್ರೀನಿವಾಸ್ ಅನುಭವಿಸಿದ ಕಷ್ಟಗಳೂ ಹತ್ತಾರು. 1976ರ ಎಮರ್ಜೆನ್ಸಿಯ ಕಾಲದಲ್ಲಿ ಶ್ರೀನಿವಾಸ್ ಅರೆಸ್ಟಾದಾಗ ಅವರ ಮನೆಯಿಂದ ಪೊಲೀಸರು ವಶಪಡಿಸಿಕೊಂಡ  ಪುಸ್ತಕಗಳಲ್ಲಿ ‘ಶೂದ್ರ’ದ ಆರಂಭದ ಸಂಚಿಕೆಗಳೂ ಇದ್ದವು. ಎಮರ್ಜೆನ್ಸಿಯಲ್ಲಿ ‘ಶೂದ್ರ’ವನ್ನು ಅಚ್ಚು ಹಾಕಲು ಹಿಂಜರಿದ ಮುದ್ರಕರೂ ಇದ್ದರು. ಅಂಥ ಕಾಲದಲ್ಲಿ ‘ಶೂದ್ರ’ವನ್ನು ಅಚ್ಚು ಮಾಡಿದ್ದಷ್ಟೇ ಅಲ್ಲ, ಹಲವು ಸಂಕಷ್ಟಗಳಲ್ಲಿ ಪತ್ರಿಕೆಯ ಜೊತೆ ಗಟ್ಟಿಯಾಗಿ ನಿಂತ ಇಳಾ ವಿಜಯಾ ಅವರು ‘ಇಳಾ ಮುದ್ರಣ’ದಲ್ಲಿ ಎಷ್ಟೋ ವರ್ಷ ಪತ್ರಿಕೆಯನ್ನು ಅಚ್ಚು ಹಾಕುತ್ತಿದ್ದರು. ಇವತ್ತಿಗೂ ‘ಶೂದ್ರ’ದ ಮೊದಲ ಸಂಚಿಕೆ ಸಂಪಾದಕರ ಬಳಿ ಇಲ್ಲ. ಈ ಅಂಕಣ ಓದುತ್ತಿರುವ ಯಾರ ಬಳಿಯಾದರೂ ‘ಶೂದ್ರ’ದ ಮೊದಲ ಸಂಚಿಕೆಯಿದ್ದರೆ ದಯಮಾಡಿ ತಿಳಿಸಿ.

ಹೈಸ್ಕೂಲ್ ಮೇಷ್ಟರ ಕೆಲಸ ಮಾಡುತ್ತಲೇ ಬೆಂಗಳೂರಿನ ಸೆಮಿನಾರುಗಳು, ಪ್ರಗತಿಪರ ರಾಜಕೀಯ ಚಟುವಟಿಕೆಗಳ ಜೊತೆಗಿರುತ್ತಿದ್ದ ಶ್ರೀನಿವಾಸ್ ಲೇಖನ, ಕವಿತೆ, ವಿಮರ್ಶೆಗಳನ್ನು ಕಾಡಿ ಬೇಡಿ ಬರೆಸಿ, ‘ಶೂದ್ರ’ವನ್ನು ತರುತ್ತಿದ್ದರು. ಮುದ್ರಣಾಲಯವನ್ನೂ ಶುರು ಮಾಡಿ ಸುಸ್ತಾದರು. ಪ್ರತಿ ಸಂಚಿಕೆಯ ತಯಾರಿಯ ಪ್ರಯಾಸ, ಪುಳಕಗಳನ್ನು ಅನುಭವಿಸಿದಂತೆಯೇ ಗೇಲಿ, ಅವಮಾನಗಳನ್ನೂ ನುಂಗಿಕೊಳ್ಳುತ್ತಿದ್ದರು. ‘ಓಕೇ ಓಕೇ ನೈಸ್ ನೈಸ್!’ ಎನ್ನುತ್ತಾ ಥಣ್ಣನೆಯ ಬಿಯರ್ ಗುಟುಕಿನಲ್ಲಿ ಲೇಖಕರ ಕುಟುಕುಗಳನ್ನು ನೆನೆದು ನಕ್ಕು ಮೀರುತ್ತಿದ್ದರು. ತಮ್ಮ ಕಾಳರಾತ್ರಿಗಳ ಅಲೆದಾಟದಲ್ಲಿ ಕಂಡ ಅಸ್ಪಷ್ಟ ಚಿತ್ರಗಳನ್ನು, ಸಾಹಿತ್ಯಲೋಕದ ಗಾಸಿಪ್ಪುಗಳನ್ನು ತಮ್ಮದೇ ಶೈಲಿಯ ವಿಚಿತ್ರ ಪ್ರಜ್ಞಾಪ್ರವಾಹದಲ್ಲಿ ಬರೆಯುತ್ತಾ ಕ್ರಿಯೇಟಿವ್ ಆಗುತ್ತಿದ್ದರು. ಹಟಾತ್ತನೆ ಎಲ್ಲೋ ಜಿಗಿವ ಶೂದ್ರ ವಾಕ್ಯಗಳು ಓದುಗರ ಗಲಿಬಿಲಿ, ಕಚಗುಳಿಗಳಿಗೂ ಕಾರಣವಾಗುತ್ತಿದ್ದವು!

ಇವತ್ತು ಹಿಂತಿರುಗಿ ನೋಡಿದರೆ, ಅವತ್ತು ‘ಶೂದ್ರ’ ಪತ್ರಿಕೆ ಜನಪ್ರಿಯ ಸಂಸ್ಕೃತಿಯ ಭರಾಟೆಯ ವಿರುದ್ಧ ತನ್ನ ಮಟ್ಟದಲ್ಲಿ ಗಂಭೀರವಾಗಿ ಸೆಣಸಿದ ಚಿತ್ರಗಳು ಕಾಣತೊಡಗುತ್ತವೆ. ಸಾವಿರ ಜನ ಹೊಸ ಲೇಖಕ, ಲೇಖಕಿಯರಿಗಾದರೂ ಬರೆವ ಆತ್ಮವಿಶ್ವಾಸ ಹುಟ್ಟಿ, ಅವರ ಬರವಣಿಗೆ ಬೆಳೆಯುವಲ್ಲಿ ‘ಶೂದ್ರ’ದ ಪಾಲೂ ಇರಬಲ್ಲದು. ಒಂದು ಕಾಲಕ್ಕೆ ಐನೂರು, ಸಾವಿರ ಪ್ರತಿಗಳಿಂದ ಹಿಡಿದು ತೊಂಬತ್ತರ ದಶಕದಲ್ಲಿ 3000 ಪ್ರತಿಗಳವರೆಗೂ ಅಚ್ಚಾದ ‘ಶೂದ್ರ’ಕ್ಕೆ ಎಂ.ಪಿ.ಪ್ರಕಾಶ್, ಬಿ. ಬಸವಲಿಂಗಪ್ಪ, ಕೆ.ಎಚ್. ರಂಗನಾಥ್, ಜೆ.ಎಚ್. ಪಟೇಲರಂಥ ಸೂಕ್ಷ್ಮ ರಾಜಕಾರಣಿಗಳೂ ಓದುಗರಾಗಿದ್ದರು.  

ಇವೆಲ್ಲವೂ ಕಾಲದ ಕೂಸಾಗಿ ಹುಟ್ಟಿದ ಕನ್ನಡ ಸಾಹಿತ್ಯಪತ್ರಿಕೆಯೊಂದು ನಿರ್ವಹಿಸಿದ ಜವಾಬ್ದಾರಿಗಳನ್ನು ಸೂಚಿಸುತ್ತವೆ. ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಿ, ವ್ಯವಧಾನದಿಂದ, ಆತ್ಮಪರೀಕ್ಷೆಯ ಮೂಲಕ ಹುಟ್ಟುವ ಬರವಣಿಗೆಗೆ ವೇದಿಕೆಯಾಗುವ ‘ಶೂದ್ರ’ದಂಥ ಪತ್ರಿಕೆಗಳಿಂದಲೂ ಸೂಕ್ಷ್ಮಜೀವಿಗಳು ಸೃಷ್ಟಿಯಾಗುತ್ತಾರೆ; ಲೇಖಕ, ಲೇಖಕಿಯರಾಗಿ, ಬುದ್ಧಿಜೀವಿಗಳಾಗಿ ಬೆಳೆಯುತ್ತಾರೆ. ಈಗ ಮತ್ತೆ ಬರಲಾರಂಭಿಸಿರುವ ಆರ್. ಜಿ. ಹಳ್ಳಿ ನಾಗರಾಜ್-ಪುಷ್ಪ ಅವರ ‘ಅನ್ವೇಷಣೆ’ಯಾಗಲೀ, ಹೊಸ ತಲೆಮಾರಿನ ಟಿ.ಎಸ್. ಗೊರವರ್ ಸಂಪಾದಿಸುವ ‘ಅಕ್ಷರ ಸಂಗಾತ’ವಾಗಲೀ ಈ ಥರದ ಜವಾಬ್ದಾರಿಗಳನ್ನು ಈ ಕಾಲದಲ್ಲಿ ಮುಂದುವರಿಸಲು ‘ಶೂದ್ರ’ದ ನಲವತ್ತೈದು ವರ್ಷಗಳ ನಡಿಗೆ ಅಪೂರ್ವ ಪ್ರೇರಣೆಯಾಗಬಲ್ಲದು.

2018ರವರೆಗೂ ಬಂದ ‘ಶೂದ್ರ’ದ ಎಷ್ಟೋ ಸಂಚಿಕೆಗಳು ಸಿಗದಿರುವ ಕಾಲದಲ್ಲಿ ಲೇಖಕಿ ಸಂಧ್ಯಾರೆಡ್ಡಿ ತಮ್ಮ ಬಳಿ ಇದ್ದ ಸಂಚಿಕೆಗಳನ್ನು ಬೈಂಡ್ ಮಾಡಿಸಿ ಸಂಪಾದಕರಿಗೆ ಕೊಟ್ಟಿದ್ದಾರೆ. ಶೂದ್ರ ಸಂಚಿಕೆಗಳು ಡಿಜಿಟಲೈಸ್ ಆಗುವ ಕಾಲವೂ ಬರಲಿದೆ. ಐವತ್ತು ವರ್ಷಗಳ ಕೆಳಗೆ ಅಂಬೆಗಾಲಿಟ್ಟ ‘ಶೂದ್ರ’ದ ನಡಿಗೆ ಇನ್ನೂ ನಿಂತಿಲ್ಲ! ಲಾಂಗ್ ಲಿವ್ ಶೂದ್ರ!

ಕಾಮೆಂಟ್ ಸೆಕ್ಷನ್: ಪುಟ್ಟ ಸೂಚನೆ:  ಈ ಅಂಕಣ ಓದಿ ನೀವು ಬರೆಯುವ ಕಾಮೆಂಟುಗಳು ಅಡ್ಮಿನ್ ಗಮನಕ್ಕೆ ಬಂದ ನಂತರ ಪ್ರಕಟವಾಗುತ್ತವೆ. ಮೊದಲ ಕಾಲಂನಲ್ಲಿ ನಿಮ್ಮ ಹೆಸರು, ಅಥವಾ ಇನಿಶಿಯಲ್ಸ್, ಅಥವಾ ಸಂಕ್ಷಿಪ್ತನಾಮ; ಎರಡನೇ ಕಾಲಂನಲ್ಲಿ ನಿಮ್ಮ ಯಾವುದಾದರೂ ಮೇಲ್ ಐಡಿ ನಮೂದಿಸಿ. ಹೆಸರು ಅಥವಾ ಸಂಕ್ಷಿಪ್ತನಾಮ ಮಾತ್ರ ಪ್ರಕಟವಾಗುತ್ತದೆ. ಮೇಲ್ ಐಡಿ ಪ್ರಕಟವಾಗುವುದಿಲ್ಲ.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link

Share on:

Comments

12 Comments



| Suresha B

"ಶೂದ್ರ" ಪತ್ರಿಕೆ ಮತ್ತು ಶೂದ್ರ ಶ್ರೀನಿವಾಸ್ ಇವೆರಡೂ ನನ್ನ ಬಾಲ್ಯವನ್ನು ಆವರಿಸಿಕೊಂಡ ಸಂಗತಿಗಳು. ನನ್ನ ತಾಯಿಯ ಮುದ್ರಣಾಲಯದಲ್ಲಿ ಈ ಪತ್ರಿಕೆಯು ಪ್ರಕಟಣೆಗೆ ಸಿದ್ಧವಾಗುವಾಗ ನಾನು ಅಕ್ಷರ ಜೋಡಣೆ ಕೆಲಸ, ಕರಡು ತಿದ್ದುವ ಕೆಲಸ, ಸಿದ್ದ ಕರಡನ್ನು ಸಂಪಾದಕರ ಅಥವಾ ಅವರು ಸೂಚಿಸಿದ್ದ ಸಾಹಿತಿಗಳ ಮನೆಗೆ ಸೈಕಲ್ಲಿನಲ್ಲಿ ಒಯ್ದು, ತೋರಿಸುವ ಕೆಲಸ, ಪತ್ರಿಕೆಯ ಮುದ್ರಣ ಆದಮೇಲೆ ಮುದ್ರಿತ ಪುಟಗಳನ್ನು ಫೋಲ್ಡಿಂಗ್ ಮಾಡಿ, ಅಂಚು ಕತ್ತರಿಸುವ ಕೆಲಸ, ಬೈಂಡಿಂಗ್ ಕೆಲಸ - ಇವೆಲ್ಲವೂ ಆದ ನಂತರ ಪುಡಿಗಾಸಿನಷ್ಡು ಇರುತ್ತಿದ್ದ ಮುದ್ರಣಾಲಯದ ಬಿಲ್ ವಸೂಲಿಗೆ ಶ್ರೀನಿವಾಸ್ ರೆಡ್ಡಿ ಅವರು ಪಾಠ ಮಾಡುತ್ತಿದ್ದ ವಾಸವಿ ಶಾಲೆಗೆ ಹೋಗಿ ಕಾಯುವ ಕೆಲಸ. ಹೀಗೆ ಹಲವು ಕೆಲಸಗಳನ್ನು ಕಲಿಯಲು ಮತ್ತು ಹಲವು ಹಿರಿಯ ಸಾಹಿತಿಗಳನ್ನು ಹಸ್ತಪ್ರತಿಯಲ್ಲಿ ಮತ್ತು ಮುದ್ರಿತ ರೂಪದಲ್ಲಿ ಎರಡೆರಡು ಬಗೆಯಲ್ಲಿ ಓದಲು ಅವಕಾಶ ಕಲ್ಪಿಸಿದ ಪತ್ರಿಕೆ ಅದು.

\r\n\r\n

ನನ್ನ ಬದುಕಿನಲ್ಲಿ ನಾನೇನಾಗಿದ್ದೇನೋ ಅದಕ್ಕೆ ಈ "ಶೂದ್ರ" ನೀಡಿದ ಕಾಣಿಕೆಯೂ ದೊಡ್ಡದು. 

\r\n\r\n

ಅದಲ್ಲದೇ, ವ್ಯಕ್ತಿಯಾಗಿ ಶೂದ್ರ ಶ್ರೀನಿವಾಸ ಅವರನ್ನು ಸರಿಸುಮಾರು ಐದು ದಶಕದಿಂದ ನೋಡಿದ್ದೇನೆ. ಅವರು ಈಗಲೂ (ನನಗೆ ಅರವತ್ತು ದಾಟಿದ ಮೇಲೂ) ಮೊದಲು ಕಂಡಾಗ ಯಾವ ಪ್ರೀತಿಯಿಂದ ಮಾತಾಡಿಸಿದರೋ ಹಾಗೆಯೇ ಮಾತಾಡಿಸುವುದನ್ನು ಆನಂದಿಸುತ್ತೇನೆ.

\r\n\r\n

"ಶೂದ್ರ" ಪತ್ರಿಕೆಯು ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕದ ಎಲ್ಲಾ ಸಾಹಿತ್ಯ ಚಳವಳಿಗಳ ಆಕರ. ಅದರ ಎಲ್ಲಾ ಪ್ರತಿಗಳನ್ನು ಡಿಜಿಟಲೀಕರಿಸುವುದು ನಮ್ಮ ಸಾಹಿತ್ಯ ಚರಿತ್ರೆಯ ಹಿನ್ನೆಲೆಯಲ್ಲಿ ಆದ್ಯತೆಯ ಕೆಲಸವಾಗಬೇಕು. ಆಗಲಿ. ಆ ಕೆಲಸ ಆಗಲು ನನ್ನ ಲೈಬ್ರರಿಯಲ್ಲಿ ಇರಬಹುದಾದ ಕೆಲವು ಪ್ರತಿಗಳನ್ನು ಖಂಡಿತ ಒದಗಿಸುವೆ.

\r\n\r\n

- ಬಿ. ಸುರೇಶ

\r\n\r\n

(ರಂಗಕರ್ಮಿ, ಚಲನಚಿತ್ರ ತಯಾರಕ - ಅದಕ್ಕಿಂತ ಮುಖ್ಯವಾಗಿ "ಶೂದ್ರ" ಮುದ್ರಣ ಮಾಡುತ್ತಿದ್ದ ಇಳಾ ಮುದ್ರಣದ ವಿಜಯಮ್ಮನವರ ಎರಡನೆಯ ಮಗ.)

\r\n


| Gangadhara BM

ಕರ್ನಾಟಕದ ಆರಂಭದ ಸಮಾಜವಾದಿ ಗೋಪಾಲಗೌಡರ ಕಾಲದಿಂದ ಸಮಾಜವಾದಿ ಚಳವಳಿಯಲ್ಲಿದ್ದ ಅಪರೂಪದ ಸಮಚಿತ್ತದ ವ್ಯಕ್ತಿ ಅವರು ಎಂಬ ಭಾವನೆ ನನ್ನದು. ಕಳೆದ ಎರಡು ವರ್ಷಗಳ ಹಿಂದೆ ಲಾಕ್‌ ಡೌನ್‌ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು (ನನ್ನ ಟಿಸಿಹೆಚ್‌ ಉಪನ್ಯಾಸಕರು) ರವರಿಗೆ ಕಲಾಗ್ರಾಮದ ಕಾರ್ಯಕ್ರಮದಲ್ಲಿ ಬುದ್ದಿ ಹೇಳಿ ಧನಸಹಾಯ ಮಾಡಿ ಹೋಗಿದ್ದರು. ಇದು ಅವರ ಸಹಾಯದ ಮನೋಭಾವಕ್ಅಕೆ ಉದಾಹರಣೆ. ಅವರ ಪತ್ರಿಕೆ ಸಹ ನನ್ನ ಸಂಶೋಧನೆಯ ಪರಿಮಿತಿಯಲ್ಲಿ ಸೇರಿರುವುದು:ಅದಕ್ಕೆ ತಕ್ಕ ಹಾಗೆ ಅವರ ಬಗ್ಗೆ ಹೊಸ ಕೃತಿ ಬಿಡುಗಡೆಯಾಗಿರುವುದು ನನಗಂತೂ ಅನುಕೂಲಕರ. ತಮ್ಮ ಲೇಖನ ಶೂದ್ರ ರವರನ್ನು ಪರಿಚಯಿಸುತ್ತಲೇ ಶೂದ್ರ ಪತ್ರಿಕೆ ಮಹತ್ವ ತಿಳಿಸಿದೆ.‌ ಶೂದ್ರ ಎಂಬ ಪತ್ರಿಕೆಯ ಹೆಸರನ್ನು ಸೂಚಿಸಿದವರು ಎಸ್.ವೆಂಕಟರಾಮನ್‌ ಎಂದು ಅವರ ಕನಸಿಗೊಂದು ಕಣ್ಣು ಪುಸ್ತಕದಲ್ಲಿದೆ. ಧನ್ಯವಾದಗಳು ಸರ್

\r\n


| Lingadahalli Chetankumar

ಉತ್ತಮ ಪತ್ರಿಕೆ. ನನ್ನ ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ ಕಲಿಸಿದ ಪತ್ರಿಕೆ 

\r\n


| Dr Niranjana Murthy B M

ಶೂದ್ರ ಪತ್ರಿಕೆಯ ಜನನ ಮತ್ತು ಬೆಳವಣಿಗೆಯನ್ನು ಸಮಗ್ರವಾಗಿ ಕಟ್ಟಿಕೊಡುವ ಈ ಬರಹ ಅದ್ಭುತವಾಗಿದೆ. ಹುಳಿಯಾರರಿಗೆ ನಮನಗಳು. ನಮ್ಮ ತಲೆಮಾರಿನ ಜನಾಂಗದ ವೈಚಾರಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಪ್ರಜ್ಞೆಯನ್ನು ರೂಪಿಸಿದ ಮತ್ತು ವಿಸ್ತರಿಸಿದ ಪತ್ರಿಕೆ ಈ ಶೂದ್ರ ಪತ್ರಿಕೆ. ಶೂದ್ರ ಶ್ರೀನಿವಾಸರಿಗೂ ನಮನಗಳು.

\r\n


| Guruprasad

ಸರ್,ಶೂದ್ರ ಪತ್ರಿಕೆ,ವ್ಯಕ್ತಿಯ ಬಗೆಗಿನ ಲೇಖನ ಚೆನ್ನಾಗಿತ್ತು.ಹಾಗೆಯೇ ಯು,ಆರ್.ಅನಂತಮೂರ್ತಿಯವರ ಬಗ್ಗೆ ಬರೆಯಿರಿ.ಸಮಕಾಲೀನ ಲೇಖಕರ ನಡುವೆ ಹಲವು ವ್ಯತ್ಯಾಸಗಳಿದ್ದರೂ  ಕಾದಂಬರಿ,ಕಥೆ,ವಿಮರ್ಶೆಯಲ್ಲಿಅನಂತಮೂರ್ತಿಯವರು ಕನ್ನಡದ   ಸಾಹಿತ್ಯದಲ್ಲಿ ದೊಡ್ಡ ಹೆಸರು.ಲಂಕೇಶರು ಅನಂತಮೂರ್ತಿಯವರನ್ನು ಪತ್ರಿಕೆಯಲ್ಲಿ ತಿವಿಯುತ್ತಿದ್ದರು.ಆದರೆ ವೈಯಕ್ತಿಕವಾಗಿ ಯಾರಾದರೂ ಟೇಕೆ ಮಾಡಿದರೆ ಅನಂತಮೂರ್ತಿ ಒಳ್ಳೆಯ ಬರಹಗಾರರು ಅವರ ಬಗ್ಗೆ ಟೀಕೆ ಬೇಡ ಎನ್ನುತ್ತಿದ್ದರಂತೆ ಲಂಕೇಶರು.ನಿಮ್ಮ ಒಡನಾಟ,ಕುತೂಹಲದ ಸಂಗತಿಗಳನ್ನು ಸೇರಿಸಿ ಬರೆಯಿರಿ.

\r\n


| Prabhakar A S

ಸಾರ್ ನಮಸ್ಕಾರ

\r\n\r\n

ಶೂದ್ರ ನಿಯತಕಾಲಿಕೆಯನ್ನು ಕುರಿತು ನಿಮ್ಮ ಬರಹ ಚೆನ್ನಾಗಿದೆ. ಕಾಲೇಜು ದಿನಗಳಲ್ಲಿ ನಮ್ಮನ್ನು ಚಿಂತನೆಗೆ ಹಚ್ಚಿದ ಪತ್ರಿಕೆಗಳಲ್ಲಿ ‘ಶೂದ್ರ’ವೂ ಒಂದು. ಸಂಕ್ರಮಣ, ಶೂದ್ರ ಮತ್ತು ಲಂಕೇಶ್ ಪತ್ರಿಕೆಗಳನ್ನು ಹೊರತಾಗಿಸಿ ನಮ್ಮ ಕಾಲೇಜು ದಿನಗಳನ್ನು ನೆನಪಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದ ನಮ್ಮ ತಲೆಮಾರಿನ ಅನೇಕರು ಶೂದ್ರ ನಿಯತಕಾಲಿಕೆಗೆ ಋಣಿಗಳಾಗಿದ್ದಾರೆ.

\r\n


| Manjunath C Netkal

ಶೂದ್ರ ಶ್ರೀನಿವಾಸ್ ಸರ್ ಅವರನ್ನು ಕಿರಂ ಸರ್ ಮನೆಯಲ್ಲಿ ಭೇಟಿ ಮಾಡುತ್ತಿದ್ದೆ... ಅವರ ಕಿಸೆಯಲ್ಲಿ ಯಾವಾಗಲೂ ಒಂದು ಸಣ್ಣ ಬರೆಯುವ ಪುಸ್ತಕ ಇರುತ್ತದೆ. ಒಮ್ಮೆ ಹೀಗೆ ಕಿರಂ ಸರ್ ಮನೆಯಲ್ಲಿ ಯಾವುದೋ ಮಾತು ಕತೆ ನಡೆಯುತ್ತಿತ್ತು. ಕಿರಂ ಸರ್ ಮಗಳು ಹೇಳಿದ ಒಂದು ಮಾತು ಅವರ ಮನಸ್ಸಿಗೆ ತಟ್ಟಿತು ಅನಿಸುತ್ತದೆ ತಕ್ಷಣ ಆ ಪುಸ್ತಕ ತೆಗೆದು ಬರೆದುಕೊಂಡರು.... ನನಗೆ ಆಶ್ಚರ್ಯವಾಯಿತು ಓಹೋ ಬರಹಗಾರ ಆಗಬೇಕಾದರೆ ಹೀಗೆಲ್ಲ ಟಿಪ್ಪಣಿ ಮಾಡಿಕೊಳ್ಳಬೇಕು ಅಂತಾ ಅನಿಸಿತು.  ಸದಾ ಹಸನ್ಮುಖಿಯಾಗಿರುವ ಸೌಜನ್ಯವೇ ಮೈವೆತ್ತಂತೆ ಕಾಣುವ ಶೂದ್ರ ಶ್ರೀನಿವಾಸ್ ಸರ್ ಅವರ ಪತ್ರಿಕೆಯ ಸಾಹಸದ ಇತಿಹಾಸ ನಿಜಕ್ಕೂ ರೋಚಕವಾಗಿತ್ತು. ಧನ್ಯವಾದಗಳು ಸರ್ 

\r\n


| Banjagere Jayaprakash

ಶೂದ್ರ ಶ್ರೀನಿವಾಸರ ಸಾಂಸ್ಕೃತಿಕ ಕೊಡುಗೆ ಬಗ್ಗೆ ಬಹಳ ಪ್ರೀತಿಯಿಂದ ಬರೆದಿರುವ ಲೇಖನ ಇದು. ಇಂದು ಸಾಹಿತ್ಯ ಪತ್ರಿಕೆಗಳನ್ನು ಪ್ರಕಟಿಸಲು ಮುಂದಾಗಿರುವ, ಅದರ ಗೋಳುಗಳಲ್ಲಿ ಮುಳುಗಿರುವ ಹಲವು ಸಂಪಾದಕರಿಗೆ ಇದು ಸ್ಥೈರ್ಯ ತುಂಬಬಲ್ಲದು. ಶೂದ್ರದ ಸಾಹಿತ್ಯ ಪ್ರೀತಿ ಹಲವು ತರುಣ ಲೇಖಕರನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಯಿತು. ಈ ಬರಹ ಓದಿ ಶೂದ್ರ ಶ್ರೀನಿವಾಸ್ ಅವರು ಪಟ್ಟಿರುವ ಸಂತೋಷವನ್ನು ನಾನು ಊಹಿಸಿಕೊಳ್ಳಬಲ್ಲೆ. ಈ ಬಗೆಯ ಸಾಹಿತ್ಯ ಪತ್ರಿಕೆಗಳ ಸಂಪಾದಕರನ್ನು ಒಂದೆಡೆ ಸೇರಿಸುವ ಯಾವುದಾದರೂ ವೇದಿಕೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಶೂದ್ರ ಅವರು ಇದಕ್ಕೆ ಪ್ರಯತ್ನ ಹಾಕಿದರೆ ಚೆನ್ನಾಗಿರಿತ್ತದೆ.

\r\n


| B.Chandregowda

ಒಂದು ತಮಾಷೆಯ ಪ್ರಸಂಗವನ್ನು ಹೇಳಬೇಕು. 'ಶೂದ್ರ' ಪತ್ರಿಕೆಗೆ ಆರೆಸೆಸ್ ವ್ಯಕ್ತಿಯೊಬ್ಬ ಚಂದಾ ಕೊಟ್ಟ.ಆದರೆ ಆ ಪತ್ರಿಕೆಯ ಸಿದ್ಧಾಂತ ಅವನ ಸಂಘಕ್ಕೆ ವಿರುದ್ಧವಾದದ್ದರಿಂದ ನನ್ನ ವಿಳಾಸಕ್ಕೆ 'ಶೂದ್ರ' ಪತ್ರಿಕೆ ಬರುವಂತೆ ಮಾಡಿದ. ಹೀಗೆ ನಾನು ಚಂದಾದಾರನಾಗದೆಯೇ ಒಂದು ವರ್ಷ 'ಶೂದ್ರ 'ದ ಸಂಚಿಕೆಗಳನ್ನು ಓದಿದೆ!

\r\n\r\n

 

\r\n


| Shamarao

ಶೂದ್ರ ಶ್ರೀನಿವಾಸ್ ಅವರ ನಿಸ್ವಾರ್ಥ ಕನ್ನಡ ಸೇವೆ ನಿಜಕ್ಕೂ ಸ್ಮರಣೀಯ.ತಾವು ಚೆನ್ನಾದ ರೀತಿ ನೆನಪು ಮಾಡಿಕೊಂಡಿದ್ದೀರಿ. 

\r\n


| ಶಿವರಾಜ್ ಬ್ಯಾಡರಹಳ್ಳಿ

ಶೂದ್ರ ಶ್ರೀನಿವಾಸ್ ಅವರ ಬದುಕು ಬರಹ ಪುಸ್ತಕ ಬಿಡುಗಡೆಯಲ್ಲಿ ನಾನೂ ಕೂಡ ಭಾಗಿ ಯಾಗಿ ಒಂದು ಕವಿತೆ ಓದಿದೆ..ಕಿರಂ ಕುರಿತ ಒಂದು ಕವಿತೆಯನ್ನು ಪ್ರಕಟಿಸಿದ 'ಶೂದ್ರ' ಪತ್ರಿಕೆ ಧನ್ಯವಾದಗಳು. ಶೂದ್ರ ಒಂದು ಕಾಲದ ಐಕಾನ್ ಆಗಿತ್ತು.ಹಲವು ಮಹತ್ತರ ಕವಿಗಳನ್ನು ರೂಪಿಸಿದ ಪತ್ರಿಕೆ ಕಥನ ನಿರೂಪಣೆ ಚನ್ನಾಗಿದೆ.

\r\n


| ಡಾ.ಹೊಂಬಯ್ಯ ಹೊನ್ನಲಗೆರೆ

ಶೂದ್ರ ಶ್ರೀನಿವಾಸ್ ಅವರ ಕನ್ನಡ ಪ್ರೀತಿ, ಕಿರಂ ಅವರ ಒಡನಾಟ, ಕೆಲವು ಪತ್ರಿಕೆಗಳಮಹತ್ವ ಮನಮುಟ್ಟುವಂತೆ ಇದೆ

\r\n




Add Comment






Recent Posts

Latest Blogs



Kamakasturibana

YouTube