ಟೀಚಿಂಗ್ ಮತ್ತು ಕಲಿಕೆ: ಒಂದು ಸುಂದರ ಸಂಬಂಧ

ಎಂ.ಎ. ತರಗತಿಗಳಲ್ಲಿ ಸಾಹಿತ್ಯದ ಹುಡುಗ, ಹುಡುಗಿಯರ ಜೊತೆಗೆ ಹಾಗೂ ರಿಫ್ರೆಶರ್ ಕೋರ್ಸುಗಳಲ್ಲಿ ಮೇಡಂ, ಮೇಷ್ಟರುಗಳ ಜೊತೆಗೆ ಸಾಹಿತ್ಯ ಪಠ್ಯಗಳನ್ನು, ಸಾಹಿತ್ಯ ಪ್ರಕಾರಗಳನ್ನು ಚರ್ಚೆ ಮಾಡುವ ನನಗೆ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ದ ಟೀಚಿಂಗ್ ಅನುಭವ ಹೊಸ ಪಾಠ ಕಲಿಸತೊಡಗಿತು. ಆ ಎನ್.ಎಸ್.ಡಿ. ತರುಣ, ತರುಣಿಯರು ಇಂಡಿಯಾದ ದಶದಿಕ್ಕುಗಳಿಂದ ಬಂದಿದ್ದರು; ಅಭಿನಯ, ನಿರ್ದೇಶನ, ಬೆಳಕು, ರಂಗ ವಿನ್ಯಾಸಗಳ ಕಲೆ ಕಲಿಯಹೊರಟಿರುವ ಅವರೊಡನೆ ಗ್ರೀಕ್, ರೋಮನ್ ನಾಟಕ ಪಠ್ಯ-ರಂಗಭೂಮಿ ಚರಿತ್ರೆ ಕುರಿತು ಇಂಗ್ಲಿಷಿನಲ್ಲೂ, ಅಷ್ಟಿಷ್ಟು ಹಿಂದಿಯಲ್ಲೂ ನನ್ನ ಚರ್ಚೆ ನಡೆಯುತ್ತಿತ್ತು; ಸೊಫೋಕ್ಲಿಸನ ‘ಈಡಿಪಸ್’, ಯೂರಿಪಿಡೀಸನ ‘ಮೀಡಿಯಾ, ಸೆನೆಕಾನ ದುರಂತ ನಾಟಕಗಳು; ಅರಿಸ್ಟೋಫನಿಸನ ‘ದ ಬರ್ಡ್ಸ್’, ‘ದ ಕ್ಲೌಡ್ಸ್’ ಕಾಮಿಡಿಗಳು...ಇವನ್ನೆಲ್ಲ ವಿವರಿಸುವಾಗ ಆ ನಟ, ನಟಿಯರ ಜೀವಂತ ಸ್ಪಂದನ ಸ್ಫೂರ್ತಿ ಉಕ್ಕಿಸುವಂತಿತ್ತು; ಅವರ ಕಲಿಕೆಯ ಕಾತರ ಕಂಡು ನಾನು ಕಲಿತಿದ್ದನ್ನೆಲ್ಲ ಅವರಿಗೆ ಧಾರೆ ಎರೆಯಬೇಕೆಂಬ ಕಾತರ ಹುಟ್ಟುತ್ತಿತ್ತು.

 

ಈ ಎರಡೂ ಕಾತರಗಳಿಗೆ ಕಾರಣಗಳಿದ್ದವು: ಈ ನಟ, ನಟಿಯರು ಮುಂಬರುವ ದಿನಗಳಲ್ಲಿ ರಂಗಭೂಮಿ, ಸಿನಿಮಾಗಳಲ್ಲಿ ನಟನೆ, ನಿರ್ದೇಶನಗಳನ್ನು ವೃತ್ತಿಯಾಗಿ ತೆಗೆದುಕೊಳ್ಳುವವರಿದ್ದರು. ಇಂಥ ಥಿಯರಿ ಕ್ಲಾಸುಗಳಲ್ಲಿ ರಂಗಭೂಮಿ, ನಾಟಕಗಳ ಬಗ್ಗೆ ಕಲಿತದ್ದು ನಾಳೆ ಹೂ ಬಿಟ್ಟು, ಹಣ್ಣಾಗುವುದೆಂಬ ನಿರೀಕ್ಷೆ ಅವರಲ್ಲಿತ್ತು. ಕಲಿಕೆಯ ಇಂಥ ತೀವ್ರ ತುರ್ತು ಇದ್ದಾಗ ಮಾತ್ರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಲ್ಲವನ್ನೂ ಬ್ಲಾಟಿಂಗ್ ಪೇಪರಿನಂತೆ ಹೀರಿಕೊಳ್ಳಬಲ್ಲರು! ಅವರ ಗ್ರಹಿಕೆಯ ಕ್ಷಿಪ್ರತೆ, ತೀವ್ರತೆಗಳು ನನ್ನಂಥವರ ಟೀಚಿಂಗ್ ನಿತ್ಯ ಹೊಸ ಕಲಿಕೆಯಿಂದ ವಿಸ್ತಾರವಾಗುತ್ತಿರಬೇಕು ಎಂಬುದನ್ನು ಸೂಚಿಸುತ್ತಿದ್ದವು. ಇಂಥ ಸೂಕ್ಷ್ಮ ನಟ,ನಟಿಯರೊಡನೆ 2500 ವರ್ಷಗಳ ಹಿಂದಿನ ಗ್ರೀಕ್ ಟ್ರ್ಯಾಜಿಡಿ, ಕಾಮಿಡಿಗಳನ್ನು ಓದುತ್ತಿರುವಾಗ ಟ್ರ್ಯಾಜಿಡಿ, ಕಾಮಿಡಿ ಪ್ರಕಾರಗಳು ಭಾಷೆ, ಪಾತ್ರ, ವರ್ತನೆ, ತತ್ವ, ನೋಟ ಎಲ್ಲವನ್ನೂ ನಿರ್ದೇಶಿಸುವ ಬಗೆ ಮತ್ತೆ ಮನದಟ್ಟಾಗತೊಡಗಿತು. ಗ್ರೀಕರ ಈ ವಿಶಿಷ್ಟ ಪ್ರಕಾರಗಳ ಮಹಾಸತ್ವ ಜಗತ್ತಿನ ಇನ್ನಾವ ಪ್ರಾಚೀನ ಸಾಹಿತ್ಯಕ್ಕೂ ದಕ್ಕಿದಂತಿಲ್ಲ. ಸತ್ಯ ಎಲ್ಲಿದೆ, ಹೇಗಿದೆ, ನೋಡಿಯೇ ಬಿಡೋಣ ಎಂಬ ನಿಷ್ಠುರ ಹುಡುಕಾಟದಿಂದ, ಸತ್ಯ ಕುರಿತ ಬದ್ಧತೆಯಿಂದ ಗ್ರೀಕರಿಗೆ ಟ್ರ್ಯಾಜಿಡಿ, ಕಾಮಿಡಿ ಪ್ರಕಾರಗಳು ದಕ್ಕಿದಂತಿವೆ. ಈ ಕ್ಲಾಸುಗಳಲ್ಲಿ ಅರಿಸ್ಟೋಫನಿಸ್ ‘ವಿಟ್’ನ ಮೋಹಕ ಶಕ್ತಿ ಹಾಗೂ ರಾಜ, ದೇವರು... ಯಾರ ಕಾಲನ್ನಾದರೂ ಎಳೆಯಬಲ್ಲ ಕಾಮಿಡಿ ಪ್ರಕಾರದ ಸ್ವಾತಂತ್ರ್ಯ ನನ್ನನ್ನು ಸೆಳೆಯಿತು. ಸೊಪೋಕ್ಲಿಸ್, ಈಸ್ಕಿಲಸ್, ಯೂರಿಪಿಡೀಸರಂಥ ದೊಡ್ಡ ನಾಟಕಕಾರರ ಟ್ರ್ಯಾಜಿಡಿಗಳನ್ನೆಲ್ಲ ಅರಗಿಸಿಕೊಂಡು, ಅಳೆದು ತೂಗಿ, ಅವರ ಸಾಲುಗಳನ್ನು ತನ್ನ ಕಾಮಿಡಿಗಳಲ್ಲಿ ಕೋಟ್ ಮಾಡಿ ಲೇವಡಿ ಮಾಡಬಲ್ಲವನು ಅರಿಸ್ಟೋಫನಿಸ್! ಇಂಥ ಪರಿಪೂರ್ಣ ವಿಟ್ಟಿ ನಾಟಕಕಾರ ಮತ್ತೊಬ್ಬ ಇರಲಿಕ್ಕಿಲ್ಲ. ಹೀಗೆ ಗ್ರೀಕ್ ಕಾಮಿಡಿ, ಟ್ರ್ಯಾಜಿಡಿಗಳನ್ನು ಹೊಸ ನಟ, ನಟಿ, ನಿರ್ದೇಶಕರೆದುರು ಓದುತ್ತಾ… ಕಲಿಸುವುದೆಂದರೆ ಕಲಿಯುವುದು ಎಂಬ ನನ್ನ ಹಳೆಯ ನಂಬಿಕೆ ಇನ್ನಷ್ಟು ಗಟ್ಟಿಯಾಗತೊಡಗಿತು.

 

ಈ ನಾಟಕ ತರಗತಿಗಳಲ್ಲಿ ನಟ, ನಟಿಯರ ಕೈಯಲ್ಲಿ ‘ಈಡಿಪಸ್’ ನಾಟಕದ ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು ಅನುವಾದಗಳಿದ್ದವು; ಎಲ್ಲರ ಕೈಯಲ್ಲೂ ಪಠ್ಯಗಳಿದ್ದುದು ಕೂಡ ಅವರ ಕಲಿಕೆಯ ದಕ್ಷತೆಗೆ ಕಾರಣವಾಗಿತ್ತು. ಈ ಕಾಲದ ಸಾಹಿತ್ಯ ತರಗತಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಪಠ್ಯವನ್ನೇ ಕೈಯಲ್ಲಿ ಹಿಡಿಯದಿರುವುದು ಅವರ ಗ್ರಹಿಕೆಯ ಹಿನ್ನಡೆಗೆ ಮುಖ್ಯ ಕಾರಣ. ಮೇಷ್ಟರೊಬ್ಬ ನಾಟಕದ ದೃಶ್ಯವನ್ನು ವ್ಯಾಖ್ಯಾನಿಸುವಾಗ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೈಯಲ್ಲಿ ಪಠ್ಯವಿದ್ದಾಗ ಮಾತ್ರ ಅವರೂ ಸ್ವತಂತ್ರ ವ್ಯಾಖ್ಯಾನ ಕೊಡಲು ಸಾಧ್ಯ. ಇದು ಎನ್. ಎಸ್. ಡಿ. ತರಗತಿಗಳಲ್ಲಿ ಮತ್ತೆ ಸ್ಪಷ್ಟವಾಗತೊಡಗಿತು. ಉದಾಹರಣೆಗೆ, ‘ಈಡಿಪಸ್’ ನಾಟಕದ ಇಂಗ್ಲಿಷ್ ಆವೃತ್ತಿಯನ್ನೋ ಅಥವಾ ಲಂಕೇಶರ ಅದ್ಭುತ ಅನುವಾದವನ್ನೋ ಓದಿದವರಿಗೆ ಈ ದೃಶ್ಯ ನೆನಪಿರಬಹುದು: ಹಠಾತ್ತನೆ ಎರಗಿರುವ ಪ್ಲೇಗಿನಿಂದ ಥೀಬ್ಸ್ ಜನ ಕಂಗಾಲಾಗಿದ್ದಾರೆ; ನಗರದ ಕಷ್ಟಪರಂಪರೆಗೆ ಪರಿಹಾರ ಹುಡುಕಬಲ್ಲ ಕಾಲಜ್ಞಾನಿ ಟೈರೀಷಿಯಸ್ ದೊರೆ ಈಡಿಪಸ್ ನ ಅರಮನೆಗೆ ಬರುತ್ತಾನೆ. ಟೈರೀಷಿಯಸ್-ಈಡಿಪಸ್ ನಡುವಣ ಸುದೀರ್ಘ ‘ಅಗಾನ್’ (ತೀವ್ರ ಮುಖಾಮುಖಿಯ ಸಂಭಾಷಣೆ) ಹೀಗೆ ಶುರುವಾಗುತ್ತದೆ: ‘ಟೈರೀಷಿಯಸ್, ದಾರ್ಶನಿಕ, ಎಲ್ಲ ಗೂಢಗಳ ಭೇದಕ.’

 

ಲಂಕೇಶರ ಅದ್ಭುತ ಕನ್ನಡೀಕರಣದಲ್ಲಿ ಈ ತೀವ್ರ ಸಂಭಾಷಣೆಯನ್ನು ಹಲವು ಸಲ ಓದಿ, ಟೀಚ್ ಮಾಡಿದ್ದರೂ ‘ತಡವಾಗಿ ಬಂದ ಬೆಳಕೇ’ ಎಂಬ ರಾಮಚಂದ್ರಶರ್ಮರ ಕವಿತೆಯ ಸಾಲಿನಂತೆ ಇದೀಗ ಈ ಸಂಭಾಷಣೆಯಲ್ಲಿನ ಈಡಿಪಸ್ ಮಾತುಗಳಲ್ಲಿ ಕೊನೆಯ ಪಕ್ಷ ಹತ್ತು ವಿಭಿನ್ನ ಭಾವಗಳಿರುವುದು ಕಾಣತೊಡಗಿತು. ‘ನಟ ನಟಿಯರಾದ ನೀವು ಈ ಹತ್ತು ನಿಮಿಷದ ಡೈಲಾಗುಗಳಲ್ಲಿ ಈಡಿಪಸ್ಸಿನ ಈ ಹತ್ತು ಭಾವಗಳನ್ನು ತರಬಲ್ಲಿರಾದರೆ, ನೀವು ದೊಡ್ಡ ಆಕ್ಟರುಗಳಾಗಿ ಬೆಳೆಯಬಲ್ಲಿರಿ’ ಎಂದೆ; ಈಡಿಪಸ್ ಆಡುವ ಒಂದೊಂದೇ ಮಾತನ್ನು ಓದುತ್ತಾ…ಆ ಮಾತುಗಳಲ್ಲಿ ವಿನಯ, ಅಸಹಾಯಕತೆ, ಜವಾಬ್ದಾರಿ, ಸಂದೇಹ, ಅಹಂಕಾರ ಮುಂತಾದ ಬಗೆಬಗೆಯ ಭಾವಗಳು ಕಾಣುತ್ತಾ ಬಂದಂತೆಲ್ಲ ಅವನ್ನೆಲ್ಲ ಅವರಿಗೂ ಕಾಣಿಸತೊಡಗಿದೆ. ನಟ, ನಟಿಯರು ಆ ಭಾವಗಳನ್ನು ತಮ್ಮ ಮಂಡನೆಗಳಲ್ಲಿ ಮೂಡಿಸತೊಡಗಿದರು. ಅವರಿಂದ ನಾನು ಕಲಿಯತೊಡಗಿದೆ...

 

ನನ್ನ ಅತ್ಯಂತ ಪ್ರಿಯ ಕೆಲಸಗಳಲ್ಲೊಂದಾದ ಟೀಚಿಂಗಿನ ಮೂಲಕ ಪಡೆಯುವ ಇಂಥ ನೂರಾರು ಸಾರ್ಥಕ ಅನುಭವಗಳು ನನ್ನ ಕಲಿಕೆಯ ಭಾಗವಾಗುತ್ತಲೇ ಇರುತ್ತವೆ; ಇಂಥ ಕಲಿಕೆಯ ಗಳಿಗೆಗಳನ್ನು ನಿತ್ಯ ಪಡೆಯುವ ನನಗೆ, ಹೊಸ ನಟ, ನಟಿಯರ ಜೊತೆಗಿನ ನಾಟಕದ ಓದು ಹೊಸ ಕಲಿಕೆಯಾಗಿದ್ದು ಸಹಜವಾಗಿತ್ತು. ‘ಟೀಚರ್ ಎನ್ನುವವರೇ ಇಲ್ಲ; ನಾವೆಲ್ಲರೂ ಲರ್ನರ್ಸ್’ ಎಂದು ಝೆನ್ ಮಾಸ್ಟರೊಬ್ಬ ಹೇಳಿದ್ದು ಮತ್ತೊಮ್ಮೆ ಮನವರಿಕೆಯಾಗತೊಡಗಿತು.

 

ಕೊನೆ ಟಿಪ್ಪಣಿ:

‘ಈಡಿಪಸ್’ ನಾಟಕದಲ್ಲಿ ನಿಗೂಢ ಸತ್ಯವನ್ನು ಕಂಡ ಕಾಲಜ್ಞಾನಿ ಟೈರೀಷಿಯಸ್ ‘ಓ ಜ್ಞಾನವೆಂಬುದು ಎಷ್ಟು ಭಯಂಕರ- ಅದರಿಂದ ಉಪಯೋಗವಿಲ್ಲದಾಗ!’ ಎಂದು ತಲ್ಲಣಿಸುತ್ತಾನೆ. ನೀನು ಕಂಡ ಸತ್ಯವನ್ನು ಹೇಳಲೇಬೇಕೆಂದು ಈಡಿಪಸ್ ಆಗ್ರಹಿಸಿದಾಗ ಟೈರೀಷಿಯಸ್ ಹೇಳುತ್ತಾನೆ: ‘ನಾನು ಹೇಳುವುದಿಲ್ಲ. ಈಗ ಅದು ನನ್ನ ದುರಂತ; ಹೇಳಿದ ಮೇಲೆ ನಿನ್ನ ದುರಂತ…’

ಎರಡೂವರೆ ಸಾವಿರ ವರ್ಷಗಳ ಕೆಳಗೆ ಗ್ರೀಕ್ ದುರಂತ ನಾಟಕಕಾರರು ಕೊಟ್ಟ ಜ್ಞಾನ, ದುರಂತಗಳ ಈ ವ್ಯಾಖ್ಯಾನಗಳು ಇವತ್ತು ಕೂಡ ಹೊಸ ಹೊಸ ಅರ್ಥಗಳನ್ನು ಹೊರಡಿಸುತ್ತವೆ…ಅವು ರಂಗದ ಮೇಲೆ ಪಡೆಯುವ ಅರ್ಥಗಳು ಇನ್ನಷ್ಟು ವಿಶಿಷ್ಟವಾಗಿರಬಲ್ಲವು!

Share on:

Comments

0 Comments





Add Comment






Recent Posts

Latest Blogs



Kamakasturibana

YouTube