ಐವತ್ತು ತುಂಬಿದ ’ಅಂಬೇಡ್ಕರ್’ ಕವಿತೆ ಮತ್ತು ಕವಿಯ ಸ್ವ-ಸೆನ್ಸಾರ್!
by Nataraj Huliyar
ಹೊಸ ತಲೆಮಾರಿನ ಪ್ರತಿಭಾವಂತ ಗಾಯಕ ಚಿಂತನ್ ವಿಕಾಸ್ ಕಂಠದಿಂದ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ ಆಲವೆ’ ಹಾಡು ಮತ್ತೆ ಕೇಳಿ ಬರತೊಡಗಿತು.
ನೋಡನೋಡುತ್ತಲೇ ‘ಅಂಬೇಡ್ಕರ್’ ಕವಿತೆಗೆ ಐವತ್ತು ವರ್ಷ ತುಂಬಿತ್ತು! ಕೆಲವು ವರ್ಷಗಳ ಕೆಳಗೆ ಒಂದು ಮಧ್ಯಾಹ್ನ ಇದೇ ‘ಅಂಬೇಡ್ಕರ್’ ಪದ್ಯದ ಸುತ್ತ ನಡೆದ ಒಂದು ಕಚಗುಳಿಯ ಕವಿಸಂವಾದ ನೆನಪಾಯಿತು:
ಅವತ್ತು ಗೆಳೆಯ, ಕನ್ನಡ ಅಧ್ಯಾಪಕ ಎಂ.ಜಿ. ಚಂದ್ರಶೇಖರಯ್ಯ ಪದವಿ ತರಗತಿಗಳ ಪಠ್ಯ ಪುಸ್ತಕದ ಡ್ರಾಫ್ಟ್ ರೆಡಿ ಮಾಡಿಕೊಂಡು ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಕಚೇರಿಗೆ ಬಂದಿದ್ದರು. ಆ ಪಠ್ಯದಲ್ಲಿ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಪದ್ಯವೂ ಸೇರಿತ್ತು. ಪಠ್ಯಪುಸ್ತಕದ ಕೊನೆಗೆ ಕವಿ-ಕಾವ್ಯ ಪರಿಚಯದ ಭಾಗ ಖಾಲಿಯಿತ್ತು. ಎಂ.ಜಿ. ಚಂದ್ರಶೇಖರಯ್ಯ ಕೊಂಚ ಮೋಹಕವಾಗಿ, ಮತ್ತು ಸೂಚ್ಯವಾಗಿ, ನನ್ನೆಡೆಗೆ ನೋಡಿದರು! ಸರಿ, ಬರೆಯಲು ರೆಡಿಯಾದೆ. ಕವಿತೆ ಚೆನ್ನಾಗಿ ನೆನಪಿತ್ತು; ಎಷ್ಟೋ ಸಲ ನಿಜಕ್ಕೂ ಭಾವುಕನಾಗಿ ನನಗೆ ನಾನೇ ಹಾಡಿಕೊಂಡಿದ್ದರಿಂದ ಬಾಯಿಪಾಠವಾಗಿತ್ತು.
ಕೂತಲ್ಲೇ ಕವಿ ಸಿದ್ದಲಿಂಗಯ್ಯನವರ ಬಗ್ಗೆ, ಅಂಬೇಡ್ಕರ್ ಕವಿತೆಯ ಬಗ್ಗೆ ಎರಡು ಪ್ಯಾರಾ ಕವಿ-ಕಾವ್ಯ ಪರಿಚಯ ಬರೆದವನು ಕೊನೆಯ ಪಂಕ್ತಿಗೆ ಬಂದು ಕೊಂಚ ಕೈ ತಡೆದಂತಾಗಿ ನಿಂತೆ. ಪಕ್ಕದಲ್ಲೇ ಬುದ್ಧನಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿದ್ದ ಕವಿಗಳತ್ತ ನೋಡಿದೆ.
‘ಸಾರ್?’
‘ಏನ್ ನಟರಾಜ್?’ ಸಣ್ಣಗೆ ಕಣ್ಣು ತೆರೆದ ಕವಿಗಳು ಎಂದಿನಂತೆ ಮೆಲುದನಿಯ ರಾಗದಲ್ಲಿ ಕೇಳಿದರು.
‘ಸಾರ್! ಈ ಸ್ಟ್ಯಾಂಝಾದಲ್ಲಿ ಎರಡು ಮೂರು ಅರ್ಥ ಬರ್ತಾ ಇದೆಯಲ್ಲ… ಯಾವುದನ್ನ ಬರೆಯೋದು?’
‘ಬಿಟ್ಬಿಡಿ ನಟರಾಜ್!’
‘ಏನ್ ಬಿಡೋದು ಸಾರ್?’
‘ಅದೇ ಆ ಸ್ಟ್ಯಾಂಝಾನ!’
‘ಅದೆಂಗಾಗುತ್ತೆ ಸಾರ್!
‘ಅದು ಮೊದಲೇ ಸ್ವಲ್ಪ ಕಾಂಟ್ರೋವರ್ಶಿಯಲ್ ಆಗಿದೆ…’ ಎಂದು ಕವಿಗಳು ಸುಮ್ಮನಾದರು.
ಆ ಸೋ ಕಾಲ್ಡ್ ‘ಕಾಂಟ್ರೊವರ್ಸಿ’ಯ ಸುತ್ತಣ ಪ್ರಶ್ನೆಗಳು ನನಗೂ ನೆನಪಿದ್ದವು. ಮೊದಲಿಗೆ ಕವಿಗಳು ಕಾಂಟ್ರೋವರ್ಶಿಯಲ್ ಎಂದ ಪಂಕ್ತಿಯನ್ನು ನೋಡಿ:
ಕಪ್ಪುಕ್ಕಿನ ಕೋಳಗಳನು
ಕಡಿದು ಎಸೆದ ವಜ್ರವೆ
ಬಂಗಾರದ ಕೋಳವೊಕ್ಕ
ಮಹಾಬೌದ್ಧ ಭಿಕ್ಷುವೆ
ಕವಿತೆಯಲ್ಲಿ ಒಂದಕ್ಕೊಂದು ಕೂಡಿಕೊಳ್ಳುವ ಪ್ರತಿಮೆಗಳನ್ನು ನಾನು ‘ಸಹಚರಿ ಪ್ರತಿಮೆಗಳು’ ಎನ್ನುತ್ತೇನೆ. ಇದು ಇಂಗ್ಲಿಷಿನ ‘ಅಸೋಸಿಯೇಟಿವ್ ಇಮೇಜಸ್’ ಎಂಬ ನುಡಿಗಟ್ಟಿನಿಂದ ನಾನು ರೂಪಿಸಿಕೊಂಡಿರುವ ಪರಿಭಾಷೆ. ಇಂಥ ಪ್ರತಿಮೆಗಳು ಒಂದರ ಅರ್ಥವನ್ನು ಮತ್ತೊಂದು ವಿಸ್ತಾರ ಮಾಡುತ್ತಿರುತ್ತವೆ. ಮೇಲಿನ ಪಂಕ್ತಿಯಲ್ಲಿರುವ ಕಪ್ಪುಕ್ಕಿನ ಕೋಳ, ಬಂಗಾರದ ಕೋಳಗಳನ್ನು ಸಹಚರಿ ರೂಪಕಗಳು ಎನ್ನಬಹುದು; ಅಥವಾ ವಿರುದ್ದಾರ್ಥದ ರೂಪಕಗಳು ಎಂದು ಕೂಡ ಹೇಳಬಹುದು. ಇಲ್ಲಿ ಒಂದರ ಅರ್ಥ ಇನ್ನೊಂದರಿಂದ ಬೆಳೆಯುವುದನ್ನು ಗಮನಿಸಿ.
ಅದಿರಲಿ. ಕವಿಸೃಷ್ಟಿಯಲ್ಲಿ ಯಾವ ಪ್ರತಿಮೆ, ಯಾವ ರೂಪಕ ಹೇಗೆ, ಯಾಕೆ ಚಿಮ್ಮುತ್ತದೋ ಯಾರು ಬಲ್ಲರು! ಎಷ್ಟೋ ಸಲ ಮೊದಲು ಹೊಳೆದ ಒಂದು ಪದವೇ ಇನ್ನೊಂದಕ್ಕೆ ಹಾದಿ ಮಾಡಿಕೊಡುತ್ತದೆ; ಒಂದು ಪ್ರಾಸ ಇನ್ನೊಂದನ್ನು ಸೃಷ್ಟಿಸುತ್ತದೆ… ಇವೆಲ್ಲ ತಾರ್ಕಿಕವಾಗೇ ನಡೆಯಬೇಕೇಂದೇನಿಲ್ಲ. ಇದು ಕವಿತೆ ಬರೆಯುವವರಿಗೆ, ಓದುವವರಿಗೆಲ್ಲ ಗೊತ್ತಿರುತ್ತದೆ.
ಆದರೆ ‘ಅಂಬೇಡ್ಕರ್’ ಕವಿತೆ ಬಂದ ಹಲವು ವರ್ಷಗಳ ನಂತರ ಕೆಲವು ಓದುಗರು, ‘ಇದೇನಿದು! ಇಲ್ಲಿ ಬಂಗಾರದ ಕೋಳ ಎಂದರೇನರ್ಥ? ಹಾಗಾದರೆ ಬೌದ್ಧ ಧರ್ಮವೂ ಒಂದು ಬಂಧನವೇ? ಎಂದು ಕೇಳಿದರಂತೆ.
ಕವಿಯೊಬ್ಬ ತನ್ನ ಕವಿತೆಯ ಬಗ್ಗೆ ಕವಿ ತಾನೇ ಉತ್ತರ ಕೊಡುವುದು ಕಷ್ಟ. ಕವಿಗಳು ಸುಮ್ಮನೆ ಇದ್ದುಬಿಟ್ಟರು. ಬಂಗಾರ ಎಂದರೆ ಆಕರ್ಷಕವಾದುದು, ಉತ್ತಮವಾದುದು ಎಂಬ ಅರ್ಥದಲ್ಲಿ ಈ ಬಂಗಾರದ ಕೋಳ ಹುಟ್ಟಿತೋ? ಅಥವಾ ಅದು ನವಧರ್ಮ ಸ್ವೀಕಾರದ ವಿಮರ್ಶೆಯೋ? ಕವಿಯೇ ಇದಕ್ಕೆಲ್ಲ ಉತ್ತರ ಕೊಡುವುದು ಕಷ್ಟ.
ಕವಿಗಳ ಮನಸ್ಸಿನಲ್ಲಿ ಹಿನ್ನೆಲೆಗೆ ಸರಿದಿದ್ದ ಈ ಪ್ರಶ್ನೆ ಇದೀಗ ಮತ್ತೆ ಪಠ್ಯಪುಸ್ತಕದ ಸಂದರ್ಭದಲ್ಲಿ ಎದುರಾಗಿತ್ತು!
‘ಮತ್ತೆ ಟೆಕ್ಸ್ಟ್ ಬುಕ್ಕಲ್ಲಿ ಯಾಕೆ ಕಾಂಟ್ರೊವರ್ಸಿ? ಆ ಸ್ಟ್ಯಾಂಝಾ ಬಿಟ್ಬಿಡಿ’ ಎಂದರು ಕವಿಗಳು.
‘ಹಾಗೇನಿಲ್ಲ ಸಾರ್. ಇದು ಕವಿಯ ಒಂದು ಘಟ್ಟದ ಗ್ರಹಿಕೆ ಎಂದು ವಿವರಿಸಿದರಾಯಿತು’ ಎಂದೆ.
ಕವಿಗಳು ಸುಮ್ಮನಿದ್ದರು. ನಾನು ಅಲ್ಲಿಂದ ಹೋದ ನಂತರವಾದರೂ ಅವರು ಆ ಪಂಕ್ತಿ ತೆಗೆಸುವ ಸಾಧ್ಯತೆ ಇತ್ತು! ಎಷ್ಟೋ ವರ್ಷಗಳ ನಂತರ ಆ ಪಠ್ಯಪುಸ್ತಕ ನೋಡಿದೆ. ಆ ಪಂಕ್ತಿ ಇರಲಿಲ್ಲ. ನನ್ನ ಅಪೂರ್ಣ ಟಿಪ್ಪಣಿ ಕೂಡ ಹಾಗೇ ಇತ್ತು! ಈ ಅಂಕಣದ ಕೊನೆಗೆ ಕೊಟ್ಟಿರುವ ಲಿಂಕ್‌ನಲ್ಲಿ ಸಿದ್ಧಲಿಂಗಯ್ಯನವರು ಓದಿರುವ ‘ಅಂಬೇಡ್ಕರ್’ ಕವಿತೆಯಲ್ಲಿ ಕೂಡ ಆ ಪಂಕ್ತಿ ಇಲ್ಲ. ಅದು ಕವಿಯ ಆಯ್ಕೆಯೂ ಇರಬಹುದು.
ಇದಕ್ಕೂ ಮೊದಲು ಕೆಲವು ಹಾಡುಗಾರರು ಇದೇ ‘ಅಂಬೇಡ್ಕರ್’ ಕವಿತೆಯ ಮತ್ತೊಂದು ಪಂಕ್ತಿಯನ್ನು ಬದಲಿಸಿ ಹಾಡುತ್ತಿದ್ದರು. ಕವಿತೆಯ ಮೂಲ ಪಂಕ್ತಿ ಹೀಗಿದೆ:
ಮಲಗಿದ್ದವರ ಕೂರಿಸಿದೆ
ನಿಲಿಸುವವರು ಯಾರೋ?
ಛಲದ ಜೊತೆಗೆ ಬಲದ ಪಾಠ
ಕಲಿಸುವವರು ಯಾರೋ?
ಇಪ್ಪತ್ತನೆಯ ಶತಮಾನದ ತೊಂಬತ್ತರ ದಶಕದಲ್ಲಿ ಬಹುಜನ ಸಮಾಜ ಪಕ್ಷದ ರಾಜಕಾರಣ ಗಟ್ಟಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕೆಲವು ಹಾಡುಗಾರರು ಇದನ್ನು ಬದಲಿಸಿ, ‘ಮಲಗಿದವರ ಕೂರಿಸಿದೆ, ನಿಲಿಸುವವರು ನಾವು; ಛಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು’ ಎಂದು ಹಾಡಲು ಶುರು ಮಾಡಿದರು.
ಮೊದಲ ಸಲ ಈ ಹೊಸ ಪದಪಲ್ಲಟ ಕಿವಿಗೆ ಬಿದ್ದಾಗ ವಿಸ್ಮಯವಾಯಿತು. ಇದು ಹೊಸ ತಲೆಮಾರಿನ ಹೋರಾಟಗಾರ-ಗಾಯಕರ ಕುತೂಹಲಕರವಾದ ಪೊಲಿಟಿಕಲ್ ರೀಡಿಂಗ್, ಪೊಲಿಟಿಕಲ್ ಕರೆಕ್ಷನ್ ಕೂಡ ಆಗಿತ್ತು. ಬಾಬಾಸಾಹೇಬರು ದಲಿತರ ಹಾಗೂ ಎಲ್ಲ ಬಡವರ ಬದುಕನ್ನು ಇಲ್ಲಿಯವರೆಗೆ ತಂದಿದ್ದಾರೆ; ಅದರ ಮುಂದಿನ ಹೊಣೆಯನ್ನು ನಾವು ಹೊರುತ್ತೇವೆ; ಹೊರಬೇಕು ಎಂಬ ದನಿ ಆ ಬದಲಾವಣೆಯಲ್ಲಿತ್ತು. ಬರೆದ ಪಠ್ಯವೊಂದು ಹಾಡುಪಠ್ಯವಾಗಿ ಹೊಸ ಹೊಸ ಅರ್ಥ ಪಡೆಯುತ್ತಿತ್ತು; ಬೇಂದ್ರೆಯವರ ‘ಭಾವಗೀತ’ ಕವಿತೆಯ ಪ್ರತಿಮೆಯ ಮೂಲಕವೇ ಹೇಳುವುದಾದರೆ, ‘ಅಂಬೇಡ್ಕರ್’ ಕವಿತೆಯ ಸಾಲು ‘ದಿಕ್ತಟಗಳ ಹಾಯುತಿತ್ತು!’
ಇಷ್ಟಾಗಿಯೂ ಅವತ್ತು ಸಿದ್ಧಲಿಂಗಯ್ಯನವರ ಸ್ವ-ಸೆನ್ಸಾರ್‌ಗೆ ಕಾರಣವೇನಿರಬಹುದು ಎಂದು ಹಲವು ಸಲ ಯೋಚಿಸಿದ್ದೇನೆ: ಸಿದ್ಧಲಿಂಗಯ್ಯನವರು ಮಾರ್ಕ್ಸ್‌ವಾದಕ್ಕೆ ಒಲಿದಿದ್ದ ತಾರುಣ್ಯದಲ್ಲಿ, ‘ಧರ್ಮ ಎನ್ನುವುದು ಜನರಿಗೆ ತಿನ್ನಿಸಿದ ಅಫೀಮು; ಭರವಸೆಯಿಲ್ಲದ ಜಗತ್ತಿನ ಭರವಸೆ’ ಎಂಬ ಕಾರ್ಲ್ ಮಾರ್ಕ್ಸ್‌ನ ಹೇಳಿಕೆಯ ಮೊದಲ ಭಾಗ ಈ ಕವಿತೆಯ ಬಂಗಾರದ ಕೋಳದ ರೂಪಕವನ್ನು ರೂಪಿಸಿತ್ತೆ? ಮುಂದೆ ಸ್ವತಃ ಕವಿಯ ನಿಲುವಿನಲ್ಲೇ ಬದಲಾವಣೆಯಾಗಿ ಈ ಬಣ್ಣನೆಯ ಬಗ್ಗೆ ಸಂದೇಹ ಹುಟ್ಟಿತೆ? ಅಥವಾ ಓದುಗರ ಹೊಸ ಓದು ಕವಿಯನ್ನು ಸ್ವ ವಿಮರ್ಶೆಗೆ ಒಯ್ದಿತೆ?
ಅಲ್ಲಮಪ್ರಭುಗಳು ಹೇಳಿದಂತೆ ‘ತೊಡೆಯಲಾಗದ ಲಿಪಿಯನು ಬರೆಯಬಾರದು.’ ಸರಿ! ಬರೆದರೇನಂತೆ, ಮರು ಮುದ್ರಣದಲ್ಲಿ ತೊಡೆಯಲೂಬಹುದು ಎಂದು ಇದೀಗ ನಮ್ಮ ಕವಿಗಳು ಸೂಚಿಸುತ್ತಿದ್ದರು!
ಅದೇನೇ ಇರಲಿ. ಸಿದ್ಧಲಿಂಗಯ್ಯನವರ ಈ ಕವಿತೆಯಂತೆಯೇ ಅವರ ಒಟ್ಟು ಕಾವ್ಯವೇ ಅಂಬೇಡ್ಕರ್‌ವಾದವನ್ನು ಹಲವು ತಲೆಮಾರುಗಳಲ್ಲಿ ಹಬ್ಬಿಸಿರುವುದನ್ನು ಕೃತಜ್ಞತೆಯಿಂದ ನೆನೆಯೋಣ. ಐವತ್ತು ತಂಬಿದ ‘ಅಂಬೇಡ್ಕರ್’ ಕವಿತೆಯಂತೂ ಈವರೆಗೆ ನೂರಾರು ಅಂಬೇಡ್ಕರ್ ಕವಿತೆಗಳನ್ನು ಬರೆಸಿದೆ; ಹಾಡಿಸಿದೆ. ಸಿದ್ಧಲಿಂಗಯ್ಯನವರ ಕಾವ್ಯದ ಮೂಲಕವೂ ಅಂಬೇಡ್ಕರ್ ಕಡೆಗೆ ತಿರುಗಿದ ಲಕ್ಷಾಂತರ ಓದುಗರಲ್ಲಿ ನಾನೂ ಒಬ್ಬ. ಗಿರೀಶ್ ಹಂದಲಗೆರೆ ಸಂಪಾದಿಸಿದ ‘ಅರಿವೇ ಅಂಬೇಡ್ಕರ್’ ಎಂಬ ಸಂಗ್ರಹಯೋಗ್ಯ ಕವನ ಸಂಕಲನದಲ್ಲಿ ಅಂಬೇಡ್ಕರ್ ಕುರಿತ ಹತ್ತಾರು ಕವಿ, ಕವಯಿತ್ರಿಯರ ಹೊಸ ಹೊಸ ಬಣ್ಣನೆಗಳಿದ್ದರೂ ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯೇ ನನ್ನ ಸೆಳೆಯುವುದೇಕೆ! ಬಹುತೇಕ ಹಾಡುಗಾರರು ಆ ಕವಿತೆಯನ್ನು ಶಿವರಂಜಿನಿ ರಾಗದಲ್ಲಿ ಹಾಡಿರುವ ಧಾಟಿ ಮತ್ತೆ ಮತ್ತೆ ನನ್ನ ಕಿವಿಗೆ ಬಿದ್ದಿರುವ ಕಾರಣದಿಂದ ಕೂಡ ಈ ಕವಿತೆ ನನ್ನಲ್ಲಿ ಕಾಯಮ್ಮಾಗಿ ಉಳಿದಿದೆ.
ಕನ್ನಡ ಕಾವ್ಯದ ಕೆಲವು ಮೂಲ ಮಾದರಿಗಳನ್ನು ಸೃಷ್ಟಿಸಿದ ಸಿದ್ಧಲಿಂಗಯ್ಯ ‘ಅಂಬೇಡ್ಕರ್’ ಎಂಬ ಈ ಕಾವ್ಯಾತ್ಮಕ ವ್ಯಕ್ತಿಚಿತ್ರದಲ್ಲೂ ಮೂಲ ಮಾದರಿಯೊಂದನ್ನು ಸೃಷ್ಟಿಸಿದಂತಿದೆ; ಆ ಮಾದರಿ ಕನ್ನಡದಲ್ಲಿ ಮತ್ತೆ ಮತ್ತೆ ರಿಪೀಟಾದಂತೆ ಕಾಣುತ್ತದೆ. ಕೆಲವು ವರ್ಷಗಳ ಕೆಳಗೆ ಅಂಬೇಡ್ಕರ್ ಜೊತೆ ಸಂವಾದ ಮಾಡುವ ಧಾಟಿಯಲ್ಲಿ ಕೋಟಗಾನಹಳ್ಳಿ ರಾಮಯ್ಯನವರು ಓದಿದ ಪದ್ಯಗಳು ಬೇರೆ ಹಾದಿ ಹಿಡಿದಂತೆ ಕಂಡಿದ್ದವು.
ನಾಳೆ ನಡೆಯಲಿರುವ ಅಂಬೇಡ್ಕರ್ ಜಯಂತಿಯಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಕುರಿತ ಭಾಷಣಕ್ಕೆ ಟಿಪ್ಪಣಿ ಮಾಡಿಕೊಳ್ಳುತ್ತಾ, ಸಿದ್ಧಲಿಂಗಯ್ಯನವರ ಕವಿತೆಯನ್ನು ನೆನೆಯುತ್ತಿರುವಾಗಲೇ ಅವರು ಅಂಬೇಡ್ಕರ್ ಡೇ ಬಗ್ಗೆ ಹೇಳಿದ ಅನುಭವವೊಂದು ನೆನಪಾಯಿತು. ಅಂಬೇಡ್ಕರ್ ಜಯಂತಿಯ ತಿಂಗಳೆಂದರೆ ಸಿದ್ಧಲಿಂಗಯ್ಯನವರ ಬಿಡುವಿಲ್ಲದ ತಿಂಗಳು. ಅವರ ಬದುಕಿನ ಕೊನೆಕೊನೆಯವರೆಗೂ ಅದು ಹಾಗೇ ಇತ್ತು.
ಇಂಥದೇ ಒಂದು ಏಪ್ರಿಲ್ ತಿಂಗಳಲ್ಲಿ ಕವಿಗಳು ತಮ್ಮ ಎಂದಿನ ಸಸ್ಪೆನ್ಸ್ ತುಂಬಿದ ಶೈಲಿಯಲ್ಲಿ ಮಾತು ಶುರು ಮಾಡಿದರು:
‘ಏನ್ ನಟರಾಜ್! ಎರಡು ಪರವಾಗಿಲ್ಲ! ಮೂರೂ ಓಕೇ! ತೀರಾ ಐದೋ ಆರೋ ಅದರೆ ಭಾಳಾ ಕಷ್ಟ!’
ಓಹೋ! ಕವಿಗಳು ಸಂಧ್ಯಾಕಾರ್ಯಕ್ರಮದ ಸವಾಲಿನ ಬಗ್ಗೆ ಹೇಳುತ್ತಿರಬಹುದು ಎಂದುಕೊಂಡ ನಾನು ಕುತೂಹಲದಿಂದ, ‘ಏನ್ ಸಾರ್?’ ಎಂದೆ.
‘ಅದೇ! ಅಂಬೇಡ್ಕರ್ ಜಯಂತಿ ಭಾಷಣ… ಮೊನ್ನೆ ಭಾನುವಾರ ಐದು ಮುಗಿಸೋವತ್ಗೆ ಸುಸ್ತಾದೆ!’
ಈ ಸಲದ ಅಂಬೇಡ್ಕರ್ ಜಯಂತಿಯ ಮುನ್ನಾ ದಿನ ೧೯೭೫ರಿಂದ ಇವತ್ತಿನವರೆಗೂ ಅರ್ಧ ಶತಮಾನ ಕಾಲ ಅಂಬೇಡ್ಕರ್ ಸ್ಪಿರಿಟ್, ಜ್ವಾಲೆ, ಬೆಳಕು ಎಲ್ಲವನ್ನೂ ನಾಡಿನ ತುಂಬ ಹಬ್ಬಿಸಿದ ಕವಿ ಸಿದ್ಧಲಿಂಗಯ್ಯನವರ ಕವಿತೆಗಳನ್ನು ನೆನೆದು ಮೌನ ಆವರಿಸತೊಡಗುತ್ತದೆ; ಜೊತೆಗೇ ಗಾಢ ಕೃತಜ್ಞತೆ…ಕವಿಗೂ, ಕವಿತೆಯ ಕೇಂದ್ರವಾದ ಬಾಬಾಸಾಹೇಬರಿಗೂ.
ಕೊನೆ ಟಿಪ್ಪಣಿ: ಹ್ಯಾಪಿ ಬರ್ತ್‌ಡೇ ಬಾಬಾ ಸಾಹೇಬ್!
ಮೂರು ವರ್ಷಗಳ ಕೆಳಗೆ ಕೊರೋನಾ ಸೆರೆಮನೆಯ ಕಾಲದಲ್ಲಿ ಅಂಬೇಡ್ಕರ್ ಜಯಂತಿಯೂ ಬಂತು. ಗೆಳೆಯರೂ ನಟರೂ ಆದ ಅಚ್ಯುತ್‌ಕುಮಾರ್ ಹಾಗೂ ಸತೀಶ್ ನೀನಾಸಂಗೆ ಫೋನ್ ಮಾಡಿ. ‘ಅಂಬೇಡ್ಕರ್ ಜಯಂತಿಯ ಮುನ್ನಾ ದಿನದ ರಾತ್ರಿ ಝೂಂನಲ್ಲಿ ಅಂಬೇಡ್ಕರ್ ಡೇ ಆಚರಿಸೋಣ’ ಎಂದೆ; ಸತೀಶ್ ಅದನ್ನು ಹೆಚ್ಚು ರೀಚ್ ಇರುವ ಇನ್ಸ್ಟಾಗ್ರಾಂನಲ್ಲೇ ಮಾಡಲು ಹೊರಟರು; ನಟ-ನಿರ್ದೇಶಕ ಚನ್ನಕೇಶವ ಛಕ್ಕನೆ ಪೋಸ್ಟರ್ ತೇಲಿ ಬಿಟ್ಟರು.
ನೋಡನೋಡುತ್ತಿದ್ದಂತೆಯೇ ಪೂರ್ವಿ ಕಲ್ಯಾಣಿ ಕಂಬಾರರ ಅಂಬೇಡ್ಕರ್ ಕವಿತೆಗೆ ಗಿಟಾರ್ ಹಿಡಿದು ರಾಗ ಹಾಕಿಬಿಟ್ಟರು; ನಟರಾದ ಬಾಲಾಜಿ ಮನೋಹರ್, ಕಿರಣ್ ನಾಯಕ್; ನಿರ್ದೇಶಕರಾದ ಬಿ.ಎಂ.ಗಿರಿರಾಜ್, ರಾಘು ಶಿವಮೊಗ್ಗ; ಕವಿ ಸುಬ್ಬು ಹೊಲೆಯಾರ್, ಕವಯಿತ್ರಿ ಎಚ್ ಎಲ್ ಪುಷ್ಪ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ…ಚಿಂತನ್ ವಿಕಾಸ್ ಸಿಡಿಸಿದ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ’ ಹಾಡು; ಎಲ್ಲವನ್ನೂ ಅಂಬೇಡ್ಕರ್ ಮಾತುಗಳ ಜೊತೆಜೊತೆಗೇ ಪೋಣಿಸಿ ನಿರ್ವಹಿಸಿದ ಜವಾರಿ ನಟ ಸತೀಶ್ ನೀನಾಸಂ…ಇವರೆಲ್ಲರ ಉತ್ಸಾಹದಿಂದ ತಯಾರಾಗಿದೆ ಈ ಅಂಕಣ ಬರಹದ ಕೆಳಗಿರುವ ವಿಡಿಯೋ. ಮೇಲೆ ಹೇಳಿದ ಚಿಂತನ್ ವಿಕಾಸ್ ಹಾಡಿದ ‘ಅಂಬೇಡ್ಕರ್’ ಹಾಡು ಈ ವಿಡಿಯೋದಲ್ಲಿದೆ.
VIDEO LINK - CLICK HERE
ಸದಾ ನನ್ನೊಡನೆ ಸ್ಪಂದಿಸುವ ಈ ಗೆಳೆಯ, ಗೆಳತಿಯರ ಸುಂದರ ಬಳಗಕ್ಕೆ, ಈ ವಿಡಿಯೋ ಸಿದ್ಧಪಡಿಸಿದ ಸತೀಶ್ ನೀನಾಸಂ ಹಾಗೂ ಅದನ್ನು ಕೊಂಚ ಮರುರೂಪಿಸಿದ ನವ ಟೆಕ್ಕಿ ಸಮಂತ್ ಪತ್ತಾರ್‌ಗೆ ಥ್ಯಾಂಕ್ಸ್.
ವಿಡಿಯೋ ನೋಡಿ. ಶೇರ್ ಮಾಡಿ. ಬಾಬಾಸಾಹೇಬರಿಗೆ ವಿಶ್ ಮಾಡಿ. ಈ ಬರಹ ಇಷ್ಟವಾದರೆ ಲೈಕ್ ಒತ್ತಿ. ಶೇರ್ ಮಾಡಿ.
ಸ್ವತಃ ಸಿದ್ಧಲಿಂಗಯ್ಯನವರೇ ಓದಿರುವ ‘ಅಂಬೇಡ್ಕರ್’ ಪದ್ಯ ನನ್ನ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನಲ್ ನಿರ್ವಹಿಸುವ ಸಮಂತ ಅವರ ‘ಕನ್ನಡಿ’ ಯೂಟ್ಯೂಬ್ ಚಾನಲ್‌ನಲ್ಲಿದೆ. ನೋಡಿ: CLICK HERE
ಹ್ಯಾಪಿ ಬರ್ತ್ ಡೇ ಬಾಬಾ ಸಾಹೇಬ್!
Comments
8 Comments
| ಬಂಜಗೆರೆ ಜಯಪ್ರಕಾಶ
ಕವಿತಯುದ್ದಕ್ಕೂ ಅಂಬೇಡ್ಕರ್ ಅವರ ಬಗ್ಗೆ ಒಂದು ತೆಳುವಾದ ವಿಮರ್ಶಾ ದನಿ ಇರುವುದನ್ನು ಈ ರೂಪಕಗಳು ಸೂಚಿಸುತ್ತಿವೆ. ಆಗಿನ ಮಾರ್ಕ್ಸ್ ವಾದಿ ಸೈದ್ಧಾಂತಿಕತೆ ಅಂಬೇಡ್ಕರ್ ಅವರ ದಾರಿಯನ್ನು ದಲಿತ ವಿಮೋಚಗೆ ಇರುವ ಬಲವಾದ ಹಾದಿ ಎಂದು ಪರಿಗಣಿಸಿರಲಿಲ್ಲ. ನೂತನ ಪ್ರಜಾತಾಂತ್ರಿಕ ಕ್ರಾಂತಿಯ ಬಗ್ಗೆ ಕವಿಗಳಿಗೆ ಇದ್ದ ದಟ್ಟ ನಂಬಿಕೆಯಿಂದಾಗಿ ಅಂಬೇಡ್ಕರ್ ಸಾಧನೆ ಮೆಚ್ಚುತ್ತಲೇ 'ಮಳೆಯನೇಕೆ ತಾರಲಿಲ್ಲ, ಮಿಂಚು ಮಾಯೆ ಅಷ್ಟೆಯಾ' ಎಂಬ ಉದ್ಗಾರಕ್ಕೆ ಕಾರಣವಾಗಿದೆ ಎಂಬುದು ನನ್ನ ಊಹೆ. ಕವಿಯ ಮಾಗುವಿಕೆಯ ದಾರಿಯಲ್ಲಿ ಈ ಬಗೆಯ ರೋಡ್ ಹಂಪ್ಸ್ ಇರುವುದು ಸಹಜ ತಾನೇ. ೯೦ ರ ಸುಮಾರಿನಲ್ಲಿ ನಾನು ಮಂಡೇಲಾ ಬಗ್ಗೆ ಬರೆದ ಕವಿತೆಯಲ್ಲಿ ' ಕಪ್ಪು ಜನರ ಕಣ್ಣೀರಿನಲಿ ತೇಲಿದ್ದು ಬೆಳಕಿನ ಹೆಣ' ಎಂದು ಬರೆದಿದ್ದೆ. ಮಂಡೇಲಾ ನಿಲುವುಗಳ ಬಗ್ಗೆ ವಿಮರ್ಶಾತ್ಮಕ ಅಂತರ ಇಟ್ಟುಕೊಂಡಿದ್ದ ನನ್ನ ಮಾರ್ಕ್ಸ್‌ವಾದಿ ಗ್ರಹಿಕೆ ಹಾಗೆ ಬರೆಸಿತ್ತು.
\r\n| Dr. Mohan Mirle
'ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ..’ ಈ ಕವಿತೆಯನ್ನು ನಾನು ಕಾಲೇಜು ದಿನಗಳಲ್ಲಿ ಡಿ.ಡಿ. ಚಂದನವಾಹಿನಿಯಲ್ಲಿ ಕೇಳಿ ಪುಳಕಗೊಂಡಿದ್ದೆ. ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಸಂಗಡಿಗರು ಈ ಹಾಡನ್ನು ಕಂಜರ ಹಿಡಿದು, ಗೆಜ್ಜೆ ಕಟ್ಟಿದ ಸಣ್ಣ ಹೆಜ್ಜೆಯೊಂದಿಗೆ ಕೋರಸ್‌ನಲ್ಲಿ ಹಾಡಿದ್ದರು. ಅದರ ಸಾಹಿತ್ಯ ಮತ್ತು ರಾಗ ಸಂಯೋಜನೆ ನನಗೆ ಬಹುವಾಗಿ ಇಷ್ಟವಾಗಿತ್ತು. ಮುಂದೆ ಜನ್ನಿ ಮತ್ತು ಇತರೆ ಹಾಡುಗಾರರ ದನಿಯಲ್ಲೂ ಈ ಕವಿತೆಯನ್ನು ಕೇಳಿ ಆನಂದಿಸಿದ್ದೆ. ಈ ಹಾಡಿನಿಂದ ಪ್ರೇರಿತನಾಗಿ ನಾನೂ ಕೂಡ ಅಂಬೇಡ್ಕರ್ ಕುರಿತು ಒಂದು ಕವಿತೆ ಬರೆದಿದ್ದೆ. ಈಗ ಸಿದ್ಧಲಿಂಗಯ್ಯನವರು ಈ ಕವಿತೆಯನ್ನು ಬರೆದು ಐವತ್ತು ವರ್ಷ ಸಂದಿರುವ ಈ ಚಾರಿತ್ರಿಕ ಹೊತ್ತಿನಲ್ಲಿ, ಕವಿತೆ ದಲಿತ ಚಳುವಳಿಯನ್ನು ಪ್ರಭಾವಿಸಿರುವ ರೀತಿ, ಅದರ ಪೊಲಿಟಿಕಲ್ ರೀಡಿಂಗ್ ಅಥವಾ ಪೊಲಿಟಿಕಲ್ ಕರೆಕ್ಷನ್, ಅದು ಓದು ಪಠ್ಯವಾಗಿ ಮತ್ತು ಹಾಡು ಪಠ್ಯವಾಗಿ ನಾಡನ್ನು ತಲುಪಿದ ರೀತಿ ಇವನ್ನೆಲ್ಲಾ ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದೀರಿ. ಕವಿತೆಯಲ್ಲಿನ ‘ಕಪ್ಪುಕ್ಕಿನ ಕೋಳ’ ಮತ್ತು ‘ಬಂಗಾರದ ಕೋಳ’ ರೂಪಕಗಳ ವಿಶ್ಲೇ಼ಷಣೆಯ ಸಂದರ್ಭದಲ್ಲಿ ಇಂತಹ ಪರಸ್ಪರ ಪೂರಕ ಅಥವಾ ವಿರುದ್ಧಾರ್ಥದ ರೂಪಕಗಳನ್ನು ‘ಸಹಚರಿ ಪ್ರತಿಮೆಗಳು/ರೂಪಕಗಳು’ ಅಥವಾ ‘Associative Images’ ಎಂದು ಸೂಚಿಸುವ ಮೂಲಕ ಈ ಪರಿಕಲ್ಪನೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗಿದ್ದೀರಿ. ಇನ್ನು ಕವಿ ಸಿದ್ಧಲಿಂಗಯ್ಯನವರ ಒಡನಾಟದ ಮೆಲುಕುಗಳನ್ನು ಪ್ರಸ್ತಾಪಿಸುವ ಮೂಲಕ ಅವರ ನೆನಪಿನಲ್ಲಿ ನಮ್ಮ ಮನಸ್ಸುಗಳೂ ಆರ್ದ್ರಗೊಳ್ಳುವಂತೆ ಮಾಡಿದ್ದೀರಿ. ಮನದುಂಬಿದ ಧನ್ಯವಾದಗಳು.
\r\n| Sanganagowda
ಕವಿಗಳು, ಲೇಖಕರು ನಿರಂತರವಾಗಿ ಕಾಲ ಕಾಲಕ್ಕೆ ಕಲಿಯುತ್ತಲೇ ಬದಲಾಗುತ್ತಿರುತ್ತಾರೆ. ಗಾಂಧಿ, ಸಿಮೊನ್ ದ ಬೊವಾ ಅಂಥವರೂ ಉದಾಹರಣೆಯಾಗಿದ್ದಾರೆ. ಇದೊಂದು ನಿರಂತರ ನಡಿಗೆ, ಕಾಲದ ಕಾಯುವಿಕೆಯಂತೂ ಅಲ್ಲ. ಆದರೆ ಕನ್ನಡಕ್ಕೆ ಹೊಸ ನುಡಿಗಟ್ಟನ್ನು ಕೊಟ್ಟ ಸಿದ್ಧಲಿಂಗಯ್ಯನವರು ಯಡಿಯೂರಪ್ಪನವರನ್ನು "ಆಧುನಿಕ ಬಸವಣ್ಣ" ಎನ್ನುವಷ್ಟರ ಮಟ್ಟಿಗೆ ಬದಲಾಗಬಾರದಿತ್ತು? ಇಂಥ ಕೆಲವು ವಿಷಯಗಳಲ್ಲಿ ಕಾಲದ ಕಾಯುವಿಕೆ ಆಗುತ್ತದೆ ವಿನಃ ನಿರಂತರ ನಡಿಗೆಯ ಕೊಂಚ ಗ್ಯಾಪ್ ಅನಿಸುತ್ತದೆ. ಏನೇ ಇರಲಿ ನಿಮ್ಮ ಬರೆಹಗಳು ಹೊಸ ನೋಟ ಕೊಡುತ್ತವೆ ಸರ್.
\r\n| Principal
Happy Birthday Dr B R Ambedkar - ಬಹಳ ಅರ್ಥಪೂರ್ಣ ಆಚರಣೆ ಸರ್. ಅದಕ್ಕಾಗಿ ನಿಮಗೆ ಹಾಗೂ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು 💐
\r\n\r\nಸರ್, ಇಂತಹ ಕಾರ್ಯಕ್ರಮಗಳಲ್ಲಿ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳ- ಅದರಲ್ಲಿಯೂ, ಹಕ್ಕಿನ scholorship ಪಡೆಯಲೂ ಮುಂಬರದ ( identity ಮರೆಮಾಚಲು ) ಕೀಳರಿಮೆಯಿಂದ ಹೊರಬರದ- ದಲಿತ ವಿದ್ಯಾರ್ಥಿಗಳನ್ನು involve ಮಾಡಿಕೊಳ್ಳಬೇಕು ಅನ್ಸತ್ತೆ
| ಡಾ. ನಿರಂಜನ ಮೂರ್ತಿ ಬಿ ಎಂ
ಕಲೆ, ಕಾವ್ಯ, ಸಾಹಿತ್ಯ, ಸಂಗೀತ, ಉಡುಗೆ, ತೊಡುಗೆಗಳು ಸೃಷ್ಟಿಯಾದ ಆಯಾ ಸಮಯ, ಸಂದರ್ಭ, ಸನ್ನಿವೇಶ, ಪರಿಸ್ಥಿತಿಗಳ ಪ್ರತಿರೂಪದಂತಿರುತ್ತವೆ. ಸಮಯ, ಸಂದರ್ಭ, ಸನ್ನಿವೇಶ, ಪರಿಸ್ಥಿತಿಗಳು ಬದಲಾದಾಗ ಅವುಗಳ ಪ್ರಾಮುಖ್ಯತೆ, ಜನಪ್ರಿಯತೆ, ಮತ್ತು ಮೌಲ್ಯಗಳು ಕುಸಿಯುತ್ತಾ ಹೋಗಿ, ಕೊನೆಗೊಮ್ಮೆ ಮರೆಯಾಗಿಬಿಡುತ್ತವೆ. ಬದಲಾದ ಸಮಯ, ಸಂದರ್ಭ, ಸನ್ನಿವೇಶ, ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ನವನವೀನ ಕಲಾಕೃತಿಗಳು, ಕವಿತೆಗಳು, ಸಾಹಿತ್ಯಕೃತಿಗಳು, ಸಂಗೀತದ ಮಾದರಿಗಳು, ಮತ್ತು ಭಿನ್ನ ಮಾದರಿಯ ಉಡುಗೆ-ತೊಡುಗೆಗಳು ಅಸ್ತಿತ್ವಕ್ಕೆ ಬರುತ್ತವೆ. ಸ್ವಲ್ಪ ಕಾಲ ಬಾಳಿ ಮರೆಯಾಗುತ್ತವೆ.
\r\n\r\nಈ ಕಾಲವೆಂಬ ಪರೀಕ್ಷೆಯನ್ನು ಗೆದ್ದು, ತನ್ನ ಮೌಲ್ಯ, ಪ್ರಭಾವ, ಮತ್ತು ಪ್ರಾಮುಖ್ಯತೆಗಳನ್ನು ಐದು ದಶಕಗಳ ಕಾಲ ಉಳಿಸಿಕೊಂಡು ಬೆಳೆಯುತ್ತಾ ಬಂದಿರುವ ನಮ್ಮ ಕವಿ ಸಿದ್ಧಲಿಂಗಯ್ಯನವರ 'ಅಂಬೇಡ್ಕರ್' ಕವಿತೆ ಒಂದು ಅದ್ಭುತ ಸೃಷ್ಟಿ! ಶೋಷಿತರ, ದಲಿತರ, ದರಿದ್ರರ ಉದ್ಧಾರಕ್ಕಾಗಿ ಜೀವನಪರ್ಯಂತ ದುಡಿದ ನಮ್ಮ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಒಬ್ಬ ಅದ್ಭುತ ಮಾನವತಾವಾದಿ ಜನನಾಯಕ! ಸ್ವಂತ ಬದುಕಿನಲ್ಲಿ ಏನೆಲ್ಲ ಹೀಗಳಿಕೆ, ಅವಮಾನ, ನೋವುಗಳನ್ನು ಅನುಭವಿಸಿದರೂ, ಒಂದಿಡೀ ಜನಸಮುದಾಯದ ಬದುಕಿನ ಭರವಸೆಯ ಆಶಾಕಿರಣವಾಗಿ ಬದಲಾವಣೆ ತಂದ ಅಂಬೇಡ್ಕರ್ ಅವರಿಗೆ ಹೃದಯಾಂತರಾಳದ ನಮನಗಳು. ಒಂದಿಡೀ ಜನಸಮುದಾಯವನ್ನು ಪ್ರಭಾವಿಸಿದ ಕವಿತೆಯನ್ನು-ಕಾವ್ಯವನ್ನು ಸೃಷ್ಟಿಸಿದ ಕವಿ ಸಿದ್ಧಲಿಂಗಯ್ಯನವರಿಗೂ; ಮತ್ತು ಇವರುಗಳನ್ನು ಸಕಾಲದಲ್ಲಿ ತಮ್ಮೀ ಲೇಖನದ ಮೂಲಕ ಸ್ಮರಿಸಿ, ಓದುಗರೆಲ್ಲರಿಗೆ ನೆನಪಿಸಿದ ಹುಳಿಯಾರರಿಗೂ ಹೃತ್ಪೂರ್ವಕ ನಮನಗಳು.
\r\n| ಮಂಜುನಾಥ್ ಸಿ ನೆಟ್ಕಲ್
ನನ್ನ ಅಧ್ಯಾಪಕ ವೃತ್ತಿ ಜೀವನ ಆರಂಭಗೊಂಡಿದ್ದೇ ಸಿದ್ದಲಿಂಗಯ್ಯ ಅವರ ಅಂಬೇಡ್ಕರ್ ಕವಿತೆ ಮೂಲಕ ಹೇಗೆಂದರೆ, ನಾನೂ ಅಧ್ಯಾಪಕ ವೃತ್ತಿ ಸೇರಬಯಸಿದ ಕಾಲೇಜಿನಲ್ಲಿ ಡೆಮೋ ಕೊಡಲು ಮೂರು ಜನ ಬಂದಿದ್ದರು.ನಾನು ಡೆಮೋ ತರಗತಿಗೆ ಇದೇ ಕವನ ಆರಿಸಿಕೊಂಡು ಕೆಲಸ ಗಿಟ್ಟಿಸಿಕೊಂಡೆ. ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ ನಿಮ್ಮ ಲೇಖನ ಓದಿ ನೆನಪಾಯಿತು. ಇನ್ನೊಂದು ವಿಶೇಷವೆಂದರೆ ಆ ಕಾಲೇಜಿನಲ್ಲಿ ಪಿಯುಸಿಗೆ ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆಸುವುದರಿಂದ ಅಂದಿನ ಕನ್ನಡ ವಿಭಾಗದ ಮುಖ್ಯಸ್ಥರು ಈ ಪದ್ಯವನ್ನು ಪಠ್ಯ ದಿಂದಲೇ ಕೈ ಬಿಟ್ಟಿದ್ದರಂತೆ. ... ಅಂಬೇಡ್ಕರ್ ಅವರನ್ನು ಕುರಿತ ಅವರ ದ್ವೇಷ ಹೀಗೆ ಪ್ರಕಟಗೊಂಡಿತ್ತು....ಆ ನಂತರ ಬೋರ್ಡ್ ಪರೀಕ್ಷೆ ಬಂದು ಆ ಪದ್ಯ ಮತ್ತೆ ಜಾರಿಯಾಯಿತು..
\r\n| Dr.Vijaya
ಚಂದವಾದ ಬರಹ. ಮನಸ್ಸು ನಿನ್ನೆಗಳಲ್ಲಿ ವಿಹರಿಸಿತು
\r\n| Shamarao
ಈ ಕೊನೆಯ ಸಾಲುಗಳನ್ನು ಕವಿಗಳೇ ಸೆನ್ಸಾರ್ ಮಾಡಿದ್ದರು.
\r\nAdd Comment