ಸಾಲು ಮರದ ಸುಂದರ ಹಕ್ಕಿ!

ರಸ್ತೆ ಬದಿ ಸಾಲು ಮರ ನೆಟ್ಟು ಲಕ್ಷಾಂತರ ಹಾದಿಹೋಕರಿಗೆ ನೆರಳಾದ ಸಾಲುಮರದ ತಿಮ್ಮಕ್ಕನವರು (೩೦ ಜೂನ್ ೧೯೧೧-೧೪ ನವಂಬರ್೨೦೨೫) ಅತ್ಯಂತ ಅರ್ಥಪೂರ್ಣವಾದ ತುಂಬು ಬಾಳನ್ನು ಬದುಕಿ ನಿರ್ಗಮಿಸಿದರು. ಈ ಸುದ್ದಿ ಓದಿದ ದಿನ ಲಂಕೇಶರ ಅನನ್ಯ ಕತೆ ‘ವೃಕ್ಷದ ವೃತ್ತಿ’ ಮತ್ತೆ ನೆನಪಾಯಿತು. ಲಂಕೇಶರು ಈ ಕತೆ ಬರೆದ ಕಾಲದಿಂದಲೂ ಈ ಕತೆಗೆ ಸಾಲು ಮರದ ತಿಮ್ಮಕ್ಕನವರೇ ಪ್ರೇರಣೆಯಿರಬಹುದು ಎಂದು ನನಗನ್ನಿಸುತ್ತಲೇ ಇರುತ್ತದೆ. ಗೊತ್ತಿಲ್ಲ, ಲಂಕೇಶರ ಕತೆ ಬಂದಿದ್ದು ೧೯೮೯ರಲ್ಲಿ. ಅದೇನೇ ಇರಲಿ, ಈ ಕತೆಯ ಜೊತೆಗೇ ಕವಿ ಮಿತ್ರ ಎನ್.ಕೆ. ಹನುಮಂತಯ್ಯ ಬರೆದ ಸಾಲುಮರದ ತಿಮ್ಮಕ್ಕನವರನ್ನು ಕುರಿತ ಹಾಡೂ  ಸುಳಿಯಿತು. ಗೆಳೆಯ ನಾಗತಿಹಳ್ಳಿ ರಮೇಶ್ ನಿರ್ಮಿಸಲು ಹೊರಟಿದ್ದ ‘ನಕ್ಕೀರಾ ಜೋಕೆ’ ಸಿನಿಮಾಕ್ಕೆ ಎನ್. ಕೆ. ಹನುಮಂತಯ್ಯ ಬರೆದ ಹಾಡಿನ ಮೊದಲ ಪಂಕ್ತಿ ನವಕತೆಗಾರ ರವಿಕುಮಾರ ನೀಹಾ ಬಾಯಲ್ಲೇ ಇತ್ತು:

ನಾಡಿಗೆ ಸಿರಿದೇವಿಯಾದ ಬಡವಿ
ಸಾಲು ಮರದ ತಿಮ್ಮಕ್ಕ 
ಗಿಡ ಮರ ನೆಟ್ಟು ಸಲಹಿದ ತಾಯಿ 
ಸಾಲು ಮರದ ತಿಮ್ಮಕ್ಕ 

ಮುಂದೆ ‘ಚಿತ್ರದ ಬೆನ್ನು’ ಕವನ ಸಂಕಲನ ಪ್ರಕಟಿಸುವ ಹೊತ್ತಿಗೆ ಈ ಹಾಡನ್ನು ಅಲ್ಲಲ್ಲಿ ಬದಲಿಸಿ, ಪದ್ಯವಾಗಿಸಿದ ಎನ್.ಕೆ.ಹನುಮಂತಯ್ಯನವರನ್ನು ತಿಮ್ಮಕ್ಕನವರ ಅಸ್ಪಶ್ಯತೆಯ  ನೋವು, ಸಂಕಟ ಕಾಡಿದ್ದು ಸಹಜವಾಗಿತ್ತು:  

ನೋವಿನ ಸುಡುಗಾಡಲ್ಲಿ 
ಹಸಿರು ಹಡೆದ ತಿಮ್ಮಕ್ಕ 
ಹೊಲಸೆಂದು ನೂಕಿದ ಮಡಿಲಿನ ಒಳಗೆ 
ಪಕ್ಷಿ ತೂಗಿದ ತಿಮ್ಮಕ್ಕ

ಬೆಂಕಿಯ ಒಳಗೆ ನೀರ ಬೇರನು ಇಳಿಸಿ 
ಆಗಸದಗಲ ಎಲೆಯನ್ನು ಅರಳಿಸಿ 
ಕರ‍್ರನೆ ನೆರಳಾದವಳೇ 
ಮುಟ್ಟದ ಮತ್ಸರಕೆ ನಿನ್ನ
ಮುಗುಳುನಗು ಸಾಕು

ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಣಿಗಲ್ ಬಳಿಯ ಕುದೂರಿನ ತಿಮ್ಮಕ್ಕ ಹಾಗೂ ಬಿಕ್ಕಲುಚಿಕ್ಕಯ್ಯ ಎಂಬ ಬಡ ದಂಪತಿಗಳಿಗೆ ಮಕ್ಕಳಿಲ್ಲದ ಕೊರಗು ಕಾಡಿತು. ಆಗ ಅವರು ಸಾಲು ಮರಗಳನ್ನು ನೆಡಲು ತೀರ್ಮಾನ ಮಾಡಿದರು. ಈ ಕುರಿತು ಮೊದಲ ಬಾರಿಗೆ ಅಧ್ಯಾಪಕ ಎಂ.ವಿ. ನೆಗಳೂರು ಮೂವತ್ತು ವರ್ಷಗಳ ಕೆಳಗೆ ಪ್ರಜಾವಾಣಿಯಲ್ಲಿ ಬರೆದ ಲೇಖನದ ಭಾಗ: 

‘ಮಕ್ಕಳಿಲ್ಲದ ಕೊರಗು ಪರಿಹರಿಸಿಕೊಳ್ಳಲು ಮರ ನೆಟ್ಟು ಮಕ್ಕಳಂತೆ ಪೋಷಿಸಲು ಇಬ್ಬರೂ ತೀರ್ಮಾನಿಸಿದರು. ಕುದೂರಿನಿಂದ ಹುಲಿಕಲ್‌ಗೆ ಹೋಗುವ ಸಾಲುಮರಗಳಿಲ್ಲದ ಬರಡು ರಸ್ತೆಯನ್ನು ತಮ್ಮ ಕಾಯಕಕ್ಕೆ ಆರಿಸಿಕೊಂಡರು. ಈ ದಂಪತಿಗಳ ಮುಗ್ಧ ತೀರ್ಮಾನ, ಅದಕ್ಕಾಗಿ ನಿಸ್ವಾರ್ಥವಾಗಿ ಹರಿಸಿದ ಬೆವರು, ಈಗ ಈ ರಸ್ತೆಯುದ್ದಕ್ಕೂ ನೂರಾರು ಹೆಮ್ಮರಗಳ ರೂಪದಲ್ಲಿ ನಳನಳಿಸುತ್ತಿವೆ. ಇದಕ್ಕಾಗಿ ಇವರಿಬ್ಬರೂ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸುತ್ತಮುತ್ತಲ ಪ್ರದೇಶಗಳನ್ನು ತಿರುಗಿ ನೆಡಲು ಯೋಗ್ಯವಾದ ಆಲದ ಮರದ ಕಡ್ಡಿಗಳನ್ನು ತಂದು ರಸ್ತೆಯ ಎರಡೂ ಬದಿ ಸಮಾನಾಂತರದಲ್ಲಿ ಗುಣಿ ತೋಡಿ ನೆಟ್ಟು ಅವುಗಳನ್ನು ದನಕರುಗಳು ತಿಂದುಹಾಕದಂತೆ ಬೇಲಿ ಕಟ್ಟಿದರು. ನಿತ್ಯವೂ ಚಿಕ್ಕಯ್ಯ ಅಡ್ಡೆಯಿಂದ, ತಿಮ್ಮಕ್ಕ ತಲೆ ಮೇಲೆ, ಸೊಂಟದ ಮೇಲೆ ಬಿಂದಿಗೆಯಲ್ಲಿ ಬಹುದೂರದಿಂದ ನೀರು ಹೊತ್ತು ತಂದು ಮರಗಳಿಗೆ ಉಣಿಸಿ ಬೆಳೆಸಿ ಪೋಷಿಸಿದರು. ಕಣ್ಗಾವಲಾಗಿ ರಕ್ಷಿಸಿದರು. ವಿಶಾಲವಾಗಿ ಬೇರು ಬಿಡಲು ಸಹಾಯಕವಾಗುವಂತೆ ಮಳೆಗಾಲದಲ್ಲಿ ಗಿಡಗಳ ಬುಡಗಳನ್ನು ಕೆದಕಿದರು. ಎದೆಯಲ್ಲಿ ಮಡುಗಟ್ಟಿದ ಪ್ರೀತಿಯನ್ನೆಲ್ಲಾ ಎಳೆಯ ಸಸಿಗಳಿಗೆ ಧಾರೆಧಾರೆಯಾಗಿ ಎರೆದರು. 

ಹೊಟ್ಟೆಪಾಡಿಗಾಗಿ ಕಲ್ಲು ಒಡೆಯಲು ಹೋಗುವ ಮೊದಲು ಅವರು ಇಷ್ಟೆಲ್ಲಾ ಮಾಡಿ ಕೆಲಸಕ್ಕೆ ಹೊರಡುತ್ತಿದ್ದರು. ಅವರಿಬ್ಬರೂ ಬಂಡೆಯ ಮೇಲೆ ಕಲ್ಲು ಒಡೆಯದಿದ್ದರೆ ಹೊಟ್ಟೆಗೆ ಸಂಚಕಾರ. ಹೀಗಾಗಿ ಹೊತ್ತು ಮೂಡುವ ಮೊದಲೇ ಅವರ ಮರಗಳ ಸೇವೆ ಆರಂಭ. ಸತತ ಆರು ವರ್ಷ ನೀರು ಹೊತ್ತು, ಮರಗಳ ಆರೈಕೆ ಮಾಡಿದರು. ಬಿಡುವಿಲ್ಲದ, ಸುಡುಬಿಸಿಲನ್ನು ಲೆಕ್ಕಿಸದ ಕಾಯಕ ಅವರದಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಿನಿಂದ ಹುಲಿಕಲ್‌ಗೆ ಹೋಗುವ ಮೂರು ಕಿಲೋಮೀಟರ್ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ೨೮೪ ಸಾಲುಮರಗಳು ತಿಮ್ಮಕ್ಕ ತನ್ನ ಪತಿಯೊಡನೆ ಅಕ್ಕರೆಯಿಂದ ಸಾಕಿ ಸಲಹಿದ ಮಕ್ಕಳು.’ 

೧೯೯೪ರ ಹೊತ್ತಿಗಾಗಲೇ ಚಿಕ್ಕಯ್ಯ ತೀರಿಕೊಂಡಿದ್ದರು. ತಿಮ್ಮಕ್ಕನ ಮರಗಳ ಕಾಯಕ ಮುಂದುವರೆಯಿತು. ನಾವೆಲ್ಲ ನೋಡನೋಡುತ್ತಿರುವಂತೆಯೇ ತಿಮ್ಮಕ್ಕ ಬದುಕಿದ್ದಾಗಲೇ ದಂತಕತೆಯಾದರು. ಅವರಿಗೆ ಬಂದ ಪ್ರಶಸ್ತಿ, ಬಿರುದುಗಳನ್ನು ಇಡಲು ಅವರ ಪುಟ್ಟ ಮನೆಯಲ್ಲಿ ಜಾಗವೇ ಇರಲಿಲ್ಲ. ಹತ್ತು ವರ್ಷಗಳ ಕೆಳಗೆ ಗೆಳೆಯ ಡಾ. ಎಂ.ಬಿ. ರಾಮಮೂರ್ತಿ ಸಾಲು ಮರದ ತಿಮ್ಕಕ್ಕನವರನ್ನು ಕುರಿತ ಪುಸ್ತಕ ಸಂಪಾದಿಸುವ ಕಾಲಕ್ಕೆ ಅವರ ಮನೆಗೆ ಹೋದಾಗ ಆ ಬಿರುದು, ಫಲಕಗಳನ್ನು ಅಟ್ಟದ ಮೇಲೆ ಒಟ್ಟಿದ್ದನ್ನು ಕೂಡ ಕಂಡರು. 

ಸಾಲುಮರದ ಹಕ್ಕಿಯಂತಿದ್ದ ತಿಮ್ಮಕ್ಕನವರು ಬರಬರುತ್ತಾ ಹನುಮಂತಯ್ಯ, ಕಗ್ಗರೆ ಪ್ರಕಾಶರ ಎದೆಯಲ್ಲಿ ಹಾಡಾದರು; ಶ್ರೀಧರ ಬನವಾಸಿಯವರ ನಾಟಕವಾದರು. ಹೋರಾಟಗಾರ ರವಿಕೃಷ್ಣಾರೆಡ್ಡಿಯವರ ಆರಂಭದ ಪ್ರೇರಣೆಯಾದರು. ಸಾವಿರಾರು ಪರಿಸರ ಪ್ರೇಮಿಗಳಿಗೆ ಸ್ಫೂರ್ತಿಯಾದರು. ಧಾರವಾಡದ ಕವಯಿತ್ರಿ ಮಾಲತಿಯವರು ಬರೆದ ‘ತಿಮ್ಮಕ್ಕನ ಕನಸು’ ಪದ್ಯ:

ರಾಜ ಗದ್ದುಗೆಯು ಬೇಡ
ಬೇಡ ಸದ್ದು ಗದ್ದಲ
ಕಲಿತವರ ವಾದ ಬೇಡ
ಕೂತವರ ಹಾದಿ ಬೇಡ
ಇರಲಿ ನನ್ನ ಪುಟ್ಟಹಳ್ಳಿ
ಅಟ್ಟುಣ್ಣುವ ಬದುಕೆ ಇರಲಿ,
ಇರಲಿ ಒಂಟಿ ಕಣ್ಣಿನಲ್ಲು
ಮರದ ಕನಸು ತೂಗುತಿರಲಿ;
ಬಡತನವೆಂದೂ ಕಾಡಲಿಲ್ಲ
ನೆಲ ಬರಡು ಕಾಡಿದಂತೆ,
ಮಕ್ಕಳಿಲ್ಲ ದುಕ್ಕವಿಲ್ಲ; ನನ್ನ
ಕನಸಿಗೆ ಸುಕ್ಕುಗಳೇ ಇಲ್ಲ;
ಬಿಸಿಲನುಂಡ ಭೂದೇವಿಗೆ
ಹಸಿರುಗುಡಿಯ ಕಟ್ಟಲೆಂದು
ಕಲ್ಲು ಮಣ್ಣು ಒಟ್ಟಲಿಲ್ಲ
ಸಸಿಯ ನೆಟ್ಟು ಹಾಡಿದೆ;
ಒಂಟಿ ಜೀವ ಸೊಂಟ ಕಟ್ಟಿ
ಕಣ್ಣ ರೆಪ್ಪೆ ಮರೆಯ ಮಾಡಿ,
ಹರೆಯದ ಹಾಲನ್ನೇ ಊಡಿ
ಲಲ್ಲೆಗರೆದು ಬೆಳೆಸಿದೆ;
ಇರಲಿ ನಾನು ಇಲ್ಲದಿರಲಿ
ಮರಗಳಲ್ಲ ಮಕ್ಕಳಿವರ
ಬಳಗ ಹಬ್ಬುತಿರಲಿ, ನನ್ನ
ಕನಸು ಭುವಿಯ ತಬ್ಬುತಿರಲಿ

ಮಾಲತಿಯವರ ಈ ಸಹಜ ಹರಿವಿನ ಒಡಲ ಕವಿತೆ ಓದಿ, ಕವಿ ಚಂದ್ರಶೇಖರ ಪಾಟೀಲ ರೋಮಾಂಚನಗೊಂಡು ಮೈದುಂಬಿ ಬರೆದರು:  

‘ಸಾಲುಮರದ ತಿಮ್ಮಕ್ಕನ ಕತೆ ಯಾರಿಗೆ ಗೊತ್ತಿಲ್ಲ? ಶತಮಾನಗಳು ಗತಿಸಿದ ಮೇಲೆ ಕೂಡ ಮಾನವಕುಲದ ನೆನಪಿನಲ್ಲಿ ಉಳಿಯುವ ಜೀವ ಅದು; ಮತ್ತೆ ಮತ್ತೆ ಕತೆಯಾಗಿ, ಕಾವ್ಯವಾಗಿ, ಪುರಾಣವಾಗಿ ಮರುಕಳಿಸುವ ಬದುಕು ಸಾಗಿಸಿದ ತಿಮ್ಮಕ್ಕ ನಮ್ಮ ಕಣ್ಣೆದುರೇ ಇತಿಹಾಸ ನಿರ್ಮಿಸಿದವಳು. ರಾಜ ಗದ್ದುಗೆ ಬೇಡ, ಸುದ್ದಿ ಗದ್ದಲ ಬೇಡ ಎಂದರೂ ಈ ತಿಮ್ಮಕ್ಕ ಸುದ್ದಿ ಮಾಡಿದ್ದಾಳೆ; ಪದವಿ-ಪುರಸ್ಕಾರ ಪಡೆದಿದ್ದಾಳೆ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಳ ಸಾಧನೆ ದಾಖಲೆಯಾಗಿದೆ. ಎಲ್ಲ ಬಗೆಯ ದಾಖಲೆಗಳನ್ನು ನಿವಾಳಿಸಿ ಒಗೆಯುವಂತೆ ಅವಳು ನೆಟ್ಟು ಬೆಳೆಸಿದ ಸಾಲುಮರಗಳು ಇಂದಿಗೂ ನೆಲಮುಗಿಲುಗಳನ್ನು ಬೆಸೆಯುವ ಹಸಿರುಗುಡಿಯಾಗಿವೆ... ಏನು ಬೇಕು? ಏನು ಇರಲಿ? ಈ ವಾಸ್ತವಗಳು ಅವಳನ್ನು ಕಾಡಲಿಲ್ಲ, ಕಂಗೆಡಿಸಲಿಲ್ಲ. 
ತಿಮ್ಮಕ್ಕನನ್ನು ‘ಭೂದೇವಿ’ಯನ್ನಾಗಿ ಮಾಡಿಬಿಡುವ ಪವಾಡವೂ ಈ ಕವಿತೆಯಲ್ಲಿದೆ. ಈ ಭೂದೇವಿಯೂ ‘ಬಿಸಿಲನುಂಡ’ವಳು; ‘ಬರಡು’ತನವೇ ಅವಳ ಬಡತನ. ತಿಮ್ಮಕ್ಕನಿಗೆ ಮಕ್ಕಳಿಲ್ಲ; ಭೂದೇವಿಗೆ ಮರಗಳಿಲ್ಲ. ಆದರೆ ಈ ‘ದುಕ್ಕ’ ಅವರನ್ನು ಕಾಡದು; ಏಕೆಂದರೆ ಅವರ ಕನಸುಗಳಿಗೆ ‘ಸುಕ್ಕು’ಗಳೇ ಇಲ್ಲ. ಸುಕ್ಕು ಮುಪ್ಪಿನ ಗುರುತು; ಸಾವಿನ ಮುನ್ನುಡಿ. ಇಬ್ಬರಿಗೂ ‘ಹರೆಯದ ಹಾಲು’ ಮೈತುಂಬಿರುವುದರಿಂದ ಮಕ್ಕಳ ಬಳಗ ಹಬ್ಬಿಸುವ ತಾಕತ್ತಿದೆ. ತಿಮ್ಮಕ್ಕನ ಬದುಕಿನ ವಿಚಿತ್ರವೆಂದರೆ, ಮನುಷ್ಯಜೀವಿಯಾಗಿ ಅವಳಿಗೆ ಮಕ್ಕಳಾಗುವುದೇ ಇಲ್ಲ. ತಾನು ತಾಯಿಯಾಗದೆ, ‘ಮರಗಳಲ್ಲ ಮಕ್ಕಳಿವರು’ ಎಂದುಕೊಂಡು ಮರಗಳನ್ನೇ ಬೆಳೆಸಿ ಭೂದೇವಿಯ ಮಡಿಲು ತುಂಬಿ ಅವಳಿಗೆ ಹಸಿರು ಗುಡಿಯ ಕಟ್ಟಿ, ಅವಳನ್ನೇ ‘ತಾಯಿ’ಯನ್ನಾಗಿ ಮಾಡುತ್ತಾಳೆ! 
ಸಸಿ ನೆಟ್ಟ ಮೇಲೆ ಅದಕ್ಕೆ ಬೇಕು ನೀರು, ಬೆಳಕು, ಗೊಬ್ಬರ; ಮತ್ತೆ ಬೇಲಿಯೂ ಬೇಕು. ತಾನು ನೆಟ್ಟ ಸಾಲು ಸಾಲು ಸಸಿಗಳಿಗೆ ಪ್ರತಿನಿತ್ಯ ನೀರೆರೆದು, ರಕ್ಷಿಸಿ, ಸಂರಕ್ಷಿಸಿ ಅವುಗಳನ್ನು ‘ಮರ’ಗಳನ್ನಾಗಿ ಮಾಡಿದ ತಾಯಿ ಸಾಲುಮರದ ತಿಮ್ಮಕ್ಕ. ಕಲ್ಲು-ಮಣ್ಣುಗಳ ‘ಸ್ಥಾವರ’ ಎಂದೋ ಬಿದ್ದು ಹೋಗುವಂಥದು; ಆದರೆ ಮರವಾಗಿ ಬೆಳೆಯುವ ಸಸಿ ಮತ್ತೆ ಸಾವಿರ ಸಸಿಗಳಾಗಿ, ‘ಜಂಗಮ’ವಾಗಿ ಸದಾ ಹಬ್ಬುತ್ತಲೇ ಇರುವಂಥದು. ತಿಮ್ಮಕ್ಕನಂಥವರದು ಆದಿ ಇದ್ದರೂ ಅಂತ್ಯವಿಲ್ಲದ ಹಾದಿ. ಆ ಹಾದಿಗೆ ಮರಣವಿಲ್ಲ; ಮುಪ್ಪೂ ಇಲ್ಲ.’ 

ಒಂದು ಸಾರ್ಥಕ ವೃಕ್ಷದ ವೃತ್ತಿಯ ಬದುಕು ಒಂದು ಅರ್ಥಪೂರ್ಣ ಪದ್ಯ ಬರೆಸಿ, ಆ ಪದ್ಯ ಒಂದು ಮೈದುಂಬಿದ ಸ್ಪಂದನ ಬರೆಸಿದೆ!  ‘ಕವಿತೆಯ ವಸ್ತು-ಕವಿತೆ-ಸ್ಪಂದನಗಳ’ ಈ ಸುಂದರ ಸಮಾಗಮ ಕೂಡ ಮನತಟ್ಟುವಂತಿದೆ. ಮೂವರು ಸೂಕ್ಷ್ಮಜೀವಿಗಳ ಸಾರ್ಥಕತೆಯ ಹಾದಿಗಳು ಆದಿ-ಅಂತ್ಯಗಳಲ್ಲಿ ಕೂಡಿಕೊಂಡಂತಿವೆ

ತಿಮ್ಮಕ್ಕನ ನಿಸ್ವಾರ್ಥದ ಮತ್ತೊಂದು ಮುಖವನ್ನು ಪ್ರಮೀಳಾ ಪಾಲನೇತ್ರ ತಮ್ಮ ‘ಅನನ್ಯ ಚೇತನ ಸಾಲು ಮರದ ತಿಮ್ಮಕ್ಕ’ ಪುಸ್ತಕದಲ್ಲಿ ಕಾಣಿಸುತ್ತಾರೆ: ‘ಸಸ್ಯವಿಜ್ಞಾನಿಯೊಬ್ಬರ ವರದಿಯಂತೆ ತಿಮ್ಮಕ್ಕ ಬೆಳೆದಿರುವ ಮರವೊಂದರ ಜೀವಿತದ ಬೆಲೆ ೧ ಕೋಟಿ ೭೫ ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಒಟ್ಟು ಎಲ್ಲ ಮರಗಳ ಬೆಲೆ ೪೯೭ ಕೋಟಿ ರೂಪಾಯಿ. ಇವುಗಳ ಮಹಾ ಒಡತಿಯಾಗಿದ್ದರೂ ಅದರಲ್ಲಿ ಬಿಡಿಗಾಸನ್ನೂ ಪಡೆಯದೆ ಅದನ್ನು ರಾಷ್ಟ್ರಕ್ಕೆ ಅರ್ಪಿಸಿರುವ ಮಹಾತ್ಯಾಗಜೀವಿ ತಿಮ್ಮಕ್ಕ.’ 

ಬಾಲ್ಯದ ತಬ್ಬಲಿತನ, ಅಸ್ಪೃಶ್ಯತೆಯ ಅವಮಾನ, ಸಂಬಂಧಿಕರ ಹಿಂಸೆ ಎಲ್ಲವನ್ನೂ ನುಂಗಿ, ಬಂಗ ಬಡತನಕ್ಕೆ ಅಂಜದೆ ಮರವಾಗಿ ಅರಳಿದ ಕನ್ನಡನಾಡಿನ ಈ ಅದ್ಭುತ ಮಹಿಳೆಯ ಬಗ್ಗೆ ಓದುತ್ತಾ ಓದುತ್ತಾ, ಇಂಗ್ಲಿಷ್ ಕವಿ ಜೇಮ್ಸ್ ಶೆರ್ಲಿಯ ‘ಡೆತ್ ದ ಲೆವೆಲರ್‍’ ಎಂಬ ಪ್ರಖ್ಯಾತ ಪದ್ಯದ ಕೊನೆಯ ಸಾಲುಗಳು ನೆನಪಾದವು:

…only the actions of the just 
smell sweet and blossom in their dust.  

ನನಗೆ ಪ್ರಿಯರಾದವರು ತೀರಿಕೊಂಡು ಎಷ್ಟೋ ವರ್ಷಗಳಾದ ಮೇಲೂ ಅವರ ವ್ಯಕಿತ್ವದ ಸುಗಂಧ ಸುಳಿದಾಗಲೆಲ್ಲ ಶೆರ್ಲಿಯ ಕವಿತೆಯ ಸಾಲು ಸುಳಿಯುತ್ತಲೇ ಇರುತ್ತದೆ. ಸಾಲುಮರದ ತಿಮ್ಮಕ್ಕನವರ ಮರಗಳ ನೆರಳು ಮತ್ತು ವೃಕ್ಷದ ಕಾಯಕ ಇಂಥ ಸುಗಂಧವನ್ನು ನನ್ನಂಥ ಸಾವಿರಾರು ಜನರಲ್ಲಿ ಹಬ್ಬಿಸುತ್ತಲೇ ಇರುತ್ತದೆ. ತಂತಮ್ಮ ಪುಟ್ಟ ಜಮೀನುಗಳಲ್ಲಿ ಸಸಿ ನೆಟ್ಟು, ಬೆಳೆ ಬೆಳೆದು ಕೊಯ್ಲು ಮಾಡಿ ಬದುಕಿನ ಅರ್ಥ, ಸಾರ್ಥಕತೆ ಪಡೆಯುವ ಕೋಟ್ಯಾಂತರ ಮಂದಿಯೂ ನಮ್ಮ ಸುತ್ತ ಇದ್ದಾರೆ. ತಂತಮ್ಮ ಕೆಲಸಗಳಲ್ಲಿ ಮುಳುಗುವ ಈ ಕಾಯಕ ನಮ್ಮನಮ್ಮ ಸೀಮಿತ ಬದುಕುಗಳಲ್ಲೇ ಹೀಗೆ ತೊಡಗುವ ಕಲೆಯನ್ನು ಕಲಿಯಲು ನಮ್ಮನ್ನು ಪ್ರೇರೇಪಿಸುತ್ತಲೇ ಇರುತ್ತದೆ.  


 

Share on:

Comments

14 Comments



| Vasantha

ಸಾರ್ಥಕ ಬದುಕಿಗೆ ಅಕ್ಷರ ನಮನ


| Subramanyaswamy Swamy

ಸಾಲು ಮರದ ತಿಮ್ಮಕ್ಕ ನವರು ಅಮರವಾದ ಮರವಾಗಿ ನಮ್ಮನ್ನ , ಸಮಾಜವನ್ನ ಎಚ್ಚರಿಕೆಯಿಂದ ಸಾಗಬೇಕಾದ ಕಾಯಕ ದಾರಿ ತೋರಿ ಹೋಗಿದ್ದಾರೆ.


| ಮಂಜುನಾಥ್ ಸಿ ನೆಟ್ಕಲ್

ನಿಸ್ವಾರ್ಥ ಮಹಿಳೆಯ ಅರ್ಥಪೂರ್ಣ ಜೀವನಗಾಥೆ ನಮ್ಮೆಲ್ಲರಿಗೂ ಸ್ಫೂರ್ತಿ ನೀಡಲಿ ನಿಜವಾದ ಅರ್ಥದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಈ ಬರಹ ಧನ್ಯವಾದಗಳು ಸರ್


| ಅನಂತಸಖಿ

' ಒಡಲ ನೋವ ಮರೆಯಲು ಹುಟ್ಟಿದ ದಿಟ್ಟ ಕನಸು, ಹೊಸಹುಟ್ಟು ಹೇಗಾದರೂ ಸರಿಯೇ..! ಇದು ಹಸಿರಿನ ಅಳಿಯದ ಪಯಣ'


| ಅನಂತಸಖಿ

' ಒಡಲ ನೋವ ಮರೆಯಲು ಹುಟ್ಟಿದ ದಿಟ್ಟ ಕನಸು, ಹೊಸಹುಟ್ಟು ಹೇಗಾದರೂ ಸರಿಯೇ..! ಇದು ಹಸಿರಿನ ಅಳಿಯದ ಪಯಣ'


| ಚರಣ್

ಹಸಿರು ಸೀರೆ ತೊಟ್ಟ ತಿಮ್ಮಕ್ಕ ಆಕಾಶ ನೋಡಿ ಅದನ್ನು ಆಶಿರ್ವದಿಸುತ್ತಾ ನಡೆದು ಬರುತ್ತಿರುವ ಚಿತ್ರ ನೋಡಿದಾಗ "ಹೆಸರನು ಬಯಸದೆ, ಅತಿಸುಖ ಗಳಿಸದೆ, ದುಡಿವನು ಗೌರವಕಾಶಿಸದೆ" ಎಂಬ ತತ್ವದಂತೆ ತಮ್ಮ ಮಿತಿಯಲ್ಲಿ ಲೋಕಸೇವೆ ಮಾಡುವ ಅಸಂಖ್ಯಾತ ಮುಗ್ಧ ತ್ಯಾಗಜೀವಿಗಳು ಕಣ್ಮುಂದೆ ಹಾದುಹೋಗುತ್ತಾರೆ. ಸಮಾಜ ಕೊಟ್ಟ ಗೊಬ್ಬರದಿಂದ ಹೂವಾಗಿ ಅರಳಿದ ತಿಮ್ಮಕ್ಕ ಬಾಳಿನಬೇಗೆಯಲ್ಲಿ ಬೇಯುತ್ತಿರುವ ಅಸಂಖ್ಯಾತ ಜನರಿಗೆ ಪ್ರೇರಣೆಯಾಗಬಲ್ಲಳು.


| Aiyasha

ಮಣ್ಣಿನ ಜೊತೆ ಮಾತಾಡಿದಳು ಹಸಿರು ಕನಸು ಬಿತ್ತಿದಳು; ಮರುಭೂಮಿಯ ಮಿಡಿತದಲ್ಲಿ ಮರಗಳೆಂದೇ ಮಗು ಕಂಡಳು. ಬಿಸಿಲಿನಲಿ ಬೆವರು ಸುರಿದು ನೆರಳಿನ ಬೀಜ ಬೆಳೆಸಿದಳು; ತಾಯಿ ಹೃದಯ ತೋರ್ಪಡಿಸಿದ ವೃಕ್ಷಗಳೊಂದಿಗೆ ಬದುಕಿದಳು. ನೀರಿಲ್ಲದ ನೆಲದೊಳಗೆ ನೀರಿನಂತೆ ಹರಿದಳು; ತಲೆಮಾರಿಗೆ ಪಾಠ ಬರೆದಳು — “ಮರವೆ ಬದುಕಿನ ಉಸಿರು” ಎಂದಳು. ಸಾಲುಮರದ ತಿಮ್ಮಕ್ಕ ಇಂದು ಸಸಿಗಳೇ ಅವಳ ಸ್ಮಾರಕ.


| ಡಾ. ಶಿವಲಿಂಗೇಗೌಡ ಡಿ.

ಬರಡು ನೆಲದೆದೆಯಲ್ಲಿ ಹಾಲುಕ್ಕಿಸಿ ತಾಯ್ತತನದ ಸಂಭ್ರಮವನು ಭೂತಾಯಿಗಿತ್ತ ತಿಮ್ನಕ್ಕ ಜಗದ ತಾಯಾದವರು. ಹಸಿರಲ್ಲಿ ಸದಾ ಹಸಿರಾಗೆ ಇರುವವರು. ತಿಮ್ಮಕ್ಕನವರ ವ್ಯಕ್ತಿತ್ವವನ್ನು ಅವರ ಬಗೆಗೆಗಿನ ಕವಿತೆ, ನಾಟಕ , ಪುಸ್ತಕಗಳ ಮೂಲಕ ಅರ್ಥಪೂರ್ಣವಾಗಿ ಕಟ್ಟುಕೊಟ್ಟಿದ್ದೀರಿ ಸರ್. ಧನ್ಯವಾದಗಳು


| Dr.Bhumika

Loved the tribute


| Suvarna T S

ವಿವಿಧ ಅಭಿವ್ಯಕ್ತಿಗಳ, ನೆರೆಟಿವ್‌ಗಳ ಸಂವಹನದ ಉಪಕರಣಗಳು-ರೀತಿಗಳು ಸವೆದು ಶಿಥಿಲವಾಗಿ ಹಿಂಸೆಯಾಗುವಾಗ ತಿಮ್ಮಕ್ಕನವರ ಸದ್ದಿಲ್ಲದ ದೃಢ ಮುಗ್ಧ ಹೆಜ್ಜೆಗಳು ಎಲ್ಲ ವರ್ಗಗಳಿಗೂ, ಜಾತಿಗಳಿಗೂ ಅನನ್ಯ ಹಿತ ಪರ್ಯಾಯವಾಗಿವೆ. ಎಷ್ಟು ಸುಲಭವಾಗಿ ಅರ್ಥಪೂರ್ಣವಾಗಿ ಜೀವನ ನಡೆಸಬಹುದೆಂಬುದಕ್ಕೆ ಅವರು ಮಾದರಿ. ಪದಗಳ, ಭಾವಗಳ ಅಷ್ಟಾವಕ್ರತೆ, ವಿಕಾರ ಸ್ಥೂಲತೆಗಳಿಂದ ಧರ್ಮದ ತೇರುಗಳು ಎಲ್ಲ ದಿಕ್ಕುಗಳಿಗೂ ಚೂರಾಗಿ ಚೆಲ್ಲಾಡುವಂತಹ ಹೊತ್ತಿನಲ್ಲಿ ವೈಭವ ಸಂಕೀರ್ಣತೆಯಿಂದ ಮುಕ್ತವಾದ ಎಂಥ ಸೊಗಸಿನ ಹಾದಿ ಅವರದು. ಹತ್ತಾರು ವರ್ಷದ ಹತ್ತಾರು ಕಾಯಿಲೆಗಳಿಗೆ ಒಂದು ಹೊತ್ತಿನ ಉಪವಾಸಗಳು ತರುವ ನೆಮ್ಮದಿಯಂತೆ.


| ಗುರು ಜಗಳೂರು

ಸರ್, ಕಟ್ಟಡದ ಬೆಲೆ ತಿಳಿದಿರುವ ನಮಗೆ ಮರಗಳ ಬೆಲೆ ತಿಳಿದಿಲ್ಲ.ಇನ್ನು ತಿಮ್ಮಕ್ಕನವರು ಅರ್ಥವಾಗುವುದು ಕಷ್ಡ.ಕೋಟಿಗಟ್ಟಲೆ ಆಸ್ತಿಯ ಬಗ್ಗೆ ಮಾತನಾಡುತ್ತೇವೆ.ನಾವು ಉದ್ದಾರವಾಗಿದ್ದೇವೆ ಎಂದು ತಿಳಿದಿದ್ದೇವೆ.ಆದರೆ ನಾವುಗಳು ನಾಶದ ಅಂಚಿನಲ್ಲಿ ಬಂದು ನಿಂತಿದ್ದೇವೆ.ನಾವು ನಮ್ಮ ಈಗಿನ ಯೋಚನೆಗಳಿಂದ ಬಿಡುಗಡೆ ಹೊಂದದಿದ್ದರೆ ಖಂಡಿತ ಉದ್ದಾರವಾಗುವುದಿಲ್ಲ.


| Manjunath CL

ಸ್ವಂತ ಸಂತಾನ ಸ್ವಾರ್ಥಕ್ಕೆಳದೀತೆಂದು ತಾಯಿಯಾದರು ಅವರು ನಿಸರ್ಗ ವಂಶಕ್ಕೆ. ಹಸಿರ ದಾಯಿಯಾದರು ಒಣಗಿ ಕಾದ ಜನಪದಕ್ಕೆ.


| Dr. Devindrappa

ಸಾಲು ಮರದ ತಿಮ್ಮಕ್ಕ ಇತ್ತೀಚೆಗೆ ನಿಧನರಾಗಿದ್ದು ವೃಕ್ಷ ಕುಲಕ್ಕೆ ಮತ್ತು ಮನುಷ್ಯ ಬದುಕಿಗೆ ತುಂಬಲಾರದ ನಷ್ಟ. ತಿಮ್ಮಕ್ಕ ಅವರು ಬೆಳೆಸಿದ ಮರಗಳ ಲೆಕ್ಕ ಹಾಕಲು ಕೂಡ ಸಾಧ್ಯವಿಲ್ಲ. ಕೇವಲ ಮೂರು ಕಿಲೋ ಮೀಟರ್ ನ ಅಂತರದಲ್ಲಿ ಅವರು ತಮ್ಮ ಇಡೀ ಜೀವನದ ಖುಷಿಯನ್ನು ಮರಗಳನ್ನು ಬೆಳೆಸುವುದರಲ್ಲಿ ಕಂಡರು. ಎಲ್ಲೋ ಅಪರೂಪವಾಗಿ ಇರುವ ಇಂತಹವರು ಸದಾ ನಮ್ಮೊಳಗೆ ತಣ್ಣನೆಯ ಗಾಳಿಯಲ್ಲಿ ಉಸಿರಾಗಿರುತ್ತಾರೆ. ತಿಮ್ಮಕ್ಕ ಮರ ಬೆಳೆಸಿದ ಪರಿಮಾಣ ಅನೇಕ ಪ್ರಾಣಿ, ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರಿಗೂ ಉಸಿರು ನೀಡಿದ ವೃಕ್ಷಮಾತೆ ಆಗಿದ್ದಾರೆ. ಶ್ರೀಧರ ಬನವಾಸಿ ಜಿ ಸಿ ಅವರು ವೃಕ್ಷಮಾತೆ ತಿಮ್ಮಕ್ಕ ಜೀವನ ಕಥನ ನಾಟಕವನ್ನು ೨೦೧೮ ರಲ್ಲಿ ಬರೆದಿದ್ದಾರೆ. ಮಕ್ಕಳ ನಾಟಕವಾದರೂ ಸಹ ಎಲ್ಲರೂ ಓದಲೇಬೇಕು. ಅವರು ಬದುಕಿದ್ದಾಗಲೇ ಅವರ ಮರಣದ ಕುರಿತಾಗಿ ಸುದ್ದಿಗಳು ಹಬ್ಬಿದ್ದವು. ಅನೇಕ ಸಲ ಸ್ವತಃ ಅವರೇ ತಾನು ಬದುಕಿದ್ದೇನೆ ಎಂದು ಉತ್ತರ ನೀಡಿದ್ದಾರೆ. ಆಧುನಿಕ ಭರಾಟೆಯಲ್ಲಿ ನಾವೆಲ್ಲ ಬಹಳ ವೇಗವಾಗಿ ಹೋಗುತ್ತಿದ್ದೇವೆ. ಆದರೆ ತಿಮ್ಮಕ್ಕ ಅತ್ಯಂತ ಸಾವಧಾನವಾಗಿ ಪ್ರಪಂಚ ನೆನಪಿನಲ್ಲಿ ಇಡುವ ಹಾಗೆ ಬದುಕಿ ಬಾಳಿದವರು. ಮೊನ್ನೆಯು ಸಹ ಅವರ ಸಾವಿನ ಸುದ್ದಿ ಸುಳ್ಳಾಗಿರಲಿ ಎಂದೇ ಬಯಸಿದ್ದೆ. ಆದರೆ...


| Mohan Raju P K

ತಿಮ್ಮಕ್ಕನವರನ್ನು ಕುರಿತು ಯೋಚಿಸುವಾಗ ಕಣ್ಣು ತೇವವಾಗುತ್ತದೆ. ಸಂತೋಷವೆಂದರೆ ನಿಮ್ಮ ಓದುಗರಲ್ಲಿ ಅನೇಕರು ಕವಿಗಳ ರೀತಿ ಅರ್ಥಪೂರ್ಣ ಚರಮಸಾಲುಗಳನ್ನು ಪ್ರತಿಕ್ರಿಯೆಯಾಗಿ ಬರೆದಿರುವುದು ಅದ್ಭುತವೆನಿಸುತ್ತದೆ.




Add Comment


Mundana Kathana Nataka

YouTube






Recent Posts

Latest Blogs