ಹಾವನೂರ್ ವರದಿಯ ಅವ್ಯಕ್ತ ಚರಿತ್ರೆ
by Nataraj Huliyar
ಈ ಅಂಕಣ ಬರೆಯುವ ಮುನ್ನಾ ದಿನ ಬಂದ ಫೋನುಗಳು ಕರ್ನಾಟಕದ ಮಹತ್ತರ ವಿದ್ಯಮಾನವೊಂದರ ಬಗ್ಗೆ ನಾವು ಅಷ್ಟಾಗಿ ಕಾಣದ ಚರಿತ್ರೆಯನ್ನು ಬಿಚ್ಚಿಡತೊಡಗಿದವು. ನಿನ್ನೆ ‘ಪ್ರಜಾವಾಣಿ’ಯಲ್ಲಿ (೨೯ ನವೆಂಬರ್ ೨೦೨೫) ’ಇತಿಹಾಸ ಚಕ್ರ ಮತ್ತು ಹಾವನೂರ್’ ಎಂಬ ತಲೆ ಬರಹದಲ್ಲಿ ಹಾವನೂರ್ ಆಯೋಗ ವರದಿ ಸಲ್ಲಿಸಿ ಐವತ್ತು ವರ್ಷವಾದ ಬಗೆಗಿನ ಬರಹ ಓದಿ ಬರುತ್ತಿದ್ದ ಫೋನುಗಳಿವು. ಈ ಹೊಸ ಓದುಗರ ಫೋನುಗಳು ಹೊಸ ಹೊಸ ಮಾಹಿತಿಗಳನ್ನು ಕೊಡತೊಡಗಿದವು. ಹಾವನೂರ್ ವರದಿ ಉದ್ಘಾಟಿಸಿದ ಮಹಾನ್ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ ಚಳುವಳಿಯ ಅವ್ಯಕ್ತ ಚರಿತ್ರೆ, ಅಗೋಚರ ಚರಿತ್ರೆ ನನ್ನ ಕಣ್ಣೆದುರು ಬಿಚ್ಚಿಕೊಳ್ಳತೊಡಗಿತು. ಅವ್ಯಕ್ತವಾದ ಅಪ್ಪಟ ರೋಮಾಂಚನ ನನ್ನೊಳಗೆ ಹಬ್ಬತೊಡಗಿತು.
ಮೊದಲಿಗೆ, ದಲಿತ ಸಂಘರ್ಷ ಸಮಿತಿಯ ಆರಂಭದ ಕಂಭಗಳಲ್ಲಿ ಒಬ್ಬರಾದ ಸೋಶಿಯಾಲಜಿ ಪ್ರೊಫೆಸರ್ ರುದ್ರಸ್ವಾಮಿಯವರು ಹೇಳಿದ ‘ದಲಿತ ಚಳುವಳಿ ಮಂಡಲ್ ವರದಿಯ ಕಾಲದಲ್ಲಿ ಹಿಂದುಳಿದ ವರ್ಗಗಳನ್ನು ತಿದ್ದಿದ’ ಪ್ರಸಂಗ:
ಇಸವಿ ೧೯೯೦. ಹಿಂದುಳಿದ ವರ್ಗಗಳ ದಾರಿ ತಪ್ಪಿದ ಹುಡುಗರು ಪ್ರಬಲ ಜಾತಿಗಳ ಕುಮ್ಮಕ್ಕಿನಿಂದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಬಿ.ಪಿ. ಮಂಡಲ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ವಿರುದ್ಧ ನಿಂತಿದ್ದ ಹುಡುಗರ ಜೊತೆ ಸೇರಿಕೊಂಡಿದ್ದರು. ಆಗ ದಸಂಸದ ರುದ್ರಸ್ವಾಮಿ ಹಾಗೂ ಸಮಾಜವಾದಿ ಹ. ಸೋಮಶೇಖರ್ ದಲಿತ ಚಳುವಳಿಯ ನಾಯಕರಾದ ಬಿ. ಕೃಷ್ಣಪ್ಪನವರ ಬಳಿ ಹೋದರು. ವಿಸ್ತೃತ ಚರ್ಚೆಯ ನಂತರ ಬಿ. ಕೃಷ್ಣಪ್ಪನವರು ಹಿಂದುಳಿದ ವರ್ಗಗಳ ಹುಡುಗರನ್ನು ತಿದ್ದುವ ಕೆಲಸಕ್ಕೆ ದಸಂಸ ಧುಮಕಬೇಕೆಂದು ತೀರ್ಮಾನಿಸಿದರು.
ಮುಂದಿನ ಬೆಳವಣಿಗೆಗಳನ್ನು ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು ಥರದ ಹಲವು ದಸಂಸ ನಾಯಕರು, ಕಾರ್ಯಕರ್ತರು ನೆನಸಿಕೊಳ್ಳುತ್ತಿರುತ್ತಾರೆ. ಕೋಲಾರದಲ್ಲಿ ದಲಿತರು ಹಾಗೂ ಹಿಂದುಳಿದವರು ಚಿನ್ನಪ್ಪ ರೆಡ್ಡಿ ಆಯೋಗ ಹಾಗೂ ಮಂಡಲ್ ಆಯೋಗಗಳ ವರದಿಯನ್ನು ಜಾರಿಗೊಳಿಸಲು ಮೆರವಣಿಗೆ ಹೊರಟ ದಿನವನ್ನು ದಸಂಸದ ರಾಜ್ಯ ಸಂಚಾಲಕ ಸಿಎಂ ಮುನಿಯಪ್ಪನವರು ಸದ್ಯದಲ್ಲೇ ಪ್ರಕಟವಾಗಲಿರುವ ತಮ್ಮ ಆತ್ನಚರಿತ್ರೆಯಲ್ಲಿ ವಿವರವಾಗಿ ದಾಖಲಿಸಿದ್ದಾರೆ.
ಇದೇ ಘಟ್ಟದಲ್ಲಿ ಹಿಂದುಳಿದ ವರ್ಗಗಳನ್ನು ತಿದ್ದಿದ ಆ ಕಾಲದ ಮತ್ತೊಂದು ಅನುಭವದ ಮುಖವನ್ನು ನ್ಯಾಶನಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಗೆಳೆಯ ಕೆ.ಪಿ. ನಾರಾಯಣಪ್ಪ ಬರೆದು ಕಳಿಸಿದರು. ಆ ಪತ್ರದ ಭಾಗಗಳು:
‘…ನಾನೂ ಹಾವನೂರು ವರದಿಯ ಫಲಾನುಭವಿ ಎಂಬುದನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳಲು ಬಯಸುತ್ತೇನೆ. ತಾವು ತಮ್ಮ ಲೇಖನದಲ್ಲಿ ‘ಮಂಡಲ್ ವರದಿ ವಿರುದ್ಧ ಪ್ರತಿಭಟಿಸಲು ಹೊರಟಿದ್ದ ಹಿಂದುಳಿದ ವರ್ಗಗಳ ಹುಡುಗರನ್ನು ಕರ್ನಾಟಕದ ದಲಿತ ಚಳವಳಿ ತಿದ್ದಿತು.’ ಎಂದಿದ್ದೀರಿ. ಈ ಮಾತಿಗೆ ಸಾಕ್ಷಿ ಎಂಬಂತೆ ನಾನು ಕೆಲಸ ಮಾಡಿದ್ದೇನು ಎಂಬುದನ್ನು ತಿಳಿಸಲು ಹೊರಟಿದ್ದೇನೆ.
ವಿ.ಪಿ.ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಮಂಡಲ್ ವರದಿಯನ್ನು ಜಾರಿಗೊಳಿಸಿದರು. ಅದರ ಅಂತರಾಳವನ್ನು ಅರಿಯದ ಹಲವು ಮಂದಿ ಹಿಂದುಳಿದ ವರ್ಗದ ಯುವಕರು ವರದಿಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರು. ಇದು ದೇಶದಾದ್ಯಂತ ನಡೆಯುತಿತ್ತು. ಮಂಡಲ್ ವರದಿಯ ಮೂಲಕ ಪರಿಶಿಷ್ಟರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿತ್ತು.
ಇಂತಹ ಚಳವಳಿ ನಮ್ಮಲ್ಲಿ ಹುಟ್ಟಿಕೊಳ್ಳಬಾರದು ಎಂದು ಚಿಂತಿಸಿದ ಪ್ರೊ.ಬಿ. ಗಂಗಾಧರಮೂರ್ತಿಯವರು ದಲಿತ ಚಳವಳಿಯಲ್ಲಿದ್ದ ದಲಿತೇತರರು ಆಯಾ ಸಮುದಾಯಗಳನ್ನು ಸಂಘಟಿಸಿ ಮಂಡಲ್ ವರದಿಯ ಪರವಾಗಿ ಧ್ವನಿ ಎತ್ತುವಂತೆ ಮಾಡಬೇಕೆಂದು ಅಭಿಪ್ರಾಯಪಟ್ಟರು. ಅವರ ಸೂಚನೆಯ ಮೇರೆಗೆ ನಾನು ನನ್ನ ಸಮುದಾಯದವರನ್ನು, ಎಂದರೆ ಕುರುಬ ಸಮುದಾಯದವರನ್ನು. ಸಂಘಟಿಸಲು ಮುಂದಾದೆನು. ತಾಲ್ಲೂಕಿನಲ್ಲಿ ಈ ಮೊದಲು ತಾಲ್ಲೂಕು ಕುರುಬರ ಸಂಘವಿತ್ತು. ಆದ್ದರಿಂದ ನಾನು ಮತ್ತೊಂದು ತಾಲ್ಲೂಕು ಸಂಘ ಕಟ್ಟಲು ಅವಕಾಶವಿಲ್ಲ ಎಂಬುದನ್ನು ಮನಗಂಡು ‘ಕುರುಬ ಯವಜನ ಸಂಘ’ ಹೆಸರಿನಲ್ಲಿ ಕರಪತ್ರವನ್ನು ಮುದ್ರಿಸಿ ಪರಿಚಯವಿರುವವರಿಗೆ ಹಂಚಿದೆನು. ನನ್ನ ನಿರೀಕ್ಷೆಗೂ ಮೀರಿ ಅದು ಪ್ರಚಾರ ಪಡೆದುಕೊಂಡಿತು. ಸಭೆ ಸೇರಬೇಕಾದ ಸ್ಥಳ, ಸಮಯ ಮತ್ತು ದಿನಾಂಕವನ್ನು ಕರಪತ್ರದಲ್ಲಿ ನಮೂದಿಸಿದ್ದೆನು. ನನಗೆ ಆಶ್ಚರ್ಯವಾಗುವ ಹಾಗೆ ಸುಮಾರು ೧೦೦ ಜನರು ನಾನು ತಿಳಿಸಿದ್ದ ಗೌರಿಬಿದನೂರು ನಗರದ ನದಿಗಡ್ಡೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸೇರಿದ್ದರು.’
ಮೇಲೆ ಹೇಳಿದ ಪ್ರಜಾವಾಣಿ ಲೇಖನ ಪ್ರಕಟವಾದ ಶನಿವಾರ ಸಂಜೆ ಎಂಬತ್ಮೂರು ವಯಸ್ಸಿನ ಮೇಷ್ಟ್ರು ನಿಂಗಣ್ಣ ಕುಂಟಿ ಸಂಭ್ರಮದಿಂದ ಫೋನ್ ಮಾಡಿದರು: ಹಾವನೂರು ಆಯೋಗ ೧೯೭೨-೭೩ರ ಸುಮಾರಿಗೆ ಗದಗಕ್ಕೆ ಬಂತು. ಆಗ ನಿಂಗಣ್ಣ ಕುಂಟಿ ಹುಲಕೋಟಿಯ ಬಳಿ ಚಿಕ್ಕಹಂದಿಗೋಳದಲ್ಲಿ ಶಾಲಾ ಮಾಸ್ತರ್. ಅವತ್ತು ರಜಾ ಹಾಕಿ ಆಯೋಗ ಹೇಗೆ ಕೆಲಸ ಮಾಡುತ್ತದೆ ಎಂಬ ಕುತೂಹಲದಿಂದ ನಿಂಗಣ್ಣ ಗದಗದ ಸಭೆಗೆ ಹೋದರು. ಅವರ ಊರಿನ ಗಂಗಾಮತಸ್ಥ ಜಾತಿಯ ಜನ ಆಯೋಗದ ಎದುರು ಅಹವಾಲು ಸಲ್ಲಿಸಲು ಬಂದಿದ್ದರು.
ಆಯೋಗದ ಜೊತೆಗಿನ ಮಾತಿನ ನಡುವೆ ಕೆಲವು ಜಾತಿಗಳಲ್ಲಿ ದೇವರಿಗೆ ಬಿಟ್ಟ ಹೆಂಗಸರ ದಯನೀಯ ಸ್ಥಿತಿ ಕುರಿತ ಚರ್ಚೆ ಬಂತು. ನಿಂಗಣ್ಣ ಎದ್ದು ನಿಂತು ಇದು ದಲಿತ ಹಾಗೂ ಕೆಳ ಜಾತಿಗಳ ಮಹಿಳೆಯರಿಗೆ ಶಾಪವಾಗಿರುವ ಬಗ್ಗೆ ಚರ್ಚೆಗೆ ಇಳಿದರು. ನಿಂಗಣ್ಣನ ಮಾತಿನಿಂದ ಬೆರಗಾದ ಹಾವನೂರು ನಿಂಗಣ್ಣನವರನ್ನು ವೇದಿಕೆ ಮೇಲೆ ಕರೆದು ಬೆನ್ನು ತಟ್ಟಿದರು. ಹಾವನೂರ್ ತಮ್ಮ ಬೆನ್ನು ತಟ್ಟಿದ ರೋಮಾಂಚನ ನಿಂಗಣ್ಣನವರ ಮೈಯಲ್ಲಿ ಇವತ್ತಿಗೂ ಹಾಗೇ ಉಳಿದಿದೆ. ದಲಿತ, ಹಿಂದುಳಿದ ಜಾತಿಗಳ ಮಹಿಳೆಯರನ್ನು ದೇವರಿಗೆ ಬಿಡುವ ಶೋಷಕ ವ್ಯವಸ್ಥೆ ಕ್ರಮೇಣ ಹೋಗಿದ್ದರ ಹಿನ್ನೆಲೆಯಲ್ಲಿ ಶಿಕ್ಷಣ, ಹಾವನೂರು ವರದಿ ಹಾಗೂ ಸರ್ಕಾರದ ಯೋಜನೆಗಳ ಪಾಲೂ ಇದೆ ಎಂಬುದನ್ನೂ ನಿಂಗಪ್ಪ ಮಾಸ್ತರ್ ಸೂಚಿಸುತ್ತಿದ್ದರು. ಕವಿ ನಿಂಗಣ್ಣ ಗುಂಟಿಯವರ 'ಕಾಮನ ಬಿಲ್ಲು' ಪದ್ಯ ಐದನೆಯ ತರಗತಿಯ ಪಠ್ಯವಾಗಿದೆ. ಗುರು ಪ್ರಸಾದ್ ಕಂಟಲಗೆರೆ ಕಳಿಸಿದ ಆ ಪದ್ಯವನ್ನೂ ಇವತ್ತು ಓದಿದೆ.
ಮಂಡಲ್ ವರದಿಯ ಕಾಲದಲ್ಲಿ ಹಿಂದುಳಿದ ವರ್ಗಗಳ ಬೆಂಬಲಕ್ಕೆ ನಿಂತ ದಾದಾಸಾಹೇಬ್ ಕಾನ್ಷೀರಾಂ ಅವರ ಕೊಡುಗೆಯನ್ನು ವಿದ್ಯಾರ್ಥಿ ಮಿತ್ರ-ಹಾಡುಗಾರ ‘ಜೀವನ್’ ಶಿವವೆಂಕಟಯ್ಯ ನೆನಪಿಸಿದರು: ‘ಮಂಡಲ್ ವರದಿ ಜಾರಿ ಮಾಡಿ ಇಲ್ಲಾ ಕುರ್ಚಿ ಬಿಡಿ ಚಳವಳಿಯನ್ನೇ ಕಾನ್ಷೀರಾಂ ಶುರು ಮಾಡಿದರು.’ ಈ ಮಾತು ಕೇಳಿದ ನಂತರ ಇತರ ಮೂಲದ ವಿವರಗಳನ್ನು ಗಮನಿಸಿದೆ: ಮಂಡಲ್ ವರದಿಯ ಪರ ಹೋರಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಬಂಧನಕ್ಕೊಳಗಾದರು. ‘ಜಿಸ್‌ಕಿ ಜಿತ್ನಿ ಸಂಖ್ಯಾಬಾರಿ; ಉಸ್ಕಿ ಉತ್ನಿ ಹಿಸ್ಸಾದಾರಿ’ (ಯಾರದು ಎಷ್ಟು ಸಂಖ್ಯೆಯೋ ಅಷ್ಟಷ್ಟು ಪಾಲು) ಎಂಬ ಘೋಷಣೆಯನ್ನೂ ಕಾನ್ಷೀರಾಂ ಕೊಟ್ಟರು.
ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಕರ್ತವ್ಯ ಕುರಿತಂತೆ ಗೆಳೆಯ ಮುದ್ದುಕುಮಾರ್ ಅವರಿಂದ ಹಿಡಿದು ಹಲವರವರೆಗೂ ಒಂದೇ ದನಿಯಿತ್ತು: ‘ಹಾವನೂರ್ ವರದಿಯ ಫಲಾನುಭವಿಗಳು, ಇದರಿಂದ ಪ್ರಯೋಜನ ಪಡೆದವರು, ತಮ್ಮ ಹೊಣೆ ಅರಿತುಕೊಳ್ಳಬೇಕು. ಹಾವನೂರ್ ವರದಿಯ ಫಲ, ಪ್ರಯೋಜನ ಪಡೆದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಪೀಳಿಗೆ ಬದಲಾಗಬೇಕು.’
ಇದೆಲ್ಲದರ ಜೊತೆಗೆ ಇಪ್ಪತ್ತನೆಯ ಶತಮಾನದ ಹುಡುಗ, ವಿದ್ಯಾರ್ಥಿ ಮಿತ್ರ, ಚರಣ್ ಬರೆದ ಅನುಭವ: ‘ಇಂದಿನವರಾದ ನಮಗೆ ಹಿಂದಿನವರು ಸವೆಸಿದ ಹಾದಿಯ ಬಗ್ಗೆ ಅವಲೋಕನ ಪ್ರಜ್ಞೆಯಿಲ್ಲದ ಕಾರಣ, ನಮ್ಮ ಇವತ್ತಿನ ಸ್ಥಾನದ ಬಗ್ಗೆ ರಾಜಕೀಯ ಅರ್ಥ ಪಡೆಯಲಾಗುತ್ತಿಲ್ಲ. ನನ್ನ ಮನೆ ಹೇಗೆ ಒಂದು ಮಟ್ಟಕ್ಕೆ ಬೆಳಗಿತು ಎಂದು ಹಿಮ್ಮಾವಲೋಕನ ಮಾಡಿದಾಗ ಅರಸು ಅವರ ಭೂಸುಧಾರಣೆ, ರೇಷನ್ ಅಕ್ಕಿ, ಅಮ್ಮ ನಡೆಸುತ್ತಿರುವ ಸ್ತ್ರೀ ಶಕ್ತಿ ಸಂಘ, ಅಂಗವಿಕಲ ಅಜ್ಜಿಯ ಅಡುಗೆ ಗೆಲಸ ಕಣ್ಮುಂದೆ ಬರುತ್ತೆ.’
ಇಂಥ ಅಗೋಚರ ಬೆಳವಣಿಗೆಗಳನ್ನು ನೋಡನೋಡುತ್ತಾ ಚರಿತ್ರೆಯ ಅಧಿಕೃತ ದಾಖಲೆಗಳಲ್ಲಿ ಎಂದೂ ಕೇಳದ ಇಂಥ ವಿವರಗಳು ಕೊಡುವ ಮತ್ತೊಂದು ಚರಿತ್ರೆಯನ್ನು ನಾವೆಲ್ಲರೂ, ಅದರಲ್ಲೂ ಅಕಡೆಮಿಕ್ ಸಂಶೋಧಕರು, ಸದಾ ಗಮನಿಸುತ್ತಿರಬೇಕು ಎಂಬ ಎಚ್ಚರ ನನ್ನೊಳಗೆ ಗಟ್ಟಿಯಾಗತೊಡಗಿತು.
ಅದರ ಜೊತೆಗೆ, ಅಂಬೇಡ್ಕರ್ ಚಿಂತನೆಗಳು, ಸಂವಿಧಾನದ ಅವಕಾಶ-ಕಾರ್ಯಕ್ರಮಗಳು ಈ ಬಗೆಯ ಎಲ್ಲ ಸಬಲೀಕರಣಗಳ ಮೂಲ ಎಂಬುದನ್ನು ಮತ್ತೆ ಮತ್ತೆ ನೆನೆಯುತ್ತಾ, ಹೇಳುತ್ತಾ ಇರಬೇಕಾಗುತ್ತದೆ. ಲೋಹಿಯಾ ಸಮಾಜವಾದಿ ಪಕ್ಷದಲ್ಲಿ ರೂಪಿಸಿದ ‘ಸಮಾನಾವಕಾಶಗಳ ಸಿದ್ಧಾಂತ’ ಒಂದು ಪರಿಕಲ್ಪನೆಯಾಗಿ, ನುಡಿಗಟ್ಟಾಗಿ ಹಾವನೂರ್ ಥರದವರನ್ನು ತಲುಪಿ, ಬೆಳೆದಿದ್ದರ ಪರಿಣಾಮ ಕೂಡ ವಿಸ್ಮಯಕರವಾಗಿದೆ:
‘ಸಮಾನ ಅವಕಾಶ ಎಂಬ ನುಡಿಗಟ್ಟನ್ನು ಹಾವನೂರರ ಬಾಯಲ್ಲಿ ಕೇಳಿದ ಅರಸು ಹೇಳಿದರು: ಸಮಾನ ಅವಕಾಶ…ಇದೊಂದು ಹೊಸ ಕಲ್ಪನೆ. ನನಗೆ ಹೊಳೆದಿರಲಿಲ್ಲ. ಹಾವನೂರರ ಮೂಲ ವಿಚಾರ ಇದು’ ಎಂದರು. (ಪ್ರಜಾವಾಣಿ ವರದಿ: ೨೦ ನವೆಂಬರ್ ೧೯೭೫)
ಹಾವನೂರು ‘ಸಮಾನ ಅವಕಾಶ’ ಎಂಬ ನುಡಿಗಟ್ಟನ್ನು, ಕನಸನ್ನು ಲೋಹಿಯಾರಿಂದ ಪಡೆದರೋ ಇಲ್ಲವೋ, ಅದು ಅವರಿಗೆ ಹೊಳೆಯಿತೋ, ಅದೆಲ್ಲ ಮುಖ್ಯವಲ್ಲ. ಆದರೆ ಲೋಹಿಯಾ, ಹಾವನೂರು, ಅರಸು, ಕಾನ್ಷೀರಾಂ ಮುಂತಾದ ಜನಕಾಳಜಿಯ ಚಿಂತಕ- ಮುತ್ಸದ್ದಿಗಳ ಕೈಯಲ್ಲಿ ಇಂಥ ನುಡಿಗಟ್ಟುಗಳು, ಕನಸುಗಳು ಸಾಕಾರ ರೂಪಕ್ಕೆ ಬರುವ ರೀತಿ ಮಾತ್ರ ಅದ್ಭುತವಾದುದು. ನಮ್ಮ ಲಕ್ಷ್ಮಣ ಹಾವನೂರ್ ನೆಲ್ಸನ್ ಮಂಡೇಲರ ದಕ್ಷಿಣ ಆಫ್ರಿಕಾದವರೆಗೂ ತಮ್ಮ ಸಾಮಾಜಿಕ ನ್ಯಾಯದ ಮಾದರಿಯನ್ನು ಒಯ್ದದ್ದನ್ನು ನೀವು ಕೇಳಿರಬಹುದು. ಆಗ ರವಿವರ್ಮಕುಮಾರ್ ಕೂಡ ಹಾವನೂರ್ ಜೊತೆಗಿದ್ದರು. ಆಫ್ರಿಕಾದ ಕಾರ್ಯಕರ್ತರಿಗೆ ಹಿಂದುಳಿದಿರುವಿಕೆಯನ್ನು ಗ್ರಹಿಸುವ ಮೆಥೆಡಾಲಜಿಯನ್ನು ಕಲಿಸುತ್ತಿರುವ ಹಾವನೂರ್ ಫೋಟೋ ಕೂಡ ಇಲ್ಲಿದೆ:
ಲೋಕಬದಲಾವಣೆಯ ಇಂಥ ರೂಪಕಗಳ ಶಕ್ತಿಯನ್ನು ಸದಾ ಧ್ಯಾನಿಸುವ, ಎಲ್ಲೆಡೆ ಹಬ್ಬಿಸುವ ಹೊಣೆ ಆರ್ಟಿಕ್ಯುಲೇಟ್ ಕ್ಲಾಸ್- ಹೆಚ್ಚು ಮಾತಾಡುವ ವರ್ಗಗಳ- ಮೇಲೇ ಇದೆ. ಇವತ್ತು ಹಾವನೂರು ವರದಿಯ ಫಲಾನುಭವಿಗಳಲ್ಲಿ ಕೊನೇ ಪಕ್ಷ ಎರಡು ತಲೆಮಾರುಗಳ ಪುರುಷರೂ ಮಹಿಳೆಯರೂ ಇದ್ದಾರೆ. ಈ ಅಂಶ ನಮ್ಮ ಎಲ್ಲ ಪ್ರಗತಿಪರ ಚಿಂತನೆಗಳ ಜೊತೆಗೆ ಆಳವಾಗಿ ಬೆರೆಯಬೇಕು. ಅದೇ ರೀತಿ, ನಮ್ಮ ಸ್ತ್ರೀವಾದಿ ಚಿಂತನೆಯೊಳಗೆ ಇಂಥ ಸಾಮಾಜಿಕ ನ್ಯಾಯದ ಭಾಷೆ ಬೆರೆಯತೊಡಗಿದಂತೆ ಭಾರತೀಯ ಸ್ತ್ರೀವಾದ, ಕನ್ನಡ ಸ್ತ್ರೀವಾದಗಳ ಸ್ವರೂಪವೂ ಬದಲಾಗುತ್ತದೆ. ಬಹುಜನ ಮಹಿಳೆಯರ ದೃಷ್ಟಿಕೋನ ನಮ್ಮ ಸ್ತ್ರೀವಾದವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹಾವನೂರ್, ಮಂಡಲ್ ವರದಿಗಳ ಫಲಾನುಭವಿ ತಲೆಮಾರುಗಳ ಮಹಿಳೆಯರೂ ಕೂಡ ಅಂಬೇಡ್ಕರ್, ಲೋಹಿಯಾ, ಕಾನ್ಷೀರಾಂ ತಾತ್ವಿಕತೆಗಳ ಮೂಲಕ ಗಟ್ಟಿಯಾಗಿ ತಾತ್ವಿಕವಾಗಿ ತಯಾರಾಗುವುದು ನಮ್ಮ ಮುಂದಿನ ಸಾಮಾಜಿಕ ಚಿಂತನೆಗಳ ದಿಕ್ಕನ್ನು ನಿರ್ಣಾಯಕವಾಗಿ ಬದಲಿಸಬಲ್ಲದು.
ಕೊನೆ ಟಿಪ್ಪಣಿ: ಮತ್ತೊಂದು ಅವ್ಯಕ್ತ ಚರಿತ್ರೆ
ಈ ಟಿಪ್ಪಣಿ ಬರೆಯುವ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಬಿಬಿಸಿಯಲ್ಲಿ ಕಂಡ ಫೋಟೋ- ವರದಿ ಭಾರತೀಯ ಸ್ವಾತಂತ್ರ ಸಂಗ್ರಾಮದ ಮತ್ತೊಂದು ಅವ್ಯಕ್ತ ಚರಿತ್ರೆಯನ್ನು ಬಿಚ್ಟಿಟ್ಟಿತು:
೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಮಹಿಳೆಯರೂ ಭಾಗಿಯಾಗಲು ಅವಕಾಶ ಬೇಕೆಂದು ಮಂಗಳೂರಿನ ಸಮಾಜವಾದಿ ತರುಣಿ ಕಮಲಾದೇವಿ ಚಟ್ಟೋಪಾಧ್ಯಾಯ ದಂಡಿಯಾತ್ರೆಯ ಹಾದಿಯಲ್ಲೇ ಗಾಂಧೀಜಿಯ ಜೊತೆ ವಾದಿಸಿ ಪಟ್ಟು ಹಿಡಿದರು. ನಂತರ ಮಹಿಳೆಯರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ೧೯೩೦ರ ನಾಗರಿಕ ಅಸಹಕಾರ ಚಳುವಳಿಯಲ್ಲಿ ಭಾರತೀಯ ಮಹಿಳೆಯರು ದೊಡ್ಡ ಮಟ್ಟದಲ್ಲಿ ಭಾಗಿಯಾದ ವಿವರಗಳು ಚರಿತ್ರೆಯ ಪುಸ್ತಕಗಳಲ್ಲಿ ಇನ್ನೂ ವಿವರವಾಗಿ ದಾಖಲಾಗುವ ಅಗತ್ಯವಿದೆ.
ಇಂಥ ಅವ್ಯಕ್ತ ಚರಿತ್ರೆಯ ಫೋಟೋಗಳು ನಮಗೆ ಸ್ಫೂರ್ತಿಯಾಗಲಿ!
Comments
8 Comments
| Subramanyaswamy Swamy
ದಲಿತ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳು ಅದರಲ್ಲಿಯೂ ಮುಖ್ಯವಾಗಿ ಯುವಜನರನ್ನು ರಾಜಕೀಯ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಒಗ್ಗೂಡಿ ಏಕೆ ಸಾಗಬೇಕು ಹಾಗೂ ಮುಂದಿನ ಅಗತ್ಯಗಳ ಕುರಿತು ಮನವರಿಕೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಡಾ.ನಟರಾಜ್ ಹುಳಿಯಾರ್ ಅವರ ಈ ಲೇಖನ ದಾರಿದೀಪವಾಗಲಿ.
| Siddaraju P K
ಲೇಖನದ ವಿಚಾರಗಳು ಮತ್ತೆ ಅನುಸಂಧಾನ ಮಾಡಿಕೊಂಡು ಹೊಸ ಕಾಲಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ಪುನರ್ರಚಿಸಿಕೊಳ್ಳಲು ಅರ್ಹವಾದ ಆಳ ಮತ್ತು ಘನತೆಗಳನ್ನು ಹೊಂದಿವೆ. ಸಮಾಜ ಮಗ್ಗುಲು ಬದಲಿಸಿ ಹೊಸ ಅಧ್ಯಾಯಗಳಿಗೆ ತೆರೆದುಕೊಳ್ಳಲು ಹಾವನೂರು ವರದಿಯೂ ತುಂಬ ಸಹಕಾರಿಯಾಯಿತು. ಆದರೂ ಅರಸರನ್ನು ಜನ ಕೈ ಹಿಡಿಯಲಿಲ್ಲ ಎಂಬುದು ಐತಿಹಾಸಿಕ ವ್ಯಂಗ್ಯ ಮತ್ತು ನೈತಿಕ ಭ್ರಷ್ಟತೆ. ಭೂಸುಧಾರಣೆಯು ವ್ಯಾಪಕವಾಗಿ ಬಹುಕಾಲದ ಅನ್ಯಾಯ ಮತ್ತು ಶೋಷಣೆಯ ಅಳಿಸುವಿಕೆ ಹೌದಾದರೂ ಅದರ ಫಲಾನುಭವಿಯೇ ಆಗಿದ್ದ ನಮ್ಮ ಚಿಕ್ಕಪ್ಪ ಹೇಳುತ್ತಿದ್ದ ಉದಾಹರಣೆಗಳು ಚಿಂತಿಸುವಂತೆ ಮಾಡಿದ್ದವು. ಒಂದೆರಡು ಎಕರೆಯಷ್ಟೇ ಜಮೀನಿನ ಮಾಲಿಕರಾಗಿದ್ದ ಕೆಲ ಬಡ ಮೇಲ್ವರ್ಗದವರು ಜೀವನಾಧಾರ ಕಳಕೊಂಡಿದ್ದು ನಿಜ. ಆದರೆ ಅವತ್ತಿನ ಉಳುವವರ ತುರ್ತು ಮತ್ತು ಕಾನೂನಿನ ಸ್ವರೂಪದಿಂದಾಗಿ ಜಮೀನನ್ನು ಭಾಗಶಃ ಪಡೆಯುವಂತಿರಲಿಲ್ಲ. ಸರ್ಕಾರವೇ ಇದಕ್ಕೊಂದು ದಾರಿ ಮಾಡಿ ಇಂತಿಷ್ಟು ಕಾಲ ಅಷ್ಟೇ ಪ್ರಮಾಣದ ಸರ್ಕಾರಿ ಜಾಗವನ್ನು ಕೃಷಿಗೆ ಬಳಸಬಹುದು ಎಂಬ ಷರತ್ತಿನ ಮೇಲೆ ಉಚಿತ ಭೋಗ್ಯಕ್ಕೆ ಭೂಮಾಲಿಕರಿಗೆ ನೀಡಬಹುದಾಗಿತ್ತು. ಅದರಿಂದ ಅಗತ್ಯವಾಗಿದ್ದ ಸಾಮಾಜಿಕ ಸ್ಥಿತ್ಯಂತರವು ಹಳೆ ಭೂಮಾಲಿಕರಿಗೆ ಧಿಡೀರ್ ಆಘಾತವಾಗಿ ಪರಿಣಮಿಸಿದ್ದನ್ನು ತಪ್ಪಿಸಬಹುದಿತ್ತು ಎಂದು ಚಿಕ್ಕಪ್ಪ ಹೇಳುತ್ತಿದ್ದುದು ಸರಿಯೇನೋ ಅನಿಸುತ್ತಿತ್ತು. ದೀರ್ಘ ಕಾಲದ ದೌರ್ಜನ್ಯಕ್ಕೆ ತಕ್ಕ ಫಲ ಅನುಭವಿಸಿದರು ಎಂದೂ ಕೆಲವರು ಹೇಳುತ್ತಿದ್ದರು. ಸಾಮಾಜಿಕ ಅಧ್ಯಯನ, ಜಾತಿಗಳ ಅಭಿವೃದ್ಧಿಗಾಗಿ ಬಳಸಬೇಕಾದ ಜಾತಿ ವಿಷಯಗಳು ಔಚಿತ್ಯ ಮೀರಿ ರಾಜಕೀಯದ, ವೋಟಿನ ದಾಳಗಳಾಗಿ ಬಳಕೆಯಾಗುತ್ತಿರುವುದು ವಿಷಾದನೀಯ.
| ಎನ್.ಡಿ.ತಿಪ್ಪೇಸ್ವಾಮಿ, ಗಂಗಾವತಿ
ಕರ್ನಾಟಕದ ಹೆಸರಾಂತ ಬರಹಗಾರರಲ್ಲಿ ತಾವೂ ಒಬ್ವರು. "ಗಾಳಿ ಬೆಳಕು" ಎಂಬ ಅಂಕಣ ಬರಹ ತನ್ನ ಮೌಲ್ಯ ಕಾಪಾಡಿಕೊಂಡಿದೆ. ಇಂತಹ ಬರಹಗಳಿಂದ ಹತ್ತಾರು ಬೆಳೆಯುತ್ತಾರೆ. ಕಲಿಯುತ್ತಾರೆ. ವಿಷಯದ ಆಳ, ಸಮಸ್ಯೆ ಜನರಿಗೆ ಗೊತ್ತಾಗಲಿದೆ. ಈ ಬರಹದ ಗಟ್ಟಿತನ ಓದಿಸಿಕೊಂಡು ಹೋಯಿತು ನಟರಾಜ್ ಸರ್.
| Mangala Nayak
ಜಾತಿಯು ಕೆಲವರಿಗೆ ಹೆಮ್ಮೆಯ ಅಸ್ಮಿತೆಯಾದರೆ ಮತ್ತೆ ಅನೇಕರಿಗೆ ನೋವಿನ ಕುರುಹು. ಈ ವ್ಯತ್ಯಾಸದೆಡೆಗೆ ಭಾರತದ ಅಸಮಾನತೆ ಶಾಸ್ತ್ರದ ಕಣ್ತೆರೆಸಿದ್ದು ಎಲ್.ಜಿ.ಹಾವನೂರರ ಅತ್ಯಮೂಲ್ಯ ಸಾಧನೆ. ದಕ್ಷಿಣ ಆಫ್ರಿಕಾ ಸಂವಿಧಾನ ಪುನರ್ರಚನೆ ಸಮಿತಿಗೆ ನೆಲ್ಸನ್ ಮಂಡೇಲಾ ಅವರು ಹಾವನೂರರನ್ನು ಆಹ್ವಾನಿಸಿದ್ದರು. ಎಷ್ಟೊಂದು ಕಾಲದ ನಂತರ ಎಷ್ಟೊಂದು ಪರಿಶ್ರಮದ ನಂತರ ಜಾರಿಗೊಂಡ ಮೀಸಲಾತಿಯಂದ ಅನೇಕರು ಮೇಲೇರಿದರೂ ಅವರಲ್ಲನೇಕರು ಈ ಪ್ರಕ್ರಿಯೆಯ ಲಾಭವನ್ನು ತಮ್ಮಂತಹವರೇ ಆದ ಕಿರಿಯರಿಗೆ ದೊರಕಿಸಬೇಕೆಂಬ ಶ್ರದ್ಧೆ ತೋರದೆ ʼನವ ಮೇಲ್ವರ್ಗʼದವರಂತೆ ವರ್ತಿಸುವುದು ಬೇಸರವನ್ನುಂಟು ಮಾಡುತ್ತದೆ.
| Sanganagouda
ಇದೊಂದು ಉತ್ತಮ ಲೇಖನ ಸರ್. ಈ ನಿಟ್ಟಿನಲ್ಲಿ ನಮ್ಮ ತಲೆಮಾರು ಗಂಭೀರವಾಗಿ ಚಿಂತಿಸಬೇಕಾಗಿದೆ. ಹಾವನೂರು ವರದಿಯ ಸಾಧ್ಯತೆಗಳ ಕುರಿತು ಈಗ ಮತ್ತಷ್ಟು ಚರ್ಚೆ ಆಗಬೇಕಾಗಿದೆ. ಜನಸಂಖ್ಯೆಗನುಗುಣವಾಗಿ ಅವಕಾಶಗಳು ಸಿಗಬೇಕಾಗಿದೆ...
| M Kumar
ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಗಮನಿಸಿದರೆ ಪ್ರಸಕ್ತ ಸನ್ನಿವೇಶದಲ್ಲಿ ಹಾವನೂರ ವರದಿ ನಂತರದ ಪರಿಣಾಮಗಳನ್ನು ಆಧರಿಸಿ ಅಭ್ಯಸಿಸಿ ಮುಂದಿನ ದಶಕಗಳಲ್ಲಿ ಈ ಸಮುದಾಯಗಳ ಅಭಿವೃದ್ಧಿಗೆ ದಿಕ್ಸೂಚಿಯಾಗುವಂತಹ ಕ್ರಮ ವಹಿಸಲು ಈಗ ಕಾಲ ಸನ್ನಿಹಿತವಾಗಿದೆ. ಅದರ ಅಗತ್ಯತೆ ಹೆಚ್ಚಿದೆ. ಏಕೆಂದರೆ ಇಂದು ದೇಶ ಆಳುತ್ತಿರುವ ಬಹುತೇಕ ರಾಜಕಾರಣಿಗಳು, ದೃಶ್ಯಮಾಧ್ಯಮಗಳ ಪತ್ರಕರ್ತರು, ಎಲ್ಲಾ ವರ್ಗಗಳ ಬಲಪಂಥೀಯರ ಮೇಲಾಟ ಹೆಚ್ಚಾಗಿ ಸಾಮಾಜಿಕ ನ್ಯಾಯದ ವಿರುದ್ಧ ದಿಕ್ಕಿನಲ್ಲಿ ಇತರರನ್ನು ಕೊಂಡೊಯ್ಯುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಮತ್ತೊಮ್ಮೆ ಹಿಂದಿನ ಸಾಮಾಜಿಕ ಚಳುವಳಿಗಳು, ಅಂತಹ ನೇತಾರರ ಅವಶ್ಯಕತೆ ಬಂದಿದೆ
| ಸೋಮಶಂಕರ ವಿ
ಅತಿ ಸಂಕೀರ್ಣ ವಿಷಯಗಳನ್ನು ಇತರರಿಗಿಂತ ಭಿನ್ನವಾಗಿ ಗ್ರಹಿಸಿ ಓದುಗರ ಮುಂದಿಡುವ ನಿಮ್ಮ ಶೈಲಿ ಸಮಕಾಲಿನ ಲೇಖಕರಲ್ಲಿ ತೀರಾ ವಿರಳ ಅನಿಸುತ್ತದೆ ಸರ್. ನವ ವಿದ್ಯಾವಂತ ಗುಂಪಿಗೆ ಹಾವನೂರು ವರದಿಯ ಚರಿತ್ರೆ,ಅದರಿಂದಾದ ಬದಲಾವಣೆಗಳ ತಿಳುವಳಿಕೆಯ ಕೊರತೆ ಬೀಕರವಾಗಿರುವಾಗ ಇಂಥ ಬರಗಳು ಒಂದಷ್ಟು ಬುದ್ದಿವಂತರನ್ನಾಗಿಸುತ್ತವೆ. ಧನ್ಯವಾದಗಳು
| ಹರಿಪ್ರಸಾದ್ ಬೇಸಾಯಿ
ಈ ಇತಿಹಾಸದ ಚದುರಿದ ಚೂರುಗಳು ತಿಳಿದಿದ್ದ ನನ್ನಂಥವರಿಗೆ ಮಾರ್ಗದರ್ಶಿ ಬರಹವಿದು. Thank you SAA
Add Comment